ಜೈನ ಚಿಂತನೆಗಳು

ಜೈನರು ತಮ್ಮ ಸಂಪ್ರದಾಯದಲ್ಲಿ ೨೪ ತೀರ್ಥಂಕರರು ಆಗಿಹೋಗಿದ್ದಾರೆಂದು ಹೇಳುತ್ತಾರೆ. ಅವರಲ್ಲಿ ೨೪ನೆಯವನು ವರ್ಧಮಾನ ಮಹಾವೀರ. ಮಹಾವೀರನಿಗೂ ಪೂರ್ವದಲ್ಲಿ ೨೩ನೆಯ ತೀರ್ಥಂಕರನಾದ ಪಾರ್ಶ್ವನಾಥನು ನಿರ್ಗ್ರಂಥ ಸಂಪ್ರದಾಯವನ್ನು ಪ್ರಾರಂಭಿಸಿದ್ದನು. ಮಹಾವೀರನು ಈ ನಿರ್ಗ್ರಂಥ ಸಂಪ್ರದಾಯವನ್ನು ಸ್ವೀಕರಿಸಿದ್ದನು. ಇದು ಜೈನಧರ್ಮ ಎಂಬುದು ಸ್ಪಷ್ಟ. ಪಾರ್ಶ್ವನ ತತ್ವಗಳ ಜೊತೆಗೆ ಮಹಾವೀರನೂ ಜೈನ ಧರ್ಮದಲ್ಲಿ ಅನೇಕ ಹೊಸ ತತ್ವಗಳನ್ನು ನೆಲೆಯೂರಿಸಿದನು. ಹೀನಯಾನ ಬೌದ್ಧರಂತೇ ಅರ್ಹತ ಪದವಿ ಅಥವಾ ನಿರ್ವಾಣ ಅಂತಿಮವಾದ ಮೋಕ್ಷವಾಗಿದೆ. ಅದನ್ನು ಹೊಂದಿದವನು ‘ಜಿನ’ ಎಂದೆನಿಸಿ ಕೊಳ್ಳುತ್ತಾನೆ. (ಜಿನ ಗೆದ್ದವನು) ಅಂದರೆ ಈ ಭವವನ್ನು ಗೆದ್ದವನು ಜಿನನಾಗುತ್ತಾನೆ. ಈ ಮತವನ್ನು ಪ್ರಚಾರ ಮಾಡಲು ಜೈನರೂ ಸಂಘಗಳನ್ನು ಸ್ಥಾಪಿಸಿದರು. ಮಹಾವೀರನೂ ಬುದ್ಧನ ಸಮಕಾಲೀನನಾಗಿದ್ದು ಆತನ ನಂತರ ಜೈನರಲ್ಲೇ ಶ್ವೇತಾಂಬರ ಎಂಬ ಪಂಗಡ ಹುಟ್ಟಿಕೊಂಡಿತು. ಜೈನರು ಮೂಲತಃ ನಗ್ನವಾಗಿ ಸಾಧನೆ ನಡೆಸುವ ತಪಸ್ವಿಗಳಾಗಿದ್ದು, ಅಂಥವರು ದಿಗಂಬರರು ಎನಿಸಿಕೊಂಡರು. ಶ್ವೇತಾಂಬರರು ಬಿಳಿ ಬಟ್ಟೆಯನ್ನು ಉಪಯೋಗಿಸುವುದನ್ನು ಮಾನ್ಯ ಮಾಡಿದರು. ಚಂದ್ರಗುಪ್ತ ಮೌರ‍್ಯನ ಕಾಲದಲ್ಲಿ ಭದ್ರಬಾಹು ಎಂಬ ಮುನಿಯ ಮುಂದಾಳತ್ವದಲ್ಲಿ, ಜೈನರು ದಕ್ಷಿಣಕ್ಕೆ ವಲಸೆ ಬಂದರೆನ್ನಲಾಗಿದೆ. ಜೈನರ ತತ್ವಗಳನ್ನು ‘ಅಂಗ’ಗಳೆಂದು ಸಂಗ್ರಹಗಳಲ್ಲಿ ಸೇರಿಸಿದ್ದಾರೆ. ಅಂಗಗಳು ಒಟ್ಟು ೧೨ ಇವೆ. ಇವಕ್ಕೆ ಕಾಲಾಂತರದಲ್ಲಿ ೧೨ ಉಪಾಂಗಗಳನ್ನು ಸೇರಿಸಿಲಾಗಿದೆ.

ಜೈನತತ್ವವೂ ಮೂಲತಃ ನಾಸ್ತಿಕವಾದಿ ಹಾಗೂ ನಿರೀಶ್ವರವಾದಿಯೇ ಆಗಿದೆ. ಜೈನರ ವಿಶ್ವನ್ನು ಸೃಜಿಸುವ ದೇವತೆ ಯಾವುದೂ ಇಲ್ಲ. ಈ ವಿಶ್ವ ಒಂದು ಅನಂತವಾದ ಗತಿಗೆ ಬದ್ಧವಾಗಿದೆ. ಅದರಲ್ಲಿ ಅಸಂಖ್ಯ ಯುಗಗಳಿವೆ. ಪ್ರತಿಯುಗವೂ ಏಳು-ಬೀಳು (ಉತ್ಸರ್ಪಿಣಿ-ಅಪಸರ್ಪಿಣಿ) ಗತಿಯನ್ನು ಹೊಂದಿದೆ. ಪ್ರತಿ ಯುಗದಲ್ಲೂ ೨೪ ತೀರ್ಥಂಕರರಿರುತ್ತಾರೆ ಹಾಗೂ ಅವರನ್ನೊಳಗೊಂಡಂತೆ ೬೩ ಶಲಾಕಾಪುರುಷರಿರುತ್ತಾರೆ. ಇಂಥ ಯುಗದಲ್ಲಿ ಧರ್ಮದ ಏರು-ಇಳುವು ಪುರಾಣಗಳ ಯುಗಕಲ್ಪಪನೆಗೆ ಹೋಲುವಂತೇ ಇದೆ.

ಈ ವಿಶ್ವವು ಆಕಾಶ, ಧರ್ಮ, ಅಧರ್ಮ, ಕಾಲ ಹಾಗೂ ಪುಟ್ಗಲಗಳೆಂಬ ಐದು ಅಜೀವಗಳು ಹಾಗೂ ಜೀವಗಳ ಸಂಸರ್ಗದಿಂದ ಅಸ್ತಿತ್ವದಲ್ಲಿದೆ. ಕೇವಲ ಜೀವಿಗಳಿಗೆ ಮಾತ್ರವಲ್ಲ, ನಿರ್ಜೀವಿಗಳಿಗೂ ಆತ್ಮವಿರುತ್ತದೆ. ಆತ್ಮಕ್ಕೆ ಕರ್ಮದ ಲೇಪನವಾಗುತ್ತದೆ. ಹೀಗೆ ಪ್ರತಿ ಆತ್ಮವೂ ತನ್ನದೇ ವಿಶಿಷ್ಟವಾದ ಸ್ವರೂಪವನ್ನು ಹೊಂದಲು ಈ ಕರ್ಮಲೇಪದ ವೈವಿಧ್ಯತೆಯೇ ಕಾರಣ. ಆತ್ಮ ಕರ್ಮದ ಲೇಪನ ಇರುವವರೆಗೆ ಪುನರ್ಜನ್ಮವನ್ನು ಹೊಂದುತ್ತಿರುತ್ತದೆ. ಕಠಿಣ ಸಾಧನೆಯಿಂದ ಕರ್ಮವು ನಶಿಸಿ ಈ ಭವಚಿತ್ರವನ್ನು ದಾಟಿ ನಿರ್ವಾಣ ಹೊಂದಲು ಸಾಧ್ಯ. ಇದು ಐದು ವ್ರತಗಳಿಂದ (ಸಪಚ್ಛಕ್ಕಾಣ) ಸಾಧ್ಯ. ಅದೆಂದರೆ ಅಹಿಂಸೆ, ಅಸತ್ಯ, ತಾನಾಗಿಯೇ ಕೊಡದ ವಸ್ತುಗಳನ್ನು ಮುಟ್ಟದಿರುವುದು, ವಿರಕ್ತಿ ಹಾಗೂ ಬ್ರಹ್ಮಚರ್ಯ. ಅಹಿಂಸೆಗೆ ಜೈನರು ಅತಿಯಾದ ಮಹತ್ವನ್ನು ನೀಡಿದ್ದರು. ಸಲ್ಲೇಖನ ಎಂಬ ಉಪವಾಸ ವಿಧಿಯಿಂದ ದೇಹತ್ಯಾಗ ಮಾಡುವುದು ಶ್ರೇಷ್ಠವಾದ ಮರಣ ಎಂದು ಪರಿಗಣಿಸಲ್ಪಟ್ಟಿತ್ತು.

ಜೈನರಲ್ಲಿ ಈಶ್ವರವಾದ ಯಾವಾಗಲೂ ಸ್ಥಾನ ಪಡೆಯಲಿಲ್ಲ. ಅವರಿಗೆ ತೀರ್ಥಂಕರನೇ ನಿರ್ವಾಣದ ಸಂಕೇತವಾಗಿ ಪರಮೋಚ್ಚ ಅದರ್ಶವಾಗಿದ್ದನು. ಆದರೆ ಮಧ್ಯಕಾಲೀನದಲ್ಲಿ ಜೈನರು ಪ್ರಾದೇಶಿಕ ದೇವಪೂಜಾ ಪಂಥಗಳನ್ನು ತಮ್ಮ ಆಚರಣೆಯಲ್ಲಿ ಒಳಗೊಂಡರು. ಇಂಥ ದೇವತೆಗಳನ್ನು ಶಾಸನ ದೇವತೆಗಳು ಎಂದು ಕರೆದರು. ಅಂದರೆ ಜಿನಶಾಸನವನ್ನು ರಕ್ಷಿಸುತ್ತ, ಭಜಕರನ್ನು ಸಾಂಸಾರಿಕ ಇಷ್ಟಾರ್ಥಗಳನ್ನು ನೆರವೇರಿಸುವುದು ಆ ದೇವತೆಗಳ ಕೆಲಸವಾಗಿತ್ತು.

ಜೈನರ ತಾತ್ವಿಕ ಚಿಂತನೆಯ ತರ್ಕವನ್ನು ‘ಸ್ಯಾದ್ವಾದ’ ಎನ್ನುತ್ತಾರೆ. ಸತ್ಯದ ಜ್ಞಾನಕ್ಕೆ ಏಳು ರೀತಿಯ ಸಂಭವನೀಯತೆಗಳು ಇವೆ ಎಂದು ಸ್ಯಾದ್ವಾದ ತಿಳಿಸುತ್ತದೆ. ಸತ್ಯ ಕುರಿತ ಸಂದೇಹ ಈ ತರ್ಕದ ವೈಶಿಷ್ಟ್ಯವಾಗಿದೆ.

ಈಶ್ವರವಾದಿ ಚಿಂತನೆಗಳು

ಈ ವಿಶ್ವದ ಕಾರಣಶಕ್ತಿಯನ್ನು ಒಂದು ದೇವತೆಯ ರೂಪದಲ್ಲಿ ಕಲ್ಪಿಸಿ, ಅದರ ಇಚ್ಛೆಯಿಂದಲೇ ಭವ ಉಂಟಾಯಿತೆಂದು ಈಶ್ವರವಾದಗಳೂ ನಂಬುತ್ತಾರೆ. ಇಂಥ ದೇವತೆಯೂ ‘ಮಾನವೀಯ’ವಾಗಿರುವುದರಿಂದ ಅದು ಭಕ್ತಿ, ಪೂಜೆ, ತಂತ್ರ ಮುಂತಾದ ಸಾಧನೆಗಳಿಗೆ ಸ್ಪಂದಿಸುತ್ತದೆ. ಆ ದೇವತೆಯೇ ಪುನರ್ಜನ್ಮ ಹಾಗೂ ಮೋಕ್ಷಗಳನ್ನು ಆಯಾ ವ್ಯಕ್ತಿಯ ಭಕ್ತಿ ಶ್ರದ್ಧೆಗಳನ್ನು ಅವಲೋಕಿಸಿ ನೀಡುತ್ತದೆ. ಈ ದೈವವಾದ ಕಲ್ಪನೆಗಳು ಭಕ್ತಿ ಸಿದ್ಧಾಂತದಲ್ಲಿ ಮತ್ತೂ ಮಾನವೀಯವಾಗಿ ಬೆಳೆದವು. ಇಷ್ಟದೈವ ಕಲ್ಪನೆ, ಅಂಥ ದೈವದೊಂದಿಗೆ ಪ್ರೇಮ, ವಾತ್ಸಲ್ಯ, ಅರ್ಪಣಾ ಭಾವಗಳನ್ನು ಭಕ್ತಿಪಂಥಗಳು ಬೆಳೆಸಿದವು.

ಉತ್ತರ ವೇದ ಕಾಲದಲ್ಲಿ ಆರ್ಯೇತರ ಕೃಷಿ ಸಂಸ್ಕೃತಿಗಳಲ್ಲಿ ವ್ಯಾಪಕವಾಗಿದ್ದ ಮೂರ್ತಿಪೂಜಾ ಸಂಪ್ರದಾಯದ ಜೊತೆಗೆ ಶ್ವೇತಾಶ್ವತರ ಉಪನಿಷತ್‌ನಂಥ ತಾತ್ವಿಕ ಕಲ್ಪನೆಗಳು ಸೇರಿಕೊಂಡು ಪ್ರಾಚೀನ ಭಾರತೀಯ ಈಶ್ವರವಾದ ರೂಪುಗೊಂಡಿದೆ. ಪ್ರಾಚೀನ ಭಾರತೀಯ ವೈದಿಕ ಹಾಗೂ ಪೌರಾಣಿಕ ವಿಶ್ವಕಲ್ಪನೆಯನ್ನು ತಮ್ಮ ತಮ್ಮ ಇಷ್ಟದೈವದ ಸೃಷ್ಟಿಯನ್ನಾಗಿ ಈ ಈಶ್ವರವಾದಿ ಚಿಂತನೆಗಳು ಕಲ್ಪಿಸುತ್ತವೆ. ಆಯಾ ದೇವತೆ ಸರ್ವಶಕ್ತನಾಗಿದ್ದು, ಅವನಿಂದಲೇ ಸೃಷ್ಟಿ, ಸ್ಥಿತಿ, ಲಯಗಳು ಆಗುತ್ತವೆ. ಇಂಥ ದೇವತೆಯನ್ನು ‘ಪರಮ’ ದೇವತೆ ಎಂದು ಕರೆಯಬಹುದು. ಹೀಗೆ ಶಿವಪಾರಮ್ಯ, ವಿಷ್ಣು ಪಾರಮ್ಯ, ಶಕ್ತಿ ಪಾರಮ್ಯಗಳ ಸಂಪ್ರದಾಯಗಳು ಶೈವ, ವೈಷ್ಣವ ಹಾಗೂ ಶಾಕ್ತ ಎಂದು ಪ್ರಬಲವಾಗಿದ್ದವು. ಉಪನಿಷತ್ತಿನ ಕಾಲದ ‘ಬ್ರಹ್ಮನ್‌’ ತತ್ವ ದೈವವಾದಿ ಚಿಂತನೆಯಲ್ಲಿ ‘ಬ್ರಹ್ಮ’ ದೇವರಾಗಿಬಿಡುತ್ತದೆ. ಈ ದೇವತೆಗಳಿಗೆ ಸಾಕಾರ/ಸಗುಣ ಹಾಗೂ ನಿರಾಕಾರ/ನಿರ್ಗುಣ ರೂಪಗಳೆರಡೂ ಇರುತ್ತವೆ. ನಿರಾಕಾರದಲ್ಲಿ ಆ ದೇವತೆ ಒಂದು ಆದಿ ತತ್ವವಾಗಿರುತ್ತದೆ. ಸಾಕಾರದಲ್ಲಿ ಅದು ಮೂರ್ತಿಯಾಗಿ ಪೂಜೆ/ಪುರಾನಗಳನ್ನು ಒಳಗೊಳ್ಳುತ್ತದೆ. ಹೀಗೆ ಈಶ್ವರವಾದಿ ಚಿಂತನೆಗಳೂ ಸಾಂಖ್ಯ, ಯೋಗ ಮುಂತಾದ ಚಿಂತನೆಗಳನ್ನು ಸುಲಭವಾಗಿ ಒಳಗೊಂಡುಬಿಡುತ್ತವೆ.

ಈಶ್ವರವಾದಿ ಚಿಂತನೆಯ ಪ್ರಮುಖ ಗ್ರಂಥವೆಂದರೆ ಮಹಾಭಾರತದಲ್ಲಿ ಅಡಕವಾಗಿರುವ ೧೮ ಅಧ್ಯಾಯಗಳ ಭಗವದ್ಗೀತೆ. ಇದರ ಪ್ರಕಾರ ಮೋಕ್ಷಕ್ಕೆ ಜ್ಞಾನ, ಕರ್ಮ ಹಾಗೂ ಭಕ್ತಿ ಮಾರ್ಗಗಳಿದ್ದು, ಅವುಗಳಲ್ಲಿ ಭಕ್ತಿ ಎಂಬುದು ನಿರ್ಣಾಯಕವಾದದ್ದು. ಏಕೆಂದರೆ ಪರಮಾತ್ಮನು ತನ್ನ ಭಕ್ತನ ಕುರಿತು ವೈಯಕ್ತಿಕವಾದ ಸಂಬಂಧ ಹೊಂದಿರುತ್ತಾನೆ. ಹಾಗಾಗಿ ಧರ್ಮ-ಅಧರ್ಮಗಳ ಜಿಜ್ಞಾಸೆ ಇರಲಿ, ಕರ್ಮದ ಸಂದಿಗ್ಧತೆ ಇರಲಿ ಅಂತಿಮವಾಗಿ ಭಕ್ತನು ಭಗವಂತನಿಗೇ ಬಿಟ್ಟು ತಾನು ಭಕ್ತಿಯ ಹಾದಿ ಹಿಡಿದಲ್ಲಿ ಮೋಕ್ಷ ಸಿಗುತ್ತದೆ. ಭಕ್ತನು ಕರ್ಮಫಲ ಕುರಿತು ಚಿಂತಿಸುವ ಅಧಿಕಾರ ಹೊಂದಿರುವುದಿಲ್ಲ. ಧರ್ಮಜ್ಞಾನಿಯಾದಾಗಲೆಲ್ಲ ಭಗವಂತನೇ ಅವರಾರ ತಳೆದು ಬಂದು ಧರ್ಮವನ್ನು ಸ್ಥಾಪಿಸಿ, ದುಷ್ಟರನ್ನು ಶಿಕ್ಷಿಸುತ್ತಾನೆ. ಈ ಭಗವಂತನದು ವಿಶ್ವರೂಪವಾಗಿದೆ. ಭಗವದ್ಗೀತೆ ಭಾರತೀಯ ದರ್ಶನ ಸಂಪ್ರದಾಯಗಳನ್ನೆಲ್ಲ ಈಶ್ವರವಾದಿ ಚಿಂತನೆಗೆ ಕಸಿಮಾಡುತ್ತದೆ.

ಈಶ್ವರವಾದಿ ಸಂಪ್ರದಾಯಗಳು ಮೂಲತಃ ಪೂಜಾ ಪಂಥಗಳಾಗಿವೆ. ಇಂಥ ಪಂಥಗಳಲ್ಲಿ ಸ್ಥೂಲವಾಗಿ ವೈಷ್ಣವ, ಶೈವ ಹಾಗೂ ಶಾಕ್ತ ಎಂಬ ವಿಭಾಗಗಳನ್ನು ಗುರುತಿಸಬಹುದು. ಇವಲ್ಲದೇ ಗಾಣಪತ್ಯ, ಕೌಮಾರ, ಸೌರ ಮುಂತಾದ ಪಂಥಗಳೂ ಅನೇಕವಿದ್ದವು. ಅವು ಮೊದಲಿನ ಮೂರು ಪಂಥಗಳಂತೇ ಪ್ರಬಲವಾಗಲಿಲ್ಲ. ವೈಷ್ಣವ ಸಂಪ್ರದಾಯವು ವಿಷ್ಣುವೇ ಪರಮ ಶಕ್ತಿ ಹಾಗೂ ಈ ಜಗತ್ತಿನ ಸೃಷ್ಟಿಗೂ ಮೂಲ ಅವನು ಎನ್ನುತ್ತದೆ. ವಿಷ್ಣುವಿಗೆ ಐದು ರೂಪಗಳಿವೆ. ಅವೆಂದರೆ, ೧. ಪರಾರೂಪ ೨. ವ್ಯೂಹ ರೂಪ ೩. ಅವತಾರ ರೂಪ ೪. ಅಂತರ್ಯಾಮಿ ರೂಪ ೫. ಮೂರ್ತಿ ರೂಪ. ಪರಾರೂಪ ಒಂದು ಆದಿ ಸತ್ವವಾಗಿದೆ. ‘ವ್ಯೂಹ’ದ ಕಲ್ಪನೆ ಮೂಲತಃ ‘ಪಾಂಚರಾತ್ರ’ ಸಿದ್ಧಾಂತವಾಗಿದೆ. ಅಂದರೆ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ, ಸಾಂಬ ಎಂಬ ವೃಷ್ಟಿ ವೀರರನ್ನು ತಾತ್ವಕವಾಗಿ ಗ್ರಹಿಸಿ ಒಬ್ಬರಿಂದೊಬ್ಬರು ಉದ್ಭವಿಸಿದಂತೇ ನಿರೂಪಿಸಲಾಗಿದೆ. ಈ ತತ್ವಗಳೆಂದರೆ ಪ್ರಕೃತಿ, ಮಾನಸ, ಅಹಂಕಾರ ಇವು ಆದಿ ತತ್ವದಿಂದ ಕ್ರಮವಾಗಿ ಹುಟ್ಟಿಬಂದವು. ಇಲ್ಲಿ ಆತ್ಮವು ಪರಮಾತ್ಮನ ಒಂದು ಅಂಶವೂ ಹೌದು, ಪ್ರತ್ಯೇಕವೂ ಹೌದು. ವಿಶಿಷ್ಟಾದ್ವೈತ ಹಾಗೂ ದ್ವೈತ ಮತಗಳ ಮೂಲತತ್ವ ಪಾಂಚರಾತ್ರದಲ್ಲಿದೆ.

ಶೈವರಲ್ಲಿ ತೀರ ಪ್ರಾಚೀನವಾದ ಪಂಥ ಎಂದರೆ ಮಾಹೇಶ್ವರ ಅಥಾವಾ ಪಾಶುಪತರದು. ಪಾಶುಪತ ಪಂಥವನ್ನು ಪ್ರಚಾರ ಮಾಡಿದವನು ಲಕುಳೀಶಮುನಿ ಹಾಗಾಗಿ ಇದಕ್ಕೆ ‘ಲಾಕುಶ’ ಮತ ಎಂದೂ ಹೆಸರು ಬಂದಿತು. ಲಕುಳೀಶರಲ್ಲೇ ಕಾಪಾಲಿಕ ಹಾಗೂ ಕಾಳಾಮುಖರೆಂಬ ಎರಡು ಪಂಥಗಳು ಮಧ್ಯಯುಗದಲ್ಲಿ ಪ್ರಚಲಿತದಲ್ಲಿದ್ದವು. ಕಾಳಾಮುಖರು ತಮ್ಮನ್ನು ನ್ಯಾಯವೈಶೇಷಕರೆಂದೂ ಕರೆದುಕೊಳ್ಳುತ್ತಾರೆ. ತಮಿಳುನಾಡಿನಲ್ಲಿ ‘ಶೈವ ಸಿದ್ಧಾಂತ’ ಎಂಬೊಂದು ಪಂಥ ೧೦-೧೧ನೆಯ ಶತಮಾನದಲ್ಲಿ ಪ್ರಚಲಿತದಲ್ಲಿ ಬಂದಿತು. ಇವರು ಉಪಾಸಕರು. ‘ಪಶು’ ಹಾಗೂ ದೇವತೆ ‘ಪತಿ’ ಆಗಿದ್ದಾರೆ. ಪಶುವನ್ನು ಬಂಧಸುವ ಪ್ರಪಂಚ ‘ಪಾಶ’ವಾಗಿದೆ. ಈ ಪಾಶವನ್ನು ಕಡಿದುಕೊಂಡು ಪತಿಯನ್ನು ಸೇರುವುದು ಮೋಕ್ಷ ಎಂದು ನಿರೂಪಿಸುತ್ತಾರೆ. ೧೨ನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಪ್ರಚಲಿತದಲ್ಲಿ ಬಂದ ವೀರಶೈವ ಪಂಥವನ್ನು ‘ಶಕ್ತಿ ವಿಶಿಷ್ಟಾದ್ವೈತ’ ಸಿದ್ಧಾಂತ ಎಂದು ಕರೆಯಲಾಗಿದೆ. ಶೈವರಲ್ಲಿ ಕಾಶ್ಮೀರ ಶೈವರದೂ ಒಂದು ಪಂಥವಿತ್ತು.

ಶಾಕ್ತರು ಈ ವಿಶ್ವದ ಆದಿತತ್ವವೇ ‘ಶಕ್ತಿ’ ಅವಳಿಂದಲೇ ‘ಪುರುಷ’ ಉದ್ಭವಿಸಿದ್ದು ಎಂದು ನಿರೂಪಿಸುತ್ತಾರೆ. ಶಾಕ್ತ ಆರಾಧನೆಯಲ್ಲಿ ತಂತ್ರದ ಪ್ರಯೋಗ ಹಾಸುಹೊಕ್ಕಾಗಿದೆ. ದೇವಿಯನ್ನು ಸೃಷ್ಷಿ, ಶಕ್ತಿ, ಜ್ಞಾನಶಕ್ತಿ ಎಂದೆಲ್ಲ ಗ್ರಹಿಸಿ ಆರಾಧಿಸುವ ಪಂಥವನ್ನು ‘ಶಾಕ್ತ’ ಎನ್ನುತ್ತಾರೆ. ಮಧ್ಯಯುಗದಲ್ಲಿ ಈ ಎಲ್ಲ ‘ಆಗಮ’ಗಳೆಂಬ ಗ್ರಂಥಗಳನ್ನು ರಚಿಸಿದವು.

ಈಶ್ವರವಾದಿ ಸಂಪ್ರದಾಯಗಳೂ ಬೌದ್ದ, ಜೈನ ಮುಂತಾದ ಸಂಪ್ರದಾಯಗಳಂತೇ ಕಲ್ಪಗಳು ಹಾಗೂ ಯುಗಗಳ ಕಲ್ಪನೆಗಳನ್ನು ತಮ್ಮ ಚಿಂತನೆಗೆ ಒಗ್ಗುವಂತೆ ಪುರಾಣೀಕರಿಸುತ್ತವೆ. ಇವರಲ್ಲಿ ತೀರ ಪ್ರಧಾನವಾದ ನಿರೂಪಣೆಯ ಪ್ರಕಾರ ಅನೇಕ ಬ್ರಹ್ಮರು ಇದ್ದಾರೆ. ಇಂಥ ಬ್ರಹ್ಮನ ಒಂದು ಹಗಲು ಒಂದು ಕಲ್ಪ ಎನಿಸಿಕೊಳ್ಳುತ್ತದೆ. ಒಂದು ಕಲ್ಪದಲ್ಲಿ ೧೪ ಮನ್ವಂತರಗಳಿದ್ದು ಅದಕ್ಕೆ ಒಬ್ಬೊಬ್ಬ ಮನು ಇರುತ್ತಾನೆ. ಮನ್ವಂತರದ ಅಂತ್ಯದಲ್ಲಿ ಪ್ರಳಯವಾಗಿ ಮತ್ತೊಂದು ಪುನರ್ಸೃಷ್ಟಿಯಲ್ಲಿ ಹೊಸ ಮನು ಮಾನವರ ಮೂಲಪುರುಷನಾಗುತ್ತಾನೆ. ಪ್ರತಿ ಮನ್ವಂತರದಲ್ಲೂ ೭೧ ಮಹಾಯುಗಗಳೂ, ಒಂದು ಮಹಾಯುಗದಲ್ಲಿ ಕೃತ, ತ್ರೇತಾ, ದ್ವಾಪರ ಹಾಗೂ ಕಲಿ ಎಂಬ ನಾಲ್ಕು ಯುಗಗಳೂ ಇರುತ್ತವೆ. ಒಂದೊಂದು ಮಹಾಯುಗವೂ ಧರ್ಮದ ಉತ್ಥಾನ ಹಾಗೂ ಅವಸಾನಗಳ ಚಕ್ರವಾಗಿದೆ, ಒಬ್ಬ ಬ್ರಹ್ಮನ ಆಯುಷ್ಯದ ಅಂತ್ಯದಲ್ಲಿ ಎಲ್ಲ ಜೀವಾತ್ಮಗಳೂ ಕರ್ಮ ಸಮೇತ ನಾಶಹೊಂದುತ್ತವೆ. ಈ ರೀತಿ ಪ್ರಳಯ ಹಾಗೂ ಸೃಷ್ಟಿಯ ಕುರಿತು ಪೌರಾಣಿಕ ಕಲ್ಪನೆಯಲ್ಲಿ ವಿಪುಲವಾದ ಗೊಂದಲಗಳಿವೆ.

ಆರು ದರ್ಶನಗಳು

ಮಧ್ಯಕಾಲೀನ ಭಾರತೀಯ ಚಿಂತನೆಯಲ್ಲಿ ‘ಷಡ್ದರ್ಶನ’ ಸಂಪ್ರದಾಯವನ್ನು ಪ್ರಮುಖವೆಂದು ಗುರುತಿಸಲಾಗಿತ್ತು. ಈ ದರ್ಶನಗಳು ಆತ್ಮಜ್ಞಾನದ ಹಾಗೂ ಆ ಮೂಲಕ ಮೋಕ್ಷದ ದಾರಿಗಳೆಂದು ನಿರೂಪಿಸುವ ಕೆಲಸ ಕ್ರಿ.ಶ. ೧೦ನೆಯ ಶತಮಾನದಿಂದ ನಂತರ ಆಗಿದ್ದು ಕಂಡುಬರುತ್ತದೆ.  ಆರು ದರ್ಶನಗಳಲ್ಲಿ ಪ್ರಾಚೀನ ಭಾರತೀಯ ಆಸ್ತಿಕ ಸಂಪ್ರದಾಯಕ್ಕೆ ಅರ್ಥಪೂರ್ಣವಾದ ತತ್ವ ಸಂಪ್ರದಾಯಗಳನ್ನು ಮಾತ್ರ ಸೇರಿಸಿಕೊಳ್ಳಲಾಗಿದೆ. ಅವೆಂದರೆ, ನ್ಯಾಯ, ವೈಶೇಷಿಕ, ಸಂಖ್ಯ, ಯೋಗ, ಮೀಮಾಂಸ ಹಾಗೂ ವೇದಾಂತಗಳು ಇವುಗಳಲ್ಲಿ ಎರಡೆರಡನ್ನು ಜೋಡಿಯಾಗಿ ಹೆಸರಿಸಿ ಮೂರು ವಿಭಾಗಗಳನ್ನು ಮಾಡುತ್ತಾರೆ. ಇದಕ್ಕೆ ಕಾರಣ ಎಂದರೆ ಅವುಗಳಲ್ಲಿ ತಾತ್ವಿಕ ಒಮ್ಮತ ಎಂದು ವಿವರಣೆ ನೀಡಲಾಗಿದೆ. ನ್ಯಾಯ ವೈಶೇಷಿಕ : ನ್ಯಾಯ ದರ್ಶನದ ಪ್ರತಿಪಾದಕರು ಅಕ್ಷಪಾದ ಗೌತಮರೆಂಬ ಪ್ರತೀತಿ ಇದೆ. ತರ್ಕವು ನ್ಯಾಯಸಿದ್ಧಾಂತದ ಪ್ರಧಾನ ಅಂಶ. ಆತ್ಮ ಜ್ಞಾನವು ತರ್ಕದಿಂದ ಸಾಧ್ಯವಾಗುತ್ತದೆ. ಎಂದು ನೈಯಾಯಿಕರು ನಂಬುತ್ತಾರೆ. ವೈಶೇಷಿಕರು ಈ ಪ್ರಪಂಚದ ಆದಿ ದ್ರವ್ಯಗಳು ಪ್ರತ್ಯೇಕ(ವಿಶೇಷ)ವಾಗಿಯೇ ಇವೆ ಎಂದು ವಾದಿಸುತ್ತಾರೆ. ಈ ದ್ರವ್ಯಗಳು ಒಟ್ಟೂ ಒಂಬತ್ತು ಇವೆ.

ಇವುಗಳೆಲ್ಲ ಪೃಥ್ವಿ, ನೀರು, ಬೆಂಕಿ, ಗಾಳಿ ಹಾಗೂ ಆಕಾಶಗಳೆಂಬ ದ್ರವ್ಯಗಳು ಪರಮಾಣುಗಳಿಂದ ಆಗಿವೆ. ಈ ಪರಮಾಣುಗಳ ವಿಭಿನ್ನ ರೀತಿಯ ವ್ಯವಸ್ಥೆಯಿಂದಾಗಿ ವಸ್ತುವೈವಿಧ್ಯತೆ ಉಂಟಾಗುತ್ತದೆ. ಪುರಾಣದ ಯುಗ ಕಲ್ಪನೆಯ ಒಬ್ಬ ಬ್ರಹ್ಮನ ಕಾಲ ಮುಗಿದ ನಂತರ ಈ ಪರಮಾಣುಗಳೆಲ್ಲ ಪ್ರತ್ಯೇಕಗೊಂಡು ನಾಮರೂಪದ ಜಗತ್ತು ಮಾಯವಾಗುತ್ತದೆ. ಹೊಸ ಬ್ರಹ್ಮನು ಅದೇ ಪರಮಾಣುಗಳನ್ನು ಉಪಯೋಗಿಸಿ ಹೊಸ ರೂಪಗಳನ್ನು ಸೃಷ್ಟಿಸುತ್ತಾನೆ. ಪರಮಾಣುಗಳಿಂದ ವಿಭಜನೆಯಾಗದ ಮೂರು ದ್ರವ್ಯಗಳಿವೆ. ಅವೆಂದರೆ ದಿಕ್‌, ಕಾಲ ಹಾಗೂ ಆತ್ಮಗಳು. ಈ ದ್ರವ್ಯಗಳು ಅನಂತವಾಗಿವೆ. ಆತ್ಮಕ್ಕೆ ‘ಜ್ಞಾನ’ ಎಂಬ ಶಕ್ತಿ ಇದೆಯಾದ್ದರಿಂದ ಅದು ತನ್ನನ್ನು ಹಾಗೂ ಈ ವಿಶ್ವವನ್ನು ಅರಿಯಬಲ್ಲದು. ಈ ವಿಶ್ವವು ಈ ಮೇಲಿನ ದ್ರವ್ಯಗಳ ಪರಸ್ಪರ ಸಂಬಂಧದಿಂದ ವಿಭಿನ್ನ ಪದಾರ್ಥಗಳಾಗಿ ಅಸ್ತಿತ್ವದಲ್ಲಿರುತ್ತದೆ.

ಸಾಂಖ್ಯ ಮತ್ತು ಯೋಗ: ಸಾಂಖ್ಯವು ಷಡ್ದರ್ಶನಗಳಲ್ಲೇ ಅತ್ಯಂತ ಹಳೆಯದು. ಇದರ ಪ್ರವರ್ತಕರು ‘ಕಪಿಲ’ರೆನ್ನುತ್ತಾರೆ. ಈಶ್ವರ ಕೃಷ್ಣನೆಂಬ ನಾಲ್ಕನೆಯ ಶತಮಾನದ ದಾರ್ಶನಿಕನ ‘ಸಾಂಖ್ಯಕಾರಿಕಾ’ ಗ್ರಂಥವೇ ಸಾಂಕ್ಯತತ್ವಗಳ ಕುರಿತು ಮೂಲ ಗ್ರಂಥವಾಗಿದೆ. ಸಾಂಖ್ಯರ ಪ್ರಕಾರ ಈ ಸೃಷ್ಟಿ ಎನ್ನುವುದು ‘ಪ್ರಕೃತಿ’ ತತ್ವದ ಸ್ವಭಾವ. ಪ್ರಕೃತಿಯನ್ನೊಳಗೊಂಡು ೨೫ ತತ್ವಗಳು ಈ ಸೃಷ್ಟಿಗೆ ಕಾರಣವಾಗುತ್ತವೆ. ೨೫ನೆಯ ತತ್ವವೇ ‘ಪುರುಷ’ (ಆತ್ಮ) ಸೃಷ್ಟಿಯ ಅದಿಯಲ್ಲಿ ‘ಸತ್ವ, ರಜಸ್‌, ತಮಸ್‌’ಗಳೆಂಬ ಮೂರು ಗುಣಗಳು ಸಮತೋಲನದಲ್ಲಿರುತ್ತವೆ. ಸೃಷ್ಟಿ ಪ್ರಕಟವಾದಂತೆಲ್ಲ ವಿಭಿನ್ನ ವಸ್ತುಗಳಲ್ಲಿ ವಿಭಿನ್ನ ಪ್ರಮಾಣದಲ್ಲಿ ಈ ತ್ರಿಗುಣಗಳು ಹಂಚಿ ವೈಶಿಷ್ಟ್ಯತೆಗೆ ಕಾರಣವಾಗುತ್ತವೆ. ಸಾಂಖ್ಯ ದರ್ಶನದಲ್ಲಿ ಪ್ರಕೃತಿ ಹಾಗೂ ಪುರುಷರ ದ್ವೈತವನ್ನು ಪ್ರತಿಪಾದಿಸಿಲಾಗಿದೆ. ಅವೆರಡೂ ಪರಸ್ಪರ ಅವಲಂಬಿತವಾಗಿಲ್ಲ. ನಂತರ ಕಾಲದಲ್ಲಿ ‘ಪುರುಷ’ವು ಸೃಷ್ಟಿಯನ್ನು ಪ್ರಚೋದಿಸುವ ಶಕ್ತಿಯಾಗಿ ನಿರೂಪಿಸಲ್ಪಡುತ್ತದೆ.

‘ಯೋಗ’ ದರ್ಶನವು ಭಾರತೀಯ ಆಧ್ಯಾತ್ಮಿಕ ಹಾಗೂ ನಾಸ್ತಿಕ ಸಂಪ್ರದಾಯಗಳಲ್ಲೆಲ್ಲ ಸಾಮಾನ್ಯವಾಗಿ ಅಳವಡಿಸಿಕೊಳ್ಳಲ್ಪಟ್ಟ ಸಂಪ್ರದಾಯವಾಗಿದೆ. ‘ಯೋಗ’ವು ಪತಂಜಲಿಯ ಸೂತ್ರಗಳಿಂದ ಪ್ರತಿಪಾದಿತವಾಗಿದೆ. ಯೋಗದ ತತ್ವಗಳು ಸಾಂಖ್ಯದಂತೆಯೇ ಇದ್ದರೂ ಯೋಗ ದರ್ಶನದಲ್ಲಿ ‘ಈಶ್ವರ’ ಕಲ್ಪನೆ ಬರುತ್ತದೆ. ಈ ಈಶ್ವರವೇ ಆದಿತತ್ವವಾಗಿದ್ದು ಅದನ್ನು ಅನುಭವಿಸುವ ಆನಂದಾವಸ್ಥೆಯೇ ಸಮಾಧಿ ಎನಿಸಿಕೊಳ್ಳುತ್ತದೆ. ಈ ಸಮಾಧಿಯು ಬೌದ್ಧ, ಜೈನರ ‘ನಿರ್ವಾಣ’ದಂತಹದೇ ಅವಸ್ಥೆ. ಯೋಗಿಗಳ ಈಶ್ವರನು ಭಕ್ತಿ ಪಂಥಗಳ ದೇವತೆಯಲ್ಲ. ಈಶ್ವರನು ಒಂದು ನಿರ್ವಿಕಲ್ಪ ಶಕ್ತಿಯಾಗಿದ್ದಾನೆ. ಯೋಗಿಯು ಸಮಾಧಿಯನ್ನು ಹೊಂದಲು ಯಮ, ನಿಯಮ, ಆಸನ, ಪ್ರಾನಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಗಳೆಂಬ ಎಂಟು ಹಂತಗಳನ್ನು ದಾಟಬೇಕು. ಯೋಗದಲ್ಲೂ ಹಟಯೋಗಕ, ಮಂತ್ರಯೋಗ, ಲಯಯೋಗಗಳೆಂಬ ಪ್ರಕಾರಗಳನ್ನು ಉಲ್ಲೇಖಿಸುತ್ತಾರೆ. ಮನುಷ್ಯನ ಬೆನ್ನ ಹುರಿಯೊಳಗೆ ಅಡಗಿರುವ ಸುಷುಮ್ನಾ ನಾಡಿಯ ತಳದಲ್ಲಿ ಕುಂಡಲಿನೀ ಶಕ್ತಿ ಇದೆ. ಹಾಗೂ ಅದರ ತಲೆಯಲ್ಲಿ ಸಹಸ್ರಾರ ಇರುತ್ತದೆ. ಯೋಗದಲ್ಲಿ ಈ ಕುಂಡಲಿನೀ ಶಕ್ತಿಯು ಜಾಗೃತವಾಗಿ ಸುಷುಮ್ನಾ ನಾಡಿಯ ಮೂಲಕ ಸಹಸ್ರಾರವನ್ನು ತಲುಪಿದಾಗಿ ಸಮಾಧಿಯ ಆನಂದ ಸ್ಥಿತಿ ಸಿದ್ಧಿಸುತ್ತದೆ ಎಂಬುದು ಯೋಗ ಸಾಧನೆಯ ಕಲ್ಪನೆಯಾಗಿದೆ.

ಮೀಮಾಂಸೆ ಹಾಗೂ ವೇದಾಂತ: ಇವರಡೂ ವೈದಿಕ ಸಂಪ್ರದಾಯಗಳಾಗಿವೆ. ವೇದಗಳಲ್ಲಿ ಪೂರ್ವ ವೇದಗಳು ಕರ್ಮಕಾಂಡಕ್ಕೆ ಮಹತ್ವ ನೀಡುತ್ತವೆ. ವೈದಿಕ ಕರ್ಮಕಾಂಡಗಳ ಕುರಿತ ಜಿಜ್ಞಾಸೆಯನ್ನು ಹೀಗೆ ಪೂರ್ವ ಮೀಮಾಂಸೆ ಎಂದು ಕರೆಯುತ್ತಾರೆ. ಜೈಮಿನಿಯ ಮೀಮಾಂಸ ಸೂತ್ರವೇ ಪೂರ್ವಮೀಮಾಂಸೆಯ ಪ್ರಾಚೀನ ಗ್ರಂಥವಾಗಿದೆ. ನಂತರ ಶಬರಸ್ವಾಮಿ, ಕುಮಾರಿಲ ಮುಂತಾದ ಅಗ್ರಗಣ್ಯರು ಪೂರ್ವ ಮೀಮಾಂಸೆಯ ಸಂಪ್ರದಾಯದಲ್ಲಿ ಆಗಿಹೋಗಿದ್ದಾರೆ. ಮೀಮಾಂಸಕರು ವೈದಿಕ ದೇವತೆಗಳ ಅಸ್ತಿತ್ವವನ್ನು ಒಪ್ಪುವುದಿಲ್ಲ. ಹಾಗಾಗಿ ಆ ಕುರಿತು ಟೀಕೆಗಳನ್ನು ಮಾಡುತ್ತಾರೆ. ಆದರೆ ಅವರು ವೇದವು ಅಪೌರುಷೇಯ ಹಾಗೂ ಚಿರಂತನವಾಗಿದ್ದು ಉಳಿದ ಯಾವುದೇ ಸಂಪ್ರದಾಯಗಳಿಗಿಂತ ಅದು ಶ್ರೇಷ್ಠ ಎಂದು ವಾದಿಸುತ್ತಾರೆ. ಇವರ ಪ್ರಕಾರ ಯಜ್ಞ ಹಾಗೂ ವೈದಿಕ ಮಂತ್ರಗಳಿಗೆ ಪರಿಣಾಮ ಶಕ್ತಿ ಇದೆ.

ಉತ್ತರ ವೇದಗಳ ಭಾಗಗಳಾದ ಉಪನಿಷತ್ತುಗಳ ತತ್ವಗಳನ್ನು ಜಿಜ್ಞಾಸೆಗೆ ಒಳಪಡಿಸುವ ದರ್ಶನವನ್ನು ‘ಉತ್ತರ ಮೀಮಾಂಸೆ’ ಅಥವಾ ‘ವೇದಾಂತ’ವೆಂದು ಕರೆಯಲಾಗಿದೆ. ವೇದಾಂತಕ್ಕೆ ಮೂಲ ಗ್ರಂಥವೆಂದರೆ ಬಾದರಾಯಣದನ ‘ಬ್ರಹ್ಮಸೂತ್ರ’ವಾಗಿದೆ. ಕ್ರಿ.ಶ. ಎಂಟನೆಯ ಶತಮಾನದಲ್ಲಿ ಶಂಕರಾಚಾರ್ಯರು ‘ಬ್ರಹ್ಮಸೂತ್ರಭಾಷ್ಯ’ವನ್ನು ಬರೆದು ವೇದಾಂತದ ತತ್ವವನ್ನು ‘ಅದ್ವೈತ’ ಎಂದು ಪ್ರತಿಪಾದಿಸಿದರು. ‘ಅದ್ವೈತ’ ಮತದ ಪ್ರಕಾರ ಜೀವಾತ್ಮ ಹಾಗೂ ಬ್ರಹ್ಮನ್‌/ಪರಮಾತ್ಮ ಎರಡು ಬೇರೆ ಬೇರೆ ಅಲ್ಲ. ಅಂತಿಮವಾದ ಸತ್ಯ ಎಂದರೆ ಬ್ರಹ್ಮವೇ. ಈ ಜಗತ್ತು ಮಿಥ್ಯೆ ಅಥವಾ ಮಾಯೆ. ಈ ರೀತಿ ಮನುಷ್ಯನ ಗ್ರಹಿಕೆ ಅಥವಾ ಮಾನಕ್ಕೆ ಸಿಗುವ (ಮಾಯಾ) ಜಗತ್ತು ಕೇವಲ ತೋರಿಕೆಯದು. ಶಂಕರಾಚಾರ್ಯರ ‘ಮಾಯೆ’ಯ ಕಲ್ಪನೆ ಬೌದ್ಧ ಮಾಧ್ಯಮಿಕ ದರ್ಶನದಿಂದ ಪ್ರೇರೇಪಿತವಾದುದು ಎಂದು ಗುರುತಿಸಿ ಅವರನ್ನು ‘ಪ್ರಚ್ಛನ್ನ’ ಬೌದ್ಧರೆಂದು ಭಿನ್ನಮತೀಯರು ಕರೆಯುತ್ತಾರೆ.

ಶಂಕರಾಚಾರ್ಯರ ಅದ್ವೈತಕ್ಕೆ ಪ್ರತಿಯಾಗಿ ೧೨-೧೩ನೆಯ ಶತಮಾನದಲ್ಲಿ ಕೆಲ ಭಕ್ತಿ ಸಿದ್ಧಾಂತಗಳು ಬಂದವು. ರಾಮಾನುಜಾಚಾರ್ಯರು ‘ವಿಶಿಷ್ಟಾದ್ವೈತ’ ಮತವನ್ನು ಪ್ರತಿಪಾದಿಸಿದರು. ಜೀವಾತ್ಮನು ಪರಮಾತ್ಮನ ಒಂದು ಅಂಶವಾಗಿರುತ್ತದೆ ಹಾಗೂ ಪರಮಾತ್ಮನ ಸಾಯುಜ್ಯವನ್ನು ಅದು ಹೊಂದಿದಾಗ ತನ್ನತನವನ್ನು ಕಳೆದುಕೊಳ್ಳುವುದಿಲ್ಲ. ಸಾಯುಜ್ಯದ ಆನಂದವನ್ನು ಅನುಭವಿಸುವ ಅಸ್ತಿತ್ವ ಅದಕ್ಕೆ ಉಳಿಯುತ್ತದೆ. ಜೀವಾತ್ಮನು ಭಕ್ತಿಯ ಮೂಲಕ ತಾನು ಪರಮಾತ್ಮನ ಒಂದು ಅಂಶ ಎಂಬುದನ್ನು ಅರಿಯುತ್ತಾನೆ. ಹಾಗೂ ತನ್ನನ್ನು ತಾನು ಸಂಪೂರ್ಣ ಪರಮಾತ್ಮನಿಗೆ ಅರ್ಪಿಸಿಕೊಳ್ಳುವ (ಪ್ರಪತ್ತಿ) ಮೂಲಕ ಮೋಕ್ಷವನ್ನು ಪಡೆಯುತ್ತಾನೆ. ಹಾಗಾಗಿ ಜ್ಞಾನದ ಮೂಲಕ ಬ್ರಹ್ಮವನ್ನು ಅರಿಯುವ ಉಪನಿಷತ್ತಿನ ತತ್ವಕ್ಕೆ ಬದಲಾಗಿ ವಿಶಿಷ್ಟಾದ್ವೈತವು ‘ಭಕ್ತಿಯನ್ನು ಮೋಕ್ಷ ಸಾಧನವೆಂದು ತಿಳಿಸುತ್ತದೆ. ಭಾರತೀಯ ಭಕ್ತಿ ಚಳವಳಿಗಳಿಗೆ ವಿಶಿಷ್ಟಾದ್ವೈತವು ಒಂದು ರೀತಿಯ ತಾತ್ವಿಕ ನಿರೂಪಣೆಯನ್ನು ಒದಗಿಸುತ್ತದೆ.

ಅದ್ವೈತ ಮತವನ್ನು ತೀವ್ರವಾಗಿ ಖಂಡಿಸಿ, ‘ದ್ವೈತ’ ಮತವನ್ನು ಅಥವಾ ಪರಮಾತ್ಮ ಹಾಗೂ ಜೀವಾತ್ಮ ಎರಡೂ ಬೇರೆ ಬೇರೆ ಎಂದು ಸಾರಿದವರು ಮಧ್ವಾಚಾರ್ಯರು. ವಿಷ್ಣು, ಜೀವಾತ್ಮಗಳಂತೆಯೇ ಅಜೀವ ಜಗತ್ತು ಬೇರೆಯೇ ಆಗಿದೆ. ಜೀವ-ಅಜೀವಗಳ ಮೇಲೆ ವಿಷ್ಣುವಿಗೆ ಸಂಪೂರ್ಣ ಅಧಿಕಾರವಿದೆ. ಏಕೆಂದರೆ ಅವನೇ ಕಾರಣಕರ್ತ. ಪುಣ್ಯಶೇಷವಿರುವ ಜೀವಕ್ಕೆ ಮಾತ್ರ ಆತ ಕೃಪೆ ಮಾಡುತ್ತಾನೆ, ಉಳಿದವರು ಪುನರ್ಜನ್ಮದಲ್ಲಿ ಸುತ್ತುತ್ತಲೇ ಇರಬೇಕು. ಮಾಧ್ವ ತತ್ವಗಳಲ್ಲಿ ಕ್ರಿಶ್ಚಿಯನ್ನರ ವಿಚಾರಗಳ ಪ್ರಭಾವವಿದೆ ಎಂದು ವಿದ್ವಾಂಸರು ಗುರುತಿಸುತ್ತಾರೆ.

ಪರಾಮರ್ಶನಗ್ರಂಥಗಳು

೧. ದೇಬಿಪ್ರಸಾದ ಚಟ್ಟೋಪಾಧ್ಯಾಯ, ೧೯೬೪. ಇಂಡಿಯನ್ಪಿಲಾಸಫಿ ಪಾಪ್ಯುಲರ್ಇಂಟ್ರೊಡಕ್ಶನ್, ಬಾಂಬೆ: ಪೀಪಲ್ಸ್‌ ಪಬ್ಲಿಂಗ್‌ ಹೌಸ್‌.

೨. ಬಾಷಮ್‌ ಎ.ಎಲ್‌., ದಿ ವಂಡರ್ ದಟ್ವಾಸ್ಇಂಡಿಯ, ಆಕ್ಸ್‌ಫರ್ಡ್‌ ಯುನಿವರ್ಸಿಟಿ  ಪ್ರೆಸ್‌.

೩. ಮಜುಮ್ದಾರ್‌ ಆರ್‌. ಸಿ. ೧೯೫೧-೧೯೭೭. ಹಿಸ್ಟರಿ ಆಂಡ್ಕಲ್ಚರ್ಆಫ್ಇಂಡಿಯನ್ಪೀಪಲ್, ಬಾಂಬೆ: ಭಾರತೀಯ ವಿದ್ಯಾಭವನ್‌.

೪. ಸರ್ವಪಲ್ಲಿ ರಾಧಾಕೃಷ್ಣನ್‌, ೧೯೬೭. ಎ ಸೋರ್ಸ್ ಬುಕ್‌ ಇನ್‌ ಇಂಡಿಯನ್‌ ಫಿಲಾಸಫಿ, ಪ್ರಿನ್ಸ್‌ಟನ್‌ ಯುನಿವರ್ಸಿಟಿ ಪ್ರೆಸ್‌.