ಮತಸಂಪ್ರದಾಯಗಳು

ನಾಸ್ತಿಕ ಮತಗಳು

ಕ್ರಿ.ಪೂ. ೬ನೆಯ ಶತಮಾನದ ಸುಮಾರಿಗೆ ಭಾರತದಲ್ಲಿ ಅನೇಕ ಮತ-ಸಂಪ್ರದಾಯಗಳು ಪ್ರಚಲಿತದಲ್ಲಿದ್ದವು. ಅಶೋಕನ ಶಾಸನಗಳಲ್ಲಿ ಕಂಡುಬರುವಂತೆ ಅವುಗಳನ್ನು ಪಾಷಂಡಗಳೂ ಎಂದು ಕರೆಯಲಾಗಿತ್ತು. ನಂತರ ಕಾಲದಲ್ಲಿ ಅವುಗಳನ್ನು ಸ್ಥೂಲವಾಗಿ ಆಸ್ತಿಕ ಮತ್ತು ನಾಸ್ತಿಕ ಸಂಪ್ರದಾಯಗಳೆಂದು ಗುರುತಿಸಲಾಗಿದೆ. ವೇದಗಳ ಅಧಿಕಾರವನ್ನು ಮಾನ್ಯ ಮಾಡಿ ಆ ಮೂಲಕ ಆತ್ಮ ಶಾಶ್ವತ ಎಂದು ಒಪ್ಪಿದವರನ್ನು ಆಸ್ತಿಕರೆಂದೂ ಆತ್ಮ ನಶ್ವರ ಎಂದು ನಿರ್ವಾಣವನ್ನು ಪ್ರತಿಪಾದಿಸಿದ ವಿರಕ್ತ ಪಂಥಗಳನ್ನು ನಾಸ್ತಿಕರೆಂದೂ ಸ್ಥೂಲವಾಗಿ ಗುರುತಿಸಲಾಗಿತ್ತು. ನಾಸ್ತಿಕರಲ್ಲಿ ಬೌದ್ದರು, ಅಜೀವಿಕರು, ಚಾರ್ವಾಕರು, ಮುಂತಾದವರಿದ್ದರು. ಈ ಸಂಪ್ರದಾಯಗಳನ್ನು ಸಾಮಾಜಿಕ-ಧಾರ್ಮಿಕ ಸುಧಾರಣಾ ಚಳವಳಿಗಳು ಎಂದು ಸಾಧಾರಣವಾಗಿ ಗುರುತಿಸಲಾಗಿದೆ. ಆದರೆ ಇವೆಲ್ಲ ಬೇರೆ ಬೇರೆ ಸಂಪ್ರದಾಯಗಳಾಗಿದ್ದವೇ ವಿನಹ ಯಾವುದೇ ಒಂದನ್ನು ನಿರಾಕರಿಸುವ ಸಲುವಾಗಿ ಮತ್ತೋದು ಅಸ್ತಿತ್ವಕ್ಕೆ ಬರಲಿಲ್ಲ. ನಾಸ್ತಿಕ-ವಿರಕ್ತ ಸಂಪ್ರದಾಯಗಳು ವಿರಕ್ತ ಜೀವನವನ್ನು ಉದ್ದೇಶಿಸಿ ತಮ್ಮ ತತ್ವಗಳನ್ನು ಪ್ರತಿಪಾದಿಸಿದರೆ ಆಸ್ತಿಕ ಗೃಹಸ್ಥ ಸಂಪ್ರದಾಯಗಳು ಸಾಂಸಾರಿಕ ಜೀವನವನ್ನು ಲಕ್ಷ್ಯದಲ್ಲಿಟ್ಟುಕೊಂಡು ತಮ್ಮ ತತ್ವವನ್ನು ಪ್ರತಿಪಾದಿಸಿದ್ದವು. ಆ ಕಾರಣದಿಂದ ಅವು ಪರಸ್ಪರರನ್ನು ತಾತ್ವಿಕವಾಗಿ ವಿರೋಧಿಸುವಂತೆ ತೋರುತ್ತದೆ.

ಬೌದ್ದ ಮತದ ಆರಂಭ ಬೆಳವಣಿಗೆ

ಬೌದ್ದ ಧರ್ಮವನ್ನು ಆರಂಭಿಸಿದರು ಗೌತಮ ಬುದ್ದ. ಗೌತಮಬುದ್ದನ ಮೂಲ ಹೆಸರು ಸಿದ್ದಾರ್ಥ ಕ್ರಿ.ಪೂ. ೫೬೬ರಲ್ಲಿ ಲುಂಬಿಣಿ ಎಂಬ ಸ್ಥಳದಲ್ಲಿ ಜನಿಸಿದನು. ಶುದ್ದೋದನ ಹಾಗೂ ಮಾಯದೇವಿಯವರು ಇವನ ತಂದೆತಾಯಿಗಳು. ತಂದೆಯಾದ ಶುದ್ದೋಧನ ಕಪಿಲ ವಸ್ತು ಗಣ ರಾಜ್ಯದ ಶಾಕ್ಯ ಮನೆತನದ ದೊರೆ. ತಾನು ಜನಿಸಿದ ೭ನೆಯ ದಿನದಲ್ಲೇ ತಾಯಿಯಾದ ಮಾಯದೇವಿ ತೀರಿಕೊಳ್ಳುತ್ತಾಳೆ. ನಂತರ ಮಲತಾಯಿಯಾದ ಪ್ರಜಾಪತಿ ಗೌತಮಿಯ ಪೋಷಣೆಯಲ್ಲಿ ಬೆಳೆದನು.

ಸಿದ್ದಾರ್ಥನು ಪ್ರೌಢವಯಸ್ಸಿಗೆ ಬರುವವರೆಗೂ ತಂದೆಯು ಐಶಾರಾಮದ ಜೀವನವನ್ನು ನಡೆಸಲು ಸಕಲ ವ್ಯವಸ್ಥೆ ಮಾಡಿದ್ದನು. ಈ ಮಧ್ಯೆ ‘ಯೋಶೋಧರೆ’ ಎಂಬ ಕನ್ಯೆಯೊಡನೆ ವಿವಾಹ ಮಾಡಲಾಯಿತು. ಇವರಿಗೆ ರಾಹುಲ ಎಂಬ ಮಗನು ಜನಿಸಿದನು. ಈ ಸಂಸಾರದ ದುಃಖವನ್ನು ನೋಡಿ ವೈರಾಗ್ಯ ಮೂಡಿ ಸಾಂಸಾರಿಕ ಜೀವನವನ್ನು ತ್ಯಜಿಸಿ ಸತ್ಯವನ್ನು ಅರಸಿ ಅಲೆಯುತ್ತಾನೆ. ತನ್ನ ೨೯ನೆಯ ವಯಸ್ಸಿನಲ್ಲಿ ತನ್ನ ರಾಜ್ಯ, ಕುಟುಂಬ ಹಾಗೂ ಹೆಂಡತಿ ಮಗನನ್ನು ತೊರೆದು ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಹೊರಡುತ್ತಾನೆ. ಈ ಘಟನೆಯನ್ನು ‘ಮಹಾಪರಿತ್ಯಾಗ’ ಎಂದು ಕರೆಯುತ್ತಾರೆ.

ನಂತರ ಆಲಾರಕಾಲಮ, ಉದ್ದಕರಾಮಪುತ್ತ, ಕಶ್ಯಪಪುರಾಣ, ಮಕ್ಕಲಿ ಘೋಷಾಲ, ಅಜಿತಕೇಶ ಕಂಬಳಿ, ಪಕುದ ಕಚಾಯಾನ ಮುಂತಾದವರೊಂದಿಗೆ ಚರ್ಚೆಗಳನ್ನು ಮಾಡುತ್ತಾನೆ. ಆದರೆ ಅವರ ವಾದಗಳಿಂದ ಸಿದ್ದಾರ್ಥಗನು ತೃಪ್ತನಾಗಲಿಲ್ಲ. ಪ್ರಪಂಚ  ಪರ್ಯಾಟನೆ ಮಾಡುವುದರ ಮೂಲಕ ಜ್ಞಾನಾರ್ಜನೆಯನ್ನು ತನ್ನ ೪೯ನೆಯ ವಯಸ್ಸಿನಲ್ಲಿ ಬೋದ್ದಗಯಾದಲ್ಲಿ ಪಡೆದುಕೊಳ್ಳುತ್ತಾನೆ. ಅಂದಿನಿಂದ ಸಿದ್ದಾರ್ಥನು ಬುದ್ದ (ಜ್ಞಾನೋದಯ) ತಥಾಗತ (ಜಗತ್ತಿನ ಸತ್ಯವನ್ನು ಕಂಡಕೊಂಡವನ್ನು) ನಾಗುತ್ತಾನೆ. ಮುಂದೆ ಗೌತಮ ಬುದ್ದ ಎಂದು ಕರೆಯುತ್ತಾರೆ. ಆನಂತರ ಬೋಧನೆಗಳನ್ನು ಮಾಡಲು ಪ್ರಾರಂಭಿಸುತ್ತಾನೆ. ಮೊದಲಿಗೆ ತನ್ನ ೫ ಜನ ಶಿಷ್ಯರೊಂದಿಗೆ ಸಾರನಾಥ ಬಳಿ ಜಿಂಕೆವನದಲ್ಲಿ ಬೋಧನೆ ಮಾಡುತ್ತಾನೆ. ನಂತರ ಅನೇಕ ಅನುಯಾಯಿಗಳನ್ನು ಬೆಳೆಸಿಕೊಂಡ ಬುದ್ದನು ಅನೇಕ ಸ್ಥಳಗಳಲ್ಲಿ ಬೊಧನೆ ಮಾಡುತ್ತಾನೆ. ಇವನ ಬೋಧನೆಗಳಿಗೆ ಪ್ರಭಾವಿತರಾದ ರಾಜ್ಯಗೃಹದ ರಾಜ ಬಿಂಬಸಾರ, ಕೋಸಲದ ರಾಜ ಪ್ರಸನ್ನಜೀತ್‌ರವರು ಬೌದ್ದ ಧರ್ಮದ ಅನುಯಾಯಿಗಳಾಗುತ್ತಾರೆ. ಬುದ್ದನು ತನ್ನ ಭೋದನೆಗಳನ್ನು ಪ್ರಸಾರ ಮಾಡಲು ಸಂಘಗಳನ್ನು ರಚಿಸುತ್ತಾನೆ. ಮುಂದೆ ಅವುಗಳು ಬೌದ್ದ ಸಂಘಗಳಾಗುತ್ತವೆ. ಈ ರೀತಿ ತನ್ನ ಭೋದನೆಗಳನ್ನು ಮಾಡಿದ ಬುದ್ದನು ತನ್ನ ೮೦ನೆಯ ವಯಸ್ಸಿನಲ್ಲಿ ಗೋರಖ್‌ಪುರ ಬಳಿಯ ಕುಶಿನಗರದಲ್ಲಿ ಮರಣಹೊಂದಿದ್ದನು. ಇದನ್ನು ಮಹಾಪರಿನಿರ್ವಾಣ ಎಂದು ಕರೆಯುತ್ತಾರೆ. ಬುದ್ದನ ನಂತರು ಬೌದ್ದ ಧರ್ಮವು ಭಾರತ ಸೇರಿದಂತೆ ಏಷ್ಯಾದ ಹಲವಾರು ರಾಷ್ಟ್ರಗಳಲ್ಲಿ ಹರಡಿತು.

ಬುದ್ದನ ಬೋಧನೆಗಳು

ಬುದ್ದನ ಬೋಧನೆಗಳನ್ನು ಮಧ್ಯಮ ಮಾರ್ಗ ಎಂದು ಕರೆಯುತ್ತಾರೆ. ಅವುಗಳೆಂದರೆ ನಾಲ್ಕು ಆರ್ಯ ಸತ್ಯಗಳು ಹಾಗೂ ಅಷ್ಟಾಂಗ ಮಾರ್ಗಗಳು.

. ನಾಲ್ಕು ಆರ್ಯ ಸತ್ಯಗಳು

೧. ಪ್ರಪಂಚವು ದುಃಖದಿಂದ ಕೂಡಿದೆ: ಹುಟ್ಟು, ಸಾವು, ರೋಗ, ವೃದ್ದಾಪ್ಯ, ನಿರಾಶೆ, ವ್ಯಸನ ಮುಂತಾದವುಗಳಿಂದ ನರಳುತ್ತಿದ್ದಾರೆ ಎಂಬುದು ಇದರ ಅರ್ಥ.

೨. ಆಸೆಯೆ ದುಃಖಕ್ಕೆ ಕಾರಂಣ ಮಾನವರ ಸಂಕಟಗಳಿಗೆ ಮೂಲ ಕಾರಣ ಆಸೆ, ಮೋಹ, ಐಷಾರಾಮವಾಗಿ ಬದುಕುವ ಬಯಕೆಗಳು.

೩. ಆಸೆಯನ್ನು ತೊರೆದರೆ ದುಃಖದಿಂದ ಹೊರಬರಬಹುದು: ಮಾನವನು ತನಗಿರವ ಅತಿಯಾಸೆಗಳನ್ನು ತ್ಯಜಿಸಿದರೆ ನಿರ್ವಾಣ ಹೊಂದಬಹುದು. ನಿರ್ನಾಣವೇ ದುಃಖದಿಂದ ಬಿಡುಗಡೆ ಹೊಂದುವ ಮಾರ್ಗ.

೪. ಆಸೆಯಿಂದ ಬಿಡುಗಡೆ ಹೊದಲು ಅಷ್ಟಾಂಗ ಮಾರ್ಗ ಅನುಸರಿಸಬೇಕು: ಬುದ್ದನು ನಿರ್ವಾಣ ಹೊಂದಲು ಎಂಟು ಮಾರ್ಗಗಳನ್ನು ಬೊಧಿಸಿದನು.

. ಅಷ್ಟಾಂಗ ಮಾರ್ಗಗಳು

ಗೌತಮ ಬುದ್ದನು ಸಮಾಜವು ದುಃಖ, ಅಸಮಾನತೆಗಳಿಂದ ಹೊರಬಂದು ನಿರ್ಮಲವಾದ ಸಾಮಾಜಿಕ ವ್ಯವಸ್ಥೆ ರಚನೆಗೊಳ್ಳಲು ಪ್ರತಿಯೊಬ್ಬರು ಈ ಕೆಳಕಂಡ ಮಾರ್ಗಗಳನ್ನು ಅನುಸರಿಸಿದರೆ ಸಾದ್ಯ ಎಂದು ಪ್ರತಿಪಾದಿಸಿದನು.

೧. ಒಳ್ಳೆಯ ಮಾತು: ಸತ್ಯವನ್ನು ನುಡಿಯುವುದು, ಪರರನ್ನು ನಿಂದಿಸದಿರುವುದು, ಉಪಯೋಗವಿಲ್ಲದ ಬಗ್ಗೆ ಮಾತನಾಡದಿರುವುದು.

೨. ಒಳ್ಳೆಯ ಜೀವನ: ಮನುಷ್ಯರಿಗೆ ಹಾಗೂ ಜೀನಂತ ಜೀವಿಗಳಿಗೆ ತೊಂದರೆ ಹಾಗೂ ಹಿಂಸೆಯನ್ನುಂಟುಮಾಡದೆ ಇರುವುದು.

೩.ಒಳ್ಳೆಯ ಚಾರಿತ್ರ‍್ಯ: ಕೊಲ್ಲದಿರುವುದು, ಬೇರೆಯವರ ವಸ್ತುಗಳನ್ನು ಕದಿಯದಿರುವುದು, ಅನೈತಿಕ ಚಟುವಟಿಕೆಗಳಿಂದ ದೂರವಿರುಜವುದು.

೪. ಒಳ್ಳೆಯ ಜ್ಞಾನ: ನಾಲ್ಕು ಸತ್ಯಗಳನ್ನೊಳಗೊಂಡಂತೆ ಸಮಾಜದ ಬಗ್ಗೆ ಸರಿಯಾದ ಜ್ಞಾನವನ್ನು  ಹೊಂದುವುದು.

೫. ಒಳ್ಳೆಯ ಪ್ರಯತ್ನ: ಸಮಾಜಕ್ಕೆ ಒಳಿತನ್ನು ಮಾಡುವ ಕಡೆ ಗಮನ ಹರಿಸುವುದು.

೬. ಒಳ್ಳೆಯ ಕಾರ್ಯ: ತನಗೂ ಹಾಗೂ ಇತರರಿಗೂ ಒಳ್ಳೆದಾಗುವಂತೆ ಚಟುವಟಿಕೆ ಮಾಡುವುದು.

೭. ಒಳ್ಳೆಯ ನೊಟ: ನಮ್ಮ ಮನಸ್ಸು ಹಾಗೂ ಕಣ್ಣುಗಳು ಉತ್ತಮ ವಿಚಾರಗಳ ಕಡೆ ಗಮನ ಹರಿಸುವುದು.

೮. ಒಳ್ಳೆಯ ಯೋಚನೆ: ಕೆಟ್ಟದ್ದನ್ನು ಆಲೋಚಿಸುದೆ ಒಳ್ಳೆಯ ವಿಷಯಗಳ ಕುರಿತು ಸದಾ ಆಲೋಚನೆ ಮಾಡುವುದು.

ಈ ರೀತಿ ಗೌತಮ ಬುದ್ದನು ಸಮಾದಲ್ಲಿ ನೈತಿಕತೆ, ಪ್ರೀತೆ, ಕರುಣೆ, ಸಮಾನತೆ, ಆತ್ಮಸಂಯಮ, ಮನಸ್ಸಿನ ಶುದ್ದೀಕರಣಮ ಮುಂತಾದ ವಿಷಯಗಳನ್ನು ಬೊಧಿಸಿದನು.

. ಇತರೆ ತತ್ವಗಳು

ನಾಲ್ಕು ಸತ್ಯಗಳು ಹಾಗೂ ಅಷ್ಟಾಂಗ ಮಾರ್ಗಗಳನ್ನಲ್ಲದೆ ಇನ್ನು ಕೆಲವು ವಿಷಯಗಳ ಕುರಿತು ಬುದ್ದನು ಬೋಧಿಸಿದನು. ಅವು ಇಂತಿವೆ.

೧. ಬುದ್ದನು ಅಹಿಂಸಾ ತತ್ವವನ್ನು ಪ್ರತಿಪಾದಿಸಿದನು, ಇದರಂತೆ ಪ್ರಾಣಿಗಳನ್ನಾಗಲಿ, ಮನುಷ್ಯರನ್ನಾಗಲಿ ಕೊಲ್ಲುವುದನ್ನು, ಹಿಂಸಿಸುವುದನ್ನು ವಿರೋಧಸಿದನು.

೨. ದೇವರ ಇರುವಿಕೆಯನ್ನು ಬಗ್ಗೆ ಎನನ್ನು ಹೇಳಲಿಲ್ಲ, ಬುದ್ದನು ಲೌಕಿಕ ವಿಚಾರಗಳ ಕುರಿತು ಹೆಚ್ಚು ಒತ್ತು ಕೊಟ್ಟು ಅಲೌಕಿಕ ವಿಚಾರಗಳ ಬಗ್ಗೆ ಚರ್ಚಿಸುವುದು ಅನಗತ್ಯವೆಂದು ಭಾವಿಸಿದ್ದನು.

೩. ಯಜ್ಞಯಾಗಗಳನ್ನು ಅವುಗಳಲ್ಲಿ ಪ್ರಾಣಿಗಳನ್ನು ಬಲಿಕೊಡುವುದನ್ನು ವಿರೋಧಸಿದನು. ಹಾಗೆಯೇ ವೈಭವದ, ದುಂದುವೆಚ್ಚದ ಉತ್ಸವ, ಆಚರನೆಗಳನ್ನು ಖಂಡಿಸಿದನು.

೪. ಜಾತಿ ತಾರತಮ್ಯಗಳು, ಅಸ್ಪ್ರಶ್ಯತೆ, ಸ್ವಾಮಿ ದಾಸ ತಾರತನ್ಯಗಳು ಮುಂತಾದ ಆಚರಣೆಗಳನ್ನು ತನ್ನ ಮಾರ್ಗದಲ್ಲಿ ನಿರಾಕರಿಸಿದನು.

೫. ಬುದ್ದನು ತಮ್ಮ ಸಿದ್ದಾಂತವನ್ನು ಒಪ್ಪಿಕೊಂಡಿದ್ದು ಪ್ರತಿಯೊಬ್ಬರು ಉತ್ತಮ ಕರ್ಮಗಳನ್ನು ಮಾಡುವುದರ ಮೂಲಕ ನಿರ್ವಾಣ ಹೊಂದಬಹುದು ಎಂದು ಬೋಧಿಸಿದನು.

೬. ಅಷ್ಟಾಂಗ ಮಾರ್ಗಗಳನ್ನು ಅನುಸರಿಸಿ ಸತ್ಯ, ಅಹಿಂಸೆ, ಪ್ರೀತಿ, ಕರುಣೆ, ದಯೆ ಮುಂತಾದವುಗಳನ್ನು ಆಚರಿಸುವುದರ ಮೂಲಕ ಮುಕ್ತಿ ಹೊಂದಬಹುದು.

೭. ಸಾಮಾಜಿಕ ನೈತಿಕತೆಗೆ ಹೆಚ್ಚು ಒತ್ತು ನೀಡಿದ್ದ ಗೌತಮ ಬುದ್ದನು ಅನುಕಂಪ, ಹಿರಿಯರಿಗೆ, ತಂದೆತಾಯಿಗಳಿಗೆ ಗೌರವ ಕೊಡುವುದು ಹಾಗೂ ಮದ್ಯಪಾನ, ದುಶ್ಚಟಗಳಿಂದ ದೂರವಿದ್ದು, ಸಕಲ ಜೀವಿಗಳಿಗೆ ದಯೆ ತೋರಿಸಬೇಕೆಂದು ಬೋಧಸಿದನು.

೮. ಸಮಾನತೆಯನ್ನು ಪ್ರತಿಪಾದಿಸಿದ ಬುದ್ದನು ಸ್ತ್ರೀಯರಿಗೆ ಗೌರವ, ಸಮಾನತೆ ಮತ್ತು ಸ್ವಾತಂತ್ರ ನೀಡಬೇಕೆಂದು ಬೋಧಸಿದನು.

ಬೌದ್ದ ಮತದ ಬೆಳವಣಿಗೆ

ಗೌತಮ ಬುದ್ದನಿಂದ ಆರಂಭವಾದ ಈ ಮತವು ಕ್ರಮೇಣವಾಗಿ ಭಾರತದ ತುಂಬೆಲ್ಲಾ ಹರಡಿತು. ನಂತರ ಏಷ್ಯಾದ ಚೀನಾ, ಟಿಬೆಟ್, ಬರ್ಮ, ಜಪಾನ್, ಥೈಲ್ಯಾಂಡ್, ಭೂತಾನ್, ಶ್ರೀಲಂಕಾ ಮುಂತಾದ ರಾಷ್ಟ್ರಗಳಿಗೂ ಹರಡಿತು. ಈ ರೀತಿ ವಿಶಾಲವಾದ ಪ್ರದೇಶಗಳಿಗೆ ಹರಡಲು ಅನೇಕ ಅಂಶಗಳು ಸಹಾಯಕವಾಗಿವೆ.

. ಗೌತಮ ಬುದ್ದನ ವ್ಯಕ್ತಿತ್ವ ಮತ್ತು ಸರಳ ತತ್ವಗಳು: ಬುದ್ದನ ವ್ಯಕ್ತಿತ್ವವು ಈ ಮತವು ಬಹುಬೇಗನೆ ಹರಡಲು ಕಾರಣವಾಗಿದೆ. ಬುದ್ದನು ತನ್ನ ಹೆಂಡತಿ, ಮಗ ರಾಹುಲ, ಶಕ್ಯ ಮನೆತನ ರಾಜ್ಯಗಳೆಲ್ಲವನ್ನು ತ್ಯಜಿಸಿ ಬಂದಿದ್ದನು. ಅತ್ಯಂತ ಸರಳವಾಗಿ ಜೀವಿಸುತ್ತಾ ಎಲ್ಲಾ ಜಾತಿ-ಧರ್ಮದವರೊಂದಿಗೂ ಬೆರೆತು ಅವರ ಕಷ್ಟ-ದುಃಖಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಪರಿಹಾರ ತಿಳಿಸಿದನು. ಜನಸಾಮಾನ್ಯರಿಗೆ ಅರ್ಥವಾಗುವ ಪಾಳಿ ಭಾಷೆಯಲ್ಲಿ ಮತ ಪ್ರಚಾರ ಮಾಡಿದನು. ಶಾಂತಿ, ಅಹಂಸೆ, ಸತ್ಯ, ನ್ಯಾಯ ಮುಂತಾದ ಅವನ ಬೋಧನೆಗಳಿಗೆ ಎಲ್ಲಾ ವರ್ಗದವರು ಆಕರ್ಷಿತರಾಗಿದ್ದರು. ಗಂಗಾಬಯಲಿನಲ್ಲಿನ ರಾಜರು, ಗೃಹಪತಿಗಳು, ಶ್ರೇಷ್ಠಿಗಳು ಹಾಗೂ ವೃತ್ತಿಪರರು ದೊಡ್ಡಪ್ರಮಾಣದಲ್ಲಿ ಬೌದ್ದ ಮತಕ್ಕೆ ಆಶ್ರಯ ನೀಡದರು.

. ಬೌದ್ದ ಸಂಘಗಳ ಪಾತ್ರ: ಬೌದ್ದ ಮತವು ಬಹುಬೇಗ ಹರಡಲು ಈ ಸಂಘಗಳೇ ಪ್ರಮುಖ ಕಾರಣವೆಂದರೆ ತಪ್ಪಾಗಲಾರದು. ಬೌದ್ಧ ಸಂಘಗಳು ಗೌತಮ ಬುದ್ಧನ ಕಾಲದಿಂದಲೇ ಪ್ರಾರಂಭವಾಗಿದ್ದವು. ಬುದ್ಧನ ಈ ಸಂಘಗಳಿಗೆ ಅನೇಕ ಭಿಕ್ಷುಗಳನ್ನು ಸೇರಿಕೊಡನು. ಬುದ್ಧನ ಕಾಲ್ಲ್ಲಿ ಸುಮಾರು ೫೦೦ ಭಿಕ್ಷುಗಳಿದ್ದರು. ಅನಂತರ ಅವರ ಸಂಖ್ಯೆಯು ಅಪಾರ ಸಂಖ್ಯೆಯಲ್ಲಿ ಹೆಚ್ಚುತ್ತಾ ಹೋಯಿತು. ಸಂಘಕ್ಕೆ ಮತ್ತು ಭಿಕ್ಷಗಳಿಗೆ ಕೆಲವು ನಿಬಂಧನೆಗಳನ್ನು ಜಾರಿಗೊಳಿಸಲಾಗಿತ್ತು. ಅವುಗಳಲ್ಲಿ ಮುಖ್ಯ ವಾದವುಗಳೆಂದರೆ:

ಅ. ಬೌದ್ಧ ಸಂಘಗಳು ಯಾವುದೇ ರೀತಿಜಯ ಆಸ್ತಿಯನ್ನಾಗಲಿ, ಸಂಪತ್ತನ್ನಾಗಲಿ ಹೊಂದಕೂಡದು. ಉದಾಹರಣೆ ಗೋವುಗಳು, ಚಿನ್ನ, ಬೆಳ್ಳಿ ವ್ಯಾಪಾರ ಮುಂತಾದವುಗಳನ್ನು ಹೊಂದಕೂಡದು.

ಆ. ಬೌದ್ಧ ಸಂಘಗಳು ಬುದ್ಧನ ತತ್ವಗಳು, ಶಾತಿ ಸಂದೇಶ, ನೈತಿಕತೆ ಮುಂತಾದವುಗಳನ್ನು ಎಲ್ಲಾ ಜನರಿಗೂ ಬೋಧಸಬೇಕು.

ಇ. ಸಂಘಕ್ಕೆ ೧೫ವರ್ಷ ಮೇಲ್ಪಟ್ಟ ಎಲ್ಲಾ ಜಾತಿ-ಧರ್ಮದವರನ್ನು ಸೇರಿಸಿಕಳ್ಳುವುದು ಆದರೆ, ದರೋಡೆಕೋರರು, ಕೊಲೆಗಾರರು, ಸಾಲಗಾರರು, ಸಾಂಕ್ರಮಿಕ ರೋಗಗಳಿಂದ ನರಳುವವರನ್ನು ನಿಷೇಧಸಲಾಗತ್ತು. ಅಂದರೆ ನೈತಿಕವಾಗಿ-ದೈಹಿಕವಾಗಿ ಸುಸ್ಥಿತಿಯಲ್ಲಿರುವವರಿಗೆ ಸದಸ್ಯತ್ವ ನೀಡಲಾಗುತ್ತಿತ್ತು.

ಈ. ಬೌದ್ದ ಬಿಕ್ಕು ಹಾಗೂ ಬಿಕ್ಕುಣಿಯರು ಊಟವನ್ನು ಎಲ್ಲಾ ರೀತಿಯ ಜನರಿಂದ ಭಿಕ್ಸೆ ಬೇಡಿ ಪಡಯಬೇಕು.

ಉ. ಹರಿದ ಬಟ್ಟೆಗಳಿಂದ ಹೋಲೆದ ೩ ರೀತಿ  ಉಡುಪನ್ನು ಮಾತ್ರ ಧರಿಸಿ, ಬರಿಗಾಲಲ್ಲಿ ಸಂಚರಿಸುತ್ತಾ ಧರ್ಮ ಪ್ರಚಾರ ಮಾಡುವುದು, ಬುದ್ದನು ಸಹಿತ ಇದನ್ನು ಪಾಲಿ ಸುತ್ತಿದ್ದನು.

ಊ. ಯಾವುದೇ ರೀತಿಯ ಮನೆಗಳಲ್ಲಿ ರಾತ್ರಿ ಮಲಗಕೂಡದು. ಮಳೆಗಾಲದಲ್ಲಿ ಮಾತ್ರ ಗಿಡಿಸಲಿನಂಥ ವಾಸಸ್ಥಾನಗಳಲ್ಲಿ ಉಳಿಯಬಹುದು.

ಋ. ಹಿರಿಯ ಬಿಕ್ಕುಗಳು ಕಿರಿಯ ಬಿಕ್ಕುಗಳ ಮೇಲೆ ೧೦ವರ್ಷಗಳ ನಿಗಾವಹಿಸುತ್ತಿದ್ದರು. ಪ್ರತಿಯೊಬ್ಬ ಬಿಕ್ಕುವು ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಾ ಬೌದ್ದ ಧರ್ಮ ತತ್ವಗಳನ್ನು ಬೋಧಸಬೇಕಾಗಿತ್ತು. ಪ್ರತಿಯೊಬ್ಬ ಬಿಕ್ಕುವು ೧೫ ದಿನಗಳಿಗೊಮ್ಮೆ ನಡೆಯತ್ತಿದ್ದ ಸಂಘದ ಸಭೆಗಳಿಗೆ ಭಾಗವಹಿಸಬೇಕಾಗುತ್ತದೆ.

ೠ. ಸಂಘದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ, ಸಲಹೆ, ಸೂಚನೆ ಮಂಡಿಸುವ ಸ್ವಾತಂತ್ರ ನೀಡಲಾಗಿತ್ತು. ತೀರ್ಮಾನಗಳನ್ನು ಬಹುಸಂಖ್ಯಾತರ ಅಭಿಪ್ರಾಯದ ಮೇರೆಗೆ ತೆಗೆದುಕೊಳ್ಳಲಾಗುತ್ತಿತ್ತು.

ಎ. ಬಿಕ್ಕುಗಳು ಅನೈತಿಕ, ಅಪರಾಧ ಚಟವಟಿಕೆಗಳಲ್ಲಿ ಭಾಗಿಯಾಗಕೂಡದು, ಒಂದು ವೇಳೆ ಭಾಗಿಯಾದರೆ ಅಂಥವರನ್ನು ಹೊರಹಾಕಲಾಗುತ್ತಿತ್ತು.

ಈ ರೀತಿಯ ನೀತಿ ಸಂಹಿತೆಗಳನ್ನು ಅಳವಡಿಸಿಕೊಂಡಿದ್ದ ಸಂಘಗಳು ಬಹುಬೇಗನೆ ಪ್ರಸಿದ್ದಿಯಾದವು ಹಾಗೂ ಬೌದ್ಧ ಧರ್ಮ ಹರಡಲು ಈ ಸಂಘಗಳೇ ಮುಖ್ಯ ಪಾತ್ರವಹಿಸಿದ್ದವು.

. ರಾಜಾಶ್ರಯ ದೊರೆತಿದ್ದು: ಬೌದ್ಧ ಮತ ಆರಂಭವಾಗುವುದಕ್ಕಿಂತ ಮುಂಚೆ ಅನೇಕ ರಾಜ್ಯಗಳಲ್ಲಿದ್ದ ಜನರು ಅನೇಕ ಸರ್ವಾಧಕಾರಿಗಳ ಅಡಿಯಲ್ಲಿದ್ದರು. ಆದರೆ ಈ ಮತವು ವಿಶಾಲ ಸಾಮ್ರಾಜ್ಯಗಳು ಸ್ಥಾಪನೆಯಾಗಲು ಅನುವು ಮಾಡಿಕೊಟ್ಟಿತು. ರಾಜರು ವಿಶಾಲ ಜನ ಸಮುದಾಯವನ್ನು ನಿಯಂತ್ರಿಸಲು ಈ ಧರ್ಮದ ತತ್ವಗಳು ಅವಶ್ಯಕವಾಗಿದ್ದವು. ಪರೋಕ್ಷವಾಗಿ ಜನರಲ್ಲಿ ಏಕತೆ ಮೂಡಿಸಿ ಶಾಂತಿ, ಅಹಿಂಸೆ ಪ್ರತಿಪಾದನೆಯಾಗಲು ಅಡಿಪಾಯ ಹಾಕಿತು. ಇದರಿಂದ ರಜರು ಆಡಲಿತ ನಡೆಸಲು ಸುಲಭವಾಯಿತು. ಆದ್ದರಿಂದ ಅನೇಕ ರಾಜರು ಈ ಮತಕ್ಕೆ ರಾಜಾಶ್ರಯ ನೀಡಿ ಬೆಳೆಸಿದರು. ಅವರಲ್ಲಿ ಪ್ರಮುಖರಾದವರೆಂದರೆ:

. ಮಾಜನಪದಗಳು: ಕ್ರಿ.ಪೂ. ೬ನೆಯ ಶತಮಾನದಲ್ಲಿ ಗಂಗಾಬಯಲಿನಲ್ಲಿ ನಗರೀಕರಣ ಆರಂಭವಾಗಿ ಅನೇಕ ನಗರಗಳು ಬೆಳವಣಿಗೆಯಾದವು. ಅವುಳೊಂದಿಗೆ ರಾಜ್ಯ ಸ್ವರೂಪ ಹೊಂದಿದ್ದ ೧೬ ಮಹಾಜನಪದಗಳು ಅಸ್ತಿತ್ವಕ್ಕೆ ಬಂದಿದ್ದವು. ಈ ಪ್ರತಿಕ್ರಿಯೆಯು ಬೌದ್ಧ ಮತದ ಬೆಳವಣಿಗೆಗೆ ಸಹಾಯಕವಾಗಿತು. ಆಗ ಈ ಮತಕ್ಕೆ ವಜ್ಜಿ, ಶಾಕ್ಯ, ಕೋಸಲ, ಮಗದ, ಲಿಚ್ಚವಿ, ಮಲ್ಲರು, ಕೂಲಿಯಾ ಮುಂತಾದ ಜನಪದಗಳು ರಾಜಶ್ರಯ ನೀಡಿದವು. ಹಾಗೂ ಇದರಿಂದ ಬೌದ್ದ ಮತ ನಗರ ಪ್ರದೇಶಗಳಿಗೂ ಹರಡಿತು.

. ಮಗದರಜರ ಆಶ್ರಯ: ಈ ರಾಜ್ಯವನ್ನು ಆಳಿದ ಅಜಾತ ಶತ್ರು, ಬಿಂಬಸಾರ, ಶಿಶುನಾಗ, ಕಾಲಾಶೋಕರವರು ಬೌದ್ಧ ಸಂಘಗಳಿಗೆ ರಾಜಾಶ್ರಯ ನೀಡಿದ್ದರು. ಕ್ರಿ.ಪೂ. ೩೮೭ರಲ್ಲಿ ವೈಶಾಲಿಯಲ್ಲಿ ಕಾಲಾಶೋಕನು ಎರಡನೇ  ಬೌದ್ಧ ಧರ್ಮ ಸಮ್ಮೇಳನವನ್ನು ಏರ್ಪಡಿಸಿದನು. ಅದೇ ರೀತಿ ಕೋಸಲದ ಪ್ರಸನ್ನಜಿತ್‌ನು ಬೌದ್ಧ ಧರ್ಮಕ್ಕೆ ಆಶ್ರಯ ನೀಡಿದನು.

. ಅಶೋಕ: ಏಷ್ಯಾದಲ್ಲಿ ಬೌದ್ಧ ಮತವು ವೇಗವಾಗಿ ಹರಡಲು ಅಶೋಕ ಚಕ್ರವರ್ತಿ ಕಾರಣನಾಗಿದ್ದಾನೆ. ತಾನು ಸ್ವತಃ ಬೌದ್ಧ  ಧರ್ಮಕ್ಕೆ ಮತಾಂತರ ಹೊಂದಿ ಬೌದ್ಧ ಧರ್ಮದ ತಳಹದಿಯ ಮೇಲೆ ತನ್ನ ಧರ್ಮ ಕಲ್ಪನೆಯನ್ನು ರೂಪಿಸಿದನು. ಧರ್ಮ ಮಹಾಮಾತ್ರರೆಂಬ ಅದಿಕಾರಿಗಳನ್ನು ನೇಮಿಸಿ ಧರ್ಮದ ಪ್ರಚಾರದ ನಿರ್ವಹಣೆವಹಿಸಿದ್ದನು. ಬೌದ್ಧ ಸ್ಥೂಪಗಳನ್ನು ಸ್ಥಂಬಗಳನ್ನು, ಶಿಲಾಶಾಸನಗಳನ್ನು, ವಿಹಾರ, ಚೈತ್ಯಾಲಯಗಳು ಮುಂತಾದವುಗಳನ್ನು ನಿರ್ಮಿಸಿ ಧರ್ಮ ಪ್ರಚಾರಕರನ್ನು ನೇಮಿಸಿ ಬೌದ್ಧ ಧರ್ಮವು ಶ್ರೀಲಂಕಾ. ಬರ್ಮ, ಟಿಬೇಟ್ ಮುಂತಾದ ವಿದೇಶಗಳಿಗೂ ಹರಡುವುದಕ್ಕೆ ಶ್ರಮಿಸಿದನು.

. ಶಾತವಾಹನರು: ದಕ್ಷಿಣ ಭಾರತದಲ್ಲಿ ಉಗಮವಾದ ಮೊಟ್ಟಮೊದಲ ರಾಜ್ಯವಾದ ಇದು ಬೌದ್ಧ ಮತಕ್ಕೆ ಆಶ್ರಯ ನೀಡಿ ಅನೇಕ ಚೈತ್ಯಾಲಯ, ವಿಹಾರ, ಸ್ಥೂಪಗಳನ್ನು ಈ ವಂಶದ ರಾಜರು ನಿರ್ಮಿಸಿ ದಕ್ಷಿಣದಲ್ಲೂ ಈ ಮತ ನೆಲೆಯೂರಲು ನೆರವಾಗಿದ್ದರು.

. ಕಾನಿಷ್ಕ: ಕುಶಾನರ ಪ್ರಮುಖ  ರಾಜನಾಗಿದ್ದ ಕಾನಿಷ್ಕನು ವಸುಮಿತ್ರನ ಪ್ರಭಾವದಿಂದ ಬೌದ್ಧ ಮತಕ್ಕೆ ಮತಾಂತರ ಹೊಂದಿದನು. ಅನಂತರ ಬೌದ್ಧ ಧರ್ಮದ ಬೆಳವಣಿಗೆಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡನು. ಹಳೆಯ ಬೌದ್ಧ ವಿಹಾರಗಳನ್ನು ದರಸ್ತಿ ಮಾಡಿಸಿ ಅನೇಕ ಹೊಸ ನಿಹರಗಳನ್ನು ನಿರ್ಮಿಸಿದನು. ಆ ವಿಹಾರಗಳನ್ನು ನಡೆಸುತ್ತಿದ್ದ ಭಿಕ್ಕುಗಳಿಗೆ ಅಪಾರ ಪ್ರಮಾಣದಲ್ಲಿ ದಾನದತ್ತಿಗಳನ್ನು ನೀಡಿದನು. ಅನೇಕ ಬುದ್ಧ ವಿಗ್ರಹಗಳನ್ನು, ಸ್ಥೂಪಗಳನ್ನು, ಸ್ಥಂಭಗಳನ್ನು ನಿರ್ಮಸಿದನು. ತನ್ನ ರಾಜಧಾನಿಯಲ್ಲಿ ೪೦೦ಅಡಿ ಎತ್ತರದ ಚೈತಾಲಯವನ್ನು ಕಟ್ಟಿಸಿದನು. ಧರ್ಮ ಪ್ರಚಾರರಕರನ್ನು ಚೀನಾ, ಜಪಾನ್, ಟಿಬೆಟ್, ಮಧ್ಯ ಏಷ್ಯಾಗಳಿಗೆ ಕಳಹಿಸಿದನು. ಕ್ರಿ.ಪೂ. ೧೦೦ರಲ್ಲಿ ಕಾಶ್ಮೀರದ ಕುಂಡಲವನದಲ್ಲಿ ನಾಲ್ಕನೇ ಬೌದ್ಧ ಧರ್ಮ ಸಮ್ಮೇಳನವನ್ನು ಏರ್ಪಡಿಸಿದನು. ಈ ರೀತಿ ಕಾನಿಷ್ಕನು ಬೌದ್ಧ ಬೆಳವಣಿಗೆಗೆ ಸಹಕಾರಿಯಾಗಿದ್ದಾನೆ.

. ಹರ್ಷವರ್ಧನ: ವರ್ಧನರ ಚಕ್ರವರ್ತಯಾದ ಇವನು ಬೌದ್ಧ ಮತದ ಏಳಿಗೆಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದನು. ಈ ಕಾಲದಲ್ಲೇ ಚೀನಾದ ಪ್ರಸಿದ್ದ ಬೌದ್ಧ ತತ್ವಜ್ಞಾನಿ ಹ್ಯೊಯೆನ್‌ತ್ಸಾಂಗ್‌ ಭಾರತಕ್ಕೆ ಭೇಟಿ ನೀಡಿದ್ದನು. ನಳಂದ ವಿಶ್ವವಿದ್ಯಾಲಯವನ್ನು ಪ್ರಪಂಚ ಪ್ರಸಿದ್ಧ ಬೌದ್ಧ ಅಧ್ಯಯನ ಕೇಂದ್ರವನ್ನಾಗಿ ಮಾರ್ಪಡಿಸಿದನು. ಇವನು ಕನೌಜ್‌ ಮತ್ತು ಪ್ರಯಾಗ್‌ಗಳಲ್ಲಿ ಧಾರ್ಮಿಕ ಪರಿಷತ್ತುಗಳನ್ನು ಏರ್ಪಡಿಸಿದ್ದನು ಹಾಗೂ ಬುದ್ಧನ ಬಂಗಾರ ವಿಗ್ರಹವನ್ನು ಪ್ರತಿಷ್ಟಾಪಿಸಿದನು. ಬೌದ್ಧ ಭಿಕ್ಷುಗಳಿಗೆ ಅಪಾರ ಪ್ರಮಾಣದ ಸಂಪತ್ತನ್ನು ದಾನ ಮಾಡಿದ್ದನು. ಈ ಮೇಲ್ಕಂಡವರಲ್ಲದೇ ಅನೇಕ ರಾಜರು ಬೌದ್ಧ ಧರ್ಮಕ್ಕೆ ರಾಜಾಶ್ರಯ ನೀಡಿ ಅದು ಬೆಳೆಯಲು ಪ್ರೋತ್ಸಾಹ ನೀಡಿದ್ದರು.

. ಬೌದ್ಧ ಸಮ್ಮೇಳನಗಳು: ಈ ಮತದ ಬೆಳವಣಿಗೆಯಲ್ಲಿ ಸಮ್ಮೇಳನಗಳು ಪ್ರಮುಖ ಪ್ರಾತ್ರವಹಿಸಿವೆ. ಸಮ್ಮೇಳನಗಳನ್ನು ನಡೆಸಿ ಅದರಲ್ಲಿ ಬೌದ್ಧ ಧರ್ಮದಲ್ಲಾಗುತ್ತಿರುವ ಬದಲಾವಣೆಗಳು, ಬೆಳವಣಿಗೆ, ಆಂತರಿಕ ಭಿನ್ನಾಭಿಪ್ರಾಯ, ಸಾಹಿತ್ಯದ ರಚನೆ, ನೀತಿ ನಿಯಮಗಳನ್ನು ಮುಂತಾದವುಗಳನ್ನು ಕೂಲಂಕಷವಾಗಿ ಚರ್ಚಿಸಿ, ತೀರ್ಮಾನಗಳನ್ನು ಕೈಗೊಂಡು ಧರ್ಮವನ್ನು ಹರಡಲು ನಂತರ ಕಾರ್ಯಪ್ರವೃತ್ತರಾಗುತ್ತಿದ್ದರು. ಸಮ್ಮೇಳನಗಳು ಬೌದ್ಧ ಧರ್ಮ ಪ್ರಚಾರವಾಗಲು ಕಾರಣೀಭೂತವಾಗಿವೆ. ಬೌದ್ಧ ಧರ್ಮದ ನಾಲ್ಕು ಪ್ರಮುಖ ಸಮ್ಮೇಳನಗಳು ಈ ಕೆಳಕಂಡ ಸ್ಥಳಗಳಲ್ಲಿ ನಡೆದವು.

. ಮೊದಲನೇ ಸಮ್ಮೇಳನ (ಕ್ರಿ.ಪೂ. ೪೮೭): ಬುದ್ಧನ ಮರಣದ ಕೇಲವೇ ವರ್ಷಗಳಲ್ಲಿ ರಾಜಗೃಹದಲ್ಲಿ ನಡೆಯಿತು. ಅಜಾತಶತ್ರು ರಾಜನು ಆಶ್ರಯ ನೀಡಿದ್ದನು. ಬೌದ್ಧ ಭಿಕ್ಕು ಮಹಾಕಶ್ಯಪ ಮುಂದಾಳತ್ವ ವಹಿಸಿಕೊಂಡಿದ್ದನು. ಇದರಲ್ಲಿ ೫೦೦ ಜನ ಬೌದ್ಧ ಭಿಕ್ಕುಗಳು ಪಾಲ್ಗೊಂಡಿದ್ದರು. ಪ್ರಮುಖರೆಂದರೆ ಬುದ್ಧನ ಶಿಷ್ಯಂದಿರಾದ ಉಪಾಲಿ, ಆನಂದ. ಈ ಸಮ್ಮೇಳನದಲ್ಲಿ ಬೌದ್ಧ ತತ್ವಗಳಿಗೆ ಒಂದು ನಿರ್ದಿಷ್ಟ ಸ್ವರೂಪ ನೀಡಿ ಅವುಗಳನ್ನು ಪ್ರಚಾರ ಮಾಡಲು ನಿರ್ಣಯಿಸಲಾಯಿತು ಹಾಗೂ ವಿನಯ ಮತ್ತು ಸುತ್ತ ಪಿಟಕಗಳನ್ನು ರಚಿಸಲಾಯಿತು.

. ದ್ವಿತೀಯ ಸಮ್ಮೇಳನ (ಕ್ರಿ.ಪೂ. ೩೮೭): ಕಾಲಾಶೋಕನ ಕಾಲದಲ್ಲಿ ವೈಶಾಲಿಯಲ್ಲಿ ನಡೆಯಿತು. ರೇವತ್‌ಮುಂದಾಳತ್ವ ವಹಿಸಿಕೊಂಡಿದ್ದನು ಎಂದು ಕೆಲ ಮೂಲಗಳು ತಿಳಿಸುತ್ತವೆ. ಇದರಲ್ಲಿ ದೇಶದ ಎಲ್ಲಾ ಭಾಗಗಳಿಂದಲೂ ಪ್ರತಿನಿಧಿಗಳು ಭಾಗವಹಿಸಿದ್ದರು. ವಿನಯ ಪಿಟಕದ ತತ್ವಗಳ ಬಗ್ಗೆ ಚರ್ಚೆ ನಡೆಸಿದರು. ಆಗ ಬಿಕ್ಕುಗಳಲ್ಲಿ ಹೊಸ ಪದ್ಧತಿ ಹಾಗೂ ಹಳೆ ತತ್ವ ಪಾಲಿಸುವ ವಿಚಾರದಲ್ಲಿ ಎರಡು ಪಂಗಡಗಳಾದವು. ಆದ್ದರಿಂದ ಒಮ್ಮತಕ್ಕೆ ಬರಲು ಆಗಲಿಲ್ಲ. ಈ ಹೊಸ ಪಂಗಡಗಳನ್ನು ಸ್ಥವಿರವಾದ ಹಾಗೂ ಮಹಾಸಾಂಘಿಕರು ಎನ್ನುತ್ತಾರೆ.

. ಮೂರನೇ ಸಮ್ಮೇಳನ (ಕ್ರಿ.ಪೂ. ೨೫೧): ಸ್ಥಳ ಪಾಟಲಿಪುತ್ರ, ಅಶೋಕನ ಆಶ್ರಯದಲ್ಲಿನಡೆದ ಇದರಲ್ಲಿ ಮೊಗ್ಗಲಿ ಪುತ್ತ ತಿಸ್ಸ ಪ್ರಮುಖನಾಗಿದ್ದನು. ಇದರಲ್ಲಿ ಅಭಿದಮ್ಮ ಪಿಟಕವನ್ನು ಸಂಗ್ರಹಿಸಲಾಯಿತು. ಹಾಗೂ ಬೌದ್ಧ ಧರ್ಮದ ಆಂತರಿಕ ಮತಭೇದವನ್ನು ಸರಿಪಡಿಸಿ ಐಕ್ಯತೆ ತರಲು ನಿರ್ಣಯಿಸಲಾಯಿತು. ಹಾಗೂ ಮತಭೇದ ಮಾಡುವವರಿಗೆ ಕೆಲವು ಶಿಕ್ಷೆಗಳನ್ನು ಜಾರಿಗೊಳಿಸಲಾಯಿತು. ಅದಕ್ಕೆ ಅಗತ್ಯವಾದ ಆಜ್ಞೆಗಳನ್ನು ಅಶೋಕನು ಹೊರಡಿಸಿದನು.

. ನಾಲ್ಕನೇ ಸಮ್ಮೇಳನ (ಕ್ರಿ.ಪೂ. ೧೦೦): ಕಾಶ್ಮೀರದ ಕುಂಡಲವನ, ಕಾನಿಷ್ಕನ ಆಶ್ರಯದಲ್ಲಿ ನಡೆಯಿತು. ವಸುಮಿತ್ರನ ಮುಂದಾಳತ್ವದಲ್ಲಿ ಇದು ನಡೆಯಿತು. ಸಮ್ಮೇಳನದಲ್ಲಿ ಕಾಶ್ಮೀರ ಹಾಗೂ ಗಾಂಧಾರ ಬೌದ್ಧ ಬಿಕ್ಕುಗಳ ಮಧ್ಯೆ ಬೌದ್ಧ ಧರ್ಮ ಆಚರಣೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. ಒಂದು ವರ್ಗ ಬುದ್ದನನ್ನು ಪೂಜಿಸಲು ಒತ್ತಾಯಿಸಿದರೆ, ಇನ್ನೊಂದು ವರ್ಗ ಬುದ್ದನ ಸರಳ ತತ್ವಗಳನ್ನು ಮಾತ್ರ ಅನುಸರಿಸಲು ಒತ್ತಾಯಿಸಿತು. ಈ ಎರಡು ಗುಂಪುಗಳ ಮಧ್ಯೆ ಒಮ್ಮತ ಮೂಡದ ಕಾರಣ ಬೌದ್ಧ ಮತದಲ್ಲಿ ಮಹಾಯನ ಹಾಗೂ ಹೀನಯಾನ ಎಂಬ ಪಂಥಗಳು ಗಟ್ಟಗೊಂಡವು.

. ಹೀನಯಾನ ಮತ್ತು ಮಹಾಯಾನ ಪಂಥಗಳು: ಬೌದ್ಧ ಮತವು ನಾಲ್ಕನೇ ಬೌದ್ಧ ಸಮ್ಮೇಳನದಲ್ಲಿ ಹೀನಯಾನ ಮತ್ತು ಮಹಾಯಾನ ಪಂಥಗಳಾಗಿ ಇಬ್ಭಾಗವಾಗುತ್ತದೆ. ಆದರೂ ಬೌದ್ಧ ಮತವು ಬೆಳವಣಿಗೆಯಾಗುತ್ತದೆ. ಮಹಾಯಾನವು ಈ ಮತದ ಬೆಳವಣಿಗೆಯಲ್ಲಿ ನಿರ್ಣಾಯಕವಾದ ಕೊಡುಗೆಗಳನ್ನು ನೀಡಿದೆ.

ಹೀನಯಾನ ಪಂಥವು ಸಾಧನೆಗೆ ಒತ್ತು ನೀಡಿದ್ದರಿಂದ ಸಂಸಾರವನ್ನು ತ್ಯಜಿಸಿ ಸಂಘವನ್ನು ಸೇರಬಯಸುವ ಕೆಲವೇ ಜನರಿಗೆ ಅದು ಸೀಮಿತವಾಗಿತ್ತು. ಹಾಗೂ ಅದು ಸನ್ಯಾಸಕ್ಕೆ ಪ್ರಾಧಾನ್ಯತೆ ನೀಡಿತ್ತು. ಆದರೆ ಮಹಾಯಾನ ಪಂಥದವರು ಬುದ್ಧನು ಚಿರಂಜೀವಿ ಹಾಗೂ ಪರಮೋಚ್ಚ ದೇವರಾಗಿದ್ದು ಪ್ರಪಂಚವನ್ನು ನಿಯಂತ್ರಿಸುವವನಾಗಿದ್ದಾನೆ ಎಂದು ಪ್ರತಿಪಾದಿಸಿದರು. ನಿರ್ವಾಣ ಹೊಂದಲು ಬುದ್ಧನನ್ನು ಪ್ರಾರ್ಥಿಸಬೇಕು ಹಾಗೂ ಪೂಜಿಸಬೇಕೆಂದು ಬುದ್ಧನನ್ನು ದೇವರ ರೂಪದಲ್ಲಿ ಪೂಜಿಸತೊಡಗಿದರು. ತ್ರಿಪಿಟಕಗಳಿಗೆ ಬದಲಾಗಿ ಸಂಸ್ಕೃತದಲ್ಲಿ ರತ್ನಕೂಟ ಹಾಗೂ ವೈಪುಲ ಸೂತ್ರಗಳನ್ನು ರಚಿಸಿಕೊಂಡರು. ಬೋಧಿಸತ್ವನ ಆರಾಧನೆ ಆರಂಭಿಸಿದರು. ಬುದ್ಧನು ದೇವರು, ಆದರೆ ಮೊದಲು ಬೋಧಿಸತ್ವನಾಗಿದ್ದು ನಂತರ ಬುದ್ಧನಾದನು. ಈ ರೀತಿ ಧರ್ಮದಲ್ಲಿ ನಂಬಿಕೆ ಹಾಗೂ ಪೂಜೆಗಳನ್ನು ಪ್ರತಿಪಾದಿಸಿದರು. ಈ ತತ್ವಗಳು ಸಾರಸ್ಥರಲ್ಲಿ ಜನಪ್ರಯವಾದವು. ಇವರ ಪ್ರಭಾವದಿಂದ ಬುದ್ಧನ ವಿಗ್ರಹಗಳು ಸ್ಥಾಪನೆಯಾದವು. ಇದರಿಂದ ಬೌದ್ಧ ಧರ್ಮವು ಲೌಕಿಕ ಸ್ವರೂಪ ಪಡೆದುಕೊಂಡುಜನರನ್ನು ತನ್ನಡೆ ಆಕರ್ಷಿಸಿತು. ಕಾಶ್ಮೀರ, ಗಾಂಧಾರ, ಚೀನಾ, ಟಿಬೆಟ್‌ಗಳಲ್ಲಿ ಹರಡಿತು.

. ಬೌದ್ಧ ತತ್ವಜ್ಞಾನಿಗಳು: ಬೌದ್ಧ ಮತದ ಬೆಳವಣಿಗೆಯಲ್ಲಿ ಬೌದ್ಧ ತತ್ವಜ್ಞಾನಿಗಳ ಪಾತ್ರವು ಮುಖ್ಯವಾಗಿದೆ. ಬೌದ್ಧ ಮತದ ಕುರಿತು ಕಾಲ ಕಾಲಕ್ಕೆ ವ್ಯಾಖ್ಯಾನ ಮಾಡುವುದು, ಗ್ರಂಥಗಳನ್ನು ರಚಿಸುವುದು, ತತ್ವ ಜ್ಞಾನವನ್ನು ಜನ ಸಾಮಾನ್ಯರಿಗೆ ಬೋಧಿಸುವುದು, ರಾಜರುಗಳನ್ನು ಬೌದ್ಧ ಧರ್ಮಕ್ಕೆ ಮತಾಂತರ ಮಾಡಿ ಅವರು ರಾಜಾಶ್ರಯ ಕೊಡುವಂತೆ ಮಾಡುವುದರಲ್ಲಿ ಇವರು ಯಶ್ವಸಿಯಾಗಿದ್ದರು. ಇವರ ಶ್ರಮದ ಪ್ರತಿಫಲವಾಗಿ ಅನೇಕ ರಾಜರು ರಾಜಾಶ್ರಯ ನೀಡಿದರು. ಬೌದ್ಧ ಸಂಘಗಳಿಗೆ, ವಿಹಾರಗಳಿಗೆ, ದಾನದತ್ತಿಕೊಡುವುದು, ಬಿಕ್ಕು-ಬಿಕ್ಕುಣಿಯರಿಗೆ ಸರಿಯಾದ ಮಾರ್ಗದಲ್ಲಿ ಧರ್ಮ ಪ್ರಚಾರ ಮಾಡುವುದುಕ್ಕೆ ಉತ್ತಮ ಮಾರ್ಗದರ್ಶನ ನೀಡಿದ್ದರು.

ಇಂಡೋ-ಗ್ರೀಕ್‌ರಾಜರ ಕಾಲದಲ್ಲಿದ್ದ ನಾಗಸೇನ ಎಂಬ ಬೌದ್ಧ ತತ್ವಜ್ಞಾನಿಯು ದೊರೆಮಿಲಿಂದ ಮತ್ತು ೫೦೦ ಜನ ಆಸ್ಥಾನಿಕರನ್ನು ಬೌದ್ಧ ಧರ್ಮಕ್ಕೆ ಮತಾಂತರ ಮಾಡಿದನು ಹಾಗೂ ಮಿಲಿಂದ ಚಕ್ರವರ್ತಿಯು ತಾನೇ ಮುಂದೆ ಬೌದ್ಧ ಸನ್ಯಾಸಿಯಾದನು ಎಂಬುದಾಗಿ ಬೌದ್ಧರು ಹೇಳಿಕೊಳ್ಳುತ್ತಾರೆ. ಕಾನಿಷ್ಕನ ಸಮಕಾಲೀನವರಾದ ವಸುಮಿತ್ರ, ಅಶ್ವಘೋಷ, ನಾಗಾರ್ಜುನ, ಪಾರ್ಶ್ವರವರು ಪ್ರಕಾಂಡ ಪಂಡಿತರಾಗಿದ್ದರು. ಅಶ್ವಘೋಷನ ಪ್ರಭಾವದಿಂದ ಕಾನಿಷ್ಕನು ಬೌದ್ದ ಧರ್ಮಕ್ಕೆ ಮತಾಂತರ ವಾದನು. ಇವರು ಸಂಸ್ಕೃತದಲ್ಲಿ ಅನೇಕ ಬೌದ್ಧ ಕೃತಿಗಳನ್ನು ರಚಿಸಿ ಬೌದ್ಧ ಧರ್ಮವು ವೃದ್ಧಿಸಲು ಕಾರಣಕರ್ತರಾಗಿದ್ದರು. ನಾಗಾರ್ಜುನನು ಅವನ ಕಾಲಕ್ಕೆ ಹೊಂದಿಕೊಳ್ಳುವಂತೆ ಬೌದ್ಧ ತತ್ವವನ್ನು ಪುನರ್ನಿರೂಪಿಸಿದನು. ಗುಪ್ತರ ಕಾಲದಲ್ಲಿ ಅಸಂಗ, ವಸುಬಂಧು, ಕುಮಾರಜೀವ, ಪರಮಾರ್ಥ, ದಿಗ್ನಾಗ, ಬುದ್ಧಘೋಷ, ಮಹಾನಾಮ ಮುಂತಾದ ಬೌದ್ದ ತತ್ವಜ್ಞಾನಿಗಳು ಧರ್ಮದ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ವರ್ಧನರ ಕಾಲದಲ್ಲಿದ್ದ ದೇವಿಕಪುತ್ರನೆಂಬ ಬೌದ್ಧ ತತ್ವಜ್ಞನಿ ಹರ್ಷವರ್ಧನ ಬೌದ್ಧ ಮತಾವಲಂಬಿಯಾಗಲು ಪ್ರೇರೇಪಣೆ ನೀಡಿದ್ದನು. ಈ ತತ್ವಜ್ಞಾನಿಗಳು ಕಾಲದಿಂದ ಕಾಲಕ್ಕೆ ಬೌದ್ಧ ಮತ ಬೆಳವಣಿಗೆಯಾಗಲು ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಕಶ್ಯನ ಮಾತಂಗ ಚೀನಾ ಮತ್ತು ಮಧ್ಯ ಏಷಿಯದಲ್ಲಿ ಬೌದ್ಧಧರ್ಮವನ್ನು ವಿಸ್ತರಿಸಿದನು. ಕಾನಿಷ್ಕನೇ ಅವರನ್ನು ಕಳುಹಿಸಿದ್ದನು.

. ಬೌದ್ಧ ಸಾಹಿತ್ಯ: ಯಾವುದೇ ಮತವು ಬೆಳವಣಿಗೆಯಾಗಲು ಆ ಧರ್ಮದ ತತ್ವಗಳನ್ನು ತಿಳಿಸುವ ಸಾಹಿತ್ಯವು ಪ್ರಮುಖವಾದುದು. ಅದೇ ರೀತಿ ಬೌದ್ಧ ಧರ್ಮದ ಬೆಳವಣಿಗೆಯಾಗಲು ಕಾಲದಿಂದ ಕಾಲಕ್ಕೆ ರಚಿತವಾದ ಬೌದ್ಧ ಸಾಹಿತ್ಯ ಕೂಡ ಮುಖ್ಯ ಪಾತ್ರವಹಿಸಿದೆ. ಆ ಪ್ರಮುಖ ಬೌದ್ಧ ಸಾಹಿತ್ಯವು ಇಂತಿದೆ.

ತ್ರಿಪಿಟಕಗಳಾದ ‘ವಿನಯ ಪಿಟಕ’ ‘ಸುತ್ತ ಪಿಟಕ’ ‘ಅಭಿದಮ್ಮ ಪಿಟಕ’ ವಿನಯ ಪಿಟಕವು ಬೌದ್ಧ ಬಿಕ್ಕುಗಳು ಯಾವ ರೀತಿ ಜೀವನ ನಡೆಸಬೇಕು. ಬಿಕ್ಕುಗಳು ಆಪರಾಧ ಮಾಡಿದರಿ ಶಿಕ್ಷೆ, ಸಮಾಧಾನ, ಬಿಕ್ಕುಗಳನ್ನು ಸಂಘದಲ್ಲಿ ಸೇರಿಸಿಕೊಳ್ಳುವ ರೀತಿ, ಆಚರಣೆ, ಧ್ಯಾನ ಮತ್ತು ಬುದ್ಧನ ಜೀವನಕ್ಕೆ ಸಂಬಂಧಿಸಿದಂತೆ ಕೆಲವು ಕಥೆಗಳನ್ನು ಒಳಗೊಂಡಿದೆ.

೧. ಧೀಘನಿಕಾಯ: ಬುದ್ಧನ ಬೋಧನೆ ರೀತಿ, ಜಾತಿ ಪದ್ಧತಿ, ದೇವರು, ಕರ್ಮ, ಆತ್ಮ, ಜಗತ್ತು ಮುಂತಾದವುಗಳನ್ನೊಳಗೊಂಡಿದೆ.

೨. ಮಜ್ಜಿಮ ನಿಕಾಯ: ನೈತಿಕ ಕಥೆಗಳನ್ನು ಒಳಗೊಂಡಿದೆ.

೩. ಸಂಯುತ್ತ ನಿಕಾಯ: ಬುದ್ಧನ ತತ್ವಗಳು

೪. ಅಂಗುತ್ತರ ನಿಕಾಯ: ಎಲ್ಲದರ ಸಾರವನ್ನು ಒಳಗೊಂಡಿದೆ.

ಅಭಿದಮ್ಮ ಪಿಟಕವು ಬೌದ್ಧ ಮತದ ತಾತ್ವಿಕ ಅಂಶಗಳನ್ನೊಳಗೊಂಡದೆ. ಇಂಡೋ-ಬ್ಯಾಕ್ಟ್ರಿಯನ್‌ ರಾಜ ಮಿಲಿಂದನ ಕಾಲದಲ್ಲಿ ರಚಿತವಾದ ಮಿಲಿಂದಪನ್ಹವು ಮಿಲಿಂದ ರಾಜ ಬೌದ್ಧ ಮತಸ್ವೀಕರಿಸಿದ ಸಂಗತಿಯನ್ನು ತಿಳಿಸುತ್ತದೆ. ಬೌದ್ಧರ ನಾಲ್ಕನೇ ಸಮ್ಮೇಳನದಲ್ಲಿ ಹೊರತಂದ ಮಹಾವಿಭಾಷ್ಯ ಕೃತಿಯನ್ನು ಬೌದ್ಧ ಮತದದ ವಿಶ್ವಕೋಶವೆಂದು ಕರೆಯುತ್ತಾರೆ. ವೈಫಲ್ಯಸೂತ್ರ, ಲಲಿತ ವಿಸ್ತರ, ಸದ್ಧಮ್ಮ ಪುಂಡರೀಕ, ದಿವ್ಯಾವದಾನ, ಅವದಾನಶತಕ, ಮಹಾವಸ್ತು ಮುಂತಾದವು ಬುದ್ಧನ ಹಾಗೂ ಬೋದಿಸತ್ವದ ಬೋಧನೆಗಳನ್ನು ಒಳಗೊಂಡಿದ್ದು ಮಹಾಯಾನ ಪಂಥದ ಪ್ರಮುಖ ಕೃತಿಗಳಾಗಿವೆ. ಇವುಗಳಲ್ಲದೇ ವಸುಮಿತ್ರನ ಮಹಾವಿಭಾಷ್ಯ ಶಾಸ್ತ್ರ, ಅಶ್ವಘೋಷನ ಬುದ್ಧ ಚರಿತ್ರೆ, ಸುಂದರಾನಂದ ಕಾವ್ಯ, ನಾಗಾರ್ಜುನನ ಮಾಧ್ಯಮಿಕ ಸೂತ್ರ, ಪ್ರಜ್ಞಾಪಾರಮಿತಸೂತ್ರ, ಅಸಂಗನ ಯೋಗಾಚಾರ ಬ್ಯೂಮಶಾಸ್ತ್ರ, ಮಹಾಯಾನ ಸಂಪರಿಗ್ರಹ, ವಸುಬಂಧುವಿನ ಅಭಿದಮ್ಮ ಕೋಶ, ಮಹಾನಾಮನ ಮಹಾವಂಶ, ಅಶ್ವಘೋಷನ ಬುದ್ದಚರಿತೆ. ಹ್ಯೂ-ಯೆನ್‌ತ್ಸಾಂಗ್‌ನ ಸಿ-ಯು-ಕಿ, ಶ್ರೀಲಂಕಾದ ದ್ವೀಪ ವಂಶ, ಮಹಾವಂಶ ಹಾಗೂ ಬೌದ್ಧರ ಜಾತಕ ಕಥೆಗಳು ಮುಂತಾದವುಗಳು ಬೌದ್ಧ ಸಂಪ್ರದಾಯದ ಬೇಳವಣಿಗೆಯಲ್ಲಿ ಸಹಕಾರಿಯಾಗಿರುವ ಸಾಹಿತ್ಯ ಕೃತಿಗಳಾಗಿವೆ.

ಜೈನ ಮತಪ್ರರಂಭಬೆಳವಣಿಗೆ

ಕ್ರಿ.ಪೂ. ೬ನೆಯ ಶತಮಾನದಲ್ಲಿ ಪ್ರಬುದ್ಧಮಾನಕ್ಕೆ ಬಂದ ಮತಗಳಲ್ಲಿ ಜೈನ ಮತವು ಒಂದು. ಆದರೆ ಜೈನ ಸಂಪ್ರದಾಯದ ಪ್ರಕಾರ ‘ಈ ಸಂಪ್ರದಾಯವು ವೈದಿಕ ಸಂಪ್ರದಾಯದಷ್ಟೇ ಹಳೆಯದು’ ಜೈನ ಸಂಪ್ರದಾಯವು ಒಟ್ಟು ೨೪ ಜೈನ ತೀರ್ಥಂಕರರನ್ನು ಹೊಂದಿದೆ. ಇವರಲ್ಲಿ ಮೊದಲನೆಯವನು ‘ವೃಷಭನಾಥ’ ಇವರೆ ಜೈನ ಮತದ ಸ್ಥಾಪಕರು. ನಂತರದ ೨೨ ಜನ ತೀರ್ಥಂಕರರ ಬಗ್ಗೆ ಹೆಚ್ಚಿನ ದಾಖಲೆಗಳು ಲಭ್ಯವಾಗಿಲ್ಲ. ೨೩ನೆಯ ತೀರ್ಥಂಕರ ‘ಪಾರ್ಶ್ವನಾಥ’ರು ಐತಿಹಾಸಿಕ ವ್ಯಕ್ತಿ. ಕೊನೆಯ ಹಾಗೂ ೨೫ನೇ ತೀರ್ಥಂಕರ ‘ಮಹಾವೀರ.’ ಇವರ ಕಾಲದಿಂದಲೇ ಜೈನ ಧರ್ಮವು ಭಾರತದಲ್ಲಿ ಪ್ರಸಿದ್ಧಗೆ ಬಂದಿತು.

ವರ್ಧಮಾನ ಮಹಾವೀರ (ಕ್ರಿ.ಪೂ.೫೯೯ಕ್ರಿ.ಪೂ ೫೨೭)

ಮಹಾವೀರನ ಮೂಲ ಹೆಸರು ವರ್ಧಮಾನ. ಇವನ ತಂದೆ ಜ್ಞಾತ್ರಿಕ ಪಂಗಡದ ಮುಖ್ಯಸ್ಥನಾದ ಸಿದ್ಧಾಥ್. ತಾಯಿ ವೈಶಾಲಿ ವಂಶದ ರಾಜಕುಮಾರಿಯಾದ ತ್ರಿಶಲಾದೇವಿ. ಮಹಾವೀರನು ವೈಶಾಲಿ ಸಮೀಪದ ‘ಕುಂದ ಗ್ರಾಮ’ ಎಂಬಲ್ಲಿ ಜನಿಸಿದನು. ಐಷಾರಾಮದ ಜೀವನ ನಡೆಸುತ್ತಿದ್ದ ವರ್ಧಮಾನನಿಗೆ ಯಶೋಧರೆ ಎಂಬ ಕನ್ಯೆಯೊಂದಿಗೆ ವಿವಾಹ ಮಾಡಿದರು. ಈ ದಂಪತಿಗಳಿಗೆ ‘ಪ್ರಿರ್ಯದರ್ಶಿನಿ’ ಎಂಬ ಮಗಳು ಜನಿಸಿದಳು. ಸುಮಾರು ೩೦ ವರ್ಷದವನಾಗಿದ್ದಾಗ ತನ್ನ ತಂದೆ ತಾಯಗಳನ್ನು ಕಳೆದುಕೊಂಡ ನಂತರ ವರ್ಧಮಾನನ ಜೀವನದಲ್ಲಿ ವೈರಾಗ್ಯ ಉಂಟಾಗಿ ಸಾಂಸಾರಿಕ ಜೀವನವನ್ನು ತ್ಯಜಿಸಿ ಸತ್ಯವನ್ನು ಅರಸುತ್ತಾ ಪ್ರಪಂಚ ಪರ್ಯಟನೆ ಆರಂಭಿಸಿದನು. ನಂತರ ೧೨ ವರ್ಷಗಳ ಕಾಲ ಕಠಿಣ ಧ್ಯಾನವನ್ನು ನಡೆಸಿ ಅಂತಮವಾಗಿ ಜ್ಞಾನವನ್ನು ಪಡೆದನು. ಅಲ್ಲಿಂದ ಮಹಾವೀರನು ‘ಕೇವಲ ಜ್ಞಾನಿ’ (ಮಹಾಜ್ಞಾನಿ) ಹಾಗೂ ‘ಜಿನ’ (ತನ್ನನ್ನು ತಾನು ಗೆದ್ದವನು) ಎಂದು ಕರೆಯಲ್ಪಟ್ಟನು. ಜ್ಞಾನವನ್ನು ಪಡೆದ ನಂತರ ತನ್ನ ಪರ್ಯಟನೆಯನ್ನು ಮುಂದುವರೆಸಿ ಬೋಧನೆಯಲ್ಲಿ ಕಾಲಕಳೆದನು. ಅನೇಕ ಜನ ಅನುಯಾಯಿಗಳನ್ನು ಹೊಂದಿದ್ದ ಮಹಾವೀರನು ತನ್ನ ೭೨ನೆಯ ವಯಸ್ಸಿನಲ್ಲಿ ‘ಪಾವ’ ಎಂಬಲ್ಲಿ ಮರಣ ಹೊಂದಿದನು.

ಜೈನ ಬೋಧನೆಗಳು

ಜೈನ ಮತವು ಐದು ಪ್ರಮುಖವಾದ ತತ್ವಗಳನ್ನೊಳಗೊಂಡಿದೆ. ಅವು ಇಂತಿವೆ.

೧. ಅಹಿಂಸೆ : ಜೀವಂತ ಜೀವಿಗಳನ್ನು ಕೊಲ್ಲಬಾರದು. ಹಿಂಸಿಸಬಾರದು.

೨. ಸತ್ಯ : ಒಳ್ಳೆಯ ಮಾತನ್ನು, ನಜವನ್ನು ನುಡಿಯಬೇಕು.

೩. ಆಸ್ತೇಯ : ಕಳ್ಳತನ ಮಾಡದಿರುವುದು.

೪. ಅಪರಿಗ್ರಹ : ಬೇರೆಯವರ ಆಸ್ತಿಯನ್ನು ವಶಪಡಿಸಿಕೊಳ್ಳದಿರುವುದು.

೫. ಬ್ರಹ್ಮಚರ್ಯ : ಪ್ರಾಪಂಚಿಕ ವ್ಯಾಮೋಹಗಳಿಂದ ದೂರವಿರುವುದು.

ಈ ಮೇಲಿನ ಮೊದಲ ನಾಲ್ಕು ತತ್ವಗಳನ್ನು ೨೩ನೆಯ ತೀರ್ಥಂಕರನಾದ ಪಾರ್ಶ್ವನಾಥನು ಬೋಧಿಸಿದನು. ಐದನೇಯದನ್ನು ಮಹಾವೀರ ಬೋಧಿಸಿದನು. ಇವುಗಳಲ್ಲದೆ ಮಹಾವೀರನು ಈ ಕೆಳಕಂಡವುಗಳನ್ನು ಬೋಧಿಸಿದನು.

೧. ಜಗತ್ತನ್ನು ಯಾವ ಅಗೋಚರ ಶಕ್ತಿಯು ಸೃಪ್ಟಿಸಿಲ್ಲ, ಇದು ಕೆಲವು ವಸ್ತುಗಳಿಂದ ರಚಿಸಲ್ಪಟ್ಟಿದೆ. ಅವುಗಳು ನಾಶವಾಗುವುದಿಲ್ಲ. ಆದರೆ ತಮ್ಮ ಸ್ವರೂಪವನ್ನು ಬದಲಾಯಿಸುತ್ತಿರುತ್ತವೆ ಎಂದು ಮಹಾವೀರನು ಪ್ರತಿಪದಿಸಿದನು.

೨. ಅಹಿಂಸೆಗೆ ಹೆಚ್ಚು ಪ್ರಮುಖ್ಯತೆ ನೀಡಿದನು. ಮಾತಿನಲ್ಲಾಗಲಿ, ಆಲೋಚನೆಯಲ್ಲಾಗಲಿ, ಚಟುವಟಿಕೆಗಳಿಂದಾಗಲಿ ಮನುಷ್ಯರನ್ನು ಮತ್ತು ಪ್ರಾಣಿಪಕ್ಷಿಗಳನ್ನು ಹಿಂಸಿಸಬಾರದು ಎಂದು ಪ್ರತಿಪಾದಿಸಿದನು.

೩. ವೇದಗಳನ್ನು, ಬಲಿಪದ್ಧತಿಯನ್ನು, ವೈದಿಕ ಆಚರಣೆಗಳನ್ನು ತಿರಸ್ಕರಿಸಿದನು.

೪. ಮಹಾವೀರನು ಆತ್ಮ ಮತ್ತು ಕರ್ಮದಲ್ಲಿ ನಂಬಿಕೆಯಿಟ್ಟಿದ್ದನು. ಜನ್ಮ ಪುನರ್ಜನ್ಮಗಳಲ್ಲಿ ನಂಬಿಕೆ ಹೊಂದಿದ್ದು ಉತ್ತಮ ಕಾರ್ಯಗಳಿಂದ ಆತ್ಮವನ್ನು ಕರ್ಮದಿಂದ ಬಿಡುಗಡೆ ಮಾಡಬಹುದು ಎಂದು ಬೋಧಿಸಿದನು.

೫. ಪ್ರಾಪಂಚಿಕ ಕೆಟ್ಟ ಕರ್ಮಗಳನ್ನು ನಾಶಮಾಡಿ ಹೊಸದಾಗಿ ಕೆಟ್ಟ ಕೆಲಸಗಳನ್ನು ಮಾಡದೆ ಆತ್ಮಜ್ಞಾನವನ್ನು ಪಡೆಯುವದರ ಮೂಲಕ ನಿರ್ವಾಣ ಅಥವಾ ಮೋಕ್ಷ ಹೊಂದ ಬಹುದು.

೬. ಮನುಷ್ಯನು ಸನ್ಮಾರ್ಗದಲ್ಲಿ ನಡೆಯಲು ಈ ಮೂರು ಮಾರ್ಗ ಅನುಸರಿಸಬೇಕು ಅ. ಸಮ್ಯಕ್‌ ಚಿಂತನೆ ಆ. ಸಮ್ಯಕ್‌ ನಂಬಿಕೆ ಇ. ಸಮ್ಯಕ್‌ ಚಾರಿತ್ರ‍್ಯ

ಇವುಗಳನ್ನು ಜೈನ ಧರ್ಮದ ‘ತ್ರಿರತ್ನಗಳು’ ಎಂದು ಕರೆಯುತ್ತಾರೆ.

೭. ಮಹಾವೀರನು ಸ್ತ್ರೀಯರ ವಿಮೋಚನೆಯನ್ನು ಪ್ರತಿಪಾದಿಸಿದನು.