ಭಾರತದಲ್ಲಿ ಫ್ರೆಂಚರು ಮತ್ತು ಇಂಗ್ಲಿಷರ ಪೈಪೋಟಿ

ಔರಂಗಜೇಬನ ಮರಣದ ನಂತರ, ಅಧಿಕಾರದ ವಿಕೇಂದ್ರೀಕರಣವಾಗಿ, ಹಲವಾರು ಸಣ್ಣಪುಟ್ಟ ರಾಜ್ಯಗಳು ತಲೆಯೆತ್ತಿದ್ದವು. ಆಗ ಇಂಗ್ಲಿಷರು ಹಾಗೂ ಫ್ರೆಂಚರು ತಮ್ಮ ರಾಜಕೀಯ  ಹಾಗೂ ಭೌಗೋಳಿಕ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ಕನಸು ಕಾಣುತ್ತಿದ್ದರು. ಫ್ರೆಂಚರು ಮತ್ತು ಇಂಗ್ಲಿಷರು ಯುರೋಪ್ ಹಾಗೂ ಉತ್ತರ ಅಮೆರಿಕಾದ ವಸಾಹತುಗಳಲ್ಲಿ ಪರಸ್ಪರ ವಿರೋಧಿಗಳಾಗಿದ್ದರು. ಇವರು ಭಾರತದ ರಾಜಕಾರಣದಲ್ಲಿ ಮಧ್ಯ ಪ್ರವೇಶಿಸಿದ್ದರಿಂದ ಕರ್ನಾಟಕ ಯುದ್ಧಗಳ ಸಂದರ್ಭದಲ್ಲಿ ಫ್ರೆಂಚರು ಇಂಗ್ಲಿಷರು ಪರಸ್ಪರ ಎದುರಾಳಿಗಳಾದರು. ಇದರಿಂದ ಭಾರತದಲ್ಲಿ ಫ್ರೆಂಚರು ನಾಶವಾದರು.

೧೭೪೦ರಲ್ಲಿ ಆಸ್ಟ್ರಿಯಾದ ಉತ್ತರಾಧಿಪತ್ಯದ ಬಗ್ಗೆ ನಡೆದ ಯುದ್ಧದಲ್ಲಿ ಬ್ರಿಟಿಷರು ಹಾಗೂ ಫ್ರೆಂಚರು ಎದುರಾಳಿಗಳಾಗಿದ್ದರು. ಭಾರತದ ದಕ್ಷಿಣಪೂರ್ವ ಕರಾವಳಿಯಲ್ಲಿ ಫ್ರೆಂಚರ ಹಡಗುಗಳನ್ನು ವಶಕ್ಕೆ ತೆಗೆದುಕೊಂಡು ಇಂಗ್ಲಿಷರೇ ಯುದ್ಧ ಆರಂಭಿಸಿದರು. ಫ್ರೆಂಚರು ಮದ್ರಾಸ್‌ನ ಕೋಟೆಯ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡರು. ಹೀಗೆ ಮೊದಲ  ಕರ್ನಾಟಕದ ಯುದ್ಧ ಆರಂಭವಾಯಿತು. ಬ್ರಿಟಿಷರು ಕರ್ನಾಟಕದ ನವಾಬನ ಆಡಳಿತಕ್ಕೊಳಪಟ್ಟಿದ್ದ ಮದ್ರಾಸನ್ನು ಫ್ರೆಂಚರಿಂದ ರಕ್ಷಿಸಬೇಕೆಂದು ಮನವಿ ಮಾಡಿದರು. ಇದಕ್ಕೆ  ಒಪ್ಪಿದ ನವಾಬನು, ತನ್ನ ನೆಲದ ಮೇಲೆ ಎರಡು ವಿದೇಶಿ ವ್ಯಾಪಾರಿ ಕಂಪನಿಗಳು ಯುದ್ಧ  ಮಾಡದಿರಲೆಂಬ ಉದ್ದೇಶದಿಂದ, ೧೦,೦೦೦ ಸೈನ್ಯವನ್ನು ಕಳುಹಿಸಿದ.  ಆದರೆ ನವಾಬನ ಸೈನ್ಯ ಅಡ್ಯಾರ್ ನದಿಯ ಬಳಿ ಸೋಲನ್ನನುಭವಿಸಿತು. ಈ ಯುದ್ಧದಿಂದ ಉತ್ತಮ ಯುದ್ಧಾಸ್ತ್ರಗಳು ಹಾಗೂ ಒಗ್ಗಟ್ಟನ್ನು ಹೊಂದಿದ್ದ ವಿದೇಶಿ ಸೈನ್ಯಗಳ ನಿಜವಾದ ಬಲ ಗೊತ್ತಾಯಿತು. ೧೭೪೮ರಲ್ಲಿ ಇಂಗ್ಲೆಂಡ್ ಹಾಗೂ ಫ್ರಾನ್ಸ್‌ನ ಯುದ್ಧ ಕೊನೆಗೊಂಡು, ಶಾಂತಿಸಂಧಾನದ ಒಪ್ಪಂದದ ಮೇರೆಗೆ ಇಂಗ್ಲಿಷರಿಗೆ ಮದ್ರಾಸನ್ನು ಹಿಂದಿರುಗಿಸಲಾಯಿತು.

ಯುದ್ಧ ಮುಗಿದ ನಂತರವೂ ಫ್ರೆಂಚರು ಹಾಗೂ ಇಂಗ್ಲಿಷರ ನಡುವಿನ ಹಗೆತನ ಮುಂದುವರಿಯಿತು. ಆಗ ಪಾಂಡಿಚೇರಿಯ ಫ್ರೆಂಚ್ ಗೌರ್ನರ್ ಜನರಲ್ ಆದ ಡೂಪ್ಲೆ ಕರ್ನಾಟಕದ ನವಾಬನಿಂದ ಆಗಷ್ಟೆ ನಡೆದ ಯುದ್ಧದಲ್ಲಿ ಕೆಲವು ಪಾಠಗಳನ್ನು ಕಲಿತಿದ್ದ. ಅವನು ಫ್ರೆಂಚ್ ಸೈನ್ಯದ ಮೂಲಕ ಭಾರತದ ರಾಜರ ಜಗಳಗಳಲ್ಲಿ ಹಸ್ತಕ್ಷೇಪ ಮಾಡಿಸಿ, ಒಬ್ಬರನ್ನು ಇನ್ನೊಬ್ಬರ ವಿರುದ್ಧ ಬೆಂಬಲಿಸಿ, ಕೊನೆಗೆ ಗೆದ್ದ ರಾಜನಿಂದ ಹಣ, ವ್ಯಾಪಾರ ಹಾಗೂ ಭೂಭಾಗಗಳು ಹೀಗೆ ಎಲ್ಲ ರೀತಿಯಿಂದಲೂ ಲಾಭ ಪಡೆಯುವ ತಂತ್ರ ಬಳಸಿದ.

೧೭೪೦ರಲ್ಲಿ ಮರಾಠರು ಕರ್ನಾಟಕವನ್ನು ವಶಪಡಿಸಿಕೊಂಡು, ನವಾಬ್ ದೋಸ್ತ್ ಆಲಿಯನ್ನು ಕೊಂದು ಅವನ ಅಳಿಯ ಚಂದಾ ಸಾಹೇಬ್‌ನನ್ನು ಸೆರೆಹಿಡಿದರು. ಈ ಸಂದರ್ಭದಲ್ಲಿ ಹೈದರಾಬಾದಿನ ನಿಜಾಮನು ಅನ್ವರ್ ಉದ್ದೀನ್ ಖಾನ್‌ನನ್ನು ಕರ್ನಾಟಕದ ನವಾಬನನ್ನಾಗಿ ನೇಮಿಸಿದ. ೧೭೪೮ರಲ್ಲಿ ಚಂದಾಸಾಹೇಬ್ ಬಿಡುಗಡೆ ಹೊಂದಿ ತಾನೇ ನವಾಬನಾಗಬೇಕೆಂದು ಸವಾಲು ಹಾಕಿದ. ಅತ್ತ ಹೈದರಾಬಾದಿನ ನವಾಬನೂ ಸಹ ಮರಣಹೊಂದಿ ಹೈದರಾಬಾದಿನಲ್ಲಿ ನವಾಬನ ಮಗ ನಾಸಿರ್ ಹಾಗೂ ಮೊಮ್ಮಗ ಮುಜಫ್ಫರ್‌ನ  ಗುಂಪು ಚಂದಾಸಾಹೇಬ್‌ನೊಂದಿಗೆ ಸೇರಿ ಹೈದರಾಬಾದ ಹಾಗೂ ಕರ್ನಾಟಕದ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಯುದ್ಧ ನಡೆಸಿತು.

ಡೂಪ್ಲೆ ಈ ಅವಕಾಶವನ್ನು ಬಳಸಿಕೊಂಡು ಚಂದಾಸಾಹೇಬ ಹಾಗೂ ಮುಜಫ್ಫರ್ ಗುಂಪಿನೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡ. ೧೭೪೯ರಲ್ಲಿ ಮೂವರು ಸೇರಿ ವೆಲ್ಲೂರಿನ ಬಳಿಯ ಅಂಬಾರ್‌ನಲ್ಲಿ ಅನ್ವರ್ ಉದ್ದೀನ್‌ನನ್ನು ಸೋಲಿಸಿ, ಕೊಂದರು. ಚಂದಾಸಾಹೇಬ್ ಕರ್ನಾಟಕದ ನವಾಬನಾದ. ಅತ್ತ ಹೈದರಾಬಾದಿನಲ್ಲಿಯೂ ಫ್ರೆಂಚರ ತಂತ್ರದಿಂದ, ನಾಸಿರನ ಗುಂಪು ಕೊಲ್ಲಲ್ಪಟ್ಟು, ಮುಜಫ್ಫರ್ ನಿಜಾಮನಾದ. ಹೊಸ ನಿಜಾಮನು ಫ್ರೆಂಚ್ ಕಂಪನಿಗೆ ಹಣದೊಂದಿಗೆ, ಪಾಂಡಿಚೇರಿಯ ಬಳಿ ಕೆಲವು ಪ್ರದೇಶಗಳನ್ನು ಹಾಗೂ ಮಚಲಿಪಟ್ಟಣಂಅನ್ನು ಕಾಣಿಕೆಯಾಗಿ ನೀಡಿದ. ಡೂಪ್ಲೆಯು, ಹೈದರಾಬಾದಿನ ವ್ಯವಹಾರಗಳ ಮೇಲೆ ನಿಗಾ ಇಡವು ಉದ್ದೇಶದಿಂದ, ತನ್ನ ಅತ್ಯಂತ ದಕ್ಷ ಅಧಿಕಾರಿ ಬಸ್ಸಿಯನ್ನು ನೇಮಿಸಿದ. ಆದರೆ ಮುಜಫ್ಫರ್ ಆಕಸ್ಮಿಕವಾಗಿ ಮರಣ ಹೊಂದಿದ. ಈ ಸಂದರ್ಭವನ್ನು ಬಳಸಿಕೊಂಡು ಬಸ್ಸಿ ಸಲಾಬತ್‌ನ ಗುಂಪಿಗೆ ರಾಜ್ಯ ಪಡೆಯುವಂತೆ ಪ್ರಚೋದಿಸಿದ. ಇದಕ್ಕೆ ಪ್ರತಿಫಲವಾಗಿ ಫ್ರೆಂಚರಿಗೆ ಮುಸ್ತಫಾನಗೆ, ಎಲ್ಲೋರ, ರಾಜಮಹೇಂದ್ರಿ ಹಾಗೂ ಚಿಕಾಕೋಲ್ ಜಿಲ್ಲೆಗಳು ಕಾಣಿಕೆಯಾಗಿ ದೊರೆತವು.

ಹೀಗೆ ಫ್ರೆಂಚರು ತಮ್ಮ ಯಶಸ್ಸಿನ ತುತ್ತತುದಿಯಲ್ಲಿದ್ದಾಗ ಇಂಗ್ಲಿಷರೇನು ಮೂಕ ಪ್ರೇಕ್ಷಕರಾಗಿರಲಿಲ್ಲ. ಫ್ರೆಂಚರನ್ನು  ಮಟ್ಟ ಹಾಕಲು ಅವರು ನಾಸಿರ್‌ನ ಗುಂಪಿನೊಂದಿಗೆ ಹಾಗೂ ಮಹಮ್ಮದ್ ಆಲಿಯೊಂದಿಗೆ ಸಂಚು ನಡೆಸುತ್ತಲೇ ಇದ್ದರು. ಆಗ ರಾಬರ್ಟ್‌ಕ್ಲೈವ್ ಕರ್ನಾಟಕದ ರಾಜಧಾನಿಯಾದ ಅರ್ಕಾಟನ್ನು ವಶಪಡಿಸಿಕೊಳ್ಳುವ ಯೋಜನೆ ಹಾಕಿದ.  ಇದರ ಪರಿಣಾಮವಾಗಿ ಇಂಗ್ಲಿಷರ ಸೈನ್ಯ ನವಾಬ ಹಾಗೂ ಫ್ರೆಂಚರನ್ನು ಸೋಲಿಸಿತು. ಚಂದಾಸಾಹೇಬ್‌ರ ತಲೆಯನ್ನು ಕತ್ತರಿಸಲಾಯಿತು. ಇದರಿಂದ ಇಂಗ್ಲಿಷರ ಸಾಮರ್ಥ್ಯ  ಬಹಳ ಬೇಗ ವೃದ್ಧಿಯಾದಂತಾಗಿ, ಫ್ರೆಂಚರ ಶಕ್ತಿ ಕುಂದಿತು. ಡೂಪ್ಲೆಯು ಕೈಬಿಟ್ಟು ಹೋದ ಪ್ರದೇಶಗಳನ್ನು ಮತ್ತೆ ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿದನಾದರೂ, ಇದಕ್ಕೆ ಫ್ರೆಂಚ್ ಸರ್ಕಾರವು ಯುದ್ಧದಲ್ಲಿ ಆದ ಆರ್ಥಿಕ ನಷ್ಟದಿಂದ ಕಂಗೆಟ್ಟು ೧೭೫೪ರಲ್ಲಿ ಬ್ರಿಟಿಷರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿತು. ಹಾಗೆಯೇ ಡೂಪ್ಲೆಯನ್ನು ಭಾರತದಿಂದ ಹಿಂದಕ್ಕೆ ಕರೆಸಲಾಯಿತು.

೧೭೫೬ರಲ್ಲಿ ಇಂಗ್ಲಿಷರು ಹಾಗೂ ಫ್ರೆಂಚರು ನಡುವೆ ಯೂರೋಪ್‌ನಲ್ಲಿ ಏಳು ವರ್ಷಗಳ ಕಾಲ ನಡೆದ ಯುದ್ಧ ಆರಂಭವಾಯಿತು. ಆಗ ಇಂಗ್ಲಿಷರು ಬಂಗಾಳದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು. ಆದರೆ ಫ್ರೆಂಚ್ ಸರ್ಕಾರವು ಇಂಗ್ಲಿಷರನ್ನು ಭಾರತದಿಂದ ಓಡಿಸುವ ಉದ್ಧೇಶದಿಂದ, ಕೌಂಟ್ ಡಿ ಲ್ಯಾಲೆಯ ನೇತೃತ್ವದಲ್ಲಿ ಒಂದು ಬಲಿಷ್ಠ ಸೈನ್ಯವನ್ನು ಕಳುಹಿಸಿತು. ಆದರೆ ಫ್ರೆಂಚ್ ಸೈನ್ಯಕ್ಕೆ ಕರ್ನಾಟಕದಲ್ಲಿ ಜಯ ಸಿಗಲಿಲ್ಲ. ಇಂಗ್ಲಿಷರು ರಾಜಮನೇಂದ್ರಿ ಹಾಗೂ ಮಚಲಿಪಟ್ಟಣಂಗಳಂಥ ಫ್ರೆಂಚರ ಪ್ರದೇಶಗಳನ್ನು ವಶಪಡಿಸಿಕೊಂಡು ೧೭೫೯ರಲ್ಲಿ ನಿಜಾಮ್ ಸಲಾಬತ್‌ನೊಂದಿಗೆ ಹೈದರಾಬಾದ್‌ನಲ್ಲಿ ಒಂದು ಒಪ್ಪಂದ ಮಾಡಿಕೊಂಡರು. ಇಷ್ಟೇ ಅಲ್ಲದೇ, ಫ್ರೆಂಚರ ಬದಲಾಗಿ ಇಂಗ್ಲಿಷರು ನಿಜಾಮರ ರಕ್ಷಕರಾದರು. ಐತಿಹಾಸಿಕ ಘಟನೆಯಾದ ಮೂರನೇ ಕರ್ನಾಟಕ ಯುದ್ಧವು ೨೨ ಜನವರಿ ೧೭೬೦ರಲ್ಲಿ ವಾಂಡಿವಾಷ್‌ನಲ್ಲಿ ನಡೆಯಿತು. ಜನರಲ್ ಐರ‍್ಕೂಟೆಯ ಸೈನ್ಯವು ಲ್ಯಾಲಿಯ ಫ್ರೆಂಚ್ ಸೈನ್ಯವನ್ನು ಮಣ್ಣು ಮುಕ್ಕಿಸಿತು. ಫ್ರೆಂಚರ ಯಾರ ಪ್ರದೇಶಗಳೂ ಅವರಿಗೆ ದಕ್ಕಲಿಲ್ಲ. ೧೭೬೦ರ ಮೇನಲ್ಲಿ ಪಾಂಡಿಚೇರಿಯ ಮೇಲೆ ಆಕ್ರಮಣವದಾಗ ಫ್ರೆಂಚರು ಯಾವುದೇ ಷರತ್ತುಗಳಿಲ್ಲದ ಬ್ರಿಟಿಷರಿಗೆ ಸಂಪೂರ್ಣ ಶರಣಾಗತರಾದರು. ಲ್ಯಾಲಿಯನ್ನು ಸೆರೆಹಿಡಿದು, ಏಳು ವರ್ಷಗಳ ನಂತರ ಫ್ರಾನ್ಸ್‌ಗೆ ಹಿಂತಿರುಗಲು ಅವಕಾಶ ನೀಡಲಾಯಿತು. ೧೭೬೩ರಲ್ಲಿ ಪ್ಯಾರಿಸ್ ಒಪ್ಪಂದದೊಂದಿಗೆ ಯುದ್ಧ ಕೊನೆಗೊಂಡಿತು. ಈ ಒಪ್ಪಂದದ ನಂತರ ಫ್ರೆಂಚರ ಕಾರ್ಖಾನೆಗಳು ವ್ಯಾಪಾರದ ಕೇಂದ್ರಗಳಾಗಿ ಮಾತ್ರ ಮುಂದುವರಿದವು. ಅವು ಬಲಗೊಳ್ಳಲು ಯಾವ ಅವಕಾಶವೂ ಇರಲಿಲ್ಲ. ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಅಧ್ಯಾಯವು  ೧೭೬೯ರಲ್ಲಿ ಕೊನೆಗೊಂಡಿತು. ನಂತರ ಫ್ರೆಂಚ್ ಕಾರ್ಖಾನೆಗಳು ಖಾಸಗಿ ವ್ಯಾಪಾರಿಗಳ ಲಾಭಕ್ಕಾಗಿ ಕಾರ್ಯ ನಿರ್ವಹಿಸಿದವು ಮತ್ತು ಅವರು ಸಂಪೂರ್ಣವಾಗಿ ಇಂಗ್ಲಿಷರ ಅಧೀನವಾಗಿದ್ದರು. ಫ್ರೆಂಚರು ಭಾರತದಲ್ಲಿ ಸ್ಥಾಪಿಸಬೇಕೆಂದಿದ್ದ ಸಾಮ್ರಾಜ್ಯದ ಕನಸು ಚೂರಾಗಿತ್ತು.

ಭಾರತಕ್ಕೆ ಹಲವಾರು ಯೂರೋಪಿಯನ್ನರು ಬಂದು ತಮ್ಮ ಕಾರ್ಖಾನೆಗಳನ್ನು ಆರಂಭಿಸಿದರೂ ಎಲ್ಲರಿಗೂ ಯಶಸ್ಸು ಸಿಕ್ಕಲಿಲ್ಲ. ಡೇನಿಯನ್ನರು ೧೬೧೬ರಲ್ಲಿ ಭಾರತಕ್ಕೆ ವ್ಯಾಪಾರಿಗಳಾಗಿ  ಬಂದರು. ಅವರು ತಂಜಾವೂರಿನ ನಾಯಕನಿಂದ ಟ್ರಾಂವಕ್ಯೂರ್ ಬಂದರನ್ನು ೧೬೨೦ರಲ್ಲಿ ವಶಪಡಿಸಿಕೊಂಡರು. ಅವರು ತಮ್ಮ ಕಾರ್ಖಾನೆಗಳನ್ನು ಮಚಲೀಪಟ್ಟಣಂ, ಪೋರ್ಟ್‌‌ನೋವೋ ಹಾಗೂ ಶ್ರೀರಾಂಪುರಗಳಲ್ಲಿ ಸ್ಥಾಪಿಸಿದರೂ, ಹೆಚ್ಚು ಯಶಸ್ಸು ಪಡೆಯಲಿಲ್ಲ. ೧೮೪೫ರಲ್ಲಿ ಅವರು ತಮ್ಮ ಕಾರ್ಖಾನೆಗಳನ್ನು ಬ್ರಿಟಿಷರಿಗೆ ಮಾರಿ ಭಾರತದಿಂದ ನಿರ್ಗಮಿಸಿದರು.

ಸ್ವೀಡಿಷ್ ಈಸ್ಟ್ ಇಂಡಿಯಾ ಕಂಪನಿಯು ೧೭೩೧ರಲ್ಲಿ ಅಸ್ತಿತ್ವಕ್ಕೆ ಬಂದು. ಅವರಿಗೆ ಭಾರತಕ್ಕಿಂತ ಚೀನಾದ ಜೊತೆ ವ್ಯಾಪಾರದಲ್ಲಿ ಆಸಕ್ತಿ ಇತ್ತು. ಹಾಗೆಯೇ ಫ್ಲಾಂಡರ್ಸ್ ವ್ಯಾಪಾರಿಗಳು ಓಸ್ಟೆಂಡ್ ಕಂಪನಿಯನ್ನು ೧೭೨೨ರಲ್ಲಿ ಸ್ಥಾಪಿಸಿದರು. ಅವರು ಚಟುವಟಿಕೆಗಳು ಭಾರತಕ್ಕಷ್ಟೆ ಸೀಮಿತವಾಗಿದ್ದವು.

ಬ್ರಿಟಿಷರ  ಭಾರತ ಆಕ್ರಮಣ

೧೭೧೭ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ತನ್ನ ವಸ್ತುಗಳನ್ನು ಯಾವುದೇ ತೆರಿಗೆಗಳಿಲ್ಲದೆ ಆಮದು ಹಾಗೂ ರಫ್ತು ಮಾಡಲು ಹಾಗೂ ಈ ವಸ್ತುಗಳನ್ನು ರವಾನೆ ಮಾಡಲು ಪಾಸುಗಳು ಅಥವಾ ದಸ್ತಕ್‌ಗಳನ್ನು ನೀಡಲು ಅನುವಾಗುವಂತೆ ಮೊಗಲ್ ಚಕ್ರವರ್ತಿಯಿಂದ ಒಂದು ರಾಜಫರ್ಮಾನನ್ನು ಪಡೆದಿತ್ತು. ಆದರೆ ಬಂಗಾಳದ ನವಾಬರು ಇಂಥ ಫರ್ಮಾನುಗಳಿಂದ ಅಸಂತೃಪ್ತರಾಗಿದ್ದರು. ಯಾಕೆಂದರೆ ಅವರಿಗೆ ಈಸ್ಟ್ ಇಂಡಿಯಾ ಕಂಪನಿಯಿಂದ ಯಾವ ಆದಾಯವೂ ಸಿಗುತ್ತಿರಲಿಲ್ಲ. ಕಂಪನಿಯು ವಸ್ತುಗಳನ್ನು ರವಾನೆ ಮಾಡಲು ನೀಡುತ್ತಿದ್ದ ದಸ್ತಕ್‌ಗಳನ್ನು ಕಂಪನಿಯ ನೌಕರರು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಮುರ್ಷಿದ್ ಅಲಿಖಾನ್‌ನಿಂದ ಹಿಡಿದು ಅಲಿವರ್ದಿಖಾನ್‌ವರೆಗೆ ಬಂಗಾಳದ ಎಲ್ಲ ನವಾಬರು ಬಂದ ಆದಾಯವನ್ನು ಬಂಗಾಳಕ್ಕೆ ನೀಡುವಂತೆ ಬ್ರಿಟಿಷರಿಗೆ ಒತ್ತಾಯಿಸಿದರು. ಹೀಗೆ ಬ್ರಿಟಿಷರ ವ್ಯಾಪಾರದ ಆಸಕ್ತಿಗಳು ಹಾಗೂ ಸ್ಥಳೀಯ ಬಂಗಾಳ ಸರ್ಕಾರದ ನಡುವಿನ ತಿಕ್ಕಾಟ ೧೮ನೆಯ ಶತಮಾನದ ವೇಳೆಗೆ ಆರಂಭವಾಗಿತ್ತು.

೧೭೫೬ರಲ್ಲಿ ಅಲಿವರ್ದಿಖಾನ್‌ನ ನಂತರ ಸಿರಾಜುದ್ದೌಲ ಬಂಗಾಳದ ನವಾಬನಾದ ನಂತರ ಬ್ರಿಟಿಷರು ನವಾಬರ ಸಂಬಂಧ ಮತ್ತಷ್ಟು ಹದಗೆಟ್ಟಿತು. ಸಿರಾಜುದ್ದೌಲನು, ಮುರ್ಷಿದ್ ಅಲಿಖಾನನ ಸಮಯದಲ್ಲಿದ್ದಂತೆ ಈಗಲೂ ಸಹ ಬ್ರಿಟಿಷರು ತನ್ನ ಜೊತೆಗೆ ವ್ಯಾಪಾರ ವ್ಯವಹಾರ ನಡೆಸಬೇಕೆಂದು ಒತ್ತಾಯಿಸಿದ. ಆದರೆ ಫ್ರೆಂಚರ ಮೇಲಿನ ವಿಜಯದ  ನಂತರ ಬಹಳ ಶಕ್ತಿಶಾಲಿಗಳಾಗಿದ್ದ ಬ್ರಿಟಿಷರು ಇದಕ್ಕೆ ಒಪ್ಪಲಿಲ್ಲ. ಇದರ ಜೊತೆಗೆ ಅವರು ತಮ್ಮ ವಶದಲ್ಲಿದ್ದ ಕಲ್ಕತ್ತಾಕ್ಕೆ ಬರುವ ಭಾರತೀಯ ವಸ್ತುಗಳ ಮೇಲೆ ಅಧಿಕ ಸುಂಕ ವಿಧಿಸುತ್ತಿದ್ದರು. ಹಾಗೆಯೇ ಅವರು ನವಾಬನ ಅನುಮತಿ ಪಡೆಯದೆ ಕಲ್ಕತ್ತಾದ ಕೋಟೆಯನ್ನು ಭದ್ರಪಡಿಸಲು ಆರಂಭಿಸಿದ್ದರು. ಇವೆಲ್ಲಕ್ಕಿಂತ ಹೆಚ್ಚಾಗಿ ಅವರು ನವಾಬನ ವೈರಿ ಕೃಷ್ಣಾದಾಸನಿಗೆ ಆಶ್ರಯ ನೀಡಿದ್ದರು. ಇದರಿಂದ ಕೆರಳಿದ ಸಿರೌಜುದ್ಧೌಲ ಕಲ್ಕತ್ತಾದ ಇಂಗ್ಲಿಷರ ಕೋಟೆಯ ಮೇಲೆ ದಾಳಿ ಮಾಡಿ, ಇಂಗ್ಲಿಷರೊಂದಿಗೆ ನೇರವಾಗಿ ಕಾದಾಟಕ್ಕಿಳಿದ. ಆದರೆ ಸಿರಾಜುದ್ಧೌಲನ ಆಸ್ಥಾನದಲ್ಲೇ ಅವನ ವೈರಿಗಳಿದ್ದರು. ಅವನು ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದು ಅವನ ಚಿಕ್ಕಮ್ಮ ಗಸ್ನಿಬೇಗಂಗೆ ಇಷ್ಟವಿರಲಿಲ್ಲ. ಇದರೊಂದಿಗೆ ಮೀರ್‌ಜಾಫರ್ ಬೇರೆಯವರೊಂದಿಗೆ ಸೇರಿ ನವಾಬನ ವಿರುದ್ಧ ಸಂಚು ಹೂಡಿದ. ಇಂಗ್ಲಿಷರು ಹಾಗೂ ನವಾಬರು ೧೭೫೭ರ ಜೂನ್ ೨೩ರಂದು ಮುಖಾಮುಖಿ ಯಾದಾಗ ನವಾಬನಿಗೆ ಸೋಲಾಯಿತು. ಅವನನ್ನು ಬಂಧಿಸಿ, ಮೀರ್‌ಜಾಫರ್‌ನ ಮಗ ಮೀರಾನ್ ಕೊಲೆ ಮಾಡಿದ. ಬ್ರಿಟಿಷ್ ಸೈನ್ಯದ ನೇತೃತ್ವ ವಹಿಸಿದ್ದ ರಾಬರ್ಟ್‌ಕ್ಲೈವ್ ಮೀರ್‌ಜಾಫರ್‌ನನ್ನು ಬಂಗಾಳದ ಸಿಂಹಾಸನದ ಮೇಲೆ ಕೂರಿಸಿದ. ಮೀರ್‌ಜಾಫರ್ ಇದಕ್ಕೆ ಪ್ರತಿಯಾಗಿ ಕಲ್ಕತ್ತಾದ ಬಳಿ ೨೪ಪರಗಣಗಳ ಜಮೀನ್ದಾರಿಯ ಜೊತೆಗೆ, ೧,೭೭,೦೦,೦೦೦ ರೂ.ಗಳನ್ನು ಕಾಣಿಕೆಯಾಗಿ ನೀಡಿದ.

ಆದರೆ ಅಧಿಕಾರಕ್ಕೆ ಬಂದ ನಂತರ ಮೀರ್‌ಜಾಫರ್ ಆರ್ಥಿಕ ಸಂಕಷ್ಟಗಳ ಜೊತೆಗೆ, ಆಸ್ಥಾನದ ಸದಸ್ಯರ ವಿರೋಧ ಹಾಗೂ ಬಂಗಾಳವನ್ನು ವಶಪಡಿಸಿಕೊಳ್ಳುವ ಮೊಗಲ್ ಚಕ್ರವರ್ತಿಯ ಬೆದರಿಕೆಯನ್ನು ಎದುರಿಸಬೇಕಾಯಿತು. ಆದರೆ ಮುಖ್ಯ ತೊಂದರೆ ಬಂದದ್ದು, ಯಾವಾಗಲೂ ಏರುತ್ತಲೇ ಹೋದ ಇಂಗ್ಲಿಷರ ಬೇಡಿಕೆಗಳಿಂದಲೇ . ಕಂಪನಿಯ ಅಧಿಕಾರಿಗಳು, ನವಾಬ ತಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದಾಗ, ಅವನನ್ನು ಟೀಕಿಸಲು ಆರಂಭಿಸಿದರು. ಅವರು ತಮಗೆ ಬರ್ದ್‌‌ವಾನ್, ಮಿಡ್ನಾಪುರ್ ಹಾಗೂ ಚಿತ್ತಗಾಂಗ್ ಜಿಲ್ಲೆಗಳ ಜಮೀನ್ದಾರಿಯನ್ನು ಹಾಗೂ ಅಪಾರಹಣವನ್ನು ನೀಡಿದ ನವಾಬನ ಅಳಿಯ ಮೀರ್‌ಖಾಸಿಂಗಾಗಿ ಅಧಿಕಾರ ತ್ಯಾಗ ಮಾಡಲು ಒತ್ತಾಯಿಸಿದರು. ಆದರೆ ಈ ಮೀರ್‌ಖಾಸಿಂ ಇಂಗ್ಲಿಷರ ಆಕಾಂಕ್ಷೆಗಳಿಗೆ ವಿರುದ್ಧವಾಗಿ  ಬೆಳೆದು ಬಂಗಾಳದಲ್ಲಿ ಅವರ ಅಸ್ತಿತ್ವಕ್ಕೆ ಕಂಟಕಪ್ರಾಯನಾದ. ಇದರ ಜೊತೆಗೆ ಬ್ರಿಟಿಷರು ವಿರೋಧದ ನಡುವೆಯೂ ಒಂದು ಶಕ್ತಿಶಾಲಿ ಸೇನೆಯನ್ನು ಕಟ್ಟುವುದರ ಜೊತೆಗೆ ದಸ್ತಕ್‌ಗಳನ್ನು ದುರುಪಯೋಗಪಡಿಸಿಕೊಂಡ. ಖಾಸಗಿ ಇಂಗ್ಲಿಷ್ ವ್ಯಾಪಾರಿಗಳ ವಿರುದ್ಧ ಬಲಪ್ರಯೋಗ ಮಾಡಿದ. ಇದರ ಪರಿಣಾಮವಾಗಿ ಬ್ರಿಟಿಷರು ನವಾಬನನ್ನು ಸಿಂಹಾಸನದಿಂದ ಕೆಳಗಿಳಿಸಲು ಸಂಚು ನಡೆಸಿದರು. ಇದರ ನಡುವೆ ಮೀರ್‌ಖಾಸಿಂ ಔಧ್‌ನ ನವಾಬ ಶುಜಾಉದ್ದೌಲ ಹಾಗೂ ಮೊಗಲ್ ಚಕ್ರವರ್ತಿ ಮೂರನೆಯ ಷಾ ಅಲಂನ ಜೊತೆ ಒಪ್ಪಂದ ಮಾಡಿಕೊಂಡ. ಎರಡೂ ಸೇನೆಗಳು ೧೭೬೪ ರಲ್ಲಿ ಬಕ್ಸರ್ ಬಳಿ ಯುದ್ಧ ನಡೆಸಿದವು. ಇದರ ನಡುವೆ ಮೀರ್‌ಖಾಸಿಂ ಔಧ್‌ನ ನವಾಬ ಶುಜಾಉದ್ದೌಲ ಹಾಗೂ ಮೊಗಲ್ ಚಕ್ರವರ್ತಿ ಮೂರನೆಯ ಷಾ ಅಲಂನ ಜೊತೆ ಒಪ್ಪಂದ ಮಾಡಿಕೊಂಡ. ಎರಡೂ ಸೇನೆಗಳು ೧೭೬೪ರಲ್ಲಿ  ಬಕ್ಸರ್ ಬಳಿ ಯುದ್ಧ ನಡೆಸಿದವು. ಬ್ರಿಟಿಷರು ಮೀರ್‌ಖಾಸಿಂನನ್ನು ಯುದ್ಧದಲ್ಲಿ ಸೋಲಿಸಿದರು. ಈ ಯುದ್ಧವು ಭಾರತದ ಎರಡು ಪ್ರಮುಖ ಶಕ್ತಿಗಳ ವಿರುದ್ಧ ಬ್ರಿಟಿಷರ ಯುದ್ಧಾಸ್ತ್ರಗಳ ನಿಜವಾದ ಶಕ್ತಿಯನ್ನು ತೋರಿಸಿಕೊಟ್ಟ ಕಾರಣದಿಂದ, ಇದು ಭಾರತದ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿದೆ. ಈ ಯುದ್ಧವು ಬ್ರಿಟಿಷರು ನಿಸ್ಸಂಶಯವಾಗಿ ಬಂಗಾಳ, ಬಿಹಾರ ಹಾಗೂ ಒರಿಸ್ಸಾದ ಅಧಿಪತಿಗಳು ಎಂಬುದನ್ನು ಎತ್ತಿತೋರಿಸಿದ್ದಲ್ಲದೆ, ಅವಧವನ್ನು ಬ್ರಿಟಿಷರ ಅಧೀನಕ್ಕೆ ಒಳಪಡಿಸಿತು. ಬ್ರಿಟಿಷರು ಮತ್ತೆ ಮೀರ್‌ಜಾಫರನ್ನು ಬಂಗಾಳದ ನವಾಬನ್ನಾಗಿಸಿದರು. ಆದರೆ ಅವನು ಶೀಘ್ರದಲ್ಲಿಯೇ ಮರಣ ಹೊಂದಿದ್ದರಿಂದ, ಅವನ ಅಪ್ರಾಪ್ತ ವಯಸ್ಸಿನ ಮಗ ನಿಜಾಮುದ್ದೌಲನನ್ನು ನವಾಬನನ್ನಾಗಿ ನೇಮಿಸಲಾಯಿತು. ಅವರು ನವಾಬನೊಂದಿಗೆ ಒಪ್ಪಂದ ಮಾಡಿಕೊಂಡರು. ಈ ಒಪ್ಪಂದದ ಪ್ರಕಾರ ನವಾಬನು ತನ್ನ ಬಹುಪಾಲು ಸೈನ್ಯವನ್ನು ವಿಸರ್ಜಿಸಿ ಬಂಗಾಳದ ಆಡಳಿತವನ್ನು ಕಂಪನಿಯ ಮೂಲಕ ನೇಮಕಗೊಂಡ ಸುಬೇದಾರನ ಮೂಲಕ ನಿರ್ವಹಿಸಬೇಕಿತ್ತು ಮತ್ತು ಈ ಸುಬೇದಾರನನ್ನು ಕಂಪನಿಯ ಸಮ್ಮತಿಯಿಲ್ಲದೆ ತೆಗೆದುಹಾಕುವಂತಿರಲಿಲ್ಲ. ಹೀಗೆ ಕಂಪನಿಯು ಬಂಗಾಳದ ಆಡಳಿತದ ಮೇಲೆ ಸಂಪೂರ್ಣ ಹತೋಟಿಯನ್ನು ಪಡೆದುಕೊಂಡಿತು.

ಈ ಮಧ್ಯೆ ಕಂಪನಿಯ ಗೌವರ್ನರ್ ಆದ ರಾಬರ್ಟ್‌ಕ್ಲೈವನು ೧೭೬೫ರಲ್ಲಿ ಮೊಗಲ್ ಚಕ್ರವರ್ತಿ ಷಾ ಆಲಂನನ್ನು ಭೇಟಿ ಮಾಡಿ ಅವನಿಂದ ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳ, ಬಿಹಾರ ಮತ್ತು ಒರಿಸ್ಸಾಗಳ ದಿವಾನಿಯನ್ನು ಪಡೆದ. ದಿವಾನಿಯ ಹಕ್ಕು ಬ್ರಿಟಿಷರಿಗೆ ಬಂಗಾಳದ ಆದಾಯ, ಕಾನೂನು ಸುವ್ಯವಸ್ಥೆ ಇತ್ಯಾದಿ ಎಲ್ಲ  ವಿಷಯಗಳ ನಿಯಂತ್ರಣಕ್ಕೆ  ದಾರಿ ಮಾಡಿಕೊಟ್ಟಿತು. ರಕ್ಷಣಾವ್ಯವಸ್ಥೆ ಮಾತ್ರ ಬಂಗಾಳದ ನವಾಬನ ಕೈಯಲ್ಲಿತ್ತು. ಆದರೆ ಬಕ್ಸರ್‌ಕದನದ ನಂತರ ನವಾಬನು ಸಂಪೂರ್ಣವಾಗಿ ತನ್ನ ಸೈನ್ಯ ಶಕ್ತಿಯನ್ನು ಕಳೆದುಕೊಂಡಿದ್ದ. ಹೀಗಾಗಿ ಬಂಗಾಳದ ರಾಜಕೀಯ ಅಧಿಕಾರವೂ ನವಾಬನಿಂದ ಈಸ್ಟ್ ಇಂಡಿಯಾ ಕಂಪನಿಯು ಕೈ ಸೇರಿತು.

ಆಂಗ್ಲೋಮೈಸೂರು ಹಾಗೂ ಆಂಗ್ಲೋಮರಾಠ ಯುದ್ಧಗಳೂ

ಮೊಗಲ್ ಸಾಮ್ರಾಜ್ಯದ ಪತನದ ನಂತರ ೧೮ನೆಯ ಶತಮಾನದಲ್ಲಿ ಮೈಸೂರು ಹಾಗೂ  ಮರಾಠರಂಥ ಸಣ್ಣ ಸಣ್ಣ ಪ್ರಾದೇಶಿಕ ಶಕ್ತಿಗಳು ಅಸ್ತಿತ್ವಕ್ಕೆ ಬಂದವು. ಇದೇ ಸಂದರ್ಭದಲ್ಲಿ ಯುರೋಪಿನ ವಸಾಹತುಶಾಹಿ ಶಕ್ತಿಗಳು  ಭಾರತೀಯ ಉಪಖಂಡದಲ್ಲಿ ಪ್ರವೇಶಿಸಿದವು. ಇದರಿಂದಾಗಿ, ಸ್ಥಳೀಯ ರಾಜಕೀಯ ಶಕ್ತಿಗಳು ಹಾಗೂ ವಸಾಹತುಶಾಹಿ ಶಕ್ತಿಗಳ ನಡುವೆ ರಾಜಕೀಯ ಪ್ರಾಬಲ್ಯಕ್ಕೆ ಕಾದಾಟ ಆರಂಭವಾಯಿತು. ಈ ಎರಡು ಶಕ್ತಿಗಳ ಸೆಣೆಸಾಟದ ನಡುವೆ ಭಾರತದ ರಾಜರುಗಳಲ್ಲಿಯೇ ರಾಜಕೀಯ ಪರಮಾಧಿಕಾರಕ್ಕಾಗಿ ಹೋರಾಟ ಆರಂಭವಾಗಿತ್ತು. ಮೈಸೂರಿನ ನಿಜವಾದ ರಾಜ ನಾನೇ ಎಂದು ಘೋಷಿಸಿ ಸೈನ್ಯಾಧಿಕಾರಿಯೊಬ್ಬ ಮರಾಠರಿಗೆ, ಕರ್ನಾಟಕದ ನವಾಬನಿಗೆ ಹಾಗೂ ಹೈದರಾಬಾದಿನ ನಿಜಾಮನಿಗೆ ಸವಾಲಾಗಿ ಪರಿಣಮಿಸಿದ. ಮರಾಠರು ಹಾಗೂ ನಿಜಾಮ ಇಬ್ಬರೂ ಸೇರಿ,ಬ್ರಿಟಿಷರ ಸಹಯೋಗದೊಂದಿಗೆ ಮೈಸೂರಿನ ವಿರುದ್ಧ ಹೋರಾಟ ನಡೆಸಿದರು. ಆದರೆ ನಿಜಾಮನಿಗೆ ದಕ್ಷಿಣದಲ್ಲಿ ಮರಾಠರು ಬೆಳೆಯುತ್ತಿದ್ದ ಪ್ರಾಬಲ್ಯದ ಬಗ್ಗೆ ಒಳಗೇ ಆತಂಕ ವಿದ್ದುದರಿಂದ ಅವನು ಮರಾಠರ ವಿರುದ್ಧ  ಬ್ರಿಟಿಷರ ಜೊತೆ ಕೈಜೋಡಿಸಿದ. ಈ  ರೀತಿಯ ಪರಸ್ಪರ ಹಗೆತನ ಸ್ಥಳೀಯ ರಾಜರ ನಡುವೆ ಇದ್ದುದರಿಂದ, ಬ್ರಿಟಿಷರಿಗೆ ಅವರ ಆಂತರಿಕ ವ್ಯವಹಾರಗಳಲ್ಲಿ ಮಧ್ಯ ಪ್ರವೇಶಿಸಲು ಅನುಕೂಲವಾಯಿತು.

ಬ್ರಿಟಿಷರು, ಮೈಸೂರು ಹಾಗೂ ಮರಾಠ ರಾಜ್ಯಗಳ ನಡುವೆ ಮಧ್ಯಪ್ರವೇಶಿದ್ದು ಮೂಲತಃ ವ್ಯಾಪಾರದ ಕಾರಣಗಳಿಗಾಗಿಯೇ. ಹೈದರ್ ಹಾಗೂ ಟಿಪ್ಪುಸುಲ್ತಾನ್ ಇಬ್ಬರೂ ಮಲಬಾರ್ ತೀರದ ವ್ಯಾಪಾರವನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದರು. ಅವರು ಮದ್ರಾಸಿನಲ್ಲಿ ಬ್ರಿಟಿಷರ ವ್ಯಾಪಾರಿ ಉದ್ದೇಶಗಳಿಗೆ ಆತಂಕಕಾರಿಯಾಗಿದ್ದರು. ಮರಾಠರು ಪಶ್ಚಿಮ ಕರಾವಳಿಯ ವ್ಯಾಪಾರವನ್ನು, ಅದರಲ್ಲೂ ಆಗ ತಾನೇ ಬೆಳೆಯುತ್ತಿದ್ದ ಹತ್ತಿ ಉದ್ಯಮವನ್ನು, ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರಿಂದ, ಬ್ರಿಟಿಷರು ಇಂಥ ಲಾಭದಾಯಕ ಉದ್ಯಮವು ಮರಾಠರಿಗತೆ ದಕ್ಕದಂತೆ ಮಾಡಬೇಕೆಂದು ಯೋಚಿಸಿದರು.

ಬ್ರಿಟಿಷರು ಮೈಸೂರು ರಾಜ್ಯದ ವಿರುದ್ಧ ನಾಲ್ಕು ಯುದ್ಧ ನಡೆಸಿದರು. ಈ ಯುದ್ಧಗಳಲ್ಲಿ ಮರಾಠರು, ಕರ್ನಾಟಕದ ನವಾಬ ಹಾಗೂ ಹೈದರಾಬಾದಿನ ನಿಜಾಮ ಎಲ್ಲರೂ ಕಾಲಕಾಲಕ್ಕೆ ಬ್ರಿಟಿಷರೊಂದಿಗೆ ಸೇರಿ ಮೈಸೂರಿನ ಪ್ರಾಬಲ್ಯವನ್ನು ಅಡಗಿಸಲು ಯತ್ನ ನಡೆಸಿದರು. ಈ ಎಲ್ಲ  ರಾಜ್ಯಗಳೂ  ಆಗ ತಾನೇ ತಮ್ಮ ಪ್ರದೇಶಗಳನ್ನು ವಿಸ್ತರಿಸುತ್ತಿದ್ದುದರಿಂದ ಮೈಸೂರು ಪ್ರವರ್ಧಮಾನಕ್ಕೆ ಬರುತ್ತಿದ್ದುದನ್ನು ಕಂಡು ಆತಂಕಕ್ಕೊಳಗಾಗಿದ್ದರು.

೧೭೬೬ರಲ್ಲಿ ಬ್ರಿಟಿಷರು ಮರಾಠರು ಹಾಗೂ ಹೈದರಾಬಾನ ನಿಜಾಮನೊಂದಿಗೆ ಸೇರಿ ಮೈಸೂರಿನ ಮೇಲೆ ಆಕ್ರಮಣ ನಡೆಸಿದರು. ಆದರೆ ಹೈದರಾಲಿಯು ಚಾಣಾಕ್ಷತೆಯಿಂದ ಮರಾಠರು ಹಾಗೂ ನಿಜಾಮನನ್ನು ತನ್ನ ಕಡೆ ಸೆಳೆದುಕೊಳ್ಳುವುದರಲ್ಲಿ ಸಫಲನಾದ. ಹೈದರಾಲಿಯು ಇವರೆಲ್ಲರ ಸಹಯೋಗದಿಂದ ಬ್ರಿಟಿಷರ ವಿರುದ್ಧ ಸಮರ ಸಾರಿ ಮದ್ರಾಸ್‌ವರೆಗೆ ತಲುಪಿದೆ. ಮತ್ತು ೧೭೬೯ರಲ್ಲಿ ಮದ್ರಾಸ್ ಕೌನ್ಸಿಲ್‌ನ್ನು ಶಾಂತಿ ಒಪ್ಪಂದಕ್ಕೆ ಸಹಿ ಮಾಡುವಂತೆ ಒತ್ತಾಯಿಸಿದ. ಎರಡೂ ಬಣಗಳು ಆಕ್ರಮಣ ನಿಲ್ಲಿಸಿ, ಮೂರನೇ ಶಕ್ತಿಯಿಂದ ಆಕ್ರಮಣವಾದಾಗ ಪರಸ್ಪರ ಸಹಾಯ ಮಾಡಲು ಒಪ್ಪಿದರು. ಆದರೆ ೧೭೭೧ರಲ್ಲಿ ಹೈದರಾಲಿಯ ಮೇಲೆ ಮರಾಠರು ದಾಳಿ ನಡೆಸಿದಾಗ ಬ್ರಿಟಿಷರು ಅವನ ಸಹಾಯಕ್ಕೆ ಬರಲಿಲ್ಲ. ಇದರಿಂದ ಹೈದರಾಲಿ ಬ್ರಿಟಿಷರ ಬಗೆಗಿನ ನಂಬಿಕೆಯನ್ನು ಕಳೆದುಕೊಂಡ.

ಬ್ರಿಟಿಷರು, ಫ್ರೆಂಚ್ ವಸಾಹತು ಆಗಿದ್ದರೂ ಹೈದರನ ನಿಯಂತ್ರಣಕ್ಕೊಳಪಟ್ಟಿದ್ದ, ಮಾಹೆಯನ್ನು ವಶಪಡಿಸಿಕೊಂಡರು. ಇದು ಎರಡನೆಯ ಮೈಸೂರು ಮಹಾಯುದ್ಧಕ್ಕೆ ಕಾರಣವಾಯಿತು. ಬ್ರಿಟಿಷರು ಮರಾಠರು ಹಾಗೂ ನಿಜಾಮನನ್ನು ತಮ್ಮ ಕಡೆಗೆ ಸೇರಿಸಿಕೊಂಡರು. ೧೮೯೧ರ ಜುಲೈನಲ್ಲಿ ಬ್ರಿಟಿಷ್ ಸೇನೆಯು ಐರ್‌ಕೂಟೆಯ ನೇತೃತ್ವದಲ್ಲಿ ಪೋರ್ಟ್‌‌ನೋವೋ ಬಳಿ ಹೈದರನನ್ನು ಸೋಲಿಸಿತು. ೧೭೮೨ರ ಡಿಸೆಂಬರ್‌ನಲ್ಲಿ ಹೈದರಾಳಿಯ ಮರಣದ ನಂತರ ಯುದ್ಧವು ಟಿಪ್ಪುಸುಲ್ತಾನನ ನಾಯಕತ್ವದಲ್ಲಿ ಮುಂದುವರಿಯಿತು. ಯಾವ  ಬಣಕ್ಕೂ ಇನ್ನೊಂದನ್ನು ಸೋಲಿಸಲು ಸಾಧ್ಯವಾಗದೇ ಇದ್ದುದರಿಂದ ಮಾರ್ಚ್‌೧೭೮೪ರಲ್ಲಿ ಇಬ್ಬರೂ ಮಂಗಳೂರಿನಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.

ಆದರೆ ೧೭೮೪ರ ಒಪ್ಪಂದದಿಂದ ಟಿಪ್ಪು ಹಾಗೂ ಬ್ರಿಟಿಷರ ನಡುವಿನ ಕಾದಾಟವನ್ನುಜ ನಿಲ್ಲಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅದು ಈ ಕಾದಾಟವನ್ನು ಮುಂದಕ್ಕೆ ಹಾಕಿತ್ತು. ಬ್ರಿಟಿಷರು ಟಿಪ್ಪುವನ್ನು ದಕ್ಷಿಣದ ಪ್ರಬಲ ವೈರಿ ಎಂದು ಪರಿಗಣಿಸಿದರು. ಟಿಪ್ಪುವು ಬ್ರಿಟಿಷರ ಸಹವರ್ತಿಯಾದ ಟ್ರಾವಂಕೂರ್‌ನ ರಾಜ್ಯದ ಮೇಲೆ ದಾಳಿ ನಡೆಸಿದಾಗ ಯುದ್ಧ ಅನಿವಾರ್ಯವಾಯಿತು. ೧೭೯೦ರಲ್ಲಿ ಆರಂಭವಾದ ಈ ಯುದ್ಧವು ಎರಡು ವರ್ಷಗಳವರೆಗೆ ನಡೆಯಿತು. ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪುವು ತೀವ್ರ ಸೋಲು ಅನುಭವಿಸಿ, ಶಾಂತಿಗಾಗಿ ಮುಂದೆ ಬಂದ. ೧೭೯೨ರಲ್ಲಿ ಶ್ರೀರಂಗಪಟ್ಟಣದ ಒಪ್ಪಂದವು ಜಾರಿಗೆ ಬಂದು, ಟಿಪ್ಪು ತನ್ನ ಅರ್ಧ ರಾಜ್ಯವನ್ನು ಕೊಡುವುದರ ಜೊತೆಗೆ ೩೩೦ ಲಕ್ಷ ರೂಪಾಯಿಗಳನ್ನು ನಷ್ಟ ಪರಿಹಾರವಾಗಿ ನೀಡಬೇಕಾಯಿತು.

ಲಾರ್ಡ್‌ ವೆಲ್ಲೆಸ್ಲಿಯು ತನ್ನ ಸಹಾಯಕ ಸೈನ್ಯ ಪದ್ಧತಿಯ ಅಡಿಯಲ್ಲಿ ಮೈಸೂರನ್ನು ತರಲು ಯೋಚಿಸಿದ. ಆದರೆ ಟಿಪ್ಪುಗೆ ತನ್ನ ಅಧಿಕಾರವನ್ನು ಬ್ರಿಟಿಷರಿಗೆ ಒಪ್ಪಿಸಲು ಇಷ್ಟವಿರಲಿಲ್ಲ. ಆದ್ದರಿಂದ ಗೌವರ್ನರ್ ಜನರಲ್‌ನು ಸೈನ್ಯವನ್ನು ಕಳುಹಿಸಿದ. ೧೭೯೯ರಲ್ಲಿ ಟಿಪ್ಪು ಯುದ್ಧದಲ್ಲಿ ಸಾವನ್ನಪ್ಪಿದ. ಶ್ರೀರಂಗಪಟ್ಟಣವನ್ನು ಕೊಳ್ಳೆ ಹೊಡೆಯಲಾಯಿತು. ಟಿಪ್ಪುವಿನ ಅರ್ಧ ರಾಜ್ಯವನ್ನು ಬ್ರಿಟಿಷರು ಹಾಗೂ ನಿಜಾಮರಿಬ್ಬರೂ ಹಂಚಿಕೊಂಡರು. ಒಡೆಯರ್ ವಂಶದವರಿಗೆ ಮೈಸೂರು ಪುನಃ ಸಿಕ್ಕಿದಂತಾಗಿದೆ, ಮೈಸೂರು ಬ್ರಿಟಿಷರ ಮೇಲೆ ಅವಲಂಬಿತವಾಯಿತು.

ಮರಾಠಾ ರಾಜ್ಯದಲ್ಲಿ ಪೇಶ್ವೆ ನಾರಾಯಣರಾವ್‌ನ ಮರಣದ ನಂತರ ಉತ್ತರಾಧಿಕಾರಿ ಯಾರಾಗಬೇಕೆಂಬ ವಿಷಯಗಳಲ್ಲಿ ಜಗಳ ಉಂಟಾಗಿತ್ತು. ರಘುನಾಥರಾವ್ ಪೇಶ್ವೆಯಾಗಲು ಬಯಸಿದ್ದನ್ನು ನಾನಾಫಡ್ನವೀಸ್ ವಿರೋಧಿಸಿದ.  ಅವನು ಬದಲಾಗಿ ಬಾಲಕ ಎರಡನೆಯ ಪೇಶ್ವೆ ಮಾಧವರಾವ್‌ನನ್ನು ಬೆಂಬಲಿಸಿದ. ರಘುನಾಥರಾವ್ ಬ್ರಿಟಿಷರ ಸಹಾಯ ಕೇಳಿದಾಗ, ಬ್ರಿಟಿಷರು ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯೋಚಿಸಿದರು. ಇದರಿಂದ ಅವರು ೧೭೭೫ರಿಂದ ೧೭೮೨ರವರೆಗೆ ಮರಾಠರೊಂದಿಗೆ ಒಂದು ದೀರ್ಘ ಯುದ್ಧದಲ್ಲಿ ತೊಡಗುವಂತಾಯಿತು. ಪ್ರಾರಂಭದಲ್ಲಿ ಮರಾಠರು ಬ್ರಿಟಿಷರನ್ನು ಸೋಲಿಸಿದರು. ಗೊರ್ಡಾನ್ ನೇತೃತ್ವದಲ್ಲಿ ಬ್ರಿಟಿಷ್ ಸೈನ್ಯವು ಮಧ್ಯಭಾರತದ ಕಡೆಗೆ ಚಲಿಸಿ, ಹಲವಾರು ವಿಜಯಗಳ ನಂತರ ಅಹಮದಾಬಾದ್‌ಅನ್ನು ವಶಪಡಿಸಿಕೊಂಡಿತು. ಮರಾಠರ ಒಕ್ಕೂಟದ ಕಷ್ಟಗಳನ್ನು ಅರಿತಿದ್ದ ಮಹದಾಜಿ ಸಿಂಧಿಯಾ ಬ್ರಿಟಿಷರೊಂದಿಗಿನ ಯುದ್ಧವನ್ನು ಮುಂದುವರೆಸಲು ಒಪ್ಪಲಿಲ್ಲ. ಇದರಿಂದಾಗಿ ೧೭೮೨ರಲ್ಲಿ ಸಾಲ್‌ಬಾಯಿ ಒಪ್ಪಂದವು ಅಸ್ತಿತ್ವಕ್ಕೆ ಬಂತು. ಮಾಧವರಾವ್ ನಾರಾಯಣನನ್ನು ಸೂಕ್ತ ಪೇಶ್ವೆ ಎಂದು ಆ ಸ್ಥಾನಕ್ಕೆ ನೇಮಿಸಲಾಯಿತು.

ನಾನಾಫಡ್ನವೀಸ್ ಹಾಗೂ ಇನ್ನು ಕೆಲವು ಪ್ರಮುಖ ಮರಾಠಾ ನಾಯಕರ ಮರಣದ ನಂತರ ಮರಾಠಾ ನಾಯಕರ  ನಡುವೆಯೇ ಯುದ್ದಗಳಾಗಿ, ಐದು ರಾಜ್ಯಗಳ ಒಕ್ಕೂಟಕ್ಕೆ ನೆಲೆಯಿಲ್ಲದಂತಾಯಿತು. ಆಗ ಯಶವಂತರಾವ್ ಹೋಳ್ಕರ್ ಒಂದು ಕಡೆ ಹಾಗೂ ದೌಲತ್‌ರಾವ್ ಸಿಂಧಿಯಾ ಮತ್ತು ಎರಡನೇ ಪೇಶ್ವೆ ಬಾಜಿರಾವ್ ಇನ್ನೊಂದು ಕಡೆ ಭೀಕರ ಕದನಕ್ಕೆ ಸಿದ್ಧರಾದರು. ೧೮೦೨ರಲ್ಲಿ ಹೋಳ್ಕರ್, ಸಿಂಧಿಯಾ ಹಾಗೂ ಪೇಶ್ವೆಯ ಸೈನ್ಯವನ್ನು  ಸೋಲಿಸಿದ. ಪೇಶ್ವೆ ಬ್ರಿಟಿಷರ ಬಳಿಸಹಾಯ ಯಾಚಿಸಿದಾಗ, ಲಾರ್ಡ್‌‌ವೆಲ್ಲೆಸ್ಲಿಗೆ ಮರಾಠರ ಆಂತರಿಕ ವ್ಯವಹಾರದಲ್ಲಿ ಪ್ರವೇಶಿಸಲು ಸದವಕಾಶ ದೊರೆಯಿತು. ಹೀಗೆ ಎರಡನೇ ಮರಠಾ ಯುದ್ಧವು ೧೮೦೩ರಲ್ಲಿ ಆರಂಭವಾಯಿತು. ಪೇಶ್ವೆ ಎರಡನೇ ಬಾಜಿರಾವ್ ಸಹಾಯಕ ಸೈನ್ಯ ಪದ್ಧತಿಗೆ ಒಪ್ಪಿ, ೧೮೦೨ರಲ್ಲಿ ಬಸ್ಸಿನ್ ಒಪ್ಪಂದಕ್ಕೆ ಸಹಿ ಹಾಕಿದ. ಬ್ರಿಟಿಷರು ಭೋಂಸ್ಲೆ ಹಾಗೂ ಸಿಂಧಿಯಾರ ಸೈನ್ಯವನ್ನು ಸೋಲಿಸಿದರು. ಲಾರ್ಡ್‌ವೆಲ್ಲೆಸ್ಲಿಯನ್ನು ಹಿಂದಕ್ಕೆ ಕರೆಸಿಕೊಂಡಿದ್ದರಿಂದ ಆ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಶಾಂತಿ ನೆಲೆಸಿತು.

ಮರಾಠರು ತಮ್ಮ ಘನತೆ ಹಾಗೂ ಸ್ವಾತಂತ್ರ್ಯವನ್ನು ಮರಳಿ ಪಡೆಯಲು ಬಹಳ ಸಾಹಸ ನಡೆಸಿದರು. ಪೇಶ್ವೆಯು ಪೂನಾದ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿದ. ನಾಗಪುರದ ಅಪ್ಪಾ ಸಾಹೇಬ್ ಸಹ ಅಲ್ಲಿನ ಬ್ರಿಟಿಷ್ ರೆಸಿಡೆನ್ಸಿಯ ಮಳೆ ದಾಳಿ ನಡೆಸಿದ. ಮಧವರಾವ್ ಹೋಳ್ಕರ್ ಯುದ್ಧಕ್ಕೆ ಸಿದ್ಧತೆ ನಡೆಸಿದ. ಮೂರನೇ ಆಂಗ್ಲೋ-ಮರಾಠ ಯುದ್ಧವೆಂದು ಹೆಸರಾದ ಈ ಯುದ್ಧವು ೧೮೧೭ರಿಂದ ೧೮೧೯ರವರೆಗೆ ನಡೆಯಿತು.

ಲಾರ್ಡ್‌ ಹೇಸ್ಟಿಂಗ್ಸ್‌ನು ಬ್ರಿಟಿಷರ ಚಕ್ರವರ್ತಿ ಪದವನ್ನು ಒಪ್ಪಿಕೊಳ್ಳುವಂತೆ ಸಿಂಧಿಯಾನನ್ನು ಒತ್ತಾಯಿಸಿ, ಪೇಶ್ವೆ, ಭೋಂಸ್ಲೆ ಹಾಗೂ ಹೋಳ್ಕರ್‌ರವರ ಸೈನ್ಯಗಳನ್ನು ಸೋಲಿಸಿದ. ಪೇಶ್ವೆಯನ್ನು ಸಿಂಹಾಸನದಿಂದ ಕೆಳಗಿಳಿಸಿ, ನಿವೃತ್ತಿ ವೇತನ ನೀಡಲಾಯಿತು. ಅವನ ಪ್ರದೇಶಗಳನ್ನು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸಿಕೊಳ್ಳಲಾಯಿತು. ಹೋಳ್ಕರ್ ಹಾಗೂ ಭೋಂಸ್ಲೆ ಸಹಾಯಕ ಸೈನ್ಯಪದ್ಧತಿಗೆ ಸಮ್ಮತಿ ಸೂಚಿಸಿದರು. ಮರಾಠರ ಪ್ರತಿಷ್ಠೆಗೆ ಧಕ್ಕೆಯಾಗದಿರಲೆಂದು, ಪೇಶ್ವೆಯ ಆಡಳಿತ ವ್ಯಾಪ್ತಿಯ ಹೊರಗೆ ಸತಾರಾ ಎಂಬ ಸಣ್ಣ ರಾಜ್ಯವನ್ನು ಛತ್ರಪತಿ ಶಿವಾಜಿಯ ವಂಶಸ್ಥರಿಗೆ ನೀಡಲಾಯಿತು. ಅದು ಸಂಪೂರ್ಣವಾಗಿ ಬ್ರಿಟಿಷರ ಮೇಲೆ ಅವಲಂಬಿತವಾದ ರಾಜ್ಯವಾಗಿತ್ತು. ಇತರ  ಭಾರತೀಯ ರಾಜರಂತ, ಮರಾಠಾ ನಾಯಕರೂ ಸಹ ಆಗಿನಿಂದ ಬ್ರಿಟಿಷರ ಕೃಪಾಶ್ರಯದಲ್ಲಿ ಬದುಕಬೇಕಾಯಿತು.

ಲಾರ್ಡ್‌ ವೆಲ್ಲೆಸ್ಲಿಯು ಸಹಾಯಕ ಸೈನ್ಯ ಪದ್ಧತಿಯನ್ನು ಬ್ರಿಟಿಷರ ಅಧಿಪತ್ಯ ಹೆಚ್ಚು ವಿಸ್ತಾರವಾಗಲೆಂಬ ಉದ್ದೇಶದಿಂದ ಭಾರತದಲ್ಲಿ ಆರಂಭಿಸಿದ. ಈ ಪದ್ಧತಿಯಂತೆ ಇದಕ್ಕೆ ಒಪ್ಪುವ ಭಾರತದ ರಾಜ್ಯವು ತನ್ನ ಪ್ರದೇಶದೊಳಗೆ ಶಾಶ್ವತವಾಗಿ ಬ್ರಿಟಿಷ್ ಸೇನೆಗೆ ಇರಲು ಅವಕಾಶ ನೀಡಬೇಕಿತ್ತು ಹಾಗೂ ಅದರ ವೆಚ್ಚವನ್ನು ಭರಿಸಬೇಕಿತ್ತು. ನಿಜವಾದ ಅರ್ಥದಲ್ಲಿ ಈ ಪದ್ಧತಿಗೆ ಸಹಿ ಹಾಕಿದವರು ತಮ್ಮ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳವಂತಾಗುತ್ತಿತ್ತು. ಅದಕ್ಕೆ ಸ್ವರಕ್ಷಣೆ, ರಾಜತಾಂತ್ರಿಕ ಸಂಬಂಧಗಳು, ನೆರೆಹೊರೆಯವರೊಂದಿಗೆ ವಿವಾದಗಳನ್ನು ಬಗೆಹರಿಸಿಕೊಳ್ಳುವ ಇತ್ಯಾದಿ ಯಾವ ಹಕ್ಕುಗಳೂ ಇಲ್ಲದಂತಾಗುತ್ತಿದ್ದವು. ಬ್ರಿಟಿಷರು ದೈನಂದಿನ ವ್ಯವಹಾರಗಳಲ್ಲಿ, ಆಸ್ಥಾನದ ಕಾರ್ಯಕಲಾಪಗಳಲ್ಲಿ ಮೂಗು ತೂರಿಸುತ್ತಿದ್ದರು. ಜೊತೆಗೆ ಭಾರತೀಯ ರಾಜರಿಗೆ ರಾಜಕೀಯ ವಿಷಯಗಳನ್ನು ಬಗೆಹರಿಸುವ ಸ್ವಾತಂತ್ರ್ಯವೇ ಕಳೆದು ಹೋಯಿತು. ಸಹಾಯಕ ಸೈನ್ಯಕ್ಕೆ ಆಗುತ್ತಿದ್ದ ವೆಚ್ಚವನ್ನು ಭಾರತದ ರಾಜರುಗಳಿಗೆ ಭರಿಸಲು ಸಾಧ್ಯವೇ ಇರಲಿಲ್ಲ. ವಾಸ್ತವವಾಗಿ ಬ್ರಿಟಿಷರು ತಮ್ಮ ದೊಡ್ಡ ಸೈನ್ಯವನ್ನು ಭಾರತದ ವೆಚ್ಚದಲ್ಲಿ ನಿರ್ವಹಿಸುವ ಸಂಚು ಇದಾಗಿತ್ತು.

೧೭೯೮ರಲ್ಲಿ ಲಾರ್ಡ್‌ವೆಲ್ಲೆಸ್ಲಿಯು ಹೈದರಾಬಾದಿನ ನಿಜಾಮನೊಂದಿಗೆ ಮೊದಲ ಸಹಾಯಕ ಸೈನ್ಯಪದ್ದತಿಯ ಒಪ್ಪಂದವನ್ನು ಮಾಡಿಕೊಂಡ ನಿಜಾಮನು ಫ್ರೆಂಚರಿಂದ ತರಬೇತಿ ಪಡೆದ ಸೈನ್ಯವನ್ನು ರದ್ದುಪಡಿಸಿ, ಆರು ಬೆಟಾಲಿಯನ್‌ಗಳ ಸಹಾಯಕ ಸೈನ್ಯವನ್ನು ತನ್ನ ಖರ್ಚಿನಲ್ಲಿ ನೋಡಿಕೊಳ್ಳಬೇಕಿತ್ತು. ಇದಕ್ಕೆ ಪ್ರತಿಯಾಗಿ ಬ್ರಿಟಿಷರು ಅವನ ರಾಜ್ಯವನ್ನು  ಮರಾಠರ ಆಕ್ರಮಣದಿಂದ ರಕ್ಷಿಸುವ  ಭರವಸೆ ನೀಡಿದರು. ಔಧ್‌ನ ನವಾಬನನ್ನು ೧೮೦೧ರಲ್ಲಿ ಒಪ್ಪಂದಕ್ಕೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು. ಅವನು ತನ್ನ ಅರ್ಧರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಿದ. ಬ್ರಿಟಿಷರು ಇಷ್ಟಕ್ಕೇ ತೃಪ್ತರಾಗಲಿಲ್ಲ. ಕೊನೆಗೆ ಲಾರ್ಡ್‌ಡಾಲ್ ಹೌಸಿಯು ಉಳಿದ ಪ್ರಾಂತ್ಯವನ್ನು ಬ್ರಿಟಿಷರಿಗೆ ಸೇರಿಸಿಕೊಂಡ. ಇದಕ್ಕೆ ಅವರು ನವಾಬ್‌ವಾಜಿದ್ ಅಲಿಷಾಹನು ರಾಜ್ಯವನ್ನು ಸರಿಯಾಗಿ ನಿರ್ವಹಿಸದೆ, ಸುಧಾರಣೆಗಳನ್ನು ತರಲು ತಿರಸ್ಕರಿಸಿದ್ದರಿಂದ ಹೀಗೆ ಮಾಡಬೇಕಾಯಿತೆಂದು ಕಾರಣ ನೀಡಿದರು.

ಯೂರೋಪಿನಲ್ಲಿದ್ದ ಆಂಗ್ಲೋ-ರಷ್ಯನ್ ಹಗೆತನದ ಕಾರಣದಿಂದ ಬ್ರಿಟಿಷರು ಸಿಂಧ್ ಅನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಯೋಚಿಸಿದರು. ಆಫ್ಘನಿಸ್ತಾನ ಹಾಗೂ ಪರ್ಶಿಯಾದಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಂಡು ಅದರ ಮೂಲಕ ರಷ್ಯನ್ನಯರು ಭಾರತದ ಮೇಲೆ ಆಕ್ರಮಣ ಮಾಡುವುದನ್ನು ತಡೆಯಲು, ಬ್ರಿಟಿಷರು ಸಿಂಧ್ ಅನ್ನು ೧೮೩೯ರಲ್ಲಿ  ಸಹಾಯಕ ಸೈನ್ಯಪದ್ಧತಿಯ ಒಪ್ಪಂದದಡಿ ತಂದರು. ೧೮೪೩ರಲ್ಲಿ ಅದನ್ನು ತಮ್ಮ ಸ್ವಾಧೀನಕ್ಕೆ ತಂದುಕೊಂಡರು.

೧೮೩೯ರಲ್ಲಿ ರಣಜಿತ್‌ಸಿಂಗ್‌ನ ಮರಣದ ನಂತರ ಪಂಜಾಬ್‌ನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ೧೮೦೯ರಲ್ಲಿ ಬ್ರಿಟಿಷರು ಹಾಗೂ ರಣಜಿತ್‌ಸಿಂಗ್‌ರ ನಡುವೆ ಸ್ನೇಹದ ಒಪ್ಪಂದವಾಗಿದ್ದರೂ, ಬ್ರಿಟಿಷರು ಪಂಜಾಬನ್ನು ತಮ್ಮ ಸ್ವಾಧೀನಕ್ಕೆ ತಂದುಕೊಳ್ಳುವ ಪ್ರಯತ್ನ ನಡೆಸಿದರು. ೧೮೪೫ರಲ್ಲಿ ಯುದ್ದ ಆರಂಭವಾಯಿತು. ಪಂಜಾಬ್ ಸೈನ್ಯವು ತುಂಬಾ ಧೈರ್ಯದಿಂದ ಹೋರಾಡಿದರೂ, ಕೆಲವು ನಾಯಕರ ಒಳಸಂಚಿನಿಂದ ೧೮೪೬ರಲ್ಲಿ ಅದು ಸೋಲೊಪ್ಪಬೇಕಾಯಿತು. ಕೊನೆಗೆ ಲಾರ್ಡ್‌ಡಾಲ್‌ಹೌಸಿಯು ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದ ವಶಕ್ಕೆ ತೆಗೆದುಕೊಂಡ.

ಲಾರ್ಡ್‌‌ಡಾಲ್‌ಹೌಸಿಯು ಭಾರತದ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಮುಂದುವರೆಸಿದ. ಇದರೊಂದಿಗೆ ಅವನು ಹೊಸ ನೀತಿಯೊಂದನ್ನು ಜಾರಿಗೆ ತಂದ. ಈ ನೀತಿಯ ಪ್ರಕಾರ ಬ್ರಿಟಿಷರ ರಕ್ಷಣೆಯಲ್ಲಿರುವ ರಾಜ್ಯದ ರಾಜನೊಬ್ಬ ಸ್ವಾಭಾವಿಕ ಉತ್ತರಾಧಿಕಾರಿಯಿಲ್ಲದೆ ಮರಣ ಹೊಂದಿದರೆ, ಆ ರಾಜ್ಯವು ಪರಂಪರೆಯಂತೆ ದತ್ತು ಪುತ್ರನಿಗೆ ಸೇರುವಂತಿರಲಿಲ್ಲ. ಈ ನೀತಿಯನ್ನು ಬಳಸಿಕೊಂಡು ಡಾಲ್ ಹೌಸಿಯು ೧೮೪೮ರಲ್ಲಿ ಸತಾರಾವನ್ನು ಹಾಗೂ ೧೮೫೪ರಲ್ಲಿ ಝಾನ್ಸಿ ಹಾಗೂ ನಾಗಪುರಗಳನ್ನು ವಶಪಡಿಸಿಕೊಂಡ. ಅವನು ಇಲ್ಲಿಯ ಮಾಡಿ ಅರಸರಿಗೆ ಬಿರುದುಗಳನ್ನು ನೀಡುವುದು, ಅವರಿಗೆ ವಿಶ್ರಾಂತಿ ವೇತನ ಇತ್ಯಾದಿಗಳನ್ನು ನೀಡುವುದನ್ನು ವಿರೋಧಿಸಿದ. ಹೀಗೆ ಕರ್ನಾಟಕದ ನವಾಬರು, ಸೂರತ್ ಹಾಗೂ ತಂಜಾವೂರಿನ ರಾಜರ ಬಿರುದುಗಳು ಇಲ್ಲವಾದವು. ಇದೇ ಕಾರಣಕ್ಕಾಗಿ ಪೇಶ್ವೆ ಎರಡನೇ ಬಾಜಿರಾವ್‌ನ ಮರಣದ ನಂತರ ಅವನ ದತ್ತುಪುತ್ರನಿಗೆ ವಿಶ್ರಾಂತಿ ವೇತನ ನೀಡಿಲು ತಿರಸ್ಕರಿಸಿದ.

೧೮೫೭ರ ವೇಳೆಗೆ ಇಡೀ ಭಾರತ ಉಪಖಂಡವು ಬ್ರಿಟಿಷರ ಅಂಕುಶದಲ್ಲಿತ್ತು. ಕೆಲವು ಪ್ರದೇಶಗಳನ್ನು ಬ್ರಿಟಿಷರೇ ನೇರವಾಗಿ ಆಳಿದರೆ, ಉಳಿದ ಪ್ರದೇಶಗಳು ಬ್ರಿಟಿಷರ ಹಿಡಿತದಲ್ಲಿದ್ದ ಭಾರತೀಯ ರಾಜರ ಮೂಲಕ ಆಳಲ್ಪಡುತ್ತಿದ್ದವು. ಈ ರಾಜ್ಯಗಳಿಗೆ ತಮ್ಮದೇ  ಆದ ಸೈನ್ಯವೂ ಇರಲಿಲ್ಲ ಮತ್ತು ಸ್ವತಂತ್ರವಾಗಿ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸುವ ಅವಕಾಶವೂ ಇರಲಿಲ್ಲ.

ಪರಾಮರ್ಶನಗ್ರಂಥಗಳು

೧. ಎರಿಕದ ಸ್ಟ್ರೋಕ್ಸ್, ೧೯೭೮. ಪೆಸೆಂಟ್ ಆಂಡ್ ದಿ ರಾಜ್, ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್.

೨. ರಣಜಿತ್ ಗುಹಾ, ೧೯೭೯. ಎಲಿಮಂಟರಿ ಆಸ್‌ಪೆಕ್ಟ್ ಆಫ್ ಪೆಸೆಂಟ್ ಇನ್ಸರ್ಜೆನ್ಸಿ ಇನ್ ಕಲೋನಿಯಲ್ ಇಂಡಿಯಾ, ಡೆಲ್ಲಿ.