ಬ್ರಹ್ಮವಿದ್ಯಾ ಸಮಾಜ (ಥಿಯೊಸಾಫಿಲ್ ಸೊಸೈಟಿ)

ಬ್ರಹ್ಮ ವಿದ್ಯಾ ಸಮಾಜ ಸ್ಥಾಪನೆಯಾಗಿದ್ದು ಅಮೆರಿಕದಲ್ಲಿ, ಮ್ಯಾಡಮ್ ಬ್ಲಾವಟ್‌ಸ್ಕಿ (೧೮೩೧-೧೮೯೧) ಮತ್ತು ಕರ್ನಲ್ ಎಚ್.ಎಸ್.ಆಲ್ಕೋಟ್ ಇವರು ಈ ಸಂಸ್ಥೆಯ ಸ್ಥಾಪನೆಯ ಮೂಲ ವ್ಯಕ್ತಿಗಳು. ಈ ಸಮಾಜದ ಅಂತರಾಷ್ಟ್ರೀಯ ಕೇಂದ್ರ ಚೆನ್ನೈನ ಅಡ್ಯಾರಿನಲ್ಲಿದೆ.

ಬಹ್ಮ ವಿದ್ಯಾ ಸಮಾಜದ ಮೂರು ಮುಖ್ಯ ಉದ್ದೇಶಗಳೆಂದರೆ

೧. ದೇಶ, ಜಾತಿ, ಕುಲ, ಮತ, ಲಿಂಗಗಳ ಭೇದವನ್ನು ಎಣಿಸದೆ ವಿಶ್ವಭ್ರಾತೃತ್ವ ನಿರ್ಮಾಣ.

೨. ಮತ, ತತ್ವ ಮತ್ತು ವಿಜ್ಞಾನಗಳ ತುಲನಾತ್ಮಕ ಅಧ್ಯಯನ ನಡೆಸುವುದು ಮತ್ತು ಪ್ರೋತ್ಸಾಹ ಕೊಡುವುದು.

೩. ನಿಗೂಢವಾದ ಪ್ರಕೃತಿ ನಿಯಮಗಳನ್ನು ಮತ್ತು ಮಾನವನ ಸುಪ್ತ ಶಕ್ತಿಗಳನ್ನು ಕಂಡು ಹಿಡಿಯುವುದು.

ಇಂಗ್ಲಿಷ್ ಶಿಕ್ಷಣ ಪಡೆದ ಭಾರತೀಯರು ಥಿಯೋಸಾಫಿಯನ್ನು ಸ್ವಾಗತಿಸಲು ಒಂದು ವಿಶೇಷ ಕಾರಣವಿತ್ತು. ಅವರಲ್ಲಿ ಹೆಚ್ಚಿನವರಿಗೆ ಧಾರ್ಮಿಕ ಹಾಗೂ ಸಾಮಾಜಿಕ ಸಿದ್ಧಾಂತ, ಪದ್ಧತಿ ಹಾಗೂ ಸಂಪ್ರದಾಯಗಳಲ್ಲಿ ಪೂರ್ಣ ವಿಶ್ವಾಸವಿರಲಿಲ್ಲ. ಆದರೆ ಅವುಗಳನ್ನು ಬಹಿರಂಗವಾಗಿ ವಿರೋಧಿಸುವಷ್ಟು ಧೈರ್ಯವೂ ಇರಲಿಲ್ಲ. ಥಿಯೋಸಾಫಿಯಲ್ಲಿ ಶಾಂತಿ ಮತ್ತು ಮೋಕ್ಷದ ಸಂದೇಶವಿದೆಯೆಂದು ಅವರಿಗೆ ಅನಿಸಿತು. ಥಿಯೋಸಾಫಿಯು ಆಗ ಹಿಂದೂಧರ್ಮದ ವಾಡಿಕೆಯ ಆಚಾರಗಳನ್ನು ಸಮರ್ಥಿಸಿತು. ವಿಶ್ವಭ್ರಾತೃತ್ವ, ಜಾತಿಪದ್ಧತಿ ಮತ್ತು ಅದ್ವೈತ ಕಲ್ಪನೆ ಇವೆಲ್ಲವುಗಳ ನಡುವೆ ಸಾಮರಸ್ಯ ಸಾಧಿಸಲು ಅದು ಯತ್ನಿಸಿತು. ವಿಗ್ರಹಾರಾಧನೆಯಂತಹ ಆಚಾರಗಳೂ ಮಾನಸಿಕ ನಂಬಿಕೆ ಮತ್ತು  ಸುಪ್ತಶಕ್ತಿಗಳನ್ನು ವೃದ್ಧಿಗೊಳಿಸುತ್ತವೆಂದು ವಾದಿಸಿತು. ಇವುಗಳ ಮೂಲಕ ಶಿಕ್ಷಿತ ಭಾರತೀಯರ ಮನಸ್ಸಿನ ಕೀಳರಿಮೆಯನ್ನು ಕಿತ್ತೊಗೆಯಲು ಅದು ಸಹಾಯ ಮಾಡಿತು.

ಆನಿಬೆಸೆಂಟ್

ಬ್ಲಾವಟ್‌ಸ್ಕಿಯವರ ಮರಣಾನಂತರ ಸುಮಾರು ಅರ್ಧ ಶತಮಾನದವರೆಗೆ ಶ್ರೀಮತಿ ಆನಿಬೆಸೆಂಟ್ (೧೮೪೭-೧೯೩೩) ಥಿಯೋಸಾಫಿಕಲ್ ಸೊಸೈಟಿಯ ಅಧ್ಯಕ್ಷೆಯಾಗಿ ಮಾರ್ಗದರ್ಶನ ಮಾಡಿದರು.

ತಮ್ಮ ಉಪನ್ಯಾಸಗಳ ಮೂಲಕ ಆನಿಬೆಸೆಂಟ್ ಹಿಂದೂಧರ್ಮ ಮತ್ತು ಹಿಂದೂ ಸಂಸ್ಕೃತಿಯ ಕುರಿತಾಗಿ ಭಾರತೀಯರಲ್ಲಿ ಅಭಿಮಾನ ಬೆಳೆಸಿದರು. ಕ್ರೈಸ್ತಳಾಗಿ ಹುಟ್ಟಿದ ಇವರು ಹಿಂದೂ ಸಂಸ್ಕೃತಿಯ ಶ್ರೇಷ್ಠ ಅಂಶಗಳನ್ನು ಜಗತ್ತಿನ ಮುಂದಿಟ್ಟರು. ಭಗವದ್ಗೀತೆಯ ಮೇಲೆ ಬೆಸೆಂಟು ಉಪನ್ಯಾಸ ಕೇಳಲು ದೂರದೂರದ ಸ್ಥಳಗಳಿಂದ ಜನ ಬರುತ್ತಿದ್ದರು. ಸನಾತನ ದೃಷ್ಟಿಯುಳ್ಳ ಶಿಕ್ಷಣ ಬೇಕೆಂದು ಬಯಸಿದರು. ೧೮೯೩ರಲ್ಲಿ ವಾರಣಾಸಿಯಲ್ಲಿ ಸೆಂಟ್ರಲ್ ಹಿಂದೂ ಕಾಲೇಜನ್ನು ಸ್ಥಾಪಿಸಿದರು. ಈ ಸಂಸ್ಥೆ ಆ ಕಾಲದ ಅತಿ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲೊಂದಾಯಿತು. ಮುಂದೆ ಬನಾರಸ್ ಹಿಂದೂ ವಿಶ್ವವಿದ್ಯಾಲಯವಾಗಿ ಬೆಳೆಯಿತು.

ಭಾರತದ ಸ್ವಾತಂತ್ರ್ಯ ಆಂದೋಲನಕ್ಕೆ ಶ್ರೀಮತಿ ಆನಿಬೆಸೆಂಟ್ ಅವರಿತ್ತ ಕೊಡುಗೆ ಸಣ್ಣದಲ್ಲ. ಭಾರತವು ಹೇಗೆ ಸ್ವಾತಂತ್ರ್ಯ ಗಳಿಸಬಹುದೆಂಬ ಪ್ರಶ್ನೆಯನ್ನು ಪರಿಶೀಲಿಸಲು ಅವರು ಹೌಸ್ ಆಫ್ ಕಾಮನ್ಸ್‌ನಲ್ಲಿ ಭಾರತೀಯ ವ್ಯವಹಾರಗಳ ಕುರಿತು ಒಂದು ಸ್ಥಾಯಿ ಸಮಿತಿಯಿರಬೇಕೆಂದು ವಾದಿಸಿದರು. ಅವರ “ನ್ಯೂ ಇಂಡಿಯಾ” ಎಂಬ ಪತ್ರಿಕೆಯು ಭಾರತದ ಸ್ವಾತಂತ್ರ್ಯದ ಕುರಿತು ಪ್ರಚಾರ ಮಾಡಲು ಮುಖವಾಣಿಯಾಯಿತು. ಈ ರೀತಿಯ ಸ್ವಾತಂತ್ರ್ಯವನ್ನು ಅವರು “ಹೋಮ್‌ ರೂಲ್” ಎಂದು ಕರೆದರು. ೧೯೧೬ರಲ್ಲಿ “ಹೋಮ್‌ರೂಲ್‌ಲೀಗ್‌” ಪ್ರಾರಂಭಿಸಿದರು. ೧೯೧೭ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಕಲ್ಕತ್ತ ಅಧಿವೇಶನದ ಅಧ್ಯಕ್ಷೆಯಾದರು.

ಶಿಕ್ಷಣ ಕ್ಷೇತ್ರದಲ್ಲಿ ಬೆಸೆಂಟರ ಕಾರ್ಯಸ್ಥಿರವಾಗಿ ಮುಂದುವರಿಯಿತು. ೧೯೧೮ರಲ್ಲಿ ಅವರು ಚೆನ್ನೈನ ಅಡ್ಯಾರಿಯಲ್ಲಿ ರಾಷ್ಟ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಗುರುದೇವ ರವೀಂದ್ರನಾಥ ಠಾಕೂರರು ಅದರ ಕುಲಪತಿಯಾಗಿದ್ದರು. ಬೆಸೆಂಟರು “ಭಾರತೀಯ ಮಹಿಳೆಯರ ಸಂಘ” ಎಂಬ ಸಂಸ್ಥೆಯನ್ನು ಆರಂಭಿಸಿ ಅದಕ್ಕೆ ಬೆನ್ನೆಲುಬಾಗಿ ನಿಂತರು. ತಾನು ಕೇವಲ ಸತ್ಯ ಮಾರ್ಗದಲ್ಲಿ ಸಾಗಬಯಸುತ್ತೇನೆ ಎಂಬುದಾಗಿ ಅವರೇ ಒಮ್ಮೇ ಹೇಳಿದ್ದರು. ನಿಜಕ್ಕೂ ಅವರ ಇಡೀ ಬದುಕು ಇದಕ್ಕೊಂದು ನಿದರ್ಶನವಾಗಿ ಬೆಳಗಿತು. ಥಿಯೊಸಾಫಿಕ್ ಸೊಸೈಟಿ ಭಾರತೀಯ ಪುನರುತ್ಥಾನಕ್ಕೆ ನೀಡಿದ ಕೊಡುಗೆ ಅಪಾರವಾದುದು.

ಹಿಂದೂ ಸಾಮಾಜಿಕ ಸುಧಾರಣೆಗಳು

ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ ಹಿಂದೂ ಸಮಾಜದಲ್ಲಿ ಅಸಂಖ್ಯ ಲೋಪದೋಷಗಳಿದ್ದವು. ಅದು ಹಿಂದೂ ಸಮಾಜದ ಅವನತಿಯ ಕಾಲವಾಗಿತ್ತು. ಸ್ತ್ರೀಯರು ಮತ್ತು  ನಿಮ್ನ ಜಾತಿಯವರು ಅದರಲ್ಲೂ ವಿಶೇಷವಾಗಿ ಅಸ್ಪೃಶ್ಯರು ಕೀಳುಮಟ್ಟದ ಸ್ಥಿತಿಯಲ್ಲಿದ್ದರು. ಹತ್ತೊಂಬತ್ತನೇ ಶತಮಾನದ ಹೆಚ್ಚಿನ ಎಲ್ಲ ಪ್ರಮುಖ ಸಮಾಜ ಸುಧಾರಣೆಗಳು ಹಿಂದೂ ಸ್ತ್ರೀಯರ ಸ್ಥಾನಮಾನಕ್ಕೆ ಸಂಬಂಧಪಟ್ಟವುಗಳಾಗಿವೆ.

. ಸ್ತ್ರೀ ಶಿಕ್ಷಣ

ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಸ್ತ್ರೀ ಶಿಕ್ಷಣಕ್ಕೊಂದು ನಿಯಮಿತ ಪದ್ಧತಿಯೆಂಬುದೇ ಇರಲಿಲ್ಲ. ಒಟ್ಟಿನಲ್ಲಿ ಸ್ತ್ರೀ ಶಿಕ್ಷಣಕ್ಕೆ ಉತ್ತೇಜನ ನೀಡದಿರುವುದೇ ಆಗಿನ ಸಾಮಾಜಿಕ ಪದ್ಧತಿಯಾಗಿತ್ತು. ಈಶ್ವರಚಂದ್ರ ವಿದ್ಯಾಸಾಗರರು ಬಂಗಾಳದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ವಿಶೇಷ ಸೇವೆ ಸಲ್ಲಿಸಿದರು. ಮುಂಬಯಿ ಮತ್ತು ಪುಣೆಯಲ್ಲಿ ೧೮೫೧ರಿಂದಲೇ ಇಂಗ್ಲಿಷ್ ಶಿಕ್ಷಣ ಪಡೆದ ಕೆಲವು ಕ್ರಿಯಾಶೀಲ ತರುಣರು ಹೆಣ್ಣುಮಕ್ಕಳಿಗಾಗಿಯೇ ಪ್ರತ್ಯೇಕ ಶಾಲೆಗಳನ್ನು ಸ್ಥಾಪಿಸಿ ಸ್ತ್ರೀ ಶಿಕ್ಷಣವನ್ನು ಪ್ರೋತ್ಸಾಹಿಸಿದರು.

. ಸ್ತ್ರೀ ವಿವಾಹ ಮತ್ತು ವಿಧವಾ ವಿವಾಹ

ಹುಡುಗಿಯು ವಯಸ್ಸಿಗೆ ಬರುವುದಕ್ಕಿಂತ ಬಹಳ ಮೊದಲೇ ಮದುವೆ ಮಾಡುವ ಪದ್ಧತಿ ಹಿಂದುಗಳಲ್ಲಿತ್ತು. ತಮ್ಮ ಜೀವನ ಸಂಗಾತಿಗಳ ಆಯ್ಕೆಯ ವಿಷಯದಲ್ಲಿ ಹೆಣ್ಣುಮಕ್ಕಳಿಗೆ ಯಾವ ಸ್ವಾತಂತ್ರ್ಯವೂ ಇರಲಿಲ್ಲ. ಗಂಡು ಸತ್ತಾಗ ಆಕೆ ಅವನೊಂದಿಗೆ ಸಹಗಮನ ಮಾಡಬೇಕಿತ್ತು ಅಥವಾ ಶೋಚನೀಯವಾಗಿ ಬದುಕಬೇಕಿತ್ತು. ಮೃತನಾದ ಪತಿಯ ಆಸ್ತಿಯ ಮೇಲೆ ಅವಳಿಗೆ ಅಧಿಕಾರವಿರಲಿಲ್ಲ ಮತ್ತು ಮರುಮದುವೆ ಆಗುವಂತೆಯೂ ಇರಲಿಲ್ಲ.

ಹಿಂದೂ ಸ್ತ್ರೀಯರ ಸಂಕಟಗಳನ್ನು ದೂರ ಮಾಡುವ ಉದ್ಧೇಶದ ಇನ್ನೊಂದು ಮಹತ್ವದ ಕ್ರಮವೆಂದರೆ ವಿಧವಾ ಪುನರ್ವಿವಾಹ ಶಾಸನ. ಪ್ರಾಚೀನ ಹಿಂದೂ ಸಮಾಜದಲ್ಲಿ ವಿಧವೆಯರಿಗೆ ಮರುಮದುವೆ ಆಗಲು ಅವಕಾಶವಿತ್ತು.

. ಪರ್ದಾ

ಹಿಂದೂ ಸ್ತ್ರೀಯರನ್ನು ಪ್ರತ್ಯೇಕವಾಗಿಡುವ ಇನ್ನೊಂದು ದುಷ್ಟ ಸಂಪ್ರದಾಯವೆಂದರೆ ಪರ್ದಾ ಪದ್ಧತಿ. ಉತ್ತರ ಭಾರತದ ಉನ್ನತ ವರ್ಗದ ಹಿಂದೂ ಸ್ತ್ರೀಯರೂ ಮಧ್ಯಕಾಲೀನ ಸಂಸ್ಕೃತಿಯ ಪ್ರಭಾವದಿಂದಾಗಿ ಈ ಪದ್ಧತಿಯನ್ನು ಅನುಸರಿಸುತ್ತಿದ್ದರು. ಮರಾಠರಲ್ಲಿ ಪರ್ದಾ ಪದ್ಧತಿ ಇರಲಿಲ್ಲವಾದ್ದರಿಂದ ಮುಂಬೈ ಹೆಂಗಸರ ಬದುಕು ಹೆಚ್ಚು ಮುಕ್ತವಾಗಿತ್ತು.

. ಸತಿ ಪದ್ಧತಿ

ಸತಿ ಪದ್ಧತಿಯು ಸಾಮಾನ್ಯ “ಹಿಂದೂ ಕಾನೂನಿನ” ಅಂಗವಾಗಿರಲಿಲ್ಲ. ಅದು ದೇಶದ ಕೆಲವು ಪ್ರದೇಶಗಳಲ್ಲಿ ಒಂದು ಸಾಮಾಜಿಕ ಪದ್ದತಿಯಾಗಿ ಆಚರಣೆಯಲ್ಲಿತ್ತು. ಗಂಡ ತೀರಿಹೋದ ಪ್ರತಿಯೋರ್ವ ಹಿಂದೂ ಸ್ತ್ರೀಯೂ ಸತಿ ಹೋಗುತ್ತಿದ್ದಳೆಂದು ಹೇಳುವುದು ಸತ್ಯಕ್ಕೆ ದೂರವಾದ ಸಂಗತಿ. ನಮಗೆ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ ೧೮೦೪ರಲ್ಲಿ  ಕಲ್ಕತ್ತದಿಂದ ಮೂವತ್ತು ಮೈಲು ಸುತ್ತಳತೆಯ ಪ್ರದೇಶಗಳಲ್ಲಿ ಆರು ತಿಂಗಳ ಅವಧಿಯಲ್ಲಿ ಸತಿ ಹೋದ ಸುಮಾರು ೩೦೦ ಪ್ರಕರಣಗಳು ನಡೆದವು. ೧೮೧೫-೧೭ರಲ್ಲಿ ಬಂಗಾಳದಲ್ಲಿ ಐದು ಜಿಲ್ಲೆಗಳಲ್ಲಿ ಇಂಥ ೮೬೪ ಪ್ರಕರಣಗಳೂ, ಬ್ರಿಟಿಷ್ ಭಾರತದ ಉಲಿದೆಲ್ಲ ಭಾಗಗಳಲ್ಲಿ ಕೇವಲ ೬೬೩ ಪ್ರಕರಣಗಳು ನಡೆದವು.

ಸತಿ ಪದ್ಧತಿಯನ್ನು ನಿಷೇಧಿಸುವ ಶಾಸವನು ಹತ್ತೊಂಬತ್ತನೆಯ ಶತಮಾನದ ಅತ್ಯಂತ ಮುಖ್ಯ ಸಾಮಾಜಿಕ ಶಾಸನವಾಗಿದೆ. ರಾಜಾರಾಮ ಮೋಹನರಾಯ್ ಈ ಸುಧಾರಣಾ ಚಳವಳಿಯ ಮುಂಚೂಣಿಯಲ್ಲಿದ್ದರು. ಅವರು ತಮ್ಮ ಸರ್ವಶಕ್ತಿಯನ್ನೂ ಇದಕ್ಕಾಗಿಯೇ ವ್ಯಯಿಸಿದರು.

. ಸ್ತ್ರೀ ಶಿಶುಹತ್ಯೆ

ಹತ್ತೊಂಬತ್ತನೇ ಶತಮಾನದಲ್ಲಿ ನಿಷೇಧಿತವಾದ ಇನ್ನೊಂದು ಕ್ರೂರ ಆಚರಣೆಯೆಂದರೆ ಸ್ತ್ರೀ ಶಿಶುಗಳ ಹತ್ಯೆ.

ಒಂದೇ ಕುಲ ಅಥವಾ ಬುಡಕಟ್ಟಿನ ಕುಟುಂಬಗಳೊಳಗೆ ವಿವಾಹ ನಿಷೇಧ ಮತ್ತು ಮದುವೆಯ ವೆಚ್ಚ ದುಬಾರಿಯಗುವುದಕ್ಕೆ ಪರಿಹಾರವಾಗಿ ಈ ಕ್ರೂರ ಪದ್ಧತಿ ಆಚರಣೆಗೆ ಬಂದಿರಬೇಕೆಂಬ ಅಭಿಪ್ರಾಯವಿದೆ.

. ಗುಲಾಮಗಿರಿ ಅಥವಾ ಜೀತಗಾರಿಕೆ

ಭಾರತದಲ್ಲಿ ನೆಲೆಸಿದ್ದ ಅನೇಕ ಯೂರೋಪಿಯನ್ನರು ಗುಲಾಮರನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದರು. ಸಣ್ಣಪುಟ್ಟ ತಪ್ಪುಗಳಿಗೂ ಅವರಿಗೆ ಚಾಟಿಯಿಂದ ಹೊಡೆಯುತ್ತಿದ್ದರು. ಇಂಗ್ಲಿಷ್ ಮಹಿಳೆಯರು ಕೂಡ ತಮ್ಮ ಪುರುಷ ಗುಲಾಮರನ್ನು ಸ್ವತಃ ಹೊಡೆಯುತ್ತಿದ್ದರೆಂಬ ದಾಖಲೆಗಳಿವೆ. ಕಲ್ಕತ್ತದಲ್ಲಿ ಇದಕ್ಕಾಗಿ ಚಾಟಿಯೇಟು ಕೊಡುವ ಅಧಿಕೃತ ಕೊಠಡಿಗಳೇ (ವಿಪ್ಪಿಂಗ್ ಹೌಸ್) ಇದ್ದವು. ಇಲ್ಲಿ ಒಂದು ಬಾರಿ ಚಾಟಿಯೇಟು ಹೊಡೆಯುವುದಕ್ಕೆ ಒಂದು  ಆಣೆ (ರೂಪಾಯಿಯ ಹದಿನಾರನೆಯ ಒಂದು ಅಂಶ) ಶುಲ್ಕ ವಿಧಿಸಲಾಗುತ್ತಿತ್ತು. “ಇವನಿಗೆ ಇಂತಿಷ್ಟು ಚಾಟಿಯೇಟು ಕೊಡಬೇಕು” ಎಂದು ಯಜಮಾನ ಬರೆದ ಪತ್ರವನ್ನು ಶುಲ್ಕ ಸಹಿತ ಗುಲಾಮರೇ ಚಾಟಿಯೇಟಿನ ಕೊಠಡಿಗಳಿಗೆ ಒಯ್ಯಬೇಕಾಗಿತ್ತು! ೧೮೪೩ರಲ್ಲಿ ಭಾರತದಲ್ಲಿ ಗುಲಾಮಗಿರಿಯನ್ನು ಕಾನೂನುಬಾಹಿರವನ್ನಾಗಿ ಮಾಡಲಾಯಿತು. ಭಾರತದಲ್ಲಿದ್ದ ಶತಮಾನಗಳಿಂದ ಚಾಲ್ತಿಯಲ್ಲಿದ್ದ ಸಾಂಪ್ರಾದಾಯಿಕ ಗುಲಾಮರಿಗೆ ಮುಕ್ತಿ ನೀಡುವ ಉದ್ದೇಶದಿಂದ ಈ ಕ್ರಮವನ್ನು ಜಾರಿಗೆ ತರಲಾಯಿತು.

ಮುಸ್ಲಿಮ್ ಸಮುದಾಯ : ಅಲೀಘರ್ ಆಂದೋಲನ

ಅಲೀಘರ್ ಆಂದೋಲನಕ್ಕೆ ಮೊದಲಿನ ಮುಸ್ಲಿಮ್ ರಾಜಕಾರಣ

ಮುಸ್ಲಿಮರು ಅದುವರೆಗೆ ತಾವು ಅನುಭೋಗಿಸುತ್ತಿದ್ದ ರಾಜಕೀಯ ಅಧಿಕಾರವನ್ನೂ ವಿಶೇಷ ಸೌಲಭ್ಯಗಳನ್ನೂ ಬ್ರಿಟಿಷರು ಕಿತ್ತುಕೊಂಡರು. ಇದರಿಂದಾಗ ಬ್ರಿಟಿಷರನ್ನು ಅವರು ತಮ್ಮ ಕಡುವೈರಿಗಳೆಂದು ಬಗೆಯುತ್ತಿದ್ದರೆಂಬ ಅಭಿಪ್ರಾಯವಿದೆ. ಹಿಂದುಗಳು ಇಂಗ್ಲಿಷ್ ಆಳ್ವಿಕೆಯನ್ನು ಸ್ವಾಗತಿಸಿದ್ದರಲ್ಲದೆ ಮುಸ್ಲಿಮ್ ಪ್ರಭುತ್ವದ ದಬ್ಬಾಳಿಕೆಮ, ಸಂಕಷ್ಟಗಳಿಂದ ತಮಗೆ ಮುಕ್ತಿಯೊದಗಿತೆಂದು ಭಾವಿಸಿದ್ದರು. ಪ್ರಾರಂಭದಿಂದಲೂ ಇವೆರಡೂ ಸಮುದಾಯಗಳ ರಾಜಕೀಯ ದೃಷ್ಟಿಕೋನಗಳು ಸಂಪೂರ್ಣವಾಗಿ ಭಿನ್ನವಾಗಿದ್ದವು. ಹಿಂದುಗಳ ರಾಜಕೀಯ ವಿಕಾಸಕ್ಕೆ ಇಂಗ್ಲಿಷ್ ಶಿಕ್ಷಣವು ಮೂಲವಾಗಿತ್ತು. ಈ ದೃಷ್ಟಿಯಲ್ಲಿ ಮುಸಲ್ಮಾನರು ಹಿಂದುಗಳಿಗಿಂತ ಬಹಳ ದೂರವಿದ್ದರು. ಇದರ ಪರಿಣಾಮವಾಗಿ ಈ ಎರಡು ದೊಡ್ಡ ಸಮುದಾಯಗಳು ಒಂದೇ ವಿದೇಶಿ ಶಕ್ತಿಯ ಆಳ್ವಿಕೆಗೆ ಒಳಗಾಗಿದ್ದರೂ ಅವೆರಡೂ ಸಂಯುಕ್ತವಾಗಿ ನಿಂತು ಸಮಾನ ರಾಜಕೀಯ ವೇದಿಕೆಯಲ್ಲಿರಲು ಸಾಧ್ಯವಾಗಲಿಲ್ಲ.

ವಹಾಬಿ ಚಳವಳಿ

ಈ ವಿಭಿನ್ನ ರಾಜಕೀಯ ದೃಷ್ಟಿ ಮೊದಲು ವಹಾಬಿ ಚಳವಳಿಯ ರೂಪದಲ್ಲಿ ಪ್ರಕಟವಾಯಿತು. ಅದೊಂದು ಸ್ಪಷ್ಟ ಮುಸ್ಲಿಮ್ ಚಳವಳಿಯಾಗಿತ್ತು. ಅದು ಮುಸ್ಲಿಮೇತರದ ವಿರುದ್ಧವಾಗಿತ್ತು. ಭಾರತದಲ್ಲಿ ದಾರ್-ಉಲ್-ಇಸ್ಲಾಮ್, ಅಂದರೆ ಶುದ್ಧ, ಸರಳ ಇಸ್ಲಾಮ್ ಸಾರ್ವಭೌಮತೆಯನ್ನು ಸ್ಥಾಪಿಸುವುದೇ ಅದರ ಉದ್ದೇಶವಾಗಿತ್ತು. ಆ ಕಾಲದಲ್ಲಿ ಮುಸಲ್ಮಾನರು ಅಂದಿನ ವಿವಿಧ ರಾಜಕೀಯ ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿಲ್ಲ. ತಮ್ಮಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾದೊಡನೆ ತಮ್ಮದೇ ಆದ ಪ್ರತ್ಯೇಕ ಸಂಘಟನೆಯನ್ನು ರಚಿಸತೊಡಗಿದರು.

ಕ್ರಮೇಣ ಮುಸ್ಲಿಮ್ ನಾಯಕರು ಇಂಗ್ಲಿಷ್ ಶಿಕ್ಷಣದ ಪ್ರಯೋಜನವನ್ನು ಅರ್ಥ ಮಾಡಿಕೊಳ್ಳತೊಡಗಿದರು. ಆದರೂ ಎರಡು ಸಮುದಾಯಗಳ ಪ್ರಗತಿಪರ ಶಕ್ತಿಗಳ ನಡುವೆ ದೊಡ್ಡ ಅಂತರವಿತ್ತು. ಚುನಾವಣೆಗಾಗಿ ಸ್ಥಳೀಯ ಸ್ವಯಂ ಆಡಳಿತಕ್ಕೆ ಶಾಸನವನ್ನು ತಂದ ಸಂದರ್ಭದಲ್ಲಿ ಮುಸಲ್ಮಾನರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆಯನ್ನು ಈ ಸಂದರ್ಭದಲ್ಲಿ ಮೊದಲ ಬಾರಿ ಮಂಡಿಸಲಾಯಿತು. ಜಾಗತಿಕ ಇಸ್ಲಾಂ(ಪಾನ್ ಇಸ್ಲಾಂ) ಭಾವನೆ ಆಗಲೇ ಮುಸಲ್ಮಾನರ ಮನಸ್ಸಿನ ಮೇಲೆ ಪ್ರಭಾವ ಬೀರತೊಡಗಿತ್ತು. ಹಿಂದುಗಳ ಮತ್ತು ಮುಸ್ಲಿಮರ ಪ್ರಾಥಮಿಕ ಶಿಕ್ಷಣಕ್ಕೆ ಸಂಪೂರ್ಣ ಬೇರೆ ಬೇರೆ ವ್ಯವಸ್ಥೆಗಳು ಇರಬೇಕು ಎಂದು ಮುಸ್ಲಿಮ್ ನಾಯಕರು ಒತ್ತಾಯಿಸತೊಡಗಿದರು. ಬಂಗಾಳದಂತಹ ಪ್ರಾಂತ್ಯದಲ್ಲಿ ಶೇಕಡಾ ೯೯ಮಂದಿ ಮುಸಲ್ಮಾನರಿಗೆ ಉರ್ದು ಭಾಷೆಯೇ ತಿಳಿಯದಿದ್ದರೂ, ಅವರ ತಾಯಿ ನುಡಿಯಾದ ಬಂಗಾಲಿಯೇ ಹಿಂದಿನಿಂದ ಶಿಕ್ಷಣ ಮಾಧ್ಯಮವಾಗಿದ್ದರೂ, ಉರ್ದುವೇ ಶಿಕ್ಷಣ ಮಾಧ್ಯಮವಾಗಬೇಕೆಂದು ಪಟ್ಟು ಹಿಡಿಯತೊಡಗಿದರು.

ಹಿಂದುಗಳು ಇಂಗ್ಲಿಷ್ ಶಿಕ್ಷಣದ ಪ್ರಭಾವದಿಂದಾಗಿ ತಮ್ಮ ರಾಜಕೀಯ ಸಂಘಟನೆಗಳನ್ನು ಬೆಳೆಸುತ್ತಿದ್ದಾಗ, ಮುಸ್ಲಿಮರು ಬ್ರಿಟಿಷ್ ವಿರೋಧಿ ಹಾಗೂ ಕೋಮುವಾದಿ ಸ್ವರೂಪದ ವಹಾಬಿ ಚಳವಳಿಯನ್ನು ಆರಂಭಿಸಿದರು.

ಅಲೀಘರ್ ಚಳವಳಿ

ಸರ್ ಸಯದ್ ಅಹಮದ್ ಖಾನ್ (೧೮೧೭-೧೮೯೮) ಅವರ ಚಿಂತನೆ ಹಾಗೂ ಕ್ರಿಯಾಶೀಲತೆಯೇ ಅಲೀಘರ್ ಚಳವಳಿಗೆ ಅಡಿಪಾಯವಾಗಿತ್ತು. ೧೮೫೭-೫೮ರ ಮಹಾದಂಗೆಯ ನಂತರ ದೊಡ್ಡ ಅಧಿಕಾರದ ಹುದ್ದೆಯನ್ನೇರಿದ ಅವರು ಆ ಅವಕಾಶವನ್ನು ತಮ್ಮ ಸ್ವಂತಕ್ಕಾಗಿ ಬಳಸದೆ ಮತೀಯ ಬಂಧುಗಳ ಒಳಿತಿಗಾಗಿ ಉಪಯೋಗಿಸಿಕೊಂಡರು. ಅವರು ಮುಸ್ಲಿಮ್ ಸಮಾಜದ ಉದ್ಧಾರಕ್ಕಾಗಿಯೇ ಶ್ರಮಿಸಲು ಸಂಕಲ್ಪ ಮಾಡಿದರು. ಮುಸ್ಲಿಮರೇ ಈ ಮಹಾದಂಗೆಯ ಪ್ರೇರಕರು, ಸೂತ್ರದಾರರು ಎಂಬುದಾಗಿ ಬ್ರಿಟಿಷರಿಗೆ ಭಾವನೆಯಿತ್ತು. ಆದ್ದರಿಂದ ಅವರಿಗೆ ಮುಸ್ಲಿಮರ ನಿಷ್ಠೆಯ ಕುರಿತು ಸದಾ ಅಪನಂಬಿಕೆಯಿತ್ತು. ಈ ಅಪನಂಬಿಕೆಯನ್ನು ಹೋಗಲಾಡಿಸಲಿ ‘ಬ್ರಿಟಿಷರೊಂದಿಗೆ ಸಹಕರಿಸಬೇಕು’ ಎಂದು  ಸಯದ್ ಅಹಮದ್ ಮುಸ್ಲಿಮರಿಗೆ ಮನದಟ್ಟು ಮಾಡಿದರು. ಅದರೊಂದಿಗೆ “ಮುಸ್ಲಿಮರು ಬ್ರಿಟಿಷ್ ಸಿಂಹಾಸನಕ್ಕೆ ವಿರೋಧಿಗಳಲ್ಲ” ಎಂದು ಇಂಗ್ಲಿಷರ ಮನವೊಲಿಸಿದರು. ಇಷ್ಟರಲ್ಲೇ ಬ್ರಿಟಿಷರು “ಒಡೆದು ಆಳುವ ನೀತಿ” ಯನ್ನು ಆರಂಭಿಸಿದ್ದರು.

ಅಂದಿಗೆ ಸರಿಯಾಗಿ ಅರ್ಧ ಶತಮಾನದ ಹಿಂದೆ ರಾಜಾರಾಮ್ ಮೋಹನ್‌ರಾಯ್ ಅವರು ರೂಪಿಸಿದ್ದಂತಹ ಪ್ರಗತಿಪರ ಪಥದಲ್ಲಿ ಸಾಗುವಂತೆ ಮುಸ್ಲಿಮರನ್ನೂ ಸಯದ್ ಅಹಮದ್ ಒತ್ತಾಯಿಸಿದರು. ಇಂಗ್ಲಿಷ್ ಶಿಕ್ಷಣವು ಎಲ್ಲ ರೀತಿಯ ಮುನ್ನಡೆಗೂ ಮೂಲಾಧಾರವೆಂದು ಅವರು ಬಗೆದರು. ಈ ಕಳಕಳಿಯಿಂದಲೇ ಅವರು ೧೮೬೪ರಲ್ಲಿ ಒಂದು ಇಂಗ್ಲಿಷ್ ಶಾಲೆಯನ್ನು ಸ್ಥಾಪಿಸಿದರು. ವಿವಿಧ ವಿಷಯಗಳುಳ್ಳ ಇಂಗ್ಲಿಷ್ ಭಾಷೆಯ ಉಪಯುಕ್ತ ಗ್ರಂಥಗಳನ್ನು ಉರ್ದು ಭಾಷೆಗೆ ಅನುವಾದಿಸಲು “ಸೈಂಟಿಫಿಕ್ ಸೊಸೈಟಿ” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ೧೮೭೭ರಲ್ಲಿ ಅಲೀಘರದಲ್ಲಿ “ಮಹಮ್ಮದನ್ ಆಂಗ್ಲೋ-ಓರಿಯಂಟಲ್ ಕಾಲೇಜ್” ಸ್ಥಾಪಿಸಿದರು. ಅಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲೆ ಮತ್ತು ವಿಜ್ಞಾನ ಶಿಕ್ಷಣ ಪಡೆಯಲು ಅವಕಾಶವಿತ್ತು. ಆ ಮೂಲಕ ಅವರ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿದ್ದ ಮುಸ್ಲಿಮ್ ಸಮುದಾಯಕ್ಕೆ “ಹೊಸ ರಕ್ತವನ್ನು” ತುಂಬುವ ಮಹಾತ್ಕಾರ್ಯವನ್ನು ಕೈಗೊಂಡರು. ಹೀಗೆ ಸಯದ್ ಅಹಮದ್ ಅವರು ಆರಂಭಿಸಿದ ಅಲೀಘರ್ ಚಳವಳಿಯು ಮುಸ್ಲಿಮರ ರಾಜಕೀಯ ವಿಕಾಸದಲ್ಲಿ ಮಹತ್ವದ ಪಾತ್ರ ವಹಿಸಿತು. ಆದರೆ ಅದು ಕಾಂಗ್ರೆಸ್ ವಿರೋಧಿಯಾಗಿ ಬೆಳೆಯಿತು. ಹೀಗಿದ್ದರೂ ಪ್ರಾರಂಭದಲ್ಲಿ ಅವರು ಕೋಮುವಾದಿಯಾಗಿರಲಿಲ್ಲ ಎಂಬುದಕ್ಕೆ ಅವರು ಕೆಲವು ಸಂದರ್ಭಗಳಲ್ಲಿ  ಆಡಿದ ಮಾತುಗಲೇ ಸಾಕ್ಷಿಯಾಗಿವೆ. ಹಿಂದುಗಳು ಮತ್ತು ಮುಸ್ಲಿಮರದು  ಒಂದೇ ರಾಷ್ಟ್ರ ಎಂದು ಅವರು ಹೇಳುತ್ತಿದ್ದರು. ಒಮ್ಮೆ ಪಂಜಾಬಿ ಹಿಂದುಗಳ ಸಭೆಯಲ್ಲಿ  ಮಾತನಾಡುತ್ತಾ, “ಹಿಂದುಸ್ತಾನದ ಪ್ರತಿಯೊಬ್ಬ ನಿವಾಸಿಯೂ ಹಿಂದು. ಆದ್ದರಿಂದ ನೀವು ನನ್ನನ್ನು ಹಿಂದುವೆಂದು  ಪರಿಗಣಿಸದಿರುವುದರಿಂದ ನನಗೆ ದುಃಖವಾಗಿದೆ” ಎಂದು ನುಡಿದಿದ್ದರು.

ಇದೇ ಸಯದ್ ಅಹಮದರ ಭಾವನೆಗಳು ಮುಂದೆ ಬದಲಾವಣೆಯಾದುದು ಕಂಡುಬರುತ್ತದೆ. ೧೮೮೮ರಲ್ಲಿ ಅವರು ಕಾಂಗ್ರೆಸ್ ಬಯಸಿದ ಪ್ರಾತಿನಿಧಿಕ ಸರ್ಕಾರ ಪದ್ಧತಿಯಿ  ಮುಸ್ಲಿಮರ ಹಿತಕ್ಕೆ ಅಪಾಯಕಾರಿ ಎಂದು ಅವರು ಬಗೆದಿದ್ದರು. ಈ ಬೇಡಿಕೆಯು ಅಂಗೀಕರಿಸಲ್ಪಟ್ಟಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರು ಬಹುಸಂಖ್ಯಾತರ ದಬ್ಬಾಳಿಕೆಯನ್ನು ತಡೆಯಲು ಖಡ್ಗವನ್ನೆತ್ತಿ ನಿಲ್ಲುವುದು ಅನಿವಾರ್ಯವಾದೀತು ಎಂದು ಅವರು ಸೂಚನೆಯಿತ್ತರು.

ಥಿಯೋಡರ್ ಬೆಕ್

ಅಲೀಘರ್ ಕಾಲೇಜಿನ ಪ್ರಾಂಶುಪಾಲರು ಮುಸ್ಲಿಮ್ ರಾಜಕೀಯ ವಿಚಾರಗಳ ಪ್ರಸಾರದಲ್ಲಿ ಬಹುಮುಖ್ಯ ಪಾತ್ರ ವಹಿಸಿದರು. ಪ್ರಥಮ ಪ್ರಾಂಶುಪಾಲ ಥಿಯೋಡರ್ ಬೆಕ್ ಎಂಬುವರು ಸಯದ್ ಅಹಮದರ ಪರವಾಗಿ ಅಲೀಘರ್ ಕಾಲೇಜಿನ ಮುಖವಾಣಿಯಾದ “ಇನ್‌ಸ್ಟಿಟ್ಯೂಟ್ ಗೆಜೆಟ್” ಇದರ ಸಂಪಾದಕನಾದರು. ಈ ಆಂಗ್ಲನು ಸಂಸದೀಯ ಸರ್ಕಾರ ಭಾರತಕ್ಕೆ ಯೋಗ್ಯ ವಾದುದಲ್ಲ ಎಂಬುದೇ ಮುಖ್ಯ ವಸ್ತುವಾಗಿದ್ದ ರಾಜಕೀಯ ಲೇಖನಗಳನ್ನು ಪ್ರತಿ ಸಂಚಿಕೆಯಲ್ಲೂ ನಿಯತವಾಗಿ ಪ್ರಕಟಿಸುತ್ತಾ ಹೋದರು.  ಇದರಿಂದ ಬೆಂಕಿಗೆ ತುಪ್ಪ ಹಾಕಿದಂತಾಯಿತು. ೧೮೯೯ರಲ್ಲಿ ಭಾರತದಲ್ಲಿ ಪ್ರಜಾತಾಂತ್ರಿಕ ಮಾದರಿಯ ಸರ್ಕಾರವನ್ನು ಸ್ಥಾಪಿಸುವ ಉದ್ದೇಶದ ಮಸೂದೆ ಬ್ರಿಟಿಷ್ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಂಡಿತವಾಗಿತ್ತು. ಥಿಯೋಡರ್ ಬೆಕ್ ಮುಸ್ಲಿಮರ ಪರವಾಗಿದ್ದರಿಂದ ಅದು ಕೈಗೂಡಲಿಲ್ಲ ಎನ್ನುವ ಅಭಿಪ್ರಾಯವಿದೆ.

೧೮೯೩ರಲ್ಲಿ ಬೆಕ್ “ಮುಸಲ್ಮಾನರ ಉತ್ತರ ಭಾರತದ ಆಂಗ್ಲೋ ಪೌರಸ್ತ್ಯ ರಕ್ಷಣಾ ಸಂಘ” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಮುಸಲ್ಮಾನರ ಅಭಿಪ್ರಾಯವನ್ನು ಇಂಗ್ಲಿಷರ ಮುಂದೆ ಮಂಡಿಸುವುದು, ಮುಸ್ಲೀಮರು ರಾಜಕೀಯ ಚಳವಳಿಯಲ್ಲಿ ಭಾಗಿಗಳಾಗದಂತೆ ತಡೆಯುವುದು ಮತ್ತು ಭಾರತದಲ್ಲಿ ಬ್ರಿಟಿಷ್ ಪ್ರಭುತ್ವವನ್ನು ಬಲಪಡಿಸುವುದು ಅದರ ಮೂಲ ಉದ್ದೇಶವಾಗಿತ್ತು. ಹೀಗೆ ಥಿಯೋಡರ್ ಬೆಕ್ ಹಿಂದು-ಮುಸ್ಲಿಮರೊಳಗೆ ಒಡಕನ್ನುಂಟು ಮಾಡಲು ವ್ಯವಸ್ಥಿತವಾಗಿ ಪ್ರಯತ್ನ ಮಾಡಿದ. ಅಲೀಘರ್ ಚಳವಳಿಯ ವೇಳೆ ಈ ಜನಾಂಗೀಯ ಭೇದಭಾವನೆ ಸ್ಪಷ್ಟವಾಗಿ ಗೋಚರಕ್ಕೆ ಬಂತು.

ಅಲೀಘರ್‌ಕಾಲೇಜಿನ  ಪ್ರಥಮ ಹಾಗೂ ಅನಂತರದ ಇಬ್ಬರು ಪ್ರಾಂಶುಪಾಲರು ಸತತ ಕಾರ್ಯವೈಖರಿಯಿಂದಾಗಿ ಕಾಂಗ್ರೆಸ್ಸಿನ ವಿರುದ್ಧ ಆರಂಭವಾದ ಆಂತರಿಕ ದ್ವೇಷವು ಅಲೀಘರ್ ಚಳವಳಿಯ ಬಹಿರಂಗ ಧ್ಯೇಯ ವಾಕ್ಯವಾಗಿ ಪ್ರಕಟವಾಯಿತು. ಕಾಂಗ್ರೆಸ್ ಎಂದರೆ ಮುಸ್ಲಿಮರ ಹಿತಾಸಕ್ತಿಗಳನ್ನು ಬಲಿಕೊಟ್ಟು ತಮ್ಮ ಸ್ವಂತ  ಅಭ್ಯುದಯವನ್ನು ಸಾಧಿಸಲು ಹಿಂದುಗಳು ರೂಪಿಸಿರುವ ವ್ಯವಸ್ಥೆ ಎಂದು ಸರ್ ಸಯದ್ ತಿಳಿದಿದ್ದರು. ೧೮೮೬ರಲ್ಲಿ ಸರ್ ಸಯದ್ ವಾರ್ಷಿಕ ಮುಸ್ಲಿಮ್ ಶೈಕ್ಷಣಿಕ ಸಮ್ಮೇಳನ ನಡೆಸುವುದನ್ನು ಪ್ರಾರಂಭಿಸಿದರು. ಕಾಂಗ್ರೆಸ್ ಅಧಿವೇಶನ ನಡೆಸುತ್ತಿದ್ದ ಸಮಯಕ್ಕೆ ಸರಿಯಾಗಿಯೇ ಈ ಸಮ್ಮೇಳನವನ್ನು ನಡೆಸಲಾಯಿತು.

ಹಿಂದುಗಳ ಪಾಲಿಗೆ ಹತ್ತೊಂಬತ್ತನೆಯ ಶತಮಾನದ ಸಾಮಾಜಿಕ ಪುನರುತ್ಥಾನ ಮತ್ತು ರಾಷ್ಟ್ರೀಯವಾದಿ ಚಳವಳಿಯು ಏನಾಗಿತ್ತೋ ಅದೇ ರೀತಿ ಅಲೀಘರ್ ಚಳವಳಿಯು  ಮುಸ್ಲಿಮರಿಗೆ ಆಗಿತ್ತು ಎಂಬ ಸತ್ಯವನ್ನು ಅಲ್ಲಗಳೆಯಲಾಗುವುದಿಲ್ಲ. ಈ ಚಳವಳಿಯನ್ನು ಆರಂಭಿಸಿದ ಸರ್  ಸಯದ್‌ರಿಗೆ ತಮ್ಮ ಸಮುದಾಯದ ಮೇಲಿದ್ದ ಅಭಿಮಾನ ಮತ್ತು ಮುಸ್ಲಿಮ್ ಸಮಸ್ಯೆಗಳ ಬಗ್ಗೆ ಅವರಿಗಿದ್ದ ದೂರದೃಷ್ಟಿ ಶ್ಲಾಘನಾರ್ಹವಾಗಿದೆ. ಇದಲ್ಲದೆ ಅವರು ಮುಸ್ಲಿಮರ ಸಾಮಾಜಿಕ ಪದ್ಧತಿ ಮತ್ತು ಧಾರ್ಮಿಕ ಕಲ್ಪನೆಗಳಲ್ಲೂ ಸುಧಾರಣೆಗಳನ್ನು ತಂದರು. ಮುಸ್ಲಿಮರ ಶಿಕ್ಷಣಕ್ಕೆ ಅವರು ಹೆಚ್ಚು ಒತ್ತು ನೀಡಿದರು. ಆದರೆ ಮುಸ್ಲಿಮರು ರಾಜಕೀಯ ಚಳವಳಿಗೆ ಶಿಕ್ಷಣಕ್ಕೆ ಅವರು ಹೆಚ್ಚು ಒತ್ತು ನೀಡಿದರು. ಆದರೆ ಮುಸ್ಲಿಮರು ರಾಜಕೀಯ ಚಳವಳಿಗೆ ಸೇರಬೇಕೆಂದು ಅವರು ಬಯಸಲಿಲ್ಲ. ಅವರಿಗೆ ಬ್ರಿಟಿಷರ ಬಗ್ಗೆ ಆಂತರಿಕವಾದ ನಿಷ್ಠೆಯಿತ್ತು. ಈ ಸ್ವಭಾವದಿಂದಾಗಿ ಅವರು ಕಾಂಗ್ರೆಸ್‌ವಿರೋಧಿಯಾದರು.

ಸರ್ ಸಯದ್‌ರ ಉದ್ದೇಶ ಏನಿದ್ದರೂ ತತ್ಪರಿಣಾಮವಾಗಿ ಈ ದೇಶದ ಎರಡು ದೊಡ್ಡ ಸಮುದಾಯಗಳ ನಡುವಿನ ಅಂತರ ವೃದ್ಧಿಯಾಯಿತು. ಆದರೆ ಅವರು ಮುಸ್ಲಿಮ್ ಪರವಾಗಿದ್ದಷ್ಟು ಹಿಂದೂ ವಿರೋಧಿಯಾಗಿರಲಿಲ್ಲವೆಂದು ಹೇಳುವುದು ಹೆಚ್ಚು ಸೂಕ್ತವಾಗಬಹುದು. ಏನಿದ್ದರೂ ಮುಸ್ಲಿಮ್ ಜನಾಂಗದ ಹಿತವೇ ಅವರ ಬದುಕಿನ ಪ್ರಧಾನ ಆಶಯವಾಗಿತ್ತು.

ಉಲೇಮಾಗಳು ಮತ್ತು ದೇವಬಂದ್ ಆಂದೋಲನ

ಸರ್ ಸಯದ್‌ರ ವಿಚಾರಧಾರೆಯನ್ನು ಮುಸ್ಲಿಮರ ಎರಡು ವರ್ಗಗಳು ಒಪ್ಪಲಿಲ್ಲ. ಅಂತ ಒಂದು ವರ್ಗವೆಂದರೆ ಸಂಪ್ರದಾಯವಾದಿಗಳೂ ಮುಸ್ಲೀಮ್ ದೇವತಾಶಾಸ್ತ್ರಜ್ಞರೂ ಆದ ಉಲೇಮಾಗಳು, ಇನ್ನೊಂದು ವರ್ಗ ರಾಷ್ಟ್ರವಾದೀ ಮುಸಲ್ಮಾನರು.

ಅನೇಕ ಉಲೇಮಾಗಳು ೧೮೫೭ರ  ಮಹಾದಂಗೆಯ ಕಾಲದಲ್ಲಿ ಬ್ರಿಟಿಷರ ವಿರುದ್ಧ ಜನರನ್ನು ಎತ್ತಿಕಟ್ಟಿ ಹೋರಾಡಿದ್ದರು. ಅವರ ಕೇಂದ್ರವು ಉತ್ತರ ಪ್ರದೇಶದ ಮುಜಾಫರ್ ಜಿಲ್ಲೆಯ ಶಮ್ಲಿ ಎಂಬಲ್ಲಿತ್ತು. ಇವರೇ ಉತ್ತರ ಪ್ರದೇಶದ ಶಹರನ್ಪುರ ಜಿಲ್ಲೆಯ ದೇವಬಂದ್ ಎಂಬಲ್ಲಿ ೧೮೬೭ರಲ್ಲಿ ವಿದ್ಯಾಸಂಸ್ಥೆಯೊಂದನ್ನು ಸ್ಥಾಪಿಸಿದರು. ತಮ್ಮ ಸಮುದಾಯದ ಒಳಿತಿಗಾಗಿ ಕೆಲಸ ಮಾಡುವ ಮತೀಯ ನಾಯಕರನ್ನು ನಿರ್ಮಾಣ ಮಾಡುವುದೇ ಈ ವಿದ್ಯಾಸಂಸ್ಥೆಯ ಉದ್ಧೇಶವಾಗಿತ್ತು. ಈ ವಿದ್ಯಾಸಂಸ್ಥೆಯಲ್ಲಿ ತಯಾರಾದ ನಾಯಕರಲ್ಲಿ ಪ್ರಮುಖರೆಂದರೆ ಮಹಮ್ಮದ್ ಕಾಸಿಂ ನನೌತವಿ (೧೮೩೭-೧೮೮೦)ಹಾಗೂ ರಶೀದ್ ಅಹಮದ್ ಗಂಗೋಹಿ (೧೮೨೮-೧೯೦೫).

ದೇವಬಂದ್‌ವಿದ್ಯಾಸಂಸ್ಥೆಯು ಪರಂಪರಾಗತ ವೈಜ್ಞಾನಿಕ ವಿಷಯಗಳಿಗೆ ಒತ್ತು ನೀಡಿತು. ಅದೊಂದು ಬಡವರ ವಿದ್ಯಾಸಂಸ್ಥೆಯಾಗಿತ್ತು. ಅವರು ಇಂಗ್ಲಿಷ್ ಶಿಕ್ಷಣ, ಪಾಶ್ಚಾತ್ಯ ಸಂಸ್ಕೃತಿ ಹಾಗೂ ಪೌರಸ್ತ್ಯ ದೇಶಗಳ ಮೇಲೆ ಪಾಶ್ಚಿಮಾತ್ಯರ ಪ್ರಭುತ್ವವನ್ನು ದ್ವೇಷಿಸುತ್ತಿದ್ದರು. ಏಷ್ಯದ ದೇಶಗಳನ್ನು ಸ್ವತಂತ್ರಗೊಳಿಸಿ ಅಲ್ಲಿಯ ಮುಸ್ಲಿಮ್ ಮತಾನುಯಾಯಿಗಳ ನೈತಿಕ ಹಾಗೂ ಧಾರ್ಮಿಕ ಪುನರುತ್ಥಾನಕ್ಕಾಗಿ ಅವರು ಹಾತೊರೆಯುತ್ತಿದ್ದರು.

ದೇವಬಂದ್ ಸಂಸ್ಥೆಯ ಮುಖ್ಯಸ್ಥರಾದ ರಶೀದ್ ಅಹಮದ್ ಗಂಗೋಹಿ ಅವನ ವ್ಯಾಖ್ಯಾನದಂತೆ ಭಾರತವು ಒಂದು ಮುಸ್ಲಿಮೇತರ ದೇಶವಾಗಿದ್ದ (ದಾರ್-ಉಲ್-ಹರ್ಬ್‌) ಇಲ್ಲಿಂದ ಬ್ರಿಟಿಷರನ್ನು ತೊಲಗಿಸುವುದು ಮುಸ್ಲಿಮರು ಅಗತ್ಯವಾಗಿ ಮಾಡಲೇಬೇಕಾದ ಕಾರ್ಯವಾಗಿತ್ತು. ದೇಶಕ್ಕೆ ಸಂಬಂಧಪಟ್ಟ ಲೌಕಿಕ ವ್ಯಾವಹಾರಿಕ ವಿಷಯಗಳಲ್ಲಿ ಮುಸ್ಲಿಮರು ಹಿಂದುಗಳೊಡನೆ ಸಹಕರಿಸಲು ಮುಸ್ಲಿಮ್ ಕಾನೂನು ಅವಕಾಶ ನೀಡುತ್ತದೆ ಎಂದು ಹೇಳಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸೇರುವಂತೆ ತನ್ನ ಮತೀಯರಿಗೆ ಗಂಗೋಹಿ ಸಲಹೆಯಿತ್ತನು. ಆದರೆ ಅವನು ಮಾತ್ರ ಕಾಂಗ್ರೆಸ್ಸನ್ನು ಸೇರಲಿಲ್ಲ. ವಿವಿಧ ಮತ ಧರ್ಮಾನುಯಾಯಿಗಳನ್ನೊಳಗೊಂಡ ರಾಷ್ಟ್ರದ ಕಲ್ಪನೆಯಿಂದ ಇಸ್ಲಾಂ ತತ್ತ್ವಗಳ ಉಲ್ಲಂಘನೆಯಾಗುವುದಿಲ್ಲವೆಂದು ಅವನು ಸಾರಿ ಹೇಳಿದ. ಇಂಥ ವಿಚಾರಧಾರೆಗಳಿಂದಾಗಿ ದೇವಬಂದ್‌ಹಾಗೂ ಅಲಿಘರ್ ಆಂದೋಲನಗಳೊಳಗೆ ಒಂದು ಕಂದಕವೇ ನಿರ್ಮಾಣವಾಯಿತು.

ಪರಾಮರ್ಶನಗ್ರಂಥಗಳು

೧.ಕೆನ್ನಿತ್ ಜೋನ್ಸ್‌ಡಬ್ಲ್ಯೂ, ೧೯೯೪. ಸೋಷಿಯೋರಿಲೀಜಿಯಸ್ ಮೂವ್ಮೆಂಟ್ಸ್ಇನ್ ಬ್ರಿಟಿಷ್ ಇಂಡಿಯಾದಿ ನ್ಯೂ ಕೇಂಬ್ರಿಡ್ಜ್ಹಿಸ್ಟರಿ ಆಫ್ ಇಂಡಿಯಾ, ಸಂಪುಟ ೩, ನ್ಯೂ ಡೆಲ್ಲಿ :  ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್.

೨. ಮಜುಂದಾರ್ ಆರ್,ಸಿ.(ಸಂ), ೧೯೬೫. ದಿ ಹಿಸ್ಟರಿ ಆಂಡ್ ಕಲ್ಚರ್ ಆಫ್ ಇಂಡಿಯನ್ ಪೀಪಲ್, ಭಾರತೀಯ ವಿದ್ಯಾಭವನ ಸಂಪುಟಗಳು, ಬಾಂಬೆ:ಭಾರತೀಯ ವಿದ್ಯಾಭವನ.

೩. ಹಿಮ್ಸತಾ ಸಿ.ಎಚ್., ೧೯೬೫. ಇಂಡಿಯನ್ ನ್ಯಾಷನಲಿಸಂ ಆಂಡ್ ಹಿಂದು ಸೋಶಿಯಲ್ ರಿಫಾರ್ಮ್‌.