ಭಾರತದಲ್ಲಿ ಬ್ರಿಟಿಷ್ ಅಧಿಕಾರ ಸ್ಥಾಪನೆಯು ಭಾರತದ ಆರ್ಥಿಕ ಸ್ಥಿತಿ ಮತ್ತು ಸಮಾಜಗಳರೆಡರಲ್ಲೂ ನೆಲೆಯೂರಿದ್ದ ಜನರ ಅತೃಪ್ತ, ಅಸಮಾಧಾನ ಹಾಗೂ ಪ್ರತಿಭಟನೆಗೆ ಗುರಿಯಾಗಿತ್ತು. ಹೀಗಾಗಿ ೧೮೫೭ರ ದಂಗೆಯನ್ನು ಇದ್ದಕ್ಕಿದ್ದಂತೆ ಸಂಭವಿಸಿದ  ಘಟನೆಯೆಂದು  ಪರಿಗಣಿಸಲಾಗುವುದಿಲ್ಲ. ಇದು ಶತಮಾನದಷ್ಟು ದೀರ್ಘಾವಧಿಯಿಂದ ಬ್ರಿಟಿಷ್ ಆಳ್ವಿಕೆಯ ವಿರುದ್ಧದ ತೀವ್ರ ಪ್ರತಿಭಟನೆಯ ಪರಿಮಾವಧಿ ಅಭಿವ್ಯಕ್ತಿಯಾಗಿತ್ತು.

ಬ್ರಿಟಿಷರು ಆರ್ಥಿಕ, ಆಡಳಿತ ಹಾಗೂ ಭೂಕಂದಾಯ ಪದ್ಧತಿಗಳಲ್ಲಿ ಜಾರಿಗೊಳಿಸಿದ ಬದಲಾವಣೆಗಳು ಕೃಷಿಪ್ರಧಾನ ಸಮಾಜವನ್ನು ಅಸ್ತವ್ಯಸ್ತಗೊಳಿಸಿದವು. ಬ್ರಿಟಿಷರ ವಿರುದ್ದ ಭೂಕಂದಾಯ ರೂಪದಲ್ಲಿ ಅಧಿಕ ಮೊತ್ತವನ್ನು ವಸೂಲಿ ಮಾಡಿದರು. ಆಳುವವರು ತಮ್ಮ ಹಕ್ಕುಗಳನ್ನು ಕಸಿದುಕೊಂಡಿದ್ದರಿಂದ ಅಥವಾ ಮಿತಿಮೀರಿದ ಭೂಕಂದಾಯ  ಕೋರಿದುದನ್ನು ಸಲ್ಲಿಸಲು ಸಾಧ್ಯವಾಗದಿದ್ದರಿಂದ ಅಥವಾ ಮಿತಿಮೀರಿದ ಭೂಕಂದಾಯ ಕೋರಿದುದನ್ನು ಸಲ್ಲಿಸಲು ಸಾಧ್ಯವಾಗದಿದ್ದರಿಂದ ತಮ್ಮ ಭೂಒಡೆತನದ ಹಕ್ಕುಗಳನ್ನು ಒತ್ತಾಯಕ್ಕೆ ಮಣಿದು ಮಾರಾಟ ಮಾಡಿದ್ದರಿಂದ ಅನೇಕ ಜಮೀನ್ದಾರರು ಹಾಗೂ ಪಾಳೇಗಾರರು ತಮ್ಮ ಭೂಮಿಗಳ ಒಡೆತನ ಹಾಗೂ ಅದರ ಬಗ್ಗೆ ಪೂಜ್ಯತೆಯನ್ನು ಕಳೆದುಕೊಂಡರು. ವಸಾಹತು ಪದ್ಧತಿಯಿಂದ ಹೊಸದೊಂದು ಜನವರ್ಗ ಎಂದರೆ ಲೇವಾದೇವಿಗರರಿಂದ ಪಡೆದ ಸಾಲಗಳನ್ನು ಮರುಪಾವತಿ ಮಾಡಲಾಗದೆ ತಮ್ಮ ಜಮೀನುಗಳನ್ನು ಕಳೆದುಕೊಂಡರು. ಹೊಸದಾಗಿ ಸ್ಥಾಪನೆಯಾದ ನ್ಯಾಯಾಲಯಗಳೂ ಕೂಡ ಬಡರೈತರಿಗೆ ನ್ಯಾಯ ದೊರಕಿಸಲಾರದೆ ಹೋದವು. ಪೊಲೀಸು, ನ್ಯಾಯಾಂಗ ಮತ್ತು ಸಾಮಾನ್ಯ ಆಡಳಿತದ ಕೆಳವರ್ಗಗಳಲ್ಲಿ  ಭ್ರಷ್ಟಾಚಾರ ತಾಂಡವಾಡ ತೊಡಗಿದ್ದರಿಂದ ಸಾಮಾನ್ಯ ಜನತೆಗೆ ಬಲವಾದ ಪೆಟ್ಟು ಬಿದ್ದಿತು.

ವಸಾಹತುಶಾಹಿ ಪದ್ಧತಿಯ ಮತ್ತೊಂದು ಪ್ರಮುಖ ಅಂಶವೆಂದರೆ ಬಲವಂತವಾಗಿ ಕೃಷಿಯನ್ನು ವಾಣಿಜ್ಯೀಕರಣಗೊಳಿಸಿದ್ದು.  ಇದರಿಂದ ಅಭಾವ ಕಾಲದಲ್ಲಿ ಕೂಡ ಆಹಾರ ಧಾನ್ಯಗಳಿಗೆ ಬದಲಾಗಿ ಇಂಡಿಗೊ(ನೀಲಿ) ಮತ್ತು ಹತ್ತಿಯಂತಹ ವ್ಯಾಪಾರಿ ಬೆಳೆಗಳನ್ನು ಬೆಳೆಯಲು ಒತ್ತಾಯ ಹೇರಿದ್ದು ರೈತಾಪಿ ಜನರಿಗೆ ಅಪಾಯಕಾರಿಯಾಗಿ ಪರಿಣಮಿಸಿತು. ಇನ್ನು ಕುಶಲಕರ್ಮಿಗಳ ಪಾಲಿಗಂತೂ ವಸಾಹತುಶಾಹಿಯು ವಿನಾಶವನ್ನುಂಟು ಮಾಡಿತು. ಭಾರತದಲ್ಲಿದ್ದ ಏಕಮುಖ ಮುಕ್ತ ಮಾರಾಟದಿಂದಾಗಿ, ವಿದೇಶಿ ಸರಕುಗಳು ಭಾರತದ ಮಾರುಕಟ್ಟೆಯನ್ನು ಆಕ್ರಮಣ ಮಾಡಲು ಸಾಧ್ಯವಾಯಿತು. ಭಾರತೀಯ ಕುಶಲಕರ್ಮಿಗಳು ಉತ್ಪಾದಿಸಿದುದಕ್ಕಿಂತಲೂ ಕಾರ್ಖಾನೆಯಲ್ಲಿ ತಯಾರಿಸಲಾದ ವಸ್ತುಗಳ ಅಗ್ಗವೂ, ಉತ್ತಮವೂ ಆಗಿರುತ್ತಿತ್ತು. ಇದರಿಂದ ಸಾಂಪ್ರಾದಾಯಿಕ ಭಾರತೀಯ ಕೈಗಾರಿಕೆಗಳೂ ಮರೆಯಾಗುವಂತಾಯಿತು. ಜೊತೆಗೆ ಹೆಚ್ಚು ಪ್ರಮಾಣದಲ್ಲಿ ಕುಶಲಕರ್ಮಿಗಳು ಕೃಷಿರಂಗದತ್ತ ಧಾವಿಸಿದ್ದರಿಂದಾಗಿ ಜಮೀನಿನ ಮೇಲೂ ಒತ್ತಡ ಹೆಚ್ಚಲಾರಂಭವಾಯಿತು.

ವಿದ್ಯಾವಂತ ಹಾಗೂ ಪುರೋಹಿತ ವರ್ಗದವರೂ ಕೂಡ ವಿದೇಶಿ ಆಳ್ವಿಕೆಯ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಪ್ರಯತ್ನಿಸುತ್ತಿದ್ದರು. ಇದಕ್ಕೆ ಮುಂಚೆ ಅವರಿಗೆ ಸ್ಥಳೀಯ ಅರಸರು ಆಶ್ರಯದಾತರಾಗಿರುತ್ತಿದ್ದರು. ಆದರೀಗ ಬ್ರಿಟಿಷರ ಅಧಿಕಾರದಡಿ ಅವರಿಗೆ ಯಾವುದೇ ಬಗೆಯ ಆಶ್ರಯವಾಗಲಿ ದೊರಕದ್ದರಿಂದ ಅವರಿಗೆ ಅತೀವ ಅಸಮಾಧಾನವಾಗಿತ್ತು.

ಜನತಾ ಚಳಚಳಿಗಳು ಮೂರು ದೊಡ್ಡ ರೂಪಗಳಲ್ಲಿ ಎಂದರೆ ನಾಗರಿಕರ ದಂಗೆ, ಗುಡ್ಡಗಾಡು ಕಿರುಕುಳಗಳು ಮತ್ತು ರೈತರ ಚಳವಳಿಯಾಗಿ ಪ್ರಕಟಗೊಂಡವು.

೧೮೫೭ರವರೆಗಿನ ಜನತಾ ಚಳವಳಿ

ಭಾರತದಲ್ಲಿ ಬ್ರಿಟಿಷ್ ಆಡಳಿತ ನೆಲೆಗೊಂಡ ಸಮಯದಿಂದಲೇ ನಾಗರಿಕ ದಂಗೆಗಳೂ ಪ್ರಾರಂಭವಾಗಿದ್ದವು. ೧೭೬೩ರಿಂದ ೧೮೫೬ರವರೆಗಿನ ಅವಧಿಯಲ್ಲಿ ನೂರಾರು ಸಣ್ಣಪುಟ್ಟ ದಂಗೆಗಳಾದವಲ್ಲದೆ ನಲವತ್ತು ಪ್ರಮುಖ ದಂಗೆಗಳಾಗಿದ್ದವು. ಬಂಗಾಲದ ಸ್ಥಳಾಂತರ ಹೊಂದಿದ ರೈತರು ಹಾಗೂ ಸೈನ್ಯದಿಂದ ಉಚ್ಛಾಟನೆಗೊಂಡ ಸೈನಿಕರ ಮತೀಯ ಸನ್ಯಾಸಿಗಳ ನಾಯಕತ್ವದಲ್ಲಿ ೧೭೬೩ರವರೆಗೆ ಹಾಗೂ ಅನಂತರ ಮತ್ತೆ ೧೭೯೫ ರಿಂದ ೧೮೧೬ರವರೆಗಿನ ಅವಧಿಗಳಲ್ಲಿ ಬಂಗಾಳದ ಐದು ಜಿಲ್ಲೆಗಳಲ್ಲಿ ಮತ್ತು ಬಿಹಾರದಲ್ಲಿ  ನಡೆದಿದ್ದವು.

ದಕ್ಷಿಣ ಭಾರತದಲ್ಲಿ ೧೭೯೪ರಲ್ಲಿ ವಿಜಯನಗರದ ರಾಜರು, ೧೭೯೦ರಲ್ಲಿ ತಮಿಳುನಾಡಿನ ಪಾಳೇಗಾರರುಮತ್ತು ೧೮೧೩-೧೪ರಲ್ಲಿ ಪರ್ಲೆಕಾಮೆಡಿಗಳು ತಿರುಗಿ ಬಿದ್ದಿದ್ದರು. ೧೮೦೫ರಲ್ಲಿ ತಿರುವಾಂಕೂರಿನ ದಿವಾನ ಮೇಲುತಂಬಿ ಧೀರೋದಾತ್ತವಾಗಿ ಕ್ರಾಂತಿ ನಡೆಸಲು ವ್ಯವಸ್ಥೆ ಮಾಡಿದ್ದನು. ೧೮೩೦-೩೧ರಲ್ಲಿ ಮೈಸೂರಿನ ರೈತರು ದಂಗೆಯೆದ್ದಿದ್ದರು. ೧೮೪೦ರಿಂದ ೧೮೪೭ರ ನಡುವಣ ಅವಧಿಯಲ್ಲಿ ವಿಶಾಖಪಟ್ಟಣಂ, ಗಜಾಂ ಮತ್ತು ಕರ್ನೂಲುಗಳಲ್ಲಿ ಅನೇಕ ದಂಗೆಗಳು ನಡೆದಿದ್ದವು.

೧೮೧೬ ರಿಂದ ೧೮೩೨ರವರೆಗಿನ ಅವಧಿಯಲ್ಲಿ ಸೌರಾಷ್ಟ್ರದ ಮುಖ್ಯಸ್ಥರು ಬ್ರಿಟಿಷರ ವಿರುದ್ಧ ತಿರುಗಿಬಿದ್ದನು. ೧೮೧೮ರಿಂದ ೧೮೩೧ ರವರೆಗಿನ ಅವಧಿಯಲ್ಲಿ ಭಿಲ್ಲರ ಪ್ರತಿಭಟನೆಗಳನ್ನು ಸಂಘಟಿಸಲಾಗಿತ್ತು. ಹಾಗೆಯೇ ಕಿತ್ತೂರಿನ ಕ್ರಾಂತಿ, ಸತಾರ ಕ್ರಾಂತಿ ಮತ್ತು ಗಡ್ಕಾರಿಯವರ ದಂಗೆಗಳೂ ನಡೆದವು.

ಉತ್ತರ ಭಾರತದಲ್ಲಿ ೧೮೨೪ರಿಂದ ೧೮೫೨ರವರೆಗಿನ ಅವಧಿಯಲ್ಲಿ ಪಶ್ಚಿಮ ಉತ್ತರ ಪ್ರದೇಶ, ಹರಿಯಾಣ, ಭಿಲಾಸಪುರ, ಅಲೀಘರ್, ಜಬಲ್‌ಪುರ್, ಖಾಂದೇಶ್‌ಗಳಲ್ಲಿ ದಂಗೆಗಳು ನಡೆದವು.

ಅಸಂಖ್ಯ ಗುಡ್ಡಗಾಡು ದಂಗೆಗಳ ಪೈಕಿ, ಸಂತಾಲರ ದಂಗೆ ದೊಡ್ಡ ಪ್ರಮಾಣದಲ್ಲಿತ್ತು. ಅವರು ಭೀರ್‌ಭೂಮ್, ಸಿಂಘಭೂಮ್, ಹಜಾರಿಬಾಗ್, ಭಾಗಲ್‌ಪುರ ಮತ್ತು ಮೊಂಗ್ಯಾಲ್‌ ಪ್ರದೇಶಗಳಲ್ಲಿ ವಾಸಮಾಡುತ್ತಿದ್ದರು. ದಬ್ಬಾಳಿಕೆಯ ಸ್ವರೂಪದ ಆಡಳಿತದ ಪರಿಣಾಮವಾಗಿ ಇಂಥ ತಿಕ್ಕಾಟಗಳುಂಟಾಗುತ್ತಿದ್ದವು. ಲೇವಾದೇವಿಗಾರರು, ಜಮೀನ್ದಾರರು ಹಾಗೂ ಪೋಲೀಸರು ಅವರನ್ನು ಸಂಪೂರ್ಣ ಶೋಷಣೆ ಮಾಡುತ್ತಿದ್ದರು. ಅಷ್ಟೇ ಅಲ್ಲ, ಬಲತ್ಕಾರದಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದ ಬಗ್ಗೆ ಕೂಡ ನಮಗೆ ಅನೇಕ ಉಲ್ಲೇಖಗಳು ದೊರೆತಿವೆ.

ಸುಮಾರು ೬೦,೦೦೦ ಸಂತಾಲರು ಜಮೀನ್ದಾರರನ್ನು, ಅವರ ಮನೆಗಳನ್ನು, ಪೊಲೀಸ್ ಠಾಣೆ, ರೈಲ್ವೆ ನಿರ್ಮಾಣದ ನಿವೇಶನ ಹಾಗೂ ಅಂಚೆ ಸಾಗಣೆ ವಾಹನಗಳಿಗೆ ಮುತ್ತಿಗೆ ಹಾಕಿದ್ದರು. ತಮ್ಮೆಲ್ಲ ಕಾರ್ಯಗಳಿಗೂ ದೇವರ ಆಶೀರ್ವಾದವಿದೆಯೆಂಬುದಾಗಿ ಸಂತಾಲರು ನಂಬಿದ್ದರು. ಪ್ರಮುಖ ದಂಗೆಕೋಡ ನಾಯಕರಾಗಿದ್ದ ಸಿಧೋ ಮತ್ತು ಕಾನ್ಹು ಶಸ್ತ್ರಗಳನ್ನು ಹಿಡಿದು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕೆಂದು ತಮಗೆ ದೇವರೇ ತಿಳಿಸಿರುವುದಾಗಿ ಹೇಳಿಕೊಳ್ಳುತ್ತಿದ್ದರು.

ಈ ಆಂದೋಲನ ಸುಮಾರು ಆರು ತಿಂಗಳ ಕಾಲ ಸತತವಾಗಿ ಮುಂದುವರಿಯಿತು. ಸಂತಾಲರು ಪೂರ್ವ ಸೂಚನೆ ನೀಡಿ ಹಲವಾರು ಗ್ರಾಮಗಳಿಗೆ ಮುತ್ತಿಗೆ ಹಾಕುತ್ತಿದ್ದರು. ಸರ್ಕಾರಕ್ಕೆ ದಂಗೆಯ ದೊಡ್ಡ ಪ್ರಮಾಣದ ಬಗ್ಗೆ ಅರಿವಾದೊಡನೆಯೇ ದಂಗೆಕೊಕೀರರ ವಿರುದ್ಧ ದೊಡ್ಡ ಮಿಲಿಟರಿ ಕಾರ್ಯಾಚರಣೆಯನ್ನೇ ನಡೆಸಿ ನಿರ್ದಯವಾಗಿ ದಂಗೆಕೋರರನ್ನು ಸದೆಬಡಿಯಿತು. ೧೫,೦೦೦ ಕ್ಕೂ ಹೆಚ್ಚು ಸಂತಾಲರು ಕೊಲೆಯಾದರಲ್ಲದೆ ಅವರ ನಾಯಕರನ್ನು ದಸ್ತಗಿರಿ ಮಾಡಲಾಯಿತು.

ಅದೇ ರೀತಿ, ೧೮೨೦-೧೮೩೭ರ ಅವಧಿಯಲ್ಲಿ ಚೋಟಾ ನಾಗಪುರದ ಕೋಲ್ಸರು ದಂಗೆಯೆದ್ದರು. ಆದರೆ ಬ್ರಿಟಿಷರು ಅವರನ್ನು ಕೂಡಲೇ ಹತ್ತಿಕ್ಕಿದರು.

೧೮೫೭ರ ಕ್ರಾಂತಿ

೧೮೫೭ರಲ್ಲಿ ಭಾರತದ ಉತ್ತರ ಹಾಗೂ ಮಧ್ಯಪ್ರದೇಶದಲ್ಲಿ ಅಪೂರ್ವವಾದ ಜನತಾ ಕ್ರಾಂತಿಯುಂಟಾಗಿ ಬಹುಮಟ್ಟಿಗೆ ಬ್ರಿಟಿಷ್ ಆಡಳಿತವನ್ನೇ ಅಳಿಸಿ ಹಾಕುವ ಯತ್ನ ಮಾಡಿತು. ಅದು ಕೇವಲ ಸಿಪಾಯಿದಂಗೆಯಂತೆ ಆರಂಭವಾಯಿತಾದರೂ ಬಹುಬೇಗನೆ ವ್ಯಾಪಕವಾಗಿ ಇತರ ಪ್ರದೇಶಗಳಿಗೆ ಹಾಗೂ ಜನರಲ್ಲಿ ಹಬ್ಬಿತು. ಲಕ್ಷಾಂತರ ಮಂದಿ ರೈತರು, ಕುಶಲಕರ್ಮಿಗಳು ಹಾಗೂ ಯೋಧರು ಒಂದು ವರ್ಷಕ್ಕೂ ಹೆಚ್ಚು ಕಾಲ ವೀರಾವೇಶದಿಂದ ಹೋರಾಡಿದರು.

ಬ್ರಿಟಿಷರು ದೇಶವನ್ನು ಆರ್ಥಿಕವಾಗಿ ಸಂಪೂರ್ಣ ಶೋಷಣೆ ಮಾಡಿದ್ದು ಹಾಗೂ ಅದರ ಸಾಂಪ್ರದಾಯಿಕ ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸಿದ್ದು ೧೮೫೭ರ ಕ್ರಾಂತಿಗೆ ಪ್ರಮುಖ ಕಾರಣವಾಯಿತು. ಬ್ರಿಟಿಷ್ ಭೂಕಂದಾಯ ನೀತಿ, ಕಾನೂನು ಮತ್ತು ಆಡಳಿತ ವ್ಯವಸ್ಥೆಯು ಜನರ ಜೀವನದ ಮೇಲೆ ಅಗಾಧ ಪರಿಣಾಮವುಂಟು ಮಾಡಿದ್ದವು. ಆಡಳಿತದ ಕೆಳಮಟ್ಟದಲ್ಲಿ ಬೆಳೆದಿದ್ದ ಭ್ರಷ್ಟಾಚಾರದಿಂದಾಗಿ ಸಾಮಾನ್ಯ ಜನರಿಗೆ ದೊಡ್ಡ ಹೊಡೆತ ಬಿದ್ದಿತ್ತು. ಕ್ಲಿಷ್ಟಕರವಾಗಿದ್ದ ನ್ಯಾಯಿಕ ಪದ್ಧತಿಯಿಂದಾಗಿ ಶ್ರೀಮಂತರು ಬಡವರನ್ನು ತುಳಿಯಲು ಸಹಾಯಕವಾಗಿತ್ತು.

ಬ್ರಿಟಿಷ್ ಜನರ ಆಳ್ವಿಕೆಯು ವಿದೇಶೀಯವಾದದ್ದರಿಂದ, ಬ್ರಿಟಿಷರು ಮತ್ತು ಭಾರತೀಯರ ನಡುಚೆ ಯಾವುದೇ ಸಾಮಾಜಿಕ ಸಂಬಂಧ ಅಥವಾ ಸಂಪರ್ಕವುಂಟಾಗಲಿಲ್ಲ. ಅವರು ತಾವು ಉತ್ತಮ ವರ್ಣದವರೆಂಬ ಭಾವನೆಯಿಂದ ಭಾರತೀಯರ ಜೊತೆ ಹೀನಾಯವಾಗಿ ಹಾಗೂ ಒರಟಾಗಿ ವರ್ತಿಸುತ್ತಿದ್ದರು.

೧೮೫೬ರಲ್ಲಿ ಲಾರ್ಡ್‌ಡಾಲ್‌ಹೌಸಿಯು ಅವಧವನ್ನು ಸ್ವಾಧೀನ ಪಡಿಸಿಕೊಂಡದ್ದು ವ್ಯಾಪಕ ಜನವಿರೋಧಕ್ಕೆ ಕಾರಣವಾಯಿತು. ಇದರಿಂದ ಬಹಳಷ್ಟು ಸಂಖ್ಯೆಯಲ್ಲಿ ಅವಧದಿಂದಲೇ ಬಂದಿದ್ದ ಸೈನಿಕರಿಗೆ ಇದು ತುಂಬ ಸಿಟ್ಟು ತರಿಸಿತು. ಎಲ್ಲಕ್ಕಿಂತ ಹೆಚ್ಚಾಗಿ, ಅವಧವನ್ನು ಬ್ರಿಟಿಷ್ ಆಳ್ವಿಕೆಗೆ ತೆಗೆದುಕೊಂಡರೂ ಕೂಡ ಜನರ ಜೀವನ ಸ್ಥಿತಿಯಲ್ಲಿ ಯಾವ ಬಗೆಯ ಸುಧಾರಣೆಯೂ ಉಂಟಾಗಲಿಲ್ಲ. ಬದಲಾಗಿ ಶ್ರೀ ಸಾಮಾನ್ಯರು ಹೆಚ್ಚು ಭೂಕಂದಾಯ ಹಾಗೂ ಹೆಚ್ಚಿನ ತೆರಿಗೆ ಸಂದಾಯ ಮಾಡುವಂತಾಯಿತು.

ಡಾಲ್‌ಹೌಸಿಯು ಇತರ ರಾಜ್ಯಗಳ ಜೊತೆಗೆ ಅವಧವನ್ನೂ ಸ್ವಾಧೀನಪಡಿಸಿಕೊಂಡದ್ದು ಸ್ಥಳೀಯ ರಾಜ್ಯಗಳಲ್ಲಿನ ರಾಜರಲ್ಲಿ ಭೀತಿಯುಂಟು ಮಾಡಿತು. ಈ ಸ್ವಾಧೀನಪಡಿಸಿಕೊಳ್ಳುವ ಕಾರ್ಯನೀತಿಯಿಂದಾಗಿ ನೇರವಾಗಿ ನಾನಾ ಸಾಹೇಬ್, ಝಾನ್ಸಿರಾಣಿ ಹಾಗೂ ಬಹದ್ದೂರ್ ಷಾ ಅವರು ಬ್ರಿಟಿಷರ ಬದ್ಧ ದ್ವೇಷಿಗಳಾಗುವಂತಾಯಿತು. ಡಾಲ್‌ಹೌಸಿಯು ರಾಣಿ ಲಕ್ಷ್ಮೀಬಾಯಿಯ ದತ್ತುಪುತ್ರನು ಸಿಂಹಾಸನವನ್ನೇರುವುದಕ್ಕೆ ಸಮ್ಮತಿ ನೀಡಲು ನಿರಾಕರಿಸಿದ್ದಷ್ಟೇ ಅಲ್ಲ, ದತ್ತುಪುತ್ರರಿಗೆ ಹಕ್ಕಿಲ್ಲವೆಂಬ ತತ್ತ್ವವನ್ನು ಅನುಸರಿಸಿ ಝಾನ್ಸಿಯನ್ನು ಸ್ವಾಧೀನಪಡಿಸಿಕೊಂಡನು. ಎರಡನೆಯ ಬಾಜೀರಾಯನ ದತ್ತುಪತ್ರನಾದ ನಾನಾಸಾಹೇಬನಿಗೆ ಬ್ರಿಟಿಷರಿಂದ ರಾಜಧನ/ನಿವೃತ್ತಿ ವೇತನವನ್ನೂ ಪಡೆಯಲಾಗಲಿಲ್ಲ.

ಕ್ರಿಶ್ಚಿಯನ್ ಧರ್ಮ ಪ್ರಚಾರಕರ ಚಟುವಟಿಕೆಗಳೂ ಕೂಡ ಜನರಲ್ಲಿ ಸಾಕಷ್ಟು ಅನುಮಾನ ಹಾಗೂ ವಿರೋಧವನ್ನುಂಟು ಮಾಡಿದವು. ಈ ಧರ್ಮಪ್ರಚಾರಕರು ಜನರ ಧರ್ಮ ಪರಿವರ್ತನೆ ಮಾಡಲು ಯತ್ನಿಸಿದರಲ್ಲದೆ  ಹಿಂದುತ್ವ ಮತ್ತು ಇಸ್ಲಾಂ ಧರ್ಮಗಳ ಬಗ್ಗೆ ನಿಂದಾತ್ಮಕವಾಗಿ ಮತ್ತು ಅಸಹ್ಯಕರವಾಗುವ ಸಾರ್ವಜನಿಕ ಭಾಷಣಗಳನ್ನು ಮಾಡುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ  ಸರ್ಕಾರವು ಅದರ ವೆಚ್ಚದಲ್ಲಿ ಮಿಷನರಿಗಳನ್ನು ಸೈನ್ಯದಲ್ಲಿ ನೇಮಿಸಿತು.

ಸಂಪ್ರದಾಯಸ್ಥರಾದ ಹಿಂದು ಮತ್ತು ಮುಸ್ಲಿಮರು ಇಂಥ ಸಾಮಾಜಿಕ ಶಾಸನದ ಮೂಲಕ ಬ್ರಿಟಿಷರು ತಮ್ಮ ಧರ್ಮ ಹಾಗೂ ಸಂಸ್ಕೃತಿಯನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆಂದು ಭಯಗೊಂಡರು. ಸತಿ ಪದ್ಧತಿಯ ರದ್ದು, ವಿಧವಾ ವಿವಾಹ ಮತ್ತು ಬಾಲಕಿಯರಿಗೆ ಪಾಶ್ಚಿಮಾತ್ಯ ಶಿಕ್ಷಣಾರಂಭ ಇವೆಲ್ಲವೂ ಕೂಡ ಅವರಿಗೆ ಆಯುಕ್ತವಾದ ಮಧ್ಯಪ್ರವೇಶಕ್ಕೆ ನಿದರ್ಶನಗಳಾದವು.

ಬ್ರಿಟಿಷ್ ಸೈನ್ಯದಲ್ಲಿ ಸಿಪಾಯಿಗಳಿಗೆ ತಮ್ಮ ಒಡೆಯರ ವಿರುದ್ಧ ಅಸಂಖ್ಯ ದೂರುಗಳಿದ್ದವು. ಬ್ರಿಟಿಷ್ ಅಧಿಕಾರಿಗಳು ಅವರನ್ನು ಅಸಡ್ಡೆಯಿಂದ ಕಾಣುತ್ತಿದ್ದರು. ಸಿಪಾಯಿಗಳಿಗೆ ಕೆಳದರ್ಜೆಯ ಸ್ಥಾನವನ್ನು ಕೊಡಲಾಗುತ್ತಿತ್ತು. ಅವರಿಗೆ ಅತ್ಯಂತ ಕಡಿಮೆ ಸಂಬಳ ನೀಡಲಾಗುತ್ತಿತ್ತಲ್ಲದೆ ಬಡ್ತಿಯ ಅವಕಾಶಗಳಿರಲಿಲ್ಲ. ಮಿಲಿಟರಿ ಅಧಿಕಾರವು ಸಿಪಾಯಿಗಳು ತಮ್ಮ ಜಾತಿ ಸೂಚಕ ಗುರುತುಗಳನ್ನು ಧರಿಸಲು, ಗಡ್ಡ ಬೆಳೆಸಲು ಹಾಗೂ ಪೇಟಾವನ್ನು ತೊಡದಂತೆ ನಿರ್ಬಂಧಿಸಿದ್ದರು. ೧೮೫೬ರಲ್ಲಿ ಒಂದು ಕಾನೂನನ್ನು ಜಾರಿಗೊಳಿಸಿ ಪ್ರತಿಯೊಬ್ಬ ಹೊಸದಾಗಿ ನೇಮಕವಾದ ಸಿಪಾಯಿಯು ಅಗತ್ಯವಾದರೆ ಕಡಲಾಚೆ ಹೋಗಿಯೂ ಕರ್ತವ್ಯಪಾಲನೆ ಮಾಡಬೇಕೆಂದು ನಿರ್ದೇಶಿಸಲಾಯಿತು. ಹಿಂದೂ ಧರ್ಮದಲ್ಲಿ ಸಮುದ್ರ ಪ್ರಯಾಣ ಮಾಡಿದರೆ ಜಾತಿ ಭ್ರಷ್ಟರಾಗುವುದರಿಂದ ಅದನ್ನು ನಿಷೇಧಿಸಲಾಗಿದ್ದು ಹೊಸ ಕಾನೂನಿನಿಂದಾಗಿ ಸಿಪಾಯಿಗಳ ಮನಸ್ಸಿಗೆ ತುಂಬ ನೋವುಂಟಾಯಿತು.

ಬಂದೂಕಿನ ತೋಟಕ್ಕೆ ಕೊಬ್ಬು ಸವರಿದ ಪ್ರಸಂಗವು ಸಿಪಾಯಿಗಳ ಕ್ರೋಧಕ್ಕೆ ಕಿಡಿ ತಗುಲಿಸಿದಂತಾಯಿತು. ಹೊಸದಾಗಿ ಬಂದ ಎನ್‌ಫೀಲ್ಡ್ ತೋಟಾಗಳಿಗೆ ಕೊಬ್ಬು ಸವರಿದ್ದ ಕಾಗದವನ್ನಂಟಿಸಿದ್ದು ನಳಿಗೆಯನ್ನು ಬಂದೂಕಿನೊಳಗೆ ಜೋಡಿಸುವುದಕ್ಕೆ ಮುನ್ನ ಕಾಗದದ ತುದಿಯನ್ನು ಹಲ್ಲಿನಿಂದ ಕಚ್ಚಿ ತೆಗೆಯಬೇಕಾಗುತ್ತಿತ್ತು. ಕೆಲವು ಸಂದರ್ಭಗಳಲ್ಲಿ ದನದ ಹಾಗೂ ಹಂದಿಯ ಕೊಬ್ಬನ್ನು ಇದಕ್ಕೆ ಬಳಸಲಾಗುತ್ತಿತ್ತು. ಇದರಿಂದ ಸಿಪಾಯಿಗಳ ಭಾವನೆಗಳಿಗೆ ಘಾಸಿಯುಂಟಾಗಿ ಅವರಲ್ಲಿ ಬಹುಮಂದಿ ಸರ್ಕಾರವು ಉದ್ದೇಶಪೂರ್ವಕವಾಗಿಯೇ ತಮ್ಮ ಧರ್ಮನಾಶ ಮಾಡುವ ಸಲುವಾಗ ಇಂಥ ಪ್ರಯತ್ನ ನಡೆದಿದೆಯೆಂದು ಭಾವಿಸಿದರು. ಹೀಗಾಗಿ, ಸಿಪಾಯಿಗಳು ಹೊಸ ಎನ್‌ಫೀಲ್ಡ್ ಬಂದೂಕುಗಳನ್ನು ಮುಟ್ಟಲೂ ಕೂಡ ನಿರಾಕರಿಸಿದರು. ಈ ರೀತಿ ಕ್ರಾಂತಿ ಮೊದಲಿಟ್ಟಿತು.

ದಂಗೆಯು ೧೮೫೭ರಲ್ಲಿ ಮೇ ೧೦ರಂದು ಮೀರತ್‌ನಲ್ಲಿ ಪ್ರಾರಂಭವಾಯಿತು. ೩ನೆಯ ರಾಷ್ಟ್ರೀಯ ಅಶ್ವದಳದವರು ಕೊಬ್ಬು ಸವರಿದ ತೋಟಾಗಳನ್ನು ಮುಟ್ಟಲೂ ಕೂಡ ನಿರಾಕರಿಸಿದರು. ಮೇ ೯ರಂದು ಅವರಲ್ಲಿ ೮೫ಜನರನ್ನು ವಜಾ ಮಾಡಿ ೧೦ ವರ್ಷಗಳ ಕಾರಾವಾಸ ಶಿಕ್ಷೆ ವಿಧಿಸಲಾಯಿತು. ಇದರಿಂದ ಮೀರತ್‌ನಲ್ಲಿಯೇ ಇದ್ದ ಭಾರತೀಯ ಸೈನಿಕರು  ಸಾಮಾನ್ಯ ಸಭೆ ನಡೆಸಲು ಪ್ರಚೋದನೆ ದೊರೆತಂತಾಯಿತು. ಅದರ ಮರುದಿನ ಎಂದರೆ ಮೇ ೧೦ರಂದು ಅವರು ತಮ್ಮ ಸಂಗಾತಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿ, ತಮ್ಮ ಅಧಿಕಾರಿಗಳ ಹತ್ಯೆ ಮಾಡಿ ದಿಲ್ಲಿಯ ಕಡೆ ನಡೆದರು. ರಾಜ್‌ಘಾಟ್‌ಬಾಗಿಲಿನ ಮೂಲಕ ಕೆಂಪು ಕೋಟೆಯನ್ನು ಪ್ರವೇಶಿಸಿದ ಸೈನಿಕರು ಅಧಿಕಾರ ಕಳೆದುಕೊಂಡಿದ್ದ ವೃದ್ಧ ಬಹಾದ್ದೂರ್‌ಷಾನು ಭಾರತದ ಎಲ್ಲ ಆಡಳಿತ ಮುಖ್ಯಸ್ಥರು ಮತ್ತು ರಾಜರಿಗೆ ಪತ್ರ ಬರೆದು ಭಾರತದ ಎಲ್ಲ ರಾಜ್ಯಗಳೂ ಒಂದುಗೂಡಿ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿ ಅಧಿಕಾರ ಸ್ಥಾಪನೆ ಮಾಡಬೇಕೆಂದು ಕೋರಿದನು. ಹೋರಾಟ ಪ್ರಾರಂಭವಾಗುವುದಕ್ಕೆ ಮೊದಲೇ ಮೀರತ್‌ನಲ್ಲಿ ೩೪ನೆಯ ಸ್ಥಳೀಯ ಅಶ್ವದಳದ ತರುಣ ಸಿಪಾಯಿಯಾದ ಮಂಗಲ್‌ಪಾಂಡೆಯು ತನ್ನ ರೆಜಿಮೆಂಟಿನ ಸಾರ್ಜೆಂಟ್ ಮೇಜರ್ ಮೇಲೆ ಗುಂಡು ಹಾರಿಸಿದನು. ಅವನನ್ನು ಹಿಡಿದು ಗಲ್ಲಿಗೇರಿಸಲಾಯಿತು.

ದೆಹಲಿಯನ್ನು ವಶಪಡಿಸಿಕೊಂಡ ಒಂದೇ ತಿಂಗಳಲ್ಲಿ ದಂಗೆಯು ದೇಶದ ಬೇರೆ ಬೇರೆ ಭಾಗಗಳಾದ ಕಾನ್‌ಪುರ, ಲಕ್ನೋ, ಬನಾರಸ್, ಅಲಹಾಬಾದ್, ಬರೈಲಿ, ಜಗದೇಶಪುರ ಮತ್ತು ಝಾನ್ಸಿಗಳಿಗೂ ಹಬ್ಬಿತು.

ಕಾನ್‌ಪುರದಲ್ಲಿ ಕೊನೆಯ ಪೇಶ್ವೆಯಾದ ಎರಡನೆಯ ಬಾಜೀರಾಯನ ದತ್ತುಪುತ್ರನಾದ ನಾನಾಸಾಹೇಬನು ದಂಗೆಯ ನಾಯಕತ್ವ ವಹಿಸಿದ್ದನು. ಅವನು ಇಂಗ್ಲಿಷರನ್ನು ಕಾನ್‌ಪುರದಿಂದ ಹೊರಗೋಡಿಸಿ ತಾನೇ ಪೇಶ್ವೆಯೆಂದು ಘೋಷಿಸಿಕೊಂಡನು. ಅವನ ಸೇನಾಧಿಪತಿಯಾಗಿದ್ದ ತಾಂತ್ಯಾಟೋಪಿಯೇ ಬ್ರಿಟಿಷರ ವಿರುದ್ಧದ ದಂಗೆಯ ನಾಯಕತ್ವ ವಹಿಸಿಕೊಂಡಿದ್ದನು.

ಲಕ್ನೋದಲ್ಲಿ ಔಷಧ ಬೇಗಂಳು ದಂಗೆಯ ನೇತೃತ್ವವಹಿಸಿಕೊಂಡು ಅವರ ಕಿರಿಯ ಪುತ್ರ ಬೀರ್‌ಜಿಸ್ ಕಾದಲ್‌ನನ್ನು ಅವಧದ ನವಾಬನೆಂದು ಘೋಷಿಸಿಕೊಂಡಳು. ಲಕ್ನೋದ ಸಿಪಾಯಿಗಳು, ಅವಧದ ಜಮೀನ್ದಾರರು, ರೈತರು ನೆರವು ಪಡೆದಿದ್ದ ಬೇಗಂಳು ಬ್ರಿಟಿಷರನ್ನು ಮುತ್ತಿಗೆ ಹಾಕಲು ಯೋಜಿಸಿದ್ದಳು. ಝಾನ್ಸಿಯಲ್ಲಿ ರಾಣಿ ಲಕ್ಷ್ಮೀಬಾಯಿಯು ಬ್ರಿಟಿಷರ ವಿರುದ್ಧದ ದಂಗೆಯ ನಾಯಕತ್ವ ವಹಿಸಿದ್ದಳು. ಅವಳು ತಾತ್ಯಾಟೋಪಿಯ ಬ್ರಿಟಿಷರ ವಿರುದ್ಧದ ದಂಗೆಯ ನಾಯಕತ್ವ ವಹಿಸಿದ್ದಳು. ಅವಳು ತಾತ್ಯಾಟೋಪಿಯ ನೆರವಿನಿಂದ ಗ್ವಾಲಿಯರನ್ನು ಸ್ವಾಧೀನಪಡಿಸಿಕೊಂಡಳು. ಬಿಹಾರದಲ್ಲಿ ಫೈಜಿಯಾಬಾದಿನ ಮೌಲ್ವಿ ಅಹಮದುಲ್ಲಾನು ದಂಗೆಯನ್ನು ವ್ಯವಸ್ಥೆ ಮಾಡಿದ್ದನು.

ಉತ್ತರ ಮತ್ತು ಮಧ್ಯಭಾರತದ ಎಲ್ಲ ಭಾಗಗಳಲ್ಲೂ ಸಿಪಾಯಿ ದಂಗೆಯ ನಾಗರಿಕರು ಪಾಲ್ಗೊಂಡ ಜನತಾ ಕ್ರಾಂತಿಗಳಿಗೆ ಎಡೆಮಾಡಿತು. ಆದಾಗ್ಯೂ ಕೆಲವು ಸ್ಥಳಗಳಲ್ಲಿ ಸಿಪಾಯಿಗಳಿಗಿಂತಲೂ ಮೊದಲೇ ಜನರು ಪ್ರತಿಭಟಿಸಿದ್ದರು. ರೈತರು ಮತ್ತು ಕಾರ್ಮಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ದಂಗೆಗೆ ನಿಜವಾದ ಬಲ ಹಾಗೂ ಜನತಾ ಕ್ರಾಂತಿಯ ಸ್ವರೂಪವನ್ನು ತಂದುಕೊಟ್ಟಿತು. ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ರೈತರು  ಜಮೀನ್ದಾರರಿಗೆ ಮುತ್ತಿಗೆ ಹಾಕುವ ಮೂಲಕ ತಮ್ಮ ನೋವನ್ನು ಮುಕ್ತವಾಗಿ ವ್ಯಕ್ತಪಡಿಸಿದರು.

೧೮೫೭ರ ಕ್ರಾಂತಿಯು ಇಡೀ ದೇಶವನ್ನು ವ್ಯಾಪಿಸಲು ಸಾಧ್ಯವಾಗಲಿಲ್ಲ. ಕ್ರಾಂತಿಕಾರಿಗಳಿಗೆ ಜನರ ಸಹಾನೂಭೂತಿ ದೊರೆಯಿತು. ಆದರೆ ಬಹುಪಾಲು ಭಾರತೀಯ ರಾಜರು, ಬುದ್ಧಿವಂತ ವರ್ಗ, ಶ್ರೀಮಂತ ಜಮೀನ್ದಾರರು ಹಾಗೂ ವ್ಯಾಪಾರಿಗಳು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸೇರಲು ನಿರಾಕರಿಸಿದರು. ಪ್ರತಿಯಾಗಿ, ಕ್ರಾಂತಿಯನ್ನು ಹತ್ತಿಕ್ಕಲು ಅವರೆಲ್ಲ ಇಂಗ್ಲಿಷರಿಗೆ ಸಕ್ರಿಯ ನೆರವು ನೀಡಿದರು. ಎಲ್ಲಕ್ಕಿಂತ ಹೆಚ್ಚಾಗಿ ಕ್ರಾಂತಿಕಾರಿಗಳಿಗೆ ರಾಜಕೀಯ ಭವಿಷ್ಯದ ಬಗ್ಗೆಯಾಗಲಿ, ಭವಿಷ್ಯದ ನಿರ್ದಿಷ್ಟ ದೃಷ್ಟಿಕೋನವಾಗಲಿ ಇರಲಿಲ್ಲ. ಹೀಗಾಗಿ, ಚಳವಳಿಯಲ್ಲಿ ಭಿನ್ನ ಭಿನ್ನ ಉದ್ದೇಶಗಳಿರುವ ವ್ಯಕ್ತಿಗಳು ಬ್ರಿಟಿಷ್ ಆಡಳಿತದ ಬಗೆಗಿನ ದ್ವೇಷವಿರುವ ಏಕೈಕ ಕಾರಣದಿಂದ ಒಂದುಗೂಡಿದ್ದರೂ ಪ್ರತಿಯೊಬ್ಬರೂ ಅವರದೇ ಆದ ನೋವುಗಳನ್ನೂ, ಸ್ವತಂತ್ರ ಭಾರತದ ರಾಜಕೀಯದ ಬಗ್ಗೆ ವಿವಿಧ ಬಗೆಯ ಪರಿಕಲ್ಪನೆಗಳನ್ನೂ ಹೊಂದಿದವರಾಗಿದ್ದರು.

ಕ್ರಾಂತಿಕಾರಿಗಳು ಹೋರಾಟವನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಸಿದರು. ಆದರೂ, ಅಂತಿಮವಾಗಿ ಬ್ರಿಟಿಷ್ ಸಾರ್ವಭೌಮತ್ವವೇ ಮೇಲುಗೈ ಸಾಧಿಸಿತು. ಅವರು ದಿಲ್ಲಿಯನ್ನು ಮತ್ತೆ ಹತೋಟಿಗೆ ತೆಗೆದುಕೊಂಡರು. ಬಹಾದ್ದೂರ್ ಷಾ ಸೆರೆಯಾದ. ದಿಲ್ಲಿಯ ಪತನದೊಂದಿಗೆ ಕ್ರಾಂತಿಯ ಕೇಂದ್ರ ಬಿಂದುವೇ ಮಾಯವಾದಂತಾಯಿತು. ಒಬ್ಬರ ನಂತರ ಮತ್ತೊಬ್ಬರಂತೆ ಕ್ರಾಂತಿಯ ನಾಯಕರು ಕುಸಿದರು. ಕಾನ್‌ಪುರದಲ್ಲಿ ನಾನಾ ಸಾಹೇಬನನ್ನು ಸೋಲಿಸಲಾಯಿತು. ತಾಂತ್ಯಾಟೋಪಿಯು ಮಧ್ಯಭಾರತದ ಕಾಡುಗಳಿಗೆ ಪಲಾಯನ ಮಾಡಿ ಅಲ್ಲಿಂದಲೇ ಗೆರಿಲ್ಲಾ ಯುದ್ಧಗಳನ್ನು ಮುಂದುವರಿಸಿದನು. ಆದರೆ ಅವನ ಆತ್ಮೀಯ ಗೆಳೆಯನೇ ದ್ರೋಹ ಮಾಡಿದ್ದರಿಂದ ಹತ್ಯೆಯಾಗಬೇಕಾಯಿತು. ಜಾನ್ಸಿರಾಣಿಯು ರಣರಂಗದಲ್ಲಿ ಮೃತ್ಯುವನ್ನಪ್ಪಿದಳು. ಹೀಗೆ ಬ್ರಿಟಿಷರು ಕ್ರಾಂತಿಯನ್ನು ಎಗ್ಗಿಲ್ಲದೇ ಬಗ್ಗು ಬಡಿದು ಭಾರತದಲ್ಲಿ ತಮ್ಮ ಅಧಿಕಾರವನ್ನು ಪುನಃ ಸ್ಥಾಪಿಸಿದರು.

ಕ್ರಾಂತಿಯಲ್ಲಿ ಜನತೆಯ ಒಟ್ಟು ಎಷ್ಟು ಭಾಗ ಪಾಲ್ಗೊಂಡಿದ್ದರೆಂಬ ಬಗ್ಗೆ ಇತಿಹಾಸಕಾರರಲ್ಲಿ ಅಭಿಪ್ರಾಯಭೇದವಿದೆ. ಸಮಕಾಲೀನ ಬ್ರಿಟಿಷ್ ಲೇಖಕರು ಹಾಗೂ ಅಂದಿನ ಘಟನೆಗಳ ಬಗ್ಗೆ ಅಧ್ಯಯನ ನಡೆಸಿದ ಬ್ರಿಟಿಷ್ ಲೇಖಕರು ಈ ಕ್ರಾಂತಿಯನ್ನು ಸಿಪಾಯಿದಂಗೆ ಎಂದು ಕರೆದರು. ಅವರ ಪ್ರಕಾರ ಸಿಪಾಯಿಗಳಿಗೆ ಬ್ರಿಟಿಷರ ವಿರುದ್ಧ ಹಲವಾರು ದೂರುಗಳಿದ್ದವು. ಸರ್ ಜಾನ್‌ಲಾರೆನ್ಸ್‌ರವರು ಬಂದೂಕಿನ ತೋಟಾಗಳ ಘಟನೆಯಿಂದಾಗಿಯೇ ಸಿಪಾಯಿ ದಂಗೆ ಉಂಟಾಯಿತೆಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯನ್ನು ಸಮರ್ಥಿಸಲು ಬ್ರಿಟಿಷ್ ಲೇಖಕರು ಪ್ರಯತ್ನಿಸಿದ್ದಾರೆ. ಆದ್ದರಿಂದಲೇ ಅವರು ಭಾರತಿಯರಿಗೆ ಬ್ರಿಟಿಷರ ವಿರುದ್ಧವಾಗಿ ಯಾವುದೇ ದೂರುಗಳೂ ಇರಲಿಲ್ಲವೆಂದು ವಾದಿಸಿದರು. ಅದಕ್ಕೇ ಅವರು ನಾನಾ ಸಾಹೇಬ, ರಾಣಿ ಲಕ್ಷ್ಮೀಬಾಯಿ ಹಾಗೂ ಇತರರನ್ನು ‘ಅನುಕೂಲ ಸಿಂಧು’ ಗಳೆಂದು ಹಣೆ ಚೀಟಿ ಅಂಟಿಸಿದ್ದಾರೆ. ಅವರು ಕಳೆದುಕೊಂಡಿದ್ದ ತಮ್ಮ ಸ್ಥಾನಮಾನವನ್ನು ಹಿಂಪಡೆಯಲು ಅಂಥದೊಂದು ಅವಕಾಶವನ್ನು ಹುಡುಕುತ್ತಿದ್ದರಿ. ಉದಾಹರಣೆಗೆ, ನಾನಾ ಸಾಹೇಬನ ದೇಶಭಕ್ತಿಯ ಬೆಲೆ ಕೇವಲ ೮೦,೦೦೦ ರೂಪಾಯಿಗಳಾಗಿತ್ತು (ಬ್ರಿಟಿಷರು ಅವನಿಗೆ ನೀಡುತ್ತಿದ್ದ ವಿಶ್ರಾಂತಿ ವೇತನವನ್ನು ರದ್ದುಗೊಳಿಸಿದ್ದರು). ಸರ್ಜಾನ್‌ಸೀಲೆಯ ಅಭಿಪ್ರಾಯದಂತೆ ಅದು “ಯಾವುದೇ ರಾಷ್ಟ್ರೀಯ ನಾಯಕತ್ವವಾಗಲಿ ಜನತೆಯ ಬೆಂಬಲವಾಗಲಿ ಇಲ್ಲದ ಸಂಪೂರ್ಣ ದೇಶಭಕ್ತಿರಹಿತ, ಸ್ವಾರ್ಥ ಸಿಪಾಯಿ ದಂಗೆಯಾಗಿತ್ತು. ಭಾರತೀಯರಿಗೆ ಶಿಸ್ತನ್ನು ಕಲಿಸಲು ಬ್ರಿಟಿಷ್ ಸರಕಾರ ಯತ್ನಿಸಿದಾಗ ಪಾಶವೀ ಶಕ್ತಿಗಳು ಅದನ್ನು ಧಿಕ್ಕರಿಸಿ ೧೮೫೭ರ ಕ್ರಾಂತಿಯನ್ನು ಅಭಿವ್ಯಕ್ತಿಸಿದವು ಎಂದು ಟಿ.ಆರ್.ಹೋಮ್ಸ್‌ನಂಥ ಸಾಮ್ರಾಜ್ಯವಾದಿ ಲೇಖಕರು ಅಭಿಪ್ರಾಯಪಟ್ಟಿದ್ದಾರೆ. ಪರ್ಸಿವಲ್ ಸ್ಪಿಯರ್‌ನಂತಹ ಆಧುನಿಕ ಇತಿಹಾಸಕಾರರು ತಮ್ಮ ಅಭಿಪ್ರಾಯವನ್ನು ಮಾರ್ಪಪಡಿಸಿಕೊಂಡು ಆಧುನಿಕತೆ ವಿರುದ್ಧ ಸಾಂಪ್ರದಾಯಿಕ ಹೋರಾಟ ಎಂದು ಹೇಳಿದರು.

ಬ್ರಿಟಿಷ್ ಲೇಖಕರು ಈ ಕ್ರಾಂತಿಯ ಮಹಮದೀಯ ಒಳಸಂಚಿನ ಪರಿಣಾಮವೆಂದು ವಿವರಿಸಿದರು. ಬ್ರಿಟಿಷರು ಭಾರತದಲ್ಲಿ ಮೊಗಲರ ಆಡಳಿತವನ್ನು ಕೊನೆಗಾಣಿಸಿದರು. ಆದ್ದರಿಂದ, ಭಾರತದಲ್ಲಿ ಮುಸ್ಲಿಮರು ತಮ್ಮ ಆಳ್ವಿಕೆಯನ್ನು ಮತ್ತೆ ಸ್ಥಾಪಿಸಬಯಸಿದರು. ಆದರೆ, ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರಿಂದ ಅವರು ಬ್ರಿಟಿಷರ ವಿರುದ್ಧವಾಗಿ ಹಿಂದೂಗಳ ಬೆಂಬಲವನ್ನೂ ಕೂಡ ಪಡೆದರು. ದಿಲ್ಲಿಯಲ್ಲಿ ಕ್ರಾಂತಿಯು ಆರಂಭವಾದಾಗ ಅವರು ಕೊನೆಯ ಮೊಗಲ್ ದೊರೆಯಾದ ಎರಡನೇ ಬಹದ್ದೂರ್‌ಷಾನನ್ನು ದಿಲ್ಲಿಯ ಸಿಂಹಾಸನದ ಮೇಲೆ ಕೂರಿಸಿದರು ಎಂಬುದಾಗಿ ವಾದಿಸುತ್ತಾರೆ.

ಬ್ರಿಟಿಷ್ ಲೇಖಕರ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿ ವಿ.ಡಿ.ಸಾವರ್ಕರ್‌ರಂಥ ರಾಷ್ಟ್ರೀಯವಾದಿ ಲೇಖಕರು ಕ್ರಾಂತಿಯನ್ನು “ಸ್ವಾತಂತ್ರ್ಯದ ಮೊದಲನೇ ಸಮರ” ಎಂದು ಕರೆದರು. ಈ ಯುದ್ಧದ ಪ್ರಮುಖ ಧ್ಯೇಯವೇ ಬ್ರಿಟಿಷರನ್ನು ಹೊರಗಟ್ಟುವುದೇ ಆಗಿತ್ತು. ಒಂದು ವೇಳೆ ಈ ಕ್ರಾಂತಿಯು ತೋಟಾಗಳಿಂದಾಗಿ ನಡೆದಿದ್ದಲ್ಲಿ, ಇಂಗ್ಲಿಷ್ ಗೌವರ್ನರ್ ಜನರಲ್‌ನು ಅವುಗಳನ್ನು ಇನ್ನು ಮುಂದೆ ಬಳಸಬಾರದೆಂಬುದಾಗಿ ಘೋಷಣೆಯನ್ನು ಹೊರಡಿಸಿದ್ದಲ್ಲಿ ಅದು ಕೂಡಲೇ ಸ್ಥಗಿತಗೊಳ್ಳುತ್ತಿತ್ತು. ಅವನು ಅವರು ಸ್ವಹಸ್ತದಿಂದಲೇ ತೋಟಾಗಳನ್ನು ತಯಾರಿಸಲು ಅನುಮತಿ ನೀಡಿದ್ದರು. ಇಲ್ಲಿ ಕೇವಲ ಸಿಪಾಯಿಗಳು ಮಾತ್ರವಲ್ಲ, ಸಾವಿರಾರು ಜನ ಶಾಂತಿಪ್ರಿಯ ನಾಗರಿಕರು, ಸೈನಿಕರೊಂದಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಂಪರ್ಕ ಹೊಂದಿರದಿದ್ದ, ರಾಜ ಮಹಾರಾಜರುಗಳೂ ಸಹ ಎಚ್ಚೆತ್ತುಕೊಂಡಿದ್ದರು ಎಂದು ವಾದಿಸುತ್ತಾರೆ. ಹೀಗೆ ೧೮೫೭ರ ಕ್ರಾಂತಿಯ ಶ್ರೇಷ್ಠವಾದ ಹಾಗೂ ಪವಿತ್ರ ಯುದ್ಧವಾಗಿತ್ತು. ಅವರು ಬ್ರಿಟಿಷ್ ಲೇಖಕರ ಕೃತಿಗಳಿಗೆ ಪಂಥವೊಡ್ಡಿ, ಬ್ರಿಟಿಷ್ ಅಧಿಕಾರಿಗಳಿಗೆ ಬದಲಾಗಿ,  ೧೮೫೭ರ ಕ್ರಾಂತಿಯ ವೀರರ ಬದಲಿ ಪಟ್ಟಿಯನ್ನು ನೀಡಿದರು.

ಎಸ್.ಬಿ.ಚೌಧರಿಯವರು ಈ ಆಂದೋಲನವನ್ನು ‘ಸಿವಿಲ್ ಮತ್ತು ಮಿಲಿಟರಿ ಕ್ರಾಂತಿಕಾರಿಗಳ ಐಕ್ಯಮತ್ಯ’ವೆಂದು ಹೆಸರಿಸಿದರು. ಎಲ್ಲೆಲ್ಲಿ ಮಿಲಿಟರಿ ದಂಗೆಗಳು ನಡೆದವೋ ಅಲ್ಲೆಲ್ಲ ಕೂಡಲೇ ನಾಗರಿಕ ಬಂಡಾಯಗಳೂ ನಡೆಯುತ್ತಿದ್ದವು. ಆದರೆ ಕೆಲವು ಸ್ಥಳಗಳಲ್ಲಿ ಸಿಪಾಯಿ ದಂಗೆಗಿಂತ ಮೊದಲು ನಾಗರಿಕ ಬಂಡಾಯವೇ ನಡೆದಿರುತ್ತಿ‌ತ್ತು. ಇಲ್ಲಿ ಅವರು ನಾಯಕರು ಹಾಗು ಆದರ್ಶವಾದದ ಬಗ್ಗೆ ಏನೂ ಹೇಳುವುದಿಲ್ಲ. ಜನೆತೆಯೇ ನಿಜವಾದ ನಾಯಕರಾಗಿದ್ದರು.

ಆರ್.ಸಿ. ಮಜುಮ್‌ದಾರ್‌೧೮೫೭ರ ಬಂಡಾಯವನ್ನು ಸಾಕಷ್ಟು ಕುತೂಹಲಕರವಾಗಿ ವರ್ಣಿಸುತ್ತಾರೆ. ಕ್ರಾಂತಿಯ ನಾಯಕರು ಅದರಲ್ಲೂ ಮುಖ್ಯವಾಗಿ ನಾನಾಸಾಹೇಬ ಮತ್ತು ಝಾನ್ಸಿರಾಣಿ ದೇಶಭಕ್ತಿಯ ಭಾವನೆಯಿಂದ ಹೋರಾಡಿದ್ದರೆಂಬ ಬಗ್ಗೆ ಯಾವುದೇ ಪುರಾವೆಯೂ ಕಾಣುವುದಿಲ್ಲ. ಅವರು ವೈಯಕ್ತಿಕ ನೋವು ಹಾಗೂ ಸ್ವಂತ ಹಿತಾಸಕ್ತಿಯಿಂದಾಗಿಯೇ ಕ್ರಾಂತಿಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಯಬಹುದು. ೧೮೫೭ರ ರಾಷ್ಟ್ರೀಯತಾ ಪ್ರಜ್ಞೆಯು ಇರಲಿಲ್ಲವೆಂದು ಅವರು ದೃಢವಾಗಿ ಪ್ರತಿಪಾದಿಸುತ್ತಾರೆ. ೧೯ನೆಯ ಶತಮಾನದ ಅಂತ್ಯದಲ್ಲಿ ಹಾಗು ೨೦ನೆಯ ಶತಮಾನದ ಆರಂಭದಲ್ಲಿ ರಾಷ್ಟ್ರೀಯತೆಯ ಭಾವನೆ ಸ್ಫುರಿಸಿತೆಂದು ಅವರು ಹೇಳುತ್ತಾರೆ. ಆದ್ದರಿಂದ  “ಅದು ಭಾರತದ ಸ್ವಾತಂತ್ರ್ಯದ ಮೊಲನೆಯ ಯುದ್ಧವಾಗಲಿ ಅಥವಾ ಅದು ಭಾರತದ ಸ್ವಾತಂತ್ರ್ಯ ಸಮರವಾಗಲಿ ಆಗಿರಲಿಲ್ಲ”ವೆಂದು ವಾದಿಸುತ್ತಾರೆ.

ಎಸ್.ಬಿ.ಸೇನ್ ಅವರು ಆ ಕ್ರಾಂತಿಯನ್ನು ಪ್ರಾರಂಭಿಸುವ ಮುನ್ನ ಯಾವುದೇ ಜಾಗರೂಕತೆಯ ಯೋಜನೆ ಮಾಡಲಾಗಿತ್ತೆಂಬುದನ್ನು ಅಲ್ಲಗೆಳೆಯುತ್ತಾರೆ. ಕ್ರಾಂತಿಯ ಮುಂಚಿನ ಅಥವಾ ಅನಂತರ ಯಾವುದೇ ಸುಸಂಘಟಿತ ಸಂಚು ಇದ್ದಿತೆಂಬುದನ್ನು ಸೂಚಿಸುವ ಯಾವುದೇ ಕಾಗದದ ಚೂರು ಕೂಡ ಲಭ್ಯವಿಲ್ಲವೆಂಬುದನ್ನು ಅದು ಎಲ್ಲ ಸ್ಥಳಗಳಲ್ಲೂ ಕೇವಲ ಸೈನಿಕರಿಗೆ ಮಾತ್ರವೇ ಸೀಮಿತವಾಗಿರಲಿಲ್ಲ. ಸೈನಿಕರು ಒಟ್ಟಾಗಿ ಕ್ರಾಂತಿಗೆ ಧುಮುಕಲಿಲ್ಲ. ಗಣನೀಯ ಸಂಖ್ಯೆಯ ಸೈನಿಕರು ಸರ್ಕಾರದ ಪರವಾಗಿಯೇ ಸಕ್ರಿಯವಾಗಿ ಹೋರಾಡಿದರು. ೧೮೫೭ರ ಯುದ್ಧದಲ್ಲಿ ಯಾವುದೇ ನೈತಿಕ ವಿವಾದಾಂಶಗಳೂ ಇರಲಿಲ್ಲ. ಆದಾಗ್ಯೂ, ಆಳುವವರ ಅಥವಾ ಆಳಿಸಿಕೊಂಡವರ ನಡುವೆ ಇತಿಹಾಸ, ಜಾತಿ, ಭಾಷೆ ಹಾಗೂ ಧರ್ಮದ ಯಾವುದೇ ಸಮಾನ ಅಂಶಗಳಿರದಿದ್ದುದರಿಂದ ದಂಗೆಯು ಅನಿವಾರ್ಯವೇ ಆಗಿತ್ತು.

ಎರಿಕ್‌ಸ್ಟೋಕ್ಸ್‌ರವರು ಉತ್ತರ ಪ್ರದೇಶದಲ್ಲಿ ನಡೆದ ಬಂಡಾಯದ ಬಗ್ಗೆ ಪ್ರಾಯೋಗಿಕ ಅಧ್ಯಯನ ಮಾಡಿದ್ದಾರೆ. ಸಾಮ್ರಾಜ್ಯಶಾಹಿಗಳು ಗ್ರಾಮೀಣ ಮುಗ್ಧ ಜನತೆಯ ಹಿತಾಸಕ್ತಿಯ ಶೋಷಣೆ ಮಾಡಿದ್ದರಿಂದ ರೈತರು ಮತ್ತು ಕಾರ್ಮಿಕರು ಅವರನ್ನು ‘ಕುರಿಗಳಂತೆ’ ಹಿಂಬಾಲಿಸಿದರು ಎಂದು ಹೇಳುತ್ತಾರೆ.

ಜನತಾ ಪ್ರತಿಭಟನೆಯ ಸಾಮ್ರಾಜ್ಯಶಾಹಿಯ ವಿರುದ್ಧ ಹಾಗೂ ಆ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಜಾರಿಯಲ್ಲಿದ್ದ ಜಮೀನ್ದಾರಿ ಪದ್ಧತಿಯ ದ್ವಿಶಕ್ತಿಗಳ ಸಂಯೋಗವನ್ನು ಪ್ರತಿಬಿಂಬಿಸಿತ್ತು. ವಿದೇಶ ಆಳ್ವಿಕೆಯ ಸಂಕೇತಗಳಾದ ಪೊಲೀಸ್‌ಠಾಣೆ, ರೈಲ್ವೇ ಹಳಿ ಹಾಗೂ  ಟೆಲಿಗ್ರಾಫ್ ತಂತಿಗಳನ್ನು ನಾಶಪಡಿಸಲಾಗಿತ್ತು. ೧೮೫೭ರ ಬಂಡಾಯದೊಂದಿಗೆ ಬೆರೆತ ಜನತಾ ಆಂದೋಲನದ ಬಗ್ಗೆ ನಮಗೆ ಹೊಸ ತೆರಿಗೆ ಪದ್ಧತಿಗೆ ಸಹಜವಾಗಿಯೇ ಮೂಡಿದ ವಿರೋಧವನ್ನು ದಾಖಲೆಗಳು ಹಾಗೂ ಲೆಕ್ಕದ ಪುಸ್ತಕಗಳನ್ನು ನಾಶಪಡಿಸುವ ಮೂಲಕ ವ್ಯಕ್ತವಾಗಿರುವ ಬಗ್ಗೆ ನಮಗೆ ಸಾಕ್ಷಿ ಸಿಗುತ್ತವೆ. ವಿದೇಶೀಯರೇ ಅವರ ಸೇಡಿನ ಮೊದಲ ಗುರಿಯಾಗಿದ್ದರು. ಆದಾಗ್ಯೂ, ಅವರ ನಂತರ ಲೇವಾದೇವಿಗಾರರು, ಹರಾಜು ಮೂಲಕ ಭೂಮಿಯನ್ನು ಖರೀದಿಸಿದವರು, ಬ್ಯಾಂಕರುಗಳು ಹಾಗೂ ಕೆಲವು ಪ್ರದೇಶಗಳಲ್ಲಿ ವರ್ತಕರಂತಹ ಭಾರತೀಯ ಬ್ರಿಟಿಷ್ ಬೆಂಬಲಿಗರ ಮೇಲೆ ಕೂಡ ದಾಳಿ ನಡೆದಿತ್ತು.

೧೮೫೭ರ ನಂತರದ ಜನತಾ ಆಂದೋಲನಗಳು

೧೮೫೭ರ  ದಂಗೆಯನ್ನು ಹತ್ತಿಕ್ಕಿದ ತರುವಾಯವೂ ಕೂಡ ಜನತಾ ಪ್ರತಿರೋಧವು ಕೊನೆಗೊಳ್ಳಲಿಲ್ಲ. ಭಾರತದಾದ್ಯಂತ ರೈತರು ಹಾಗು ಗುಡ್ಡಗಾಡು ಜನರು ಸಂಘಟಿಸುತ್ತಿದ್ದ ಹಲವಾರು ಚಳವಳಿಗಳು ನಡೆದೇ ಇದ್ದವು. ವಸಾಹತುಶಾಹಿಯ ಆರ್ಥಿಕ ಕಾರ್ಯ ನೀತಿ, ಹೊಸ ಭೂ ಕಂದಾಯ ಪದ್ಧತಿ, ವಸಾಹತುಶಾಹಿಯ ಆಡಳಿತ ಹಾಗೂ ನ್ಯಾಯಿಕ ಪದ್ದತಿಗಳಿಂದ ಹಾಗೂ ಕರಕುಶಲ ಕೈಗಾರಿಕೆಗಳನ್ನು ಸಂಪೂರ್ಣ ನಾಶಗೊಳಿಸಿದ್ದರ ಪರಿಣಾಮವಾಗಿ ಭೂಮಿಯ ಹಂಚಿಕೆಗಾಗಿ ಜನರ ನೂಕುನುಗ್ಗಾಟವಾಗಿ, ರೈತರು ಹಾಗೂ ಗ್ರಾಮೀನ ಜನರು ಸಂಪೂರ್ಣವಾಗಿ ನೆಲಕ್ಕೆ ಕುಸಿದರು. ಈ ಶೋಷಣೆಯನ್ನು ಸಹಿಸಿಕೊಳ್ಳಲಾರದ ಜನ ಪ್ರತಿಭಟಿಸಿದರು ಇಲ್ಲವೇ ತಮ್ಮ ಮೇಲಿನ ಶೋಷಣೆ ಮಾಡುತ್ತಿದ್ದವರನ್ನು, ಅವರು ದೇಶೀಯರೇ ಆಗಿರಲಿ ಅಥವಾ ಬ್ರಿಟಿಷರೇ ಆಗಿರಲಿ, ಎಲ್ಲರಿಗೂ ಮುತ್ತಿಗೆ ಹಾಕಿದರು.

ನೀಲಿ(ಇಂಡಿಗೊ) ಗಲಭೆಗಳು: ರೈತ ಚಳವಳಿಗಳ ಅತ್ಯಂತ ಉಗ್ರ ಹಾಗೂ ವ್ಯಾಪಕವಾದ ಚಳವಳಿ ೧೮೫೯-೬೦ರಲ್ಲಿ ನಡೆದ ನೀಲಿ ಗಲಭೆಯಾಗಿತ್ತು. ಈಸ್ಟ್ ಇಂಡಿಯಾ ಕಂಪನಿಯು ೧೭೭೦ರಷ್ಟು ಹಿಂದೆಯೇ ನೀಲಿ ಬೆಳೆಯ ಪ್ಲಾಂಟೇಷನ್ನು ಸ್ಥಾಪಿಸಿತ್ತು. ಬಹುಪಾಲು ಯುರೋಪಿಯನ್ನರೇ ಇದ್ದ ನೀಲಿ ಪ್ಲಾಂಟರುಗಳು ನಷ್ಟದಲ್ಲಿದ್ದರೂ ನೀಲಿ ಬೆಳೆಯನ್ನೇ ಸಾಗುವಳಿ ಮಾಡಲು ಗೇಣಿದಾರರನ್ನು ಒತ್ತಾಯ ಪಡಿಸುತ್ತಿದ್ದರು. ಜೀವನಾಧಾರವಾದ ಆಹಾರ ಧಾನ್ಯಗಳನ್ನು ಬೆಳೆಯಲು ಆಸ್ಪದವಿಲ್ಲದಿದ್ದ ರೈತರಲ್ಲಿ ಇದು ಬಹಳಷ್ಟು ಅಸಮಾಧಾನವುಂಟಾಗಲು ಕಾರಣವಾಯಿತು. ಇನ್ನು ಸಾಗಣೆ ಕಾಲದಲ್ಲಿ ಅವರಿಗೆ ಸಲ್ಲಬೇಕಾಗಿದ್ದ ಕಡಿಮೆ ಬೆಲೆಯನ್ನೂ ಕೊಡದೆ ಮೋಸ ಮಾಡಲಾಗುತ್ತಿತ್ತು. ಈ ಮುಂಗಡ ಹಣ ಪಡೆಯಲು ಅವರನ್ನು ಬಲಾತ್ಕರಿಸಲಾಗುತ್ತಿತ್ತು. ಈ ಮುಂಗಡ ಸಂದಾಯವನ್ನು ಪ್ಲಾಂಟರುಗಳು ರೈತರನ್ನು ನೀಲಿಯನ್ನೇ ಬೆಳೆಯುವಂತೆ ಒತ್ತಾಯಪಡಿಸಲು ಬಳಸಿಕೊಳ್ಳುತ್ತಿದ್ದರು.

೧೮೫೯ರ ವೇಳೆಗೆ ಸಾವಿರಾರು ಜನ ರೈತರು ತಮ್ಮ ಕಾರ್ಮಿಕರ ಸಂಘಟನೆಗಳನ್ನು ನೀಲಿ ಪ್ಲಾಂಟೇಷನ್‌ಗಳಿದ್ದ ಎಲ್ಲ ಜಿಲ್ಲೆಗಳಲ್ಲೂ ವ್ಯಾಪಕವಾಗಿ ನಡೆಸಿ ಪ್ಲಾಂಟರುಗಳ ಬಲಾತ್ಕಾರವನ್ನು ಹಾಗೂ ಅವರ ಸಶಸ್ತ್ರದಳಗಳನ್ನೂ ಎದುರಿಸಿದರು. ಇದರ ಪ್ರಾರಂಭವಾದದ್ದು ನೈದಾ ಜಿಲ್ಲೆಯ ಗೋವಿಂದಪುರ ಗ್ರಾಮದ ಗಲಭೆಗಳಲ್ಲಿ. ಅಲ್ಲಿಯ ರೈತರು ನೀಲಿಯನ್ನು ಬೆಳೆಯಲಿಲ್ಲ. ಪ್ಲಾಂಟರನು ಅವರ ಗ್ರಾಮವನ್ನು ಮುತ್ತಲು ಸಶಸ್ತ್ರದಳವನ್ನು ಕಳುಹಿಸಿದಾಗ ರೈತರು ಲಾಠಿ ಮತ್ತು ಈಟಿಗಳನ್ನು ಹಿಡಿದ ಮತ್ತೊಂದು ಪಡೆಯನ್ನು ಸಂಘಟಿಸಿಕೊಂಡು ಹೋರಾಡಿದರು. ಅದು ಕ್ಷಿಪ್ರದಲ್ಲೇ ಎಲ್ಲೆಡೆಗೂ ಹರಡಿತು. ರೈತರು ಇಂಡಿಗೊವನ್ನು ಬೆಳೆಯಲು ನಿರಾಕರಿಸಿದರು. ಒಂದಾದ ನಂತರ ಒಂದರಂತೆ ಅವರು ಇಂಡಿಗೋ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಿದರು.

‘ಬೆಂಗಾಲ’ಯಂಥ ಆ ಕಾಲದ ವೃತ್ತಪತ್ರಿಕೆಗಳಲ್ಲಿ ಈ ಆಂದೋಲನಕ್ಕೆ ಸಾಕಷ್ಟು ಪ್ರಚಾರ ದೊರೆತು ಚಳವಳಿಯು ಯಶಸ್ವಿಯಾದ ಬಗೆಯನ್ನೂ ವರದಿ ಮಾಡಲಾಗಿತ್ತು. ದೀನಬಂಧು ಮಿತ್ರ ಅವರು ಬಂಗಾಲಿಯಲ್ಲಿ ನೀಲಿ ದರ್ಪಣ ಎಂಬ ನಾಟಕವನ್ನು ಬರೆದಿದ್ದು ಅದರಲ್ಲಿ ರೈತರ ಬವಣೆಯನ್ನು ಎತ್ತಿ ಹಿಡಿಯಲಾಗಿತ್ತು.

ಈ ಬಂಡಾಯಕ್ಕೆ ಸರ್ಕಾರದ ಪ್ರತಿಕ್ರಿಯೆ ಕೇವಲ ನಿಯಂತ್ರಣಾತ್ಮಕವಾಗಿದ್ದಿತೇ ವಿನಃ ಆ ಇತರ ನಾಗರಿಕ ದಂಗೆ ಅಥವಾ ಗುಡ್ಡಗಾಡು ಜನರ ಗಲಭೆಗಳಲ್ಲಿದ್ದಂತೆ ಕಠೋರವಾಗಿರಲಿಲ್ಲ. ಅದು ೧೮೬೦ರಲ್ಲಿ ಅಧಿಕೃತ ವಿಚಾರಣೆ ನಡೆಸಿ ಅಧಿಸೂಚನೆಯನ್ನು ಹೊರಡಿಸುವ ಮೂಲಕ ರೈತರನ್ನು ಇಂಡಿಗೊ ಬೆಳೆಯಲು ಒತ್ತಾಯಪಡಿಸಲು ಸಾಧ್ಯವಿಲ್ಲ ಹಾಗೂ ಎಲ್ಲ ವಿವಾದಗಳನ್ನು ನ್ಯಾಯ ರೀತಿಯಿಂದ ಇತ್ಯರ್ಥ ಮಾಡಲಾಗುವುದೆಂದು ಖಚಿತಪಡಿಸಿತು. ಅಷ್ಟೇ ಅಲ್ಲ, ಈ ಚಳವಳಿಯಿಂದಾಗಿ ಕೆಳ ಬಂಗಾಲದಲ್ಲಿದ್ದ ಪ್ಲಾಂಟೇಷನ್ ಪದ್ಧತಿಯನ್ನೇ ಬಗ್ಗುಬಡಿದು ಪ್ಲಾಂಟರುಗಳೆಲ್ಲ ಬಲವಂತವಾಗಿ ಬಿಹಾರಕ್ಕೆ ವಲಸೆ ಹೋಗುವಂತಾಯಿತು.

ಮಾಪಿಳ್ಳ ದಂಗೆ : ೧೮೫೦-೧೯೦೦ ರ ಅವಧಿಯಲ್ಲಿ ಮಲಬಾರ್ ಪ್ರಾಂತ್ಯದಲ್ಲಿ ಹಲವಾರು ಮಾಪಿಳ್ಳ ದಂಗೆಗಳು ಒಂದರ ನಂತರ ಒಂದರಂತೆ ನಡೆದುದನ್ನು ನಾವು ಕಾಣುತ್ತೇವೆ. ಪೊಲೀಸ್ ನ್ಯಾಯಾಲಯ ಮತ್ತು ರೆವಿನ್ಯೂ ಅಧಿಕಾರಿಗಳ ಬೆಂಬಲ ಪಡೆದ ಜೆನ್ಮಿ ಭೂಮಾಲೀಕರು ಮಾಪಿಳ್ಳ ರೈತರನ್ನು ತಮ್ಮ ವಜ್ರಮುಷ್ಠಿಯಲ್ಲಿ ಹಿಡಿದಿಟ್ಟು ಕೊಂಡಿದ್ದರು. ರೈತರು ಭೂಮಾಲೀಕರು ಹಿಂದೂಗಳು ಹಾಗೂ ರೈತರು ಮುಸ್ಲಿಮರಾಗಿದ್ದುದರಿಂದ  ಈ ಬಡವ ಬಲ್ಲಿದರ ನಡುವಣ ಸಂಘರ್ಷಕ್ಕೆ ಇಂಗ್ಲಿಷ್ ಸರ್ಕಾರವು ಮತೀಯ ವೈಷಮ್ಯದ ಬಣ್ಣವನ್ನು ಹಚ್ಚಿತು. ಭೂಮಾಲೀಕರು ರೈತರ ಒಗ್ಗಟ್ಟನ್ನು ಮುರಿಯಲು ಬಂಡುಕೋರರ ದೇಹಗಳನ್ನು ಸುಟ್ಟು ಹಾಕಿದರು. ಆದರೆ ರೈತರು ಇಂಥ ಕೃತ್ಯಗಳಿಗೆ ತಕ್ಕ ಪ್ರತೀಕಾರ ಮಾಡದೆ ಇರಲಿಲ್ಲ. ೧೮೭೫ರಲ್ಲಿ  ಮಾಪಿಳ್ಳೆ ರೈತನೊಬ್ಬ ಮದರಾಸ್ ಸರ್ಕಾರಕ್ಕೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲಾಯಿತು. ಆದಾಗ್ಯೂ ೧೮೮೨ ಮತ್ತು ೧೮೮೫ರ ಅವಧಿಯಲ್ಲಿ ಮತ್ತೊಮ್ಮೆ ಬಂಡಾಯಗಳು ಕಾಣಿಸಿಕೊಂಡಿದ್ದಲ್ಲದೆ ರೈತರು ಭೂಮಾಲೀಕರ ಸ್ವತ್ತುಗಳನ್ನು ಲೂಟಿ ಮಾಡಿ ಅವರ ಮನೆಗಳನ್ನೂ ಸುಟ್ಟು ಹಾಕಿದರು. ಅದರ ಜೊತೆಗೆ ಹಿಂದೂ ದೇವಾಲಯಗಳನ್ನು ಹಾಳುಗೆಡವಿದರು. ೧೮೮೬ರ ವೇಳೆಗೆ ಮಾಪಿಳ್ಳ ರೈತರ ಹೋರಾಟವು ಉಗ್ರಮತೀಯ ವೈಷಮ್ಯದ ಸ್ವರೂಪವನ್ನು ಪಡೆದುಕೊಂಡಿತ್ತು.

ಪೂನಾ ಮತ್ತು ಅಹಮದ್ ನಗರಗಳಲ್ಲಿ ದಂಗೆ

ಮಹಾರಾಷ್ಟ್ರ ರಾಜ್ಯದ ಪೂನಾ ಮತ್ತು ಅಹಮದ್ ನಗರಗಳಲ್ಲಿ ಕೂಡ ೧೮೭೫ರಲ್ಲಿ ರೈತ ದಂಗೆಗಳು ಕಾಣಿಸಿಕೊಂಡಿದ್ದವು. ೧೮೬೭ರಲ್ಲಿ ಹತ್ತಿ ರಫ್ತಿನಲ್ಲಿ ಕುಸಿತ ಹಾಗೂ ಹತ್ತಿ ಬೆಲೆಗಳಲ್ಲಿ ಇಳಿಮುಖವಾಗಿದ್ದಾಗ ಸರ್ಕಾರವು ಶೇ.೫೦ರಷ್ಟು ಭೂಕಂದಾಯವನ್ನು ಏರಿಸಿತು. ಇಂಥ ಪರಿಸ್ಥಿತಿಯಲ್ಲಿ ರೈತನು ಸಹಜವಾಗಿಯೇ ಲೇವಾದೇವಿಗಾರನ ಹತ್ತಿರ ಹೋಗಬೇಕಾಗುತ್ತಿತ್ತು ಹಾಗು ಲೇವಾದೇವಿಗಾರನಿಗೆ ರೈತನ ಭೂಮಿಯನ್ನು ನುಂಗಿಹಾಕಲು ಇದು ಸದವಕಾಶ ಕಲ್ಪಿಸಿತು. ಇದರಿಂದ ರೈತರು ಹಾಗೂ ಬಹುಮಟ್ಟಿಗೆ ಹೊರಗಿನವರು ಮಾರವಾಡಿ ಅಥವಾ ಗುಜರಾತಿಗಳೇ ಇದ್ದ ಲೇವಾದೇವಿಗಾರರಲ್ಲಿ ಒಂದು ಬಗೆಯ ಕಳವಳ ಹೆಚ್ಚಲಾರಂಭಿಸಿತು. ಪ್ರಾರಂಭದಲ್ಲಿ ರೈತರು ಮತ್ತು ಇಡೀ ಗ್ರಾಮಸೇವಕರು ಲೇವಾದೇವಿಗಾರರಿಗೆ ಬಹಿಷ್ಕಾರ ಹಾಕಿದರು. ಇದು ಮೊದಲು ಸಿರೂರು ತಾಲೂಕಿನ ಕರ್ದಾ ಗ್ರಾಮದಲ್ಲಿ ಪ್ರಾರಂಭವಾಗಿ ಅನಂತರ ಪೂನಾ, ಅಹಮದ್‌ನಗರ, ಶೋಲಾಪುರ ಮತ್ತು ಸಪಾರಾ ಜಿಲ್ಲೆಗಳ ಗ್ರಾಮಗಳಿಗೂ ಹರಡಿತು. ಈ ಸಾಮಾಜಿಕ ಬಹಿಷ್ಕಾರವು ಪರಿಣಾಮ ಬೀರದ್ದರಿಂದ, ರೈತರು ನೇರವಾಗಿಯೇ ಲೇವಾದೇವಿಗಾರರನ್ನು ಮುತ್ತಿಗೆ ಹಾಕಲು ಅವರ ಮನೆ, ಅಂಗಡಿಗಳಿಗೆ ಮುತ್ತಿಗೆ ಹಾಕಿ ಋಣಪತ್ರ ಹಾಗೂ ಸಾಲದ ಪತ್ರಗಳನ್ನು ಸುಟ್ಟು ಹಾಕಿದರು. ಕೆಲವೇ ದಿನಗಳಲ್ಲಿ ಈ ಉಪಟಳಗಳು ಪೂನಾ ಮತ್ತು ಅಹಮದ್ ನಗರಗಳ ಇತರ ಹಳ್ಳಿಗಳಿಗೂ ಹಬ್ಬಿತು. ಸರ್ಕಾರವು ಕೂಡಲೇ ಕ್ರಮ  ತೆಗೆದುಕೊಂಡು ಕ್ಷಿಪ್ರದಲ್ಲಿಯೇ  ಈ ಚಳವಳಿಯನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಯಿತು. ಅಲ್ಲಿನ್ನೂ ವಸಾಹತುಶಾಹಿ ವಿರೋಧದ ಜಾಗೃತಿಯುಂಟಾಗಿರದುದ್ದದರಿಂದ  ೧೮೭೯ರ ಡೆಕ್ಕನ್ ಕೃಷಿಕರ ಪರಿಹಾರ ಅಧಿನಿಯಮದ ಮೂಲಕ ರೈತರಿಗೆ ಲೇವಾದೇವಿಗಾರರ ವಿರುದ್ಧ ರಕ್ಷಣೆ ನೀಡಿತು.

ಪಾಟ್ನಾ ಬಂಡಾಯ: ಪೂರ್ವ ಬಂಗಾಲದಲ್ಲಿ ೧೮೭೩ ಮತ್ತು ೧೮೮೫ರ ನಡುವಿನ ಅವಧಿಯಲ್ಲಿ ರೈತ ದಂಗೆ ನಡೆದಿತ್ತು. ಪಾಟ್ನಾದ ರೈತರು ಗೇಣಿ ಏರಿಕೆಗೆ ಆಕ್ಷೇಪವೆತ್ತಲಿಲ್ಲ. ಆದರೆ, ಒಕ್ಕಲು ತಮ್ಮ ಅಧಿಭೋಗ ಹಕ್ಕುಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಜಮೀನ್ದಾರರು ತಪ್ಪಿಸಿದಾಗ ಅವರು ಪ್ರತಿಭಟಿಸಿದರು. ಭೂಮಿಯ ಅಧಿಭೋಗದಾರ ಒಕ್ಕಲುಗಳನ್ನು ಮನಸೋಯಿಚ್ಛೆಯಾಗಿ ಬಲಾತ್ಕಾರವಾಗಿ ಲಿಖಿತ ಒಪ್ಪಂದಗಳ ಮೂಲಕ ಗೇಣಿದಾರರನ್ನಾಗಿ ಪರಿವರ್ತಿಸಲಾಗುತ್ತಿತ್ತು. ಅಲ್ಲದೆ ತ್ರಿಪುರಾದಂಥ ಅನೇಕ ಸ್ಥಳಗಳಲ್ಲಿ ಅಕ್ರಮ ಬಾಕಿಗಳನ್ನು ತೋರಿಸುವ ಸಮಸ್ಯೆ ಕೂಡ ಎ‌ದ್ದಿತ್ತು. ೧೮೭೩ರಲ್ಲಿ ಪಾಟ್ನಾ ರೈತರು ‘ರೈತ ಸಂಘ’ ವೊಂದನ್ನು ರಚಿಸಿಕೊಂಡರು. ಇದು ಅಲ್ಪ ಕಾಲದಲ್ಲೇ ಇಡೀ ಜಿಲ್ಲೆಯಲ್ಲಿ ವ್ಯಾಪಿಸಿತು. ಈ ಸಂಘವು ಗೇಣಿ ಮುಷ್ಕರವನ್ನು ಹಮ್ಮಿಕೊಂಡು ಜಮೀನ್ದಾರರನ್ನು ನ್ಯಾಯಾಲಯಗಳಲ್ಲಿ  ಪ್ರಶ್ನಿಸಿತು. ಅಲ್ಲಿ ಹಿಂಸೆ ಅತಿ ಕಡಿಮೆಯಿತ್ತು. ಅಲ್ಲದೆ ರೈತರು ಆಡಳಿತ ವರ್ಗವನ್ನು ವಿರೋಧಿಸಲಿಲ್ಲ. ಹೀಗಾಗಿ ವಸಾಹತು ಸರ್ಕಾರವು ರೈತರ ಬಗ್ಗೆ ಸಹಾನುಭೂತಿಯುತವಾಗಿತ್ತು. ೧೮೮೫ರಲ್ಲಿ ಅದು ಬಂಗಾಲ ಗೇಣಿದಾರಿಕೆ ಅಧಿನಿಯಮವನ್ನು ಜಾರಿಗೊಳಿಸಿತು.

ಕೋಯಾಬಂಡಾಯ: ೧೮೭೯-೧೮೮೦ರಲ್ಲಿ ಈಗಿನ ಆಂಧ್ರದ ಗೋದಾವರಿ ನದಿಯ ಪೂರ್ವ ಭಾಗದಲ್ಲಿ ಹಾಗೂ ಒರಿಸ್ಸಾದಲ್ಲಿನ ಕೋರಾಪುತ್ ಪ್ರದೇಶದ ಮಲ್ಕ್‌ನ ಗಿರಿ ಭಾಗಗಳಲ್ಲಿ ಕೋಯಾ ಬಂಡಾಯವೆದ್ದಿತ್ತು. ಕೋಯಾ ಮುಖಂಡವಾದ ತಮ್ಮ ದೊರೆ ಎಂಬುವನು ಈ ಚಳವಳಿಯ ನಾಯಕತ್ವ ವಹಿಸಿದ್ದನು. ಈ ಚಳವಳಿಯಲ್ಲಿ ತ್ರಿಬಾಲರು ಎದುರಿಸಬೇಕಾಗಿದ್ದ ಅರಣ್ಯಗಳ ಮೇಲಿನ ಸುಂಕದ ಹಕ್ಕುಗಳ ರದ್ದಿಯಾತಿ, ಸಾಲ ಹಾಗೂ ಭೂ ವರ್ಗಾವಣೆ ಮೂಲಕ ಕೋಯಾಗಳ ಜೀವನವನ್ನೇ ನಿಯಂತ್ರಸುತ್ತಿದ್ದ ಲೇವಾದೇವಿದಾರರ ಸುಲಿಗೆ ಪ್ರವೃತ್ತಿಗಳಂಥ ಸಮಸ್ಯೆಗಳನ್ನು ಎತ್ತಿಹಿಡಿಯಲಾಗಿತ್ತು. ಆದರೆ ಪೋಲೀಸರು ತೊಮ್ಮ ದೊರೆಯನ್ನು ಗುಂಡಿಕ್ಕಿ ಕೊಂದದ್ದರಿಂದ  ಚಳವಳಿಯೂ ತಣ್ಣಗಾಯಿತು.

ಬೀರ್ ಸಾ ಮುಂಡಾ ಕ್ರಾಂತಿ: ಬೀರ್ ಸಾಮುಂಡಾ ಎಂಬುವನ ಮುಂದಾಳತ್ವದಲ್ಲಿ ಮುಂಡಾ ಗುಡ್ಡಗಾಡು ಜನರ ದಂಗೆಯು ೧೮೮೮-೧೯೦೦ ರಲ್ಲಿ ನಡೆಯಿತು. ಈ ಚಳವಳಿಯು ದಕ್ಷಿಣ ಬಿಹಾರದ ಚೋಟಾನಾಗಪುರ್ ಪ್ರದೇಶದಲ್ಲಿ ಸುಮಾರು ೪೦೦ ಚ.ಮೈಲಿಗಳವರೆಗೂ ವ್ಯಾಪಿಸಿತ್ತು. ಸುಂಕದ ಹಕ್ಕುಗಳ  ರದ್ದಿಯಾಗಿ, ಬಲತ್ಕಾರದ ಕೆಲಸ, ವಸಾಹತು ಕಾನೂನುಗಳೇ ಮುಂತಾದುವು ಆ ಜನರ ಸಾಮಾನ್ಯ ಬದುಕಿನ ಮೇಲೆ ಪರಿಣಾಮ ಬೀರಿದ್ದವು. ಈ ಗುಡ್ಡಗಾಡು ಜನರು ಆರಂಭದ ಹಂತದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಒಪ್ಪಿಕೊಂಡಿದ್ದರಲ್ಲದೆ ಜರ್ಮನ್ ಪಾದ್ರಿಗಳು ಜಮೀನ್ದಾರರ ಭ್ರಷ್ಟಾಚಾರಗಳನ್ನು ಪಡೆದು ಎಲ್ಲವನ್ನೂ ಸರಿಪಡಿಸುವರೆಂದು ಅವರು ನಂಬಿದ್ದರು. ಆದರೆ ಶೀಘ್ರವಾಗಿ ಅವರು ತಮ್ಮ ಆಸೆಯನ್ನು ಕಳೆದುಕೊಂಡರು. ಈ ಸಂದರ್ಭದಲ್ಲಿ ಬೀರ್ ಸಾ ಮುಂಡಾ ಎಂಬುವವನು ಮುಂಡಾ ಜನರ ಮುಂದಾಳ್ತನ ವಹಿಸಿಕೊಂಡನು. ಅವನು ಹಳ್ಳಿಯಿಂದ ಹಳ್ಳಿಗೆ ಅಲೆದು ರಾಲಿಗಳನ್ನು ನಡೆಸುತ್ತ ಮತೀಯ ಮತ್ತು ರಾಜಕೀಯ ಆಧಾರದಿಂದ ತನ್ನ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದನು. ೧೮೯೯ರಲ್ಲಿ  ಅಲ್ಲಿ ಮುಂಡಾ ಆಡಳಿತವನ್ನು ಸ್ಥಾಪಿಸಲೋಸುಗ ಕ್ರಾಂತಿಯನ್ನು ಮಾಡಿಸಿದನಲ್ಲದೆ ದಿಕೂದಾರರು ಮತ್ತು ಜಾಗೀರುದಾರರು, ರಾಜರು ಮತ್ತು ಕ್ರಿಶ್ಚಿಯನ್ನರನ್ನು ಕೊಲ್ಲಲು ಜನರನ್ನು ಹುರಿದುಂಬಿಸಿದನು. ಕತ್ತಿ, ಈಟಿ, ಯುದ್ಧಗೊಡಲಿ ಹಾಗೂ ಬಿಲ್ಲು ಬಾಣಗಳನ್ನು ಹಿಡಿದ ೬೦೦೦ ಜನರ ಪಡೆಯನ್ನು ಹೊಂದಿದ್ದನು. ಆದರೂ ಅವನು ಬಂಧಿತನಾಗಿ ಸೆರೆಮನೆಯಲ್ಲಿ ಮೃತನಾದನಲ್ಲದೆ ದಂಗೆಯೂ ಅಲ್ಲಿಗೆ ಕೊನೆಗೊಂಡಿತು.

ವಸಾಹತುಶಾಹಿಯ ಕಾರ್ಯನೀತಿಗಳು ರೈತರು, ಗುಡ್ಡಗಾಡು ಜನರು ಹಾಗೂ ಕಾರ್ಮಿಕರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಿತು. ಅವರನ್ನು ವಸಾಹತುಶಾಹಿ ಸರ್ಕಾರ, ಭೂಮಾಲೀಕರು ಮತ್ತು ಹಣ ಸಾಲ ಕೊಡುವವರು ಇವರೆಲ್ಲ ಶೋಷಣೆ ಮಾಡುತ್ತಿದ್ದರು. ಶೋಷಿತ ಜನರು ದಂಗೆಯೇಳುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ವಸಾಹತುಶಾಹಿ ಸರ್ಕಾರವು ಈ ದಂಗೆಗಳನ್ನು ಡಕಾಯಿತಿ, ಗಲಭೆ, ದಂಗೆ ಇತ್ಯಾದಿ ಗಳೆಂದು ವರ್ಣಿಸುತ್ತಿದ್ದರು. ಈ ಬಂಡಾಯಗಳು ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ತಲೆದೋರುತ್ತಿದ್ದವು. ಆದರೆ ಇವುಗಳಲ್ಲಿ ಹೆಚ್ಚಿನ ಸಂಖ್ಯೆಯವು ಶೋಷಣೆ ಮಾಡುವವರು ಹಾಗೂ ಶೋಷಣೆಗೊಳಗಾದವರ ನಡುವೆ ಉಂಟಾಗುತಿತ್ತು. ಈ ದಂಗೆಗಳೇನೋ ವಿಫಲವಾಗಿರಬಹುದು. ಆದರೆ ಅವು ಬ್ರಿಟಿಷ್ ವಿರೋಧಿ ಭಾವನೆಯನ್ನು ಹುಟ್ಟು ಹಾಕಿದವು ಮಾತ್ರವಲ್ಲ ರಾಷ್ಟ್ರೀಯ ಮಟ್ಟದಲ್ಲಿ ಜನಸಮೂಹಗಳು ಪ್ರತಿಭಟನೆ ವ್ಯಕ್ತಪಡಿಸಲು ವೇದಿಕೆಯನ್ನು ನಿರ್ಮಿಸಿದವು.

ಪರಾಮರ್ಶನಗ್ರಂಥಗಳು

೧. ಎರಿಕ್ ಸ್ಟ್ರೋಕ್ಸ್, ೧೯೭೮. ಪೆಸೆಂಟ್ ಅಂಡ್ ದಿ ರಾಜ್, ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್.

೨. ಚೌಧರಿ ಎಸ್.ಬಿ., ೧೯೫೫ ಸಿವಿಲ್ ಡಿಸ್ಟರ್ಬೆನ್ಸಸ್ಡ್ಯೂರಿಂಗ್ ದಿ ಬ್ರಿಟಿಷ್ ರೂಲ್ ಇನ್ ಇಂಡಿಯಾ, ಕಲ್ಕತ್ತ.

೩. ಬಿಪನ್ ಚಂದ್ರ ಮತ್ತು ಇತರರು, ೧೯೮೯. ಇಂಡಿಯನ್ ಸ್ಟ್ರಗಲ್ ಫಾರ್ ಇಂಡಿಪೆಂಡನ್ಸ್, ೧೮೫೭-೧೯೪೭, ಡೆಲ್ಲಿ.

೪. ರಣಜಿತ್ ಗುಹಾ, ೧೯೭೯. ಎಲಿಮೆಂಟರಿ ಆಸ್‌ಪೆಕ್ಟ್ ಆಫ್ ಪೆಸೆಂಟ್ ಇನ್ಸರ್ಜೆನ್ಸಿ ಇನ್ ಕಲೋನಿಯಲ್ ಇಂಡಿಯಾ, ಡೆಲ್ಲಿ.