ಸಾಮಾಜಿಕ ಜೀವನ

ಋಗ್ವೇದ ಸಂಹಿತೆಯಲ್ಲಿ ಆರ್ಯ ಮತ್ತು ದಾಸವರ್ಣಗಳ ಉಲ್ಲೇಖ ಕಂಡುಬರುತ್ತದೆ. ಆರ್ಯ ವರ್ಣ ಎಂದರೆ ಗೌರವರ್ಣ ಎಂದು ದಾಸ ವರ್ಣ ಎಂದರೆ ಕಪ್ಪು ಬಣ್ಣ ಎಂಬ ಅರ್ಧದಲ್ಲಿ ಬಳಸಲಾಗಿದೆ. ಆರ್ಯರು ಅಗ್ನಿ ಪೂಜಕರಾಗಿದ್ದು ಯಜ್ಞಯಾಗಾದಿ ಆಚರಣೆಗಳನ್ನು ಮಾಡುವವರಾಗಿದ್ದರು. ಈ ಆಚರಣೆಗಳನ್ನು ಅವರು ಮತಗಳೆಂದು ಕರೆದುಕೊಳ್ಳುತ್ತಿದ್ದರು. ಇವರ ಮಂತ್ರಗಳಲ್ಲಿನ ಶಕ್ತಿಯನ್ನು ಬ್ರಹ್ಮನ್‌ ಎಂದು ತಿಳಿದಿದ್ದರು. ಇವರು ಇಂದ್ರ ಅಥವಾ ದೇವಾ ಎನ್ನುವ ಯಜ್ಞದ ಮೂಲಕ ಹವಿಸ್ಸನ್ನು ಒಯ್ಯುವ ದೇವತೆಗಳ ಪೂಜಕರಾಗಿದ್ದರು. ಹೀಗೆ ಆರ್ಯರು ತಮ್ಮ ಗುರುತನ್ನು ಕಟ್ಟಿಕೊಂಡಿದ್ದರು. ಅವೈದಿಕ ಜನರನ್ನು ಪ್ರಾಣಿ, ದಾಸ, ದಸ್ಯು, ಅಸುರ ರಾಕ್ಷಸ ಎಂಬುದಾಗಿ ಕರೆಯಲಾಗುತ್ತಿತ್ತು. ಇವರುಗಳೊಂದಿಗೆ ವೈದಿಕ ಆರ್ಯರು ಯಾವಾಗಲೂ ಕಾದಾಡುತ್ತಿದ್ದರು. ಅವೈದಿಕರು ಯಜ್ಞ-ಯಾಗಾದಿ ಆಚರಣೆಗಳನ್ನು ಮಾಡದವರು, ಬೇರೆ ಭಾಷೆಗಳನ್ನಾಡುವವರು. ಆದರೆ ಅಪಾರ ಪ್ರಮಾಣದ ಗೋವುಗಳನ್ನು ಸಂಪತ್ತನ್ನು ಹೊಂದಿದವರು ಆಗಿದ್ದರು. ಇವರು ಆರ್ಯರ ಗೋವುಗಳನ್ನು ಹಾರಿಸಿಕೊಂಡು ಹೋಗುತ್ತಿದ್ದರು. ದಾಸರು ಮತ್ತು ದಸ್ಯುಗಳ ವೈದಿಕ ಜನರಿಗಿಂತ ಭೌತಿಕವಾಗಿ ಮುಂದುವರೆದಿದ್ದು ಅವರು ಪುರಗಳಲ್ಲಿ ಅಥವಾ ರಕ್ಷಿತ ವಸತಿಗಳಲ್ಲಿ ವಾಸವಾಗಿರುತ್ತಿದ್ದರು. ಅವರು ಕಪ್ಪು ಬಣ್ಣದವರಾಗಿದ್ದು ಮೂಗಿಲ್ಲದವರು, ಬೇರೆ ಭಾಷೆಯನ್ನು ಆಡುವವರಾಗಿದ್ದರು. ದಾಸರು ಬಹುಶಃ ಆರ್ಯ ಪೂರ್ವಜನರಾಗಿದ್ದರಬಹುದು. ಏಕೆಂದರೆ ಈ ದಾಸರಲ್ಲಿ ಕಿರಾತ, ಕೀಕಟ, ಚೌಂಡಾಲ ಮುಂತಾದ ಬುಡಕಟ್ಟುಗಳಿದ್ದವು. ದಸ್ಸುಗಳು ಯಜ್ಞ, ದೇವ, ವ್ರತ, ಬ್ರಹ್ಮನ್‌ಗಳನ್ನು ಹೊಂದಿರದವರು, ಇವರು ಶಿಶ್ನ ಪೂಜೆ, ‘ಮೂಢವಸ್ತುಗಳ’ ಪೂಜೆ ಮಾಡುವವರಾಗಿದ್ದರು. ಅಸುರರು ಅಸ್ಸೀರಿಯಾದ ಜನರು ಎಂಬ ವಾದವಿದೆ. ವೈದಿಕರಿಗೆ ಅಸುರರು ವೈರಿಗಳಾಗಿದ್ದರೇ ವಿನಃ ಅಸುರರು ಸಂಪೂರ್ಣ ಅವೈದಿಕರಾಗಿರಲಿಲ್ಲ. ರಾಕ್ಷಸರು ವೈದಿಕ ದೇವತೆಗಳ ವೈರಿ ದೇವತೆಗಳಾಗಿದ್ದರು.

ಆರ್ಯರು ಈ ಅವೈದಿಕ ಜನರೊಂದಿಗೆ ಹೋರಾಡಿ ಅವರನ್ನು ಸೋಲಿಸಿ ತಮ್ಮ ಅಧೀನಕ್ಕೆ ಒಳಪಡಿಸಿಕೊಂಡು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಋಗ್ವೇದ ಸಂಹಿತೆಯಲ್ಲಿ ದಾಸರನ್ನು ದಾನ ನೀಡಿದ ಉಲ್ಲೇಖ ಮೇಲಿಂದ ಮೇಲೆ ಪ್ರಸ್ತಾಪ ಮಾಡಲಾಗಿದೆ. ಆರ್ಯರು ತಾವು ಗೆದ್ದು ಗಳಿಸಿದ ಸಂಪತ್ತಿನಲ್ಲಿ ಬಣಗಳ ಮುಖ್ಯಸ್ಥರು ಸಿಂಹಪಾಲನ್ನು ಇಟ್ಟುಕೊಂಡಿದ್ದರಿಂದ ಅವರು ಸಾಮಾನ್ಯ ಜನರಿಗಿಂತ ಬಲಿಷ್ಟರಾಗಿ ಬೆಳೆದು ಆರ್ಯ ಸಮುದಾಯದಲ್ಲಿ ಸಾಮಾಜಿಕ ಭೇದಗಳು ಹುಟ್ಟಿಕೊಳ್ಳಲು ಕಾರಣವಾದವು. ಇದರ ಫಲವಾಗಿ ಆರ್ಯ ಸಮಾಜದಲ್ಲಿ ಯೋಧರು, ಪುರೋಹಿತರು ಮತ್ತು ಸಾಮಾನ್ಯ ಜನರು ಎಂದು ಮೂರು ವಿಭಾಗಗಳಾಗಿ ಒಡೆಯಿತು.

ಬುಡಕಟ್ಟುಗಳು ಅಥವಾ ಬಣಗಳು

ಋಗ್ವೇದದ ಆರ್ಯರ ಸಮಾಜದಲ್ಲಿ ವಿಭಿನ್ನ ಬುಡಕಟ್ಟುಗಳಿಗೆ ಸೇರಿದ ಕುಲ ಹಾಗೂ ಗೋತ್ರಗಳು ಪ್ರಧಾನವಾಗಿದ್ದವು. ಇಂಥ ಬುಡಕಟ್ಟುಗಳ ಸದಸ್ಯರನ್ನು ‘ಜನಾ’ ಎಂದು ಕರೆದಿರುವುದು ಕಂಡುಬರುತ್ತದೆ. ಗೋತ್ರಗಳು ಬ್ರಾಹ್ಮಣ ಋಷಿಮೂಲದಿಂದ ಗುರುತಿಸಲ್ಪಡುತ್ತಿದ್ದವು. ಪ್ರತೀ ಬುಡಕಟ್ಟುಗಳಲ್ಲೂ ಕೆಲವು ರಾಜನ್ಯ ವಂಶಗಳಿರುತ್ತಿದ್ದವು. ಇಂತಹ ವಂಶಗಳ ಸದಸ್ಯರಲ್ಲೆ ಪ್ರಬಲನಾದವನು ಬುಡಕಟ್ಟಿನ ಮುಂದಾಳತ್ವವನ್ನು ವಹಿಸುತ್ತಿದ್ದನು. ಇಂತಹವನನ್ನು ರಾಜನೆಂದು ಕರೆಯುತ್ತಿದ್ದರು. ಅಲ್ಲದೆ ರಾಜಮಾನ್ಯ ಕುಲದವರು ಒಬ್ಬನನ್ನು ರಾಜನೆಂದು ಆಯ್ಕೆಮಾಡುವ ವ್ಯವಸ್ಥೆಯೂ ಸಹ ಇದ್ದಂತೆ ತೋರುತ್ತದೆ. ಋಗ್ವೇದ ಕಾಲದಲ್ಲಿ ಇಂತಹ ಬಣಗಳು ಹಲವು ಬಾರಿ ತಮ್ಮ ತಮ್ಮಲ್ಲೇ ಕಾದಾಡುತ್ತಿದ್ದರು. ಇದಕ್ಕಾಗಿ ಕೆಲ ಬಾರಿ ಆರ್ಯೇತರ ಬಣಗಳ ಸಹಾಯವನ್ನು ಸಹ ಪಡೆಯುತ್ತಿದ್ದರು. ಋಗ್ವೇದದಲ್ಲಿ ಉಲ್ಲೇಖಗೊಂಡ ಬುಡಕಟ್ಟುಗಳಲ್ಲಿ ಭರತ ಬುಡಕಟ್ಟಿನ ತೃತ್ಸು ಕುಲದ ಸುದಾಸ ಮತ್ತು ದೀವೋದಾಸ ಎಂಬ ರಾಜರುಗಳು ಮುಖ್ಯರಾಗಿದ್ದಾರೆ. ತೃತ್ಸುಗಳ ಪುರೋಹಿತ ವಿಶ್ವಾಮಿತ್ರನಾಗಿದ್ದ. ಆದರೆ ತೃತ್ಸುಗಳು ವಿಶ್ವಾಮಿತ್ರನನ್ನು ಕೈಬಿಟ್ಟು ವಸಿಷ್ಠನನ್ನು ಪರೋಹಿತನನ್ನಾಗಿ ನೇಮಿಸಕೊಂಡರು. ಆಗ ವಿಶ್ವಾಮಿತ್ರನು ಹತ್ತು ಬುಡಕಟ್ಟುಗಳ ಒಂದು ಸೇನೆಯನ್ನು ಕಟ್ಟಿ ಆ ಸೇನೆಯನ್ನು ಸುದಾಸನ ವಿರುದ್ಧ ಕಳುಹಿಸುತ್ತಾನೆ. ಈ ಹತ್ತು ಬುಡಕಟ್ಟುಗಳಾವುವೆಂದರೆ ಪಂಚಜನರೆಂದು ಕರೆಯಲ್ಪಡುತ್ತಿದ್ದ ಪುರು, ಯದು, ಅನು, ದೃಹ್ಯು ಹಾಗೂ ತುರ್ವಶನ್‌ಮತ್ತು ಇವರ ಜೊತೆ ಅಲೀನ, ಫಕ್ತಿ, ಬಲಾನ, ಶಿವ ಹಾಗೂ ವಿಷಣಿನ್‌ಎಂಬ ಇನ್ನೂ ಐದು ಬಣಗಳಾಗಿದ್ದವು. ಈ ಬಣಗಳಲ್ಲೇ ವೈದಿಕ ಮತ್ತು ಅವೈದಿಕ ಬಣಗಳೂ ಇದ್ದವು. ಈ ಹೋರಾಟವನ್ನು ಹತ್ತು ರಾಜರ ಯುದ್ಧ ಎಂದು ಕರೆಯಲಾಗಿದೆ. ಇದು ಆಗ ಪರುಷ್ನಿ ಎಂದು ಕರೆಯುತ್ತಿದ್ದ ರಾವಿ ನದಿ ದಂಡೆಯ ಮೇಲೆ ಜರುಗಿತು. ಈ ಯುದ್ಧದಲ್ಲಿ ಸುದಾಸನು ಗೆದ್ದು ಭರತ ಬುಡಕಟ್ಟಿನ ಸಾರ್ವಭೌಮತ್ವವನ್ನು ಸ್ಥಾಪಿಸಿದನು.

ಕುಟುಂಬ/ಕುಲ

ಋಗ್ವೇದ ಕಾಲದಲ್ಲಿ ಸಮಾಜವು ರಕ್ತ ಸಂಬಂಧವನ್ನು ಆಧರಿಸಿ ರಚನೆಯಾಗಿತ್ತು. ವೇದ ಕಾಲದ ಆರಂಭದಲ್ಲಿ ಕುಟುಭವನ್ನು ಗೃಹ ಎಂಬ ಶಬ್ಧ ಸೂಚಿಸುದ್ದಂತೆ ತೋರುತ್ತದೆ. ಋಗ್ವೇದದಲ್ಲಿ ಈ ಶಬ್ಧವನ್ನು ಬಹಳಷ್ಟು ಬಾರಿ ಉಲ್ಲೇಖಿಸಲಾಗಿದೆ. ಹಲವು ತಲೆಮಾರಿನ ಜನರು ಕುಟುಂಬದಲ್ಲಿ ವಾಸಿಸುತ್ತಿದ್ದರಿಂದ ಕುಟುಂಬವು ಒಂದು ವಿಸ್ತೃತ ರಕ್ತ ಸಂಬಂಧಗಳಗುಂಪಾಗಿತ್ತು. ಈ ಕಾಲದ ಕುಟುಂಬವು ಪಿತೃಪ್ರಧಾನವಾಗಿತ್ತು. ಕುಟುಂಬವನ್ನು ಸೂಚಿಸುವ ಕುಲ ಎಂಬ ಶಬ್ಧ ಋಗ್ವೇದದಲ್ಲಿ ಅಪರೂಪಕ್ಕೆ ಕಂಡುಬರುತ್ತದೆ. ಈ ಕಾಲದ ಜನರು ತಮ್ಮನ್ನು ಕುಲದಿಂದ ಗುರುತಿಸಿಕೊಳ್ಳುತ್ತಿದ್ದರು. ರಾಜ್ಯದಂತಹ ಘಟಕ ರೂಪುಗೊಂಡಿರಲಿಲ್ಲವಾದ್ದರಿಂದ ಜನರು ತಮ್ಮ ಕುಲಗಳಿಗೆ ಬದ್ಧರಾಗಿರುತ್ತಿದ್ದರು. ಕುಲ ಅಥವಾ ಕುಟುಂಬ ತಂದೆತಾಯಿ, ಮಕ್ಕಳು, ದಾಸರು ಇತ್ಯಾದಿ ಬಹಳಷ್ಟು ಸದಸ್ಯರನ್ನು ಹೊಂದಿತ್ತು. ಅಂತಹ ಬಣಗಳ ಕಾದಾಟ ಆಧಿಕವಿದ್ದುದರಿಂದ ಯುದ್ಧಗಳಲ್ಲಿ ಹೋರಾಡುವ ಗಂಡು ಮಕ್ಕಳನ್ನು ಕುಟುಂಬವು ಬಯಸುತ್ತಿತ್ತು. ಇಂತಹ ಮಕ್ಕಳಿಗಾಗಿ ದೇವತೆಗಳಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದರು.

ವಿವಾಹ

ಋಗ್ವೇದ ಕಾಲದಲ್ಲಿ ವಿವಾಹ ಪದ್ಧತಿ ಸ್ಥಿರಗೊಂಡಿತ್ತು. ಬಾಲ್ಯವಿವಾಹ ಕಂಡು ಬರುವುದಿಲ್ಲ. ಹೆಣ್ಣು ಮಕ್ಕಳು ಪೂರ್ಣವಾಗಿ ಬೆಳೆದ ನಂತರವೇ ಅವರಿಗೆ ಮದುವೆ ಮಾಡುತ್ತಿದ್ದರು. ಹೆಣ್ಣು ಮತ್ತು ಗಂಡಿಗೆ ತಮ್ಮ ಸಂಗಾತಿಯನ್ನು ಆಯ್ಕೆಮಾಡುವ ಸ್ವಾತಂತ್ರ್ಯ ಇದ್ದರೂ ಅದಕ್ಕೆ ಮಾತಾಪಿತೃಗಳ ಅನುಮತಿ ಬೇಕಿತ್ತು. ವರದಕ್ಷಿಣೆ ಕಂಡುಬುರುವುದಿಲ್ಲ. ಅದರೆ ಕನ್ಯೆ ಅಂಗಹೀನಗಳಾಗಿದ್ದರೆ ವರದಕ್ಷಿಣೆ ನೀಡಬೇಕಿತ್ತು. ವಿವಾಹವು ವಧುವಿನ ಗೃಹದಲ್ಲೆ ನಡೆಯುತ್ತಿತ್ತು. ಸಾಮಾನ್ಯವಾಗಿ ವಿವಾಹಿತನು ಏಕಪತ್ನಿ ವೃತಸ್ಥನಾಗಿರುತ್ತಿದ್ದನು. ಬಹುಪತ್ನಿತ್ವ ಆಚರಣೆಯಲ್ಲಿತ್ತಾದರೂ ಅದು ಉನ್ನತ ವರ್ಗದಲ್ಲಿ ಮಾತ್ರ ಕಾಣುತ್ತಿತ್ತು. ಆಶ್ವಿನಿ ಸಹೋದರರು ಸೂರ್ಯದೇವನ ಮಗಳೊಂದಿಗೆ ಸಂಸಾರ ಮಾಡಿದ ಪ್ರಸಂಗ, ಮರುತ್ತುಗಳ ಶೋಡಶಿಯೊಂದಿಗೆ ಸುಖಪಟ್ಟ ಇತ್ಯಾದಿ ಪ್ರಸಂಗಗಳು ಬಹುಪತ್ನಿತ್ವದ ಸೂಚನೆ ನೀಡುತ್ತವೆಯಾದರೂ ಅಂತಹ ಉಲ್ಲೇಖಗಳ ಪ್ರಮಾಣ ಕಡಿಮೆ. ವಿಧವೆಯರಿಗೆ ಪುನರ್ ವಿವಾಹಕ್ಕೆ ಅವಕಾಶವಿತ್ತು. ಮಕ್ಕಳಿಲ್ಲದ ವಿಧವೆ ಮೈದುನನ್ನು ಗಂಡು ಮಾಗುವಾಗುವವರೆಗೂ ಸೇರಬಹುದಿತ್ತು. ಇದಕ್ಕೆ ನಿಯೋಗ ಪದ್ಧತಿ ಎಂದು ಕರೆಯಾಲಾಗುತ್ತಿತ್ತು.

ಸಾಮಾಜಿಕ ವ್ಯವಸ್ಥೆ

ಋಗ್ವೇದ ಕಾಲದಲ್ಲಿ  ವರ್ಣಜಾತಿ ವ್ಯವಸ್ಥೆಗಳ ಸಾಮಾಜಿಕ ಶ್ರೇಣೀಕರಣದ ಕಲ್ಪನೆ ಇರಲಿಲ್ಲ. ಋಗ್ವೇದವು ದೈಹಿಕ ಚಹರಗಳನ್ನು ಕುರಿತು ಉಲ್ಲೇಖಿಸುತ್ತದೆ. ಅದು ಶರೀರದ ಛಾಯೆ ಅಥವಾ ಬಣ್ಣಕ್ಕೆ ವರ್ಣ ಎಂಬ ಶಬ್ಧವನ್ನು ಬಳಸಿದೆ. ಸಮಾಜದಲ್ಲಿನ ವಿವಿಧ ಸ್ಥಾನಗಳನ್ನು ಅಥವಾ ಹಂತಗಳನ್ನು ಗುರುತಿಸುವಲ್ಲಿ ವರ್ಣವು ಒಂದು ಸೂಚಕವಾಗಿ ಬಳಕೆಯಾಗಿದ್ದಿರಬಹುದಾದರೂ ಕೆಲವು ಪಾಶ್ಚಿಮಾತ್ಯ ಲೇಖಕರು ಅದರ ಮಹತ್ವವನ್ನು ತುಂಬಾ ಉತ್ಪ್ರೇಕ್ಷಿಸಿ ನಿರೂಪಿಸಿದ್ದಾರೆ. ಋಗ್ವೇದ ಕಾಲದಲ್ಲಿ ಸಮಾಜವು ಯೋಧರು, ಪುರೋಹಿತರು ಮತ್ತು ಸಾಮಾನ್ಯ ಜನರು ಎಂಬುದಾಗಿ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು. ಈ ಮೂರು ವರ್ಗಗಳಲ್ಲಿ ವಿವಾಹವನ್ನು ಪ್ರತಿಬಂಧಿಸುವ ಅಥವಾ ಸಹಭೋಜನದ ನಿರ್ಬಂಧಗಳಾಗಲಿ ಇರುವುದು ಕಂಡುಬರುವುದಿಲ್ಲ. ಋಗ್ವೇದ ಕಾಲದಲ್ಲಿ ಈ ವಿಭಜನೆಯು ವೃತ್ತಿಯ ಆಧಾರದ ಮೇಲೆ ಅವಲಂಬಿತವಾಗಿತ್ತು. ಆರ್ಯಕುಲದ ಯಾರಾದರೂ ಯಾವುದೇ ವೃತ್ತಿಯನ್ನಾದರೂ ಅವಲಂಬಿಸಬಹುದಾಗಿತ್ತು. ರಾಜನ್ಯರು ಋಷಿಗಳು ಹಾಗೂ ಪುರೋಹಿತರು ಆಗುತ್ತಿದ್ದ ಉಲ್ಲೇಖ ಋಗ್ವೇದದಲ್ಲಿ ಕಂಡುಬರುತ್ತದೆ. ಋಗ್ವೇದದ ಒಂದು ಶ್ಲೋಕದಲ್ಲಿ ನಾನು ಕವಿ, ನನ್ನ ತಂದೆ ವೈದ್ಯ ಹಾಗೂ ನನ್ನ ತಾಯಿ ಧಾನ್ಯ ಬೀಸುತ್ತಾಳೆ. ನಾವು ಬೇರೆ ಬೇರೆ ವೃತ್ತಿಗಳಿಂದ ಜೀವನೋಪಾಯಗಳಿಸುತ್ತುದ್ದರೂ ನಾವೆಲ್ಲರೂ ಒಟ್ಟಿಗೆ ವಾಸವಾಗಿದ್ದೇವೆ ಎಂದು ಪ್ರಸ್ತಾಪವಾಗಿದೆ. ಆದರೆ ನಂತರದ ಕಾಲದಲ್ಲಿ ಸೇರಿಸಲಾಗಿದೆ. ಎಂದು ಹೇಳಲಾದ ಋಗ್ವೇದದ  ೧೦ನೆಯ ಮಂಡಲವಾದ ಪುರುಷ ಸೂಕ್ತದಲ್ಲಿ ಪ್ರಪ್ರಥಮ ಬಾರಿಗೆ ಸಮಾಜವು ನಾಲ್ಕು ವರ್ಣಗಳಲ್ಲಿ ವಿಭಜಿತವಾಗಿರುವುದನ್ನು ಕಾಣಬಹುದು. ಪುರುಷ ಸೂಕ್ತವೂ ಬ್ರಹ್ಮನ ಬಾಯಿಂದ ಬ್ರಾಹ್ಮಣ, ಅವನ ಕೈಗಳಿಂದ ಯೋಧನು, ಅವನ ತೊಡೆಗಳಿಂದ ವೈಶ್ಯರು ಮತ್ತು ಪಾದದಿಂದ ಶೂದ್ರನು ಜನಿಸಿದ್ದಾನೆ ಎಂದು ತಿಳಿಸುತ್ತದೆ. ಪ್ರಾರಂಭದ ವೈದಿಕರು ಸ್ಥಳೀಯರೊಂದಿಗೆ ಹೋರಾಡಿ ಅವರನ್ನು ಸೋಲಿಸಿ ತಮ್ಮ ದಾಸರನ್ನಾಗಿ ಮಾಡಿಕೊಂಡರು. ಆರ್ಯರು ಶ್ವೇತವರ್ಣೀಯರಾಗಿದ್ದು ಕಪ್ಪು ವರ್ಣದವರಾದ ದಾಸರಿಂದ ಪ್ರತ್ಯೇಕತೆಯನ್ನು ಉಳಿಸಿಕೊಂಡಿದ್ದರು. ಹೀಗಾಗಿ ಈ ಭಿನ್ನತೆಯು ಮುಖ್ಯವಾಗಿ ವರ್ಣ ವಿಭಜನೆಯ ಆಧಾರದ ಮೇಲೆ ನಿರ್ಧಾರಿತವಾಗಿತ್ತು ಎಂದು ತೋರುತ್ತದೆ. ಋಗ್ವೇದ ಕಾಲದಲ್ಲಿಯೇ ವರ್ಣರಹಿತ ಸಮಾಜವೊಂದು ಕ್ರಮೇಣ ವರ್ಣ ಸಮಾಜವಾಗಿ ಪರಿರರ್ತನೆಯಾಗಲಿಕ್ಕೆ ಬೇಕಾದ ಸಿದ್ಧತೆಗಳು ನಡೆದಿದ್ದವು ಎಂದು ಭಾವಿಸಬಹುದು.

ಸ್ತ್ರೀಯರ ಸ್ಥಾನಮಾನ

ಋಗ್ವೇದದ ಋಕ್ಕುಗಳಲ್ಲಿ ಹೆಣ್ಣು ಮಕ್ಕಳನ್ನು ಪಡೆಯುವ ಇಚ್ಚೆ ವ್ಯಕ್ತವಾಗಿಲ್ಲ. ಕುಟುಂಬದಲ್ಲಿ ಗಂಡು ಸಂತಾನಕ್ಕೆ ಹೆಚ್ಚು ಒಲವಿದ್ದರೂ ಜನಿಸಿದ ಹೆಣ್ಣು ಮಕ್ಕಳನ್ನು ಪ್ರೀತಿ ವಾತ್ಸಲ್ಯಗಳಿಂದ ಸಾಕುತ್ತಿದ್ದರು. ಸ್ತ್ರೀ ಮನೆಯಲ್ಲಿ ಗೌರವ ಸ್ಥಾನವನ್ನು ಹೊಂದಿದ್ದು ರಕ್ಷಣೆಗಾಗಿ ಪುರುಷರನ್ನು ಅವಲಂಬಿಸಿದ್ದರು. ಸ್ತ್ರೀ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದು ತಮ್ಮ ಪತಿಯೊಡನೆ ಹವಿಸ್ಸು ಅರ್ಪಿಸುವುದು ಮೊದಲಾದ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದುದು ಕಂಡುಬರುತ್ತದೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನು ನಿರ್ಲಕ್ಷಿಸುತ್ತಿರಲಿಲ್ಲವಾಗಿ ಕೆಲವರು ಋಕ್ಕುಗಳನ್ನು ರಚಿಸುವಷ್ಟು ವಿದ್ವತ್‌ನ್ನು ಹೊಂದಿದ್ದರು. ಋಗ್ವೇದದಲ್ಲಿ ವಿಶ್ವವಾರಾ, ಘೋಷ, ಅಪಾಲಾ ಮೊದಲಾದವರು ಋಕ್ಕುಗಳನ್ನು ರಚಿಸಿದ್ದಾರೆ.

ಉಡುಪು ಮತ್ತು ಆಭರಣ

ಈ ಕಾಲದ ಜನರ ಉಡುಪು ಹಾಗೂ ಶೃಂಗಾರಕ್ಕೆ ಸಂಬಂಧಿಸಿದಂತೆ ನೀವಿ, ವಾಸ ಅಥವ ಪರಿದಾನ ಎನ್ನುವ ಉಡುಪುಗಳು ಅಧಿವಾಸ, ಅಟಕ ಅಥವಾ ದ್ರಾಪಿ ಎಂದು ಕರೆಯಲ್ಪಡುತ್ತಿದ್ದ ಹೊದಿಕೆಗಳನ್ನು ಇವರು ಬಳಸುತ್ತಿದ್ದ ಉಲ್ಲೇಖಗಳಿವೆ. ಇವರು ಧರಿಸುತ್ತಿದ್ದ ಉಡುಪುಗಳು ವಿವಿಧ ಬಣ್ಣಗಳಿಂದ, ಅನೇಕ ವೇಳೆ ಚಿನ್ನದಿಂದ ಕಸೂತಿ ಕೆಲಸ ಮಾಡಿರುತ್ತಿದ್ದವು ಇವರು ಚಿನ್ನದಿಂದ ಮಾಡಿದ ಆಭರಣಗಳನ್ನು ಉಪಯೋಗಿಸುತ್ತಿದ್ದರು.

ಆಹಾರಾಭ್ಯಾಸ

ಸಾಮಾನ್ಯವಾಗಿ ದಿನನಿತ್ಯದ ಆಹಾರಕ್ಕಾಗಿ ಧಾನ್ಯಗಳು, ಯವ(ಬಾರ್ಲಿ), ಹಾಲು, ಹಾಲಿನಿಂದಾದ ಉತ್ಪನ್ನಗಳು, ತರಕಾರಿ, ಹಣ್ಣುಗಳನ್ನು ಉಪಯೋಗಿಸುತ್ತಿದ್ದರು. ಅಲ್ಲದೆ ಪ್ರಾಣಿಗಳ ಮಾಂಸವನ್ನು ಉಪಯೋಗಿಸುತ್ತಿದ್ದರು. ಹಬ್ಬಗಳಲ್ಲಿ ಇತರೆ ಸಂತೋಷ ಸಮಾರಂಭಗಳಲ್ಲಿ ಅದನ್ನು ವಿಶೇಷವಾಗಿ ಬಳಸುತ್ತಿದ್ದರು. ಕ್ರಮೇಣ ಗೋವಧೆಯನ್ನು ನಿಷೇಧಿಸುತ್ತಾ ಬಂದಿರುವುದು ಮತ್ತು ಅದಕ್ಕೆ ಸಂಬಂಧಪಟ್ಟಿದಂತೆ ಋಗ್ವೇದದಲ್ಲಿ ಅಘ್ನಾ (ಕೊಲ್ಲಬಾರದು) ಎಂಬ ಪದದಿಂದ ಗೊತ್ತಾಗುತ್ತದೆ. ನೀರಿಗಾಗಿ ‘ಉತ್ಸ’ ಅಥವಾ ನದಿಚಿಲುಮೆ, ‘ಅವಸತ್‌’ ಅಥವಾ ನಿರ್ಮಿತ ಬಾವಿಗಳನ್ನು ಅವಲಂಬಿಸಿದ್ದರು. ಅಲ್ಲದೇ ಋಗ್ವೇದದಲ್ಲಿ ‘ಸೋಮ’ ಮತ್ತು ‘ಸುರ’ ಎಂಬ ಉಲ್ಲಾಸಕಾರಿ ಪಾನೀಯಗಳ ಬಗ್ಗೆ ಉಲ್ಲೇಖವಿದೆ. ‘ಸೋಮ’ ಎಂಬುದು ಪರ್ವತಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಹಿಮಾಲಯದ ‘ಮೂಜವತ್‌’ ಶಿಖರದಲ್ಲಿ ಬೆಳೆಯುತ್ತಿದ್ದ ಗಿಡವೊಂದರ ರಸವಾಗಿತ್ತು. ಇದರ ಉಪಯೋಗ ಧಾರ್ಮಿಕ ಸಮಾರಂಭಗಳಿಗೆ ಮಾತ್ರ ಮೀಸಲಾಗಿತ್ತು. ‘ಸುರ’ ಸಾಮಾನ್ಯ ಮಾದಕ ಪಾನೀಯವಾಗಿತ್ತು.

ಮನರಂಜನೆ

ಈ ಕಾಲದ ಹೆಚ್ಚು ಜನಪ್ರಿಯವಾಗಿದ್ದ ಕ್ರೀಡೆ ಎಂದರೆ ರಥಗಳ ಪಂದ್ಯ. ಇದರ ನಂತರ ಬೇಟೆ, ನೃತ್ಯ ಪ್ರಿಯವಾದ ವಿನೋದ ಕ್ರೀಡೆಗಳಾಗಿದ್ದವು. ಪಗಡೆಯಾಟ ಈ ಕಾಲದ ಮತ್ತೊಂದು ಜನಪ್ರಿಯ ಕ್ರೀಡೆಯಾಗಿತ್ತು. ಈ ಆಟದಲ್ಲಿ ಆಟಗಾರನು ಅನೇಕ ವೇಳೆ ಸೊತು ನಷ್ಟಕ್ಕೊಳಗಾಗುತ್ತಿದ್ದನು.

ಋಗ್ವೇದ ಕಾಲದ ಆರ್ಥಿಕ ಜೀವನ

ಋಗ್ವೇದ ಕಾಲದ ಜನರಿಗೆ ವ್ಯವಸಾಯದ ಬಗ್ಗೆ ತಿಳುವಳಿಕೆ ಇತ್ತು. ಋಗ್ವೇದದ ಅತ್ಯಂತ ಪ್ರಾಚೀನ ಭಾಗದಲ್ಲಿ ನೇಗಿಲಿನ ಪ್ರಸ್ತಾಪವಿದೆ. ಬಹುಶಃ ಇದು ಮರದ ನೇಗಿಲಾಗಿದ್ದರಬಹುದು. ಬಿತ್ತನೆ ಮಾಡುವುದು ಕೊಯ್ಲುಮಾಡುವುದು, ಕಣ ಮಾಡುವುದು ಹೀಗೆ ಕೃಷಿಯ ವಿವಿಧ ಹಂತಗಳು ಅವುಗಳ ಕಾಲ ಇತ್ಯಾದಿ ವಿವಿರಗಳು ಅವರಿಗೆ ತಿಳಿದಿದ್ದವು. ವ್ಯವಸಾಯದಲ್ಲಿ ಭೂಮಿಯನ್ನು ಉಳುವ ಕಲೆಯನ್ನು ಅವೈದಿಕ ಜನರಿಂದ ಕಲಿತಿರಬಹುದಾದ ಸಾಧ್ಯತೆಗಳು ಇವೆ. ಏಕೆಂದರೆ ನೇಗಿಲನ್ನು ಸೂಚಿಸುವ ಅಂಗಳ, ಶಿರ ಮುಂತಾದ ಶಬ್ದಗಳು ಸಂಸ್ಕೃತ ಮೂಲದವುಗಳಲ್ಲ. ಋಗ್ವೇದದಲ್ಲಿ ಕೃಷಿಯನ್ನು ಚರ್ಷಾಣಿ ಎಂಬ ಹೆಸರಿನಿಂದ ಕರೆಯಲಾಗಿದೆ. ಸಾಗುವಳಿ ಮಾಡಿದ ಭೂಮಿಯನ್ನು ಉರ್ವರಾ ಅಥವಾ ಕ್ಷೇತ್ರ ಎಂದು ಕರೆಯುತ್ತಿದ್ದರು. ಇವರು ಬೆಳೆದ ಧಾನ್ಯವನ್ನು ‘ಯವ’ ಎಂದು ಕರೆಯುತ್ತಿದ್ದರು. ಪ್ರಾರಂಭದಲ್ಲಿ ಈ ಪದದ ಅರ್ಥವೇನೆಂಬುದು ತಿಳಿಯದಿದ್ದರೂ ನಂತರದ ಕಾಲದಲ್ಲಿ ಅದಕ್ಕೆ ಬಾರ್ಲಿ ಎಂದು ಅರ್ಥೈಸಲಾಗಿದೆ. ಈ ಕಾಲದಲ್ಲಿ ಭೂಮಿಯು ಖಚಿತ ರೂಪದಲ್ಲಿ ಖಾಸಗಿ ಆಸ್ತಿಯಾಗಿರಲಿಲ್ಲ. ಕುಟುಂಬಗಳು ಅಥವಾ ಕುಲಗಳು ಸಾಮುದಾಯಿಕವಾಗಿ ಭೂಮಿಯ ಒಡೆತನವನ್ನು ಹೊಂದಿರುತ್ತಿದ್ದರು.

ಋಗ್ವೇದ ಕಾಲದ ಜನರಿಗೆ ವ್ಯವಸಾಯದ ಜ್ಞಾನವಿದ್ದರೂ ಕೂಡ ಕೃಷಿಯೇ ನಿರ್ಣಾಯಕವಾಗಿರಲಿಲ್ಲ. ಬಹುಶಃ ಸಪ್ತಸಿಂಧೂ ಭಾಗದ ಶುಷ್ಕಹವೆಯ, ಹುಲ್ಲುಗಾವಲಿನ ಪ್ರದೇಶಗಳಲ್ಲಿ ಗೋಪಾಲನೆಯೇ ಅನುಕೂಲಕರವಾಗಿದ್ದರಬಹುದು. ಋಗ್ವೇದದಲ್ಲಿ ಬಹಳಷ್ಟು ಬಾರಿ ಹಸುಗಳ ಪ್ರಸ್ತಾಪ ಬರುವುದನ್ನು ನೋಡಿದರೆ ಅವರು ಮುಖ್ಯವಾಗಿ ತುರುಗಾಹಿಗಳಾಗಿದ್ದಿರಬೇಕೆಂದು ತೋರುತ್ತದೆ. ಇವರು ಕುದುರೆ, ಕುರಿ, ಆಡು ಮೊದಲಾದ ಪ್ರಾಣಿಗಳನ್ನು ಸಾಕುತ್ತಿದ್ದರಾದರೂ ಗೋವು ಮುಖ್ಯ ಸಾಕು ಪ್ರಾಣಿಯಾಗಿತ್ತು. ಗೋವು ಒಂದು ಬುಡಕಟ್ಟಿನ ಸಂಪತ್ತಾಗಿತ್ತು. ಈ ಜನರ ಸಂಸ್ಕೃತಿಯಲ್ಲಿ ಗೋಪಾಲನೆ ಅಚ್ಚೊತ್ತಿದೆ. ರಾಜನ ಮುಖ್ಯ ಕರ್ತವ್ಯ ಎಂದರೆ ಗೋವುಗಳನ್ನು ರಕ್ಷಿಸುವುದು ಹಾಗಾಗಿ ಆತನನ್ನು ಗೋಪ ಅಥವಾ ಗೋಪಾಲ ಎಂದು ಕರೆಯಲಾಗಿದೆ. ಪ್ರತಿ ಬುಡಕಟ್ಟು ಒಂದು ನಿರ್ದಿಷ್ಟ ಭೂಪ್ರದೇಶದಲ್ಲಿ ತನ್ನ ಗೋಪಾಲನೆ ನಡೆಸುತ್ತಿತ್ತು. ಗೋಪಾಲನೆಯನ್ನು ನಡೆಸುವ ಜನರನ್ನು ವಿಶಃ ಎಂದು ಕರೆಯಲಾಗಿದೆ. ಇಂಥ ಗೋವಳರ ಬೀಡನ್ನು ಗ್ರಾಮ ಎಂದು ಕರೆಯುತ್ತಿದ್ದರು. ಈ ರೀತಿ ಗ್ರಾಮಗಳು ಸಾಮುದಾಯಿಕ ಗೋಚರ ಭೂಮಿಯನ್ನು ಬಳಸುತ್ತಿದ್ದವು. ಗೋವಿಗಾಗಿ ಹೊಡೆದಾಟ ವಿಭಿನ್ನ ಬುಡಕಟ್ಟುಗಳ ಮಧ್ಯೆ ಸಾಮಾನ್ಯವಾಗಿತ್ತು. ಒಬ್ಬರು ಮತ್ತೊಬ್ಬರ ಗೋವನ್ನು ಕದ್ದೊಯ್ಯುವ ಗೋಗ್ರಹಣಗಳು, ಗೋವಿನ ರಕ್ಷಣೆಗಾಗಿ ಅವನ್ನು ಮರಳಿ ಪಡೆಯಲು ನಡೆಸುತ್ತಿದ್ದ ಗವಿಷ್ಠಗಳೆಂಬ ಯುದ್ದಗಳು ಈ ಕಾಲದಲ್ಲಿ ಸಾಮಾನ್ಯವಾಗಿದ್ದವು. ಗೋಗ್ರಹಣ ಬುಡಕಟ್ಟುಗಳ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಮಾಧ್ಯಮವಾಗಿತ್ತು. ತಮ್ಮ ಗೋವನ್ನು ರಕ್ಷಿಸಿಕೊಳ್ಳಲಾಗದ ಬುಡಕಟ್ಟುಗಳು ಕ್ರಮೇಣ ತಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡು ದುರ್ಬಲವಾಗುತ್ತಿದ್ದವು. ರಾಜರು ಗೋವನ್ನು ರಕ್ಷಿಸುವ ಸಂದರ್ಭದಲ್ಲಿ ತನ್ನ ಪ್ರತಿಷ್ಠೆಯನ್ನು ಮೆರೆಯುತ್ತಿದ್ದರು. ಯುದ್ದದಲ್ಲಿ ಸೆರೆಹಿಡಿದುಕೊಂಡು ಬಂದ ಗೋವುಗಳನ್ನು ವಿಧಾತ ಎಂಬ ಸಭೆಯಲ್ಲಿ ಹಂಚಿಕೊಳ್ಳುತ್ತಿದ್ದರು. ಋಗ್ವೇದದಲ್ಲಿ ಬರುವ ದಾನಸ್ತುತಿಯಲ್ಲಿ ಗೋವು, ಕುದುರೆ, ಸುವರ್ಣ, ರಥ, ದಾಸಿಯರು ಮುಂತಾದ ಬೆಲೆಬಾಳುವ ವಸ್ತುಗಳನ್ನು ನೀಡುತ್ತಿದ್ದ ಉಲ್ಲೇಖ ಸಿಗುತ್ತವೆ. ಅದರಲ್ಲೂ ಈ ಕಾಲದ ಪುರೋಹಿತರಲ್ಲಿ ಋಷಿಗಳಲ್ಲಿ ದಾನ ಸ್ವೀಕರಿಸಿದ ಗೋಮಂದೆಯೇ ಇರುತ್ತಿತ್ತು. ಮೊದಲು ಯಜ್ಞಯಾಗಾದಿಗಳಿಗೆಲ್ಲ ಗೋವನ್ನು ಬಲಿ ಕೊಡುವ ಪದ್ಧತಿ ಇದ್ದು ನಂತರ ಕೆಲ ನಿರ್ದಷ್ಟ ಪ್ರಕಾರದ ಗೋವುಗಳ ಬಲಿಯನ್ನು ಅವು ‘ಅಘ್ನ’ ಎಂದು ನಿಷೇಧಿಸಲಾಯಿತು. ಹೀಗೆ ಋಗ್ವೇದ ಕಾಲದಲ್ಲಿನ ಜನರು ಮುಖ್ಯವಾಗಿ ತುರುಗಾಹಿಗಳಾಗಿರುವುದನ್ನು ಕಾಣಬಹುದು. ಇವರು ರಾಸುಗಳ ಕಿವಿಗಳ ಮೇಲೆ ಗುರುತು ಹಾಕುವ ಅಭ್ಯಾಸ ರೂಢಿಯಲ್ಲಿತ್ತು. ‘8’ ಎಂಬ ಚಿನ್ಹೆಯನ್ನ ಗೋವಿನ ಕಿವಿಗೆ ಹಾಕಿ ಅದನ್ನು ‘ಅಷ್ಟಕರ್ಣಿ’ ಎಂದು ಕರೆದಿರುವ ನಿದರ್ಶನದಿಂದ ಈ ಪದ್ಧತಿ ಪ್ರಚಲಿತದಲ್ಲಿದ್ದುದನ್ನು ತಿಳಿಯಬಹುದು.

ಕುಶಲ ಕರ್ಮಿಗಳು

ವೃತ್ತಿ ಕುಶಲಿಗಳಾದ ಚರ್ಮಕಾರರು, ಲೋಹಕಾರರು, ನೇಕಾರರು, ಕುಂಬಾರರು, ರಥಕಾರರು ಮುಂತಾದ ಕುಶಲಕರ್ಮಿಗಳನ್ನು ಋಗ್ವೇದ ಪ್ರಸ್ತಾಪಿಸುತ್ತದೆ. ಇದು ಈ ಕಸುಬುಗಳು ಆ ಕಾಲದಲ್ಲಿ ಪ್ರಚಲಿತದಲ್ಲಿದ್ದವೆಂಬುದನ್ನು ಸೂಚಿಸುತ್ತದೆ. ಬಡಗಿಯು ರಥ ನಿರ್ಮಿಸುವುದು, ಗೃಹ ನಿರ್ಮಾಣದಲ್ಲಿನ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತದೆ. ರಥಗಳು ಯುದ್ಧಕ್ಕೆ, ಸಂಚಾರಕ್ಕೆ, ಸಾಗಣಿಕೆಗೆ ಹಾಗೂ ಕ್ರೀಡೆಗೆ ಅವಶ್ಯಕವಾಗಿದ್ದರಿಂದ ಅವುಗಳನ್ನು ನಿರ್ಮಿಸುವ ರಥಕಾರು ಮತ್ತು ಬಡಗಿಯು ಸಮಾಜದಲ್ಲಿ ಅತ್ಯಂತ ಅವಶ್ಯಕ ವ್ಯಕ್ತಿಯಾಗಿದ್ದನು. ಋಗ್ವೇದದಲ್ಲಿ ತಾಮ್ರ ಅಥವಾ ಕಂಚನ್ನು ಅಯಸ್‌ಎಂದು ಕರೆದಿರುವುದು ಲೋಹಗಾರಿಕೆಯು ಅವರಿಗೆ ತಿಳಿದಿತ್ತು ಎಂದು ತಿಳಿಯಬಹುದು. ಪ್ರಾಕ್ತನಶಾಸ್ತ್ರೀಯವಾಗಿ ಕಬ್ಬಿಣದ ಬಳಕೆ ಈ ಕಾಲದಲ್ಲಿದ್ದುದಕ್ಕೆ ಆಧಾರಗಳು ಸಿಗುವುದಿಲ್ಲ. ತಾಮ್ರವನ್ನು ಬಿಟ್ಟರೆ ಇವರಿಗೆ ಬಂಗಾರದ ಉಪಯೋಗ ತಿಳಿದಿತ್ತು. ಬಂಗಾರವನ್ನು ಆಭರಣಗಳಿಗೆ ಹಾಗೂ ಗಟ್ಟಿಗಳನ್ನಾಗಿ ಮಾಡಿ ದಾನ ನೀಡಲು ಉಪಯೋಗಿಸುತ್ತಿದ್ದರು. ನೇಕಾರರು ಮುಖ್ಯವಾಗಿ ಉಣ್ಣೆಯ ಬಟ್ಟೆಯನ್ನು ನೇಯುತ್ತಿದ್ದರು. ಬಟ್ಟೆಗಳಿಗೆ ಜರಿಯ ವಿನ್ಯಾಸವನ್ನು ರಚಿಸುವ ಕಸೂತಿ ಕಲೆ ಅವರಿಗೆ ತಿಳಿದಿತ್ತು.

ವ್ಯಾಪಾರ ಮತ್ತು ವಾಣಿಜ್ಯ

ಋಗ್ವೇದ ಕಾಲದ ಜನರು ವಿಶೇಷವಾಗಿ ತುರುಗಾಹಿಗಳು, ಇವರು ಕೃಷಿಯನ್ನು ಅವಲಂಭಿಸಿದ್ದರೂ ವ್ಯಾಪಾರ ವಾಣಿಜ್ಯಗಳ ಬಗ್ಗೆ ಉದಾಸೀನರಾಗಿರಲಿಲ್ಲ. ಋಗ್ವೇದದ ಕೆಲವು ಋಕ್ಕುಗಳಲ್ಲಿ ಈ ಕಾಲದ ಜನರು ವ್ಯಾಪಾರ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವುದನ್ನು ಸೂಚಿಸುತ್ತದೆ. ವ್ಯಾಪಾರವು ಹೆಚ್ಚಾಗಿ ‘ಪಾಣಿ’ ಎಂಬ ಜನರ ಮುಖ್ಯ ಕಸುಬಾಗಿತ್ತು. ಇವರು ಪ್ರಾಯಶಃ ಆರ್ಯೇತರ ಜನರಾಗಿದ್ದಿರಬೇಕು. ಆ ಕಾಲದಲ್ಲಿ ಇವರ ಜಿಪುಣತನ ನಾಣ್ನುಡಿಯಾಗಿ ಹೋಗಿದ್ದಿತು. ವ್ಯಾಪಾರವು ಹೆಚ್ಚಾಗಿ ಸರಕುಗಳ ವಿನಿಮಯ ಪದ್ಧತಿಯನ್ನು ಅನುಸರಿಸಿತ್ತು. ವ್ಯಾಪಾರದ ಮುಖ್ಯ ಸರಕುಗಳು ಬಟ್ಟೆ, ಹೊದಿಕೆ, ವಸ್ತ್ರ ಮತ್ತು ಚರ್ಮದ ವಸ್ತುಗಳಾಗಿದ್ದವು. ಗೋವಿನ ಬೆಲೆಯ ಆಧಾರದ ಮೇಲೆ ವಸ್ತುಗಳ ಬೆಲೆಯನ್ನು ನಿರ್ಧರಿಸುತ್ತಿದ್ದರು. ಆ ಕಾಲದಲ್ಲಿನ ಯಾವುದೇ ನಾಣ್ಯಗಳು ದೊರೆತಿಲ್ಲ. ಆದರೆ ನಾಣ್ಯ ರೂಪದ ಹಣ ಚಲಾವಣೆಯ ಮಧ್ಯವರ್ತಿಯಾಗಿ ‘ನಿಷ್ಕ’ ಎಂಬ ಲೋಹ ಇದ್ದಿತೆಂದು ತಿಳಿದುಬರುತ್ತದೆ. ಆದರೆ ಕೆಲವು ವಿದ್ವಾಂಸರು ನಿಷ್ಕ ಎಂಬ ಲೋಹ ಚಿನ್ನದ ಕಂಠಾಭರಣವೆಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಋಗ್ವೇದದಲ್ಲಿನ ಕೆಲವು ಉಲ್ಲೇಖಗಳಲ್ಲಿ ನೂರು ಗೋವು, ನೂರು ಕುದುರೆ ಹಾಗೂ ನೂರು ನಿಷ್ಕಗಳನ್ನು ಕಾಣಿಕೆಯಾಗಿ ನೀಡಿದ ಅಂಶಗಳು ಕಂಡುಬರುತ್ತವೆ. ಇಂತಹ ಉಲ್ಲೇಖಗಳಲ್ಲಿ ನಿಷ್ಕ ಆಭರಣವಾಗಿರದೆ, ಚಿನ್ನದ ಗಟ್ಟಿ ಅಥವಾ ಹಣವೇ ಆಗಿದ್ದರಬಹುದೆಂದು ತೋರುತ್ತದೆ. ನಿಷ್ಕವು ಒಂದು ನಿಗದಿಯಾದ ತುಕವುಳ್ಳದ್ದಾಗಿತ್ತು. ಆದರೆ ಅದು ರಾಜ ಮುದ್ರಯಿಲ್ಲದ ಲೋಹದ ಚೂರಾಗಿತ್ತು. ಋಗ್ವೇದದಲ್ಲಿ ಬಳುವಳಿಗಳನ್ನು ವರ್ಣಿಸುವಾಗ ಚಿನ್ನದ ‘ಮನಾ’ದ ಬಗ್ಗೆ ಉಲ್ಲೇಖವಿದೆ. ಆದರೆ ಇದು ಹಣವಾಗಿತ್ತೇ ಎಂಬುದಕ್ಕೆ ಸಂಬಂಧಿಸಿ ಸಂದೇಹಗಳಿವೆ. ಹಲವು ವಿದ್ವಾಂಸರು ಈ ಮನಾವನ್ನು ಹಳೆಯ ಬ್ಯಾಬಿಲೋನಿಯಾದ ತೂಕದ ಮೂಲಮಾನವಾದ ‘ಮಾನ್ಹಾ’ (manah)ಕ್ಕೆ ಸಮಾನವೆಂದು ಹೇಳುತ್ತಾರೆ.

ಸಂಚಾರದ ಮತ್ತು ವಸ್ತುಗಳ ಸಾಗಾಣಿಕೆಯ ಪ್ರಮುಖ ಸಾಧನಗಳೆಂದರೆ ಕುದುರೆಗಳು ಎಳೆಯುತ್ತಿದ್ದ ರಥಗಳು ಮತ್ತು ‘ಅನಸ್‌’ ಎಂದು ಕರೆಯಲ್ಪಡುತ್ತಿದ್ದ ಎತ್ತಿನ ಗಾಡಿಗಳು. ಯಾತ್ರಿಕರಿಗೆ ಹಾಗೂ ವ್ಯಾಪಾರಗಾರರ ಸಂಚಾರಕ್ಕೆ ಮಾರ್ಗಗಳನ್ನು ರಚಿಸಲು ಮತ್ತು ದುಷ್ಟ ಮೃಗಗಳಿಂದ ಹಾಗು ದರೋಡೆಕೋರರಿಂದಲೂ ಕೂಡಿದ ಪ್ರಾಚೀನ ವನಗಳನ್ನು ಸುಡಲು ಅಗ್ನಿದೇವನನ್ನು ಪುನಃ ಪುನಃ ಜನರು ಪ್ರಾರ್ಥಿಸುತ್ತಿದ್ದರು ಹಾಗೂ ಅಗ್ನಿದೇವನನ್ನು ಪಥಿಕೃತ್‌ಅಥವಾ ಮಾರ್ಗಕರ್ತೃ ಎಂಬ ಹೆಸರಿನಿಂದ ಕರೆಯುತ್ತಿದ್ದರು.

ಋಗ್ವೇದಗಳ ಕಾಲದಲ್ಲಿ ಸಮುದ್ರ ಯಾನ ಮಾಡುತ್ತಿದ್ದರೆ ಎಂಬ ಬಗ್ಗೆ ಗೊಂದಲಗಳಿವೆ. ಸಮುದ್ರ ಎಂಬ ಶಬ್ದವನ್ನು ಋಗ್ವೇದವು ನೀರಿನ ಸಂಗ್ರಹ ಎಂಬ ಅರ್ಥ ಬರುವಂತೆ ಬಳಸಿರುವುದರಿಂದ ಆ ಕಾಲದ ಆರ್ಯರಿಗೆ ಸಾಗರಗಳು ಮತ್ತು ಸಮುದ್ರಗಳ ಪರಿಚಯವಿದ್ದುದು ಸಂದೇಹಾಸ್ಪದ. ಕೇವಲ ನದಿಗಳನ್ನು ದಾಟಲು ಮಾತ್ರ ನೌಕಾಯಾನ ರೂಢಿಯಲ್ಲದಿದ್ದಿತೆಂಬ ಒಂದು ಅಭಿಪ್ರಾಯವಿದೆ. ಆದರೆ ನೂರು ಕಡಲ್ಗೋಲುಗಳ ಸಹಾಯದಿಂದ ಸಮುದ್ರಯಾನ ಮಾಡಿದ ನಾವಿಕರ ಬಗ್ಗೆ ಋಗ್ವೇದದಲ್ಲಿ ಉಲ್ಲೇಖಗಳು ಸಿಗುತ್ತವೆ. ಸಮುದ್ರವೆಂದರೆ ಸಿಂಧೂ ನದಿಯ ಕೆಳಗಣ ಭಾಗದ ಪ್ರವಾಹವೆಂದು ಕೆಲವರು ಅಭಿಪ್ರಾಯಪಡುತ್ತಾರೆ.

ವಸತಿ ನೆಲೆ

ಋಗ್ವೇದ ಕಾಲದ ಆರ್ಯರು ಪಟ್ಟಣವಾಸಿಗಳಾಗಿರಲಿಲ್ಲ ಎಂಬುದು ಖಚಿತವಾಗಿದೆ. ಕೋಟೆಗಳಿಂದ ಆವೃತವಾದ ಮಣ್ಣಿನ ಮನೆಗಳ ವಸತಿಗಳಲ್ಲಿ ಅವರು ವಾಸಮಾಡುತಿದ್ದಿರಬೇಕು. ಇದಕ್ಕೆ ಸೂಕ್ತವಾದ ಸಮರ್ಥನೆಯನ್ನು ಪ್ರಾಕ್ತನಶಾಸ್ತ್ರ ಇನ್ನೂ ಒದಗಿಸಿಲ್ಲ. ಹೀಗಾಗಿ ಈ ಕಾಲದ ಜನರು ಹಳ್ಳಿಗಳಲ್ಲಿ ವಾಸವಾಗಿದ್ದರು. ನಗರ ಎಂಬ ಪದವು ಋಗ್ವೇದದಲ್ಲಿ  ಕಂಡುಬರುವುದಿಲ್ಲ. ಋಗ್ವೇದದಲ್ಲಿ ಪುರಗಳು ಎಂಬ ಹೆಸರುಗಳ ಉಲ್ಲೇಖವಿದ್ದು ಅವು ಸಾಕಷ್ಟು ದೊಡ್ಡದಿದ್ದವು. ಕೆಲವು ಪುರಗಳು ರಕ್ಷಣೆಗಾಗಿ ಶತಭುಜಿಗಳಾಗಿದ್ದವು. ಅಂದರೆ ನೂರು ಗೋಡೆಗಳಿಂದ ಕೂಡಿದವುಗಳಾಗಿದ್ದವು. ಆದರೆ ಪುರಗಳು ನಗರಗಳಾಗಿರದೆ ಬಹುಶಃ ಕೋಟೆಗಳಾಗಿವೆಯೋ, ಖಿಲ್ಲೆಗಳಾಗಿಯೋ ಇರಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಋಗ್ವೇದದ ಕೆಲವು ಶ್ಲೋಕಗಳಲ್ಲಿ ಕಂಡುಬರುವ ‘ಶಾರದೀ’ ಎನ್ನುವ ಪದ ಕಂಡುಬರುತ್ತದೆ. ಅವು ಬಹುಮಟ್ಟಿಗೆ ಶರತ್ಕಾಲದಲ್ಲಿ ನಿರಾಶ್ರಿತರಿಗೆ ಆಶ್ರಯ ಸ್ಥಾನವಾಗಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಈಚೆಗೆ ಹರಿಯಾಣದ ಭಗವಾನ್ ಪುರ ಮತ್ತು ಪಂಜಾಬಿನ ಮೂರು ವಿವೇಶನಗಳಲ್ಲಿ ನಡೆಸಿರುವ ಉತ್ಖನನಗಳಲ್ಲಿ ಚಿತ್ರಿತ ಕಂದು ಕುಂಬಾರಿಕೆ ವಸ್ತುಗಳೊಂದಿಗೆ ಉತ್ತರ ಹರಪ್ಪದ ಕುಂಬಾರಿಕೆ ವಸ್ತುಗಳು ದೊರೆತಿವೆ. ಭಗವಾನ್ ಪುರದ ಕಾಲವನ್ನು ಕ್ರಿ. ಪೂ. ೧೬೦೦ರಿಂದ ಕ್ರಿ. ಪೂ. ೧೦೦೦ ಎಂದು ನಿರ್ಣಯಿಸಲಾಗಿದ್ದು ಅದು ಋಗ್ವೇದ ಕಾಲಕ್ಕೆ ಸರಿಸುಮಾರಾಗಿ ಜೋಡಿಯಾಗುತ್ತದೆ. ಈ ನಾಲ್ಕು ನಿವೇಶನಗಳು ಇರುವ ಪ್ರದೇಶವು ಸಹ ಋಗ್ವೇದ ಕಾಲದ ಆರ್ಯರು ನೆಲೆಸಿದ್ದ ಪ್ರದೇಶದ ಒಂದು ಮುಖ್ಯಭಾಗವಾಗಿದೆ. ಇಲ್ಲೆಲ್ಲ ಚಿತ್ರಿತ ಕಂದು ಮಡಕೆಗಳು ದೊರೆತಿದ್ದರೂ ಕಬ್ಬಿಣ ಪೂರ್ವ ಹಂತವನ್ನು ಕುರಿತು ಅಲೋಚಿಸಬಹುದು. ಇದು ಋಗ್ವೇದ ಕಾಲಕ್ಕೆ ಹೊಂದುತ್ತದೆ. ಈ ಭಗವಾನ್ ಪುರದಲ್ಲಿ ಹದಿಮೂರು ಕೋಣೆಗಳ ಒಂದು ಮಣ್ಣಿನ ಮನೆ ದೊರೆತಿರುವುದು ಒಂದು ವಿಶೇಷ. ಇದು ಒಂದು ದೊಡ್ಡ ಜಂಟಿ ಕುಟುಂಬದ ಇಲ್ಲವೇ ಬಣದ ಮುಖ್ಯಸ್ಥನ ಮನೆಯನ್ನು ಸೂಚಿಸುತ್ತದೆ. ಈ ಎಲ್ಲ ನಿವೇಶನಗಳಲ್ಲೂ ದನದ ಮೂಳೆಗಳು ದೊರೆತಿವೆ.

ಉತ್ತರ / ನಂತರ ವೈದಿಕ ಯುಗ

ನಂತರ ವೇದ ಕಾಲದ ಚರಿತ್ರೆಯನ್ನು ತಿಳಿಯಲು ಋಗ್ವೇದ ಸಂಹಿತೆಯ ನಂತರ ರಚಿತವಾದ ವೈದಿಕ ಗ್ರಂಥಗಳು ಸಹಾಯಮಾಡುತ್ತವೆ. ಈ ಕಾಲದಲ್ಲಿ ಋಗ್ವೇದದ ಮಂತ್ರಗಳನ್ನು ರಾಗಗಳಿಗೆ ಹೊಂದಿಸಿ ಹಾಡಲು ಅನುಕೂಲವಾಗುವಂತೆ ಮಾರ್ಪಡಿಸಿದ ಸಂಗ್ರಹವನ್ನು ಸಾಮವೇದ ಸಂಹಿತ ಎಂದು ಕರೆಯುತ್ತಾರೆ. ಮಂತ್ರಗಳು ಮತ್ತು ಅವುಗಳನ್ನು ಪಠಿಸುವಾಗ ಆಚರಿಸಬೇಕಾದ ಸಂಸ್ಕಾರ ಕ್ರಿಯೆಗಳನ್ನು ಯಜುರ್ವೇದ ಸಂಹಿತೆಯಲ್ಲಿ ವಿವರಿಸಲಾಗಿದೆ. ಈ ಸಂಸ್ಕಾರ ಕ್ರಿಯೆಗಳು ಅವು ರೂಪುಗೊಂಡ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳನ್ನು ಪ್ರತಿನಿಧಿಸುತ್ತವೆ. ಅಥರ್ವಣ ವೇದ ಸಂಹಿತೆಯ ಕೇಡು ಹಾಗೂ ಕಾಯಿಲೆಗಳನ್ನು ನಿವಾರಿಸುವ ಮಂತ್ರ ತಂತ್ರಗಳನ್ನು ಒಳಗೊಂಡಿದೆ. ಇದು ಆರ್ಯೇತರ ನಂಬಿಕೆಗಳು ಹಾಗೂ ಅಚರಣೆಗಳ ಮೇಲೆ ಬೆಳಕು ಬೀರುತ್ತದೆ. ವೇದ ಸಂಹಿತೆಗಳ ನಂತರ ಬ್ರಾಹ್ಮಣಗಳು ಎಂಬ ಗ್ರಂಥಗಳು ರಚಿತವಾದವು. ಅವು ಸಂಸ್ಕಾರದ ಸೂತ್ರಗಳನ್ನು  ಸಂಸ್ಕಾರ ಕ್ರಿಯೆಗಳ ಸಾಮಾಜಿಕ ಹಾಗೂ  ಮತಧರ್ಮೀಯ ಅರ್ಥಗಳನ್ನು ವಿವರಿಸುತ್ತದೆ. ಇವುಗಳಲ್ಲದೆ ಅರಣ್ಯಕಗಳು, ಉಪನಿಷತ್ತು ಗಳು, ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ನಂತರ ವೇದಕಾಲದ ಸಮಾಜವನ್ನು ತಿಳಿಸುತ್ತವೆ. ಈ ಉತ್ತರ ವೇದಗ್ರಂಥಗಳೆಲ್ಲ ಕ್ರಿ. ಪೂ. ೧೦೦೦ದಿಂದ  ಕ್ರಿ. ಪೂ. ೬೦೦ರ ನಡುವೆ ಗಂಗಾಬಯಲಿನ ಉತ್ತರ ಭಾಗದಲ್ಲಿ ರಚಿತವಾದಂತಹವುಗಳಾಗಿವೆ. ಮತ್ತು ಈ ಕಾಲಾವಧಿಗೆ ಸೇರಿದಂತೆ ಗಂಗಾ ನದಿ ಬಯಲಿನ  ಪ್ರದೇಶದಲ್ಲಿ ಸುಮಾರು ೭೦೦ ನಿವೇಶನಗಳು ಪತ್ತೆಯಾಗಿವೆ. ಅವು ಆ ಕಾಲದಲ್ಲಿ ಮೊಟ್ಟ ಮೊದಲಬಾರಿಗೆ ಜನವಸತಿಗಳಿಂದ ಆದಂತಹವುಗಳಾಗಿವೆ. ಇಲ್ಲಿನ ನಿವಾಸಿಗಳು ಹೊಳಪಿನ ಬೂದು ಬಣ್ಣದ ಮಡಕೆಗಳ ಜೊತೆ ಕಬ್ಬಿಣದ ಆಯುಧಗಳನ್ನು ಬಳಸುತ್ತಿದ್ದರು. ಈ ರೀತಿ ಉತ್ತರ ವೈದಿಕ ಗ್ರಂಥಗಳು ಮತ್ತು ಉತ್ಖನನಗಳಿಂದ ದೊರೆಯುವ ಸಾಕ್ಷಾಧಾರಗಳಿಂದ ಈ ಕಾಲದ ಜನಜೀವನದ ಒಂದು ಸ್ಥೂಲ ಚಿತ್ರಣವನ್ನು ಕಟ್ಟಿಕೊಳ್ಳಲು ಸಾಧ್ಯವಿದೆ.

ಉತ್ತರ ವೇದ ಕಾಲದ ಭೌಗೋಳಿಕ ವಿಸ್ತರಣೆ

ಉತ್ತರ ವೇದಕಾಲದಲ್ಲಿ ಉಲ್ಲೇಖಿತವಾದ ಭೌಗೋಳಿಕ ಪ್ರದೇಶವು ಗಂಗಾ-ಯುಮುನಾ ನದಿಗಳ ನಡುವಿನ ಪ್ರದೇಶದಲ್ಲಿ ಕೇಂದ್ರಿತವಾಗಿದೆ. ಸಪ್ತಸಿಂಧೂ ಪ್ರದೇಶ ಈ ಕಾಲದ ಆರ್ಯರ ಸ್ಮೃತಿಯಿಂದ ಕ್ರಮೇಣ ಮರೆಯಾಯಿತು. ಕ್ರಿ. ಪೂ. ೧೦೦ರ ವೇಳೆಗೆ ಸರಸ್ವತೀ ನದಿ ಬತ್ತಿ ಹೋಗತೊಡಗಿತೆಂದು ಸಾಹಿತ್ಯದಲ್ಲಿ ಸೂಚಿತವಾಗಿದೆ. ಈ ವೇಳೆಯಲ್ಲೇ ಆರ್ಯರು ಗಂಗಾ-ಯಮುನಾ ನದಿಗಳ ಪ್ರದೇಶಕ್ಕೆ ತಮ್ಮ ವಸತಿಗಳನ್ನು ವಿಸ್ತರಿಸಿದ್ದರು. ಈ ಕಾಲದಲ್ಲಿ ಭರತರು ಮತ್ತು ಪುರುಗಳು ಒಂದುಗೂಡಿ ಕುರುಜನರಾದರು. ಅವರು ಇಲ್ಲಿ ವಾಸಿಸುತ್ತಿದ್ದರು. ಮಹಾಭಾರತ ಮಹಾಕಾವ್ಯದ ಮುಖ್ಯ ಕುರುವಂಶದ ವೀರರ ಮಧ್ಯೆ ನಡೆದ ಯುದ್ದವನ್ನು ನಿರೂಪಿಸುತ್ತದೆ. ಕುರುವಂಶದ ರಾಜಧಾನಿ ಗಂಗಾನದಿಯ ದಡದ ಮೇಲಿನ ಹಸ್ತಿನಾಪುರವಾಗಿತ್ತು. ಯಮುನಾ ನದಿಯ ಪಶ್ಚಿಮಕ್ಕೆ ಇಂದಿನ ಹರ್ಯಾಣ ಹಾಗೂ ದೆಹಲಿಗಳಲ್ಲಿ ಕುರುಕ್ಷೇತ್ರ ಹಾಗೂ ಇಂದ್ರಪ್ತಸ್ಥಗಳಿದ್ದವು ಕುರುಭೂಮಿಯ ಪೂರ್ವಕ್ಕೆ ಪಾಂಚಾಲ ದೇಶವಿತ್ತು. ಅಹಿಚ್ಚತ್ರ ಇದರ ಪ್ರಮುಖ ಪಟ್ಟಣವಾಗಿತ್ತು. ಕುರುಪಾಂಚಾಲಗಳು ಸೇರಿದ ಪ್ರದೇಶವನ್ನು ಆರ್ಯಾವರ್ತ ಎಂದು ನಂತರ ಗುರುತಿಸುತ್ತಿದ್ದರು ಹಾಗೂ ಈ ಪ್ರದೇಶದಲ್ಲೇ ಶ್ರೇಷ್ಠವಾದ ವೈದಿಕ ಆಚರಣೆ ಪ್ರಚಲಿತದಲ್ಲಿತ್ತೆಂದು ತಿಳಿದುಬರುತ್ತದೆ.

ಉತ್ತರ ವೇದಕಾಲದ ಜನರಿಗೆ ಕುರುಪಾಂಚಾಲರಿಂದ ಹೊರಗಿದ್ದ ಅನೇಕ ಪ್ರದೇಶಗಳು ಪರಿಚಯವಿದ್ದವು. ಬ್ರಾಹ್ಮಣಗಳು ಹಾಗೂ ಉಪನಿಷತ್ತುಗಳಲ್ಲಿ ವಿದೇಹ, ಕಾಶಿ, ಕೋಸಲ ಉಲ್ಲೇಖ ಬರುತ್ತದೆ. ಈ ರಾಜರುಗಳೆಲ್ಲ ವೈದಿಕ ಸಂಸ್ಕೃತಿಯನ್ನು ಪಾಲಿಸುವವರಾಗಿ ಕಂಡುಬರುತ್ತಾರೆ. ಒಟ್ಟಾರೆ ಆರ್ಯವರ್ತ ಹಾಗೂ ಕೋಸಲ, ವಿದೇಹ, ಕಾಶಿ ಮುಂತಾದ ಪ್ರದೇಶಗಳಲ್ಲಿ ಉತ್ತರ ವೇದ ಕಾಲದ ವೈಧಿಕ ಸಂಸ್ಕೃತಿ ಪ್ರಚಲಿತದಲ್ಲಿತ್ತು.

ಸಾಮಾಜಿಕ ಜೀವನ

ಉತ್ತರ ವೇದ ಕಾಲದ ಸಮಾಜವು ಬ್ರಾಹ್ಮಣ, ರಾಜನ್ಯ ಅಥವಾ ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಕಾಲ್ಕು ವರ್ಣಗಳಾಗಿ ವಿಂಗಡಣೆಗೊಂಡಿತ್ತು. ವರ್ಣಕಲ್ಪನೆಯು ಋಗ್ವೇದದ ೧೦ನೆಯ ಮಂಡಲ ಪುರುಷ ಸೂಕ್ತದಲ್ಲಿ ವ್ಯಕ್ತವಾಗಿದೆ. ೧೦ನೆಯ ಮಂಡಲ  ಕ್ರಿ. ಪೂ. ಸುಮಾರು ೮೦೦ರ ಕಾಲದಲ್ಲಿ ರಚನೆಯಾಯಿತು. ಇದೇ ಕಾಲ ಹಾಗೂ ಇದರ ನಂತರ ಕಾಲದ ವೈದಿಕ ಸಾಹಿತ್ಯದಲ್ಲಿ ವರ್ಣಕಲ್ಪನೆ ಪದೇ ಪದೇ ಬರುತ್ತದೆ. ಈ ವರ್ಣಕಲ್ಪನೆ ಸಿದ್ಧವಾಗುವ ಕಾಲಕ್ಕಾಗಲೇ ಸಮಾಜ ಶ್ರೇಣಿಕೃತವಾಗಿ ವಿಭಾಗವಾಗತೊಡಗಿತ್ತು. ಇದಕ್ಕೆ ಕಾರಣ ಈ ಕಾಲದಲ್ಲಿ ರಾಜ್ಯ ವ್ಯವಸ್ಥೆಯು ನಿರ್ಮಾಣವಾಗಿ ‘ಜನ’ ಎಂದು ಸಾಮುದಾಯಿಕವಾಗಿ ಗುರುತಿಸಲ್ಪಡುತ್ತಿದ್ದವರು ಕ್ರಮೇಣ ನಾಲ್ಕು ವಿಭಿನ್ನ ಶ್ರೇಣಿಗಳನ್ನು ಪ್ರತಿನಿಧಿಸತೊಡಗಿದರು. ಈ ವರ್ಣ ಕಲ್ಪನೆಯ ಪ್ರಕಾರ ಸಮಾಜ ನಾಲ್ಕು ವಿಭಿನ್ನ ಜನರಿಂದ ಕೂಡಿದೆ. ಅವರೆಂದರೆ ಬ್ರಾಹ್ಮಣ, ರಾಜನ್ಯ (ಕ್ಷತ್ರಿಯ), ವೈಶ್ಯ ಮತ್ತು ಶೂದ್ರ. ಪುರುಷ ಸೂಕ್ತದ ಈ ಪುರಾಣವನ್ನು ನಂತರ ಆಯಾವರ್ಣಗಳ ಕೆಲಸ ಹಾಗೂ ಸಾಮಾಜಿಕ ಸ್ಥಾನಮಾನಗಳನ್ನು ಸೂಚಿಸಲು ಬಳಸಲಾಯಿತು. ಇದರ ಪ್ರಕಾರ ಬ್ರಾಹ್ಮಣರು ಅಧ್ಯಯನ, ಅಧ್ಯಾಪನ, ಯಜ್ಞವನ್ನು ಮಾಡಿಸುವುದು, ದಾನ ಇತ್ಯಾದಿ ಕಾರ್ಯಗಳಲ್ಲಿ ತೊಡಗಿರಬೇಕು. ಕ್ಷತ್ರಿಯರು ರಾಜ್ಯಪಾಲನೆ, ಯುದ್ಧ, ಧರ್ಮ ರಕ್ಷಣೆ ಮಾಡಬೇಕು. ವೈಶ್ಯರು ಸಂಪತ್ತಿನ ಉತ್ಪಾದನೆ ಮಾಡಬೇಕು ಹಾಗೂ ಶೂದ್ರರು ಈ ಮೇಲಿನ ಮೂರು ವರ್ಣಗಳ ಸೇವೆಯನ್ನು ಮಾಡಬೇಕು ಎಂದು ತಿಳಿಯುತ್ತದೆ.

ಆರಂಭದಲ್ಲಿ ಪುರೋಹಿತರಲ್ಲಿ ಹದಿನಾರು ವರ್ಗಗಳಿದ್ದವು. ಆದರೆ ಅವರಲ್ಲೊಂದು ವರ್ಗವಾಗಿದ್ದ ಬ್ರಾಹ್ಮಣರು ಉಳಿದವರನ್ನು ಮೀರಿ ಅತ್ಯಂತ ಪ್ರಧಾನ ವರ್ಗವಾದರು. ತಮಗಾಗಿ ಇಲ್ಲವೆ ತಮ್ಮ ಪೋಷಕರಿಗಾಗಿ ಸಂಸ್ಕಾರ ಕ್ರಿಯೆಗಳನ್ನು, ಯಜ್ಞಯಾಗಾದಿಗಳನ್ನು ಜರುಗಿಸುತ್ತಿದ್ದರಲ್ಲದೇ ಕೃಷಿಗೆ ಸಂಬಂಧಿಸಿದಂತಹ ಹಬ್ಬಗಳನ್ನು ನಡೆಸಿಕೊಡುತ್ತಿದ್ದರು. ಅವರು ತಮ್ಮ ಆಶ್ರಯದಾತನಿಗೆ ಯುದ್ಧದಲ್ಲಿ ಯಶಸ್ಸು ಕೋರಿ ಪ್ರಾರ್ಥನೆ, ಪೂಜೆಗಳನ್ನು ಸಲ್ಲಿಸುತ್ತಿದ್ದರು. ಕೆಲವೊಮ್ಮೆ ಬ್ರಾಹ್ಮಣರು ಕ್ಷತ್ರಿಯರೊಂದಿಗೆ ಉನ್ನತ ಸ್ಥಾನಗಳಿಗಾಗಿ ಸೆಣಸಾಡಿದ್ದ ಉಲ್ಲೇಖವು ದೊರೆಯುತ್ತದೆ. ಉತ್ತರ ವೇದಕಾಲದ ಕೊನೆಯ ವೇಳೆಗೆ ಅವರಿಬ್ಬರೂ ಪರಸ್ಪರ ಸಹಕರಿಸಿ ಇದೇ ಸಮಾಜದ ಮೇಲೆ ಆಳ್ವಿಕೆ ನಡೆಸಬೇಕೆಂಬ ಅಂಶಕ್ಕೆ ಹೆಚ್ಚಿನ ಒತ್ತು ನೀಡಲಾರಂಭಿಸಿದರು.

ಕ್ಷತ್ರಿಯರ ಪ್ರತಿನಿಧಿಯಾದ ರಾಜನು ತನ್ನ ಅಧಿಕಾರವನ್ನು ಇತರ ಮೂರು ವರ್ಣಗಳ ಮೇಲೆ ಹೇರಲು ಯತ್ನಿಸಿದನು. ಐತ್ತರೇಯ ಬ್ರಾಹ್ಮಣದಲ್ಲಿ ರಾಜ ಮತ್ತು ಬ್ರಾಹ್ಮಣರ ಸಂಬಂಧ ಕುರಿತು ಹೇಳುವಾಗ ಬ್ರಾಹ್ಮಣನನ್ನು ಜೀವನೋಪಾಯಕ್ಕೆ ಬೇಡುವವನು, ದಾನ ಸ್ವೀಕರಿಸುವವನು ಎಂದು ಚಿತ್ರಿತನಾಗಿದ್ದನು. ಆದರೆ ರಾಜನು ಅವನನ್ನು ಮನಬಂದಾಗ ತೆಗೆಯಬಹುದೆಂದು ಹೇಳಲಾಗಿದೆ. ವೈಶ್ಯನು ಕಪ್ಪ ಕಾಣಿಕೆ ಸಲ್ಲಿಸುವನನ್ನು ಹೊಡೆಯಬಹುದು ಮತ್ತು ಮನಬಂದಂತೆ ಅವನನ್ನು ಪೀಡಿಸಬಹುದೆಂದು ಹೇಳಲಾಗಿದೆ.

ವೈಶ್ಯ ವರ್ಣದವರು ಕೃಷಿ, ಪಶುಪಾಲನೆ ವ್ಯಾಪಾರ ಮುಂತಾದ ಉತ್ಪಾದನಾ ಕಾರ್ಯಗಳಲ್ಲಿ ಮತ್ತು ಕುಶಲ ಕೈಗಾರಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಉತ್ತರ ವೇದ ಕಾಲದಲ್ಲಿ ವೈಶ್ಯರು ಇದನ್ನು ಪ್ರತಿರೋಧಿಸಲು ತೊಡಗಿದಾಗ ಅವರನ್ನು ಅಡಗಿಸಲು ಹಲವು ಸಂಸ್ಕಾರ ಕ್ರಿಯೆಗಳು ರೂಪಿತವಾದವು. ಇದರಲ್ಲಿ ಪುರೋಹಿತ ವರ್ಗದ ಸಹಕಾರವೂ ಇತ್ತು.

ಉತ್ತರ ವೈದಿಕ ಗ್ರಂಥಗಳು ಸಾಮಾನ್ಯವಾಗಿ ಮೇಲಿನ ಮೂರು ವರ್ಣಗಳ ಹಾಗೂ ಶೂದ್ರರ ನಡುವೆ ಪ್ರತ್ಯೇಕತೆಯ ಗೆರೆಯೊಂದನ್ನು ಹಾಕುತ್ತವೆ. ಶೂದ್ರ ಎನ್ನುವ ಶಬ್ದ ಮೂಲತಃ ಒಂದು ಬುಡಕಟ್ಟಿನ ಹೆಸರಾಗಿತ್ತು. ಇವರೂ ವೈದಿಕ ಬುಡಕಟ್ಟುಗಳಂತೆ ಋಗ್ವೇದ ಕಾಲದಲ್ಲಿ ಪಶುಸಂಗೋಪನೆ ಮಾಡಿಕೊಂಡಿದ್ದಂತೆ ತೋರುತ್ತದೆ. ವೈದಿಕ ಬುಡಕಟ್ಟುಗಳು ಶೂದ್ರರ ಗೋವುಗಳನ್ನೆಲ್ಲ ಅಪಹರಿಸಿ ಕ್ರಮೇಣ ಅವರನ್ನು ತಮ್ಮ ದಾಸದಾಸಿಯರನ್ನಾಗಿ ಪರಿವರ್ತಿಸಿದರು. ಉತ್ತರ ವೈದಿಕ ಸಮಾಜದ ಪ್ರಾರಂಭದಲ್ಲಿ ಬ್ರಾಹ್ಮಣರಾಧಿಯಾಗಿ ಆರ್ಯವರ್ಣದವರಿಗೆಲ್ಲರಿಗೂ ಈ ಶೂದ್ರರೇ ದಾಸರಾಗಿದ್ದರೆಂದು ತೋರುತ್ತದೆ. ಅಂದರೆ ಅವರು ಶ್ರಮದ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಹಾಗಾಗಿ ಶೂದ್ರರು ಆದಿಪುರಷನ ಪಾದದಿಂದ ಹುಟ್ಟಿ ಬಂದರು ಹಾಗೂ ಅವರ ಕರ್ತವ್ಯವೆಂದರೆ ಮೇಲಿನ ಮೂರ ವರ್ಣಗಳ ಸೇವೆಯನ್ನು ಮಾಡುವವರು ಎಂದು ನಿರೂಪಿಸಲಾಗಿದೆ. ಕಾಲಕ್ರಮದಲ್ಲಿ ವ್ಯವಸಾಯವನ್ನು ಅಳವಡಿಸಿಕೊಂಡ ಆರ್ಯ ಸಮಾಜಕ್ಕೆ ಶ್ರಮಜೀವಿಗಳ ವರ್ಗದ ಅಗತ್ಯ ಹೆಚ್ಚುತ್ತಾ ಹೋಯಿತು. ಆರ್ಯರು ಇಂತಹವರನ್ನು ಶ್ರಮಿಕರನ್ನಾಗಿ ಅಳವಡಿಸಿಕೊಂಡರು. ಇವರಿಗೆಲ್ಲ ಶೂದ್ರರೆಂಬ ಪರಿಭಾಷೆ ಬೆಳೆದುಕೊಂಡು ಬಂದಿತ್ತು.

ಈ ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯ ಈ ಮೂರು ವರ್ಣಗಳು ದ್ವಿಜವರ್ಣಗಳೆನಿಸಿಕೊಂಡಿವೆ. ಈ ಮೂರು ವರ್ಣಗಳಿಗೆ ಯಜ್ಞಸಂಸ್ಕೃತಿ ಸಾಮಾನ್ಯವಾಗಿತ್ತು. ಹಾಗಾಗಿ ‘ಉಪನಯನ ಸಂಸ್ಕಾರ’ ಹಾಗೂ ಮತ್ರೋಚ್ಚಾರಣೆಗಳು ಆಯಾ ವರ್ಗಕ್ಕೆ ಬೇರೆ ಬೇರೆ ಪದ್ಧತಿಯಲ್ಲಿದ್ದವು. ಉಪನಯನ ಸಂಸ್ಕಾರವನ್ನು ಇವರು ಎರಡನೆ ಹುಟ್ಟು ಎಂದು ಪರಿಗಣಿಸಿದ್ದರಿಂದ ಅವರು ತಮ್ಮನ್ನು ದ್ವಿಜರೆಂದು ಕರೆದುಕೊಳ್ಳುತ್ತಿದ್ದರು. ಆದರೆ ವರ್ಣ ವ್ಯವಸ್ಥೆಯಲ್ಲಿ ನಾಲ್ಕನೇ ವರ್ಣವಾದ ‘ಶೂದ್ರ’ ವರ್ಣವು ಮಾತ್ರ ದ್ವಿಜ ವರ್ಣವಾಗಿರಲಿಲ್ಲ.