ಗುಪ್ತರು

ಮೌರ್ಯ ಮತ್ತು ಕುಶಾನರ ನಂತರ ಭಾರತದಲ್ಲಿ ಆಳ್ವಿಕೆ ನಡೆಸಿದ ಇನ್ನೊಂದು ಪ್ರಮುಖ ರಾಜ ಮನೆತನವೆಂದರೆ ಗುಪ್ತರು. ಸುಮಾರು ೪ನೆಯ ಶತಮಾನದ ಮಧ್ಯಭಾಗದಿಂದ ಆರನೇ ಶತಮಾನದವರೆಗೆ ಉತ್ತರ ಭಾರತವನ್ನು ಒಂದುಗೂಡಿಸಿ ಆಳ್ವಿಕೆ ನಡೆಸಿದ್ದರಲ್ಲದೆ, ದಕ್ಷಿಣಕ್ಕೂ ವಿಸ್ತರಿಸಿದ್ದರು. ಕುಶಾನರ ಪತನದ ನಂತರ ಉತ್ತರ ಭಾರತದಲ್ಲಿ ಹಲವು ಸಣ್ಣ ಪುಟ್ಟ ರಾಜ್ಯಗಳು ಏಳಿಗೆಗೆ ಬಂದವು. ಅನೇಕ ವಿದೇಶಿಯರೂ ಭಾರತವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿದ್ದರು. ಸರಿಸುಮಾರು ಇದೇ ವೇಳೆಯಲ್ಲಿ ಏಳಿಗೆಗೆ ಬಂದ ಗುಪ್ತರು ವ್ಯಾಪಾರ ವಾಣಿಜ್ಯದ ಕುಸಿತ ಮತ್ತು ಪ್ರಭುತ್ವದ ವಿಘಟನೆಯ ಲಕ್ಷಣಗಳು ಗೋಚರಿಸುತ್ತಿದ್ದ ಕಾಲದಲ್ಲೂ ಪ್ರಬಲ ರಾಜ್ಯವೊಂದನ್ನು ಕಟ್ಟುವಲ್ಲಿ ಯಶಸ್ವಿಯಾದರು. ಸಮುದ್ರಗುಪ್ತ ಮತ್ತು ವಿಕ್ರಮಾದಿತ್ಯ ಎಂಬ ಬಿರುತದನ್ನು ಹೊಂದಿದ್ದ ೨ನೆಯ ಚಂದ್ರಗುಪ್ತ ಈ ಮನೆತನದ ಪ್ರಸಿದ್ಧ ಅರಸರು.

ಮೊದಲಿಗೆ ಗುಪ್ತ ರಾಜ್ಯವು ಕ್ರಿ.ಶ. ೩ನೆಯ ಶತಮಾನದ ಕೊನೆಯಲ್ಲಿ ಈಗಿನ ಉತ್ತರ  ಪ್ರದೇಶ ಮತ್ತು ಬಿಹಾರಗಳನ್ನು ಒಳಗೊಡಿತ್ತು. ಬಿಹಾರಕ್ಕಿಂತ ಉತ್ತರ ಪ್ರದೇಶವೇ ಅವರಿಗೆ ಮಹತ್ವದ್ದಾಗಿದ್ದಂತೆ ತೋರುತ್ತದೆ. ಮೊದಲ ಗುಪ್ತ ಶಾಸನಗಳು ಮತ್ತು ನಾಣ್ಯಗಳು ಈ ಭಾಗದಲ್ಲಿ ದೊರೆತಿರುವುದು ಇದನ್ನು ಸಮರ್ಥಿಸುತ್ತದೆ. ಬಹುಶಃ ಅವರು ಉತ್ತರ ಪ್ರದೇಶದಲ್ಲಿರುವ ಪ್ರಯಾಗವನ್ನು ತಮ್ಮ ಅಧಿಕಾರದ ನೆಲೆಯನ್ನಾಗಿ ಸುತ್ತಲ ಪ್ರದೇಶಗಳನ್ನು ಆಳುತ್ತಿದ್ದರೆಂದು ತೋರುತ್ತದೆ. ಪಾಟಲೀಪುತ್ರ ನಂತರದಲ್ಲಿ ಅವರ ರಾಜಜಧಾನಿಯಾಗಿರಬಹುದು. ಬಿಹಾರ ಮತ್ತು ಉತ್ತರ ಪ್ರದೇಶದ ಫಲವತ್ತಾದ ಭೂಮಿ ಅದಕ್ಕೆ ಹೊಂದಿಕೊಂಡಿದ್ದ ದಕ್ಷಿಣ ಬಿಹಾರ ಹಾಗೂ ಮಧ್ಯ ಪ್ರದೇಶದಲ್ಲಿ ದೊರೆಯುತ್ತಿದ್ದ ಕಬ್ಬಿಣದ ಅದಿರು ಅವರ ಏಳಿಗೆಯಲ್ಲಿ ಪ್ರಮುಖ ಪಾತ್ರವಹಿಸಿತು. ಕಾಲಕ್ರಮೇಣ ಅವರ ರಾಜ್ಯವು ಅಖಿಲ ಭಾರತ ವ್ಯಾಪ್ತಿಗಳಿಸಿತು. ಕ್ರಿ.ಶ. ೩೩೫ರಿಂದ ಕ್ರಿ.ಶ. ೪೫೫ ಅವರ ಉಚ್ಛ್ರಾಯ ಕಾಲ.

ಆಧಾರಗಳು: ಗುಪ್ತರ ಇತಿಹಾಸ ತಿಳಿಯಲು ಸಾಕಷ್ಟು ಸಾಹಿತ್ಯಾಧಾರಗಳು ಮತ್ತು ಪ್ರಾಕ್ತನಶಾಸ್ತ್ರ ಆಧಾರಗಳು ದೊರೆತಿವೆ. ಸಾಹಿತ್ಯಾಧಾರಗಳಲ್ಲಿ ಪ್ರಮುಖವಾದವುಗಳೆಂದರೆ ಪುರಾಣಗಳು. ಧರ್ಮ ಸೂತ್ರಗಳು ಕಮಂಡಕನ ನೀತಿಶಾಸ್ತ್ರ, ವಿಶಾಖದತ್ತನು ರಚಿಸಿದ ದೇವಿ ಚಂದ್ರಗುಪ್ತಂ ಮತ್ತು ಮುದ್ರಾರಾಕ್ಷಸ ಕೃತಿಗಳು, ಕಾಳಿದಾಸನ ಬರಹಗಳು, ಕಾತ್ಯಾಯವನ ಸ್ಮೃತಿಗಳು ಮುಂತಾದ ದೇಶೀಯ ವಿದ್ವಾಂಸರ ಕೃತಿಗಳಲ್ಲದೆ, ಗುಪ್ತರ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸುಪ್ರಸಿದ್ದ ಚೀನೀ ಯಾತ್ರಿಕ ಹಾಗೂ ಬೌದ್ದ ವಿದ್ವಾಂಸನಾದ ಫಾಹಿಯಾನನ ಬರವಣಿಗೆ ಪ್ರಮುಖ ಆಧಾರಗಳು.

ಸಾಹಿತ್ಯಾಧಾರಗಳಲ್ಲದೆ ಸಾಕಷ್ಟು ಸಂಖ್ಯೆಯ ಶಾಸನಗಳು ದೊರೆತಿವೆ. ಅವುಗಳಲ್ಲಿ ಪ್ರಮುಖವಾದುವುಗಳೆಂದರೆ ಅಲಹಾಬಾದ್ ಸ್ತಂಭಶಾಸನ. ಇದು ಸಮುದ್ರಗುಪ್ತನ ದಿಗ್ವಿಜಯಗಳ ಪೂರ್ಣವಿವರ ನೀಡುತ್ತದೆ. ಉದಯಗಿರಿಯ ಗುಹಾಶಾಸನ, ಮಥುರಾ, ಸಾಂಚಿ ಮತ್ತು ಗದ್ವಾ ಶಿಲಾಶಾಸನಗಳು ಎರಡನೇ ಚಂದ್ರಗುಪ್ತನ ಬಗ್ಗೆ ಅಮೂಲ್ಯ ದಾಖಲೆಗಳನ್ನು ನೀಡುತ್ತದೆ. ಬಿಲ್ಸಾದ್, ಗದ್ವಾ, ಮಂಡಸೋರ್ ಶಾಸನಗಳು ಕುಮಾರಗುಪ್ತನ ಕಾಲವನ್ನು ತಿಳಿಸುತ್ತವೆ. ಭಿತಾರಿ ಶಿಲಾಸ್ತಂಭ, ಜುನಾಗಢದ ಶಾಸನ, ಇಂದೋರಿನ ತಾಮ್ರ ಪಟಗಳು ಸ್ಕಂದಗುಪ್ತನ ಸಾಧನೆಯನ್ನು ವಿವರಿಸುತ್ತವೆ.

ಪ್ರಮಖ ಸ್ಮಾರಕಗಳಾದ ದೇವಾಲಯಗಳು, ಗುಹಾಂತರ ದೇವಾಲಯಗಳು, ಶಿಲ್ಪಗಳು ಚಿತ್ರಕಲೆಗಳು ಗುಪ್ತರ ಕಾಲದ ಸಂಸ್ಕೃತಿಯ ಬಗ್ಗೆ ಅಮೂಲ್ಯ ಮಾಹತಿಯನ್ನೊದಗಿಸುತ್ತವೆ. ನಾಣ್ಯಗಳೂ ಕೂಡ ಗುಪ್ತರ ಇತಿಹಾಸ ಅಧ್ಯಯನಕ್ಕೆ ಅಮೂಲ್ಯ ಆಧಾರಗಳು ಸಮುದ್ರ ಗುಪ್ತನೊಬ್ಬನೆ ಎಂಟು ಬಗೆಯ ನಾಣ್ಯಗಳನ್ನು ಅಚ್ಚುಹಾಕಿಸಿದ್ದು ಅವು ಹುಲಿ, ಅಶ್ವಮೇದ, ಬಿಲ್ಲುಗಾರ, ಸಂಗೀತಜ್ಞ ಮುಂತಾದ ಹಲವು ಬಗೆಯಲ್ಲಿದ್ದು ಸಮುದ್ರಗುಪ್ತನ ವ್ಯಕ್ತಿತ್ವದ ಬಗೆಯನ್ನು ತಿಳಿಸುತ್ತವೆ. ಗುಪ್ತರ ಆಳ್ವಿಕೆಯ ಕೊನೆಯ ಭಾಗದ ನಾಣ್ಯಗಳಲ್ಲಿ ಬಂಗಾರದ ಪ್ರಮಾಣ ಕಡಿಮೆಯಾಗಿರುವುದು ಆರ್ಥಿಕ ಅವನತಿಯನ್ನು ಸೂಚಿಸುತ್ತವೆ. ಈ ಎಲ್ಲಾ ಆಧಾರಗಳು ಗುಪ್ತರ ಇತಿಹಾಸ ತಿಳಿಯಲು ಪ್ರಮುಖ ಆಧಾರಗಳಾಗಿವೆ.

ಆರಂಭದ ಅರಸರು: ಗುಪ್ತರು ವೈಶ್ಯಮೂಲದವರಾಗಿದ್ದಂತೆ ಕಂಡುಬರುತ್ತದೆ. ಗುಪ್ತರ ವಂಶಾವಳಿಯು ಕಂಡುಬರುವ ಶಾಸನಗಳ ಪ್ರಕಾರ ಕಂಡುಬರುವ ಮೊದಲ ಹೆಸರೇ ಶ್ರೀಗುಪ್ತ ಪ್ರಾಯಶಃ ಈ ಸಂತತಿಯ ಮೂಲ ಪುರುಷ. ಇವನು ಕ್ರಿ.ಶ. ೨೭೫ ರಿಂದ ೩೦೦ವರೆಗೆ ಆಳಿರಬಹುದು. ಚೀನೀ ಯಾತ್ರಿಕ ಇತ್ಸಿಂಗ್‌ ಪ್ರಸ್ತಾಪಿಸಿರುವ ಮೃಗಶಿಖವನದಲ್ಲಿ ಬೌದ್ಧ ಬಿಕ್ಷುಗಳಿಗಾಗಿ ವಿಹಾರವನ್ನು ನಿರ್ಮಿಸಿದ ಶ್ರೀಗುಪ್ತ ಇವನೇ ಎಂದು ನಂಬಲಾಗಿದೆ. ಇವನು ಮಹಾರಾಜ ಎಂಬ ಬಿರುದನ್ನು ಧರಿಸಿದ್ದನು. ಇವನ ನಂತರ ಘಟೋತ್ಕಚ ಎಂಬುವನು ಆಳ್ವಿಕೆ ನಡೆಸಿದ್ದು, ಇವನ ಹೆಸರಿನ ನಾಣ್ಯವನ್ನೊಂದನ್ನು ಬಿಟ್ಟರೆ ಮತ್ತಾವ ಆಧಾರಗಳಲ್ಲೂ ಇವನ ಪ್ರಸ್ತಾಪವಿಲ್ಲ. ಇವನು ಕ್ರಿ.ಶ. ೩೦೦ ರಿಂದ ೩೨೦ ರವರೆಗೆ ಆಳಿದಂತೆ ಕಂಡುಬರುತ್ತದೆ.

ಒಂದನೇ ಚಂದ್ರಗುಪ್ತ (ಕ್ರಿ.. ೩೨೦೩೩೫)­­­

ಗುಪ್ತವಂಶದ ಪ್ರಮುಖ ರಾಜರಲ್ಲಿ ಮೊದಲಿನವನು ಒಂದನೆಯ ಚಂದ್ರಗುಪ್ತ. ಶಾಸನಗಳು ಇವನನ್ನು ಮಹಾರಾಜಾಧಿರಾಜ ಎಂದು ಸಂಭೋಧಿಸಿವೆ. ಹಿಗಾಗಿ ಇವನು ಪ್ರಮುಖ ಅರಸನಾಗಿದ್ದಂತೆ ತೋರುತ್ತದೆ. ಇವನು ಬಿಹಾರ ಮತ್ತು ಪ್ರಾಯಶಃ ನೇಪಾಳದ ಒಡೆತನ ಹೊಂದಿದ್ದ. ಲಿಚ್ಚವಿ ರಾಜಕುಮಾರಿಯೊಬ್ಬಳನ್ನು ಮದುವೆಯಾಗಿದ್ದನು. ಈ ಕ್ಷತ್ರಿಯ ಕುಟುಂಬದೊಂದಿಗಿನ ಭಾಂಧವ್ಯ ವೈಶರಾಗಿದ್ದ ಗುಪ್ತರಿಗೆ ಪ್ರತಿಷ್ಠೆ ಮತ್ತು ಮಾನ್ಯತೆಯನ್ನು ತಂದುಕೊಟ್ಟಿತು. ಜೊತೆಗೆ ಸಾಕಷ್ಟು ಭೂಮಿಯೂ ಬಳುವಳಿಯ ಮೂಲಕ ಚಂದ್ರಗುಪ್ತನಿಗೆ ಸಂದಿತು. ಇದರಿಂದ ಇವನ ರಾಜ್ಯ ಸಾಕಷ್ಟು ವಿಸ್ತಾರವಾಯಿತು. ಇವನು ಅಧಿಕಾರಕ್ಕೆ ಬಂದಾಗ ಗುಪ್ತಶಕೆಯೊಂದನ್ನು ಆರಂಭಿಸಿದನು. ಅನಂತರದ ಹಲವು ಶಾಸನಗಳು ಈ ಗುಪ್ತ ಶಕೆಯಲ್ಲಿ ಕಾಲವನ್ನು ಸೂಚಿಸಿವೆ. ಚಂದ್ರಗುಪ್ತನು ಮರಣಹೊಂದುವ ಮೊದಲು ಮಂತ್ರಾಲೋಚನೆ ಸಭೆಯೊಂದನ್ನು ನಡೆಸಿ ಅಲ್ಲಿ ಸಮುದ್ರ ಗುಪ್ತನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದನೆಂದು ತಿಳಿದುಬರುತ್ತದೆ.

ಸಮುದ್ರಗುಪ್ತ (ಕ್ರಿ.. ೩೩೫೩೮೦)

ಒಂದನೆಯ ಚಂದ್ರಗುಪ್ತನ ಮಗನೂ ಉತ್ತರಾಧಿಕಾರಿಯೂ ಆದ ಸಮುದ್ರಗುಪ್ತನು ಗುಪ್ತ ಸಂತತಿಯ ಅತ್ಯಂತ ಪ್ರಸಿದ್ದ ದೊರೆ. ಮಹಾದಂಡನಾಯಕನಾಗಿ, ದಿಗ್ವಿಜಯಿಯಾಗಿ, ಸಾಮ್ರಾಜ್ಯ ನಿರ್ಮಾಪಕನಾಗಿ ಸಂಗೀತಗಾರನಾಗಿ, ಉತ್ತಮ ಆಡಳಿತಗಾರನಾಗಿ ಭಾರತದ ಚರಿತ್ರೆಯಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಡಿದ್ದಾನೆ. ಡಿ.ಅರ್.ಎಸ್.ತ್ರಿಪಾಠಿಯವರು ಬರೆಯುವಂತೆ ಯುದ್ದ ಮತ್ತು ಆಕ್ರಮಣಗಳನ್ನೇ ಗುರಿಯಾಗಿ ಹೊಂದಿದ್ದ ಸಮುದ್ರ ಗುಪ್ತನು ಶಾಂತಿ ಮತ್ತು ಧರ್ಮಗಳನ್ನು ಗುರಿಯಾಗಿ ಹೊಂದಿದ್ದ  ಅಶೋಕನಿಗೆ ತದ್ವಿರುದ್ದನಾಗಿದ್ದನು. ಈ ಹೇಳಿಕೆ ಅವನ ಒಟ್ಟಾರೆ ಆಳ್ವಿಕೆಯನ್ನು ವಿಮರ್ಶಿಸುತ್ತದೆ. ಮಹಾದಿಗ್ವಿಜಯಿಯಾಗಿದ್ದ ಸಮುದ್ರಗುಪ್ತನ ದಿಗ್ವಿಜಯವನ್ನು ತಿಳಿಯಲು ಇರುವ ಪ್ರಮುಖ ಆಧಾರವೆಂದರೆ ಅಲಹಾಬಾದ್ ಸ್ತಂಭಶಾಸನ, ಈ ಶಿಲಾಶಾಸನವು ಅವನ ದಂಡನಾಯಕವೂ, ಆಸ್ಥಾನ ಕವಿಯೂ ಆದ್ಫಹರಿಸೇನ್ಬನಿಂದ ರಚಿಸಲ್ಪಟ್ಟಿತು. ಇದು ಸಂಸ್ಕೃತ ಭಾಷೆಯ ಉತ್ಕೃಷ್ಟ ಶೈಲಿಯಲ್ಲಿದ್ದು ಗದ್ಯ ಮತ್ತು ಪದ್ಯ ಮಿಶ್ರಿತ ಚಂಪೂ ಕಾವ್ಯದ ಶೈಲಿಯಲ್ಲಿದೆ. ಅದರ ಕವಿಯೂ ಸಂಸ್ಕೃತ ಭಾಷೆಯ ಶ್ರೇಷ್ಟ ಸಾಹಿತಿಯಾಗಿದ್ದನೆಂಬುದನ್ನು ಸೂಚಿಸುತ್ತದೆ. ಅಲಹಾಬಾದ್ ಸ್ತಂಭಶಾಸನವು ಮೂಲತಃ ಅಶೋಕನ ಶಾಸನವಾಗಿದ್ದು ಆ ಕಂಬದ ಮೇಲೆಯೇ ಸಮುದ್ರಗುಪ್ತನ ಸಾಧನೆಯನ್ನು ಕೆತ್ತಲಾಗಿದೆ.

ಈ ಶಾಸನದಲ್ಲಿ ಸಮುದ್ರಗುಪ್ತನ ದಿಗ್ವಿಜಯವನ್ನು ಐದು ಭಾಗಗಳಾಗಿ ವಿಂಗಡಿಸಲಾಗದೆ. ಶಾಸನದ ೧೩, ೧೪, ೨೧ ಮತ್ತು ೨೩ನೆಯ ಸಾಲುಗಳ ಸಮುದ್ರಗುಪ್ತನ ಆರ್ಯವರ್ತ ಅಂದರೆ ಉತ್ತ ಭಾರತದ ದಿಗ್ವಿಜಯಗಳನ್ನು ಕುರಿತು ವಿವರಿಸುತ್ತದೆ. ಉತ್ತರದ ಅರಸರುಗಳಾದ ಅಚ್ಯುತ (ಪದ್ಮಾವತಿ ರಾಜ್ಯ, ಮಧ್ಯಭಾರತ) ನಾಗಸೇನ (ಅಹಿಚ್ಚತ್ರ ರೋಹಿಲ್ ಖಂಡ) ಹೆಸರಿನೊಂದಿಗೆ ಉತ್ತರ ಗಂಗಾ ಕಣಿವೆಯಲ್ಲಿ ಆಳುಯತ್ತಿದ್ದ ರುದ್ರದೇವ, ಮೈಥಿಲಾ, ನಾಗದತ್ತ, ಚಂದ್ರವರ್ಮ, ಗಣಪತಿನಾಗ, ನಂದಿನ್ ಮತ್ತು ಬಲವರ್ಮ ಹೀಗೆ ಒಂಬತ್ತು ರಾಜ್ಯರನ್ನು ಸೋಲಿಸಿ ಆ ರಾಜ್ಯಗಳನ್ನು ತನ್ನ ಆಳ್ವಿಕೆಗೆ ಸೇರಿಸಿಕೊಡನೆಂದು ತಿಳಿದುಬರುತ್ತದೆ. ಎರಡನೆಯದಾಗಿ ನೇಪಾಳ, ಬಂಗಾಳ, ಅಸ್ಸಾಂ ಮುಂತಾದ ಹಿಮಾಲಯದ ರಾಜ್ಯಗಳು ಮತ್ತು ಗಡಿರಾಜ್ಯಗಳು. ಪಂಜಾಬಿನಲ್ಲಿ ಮೌರ್ಯ ಸಾಮ್ರಾಜ್ಯದ ನಂತರವೂ ಜೀವಂತವಾಗಿದ್ದ ಗಣರಾಜ್ಯಗಳನ್ನು ಸಮುದ್ರಗುಪ್ತ ತನ್ನ ಸೇನಾಪ್ರಭವದ ವಲಯದೊಳಕ್ಕೆ ತಂದುಕೊಂಡನು. ಮೂರನೆಯದಾಗಿ ಅವನ ಹತೋಟಿಗೆ ಒಳಗಾದ ರಾಜ್ಯಗಳೆಂದರೆ ವಿಂಧ್ಯ ಪ್ರದೇಶದ ಅಟವಿಕ ಅಂದರೆ ಆದಿವಾಸಿ ರಾಜ್ಯಗಳು ಸೇರುತ್ತವೆ. ನಾಲ್ಕನೆಯದಾಗಿ ದಕ್ಷಿಣ ಭಾರತದ ಪೂರ್ವ ಭಾಗದ ಹನ್ನೆರಡು ರಾಜ್ಯಗಳನ್ನು ಗೆದ್ದು ಅವರಿಂದ ಕಪ್ಪ ಸಂಗ್ರಹಿಸಿ ಪನಃ ಅಲ್ಲಿನ ಅರಸರಿಗೇ ರಾಜ್ಯಗಳನ್ನು ಹಿಂದಿರುಗಿಸಲಾಯಿತು. ಅವುಗಳೆಂದರೆ ಕೋಸಲದ ಮಹೇಂದ್ರ ರಾಜ (ಮೇಲಿನಾಮಹಾನದಿ ಕಣಿವೆ) ಮಹಾಕಾಂತಾರದ ವ್ಯಾಘ್ರರಾಜ (ಮಹಾರಣ್ಯ ಅಥವಾ ದಂಡಕಾರಣ್ಯ) ಕೌರಾಲದ ಮಂಟರಾಜ, ಪಿಷ್ಟಪುರದ ಮಹೇಂದ್ರ (ಗೋದಾವರಿ ಜಿಲ್ಲೆಯ ಪೀತಪುರಂ) ಕೊಟ್ಟೂರದ ಸ್ವಾಮಿದತ್ತ (ಮದಶನು ಪ್ರಾಂತ್ಯದ ಉತ್ತರದ ಭಾಗ) ಎರಂಡಪಲಾದ ದಮನ (ವಿಶಾಖಪಟ್ಟಣ ಜಿಲ್ಲೆ) ಕಂಚಿಯ ಪಲ್ಲವ ರಾಜ ವಿಷ್ಣುಗೋಪ, ಅವಮುಕ್ತದ ನೀಲರಾಜ (ಗೋದಾವರಿಜಿಲ್ಲೆ) ವೆಂಗಿಯ ಶಾಲಂಕಾಯನ ರಾಜ ಹಸ್ತಿವರ್ಮನ್ (ಪ್ರಾಯಶಃ ನಲ್ಲೂರು ಜಲ್ಲೆ), ಪಲಕ್ಕದ ಉಗ್ರಸೇನ (ನಲ್ಲೂರು ಜಿಲ್ಲೆ) ದೇವರಾಷ್ಟ್ರದ ಕುಬೇರ (ವಿಶಾಖಪಟ್ಟಣ ಜಿಲ್ಲೆ), ಕೌಸ್ಥಲಪುರದ ಧನಂಜಯ (ಉತ್ತರ ಆರ್ಕಾಟ್ ಜಿಲ್ಲೆ). ಐದನೆಯದಾಗಿ ಆಫ್ಘಾನಿಸ್ತಾನದ ಭಾಗದಲ್ಲಿ ಆಳುತ್ತಿದ್ದ ಕುಶಾನರು ಮತ್ತು ಶಕರನ್ನು ಅಧಿಕಾರದಿಂದ ಕಿತ್ತೊಗೆದು ದೂರದೇಶದ ರಾಜರನ್ನು ಆಶ್ರಿತರನ್ನಾಗಿ ಮಾಡಿಕೊಂಡನೆಂದು ಹೇಳಲಾಗದೆ.

ಸಮುದ್ರಗುಪ್ತನ ಪ್ರತಿಷ್ಠೆ ಹಾಗೂ ಪ್ರಭಾವಗಳು ಭಾರತದ ಹೊರಗಿನ ದೇಶಗಳಿಗೂ ಮುಟ್ಟಿತ್ತು. ಲಂಕೆಯ ರಾಜನಾದ ಶ್ರೀಮೇಘವರ್ಮನು ಸಮುದ್ರಗುಪ್ತನ ಆಸ್ಥಾನಕ್ಕೆ ರಾಯಭಾರಿಗಳ ತಂಡವೊಂದನ್ನು ಕಳುಹಿಸಿ, ಬುದ್ದಗಯೆಯಲ್ಲಿ ವಿಹಾರವೊಂದನ್ನು ಕಟ್ಟಿಸಲು ಅನುಮತಿಯನ್ನು ಪಡೆದುಕೊಡಿದ್ದನೆಂದು ಹ್ಯೂಯೆನ್ ತ್ಸಾಂಗ್ ತಿಳಿಸಿದ್ದಾನೆ. ಇವನ ದಿಗ್ವಿಜಯದಿಂದ ಬೆದರಿದ ಭಾರತದ ಗಡಿನಾಡಿನ ಜನರು ತಾವೇ ತಾವಾಗಿ ಶರಣಾಗತರಾದರೆಂದೂ ಶಾಸನದಿಂದ ತಿಳಿದುಬರುತ್ತದೆ. ಆರ್.ಕೆ. ಮುಖರ್ಜಿಯವರ ಪ್ರಕಾರ ಸಮುದ್ರಗುಪ್ತನ ಸಾಮ್ರಾಜ್ಯವು ಉತ್ತರದಲ್ಲಿ ಹಿಮಾಲಯದಿಂದ ದಕ್ಷಿಣದಲ್ಲಿ ನರ್ಮದಾ ನದಿಯವರೆಗೆ ಮತ್ತು ಪಶ್ಚಿಮದಲ್ಲಿ ಪಂಜಾಬಿನಿಂದ ಪೂರ್ವದಲ್ಲಿ ಬ್ರಹ್ಮ ಪುತ್ರಾವರೆಗೆ ಹರಡಿದ್ದಿತು. ಇದರ ಸುತ್ತಮುತ್ತ ಸಾಮಂತ ರಾಜರ ಹಲವು ರಾಜ್ಯಗಳಿದ್ದವು. ಈ ವಲಯದ ಹೊರಗೆ ಮಿತ್ರರಾಜ್ಯವಾಗಿದ್ದವೆಂದು ತಿಳಿದುಬರುತ್ತದೆ.

ಸಮುದ್ರಗುಪ್ತನ ವ್ಯಕ್ತಿತ್ವ

ಸಮುದ್ರಗುಪ್ತ ಕೇಲವ ದಿಗ್ವಿಜಯಿಯಾಗಿರದೆ ಸಾಹಿತ್ಯ ಕಲೆಗಳ ಪೋಷಕನೂ ಆಗಿದ್ದನು. ಅಲಹಾಬಾದ್ ಶಾಸನವು ಇವನನ್ನು ‘ಕವಿರಾಜ’ ಎಂದು ವರ್ಣಿಸಿದೆ. ಸ್ವತಃ ಕವಿಯಾಗಿದ್ದುದೇ ಅಲ್ಲದೆ ಹಲವು ಕವಿಗಳಿಗೆ ಆಶ್ರಯ ನೀಡಿದ್ದನು. ಖ್ಯಾತ ಬೌದ್ಧವಿದ್ವಾಂಸ ವಸುಬಂಧು ಇವನ ಮಂತ್ರಿ. ಹರಿಸೇನ ದಂಡನಾಯಕನೂ, ಮಂತ್ರಿಯೂ, ಸಾಹಿತಿಯೂ ಆಗಿದ್ದನು. ಸಮುದ್ರಗುಪ್ತನಿಗೆ ಸಂಗೀತದಲ್ಲಿಯೂ ಆಸಕ್ತಿಯಿತ್ತು. ಇವನ ಕೆಲವು ನಾಣ್ಯಗಳಲ್ಲಿ ಇವನನ್ನು ವೀಣೆ ಅಥವಾ ಕೊಳಲಿನಂತಹ ವಾದ್ಯವನ್ನು ನುಡಿಸುತ್ತಿರುವಂತೆ ಚಿತ್ರಿಸಲಾಗಿದೆ. ತನ್ನ ದಿಗ್ವಿಜಯದ ನೆನಪಿಗಾಗಿ ಅಶ್ವಮೇಧಯಾಗವೊಂದನ್ನು ಮಾಡಿ ಅಶ್ವಮೇಧ, ಪರಾಕ್ರಮ ಎಂಬ ಬಿರುದನ್ನು ಧರಿಸಿದ್ದನು. ಆದರೆ ನೆನಪಿಗಾಗಿ ಎಂಟು ಬಗೆಯ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿಸಿದ್ದನು. ಈ ನಾಣ್ಯಗಳೂ ಆ ಕಾಲದ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುತ್ತವೆ.

ಎರಡನೇ ಚಂದ್ರಗುಪ್ತ (ಕ್ರಿ.. ೩೮೦೪೧೨)

ಗುಪ್ತ ಸಾಮ್ರಾಜ್ಯದ ಉನ್ನತಿಯ ಉತ್ತುಂಗ ಶಿಖರ ಎರಡನೇ ಚಂದ್ರಗುಪ್ತನ ಆಡಳಿತ. ಪರಾಕ್ರಮಿಯಾಗಿ ಉತ್ತಮ ಆಡಳಿತಗಾರನಾಗಿ ಸಾಹಿತ್ಯ, ಕಲೆ, ವಿಜ್ಞಾನಗಳ ಮಹಾ ಪೋಷಕನಾಗಿ ಗುಪ್ತರ ಇನ್ನೊಬ್ಬ ಪ್ರಸಿದ್ಧ ಅರಸನಾಗಿದ್ದಾನೆ. ಕೆಲವು ಆಧಾರಗಳು ಇವನಿಗಿಂತ ಮೊದಲು ರಾಮಗುಪ್ತನೆಂಬುವನು ಆಳ್ವಿಕೆ ನಡೆಸಿದನೆಂದು ತಿಳಿಸುತ್ತವೆ. ಆದರೆ ಅದಕ್ಕೆ ಹೆಚ್ಚಿನ ಸಮರ್ಥನೆಯಿಲ್ಲ. ಪುರಾಣಗಳು ಹೇಳುವಂತೆ ಎರಡನೇ ಚಂದ್ರಗುಪ್ತನ ತಂದೆ ಸಮುದ್ರಗುಪ್ತ ಮತ್ತು ತಾಯಿ ದತ್ತದೇವಿ.

ಆಡಳಿತ ವಿಸ್ತರಣೆ

ಎರಡನೇ ಚಂದ್ರಗುಪ್ತನು ವಿವಾಹ ಬಾಂಧವ್ಯಗಳಿಂದಲೂ, ಚೈತ್ರಯಾತ್ರೆಗಳಿಂದಲೂ ಸಾಮ್ರಾಜ್ಯವನ್ನು ವಿಸ್ತರಿಸಿದನು. ಈತನು ನಾಗಮನೆತನದ ಕುಬೇರನಾಗಳನ್ನು ವಿವಾಹವಾಗುವ ಮೂಲಕ ಪ್ರಬಲ ರಾಜ್ಯವೊಂದರ ಮಿತ್ರತ್ವ ಸಾಧಿಸಿದನು. ನಾಗರು ದೆಹಲಿ ಮಥುರಾದ ಸುತ್ತ ಮುತ್ತ ಸಾಕಷ್ಟು ಪ್ರಬಲರಾಗಿದ್ದು ಅವರ ಸಂಬಂಧ ಚಂದ್ರಗುಪ್ತನ ಸ್ಥಾನಮಾನವನ್ನು ಹೆಚ್ಚಿಸಿತು. ಎರಡನೆಯದಾಗಿ ತನ್ನ ಮಗಳು ಪ್ರಭಾವತಿ ಗುಪ್ತಳನ್ನು ಮಧ್ಯ ಭಾರತದಲ್ಲಿ ಅಳುತ್ತಿದ್ದ ವಾಕಾಟಕ ದೊರೆ ರುದ್ರಸೇನನಿಗೆ ಕೊಟ್ಟು ಮದುವೆ ಮಾಡಿದನು. ಆ ರಾಜ ಮರಣಗೊಂದಿ ಪ್ರಭಾವತಿ ತನ್ನ ಮಗನ ಹೆಸರಿನಲ್ಲಿ ಆಳತೊಡಗಿದಳು. ಅವಳ ಶಾಸನಗಳು ಗುಪ್ತರ ಶೈಲಿಯಲ್ಲಯೇ ಇದ್ದು ತನ್ನ ತಂದೆಯ ಹಿತಾಸಕ್ತಿಗಳನ್ನು ಪೋಷಿಸುತ್ತಿದ್ದಳೆಂದು ತೋರುತ್ತದೆ. ಈ ರೀತಿ ವಾಕಾಟಕರೊಂದಿಗೆ ಏರ್ಪಟ್ಟ ಸಂಬಂಧ ೪೦೦ ವರ್ಷಗಳಿಂದ ಶಕ ಕ್ಷತ್ರಪರ ಹತೋಟಿಗೊಳಪಟ್ಟಿದ್ದ ಮಾಳವ ಮತ್ತು ಗುಜರಾತನ್ನು ಗೆದ್ದುಕೊಳ್ಳಲು ಸಹಾಯಕವಾಯಿತು.

ಎರಡನೇ ಚಂದ್ರಗುಪ್ತನ ಪ್ರಮುಖ ದಿಗ್ವಿಜಯವೆಂದರೆ ಶಕ ಕ್ಷತ್ರಪರನ್ನು ಸೋಲಿಸಿ ಭಾರತದಲ್ಲಿ ಅವರ ಆಳ್ವಿಕೆಯನ್ನು ಬೇರು ಸಹಿತ ಕಿತ್ತೊಗೆದುದು ಹಾಗೂ ಶಕಾರಿ ಎಂಬ ಬಿರುದನ್ನು ಧರಿಸಿದುದು. ವಾಕಟಕರ ಸಹಾಯದಿಂದ ಮಾಳವ, ಗುಜರಾತುಗಳ ಅಧಿಪತಿಗಳಾಗಿದ್ದ ಶಕಕ್ಷತ್ರಪರ ಪ್ರಮುಖ ದೊರೆ ಮೂರನೇ ರುದ್ರದಾಮನ್‌ಹಾಗೂ ಅವನ ಮುಂದಿನ ಉತ್ತರಾಧಿಕಾರಿಗಳನ್ನು ಸೋಲಿಸಿ ತನ್ನ ಸಾಮ್ರಾಜ್ಯವನ್ನು ಅರಬಿ ಸಮುದ್ರದವರೆಗೆ ವಿಸ್ತರಿಸಿದನು. ಸಂಪದ್ಭರಿತವಾಗಿದ್ದ, ವ್ಯಾಪಾರ, ವಾಣಿಜ್ಯಗಳಿಗೆ ಪ್ರಸಿದ್ಧವಾಗಿದ್ದ ಈ ಪ್ರದೇಶವನ್ನು ಗೆದ್ದುದರಿಂದ ಗುಪ್ತರು ಪುನಃ ವಿದೇಶಗಳೊಡನೆ ನೇರ ವ್ಯಾಪಾರ ಸಂಪರ್ಕ ಹೊಂದಲು ಅನುಕೂಲವಾಯಿತು. ಮಾಳವ ಮತ್ತು ಅವರ ಮುಖ್ಯ ನಗರ ಉಜ್ಜಯಿನಿಯೂ ಉಚ್ಛಾಯ ಸ್ಥಿತಿಗೆ ಬಂದವು. ಉಜ್ಜಯಿನಿಯು ಚಂದ್ರಗುಪ್ತನ ಎರಡನೆಯ ರಾಜಧಾನಿಯೂ ವ್ಯಾಪಾರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇದ್ರವೂ ಆಗಿ ಮಾರ್ಪಟ್ಟಿತು.

ಎರಡನೇ ಚಂದ್ರಗುಪ್ತನ ಅನೇಕ ನಾಣ್ಯಗಳ ಮೇಲೆ ವಿಕ್ರಮಾದಿತ್ಯ ಎಂಬ ವಿಶೇಷಣವಿದೆ. ಶಕರ ಮೇಲಿನ ವಿಜಯದಿಂದಾಗಿ ಅವನು ಈ ಬಿರುದನ್ನು ಧರಿಸಿದ್ದಂತೆ ಕಂಡುಬರುತ್ತದೆ. ಜೊತೆಗೆ ಶಕಾವಿ ಸೌಹತಾಂಕ ಎಂಬ ಬಿರುದುಗಳೂ ಈ ವಿಜಯದಿಂದ ಅವನಿಗೆ ದೊರೆತವು. ದೆಹಲಿಯ ಕುತುಬ್‌ಮಿನಾರನ ಬಳಿಯಿರುವ ಕಬ್ಬಣ ಸ್ತಂಭ ಶಾಸನವು ಚಂದ್ರ ಎಂಬ ರಾಜನನ್ನು ಪ್ರಶಂಸೆ ಮಾಡುತ್ತದೆ. ಆ ಚಂದ್ರನು ಎರಡನೇ ಚಂದ್ರಗುಪ್ತನೇ ಆಗಿದ್ದಲ್ಲಿ ಅವನು ವಾಯುವ್ಯ ಮತ್ತು ಬಂಗಾಳದ ಬಹುಭಾಗಗಳನ್ನು ಜಯಿಸಿದ್ದನು ಎಂದು ತಿಳಿಯಬಹುದು.

ಎರಡನೆ ಚಂದ್ರಗುಪ್ತನು ಸಾಹಿತಿಯೂ ಸಾಹಿತ್ಯ ಪ್ರೇಮಿಯೂ ಆಗಿದ್ದನು. ನವರತ್ನಗಳು ಎಂದು ಹೆಸರು ಪಡೆದಿದ್ದ ರಾಜನ ಪ್ರಸಿದ್ಧ ಸಂಸ್ಕೃತ ಸಾಹಿತಿಗಳು ಅವನ ಆಸ್ಥಾನದಲ್ಲಿದ್ದರೆಂದು ನಂಬಲಾಗಿದೆ. ಕಾಳಿದಾಸ ಮತ್ತು ಅಮರ ಸಿಂಹ ಉಜ್ಜೈನಿಯ ಆಸ್ಥಾನದಲ್ಲಿದ್ದರು. ನವರತ್ನಗಳ ಕಲ್ಪನೆ ನಂತರದ ಕಾಲವಾಗಿದ್ದು ಈ ಎಲ್ಲಾ ಕವಿಗಳೂ ಒಂದೇ ಕಾಲದಲ್ಲಿದ್ದರೆಂಬುದು ಅನಿಶ್ಚಿತವಾಗಿದೆ. ಚೀನಾ ದೇಶದ ಬೌದ್ಧ ಯಾತ್ರಿಕ ಫಾಹಿಯಾನನು (ಕ್ರಿ.ಶ. ೩೯೯-೪೧೪) ಇವನ ಕಾಲದಲ್ಲಿ ಭಾರತಕ್ಕೆ ಬಂದ್ದಿದನು. ಇಲ್ಲಿನ ಜನಜೀವನವನ್ನು ಕುರಿತು ಪು. ಕೊ. ಕಿ. ಎಂಬ ಕೃತಿಯಲ್ಲಿ ವಿವರವಾಗಿ ಚಿತ್ರಿಸಿದ್ದಾನೆ. ಇದು ಆ ಕಾಲದ ಚರಿತ್ರೆ ತಿಳಿಯಲು ಅತ್ಯುತ್ತಮ ಕೃತಿಯಾಗಿದೆ.

ಮೊದಲನೆಯ ಕುಮಾರಗುಪ್ತ

ಎರಡನೇ ಚಂದ್ರಗುಪ್ತನ ನಂತರ ಗುಪ್ತರು ತಮ್ಮ ಪ್ರಾಬಲ್ಯವನ್ನು ಕಳೆದುಕೊಳ್ಳಲಾರಂಭಿಸಿದರು ೨ನೆಯ ಚಂದ್ರಗುಪ್ತನ ಮಗ ಒಂದನೆಯ ಕುಮಾರಗುಪ್ತ ಕ್ರಿ.ಶ. ೪೧೨-೪೫೫ರ ವರೆಗೆ ಆಳ್ವಿಕೆ ನಡೆಸಿದಂತೆ ಕಂಡುಬರುತ್ತದೆ. ತನ್ನ ಹಿರಿಯರ ರಾಜ್ಯವನ್ನು ಇವನು ಉಳಿಸಿಕೊಂಡು ಬಂದನು. ನಾಣ್ಯಗಳ ಸಾಕ್ಷಗಳ ಮೇರೆಗೆ ಇವನು ದಖನ್ನಿನ ಸತಾರದವರೆಗೆ ತನ್ನ ಅಧಿಕಾರ ವ್ಯಾಪಿಸಿದ್ದನು. ತನ್ನ ಸಾಧನೆಯನ್ನು ಮೆರೆಯಲು ಸಮುದ್ರಗುಪ್ತನಂತೆ ಅಶ್ವಮೇಧ ಯಾಗವನ್ನು ಮಾಡಿದ್ದನು. ಇವನ ಕೊನೆಯ ದಿನಗಳಲ್ಲಿ ನರ್ಮದ ಕಣಿವೆಯಲ್ಲಿ ಆಳುತ್ತಿದ್ದ ಪುಷ್ಯಾಮಿತ್ರ ಎಂಬ ಬುಡಕಟ್ಟಿನವರು ಪ್ರಾಬಲ್ಯಕ್ಕೆ ಬಂದು ಗುಪ್ತ ರಾಜ್ಯಕ್ಕೆ ಆತಂಕವನ್ನೊಡ್ಡಿದರು.

ಗುಪ್ತರ ಅವನತಿ

ಕುಮಾರಗುಪ್ತನ ನಂತರ ಅಧಿಕಾರಕ್ಕೆ ಬಂದ ಸ್ಕಂದಗುಪ್ತ ಪುಷ್ಯಮಿತ್ರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದನು. ಇವನು ಗುಪ್ತ ಸಂತತಿಯು ಕೊನೆಯ ಸಮರ್ಥ ದೊರೆ. ಈ ವೇಳೆಗೆ ಮಧ್ಯ ಏಷ್ಯಾದ ಪ್ರಚಂಡ ದಾಳಿಕಾರರಾಗಿದ್ದ ಹೂಣರು ಭಾರತದ ಮೇಲೆ ದಾಳಿ ಆರಂಭಿಸಿದರು. ಸ್ಕಂದ ಗುಪ್ತ ಹೋಣರ ದಾಳಿಯನ್ನು ತಡೆಯುವುದರಲ್ಲಿ ಯಶಸ್ವಿಯಾದನು. ಅವನ ನಂತರದ ಅರಸರು ಹೂಣರನ್ನು ತಡೆಗಟ್ಟುವಲ್ಲಿ ಸೋತರು. ಲೋಹದಿಂದ ತಯಾರಿಸುತ್ತಿದ್ದ ರಿಕಾಪು ಬಳಸುತ್ತಿದ್ದ ಸಮರ್ಥ ರಾವುತರಾಗಿದ್ದು ನಿಪುಣ ಬಿಲ್ಲುಗಾರರಾಗದಿದ್ದ ಹೂಣರು ಗುಪ್ತರನ್ನು ಅಂತ್ಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕ್ರಿ.ಶ. ೪೮೫ರ ವೇಳೆಗೆ ಹೊಣರು ಮಾಳವದವರೆಗೆ ದಾಳಿಮಾಡಿದರು. ಆದರೆ ಮಾಳವದ ರಾಜ ಯಶೋವರ್ಮನು ಹೂಣರನ್ನು, ಗುಪ್ತರನ್ನೂ (ಕ್ರಿ.ಶ. ೫೩೨) ಪರಾಭವಗೊಳಿಸಿ ಗುಪ್ತಸಾಮ್ರಾಜ್ಯಕ್ಕೆ ಮಾರಣಾಂತಿಕ ಪೆಟ್ಟುಕೊಟ್ಟನು.

ಸಾಮಂತ ರಾಜರು ಪ್ರಬಲರಾದುದು ಗುಪ್ತರ ಅವನತಿಗೆ ಇನ್ನೊಂದು ಪ್ರಮುಖ ಕಾರಣವಾಯಿತು. ಗುಪ್ತರ ಪ್ರಾಬಲ್ಯ ಕಡಿಮೆಯಾದಂತೆ ಅವರಿಂದಲೇ ನೇಮಕವಾಗಿದ್ದ ಸಾಮಂತರು ಸ್ವತಂತ್ರರಾಗತೊಡಗಿದರು. ಕನೌಜ್‌ನ ಮೌಖಾರಿಗಳು, ವಲ್ಲಭಿಯ ಅರಸರು, ಬಂಗಾಳದ ಅವರ ಸಾಮಂತರು ಸ್ವತಂತ್ರರಾಗತೊಡಗಿದರು. ಕ್ರಿ.ಶ. ೪೬೭ರಲ್ಲಿ ಪಶ್ಚಿಮ ಕರಾವಳಿಯ ಮೇಲಿನ ಹತೋಟಿಯನ್ನು ಕಳೆದುಕೊಂಡರು. ಇದರಿಂದ ವ್ಯಾಪಾರ, ವಾಣಿಜ್ಯದಿಂದ ಗಳಿಸುತ್ತಿದ್ದ ವಿಪುಲ ಆದಾಯವನ್ನು ಕಳೆದುಕೊಂಡರು. ಈ ಆರ್ಥಿಕ ಕುಸಿತ ಗುಪ್ತರ ಅವನತಿಯನ್ನು ತೀವ್ರಗೊಳಿಸಿತು.

ಮತಧರ್ಮ ಹಾಗೂ ಇತರ ಉದ್ದೇಶಗಳಿಗಾಗಿ ಭೂಮಾನ್ಯ ನೀಡುವ ಪದ್ಧತಿಯು ದಿನೇ ದಿನೇ ಬೆಳೆಯುತ್ತ ಬಂದಂತೆ ರಾಜಾದಾಯವು ಇಳಿಮುಖವಾಗಿ ಗುಪ್ತ ರಾಜರಿಗೆ ದೊಡ್ಡ ಸೈನ್ಯವನ್ನು ನಿರ್ವಹಿಸುವುದು ದುಸ್ತರವಾಗಿರಬೇಕು. ಈ ಊಳಿಗಮಾನ್ಯ ಲಕ್ಷಣ ವ್ಯಾಪಾರ ವ್ಯವಹಾರಗಳನ್ನು ಕುಗ್ಗಿಸಿತು. ವಿವಿಧ ವೃತ್ತಿಯ ಜನರು ತಮ್ಮ ವೃತ್ತಿಯನ್ನು ನಿರ್ವಹಿಸಲಾರದಷ್ಟು ಸಂಕಷ್ಟಕ್ಕೀಡಾದರು. ಇದರಿಂದ ವ್ಯಾಪಾರ ತೀವ್ರವಾಗಿ ಕುಸಿಯಿತು. ಇದು ರಾಜ್ಯದ ಆದಾಯ ಕಡಿಮೆಯಾಗಲು ಕಾರಣವಾಯಿತು. ಐದನೆಯ ಶತಮಾನದ ನಂತರ ಚಿನ್ನದ ನಾಣ್ಯಗಳ ಸಂಖ್ಯೆ ಕುಸಿಯಿತು. ಅವುಗಳಲ್ಲಿನ ಚಿನ್ನದ ಪ್ರಮಾಣವೂ ಕಡಿಮೆಯಾಯಿತು. ಆರನೇ ಶತಮಾನದ ಮಧ್ಯ ಭಾಗದವರೆಗೆ ಗುಪ್ತ ಸಾಮ್ರಾಜ್ಯವು ನಾಮಮಾತ್ರಕ್ಕೆ ಅಸ್ತಿತ್ವದಲ್ಲಿದ್ದಿತಾದರೂ ಒಂದು ಶತಮಾನದ ಹಿಂದೆಯೇ ವೈಭವವನ್ನು ಕಳೆದುಕೊಂಡಿತ್ತು.

ಗುಪ್ತರ ಕಾಲದ ಆಡಳಿತ ವ್ಯವಸ್ಥೆ

ಗುಪ್ತರು ತಮ್ಮ ಆಡಳಿತದ ಅತ್ಯುನ್ನತಿಯಲ್ಲಿ ವಿಶಾಲ ಸಾಮ್ರಾಜ್ಯವನ್ನು ನಿರ್ಮಿಸಿದ್ದರು. ಪಾಟಲಿಪುತ್ರವು ರಾಜಧಾನಿಯಾಗಿತ್ತು. ಉಜೈನಿಯು ಎರಡನೆ ರಾಜಧಾನಿಯಾಗಿದ್ದು, ವ್ಯಾಪಾರ ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. ಗುಪ್ತರ ಆಡಳಿತದ ಶೈಲಿಯು ಮೌರ್ಯರ ಆಡಳಿತದ ವಿಸ್ತೃತರೂಪವಾಗಿತ್ತು. ಕೌಟಿಲ್ಯನ ಅರ್ಥಶಾಸ್ತ್ರ ಇತರೆ ದಂಡ ಸಂಹಿತೆಗಳು ಹಾಗೂ ಧರ್ಮಶಾಸ್ತ್ರ ಗ್ರಂಥಗಳು, ಸಾಮಾಜಿಕ ಕಟ್ಟುಪಾಡುಗಳನ್ನು ಆಧರಿಸಿತ್ತು. ಕೇಂದ್ರೀಕೃತ ರಾಜಪ್ರಭುತ್ವ ಅಸ್ತಿತ್ವದಲ್ಲಿದ್ದರೂ ಕೆಲವೊಂದು ಗಣರಾಜ್ಯಗಳು ಈ ಕಾಲದಲ್ಲೂ ಮುಂದುವರೆದಿದ್ದವು. ಗಣರಾಜ್ಯಗಳಲ್ಲಿ ಪ್ರಮುಖವಾದವು ಮದ್ರ, ಕುನಿಂದ, ಯೌದೇಹ, ಅರ್ಜುನಾಯನ ಮತ್ತು ಮಾಲವ ಇವು ಪಂಜಾಬು ಮತ್ತು ರಾಜಾಸ್ತಾನದ ಪ್ರದೇಶದಲ್ಲಿ ನೆಲೆಗೊಂಡವು.

ರಾಜ ಅಥವಾ ಚಕ್ರವರ್ತಿ ಆಡಳಿತದ ಕೇಂದ್ರಬಿಂದುವಾಗಿದ್ದನು. ರಾಜರು ಮಹಾರಾಜ, ಮಹಾರಾಜಾಧಿರಾಜ, ಪರಮೇಶ್ವರ, ಪರಮಭಟ್ಟಾರಕ ಮುಂತಾದ ಆಡಂಬರದ ಬಿರುದುಗಳನ್ನು ಹೊಂದಿದ್ದರು. ರಾಜರನ್ನು ದೈವಾಂಶಸಂಭೂತರೆಂದು ನಂಬಲಾಗಿದ್ದಿತು. ಅಲಹಾಬಾದ್‌ ಶಾಸನದಲ್ಲಿ ಸಮುದ್ರಗುಪ್ತನನ್ನು ಭೂಮಿಗೆ ಆಳಲು ಬಂದ ದೇವರೆಂದು ವರ್ಣಿಸಲಾಗಿದೆ. ಗುಪ್ತರಾಜರು ಬ್ರಾಹ್ಮಣರಿಗೆ ಧಾರಳವಾಗಿ ದಾನ ಮಾಡುತ್ತಿದ್ದುದಕ್ಕೆ ಪ್ರತಿಫಲವಾಗಿ ಅವರು ರಾಜರನ್ನು ನಾನಾ ದೇವರುಗಳಿಗೆ ಹೋಲಿಸಿ ಹೊಗಳುತ್ತಿದ್ದರು. ರಾಜಪದವಿಯು ವಂಶಪಾರಂಪರ್ಯವಾಗಿತ್ತು. ಆದರೆ ನಿಖರವಾಗಿ ಹಿರಿಯ ಮಗನಿಗೇ ಪಟ್ಟಕಟ್ಟುವ ಸಂಪ್ರದಾಯ ಇದ್ದರೂ ಕೆಲವು ಬಾರಿ ಶೂರರಾದವರು ಪಟ್ಟವೇರುತ್ತಿದ್ದರು. ಈ ಅನಿಶ್ಚಯತೆಯಿಂದಾಗಿ ಉನ್ನತ ಅಧಿಕಾರಿಗಳೂ, ಮಾಂಡಲೀಕರು ಮುಂತಾದವರು ಪ್ರಯೋಜನ ಪಡೆದುಕೊಳ್ಳುತ್ತಿದ್ದರು.

ಕೇಂದ್ರಾಡಳಿತ: ರಾಜನು ರಾಜ್ಯದ ಪರಮಾಧಿಕಾರಿ. ರಾಜ್ಯದ ಅಧಿಕಾರಗಳೆಲ್ಲಾ ಅವನಲ್ಲೇ ಕೇಂದ್ರೀಕೃತವಾಗಿದ್ದವು. ಮಂತ್ರಿಪರಿಷತ್ತಿನ ಸಲಹೆ ಮತ್ತು ಸಹಕಾರಗಳಿಂದ ಆಡಳಿತ ನಡೆಸುತ್ತಿದ್ದರು. ಆದರೆ ಎಲ್ಲ ವಿಷಯಗಳಲ್ಲಿ ಅಂತಿಮ ತೀರ್ಮಾನ ಅವನದೇ ಆಗಿದ್ದಿತು. ರಾಜ್ಯದ ಎಲ್ಲ ಅಧಿಕಾರಿಗಳು ರಾಜನಿಗೆ ಹೊಣೆಯಾಗಿದ್ದರು. ರಾಜಧಾನಿಯಲ್ಲಿ ಆಡಳಿತಾಂಗವು ಅವನ ನೇರ ಮೇಲ್ವಿಚಾರಣೆಯಲ್ಲಿದ್ದಿತು. ಪ್ರಾಂತೀಯ ರಾಜ್ಯಪಾಲರು ಮತ್ತು ಅಧಿಕಾರಿಗಳು ರಾಜರ ನಿಯಂತ್ರಣ ಮತ್ತು ಮಾರ್ಗದರ್ಶನಕ್ಕೆ ಒಳಗಾಗಿದ್ದರು. ಇದನ್ನೆಲ್ಲ ನೋಡಿದಲ್ಲಿ ರಾಜರು ದರ್ಪಿಷ್ಟ ಪ್ರಭುಗಳಂತೆ ಕಾಣುತ್ತಿದ್ದರು. ಆದರೆ ವಾಸ್ತವವಾಗಿ ಹಾಗಿರಲಿಲ್ಲ. ರಾಜರು ತಮ್ಮ ಅಧಿಕಾರಿಗಳನ್ನು ಮಂತ್ರಿಗಳು ಮತ್ತು ಮುಖ್ಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ರಾಜನಿಗೆ ಕಾನೂನು ಮಾಡುವ ಅಧಿಕಾರವಿರಲಿಲ್ಲ. ಅವರು ಅನೂಚಾನವಾಗಿ ನಡೆದುಬಂದಿದ್ದ ಸಂಪ್ರದಾಯ ಮತ್ತು ಆಚರಣೆಗಳಿಗೆ ಅನುಗುಣವಾಗಿ ಆಡಳಿತ ನಡೆಸಬೇಕಾಗಿದ್ದಿತು.

ಮಂತ್ರಿಪರಿಷತ್: ರಾಜನಿಗೆ ಆಡಳಿತ ನಡೆಸಲು ಬೇಕಾದ ಬಹುಮುಖ್ಯ ಅಂಗವೇ ಮಂತ್ರಿಮಂಡಲ. ಶಾಸನಗಳಲ್ಲಿ ಮಂತ್ರಿ ಅಥವಾ ಸಚಿವರ ಹೆಸರುಗಳು ಮೇಲಿಂದ ಮೇಲೆ ಪ್ರಸ್ತಾಪಿಸಲ್ಪಟ್ಟಿವೆ. ಗುಪ್ತರ ಆಡಳಿತ ಯಂತ್ರವು ಮೌರ್ಯರಷ್ಟು ವಿಸ್ತೃತವಾಗಿರಲಿಲ್ಲ. ಕುಮಾರಾಮಾತ್ಯರು ಗುಪ್ತಸಾಮ್ರಾಜ್ಯದ ಅತ್ಯಂತ ಮುಖ್ಯ ಅಧಿಕಾರಿಗಳಾಗಿದ್ದರು. ಶಾಸನಗಳಲ್ಲಿ ಮತ್ತು ಮುದ್ರೆಗಳಲ್ಲಿ ಇವರು ಪ್ರಧಾನವಾಗಿ ಕಂಡುಬರುತ್ತಾರೆ. ಇವರು ದಂಡನಾಯಕರಾಗಿ, ಆಸ್ಥಾನಿಕರಾಗಿ ಮತ್ತು ವಿಭಾಗದ ಅಧಿಕಾರಿಗಳಾಗಿ ಕರ್ತವ್ಯ ರ್ನಿಹಿಸುತ್ತಿದ್ದರೆಂದು ಊಹಿಸಲಾಗಿದೆ. ಮಹಾಮಂತ್ರಿ, ಮಹಾಸೇನಾಪತಿ, ಮಹಾದಂಡನಾಯಕ, ಮಹಾಕ್ಷತ್ರಪಟಲಿಕ, ಸಂವಿಧಿಗ್ರಹಿಕ, ವಿನಯಸ್ಥಿತಿಸ್ಥಾಪಕ ಮುಂತಾದ ಹೆಸರಿನ ಮಂತ್ರಿಗಳಿದ್ದ ಬಗ್ಗೆ ಶಾಸನಗಳಿಂದ ತಿಳಿದುಬರುತ್ತದೆ. ಹರಿಸೇಣ ಸಮುದ್ರಗುಪ್ತನ ವಿದೇಶಾಂಗ ಮಂತ್ರಿಯೂ, ದಂಡನಾಯಕನೂ ಜೊತೆಗೆ ಸಾಹಿತಿಯೂ ಆಗಿದ್ದನು. ಈ ಮಂತ್ರಿಗಳು ಕ್ರಿಯಾಶೀಲರಾಗಿದ್ದು ಸಾಮ್ರಾಜ್ಯದಾದ್ಯಂತ ಜನರ ಕುಂದುಕೊರತೆಗಳನ್ನು ಸಂಗ್ರಹಿಸಿ ರಾಜನಿಗೆ ತಿಳಿಸುತ್ತಿದ್ದರು. ರಾಜನು ತಕ್ಷಣ ಅವರ ಪರಿಹಾರಕ್ಕೆ ಆಜ್ಞೆ ನೀಡುತ್ತಿದ್ದನು. ಹೀಗೆ ಮಂತ್ರಿ ಪರಿಷತ್ತು ಕ್ರಿಯಾತ್ಮಕವಾಗಿದ್ದರಿಂದ ರಾಜರು ನಿರಂಕುಶಮತಿಗಳಾಗಿರಲು ಸಾಧ್ಯವಿರಲಿಲ್ಲ. ಜೊತೆಗೆ ಮಂತ್ರಿ ಪದವಿ ಕೆಲವೊಮ್ಮೆ ವಂಶಪಾರಂಪರ್ಯವಾಗಿದ್ದು ರಾಜರ ಹತೋಟಿ ಕಡಿಮೆಯಾಗಲು ಕಾರಣವಾಗಿತು.

ರಾಜಧಾನಿಯಲ್ಲಿ ಕೇಂದ್ರೀಯ ಆಡಳಿತ ಕಛೇರಿ ‘ಸರ್ವಾಧ್ಯಕ್ಷ’ನೆಂಬ ಅಧಿಕಾರಿಯ ಕೆಳಗಿತ್ತು. ಇವನು ಕೇಂದ್ರ ಸರ್ಕಾರದ ಆಜ್ಞೆಗಳನ್ನು ಪ್ರಾಂತ್ಯದ ಮತ್ತು ವಿಭಾದಗದ ಅಧಿಕಾರಿಗಳಿಗೆ ದೂತರ ಮೂಲಕ ತಲುಪಿಸುತ್ತಿದ್ದನು. ದೈನಂದಿನ ಕೆಲಸ ಕಾರ್ಯಗಳನ್ನು ಮಂತ್ರಿಗಳು ತಮ್ಮ ಹೊಣೆಗಾರಿಕೆಯ ಮೇಲೆ ನಿರ್ವಹಿಸುತ್ತಿದ್ದರು. ಪ್ರಮುಖವಾದ ವಿಷಯಗಳನ್ನು ರಾಜನ ಅಧ್ಯಕ್ಷತೆಯಲ್ಲಿ ಜರುಗುತ್ತಿದ್ದ ಮಂತ್ರಿ ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುತ್ತಿತ್ತು. ಪ್ರತಿಹಾರ ಮತ್ತು ಮಹಾಪ್ರತಿಹಾರರು ರಾಜನ ಆಸ್ಥಾನದ ಪ್ರಮುಖ ಅಧಿಕಾರಿಗಳಾಗಿದ್ದರು. ಇವರಲ್ಲದೆ ಕೇಂದ್ರ ಸರ್ಕಾರದಲ್ಲಿ ಹಲವಾರು ವರ್ಗದ ನಾಗರಿಕ ಸೇವೆಯ ಅಧಿಕಾರಿಗಳಿದ್ದರು.

ಗುಪ್ತರ ಕಾಲದಿಂದ ಆಡಳಿತದಲ್ಲಿ ಕಂಡುಬರುವ ಇನ್ನೊಂದು ಪ್ರಮುಖ ಬೆಳವಣಿಗೆಯೆಂದರೆ ಸಾಮಂತ ಪದ್ಧತಿ. ಸಾಮ್ರಾಜ್ಯದ ಆಡಳಿತದ ಬಹುಪಾಲನ್ನು ಸಾಮಂತರು ಹಾಗೂ ಮಾಸ್ಯಿದಾರರು ನಿರ್ವಹಿಸುತ್ತಿದ್ದರಿಂದ ಗುಪ್ತರಾಜರಿಗೆ ಮೌರ್ಯರಿಗೆ ಅಗತ್ಯವಿದ್ದಷ್ಟು ಸಂಖ್ಯೆಯಲ್ಲಿ ಆಧಿಕಾರಿಗಳ ಅಗತ್ಯವಿರಲಿಲ್ಲ. ಮಾನ್ಯದರರು ತಮ್ಮ ವ್ಯಾಪ್ತಿಯ ಎಲ್ಲ ಆಡಳಿತದ ಜವಾಬ್ದಾರಿಯನ್ನೂ (ನ್ಯಾಯಾಡಳಿತವನ್ನು ಒಳಗೊಂಡಂತೆ) ಹೊಂದಿದ್ದುದು. ಇದಕ್ಕೆ ಕಾರಣವಾಯಿತು. ಜೊತೆಗೆ ಪ್ರಮುಖ ಕಸುಬುದಾರರು (ವೃತ್ತಿಸಂಘಗಳ ಮುಖ್ಯಸ್ಥರು) ವ್ಯಾಪಾರಸ್ಥರು, ಗ್ರಾಮೀಣ ಹಾಗೂ ನಗರ ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರಿಂದಲೂ ಅಧಿಕಾರಿಗಳ ಅಗತ್ಯ ಕಡಿಮೆಯಾಯಿತು.

ಪ್ರಾಂತ್ಯಾಡಳಿತ: ಗುಪ್ತರು ಆಡಳಿತದ ಅನುಕೂಲಕ್ಕಾಗಿ ತಮ್ಮ ಸಾಮ್ರಾಜ್ಯವನ್ನು ಪ್ರಾಂತ್ಯಗಳಾಗಿ ವಿಭಜಿಸಿದ್ದರು. ಎರಡು ವರ್ಗದ ಪ್ರಾಂತಗಳಿದ್ದವು. ಮೊದಲನೆಯದು, ರಾಜನೇ ನೇರವಾಗಿ ತನ್ನ ಪ್ರತಿನಿಧಿಗಳ ಮೂಲಕ ಆಡಳಿತ ನಡೆಸುತ್ತಿದ್ದ ಪ್ರಾಂತಗಳು ಮತ್ತು ಎರಡನೆಯದು ಸಾಮಂತ ರಾಜರಿಂದ ಆಡಲ್ಪಡುತ್ತಿದ್ದ ಪ್ರಾಂತಗಳು. ಸಾಮಾನ್ಯವಾಗಿ ರಾಜಕುಮಾರರು ಪ್ರಭಾವೀ ಸಾಮಂತರಾಜರು ಪ್ರಾಂತ್ಯಾಧಿಕಾರಿಗಳಾಗಿರುತ್ತಿದ್ದರು. ಪ್ರಾಂತ್ಯಗಳನ್ನು ಭುಕ್ತಿ ಎಂಬ ವಿಭಾಗಗಳಾಗಿ ವಿಭಜಿಸಲಾಗಿದ್ದು ಉಪರಿಕ ಎಂಬ ಅಧಿಕಾರಿ ಇವುಗಳ ಆಡಳಿತಾಧಿಕಾರಿಗಳಾಗಿದ್ದರು. ಭುಕ್ತಿಗಳನ್ನು ವಿಷಯ ಎಂದು ಕರೆಯುತ್ತಿದ್ದರು. ಅವರು ಅವುಗಳನ್ನು ಜಿಲ್ಲೆಗಳಾಗಿ ವಿಭಜಿಸಿದ್ದರು. ವಿಷಯಪತಿ ಇದರ ಆಡಳಿತ ನೋಡಿಕೊಳ್ಳುತ್ತಿದ್ದ ಅಧಿಕಾರಿಯಾಗಿದ್ದನು. ವಿಷಯಗಳನ್ನು ಹಳ್ಳಿಗಳಾಗಿ ವಿಂಗಡಿಸಿದ್ದರು. ಗ್ರಾಮಗಳ ಆಡಳಿತಕ್ಕೆ ಗ್ರಾಮಿಕ ಅಥವಾ ಗ್ರಾಮಾಧ್ಯಕ್ಷರೆಂಬ ಆಡಳಿತಾಧಿಕಾರಿಯಿದ್ದನು. ಇವನಿಗೆ ಆಡಳಿತದಲ್ಲಿ ಸಲಹೆ ನೀಡಲು ಗ್ರಾಮದ ಹಿರಿಯರ ಸಭೆ ಇರುತ್ತಿತ್ತು. ಗುಪ್ತರ ಕಾಲದಲ್ಲಿ ನಗರಗಳ ಆಡಳಿತ ನೋಡಿಕೊಳ್ಳಲು ಪರಿಷತ್‌ ಎಂಬ ನಗರಸಭೆ ಅಸ್ತಿತ್ವದಲ್ಲಿದ್ದು ಪುರಪಾಲ ಅದರ ಮುಖ್ಯಸ್ಥನಾಗಿರುತ್ತಿದ್ದನು. ವೃತ್ತಿ ಸಂಘಗಳ ಮುಖ್ಯಸ್ಥರುಗಳು ಆಡಳಿತದಲ್ಲಿ ಇವನಿಗೆ ಸಹಕರಿಸುತ್ತಿದ್ದರು.

ನ್ಯಾಯಾಡಳಿತ: ಗುಪ್ತರ ಕಾಲಕ್ಕೆ ನ್ಯಾಯ ವಿತರಣೆ ವ್ಯವಸ್ಥೆಯು ಬಹಳ ಅಭಿವೃದ್ಧಿಯಾಯಿತು. ಈ ಕಾಲಕ್ಕೆ ಹಲವಾರು ನ್ಯಾಯಶಾಸ್ತ್ರ ಗ್ರಂಥಗಳು ರಚಿತವಾದವು. ಮೊಟ್ಟ ಮೊದಲ ಬಾರಿಗೆ ಲೌಕಿಕ ನ್ಯಾಯ (ಸಿವಿಲ್‌) ಮತ್ತು ಅಪರಾಧ (ಕ್ರಿಮಿನಲ್‌) ನ್ಯಾಯಗಳು ಸ್ಪಷ್ಟವಾಗಿ ಬೇರ್ಪಡಿಸಲ್ಪಟ್ಟವು. ಕಳ್ಳತನ ಹಾಗೂ ವ್ಯಭಿಚಾರಗಳು ಘೋರ ಅಪರಾಧಗಳೆಂದು ಪರಿಗಣಿಸಲ್ಪಟ್ಟವು. ವಿವಿಧ ಬಗೆಯ ಆಸ್ತಿಗಳಿಗೆ ಸಂಬಂಧಪಟ್ಟ ವ್ಯವಹಾರಗಳು ಲೌಕಿಕ ನ್ಯಾಯದ ವ್ಯಾಪ್ತಿಗೆ ಬಂದವು. ಆಸ್ತಿ ಉತ್ತರಾಧಿಕಾರವನ್ನು ಕುರಿತು ವಿವರವಾದ ನ್ಯಾಯ ನಿಯಮಗಳು ವರ್ಣಭೇದದ ಆಧಾರದ ಮೇಲೆಯೇ ರೂಪಿಸಲ್ಪಟ್ಟವು.

ರಾಜನು ಸಾಮ್ರಾಜ್ಯದ ಪರಮೋಚ್ಛ ನ್ಯಾಯಾಧಿಶನಾಗಿದ್ದನು. ನ್ಯಾಯವನ್ನು ಎತ್ತಿಹಿಡಿಯುವುದು ರಾಜನ ಕರ್ತವ್ಯವಾಯಿತು. ರಾಜನ ಕೈಕೆಳಗೆ ಹಲವಾರು ವರ್ಗದ ಧರ್ಮಾಧಿಕಾರಿಗಳಿದ್ದರು. ಇವರು ಧರ್ಮಶಾಸ್ತ್ರದಲ್ಲಿ ಪಂಡಿತರಾಗಿದ್ದು ನ್ಯಾಯ ವಿತರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ರಾಂತ್ಯಗಳಲ್ಲಿ, ವಿಭಾಗಗಳಲ್ಲಿ ಮತ್ತು ಉಪವಿಭಾಗಗಳಲ್ಲಿ ಪ್ರತ್ಯೇಕ ನ್ಯಾಯ ವಿತರಣೆ ವ್ಯವಸ್ಥೆಯಿದ್ದು ಆಯಾಸ್ಥಳದ ಅಧಿಕಾರಿಗಳು ನ್ಯಾಯವಿತರಣೆಯ ಜವಾಬ್ದಾರಿ ವಹಿಸುತ್ತಿದ್ದು. ಕಸುಬುದಾರರು, ವ್ಯಾಪರಿಗಳು ಮತ್ತು ಇತರ ವೃತ್ತಿಶ್ರೇಣಿಗಳವರು ತಮ್ಮ ತಮ್ಮದೇ ಅದ ನ್ಯಾಯ ನಿಯಮಗಳಿಗೆ ಅನುಸಾರವಾಗಿ ನಿಯಂತ್ರಿಸಲ್ಪಡುತ್ತಿದ್ದರು. ಗ್ರಾಮಗಳ ಹಂತದಲ್ಲಿ ಗ್ರಾಮ ಸಭೆಗಳೇ ನ್ಯಾಯ ವಿತರಿಸುತ್ತಿದ್ದವು.

ಸೈನ್ಯಾಡಳಿತ: ಗುಪ್ತರ ಸೇನಾಬಲ ಎಷ್ಟು ಎಂಬುದು ತಿಳಿದುಬಂದಿಲ್ಲ. ರಾಜರು ದೊಡ್ಡ ಗಾತ್ರದ ಸೈನ್ಯವನ್ನು ಹೊಂದಿರುತ್ತಿದ್ದರು ಅಗತ್ಯ ಬಿದ್ದಾಗ ಆ ಸೇನಾಬಲವು ಸಾಮಂತರು ಒದಗಿಸುತ್ತಿದ್ದ ಸೇನಾಬಲಗಳಿಂದ ವಿಸ್ತಾರಗೊಳ್ಳುತ್ತಿತ್ತು. ಈ ಕಾಲದಲ್ಲಿ ಗಜದಳಕ್ಕಿಂತ ಅಶ್ವಸೇನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿತ್ತು. ಸೇನಾಪತಿ ಸೂಕ್ತ ಸೈನ್ಯದ ಅಧಿಕಾರಿಯಾಗಿದ್ದು ಅವನು ಮಂತ್ರಿಯ ಸ್ಥಾನಮಾನ ಹೊಂದಿರುತ್ತಿದ್ದನು. ಅಲ್ಲದೆ ಸೈನ್ಯದ ಪ್ರತಿಯೊಂದು ವಿಭಾಗದಲ್ಲಿ ಹಲವು ವರ್ಗ ಅಧಿಕಾರಿಗಳಿದ್ದು ಅವರು ಅಶ್ವಪತಿ, ವೆಲುಪತಿ ಮತ್ತು ಮಹಾವೆಲುಪತಿ ಮುಂತಾದ ಹೆಸರಿನಿಂದ ಕರೆಯಲ್ಪಡುತ್ತಿದ್ದರು. ಕುದುರೆಯ ಮೇಲೆ ಕುಳಿತೇ ಬಾಣಬಿಡುವುದು ಮುಖ್ಯವಾದ ಯುದ್ಧ ತಂತ್ರವಾಗಿ ಬೆಳೆಯಿತು. ಜೊತೆಗೆ ಸಾಂಪ್ರದಾಯಿಕ ಶಸ್ತ್ರಗಳಾದ ಬಿಲ್ಲು, ಕತ್ತಿ, ಕೈಗೂಡಲಿ, ಈಟಿ, ಭರ್ಜಿ ಮುಂತಾದವುಗಳನ್ನು ಬಳಸುತ್ತಿದ್ದರು. ಸೈನಿಕರು ಶಿರಸ್ತ್ರೀಣ ಮತ್ತು ಕಬ್ಬಿಣದ ಕವಚಗಳನ್ನು ಬಳಸುತ್ತಿದ್ದರು.

ವರ್ಧನರು

ವರ್ಧನರು ಕ್ರಿ.ಶ. ಏಳನೆಯ ಶತಮಾನದಲ್ಲಿ ಉತ್ತರ ಭಾರತದ ಪ್ರಬಲ ಅರಸರಾಗಿ ಆಳ್ವಿಕೆ ನಡೆಸಿದರು. ಕ್ರಿ.ಶ. ೬ನೆಯ ಶತಮಾನದ ಮಧ್ಯಭಾಗದಲ್ಲಿ ಗುಪ್ತರು ಅವನತಿ ಹೊಂದಿದ ನಂತರ ಉತ್ತರ ಭಾರತವು ಹಲವು ಸಣ್ಣ ರಾಜ್ಯಗಳಾಗಿ ಛಿದ್ರವಾಯಿತು. ಪಂಜಾಬ್‌, ಕಾಶ್ಮೀರ ಮತ್ತು ಪಶ್ಚಿಮ ಭಾರತ ಹೊಣರ ಅಧಿಪತ್ಯಕ್ಕೊಳಪಟ್ಟಿತು. ಉತ್ತರ ಮತ್ತು ಪಶ್ಚಿಮ ಭಾರತಗಳಲ್ಲಿ ಗುಪ್ತರ ಆರೇಳು ಸಾಮಂತರು ಪ್ರಬಲರಾಗಿ ಗುಪ್ತರ ಸಾಮ್ರಾಜ್ಯವನ್ನು ತಮ್ಮ ತಮ್ಮಲ್ಲಿ ಪಾಲುಮಾಡಿಕೊಂಡರು. ಅವರಲ್ಲಿ ಒಂದಾದ ವರ್ಧನ ಸಂತತಿಯವರು ಸ್ಥಾನೇಶ್ವರ ಸಂತತಿಯವರು ಹರಿಯಾಣದಲ್ಲಿ ಆಳುತ್ತಿದ್ದು ಕ್ರಮೇಣ ಇತರ ಎಲ್ಲಾ ಸಾಮಂತರ ಮೇಲೂ ತಮ್ಮ ಅಧಿಕರ ಮುದ್ರೆ ಒತ್ತಿದರು. ವರ್ಧನ ಸಂತತಿಯವರು ಶಿವಭಕ್ತರಾದ ಸುಪ್ರಸಿದ್ಧ ಪುಷ್ಯಭೂತಿಯ ವಂಶದವರೆಂದು ಹೇಳಿಕೊಂಡಿದ್ದಾರೆ. ಪ್ರಾಯಶಃ ನಂತರದ ಗುಪ್ತರ ಸಂತತಿಯ ರಾಜ ಪುತ್ರಿಯೊಬ್ಬಳ ಮಗನೂ ಹರ್ಷನ ತಂದೆಯೂ ಆದ ಪ್ರಭಾಕರ ವರ್ಧನನಿಂದ ಈ ಸಂತತಿ ಪ್ರಸಿದ್ಧಿಗೆ ಬಂತು.

ವರ್ಧನರ ಇತಿಹಾಸ ತಿಳಿಯಲು ಅನೇಕ ಆಧಾರಗಳು ಲಭ್ಯವಾಗಿವೆ. ಅವುಗಳಲ್ಲಿ ಪ್ರಮುಖ ಸಾಹಿತ್ಯ ಕೃತಿಗಳೆಂದರೆ ಬಾಣನ ‘ಹರ್ಷ ಚರಿತ್ರೆ,’ ಚೀನಿ ಯಾತ್ರಿಕ ಮತ್ತು ಬೌದ್ಧ ಸನ್ಯಾಸಿ ಹ್ಯೊಯೆನ್‌ತ್ಸಾಂಗ್‌ನ ಬರವಣಿಗೆ, ಹಾಗೂ ಮಧುಬನ್‌ ಸೊನ್‌ಪೇಟ್‌ ಮತ್ತು ಬನ್ಸಕೇರ್ ಮುಂತಾದ ಕಡೆಗಳಲ್ಲಿ ದೊರತಿರುವ ಶಾಸನಗಳು ಮುಖ್ಯವಾದವುಗಳು.