ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಅತಿ ಮುಖ್ಯ ಪರಿಣಾಮವೆಂದರೆ ಭಾರತೀಯ ಜನರ ಬೌದ್ಧಿಕ ವಿಕಾಸವು ಸಂಪೂರ್ಣವಾಗಿ ಹೊಸ ಜಾಡಿನಲ್ಲಿ ಸಾಗತೊಡಗಿದ್ದು. ಇದರಿಂದಾಗಿ ಮುಂದೆ ಭಾರತೀಯರ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ದೃಷ್ಟಿಕೋನದಲ್ಲಿ ಅನೇಕ ಪರಿವರ್ತನೆಗಳಾದವು. ಹತ್ತೊಂಬತ್ತನೇ ಶತಮಾನದ ವೇಳೆಗೆ ಭಾರತದಲ್ಲಿ ಮಧ್ಯಯುಗವು ಅಂತ್ಯವಾಗಿ ಆಧುನಿಕ ಯುಗವು ಪ್ರಾರಂಭಗೊಂಡಿತು.

ಇಂಗ್ಲಿಷ್ ಶಿಕ್ಷಣದಿಂದಾಗಿ ಭಾರತೀಯರ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಆಗತೊಡಗಿತು. ಇಂಗ್ಲಿಷ್ ಶಿಕ್ಷಣವು ಭಾರತ ಮತ್ತು ಪಾಶ್ಚಾತ್ಯ ಜಗತ್ತಿನ ನಡುವೆ ಇದ್ದ ಬೇಲಿಯನ್ನು ಕಿತ್ತೊಗೆಯಿತು. ಮುಸ್ಲಿಮ್ ವಿದ್ವಾಂಸ ಅಲ್‌ಬೆರೂನಿಯು ಸುಮಾರು ಕ್ರಿ.ಶ ೧೦೦೦ರಲ್ಲಿಯೇ ಬರೆದಿರುವಂತೆ, ಹಿಂದುಗಳು ಬಾಹ್ಯ ಜಗತ್ತಿನಿಂದ ದೂರ ನಿಂತಿದ್ದರು ಮತ್ತು ಅವರಿಗೆ ಪಶ್ಚಿಮದ ಕಲೆ-ವಿಜ್ಞಾನಗಲ ಪರಿಚಯವಿರಲಿಲ್ಲ. ಹಿಂದುಗಳಲ್ಲಿದ್ದ ಈ ನ್ಯೂನ್ಯತೆಯು ಎಂಟುನೂರು ವರ್ಷಗಳ ತನಕ ಹಾಗಯೇ ಇತ್ತು. ಆದರೆ ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಅವರಲ್ಲಿ ಬಹುದೊಡ್ಡ ಪರಿವರ್ತನೆಯಾಯಿತೆನ್ನುವ ಅಭಿಪ್ರಾಯವಿದೆ. ಇಂಗ್ಲಿಷ್ ಶಿಕ್ಷಣದ ಫಲವಾಗಿ ಪಾಶ್ಚಾತ್ಯ ದೃಷ್ಟಿಕೋನ, ವಿಚಾರಗಳು ನಮ್ಮ ಜನರಲ್ಲಿ ನಿರಾತಂಕವಾಗಿ ಹರಿದು ಬರತೊಡಗಿದವು. ಬಂಗಾಲದಲ್ಲಿ ಶಿಕ್ಷಿತ ಹಿಂದುಗಳಲ್ಲಿ ಹಿಂದಿನ ಸಾವಿರ ವರ್ಷಗಳಲ್ಲಿ ಆಗದಿದ್ದ ಬೌದ್ಧಿಕ ಪರಿವರ್ತನೆಗಳು ಕೇವಲ ಐವತ್ತು ವರ್ಷಗಳ ಇಂಗ್ಲಿಷ್ ಶಿಕ್ಷಣದಿಂದ ಆದುವು. ಪಾಶ್ಚಾತ್ಯ ವಿಚಾರಗಳು ಅತ್ಯಂತ ಸೂಕ್ತ ಕಾಲದಲ್ಲಿ ಭಾರತೀಯರಿಗೆ ಲಭಿಸಿದ್ದೇ ಹೀಗಾಗಲು ಮುಖ್ಯ ಕಾರಣ. ಯುರೋಪಿನಲ್ಲಿ ಆಗ “ವಿಚಾರ ಯುಗದ” ಕಾಲವಾಗಿತ್ತು. ಐರೋಪ್ಯ ವಿಚಾರಧಾರೆಯು ವಿಚಾರವಾದ ಮತ್ತು ವ್ಯಕ್ತಿವಾದದ ಪ್ರಭಾವಕ್ಕೆ ಒಳಪಟ್ಟಿತ್ತು. ಅದರ  ಪರಿಣಾಮವಾಗಿ ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಹಕ್ಕುಗಳು ಕುರಿತು ಹೊಸ ಕಲ್ಪನೆಗಳು ಹುಟ್ಟಿಕೊಂಡವು. ಅಲ್ಲದೆ, ಮತವನ್ನು (ರಿಲಿಜನ್) ವಿಮರ್ಶಾತ್ಮಕ ದೃಷ್ಟಿಯಿಂದ ಅವಲೋಕಿಸುವ ಪರಿಪಾಠ ಆರಂಭವಾಯಿತು.

ಬಂಗಾಳದಲ್ಲಿ ಇಂಗ್ಲಿಷ್ ಶಿಕ್ಷಣವು ಮೊತ್ತ ಮೊದಲು ಧಾರ್ಮಿಕ ಮತ್ತು ಸಾಮಾಜಿಕ ವಿಚಾರಗಳ ಮೇಲೆ ಪ್ರಭಾವ ಬೀರತೊಡಗಿತು. ಅದರೊಂದಿಗೆ ಶೀಘ್ರದಲ್ಲಿಯೇ ಈ ಪ್ರಭಾವ ಜನರ ರಾಜಕೀಯ ಪ್ರಜ್ಞೆಯು ಮೇಲೂ ಗಾಢವಾಗಿ ಬೀರತೊಡಗಿತು. ಬ್ರಹ್ಮ ಸಮಾಜದ ಹುಟ್ಟು ಈ ಪ್ರಭಾವದ ಫಲವಾಗಿದ್ದು. ಅದು ರಾಜಕೀಯ ಸ್ವಾತಂತ್ರ್ಯದ ಕುರಿತು ಹೊಸ ಹೊಸ ಕಲ್ಪನೆ, ವಿಚಾರಣಗಳನ್ನು ಜನರ ಮುಂದಿಟ್ಟಿತು.

ಇಂಗ್ಲಿಷ್ ಶಿಕ್ಷಣದ ಪ್ರಮುಖ ಪರಿಣಾಮವೆಂದರೆ, ಭಾರತೀಯರು ತಮ್ಮ ಧರ್ಮ ಹಾಗೂ ಸಮಾಜ ವ್ಯವಸ್ಥೆಯನ್ನು ವೈಚಾರಿಕವಾಗಿ ವಿಮರ್ಶಿಸುವ ಬೌದ್ಧಿಕ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದು. ರಾಜಾರಾಮ ಮೋಹನರಾಯ್ ಅವರ ವ್ಯಕ್ತಿತ್ವವು ಇದಕ್ಕೆ ಉಜ್ವಲ ಉದಾಹರಣೆ.

ಹತ್ತೊಂಬತ್ತನೇ ಶತಮಾನದ ಭಾರತೀಯರ ಜನಜೀವನದ ಪ್ರಗತಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ, ಆಂಗ್ಲ ವಿಚಾರಧಾರೆಯ ಪ್ರಭಾವ ಜನಜೀವನದ ಎಲ್ಲ ಕ್ಷೇತ್ರಗಳ ಮೇಲೆ ಆಗಿರುವುದನ್ನು ಕಾಣಬಹುದು. ಹೊಸ ಧಾರ್ಮಿಕ ಪಂಥಗಳ ಉದಯದೊಂದಿಗೆ ಹಿಂದೂ ಧರ್ಮದ ಆಚಾರ, ಸಂಪ್ರದಾಯಗಳಲ್ಲಿ ಮಹತ್ವದ ಕೆಲವು ಪರಿವರ್ತನೆಗಳೂ ಆದವು. ಸಮಾಜದಲ್ಲಿರುವ ಸಾಂಪ್ರದಾಯಿಕ ದೋಷಗಳನ್ನು ಕಿತ್ತು ಹಾಕಬೇಕು ಹಾಗೂ ಆಧುನಿಕ ಸುಧಾರಣೆಗಳಾಗಬೇಕೆಂಬ ಆಂತರಿಕ ಒತ್ತಡ  ಹಿಂದೂ ಸಮಾಜದಲ್ಲಿ ಬಲವಾಗ ತೊಡಗಿತು. ಶಿಕ್ಷಣ ಕ್ರಮ ಮತ್ತು ಜೀವನದ ಆದರ್ಶಗಳಲ್ಲಿಯೂ ಕ್ರಾಂತಿಕಾರಿ ಬದಲಾವಣೆಗಳಾದವು. ಅಂತೆಯೇ ಸಾಹಿತ್ಯ ಕ್ಷೇತ್ರದಲ್ಲಿಯೂ ಅಷ್ಟೇ ಕ್ರಾಂತಿಕಾರಿಯಾದ ಬದಲಾವಣೆ ತಲೆದೋರಿತು. ಪತ್ರಿಕೆಗಳ ಹುಟ್ಟು ಹಾಗೂ ಬೆಳವಣಿಗೆ ಸಮಾಜದ ಮೇಲೆ ಅಭೂತಪೂರ್ವವಾದ ಪರಿಣಾಮ ಬೀರಿತು. ಮುದ್ರಣ ಕಲೆಯಿಂದಾಗಿ ಶಿಕ್ಷಣ ಪ್ರಸಾರದಲ್ಲಿ ಅದ್ಭುತ ಬದಲಾವಣೆಯಾಯಿತು. ಇವೆಲ್ಲ ಅಂಶಗಳ ಒಟ್ಟು ಪರಿಣಾಮವಾಗಿ ಭಾರತೀಯರಲ್ಲಿ ಹಿಂದೆ ಇಲ್ಲದಿದ್ದ ದೇಶಭಕ್ತಿ ಮತ್ತು ರಾಷ್ಟ್ರೀಯತೆ  ಪ್ರಜ್ಞೆ ಬಲವಾಗಿ ಬೆಳೆಯಿತು. ಭಾರತವು ಹತ್ತೊಂಬತ್ತನೇ ಶತಮಾನದಲ್ಲಿ “ಮಧ್ಯಯುಗದ” ಸೀಮಾರೇಖೆಯನ್ನು ದಾಟಿ ಆಧುನಿಕ ಯುಗಕ್ಕೆ ಕಾಲಿರಿಸಿತು.

ರಾಜಾರಾಮ ಮೋಹನರಾಯ್ ಮತ್ತು ಬ್ರಹ್ಮಸಮಾಜ

ಬ್ರಹ್ಮಸಮಾಜದ ಸ್ಥಾಪಕನಾದ ರಾಜಾರಾಮ ಮೋಹನರಾಯ್ (೧೭೭೨-೧೮೩೩) ಅವರೇ ಭಾರತದಲ್ಲಿ ನವಯುಗದ ಪ್ರವರ್ತಕರು.

ರಾಮಮೋಹನ್‌ರಾಯ್ ತಾವು ಪ್ರತ್ಯೇಕ ಪಂಥವೊಂದರ ಸ್ಥಾಪಕನಂತೆ ಎಂದೂ ನಡೆದುಕೊಳ್ಳಲಿಲ್ಲ. ಅವರ ಜನ್ಮ ಕಲ್ಕತ್ತದ ಸಮೀಪದ ಒಂದು ಹಳ್ಳಿಯ ಬ್ರಾಹ್ಮಣ ಕುಟುಂಬವೊಂದರಲ್ಲಾಯಿತು. ಅವರು ಪಟ್ನಾದಲ್ಲಿ ಪಾರ್ಸಿ ಮತ್ತು ಅರಬ್ಬಿ ಭಾಷೆಗಳನ್ನೂ ವಾರಣಾಸಿಯಲ್ಲಿ ಸಂಸ್ಕೃತವನ್ನೂ ಕಲಿತರು. ಸೂಫೀ ಮತ್ತು ಮುಸ್ಲಿಮ್ ಮತೀಯ ವಿಚಾರಧಾರೆಯ ಗಾಢ ಪರಿಚಯ ಅವರಿಗಾಯಿತು. ಇದರ ಫಲವಾಗಿ ಪ್ರಾಯಶಃ ವಿಗ್ರಹರಾಧನೆಯ ಮೌಲ್ಯದ ಕುರಿತು ಅವರ ಮನಸ್ಸಿನಲ್ಲಿ ಸಂಶಯದ ಅಲೆಗಳು ಏಳತೊಡಗಿದವು ಎನ್ನುವುದು.

ಧಾರ್ಮಿಕ ಸುಧಾರಣೆ

೧೮೧೫ರಲ್ಲಿ ರಾಜಾರಾಮ ಮೋಹನ್‌ರಾಯ್‌ಅವರು ಕಲ್ಕತ್ತದಲ್ಲಿ “ಆತ್ಮೀಯ ಸಭಾ” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರತಿವಾರವೂ ಸಭೆ ನಡೆಸಿ ಧರ್ಮಶಾಸ್ತ್ರಗಳಲ್ಲಿರುವ ಏಕದೇವೋಪಾಸನೆಯನ್ನು ಪ್ರತಿವಾದಿಸಿದರು. ಅವರು “ದೇವರು ಒಬ್ಬನೇ” ಎಂಬ ತತ್ವವನ್ನು ಎತ್ತಿಹಿಡಿದರು.

ವೇದಾಂತದ ಏಕದೇವ ತತ್ವವನ್ನು ಆಸಕ್ತರಿಗೆ ಕಲಿಸುವ ಉದ್ದೇಶದಿಂದ ೧೮೨೫ರಲ್ಲಿ ವೇದಾಂತ ಕಾಲೇಜನ್ನು ಸ್ಥಾಪಿಸಿದರು. ಎಲ್ಲ ಪಂಥಗಳಿಗೂ ಅತೀತವಾದ ಏಕದೇವನನ್ನು ಯಾವುದೇ ಪಂಥದ ಚೌಕಟ್ಟಿಲ್ಲದೆ ಅರ್ಚಿಸುವ ಅವಕಾಶವೊದಗಿಸಲು ೧೮೨೮ರಲ್ಲಿ “ಬ್ರಹ್ಮ ಸಮಾಜ”ವನ್ನು ಸ್ಥಾಪಿಸಿದರು. ವೇದಗಳ ಪಠಣ, ಉಪನಿಷತ್ತುಗಳ ವಾಚನ ಹಾಗೂ ಬಂಗಾಳಿ ಭಾಷೆಗೆ ಅವುಗಳ ಅನುವಾದ ಕಾರ್ಯ ನಡೆಯಿತು. ಹಿಂದೂ ಧರ್ಮದ ಬಗ್ಗೆ ತಾವು ಮಾಡಿದ ವ್ಯಾಖ್ಯಾನಗಳಿಗೆ ಪ್ರಾಚೀನ ಶಾಸ್ತ್ರಗ್ರಂಥಗಳನ್ನೇ ಆಧಾರವಾಗಿಟ್ಟುಕೊಂಡರು.

ಸಾಮಾಜಿಕ ಸುಧಾರಣೆಗಳು

ರಾಮಮೋಹನರಿಗೆ ಜಾತಿಪದ್ಧತಿಯ ದೋಷಗಳ ಬಗ್ಗೆ ಅರಿವಿತ್ತು. ಹಿಂದೂ ಸ್ತ್ರೀಯರ ಬಾಳನ್ನು ದುರ್ಭರವಾಗಿ ಮಾಡಿದ್ದ ಅನೇಕ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನ ಮಾಡಲು ಅವರು ಸಕ್ರಿಯ ಆಸಕ್ತಿ ವಹಿಸಿದರು. ಸತಿ ಪದ್ಧತಿಯ ವಿಷಯದಲ್ಲಿ ಜನಾಭಿಪ್ರಾಯವನ್ನು ಜಾಗೃತಗೊಳಿಸಿದರು. ಇದರ ಪರಿಣಾಮವಾಗಿ ರಾಮಮೋಹನರು ಸಂಪ್ರದಾಯವಾದಿ ಹಿಂದುಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಆದರೆ ಈ ಪದ್ಧತಿಯನ್ನು ಶಾಸನದ ಮೂಲಕ ರದ್ದುಪಡಿಸಲು ಯತ್ನಿಸುವುದು ಒಳಿತಲ್ಲವೆಂದು ಅವರು ಬ್ರಿಟಿಷ್ ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್ ಅವರಿಗೆ ಸಲಹೆಯಿತ್ತರು. ಈ ಕಾರ್ಯವನ್ನು ಜನರ ಮನವೊಲಿಸಿ, ಎಚ್ಚರಿಕೆಯಿಂದ, ಯೋಜನಾಬದ್ಧವಾಗಿ ಆಡಳಿತ ಕ್ರಮಗಳ ಮೂಲಕ ಸಾಧಿಸಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು.

ಸ್ತ್ರೀಯರಿಗೆ ಉತ್ತರಾಧಿಕಾರ ಮತ್ತು ಆಸ್ತಿಯ ಹಕ್ಕನ್ನು ನೀಡುವ ಮೂಲಕ ಅವರ ಸಾಮಾಜಿಕ ಸ್ಥಾನಮಾನ ಸುಧಾರಣೆಯಾಗಬಹುದು ಎಂದು ರಾಮಮೋಹನರು ವಾದಿಸಿದರು.

ರಾಜಕೀಯ ವಿಚಾರಧಾರೆ

ರಾಮಮೋಹನ ರಾಯ್ ಆಧುನಿಕ ಭಾರತದ ಪ್ರಥಮ ರಾಜಕೀಯ ಚಿಂತಕರೆಂದರೆ ಅತಶಯೋಕ್ತಿಯಾಗದು. ರಾಜಕೀಯ ವಿವಾದಗಳ ನಿರ್ಣಯದಲ್ಲಿ  ಅವರು ಅತ್ಯಂತ ವಿಶಾಲ ಮನೋಭಾವವುಳ್ಳವರಾಗಿದ್ದರು. ಸಾಂವಿಧಾನಿಕ ಪ್ರಭುತ್ವವನ್ನು ಅವರು ಮೆಚ್ಚುತ್ತಿದ್ದರು.

ಭಾರತೀಯರಿಗೆ ಕ್ರಿಮಿನಲ್ ಮತ್ತು ಸಿವಿಲ್ ಕಾನೂನುಗಳ ಸಂಹಿತೆಯನ್ನು ಸಿದ್ಧಪಡಿಸಬೇಕೆಂದು ರಾಜಾರಾಮಮೋಹನರು ಪ್ರತಿವಾದಿಸಿದರು. ಭಾರತೀಯರಿಗೆ ಮೇಲ್ದರ್ಜೆಯ ಅಧಿಕಾರ ಕೊಡಬೇಕೆಂದು, ಭೂಕಂದಾಯವನ್ನು ಕಡಿಮೆ ಮಾಡಬೇಕೆಂದು, ರೈತರಿಗೆ ವಿಶೇಷ ಹಕ್ಕುಗಳಿರಬೇಕೆಂದು ಅವರು ಒತ್ತಾಯಪಡಿಸಿದರು.

ರಾಮಮೋಹನರು ಪತ್ರಿಕೋದ್ಯಮದ ಆದ್ಯ ಪ್ರವರ್ತಕರಲ್ಲೊಬ್ಬರಾಗಿದ್ದರು. ಅವರು ಬಂಗಾಲಿ, ಪಾರ್ಷಿ ಮತ್ತು ಹಿಂದಿ ಭಾಷೆಗಳಲ್ಲಿ ನಿಯತಕಾಲಿಕಗಳನ್ನು ಪ್ರಕಟಿಸಿ ಜನರಲ್ಲಿ ವೈಜ್ಞಾನಿಕ, ಸಾಹಿತ್ಯಕ ಮತ್ತು ರಾಜಕೀಯ ಜ್ಞಾನವನ್ನು ಹರಡಲು ಯತ್ನಿಸಿದರು. ಈ ಎಲ್ಲ ಕಾರಣಗಳಿಂದಾಗಿ ರಾಮಮೋಹನರನ್ನು “ಆಧುನಿಕ ಭಾರತದ ಪಿತೃ ಮತ್ತು ಗುರು” ಎಂದು ಕರೆಯುತ್ತಿದ್ದುದುಂಟು.

ಆರ್ಯಸಮಾಜಸ್ವಾಮಿ ದಯಾನಂದ ಸರಸ್ವತಿ

ಇನ್ನೊಂದು ಪ್ರಮುಖ ಧಾರ್ಮಿಕ ಚಳವಳಿಯೆಂದರೆ ಆರ್ಯ ಸಮಾಜ. ಅದನ್ನು ಸ್ಥಾಪಿಸಿದವರು ಸ್ವಾಮಿ ದಯಾನಂದ ಸರಸ್ವತಿಯವರು (೧೮೨೪-೧೮೮೩).

ದಯಾನಂದರ ಬಾಲ್ಯದ ಹೆಸರು ಮೂಲಶಂಕರ. ೧೮೨೪ರಲ್ಲಿ ಗುಜರಾತಿನ ಕರ್ಮಠ ಬ್ರಾಹ್ಮಣ ಕುಟುಂಬವೊಂದರಲ್ಲಿ ಅವರು ಜನಿಸಿದರು. ಅವರ ಬಾಲ್ಯಕ್ಕೆ ಸಂಬಂಧಿಸಿದಂತೆ ಐತಹ್ಯವೊಂದು ಜನಜನಿತವಾಗಿದೆ. ಅದರ ಪ್ರಕಾರ ಅವರು ಹದಿನಾಲ್ಕು ವರ್ಷದವರಿದ್ದಾಗ, ಶಿವರಾತ್ರಿಯಂದು, ಅವರ ತಂದೆ ಮಗನನ್ನು ದೇವಾಲಯಕ್ಕೆ ಕರೆದುಕೊಂಡು ಹೋದರು. ರಾತ್ರಿ ಶಿವಾರ್ಚನೆ ಮಾಡುವುದು ಮತ್ತು ಜಾಗರಣೆ ಮಾಡುವುದು ಅವರ ಉದ್ದೇಶವಾಗಿತ್ತು. ಮಧ್ಯರಾತ್ರಿಯ ಬಳಿಕ ದಯಾನಂದರ ತಂದೆ ಮತ್ತು ದೇವಾಲಯದ ಅರ್ಚಕ ಇಬ್ಬರೂ ನಿದ್ದೆ ಹೋದರು. ಆದರೆ ಹುಡುಗ ಎಚ್ಚರವಾಗಿಯೇ ಇದ್ದ. ಇದ್ದಕ್ಕಿದ್ದಂತೆ ಒಂದು ಇಲಿ ಶಿವಲಿಂಗದ ಮೇಲೆ ಹರಿದಾಡಿ ಅದರೆದುರು ಇಟ್ಟಿದ್ದ ನೈವೇದ್ಯವನ್ನು ತಿಂದಿತು. ಇದನ್ನು ನೋಡಿದ ಹುಡುಗನ ಮನಸ್ಸಿನಲ್ಲಿ ನಾನಾ ರೀತಿಯ ಆಲೋಚನೆಗಳ ಅಲೆಗಳು ಎದ್ದವು. ದೇವರಿಗೆ ಕೇವಲ ಒಂದು ಇಲಿಯ ತುಂಟಾಟದ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದಿದ್ದರೆ ಆತ ಸರ್ವಶಕ್ತನಾದ ಶಿವನಾಗಿರಲು ಸಾಧ್ಯವೇ ಇಲ್ಲ ಮತ್ತು ಶಿವಲಿಂಗವು ಕೇವಲ ಒಂದು ನಿರ್ಜೀವ ಜಡವಸ್ತು ಎಂದು ಯೋಚಿಸಿದ. ಈ ಪ್ರಕರಣವು ಹುಡುಗನ ಜೀವನದ ದಿಕ್ಕನ್ನೇ ಬದಲಾಯಿಸಿತೆಂದು ಮೇಲ್ಕಂಡ ಐತಿಹ್ಯವು ತಿಳಿಸುತ್ತದೆ. ಆತ ಪರಂಪರಾಗತ ಧಾರ್ಮಿಕ ಆಚರಣೆಯಲ್ಲಿ ವಿಶ್ವಾಸವನ್ನು ಕಳೆದುಕೊಂಡು ಸ್ವತಂತ್ರವಾಗಿ ಯೋಚಿಸತೊಡಗಿದ.

ಐದು ವರ್ಷಗಳ ಬಳಿಕ ಮೂಲಶಂಕರನನ್ನು ಬಹಳವಾಗಿ ಪ್ರೀತಿಸುತ್ತಿದ್ದ ಅವನ ಮಾವ ಮೃತರಾದರು. ಸಾವನ್ನು ಗೆಲ್ಲುವುದು ಹೇಗೆ ಎಂದು ಮೂಲಶಂಕರ ತನ್ನ ಸ್ನೇಹಿತರನ್ನೂ ಅನೇಕ ವಿದ್ವಾಂಸರನ್ನೂ ಬುದ್ಧನಂತೆ ಪ್ರಶ್ನಿಸಿದ. ಆತ ಮೊದಲು ಬ್ರಹ್ಮಚಾರಿಯಾಗಿದ್ದ. ಅನಂತರ ಕೆಲವೇ ವರ್ಷಗಳಲ್ಲಿ ವಿಧ್ಯುಕ್ತವಾಗಿ ಸಂನ್ಯಾಸ ದೀಕ್ಷೆಯನ್ನು ಪಡೆದು ಸ್ವಾಮಿ ದಯಾನಂದ ಸರಸ್ವತಿ ಎಂಬ ಹೆಸರನ್ನು ಧರಿಸಿದ.

೧೮೪೫ರಿಂದ ೧೮೬೦ರವರೆಗೆ ದಯಾನಂದರು ಸಮಗ್ರ ಭಾರತ ಸಂಚಾರ ಮಾಡಿದರು. ಎಡೆಬಿಡದೆ ಯೋಗಾಭ್ಯಾಸ ಮಾಡಿದರು. ಸತ್ಯ ಪ್ರಚಾರಕ್ಕೆ ಜೀವನವನ್ನು ಮೀಸಲಾಗಿಡುವಂತೆ ಮತ್ತು ಕರ್ಮಠ ಹಿಂದೂಧರ್ಮ ಅಥವಾ ಪೌರಾಣಿಕ ನಂಬಿಕೆಯ ಬಗ್ಗೆ ಅವರ ಗುಣ ಸ್ವಾಮಿ ವಿರಜಾನಂದರು ದಯಾನಂದರಿಗೆ ಕರೆ ನೀಡಿದರು.

ಇದಾಗಿ ಎರಡು ವರ್ಷಗಳವರೆಗೆ ದಯಾನಂದರು ಅಲ್ಲಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಷಣ ಮೂಡಿ ತಮ್ಮ ವಿಚಾರಗಳನ್ನು ಮಂಡಿಸಿದರು. ಬಹಿರಂಗ ಚರ್ಚೆಯ ಫಲವಾಗಿ ಅವರು ಪ್ರಖ್ಯಾತ ವ್ಯಕ್ತಿಯಾಗಿ ಹೊಸ ಧಾರ್ಮಿಕ ವಿಚಾರಗಳ ಭೋಧಕರೆಂಬ ಮಾನ್ಯತೆಯನ್ನು ಪಡೆದರು.

ಆರ್ಯ ಸಮಾಜವು ಗೋಭಕ್ತಿಯನ್ನು ವಿಶೇಷವಾಗಿ ಪ್ರತಿಪಾದಿಸುತ್ತದೆ. ಅದು ಬಹುದೇವೋಪಾಸನೆಯನ್ನು ಮಾತ್ರವಲ್ಲದೆ ಕ್ರೈಸ್ತಮತ ಮತ್ತು ಇಸ್ಲಾಂಮತ ಹೇಳುವಂತಹ ಏಕದೇವೋಪಾಸನೆಯನ್ನೂ ಖಂಡಿಸುತ್ತದೆ. ದಯಾನಂದರಿಗೆ ಇಂಗ್ಲಿಷ್ ಗೊತ್ತಿರಲಿಲ್ಲ. ಹಿಂದಿ ಭಾಷೆಯಲ್ಲಿಯೇ ಅವರು ತಮ್ಮ ಬೋಧನೆಯನ್ನು ಮಾಡಿದರು.

ದಯಾನಂದರು ತಮ್ಮ ಕೊನೆಯ ಎಂಟು ವರ್ಷಗಳನ್ನು ವೇದ ಸಂದೇಶದ ಪ್ರಚಾರಕ್ಕಾಗಿಯೂ ತಮ್ಮ ಬೋಧನೆಗಳನ್ನೊಳಗೊಂಡ ಗ್ರಂಥಗಳ ಬರವಣಿಗೆಗಾಗಿಯೂ, ಭಾರತದಾದ್ಯಂತ ಆರ್ಯ ಸಮಾಜದ ಸಂಘಟನೆಗಾಗಿಯೂ ಕಳೆದರು. ಅವರು ಮದ್ರಾಸನ್ನುಳಿದು ಭಾರತದ ಎಲ್ಲ ಭಾಗಗಳಲ್ಲಿ ಪ್ರವಾಸ ಮಾಡಿದರು. ವೇದಗಳನ್ನು ಭಾಷಾಂಥರಿಸಿದರು. “ಸತ್ಯಾರ್ಥ ಪ್ರಕಾಶ”, “ವೇದಭಾಷ್ಯಾ ಭೂಮಿಕಾ” ಮತ್ತು “ವೇದ ಭಾಷ್ಯಾ” ಎಂಬ ಮೂರು ಮುಖ್ಯವಾದ ಕೃತಿಗಳನ್ನು ರಚಿಸಿದರು.

ಆರ್ಯ ಸಮಾಜ

“ಯಾವ ರಾಷ್ಟ್ರಕ್ಕೆ ತನ್ನ ಪೂರ್ವಜನ ಬಗ್ಗೆ, ಪೂರ್ವಜರ ಧರ್ಮದ ಹಾಗೂ ಪೂರ್ವಜರ ಇತಿಹಾಸದ ಬಗ್ಗೆ ಅಭಿಮಾನವಿಲ್ಲವೋ, ಆ ರಾಷ್ಟ್ರ ಆತ್ಮಾಭಿಮಾನದಿಂದ ತಲೆ ಎತ್ತಿ ನಿಲ್ಲಲಾರದು” ಎಂಬ ಸತ್ಯವನ್ನು ದಯಾನಂದರು ಕಂಡುಕೊಂಡರು. “ವೇದಗಳನ್ನು ಹಿಡಿದು ನಿಮ್ಮ ಪೂರ್ವಜರು ಜಗತ್ತಿಗೆ ಗುರುಗಳಾಗಿ ವಿರಾಜಿಸಿದರು. ನೀವೂ ಅದೇ ರೀತಿ ವೇದಗಳನ್ನು ಹಿಡಿದು ನಡೆಯಿರಿ. ನೀವೂ ಮತ್ತೆ ಜಗದ್ಗುರುಗಳಾದೀರಿ” ಎಂದು ಗುಡುಗಿದರು. ಆರ್ಯ ಸಮಾಜವು ಕೆಲವು ಮೂಲ ಸಿದ್ದಾಂತಗಳನ್ನೂ ನಿಯಮಗಳನ್ನೂ ವಿಧಿಸಿತು. ಅವುಗಳಲ್ಲಿ  ಮೂರು ಹೀಗಿವೆ:

೧. ವೇದಗಳು ಸ್ವತಂತ್ರ, ಪರಿಪೂರ್ಣ ಹಾಗೂ ಅಧಿಕೃತವಾದವುಗಳು.

೨. ಪ್ರತಿಯೊಬ್ಬನೂ ತನ್ನ ಗಳಿಕೆಯ ಹಣದ ಮೂರನೇ ಒಂದು ಭಾಗವನ್ನು ಸಮಾಜದ ನಿಧಿಗೆ ಕೊಡಬೇಕು.

೩. ವೇದಗಳನ್ನೂ ಪ್ರಾಚೀನ ಆರ್ಯಗ್ರಂಥಗಳನ್ನೂ ಆರ್ಯವಿದ್ಯಾಲಯಗಳಲ್ಲಿ ಕಲಿಯಬೇಕು ಮತ್ತು ಕಲಿಸಬೇಕು.

ವೈದಿಕ ಸಂಸ್ಕಾರ ಮತ್ತು ಪದ್ಧತಿಯನ್ನು ಪುನಶ್ಚೇತನಗೊಳಿಸುವುದರಿಂದ ಮಾತ್ರ ಹಿಂದೂ ಸಮಾಜದ ಸುಧಾರಣೆ ಸಾಧ್ಯವೆಂದು ದಯಾನಂದರು ನಂಬಿದ್ದರು. ಅವರು ಜಾತಿಪದ್ಧತಿಯನ್ನು ಅಲ್ಲಗಳೆದರು. ಮಾತ್ರವಲ್ಲದೆ ಕೇವಲ ಹುಟ್ಟಿನಿಂದಾಗಿ ಬ್ರಾಹ್ಮಣರು ಶ್ರೇಷ್ಠರು ಎಂಬುದನ್ನು ಒಪ್ಪಲಿಲ್ಲ. ವೇದಗಳನ್ನು ಮತ್ತು ಹಿಂದೂ ಗ್ರಂಥಗಳನ್ನು ಅಧ್ಯಯನ ಮಾಡಲು ಪ್ರತಿಯೊಬ್ಬನಿಗೂ ಅಧಿಕಾರ ಉಂಟೆಂದು ಘೋಷಿಸಿದರು. ವಿವಿಧ ದೇವ ದೇವತೆಗಳ ಪೂಜೆಯನ್ನು ಖಂಡಿಸಿದರು. ಪರಮ ಸತ್ಯವಾದ ಪರಮಾತ್ಮನನ್ನು ಮಾತ್ರ ಪೂಜಿಸಬೇಕೆಂದು ಬೋಧಿಸಿದರು. ಅಂತರ್ಜಾತೀಯ ವಿವಾಹಗಳಿಗೆ ಪ್ರೋತ್ಸಾಹ ನೀಡಿದರು ಮತ್ತು ಬಾಲ್ಯ ವಿವಾಹವನ್ನು ಖಂಡಿಸಿದರು.

ಹಿಂದೂಧರ್ಮ ಮತ್ತು ಸಮಾಜದ ರಕ್ಷಣೆಯ ಆರ್ಯ ಸಮಾಜದ ಅತ್ಯಂತ ದೊಡ್ಡಕೊಡುಗೆ ಶುದ್ಧಿ. ಶುದ್ಧಿಯೆಂದರೆ ಸ್ವಯಂಬುದ್ಧಿಯಿಂದ ಅಥವಾ ಬಲಾತ್ಕಾರಕ್ಕೆ ಮಣಿದು ಮುಸ್ಲಿಮ್ ಅಥವಾ ಕ್ರೈಸ್ತರಾಗಿ ಮತಾಂತರಗೊಂಡು ಪುನಃ  ಹಿಂದೂಗಳಾಗ ಬಯಸುವವರನ್ನು ಮಾತೃಧರ್ಮಕ್ಕೆ ಸೇರಿಸಿಕೊಳ್ಳುವ ವಿಧಿ-ಶುದ್ಧಿಗೆ ಆರ್ಯ ಸಮಾಜವು ಬಹಳ ಮಹತ್ವ ನೀಡಿತು.

ಆರ್ಯ ಸಮಾಜವು ಇನ್ನೂ ಎರಡು ವಿಶಿಷ್ಟ ಕಾರ್ಯಗಳನ್ನು ಕೈಗೊಂಡಿತು. ಅವು ಯಾವುವೆಂದರೆ ಕ್ಷಾಮ ಪರಿಹಾರದಂತಹ ಸಮಾಜ ಸೇವಾ ಕಾರ್ಯಗಳು ಮತ್ತು ಇಂಗ್ಲಿಷ್ ಶಿಕ್ಷಣದ ಪ್ರಸಾರ. ಲಾಹೋರಿನಲ್ಲಿ ಆರ್ಯ ಸಮಾಜವು ನಡೆಸುತ್ತಿದ್ದ “ದಯಾನಂದ ಆಂಗ್ಲೋ-ವೇದಿಕ್ ಸ್ಕೂಲ್” ಅನೇಕ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಯಿತು.

ಆಧುನಿಕ ಹಿಂದುವಿನಲ್ಲಿ ಹೊಸ ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸುವಲ್ಲಿ ದಯಾನಂದ ಸರಸ್ವತಿಯವರ ಕೊಡುಗೆ ಅಮೋಘವಾದುದು. ಆ ಕಾಲದಲ್ಲಿ ದಯಾನಂದರು ಅನೇಕ ಸಾಮಾಜಿಕ ದೌರ್ಬಲ್ಯಗಳನ್ನು ಕಿತ್ತುಹಾಕುವ ಪ್ರಯತ್ನ ಮಾಡಿದ್ದಲ್ಲದೆ ವೇದೋಕ್ತ ಆಧಾರವುಳ್ಳ ಒಂದು ವ್ಯವಸ್ಥೆಯನ್ನು ಸ್ಥಾಪಿಸುವ ಪ್ರಯತ್ನ ಮಾಡಿದರು. ಭಾರತೀಯರು ಪರಿಶುದ್ಧ ಧರ್ಮ ಅಥವಾ ಆದರ್ಶ ಸಮಾಜದ ವ್ಯವಸ್ಥೆಗಾಗಿ ಯೂರೋಪಿನ ಕಡೆ ನೋಡುವ ಅಗತ್ಯವಿಲ್ಲವೆಂದು ಅವರು ವಾದಿಸಿದರು.

ರಾಮಕೃಷ್ಣ ಮಿಷನ್: ಸ್ವಾಮಿ ವಿವೇಕಾನಂದ

ಶ್ರೀ ರಾಮಕೃಷ್ಣ (೧೮೩೬೧೮೮೬): ಭಾರತೀಯ ಪುನರುತ್ಥಾನಕ್ಕೆ ಕಾರಣರಾದ ಇಬ್ಬರು ಮಹಾಪುರುಷರೆಂದರೆ ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಶಿಷ್ಯೋತ್ತಮ ಸ್ವಾಮಿ ವಿವೇಕಾನಂದರು. ಬಹಳ ಚಿಕ್ಕವರಿದ್ದಾಗಲೇ ಶ್ರೀ ರಾಮಕೃಷ್ಣರ ಮನಸ್ಸು ದಿವ್ಯೋನ್ಮಾನದ ಸ್ಥಿತಿ ತಲುಪಿ ಎಲ್ಲರಿಗೂ ಆಶ್ಚರ್ಯವನ್ನುಂಟುಮಾಡುತ್ತಿತ್ತು. ಒಂದು ಕೈಯಲ್ಲಿ ಹಣವನ್ನೂ ಇನ್ನೊಂದು ಕೈಯಲ್ಲಿ ಮಣ್ಣಹೆಂಟೆಯನ್ನೂ ಹಿಡಿದುಕೊಂಡು “ಹಣವೆಂದರೆ ಮಣ್ಣು, ಮಣ್ಣೆಂದರೆ ಹಣ” ಎಂದು ಹೇಳುತ್ತಿದ್ದರು. ಕೊನೆಗೆ ಜನರು ಅವರನ್ನು ಹುಚ್ಚರೆಂದೇ ಬಗೆದರು. ಅವರ ಮಡದಿ ಶಾರದಾಮಣಿ ಗಂಡನಿಗೆ ತಕ್ಕ ಹೆಂಡತಿಯಾಗಿದ್ದಳು. ತನಗೇನೂ ಬೇಕಾಗಿಲ್ಲ. ಆದರೆ ದೇವರನ್ನು ಸಾಕ್ಷಾತ್ಕರಿಸುವುದು ಹೇಗೆಂಬುದನ್ನು ತನಗೆ ಕಲಿಸಬೇಕು ಎಂದು ಗಂಡನಲ್ಲಿ ಪ್ರಾರ್ಥಿಸಿಕೊಂಡಳು. ಶ್ರೀ ರಾಮಕೃಷ್ಣರು ಹನ್ನೆರಡೂ ವರ್ಷಗಳ ಕಾಲ ಬೇರೆ ಬೇರೆ ಧಾರ್ಮಿಕ ಸಾಧನೆಗಳಲ್ಲದೆ ಇಸ್ಲಾಂ, ಕ್ರೈಸ್ತ, ಸೂಫಿ ಇತ್ಯಾದಿ ಮಾರ್ಗಗಳನ್ನು ಅವರು ಪ್ರಯೋಗಿಸಿದರು. ಕೊನೆಗೆ ಅವರಿಗೆ :ಆತ್ಮಜ್ಞಾನ” ಪ್ರಾಪ್ತವಾಯಿತು.

ಪರಮಜ್ಞಾನವನ್ನು ಅಥವಾ ಪರಮಸತ್ಯವನ್ನು ಸರಳವಾದ ಮಾತುಗಳಲ್ಲಿ ಮತ್ತು ಕಥೆಗಳ ಉದಾಹರಣೆಗಳ ರೂಪದಲ್ಲಿ ತಿಳಿಯಪಡಿಸಿದ್ದು ಶ್ರೀ ರಾಮಕೃಷ್ಣರ ಬೋಧನೆಗಳ ಅಪೂರ್ವ ವೈಶಿಷ್ಟ್ಯ. ಭಗವಂತರ ಸಾಕ್ಷಾತ್ಕಾರವೇ ಮಾನವನ ಪರಮಧ್ಯೇಯ ಎಂಬುದು ಅವರ ಎಲ್ಲ ಪ್ರವಚನಗಳಲ್ಲಿ ಪ್ರಕಟವಾದ ವಿಷಯ. ಎಲ್ಲ ಮತಗಳೂ ಸಾಮರಸ್ಯವನ್ನೇ ಪ್ರತಿಪಾದಿಸುತ್ತವೆ. ದೇವನೊಬ್ಬ ನಾಮ ಹಲವು.

ಮುಂದೆ ಖ್ಯಾತನಾಮರಾದ ಅನೇಕ ವ್ಯಕ್ತಿಗಳು ಶ್ರೀ ರಾಮಕೃಷ್ಣ ಪರಮಹಂಸ ದರ್ಶನ ಮಾಡಿದರು. ಬ್ರಹ್ಮ ಸಮಾಜದ ಪ್ರಖ್ಯಾತ ನಾಯಕ ಕೇಶವಚಂದ್ರ ಸೇನರೂ ಶ್ರೀ ರಾಮಕೃಷ್ಣರನ್ನು ಭೇಟಿ ಮಾಡಿ ಅವರ ಅಭಿಮಾನಿಯಾದರು. ನರೇಂದ್ರನಾಥ ದತ್ತ ಎಂಬ ಪದವೀಧರ ತರುಣ ಆಗಾಗ ಅವರ ಭೇಟಿಗೆ ಬರುತ್ತಿದ್ದ. ಮುಂದೆ ಈ ನರೇಂದ್ರನಾಥನೇ ಸ್ವಾಮಿ ವಿವೇಕಾನಂದರೆಂದು ಖ್ಯಾತನಾದನು. ಶ್ರೀ ರಾಮಕೃಷ್ಣರು ತಾವು ಸಮಾಧಿಯಾಗುವುದಕ್ಕಿಂತ ಸ್ವಲ್ಪವೇ ಮೊದಲು ತಮ್ಮ ಎಲ್ಲ ಆಧ್ಯಾತ್ಮಿಕ ಶಕ್ತಿಗಳನ್ನು ವಿವೇಕಾನಂದರಿಗೆ ಧಾರೆ ಎರೆದರು.

ಸ್ವಾಮಿ ವಿವೇಕಾನಂದ: ಸ್ವಾಮಿ ವಿವೇಕಾನಂದರು  (೧೮೯೩-೧೯೦೨) ತಮ್ಮ ಗುರುವಿನ ಸಂದೇಶವನ್ನು ಭಾರತಾದ್ಯಂತ ಮಾತ್ರವಲ್ಲದೆ ಯೂರೋಪ್ ಮತ್ತು ಅಮೇರಿಕದಲ್ಲಿಯೂ ಹರಡಿದರು. ಇವರು ಶಾಲೆ ಮತ್ತು ಕಾಲೇಜುಗಳಲ್ಲಿ ಇಂಗ್ಲಿಷ್ ಶಿಕ್ಷಣ ಪಡೆದಿದ್ದರು.

ದೇಶದ ಉತ್ತರ, ಪಶ್ಚಿಮ ಹಾಗೂ ದಕ್ಷಿಣ ಭಾಗದಲ್ಲಿ ಯಾತ್ರೆ ಮಾಡಿದ ಇವರು ಭಾರತದ ನಿಜವಾದ ಪರಿಸ್ಥಿತಿಯನ್ನು ಅರಿತುಕೊಂಡರು. ಪ್ರಾಚೀನ ಕಾಲದಲ್ಲಿ ಜಗತ್ತಿನಲ್ಲೇ ಅತ್ಯಂತ ವೈಭವಸಂಪನ್ನವಾಗಿದ್ದು ಐಹಿಕ, ಆಯುಷ್ಮಿಕ ಎರಡು ದೃಷ್ಟಿಗಳಿಂದಲೂ ಗುರುಸ್ಥಾನದಲ್ಲಿದ್ದ ಭಾರತವ್‌ಉ ಪತನಗೊಂಡು, ನಿಸ್ತೇಜನವಾಗಿರುವುದನ್ನು  ನೋಡಿ ಅವರಿಗೆ ಅತೀವ ಮರುಕವುಂಟಾಯಿತು. ಭಾರತದ ಬದುಕಿನ ಜೀವನಾಡಿಯೆಂದರೆ ಧರ್ಮ. ಅದು  ಪೂರ್ಣವಾಗಿ ಅಳಿಯದೆ ಉಳಿದಿದ್ದುದೊಂದೇ ಅವರಿಗೆ ಸಮಾಧಾನದ ಅಂಶವಾಗಿತ್ತು. ಈ ಪರಿಸ್ಥಿತಿಯನ್ನು ಹೇಗೆ ಜಯಿಸಲಿ ಎಂಬ ಪ್ರಶ್ನೆ ಅಂದಿನಿಂದ ಕೊನೆಯವರೆಗೂ ವಿವೇಕಾನಂದರನ್ನು ಕಾಡುತ್ತಲೇ ಇತ್ತು.

ಕೊಲಂಬಸ್‌ನ ಅಮೆರಿಕಾ ಅನ್ವೇಷಣೆಯ ೪೦೦ನೆಯ ವರ್ಧಂತಿಯ ಸಂದರ್ಭದಲ್ಲಿ ಅಮೇರಿಕಾದ ಶಿಕಾಗೋ ನಗರದಲ್ಲಿ ವಿಶ್ವಧರ್ಮ ಸಮ್ಮೇಳನವು ನಡೆಯಲಿದೆಯೆಂಬುದು ವಿವೇಕಾನಂದರಿಗೆ ತಿಳಿಯಿತು. ಕೈಯಲ್ಲಿ ಕಾಸಿಲ್ಲದಿದ್ದರೂ ಹೇಗೋ ಏಕಾಂಗಿಯಾಗಿ ಸಂಪೂರ್ಣ ಅಪರಿಚಿತವಾದ ನಾಡಿಗೆ ತಲುಪಿಯೇ ಬಿಟ್ಟರು. ೧೮೯೩ರಲ್ಲಿ ಸಮಾವೇಶಗೊಂಡ ಜಾಗತಿಕ ಧರ್ಮಸಮ್ಮೇಳನಕ್ಕೆ ಹಿಂಧೂಧರ್ಮದ ಪ್ರತಿನಿಧಿಯಾಗಿ ಪ್ರವೇಶಗಳಿಸಿಕೊಂಡ ಅವರ ಸಾಧನೆ ಒಂದು ರಮ್ಯವಾದ ಕಥೆ. ವಿವೇಕಾನಂದರು ಅಲ್ಲಲಿ ಮಾಡಿದ ಭಾಷಣ “ಶಿಕಾಗೋ ಉಪನ್ಯಾಸ” ಎಂದು ಇತಿಹಾಸ ಪ್ರಸಿದ್ಧವಾಗಿದೆ. ಅವರಿಗೆ ಅಪರಿಚಿತರಾಗಿ, ಅನಾಮಧೇಯರಾಗಿ, ಸಾಮಾನ್ಯ ವ್ಯಕ್ತಿಯಂತೆ ತಿರುಗಾಡುತ್ತಿದ್ದ ವಿವೇಕಾನಂದರು ಒಮ್ಮಗೇ ಜಗದ್ವಿಖ್ಯಾತ ಪುರುಷರಾದರು. ಜಗತ್ತಿನ ಎದುರು ಭಾರತದ ಮತ್ತು ಹಿಂದೂಧರ್ಮದ ಗೌರವ ಮುಗಿಲೆತ್ತರಕ್ಕೇರಿತು.

ವಿವೇಕಾನಂದರ ಕಾರ್ಯ ಮತ್ತು ಕೊಡುಗೆ

ಪಶ್ಚಿಮದಲ್ಲಿ ಹಿಂದೂಧರ್ಮದ ಕೀರ್ತಿ ಪತಾಕೆಯನ್ನು ಹಾರಿಸಿದ  ಬಳಿಕ ೧೮೯೭ರಲ್ಲಿ ಸ್ವಾಮಿ ವಿವೇಕಾನಂದರು ಭಾರತಕ್ಕೆ ಮರಳಿ ಬಂದರು. ಕನ್ಯಾಕುಮಾರಿಯಿಂದ ಹಿಮಾಲಯದ ವರೆಗೆ ಭಾರತದ ಎಲ್ಲೆಡೆಗೂ ಅವರಿಗೆ ಅತ್ಯಂತ ಗೌರವ, ಸ್ವಾಗತ ದೊರಕಿತು. ತಾವು ಭಾರತದ ಜನರಿಗಾಗಿ ಮಾಡಬೇಕಾದ ಕಾರ್ಯಗಳೇನೆಂದು ಅವರಿಗೆ ಅರಿವಾಗತೊಡಗಿತು. ಜನಸಾಮಾನ್ಯರ ದಾರಿದ್ಯ್ರ ಮತ್ತು ಅಜ್ಞಾನವನ್ನು ತೊಲಗಿಸಬೇಕು; ಪಾಶ್ಚಾತ್ಯ ಸಮಾಜದಲ್ಲಿ ಕಂಡುಬರುವ ಸಮಾನತೆ, ಸ್ವಾತಂತ್ರ್ಯ, ಕಾಯಕ ಮತ್ತು ಕೆ‌ಚ್ಚು ಈ ಭಾವನೆಗಳನ್ನು ಭಾರತೀಯರಲ್ಲಿ ಪ್ರಚೋದಿಸಿ ದೇಶವನ್ನು ಶಕ್ತಿಶಾಲಿಯಾಗಿ ಮಾಡಬೇಕು – ಇವೇ ತಾವು ಮಾಡಬೇಕಾದ ಅನಿವಾರ್ಯ ಕೆಲಸಗಳು ಎಂದು ನಿರ್ಧರಿಸಿದರು. ಆದರೆ ಇವನ್ನು ಮಾಡುವಾಗ ಹಿಂದುಗಳ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕು. ಮಹಿಳೆಯರ ಮತ್ತು ಜನಸಾಮಾನ್ಯರ ಸ್ಥಾನಮಾನವನ್ನು ಹೆಚ್ಚಿಸಬೇಕು. ಈವರೆಗೆ ಸ್ತ್ರೀ ಮತ್ತು ಜನಸಾಮಾನ್ಯರನ್ನು ದಮನ ಮಾಡಿದ್ದೇ ಭಾರತದ ಅಧಃಪತನಕ್ಕೆ ಕಾರಣವೆಂದು ಅವರು ಎಚ್ಚರಿಕೆ ನೀಡಿದರು.

ವಿವೇಕಾನಂದರು ಮತ್ತಿತರ ಸನ್ಯಾಸಿಗಳು  ಶ್ರೀ ರಾಮಕೃಷ್ಣ ಮಠವನ್ನು ಸ್ಥಾಪಿಸಿದರು. ಪ್ರಾರಂಭದಲ್ಲಿ ಅದು ಕಲ್ಕತ್ತದ ಬಾಡಿಗೆ ಮನೆಯೊಂದರಲ್ಲಿತ್ತು. ೧೮೯೯ರಲ್ಲಿ ಅದನ್ನು ಬೇಲೂರಿಗೆ ಸ್ಥಳಾಂತರಿಸಲಾಯಿತು. ಮಠದ ಸನ್ಯಾಸಿಗಳಿಗೆ ಕಟ್ಟುನಿಟ್ಟಿನ ಆಚಾರಗಳನ್ನು ವಿಧಿಸಲಾಯಿತು. ಇಂಗ್ಲಿಷಿನಲ್ಲಿ “ಪ್ರಭುದ್ಧ ಭಾರತ” ಮತ್ತು ಬಂಗಾಳಿಯಲ್ಲಿ  “ಉದ್ಭೋದನಾ” ಎಂಬ ಎರಡು ಮಾಸ ಪತ್ರಿಕೆಗಳನ್ನು ಪ್ರಾರಂಭಿಸಲಾಯಿತು. ವಿವೇಕಾನಂದರು ದೇಶಾದ್ಯಂತ ವಿಸ್ತೃತವಾದ ಪ್ರವಾಸ ಮಾಡಿ ಉಪನ್ಯಾಸಗಳನ್ನು ಮಾಡಿದರು.

ಸನ್ಯಾಸ ಜೀವನಕ್ಕೆ ಸಮಾಜ ಸೇವೆಯ ಹೊಸ ಆಯಾಮಗಳನ್ನು ನೀಡಿದವರು ಸ್ವಾಮಿ ವಿವೇಕಾನಂದರು. “ದರಿದ್ರರು, ಅಜ್ಞಾನಿಗಳು, ಅನಕ್ಷರಸ್ಥರು, ರೋಗಿಗಳು- ಇವರೇ ನಿಮ್ಮ ದೇವರಾಗಲಿ. ಇವರ ಸೇವೆ ಮಾಡುವುದೇ ಸರ್ವಶ್ರೇಷ್ಠ ಧರ್ಮವೆಂದು ತಿಳಿಯಿರಿ” ಎಂದು ಸ್ವಾಮೀಜಿ ಕರೆ ನೀಡಿದರು. “ನೀವು ನಿಮ್ಮ ಸ್ವಧರ್ಮ ಪಾಲಿಸಿರಿ, ಇದೇ ಸತ್ಯ. ಎಲ್ಲ ಸತ್ಯಗಳ ಸತ್ಯ ಇದು. ನನ್ನ ಪ್ರಿಯ ಧರ್ಮಬಾಂಧವರೇ, ಇದೇ ನಿಮಗೆ ನನ್ನ ಉಪದೇಶ. ಇತರರಿಗೆ ಕೇಡು ಬಗೆಯಬೇಡಿ, ಇತರರ  ತಲೆಯ ಮೇಲೆ ಕಾಲು ಇಡಬೇಡಿ, ನಿಮ್ಮ ಕೈಲಾದಷ್ಟು ಇತರರಿಗೆ ಹಿತವನ್ನೇ ಮಾಡಿರಿ, ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳಲ್ಲಿ ತೊಡಗಿರಿ. ಶಕ್ತಿಯೇ ಜೀವನ, ದುರ್ಬಲತೆಯೇ ಮರಣ. ಶಕ್ತಿಯೇ ಪರಮಾನಂದ, ಅನಂತ ಜೀವನ, ಅಮೃತತ್ವ, ನಿರ್ದಿಷ್ಟವಾದ ಶಕ್ತಿದಾಯಕ ಉತ್ತೇಜನಕಾರಿ ಮಹದಾಲೋಚನೆಗಳು ಬಾಲ್ಯದಿಂದಲೂ ನಿಮ್ಮ ಮೆದುಳನ್ನು ಪ್ರವೇಶಿಸಲಿ” ಎಂದು ವಿವೇಕಾನಂದರು ಉಪದೇಶಿಸಿದರು.