ರಾಜ್ಯ ಎಂಬ ವ್ಯವಸ್ಥೆಯನ್ನು ಮನುಷ್ಯ ಸಮಾಜಗಳು ನಾಗರಿಕ ಅವಸ್ಥೆಯಲ್ಲಿ ರೂಢಿಸಿಕೊಂಡಿವೆ. ಈ ವ್ಯವಸ್ಥೆಯ ಕೆಲ ಪ್ರಾಥಮಿಕ ರೂಪುರೇಷೆಗಳ ನಿರ್ಮಾಣಕ್ಕೂ ಸಾವಿರಾರು ವರ್ಷಗಳೇ ಬೇಕಾಗಿವೆ. ರಾಜ್ಯವು ಒಂದು ಆಳ್ವಿಕೆಯ ವ್ಯವಸ್ಥೆ. ಅದು ಒಂದು ನಿರ್ದಿಷ್ಟ ಭೌಗೋಳಿಕ ಸೀಮೆಯಲ್ಲಿ ವಾಸಿಸುವ ಜನರನ್ನು ಆಳುವ ಸಾರ್ವಭೌಮ ಶಕ್ತಿಯಾಗಿದೆ. ಈ ಆಳ್ವಿಕೆಯನ್ನು ಒಂದು ಆಡಳಿತ ವ್ಯವಸ್ಥೆಯ ಮೂಲಕ ನಡೆಸಲಾಗುತ್ತದೆ. ಪ್ರಭತ್ವವನ್ನು ಈ ವ್ಯವಸ್ಥೆಯಲ್ಲಿ ಚಲಾಯಿಸುವ ಸಂಬಂಧಿಸಿ ಕೆಲ ಸಂಪ್ರದಾಯಗಳು ಬೆಳೆದು ಬರುತ್ತವೆ. ಅಂದರೆ ಕೆಲವರಿಗೆ ಆಳುವ ಅಧಿಕರವನ್ನು ವಹಿಸಲಾಗುತ್ತದೆ. ಈ ರೀತಿಯಲ್ಲಿ ರಾಜ್ಯ ಎಂಬುದು ಒಂದು ಸಂಕೀರ್ಣವಾದ ಹಾಗೂ ಅಮೂರ್ತೀಕರಿಸಿದ ಅಧಿಕಾರ ವ್ಯವಸ್ಥೆಯಾಗಿದೆ.

ಕೆಲ ಇತಿಹಾಸಶಾಸ್ತ್ರೀಯ ಸಮಸ್ಯೆಗಳು

ಪ್ರಾಚೀನ ಭಾರತದಲ್ಲಿ ಕ್ರಿಸ್ತಪೂರ್ವ ಆರು ಅಥವಾ ಐದನೆಯ ಶತಕದಲ್ಲಿ ಇಂಥ ವ್ಯವಸ್ಥೆಗಳು ಬೆಳೆದು ಬರಲು ಪ್ರಾರಂಭಿಸಿದವು. ಕ್ರಿಸ್ತಪೂರ್ವ ಮೂರನೆಯ ಶತಕದಲ್ಲಿ ರಾಜಪ್ರಭುತ್ವದ ಸಾಮ್ರಾಜ್ಯ ನಿರ್ಮಾಣವಾಗಿದ್ದೂ ಕಂಡುಬರುತ್ತದೆ. ಕೌಟಲೀಯ ಅರ್ಥಶಾಸ್ತ್ರವು ಇಂಥ ರಾಜ್ಯದ ಆಳ್ವಿಕೆಯನ್ನು ಗಳಿಸುವ ಹಾಗೂ ನಡೆಸುವ ತಂತ್ರವನ್ನು ಬೋಧಿಸುತ್ತದೆ. ಭಾರತೀಯ ಇತಿಹಾಸವು ಈ ಕಾಲದ ನಂತರ ರಾಜಮನೆತನಗಳ ಇತಿಹಾಸವಾಗಿ ಮಾರ್ಪಟ್ಟಿದೆ. ರಾಷ್ಟ್ರೀಯತಾ ಯುಗದಲ್ಲಿ ಹಾಗೂ ಅದಕ್ಕೂ ಸ್ವಲ್ಪ ಪೂರ್ವದ ವಸಾಹತುಶಾಹಿ ಇತಿಹಾಸದ ಸಂಪ್ರದಾಯದಲ್ಲಿ ರಾಜಮನೆಗಳ ರಾಜಕೀಯ ಇತಿಹಾಸಕ್ಕೆ ಒತ್ತು ಬಿದ್ದಿದೆ. ಈ ಇತಿಹಾಸವು ನಂದರು, ಮೌರ್ಯರಾದಿಯಾಗಿ ಪುರಾಣಗಳು ಹಾಗೂ ಶಾಸನಗಳು ಅನೇಕ ರಾಜ ವಂಶಗಳನ್ನು ಪ್ರಾಚೀನ ಭಾರತದ ಇತಿಹಾಸದ ಕೇಂದ್ರದಲ್ಲಿಟ್ಟುನೋಡಿದೆ. ಈ ಇತಿಹಾಸದ ಪ್ರಕಾರ ಒಂದು ರಾಜ್ಯವನ್ನು ರಾಜವಂಶ ಸ್ಥಾಪಿಸುತ್ತದೆ. ರಾಜವಂಶದ ನಿರ್ನಾಮದೊಂದಿಗೆ ರಾಜ್ಯವೂ ನಾಶವಾಗುತ್ತದೆ. ಹಾಗಾಗಿ ಮೌರ್ಯ, ನಂದ ಮುಂತಾದವರಿಗೂ ಪೂರ್ವದಲ್ಲಿನ ರಾಜಕೀಯ ಇತಿಹಾಸದ ರಚನೆಗೆ ಪುರಾಣಗಳ ವಂಶಾನುಚರಿತದ ಮೊರೆ ಹೋಗಬೇಕಾಯಿತು. ವಂಶಾನುಚರಿತಗಳು ಭಾರತೀಯ ರಾಜ ವಂಶಗಳನ್ನು ಸೂರ್ಯ-ಚಂದ್ರ ಮುಂತಾದ ದೇವತೆಗಳಿಂದ ಪ್ರಾರಂಭಸಿ, ಮಹಾಕಾವ್ಯಗಳ ಪುರಾಣ ಪುರುಷರ ವಂಶಗಳಿಂದ ಮುಂದುವರಿದು ಬಂದಂತೇ ಚಿತ್ರಿಸುತ್ತವೆ. ಅವುಗಳ ಮುಖ್ಯ ಉದ್ದೇಶ ಎಂದರೆ ಈ ವಂಶಾವಳಿಗಳ ಆಳ್ವಿಕೆ ಅನಾದಿ ಹಾಗೂ ಸೃಷ್ಟಿಯ ನಿಯಮ ಎಂಬಂತೇ ಬಿಂಬಿಸುವುದಾಗಿದೆ. ಕೆಲ ರಾಷ್ಟ್ರೀಯತಾವಾದಿ ಇತಿಹಾಸಕಾರರು ಈ ಪುರಣ ಪುರುಷರನ್ನೆ ಇತಿಹಾಸದ ಕಾಲಾನುಕ್ರಮಣಿಕೆಗೆ ಅಳವಡಿಸಿ ರಾಜಕೀಯ ಇತಿಹಾಸದ ಮೌರ್ಯ ಪೂರ್ವ ಕಾಲವನ್ನು ಕಟ್ಟಲು ಯತ್ನಿಸಿದರು. ಇಷ್ಟೆಲ್ಲ ಪ್ರಯತ್ನಗಳು ನಡೆದರೂ ಮೌರ್ಯ ಪೂರ್ವ ಕಾಲದ ರಾಜಕೀಯ ಇತಿಹಾಸ ದೊಡ್ಡ ಕಗ್ಗಂಟಾಗಿಯೇ ಉಳಿಯಿತು.

ಹೀಗೆ ಮೌರ್ಯಪೂರ್ವ ಕಾಲದ ರಾಜಕೀಯ  ಇತಿಹಾಸ ಒಂದು ಸಮಸ್ಯೆಯಾಗಲು ಕಾರಣ ಎಂದರೆ ರಾಜಕೀಯ ಇತಿಹಾಸ ಹಾಗೂ ರಾಜ್ಯದ ಕುರಿತು ಇಟ್ಟ, ಕೆಲ ಮಿತವಾದ ಕಲ್ಪನೆಗಳು. ರಾಜ್ಯವನ್ನು ಒಂದು ಸಾಮಾಜಿಕ ಪ್ರಕ್ರಿಯೆಯ ಸಾವಯವ ಅಂಗವನ್ನಾಗಿ ಅವರು ನೋಡಲಿಲ್ಲ. ರಾಜಮನೆತನದ ಒಂದು ಖಾಸಗಿ ಚಟುವಟಿಕೆ ಎಂಬಂತೆ ಇದನ್ನು ನೋಡಲಾಗಿದೆ. ರಾಜಕೀಯ ಎಂಬುದನ್ನು ಸೈನ್ಯ, ಯುದ್ಧ, ರಾಜವಂಶಗಳ ಸಂಬಂಧ, ಆಶ್ರಯ ಎಂದು ಮೇಲು ಮೇಲೆ ಅರ್ಥೈಸಲಾಗಿತ್ತು.ಇದೊಂದು ಸಾಮಾಜಿಕ ಅಧಿಕಾರ ಹಂಚಿಕೆಯ ಹಾಗೂ ಗಳಿಕೆಯ ವ್ಯವಸ್ಥೆ ಎಂಬುದು ಗೌಣವಾಗಿತ್ತು. ಹಾಗಾಗಿ ರಾಜ್ಯ ನಿರ್ಮಾಣ ಎಂಬುದು ರಾಜವಂಶಗಳ ಪ್ರಯತ್ನದ ಫಲ ಎಂಬುದಾಗಿ ಗ್ರಹಿಸಲಾಗಿತ್ತು. ಆದರೆ ಈ ರಾಜವಂಶಗಳೇ ಹೇಗೆ ಉದ್ಭವವಾದವು, ರಾಜ ವಂಶಗಳ ಹೊರತಾಗಿಯೂ ರಾಜ್ಯ (ಸ್ಟೇಟ್) ಅಸ್ತಿತ್ವದಲ್ಲಿರಬಹದೆ? ಮುಂತಾದ ಪ್ರಶ್ನೆಗಳು ಮಹತ್ವ ಪಡೆಯಲಿಲ್ಲ.

ರಾಜ್ಯ ಎಂಬುದು ಭಾರತೀಯ ಪರಿಭಾಷೆಯಲ್ಲಿ ‘ರಾಜ’ ಎಂಬ ಶಬ್ದದಿಂದ ಹುಟ್ಟಿದೆ. ಆದರೆ ರಾಜ್ಯವನ್ನು ಸ್ಟೇಟ್‌ ಎಂಬರ್ಥದಲ್ಲಿ ಗ್ರಹಿಸಿದರೆ ಇದೊಂದು ಪ್ರಭುತ್ವದ ವ್ಯವಸ್ಥೆ. ಪ್ರಭುತ್ವ ‘ರಾಜ’ನಲ್ಲೇ ಇರಬೇಕೆಂದೇನೂ ಇಲ್ಲ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ಈ ಪ್ರಭುತ್ವದ ವ್ಯವಸ್ಥೆ ಅಧಿಕಾರ ಹಂಚಿಕೆ ಹಾಗೂ ಹೊಂದಾಣಿಕೆಯ ರಚನೆಯಾಗಿದೆ. ಈ ರೀತಿಯ ರಚನೆ ಮನುಷ್ಯ ಸಮಾಜದಲ್ಲಿನ ಒಂದು ಸಂಕೀರ್ಣ ಬೆಳವಣಿಗೆಯಾಗಿದೆ. ಅಂದರೆ ರಾಜ್ಯ ವ್ಯವಸ್ಥೆ ಹುಟ್ಟಬೇಕಾದರೆ, ಅದಕ್ಕೆ ಪೂರ್ವಭಾವಿಯಾದ ಸಾಮಾಜಿಕ ಬೆಳವಣಿಗೆ ತಡೆದಿರುತ್ತದೆ. ಸಮಾಜದಲ್ಲಿ ಶ್ರೇಣೀಕರಣ ಅಥವಾ ವರ್ಗ ವಿಭಜನೆ ಪ್ರಾರಂಭವಾಗಿರುತ್ತದೆ. ಸಮಾಜದ ಉತ್ಪಾದನಾ ಸಂಭಂಧಗಳು, ತಂತ್ರಜ್ಞಾನ ಪೂರಕವಾಗಿ ಬೆಳೆದಿರುತ್ತದೆ. ರಾಜ್ಯದಲ್ಲಿ ಆಳುವ ವರ್ಗಗಳ ಕೈಯಲ್ಲಿ ಅಧಿಕಾರ ಕೇಂದ್ರೀಕೃತವಾದಂತೆಲ್ಲ ಅದರ ಹಿತಾಸಕ್ತಿಗನುಗುಣವಾಗಿ ಕಾಯ್ದೆ, ಕಾನೂನು, ತಾತ್ವಿಕ ತಿಳುವಳಿಕೆಗಳು, ಸ್ಥಾನಮಾನ ಮುಂತಾದವುಗಳ ನಿರೂಪಣೆಯಾಗುತ್ತದೆ. ಒಟ್ಟಾರೆಯಾಗಿ ರಾಜ್ಯದ ಬೆಳವಣಿಗೆ ರಾಜ್ಯ ಸಂಸ್ಕೃತಿಯ ಬೆಳವಣಿಗೆಯ ಜೊತೆ ಜೊತೆಗೆ ಆಗಬೇಕು. ಹಾಗಾಗಿ ರಾಜ್ಯದ ಉಗಮ ಒಂದು ಸಮಾಜದ ಸಮಗ್ರ ಪರಿವರ್ತನೆಯನ್ನು ಹುಟ್ಟುಹಾಕುತ್ತದೆ. ಜನರನ್ನೆಲ್ಲ ‘ಪ್ರಜಾ ಸಮೂಹ’ ಅಥವಾ ‘ವಿಧೇಯ ಪ್ರಜೆ’ಗಳನ್ನಾಗಿ ಪರಿವರ್ತಿಸುವುದೆಂದರೆ ರಾಜ್ಯ ಸಂಸ್ಕೃತಿಯನ್ನು ಬೆಳೆಸಿದಂತೆ, ಪ್ರಾಚೀನ ‘ರಾಜ’ಕೇಂದ್ರಿತ ರಾಜ್ಯಗಳು ರಾಜನ ಅತಿಮಾನುತ್ವ, ದೈವತ್ವಗಳನ್ನು, ರಾಜವಂಶಗಳ ಅನೂಚಾನತೆಯನ್ನು ಹಾಗೂ ಅವುಗಳ ಅನಿವಾರ್ಯತೆಯನ್ನು ಕುರಿತ ಲೋಕದೃಷ್ಟಿಯನ್ನು ಪ್ರತಿಪಾದಿಸುತ್ತವೆ. ಆದರೆ ಈ ‘ರಾಜ’ನಿಗೆ ಅತಿಮಾನುಷತೆಯನ್ನು ಆರೋಪಿಸುವ ಸಾಮಾಜಿಕ ಸಂಸ್ಥೇಗಳು, ಅದನ್ನು ಸ್ವೀಕರಿಸಿ ಜೀವನ ರೂಪಿಸಿಕೊಂಡ ಸಾಮಾಜಿಕ ವರ್ಗಗಳು ಇಂಥ ರಾಜ್ಯಗಳಿಗೆ ಮೂಲಭೂತ ಅಗತ್ಯಗಳಾಗಿದ್ದವು. ಈ ಕಾರಣಗಳಿಂದ ಪ್ರಸ್ತುತ ಸಂದರ್ಭದಲ್ಲಿ ‘ರಾಜ್ಯ’ವನ್ನು ಒಂದು ‘ಆಳ್ವಿಕೆಯ ವ್ಯವಸ್ಥೆ’ ಎಂಬುದಕ್ಕೆ ಒತ್ತು ಕೊಟ್ಟು ನೋಡಬೇಕಾಗುತ್ತದೆ. ಈ ವ್ಯವಸ್ಥೆಯಲ್ಲಿ ಪ್ರಭುತ್ವವನ್ನು ಹೊಂದಿದವರು ಅಥವಾ ‘ರಾಜ’ರಾದವರು ಆಡಳಿತ ನಿರ್ವಹಣೆಯ ‘ದಂಡ’ ಶಕ್ತಿಯನ್ನು ಹೊಂದಿರುತ್ತಾರೆ. ರಾಜ್ಯದ ಸೀಮೆಯನ್ನು ರಕ್ಷಿಸುವ ಸೈನ್ಯವನ್ನು ಸಾಕುತ್ತಾರೆ. ಆಳುವ ಕೆಲಸದಲ್ಲಿ ಸಹಚರರನ್ನು ಘೋಷಿಸುತ್ತಾರೆ. ಜೊತೆಗೇ, ಆಳುವವರ ಘನತೆ, ಪ್ರತಿಷ್ಠೆಗಳನ್ನು, ಧಾರ್ಮಿಕತೆಯನ್ನು ಕಾಪಾಡುವ ಕೆಲಸಗಳು ನೆಡೆಯುತ್ತಿರುತ್ತವೆ. ರಾಜ್ಯದ ಅಸ್ತಿತ್ವವನ್ನು ಇಡಲು ಅನಿವಾರ್ಯವಾದ ಈ ವೆಚ್ಚಗಳನ್ನು ಭಂಡಾರದಿಂದ ಭರಿಸಾಗುತ್ತದೆ. ಭಂಡಾರವೆಂದರೆ ಪ್ರಜೆಗಳಿಂದ ವಶೂಲಿ ಮಾಡದ ಸಂಪತ್ತಾಗಿದೆ.

ರಾಜ್ಯ ವ್ಯವಸ್ಥೆಯು ಖಾಸಗಿ ಆಸ್ತಿಯನ್ನು ರಕ್ಷಿಸಲು, ಗಡಿಯನ್ನು ರಕ್ಷಿಸಲು, ಉತ್ಪಾದನೆಯನ್ನು ನಿರ್ವಹಿಸಲು ಅನಿವಾರ್ಯವಾಗಿರುವುದರಿಂದ ಪ್ರಜೆಗಳ ಹಿತಾಸಕ್ತಿಯೂ ರಾಜ್ಯದಲ್ಲಿ ಬೆರೆತಿರುತ್ತದೆ. ರಾಜ್ಯವು ವಸೂಲು  ಮಾಡುವ ಕರ-ಕಂದಾಯಗಳು ರಾಜ್ಯದ ಈ ಕೆಲಸಗಳಿಂದಾಗಿ ಹಕ್ಕುಬದ್ಧವಾಗುತ್ತದೆ. ಇದೊಂದು ಪ್ರಜೆಗಳಿಗೆ ಅನಿವಾರ್ಯ ವ್ಯವಸ್ತೆ, ಈ ವ್ಯವಸ್ಥೆ ಇಲ್ಲದಿದ್ದರೆ ಅರಾಜಕತೆ ಉಂಟಾಗುತ್ತದೆ ಎಂಬ ಲೋಕದೃಷ್ಟಿಯನ್ನು ಬೆಳೆಸುವ ಪುರಾಣಗಳೂ ಇಲ್ಲಿ ಪ್ರಾಮುಖ್ಯತೆ ಪಡೆಯುತ್ತವೆ. ರಾಜ್ಯ ಈ ರೀತಿ ಕೆಲಸ ನಿರ್ವಹಿಸಲು ಸಮಾಜದ ಶ್ರೇಣೀಕೃತ ನಿರೂಪಣೆ ಅಗತ್ಯವಾಗಿದೆ. ಅಧಿಕರಕ್ಕೆ ಹತ್ತಿರ ಇರುವವರು ಅಥವಾ ಅಧಿಕಾರದ ಏಣಿಯಲ್ಲಿ ವಿಭಿನ್ನ ಮೆಟ್ಟಿಲುಗಳ ಮೇಲೆ ನಿಂತವರು, ಉತ್ಪಾದನಾ ಸಾಧನ ಹಾಗೂ ವಿಧಾನದ ಮೇಲೆ ಹಿಡಿತ ಇರುವವರು, ಹಿಡಿತಕ್ಕೊಳಪಟ್ಟವರು, ಹೀಗೆ ರಾಜ್ಯದ ಪ್ರಜೆಗಳಲ್ಲೇ ಇರುವ ಈ ವ್ಯತ್ಯಾಸಗಳು ಶ್ರೇಣೀಗಳಾಗಿ ಮುಂದುವರಿಯಬೇಕಾದರೆ ಸ್ಥಾನ-ಮಾನಗಳ ವ್ಯತ್ಯಾಸವನ್ನು ಕಾಪಾಡಬೇಕಾಗುತ್ತದೆ. ಹೀಗೆ ಸಂಕೀರ್ಣವಾದ ಸಾಮಾಜಿಕ ಸಂಸ್ಥೆಯೇ ಆಗಿದೆ.

ಪ್ರಾಚೀನ ಭಾರತೀಯ ರಾಜ್ಯಗಳ ಕುರಿತು ಒಂದು ಗ್ರಹಿಗೆ ಪ್ರಧಾನವಾಗಿ ಚಾಲ್ತಿಯಲ್ಲಿ ಬಂದಿದೆ. ಅದೆಂದರೆ ವಸಾಹತುಶಾಹಿಯ ರಾಷ್ಟ್ರೀಯತಾವಾದಿ ಕಲ್ಪನೆ. ಇದಕ್ಕೆ ರಾಜ್ಯ ಎಂಬುದು ರಾಜವಂಶಗಳು. ರಾಜವಂಶಗಳೂ ರಾಜ್ಯವನ್ನು ಕಟ್ಟುತ್ತವೆ ಹಾಗೂ ಆಶಿಸುತ್ತವೆ. ಇದಕ್ಕೆ ಮೂಲದಲ್ಲಿ ಪಾಶ್ಚಾತ್ಯರಿಗೆ ಬಹು ಹಿಂದಿನಿಂದ ಪೌರಾತ್ಯ ರಾಜ್ಯಗಳ ಬಗ್ಗೆ ಇದ್ದ ಕಲ್ಪನೆ ಕಾರಣವಾಗಿದೆ. ಪೌರಾತ್ಮ ದೇಶಗಳಲ್ಲಿನ ಪ್ರಭುತ್ವವನ್ನು ‘ಪೌರಾತ್ಯ ನಿರಂಕುಶ ಪ್ರಭುತ್ವ’ ಎಂದು ವರ್ಣಿಸಲಾಗಿದೆ. ಈ ದೇಶಗಳಲ್ಲಿ ರಾಜವಂಶಗು ರಾಜರು ಒಂದು ರಾಜ್ಯದ ಮೇಲಿನ ಸಂಪೂರ್ಣ ಹತೋಟಿಯನ್ನು ಹೊಂದಿ ಸಾವಿರಾರು ವರ್ಷಗಳ ಕಾಲ ಆಳಿದರು. ಖಾಸಗಿ ಆಸ್ತಿಯ ಬೆಳವಣಿಗೆ ಕೂಡ ಇಲ್ಲಿ ಆಗಲಿಲ್ಲ. ಹಾಗಾಗಿ ಭಾರತೀಯ ಸಮಾಜ ಮುಖ್ಯವಾದ ಐತಿಹಾಸಿಕ ಬದಲಾವಣೆಗಳನ್ನೂ ಕಾಣಲಿಲ್ಲ. ಎಂಬುದು ಈ ಗ್ರಹಿಕೆಯಾಗಿದೆ. ಎಡಪಂಥೀಯ ಇತಿಹಾಸಕಾರರೂ ಕೂಡ (ಕೊಸಾಂಬಿಯವರ ವರೆಗೆ) ತಮ್ಮ ‘ಏಶಿಯಾಟಿಕ್ ಉತ್ಪಾದನಾ ವಿಧಾನ’ ಕಲ್ಪನೆಯಲ್ಲಿ ಈ ‘ಪೌರಾತ್ಯ ನಿರಂಕುಶ ಪ್ರಭುತ್ವ’ ಕಲ್ಪನೆಯನ್ನೆ ಮುಂದುವರೆಸಿದರು. ಏಶಿಯಾಟಿಕ್ ಉತ್ಪಾದನ ವಿಧಾನ ಎಂಬುದು ಮಾರ್ಕ್ಸಾ ಅವರು ತಮ್ಮ ಪ್ರಾರಂಭದ ಕಾಲದಲ್ಲೊಮ್ಮೆ ಪೌರಾತ್ಮ ಸಮಾಜಗಳ ಕುರಿತು ಮಂಡಿಸಿದ ವಾದವಾಗಿತ್ತು. ಈವಾದವು ಸಾಮ್ರಾಜ್ಯ ಶಾಹಿ ಇತಿಹಾಸಕಾರರು ಹಾಗೂ ಪಾಶ್ಚಾತ್ಮ ಗ್ರಹಿಕೆಗಳನ್ನು ಆಧರಿಸಿ ರೂಪುಗೊಂಡಿತ್ತು. ಆದರೆ ಈವಾದದ  ಅಸಂಗತತೆಯನ್ನು ಗ್ರಹಿಸಿದ ಮಾರ್ಕ್ಸಾ ಕ್ರಮೇಣ ಅದನ್ನು ಕೈಬಿಟ್ಟಿದ್ದು ತಿಳಿದುಬರುತ್ತದೆ. ಆದರೆ ಎಡಪಂಥೀಯ ಇತಿಹಾಸಕಾರರು ಈ ಕಲ್ಪನೆಯನ್ನು ಒಪ್ಪಿಕೊಂಡಿದ್ದರು ಅಥವಾ ಅಷ್ಟಾಗಿ ಚರ್ಚೆಗೆ ಒಡ್ಡಲಿಲ್ಲ. ಕಾರಣವೆಂದರೆ ಇವರಲ್ಲಿ ಭಾರತೀಯ ಇತಿಹಾಸಕಾರರು ಯಾರೂ ಇರಲಿಲ್ಲ.

‘ಏಶಿಯಾಟಿಕ್ ಉತ್ಪಾದನಾ ವಿಧಾನ’ ಕಲ್ಪನೆಯನ್ನು ಭಾರತೀಯ ಇತಿಹಾಸದ ಸಂದರ್ಭದಲ್ಲಿ ತಿರಸ್ಕರಿಸಿದ ಪ್ರಥಮ ಇತಿಹಾಸಕಾರರು ಎಂದರೆ ಡಿ.ಡಿ. ಕೊಸಾಂಬಿಯವರು ಅವರು ಪ್ರಾಚೀನ ಭಾರತಿಯ ಇತಿಹಾಸವನ್ನು ಐತಿಹಾಸಿಕ ಭೌತವಾದ (ಹಿಸ್ಟಾರಿಕಲ್ ಮೆಟೀರಿಯಲಿಸಂ) ದ ಚಲನಶೀಲತೆಯ ಕಲ್ಪನೆಗೆ ಒಗ್ಗಿಸಿದರು. ಇಡೀ ಪ್ರಾಚೀನ ಭಾರತೀಯ ಇತಿಹಾಸವನ್ನು ಪುನರ್ರೂಪಿಸುವ ಈ ಅಗಾಧ ಕೆಲಸದಲ್ಲಿ ಅವರಿಗೆ ಯಾವದೇ ನಿರ್ದಷ್ಟ ಹಂತವನ್ನು ಕುರಿತು ವಿಶೇಷವಾಗಿ ವಿಶ್ಲೇಷಿಸಲು ಆಗಲಿಲ್ಲ. ಆದರೆ ಅವರು ರಾಜ ವಂಶಗಳ ಇತಿಹಾಸವನ್ನು ಕೈಬಿಟ್ಟು, ಪ್ರಾಚೀನ ಭಾರತೀಯ ಇತಿಹಾಸವನ್ನು ಸಾಮಾಜಿಕ ಆರ್ಥಕ ನೆಲೆಯಲ್ಲಿ ನಿಲ್ಲಿಸಿದರು. ಇದರ ತಾರ್ಕಿಕ ಬೆಳವಣಿಗೆಯಾಗಿ ನಂತರದ ಎಡಪಂಥೀಯ ಇತಿಹಾಸಕರರು ವಿಭಿನ್ನ ಸಮಸ್ಯೆಗಳನ್ನು ಎತ್ತಿಕೊಂಡು ಸಂಶೋದನೆ ನಡೆಸಿದ್ದು ಕಂಡುಬರುತ್ತದೆ. ಪ್ರಾಚೀನ ಭಾರತದಲ್ಲಿ ವೇದೋತ್ತರ ಕಾಲದಲ್ಲಿ ಪ್ರಪ್ರಥಮ ರಾಜ್ಯ ನಿರ್ಮಾಣದ ಬೆಳವಣಿಗೆ ಯನ್ನು ಕುರಿತು ೧೯೭೦ರಿಂದಲೇ ಚರ್ಚೆಗಳು ಪ್ರಾರಂಭವಾಗಿ, ೧೯೮೨ರಲ್ಲಿ ರೋಮಿಲಾ ಥಾಪರ್ರ ಎಂಬ ಪ್ರಸಿದ್ದ ಇತಿಹಾಸಕಾರರು ತಮ್ಮ ‘ಲೇನಿಯೇಜ್ ಟು ಸ್ಟೇಟ್’ ಗ್ರಂತವನ್ನು ರಚಿಸಿದರು. ಈ ಗ್ರಂಥವು ವೇದೋತ್ತರ ಕಾಲದ ರಾಜಕೀಯ ಬೆಳವಣಿಗೆಯನ್ನು ಕುರಿತು ಅಧ್ಯಯನ ನಡೆಸುತ್ತದೆ. ಥಾಪರ್ ಅವರ ಗ್ರಹಿಕೆಗಳನ್ನು ಪ್ರಶ್ನಿಸುವ ಬದಲಿ ನಿರೂಪಣೆಗಳನ್ನುನೀಡುವ ಅನೇಕ ವದಗಳು ತದನಂತರ ಬಂದಿವೆ. ಆದರೆ ಒಂದು ಗಮನಾರ್ಹ ವಿಷಯವೆಂದರೆ ರಾಜ್ಯ ನಿರ್ಮಾಣದ ಕುರಿತು ಸೈದ್ದಾಂತಿಕ ಚರ್ಚೆಗಳು ಈಗ ಪ್ರಾರಂಭವಾಗಿವೆ. ಬಹುಶಃ ಭಾರತದ ಉಪಖಂಡದಲ್ಲಿ ಪ್ರಪ್ರಥಮ ರಾಜ್ಯ ಕಲ್ಪನೆ ಸಿಂಧೂ ಸಂಸ್ಕೃತಿಯಲ್ಲಿ ಹುಟ್ಟಿರಬೇಕು. ಆದರೆ ವೇದೋತ್ತರ ಕಾಲದ ರಾಜ್ಯ ಕಲ್ಪನೆಯಲ್ಲಿ ಅದರ ಪ್ರಭಾವ ಏನಿರ ಬಹುದು ಎಂದು ಗುರುತಿಸುವ ಸ್ಥಿತಿಯಲ್ಲೂ ನಾವಿಲ್ಲ. ಹಾಗಾಗಿ ವೇದಕಾಲದ ಅಂತ್ಯದಿಂದಲೇ ರಾಜ್ಯ ನಿರ್ಮಾಣದ ಕುರುಹುಗಳನ್ನು ಗುರುತಿಸಬೇಕಾಗಿದೆ.

ಉತ್ತರ ವೇದಕಾಲದಲ್ಲಿ ರಾಜ್ಯದ ಕಲ್ಪನೆ

ಉತ್ತರ ವೇದಕಾಲದಲ್ಲಿ, ಅಂದರೆ ಕ್ರಿ.ಪೂ. ೬-೭ನೆಯ ಶತಮಾನದ ನಂತರ ಎರಡು ಪ್ರದೇಶಗಳಲ್ಲಿ ರಾಜ್ಯ ಕಲ್ಪನೆಗಳು ಏಕಕಾಲದಲ್ಲಿ ಮೈತಳೆದ ಸಾಧ್ಯತೆ ಕಾಣಿಸುತ್ತದೆ. ಅದರೆಂದರೆ ಗಂಗಾ-ಯಮುನಾ ದೋಅಬ್ ಪ್ರದೇಶದ (ಆರ್ಯಾವರ್ತದ) ವೈದಿಕ ಕಲ್ಪನೆಗಳು ಹಾಗೂ ಪೂರ್ವಗಂಗಾ ಬಯಲಿನ ಅವೈದಿಕ (ಪ್ರಾಚ್ಯ) ರಾಜ್ಯ ಕಲ್ಪನೆಗಳು ಈ ಎರಡೂ ಪ್ರದೇಶಗಳಲ್ಲಿ ರಾಜ್ಯಗಳ ಪ್ರಭುತ್ವ ಎರಡು ವಿಭಿನ್ನ ರೀತಿಯದಾಗಿತ್ತು. ೧. ಗಣ ಪ್ರಭುತ್ವ ೨. ರಾಜಪ್ರಭುತ್ವ. ಗಂಗಾ ಬಯಲು, ವಾಯವ್ಯ ಭಾರತ ಹಾಗೂ ಮಧ್ಯ ಭಾರತದಲ್ಲಿ ಕ್ರಿ.ಪೂ. ಆರನೆಯ ಶತಮಾನದ ಸುಮಾರಿಗೆ ೧೬ ಮಹಾ ಜನಪದಗಳೂ ಇದ್ದವು ಎಂದು ನಂತರದ ಬೌದ್ಧಪಾಳಿ ಸಾಹಿತ್ಯಯ ಉಲ್ಲೇಖಿಸುತ್ತದೆ. ಇವುಗಳಲ್ಲಿ ಮುಖ್ಯವಾದವು ಎಂದರೆ ಮಗಧ, ಲಿಚ್ಛವಿ, ಕಾಶಿ, ಕೋಸಲ, ಪಾಂಚಾಲ, ಕುರು, ವತ್ಸ, ಮತ್ತ್ಯ, ಶೂರಸೇನ, ಆವಂತಿ, ಮದ್ರ ಮುಂತಾದವು. ಆಯಾ ಜನಪದಗಳ ಜನರನ್ನು ಜನಪದಗಳ ಹೆಸರಿನಿಂದಲೇ ಸೂಚಿಸುತ್ತಿದ್ದರು. ಈ ರೀತಿ ಕೌರವ, ಮಾಗಧ, ಪಾಂಚಾಲಿ ಮುಂತಾದ ಹೆಸರುಗಳು ಪರಿಚಿತವಾಗಿದೆ. ಇವು ಬಹುಶಃ ಬುಡಕಟ್ಟು ಅವಸ್ಥೆಯಿಂದ, ಹೊರಬರುತ್ತ ಕೃಷಿ ಸಮುದಾಯಗಳು ಪ್ರಭುತ್ವದ ಸೀಮೆಯನ್ನು (territorial sovereignty) ಗುರುತಿಸಿಕೊಂಡ ಹಂತ ಇರಬಹುದು. ಈ ಹಂತದಲ್ಲಿ ಬುಡಕಟ್ಟಿನ ಮುಖ್ಯಸ್ಥರು ಕ್ರಮೇಣ ಆಳ್ವಿಕೆಯ ವ್ಯವಸ್ಥೆಯನ್ನು ತಮ್ಮ ಕೈಯೊಳಗೆ ತೆಗೆದು ಕೊಂಡರು. ಇವರಲ್ಲಿ ಸಾಮೂಹಿಕವಾಗಿ ಆಳ್ವಿಕೆ ನಡೆಸುವ ಪದ್ಧತಿ ಬೆಳೆದಲ್ಲಿ ಅದು ಗಣ ಪ್ರಭುತ್ವ ಎಂದೆನಿಸಿತು. ವೈಯಕ್ತಿಕವಾಗಿ ನಿರ್ದಿಷ್ಟ ರಾಜ ವಂಶಗಳು ಆಳ್ವಿಕೆಯನ್ನು ತಮ್ಮ ಹತೋಟಿಯಲ್ಲಿ ತಂದುಕೊಂಡದ್ದು ರಾಜಪ್ರಭುತ್ವವಾಗಿ ಬೆಳೆಯಿತು.

ಈ ಗಣಪ್ರಭುತ್ವಗಳು ಬುಡಕಟ್ಟು ರಾಜ್ಯ ಪೂರ್ವ ಆಳ್ವಿಕೆ ಹಾಗೂ ರಾಜಪ್ರಭುತ್ವದ ಆಳ್ವಿಕೆಯ ಮಧ್ಯದ ಕೊಂಡಿಗಳಿರಬಹುದೆ ಎಂಬ ಪ್ರಶ್ನೆಯೂ ಏಳುತ್ತದೆ. ಅದೇನೇ ಇದ್ದರೂ, ರಾಜಪ್ರಭುತ್ವಗಳು ಕಾಣಿಸಿಕೊಂಡು ನಾನೂರು ಐನೂರು ವರ್ಷಗಳ ನಂತರವೂ ಈ ಗಣಪ್ರಭುತ್ವಗಳು ಅಸ್ತಿತ್ವವನ್ನು ಇಟ್ಟುಕೊಂಡಿದ್ದವು. ನಂತರ ನಾಮಾವಶೇಷವಾದವು. ‘ಗಣ’ ಕಲ್ಪನೆ ವೈದಿಕ ಸಾಹಿತ್ಯದಲ್ಲೂ ಕಾಣಿಸುತ್ತದೆ. ಋಗ್ವೇದದ ಸಮಾಜವು ‘ರಾಜ್ಯ’ ಪೂರ್ವ ಸಮಾಜ ಎಂಬುದು ನಿಶ್ಚಿತ. ಆದರೆ ಅದರಲ್ಲಿ ಬರುವ ‘ಗಣ’ ಶಬ್ದ ಕುತೂಹಲಕಾರಿಯಾಗಿದೆ. ಈ ಕಾಲದಲ್ಲಿ ಭರತ, ಯದು, ಪುರು ಮುಂತಾದ ಅನೇಕ ವೈದಿಕ ಹಾಗೂ ಅವೈದಿಕ ಬುಡಕಟ್ಟುಗಳಿದ್ದವು. ಈ ಬುಡಕಟ್ಟುಗಳು ‘ರಾಜತ್ವ’ ವಂಶಗಳ ಬುಡಕಟ್ಟಿನ ಆಳ್ವಿಕೆ ನಡೆಸುವವರಾಗಿದ್ದರು. ಆದರೆ ಇವರಿಗೆ ಸಾರ್ವಭೌಮ ಅಧಿಕಾರ ಇರಲಿಲ್ಲ. ವಂಶಪಾರಂಪರ್ಯ ಅಧಿಕಾರವೂ ಇರಲಿಲ್ಲ. ಆದರೆ ಕ್ರಿ.ಪೂ. ಏಳನೆಯ ಶತಮಾನದ ಸುಮಾರಿಗೆ ಕುರು, ಪಾಂಚಾಲ ಮುಂತಾದ ಜನಪದಗಳಲ್ಲಿ ರಾಜವಂಶಗಳ ಆಳ್ವಿಕೆ ಪ್ರಾರಂಭವಾದ ಸೂಚನೆ ಸಿಗುತ್ತದೆ. ಕುರು ವಂಶದ ರಾಜರು ಒಂದು ‘ರಾಜ್ಯ’ ವ್ಯವಸ್ಥೆಯ ಒಡೆಯರಾಗಿ ಚಿತ್ರಿತರಾಗಿದ್ದಾರೆ. ಅವರ ಬಳಿ ಚದುರಂಗ ಬಲ ಇದ್ದು, ಆಡಳಿತಾಧಿಕಾರಿಗಳ ಶ್ರೇಣಿಗಳಿದ್ದು, ತಮ್ಮ ಗಡಿಯೊಳಗೆ ಅವರು ಸಾರ್ವಭೌಮ ಶಕ್ತಿಗಳಾಗಿದ್ದರು ಎಂಬ ಮಹಾಭಾರತದ ಚಿತ್ರಣ ಕ್ರಿ.ಪೂ. ೫-೪ನೆಯ ಶತಮಾನದ ನಂತರ ಸೇರಿಸಿದ್ದು ಎಂಬುದು ಸ್ಪಷ್ಟ. ಆದರೆ ರಾಜವಂಶಗಳು ಬುಡಕಟ್ಟಿನ ಕಟ್ಟಳೆಗಳನ್ನು ಮೀರಿ ತಮ್ಮ ಅಧಿಕಾರವನ್ನೂ ಇದಕ್ಕೂ ಮೊದಲೇ ಬೆಳೆಸಿಕೊಂಡಿದ್ದುದರಲ್ಲಿ ಅನುಮಾನವಿಲ್ಲ.

ಬಹುಶಃ ಉತ್ತರ ವೇದಕಾಲದಲ್ಲಿ ಗಂಗಾಬಯಲಿನ ದುರ್ಗಮ ಅರಣ್ಯಗಳನ್ನು ಕಡಿದು ವ್ಯವಸಾಯ ಭೂಮಿಯನ್ನಾಗಿ ಪರಿವರ್ತಿಸಿ, ಸ್ಥಾನಿಕ ಬುಡಕಟ್ಟುಗಳ ಪ್ರತಿರೋಧವನ್ನು ಜಯಿಸಿ, ಅವರನ್ನು ತಮ್ಮ ಹತೋಟಿಯಲ್ಲಿ ತಂದು ಆರ್ಯ ಬುಡಕಟ್ಟುಗಳು ಕೃಷಿ ಸಮಾಜಗಳಾಗಿ ನೆಲೆಯೂರಿದಾಗಲೆ ರಾಜಪ್ರಭುತ್ವದ ಅಂಕುರವಾಗಿರಬಹುದು. ಏಕೆಂದರೆ ಈ ಕೆಲಸವನ್ನು ವೈದಿಕ ರಾಜನ್ಯರು / ಕ್ಷತ್ರಿಯರು ಮುಂದಾಳುಗಳಾಗಿ ನಡೆಸಬೇಕಾಯಿತು. ಹೀಗೆ ಹೊಸ ಹೊಸ ಪ್ರದೇಶಗಳಲ್ಲಿ ಆರ್ಯ ಬುಡಕಟ್ಟುಗಳ ವಲಸೆ ಹಾಗೂ ಆಕ್ರಮಣದ ನಂತರ ಅಸಂಕ್ಯ ಆರ್ಯೇತರ ಜನರೂ ಹೊಸ ವ್ಯವಸಾಯ ಸಂಸ್ಕೃತಿಯಲ್ಲಿ ಸೇರ್ಪಡೆ ಹೊಂದಿದರು. ಈ ರೀತಿಯ ಸಾಮಾಜಿಕ ಪರಿವರ್ತನೆ ವೈದಿಕ ವರ್ಣಧರ್ಮದ ನಿರೂಪಣೆಯ ಮೂಲಕ ನಡೆಯಿತು. ಈ ವರ್ಗ ಕಲ್ಪನೆಯಲ್ಲಿ ಆರ್ಯ ಬುಡಕಟ್ಟುಗಳ ಬ್ರಾಹ್ಮಣ, ರಾಜನ್ಯ, ವಿಶಃಗಳಲ್ಲದೇ ಆರ್ಯೇತರ ಶೂದ್ರ ಸಮುದಾಯವೂ ಸೇರಿದೆ. ಈ ರೀತಿ ಈಗ ರಾಜರ ಆಳ್ವಿಕೆ ಬುಡಕಟ್ಟಿನ ಚೌಕಟ್ಟಿನ ಮಿತಿಯನ್ನು ಮೀರಿತು. ರಾಜನು ಈಗ ವಿಭಿನ್ನ ಬುಡಕಟ್ಟುಗಳ ಮೂಲದ, ವಿಭಿನ್ನ ಸಂಸ್ಕೃತಿಗಳ ‘ಪ್ರಜೆ’ಗಳನ್ನು ತನ್ನ ಆಳ್ವಿಕೆಯೊಳಗೆ ತರಬೇಕಾಯಿತು. ಹಾಗಾಗಿ ರಾಜನ ಪ್ರಭುತ್ವದ ಮಾನ್ಯತೆಗೆ ಹೊಸ ನೆಲೆಗಳನ್ನು ನಿರ್ಮಿಸಬೇಕಾಯಿತು. ಈ ಸಂದರ್ಭದಲ್ಲಿ ರಾಜರು – ಬ್ರಾಹ್ಮಣರು ಪರಸ್ಪರರನ್ನು ಪೋಷಿಸಿದ್ದು ಕಂಡುಬರುತ್ತದೆ. ಆರ್ಯ ಬುಡಕಟ್ಟುಗಳನ್ನು ಹೊಸ ಹೊಸ ಪ್ರದೇಶಗಳಲ್ಲಿ ನೆಲೆ ನಿಲ್ಲಿಸಿದ ವೀರರು ಸಾರ್ವಭೌಮತ್ವವನ್ನು ಗಳಿಸುವಾಗ ವೈದಿಕ ಯಜ್ಞ ಯಾಗಾದಿಗಳು, ವಿಧಿಗಳು ಕೂಡ ನಿರ್ಣಾಯಕವಾದವು.

ಈ ರೀತಿ ‘ರಾಜ’ಪ್ರಭುತ್ವದ ಪ್ರಾರಂಭ ಅವಸ್ಥೆಯಲ್ಲಿ ವೈದಿಕ ಯಜ್ಞ ಯಾಗಾದಿಗಳೂ ತೀರ ಸಂಕೀರ್ಣವಾಗಿ ಬೆಳೆದವು. ರಾಜರ ಅಧಿಕಾರವನ್ನು ಮಾನ್ಯ ಮಾಡುವ ಪಟ್ಟಾಭಿಷೇಕ ವಿಧಿ ಬೆಳೆಯಿತು ಅಶ್ವಮೇಧ, ರಾಜಸೂಯ, ವಾಜಪೇಯ ಮುಂತಾದ ಹಲವಾರು ಯಾಗಗಳು ರಾಜತ್ವದ ವರ್ಧನೆಯನ್ನು ಮಡಿ ರಾಜನಲ್ಲಿ ಅತಿಮಾನುಷ ಶಕ್ತಿಯನ್ನು ತುಂಬುತ್ತವೆ ಎಂದು ನಂಬಿದ್ದರು. ಅವರ ನಂಬಿಕೆಯ ಜೊತೆ ಪ್ರಜೆಗಳಿಗೆ ಈ ಕುರಿತು ವಿಶ್ವಾಸ ಕುದುರಿಸುವ ಉದ್ದೇಶವೂ ಇತ್ತು. ರಾಜನೆಂದರೆ ವಿಷ್ಣುವಿನ ರೂಪವೇ ಆಗಿದ್ದಾನೆ, ಆತನಲ್ಲಿ ಅಷ್ಟದಿಕ್ಪಾಲರ ನಿಯತಿ ಮೈಗೂಡಿರುತ್ತದೆ ಎಂದು ಧರ್ಮಗ್ರಂಥಗಳು ಪ್ರತಿಪಾದಿಸಿದವು. ಅಂದರೆ, ‘ರಾಜ’ ನೆಂಬವನು ‘ದೇವ’ನ ನಿಯತಿಯನ್ನು ಭೂಲೋಕದಲ್ಲಿ ಕಾಯಲು ಬಂದವನು. ಭೂಲೋಕದಲ್ಲಿ ಮಳೆ-ಬೆಳೆ ಸರಿಯಾಗಿ ನಡೆದು ಉತ್ಪಾದನೆ ಸಮೃದ್ಧಿ ನೆಲೆಸಬೇಕಾದರೆ ಸಾಮಾಜಿಕ ಶಾಂತಿ ಸುವ್ಯವಸ್ಥೆ ನೆಲೆಸಬೇಕಾದರೆ ಇಂಥ ಅತಿಮಾನುಷ ಶಕ್ತಿಯ ರಾಜ ಇರಬೇಕು ಎಂದು ನಂಬುವ ರಾಜ್ಯ ಸಂಸ್ಕೃತಿಯನ್ನು ಬೆಳೆಸಲಾಯತು.

ಉತ್ತರ ವೈದಿಕ ರಾಜ್ಯ ಕಲ್ಪನೆಯಲ್ಲಿ ಬ್ರಾಹ್ಮಣರು ವರ್ಣಧರ್ಮದ ನಿರೂಪಕನಾಗಿ ನಿರ್ಣಾಯಕ ಸ್ಥಾನ ಪಡೆಯುತ್ತಾರೆ. ರಾಜರು ತಮ್ಮ ಮಾನ್ಯತೆಗಾಗಿ ಹಾಗೂ ಅತಿಮಾನುಷ ಶಕ್ತಿಯ ವರ್ಧನೆಗಾಗಿ ಬ್ರಾಹ್ಮಣರನ್ನು ಆಶ್ರಯಿಸಿದ್ದರು. ಅಧಾರ್ಮಿಕನಾದ ರಾಜ ಆಪದವಿಗೆ ಅರ್ಹನಲ್ಲ, ವರ್ಣಧರ್ಮವಿಲ್ಲದ ರಾಜ್ಯವನ್ನು ಬ್ರಾಹ್ಮಣರು ಮಾನ್ಯ ಮಾಡಬಾರದು ಎಂಬವಾದಗಳು ಬೆಳೆದವು. ವೇಣನೆಂಬ ರಾಜನು ವರ್ಣಧರ್ಮವನ್ನು ಮಾನ್ಯ ಮಾಡದ ಕಾರಣ ಬ್ರಾಹ್ಮಣರು ಆತನನ್ನು ರಾಜ್ಯದ ಹಿತಕ್ಕಾಗಿ ಬಲಿಕೊಟ್ಟು ಅವನ ಬಲಗೈಯನ್ನು ಕಡಿದಾಗ ಪೃಥು ಎಂಬುವನು ಹುಟ್ಟಿದನು. ಪೃಥುವು ವರ್ಣಧರ್ಮದಲ್ಲಿ ನಿಷ್ಠೆಯುಳ್ಳವನಾಗಿದ್ದನು. ಹಾಗಾಗಿ ಆತನ ದೇಹದಲ್ಲಿ ವಿಷ್ಣು ಸೇರಿಕೊಳ್ಳುತ್ತಾನೆ. ಪೃಥುವು ಆದರ್ಶ ರಾಜನಾಗುತ್ತಾನೆ. ಆ ಪೃಥುವೇ ಪ್ರಪ್ರಥಮ ರಾಜ ಎಂದು ಪುರಾಣಕಥೆಯೊಂದು ಮಹಾಭಾರತದಲ್ಲಿ ವರ್ಣ ಸಂಕರವಾಗಿ ಧರ್ಮನಾಶವಾಯಿತು. ಕೌಟುಂಬಿಕ ನೀತಿ ಹಾಳಾಗಿ ಪ್ರಬಲರು ದುರ್ಬಲರ ಸಂಪತ್ತನ್ನು ಲಪಟಾಯಿಸತೊಡಗಿದರು. ಕುಲ ಸ್ತ್ರೀಯರನ್ನು ಬಲಾತ್ಕರಿಸತೊಡಗಿದರು. ಈ ಅರಾಜಕ ಅವಸ್ಥೆಯಿಂದ ತಪ್ಪಿಸಿಕೊಳ್ಳಲು ಜನರು ಬ್ರಹ್ಮನಲ್ಲಿ ಮೊರೆ ಇಟ್ಟಾಗ ಬ್ರಹ್ಮನು ‘ರಾಜ’ನನ್ನು ಸೃಷ್ಟಿಸಿ ಕಳುಹಿಸಿದನು. ರಾಜನು ರಾಜ್ಯಪಾಲನೆ ಮಾಡಿದ್ದಕ್ಕೆ ಪ್ರತಿಯಾಗಿ ಪ್ರಜೆಗಳು ಆತನಿಗೆ ಶುಲ್ಕ ರೂಪದಲ್ಲಿ ತಮ್ಮ ಉತ್ಪಾದನೆಯ ಒಂದು ಭಾಗವನ್ನು ನೀಡಬೇಕು ಎಂದು ಆಣತಿ ಮಾಡಿದನು.

ಈ ಮೇಲಿನ ಪುರಾಣಗಳು ವೇದೋತ್ತರ ಕಾಲದ ವೈದಿಕ ರಾಜ್ಯ ಕಲ್ಪನೆಯನ್ನು ವಿಶಧಿಕರಿಸುತ್ತವೆ. ರಾಜ್ಯ ಎನ್ನುವುದು ಶಾಂತಿ ಸುವ್ಯವಸ್ಥೆಗೆ ಅನಿವಾರ್ಯವಾದ ಒಂದು ಸಾರ್ವಭೌಮ ಶಕ್ತಿ. ಅದು ಒಂದು ಶ್ರೇಣೀಕೃತ ಸಮಾಜ ವ್ಯವಸ್ಥೆಯ ಮೂಲಕ, ಶಾಂತಿಯುತವಾದ, ವ್ಯವಸ್ಥಿತವಾದ ಜೀವನವನ್ನು ಕಲ್ಪಿಸುತ್ತದೆ ಎಂಬ ಸಂದೇಶ ಈ ಕಥೆಗಳಲ್ಲಿದೆ. ಬ್ರಾಹ್ಮಣಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ಎಂಬ ನಾಲ್ಕು ವರ್ಣಗಳು ರಾಜ್ಯದ ವಿಭಿನ್ನ ಸಮಾಜಗಳನ್ನು, ವೃತ್ತಿಗಳನ್ನು ಶ್ರೇಣೀಕರಿಸಿ ಅಳಲು ಮಾಧ್ಯಮಗಳಾದವು. ವರ್ಣ ಎಂಬುದು ಮೂಲತಃ ಒಂದು ಕಾಲ್ಪನಿಕ, ನಿರೂಪಣಾತ್ಮಕ ಚೌಕಟ್ಟಾಗಿದೆ. ನಿಜವಾದ ಸಾಮಾಜಿಕ ಪ್ರಬೇಧ ಎಂದರೆ ‘ಜಾತಿ.’ ಇದು ಒಂದು ರಕ್ತ ಸಂಬಂಧಿ ಸಾಮಾಜಿಕ ಸಂಘಟನೆ. ಇಲ್ಲಿ ಸದಸ್ಯತ್ವ ಹುಟ್ಟಿನಿಂದಲೇ ಬರುತ್ತದೆ. ಇಂಥ ಅನೇಕ ಸಮಾಜಗಳನ್ನು ರಾಜ್ಯ ಸಮಾಜದೊಳಗೆ ಒಳಗೊಳ್ಳುವಾಗ ಅವುಗಳನ್ನು ತರ-ತಮ ಶ್ರೇಣಿಯಲ್ಲಿಟ್ಟು ನಿರೂಪಿಸಬೇಕಾಯಿತು. ಏಕೆಂದರೆ ರಾಜ್ಯ ನಿರ್ಮಾಣವಾಗುವಾಗ ಇಂಥ ಸಮಾಜಗಳು ಆಳುವ-ಆಳಿಸಿಕೊಳ್ಳುವ, ಆಸ್ತಿವಂತ-ಆಸ್ತಿಹೀನತೆಯ, ದುಡಿಯುವ – ದುಡಿಸುವ ಸಂಬಂಧದಲ್ಲಿ ಸಿಲುಕಿದ್ದವು. ಈ ಸಂಬಂಧವನ್ನು ಕಾಪಾಡುವ ಶ್ರೇಣೀಕೃತ ವ್ಯವಸ್ಥೆಯಲ್ಲೇ ರಾಜ್ಯ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗಿತ್ತು. ಹಾಗಾಗಿ ವೇದೋತ್ತರ ಕಾಲದ ಧರ್ಮಸೂತ್ರಗಳು ವರ್ಣಸಂಖರ ಹಾಗೂ ಸಂಕೀರ್ಣ ಜಾತಿಯ ಕಲ್ಪನೆಯನ್ನು ಬೆಳೆಸಿದವು. ಅಂದರೆ ಒಂದು ರಾಜ್ಯದ ವಿಭಿನ್ನ ರಕ್ತ ಸಂಬಂಧಿ ಸಮಾಜಗಳು ಮೂಲತಃ ನಾಲ್ಕು ವಣಘಗಳಿಂದ ಉದ್ಭವವಾದಂತವು. ಆದರೆ ಅವು ಸಂಕರಗಳಾದ್ದರಿಂದ ಆರ್ಯ ಪ್ರತಿಷ್ಠಿತ ಸ್ಥಾನಮಾನವನ್ನು ಶ್ರೇಷ್ಠ ಎಂದು ನಿರೂಪಿಸಲಾಯಿತು. ಅನಾರ್ಯ ಜನರನ್ನು ಸಂಕೀರ್ಣ ಜಾತಿಗಳೆಂದು ಕೆಳಗೆ ಇಡಲಾಯಿತು. ಈ ಮೇಲೆ ಕಾಣಿಸಿದ ಐಡಿಯಾಲಜಿಕಲ್‌ನಿರೂಪಣೆಗಳು ವೈದಿಕ ಕಲ್ಪನೆಯವಾದರೂ, ಕ್ರಮೇಣ ಪ್ರಾಚೀನ ಭಾರತೀಯ ರಾಜ್ಯಗಳ ಸಾಮಾನ್ಯ ತಾತ್ವಿಕತೆಗಳಾಗಿ ಬೆಳೆದವು. ಅದು ನಮಗೆ ನಿದರ್ಶನವಾಗುವುದು ಕ್ರಿಸ್ತಶಕದ ನಂತರ.

ಕ್ರಿ.ಪೂ. ಆರನೆಯ ಶತಮಾನದ ಸುಮಾರಿಗೆ ಪೂರ್ವಗಂಗಾ ಬಯಲಿನಲ್ಲಿ ಅವೈದಿಕ ‘ರಾಜ್ಯ’ ಕಲ್ಪನೆ ಉದಯವಾಯಿತು. ಇದರ ಒಂದು ಚಿತ್ರಣ ನಮಗೆ ಪಾಳಿ ಸಾಹಿತ್ಯದಲ್ಲಿ ಸಿತುತ್ತದೆ. ಪಾಳಿ ಸಾಹಿತ್ಯಗಳು ಈ ಪ್ರದೇಶದ ಆಳ್ವಿಕೆಯ್ನನು ಗಣಾಧೀನ ಹಾಗೂ ರಾಜಾಧೀನ ಎಂದೂ ವರ್ಗೀಕರಿಸುತ್ತವೆ. ಗಣಗಳಲ್ಲಿ ಮುಖ್ಯವಾದುವು ಲಿಚ್ಛವಿ, ಯೌಧೇಯ, ಮಾಳವ, ಸಾಕ್ಯ, ಕೋಳಿಯ ಮುಂತಾದವು. ಈ ಗಣಗಳದು ಸಾಮೂಹಿಕ ಪ್ರಭುತ್ವವಾದ್ದರಿಂದ ‘ಗಣ’ ಎಂಬ ಹೆಸರು ಬಂದಿದೆ. ಇವುಗಳನ್ನು ಗಣಸಂಘಗಳು ಎಂದೂ ಕರೆಯುತ್ತಿದ್ದರು. ಇವುಗಳಲ್ಲಿ ಅನೇಕ ರಾಜರು ಇರುತ್ತಿದ್ದರು. ‘ರಾಜ’ರು ಆಸ್ತಿಪಾಸ್ತಿಗಳನ್ನು ಹೊಂದಿದ್ದ ಪ್ರತಿಷ್ಠಿತರಾಗಿದ್ದರು. ಕೆಲವೊಮ್ಮೆ ರಾಜರ ಸಂಖ್ಯೆ ಸಾವಿರಾರು ಇರುತ್ತಿತ್ತು. ಇವರೆಲ್ಲ ಒಟ್ಟಾಗಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದರು. ಇವರು ಸಭೆ ಸೇರದ ಸ್ಥಳವನ್ನು ಸಂಥಾಗಾರ ಎನ್ನಲಾಗುತ್ತಿತ್ತು. ನಿರ್ದಿಷ್ಟ ವರ್ಷಗಳ ಅವಧಿಗೆ ಇವರು ಒಬ್ಬ ಗಣರಾಜನನ್ನು ಆಯ್ಕೆ ಮಾಡುತ್ತಿದ್ದರು. ಗಣಗಳೂ ರಾಜ್ಯಗಳ ಸ್ವರೂಪವನ್ನು ಹೊಂದಿದ್ದವು. ಉಪರಾಜರು, ಸೇನಾಪತಿಗಳು, ಭಾಂಡಾಗಾರಿಕರು, ಅಮಾತ್ಯರು ಗಣದ ಆಡಳಿತದಲ್ಲಿ  ಅಧಿಕಾರಿಗಳಾಗಿದ್ದರು. ಈ ರಾಜರು ಸ್ವಂತ ಕೃಷಿ ಕ್ಷೇತ್ರಗಳನ್ನು ಹೊಂದಿದ್ದು ಕೃಷಿಯನ್ನು ದಾಸ-ಕರ್ಮಕಾರರ ದುಡಿಮೆಯಿಂದ ನಡೆಸುತ್ತಿದ್ದರು. ಈ ದಾಸ-ಕರ್ಮಕಾರರು ಗಣದ ಸದಸ್ಯರಾಗಿಲಿಲ್ಲ.

ಪೂರ್ವ ಭಾರತದ ಈ ಗಣ ಪ್ರಭುತ್ವಗಳು ಅವೈದಿಕ ಪ್ರಭುತ್ವಗಳಾಗಿದ್ದವು. ಇವುಗಳಲ್ಲಿ ವರ್ಣ ಕಲ್ಪನೆ ಮೂಲತಃ ಇರಲಿಲ್ಲ. ಬ್ರಾಹ್ಮಣರಿಗೆ ಉಚ್ಚ ಸ್ಥಾನಮಾನ ಇರಲಿಲ್ಲ. ಕ್ಷತ್ರಿಯರೇ ಸರ್ವೋಚ್ಚ ಪ್ರಜೆಗಳಾಗಿದ್ದರು. ಪಾಳಿ ಸಾಹಿತ್ಯದಲ್ಲಿ ರಾಜ್ಯದ ಉಗಮದ ಸಂಬಂಧಿಸಿ ಇರುವ ಪುರಾಣವು ವರ್ಣಧರ್ಮ ಕಲ್ಪನೆಯನ್ನು ಉಲ್ಲೇಖಿಸುವುದಿಲ್ಲ. ಬದಲಾಗಿ ಇದರ ಪ್ರಕಾರ ಪೂರ್ವದಲ್ಲಿ ಜನರಿಗೆ ತಮ್ಮ ಕೃಷಿ ಭೂಮಿಯ ಗಡಿಗಳ ಸಂಬಂಧಿಸಿ, ಹಕ್ಕಿಗೆ ಸಂಬಂಧಿಸಿ ಹೊಡೆದಾಟ ಪ್ರಾರಂಭವಾಯಿತು. ನೀರಾವರಿ ಹಂಚಿಕೆ ಮಾಡುವವರಿಲ್ಲದೇ ಜಗಳ ಉಂಟಾಯಿತು. ಈ ಬಿಕ್ಕಟ್ಟಿನಿಂದ ಪಾರಾಗಲು ಜನರೇ ರಾಜನೊಬ್ಬನನ್ನು ಆಯ್ಕೆ ಮಾಡಿದರು. ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ಹೊಣೆ ಅವನಿಗೆ ಒಪ್ಪಿಸಿ ಆ ಕೆಲಸಕ್ಕಾಗಿ ಆತನಿಗೆ ತಮ್ಮ ಉತ್ಪಾದನೆಯ ಒಂದು ಭಾಗವನ್ನು ನೀಡುವ ವ್ಯವಸ್ಥೆ ಮಾಡಿಕೊಂಡರು. ಈ ಪುರಾಣದ ಪ್ರಕಾರ ರಾಜ್ಯ ಎಂಬುದು ತೀರ ಐಹಿಕ ಅಗತ್ಯಕ್ಕಾಗಿ ಬಂದ ವ್ಯವಸ್ಥೆ. ಈ ಪೂರ್ವ ಭಾರತದ ರಾಜ್ಯಗಳಲ್ಲಿ ಬ್ರಾಹ್ಮಣರಂತೇ ಒಂದು ಪುರೋಹಿತ ವರ್ಗವು ರಾಜತ್ವವನ್ನು ಮಾನ್ಯ ಮಾಡುವ ಮಟ್ಟದಲ್ಲಿ ಬೆಳೆದಿರಲಿಲ್ಲ. ಕಾರಣ ಎಂದರೆ ಗಣ ಪ್ರಭುತ್ವಗಳಲ್ಲಿ ಗಣರಾಜರು ಸಾಮೂಹಿಕ ಆಯ್ಕೆಯಾಗಿರುತ್ತಾರೆ, ಅದಕ್ಕೆ ಅತಿಮನುಷ ಕಲ್ಪನೆಗಳು ಮನ್ಯತೆಗಾಗಿ ಅಗತ್ಯವಿರಲಿಲ್ಲ.