ಪ್ರಾಚೀನ ಕಾಲದಿಂದಲೂ ಭಾರತದ ಬಂದರುಗಳು ಸಾಂಬಾರು ಪದಾರ್ಥಗಳು, ಮೆಣಸು, ಶುಂಠಿ ಇತ್ಯಾದಿ ವಸ್ತುಗಳಿಗೆ ಪ್ರಸಿದ್ಧವಾಗಿದ್ದವು. ಈ ವಸ್ತುಗಳನ್ನುಯುರೋಪಿನ ಗ್ರೀಕ್ ಮತ್ತು ರೋಮನ್ ಸಾಮ್ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿತ್ತು. ಮಧ್ಯಕಾಲದಲ್ಲಿ ಯುರೋಪ್, ಭಾರತ ಮತ್ತು ದಕ್ಷಿಣಪೂರ್ವ ಏಷ್ಯಾದ ನಡುವಿನ ವ್ಯಾಪಾರ ವ್ಯವಹಾರಗಳು, ಪರ್ಶಿಯನ್ ಕೊಲ್ಲಿ, ಕೆಂಪು ಸಮುದ್ರ ಮತ್ತು ಏಷ್ಯಾದ ನಾರ್ತ್‌‌ವೆಸ್ಟ್ ಫ್ರಾಂಟಿಯರ್‌ನ ಕಣಿವೆಗಳು. ಹೀಗೆ ಬೇರೆ ಬೇರೆ ಮಾರ್ಗಗಳ ಮೂಲಕ ನಡೆಯುತ್ತಿದ್ದವು. ಏಷ್ಯಾದ ವ್ಯಾಪಾರವು ಅರಬ್ ವ್ಯಾಪಾರಿಗಳಿಂದ ನಡೆಯುತ್ತಿದ್ದರೆ, ಮೆಡಿಟರೇನಿಯನ್ ಹಾಗೂ ಯೂರೋಪಿನ ವ್ಯಾಪಾರವು ಇಟಾಲಿಯನ್ನರ ಏಕಸ್ವಾಮ್ಯಕ್ಕೆ ಒಳಪಟ್ಟಿತ್ತು.

ಯೂರೋಪಿನ ಜನರಿಂದ ಪೂರ್ವದೇಶಗಳ ಸಾಂಬಾರ ಪದಾರ್ಥಗಳಿಗೆ ಯಥೇಚ್ಛ ಬೇಡಿಕೆ ಇದ್ದುದರಿಂದ ಕ್ರಿ.ಶ.೧೫೦೦ರ ಹೊತ್ತಿಗೆ ಈ ವ್ಯಾಪಾರವು ಅತ್ಯಂತ ಲಾಭದಾಯಕವಾಗಿತ್ತು. ಇಟಲಿಯು ತನ್ನ ಸಂಪದ್ಭರಿತ ನಗರಗಳಾದ ವೆನಿಸ್, ಜಿನಿವಾ, ಮಿಲಾನ್, ಫ್ಲಾರೆನ್ಸ್ ಇತ್ಯಾದಿಗಳ ಮೂಲಕ ಭಾರತದ ಸಾಂಬಾರ ಪದಾರ್ಥಗಳನ್ನು ವಿತರಣೆ ಮಾಡುವ ಕೇಂದ್ರವಾಯಿತು. ಪಶ್ಚಿಮ ಯೂರೋಪಿನ ದೇಶಗಳು ಇಟಲಿಯ ಏಕಸ್ವಾಮ್ಯವನ್ನು ಇಲ್ಲವಾಗಿಸಿ ಅಟ್ಲಾಂಟಿಕ್ ಕರಾವಳಿಯ ಮೂಲಕ ಒಂದು ಪರ್ಯಾಯ ವ್ಯಾಪಾರ ಮಾರ್ಗವನ್ನು ಹುಡುಕುವ ಯತ್ನದಲ್ಲಿದ್ದವು.

ಕ್ರಿ.ಶ.೧೫ನೆಯ ಶತಮಾನದ ಉತ್ತರಾರ್ಧದಲ್ಲಿ ಬಲಿಷ್ಠವಾದ ಸಾಮ್ರಾಜ್ಯಗಳು, ಕೇಂದ್ರೀಕೃತ ರಾಜ್ಯಗಳು (ನೇಷನ್ ಸ್ಟೇಟ್ಸ್) ಉದಯವಾಗಿದ್ದರಿಂದ, ಯುರೋಪಿನ ಆರ್ಥಿಕ ಏಕಸ್ವಾಮ್ಯಕ್ಕೆ ಧಕ್ಕೆ ಬಂತು. ಸ್ಟೇನ್, ಪೋರ್ಚುಗಲ್ ದೇಶಗಳು ಹಾಗೂ ಇತರ ರಾಜ್ಯಗಳು ಹೊಸ ಭೂ ಪ್ರದೇಶಗಳನ್ನು ಆವಿಷ್ಕರಿಸುವ ನಾವಿಕರ ಸಾಹಸಕ್ಕೆ ಪ್ರೋತ್ಸಾಹ ನೀಡಿದವು. ಸಮುದ್ರಯಾನ ಕೈಗೊಂಡ ನಾವಿಕರು ಹೊಸ ವೈಜ್ಞಾನಿಕ ಬೆಳವಣಿಗೆಗಳಾದ ದಿಕ್ಸೂಚಿ, ಸಮುದ್ರ ಮಟ್ಟದಿಂದ ಎತ್ತರವನ್ನು ಕಂಡುಹಿಡಿಯುವ ಆಸ್ಟ್ರೋಲೇಬ್, ಗನ್‌ಪೌಡರ್, ಭೂಪಟ ಬರೆಯುವ ಕಲೆ (Cartography) ಇತ್ಯಾದಿಗಳ ಸಹಾಯವನ್ನು ಪಡೆದುಕೊಂಡರು. ಇದರ ಜೊತೆಗೆ ಪೂರ್ವದೇಶಗಳ ಸಂಪತ್ತಿನ ಬಗ್ಗೆ ಮಾರ್ಕೋಪೋಲೋ ಮತ್ತು ಕಾಸ್ಮೋಸ್ ಎಂಬ ಈಜಿಪ್ಟಿನ ವ್ಯಾಪಾರಿ ಮುಂತಾದವರು ಹೇಳುತ್ತಿದ್ದ ಕತೆಗಳು, ಧರ್ಮಪ್ರಚಾರಕ್ಕಾಗಿ ಉತ್ಸಾಹಿತರಾಗಿದ್ದ ಮಿಶನರಿಗಳು – ಇವುಗಳೂ ಸಹ ಸಮುದ್ರಯಾನಕ್ಕೆ ಸ್ಫೂರ್ತಿ ನೀಡಿದವು.

ಇನ್ನೂ ಕೆಲವು ವಿದ್ವಾಂಸರ ಪ್ರಕಾರ ೧೪೫೩ರಲ್ಲಿ ಟರ್ಕಿಯ ರಾಜ ಎರಡನೆಯ ಮಹಮ್ಮದ್‌ನು ಕಾನ್‌ಸ್ಟಾಂಟಿನೋಪಲ್ ಅನ್ನು ವಶಪಡಿಸಿಕೊಂಡಿದ್ದರಿಂದ ಪೌರ್ವಾತ್ಯ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ಮಧ್ಯೆ ಇದ್ದ ಪ್ರಾಚೀನ ವ್ಯಾಪಾರ ಮಾರ್ಗವು ಇಲ್ಲದಂತಾಯಿತು. ಇದರಿಂದ ಯೂರೋಪಿನ ವರ್ತಕರು ಪರ್ಯಾಯ ಮಾರ್ಗದ ಅನ್ವೇಷಣೆಯಲ್ಲಿದ್ದರು. ಆದರೆ ಈ ವಾದವನ್ನು ಬಹಳಷ್ಟು ವಿದ್ವಾಂಸರು ಒಪ್ಪುವುದಿಲ್ಲ ಎಂಬ ಅಭಿಪ್ರಾಯವಿದೆ.

ಭಾರತದಲ್ಲಿ ಪೋರ್ಚುಗೀಸರು

ಅಟ್ಲಾಂಟಿಕ್ ಸಾಗರದ ಮೂಲಕ ಪೂರ್ವದೇಶಗಳಿಗೆ ಬರುವ ಮೊದಲ ಪ್ರಯತ್ನ ಮಾಡಿದ್ದು ಪೋರ್ಚುಗಲ್ ಹಾಗೂ ಸ್ಪೇನ್‌ಗಳು. ೧೪೯೪ರಲ್ಲಿ ಸ್ಪೇನ್‌ನ ಕೊಲಂಬಸ್ ಇಂಡಿಯದ ಕಡೆ ಹೊರಟು ತಲುಪಿದ್ದು ಅಮೇರಿಕಾಕ್ಕೆ. ೧೪೮೬ರಲ್ಲಿ ಬಾರ್ತ್‌ಲೋಮಿಯೋ ಡಯಾಸ್ ತನ್ನ ಯಾನವನ್ನು ಆರಂಭಿಸಿದರೂ ಆಫ್ರಿಕಾದ ತೀರವನ್ನು ದಾಟಿ ಮುಂದೆ  ಹೋಗಲಿಲ್ಲ. ೧೪೯೮ರ ಫೆಬ್ರವರಿ ೨೪ರಂದು ಯಾನ ಆರಂಭಿಸಿದ ವಾಸ್ಕೋಡಿಗಾಮ ತನ್ನ ಎರಡು ಹಡಗುಗಳೊಂದಿಗೆ ಗುಡ್‌ಹೋಪ್ ಭೂಶಿರದ ಮೂಲಕ ಕಲ್ಲಿಕೋಟೆಯನ್ನು ತಲುಪಿದ. ಕಲ್ಲಿಕೋಟೆಯ ಅರಬ್ ವರ್ತಕರ ವಿರೋಧದ ನಡುವೆಯೂ, ತನ್ನ ಸಮುದ್ರಯಾನಕ್ಕೆ ಖರ್ಚಾದ ಹಣದ ೬೦ಪಟ್ಟು ಹೆಚ್ಚು ಮೌಲ್ಯದ  ಭಾರೀ ಸರಕಿನೊಂದಿಗೆ ಹಿಂತಿರುಗಿದ. ಹೀಗೆ ಒಂದು ಶತಮಾನದವರೆಗೆ ಪೋರ್ಚುಗೀಸರು ಪೂರ್ವ ದೇಶಗಳ ವ್ಯಾಪಾರದ ಮೇಲೆ ತಮ್ಮ ಏಕೈಕ ಹಿಡಿತವನ್ನು ಸಾಧಿಸಿದ್ದರು.

ಕಲ್ಲಿಕೋಟೆಯಲ್ಲಿ ಪೋರ್ಚುಗೀಸರು ಕ್ರಿ.ಶ.೧೫೦೦ರಲ್ಲಿ ಮೊದಲ ಕಾರ್ಖಾನೆಯನ್ನು ಸ್ಥಾಪಿಸಿದರು. ಹಾಗೆಯೇ ಭಾರತದ ಪಶ್ಚಿಮ ಕರಾವಳಿಯ ಪ್ರದೇಶಗಳಾದ ಕೊಚ್ಚಿನ್,  ಕಣ್ಣಾನೂರು, ಕ್ವಿಲಾನ್, ಮಂಗಳೂರು, ಹೊನ್ನಾವರ, ಭಟ್ಕಳ, ಗೋವಾ, ಡಿಯು, ಬಸ್ಸಿನ್, ಸೂರತ್ ಮತ್ತು ಡಾಮನ್‌ಗಳಲ್ಲೂ ಸಹ ಕಾರ್ಖಾನೆಗಳನ್ನು ಆರಂಭಿಸಿದರು. ನಂತರ ಮೊಗಲರ ಅನುಮತಿ  ಪಡೆದು ಪೂರ್ವ  ಕರಾವಳಿಯ ಚಿತ್ತಗಾಂಗ್, ಸತ್‌ಗಾಂವ್ ಮತ್ತು ಹೂಗ್ಲಿಗಳಲ್ಲೂ  ಕಾರ್ಖಾನೆಗಳನ್ನು ಸ್ಥಾಪಿಸಿದರು.

ಪೋರ್ಚುಗೀಸರು ಮೆಣಸು, ಶುಂಠಿ, ದಾಲ್ಚಿನ್ನಿ, ಏಲಕ್ಕಿ, ಶ್ರೀಗಂಧ, ಮಸ್ಲಿನ್ ಪದಾರ್ಥಗಳಲ್ಲಿದೆ. ಆನೆ ಮುಂತಾದ ಪ್ರಾಣಿಗಳನ್ನು ಆಮದು ಮಾಡಕೊಳ್ಳುತ್ತಿದ್ದರು. ಇವಕ್ಕೆ ಪ್ರತಿಯಾಗಿ ಕೊಡಲು ಅವರಲ್ಲಿ ಏನೂ ಇಲ್ಲದ್ದರಿಂದ ಚಿನ್ನ -ಬೆಳ್ಳಿಯ ಗಟ್ಟಿಗಳನ್ನು ವ್ಯಾಪಾರಕ್ಕಾಗಿ ತರುತ್ತಿದ್ದರು.

ಮೊದಲಿನಿಂದಲೂ ಪೋರ್ಚುಗೀಸರ ಭಾರತದ ವ್ಯಾಪಾರದ ಮೇಲೆ ತಮ್ಮ ಏಕಸ್ವಾಮ್ಯವನ್ನು ಸಾಧಿಸಲು ಪ್ರಯತ್ನಿಸಿದರು. ಬೇರೆ ವ್ಯಾಪಾರಿಗಳು ಇಲ್ಲಿಗೆ ವ್ಯಾಪಾರಕ್ಕೆ ಬರದಂತೆ ತಡೆಯಲು ಭಾರತದ ರಾಜರನ್ನು ಅವರು ಒತ್ತಾಯಿಸಿದರು. ಕಲ್ಲಿಕೋಟೆಯ ಜಾಮೋರಿನ್‌ನಂಥ ರಾಜರು ಇಂಥ ಒತ್ತಾಯಗಳಿಗೆ ಮಣಿಯಲಿಲ್ಲ. ಆಗ ಅರೇಬಿಯನ್ ಸಮುದ್ರ ಹಾಗೂ ಭಾರತದ ಸಮುದ್ರದ ಮೇಲೆ ಸಾಗುವ ಎಲ್ಲ ವ್ಯಾಪಾರ ನೌಕೆಗಳ ಮೇಲೆ ಯುದ್ಧ ಸಾರಿದರು. ಹಡಗುಗಳ ಮೇಲೆ ಆಕ್ರಮಣವಾಗದಂತೆ ನೋಡಿಕೊಳ್ಳಬೇಕಾದರೆ ಪೋರ್ಚುಗಲ್ ಅಧಿಕಾರಿಗಳಿಂದ ಪಡೆದ “ಕರ್ತಾಜ್” ಅಥವಾ ಪಾಸುಗಳನ್ನು ಪಡೆಯಬೇಕಿತ್ತು. ಇಂಥ ಪಾಸುಗಳನ್ನು ಪಡೆಯುವಾಗ ಭಾರತದ ವರ್ತಕರು ಮುಖ್ಯ ಸಾಂಬಾರು ಪದಾರ್ಥಗಳಾದ ಮೆಣಸು, ಶುಂಠಿ ಇತ್ಯಾದಿಗಳನ್ನು ಹಡಗಿನಲ್ಲಿ  ಸಾಗಿಸುವಂತಿರಲಿಲ್ಲ. ಅಕ್ಬರನಂಥ ಚಕ್ರವರ್ತಿಗಳು, ಬಿಜಾಪುರದ ಆದಿಲ್‌ಶಾಹಿಗಳು ಮತ್ತು ಕಲ್ಲಿಕೋಟೆಯ ಜಾಮೊರಿನ್ -ಎಲ್ಲರೂ ಸಹ ಈ ಪಾಸುಗಳನ್ನು ಕೊಂಡಿದ್ದರು. ಹೀಗೆ ಪೋರ್ಚುಗೀಸರು ಆಯಕಟ್ಟಿನ ಜಾಗಗಳಲ್ಲಿ ಕೋಟೆಗಳನ್ನು ಕಟ್ಟುವ ಮೂಲಕ, ಪಾಸುಗಳನ್ನು ಮಾರುವ ಮೂಲಕ ಹಾಗೂ ಶತ್ರು ನೌಕೆಗಳ ಮೇಲೆ ಆಕ್ರಮಣ ಮಾಡುವ ಮೂಲಕ ಏಷ್ಯಾದಲ್ಲಿ ತಮ್ಮ ಏಕಸ್ವಾಮ್ಯವನ್ನು ಸ್ಥಾಪಿಸಿದರು.

ಆದರೆ ಪೋರ್ಚುಗೀಸರಿಗೆ ಬಹಳ ಕಾಲದವರೆಗೆ ಈ ಏಕಸ್ವಾಮ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪೋರ್ಚುಗಲ್‌ನ ವರ್ತಕರಿಗೆ ಭೂಮಾಲೀಕ ಶ್ರೀಮಂತ ವರ್ಗಕ್ಕಿಂತ ಹೆಚ್ಚಿನ ಘನತೆ ಮತ್ತು ಅಧಿಕಾರಿಗಳು ಇರಲಿಲ್ಲ. ಮೇಲಾಗಿ ಅವರು ಧಾರ್ಮಿಕ ಅಸಹಿಷ್ಣುತೆಯ ನೀತಿಯನ್ನು ಅನುಸರಿಸಿದ್ದಲ್ಲದೆ, ಬಲವಂತವಾದ ಮತಾಂತರಗಳಲ್ಲಿ ತೊಡಗಿದ್ದರು. ೧೬ನೆಯ ಶತಮಾನದ ಕೊನೆಯ ಭಾಗದಲ್ಲಿ ಇಂಗ್ಲೆಂಡ್, ಹಾಲೆಂಡ್ ಮತ್ತು ಫ್ರಾನ್ಸ್‌ಗಳು ಸ್ಪೇನ್ ಹಾಗೂ ಪೋರ್ಚುಗಲ್‌ನ ವಿಶ್ವವ್ಯಾಪಾರದ ಏಕಸ್ವಾಮ್ಯದ ವಿರುದ್ಧ ಭೀಕರ ಯುದ್ಧ ಆರಂಭಿಸಿದವು. ೧೫೮೦ರ ವೇಳೆಗೆ ಪೋರ್ಚುಗಲ್ ಸ್ಪೇನ್‌ನ ಅಧೀನದಲ್ಲಿತ್ತು. ೧೫೮೮ರಲ್ಲಿ ಇಂಗ್ಲೀಷರು ಸ್ಪೇನಿನ ನೌಕಾಪಡೆ ಆರ್ಮಡಾವನ್ನು ಸೋಲಿಸಿ, ಸ್ಪೇನಿನ ನೌಕಾಸ್ವಾಮ್ಯವನ್ನು ಸಂಪೂರ್ಣವಾಗಿ ಇಲ್ಲವಾಗಿಸಿದರು. ಇದರಿಂದ ಇಂಗ್ಲಿಷ್ ಹಾಗೂ ಡಚ್ ವರ್ತಕರು ಗುಡ್‌ಹೋಪ್ ಭೂಶಿರದ ಮಾರ್ಗವಾಗಿ ಪೌರ್ವಾತ್ಯ ದೇಶಗಳೊಂದಿಗೆ ವ್ಯಾಪಾರ ಆರಂಭಿಸಲು ಸಾಧ್ಯವಾಯಿತು.

೧೬ ಹಾಗೂ ೧೭ ನೆಯ ಶತಮಾನಗಳಲ್ಲಿ ಆದ ವ್ಯಾಪಾರಕ್ರಾಂತಿಯು ಯೂರೋಪಿನ ಮಾರುಕಟ್ಟೆಯನ್ನು ಭಾರೀ ಪ್ರಮಾಣದಲ್ಲಿ ವಿಸ್ತರಿಸಿದ್ದಲ್ಲದೆ ಹಣ ಆಧಾರಿತ ಆರ್ಥಿಕತೆಯನ್ನು ಜಾರಿಗೆ ತಂದಿತು. ೧೫ನೆಯ ಶತಮಾನದವರೆಗೆ ವರ್ತಕರು ಒಬ್ಬೊಬ್ಬನೇ ವ್ಯಾಪಾರ  ನಡೆಸುತ್ತಿದ್ದರು. ಆದರೆ ದೊಡ್ಡ ವ್ಯಾಪಾರ ವಹಿವಾಟು ನಡೆಸಲು ಬಹಳ ಬಂಡವಾಳ ಬೇಕಾಗಿದ್ದರಿಂದ, ರೆಗ್ಯುಲೇಟೆಡ್ ಕಂಪನಿಗಳು, ಜಾಯಿಂಟ್ ಸ್ಟಾಕ್ ಕಂಪನಿಗಳು ನಂತರ ಚಾರ್ಟರ್ಡ್‌ಕಂಪನಿಗಳು ಆರಂಭವಾದವು. ಇವುಗಳನ್ನು ಸರ್ಕಾರವೇ ಅಧಿಕೃತವಾಗಿ ಆರಂಭಿಸಬೇಕಿತ್ತು. ಪೂರ್ವದೇಶಗಳ ವ್ಯಾಪಾರವನ್ನು ತಮ್ಮ ವಶದಲ್ಲಿಟ್ಟುಕೊಳ್ಳಲು ಹಲವಾರು ಕಂಪನಿಗಳನ್ನು ಆರಂಭಿಸಲಾಯಿತು. ಅವುಗಳೆಂದರೆ, ದಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ (೧೬೦೦), ದಿ ಡಚ್ ಈಸ್ಟ್ ಇಂಡಿಯಾ ಕಂಪನಿ (೧೬೧೨) ಮತ್ತು ದಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ (೧೬೬೪).

೧೭ನೆಯ ಶತಮಾನದಲ್ಲಿ ಯೂರೋಪ್ “ಮರ್ಕಂಟೈಲಿಸಂ” ಎಂಬ ವ್ಯಾಪಾರ ತತ್ವದ ಆಧಾರದ ಮೇಲೆ ವ್ಯಾಪಾರ ನಡೆಸುತ್ತಿತ್ತು. ಇದರ ಪ್ರಕಾರ ಚಿನ್ನ-ಬೆಳ್ಳಿಯ ಗಟ್ಟಿಗಳನ್ನು ದೇಶದ ಆರ್ಥಿಕ ಶಕ್ತಿಯ ದ್ಯೋತಕವಾಗಿ ಪರಿಗಣಿಸಲಾಗುತ್ತಿತ್ತು. ಈ ಲೋಹಗಳನ್ನು ಸಂಗ್ರಹಿಸಲು ಸರ್ಕಾರ ರಫ್ತನ್ನು ಹೆಚ್ಚಿಸಿ ಆಮದನ್ನು ಕಡಿತಗೊಳಿಸಬೇಕಿತ್ತು. ಜೊತೆಗೆ ವಸಾಹತುಗಳನ್ನು ತಮ್ಮ ರಫ್ತು ಉತ್ಪನ್ನಗಳಿಗೆ ಮಾರುಕಟ್ಟೆಯಾಗಿಸಿ, ಅಲ್ಲಿಂದಲೂ ಸಾಧ್ಯವಾದಷ್ಟು ಅಮೂಲ್ಯ ಲೋಹಗಳನ್ನು ಆಮದು, ಮಾಡಿಕೊಳ್ಳುವ ಹವಣಿಕೆ ಯೂರೋಪಿನದಾಗಿತ್ತು. ವ್ಯಾಪಾರ ವಹಿವಾಟಿನ ಪ್ರತಿಸ್ಪರ್ಧಿಗಳನ್ನು ಸೋಲಿಸಲು ಹಾಗೂ ತನ್ನ ವಸಾಹತುಗಳನ್ನು ರಕ್ಷಿಸಲು ಅದು ಯುದ್ದಕ್ಕೂ ಸಿದ್ಧವಾಗಿತ್ತು.

ವ್ಯಾಪಾರ ತತ್ವದ ವಿಚಾರಗಳು ೧೬೦೦ ಮತ್ತು ೧೭೦೦ರ ಅವಧಿಯಲ್ಲಿ ಬಹಳಷ್ಟು ಪ್ರಭಾವಶಾಲಿಯಾಗಿದ್ದವು. ಕ್ರಮೇಣ ಚಿನ್ನ-ಬೆಳ್ಳಿಗಳು ದೇಶವನ್ನು ಶ್ರೀಮಂತವಾಗಿಸಲಾರವೆಂಬ ಸತ್ಯ ಅರಿವಿಗೆ ಬಂತು. ಉದಾಹರಣೆಗೆ ಸ್ಟೇನ್‌ನಲ್ಲಿ ಇಂಥ ಲೋಹಗಳನ್ನು ಅಮೆರಿಕದ ವಸಾಹತುಗಳಿಂದ ಸಂಗ್ರಹಿಸಿದ್ದರೂ ಅವು ಬಹಳ ಕಾಲ ಉಳಿಯಲಿಲ್ಲ. ಇವುಗಳಿಂದ ಸ್ಟೇನಿನ ಜನ ಇಂಗ್ಲೆಂಡ್, ಹಾಲೆಂಡ್‌ಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯಕಾರಿಯಾಗಿದ್ದ ವ್ಯವಸಾಯದ ಹಾಗೂ ಕೈಗಾರಿಕೆಯ ಸಾಧನಗಳನ್ನು ಕೊಂಡರು. ಯೂರೋಪ್‌ನಲ್ಲಿ ಎಲ್ಲ ವಸ್ತುಗಳ ಬೆಲೆ ಏರಿತು. ಬೆಲೆ ಏರಿಕೆ, ಆರ್ಥಿಕ ಸ್ಥಿತಿಯ ಸ್ಥಗಿತತೆ, ಧಾರ್ಮಿಕ ಯುದ್ಧಗಳು, ಜನಸಂಖ್ಯೆಯ ಇಳಿಕೆ ಇತ್ಯಾದಿ ಕಾರಣಗಳಿಂದ ಪೋರ್ಚುಗಲ್, ಸ್ಟೇನ್, ಇಟಲಿ ಹಾಗೂ ಯೂರೋಪಿನ ಬಹುಭಾಗಗಳು ೧೭ನೆಯ ಶತಮಾನದ ಆದಿಭಾಗದಲ್ಲಿ ಒಂದು ಬಗೆಯ ಸಂಕಷ್ಟಕ್ಕೆ ಒಳಗಾದವು. ಆದರೆ ಈ ಸಂಕಷ್ಟವು ಯೂರೋಪಿನ ಎಲ್ಲ ಕಡೆ ವ್ಯಾಪಿಸಲಿಲ್ಲ. ಡಚ್ಚರು ಹಾಗೂ ಇಂಗ್ಲಿಷರು ಈ ಸಂಕಷ್ಟದ ಸ್ಥಿತಿಯನ್ನು ಮೀರಿ ಆರ್ಥಿಕ ಸ್ಥಿತಿಯನ್ನು  ಸುಧಾರಿಸಿದರು. ಫ್ರಾನ್ಸ್ ಸಹ ತನ್ನ ವ್ಯಾಪಾರ ತತ್ವದ ಸಹಾಯದಿಂದ ಈ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಿತು. ಕ್ರಿ.ಶ.೧೭೦೦ರ ವೇಳೆಗೆ ಹಾಲೆಂಡ್, ಫ್ರಾನ್ಸ್ ಮತ್ತು ಇಂಗ್ಲೆಂಡ್‌ಗಳು ಯುರೋಪಿನ ಪ್ರಮುಖ ಶಕ್ತಿಗಳಾಗಿದ್ದವು. ಆದರೆ ೧೮ನೆಯ ಶತಮಾನದಲ್ಲಿ  ಇವೆಲ್ಲವೂ ಪರಸ್ಪರ ವಿರೋಧೀ ವಸಾಹತುಶಕ್ತಿಗಳಾಗಿ ಬೆಳೆದವು. ಬ್ರಿಟನ್ ತನ್ನ ಕೈಗಾರಕಾಕ್ರಾಂತಿಯ ಬಲದಿಂದ ೧೮ನೆಯ ಶತಮಾನದಲ್ಲಿ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಉದಯವಾಯಿತು.

ಭಾರತದಲ್ಲಿ ಡಚ್ಚರು

ತಮ್ಮ ವ್ಯಾಪಾರವನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ೧೬೦೨ರಲ್ಲಿ ಡಚ್ಚರು ಡಚ್ ಈಸ್ಟ್‌ಇಂಡಿಯಾ ಕಂಪನಿಯನ್ನು ಸ್ಥಾಪಿಸಿದರು. ಅವರು ತಮ್ಮ ಮೊದಲ ಕಾರ್ಖಾನೆಗಳನ್ನು ಕ್ರಿ.ಶ. ೧೬೦೬ರಲ್ಲಿ ಮಚಲಿಪಟ್ನಂ ಹಾಗೂ ಉತ್ತರ ಕೋರಮಂಡಲ್‌ನ ಪೇಟಪುಲಿಯಲ್ಲಿ ಸ್ಥಾಪಿಸಿದರು. ಆಗ ಡಚ್ಚರು ಮುಖ್ಯಗುರಿ ಭಾರತವಾಗಿರದೆ, ಹೆಚ್ಚು ಸಾಂಬಾರ ಪದಾರ್ಥಗಳು ದೊರೆಯುತ್ತಿದ್ದ ಇಂಡೋನೇಷ್ಯಾದ ದ್ವೀಪಗಳಾದ ಜಾವಾ, ಸುಮಾತ್ರಾಗಳಾಗಿದ್ದವು. ಆದರೆ ಕ್ರಮೇಣ  ಭಾರತದ ಬಟ್ಟೆಗಳ ಗುಣಮಟ್ಟ ಇಂಡೋನೇಷ್ಯಾಕ್ಕಿಂತ ಒಳ್ಳೆಯದು ಎಂದು ಅರಿವಾದಾಗ, ಅವರು ಪುಲಿಕಾಟ್, ಕ್ಯಾಂಬೆ, ಸೂರತ್, ಆಗ್ರಾ, ಹರಿಹರಪುರ, ಪಾಟ್ನಾ, ಉದಯ್‌ಗಂಜ್, ಚಿನ್ಸುರಾ, ಖಾಸಿಂಬಜಾರ್, ಬರಂಗೋರೆ, ಬಾಲಸೋರ್ ಮತ್ತು ನಾಗಪಟ್ಟಣಂಗಳಲ್ಲಿ ಕಾರ್ಖಾನೆಗಳನ್ನು ಆರಂಭಿಸಿದರು. ೧೬೫೮ರಲ್ಲಿ ಸಿಲೋನ್ ಅನ್ನೂ ಸಹ ಅವರು ಪೋರ್ಚುಗೀಸರಿಂದ ವಶಪಡಿಸಿಕೊಂಡರು.

ಹತ್ತಿಯ ಜೊತೆಗೆ ಇಂಡಿಗೋ(ನೀಲಿ), ಪೆಟ್ಲುಪ್ಪು, ಅಫೀಮು, ಕಚ್ಚಾರೇಷ್ಮೆ ಇತ್ಯಾದಿ ವಸ್ತುಗಳ ಸಹಾಯದಿಂದ ಡಚ್ಚರು ಪೋರ್ಚುಗೀಸರ ಹಿಡಿತದಲ್ಲಿದ್ದ ಏಷ್ಯಾದ ವ್ಯಾಪಾರವನ್ನು ತಮ್ಮ ಕೈವಶಮಾಡಿಕೊಂಡರು. ವ್ಯಾಪಾರದ ಸಮಯದಲ್ಲಿ ಗೋವವನ್ನು ಮುಚ್ಚಿದ್ದಲ್ಲದೆ, ೧೬೪೧ರಲ್ಲಿ ಮಲಕ್ಕಾವನ್ನು, ೧೬೫೫-೫೬ರಲ್ಲಿ ಕೊಲಂಬೋವನ್ನು ಹಾಗೂ ೧೬೫೯-೬೩ರಲ್ಲಿ ಕೊಚ್ಚಿನ್‌ಅನ್ನು ವಶಪಡಿಸಿಕೊಂಡರು. ಇದರಿಂದ ಡಚ್ಚರು, ಪೋರ್ಚುಗೀಸರನ್ನು ಏಷ್ಯಾದಿಂದ ಸಂಪೂರ್ಣವಾಗಿ ನಿರ್ಮೂಲನ ಮಾಡಿದಂತಾಯಿತು. ಇಷ್ಟಲ್ಲದೆ ಇಂಗ್ಲಿಷರನ್ನೂ ಸಹ ಡಚ್ಚರು ದಕ್ಷಿಣ ಪೂರ್ವ ಏಷ್ಯಾದಿಂದ ಹೊರಗಟ್ಟಿದರು. ಡಚ್ಚರು ಹಾಗೂ ಇಂಗ್ಲಿಷರ ನಡುವಿನ ಕಾದಾಟಗಳು ೧೬೫೩-೫೪ರ ನಂತರ ಹೆಚ್ಚಾದವು. ಒಮ್ಮೆ ಸೂರತ್‌ನ ಬಳಿ ಡಚ್ಚರ ಹಡಗುಗಳು ಬಂದಿದ್ದರಿಂದ ಇಂಗ್ಲಿಷರು ತಮ್ಮ ವ್ಯಾಪಾರವನ್ನು ರದ್ದುಗೊಳಿಸಬೇಕಾಯಿತು. ೧೬೭೨-೭೪ರಲ್ಲಿ ಡಚ್ಚರು ಮತ್ತೆ ಸೂರತ್ ಹಾಗೂ ಬಾಂಬೆಗಳಲ್ಲಿ ಇಂಗ್ಲಿಷ್ ವಸಾಹತುಗಳನ್ನು ಸ್ಥಾಪಿಸಿದಂತೆ ತಡೆದರು. ಇದಕ್ಕೆ ಪ್ರತಿಯಾಗಿ ಇಂಗ್ಲಿಷರು ಪೋರ್ಚುಗೀಸರೊಂದಿಗೆ ಸೇರಿ ೧೭೫೯ರಲ್ಲಿ ಡಚ್ಚರನ್ನು ಸೋಲಿಸಿದ್ದರಿಂದ, ಡಚ್ಚರ ಪ್ರಾಬಲ್ಯ ಕಡಿಮೆಯಾಯಿತು. ಕೊನೆಗೆ ಡಚ್ಚರು ೧೭೯೫ರಲ್ಲಿ ತಮ್ಮ ಕೊನೆಯ ನೆಲೆಯನ್ನು ಕಳೆದುಕೊಂಡರು.

ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ

ಇಂಗ್ಲೆಂಡಿನ ರಾಣಿ ೧೬೦೦ರ ಡಿಸೆಂಬರ್ ೩೧ರಂದು ರಾಯಲ್ ಚಾರ್ಟರ್ (ರಾಜ ಶಾಸನ) ಅನ್ನು ಹೊರಡಿಸಿದ್ದರ ಪರಿಣಾಮವಾಗಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಆರಂಭವಾಯಿತು. ಅದು ೧೬೦೮ರಲ್ಲಿ ತನ್ನ ಮೊದಲ ಕಾರ್ಖಾನೆಯನ್ನು ಆರಂಭಿಸಿದ್ದು ಸೂರತ್‌ನಲ್ಲಿ. ಕಂಪನಿಯು ಕ್ಯಾಪ್ಟನ್ ಹಾಕಿನ್ಸ್‌ನನ್ನು ಚಕ್ರವರ್ತಿ ಜಹಾಂಗೀರನ ಆಸ್ಥಾನಕ್ಕೆ ಕೆಲವುವ ಸಹಾಯಗಳನ್ನು ಪಡೆಯಲು ಕಳುಹಿಸಿತು. ಮೊದಲು ಅವರನ್ನು ಸ್ನೇಹದಿಂದ ಬರಮಾಡಿಕೊಳ್ಳಲಾಯಿತಾದರೂ, ಪೊರ್ಚುಗೀಸರ ಸಂಚಿನಿಂದ ಕೊನೆಗೆ ಆಗ್ರಾದಿಂದ ಅವನನ್ನು ಹೊರಗಟ್ಟಿದರು. ಇದರಿಂದ ಇಂಗ್ಲಿಷರು ಮೊಗಲರಿಂದ ಸಹಾಯ ಪಡೆಯಬೇಕಾದರೆ ಪೋರ್ಚುಗೀಸರೊಂದಿಗಿನ ಬಾಂಧವ್ಯ ಅಗತ್ಯವಾದದ್ದು ಎಂಬ ಸತ್ಯವನ್ನು ಅರಿತುಕೊಂಡಿದ್ದರು. ೧೬೧೧ರಲ್ಲಿ ಸೂರತ್‌ನ ಬಳಿ ಪೋರ್ಚುಗೀಸರ ನೌಕಾಪಡೆಯು ಸೋಲನ್ನನುಭವಿಸಿದ್ದರಿಂದ, ಜಹಾಂಗೀರನು ಇಂಗ್ಲಿಷರಿಗೆ ೧೬೧೩ರಲ್ಲಿ ಸೂರತ್‌ನ ಬಳಿ ಒಂದು ಶಾಶ್ವತ ಕಾರ್ಖಾನೆಯನ್ನು ಸ್ಥಾಪಿಸಲು ಅನುಮತಿ ನೀಡಿದ.  ಅವರು ಆಗ್ರಾ, ಅಹಮದಾಬಾದ್, ಭರೂಚ್ ಮತ್ತು ಮಚಲೀಪಟ್ಟಣಂಗಳಲ್ಲಿ ಸಹ ಕಾರ್ಖಾನೆಗಳನ್ನು ಸ್ಥಾಪಿಸಿದ್ದರು.

೧೬೧೫ರಲ್ಲಿ ಸರ್ ಥಾಮಸ್‌ರೋ ಎಂಬ ರಾಯಭಾರಿ ಮೊಗಲರ ಆಸ್ಥಾನಕ್ಕೆ ಭೇಟಿ ನೀಡಿ, ಮೊಗಲ್ ಸಾಮ್ರಾಜ್ಯದ ಎಲ್ಲ ಕಡೆ ಕಾರ್ಖಾನೆಗಳನ್ನು ಆರಂಭಿಸಲು ಹಾಗೂ ವ್ಯಾಪಾರ ನಡೆಸಲು ಅನುವಾಗುವಂತೆ ಫರ್ಮಾನನ್ನು ಪಡೆಯಲು ಯಶಸ್ವಿಯಾದ. ಇಂಗ್ಲಿಷರ ಈ ಯಶಸ್ಸನ್ನು ಕಂಡು ಪೋರ್ಚುಗೀಸರಿಗೆ ಸಿಟ್ಟು ಬಂದಿತು. ೧೬೨೦ ರಲ್ಲಿ ನಡೆದ ಯುದ್ಧದಲ್ಲಿ ಪೋರ್ಚುಗೀಸರ ನೌಕಾಪಡೆಯನ್ನು ಸೋಲಿಸುವುದರೊಂದಿಗೆ ಇಂಗ್ಲಿಷರ ಪ್ರಾಬಲ್ಯಕ್ಕೆ ಸಮರ್ಥನೆ ಸಿಕ್ಕಿದಂತಾಯಿತು. ೧೬೩೩ರಲ್ಲಿ ಮೊಗಲರು ಪೋರ್ಚುಗೀಸರ ರಾಜಕೂಮಾರಿಯ ಮದುವೆಯ ಸಂದರ್ಭದಲ್ಲಿ ವರದಕ್ಷಿಣೆಯ ರೂಪವಾಗಿ ಅವರು ಬಾಂಬೆ ದ್ವೀಪವನ್ನು ಎರಡನೇ ಚಾರ್ಲ್ಸ್‌‌ಗೆ ನೀಡಿದರು. ಕೊನೆಗೆ ಪೋರ್ಚುಗೀಸರು ಗೋವಾ, ಡಿಯು ಮತ್ತು ಡಾಮನ್‌ಗಳ ಹೊರತಾಗಿ ಭಾರತದ ಎಲ್ಲ ನೆಲೆಗಳನ್ನು ಕಳೆದುಕೊಂಡರು. ೧೬೩೯ರಲ್ಲಿ ಅವರು ಸ್ಥಳೀಯ ರಾಜನಿಂದ ಮದ್ರಾಸ್‌ಅನ್ನು ಗುತ್ತಿಗೆಗೆ ಪಡೆದನು. ಆ ರಾಜನು ಇಂಗ್ಲಿಷರಿಗೆ ಈ ಸ್ಥಳದಲ್ಲಿ ಕೋಟೆಯನ್ನು ಭದ್ರಪಡಿಸುವ, ಆಡಳಿತ ನಡೆಸುವ ಹಾಗೂ ನಾಣ್ಯಗಳನ್ನು ತಯಾರಿಸುವ ಅನುಮತಿ ನೀಡಿದ. ಇದಕ್ಕೆ ಪ್ರತಿಯಾಗಿ ಅವರು ಬಂದರಿನಲ್ಲಿ ಸಂಗ್ರಹವಾದ ತೆರಿಗೆಯಲ್ಲಿ ಅರ್ಧವನ್ನು ರಾಜನಿಗೆ ನೀಡಬೇಕಾಗಿತ್ತು. ಇಂಗ್ಲಿಷರು ಅಲ್ಲಿ ಸೇಂಟ್‌ಜಾರ್ಜ್‌ಎಂಬ ಕೋಟೆಯನ್ನು ಕಟ್ಟಿದರು.

ಪೂರ್ವ ಭಾರತದಲ್ಲಿ ಅವರು ಒರಿಸ್ಸಾದ ಬಾಲಸೋರ್ (೧೬೩೩) ಹಾಗೂ ಬಂಗಾಳದ ಹೂಗ್ಲಿಗಳಲ್ಲಿ (೧೬೫೧) ಕಾರ್ಖಾನೆಗಳನ್ನು ಆರಂಭಿಸಿದರು. ಶೀಘ್ರದಲ್ಲಿಯೇ ಅವರು ಒರಿಸ್ಸಾದ ಪಟ್ನಾ ಮತ್ತು ಡಕ್ಕಾ ಹಾಗೂ ಬಂಗಾಳದ ಖಾಸಿಂಬಜಾರ್‌ಗಳಲ್ಲಿ ಸಹ ಕಾರ್ಖಾನೆಗಳನ್ನು ಆರಂಭಿಸಿದರು. ಔರಂಗಜೇಬನ ಅವಧಿಯಲ್ಲಿ ಮೊಗಲರು ಹಾಗೂ ಕಂಪನಿಯ ಸಂಬಂಧಗಳಲ್ಲಿ  ಕೆಲವು ಬದಲಾವಣೆಗಳಾಗುತ್ತದ್ದವು. ಈ ವೇಳೆಗೆ ಇಂಗ್ಲಿಷರು ಮದ್ರಾಸ್ ಹಾಗೂ ಬಾಂಬೆಯ ವಸಾಹತುಗಳ ದೆಸೆಯಿಂದ ಹೆಚ್ಚು ಪ್ರಾಬಲ್ಯಗಳಿಸಿದ್ದರು. ಔರಂಗಜೇಬನು ಮರಾಠರ ವಿರುದ್ಧದ ಆಂದೋಲನದಲ್ಲಿ ಸಕ್ರಿಯವಾಗಿದ್ದ. ಆದ್ದರಿಂದ ಬ್ರಿಟಿಷರು ಬರೀ ಬೇಡಿಕೆಗಳನ್ನು ಸಲ್ಲಿಸುವ ತಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕಾಯಿತು. ತಮ್ಮ ಬಲದ ಸಹಾಯದಿಂದ ಅವರು ಬೆಲೆಗಳನ್ನು ನಿಯಂತ್ರಿಸುವುದಲ್ಲದೆ,  ವ್ಯಾಪಾರದಲ್ಲಿ ಯಾವುದೇ ತೊಂದರೆಗಳಿಲ್ಲದೆ ತೊಡಗಿಸಿಕೊಳ್ಳಬಹುದಾಗಿತ್ತು. ಅವರು ಭಾರತದಲ್ಲಿ ತಮ್ಮ ವ್ಯಾಪಾರಕ್ಕೆ ಮೊಗಲರಿಂದಲೂ ಯಾವ ತಡೆ ಉಂಟಾಗದ, ಭಾರತದ ವಸ್ತುಗಳನ್ನು ಅಗ್ಗದ ಬೆಲೆಯಲ್ಲಿ ಕೊಂಡು ಹೆಚ್ಚಿನ ಬೆಲೆಗೆ ಮಾರುವಂಥ, ತಮ್ಮ ವಿರುದ್ಧ ಇದ್ದ ಬೇರೆ ಯೂರೋಪಿನ ವರ್ತಕರನ್ನು  ಬದಿಗೊತ್ತುವಂಥ ಮತ್ತು ತಮ್ಮ ವ್ಯಾಪಾರಕ್ಕೆ ಭಾರತದ ಯಾವುದೇ ನೀತಿನಿಯಮಗಳು ಅಡ್ಡಿ ಬರದಂಥ ಒಂದು ಬಲಿಷ್ಠ ರಾಜಕೀಯ ಶಕ್ತಿಯನ್ನು ಕಟ್ಟುವ ಕನಸನ್ನು ಕಾಣತೊಡಗಿದರು. ಈ ರಾಜಕೀಯ ಶಕ್ತಿಯಿಂದ ಅವರು ಭಾರತದ ಆದಾಯದ ಮೂಲಗಳನ್ನು ತಮ್ಮ ನಿಯಂತ್ರಣಕ್ಕೆ ತರಬಹುದಾಗಿತ್ತು. ೧೬೮೬ರಲ್ಲಿ  ಮೊಗಲರ ವಿರುದ್ಧ ಇಂಗ್ಲಿಷರು ಯುದ್ಧ ಸಾರಿದರು. ಇಂಗ್ಲಿಷರಿಗೆ ಮೊಗಲರ ನಿಜವಾದ ಪ್ರಾಬಲ್ಯದ ಅರಿವು ಇರಲಿಲ್ಲವಾದ್ದರಿಂದ ಅವರು ಬಂಗಾಳದಲ್ಲಿನ ತಮ್ಮ ಎಲ್ಲ ನೆಲೆಗಳನ್ನು ಕಳೆದುಕೊಳ್ಳಬೇಕಾಯಿತು. ಸೂರತ್, ಮಚಲಿಪಟ್ಟಣಂ ಹಾಗೂ ವಿಶಾಖಪಟ್ಟಣಂಗಳಲ್ಲಿನ ಅವರ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದೇ ಅಲ್ಲದೆ, ಬಾಂಬೆಯ ಕೋಟೆಯನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಯಿತು. ಮೊಗಲರ ಶಕ್ತಿಯ ಮುಂದೆ ತಮ್ಮ ಆಟ ನಡೆಯದಿದ್ದಾಗ ಅವರು ತಮ್ಮ ಹಳೆಯ ನೀತಿಯಾದ “ಬೇಡಿಕೆ ಹಾಗೂ ರಾಜನೀತಿ”ಗೆ (Petition and Diplomacy) ಮೊರೆ ಹೋದರು. ಇದರಂತೆ ಅವರು ಭಾರತದ ರಾಜರನ್ನು ತಮ್ಮ ವ್ಯಾಪಾರಕ್ಕೆ ರಕ್ಷಣೆ ನೀಡಬೇಕೆಂದು ಕೋರಿದರು. ಮೊಗಲರು ವಿದೇಶಿ ವ್ಯಾಪಾರದಿಂದ ಬರುವ ಲಾಭವನ್ನು ಮನಸ್ಸಿನಲ್ಲಿಟ್ಟುಕೊಂಡು ಇಂಗ್ಲಿಷರನ್ನು ಕ್ಷಮಿಸಿದರು. ಔರಂಗಜೇಬನು ೧,೫೦,೦೦೦ ರೂಪಾಯಿಗಳನ್ನು ಪರಿಹಾರಕ್ಕಾಗಿ ನೀಡುವಂತೆ ಶರತ್ತು ಹಾಕಿ ಅವರಿಗೆ ವ್ಯಾಪಾರಕ್ಕೆ ಅನುಮತಿ ನೀಡಿದ. ೧೬೯೧ರಲ್ಲಿ ಇಂಗ್ಲಿಷ್ ಕಂಪನಿಯು ವರ್ಷಕ್ಕೆ ೩೦೦೦ ರೂ.ಗಳನ್ನು ನೀಡಿ ಬಂಗಾಳದಲ್ಲಿ ತೆರಿಗೆಯಿಂದ ವಿನಾಯಿತಿ ಪಡೆಯಿತು. ೧೬೯೮ರಲ್ಲಿ ಕಂಪನಿಯು ಸುತನೌತಿ, ಕಲಿಕಾಟ ಮತ್ತು ಗೋವಿಂದಪುರ ಹಳ್ಳಿಗಳ ಜಮೀನ್ದಾರಿಯನ್ನು ಪಡೆದು ಅಲ್ಲಿ ಪೋರ್ಟ್‌‌ವಿಲಿಯಂ ಅನ್ನು ಕಟ್ಟಿಸಿತು. ಆದರೆ ೧೮ನೆಯ ಶತಮಾನದ ಮೊದಲ ಭಾಗದಲ್ಲಿ ಬಂಗಾಳವು ಮುರ್ಷಿದ್ ಅಲಿಖಾನ್ ಮತ್ತು ಅಲಿವರ್ದಿಖಾನ್‌ರಂಥ ಬಲಿಷ್ಠ ನವಾಬರ ಕೈಯಲ್ಲಿತ್ತು. ಅವರಿಗೆ ಇಂಗ್ಲಿಷ್ ವ್ಯಾಪಾರಿಗಳ ಮೇಲೆ ಬಹಳ ನಿಯಂತ್ರಣವಿತ್ತು. ಆದರೆ ಈ ನವಾಬರ ನಿರ್ಗಮನದ ನಂತರ ತಕ್ಷಣ ಕಂಪನಿಯು ಸಂಚು ಹೂಡಿ ನವಾಬರನ್ನು ಸೋಲಿಸುವಲ್ಲಿ ಸಫಲವಾಯಿತು.

ಈಸ್ಟ್ ಇಂಡಿಯಾ ಕಂಪನಿಯು, ಒಬ್ಬ ಗವರ್ನರ್, ಒಬ್ಬ ಡೆಪ್ಯೂಟಿ ಗವರ್ನರ್ ಹಾಗೂ ವರ್ತಕರಿಂದ ಚುನಾಯಿಸಲ್ಪಟ್ಟ ೨೪ ಸದಸ್ಯರನ್ನೊಳಗೊಂಡ ಸಮಿತಿಯನ್ನು ಒಳಗೊಂಡಿತ್ತು. ಈ ಸಮಿತಿಯು ಮುಂದೆ “ಕೋರ್ಟ್‌ಆಫ್ ಡೈರೆಕ್ಟರ್ಸ” ಎಂದು ಹೆಸರಾಗಿ, ಅವರ ಸದಸ್ಯರನ್ನು ಡೈರೆಕ್ಟರ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.

ಕಂಪನಿಯು ಪೂರ್ವದೇಶಗಳೊಂದಿಗಿನ ವ್ಯಾಪಾರದ ವಿಷಯದಲ್ಲಿ ಏಖಸ್ವಾಮ್ಯದ  ನೀತಿಯನ್ನು ಅನುಸರಿಸಿತು. ಈ ಏಕಸ್ವಾಮ್ಯಕ್ಕೆ ವಿರೋಧವಿದ್ದರೂ ಕಂಪನಿ ತನ್ನ ವಿಶೇಷ ಅಧಿಕಾರಗಳನ್ನು ಲಂಚದ ಆಮಿಷದ ಮೂಲಕ ಹಾಗೂ ಸರ್ಕಾರಕ್ಕೆ ಸಾಲ ನೀಡುವುದರ ಮೂಲಕ ಉಳಿಸಿಕೊಂಡಿತು. ೧೬೯೪ರಲ್ಲಿ ಪಾರ್ಲಿಮೆಂಟ್ ಒಂದು ನಿರ್ಣಯವನ್ನು ಅಂಗೀಕರಿಸಿ,  ಇಂಗ್ಲೆಂಡಿನ ಎಲ್ಲ ಪ್ರಜೆಗಳಿಗೂ ಪೂರ್ವದೇಶಗಳಲ್ಲಿ ವ್ಯಾಪಾರ ಮಾಡುವ ಅವಕಾಶ ಮಾಡಿಕೊಟ್ಟಿತು. ಆದರೆ “ಓಲ್ಡ್ ಕಂಪನಿ” ತನ್ನ ವಿಶೇಷ ಅಧಿಕಾರಗಳನ್ನು ಬಿಡಲು ಸಿದ್ಧವಿರಲಿಲ್ಲ. ಕೊನೆಗೆ, ಸಾಕಷ್ಟು ವಾದ-ವಿವಾದಗಳ ನಂತರ ೧೭೦೮ರಲ್ಲಿ ಎರಡೂ ಕಂಪನಿಗಳು ಸೇರಿ ವ್ಯಾಪಾರ ನಿರ್ಧರಿಸಿದವು. ಈ ಹೊಸ ಕಂಪನಿಯನ್ನು “ದಿ ಲಿಮಿಟೆಡ್ ಕಂಪನಿ ಆಫ್ ಮರ್ಚಂಟ್ಸ್ ಆಫ್ ಇಂಗ್ಲೆಂಡ್ ಟ್ರೇಡಿಂಗ್ ಟು ದಿ ಈಸ್ಟ್ ಇಂಡೀಸ್” ಎಂದು ಕರೆಯಲಾಯಿತು.

ಔರಂಗಜೇಬನ ಮರಣದ ನಂತರ ಭಾರತದಲ್ಲಿ ಮೊಗಲರ ಶಕ್ತಿ ಕುಂದಿತು. ಎಲ್ಲ ಕಡೆ ಸಣ್ಣಪುಟ್ಟ ರಾಜ್ಯಗಳು ತಲೆಯೆತ್ತಿದವು. ಇವು ಬ್ರಿಟಿಷರೊಂದಿಗೆ ಸ್ನೇಹದಿಂದ ಇರಲಿಲ್ಲವಾದರೂ ಅದಕ್ಕೆ ವಿದೇಶಿ ಆಕ್ರಮಣವನ್ನು ತಡೆಗಟ್ಟುವ ಸಾಮರ್ಥ್ಯವೂ ಇರಲಿಲ್ಲ. ಅವೆಲ್ಲವೂ ಸಹ ಉತ್ತರಾಧಿಕಾರದ ಪ್ರಶ್ನೆಯನ್ನಿಟ್ಟುಕೊಂಡು ಯುದ್ಧದಲ್ಲಿ ತೊಡಗಿದ್ದವು. ಇಂಥ ಸಂದರ್ಭವನ್ನು ಬಳಸಿಕೊಂಡು ಯುರೋಪಿಯನ್ ಶಕ್ತಿಗಳು ತಮ್ಮ ರಾಜಕೀಯ ವರ್ಚಸ್ಸನ್ನು ಹೆಚ್ಚಿಸಿಕೊಂಡು, ದಕ್ಷಿಣ ಭಾರತದ ಕೆಲವು ರಾಜ್ಯಗಳ ಮೇಲೆ ತಮ್ಮ ಹಿಡಿತ ಸ್ಥಾಪಿಸಿದರು. ಆದರೆ ತಮ್ಮ ವ್ಯಾಪಾರ ಹಾಗೂ ರಾಜಕೀಯ ಶಕ್ತಿಯನ್ನು  ಬೆಳೆಸಿಕೊಳ್ಳುವುದರಲ್ಲಿ ಇಂಗ್ಲಿಷರೊಬ್ಬರೇ ಮುಖ್ಯ ಪಾತ್ರ ವಹಿಸಲಿಲ್ಲ. ಅವರಿಗೆ ಫ್ರೆಂಚರಂಥ ಪ್ರಬಲ ಎದುರಾಳಿಯನ್ನು ಎದುರಿಸಬೇಕಿತ್ತು. ಅವರ ವಿರುದ್ಧ ಇಂಗ್ಲಿಷರು ೧೭೪೪ ರಿಂದ ೧೭೬೩ರವರೆಗೆ, ಸಂಪತ್ತು ಹಾಗೂ ಭೂಭಾಗಗಳನ್ನು ತಮ್ಮ ಹತೋಟಿಗೆ ತರಲು, ಸುಮಾರು ೨೦ ವರ್ಷಗಳ ಕಾಲ ಭೀಕರ ಯುದ್ಧ ನಡೆಸಬೇಕಾಯಿತು.

ಭಾರತದಲ್ಲಿ  ಫ್ರೆಂಚರು

ಫ್ರೆಂಚರು ೧೬೬೪ರಲ್ಲಿ ಬೇರೆಲ್ಲ ಯೂರೋಪಿಯನ್ ದೇಶಗಳಿಗಿಂತ ತಡವಾಗಿ “ದಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ”ಯನ್ನು ಸ್ಥಾಪಿಸಿದರು. ೧೬೬೮ರಲ್ಲಿ ಅವರು ಸೂರತ್‌ನಲ್ಲಿ ತಮ್ಮ ಪ್ರಥಮ ಕಾರ್ಖಾನೆಯನ್ನು ಸ್ಥಾಪಿಸಿದರು. ೧೬೭೩ರಲ್ಲಿ ಅವರಿಗೆ ಪೂರ್ವ ಕರಾವಳಿಯಲ್ಲಿ ಕಾಣಿಕೆಯಾಗಿ ಪಾಂಡಿಚೇರಿಯನ್ನು ಕೊಡಲಾಯಿತು. ಬಂಗಾಳದ ರಾಜ ಅವರಿಗೆ  ೧೬೭೪ರಲ್ಲಿ ಕಲ್ಕತ್ತಾದ ಬಳಿ ಒಂದು ಜಾಗವನ್ನು ಕೊಟ್ಟ. ಅಲ್ಲಿ ಅವನು ಚಂದ್ರನಾಗೋರ್ ಎಂಬ ಪಟ್ಟಣವನ್ನು ಸ್ಥಾಪಿಸಿದರು.

ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯು ಅನುದಾನಗಳಿಗೆ, ಸಬ್ಸಿಡಿಗಳಿಗೆ ಹಾಗೂ ಸಾಲಗಳಿಗೆ ಹೀಗೆ ಎಲ್ಲ ವಿಧದಲ್ಲೂ ಫ್ರೆಂಚ್ ಸರ್ಕಾರದ ಮೇಲೆ ಅವಲಂಬಿತವಾಗಿತ್ತು. ಆದರೆ ಫ್ರೆಂಚ್ ಸರ್ಕಾರವೇನೂ ಸಮರ್ಥವಾಗಿರಲಿಲ್ಲ. ಅದು ನಿರಂಕುಶವಾಗಿದ್ದುದಲ್ಲದೆ ಭ್ರಷ್ಟವೂ ಆಗಿದ್ದರಿಂದ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವು ಶಿಥಿಲಗೊಂಡಿತು. ಮೇಲಾಗಿ ಅದಕ್ಕೆ ಮೊದಲಿನಿಂದ ಕೊನೆಯವರೆಗೆ ಆರ್ಥಿಕ ಕೊರತೆಯ ಸಮಸ್ಯೆ ಕಾಡಿತು.