ಗುಪ್ತರ ಅವನತಿಯ ನಂತರ ಭಾರತದ ರಾಜಕೀಯ ಐಕ್ಯತೆ ಧ್ರುವೀಕರಣಗೊಂಡು ಮತ್ತೊಮ್ಮೆ ಸಣ್ಣ ಪುಟ್ಟ ರಾಜ್ಯಗಳು ಉದಯಿಸಿದವು. ಮೌರ್ಯರ ಕಾಲದಿಂದಲೂ ಭಾರತದ ರಾಜಕೀಯ ಹಾಗೂ ಸಂಸ್ಕೃತಿಯ ಕೇಂದ್ರಬಿಂದುವಾಗಿದ್ದ ಪಾಟಲಿಪುತ್ರವು ಪ್ರಾಮುಖ್ಯತೆಯನ್ನು ಕಳೆದುಕೊಂಡಿತಲ್ಲದೆ, ಈ ಕೇಂದ್ರ ಬಿಂದುವು ಕನೌಜ್‌ಗೆ ವರ್ಗಾಯಿಸಲ್ಪಟ್ಟಿತು. ಕನೌಜ್‌ ಸಾಮ್ರಾಜ್ಯದ ಸ್ಥಾನಮಾನವನ್ನು ಪಡೆದುಕೊಂಡ ನಂತರ ಆ ನಗರದ ಮೇಲೆ ತಮ್ಮ ಪ್ರಭುತ್ವ ಸ್ಥಾಪಿಸುವ ಉದ್ದೇಶದಿಂದ ಉತ್ತರ ಮತ್ತು ದಕ್ಷಿಣ ಭಾರತದ ರಾಜ್ಯಗಳೊಡನೆ ಅವಿರತ ಹೋರಾಟ ಪ್ರಾರಂಭವಾಯಿತು. ಇದು ನಂತರದ ಶತಮಾನದ ಪ್ರಮುಖ ರಾಜಕೀಯ ಘಟನೆಯಾಗಿ ಪರಿಣಮಿಸಿ ಇಸ್ಲಾಂ ಧರ್ಮೀಯರ ರಾಜ್ಯ ಸ್ಥಾಪನೆಗೆ ನಾಂದಿಯಾಯಿತು. ಕ್ರಿ.ಶ. ಏಳನೆಯ ಶತಮಾನದ ವೇಳೆಗೆ ಕಂಚಿಯ ಪಲ್ಲವರು, ಬಾದಾಮಿಯ ಚಾಲುಕ್ಯರು ಮತ್ತು ಮಧುರೆಯ ಪಾಂಡ್ಯರು ಪ್ರಮುಖ ರಾಜ್ಯ ಶಕ್ತಿಗಳಾಗಿ ದಕ್ಷಿಣ ಭಾರತದಲ್ಲಿ ನೆಲೆಗೊಂಡರು. ನಂತರದಲ್ಲಿ ಮಾನ್ಯ ಖೇಟದ ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು, ತಂಜಾವೂರಿನ ಚೋಳರು ಮತ್ತು ದ್ವಾರಸಮುದ್ರದ ಹೊಯ್ಸಳರು, ದೇವಗಿರಿಯ ಸೇವುಣರು ಮತ್ತು ವಾರಂಗಲ್ಲಿನ ಕಾಕತೀಯರು ಪ್ರಮುಖ ರಾಜ್ಯ ಶಕ್ತಿಗಾಳಾಗಿ ಬೆಳೆದರು. ಏಳನೆಯ ಶತಮಾನದ ಮತ್ತು ನಂತರದಲ್ಲಿ ಕಂಡುಬರುವ ಪ್ರಮುಖ ರಾಜಕೀಯ ವೈಶಿಷ್ಟ್ಯವೆಂದರೆ ದಕ್ಷಿಣದ ಈ ಕೆಲವು ರಾಜ್ಯಗಳು ಉತ್ತರ ಭಾರತದ ಮೇಲೆ ಪದೇ ಪದೇ ವಿಜಯೀ ದಂಡೆಯಾತ್ರೆಗಳನ್ನು ಕೈಗೊಂಡುದು. ಇದು ಉತ್ತರ ಭಾರತದ ರಾಜಕೀಯ ಶಕ್ತಿಯ ಕೊರತೆಯ ಸೂಚಕವಾಗಿದೆ. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯೊಂದಿಗೆ ದಕ್ಷಿಣಾಪಥದಲ್ಲಿ ರಾಜಕೀಯ ಹಾಗೂ ಸಾಂಸ್ಕೃತಿಕ ಐಕ್ಯಮತ್ಯ ನೆಲೆಗೊಂಡಿತು. ಈ ಐಕ್ಯಮತ್ಯ ಬಹಮನಿ ರಾಜ್ಯ ಹಾಗೂ ಅದರ ಉತ್ತರಾಧಿಕಾರಿ ರಾಜ್ಯಗಳ ಸವಾಲುಗಳಿಗೆ ಬಹಳಕಾಲ ಸಮರ್ಪಕವಾಗಿ ಸ್ಪಂದಿಸಲು ನೆರವಾಯಿತು.

ಗುಪ್ತರ ಅವನತಿಯ ನಂತರ ಹೂಣರು, ವಲ್ಲಭಿಯಲ್ಲಿ ಮೈತ್ತಿಕರು, ಕನೌಜ್‌ನಲ್ಲಿ ಮೌಖಾರಿಗಳು, ಮಂಡ್‌ಸಾರ್ನಲ್ಲಿ ಯಶೋಧರ್ಮನ್, ಬೀರಾರಿನಲ್ಲಿ ವಾಕಾಟಕರು, ಗೌಡದೇಶದಲ್ಲಿ ಶಶಾಂಕ, ಸ್ಥಾಣೇಶ್ವರದಲ್ಲಿ ಪುಶ್ಯಭೂತಿಗಳು ಮತ್ತು ಕಾಮರೂಪದಲ್ಲಿ ವರ್ಮರು ರಾಜಕೀಯ ಭೂಪಟವನ್ನು ಕದಡಲು ಪ್ರಾರಂಭಿಸಿದರು. ಗುಪ್ತರ ನೆಲೆ ಪ್ರಾಂತವಾದ ಮಗಧದಲ್ಲಿ ನಂತರದ ಗುಪ್ತರೆಂದು ಕರೆದುಕೊಂಡ ರಾಜ ಸಂತತಿಯ ಆಳಿಕೆ ಪ್ರಾರಂಭವಾಯಿತು.

ಗುಪ್ತರ ಅವನತಿಗೆ ಕಾರಣಗಳಲ್ಲಿ ಒಂದಾದ ಹೂಣರ ದಾಳಿಗಳ ನಾಯಕ ತೋರಮಾನ ೫೧೦ರಲ್ಲಿ ಭಾನುಗುಪ್ತನಿಂದ ಸೋಲಿಸಲ್ಪಟ್ಟಿದ್ದರೂ ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಕಾಶ್ಮೀರದ ಕೆಲವು ಭಾಗಗಳನ್ನು ತನ್ನ ವಶದಲ್ಲಿಟ್ಟುಕೊಂಡಿದ್ದನು. ಆತನ ಮಗ ಹಾಗೂ ಉತ್ತರಾಧಿಕಾರಿ ಮಿಹಿರಕುಲ ಆ ಸಂತತಿಯ ಅತಿ ಶಕ್ತಿಯುತ ರಾಜನಾಗಿದ್ದನು. ಕ್ರೂರಿಯಾದ  ಆತನು ಬೌದ್ದಧರ್ಮದ ಅನುಯಾಯಿಗಳಿಗೆ ಕಿರುಕುಳ ಕೊಡುತ್ತಿದ್ದನು. ಆತನು ಗಾಂಧಾರ ಮತ್ತು ಕಾಶ್ಮೀರವನ್ನು ಆಳುತ್ತಿದ್ದನಲ್ಲದೆ ಉತ್ತರ ಭಾರತ ಮತ್ತು ಶ್ರೀಲಂಕಾವನ್ನು ಗೆದ್ದುಕೊಂಡಿದ್ದನೆಂದು ರಾಜ ತರಂಗಿಣಿ ತಿಳಿಸುತ್ತದೆ. ಯಶೋಧರ್ಮನಿಂದ ೫೪೦ ಅಥವಾ ೫೪೭ ರಲ್ಲಿ ಪರಾಜಿತಗೊಂಡ ಮೇಲೆ ಕಾಶ್ಮೀರದಲ್ಲಿ ಆಶ್ರಯ ಪಡೆದು ಅಲ್ಲನ ಸಿಂಹಾಸನವನ್ನು ಅತಿಕ್ರಮಿಸಿಕೊಂಡನು. ಆತನ ಪರಾಜಯದೊಂದಿಗೆ ಹೂಣರ ಆಳ್ವಿಕೆ ಕೊನೆಗೊಂಡು ಅವರು ಭಾರತೀಯ ಸಂಸ್ಕೃತಿ ಹಾಗೂ ನಡವಳಿಗಳಲ್ಲಿ ಲೀನವಾದರು.

ಪ್ರಾಚೀನ  ಪ್ರಮುಖ ವಿದ್ಯಾಕೇಂದ್ರಗಳಲ್ಲಿ ಒಂದಾದ ವಲ್ಲಭಿಯು ಪ್ರಾಚೀನ ಭಾರತದ ರಾಜಕೀಯ, ಸಾಂಸ್ಕೃತಿಕ ಹಾಗೂ ವಾಣಿಜ್ಯ ಜೀವನದಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸಿದ್ದಿತು.  ಆಧುನಿಕ ಸೌರಾಷ್ಟ್ರಕ್ಕೆ ಹೊಂದಿಕೆಯಾಗುವ ವಲ್ಲಭಿಯು ಮೈತ್ತಿಕರ ರಾಜ್ಯದ ಹಾಗೂ ರಾಜಧಾನಿಯ ಹೆಸರಾಗಿತ್ತು. ಒಂದನೆಯ ಶಿಲಾದಿತ್ಯ (೬೦೬-೬೧೨) ವಲ್ಲಭಿಯ ಸ್ವತಂತ್ರರಾಜ. ಆತನ ನಂತರ ಮುಮ್ಮಡಿ ಧರಸೇನ, ಇಮ್ಮಡಿ ಧ್ರುವಸೇನ ಮತ್ತು ನಾಲ್ಮಡಿ ಧರಸೇನ ಪಟಕ್ಕೆ ಬಂದರು. ಇವರಲ್ಲಿ ನಾಲ್ಮಡಿ ಧರಸೇನ ಈ ರಾಜಸಂತತಿಯ ಪ್ರಮುಖ ದೊರೆ. ಆತನು ಪರಮಭಟ್ಟಾರಕ, ಮಹಾರಾಜಾಧಿರಾಜ, ಪರಮೇಶ್ವರ ಮತ್ತು ಚಕ್ರವರ್ತಿನ್ ಎಂಬ ಬಿರುದುಗಳನ್ನು ಧರಿಸಿದ್ದನು. ಭಟ್ಟಿ ಕವಿಯ ಪೋಷಕನಾಧ ಆತನ ಆಳ್ವಕೆಯಲ್ಲಿ ವಲ್ಲಭಿ ತನ್ನ ಶಕ್ತಿ ಮತ್ತು ಪ್ರತಿಷ್ಠೆಯಲ್ಲಿ  ಔನ್ನತ್ಯವನ್ನು ಕಂಡಿತು. ಆತನ ನಂತರ ವಲ್ಲಭಿಯ ಕಷ್ಟದಿನಗಳು ಪ್ರಾರಂಭವಾಗಿ ಮೂರನೆಯ ಶಿಲಾದಿತ್ಯ, ನಾಲ್ಕನೆಯ ಶೀಲಾದಿತ್ಯ, ಐದನೆಯ ಶಿಲಾದಿತ್ಯ ಮತ್ತು ಆರನೆಯ ಶಿಲಾತ್ಯರ ಆಳ್ವಿಕೆಯಲ್ಲಿ ಕ್ಷೀಣಗೊಂಡು ಏಳನೆಯ ಶಿಲಾದಿತ್ಯ ಆಳ್ವಕೆಯಲ್ಲಿ (೭೬೬-೭೬೭) ಕುಸಿದು ಬಿದ್ದಿತು.

ಪಾಣಿನಿಯ ಅಷ್ಟಾಧ್ಯಾಯಿ ಮತ್ತು ಮೌರ್ಯರ ಮುದ್ರೆಗಳಲ್ಲಿ ಉಲ್ಲೇಖಿತವಾಗಿರುವುದರಿಂದ ಮೌಖಾರಿಗಳು ಬಹಳ ಪ್ರಾಚೀನ ಜನಾಂಗವೆಂದು ತಿಳಿದುಬರುತ್ತದೆ. ಅವರ ಮೂರು ಶಾಖೆಗಳು ಅನುಕ್ರಮಚಾಗಿ ಕನೌಜ್, ಗಯಾಪ್ರದೇಶ ಮತ್ತು ರಾಜಸ್ಥಾನದ ಕೋಟದಲ್ಲಿ ಆಳುತ್ತಿದ್ದವು. ಕನೌಜ್‌ನಲ್ಲಿ ಸ್ವತಂತ್ರ ಮೌಖಾರಿ ರಾಜ್ಯವನ್ನು ಸ್ಥಾಪಿಸಿದ ಕೀರ್ತ ಹರಿವರ್ಮನಿಗೆ ಸಲ್ಲುತ್ತದೆ. ಈಶಾನವರ್ಮನ್ ಈ ವಂಶದ ಪ್ರಮುಖ ದೊರೆ. ಆತನು ಮಹಾರಾಜಾಧರಾಜ ಎಂಬ ಬಿರುದನ್ನು ಮಗಧದ ನಂತರದ ಗುಪ್ತರನ್ನು ಸ್ಥಳಪಲ್ಲಟಗೊಳಿಸಿ ಧರಿಸಿದನು. ಮಗಧದ ಗುಪ್ತರೊಡನೆ ಸತತ ಹೋರಾಟಗಳಿಂದ ಅವರ ಶಕ್ತಿಯು ಕ್ಷೀಣಿಸಲಾರಂಭಿಸಿತು. ಈ ವಂಶದ ಕೊನೆಯ ಪುಶ್ಯಭೂತಿ ವಂಶದೊಡನೆ ಸಂಬಂಧವನ್ನು ಬೆಳಸಿದನು. ಇದನ್ನು ಸಹಿಸದ ಗೌಡ ದೇಶದ ಶಶಾಂಕ ಮತ್ತು ಮಾಳವದ ದೇವಗಪ್ತ ಒಂದಾಗಿ ಕನೌಜ್ ಮೇಲೆ ದಂಡೆತ್ತಿ ಹೋಗಿ ಗೃಹವರ್ಮನನ್ನು ಕೊಂದು ರಾಜಶ್ರೀಯನ್ನು ಸೆರೆಯಲ್ಲಿಟ್ಟನು. ಹರ್ಷನು ಕನೌಜ್ ಮತ್ತು ಸ್ಥಾಣೀಶ್ವರದ ಕಿರೀಟಗಳನ್ನು ಏಕ್ಯಗಳಿಸುವುದರೊಂದಿಗೆ ಮೌಖಾರಿಗಳ ನಿಶ್ಯೇಷವು  ಪುರ್ಣಗೊಂಡಿತು.

ಮಂಡಸಾರ್ ರಾಜ್ಯವು ಯಶೋಧರ್ಮನೊಂದಿಗೆ ಉದಯವಾಗಿ ಅವನ ಮರಣದೊಂದಿಗೆ ಅಂತ್ಯಗೊಂಡಿತು. ಆತನ ಆಳ್ವಿಕೆಯ ಇಪ್ಪತ್ತು ವರ್ಷಗಳಲ್ಲಿ (೫೩೦-೫೫೦) ಮಿಹಿರಕುಲ ಮತ್ತು ಗುಪ್ತರನ್ನು ಯಶಸ್ವಿಯಾಗಿ ಎದುರಿಸಿ ಮಧ್ಯ ಭಾರತದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಸಿದಿದ್ದನು.

ಗುಪ್ತರ ಅಳಿದುಳಿದ ಅಸ್ತಿಯನ್ನು ಪಡೆದುಕೊಂಡ ನಂತರದ ಗುಪ್ತ ರಾಜ್ಯ ಸಂತತಿಯು ಸಂಸ್ಥಾಪಕ ಒಂದನೆಯ ಕೃಷ್ಣಗುಪ್ತ ಆತನ ನಂತರ ಹರ್ಷಗುಪ್ತ, ಒಂದನೆಯ ಜೀವಿತಗುಪ್ತ ಮತ್ತು ಕುಮರಗುಪ್ತ ಅನುಕ್ರಮವಾಗಿ ಆಳಿದರು. ಕುಮಾರಗುಪ್ತನು ಮೌಖಾರಿ ದೊರೆ ಈಶಾನವರ್ಮನನ್ನು ಸೋಲಿಸಿದನು. ಇದರ ಸೇಡು ತೀರಿಸಿಕೊಳ್ಳಲು ಮೌಖಾರಿಗಳು ಆತನ ಮಗ ದಾಮೋದರ ಗುಪ್ತನನ್ನು ಕೊಂದರು. ಆತನ ಮಗ ಮಹಾಸೇನಗುಪ್ತ ತನ್ನ ವಂಶದ ಪ್ರತಿಷ್ಠೆಯನ್ನು ವೃದ್ಧಿಗೊಳಿಸಿದನು. ಆತನ ನಂತರದ ಪ್ರಮುಖ ದೊರೆ ಒಂದನೆಯ ಆದಿತ್ಯಸೇನ. ಪರಮಭಟ್ಟಾರಕ, ಮಹಾರಾಜಾಧಿರಾಜ ಮುಂತಾದ ಬಿರುದುಗಳನ್ನು ಧರಿಸಿದವರಲ್ಲಿ ಮೊದಲಿಗ. ಆತನು ವ್ಯಾಪಕವಾದ ದಂಡಯಾತ್ರೆಗಳನ್ನು ಕೈಗೊಂಡು ಅದರ ಜ್ಞಾಪಕಾರ್ಥವಾಗಿ ಅಶ್ವಮೇಧ ಮೊದಲಾದ ಯಜ್ಞಯಾಗಾದಿಗಳನ್ನು ಮಾಡಿದನು. ಆದರೆ ಇದು ಅಲ್ಪಕಾಲದ ವೈಭವವಾಗಿತ್ತು. ಎಂಟನೆಯ ಶತಮಾನದ ಮಧ್ಯಭಾಗದಲ್ಲಿ ಬಂಗಾಳದ ಅರಸರು ಗುಪ್ತರನ್ನು ಅಧಿಕಾರ ಚ್ಯುತರನ್ನಾಗಿಸಿದರು.

ಗುಪ್ತ ಸಾಮ್ರಾಜ್ಯದಿಂದ ಸ್ವತಂತ್ರರಾದವರಲ್ಲಿ ವಾಕಾಟಕರು ಮೊದಲಿಗರು. ಆ ವಂಶದ ಪ್ರಮುಖ ದೊರೆ ಹರಿಸೇನ (೪೮೦-೫೧೫). ಆತನು ವಾಕಾಟಕರ ಎರಡು ಶಾಖೆಗಳನ್ನು ಒಂದುಗೂಡಿಸಿದನಲ್ಲದೆ ಕುಂತಲ, ಆವಂತಿ, ಕಳಿಂಗ, ಕೋಸಲ, ಕೊಂಕಣ, ಆಂಧ್ರಪ್ರದೇಶ ಮೊದಲಾದ ಪ್ರದೇಶಗಳನ್ನು ವಶಪಡಿಸಿಕೊಂಡು ತನ್ನ ರಾಜ್ಯವನ್ನು ಉತ್ತರದಲ್ಲಿ ಮಾಳವದಿಂದ ದಕ್ಷಿಣದಲ್ಲಿ ಮಹರಾಷ್ಟ್ರದವರೆಗೆ ಮತ್ತು ಪೂರ್ವದಲ್ಲಿ ಬಂಗಾಳ ಕೊಲ್ಲಿಯಿಂದ ಪಶ್ಚಿಮದಲ್ಲಿ ಅರಬ್ಬೀ ಸಮುದ್ರದವರೆಗೆ ವಿಸ್ತರಿಸಿದನು. ಆತನ ನಂತರ ನಳರು ಮತ್ತು ರಾಷ್ಟ್ರಕೂಟರ ದಾಳಿಗಳಿಗೆ ತುತ್ತಾಗಿ ಅಶಕ್ತಗೊಂಡು ಮಾಳವದಲ್ಲಿ ಯಶೋಧರ್ಮನ ಸ್ವತಂತ್ರ ರಾಜ್ಯದ ಬೆಳವಣಿಗೆಯೊಂದಿಗೆ ನಿರ್ನಾಮವಾಯಿತು.

ಬಂಗಾಳದ ಒಂದು ಜಿಲ್ಲೆಯಾದ ಗೌಡವಿಶ್‌ಯ ಶಶಾಂಕನ ಕಾಲದಲ್ಲಿ ಸ್ವತಂತ್ರಗೊಂಡು ಪ್ರಾಮುಖ್ಯತೆ ಪಡೆಯಿತು. ಆತನು ಮಹಾಸೇವಗುಪ್ತನ ಮಹಾಸಾಮಂತನಾಗಿದ್ದಾನೆಂದು ರತಸ್ಲಡ ಮುದ್ರೆಯಿಂದ ವ್ಯಕ್ತವಾಗುತ್ತದೆ. ನಂತರ ಆತನು ಸ್ವತಂತ್ರಗೊಂಡು ಕರ್ಣಸುವರ್ಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಉತ್ಕಲ ಮತ್ತು ಕಂಗಡಗಳನ್ನು ವಶಪಡಿಸಿಕೊಂಡು ಒರಿಸ್ಸಾದ ಉತ್ತರ ಮತ್ತು ದಕ್ಷಿಣದಲ್ಲಿ ತನ್ನ ರಾಜ್ಯವನ್ನು ವಿಸ್ತರಿಸಿದನು. ಪಶ್ಚಿಮದತ್ತ ತನ್ನ ಗಮನವನ್ನು ಹರಿಸಿ, ಮಾಳವದ ದೇವಗುಪ್ತನ ಜೊತೆಗೂಡಿ ಮೌಖಾರಿ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಗ್ರಹವರ್ಮನನ್ನು ಕೊಂದನು. ಕನೌಜನ್ನು ತೆರವು ಮಾಡಲು ಬಂದ ಸ್ಥಾಣೇಶ್ವರದ ರಾಜ್ಯವರ್ಧನನನ್ನು ಮೋಸದಿಂದ ವಂಚಿಸಿ ಕೊಂದು ತನ್ನ ರಾಜ್ಯಕ್ಕೆ ಹಿಂತಿರುಗಿದನು. ಯಾರಿಗೂ ಆತನನ್ನು ಮಣಿಸಲಾಗಲಿಲ್ಲವೆಂದು ತೋರುತ್ತದೆ. ಬೌದ್ಧ ಧರ್ಮದ ವೈರಿಯಾಗಿದ್ದ ಆತನು ಗಯಾದಲ್ಲಿ ಬೋಧಿ ವೃಕ್ಷವನ್ನು ಧ್ವಂಸಮಾಡಿದನೆಂದು ಹ್ಯೂಯೆನ್‌ತ್ಸಾಂಗ್‌ ಅಭಿಪ್ರಾಯ ಪಟ್ಟಿದ್ದಾನೆ. ಆತನ ಮರಣಾನಂತರ ಕರ್ಣಸುವರ್ಣವನ್ನು ಹರ್ಷನು ವಶಪಡಿಸಿಕೊಂಡನು.

ಅಲಹಾಬಾದ್‌ ಸ್ತಂಭ ಶಾಸನದ ಪ್ರಕಾರ ಕಾಮರೂಪವು ಗುಪ್ತ ಸಾಮ್ರಾಜ್ಯದ ಹೊರಗಿನ ಗಡಿರಾಜ್ಯವಾಗಿತ್ತು. ಈ ರಾಜ್ಯದ ಸುಸ್ಥಿತಿಗೆ ವರ್ಮ ವಂಶದ ಆಳ್ವಿಕೆಯು (೩೫೫-೬೫೦) ಬಹುಮಟ್ಟಿಗೆ ಕಾರಣವಾಗಿತ್ತು. ಈ ವಂಶದ ದೊರೆ ಸುಸ್ಥಿತವರ್ಮನನ್ನು ಮಹಾಸೇನ ಗುಪ್ತನು ಪರಾಜಯಗೊಳಿಸಿದ್ದನು. ಇದು ಅಲ್ಪಕಾಲದ ಸಂದಿಗ್ಧ ಪರಿಸ್ಥಿತಿಯಾಗಿತ್ತು. ಈ ವಂಶದ ಪ್ರಸಿದ್ಧ ದೊರೆ ಭಾಸ್ಕರವರ್ಮನ್‌ ಕಾಮರೂಪವನ್ನು ಉತ್ತರ ಭಾತರದ ಒಂದು ಪ್ರತಿಷ್ಠಿತ ರಾಜ್ಯವನ್ನಾಗಿ ಮಾರ್ಪಡಿಸಿದನಲ್ಲದೆ ಕಾಮರೂಪದ ಇತಿಹಾಸದಲ್ಲಿ ಒಂದು ವೈಭವಯುತ ಅಧ್ಯಾಯವನ್ನು ಪ್ರಾರಂಭಿಸಿದನು. ಹರ್ಷನ ಆಪ್ತಮಿತ್ರನಾದ ಭಾಸ್ಕರವರ್ಮನು ಆತನ ಗೌಡ ದೇಶದ ಮೇಲಿನ ದಂಡಯಾತ್ರೆ ಮತ್ತು ಕನೌಜದ ಬೌದ್ಧ ಮಹಾಸಮ್ಮೇಳನದಲ್ಲಿ ಬಹುಮುಖ ಪಾತ್ರವನ್ನು ವಹಿಸಿದ್ದನು. ಬಾಣ ಮತ್ತು ಹ್ಯೂಯೆನ್‌ತ್ಸಾಂಗ್‌ ಅವರ ಪ್ರಶಂಸೆಗೆ ಪಾತ್ರನಾದ ಭಾಸ್ಕರವರ್ಮನ್‌ ಕಾಮರೂಪದ ಸಾಂಸ್ಕೃತಿಕ ಇತಿಹಾಸದಲ್ಲಿ ತನ್ನ ಹೆಸರನ್ನು ಶಾಸ್ವತವಾಗಿ ಸ್ಥಾಪಿಸಿದ್ದಾನೆ.

ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದ ಸಾಮಂತರ ಮೇಲೆ ತನ್ನ ಅಧಿಕಾರ ಮುದ್ರೆ ಒತ್ತಿ, ಆ ಪ್ರದೇಶದ ದೊಡ್ಡಭಾಗಕ್ಕೆ ಒಂದು ಮಟ್ಟದ ರಾಜಕೀಯ ಐಕ್ಯಮತ್ಯ ಸ್ಥಾಪಿಸಿದ ಕೀರ್ತಿ ಹರ್ಷವರ್ಧನನಿಗೆ (೬೦೬-೬೪೭) ಸಲ್ಲುತ್ತದೆ. ಕ್ರಿ.ಶ. ಐದನೆಯ ಶತಮಾನದ ಅಂತ್ಯ ಅಥವಾ ಆರನೆಯ ಶತಮಾನದ ಆದಿಭಾಗದಲ್ಲಿ ಅಸ್ತಿತ್ವಕ್ಕೆ ಬಂದ ಪುಶ್ಯಭೂತಿ ರಾಜಸಂತತಿಗೆ ಸೇರಿದ್ದನು. ಆತನು ಆ ವಂಶದ ಮೊದಲ ಪ್ರಮುಖ ದೊರೆ ಹಾಗೂ ಮಹಾರಾಜಾಧಿರಾಜ ಎಂಬ ಬಿರುದನ್ನು ಧರಿಸಿದ್ದ ಪ್ರಭಾಕರವರ್ಧನನ ಮಗ. ತನ್ನ ತಂದೆ ಹಾಗೂ ಅಣ್ಣ ರಾಜ್ಯವರ್ಧನನ ಮರಣಾನಂತರ ಪಟ್ಟಕ್ಕೆ ಬಂದನು. ಆತನ ವ್ಯಕ್ತಿತ್ವ ಹಾಗೂ ಸಾಧನೆಗಳ ಅಧ್ಯಯನಕ್ಕೆ ಬಾಣನ ಹರ್ಷಚರಿತ, ಹ್ಯೂಯೆನ್‌ತ್ಸಾಂಗನ ವಿಷಯ ಕಥನ, ನಾಣ್ಯಶಾಸ್ತ್ರ ಮತ್ತು ಶಾಸನಶಾಸ್ತ್ರ ಪ್ರಮುಖ ಆಧಾರಗಳಾಗಿವೆ.

ಸಿಂಹಾಸನಕ್ಕೆ ಬಂದ ಮೇಲೆ ತನ್ನ ಸಹೋದರಿ ರಾಜ್ಯಶ್ರೀಯನ್ನು ರಕ್ಷಿಸುವುದು ಮತ್ತು ಶಶಾಂಕನ ಮೇಲೆ ಸೇಡು ತೀರಿಸಿಕೊಳ್ಳುವುದು ಹರ್ಷನ ತತ್‌ಕ್ಷಣದ ಕಾರ್ಯಭಾರವಾಗಿತ್ತು. ಈ ಉದ್ದೇಶದಿಂದ ದಂಡಯಾತ್ರೆಯನ್ನು ಕೈಕೊಂಡ ಹರ್ಷನಿಗ ಸಮಾನೋದ್ದೇಶದಿಂದ ಕೂಡಿದ್ದ ಭಾಸ್ಕರವರ್ಮನ ಮಿತ್ರತ್ವ ಲಭಿಸಿತು. ಮೊದಲಿಗೆ ರಾಜ್ಯ ಶ್ರೀಯನ್ನು ರಕ್ಷಿಸಿ ತನ್ನ ದಂಡಯಾತ್ರೆಯನ್ನು ಮುಂದುವರಿಸಿದನು. ಶಶಾಂಕನನ್ನು ಸೋಲಿಸಲು ಹರ್ಷನಿಗೆ ಸಾಧ್ಯವಾಯಿತೆ ಎಂಬುದರ ಬಗ್ಗೆ ವಾದವಿವಾದಗಳಿವೆ. ಬಹುಶಃ ಶಶಾಂಕನ ಮರಣಾನಂತರ ಕರ್ಣಸುವರ್ಣ ಹರ್ಷನ ವಶವಾಯಿತೆಂಬುದು ಹೆಚ್ಚಿನ ಇತಿಹಾಸಕಾರರ ಅಭಿಪ್ರಾಯ. ನಂತರ ವಲ್ಲಭಾಯ ದೊರೆ ಇಮ್ಮಡಿ ಧ್ರುವಸೇನ ಅಥವಾ ಧ್ರುವಭಟ್ಟನನ್ನು ಸೋಲಿಸಿ ಮಗಳನ್ನು ವಿವಾಹವಾದನು.

ದಕ್ಷಿಣದಲ್ಲಿ ನರ್ಮದಾ ನದಿಯ ಆಚೆ ತನ್ನ ರಾಜ್ಯವನ್ನು ವಿಸ್ತರಿಸಬೇಕೆಂಬ ಮಹತ್ವಾಕಾಂಕ್ಷೆ ಚಾಳುಕ್ಯ ರಾಜ ಇಮ್ಮಡಿ ಪುಲಿಕೇಶಿಯೊಡನೆ ಯುದ್ಧಕ್ಕೆ ನಾಂದಿಯಯಿತು. ನರ್ಮದಾ ನದಿಯ ತೀರದಲ್ಲಿ ನಡೆದ ಕದನವೊಂದರಲ್ಲಿ ಹರ್ಷನು ಹೀನಾಯವಾದ ಸೋಲನ್ನು ಅನುಭವಿಸಬೇಕಾಯಿತು. ಪುಲಿಕೇಶಿಯನ್ನು ಸೋಲಿಸಲು ಹರ್ಷನಿಗೆ ಸಾಧ್ಯವಾಗಲಿಲ್ಲವೆಂದು ಹ್ಯೂಯೆನ್‌ತ್ಸಾಂಗ್‌ ಹೇಳಿದ್ದಾನೆ. ಪುಲಿಕೇಶಿಯೊಡನೆ ಯುದ್ಧದಲ್ಲ ಹರ್ಷನು ತನ್ನ ಹರ್ಷವನ್ನು ಕಳೆದುಕೊಂಡನೆಂದು ಐಹೊಳೆ ಸಾಸನ ತಿಳಿಸುತ್ತದೆ. ಈ ಶಾಸನವು ಹರ್ಷನನ್ನು ಸಕಲೋತ್ತರ ಪಥನಾಥ ಎಂದು ವರ್ಣಿಸಿದೆ.

ಹರ್ಷನ ಆಡಳಿತ

ಈ ಪರಾಜಯದ ನಂತರ ಹರ್ಷನು ತನ್ನ ಉಳಿದ ಜೀವಿತ ಕಾಲವನ್ನು ಶಾಂತಿಕ್ರಿಯೆಗಳಲ್ಲಿ ತೊಡಗಿಸಿದನು. ಆತನು ತನ್ನ ಆಡಳಿತದಲ್ಲಿ ನಿಷ್ಪಕ್ಷಾಪತಿಯೂ, ಕರ್ತವ್ಯವನ್ನು ನಿರ್ವಹಿಸುವಲ್ಲಿ ಸೂಕ್ಷ್ಮ ದೃಷ್ಟಿಯುಳ್ಳವನಗಿದ್ದನು. ಆಯಾಸವರಿಯದ ಆತನಿಗೆ ದಿನಗಳು ಬಹಳ ಮೊಟುಕಾಗಿತ್ತು ಎಂದು ಹ್ಯೂಯೆನ್‌ತ್ಸಾಂಗ್‌ ತಿಳಿಸಿದ್ದಾನೆ. ಆತನು ಮಂತ್ರಿ ಪರಿಷತ್ತನ್ನು ಹೊಂದಿದ್ದು ಅವರ ಅಭಿಪ್ರಾಯದಂತೆ ಆಡಳಿತ ನಡೆಸುತ್ತಿದ್ದನು. ಬಲಯುತವಾದ ಹಾಗೂ ಪೂರ್ಣವಾಗಿ ಸಜ್ಜುಗೊಂಡ ಸೈನ್ಯವನ್ನು ಹೊಂದಿದ್ದನು. ಆದರೆ ನ್ಯಾಯಾಡಳಿತವು ಮೌರ್ಯ ಯುಗದಲ್ಲಿದ್ದಂತೆ ಕಠೋರವಾಗಿತ್ತು.

ಧರ್ಮ

ಹರ್ಷನು ಸೂರ್ಯ, ಶಿವ, ಮತ್ತು ಬುದ್ಧರ ಭಕ್ತನಾಗಿದ್ದನೇ ವಿನಃ ಬೌದ್ಧಧರ್ಮದ ಪ್ರಚಾರಕನಾಗಿರಲಿಲ್ಲವೆಂದು ಆರ್.ಸಿ. ಮಜುಂದಾರ್ ತಿಳಿಸಿದ್ದಾರೆ. ತನ್ನ ಅಂತಿಮ ದಿನಗಳಲ್ಲಿ ಮಹಾಯಾನ ಬೌದ್ಧ ಧರ್ಮವನ್ನು ಬೆಂಬಲಿಸಿ ಕನೌಜ್‌ನಲ್ಲಿ ಬೌದ್ಧ ಮಹಾಸಮ್ಮೇಳನವನ್ನು ಆಮಂತ್ರಿಸಿದನು. ಈ ಸಮ್ಮೇಳನದಲ್ಲಿ ಭಾಸ್ಕರವರ್ಮನ್‌ ಸೇರಿದಂತೆ ೨೧ ರಾಜರು ಭಾಗವಹಿಸಿದ್ದರು. ಇದರ ನಂತರ ಐದು ವರ್ಷಕ್ಕೊಮ್ಮೆ ಬರುವ ಮಹಾಮೋಕ್ಷ ಪರಿಷತ್ತು ಎಂದು ಕರೆಯಲಾದ ಸಮ್ಮೇಳನವನ್ನು ಪ್ರಯಾಗದ ಗಂಗಾಯಮುನ ಸಂಗಮದಲ್ಲಿ ಕರೆದನು. ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತಿದ್ದ ಉತ್ಸವಕ್ಕೆ ದೇಶದ ನಾನಾ ಭಾಗಗಳಿಂದ, ವಿಶೇಷವಾಗಿ ನಲಂದಾ ವಿಶ್ವವಿದ್ಯಾಲಯದಿಂದ ವಿದ್ವಾಂಸರನ್ನು ಆಹ್ವಾನಿಸಲಾಗುತ್ತಿತ್ತು. ಇಂತಹ ಆರನೆಯ ಸಮ್ಮೇಳನದಲ್ಲಿ ಹ್ಯೂಯೆನ್‌ತ್ಸಾಂಗ್‌ ಭಾಗವಹಿಸಿದ್ದನು. ಆತನ ಪ್ರಕಾರ ಹರ್ಷನು ತಾನು ಹಿಂದಿನ ಐದು ವರ್ಷಗಳಲ್ಲಿ ಸಂಗ್ರಹಿಸಿದ್ದ ಕುದುರೆಗಳು, ಆನೆಗಳು ಮತ್ತು ಸೈನ್ಯಕ್ಕೆ ಸಂಬಂಧಿಸಿದ ವಸ್ತುಗಳ ಹೊರತಾಗಿ ಎಲ್ಲವನ್ನೂ ಧಾನಮಾಡಿ ರಾಜ್ಯಶ್ರೀಯಿಂದ ಒಂದು ಜೋಡಿ ವಸ್ತ್ರಗಳ ಭಿಕ್ಷೆಯನ್ನು ಬೇಡಿ ಪಡೆಯುತ್ತಿದ್ದನು.

ಹರ್ಷನು ಸಾಹಿತ್ಯ ಹಾಗೂ ವಿದ್ಯೆಗೆ ಪ್ರೋತ್ಸಾಹ ಕೊಟ್ಟನು. ಸ್ವತಃ ಗ್ರಂಥಕರ್ಥನಾದ ಆತನು ರತ್ನಾವಳಿ, ನಾಗನಂದ ಮತ್ತು ಪ್ರಿಯದರ್ಶಿಕ ಎಂಬ ಮೂರು ನಾಟಕಗಳನ್ನು ರಚಿಸಿದನು. ಆತನ ಆಸ್ಥಾನ ಕವಿಯಾದ ಭಾಣನು ಹರ್ಷಚರಿತ ಮತ್ತು ಕಾದಂಬರಿ ಎಂಬ ಕೃತಿಗಳನ್ನು ರಚಿಸಿದನು. ಈತನ ಆಳ್ವಕೆಯ ಕಾಲದಲ್ಲಿ ನಲಂದಾ ವಿಶ್ವವಿದ್ಯಾಲಯದಲ್ಲಿ ದಿನ್ನಾಗ, ಸ್ಥಿರಮತಿ, ಧರ್ಮಪಾಲ, ಶಾಂತರಕ್ಷಿತ ಮುಂತಾದ ಪ್ರಖ್ಯಾತ ಉಪಾಧ್ಯಾಯರುಗಳಿದ್ದರು. ನಲಂದದಲ್ಲಿ ೧೦೦ ಅಡಿ ಎತ್ತರದ ಕಂಚಿನ ದೇವಾಲಯ ಹಾಗೂ ಸ್ಥೂಪಗಲೂ ಮತ್ತು ಹೆದ್ದಾರಿಗಳಲ್ಲಿ ವಿಶ್ರಾಂತಿ ಗೃಹಗಳು ಮತ್ತು ಆಸ್ಪತ್ರೆಗಳನ್ನು ಹರ್ಷನು ನಿರ್ಮಿಸಿದನೆಂದು ಹೇಳಲಾಗಿದೆ.

ರಾಜ್ಯಕ್ಕೆ ಸಲ್ಲಿಸುತ್ತಿದ್ದ ಸೇವೆಗಾಗಿ ಪುರೋಹತ ವರ್ಗಕ್ಕೆ ಭೂಮಾನ್ಯ ನೀಡುವ ಪದ್ಧತಿ ಮುಂದುವರಿಯಿತು. ಈ ಭೂಮಾನ್ಯಗಳು ಹಿಂದಿನಂತೆ ಎಲ್ಲ ಸವಲತ್ತುಗಳಿಗೂ ಬಾಧ್ಯವಾಗಿದ್ದವು. ರಾಜ್ಯದ ಆಧಿಕಾರಿಗಳಿಗೆ ಸಂಭಳಕ್ಕೆ ಬದಲಾಗಿ ಭೂಮಿ ನೀಡುವ ಸಾಮಂತಶಾಹಿ ಪದ್ಧತಿಯು ಹರ್ಷನಿಂದ ಪ್ರಾರಂಭವಾಯಿತೆಂದೂ ಆರ್.ಎಸ್. ಶರ್ಮ ಅಭಿಪ್ರಾಯ ಪಟ್ಟಿದ್ದಾರೆ.

ಒಬ್ಬ ಪ್ರಸಿದ್ಧ ರಾಜನಾಗಿ, ಸಮರ್ಥಯೋಧನಾಗಿ, ವಿವೇಕಯುತ ಹಾಗೂ ದಯಾಪರ ಆಡಳಿತಗಾರನಾಗಿ, ಸಾಹಿತ್ಯದ ಧಾರಾಳ ಪೋಷಕನಾಗಿ ಹರ್ಷನು ಪ್ರಾಚೀನ ಭಾರತದ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಾನೆಂಬುದರಲ್ಲಿ ಸಂದೇಹವಿಲ್ಲ. ಆದರೆ ಆತನು ಭಾರತದ ಕೊನೆಯ ಮಹಾನ್‌ ಹಿಂದೂ ಸಾಮ್ರಾಟ ಎಂಬ ಸಿ.ವಿ. ವೈದ್ಯರ  ಹೇಳಿಕೆಯನ್ನು ಒಪ್ಪಲಾಗುವುದಿಲ್ಲ. ಆತನ  ಸಾರ್ವಭೌಮತ್ವವನ್ನು ಇಡೀ ಉತ್ತರ ಭಾರತ ಮಾನ್ಯ ಮಾಡಿದ್ದಿತೇ ಎಂಬ ಬಗ್ಗೆ ಒಮ್ಮತವಿಲ್ಲ. ಆತನು ಪರಾಜಿತಗೊಳ್ಳದ ಯೋಧವಾಗಿರಲಿಲ್ಲ. ಮಾತ್ರವಲ್ಲ, ಆತನು ನಿಷ್ಠಾವಂತ ಹಿಂದುವೂ ಆಗಿರಲಿಲ್ಲ. ಐಹೊಳೆ ಶಾಸನದಲ್ಲಿ ಕಂಡುಬರುವ ಸಕಲೋತ್ತರಪಥನಾಥ ಎಂಬ ವರ್ಣನೆ ಪುಲಿಕೇಶಿಯ ವಿಜಯವನ್ನು ಅತಿಶಯಿಸುವ ಉದ್ದೇಶವನ್ನು ಹೊಂದಿದ್ದಿತೇ ವಿನಃ ಹರ್ಷನ ಪ್ರತಾಪವನ್ನಲ್ಲ. ಮಿಗಿಲಾಗಿ ಹರ್ಷನ ಸಾಮ್ರಾಜ್ಯ ಅಲ್ಪಾಯುಷಿಯಾಗಿದ್ದು, ಸ್ಥಿರತೆಯ ಕೊರತೆಯಿಂದ ಕೂಡಿದ್ದು ಸಮಕಾಲೀನ ಇತಿಹಾಸದಲ್ಲಿ ತನ್ನ ಆಳವಾದ ಮುದ್ರೆ ಒತ್ತುವಲ್ಲಿ ವಿಫಲವಾಯಿತು.

ಹ್ಯೂಯೆನ್ತ್ಸಾಂಗನ ಭಾರತ

ಚೀನೀ ಯಾತ್ರಿಕ ಹ್ಯೂಯೆನ್‌ತ್ಸಾಂಗನ ಭಾರತ ಪ್ರವಾಸದ ಕಾರಣದಿಂದಾಗಿ ಹರ್ಷನ ಆಳ್ವಿಕೆ ಹೆಚ್ಚು ಮಹತ್ವವನ್ನು ಪಡೆದಿದೆ. ಆತನು ಭಾರತಕ್ಕೆ ಬರುವ ಸಲುವಾಗಿ ಸಿಯಾಂ ಅನ್ನು ಕ್ರಿ.ಶ. ೬೨೫ರಲ್ಲಿ ಬಿಟ್ಟು, ಭಾರತದಲ್ಲಿ ವ್ಯಾಪಕವಾಗಿ ಸಂಚರಿಸಿ, ಕ್ರಿ.ಶ. ೬೪೬ ರಲ್ಲಿ ಚೀನಾಕ್ಕೆ ಹಿಂತಿರುಗಿದನು. ಬುದ್ಧನ ಜನ್ಮ ಭೂಮಿಯಲ್ಲಿ ಬೌದ್ಧಧರ್ಮವನ್ನು ಅಧ್ಯಯನ ಮಾಡುವುದು ಆತನ ಉದ್ದೇಶವಾಗಿತ್ತು. ಆತನ ಮಹತ್ವದ ಕೃತಿ “ಸಿ-ಯೂ-ಕಿ” ಸಮಕಾಲೀನ ಭಾರತದ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಸಮಾಜದಲ್ಲಿ ನಾಲ್ಕು ವರ್ಣಗಳಿದ್ದು ಬ್ರಾಹ್ಮಣರು ಮತ್ತು ಕ್ಷತ್ರಿಯರು ಪ್ರಮುಖ ಸ್ಥಾನ ಪಡೆದಿದ್ದರು. ಬ್ರಾಹ್ಮಣರು ಶುದ್ಧ ಜೀವನ ನಡೆಸುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದುದರಿಂದ ಭಾರತವನ್ನು ಬ್ರಾಹ್ಮಣ ದೇಶವೆಂದು ಕರೆಯುವುದು ಜನಪ್ರಿಯವಾಗಿತ್ತು. ಶೂದ್ರರನ್ನು ಕೃಷಿಕರೆಂದು ಕರೆದಿರುವುದು ಮಹತ್ವದ ಅಂಶವಾಗಿದೆ. ಅಸ್ಪೃಶ್ಯರು ನಗರದ ಹೊರಗೆ ವಾಸಿಸುತ್ತಿದ್ದು ನಗರಕ್ಕೆ ನುಸುಳಿದಾಗ ಎಡಪಾರ್ಶ್ವದಲ್ಲಿ ಎತ್ತರ ಧ್ವನಿಯಲ್ಲಿ ಸಾರುತ್ತಾ ಬರಬೇಕಾಗಿತ್ತು. ವಿಧವೆಯರನ್ನು ಅತ್ಯಂತ ಜಿಗುಪ್ಸೆಯಿಂದ ಕಾಣೂತ್ತಿದ್ದರು. ಬಾಲ್ಯವಿವಾಹ ಪದ್ಧತಿ ಜಾರಿಯಲ್ಲಿರಲಿಲ್ಲ. ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ತೆರಿಗೆ ಪದ್ಧತಿಯು ಭಾರವಾಗಿರಲಿಲ್ಲ. ಧಾರ್ಮಿಕ ಪ್ರಸ್ಥಿತಿಯನ್ನು ವಿವರಿಸುವಾಗ ಸ್ವಾಭಾವಿಕವಾಗಿ ಹೆಚ್ಚಿನ ವಿವರಣೆಯನ್ನು ಬೌದ್ಧಧರ್ಮಕ್ಕೆ ಮೀಸಲಿಟ್ಟಿದ್ದಾನೆ. ಬೌದ್ಧರು ೧೮ ಪಂಥಗಳಾಗಿ ಒಡೆದು ಹೋಗಿದ್ದು ಹಿಂದಿನ ಬೌದ್ಧ ಕ್ಷೇತ್ರಗಳು ಅವನತಿಯ ಸ್ಥಿತೆಗೆ ಬಂದಿದ್ದವು. ನಲಂದವಿಶ್ವವಿದ್ಯಾಲಯ ಪ್ರಸಿದ್ಧ ಬೌದ್ಧ ಕೇಂದ್ರವಾಗಿದ್ದು ೧೦,೦೦೦ ಬೌದ್ಧ ಭಿಕ್ಷುಗಳು ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇತರ ಧರ್ಮಗಳ ದೊರೆಗಳೂ ಬೌದ್ಧಧರ್ಮದ ಬಗ್ಗೆ ಸಹಿಷ್ಣುತೆ ತೋರುತ್ತಿದ್ದರಲ್ಲದೆ ಅದರ ಯೋಗಕ್ಷೇಮದ ಬಗ್ಗೆ ಕರುಣೆ ತೋರುತ್ತಿದ್ದರು. ಸಿ-ಯೂ-ಕಿಯು ಯಥಾರ್ಥವಾದ ವಿಷಯಗಳ ಭಂಡಾರವಾಗಿದ್ದು ಪುರಾತತ್ವ ಅಧ್ಯಯನದ ಪ್ರತಿಯೊಬ್ಬ ವಿದ್ಯಾರ್ಥಿಗೂ ಅವಶ್ಯವಾಗಿದೆ ಎಂದು ವಿ.ಎ. ಸ್ಮಿತ್ ಹೇಳಿದ್ದಾನೆ.

ಆರನೆಯ ಶತಮಾನದಿಂದ ಎಂಟನೆಯ ಶತಮಾನದವರೆಗೆ ಪರ್ಯಾಯ ದ್ವೀಪದ ರಾಜಕೀಯ ಇತಿಹಾಸ ವಾತಾಪಿ ಅಥವಾ ಬಾದಾಮಿಯ ಚಾಳುಕ್ಯರು ಮತ್ತು ಕಂಚಿಯ ಪಲ್ಲವರ ಮೇಲೆ ಕೇಂದ್ರೀಕೃತವಾಗಿತ್ತು. ಜಯಸಿಂಹನಿಂದ ಆರಂಭಗೊಂಡ ಚಾಲಿಕ್ಯ ವಂಶ ರಣರಂಗದ ಮಗನದ ಒಂದನೆಯ ಪುಲಿಕೇಶಿಯ ಕಾಲದಲ್ಲಿ ಸ್ವತಂತ್ರ ರಾಜ್ಯವಾಗಿ ಮಾರ್ಪಾಡಾಯಿತು. ಸತ್ಯಾಶ್ರಯ ರಣವಿಕ್ರಮ, ಪೃಥ್ವೀವಲ್ಲಭ ಮತ್ತು ಶ್ರೀವಲ್ಲಭ ಬಿರುದುಗಳನ್ನು ಧರಿಸಿದವನಲ್ಲಿ ಆತ ಮೊದಲಿಗ. ಬಾದಾಮಿ ನಗರದಲ್ಲಿ ಕೋಟೆಯನ್ನು ನಿರ್ಮಿಸಿ, ರಕ್ಷಕ ಸೈನ್ಯವನ್ನಿಟ್ಟು ತನ್ನ ಸ್ವಾತಂತ್ರ್ಯದ ನೆನಪಿಗಾಗಿ ಅಶ್ವಮೇಧ ಯಜ್ಞಗಳನ್ನು ಮಾಡಿದನು. ಆತನ ಮಗ ಒಂದನೆಯ ಕೀರ್ತಿವರ್ಮನು ಉತ್ತರ ಕೊಂಕಣ, ಕೆನರಾ, ಬಳ್ಳಾರಿ ಹಾಗೂ ಕರ್ನೂಲ್‌ ಜಿಲ್ಲೆಗಳನ್ನು ವಶಪಡಿಸಿಕೊಂಡು ತನ್ನ ರಾಜ್ಯವನ್ನು ವಿಸ್ತರಿಸಿದನು. ಬಾದಾಮಿಯಲ್ಲಿ ವೈಭವಯುಕ್ತ ದೇವಾಲಯಗಳನ್ನು ನಿರ್ಮಿಸಿದರು. ಕೀರ್ತಿವರ್ಮನು ಮರಣ ಹೊಂದಿದಾಗ ಆತನ ಮಗ ಇಮ್ಮಡಿ ಪುಲಿಕೇಶಿ ಇನ್ನೂ ಚಿಕ್ಕವನಿದ್ದುದರಿಂದ ಕೀರ್ತಿವರ್ಮನ ಸಹೋದರ ಮಂಗಳೇಶ ಆಡಳಿತ ಸೂತ್ರವನ್ನು ಹಿಡಿದನು. ಮಂಗಳೇಶನು ರತ್ನಗಿರಿ ಜಿಲ್ಲೆಯನ್ನು ವಶಪಡಿಸಿಕೊಂಡನಲ್ಲದೆ ಉತ್ತರ ದಖನ್ನಿನ ಕಳಚೂರಿಗಳನ್ನು ಅಡಗಿಸಿದನು. ಮಹತ್ವಾಕಾಂಕ್ಷಿಯಾದ ಮಂಗಳೇಶನು ತನ್ನ ಉತ್ತರಾಧಿಕಾರಿಯಾಗಿ ಮಗನನ್ನು ತರಲು ಸಂಚು ನಡೆಸುತ್ತಿದ್ದಾಗ ಪುಲಕೇಶಿಯು ಆತನನ್ನು ಕೊಂದು ಸಿಂಹಾಸನಕ್ಕೆ ಬಂದನು. ಇಮ್ಮಡಿ ಪುಲಿಕೇಶಿಯು ನಿಸ್ಸಂದೇಹವಾಗಿ ಈ ವಂಶದ ಪ್ರಸಿದ್ಧ ದೊರೆ ಮತ್ತು ಭಾರತದ ಶ್ರೇಷ್ಠ ದೊರೆಗಳ ಜೊತೆಯಲ್ಲಿ ಹೆಸರಿಸಲು ಅರ್ಹನಾಗಿದ್ದಾನೆ. ಆಡಳಿತ ಸೂತ್ರವನ್ನು ಕಸಿದುಕೊಂಡ ತರುಣದಲ್ಲಿಯೇ ಆಂತರಿಕ ವಿರೋಧಿಗಳನ್ನು ಮೌನಗೊಳಿಸಿದನು. ನಂತರ ಅತ್ಯಂತ ವೇಗದ ದಂಡಯಾತ್ರೆಯಿಂದ ಬನವಾಸಿಯ ಕದಂಬರು, ತಲಕಾಡಿನ ಗಂಗರು, ಉತ್ತರಕೊಂಕಣದ ಮೌರ್ಯರು, ದಕ್ಷಿಣ ಪ್ರದೇಶಗಳನ್ನು ಧ್ವಂಸ ಮಾಡಿ ಆ ಪ್ರದೇಶಕ್ಕೆ ತನ್ನ ಸಹೋದರ ಜಯಸಿಂಹನನ್ನು ಪ್ರಾಂತಾಧಿಕಾರಿಯಾಗಿ ನೇಮಿಸಿದನು. ಹರ್ಷನಿಗೂ ಸಹ ಈ ಅದೃಷ್ಟವೇ ಕಾದಿತ್ತು. ಮತ್ತೊಂದು ಭೀಕರ ದಂಡೆಯಾತ್ರೆಯಲ್ಲಿ ಮಹಾಕೋಸಲ ಮತ್ತು ಕಳಿಂಗದ ದೊರೆಗಳು ಸೋಲಲ್ಪಟ್ಟು ಪಿಷ್ಟಪುರದ ಕೋಟೆ ಚಾಳುಕ್ಯರ ವಶವಾಯಿತು.

ಪುಲಕೇಶಿಯ ಕಾಲದಲ್ಲಿ ಪಲ್ಲವ ಮತ್ತು ಚಾಲುಕ್ಯರ ನಡುವೆ ವಂಶಪಾರಂಪರ್ಯ ಘರ್ಷಣೆ ಪ್ರಾರಂಭವಾಯಿತು. ಕೃಷ್ಣಾ ತುಂಗಭದ್ರಾ ನಡುಬಯಲಿನ ಮೇಲಿನ ಅಧಿಪತ್ಯ ಈ ಘರ್ಷಣೆಗೆ ಮುಖ್ಯ ಕಾರಣ. ಪಲ್ಲವ ರಾಜ ಒಂದನೆಯ ಮಹೇಂದ್ರವರ್ಮನನ್ನು ಸೋಲಿಸಿ ಆತನಿಂದ ಆಂಧ್ರ ಪ್ರದೇಶ ಒಂದು ಭಾಗವನ್ನು ಪಡೆದುಕೊಂಡನು. ಈ ಪ್ರದೇಶಕ್ಕೆ ತನ್ನ ಮತ್ತೊಬ್ಬ ಸೋದರ ಕುಬ್ಜ ವಿಷ್ಣುವರ್ಧನನ್ನು ಪ್ರಾಂತಾಧಿಕಾರಿಯಾಗಿ ನೇಮಿಸಿದನು. ಈತನು ಮುಂದೆ ವೆಂಗಿ ಚಾಳುಕ್ಯ ರಾಜ್ಯ ಸಂತತಿಯನ್ನು ಸ್ಥಾಪಿಸಿದನು. ಆದರೆ ಪಲ್ಲವರ ಮೇಲೆ  ಈ ಯುದ್ಧ ನಿರ್ಣಾಯಕವಾಗಿರಲಿಲ್ಲವೆಂದು ತೋರುತ್ತದೆ. ಆತನು  ಕೈಗೊಂಡ ಎರಡನೆಯ ದಂಡಯಾತ್ರೆಯು ವಿಫಲವಾಯಿತು. ಪಲ್ಲದ ರಾಜ ನರಸಿಂಹವರ್ಮ ಪರಿಯಾಲ, ಮಣಿಮಂಗಳ ಮತ್ತು ಸುರಮಾರ ಕದನಗಳಲ್ಲಿ ಪುಲಿಕೇಶಿಯನ್ನು ಸೋಲಿಸಿ ೬೪೨ರಲ್ಲಿ ವಾತಾಪಿಯನ್ನು ವಶಪಡಿಸಿಕೊಂಡು ವಾತಾಪಿಕೊಂಡ ಎಂಬ ಬಿರುದನ್ನು ಧರಿಸಿದನು. ಈ ಕದನಗಳೊಂದರಲ್ಲಿ ಪುಲಿಕೇಶಿಯು ಮರಣ ಹೊಂದಿದನೆಂದು ತೋರುತ್ತದೆ.

ಪುಲಿಕೇಶಿಯ ಮರಣಾನಂತರ ಸುಮಾರು ಹದಿಮೂರು ವರ್ಷಗಳವರೆಗೆ ಚಾಲುಕ್ಯ ರಾಜ್ಯದಲ್ಲಿ ಅಂಧಕಾರ ತಾಂಡವಾಡುತ್ತಿತ್ತು. ನಂತರ ಒಂದನೆಯ ವಿಕ್ರಮಾದಿತ್ಯ (೬೫೫-೬೮೦) ಪಲ್ಲವ ಪರಮೇಶ್ವರವರ್ಮನನ್ನು ತಾತ್ಕಾಲಿಕವಾಗಿ ಚಾಲುಕ್ಯ ಹಿರಿಮೆಯನ್ನು ಸ್ಥಾಪಿಸಿದರು. ಚೋಳರು, ಚೇರರು ಮತ್ತು ಪಾಂಡ್ಯರು ಆತನ ಪ್ರಭುತ್ವವನ್ನು ಅನುಭವಿಸಿದ್ದರು. ಆತನ ಉತ್ತರಾಧಿಕಾರಿ ಒಂದನೆಯ ವಿನಯಾದಿತ್ಯ (೬೮೦-೭೪೩) ಪಲ್ಲವರು, ಚೇರರು, ಚೋಳರು, ಪಾಂಡ್ಯರು ಆತನ ಪ್ರಭುತ್ವವನ್ನು ಅನುಭವಿಸಿದ್ದರು. ಆತನ ಉತ್ತರಾಧಿಕಾರಿ ಒಂದನೆಯ ವಿನಯಾದಿತ್ಯ (೬೮೦-೬೯೦) ಪಲ್ಲವರು, ಚೇರರು, ಚೋಳರು, ಪಾಂಡ್ಯರು ಮತ್ತು ಮಾಳವದವರೊಡನೆ ಹೋರಾಡಿ (೬೯೬-೭೩೩) ಆಳ್ವಿಕೆಯ ನಂತರ ಇಮ್ಮಡಿ ವಿಕ್ರಮಾದಿತ್ಯ (೭೩೩-೭೪೨) ಪಟ್ಟಕ್ಕೆ ಬಂದನು. ಆತನು ಪಲ್ಲವ ರಾಜ ನಂದಿವರ್ಮನ್‌ ಪಲ್ಲವ ಮಲ್ಲನನ್ನು ಸಂಪೂರ್ಣವಾಗಿ ಸೋಲಿಸಿ, ಕಂಚಿಯನ್ನು ಆಕ್ರಮಿಸಿಕೊಂಡು ಪುಲಿಕೇಶಿಯ ಸೋಲಿನ ಸೇಡನ್ನು ತೀರಿಸಿಕೊಂಡನು. ಆದರೆ ಕಂಚಿಯನ್ನು ನಾಶಮಾಡದೆ ತಾನು ವಶಪಡಿಸಿಕೊಂಡು ಐಶ್ವರ್ಯವನ್ನು ಅಲ್ಲಿನ ದೇವಾಲಯಗಳಿಗೆ ದಾನ ಮಾಡಿ ತನ್ನ ಶಾಸನವೊಂದನ್ನು ಸ್ಥಾಪಿಸಿ ರಾಜಧಾನಿಗೆ ಮರಳಿದನು. ಇದರೊಂದಿಗೆ ಚಾಲುಕ್ಯರ ವಿಜಯವು ಪೂರ್ಣಗೊಂಡಿತು. ದಖನ್ನಿಗೆ ನುಗ್ಗಿದ್ದ ಅರಬ್ಬರನ್ನು ಹಿಮ್ಮೆಟ್ಟಿಸಿದನು. ಈ ವಂಶದ ಕೊನೆಯ ದೊರೆ ಇಮ್ಮಡಿ ಕೀರ್ತಿವರ್ಮನ್‌(೭೪೬-೭೫೭). ರಾಷ್ಟ್ರಕೂಟ ದೊರೆ ಒಂದನೆಯ ದಂತಿಮರ್ವನು ೭೫೩ ರಲ್ಲಿ ಆತನನ್ನು ಸೋಲಿಸಿದನು. ಆದರೆ ಬಾದಾಮಿ ಚಾಲುಕ್ಯರನ್ನು ಭಾರತದ ರಾಜಕೀಯ ಭೂಪಟದಿಂದ ಅಳಿಸಿದ ಕೀರ್ತಿ ಒಂದನೆಯ ಕೃಷ್ಣನಿಗೆ ಸಲ್ಲುತ್ತದೆ.

ಚಾಲುಕ್ಯರ ಸರ್ಕಾರವು ಸಾಂಕುಶ ರಾಜಪ್ರಭುತ್ವವಾಗಿತ್ತು. ರಾಜಪ್ರತಿನಿಧಿತ್ವದ ವ್ಯವಸ್ಥೆಯೂ ಜಾರಿಯಲ್ಲಿತ್ತು. ಆಡಳಿತದ ಅನುಕೂಲಕ್ಕಾಗಿ ರಾಜ್ಯವನ್ನು ದೇಶ, ಮಂಡಲ ಮತ್ತು ವಿಷಯಗಳಾಗಿ ವಿಂಗಡಿಸಲಾಗಿತ್ತು. ಗ್ರಾಮವು ಆಡಳಿತದ ಕೊನೆಯ ಘಟಕವಾಗಿತ್ತು. ಪ್ರಾಂತ್ಯಗಳನ್ನು ಸಂಖ್ಯಾಪ್ರತ್ಯಯದೊಂದಿಗೆ, ಅಂದರೆ ಬನವಾಸಿ ೧೨,೦೦೦ ಪುಲಿಗೆರೆ ೩೦೦ ಮುಂತಾಗಿ ಗುರುತಿಸಲಾಗುತ್ತಿತ್ತು. ರಾಜನ ರಕ್ತ ಸಂಬಂಧಿಗಳನ್ನು ಸಾಮಾನ್ಯವಾಗಿ ಪ್ರಾಂತಾಧಿಕಾರಿಗಳಾಗಿ ನೇಮಿಸುತ್ತಿದ್ದರು. ಸಮಾಜದಲ್ಲಿ ನಾಲ್ಕು ವರ್ಣಗಳಲ್ಲದೆ ಉದ್ಯೋಗದ ಆಧಾರದ ಮೇಲೆ ಹುಟ್ಟಿಕೊಂಡ ಇತರ ಜಾತಿಗಳಿದ್ದವು. ಮಹಿಳೆಯರಿಗೆ ಸಮಾಜದಲ್ಲಿ ವಿಶೇಷ ಗೌರವವಿತ್ತು. ರಾಣಿಯರು ಮತ್ತು ರಾಜವಂಶದ ಮಹಿಳೆಯರು ಆಡಳಿತದಲ್ಲಿ ಪಾಲ್ಗೊಳ್ಳುತ್ತಿದ್ದರು. ಗಣಿಕೆಯರು ಸಮಾಜದಲ್ಲಿ ವಿಶೇಷ ಸ್ಥಾನಮಾನಗಳನ್ನು ಪಡೆದಿದ್ದರು. ಕೃಷಿಯು ರಾಜ್ಯಾದಾಯದ ಬೆನ್ನಲುಬಾಗಿತ್ತು. ಜಮೀನನ್ನು ಫಲವತ್ತಿನ ಆಧಾರದ ಮೇಲೆ ಕಪ್ಪು ಮಣ್ಣಿನ  ಭೂಮಿ, ಕೆಂಪು ಮಣ್ಣಿನ ಭೂಮಿ, ತೋಟದ ಭೂಮಿ ಮತ್ತು ಬಂಜರು ಭೂಮಿ ಎಂದು ವರ್ಗೀಕರಿಸಲಾಗಿತ್ತು. ಕೈಗಾರಿಕೆಗಳು ಸಾಮುದಾಯಿಕವಾಗಿ ವ್ಯವಸ್ಥಾಪಿಸಲ್ಪಟ್ಟಿದ್ದವು. ಐಯ್ಯಪೊಳೆ ೫೦೦ ಮತ್ತು ವೀರಬಣಂಜುಗಳು ವ್ಯಾಪಾರದಲ್ಲಿ ತೊಡಗಿದ್ದರು.

ಶೈವ ಮತ್ತು ವೈಷ್ಣವ ಧರ್ಮಗಳ ಜೊತೆಗೆ ಬೌದ್ಧ ಮತ್ತು ಜೈನ ಧರ್ಮಗಳು ಆಚರಣೆಯಲ್ಲಿದ್ದವು. ಹ್ಯೂಯೆನ್‌ತ್ಸಾಂಗನ ಹೇಳಿಕೆಯಂತೆ ಅಲ್ಲಿ ೧೦,೦೦೦ ಭಿಕ್ಷುಗಳನ್ನೊಳಗೊಂಡ ಸುಮಾರು ೧೦೦ ಸಂಘಾರಾಮಗಳಿದ್ದು  ಅವರು ಮಹಾಯಾನ ಮತ್ತು ಹೀನಯಾನ ತತ್ವಗಳನ್ನು ಅಧ್ಯಯನ ಮಾಡುತ್ತಿದ್ದರು. ಗಣ್ಯರು ಮತ್ತು ಕೆಲವು ಉನ್ನತ ಅಧಿಕಾರಿಗಳು ಜೈನ ಧರ್ಮದ ಅನುಯಾಯಿಗಳಾಗಿದ್ದರು. ಸರ್ವಧರ್ಮ ಸಹಿಷ್ಣುತೆ ಚಾಲುಕ್ಯ ದೊರೆಗಳೆಲ್ಲರಲ್ಲೂ ಇತ್ತು.

ಭಾರತದಲ್ಲಿ ಬ್ರಾಹ್ಮಣ ಧರ್ಮದ ಗುಹಾಂತರ ದೇವಾಲಯಗಳ ಬೆಳವಣಿಗೆಯನ್ನು ಆರಂಭಿಸಿದವರಲ್ಲಿ ಚಾಲುಕ್ಯರೇ ಮೊದಲಿಗರು. ಈ ಗುಹಾಂತರ ದೇವಾಲಯಗಳು ಬಾದಾಮಿಯಲ್ಲಿ ನಾಲ್ಕು ಹಾಗೂ ಐಹೊಳೆಯಲ್ಲಿ ಎರಡು ಇವೆ. ಬಾದಾಮಿಯಲ್ಲಿ ಎರಡು ವೈಷ್ಣವ, ಒಂದು ಶೈವ ಮತ್ತು ಒಂದು ಜೈನ ಪಂಥಗಳಿಗೆ ಸೇರಿದ್ದರೆ, ಐಹೊಳೆಯಲ್ಲಿ ಒಂದು ಶೈವ, ಮತ್ತೊಂದು ಜೈನ ಪಂಥಕ್ಕೆ ಸೇರಿವೆ. ಐಹೊಳೆಯು ಭಾರತೀಯ ದೇವಾಲಯ ವಾಸ್ತುಶಿಲ್ಪದ ಮತ್ತೊಂದು ಜೈನ ಪಂಥಕ್ಕೆ ಸೇರಿವೆ. ಐಹೊಳೆಯು ಭಾರತೀಯ ದೇವಾಲಯ ವಾಸ್ತುಶಿಲ್ಪದ ತೊಟ್ಟಿಲೆನಿಸಿದೆ. ಇಲ್ಲಿ ೭೦ಕ್ಕೂ ಮೀರಿದ ಸಣ್ಣಪುಟ್ಟ ದೇವಾಲಯಗಳು ದೊರೆತಿವೆ. ದೇವಾಲಯದ ಹೆಚ್ಚಿನ ಬೆಳವಣಿಗೆಯನ್ನು ಪಟ್ಟದಕಲ್ಲಿನ ಪಾಪನಾಥ ಮತ್ತು ವಿರೂಪಾಕ್ಷ ದೇವಾಲಯಗಳಲ್ಲಿ ಕಾಣಬಹುದು. ವರ್ಣಚಿತ್ರ ಕಲೆಯಲ್ಲಿ ಅಜಂತಾದ ಒಂದನೆಯ ಗುಹೆ ಚಾಲುಕ್ಯರ ಕಾಲದ್ದಾಗಿದೆ. ಇಲ್ಲಿಯ ಚಿತ್ರದಲ್ಲಿ ‘ಬುದ್ಧನ ಪ್ರಲೋಭನ’ ಮತ್ತು  ‘ಪರ್ಷಿಯಾದ ರಾಯಭಾರಿ’ ಮುಖ್ಯ ದೃಶ್ಯಗಳಾಗಿವೆ. ಬಾದಾಮಿಯ ಎರಡನೆಯ ಮತ್ತು ಮೂರನೆಯ ಗುಹೆಗಳಲ್ಲಿ ಅಲ್ಪಸ್ವಲ್ಪ ಚಿತ್ರಗಳಿವೆ.

ಕ್ರಿ.ಶ.೫೭೫ರಲ್ಲಿ ಸಿಂಹಾಸನಕ್ಕೆ ಬಂದ ಸಿಂಹವಿಷ್ಣುವಿನೊಂದಿಗೆ ಪಲ್ಲವರ ಒಂದು ಹೊಸ ಯುಗ ಪ್ರಾರಂಭವಾಗುತ್ತದೆ. ಆತನು ಶ್ರೀಲಂಕಾ, ಚೋಳ, ಚೇರ ಮತ್ತು ಪಾಂಡ್ಯ ರಾಜರನ್ನು ಸೋಲಿಸಿ ತನ್ನ ರಾಜ್ಯವನ್ನು ವಿಸ್ತರಿಸಿದನು. ಕಿರಾತರ್ಜುನೀಯರ ಕರ್ತೃ ಭಾರವಿ ಆತನ ಆಸ್ಥಾನದಲ್ಲಿದ್ದನು. ಒಂದನೆಯ ಮಹೇಂದ್ರವರ್ಮನ್‌ಆತನ ಉತ್ತರಾಧಿಕಾರಿ. ಪುಲಿಕೇಶಿಯಿಂದ ಪರಾಜಯಗೊಂಡ ಆತನು ಬ್ರಹ್ಮ, ವಿಷ್ಣು, ಈಶ್ವರನಿಗೆ ದೇವಾಲಯಗಳನ್ನು ನಿರ್ಮಿಸಿದನಲ್ಲದೆ ತಿರುಚನಾಪಳ್ಳಿ, ಚೆಂಗಲ್ ಪೇಟ್ ಮತ್ತು ಉತ್ತರ ಹಾಗೂ ದಕ್ಷಿಣ ಆರ್ಕಾಟ್‌ ಜಿಲ್ಲೆಗಳಲ್ಲಿ ಗುಹಾಂತರ ದೇವಾಲಯಗಳನ್ನು ನಿರ್ಮಿಸಿದನು. ಆತನ ಮಗ ಒಂದನೆಯ ನರಸಿಂಹವರ್ಮನ್‌ಮಾಮಲ್ಲಿ ಶ್ರೀಲಂಕಾಕ್ಕೆ ನೌಜಾ ಸೈನ್ಯವನ್ನು ಕಳುಹಿಸಿ, ಅಲ್ಲಿನ ರಾಜನನ್ನು ಪದಚ್ಯುತಿಗೊಳಿಸಿ ತನ್ನ ಮಿತ್ರ ಮಣಿವರ್ಮನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದನು. ಇವನು ಪುಲಿಕೇಶಿಯನ್ನು ಸೋಲಿಸಿ ಚಾಲುಕ್ಯರ ಇರುವಿಗೆ ಸಂಚಕಾರ ತಂದನು. ಮಹಾಬಲಿಪುರದ ಈಗಿನ ಖ್ಯಾತಿಗೆ ಬಹುಮಟ್ಟಿಗೆ ಕಾರಣನಾಗಿದ್ದಾನೆ. ಹ್ಯೂಯೆನ್‌ತ್ಸಾಂಗನು ಪಲ್ಲವ ರಾಜ್ಯಕ್ಕೆ ಭೇಟಿ ಇತ್ತರೂ ಆತನ ನಂತರ ಇಮ್ಮಡಿ ಮಹೇಂದ್ರವರ್ಮನ್‌ ಒಂದನೆಯ ಪರಮೇಶ್ವರವರ್ಮನ್‌ ಅನುಕ್ರಮವಾಗಿ ಮತ್ತು ಇಮ್ಮಡಿ ನರಸಿಂಹವರ್ಮನ್‌ ರಾಜಸಿಂಹ ಅನುಕ್ರಮವಾಗಿ ಆಳಿದರು. ರಾಜಸಿಂಹನು ಚೀನಾಕ್ಕೆ ರಾಯಭಾರವನ್ನು ಕಳುಹಿಸಿದನಲ್ಲದೆ ಪ್ರಸಿದ್ಧ ಸಂಸ್ಕೃತ ಕವಿ ದಂಡನ್‌ಗೆ ಪ್ರೋತ್ಸಾಹ ನೀಡಿದರು. ಕಂಚಿಯಲ್ಲಿ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದನು. ಇಮ್ಮಡಿ ಪರಮೇಶ್ವರವರ್ಮನ್ ನಂತರ ಇಮ್ಮಡಿ ನಂದಿವರ್ಮನ್‌ಪಲ್ಲಮಮಲ್ಲ(೭೩೦-೮೦೦) ಚಾಳುಕ್ಯ ದೊರೆ ಇಮ್ಮಡಿ ವಿಕ್ರಮಾದಿತ್ಯನಿಂದ ಸೋಲನ್ನನುಭವಿಸಿದರೂ ಪೂರ್ವ ಚಾಲುಕ್ಯ ಹಾಗೂ ಗಂಗರಾಜರು ಕೆಲವು ಪ್ರದೇಶಗಳನ್ನು ಜಯಿಸಿ ತನ್ನ ರಾಜ್ಯ ಶಿಥಿಲವಾಗುವಂತೆ ನೋಡಿಕೊಂಡನು. ವಿಷ್ಣುಭಕ್ತನಾದ ಆತನು ಕಂಚಿಯಲ್ಲಿ ವೈಕುಂಠ ಪೆರುಮಾಳ್ ದೇವಾಲಯವನ್ನು ನಿರ್ಮಿಸಿದನು. ನಂದಿವರ್ಮನ ಮರಣಾನಂತರ ಪಲ್ಲವರ ಸುಯೋಗ ಕ್ಷೀಣಿಸಲಾರಂಭಿಸಿತು. ದಂತಿವರ್ಮನು ಪಾಂಡ್ಯರು ಮತ್ತು ರಾಷ್ಟ್ರಕೂಟರನ್ನು ಎದುರಿಸಲಾಗದೆ ಹೋದನು. ಮುಮ್ಮಡಿ ನಂದಿವರ್ಮನು ಅವನತಿಯನ್ನು ಸ್ವಲ್ಪಕಾಲ ತಡೆಹಿಡಿದನು. ಈ ವಂಶದ ಕೊನೆಯ ದೊರೆ ಅಪರಾಜಿತ ಪಲ್ಲವ ಚೋಳರ ತಿರುವಿನಿಂದ ಶ್ರೀಪುರಂಬಿಯ ಕದನದಲ್ಲಿ ತನ್ನ ಸಾಮಾಂತರಾದ ಮುತ್ತರಿಯಾರರನ್ನು  ಸೋಲಿಸಿದನು. ಈ ಯಶಸ್ಸು ಅಲ್ಪಕಾಲದ್ದಾಗಿತ್ತು. ಕ್ರಿ.ಶ. ೮೯೧ರಲ್ಲಿ ಆದಿತ್ಯ ಚೋಳನು ಅಪರಾಜಿತ ಪಲ್ಲವನನ್ನು ಸೋಲಿಸಿ ಚೋಳರ ಪ್ರಭುತ್ವವನ್ನು ಸ್ಥಾಪಿಸಿದನು.

ಸಾಂಸ್ಕೃತಿಕ ಕ್ಷೇತ್ರದಲ್ಲಿ ಪಲ್ಲವರ ಕೊಡುಗೆ ಅಪಾರವಾದುದು. ನಾಯನಾರ್ ಮತ್ತು ಆಳ್ವಾರ್ ಚಳವಳಿಗಳು ಜನಪ್ರಿಯ ಹೊಂದಿದ್ದು ಪಲ್ಲವರ ಕಾಲದಲ್ಲಿ, ಹ್ಯೂಯೆನ್‌ತ್ಸಾಂಗನ ಹೇಳಿಕೆಯಂತೆ ಕಂಚಿಯಲ್ಲಿ ನೂರಕ್ಕೂ ಮೀರಿ ಸಂಘಾರಾಮಗಳು ಮತ್ತು ೮೦ ಜೈನ ದೇವಾಲಯಗಳಿದ್ದವು. ಕಂಚಿ ಘಟಕವು ಭಾರತದ ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದಿತು. ನಲಂದಾ ವಿಶ್ವವಿದ್ಯಾಲಯದಲ್ಲಿದ್ದ ಧರ್ಮಪಾಲನು ಕಂಚಿಯವನು.

ಪಲ್ಲವ ದೊರೆಗಳು ಭಾರವಿ ಮತ್ತು ದಂಡಿನ್‌ಗೆ ಪ್ರೋತ್ಸಾಹವಿತ್ತರು. ಒಂದನೆಯ ಮಹೇಂದ್ರವರ್ಮನ್‌ಸಂಸ್ಕೃತದಲ್ಲಿ ಮತ್ತುವಿಲಾಸಪ್ರಹಸನ ಮತ್ತು ಭಗವದಜ್ಜುಕ ಕೃತಿಗಳನ್ನು ರಚಿಸಿದನು. ಕೆ.ಎಂ. ಪಣೀಕ್ಕರ್ ತಿಳಿಸಿರುವಂತೆ ದಕ್ಷಿಣ ಭಾರತದ ಆರ್ಯೀಕರಣವು ಪಲ್ಲವರ ಕಾಲದಲ್ಲಿ ಪೂರ್ಣಗೊಂಡಿತು. ದ್ರಾವಿಡ ಶೈಲಿಯಲ್ಲಿ ದೇವಾಲಯಗಳ ನಿರ್ಮಾಣವನ್ನು ಪ್ರಾರಂಭಿಸಿದವರು ಪಲ್ಲವರು. ಅವರು ಮಹಾಬಲಿಪುರಂನಲ್ಲಿ ಕೊರೆದು ನಿರ್ಮಿಸಿರುವ ರಥಗಳು ಮತ್ತು ಪಂಟಪಗಳು ಮುಖ್ಯವಾಗಿವೆ. ಇಲ್ಲಿ ಗಂಗಾವತರಣವನ್ನು ಚಿತ್ರಿಸಿರುವ ಉಬ್ಬು ಚಿತ್ರಗಳಿಗೆ ಹಾಗೂ ಸಿತ್ತಣ್ಣವಾಸಲ್ ಗುಹೆಗಳಲ್ಲಿ ಕಂಡುಬರುವ ವರ್ಣಚಿತ್ರಗಳಿಗೆ, ವಾಸ್ತುಶಿಲ್ಪ ಮತ್ತು  ಕಲೆಗೆ ಅವರು ನೀಡುತ್ತಿದ್ದ ಪ್ರೋತ್ಸಾಹಕ್ಕೆ ಸಾಕ್ಷಿಗಳಾಗಿವೆ.

ಸಾಮ್ರಾಜ್ಯ ಐಕ್ಯತೆಯ ದೃಷ್ಟಿಯಿಂದ ಹರ್ಷನ ಮರಣಾನಂತರ ಉತ್ತರ ಭಾರತದ ಚಿತ್ರಣವು ಅಸ್ಪಷ್ಟವಾಗುತ್ತದೆ. ಕ್ರಿ.ಶ.೨೦೦ರಲ್ಲಿ ಕನೌಜ್ ಯಶೋವರ್ಮನ ವಶವಾಯಿತು. ಆತನು ಶಶಾಂಕ ಮತ್ತು ಮಾಳವದ ಯಶೋಧರ್ಮನಂತೆ ಉಲ್ಕಾಪಾತದಂತೆ ಮೇಲೆದ್ದು ತಣ್ಣಗಾದನು. ವಾಕ್ಪತಿಯ “ಗೌಡವಾಹೊದ” ಪ್ರಕಾರ ಆತನು ಮಗಧ ರಾಜನನ್ನು ಸೋಲಿಸಿ ಗೌಡದೇಶವನ್ನು ವಶಪಡಿಸಿಕೊಂಡನು. ನಂತರ ದಕ್ಷಿಣಕ್ಕೆ ತಿರುಗಿ ಪಾರಸಿಕ (ಅರಬ್ಬರನ್ನು) ರನ್ನು ಸೋಲಿಸಿ ೩೩೦ ರಲ್ಲಿ ಚೀನಾಕ್ಕೆ ರಾಯಭಾರಿಯನ್ನು ಕಳುಹಿಸಿದನು. ಕಾಶ್ಮೀರದ ದೊರೆ ಲಲಿತಾದಿತ್ಯನೊಡನೆ ಸಂಬಂಧ ಬೆಳೆಸಿ ಅರಬ್ಬರು ಮತ್ತು ಟಿಬೆಟ್ಟಿನ ಭಯವನ್ನು ನಿವಾರಿಸಿದನು. ಗೌಡವಾಹೋದ ಕರ್ತೃ ಮತ್ತು ಮಹಾವೀರಚರಿತ, ಉತ್ತರರಾಮಚರಿತ ಮತ್ತು ಮಾಲತಿ ಮಾಧವದ ಕರ್ತೃ ಭವಭೂತಿ ಆತನ ಆಸ್ಥಾನದಲ್ಲಿದ್ದರು.

ಯಶೋವರ್ಮನ ನಂತರದ ಕನೌಜ್‌ನ ಇತಿಹಾಸ ಸ್ಪಷ್ಟವಾಗಿಲ್ಲ. ಕಾಶ್ಮೀರದ ದೊರೆಗಳಾದ ಮುಕ್ತಪೀಡ ಲಲಿತಾದಿತ್ಯ ಮತ್ತು ಜಯಪೀಡ ಕನೌಜ್ ದೊರೆಗಳನ್ನು ಸೋಲಿಸಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು. ಮುಕ್ತಪೀಡನು ಮಗಧ, ಬಂಗಾಳ ತಾ ಕಾಮರೂಪ ಮತ್ತು ಒರಿಸ್ಸಾ ದೇಶಗಳನ್ನು ಗೆದ್ದುಕೊಂಡು ದಖನ್‌ಒಳಹೊಕ್ಕು ಸಂಧ್ನ ಅರಬ್ಬರನ್ನು ಸೋಲಿಸಿದನೆಂದು ರಾಜತರಂಗಿಣಿ ತಿಳಿಸುತ್ತದೆ. ಆತನು ಮಾರ್ತಾಂಡ ದೇವಾಲಯವನ್ನು ನಿರ್ಮಿಸಿದನು. ಮುಕ್ತಪೀಡನ ಮೊಮ್ಮಗ, ಜಯಪೀಡ ವಿನಯಾದಿತ್ಯ(೭೭೯-೮೧೦) ಕನೌಜ್‌ದ ರಾಜ ಇಂದ್ರಾಯುಧನನ್ನು ಸೋಲಿಸಿದನಲ್ಲದೆ ನೇಪಾಳ ಮತ್ತು ಉತ್ತರ ಬಂಗಾಳದ ಮೇಲೆ ದಂಡಯಾತ್ರೆಗಳನ್ನು ಕಳುಹಿಸಿದನೆಂದು ಕಲ್ಹಣ ತಿಳಿಸಿದ್ದಾನೆ. ಒಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಕಾರ್ಕೋಟಕ ರಾಜ ಸಂತತಿಯನ್ನು ಸ್ಥಳಾಂತರಿಸಿ ಉತ್ಪಲವಂಶದವರು ೧೩೩೯ ರವರೆಗೆ ಕಾಶ್ಮೀರದ ಪ್ರಭುತ್ವವನ್ನು ನಿರ್ವಹಿಸಿದರು.