೧೮೫೭ರ ಘಟನೆಗಳ ಸ್ವರೂಪದ ಬಗ್ಗೆ ಇತಿಹಾಸಕಾರರಲ್ಲಿ ಒಮ್ಮತದ ಅಭಿಪ್ರಾಯವಿಲ್ಲ. ಈ ಘಟನೆಯ ವಾಸ್ತವಿಕತೆಯನ್ನು ಅರಿಯುವ ಸಲುವಾಗಿ ಅದರಲ್ಲಿ ಭಾಗವಹಿಸಿದ್ದ ನಾಯಕರು ಎಂಥಹವರು, ಅವರ ದುಗುಡ ದುಮ್ಮಾನಗಳಾವುವು ಮತ್ತು ಅದರ ವ್ಯಾಪ್ತಿ ಎಷ್ಟರ ಮಟ್ಟಿನದು ಎಂಬುದನ್ನು ನಾವು ಪರಿಗಣಿಸಬೇಕು. ಈ ಚಳವಳಿಯನ್ನು ದಮನ ಮಾಡಲಾಯಿತಾದರೂ, ಅದು ೧೮೫೭ರ ತರುವಾಯ ಅನೇಕ ಬದಲಾವಣೆಗಳಿಗೆ ಕಾರಣ ವಾಯಿತು. ೧೮೫೭ರ ಘಟನೆ ಭಾರತೀಯರು ಮತ್ತು ಬ್ರಿಟಿಷರ ನಡುವಣ ಸಂಬಂಧವನ್ನು ಹದಗೆಡಿಸಿತು. ಹೀಗಾಗಿ ಬ್ರಿಟಿಷ್ ಆಳ್ವಿಕೆಯ ಬಗ್ಗೆ ಭಾರತೀಯರ ಮನಸ್ಸನ್ನು ಗೆಲ್ಲಲು ಏನನ್ನಾದರೂ ಮಾಡಬೇಕೆಂದು ಬ್ರಿಟಿಷರು ಆಲೋಚಿಸಿದರು. ಪ್ರಗತಿ ವಿರೋಧಿಯಾದ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಗೆ ರಕ್ಷಣೆ ಒದಗಿಸಲಾರಂಭಿಸಿದರು. ಒಡೆದು ಆಳುವ ನೀತಿಗೆ ವ್ಯಾಪಕವಾಗಿ ಪ್ರೋತ್ಸಾಹ ನೀಡಲಾಯಿತು ಮತ್ತು ಸಿವಿಲ್ ಹಾಗೂ ಸೈನಿಕ  ಇಲಾಖೆಗಳ ಉತ್ತಮ ವೇತನವುಳ್ಳ ಸ್ಥಾನಗಳನ್ನು ಯುರೋಪಿಯನ್ನರು ನಿಯಂತ್ರಿಸುತ್ತಿದ್ದರು.

೧೮೫೭ರ ಚಳವಳಿಯ ಬಗ್ಗೆ ಬ್ರಿಟಿಷರ ಪ್ರತಕ್ರಿಯೆ ಏನು ಎಂಬುದನ್ನು ಇಲ್ಲಿ ಚರ್ಚಿಸುವುದು ಅವಶ್ಯಕ. ಏಕೆಂದರೆ ಶೋಷಣೆಯ ನೀತಿಯ ಕಾರಣದಿಂದಾಗಿ ಸಿಪಾಯಿ ದಂಗೆ ಸ್ಫೋಟಿಸಿತೆಂದು ಬ್ರಿಟಿಷರು ಭಾವಿಸಿದರು. ಹೀಗಾಗಿ ಆಡಳಿತ ಯಂತ್ರದಲ್ಲಿ ಬದಲಾವಣೆಗಳನ್ನು ತರಲು ನಿರ್ಧರಿಸಿದರು. ೧೮೫೮ರ ಭಾರತ ಸರ್ಕಾರದ ಅಧಿನಿಯಮವನ್ನು ಜಾರಿ ಮಾಡಿ,  ಭಾರತದ ಆಡಳಿತ ನಿಯಂತ್ರಣವನ್ನು ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟನ್ನಿನ ರಾಣಿಗೆ ಹಸ್ತಾಂತರಿಸಲಾಯಿತು. ಆದರೂ ಭಾರತದಲ್ಲಿ ಅದೇ ಗವರ್ನರ್ ಜನರಲ್‌ರ ಮತ್ತು ಅದೇ ಸಿವಿಲ್ ಮತ್ತು ಮಿಲಿಟರಿ ಆಡಳಿತ ಪದ್ಧತಿ ಮುಂದುವರೆಯಿತು. ೧೮೫೮ರ ಅಧಿನಿಯಮದಲ್ಲಿ ಬ್ರಿಟನ್‌ನಲ್ಲಿ ಭಾರತಕ್ಕೆ ಒಬ್ಬ ಸೆಕ್ರೆಟರಿ ಆಫ್ ಸ್ಟೇಟ್‌ನನ್ನು ನೇಮಕ ಮಾಡುವ ಅವಕಾಶ ಕಲ್ಪಿಸಲಾಯಿತು. ಅವನಿಗೆ ನೆರವಾಗಿ ೧೫ ಜನರಿರುವ ಪರಿಷತ್ತು ರಚಿತವಾಗಲು ಅವಕಾಶ ಕಲ್ಪಿಸಲಾಯಿತು. ಹೊಸ ಕಾರ್ಯನೀತಿಯನ್ನೇನೂ ಪ್ರಾರಂಭಿಸಲಿಲ್ಲ. ರಾಣಿಯು ಕಂಪನಿಯ ಕಾರ್ಯನೀತಿಗಳೇ ಮುಂದುವರಿಯುವುದಾಗಿ ಘೋಷಿಸಿದಳು. ಹೀಗೆ ೧೮೫೮ರ ಅಧಿನಿಯಮವು ಭಾರತದ ಆಡಳಿತ ವ್ಯವಹಾರದ ಜವಾಬ್ದಾರಿಯು ನೇರವಾಗಿ ರಾಣಿಯ ಹೆಗಲಿಗೆ ಬಿತ್ತು. ರಾಣಿಯು ಉದ್ಘೋಷಣೆಯ ಮೂಲಕ ದೇಶೀಯ ರಾಜರ ಹಕ್ಕುಗಳು,  ಘನತೆ ಮತ್ತು ಗೌರವಗಳನ್ನು ಕಾಪಾಡುವುದಾಗಿ ಸಹ ಭರವಸೆ ನೀಡಲಾಯಿತು. ಗಂಭೀರ ಅಪರಾಧಗಳನ್ನೆಸಗಿದವರನ್ನು  ಬಿಟ್ಟು ಉಳಿದವರಿಗೆ ಸಾರ್ವತ್ರಿಕ ಕ್ಷಮಾದಾನ ನೀಡಲಾಯಿತು. ಭಾರತೀಯರನ್ನೂ ಆಡಳಿತ ಸೇವೆಗೆ ನೇಮಕ ಮಾಡಿಕೊಳ್ಳುವುದಾಗಿ ಸಹ ಭರವಸೆ ನೀಡಲಾಯಿತು. ಸೈನ್ಯಾಡಳಿತದಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಯಿತು. ಭಾರತೀಯ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡಿ, ಸಿವಿಲ್ ಮತ್ತು ಮಿಲಿಟರಿ ಇಲಾಖೆಗಳ ಎಲ್ಲ ಪ್ರಮುಖ ಹುದ್ದೆಗಳನ್ನು ಯುರೋಪಿಯನ್ನರಿಗೆ ಮೀಸಲಿಡಲಾಯಿತು. ಭಾರತೀಯರನ್ನು ಆಡಳಿತ ವ್ಯವಸ್ಥೆಯಿಂದಲೇ ಹೊರಗಿಟ್ಟಿದ್ದೇ ೧೮೫೭ರ ಸಿಪಾಯಿ ದಂಗೆಗೆ ಒಂದು ಪ್ರಮುಖ ಕಾರಣವಾಯಿತೆಂದು ಬ್ರಿಟಿಷರು ಆಲೋಚಿಸಿ, ಭಾರತೀಯರಿಗೆ ಪ್ರಜಾ ಪ್ರತಿನಿಧಿ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವ  ಸಲುವಾಗಿ ೧೮೬೧ರ ಇಂಡಿಯನ್ ಕೌನ್ಸಿಲ್ಸ್ ಅಧಿನಿಯಮವನ್ನು ಜಾರಿಗೊಳಿಸಲಾಯಿತು. ಅವರು ಭಾರತೀಯರನ್ನು ಪ್ರಾಣಿಗಳಂತೆ ಕಂಡು ಅಪಮಾನಿಸುತ್ತಿದ್ದರು. ಬಿಳಿಯರು ಕರಿಯರನ್ನು ತಿದ್ದಬೇಕೆಂಬ ವಿಚಾರ ಹಾಗೂ   ಭಾರತೀಯರನ್ನು ನಾಗರಿಕರಾಗಿಸಬೇಕಾದ ಹೊಣೆ ಇಂಗ್ಲೆಂಡಿಗಿದೆ ಎಂಬ ವಿಚಾರಕ್ಕೆ ಈ ನಡತೆ ಅನುಗುಣವಾಗಿತ್ತು. ಹೀಗೆ ಭಾರತದ ಆಡಳಿತದಲ್ಲಿ ಒಂದು ವಿಧದ ಪುನರ್ವ್ಯವಸ್ಥೆಯನ್ನು ಮಾಡಲಾಯಿತು ಮತ್ತು ಬ್ರಿಟನ್ನಿನ ರಾಣಿಯು ಅದರ ನೇರ ಹೊಣೆಯನ್ನು ವಹಿಸಿಕೊಂಡಳು.

ಈ ದಂಗೆಯು ಹಳೆಯ ಸಾಮಾಜಿಕ ಶಕ್ತಿಗಳ ಅಂತ್ಯಕ್ಕೆ ಕಾರಣವಾಗಿ, ವಿದ್ಯಾವಂತ ವಿವೇಚನಾಪೂರ್ಣ ವರ್ಗ ಮತ್ತು ಮಧ್ಯಮ ತರಗತಿಯ ವ್ಯಾಪಾರಿ ವರ್ಗಗಳೆಂಬ ಹೊಸ ಸಾಮಾಜಿಕ ಶಕ್ತಿಗಳು ಉದಯವಾದವು. ಈ ವರ್ಗಗಳ ಜನರೇ ಮುಂದೆ ಸಂಘಟಿತ ರಾಷ್ಟ್ರೀಯ ಚಳವಳಿಯ ಅಗ್ರನಾಯಕರೆನಿಸಿದರು. ೧೮೫೭ರಿಂದ ೧೮೭೦ರವರೆಗಿನ ಅವಧಿಯಲ್ಲಿ ಎರಡು ಬ್ರಿಟಿಷ್ ವಿರೋಧಿ ಚಳವಳಿಗಳು ನಡೆದವು. ಅವುಗಳೆಂದರೆ ವಹಾಭಿ ಮತ್ತು ಮರಾಠಾ ಚಳವಳಿಗಳು.

೧೮೫೮ರ ಹೊಸ ಕಾನೂನಿನ ಪ್ರಕಾರ ಲಾರ್ಡ್‌ಕ್ಯಾನಿಂಗ್ (೧೮೫೬-೬೨) ಬ್ರಿಟಿಷ್ ಅಧಿಪತ್ಯದ ಅಧೀನದಲ್ಲಿ ಮೊದಲ ವೈಸರಾಯಿ ಆದ. ಕಾನೂನು ಮತ್ತು ಶಾಂತಿ ಪಾಲನೆ ಅವನ ಮುಖ್ಯ ಕೆಲಸವಾಗಿತ್ತು. ೧೮೫೭ರ ಘಟನೆಯು ಭಾರತೀಯರ ಮತ್ತು ಇಂಗ್ಲಿಷರ ನಡುವಣ ಸಂಬಂಧವನ್ನು ಹದಗೆಡಿಸಿತು. ಎರಡೂ ಕಡೆಗಳಲ್ಲಿ ಕಹಿ ಮತ್ತು ದ್ವೇಷ ಮನೋಭಾವ ಮೂಡಿತ್ತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಅವನು ಸಾಂತ್ವನದ ಕಾರ್ಯನೀತಿ ಅನುಸರಿಸಿದನು ಹಾಗೂ ತನ್ನ ಕಾಲ ಮತ್ತು ಶಕ್ತಿಯನ್ನು ವಿನಿಯೋಗಿಸಿ ಆಡಳಿತದಲ್ಲಿ ಸುಧಾರಣೆಗಳನ್ನು ತರಲು ಶ್ರಮಿಸಿದನು. ಭಾರತೀಯರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದೆಂದು ಮತ್ತು ಭಾರತೀಯರ ಆಂತರಿಕ ವಿಚಾರಗಳಲ್ಲಿ ಬ್ರಿಟನ್ ಹಸ್ತಕ್ಷೇಪ ಮಾಡುವುದಿಲ್ಲವೆಂಬ ಭರವಸೆ ನೀಡಲಾಯಿತು. ಈ ದಿಸೆಯಲ್ಲಿ ಕೆಲವೊಂದು ಸುಧಾರಣೆಗಳನ್ನು ತರಲಾಯಿತು. ರೈತರ ಅಭಿವೃದ್ಧಿಗಾಗಿ ೧೮೫೯ ಬಂಗಾಳ ಗೇಣಿ ಅಧಿನಿಯಮವನ್ನು ಜಾರಿಗೊಳಿಸಲಾಯಿತು. ಗೇಣಿದಾರನು ೧೨ ವರ್ಷಗಳ ಕಾಲ ನಿರಂತರ ಉಳುಮೆ ಮಾಡಿಕೊಂಡಿದ್ದ ಜಮೀನಿನಿಂದ ಅವನನ್ನು ಹೊರದೂಡಲಾಗದೆಂದು ಅದರಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು.

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುವ ಸಲುವಾಗಿ ಸಲುವಾಗಿ ಶಿಕ್ಷಣ ಇಲಾಖೆಯನ್ನು ರಚಿಸಲಾಯಿತು. ಕಲ್ಕತ್ತಾ, ಮುಂಬಯಿ ಮತ್ತು ಮದರಾಸು ಪ್ರಾಂತ್ಯಗಳಲ್ಲಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಯಿತು. ಒಂದು ಬಗೆಯ ತಾಂತ್ರಿಕ ಶಿಕ್ಷಣವನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಲಾಯಿತು.

ನ್ಯಾಯಾಂಗ ಕ್ಷೇತ್ರದಲ್ಲಿ ಕೆಲವು ಸುಧಾರಣೆಗಳನ್ನು ತರಲಾಯಿತು. ಕಲ್ಕತ್ತಾ, ಮುಂಬಯಿ ಮತ್ತು ಮದರಾಸುಗಳಲ್ಲಿ ಉಚ್ಚ ನ್ಯಾಯಾಲಯಗಳನ್ನು ಸ್ಥಾಪಿಸಲಾಯಿತು. ಬ್ರಿಟನ್ನಿನ ರಾಣಿ ನ್ಯಾಯಾಧೀಶರನ್ನು ನೇಮಕ ಮಾಡಲಾರಂಭಿಸಿದಳು. ಕಾನೂನು ಮತ್ತು ಶಾಂತಿಪಾಲನೆ ಮಾಡುವ ದೃಷ್ಟಿಯಿಂದ ಇನ್ಸ್‌ಪೆಕ್ಟರ್ ಜನರಲ್ಲಿನ ಅಧೀನದಲ್ಲಿ ಪೊಲೀಸ್ ಇಲಾಖೆಯನ್ನು ಸ್ಥಾಪಿಸಲಾಯಿತು.

ಬ್ರಿಟಿಷರು ಕೈಗೊಂಡ ಇನ್ನೊಂದು ಮುಖ್ಯ ಕ್ರಮವೆಂದರೆ ಭಾರತೀಯರಿಗೆ  ವಿಧಾನ ಮಂಡಲಗಳಲ್ಲಿ ಪ್ರಾತಿನಿಧ್ಯವನ್ನು ನೀಡುವ ಸಲುವಾಗಿ ೧೮೬೧ರ ಇಂಡಿಯನ್ ಕೌನ್ಸಿಲ್ಸ್‌ಅಧಿನಿಯಮವನ್ನು ಜಾರಿಗೆ ತಂದದ್ದು. ಈ ಅಧಿನಿಯಮದ ಮೇರೆಗೆ ವೈಸರಾಯನ ಲೆಜಿಸ್ಲೇಟಿವ್ ಕೌನ್ಸಿಲನ್ನು ವಿಸ್ತರಿಸಿ ಮುಂಬಯಿ,  ಬಂಗಾಳ ಮತ್ತು ಮದರಾಸುಗಳಲ್ಲಿ ವಿಧಾನ ಮಂಡಲಗಳನ್ನು ಸ್ಥಾಪಿಸಲಾಯಿತು. ಹೀಗೆ ಕ್ಯಾನಿಂಗ್‌ನ ಕಾಲಾವಧಿಯಲ್ಲಿ ಬ್ರಿಟಿಷರು ಶಾಂತಿ ಹಾಗೂ ಹಸ್ತಕ್ಷೇಪರಹಿತ ಕಾರ್ಯನೀತಿಯನ್ನೇ ಅನುಸರಿಸಿದರು.

ಲಾರ್ಡ್‌ಕ್ಯಾನಿಂಗ್‌ನ ತರುವಾಯ ಸರ್ ಜಾನ್ ಲಾರೆನ್ಸ್ (೧೮೬೪-೬೮)ವೈಸರಾಯ್ ಆದ. ಇವನ ಅಧಿಕಾರವಧಿಯಲ್ಲಿ ನಿಸ್ಸಾ ಪ್ರಾಂತ್ಯದಲ್ಲಿ ತೀವ್ರ ಬರಗಾಲ ಉಂಟಾಗಿತ್ತು. ಆಫ್ಘಾನಿಸ್ತಾನದಲ್ಲಿ ಉತ್ತರಾಧಿಕಾರಕ್ಕಾಗಿ ಹೋರಾಟ ನಡೆಯುತ್ತಿದ್ದಾಗಲೂ ಬ್ರಿಟಿಷರು ಅಲ್ಲಿನ ಆಂತರಿಕ ವ್ಯವಹಾರಗಳಲ್ಲಿ ಸಹ ಹಸ್ತಕ್ಷೇಪ ನಡೆಸಲಿಲ್ಲ. ಇದನ್ನು ಒಂದು “ತೀವ್ರ ನಿಷ್ಕ್ರಿಯ” ಕಾರ್ಯನೀತಿಯೆಂದು ಟೀಕಿಸಲಾಯಿತು.

ಸರ್ ಜಾನ್ ಲಾರೆನ್ಸ್‌ನ ತರುವಾಯ ಲಾರ್ಡ್‌‌ಮೇಯೋ (೧೮೬೯-೭೨)ವೈಸರಾಯ್ ಆದ. ಇವನ ಕಾಲದಲ್ಲಿ ಬ್ರಿಟಿಷರು, ಆಫ್ಘಾನಿಸ್ತಾನದ ಸಂಭಂದದಲ್ಲಿ ಸರ್ ಜಾನ್ ಲಾರೆನ್ಸನು ಅನುಸರಿಸಿದಂಥ ಹಸ್ತಕ್ಷೇಪರಹಿತ ಕಾರ್ಯನೀತಿಯನ್ನು ಮುಂದುವರೆಸಿದರು. ಇವನು ಭಾರತೀಯ ರಾಜರು ಮತ್ತು ನವಾಬರ ಮಕ್ಕಳ ಶಿಕ್ಷಣದಲ್ಲಿ ಕೆಲವು ಸುಧಾರಣೆಗಳನ್ನು ಜಾರಿಗೊಳಿಸಿದನು. ಅಜ್ಮೀರ್‌ನಲ್ಲಿ ಮೇಯೋ ಕಾಲೇಜನ್ನು ಪ್ರಾರಂಭಿಸಲಾಯಿತು.

ಮೇಯೋನ ನಿಧನದ ನಂತರ ನಾರ್ತ್‌ಬ್ರೂಕ್ (೧೮೭೨-೭೬) ವೈಸರಾಯನಾದ. ೧೮೭೬ರಲ್ಲಿ ಲಾರ್ಡ್‌‌ಲಿಟ್ಟನ್ ವೈಸರಾಯನಾಗಿ ಭಾರತಕ್ಕೆ ಬಂದ. ಅವನು ಡಿಸ್ರೇಲಿಯ ಕನ್‌ಸರ್ವೇಟೀವ್ ಸರ್ಕಾರದಿಂದ ನಾಮನಿರ್ದೇಶಿತನಾದವನು. ಬ್ರಿಟಿಷ್ ಸರ್ಕಾರದ ಹಿತಾಸಕ್ತಿಯನ್ನು ಕಾಪಾಡಲು ಲಿಟ್ಟನ್ ಮುಕ್ತ ವ್ಯಾಪಾರ ನೀತಿಯನ್ನು ಅನುಸರಿಸಿದನು.  ಭಾರತದ ಕೈಗಾರಿಕೆಗಳ ಬ್ರಿಟಿಷ್ ಕೈಗಾರಿಕೆಗಳೊಂದಿಗೆ ಸ್ಪರ್ಧಿಸುವುದನ್ನು ತಡೆಗಟ್ಟುವ ಸಲುವಾಗಿ ಆಮದು ಸುಂಕ ವಿಧಿಸುವುದನ್ನು ರದ್ದುಪಡಿಸಿದನು. ಹೀಗೆ ಭಾರತೀಯ ಹಿತಾಸಕ್ತಿಗಳನ್ನು ಬಲಿಕೊಟ್ಟು ಆಂಗ್ಲ ರಾಜಕಾರಣದ ಅವಶ್ಯಕತೆಗಳಿಗೆ ಅನುಕೂಲ ಮಾಡಿಕೊಟ್ಟನು. ಅವನು ಪ್ರಾಂತಗಳಿಗೆ ಹಣಕಾಸು ಪ್ರಾಪ್ತಿಯ ಕಾರ್ಯನೀತಿಯನ್ನು ಮುಂದುವರೆಸಿದನು ಮತ್ತು ಪ್ರಾದೇಶಿಕ ಸರ್ಕಾರಗಳಿಗೆ ವೆಚ್ಚ ನಿಯಂತ್ರಣ ಅಧಿಕಾರವನ್ನು ನೀಡಿದನು.

೧೮೭೬-೭೮ರಲ್ಲಿ ಮದರಾಸು, ಮುಂಬಯಿ, ಮೈಸೂರು, ಹೈದರಾಬಾದ ಮತ್ತು ಪಶ್ಚಿಮ ಭಾರತದ ಕೆಲವು ಭಾಗಗಳಲ್ಲಿ ತೀವ್ರತವಾದ ಕ್ಷಾಮ ತಲೆದೋರಿತು. ಇದಕ್ಕೆ ಪರಿಹಾರ ಸೂಚಿಸಲು ೧೮೭೮ರಲ್ಲಿ ಒಂದು ಕ್ಷಾಮ ಆಯೋಗವನ್ನು ನೇಮಕ ಮಾಡಲಾಯಿತು. ಆ ಆಯೋಗವು ಬರಗಾಲ ನಿಧಿಯನ್ನು ಸ್ಥಾಪಿಸಲು ಒತ್ತಾಯಿಸಿತು ಮತ್ತು ರೇಲ್ವೆ ಹಾಗೂ ನೀರಾವರಿ ಸೌಲಭ್ಯಗಳನ್ನು ನಿರ್ಮಿಸಲು ಸಹ ಶಿಫಾರಸ್ಸು ಮಾಡಿತು. ೧೮೭೬ರಲ್ಲಿ ಬ್ರಿಟಿಷ್ ಸರ್ಕಾರವು ರಾಜ ಬಿರುದುಗಳ ಅಧಿನಿಯಮವನ್ನು ಜಾರಿಗೊಳಿಸಿತು. ಆ ಮೂಲಕ ಬ್ರಿಟನ್ನಿನ ರಾಣಿಗೆ ಕೈಸರ್-ಎ-ಹಿಂದ್ ಎಂಬ ಬಿರುದನ್ನು ನೀಡಲಾಯಿತು. ಕ್ಷಾಮದಿಂದಾಗಿ ಮಿಲಿಯಗಟ್ಟಲೆ ಜನರು ಹಸಿವು ನೀರಡಿಕೆಗಳಿಂದ ಸಾಯುತ್ತಿದ್ದಾಗ ಆ ಬಗ್ಗೆ ಭಾರತದ ಜನತೆಗೆ ತಿಳಿಸಲು ೧ನೆಯ ಜನವರಿ ೧೮೭೭ರಲ್ಲಿ  ಒಂದು ವೈಭವಯುತವಾದ ದರ್ಬಾರ್ ನಡೆಸಲಾಯಿತು. ಇದು  ಭಾರತದ ಜನರನ್ನು ಬ್ರಿಟಿಷ್ ಸಾಮ್ರಾಜ್ಯದ “ನಾಗರಿಕನ್ನಾಗಿ” ಮಾಡಿತು ಮತ್ತು ಅದು ಬ್ರಿಟಿಷ್ ಸಾಮ್ರಾಜ್ಯಗಳಲ್ಲಿ ಸೂಕ್ತ ಸ್ಥಾನವನ್ನು ಪಡೆಯುತ್ತೇವೆಂಬ ಭಾವನೆಗೆ ಸಹ ನಾಂದಿ ಹಾಡಿತು.

ಲಿಟ್ಟನ್ನನು ಕೈಗೊಂಡ ಇನ್ನೊಂದು ಜನವಿರೋಧಿ ಕ್ರಮವೆಂದರೆ ೧೮೭೮ರ ಭಾರತೀಯ  ಭಾಷಾ ಪತ್ರಿಕೆಗಳ ಅಧಿನಿಯಮವನ್ನು ಜಾರಿಗೆ ತಂದುದು. ಭಾರತೀಯ ಭಾಷೆಗಳಲ್ಲಿ ಮುದ್ರಿಸಲಾದ ಪತ್ರಿಕೆಗಳ ಸೆನ್ಸಾರ್ ಮಾಡಲು ಮತ್ತು ಬ್ರಿಟಿಷರ ವಿರುದ್ಧ ಅಸಮಾಧಾನ ಭಾವನೆಗಳನ್ನು ಕೆರಳಿಸುವ ಸಂಭವವಿರುವ ಯಾವುದೇ ಬರಹಗಳನ್ನು ಪ್ರಕಟಿಸಿದ್ದಕ್ಕಾಗಿ ಆ ಭಾರತೀಯ ವೃತ್ತ ಪತ್ರಿಕೆಯನ್ನು ಸ್ವಾಧೀನಪಡಿಸಿಕೊಳ್ಳಲು ಮ್ಯಾಜಿಸ್ಟ್ರೇಟ್‌ರೊಬ್ಬರಿಗೆ ಅಧಿಕಾರ ನೀಡಲಾಗಿತ್ತು. ಭಾರತದಲ್ಲಿ ಬ್ರಿಟಿಷರ ಕಾರ್ಯನೀತಿಯನ್ನು ಟೀಕಿಸುವುದನ್ನು ನಿಲ್ಲಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಭಾರತೀಯ ವೃತ್ತ ಪತ್ರಿಕೆಗಳು ಸಾಮಾನ್ಯವಾಗಿ ಬ್ರಿಟಿಷರ ನೀತಿಯನ್ನು ಟೀಕಿಸುತ್ತಿದ್ದವು. ಭಾರತೀಯರು ಈ ಶಾಸನವನ್ನು ಬಾಯಿಗೆ ಬಟ್ಟೆ ತುರುಕುವ ಶಾಸನವೆಂದು ವರ್ಣಿಸಿ ಇದನ್ನು ತೀವ್ರವಾಗಿ ವಿರೋಧಿಸಿದರು.

ಲಿಟ್ಟನ್ನನು ಕೈಗೊಂಡ ಇನ್ನೊಂದು ದಮನಕಾರಿ ಕ್ರಮವೆಂದರೆ ೧೮೭೮ರ ಭಾರತ ಶಸ್ತ್ರಾಸ್ತ್ರಗಳ ಅಧಿನಿಯಮವನ್ನು ಜಾರಿಗೆ ತಂದುದು. ಈ ಶಾಸನದ ಪ್ರಕಾರ ಲೈಸೆನ್ಸಿಲ್ಲದೆ ಬಂದೂಕು ಮುಂತಾದ ಆಯುಧಗಳನ್ನು ಇಟ್ಟುಕೊಳ್ಳುವುದು, ಒಯ್ಯುವುದು ಒಂದು ಕ್ರಿಮಿನಲ್ ಅಪರಾಧ. ಈ ಶಾಸನದ ಉಲ್ಲಂಘನೆಗಾಗಿ ೩ ವರ್ಷಗಳ ಕಾರಾಗೃಹ ಶಿಕ್ಷೆ ಅಥವಾ ಜುಲ್ಮಾನೆ ಅಥವಾ ಅವೆರಡನ್ನೂ ವಿಧಿಸಲಾಗುತಿತ್ತು. ಆಯುಧಗಳನ್ನು  ಬಚ್ಚಿಟ್ಟರೆ ೭ ವರ್ಷಗಳ ಕಾರಾಗೃಹ ಶಿಕ್ಷೆ ಅಥವಾ ಜುಲ್ಮಾನೆ ವಿಧಿಸಲಾಗುತ್ತಿತ್ತು. ಆದರೆ ಇದರ ಕೆಟ್ಟ ಅಂಶವೆಂದರೆ ಜನಾಂಗ ವಿಭೇದ ನೀತಿ. ಯುರೋಪಿಯನ್ನರು ಮತ್ತು ಆಂಗ್ಲೋ ಇಂಡಿಯನ್ನರಿಗೆ ಈ ಶಾಸನದಿಂದ ವಿನಾಯಿತಿ, ನೀಡಲಾಗಿತ್ತು.

೧೮೫೩ ಮತ್ತು ೧೮೫೫ರ ಚಾರ್ಟರ್ ಅಧಿನಿಯಮವನ್ನು ವರ್ಣಭೇದವಿಲ್ಲದೆ ವ್ಯಕ್ತಿಯ ಅರ್ಹತೆಯ ಆಧಾರದ ಮೇಲೆ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುವುದಾಗಿ ಮತ್ತು ಉನ್ನತ ಹುದ್ದೆಗಳ ನೇಮಕಾತಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದಾಗಿ ಘೋಷಿಸಲಾಗಿದ್ದರೂ, ಕೆಲವೇ ಕೆಲವು ಭಾರತೀಯರಿಗೆ ಸಿವಿಲ್ ಸೇವೆಗೆ ಪ್ರವೇಶಿಸಲು ಅವಕಾಶ ನೀಡಲಾಯಿತು. ಆದುದರಿಂದ ಲಿಟ್ಟನ್ನನು ೧೮೭೯ರ ಶಾಸನಬದ್ಧ ಸಿವಿಲ್ ಸೇವಾ ಕಾಯ್ದೆಯನ್ನು ಜಾರಿಗೊಳಿಸಿದನು. ಇದರ ಪ್ರಕಾರ ಭಾರತ ಸರ್ಕಾರವು ಶಾಸನಬದ್ಧ ಸಿವಿಲ್ ಸೇವೆಗೆ ಕೆಲವು ಉತ್ತಮ ಕುಟುಂಬಗಳಿಂದ ಭಾರತೀಯರನ್ನು, ಪ್ರಾಂತೀಯ ಸರ್ಕಾರಗಳ ಶಿಫಾರಸಿನ ಮೇಲೆ ಮತ್ತು ಭಾರತ ವ್ಯವಹಾರ ಕಾರ್ಯದರ್ಶಿಗಳ ಸ್ಥಿರೀಕರಣಕ್ಕೆ ಒಳಪಟ್ಟು ಭಾರತ ಸರ್ಕಾರವು ನೇಮಕ ಮಾಡಿಕೊಳ್ಳಬಹುದಾಗಿತ್ತು ಮತ್ತು ಅಂಥ ನೇಮಕಾತಿಗಳು ಒಂದು ವರ್ಷದಲ್ಲಿ ಸೇವೆಗೆ ನೇಮಕ ಮಾಡಿಕೊಳ್ಳಲಾದ ಒಟ್ಟು ಹುದ್ದೆಗಳ ಆರನೇ ಒಂದು ಭಾಗವನ್ನು ಮೀರುವಂತಿರಲಿಲ್ಲ. ಆದರೆ ಅದು ಒಡಂಬಡಿಕೆಯ ಸೇವೆಗಳಿಗೆ ಸಮನಾದ ಸ್ಥಾನಮಾನ ಮತ್ತು ಸಂಬಳವನ್ನು ಹೊಂದಿರಲಿಲ್ಲ. ಈ ಶಾಸನಬದ್ಧ ಸೇವೆಗಳು ಭಾರತದ ಜನಮನ್ನಣೆಗಳಿಸದೆ ೮ ವರ್ಷಗಳ ತರುವಾಯ ಅದನ್ನು ರದ್ದುಪಡಿಸಲಾಯಿತು. ಭಾರತೀಯರು ಪರೀಕ್ಷೆಗೆ ಕುಳಿತುಕೊಳ್ಳುವುದನ್ನು ಪ್ರೋತ್ಸಾಹಿಸದಿರುವ ಸಲುವಾಗಿ ಗರಿಷ್ಠ ವಯೋಮಿತಿಯನ್ನು ೨೧ ವರ್ಷದಿಂದ ೧೯ ವರ್ಷಕ್ಕೆ ಇಳಿಸಲಾಯಿತು  ಮತ್ತು ಪರೀಕ್ಷೆಯನ್ನು ಲಂಡನ್ನಿನಲ್ಲಿ ನಡೆಸಲಾಗುತ್ತಿತ್ತು.

ಹೀಗೆ  ಲಿಟ್ಟನ್ ಭಾರತದಲ್ಲಿ ಪ್ರಗತಿ ವಿರೋಧಿ ನೀತಿಯನ್ನು ಅನುಸರಿಸಿದನು. ಅದು ಭಾರತೀಯರ ಮನಸ್ಸಿನಲ್ಲಿ ವಿರೋಧದ ಭಾವನೆಗಳನ್ನು, ಕಹಿ ಮನೋಭಾವವನ್ನು ಮೂಡಿಸಿತು. ಅವನ ಕಾರ್ಯನೀತಿಯು ಭಾರದಲ್ಲಿ ಆಳುವ ಮತ್ತು ಆಳಿಸಿಕೊಳ್ಳುವ ವರ್ಗಗಳ ನಡುವಣ ಸಂಬಂಧವನ್ನು ಹಾಳುಮಾಡಿತು. ಆದಾಗ್ಯೂ ಲಿಟ್ಟನ್ ಬ್ರಿಟಿಷ್ ವಿರುದ್ಧ ರೂಪುಗೊಳ್ಳುತ್ತಿದ್ದ ಚಳುವಳಿ ಬಲಗೊಳ್ಳುವಂತೆ ಮಾಡಲು ಒಂದು ರೀತಿಯಲ್ಲಿ ಪರೋಕ್ಷವಾಗಿ ಕಾರಣನಾಗಿದ್ದ.

ಲಿಟ್ಟನ್ನನ ನಿರ್ಗಮನದ ತರುವಾಯ ಲಾರ್ಡ್‌ರಿಪ್ಪನ್ (೧೮೮೧-೮೪) ವೈಸರಾಯ್ ಆದ. ರಿಪ್ಪನ್ನನು ವೈಸರಾಯ್ ಆಗಿ ಭಾರತಕ್ಕೆ ಬಂದಾಗ ಯೂರೋಪ್‌ನಲ್ಲಿ ಲಿಬರಲ್ ಪಕ್ಷ ಅಧಿಕಾರದಲ್ಲಿತ್ತು. ರಿಪ್ಪನ್ ಉದಾರವಾದಿ ಹಾಗೂ ಜನತಂತ್ರವಾದಿಯಾಗಿದ್ದ. ಆದ್ದರಿಂದ ಅವನು ಭಾರತದ  ಆಡಳಿತದಲ್ಲಿ ಉದಾರೀಕರಣವನ್ನು ತರುವ ಕ್ರಮಗಳನ್ನು ಕೈಗೊಂಡನು. ಹೀಗಾಗಿ ಅವನು ಲಾರ್ಡ್‌ಲಿಟ್ಟನ್ನನ ಕೆಲವು ಜನವಿರೋಧಿ ಕ್ರಮಗಳನ್ನು ರದ್ದುಗೊಳಿಸುವ ಮೂಲಕ, ಭಾರತೀಯರ ಮನಸ್ಸಿಗೆ ಆದ ಗಾಯವನ್ನು ಮಾಯಿಸಲು  ಪ್ರಯತ್ನಿಸಿದ. ಲಾರ್ಡ್‌‌ಲಿಟ್ಟನ್ನನು ಜಾರಿಗೊಳಿಸಿದ್ದ ಭಾರತೀಯ ಭಾಷಾ ವೃತ್ತಪತ್ರಿಕೆಗಳ ಅಧಿನಿಯಮವನ್ನು ರದ್ದುಗೊಳಿಸಿದ ಮತ್ತು ಭಾರತೀಯ ವೃತ್ತಪತ್ರಿಕೆಗಳಿಗೆ ಉಳಿದ ದೇಶಗಳ ವೃತ್ತಪತ್ರಿಕೆಗಳಿರುವಷ್ಟೇ ಸಮಾನವಾದ ಸ್ವಾತಂತ್ರ್ಯವನ್ನು ನೀಡಿದನು.

ಭಾರತದಲ್ಲಿನ ಕಾರ್ಖಾನೆಗಳನ್ನು ನಿಯಂತ್ರಿಸಲು ಮತ್ತು ಕಾರ್ಮಿಕರ ಸ್ಥಿತಿಗತಿಗಳನ್ನು ಸುಧಾರಿಸಲು ೧೮೮೧ರಲ್ಲಿ ಪ್ರಥಮ ಕಾರ್ಖಾನೆ ಅಧಿನಿಯಮವನ್ನು ಜಾರಿಗೆ ತರಲಾಯಿತು. ಮೇಯೋ ಪ್ರಾರಂಭಿಸಿದ ಆರ್ಥಿಕ ವಿಕೇಂದ್ರೀಕರಣ ನೀತಿಯನ್ನು ರಿಪ್ಪನ್‌ಮುಂದುವರೆಸಿದ ಮತ್ತು ಪ್ರಾಂತಗಳಿಗೆ ಹೆಚ್ಚಿನ ಹಣಕಾಸಿನ ಜವಾಬ್ದಾರಿಯನ್ನು ವಹಿಸಿದನು.

ಆದರೆ ರಿಪ್ಪನ್ನನು ಮಾಡಿದ ಮಹತ್ವದ ಕಾರ್ಯವೆಂದರೆ ಸ್ವಯಂ ಆಡಳಿತದ ನಿರ್ಣಯ ಕೈಗೊಂಡುದು. ಭಾರತದ ಜನರಿಗೆ ಒಂದು ಜನಪ್ರಿಯ ಮತ್ತು ರಾಜಕೀಯ ಶಿಕ್ಷಣ ನೀಡುವುದು ಆತನ ಮುಖ್ಯ ಉದ್ದೇಶವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ತಾಲೂಕುಗಳನ್ನು ರಚಿಸಲಾಯಿತು ಮತ್ತು ಪಟ್ಟಣಗಳಲ್ಲಿ ಸ್ಥಳೀಯ ಮಂಡಲಿಗಳನ್ನು ರಚಿಸುವ ಸಲುವಾಗಿ ಪುರಸಭಾ ಸಮಿತಿಗಳನ್ನು ಮತ್ತು ನಗರ ಸಂಸ್ಥೆಗಳನ್ನು ಸ್ಥಾಪಿಸಲಾಯಿತು.

ರಿಪ್ಪನ್ ಭೂಕಂದಾಯದ ಬಗ್ಗೆ ಒಂದು ಠರಾವನ್ನು ಅಂಗೀಕರಿಸಿದ ಮತ್ತು ರೈತಾಪಿ ವರ್ಗದಲ್ಲಿ ಭರವಸೆಯ ಮತ್ತು ಭುಕಂದಾಯವನ್ನು ಹೆಚ್ಚಿಸುವುದಿಲ್ಲವೆಂಬ ಭದ್ರತೆಯ ಭಾವನೆಯನ್ನು ಮೂಡಿಸುವ ದೃಷ್ಟಿಯಿಂದ ಭೂಕಂದಾಯದ ಕಾಯಂ ಇತ್ಯರ್ಥವನ್ನು  ಮಾರ್ಪಾಟುಗೊಳಿಸಿದ. ಇದನ್ನು ಜಮೀನ್ದಾರರು ವಿರೋಧಿಸಿದರು.

೧೮೫೪ರ ಲಂಡನ್ ಡಿಸ್‌ಪ್ಯಾಚ್‌ನ ತರುವಾಯ ಶಿಕ್ಷಣಕ್ಷೇತ್ರದಲ್ಲಿ ಆಗಿರುವ ಪ್ರಗತಿಯನ್ನು ಪರಶೀಲಿಸಲು ಮತ್ತು ಅದರಲ್ಲಿ ನಿರೂಪಿಸಲಾಗಿರುವ ಕಾರ್ಯನೀತಿಯ ಮುಂದಿನ ಅನುಷ್ಠಾನ ಕ್ರಮಗಳನ್ನು ಸೂಚಿಸಲು ಸರ್ ವಿಲಿಯಂ ಹಂಟ್ಸ್‌ನ ಅಧ್ಯಕ್ಷತೆಯಲ್ಲಿ,  ೧೮೮೨ರಲ್ಲಿ ಒಂದು ಶಿಕ್ಷಣ ಆಯೋಗವನ್ನು ನೇಮಕ ಮಾಡಲಾಯಿತು. ಆ ಆಯೋಗವು ಪ್ರಾಥಮಿಕ ಶಿಕ್ಷಣವನ್ನು ಸರ್ಕಾರದ ಮೇಲ್ವಿಚಾರಣೆಯ ಅಡಿಯಲ್ಲಿ ಪುರಸಭೆಗಳು ಮತ್ತು ಜಿಲ್ಲಾ ಮಂಡಲಿಗಳಿಗೆ ವಹಿಸಿಕೊಡಬಹುದೆಂದು, ಪ್ರೌಢಶಾಲೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ನೇರ ಆಡಳಿತ ನಡೆಸುವುದರಿಂದ ಹಿಂದೆ ಸರಿಯಬೇಕು ಮತ್ತು ಸಹಾಯಾನುದಾನ ನೀಡುವ ವ್ಯವಸ್ಥೆಯನ್ನು ಮುಂದುವರೆಸಬೇಕೆಂದು ಶಿಫಾರಸು ಮಾಡಿತು.

ಭಾರತದಲ್ಲಿ ರಿಪ್ಪನ್ನನಿಗೆ ಕೆಟ್ಟ ಹೆಸರು ಬರುವಂತೆ ಮಾಡಿದ ಮುಖ್ಯ ಪ್ರಸಂಗವೆಂದರೆ ಇಲ್‌ಬರ್ಟ್‌ಮಸೂದೆ ವಿವಾದ. ವೈಸರಾಯನ ಕಾರ್ಯನಿರ್ವಾಹಕ ಪರಿಷತ್ತಿನಲ್ಲಿ ಕಾನೂನು ಸದಸ್ಯನಾಗಿದ್ದ ಸರ್ ಸಿ.ಪಿ.ಇಲ್‌ಬರ್ಟ್‌‌ನು ವರ್ಣಭೇದ ನೀತಿಯಿಂದ ಕೂಡಿದ ನ್ಯಾಯಿಕ ಅನರ್ಹತೆಯನ್ನು ತೊಡೆದುಹಾಕಲು ಪ್ರಯತ್ನಿಸಿದ.  ಭಾರತೀಯ ನ್ಯಾಯಾಧೀಶರಿಗೆ ಕ್ರಿಮಿನಲ್ ಮೊಕದ್ದಮೆಯಲ್ಲಿ ಸಿಲುಕಿರುವ ಬ್ರಿಟಿಷ್ ಪ್ರಜೆಗಳ ವಿಚಾರಣೆ ನಡೆಸುವ ಹಕ್ಕನ್ನು ನೀಡಿತು. ಆದರೆ ಈ ಕ್ರಮವನ್ನು ಬ್ರಿಟಿಷ್ ಸಮುದಾಯ ಉಗ್ರವಾಗಿ ವಿರೋಧಿಸಿತು.  ಈ ವಿರೋಧದಿಂದಾಗಿ ರಿಪ್ಪನ್ನನು ಈ ಮಸೂದೆಯನ್ನು ಮಾರ್ಪಡಿಸಬೇಕಾಯಿತು. ಮಾರ್ಪಾಟುಗೊಂಡ ಮಸುದೆಯ ಪ್ರಕಾರ ಯೂರೋಪಿಯನ್ ಆಂಗ್ಲ ಪ್ರಜೆಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟರ ಮುಂದೆ ವಿಚಾರಣೆಗಾಗಿ ಕರೆತಂದಾಗ, ಅವನು ಕನಿಷ್ಠ ೭ ಜನ ಯುರೋಪಿಯನ್ನರು ಹನ್ನೆರಡು ಜನ ಜ್ಯೂರಿಗಳ ಮೂಲಕ ವಿಚಾರಣೆ ನಡೆಸಬೇಕೆಂದು ಕೇಳುವ ಹಕ್ಕು ಹೊಂದಿರುತ್ತಿದ್ದ. ಇಲ್‌ಬರ್ಟ್ ಮಸೂದೆ ವಿವಾದವೂ ಬ್ರಿಟಿಷರು ಯಾವ ತ್ಯಾಗವನ್ನೂ ಮಾಡಲು ಸಿದ್ಧರಿಲ್ಲ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿತು. ೧೮೫೭ರ ಹೋರಾಟದ ಮೂಲಕ ಪ್ರಾರಂಭವಾದ ಭಾರತೀಯರ ಮತ್ತು ಆಂಗ್ಲರ ನಡುವಣ ಜನಾಂಗೀಯ ಕಹಿ ಮನೋಭಾವವನ್ನು ಮುಂದುವರಿಸಿತು.

ರಿಪ್ಪನ್ನನು ಕೈಗೊಂಡ ಇನ್ನೊಂದು ಮುಖ್ಯ ಕ್ರಮವೆಂದರೆ ಮೈಸೂರು ರಾಜ್ಯದ ಪುನರ್‌ವರ್ಗಾವಣೆ. ದುರಾಡಳಿತದ ಕಾರಣದ ಮೇಲೆ ಲಾರ್ಡ್‌‌ವಿಲಿಯಂ ಬೆಂಟಿಂಕನು ಪದಚ್ಯುತಗೊಳಿಸಿದ್ದ ಮೈಸೂರಿನ ಹಿಂದೂ ರಾಜನನ್ನು ರಿಪ್ಪನ್ ಸಿಂಹಾಸನದಲ್ಲಿ ಪುನರ್ ಸ್ಥಾಪಿಸಿದ. ಹೀಗೆ ತಾನು ಕೈಗೊಂಡ ಕಾರ್ಯನೀತಿ ಮತ್ತು ಕ್ರಮಗಳಿಂದಾಗಿ ರಿಪ್ಪನ್ ಜನಪ್ರಿಯನಾದ. ರಿಪ್ಪನ್ ಸಜ್ಜನ ಮತ್ತು ಸದ್ಗುಣಿಯೆಂದು  ಮನ್ನಣೆ ಗಳಿಸಿದ. ಆದರೆ ಇದು ಬ್ರಿಟಿಷರ ಕಣ್ಣನ್ನು ಕೆಂಪಗಾಗುವಂತೆ ಮಾಡಿತು. ಆಂಗ್ಲರು ಅವನನ್ನು ವೈಸರಾಯ್ ಹುದ್ದೆಯಿಂದ ಕೆಳಗಿಳಿಸಲು ಪ್ರಯತ್ನಿಸಿದರು.

ಹೀಗೆ ಆಂಗ್ಲರು ೧೮೫೭ರ ದಂಗೆಯ ತರುವಾಯದಲ್ಲಿ ಸಾಮ್ರಾಜ್ಯ ವಿಸ್ತರಣೆಯ ನೀತಿಯಿಂದ ದೂರ ಸರಿದುದನ್ನು ಮೇಲ್ಕಂಡ ಘಟನೆಗಳು ಸ್ಪಷ್ಟವಾಗಿ ತೋರಿಸುತ್ತವೆ. ಆಂತರಿಕ ವ್ಯವಹಾರಗಳಿಗೆ ಅತಿಯಾದ ಹಸ್ತಕ್ಷೇಪ ಮಾಡುವುದು ಬ್ರಿಟಿಷರ ಹಿತಾಸಕ್ತಿಗೇ ಮಾರಕವೆಂದು ಭಾವಿಸತೊಡಗಿದರು. ಭಾರತೀಯರ ಬೆಂಬಲ ಅವರಿಗೂ ಅಗತ್ಯವಾಗಿತ್ತು. ಹೀಗಾಗಿ ಹಂತಹಂತವಾಗಿ ಸುಧಾರಣೆಗಳನ್ನು ಜಾರಿಗೆ ತಂದು ಆಡಳಿತ ವ್ಯವಸ್ಥೆಯಲ್ಲಿ ಭಾರತೀಯರನ್ನು ಸೇರಿಸಿಕೊಳ್ಳಲು  ಪ್ರಯತ್ನಿಸಿದರು. ಭಾರತೀಯ ರೈತರನ್ನು ವಸಾಹತುಶಾಹಿಗಳು ಶೋಷಿಸಿದ ಬಗ್ಗೆ ಮತ್ತು ವಿವಿಧ ರೈತ ಚಳವಳಿಗಳು ಹಾಗೂ ಅವರು ಬಂಡಾಯ ನಡೆಸಿದ ಬಗ್ಗೆ ಇಲ್ಲಿ ಚರ್ಚಿಸುವುದು ಅಗತ್ಯ. ಈ ಚಳವಳಿಗಳು ಮತ್ತು ಬಂಡಾಯಗಳು ಬಹುಮಟ್ಟಿಗೆ ವಸಾಹತುಶಾಹಿಯ ಆರ್ಥಿಕ ನೀತಿಗಳು, ಹೊಸ ಭೂಕಂದಾಯ ಪದ್ಧತಿ, ವಸಾಹತುಶಾಹಿ ಆಡಳಿತ ಪದ್ಧತಿ ಮತ್ತು ನ್ಯಾಯಾಂಗ ಪದ್ಧತಿ ಇವುಗಳಿಂದಾಗಿ ಆಸ್ಫೋಟಿಸಿದವು. ಕರಕುಶಲ ಕಲೆಗಳ ವಿನಾಶದಿಂದಾಗಿ ಜನ ಬೇಸಾಯ ಕ್ಷೇತ್ರಕ್ಕೆ ಲಗ್ಗೆ ಇಡತೊಡಗಿದರು. ಇದರಿಂದ ಕೃಷಿ ಕ್ಷೇತ್ರ ದುರ್ಬಲವಾಯಿತು. ಜಮೀನ್ದಾರಿ ಪ್ರದೇಶಗಳಲ್ಲಿ ಜಮೀನ್ದಾರರು ಕಾನೂನು ವಿರುದ್ಧವಾಗಿ ಬಾಕಿ ವಸೂಲಿ ಮಾಡುವ ಮೂಲಕ ರೈತರನ್ನು ಶೋಷಿಸಿದರು. ರೈತವಾರಿ ಪದ್ಧತಿಯಲ್ಲಿ ಸರ್ಕಾರವೇ ಅತ್ಯಧಿಕ ಕಂದಾಯವನ್ನು ವಸೂಲು ಮಾಡುತ್ತಿತ್ತು. ಇದರಿಂದಾಗಿ ರೈತರು ಲೇವಾದೇವೆದಾರರಿಂದ ಹಣ ಸಾಲ ತೆಗೆದುಕೊಳ್ಳವುದು ಅನಿವಾರ್ಯವಾಗುತ್ತಿತ್ತು. ರೈತರು ಕ್ರಮೇಣ ಬಡತನದ ಕೂಪದಲ್ಲಿ ಬಿದ್ದು ನರಳುವಂತಾಯಿತು. ಸಾಮೂಹಿಕ ಪ್ರತಿಭಟನೆ ಸಾಧ್ಯವಿಲ್ಲವೆಂದು ಮನವರಿಕೆಯಾದಾಗ ರೈತರು ಅದನ್ನು ಒಂಟಿಯಾಗಿ ಅಥವಾ ಸಣ್ಣ ಗುಂಪುಗಳಲ್ಲಿ ಪ್ರತಿಭಟಿಸಿದರು. ಅನೇಕ ಜನ ಕಳ್ಳತನ, ಲೂಟಿ, ದರೋಡೆ ಮುಂತಾದ ಕೃತ್ಯಗಳಲ್ಲಿ ತೊಡಗಿದರು.

ರೈತ ಚಳವಳಿಯ ಅಂಗವಾಗಿ ಅತ್ಯಂತ ಉಗ್ರಸ್ವರೂಪ ತಾಳಿದ ಮತ್ತು ವ್ಯಾಪಕವಾಗಿ ಹಬ್ಬಿದ ಚಳವಳಿಯೆಂದರೆ ೧೮೫೯-೬೦ರ ನೀಲಿ ಬೆಳೆ ಬೆಳೆಯುವಂತೆ ಗೇಣಿದಾರರನ್ನು ಒತ್ತಾಯಿಸುತ್ತಿದ್ದರು. ಪ್ರಾರಂಭದಿಂದಲೂ ನೀಲಿಬೆಳೆಯನ್ನು ಅತ್ಯಂತ ದಬ್ಬಾಳಿಕೆ-ಕ್ರೌರ್ಯಗಳ ಮೂಲಕ ಬೆಳೆಸಲಾಗುತ್ತಿತ್ತು. ನೀಲಿಯನ್ನು ಫಲವತ್ತಾದ ಭೂಮಿಯಲ್ಲಿ ಬೆಳೆದು, ಬ್ರಿಟಿಷ್ ಪ್ಲಾಂಟರುಗಳು ನಿಗದಿಪಡಿಸಿದ ಬೆಲೆಗೆ ಅವರಿಗೆ ಮಾರಾಟ ಮಾಡುವಂತೆ ರೈತರನ್ನು ಒತ್ತಾಯಿಸಲಾಗುತ್ತಿತ್ತು. ಅವರು ನಿಗದಿ ಪಡಿಸುವ ಬೆಲೆಯು ಮಾರುಕಟ್ಟೆ ಬೆಲೆಗಿಂತ ತುಂಬಾ ಕಡಿಮೆ ಇರುತ್ತಿತ್ತು. ಪ್ಲಾಂಟರುಗಳು ರೈತರನ್ನು  ಅಪಹರಿಸಿ ಗೋದಾಮುಗಳಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟು,ಚಾಟಿ ಏಟು ಕೊಟ್ಟು ಹೆದರಿಸಿ ಬೆದರಿಸಿ ದೌಜನ್ಯವೆಸಗುವ ಮೂಲಕ ನೀಲಿ ಬೆಳೆ ತೆಗೆಯುತ್ತಿದ್ದರು.

ಬಂಗಾಳದ ನೀಲಿ ಬೆಳೆಗಾರರಲ್ಲಿ ೧೮೫೯ರಲ್ಲಿ ಅಸಮಾಧಾನದ ಹೊಗೆಯಾಡಲು ಪ್ರಾರಂಭವಾಯಿತು. ಕಲರೋವಾದ ಡೆಪ್ಯೂಟಿ ಮ್ಯಾಜಿಸ್ಟ್ರೇಟರು ಒಂದು ಘೋಷಣೆಯನ್ನು ಹೊರಡಿಸಿದರು. ಅದರಲ್ಲಿ ನೀಲಿ ಬೆಳೆಗಾರರು ತಮ್ಮ ಜಮೀನುಗಳನ್ನು ತಮ್ಮ ವಶದಲ್ಲಿಯೇ ಇಟ್ಟುಕೊಳ್ಳಬೇಕೆಂದು ಮತ್ತು ತಮಗೆ ಇಷ್ಟಬಂದ ಬೆಳೆ ತೆಗೆಯಬಹುದೆಂದು ಘೋಷಿಸಿದರು. ಬೆಳೆಯನ್ನು ಕಿತ್ತೊಗೆಯಲು ಕಾಲ ಪಕ್ವವಾಗಿದೆಯೆಂದು ಆಲೋಚಿಸಿದರು. ಪ್ರಾರಂಭದಲ್ಲಿ ಅವರು ಶಾಂತಿ ಮಾರ್ಗದ ಮೂಲಕ ಪ್ರತಿಭಟಿಸಿದರು. ಅದು ವಿಫಲವಾದಾಗ ಬಲಪ್ರಯೋಗ ಅನಿವಾರ್ಯವಾಯಿತು. ಪ್ರಾರಂಭಿಕ ಪ್ರತಿಭಟನೆಯು ಗೋವಿಂದಪುರ ಗ್ರಾಮದಲ್ಲಿ ದಿಗಂಬರ ಬಿಶ್ವಾಸ್ ಮತ್ತು ಬಿಷ್ಣು ಬಿಶ್ವಾಸರ ನಾಯಕತ್ವದಲ್ಲಿ ಪ್ರಾರಂಭವಾಯಿತು. ಅವರು ನೀಲಿ ಬೆಳೆ ಬೆಳೆಯುವುದನ್ನು ನಿಲ್ಲಿಸಿದರು. ಈ ಚಳವಳಿಯು ಇತರ ಸ್ಥಳಗಳಿಗೂ ಶೀಘ್ರವಾಗಿ ಹರಡಿತು. ಬ್ರಿಟಿಷ್ ಪ್ಲಾಂಟರುಗಳ ಮೇಲೆ ಪ್ರತಿ ಹಲ್ಲೆ ನಡೆಸಿದರು.

ಈ ಸಂದರ್ಭದಲ್ಲಿ ಪ್ಲಾಂಟರುಗಳು ಮತ್ತೊಂದು ತಂತ್ರವನ್ನು ಅನುಸರಿಸಿದರು. ಗೇಣಿದಾರರನ್ನು ಒಕ್ಕಲೆಬ್ಬಿಸುವುದಾಗಿ ಮತ್ತು ಗೇಣಿ ಬಾಡಿಗೆ ಹೆಚ್ಚಿಸುವುದಾಗಿ ಬೆದರಿಕೆ ಹಾಕಿದರು. ರೈತರು ಹೆಚ್ಚಿನ ಗೇಣಿ ಬಾಡಿಗೆ ನೀಡಲು ಹಾಗೂ ಗೇಣಿ ಜಮೀನನ್ನು ಬಿಟ್ಟುಕೊಡಲು ನಿರಾಕರಿಸಿದರು. ರೈತರು ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸಲು  ಕಾನೂನು ನೆರವು ಪಡೆಯುವುದನ್ನು ಸಹ ಕಲಿತರು. ತಮ್ಮ ಮೇಲೆ ನ್ಯಾಯಾಲಯಗಳಲ್ಲಿ ಹೂಡಲಾದ ಮೊಕದ್ದಮೆಗಳ ವಿರುದ್ಧ ಎಲ್ಲರೂ ಒಗ್ಗೂಡಿ, ನಿಧಿ ಸಂಗ್ರಹಿಸಿ ಒಟ್ಟಾಗಿ ಹೋರಾಟ ನಡೆಸಿದರು. ಅಂತಿಮವಾಗಿ ಪ್ಲಾಂಟರುಗಳು ರೈತರ ವಿರೋಧವನ್ನು ಎದುರಿಸಲಾಗದೆ ತಮ್ಮ ಕಾರ್ಖಾನೆಗಳನ್ನು ಮುಚ್ಚಲು ಪ್ರಾರಂಭಿಸಿದರು. ೧೮೬೦ರ ಕೊನೆಯ ಹೊತ್ತಿಗೆ ಬಂಗಾಳದಲ್ಲಿ ನೀಲಿ ಬೆಳೆಯ ಬೇಸಾಯ ನಿಂತು ಹೋಯಿತು. ರೈತರ ಈ ಯಶಸ್ಸಿಗೆ ಮುಖ್ಯ ಕಾರಣವೆಂದರೆ ಒಂದು  ಅದ್ಭುತ ಪ್ರಾರಂಭ ಹಾಗೂ ಹಿಂದೂ ಮತ್ತು ಮುಸ್ಲಿಮ್ ರೈತರ ನಡುವೆ ಇದ್ದ ಸಹಕಾರ ಸಂಘಟನೆ ಐಕ್ಯಮತ.

ನೀಲಿ ಬಂಡಾಯದ ಒಂದು ವಿಶೇಷವೆಂದರೆ ಬಂಗಾಳದ ಬುದ್ಧಿಜೀವಿಗಳು ವಹಿಸಿದ ಪಾತ್ರ. ಅವರು ಪತ್ರಿಕಾ ಆಂದೋಲನವನ್ನು ನಡೆಸಿದರು, ಸಭೆಗಳನ್ನು ಸಂಘಟಿಸಿದರು,ಕಾನೂನು ಹೋರಾಟದಲ್ಲಿ ಅವರಿಗೆ ಸಹಾಯ ಮಾಡಿದರು. ಅಂಥ ಬುದ್ಧಿಜೀವಿಗಳಲ್ಲಿ ಪ್ರಮುಖರಾದ ಹರೀಶ್‌ಚಂದ್ರ ಮುಖರ್ಜಿಯವರ “ಹಿಂದೂ ದೇಶಭಕ್ತ” ಮತ್ತು ದೀನಬಂಧು ಮಿತ್ರ ಅವರ ನಾಟಕವಾದ “ನೀಲ ದರ್ಪಣ” ಇವು ರೈತರ ಕಷ್ಟ ಕಾರ್ಪಣ್ಯಗಳನ್ನು ಎತ್ತಿತೋರಿಸಿದವು. ಈ  ನೀಲಿ ಬಂಡಾಯವು ರಾಷ್ಟ್ರದ ಚಳವಳಿಯ ಮೇಲೂ ತನ್ನ  ಪ್ರಭಾವವನ್ನು ಬೀರಿತು. ಈ ಬಂಡಾಯದ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ನಿಷ್ಠುರವಾದುದಾಗಿರಲಿಲ್ಲ. ಅದು ನೀಲಿ ಬೆಳೆಗಾರರ ಸಮಸ್ಯೆಗಳನ್ನು ಅಧ್ಯಯನ ಮಾಡಲು ಒಂದು ಆಯೋಗವನ್ನು ನೇಮಕ ಮಾಡಿತು. ಆಯೋಗವು ಆ ಪದ್ಧತಿಯ ದಬ್ಬಾಳಿಕೆ, ದೌರ್ಜನ್ಯಗಳು ಮತ್ತು ಭ್ರಷ್ಟಾಚಾರವನ್ನು ಬಹಿರಂಗಪಡಿಸಿತು. ತತ್ಪರಿಣಾಮವಾಗಿ ಸರ್ಕಾರವು ೧೮೬೦ರಲ್ಲಿ ಒಂದು ಅಧಿಸೂಚನೆಯನ್ನು ಹೊರಡಿಸಿ, ರೈತರು ನೀಲಿ ಬೆಳೆ ಬೆಳೆಯುವಂತೆ ಒತ್ತಾಯಿಸಬಾರದೆಂದು ಮತ್ತು ಎಲ್ಲ ವಿವಾದಗಳನ್ನು ಕಾನೂನು ಮೂಲಕ ಇತ್ಯರ್ಥಗೊಳಿಸಿಕೊಳ್ಳಬೇಕೆಂದು ನಿರ್ದೇಶಿಸಿತು.

೧೮೭೦ರಲ್ಲಿ ಬಂಗಾಳದಲ್ಲಿ ಜಮೀನ್ದಾರರು ಗೇಣಿ ಬಾಡಿಗೆಯನ್ನು ಹೆಚ್ಚಿಸಿದ ಕಾರಣ ಮತ್ತು ರೈತರು ಭೂಮಿಯ ಅಧಿಭೋಗದ ಹಕ್ಕು ಪಡೆಯುವುದಕ್ಕೆ  ತಡೆಯೊಡ್ಡಿದ ಕಾರಣ ರೈತ ಚಳವಳಿ ನಡೆಯಿತು. ರೈತರು ಈ ಕ್ರಮಗಳನ್ನು ವಿರೋಧಿಸಿದರು. ೧೮೭೩ರ ಮೇ ತಿಂಗಳಲ್ಲಿ ಜಮೀನ್ದಾರರ ಬೇಡಿಕೆಗಳನ್ನು ವಿರೋಧಿಸುವ ಸಲುವಾಗಿ ಪಬ್ನ ಜಿಲ್ಲೆಯ ಯೂಸೂಫ್ ಷಾಹಿ ಪರಗಣದಲ್ಲಿ ಒಂದು ರೈತ ದಳವನ್ನು ರಚಿಸಲಾಯಿತು. ಈ ದಳವು ರೈತರ ಸಾಮೂಹಿಕ ಸಭೆಗಳನ್ನು, ಗೇಣಿ ಕುರಿತ ಮುಷ್ಕರಗಳನ್ನು ಸಂಘಟಿಸಿತು ಮತ್ತು ಜಮೀನ್ದಾರರ ಕ್ರಮಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿತು. ಸರ್ಕಾರವು ಜಮೀನ್ದಾರರ ರಕ್ಷಣೆಗೆ ನಿಂತಿತು. ಆದರೆ ಆ ತರುವಾಯ ಸರ್ಕಾರವು ಗೇಣಿದಾರರಿಗೆ ರಕ್ಷಣೆ ನೀಡುವ ಶಾಸನ ರಚಿಸುವುದಾಗಿ ಭರವಸೆ ನೀಡಿ, ೧೮೮೫ರಲ್ಲಿ ಬಂಗಾಳ ಗೇಣಿದಾರಿಕೆ ಅಧಿನಿಯಮವನ್ನು ಜಾರಿಗೊಳಿಸಿತು. ರೈತರು ಈ ಸಂದರ್ಭದಲ್ಲಿ ಕಾನೂನು ನೆರವನ್ನು ಪಡೆಯುತ್ತಿದ್ದುದರಿಂದ ಮತ್ತು ಆಂಗ್ಲ ವಿರೋಧಿ ಘೋಷಣೆ ಕೂಗದಿದ್ದುದರಿಂದ ಬ್ರಿಟಿಷರು ಚಳವಳಿಯನ್ನು ಹತ್ತಿಕ್ಕಲು ಬಲ ಪ್ರಯೋಗ ಮಾಡಲಿಲ್ಲ. ರೈತರ ಹೋರಾಟ ಜಮೀನ್ದಾರರ ವಿರುದ್ಧವಾದದ್ದೇ ಹೊರತು ಬ್ರಿಟಿಷರ ವಿರುದ್ಧವಲ್ಲ. ಆ ಹೋರಾಟದಲ್ಲಿ ಹಿಂದೂ ಮುಸ್ಲಿಮರಲ್ಲಿ ಐಕ್ಯತೆ ಇತ್ತು. ಬುದ್ಧಿಜೀವಿಗಳು ರೈತ ಹೋರಾಟವನ್ನು ಬೆಂಬಲಿಸಿದರು. ರೈತರು ಹಕ್ಕುಗಳಿಗಾಗಿ ನಡೆಸಿದ ಆಂದೋಲನಕ್ಕೆ ಪ್ರೋತ್ಸಾಹ ನೀಡಿದ ಪ್ರಮುಖ ಬುದ್ಧಿಜೀವಿಗಳೆಂದರೆ ಬಂಕಿಮಚಂದ್ರ ಚಟರ್ಜಿ, ಆರ್.ಸಿ.ದತ್ತ, ಸುರೇಂದ್ರನಾಥ ಬ್ಯಾನರ್ಜಿ ಮುಂತಾದವರು.

೧೮೭೫ರಲ್ಲಿ ಪೂನಾದಲ್ಲಿ ಮತ್ತು ಮಹಾರಾಷ್ಟ್ರ ಜಿಲ್ಲೆಯ ಅಹಮದ್ ನಗರದಲ್ಲಿ ಪ್ರಮುಖ ರೈತ ಚಳವಳಿ ನಡೆಯಿತು. ಈ ಸ್ಥಳಗಳಲ್ಲಿ ರೈತವಾರಿ  ಪದ್ಧತಿ ಜಾರಿಯಲ್ಲಿತ್ತು. ಆದರೆ ಲೇವಾದೇವಿದಾರರ ಮುಷ್ಟಿಯಲ್ಲಿ ಸಿಕ್ಕಿಕೊಳ್ಳದೆ ಕಂದಾಯವನ್ನು ಸಂದಾಯ ಮಾಡುವುದು ರೈತರಿಗೆ ಕಷ್ಟವೆನಿಸುತ್ತಿತ್ತು. ಇದರಿಂದಾಗಿ  ರೈತರು ಮತ್ತು ಲೇವಾದೇವಿದಾರರ ನಡುವೆ  ಘರ್ಷಣೆಗಳಾಗುತ್ತಿದ್ದವು. ಇದೇ ಸಂದರ್ಭದಲ್ಲಿ ಇತರ ಮೂರು ಬೆಳವಣಿಗೆಗಳು ಸಂಭವಿಸಿದವು. ಅಮೆರಿಕಾದಲ್ಲಿ ತಲೆದೋರಿದ ಅಂತರ್ಯುದ್ದದಿಂದಾಗಿ ಹತ್ತಿ ರಫ್ತು  ಪ್ರಮಾಣ ಇಳಿಮುಖವಾಗಿ ಬೆಲೆ ಕುಗ್ಗಿತು. ೧೮೬೭ರಲ್ಲಿ ಸರ್ಕಾರವು ಭೂಕಂದಾಯವನ್ನು ಶೇ.೫೦ರಷ್ಟು ಹೆಚ್ಚಿಸಿತು. ಇದರ ಬೆನ್ನ ಹಿಂದೆಯೇ ಮಳೆ ಬೆಳೆ ಉತ್ತಮವಾಗಿ ಆಗದೆ ರೈತರು ಕಂಗಾಲಾದರು. ಹೀಗೆ ರೈತರು ಭೂಕಂದಾಯ ಕಾಣಲು ಲೇವಾದೇವಿದಾರರ ಮೊರೆ ಹೋಗಬೇಕಾಯಿತು.

೧೮೭೪ರಲ್ಲಿ ಕರ್ಧಾ ಗ್ರಾಮದಲ್ಲಿ ಪ್ರತಿಭಟನಾ ಚಳವಳಿ ಪ್ರಾರಂಭವಾಯಿತು. ರೈತರು ಲೇವಾದೇವಿದಾರರನ್ನು ಹೊರಗಿನವರೆಂದು ಸಂಪೂರ್ಣ ಸಾಮಾಜಿಕ ಬಹಿಷ್ಕಾರ ಹಾಕಿ,ಶಾಂತ ರೀತಿಯಲ್ಲಿ ತಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ಈ ಚಳವಳಿಯು ಪೂನಾ, ಅಹಮದ್ ನಗರ, ಶೋಲಾಪುರ ಮತ್ತು ಸತಾರಾಗಳಿಗೂ ಹಬ್ಬಿತು. ಶಾಂತ ರೀತಿಯ ಚಳವಳಿ ಫಲಕಾರಿಯಗದಿದ್ದಾಗ ರೈತರು ಹಿಂಸೆಯ ಹಾದಿ ಹಿಡಿದು, ಲೇವಾದೇವಿದಾರರ ಮನೆಗಳ ಮೇಲೆ ದಾಳಿ ಮಾಡಿ ಸಾಲದ ಬಾಂಡುಗಳು, ವಿತ್ತ ಪತ್ರಗಳನ್ನು ಸುಟ್ಟು ಹಾಕಿದರು. ಆದರೆ ಆಂಗ್ಲರು ಚಳವಳಿಯನ್ನು ದಮನ ಮಾಡಿದರು ಹಾಗೂ ಬೇಸಾಯಗಾರರನ್ನು ಲೇವಾದೇವಿದಾರರಿಂದ ರಕ್ಷಿಸಲು, ೧೮೭೯ರ ದಕ್ಷಿಣ ಪ್ರಾಂತ್ಯಗಳ ಬೇಸಾಯಗಾರರ ಪರಿಹಾರ ಅಧಿನಿಯಮವನ್ನು ಜಾರಿಗೊಳಿಸಿದರು. ಆ ಸಂದರ್ಭದಲ್ಲಿ ಮೊತ್ತೊಮ್ಮೆ ಆಧುನಿಕ ರಾಷ್ಟ್ರೀಯ ಬುದ್ಧಿಜೀವಿಗಳು ರೈತರನ್ನು ಬೆಂಬಲಿಸಿದರು.

ರೈತ ಚಳವಳಿ ದೇಶದ ಇನ್ನಿತರ ಭಾಗಗಳಲ್ಲಿಯೂ ನಡೆಯಿತು. ಮಲಬಾರಿನಲ್ಲಿ ಮಾಪಿಳ್ಳರು ಸಿಡಿದೆದ್ದರು. ಬಾಬಾ ರಾಮ್‌ಸಿಂಗರ ನೇತೃತ್ವದಲ್ಲಿ ಪಂಜಾಬ್‌ನಲ್ಲಿ ಕುಬಾಬಂಡಾಯ ನಡೆಯಿತು. ಹೆಚ್ಚಿನ ಭೂ ಕಂದಾಯ ವಿಧಿಸಿದ ಕಾರಣ ೧೮೯೩-೯೪ರಲ್ಲಿ ಅಸ್ಸಾಂನಲ್ಲಿ ರೈತರ ಅನೇಕ ದೊಂಬಿಗಳಿಗೆ ಎಡೆಮಾಡಿಕೊಟ್ಟಿತು.

೧೮೫೭ರ ತರುವಾಯ ರೈತ ಚಳವಳಿಗಳಲ್ಲಿ ಆಳರಸರು, ಪ್ರಧಾನರು, ಜಮೀನ್ದಾರರು ಸಕ್ರಿಯವಾಗಿ ಭಾಗವಹಿಸದಿದ್ದುದು ಒಂದು ವಿಶೇಷ. ರೈತರು ತಮ್ಮಹಕ್ಕುಗಳಿಗಾಗಿ  ಖುದ್ದಾಗಿ ಹೋರಾಟ ಮಾಡಿದರು. ವಸಾಹತುಶಾಹಿ ಅವರ ಹೋರಾಟದ ಗುರಿಯಾಗಿರಲಿಲ್ಲ. ಅವರು ತಮ್ಮ ಸ್ವಂತ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ಹೋರಾಟ ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿರುತ್ತಿತ್ತು. ದೌರ್ಜನ್ಯ ಮತ್ತು ಶೋಷಣೆಗಳ ಕಾರಣಕ್ಕಾಗಿ ರೈತ ಚಳವಳಿ ನಡೆಯಿತು.  ರೈತರು ಗೇಣಿ ಬಾಡಿಗೆಯ ಹೆಚ್ಚಳ, ಗೇಣಿ ಜಮೀನಿಂದ ಹೊರ ಹಾಕುವಿಕೆ  ಮುಂತಾದ ಕಾರಣಗಳಿಗಾಗಿ ಹೋರಾಟ ನಡೆಸಿದರೇ ಹೊರತು ಭೂಮಾಲೀಕತ್ವಕ್ಕಾಗಿ ಹೋರಾಡಲಿಲ್ಲ.

ರೈತ ಚಳವಳಿಯ ಮುಖ್ಯ ದೌರ್ಬಲ್ಯವೆಂದರೆ ರೈತರು ವಸಾಹತುಶಾಹಿ ವ್ಯವಸ್ಥೆ ಮತ್ತು  ಅದರ ಪರಿಣಾಮಗಳನ್ನು ಅರಿತುಕೊಳ್ಳುವಲ್ಲಿ ವಿಫಲರಾದುದು. ಅಖಂಡ ಭಾರತದ ವಿಶಾಲ ನೆಲೆಯ ಮೇಲೆ ಜನರನ್ನು ಸಂಘಟಿಸುವ ಹೊಸ ರಾಜಕೀಯ ಮತ್ತು ಸಾಮಾಜಿಕ ಪರಿಕಲ್ಪನೆ ಅವರಿಗಿರಲಿಲ್ಲ. ಹೀಗಾಗಿ ಸಹಜವಾಗಿಯೇ ಬ್ರಿಟಿಷರು ರೈತರಿಗೆ ಕೆಲವು ರಿಯಾಯಿತಿಗಳನ್ನು ನೀಡುವ ಮೂಲಕ ಅಂಥ ಚಳವಳಿಯನ್ನು ದಮನ ಮಾಡಲು ಸಾಧ್ಯವಾಯಿತು.

೧೮೫೪ರ ವುಡ್ಸ್ ಡಿಸ್‌ಪ್ಯಾಚ್ ಭಾರತದಲ್ಲಿ ಆಂಗ್ಲ ಶಿಕ್ಷಣ ನೀತಿಯ ಚೌಕಟ್ಟನ್ನು ರೂಪಿಸಿತು. ಅದರ ಉದ್ದೇಶಗಳೆಂದರೆ ಪಾಶ್ಚಾತ್ಯ ಸಂಸ್ಕೃತಿಯನ್ನು ಪಸರಿಸುವುದು, ಸರ್ಕಾರಿ ಆಡಳಿತಕ್ಕಾಗಿ ಸೂಕ್ತ ತರಬೇತಿ ಹೊಂದಿದ ನೌಕರರನ್ನು ಸಜ್ಜುಗೊಳಿಸುವುದು. ಅದಕ್ಕಾಗಿ  ಅವರು ಆಂಗ್ಲ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿಸಿದರು.  ಪ್ರೌಢಶಿಕ್ಷಣವನ್ನು ಇಂಗ್ಲಿಷ್ ಭಾಷೆಯ ಮೂಲಕ ನೀಡಬೇಕು ಮತ್ತು ಆ ತರುವಾಯದಲ್ಲಿ ಶಿಕ್ಷಣವನ್ನು ನೀಡಲು ಆಧುನಿಕ ಭಾರತೀಯ ಭಾಷೆಯನ್ನು ಅಭಿವೃದ್ಧಿಪಡಿಸಬೇಕೆಂದು ನಿರೂಪಿಸಿದ್ದರು. ಹೀಗೆ ೧೮೫೪ರಲ್ಲಿ ವುಡ್ಸ್‌ಡಿಸ್‌ಪ್ಯಾಚ್‌ಭಾರತದಲ್ಲಿ ಆಧುನಿಕ ಶಿಕ್ಷಣಕ್ಕೆ ಅಡಿಪಾಯ ಹಾಕಿತು.

೧೮೮೦ರ ತರುವಾಯ ಶಿಕ್ಷಣ ಕ್ಷೇತ್ರದಲಲ್ಲಿ ತೀವ್ರತರ ಬದಲಾವಣೆಗಳಾದವು. ಬದಲಾವಣೆಗಳಿಗೆ ಮುಖ್ಯವಾಗಿ ಮಿಷನರಿಗಳು, ಶಿಕ್ಷಣ ಇಲಾಖೆ ಮತ್ತು ಸರ್ಕಾರ ಪ್ರಗತಿಪರ ಮನೋಭಾವದ ಭಾರತೀಯರು ಕಾರಣರಾದರು. ಡೆಕ್ಕನ್ ಎಜುಕೇಷನ್ ಸೊಸೈಟಿಯ ಸ್ಥಾಪನೆ ಈ ದಿಶೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಇದರ ಸಂಸ್ಥಾಪಕರು ಭಾರತದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಗತಿಯಲ್ಲಿ ಆಧುನಿಕ ಶಿಕ್ಷಣದ ಮಹತ್ವವೇನೆಂಬುದನ್ನು ಅರಿತವರಾಗಿದ್ದರು.

ಹೀಗೆ ದೇಶಿಯ ಶಾಲಾ ವ್ಯವಸ್ಥೆ ರಾಜ್ಯದ ಹಣಕಾಸು ನೆರವಿನ ಕೊರತೆಯಿಂದಾಗಿ ತೀವ್ರವಾಗಿ ಕುಸಿಯಿತು ಮತ್ತು ಆಧುನಿಕ ಶಾಲೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸರ್ಕಾರಿ ಹುದ್ದೆ ಪಡೆಯಲು ಅರ್ಹರೆನಿಸಿದರು.

ಪರಾಮರ್ಶನಗ್ರಂಥಗಳು

೧. ಎರಿಕ್ ಸ್ಟೋಕ್ಸ್, ೧೯೭೮. ದಿ ಪೆಸಂಟ್ ಆಂಡ್ ದಿ ರಾಜ್, ಸ್ಟಡೀಸ್ ಇನ್ ಅಗ್ರೇರಿಯನ್ ಸೊಸೈಟಿ ಆಂಡ್ ದಿ ಪೆಸೆಂಟ್ ರಿವಲೇಶನ್ ಇನ್ ಕಲೋನಿಯಲ್ ಇಂಡಿಯಾ, ಕೇಂಬ್ರಿಡ್ಜ್‌: ಕೇಂಬ್ರಿಡ್ಜ್‌ ಯೂನಿವರ್ಸಿಟಿ ಪ್ರೆಸ್.

೨. ಮಜುಂದಾರ್ ಆರ್.ಸಿ.(ಸಂ). ೧೯೬೫. ದಿ ಹಿಸ್ಟರಿ ಆಂಡ್ ಕಲ್ಚರ್ ಅಥವಾ ಇಂಡಿಯನ್ ಪೀಪಲ್, ಭಾರತೀಯ ವಿದ್ಯಾಭವನ ಸಂಪುಟಗಳು, ಬಾಂಬೆ: ಭಾರತೀಯ ವಿದ್ಯಾಭವನ.

೩. ರುದ್ರಾಂಗ್ಶು ಮುಖರ್ಜಿ, ೧೮೫೭. ಅವಧ್ಇನ್ರಿವೋಲ್ಟ್, ನ್ಯುಡೆಲ್ಲಿ.

೪. ಸಾವರಕರ್ ವಿ.ಡಿ., ೧೯೦೯, ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ ಆಫ್ ೧೮೫೭, ಲಂಡನ್.