ಆಧುನಿಕ ಭಾರತದ ಇತಿಹಾಸದಲ್ಲಿ ೧೮೫೭ರ ದಂಗೆಯು ಪ್ರಮುಖ ಪಾತ್ರ ವಹಿಸಿದೆ. ಯಾಕೆಂದರೆ ಈ ಘಟನೆಗೆ ಸಂಬಂಧಿಸಿದಂತೆ ದೊರೆಯುವಷ್ಟು ಅಧ್ಯಯನ ಸಾಹಿತ್ಯವು ಬೇರಾವುದೇ ಘಟನಾ ಸಂಬಂಧಿ ದೊರೆಯುವುದಿಲ್ಲ. ಅಷ್ಟು ಮಾತ್ರವಲ್ಲದೆ, ಈ ದಂಗೆಯು ಭಾರತದ ಸ್ವಾತಂತ್ರ ಚಳವಳಿಗೆ ಪೀಠಿಕೆ ಹಾಗೂ ಪ್ರೇರಣೆ ಘಟನೆ. ವಿದ್ವಾಂಸರು, ಇತಿಹಾಸಕಾರರು ಈ ಘಟನೆಗೆ ಸಂಬಂಧಿಸಿದಂತೆ ವಿಭಿನ್ನ ಹಾಗೂ ವಿವಿಧ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಸಾಮ್ರಾಜ್ಯಶಾಹಿ ಚಿಂತನೆಯಲ್ಲಿ ಈ ಘಟನೆಯನ್ನು ಬರೇ ‘ಸಿಪಾಯಿ ದಂಗೆ’ ಎಂಬುದಾಗಿ ಚಿತ್ರಿಸಲಾಗಿದೆ. ಅವರ ದೃಷ್ಟಿಯಲ್ಲಿ ಇದೆಲ್ಲ ಅತೃಪ್ತ, ಸ್ವಾರ್ಥಿ ಸಿಪಾಯಿಗಳ ಕಾರುಬಾರು. ಸೈನ್ಯದಲ್ಲಿ ಹಂದಿ ಹಾಗೂ ದನದ ಕೊಬ್ಬು ಸವರಿದ ಮದ್ದುಗುಂಡುಗಳು ಹೊಸದಾಗಿ ಸೇರ್ಪಡೆ ಅವರನ್ನು ತುರ್ತಾಗಿ ದಂಗೆಯೇಳುವಂತೆ ಮಾಡಿತು ಹಾಗೂ ಹಿಂದೂ ಮುಸ್ಲಿಮ್ ಸೈನಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದದ್ದೇ ಮೂಲ ಕಾರಣವಾಯಿತು ಎಂಬ ತರ್ಕವನ್ನು ಇವರು ಮಂಡಿಸುತ್ತಾರೆ. ಈ ಎಲ್ಲ ಘಟನಾವಳಿಗಳಲ್ಲಿ  ನಾನಾಸಾಹೇಬ, ಲಕ್ಷ್ಮೀಬಾಯಿಯಂತವರು ನಿಜವಾದ ನಾಯಕರಲ್ಲ ಬದಲು ‘ಅವಕಾಶವಾದಿ’ಗಳಾಗಿ ತೋರುತ್ತಾರೆ. ಕೆಲವು ಬ್ರಿಟಿಷ್ ಬರಹಗಾರರಿಗಂತೂ ಇದು ಮಹಮ್ಮದೀಯರ ಪಿತೂರಿಯೆಂದು  ಕಂಡಿದೆ. ಇನ್ನೂ ಕೆಲವರು ಇದನ್ನು ನಾಗರಿಕತೆಯ ವಿರುದ್ಧ ಅನಾಗರಿಕರ ದಾಳಿ ಎಂಬಂತೆ  ಚಿತ್ರಿಸಿದ್ದಾರೆ. ಆದರೆ ಬ್ರಿಟಿಷ್ ಬರಹಗಾರರಲ್ಲಿ ಕೆಲವರು ಈ ದಂಗೆಯನ್ನು ಹೊಗಳಿದವರೂ ಇದ್ದಾರೆ.

ಕಾರ್ಲ್‌‌ಮಾರ್ಕ್ಸ್‌‌ನಂತಹ ಚಿಂತಕರಿಗೆ ಇದೊಂದು ವಸಾಹತುಶಾಹಿ ಶೋಷಣೆಯ ವಿರುದ್ಧ ಭಾರತೀಯರು ಸಿಟ್ಟಿನಿಂದ ಸಿಡಿದೆದ್ದ ಘಟನೆಯಾಗಿದೆ. ಈ ದಂಗೆಯಲ್ಲಿ ಹಿಂದೂ ಹಾಗೂ ಮುಸ್ಲಿಮರು ತೋರಿಸಿದ ಒಗ್ಗಟ್ಟು ಮಾರ್ಕ್ಸ್ ಹಾಗೂ ಏಂಗೆಲ್ಸ್‌ರ ಪ್ರಶಂಸೆಗೆ ಪಾತ್ರವಾಗಿದೆ. ಅವರ ಪ್ರಕಾರ ‘ಬೂರ್ಜ್ವ’ ವರ್ಗದ ಕಪಟತನ ಹಾಗೂ ಅಂತರ್ಜಾತ ಅನಾಗರಿಕತೆ ಈ ದಂಗೆಯಿಂದಾಗಿ ಬಯಲುಗೊಂಡಿದೆ. ಆದರೆ ಭಾರತೀಯ ಮಾರ್ಕ್ಸಿಸ್ಟರ ವಾದಗಳು ಈ  ನೆಲೆಗಿಂತ ಭಿನ್ನವಾಗಿದ್ದವು. ಎಮ್.ಎನ್.ರಾಯ್ ಅವರು ಈ ದಂಗೆಯ ವಿಫಲತೆಯನ್ನು ಊಳಿಗಮಾನ್ಯ ಪದ್ಧತಿಯ ಕೊನೆಯ ಕುರುಹುಗಳ ನಿರ್ಮೂಲನವೆಂದು ಬಣ್ಣಿಸಿದ್ದಾರೆ. ಅವರ ಪ್ರಕಾರ, ಶಕ್ತಿಗುಂದಿರ ಊಳಿಗಮಾನ್ಯ ಪದ್ಧತಿಯ ಹಾಗೂ ಹೊಸತಾಗಿ ಸ್ಥಾಪಿತವಾದ ವಾಣಿಜ್ಯೀಕೃತ ಬಂಡವಾಳಶಾಹಿಯ ನಡುವೆ ರಾಜಕೀಯ ಪ್ರಾಬಲ್ಯವನ್ನು ಸ್ಥಾಪಿಸಲು ನಡೆದ ಘರ್ಷಣೆಯಾಗಿದೆ. ಆರ್.ಪಿ.ದತ್ತರು ೧೮೫೭ರ ದಂಗೆಯನ್ನು ಒಂದು ಬೃಹತ್ ರೈತರ ದಂಗೆಯೆಂದು ಒಪ್ಪಿದರೂ, ಈ ದಂಗೆಯ ಮುಖಂಡತ್ವವನ್ನು ವಹಿಸಿದವರು ನಶಿಸುತ್ತಿರುವ ಊಳಿಗಮಾನ್ಯಪದ್ಧತಿಯ ಶಕ್ತಿಗಳು ಎಂದು ಹೇಳುತ್ತಾರೆ. ಈ ಶಕ್ತಿಗಳು ತಮ್ಮ ಹಿಂದಿನ ಕಾಲದ ಹಕ್ಕುಬಾದ್ಯತೆಗಳನ್ನು ಪಡೆಯುವತ್ತ ಹೆಚ್ಚಿನ ಮುತುವರ್ಜಿವಹಿಸಿದವು ಎಂದು ವಾದಿಸುತ್ತಾರೆ.

ರಾಷ್ಟ್ರೀಯವಾದಿ ಇತಿಹಾಸಕಾರರು ಬ್ರಿಟಿಷರ ನಿಲುವಿನ ತದ್ವಿರುದ್ಧ ನಿಲುವನ್ನು ತಳೆಯುತ್ತಾರೆ. ವಿ.ಡಿ ಸಾವರ್ಕರ್ ೧೯೦೯ರಲ್ಲಿ ಇದನ್ನು ‘ಭಾರತದ ಪ್ರಥಮ ಸ್ವಾತಂತ್ರ ಸಮರ’ ಎಂದೇ ವಾದಿಸುತ್ತಾರೆ. ಅವರ ಪ್ರಕಾರ ಇದು ಸ್ವಧರ್ಮ ಹಾಗೂ ಸ್ವರಾಜ್ಯಕ್ಕಾಗಿ ಭಾರತೀಯರು ಮಾಡಿದ ಮಹಾ ಬಲಿದಾನವಾಗಿದೆ. ಈ ಸಮರವು ಕೇವಲ ಮದ್ದು ಗುಂಡುಗಳಿಗೆ ಸೀಮಿತವಾದುದಲ್ಲ. ಹಾಗಾಗಿದ್ದರೆ ಅದು ಬ್ರಿಟಿಷರು ಮದ್ದು ಗುಂಡುಗಳನ್ನು ವಾಪಸ್ ಪಡೆದ ಕೂಡಲೇ ನಿಲ್ಲಬೇಕಿತ್ತು. ಆದರೆ ಹಾಗಾಗಲಿಲ್ಲ. ಈ ವಾದವವು ನಾನಾ ಸಾಹೇಬ, ಖಾನ್ ಬಹುದೂರ ಖಾನ್, ಝಾನ್ಸಿಯ ರಾಣಿಯವರ ಪಾತ್ರವನ್ನು ವಿವರಿಸಲು ಶಕ್ತವಾಗಲಾರದು. ಇದು ಭಾರತೀಯ ಧರ್ಮದ ಮೇಲೆ ವಿದೇಶಿ ಧರ್ಮೀಯರು ನಡೆಸಿದ ದಬ್ಬಾಳಿಕೆಗೆ ಭಾರತೀಯರು ತೆಗೆದುಕೊಂಡ ಪ್ರತಿಕಾರವಾಗಿದೆ ಎಂಬುದು ಇವರ ವಾದ. ಸ್ವಾತಂತ್ರ್ಯ ನಂತರದ ಇತಿಹಾಸಕಾರರು ಇದನ್ನು ಪ್ರಥಮ ಸ್ವಾತಂತ್ರ ಸಮರವೆಂಬುದನ್ನು ಒಪ್ಪಲು ಸಿದ್ಧರಿಲ್ಲವಾದರೂ ಅವರ ಬರವಣಿಗೆಗಳು ಶಿಷ್ಟರಾಷ್ಟ್ರೀಯವಾದಿ ಚಿಂತನೆಯನ್ನೇ ಹೆಚ್ಚಾಗಿ ಮುಂದುವರಿಸುತ್ತಾ ಅದರ ಸಂಕೀರ್ಣತೆಗೆ ಹೆಚ್ಚಿನ ಮಹತ್ವ ನೀಡಿವೆ. ಆರ್.ಸಿ.ಮಜುಂದಾರ್, ಎಸ್.ಬಿ.ಚೌಧುರಿ ಹಾಗೂ ಎಸ್.ಎನ್.ಸೇನ್‌ರವರು ಈ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಅವರ ಬರವಣಿಗೆಗಳು ೧೮೫೭ರ ದಂಗೆಯ ರಾಷ್ಟ್ರೀಯತೆಯ ಕುರುಹುಗಳು ಶೋಧದಲ್ಲಿ ತೊಡಗಿವೆ. ಎಸ್.ಎನ್.ಸೇನರ ಕೃತಿ ಭಾರತೀಯ ರಾಷ್ಟ್ರೀಯತೆಯ ಆಚರಣೆಯ ಉದ್ದೇಶ ಹೊಂದಿತ್ತೆಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ ಇದು ೧೯೫೭ರಲ್ಲಿ ರಚಿತವಾದ ಸರಕಾರಿ ಕೃಪಾಪೋಷಿತ ಕೃತಿ.

೧೮೫೭ರ ಘಟನೆಯನ್ನು ವಿವರಿಸುವ ಈ ಪ್ರಕಾರದ ವಾದಗಳು ಈ ದಂಗೆಯನ್ನು ಬರೇ ಸೈನಿಕ ಚರಿತ್ರೆಗೆ ಸೀಮಿತಗೊಳಿಸುತ್ತವೆ. ಜನಸಾಮಾನ್ಯರ ದಂಗೆಗೆ ಬ್ರಿಟಿಷ್ ಕಂದಾಯ ಪದ್ಧತಿ ಹಾಗೂ ಆರ್ಥಿಕ ನೀತಿಯು ಯಾವ ವಿಧದಲ್ಲಿ ಕಾರಣೀಭೂತವಾಯಿತು ಎಂಬುದರ ಬಗೆಗೆ ಯಾವುದೇ ಮಾಹಿತಿಯನ್ನು ಒದಗಿಸುವುದಿಲ್ಲ. ಈ ದಿಶೆಯಲ್ಲಿ ಎರಿಕ್ ಸ್ಟೋಕ್ಸ್‌ನ  ಕೃತಿಯು ಹೆಚ್ಚಿನ ಉಪಕಾರಿಯಾಗಿದೆ. ಇಲ್ಲಿ ಸೈನ್ಯದ ಒಳಗೂ ಹೊರಗೂ ಇರುವ ರೈತರ ಪಾತ್ರದ ಬಗ್ಗೆ ಬಹಳಷ್ಟು ವಿಶ್ಲೇಷಣೆ ಮಾಡಲಾಗಿದೆ. ಕೃಷಿಕ ಸಮಾಜದ ಹಿನ್ನೆಲೆ ಹಾಗೂ ಗ್ರಾಮೀಣ ಮೂಲವನ್ನು ಆಳವಾಗಿ ಹುಡುಕುತ್ತ, ೧೮೫೭ರ ದಂಗೆಯು ಬ್ರಿಟಿಷರ ವಿರುದ್ಧ ನಡೆದ ರೈತ ದಂಗೆಯೆಂದೇ ಆತ ವಾದಿಸುತ್ತಾನೆ. ಆತನಿಗೆ ಈ ಘಟನೆಯು ಸಿಪಾಯಿ ದಂಗೆಯೋ ಅಥವಾ ನಾಗರಿಕ ಬಂಡಾಯವೋ ಎಂಬ ಐತಿಹಾಸಿಕ ಪ್ರಶ್ನೆ ಮುಖ್ಯವಾಗಿರಲಿಲ್ಲ. ಆದರೆ ಸಿಪಾಯಿ ದಂಗೆಯು ನಾಗರಿಕ ಬಂಡಾಯವಾಗಿ ಪರಿವರ್ತಿತವಾದ ಪ್ರಕ್ರಿಯೆಯೇ ಬಹುಮುಖ್ಯ ವಿಷಯವಾಗಿದೆ. ಸ್ಟೋಕ್ಸ್‌ನ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ‘ಕಳಕೊಂಡವರು’ – ಮೇಲ್ವರ್ಗದ ರೈತರು, ಜಮೀನುದಾರರು ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸುತ್ತಾರೆ. ಈ ಕುರಿತಂತೆ ಆತ ‘ಜಾಟ್’ ಮತ್ತು ‘ಗುಜಾರ್’ ಸಮುದಾಯದ ಪ್ರದೇಶಗಳಲ್ಲಿ ಜಿಲ್ಲಾವಾರು ಸೂಕ್ಷ್ಮ ಅಧ್ಯಯನ ನಡೆಸಿದ್ದಾನೆ. ಆತನು ಹೇಳುವಂತೆ, ಎಲ್ಲಿ ಲೇವಾದೇವಿಗಾರರು ರೈತರ ಭೂಮಿಯನ್ನು ಆಕ್ರಮಿಸಿದ್ದಾರೋ ಅಲ್ಲೆಲ್ಲ ಈ ಬಂಡಾಯದ ಪ್ರಭಾವವು ಕನಿಷ್ಠವಾಗಿದೆ. ಲೇವಾದೇವಿಗಾರರ ಪ್ರಭಾವ ಕನಿಷ್ಠ ಇದ್ದಲ್ಲಿ ಬಂಡಾಯವು ಗರಿಷ್ಠವಾಗಿದೆ. ಲೇವಾದೇವಿಗಾರರ ಪ್ರಭಾವ ಕನಿಷ್ಠ  ಇರುವಲ್ಲೆಲ್ಲ ಜಾತಿ ಪರಂಪರೆ ಹಾಗೂ ವಾಂಶಿಕ ಪಂಗಡಗಳ ನಡುವಿನ ಸಂಬಂಧಗಳು ಬಲಿಷ್ಟವಾಗಿವೆ. ಇವರು ಅನುಭವಿಸಿರುವ ಭೂಮಿಯ ಶುಷ್ಕ ಭೂಮಿಯಾಗಿದ್ದು, ಭೂಕಂದಾಯವು ಇತರ ನೀರಾವರಿ ಕೃಷಿ ಭೂಮಿಗೆ ಹೋಲಿಸಿದರೆ  ಅತಿಯಾಗಿರುವುದು ಈ ಜನರ ಪ್ರಬಲ ವಿರೋಧಕ್ಕೆ ಕಾರಣವಾಗಿದೆ. ಹಾಗಾಗಿ ೧೮೫೭ರ ದಂಗೆಯಲ್ಲಿ  ಇವರೆಲ್ಲರೂ ಬ್ರಿಟಿಷರಿಗೆ ಪ್ರಬಲ ವಿರೋಧವನ್ನು ಒಡ್ಡಿದ್ದರು. ಈ ಚಳವಳಿಯಲ್ಲಿ ಲೇವಾದೇವಿಗಾರರ ಪಾತ್ರವು ಬಹಳ ಕನಿಷ್ಟವಾಗಿದೆ. ಒಟ್ಟಿನಲ್ಲಿ ಅಂದು ಈ ದಂಗೆಯು ಬ್ರಿಟಿಷರು ನಾಶಮಾಡಿದ ಪಾರಂಪಾರಿಕ ಸ್ಥಾನಮಾನಗಳನ್ನು ಮರುಸ್ಥಾಪನೆ ಮಾಡುವ ದಿಕ್ಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಚಳವಳಿಗಳಲ್ಲಿ ಯಾವುದೇ ಸೈದ್ಧಾಂತಿಕ ನಿಲುವು ಅಡಕವಾಗಿಲ್ಲ, ಬದಲಾಗಿ ಇವೆಲ್ಲವು ಬ್ರಿಟಿಷರ ವಿರುದ್ಧ ಪಡೆದ ‘ಪ್ರಾಥಮಿಕ ಪ್ರತಿಭಟನೆ’ ಗಳು (Primary Resistance) ಎಂಬುದು ಸ್ಟೋಕ್ಸ್‌ನ ಅಭಿಪ್ರಾಯ.

ದಂಗೆಕೋರರ ಕಲ್ಪನೆ, ಮನೋಭಾವನೆ ಹಾಗೂ ಸಂಘಟನೆಯನ್ನು ಗಮನಿಸುವುದಕ್ಕೋಸ್ಕರ, ಸ್ಟೋಕ್ಸ್, ಅತಿಯಾದ  ದಂಗೆಯ ‘ಕೃಷಿಕಮೂಲ’ (Agrarian Roots) ಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬುದು ಬಹುತೇಕ ಇತಿಹಾಸಕಾರರ ಅಭಿಪ್ರಾಯ. ೧೮೫೭ರ ದಂಗೆಗೊಂದು ಮನೋರಥವಿದೆ, ಒಂದು ದಿಶೆಯಿದೆ, ಒಂದು ಕೇಂದ್ರವಿದೆ ಎಂಬುದನ್ನು ಇತರ ಇತಿಹಾಸಕಾರರು ಕೂಡ ವಾದಿಸಿದ್ದಾರೆ. ರುದ್ರಾಂಗ್ಷು ಮುಖರ್ಜಿಯನ್ನು ಈ ದಂಗೆಯು ಯಾವ ತೆರನಾಗಿ ಲೋಕಪ್ರಿಯ ಆಯಾಮ ಪಡೆಯಿತು ಎಂದು ವಾದಿಸಿದ್ದಾರೆ. ಅವರ ಪ್ರಕಾರ ಅವಧ್‌ನಲ್ಲಿ ೩/೪ ಜನರು ಈ ದಂಗೆಯಲ್ಲಿ ಪಾಲುಗೊಂಡಿದ್ದಾರೆ. ಬ್ರಿಟಿಷರ ಅತಿಯಾದ ಭೂಕಂದಾಯ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಕಾನೂನುಗಳು ರೈತರನ್ನು ಹಾಗೂ ತಾಲೂಕುದಾರರನ್ನು ಬ್ರಿಟಿಷರ ವಿರುದ್ಧ ಒಗ್ಗೂಡಲು ಪ್ರೇರೆಪಿಸಿತು ಎಂಬುದು ಅವರ ಅಭಿಪ್ರಾಯ. ಗ್ರಾಮೀಣ ಪ್ರದೇಶಗಳಲ್ಲಿ ಈ ದಂಗೆಯು ಮೇಲ್‌ಸ್ತರದ (Elitist) ಜನರಿಗೆ ಸೀಮಿತವಾಗಿತ್ತು ಎಂಬ ಸ್ಟೋಕ್ಸ್‌ನ ವಾದವನ್ನು ರುದ್ರಾಂಗ್ಷು ಮುಖರ್ಜಿಯು ಒಪ್ಪುವುದಿಲ್ಲ. ಯಾಕೆಂದರೆ ಕೆಲವೆಡೆ ರಾಜ್ಯದ ರೈತರು ತಾಲೂಕುದಾರರ ಸಹಾಯವಿಲ್ಲದೆಯೇ ಸ್ವತಂತ್ರವಾಗಿ ಕಾರ್ಯಾಚರಿಸುವುದನ್ನು ಅವರು ಕಂಡುಕೊಂಡಿದ್ದಾರೆ. ಆದರೆ ಅವರೇ ಹೇಳುವಂತೆ ಇದು ಹೊಸತೊಂದು ಸಾಮಾಜಿಕ ವ್ಯವಸ್ಥೆಯನ್ನು ಹುಟ್ಟುಹಾಕಲು ನಡೆದ ಚಳವಳಿಯಲ್ಲ, ಬದಲಿಗೆ, ಬ್ರಿಟಿಷರ ಮಾರ್ಪಡಿಸಿದ ಹಳೆ ಪದ್ಧತಿಯನ್ನು ಮರುಸ್ಥಾಪಿಸಲು ಮಾಡಿದ ಒಂದು ಪ್ರಯತ್ನವಾಗಿದೆ. ಫರಂಗಿ ಆಡಳಿತವನ್ನು ತಾತ್ಕಾಲಿಕ ಮಟ್ಟಿಗಾದರೂ ಅಳಿಸಿ ಹಾಕಲೆತ್ನಿಸಿದ ಚಳವಳಿಯಿದು. ಅವಧ್‌ನಲ್ಲಿ ಬ್ರಿಟಿಷರ ಹೊಸ ಕಂದಾಯ ಬೇಡಿಕೆ, ತಾಲೂಕದಾರರ ವಜಾ,  ನವಾಬ ವಜಿದ್‌ಆಲಿಯ ವಜಾ ಹಾಗೂ ಇದರೊಂದಿಗೆ ಧಾರ್ಮಿಕ ಹಾಗೂ ಜಾತಿ ಸಂಬಂಧಿ ಭೀತಿ ರೈತರನ್ನು ಬ್ರಿಟಷರ ವಿರುದ್ಧ ದಂಗೆಯೇಳುವಂತೆ ಮಾಡಿತು ಎಂಬುದು ರುದ್ರಾಂಕ್ಷು ಮುಖರ್ಜಿಯ ವಾದ.

ಸಬಾಲ್ಟರ್ನ್‌ ಇತಿಹಾಸಕಾರರಾದ ತಪತಿ ರಾಯ್ ಅವರು, ಈ ದಂಗೆಯ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಹಾಗೂ ಜಮೀನ್ದಾರರ ಒಗ್ಗೂಡುವಿಕೆ (Symbiosis)ಯಿಂದ ನಡೆದ ಚಳವಳಿಯೆಂದು ಒಪ್ಪಲು ಸಿದ್ಧರಿಲ್ಲ. ಯಾಕೆಂದರೆ ಸಿಪಾಯಿಗಳು ಮತ್ತು ರಾಜರು ದಂಗೆಯನ್ನು ಅರ್ಧದಲ್ಲಿ ಬಿಟ್ಟುಬಿಟ್ಟರೂ ರೈತವರ್ಗವು ಅದನ್ನು ಮುಂದುವರಿಸಿತು ಎಂಬುದು ಆಕೆಯ ವಾದ. ಆಕೆಯ ಅಭಿಪ್ರಾಯದಂತೆ ಜನಸಾಮಾನ್ಯರ ಚಳವಳಿಗಳು ಸ್ವಾಯತ್ತತೆಯಿಂದ (Autonomous) ಕೂಡಿದ್ದವು. ಇಂತಹ ಚಳವಳಿಗಳಲ್ಲಿ ಮುಖಂಡತ್ವ, ಹಿಂಬಾಲಿಸುವಿಕೆಗಳೆಲ್ಲವು ಕಂಡುಬರುವುದಿಲ್ಲ. ಇಲ್ಲಿ ಗ್ರಾಮೀಣ ವಿರೋಧವು ಎಲ್ಲರ ಭಾಗವಹಿಸುವಿಕೆಯಿಂದ ವ್ಯಕ್ತವಾಗುತ್ತದೆ. ಈ ದಂಗೆಯಲ್ಲಿ ಠಕೂರ್, ಸಿಪಾಯಿ, ರಾಜರು ಹಾಗೂ ಜನಸಾಮಾನ್ಯರು ಬೇರೆ ಬೇರೆ ಉದ್ದೇಶಗಳಿಗಾಗಿ ಅಥವಾ ಆಕಾಂಕ್ಷೆಗಳಿಗಾಗಿ ಭಾಗವಹಿಸಿದರು. ಅವರೆಂದೂ ಒಗ್ಗೂಡಿ ಕೆಲಸ ಮಾಡಲಿಲ್ಲ. ಆದರೆ ಆ ವೈಯಕ್ತಿಕ ಉದ್ದೇಶಗಳು ಆ ಕಾಲದ ರಾಜಕೀಯ ಸನ್ನಿವೇಶದಲ್ಲಿ ವಿಲೀನವಾದವು ಹಾಗೂ ಅವರೆಲ್ಲರ ಪ್ರತಿಭಟನೆಗಳು ಪೂರ್ಣ ಚಳವಳಿಗೆ ರೂಪುಕೊಟ್ಟಿತು.

ರಜತ್‌ಕಾಂತ್‌ ರಾಯ್ ಅವರು ಜನರ ಧಾರ್ಮಿಕ ಭಾವನೆಗಳು ಎಷ್ಟರಮಟ್ಟಿಗೆ ಈ ದಂಗೆಗೆ ಕಾರಣೀಭೂತವಾದವು ಎಂಬುದರ ಬಗ್ಗೆ ವಿಶ್ಲೇಷಿಸಿದ್ದಾರೆ. ಅವರ ಪ್ರಕಾರ ಈ ಚಳವಳಿಗೆ ಧರ್ಮವು ಸೈದ್ಧಾಂತಿಕ ನೆಲೆಯನ್ನು ಒದಗಿಸಿದೆ. ಆದರೂ ಇದು ಧಾರ್ಮಿಕ ಯುದ್ಧವಾಗಿರಲಿಲ್ಲ. ಹಿಂದೂ-ಮುಸ್ಲಿಮರ ಒಗ್ಗೂಡುವಿಕೆ ಕ್ರೈಸ್ತ ಧರ್ಮದ ತತ್ವವನ್ನು ವಿರೋಧಿಸಲಿಕ್ಕಲ್ಲ, ಬದಲಿಗೆ ಆಳುವವರ ಧರ್ಮವು ಕ್ರೈಸ್ತಧರ್ಮವಾದುದೇ, ಅದನ್ನು ವಿರೋಧಿಸಲು ಪ್ರಮುಖ ಕಾರಣ. ಇಲ್ಲಿ ವಿರೋಧದ ಪ್ರಮುಖ ಗುರಿ ಆಡಳಿತ ವರ್ಗವೇ ವಿನಹ ಧರ್ಮವಲ್ಲ. ಒಂದು ವೇಳೆ ಈ ಸನ್ನಿವೇಶವನ್ನು ಮತಾಂಧತೆಯೆಂದು ಗುರುತಿಸುವುದಾದರೆ ಆ ಸಂದರ್ಭದಲ್ಲಿ ಹಿಂದೂ -ಮುಸ್ಲಿಮ್ ಏಕತೆ ಕೂಡ ಅಸಾಧ್ಯವಾಗಬಹುದಿತ್ತು. ಧಾರ್ಮಿಕ ಕಾರಣಗಳಿಗೋಸ್ಕರ ದಂಗೆಕೋರರೊಳಗೆ ಮತಭೇದವೆದ್ದ ವಿವರಗಳು ಬಹಳ ಕಡಿಮೆ. ದೆಹಲಿಯಲ್ಲಿ ನಡೆದ ಘರ್ಷಣೆಯು ಬಡ ಮುಸ್ಲೀಮ್ ಸಿಪಾಯಿ ಮತ್ತು ಶ್ರೀಮಂತ ಹಿಂದೂ ವ್ಯಾಪಾರಸ್ಥರಿಗೆ ಸೀಮಿತವಾಗಿತ್ತು. ಇದು ಬೇರೆ ಕಡೆ ಹರಡಲಿಲ್ಲ.

ಪ್ರತಿಯೊಂದು ಪೀಳಿಗೆಯು ಇತಿಹಾಸವನ್ನು ತನ್ನದೇ ರೀತಿಯಲ್ಲಿ ಪರಿಶೀಲಿಸುತ್ತದೆ. ಈ ಪ್ರಶ್ನಿಸುವಿಕೆಯು ಪ್ರಸಕ್ತ ಸಮಯದ ಕಾಳಜಿಯಿಂದ ಕೂಡಿರುತ್ತದೆ. ಆದುದರಿಂದಲೇ ೧೮೫೭ರ ದಂಗೆಯಲ್ಲಿ ಆದಿವಾಸಿಗಳ ಪಾತ್ರ, ಅವರು ನಡೆಸಿದ ಚಳವಳಿಯ ಸ್ವರೂಪವು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ. ಸ್ತ್ರೀವಾದಿ ಚಳವಳಿಗಳು ಇಂದಿನ ಯುಗದಲ್ಲಿ ಪ್ರಾತಿನಿಧ್ಯ ಪಡೆಯುತ್ತಿರುವಾಗ ಇತಿಹಾಸ ಕೂಡ ಈ ನಿಟ್ಟಿನಲ್ಲಿ ಸಾಗಬೇಕಾಗಿದೆ. ಹಾಗಾಗಿ ಇಂದು ೧೮೫೭ರ ದಂಗೆಯಲ್ಲಿ ಪಾತ್ರವಹಿಸಿದ ರಾಣಿ ಲಕ್ಷ್ಮಿಬಾಯಿಯಂತಹ ನಾಯಿಕಿಯರ ಪಾತ್ರ ಮಾತ್ರವಲ್ಲದೆ ಈ ಚಳವಳಿಯಲ್ಲಿ ನೇರವಾಗಿ ಭಾಗವಹಿಸದಿದ್ದರೂ ಪರೋಕ್ಷವಾಗಿ ಅದರ ಬಿಸಿ ತಟ್ಟಿರುವ ಭಾರತೀಯ ಹಾಗೂ ವಿದೇಶಿ ಮಹಿಳೆಯರ  ಬಗೆಗಿನ ಅಧ್ಯಯನಗಳು ಇಂದು ಮಹತ್ವ ಪಡೆಯಬೇಕಾಗಿದೆ. ದಂಗೆಯ ಸಮಯದಲ್ಲಿ ಈ “ಮೇಮ್ ಸಾಹೇಬರು” ಮನೆಯಲ್ಲಿ ಎಷ್ಟು ಕಷ್ಟ ಬಂದರೂ ತಮ್ಮ ಪತಿಯಂದಿರನ್ನು ಯುದ್ಧಭೂಮಿಗೆ ಕಳುಹಿಸಲು ನಿರಾಕರಿಸಲಿಲ್ಲ. ತಮ್ಮ ಕುಟುಂಬದವರು ಸಂಬಂಧಿಕರು ಈ ದಂಗೆಯಿಂದಾಗಿ ಹತರಾದಾಗ ಅತೀವ ಧೈರ್ಯ ಗಡಸುತನ ಹಾಗೂ ತಾಳ್ಮೆಯನ್ನು ಪ್ರದರ್ಶಿಸಿದವರು. ಆದರೆ, ಈ ದಂಗೆಯ ಬಗೆಗಿನ ಅಳುಕು, ಭಯ, ಹಾಗೂ ಆತಂಕ ಅವರನ್ನು ಸದಾ ಕಾಡುತ್ತಿದ್ದುದನ್ನು ನಿರಾಕರಿಸುವಂತಿಲ್ಲ. ಈ ದಂಗೆಯಿಂದಾಗಿ ಭಾರತದಲ್ಲಿ ವಸಾಹತುಶಾಹಿ ಆಡಳಿತದ ಕೊನೆ ಹತ್ತಿರ ಬಂತೇನೋ ಎಂಬ  ಆತಂಕವನ್ನೂ ಅವರು ವ್ಯಕ್ತಪಡಿಸಿದ್ದುಂಟು. ಕೊಬ್ಬು ಸವರಿದ ಮದ್ದು ಗುಂಡುಗಳು ಭಾರತೀಯರ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಹೇಗೆ ಕಾರಣವಾಯಿತೋ ಅದೇ ಪ್ರಕಾರ ಉನ್ನತ ಹುದ್ದೆಯಲ್ಲಿರುವ ಬ್ರಿಟಿಷ್ ಅಧಿಕಾರಗಳು ತಮ್ಮ ಸಂಕುಚಿತ ದೃಷ್ಟಿಕೋನದಿಂದ ಹಾಗೂ ಅಸಾಮರ್ಥ್ಯದಿಂದಾಗಿ ಈ ದಂಗೆಯನ್ನು ಸಮರ್ಪಕ ರೀತಿಯಲ್ಲಿ ನಿಭಾಯಿಸುವಲ್ಲಿ ವಿಫಲರಾದರು ಎಂಬ ಅಭಿಪ್ರಾಯವನ್ನು ಇವರು ವ್ಯಕ್ತಪಡಿಸುತ್ತಾರೆ. ಈ ದಂಗೆಯ ತೀವ್ರತೆಯನ್ನು ಕಂಡು ತಾವು ವಿಶ್ವಾಸವಿಟ್ಟಿರುವ ತಮ್ಮ ಪತಿಯಂದಿರ ನಿರ್ಣಯಗಳನ್ನೇ ಅವರು ಪ್ರಶ್ನಿಸಿದ್ದಾರೆ. ಆದರೆ ಅಂತಿಮವಾಗಿ ಇಷ್ಟೆಲ್ಲ ಹಿಂಸೆ ನಡೆಸಿದ, ತಮ್ಮ ಕುಟುಂಬಸ್ಥರ ಹತ್ಯೆಗೆ ಕಾರಣರಾದ ಸಿಪಾಯಿಗಳ ವಿರುದ್ಧ ಪ್ರತೀಕಾರವನ್ನು ತೆಗೆದುಕೊಳ್ಳಲೇಬೇಕೆಂಬುದನ್ನೂ ವಾದಿಸುತ್ತಾರೆ.

೧೮೫೭ರ ದಂಗೆಯು ಬ್ರಿಟಿಷ್ ವಸಾಹತುಶಾಹಿ ವಿರುದ್ಧ ನಡೆದ ಮೊದಲ ಹೋರಾಟವಾಗಿದೆ ಹಾಗೂ ಬ್ರಿಟಿಷರು ಭಾರತದಲ್ಲಿ ಎದುರಿಸಿದ ಮೊದಲ ಶಸ್ತ್ರಾಸ್ತ್ರ ಹೋರಾಟ ಇದಾಗಿದೆ. ಉತ್ತರ ಭಾರತದಲ್ಲಿ ಈ ದಂಗೆಯು ಬ್ರಿಟಿಷ್ ವಸಾಹತುಶಾಹಿಯ ಅಡಿಪಾಯವನ್ನೇ ಅಲುಗಾಡಿಸುವಷ್ಟು ತೀಕ್ಷ್ಣತೆಯನ್ನು ಹೊಂದಿತ್ತು. ಮಾತ್ರವಲ್ಲದೇ ಇದರ ಕಂಪನದ ತೀವ್ರತೆಯು ದೇಶದ ಇತರ ಭಾಗಗಳಿಗೂ ಹರಡಿತ್ತು. ಕೇರಳದ ತಲ್ಲಿಚೇರಿಯ ಬೀದಿಗಳಲ್ಲಿ ಮುಸ್ಲಿಮ್ ಧಾರ್ಮಿಕ ಮುಖಂಡರುಗಳು ಯುರೋಪಿಯನ್ನರನ್ನು ಈ ದೇಶದಿಂದ ಹೊರಗಟ್ಟು ಕರೆ ಕೊಟ್ಟು ಮಾಡಿದ ಭಾಷಣಗಳು, ದಕ್ಷಿಣ ಕೇರಳದ ಎರ್ನಾಡ್ ತಾಲೂಕಿನ ಮಸೀದಿಯ ಮಲ್ಲಾನೊಬ್ಬನು ಮಾಪಿಳ್ಳೆ ಶೌರ್ಯಗೀತೆಗಳಿಂದ ಜನರನ್ನು ಬ್ರಿಟಿಷರ ವಿರುದ್ಧ ಹುರಿದುಂಬಿಸಲು ಮಾಡಿದ ಪ್ರಯತ್ನಗಳು, ಭಾರತದೆಲ್ಲೆಡೆ ಈ ದಂಗೆಯ ಅರಿವಿಕೆಯ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ.

ಪರಾನರ್ಶನಗ್ರಂಥಗಳು

೧. ಎರಿಕ್ ಸ್ಟೋಕ್ಸ್, ೧೯೭೮. ದಿ ಪೆಸಂಟ್ ಆಂಡ್ ದಿ ರಾಜ್, ಸ್ಟಡೀಸ್ ಇನ್ ಅಗ್ರೇರಿಯನ್ ಸೊಸೈಟಿ ಆಂಡ್ ದಿ ಪೆಸೆಂಟ್ ರಿವಲೇಶನ್ ಇನ್ ಕಲೋನಿಯಲ್ ಇಂಡಿಯಾ ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್.

೨.ಕಾಯೆ ಜೆ.ಕೆ. ೧೮೬೭. ಹಿಸ್ಟರಿ ಆಫ್ ದಿ ಸಿಪಾಯ್ ವಾರ್ ಇನ್ ಇಂಡಿಯಾ, ೩ನೇ ವಾಲ್ಯೂಂ ಲಂಡನ್.

೩.ಜಾನ್ಸ್ ಎರ್ನೆಸ್ಟ್, ೧೮೫೭. ದಿ ರಿವೋಲ್ಟ್ ಆಫ್ ಹಿಂದೂಸ್ತಾನ್, ಲಂಡನ್: ಆರ್ ನ್ಯೂ ವರ್ಲ್ಡ್‌.

೪. ತಪತಿರಾಯ್, ೧೯೯೪. ದಿ ಪಾಲಿಟಿಕ್ಸ್ ಆಫ್ ಪಾಪ್ಯೂಲರ್ ಅಪ್ರೈಸಿಂಗ್, ಬುದೆಲ್‌ಖಂಡ ಇನ್ ೧೮೫೭, ನವದೆಹಲಿ

೫. ರುದ್ರಾಂಗ್ಶು ಮುಖರ್ಜಿ, ೧೮೫೭. ಅವಧ್ ಇನ್ ರಿವೋಲ್ಟ್, ನ್ಯೂಡೆಲ್ಲಿ.

೬. ಸಾವರಕರ್ ವಿ.ಡಿ., ೧೯೦೯, ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ ಆಫ್ ೧೮೫೭, ಲಂಡನ್.

೭. ಸೇನ್ ಎಸ್.ಎನ್., ೧೯೫೭. ಎಯ್ಟೀನ್ ಫಿಫ್ಟಿ ಸೆವೆನ್, ನವದೆಹಲಿ.