ಮಗಧದ ಉತ್ಕರ್ಷ

ಈ ಹಿಂದೆ ಉಲ್ಲೇಖಿಸಿದಂತೇ ಗಂಗಾಬಯಲಿನ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಕ್ರಿ.ಪೂ. ಆರನೆಯ ಶತಮಾನದ ಸುಮಾರಿಗೆ ‘ರಾಜ್ಯ’ ವ್ಯವಸ್ಥೆಯ ಕೆಲ ಮೂಲಭೂತ ಅಂಗಗಳು ರೂಪುಗೊಂಡಿದ್ದವು. ಆದರೆ ಈ ಬೆಳವಣಿಗೆ ಗಂಗಾಬಯಲಿನ ಮಹಾಜನಪದಗಳಲ್ಲೆಲ್ಲ ಪ್ರತ್ಯೇಕವಾಗಿ ನಡೆದ ಬೆಳವಣಿಗೆಯಾಗಿತ್ತು. ಈ ಜನಪದಗಳಲ್ಲೇ ಮಗಧವು ಕ್ರಿ.ಪೂ. ೫ನೆಯ ಶತಕದ ನಂತರ ಹೆಚ್ಚು ಆಕ್ರಮಣಶೀಲವಾಯಿತು. ಅಕ್ಕಪಕ್ಕದ ರಾಜ್ಯಗಳ ಮೇಲೆಲ್ಲ ಅದು ತನ್ನ ಸ್ವಾಮ್ಯವನ್ನು ಸ್ಥಾಪಿಸುತ್ತ ಸಾಮ್ರಾಜ್ಯವಾಗಿ ಬೆಳೆಯಿತು. ಈ ಬೆಳವಣಿಗೆಗೆ ಪೂರ್ವಭಾವಿಯಾಗಿ ಮಗಧ ರಾಜ್ಯವು ರಾಜವಂಶದ ಆಳ್ವಿಕೆಗೆ ಒಳಪಟ್ಟಿತ್ತು. ಬುದ್ಧನ ಸಮಕಾಲೀನರು ಎನ್ನಲಾದ ಇಬ್ಬರು ರಾಜರೆಂದರೆ ಮಗಧದ ಅಜಾತಶತ್ರು ಹಾಗೂ ಕೋಸಲದ ಪ್ರಸೇನಜಿತ್‌ ಎಂಬವರು. ಅಜಾತಶತ್ರವು ಬಿಂಬಿಸಾರನೆಂಬ ರಾಜನ ಮಗನಾಗಿದ್ದನು. ಆತನು ಗಿರಿವೃಜದಿಂದ ಪಾಟಲೀಪುತ್ರಕ್ಕೆ ಮಗಧದ ರಾಜಧಾನಿಯನ್ನು ಬದಲಾಯಿಸಿದನು. ಈ ರಾಜರಿಂದ, ಅಕ್ಕಪಕ್ಕದ ಗಣ ಪ್ರಭುತ್ವಗಳ ಅಸ್ತಿತ್ವಕ್ಕೆ ಅಪಾಯ ಬಂದಿತು. ಇವರು ತಮ್ಮ ಆಕ್ರಮಣ ನೀತಿಯಿಂದ ಗಣಗಳನ್ನು ಸೋಲಿಸಿ ನಿರ್ನಾಮ ಮಾಡಿ ತಮ್ಮ ರಾಜ್ಯ ವಿಸ್ತರಣೆ ಮಾಡುವುದರಲ್ಲಿ ಮಗ್ನರಾಗಿದ್ದರು. ಅಜಾತಶತ್ರುವು ಈ ರೀತಿ ಲಿಚ್ಛವಿ ಗಣವನ್ನು, ಕಾಶಿ, ಕೋಸಲ ರಾಜ್ಯಗಳನ್ನು ಹಾಗೂ ಸುತ್ತ ಮುತ್ತಲ ಪ್ರದೇಶವನ್ನು ತನ್ನ ಯುದ್ಧ ತಂತ್ರದಿಂದಾಗಿ ಮಗಧರ ಆಳ್ವಿಕೆಗೆ ಸೇರಿಸಿದ್ದನು. ಅಷ್ಟೇ ಅಲ್ಲದೇ ಮಗಧದ ರಾಜರು ಸಮರ್ಥವಾಗಿ ತಮ್ಮ ರಾಜ್ಯದ ಕೃಷಿ ಹಾಗೂ ವಾಣಿಜ್ಯ ವ್ಯವಸ್ಥೆಯನ್ನು ಹತೋಟಿಯಲ್ಲಿ ತೆಗೆದುಕೊಂಡಿದ್ದು ಕಂಡುಬರುತ್ತದೆ. ವ್ಯಾಪಾರಿ ವರ್ಗಗಳನ್ನು ದರೋಡೆಕೋರರಿಂದ ರಕ್ಷಿಸಿದರು. ಪಾಟಲೀಪುತ್ರವು ಗಂಗಾನದಿಯ ದಡದಲ್ಲಿದ್ದು ಗಂಗಾನದಿಯು ಪಾಟಲೀಪುತ್ರದವರೆಗೆ ಒಂದು ಹಿರಿದಾದ ನದಿಮಾರ್ಗವಾಗಿದೆ. ಕ್ರಿ.ಪೂ. ೫ನೆಯ ಶತಮಾನದಿಂದ ಗಂಗಾಬಯಲಿನಲ್ಲಿ ನಗರೀಕರಣ ಪ್ರಕ್ರಿಯೆ ಪ್ರಾರಂಭವಾದದ್ದು ಕಂಡುಬರುತ್ತದೆ. ವ್ಯಾಪಾರ ವಾಣಿಜ್ಯದ ಬೆಳವಣಿಗೆಯೊಂದಿಗೆ ಮಹಾನಗರ, ನಗರ, ಪಟ್ಟಣ, ನಿಗಮ ಮುಂತಾದ ಕೇಂದ್ರಗಳು ಬೆಳೆದವು. ವ್ಯಾಪಾರವು ನಾಣ್ಯ ಚಲಾವಣೆಯಿಂದ ಹೆಚ್ಚಿತು. ಪಟ್ಟಣಗಳಲ್ಲಿ ನೂರಾರು ವ್ಯವಸಾಯೇತರ ವೃತ್ತಿಗಳು ಬೆಳೆದವು. ಈ ಬೆಳವಣಿಗೆಯ ಜೊತೆ ಜೊತೆಗೇ ಮಗಧ ಸಾಮ್ರಾಜ್ಯ ಉಚ್ಛ್ರಾಯ ಸ್ಥಿತಿ ತಲುಪಿತು. ಅಜಾತಶತ್ರುವಿ ನಂತರ ‘ಶಿಶುನಾಗ’ ವಂಶದವರು ಮಗಧವನ್ನು ಆಳಿದರು. ತದನಂತರ ನಂದರು ಆಳಿದರು. ಈ ರಾಜರೆಲ್ಲ ಚದುರಂಗ ಬಲವನ್ನು ಹೊಂದಿದ್ದರು. ನಂದರು ಎರಡು ಲಕ್ಷ ಜನ ಕಲಾಳುಗಳನ್ನು ತಮ್ಮ ಸೈನ್ಯದಲ್ಲಿ ಹೊಂದಿದ್ದರು ಎಂದು ಗ್ರೀಕ್‌ ಆಕರಗಳು ತಿಳಿಸುತ್ತವೆ.

ಮಗಧದಲ್ಲಿ ಮೌರ್ಯರ ಆಳ್ವಿಕೆ ಪ್ರಾರಂಭವಾಗುವುದಕ್ಕೂ ಪೂರ್ವದಲ್ಲೇ ರಾಜ್ಯಾಡಳಿತದ ವ್ಯವಸ್ಥೆ ಗಟ್ಟಿಯಾಗಿತ್ತು. ರಾಜ್ಯವು ವಿಭಿನ್ನ ಅಧಿಕಾರಿಗಳನ್ನು ನಿಯಮಿಸಿ ಅವರ ಸಹಾಯದಿಂದ ಉತ್ಪಾದನೆಯ ಉಸ್ತುವಾರಿ, ಕಂದಾಯ ವಶೂಲಿ, ಪ್ರಜಾಕಲ್ಯಾಣದ ಕೆಲಸಗಳನ್ನೆಲ್ಲ ನಿರ್ವಹಿಸುತ್ತಿತ್ತು. ಮೌರ್ಯ ಕಾಲದಲ್ಲಿ ರಚಿತವಾದ ಅರ್ಥಶಾಸ್ತ್ರಕ್ಕೆ ಕನಿಷ್ಟ ಇನ್ನೂರು ವರ್ಷಗಳ ಇತಿಹಾಸವಾದರೂ ಇದ್ದಿರಬೇಕು. ರಾಜ್ಯವು ನೀರಾವರಿ ನಾಲೆಗಳನ್ನು ನಿರ್ಮಿಸಿ ವ್ಯವಸಾಯೋತ್ಪಾದನೆಯನ್ನು ಹೆಚ್ಚಿಸಿತ್ತು. ವ್ಯಾಪಾರಿ ಕರಗಳನ್ನು ವ್ಯವಸ್ಥಿತವಾಗಿ ವಸೂಲಿ ಮಾಡುತ್ತಿತ್ತು. ಈ ರೀತಿ ನಂದ ರಾಜರ ಭಾಂಡಾಗಾರವು ಅದ್ಭುತವಾಗಿ ಬೆಳೆದಿತ್ತು.

ಕ್ರಿ.ಪೂ. ೩೨೬ರಲ್ಲಿ ಅಲೆಗ್ಸಾಂಡರನು ವಾಯುವ್ಯ ಭಾರತದಲ್ಲಿ ದಾಳಿ ನಡೆಸುತ್ತಿದ್ದಾಗ ಮೌರ್ಯ ವಂಶದ ಚಂದ್ರಗುಪ್ತನು ಮಗಧದ ರಾಜನಾಗಲು ಸನ್ನಾಹ ನಡೆಸುತ್ತಿದ್ದನು. ಈ ಕಾಲದಲ್ಲಿ ಮಗಧದ ಆಳ್ವಿಕೆ ಬಹುಶಃ ಗಂಗಾಬಲಯಲಿಗಷ್ಟೇ ಸೀಮಿತಗೊಂಡಿದ್ದಂತೇ ತೋರುತ್ತದೆ. ಅದರ ಸುತ್ತಮುತ್ತ ಅನೇಕ ಗಣಪ್ರಭುತ್ವಗಳು ಇನ್ನೂ ಇದ್ದವು. ಅಲೆಗ್ಸಾಂಡರನು ಇಂಥವೇ ಗಣಗಳನ್ನು, ರಾಜರನ್ನು ಎದುರಿಸುತ್ತಿದ್ದನು. ಕ್ರಿ.ಪೂ. ೩೨೦ರ ನಂತರ ಅಲೆಗ್ಸಾಂಡರನು ವಾಪಸು ಹೋದ ನಂತರ ಪ್ರಕ್ಷುಬ್ಧದ ವಾಯವ್ಯ ಭಾರತವೆಲ್ಲ ಮಗಧ ಸಾಮ್ರಾಜ್ಯದ ಪಾಲಾಯಿತು ಹಾಗೂ ಚಂದ್ರಗುಪ್ತನು ಅದರ ಸಾಮ್ರಾಟನಾಗಿದ್ದನು. ಭಾರತೀಯ ಸಾಂಪ್ರದಾಯವು ಅರ್ಥಶಾಸ್ತ್ರದ ಕರ್ತೃ ಚಾಣಕ್ಯನನ್ನು ಚಂದ್ರಗುಪ್ತನ ಪುರೋಹಿತ ಎಂದು ತಿಳಿಸುತ್ತದೆ. ಚಾಣಕ್ಯನೇ ಚಂದ್ರಗುಪ್ತನಿಗೆ ಗೆಲುವಿನ ತಂತ್ರಗಳನ್ನು ಬೋಧಿಸಿ ನಂದರನ್ನು ಉಚ್ಚಾಟಿಸಲು ಸಹಕರಿಸಿದನೆಂದೂ ಕಥೆಗಳಿವೆ. ಇಂಥ ಕಥೆಗಳ ಐತಿಹಾಸಿಕತೆಯನ್ನು ಸಾಧಿಸುವುದು ಅಸಾಧ್ಯ. ಆದರೆ ಅರ್ಥಶಾಸ್ತ್ರವು ಮೌರ್ಯ ಕಾಲದ ರಾಜ್ಯ ಕಲ್ಪನೆಯನ್ನು ಅಭ್ಯಸಿಸಲು ಒಂದು ಅತ್ಯುಪಯುಕ್ತ ಆಕರವಾಗಿದೆ.

ಚಂದ್ರಗುಪ್ತನು ವಾಯುವ್ಯ ಭಾರತದಲ್ಲಿ ಗ್ರೀಕ್‌ ದಂಡನಾಯಕ ಸೆಲ್ಯುಕಸನ ಜೊತೆ ಹೊಡೆದಾಡಿದ್ದು ಕಂಡುಬರುತ್ತದೆ. ಬಹುಶಃ ಅಲೆಗ್ಸಾಂಡರನು ದಾಳಿ ಮಾಡಿದ ಪ್ರದೇಶದ ಮೇಲಿನ ಸ್ವಾಮ್ಯವನ್ನು ಉಳಿಸಿಕೊಳ್ಳಲು ಸೆಲ್ಯುಕಸ್‌ ಪ್ರಯತ್ನಿಸಿರಬಹುದು. ಆದರೆ ಕೊನೆಗೂ ಆತ ಚಂದ್ರಗುಪ್ತನ ಜೊತೆ ಮಿತ್ರತ್ವ ಸಾಧಿಸಿ ಆತನಿಗೆ ಕಾಬೂಲ – ಕಂದಹಾರದ ಭಾಗಗಳನ್ನು ಬಿಟ್ಟುಕೊಟ್ಟನು. ಇದೇ ಸಂದರ್ಭದಲಲ್ಲಿ ಮೆಗಸ್ತನೀಸ್‌ ಎಂಬ ಗ್ರೀಕ್‌ ರಾಯಭಾರಿಯೂ ಪಾಟಲೀಪುತ್ರಕ್ಕೆ ಭೇಟಿ ಕೊಟ್ಟು ಮೌರ್ಯಕಾಲದ ಸಮಾಜದ ಬಗ್ಗೆ ದಾಖಲಿಸಿದ್ದಾನೆ. ಚಂದ್ರಗುಪ್ತನು ಈ ರೀತಿಯಾಗಿ ಭಾರತೀಯ ಉಪಖಂಡದ ಬಹುಭಾಗವನ್ನು ಆಳಿದ ಪ್ರಪ್ರಥಮ ಸಾಮ್ರಾಟನಾಗಿದ್ದಾನೆ. ಕಾಬೂಲಿನಂದ ಬಂಗಾಳಕೊಲ್ಲಿಯವರೆಗೆ ಪೂರ್ವ ಪಶ್ಚಿಮವಾಗಿ ಹಬ್ಬಿದ್ದ ಈ ರಾಜ್ಯ ದಕ್ಷಿಣದಲ್ಲಿ ಕರ್ನಾಟಕ ಆಂಧ್ರಗಳನ್ನೂ ಒಳಗೊಂಡಿದ್ದ ಸಾಧ್ಯತೆ ಇದೆ. ಚಂದ್ರಗುಪ್ತನು ತನ್ನ ಜೀವನದ ಅಂತ್ಯಕಾಲದಲ್ಲಿ ಕರ್ನಾಟಕದ ಶ್ರವಣಬೆಳ್ಗೊಳಕ್ಕೆ ಬಂದು ಸಲ್ಲೇಖನ ವಿಧಿಯಿಂದ ಮರಣಹೊಂದಿದ ಎಂದು ಜೈನ ಸಂಪ್ರದಾಯ ಹೇಳುತ್ತದೆ. ಅದರ ಸತ್ಯಾಸತ್ಯತೆ ಏನೇ ಇದ್ದರೂ, ಕರ್ನಾಟಕದ ಈ ಭಾಗ ಅಶೋಕನಿಗೂ ಪೂರ್ವದಲ್ಲೇ ಮೌರ್ಯರ ಆಳ್ವಿಕೆಯೊಳಗೆ ಬಂದಿದ್ದು ಸ್ಪಷ್ಟ.

ಮೌರ್ಯ ಸಾಮ್ರಾಜ್ಯವು ಭಾರತದ ಉಪಖಂಡದಲ್ಲಿ ಅಸ್ತಿತ್ವಕ್ಕೆ ಬರುವಾಗ ರಾಜ್ಯ ಬಾರದ ಕಲೆಯೂ ಅಷ್ಟೇ ವ್ಯವಸ್ಥಿತವಾದ ಶಾಸ್ತ್ರವಾಗಿ ಬೆಳೆದಿತ್ತು ಎಂಬುದು ಅರ್ಥಶಾಸ್ತ್ರದಿಂದ ತಿಳಿದುಬರುತ್ತದೆ. ‘ಅರ್ಥಶಾಸ್ತ್ರ’ ಎಂದರೆ ಭೂಮಿಯನ್ನು ಗಳಿಸಿ, ಪಾಲಿಸುವುದು ಹೇಗೆ ಎಂಬ ಉಪಾಯವನ್ನು ತಿಲಿಸುವ ಶಾಸ್ತ್ರ. ಈ ಭೂಮಿ ವಿವಿಧ ಅರ್ಥದಲ್ಲಿ (ವೃತ್ತಿ/ಉತ್ಪಾದನೆ) ತೊಡಗಿಸಿಕೊಂಡ ಮನುಷ್ಯ ರಿಂದ ತುಂಬಿದ್ದು ಇವರನ್ನು ಆಳುವುದು ರಾಜ್ಯವ್ಯವಸ್ಥೆ. ರಾಜ್ಯವು ಏಳು ಅಂಗಗಳನ್ನು ಹೊಂದಿದೆ. ಅವು ರಾಜ, ರಾಷ್ಟ್ರ, ಭಂಡಾಗಾರ, ಸಚಿವರು, ದುರ್ಗ ಸೈನ್ಯ ಹಾಗೂ ಮಿತ್ರ. ಅರ್ಥಶಾಸ್ತ್ರದ ಸಪ್ತಾಂಗ ಕಲ್ಪನೆಯಲ್ಲಿ ರಾಜ್ಯವ್ಯವಸ್ಥೆಯ ಸಂಪೂರ್ಣ ಲಕ್ಷಣಗಳು ಮೈದಳೆದಿರುವುದನ್ನು ನೋಡಬಹುದು. ಕೌಟಿಲ್ಯನ ‘ಮಂಡಳ’ ಎಂಬ ಕಲ್ಪನೆಯಲ್ಲಿ ಪ್ರತಿ ರಾಜ್ಯವೂ ಅನ್ಯರಾಜ್ಯಗಳಿಂದ ಸುತ್ತು ವರಿಯಲ್ಪಟ್ಟಿರುತ್ತದೆ. ಈ ಅನ್ಯರಾಜ್ಯಗಳಲ್ಲಿ ಯಾರು ಯಾರು ಮಿತ್ರರಾಗುವ ಸಾಧ್ಯತೆ ಇದೆ. ಈ ಮಿತ್ರತ್ವ (aalliance) ಉಪಯೋಗಿಸಿ ರಾಜನೊಬ್ಬನು ತನ್ನ ರಾಷ್ಟ್ರವನ್ನು ಯಾವ ತಂತ್ರದಿಂದ ವಿಸ್ತರಿಸಬೇಕು ಎಂದು ವಿವರಿಸಲಾಗಿದೆ. ವೈರಿಯನ್ನು ಯಾವ ಯಾವ ಉಪಾಯದಿಂದ ಬಗ್ಗು ಬಡಿಯಬೇಕು ಎಂಬ ಕುಟಿಲ ತಂತ್ರಗಳನ್ನು ಅರ್ಥಶಾಸ್ತ್ರ ನೀಡುತ್ತದೆ. ಒಮ್ಮೆ ಶತ್ರು ರಾಜ್ಯವನ್ನು ಆಕ್ರಮಿಸಿದ ನಂತರ ಅಲ್ಲಿ ತಾನೇ ಉಂಟುಮಾಡಿರುವ ಅರಾಜಕತೆಯನ್ನು ಹೋಗಲಾಡಿಸಿ, ವಿದ್ವಾಂಸರನ್ನು, ಪ್ರತಿಷ್ಠಿತರನ್ನು ಸತ್ಕರಿಸಿ ಒಳಗುಮಾಡಿಕೊಂಡು, ದೇವಾಲಯಗಳನ್ನು ಕಟ್ಟಿಸಿ ಜನರ ಮನಗೆದ್ದು ಆಳಬೇಕು ಎಂಬುದೂ ಅರ್ಥಶಾಸ್ತ್ರದ ಸಲಹೆಯಾಗಿದೆ.

ರಾಷ್ಟ್ರದ ಭೂಮಿಯೆಲ್ಲ ರಾಜನಿಗೆ ಪ್ರತ್ಯಕ್ಷವಾಗಿ ಸೇರಿದ್ದು ಅಥವಾ ಜನಪದಗಳದ್ದು ಎಂದು ವಿಭಾಗಿಸಲ್ಪಟ್ಟಿತ್ತು. ರಾಜನು ಹೊಸಹೊಸ ಭೂಮಿಯನ್ನು ವ್ಯವಸಾಯಕ್ಕೆ ಅಳವಡಿಸಿ, ಗ್ರಾಮಗಳನ್ನು ಸ್ಥಾಪಿಸಿ, ಶೂದ್ರ ಸಮುದಾಯವನ್ನು ನೆಲೆ ನಿಲ್ಲಿಸಬೇಕು. ಕರ-ಕಂದಾಯಗಳ ಕುರಿತು ಅರ್ಥಶಾಸ್ತ್ರ ತೀರ ಕಟ್ಟುನಿಟ್ಟಾಗಿದೆ ಅದು ರಾಜನು ಪ್ರಜೆಗಳ ಹೆಚ್ಚುವರಿ ಉತ್ಪಾದನೆಯನ್ನು ಸಾಕಿದ ಆಕಳನ್ನು ಹಿಂಡುವಂತೆಯೇ ಕ್ರಮಬದ್ಧವಾಗಿ ಸಂಗ್ರಹಿಸಬೇಕು ಎನ್ನುತ್ತದೆ. ವ್ಯಾಪಾರ, ವಾಣಿಜ್ಯ, ಗುಡಿಕೈಗಾರಿಕೆಗಳಿಗೆ ಸಂಬಂಧಿಸಿ ರಾಜ್ಯವು ನೂರಾರು ಅಧ್ಯಕ್ಷರನ್ನು ನಿಯಮಿಸಿ ತನ್ನ ಅಧಿಕಾರವನ್ನು ಕೇಂದ್ರೀಕರಿಸಬೇಕು. ಪ್ರಜೆಗಳು ರಾಜ್ಯಕ್ಕೆ ಮಾಡಬಹುದಾದ ಮೋಸವನ್ನು ತಡೆಯುವುದಲ್ಲದೇ, ರಾಜ್ಯದ ಅಧಿಕಾರಿಗಳ ಭ್ರಷ್ಟಾಚಾರವನ್ನು ಕೂಡ ತಡೆಯಬೇಕು. ಈ ಸಂಬಂಧ ಗೂಢಚಾರರ ಪಡೆಯೇ ರಾಜ್ಯದ ತುಂಬ ಇರಬೇಕು. ರಾಜನಾದವನು ರಾತ್ರಿ ರಹಸ್ಯವಾಗಿ ಈ ಗೂಢಚಾರರಿಂದ ವಾರ್ತೆಗಳನ್ನು ತಿಳಿದುಕೊಳ್ಳಬೇಕು. ಅರ್ಥಶಾಸ್ತ್ರದ ಪ್ರಕಾರ ರಾಜನಾದವನಿಗೆ ಇಡೀ ದಿನ, ರಾತ್ರಿಯೆಲ್ಲ ಕೆಲಸಗಳಿರುತ್ತವೆ. ರಾಜನೆಂಬವನು ಅಷ್ಟದಿಕ್ಪಾಲರ ಅಂಶಗಳನ್ನು ಹೊಂದಿದ ಅತಿಮಾನುಷವ್ಯಕ್ತಿ ಎಂಬ ಪುರಾಣವನ್ನು ಅರ್ಥಶಾಸ್ತ್ರವೂ ನೀಡುತ್ತದೆ. ಆದರೆ ಅರ್ಥಶಾಸ್ತ್ರಕ್ಕೆ ಈ ದೈವತ್ವ, ಧರ್ಮ ಇವೆಲ್ಲ ರಾಜನೀತಿಯ ಅನಿವಾರ್ಯ ಅಂಗಗಳು.

ಅರ್ಥಶಾಸ್ತ್ರವು ನಾಗರಿಕ ಕಾನೂನುಗಳ ಕುರಿತೂ ಸೂಕ್ಷ್ಮವಾದ ವಿವರಗಳನ್ನು ದಾಖಲಿಸುತ್ತದೆ. ಚಂದ್ರಗುಪ್ತನ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಮೆಗಾಸ್ತನೀಸ್‌ ಎಂಬ ಗ್ರೀಕ್‌ ರಾಯಭಾರಿ ಕೂಡ ಪಾಟಲೀ ಪುತ್ರದ ನಗರಾಡಳಿತದ ಕುರಿತ ವಿವರಗಳನ್ನು ದಾಖಲಿಸುತ್ತಾನೆ. ನಗರಗಳಲ್ಲಿ ವಿಭಿನ್ನ ಚಟುವಟಿಕೆಗಳಿಗೆ ವಿಭಿನ್ನ ಸಮಿತಿಗಳೇ ಇದ್ದವು. ಅರ್ಥಶಾಸ್ತ್ರದ ರಾಜ್ಯವು ಒಂದು ನೌಕರಶಾಹಿಯಾಗಿತ್ತು. ಪುರೋಹಿತನಿಂದ ಹಿಡಿದು ಅರಮನೆಯ ಶಿಲ್ಪಿಗಳವರೆಗೆ ವಿಭಿನ್ನ ಹಂತದವರ ವೇತನ ಪಟ್ಟಿಯನ್ನು ನೀಡಲಾಗಿದೆ. ಆದರೆ ಅರ್ಥಶಾಸ್ತ್ರವು ಸಣ್ಣ ಸಣ್ಣ ಕೇಂದ್ರೀಕೃತ ಪ್ರಭುತ್ವಗಳ ಚಿತ್ರಣವನ್ನು ನೀಡುತ್ತದೆಯೇ ಹೊರತು ಒಂದು ಸಾಮ್ರಾಜ್ಯದ ಕಲ್ಪನೆಯನ್ನು ನೀಡುವುದಿಲ್ಲ.

ಮೌರ್ಯ ರಾಜರಲ್ಲಿ ಅಶೋಕನ ಕುರಿತು ನಮಗೆ ಅತಿ ಹೆಚ್ಚು ಐತಿಹಾಸಿಕ ಮಾಹಿತಿ ಸಿಗುತ್ತದೆ. ಅಶೋಕನ ಮುಖ್ಯ ಹಾಗೂ ಉಪಧರ್ಮಶಾಸನಗಳು ನಮಗೆ ಭಾರತದ ಉಪಖಂಡದ ತುಂಬೆಲ್ಲ ಸಿಕ್ಕಿವೆ. ಉತ್ತರದಲ್ಲಿ ಕಂದಹಾರದಿಂದ ದಕ್ಷಿಣದಲ್ಲಿ ಕರ್ನಾಟಕ ಬ್ರಹ್ಮಗಿರಿಯವರೆಗೆ ಪೂರ್ವದಲ್ಲಿ ನೇಪಾಳಿ ಚರಾಯಿ ಹಾಗೂ ಒರಿಸ್ಸಾದ ಧೌಲಿಗಳಿಂದ ಪಶ್ಚಿಮದಲ್ಲಿ ಗುಜರಾತಿನ ಗಿರಿನಾರದವರೆಗೆ ಆತನ ಪ್ರಭುತ್ವ ವಿಸ್ತರಿಸಿತು. ಅಶೋಕ ನಡೆಸಿದ ಒಂದೇ ಯುದ್ಧ ಎಂದರೆ ಕಳಿಂಗ ಗಣಪ್ರಭುತ್ವದ ಮೇಲಿನ ಯುದ್ಧ. ಅಶೋಕನಿಗೆ ಬೌದ್ಧ ಧರ್ಮದಿಂದಾದ ಪ್ರಭಾವ ದಯೆ, ಅಹಿಂಸೆ ಮತ್ತು ಒಲವು ಬೆಳೆಯುವಂತೆ ಮಾಡಿರಬಹುದು. ಈತನು ಕಳಿಂಗ ಯುದ್ಧಾನಂತರ ಪಶ್ಚಾತ್ತಾಪಪಟ್ಟು ಯುದ್ಧ ನೀತಿಯನ್ನೇ ಕೈಬಿಟ್ಟಿದ್ದು ಕಂಡುಬರುತ್ತದೆ. ಆತನ ಒಂದು ಶಾಸನದಲ್ಲಿ ತಾನು ಬೌದ್ಧ ಸಂಘವನ್ನು ಸೇರಿದ್ದಾಗಿ ಕೂಡ ಹೇಳಿಕೊಳ್ಳುತ್ತಾನೆ. ತನ್ನ ಧರ್ಮವನ್ನು ಪ್ರಚಾರ ಮಾಡಲು ಧರ್ಮಶಾಸನಗಳನ್ನು ಕೊರೆಸಿದನು. ಭಾರತದಲ್ಲಿ ಅತ್ಯಂತ ಪ್ರಾಚೀನ ಬ್ರಾಹ್ಮಿಲಿಪಿಯ ಉಪಯೋಗ ಇವನ ಕಾಲದಲ್ಲಿ ಈ ರೀತಿಯಲ್ಲಿ ಪ್ರಚಲಿತದಲ್ಲಿ ಬಂದಿತು. ಲಿಪಿಯ ಪರಿಚಯವೇ ಇಲ್ಲದ, ಭಾಷೆ ಗೊತ್ತಿಲ್ಲದ ಪ್ರಾದೇಶಿಕ ಜನರಿಗೆ ತನ್ನ ಧರ್ಮ ತತ್ವಗಳನ್ನು ಬೋಧಿಸಲು ಧರ್ಮ ಮಹಾಮಾತ್ರರೆಂಬ ಅಧಿಕಾರಿಗಳನ್ನು ಅಶೋಕ ನಿಯಮಿಸಿದ್ದನು. ಅಶೋಕನು ಸಾರುವ ಧರ್ಮ ಬೌದ್ದ ಧರ್ಮವಲ್ಲ ಆದರೆ ದಯೆ, ಅಹಿಂಶೆ, ಶಾಂತಿ, ಸಹಬಾಳ್ವೆ ಕೌಟುಂಬಿಕ ನೀತಿಗಳು, ಬ್ರಾಹ್ಮಣ ಶ್ರಮಣದ ಆರಧಾನೆ ಮುಂತಾದ ತತ್ವಗಳಲ್ಲಿ ಅನೇಕವು ಬೌದ್ದ ಧರ್ಮದ ಪ್ರಭಾವ ಎಂಬುದು ಸ್ಪಷ್ಟ. ಕೇವಲ ಭಿನ್ನ ಸಾಮ್ರಾಜ್ಯದಲ್ಲಿ ಒಂದೇ ಅಲ್ಲ. ಸಿಲೋನ್, ಗ್ರೀಸ್, ಮೆಸಡೋನಿಯಾ, ಈಜಿಪ್ಟ್ ಮುಂತಾದ ದೇಶಗಳಿಗೂ ಅಶೋಕನು ರಾಯಭಾರಿಗಳನ್ನು ಕಳುಹಿಸಿ ಧರ್ಮ ಸಂದೇಶವನ್ನು ತಲುಪಿಸಿದನು. ಈತನ ಕಾಲದಲ್ಲಿ ಉತ್ತರ ಭಾರತದ ಬೇರೆ ಬೇರೆ ಭಾಗಗಳಲ್ಲಿ ಚೂನಾರ್ ಮರಳುಗಲ್ಲಿನಲ್ಲಿ ಕಟ್ಟದ ಸ್ತಂಭಗಳನ್ನು ನಿಲ್ಲಿಸಿ ಅವುಗಳ ಮೇಲೆ ಲಾಂಛನಗಳನ್ನು ಇರಿಸಿದನು.

ಅಶೋಕನ ಧರ್ಮವನ್ನು ಒಂದು ಶಾಂತಿ ಸಂದೇಶ ಎಂದು ನಿರೂಪಿಸಲಾಗಿದೆ. ಈ ರೀತಿಯ ನಿರೂಪಣೆ ಬಂದದ್ದು ಗಾಂಧಿ-ನೆಹರೂ ಯುಗದಲ್ಲಿ. ಆತನು ಪ್ರಪಂಚಕ್ಕೇ ಯುದ್ಧದ ನಿರರ್ಥಕತೆ ಸಾರಿದ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಅರ್ಥೈಸಲ್ಪಟ್ಟಿದ್ದನು. ಇದೇ ವಾದವನ್ನು ಹಿಡಿದುಕೊಂಡು ಕೆಲ ಇತಿಹಾಸಕಾರರು ಮೌರ್ಯ ಸಾಮ್ರಾಜ್ಯದ ಪತನಕ್ಕೆ ಆತನ ‘ಶಾಂತಿ’ ನೀತಿಯೇ ಕಾರಣ ಎಂದು ವಾದಿಸಿದರು. ಆತನ ಶಾಂತಿ ನೀತಿ ಮೌರ್ಯ ಸಾಮ್ರಾಜ್ಯಕ್ಕೆ ವಿನಾಶಕಾರಿಯಾಯಿತು ಎಂದು ಗಾಂಧಿ-ನೆಹರೂ ಯುಗದ ‘ಶಾಂತಿ’ಯ ಪ್ರತೀಕಗಳನ್ನು ಪ್ರಶ್ನಿಸಲಾಯಿತು. ಆದರೆ ರೋಮಿಲಾ ಥಾಪರ್ ಅವರು ಅಶೋಕನ ಧರ್ಮ ಎಂಬುದು ಒಂದು ರಾಜಕೀಯ ನೀತಿಯಾಗಿತ್ತು ಎಂಬ ವಿಷಯದತ್ತ ನಮ್ಮ ಗಮನ ಸೆಳೆಯುತ್ತಾರೆ. ಅವರ ವಾದದ ಪ್ರಕಾರ ಸಾಮ್ರಾಜ್ಯವನ್ನು ಆಕ್ರಮಿಸಿದ ನಂತರ ಆಳ್ವಿಕೆಯನ್ನು ಗಟ್ಟಿಮಾಡುವ  ಪ್ರಯತ್ನ ಅಶೋಕನದು. ಈ ಪ್ರಯತ್ನ ಬಲಾತ್ಕಾರವಾಗಿ ನಡೆದರೆ ಪ್ರಯೋಜನವಿಲ್ಲ, ಶಾಂತಿಯುತವಾಗಿ ನಡೆಯಬೇಕು. ಯಾವ್ಯಾವುದೋ ರಾಜ್ಯ ಪೂರ್ವ ಸಂಸ್ಕೃತಿಯ ಹಿನ್ನೆಲೆಯ ಸಮುದಾಯಗಳನ್ನು ರಾಜ್ಯ ಸಂಸ್ಕೃತಿಗೆ ಒಗ್ಗಿಸಬೇಕು. ಆಗ ರಾಜ್ಯಕ್ಕೆ ಐಡಿಯಾಲಜಿಕಲ್‌ ಪ್ರತಿಪಾದನೆ ಬೇಕಾಗುತ್ತದೆ. ಅಶೋಕನು ಸಾರುವ ನಾಗರಿಕ ಸದ್ವರ್ತನೆಗಳು ಈ ಸ್ವರೂಪದ ಶಿಕ್ಷಣಗಳಾಗಿವೆ. ಜೊತೆಗೆ ರಾಜ್ಯ ಕೂಡ ಸಾರ್ವಜನಿಕ ಕಲ್ಯಾಣಕ್ಕಾಗಿ ಶ್ರಮಿಸಿ ಪ್ರಜೆಗಳ ವಿಶ್ವಾಸಾರ್ಹತೆ ಗಳಿಸಬೇಕು. ಅಶೋಕನು ಮನುಷ್ಯ ಹಾಗೂ ಪಶು ಚಿಕಿತ್ಸಾಲಯಗಳನ್ನು ತೆರೆದನು ಹಾಗೂ ಇಂಥ ಇತರ ಕಲ್ಯಾಣ ಕಾರ್ಯಗಳನ್ನು ವಾದಿಸಿದನು. ಹಾಗಾಗಿ ಆತನ ಧರ್ಮ ಸಾಮ್ರಾಜ್ಯಕ್ಕೆ ರಾಜಕೀಯ ಅಗತ್ಯವಾಗಿತ್ತು.

ಮೌರ್ಯೋತ್ತರ ಕಾಲ

ಅಶೋಕನ ಇಂಥ ರಾಜನೈತಿಕ ಪ್ರಯತ್ನಗಳು ಏನೇ ಇರಲಿ, ಆತನ ನಂತರ ಕೇವಲ ಐವತ್ತೇ ವರ್ಷಗಳಲ್ಲಿ ಮೌರ್ಯ ಸಾಮ್ರಾಜ್ಯ ಹೇಳ ಹೆಸರಿಲ್ಲದಂತಾಗಿತ್ತು. ಕ್ರಿ.ಪೂ. ಎರಡನೆಯ ಶತಮಾನದಲ್ಲಿ ಇದು ಉತ್ತರ ಭಾರತವು ಚಿಕ್ಕಪುಟ್ಟ ರಾಜ್ಯಗಳಿಂದ ತುಂಬಿತ್ತು. ಇವೆಲ್ಲವುಗಳನ್ನು ಆಕ್ರಮಿಸಿದ ಸಾಮ್ರಾಜ್ಯ ಮಾಯವಾಗಿತ್ತು. ಮಗಧದಲ್ಲಿ ಮೌರ್ಯರ ನಂತರ ಆಳಿದ ಶುಂಗ, ಕಣ್ವ ವಂಶಗಳೂ ಮಗಧವೊಂದನ್ನು ಬಿಟ್ಟು ಹೊರಗೆ ಪ್ರಭುತ್ವ ಹೊಂದಿದ ಲಕ್ಷಣಗಳಿಲ್ಲ. ಬದಲಾಗಿ ಕೌಶಾಂಬಿ, ಅಹಿಚ್ಛತೃ, ಮಥುರಾ, ಮುಂತಾದ ನಗರಗಳಲ್ಲಿ ಸ್ಥಾನಿಕ ಅರಸರ ನಾಣ್ಯಗಳು ಸಿಗುತ್ತದೆ. ಯೌಧೇಯ, ಮಾಳವ, ಔರುಂಬರ ಮುಂತಾದ ಗಣಪ್ರಭುತ್ವಗಳ ನಾಣ್ಯಗಳೂ ದೊರೆತಿವೆ. ಈ ಗಣಗಳೆಲ್ಲ ಕ್ರಿ.ಪೂ. ೧ನೆಯ ಶತಮಾನದಲ್ಲಿ ಉಚ್ಚ್ರಾಯ ಸ್ಥಿತಿಗೇರಿದ್ದವು. ಕ್ರಿ.ಪೂ. ೧೮೦ರ ನಂತರ ವಾಯುವ್ಯ ಭಾರತದಲ್ಲಿ (ಇಂದಿನ ಪಾಕಿಸ್ಥಾನದ ಭಾಗದಲ್ಲಿ) ಅನೇಕ ಪರದೇಶಿ ಮೂಲದ ರಾಜರು ಆಳ್ವಿಕೆ ನಡೆಸಿದ್ದರು. ಸುಮಾರು ೨೮ ಇಂಡೋಗ್ರೀಕ್ ರಾಜರ ನಾಣ್ಯ ಒಂದು ನೂರು ವರ್ಷದ ಅವಧಿಯ ಒಳಗೇ ಸಿಗುತ್ತದೆ. ಅವರಲ್ಲಿ ಸಿಂಧ್ ಪ್ರಾಂತ್ಯವನ್ನು ಆಳಿದ ಮಿನಾಂದರ್ ಬೌದ್ದಸಾಹಿತ್ಯದಲ್ಲಿ ಚಿರಸ್ಥಾಯಿ ಯಾಗಿದ್ದಾನೆ. ಇಂಡೋಗ್ರೀಕರನ್ನು ‘ಯವನ’ ರೆಂದು ಕರೆಯಲಾಗಿದೆ. ಅಶೋಕನ ಕಾಲದಲ್ಲೇ ಗುಜರಾತಿನ ಭಾಗದಲ್ಲಿ ಯವನ ಅಧಿಕಾರಿಯೊಬ್ಬನಿದ್ದನು. ಬಹುಶಃ ಭಾರತದ ಈ ಭಾಗದಲ್ಲಿ ಅಲೆಗ್ಸಾಂಡರನ ದಾಳಿಯ ನಂತರ ಗ್ರೀಕ್ ವಸತಿ ಅನೂಚಾನವಾಗಿ ಮುಂದುವರಿದುಕೊಂಡು ಬಂದಿರಬಹುದು.

ಕ್ರಿ.ಪೂ. ಮೊದಲನೆಯ ಶತಮಾನದ ಮಧ್ಯಭಾಗದಲ್ಲಿ ಶಕರು ಹಾಗೂ ಪಾಹ್ಲವರು ವಾಯುವ್ಯ ಭರತದಲ್ಲಿ ಅಧಿಕಾರ ಸ್ಥಾಪಿಸಿದರು. ನಂತರ ಕ್ರಿ.ಶ.ಕದ ಆದಿಭಾಗದಲ್ಲಿ ಕುಷಾಣರು ಈ ಭಾಗವನ್ನು ಆಕ್ರಮಿಸಿಕೊಡರು. ಕುಷಾಶಣರು ಈ ಪರದೇಶಿ ರಾಜರಲ್ಲೆಲ್ಲ ಪ್ರಪ್ರಥಮವಾಗಿ ಗಂಗಾಬಯಲಿನಲ್ಲಿ ಮಗಧದವರೆಗೆ ರಾಜ್ಯವನ್ನು ವಿಸ್ಥರಿಸಿದರು. ಮಧ್ಯಭಾರತ ಹಾಗೂ ಗುಜರಾತನ ಭಾಗಗಳೂ ಅವರ ರಾಜ್ಯದಲ್ಲಿ ಸೇರ್ಪಡೆಯಾದವು. ಈ ಕಾರ್ಯವನ್ನು ಕನಿಷ್ಕನೆಂಬ ರಾಜನು ಸಾಧಿಸಿದನು. ಆತನು ಮುಖ್ಯವಾಗಿ ಪರದೇಶೀಯ ಕ್ಷಾತ್ರಪರನ್ನು ಬೆನ್ನಿಗಿಟ್ಟುಕೊಂಡು ಸಾಮ್ರಾಜ್ಯ ವಿಸ್ತಾರ ಕಾರ್ಯವನ್ನು ನಡೆಸಿದನು. ಆತನ ಅಧೀನರಾದ ಕ್ಷಾತ್ರಪರಲ್ಲಿ ಗುಜರಾತನ ಜಾಗದಲ್ಲಿ ಆಳುತ್ತಿದ್ದ ಶಕಕ್ಷಾತ್ರಪರು ಮುಖ್ಯರು. ಕನಿಷ್ಕನ ಸಾಮ್ರಾಜ್ಯವು ಮಧ್ಯ ಏಷಿಯಾ ಹಾಗೂ ಇರಾನಿನ ಗಡಿಯವರೆಗೂ ಚಾಚಿಕೊಂಡಿತ್ತು. ಈ ಭಾಗದಲ್ಲಿ ರೋಂ ಸಾಮ್ರಾಜ್ಯದವೇ ಕುಷಾಣ ಸಾಮ್ರಾಜ್ಯದ ಗಡಿಯಾಗಿತ್ತು.

ಈ ಪರದೇಶಿರಾಜರ ಪ್ರಭುತ್ವದಿಂದ ಭಾರತೀಯ ರಾಜತ್ವ ಕಲ್ಪನೆಯ ಮೇಲೆ ಅಗಾಧವಾದ ಪ್ರಭಾವ ಉಂಟಾಗಿದೆ. ಪ್ರಪ್ರಥಮವಾಗಿ ಈ ರಾಜರಿಂದ ಭಾರತದಲ್ಲಿ ತಲೆಬರಹವುಳ್ಳ ಅಚ್ಚೋತ್ತಿದ ಸುಂದರ ನಾಣ್ಯಗಳು ಪರಿಚಯಿಸಲ್ಪಟ್ಟವು. ಈ ರಾಜರ ಬಿರುದುಗಳು ಗ್ರೀಕ್‌ಹಗೂ ಪರ್ಶಿಯನ್‌ಸೈಲಿಯಲ್ಲಿ ಇವೆ. ಇಂಡೋ ಗ್ರೀಕ್‌ರಾಜರು ‘ಬ್ಯಾಸಿಲಿಯಸ್‌ ಬ್ಯಾತಿಲಿಯನ್‌’ ಎಂಬ ಬಿರುದುಗಳನ್ನು ಧರಿಸಿದರೆ ಕುಷಾನರು ‘ಶಹಾನ್‌ಶಾಹ’ ಎಂಬ ಬಿರುದುಗಳನ್ನು ಧರಿಸಿದರು. ಈ ಬಿರುದುಗಳೆರಡನ್ನೂ ‘ರಾಜಾಧಿರಾಜ’ ಎಂದು ಭಾರತೀಯ ಭಾಷೆಗೆ ತರ್ಜುಮೆ ಮಾಡಿದವರೂ ಇವರೇ. ಇದರಿಂದಲೇ ‘ಮಹಾರಾಧಿರಾಜ’ ಎಂಬ ಬಿರುದೂ ಪರಿಚಯಿಸಲ್ಪಟ್ಟಿತು. ಭಾರತದಲ್ಲಿ ಮೌರ್ಯ ಸಾಮ್ರಾಟರೂ ಕೂಡ ‘ರಾಜ’ ಎಂಬ ಬಿರುದನ್ನೇ ಧರಿಸಿದ್ದರು. ಅಶೋಕನು ತನ್ನ ಶಾಸನಗಳಲ್ಲಿ ‘ರಾಜ’ ಎಂದಷ್ಟೇ ಕರೆದುಕೊಳ್ಳುತ್ತಾನೆ. ‘ರಾಜಾಧಿರಾಜ’ ಎಂಬುದು ಅಪ್ರತ್ಯಕ್ಷ ಪ್ರಭುತ್ವವನ್ನು, ಪರಭುತ್ವದ ಶ್ರೇಣೀಕರಣವನ್ನೂ ಸೂಚಿಸುತ್ತದೆ. ‘ಮಹಾರಾಜಾದಿರಾಜ’ ಅಧಿಕಾರದ ಶ್ರೇಣೀಕರಣ ಮತ್ತೂ ಸಂಕೀರ್ಣವಾದದ್ದರ ಸೂಚನೆ. ಅಂದರೆ ಇವೆಲ್ಲ ಅರ್ಥಶಾಸ್ತ್ರದ ಕೇಂದ್ರೇಕೃತ ರಾಜ್ಯ ಕಲ್ಪನೆಯಿಂದ ಬೇರೆಯವಾಗಿವೆ.

ಕುಷಾನ ರಾಜರು ರಾಜನನ್ನು ದೇವತೆ ಎಂದು ಪ್ರತಿಪಾದಿಸಿದ್ದರು. ಅವರ ನಾಣ್ಯಗಳಲ್ಲಿ ರಾಜನನ್ನು ಪ್ರಭಾಮಂಡಳದೊಳಗೆ ತೋರಿಸಲಾಗುತ್ತದೆ. ತಮ್ಮನ್ನು ‘ದೇವಪುತ್ರ”ರೆಂದು ಅವರು ಕರೆದುಕೊಂಡಿದ್ದರು. ರಾಜನು ತೀರಿಕೊಂಡ ಬಳಿಕ ಆತನ ಪ್ರತಿಮೆಯನ್ನು ಕೆತ್ತಿಸಿ ದೇವಕುಲಗಳೆಂಬ ಮನೆಗಳಲ್ಲಿ ಇರಿಸುತ್ತಿದ್ದರು. ಮಥುರಾದಲ್ಲಿ ಇಂಥ ದೇವಕುಲಕ್ಕೆ ಸೇರಿದ ಕನಿಷ್ಕ ಹಾಗೂ ಚಷ್ಟಣ ಎಂಬ ರಾಜರ ಮೂರ್ತಿಗಳು ಶಾಸನ ಸಮೇತ ಸಿಕ್ಕಿವೆ. ಈ ದೇವಕುಲದ ಕಲ್ಪನೆ ಹಾಗೂ ‘ದೇವಪುತ್ರ’ ಕಲ್ಪನೆಗಳು ರೊಂ ಸಾಮ್ರಾಜ್ಯದ ಪ್ರಭುತ್ವ ಕಲ್ಪನೆಯ ನೇರ ಪ್ರಭಾವಗಳಾಗಿವೆ.

ಈ ಪರದೇಶಿ ರಾಜರು ಭಾರತದ ಮತ ಪಂಥಗಳನ್ನೆಲ್ಲ ಪೋಷಿಸುವಲ್ಲಿ ಉತ್ಸಾಹ ಪ್ರಕಟಿಸುತ್ತಿದ್ದರು. ಕನಿಷ್ಕನು ಬೌದ್ಧ ಧರ್ಮೀಯನೆಂದು ಬೌದ್ಧ ಸಂಪ್ರದಾಯ ಪ್ರತಿಪಾದಿಸಿದರೂ, ಆತನು ಉಳಿದ ಮತಗಳನ್ನೂ ಪೋಷಿಸಿದ್ದನು. ಆತನ ನಾಣ್ಯಗಳ ಮೇಲೆ ಶಿವ, ವಿಷ್ಣು, ಕುಮಾರ, ಬುದ್ಧ, ಇವರಲ್ಲದೇ ಗ್ರೀಕ್‌ ಹಾಗೂ ಪರ್ಶಿಯನ್‌ ದೇವತೆಗಳೂ ಚಿತ್ರಿತರಾಗಿದ್ದಾರೆ. ಈ ಕಾಲವನ್ನು, ಪೌರಾಣಿಕ ಹಿಂದೂ ಧರ್ಮದ ಉಗಮ ಕಾಲ ಎನ್ನಬಹುದು. ಜೊತೆಗೆ ಮೌರ್ಯ ಸಾಮ್ರಾಜ್ಯದಲ್ಲಿ ಆಷ್ಟಾಗಿ ಕಾಣದಿರುವ ವರ್ಣಧರ್ಮಕ್ಕೆ ಈ ಕಾಲದಲ್ಲಿ ಇಂಬು ದೊರೆಯಿತು. ಈ ರಾಜರು ಪ್ರಾಕರತದಿಂದ ಸಂಸ್ಕೃತಕ್ಕೆ ರಾಜ್ಯ ಶಾಸನ ಭಾಷೆಯನ್ನು ಬದಲಾಯಿಸಿದರು. ಭಾರತದ ಪ್ರಪ್ರಥಮ ಸಂಸ್ಕೃತ ಶಾಸನವು ಗುಜರಾತಿನ ಶಕ ಕ್ಷಾತ್ರಪ ರುದ್ರಧಾಮನ್‌ನದಾಗಿದೆ. ಶಕ ಕ್ಷಾತ್ರಪ ನಹಾಪನನ ಅಳಿಯ ಉಷಬದಾತರ ಶಾಸನವೊಂದು ತಿಳಿಸುವಂತೆ ಆತನು ಸಾವಿರಾರು ಬ್ರಾಹ್ಮಣರಿಗೆ ಲಕ್ಷಾಂತರ ಗೋದಾನಗಳನ್ನು ಮಾಡಿದ್ದನು, ತೆಂಗಿನ ಸಸಿಯನ್ನು ನೀಡಿದ್ದನು, ಊಟ ಹಾಕಿದ್ದನು, ಭೂದಾನವನ್ನು ಮಾಡಿದ್ದನು. ತೀರ್ಥಕ್ಷೇತ್ರಗಳಲ್ಲಿ ಇಂಥ ದಾನ ನಡೆಸಿದ್ದು ಕಂಡುಬರುತ್ತದೆ. ಜೊತೆಗೆ ಬೌದ್ಧ ಸಂಘಗಳನ್ನೂ ಇವರು ಘೋಷಿಸಿದರು. ಒಟ್ಟಾರೆ ಯಾಗಿ ರಾಜ್ಯದ ಮತಗಳನ್ನೆಲ್ಲ ಪೋಷಿಸಿ ತಮ್ಮ ಅಧಿಕಾರದ ಮಾನ್ಯತೆಯನ್ನು ಗಳಿಸುವ ಪ್ರಾಚೀನ ರಾಜವಂಶಗಳ ನೀತಿಯನ್ನು ಇವರೂ ಪಾಲಿಸಿದ್ದು ಕಂಡುಬರುತ್ತದೆ. ಸಂಸ್ಕೃತ ಪ್ರಧಾನವಾದ, ಮೂರ್ತಿಪೂಜೆಯನ್ನಳವಡಿಸಿಕೊಂಡ ‘ಮಹಾಯಾನ’ ಪಂಥ ರೂಪುಗೊಂಡಿದ್ದೂ ಈ ಕಾಲದಲ್ಲೇ ಆಗಿದೆ.

ಪರದೇಶಿ ರಾಜರೊಂದೇ ಅಲ್ಲ, ಕ್ರಿಸ್ತಶಕದ ನಂತರದ ರಾಜ್ಯಗಳು ಹೆಚ್ಚು ಹೆಚ್ಚು ವರ್ಣಧರ್ಮವನ್ನು ಅವಲಂಬಿಸತೊಡಗಿದವು. ಅದರಲ್ಲೂ ಗಂಗಾಬಯಲಿನಂದ, ಆರ್ಯಾವರ್ತದಿಂದ ದೊರದ ದಖ್ಖನ್ನಿನ, ದ್ರಾವಿಡರ ರಾಜ್ಯಗಳು ವರ್ಣಧರ್ಮವನ್ನು ಗಾಢವಾಗಿ ಒಪ್ಪಿಕೊಂಡಿದ್ದು ಕುತೂಹಲಕಾರಿಯಾಗಿದೆ. ಗಂಗಾ ಬಯಲಿನಲ್ಲಿ ಗುಪ್ತ ಕಾಲದವರೆಗೆ ಇಂಥ ರಾಜ್ಯಗಳು ಸಿಗುವುದಿಲ್ಲ. ಮೌರ್ಯ ಸಾಮ್ರಾಜ್ಯವು ಪೂರ್ವ ಗಂಗಾಬಯಲಿನ ಪ್ರಾಂತ್ಯ/ರಾಜ್ಯ ಕಲ್ಪನೆಯನ್ನು ಪ್ರಧಾನವಾಗಿ ಅನುಸರಿಸಿತ್ತು. ಈ ಕಲ್ಪನೆಯಲ್ಲಿ ಬೌದ್ಧ ‘ಚಕ್ರವರ್ತಿ’ ಕಲ್ಪನೆ, ದಯೆ, ಧರ್ಮ ಹಾಗೂ ನೀತಿಯ ಆಳ್ವಕೆ ಅಶೋಕನಲ್ಲಿ ಕಾಣಿಸುತ್ತದೆ. ಮೌರ್ಯರ ನಂತರ ಗಂಗಾಬಯಲಿನಲ್ಲಿ ಬಂದ ಮತ್ತೊಂದು ಸಾಮ್ರಾಜ್ಯ ಕ್ರಿ.ಶ. ೩ನೆಯ ಶತಮಾನದ ಗುಪ್ತರದು. ಅದು ಪೂರ್ಣ ಬ್ರಾಹ್ಮಣ ವರ್ಣಧರ್ಮದ ನೆಲೆಯಲ್ಲಿ ನಿರ್ಮಾಣವಾಯಿತು. ಆದರೆ, ದಕ್ಷಿಣದಲ್ಲಿ ಕ್ರಿ.ಪೂ. ಒಂದನೆಯ ಶತಮಾನದಲ್ಲೇ ಅಭ್ಯುದಯ ಹೊಂದಿದ ಶಾತವಾಹನ ರಾಜವಂಶವು ವರ್ಣ ಸಂಸ್ಕೃತಿಯನ್ನು ಪೋಷಿಸಿ ತನ್ನ ಮಾನ್ಯತೆ ಗಳಿಸಿತ್ತು ಎಂಬುದು ಶಾತಕರ್ಣಿಯ ರಾಣಿ ನಾಯನಿಕಾಳ ಶಾಸನದಿಂದ ತಿಳಿದುಬರುತ್ತದೆ. ಈ ಶಾಸನವು ಮಹಾರಾಷ್ಟ್ರದ ನಾಣೆಘಾಟದಲ್ಲಿದೆ. ಈ ಸ್ಥಳವು ಕಲ್ಯಾಣ, ಸೋಪಾದ ಮುಂತಾದ ಬಂದರುಗಳನ್ನು ಒಳನಾಡಿನ ನಗರಗಳಿಗೆ ಜೋಡಿಸಲು ಪಶ್ಚಿಮಘಟ್ಟದ ಕಣಿವೆ ಮಾರ್ಗದ ತುದಿಯಲ್ಲಿದೆ. ಈ ಶಾಸನದಲ್ಲಿ ಶಾತವಾಹನ ರಾಣಿಯು ತಾವು ನಡೆಸಿದ ಸುಮಾರು ೧೫೨೦ರಷ್ಟು ವೈದಿಕ ಯಜ್ಞಯಾಗಾದಿಗಳನ್ನೂ, ಬ್ರಾಹ್ಮಣರಿಗೆ, ನೀಡಿದ ಗೋದಾನ, ಭೂದಾನ ಸುವರ್ಣ ದಾನಗಳನ್ನು ದಾಖಲಿಸುತ್ತದೆ. ಈ ಶಾಸನವು ಇಂದ್ರ, ಸಂಕರ್ಷಣ, ವಾಸುದೇವ ಮುಂಥಾದ ಪೌರಾಣಿಕ ದೇವತೆಗಳ ಸ್ತುತಿಯೊಂದಿಗೆ ಪ್ರಾರಂಭವಾಗುತ್ತದೆ. ಕ್ರಿ.ಶ. ಎರಡನೆಯ ಶತಮಾನದ ಪೂರ್ವಾರ್ಧದಲ್ಲಿ ಶಾತವಾಹನ ವಂಶದ ಗೌತಮೀಪುತ್ರನೆಂಬ ರಾಜನು ಶಕಕ್ಷಾತ್ರಪರನ್ನು ಸೋಲಿಸಿ ತಮ್ಮ ಸಾಮ್ರಾಜ್ಯವನ್ನೂ ಪೂರ್ವ ಸಮುದ್ರದಿಂದ ಪಶ್ಚಿಮ ಸಮುದ್ರದವರೆಗೂ ವಿಸ್ತರಿಸಿದನು. ಆತನ ರಾಣಿ ಕೊರೆಸಿದ ನಾಸಿಕದ ಶಾಸನದಲ್ಲಿ ಆತನನ್ನು ವರ್ಣಸಂಕರವನ್ನು ತಡೆದವನು, ಏಕೈಕ ಬ್ರಾಹ್ಮಣ ಎಂದೆಲ್ಲ ಸ್ತುತಿಸಲಾಗಿದೆ. ಅಂದರೆ ರಾಜರು ವರ್ಣಧರ್ಮದ ಮೂಲದ ಮಾನ್ಯತೆ ಪಡೆಯಲು ಪ್ರಯತ್ನ ಇಲ್ಲಿ ವ್ಯಕ್ತವಾಗಿದೆ.

ಶಾತವಾಹನರ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ನಗರೀಕರಣ ಉಂಟಾಯಿತು. ಭಾರತ ಮತ್ತು ರೋಂ ಸಾಮ್ರಜ್ಯದ ನಡುವೆ ವ್ಯಾಪರ ಹೆಚ್ಚಾಯಿತು. ರೋಮನ್ನರು ಅರಬ್ಬೀ ಸಮುದ್ರದ ಮಾರ್ಗದಿಂದ ಮನ್ಸೂನು ಗಾಳಿಗಳ ಸಹಾಯದಿಂದ ಪಶ್ಚಿಮ ಕರಾವಳಿಯ ಬಂದರುಗಳನ್ನು ತಲುಪುತ್ತಿದ್ದರು. ಹಾಗಾಗಿ ದ್ರಾವಿಡ ಹಾಗೂ ದಖ್ಖನ್ನಿನ ಪ್ರದೇಶಗಳಿಗೆ ರೋಮನ್ನರ ನೇರ ಸಂಪರ್ಕ ಉಂಟಾಯಿತು. ರೋಂ ಸಾಮ್ರಾಟರಾದ ಅಗಸ್ಟಿಸ್‌ ಹಾಗೂ ಟೈಬೀರಿಯಸ್‌ ಇವರ ನಾಣ್ಯಗಳು ದಕ್ಷಿಣ ಭಾರತದ ಹಲವಾರು ಸ್ಥಳಗಳಲ್ಲಿ ಸಿಕ್ಕಿವೆ. ಎಂಪೋರಾ ಹಾಗೂ ರೋಮನ್‌ರೌಲೆಟೆಡ್‌ಮಡಿಕೆಗಳು, ಅರೆಟೈನ್‌ ಮಡಿಕೆಗಳೂ ದಕ್ಷಿಣ ಭಾರತದಲ್ಲಿ ಸಿಕ್ಕಿವೆ. ದಕ್ಷಿಣ ಭಾರತೀಯ ನಗರಗಳು, ವ್ಯಾಪಾರಿ ಮಾರ್ಗಗಳು ಈ ಹೊಸ ವ್ಯಾಪಾರಿ ಸಂಬಂಧಿಂದ ರಾಜ್ಯಕ್ಕೆ ವಿಶೇಷ ಆದಾಯವನ್ನು ಉಂಟುಮಾಡಿರಬಹುದು. ಶಾತವಾಹನರ ಪ್ರಥಮ ಸಾಮ್ರಾಟನಾದ ನಾಣೆಘಾಟದ ಶಾಸನದ ಶಾತಕರ್ಣಿಯು ‘ಕ್ಷಣಾಪಥ ಪತಿ’ ಎಂದು ಕರೆಸಿಕೊಂಡಿದ್ದನು. ದಕ್ಷಿಣಾಪಥ ಎಂದರೆ ದಕ್ಷಿಣದ (ವ್ಯಾಪಾರೀ) ಮಾರ್ಗಗಳು ಎಂದರ್ಥ. ಶಾತವಾಹನರು ವ್ಯಾಪಾರಿ ಮಾರ್ಗಗಳ ಮೇಲೆ ಹತೋಟಿ ಇಟ್ಟುಕೊಂಡಿದ್ದನ್ನು ಇದು ಸೂಚಿಸುತ್ತದೆ. ಸಾತವಾಹನದ ನಾಣ್ಯಗಳ ಆಧಾರದಿಂದಲೂ ಇದನ್ನು ಸಮರ್ಥಿಸಬಹುದು. ಪ್ರಾಚೀನ ರಾಜ್ಯಗಳಲ್ಲೆಲ್ಲ, ಅತ್ಯಧಿಕ ಸಂಖ್ಯೆಯ, ವೈವಿಧ್ಯತೆಯ ನಾಣ್ಯಗಳನ್ನು ಟಂಕಿಸಿದವರೇ ಶಾತವಾಹನರು. ಇವರು ಬೆಳ್ಳಿ, ಸೀಸ, ನಿಕ್ಕಲ್‌ ಹಾಗೂ ತಾಮ್ರ ಧಾತುಗಳಲ್ಲಿ ನಾಣ್ಯಗಳನ್ನು ಹೊರಡಿಸಿದರು. ಅವರ ಆಂಧ್ರ ಪ್ರಾಂತ್ಯದ ನಾಣ್ಯಗಳ ಮೇಲೆ ದ್ರಾವಿಡ (ಪ್ರಾಚೀನ ತೆಲುಗು?) ಭಾಷೆಯಲ್ಲಿ ತಲೆಬರಹಗಳಿವೆ.

ಶಾತವಾಹನರು ಪ್ರಾರಂಭದಲ್ಲಿ ಪಶ್ಚಿಮ ಮಹಾರಾಷ್ಟ್ರದಲ್ಲಿ ತಮ್ಮ ಆಳ್ವಿಕೆಯನ್ನು ಪ್ರಾರಂಭಿಸಿದಂತೇ ತೋರುತ್ತದೆ. ಶಾತಕರ್ಣಿಯ ಕಾಲದಲ್ಲಿ ಮಧ್ಯಭಾರತದ ಮಾಳವ ಪ್ರಾಂತ್ಯ ಕೂಡ ಅವರ ಅಧೀನದಲ್ಲಿತ್ತು. ಈ ಕಾಲದಲ್ಲೇ ಆಂಧ್ರ ದಕ್ಷಿಣ ಕೋಸಲ, (ಮಧ್ಯಪ್ರದೇಶದ ಬಸ್ತರ್ ಪ್ರದೇಶ) ಹಾಗೂ ಕರ್ನಾಟಕಗಳ ಭಾಗಗಳನ್ನು ತಮ್ಮ ಆಳ್ವಿಕೆಗೆ ತಂದಿದ್ದರು. ಕರ್ನಾಟಕದ ಭಾಗದಲ್ಲಿ ಶಾತವಾಹನ ವಂಶಗಳಾದ ಚುಟು ಹಾಗೂ ಕುರ ವಂಶಗಳು ಆಳುತ್ತಿದ್ದವು. ಅವು ನಾಣ್ಯಗಳನ್ನು ಪ್ರತ್ಯೇಕವಾಗಿ ಟಂಕಿಸಿದ್ದವು. ಶಾತವಾಹನ ಸಾಮ್ರಾಜ್ಯದಲ್ಲಿ ಇತರ ಭಾಗದಲ್ಲೂ ಭೋಜರ್, ರಥಿಕ ಮುಂತಾಗಿ ಕರೆಯಲ್ಪಟ್ಟ ವಂಶಗಳು ಆಳುತ್ತಿದ್ದವು. ಶತವಾಹನರ ಕಾಲದ ಶಾಸನಗಳು ಈ ಕಾಲದ ಕೃಷಿ ಸಂಸ್ಕೃತಿಯ ಕುರಿತೂ ಸಾಕಷ್ಟು ಬೆಳಕು ಚೆಲ್ಲುತ್ತವೆ. ಕೃಷಿ ಕ್ಷೇತ್ರಗಳಲ್ಲಿ ರಾಜರ ಸ್ವಾಮ್ಯದಲ್ಲಿ (ರಾಜಕಂ ಖೇತಂ) ಇದ್ದಂತಹವು ಹಾಗೂ ಖಾಸಗಿ ಸ್ವಾಮ್ಯದಲ್ಲಿ ಇದ್ದಂತಹವು ಎಂದು ವಿಭಾಗಿಸಲಾಗಿದೆ. ಭತ್ತದ ಭೂಮಿಯಲ್ಲಿ ನೀರಾವರಿ ಹಾಗೂ ಖುಷ್ಕಿ ಭೂಮಿಗಳಿದ್ದವು. ಇವಲ್ಲದೇ ತೆಂಗಿನ, ಮಾವಿನ ತೋಟಗಳೂ ಇದ್ದವು. ಬಹುಶಃ ರಾಜ್ಯವು ತೆಂಗಿನ ಸಸಿಗಳನ್ನು ದಾನ ನೀಡಿ ತೋಟದ ಕೃಷಿಯನ್ನು ಪ್ರೋತ್ಸಾಹಿಸಿತ್ತು. ಖಾಸಗಿ ಭೂಮಿಯನ್ನು ದಾನ ನೀಡುವಾಗ ರಾಜ್ಯವು ಅವನ್ನೂ ಖರೀದಿಸಿ ದಾನ ನೀಡುತ್ತಿತ್ತು. ಉಷವದಾತನು ಬ್ರಾಹ್ಮಣನೊಬ್ಬನಿಂದ ಹೀಗೆ ಭೂಮಿಯನ್ನು ಖರೀದಿಸಿ ಭಿಕ್ಷು ಸಂಘಕ್ಕೆ ದಾನ ನೀಡಿದ್ದನು. ರಾಜ್ಯವು ಕರವಸೂಲಿಯನ್ನು ಮಾಡುತ್ತಿದ್ದು, ದಾನ ನೀಡಿದ ಭೂಮಿಗೆ ಕರದಿಂದ ವಿನಾಯಿತಿ ನೀಡಿತ್ತು. ಇಂಥ ವಿನಾಯಿತಿಯ ಪಟ್ಟಿಯಲ್ಲಿ ರಾಜ್ಯದ ಸೈನ್ಯ, ಅಧಿಕಾರಿಗಳೂ, ದಂಡಾಧಿಕಾರಿಗಳೂ ಈ ಭೂಮಿಯಲ್ಲಿ ಪ್ರವೇಶಿಸುವಂತಿಲ್ಲ ಎಂಬುವೂ ಬರುತ್ತವೆ. ಇದು ಶಾತವಾಹನ ರಾಜ್ಯದ ಕುರಿತ ಒಂದು ಇಣುಕುನೋಟವನ್ನು ನೀಡುತ್ತದೆ.

ಶಾತವಾಹನರಲ್ಲದೇ ಇನ್ನೂ ಕೆಲವು ರಾಜವಂಶಗಳು ದಕ್ಷಿಣದಲ್ಲಿ ಮೌರ್ಯೋತ್ತರ ಕಾಲದಲ್ಲಿ ತಲೆ ಎತ್ತಿದ್ದವು. ಕಳಿಂಗದ ರಾಜ ಖಾರವೇಲನೆಂಬವನು ಕ್ರಿ.ಪೂ. ೧ನೆಯ ಶತಮಾನದ ಮಧ್ಯಭಾಗದಲ್ಲಿ ಮಗಧದವರೆಗೂ ದಿಗ್ವಿಜಯ ಮಾಡಿದ್ದನು. ಆತನು ತನ್ನ ರಾಜ್ಯದಲ್ಲಿ ಚಂಡಮಾರುತದಿಂದ ಹಾಳಾದ ಆಸ್ತಿಪಾಸ್ತಿಯನ್ನು ಜೀರ್ಣೋದ್ದಾರ ಮಾಡಿಸಿದ್ದನ್ನು ಶಾಸನದಲ್ಲಿ ಹೇಳಿಕೊಳ್ಳುತ್ತಾನೆ. ಆದರೆ ಖಾರವೇಲನ ನಂತರ ಕಳಿಂಗದಲ್ಲಿ ಆತನ ವಂಶ ಮುಂದುವರಿದಂತೆ ಕಾಣುವುದಿಲ್ಲ. ಕ್ರಿ.ಶ. ಮೂರನೆಯ ಶತಮಾನದಲ್ಲಿ ನಾಗಾರ್ಜುನಕೊಂಡದಲ್ಲಿ ಆಳಿದ ಇಕ್ಷ್ವಾಕು ವಂಶದ ಅರಸರು ಅಲ್ಲಿ ಅನೇಕ ಬೌದ್ಧ, ಪೌರಾಣಿಕ ದೇವತೆಗಳಿಗೆ ಸ್ತೂಪಗಳನ್ನು, ದೇವಾಲಯಗಳನ್ನು ಕಟ್ಟಿಸಿದ್ದರು. ಆದರೆ ಯಾರೂ ಶಾತವಾಹನರಂತೆ ಸಾಮ್ರಾಜ್ಯವನ್ನು ಕಟ್ಟಲಿಲ್ಲ.

ಸಾಮಂತ ಪದ್ಧತಿಯ ಪ್ರಾರಂಭ

ಗುಪ್ತರ ಸಾಮ್ಯಾಜ್ಯದ ಉದಯದೊಂದಿಗೆ ಪ್ರಾಚೀನ ರಾಜ್ಯಗಳ ರಚನೆಯಲ್ಲಿ ಕೆಲ ಮೂಲಭೂತ ಬದಲಾವಣೆಗಳಾದವು. ಇವುಗಳಲ್ಲಿ ಮುಖ್ಯವಾದುದು ಎಂದರೆ ಸಾಮಂತ ಪದ್ಧತಿಯ ಮೂಲಕ ಸಾಮ್ರಾಜ್ಯವನ್ನು ಆಳುವ ಕ್ರಮ. ಪರದೇಶಿ ರಾಜರ ಆಳ್ವಿಕೆಯ ಕಾಲದಿಂದ ‘ರಾಜಾಧಿರಾಜ’ ಮಹಾರಾಜಾಧಿರಾ’ ಎಂಬ ಬಿರುದುಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ನೋಡಿದ್ದೇವೆ. ಹಲವು ರಾಜರ ಮೇಲೆ ಸರ್ವಭೌಮತ್ವನ್ನು ಸ್ಥಾಪಸಿದ ಒಬ್ಬನನ್ನು ರಾಜಾಧಿರಾಜ ಎಂದು ಕರೆಯುತ್ತಿದ್ದರು. ಮಹಾರಾಜರನ್ನೇ ತನ್ನ ಅಧೀನತೆಗೆ ತಂದುಕೊಂಡವನು ಮಹಾರಾಜಾಧಿರಾಜನಾಗುತ್ತಾನೆ. ಗುಪ್ತವಂಶದ ರಾಜರು ವಂಶಪಾರಂಪರ್ಯವಾಗಿ ಹೀಗೆ ‘ರಾಜ’ ಅವಸ್ಥೆಯಿಂದ ‘ಮಹಾರಾಜಾಧಿರಾಜ’ ಬಿರುದನ್ನು ಧರಿಸುವ ಮಟ್ಟಕ್ಕೆ ಪ್ರಬಲರಾದರು. ಈ ವಂಶದ ಸ್ಥಾಪಕನಾದ ಶ್ರೀಗುಪ್ತನನ್ನು ಮಹಾರಾಜ ಎಂಷ್ಟೇ ಕರೆಯಲಾಗಿದೆ. ಈತನ ಕಾಲ ಕ್ರಿ.ಶ. ಮೂರನೆಯ ಶತಮಾನದ ಅಂತ್ಯ ಭಾಗವಿರಬಹುದು. ಈ ವಂಶದಲ್ಲಿ ಬಂದ ಮೊದಲನೆಯ ಚಂದ್ರಗುಪ್ತನಿಗೆ ಮಹಾರಾಜಾಧಿರಾಜ ಎಂಬ ಬಿರುದು ಬಂದಿತು. ಈತನು ಲಿಚ್ಛವಿ ಗಣರಾಜ್ಯವನನ್ನು ಗುಪ್ತ ಸಾಮ್ರಾಜ್ಯದಲ್ಲಿ ಸೇರಿಸಿಕೊಂಡ ನಂತರ ಲಿಚ್ಛವಿಗಳ ಅಸ್ತಿತ್ವ ಮತ್ತೆ ಮೇಲೇಳದಂತೇ ನಾಶವಾಗಿ ಹೋಯಿತು. ಈತನ ಮಗ ಸಮುದ್ರಗುಪ್ತನು ಮಹಾ ಪರಾಕ್ರಮಿಯಾಗಿದ್ದನು. ಆತನ ಅಲಹಾಬಾದಿನ ಸ್ತಂಭ ಶಾಸನದಲ್ಲಿ ಆತನು ನಡೆಸಿದ ದಗ್ವಿಜಯದ ವಿವರಗಳು ದಾಖಲಾಗಿವೆ. ಈ ದಿಗ್ವಜಯದ ನಂತರ ಸಮುದ್ರಗುಪ್ತನು ಸೋತ ರಾಜರ ಹಾಗೂ ಜನರ ಜೊತೆ ವಿಭಿನ್ನ ರೀತಿಯ ಆಳ್ವಿಕೆಯ ವಿಧಾನಗಳನ್ನು ಹಾಕಿಕೊಂಡಿದ್ದನು. ದಕ್ಷಿಣಾಪಥದ ೧೨ ರಾಜರನ್ನು ಸೋಲಿಸಿ ಸೆರೆ ಹಿಡಿದು ನಂತರ ಅವರನ್ನು ಸ್ವತಂತ್ರಗೊಳಿಸಿ ಅನುಗ್ರಹಿಸಿದನು. ಉತ್ತರಾಪಥದ ೭ ರಾಜರನ್ನು ಹಾಗೂ ೯ ಗಣತಂತ್ರಗಳನ್ನು ಸೋಲಿಸಿ ಅವರ ಮೇಲೆ ಕರಗಳನ್ನು ವಿದಿಸಿದನು. ಅಂದರೆ ದಕ್ಷಿಣಾಪಥವು ಗುಪ್ತರ ಆಳ್ವಿಕೆಗೆ ಓಳಪಡಲಿಲ್ಲ. ಉತ್ತರಾಪಥದ ಪ್ರಬಲ ರಾಜರನ್ನು ತನ್ನ ಸೇವಕರನ್ನಾಗಿ, ಅಂದರೆ ಸಾಮಂತರನ್ನಾಗಿ ಮಾಡಿಕೊಂಡನು. ಇನ್ನೂ ಗುಡ್ಡಗಾಡು ಜನಾಂಗಗಳನ್ನು, ಗಣತಂತ್ರಗಳನ್ನು ನೇರವಾಗಿ ತನ್ನ ಆಳ್ವಿಕೆಯೊಳಗೆ ತಂದಂತೆ ತೋರುತ್ತದೆ. ಹೀಗೆ ಸಮುದ್ರಗುಪ್ತನ ಸಾಮ್ರಾಜ್ಯದಲ್ಲಿ ಆಳ್ವಿಕೆಯು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಎರಡೂ ರೂಪದಲ್ಲೂ ಅಸ್ತಿತ್ವದಲ್ಲಿತ್ತು.

ಸಾಮಂತ ಎಂಬ ಶಬ್ದ ಅಲಹಾಬಾದ್‌ ಶಾಸನದಲ್ಲಿ ಸಿಗದಿದ್ದರೂ, ಸಮುದ್ರಗುಪ್ತನ ನಂತರ ಕಾಲದ ಶಾಸನಗಳಲ್ಲಿ ಸಿಗುತ್ತದೆ. ಡಿ.ಡಿ. ಕೊಸಾಂಬಿಯವರು ಈ ಪದದ ಅರ್ಥದ ಬದಲಾವಣೆಯನ್ನು ಗುಪ್ತಕಾಲದಲ್ಲಿ ಗುರುತಿಸಿದ್ದಾರೆ. ಕೌಟಿಲ್ಯನೂ ಸಾಮಂತ ರಾಜರನ್ನು ಉಲ್ಲೇಖಿಸುತ್ತಾನೆ. ಆದರೆ ಅಲ್ಲಿ ಸಾಮಂತರು ಎಂದರೆ ಅಕ್ಕಪಕ್ಕದ ರಾಜ್ಯದ ರಾಜರು. ಗುಪ್ತರ ಶಾಸನಗಳಲ್ಲಿನ ಸಾಮಂತನೆಂದರೆ ಒಬ್ಬ ಸಾಮ್ರಾಟನಿಗೆ ಅಡಿಯಾಳಾಗಿರುವ ರಾಜ. ಅಂದರೆ ಇಲ್ಲಿ ಸಾಮಂತನು ತನ್ನ ಸಾರ್ವಭೌಮತ್ವವನ್ನೂ ಕಳೆದುಕೊಂಡವನು. ಬಹುಶಃ ಸಮುದ್ರಗುಪ್ತನಂತಹ ವಿಜಿಗೀಷುಗಳು ಸಣ್ಣ ಪುಟ್ಟ ರಾಜರನ್ನೆಲ್ಲ ಸೋಲಿಸಿ, ಅವರನ್ನು ತಮ್ಮ ಅಡಿಯಾಳುಗಳನ್ನಾಗಿ ಮಾಡಿಕೊಂಡಿರಬಹುದು. ಅಂಥ ಸಾಮಂತರು ಮಹಾರಾಜಾಧಿರಾಜನಿಗೆ ತಮ್ಮ ವಿಧೇಯತೆನ್ನು ಸೈನ್ಯದ ಸಹಾಯ ಮಾಡುವುದರ ಮೂಲಕ, ನಿರ್ದಿಷ್ಟ ಕಾಲದಲ್ಲಿ ಕಪ್ಪ ಕಾಣಿಕೆಗಳನ್ನು ಸಲ್ಲಸುವ ಮೂಲಕ ಪ್ರಕಟಿಸುತ್ತಿದ್ದರೂ, ಇವರು ತಮ್ಮನ್ನು ಸಾಮ್ರಾಟರ ಪಾದಪದ್ಮೋಪ ಜೀವಿಗಳು ಎಂದು ಕರೆದುಕೊಳ್ಳುತ್ತಿದ್ದರು. ಈ ರೀತಿಯಲ್ಲಿ ಗುಪ್ತಕಾಲದ ನಂತರ ಭಾರತೀಯ ರಾಜ್ಯಗಳ ರಚನೆ ವಿಘಟಿತ ರಾಜ್ಯದ ರಚನೆಯಾಯಿತು. ರಾಜನಿಗೆ ಪ್ರಾದೇಶಿಕ ಆಡಳಿತದ ನೇರ ಹೊಣೆ ಇಂಥ ಸಾಮಂತಾಧೀನ ಪ್ರದೇಶಗಳಲ್ಲಿ ತಪ್ಪಿತು. ಆಡಳಿತ ಎಂಬುದು ‘ನೌಕರಶಾಹಿ’ಯ ಸ್ವರೂಪದಲ್ಲಿರದೇ ಖಾಸಗಿ ವಂಶಪಾರಂಪರ್ಯವಾದ ಜವಾಬ್ದಾರಿಯಾಯಿತು. ಆಡಳಿತ ಎಂಬುದು ಒಟ್ಟಾರೆಯಾದ ಆಳ್ವಿಕೆಯಾಗಿ ಪರಿವರ್ತಿತವಾಯಿತು. ಒಂದು ರಾಜ್ಯದಲ್ಲಿ ರಾಜನ ಆಳ್ವಿಕೆಗೆ ನೇರವಾಗಿ ಸೇರಿದ ಪ್ರದೇಶ, ಸಾಮಂತರಿಗೆ ಸೇರಿದ ಪ್ರದೇಶ ಎಂಬ ಎರಡು ರೀತಿಯ ಅಧಿಕಾರವಲಯಗಳು ನಿರ್ಮಾಣವಾದವು. ಇದರ ಪರಿಣಾಮವಾಗಿ ಸಾಮ್ರಾಟರ ಕೇಂದ್ರೀಕೃತ ಆಡಳಿತ, ಸೈನ್ಯ ಮುಂತಾದವುಗಳ ಪ್ರಮಾಣ ಸಣ್ಣದಾಯಿತು.

ಈ ರೀತಿಯ ಆಡಳಿತ ವ್ಯವಸ್ಥೆಯ ಪ್ರಾರಂಭವನ್ನು ಭಾರತದಲ್ಲಿ ‘ಪ್ಯೂಡಲ್‌’ ವ್ಯವಸ್ಥೆಯ ಪ್ರಾರಂಭವನ್ನಾಗಿ ಕೆಲವು ಎಡಪಂಥೀಯ ವಿದ್ವಾಂಸರು ಗ್ರಹಿಸುತ್ತಾರೆ. ಅವರಲ್ಲಿ ಕೊಸಾಂಬಿ ಹಾಗೂ ಆರ್.ಎಸ್‌. ಶರ್ಮ ಅವರು ಅಗ್ರಗಣ್ಯರು. ಗುಪ್ತಕಾಲವು ಒಟ್ಟಾರೆಯಾಗಿ ಅನೇಕ ಸಾಮಾಜಿಕ ಆರ್ಥಿಕ ಬದಲಾವಣೆಗಳನ್ನು ಪ್ರತಿನಿಧಿಸುತ್ತದೆ. ಅವುಗಳಲ್ಲಿ ಮುಖ್ಯವಾದವೆಂದರೆ ೧. ಅಧಿಕಾರದ ವಿಘಟನೆಯಾಗಿ ಮಾಧ್ಯಮಿಕ ಅಧಿಕಾರಿಗಳ ಹೆಚ್ಚಳವಾಗುತ್ತದೆ. ೨. ಭೂಮಿಯನ್ನು ರಾಜ್ಯದ ಅಧಿಕಾರದಿಂದ ಮನ್ನಾ ಮಾಡಿ ಖಾಸಗಿ ಒಡೆತನಕ್ಕೆ ಒಪ್ಪಿಸುವ ಸಂಪ್ರದಾಯ ಬಲವಾಯಿತು. ರಾಜ್ಯದ ಅಧಿಕಾರಿಗಳಿಗೆ ಹಣದ ರೂಪದ ವೇತನ ನೀಡುವ ಪದ್ಧತಿ ನಿಂತುಹೋಗಿ, ಭೂಮಿಯ ಒಡೆತನದ ಮೂಲಕ ಅದನ್ನು ಸಲ್ಲಿಸುವ ಪದ್ಧತಿ ಬೆಳೆಯಿತು. ೩. ಗುಪ್ತಕಾಲದಲ್ಲಿ ನಗರಗಳ ವಿನಾಶವಾಗಿ, ಹಣದ ಚಲಾವಣೆ ಸ್ಥಗಿತಗೊಂಡಿತು. ವ್ಯಾಪಾರ ವಾಣಿಜ್ಯ ಚಟುವಟಿಕೆ ಸಂಕುಚಿತವಾಯಿತು. ಕೃಷಿ ಉತ್ಪಾದನೆಯನ್ನು ನೆಚ್ಚಿಕೊಂಡಿದ್ದ ರಾಜ್ಯಗಳಲ್ಲಿ ಗ್ರಾಮ ಸಂಸ್ಕೃತಿ ಪ್ರಬಲವಾಯಿತು. ೪. ಖಾಸಗಿ ಒಡೆತನದ ಜೊತೆಗೆ ಒತ್ತಾಯದ, ಬಿಟ್ಟಿಕೆಲಸದ ಪದ್ಧತಿಯೂ ಬೆಳೆಯಿತು. ಒಟ್ಟಿನಲ್ಲಿ ಯುರೋಪಿನ ಮಧ್ಯಕಾಲದಲ್ಲಿ ಪ್ಯೂಡಲ್‌ಯುಗದಲ್ಲಿ ಆದ ಬದಲಾವಣೆಗಳನ್ನೇ ಇವು ಹೋಲುವುದರಿಂದ ಇದೊಂದು ಭಾರತೀಯ ಪ್ರಕಾರದ ಪ್ಯೂಡಲ್‌ ವ್ಯವಸ್ಥೆ ಎಂಬುದು ಶರ್ಮ ಅವರ ಅಭಿಪ್ರಾಯ. ಈ ವಾದಕ್ಕೆ ಭಿನ್ನಾಭಿಪ್ರಾಯಗಳೂ ಬಂದಿವೆ.

ಗುಪ್ತಕಾಲ ಪ್ರಾಚೀನ ಭಾರತೀಯ ರಾಜ್ಯಗಳ ಬೆಳವಣಿಗೆಯಲ್ಲಿ ಒಂದು ಮಹತ್ವದ ತಿರುವು ಎಂಬುದನ್ನಂತೂ ಅಲ್ಲಗಳೆಯುವಂತಿಲ್ಲ. ಈ ಕಾಲದಲ್ಲಿ ಭಾರತೀಯ ಮಧ್ಯಯುಗ ಸಂಸ್ಕೃತಿ ರೂಪುಗೊಂಡಿತು. ಅಂದರೆ ರಾಜತ್ವದ ಕಲ್ಪನೆ ಯಜ್ಞ-ಯಾಗಗಳನ್ನು ಬಿಟ್ಟು ಮೂರ್ತಿಪೂಜೆಯ ಪೌರಾಣಿಕ ಸಂಸ್ಕೃತಿಯನ್ನು ಆಧರಿಸಿತು. ಮಧ್ಯಕಾಲೀನ ದೇವಾಲಯ ಸಂಸ್ಕೃತಿಯ ಪ್ರಾರಂಭವನ್ನು ನಾವು ಗುಪ್ತ ಕಾಲದಲ್ಲಿ ನೋಡುತ್ತೇವೆ. ಭಕ್ತಿ ತತ್ವದ ಮೂರ್ತಿ ಪೂಜಾ ಪಂಥಗಳೂ ಈ ಕಾಲದ ವೈಶಿಷ್ಟ್ಯವಾಗಿವೆ ಶೈವ, ವೈಷ್ಣವ, ಶಾಕ್ತ, ಸೌರ, ಗಾನಪತ್ಯ ಮುಂತಾದ ಪೌರಾಣಿಕ ದೇವತಾ ಪಂಥಗಳಲ್ಲದೇ ಬೌದ್ಧ, ಜೈನ ಮುಂತಾದ ಪಂಥಗಳೂ ಮೂರ್ತಿಪೂಜೆಯನ್ನು ವೈಭವೀಕರಿಸಿದವು. ಈ ಪೂಜಾ ಪಂಥಗಳು ಮಧ್ಯಕಾಲೀನ ಸಮಾಜದ ವಿಭಿನ್ನ ಬುಡಕಟ್ಟುಗಳನ್ನು, ಜಾತಿಗಳನ್ನು, ಪ್ರದೇಶಗಳನ್ನು ಬೆಸೆಯುವ, ಸಂಸ್ಕೃತೀಕರಿಸುವ ಪರಿಣಾಮಕಾರಿ ಸಾಧನಗಳಾದವು. ಹಾಗಾಗಿ ರಾಜ್ಯವು ಉತ್ಸಾಹದಿಂದ ಮೂರ್ತಪೂಜಾ ಸಂಸ್ಕೃತಿಯನ್ನು ಪೋಷಿಸಿ ತನ್ನ ಮಾನ್ಯತೆ ಗಳಿಸಿಕೊಂಡಿತು. ಸಾಮಂತ ಪದ್ದತಿಯ ಬಗ್ಗೆ ಈಗಾಗಲೇ ವಿವರಿಸಲಾಗಿದೆ. ಈ ಎಲ್ಲ ಮಧ್ಯಯುಗೀನ ಆಳ್ವಿಕೆಯ ವೈಶಿಷ್ಟ್ಯತೆಗಳೂ ಗುಪ್ತಕಾಲದಲ್ಲಿ ರೂಪುಗೊಂಡಿವೆ.

ಪರಾಮರ್ಶನ ಗ್ರಂಥಗಳು

೧. ಕೋಸಾಂಬಿ ಡಿ.ಡಿ.೧೯೬೫. ಕಲ್ಚರ್ ಸಿವಿಲೈಝೇಶನ್ ಇನ್ ಏನ್ಸಿಯೆಂಟ್ ಇಂಡಿಯ ಇನ್ ಹಿಸ್ಟಾರಿಕಲ್ ಔಟ್ಲೈನ್, ಲಂಡನ್.

೨. ರೋಮಿಲಾ ಥಾಪರ್, ೧೯೮೫. ಫ್ರಮ್ ಲೀನ್ಯೇಜ್ಟು ಸ್ಟೇಟ್, ಡೆಲ್ಲಿ: ಆಕ್ಸ್‌ಫರ್ಡ ಯುನಿವರ್ಸಿಟಿ ಪ್ರೆಸ್.

೩. ರೋಮಿಲಾ ಥಾಪರ್, ೨೦೦೨. ಅರ್ಲಿ ಇಂಡಿಯ, ಡೆಲ್ಲಿ: ಪೆಂಗ್ವಿನ್ ಬುಕ್ಸ್.

೪. ರೋಮಿಲಾ ಥಾಪ್‌, ೧೯೯೮. ಅಶೋಕ ಆಂಡ್ದಿ ಡಿಕ್ಲೈನ್ಆಫ್ದಿ ಮೌರ್ಯಾಸ್, ಡೆಲ್ಲಿ: ಆಕ್ಸ್‌ಫರ್ಡ್ ಯುನಿವರ್ಸಟಿ ಪ್ರೆಸ್‌.

೫. ಶರ್ಮ ಆರ್.ಎಸ್‌., ೧೯೮೫. ಮೆಟಿರಿಯಲ್ಕಲ್ಚರ್ಆಂಡ್ಸೋಶಿಯಲ್ಫಾರ್ಮೇಶನ್ಇನ್ ಏನ್ಸಿಯೆಂಟ್ಇಂಡಿಯ, ಡೆಲ್ಲಿ: ಮ್ಯಾಕ್ಮುಲನ್‌.

೬. ಶರ್ಮ ಆರ್.ಎಸ್‌., ೧೯೮೩. ಪರ್‌ಸ್ಪೆಕ್ಟಿವ್ಸ್‌ ಇನ್‌ ಸೋಶಿಯಲ್‌ ಆಂಡ್‌ಇ ಕನಾಮಿಕ್‌ ಹಿಸ್ಟರಿ ಆಫ್‌ ಅರ್ಲಿ ಇಂಡಿಯ, ನ್ಯೂ ಡೆಲ್ಲಿ: ಮುನ್ಕಿರಾಮ್‌ ಮನೋಹರಲಾಲ್‌.