ವರ್ಣಸಂಕರ

ನಾಲ್ಕು ವರ್ಣದ ಕಲ್ಪನೆ ಉತ್ತರ ವೇದಕಾಲದ ವೈದಿಕ ಕೇಂದ್ರಿತ ಸಾಮಾಜಿಕ ನಿರೂಪಣೆಯಾಗಿದೆ. ವೈದಿಕ ಸಮಾಜದಲ್ಲಿ ಒಳಗೊಳ್ಳದ ಅನೇಕ ಅವೈದಿಕ ಬುಡಕಟ್ಟು ಸಮಾಜಗಳು ಈ ಕಾಲದಲ್ಲಿ ಇದ್ದವು. ಅವರುಗಳೆಂದರೆ ನಾಗರು, ವ್ರಾತ್ಯರು, ನಿಷಾದರು, ಚಂಡಾಲರು, ಶಬರ, ಪುಶಿಂದ ದಸ್ಯು ಮುಂತಾದವರು. ಇವರನ್ನೆಲ್ಲ ವರ್ಣವ್ಯವಸ್ಥೆಯ ಒಂದು ಭಾಗವನ್ನಾಗಿ ನೋಡಲು ಸಾಧ್ಯವಿರಲಿಲ್ಲ. ಆದರೆ ವೈದಿಕರು ಈ ಜನರ ಜೊತೆಗೆ ಒಂದೇ ಪ್ರದೇಶದಲ್ಲಿ ಇರುತ್ತಿದ್ದರು. ಹಾಗೂ ಅವರ ಜೊತೆ ಹೋರಾಡುತ್ತಲೋ ಇಲ್ಲವೆ ಬೆರೆಯುತ್ತಲೋ ಇದ್ದರು. ಮೊದಮೊದಲು ವರ್ಣವ್ಯವಸ್ಥೆ ಆರ್ಯರ ರಾಜ್ಯಗಳ ವ್ಯವಸ್ಥೆ ಮಾತ್ರವಾಗಿತ್ತು. ಆದರೆ ಯಾವಾಗ ರಾಜರು ಆರ್ಯೇತರರನ್ನು ಸೋಲಿಸಿ ಅವರನ್ನೂ ಪ್ರಜಾ ಸಮೂಹದಲ್ಲಿ ಸೇರಿಸದರೋ ಆಗ ಇಂತಹ ಸಮಾಜಗಳನ್ನೆಲ್ಲಾ ಒಳಗೊಳ್ಳುವ ವರ್ಣ ಕಲ್ಪನೆಯನ್ನು ಬೆಳಸಬೇಕಾಯಿತು. ಹೀಗೆ ಕ್ರಿ.ಪೂ. ೬೦೦ರ ಸುಮಾರಿಗೆ ವರ್ಣಸಂಕರದ ಕಲ್ಪನೆ ಉದಯವಾಗತೊಡಗಿತು. ವರ್ಣಸಂಕರ ಎಂದರೆ ವರ್ಣಗಳ ಮಿಶ್ರಣ ಅಥವಾ ಮಾಲಿನ್ಯ ಈ ಮಿಶ್ರಣ ಉಂಟಾಗುವುದಕ್ಕೆ ಕಾರಣಗಳೆಂದರೆ ಅಂತರ್ವಿವಾಹ, ವೃತ್ತಿ ಬದಲಾವಣೆ, ಕರ್ತವ್ಯ ಭ್ರಷ್ಟತೆ, ಅಜ್ಞಾನ ಮೊದಲಾದವು. ಈ ಕಾರಣಗಳಿಂದ ಶುದ್ಧ ನಾಲ್ಕು ವರ್ಣಗಳ ಜೊತೆಗೇ ಅನೇಕ ಸಂಕೀರ್ಣ ಜಾತಿಗಳು ಹುಟ್ಟಿದವು ಎಂದು ನಿರೂಪಿಸಿಲಾಯಿತು. ಆರ್ಯವರ್ಣ ಪ್ರತಿಪಾದಕರು ತಮ್ಮ ತಿಳುವಳಿಕೆಗೆ ಬಂದ ಹೊಸ ಸಮಾಜಗಳನ್ನು ಸಂಕೀರ್ಣ ಜಾತಿಗಳೆಂದು ತಿಳಿಸಿ ಅವುಗಳು ವರ್ಣ ಸಂಕರದಿಂದಾದವೆಂದು ವಿವರಿಸಿ ವರ್ಣ ವ್ಯವಸ್ಥೆಗೆ ಅವನ್ನು ಜೋಡಿಸುತ್ತಿದ್ದರು.

ಸಂಕೀರ್ಣ ಜಾತಿಯ ಕಲ್ಪನೆಯನ್ನು ಬೆಳೆಸಲು ಮತ್ತೊಂದು ಮುಖ್ಯ ಕಾರಣವೆಂದರೆ ಹೆಚ್ಚುತ್ತಿದ್ದ ವೃತ್ತಿಗಳು, ಉತ್ತರ ವೈದಿಕ ಸಮಾಜದಲ್ಲಿ ವಿಭಿನ್ನ ಲೋಹಗಳ ಕೆಲಸಗಾರರು, ಬುಟ್ಟಿ ಹೆಣೆಯುವವರು, ನೇಯ್ಗೆಯವರು, ಬಣ್ಣ ಹಾಕುವವರು, ಬಡಗಿಗಳು, ಕುಂಬಾರರು, ಚರ್ಮಕಾರರು, ಮಣಿಕಾರರು, ನರ್ತಕರು, ಕಣಿಹೇಳುವವರು, ಸೂತರು, ಡೊಂಬರು ಮುಂತಾದ ಅನೇಕ ವೃತ್ತಿ ಪಂಗಡಗಳು ಅಥವಾ ಜಾತಿಗಳು ಇದ್ದವು. ವೇದ ಕಾಲದ ನಂತರ ಇವರನ್ನೆಲ್ಲಾ ಸಂಕೀರ್ಣ ಜಾತಿಗಳ ಪಟ್ಟಿಯಲ್ಲಿ ಸೇರಿಸಲಾಯಿತು.

ಕುಟುಂಬ : ಉತ್ತರ ವೈದಿಕ ಕಾಲದಲ್ಲಿ ಕುಟುಂಬಗಳು ಪ್ರಮುಖ ಸಾಮಾಜಿಕ ಸಂಸ್ಥೆಗಳಾಗಿ ರೂಪುತಳೆದವು. ಕುಟುಂಬದಲ್ಲಿ ಅನೇಕ ಸದಸ್ಯರಿದ್ದು ತಂದೆಯ ಅಧಿಕಾರ ಈ ಕಾಲದಲ್ಲಿ ಬಲಗೊಂಡಿತು. ಐತ್ತರೇಯ ಬ್ರಾಹ್ಮಣದ ಪ್ರಕಾರ ಕುಟುಂಬದಲ್ಲಿ ತಂದೆ ಎಷ್ಟು ಪ್ರಮುಖ ಅಧಿಕಾರ ಪಡೆದನೆಂದರೆ ಮಗನು ಸಂಪೂರ್ಣವಾಗಿ ತಂದೆಯ ಅಧೀನಕ್ಕೊಳಗಾದನು. ಅವನು ಮಗನಿಗೆ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ನಿರಾಕರಿಸಬಹುದಿತ್ತು ಅಥವಾ ಅವನು ಮಗನ ಉತ್ತರಾಧಿಕಾರತ್ವವನ್ನು ಕಿತ್ತುಕೊಳ್ಳಬಹುದಿತ್ತು. ಕುಟುಂಬದ ಹಿರಿಯನನ್ನು ಕುಲಪತಿ ಎಂದು ಕರೆಯುತ್ತಿದ್ದರು. ಈ ಕಾಲದಲ್ಲಿ ಪಿತೃಪೂಜೆ ಆರಂಭವಾಯಿತು. ಈ ಕಾಲದಲ್ಲಿ ‘ಗೋತ್ರ’ ಎಂಬ ಪದ್ಧತಿ ಆರಂಭವಾಯಿತು. ಗೋತ್ರ ಹಾಗೂ ಪ್ರವರ ಪದ್ಧತಿ ಆರಂಭವಾದದ್ದು ಋಗ್ವೇದ ಯುಗದಲ್ಲಿ. ಈ ಶಬ್ದದ ಅರ್ಥ ದನದ ದೊಡ್ಡಿ ಎಂದಾದರೂ ಒಬ್ಬ ಸಮಾನ ಮೂಲ ಪುರುಷನ ಸಂತತಿ ಎಂಬ ಅರ್ಥವನ್ನು ಅದು ಪಡೆದುಕೊಂಡಿತು. ಜನರು ಗೋತ್ರಗಳ ಹೊಗಿನಿಂದ ಮದುವೆಯಾಗುವ ರೂಢಿಯನ್ನು ಆರಂಭಿಸಿದರು. ಒಂದೇ ಗೊತ್ರಕ್ಕೆ ಸೇರಿದವರೆಲ್ಲರೂ ಒಂದೇ ಸಂತತಿಗೆ ಸೇರಿದವರಾದ್ದರಿಂದ ಅವರವರಲ್ಲೇ ಮದುವೆಯಾಗುವುದು ನಿಷಿದ್ಧವಾಯಿತು. ಧರ್ಮ ಸೂತ್ರಗಳಲ್ಲಿ ವ್ಯಕ್ತವಾದಂತೆ ಎಂಟು ಬಗೆಯ ವಿವಾಹ ಪದ್ಧತಿಗಳಿದ್ದವು. ಅವುಗಳೆಂದರೆ ಬ್ರಹ್ಮ, ದೈವ, ಅರ್ಷ, ಪ್ರಜಾಪತ್ಯ, ಗಾಧರ್ವ, ಅಸುರ, ರಾಕ್ಷಸ ಮತ್ತು ಪೈಶಾಚ.

ಪೂರ್ವ ವೈಧಿಕ ಕಾಲದಲ್ಲಿ ನಾಲ್ಕು ಆಶ್ರಮಗಳು ಅಥವಾ ಚತುರಾಶ್ರಮಗಳು ಸ್ಪಷ್ಟರೂಪ ತಳೆದಿರಲಿಲ್ಲ. ವೇದೋತ್ತರ ಕಾಲದಲ್ಲಿ ಬ್ರಹ್ಮಚರ್ಯ ಅಥವಾ ಶಿಷ್ಯ ಹಂತ, ಗೃಹಸ್ಥ ಅಥವಾ ಸಂಸಾರ ಹಂತ, ವಾನಪ್ರಸ್ಥ ಅಥವಾ ವಿರಕ್ತ ಹಂತ ಮತ್ತು ಸನ್ಯಾಸ ಅಥವಾ ಸರ್ವಸಂಗ ಪರಿತ್ಯಾಗ ಹೀಗೆ ಜೀವನದ ನಾಲ್ಕು ಹಂತಗಳನ್ನು ನಿರೂಪಿಸಲಾಗಿದೆ. ಉತ್ತರ ವೈದಿಕ ಸಾಹಿತ್ಯದಲ್ಲಿ ಮೊದಲ ಮೂರು ಮಾತ್ರ ಪ್ರಸ್ತಾಪವಾಗಿದೆ. ಸನ್ಯಾಸ ಜೀವನದ ಪರಿಚಯವಿತ್ತಾದರೂ ಅದು ಸ್ಪಷ್ಟ ರೂಪ ತಳೆದಿರಲಿಲ್ಲ. ಛಂದೋಗ್ಯ ಉಪನಿಷತ್ತಿನಲ್ಲಿ ಮೂರು ಆಶ್ರಮಗಳನ್ನು ಸ್ಪಷ್ಟವಾಗಿ ಹೆಸರಿಸಲಾಗಿದೆ. ನಾಲ್ಕು ಆಶ್ರಮಗಳು ಜಾಬಲ ಉಪನಿಷತ್ತಿನಲ್ಲಿ ಉಲ್ಲೇಖಿಸಲ್ಪಟ್ಟಿದೆ.

ಉತ್ತರ ವೈದಿಕ ಕಾಲದಲ್ಲಿ ಸಾಮಾನ್ಯವಾಗಿ ಸ್ತ್ರೀಯರ ಸ್ಥಾನ ಕೆಳಹಂತಕ್ಕಿಳಿಯಿತು. ಸಭಾ ಮುಂತಾದ ಸಭೆಗಳಿಗೆ ಸ್ತ್ರೀಯರಿಗೆ ಪ್ರವೇಶ ನಿರಾಕರಿಸಲಾಯಿತು. ಕೆಲವು ತತ್ವಶಾಸ್ತ್ರ ಜಿಜ್ಞಾಸೆಗಳಲ್ಲಿ ತತ್ವಶಾಸ್ತ್ರಜ್ಞೆಯರು ಭಾಗವಹಿಸುತ್ತಿದ್ದರು. ಪಟ್ಟಾಭಿಷೇಕ ಸಂಸ್ಕಾರಗಳಲ್ಲಿ ಕೆಲವು ರಾಣಿಯರು ಪಾತ್ರವಹಿಸುತ್ತಿದ್ದರು. ಆದರೂ ಹೆಂಗಸರು ಗಂಡಸರಿಗಿಂತ ಕೀಳೆಂದೂ ಗಂಡಸರಿಗೆ ವಿಧೇಯರಾಗಿರಬೇಕಾದವರೆಂದೂ ಭಾವಿಸಲಾಗಿತ್ತು. ಗಾರ್ಗಿ ಮತ್ತು ಮೈತ್ರೇಯಿ ಈ ಕಾಲದ ಉನ್ನತ ಜ್ನಾನವನ್ನು ಪಡೆದ ಮಹಿಳೆಯರಲ್ಲಿ ಪ್ರಮುಖರಾಗಿದ್ದಾರೆ.

ನಂತರ ವೈದಿಕ ಕಾಲದ ಆರ್ಥಿಕ ಜೀವನ

ಸ್ಥಿರ ಜೀವನ : ನಂತರ ವೇದ ಕಾಲದ ಐಹಿಕ ಜೀವನವು ಪೂರ್ವ ವೇದಕಾಲಕ್ಕಿಂತ ಅಪಾರವಾಗಿ ಮುಂದುವರಿದಿತ್ತು. ತುರುಗಾಹಿಗಳಾಗಿ ಅರೆ ಅಲೆಮಾರಿ ಜೀವನ ನಡೆಸುವ ವಿಧಾನ ಹಿಂದೆ ಸರಿದು ಕೃಷಿಯೇ ಪ್ರಧಾನ ವೃತ್ತಿಯಾಗಿ ಸ್ಥಿರ ಜೀವನ ವಿಧಾನ ಈ ಕಾಲದಲ್ಲಿ ನೆಲೆಗೊಂಡಿತ್ತು. ಉತ್ತರ ವೇದ ಕಾಲದ ಜನಜೀವನವನ್ನು ಕುರಿತು ಉತ್ಖನನಗಳು ಹಾಗೂ ಅನ್ವೇಷಣೆಗಳು ಕೆಲವು ವಿವರಗಳನ್ನು ಒದಗಿಸಿವೆ. ಕುರು ಪಾಂಚಾಲ ಪ್ರದೇಶವಾಗಿದ್ದ ಉತ್ತರ ಪ್ರದೇಶದ ಪಶ್ಚಿಮ ಭಾಗ ಹಾಗೂ ದೆಹಲಿ ಮತ್ತು ಇವುಗಳಿಗೆ ಹೊಂದಿಕೊಂಡಿರುವ ಪಂಜಾಬು, ಹರಿಯಾಣ ಮತ್ತು ರಾಜಾಸ್ತಾನ ಪ್ರದೇಶದಲ್ಲಿ ಉತ್ಖನನಗೊಮಡ ನೂರಾರು ನಿವೇಶನಗಳಲ್ಲಿ ಮುಖ್ಯವಾಗಿ ಒಂದು ಪ್ರಕಾರದ ಬೂದು ಬಣ್ಣದ ಉತ್ಕೃಷ್ಟ ಗುಣಮಟ್ಟದ ಮಡಿಕೆಗಳು ದೊರೆಯುತ್ತವೆ. ಈ ಮಡಿಕೆಗಳ ಒಳಭಾಗದಲ್ಲಿ ಬಿಳಿ ಬಣ್ಣದ ಚಿತ್ರಗಳಿವೆ. ಇವುಗಳನ್ನು ಪೇಯಿಂಟೆಡ್‌ಗ್ರೇ ವೇರ್ (painted grey ware) ಎಂದು ಸೂಚಿಸಲಾಗಿತ್ತದೆ. ಈ ಮಡಿಕೆಗಳನ್ನು ಉಪಯೋಗಿಸುತ್ತಿದ್ದ ಜನರು ಕೃಷಿ ಪ್ರಧಾನ ಹಳ್ಳಿ ಸಂತತಿಯವರಾಗಿದ್ದರು. ಕ್ರಿ.ಪೂ. ೧೦೦೦ರಿಂದ ೬೦೦ರ ಅವಧಿಯಲ್ಲಿ ಈ ಬಗೆಯ ಅವಶೇಷಗಳು ಸಿಗುತ್ತವೆ. ನಗರ ಎಂಬ ಶಬ್ದವನ್ನು ಉತ್ತರ ವೈಧಿಕ ಗ್ರಂಥಗಳು ಪ್ರಸ್ತಾಪಿಸುತ್ತವಾದರೂ ಹಸ್ತಿನಾಪುರ, ಕೊಶಾಂಬಿ, ಅಹಿಚ್ಚತ್ರ ಮುಂತಾದ ಸ್ಥಳಗಳಲ್ಲಿ ಈ ಕಾಲದಲ್ಲಿ ಪ್ರಥಮಾವಸ್ಥೆಯ ಊರುಗಳೆಂದ ಮಾತ್ರ ಪರಿಗಣಿಸಲ್ಪಟ್ಟಿವೆ. ಇರುವುದರಿಮದ ಅವು ಒಂದರಿಂದ ಮೂರು ಶತಮಾನಗಳವರೆಗೆ ಅಸ್ತಿತ್ವದಲ್ಲಿದ್ದಿರಬೇಕು. ಬಹುಮಟ್ಟಿಗೆ ಅವು ಒಂದರಿಂದ ಮೂರು ಶತಮಾನಗಳವರೆಗೆ ಅಸ್ತತ್ವದಲ್ಲಿದ್ದಿರಬೇಕು. ಬಹುಮಟ್ಟಿಗೆ ಅವು ಆ ಹಿಂದೆ ಜನವಸತಿ ಇಲ್ಲದಿದ್ದ ಜಾಗಗಳಲ್ಲಿ ತಲೆಯೆತ್ತಿದಂತಹವು. ಅಲ್ಲಿನ ಮನೆಗಳ ಮಣ್ಣು ಇಟ್ಟಿಗೆಯವು ಇಲ್ಲವೆ ಮರದ ಕಂಬಗಳ ಮೇಲೆ ನಿರ್ಮಿತವಾದ ತಡಿಕೆ ಗೋಡೆಯವು. ಈ ನಿವೇಶನಗಳಲ್ಲಿ ಒಲೆಗಳು ಹಾಗೂ ಧಾನ್ಯಗಳು ದೊರೆತಿರುವುದು ಈ ಜನ ಕೃಷಿಕರಾಗಿದ್ದು ನೆಲೆನಿಂತ ಹಳ್ಳಿಗಳಲ್ಲಿ ವಾಸಮಾಡುತ್ತಿದ್ದರು. ಮನೆ ಕಟ್ಟು ಕಲೆಯ ಜೊತೆಗೆ ಮನೆಗೆ ಸಂಬಂಧಿಸಿದ ಧಾರ್ಮಿಕ ವಿಧಿಗಳನ್ನು ಆಚರಣೆಗೆ ತರಲಾಯಿತು. ಗೃಹ್ಯ ಸೂತ್ರಗಳು ಇಂಥ ವಿಧಿಗಳನ್ನು ದಾಖಲಿಸುತ್ತವೆ. ಈ ಕಾಲದಲ್ಲಿ ಖಾಸಗಿ ಆಸ್ತಿಯ ಕಲ್ಪನೆ ಬೆಳೆಯಿತು.

ಕೃಷಿ : ನಂತರ ವೈದಿಕ ಕಾಲದ ಜನರು ಪ್ರಧಾನವಾಗಿ ವ್ಯವಸಾಯವನ್ನು ಅವಲಂಭಿಸಿರುವುದು ತಿಳಿದುಬರುತ್ತದೆ. ಈ ಕಾಲದ ಆರ್ಯ ರಾಜರ ಹಾಗೂ ವಿಶಃಗಳು ಕೈಗೊಳ್ಳುತ್ತಿದ್ದ ಯಜ್ಞಗಳಲ್ಲಿ ಕೂಡ ಪ್ರಾಣಿಗಳ ಜೊತೆಗೆ ಧಾನ್ಯಗಳನ್ನು ಉಪಯೋಗಿಸತೊಡಗಿದರು. ದಾನದ ವಸ್ತುಗಳಲ್ಲಿ ಧಾನ್ಯವು ಸೇರಿತು. ಈ ಕಾಲದಲ್ಲೂ, ಗೋಗ್ರಹಣದ ಕಥೆಗಳು ಬರುತ್ತವೆ. ಹಾಗೆ ಗೋವುಗಳನ್ನು ಬ್ರಾಹ್ಮಣರಿಗೆ, ಯತಿಗಳಿಗೆ ದಾನಮಾಡಿದ ಉಲ್ಲೇಖಗಳು ದೊರೆಯುತ್ತವೆಯಾದರೂ ಬಹುಶಃ ಗೋವು ಈ ಕಾಲದ ಯತಿಗಳ ಆಶ್ರಮದಲ್ಲಿ ಬಿಟ್ಟರೆ ಉಳಿದ ಕಡೆಗಳಲ್ಲಿ ವ್ಯವಸಾಯ ಸಾಧನವಾಗಿ ಪರಿವರ್ತಿತವಾದಂತೆ ಕಂಡುಬರುತ್ತದೆ.

ಪೂರ್ವ ವೈದಿಕ ಕಾಲದ ಜನರು ವಾಸಿಸುತ್ತಿದ್ದ ಸಪ್ತಸಿಂಧೂ ಪ್ರದೇಶಕ್ಕೂ ನಂತರ ವೈದಿಕ ಕಾಲದ ಜನರು ವಾಸಿಸುತ್ತಿದ್ದ ಗಂಗಾ-ಯುಮುನ ನದಿಗಳ ಬಯಲಿಗೂ ಒಂದು ಮುಖ್ಯವಾದ ಭೌಗೋಳಿಕ ವ್ಯತ್ಯಾಸವಿತ್ತು. ಸಪ್ತಸಿಂಧೂ ಪ್ರದೇಶವು ಒಣಹವೆಯಿಂದ ಕೂಡಿದ್ದು ಮಳೆ ಅತ್ಯಂತ ಕಡಿಮೆಯಾಗಿತ್ತು. ಆದರೆ ಗಂಗಾ ಬಯಲು, ಆದ್ರಹವೆಯಿಂದ ಕೂಡಿದ್ದು ನಿಯತಕಾಲಿಕೆ ಮಳೆ ಹೆಚ್ಚಾಗಿತ್ತು. ಈ ರೀತಿ ವಯವಸಾಯಕ್ಕೆ ಯೋಗ್ಯವಾದ ಫಲವತ್ತಾದ ಭೂಮಿಯಿಂದ ಈ ಪ್ರದೇಶ ಕೂಡಿದ್ದರೂ ದುರ್ಗಮವಾದ ಅರಣ್ಯಗಳನ್ನು ಕಡಿಯಬೇಕಿತ್ತು. ಈ ಕಾರ್ಯಕ್ಕೆ ಅವರಿಗೆ ಒದಗಿ ಬಂದ ಸಾಧನಗಳು ಎರಡು ಒಂದು ಅಗ್ನಿ, ಮತ್ತೊಂದು ಕಬ್ಬಿಣದ ಆಯುಧಗಳು ಸ್ಥಳೀಯ ಬುಡಕಟ್ಟಿನವರ ವಿರೋಧವನ್ನೆದುರಿಸಿ ಅಡವಿಗಳನ್ನು ವ್ಯವಸಾಯ ಭೂಮಿಯನ್ನಾಗಿ ಪರಿವರ್ತಿಸುವ ಘಟನೆಗಳೇ ಮಹಾಭಾರತದ ‘ಖಾಂಡವವನ ದಹನ’ ದಂತಹ ಕಥೆಗಳಲ್ಲಿ ಕಂಡುಬರುತ್ತದೆ.

ಸುಮಾರು ಕ್ರಿ. ಪೂ. ೧೦೦೦ದಿಂದ ಈಚೆಗೆ ಪಾಕಿಸ್ತಾನದ ಗಂಧಾರ ಪ್ರದೇಶದಲ್ಲಿ ಬಲೂಚಿಸ್ತಾನದಲ್ಲಿ ಹಾಗೂ ಭಾರತದ ಪೂರ್ವ ಪಂಜಾಬು, ಉತ್ತರ ಪ್ರದೇಶ ಮತ್ತು ರಾಜಾಸ್ತಾನಗಳಲ್ಲಿ ನೆಲೆಸಿದ್ದ ಈ ಜನರಿಗೆ ಕಬ್ಬಿಣದ ತಂತ್ರಜ್ಞಾನದ ಪರಿಚಯವಿತ್ತು. ಪ್ರಾರಂಭದಲ್ಲಿ ಕಬ್ಬಿಣವನ್ನು ಕೆವಲ ಬಾಣ, ಈಟಿಯ ಮೊನೆ, ಖಡ್ಗ, ಚೂರಿ ಮುಂತಾದ ಯುದ್ಧ ಸಾಧನಗಳಿಗೆ ಮಾತ್ರ ಬಳಸುತ್ತಿದ್ದರು. ಆದರೆ ಕ್ರಿ. ಪೂ. ೬೦೦ರ ಸುಮಾರಿಗೆ ವಿಧ ವಿಧವಾದ ಕಬ್ಬಿಣದ ಆಯುಧಗಳು ಬಳಕೆಯಲ್ಲಿ ಬಂದವು. ಅವುಗಳೆಂದರೆ ನೇಗಿಲಿನ ಕುಳ, ಗುದ್ದಲಿ, ಕತ್ತಿ, ಕೊಡಲಿ, ಬಾಚಿ, ಗರಗಸ, ಉಳಿ ಮುಂತಾದವು. ಈ ಆಯುಧಗಳ ಸಹಾಯದಿಂದ ಕಾಡುಗಳನ್ನು ಕಡಿದು ವ್ಯವಸಾಯ ಯೋಗ್ಯ ಭೂಮಿಯನ್ನಾಗಿ ಮಾಡಿರಬಹುದು. ಇದು ಕೇವಲ ವ್ಯವಸಾಯದ ತಂತ್ರಜ್ಞಾನವೊಂದೆ ಅಲ್ಲದೆ ಆಗಿನ ಕಾಲದ ಮರಗೆಲಸದ ಬೆಳವಣಿಗೆಯನ್ನು ಕೂಡ ಸೂಚಿಸುತ್ತದೆ. ಗಂಗಾ ಬಯಲಿನ ಮೆಕ್ಕಲು ಮಣ್ಣಿನಲ್ಲಿ ಕಬ್ಬಿಣದ ಕುಳಗಳುಳ್ಳ ಭಾರೀ ನೇಗಿಲುಗಳಿಂದ ಆಳವಾಗಿ ಉಳುಮೆ ನಡೆಸುತ್ತಿದ್ದರು. ಅಗತ್ಯಕ್ಕೆ ತಕ್ಕಂತೆ ೬, ೮, ೧೨, ೨೪, ಎತ್ತುಗಳನ್ನು ಕಟ್ಟಿ ನೇಗಿಲುಗಳನ್ನು ಎಳೆಯಿಸುತ್ತಿದ್ದ ಉಲ್ಲೇಖಗಳು ಆಗಿನ ಕಾಲದ ಗ್ರಂಥಗಳಲ್ಲಿ ದೊರೆಯುತ್ತದೆ. ಶತಪಥ ಬ್ರಾಹ್ಮಣವು ಉಳುಮೆಗೆ ಸಂಬಂಧಿಸಿದ ಸಂಸ್ಕಾರಗಳನ್ನು ವಿವರವಾಗಿ ತಿಳಿಸಿದೆ. ಪ್ರಾಚೀನ ಐತಿಹ್ಯಗಳ ಪ್ರಕಾರ ಸೀತೆಯ ತಂದೆಯೂ ವಿದೇಹದ ರಾಜನೂ ಆದ ಜನಕನು ತಾನೇ ನೇಗಿಲು ಹೂಡಿ ಊಳುತ್ತಿದ್ದನು. ಕೃಷ್ಣನ ಅಣ್ಣ ಬಲರಾಮನನ್ನು ಹಲಾಧರ ಅಂದರೆ ನೇಗಿಲು ಹಿಡಿದಿರುವವನು ಎಂದು ಗುರುತಿಸಿದ್ದರು. ಇದು ಆ ಕಾಲದಲ್ಲಿ ರಾಜರೂ ಸಹ ಕೃಷಿಯನ್ನು ಕೈಗೊಳ್ಳುತ್ತಿದ್ದರು ಎಂಬುದನ್ನು ಸೂಚಿಸುತ್ತದೆ.

ನಂತರ ವೈದಿಕ ಕಾಲದ ಜನರಿಗೆ ಮಳೆ ನೀರಿನ ಜೊತೆಗೆ ಕೃತಕ ನೀರಾವರಿ ವ್ಯವಸ್ಥೆಗಳನ್ನು ಕಂಡುಕೊಂಡಿದ್ದರು. ಅವುಗಳಲ್ಲಿ ನದಿ ಪಕ್ಕದ ಬಯಲಿನಲ್ಲಿ ನೀರಿನ ಮಟ್ಟ ಮೇಲೆ ಇರುವ ಜಾಗದಲ್ಲಿ ಬಾವಿಗಳನ್ನು ತೋಡಿ ನೀರನ್ನು ಎತ್ತಿ ಹೊಯ್ಯುವ ವಿಧಾನ ಸಾಮಾನ್ಯವಾಗಿ ಪ್ರಚಲಿತದಲ್ಲಿತ್ತು. ಜೊತೆಗೆ ಹೊಳೆಯ ನೀರನ್ನು ಕಾಲುವೆಗಳ ಮೂಲಕ ಹರಿಸುವ ವ್ಯವಸ್ಥೆಯನ್ನು ಕಂಡುಕೊಂಡಿದ್ದರು. ಈ ಕಾಲದಲ್ಲಿ ಭತ್ತ ಮತ್ತು ಗೋಧಿಗಳು ಪ್ರಮುಖ ಬೆಳೆಗಳಾದವು. ಭತ್ತವನ್ನು ವೈದಿಕ ಗ್ರಂಥಗಳಲ್ಲಿ ವ್ರೀಹಿ, ಶಾಲಿ ಎಂದು ಕರೆಯುತ್ತಿದ್ದರು. ಗೋಧಿಯನ್ನು ಗೋಧೂಮ ಎಂದು ಕರೆಯುತ್ತಿದ್ದರು. ಹಸ್ತಿನಾಪುರದಲ್ಲಿ ಕ್ರಿ. ಪೂ. ೮ನೆಯ ಶತಮಾನಕ್ಕೆ ಸೇರಿದ ಭತ್ತ ದೊರೆತಿದೆ. ಸಂಸ್ಕಾರ ಕ್ರಿಯೆಗಳಲ್ಲಿ ಅಕ್ಕಿಯು ಪ್ರಶಸ್ತವೆಂದು ಪರಿಗಣಿತವಾಗಿತ್ತು. ಭತ್ತ ಗೋಧಿಗಳಲ್ಲದೇ ಈ ಕಾಲದ ಸಾಹಿತ್ಯ ಹಾಗೂ ಪ್ರಾಕ್ತನ ಆಧಾರಗಳು ತಿಳಿಸುವಂತೆ ಉದ್ದು, ಮಸೂರ, ಮುದ್ಗ, ಬಲ್ಪ ಮುಂತಾದ ಬೇಳೆಕಾಳುಗಳು, ಎಳ್ಳು, ಸಾಸಿವೆ ಮುಂತಾದ ಎಣ್ಣೆಕಾಳುಗಳು, ಕಬ್ಬು, ಹಲವಾರು ತರಕಾರಿಗಳು ಈ ಕಾಲದಲ್ಲಿ ಸಾಮಾನ್ಯವಾಗಿ ಬೆಳೆಯುತ್ತಿದ್ದವು.

ಕುಶಲ ಕೆಲಸಗಳು : ಉತ್ತರ ವೈದಿಕ ಕಾಲದಲ್ಲಿ ವಿವಿಧ ಕುಶಲ ಕಲೆಗಳು ಹಾಗೂ ಕಸುಬುಗಳು ತಲೆಯೆತ್ತಿದ್ದವು. ಕ್ರಿ. ಪೂ. ೧೦೦೦ ದಿಂದ ಲೋಹಗಾರರು ಹಾಗೂ ಕಮ್ಮಾರರ ವಿಚಾರ ಕೇಳಿಬರುತ್ತದೆ. ಮೊದಲಿನಿಂದ ಇದ್ದ ತಾಮ್ರ ಲೋಹಗಾರಿಕೆಗೆ ಈಗ ಕಬ್ಬಿಣ ಇನ್ನೊಂದು ರೂಪ ನೀಡಿ ಕಮ್ಮಾರಿಕೆಯಾಯಿತು. ಪೇಯಿಂಟೆಡ್‌ಗ್ರೇ ವೇರ್ (painted grey ware) ಕುಂಬಾರಿಕೆ ನಿವೇಶನಗಳಲ್ಲಿ ಎರಡೂ ಲೋಹಗಳ ವಸ್ತುಗಳು ದೊರೆತಿವೆ. ಉತ್ತರ ವೇದದ ಕಾಲದ ಜನರಿಗೆ ಬ್ಲ್ಯಾಕ ಯ್ಯಂಡ್‌ರೆಡ್‌ವೇರ್ (black and red ware), ಪಾಲಿಷಡ್‌ಬ್ಲ್ಯಾಕ ವೇರ್ (polished black ware), ಪೇಯಿಂಟೆಡ್‌ಗ್ರೇ ವೇರ್ (painted grey ware) ಮತ್ತು ರೆಡ್‌ವೇರ್ (red ware) ಎಂಬ ನಾಲ್ಕು ಬಗೆಯ ಕುಂಬಾರಿಕೆಗಳ ಪರಿಚಯ ಇತ್ತು. ಇವುಗಳಲ್ಲಿ ರೆಡ್‌ವೇರ್ ಅತ್ಯಂತ ಜನಪ್ರಿಯವಾಗಿತ್ತೆಂಬುದನ್ನು ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿನ ನಿವೇಶನಗಳು ತೋರಿಸಕೊಡುತ್ತವೆ. ಆದರೆ ಆ ಕಾಲಾವಧಿಯ ಅತ್ಯಂತ ವಿಶಿಷ್ಟ ಕುಂಬಾರಿಕೆ ಪೇಯಿಂಟೆಡ್‌ಗ್ರೇ ವೇರ್ ಬಹುಶಃ ತಲೆಯೆತ್ತುತ್ತಿದ್ದ ಉಚ್ಚ ವರ್ಗದವರು ಸಂಸ್ಕಾರ ಕ್ರಿಯೆಗಳಲ್ಲೋ ಇಲ್ಲವೇ ಊಟಕ್ಕಾಗಿಯೋ ಬಳಸುತ್ತಿದ್ದ ತಟ್ಟೆ ಬಟ್ಟಲುಗಳು ಈ ಬಗೆಯ ಕುಂಬಾರಿಕೆಯ ವಸ್ತುಗಳಾಗಿವೆ. ನೇಯ್ಗೆ ಹೆಂಗಸರಿಗೆ ಸೀಮಿತಗೊಂಡಿತ್ತು. ಅವರು ಕಸೂತಿ ಹಾಕಿದ ಉಡುಪು ತಯಾರಿಕೆ, ಬಣ್ಣ ಹಾಕುವುದು ಮುಂತಾದ ಕೆಲಸಗಳಲ್ಲಿ ನೈಪುಣ್ಯತೆಯನ್ನು ಸಾಧಿಸಿದ್ದರು. ಈ ಕಾರ್ಯ ವ್ಯಾಪಕವಾಗಿ ಹರಡಿತ್ತು. ಈ ಕಾಲದಲ್ಲಿ ಚಮ್ಮಾರಿಕೆ ಹಾಗೂ ಬಡಗಿತನಗಳು ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದ್ದವು. ಒಟ್ಟಿನಲ್ಲಿ ನಂತರ ವೈದಿಕ ಗ್ರಂಥಗಳು ಹಾಗೂ ಉತ್ಖನನಗಳು ಆ ಕಾಲದಲ್ಲಿ ವಿಶಿಷ್ಟ ಕುಶಲ ಕೆಲಸಗಳಿದ್ದುದನ್ನು ಸೂಚಿಸುತ್ತವೆ.

ವಾಣಿಜ್ಯ ಚಟುವಟಿಕೆಗಳು

ನಂತರ ವೈದಿಕ ಕಾಲದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳು ಅಭಿವೃದ್ಧಿಗೊಂಡಿದ್ದವು. ವಣಿಕರು ಎಂಬ ವರ್ತಕರ ಪಂಗಡ ಅಸ್ತಿತ್ವಕ್ಕೆ ಬಂದಿತು. ಪರ್ವತಗಳಲ್ಲಿ ವಾಸಿಸುತ್ತಿದ್ದ ಕಿರಾತ ಎಂಬ ಜನರೊಡನೆ ಈ ವರ್ತಕರು ಅಂತರ್ದೇಶಿಯ ವ್ಯಾಪಾರ ಸಂಬಂಧವನ್ನು ಹೊಂದಿದ್ದರು. ಕಿರಾತರು ತಾವು ಪರ್ವತ ಪಂಕ್ತಿಗಳಿಂದ ಶೇಖರಿಸುತ್ತಿದ್ದ ಮೂಲಿಕೆಗಳನ್ನು ಬಟ್ಟೆ, ಮೆತ್ತನೆ ಹಾಸಿಗೆ ಹಾಗೂ ಚರ್ಮ ಇವುಗಳಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದರು. ಶತಪಥ ಬ್ರಾಹ್ಮಣದಲ್ಲಿ ಬರುವ ಪ್ರವಾಹದ ಕಥೆಯನ್ನು ಹಲವು ತಜ್ಞರು ಭಾರತ ಬ್ಯಾಬಿಲೋನಿಯಾ ದೇಶದೊಡನೆ ವ್ಯಾಪಾರ ಸಂಬಂಧವನ್ನು ಹೊಂದಿತ್ತು. ಇದು ಸಮುದ್ರದ ವ್ಯಾಪಾರವನ್ನು ಅವರು ಕೈಗೊಂಡಿದ್ದರು ಎಂಬುದರ ಸೂಚನೆಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ವ್ಯಾಪಾರವು ನಿಷ್ಕ, ಶತಮಾನ ಮತ್ತು ಕೃಷ್ಣಾಲಾ ಮುಂತಾದ ಮೌಲ್ಯಮಾಪನಗಳಿಂದ ಸುಗಮವಾಗಿ ಸಾಗುತ್ತಿತ್ತು. ನಿಷ್ಕ ೩೨೦ ರತಿಗಳಷ್ಟು (೦೧ ರತಿ=೧೮ಗ್ರಾಂ) ತೂಕದ ಚಿನ್ನದ ತುಂಡಾಗಿರಬಹುದು ಎಂದು ಅಂದಾಜಿಸಲಾಗಿದೆ. ಶತಮಾನದ ತೂಕವು ಅಷ್ಟೇ ಆಗಿತ್ತು. ಒಂದು ಕೃಷ್ಣಾಲಾವು ಒಂದು ರತಿ ಅಂದರೆ ೧.೮ ಗ್ರಾಂ ನಷ್ಟು ತೂಕವನ್ನು ಹೊಂದಿತ್ತು. ಎಂದು ಅಂದಾಜಿಸಲಾಗಿದೆ. ವರ್ತಕರು ತಮ್ಮ ತಮ್ಮಲ್ಲಿಯೇ ವೃತ್ತಿ ಸಂಘಗಳನ್ನು ಮಾಡಿಕೊಂಡಿದ್ದಂತೆ ಕಾಣುತ್ತದೆ. ಈ ವಿಷಯವು ಗಣಗಳು ಅಥವಾ ಸಂಸ್ಥೆಗಳು ಮತ್ತು ಶ್ರೇಷ್ಟಿನ್‌ಅಥವಾ ಶೇಷ್ಠಿ ಎಂಬ ಉಲ್ಲೇಖದಿಂದ ತಿಳಿಯುತ್ತದೆ.

ವೈದಿಕ ದೇವತೆಗಳು : ತಾತ್ವಿಕತೆ ಮತ್ತು ಆಚರಣೆ

ಪ್ರತಿಯೊಂದು ಜನ ಸಮುದಾಯವು ತನ್ನ ಸುತ್ತಲಿನ ಪರಿಸರದಲ್ಲಿ ತನ್ನ ಮತ ಧರ್ಮವನ್ನು ಕಂಡುಕೊಳ್ಳುತ್ತದೆ. ಋಗ್ವೇದ ಸಂಹಿತೆಯು ಒಂದು ಕಾಲದಲ್ಲಿ ಒಬ್ಬರಿಂದ ರಚಿತವಾದ ಕೃತಿಯಾಗಿರದೆ ವಿವಿಧ ಕಾಲಘಟ್ಟಗಳಲ್ಲಿ ಅದರ ವಿವಿಧ ಭಾಗಗಳು ರಚನೆಯಾಗಿರುವುದು ತಿಳಿಯುತ್ತದೆ. ಈ ಕಾಲದಲ್ಲಿ ಸಮಾಜವು ಅತ್ಯಂತ ಪುರಾತನ ವ್ಯವಸ್ಥೆಯಲ್ಲಿದ್ದು ಆ ಸಮಾಜದಲ್ಲಿ ಪ್ರಚಲಿತವಾಗಿದ್ದ ಸರಳ ಚಿಂತನೆಗಳು, ನಂಬಿಕೆಗಳು, ಆಚರಣೆಗಳು ಜೊತೆಗೆ ದೇವರಿಗೂ ಮತ್ತು ಮಾನವನಿಗೂ ಇದ್ದಿರಬಹುದಾದ ಸಂಬಂಧದ ಆಳವಾದ ಚಿಂತನೆಯನ್ನು ಕಾಣಬಹುದಾಗಿದೆ. ಋಗ್ವೇದ ಕಾಲದ ಆರ್ಯರಿಗೆ ಮೇಲು ನೋಟಕ್ಕೆ ರಹಸ್ಯ ಚಟುವಟಿಕೆಗಳಂತೆ ತೋರುವ ಪ್ರಾಕೃತಿಕ ವಿದ್ಯಮಾನಗಳಾದ ಸೂರ್ಯ-ಚಂದ್ರರ ಉದಯ ಅಸ್ತಮಾನಗಳು ಮಳೆ ಬರುವುದು, ನದಿ, ಬೆಟ್ಟ ಮೊದಲಾದ ಶಕ್ತಿಗಳು ಆಳವಾದ ಪರಿಣಾಮವನ್ನು ಉಂಟುಮಾಡಿದವು. ಈ ಶಕ್ತಿಗಳಿಗೆ ಅವರು ಮೂರ್ತ ರೂಪವನ್ನು ನೀಡಿ ಅವುಗಳಿಗೆ ಮನುಷ್ಯ ಮತ್ತೆ ಕೆಲವು ಸಂದರ್ಭಗಳಲ್ಲಿ ಪ್ರಾಣಿಗಳ ಸ್ವಭಾವ ಲಕ್ಷಣಗಳನ್ನು ಆರೋಪಿಸಿ ಅವುಗಳನ್ನು ಜೀವಂತ ವಸ್ತುಗಳನ್ನಾಗಿ ನೋಡಿದರು. ಋಗ್ವೇದದಲ್ಲಿ ಅಂತಹ ಹಲವು ದೈವ ರೂಪಗಳನ್ನು ಕುರಿತು ಋಕ್ಕುಗಳು ರಚಿತವಾಗಿವೆ. ಹೀಗಾಗಿ ಪೂರ್ವ ವೈದಿಕರು ಪ್ರಕೃತಿಯನ್ನೆ ದೇವತೆಯನ್ನಾಗಿ ಪರಿಭಾವಿಸಿದ ಪ್ರಕೃತಿಯ ಆರಾಧಕರೆಂದು ಕರೆಯಬಹುದು. ಋಗ್ವೇದದ ಒಂದು ಕಾಲಘಟ್ಟದಲ್ಲಿ ದೇವತೆಗಳ ಸಂಖ್ಯೆ ಅಧಿಕವಾಗುತ್ತ ಹೋಗುತ್ತದೆ. ಇದಕ್ಕೆ ಕಾರಣ ಒಂದು ದೇವತೆಯಲ್ಲಿನ ಗಮನ ಸೆಳೆಯಬಹುದಾದ ಲಕ್ಷಣವನ್ನು ತೆಗೆದುಕೊಂಡು ಹೊಸ ದೇವತೆಯನ್ನು ಸೃಷ್ಟಿಸಿರಬಹುದು. ಆ ದೇವತೆಯು ಮುಂದೆ ಸ್ವತಂತ್ರ ಸ್ಥಾನವನ್ನು ಪಡೆಯುತ್ತ ಹೋಗುತ್ತದೆ. ಹೀಗೆ ದೇವತೆಗಳ ಸಂಖ್ಯೆ ಬೆಳೆದಿದ್ದರೂ ಅವರುಗಳಲ್ಲಿ ಯಾವ ದೇವತೆ ಮತ್ತೊಂದು ದೇವತೆಗಿಂತ ಹಿರಿಯ ಅಥವಾ ಶ್ರೇಷ್ಠ ಸ್ಥಾನವನ್ನು ಪಡೆಯುತ್ತದೆ ಎಂದು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುವುದಿಲ್ಲ. ಒಮ್ಮೆ ಒಬ್ಬ ದೇವತೆ ಅತ್ಯಂತ ಶ್ರೇಷ್ಠ ಎಂದು ಭಾವಿಸದರೆ ಮತ್ತೊಮ್ಮೆ ಇನ್ನೊಬ್ಬ ದೇವತೆ ಅತ್ಯಂತ ಶ್ರೇಷ್ಠ ಎಂಬ ನಂಬಿಕೆ ಮೂಡುವಂತೆ ಮಾಡುತ್ತದೆ. ಇದಕ್ಕೆ ಕಾರಣ ಇಬ್ಬರು ಅಥವಾ ಅದಕ್ಕಿಂತ ಹಚ್ಚಿನ ಸಂಖ್ಯೆಯ ದೇವತೆಗಳು ಒಂದೇ ಕೆಲಸವನ್ನು ನಿರ್ವಹಿಸುವುದಾಗಿದೆ. ಒಟ್ಟಿನಲ್ಲಿ ಕವಿಯು ಯಾವ ದೇವತೆಯನ್ನು ಕುರಿತು ಪ್ರಾರ್ಥಿಸುತ್ತಿರುತ್ತಾನೋ ಆ ಕ್ಷಣಕ್ಕೆ ಆ ದೇವತೆಗಳಿಗೆ ಎಲ್ಲಾ ವಿಶೇಷಣಗಳನ್ನು ಅಥವಾ ಶ್ರೇಷ್ಠತೆಯನ್ನು ಆರೋಪಿಸುತ್ತಾನೆ. ಆದರೆ ಮುಂದಿನ ಸಂದರ್ಭದಲ್ಲಿ ಆ ಶಕ್ತಿಶಾಲಿ ಯಾವ ದೇವತೆಯನ್ನು ಇತರ ದೇವತೆಗಳಿಗೆ ಅವಲಂಬಿಸಿರುವಂತೆ ವರ್ಣಿಸಲಾಗಿದೆ.

ಋಗ್ವೇದ ಸಂಹಿತೆಯ ದೇವತೆಗಳು ಜೋಡಿ ಜೋಡಿಯಾಗಿ ಇಲ್ಲವೆ ಗುಂಪು ಗುಂಪಾಗಿ ಪರಸ್ಪರಿಗೆ ಸಹಕಾರ ನೀಡುವುದು ಇಲ್ಲವೆ ಪರಸ್ಪರ ಅವಲಂಬನೆಯಾಗಿರುವುದು ಅಥವಾ ಒಂದು ದೇವತೆ ಮತ್ತೊಂದು ದೇವತೆಗೆ ಅಧೀನವಾಗಿರುವುದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ. ಅತ್ಯಂತ ಶ್ರೇಷ್ಠ ದೇವತೆಯೂ ಸೇರಿದಂತೆ ಅಮುಖ್ಯವಾದ ಎಲ್ಲಾ ದೇವತೆಗಳನ್ನು ಸ್ತುತಿಸಿರುವುದು ಕಂಡುಬರುತ್ತದೆ. ಋಗ್ವೇದ ಕಾಲದಲ್ಲಿನ ದೇವತೆಗಳು ಒಟ್ಟು ೩೩ ಎಂದು ಹೇಳಲಾಗಿದೆ. ಈ ದೇವತಾ ಸಮೂಹವನ್ನು ಮೂರು ರೀತಿಯಲ್ಲಿ ವರ್ಗೀಕರಿಸಿದ್ದಾರೆ. ಅವುಗಳೆಂದರೆ:

. ಭೂಮಿಯ ದೇವತೆಗಳು

. ವಾಯುಮಂಡಲದ ದೇವತೆಗಳು

. ಸ್ವರ್ಗದ ದೇವತೆಗಳು

ಈ ವರ್ಗೀಕರಣವು ದೇವತೆಗಳು ಯಾವ ಪ್ರಕೃತಿ ವಲಯಕ್ಕೆ ಸೇರಿರುತ್ತಾರೋ ಅಥವಾ ಲಕ್ಷಣಗಳನ್ನು ಹೊಂದಿರುತ್ತಾರೋ ಅದನ್ನು ಆಧರಿಸಿ ರಚಿಸಿರುತ್ತಾರೆ. ಆದರೆ ಆ ವರ್ಗೀಕರಣವು ಕೆಲವೊಂದು ದೋಷಗಳಿಂದ ಕೂಡಿದೆ. ಏಕೆಂದರೆ ದೇವತೆಗಳಾದ ತ್ವಷ್ಟ್ರ ಮತ್ತು ಪೃಥ್ವಿಗಳನ್ನು ಮೂರು ವಲಯಗಳಿಗೂ ಸೇರಿಸಲಾಗಿದೆ. ಅಗ್ನಿ ಮತ್ತು ಉಷಸ್‌ಗಳನ್ನು ಪೃಥ್ವಿ ಸ್ಥಾನಕ್ಕೂ ಮತ್ತು ಅಂತರಿಕ್ಷ ಸ್ಥಾನಕ್ಕೂ ಸೇರಿಸಲಾಗಿದೆ. ವರುಣ, ಯಮ ಮತ್ತು ಸವಿತೃ ದೇವತೆಗಳನ್ನು ಆಕಾಶ ಮತ್ತು ಸ್ವರ್ಗದ ವಲಯಗಳಿಗೂ ಸೇರಿಸಲಾಗಿದೆ. ಈ ವರ್ಗಿಕರಣ ಹೊರತುಪಡಿಸಿದಂತೆ ಋಗ್ವೇದ ಕಾಲದ ದೇವತೆಗಳನ್ನು ಇಂಡೋ-ಯುರೋಪಿಯನ್‌ ಮತ್ತು ಇಂಡೋ-ಇರಾನಿಯನ್‌ ಎಂದು ವಿಭಾಗಿಸಿದ್ದಾರೆ. ಆದರೆ ಸಾಕಷ್ಟು ಮಾಹಿತಿಗಳ ಕೊರತೆ ಇರುವುದಲ್ಲದೆ ಲಭ್ಯವಿರುವ ಮಾಹಿತಿಗಳೂ ಕೂಡ ದೋಷ ಪೂರ್ಣವಾಗಿದೆ. ಹೀಗಾಗಿ ಈ ವಿಭಜನೆಗಳಲ್ಲಿ ಪ್ರಾರಂಭದ ವರ್ಗೀಕರಣವು ಇತರೆ ವರ್ಗೀಕರಣಗಳಿಗೆ ಹೋಲಿಸಿದಲ್ಲಿ ಕಾರ್ಯಸಾಧುವೂ ಮತ್ತು ಕಡಿಮೆ ಆಕ್ಷೇಪಣೆಯವೂ ಆಗಿದೆ.

ಋಗ್ವೇದ ಕಾಲದ ದೇವತೆಗಳಲ್ಲಿ ಮಹಾನ್‌ಯೋಧನಾದ ಇಂದ್ರನು ಮತ್ತು ಪರಮ ನೈತಿಕ ಪ್ರಭುವಾದ ವರುಣನು ಅತ್ಯಂತ ಮಹತ್ವದ ಸ್ಥಾನವನ್ನು ಪಡೆದರೂ ಇಂದ್ರ, ಅಗ್ನಿ, ಸೋಮ ಈ ದೇವತೆಗಳನ್ನು ಉದ್ದೇಶಿಸಿ ಅತೀ ಹೆಚ್ಚಿನ ಋಕ್ಕುಗಳು ರಚಿತವಾಗಿರುವುದನ್ನು ನೋಡಿದರೆ ಅವರೇ ಹೆಚ್ಚು ಜನಪ್ರಿಯರಾದ ದೇವತೆಗಳಾಗಿರಬಹುದು. ಎಂದೇ ಹೇಳಬೇಕಾಗುತ್ತದೆ. ಈ ಕಾಲದ ದೇವತೆಗಳ ಸಾಮಾನ್ಯ ಲಕ್ಷಣಗಳೆಂದರೆ.

  • ದೇವತೆಗಳಿಗೆ ಮನಷ್ಯರ ರೂಪ ನೀಡಿ ಅವರು ಏಕಕಾಲದಲ್ಲಿ ಅಲ್ಲದಿದ್ದರೂ ಹುಟ್ಟನ್ನು ಹೊಂದಿರುವವರು ಹಾಗೂ ಅವರು ಅಮರರೆಂದು ವರ್ಣಿತರಾಗಿದ್ದಾರೆ. ಅವರ ದೇಹದ ಭಾಗಗಳನ್ನು ಪ್ರಕೃತಿಯ ಘಟಕಗಳಾದ ಕಿರಣಗಳು ಅಥವಾ ಜ್ವಾಲೆಗಳೆಂದು ವರ್ಣಿಸಲಾಗಿದೆ. ಕುದುರೆ ಅಥವಾ ಇತರೆ ಪ್ರಾಣಿಗಳಿಂದ ಹೂಡಿದ ರಥಗಳಲ್ಲಿ ಅವರು ವಾಯು ಮಾರ್ಗದಲ್ಲಿ ಸಂಚರಿಸುವುದನ್ನು ಋಕ್ಕುಗಳು ಸೂಚಿಸುತ್ತವೆ.
  • ಈ ದೇವತೆಗಳ ಸಹಜ ಧರ್ಮಗಳೆಂದರೆ ತೇಜಸ್ಸು, ಶಕ್ತಿ, ಜ್ಞಾನ, ಒಡೆತನ ಮತ್ತು ಸತ್ಯ. ಅವರು ದುಷ್ಟ ಶಕ್ತಿಗಳನ್ನು ನಿಗ್ರಹಿಸುತ್ತಾರೆ ಮತ್ತು ಪ್ರಕೃತಿಯ ವ್ಯವಸ್ಥೆಯನ್ನು ನಿಯಂತ್ರಿಸುತ್ತಾರಲ್ಲದೆ ಸ್ವತಃ ತಾವೂ ಪಾಲಿಸಿ ಇತರರೂ ಪಾಲಿಸುವಂತೆ ಒತ್ತಾಯಿಸುತ್ತಾರೆ.
  • ದೇವತೆಗಳಿಗೆ ಯಜ್ಞಗಳಲ್ಲಿ ಅರ್ಪಿಸುವ ಹಾಲು, ಧಾನ್ಯ, ಮಾಂಸ ಮುಂತಾದ ಮಾನವ ಆಹಾರಗಳೇ ಅವರಿಗೂ ಆಹಾರವಾಗುತ್ತವೆ.

ಭೂಮಿಯ ದೇವತೆಗಳು

ಪೃಥ್ವಿ, ಅಗ್ನಿ, ಸೋಮ, ಬೃಹಸ್ಪತಿ ಮತ್ತು ನದಿಗಳು ಈ ವರ್ಗದ ಮುಖ್ಯ ದೇವತೆಗಳಾಗಿದ್ದಾರೆ. ಈ ದೇವತೆಗಳಲ್ಲೆಲ್ಲಾ ಅಗ್ನಿಯು ಪ್ರಮುಖ ದೇವತೆಯಾಗಿದ್ದಾನೆ. ಋಗ್ವೇದ ಕಾಲದಲ್ಲಿ ಇಂದ್ರನನ್ನು ಹೊರತುಪಡಿಸಿದರೆ ಅಗ್ನಿಯೇ ಎರಡನೆಯ ಪ್ರಮುಖ ದೇವತೆಯಾಗಿರುವುದು ಕಂಡುಬರುತ್ತದೆ. ಇವನನ್ನು ಕುರಿತು ಸುಮಾರು ೨೦೦ ಋಕ್ಕುಗಳ ರಚಿತವಾಗಿವೆ. ಇವನು ಉಳಿದೆಲ್ಲ ದೇವತೆಗಳಿಗಿಂತ ಇಂದ್ರನಿಗೆ ಹೆಚ್ಚು ಹತ್ತಿರವಾಗಿರುವುದರಿಂದ ಇಂದ್ರನನ್ನು ಇವನ ಅವಳಿ ಸಹೋದರನೆಂದು, ಸೂರ್ಯ ಎಂದು ವರ್ಣಿಸಲ್ಪಟ್ಟಿದ್ದಾನೆ. ಉಜ್ವಲವಾದ ಪ್ರಕಾಶವೇ ಅಗ್ನಿಯ ಅತ್ಯಂತ ಪ್ರಧಾನವಾದ ಲಕ್ಷಣವಾಗಿದೆ. ಅವನ ಬೆನ್ನು ಬೆಣ್ಣೆಯಿಂದ, ಕೂದಲು ಜ್ವಾಲೆಗಳಿಂದ ಆಗಿದ್ದು ಕಟ್ಟಿಗೆ ಅಥವಾ ತುಪ್ಪವು ಅವನ ಆಹಾರ ಮತ್ತು ಹವಿಸ್ಸುಗಳನ್ನು ಅವನು ತನ್ನ ನಾಲಿಗೆಯಿಂದ ತಿನ್ನುತ್ತಾನೆ. ಆಗಾಗ ಸೋಮಪಾನಕ್ಕಾಗಿ ಇತರೆ ದೇವತೆಗಳಿಂದ ಇವನಿಗೆ ಆಹ್ವಾನ ಬರುತ್ತಿತ್ತು. ಯಜ್ಞಗಳ ಸಂದರ್ಭದಲ್ಲಿ ಅವನು ರಥಿಕ, ತನ್ನ ಚಿನ್ನದ ರಥದಲ್ಲಿ ಅವನು ದೇವತೆಗಳನ್ನು ಕರೆದು ತರುತ್ತಾನೆ. ಅವನು ಸ್ವರ್ಗ ಮತ್ತು ಭೂಮಿಯ ಪುತ್ರನೆಂದು ವರ್ಣೀತನಾಗಿದ್ದಾನೆ. ಇವನು ಪ್ರತಿನಿತ್ಯವೂ ಜನಿಸುತ್ತಾನೆ ಎನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ಇವನು ನಿತ್ಯ ಯುವಕನೆಂದು ಕರೆಯಲ್ಪಟ್ಟಿದ್ದಾನೆ. ಇವನನ್ನು ಶಕ್ತಿಯ ಪುತ್ರನೆಂದು ಮತ್ತು ಹೊಗೆಯನ್ನು ಧ್ವಜವನ್ನಾಗಿ ಹೊಂದಿರುವನೆಂದು ವರ್ಣಿಸಲ್ಪಟ್ಟಿದ್ದಾನೆ. ಅಗ್ನಿಯು ಯಜ್ಞದ ಮುಖ್ಯ ಪುರುಷ. ಅವನು ಸೃಷ್ಟಿಗೊಂಡಿರುವ ಎಲ್ಲವನ್ನು ಬಲ್ಲವನು ಎಂದು ಕರೆಯಲಾಗಿದೆ. ಕೌಟುಂಬಿಕ ಜೀವನದೊಂದಿಗೆ ಅವನಿಗೆ ಸಂಬಂಧವಿರುವುದು ಅವನ ಒಂದು ವಿಶಿಷ್ಟ ಲಕ್ಷಣ. ಅವನೊಬ್ಬ ಅತಿಥಿ ಮತ್ತು ಜನರ ಬಂಧುವಾಗಿದ್ದಾನೆ. ದೇವತೆಗಳಿಂದಲೂ, ಮಾನವರಿಂದಲೂ ಹವಿಸ್ಸನ್ನು ಕೊಂಡೊಯ್ಯುವ ಸಲುವಾಗಿ ನೇಮಕಗೊಂಡ ದೂತ ಅವನೆಂದು ವರ್ಣಿತನಾಗಿದ್ದಾನೆ.

ಬೃಹಸ್ಪತಿ ದೇವತೆಯು ಪುರೋಹಿತನೆಂದು, ಎಲ್ಲಾ ಪ್ರಾರ್ಥನೆಗಳ ಜನಕನೆಂದು ವರ್ಣಿಸಲ್ಪಟ್ಟಿದ್ದಾನೆ. ಇವನಲ್ಲಿ ಮುಂದಿನ ಕಾಲದಲ್ಲಿ ಕಂಡುಬರುವ ಬ್ರಹ್ಮನ ಮೂಲ ಸ್ವರೂಪವನ್ನು ಕಾಣಲಾಗುತ್ತದೆ. ಸೋಮ ದೇವತೆಯು ಇಂದ್ರ ಮತ್ತು ಅಗ್ನಿಯ ನಂತರದ ಸ್ಥಾನವನ್ನು ಪಡೆಯುತ್ತಾನೆ. ಋಗ್ವೇದದ ವಿಧಿ ಪದ್ಧತಿಗಳಲ್ಲಿ ಸೋಮ ಯಜ್ಞವು ಕೇಂದ್ರಸ್ಥಾನದಲ್ಲಿದೆ. ಭೂ ಲೋಕದ ಇತರ ದೇವತೆಗಳಲ್ಲಿ ದ್ಯೌಃ ಮತ್ತು ಪೃಥ್ವಿಗೂ ಹತ್ತಿರದ ಸಂಬಂಧವನ್ನು ಹೊಂದಿದ್ದು ಅವರನ್ನು ಸಾಮಾನ್ಯವಾಗಿ ಒಟ್ಟಿಗೆ ಸ್ತುತಿಸಲಾಗುತ್ತದೆ. ಕೆಲವು ನದಿಗಳನ್ನು ಅದರಲ್ಲಿಯೂ ಸರಸ್ವತಿ ನದಿಯನ್ನು ಹೆಚ್ಚು ಸ್ತುತಿಸಿರುವುದು ಕಂಡುಬರುತ್ತದೆ.

ವಾಯುಮಂಡಲದ ದೇವತೆಗಳು

ಇಂದ್ರ ಅಪಮ್ನಪಾತ್‌, ರುದ್ರ, ವಾಯು, ವಾತ, ಪರ್ಜನ್ಯ, ಆಪಃ ಮತ್ತು ಮಾತರಿಶ್ಚನ್‌ ಈ ವರ್ಗದ ಮುಖ್ಯ ದೇವತೆಗಳಾಗಿದ್ದಾರೆ. ಈ ದೇವತೆಗಳಲ್ಲಿ ಅತ್ಯಂತ ಪ್ರಮುಖನಾದವನು ಅಷ್ಟೇ ಅಲ್ಲದೆ ಋಗ್ವೇದದ ದೇವತೆಗಳಲ್ಲೆ ಅತ್ಯಂತ ಶಕ್ತಿಶಾಲಿ ಮತ್ತು ಶ್ರೇಷ್ಠನಾದವನು ಇಂದ್ರ ದೇವತೆಯಾಗಿದ್ದಾನೆ. ಇಂದ್ರನನ್ನು ಕುರಿತು ಋಗ್ವೇದದಲ್ಲಿ ೨೫೦ ಋಕ್ಕುಗಳಿವೆ ಮತ್ತು ಬೇರೆ ಯಾವುದೇ ದೇವತೆಗೂ ಇಲ್ಲದಷ್ಟು ಪೌರಾಣಿಕ ಕಥೆಗಳು ಅವನ ಸುತ್ತ ಹೆಣೆಯಲ್ಪಟ್ಟಿವೆ. ಭೌತಿಕವಾಗಿ ಹೆಚ್ಚು ವಿಕಾಸಗೊಂಡ ಮನುಷ್ಯತ್ವದ ಆರೋಪಣೆ ಅವನ ಮೇಲಾಗಿದೆ. ಇಂದ್ರನ ಶಕ್ತಿ ಅಪರಿಮಿತವಾದುದು ಅವನ ಆಯುಧ ವಜ್ರ ಜೊತೆಗೆ ಕೊಕ್ಕೆ ಮತ್ತು ಬಿಲ್ಲು ಬಾಣಗಳನ್ನು ಧರಿಸಿರುವನು ಎಂದು ತಿಳಿಯುತ್ತದೆ. ಅವನು ರಥದಲ್ಲಿ ಕುಳಿತು ಯುದ್ಧ ಮಾಡುವವನು, ಸೋಮಪಾನವು ಅವನಿಗಿಷ್ಟವಾದ ಪಾನೀಯವಾಗಿದ್ದುದಲ್ಲದೆ ಅದು ಅವನನ್ನು ಯುದ್ಧಕ್ಕೆ ಪ್ರಚೋಧಿಸುತ್ತದೆ ಎಂದು ತಿಳಿಯುತ್ತದೆ. ಅಗ್ನಿ ಅವನ ಅವಳಿ ಸಹೋದರನಾಗಿದ್ದು ಮರುತ್ತುಗಳು ಅವನ ಶಾಶ್ವತ ಮಿತ್ರರಾಗಿದ್ದಾರೆ. ಇದ್ರನನ್ನು ಪುರಂಧರ ಅಥವಾ ಪೂರ್ಭಿದ್‌ಎಂದರೆ ಕೋಟೆಯ ನಾಶಕನೆಂದು ಕರೆಯಲ್ಪಟ್ಟಿದ್ದಾನೆ. ಇವನ ವಿಶಿಷ್ಟ ಮತ್ತು ಮುಖ್ಯ ವಿಶೇಷಣವೆಂದರೆ ವೃತ ವಿನಾಶಕ ಎಂಬುದು ವೃತವನ್ನು ಕುರಿತಂತೆ  ವಿದ್ವಾಂಸರು ಜಲಗಳನ್ನು ಮೋಡಗಳೊಳಗೆ ಬಂಧಿಸಿ ಕ್ಷಾಮವನ್ನು ಉಂಟುಮಾಡುವ ಅಸುರ ಎಂದು ಹೇಳಿದ್ದಾರೆ. ವೃತನ ಹಿಡಿತದಿಂದ ಇಂದ್ರನು ಪ್ರತಿವರ್ಷವು ಜಲಗಳನ್ನು ಬಲವಂತವಾಗಿ ಬಿಡಿಸಿ ತರಬೇಕು. ಇದು ಮುಂದಿನ ದಿನಗಳಲ್ಲಿ ಇಂದ್ರನನ್ನು ಮಿಂಚು, ಸಿಡಿಲುಗಳ ದೇವತೆ ಎಂದು ಪರಿಷ್ಕರಿಸಲು ನೆರವಾಯಿತು.

ವಾಯು ಮಂಡಲದ ಇತರೆ ದೇವೆತೆಗಳೆಂದರೆ ರುದ್ರ. ಈ ದೇವತೆಯನ್ನು ಶಕ್ತಿಶಾಲಿಗಳಲ್ಲಿ ಶಕ್ತಿಶಾಲಿಯೆಂದು, ಕ್ರೂರವಾದ ಪ್ರಾಣಿಯಂತೆ ಭಯಂಕರನಾದವನು, ವೃಷಭ ಎಂದು ಮುಂತಾಗಿ ಗುರುತಿಸಿಕೊಂಡಿದ್ದಾನೆ. ಋಗ್ವೇದದ ಅನೇಕ ಋಕ್ಕುಗಳು ಅವನನ್ನು ಹಿಂಸಾಶೀಲ ಪ್ರವೃತ್ತಿಯುಳ್ಳವನು ಎಂದು ಸೂಚಿಸುತ್ತದೆ. ಅವನ ಕೋಪ ಮತ್ತು ಭಯಕ್ಕೆ ಅನೇಕ ನಿದರ್ಶನಗಳು ಸಿಗುತ್ತದೆ. ಇವನು ಈ ಕಾಲದಲ್ಲಿ ಅಮುಖ್ಯನಾಗಿ ಕಂಡರೂ ಮುಂದಿನ ಯುಗಗಳಲ್ಲಿ ಪ್ರಮುಖ ದೇವತೆಯಾಗಿ ಕಂಡುಬರುತ್ತಾನೆ. ವಾಯು, ವಾತ ಪರ್ಜನ್ಯ ಮತ್ತು ಆಹಃ ಇತ್ಯಾದಿ ದೇವತೆಗಳು ಗಾಳಿ, ಮಳೆ, ಜಲಸೂಚಕ ದೇವತೆಗಳಾಗಿ ಈ ಕಾಲದಲ್ಲಿ ಕಂಡುಬರುತ್ತಾರೆ.

ಸ್ವರ್ಗದ ದೇವತೆಗಳು

ದ್ಯೌಃ ವರುಣ, ಮಿತ್ರ, ಸೂರ್ಯ, ಸವಿತೃ, ಪೂಷನ್‌, ವಿಷ್ಣು, ಆದಿತ್ಯರು, ಉಷಸ್‌ ಮತ್ತು ಅಶ್ವಿನೀ ದೇವತೆಗಳನ್ನು ಈ ವರ್ಗದಲ್ಲಿ ಸೇರಿಸಲಾಗಿದೆ. ದ್ಯೌಃ ದೇವತೆಯನ್ನು ಆಕಾಶ ದೇವತೆಯೆಂದು ಪ್ರತಿನಿಧಿಸಲಾಗಿದೆ. ವರುಣ ದೇವತೆಯು ಈ ವರ್ಗದಲ್ಲಿ ಕಂಡುಬರುವ ಅತೀ ಮುಖ್ಯ ದೇವತೆ. ಇವನಿಗೆ ಸಂಬಂಧಪಟ್ಟ ಸೂತ್ರಗಳು ಮುಖ್ಯವಾಗಿ ನೀತಿ, ಭಕ್ತಿಗಳನ್ನು ವಸ್ತುವಾಗಿ ಹೊಂದಿದ್ದು ಅವು ಋಗ್ವೇದದ ಅತ್ಯಂತ ಭವ್ಯವಾದ ಕಾವ್ಯಕ್ಕೆ ಕಾರಣಗಳಾಗಿವೆ. ಋಗ್ವೇದದಲ್ಲಿ ಇವನ ಕುರಿತು ರಚಿತವಾಗಿರುವ ಋಕ್ಕುಗಳ ಸಂಖ್ಯೆ ಕಡಿಮೆ ಇದ್ದರೂ ಅವು ಅತ್ಯಂತ ಪ್ರಭಾವಶಾಲಿಯಾಗಿವೆ. ವರುಣನು ಋತುಗಳನ್ನು ನಿಯಂತ್ರಿಸುವವನು. ನೈತಿಕ ವ್ಯವಸ್ಥೆಯನ್ನು ಪ್ರತಿಪಾಲಿಸುವವನು ಎಂದು ಸೂಚತನಾಗಿದ್ದಾನೆ. ಋತುಮಾನಕ್ಕೂ ವರುಣನಿಗೂ ಉಳಿದ ಯಾವುದೇ ದೇವತೆಗಿಂತಲೂ ಹೆಚ್ಚಿನ ಆತ್ಮೀಯ ಸಂಬಂಧವಿದೆ. ವರುಣನು ಶಕ್ತಿಯಿಂದ ಉಷಸ್ಸುಗಳನ್ನು ಸೂರ್ಯನ ಬಳಿಗೆ ಕಳುಹಿಸಿ ಅವನು ಆಕಾಶದಲ್ಲಿ ಚಲಿಸುವಂತೆ ಮಾಡುತ್ತಾನೆ. ಋಗ್ವೇದದ ಕೆಲವು ಋಕ್ಕುಗಳಲ್ಲಿ ವರುಣನು ಮಿತ್ರ ದೇವತೆಯೊಡಗೂಡಿ ಮಳೆಯನ್ನು ಕರುಣಿಸುವ ದೇವತೆ ಎಂದು ಸ್ತುತಿಸಲಾಗಿದೆ. ಅವನನ್ನು ವಿಶ್ವಜಲಗಳ ಪ್ರಭು, ನದಿಗಳು ಹರಿಯುವಂತೆ ಮಾಡುವವನು ಎಂದು ವರ್ಣಿಸಲ್ಪಟ್ಟಿದ್ದಾನೆ.

ಮಿತ್ರದೇವತೆಯು ಸೂರ್ಯ ಮಂಡಲದ ದೇವತೆಯೆಂದು, ಅವನು ವರುಣನೊಂದಿಗೆ ತನ್ನ ಕಾರ್ಯ ಚಟುವಟಿಕೆಯನ್ನು ನಡೆಸುತ್ತಿದ್ದನು. ಸೂರ್ಯ, ಸವಿತೃ, ಪೂಷನ್‌, ವಿಷ್ಣು, ಅದಿತಿ ಮತ್ತು ಅಶ್ವಿನಿ ದೇವತೆಗಳು ಈ ವರ್ಗದ ಇತರೆ ಅಪ್ರಾಮುಖ್ಯ ದೇವತೆಗಳೆನಿಸಿದ್ದಾರೆ.

ಒಟ್ಟಾರೆ ಋಗ್ವೇದ ಕಾಲದ ದೇವತಾ ಸಮೂಹದ ವೈಶಿಷ್ಟ್ಯವನ್ನು ಕ್ರೋಢೀಕರಿಸಿ ಹೀಗೆ ಹೇಳಬಹುದು:

. ಪ್ರಕೃತಿಯ ಪ್ರಧಾನ ಘಟನೆಗಳನ್ನು ಜೀವಂತ ಎಂದು ಕಲ್ಪಿಸಿಕೊಂಡು ಅವುಗಳಿಗೆ ಮಾನವ ರೂಪವನ್ನು ನೀಡಿ ಅದನ್ನು ಪೂಜಿಸುವುದು.

. ಪ್ರಕೃತಿಯ ಆರಾಧನೆಯ ಸರಳ ಆದಿಮ ಹಂತಗಳನ್ನಾಗಿ ಗಿಡ ಮರ ಪರ್ವತಗಳ ಆರಾಧನೆಯಲ್ಲಿ ಕಾಣಬಹುದು.

. ಇಂದ್ರನಂತಹ ದೊಡ್ಡ ದೇವತೆಯನ್ನು ಕೆಲವು ಸಲ ಗೂಳಿ ಎಂದು, ಅಥವಾ ಸೂರ್ಯನನ್ನು ಕೆಲವೊಮ್ಮೆ ಕುರುರೆಯೆಂದು ಕಲ್ಪಿಸಕೊಂಡಿರುವವರಾದರೂ, ಪ್ರಾಣಿಗಳನ್ನು ನೇರವಾಗಿ ಪೂಜಿಸುವುದು ಕಂಡುಬಂದಿಲ್ಲ. ಕ್ಷಾಮ ಅಥವಾ ಬರದ ರಾಕ್ಷಸನೆಂದು ಕಲ್ಪಿಸಿಕೊಳ್ಳಲಾಗಿರುವ ವೃತನನ್ನು ಹಾವು ಎಂದು ಕರೆಯಲಾಗಿದೆಯಾದರೂ ಹಾವನ್ನು ಪೂಜಿಸಿರುವ ಉಲ್ಲೇಖವಿಲ್ಲ.

. ಇಂದ್ರನ ಪ್ರತಿಮೆ ಒಂದು ಕಡೆ ಉಲ್ಲೇಖವಿದೆಯಾದರೂ ಇದು ಅವರು ವಿಗ್ರಹರಾಧನೆಯನ್ನು ಮಾಡುತ್ತಿದ್ದರು ಎಂದು ಖಚಿತವಾಗಿ ನಿರ್ಧರಿಸಲು ಸಾಧ್ಯವಾಗುವುದಿಲ್ಲ.

. ಆದಿತಿ, ಪ್ರಾತಸ್ಸಂಧ್ಯಾ ದೇವತೆಯಾದ ಉಷಸ್‌, ಪೃಥ್ವಿ ಮತ್ತು ಸರಸ್ವತಿ ಮುಂತಾದ ಹೆಣ್ಣು ದೇವತೆಗಳ ಉಲ್ಲೇಖವಿದ್ದರೂ ಋಗ್ವೇದ ಕಾಲದ ಪಿತೃ ಕುಲೀನ ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡು ದೇವತೆಗಳಿಗೆ ದೊರೆತ ಪ್ರಾಧಾನ್ಯತೆ ಹೆಣ್ಣು ದೇವತೆಗಳಿಗೆ ದೊರೆತಿಲ್ಲ.

ನಂತರ ವೈದಿಕ ಕಾಲದಲ್ಲಿ ಋಗ್ವೇದ ಕಾಲದ ದೇವತೆಗಳಿಗೆ ಹೆಚ್ಚು ಪ್ರಾಮುಖ್ಯತೆ ಉಳಿಯಲಿಲ್ಲ. ಈ ದೇವತೆಗಳು ಕೇವಲ ಹೆಸರಿಗೆ ಮಾತ್ರ ದೇವತೆಗಳಾಗಿ ಉಳಿದುಕೊಂಡವು. ಈ ಕಾಲದಲ್ಲಿ ಇಂದ್ರ. ಅಗ್ನಿ ಮತ್ತು ವರುಣ ದೇವತೆಗಳು ತಮ್ಮ ಹಿಂದಿನ ಹೆಗ್ಗಳಿಕೆಯನ್ನು ಕಳೆದುಕೊಂಡರು. ಈ ಕಾಲದ ದೇವತೆಗಳಲ್ಲಿ ಪ್ರಜಾಪತಿಯು ಮುಖ್ಯ ಸ್ಥಾನವನ್ನು ಅಲಂಕರಿಸಿದ್ದಾನೆ. ಇವನು ಸೃಷ್ಠಿಕರ್ತನೆಂದು ಖ್ಯಾತನಾಗಿದ್ದಾನೆ. ಆದರೆ ಪ್ರಜಾಪತಿಯು ರುದ್ರ ದೇವತೆಯಷ್ಟು ಪ್ರಭಾವಿಯಾಗಿರಲಿಲ್ಲ. ಯುಜರ್ವೇದ ಸಂಹಿತೆ, ಐತ್ತರೇಯ, ಕೌಷೀತಕಿ ಮತ್ತು ಶತಪಥ ಬ್ರಾಹ್ಮಣಗಳಲ್ಲಿನ ಕೆಲವು ಉಲ್ಲೇಖಗಳು ರುದ್ರನಿಗೆ ದೊರೆತಿರುವ ಮಹತ್ವನ್ನು ಸೂಚಿಸುತ್ತದೆ. ರುದ್ರನು ಪಶುಪತಿಯೆಂದು, ಭೂಪತಿಯೆಂದು, ಘೋರ ರೂಪಿಯೆಂದು ವಣಿತನಾಗಿದ್ದಾನೆ. ಇವನು ಒಂದು ಸಂದರ್ಭದಲ್ಲಿ ಪಶುಗಳ ಮೇಲಿನ ಪ್ರಜಾಪತಿಯ ಅಧಿಕಾರವನ್ನು ಕಸಿದುಕೊಂಡನು ಎಂದು ಸೂಚಿತವಾಗಿದೆ. ರುದ್ರನ ತರುವಾಯ ವಿಷ್ಣು ದೇವತೆಯು ಬರುತ್ತಾನೆ. ಇವನು ಕೆಲವು ಪ್ರದೇಶಗಳಲ್ಲಿ ಸಾಕಷ್ಟು ಪ್ರಮುಖವಾಗಿದ್ದರಿಂದ ಹೆಚ್ಚಿನ ನಿಷ್ಠೆಯನ್ನು ಪಡೆದಿದ್ದನು. ತೈತ್ತಿರೀಯ ಅರಣ್ಯದಲ್ಲಿ ನಾರಾಯಣ ಮತ್ತು ವಿಷ್ಣು ದೇವತೆಗಳ ಸಂಬಂಧವನ್ನು ಕಲ್ಪಿಸಲಾಗಿದೆ. ಈ ಕಾಲದಲ್ಲಿ ಕೆಲವು ವಸ್ತುಗಳನ್ನು ದೈವತ್ವದ ಸಂಕೇತಗಳೆಂದು ಭಾವಿಸಿ ಪೂಜಿಸುವುದು ಆರಂಭವಾಯಿತು. ವಿಗ್ರಹರಾಧನೆಯು ರೂಪಗೊಳ್ಳತೊಡಗಿತು. ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ ಮುಂತದ ಸಾಮಾಜಿಕ ವಿಭಜನೆಗಳು ತಲೆದೋರಿ ಕೆಲವು ಸಾಮಾಜಿಕ ಗುಂಪುಗಳನ್ನು ತಮ್ಮ ತಮ್ಮದೇ ದೇವತೆಗಳನ್ನು ಅವರು ರೂಪಿಸಿಕೊಂಡರು.

ಆಚರಣೆಗಳು : ಋಗ್ವೇದ ಕಾಲದಲ್ಲಿನ ಜನರು ದೇವತೆಗಳಿಗೆ ಪ್ರಾರ್ಥನೆಗಳನ್ನು ಸಲ್ಲಿಸುವುದು ಹವಿಸ್ಸನ್ನು ಅರ್ಪಿಸುವುದು ಕಂಡುಬರುತ್ತದೆ. ಆ ಮೂಲಕ ಅವರು ದೇವತೆಗಳನ್ನು ಪ್ರಸನ್ನಗೊಳಿಸುತ್ತಿದ್ದರು ಮತ್ತು ತಾವು ದೇವತೆಗಳಲ್ಲಿ ಹೊಂದಿದ್ದ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದರು. ಈ ಕಾಲದ ದೇವತೆಗಳನ್ನು ಪ್ರಾರ್ಥನಾ ಮಂತ್ರಗಳ ಪಠಣ ಮತ್ತು ಯಜ್ಞಯಾಗಗಳ ಮೂಲಕ ಪೂಜಿಸುವ ಕ್ರಮವು ಪ್ರಧಾನ ವಿಧಾನವಾಗಿತ್ತು. ಈ ಕಾಲದಲ್ಲಿ ಪ್ರಾರ್ಥನೆಗಳನ್ನು ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಸಲ್ಲಿಸಲಾಗುತ್ತಿತ್ತು. ಮೂಲತಃ ಒಂದೊಂದು ಕುಲ ಅಥವಾ ಬಣವೂ ಒಂದೊಂದು ದೈವಕ್ಕೆ ನಿಷ್ಠವಾಗಿತ್ತು. ಬಣದ ಎಲ್ಲಾ ಸದಸ್ಯರೂ ಒಂದುಗೂಡಿ ಪ್ರಾರ್ಥನೆ ಮಾಡುತ್ತಿದ್ದರು. ಯಜ್ಞಯಾಗಗಳು ಇದೇ ರೀತಿ ಸಾಮೂಹಿಕ ಪ್ರಾರ್ಥನಾ ಕ್ರಿಯೆಯಾಗಿತ್ತು. ಋಗ್ವೇದದಲ್ಲಿ ಕಂಡುಬರುವ ಯಜ್ಞವು ದೇವತೆಗಳಿಗೆ ಮತ್ತು ಉಪಾಸಕರಿಗೆ ತೃಪ್ತಿಪಡಿಸುವ ಸಾಧನ ಮಾತ್ರವಾಗಿತ್ತು. ಈ ಕಾಲದಲ್ಲಿ ಕರ್ಮಕ್ಕಾಗಿ ನಿರ್ದಿಷ್ಟವಾದ ಸಂಸ್ಕಾರವಾಗಲೀ, ಮಂತ್ರವಾಗಲೀ ಬಳಕೆಯಾಗುತ್ತಿರಲಿಲ್ಲ.

ಋಗ್ವೇದ ಕಾಲದಲ್ಲಿ ಮುಖ್ಯವಾಗಿ ಎರಡು ಬಗೆಯ ಯಜ್ಞ ಸಂಪ್ರದಾಯಗಳಾದವು. ಅವುಗಳೆಂದರೆ:

. ಗೃಹ್ಯ ಅಥವಾ ಕೌಟುಂಬಿಕ ಕರ್ಮಗಳಿಗೆ ಸಂಬಂಧಿಸಿದ ಯಜ್ಞಗಳು ಋಗ್ವೇದದ ಕೆಲವು ಋಕ್ಕುಗಳು ಜನನ, ವಿವಾಹ, ಅಂತ್ಯಕ್ರಿಯೆ, ಪಿತೃಪೂಜೆ, ಕೃಷಿ ಕ್ಷೇತ್ರದಲ್ಲಿ ಹಣ್ಣುಗಳ ಬೆಳೆ ಮುಂತಾದ ಸಂದರ್ಭಗಳಲ್ಲಿ ಯಜ್ಞಗಳು ಜರುಗುತ್ತಿದ್ದವು ಎಂದು ತಿಳಿಸುತ್ತವೆ. ಈ ಸಂದರ್ಭಗಳಲ್ಲಿ ಜರುಗುತ್ತಿದ್ದ ಯಜ್ಞಗಳು ಅತ್ಯಂತ ಸರಳವಾದ ಯಜ್ಞಗಳು ಎಂದು ಭಾವಿಸಲ್ಪಟ್ಟಿದ್ದವು. ಇಂತಹ ಕ್ರಿಯೆಗಳಲ್ಲಿ ಮನೆಯ ಯಜಮಾನನೇ, ಅಗತ್ಯವಾದರೆ ಒಬ್ಬ ಪುರೋಹಿತನ ಅಥವಾ ಬ್ರಹ್ಮನ್‌ನ ನೆರವು ಪಡೆದು ಯಜ್ಞದ ಕಾರ್ಯವನ್ನು ಪೂರೈಸುತ್ತಿದ್ದರು.

. ಮಹಾಯಜ್ಞಗಳು ಈ ಬಗೆಯ ಯಜ್ಞಗಳು ಅದರಲ್ಲೂ ಇಂದ್ರನಿಗೆ ಸಂಬಂಧಿಸಿದ ಸೋಮ ಸಂಪ್ರದಾಯದ ಯಜ್ಞವನ್ನು ಶ್ರೀಮಂತ ವರ್ಗದವರೂ ಅದರಲ್ಲೂ ರಾಜರು ಮಾತ್ರವೇ ಮಾಡಲು ಸಾಧ್ಯವಾಗುತ್ತಿತ್ತು. ಅದನ್ನು ವಿಶಾಲವಾದ ಜಾಗದಲ್ಲಿ ಯಥೇಚ್ಚ ಸಂಪತ್ತನ್ನು ಈ ಕಾರ್ಯಕ್ಕೆ ವ್ಯಯ ಮಾಡಬೇಕಾಗುತ್ತಿತ್ತು. ಋಗ್ವೇದದ ಬಹುಪಾಲು ಸೂಕ್ತಗಳು ಸೋಮಯಜ್ಞಪ್ರಕ್ರಿಯೆಗಳಿಗೆ ಮೀಸಲಾಗಿವೆ.

ಅಗ್ನಿ ಮತ್ತು ಇಂದ್ರರನ್ನು ಹವಿಸ್ಸುಗಳನ್ನು ಸ್ವೀಕರಿಸಲು ಆಹ್ವಾನಿಸಲಾಗುತ್ತಿತ್ತು. ಅಗ್ನಿಯನ್ನು ಮಾನವರ ಮತ್ತು ದೇವತೆಗಳ ನಡುವಣ ಮಧ್ಯವರ್ತಿಯೆಂದೂ, ಸಂದೇಶವಾಹಕನೆಂದು ಭಾವಿಸಲಾಗಿದೆ. ದೇವತೆಗಳಿಗೆ ಬಾರ್ಲಿ, ಹಣ್ಣುಹಂಪಲು ಮೊದಲಾದವುಗಳನ್ನು ಅರ್ಪಿಸಲಾಗುತ್ತಿತ್ತು. ಋಗ್ವೇದ ಕಾಲದಲ್ಲಿ ಜನರು ದೇವತೆಗಳನ್ನು ಆಧ್ಯಾತ್ಮಿಕ ಉನ್ನತಿಗಾಗಿ ಪ್ರಾಥಿಸುತ್ತಿದ್ದರೋ ಅಥವಾ ದೈನಂದಿನ ಬದುಕಿನ ಬವಣೆಗಳ ಪರಿಹಾರಕ್ಕಾಗಿ ಪ್ರಾರ್ಥಿಸುತ್ತಿದ್ದರೋ ತಿಳಿಯುವುದಿಲ್ಲ. ಸಾಮಾನ್ಯವಾಗಿ ಇವರು ಮುಖ್ಯವಾಗಿ ಮಕ್ಕಳು ಅದರಲ್ಲೂ ಗಂಡು ಸಂತಾನ, ಪಶುಗಳು, ಆಹಾರ, ಸಂಪತ್ತು, ಆರೋಗ್ಯ ಇತ್ಯಾದಿಗಳನ್ನು ಬೇಡಿಕೊಳ್ಳುತ್ತಿದ್ದರು.

ಉತ್ತರ ವೇದಕಾಲದಲ್ಲಿ ಗಂಗಾ-ಯಮುನಾ ಬಯಲಿನ ಮೇಲು ಭಾಗವು ಆರ್ಯ ಸಂಸ್ಕೃತಿಯ ಕಾರ್ಯ ಚಟುವಟಿಕೆಗಳ ಕೇಂದ್ರಸ್ಥಾನವಾಯಿತು. ಈ ಪ್ರದೇಶದಲ್ಲಿ ಇಡೀ ಉತ್ತರ ವೈದಿಕ ಸಾಹಿತ್ಯ ಸಂಕಲನ ಮತ್ತು ಸಂಗ್ರಹಗಳ ಕಾರ್ಯ ಜರುಗಿತು. ಮಂತ್ರೋಚ್ಚಾರ ಪೂರ್ವಕವಾದ ಯಜ್ಞಯಾಗಾದಿಸಂಸ್ಕಾರ ಕ್ರಿಯೆಗಳೇ ಈ ಸಂಸ್ಕೃತಿಯ ಜೀವಾಳವಾಯಿತು. ಈ ಕಾಲದಲ್ಲಿ ಪೂಜಾ ವಿಧಾನಗಳು ಮಾರ್ಪಟ್ಟವಾದರೂ ಪೂಜೆಯ ಗುರಿ ಮಾತ್ರ ಹಿಂದಿನಂತೆಯೇ ಲೌಕಿಕ ಇಚ್ಛೆಗಳೇ ಆಗಿದ್ದವು. ಮಂತ್ರ ಸ್ತೋತ್ರಗಳ ಪಠಣ ಮುಂದುವರಿಯಿತಾದರೂ ಯಜ್ಞಯಾಗಾದಿಗಳು ಪ್ರಾಧಾನ್ಯತೆ ಗಳಿಸಿದವು. ಯಜ್ಞಗಳಲ್ಲಿ ಅಧಿಕ ಪ್ರಮಾಣದಲ್ಲಿ ಪ್ರಾಣಿ ಬಲಿ, ಮುಖ್ಯವಾಗಿ ಗೋಸಂಪತ್ತಿನ ನಾಶ ಜರುಗುತ್ತಿತ್ತು. ಆಗ ಅತಿಥಿಯನ್ನು ‘ಗೋಘ್ನಾ’ ಎಂದರೆ ಗೋವಿನ ಊಟ ನೀಡಲ್ಪಡುವವನು ಎಂದೇ ಕರೆಯುತ್ತಿದ್ದರು ಯಜ್ಞ ನಸೆಸುವವನು ಯಜಮಾನ ಎಂದು ಕರೆಯಲ್ಪಡುತ್ತಿದ್ದನು. ಮಂತ್ರೋಚ್ಚಾರಕ್ಕೆ ಬಹಳ ಮಹತ್ವ ದೊರೆತಿತ್ತು. ನಂತರ ವೈದಿಕ ಕಾಲದಲ್ಲಿ ಯಜ್ಞವು ಒಂದು ಸಂಸ್ಥೆಯಾಗಿ ಬೆಳೆಯಿತು. ಈ ಕಾಲದಲ್ಲಿ ಯಜ್ಞಗಳ ಪರಿಷ್ಕರಣಾ ಕಾರ್ಯ ನಡೆದು ಅದನ್ನು ವ್ಯವಸ್ಥಿತಗೊಳಿಸಲಾಯಿತು. ಹೀಗೆ ಯಜ್ಞಗಳ ವಿಜ್ಞಾನ ವಿಕಸಿತಗೊಂಡಿತು. ಮಹಾಯಜ್ಞಗಳ ಯಪಯೋಗಕ್ಕಾಗಿ ಸಾಮವೇದ, ಯಜುರ್ವೇದಗಳನ್ನು ರಚಿಸಲಾಯಿತು. ಮತ್ತು ಯಜ್ಞಗಳು ಬ್ರಾಹ್ಮಣ ಗ್ರಂಥಗಳ ಮುಖ್ಯ ವಿಷಯವಾಯಿತು. ಈ ಕಾಲದಲ್ಲಿ ಮಹಾ ಯಜ್ಞಗಳಿಗೆ ಒಂದು ಅಗ್ನಿಯ ಬದಲಿಗೆ ಮೂರು ಅಗ್ನಿಗಳ ಅವಶ್ಯಕತೆಯಾದವು. ಅವುಗಳಿಗಾಗಿ ವಿಶಾಲವಾದ ಯಜ್ಞವೇದಿಕೆಗಳನ್ನು ನಿರ್ಮಿಸಬೇಕಾಯಿತು. ಇವುಗಳ ಸರಿಯಾದ ನಿರ್ವಹಣೆಗಾಗಿ ನಾಲ್ಕು ಮುಖ್ಯ ಪುರೋಹಿತರ ತಂಡವನ್ನು ರಚಿಸಲಾಯಿತು. ಈ ನಾಲ್ಕು ಗುಂಪುಗಳ ಮುಖ್ಯಸ್ಥರುಗಳೆಂದರೆ ಹೋತೃ, ಉದ್ಗಾತೃ, ಅಧ್ವರ್ಯ ಮತ್ತು ಬ್ರಹ್ಮನ್‌ಹೋತೃ ಅವಾಹನೆ ಮಾಡುವವನಾಗಿದ್ದು ಯೋಗ್ಯ ಮಂತ್ರಗಳನ್ನು ಪಠಿಸುವುದರ ಮೂಲಕ ದೇವತೆಗಳನ್ನು ಯಜ್ಞಕ್ಕೆ ಆಹ್ವಾನಿಸುತ್ತಾನೆ. ಉದ್ಗಾತೃ ಎಂದರೆ ಗಾಯನ ಮಾಡುವವನಾಗಿದ್ದು ಯಜ್ಞಗಳಲ್ಲಿ ವಿಶೇಷವಾಗಿ ಸೋಮಯಜ್ಞಗಳಲ್ಲಿ ಸಾಮವೇದದ ಮಂತ್ರಗಳನ್ನು ಹಾಡುತ್ತಾನೆ. ಅಧ್ವರ್ಯ ಎಂದರೆ ನಿರ್ವಹಿಸುವವನು ಇವನು ಗದ್ಯ ಪ್ರಾರ್ಥನೆಗಳನ್ನು ಮತ್ತು ಯಜುಸ್‌ವಿಧಿಗಳನ್ನು ಪಠಿಸುತ್ತ ಯಜ್ಞಕ್ರಿಯೆಗಳನ್ನು ಮಾಡುತ್ತಾನೆ. ಬ್ರಹ್ಮನ್‌ಎಂದರೆ ಮಹಾಪುರೋಹಿತ ಇವನು ಮೇಲ್ವಿಚಾರಕನಂತಿದ್ದು ಯಜ್ಞದ ಕಾರ್ಯಗಳಲ್ಲಿ ತಪ್ಪುಗಳಾಗದಂತೆ ಎಚ್ಚರ ವಹಿಸುವುದಾಗಿದೆ.

ಋಗ್ವೇದ ಕಾಲದ ಯಜ್ಞದಲ್ಲಿನ ಸ್ವಾಭಾವಿಕತೆ ಮತ್ತು ಸರಳತೆ ನಂತರ ವೈದಿಕ ಕಾಲದಲ್ಲಿ ಉಳಿಯಲಿಲ್ಲ. ಬ್ರಾಹ್ಮಣರು ಎಂದು ಹೆಸರಾಗಿದ್ದ ಪುರೋಹಿತರು ಯಜ್ಞಗಳನ್ನೂ, ಮಂತ್ರಗಳನ್ನು ಆವಿಷ್ಕರಿಸಿ, ಹೊಂದಿಸಿ ವಿಸ್ತರಿಸುವ ಕಾರ್ಯ ಮಾಡಿದರು. ಈ ಆವಿಷ್ಕಾರ ಹಾಗೂ ವಿಸ್ತರಣೆಗಳಿಗೆ ಕಾರಣಗಳು ಸ್ಪಷ್ಟವಾಗಿ ತಿಳಿಯದಿದ್ದರೂ ಸಂಪತ್ತಿನ ಹಿತಾಸಕ್ತಿಯ ಉದ್ದೇಶವನ್ನು ತಳ್ಳಿ ಹಾಕುವಂತಿಲ್ಲ. ರಾಜಸೂಯ ಯಾಗದ ಪ್ರಮುಖ ಪುರೋಹಿತನಿಗೆ ೨,೪೦,೦೦೦ದಷ್ಟು ಗೋವುಗಳನ್ನು ದಕ್ಷಿಣೆಯಾಗಿ ನೀಡುತ್ತಿದ್ದರು ಎಂದು ಹೇಳಲಾಗಿದೆ. ಹಸುಗಳ ಜೊತೆಗೆ ಯಜ್ಞಗಳಲ್ಲಿ ಚಿನ್ನ, ವಸ್ತ್ರ ಹಾಗೂ ಕುದುರೆಗಳೂ ಸಹ ದಕ್ಷಿಣೆಯಾಗಿ ನೀಡಲ್ಪಡುತ್ತಿದ್ದವು. ಕೆಲವೊಮ್ಮೆ ಪುರೋಹಿತರು ಭೂಮಿಯನ್ನು ದಕ್ಷಿಣೆಯಾಗಿ ಕೇಳುತ್ತಿದ್ದರು. ಶತಪಥ ಬ್ರಾಹ್ಮಣವು ಆಶ್ವಮೇಧ ಯಾಗದಲ್ಲಿ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣಗಳಲ್ಲಿನ ಭೂಮಿಯನ್ನು ಪುರೋಹಿತನಿಗೆ ದಕ್ಷಿಣೆಯಾಗಿ ನೀಡಬೆಕೆಂದು ಹೇಳುತ್ತದೆ. ಆದ್ದರಿಂದ ಇದು ಪುರೋಹಿತರು ಸಾಧ್ಯವಾದಷ್ಟು ಭೂಮಿಯನ್ನು ಕಬಳಿಸಲು ಇಷ್ಟಪಡುತ್ತಿದ್ದರೆಂಬುದನ್ನು ಸೂಚಿಸುತ್ತದೆ. ಅಲ್ಲದೆ ಈ ಕಾಲದ ಗ್ರಂಥಗಳಿಂದ ದಾನ ನೀಡಿದ ಭೂಮಿಯನ್ನು ಪುರೋಹಿತರಿಗೆ ವಹಿಸಿಕೊಡಲು ನಿರಾಕರಿಸಿದ ಒಂದು ಪ್ರಸಂಗವೂ ಪ್ರಸ್ತಾಪಗೊಂಡಿದೆ.

ನಂತರ ವೇದ ಕಾಲದ ಕೊನೆಯ ವೇಳೆಗೆ ಪೌರೋಹಿತ್ಯದ ತಿಳುವಳಿಕೆ ಮತ್ತು ಪರಿಣತಿಗಳ ಮೇಲೆ ಪುರೋಹಿತರು ಹೊಂದಿದ್ದ ಏಕಸ್ವಾಮ್ಯವನ್ನು ತೀವ್ರವಾಗಿ ಪ್ರತಿರೋಧಿಸಲಾಯಿತು. ಕ್ರಿ. ಪೂ. ೬೦೦ರ ಸುಮಾರಿನಲ್ಲಿ ರಚಿತವದ ಉಪನಿಷತ್ತುಗಳು ತಾತ್ವಿಕ ಗ್ರಂಥಗಳಲ್ಲಿ ಯಜ್ಞಯಾಗಗಳನ್ನು ಟೀಕಿಸಿ ಸರಿಯಾದ ನಂಬಿಕೆ ಹಾಗೂ ತಿಳುವಳಿಕೆಗಳ ಮಹತ್ವವನ್ನು ಎತ್ತಿಹಿಡಿದವು. ಹಲವು ಕ್ಷತ್ರಿಯ ರಾಜರು ಈ ಆಲೋಚನಾ ವಿಧಾನವನ್ನು ರೂಢಿಸಿಕೊಂಡು ಪುರೋಹಿತ ಪ್ರಾಬಲ್ಯದ ಮತ ಧರ್ಮದ ಸುಧಾರಣೆಗೆ ಸೂಕ್ತ ಸನ್ನಿವೇಶಗಳನ್ನು ಹುಟ್ಟಿಸಿದರು.

ಪರಾಮರ್ಶನಗ್ರಂಥಗಳು

೧. ಕೋಸಾಂಬಿ ಡಿ. ಡಿ., ೧೯೭೫, ಯ್ಯಾನ್ಇನ್ಟ್ರುಡಕ್ಷನ್ಟು ದಿ ಸ್ಟಡೀ ಆಫ್ಇಂಡಿಯನ್ಹಿಸ್ಟರಿ, ಬಾಂಬೆ : ಪಾಪ್ಯುಲರ್ ಪ್ರಕಾಶನ್‌.

೨. ಘೋಷ್‌ ಬಿ. ಕೆ. ಮತ್ತು ಆಪ್ಟೆ ವಿ. ಎಂ., ೧೯೮೮. “ದಿ ಆರ್ಯನ್ಸ್‌ ಇನ್‌ ಇಂಡಿಯಾ”, ಮುಜುಂದಾರ್ ಆರ್. ಸಿ. (ಸಂ.), ದಿ ವೇದಿಕ್ಏಜ್, ಬಾಂಬೆ : ಭಾರತೀಯ ವಿದ್ಯಾಭವನ.

೩. ಧಾಪರ್ ಬಿ. ಕೆ., ೧೯೮೫. ರೀಸೆಂಟ್ಆರ್ಕಿಯಾಲಾಜಿಕಲ್ಡಿಸ್ಕವರೀಸ್ಇನ್ಇಂಡಿಯಾ, ಯುನೆಸ್ಕೊ : ದಿ ಸೆಂಟರ್ ಫಾರ್ ಈಸ್ಟ್‌ ಏಷಿಯನ್‌ ಕಲ್ಚರಲ್‌ ಸ್ಟಡೀಸ್‌.

೪. ಬ್ರಿಡ್ಜೆಟ್‌ ಮತ್ತು ಆಲ್‌ಚಿನ್‌ ರೇಮಂಡ್‌, ೧೯೮೯. ದಿ ರೈಸ್ಆಫ್ಸಿವಿಲೈಜೇಷನ್ಇಂಡಿಯಾ ಯ್ಯಾಂಡ್ಪಾಕಿಸ್ತಾನ, ನ್ಯೂಡೆಲ್ಲಿ : ಸೆಲೆಕ್ಟ್‌ಬುಕ್ಸ್‌.

೫. ರತ್ನಾಗರ್ ಶರೀನ್‌, ೨೦೦೨, ಅಂಡರ್ ಸ್ಟ್ಯಾಂಡಿಗ್ಹರಪ್ಪ ಸಿವಿಲೈಜೇಷನ್ಇನ್ದಿ ಗ್ರೇಟರ್ ಇಂಡಸ್ವ್ಯಾಲಿ, ನ್ಯೂಡೆಲ್ಲಿ.

೬. ರಾವ್‌ಎಸ್. ಆರ್., ೧೯೭೩. ಲೋಧಲ್ಯ್ಯಾಡ್ಇಂಡಸ್ಸಿವಿಲೈಜೇಷನ್, ದೆಹಲಿ : ಏಷಿಯನ್‌ ಪಬ್ಲಿಷಿಂಗ್‌ ಹೌಸ್‌.

೭. ರಾಜಾರಾಮ ಹೆಗಡೆ, ೨೦೦೧ “ವೈದಿಕ ಆರ್ಯರು”, ತಂಬಂಡ ವಿಜಯ್‌ಪೂಣಚ್ಚ (ಸಂ.), ಚರಿತ್ರೆ ವಿಶ್ವಕೋಶ, ಹಂಪಿ : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

೮. ಶರ್ಮ ಆರ್. ಎಸ್‌., ೧೯೯೩. ಏನ್ಷಿಯೆಂಟ್ಇಂಡಿಯಾ, ನ್ಯೂಡೆಲ್ಲಿ : ನ್ಯಾಷನಲ್‌ ಕೌನ್ಸಿಲ್‌ ಆಫ್‌ ಎಜುಕೇಷನಲ್‌ ರೀಸರ್ಚ್‌ ಯ್ಯಾಂಡ್‌ ಟ್ರೈನಿಂಗ್‌.

೯. ಶಾಸ್ತ್ರೀ ಕೆ. ಎ. ಎನ್‌. ೧೯೮೭. ಹಿಸ್ಟರಿ ಆಫ್ಸೌತ್ಇಂಡಿಯಾ ಫ್ರಂ ಪ್ರಿ ಹಿಸ್ಟಾರಿಕ್ಟೈಮ್ಸ್ಟು ದಿ ಫಾಲ್ಆಫ್ವಿಜಯನಗರ, ಮದ್ರಾಸ್‌: ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌.

೧೦. ಸುಂದರ ಅ. ಮತ್ತು ಮುಧೋಳ ಎಂ. ಎಸ್ಸ್‌., ೧೯೯೭. “ಪೂರ್ವಭಾವಿ ಇತಿಹಾಸ ಹಂತದ ಸಂಸ್ಕೃತಿಗಳು”, ಷೇಕ್‌ ಆಲಿ ಬಿ. (ಸಂ.) ಕರ್ನಾಟಕ ಚರಿತ್ರೆ – ಆದಿ ಹಳೆ ಶಿಲಾಯುಗದಿಂದ ಕ್ರಿ. ಶ. ೬೪೦, ಸಂಪುಟ ೧. ಹಂಪಿ : ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ.