ಇವತ್ತು ನಾವು ಯಾವುದನ್ನು ಭಾರತ ಉಪಖಂಡ ಎಂದು ಗುರುತಿಸುತಿದ್ದೇವೆಯೋ ಅಥವಾ ಬೇರೆ ಬೇರೆ ಹೆಸರುಗಳಿಂದ ದೇಶಗಳನ್ನು ಗುರುತಿಸುತಿದ್ದೇವೆಯೋ  ಅಥವಾ ನಮ್ಮ ನಮ್ಮನ್ನು ಮತ್ಯಾವ ಸಮುದಾಯ ಮುಂತಾದ ಗುರುತುಗಳಿಂದ ಗುರುತಿಸುತಿದ್ದೇವೆಯೋ  ಅಂತಹ ಗುರುತುಗಳನ್ನು ಮಾನವ ಚರಿತ್ರೆಯಲ್ಲಿ ಅಂದಾಜಿಸುವುದು ದುಸ್ತರ. ಭಾರತದ ಚರಿತ್ರೆಯ ಅತ್ಯಂತ ಹಿಂದಿನ ಪುಟಗಳಿಗೆ ಹೋಗುವುದಾದರೆ ನಮಗೆ ಈ ನೆಲದ ಬಗ್ಗೆ : “ಪೂರ್ವೇತಿಹಾಸವು” ವರ್ಣರಂಜಿತವಾದ ಮಾಹಿತಿಯನ್ನು ನೀಡುತ್ತದೆ. ಸುಮಾರು ೨೦ ಲಕ್ಷ ವರ್ಷಗಳ ಹಿಂದೆ ರಿವತ್‌ನಲ್ಲಿ  (ಹಿಂದಿನ ಪಾಕಿಸ್ತಾನ) ಮನುಷ್ಯರು ಉಪಯೋಗಿಸುತ್ತಿದ್ದ ಉಪಕರಣಗಳ ಪತ್ತೆಯಾಗಿರುವುದು, ೧೦ ಲಕ್ಷ ವರ್ಷಗಳ ಹಿಂದೆ ಪಾಕಿಸ್ತಾನದ ಸೊನ್ ಕಣಿವೆಯಲ್ಲಿ ಬೆಣಚು  ಕಲ್ಲಿನ ಸಂಸ್ಕೃತಿ ಪತ್ತೆಯಾಗಿರುವುದು, ಸುಮಾರು ೭ರಿಂದ ೫ ಲಕ್ಷ ವರ್ಷಗಳ ಹಿಂದೆ  ಪಬ್ಬಿ ಪರ್ವತ ಶ್ರೇಣಿ (ಪಾಕಿಸ್ತಾನ), ಹಿಮಾಚಲಗಳಲ್ಲಿ ಜನವಸತಿಯಿದ್ದ ವಿಚಾರ ಗಮನಾರ್ಹವಾಗಿದೆ. ಭಾರತದಲ್ಲಿ  ಅಧುನಿಕ ಮಾನವರ ಆಗಮನವು ಸುಮಾರು ೭೫,೦೦೦ ವರ್ಷಗಳ ಹಿಂದೆ ಎಂದು ಚರಿತ್ರೆಕಾರರು ತರ್ಕಿಸಿದ್ದಾರೆ. ಸುಮಾರು ೩೧,೦೦೦ ವರ್ಷಗಳ ಹಿಂದಿನ ಮೊದಲ ಆಧುನಿಕ ಮಾನವನ ಪಳೆಯುಳಿಕೆ ದೊರೆತದ್ದು ಶ್ರೀಲಂಕಾದಲ್ಲಿ ಎಂಬ ಅಂದಾಜಿದೆ. ಪ್ರಸ್ತುತ ಸಂಪುಟದ ಮೊದಲ ಲೇಖನದಲ್ಲಿ ಈ ಕುರಿತಾದ ದೀರ್ಘವಾದ ವಿವರ ಮತ್ತು ವಿಶ್ಲೇಷಣೆಗಳಿವೆ. ೧೯೨೦ರ ದಶಕದ ಆರಂಭದಲ್ಲಿ ಸಿಂಧೂ ಕಣಿವೆ ನಾಗರಿಕತೆ ಸಂಶೋಧನೆಯಾಗುವವರೆಗೆ ಭಾರತದ ಚರಿತ್ರೆ ಆರಂಭವಾಗಿದ್ದೇ ಆರ್ಯರ ಚರಿತ್ರೆಯಿಂದ. ಅಂದರೆ ಸುಮಾರು ಕ್ರಿ.ಪೂ. ೨೦೦೦ರಿಂದ ಭಾತರದ ಚರಿತ್ರೆ ಆರಂಭವಾಯಿತೆನ್ನಲಾಗಿತ್ತು. ಸಿಂಧೂಕಣಿವೆ ನಾಗರಿಕರೆ ಸುಮಾರು ಕ್ರಿ. ಪೂ. ೩೫೦೦ ಹೊತ್ತಿಗೆ ಆರಂಭವಾದ ಸೂಚನೆಗಳು ಸಿಗುತ್ತವೆ. ಅದಕ್ಕಿಂತ ಹಿಂದಿನ ಚರಿತ್ರೆಯ ಮಾನವನ ಸ್ಥಿತಿಗತಿಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದರೂ ಅವುಗಳನ್ನು ಚರಿತ್ರೆಕಾರರು  ಅರ್ಥ ಮಾಡಿಕೊಳ್ಳಲು ಹೆಣಗುತ್ತಿದ್ದಾರೆ.

ಸಿಂಧೂ ಕಣಿವೆ ನಾಗರೀಕತೆ ಮತ್ತು ಅರ್ಯರ ಸಂಸ್ಕೃತಿಗಳನ್ನು ತಳಕು ಹಾಕುವ ಸಂಶೋಧನೆಗಳು ಅಲಲ್ಲಿ ಕಂಡರೂ ಅದಕ್ಕಿಂತ ಪೂರ್ವದ ಚರಿತ್ರೆಗೆ ಲಿಂಕ್ ತೆಗೆದುಕೊಳ್ಳಲು ಅಸಕ್ತ ಚರಿತ್ರೆಕಾರರಿಗೆ ಕೈಗೆಟುಕದ ವಿಷಯವಾಗಿದೆ. ಇತಿಹಾಸದ ರಚನೆಯಲ್ಲಿ ಗ್ಯಾಪ್‌ಗಳನ್ನು ತುಂಬಿಸುವ ಕೆಲಸಗಳು ಅಲಲ್ಲಿ ಕಂಡರೂ ಅದು ಮರಳು ಭೂಮಿಯಲ್ಲಿ ಓಯಸಿಸ್ಸನ್ನು ಹುಡುಕಿದಂತೆ ಎನ್ನುವುದು ವೃತ್ತಿಪರ ಚರಿತ್ರೆಕಾರರಿಗಂತು ಗೊತ್ತಿದೆ. ಅಂದರೆ ಉಪಖಂಡದಲ್ಲಿ ಸುಮಾರು ೩೦,೦೦೦ ವರ್ಷಗಳ ಹಿಂದೆ ಆಧುನಿಕ ಮಾನವನ ಕುರುಹು ಸಿಗುತ್ತದೆ ಎಂದರೆ ಅವನ ಜೊತೆಗೆ ನಮ್ಮ ಸಂಸ್ಕೃತಿ ಸಮುದಾಯಗಳ ಅಳಿವು ಉಳಿವಿನ ಹಿನ್ನಲೆ, ವಾಗ್ವಾದ, ಸಂಘರ್ಷ, ಹೋರಾಟಗಳನ್ನು ಅರ್ಥಮಾಡಿಕೊಳ್ಳುವುದು ಕೂಡ ಸಂಕೀರ್ಣವಾದ ವಿಚಾರವಾಗಿದೆ. ಪ್ರಾಚೀನ ಭಾರತದ ಚರಿತ್ರೆ ಬರವಣಿಗೆಯಲ್ಲಿ ಸರಳ ರೇಖಾತ್ಮಕವಾಗಿ ಇವನು ನಮ್ಮ ಪೂರ್ವಜ ಅಥವಾ ಇವರು ನಮ್ಮ ಮೂಲಕ್ಕೆ ಸೇರಿದವರು ಎನ್ನುವ ವಾದಗಳು ಈ ಸಂದರ್ಭದಲ್ಲಿ ಅಸಂಗತವಾಗುತ್ತವೆ. ಹಾಗಾಗಿ ಚರಿತ್ರೆಯ ಮೂಲ ಹುಡುಕಿ ಅದರ ಆಧಾರದಲ್ಲಿ ಮಹಾಯುದ್ದಗಳನ್ನು ಮಾಡುವ ಎಲ್ಲ ಬಗೆಯ ಆಧುನಿಕ ರಾಜಕಾರಣವು ತೀವ್ರವಾದ ವಿಮರ್ಶೆಗೆ ಒಳಪಡಬೇಕಾಗುತ್ತದೆ.

ಭಾರತದ ನೆಲದಲ್ಲಿ ಕೃಷಿ ಸಂಸ್ಕೃತಿಗಳು ಆರಂಭವಾಗುವ ದಿನಗಳಿಂದ ಅಂದರೆ ವೈದಿಕ ಯುಗದಿಂದ ಮೌರ್ಯರ ಮತ್ತು ಗುಪ್ತರ ಕಾಲದ ರಾಜ್ಯ ನಿರ್ಮಾಣ ಪ್ರಕ್ರಿಯೆವರೆಗಿನ ಚರಿತ್ರೆಯ ವಿವಿಧ ಮುಖಗಳನ್ನು ಪ್ರಸ್ತುತ ಸಂಪುಟವು ಚರ್ಚಿಸುತ್ತದೆ. ನಮ್ಮ ದೇಶದಲ್ಲಿ ರಾಜ್ಯ ನಿರ್ಮಾಣ ಹಾಗೂ ನಗರೀಕರಣ ಹೇಗೆ ಒಂದು ವ್ಯವಸ್ಥೆಯನ್ನು ನಿರ್ಮಾಣ ಮಾಡಿದವು ಎನ್ನುವ ಬಗೆಗಿನ ಹಾಗೂ ಇವುಗಳ ಪ್ರಕ್ರಿಯೆಗಳ ಬಗೆಗಿನ ಬಹಳ ಅಪರೂಪದ ಲೇಖನಗಳು ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಚರ್ಚೆಗೆತ್ತಿಕೊಂಡಿದ್ದಾರೆ. ನಮ್ಮ ಸಂಪುಟದ ವಿದ್ವಾಂಸರು . ಮಹಾ ಯುದ್ಧಗಳನ್ನು ಸಂಭ್ರಮಿಸುವುದಕ್ಕೆ ಮತ್ತು  ಸಂಸ್ಕೃತಿಯನ್ನು ವೈಭವೀಕರಿಸುವುದಕ್ಕೆ ಪ್ರಾಚೀನ ಭಾತರದ ಬಗೆಗಿನ ಬಹುತೇಕ ಸಂಶೋಧನೆಗಳು ಬರಹಗಳು ಮಿತಿಗಳಿಗೆ ಒಳಪಟ್ಟ ಸಂಸರ್ಭದಲ್ಲಿ ಆ ಕಾಲದಲ್ಲಿ ಬೆಳವಣಿಗೆಯಾದ ರಾಜ್ಯ ವ್ಯವಸ್ಥೆ, ರಾಜಕಾರಣದ ವಿವಿಧ ಮಜಲುಗಳು, ಆರ್ಥಿಕ ನಿಯಮಗಳು ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ವಿಶ್ಲೇಷಿಸಿದ ಲೇಖನಗಳನ್ನು ಈ ಸಂಪುಟದಲ್ಲಿ ಪರಿಚಯಿಸುತ್ತಿದ್ದೇವೆ. ವೈದಿಕ ಪರಂಪರೆಯೊಂದಿಗೆ ಜೊತೆ ಜೊತೆಯಾಗಿ ಬೆಳೆದ ಜೈನ ಮತು ಬೌದ್ಧ ಪರಂಪರೆಗಳನ್ನು ಈ ಸಂದರ್ಭದಲ್ಲಿ ಅಭ್ಯಸಿಸಲಾಗಿದೆ.

ಪ್ರಸ್ತುತ ಸಂಪುಟವು ಮೊಗಲರ ಕಾಲದ ವಿವಿಧ ಆಯಾಮಗಳನ್ನು ಅಧ್ಯಯನ ಮಾಡಿದರೂ ಆ ಕಾಲದ ರಾಜ್ಯ ಮತ್ತು ಅರ್ಥವ್ಯವಸ್ಥೆಯ ಕುರಿತಾಗಿ ವಿಶೇಷ ಅಧ್ಯಯನ ನಡೆಸಿದ ವಿದ್ವಾಂಸರ ಬರಹಗಳನ್ನು ಒಳಗೊಂಡಿದೆ. ಮಹಾರಾಷ್ಟ್ರದಲ್ಲಿ ಮೊಗಲರಿಗೆ ರಾಜಕೀಯದಾಟದಲ್ಲಿ ಎದುರಾಳಿಯಾದ ಶಿವಾಜಿಯ ಪ್ರತಿಭಟನೆಗಳನ್ನು ದಾಖಲಿಸುವುದರೊಂದಿಗೆ ಆ ಕಾಲದಲ್ಲಿ ಯುರೋಪಿನ ವ್ಯಾಪಾರೀ ಸಂಸ್ಥೆಗಳು ಭಾರತಕ್ಕೆ ಕಾಲಿಡಲು ಮೊಗಲರನ್ನು ಸೇರಿಸಿದಂತೆ ರಾಜ ಮಹಾರಾಜರ ಬಳಿ ಅನುಮತಿಗಾಗಿ, ವ್ಯಾಪಾರ ಒಪ್ಪಂದಕ್ಕಾಗಿ ಹಪಹಪಿಸಿ ಅದರಲ್ಲಿ ಸಫಲರಾದ ಪ್ರಕ್ರಿಯೆಗಳನ್ನು ದಾಖಲಿಸುವ ಪ್ರಯತ್ನಗಳಿವೆ. ಭಾರತದ ನೆಲದಲ್ಲಿ ಹಂತ ಹಂತವಾಗಿ ಬೇರೂರಿದ ಯುರೋಪಿನ ಸಾಮ್ರಜ್ಯಶಾಹಿಗಳ ಪರಸ್ಪರ ಕದನಗಳಲ್ಲಿ ಜಯಶೀಲರಾದ ಬ್ರಿಟಿಷರು ಭಾರತದ ರಾಜಕೀಯವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬಗೆಗಳನ್ನು ಚರ್ಚಿಸಲಾಗಿದೆ. ಬ್ರಿಟಿಷರ ಆಳ್ವಿಕೆಗೆ ಆರಂಭದಲ್ಲಿ ಭಾರತದ ಅರಸರು, ನವಾಬರು ಮತ್ತಿತರರು ನೀಡಿದ ಪ್ರತಿರೋಧಗಳ ಬಗೆಗಳ ಬಗೆಗಿನ ವಿದ್ವಾಂಸರ ಬರವಣಿಗೆಗಳು ನಮ್ಮ ಗಮನ ಸೆಳೆಯುತ್ತದೆ. ಪಾಶ್ಚಾತ್ಯ ಸಂಸ್ಕೃತಿ ಮತ್ತು ಇಂಗ್ಲಿಷ್‌ ಭಾರತದ ಮೇಲೆ ಬೀರಿದ ಪರಿಣಾಮಗಳನ್ನು ರಾಜಾರಾಮ ಮೋಹನರಾಯ್‌, ದಯಾನಂದ ಸರಸ್ವತಿ, ಸಯ್ಯದ್‌ ಅಹಮದ್‌ ಖಾನ್‌, ಸ್ವಾಮಿ ವಿವೇಕಾನಂದ ಮೊದಲಾದವರ ಚಿಂತನೆಗಳು ಹಾಗೂ ಅವರ ಸಂಸ್ಥೆಗಳ ಮೂಲಕ ತಿಳಿಸುವ ಲೇಖನಗಳು ಇಲ್ಲಿ ಮುಖ್ಯವಾಗಿವೆ. ಭಾರತದ ಚರಿತ್ರೆಯ ಮೈಲುಗಲ್ಲಾದ ೧೮೫೭ರ ಭಾರತೀಯರ ಪ್ರತಿರೋಧವು ಸ್ವಾತಂತ್ರ್ಯ ಹೋರಾಟದ ಮುಖ್ಯವಾದ ಮೈಲುಗಲ್ಲು. ೧೮೫೭ರ ಹೋರಾಟದ ಸ್ವರೂಪ, ವಿನ್ಯಾಸಗಳ ಜೊತೆಗೆ ಈ ಘಟನೆಯನ್ನು ವಿವಿಧ ಸೈದ್ಧಾಂತಿಕ ದೃಷ್ಟಿ ಕೋನಗಳಿಂದ ವಿಮರ್ಶಿಸಿದ ಲೇಖನಗಳು ಪ್ರಸ್ತುತ ಸಂಪುಟದ ಕೊನೆಯ ಭಾಗದಲ್ಲಿವೆ. ಭಾರತದ ಆಧುನಿಕ ಚರಿತ್ರೆಯಲ್ಲಿ ಪ್ರಬಲ ಅಲೆಯೊಂದನ್ನು ಸೃಷ್ಟಿಸಿದ ಈ ಪ್ರತಿಭಟನೆಯಲ್ಲಿ ಭಾರತೀಯರಿಗಿದ್ದ ಏಕೈಕ ವಿರೋಧಿ ಬ್ರಿಟಿಷ್ ಸಾಮ್ರಾಜ್ಯಶಾಹಿಗಳು. ಈ ಹೋರಾಟವೇ ಆಧುನಿಕ ಭಾರತದ ಕನಸಿಗೆ, ನಿರ್ಮಾಣಕ್ಕೆ ದೊಡ್ಡ ಮೈಲುಗಲ್ಲಾಯಿತು ಎಂದರೆ ಉತ್ಪ್ರೇಕ್ಷೆಯಲ್ಲ.

ಭಾರತದಲ್ಲಿ ಆಧುನಿಕ ಯುಗದ ಆರಂಭದ ಬಗ್ಗೆ ಬಹಳಷ್ಟು ಚರ್ಚೆಗಳಿವೆ. ಬ್ರಿಟಿಷ್‌ರ ಕಾಲವನ್ನು ಆಧುನಿಕ ಯುಗವೆಂದು ಬ್ರಿಟಿಷ್‌ರೇ ಕರೆದುಕೊಂಡಿದ್ದರಿಂದ ಅವರ ಮಾತು ಅವರ ಅಧಿಕಾವಧಿಯಲ್ಲಿ ಒಪ್ಪಿತವಾಯಿತು. ಅವರ ಬೌದ್ಧಿಕತೆಯನ್ನು ವಿರೋಧಿಸಿದ ಭಾರತದ ವಿವಿಧ ಸೈದ್ಧಾಂತಿಕ ಹಿನ್ನೆಲೆಯ ವಿದ್ವಾಂಸರು ಚೌಕಟ್ಟನ್ನು ಮೂಲಭೂತವಾಗಿ ಒಪ್ಪಿಕೊಂಡು, ನಂತರ ಅವರ ವಿಚಾರಗಳಿಗೆ ಪ್ರತಿಕ್ರಿಯಿಸಿದ್ದನ್ನು ನೋಡಬಹುದು. ಹೀಗಾಗಿ ಬ್ರಿಟಿಷ್‌ರು ಹಾಕಿಕೊಟ್ಟ ಭಾರತದ ಚರಿತ್ರೆಯ ಮೂಲಭೂತ ವಿಂಗಡನೆಗಳಾದ ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಎನ್ನುವ ಬೌದ್ಧಿಕ ಚೌಕಟ್ಟುಗಳು ಭಾರತದಲ್ಲಿ ಇಂದಿಗೂ ಚಾಲ್ತಿಯಲ್ಲಿವೆ. ಬ್ರಿಟಿಷ್‌ರು ಬರುವ ಮೊದಲೇ ಭಾರತದಲ್ಲಿ ಆಧುನಿಕತೆ ಇತ್ತು ಎಂದು ವಾದಿಸುವವರು ಇದ್ದಾರೆ. ಈ ಕೃತಕ ಚೌಕಟ್ಟುಗಳ ಬಗ್ಗೆ ಅಲ್ಲಲ್ಲಿ ತೀವ್ರವಾದ ವಿಮರ್ಶೆಗಳಿದ್ದರೂ ಅವು ಪ್ರಭಾವಿಯಾಗಿಲ್ಲ.

ಚರಿತ್ರೆಯ ಪ್ರಕ್ರಿಯೆಯು ಎಲ್ಲೋ ಒಂದು ಕಡೆ ಧುತ್ತನೆ ನಿಂತು, ಇಲ್ಲಿಂದ ಮುಂದೆ ಪ್ರಾಚೀನ  ಚರಿತ್ರೆ, ಮಧ್ಯಕಾಲೀನ ಚರಿತ್ರೆ ಎಂದು ನಿಲ್ಲುವುದಿಲ್ಲ. ಈ ನಿರಂತರ ಪ್ರಕ್ರಿಯೆಯನ್ನು ವಿಭಜಿಸಿದರ ಹಿಂದಿನ ರಾಜಕೀಯ ತರ್ಕಗಳನ್ನು  ಇಂದಿನ ಪರಿಸ್ಥಿತಿಯಲ್ಲಿ ಮೀರುವುದು ಮುಖ್ಯ. ಸಾವಿರಾರು ವರ್ಷಗಳ ಚರಿತ್ರೆಯ ಪ್ರಕ್ರಿಯೆಗೆ ಚರಿತ್ರೆಕಾರರು ತಡೆಗೋಡೆಗಳನ್ನು ನಿರ್ಮಿಸಿ ಇದು ಪ್ರಾಚೀನ ಕಾಲ, ಇದು ಮಧ್ಯಕಾಲ ಎಂದು ಅದೇಶ ನೀಡುವ ವಿಚಾರ ತರ್ಕಬದ್ದವಾಗಿಲ್ಲ. ಮೌರ್ಯರ ಕಾಲವಿರಲಿ, ಚೋಳರ ಕಾಲವಿರಲಿ, ಗುಪ್ತರ ಕಾಲವಿರಲಿ, ಮೊಗಲರ ಕಾಲವಿರಲಿ ಅಥವಾ ಬ್ರಿಟಿಷರ ಕಾಲವಿರಲಿ ಕೋಟ್ಯಾಂತರ ಜನರ ಜನಜೀವನ, ಅವರು ಬಾಳಿ ಬದುಕಿದ ವ್ಯವಸ್ಥೆಯ ಪ್ರಕ್ರಿಯೆ ನಿರಂತರವಾಗಿರುವುದನ್ನು ಗಮನಿಸಬಹುದಾಗಿದೆ. ಚರಿತ್ರೆಯ ಪುಟಗಳಲ್ಲಿ ವಿಜೃಂಭಿಸುವ ಈ ಚಕ್ರಾಧಿಪತ್ಯಗಳು ವಾಸ್ತವಿಕವಾಗಿ ಕೋಟಿ ಕೋಟಿ ಜನರ ದಿನನಿತ್ಯದ ಜೀವನದ ಮೇಲೆ ಎಷ್ಟು ಪರಿಣಾಮಕಾರಿಯಾಗಿ ಪ್ರಭಾವ ಬೀರಿವೆ ಎಂಬುದು ಇವತ್ತಿಗೂ ಕೂಡ ಚರಿತ್ರೆಕಾರರಿಗೆ ದೊಡ್ಡ ಸವಾಲೇ. ಭಾರತದ ಹಳ್ಳಿಗಳಲ್ಲಿ ಮತ್ತು ಸಮುದಾಯಗಳಲ್ಲಿ ಇಂದಿಗೂ ಭದ್ರವಾಗಿರುವ ನಂಬಿಕೆಗಳು, ನ್ಯಾಯಪದ್ಧತಿಗಳು ಈ ಚಕ್ರಾಧಿಪತಿಗಳ ಅಥವಾ ಪ್ರಜಾಪ್ರಭುತ್ವದ ಪ್ರಭುಗಳ ವ್ಯಾಪ್ತಿಗೆ ಎಷ್ಟು ಬಂದಿವೆ ಅಥವಾ ಇಲ್ಲ ಎನ್ನುವುದು ಹೆಚ್ಚು ವಾಸ್ತವವಾಗುತ್ತದೆ.

ಪ್ರಸ್ತುತ ಸಂಪುಟವು ಈ ಬಗೆಯ ಮಿತಿಗಳನ್ನು ಮೀರಲು ಅಲ್ಲಲ್ಲಿ ಪ್ರಯತ್ನಿಸಿದೆ. ಈ ಹಿನ್ನೆಲೆಯಲ್ಲಿ ೧೮೫೭ರ ಭಾರತೀಯರ ಪ್ರತಿಭಟನೆಯವರೆಗಿನ ಅವಧಿಯನ್ನು ಆಧುನಿಕ ಪೂರ್ವದ ಕಾಲವೆಂದು ಗುರುತಿಸಲಾಗಿದೆ. ಆಧುನಿಕ ಭಾರತದ ನಿರ್ಮಾಣದ ಕೂಗು ಹಾಗೂ ಬ್ರಿಟಿಷರಿಂದ ಭಾರತದ ವಿಮೋಚನೆಯ ಹೋರಾಟಕ್ಕೆ ಭದ್ರ ಬುನಾದಿ ಸಿಕ್ಕಿದ್ದು ಈ ಸಂದರ್ಭದಲ್ಲಾದ್ದರಿಂದ ಆಧುನಿಕ ಪೂರ್ವದ ಮತ್ತು ಆಧುನಿಕ ಭಾರತದ ಚೌಕಟ್ಟು ಪ್ರಸ್ತುತ ಎಂದು ನಾನು ಭಾವಿಸಿದ್ದೇನೆ.

ಕುವೆಂಪು ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರಧ್ಯಾಪಕರಾದ ಡಾ. ರಾಜಾರಾಮ ಹೆಗಡೆ ಮತ್ತು ಅವರ ವಿದ್ಯಾರ್ಥಿಗಳು ಪ್ರಾಚೀನ ಚರಿತ್ರೆಗೆ ಸಂಬಂಧಿಸಿದ ಮಹತ್ವದ ವಿಮರ್ಶಾತ್ಮಕ ಲೇಖನಗಳನ್ನು ಈ ಸಂಪುಟಕ್ಕೆ ನೀಡಿದ್ದಾರೆ. ಕನ್ನಡದಲ್ಲಿ ಈ ಕುರಿತಾದ ಪ್ರಮುಖ ಲೇಖನಗಳನ್ನು ನಮ್ಮ ಸಂಪುಟದ ಮೂಲಕ ಪರಿಚಯಿಸಿದ ಡಾ. ರಾಜಾರಾಮ ಹೆಗಡೆ ಅವರಿಗೆ ನಾನು ಕೃತಜ್ಞನಾಗಿದ್ದೇನೆ.

ಚರಿತ್ರೆ ವಿಶ್ವಕೋಶವನ್ನು ಹೊರತರಲು ಪ್ರೇರಕಶಕ್ತಿಯಾಗಿದ್ದ ಆರಂಭಿಕ ಕುಲಪತಿ ಡಾ. ಚಂದ್ರಶೇಖರ ಕಂಬಾರ, ಕುಲಸಚಿವರಾಗಿದ್ದ ಡಾ. ಕೆ. ವಿ. ನಾರಾಯಣ ಅವರನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ. ಈಗಾಗಲೇ ತಿಳಿಸಿದ ಹಾಗೆ ಇಲ್ಲಿನ ಬಹುತೇಕ ಲೇಖನಗಳು ಚರಿತ್ರೆ ವಿಶ್ವಕೋಶದಲ್ಲಿ ಪ್ರಕಟವಾದವುಗಳೇ. ಅವುಗಳಲ್ಲಿ ಬಹಳಷ್ಟು ಪರಿಷ್ಕಾರವಾದವುಗಳೇ. ಇವುಗಳೊಂದಿಗೆ ಹಲವು ಹೊಸ ಲೇಖನಗಳನ್ನು ನಮ್ಮ ವಿದ್ವಾಂಸರು ಬರೆದುಕೊಟ್ಟಿದ್ದಾರೆ. ಈ ಬಗೆಯ ಕೃತಿಗಳು ಹೊರಬರಲೇಬೇಕೆಂದು ಒತ್ತಾಸೆ ನೀಡಿದ ಹಿಂದಿನ ಕುಲಪತಿಗಳಾದ ಡಾ. ಬಿ. ಎ. ವಿವೇಕ ರೈ ಅವರಿಗೆ ನಮ್ಮ ಕೃತಜ್ಞತೆಗಳು. ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ಮತ್ತು ಪ್ರಸಾರಾಂಗದ ಹಿಂದಿನ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಅವರಿಗೆ ನಾನು ಆಭಾರಿಯಾಗಿದ್ದೇನೆ.

ಈ ಯೋಜನೆಯ ವಿಷಯತಜ್ಞರಾದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್‌. ಎ. ಬಾರಿ ಹಾಗೂ ಇತಿಹಾಸ ಪ್ರಾಧ್ಯಾಪಕರಾದ ಡಾ. ರಾಜಾರಾಮ ಹೆಗಡೆ ಅವರಿಗೆ ವಿಶೇಷ ಕೃತಜ್ಞತೆಗಳು. ಈ ಕೃತಿಯನ್ನು ಹೊರತರಲು ಶ್ರಮಿಸಿದ ವಿಭಾಗದ ಹಿಂದಿನ ಮುಖ್ಯಸ್ಥರಾದ ಡಾ. ಕೆ. ಮೋಹನಕೃಷ್ಣ ರೈ ಹಾಗೂ ವಿಭಾಗದ ಇಂದಿನ ಮುಖ್ಯಸ್ಥರಾದ ಡಾ. ಎನ್‌. ಚಿನ್ನಸ್ವಾಮಿ ಸೋಸಲೆ ಅವರಿಗೂ, ಸಹೋದ್ಯೋಗಿಗಳಾದ ಪ್ರೊ. ಲಕ್ಷ್ಮಣ್‌ ತೆಲಗಾವಿ, ಡಾ. ಸಿ. ಆರ್. ಗೋವಿಂದರಾಜು ಹಾಗೂ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರಿಗೆ ನಾನು ಆಭಾರಿಯಾಗಿದ್ದೇನೆ.

ಈ ಕೃತಿಯ ಪುಸ್ತಕವಿನ್ಯಾಸ ಮಾಡಿದ ಶ್ರೀ ಸುಜ್ಞಾನಮೂರ್ತಿ, ಮುಖಪುಟ ವಿನ್ಯಾಸ ಮಾಡಿದ ಶ್ರೀ ಯು. ಟಿ. ಸುರೇಶ್‌, ವಿಷಯಸೂಚಿ ತಯಾರಿಯಲ್ಲಿ ನೆರವಾದ ಶ್ರೀಮತಿ ಎಸ್‌. ರಶ್ಮಿ ಮತ್ತು ಶಿವಪ್ರಸಾದ್‌, ಅಕ್ಷರ ಜೋಡಣೆ ಮಾಡಿದ ಹೊಸಪೇಟೆಯ ಯಾಜಿ ಗ್ರಾಫಿಕ್ಸ್‌ನ ಶ್ರೀಮತಿ ಸವಿತಾ ಯಾಜಿ ಹಾಗೂ ಶ್ರೀ ಗಣೇಶ್ ಯಾಜಿ ಹಾಗೂ ಕೃತಿಯನ್ನು ಆಕರ್ಷಕವಾಗಿ ಮುದ್ರಿಸಿದ ಸ್ವ್ಯಾನ್ ಪ್ರಿಂಟರ್ಸ್, ಬೆಂಗಳೂರು ಅವರಿಗೆ ನನ್ನ ಕೃತಜ್ಞತೆಗಳು.

– ಡಾ. ವಿಜಯ್‌ ಪೂಣಚ್ಚ ತಂಬಂಡ