ಪ್ರಾಕೃತ ಮತ್ತು ಪಾಳಿಭಾಷಾ ಸಾಹಿತ್ಯ

ಗುಪ್ತರ ಕಾಲದಲ್ಲಿಪ್ರಾಕೃತ ಮತ್ತು ಪಾಳಿಭಾಷೆಗಳು ಧಾರ್ಮಿಕ ಮತ್ತು ಧಾರ್ಮಿಕೇತರ ಎರಡೂ ಸಾಹಿತ್ಯ ವಿಭಾಗಗಳಲ್ಲೂ ತಕ್ಕ ಮಟ್ಟಿಗೆ ಬಳಕೆಯಲ್ಲಿದ್ದವು. ಜೈನ ಮತ್ತು ಬೌದ್ಧ ಧರ್ಮದ ಧಾರ್ಮಿಕ ಗ್ರಂಥಗಳು, ಅವುಗಳ ಮೇಲಿನ ಭಾಷ್ಯಗಳು ಮತ್ತು ಟೀಕೆಗಳು ಈ ಭಾಷೆಗಳಲ್ಲಿ ರಚನೆಗೊಂಡವು. ಆದರೆ ನಂತರದ ಕಾಲದಲ್ಲಿ ಎಲ್ಲ ವರ್ಗ ಮತ್ತು ಪಂಗಡಗಳಲ್ಲಿ ವಿದ್ವಾಂಸರಲ್ಲಿ, ಧಾರ್ಮಿಕ ಮತ್ತು ಧಾರ್ಮಿಕೇತರ ಕ್ಷೇತ್ರಗಳಲ್ಲಿ ಈ ಎರಡೂ ಭಾಷೆಗಳು ತಮ್ಮ ಸ್ಥಾನ ಕಳೆದುಕೊಂಡವು. ಸಂಸ್ಕೃತವು ಈ ಎರಡು ಭಾಷೆಗಳನ್ನು ಹಿಂದಕ್ಕೆ ತಳ್ಳಿತು. ಪಾಳಿ ಬಾಷೆಯು ಜನಸಾಮಾನ್ಯರ ಆಡು ಭಾಷೆಗೆ ಸಮೀಪವಾಗಿದ್ದಿತು. ಬೌದ್ಧ ಧರ್ಮವು ಹೆಚ್ಚಾಗಿ ಈ ಭಾಷೆಯನ್ನು ಬಳಸಿಕೊಂಡಿದೆ. ಸಂಹಿತಾ ಗ್ರಂಥಗಳು, ವ್ಯಾಖ್ಯನಗಳು, ಜಾತಕ ಕಥೆಗಳು, ದೀಪವಂಶ ಮಹಾವಂಶಗಳೂ, ಕಛ್ಛಾಯನನ ವ್ಯಾಕರಣ ಅಥವಾ ಗಂಧ ಮೊದಲಾದವುಗಳು ಪಾಳಿ ಭಾಷೆಯಲ್ಲಿನ ಮುಖ್ಯ ಕೊಡುಗೆಗಳಾಗಿವೆ. ಗುಪತ್ತರ ನಂತರದಲ್ಲಿ ಪಾಳಿ ಭಾಷಾ ಸಾಹಿತ್ಯವು ಕ್ಷೀಣೀಸಿತು. ಕ್ರಿ.ಶ. ಹತ್ತನೆಯ ಶತಮಾನದಲ್ಲಿ ನಾಲ್ಕನೆಯ ಮಹೀಂದನ (೯೫೩-೯೬೯) ಕಾಲದಲ್ಲಿ ಕೆಲವು ಕೃತಿಗಳು ರಚನೆಗೊಂಡವು. ಚುಲ್ಲಧಮ್ಮ ಪಾಲನ ಸತ್ಯಸಂಖೇಪ, ಮಹಾನಾಮನ ಸಧ್ಧಮ್ಮ ಕಾಸಿನಿ, ಖೇಮನ ಖೇಮಪ್ಪಪುರಾಣ ಅಲ್ಲದೆ ಉಪತಿಸ್ಸ ಮತ್ತು ತೇಲಕಟಾಹಗಾಥಾಗಳನ್ನು ಇಲ್ಲಿ ಹೆಸರಿಸಬಹುದಾಗಿದೆ. ಪಾಳಿಗೆ ಹೋಲಿಸಿದರೆ ಪ್ರಾಕೃತವು ಹೆಚ್ಚು ಅಲಂಕೃತವಾದ ಭಾಷೆ ಸಂಸ್ಕೃತಕ್ಕೆ ಸಮೀಪವಾದುದಾಗಿದೆ. ಜೈನಮತ ಗ್ರಂಥಗಳು ಹೆಚ್ಚಾಗಿ ಪ್ರಾಕೃತ ಭಾಷೆಯಲ್ಲಿವೆ. ಜೈನಸೂತ್ರಗಳು, ಆಗಮಗಳು ಪ್ರಾಕೃತಭಾಷೆಯಲ್ಲಿವೆ. ಧಾರ್ಮಿಕವಲ್ಲದ ಕೃತಿಗಳಲ್ಲಿ ಗುಪ್ತರಕಾಲದಲ್ಲಿ ಧರ್ಮದಾಸ ಮತ್ತು ಸಂಘದಾಸರ ವಸುದೇವಹಿಂಡಿ ಪಾದಲಿಪ್ತನ ತರಂಗವತಿಕಥಾ ಸಿದ್ಧಸೇನನ ಸಮ್ಮತಿ ತರ್ಕ ಸೂತ್ರ ವ್ಯಾಕರಣಗಳಲ್ಲಿ ವರರುಚಿಯ ಪ್ರಾಕೃತ ಪ್ರಕಾರ ಮತ್ತು ಚಂಡನ ಪ್ರಾಕೃತ ಲಕ್ಷಣಗಳು, ಕವ್ಯಗಳಲ್ಲಿ ಸೇತುಬಂಧ ಮತ್ತು ಗೌಡವಹೋ ಪ್ರಮುಖ ಕೊಡುಗೆಯಾಗಿದೆ. ನಂತರದಲ್ಲಿ ಹರಿಭದ್ರನು ಮಹತ್ವದ ಲೇಖಕನಾಗಿದ್ದಾನೆ. ಈತನ ಕೃತಿಗಳಲ್ಲಿ ಸಮರಾದಿತ್ಯ ಕಥಾ ಮತ್ತು ದೂರ್ತಾಖ್ಯಾನ ಪ್ರಮುಖವಾಗಿವೆ. ಉದ್ಯೋತನ ಸೂರಿಯ ಕುವಲಯಮಾಲಾ, ಧರ್ಮದಾಸ ಸಹಣಿಯ ಉಪದೇಶಮಾಲಾ, ಮಹೇಶ್ವರ ಸೂರಿಯ ಜ್ಞಾನಪಂಚಮೀಕಥಾ, ವಿಜಯಸಿಂಹನ ಭುವನಸುಂದರೀಕಥಾ ನಂದೀಷೇಣನ ಅಜಿತಶಾಂತಿಸ್ತವ (ಕಾವ್ಯ) ಇವುಗಳು ಇತರ ಮುಖ್ಯ ಪ್ರಾಕೃತ ಕೃತಿಗಳಾಗಿವೆ. ಗುಪ್ತ ಕಾಲಕ್ಕೆ ಹೋಲಿಸಿದರೆ ನಂತರದ ಕೃತಿಗಳ ಶೈಲಿಯಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಸಂಸ್ಕೃತ ಶೈಲಿಯ ಅನುಸರಣೆಯಾಗಿರುವುದನ್ನು ನೋಡಬಹುದಾಗಿದೆ.

ಅಪಭ್ರಂಶ ಭಾಷಾ ಸಾಹಿತ್ಯ

ಪ್ರಾಚೀನ ಬಾರತದ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಗಮನಾರ್ಹ ಅಂಶವೆಂದರೆ, ಅಪಭ್ರಂಶ ಎಂಬ ಭಾಷೆಯ ಉಗಮ ಮತ್ತು ಆ ಭಾಷೆಯಲ್ಲಿ ಸಾಹಿತ್ಯ ಕೃತಿಗಳ ರಚನೆ. ಅಪಭ್ರಂಶವೆಂದರೆ ಒಂದು ಭಾಷೆಯ ಅಶುದ್ಧ ರೂಪವೆಂದು ಅರ್ಥವಿದೆ ಯಾದರೂ, ಇಲ್ಲಿ ಇದನ್ನು ಒಂದು ಭಾಷೆಯೆಂದು ಪರಿಗಣಿಸಬೇಕು. ಅಪಭ್ರಂಶವು ಪ್ರಾಕೃತದ ಕೊನೆಯ ಹಂತವನ್ನು ಪ್ರತಿನಿಧಿಸುತ್ತದೆ ಮತ್ತು ಆಧುನಿಕ ಆರ್ಯಭಾಷೆಗಳಾದ ಹಿಂದಿ, ಗುಜರಾತಿ, ಮರಾಠಿ, ಬಂಗಾಳಿ ಮೊದಲಾದವು ಅಪ್ರಭಂಶದಿಂದಲೇ ರೂಪುಗೊಂಡವು ಎಂಬ ಅಭಿಪ್ರಾಯವಿದೆ. ಆರನೆಯ ಶತಮಾನದ ವೇಳೆಗೆ ಈ ಭಾಷೆಯು ಪ್ರವರ್ಧಮಾನಕ್ಕೆ ಬಂದಿದ್ದತು. ವಾಯುವ್ಯ ಭಾರತವು ಇದರ ಮೂಲಸ್ಥಳವೆಂದು ಭಾವಿಸಲಾಗಿದೆ. ವೈಯಾಕರಣಿಗಳು ಈ ಭಾಷೆಯನ್ನು ಅಶುದ್ಧ ವೆಂದರೂ ಕವಿಗಳು ಅಪಭ್ರಂಶವೆನ್ನದೆ ದೇಶೀ ಅರ್ಥಾತ್‌ಪ್ರಾ ದೇಶಿಕ ಭಾಷೆ ಎಂದು ಕರೆದಿರುವರು.

ಅಪ್ರಭಂಶ ಭಾಷೆಯಲ್ಲಿ ದೋಹಗಳೂ ರಚನೆಯಾಗಿವೆ. ದೋಹಾಗಳೆಂದರೆ ಎರಡು ಸಾಲಿನ ಪದ್ಯಗಳೂ. ಜೋಇಂದು ಬರೆದ ಪರಮಪ್ಪಪಯಾಸು, ರಾಮಸಿಂಹಮುನಿ ಬರೆದ ಪಾಹುಡದೋಹಾ, ದೇವಸೇನನು ಬರೆದ ಸಾವಯಧಮ್ಮ ದೋಹಾ ಹಾಗೂ ಸುಪ್ರಭಾಚಾರ್ಯನ ವೈರಾಗ್ಯಸಾರ ಇವುಗಳು ಜೈನ ಸಾಹಿತ್ಯದ ದೋಹಾ ಗ್ರಂಥಗಳಾಗಿವೆ. ತಿಲ್ಲೋಪಾದ, ಸರಹಪಾದ, ಕಣ್ಹಪಾದ ಮತ್ತು ಇತರ ಬೌದ್ಧ ಸನ್ಯಾಸಿಗಳು ದೋಹಾ ಶ್ಲೋಕಗಳನ್ನು ರಚಿಸಿದ್ದಾರೆ. ಇವುಗಳು ದೋಹಕೋಶ ಎಂಬ ಗ್ರಂಥದಲ್ಲಿ ಸಂಗ್ರಹಿಸಲಾಗಿದೆ.

ಅಪ್ರಭಂಶದಲ್ಲಿ ದೊರೆತ ಮಹಾಕಾವ್ಯಗಳಲ್ಲಿ ಅತ್ಯಂತ ಪ್ರಾಚೀನವಾದವು ಸ್ವಯಂಭೂದೇವನ ಹರಿವಂಶ ಪುರಾಣ ಮುಂತಾದವುಗಳು ರಾಮಯಾಣ ಮತ್ತು ಮಹಾಭಾರತಗಳ ಜೈನ ರೂಪಾಂತರಗಳಾಗಿವೆ. ಈ ಎರಡು ಕೃತಿಗಳನ್ನು ಈತನ ಮಗ ತ್ರಿಭುವನ ಸ್ವಯಂಭೂದೇವ ಎಂಬುವನು ಪೂರ್ತಿಗೊಳಿಸಿದನು. ಈ ಸ್ವಯಂಭೂದೇವನು ಅಪಭ್ರಂಶ ಛಂದಶಾಸ್ತ್ರ ಅಲಂಕಾರಶಾಸ್ತ್ರ ಮತ್ತು ವ್ಯಾಕರಣಗಳನ್ನು ರಚಿಸಿರುವನೆಂದು ಹೇಳಲಾಗಿದೆ.

ಅಪಭ್ರಂಶದ ಬಹುದೊಡ್ಡ ಕವಿ ಪುಷ್ಪದಂತ. ಈತನು ಮಹಾಪುರಾಣ, ನಾಯಕುಮಾರ ಚರಿತೆ ಮುಂತಾದ ಕೃತಿಗಳನ್ನು ರಚಿಸಿರುವನು. ಈತನು ಅಪಭ್ರಂಶದಲ್ಲಿಯೂ ಶೇಷ್ಟ ಕವ್ಯ ರಚಿಸಿಬಹುದೆಂದು ತೋರಿಸಿಕೊಟ್ಟಿರುವನು. ಪುಷ್ಪದಂತನ ಕಾವ್ಯದಿಂದ ಪ್ರಚೋದಿತನಾದ ಕನಕಾಮರನ ಕರಕಂಡಚರಿತೆ ಎಂಬ ಕಾವ್ಯವನ್ನು ರಚಿಸಿರುವನು. ಹರಿಭದ್ರನ ಣೀಮಿಣಾಂಹ ಚರಿತೆ ಮತ್ತು ಪದ್ಮಕೀರ್ತಿಯ ಪಾಸನಾಹಚರಿತೆ ಅಥವಾ ಪಾಸುಪುರಾಣ ಇತರ ಪ್ರಮುಖ ಕಾವ್ಯಗಳಾಗಿವೆ.

ಅಪಭ್ರಂಶ ಭಾಷಾ ಸಾಹಿತ್ಯದ ಮತ್ತೊಂದು ಪ್ರಕಾರವೆಂದರೆ ಸಣ್ಣ ಕಥೆಗಳು. ಇವುಗಳು ಮನೋರಂಜನೆ ಹಾಗೂ ನೈತಿಕ ಮತ್ತು ದಾರ್ಮಕ ತಿಳುವಳಿಕೆ ಉದ್ದೇಶದಿಂದ ರಚಿಸಲ್ಪಟ್ಟಿದೆ. ಜೈನ ಸಾಹಿತ್ಯದಲ್ಲಿ ಈ ರೀತಿ ಕಥೆಗಳ ಮೂಲಕ ಧಾರ್ಮಿಕ ತತ್ವಗಳನ್ನು ವಿವರಿಸುವ ಮಾದರಿ ಪ್ರಾಚೀನ ಕಾಲದಿಂದಲೂ ಇದೆ. ಇದು ಧಾರ್ಮಿಕ ಶಿಕ್ಷಣವನ್ನು ನಿಡುತ್ತಿದ್ದ ಮಾದರಿಗಳಲ್ಲಿ ಒಂದೆನ್ನಬಹುದು. ಈ ವಿಧಾನಗಳಲ್ಲಿ ಎರಡು ಪ್ರಕಾರಗಳಿವೆ ಎಂದು ಗುರುತಿಸಲಾಗಿದೆ. ಒಂದು, ಬೇರೆ ಮತಗಳಲ್ಲಿನ ಅಸಂಗತ ಮತ್ತು ಅನೌಚಿತ್ಯ ವಿಷಯಗಳನ್ನು ಕಥೆಗಳ ಮೂಲಕ ವಿವರಿಸಿ ತನ್ನ ಮತದಲ್ಲಿ ವಿಶ್ವಾಸ ಮೂಡುವಂತೆ ಮಾಡುವುದು. ಎರಡನೆಯದು ತಾವು ನಿಜವೆಂದು ನಂಬಿದ ಮತವನ್ನು ಸಮರ್ಥಿಸಿಕೊಳ್ಳಲು ಮತ್ತು ಅದರಲ್ಲಿನ ಮೃತ ಮತ್ತು ಸಂಪ್ರದಾಯಗಳನ್ನು ನಿಷ್ಠೆಯಿಂದ ಅನುಸರಿಸಲು ಹಿಂದಿನ ಉದಾಹರಣೆಗಳನ್ನು ನೀಡಿ ಪ್ರೇರೇಪಿಸುವುದು. ಹರಿಷೇನ ಧಮ್ಮ ಪರೀಕ್ಷಾ ಎಂಬ ಕೃತಿಯು ಅಪ್ರಭಂಶ ಸಾಹಿತ್ಯ ಕ್ಷೇತ್ರದಿಂದ ಮೊದಲನೆಯ ವಿಧಾನಕ್ಕೆ ನೀಡಲದ ಕೊಡುಗೆಯಾಗಿದೆ.

ದ್ರಾವಿಡ ಭಾಷಾ ಸಾಹಿತ್ಯ

 

ತಮಿಳು ಭಾಷಾ ಸಾಹಿತ್ಯವು ದೀರ್ಘಾವಧಿಯ ಇತಿಹಾಸವನ್ನು ಹೊಂದಿದೆ. ಸಂಗಮ್‌ ಯುಗಿಂದ ತಮಿಳು ಸಾಹಿತ್ಯದ ಬೆಳವಣಿಗೆಯನ್ನು ಗುರುತಿಸಲಾಗುತ್ತದೆ. ಗುಪ್ತರ ಯುಗದಿಂದ ಕ್ರಿ.ಶ. ಹನ್ನೆರಡನೆಯ ಶತಮಾನದವರೆಗಿನ ಅವಧಿಯಲ್ಲಿ ಕೂಡಾ ಅನೇಕ ತಮಿಳು ಕೃತಿಗಳು ರಚನೆಗೊಂಡಿವೆ. ತಮಿಳಿನ ಐದು ಪ್ರಸಿದ್ಧ ಕಾವ್ಯಗಳಲ್ಲಿ ಜೈನ ಕವಿ ಇಳಂಗೋಅಡಿಗಳ್‌ನ ಶಿಲಪ್ಪಾದಿಕರಂ, ಬೌದ್ಧ ಕವಿ ಸತ್ತನಾರ್ನ್ ಮಣಿಮೇಖಲೈ ಈ ಅವಧಿಗೆ ಸೇರಿವೆ. ಶೈವ ಮತ್ತು ವೈಷ್ಣವ ಸಂತರು ಅಪಾರ ಸಂಖ್ಯೆ ತಮಿಳು ಭಕ್ತಿ ಸ್ತೋತ್ರಗಳನ್ನು ರಚಿಸಿದ್ದಾರೆ. ನಂಬಿ ಅಂಡಾರ್ ನಂಬಿ ಲಭ್ಯ ಶೈವಭಕ್ತಿ ಸ್ತೋತ್ರಗಳನ್ನು ಸಂಗ್ರಹಿಸಿ ಹನ್ನೊಂದು ತಿರುಮುಳೈ ಎಂದು ಸಂಕಲನ ಮಾಡಿರುವರು. ಮೊದಲ ಏಳು ತಿರುಮುಳೈಗಳು ಅಪ್ಪಾರ್, ಸಂಬಂಧರ್ ಮತ್ತು ಸುಂದರರ್‌ರವರ ಸ್ತೋತ್ರಗಳು. ಎಂಟನೆಯದು ಮಾಣಿಕ್ಯ ವಾಚಕರ್ ರಚಿತ ತಿರುವಾಚಕಂ. ಒಂಭತ್ತನೆಯದು ಇಶ್ಯೆಪ್ಪಾ ಹಲವರ ಸ್ತೋತ್ರಗಳ ಸಂಗ್ರಹ. ಹತ್ತನೆಯದು ಶೈವಯೋಗಿ ತಿರುಮಾಲರ ಅನುಭಾವ ಸ್ತೋತ್ರಗಳ ಸಂಗ್ರಹ. ಹನ್ನೊಂದನೆಯದು ನಕ್ಕೀರರ್ ಮತ್ತು ಅಂಡಾರ್ ನಂಬಿಯವರ ಸ್ತೋತ್ರಗಳ ಸಂಗ್ರಹವಾಗಿದೆ. ಇದೇ ರೀತಿ ನದಮುನಿಯು ನಾಲ್ಕು ಸಾವಿರ ವೈಷ್ಣವ ಸ್ತೋತ್ರಗಳನ್ನು ಸಂಗ್ರಹಿಸಿ ನಾಲಯಿರ ಪ್ರಬಂಧಂ ಎಂಬ ಹೆಸರಿನಲ್ಲಿ ಸಂಕಲಿಸಿ ನೀಡಿದ್ದಾರೆ. ತಿರುಮೂಲರ ಅವರ ತಿರುಮಂದಿರ ಶಿವನನ್ನು ಕುರಿತ ೩೦೦೦ ಶ್ಲೋಕಗಳ ಸಂಕಲನ ಪ್ರಮುಖ ಕೊಡುಗೆಯಾಗಿದೆ.

ಜೈನ ಕವಿ ಕೊಂಗುವೇಲಿರ್ ನ ಪೆರುಂಗದೈ ಸಂಸ್ಕೃತದ ಬೃಹತ್ಕಥೆಯನ್ನು ಹೋಲುವ ಕೃತಿಯಾಗಿದೆ. ಗದ್ಯ ಸಾಹಿತ್ಯದಲ್ಲಿ ನಕೀರರ್ ರಚಿತ ಇರೈಯನಾರಹಪ್ಪೊರುಳ್ ಪ್ರಮುಖವಾಗಿದೆ ಇದು ಕ್ರಿ.ಶ. ಎಂಟು-ಒಂಭತ್ತನೇ ಶತಮಾನದಲ್ಲಿ ರಚಿತವಾಯಿತು. ಚೋಳರ ಆಳ್ವಿಕೆ ಕಾಲವನ್ನು ತಮಿಳು ಸಹಿತ್ಯದ ಸುವರ್ಣಯುಗವೆನ್ನುತ್ತಾರೆ. ಜೈನ ಕವಿ ತಿರುತ್ತಕ್ಕದೇವರ್‌ನ ಜೀವಿಕ ಚಿಂತಾಮಣಿಯು ಕ್ರಿ.ಶ. ಒಂಭತ್ತನೆಯ ಶತಮಾನದ ಸಂಸ್ಕೃತ ಕಾವ್ಯ ಶೈಲಿಯನ್ನು ಹೋಲುತ್ತದೆ. ಐತಿಹಾಸಿಕ ಕೃತಿಗಳಲ್ಲಿ ಕಳಿಂಗಪತ್ತು ಪರಣಿ ಪ್ರಧಾನವಾಗಿದೆ. ಚೋಳ ದೊರೆ ಒಂದನೇ ಕುಲೋತ್ತುಂಗನ ಕಳಿಂಗ ದಂಡಯಾತ್ರೆ ಕುರಿತ ಜಯಗೊಂಡರ್ ರಚಿಸಿರುವನು. ಈ ಕೃತಿಯ ಮಾದರಿಯಲ್ಲಿ ಕೂತ್ತನ್‌ ತಕ್ಕಯಾಗ ಪರಣಿ ಎಂಬ ಕಾವ್ಯ ರಚಿಸಿದ್ದಾನೆ. ಇದು ದಕ್ಷಯಜ್ಞ ಕಥೆಯನ್ನಾಧರಿಸಿದೆ. ಭಕ್ತಿ ಸಾಹಿತ್ಯದಲ್ಲಿ ಸಿಕ್ಕಿಲಾರ್ ರಚಿತ ತಿರುತೊಂಡರ್‌ ಪುರಾಣಂ (ಪೆರಿಯಪುರಾಣಂ) ಪ್ರಸಿದ್ಧವಾಗಿದೆ. ತಮಿಳು ವ್ಯಾಕರಣ ಕ್ಷೇತ್ರದಲ್ಲಿ ಜೈನ ವಿದ್ವಾಂಸ ಅಮಿತಸಾಗರನ ಯಾಪ್ಪರುಂಗಲಂ ಮತ್ತು ಯಾಪ್ಪರುಂಗಲಕ್ಕರಿಕೈ ಎರಡು ಮುಖ್ಯ ಕೃತಿಗಳಾಗಿವೆ. ಇವೆರಡು ಕ್ರಿ.ಶ. ೧೦ನೆಯ ಶತಮಾನದಲ್ಲಿ ರಚನೆಗೊಂಡವು. ಬುದ್ಧ ಮಿತ್ರನವೀರ ಸೊಳಿಯಾಮ್ ತಮಿಳು ಮತ್ತು ಸಂಸ್ಕೃತಗಳ ತುಲನಾತ್ಮಕ ಅಧ್ಯಯನದ ಕೃತಿಯಾಗಿದೆ. ಅನಾಮಧೇಯನ ದಂಡಿ ಕಾವ್ಯಾದರ್ಶ ಆಧರಿಸಿದ ದಂಡಿಯಲಂಗಾರಂ ಅಲಂಕರ ಶಾಸ್ತ್ರ ಕುರಿತ ಕೃತಿಯಾಗಿದದೆ. ನೇಮಿನಾದಮ್‌ ಮತ್ತು ಪವನಂದಿಯ ನನ್ನೂಲ್ ಇವೆರಡು ಜೈನ ಕೃತಿಗಳು ಇವು ತಮಿಳು ವ್ಯಾಕರಣದ ಕೈಪಿಡಿಗಳಾಗಿವೆ. ದಿವಾಕರರ್ ಮತ್ತು ಪಿಂಗಳರ್ ಎಂಬುವವರು ಅವರ ಹೆಸರಿನಲ್ಲಿ ನಿಘಂಟುಗಳನ್ನು ರಚಿಸಿದ್ದಾರೆ. ಅಯಾನಾರಿದನಾರ್ ರಚಿತ ಪುರಪ್ಪೊರುಳ್-ವೆಣ್‌ಬಾಮಲೈ ಮತ್ತೊಂದು ಪ್ರಮುಖ ಕೃತಿಯಾಗಿದೆ.

ಕನ್ನಡ ಸಾಹಿತ್ಯವು ಕೂಡಾ ತಮಿಳು ಸಾಹಿತ್ಯದಂತೆ ದೀರ್ಘಕಾಲದ ಇತಿಹಾಸವನ್ನು ಹೊಂದಿದೆ. ಕ್ರಿ.ಶ. ಆರು-ಏಳನೆಯ ಶತಮಾನದಲ್ಲಿ ಕನ್ನಡದಲ್ಲಿ ಅನೇಕ ವಿದ್ವಾಂಸರಿದ್ದರೆನ್ನಲಾಗಿದೆ. ಆದರೆ ಅವರ ಕೃತಿಗಳು ಲಭ್ಯವಿಲ್ಲ. ಶ್ರೀ ವಿಜಯನ ಕವಿರಾಜಮಾರ್ಗ ದೊರೆತಿರುವ ಪ್ರಾಚೀನ ಕೃತಿಗಳಲ್ಲಿ ಮೊದಲನೆಯದು. ಕ್ರಿ.ಶ. ಹತ್ತನೆಯ ಶತಮಾನದಿಂದ ಕನ್ನಡ ಸಾಹತ್ಯ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆಯು ಕಂಡುಬರುತ್ತದೆ. ಶಿವಕೋಟಾಚಾರ್ಯನ ವಡ್ಡಾರಾಧನೆ ಕೂಡಾ ಕನ್ನಡದ ಪ್ರಾಚೀನ ಕೃತಿಗಳಲ್ಲಿ ಒಂದಾಗಿದೆ. ವೇಮುಲವಾಡ ಚಾಲುಕ್ಯರ ದೊರೆ ಅರಿಕೇಸರಿಯ ಆಸ್ಥಾನ ಕವಿಯಾದ ಪಂಪನನ್ನು ಕನ್ನಡದ ಆದಿಕವಿಯೆನ್ನುತ್ತಾರೆ. ಆತನ ಆದಿಪುರಾಣಂ ಮತ್ತು ವಿಕ್ರಮಾರ್ಜುನ ವಿಜಯ (ಪಂಪಭಾರತ) ಕನ್ನಡದ ಶ್ರೇಷ್ಠ ಕಾವ್ಯಗಳಾಗಿವೆ. ಇವು ಚಂಪೂ ಸೈಲಿಯಲ್ಲಿವೆ. ಚಾಲುಕ್ಯರ ಸತ್ಯಶ್ರಯನ ಆಶ್ರಯ ಪಡೆದಿದ್ದರನ್ನನು ಸಾಹಸಭೀಮವಿಜಯ ಅಥವಾ ಗದಾಯುದ್ಧ ಎಂಬ ಶ್ರೇಷ್ಠ ಚಂಪೂ ಕಾವ್ಯವನ್ನು ನೀಡಿರುವನು. ಅಜಿತನಾಥಪುರಾಣ ಮತ್ತು ರನ್ನಕಂದ ಆತನ ಇತರ ಎರಡು ಕೃತಿಗಳಾಗಿವೆ. ಮತ್ತೋರ್ವ ಪ್ರಸಿದ್ಧ ಕವಿ ಪೊನ್ನನು ಶಾಂತಿನಾಥಪುರಾಣ ಮತ್ತು ಜಿನಾಕ್ಷರ ಮಾಲೆ ಎಂಬ ಕೃತಿಗಳನ್ನು ರಚಿಸಿರುವನು. ಈ ಮೂವರು ಕವಿಗಳನ್ನು ಕನ್ನಡ ಸಾಹಿತ್ಯದಲ್ಲಿ ರತ್ನತ್ರಯರೆನ್ನುತ್ತಾರೆ.

ರನ್ನನಿಗೆ ಸಮಕಾಲೀನನಾದ ನಾಗವರ್ಮನು ಛಂದಸ್ಸನ್ನು ಕರಿತು ಛಂದೋಬುದಿ ಮತ್ತು ಬಾಣನ ಕಾದಂಬರಿಯ ರೂಪಾಂತರವಾದ ಕರ್ಣಟಕಕಾದಂಬರಿಯನ್ನು ರಚಿಸಿರುವನು. ಚಾವುಂಡರಾಯನ ತ್ರಿಶಷ್ಟಿ ಲಕ್ಷಣ ಮಹಾಪುರಾಣ ಎಂಬ ೬೭ ಜೈನ ಸಂತರ ಜೀವನ ಕಥೆಯನ್ನಾಧರಿಸಿದ ಕೃತಿಯನ್ನು ರಚಿಸಿರುವನು. ಹನ್ನೊಂದನೆಯ ಶತಮಾನದಲ್ಲಿ ಅಭಿನವ ಪಂಪನೆಂದು ಪ್ರಸಿದ್ಧನಾದ ನಾಗಚಂದ್ರನು ರಾಮಚಂದ್ರಚರಿತವನ್ನು, ಶ್ರೀಧರಾಚಾರ್ಯನು ಜಾತಕತಿಲಕವನ್ನು ಮತ್ತು ಚಂದ್ರರಾಜನು ಮದನತಿಲಕವನ್ನು ರಚಿಸಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಚಾಲುಕ್ಯ ರಾಜಕುಮಾರ ಕೀರ್ತಿವರ್ಮನು ದನಕರುಗಳ ಕಾಯಿಲೆಗೆ ಸಂಬಂಧಿಸಿದ ವೈದ್ಯಗ್ರಂಥ ಗೋವೈದ್ಯವನ್ನು, ದುರ್ಗಸಿಂಹನು ಕರ್ಣಾಟಕ ಪಂಚತಂತ್ರವನ್ನು ರಚಿಸಿರುವರು. ಎರಡನೆಯ ನಾಗವರ್ಮನು ವಾಸ್ತುಕೋಶ ಎಂಬ ಸಂಸ್ಕೃತ ಕನ್ನಡ ನಿಘಂಟು ಹಗೂ ಜಗದ್ದಲ ಸೋಮನಾಥನು ಸಂಸ್ಕೃತದ ಕಾಲ್ಯಾಣಕರಕ ಎಂಬ ವೈದ್ಯಕೀಯ ಗ್ರಂಥದ ಅನುವಾದವನ್ನು ರಚಿಸಿರುವನು. ಗನಿತ ವಿಷಯದ ಶ್ರೇಷ್ಠ ವಿದ್ವಾಂಸ ರಾಜಾಧಿತ್ಯನು ವ್ಯವಹಾರಗಣಿತ, ಕ್ಷೇತ್ರಗಣಿತ ಮತ್ತು ಲೀಲಾವತಿ ಎಂಬ ಕೃತಿಗಳನ್ನು ರಚಿಸಿದ್ದಾನೆ. ಹರೀಶ್ವರನೆಂಬಾತನು ಶಿವಗಣದ ರಗಳೆಗಳು ಎಂಬ ಕೃತಿಯಲ್ಲಿ ೬೩ ಶೈವಸಂತರ ಜೀವನವನ್ನು ವಿವರಿಸಿರುವನು. ಕನ್ನಡಕ್ಕೆ ಜೈನ ಕವಿಗಳ ಕೊಡುಗೆ ಅಪೂರ್ವವಾದುದು ಅದು ನಂತರ ಹೊಯ್ಸಳರ ಕಾಲಕ್ಕೂ ಮುಂದುವರೆದಿದೆ.

ಹನ್ನೆರಡನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯ ಲೋಕವು ಮತ್ತೊಂದು ತಿರುವನ್ನು ಕಂಡಿತು. ಅದೆಂದರೆ ವಚನಕಾರರು ಕನ್ನಡ ಸಾಹಿತ್ಯಕ್ಕೆ ವಚನ ಪ್ರಕಾರವನ್ನು ಪರಚಯಿಸಿ ತಮ್ಮ ಸುಧಾರಣೆಗಳನ್ನು ಹರಡಲು ಈ ವಚನಗಳನ್ನು ಮಾಧ್ಯಮವಾಗಿ ಬಳಸಿಕೊಂಡದ್ದು. ಈ ಚಳುವಳಿಯ ಪ್ರಮುಖರಾದ ಬಸವಣ್ಣನವರಲ್ಲದೆ ಸುಮಾರು ೨೦೦ ವಚನಕರರು ವಚನ ಸಾಹಿತ್ಯಕ್ಕೆ ತಮ್ಮ ಕೊಡುಗೆಗಳನ್ನು ನೀಡಿರುವರು. ಬಸವಣ್ಣ, ಅಲ್ಲಮಪ್ರಭು, ಚನ್ನಬಸವಣ್ಣ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಉರಿಲಿಂಗದೇವ, ಗಜೇಶಮ ಸಣಯ್ಯ, ಕಿನ್ನರಿಬ್ರಹ್ಮಯ್ಯ, ಮಾದರಧೂಳಯ್ಯ, ಅಕ್ಕಮಹಾದೇವಿ. ಮುಕ್ತಾಯಕ್ಕ, ನೀಲಮ್ಮ ಇವರುಗಳು ಪ್ರಮುಖ ವಚನಕಾರರಾಗಿದ್ದಾರೆ. ಸರಳವಾದ ಭಾಷೆ, ಶೈಲಿ ಮತ್ತು ಜನಸಾಮಾನ್ಯ ವಿಚಾರಗಳ ಕೇಂದ್ರಿತವಾದ ವಚನಗಳು ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿವೆ.

ಕನ್ನಡ ಸಾಹಿತ್ಯದ ನಂತರ ತೆಲಗು ಸಾಹಿತ್ಯವು ಆರಂಭಗೊಂಡಿತು. ಸಂಸ್ಕೃತದ ಪ್ರಭಾವ ತೆಲಗು ಸಾಹಿತ್ಯದಲ್ಲಿ ಕಂಡುಬರುತ್ತದೆ. ಹನ್ನೊಂದನೆಯ ಶತಮಾನದಲ್ಲಿ ನನ್ನಯ ಎಂಬ ವಿದ್ವಾಂಸನು ಮಹಾಭಾರತದ ಆದಿ ಮತ್ತು ಸಭಾಪರ್ವಗಳನ್ನು ಭಾಷಾಂತರ ಮಾಡಿರುವನು. ಆಂಧ್ರ ಶಬ್ದ ಚಿಂತಾಮಣಿ ಎಂಬ ಕೃತಿಯನ್ನು ಈತನೇ ರಚಿಸಿರುವನೆಂದು ಹೇಳಲಾಗಿದೆ. ಇದು ತೆಲುಗು ವ್ಯಾಕರಣ ಕೃತಿಯಾಗಿದೆ. ವೇಮುಲವಾಡದ ಭೀಮಕವಿಯು ಕವಿಜನಾಶ್ರಯ ಎಂಬ ಕೃತಿಯು ಮತ್ತೊಂದು ವ್ಯಾಕರಣ ಗ್ರಂಥವಾಗಿದೆ. ಈತನು ಭೀಮೇಶ್ವರ ಪುರಾಣ ಎಂಬ ಕೃತಿಯನ್ನು ರಚಿಸಿರುವನು. ಮಲ್ಲಣನು ಮಹಾವೀರಾಚಾರ್ಯ ವಿರಚಿತ ಗಣಿತ ಗ್ರಂಥವನ್ನು ಭಾಷಾಂತರಿಸಿರುವನು, ಈಳುಗಂಟಿ ಪೆದ್ದಣನು ಭಾಸ್ಕರಚಾರ್ಯನ ಲೀಲಾವತಿಯನ್ನು ಪ್ರಕೀರಣಗಣಿತವೆಂಬ ಹೆಸರಿನಲ್ಲಿ ಭಾಷಾಂತರಿಸಿರುವನು. ಕ್ರಿ.ಶ. ಹದಿಮೂರನೆಯ ಶತಮಾನದಿಂದ ತೆಲುಗು ಸಾಹಿತ್ಯವು ಹೆಚ್ಚಿನ ಬೆಳವಣಿಗೆ ಹೊಂದಿತು.

ಹೀಗೆ ಪ್ರಾಚೀನ ಭಾರತದ ಸಾಹಿತ್ಯ ಬೆಳವಣಿಗೆಯ ಪ್ರಧಾನ ಅಂಶಗಳನ್ನು ನೋಡಬಹುದಾಗಿದೆ. ಸಾಹಿತ್ಯದ ವಸ್ತು ವೈವಿಧ್ಯ ನಿರೂಪಣಾ ಶೈಲಿ, ಮತ್ತು ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಈ ಕಾಲಾವಧಿಯು ಅರ್ಥಪೂರ್ಣವಾಗಿದೆಯೆನ್ನಬಹುದು.

ಪರಾಮರ್ಶನಗ್ರಂಥಗಳು

೧. ಕೋಸಾಂಬಿ ಡಿ.ಡಿ., ೧೯೬೫. ದಿ ಕಲ್ಚರ್ ಆಂಡ್ ಸಿವಿಲೈಸೇಶನ್ ಆಫ್ ಏನ್ಸಿಯೆಂಟ್ ಇಂಡಿಯಾ ಇನ್ ಹಿಸ್ಟಾರಿಕಲ್ ಔಟ್ಲೈನ್, ಲಂಡನ್‌: ರೂಟ್ಲೆಜ್ ಆಂಡ್ ಕೇಗನ್ ಪೌಲ್.

೨. ಬರ್ಟನ್ ಸ್ಟೈನ್, ಪೆಸೆಂಟ್ ಸ್ಟೇಟ್ ಆಂಡ್ ಸೊಸೈಟಿ ಇನ್ ಮಿಡೀವಲ್ಸೌತ್ ಇಂಡಿಯಾ, ಆಕ್ಸಫರ್ಡ್: ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್.

೩. ಮಜುಂದಾರ್ ಆರ್.ಸಿ. (ಸಂ.), ೧೯೬೫. ದಿ ಹಿಸ್ಟರಿ ಆಂಡ್ ಕಲ್ಚರ್ ಆಫ್ ಇಂಡಿಯನ್ ಪೀಪಲ್ದಿ ಕ್ಲಾಸಿಕಲ್ ಏಜ್, ಭಾರತೀಯ ವಿದ್ಯಾಭವನ ಸಂಪುಟಗಳು, ಸಂಪುಟ ೩, ಬಾಂಬೆ: ಭಾರತೀಯ ವಿದ್ಯಾಭವನ.

೪. ಮಜುಂದಾರ್ ಆರ್.ಸಿ. (ಸಂ.), ೧೯೬೫. ದಿ ಹಿಸ್ಟರಿ ಆಂಡ್ ಕಲ್ಚರ್ ಆಫ್ ಇಂಡಿಯನ್ ಪೀಪಲ್ದಿ ಏಜ್ ಆಫ್ ಇಂಪೀರಿಯಲ್ ಕನೌಜ್, ಭಾರತೀಯ ವಿದ್ಯಾಭವನ ಸಂಪುಟಗಳು, ಸಂಪುಟ ೪, ಬಾಂಬೆ: ಭಾರತೀಯ ವಿದ್ಯಾಭವನ.

೫. ಮಜುಂದಾರ್ ಆರ್. ಸಿ. (ಸಂ.), ೧೯೬೫. ದಿ ಹಿಸ್ಟರಿ ಆಂಡ್ ಕಲ್ಚರ್ ಆಫ್ ಇಂಡಿಯನ್ ಪೀಪಲ್ದಿಸ್ಟ್ರಗಳ್ ಫಾರ್ ಎಂಪೈರ್, ಭಾರತೀಯ ವಿದ್ಯಾಭವನ ಸಂಪುಟಗಳು, ಸಂಪುಟ ೫, ಬಾಂಬೆ: ಭಾರತೀಯ ವಿದ್ಯಾಭವನ.

೬. ರೋಮಿಲಾ ಥಾಪರ್, ೨೦೦೨. ಅರ್ಲಿ ಇಂಡಿಯಾ: ಫ್ರಮ್ ಆರಿಜಿನ್ಸ್ ಟು ಎ.ಡಿ. ೧೩೦೦, ನ್ಯೂ ಡೆಲ್ಲಿ: ಪೆಂಗ್ವಿನ್ ಬುಕ್ಸ್.

೭. ಶರ್ಮಾ ಆರ್.ಎಸ್., ೨೦೦೫. ಇಂಡಿಯನ್ ಫ್ಯೂಡಲಿಸಂ, ಡೆಲ್ಲಿ: ಮ್ಯಾಕ್‌ಮಿಲನ್.

೮. ಶರ್ಮಾ ಆರ್.ಎಸ್., ೧೯೮೭. ಅರ್ಬನ್ ಡಿಕೆ ಇನ್ ಇಂಡಿಯಾ (ಸಿ.೩೦೦-೧೦೦೦) ಡೆಲ್ಲಿ: ಮುನ್ಷಿರಾಮ್ ಮನೋಹರ್‌ಲಾಲ್.