ಫ್ಯೂಡಲ್ವಾದದ ಕುರಿತ ಟೀಕೆಗಳು

ಊಳಿಗಮಾನ್ಯ ಪದ್ಧತಿಯ ಬಗ್ಗೆ ಹರ್‌ಬನ್ಸ್‌ಮುಖಿಯ ಅವರು ಆರ್.ಎಸ್‌.ಶರ್ಮ ಅವರಿಗಿಂತ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ಬಂಡವಾಳಶಾಹಿಯಂತೆ ಊಳಿಗಮಾನ್ಯ ಪದ್ಧತಿ ಸಾರ್ವತ್ರೀಕರಣ ಹೊಂದಿರಲಿಲ್ಲ. ಭಾರತದಲ್ಲಿ ಭೂಮಿಯು ಹೇರಳವಾಗಿದ್ದು ಪಾಶ್ಚಿಮಾತ್ಯ ಬಗೆಯ ಊಳಿಗಮಾನ್ಯ ವ್ಯವಸ್ಥೆ ಹಾಗೂ ಜೀತಗಾರಿಕೆ ಪದ್ಧತಿಯ ಏಳಿಗೆ ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಕೆಲವು ವಿದ್ವಾಂಸರು ಭೂಮಿಯನ್ನು ದಾನದತ್ತಿ ಮತ್ತು ಕೊಡುಗೆಗಳ ಮುಖಾಂತರ ನೀಡುತ್ತಿದ್ದುರಿಂದ ಹೊಸ ಭೂ ಶ್ರೀಮಂತ ವರ್ಗ ಏರ್ಪಟ್ಟರೂ ಸಹ ವೈಯಕ್ತಿಕ ಹಿಡುವಳಿ ಹೊಂದಿದ್ದ ರೈತರ ಸಂಖ್ಯೆ ಸಾಕಷ್ಟಿದ್ದಿತು. ರಾಜ್ಯ ಸರ್ಕಾರ ದಾನದತ್ತಿ ನೀಡಲು ವೈಯಕ್ತಿಕ ವ್ಯಕ್ತಿಗಳಿಂದ ಭೂಮಿಯನ್ನು ಕಂಡುಕೊಳ್ಳುತ್ತಿದ್ದ ನಿದರ್ಶನಗಳಿದ್ದವು ಎಂದಿದ್ದಾರೆ. ಡಿ.ಸಿ. ಸರ್ಕಾರ್ ಅವರು ಗುಪ್ತಕಾಲದ ನಂತರ ನಗರಗಳ ವಿನಾಶ, ವ್ಯಾಪಾರ, ನಾಣ್ಯವ್ಯವಸ್ಥೆಯ ಅವನತಿಗಳಿಗೆ ಪ್ರಾಕ್ತನ ಆಧಾರಗಳು ಸಮರ್ಥನೆ ನೀಡುತ್ತಿಲ್ಲ ಎಂದು ವಾದಿಸಿದ್ದಾರೆ.

ಮೇಲಿನ ಹೆಳಿಕೆಗಳನ್ನು ಫ್ಯೂಡಲ್ ವಾದದ ಸಮರ್ಥಕರು ಎದುರಿಸಲು ಪ್ರಯತ್ನಿಸಿದ್ದಾರೆ. ಶರ್ಮ ಅವರ ಪ್ರಕಾರ ಭಾರತದಲ್ಲಿನ ಊಳಿಗಮಾನ್ಯ ಪದ್ಧತಿಯ ಸ್ವೂರೂಪ ಪ್ರಪಂಚದ ಅನ್ಯ ಭಾಗದಲ್ಲಿದ್ದ ಊಳಿಗಮಾನ್ಯ ಪದ್ಧತಿಗಿಂತ ಭಿನ್ನವಾಗಿತ್ತು. ಆದರೆ ಊಳಿಗಮಾನ್ಯ ಪದ್ಧತಿಯ ಮೂಲ ಅವಶ್ಯಕತೆಗಳು ಭಾರತದಲ್ಲಿ ಅಸ್ತಿತ್ವದಲ್ಲಿದ್ದವು. ಯುರೋಪಿನ ಅನೇಕ ಅಂಶಗಳು ಇಲ್ಲಿ ತದ್ವತ್ತಾಗಿ ಕಂಡುಬರುವುದಿಲ್ಲ.

ಫ್ಯೂಡಲ್‌ವಾದಿಗಳ ವಿಮರ್ಶಕರು ಮತ್ತೊಂದಷ್ಟು ಪ್ರಶ್ನೆ ಎತ್ತುತ್ತಾರೆ:

೧. ಫ್ಯೂಡಲ್‌ ವ್ಯವಸ್ಥೆಯ ಮೂಲಭೂತ ಅಂಗಗಳೆಂದರೆ ರಾಜ ಮತ್ತು ಸಾಮಂತನ ಮಧ್ಯದ ಒಪ್ಪಂದ ಹಾಗೂ ಊಳಿಗವನ್ನೇ ಆಧರಿಸಿ ನಿಂತ ಕೃಷಿ ವ್ಯವಸ್ಥೆ. ಇವೆರಡೂ ಭಾರತದಲ್ಲಿ ಇರಲಿಲ್ಲ ಅಂದ ಮೇಲೆ ಇದನ್ನು ಭಾರತದ ಫ್ಯೂಡಲಿಸಂ ಎಂದಾದರೂ ಏಕೆ ಕರೆಯಬೇಕು?

೨. ಸಮಸ್ತ ಭಾರತಕ್ಕೂ ಅನ್ವಯವಾಗುವ ಒಂದು ವ್ಯವಸ್ಥೆ ಇದರ ಇತಿಹಾಸದ ಯಾವುದೇ ಕಾಲದಲ್ಲೂ ಇರಲಿಕ್ಕೆ ಸಾಧ್ಯವಿಲ್ಲ. ಹಾಗಾಗಿ ಮಧ್ಯಕಾಲೀನ ಭಾರತವನ್ನು ಫ್ಯೂಡಲ್‌ ಎಂದು ಸಾರಾಸಗಟಾಗಿ ಕರೆಯುವುದರಲ್ಲಿ ಅರ್ಥವಿಲ್ಲ.

ಘಟಕ ಪ್ರಭುತ್ವ ಅಥವಾ ಸೆಗ್ಮೆಂಟರಿ ಪ್ರಭುತ್ವ

ಈ ಸಿದ್ಧಾಂತವನ್ನು ಮಂಡಿಸಿದವರು ಬರ್ಟನ್‌ ಸ್ಟೈನ್‌. ಬರ್ಟನ್‌ ಸ್ಟೈನ್‌ರವರು ಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ಚೋಳರ ಆಡಳಿತವನ್ನು ಸೆಗ್ಮೆಂಟರಿ ಸ್ಟೇಟ್‌ (segmentary state) ಎಂದು ಕರೆದರು. ಅದೇ ಮಾದರಿಯನ್ನು ವಿಜಯನಗರ ಆಡಳಿತಕ್ಕೂ ಅವರು ಹೋಲಿಸಿದ್ದಾರೆ. ಈ ಅಂಶವನ್ನು ಪೆಸೆಂಟ್‌ ಸ್ಟೇಟ್‌ ಆಂಡ್‌ ಸೊಸೈಟಿ ಇನ್‌ ಸೌತ್‌ ಇಂಡಿಯ ಎನ್ನುವ ಕೃತಿಯಲ್ಲಿ ಬರ್ಟನ್‌ ಸ್ಟೈನ್‌ರವರು ವಿವರಿಸಿದ್ದಾರೆ. ಇವರು ನೀಲಕಂಠ ಶಾಸ್ತ್ರಿಯವರ ಕೇಂದ್ರೀಕೃತ ಪ್ರಭುತ್ವ ಮಾದರಿಯನ್ನು ಅಲ್ಲಗಳೆಯುತ್ತಾರೆ. ಏಕೆಂದರೆ ಚೋಳ ಪ್ರಭುತ್ವವು ಅನೇಕ ಸ್ಥಾನಿಕ ಸ್ವಾಯತ್ತ ಘಟಕಗಳಿಂದ ಕೂಡಿತ್ತೆನ್ನುವುದು ಸ್ಪಷ್ಟವಾಗಿದೆ. ಆದರೆ ಅದು ಫ್ಯೂಡಲ್‌ ಮಾದರಿ ಎಂಬುದನ್ನು ಕೂಡಾ ಒಪ್ಪುವುದಿಲ್ಲ. ಚೋಳ ಪ್ರಭುತ್ವವು ಫ್ಯೂಡಲ್‌ ಒಪ್ಪಂದವನ್ನಾಗಲೀ, ಊಳಿಗವನ್ನಾಗಿಲೀ ಆಧರಿಸಿರಲಿಲ್ಲ.

ಬರ್ಟನ್‌ಸ್ಟೈನ್‌ ತನ್ನ ವಾದವನ್ನು ಮುಂದುವರೆಸುತ್ತಾ ರಾಜನ ಪ್ರಭುತ್ವದ ಬಗ್ಗೆಯೂ ವಿವರಿಸಿದ್ದಾರೆ. ಇವರ ಪ್ರಕಾರ ರಾಜ ತನ್ನ ಕೇಂದ್ರದಲ್ಲಿ ಮಾತ್ರ ನಿಜವಾದ ಸಾರ್ವಭೌಮವಾಗಿದ್ದು ತನ್ನ ನೇರ ಅಧಿಕಾರವನ್ನು ಹೊಂದಿರುತ್ತಾನೆ. ಇದನ್ನೇ ಬರ್ಟನ್‌ ಸ್ಟೈನ್‌ರವರು ನಿಜವಾದ ಸಾರ್ವಭೌಮತ್ವ ಎಂದು ಕರೆದಿದ್ದಾರೆ. ಇದು ಸಾಮ್ರಾಜ್ಯದ ತಿರುಳಿನ / ಕೆಂದ್ರದ (core) ಭಾಗದಲ್ಲಿ ಪ್ರಚಲಿತದಲ್ಲಿರುತ್ತದೆ. ಆದರೆ ಸಾಮ್ರಾಜ್ಯದ ಇತರೆ ಪ್ರಾಂತ್ಯಗಳ ರಾಜರು ತಮ್ಮ ಪ್ರಾಂತ್ಯದಲ್ಲಿ ತಮ್ಮದೇ ಅಧಿಕಾರವನ್ನು ಚಲಾಯಿಸಿ ನಿಜವಾದ ಅಧಿಕಾರಿಗಳಾಗಿದ್ದು ಸಾಮ್ರಾಟಿನಿಗೆ ವಿಧೇಯರಾಗಿರುತ್ತಿದ್ದರು. ಇದೇ ರೀತಿ ಸ್ಥಾನಿಕ ಆಡಳಿತ ಘಟಕಗಳಾದ ನಾಡು, ಗ್ರಾಮ, ಅಗ್ರಹಾರ, ದೇವಾಲಯ, ಮಠ, ವ್ಯಾಪಾರೀ ಶ್ರೇಣಿ ಮುಂತಾದವು ಕೂಡ ತಮ್ಮದೇ ಶಾಸನಗಳನ್ನು ರೂಪಿಸಿಕೊಂಡು ಅಧಿಕಾರ ಚಲಾಯಿಸುವ ಅಧಿಕಾರವನ್ನು ಹೊಂದಿದ್ದವು. ಈ ವಲಯವನ್ನು ಸಾಮ್ರಾಜ್ಯದ ಅಂಚು (periphery) ಎಂದು ಸ್ಟೈನ್‌ ಕಲ್ಪಿಸುತ್ತಾರೆ. ಈ ವಲಯಗಳಲ್ಲೆಲ್ಲ ಇದ್ದುದು ವಿಧಿ ಆಚರಣೆಯ (ritual) ಸಾರ್ವಭೌಮತ್ವವಾಗಿದೆ. ಈ ರೀತಿ ಈ ಎರಡು ಪ್ರಕಾರದ ಸಾರ್ವಭೌಮತ್ವಗಳೇ ಘಟಕ ಪ್ರಭುತ್ವದ ಮೂಲ ಲಕ್ಷಣವಾಗಿದೆ.

ಅಂಚು ಎಂದರೆ ಒಪ್ಪಿತವಾದ ಪ್ರಭುತ್ವವಾಗಿದೆ. ಅಂದರೆ ಅದು ನೇರವಾದ ಹಿಡಿತವಿಲ್ಲದ ಪ್ರದೇಶವಾಗಿದೆ. ಈ ಭಾಗದಲ್ಲಿ ವಿಜಯನಗರ ಸಾಮ್ರಾಜ್ಯದ ಒಂದು ಧಾರ್ಮಿಕ ಶ್ರದ್ಧೆಯನ್ನೂ ಗುರುತಿಸುತ್ತೇವೆ. ಧಾರ್ಮಿಕ ಶ್ರದ್ಧೆಯ ಆಧಾರದ ಮೇಲೆ ರಾಜ ಎಂದು ಒಪ್ಪುವ ಒಂದು ಒಪ್ಪಿತವಾದ ಪ್ರಭುತ್ವನ್ನು ‘ಅಂಚಿನಲ್ಲಿ’ ಕಾಣಬಹುದು. ‘ತಿರುಳಿನಲ್ಲಿ’ ಪ್ರತ್ಯಕ್ಷವಾದ ಆಡಳಿತವಿದ್ದರೆ, ‘ಅಂಚಿನಲ್ಲಿ’ನಲ್ಲಿ ಅಪ್ರತ್ಯಕ್ಷವಾದ ಆಡಳಿತವಿತ್ತು ಎಂದು ಹೇಳಿದ್ದಾರೆ.

‘ಅಂಚಿನಲ್ಲಿ’ ಅನೇಕ ಸ್ವಾಯುಕ್ತ ಘಟಕಗಳೂ ಇರುತ್ತವೆ. ಅವುಗಳೆಂದರೆ ನಾಡು, ನಿಗಮ, ಅಗ್ರಹಾರ, ದೇವಾಲಯ, ಶ್ರೇಣಿ, ಕುಲಗಳು, ಹಳ್ಳಿಗಳು ಇವೆಲ್ಲವೂ ಸ್ವಾಯತ್ತ ಸರ್ಕಾರಗಳೂ ಆಗಿದ್ದವು. ನಾಡುಗಳಲ್ಲಿ ಮುಖಂಡನಿದ್ದು ಅಲ್ಲಿನ ಆಡಳಿತವನ್ನು ಅವನೇ ಮಾಡುತ್ತಿದ್ದನು. ಅಲ್ಲಿನ ಆಡಳಿತ, ನ್ಯಾಯದಾನ, ಕಂದಾಯ ಸಮಸ್ಯೆಗಳ ನಿವಾರಣೆಯನ್ನು ಅವರೇ ಮಾಡಿಕೊಳ್ಳುತ್ತಿದ್ದರು. ಬರ್ಟನ್‌ ಸ್ಟೈನ್‌ರವರು ಚೋಳ ಆಡಳಿತವು ಘಟಕ ಪ್ರಭುತ್ವವಾಗಿತ್ತು ಎಂದು ಹೇಳಲು ಕಾರಣವೆಂದರೆ ಆಳ್ವಿಕೆ ತುಂಡು ತುಂಡು ಆಗಿ ಅಸ್ತಿತ್ವದಲ್ಲಿತ್ತು ಎಂಬ ಕಾರಣಕ್ಕೆ. ಮಠಗಳು, ನಿಗಮಗಳೂ, ಪಾಳೆಯಗಾರರು, ದೇವಾಲಯಗಳು ತಮ್ಮ ಮಟ್ಟಿಗೆ ತಾವೇ ಸ್ವ-ಆಳ್ವಿಕೆಯನ್ನು ಹೊಂದಿದ್ದವು. ಸಂಸ್ಥಾನಗಳಲ್ಲಿ ಮತ್ತು ಮಂಡಲಗಳಲ್ಲಿ ಅನುವಂಶಿಯಾಗಿಯೂ, ಶಾಸ್ತ್ರಯುಕ್ತವಾಗಿಯೂ ಪಟ್ಟಾಭಿಷೇಕಗಳು ನಡೆಯುತ್ತಿದ್ದವು.

ಅಗ್ರಹಾರಗಳಲ್ಲಿ ಬ್ರಾಹ್ಮಣರಿದ್ದು ಅವರೇ ಅಗ್ರಹಾರಗಳ ಸಂಪೂರ್ಣ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಇಂತಹ ಆಡಳಿತದಲ್ಲಿ ರಾಜ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಆದರೆ ಈ ಎಲ್ಲರೂ ಚೋಳ ರಾಜರನ್ನು ನಮ್ಮ ದೊರೆಗಳು ಎಂಬ ಒಂದು ಗೌರವವನ್ನು ಹೊಂದಿದ್ದರು. ಆದರೆ ಘಟಕಗಳಲ್ಲಿ ಅವರದೇ ಅದ ಆಡಳಿತವಿದ್ದಿತು. ಈ ಘಟಕಗಳ ಮೇಲೆ ಇವರಿಗೆ ಅಪ್ರತ್ಯಕ್ಷವಾದ ಹಿಡಿತ ಅಥವಾ ಪ್ರಭುತ್ವ ಇದ್ದಿತು ಎಂದು ಹೇಳುತ್ತಾರೆ.

ಘಟಕ ಪ್ರಭುತ್ವದ ಕುರಿತೂ ಸಾಕಷ್ಟು ಟೀಕೆಗಳು ಬಂದಿವೆ. ಸ್ಟೈನರು ಆಧಾರಗಳನ್ನು ಸರಿಯಾಗಿ ವಿಶ್ಲೇಷಿಸಿಲ್ಲ ಎಂಬುದದಾಗಿ ಜಪಾನೀ ವಿದ್ವಾಂಸರದ ನೊಬೊರು ಕರಾಷಿಮ ಟೀಕಿಸಿದ್ದಾರೆ. ಜೊತೆಗೇ ಸ್ಟೈನರ ವಾದವು ಭಾರತೀಯ ಸಮಾಜ ಜಡವಾದುದು ಎಂಬ ವಸಾಹತು ವಾದವನ್ನು ಪುಷ್ಟೀಕರಿಸುತ್ತದೆ ಎಂಬ ಟೀಕೆಯೂ ಇದೆ.

ನಗರಗಳ ಅವನತಿ

ಭಾರತದ ಚರಿತ್ರೆಯಲ್ಲಿ ಕ್ರಿ.ಶ. ೪ನೆಯ ಶತಮಾನದ ನಂತರದ ಯುಗವನ್ನು ಫ್ಯೂಡಲ್‌ ವ್ಯವಸ್ಥೆ ಎಂದು ಕರೆಯಬೇಕೋ ಬೇಡವೊ ಎಂಬ ಚರ್ಚೆಗೂ ಹೊರತಾಗಿ ಈ ಚರ್ಚೆಯು ಭಾರತೀಯ ಇತಿಹಾಸದ ಕುರಿತು ಕೆಲ ಮಹತ್ವದ ವಿಷಯಗಳನ್ನು ಬೆಳಕಿಗೆ ತಂದಿದೆ. ಅವುಗಳಲ್ಲಿ ಒಂದೆಂದರೆ ಗುಪ್ತಕಾಲದ ನಂತರ ೧೨ನೆಯ ಶತಮಾನದವರೆಗೆ ಭಾರತೀಯ ಆರ್ಥಿಕ ಜೀವನದಲ್ಲಿ ನಡೆದ ಪಲ್ಲಟ. ಈ  ಕಾಲದಲ್ಲಿ ಭೂಮಿಯೇ ಆದಾಯದ ಪ್ರಮುಖ ಮೂಲವಾಗಿದ್ದು, ವ್ಯಾಪಾರ ವ್ಯವಹಾರಗಳು ಇನ್ನಿಲ್ಲದಂತೆ ಕುಸಿದವು. ರೋಮನ್‌ ಸಾಮ್ರಾಜ್ಯದೊಂದಿಗೆ ವ್ಯಾಪಾರ ವಾಣಿಜ್ಯವು ಮೂರನೆಯ ಶತಮಾನದಲ್ಲಿ. ಇರಾನ್‌ ಹಾಗೂ ಬೈಜಾಂಟಿಯನ್‌ ಅಥವಾ ಪೂರ್ವ ರೋಮನ್‌ ಸಾಮ್ರಾಜ್ಯದೊಂದಿಗಿನ ರೆಷ್ಮೆ ವ್ಯಾಪಾರವು ಆರನೆಯ ಶತಮಾನದ ಮಧ್ಯಭಾಗದಲ್ಲಿ ನಿಂತು ಹೋಯಿತು. ಆರನೆಯ ಶತಮಾನದ ನಂತರ ಅವನತಿ ಇನ್ನಷ್ಟು ತೀವ್ರವಾಯಿತು. ಇದರ ನೇರ ಪರಿಣಾಮ ಭಾರತದ ಅರ್ಥವ್ಯವಸ್ಥೆಯ ಮೇಲಾಯಿತು. ಚೀನಾ ಹಾಗೂ ಆಗ್ನೇಯ ಏಷ್ಯಾಗಳೊಂದಿಗಿನ ವಾಣಿಜ್ಯವು ಅಷ್ಟಿಷ್ಟು ಜರುಗುತ್ತಿತ್ತಾದರೂ ಅದರ ಲಾಭವೆಲ್ಲಾ ಮಧ್ಯವರ್ತಿಗಳಾಗಿದ್ದ ಅರಬ್ಬರ ಪಾಲಿನದಾಗುತ್ತಿತ್ತು. ಮುಸ್ಲಿಮ್‌ಪೂರ್ವ ಕಾಲಾವಧಿಯಲ್ಲಿ ಭಾರತದ ರಪ್ತು ವ್ಯಾಪಾರವು ಬಹುಮಟ್ಟಿಗೆ ಅರಬ್ಬರ ಹಿಡಿತದಲ್ಲಿತ್ತು. ಆರನೆಯ ಶತಮಾನದಿಂದ ಮುಂದಿನ ಮುನ್ನೂರು ವರ್ಷಗಳ ಅವಧಿಯ ವಾಣಿಜ್ಯದ ಅವನತಿಯನ್ನು ಕಾಣುತ್ತಿದೆಯೋ ಎನ್ನುವಂತೆ ದೇಶದಲ್ಲೆಲ್ಲೂ ಆ ಶತಮಾನಗಳಲ್ಲಿ ಹಿಂದಿನ ರೀತಿ ನಾನಾ ಲೋಹಗಳ, ಮುಖಬೆಲೆಯ ವಿಫುಲ ನಾಣ್ಯಗಳು ಕಂಡುಬರುವುದಿಲ್ಲ. ಉತ್ತರ ಭಾರತ ಮತ್ತು ದಕ್ಷಿಣ ಭಾರತಗಳೆರಡರಲ್ಲೂ ಆರನೆಯ ಶತಮಾನದ ನಂತರ ನಾಣ್ಯಗಳ ಕೊರತೆ ಎದ್ದು ಕಾಣುತ್ತದೆ.

ವಾಣಿಜ್ಯದ ಅವನತಿಯ ನೇರ ಪರಿಣಾಮ ನಗರಗಳ ಮೇಲಾಯಿತು. ಶಾತವಾಹನರು ಹಾಗೂ ಕುಶಾನರ ಆಳ್ವಿಕೆಯಲ್ಲಿ ಪಶ್ಚಿಮ ಮತ್ತು ಉತ್ತರ ಭಾರತಗಳಲ್ಲಿ ನಗರಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವು. ಗುಪ್ತರ ಕಾಲದಲ್ಲೂ ಕೆಲವು ಪಟ್ಟಣಗಳು ಸುಸ್ಥಿತಿಯಲ್ಲಿದ್ದವು. ಗುಪ್ತರ ನಂತರದ ಅವಧಿಯಲ್ಲಿ ಉತ್ತರ ಭಾರತದ ಹಲವಾರು ವ್ಯಾಪಾರ ಕೇಂದ್ರಗಳು ನಾಶವಾದವು. ಈ ಕಾಲದಲ್ಲಿ ಕೃಷಿಯೇ ಎಲ್ಲಾ ಚಟುವಟಿಕೆಗಳ ಮೂಲವಾಯಿತು. ಕೃಷಿ ಅರ್ಥವ್ಯವಸ್ಥೆಯು ನಗರ ವ್ಯವಸ್ಥೆಗೆ ಪೂರಕವಾಗಿಲ್ಲದ್ದು ನಗರಗಳ ಅವಶ್ಯಕತೆಯನ್ನು ಇನ್ನಷ್ಟು ಕಡೆಗಣಿಸಿತು. ಗ್ರಾಮಗಳ ಆರ್ಥಿಕ ಸ್ವಾವಲಂಬನೆಯಿಂದಾಗಿ ವ್ಯಾಪಾರಿಗಳೂ ನಗರಗಳಿಂದ ಗ್ರಾಮಗಳತ್ತ ಚಲಿಸಲಾರಂಭಿಸಿದರು. ಇದು ಸಂಥೆಗಳ ರೂಪದಲ್ಲಿ ಕಂಡುಬರುತ್ತದೆ. ಕ್ರಿ.ಶ. ಆರನೆಯ ಶತಮಾನದ ನಂತರ ನಗರಗಳ ವರ್ತಕರು ಗ್ರಾಮಗಳತ್ತ ಚಲಿಸಿ ವಾರದ ಸಂತಗಳನ್ನೇರ್ಪಡಿಸುವ ಪರಿಪಾಠ ಬೆಳೆಸಿಕೊಂಡಿದ್ದು ಕಂಡುಬರುತ್ತದೆ. ಇದು ನಗರಗಳು ಅವನತಿ ಹೊಂದಿರುತ್ತಿದ್ದುದನ್ನು ಸ್ಪಷ್ಟಪಡಿಸುತ್ತದೆ. ಈ ಕಾಲವನ್ನು ಕುರಿತು ಬರೆಯುವ ಅರಬ್ಬೀ ಭೂಗೋಳಶಾಸ್ತ್ರಜ್ಞರು ಚೀನಾದೊಂದಿಗೆ ಹೋಲಿಸಿ ನೋಡಿದಾಗ ಭಾರತದಲ್ಲಿ ಪಟ್ಟಣಗಳ ಅಭಾವವಿತ್ತೆಂದು ಅಭಿಪ್ರಾಯಪಟ್ಟಿದ್ದಾರೆ. ಹ್ಯೊಯೆನ್‌ತ್ಸಾಂಗ್‌ನು ಬುದ್ಧನಿಗೆ ಸಂಬಂಧಪಟ್ಟ ಹಲವಾರು ಊರುಗಳಲ್ಲಿ ಪ್ರವಾಸ ಮಾಡಿ ಅವು ನಿರ್ಜನವಾಗುತ್ತಿದ್ದುದನ್ನೂ, ಪಾಳು ಬೀಳುತ್ತಿದ್ದುದನ್ನೂ ತನ್ನ ಪ್ರವಾಸ ಕಥನದಲ್ಲಿ ಪ್ರಸ್ತಾಪಿಸಿದ್ದಾನೆ.

ಉತ್ಖನನಗಳೂ ಕೂಡ ಗುಪ್ತೋತ್ತರ ಕಾಲದಲ್ಲಿ ಭಾರತದಲ್ಲಿ ನಗರಗಳು ಅವನತಿ ಹೊಂದಿದ್ದನ್ನು ಸೂಚಿಸುತ್ತವೆ. ಹರಿಯಾಣ ಮತ್ತು ಪೂರ್ವ ಪಂಜಾಬುಗಳ ಹಲವಾರು ಊರುಗಳು ಉದಾಹರಣೆಗೆ ಪುರಾನ್‌ಕಿಲಾ (ದೆಹಲಿ), ಮಥುರಾ, ಹಸ್ತಿನಾಪುರ (ಮೀರತ್‌ಜಿಲ್ಲೆ), ಶ್ರಾವಸ್ತಿ, ಕೌಶಾಂಬಿ, ರಾಜಘಾಟ್‌ (ವಾರಣಾಸಿ), ಚಿರಾಂಡ್ (ಸರನ್ ಜಿಲ್ಲೆ), ವೈಶಾಲಿ ಹಾಗೂ ಪಾಟೀಲಪುತ್ರಗಳು ಗುಪ್ತರ ಕಾಲದಲ್ಲಿ ಅವನತಿಯಾಗಿ, ಗುಪ್ತೋತ್ತರ ಕಾಲದಲ್ಲಿ ಅಳಿದುಹೋದವೆಂಬುದನ್ನು ಉತ್ಪನ್ನಗಳು ತೋರಿಸಿವೆ. ಇದೇ ರೀತಿ ಉತ್ತರ ಪ್ರದೇಶದ ಸೋಹ್‌ಗೌರಾ, ಬಿಟಾ, ಅಲಹಾಬಾದಿನ ಬಳಿಯಿರುವ ಶೃಂಗಬೇರುಪುರ, ಅತ್ರಂಜಿಖೇರಾ, ಮೀರತ್‌ ಹಾಗೂ ಮುಜಾಫರ್ ನಗರ ಜಿಲ್ಲೆಗಳ ಹಲವು ನಿವೇಶನಗಳು ಕುಶಾನರ ನಂತರದ ಕಾಲದಲ್ಲಿ ಅವನತಿಯತ್ತ ಸಾಗಿದ್ದುದನ್ನು ಉತ್ಖನನಗಳು ಹೊರಗೆಡಹಿವೆ. ಮಥುರಾದಲ್ಲಿರುವ ಸೋಂಖ್‌ ಉತ್ಖನನಗಳು ಕುಶಾನರ ಕಾಲದ ಏಳು ಸ್ತರಗಳನ್ನು ತೋರಿಸುತ್ತವೆ. ಅಲ್ಲಿ ಗುಪ್ತರ ಕಾಲದ್ದು ಒಂದೇ ಸ್ತರ ಹಾಗೂ ನಂತರ ಸಂಪೂರ್ಣ ಅವನತಿಯಾಗಿದ್ದನ್ನು ಸೂಚಿಸುತ್ತವೆ. ಕೆಲವು ಕಡೆ ಕುಶಾನರ ಕಾಲದಲ್ಲಿ ಬಳಸಿದ ಇಟ್ಟಿಗೆಗಳನ್ನೇ ಬಳಸಿ ಪುನಃ ಕಟ್ಟಡಗಳನ್ನು ಕಟ್ಟಿರುವುದು ಕಂಡುಬರುತ್ತದೆ. ಇದು ಆರ್ಥಿಕ ಕುಸಿತವನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಭಾರತದ ರಫ್ತುಗಳಿಗೆ ಗಿರಾಕಿ ತಪ್ಪಿದ ಕಾರಣ ಊರುಗಳಲ್ಲಿ ನೆಲೆಸಿದ್ದ ಕಸುಬುಗಾರರು ಹಾಗೂ ವ್ಯಾಪಾರಿಗಳು ಗ್ರಾಮಾಂತರಗಳಿಗೆ ಹೋಗಿ ಕೃಷಿಯನ್ನು ಕೈಗೊಂಡ ಉದಾಹರಣೆಯಿದೆ. ಐದನೆಯ ಶತಮಾನದ ಕೊನೆಯಲ್ಲಿ ಪಶ್ಚಿಮ ಕರಾವಳಿಯ ರೇಷ್ಮೆ ನೇಕಾರರ ಗುಂಪೊಂದು ಮಾಳವದ ಮಂಡಸೂರಿಗೆ ಬಂದು ಬೇರೆ ವೃತ್ತಿಯನ್ನು ಹಿಡಿದು ಎಣ್ಣೆ, ಉಪ್ಪು, ಮಸಾಲೆ ವಸ್ತುಗಳೂ ಬಟ್ಟೆ ಮುಂತಾದ ತಮ್ಮ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳುವ ಪರಿಸ್ಥಿತಿಗೆ ಗುರಿಯಾದರು. ಇದರಿಂದ ಉತ್ಪಾದನೆಯು ಭೂಮಾಲೀಕರಿಂದ ಹೆಚ್ಚನ ಪಾಲಿಗಾಗಿ ಬೇಡಿಕೆಗೆ ಕಾರಣವಾಗುತಿತ್ತು.  ಉತ್ಪಾದನೆಯನ್ನು ಸುಧಾರಿಸಲು ಉತ್ತೇಜನವಿರದಿದ್ದರಿಂದ ಅಸ್ತಿತ್ವದಲ್ಲಿದ್ದ  ಕೃಷಿ ಉತ್ಪಾದನೆಯ ಮುಖ್ಯ ಉತ್ಪಾದನಾ ಮಾರ್ಗವಾಯಿತು. ಪರಿಮಿತ ಉತ್ಪಾದನೆ ಮತ್ತು ವ್ಯಾಪಾರದ ಅಭಾವದಿಂದ ನಾಣ್ಯಗಳ ಬಳಕೆ ಕಡಿಮೆಯಾಯಿತು. ದೂರ ದೂರದ ವ್ಯಾಪಾರವನ್ನು ಕಠಿಣವಾಗಿಸುವಂತಹ ಬಹು ವಿಧದ ಸ್ಥಳೀಯ ತೂಕಗಳು ಮತ್ತು ಅಳತೆಗಳ ಉಗಮದಿಂದ ವ್ಯಾಪಾರಕ್ಕೆ ಇನ್ನೂ ತಡೆಯಾಯಿತು. ಸಾಮಂತರ ಹಗೂ ರಾಜರ ಹೆಚ್ಚುವರಿ ಸಂಪತ್ತು ಕುಶಲ ಉತ್ಪಾದನೆಯಲ್ಲಿ ಅಥವಾ ವ್ಯಾಪಾರದಲ್ಲಿ ತೊಡಗದೆ ಆಡಂಬರದ ಉಪಭೋಗಕ್ಕೆ ಬಳಸಲ್ಪಟ್ಟಿತು.

ದಖನ್ನಿನಲ್ಲೂ ಹೀಗೆ ಆಯಿತು. ಕ್ರಿ.ಶ. ಮೂರನೆಯ ಶತಮಾನದಲ್ಲಿ ರೋಮನ್ ಸಾಮ್ರಾಜ್ಯದ ಜೊತೆಗೆ ಭಾರತದ ವ್ಯಾಪಾರ ಸ್ಥಗಿತಗೊಂಡ ಮೇಲೆ ನಗರಗಳು ತಮ್ಮಲ್ಲಿ ವಾಸ ಮಾಡುತ್ತಿದ್ದ ಕಸುಬುಗಾರರು ಹಾಗೂ ವ್ಯಾಪಾರಸ್ಥರಿಗೆ ಆಶ್ರಯ ನೀಡಲಾರದೆ ಸೊರಗಿದವು. ದಖನ್ನಿನ ಉತ್ಖನನಗಳು ಶಾತವಾಹನಕಾಲದ ನಂತರ ನಗರಗಳ ಅವನತಿ ಸ್ಥಿತಿಯನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಕೃಷಿಯ ವಿಸ್ತರಣೆ ಹಾಗೂ ಸ್ವಯಂಪೂರ್ಣ ಗ್ರಾಮಗಳ ನಿರ್ಮಾಣವೂ ವ್ಯಾಪಾರ ಮತ್ತು ನಗರಗಳ ಆಸ್ತಿತ್ವ ಕೊನೆಗಾಣಲು ಕಾರಣವಾಯಿತು.

ಪ್ರಾಚೀನ ಭಾರತದಲ್ಲಿ ಕೃಷಿಯ ಅಭಿವೃದ್ದಿ

ಸಂಸ್ಕೃತಿ ಮತ್ತು ನಾಗರಿಕತೆಯ ಬೆಳವಣೆಗೆಯಲ್ಲಿ ಕೃಷಿಯ ಪ್ರಧಾನ ಪಾತ್ರವನ್ನು ವಹಿಸಿದೆ. ಪ್ರಾಚೀನ ಭಾರತದ ಸಂದರ್ಭದಲ್ಲಿ ಕೃಷಿಯು ಆಹಾರದ ಪ್ರಧಾನ ಮೂಲ ಮಾತ್ರವಾಗಿರದೇ, ರಾಜ್ಯದ ಆದಾಯದ ಪ್ರಮುಖ ಮೂಲವು ಆಗಿದ್ದಿತ್ತು. ಹೀಗಾಗಿ ರಾಜ್ಯವು ಕೃಷಿಯ ಅಭಿವೃದ್ದಿ ಮತ್ತು ವಿಸ್ತರಣೆಯ ಕಡೆಗೆ ಗಮನಹರಿಸಿದ್ದಿತು. ರಾಜ್ಯ ಮತ್ತು ಕೃಷಿ ವ್ಯವಸ್ಥೆಗಳ ನಡುವಿನ ಸಂಬಂಧವು ಉತ್ತಮವಾಗಿದ್ದಾಗ ಕೃಷಿಯ ಅಭಿವೃದ್ದಿಗೆ ಪೂರಕ ಸನ್ನಿವೇಶವಿರುತ್ತದೆ. ಇಂತಹ ಸನ್ನಿವೇಶವು ಪ್ರಾಚೀನ ಭಾರತದ ಸಂದರ್ಭದಲ್ಲಿದ್ದಿತು. ನೀರಾವರಿ ಸೌಲಭ್ಯಗಳನ್ನು ಒದಗಿಸುವಲ್ಲಿ ಮತ್ತು ಕೃಷಿಯ ವಿಸ್ತರಣೆಗೆ ರಾಜ್ಯವು ನೀಡಿದ ಇದನ್ನು ಸಮರ್ಥಿಸುತ್ತದೆ. ಈ ಅಧ್ಯಾಯದಲ್ಲಿ ಗುಪ್ತರ ಕಾಲದಿಂದ ಕ್ರಿಸ್ತಶಕ ಹನ್ನೆರಡನೆಯ ಶತಮಾನದವರೆಗಿನ ಅವಧಿಯಲ್ಲಿನ ಕೃಷಿಯ ಬೆಳವಣೆಗೆ ಕುರಿತು ವಿಶ್ಲೇಷಿಸಲಾಗದೆ. ಈ ಅವಧಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಸಿದಂತೆ, ಕೆಲವು ಪ್ರಮುಖ ಬೆಳವಣಿಗೆಗಳನ್ನು ನೋಡಬಹುದಾಗಿದೆ. ಅವುಗಳನ್ನು ಅರಣ್ಯ ಭೂಮಿ, ಸಾಗರ ತೀರ ಪ್ರದೇಶ ಮತ್ತು ಬಂಜರು ಭೂಮಿಗಳನ್ನು ಕೃಷಿ ಭೂಮಿಯಾಗಿ ಪರಿವರ್ತಸಿರುವುದು, ಕಾಲುವೆ ತಂತ್ರಜ್ಞಾನದ ಅಭಿವೃದ್ದಿ, ಹೊಸ ಗ್ರಾಮಗಳ ರಚನೆ ಮತ್ತು ಕೃಷಿ ಉತ್ಪನ್ನದಲ್ಲಿ ಹೆಚ್ಚಳವಾಗಿರುವುದು ಎಂದು ಗುರುತಿಸಬಹುದು.

ಆಧಾರಗಳು

ಪ್ರಾಚೀನ ಭಾರತದ ಕೃಷಿ ಸಂಬಂಧಿತ ವಿಚಾರಗಳನ್ನು ಅರಿಯಲು ಸಾಕಷ್ಟು ಆಧಾರಗಳಿವೆ. ನಂತರದ ವೇದಗಳ ಕಾಲದಲ್ಲಿ ಕೃಷಿಯ ವಿಧಾನ ಮತ್ತು ತಂತ್ರಜ್ಞಾನವು ಸ್ವಲ್ಪಮಟ್ಟಿನ ಸ್ವರೂಪವನ್ನು ಪಡೆಯಿತೆಂದು ಬಿ.ಪಿ. ರಾಯ್ ಅವರು ಅಭಿಪ್ರಾಯಿಸಿದ್ದಾರೆ. ಗುಪ್ತನ ಯುಗದಲ್ಲಿ ರಚನೆಯಾದ ವರಹಾಮಿಹಿರನ ಬೃಹತ್ ಸಂಹಿತದಲ್ಲಿ ಭೂಮಿಯ ಆಯ್ಕೆ, ಗೊಬ್ಬರ ಮತ್ತು ಬೀಜ ಸಂಸ್ಕರಣೆ, ಸಸಿ ಮತ್ತು ಗಿಡಗಳ ಆರೈಕೆ, ಬಿತ್ತನೆ ಹಾಗೂ ಸಸಿನೆಡುವ ವಿಧಾನ ಮತ್ತು ಮಳೆಗೆ ಸಂಬಂಧಿತವಾದ, ಯಾವಾಗ ಮಳೆ ಬೀಳುತ್ತದೆ, ಅದರ ಪ್ರಮಾಣವೇನು ಎಂದು ಖಗೋಳಶಾಸ್ತ್ರ ಮತ್ತು ಹವಮಾನ ಶಾಸ್ತ್ರಗಳನ್ನಾಧರಿಸಿ, ಅಲ್ಲದೆ ಶಕುನಗಳನ್ನು ಮತ್ತು ಪ್ರಾಕೃತಿಕ ಮುನ್ಸೂಚನೆಗಳನ್ನಿಟ್ಟುಕೊಂಡು ಮಳೆಯನ್ನು ಅಂದಾಜಿಸುವ ವಿವರಣೆಯನ್ನು ನೀಡಲಾಗಿದೆ. ಹವಾಮಾನ ಮತ್ತು ಮಳೆಗೆ ಸಂಬಂಧಿಸಿದ ಈ ವಿಚಾರಗಳ ಬಗ್ಗೆ ಇಂತಹ ಮತ್ತೊಂದು ಕೃತಿಯು ನಂತರ ರಚನೆಯಾಗಿಲ್ಲ. ಮುಂದೆ ಚಕ್ರಪಾಣಿ ಎಂಬಾತನು ರಚಿಸಿದ ವಿಶ್ವವಲ್ಲಭ ಕೃತಿಯಲ್ಲಿ ಬೃಹತ್‌ ಸಂಹಿತಾದ ಹಲವು ಶ್ಲೋಕಗಳನ್ನೇ ಪುನರ್ ಉಲ್ಲೇಖಿಸಲಾಗಿದೆ. ಗುಪ್ತರ ಕಾಲಕ್ಕೆ ಸೇರಿದ ಮತ್ತೊಂದು ಕೃತಿ ಅಮರಕೋಶ ಎಂಬ ನಿಘಂಟು. ಇದರ ಕರ್ತೃ ಅಮರಸಿಂಹ ಇದರಲ್ಲಿ ಭೂಮಿಯ ವರ್ಗೀಕರಣ, ನೀರಾವರಿ ಮೂಲಗಳು ಹಾಗೂ ಕೃಷಿ ಉಪಕರಣಗಳಿಗೆ ಸಂಬಂಧಿತ ಪದಗಳು ಉಲ್ಲೇಖಿಸಲ್ಪಟ್ಟಿವೆ. ಕ್ರಿ.ಶ. ಹನ್ನೊಂದನೆಯ ಶತಮಾನಕ್ಕೆ ಸೇರಿದ ಕೃಷಿ ಪರಾಶರ ಎಂಬ ಕೃತಿಯು ಸಂಪೂರ್ಣವಾಗಿ ಕೃಷಿ ಸಂಬಂಧಿತ ಕೃತಿಯಾಗಿದೆ. ಇದು ವಿಶೇಷವಾಗಿ ಭತ್ತದ ಕೃಷಿಯ ಬಗ್ಗೆ ವಿವರಣೆ ನೀಡುತ್ತದೆ. ಕಶ್ಯಪ ಕೃಷಿ ಸೂಕ್ತಿಯೆಂಬ ಕೃತಿಯು ಮಧ್ಯಕಾಲೀನ ಕಾಲಕ್ಕೆ ಸೇರಿದುದಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಸೂರಪಾಲನೆಂಬಾತನು ರಚಿಸಿದ ವೃಕ್ಷಾಯುರ್ವೇದವು ಗಿಡಮರಗಳ ಬೆಳೆಸುವ ವಿಧಾನದ ಬಗ್ಗೆ ವಿವರಿಸುತ್ತದೆ. ಅಲ್ಲದೆ ಹಲವು ಸ್ಮತಿಗಳಲ್ಲಿಯೂ ಕೃಷಿ ಸಂಬಂಧಿತ ವಿಷಯಗಳ ಪ್ರಾಸ್ತಾಪಗಳಿವೆ.

ಈ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡಿರುವ ಹ್ಯೂಯೆನ್‌ತ್ಸಾಂಗ್, ಇತ್ಸಿಂಗ್‌ ಮತ್ತು ಅರಬ್‌ ಪ್ರವಾಸಿಗರ ಬರಹಗಳಲ್ಲಿ ಭಾರತದ ವಿವಿಧ ಪ್ರಾಂತ್ಯಗಳ ಭೂಮಿಯ ಫಲವತ್ತತೆ, ಬೆಳೆಯುತ್ತಿದ್ದ ಪ್ರಧಾನ ಬೆಳೆಗಳು ಮತ್ತು ಹಣ್ಣುಗಳ ಕುರಿತು ಮಾಹಿತಿಗಳು ದೊರಕುತ್ತವೆ. ಶಾಸನ ಪಠ್ಯಗಳಿಂದ ಭೂಮಿಯ ಕೊಡುಗೆಗಳ ಸ್ವರೂಪ ಮತ್ತು ಕೃಷಿ ಸಂಬಂಧಿತ ತೆರಿಗೆಗಳೂ ಹಾಗೂ ನೀರಾವರಿ ಮೂಲಗಳನ್ನು ಕುರಿತ ಮಾಹಿತಗಳು ಲಭ್ಯವಾಗುತ್ತವೆ. ವಿವಿಧ ಐತಿಹಾಸಿಕ ನಿವೇಶನಗಳಲ್ಲಿ ನಡೆಸಲಾದ ಉತ್ಖನನಗಳಿಂದ ಹಲವು ಕೃಷಿ ಉಪಕರಣಗಳ ಮತ್ತು ನೀರಾವರಿ ವ್ಯವಸ್ಥೆಯ ಸ್ವರೂಪವನ್ನು ಅರಿಯಬಹುದಾಗಿದೆ. ಪ್ರಾಚೀನ ಸ್ಮಾರಕಗಳ ಮೇಲಿನ ಶಿಲ್ಪ ಪಟ್ಟಿಕೆಗಳಲ್ಲಿ ಕೆಲವಡೆ ವ್ಯವಸಾಯ ಸಂಬಂಧಿತ ಶಿಲ್ಪಗಳು ಮತ್ತು ವಿವಿಧ ಹಣ್ಣುಗಳ ಶಿಲ್ಪಗಳು ಕಂಡುಬರುತ್ತವೆ. ಇವುಗಳು ಪ್ರಾಚೀನ ಭಾರತದ ಕೃಷಿ ವ್ಯವಸ್ಥೆಯ ಚಿತ್ರಣವನ್ನು ಮತ್ತಷ್ಟು ಸ್ಪಷ್ಟಪಡಿಸುತ್ತವೆ.

ಭೂಮಿಯ ವರ್ಗೀಕರಣ

ಅಮರಕೋಶವು ಹನ್ನೆರಡು ಬಗೆಯ ಭೂಮಿಯ ವರ್ಗೀಕರಣವನ್ನು ಉಲ್ಲೇಖಿಸಿದೆ. ಭೂಮಿಯ ಫಲವತ್ತತೆ, ನೀರಾವರಿ ಸೌಲಭ್ಯ ಮತ್ತು ಭೌಗೋಳಿಕ ಅಂಶಗಳನ್ನಾಧರಿಸಿ ಊರ್ವರ, ಊಷರ, ಮರು, ಅಪ್ರಹತ, ಶಾದ್ವಲ, ಪಂಕಿಲ, ಜಲಪ್ರಾಯ, ಕಛ್ಛ, ಶ್ಯಾರ್ಕರ, ಶಕ್ಕಾರವತಿ, ನದಿಮಾತೃಕ ಮತ್ತು ದೇವಮಾತೃಕವೆಂದು ಉಲ್ಲೇಖಿಸಿದೆ. ಬೆಳೆಯುವ ಬೆಳೆಗಳನ್ನಾಧರಿಸಿ ಭತ್ತ ಬೆಳೆಯುವ ಭೂಮಿಯನ್ನು ಕ್ಷೇತ್ರವೆಂದು, ಭಾರ್ಲಿ ಮತ್ತು ಗೋಧಿ ಬೆಳೆಯುವ ಭೂಮಿತನ್ನು ಯವ ಎಂದು, ಎಳ್ಳು ಬೆಳೆಯುವ ಭೂಮಿಯನ್ನು ತೈಲೀನ ಎಂದು ಹಾಗೂ ಸೊಪ್ಪಿನ ತೋಟವನ್ನು ಮೌದ್ಗೀನವೆಂದು ವರ್ಗೀಕರಿಸಲಾಗಿದೆ. ಅಭಿದಾನ ರತ್ನಮಾಲಾ ಎಂಬ ಕೃತಿಯಲ್ಲಿ, ಕೃಷಿಭೂಮಿಯನ್ನು ಫಲವತ್ತಾದ ಭೂಮಿ (ಊರ್ವರಾ) ಬಂಜರು ಭೂಮಿ (ಇರಿಣ) ಸಾಗುವಳಿಗೆ ಅರ್ಹವಾದ ಆದರೆ ಸಿದ್ಧಪಡಿಸಿದ ಭೂಮಿ (ಖಿಲ) ಉತ್ತಮ ಅಥವಾ ಪರಮೋತ್ಕೃಷ್ಟ ಭೂಮಿ (ಮೃತ್ಸಾ) ಎಳೆಗರಿಕೆಯಿಂದ ಹಸಿರಾದ ಭೂಮಿ (ಶಾಡ್ವಲ) ಜೊಂಡು ಅಥವ ಜೌಗು ಸಸ್ಯದಿಂದ ಕೂಡಿದ ಭೂಮಿ (ನಡ್ವಲ) ಕರಿ ಅಥವಾ ಹಳದಿ ಮಣ್ಣಿನ ಭೂಮಿ ಮತ್ತು ನದಿನೀರು ಇಲ್ಲವೇ ಮಳೆ ನೀರನ್ನು ಆಶ್ರಯಿಸಿದ ಭೂಮಿ ಎಂದು ವರ್ಗೀಕರಿಸಲಾಗಿದೆ.

ಕೃಷಿ ಉಪಕರಣಗಳು

ಭಾರತೀಯ ಕೃಷಿ ಸಾಧನಗಳು ಅಥವಾ ಉಪಕರಣಗಳನ್ನು ಕರಿತು ಟೀಕೆಗಳಿವೆ. ಕ್ರಿಸ್ತಶಕ ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಬುಕಾನನ್‌ ಕೂಡಾ ಇಲ್ಲಿನ ನೇಗಿಲ ಮತ್ತು ಅದರ ಕಾರ್ಯಕ್ಷಮತೆಯನ್ನು ಕುರಿತು ಟೀಕೆ ಮಾಡಿದ್ದಾನೆ. ಭಾರತೀಯ ಕೃಷಿಕನು ಹೊಸ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಅಳವಡಿಸಿಕೊಳ್ಳದಿರಲು ಆತನ ಆರ್ಥಿಕ ಸ್ಥಿತಿಯೇ ಕಾರಣವೆನ್ನಲಾಗಿದೆ. ಆತನು ಆರ್ಥಿಕ ಅಭದ್ರತೆಯಿಂದ ನಲುಗುತ್ತಿದ್ದುದರಿಂದ ಯಾವುದೇ ಹೊಸ ಪ್ರಯೋಗಕ್ಕೆ ಧೈರ್ಯ ತೋರುತ್ತಿರಲಿಲ್ಲ. ರಾಜ್ಯದ ತೆರಿಗೆ ನೀತಿ ಕೂಡಾ ಆತನಿಗೆ ಹೊಸ ಪ್ರಯೋಗಕ್ಕೆ ಧೈರ್ಯ ತೋರುತ್ತಿರಲಿಲ್ಲ. ರಾಜ್ಯದ ತೆರಿಗೆ ನೀತಿ ಕೂಡಾ ಆತನಿಗೆ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಉತ್ಪನ್ನವನ್ನು ಹೆಚ್ಚಿಕೊಳ್ಳಲು ಪ್ರೋತ್ಸಾಹಕ ಸನ್ನಿವೇಶಗಳಿರಲಿಲ್ಲ. ಎಂದು ಎಲ್‌. ಗೋಪಾಲ್‌ ಅವರು ಅಭಿಪ್ರಾಯಪಟ್ಟಿದ್ದಾರೆ. ಗುಪ್ತರ ಕಾಲದಲ್ಲಿ ಲೋಹ ವಿಜ್ಞಾನ ಕ್ಷೇತ್ರದಲ್ಲಿ ಉಂಟಾದ ಬೆಳವಣಿಗೆಯು ಖಂಡಿತವಾಗಿಯೂ ಕೃಷಿ ಉಪಕರಣಗಳ ಕ್ಷೇತ್ರದಲ್ಲಿಯು ಬೆಳವಣಿಗೆಗೂ ಕಾರಣವಾಗಿದೆ. ಅಮರಕೋಶದಲ್ಲಿ ಹಲವು ಕೃಷಿ ಉಪಕರಣಗಳನ್ನು ಹೆಸರಿಸಲಾಗಿದೆ. ಲಾಂಗಲ, ಹಲ (ನೇಗಿಲು), ಲಾಂಗಲದಂಡ (ನೇಗಿಲ ಕಾವು), ಯುಗಕೀಲಕ (ನೊಗದಕಣ್ಣಿಗೆ ತಗಲು ಹಾಕುವ ಮೊಳೆ), ಪ್ರಾಜನತೋದನಂ (ತಿವಿಗೋಲು,) ಕೋಟಿಶ ಹೆಂಟೆಯನ್ನೊಡೆಯುವ ಸಾಧನ ಖನಿತ್ರ ಅಗೆತಯ ಸಾಧನ ಗುದ್ದಲಿ ಮೊದಲಾದುದು ದಾತ್ರ, ಲಾವಿತ್ರ ಕುಡಗೋಲು ಯೋತ್ರ (ಮಿಣಿ ಮೊದಲಾದ ಕಟ್ಟುವ ಸಾಧನ) ಸರ್ಪಾ (ಧಾನ್ಯ ತೊರುವ ಬುಟ್ಟಿ ಅಥವಾ ಮೊರ), ಚಲನಿ (ಜರಡಿ), ಮೊದಲಾದ ಪದಗಳಿಗೆ ಸಂಸ್ಕೃತದಲ್ಲಿನ ಸಮಾನಾರ್ಥ ಪದಗಳನ್ನು ಈ ನಿಘಂಟಿನಲ್ಲಿ ನೋಡಬಹುದಾಗಿದೆ. ಸ್ಮಾರಕಗಳ ಮೇಲಿನ ಶಿಲ್ಪಪಟ್ಟಿಕೆಗಳಲ್ಲಿ, ದಾನಶಾಸನಗಳಲ್ಲಿ ನೇಗಿಲಿನ ಶಿಲ್ಪಗಳು ಕಂಡು ಬರುತ್ತವೆ. ಒಟ್ಟಿನಲ್ಲಿ ಪ್ರಾಚೀನ ಭಾರತದ ಸಂದರ್ಭದಲ್ಲಿ ಪರಂಪರಾಗತ ಕೃಷಿ ಉಪಕರಣಗಳು ಬಳಕೆಯಲ್ಲಿದ್ದವು ಎನ್ನಬಹುದು.

ಪ್ರಮುಖ ಕೃಷಿ ಉತ್ಪನ್ನಗಳು

ಈ ಅವಧಿಯಲ್ಲಿನ ಭಾರತದ ಕೃಷಿ ಕ್ಷೇತ್ರದಲ್ಲಿನ ಉತ್ಪನ್ನಗಳಾದ ಆಹಾರ ಧಾನ್ಯಗಳು, ತರಕಾರಿಗಳು ಮತ್ತು ಹಣ್ಣುಗಳನ್ನು ಕುರಿತು ಸಾಕಷ್ಟು ವಿವರಗಳು ದೊರಕತ್ತವೆ. ಕಾಳಿದಾಸನ ರಘುವಂಶದಲ್ಲಿ ಬಂಗಾಳದಲ್ಲಿ ಬೆಳೆಯುತ್ತಿದ್ದ ವಿವಿಧ ರೀತಿಯ ಭತ್ತಗಳನ್ನು ಉಲ್ಲೇಖಿಸಲಾಗಿದೆ ಅವುಗಳೆಂದರೆ ಸಾಲಿ, ಕಮಲ, ನಿವಾರ, ಉಂಚ, ಶ್ಯಾಮಕ, ಕೆಂಪಕ್ಕಿ, ಹಳದಿ ಅಕ್ಕಿ, ಭತ್ತ ಮೊದಲಾದವುಗಳು ಇವುಗಳಲ್ಲಿ ಸಾಲಿಯು ಸಸಿ ನಾಟಿ ಮಾಡುವ ವಿಧಾನದಲ್ಲಿ ಬೆಳೆಯುವ ಭತ್ತದ ತಳಿಯಾಗಿದೆ. ಭತ್ತದ ಸಸಿ ನಾಟಿ ಮಾಡುವ ವಿಧಾನದಲ್ಲಿ ಬೆಳೆಯುವ ಭತ್ತದ ತಳಿಯಾಗಿದೆ. ಭತ್ತದ ಸಸಿ ನಾಟಿ ಮಾಡುವ ವಿಧಾನವು ಬುದ್ಧನಕಾಲದಿಂದಲೂ ಉಲ್ಲೇಖವಾಗಿದೆ. ಅಮರಕೋಶ, ಬೃಹತ್‌ ಸಂಹಿತಾ ಮತ್ತು ಅಭಿದಾನ ರತ್ನಮಾಲಾ ಕೃತಿಗಳಲ್ಲಿಯೂ ವಿವಿಧ ಭತ್ತದ ತಳಿಗಳ ಉಲ್ಲೇಖಗಳಿವೆ. ಅದರಲ್ಲಿ ಅರವತ್ತು ದಿನಗಳಲ್ಲಿ ಫಸಲು ನೀಡುವ ಭತ್ತದ ತಳಿಯು ಸೇರಿಕೊಂಡಿದೆ ಎಂಬುದು ಗಮನಾರ್ಹ ವಿಷಯವಾಗಿದೆ. ರಘುವಂಶವು ಹೇಳಿರುವಂತೆ ಸಿಂಧೂ ನದಿ ದಡದ ಪ್ರದೇಶದಲ್ಲಿ ಕೇಸರಿ ಒಂದು ಮುಖ್ಯ ಬೆಳೆಯಾಗಿದ್ದಿತು. ಹ್ಯೊಯೆನ್‌ ತ್ಸಾಂಗನು ಮಗಧ ಪ್ರದೇಶದಲ್ಲಿ ಸುವಾಸನಾಯುಕ್ತ ಅತ್ಯುತ್ತಮ ದರ್ಜೆಯ ಭತ್ತವನ್ನು ಬೆಳೆಯುತ್ತಿದ್ದರೆಂದು ಹೇಳಿರುವನು. ಅರಬ್‌ ಪ್ರವಾಸಿ ಇಬನ್‌ ಖುರ್ದಬ್‌ ಹೇಳಿರುವಂತೆ ಕ್ರಿ.ಶ. ಒಂಬತ್ತನೆಯ ಶತಮಾನದ ವೇಳೆಗೆ ಆಂಧ್ರ ಭಾತದಲ್ಲಿ ಹೆಚ್ಚು ಪ್ರಮಾಣದಲ್ಲಿ ಭತ್ತ ಬೆಳೆದು ಶ್ರೀಲಂಕಾಕ್ಕೆ ಅಕ್ಕಿಯನ್ನು ಉಫ್ತು ಮಾಡುತ್ತಿದ್ದರು. ದಕ್ಷಿಣ ಭಾರತದಲ್ಲಿ ಕಾವೇರಿ ನದಿಯ ಪ್ರದೇಶದಲ್ಲಿ ವಿವಿಧ ತಳಿಗಳ ಭತ್ತವನ್ನು ಬೆಳೆಯುತ್ತಿದ್ದರು.

ಉತ್ತರ ಭಾರತದಲ್ಲಿ ಭತ್ತದ ನಂತರ ಗೋಧಿಯು ಪ್ರಮುಖ ಬೆಳೆಯಾಗಿದ್ದಿತು. ಗೋಧಿಯನ್ನು ಬೆಳೆಯುತ್ತಿದ್ದ ಪ್ರದೇಶದಲ್ಲಿ ಬಾರ್ಲಿ ಕೂಡಾ ಬೆಳೆಯುತ್ತಿದ್ದರು. ಇಂದಿನ ಪಂಜಾಬ್, ಉತ್ತರ ಪ್ರದೇಶ, ಮಧ್ಯಭಾರತ, ರಾಜಸ್ಥಾನಗಳಲ್ಲಿ ಗೋಧಿ ಬೆಳೆಗೆ ಸೂಕ್ತ ಭೂಮಿ ಮತ್ತು ಹವಮಾನವಿದ್ದಿತು. ಅಮರಕೋಶವು ಎಳ್ಳು, ಸಾಸಿವೆ, ಹಸರು, ಉದ್ದು, ಅಗಸೆ, ಸೆಣಬು, ಅಲಸಂಧಿ, ಕಡಲೆ, ಜೀರಿಗೆ ಮೂದಲಾದ ಬೆಳೆಗಳನ್ನು ಸೌತೆ, ಈರುಳ್ಳಿ, ಕುಂಬಳ, ಸೋರೆಕಾಯಿ ಮೊದಲಾದ ತರಕಾರಿ ಬೆಳೆಗಳನ್ನೂ ಉಲ್ಲೇಖಿಸಿದೆ. ಭತ್ತ ಬೆಳೆಯುವ ಕೃಷಿ  ಭೂಮಿಯ ಸಮೀಪ  ಕಬ್ಬು ಬೆಳೆಯಲಾಗುತ್ತಿತ್ತು. ಸುಶೃತಸಂಹಿತಾ ಕೃತಿಯು ಹನ್ನೆರಡು ಬಗೆಯ ಕಬ್ಬುಗಳನ್ನು ಉಲ್ಲೇಖಿಸಿದೆ. ಕಾವ್ಯಮೀಮಾಂಸ ಗ್ರಂಥದಲ್ಲಿ ಯಾವುದೇ ವಿಧದ  ಅರೆಯುವ ಯಂತ್ರದ ಅಗತ್ಯವಿಲ್ಲದೆ ರಸವನ್ನು ಸುಲಭವಾಗಿ ಸುರಿಸುವ ಪುಂಡ್ರ ಎಂಬ ವಿಶಿಷ್ಡ ಕಬ್ಬಿನ ಹಿರಿಮೆಯ ವರ್ಣನೆಯಿದೆ. ಸೌರಾಷ್ಟ್ರ ಕಾಥೆವಾಡ ಪ್ರದೇಶಗಳಲ್ಲಿ ಹತ್ತಿಯನ್ನು ಬೆಳೆಯುತ್ತಿದ್ದರು. ದಕ್ಷಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಕಾಳಮೆಣಸು, ಏಲಕ್ಕಿ, ಶುಂಠಿ, ಲವಂಗ, ಅರಿಶಿನ, ಅಡಕೆ, ಮೊದಲಾದವುಗಳು ಪ್ರಮುಖ ಕೃಷಿ ಉತ್ಪನ್ನಗಳಾಗಿದ್ದವು. ದಕ್ಷಿಣದ ಬಯಲು ಪ್ರದೇಶಗಳಲ್ಲಿ ನವಣೆ, ರಾಗಿ, ಜೋಳಗಳನ್ನು ಬೆಳೆಯಲಾಗುತಿತ್ತು. ನವಶಿಲಾಯುಗದ ನಿವೇಶನಗಳಲ್ಲಿ ಒಂದಾದ ಹಳ್ಳೂರು ಎಂಬಲ್ಲಿ ಉತ್ಪನನದ ಸಂದರ್ಭದಲ್ಲಿ ದೊರೆತ ಸುಮಾರು ಕ್ರಿ.ಪೂ. ೧೮೦೦ರ ವೇಳೆಗೆ ಸಂಬಂಧಿಸಿದ ರಾಗಿಯು, ರಾಗಿ ಬೆಳೆಯ ಮೂಲವು ಕರ್ನಾಟಕ ಎಂಬುದನ್ನು ತೋರಿಸುತ್ತದೆ ಎಂದು ಹಾಗೂ ನಂತರದಲ್ಲಿ ಈ ಬೆಳೆಯು ಆಂಧ್ರ, ಮಹಾರಾಷ್ಟ್ರ ಮತ್ತು ತಮಿಳುನಾಡು ಪ್ರದೇಶಗಳಿಗೆ ವಿಸ್ತರಿಸಿರಬೇಕೆಂದು ಅರ್. ಎನ್. ನಂದಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಹ್ಯೂಯೆನ್‌ತ್ಸಾಂಗನು ಭತ್ತ ಮತ್ತು ಗೋಧಿಗಳು ಭಾರತದ ಪ್ರಧಾನ ಬೆಳೆಗಳಾಗಿದ್ದವು. ಎಳ್ಳು, ಸಾಸುವೆ, ಕುಂಬಳವನ್ನು ಸಾಕಷ್ಟು ಬೆಳೆಯುತ್ತಿದ್ದರು. ಮಾವು, ಕಲ್ಲಂಗಡಿ, ಹಲಸು, ಬಾಳೆ, ಜಿಣಸೆ, ಮರಸೇಬು ಜನಪ್ರಿಯ ಹಣ್ಣುಗಳು ಮತ್ತು ದಾಳಿಂಬೆ ಹಾಗೂ ಸಿಹಿಕಿತ್ತಳೆಯನ್ನು ಎಲ್ಲ ಪ್ರದೇಶಗಳಲ್ಲಿ ಬೆಳೆಯುತ್ತದ್ದರೆಂದು ಹೇಳಿದ್ದಾನೆ. ಬಂಗಾಳ, ಒರಿಸ್ಸಾ, ತಮಿಳುನಾಡು ಕರಾವಳಿ ಪ್ರದೇಶಗಳಲ್ಲಿ ತೆಂಗು ಪ್ರಧಾನ ಬೆಳೆಯಾಗಿದ್ದಿತು. ಒಂಭತ್ತು ಮತ್ತು ಹತ್ತನೆಯ ಶತಮಾನ ವೇಳೆಗೆ ಪಶ್ಚಿಮ ಭಾರತದಲ್ಲಿ ಭತ್ತ, ಮಾವು, ತೆಂಗು ಮತ್ತು ನಿಂಬೆ ಅಪಾರ ಪ್ರಮಾಣದಲ್ಲಿ ಬೆಳೆಯುತ್ತಿದ್ದರೆಂದು ಅರಬ್ ಪ್ರವಾಸಿಗಳು ನೀಡಿದ ವಿವರಣೆಯಂದ ತಿಳಿಯುತ್ತದೆ.

ಗೊಬ್ಬರಬೀಜ ಸಂಸ್ಕರಣೆಬೆಳೆಯ ಪೋಷಣೆ

ಹೆಚ್ಚಿನ ಇಳುವರಿಗೆ ಅಗತ್ಯವಾದ ಮಣ್ಣಿನ ಗುಣಮಟ್ಟ ಹೆಚ್ಚಿಸುವುದು, ಬೀಜವನ್ನು ಬತ್ತನೆಗೆ ಮೊದಲು ಸಂಸ್ಕರಿಸುವುದು ಹಾಗೂ ಬೆಳೆಯ ಪೋಷಣೆ ಕುರಿತು ಪ್ರಾಚೀನ ಭಾರತೀಯರಿಗೆ ಅರಿವಿದ್ದಿತು. ಇದನ್ನು ಬೃಹತ್ ಸಂಹಿತಾ, ಕೃಷಿಸೂಕ್ತಿ, ಕೃಷಿಪರಾಶರ ಮತ್ತು ವೃಕ್ಷಾಯುರ್ವೇದ ಕೃತಿಗಳಲ್ಲಿನ ವಿವರಣೆಗಳು ಸಮರ್ಥಿಸುತ್ತವೆ. ಬೃಹತ್ ಸಂಹಿತಾದಲ್ಲಿ ಬೀಜವನ್ನು ಸಂಸ್ಕರಿಸುವ ವಿಧಾನ, ಅದನ್ನು ಬಿತ್ತಲು ಮಣ್ಣನ್ನು ಸಿದ್ದಗೊಳಿಸಬೇಕಾದ ವಿಧಾನ, ಚೆನ್ನಾಗಿ ಹೂವು ಮತ್ತು ಕಾಯಿ ಮಾಡಲು ಸಸಿಯನ್ನು ಪೋಷಿಸಬೇಕಾದ ವಿಧಾನ, ಕಸಿ ಕಟ್ಟುವ ವಿಧಾನ, ಗಿಡಗಳಿಗೆ ನೀರುಣಿಸುವ ವಿಧಾನ, ಮೊದಲಾದ ಅಂಶಗಳನ್ನು ವಿವರಿಸಲಾಗದೆ. ಅಗ್ನಿ ಪುರಾಣದಲ್ಲಿ ಕೂಡಾ ಮರದಲ್ಲಿ ಹೂವುಹಣ್ಣು ಹೆಚ್ಚಾಗಲು ಅನುಸರಿಸಬೇಕಾದ ವಿಧಾನವನ್ನು ಉಲ್ಲೇಖಿಸಲಾಗದೆ. ಈ ವಿವರಣೆಗಳಿಂದ ಮಣ್ಣಿನ ಗುಣಮಟ್ಟ ಹೆಚ್ಚಿಸಲು ಪ್ರಾಣಿಗಳ ಕೊಬ್ಬು ಮತ್ತು ಸತ್ತ ಪ್ರಾಣಿಗಳನ್ನು ಗೊಬ್ಬರವಾಗಿ ಹಾಗೂ ಕೆಲವು ಸಸ್ಯಗಳಿಂದ ತಯಾರಿಸಿದ ಕಷಾಯವನ್ನು ಬೀಜ ಸಂಸ್ಕರಿಸಲು ಬಳಸುತ್ತಿದ್ದುದು ಕಂಡುಬರುತ್ತದೆ. ಸಗಣಿ ಗೊಬ್ಬರವನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಕೃಷಿಪರಾಶರವು ಸಗಣಿ ಗೊಬ್ಬರದ ತಯಾರಿಕಾ ವಿಧಾನವನ್ನು ವಿವರಿಸಿದೆ. ಕೃಷಿಸೂಕ್ತಿಯಲ್ಲಿ ಸಗಣೆ ಗೊಬ್ಬರ, ಮೇಕೆ ಗೊಬ್ಬರ ಮತ್ತು ಮಿಶ್ರಗೊಬ್ಬರಗಳ ಉಲ್ಲೇಖವಿದೆ. ವೃಕ್ಷಾಯುರ್ವೇದದಲ್ಲಿ ಕೂಡಾ ಗೊಬ್ಬರದ ತಯಾರಿಕೆ ಮತ್ತು ಅದನ್ನು ನೀಡುವ ಬಗ್ಗೆ ವಿವರಣೆಯಿದೆ. ಇದೇ ಕೃತಿಯಲ್ಲಿ ಮರಗಳಿಗೆ ಬರುವ ರೋಗಗಳ ಮತ್ತು ಅವುಗಳಿಗೆ ನೀಡಬೇಕಾದ ಚಿಕಿತ್ಸೆಯ ವಿಧಾನವನ್ನು ಕೂಡಾ ವಿಶ್ಲೇಷಿಸಲಾಗಿದೆ.

ಕೃಷಿಕರು ಬೆಳೆಗಳನ್ನು ಕ್ರಿಮಿಕೀಟಗಳಿಂದ, ಪಕ್ಷಿಗಳಿಂದ ರಕ್ಷಿಸಲು ಕೆಲವೊಮ್ಮೆ ಮಂತ್ರಗಳ ಮೊರೆ ಹೋಗುತ್ತಿದ್ದರು. ಕೃಷಿಪರಾಶರ ವೃಕ್ಷಾಯುರ್ವೇದಗಳಲ್ಲಿ ಅವುಗಳ ಉಲ್ಲೇಖಗಳಿವೆ. ಬೆಳೆಗಳ ರಕ್ಷಣೆಗೆ ನಿಯಮಿತವಾಗಿ ಬಳಸುತ್ತಿದ್ದ ಕ್ರಿಮಿನಾಶಕಗಳ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಆದರೆ ಕೃಷಿಸೂಕ್ತಿಯಲ್ಲಿ ತರಕಾರಿ ಗಿಡಗಳ ಎಲೆ ತಿನ್ನುವ ಕೀಟಗಳಿಂದ ರಕ್ಷಿಸಲು ಬೂದಿ ಮತ್ತು ನಿಂಬೆ ನೀರು ಬಳಸಬಹುದೆಂದು ಹೇಳಲಾಗಿದೆ. ಆ ಕಾಲದಲ್ಲಿ ಮುಖ್ಯವಾಗಿ ಎರಡು ಸುಗ್ಗಿ ಕಾಲಗಳಿದ್ದವು ಒಂದು ಬೇಸಿಗೆಯಲ್ಲಿ, ಮತ್ತೊಂದು ಶರದೃತುವಿನಲ್ಲಿ ಅಲ್ಲದೆ ವಸಂತ ಋತುವಿನಲ್ಲಿ ಒಂದು ಸಣ್ಣ ಅವಧಿಯ ಬೆಳೆಯನ್ನು ಕೂಡಾ ಬೆಳೆಯುತ್ತಿದ್ದರೆಂದು ಬೃಹತ್‌ಸಂಹಿತೆಯು ತಿಳಿಸುತ್ತದೆ.

ನೀರಾವರಿ ಸೌಲಭ್ಯಗಳು

ಕೃಷಿಯ ಅಭಿವೃದ್ಧಿಯಲ್ಲಿ ನೀರಾವರಿ ವ್ಯವಸ್ಥೆಯು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಭಾರತದಲ್ಲಿ ಹರಿಯುವ ನೀರು, ಮಳೆ ನೀರು ಮತ್ತು ಅಂತರ್ಜಲವನ್ನು ಕೃಷಿಗಾಗಿ ಬಳಸುವ ತಂತ್ರಜ್ಞಾನವು ದೀರ್ಘಕಾಲದ ಇತಿಹಾಸವನ್ನು ಹೊಂದಿದೆ. ಆದರೂ ಬಹುತೇಕ ಕಡೆಗಳಲ್ಲಿ ವ್ಯವಸಾಯಕ್ಕಾಗಿ ಮಳೆಯನ್ನೇ ಎದುರು ನೋಡುವ ಪದ್ಧತಿಯಿದ್ದಿತೆಂದು ಬೃಹತ್‌ಸಂಹಿತೆಯಿಂದ ತಿಳಿಯುತ್ತದೆ. ನೀರಾವರಿ ಮೂಲಗಳ ನಿರ್ಮಾಣದಲ್ಲಿ ರಾಜ್ಯದ ಪಾತ್ರವು ಪ್ರಧಾನವಾದುದು. ಕೃಷಿಯ ಅಭಿವೃದ್ಧಿಯಿಂದ ರಾಜ್ಯದ ವರಮಾನವು ಹೆಚ್ಚುವುದರಿಂದ ರಾಜ್ಯವು ಕೃಷಿ ವಿಸ್ತರಣೆಗೆ ಗಮನಹರಿಸುವುದು ಸ್ವಾಭಾವಿಕವಾಗಿದ್ದಿತ್ತು. ಸರೋವರ, ಕೆರೆ, ಬಾವಿಗಳ ನಿರ್ಮಾಣವನ್ನು ಪವಿತ್ರ ಕಾರ್ಯಗಳಲ್ಲಿ ಒಂದೆಂದು ಪ್ರಾಚೀನ ಭಾರತೀಯರು ಪರಿಗಣಿಸಿದ್ದರು. ಇದಕ್ಕೆ ಸಾಮಾಜಿಕ ಮತ್ತು ಧಾರ್ಮಿಕ ಆಯಾಮವನ್ನು ನೀಡಲಾಗಿದ್ದಿತ್ತು. ಸಾಹಿತ್ಯ ಮತ್ತು ಶಾಸನ ಪಠ್ಯಗಳಲ್ಲಿನ ಉಲ್ಲೇಖಗಳು ಹಾಗೂ ಉತ್ಖನನದ ಸಂದರ್ಭದಲ್ಲಿ ಪತ್ತೆಯಾದ ಅವಶೇಷಗಳು ಅಂದು ನೀರಾವರಿ ಅಭಿವೃದ್ಧಿಗೆ ನೀಡಿದ್ದ ಪ್ರಾಮುಖ್ಯತೆಯನ್ನು ಸ್ಪಷ್ಟಪಡಿಸುತ್ತವೆ.

ಸಿಂಧೂ ಕಣಿವೆ ನಾಗರಿಕತೆಯ ನಿವೇಶನಗಳಲ್ಲಿ ಮತ್ತು ಬೀಸ್‌ನಗರ, ಕುಮ್ರಾಹರ್, ಉಜ್ಜಯಿನಿ, ನಾಗಾರ್ಜುನಕೊಂಡ ಮೊದಲಾದ ಪ್ರಾಚೀನ ಐತಿಹಾಸಿಕ ಸ್ಥಳಗಳಲ್ಲಿ ನಡೆಸಿದ ಉತ್ಖನನದ ಸಂದರ್ಭದಲ್ಲಿ ನೀರಾವರಿಗಾಗಿ ನಿರ್ಮಿಸಲಾದ ಕಾಲುವೆಗಳ ಅವಶೇಷಗಳು ಕಂಡುಬಂದಿವೆ. ವೇದಿಕ ಸಾಹಿತ್ಯಗಳಲ್ಲಿ ವೇದಗಳ ಕಾಲದ ನೀರಾವರಿ ಸೌಲಭ್ಯಗಳ ಉಲ್ಲೇಖಗಳಿವೆ. ಕೌಶಿಕ ಸೂತ್ರ, ಬಹುದಾಯನ ಧರ್ಮಸೂತ್ರ ಮಹಾಭಾರತ, ಬುದ್ಧಜಾತಕ, ಅರ್ಥಶಾಸ್ತ್ರ, ಪದ್ಮ ಪುರಾಣ ಮತ್ತು ಕೆಲವು ಸ್ಮೃತಿಗಳಲ್ಲಿ ಕೆರೆ ಮತ್ತು ಸರೋವರಗಳ ನಿರ್ಮಾಣದ ವಿಷಯ ಕುರಿತು ಪ್ರಸ್ತಾಪಗಳಿವೆ. ಹಾಲರಾಜನ ಗಾಥಸಪ್ತಶತಿಯು ನೀರಾವರಿ ಮತ್ತು ಏತ ನೀರಾವರಿಯನ್ನು ಉಲ್ಲೇಖಿಸಿದೆ. ಸಂಗಂ ಕೃತಿಗಳಲ್ಲಿ ನದಿಗಳಿಗೆ ಅಣೆಕಟ್ಟು ನಿರ್ಮಿಸುವ ಮತ್ತು ಕೆರೆ ನಿರ್ಮಾಣವನ್ನು ಕುರಿತು ವಿವರಣೆಗಳಿವೆ. ಶಿಲಪ್ಪಾಧಿಕಾರಂ ಕೃತಿಯಲ್ಲಿ ಕಾವೇರಿ ನದಿಗೆ ನಿರ್ಮಿಸಲಾದ ಆಣೆಕಟ್ಟಿನ ಉಲ್ಲೇಖವಿದೆ. ಅಮರಕೋಶವು ನೀರಾವರಿ ಸೌಲಭ್ಯ ಪಡೆದ ಭೂಮಿಯನ್ನು ನದಿಮಾತೃಕವೆಂದು ಹೆಸರಿಸಿದೆ. ಈ ಉಲ್ಲೇಖಗಳು ಭಾರತದಲ್ಲಿ ನೀರಾವರಿ ವ್ಯವಸ್ಥೆಯು ಅತ್ಯಂತ ಪ್ರಾಚೀನವಾದುದೆಂದು ತೋರಿಸುತ್ತವೆ. ಪ್ರಾಚೀನ ಭಾರತದ ನೀರಾವರಿ ಚರಿತ್ರೆಯಲ್ಲಿ ಗಿರ್ನಾರ್ ಸರೋವರವು ವಹಿಸಿದ ಪಾತ್ರವು ಗಮನಾರ್ಹವಾದುದು. ಕ್ರಿ.ಪೂ. ನಾಲ್ಕನೆಯ ಶತಮಾನದಲ್ಲಿ ನಿರ್ಮಾಣಗೊಂಡ ಈ ಸರೋವರವು ಹಲವು ಬಾರಿ ರಿಪೇರಿಯಾದರೂ ಎಂಟು ಶತಮಾನಗಳ ಕಾಲ ಸತತವಾಗಿ ಭೂಮಿಗೆ ನೀರು ಹರಿಸಿ ಗುಜರಾತ್‌ ಭಾಗದ ಕೃಷಿ ಅಭಿವೃದ್ಧಿಗೆ ಕಾರಣವಾಗಿದೆ.

ದಕ್ಷಿಣ ಭಾರತದಲ್ಲಿ ನದಿಗೆ ಆಣೆಕಟ್ಟು ಕಟ್ಟಿ ಕಾಲುವೆಯ ಮೂಲಕ ನೀರು ಹರಿಸುವ ವಿಧಾನವು ಸಂಗಂ ಕಾಲದಿಂದ ಬೆಳೆದು ಬಂದಿದೆ. ಕ್ರಿ.ಶ. ಏಳನೆಯ ಶತಮಾನದಿಂದೀಚೆಗೆ ಕೆರೆ ನೀರಾವರಿ ಯೋಜನೆಗಳು ದಕ್ಷಿಣದಲ್ಲಿ ಜನಪ್ರಿಯವಾದವು. ನೀರಾವರಿ ಮೂಲಗಳ ನಿರ್ಮಾಣದಲ್ಲಿ ರಾಜ್ಯ, ಸ್ಥಳೀಯ ಆಡಳಿತ ಸಂಸ್ಥೆಗಳು, ಅಧಿಕಾರಿಗಳು ಮತ್ತು ಕೆಲವು ಶ್ರೀಮಂತ ವ್ಯಕ್ತಿಗಳು ಆಸಕ್ತಿ ವಹಿಸಿದ್ದರು. ನಿರ್ಮಾಣಕ್ಕೆ ಅಗತ್ಯವಾದ ಭೂಮಿ ನೀಡುವುದು, ತೆರಿಗೆಯಲ್ಲಿ ರಿಯಾಯ್ತಿ ನೀಡುವುದು, ರಾಜ್ಯವು ಸ್ವತಃ ತಾನೇ ಕೆರೆಕಾಲುವೆಗಳನ್ನು ನಿರ್ಮಿಸುವುದು ಹಾಗೂ ಖಾಸಗಿ ವ್ಯಕ್ತಿಗಳಿಗೆ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ರಾಜ್ಯವು ನೀರಾವರಿ ಸೌಲಭ್ಯ ಒದಗಿಸುವಲ್ಲಿ ಭಾಗಿಯಾಗಿದ್ದಿತು. ಸ್ಥಳೀಯ ಆಡಳಿತ ಘಟಕಗಳು ಕೆರೆಕಾಲುವೆಗಳ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದವು. ಚೋಳರ ಸ್ಥಳೀಯ ಸರ್ಕಾರದಲ್ಲಿ ಕೆರೆಗಳ ನಿರ್ವಹಣೆಗಾಗಿ ಏರಿವಾರಿಯಾಮ ಎಂಬ ಸಮಿತಿಯಿದ್ದುದನ್ನು ಗಮನಿಸಬಹುದು. ಕರ್ನಾಟಕದಲ್ಲಿ ಕೆರೆಗಳ ನಿರ್ಮಾಣವು ಗಂಗ ವಂಶದ ಆಳ್ವಿಕೆಯ ಕಾಲದಿಂದ ಕಂಡು ಬರುತ್ತದೆ. ನಂತರ ಹೊಯ್ಸಳರು ಮತ್ತು ವಿಜಯನಗರ ಅರಸರ ಕಾಲದಲ್ಲಿ ಕೆರೆ ನೀರಾವರಿ ತಂತ್ರಜ್ಞಾನವು ಉಚ್ಛ್ರಾಯ ಸ್ಥಿತಿ ತಲುಪಿತು. ಕರ್ನಾಟಕದಲ್ಲಿ ಕೆರೆಗಳ ನಿರ್ಮಾಣಕ್ಕೆ ಮತ್ತು ನಿರ್ವಹಣೆಗೆ ನೀಡಲಾದ ಕೊಡುಗೆಗಳನ್ನು ನೂರಾರು ಶಾಸನಗಳು ಉಲ್ಲೇಖಿಸುತ್ತವೆ. ಅವುಗಳನ್ನು ಬಿತ್ತುವಟ್ಟ, ದಶವಂದ, ಕಟ್ಟುಕೊಡುಗೆಗಳೆಂದು ಹೆಸರಿಸಲಾಗಿದೆ. ಆದರೆ ತಮಿಳುನಾಡಿನ ರೀತಿ ಕೆರೆಗಳ ನಿರ್ವಹಣೆಗೆ ಪ್ರತ್ಯೇಕ ಸಮಿತಿಯಿದ್ದುದು ಕಂಡುಬರುವುದಿಲ್ಲ.

ಸಣ್ಣ ಪ್ರಮಾಣದ ಜಮೀನಿಗೆ ಮತ್ತು ತೋಟಗಳಿಗೆ ನೀರು ಒದಗಿಸಲು ಬಾವಿಗಳು ಸೂಕ್ತವೆಂದು ಭಾವಿಸಲಾಗಿತ್ತು. ವಿಜ್ಞಾನೇಶ್ವರನು ಬಾವಿಗಳ ಪ್ರಾಮುಖ್ಯತೆಯನ್ನು ತನ್ನ ಕೃತಿ ಮಿತಾಕ್ಷರದಲ್ಲಿ ಪ್ರಸ್ತಾಪಿಸುರುವನು. ನೀರಾವರಿ ಉದ್ದೇಶಕ್ಕಾಗಿ ಬಾವಿಗಳ ಬಳಕೆಯಿಂದ ಏತ ನೀರಾವರಿ ಪದ್ಧತಿಯು ಬೆಳವಣಿಗೆ ಹೊಂದಿತು. ಕ್ರಿ.ಶ. ಏಳನೆಯ ಶತಮಾನದಲ್ಲಿ ನದಿಯಿಂದ ಕಾಲುವೆಯ ಮೂಲಕ ಕೆರೆಗಳಿಗೆ ನೀರು ತುಂಬುವ ಪದ್ಧತಿಯು ತಮಿಳ್ನಾಡಿನಲ್ಲಿ ರೂಪುಗೊಂಡಿತೆಂಬುದುನ್ನು ಪಲ್ಲವರ ಶಾಸನವೊಂದು ಉಲ್ಲೇಖಿಸಿದೆ. ಕರ್ನಾಟಕದಲ್ಲಿ ಇಂತಹ ಬೆಳವಣಿಗೆಯು ಹತ್ತನೆಯ ಶತಮಾನದ ವೇಳೆಗೆ ಕಂಡುಬರುತ್ತದೆ.

ಪ್ರಾಚೀನ ಭಾರತದ ಸಂದರ್ಭದಲ್ಲಿ, ಪ್ರಾಣಿಗಳನ್ನು ಬಳಸಿ, ಚರ್ಮದ ಬಾನೆಯ ಮೂಲಕ ಆಳವಾದ  ಬಾವಿಗಳಿಂದ ನೀರನ್ನೆತ್ತಿ ಜಮೀನಿಗೆ ಹರಿಸುವ ತಂತ್ರಜ್ಞಾನವು (‘ಅರಹಟ ತಂತ್ರಜ್ಞಾನ’) ಬಳಕೆಯಲ್ಲಿದ್ದುದು ಗಮನಾರ್ಹ ಅಂಶವಾಗಿದೆ. ಅರಹಟವು ಕೃಷಿರಂಗಕ್ಕೆ ಬಹುಶಃ ಸುಮಾರು ೫ನೆಯ ಶತಮಾನದ ವೇಳೆಗೆ ಪರಿಚಯಿಸಲ್ಪಟ್ಟಿತು. ಆದರೆ ಹೆಚ್ಚು ಪ್ರಚಲಿತವಾದುದು ಮಧ್ಯ ಕಾಲೀನದ ಆರಂಭದ ವೇಳೆಗೆ ಎಂದು ಆರ್.ಎನ್. ನಂದಿ ಅವರ ಅಭಿಪ್ರಾಯವಾಗಿದೆ. ಬಿ.ಡಿ. ಚಟ್ಟೋಪಾಧ್ಯಾಯ ಅವರ ಅಧ್ಯಯನವು ರಾಜಸ್ತಾನದಲ್ಲಿ ಈ ತಂತ್ರಜ್ಞಾನವು ಮೊದಲಿಗೆ ಕ್ರಿ.ಶ ಏಳನೆಯ ಶತಮಾನದಲ್ಲಿ ಆರಂಭವಾಗಿ ಕ್ರಿ.ಶ. ಹನ್ನೆರಡನೆಯ ಶತಮಾನದ ಕೊಣೆಯ ವೇಳೆಗೆ ರಾಜ್ಯದ ಎಲ್ಲೆಡಗೆ ಹರಡಿತೆಂಬುದನ್ನು ಸ್ಪಷ್ಟಪಡಿಸಿದೆ. ಕ್ರಿ.ಶ. ೯೪೬ಕ್ಕೆ ಸೇರಿದುದೆನ್ನಲಾದ ಶಾಸನವೊಂದರಲ್ಲಿನ ಉಲ್ಲೇಖ ಮತ್ತು ರಾಜಸ್ತಾನದ ಮಾಂಡೋರ್ ನಲ್ಲಿ ಕ್ರಿ.ಶ. ಹನ್ನೊಂದನೆಯ ಶತಮಾನಕ್ಕೆ ಸೇರಿದ ಸ್ಮಾರಕ ವೊಂದರ ಮೇಲಿನ ಶಿಲ್ಪಪಟ್ಟಿಕೆಯಲ್ಲಿ ಕಂಡುಬಂದಿರುವ ಪರ್ಷಿಯನ್‌ ವ್ಹೀಲ್‌ ರೀತಿಯ ಕೆತ್ತನೆಯ ತಂತ್ರಜ್ಞಾನವು ಇಸ್ಲಾಂ ಪೂರ್ವ ಕಾಲದಿಂದಲೇ ಭಾರತದಲ್ಲಿ ಅಸ್ತಿತ್ವದಲ್ಲಿದುದನ್ನು ಸಮರ್ಥಿಸುತ್ತವೆ.

ನೀರಾವರಿ ಮೂಲಗಳ ರಕ್ಷಣೆಗಾಗಿ ಕೆಲವು ಕ್ರಮಗಳನ್ನು ಅನುಸರಿಸುತ್ತಿದ್ದುದನ್ನು ಸ್ಮೃತಿಗಳಲ್ಲಿ ಉಲ್ಲೇಖಿತ ನಿಯಮಗಳಿಂದ ನೋಡಬಹುದು. ನೀರುಗಟ್ಟೆಗಳಿಗೆ ಆಣೆಕಟ್ಟುಗಳಿಗೆ ಹಾನಿಯುಂಟು ಮಾಡಿದರೆ ಭಾರಿ ಪ್ರಮಾಣದ ದಂಡ ವಿಧಿಸಿಬೇಕೆಂದು ಸ್ಮೃತಿಗಳು ಶಿಫಾರಸ್ಸು ಮಾಡಿವೆ. ನಾರದಸ್ಮೃತಿಯು ಹೇಳಿರುವಂತೆ, ಯಾರದೇ ಒಡೆತನದಲ್ಲಿರುವ ಭೂಮಿಯಲ್ಲಿ ಕೂಡಾಕಾಲವೆಗಳ ನಿರ್ಮಾಣ ಮಾಡಲು ಅವಕಾಶವಿದ್ದಿತು. ಆದರೆ ಅದಕ್ಕಾಗುವ ನಷ್ಟವನ್ನು ತುಂಬಿಕೊಡಬೇಕಾಗಿದ್ದಿತು. ನೀರಾವರಿ ಮೂಲಗಳ ನಿರ್ಮಾಣವನ್ನು ಅಭಿವೃದ್ಧಿಯ ಮೂಲಭೂತ ವಿಷಯವಾಗಿ ಪರಿಗಣಿಸಲಾಗಿತ್ತು. ಭೂಮಿಯ ಮಾಲೀಕನ ಅನಮತಿ ಪಡೆದು ಇನ್ನೋರ್ವನು ಅದರಲ್ಲಿ ನೀರಾವರಿ ಉದ್ದೇಶಕ್ಕಾಗಿ ಆಣೆಕಟ್ಟು ಅಥವಾ ಬಾವಿಯನ್ನು ನಿರ್ಮಿಸಿಕೊಂಡ ಮೇಲೆ ಭೂಮಿಯ ಮಾಲೀಕನು ಅದಕ್ಕೆ ತಕರಾರು ಮಾಡಿದಲ್ಲಿ ಆತನನ್ನು ದಂಡಿಸಬೇಕೆಂದು ವಿಜ್ಞಾನೇಶ್ವರನು ಹೇಳಿದ್ದಾನೆ. ಇಂತಹ ನಿಯಮಗಳ ಉದ್ದೇಶವು ಸಾಮುದಾಯಿಕ ಹಿತವನ್ನು ಹೊಂದಿದ್ದಿತು. ಸರೋವರ, ಕೆರೆಗಳು, ಬಾವಿಗಳು ನದಿಗೆ ನಿರ್ಮಿಸಲಾದ ಸಣ್ಣಪ್ರಮಾಣದ ಆಣೆಕಟ್ಟುಗಳು, ಕಾಲುವೆಗಳು ಪ್ರಾಚೀನ ಭಾರತದ ನೀರಾವರಿ ಕ್ಷೇತ್ರದಲ್ಲಿ ಪ್ರಧಾನವಾಗಿದ್ದವು. ಹೀಗೆ ಲಭ್ಯ ತಂತ್ರಜ್ಞಾನವನ್ನು ಬಳಸಿಕೊಂಡು ಇರುವ ಮಿತಿಯಲ್ಲಿ ನೀರಾವರಿ ವ್ಯವಸ್ಥೆಯನ್ನು ರೂಪಿಸಿಕೊಂಡಿರುವುದನ್ನು ಗಮನಿಸಬಹುದು.