ಕೃಷಿಯ ಮೇಲಿನ ತೆರಿಗೆಗಳು

ಈಗಾಗಲೇ ಹೇಳಿರುವಂತೆ ಪ್ರಾಚೀನ ಭಾರತದ ಅರ್ಥ ವ್ಯವಸ್ಥೆಯಲ್ಲಿ ಕೃಷಿಯೇ ಪ್ರಧಾನವಾಗಿದ್ದುದರಿಂದ, ರಾಜ್ಯದ ಆದಾಯದ ಮೂಲವು ಕೂಡಾ ಕೃಷಿ ಕ್ಷೇತ್ರವೇ ಆಗಿದ್ದಿತು. ಹೀಗಾಗಿ ಭೂಕಂದಾಯವಲ್ಲದೆ ವಿವಿಧ ರೀತಿಯ ತೆರಿಗೆಗಳನ್ನು ಕೃಷಿ ಕ್ಷೇತ್ರದ ಮೇಲೆ ವಿಧಿಸಿರುವುದು ಕಂಡು ಬರುತ್ತದೆ. ಸ್ಮೃತಿಕಾರರು ಭೂಕಂದಾಯದ ದರವನ್ನು ಪ್ರಸ್ತಾಪಿಸಿರುವರು. ಆದರೆ ಅದು ವಾಸ್ತವಿಕವಾಗಿ ಜಾರಿಯಲ್ಲಿದ್ದಿತೆನ್ನಲಾಗದು. ಶಾಸನಗಳಲ್ಲಿ ವಿವಿಧ ತೆರಿಗೆಗಳ ಹೆಸರುಗಳು ಕಂಡುಬರುವುದಾದರೂ ಸ್ಪಷ್ಟವಾಗಿ ದರಗಳು ಉಲ್ಲೇಖವಾಗಿಲ್ಲ. ಆದರೆ ತೆರಿಗೆಯ ದರಗಳು ಭೂಮಿಯ ವಿಧಗಳನ್ನಾಧರಿಸಿ ಭಿನ್ನವಾಗಿರುತ್ತವೆ ಎಂಬುದನ್ನು ಶಾಸನಗಳು ಸ್ಪಷ್ಟಪಡಿಸುತ್ತವೆ.

ಮನುಸ್ಮತಿಯು ಮೂರು ರೀತಿಯ ದರಗಳನ್ನು ಹೇಳಿದೆ. ಅವುಗಳೆಂದರೆ ಒಟ್ಟು ಉತ್ಪನ್ನದ ೧/೬, ೧/೮ ಮತ್ತು ೧/೧೨ ಭಾಗಗಳು ಬೃಹಸ್ಪತಿ ಮತ್ತು ಗೌತಮ ಸ್ಮೃತಿಕಾರರು ಕನಿಷ್ಟವೆಂದರೆ ಒಟ್ಟು ಉತ್ಪನ್ನದಲ್ಲಿ ೧/೧೦ರಷ್ಟು ಭಾಗವನ್ನು ಭೂಕಂದಾಯವೆಂದು ಸೂಚಿಸಿದ್ದಾರೆ. ಮನುಸ್ಮೃತಿಯ ವ್ಯಾಖ್ಯಾನಕಾರರಾದ ಮೇದಾತೀಥಿ, ಕಲ್ಲುಕಭಟ್ಟ ಮತ್ತು ಮಿತ್ರಮಿಶ್ರರು ಮನುಸ್ಮೃತಿಯು ಹೇಳಿದ ಕಂದಾಯ ದರಗಳನ್ನು ವಿರೋಧಿಸುವುದಿಲ್ಲ. ಆದರೆ ಕಂದಾಯವು ಮಣ್ಣಿನ ಅಂದರೆ ಭೂಮಿಯ ಸ್ವರೂಪ ಮತ್ತು ಫಲವತ್ತತೆಯನ್ನು ಆಧರಿಸಿ ವಿವಿಧ ದರಗಳಲ್ಲಿರಬೇಕೆಂದು ಅಭಿಪ್ರಾಯಿಸಿದ್ದಾರೆ. ಬೃಹಸ್ಪತಿಸ್ಮೃತಿ ಮತ್ತು ವಿಷ್ಣುಧರ್ಮೋತ್ತರಗಳು ಕೃಷಿ ಉತ್ಪನ್ನದಲ್ಲಿ ರಾಜನ ಪಾಲು ವಿವಿಧ ಋತುಗಳಲ್ಲಿ ಬೆಳೆಯುವ ಉತ್ಪನ್ನವನ್ನಾಧರಿಸಿರುತ್ತದೆ. ಅವುಗಳು ಬಂಜರು ಭೂಮಿಯ ಉತ್ಪನ್ನದಲ್ಲಿ ೧/೧೦ ಭಾಗ, ಮಳೆಗಾಲದ ಉತ್ಪನ್ನದಲ್ಲಿ ೧/೮ ಭಾಗ ಮತ್ತು ಶರತ್‌ ಋತುವಿನ ಉತ್ಪನ್ನದಲ್ಲಿ ೧/೬ ಭಾಗವೆಂದು ನಿಗದಿಸಿವೆ. ನಾರದ ಹಾಗೂ ವಿಷ್ಣು ಸ್ಮೃತಿಕಾರರು ಉತ್ಪನದ ೧/೬ ಭಾಗವನ್ನು ರಾಜನ ಪಾಲೆಂದು ಅಭಿಪ್ರಾಯಿಸಿದ್ದಾರೆ. ಕಾಳಿದಾಸನು ಕೂಡಾ ಇದನ್ನೇ ಅಭಿಪ್ರಾಯಿಸಿರುವನು. ಈ ಹಿನ್ನಲೆಯಲ್ಲಿ ರಾಜನನ್ನು ಷಡ್ಭಾಗಿನ್‌ ಎಂದು ಕರೆಯಲಾಗಿದೆ.

ಭೂಮಿಯ ಕೊಡುಗೆಗಳಿಗೆ ಸಂಬಂಧಿಸಿದ ಶಾಸನಗಳಲ್ಲಿ ಕೃಷಿ ಕ್ಷೇತ್ರದ ಮೇಲೆ ವಿಧಿಸಲಾದ ಹಲವು ತೆರಿಗೆಗಳ ಉಲ್ಲೇಖ ಕಂಡುಬರುತ್ತದೆ. ಅವುಗಳಲ್ಲಿ ಪ್ರಮುಖವಾದುದು ಭಾಗಭೋಗಕರ, ಇದನ್ನು ವಿವಿಧ ರೀತಿಯಲ್ಲಿ ಅರ್ಥೈಸಲಾಗಿದೆ. ಎ.ಎಸ್. ಅಲ್ಲೇಕ್‌ ಅವರು ಇದನ್ನು ಎರಡು ಭಾಗಗಳನ್ನಾಗಿ ವಿಭಾಗಿಸಿ, ಭಾಗಕರವೆಂದರೆ ಭೂಕಂದಾಯವೆಂದೂ, ಭೋಗಕರವೆಂದರೆ ರಾಜ ಅಥವಾ ಸ್ಥಳೀಯ ಅಧಿಕಾರಿಗೆ ಸಲ್ಲಿಸಬೇಕಾಗಿದ್ದ ಸಣ್ಣ ಪ್ರಮಾಣದ ತೆರಿಗೆಯೆಂದು ಅಭಿಪ್ರಾಯಿಸಿರುವರು. ಎಲ್. ಗೋಪಾಲ್‌ ಅವರು ಭಾಗಬೋಗಕರವೆಂದರೆ ಒಂದು ತೆರಿಗೆಯಲ್ಲ ಅದು ಭಾಗ, ಭೋಗ ಮತ್ತು ಕರ ಎಂಬ ಮೂರು ತೆರಿಗೆಗಳನ್ನು ಉಲ್ಲೇಖಿಸುತ್ತದೆ ಎಂದಿರುವರು. ಭಾಗ ಭೋಗ ಎಂಬ ತೆರಿಗೆಯು ರಜಪೂತ ರಾಜವಂಶಗಳ ಶಾಸನಗಳಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ. ಅಂದರೆ ಗುಪ್ತರ ಕಾಲದಿಂದ ಮಧ್ಯಕಾಲೀನದವರೆಗೆ ಈ ತೆರಿಗೆಯು ಅಸ್ತಿತ್ವದಲ್ಲಿ ಇದ್ದಿತೆನ್ನಬಹುದು. ಕರ ಎಂಬುದು ತೆರಿಗೆ ಎಂಬ ಅರ್ಥವನ್ನು ನೀಡುವುದಾದರೂ ಸಮುದ್ರಗುಪ್ತನ ಅಲಹಬಾದ್‌ ಶಾಸನವು ‘ಕರ’ ಎಂಬುದು ತೆರಿಗೆಗಳಲ್ಲಿ ಒಂದಾಗಿದ್ದಿತೆಂಬುದನ್ನು ಸ್ಪಷ್ಟಪಡಿಸಿದೆ.

ಕೃಷಿಕ್ಷೇತ್ರದ ಮೇಲಿನ ತೆರಿಗೆಗಳಲ್ಲಿ ಮತ್ತೊಂದು ಪ್ರಮುಖ ತೆರಿಗೆಯೆಂದರೆ ಹಿರಣ್ಯ ಎಂಬುದಾಗಿದೆ. ಇದರ ಅರ್ಥ ಚಿನ್ನವೆಂದು, ಆದರೆ ಘೋಷಾಲ್‌ ಅವರು, ಇದು ಕೆಲವು ವಿಶೇಷ ಬೆಳೆಗಳ ಮೇಲೆ ವಿಧಿಸುತ್ತಿದ್ದ ನಗದು ರೂಪದ ತೆರಿಗೆಯಾಗಿದೆ ಎಂದಿದ್ದಾರೆ. ಕ್ರಿ.ಶ. ೫೯೨ರ ಶಾಸನ ದಾಖಲೆಯೊಂದರಲ್ಲಿ ಕಬ್ಬಿನ ತೋಟವೊಂದರ ಮೇಲೆ ೩೨ ಬೆಳ್ಳಿ ನಾಣ್ಯಗಳು ಅದು ಧಾರ್ಮಿಕ ಉದ್ದೇಶವಾಗಿ ದಾನ ನೀಡಿದ ತೋಟವಾದರೆ ೨೧/೨ ಬೆಳ್ಳಿ ನಾಣ್ಯಗಳು ಅದೇ ಪ್ರಮಾಣದ ಶುಂಠಿ ಬೆಳೆಯುವ ಪ್ರದೇಶವಾದರೆ ೧೬ ಬೆಳ್ಳಿ ನಾಣ್ಯಗಳನ್ನು ತೆರಿಗೆಯ ದರವಾಗಿ ಸೂಚಿಸಲಾಗದೆ. ಇದರಿಂದ ಕೆಲವು ಬೆಳೆಗಳ ಮೇಲೆ ನಗದು ರೂಪದ ತೆರಿಗೆ ವಿಧಿಸುತ್ತಿದ್ದುದು ಸ್ಪಷ್ಟವಾಗುತ್ತದೆ. ಈ ಹಿನ್ನಲೆಯಲ್ಲಿ ಡಿ.ಎನ್. ಝೂ ಅವರು ಹಿರಣ್ಯ ಎಂಬುದನ್ನು ವಾಣಿಜ್ಯ ಬೆಳೆಗಳ ಮೇಲಿನ ತೆರಿಗೆ ಎಂದು ಅಭಿಪ್ರಾಯಪಟ್ಟಿರುವರು. ಗುಪ್ತರ ಕಾಲದ ಅಮರಕೋಶದಲ್ಲಿ ಭಾಗಧೇಯ, ಕರ, ಬಲಿ ಮತ್ತು ಶುಲ್ಕಗಳನ್ನು ತೆರಿಗೆಗಳೆಂದು ಅರ್ಥೈಸಲಾಗಿದೆ.

ಗುಪ್ತರ ನಂತರದ ಕಾಲದಲ್ಲಿ ಇನ್ನೆರಡು ಮುಖ್ಯ ತೆರಿಗೆಗಳು ಕಂಡುಬರುತ್ತವೆ. ಅವುಗಳೆಂದರೆ, ಉದ್ರಂಗ ಮತ್ತು ಉಪರಿಕರ ಮೊದಲನೆಯದನ್ನು ಖಾಯಂ ಕೃಷಿಕರ ಮೇಲೆ ವಿಧಿಸುತ್ತಿದ್ದ ತೆರಿಗೆಯಾದರೆ, ಎರಡನೆಯದನ್ನು ತಾತ್ಕಾಲಿಕವಾಗಿ ಕೃಷಿ ಮಾಡುವವರ ಮೆಲೆ ವಿಧಿಸುತ್ತಿದ್ದ ತೆರಿಗೆಯೆಂದು ಅರ್ಥೈಸಲಾಗಿದೆ. ಇವೆರಡು ರಾಜ್ಯವು ಕೃಷಿಕ್ಷೇತ್ರ ಮೇಲೆ ವಿಧಿಸಿದ್ದ ಹೆಚ್ಚುವರಿ ತೆರಿಗೆಗಳಾಗಿದ್ದವು.

ಭೂಕಂದಾಯ ಅಥವಾ ಕೃಷಿ ಉತ್ಪನ್ನದ ಮೇಲಿನ ತೆರಿಗೆಯಲ್ಲದೆ, ಹಲಾದಂಡ (ನೇಗಿಲ ಮೇಲಿನ ತೆರಿಗೆ) ಸಾಕು ಪ್ರಾಣಿಗಳ ಮೇವಿಗಾಗಿ ಬಳಸುವ ಪ್ರದೇಶದ ಮೇಲೆ ತೆರಿಗೆ, ಕೆಲವು ಪ್ರದೇಶಗಳಲ್ಲಿ ಕೆಲವು ಬೆಳೆಗಳ ಮೇಲೆ ವಿಶೇಷ ತೆರಿಗೆಗಳನ್ನು ವಿಧಿಸಲಾಗಿದ್ದಿತು. ಧರ್ಮಶಾಸ್ತ್ರಗಳಲ್ಲಿ ಮರಗಳು, ಸುವಾಸನಾ ವಸ್ತುಗಳು, ಔಷಧಿ ವಸ್ತುಗಳು, ಹೂವು, ಬೇರು, ಹಣ್ಣು, ಎಲೆ, ತರಕಾರಿ ಮತ್ತು ಹುಲ್ಲಿನ ಮೇಳೂ ರಾಜನು ತೆರಿಗೆ ವಿಧಿಸಬಹುದೆಂದು ಹೇಳಲಾಗದೆ. ಭೂಮಿಯ ಗಾತ್ರ ಮತ್ತು ಗುಣಮಟ್ಟ ಆಧರಿಸಿ ತೆರಿಗೆ ವಿಧಿಸುತ್ತಿದ್ದುದು ಸ್ಪಷ್ಟವಾಗಿದೆ. ಸಾಮುದಾಯಿಕವಾಗಿ ಅಥವಾ ಗ್ರಾಮಗಳ ಮೇಲೆ ಒಟ್ಟಾರೆಯಾಗಿ ತೆರಿಗೆಯನ್ನು ವಿಧಿಸುತ್ತಿರಲಿಲ್ಲ. ಪ್ರತಿಯೋರ್ವನ ಭೂಮಿಯ ಮೇಲೆ ಪ್ರತ್ಯೇಕವಾಗಿ ತೆರಿಗೆ ನಿಗದಿಪಡಿಸಲಾಗುತಿತ್ತು. ರೈತರು ಕೆಲವೊಮ್ಮೆ ಮಧ್ಯವರ್ತಿಗಳ ಮೂಲಕ, ಕೆಲವೊಮ್ಮೆ ನೇರವಾಗಿ, ನಗದು ಇಲ್ಲವೇ ಧಾನ್ಯಗಳ ರೂಪದಲ್ಲಿ ತೆರಿಗೆಯನ್ನು ಸಲ್ಲಿಸುತ್ತಿದ್ದರು.

ಕ್ರಿ.ಶ. ಏಳನೆಯ ಶತಮಾನದ ವೇಳೆಗೆ ಭಾರತಕ್ಕೆ ಭೇಟಿ ನೀಡಿದ ಚೀನಿ ಪ್ರವಾಸಿ ಹ್ಯೂಯೆನ್‌ತ್ಸಾಂಗನು, ಹರ್ಷನ ಕಾಲದಲ್ಲಿ ಕಂದಾಯವು ರೈತರಿಗೆ ಹೊರೆಯಾಗಿರಲಿಲ್ಲ ಮತ್ತು ಪ್ರಜೆಗಳಿಂದ ಆಗಾಗ್ಗೆ ಬಲತ್ಕಾರದ ಸೇವೆಯನ್ನು (ಬಿಟ್ಟಿ ಅಥವಾ ವೃಷ್ಟಿ) ರಾಜ್ಯವು ಪಡೆಯುತ್ತಿದ್ದಿತೆಂದು ಉಲ್ಲೇಖಿಸಿದ್ದಾನೆ. ಅರಬ್‌ ಪ್ರವಾಸಿ ಅಲ್‌ಇದ್ರೀಸಿಯು, ರಾಷ್ಟ್ರಕೂಟರ ರಾಜ್ಯದಲ್ಲಿ ತೆರಿಗೆಯು ರೈತರಿಗೆ ಹೊರೆಯಾಗಿದ್ದಿತು. ಗುಜರಾತ್‌ನಲ್ಲಿ ಕೃಷಿ ಉತ್ಪನ್ನಗಳ ಮೇಲೆ ಪ್ರಜೆಗಳು ಹೆಚ್ಚಿನ ಕಂದಾಯ ನೀಡುತ್ತಿದ್ದರೆಂದು ಹೇಳಿರುವನು.

ಪ್ರಾಚೀನ ಭಾರತದ ಸಂದರ್ಭದಲ್ಲಿನ ಕೃಷಿ ಉತ್ಪನ್ನಗಳ ಮತ್ಟ ಮತ್ತು ಬೆಲೆಗಳನ್ನು ಕುರಿತು ಯಾವುದೇ ಸ್ಪಷ್ಟ ಮಾಹಿತಿಯು ದೊರಕುವುದಿಲ್ಲ. ಕಲ್ಹಣನ ಕೃತಿ ರಾಜತರಂಗಿಣಿಯಲ್ಲಿ ಮಾತ್ರ ಕೆಲವು ಮುಖ್ಯ ವಸ್ತುಗಳ ಬೆಲೆಗಳನ್ನು ಉಲ್ಲೇಖಿಸಲಾಗಿದೆ. ಆದರೆ ರಾಜ್ಯದ ಹೆಚ್ಚಿದ ಆರ್ಥಿಕ ಬೇಡಿಕೆಯಿಂದ  ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸಿದ್ದುದು ಶಾಸನಗಳಿಂದ ಸ್ಪಷ್ಟವಾಗುತ್ತದೆ. ಗುಪ್ತರ ಕಾಲದಲ್ಲಿ ಕಬ್ಬು, ಹತ್ತಿ, ಅಗಸೆನರು ಮತ್ತು ಅಡಿಕೆಯ ಮೇಲೆ ತೆರಿಗೆಯಿರಲಿಲ್ಲ. ಆದರೆ ನಂತರದ ಕಾಲದಲ್ಲಿ ಈ ಉತ್ಪನ್ನಗಳ ಮೇಳೂ ತೆರಿಗೆ ವಿಧಿಸಿದ್ದನ್ನು ಶಾಸನಾಧಾರಗಳು ಸ್ಪಷ್ಟಪಡಿಸಿವೆ. ಚಾಹಮಾನ ದೊರೆಗಳು ಗೋಧಿಯ ಮೇಲೆ ಹೆಚ್ಚುವರಿ ತೆರಿಗೆಳನ್ನು ವಿಧಿಸಿದ್ದರು. ಇಂತಹ ಬೆಳವಣಿಗೆಗಳು ಸಹಜವಾಗಿ ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಲು ಕಾರಣವಾಗಿರುತ್ತವೆ.

ಅತೃಪ್ತಿ ಮತ್ತು ಪ್ರತಿಭಟನೆ

ಈಗಾಗಲೇ ಗಮನಿಸಿರುವಂತೆ ಗುಪ್ತರ ಯುಗದಿಂದ ಕೃಷಿ ಕ್ಷೇತ್ರದ ಮೇಲೆ ಒತ್ತಡ ಹೆಚ್ಚಾಯಿತು. ಆರ್.ಎಸ್‌.ಶರ್ಮ ಅವರು ಗುರುತಿಸಿರುವಂತೆ, ಭೂಮಿಯ ಒಡೆತನದಲ್ಲಿ ಒಂದು ಮುಖ್ಯ ಬೆಳವಣಿಗೆಯು ಕಂಡುಬಂದಿತು. ಅದೆಂದರೆ ಬ್ರಾಹ್ಮಣರಿಗೆ ನೀಡಲಾದ ಭೂ ಕೊಡುಗೆಗಳಿಂದ ಆ ವರ್ಗವು ಭೂಮಾಲೀಕರಾದುದು. ಇದು ಹೊಸ ಪ್ರದೇಶಗಳಲ್ಲಿ ಕೃಷಿಯ ವಿಸ್ತರಣೆಗೆ ಕಾರಣವಾಯಿತಾದರೂ ಕೃಷಿಕನ ಸ್ಥಾನಮಾನವನ್ನು ಕುಗ್ಗುವಂತೆ ಮಾಡಿತು. ನಂತರ ಪ್ರಮುಖ ಅಧಿಕಾರಿಗಳಿಗೆ, ಸೇನೆಯ ಮುಖಂಡರಿಗೆ ಇದೇ ರೀತಿ ಭೂ ಕೊಡುಗೆಗಳನ್ನು ನೀಡಿದುದರಿಂದ ಕೃಷಿ ಕ್ಷೇತ್ರದ ಮೇಲೆ ದುಷ್ಟರಿಣಾಮ ಬೀರಿತು. ಕೃಷಿ ಸಂಬಂಧಿತ ಸಂಬಂಧಗಳು ಬದಲಾದವು. ಭೂಮಾಲೀಕರ ನಡುವೆ, ರಾಜ ಮತ್ತು ಭೂಮಾಲೀಕರ ನಡುವೆ ಹಾಗೂ ಭೂಮಾಲೀಕರು ಮತ್ತು ರೈತರ ನಡುವಿನ ಸಂಬಂಧಗಳು ಸಂಘರ್ಷದ ಸ್ವರೂಪ ಪಡೆದವು. ಭೂ ಸಂಬಂಧಿತ ವಿವಾದಗಳನ್ನು ಬಗೆಹರಿಸಲು ಧರ್ಮಶಾಸ್ತ್ರಗಳಲ್ಲಿ ಹೊಸ ನಿಯಮಗಳನ್ನು ಪರಿಚಯಿಸಲಾಯಿತು. ಒತ್ತಾಯದ ಕಂದಾಯ ವಸೂಲಿಗಾಗಿ ರಾಜರು ಸಾಮಂತರ ಮೇಲೆ, ಸಾಮಂತರು ಅಗ್ರಹಾರಗಳ ಮೇಲೆ ದಾಳಿ ಮಾಡಿರುವ ಪ್ರಕರಣಗಳ ಉಲ್ಲೇಖವು ಕ್ರಿ.ಶ. ಹನ್ನೆರಡು-ಹದಿಮೂರನೆಯ ಶತಮಾನಗಳ ಶಾಸನಗಳಲ್ಲಿ ಕಂಡು ಬರುತ್ತವೆ. ರಾಜ್ಯದ ದಮನಕಾರಿ ತೆರಿಗೆ ನೀತಿಯ ವಿರುದ್ಧ ವಿಜಯನಗರ ಸಾಮ್ರಾಜ್ಯದ ಆಡಳಿತದ ವೇಳೆಯಲ್ಲಿ ತಮಿಳುನಾಡಿನ ತಂಜಾವೂರು ಜಿಲ್ಲೆ ಮಾಯಾವರಂ ತಾಲ್ಲೂಕಿನಲ್ಲಿ ರೈತರು ಮತ್ತು ಕುಶ ಲಕರ್ಮಿಗಳು ಒಂದಾಗಿ ಪ್ರತಿಭಟಿಸಿರುವುದನ್ನು ಶಾಸನವೊಂದು ಉಲ್ಲೇಖಿಸಿದೆ. ರೈತರು ದಾವೆಯನ್ನು ಹೂಡವ ಮೂಲಕ ರಾಜರನ್ನು ಕಂಡು ದೂರುಗಳನ್ನು ಹೇಳಿಕೊಳ್ಳುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು. ಇದು ರೈತರ ಪ್ರತಿಭಟನೆಯ ಒಂದು ವಿಧಾನವಾಗಿದ್ದಿತು. ಮತ್ತೊಂದು ವಿಧವೆಂದರೆ ಆತ್ಮ ಹತ್ಯೆ. ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಇಂತಹ ಪ್ರಕರಣಗಳು ಕಂಡುಬರುತ್ತವೆ. ಎಂದು ಆರ್.ಎಸ್. ಶರ್ಮ ಅವರು ಹೇಳಿರುವರು.

ಕಾಶ್ಮೀರದಲ್ಲಿ ರಾಜರು ಬಲವಂತವಾಗಿ ತೆರಿಗೆ ವಸೂಲಿ ಮಾಡುತ್ತಿದ್ದುದ್ದು ಮತ್ತು ಹೊಸ ತೆರಿಗೆಗಳನ್ನು ಹೇರಿದುದನ್ನು ವಿರೋಧಿಸಿ ಹಲವು ಬಾರಿ ಬ್ರಾಹ್ಮಣರು ಉಪವಾಸ ಮಾಡಿ ಪ್ರತಿಭಟಿಸಿರುವುದನ್ನು ಕಲ್ಹಣನು ಉಲ್ಲೇಖಿಸಿರುವನು. ಆದರೆ ಉಳಿದಡೆ ಬ್ರಾಹ್ಮಣರು ಇಂತಹ ಪ್ರತಿಭಟನೆಯ ನಾಯಕತ್ವವನ್ನು ವಹಿಸಿಕೊಂಡಿದ್ದು ಕಂಡುಬರುವುದಿಲ್ಲ. ಸಮಾಜದಲ್ಲಿ ಪ್ರಭಾವಿತರಾದ, ಧೈರ್ಯವುಳ್ಳ ಬ್ರಾಹ್ಮಣರನ್ನು ಭೂಮಿ ಸ್ವರೂಪದ ಕೊಡುಗೆಗಳು  ಮತ್ತು ಉನ್ನತ ಹುದ್ದೆಗಳು ಮೌನವಾಗಿಸಿರಬಹದು ಎಂದು ತರ್ಕಿಸಬಹುದೇ? ಉಳಿದಂತೆ ಅಂತ್ಯಜರು ಮತ್ತು ಅಸೃಶ್ಯರು ಸಾಮಾಜಿಕ ವ್ಯವಸ್ಥೆಯಲ್ಲಿ ಉನ್ನತ ಸ್ತರದಲ್ಲಾಗಲೀ, ಅಧಿಕಾರದಲ್ಲಾಗಲೀ ಇರಲಿಲ್ಲ ಎಂದು ಬಿ.ಪಿ ಮಜುಂದರ್ ಅವರು ಅಭಿಪ್ರಾಯಿಸಿದ್ದಾರೆ. ಅಂದರೆ ಈ ಎರಡು  ವರ್ಗಗಳು ಪ್ರತಿಭಟಿಸುವ ಸ್ಥಿತಿಯಲ್ಲಿ ಇರಲಿಲ್ಲ ಎಂಬುದು ಇದರ ಅರ್ಥವಾಗಿದೆ. ಅಲ್ಲದೆ ತೆರಿಗೆಯ ಹೆಚ್ಚಳದಿಂದಾಗಿ ಜನಸಮೂಹವು ನೆರೆರಾಜರ ದಾಳಿಗಳಿಗೆ ಉದಾಸೀನವಾಗಿದ್ದಿತು ಹಾಗೂ ಟರ್ಕೋ-ಆಫ್ಗನ್‌ ದಾಳಿಯ ಸಂದರ್ಭದಲ್ಲಿ ಕೆಲಮಟ್ಟಿಗೆ ಲಕ್ಷ್ಯ ನೀಡಿತೆಂಬುದು ಕೂಡಾ ಅವರ ಅಭಿಪ್ರಾಯವಾಗಿದೆ. ಅಂದರೆ ರಾಜ್ಯದ ತೆರಿಗೆ ನೀತಿಯು ಜನ ಸಮೂಹದಲ್ಲಿ ರಾಜೀಯ ಬೆಳವಣಿಗೆಗಳ ಬಗ್ಗೆ ನಿರಾಸಕ್ತಿಯನ್ನುಂಟು ಮಾಡಿದ್ದಿತು.

ಕೃಷಿಕ್ಷೇತ್ರದ ಅಧ್ಯಯನವೆಂದರೆ ಕೃಷಿಯ ಸ್ವರೂಪ, ಸಲಕರಣೆಗಳು, ಉತ್ಪನ್ನಗಳು, ಗೊಬ್ಬರ ಮತ್ತು ಪೋಷಣೆಯ ವಿಧಾನ, ನೀರಾವರಿ ವ್ಯವಸ್ಥೆಯ ಅಧ್ಯಯನವು ಮಾತ್ರವಲ್ಲ ಕೃಷಿ ಕ್ಷೇತ್ರ ಕುರಿತು ಆಡಳಿತ ವರ್ಗದ ನೀತಿ ಮತ್ತು ಕೃಷಿ ಕ್ಷೇತ್ರದ ಮೇಲಿನ ತೆರಿಗೆಗಳನ್ನು ಕೂಡಾ ಒಳಗೊಳ್ಳುತ್ತವೆ. ಈಗಾಗಲೇ ಗಮನಿಸಿದಂತೆ ಗುಪ್ತರ ಕಾಲದಿಂದ ಕ್ರಿ.ಶ. ಹನ್ನೆರಡನೆಯ ಶತಮಾನದವರೆಗಿನ ಸಂದರ್ಭದಲ್ಲಿ ಕೃಷಿಸಲಕರಣೆ ಹಾಗೂ ನೀರಾವರಿಯ ಸ್ವರೂಪದಲ್ಲಾದ ಬದಲವಣೆಗಳಿಂದ ಕೃಷಿಯ ವಿಸ್ತರಣೆಯಾಗಿದೆ. ಅದೇ ರೀತಿ ಆಡಳಿತ ನೀತಿಯ ಪರಿಣಾಮದಿಂದಾಗಿ ಈ ಕ್ಷೇತ್ರದ ಮೇಲೆ ಒತ್ತಡ ಹೆಚ್ಚಿದೆ. ಕೃಷಿಯ ಮೇಲೆ ಹೆಚ್ಚಿದ ತೆರಿಗೆಗಳು ಮತ್ತು ಅಸ್ತಿತ್ವಕ್ಕೆ ಬಂದ ಭೂಮಾಲೀಕ ವರ್ಗ ಈ ಕ್ಷೇತ್ರದ ಮೇಲೆ ದುಷ್ಟರಿಣಾಮವನ್ನು ಬೀರಿರುವುದನ್ನು ಹಲವು ಅಧ್ಯಯನಗಳು ಸ್ಪಷ್ಟಪಡಿಸಿವೆ.

ಪ್ರಾಚೀನ ಭಾರತದಲ್ಲಿ ಸಾಹಿತ್ಯ

ಈ ಅಧ್ಯಾಯದಲ್ಲಿ ಗುಪ್ತರ ಯುಗದಿಂದ ಸುಮಾರು ಹನ್ನೆರಡನೆಯ ಶತಮಾನದವರೆಗಿನ ಅವಧಿಯಲ್ಲಿ ಆದ ಸಾಹಿತ್ಯ ಕ್ಷೇತ್ರದಲ್ಲಿನ ಬೆಳವಣಿಗೆಯನ್ನು ವಿವರಿಸಲಾಗಿದೆ. ಗುಪ್ತರ ಕಾಲದಲ್ಲಿ ವಿಶಾಲವಾದ ಸಾಮ್ರಾಜ್ಯ ಮತ್ತು ರಾಜಕೀಯ ಏಕತೆಯ ಸ್ಥಾಪನೆಯಾದುದರಿಂದ ಹಾಗೂ ನಂತರದಲ್ಲಿ ಪ್ರಾದೇಶಿಕ ರಾಜ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಅಸ್ತಿತ್ವಕ್ಕೆ ಬಂದಿದುದರಿಂದ ರಾಜಾಶ್ರಯದ ಪ್ರಮಾಣವು ಹೆಚ್ಚಿ, ಅಧಿಕ ಸಂಖ್ಯೆಯ ಕೃತಿಗಳು ರಚನೆಯಾದವು. ಪುರಾಣಗಳು, ಧರ್ಮಶಾಸ್ತ್ರಗಳು, ಕಾವ್ಯ ಮತ್ತು ನಾಟಕಗಳಲ್ಲಿದೆ, ವ್ಯಾಕರಣ, ಖಗೋಳಶಾಸ್ತ್ರ, ವೈದ್ಯಕೀಯ, ಗಣಿತ ಹಾಗೂ ಜ್ಯೋತಿಷ್ಯಶಾಸ್ತ್ರ  ಮೊದಲಾದ ಕ್ಷೇತ್ರಗಳನ್ನೊಳಗೊಂಡಂತೆ ಉತ್ತಮವಾದ ಕೃತಿಗಳು ಪ್ರಕಟಗೊಂಡವು. ಈ ಅವಧಿಯಲ್ಲಿ ಮುಖ್ಯವಾಗಿ ಸಂಸ್ಕೃತ ಸಾಹಿತ್ಯದಲ್ಲಿ ಗಮನಾರ್ಹ ಬೆಳವಣಿಗೆಯು ಕಂಡುಬಂದಿದೆ. ಜೊತೆಗೆ ದಕ್ಷಿಣ ಭಾರತದಲ್ಲಿಯೂ ಸಂಸ್ಕೃತ ಸಾಹಿತ್ಯ ರಚನೆ ವಿಶೇಷವಾಗಿ ಅಭಿವೃದ್ಧಿಗೊಂಡಿತು. ಪ್ರಾಕೃತ ಭಾಷೆಯು ಪೂರ್ಣವಾಗಿ ಕಣ್ಮರೆಯಾಗಲಿಲ್ಲ. ಪ್ರಾಕೃತ, ಪಾಳಿ ಮತ್ತು ಅಪಭ್ರಂಶ ಭಾಷೆಯಲ್ಲಿ ಹಲವು ಕೃತಿಗಳು ರಚನೆಯಾದವು. ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಕೂಡಾ ಮಹತ್ವದ ಕೃತಿಗಳು ರಚಿವಾದವು. ಸಂಸ್ಕೃತ ಸಾಹಿತ್ಯದ ಪ್ರಭಾವವು ಪ್ರಾದೇಶಿಕ ಭಾಷಾ ಸಾಹಿತ್ಯಗಳ ಮೇಲೆ ಆಗಿರುವುದನ್ನು ಈ ಅವಧಿಯಲ್ಲಿ ಗಮನಿಸಬಹದು. ಕಾವ್ಯದಲ್ಲಿ ಚಂಪೂಶೈಲಿ, ಸಂಗ್ರಹಕಾವ್ಯ ಪ್ರಕರ, ಅಲಂಕಾರಶಾಸ್ತ್ರದ ಬೆಳವಣಿಗೆ ಗುಪ್ತರ ನಂತರದ ಕಾಲದಲ್ಲಿ ಸಂಸ್ಕೃತ ಸಾಹಿತ್ಯಕ್ಷೇತ್ರದಲ್ಲಿ ಕಂಡುಬರುವ ಗಮನಾರ್ಹ ಅಂಶಗಳಾಗಿವೆ.

ಸಂಸ್ಕೃತ ಸಾಹಿತ್ಯ

ಗುಪ್ತರ ಕಾಲದಲ್ಲಿ ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆ ಕಂಡು ಬರುತ್ತದೆ. ಸಾಹತ್ಯದ ಪದ್ಯ, ಗದ್ಯ ಮತ್ತು ನಟಕ ಪ್ರಕಾರಗಳಲ್ಲಿಯೂ ಶ್ರೇಷ್ಠ ಕೃತಿಗಳು ರಚಿಸಲ್ಪಟ್ಟವು. ಅದರಲ್ಲಿಯೂ ಕಾವ್ಯ ಸೈಲಿಯು ಪರಿಪಕ್ವಗೊಂಡಿತು. ಸಂಸ್ಕೃತವು ಶಾಸನ, ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾಕೃತದ ಸ್ಥಾನವನ್ನಾಕ್ರಮಿಸಿತು. ಈ ಹಿನ್ನಲೆಯಲ್ಲಿ ಗುಪ್ತರ ಯುಗವನ್ನು ಸಂಸ್ಕೃತ ಸಾಹಿತ್ಯದ ಸುವರ್ಣಯುಗವೆಂದು ಭಾವಿಸಲಾಗಿದೆ. ಗುಪ್ತರ ಕಾಲದಲ್ಲಿಯೂ ವೈದಿಕ ಸಾಹಿತ್ಯ ರಚನೆಯು ಮುಂದುವರೆದಿದೆ. ಮಹಾಕಾವ್ಯಗಳಾದ ರಾಮಾಯಾಣ ಮತ್ತು ಮಹಾಭರತಗಳು ಈಗಿನ ಸ್ವರೂಪವನ್ನು ಈ ಕಾಲದಲ್ಲಿ ಹೊಂದಿದವು. ಬಹುತೇಕ ಪುರಾಣಗಳು ಪುನರಚಿಸಲ್ಪಟ್ಟವು. ಸಾಮಾನ್ಯವಾಗಿ ಪುರಾಣಗಳು ಐದು ಲಕ್ಷಣಗಳನ್ನು ಅಥವ ಐದು ವಿಷಯಗಳನ್ನು ಒಳಗೊಂಡಿರುತ್ತವೆ. ಅದರೆ ಈ ಅವಧಿಯಲ್ಲಿ ಪುರಾಣಗಳು ಈ ವಿಷಯ ವ್ಯಾಪ್ತಿಯ ಮಿತಿಯನ್ನು ದಾಟಿ ಅನೇಕ ಲೌಕಿಕ ವಿಷಯಗಳನ್ನು, ಧರ್ಮಶಾಸ್ತ್ರಗಳಿಗೆ ಸಂಬಂಧಿಸಿದ ವಿಷಯಗಳು, ದೇವರ ಪೂಜಾವಿಧಾನ, ತಾತ್ವಿಕ ವಿಚಾರಗಳು ಮೊದಲಾದ ವಿಷಯಗಳನ್ನು ತಮ್ಮ ವ್ಯಾಪ್ತಿಗೆ ತೆಗೆದುಕೊಂಡಿವೆ. ಅಗ್ನಿಪುರಾಣದಲ್ಲಿ ಖಗೋಳಶಾಸ್ತ್ರ, ಆಯುರ್ವೇದ, ವ್ಯಾಕರಣ, ಜ್ಯೋತಿಷ್ಯ, ರಾಜನೀತಿ, ವಾಸ್ತುಶಿಲ್ಪ, ಯುದ್ಧವಿಚಾರಗಳು, ವೈದ್ಯಕೀಯ ಮೊದಲಾದ ವಿಷಯಗಳು ಸೇರ್ಪಡೆಯಾಗಿವೆ. ವಿಷ್ಣುಧರ್ಮೋತ್ತರ ಪುರಾಣವು ನೃತ್ಯ, ಚಿತ್ರಕಲೆ, ಶಿಲ್ಪಕಲೆ ವಿಚಾರಗಳನ್ನು ಹಾಗೂ ಗರುಡ ಪುರಾಣವು ಸುಗಂಧದ್ರವ್ಯ ಮತ್ತು ವಜ್ರದ ವಿಚಾರಗಳನ್ನು ಒಳಗೊಂಡಿವೆ. ಮತ್ಸ್ಯ, ವಾಯು, ಬ್ರಹ್ಮಾಂಡ, ಭವಿಷ್ಯ ವಿಷ್ಣು ಮತ್ತು ಗರುಡ ಪುರಾಣಗಳು ಕ್ರಿಸ್ತಶಕ ನಾಲ್ಕರಿಂದ ಏಳನೆಯ ಶತಮಾನದ ಸಂದರ್ಭದಲ್ಲಿ ಈಗಿನ ಸ್ವರೂಪ ಪಡೆದಿವೆ. ಮುಖ್ಯ ಪುರಾಣಗಳಾದ ವಾಯು, ಬ್ರಹ್ಮಾಂಡ, ವಿಷ್ಣು ಮತ್ತು ಮತ್ಸ್ಯ ಪುರಾಣಗಳಲ್ಲಿ ಪ್ರಾಚೀನ ರಾಜವಂಶಗಳ ವಂಶಾವಳಿಗಳ ವಿವರಗಳಿವೆ. ಕ್ರಿ.ಶ. ೮೦೦ ರಿಂದ ೧೦೦೦ ಅವಧಿಯಲ್ಲಿ ಕೂಡಾ ಪುರಾಣಗಳು ಪರಿಷ್ಕರಣೆಯಾಗಿವೆ. ಈ ಅವಧಿಯಲ್ಲಿ ಲಿಂಗ ಪುರಾಣಕ್ಕೆ ಲಿಂಗಪ್ರತಿಷ್ಟೆ, ಪಾಶುಪತ ವೃತ, ಪಂಚಾಕ್ಷರಿ ಮಂತ್ರ ಮೊದಲಾದ ವಿಚಾರಗಳು ವರಾಹ ಪುರಾಣಕ್ಕೆ ತೀರ್ಥಕ್ಷೇತ್ರ, ದೀಕ್ಷಾ, ತಪಸ್ಸು, ಅಂತ್ಯಸಂಸ್ಕಾರ ಮೊದಲದ ವಿಚಾರಗಳು, ವಾಮನ ಪುರಾಣಕ್ಕೆ ವರ್ಣಾಶ್ರಮ ಧರ್ಮದ ವಿಚಾರಗಳು, ವಿವಿಧ ವ್ರತಗಳು, ವಿಷ್ಣು ಪೂಜೆ ಮೊದಲಾದ ವಿಚಾರಗಳು ಸೇರ್ಪಡೆಯಾಗಿವೆ.

ಧರ್ಮಶಾಸ್ತ್ರಗಳಲ್ಲಿ ಯಾಜ್ಞವಲ್ಕ್ಯ ಸ್ಮೃತಿ ಮತ್ತು ನಾರದ ಸ್ಮೃತಿಗಳು ಗುಪ್ತರ ಯುಗದ ಪ್ರಧಾನ ರಚನೆಗಳಾಗಿವೆ. ಪರಾಶರ, ಕಾತ್ಯಾಯನ, ಪಿತಾಮಹ, ಪುಲಸ್ತ್ಯ, ವ್ಯಾಸ, ಹರಿತ ಸ್ಮೃತಿಗಳು ಇವುಗಳು ಗುಪ್ತರ ಕಾಲದಲ್ಲಿ ರಚನೆಯಾಗಿ ನಂತರದ ಕಾಲದಲ್ಲಿ ಪರಿಷ್ಕರಿಸಲ್ಪಟ್ಟವು. ಒಂದು ಗಮನಾರ್ಹ ಅಂಶವೆಂದರೆ ಪ್ರಾಚೀನ ಭಾರತದ ಸಂದರ್ಭದಲ್ಲಿ ಸ್ಮೃತಿಗಳ ಮೆಲೆ ಭಾಷ್ಯಗಳ ರಚನೆಯಾದುದು. ಅಸಹಾಯ, ಮೇಧಾತೀರ್ಥ, ಕಲ್ಲುಕಭಟ್ಟ, ವಿಜ್ಞಾನೇಶ್ವರ ಮೊದಲಾದವರು ಭಾಷ್ಯಕಾರರಲ್ಲಿ ಪ್ರಮುಖರಾಗಿದ್ದಾರೆ. ಎಂಟನೆಯ ಶತಮಾನದ ಆರಂಭದಲ್ಲಿ ಕಾಮಂದಕನು ನೀತಿಸಾರವನ್ನು ರಚಿಸಿದ್ದಾನೆ. ಇದು ಗುಪ್ತರಯುಗ ಮತ್ತು ನಂತರದ ಅವಧಿಗೆ ಸೇರಿದ ಒಂದೇ ಒಂದು ಅರ್ಥಶಾಸ್ತ್ರ ಗ್ರಂಥವಾಗಿದೆ.

ತತ್ವಶಾಸ್ತ್ರದ ಕ್ಷೇತ್ರದಲ್ಲಿ ಗಮನಾರ್ಹವಾದ ಕೊಡುಗೆಗಳು ಬಂದಿವೆ. ಸಾಂಖ್ಯತತ್ವದ ಅತ್ಯಂತ ಪ್ರಾಚೀನ ಗ್ರಂಥ ಈಶ್ವರ ಕೃಷ್ಣನ ಸಾಂಖ್ಯಕಾರಿಕೆ, ಇದರಲ್ಲಿ ಸಂಖ್ಯಾಸಿದ್ಧಾಂತದ ಪ್ರತಿಪಾದನೆಯಿದೆ. ಇದರ ಮೇಲೆ ವಾಚಸ್ಪತಿಯು ತತ್ವಕೌಮುದಿ ಮತ್ತು  ತತ್ವಶಾರದೀ ಎಂಬ ಭಾಷ್ಯಗಳನ್ನು ರಚಿಸಿರುವನು. ಪತಾಂಜಲಿಯ ಯೋಗಸೂತ್ರದ ಮೇಲೆ ವ್ಯಾಸನು ಭಾಷ್ಯವನ್ನು ರಚಿಸಿದರೆ ವಾಚಸ್ಪತಿಯು ಈ ಭಾಷ್ಯದ ಮೇಲೆ ತತ್ವವೈಶಾರಧೀ ಎಂಬ ಟೀಕೆಯನ್ನು ಬರೆದಿರುವನು. ಯೋಗ ಸೂತ್ರದ ಮೇಲೆ ಹನ್ನೊಂದನೆ ಶತಮಾನದಲ್ಲಿ ಬೋಜನೆಂಬಾತನು ರಾಜಮಾರ್ತಾಂಡ ಎಂಬ ಮತ್ತೊಂದು ಭಾಷ್ಯವನ್ನು ಬರೆದಿರುವನು. ನ್ಯಾಯಸೂತ್ರಕ್ಕೆ ಸಂಬಂಧಿಸಿದಂತೆ, ಉದ್ಯೋತಕನು ನ್ಯಾಯವಾರ್ತಿಕ, ಧರ್ಮ ಕೀತಿರ್ಯಯು ನ್ಯಾಯವಿಂದು ಜೈನ ಕವಿ ದಿವಾಕರನು ನ್ಯಾಯಾವತಾರ ಮತ್ತು ಮಾಣಿಕ್ಯ ನಂದಿಯೆಂಬಾತನು ಪರೀಕ್ಷಾ ಮುಖಸೂತ್ರ ಎಂಬ ಕೃತಿಗಳನ್ನು ರಚಿಸಿರುವರು. ಇದರಲ್ಲಿ ನ್ಯಾಯವಾರ್ತಿಕದ ಮೇಲೆ ವಾಚಸ್ಪತಿ ಮಿಶ್ರನು ನ್ಯಾಯಸೂಚಿ ನಿಬಂಧ ಮತ್ತು ನ್ಯಾಯಸೂತ್ರೋದ್ಧಾರ ಎಂಬ ಟೀಕೆಗಳನ್ನು, ನ್ಯಾಯ ಬಿಂದುವಿನ ಮೇಲೆ ಧರ್ಮೋತ್ಕರ ಮತ್ತು ಮಲ್ಲವಾದಿ ಎಂಬುವವರು ಟೀಕೆಗಳನ್ನು ಬರೆದಿರುವರು. ಇಲ್ಲಿ ಹೆಸರಿಸಲಾದ ವಾಚಸ್ಪತಿಯು ಒಂಬತ್ತನೆಯ ಶತಮಾನಕ್ಕೆ ಸೇರಿದವನಾಗಿದ್ದು, ಈತನು ಮಂಡನಮಿಶ್ರರ ವಿಧಿವಿವೇಕದ ಮೇಲೆ ನ್ಯಾಯಕಣಿಕಾ ಎಂಬ ಟೀಕು ಮತ್ತು ಭಟ್ಟಿ ಮೀಮಾಂಸೆಯ ಮೇಲೆ ತತ್ವಬಿಂಧು ಎಂಬ ಕೃತಿಯನ್ನು ಕೂಡಾ ರಚಿಸಿರುವನು. ನ್ಯಾಯವಾರ್ತಿಕದ ಮೇಲೆ ತತ್ವಶುದ್ಧಿ ಎಂಬ ವ್ಯಾಖ್ಯಾನವನ್ನು ಉದಯನು ರಚಿಸಿರುವನು. ಈ ಉದಯನನು ಕ್ರಿ.ಶ. ಹತ್ತನೆಯ ಶತಮಾನದ ಪ್ರಸಿದ್ಧ ವಿದ್ವಾಂಸನಾಗಿದ್ದಾನೆ. ಆತ್ಮ ವಿವೇಕ, ನ್ಯಾಯ ಪರಿಶಿಷ್ಟ ಮತ್ತು ನ್ಯಾಯ ಕುಸುಮಾಂಜಲಿಗಳು ಕೂಡಾ ಈತನ ಕೃತಿಗಳಾಗಿವೆ. ನ್ಯಾಯ ಸೂತ್ರದ ಮೆಲೆ ಜಯಂತನೆಂಬಾತನು ಬ್ಯಾಯಮಂಜರಿ ಎಂಬ ವ್ಯಾಖ್ಯೆಯನ್ನು ಮತ್ತು ಭಾಸರ್ವಜ್ಞನೆಂಬಾತನು ನ್ಯಾಯಸಾರ ಎಂಬ ಸಮೀಕ್ಷ ಕೃತಿಯನ್ನು ರಚಿಸಿರುವರು.

ಕಣಾದನ ವೈಶೇಷಿಕ ಸೂತ್ರದ ಮೇಲೆ ಪ್ರಶಸ್ತ ಪಾದ ಎಂಬ ವಿದ್ವಾಂಸನು ಕ್ರಿ.ಶಕ ಐದನೆಯ ಶತಮಾನದಲ್ಲಿ ಪದಾರ್ಥ ಧರ್ಮ ಸಂಗ್ರಹ ಎಂಬ ಭಾಷ್ಯವನ್ನು ರಚಿಸಿರವನು. ಈ ಭಾಷ್ಯದ ಮೇಲೆ ಉದಯನೆಂಬ ಕ್ರಿ.ಶ. ೯೮೪ರಲ್ಲಿ ಕಿರಣಾವಲೀ ಎಂಬ ವ್ಯಾಖ್ಯಾನವನ್ನು ಶ್ರೀಧರಭಟ್ಟನೆಂಬಾತನು ನ್ಯಾಯಕಂದಲಿ ಎಂಬ ಟೀಕೆಯನ್ನು ಬರೆದಿರುವರು. ಪ್ರಶಸ್ತ ಪಾದರ ಕೃತಿಯ ಮೇಲೆ ವ್ಯೋಮಶೇಖರನು ವ್ಯೊಮವತಿ ಹಗೂ ಶ್ರೀವತ್ಸನು ಲೀಲಾವತಿ ಎಂಬ ವ್ಯಾಖ್ಯೆಗಳನ್ನು ರಚಿಸಿದ್ದಾರೆ. ಹೀಗೆ ವೈಶೇಷಿಕ ಸೂತ್ರದ ಮೇಲೆ ಕ್ರಿ.ಶ. ಹತ್ತು-ಹನ್ನೊಂದನೆಯ ಶತಮಾನದ ವೇಳೆಯಲ್ಲಿ ಹಲವು ಕೃತಿಗಳು ರಚನೆಯಾಗಿವೆ.

ಜೈಮಿನಿಯ ಮೀಮಾಂಸ ಸೂತ್ರದ ಮೇಲೆ ಈ ಹಿಂದೆ ಶಬರಭಾಷ್ಯವು ಬರೆಯಲ್ಪಟ್ಟಿದ್ದಿತು. ಏಳನೆಯ ಶತಮಾನದ ವೇಳೆಗೆ ಕುಮಾರಿಲಭಟ್ಟ ಮತ್ತು ಪ್ರಭಾಕರ ಗುರು ಎಂಬುವವರು ಇದರ ಮೇಲೆ ಟೀಕೆಗಳನ್ನು ರಚಿಸಿರುವರು. ಮೀಮಾಂಸ ಕ್ಷೇತ್ರಕ್ಕೆ ವಾಚಸ್ಪತಿ ಕೂಡಾ ತತ್ವಬಿಂದು ಎಂಬ ಕೃತಿಯನ್ನು ನೀಡಿರುವನು. ಸವಜ್ಞಾತ್ಮಮುನಿ ಎಂಬಾತನು ಶಂಕರರ ಭಾಷ್ಯದ ಸಂಕ್ಷಿಪ್ತ ರೂಪವಾದ ಸಂಕ್ಷೇಪ ಶಾರೀರಿಕ ಎಂಬ ಗ್ರಂಥವನ್ನು ರಚಿಸಿರುವನು. ವೇದಾಂತ ಕುರಿತ ಕೃತಿಕಾರರಲ್ಲಿ ಗೌಡಪಾದರು. ನಾಥಮುನಿ, ಯಮುನಾಚಾರ್ಯ, ರಾಮಾನುಜಾಚಾರ್ಯರು ಸೇರಿದ್ದಾರೆ. ನ್ಯಾಯತತ್ವ ಮತ್ತು ಯೋಗರಹಸ್ಯಗಳು ನಾಥಮುನಿಗಳಿಂದ ರಚಿತವಾದವುಗಳು. ಆಗಮಪ್ರಾಮಾಣ್ಯ, ಸಿದ್ಧಿತ್ರಯ, ಗೀತಾಸಂಗ್ರಹಗಳಲ್ಲದೆ ಇನ್ನೂ ಹಲವು ಕೃತಿಗಳನ್ನು ಯಮುನಾಚಾರ್ಯರು ನೀಡಿರುವರು. ಅದ್ವೈತ ಸಿದ್ದಾಂತದ ಗೌಡಪಾದರು. ವಾಕ್ಯಪದೀಯ ಕರ್ತೃ ಭರ್ತೃಹರಿ ಕೂಡಾ ವೇದಾಂತ ಕ್ಷೇತ್ರವನ್ನು ಶ್ರೀಮಂತಗೊಳಿಸಿರುವರು. ವೈಷ್ಣವ ಪದ್ಧತಿಯು ವೇದಾಂತ ತತ್ವಗಳೊಂದಿಗೆ ಗಾಢವಾದ ಸಂಬಂಧ ಬೆಳೆಸಿಕೊಂಡಂತೆ ಶೈವಪದ್ಧತಿಯು ಕೂಡಾ ಪ್ರಭಾವಗೊಂಡಿತು. ಹೀಗಾಗಿ ಸ್ಪಂದಶಾಸ್ತ್ರ ಮತ್ತು ಪ್ರತ್ಯಭಿಜ್ಞಾನಶಾಸ್ತ್ರ ಎಂಬ ಎರಡು ಶೈವ ಪದ್ಧತಿಗಳು ಕಾಶ್ಮೀರದಲ್ಲಿ ಅಸ್ತಿತ್ವಕ್ಕೆ ಬಂದವು. ಮೊದಲನೆಯದನ್ನು ಕ್ರಿ.ಶ. ಒಂಬತ್ತನೆಯ ಶತಮಾನದಲ್ಲಿ ವಸುಗುಪ್ತನು ಸ್ಥಾಪಿಸಿದನು. ಈತನು ಶಿವಸೂತ್ರದ ಕರ್ತೃ. ಇದು ಈ ಪದ್ಧತಿಯ ಮುಖ್ಯ ಸೂತ್ರಗ್ರಂಥವಾಗಿದೆ. ಈ ಪದ್ಧತಿಗೆ ಸಂಬಂಧಿಸಿದ ಮತ್ತೊಂದು ಕೃತಿ ಕಲ್ಲಟನ ಸ್ಪಂದಕಾರಿಕಾ ಇದರಲ್ಲಿ ೫೧ ಶ್ಲೋಕಗಳಿದ್ದು ವಸುಗುಪ್ತನ ಬೋಧನೆಗಳನ್ನು ಆಧರಿಸಿದೆ. ಪ್ರತ್ಯಭಿಜ್ಞಾ ಪಂಥದ ಮುಖ್ಯ ಕೃತಿಗಳೆಂದರೆ ಸೋಮಾನಂದನ ಶಿವದೃಷ್ಟಿ ಮತ್ತು ಉತ್ಪಲನ ಪ್ರತ್ಯಭಿಜ್ಞಸೂತ್ರ ಇವುಗಳು ಕ್ರಿ.ಶ. ಹತ್ತನೆಯ ಶತಮಾನಕ್ಕೆ ಸೇರಿದವುಗಳಾಗಿವೆ. ಈ ಎರಡನೇ ಕೃತಿಯ ಮೇಲೆ ಅಭಿನವಗುಪ್ತನ ಪ್ರತ್ಯಭಿಜ್ಞಾವಿಮರ್ಶಿನಿ ಎಂಬ ಟೀಕೆಯನ್ನು ರಚಿಸಿರುವನು, ಅಲ್ಲದೆ ತಂತ್ರಲೋಕ ಮತ್ತು ಪರಮಾರ್ಥಸಾರ ಎಂಬ ಕೃತಿಗಳನ್ನು ಕೂಡಾ ಅಭಿನವಗುಪ್ತನು ನೀಡಿರುವನು.

ಹೀಗೆ ಗುಪ್ತರ ಯುಗದಿಂದ ಹನ್ನೆರಡನೆಯ ಶತಮಾನದ ಅವಧಿಯಲ್ಲಿ ಪುರಾಣಗಳ ಪರಿಷ್ಕರಣೆ, ಧರ್ಮಶಾಸ್ತ್ರಗಳ ರಚನೆ, ಧರ್ಮಶಾಸ್ತ್ರ ಮತ್ತು ಸೂತ್ರಗಳ ಮೆಲೆ ಭಾಷ್ಯಗಳು, ವ್ಯಾಖ್ಯಾನಗಳೂ ಮತ್ತು ಟೀಕೆಗಳು ಬರೆಯಲ್ಪಟ್ಟಿವೆ. ಇವುಗಳು ಭಾರತೀಯ ಧರ್ಮ, ತತ್ವ, ಆಧ್ಯಾತ್ಮ ಮೊದಲಾದವುಗಳನ್ನರಿಯಲು ಸಹಕಾರಿಯಾಗಿವೆ.

ಸಾಹಿತ್ಯದ ಪ್ರಮುಖ ಪ್ರಕಾರವಾದ ಕಾವ್ಯ ಪ್ರಕಾರದಲ್ಲಿ ಗುಪ್ತರ ಕಾಲದಲ್ಲಿ ಶ್ರೇಷ್ಠವಾದ ಕೃತಿಗಳು ರಚನೆಗೊಂಡವೆ. ಈ ಅವಧಿಯ ಶ್ರೇಷ್ಟ ಕವಿಯೆಂದು ಪರಿಗಣಿಸಲ್ಪಟ್ಟ ಕಾಳಿದಾಸನು “ಪ್ರಶ್ನಾತೀತವಾಗಿ ಭಾರತೀಯ ಕಾವ್ಯಶೈಲಿಯ ಅತಿ ಮನೋಜ್ಞಪಾರಂಗತನು” ಎನ್ನಲಾಗಿದೆ. ಆತನ ಉಪಮಾಲಂಕಾರ ಬಳಕೆಯ ಶಕ್ತಿ ಮತ್ತು ವಿಧಾನ ಮುಖ್ಯವಾಗಿ ಶ್ಲಾಘಿಸಲ್ಪಟ್ಟಿದೆ. ಕಾಳಿದಾಸನ ಜೀವನ ಕುರಿತು ಹಲವು ಕಥೆಗಳು ಚಾಲ್ತಿಯಲ್ಲಿವೆ. ಆದರೂ ಆತನನ್ನು ಗುಪ್ತರ ಕಾಲಕ್ಕೆ ಸೇರಿದವನೆಂದು ಹೆಚ್ಚಿನವರ ಅಭಿಪ್ರಾಯವಾಗಿದೆ. ಕಾಳಿದಾಸನ ಮೊದಲ ಕಾವ್ಯ ಋತುಸಂಹಾರ, ನಂತರ ಮೇಘದೂತ, ಕುಮಾರಸಂಭವ ಮತ್ತು ರಘವಂಶಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ಕೊನೆಯವರೆಡನ್ನು ಮಹಾಕಾವ್ಯಗಳೆಂದು  ಹಾಗೂ ಸಂಸ್ಕೃತ ಕಾವ್ಯದ ಎರಡು ರತ್ನಗಳೆಂದು ಕರೆಯಲಾಗಿದೆ. ಮೇಘದೂತನು ಅತ್ಯಂತ ಚಿತ್ತಾಕರ್ಷಕ ಲಘುಕಾವ್ಯವಾಗಿದೆ. ಕುಮಾರದಾಸನ ಜಾನಕಿಹರಣ, ಪಂಚಮಹಾಕಾವ್ಯಗಳಲ್ಲಿ ಒಂದೆಂದು ಪರಿಗಣಿಸಲಾದ ಭರವಿಯ ಕಿರಾತಾರ್ಜುನೀಯಂ, ಮಾಘನ ಶಿಶುಪಾಲವಧಾ, ಭಟ್ಟಿಯ ರಾವಣವಧಾ ಇವುಗಳು ಗುಪ್ತರ ಕಾಲದ ಇತರ ಪ್ರಮುಖ ಸಂಸ್ಕೃತ ಕಾವ್ಯಗಳಾಗಿವೆ. ಈ ಕಾಲದ ಶಾಸನಗಳ ರಚನೆಯ ಮೇಲೆ ಕೂಡಾ ಕಾವ್ಯದ ಪ್ರಭಾವವಾಗಿವೆ. ಸಮುದ್ರಗುಪ್ತನ ಅಲಹಬಾದ್‌ ಸ್ತಂಭಶಾಸನ, ಯಶೋವರ್ಮನ್‌ನ ಮಾಂಡ್‌ಸೋರ್ಶಾಸನ, ಜುನಾಗಡ್‌ ಬಂಡೆಗಲ್ಲಿನ ಶಾಸನ ಮತ್ತು ಮೆಹರುಲಿಸ್ತಂಭ ಶಾಸನಗಳು ಪಠ್ಯಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.

ಗುಪ್ತರ ಯುಗದ ನಂತರವೂ ಕವ್ಯ ಪರಂಪರೆಯು ಮುಂದುವರೆದಿದೆ. ಬೌದ್ಧ, ಜೈನ, ವೈದಿಕ ವಿದ್ವಾಂಸರು ಇದರಲ್ಲಿ. ಭಾಗಿಯಾಗಿರುವರು. ಈ ಅವಧಿಯಲ್ಲಿ ಬೌದ್ಧ ಕವಿ ಶಿವಸ್ವಾಮಿಯು ಕಪ್ಪಣಾಭ್ಯುದಯ, ಜಿನಪಂಥದ ಜಿನಸೇನನು ಹರಿವಂಶ, ಅಸಗನು ವರ್ಧಮಾನಚರಿತ, ರವಿಸೇನನು ಪದ್ಮ ಪುರಾಣ, ಕನಕಸೇನ ವಾದಿರಾಜನು ಯಶೋಧರಚರಿತ, ರಾಜಾತನಕ ರತ್ನಾಕರನು ಹರಿವಿಜಯ, ಕಶ್ಮೀರದ ಕವಿ ಅಭಿನಂದನು ರಾಮಚರಿತ, ವಾಸುದೇವನು ಯುಧಿಷ್ಠಿರ ವಿಜಯ ಹಾಗೂ ಧನಂಜಯನು ರಾಘವಪಾಂಡವೀಯ ಎಂಬ ಕಾವ್ಯಗಳನ್ನು ರಚಿಸಿರುವರು. ಇವುಗಳ ವಿಷಯ ವಸ್ತು ಪುರಾಣ ಮತ್ತು ಮಹಾಕಾವ್ಯಗಳಲ್ಲಿ ಉಲ್ಲೇಖಿತ ಪ್ರಸಂಗಗಳಾಗಿವೆ.

ಸಂಸ್ಕೃತದಲ್ಲಿ ಐತಿಹಾಸಿಕ ವಿಷಯವಸ್ತುವನ್ನಾಧರಿಸಿದ ಕಾವ್ಯಗಳು ವಿರಳ. ದೊರೆತಿವ ಐತಿಹಾಸಿಕ ಕಾವ್ಯಗಳಲ್ಲಿ ಪ್ರಾಚೀನವಾದುದು ಬಾಣನ ಹರ್ಷಚರಿತೆ. ಇದು ವರ್ಧನರ ಹರ್ಷವರ್ಧನನ ಕುರಿತ ಕೃತಿಯಾಗಿದೆ. ಪದ್ಮಗುಪ್ತನ ನವಸಾಹಸಾಂಕಚರಿತ ಮತ್ತೊಂದು ಮುಖ್ಯ ಕೃತಿಯಾಗಿದೆ. ಇದು ಕ್ರಿ.ಶ. ೧೦೦೦ದಲ್ಲಿ ರಚನೆಯಾಗಿದ್ದೆನ್ನಲಾಗಿದೆ. ಮಾಳವದ ದೊರೆ ಸಿಂಧೂರಾಜ ನವಸಾಹಸಾಂಕನು ರಾಜಕುಮಾರಿ ಶಶಿಪ್ರಭೆಯನ್ನು ಗೆದ್ದ ವಿಚಾರವು ಇದರ ವಿಷಯ ವಸ್ತುವಾಗಿದೆ. ಬಿಲ್ಹಣನ ವಿಕ್ರಮಾಂಕದೇವಚರಿತ, ೧೮ ಸರ್ಗಗಳ ಈ ಮಹಾಕಾವ್ಯವು ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಜೀವನಚರಿತವಾಗದೆ. ಕ್ರಿ.ಶ. ೧೨ನೆಯ ಶತಮಾನದಲ್ಲಿ ಕಲ್ಹಣನು ರಾಜತರಂಗಿಣಿ ಎಂಬ ಕೃತಿಯನ್ನು ರಚಿಸಿದ್ದಾನೆ. ಇದು ಕಾಶ್ಮೀರದ ರಾಜರ ಇತಿಹಾಸವನ್ನು ವಿವರಿಸುತ್ತದೆ. ಹೇಮಚಂದ್ರನ ಕುಮಾರಪಾಲಚರಿತ, ಜಲ್ಹಣನ ಸೋಮಪಾಲವಿಲಾಸ ಮತ್ತು ಚಂದ್ರಕವಿಯ ಪೃಥ್ವಿರಾಜವಿಜಯ, ಇವುಗಳು ಇತರ ಐತಿಹಾಸಿಕ ಕಾವ್ಯಗಳಾಗಿವೆ. ನೀತಿ ಕಾವ್ಯಗಳಲ್ಲಿ ದಾಮೋದರ ಗುಪ್ತನ ಕುಟ್ಟಿನೀಮತ, ಭಲ್ಲಟನ ಭಲ್ಲಟಶತಕ ಮತ್ತು ಸೋಮದೇವರ ನೀತಿವಾಕ್ಯಾಮೃತಗಳು ಪ್ರಮುಖ ರಚನೆಗಳಾಗಿವೆ.

ಗುಪ್ತರಯುಗದ ನಂತರ ಸಂಸ್ಕೃತದಲ್ಲಿ ಬೆಳೆದು ಬಂದ ಒಂದು ಸಾಹಿತ್ಯ ಪ್ರಕಾರವೆಂದರೆ ಸ್ತೋತ್ರ ಸಾಹಿತ್ಯ, ಮಯೂರನ ಮಯೂರಶತಕ, ಬಾಣನ ಚಂಡೀಶತಕ, ಶಂಕರಾಚಾರ್ಯರ ಭಜಗೋವಿಂದಂ, ಅನಂದವರ್ಧನನ ದೇವಿಶತಕ, ಕುಲಶೇಖರನ ಮುಕುಂದಮಾಲೆ, ಉತ್ಪಲದೇವನ ಸ್ತೋತ್ರಾವಲಿ, ಜೈನ ಕವಿಗಳಾದ ಶೋಬಲನ ತೀರ್ಥೇಶಸ್ತುತಿ ಮತ್ತು ಮಾನತುಂಗನ ಭಕ್ತಾಮರಸ್ತೋತ್ರಗಳನ್ನು ಪ್ರಮುಖ ರಚನೆಗಳೆಂದು ಹೆಸರಿಸಿಬಹುದಾಗಿದೆ.

‘ಸಂಗ್ರಹಕಾವ್ಯ’ ವಿಧವು ಕೂಡಾ ಈ ಅವಧಿಯಲ್ಲಿ ಪರಿಚಯಿಸಲ್ಪಟ್ಟಿತು. ಇದರಿಂದ ಹಿಂದಿನ ಅಪೂರ್ವ ಶ್ಲೋಕಗಳನ್ನು ಸಂಗ್ರಹಿಸಿ ನೀಡುವ ಮೂಲಕ ಅವುಗಳ ರಕ್ಷಣೆ ಮಾಡಲು ಸಾಧ್ಯವಾಯಿತು. ಮೂಲಕೃತಿಗಳು ಲಭ್ಯವಾಗದಿದ್ದರೂ, ಅನೇಕ ಕಾವ್ಯ ಕಥೆಗಳು ಬೆಳಕಿಗೆ ಬರುವಂತಾಯಿತು. ಸಂಗ್ರಹ ಕಾವ್ಯಗಳಲ್ಲಿ ಕವೀಂದ್ರ ವಚನ ಸಮುಚ್ಚಯವು ಕ್ರಿ.ಶ. ೧೦೦೦ಕ್ಕಿಂತ ಹಿಂದಿನ ೫೨೫ ಶ್ಲೋಕಗಳ ಸಂಗ್ರಹವಾಗಿದೆ. ಬುಧಸ್ವಾಮಿ ರಚಿತ ಶ್ಲೋಕಸಂಗ್ರಹವು ಗುಣಾಡ್ಯನ ಬೃಹತ್ಕಥೆಯ ಶ್ಲೋಕರೂಪದ ಸಂಗ್ರಹವಾಗಿದೆ. ಮಾಧವನಲಕಾಮಕಂದಲಾ ಕಥಾ ಭಟ್ಟಿ ವಿದ್ಯಾಧರನ ಶಿಷ್ಯ ಆನಂದನ ರಚನೆಯಾಗಿದೆ. ಬಾಣನ ಕಾದಂಬರಿ ಆಧಾರಿತ ತಿಲಕಮಂಜರಿ ಧನಪಾಲನ ರಚನೆಯಾಗಿದೆ.

ಸಂಸ್ಕೃತದಲ್ಲಿ ಚಂಪೂಕಾವ್ಯ ಪ್ರಕಾರವು ಗುಪ್ತರ ಯುಗದ ನಂತರ ಕಂಡುಬರುತ್ತದೆ. ಈ ಕಾವ್ಯ ಪ್ರಕಾರದಲ್ಲಿ ಕವಿಗೆ ಒಂದೇ ಕಾವ್ಯದಲ್ಲಿ ಗದ್ಯ-ಪದ್ಯಗಳೆರಡರಲ್ಲಿ ತನಗಿರುವ ಸಾಮರ್ಥ್ಯ ಮತ್ತು ವಿದ್ಯಾ ಪ್ರೌಢಿಮೆಯನ್ನು ತೋರಿಸಲು ಅವಕಾಶವಿದೆ. ಕ್ರಿ.ಶ. ಹತ್ತನೆಯ ಶತಮಾನದವರೆಗೆ ಕಾವ್ಯಗಳು ಗದ್ಯ ಇಲ್ಲವೇ ಪದ್ಯದ ರೂಪದಲ್ಲಿ ರಚಿಸಲ್ಪಡುತ್ತಿದ್ದವು ಒಂದೊಮ್ಮೆ ಗದ್ಯದ ನಡುವೆ ಪದ್ಯವನ್ನು ಬಳಸಿದರೂ ಅದು ನಿಶ್ಚಿತ ಕಾರಣಕ್ಕಾಗಿ ಸಂದರ್ಭೋಚಿತವಾಗಿ ಮಾತ್ರ ಬಳಸಲಾಗುತ್ತಿತ್ತು. ಕ್ರಿ.ಶ. ಹತ್ತನೆಯ ಶತಮಾನದಲ್ಲಿ ಕಾವ್ಯದಲ್ಲಿ ಗದ್ಯ- ಪದ್ಯಗಳೆರಡನ್ನೂ ಒಟ್ಟಿಗೆ ಬಳಸುವ ಶೈಲಿ ಕಂಡು ಬಂದಿದೆ. ಹೀಗಾಗಿ ‘ಚಂಪೂ’ ಕ್ರಿ.ಶ. ಹತ್ತನೆಯ ಶತಮಾನದ ಕಾಣಿಕೆ ಎನ್ನಬಹುದು. ಚಂಪೂ ಕಾವ್ಯ ಪ್ರಾಕಾರದಲ್ಲಿ ಮೊದಲ ಕಾವ್ಯವು ತ್ರಿವಿಕ್ರಮಭಟ್ಟನ ನಳಚಂಪೂ ಅಥವಾ ದಮಯಂತಿಕಥಾ ಎನ್ನಲಾಗಿದೆ. ಈತನು ರಾಷ್ಟ್ರಕೂಟರ ಮೂರನೆಯ ಇಂದ್ರನ ಆಸ್ಥಾನ ಕವಿಯಾಗಿದ್ದನು. ಈತನ ಮತ್ತೊಂದು ಕೃತಿ ಮದಾಲಸಾಚಂಪೂ. ಈತನು ನೌಸಾರಿ ಶಿಲಾಶಾಸನದ ಕರ್ತೃ ಕೂಡಾ ಆಗಿದ್ದಾನೆ. ಕ್ರಿ.ಶ. ಹತ್ತನೆಯ ಶತಮಾನದ ಮಧ್ಯಭಾಗದಲ್ಲಿ ದಿಗಂಬರ ಪಂಥದ ಜೈನಕವಿ ಸೋಮದೇವನು ಯಶಸ್ತಿಲಕ ಚಂಪೂ ಎಂಬ ಕೃತಿಯನ್ನು ನೀಡಿದ್ದಾನೆ. ಇದರ ಕೊನೆಯ ಮೂರು ಅಧ್ಯಾಯಗಳು ಜೈನ ತತ್ವದ ಪ್ರತಿಪಾದನೆಗೆ ಮೀಸಲಿಡಲಾಗಿದೆ. ಒಂದು ಅನಾಮಧೇಯ ಟೀಕು ತಿಳಿಸುವಂತೆ ಈತನು ನೀತಿವಾಕ್ಯಮೃತ ಎಂಬ ಕೃತಿಯನ್ನು ಕೂಡಾ ರಚಿಸಿರುವನು. ಸೊಡ್ಡಳ ಎಂಬ ಇನ್ನೋರ್ವ ಕವಿಯ ಉದಯಸುಂದರೀಕಥಾ ಎಂಬುದು ಮತ್ತೊಂದು ಪ್ರಮುಖ ಚಂಪೂ ಕಾವ್ಯ. ಈ ಕವಿಯು ಕ್ರಿ.ಶ. ೧೦೦೦ದ ವೇಳೆಗೆ ಕೊಂಕಣ ಮುಮ್ಮಣಿ ರಾಜನ ಆಸ್ಥಾನದಲ್ಲಿದ್ದನು.

ಸಂಸ್ಕೃತ ನಾಟಕಗಳ ಪ್ರಕಾರದ ಮೂಲ ಕುರಿತು ವಿಭಿನ್ನ ಅಭಿಪ್ರಾಯಗಳಿವೆ. ಗ್ರೀಕ್‌ ಮತ್ತು ಸಂಸ್ಕೃತ ನಾಟಕಗಳ ನಡುವಿನ ಹೊರ ಸ್ವಾಮ್ಯಗಳನ್ನಾಧರಿಸಿ ಸಂಸ್ಕೃತ ನಾಟಕಗಳು ಗ್ರೀಕ್‌ ನಾಟಕಗಳಿಂದ ಪ್ರಭಾವಿತವಾಗಿದೆಯೆಂದು ಕೆಲವು ವಿದ್ವಾಂಸರು ಅಭಿಪ್ರಾಯಿಸಿದ್ದಾರೆ. ಭರತ ಮುನಿಯೇ ನಟಕ ರಚನೆಗೆ ಮೂಲಕಾರಣನೆಂಬುದು ಕೆಲವರ ಅಭಿಪ್ರಾಯ. ವೇದಗಳಿಂದ ಸಂಸ್ಕೃತ ನಾಟಕಗಳು ಉತ್ಪನ್ನವಾಗಿದೆಯೆಂದು ಕೆಲವರ ಅಭಿಮತವಾಗಿದೆ. ಋಗ್ವೇದದಲ್ಲಿ ಇರುವ ಯಮ-ಯಮಿ, ಊರ್ವಶಿ-ಪುರೂರವ ಮೊದಲಾದ ಸಂವಾದ ಸೂಕ್ತಗಳನ್ನು ಉದಾಹರಿಸಿ ಈ ಅಭಿಪ್ರಾಯವನ್ನು ನೀಡಲಾಗಿದೆ. ಇನನು ಕೆಲವರು ಸಂಸ್ಕೃತ ನಾಟಕದ ಉತ್ಪತ್ತಿಯು ಮೂಕದೃಶ್ಯ, ಬೊಂಬೆಯಾಟ, ಛಾಯಾನಾಟಕಗಳಿಂದ ಆಯಿತೆಂದು ಹೇಳುತ್ತಾರೆ. ಕ್ರಿ.ಶ. ಒಂದರಿಂದ ಆರನೆಯ ಶತಮಾನದ ಅವಧಿಯನ್ನು ಸಂಸ್ಕೃತ ನಾಟಕಗಳ ಉಚ್ಛ್ರಾಯ ಕಾಲವೆನ್ನಲಾಗಿದೆ.

ಸಂಸ್ಕೃತ ಕಾವ್ಯಗಳಿಗೆ ಪ್ರಸಿದ್ಧನಾದ ಕಾಳಿದಾಸನು ನಾಟಕಗಳನ್ನು ಕೂಡಾ ರಚಿಸಿರುವನು. ಶಾಕುಂತಲಾ ಮಾಲವಿಕಾಗ್ನಿ ಮಿತ್ರಮ್‌ ಮತ್ತು ವಿಕ್ರಮೋರ್ವಶೀಯ ಎಂಬ ಮೂರು ನಾಟಕಗಳು ನಾಟಕ ಕ್ಷೇತ್ರಕ್ಕೆ ಆತನ ಕೊಡುಗೆಗಳಾಗಿವೆ. ಸಂಸ್ಕೃತ ನಾಟಕಗಳಲ್ಲಿ ವಿಶಿಷ್ಟವಾದ ಕೊಡುಗೆ ವಿಶಾಖದತ್ತನದು. ಆತನ ಮುದ್ರಾರಾಕ್ಷಸವು ರಾಜಕೀಯ ಮತ್ತು ಐತಿಹಾಸಿಕವಾದ ಮೌರ್ಯ ಸ್ಥಾಪನೆಯ ವಿಷಯ ವಸ್ತು ಆಧರಿಸಿದ ಏಳು ಅಂಕಗಳ ನಾಟಕವಾಗಿದೆ. ಇದರಲ್ಲಿ ನಾಯಕಿಯ ಪಾತ್ರವಿಲ್ಲ ಮತ್ತು ಶೃಂಗಾರರಸವಿಲ್ಲ ಆದರೂ ಆಕರ್ಷಕವಾಗುವಂತೆ ನಾಟಕವನ್ನು ರಚಿಸಲಾಗಿದೆ. ವಿಶಾಖದತ್ತನೇ ರಚಿಸಿದನೆಂದು ಹೇಳಲಾಗುವ ಇನ್ನೆರಡು ನಾಟಕಗಳಿವೆ. ಅವುಗಳೆಂದರೆ, ದೇವಿಚಂದ್ರ ಗುಪ್ತಂ ಮತ್ತು ಅಭಿಸಾರಿಕವಂಚಿತಕ. ಪಲ್ಲಾವರ ದೊರೆ ಒಂದನೆಯ ಮಹೇಂದ್ರ ವರ್ಮನು ‘ಮತ್ತ ವಿಲಾಸ ಪ್ರಹಸನಂ’ ಎಂಬ ನಟಕವನ್ನು ಏಳನೆಯ ಶತಮಾನದ ವೇಳೆಗೆ ರಚಿಸಿದ್ದಾನೆ. ಕ್ರಿ.ಶ. ಎಂಟನೆಯ ಶತಮಾನಕ್ಕೆ ಸೇರಿದ ಭವಭೂತಿಯ ಇನ್ನೋರ್ವ ಪ್ರಸಿದ್ಧ ನಾಟಕಕಾರ ಮಹಾವೀರಚರಿತ, ಉತ್ತರರಾಮಚರಿತ ಮತ್ತು ಮಾಲತಿಮಾಧವತಗಳು ಆತನ ಪ್ರಮುಖ ಕೊಡುಗೆಗಳಾಗಿವೆ. ಕ್ರಿ.ಶ. ಏಳನೆಯ ಶತಮಾನದಲ್ಲಿ ರಾಜ ಶ್ರೀ ಹರ್ಷನು ರಾತ್ನಾವಲೀ, ಪ್ರಿಯದರ್ಶಿಕಾ ಮತ್ತು ನಾಗಾನಂದ ಎಂಬ ಮೂರು ನಾಟಕಗಳನ್ನು ರಚಿಸಿರುವನು. ಕ್ರಿ.ಶ. ಎಂಟನೆಯ ಶತಮಾನದ ಕೊನೆ ಮತ್ತು ಕ್ರಿ.ಶ ಒಂಭತ್ತನೆಯ ಶತಮಾನದ ಆರಂಭದಲ್ಲಿ ಜೀವಿಸಿದ್ದನೆಂದು ಹೇಳಲಾದ ಮುರಾರಿ ಎಂಬ ನಾಟಕಕಾರನು, ರಾಮಾಯಣವನ್ನು ಆಧರಿಸಿ ಅನರ್ಘರಾಘವ ಎಂಬ ಏಳು ಅಂಕಗಳ ನಾಟಕವನ್ನು ರಚಿಸಿದ್ದಾನೆ. ಒಂಭತ್ತನೆಯ ಶತಮಾನಕ್ಕೆ ಸೇರಿದ ಭೀಮ ಅಥವಾ ಭೀಮಟನು ಐದು ನಾಟಕಗಳನ್ನು ರಚಿಸಿರುವನು. ಮುದ್ರಾರಾಕ್ಷಸವನ್ನು ಆದರ್ಶವಾಗಿಟ್ಟುಕೊಂಡ ಪ್ರತಿಭಾಚಾಣಕ್ಯ ಮತ್ತು ಸ್ವಪ್ನದಶಾನನ ಎಂಬ ನಾಟಕಗಳು ಆತನ ಪ್ರಸಿದ್ಧ ನಾಟಕಗಳಾಗಿವೆ. ಚೈನ ಕವಿಗಳಾದ ಶಕ್ತಿ ಭದ್ರನು ಆಶ್ಚರ್ಯಚೂಡಾಮಣಿ ಮತ್ತು ಹಸ್ತಿ ಮಲ್ಲನು ವಿಕ್ರಾಂತಕೌರವ, ಸುಭದ್ರಾಹರಣ ಮತ್ತು ಮೈಥಿಲಿಕಲ್ಯಾಣ ಎಂಬ ನಾಟಕಗಳನ್ನು ರಚಿಸಿದ್ದಾರೆ. ಇವರಿಬ್ಬರು ಕ್ರಿ.ಶ. ಒಂಭತ್ತನೆಯ ಶತಮಾನಕ್ಕೆ ಸೇರಿದವರಾಗಿದ್ದಾರೆ.

ಹತ್ತನೆಯ ಶತಮಾನದಲ್ಲಿ ಶ್ರೇಷ್ಠ ವಿದ್ವಾಂಸನಾದ ರಾಜಶೇಖರನು ತನ್ನ ಇತರ ಕೃತಿಗಳೊಂದಿಗೆ ನಾಲ್ಕು ನಾಟಕಗಳನ್ನು ರಚಿಸಿದ್ದಾನೆ. ಅವುಗಳೆಂದರೆ ಬಾಲರಾಮಾಯಣ, ಬಾಲಭಾರತ, ವಿದ್ದಶಾಲಾಭಂಜಿಕಾ ಮತ್ತು ಕರ್ಪೂರಮಂಜರಿ ಆದರೆ ಇವು ಆತನನ್ನು ಶ್ರೇಷ್ಠ ನಾಟಕಕಾರನ ಸ್ಥಾನಕ್ಕೇರಿಸುವಂತಹ ಕೃತಿಗಳಾಗಲಿಲ್ಲ. ಇದೇ ಕಾಲದಲ್ಲಿ ಕ್ಷೇಮೇಂದ್ರನು ಹರಿಶ್ಚಂದ್ರನ ಕಥೆಯನ್ನಾಧರಿಸಿ ಚಂಡಕೌಶಿಕ ಎಂಬ ನಾಟಕವನ್ನು ಮತ್ತು ನಳನಕಥೆಯನ್ನಾಧರಿಸಿ ನೈಷದಾನಂದ ಎಂಬ ನಾಟಕವನ್ನು ರಚಿಸಿರುವನು. ಹನ್ನೊಂದನೇ ಶತಮಾನದಲ್ಲಿ ಬಿಲ್ಹಣನು ನಾಲ್ಕು ಅಂಖಗಳ ಕರ್ಣಸುಂದರೀ ಎಂಬ ನಾಟಕವನ್ನು ರಚಿಸಿರುವನು. ಹದಿನಾಲ್ಕು ಅಂಕಗಳ ದೀಘವಾದ ಪ್ರಾಚೀನ ನಾಟಕವೊಂದಿದೆ. ಅದು ಮಹಾನಾಟಕ ಅಥವಾ ಹನುಮನ್ನಾಟಕ ಇದರ ಕರ್ತೃ ಯಾರೆಂದು ನಿಖರವಾಗಿ ತಿಳಿದು ಬರುವುದಿಲ್ಲ. ಈಗ ದೊರೆತಿರುವ ಪ್ರತಿಯು ಹನ್ನೊಂದನೆಯ ಶತಮನದ ವೇಳೆಗೆ ಭೋಜರಾಜನ ಕಾಲದಲ್ಲಿ ಸಿದ್ಧವಾಯಿತೆನ್ನಲಾಗಿದೆ. ಇದೇ ಅವಧಿಯಲ್ಲಿ ಜೈನಕವಿ ಹೇಮಚಂದ್ರನು ಕೌಮುದಿ ಮಿತ್ರಾನಂದ ಮತ್ತು ನಳವಿಲಾಸ ಎಂಬ ನಾಟಕಗಳನ್ನು, ಕುಲಶೇಖರ ವರ್ಮನು ಸುಭದ್ರಾಧನಂಜಯ ಮತ್ತು ತಪತೀಸ್ವಯಂವರ ಎಂಬ ನಾಟಕಗಳನ್ನು ರಚಿಸಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಶಂಖಧರ ಕವಿರಾಜನು ಲಟಕಮೇಲಕ ಪ್ರಹಸನ ಮತ್ತು ವಿಶಾಲದೇವನು ಹರಕೇಳಿನಾಟಕ ಎಂಬ ಕೃತಿಗಳನ್ನು ರಚಿಸಿದ್ದಾರೆ.

ನೀತಿ ಕಾವ್ಯಗಳಂತೆ ನೀತಿಕಥೆಗಳು ಸಂಸ್ಕೃತದಲ್ಲಿ ರಚನೆಯಾಗಿವೆ. ಉತ್ತಮ ಉದಾಹರಣೆಯೆಂದರೆ ವಿಷ್ಣುಶರ್ಮನ ಪಂಚತಂತ್ರ. ದಂಡಿಯ ದಶಕುಮಾರಚರಿತ ಮತ್ತು ಆವಂತಿಸುಂದರೀ ಕಥಾ, ಸುಬಂಧುವಿನ ವಾಸವದತ್ತ ಇವುಗಳು ಪ್ರಸಿದ್ಧ ರಮ್ಯ ಕಥೆಗಳಾಗಿವೆ.

ಗುಪ್ತರ ಕಾಲದಿಂದ ೧೨ನೆಯ ಶತಮಾನದ ಅವಧಿಯಲ್ಲಿ ಸಂಸ್ಕೃತ ಭಾಷಾ ಬೆಳವಣಿಗೆಗೆ ಸಂಬಂಧಿಸಿದ ಅಲಂಕಾರ, ಛಂದಸ್ಸು, ವ್ಯಾಕರಣ ವಿಷಯಗಳ ಹಲವು ಕೃತಿಗಳು ರಚನೆಗೊಂಡಿವೆ. ಗುಪ್ತರ ಯುಗದಲ್ಲಿ ರಚಿತವಾದ ಭಟ್ಟಿಯ ರಾವಣವಧಾ ಕಾವ್ಯದಲ್ಲಿ ಒಂದು ವರ್ಗವನ್ನು ಪೂರ್ಣವಾಗಿ ಅಲಂಕಾರದ ವಿವರಣೆಗೆ ಮೀಸಲಿಡಲಾಗಿದೆ. ಇದೇ ಕಾಲದ ದಂಡಿಯ ಕಾವ್ಯಾದರ್ಶ ಮತ್ತು ಭಾಮಹನ ಕಾವ್ಯಾಲಂಕಾರಗಳು ಅಲಂಕಾರ ಶಾಸ್ತ್ರಕ್ಕೆ ಮಹತ್ವದ ಕೊಡುಗೆಗಳಾಗಿವೆ. ಕ್ರಿ.ಶ. ಎಂಟನೆಯ ಶತಮಾನ ಮತ್ತು ನಂತರದ ಕಾಲವು ಅಲಂಕಾರ ಶಾಸ್ತ್ರದ ಸುವರ್ಣಕಾಲವೆನ್ನಲಾಗಿದೆ. ಉದ್ಭಟನ ಅಲಂಕಾರಸಾರ. ರುದ್ರಟನ ಕಾವ್ಯಾಲಂಕಾರ ರುದ್ರಭಟ್ಟನ ಶೃಂಗಾರ ತಿಲಕ, ವಾಮನನ ಕಾವ್ಯಾಲಂಕಾ ಸೂತ್ರವೃತ್ತಿ, ಮತ್ತು ರಾಜಶೇಖರನ ಕಾವ್ಯಮೀಮಾಸೆಗಳು ಈ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಧಾನ ಕೃತಿಗಳಾಗಿವೆ. ಆನಂದ ವರ್ಧನನ ಧ್ವನ್ಯಾಲೋಕವು ಧ್ವನಿಸಿದ್ಧಾಂತಕ್ಕೆ ಸೇರಿದ ಮಹತ್ವದ ಕೃತಿಯಾಗಿದೆ. ಸ್ವಯಂಭೂ ರಚಿತ ಸ್ವಯಂಭೂಛಂದಸ್‌ ಮತ್ತು ಹೇಮಚಂದ್ರನ ಛಂದೋನು ಸಾಸನಗಳೂ ಛಂದಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಕೃಋತಿಗಳಾಗಿವೆ. ಕ್ರಿ.ಶ. ಹತ್ತನೆಯ ಶತಮಾನಕ್ಕೆ ಸೇರಿದ ಉತ್ಪಲನು ಸಂಸ್ಕೃತ ಛಂದಶ್ಯಾಸ್ತ್ರದಲ್ಲಿ ಪ್ರಸಿದ್ಧ ಲೇಖಕನಾಗಿದ್ದಾನೆ.

ಗುಪ್ತರ ಯುಗದಲ್ಲಿ ಸಂಸ್ಕೃತ ವ್ಯಾಕರಣದ ಅನೇಕ ಪದ್ಧತಿಗಳಲ್ಲಿನ ಚಾಂದ್ರ ಪದ್ಧತಿ ಮತ್ತು ಜೈನೇಂದ್ರ ಪದ್ಧತಿಗಳು ಉದಯವಾದವು. ಚಾಂದ್ರಪದ್ಧತಿಯ ಸ್ಥಾಪಕನು ಚಂದ್ರಗೋವವಿ, ಜೈನೇಂದ್ರ ಪದ್ಧತಿಯ ಉಗಮಕ್ಕೆ ಕಾರಣವಾದುದು ಜೈನೇಂದ್ರ ವ್ಯಾಕರಣ ಇದರ ಕರ್ತೃ ಕ್ರಿ.ಶ. ಏಳನೆಯ ಶತಮಾನಕ್ಕೆ ಸೇರಿದ ದೇವನಂದಿಯೆಂದು ಹೇಳಲಾಗಿದೆ. ಟೀಕೆಗಳ ರೂಪದಲ್ಲಿ ವ್ಯಾಕರಣ ಕೃತಿಗಳು ರಚನೆಯಾಗಿವೆ. ಭರ್ತೃಹರಿ ವಾಕ್ಯಪದೀಯ ಖಂಡಗಳು, ಜಯಾದಿಯ್ಯವಾಮನರು ರಚಿಸಿದ ಪತಂಜಲಿಯ ಗ್ರಂಥದ ಮೇಲಿನ ಕೌಶಿಕಾ ಎಂಬ ವೃತ್ತಿ ಅದರ ಮೇಲೆ ಬೌದ್ಧ ಕವಿ ಜಿನೇಂದ್ರ ಬುದ್ದಿಯು ರಚಿಸಿದ ನ್ಯಾಸ ಎಂಬ ಟೀಕೆ ಇವುಗಳು ವ್ಯಾಕರಣ ಕ್ಷೇತ್ರಕ್ಕೆ ಗುಪ್ತರ ಯುಗದ ಪ್ರಮುಖ ಕೊಡುಗೆಗಳಾಗಿವೆ. ನಂತರ ನ್ಯಾಸದ ಮೇಲೆ ಮೈತ್ರೇಯಿ ರಕ್ಷಿತನು ತಂತ್ರ ಪ್ರದೀಪೆಂಬ ಟೀಕೆಯೊಂದನ್ನು ರಚಿಸಿರುವನು. ಕ್ರಿ.ಶ. ಒಂಭತ್ತನೆಯ ಶತಮಾನದ ಶಾಕಟಾಯನನು ಹೊಸದೊಂದು ಪ್ರಸ್ಥಾನದ ಪ್ರವರ್ತಕನಾಗಿರುವನು. ಕಾತಂತ್ರವ್ಯಾಕರಣದ ಮೇಲೆ ಅತೀ ಪ್ರಾಚೀನ ಟೀಕು ಬರೆದಿರುವ ದುರ್ಗಸಿಂಹನೆಂಬ ವೈಯಾಕರಣಿಯು ಕೂಡಾ ಕ್ರಿ.ಶ. ೮೦೦ರ ವೇಳೆಗೆ ಇದ್ದನೆಂದು ಹೇಳಲಾಗಿದೆ. ಗುಪ್ತರ ಕಾಲದಲ್ಲಿ ಅಮರಸಿಂಹನ ಅಮರಕೋಶ ಧನ್ವಂತರಿಯ ವೈದ್ಯಕೀಯ ನಿಘಂಟು, ನಂತರ ಹಲಾಯುಧನ ಅಭಿದಾನ ರತ್ನಮಲಾ ಎಂಬ ಶಬ್ದಕೋಶಗಳು ರಚನೆಯಾದವು.

ಪ್ರಾಚೀನ ಭಾರತದ ಸಂದರ್ಭದಲ್ಲಿ ವೈದ್ಯಕೀಯ, ಖಗೋಳಶಾಸ್ತ್ರ ಮತ್ತು ಗಣೀತ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಗಮನಾರ್ಹ ಕೃತಿಗಳೂ ರಚನೆಗೊಂಡವು. ವೃದ್ಧ ವಾಗ್ಭಟನ ಅಷ್ಟಾಂಗಸಂಗ್ರಹ ಎರಡನೆಯ ವಾಗ್ಭಟನ ಅಷ್ಟಾಂಗ ಹೃದಯ ಸಂಹಿತಾ ಮಾಧವಕರನ ರುಗ್ವಿನಿಶ್ಚಯ ಅಥವಾ ಮಾಧವನಿಧಾನ ವೃಂದನ ಸಿದ್ಧಯೋಗ ಅಥವಾ ವೃಂದಮಾಧವ ಇವುಗಳು ವೈದ್ಯಕೀಯ ವಿಜ್ಞಾನದ ಪ್ರಮುಖ ಕೃತಿಗಳಾಗಿವೆ. ಅಂಗದೇಶದ ರಾಜನಾದ ರೋಮಪಾದ ಮತ್ತು  ಪಾಲಕಾಪ್ಯ ಮುನಿಯ ನಡುವಿನ ಸಂಭಾಷಣಾ ರೂಪದ ಹಸ್ತಾಯುರ್ವೇದ, ಶಾಲಿಹೋತ್ರ ಮುನಿಯ ಅಶ್ವಶಾಸ್ತ್ರ ಇವುಗಳು ಆನೆ ಮತ್ತು ಕುದುರೆಗಳ ರೋಗ ಚಿಕಿತ್ಸಾ ಪದ್ಧತಿ ಕುರಿತ ಪ್ರಮುಖ ಕೃತಿಗಳಾಗಿವೆ. ವರಹಮಿಹಿರನ ಪಂಚಸಿದ್ಧಾಂತಿಕ ಖಗೋಳ ಶಾಸ್ತ್ರಕ್ಕೆ ಶ್ರೇಷ್ಠ ಕೊಡುಗೆಯಾಗಿದೆ. ಮತ್ತೋರ್ವ ಖಗೋಳ ವಿಜ್ಞಾನಿ ಆರ್ಯಭಟನ ಆರ್ಯಭಟೀಯಂ ದಶಗೀತಿಕಾಸೂತ್ರ ಮತ್ತು ಆರ್ಯಷ್ಟಶತ, ಪ್ರಮುಖ ಕೃತಿಗಳಾಗಿವೆ. ಗಣಿತಶಾಸ್ತ್ರ ಕ್ಷೇತ್ರದಲ್ಲಿ ಬ್ರಹ್ಮಗುಪ್ತನ ಬ್ರಹ್ಮಸಿದ್ಧಾಂತ, ಶ್ರೀಧರನು ರಚಿಸಿದ ಭಾಸ್ಕರಾಚಾರ್ಯನ ಲೀಲಾವತಿ ಇವುಗಳು ಪ್ರಧಾನ ಕೊಡುಗೆಗಳಾಗಿವೆ. ವರಾಹಮಿಹಿರನ ಬೃಹತ್‌ಸಂಹಿತಾ ಮತ್ತು ಮೂರನೇ ಸೋಮೇಶ್ವರನ ಮಾನಸೋಲ್ಲಾಸ ಇವುಗಳು ವಿರ್ಶವಕೋಶ ಮಾದರಿಯ ಕೃತಿಗಳಾಗಿವೆ.