ಪ್ರಾಚೀನ ಭಾರತೀಯ ಚಿಂತನಾ ಸಂಪ್ರದಾಯದ ಆಧುನಿಕ ಅಧ್ಯಯನವು ಪೌರಾತ್ಯ ಅಧ್ಯಯನದೊಂದಿಗೆ (ಓರಿಯೆಂಟಲಿಸಂ) ಪ್ರಾರಂಭವಾಗುತ್ತದೆ. ಮ್ಯಾಕ್ಸ್ ಮುಲ್ಲರ್, ಕೀಥ್‌, ರೈಸ್‌ ಡೇವಿಡ್ಸ್‌ ಮುಂತಾದ ವಿದ್ವಾಂಸರು ಪ್ರಾಚೀನ ಭಾರತೀಯ ಧರ್ಮಗಳ ಸಾಹಿತ್ಯದ ಅಧ್ಯಯನ ನಡೆಸುತ್ತಾ ಚಿಂತನಾ ಸಂಪ್ರದಾಯದ ಮೇಲೂ ಬೆಳಕು ಚೆಲ್ಲಿದ್ದಾರೆ. ಈ ವಿದ್ವಾಂಸರಿಗೆ ಭಾರತವೆಂಬುದು ಅಗಾಧವಾದ ಆಧ್ಯಾತ್ಮಿಕ ತಿಳುವಳಿಕೆಯನ್ನು ಹುದುಗಿಸಿ ಕೊಂಡಿರುವ ನಾಡಾಗಿ ಕಾಣಿಸಿತ್ತು. ಅದೇ ವೇಳೆಗೆ ಪಾಶ್ವಾತ್ಯ ರಾಷ್ಟ್ರಗಳು ನಗರೀಕರಣ ಹಾಗೂ ಭೌತಿಕ ಆಕಾಂಕ್ಷೆಗಳಿಂದ ಆಧ್ಯಾತ್ಮಕವಾಗಿ ಬರಡಾಗುತ್ತಿವೆ ಎಂಬ ಕಳವಳ ಕೂಡ ಇಂಥ ವಿದ್ವಾಂಸರಲ್ಲಿತ್ತು. ಹಾಗಾಗಿ ಭಾರತೀಯ ಚಿಂತನೆಯನ್ನು ವಿಶೇಷವಾದ ಶ್ರದ್ದೆಯಿಂದ ಈ ವಿದ್ವಾಂಸರು ಅಧ್ಯಯನ ಮಾಡಿದರು. ಹತ್ತೊಂಬತ್ತನೆಯ ಶತಮಾನದ ಅಂತ್ಯ ಭಾಗದಲ್ಲಿ ಭಾರತದ ರಾಷ್ಟ್ರೀಯತೆಯ ಉದಯವಾಗುತ್ತಿದ್ದಂತೆಯೇ ಭಾರತೀಯ ವಿದ್ದಾಂಸರು ಪೌರಾತ್ಯ ವಿದ್ವಾಂಸರ ಈ ಮೇಲಿನ ಗ್ರಹಿಕೆಗಳನ್ನು ಹೆಗ್ಗಳಿಕೆಯಿಂದ ಬಳಸಿಕೊಂಡರು. ಭಾರತೀಯ ತತ್ವಜ್ಞಾನವೆಂದರೆ ಪ್ರಾಚೀನ ಭಾರತೀಯ ತತ್ವಜ್ಞಾನವಾಗಿ ಇವರಿಗೆ ಕಾಣಿಸಿದ್ದಲ್ಲದೇ, ಪೌರಾತ್ಯ ವಿದ್ವಾಂಸರಿಂದ ನಿರೂಪಿಸಲ್ಪಟ್ಟ, ಪಠ್ಯಗಳನ್ನು ಹಾಗೂ ಭಾಷಾಂತರಗಳನ್ನು ಉಪಯೋಗಿಸಿದ ಇವರು ಭಾರತವು ‘ಆಧ್ಯಾತ್ಮ ಪ್ರಧಾನ’ ದೇಶ ಎಂಬ ಗ್ರಹಿಕೆಯನ್ನೂ ಪ್ರತಿಪಾದಿಸಿದರು. ೧೯೨೨ರಲ್ಲಿ ಪ್ರಕಟವಾದ ದಾಸಗುಪ್ತರ ‘ಹಿಸ್ಟರಿ ಆಫ್ ಇಂಡಿಯನ್ ಫೀಲಾಸಫಿ,’ ಅದೇ ವೇಳೆಗೆ ಪ್ರಕಟವಾದ ಡಾ. ರಾಧಕೃಷ್ಣನ್ ಅವರ ‘ಇಂಡಿಯನ್ ಫಿಲಾಸಫಿ’ ಗ್ರಂಥಗಳು ಇಂಥ ರಾಷ್ಟ್ರೀಯತಾವಾದಿ ಗ್ರಹಿಕೆಯ ತತ್ವಶಾಸ್ತ್ರೀಯ ಇತಿಹಾಸಗಳಾಗಿವೆ.

ಈ ಶತಮಾನದ ಮಧ್ಯಭಾಗದ ನಂತರ ಭಾರತೀಯ ಚಿಂತನೆಯ ಕುರಿತು ‘ಲೋಕಾಯತ’ದ ಆದಿಯಾಗಿ ಅನೇಕ ಗ್ರಂಥಗಳನ್ನು ಪ್ರಕಟಿಸಿದ ದೇವೀಪ್ರಸಾದ ಚಟ್ಟೋಪಾಧ್ಯಾಯರು ಇಂಥ ಆಧ್ಯಾತ್ಮಪ್ರಧಾನ ನಿರೂಪಣೆಗಳನ್ನು ಟೀಕಿಸುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಭೌತಿಕವಾದಿ ಚಿಂತನೆಗಳೂ ಒಂದು  ಕಾಲದಲ್ಲಿ ಪ್ರಬಲವಾಗಿದ್ದವು. ಆದರೆ ಅವು ಪ್ರಬಲವಾದಾಗಲೆಲ್ಲ ಆಧ್ಯಾತ್ಮವಾದೇ ಚಿಂತನೆಗಳು ಅವುಗಳನ್ನು ಹತ್ತಿಕ್ಕಿದವು ಅಥವಾ ಒಳಗೆ ಸೇರಿಸಿಕೊಂಡು ಅಂತಿಮವಾಗಿ ಅಧ್ಯಾತ್ಮದ ಬಣ್ಣ ನೀಡಿದವು ಎಂದು ದೇವೀಪ್ರಸಾದರ ಅಭಿಪ್ರಾಯ. ದೇವೀ ಪ್ರಸಾದರು ಮಾರ್ಕ್ಸ್‌ವಾದದ ‘ಐತಿಹಾಸಿಕ ಭೌತವಾದ’ದ ದೃಷ್ಟಿಕೋನದಿಂದ ಭಾರತೀಯ ಚಿಂತನಾ ಸಂಪ್ರದಾಯವನ್ನು ವಿಮರ್ಶಿಸುತ್ತಾರೆ.

ಆದರೆ ಒಂದು ಆಸಕ್ತಿಯ ವಿಷಯವೆಂದರೆ ಯಾವ ಪಾಶ್ಷಾತ್ಯ ವಿದ್ವಾಂಸರೂ ಒಂದು ಸಮಗ್ರವಾದ ‘ಭಾರತೀಯ ತತ್ವಶಾಸ್ತ್ರದ ಇತಿಹಾಸ’ವನ್ನು ರಚಿಸುವ ಗೋಜಿಗೆ ಹೋಗಿಲ್ಲ. ಅದೇ ಭಾರತೀಯ ಇತಿಹಾಸ, ಧರ್ಮ, ಕಲೆ ಮುಂತಾದವುಗಳಿಗೆ ಸಂಬಂದಿಸಿದಂತೆ ಧಾರಾಳವಾಗಿ ಪಾಶ್ಚಾತ್ಯರಿಂದ ಗ್ರಂಥ ರಚನೆ ಆಗಿದೆ ಹಾಗೂ ಅಂಥ ಗ್ರಂಥಗಳಲ್ಲಿ ಸಾಂದರ್ಭಿಕವಾಗಿ ಭಾರತೀಯ ತತ್ವಶಾಸ್ತ್ರವನ್ನು ಚರ್ಚಿಸಿದ್ದಾರ. ಅದೇ ರೀತಿ ಆಧುನಿಕ ಭಾರತೀಯ ತತ್ವಶಾಸ್ತ್ರಜ್ಞರಿಗೆ ಬಾರತೀಯ ಚಿಂತನೆಗಳ ಇತಿಹಾಸವಾಗಿ ಅಥವಾ ಪ್ರತೀಕವಾಗಿ ಮಹತ್ವವನ್ನು ಹೊಂದಿದಂತೆ ತೋರುತ್ತದೆ. ಹಾಗಾಗಿ ಪ್ರಾಚೀನ ಭಾರತೀಯ ಚಿಂತನೆಯ ನೈಜ ಅರ್ಧದ ಆಧುನಿಕ ವ್ಯಾಖ್ಯಾನ ಅಥವಾ ಭಾಷ್ಯ ನಡೆದಿಲ್ಲ. ಹಾಗಾಗಿ ಆಧುನಿಕ ಯುರೋಪಿನಲ್ಲಿ ಗ್ರೀಕ್ ಚಿಂತನೆಗಳು ಬೆಳೆದಂತೆ ಭಾರತದಲ್ಲಿ ಪ್ರಾಚೀನ ಭಾತೀಯ ಚಿಂತನೆಗಳು ಬಳೆದುಬಂದಿಲ್ಲ. ಆದರೆ ೧೯ನೆಯ ಶತಮಾನದವರೆಗೂ ಪ್ರಾಚೀನ ಭಾರತೀಯ ಚಿಂತನೆಗಳಿಗೆ ಭಾಷ್ಯ ಸಂಪ್ರದಾಯ ಸತತವಾಗಿ ಬೆಳೆದುಕೊಂಡು ಬಂದಿತ್ತು.

ಪ್ರಾಚೀನ ಭಾರತೀಯ ಚಿಂತನಾ ಸಂಪ್ರದಾಯ ವಿಭಾಗೀಕರಣದ ಸಮಸ್ಯೆಗಳು

ಪ್ರಾಚೀನ ಭಾರತದಲ್ಲಿ ಒಂದು ಚಿಂತನಾ ಮಾರ್ಗ ಇರಲಿಲ್ಲ, ಹಲವಾರು ಇದ್ದವು. ವೈದಿಕ ಕಾಲದಿಂದ ಕ್ರಿ.ಶ. ೧೦ನೆಯ ಶತಮಾನದವರೆಗೆ, ಸುಮಾರು ಎರಡೂವರೆ ಸಾವಿರ ವರ್ಷಗಳಷ್ಟು ದೀರ್ಘಾವಧಿಯ ಕುರಿತು ಮಾತನಾಡುವಾಗ ಐತಿಹಾಸಿಕ ಚಲನಶೀಲತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಭಾರತದಂತಹ ವಿಶಾಲ ಉಪಖಂಡದ ವಿಭಿನ್ನ ಭಾಗಗಳಲ್ಲಿ, ವಿಭಿನ್ನ ಐತಿಹಾಸಿಕ ಸನ್ನಿವೇಶದಲ್ಲಿ ಇಂಥ ಚಿಂತನಾ ಸಂಪ್ರದಾಯಗಳು ರೂಪುಗೊಡಿವೆ. ನಾವು ಪರಿಶೀಲಿಸುವ ಚಿಂತನಾ ಸಂಪ್ರದಾಯಗಳು ಸುಸಂಘಟಿತ  ಗ್ರಾಂಥಿಕ ಪರಂಪರೆಗೆ ಸೇರಿರುವುದರಿಂದ, ವ್ಯವಸ್ಥಿತವಾದ ಕಲಿಕೆಯಿಂದ, ಜಿಜ್ಞಾಸೆಯಿಂದ ಬೆಳೆಸಿದ ಸಂಪ್ರದಾಯಗಳಾದ್ದರಿಂದ ಅವುಗಳನ್ನು ಪರಸ್ಪರ ಸಂಬಂಧವೇ ಇಲ್ಲದಂತೆ ಪ್ರತ್ಯೇಕಿಸಿ ಇಡುವುದೂ ಸಾಧ್ಯವಿಲ್ಲ. ಚಿಂತನೆಯ ಎಳೆಗಳು ಯಾವ್ಯಾವುದೋ ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗಿ ಬೆಳೆದು ಬರುತ್ತವೆ. ಹಾಗಾಗಿ ಪ್ರಾಚೀನ ಭಾರತೀಯ ಮತ ಸಿದ್ದಾಂತಗಳು ತಮ್ಮನ್ನು ಬೇರೆ ಬೇರೆ ಎಂದು ಸಾರಿಕೊಂಡರೂ, ಅವು ಸಾರಿಕೊಳ್ಳುವಷ್ಟು ಬೇರೆ ಬೇರೆಯಾಗಿಲ್ಲದೆ ಇರಬಹುದು.

ಸಾಧಾರಣವಾಗಿ ಭಾರತೀಯ ತತ್ವಚಿಂತನೆಯ ಇತಿಹಾಸದಲ್ಲಿ ಪ್ರಾಚೀನ ಭಾರತೀಯ ಚಿಂತನೆಗಳೇ ಮೂಲತಃ ಇರುತ್ತವೆ. ಈ ಚಿಂತನೆಗಳನ್ನು ಈ ಮುಂದಿನಂತೆ ವಿಭಾಗೀಕರಿಸಲಾಗುತ್ತದೆ. ೧.ವೈದಿಕ ಚಿಂತನೆ (ಉಪನಿಷತ್ತುಗಳ ಕುರಿತು ಪ್ರತ್ಯೇಕ ಭಾಗ ಇರಬಹುದು) ೨. ಭೌದ್ದ ಮತ ೩. ಜೈನಮತ ೪. ಇತರ ಭೌತವಾದೀ, ನಾಸ್ತಿಕವಾದಿ ಸಂಪ್ರದಾಯಗಳು ೫. ಷಡ್ದರ್ಶನಗಳು ಇವಲ್ಲದೇ ದೈವವಾದಿ, ನಾಸ್ತಿಕನಾದಿ ಸಂಪ್ರದಾಯಗಳು ೫. ಷಡ್ದರ್ಶನಗಳು ಇವಲ್ಲದೇ ದೈವವಾದೀ ಚಿಂತನೆಗಳು ವೈಷ್ಣವ, ಶೈವ, ಶಕ್ತಿ ಇತ್ಯಾದಿ ಸೇರಿಸಬಹುದು. ಇವು ಬೇರೆ ಬೇರೆ ಕಾಲದಲ್ಲಿ ಅಸ್ತಿತ್ವದಲ್ಲಿದ್ದವು. ಹಾಗೂ ಒಂದು ಐತಿಹಾಸಿಕ ಪ್ರಕ್ರಿಯೆಗೆ ಒಳಪಟ್ಟ ಸಂಪ್ರದಾಯಗಳಾದ್ದರಿಂದ ಜಡವಾದ, ನಿತ್ಯವಾದ ಪ್ರಬೇಧಗಳಾಗಲಾರವು. ಹಾಗಾಗಿ ಒಂದು ‘ಮತ’ ಎಂದು ಕರೆಯಲ್ಪಟ್ಟಿರುವ ಚಿಂತನೆಯಲ್ಲಿ ಪರಸ್ಪರ ಅಷ್ಟಾಗಿ ಸಂಬಂಧವೇ ಇಲ್ಲದ ಮಾರ್ಗಗಳು ಬೆಳೆದುಕೊಡು ಬಂದಿರಬಹುದು (ಬೌದ್ದ ಚಿಂತನೆಯಲ್ಲಿ ಹೀನಯಾನ, ಮಹಾಯಾನ, ವಜ್ರಯಾನ ಸಂಪ್ರದಾಯಗಳು ಬೆಳೆದ ಹಾಗೆ ಅಥವಾ ವೇದಾಂತ ದಶಕದಂತೇ ಅದ್ವ್ಯೆತ, ವಿಶಿಷ್ಟಾದ್ವ್ಯೆತ ದ್ವ್ಯೆತ ಮುಂತಾದ ಪರಸ್ಪರ ವಿರುದ್ದ ಸಿದ್ದಾಂತಗಳೂ ಇರಬಹುದು. ಇಲ್ಲ ಷಡ್ದರ್ಶನ ಎಂದು ನಾವು ಭೇದ ಎಣಿಸುವ ವಿಭಿನ್ನ ಸಂಪ್ರದಾಯಗಳಲ್ಲಿ ತರ್ಕ ಪ್ರಮಾಣಗಳಂತಹ ಸಾಮಾನ್ಯ ಅಂಶಗಳೂ ಇರಬಹುದು.

ನಾವು ಪ್ರಾಚೀನ ಭಾರತೀಯ ಚಿಂತನೆಯಲ್ಲಿ ಮಾಡಿಕೊಂಡ ವಿಭಾಗಗಳು ಭಾಗಶಃ ಪ್ರಾಚೀನ ವಿಂಗಡಣೆಗಳೂ, ಭಾಗಶಃ ಆಧುನಿಕ ಇತಿಹಾಸಶಾಸ್ತ್ರದವೂ ಆಗಿವೆ. ಪ್ರಾಚೀನ ವಿಂಗಡಣೆಗಳು ತಮ್ಮ ಒಂದು ಹೆಸರಿನ ಮೂಲಕ ತಮ್ಮ ಅಥವಾ ಅಥವಾ ಅನ್ಯರ ಸಂಪ್ರದಾಯಗಳನ್ನು ಗುರುತಿಸಲಿಕ್ಕಾಗಿ, ಐತಿಹಾಸಿಕವಾಗಿ ಕ್ರಿಯಾಶೀಲವಾಗಲಿಕ್ಕಾಗಿ ಒಂದು ಸುಸಂಸ್ಕೃತಿಗೆ ಗುರುತಾಗಿ ಆಕಾರ ತಳೆದಿವೆ. ಹಾಗಾಗಿ ಒಂದು ಮಟ್ಟದ ಸಾಮಾನ್ಯೀಕರಣ ಹಾಗೂ ನಿರೂಪಣೆ ಪ್ರಾಚೀನ ವಿಂಗಡಣೆಗಳಲ್ಲೂ ಇವೆ. ಅದೇ ರೀತಿ ಆಧುನಿಕರೂ ತಮ್ಮ ಇತಿಹಾಸಶಾಸ್ತ್ರೀಯ ಅಗತ್ಯಕ್ಕಾಗಿ ವಿಂಗಡಣೆಗಳನ್ನು ಮಾಡಬೇಕಾಗುತ್ತದೆ. ಉದಾಹರಣೆಗೆ ವೈದಿಕ ಚಿಂತನೆ ಎಂಬುದು ನಾವು ವೈದಿಕ ಸಾಹಿತ್ಯದಿಂದ ಆಯ್ದು ಕಟ್ಟುವ ಒಂದು ಪ್ರಕಾರವಾಗದೆ. ಪ್ರಾಚೀನ ಭಾರತದಲ್ಲಿ ವೇದಗಳಿಗೆ ಸಂಬಂಧಿಸಿ ಪೂರ್ವ ಮೀಮಾಂಸೆ  ಹಾಗೂ ವೇದಾಂತ ಎಂಬ ಮಾರ್ಗಗಳಿದ್ದವು. ಫೂರ್ವಮೀಮಾಂಸೆ ವೇದಗಳ ಕರ್ಮಕಾಂಡದ ಕುರಿತು ಜಿಜ್ಞಾಸೆ ನಡಿಸುತ್ದೆಯೇ ಹೊರತೂ ನಾವು ಈಗ ಅಧ್ಯಯನ ನಡೆಸುವ ರೀತಿಯಲ್ಲಿಲ್ಲ. ಅದೇ ರೀತಿ ನಾವು ಮಧ್ಯಕಾಲೀನ ಭಾರತದ ದೈವಿವಾದಿ ಚಿಂತನೆಗಳ ಕುರಿತು ಕಟ್ಟುವ ಇತಿಹಾಷ ಕೂಡ ಆಧುನಿಕ ಸಾಮಾನ್ಯೀಕರಣವೇ ಆಗುತ್ತದೆ.

ಈ ಮೇಲೀನ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಚೀನ ಭಾರತೀಯ ಚಿಂತನೆಗಳ ಸಂಪ್ರದಾಯಗಳನ್ನು ಪರಿಶೀಲಿಸಬೇಕು.

ವೈದಿಕ ಚಿಂತನೆಗಳು

ವೇದಗಳಲ್ಲಿ ಋಗ್ವೇದವು ವೈದಿಕ ಜನರ ಪ್ರಾಚೀನ ವಿಚಾರಗಳನ್ನು ಕುರಿತು ತಿಳಿಸುತ್ತದೆ. ಆದರೆ ಋಗ್ವೇದ ಹಾಗೂ ಇತರ ಮೂರು ವೇದಗಳಲ್ಲಿ ಕರ್ಮಾಂಗ ಹಾಗೂ ಮಂತ್ರ, ತಂತ್ರಗಳು ಪ್ರಾಧಾನ್ಯತೆ ಪಡೆಯುತ್ತವೆ. ಇವುಗಳೆಡೆಯಲ್ಲಿ ಯಜ್ಞ, ದೇವತೆಗಳು ಮುಂತಾದ ವಿಷಯಗಳ ಕುರಿತು ಆನುಭಾವಿಕ ವಿವರಣೆಗಳು ಸಿಗಬಹುದು ಹಾಗೂ ಎಲ್ಲೋ ಕ್ವಚಿತ್ತಾಗಿ ವೈದಿಕರ ಲೋಕ ದೃಷ್ಟಿ ಹಾಗೂ ತಾತ್ವಿಕ ಜಿಜ್ಞಾಸೆಗಳು ಸಿಗಬಹುದು. ಬಹುಶಃ ತಾತ್ವಿಕ ಚಿಂತನೆಗಳು ಯಜ್ಞ ಪ್ರಧಾನವಾದ ವೈದಿಕ ಮಂತ್ರಗಳಲ್ಲಿ ಅಷ್ಟೇನೂ ಪ್ರಸ್ತುತವಾಗಿದ್ದಿಲ್ಲದಿರಬಹುದು. ಯರ್ಜವೇದ, ಅಥರ್ವವೇದ ಹಾಗೂ ಬ್ರಾಹ್ಮಣಗಳಲ್ಲಿ ಯಂತೂ ಯಜ್ಞ ಹಾಗೂ ಮಂತ್ರ ತಂತ್ರಗಳು ಸರ್ವಸ್ವವಾಗಿವೆ.

ಪೂರ್ವ ವೈದಿಕ ಕಾಲದ ಚಿಂತನೆಗಳು ನಮಗೆ ಅವರ ದೇವತಾ ಸ್ತುತಿಗಳಲ್ಲಿ ಹಾಗೂ ಯಜ್ಞ ಕಲ್ಪನೆಯಲ್ಲಿ ಮುಖ್ಯವಾಗಿ ಸಿಗುತ್ತವೆ. ವೈದಿಕ ಜನರ ದೈವ ಕಲ್ಪನೆಯಲ್ಲಿ ಬಹುದೇವತಾ ರಾಧನೆಯಿಂದ ಏಕ ದೇವತಾರಾಧನೆ ಹಾಗೂ ನಿರಾಕರ ಪರಮಾತ್ಮ ತತ್ವದ ಬೆಳವಣೆಗೆಯನ್ನು ವಿದ್ವಾಂಸರು ಗುರುತಿಸುತ್ತಾರೆ. ‘ಏಕಂ ಸತ್‌ ವಿಪು ಬಹುದಾ ವದಂತಿ’ ಎನ್ನುವ ಸುಪ್ರಸಿದ್ಧ ವೈದಿಕ ಮಂತ್ರದಲ್ಲಿ ವೈದಿಕ ಜನರು ಒಂದು ವಿಶ್ವ ಕಲ್ಪನೆಯತ್ತ ಹೆಜ್ಞೆ ಹಾಕಿದ ಸೂಚನೆ ಇದೆ. ಅದೇ ರೀತಿ ‘ಋತ’ ಎನ್ನುವ ಕಲ್ಪನೆ ಕೂಡ ವೈದಿಕರ ವಿಶ್ವಕಲ್ಪನೆಯನ್ನು ಬಿಂಬಿಸುತ್ತದೆ. ಋತ ಎಂದರೆ ಜಗತ್ತನ್ನು ನಡೆಸುವ ತತ್ವವಾಗಿದೆ. ಹಗಲು-ರಾತ್ರಿಗಳು, ಋತುಮಾನಗಳು, ಜನನ-ಮರಣಗಳೆಲ್ಲವನ್ನೂ ಸುಸಂಬಧ್ದವಾಗಿ ನಡೆಸಿಕೊಂಡು ಹೋಗುವ ಶಕ್ತಿ ‘ಋತ’ವಾಗಿದೆ. ವರುಣನು ಈ ಋತವನ್ನು ಸೃಜಿಸಿದವನು ಹಾಗೂ ಕಾಯುವವನು. ಆತನು ಎಲ್ಲಡೆ ವ್ಯಾಪಿಸಿಕೊಂಡು ಎಲ್ಲದಕ್ಕೂ ಸಾಕ್ಷೀಭೂತ ನಾಗಿರುತ್ತಾನೆ. ಹಾಗಾಗಿ ಮನುಷ್ಯರ ಚಟುವಟಿಕೆಯನ್ನು ಪರೀಕ್ಷಿಸಿ ಅವರನ್ನು  ದಂಡಿಸುವ ಶಕ್ತಿಯಾಗಿದ್ದಾನೆ ಎಂದು ವೈದಿಕ ಜನರು ನಂಬಿದ್ದರು.

ಯಜ್ಞವು ಮೂಲತಃ ಬಹುಶಃ ದೇವತೆಗಳನ್ನು ಸಂತೃಪ್ತಪಡಿಸುವ ವಿಧಾನವಾಗಿದ್ದಿತು. ವೈದಿಕಕ ಜನರಿಗೆ ಯಜ್ಞವು ಒಂದು ಅನಿವಾರ್ಯವಾದ ಸಾಮಾಜಿಕ ಚಟುವಟಿಕೆಯಾಗಿದ್ದಿತು. ಕ್ರಮೇಣ ಯಜ್ಞವು ವಿಶ್ವಕಲ್ಪನೆಯ ಸಂಕೇತಗಳನ್ನು ಮೈಗೂಡಿಸಿಕೊಂಡಿತು. ಇಡೀ ಸೃಷ್ಟಿಯೇ ಒಂದು ಯಜ್ಞ ಎಂದು ನಿರೂಪಿಸಲಾಯಿತು. ಆದಿ ಪುರುಷನು ಅಥವಾ ಪ್ರಜಾಪತಿಯು ತನ್ನ ದೇಹವನ್ನು ಈ ಯಜ್ಞದಲ್ಲಿ ಬಲಿ ನೀಡಿ ಸೃಷ್ಟಿಯನ್ನು ಮಾಡಿದನು. ಋಗ್ವೇದದ ಪುರುಷಸೂಕ್ತದಲ್ಲಿ ದೇವತೆಗಳೂ ಯಜ್ಞವನ್ನು ಮಾಡಿ ಪುರುಷನ ಬಲಿಯನ್ನು ನೀಡುತ್ತಾರೆ. ಈ ಪುರಷನ ವಿಭಿನ್ನ ಅಂಗಾಂಗಗಳಿಂದಲೇ ಸಮಸ್ತ ಪ್ರಕೃತಿಯೂ ಮಾನವರೂ ಹುಟ್ಟಿದವು ಎಂದು ಹೇಳಲಾಗಿದೆ. ವೈದಿಕ ಜನರ ನಾಲ್ಕು ವರ್ಣಗಳ ಕಲ್ಪನೆಯ ಸಮಾಜವೂ ಈ ರೀತಿ ಪುರುಷನ ವಿಭಿನ್ನ ಅಂಗಾಗಳಿಂದ ಹುಟ್ಟಿತು ಎನ್ನಲಾಗಿದೆ.

ಋಗ್ವೇದದ ‘ನಾಸದೀಯ ಸೂಕ್ತ’ ಎನ್ನುವ  ಭಾಗದಲ್ಲಿ ಈ ಸೃಷ್ಟಿಗೂ ಆದಿಯಲ್ಲಿ ಏನಿತ್ತು? ಎಂಬ ಪ್ರಶ್ನೆಯನ್ನೆತ್ತುವುದನ್ನೂ ಕಾಣುತ್ತೇವೆ. ‘ಸತ್ತು ಹಾಗೂ ಅಸತ್ತು’ ಎರಡೂ ಆಗ ಇರಲಿಲ್ಲ. ಹಾಗಾದರೆ ಈ ಸೃಷ್ಟಿ ಅಂಥ ಸ್ಥಿತಿಯಿಂದ ಹೇಗಾಯಿತು? ದೇವತೆಗಳಿಗೂ ಈ ನಿಗೂಢ ತಿಳಿದಿಲ್ಲ, ಏಕೆಂದರೆ ಅವರೂ ಈ ಸೃಷ್ಟಿಯ ನಂತರ ಅಸ್ತಿತ್ವಕ್ಕೆ ಬಂದವರು. ಈ ದೇವತೆಗಳಿಗೂ ಅಚೆಗಿನ ಶಕ್ತಿಗೆ ಕೂಡ ಇದು ಗೊತ್ತಿದೆಯೋ ಇಲ್ಲವೋ ಎಂಬ ಜಿಜ್ಞಾಸೆ ಈ ಸೂಕ್ತದಲ್ಲಿದೆ.

ವೇದಕಾಲದಲ್ಲಿ ಯಜ್ಞ ಸಂಸ್ಕೃತಿಯಿಂದ ಹೊರತಾಗಿ ತಪಸ್ಸಿನ ಸಂಸ್ಕೃತಿ ಕೂಡ ಬೆಳೆದು ಬಂದಿದ್ದು ಕಾಣುತ್ತೇವೆ. ಬಹುಶಃ ಅನಾರ್ಯ ಜನರಿಂದ ಆರ್ಯ ಸಂಸ್ಕೃತಿಗೆ ಸೇರ್ಪಡೆಯಾದ ಅಂಶ ಇದಾಗಿದೆ. ಮನುಷ್ಯನು ಸಂಸಾರವನ್ನು ತ್ಯಜಿಸಿ ಗುಡ್ಡಗಾಡುಗಳಲ್ಲಿ ಏಕಾಂಗಿಯಾಗಿ ಸಾಧನೆ ಮಾಡುವುದರ ಮೂಲಕ ಅತಿಮಾನುಷವಾದ ಶಕ್ತಿಯನ್ನು, ಜ್ಞಾನವನ್ನು ಹೊಂದುತ್ತಾನೆ ಎಂದು ಈ ಪಂಥಗಳು ನಂಬಿದ್ದವು. ಇಂಥಹವರಿಂದಲೇ ‘ನಾಸದೀಯ ಸೂಕ್ತ’ದಂತಹ ಜಿಜ್ಞಾಸೆಗಳು ಬೆಳೆದಿರಬಹುದು. ವಿಶ್ವದ ಅಂತಿಮವಾದ ನಿತ್ಯ ದೇವತೆಗಳಿಗೂ ಆಚೆ ಇದೆ ಎಂಬ ಪ್ರತಿಪಾದನೆ ಆರಣ್ಯಕ ಹಾಗೂ ಉಪನಿಷತ್ತುಗಳ ಕಾಲಕ್ಕೆ ಬಲವಾಯಿತು. ಇದರ ಪರಿಣಾಮವಾಗಿ ‘ಯಜ್ಞ’ ಸಂಸ್ಕೃತಿಯಲ್ಲಿ ಮಾನ್ಯತೆ ಪಡೆದಿದ್ದ ಬ್ರಾಹ್ಮಣರಿಗಿಂತಲೂ, ಋಷಿ ಮುನಿಗಳು ಅಧ್ಯಾತ್ಮದ ವಕ್ತಾರರಾದರು. ಈ ತಪಸ್ವಿಗಳು ಅರಣ್ಯಗಳಲ್ಲಿ ತಪೋವನವನ್ನು ನಿರ್ಮಿಸಿಕೊಡಿರುತ್ತಿದ್ದರು. ಈ ತಪೋವನಗಳಲ್ಲಿ ಯಜ್ಞ ಯಾಗಾದಿಗಳು ಸಾಂಗವಾಗಿ ನಡೆಯುತ್ತಿದ್ದವು. ಆದರೆ ಅವುಗಳಿಗಿಂತ ಈ ತಪಸ್ವಿಗಳು ತಮ್ಮ ಶಿಷ್ಯರಿಗೆ ಬೋಧಿಸುತ್ತಿದ್ದ ಬ್ರಹ್ಮ ಜಿಜ್ಞಾಸೆ ಉಪನಿಷತ್ತುಗಳಲ್ಲಿ ಪ್ರಾಧಾನ್ಯಾತೆ ಹೊಂದಿದೆ.

ಉಪನಿಷತ್ತುಗಳು ಈ ಪ್ರಪಂಚದ ಕಾರಣ ಶಕ್ತಿ ಯಾವುದು ಎಂಬ ಜಿಜ್ಞಾಸೆಯನ್ನು ನಡೆಸುತ್ತಿವೆ. ಅವುಗಳಲ್ಲಿ ಕೆಲವು ‘ಬ್ರಹ್ಮನ್’ ಎಂಬ ತತ್ವವನ್ನು ಸಂಭಾಷಣೆಯ ರೂಪದಲ್ಲಿ ಪ್ರತಿಪಾದಿಸಿದರೆ ಇನ್ನೂ ಕೆಲವು ಈಶ್ವರ ಎಂಬ ದೈವೀ ಶಕ್ತಿಯನ್ನು ಶ್ಲೋಕಗಳಲ್ಲಿ ಪ್ರತಿಪಾದಿಸುತ್ತವೆ. ಆದರೆ ಈ ಎರಡೂ ಕೂಡ ಯಜ್ಞಯಾಗಾದಿಗಳ ದೇವತಾ ಕಲ್ಪನೆಗಳಂತೇ ವ್ಯಾವಹಾರಿಕ ಕಲ್ಪನೆಗಳಲ್ಲಿ. ‘ಬ್ರಹ್ಮನ್’ ಎಂಬ ಶಬ್ದ ಋಗ್ವೇದ ಕಾಲದಲ್ಲಿ ‘ಮಂತ್ರ’ ಹಾಗೂ ‘ಮಂತ್ರೋಚ್ಚಾರಣೆಯಲ್ಲಿ ಇರುವ ಶಕ್ತಿ’ ಎಂಬರ್ಥವನ್ನು ಹೊಂದಿತ್ತು. ನಂತರ ಈ ಕಲ್ಪನೆಯೇ ಬಹುಶಃ ‘ಜಗತ್ತಿನ ನಿರ್ಣಾಯಕ ಶಕ್ತಿ’ ಎಂದು ಬೆಳೆದಿರಬಹುದು. ಉಪನಿಷತ್ತಿನ ‘ಬ್ರಹನ್’ ಸಾರ್ವಕಾಲಿಕವಾದ ಸರ್ವವ್ಯಾಪಿಯಾದ ಒಂದು ತತ್ವವಾಗಿದೆ. ಎಲ್ಲ ರೂಪಗಳ, ಸಂಗತಿಗಳ ಆಧಾರ ಹಾಗೂ ದೇವತೆಗಳ ಸಮೇತ ಎಲ್ಲ ಸೃಷ್ಟಿಯ ಕಾರಣೀಭೂತ ಅಂಶವಾಗಿದೆ. ಪ್ರತಿ ವ್ಯಕ್ತಿಯಲ್ಲಿರುವ ಆತ್ಮ ಈ ಬ್ರಹನ್ ತತ್ವದ ಪ್ರಕಟ ರೂಪವಾಗಿದೆ. ಇದನ್ನು ಅರಿತವನು ‘ಬ್ರಹ್ಮಜ್ಞಾನಿ’ಯಾಗುತ್ತಾನೆ. ಛಾಂದೋಗ್ಯ ಉಪನಿಷತ್ತಿನ ಉದ್ದಾಲಕ ಶ್ವೇತಕೇತು ಸಂಭಾಷಣೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ತಂದೆಯು ಮಗನಿಗೆ ‘ಬ್ರಹ್ಮನ್’ ಎಂಬುದು ಸರ್ವಾಂತರ್ಯಾಮಿಯಾಗಿದೆ, ನೀನೇ ಅದು (ಬ್ರಹ್ಮನ್)(ತತ್‌ತ್ವಮ್ ಅಸಿ), ಎಂದು ಬೋಧಿಸುತ್ತಾನೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಯಾಜ್ಞವಲ್ಕ್ಯನೆಂಬುವನು ತನ್ನ ಪತ್ನಿ ಮ್ಯೆತ್ರೇಯಿಗೆ ಬ್ರಹ್ಮ ಎಂದರೆ ನೇತ್ಯಾತ್ಮಕವಾದ ವಿವರಣೆಯಲ್ಲಿ ಮನದಟ್ಟು ಮಾಡಿಕೊಡುತ್ತಾನೆ. ಅಂದರೆ, ಮನುಷ್ಯ ಕಲ್ಪನೆಗೆ ಸಿಗುವುದು ಬ್ರಹ್ಮನಾಗಲಿಕ್ಕೆ ಸಾಧ್ಯವಿಲ್ಲ. ಏಕೆಂದರೆ ಬ್ರಹ್ಮ ಸಿಗದಂತಹ ಅನಂತವಾದ ತತ್ವ.

ಈಶ ಹಾಗೂ ಶ್ವೇತಾಶ್ವತರ ಉಪನಿಷತ್ತುಗಳು ಶ್ಲೋಕ ರೂಪದಲ್ಲಿವೆ. ಇವು ಸೃಷ್ಟಿಯ ಆದಿತತ್ವವನ್ನು ‘ಈಶ’ ಅಥವಾ ದೈವೀತತ್ವವನ್ನಾಗಿ ಗ್ರಹಿಸುತ್ತವೆ. ಈ ದೇವತೆಯೇ ಸೃಷ್ಟಿಗೆ ಮೂಲಕಾರಣ ಹಾಗೂ ಸೃಷ್ಟಿಯ ಪಾಲನೆ, ಲಯ ಎಲ್ಲವೂ ಈ ತತ್ವದಿಂದಲೇ ಈಶನು ಸರ್ವಾಂತರ್ಯಾಮಿಯಾಗಿರುತ್ತಾನೆ. ಈ ಉಪನಿಷತ್ತುಗಳಲ್ಲಿ ಭಾರತೀಯ ಭಕ್ತಿ ತತ್ವಗಳ ಪ್ರಾರಂಭಾವಸ್ಥೆಯನ್ನು ಗುರುತಿಸಬಹುದು. ಅಂದರೆ ಸೃಷ್ಟಿಗೆ ಕಾರಣ ‘ದೇವತೆ’ ಯಾಗಿ, ಪ್ರತಿ ಆತ್ಮವೂ ಆದೇವತೆಯನ್ನು ಸೇರುವುದನ್ನು ಮೋಕ್ಷ ಎಂಬುದಾಗಿ ಕಲ್ಪಿಸುವ ಭಕ್ತಿ ಸಿದ್ದಾಂತ ದೇವ ಪೂಜಾ ಸಂಸ್ಕೃತಿಯ ಮೋಕ್ಷಕಲ್ಪನೆಯಾಗಿದೆ. ವೇದಕಾಲದ ಅಂತ್ಯದಲ್ಲಿ ಅವೈದಿಕ ಭಕ್ತಿ ಹಾಗೂ ತಂತ್ರಗಳ ಪೂಜಾ ಮಾರ್ಗಗಳು ವೈದಿಕ ಚಿಂತನೆಯನ್ನು ಪ್ರಭಾವಿಸಿವೆ. ಈ ಮೂಲಕವಾಗಿ ಶಿವಾ ಹಾಗೂ ವಿಷ್ಣು ಎಂಬ ಹೊಸ ‘ಸರ್ವಾಂತರ್ಯಾಮಿ’ ದೇವತೆಗಳು ವೈದಿಕ ಸಂಪ್ರದಾಯವನ್ನು ಸೇರಿದವು.

ಉಪನಿಷತ್ತಗಳಲ್ಲಿ ವಿಶ್ವದ ಆಧಾರ ಶಕ್ತಿಯ ಕುರಿತ ಚಿಂತನೆಗಳ ಜೊತೆಗೆ ಮನುಷ್ಯನ ಆತ್ಮ ಕುರಿತೂ ವಿಚಾರಗಳಿವೆ. ಆತ್ಮವು ದೇಹ ನಶಿಸಿದ ನಂತರವೂ ಇರುವ ಶಾಶ್ವತ ಅಂಶವಾಗಿದೆ. ಅದು ಸಾವಿನ ನಂತರ ಪಿತೃಲೋಕ, ಯಮಲೋಕ ಮುಂತಾದವುಗಳಲ್ಲಿ ಸಂಚರಸಿ ಪನಃ ಭೂಮಿಯಲ್ಲಿ ದೇಹಧಾರಣೆ ಮಾಡುತ್ತದೆ. ಇಡೀ ಜೀವಜಗತ್ತೇ ಹೀಗೆ ಪುನರ್ಜನ್ಮಕ್ಕೆ ಬದ್ದವಾಗಿದೆ. ಉಪನಿಷತ್ತುಗಳು ಈ ಪುನರ್ಜನ್ಮದ ಕಲ್ಪನೆಯನ್ನು ತಾತ್ವಿಕವಾಗಿ, ಪ್ರತೀಕಾರಾತ್ಮಕವಾಗಿ ಗ್ರಹಿಸುತ್ತವೆ. ಕ್ರಮೇಣ ಈ ಪುನರ್ಜನ್ಮ ಕಲ್ಪನೆಗೆ ‘ಕರ್ಮ’ ಸೇರಿಕೊಂಡಿತು. ಅಂದರೆ ಪುನರ್ಜನ್ಮಕ್ಕೆ ಕಾರಣವಾಗಿ ಕರ್ಮ ಬರುತ್ತದೆ. ಆದರೆ ಕರ್ಮಸಿದ್ದಾಂತ ಗಟ್ಟಿಗೊಂಡಿದ್ದು ಉಪನಿಷತ್ಕಾಲದ ನಂತರವೇ.

ನಾಸ್ತಿಕವಾದಿ ಪಂಥಗಳು

ಆವೈದಿಕರಲ್ಲಿ ತಪಸ್ಸಿನ ಮೂಲಕ ಸೃಷ್ಟಿಯ ರಹಸ್ಯಗಳನ್ನು ಅರಿಯುವ ಮಾರ್ಗ ವೈದಿಕ ಮಾರ್ಗದಂತೇ ಪ್ರಬಲವಾದ ಮಾರ್ಗವಾಗಿತ್ತು. ಇವರು ವೇದ ಪ್ರಾಮಾಣ್ಯವನ್ನೂ ಒಪ್ಪಿಕೊಂಡಿರಲಿಲ್ಲ ಹಾಗೂ ವೇದಾಂತದ ಅಧಾತ್ಮವನ್ನೂ ಒಪ್ಪಿಕೊಂಡಿರಲಿಲ್ಲ. ಇವರಲ್ಲಿ ನಿರೀಶ್ವರವಾದಿಗಳು, ಭೌತಿಕವಾದಿಗಳು, ಅನಾತ್ಮವಾದಿಗಳು ಎಲ್ಲ ಇದ್ದರು. ಕ್ರಿ.ಪೂ. ಆರನೆಯ ಶತಮಾನದ ನಂತರ ಇಂಥ ಅನೇಕ ಪಂಥಗಳಿಗೆ ಆಧಾರ ದೊರಕತೊಡಗುತ್ತವೆ. ಅವರಲ್ಲಿ ಬೌದ್ದ, ಜೈನ ಮತಗಳು ಪ್ರಬಲವಾದವು. ಉಳಿದವು ಅಲ್ಲಲ್ಲಿ ತಮ್ಮ ಅಸ್ತಿತ್ವವನ್ನಿಟ್ಟುಕೊಂಡು ಬಂದಿದ್ದನ್ನು ಕಾಣಬಹುದು.

ಇಂಥ ಪಂಥಗಳಲ್ಲಿ ಬೌದ್ದ, ಜೈನ ಪಂಥಗಳನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿದೆ. ಅದಕ್ಕೂ ಪೂರ್ವದಲ್ಲಿ ಉಳಿದ ಪಂಥಗಳ ಕುರಿತು ಸಂಕ್ಷಿಪ್ತವಾಗಿ ಇಲ್ಲಿ ಉಲ್ಲೇಖಿಸಲಾಗಿದೆ.

‘ಆಜೀವಕ’ರೆಂಬುವರು ಮೌರ್ಯರ ಕಾಲದಲ್ಲಿ ರಾಜಾಶ್ರಯವನ್ನು ಹೊಂದಿದ್ದರು. ಇವರು ಬಿಹಾರದ ಭಾಗದಲ್ಲಿ ಆ ಕಾಲದಲ್ಲಿದ್ದವರು, ನಂತರ ಮಧ್ಯಕಾಲದಲ್ಲಿ ದಕ್ಷಿಣ ಭಾರತದ ಕರ್ನಾಟಕ ತಮಿಳ್ನಾಡಿನ ಗಡಿ ಪ್ರದೇಶದಲ್ಲಿ ಇದ್ದದ್ದು ಕಂಡುಬರುತ್ತದೆ. ಇದೊಂದು ನಿರೀಶ್ವರವಾದಿ ಪಂಥವಾಗಿದ್ದು, ಈ ಪ್ರಪಂಚವು ಪೂರ್ವನಿರ್ಧಾರಿತ ಎಂದು ನಂಬಿದ್ದರು. ಕರ್ಮ ಹಾಗೂ ಪುನರ್ಜನ್ಮಗಳು ಎಲ್ಲ ಜೀವಿಗಳಿಗೂ ನಿರ್ಧರಿಸಲ್ಪಟ್ಟಿದ್ದು ಇದನ್ನು ನಡೆಸುವ ಶಕ್ತಿ ಒಂದು ‘ನಿಯತಿ’ಯಾಗಿದೆಯೇ ಹೊರತೂ ದೇವರಲ್ಲ. ಯಾರು, ಎಷ್ಟು ಪ್ರಯತ್ನಪಟ್ಟರೂ ಈ ಪೂರ್ವನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲ. ಏಕೆಂದರೆ ಈ ನಿಯತಿ ಮನುಷ್ಯರ ಪ್ರಭಾವಕ್ಕೆ ಒಳಗಾಗುವಂಥದ್ದೇ ಅಲ್ಲ. ಆದರೆ ಆಜೀವಕರು ಕಠಿಣ ತಪಶ್ಚರ್ಯೆಯಲ್ಲಿ ತೊಡಗಿರುತ್ತಿದ್ದರು.

ನಾಸ್ತಿಕವಾದಿಗಳಲ್ಲೇ, ಆಸ್ತಿಕ ಸಂಪ್ರದಾಯದ ತೀವ್ರ ಟೀಕೆಗೆ ಗುರಿಯಾಗಿದ್ದವರೆಂದರೆ ಚಾರ್ವಾಕರು ಆಥವಾ ಲೋಕಾಯತರು ‘ಚಾರ್ವಾಕ’ ಎಂಬೊಬ್ಬ ವ್ಯಕ್ತಿಯನ್ನೂ ಕಲ್ಪಿಸಲಾಗಿದೆ ಹಾಗೂ ಆ ಋಷಿಯೇ ಚಾರ್ವಾಕ ಮತ ಬೋಧನೆ ಮಾಡಿದನೆಂದು ನಮ್ಮ ಸಂಪ್ರದಾಯಗಳು ಗ್ರಹಿಸಿದ್ದವು. ಆದರೆ ‘ಲೋಕಾಯತ’ ಹಾಗೂ ಚಾರ್ವಾಕ ಎನ್ನುವುದು ಬಹು ಜನಪ್ರಿಯವಾಗಿದ್ಧ ಭೌತವಾದೀ ಚಿಂತನೆಗೆ ಸಾಮಾನ್ಯವಾಗಿ ಕರೆದ ಹೆಸರಿರಬಹುದು. ಲೋಕಾಯತರು ಕಟ್ಟಾಭೌತವಾದಿಗಳು. ಮನುಷ್ಯನು ನಾಲ್ಕು ಭೂತಗಳಿಂದ (ಭೂಮಿ, ನೀರು, ಬೆಂಕಿ, ಗಾಳಿ) ಮಾಡಲ್ಪಟ್ಟಿದ್ದಾನೆ. ಈ ಭೂತಗಳ ಯೋಜನೆಯಿಂದ ಜೀವ ಅಸ್ತಿತ್ವಕ್ಕೆ ಬಂದಿದೆ. ಮರಣ ನಂತರ ಏನೂ ಉಳಿಯುವುದಿಲ್ಲ. ಪರಲೋಕ, ಆತ್ಮ, ಪುನರ್ಜನ್ಮ ಮುಂತಾದವು ಇಲ್ಲವೇ ಇಲ್ಲ. ಹಾಗಾಗಿ ಮನುಷ್ಯ ಜೀವನದ ಅರ್ಥವನ್ನು ಜೀವಿತಾವಧಿಯಲ್ಲೇ ಕಾಣಬೇಕು ಎಂಬುದು ಸ್ಥೂಲವಾಗಿ ಲೋಕಾಯತರ ಚಿಂತನೆಗಳೂ. ಆಸ್ತಿಕವಾದಿ ಸಂಪ್ರದಾಯಗಳು ಲೋಕಾಯತರನ್ನು ಇಂದ್ರೀಯ ಸುಖವಾದಿಗಳೆಂದೂ, ‘ಸಾಲಮಾಡಿಯಾದರೂ ತುಪ್ಪ ತಿನ್ನು’ ಎನ್ನುವ ತತ್ವದವರೆಂದೂ ಚಿತ್ರಿಸುತ್ತಾರೆ. ಮರಣಾನಂತರದ ಜೀವಕ್ಕೆ ಸಂಸ್ಕಾರ ನಡೆಸುವುದು ವ್ಯರ್ಥ, ಇವೆಲ್ಲ ಬ್ರಾಹ್ಮಣರು ತಮ್ಮ ಹೊಟ್ಟೆಪಾಡಿಗಾಗಿ ಮಾಡಿಕೊಂಡದ್ದು ಎಂದು ಚಾರ್ವಾಕ ದರ್ಶನ ಹೇಳುತ್ತದೆ. ಈ ಹೇಳಿಕೆಗಳನ್ನು ೮ನೆಯ ಶತಮಾನದಲ್ಲಿದ್ದ ಜಯರಾಣಿ ಎಂಬುವನ ತತ್ವೋಪಪ್ಲವ ಸಿಂಹ (ಆಸ್ತಿಕ ತತ್ವಗಳನ್ನು ನಾಶಗೈಯುವ ಸಿಂಹ) ಎಂಬ ಕೃತಿಯಿಂದ ಎತ್ತಿಕೊಳ್ಳಲಾಗಿದೆ. ಆದರೆ ಲೋಕಾಯತವನ್ನು ಪ್ರಾಚೀನ ಆಸ್ತಿಕರು ಖಂಡಿಸುವ ಉದ್ದೇಶದಿಂದ ಅದನ್ನೊಂದು ವಿಷಯಾಸಕ್ತರ ವಾದವೆಂದು ನಿರೂಪಿಸಿದ್ದು ಸ್ಪಷ್ಟವಾಗಿದೆ.

ಬುದ್ಧನ ಸಮಕಾಲೀನದಲ್ಲಿ ಇಂಥ ಅನೇಕ ನಾಸ್ತಿಕವಾದಿ ಚಿಂತಕರು ಇದ್ದರೆಂದು ತಿಳಿದುಬರುತ್ತದೆ. ಅವರಲ್ಲಿ ಅಜಿತ ಕೇಶಕಂಬಲಿ, ಪೂರಣ ಕಸ್ಸಪ, ಪಕುದ್ಧ ಕಚ್ಚಾಯನ, ಸಂಜಯ ಬೆಲಠ್ಠಿಪುತ್ತ, ಮಖ್ಖನಿ ಗೋಶಾಲ, ನಿಗ್ಗಂಥ ನಾಥಪುತ್ರರ ಉಲ್ಲೇಖವನ್ನು ಪಾಳಿ ಸಾಹಿತ್ಯ ಮಾಡುತ್ತದೆ. ಇವರಲ್ಲಿ ಅಜಿತ ಕೇಶಕಂಬಲಿಯದು  ಇಲ್ಲ, ಹಾಗೂ ಈತನ ಚಿಂತನೆ ಲೋಕಾಯತ ಚಿಂತನೆಯನ್ನೇ ಹೋಲುತ್ತವೆ. ಸಂಜಯ ಬೆಲಠ್ಠಿಪುತ್ತನು ಪರಲೋಕ ಇರಬಹುದು, ಇಲ್ಲದಿರಬಹುದು, ಈ ಕುರಿತು ಏನನ್ನು ಹೇಳುವುದು ಸಾಧ್ಯವಿಲ್ಲ. ಪಕುದ್ಧ ಕಚ್ಚಾಯನನ ಪ್ರಕಾರ ಭೂಮಿ, ನೀರು, ಬೆಂಕಿ, ಗಾಳಿ, ಸುಖ, ದುಃಖ ಹಾಗೂ ಜೀವಗಳ ಆಚೆಗೆ ಯಾವ ಪಾರಲೌಕಿಕ ವಸ್ತುವೂ ಇಲ್ಲ. ಈ ಏಳು ಅಂಶಗಳ ಹಿಂದೆ ಯಾವ ಕಾಣದ ಶಕ್ತಿಯೂ ಇಲ್ಲ. ಪೂರಣ ಕಸ್ಸಪನ ಪ್ರಕಾರ ಈ ಜಗತ್ತೆಂಬುದು ಕೇವಲ ಕಾರ್ಯ ಕಾರಣಗಳ ಸರಣಿಯಾಗಿದೆ. ಇದನ್ನು ನಿರ್ದೇಶಿಸುವ, ಹಾಗೂ ಬದಲಿಸುವ ಸಾಧ್ಯತೆ ಜೀವಿಗೆ ಇಲ್ಲ. ಹಾಗಾಗಿ ಪುಣ್ಯ ಪಾಪಗಳೆಂಬ ಕರ್ಮಲೇಪ ಜೀವಿಗೆ ಇಲ್ಲವೇ ಇಲ್ಲ.

ಈ ಮೇಲಿನ ಎಲ್ಲ ಚಿಂತಕರೂ ಆಸ್ತಿಕವಾದಿ ಚಿಂತನೆಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ತಿರಸ್ಕರಿಸುವುದನ್ನು ನಾವು ಕಾಣಬಹುದು. ಬುದ್ಧ ಹಾಗೂ ಮಹಾವೀರ (ನಿಗ್ಗಂಥನಾಥಪುತ್ರ)ರೂ ಈ ಚಿಂತಕರಿಂದ ಸಾಕಷ್ಟು ಪ್ರಭಾವಿತರಾಗಿದ್ದರು.

ಬೌದ್ಧಮತ

ಬೌದ್ಧಮತದ ಸಂಸ್ಥಾಪಕನಾದ  ಗೌತಮ ಬುದ್ದ ಅಥವಾ ಸಿದ್ದಾರ್ಥನು ಶಾಕ್ಯ ಗಣದ ರಾಜನೊಬ್ಬನ ಮಗನಾಗಿದ್ದನು. ಶಾಕ್ಯ ಗಣದ ಆಳ್ವಿಕೆಯ ಪ್ರದೇಶವು ಇಂದಿನ ನೇಪಾಳದ ತರಾಯಿ ಭಾಗದಲ್ಲಿತ್ತು. ಬುದ್ದನು ವಿರಕ್ತನಾಗಿ ಸಂಚರಿಸುತ್ತ ಬಿಹಾರದ ಬೌದ್ದ ಗಯಾದಲ್ಲಿ ಜ್ಞಾನೋದಯವನ್ನು ಹೊಂದಿದ್ದನು. ನಂತರ ಧರ್ಮ ಪ್ರಚಾರಕ್ಕಾಗಿ ಆತನು ಸಾರನಾಥ, ಕೌಶಾಂಬಿ, ಕುಶೀನಗರ, ಶ್ರಾವಸ್ತಿ ಮುಂತಾದ ಪಟ್ಟಣಗಳಲ್ಲಿ ಬೀಡುಬಿಟ್ಟಿದ್ದನು. ಆತನ ಜೀವಿತಾವಧಿಯನ್ನು ಕ್ರಿ.ಪೂ. ಆರನೆಯ ಶತಮಾನದ ಆದಿಭಾಗ ಎಂದು ತರ್ಕಿಸಲಾಗಿದೆ. ಬುದ್ದನ ನಿರ್ವಾಣದ ನಂತರ ಸುಮಾರು ನೂರು ವರ್ಷಗಳೇ ಕಳೆದ ಮೇಲೆ ಆತನ ಶಿಷ್ಯ ಪರಂಪರೆ ಆತನ ಉಪದೇಶಗಳನ್ನು ಜೀವಿತಾವಧಿಯ ವಿವರಗಳನ್ನು ಹಾಗೂ ಸಂಭಾಷಣೆಗಳನ್ನು ಬೌದ್ದ ಸಂಘದ ಪವಿತ್ರ ಗ್ರಂಥಗಳಲ್ಲಿ ಸಂಗ್ರಹಿಸತೊಡಗಿತ್ತು. ಇವು ತ್ರಿಪಿಟಕಗಳೆಂದು ಪ್ರಸಿದ್ದಿಯಾಗಿವೆ. ಸುತ್ತ ಪಿಟಕದಲ್ಲಿ ದೀರ್ಘ, ಮಜ್ಜಿಮ, ಸಂಯುಕ್ತ, ಅಂಗುಪ್ತರ ಹಾಗೂ ಖುದ್ದುಕಗಳೆಂಬ ನಿಕಾಯಗಳಿವೆ. ಖುದ್ದಕ ನಿಕಾಯವು ಥೇರಗಾಥಾ, ಥೇರಿಗಾಥಾ ಹಾಗೂ ಜಾತಕ ಕಥೆಗಳಿಂದ ವಿಶಿಷ್ಟವಾಗಿದೆ. ವಿನಯ ಪಿಕವು ಬೌದ್ದ ಭಿಕ್ಷುಗಳ ಸಂಘ ಜೀವನದ ರೀತಿ ನೀತಿಗಳನ್ನು ತಿಳಿಸುತ್ತದೆ. ಅಭಿಧಮ್ಮ ಪಿಟಕವು ತ್ರಿಪಟಕಗಳಲ್ಲಿಯೇ ತೀರ ಕೊನೆಯ ಸಂಗ್ರಹವಾಗಿದ್ದು ಕ್ರಿ.ಶಕದ ನಂತರವೂ ಮಿಳಿಂದ ಪನ್ಹ, ದೀಪ ವಂಶ, ಮಹಾವಂಶ ಮುಂತಾದ ಸೇರ್ಪಡೆಯನ್ನು ಹೊಂದಿದೆ. ಬುದ್ದನ ಮೂಲ ಚಿಂತನಗಳನ್ನು ನಾವು ಪಠ್ಯ ವಿಮರ್ಶಯ ಆಧಾರದ ಮೇಲೆ ಕಟ್ಟಿಕೊಡಬೇಕಾಗುತ್ತದೆ.

ಬುದ್ಧನ ಮೂಲ ಉಪದೇಶಗಳು ಧರ್ಮಚಕ್ರ ಪ್ರವರ್ತನ ಸೂತ್ರದಲ್ಲಿ ಇವೆ. ಅವೆಂದರೆ ನಾಲ್ಕು ಆರ್ಯ ಸತ್ಯಗಳು, ಅಷ್ಟಾಂಗ ಮಾರ್ಗ ಹಾಗೂ ಪಟಿಚ್ಚ ಸಮುಪ್ಪ ಎಂಬವು ಆರ್ಯ ಸತ್ಯಗಳು ಬುದ್ದನಿಗೆ ಜ್ಞಾನೋದಯವಾದಾಗ ಹೊಳೆದ ಸತ್ಯಗಳು. ಅವೆಂದರೆ ೧. ದುಃಖ ೨. ದುಃಖದ ಹುಟ್ಟು ಆಸೆಯಿಂದ  (ದುಃಖ ಸಮುವಾಯೊ) ೩. ಈ ದುಃಖದ ಕಾರಣವಾದ ಆಸೆಯ ನಿರ್ಮೂಲನದಿಂದ ದುಃಖ ನಿಲ್ಲುತ್ತದೆ (ದುಃಖ ನಿರೋಧೋ) ೪. ಆಸೆಯನ್ನು ಜಯಿಸಲು ಮನುಷ್ಯನು ಎಂಟು ರೀತಿಯ ಸಾಧನೆಗಳನ್ನು ನಡೆಸಬೇಕು. (ಅಷ್ಟಾಂಗ ಮಾರ್ಗ) ಅವೆಂದರೆ ಸರಿಯಾದ ದೃಷ್ಟಿ. ನಿರ್ಧಾರ, ಮಾತು, ವರ್ತನೆ, ಜೀವನ ವಿಧಾನ, ಶ್ರಮ, ಹಾಗೂ ಧಾನ್ಯ ಬುದ್ದನ ಆರ್ಯಸತ್ಯಗಳು ಮಾನವೀಯ ಹಾಗೂ ನೈತಿಕ ನೆಲೆಯನ್ನು ಹೊಂದಿದ್ದು, ಬೌದ್ಧ ಮತವು ಒಂದು ಧರ್ಮ ಅಥವಾ ನೈತಿಕ ವ್ಯವಸ್ಥೆ ಎಂದು ಪರಿಗಣಿಸಬಹುದು.

ಈ ಜಗತ್ತು ‘ಅನಿತ್ಯ’ ಹಾಗೂ ‘ಅನಾತ್ಮ’ ಎಂದು ಬುದ್ಧನು ಪ್ರತಿಪಾದಿಸಿದನು. ಅನಿತ್ಯ ಎಂದರೆ ಈ ಪ್ರಪಂಚವು ಕ್ಷಣಕ್ಷಣಕ್ಕೂ ಪರಿವರ್ತನಶೀಲವಾಗಿದೆ. ಈ ಕ್ಷಣಕ್ಕೂ ಮುಂದಿನದಕ್ಕೂ ಮುಂದುವರಿದು ಹೋಗುವ ನಿತ್ಯವಾದದ್ದು, ಜಡವಾದದ್ದು ಏನೂ ಎಲ್ಲ. ಅದೇ ರೀತಿ ಈ ಭೌತಿಕ ಪ್ರಪಂಚದ ಹಿಂದೆ ಚಿರಂತನವಾಗಿ ಉಳಿಯುವ ಆತ್ಮ ಎಂಬುದೂ ಇಲ್ಲ. ಹಾಗಾಗಿ ಉಪನಿಷತ್ತುಗಳು ಈ ವಿಶ್ವದ ಕಾರಣೀಭೂತ ಶಕ್ತಿಯೆಂದು ನಂಬಿದ ತತ್ವವನ್ನೂ ಬುದ್ಧ ಅಲ್ಲಗಳೆಯುತ್ತಾನೆ. ಈ ಕಾರಣಕ್ಕೆ ಬುದ್ಧ ಧರ್ಮದಲ್ಲಿ ದೇವತೆಗಳು ಮನುಷ್ಯರಿಗಿಂತ ಭಿನ್ನರಲ್ಲ. ಮನುಷ್ಯನ ಪರಮೋಚ್ಛಗುರಿ ‘ನಿರ್ವಾಣ’(ನಿಬ್ಬಣ)ವಾಗಿದೆ. ನಿರ್ವಾಣ ಎಂದರೆ ಮರಳಿ ಈ ಸಂಸಾರಕ್ಕೆ ಬಾರದಂಥ ಸ್ಥಿತಿ. ಬೌದ್ಧ ಧರ್ಮವು ಅನಾತ್ಮವಾದಿಯಾಗಿದ್ದರೂ ಕರ್ಮ ಹಾಗೂ ಪುನರ್ಜನ್ಮದ ಕಲ್ಪನೆ ಅದರ ತತ್ವಗಳಲ್ಲಿದೆ. ಇದನ್ನು ‘ಪಟೀಚ್ಚಿ ಸಮುಪ್ಪಾದ’ (ಅಂದರೆ ಪುನರುತ್ಪಾದನೆಯ ಸರಣಿ) ಎಂದು ಕರೆಯಲಾಗಿದೆ. ಈ ಸರಣಿಯಲ್ಲಿ ಒಂದು ಇನ್ನೊಂದನ್ನು ಹುಟ್ಟುಹಾಕುತ್ತ ಪುನರ್ಜನ್ಮಕ್ಕೆ, ಕಾರಣವಾಗುತ್ತದೆ. ಅವೆಂದರೆ, ಅವಿದ್ಯೆ, ಸಂಕರ, ಚೇತನ, ವಿಜ್ಞಾನ, ನಾಮರೂಪ, ಷಡಾಯತನ(ಆರು ಇಂದ್ರಿಯಗಳು), ಸ್ಪರ್ಶ, ವೇದನೆ, ತೃಷ್ಣೆ, ಉಪದಾನ, ಭವ, ಜಾತಿ (ಪುನರ್ಜನ್ಮ) ಹಾಗೂ ಜರಾಮರಣ ಹೀಗೆ ಒಬ್ಬ ವ್ಯಕ್ತಿ ಕಾರಣಚಕ್ರದಲ್ಲಿ ಸುತ್ತುತ್ತಿರುತ್ತಾನೆ. ಅಷ್ಟಾಂಗಮಾರ್ಗದಿಂದ ಹಾಗೂ ಸಾಧನೆಯಿಂದ ವ್ಯಕ್ತಿಯು ಈ ಚಕ್ರದಿಂದ ತಪ್ಪಿಸಿಕೊಂಡು ಮುಕ್ತನಾಗುತ್ತಾನೆ. ಇದೇ ‘ನಿರ್ವಾಣ’, ಇದನ್ನು ಹೊಂದಿದವನು ‘ಅರ್ಹತ’ ಎನ್ನಿಸಿಕೊಳ್ಳುತ್ತಾನೆ. ಬುದ್ಧ ತನ್ನ ಸಾಧನಾ ಮಾರ್ಗವನ್ನು ‘ಮಧ್ಯಮ ಮಾರ್ಗ’ ಎಂದು ಕರೆದಿದ್ದನು. ಏಕೆಂದರೆ ಇದು ತೀರ ಕಠಿಣವಾದ ವಿರಕ್ತಿ ಮಾರ್ಗವೂ ಆಗಿರಲಿಲ್ಲ, ಸುಖ ಸಂಸಾರದ ಮಾರ್ಗವೂ ಆಗಿರಲಿಲ್ಲ, ಅವೆರಡರ ಮಧ್ಯದಲ್ಲಿತ್ತು.

ಬೌದ್ಧ ಮತದಲ್ಲಿ ಮೂಲತಃ ಇರದಿದ್ದ ಪಾರಲೌಕಿಕತೆ ಹಾಗೂ ದೇವರುಗಳು ಬುದ್ಧನ ನಿರ್ವಾಣದ ನಂತರ ನೂರು ವರ್ಷಗಳಲ್ಲೇ ಕಾರಣಿಸಿಕೊಂಡರು. ಅಶೋಕನ ಕಾಲದಲ್ಲಾಗಲೇ ಮಹಾಸಾಂಘಿಕರೆಂಬ ಬಣದವರು ಸಾಂಪ್ರದಾಯಿಕ ಬೌದ್ಧ ತತ್ವಗಳಿಗೆ ಹೊಸ ನಿರೂಪಣೆಗಳನ್ನು ಸೇರಿಸಿ ಸಂಘರ್ಷಕ್ಕೆ ಕಾರಣರಾದರು. ಮಹಾಸಾಂಘಿಕರು ಆಂಧ್ರಕ್ಕೆ ವಲಸೆ ಹೋಗಿ ಅಲ್ಲಿ ಮಹಾಯಾನ ಪಂಥದ ಉಗಮವಾಯಿತು. ‘ಮಹಾಯಾನ’ ಎಂದರೆ ‘ಹಿರಿದಾದ ವಾಹನ’ ಎಂಬರ್ಥ ಬರುತ್ತದೆ. ಅಂದರೆ, ಕೇವಲ ವೈಯಕ್ತಿಕ ಸಾಧನೆ ಹಾಗೂ ನಿರ್ವಾಣಗಳಷ್ಟೇ ಬೌದ್ಧರ ಉದ್ದೇಶವಾಗಿರದೆ ಎಲ್ಲ ಜೀವಿಗಳ ಮೋಕ್ಷದ ಕಲ್ಪನೆಯನ್ನು ನೀಡುವುದರಿಂದ ‘ಮಹಾಯಾನ’ ಹೆಸರು ಬಂದಿದೆ. ಸಾಂಪ್ರದಾಯಿಕ ಬೌದ್ಧರನ್ನು ‘ಹೀನಯಾನ’ (ಸಣ್ಣವಾಹನ) ಎಂದು ಕರೆಯಲಾತಯಿತು. ಹೀನಯಾನಿಗಳಿಗೆ ಅರ್ಹತ ಪದವಿಯೇ ಅಂತಿಮ ಗುರಿ.

‘ಮಹಾಯಾನ’ವು ಹೀನಯಾನದಿಂದ ಹಲವು ರೀತಿಯಲ್ಲಿ ಭಿನ್ನವಾಗಿದೆ. ಆ ಮಹಾಯಾನದವರು ವಿಸ್ತಾರವಾದ ಪರಲೋಕವನ್ನು ಸೃಷ್ಟಿಸಿಕೊಂಡರು. ಕಾಲವನ್ನು ಮಹಾಕಲ್ಪ ಎಂದು ವಿಂಗಡಿಸಿ, ಅಂಥ ಮಹಾಕಲ್ಪಗಳಲ್ಲಿ ನಾಲ್ಕು ಅಸಂಖ್ಯೆಗಳಿರುತ್ತದೆ. ಇಂಥ ಅಸಂಖ್ಯೆಯದಲ್ಲಿ ಉಪಯುಗಗಳಿದ್ದು, ಅವುಗಳನ್ನು ಬುದ್ಧನ ವಿಭಿನ್ನ ರೂಪಗಳು ಆಳುತ್ತಿರುತ್ತವೆ. ಈ ರೂಪಗಳನ್ನು ‘ಬೋಧಿಸತ್ವ’ರೆಂದು ಕರೆಯಲಾಯಿತು. ಹೀಗೆ ಈ ಭೌತ ಪ್ರಪಂಚಕ್ಕೆ ಮಾತ್ರ ಸೀಮಿತವಿದ್ದ ಬೌದ್ಧ ತತ್ವ ಅದರಿಂದ ವಿಮುಖವಾಯಿತು. ಆ ದೇವಲೋಕದ ಮೂರ್ತೀಕರಣ ‘ಅರ್ಹತ’ ಕಲ್ಪನೆ ಹಾಗೂ ಪದವಿ ಮೂಲೆಗೊತ್ತಲ್ಪಟ್ಟಿತು. ಬದಲಾಗಿ ‘ಆದಿಬುದ್ಧ’ ನೆಂಬ ಒಂದು ಚಿರಂತನ ಶಕ್ತಿಯಿಂದ ಹುಟ್ಟಿದ ಬುದ್ಧರು, ಬೊಧಿಸತ್ವರು ಒಬ್ಬರ ಮೇಲೆ ಒಬ್ಬರಂತೇ ಕಲ್ಪಿಸಲ್ಪಟ್ಟರು. ‘ಬೋಧಿಸತ್ವ’ನು ಆದಿ ಬುದ್ಧನ ಅವತಾರದಂತೇ ಮಾನವರ ದುಃಖವನ್ನು ಪರಿಹರಿಸುವವರೆಗೆ ತಾನು ನಿರ್ವಾಣ ಹೊಂದುವುದಿಲ್ಲ. ಬೋಧಿಸತ್ವನು ಕರುಣಾಮಯಿಯಾಗಿದ್ದು ಶರಣು ಬಂದವರನ್ನು ಪೊರೆಯುತ್ತಾನೆ. ಈ ರೀತಿ ಮಾಹಾಯಾನದಲ್ಲಿ ಮೂರ್ತಿಪೂಜೆಯ ಮೂಲಕ ಮೋಕ್ಷ ಹೊಂದುವ ಕಲ್ಪನೆ ಬೆಳೆಯಿತು. ಇ. ಮಹಾಯಾನದ ತತ್ವ ಗ್ರಂಥಗಳೆಲ್ಲ ಸಂಸ್ಕೃತದಲ್ಲೇ ಇವೆ. ಸಂಸ್ಕೃತದ ಬಳಕೆಯು ಕೇವಲ ಒಂದು ಭಾಷೆಯ ಆಯ್ಕೆಯಷ್ಟೇ ಆಗಿರದೇ ಬೌದ್ಧ ಸಂಗಗಳ ಬದಲಾದ ಭೌತಿಕ ತಾತ್ವಿಕ ಸ್ಥಿತಿಯನ್ನು ಸೂಚಿಸುತ್ತದೆ. ಅಂದರೆ ಮಹಾಯನ ತತ್ವಗಳು ಸಂಸತದ ಪರಿಭಾಷೆಗೆ ಒಗ್ಗಿ ಕೊಂಡಿದ್ದವು. ಮಹಾಯಾನದ ಪ್ರಾಚೀನ ಗ್ರಂಥಗಳೆಂದರೆ ‘ಲಲಿತವಿಸ್ತರ’ ಹಾಗೂ ಸದ್ಧರ್ಮ ಪುಂಡರೀಕ ಎಂಬವು. ಮಹಾಯಾನದ ತತ್ವವನ್ನು ಸಾರುವ ಮಾಧ್ಯಮಿಕ ಕಾರಿಕಾ ಹಾಗೂ ಯೋಗಾಚಾರ ತತ್ವದ ಗ್ರಂಥಗಳೂ ಸಂಸ್ಕೃತದಲ್ಲೇ ಇವೆ. ಈ. ಮಹಾಯನದಲ್ಲಿ ‘ಮಾಧ್ಯಮಿಕ’ ಮತ್ತು ‘ಯೋಗಾಚಾರ’ಗಳೆಂಬ ಎರಡು ಮುಖ್ಯ ತಾತ್ವಿಕ ಸಂಪ್ರದಾಯಗಳಿವೆ. ನಾಗಾರ್ಜುನನೆಂಬ ಸುಪ್ರಸಿದ್ಧ ಬೌದ್ಧ ಬಿಕ್ಷುವು ಮಾಧ್ಯಮಿಕ ಪಥದ ಪ್ರವರ್ತಕನು. ಆತನ ಪ್ರಕಾರ ಅಂತಿಮವಾದ ಸತ್ಯ ಎಂದರೆ ‘ಶೂನ್ಯತೆ’ಯಾಗಿದೆ. ಪುನರ್ಜನ್ಮಕ್ಕೆ ಬದ್ಧವಾದ ಈ ಪ್ರಪಂಚ, ದೇವತೆಗಳು ನಿರ್ವಾಣ ಇವೆಲ್ಲ ಸತ್ಯವಲ್ಲ. ಇವನ್ನು ‘ಸಂವೃತಿ’ ಎಂದು ಕರೆಯಲಾಯಿತು. ಆದರೆ ಅವೂ ವ್ಯಾವಹಾರಿಕ ಸತ್ಯಗಳಾಗಿದ್ದು ಪ್ರಸ್ತುತವಾಗುತ್ತವೆ. ಯೋಗಚಾರ ಸಂಪ್ರದಾಯದ ಪ್ರಕಾರ ಈ ಜಗತ್ತಿಗೆ ಸ್ವಪ್ನಕ್ಕಿಂತ ಹೆಚ್ಚು ವಾಸ್ತವಿಕತೆ ಇಲ್ಲ. ಅಂತಿಮ ಸತ್ಯವೆಂದರೆ ‘ತಥಾತಾ’ ಅಥವಾ ‘ಅದು’ ಎಂದು ಕರೆಯಲಾಗುತ್ತದೆ.

ಮಹಾಯಾನ ಬೌದ್ಧ ಪಂಥದಿಂದ ಬೆಳೆದ ‘ವಜ್ರಯಾನ’ವು ಒಂದು ತಾಂತ್ರಕ ಪಂಥವಾಗಿದೆ. ಇದು ಪೂರ್ವಭಾರತ ಹಾಗೂ ನೇಪಾಳ, ಟಿಬೇಟಗಳಲ್ಲಿ ಪ್ರಚಲಿತದಲ್ಲಿದೆ. ವಿಶ್ವದ ಆದಿಶಕ್ತಿ ‘ವಜ್ರಸತ್ವ’ನಾಗಿದ್ದು, ಇಲ್ಲಿಯ ದೇವತೆಗಳಿಗೆಲ್ಲ ‘ತಾರಾ’ ಎಂಬ ಮಾತೃದೇವತೆಯರನ್ನು ಜೋಡಿಸಲಾಯಿತು. ಅಂದರೆ ಪುರುಷ ದೇವತೆಗಳನ್ನು ಅವುಗಳ ಸ್ತ್ರೀ ಶಕ್ತಿಗಳ ಜೊತೆಗೇ ಉಪಾಸಿಸುತ್ತಿದ್ದರು. ವಜ್ರಯಾನಿಗಳು ಪಂಚ‘ಮ’ಕಾರಗಳ (ಮಾಂಸ, ಮದ್ಯ, ಮೈಥುನ, ಹೆಣ್ಣು ಹಾಗೂ ಮಂತ್ರ) ಸಾಧನೆಯಿಂದಲೇ ನಿರ್ವಾಣ ಸುಲಭ ಎಂದು ಪ್ರತಿಪಾದಿಸಿದರು.