೧೭

ಉತ್ತರ ಭಾರತದಲ್ಲಿ ಮಹಮದ್ ಘೋರಿಯ ಮರಣಾನಂತರ ಕುತುಬಿದ್ದೀನ್ ಸ್ವತಂತ್ರವಾಗಿ ಮೆಮಲುಕ್ ಸಂತತಿಯನ್ನು ಸ್ಥಾಪಿಸಿ ದೆಹಲಿ ಸುಲ್ತಾನರ ಆಳ್ವಿಕೆಯನ್ನು ಪ್ರಾರಂಭಿಸಿದನು. ದೆಹಲಿ ಮತ್ತು ಲಾಹೋರಿನಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡು, ಕುಲೀನರನ್ನು ತನ್ನ ಅಧೀನಕ್ಕೊಳಪಡಿಸಿ, ತನ್ನ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಕಾರ್ಯತತ್ಪರನಾಗಿದ್ದನು. ಆತನು ಕೇವಲ ನಾಲ್ಕು ವರ್ಷಗಳವರೆಗೆ ಮಾತ್ರ ಆಳಿದ್ದರಿಂದ ಆಡಳಿತ ವ್ಯವಸ್ಥೆಯ ಕಡೆಗೆ ಗಮನ ಹರಿಸಲಾಗಲಿಲ್ಲ. ಕುತುಬುದ್ದೀನ್ ಅಜ್ಮೀರದಲ್ಲಿ ಧಾಯ್ ದಿನ್ ಕಾ ಜೋನ್  ಪಾರ ಮತ್ತು ದೆಹಲಿಯಲ್ಲಿ ಕುವತ್ -ಉಲ್-ಇಸ್ಲಾಂ ಮಸೀದಿಗಳನ್ನು ನಿರ್ಮಿಸಿ ಕುತುಬ್ ಮಿನಾರ್ ಕಟ್ಟಡಗಳನ್ನು ಪ್ರಾರಂಭಿಸಿದನು.

ಕುತುಬುದ್ದೀನ್  ೧೨೦೬ರಲ್ಲಿ ಮರಣಹೊಂದಿದ ಮೇಲೆ ಆರಂಶಾನ ಎಂಟು ತಿಂಗಳ ಆಳ್ವಿಕೆಯ ನಂತರ ಇಲ್‌ತೂಲ್ತುಮಿಶ್‌ (೧೨೧೧-೧೨೩೬) ಸರ್ಕಾರದ ಸೂತ್ರವನ್ನು  ವಹಿಸಿಕೊಂಡನು. ಆತನನ್ನು ದೆಹಲಿ ಸುಲ್ತಾನ ರಾಜ್ಯದ ನಿಜವಾದ ಸ್ಥಾಪಕನೆಂದು ಪರಿಗಣಿಸಲಾಗಿದೆ. ರಾಜ್ಯಕ್ಕೆ ಒಂದು ರಾಜಧಾನಿ, ಸಾರ್ವಭೌಮ್ಯರಾಜ್ಯ, ರಾಜಸತ್ತೆಯ  ಸರ್ಕಾರ, ತುಕಾನ್‌ಇ-ಚಹಲ್‌ಗನಿ ಅಥವಾ ಚಲಿಸ ಎಂಬ ಅಧಿಕಾರ ವರ್ಗ ಅಥವಾ ಕುಲೀನರ ವರ್ಗವನ್ನು  ಸ್ಥಾಪಿಸಿದನು. ಆತನು ಚಲಾವಣೆಗೆ ತಂದ ಬೆಳ್ಳಿಯ ಟಂಕ ಮತ್ತು ತಾಮ್ರದ ಜಿಟಿಲ್ ಸುಲ್ತಾನ ವಂಶದ ಮೂಲನಾಣ್ಯಗಳಾಗಿ ಉಳಿದವು. ‘ಸುಲ್ತಾನ್‌’ ಎಂಬ ಅಧಿಕಾರನಾಮವನ್ನು ಧರಿಸಿದವರಲ್ಲಿ ಆತ ಮೊದಲಿಗ. ಮಂಗೋಲರ ದಾಳಿಯಿಂದ ರಾಜ್ಯವನ್ನು ರಕ್ಷಿಸಿ, ವಿಸ್ತರಣಾನೀತಿಯನ್ನು ಅನುಸರಿಸಿ ಬಂಗಾಳ ಮತ್ತು ರಜಪೂತ ರಾಜರನ್ನು ಸೋಲಿಸಿದನು. ಕುತುಬ್ ಮಿನಾರ್ ಪೂರ್ಣಗೊಳಿಸಿದನು.

ಇಲ್‌ತೂಲ್ತುಮಿಶ್‌ ನಂತರ ರೆಜಿಯ ಸುಲ್ತಾನ ಸೇರಿದಂತೆ ನಾಲ್ವರು ಆಳಿದ ಮೇಲೆ ನಾಸಿರ್‌ ಉದ್ದೀನ್‌ ಮಹಮದ್‌ ಷಾ ಸಿಂಹಾಸನಕ್ಕೆ ಬಂದನು.  ಆತನ ಆಳ್ವಿಕೆಯಲ್ಲಿ ಕುಲೀನವರ್ಗದಲ್ಲಿ ಒಬ್ಬನಾದ ಬಲ್ಪನ್ ತನ್ನ ಮಗಳನ್ನು ಆತನಿಗೆ ಕೊಟ್ಟು ವಿಹಾಹ ಮಾಡಿ, ಸುಲ್ತಾನನ ಪ್ರತಿನಿಧಿಯಾಗಿ ನೇಮಕಗೊಂಡು ಆಡಳಿತ ಸೂತ್ರವನ್ನು ತನ್ನ ಕೈಗೆ ತೆಗೆದುಕೊಂಡನು. ನಾಸಿರುದ್ದೀನನ ಮರಣಾನಂತರ ಬಲ್ಬನ್ ಆಳ್ವಿಕೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತಿದ್ದ ಕುಲೀನವರ್ಗವನ್ನು ನಿರ್ನಾಮ ಮಾಡಿ ಸಿಂಹಾಸನವನ್ನು ಆಕ್ರಮಿಸಿಕೊಂಡನು.

ಗಯಾಸುದ್ದೀನ್ ಬಲ್ಬನ್ (೧೨೬೫-೧೨೮೭) ರಾಜ್ಯದ ವಿಸ್ತರಣೆಗಿಂತ ಸಂಘಟನೆಗೆ ಪ್ರಾಮುಖ್ಯತೆ ನೀಡಿದನು. ಮಂಗೋಲರ ದಾಳಿಯನ್ನು ತಡೆಗಟ್ಟಲು ಸರಹದ್ದುಗಳಲ್ಲಿ ರಾಜ್ಯಗಳನ್ನು ನಿರ್ಮಿಸಿದನು. ಸೈನ್ಯವನ್ನು ಸಜ್ಜುಗೊಳಿಸಿ, ಗುಪ್ತಚಾರ ದಳವನ್ನು ಅಭಿವೃದ್ಧಿಗೊಳಿಸಿದನು. ರಾಜನು ಭೂಲೋಕದಲ್ಲಿನ ದೇವರ ಪ್ರತಿನಿಧಿ ಎಂಬ ಸಿದ್ದಾಂತವನ್ನು ಜನಪ್ರಿಯಗೊಳಿಸುವ ಯತ್ನವನ್ನು ಮಾಡಿದನಲ್ಲದೆ ಸುಲ್ತಾನನು ಅಲ್ಲಾನಿಗೆ ಮಾತ್ರ ಜವಾಬ್ದಾರನೆಂದು ಘೋಷಿಸಿದನು. ರಾಜ್ಯದಲ್ಲಿನ ದಂಗೆಗಳನ್ನು ಹತ್ತಿಕ್ಕಿ, ಬಂಗಾಳವನ್ನು ಗೆದ್ದುಕೊಂಡು, ತನ್ನ ಮಗ ಬುಘ್ರಾಖಾನನನ್ನು ಪ್ರಾಂತಾಧಿಕಾರಿಯಾಗಿ ನೇಮಿಸಿದನು. ಮಂಗೋಲರ ದಾಳಿಯಲ್ಲಿ ಮರಣ ಹೊಂದಿದ ಹಿರಿಯ ಮಗನ ದುಃಖವನ್ನು  ಭರಿಸಲಾಗದೆ ಸತ್ತುಹೋದನು.

ಬಲ್ಬನ್ ನಂತರ ಭುಗಿಲೆದ್ದ ರಾಜಕೀಯ ಕ್ಷೋಭೆಯ ಲಾಭಪಡೆದು ಜಲಾಲುದ್ದೀನ್ ಖಿಲ್ಜಿ ಮನೆತನದ ಆಳ್ವಿಕೆಯನ್ನು ಸ್ಥಾಪಿಸಿದನು. ಇದು ಕೇವಲ ರಾಜಮನೆತನದ ಬದಲಾಣೆಯಾಗಿರದೆ ಅದು ಖಿಲ್ಜಿಯವರ ಕ್ರಾಂತಿಯೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಏಕೆಂದರೆ ಈ ಸಂತತಿಯವರು ಜನಾಂಗೀಯ ನಿರಂಕುಶ ಪ್ರಭುತ್ವವನ್ನು ಕೊನೆಗಾಣಿಸಿ ಶ್ರೇಷ್ಠ ಮಟ್ಟದ ಸಾಮ್ರಾಜ್ಯಶಾಹಿತ್ವವನ್ನು ಆರಂಭಿಸಿದರು. ಈ ವಂಶದ ಪ್ರಖ್ಯಾತ ಸುಲ್ತಾನ ಅಲ್ಲಾವುದ್ಧೀನ್ ಖಿಲ್ಜಿ (೧೨೬೯-೧೩೧೬). ಅಲ್ಲಾವುದ್ದೀನ್ ತನ್ನ ಚಿಕ್ಕಪ್ಪ ಹಾಗೂ ಮಾವನಾದ ಜಲಾಲುದ್ದೀನನನ್ನು ಮೋಸದಿಂದ ಕೊಂದು ಸಿಂಹಾಸನವನ್ನು ಆಕ್ರಮಿಸಿದನು. ಆತನು  ಸಾಮ್ರಾಜ್ಯದ ರಕ್ಷಣೆ, ವಿಸ್ತರಣೆ ಮತ್ತು ಸಂಘಟನೆಯಲ್ಲಿ ನಂಬಿದ್ದನು. ಕಾರ ಮತ್ತು ಮಣಿಕ್‌ಪುರದ ಪ್ರಾಂತಾಧಿಕಾರಿಯಾಗಿದ್ದಾಗಲೇ ದೇವಗಿರಿಯ ಮೇಲೆ ದಂಡೆತ್ತಿ ಹೋಗಿ ಸೂರೆ ಮಾಡಿದ್ದನು. ಸುಲ್ತಾನನಾದ ಮೇಲೆ ಗುಜರಾತ್‌, ಜೈಸಲ್‌ಮೇರ್, ರಾಣತಂಬೂರು, ಬಂಗಾಳ, ಚಿತ್ತೂರು, ಮಾಳ್ವ, ಸಿವಾನ ಮತ್ತು ಜಲೂರ್ ರಾಜ್ಯಗಳನ್ನು ವಶಪಡಿಸಿಕೊಂಡನು. ಆತನ ಸೇನಾಪತಿ ಮಲ್ಲಿಕಾಫರ್ ೧೩೦೭ ಮತ್ತು ೧೩೧೭ರಲ್ಲಿ ದಖನ್‌ದಂಡಯಾತ್ರೆ ಕೈಗೊಂಡು ದೇವಗಿರಿ, ತೆಲಾಂಗಣ, ದ್ವಾರಸಮುದ್ರ ಮತ್ತು ಪಾಂಡ್ಯ ರಾಜರುಗಳನ್ನು ಸೋಲಿಸಿದನು. ಈ ವಿಜಯಗಳಿಂದ ಆತನ ಸಾಮ್ರಾಜ್ಯವು ವಿಶಾಲಗೊಂಡಿತು.

ರಾಜ್ಯದಲ್ಲಿನ ಸಣ್ಣಪುಟ್ಟ ದಂಗೆಗಳಿಗೆ ಕುಲೀನರೇ ಕಾರಣರೆಂದು ಅರಿತ ಅಲ್ಲಾವುದ್ದೀನ್ ಅವರು ಅನುಭೋಗಿಸುತ್ತಿದ್ದ ಇನಾಮುಗಳನ್ನು ವಾಪಸ್ಸು ಪಡೆದನು. ಮಂಗೋಲರ ದಾಳಿಯನ್ನು  ಹತ್ತಿಕ್ಕುವ ಸಲುವಾಗಿ ದೊಡ್ಡ ಸೈನ್ಯವನ್ನು ಕಟ್ಟಿದನು. ಸೈನಿಕರಿಗೆ ಅವಶ್ಯಕವಾದ ವಸ್ತುಗಳು ಸುಲಭ ಬೆಲೆಯಲ್ಲಿ ದೊರಕುವಂತೆ ಮಾಡಲು ಮಾರುಕಟ್ಟೆ ನಿಯಂತ್ರಣವನ್ನು ಜಾರಿಗೆ ತಂದನು. ಇವು ಆರ್ಥಕ ನೀತಿಯಿಂದ ಪ್ರೇರಿತವಾಗಿರಲಿಲ್ಲ. ಈ ನಿಯಂತ್ರಣ ದೆಹಲಿಗೆ ಮಾತ್ರ ಸೀಮಿತವಾಗಿತ್ತು. ಅಮೀರ್ ಖುಸ್ರು ಮತ್ತು ಅಮೀರ್ ಹಸನ್ ಆತನ ಆಸ್ಥಾನದಲ್ಲಿದ್ದರು. ದೆಹಲಿಯಲ್ಲಿ ಅಲೈ ದರ್ವಾಜವನ್ನು ಕಟ್ಟಿಸಿದನು. ಅಲ್ಲಾವುದ್ದೀನನ ಮರಣಾನಂತರ ಖಿಲ್ಜಿವಂಶ ಕೇವಲ ನಾಲ್ಕು ವರ್ಷಗಳು ಅಸ್ತಿತ್ವದಲ್ಲಿತ್ತು. ಘಿಯಾಸುದ್ದೀನನು ಅವರ ಆಳ್ವಿಕೆಯನ್ನು ಅಂತ್ಯಗೊಳಿಸಿ ತೊಘಲಕ್‌ವಂಶವನ್ನು ಸ್ಥಾಪಿಸಿದನು.

ಘಿಯಾಸುದ್ದೀನನು ಜಾಗೀರುಗಳನ್ನು ಕುಲೀನರಿಗೆ ಮರಳಿಸಿ ಅವರ ಒಲವನ್ನು ಸಂಪಾದಿಸಿದನು. ರಾಜ್ಯದ ಆರ್ಥಿಕಸ್ಥಿತಿಯನ್ನು ಅಭಿವೃದ್ಧಿಪಡಿಸಲು ಕೃಷಿಯನ್ನು ಪ್ರೋತ್ಸಾಹಿಸಿ, ರೈತರ ರಕ್ಷಣೆಯತ್ತ ಗಮನ ಹರಿಸಿದನು. ರಸ್ತೆಗಳನ್ನು ರಿಪೇರಿ ಮಾಡಿ ಸಂಪರ್ಕ ಸಾಧನವನ್ನು ವ್ಯವಸ್ಥಿತಗೊಳಿಸದನಲ್ಲದೆ ಸೇತುವೆಗಳು ಮತ್ತು ಕಾಲುವೆಗಳನ್ನು ನಿರ್ಮಿಸಿದನು. ಅಂಚೆ ವ್ಯವಸ್ಥೆಯನ್ನು ಉತ್ತಮಗೊಳಿಸಿದನು. ಆಂತರಿಕ ದಂಗೆಗಳನ್ನು ಅಡಗಿಸಿ, ದೇವಗಿರಿ ಮತ್ತು ಕಾಕತೀಯರನ್ನು ಸೋಲಿಸಿ, ದೇವಗಿರಿ ಹಾಗೂ ತೆಲಂಗಾಣವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಓರಂಗಲ್ ಸುಲ್ತಾನಪುರ ಎಂಬ ಹೆಸರನ್ನು ಪಡೆಯಿತು. ಘಿಯಾಸುದ್ದೀನನನ್ನು ಕೊಂದು ಮಹಮದ್‌ ಬಿನ್‌ ತೊಘಲಕ್‌ ಸಿಂಹಾಸನವನ್ನೇರಿದನು. ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಆತನು ಆಕರ್ಷಕ ವ್ಯಕ್ತಿಯಾಗಿದ್ದಾನೆ. ಧಾರ್ಮಿಕ ವ್ಯವಹಾರಗಳಲ್ಲಿ ಧಾರಾಳವಾಗಿ ವರ್ತಿಸುತ್ತಿದ್ದನು. ದೂರ ದೇಶಗಳಾದ ಚೀನಾ, ಇರಾನ್‌ ಮತ್ತು ಈಜಿಪ್ಟ್‌ನೊಂದಿಗೆ ರಾಯಭಾರಿ ವರ್ಗದ ಸಂಬಂಧಗಳನ್ನು ಬೆಳೆಸಿದನು. ವರ್ಗ ಮತ್ತು ಜನಾಂಗ ವ್ಯತ್ಯಾಸಗಳನ್ನು ಕಡೆಗಣಿಸಿ ಅರ್ಹತೆಯ ಆಧಾರದ ಮೇಲೆ ಅಧಿಕಾರಿಗಳನ್ನು ನಿಷ್ಕೃಷ್ಟವಾಗಿ ನೇಮಕ ಮಾಡುತ್ತಿದ್ದನು. ರಾಜಧಾನಿಯನ್ನು ದೆಹಲಿಯಿಂದ ದೌಲತಾಬಾದ್‌ಗೆ ವರ್ಗಾಯಿಸಿದುದು, ವ್ಯವಸಾಯ ಇಲಾಖೆಯ ಸ್ಥಾಪನೆ, ಸಾಂಕೇತಿಕ ನಾಣ್ಯ ಚಲಾಚಣೆ ಮೊದಲಾದ ಸುಧಾರಣೆಗಳು ಯಶಸ್ವಿಯಾಗಿ ಕಾರ್ಯಗತವಾಗಲಿಲ್ಲ. ಆದರೆ ಅವನು ದಕ್ಷಿಣ ಭಾರತದ ಬಹುಭಾಗವನ್ನು ಗೆದ್ದುಕೊಂಡು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ನಾಗರಕೋಟ್‌ನ ವಿರುದ್ಧದ ಯುದ್ಧಗಳಲ್ಲಿಯೂ ಯಶಸ್ವಿಯಾದನು. ಆದರೆ ಅವನ ಕರಜಾಲ್ ದಂಡೆಯಾತ್ರೆ ಹಾಗೂ ಖುರಸಾನ್ ಮತ್ತು ಇರಾಕನ್ನು ಆಕ್ರಮಿಸುವ ಯೋಜನೆಗಳು ವಿಫಲಗೊಂಡವು.

ಮುಂದಿನ ಸುಲ್ತಾನ ಫಿರೊಜ್ ಷಾ (೧೩೫೧-೧೩೮೮) ರಾಜ್ಯವನ್ನು ರಕ್ಷಿಸುವ, ಪ್ರಜೆಗಳ ದೃಢವಿಶ್ವಾಸವನ್ನು ಗಳಿಸುವ ಹಾಗೂ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುವತ್ತ ತನ್ನ ಗಮನವನ್ನು ಹರಿಸಿದನು. ಖರಾಜ್, ಖಾಮ್ಸ್‌, ಜಸಿಯ ಮತ್ತು ಜಕತ್ ತೆರಿಗೆಗಳನ್ನು ಹೊರತುಪಡಿಸಿ ಇತರ ತೆರಿಗೆಗಳನ್ನು ವಜಾ ಮಾಡಿದನು. ನೀರಾವರಿ ಸೌಕರ್ಯಕ್ಕಾಗಿ ಐದು ಕಾಲುವೆಗಳನ್ನು ನಿರ್ಮಿಸಿದನು. ಫೆರಿಸ್ತಾನ ಪ್ರಕಾರ ಫಿರೋಜ್ ೫೦ ಅಣೆಕಟ್ಟುಗಳು, ೪೦ ಮಸೀದಿಗಳು, ೩೦ ಕಾಲೇಜುಗಳು, ೨೦ ಅರಮನೆಗಳು, ೧೦೦ ಅನ್ನಛತ್ರಗಳು, ೨೦೦ ನಗರಗಳು, ೩೦ ಜಲಾಶಯಗಳು, ೧೦೦  ಆಸ್ಪತ್ರೆಗಳು, ೫ ಸಮಾಧಿ ಭವನಗಳು, ೧೦೦ ಸಾರ್ವಜನಿಕ ಸ್ನಾನಗೃಹಗಳು, ೧೦ ಏಕಶಿಲಾಸ್ತಂಭಗಳು, ೧೦ ಸಾರ್ವಜನಿಕ ಭಾವಿಗಳು ಮತ್ತು ೧೫೦ ಸೇತುವೆಗಳನ್ನು ಕಟ್ಟಿಸಿದನು. ಖಿಜಿರಾಬಾದ ಮತ್ತು ಮೀರತ್‌ನಿಂದ ಅಶೋಕನ ಸ್ತಂಭಗಳನ್ನು ದೆಹಲಿಗೆ ತರಿಸಿ ಸ್ಥಾಪಿಸಿದನು. ಸಾರ್ವಜನಿಕ ಉಪಯೋಗಕ್ಕಾಗಿ ಹಲವಾರು ಕಾರ್ಯಗಳನ್ನು ಕೈಗೊಂಡನು. ಆದರೆ ಬಂಗಾಳ, ಜಾರ್ಜ್‌ನಗರ(ಒರಿಸ್ಸಾ) ನಾಗರಕೋಟ್ ಮತ್ತು ಸಿಂಧ್ ದಂಡಯಾತ್ರೆಗಳಲ್ಲಿ ಯಶಸ್ಸು ಗಳಿಸಲು ವಿಫಲನಾದನು.

ಫಿರೋಜ್‌ಷಾನ ಉತ್ತರಾಧಿಕಾರಿಗಳು ಅಸಮರ್ಥರಾಗಿದ್ದರು. ೧೩೯೮-೧೩೯೯ರಲ್ಲಿ ತೈಮೂರನು ದಂಡೆತ್ತಿ ಬಂದು ದೆಹಲಿಯನ್ನು ನಾಶಗೊಳಿಸಿದನು. ಕ್ರೂರಿಯಾದ ಆತನು ಅಸಂಖ್ಯಾತ ಜನರನ್ನು ಕೊಂದನಲ್ಲದೆ ಕಣ್ಣೆದುರಿಗೆ ಸಿಕ್ಕಿದ ಎಲ್ಲವನ್ನೂ ಧ್ವಂಸ ಮಾಡಿದನು. ವಾಪಾಸ್ಸಾಗುವ ಮುನ್ನ ಮುಲ್ತಾನ್, ಲಾಹೋರ್ ಮತ್ತು ದಿಪಾಲ್‌ಪುರಕ್ಕೆ ಪ್ರಾಂತಾಧಿಕಾರಿಯಾಗಿ ಖಿಜರ್ ಖಾನನನ್ನು ನೇಮಿಸಿದನು. ಆತನು ೧೪೧೪ರಲ್ಲಿ ಸಯ್ಯಿದ್ ವಂಶದ ಆಳ್ವಿಕೆಯಲ್ಲಿ ಪ್ರಾರಂಭಿಸಿದನು.

ಸೈಯ್ಯಿದ್ ಸಂತತಿಯ ಸುಲ್ತಾನರು ೧೪೧೪ರಿಂದ ೧೪೫೧ರವರೆಗೆ ಆಳಿದರು. ಅವರ ಅಸಮರ್ಪಕ ಆಳ್ವಿಕೆಯು ಮುಲ್ತಾವಿನ ಪ್ರಾಂತಾಧಿಕಾರಿ ಬಹುಲೂಲ್ ಲೂದಿಗೆ ಆಮಂತ್ರಣ ಕೊಟ್ಟಂತಾಯಿತು. ಆತನು ವಜೀರ್ ಹಮೀದ್ ಖಾನನ ನೆರವಿನಿಂದ ದೆಹಲಿ ಸಿಂಹಾಸನವನ್ನು ಆಕ್ರಮಿಸಿದನು.

ಲೂದಿ ಸಂತತಿಯು (೧೪೫೧-೧೫೨೬) ದೆಹಲಿ ಸುಲ್ತಾನ ರಾಜಸಂತತಿಯಲ್ಲಿ ಕೊನೆಯದು. ಬಹಲೂಲ್ ಲೂದಿಯ ಉತ್ತರಾಧಿಕಾರಿ ಸಿಕಂದರ್ ಷಾ ಲೂದಿ (೧೪೮೯-೧೫೧೩) ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ, ಸುಲ್ತಾನನ ಗೌರವವನ್ನು ಪುನರ್‌ಸ್ಥಾಪಿಸಿ ಲೂದಿ ಸುಲ್ತಾನರಲ್ಲಿ ಶ್ರೇಷ್ಠನೆಂದು ಪರಿಗಣಿಸಲ್ಪಟ್ಟಿದ್ದಾನೆ. ದೋಲ್‌ಪುರ, ಮಂದ್ರಯಿಲಂ, ಉತ್‌ಗೀರ್, ನಾರ‍್ವಾಡ, ನಾಗೂರು, ಬಿಹಾರಗಳನ್ನು ಗೆದ್ದುಕೊಂಡನು. ಗ್ವಾಲಿಯರ್ ರಾಜನನ್ನು ಸೋಲಿಸಿದರೂ ಆ ಪ್ರದೇಶವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಳ್ಳಲಾಗಲಿಲ್ಲ. ಆತನು ಸಮರ್ಥ ಆಡಳತಗಾರನಾಗಿದ್ದನು. ಸಿಕಂದರ್ ಲೂದಿಯ ಮರಣಾನಂತರ ಆತನ ಹಿರಿಯ ಮಗ ಇಬ್ರಾಹಿಂ ಲೂದಿ (೧೫೧೩-೧೫೨೬)ಸುಲ್ತಾನನಾದನು. ಆತನು ಗ್ವಾಲಿಯರ್ ರಾಜ ವಿಕ್ರಮಾಜಿತ್‌ನನ್ನು ಸೋಲಿಸಿ, ಆ ರಾಜ್ಯವನ್ನು ತನ್ನ ರಾಜ್ಯದಲ್ಲಿ ವಿಲೀನಗೊಳಿಸಿದನು. ಆದರೆ ಮೇವಾಡದ ರಾಣ ಸಂಗ್ರಾಮ ಸಂಗ್‌ನ ವಿರುದ್ಧದ ಯುದ್ಧದಲ್ಲಿ ವಿಫಲನಾದನು. ಇಬ್ರಾಹಿಂ ಸಂಶಯದ ಹಾಗೂ ಅಹಂಕಾರದ ವ್ಯಕ್ತಿಯಾಗಿದ್ದು ಅಫ್ಘಾನ್ ಕುಲೀನರಿಂದ ದ್ವೇಷಿಸಲ್ಪಡುತ್ತಿದ್ದನು. ಗುಜರಾತಿನ ಪ್ರಾಂತಾಧಿಕಾರಿ ಅಲಂಖಾನ್‌ಲೂದಿ ಮತ್ತು ಪಂಜಾಬಿನ ಪ್ರಾಂತಾಧಿಕಾರಿ ದೌಲತ್‌ಖಾನ್‌ಬಾಬರ್‌ಗೆ ಆಮಂತ್ರಣ ನೀಡಿದರು. ಬಾಬರನು ೧೫೨೬ರಲ್ಲಿ ಪಾಣಿಪಟ್‌ಕದನದಲ್ಲಿ ಇಬ್ರಾಂಹಿಂನನ್ನು ಸೋಲಿಸಿ ಮೊಗಲ್ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದನು. ಇದರೊಂದಿಗೆ ದೆಹಲಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು.

ದೆಹಲಿ ಸುಲ್ತಾನರು “ದೇವಪ್ರಭುತ್ವವನ್ನು” ಸ್ಥಾಪಿಸಿದರು. ಸುಲ್ತಾನನಿಗೆ ಖಲೀಪರ ಮನ್ನಣೆ ಅಗತ್ಯವಾಗಿತ್ತು. ಅಲ್ಲಾವುದ್ದೀನ್ ಖಿಲ್ಜಿ ಮತ್ತು ಮುಬಾರಕ್ ಷಾ ಹೊರತಾಗಿ ಇತರ ಸುಲ್ತಾನರು ಹೊಗರಿನ ಪ್ರಭುತ್ವಕ್ಕೆ ಸಮ್ಮತಿಸಿದ್ದರು. ಸುಲ್ತಾನರು ನಿರಂಕುಶ ಪ್ರಭುಗಳಾಗಿದ್ದು ಎಲ್ಲ ಅಧಿಕಾರಿಗಳೂ ಅವರಲ್ಲಿ ಕೇಂದ್ರೀಕೃತವಾಗಿತ್ತು. ಅವನ ತೀರ್ಪೇನ್ಯಾಯವಾಗಿತ್ತು. ಅವರು ಹೇಳಿದ್ದೇ ಸರಿಯೆಂಬ ಭಾವನೆಯಿತ್ತು. ವಜೀರ್ ಮೊದಲಾದ ಅಧಿಕಾರಿಗಳು ಅವರ ಆಜ್ಞೆಗಳನ್ನು  ಪಾಲಿಸಬೇಕಿದ್ದಿತೇ ವಿನಃ ಸಲಹೆ ನೀಡುವುದಕ್ಕಲ್ಲ. ಈ ಕಾರಣದಿಂದ ಸುಲ್ತಾನರ ಆಡಳಿತವು ಏಕವ್ಯಕ್ತಿಯ ಆಡಳಿತವಾಗಿತ್ತು.

ಅವನ ಆಳ್ವಿಕೆಯಲ್ಲಿ ಹಿಂದೂ ಸಮಾಜದಲ್ಲಿ ಬಾಲ್ಯ ವಿವಾಹ, ಸತಿಪದ್ಧತಿ ಮೊದಲಾದ ಅನಿಷ್ಟಗಳು ನೆಲೆಗೊಂಡವು. ಬಹುಪತ್ನಿತ್ವ, ಪರ್ದಾಪದ್ಧತಿ ಮುಸಲ್ಮಾನ ಮಹಿಳೆಯರ ಸ್ಥಾನಮಾನಗಳ ಹಿನ್ನಡೆಗೆ ಕಾರಣವಾಗಿದ್ದವು. ಈ ಕಾರಣದಿಂದಾಗಿ ಮಹಿಳೆಯರ ವಿದ್ಯಾಭ್ಯಾಸ ಕುಂಠಿತಗೊಂಡಿತು. ಸುಲ್ತಾನರ ಆಳ್ವಿಕೆ ಖುರಾನಿಗೆ ಬದ್ಧವಾಗಿದ್ದು, ಕೃಷಿ ಮತ್ತು ಕೈಗಾರಿಕೆಗಳಿಗೆ ರಾಜ್ಯದ ಪ್ರೋತ್ಸಾಹದ ಬಗ್ಗೆ ಉಲ್ಲೇಕದ ಕೊರತೆಯಿಂದ, ಆರ್ಥಿಕ ಅಭಿವೃದ್ಧಿ ಕುಂಠಿತಗೊಂಡಿತು. ಕುಶಲಕರ್ಮಿಗಳ ಉಪಕರಣಗಳಲ್ಲಾಗಲೀ ಕಾರ್ಯವಿಧಾನದಲ್ಲಿಯೇ ಆಗಲಿ ಸುಧಾರಣೆ ಕಂಡುಬರುವುದಿಲ್ಲ. ಆದರೆ ಅವರ ಕೌಶಲ್ಯ ವಂಶಪಾರಂಪರ್ಯವಾಗಿದ್ದು ಉತ್ಪನ್ನಗಳು ಉತ್ಕೃಷ್ಟವಾಗಿದ್ದು, ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿತ್ತು.

ಕೋಮುಗಳ ನಡುವಣ ಕಂದರವನ್ನು ಮುಚ್ಚಲು ಸೂಫಿ ಮತ್ತು ಭಕ್ತಿ ಸಂತರು ಶ್ರಮಿಸಿದರು. ರಮಾನಂದ, ಚೈತನ್ಯ, ಶಂಕರದೇವ ಮೊದಲಾದ ಭಕ್ತಿಸಂತರು ಹಿಂದೂ ಸಮಾಜದಲ್ಲಿ ನೆಲೆಗೊಂಡಿದ್ದ ಪಿಡುಗುಗಳನ್ನು ನಿವಾರಿಸಲು ಪ್ರಯತ್ನಿಸಿದರೆ ಕಬೀರ್ ಮತ್ತು ಗುರುನಾನಕ್ ಹಾಗೂ ಸೂಫಿಸಂತರು ಈ ಎರಡು ಕೋಮುಗಳ ನಡುವೆ ಸೌಹಾರ್ದತೆಯನ್ನುಂಟುಮಾಡಲು ಶ್ರಮಿಸಿದರು. ಕಬೀರರು ಇತರೆ ಸಂತರಂತೆ, ದೇವರು ಒಬ್ಬನೇ, ಹಿಂದೂಗಳು ದೇವನನ್ನು ಈಶ್ವರ ಎಂದು ಕರೆದರೆ ಮುಸಲ್ಮಾನರು ಅಲ್ಲಾ ಎಂದು ಕರೆಯುತ್ತಾರೆ ಎಂದು ಸಾರಿದರು. ಭಕ್ತಿ ಚಳವಳಿಗೆ, ಜನಸಾಮಾನ್ಯರ ಭಾಷೆಯಲ್ಲಿ ಸಾಹಿತ್ಯ ರಚನೆಗೆ ಉತ್ತೇಜನವಿತ್ತರು.

೧೮

ದಕ್ಷಿಣಾಪಥದಲ್ಲಿ ೧೩೩೬ರಲ್ಲಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯವು ಇತಿಹಾಸದ ಮಹತ್ವಪೂರ್ಣ ಘಟನೆಯಾಗಿದೆ. ಈ ಸಾಮ್ರಾಜ್ಯವನ್ನು ಸಂಗಮ, ಸಾಳುವ, ತುಳುವ ಮತ್ತು ಅರವೀಡು ಮನೆತನದವರು ಅನುಕ್ರಮವಾಗಿ ಆಳಿದರು. ಸಂಗಮರ ಒಂದನೆಯ ಹರಿಹರ ದೂರದೃಷ್ಟಿಯುಳ್ಳವನಾಗಿದ್ದು ತನ್ನ ತಮ್ಮ ಬುಕ್ಕನನ್ನು ಆಡಳಿತದಲ್ಲಿ ಸೇರಿಸಿಕೊಂಡಿದ್ದನು. ಆತನ ಮರಣಾನಂತರ ಬುಕ್ಕನು ಮಗ ಕಂಪಣ ಮಧುರೆಯ ಸುಲ್ತಾನನನ್ನು ಸೋಲಿಸಿದನು. ಈ ವಿಜಯವೇ ರಾಣಿ ಗಂಗಾದೇವಿಯ ಮಧುರಾವಿಜಯದ ವಸ್ತು ವಿಷಯವಾಗಿದೆ, ಬುಕ್ಕನು ಬಹಮನಿ ಸುಲ್ತಾನರಿಂದ ಪರಾಜಯಗೊಂಡನು. ಬುಕ್ಕನ ಮಗ ಇಮ್ಮಡಿ ಹರಿಹರ ಮಹಾರಾಜಾಧಿರಾಜ ಮತ್ತು ರಾಜ ಪರಮೇಶ್ವರ ಎಂಬ ಸಾರ್ವಭೌಮರ ಬಿರುದುಗಳನ್ನು ಧರಿಸಿದವರಲ್ಲಿ  ಮೊದಲಿಗ. ಆತನು ಕೃಷ್ಣಾನದಿಯಿಂದ ದಕ್ಷಿಣದ ಪ್ರದೇಶಗಳಿಗೆ ತನ್ನ ರಾಜ್ಯವನ್ನು ವಿಸ್ತರಿಸಿದನು. ಬಹುಮನಿಯ ಸುಲ್ತಾನನಿಂದ ಸೋತ ಹರಿಹರ ಸಾಮ್ರಾಜ್ಯದ ಗಡಿ ರಕ್ಷಣೆಗಾಗಿ ಭಾರಿ ದಂಡ ತೆರಬೇಕಾಯಿತು. ಹರಿಹರನ ಮರಣದ ನಂತರ ಸಿಂಹಾಸನಕ್ಕಾಗಿ ಆತನ ಮಕ್ಕಳಲ್ಲಿ ಹೋರಾಟ ಪ್ರಾರಂಭವಾಯಿತು. ಕೊನೆಯಲ್ಲಿ ಒಂದನೆಯ ದೇವರಾಯ ೧೪೦೬ರಲ್ಲಿ ಸಿಂಹಾಸನವನ್ನೇರಿದನು. ದೇವರಾಯನೂ ಸಹ ಬಹಮನಿ ಸುಲ್ತಾನರ ವಿರುದ್ಧ ಯಶಸ್ಸು ಗಳಿಸಲಿಲ್ಲ. ಮಾತ್ರವಲ್ಲ, ಕೊಂಡವೀಡಿನ ರೆಡ್ಡಿಗಳು ಉದಯಗಿರಿ ಪ್ರಾಂತವನ್ನು ವಶಪಡಿಸಿಕೊಂಡರು. ರಾಜಮಹೇಂದ್ರಿಯ ಒಂದು ಭಾಗವನ್ನು ವಶಪಡಿಸಿಕೊಳ್ಳುವಲ್ಲಿ ಸಫಲನಾದನು. ದೇವರಾಯನ ಆಡಳಿತದ ಕೊನೆಯ ದಿನಗಳಲ್ಲಿ (ಸುಮಾರು ೧೪೨೦) ಇಟಲಿಯ ಪ್ರವಾಸಿ ನಿಕೋಲೊ ಕಾಂಟಿ ವಿಜಯನಗರಕ್ಕೆ ಭೇಟಿಯಿತ್ತಿದ್ದನು.

ಇಮ್ಮಡಿ ದೇವರಾಯನು ೧೪೨೬ರಲ್ಲಿ ಆಡಳಿತವನ್ನು ವಹಿಸಿಕೊಂಡನು. ಆತನ ಆಳ್ವಿಕೆಯು ವಿಜಯನಗರದ ಮಹತ್ವಪೂರ್ಣವಾದ ಕಾಲ. ಆಡಳಿತವನ್ನು ಕ್ರಮಗೊಳಿಸಿದನು. ತನ್ನ ಸೈನ್ಯದಲ್ಲಿ ಮುಸಲ್ಮಾನರನ್ನು ಸೇರಿಸಿಕೊಂಡನು. ಕೊಂಡವೀಡು ಮತ್ತು ಕೇರಳವನ್ನು ಗೆದ್ದುಕೊಂಡನು.  ಆದರೆ ಬಹುಮನಿ ಸುಲ್ತಾನನಿಂದ ಪರಾಜಯಗೊಂಡನು. ಆತನು ಸಾಹಿತ್ಯ ಮತ್ತು ಕಲೆಯ ಪಕ್ಷಪಾತಿಯಾಗಿದ್ದನು. ಆತನು ಸಂಗಮ ವಂಶದ ಶ್ರೇಷ್ಠ ಸಾಮ್ರಾಟ.

ದೇವರಾಯನ ಮರಣಾನಂತರ ವಿಜಯನಗರದ ಹಿರಿಮೆ ಕುಂದುತ್ತಾ ಹೋಯಿತು. ಆಡಳಿತ ವ್ಯವಸ್ಥೆ ಹದಗೆಟ್ಟಿತು. ಸಾಳುವ ನರಸಿಂಹ ೧೪೩೩ರಲ್ಲಿ ಸಿಂಹಾಸನವನ್ನು ಆಕ್ರಮಿಸಿದನು. ವಿಜಯನಗರದ ಇತಿಹಾಸದಲ್ಲಿ ಇದು ಮೊದಲನೆಯ ದುರಾಕ್ರಮಣ ಎಂದು ಪ್ರಸಿದ್ಧಿ ಪಡೆದಿದೆ. ಸಾಳುವರ ಆಳ್ವಿಕೆಯ ಕೇವಲ ೨೦ ವರ್ಷಗಳಿಗೆ ಸೀಮಿತವಾಗಿತ್ತು. ೧೪೯೫ರಲ್ಲಿ ತುಳುವ ನರಸನಾಯಕ ಸಿಂಹಾಸನವನ್ನು ಅತಿಕ್ರಮಿಸಿದನು. ಇದು ‘ದ್ವಿತೀಯ ದುರಾಕ್ರಮಣ’ ಎಂದು  ಹೆಸರಾಗಿದೆ.

ತುಳುವ ವಂಶದ ಹಾಗೂ ವಿಜಯನಗರದ ಅತಿ ಶ್ರೇಷ್ಠ ಸಾಮ್ರಾಟ ಕೃಷ್ಣದೇವರಾಯ (೧೫೦೯-೧೫೨೯). ಬಹಮನಿ ರಾಜ್ಯವನ್ನು ಪುನರುಜ್ಜೀವನಗೊಳಿಸಿ ‘ಯವನರಾಜ್ಯಸ್ಥಾಪನಾಚಾರ್ಯ’ ಎಂಬ ಬಿರುದನ್ನು ಧರಿಸಿದನು. ಆಂತರಿಕ ದಂಗೆಗಳನ್ನು ಅಡಗಿಸಿ, ರೆಡ್ಡಿ ಪಾಳೆಯಗಾರರನ್ನು ಸೋಲಿಸಿ, ತೆಲಂಗಾಣವನ್ನು ವಶಪಡಿಸಿಕೊಂಡು, ಕಳಿಂಗರಾಜ ಪ್ರತಾಪರುದ್ರನನ್ನು ಸೋಲಿಸಿ ಆತನ ಮಗಳನ್ನು ವಿವಾಹವಾದನು. ರಾಯನು ಮತ್ತೊಂದು ದಿಗ್ವಿಜಯ ಕೈಗೊಂಡು ಗೋಲ್ಕೊಂಡ ಮತ್ತು ಬಿಜಾಪುರಗಳನ್ನು ಸೂರೆ ಮಾಡಿದನು. ಆದಿಲ್ ಷಾನೊಂದಿಗೆ  ಯುದ್ಧಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾಗ ರೋಗಗ್ರಸ್ತನಾಗಿ ಮಡಿದನು. ಸಮರ್ಥ ಆಡಳಿತಗಾರ ಮತ್ತು ದಕ್ಷ ಆಡಳತಗಾರನಾಗಿದ್ದ ರಾಯನು ಸಾಹಿತ್ಯದ ಪೋಷಕನಾಗಿ ‘ಅಭಿನವ ಭೋಜ’ ಎಂಬ ಬಿರುದಿಗೆ ಪಾತ್ರನಾಗಿದ್ದನು. ಸ್ವತಃ ಸಂಸ್ಕೃತ ಮತ್ತು ತೆಲುಗು ಭಾಷೆಯಲ್ಲಿ ಕವಿಯಾಗಿದ್ದ ರಾಯನು ಅನುಕ್ರಮವಾಗಿ ಜಾಂಬವತಿ ಕಲ್ಯಾಣ ಮತ್ತು ಆಮುಕ್ರಮಾಲ್ಯದವನ್ನು ರಚಿಸಿದನು. ತಿಮ್ಮಣನನ್ನು ಕುಮಾರವ್ಯಾಸನ ಭಾರತವನ್ನು ಪೂರ್ಣವಾಗಿಸಲು ಕೇಳಿಕೊಂಡಿದ್ದನು. ತೆಲುಗು ಸಾಹಿತ್ಯದಲ್ಲಿ ಅಷ್ಟದಿಗ್ಗಜಗಳೆಂದು ಪ್ರಖ್ಯಾತರಾದ ಕವಿಗಳು ಆತನ ಆಸ್ಥಾನವನ್ನು ಅಲಂಕರಿಸಿದ್ದರು. ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ ರಾಯಗೋಪುರಗಳೆಂದು ಹೆಸರಾದ ಗೋಪುರಗಳನ್ನು ನಿರ್ಮಿಸಿದನು.

ಕೃಷ್ಣದೇವರಾಯನ ಮರಣಾನಂತರ ಆತನ ಅಳಿಯ ಅರವೀಡು ರಾಮರಾಯ ರಾಜ್ಯದ ವ್ಯವಹಾರದಲ್ಲಿ ಕೈಹಾಕಲಾರಂಭಿಸಿದನು. ಅಚ್ಯುತರಾಯ ಇದಕ್ಕೆ ಅವಕಾಶ ಕೊಡಲಿಲ್ಲ. ಆತನ ಮರಣಾನಂತರ ಸದಾಶಿವನ ಆಳ್ವಿಕೆಯಲ್ಲಿ ಸದಾಶಿವನನ್ನು ಸೆರೆಯಲ್ಲಿಟ್ಟು ರಾಮರಾಯನು ಆಡಳಿತವನ್ನು ವಶಪಡಿಸಿಕೊಂಡನು. ವಿಜಯನಗರವನ್ನು ಅತ್ಯುನ್ನತ ಸ್ಥಾನಕ್ಕೇರಿಸುವ ಹಂಬಲದಿಂದ ಮುಸಲ್ಮಾನ ಸುಲ್ತಾನರಲ್ಲಿ ವೈಮನಸ್ಯ ಉಂಟುಮಾಡುವ ಪ್ರಯತ್ನ ೧೫೬೫ರ ರಕ್ಕಸತಂಗಡಿ ಕದನಕ್ಕೆ ಕಾರಣವಾಯಿತು. ರಾಮರಾಯ ಸೋತು ಕೊಲ್ಲಲ್ಪಟ್ಟನು. ವಿಜಯನಗರದ ಇತಿಹಾಸದಲ್ಲಿ ಇದು ಅತ್ಯಂತ ನಿಕೃಷ್ಟವಾದ ಸೋಲಾಗಿತ್ತು. ಅಳಿದುಳಿದ ಸಾಮ್ರಾಜ್ಯವನ್ನು ಅರವೀಡು ಸಂತತಿಯವರು ಆಳಲು ಪ್ರಾರಂಭಿಸಿದರು.

ಮೊದಲನೆಯ ವೆಂಕಟ (೧೫೮೬-೧೬೧೪) ಈ  ವಂಶದ ಪ್ರಬಲ ದೊರೆ. ತನ್ನ ಸೈನಿಕ ಕಾರ್ಯಾಚರಣೆಗಳಿಂದ ಅಳಿದುಳಿದ ವಿಜಯನಗರ ಸಾಮ್ರಾಜ್ಯಕ್ಕೆ ಒಂದು ರೂಪ ಕೊಟ್ಟನು. ಮೊಗಲ್ ಸಾಮ್ರಾಟ ಅಕ್ಬರ್‌ವೆಂಕಟನ ಆಸ್ಥಾನಕ್ಕೆ ೧೬೦೦ ಮತ್ತು ೧೬೦೪ರಲ್ಲಿ ರಾಯಭಾರಿಗಳನ್ನು ಕಳುಹಿಸಿಕೊಟ್ಟನು.  ಆತನು ಸಾಹಿತ್ಯ ಪೋಷಕನೂ ಆಗಿದ್ದನು. ಈ ಸಂತತಿಯ ದೊರೆ ಮೂರನೆಯ ಶ್ರೀರಂಗ ಕೆಳದಿಯ ಶಿವಪ್ಪನಾಯಕನ  ಬೆಂಬಲ ಪಡೆಯಬೇಕಾಯಿತು. ವಿಜಯನಗರವು ಹೀಗೆ ತನ್ನ ಅಸ್ತಿತ್ವದ ಕೊನೆಯನ್ನು ಕಾಣಬೇಕಾಯಿತು.

ವಿಜಯನಗರ ಆಡಳಿತದಲ್ಲಿ ಕಂಡಬರುವ ವಿಶೇಷವೆಂದರೆ ನಾಯಕರ ಪದ್ಧತಿಯ ಸ್ಥಾಪನೆ. ನಾಯಕರು ಸೈನಿಕ ಸಾಮಂತರಾಗಿದ್ದು “ಅಮರಂ” ಅನ್ನು ಪಡೆದಿದ್ದರು. ಸಾಮ್ರಾಟನಿಂದ ಪಡೆದ ಈ ಅಮರಂ ಅನ್ನು ನಾಯಕರು ವಿಭಿನ್ನ ರೀತಿಯ ಸ್ವತಂತ್ರದಲ್ಲಿ ಆಳುತ್ತಿದ್ದರು. ನಾಯಕರ ಪದ್ಧತಿಯು ಮಧ್ಯಕಾಲೀನ ಯುರೋಪಿನ ಊಳಿಗಮಾನ್ಯ ಪದ್ಧತಿಯನ್ನು ಹೋಲುತ್ತಿತ್ತು. ವಿಜಯನಗರ ಸಮಾಜದಲ್ಲಿ ಕಂಡುಬರುವ ಒಂದು ಗಮನಾರ್ಹವಾದ ವಿಷಯವೆಂದರೆ ವಿಭಿನ್ನ ಜನಾಂಗಗಳಲ್ಲಿ ಸ್ವಾಭಿಮಾನ ಮತ್ತು ಸ್ವಕೀಯತೆಗಳ  ಭಾವನೆಗಳ ಹೆಚ್ಚಳ. ಪ್ರತಿ ಜನಾಂಗವೂ ಉನ್ನತವರ್ಗದವರು ಹೊಂದಿದ್ದ ವಿಶೇಷಾಧಿಕಾರಿಗಳಿಗಾಗಿ ಮತ್ತು ಗೌರವಕ್ಕಾಗಿ ತಗಾದೆ ಮಾಡಲಾರಂಭಿಸಿದವು. ವಿಪ್ರವಿನೋದಿಗಳು ಎಂಬ ಸಾಮಾಜಿಕ ಪಂಗಡ ಬೆಳೆದು ಬಂದುದು ಈ ಕಾಲದಲ್ಲೇ. ವೀರಪಾಂಚಾಲರು,ಕೈಕ್ಕೋಲರು, ತೊಟ್ಟಿಯರು ಮತ್ತು ಕಂಬತ್ತರು ಕೆಲವು ಸಾಮಾಜಿಕ ವಿಶೇಷಾಧಿಕಾರಿಗಳಿಗೆ ಒತ್ತಾಯ ಮಾಡುತ್ತಿದ್ದರು. ಕವಿಗಳು ಮತ್ತು ನೀತಿಶಾಸ್ತ್ರಜ್ಞರು ಸಾಮಾಜಿಕ ದೋಷಗಳನ್ನು ನಿರ್ಮೂಲ ಮಾಡಲು ಪ್ರಯತ್ನಿಸಿದರು. ಇಂತಹವರಲ್ಲಿ ಸರ್ವಜ್ಞ, ಕನಕದಾಸ, ಕಪಿಲಾರ್, ವೇಮನ ಪ್ರಮುಖರು. ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಯ ನಿವಾರಣೆಗೆ ಚಳವಳಿಯನ್ನು ಪ್ರಾರಂಭಿಸಿದರು. ಗೌಡರು ಮತ್ತು ನಾಯಕರು ಸತಿ ಪದ್ಧತಿಯನ್ನು ಪಾಲಿಸುತ್ತಿದ್ದರು. ಆದರೆ ಅದು ಐಚ್ಛಿಕವಾಗಿತ್ತು.

ಸರ್ಕಾರವು ನೀರಾವರಿ ಅನುಕೂಲತೆಗಳನ್ನು ಒದಗಿಸಿ ಕೃಷಿಯ ಬಗ್ಗೆ ಹೆಚ್ಚು ಗಮನ ಹರಿಸಿತ್ತು. ನಗರದಲ್ಲಿ ಆರ್ಥಿಕ ಜೀವನವು ಚೈತನ್ಯಪೂರ್ಣವಾಗಿತ್ತು. ಪ್ರಾಚೀನ ಕೈಗಾರಿಕೆಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ವಜ್ರದ ಗಣಿಗಳು ಲಾಭದಾಯಕವಾಗಿದ್ದವು. ಆರ್ಥಿಕ ವ್ಯವಸ್ಥೆಯಲ್ಲಿ ದೇವಾಲಯಗಳ ಪ್ರಮುಖ ಪಾತ್ರ ವಹಿಸಿದ್ದವು. ಪಶ್ಚಿಮ ತೀರವು ವಿದೇಶಿ ವ್ಯಾಪಾರ ಕೇಂದ್ರವಾಗಿತ್ತು. ಕಲ್ಲಿಕೋಟೆ ಪ್ರಮುಖ ಬಂದರುಗಳಲ್ಲಿ ಒಂದಾಗಿತ್ತು. ದಕ್ಷಿಣ  ಆಫ್ರಿಕ, ಅಭಿಸೀನಿಯ, ಅರೇಬಿಯ ದೇಶಗಳ ವರ್ತಕರು ಈ ಬಂದರಿಗೆ ವಿದೇಶಿ ವಸ್ತುಗಳನ್ನು ತರುತ್ತಿದ್ದರು. ಪೆಗು ಮತ್ತು ಮಲಕ್ಕಾದ ಎಷ್ಟೋ ವ್ಯಾಪಾರಿ ಹಡಗುಗಳು ಕಲ್ಲಿಕೋಟೆಯಲ್ಲಿ ತಂಗುತ್ತಿದ್ದವು. ಇಲ್ಲಿಯವರೆಗೆ ಭಾರತದ ಸಮುದ್ರ ವ್ಯಾಪಾರ ಮುಸಲ್ಮಾನ ವ್ಯಾಪಾರಿಗಳಿಗೆ ಮೀಸಲಾಗಿತ್ತು. ಇಲ್ಲಿಂದ ಮುಂದೆ ಅದು ಪೋರ್ಚುಗೀಸರ ಕೈವಶವಾಯಿತು.

ಈ ಸಾಮ್ರಾಜ್ಯ ವಿಭಿನ್ನ ಧರ್ಮಗಳ ಬಗ್ಗೆ ಸಹನೆ ಮತ್ತು ಸಹನುಭೂತಿಗಳನ್ನು ತೋರುತ್ತಿತ್ತು. ಧಾರ್ಮಿಕ ಹಿಂಸೆಗಳು ನಡೆಯುತ್ತಿರಲಿಲ್ಲ. ಜನಸಾಮಾನ್ಯರಿಗೆ ಸಂಸ್ಕೃತದಲ್ಲಿರುವ ವೇದಗಳು ಮತ್ತು ಪುರಾಣಗಳು ಅರ್ಥವಾಗುವುದಿಲ್ಲವಾದ ಕಾರಣ ದೇಶ ಭಾಷೆಗಳಲ್ಲಿ ಬೋಧಿಸಬೇಕೆಂದು ವಿದ್ಯಾರಣ್ಯರ ಆಣತಿಯ ಮೇರೆಗೆ ಸಂಸ್ಕೃತ, ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳ ಸಾಹಿತ್ಯವು ರಾಜಪೋಷಣೆ ಪಡೆದು ವಿಪುಲವಾಗಿ ರಚಿಸಲ್ಪಟ್ಟವು. ಸಾಹಿತ್ಯದ ದೃಷ್ಟಿಯಿಂದ ಈ ಯುಗವನ್ನು ಅಗಸ್ಟಸ್‌ ಮತ್ತು ಎಲಿಜಬೆತ್‌ ಯುಗಗಳಿಗೆ ಕೆಲವು  ವಿದ್ವಾಂಸರು ಹೋಲಿಸಿದ್ದುಂಟು. ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರದಲ್ಲಿ ಈ ಸಾಮ್ರಾಜ್ಯವು ನೂತನ ಸುಧಾರಣೆಗಳನ್ನೇನೂ ರೂಪಿಸಲಿಲ್ಲ. ಅಮ್ಮನಗುಡಿ, ಕಂಬಗಳನ್ನುಳ್ಳ ಹಜಾರಗಳು, ಕಲ್ಯಾಣ ಮಂಟಪಗಳು ಈ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿತವಾದವು. ಪರ್ಸಿಬ್ರೌನ್ ಅಭಿಪ್ರಾಯ ಪಟ್ಟಿರುವಂತೆ, “ಸ್ತಂಭಗಳನ್ನುಳ್ಳ, ಅಂಸಂಖ್ಯಾತ ಮಂಟಪಗಳೂ, ಸಮಸ್ಯಾತ್ಮಕವೆನಿಸುವ ಶಿಲ್ಪ ನಿರ್ಮಾಣ, ಐಶ್ವರ್ಯ ಮತ್ತು ಚಿತ್ರನಾಟಕವೆನಿಸುವ ಕೆತ್ತನೆಗಳೂ ಈ ಶೈಲಿಯ ಪ್ರಮುಖ ಲಕ್ಷಣಗಳಾಗಿವೆ.” ಹಂಪಿಯಲ್ಲಿರುವ ವಿರೂಪಾಕ್ಷ, ವಿಠ್ಠಲ, ಹಜಾರರಾಮ ದೇವಾಲಯವು ವಿಜಯನಗರದ ಉತ್ತರಾರ್ಧ ಕಾಲದ ವರ್ಣಚಿತ್ರಗಳನ್ನು ಹೊಂದಿದೆ. ಹಂಪಿಯ ವಿರೂಪಾಕ್ಷ  ದೇವಾಲಯದ ಮೇಲ್ಛಾವಣಿಯಲ್ಲಿ ದಶಾವತಾರ ಮತ್ತು ಗಿರಿಜಾ ಕಲ್ಯಾಣ ಇವುಗಳಿಗೆ ಸಂಬಂಧಿಸಿದ ದೃಶ್ಯಗಳನ್ನು ಚಿತ್ರಿಸಲಾಗಿದೆ.

೧೯

೧೩೪೯ರಲ್ಲಿ ಸ್ಥಾಪಿತವಾದ ಬಹಮನಿ ರಾಜ್ಯ ದಕ್ಷಿಣಾಪಥವನ್ನು ಸುಮಾರು ೧೮೦ ವರ್ಷಗಳವರೆಗೆ ಆಳಿತು. ಪರ್ಷಿಯಾದ ರಾಜ ಬಹಮನ್‌ ಸಂತತಿಯವನೆಂದು ಕರೆದು ಕೊಳ್ಳುತ್ತಿದ್ದ ಹಸನ್‌ಗಂಗು ಈ ಸಾಮ್ರಾಜ್ಯದ ಸ್ಥಾಪಕ. ಆತನು ಅಬ್ದುಲ್‌ ಮುಜಫರ್‌ ಅಲ್ಲಾವುದ್ದೀನ್ ಬಹಮನ್ ಷಾ ಎಂಬ ಹೆಸರನ್ನು ಧರಿಸಿ ದೌಲತಾಬಾದ್‌ನಲ್ಲಿ ಸಿಂಹಾಸನವನ್ನೇರಿದನು. ಸ್ವಲ್ಪ ಕಾಲದಲ್ಲಿಯೇ ಆತನು ಗುಲ್ಬರ್ಗಾವನ್ನು ಆರಿಸಿ ಅದಕ್ಕೆ ಅಹ್‌ಶನಾಬಾದ್‌ಎಂದು ಹೆಸರಿಟ್ಟು ಅವನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಈ ವಂಶದ ಸುಲ್ತಾನರು ವಿಜಯನಗರದೊಂದಿಗೆ ಅವಿರತವಾಗಿ ಹೋರಾಡುತ್ತಿದ್ದರು.

ಈ ವಂಶದ ಐದನೇ ಸುಲ್ತಗಾನ ಎರಡನೆಯ ಮಹಮದ್‌ ತನ್ನ ಪ್ರಜೆಗಳಿಂದ ಅರಿಸ್ಟಾಟಲ್‌ ಎಂಬ ಉಪನಾಮವನ್ನು ಹೊಂದಿದ್ದು ಹಲವಾರು ಮಸೀದಿಗಳು ಮತ್ತು ಅನಾಥರಿಗೆ ಉಚಿತ ಶಾಲೆಗಳು ಹಾಗೂ ಆಶ್ರಮಗಳನ್ನು ಕಟ್ಟಿಸಿದನೆಂದು ಹೇಳಲಾಗಿದೆ. ೧೪೨೫ರಲ್ಲಿ ತನ್ನ ರಾಜಧಾನಿಯನ್ನು ಗುಲ್ಬರ್ಗದಿಂದ ಬೀದರ್‌ಗೆ ವರ್ಗಾಯಿಸಿದನು.

ನಿಜಾಮ್‌ಷಾ ಹಾಗೂ ಆತನ ಸಹೋದರ ಮೂರನೆಯ ಮಹಮದ್‌ಷಾ ಅವರ ಆಡಳಿತ ಕಾಲದಲ್ಲಿ ಬಹಮನಿ ಆಸ್ಥಾನದಲ್ಲಿ ಸಮರ್ಥವಾಗಿದ್ದ ಮಹಮದ್‌ ಗವಾನ್‌ ಸಿಂಹಾಸನದ ಬೆಂಗಾವಲಾಗಿದ್ದನು. ಸೈನ್ಯವನ್ನು ವ್ಯವಸ್ಥಿತಗೊಳಿಸಿದನು ಮತ್ತು ಸುಲ್ತಾನನ ಗೌರವವನ್ನು ಹೆಚ್ಚಿಸಿದನು. ರಾಜ್ಯದ ಯೋಗಕ್ಷೇಮಕ್ಕೆ ಶ್ರಮಿಸುತ್ತಿದ್ದ ಗವಾನ್ ನೀರಾವರಿ ಸೌಕರ್ಯಗಳನ್ನು ಕಲ್ಪಿಸಿ ಕೃಷಿಗೆ ಉತ್ತೇಜನವಿತ್ತನು. ರಾಜ್ಯವನ್ನು ವಿಸ್ತರಿಸಿದನಲ್ಲದೆ ಕಲೆ, ಸಾಹಿತ್ಯ ಮತ್ತು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹವಿತ್ತನು. ಸಾಕ್ಷರತೆಯನ್ನು ವೃದ್ಧಿಗೊಳಿಸಲು ಹಲವಾರು ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದನು. ಇವುಗಳಲ್ಲಿ ‘ಮಹಮದ್ ಗವಾನನ ಮದ್ರಸ’ ಎಂದು ಕರೆಯಲ್ಪಡುವ ಮದ್ರಸವು ಅತಿ ಪ್ರಸಿದ್ಧವಾಗಿದೆ. ಗವಾನನು ದಿವಾನ್‌ಇ-ಅಷಾರ್ ಮತ್ತು ರೌಜರ್-ಉರ್-ಇನ್‌ಷಾ ಎಂಬ ಗ್ರಂಥಗಳನ್ನು ರಚಿಸಿದನೆಂದು ಫೆರಿಸ್ಟಾ ಹೇಳಿದ್ದಾನೆ. ಅನುಯಾಯಿಗಳ ಪಿತೂರಿಗಳಿಗೆ ತುತ್ತಾದ ಆತನನ್ನು ಸುಲ್ತಾನ್ ಮಹಮದ್‌ಷಾ ಶಿರಚ್ಛೇದನ ಮಾಡಿಸಿದನು. ಇದು ಬಹಮನಿ ರಾಜ್ಯದ ನಾಶವನ್ನು ತ್ವರಿತಪಡಿಸಿತು. ಈ ರಾಜ್ಯದ ಕೊನೆಯ ಸುಲ್ತಾನ ಕಾಲಿಮುಲ್ಲಾ ಷಾ ತನ್ನ ರಾಜ್ಯದ ಘನತೆ ಮತ್ತು ಗೌರವವನ್ನು ಸ್ಥಾಪಿಸಲು ಗುಟ್ಟಾಗಿ ಬಾಬರನ ಸಹಾಯವನ್ನು ಅಪೇಕ್ಷಿಸಿದನು. ಆದರೆ ಬಾಬರನಿಂದ ನೆರವು ದೊರೆಯಲಿಲ್ಲ. ಆತನು ಸುಮಾರು ೧೫೩೮ರಲ್ಲಿ ಮುಡಿದ ಮೇಲೆ ಬಹಮನಿ ರಾಜ್ಯವು ಕೊನೆಗೊಂಡಿತು. ಶೀಘ್ರದಲ್ಲಿಯೇ ಬಿಜಾಪುರದಲ್ಲಿ ಆದಿಲ್‌ಷಾಹಿ, ಗೋಲ್ಕೊಂಡದಲ್ಲಿ ಕುತುಬ್‌ಷಾಹಿ, ಅಹಮದ್‌ ನಗರದಲ್ಲಿ ನಿಜಾಮ್‌ಷಾಹಿ, ಬೀದರ‍್ನಲ್ಲಿ ಬರಿದ್‌ಷಾಹಿ ಮತ್ತು ಬೀರಾರ‍್ನಲ್ಲಿ ಬರಿಹ್‌ಷಾಹಿ ಎಂಬ ಐದು ಸ್ವತಂತ್ರವಾದ ರಾಜ್ಯಗಳು ಬಹಮನಿ ರಾಜ್ಯದ ಅವಶೇಷದಿಂದ ಜನಿಸಿದವು.

ಆಡಳಿತದಲ್ಲಿ ಸುಲ್ತಾನನು ಕೇಂದ್ರ ಬಿಂದುವಾಗಿದ್ದನು. ವಕೀಲ್-ಉಸ್-ಸುಲ್ತನೆತ್ (ಮುಖ್ಯಮಂತ್ರ), ಅಮೀರ್-ಇ-ಜುಮ್ಲ (ಅರ್ಥ ಸಚಿವ),  ವಜೀರಂ ಇ ಅಶ್ರಫ್ (ವಿದೇಶಾಂಗ ಸಚಿವ), ವಜೀರ್-ಇ-ಕುಲ್ ಮತ್ತು ಪೇಶ್ವೆ ಅವರು ಸುಲ್ತಾನನಿಗೆ ನೆರವಾಗುತ್ತಿದ್ದರು.  ಕೊನೆಯ ಇಬ್ಬರು ಸಚಿವರ ಕರ್ತವ್ಯಗಳು ಸರಿಯಾಗಿ ತಿಳಿಯದಾಗಿದೆ. ಸದರ್-ಇ-ಜಿಹಾನ್ ನ್ಯಾಯಾಡಳಿತ ಜೊತೆಗೆ ಧಾರ್ಮಿಕ ವಿಚಾರಗಳು ಮತ್ತು ದತ್ತಿಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದನು. ಆಡಳಿತದ ಅನುಕೂಲತೆಗಾಗಿ ರಾಜ್ಯವನ್ನು ತರಪ್ (ಪ್ರಾಂತ್ಯ), ಸರ್ಕಾರ, ಮತ್ತು ಪರಗಣಗಳಾಗಿ  ವಿಭಜಿಸಲಾಗಿತ್ತು. ಗ್ರಾಮವು ಆಡಳಿತದ ಅಂತಿಮ ಘಟಕವಾಗಿತ್ತು.

ಅವಿಭಕ್ತ ಕುಟುಂಬವು ಸಮಾಜದ ವೈಶಿಷ್ಟ್ಯವಾಗಿತ್ತು.ಬಹುಪತ್ನಿತ್ವ ಹಾಗೂ ಬಾಲ್ಯವಿವಾಹಗಳು ಸಮಾಜಕ್ಕೆ ಪರಿಚಿತವಾಗಿದ್ದವು. ಕೃಷಿ, ವಿದ್ಯಾಭ್ಯಾಸ, ಸಾಹಿತ್ಯ ಮತ್ತು ಕಲೆಗೆ ಸುಲ್ತಾನರು ಪ್ರೋತ್ಸಾಹ ನೀಡಿದ್ದರು. ಗುಲ್ಬರ್ಗ ಮತ್ತು ಬೀದರ‍್ಗಳನ್ನು ಸುಲ್ತಾನರು ಅರಮನೆಗಳು, ಕೋಟೆಗಳು ಮತ್ತು ಮಸೀದಿಗಳಿಂದ ಅಲಂಕರಿಸಿದ್ದರು. ಈ ರಾಜಸಂತತಿಯ ಪ್ರಸಿದ್ಧವಾದ ಕಟ್ಟಡಗಳಲ್ಲಿ ಗುಲ್ಬರ್ಗ ಕೋಟೆಯಲ್ಲಿರುವ ಜಾಮಾಮಸೀದಿ, ಫಿರೋಜಬಾದ್‌ನ ಅರಮನೆ ಮತ್ತು ಕೋಟೆ, ಫಿರೋಜ್‌ಷಾನ ಗೋರಿ, ಮತ್ತು ಗುಲ್ಬರ್ಗದಲ್ಲಿರುವ ‘ಗೀಸುದರ’ ಇವುಗಳನ್ನು ಹೆಸರಿಸಬಹುದಾಗಿದೆ. ಬೀದರ್ ನಗರವನ್ನು “ಹಿಂದೂಸ್ಥಾನದಲ್ಲೆಲ್ಲಾ ಮುಸಲ್ಮಾನರ ಪ್ರಮುಖವಾದ ನಗರ” ಎಂದು ನಿಕಿಟಿನ್ ವರ್ಣಿಸಿರುವುದು ಆ ನಗರದ ಸೌಂದರ್ಯ ಮತ್ತು ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.ಕಲಾಕಾರರ ಹೆಚ್ಚಿನ ಆಸಕ್ತಿ ಕಟ್ಟಡಗಳ ಅಲಂಕಾರದಲ್ಲಿ ಕೇಂದ್ರೀಕೃತವಾಗಿತ್ತು.

೨೦

ಪಾಣಿಪಟ್ಟ ಕದನದ ನಂತರ ಬಾಬರನು ಹಲವಾರು ತೊಂದರೆಗಳನ್ನು ಎದುರಿಸಬೇಕಾಯಿತು. ಈ ಕದನದಿಂದ ಪಲಾಯನ ಮಾಡಿದ ಇಬ್ರಾಹಿಂ ಲೂದಿಯ ಸಹೋದರ ಇತರ ಆಫ್ಘನ್ ಕಲೀನರ ಜೊತೆಗೂಡಿ ಬಾಬರನ ವಿರುದ್ಧ ಹೋರಾಡಬಹುದೆಂಬುದು ಒಂದು ಕಡೆಯಾದರೆ ಬಾಬರನ ಜೊತೆಯಲ್ಲಿ ಬಂದಿದ್ದ ಕುಲೀನರು ಭಾರತದಲ್ಲಿನ ಸೆಕೆಯನ್ನು ತಡಯಲಾರದೆ ವಾಪಾಸ್ಸಾಗಲು ಅಪೇಕ್ಷಿಸುತ್ತಿದ್ದರು. ಬಾಬರನು ಭಾರತದಲ್ಲಿಯೇ ನಿಲ್ಲಲು ತೀರ್ಮಾನಿಸಿದಾಗ ಕುಲೀನರು ಹಾಗೂ ಸೈನಿಕರು ಮೌನರಾದರು.೧೫೨೭ರಲ್ಲಿ ನಡೆದ ಕಣ್ವ ಕದನದಲ್ಲಿ ಬಾಬರನು ಮೇವಾರದ ರಾಣಸಂಗನನ್ನು ಸೋಲಿಸಿದನು.

ಇದರೊಂದಿಗೆ ದೆಹಲಿಯನ್ನು ಗೆದ್ದುಕೊಳ್ಳುವ ರಜಪೂತರ ಕನಸು ನನಸಾಗಲಿಲ್ಲ. ಚಂದೇರಿ (೧೫೨೮)ಮತ್ತು ಘಘರ ಕದನದಲ್ಲಿ (೧೫೨೯) ಇಬ್ರಾಹಿಂನ ಸಹೋದರ ಮಹಮದ್‌ ಲೂದಿಯನ್ನು ಸೋಲಿಸಿ ದೆಹಲಿಯನ್ನು ವಶಪಡಿಸಿಕೊಂಡನು. ಇದು ಬಾಬರನ ಕೊನೆಯ ಯುದ್ಧವಾಗಿತ್ತು. ಇದರೊಂದಿಗೆ ಭಾರತದಲ್ಲಿ ಮೊಗಲ್‌ಸಾಮ್ರಜ್ಯವನ್ನು ಸ್ಥಾಪಿಸುವಲ್ಲಿ ಆತನು ಯಶಸ್ವಿಯಾದನು. ಉತ್ತರ ಭಾರತದಲ್ಲಿ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸುವಲ್ಲಿ ಆತನು ಯಶಸ್ವಿಯಾದನು. ಉತ್ತರ ಭಾರತದಲ್ಲಿ ಆತನನ್ನು ವಿರೋಧಿಸುವವರು ಯಾರೂ ಇರಲಿಲ್ಲ. ತನ್ನ ಮಗ ಹುಮಾಯೂನನನ್ನು ಉತ್ತರಾಧಿಕಾರಿಯಾಗಿ ನೇಮಿಸಿ ಬಾಬರನು ೧೫೩೦ರಲ್ಲಿ ಮರಣ ಹೊಂದಿದನು. ಆತನು ವಿದ್ವಾಂಸ ರಾಜನಾಗಿದ್ದು ತುರ್ಕಿ ಭಾಷೆಯಲ್ಲಿ ತುಜುಕ್-ಇ-ಬಾಬರು ಅಥವಾ ಬಾಬರ್ ನಾಮ ಎಂಬ ಜೀವನ ಚರಿತ್ರೆಯನ್ನು ರಚಿಸಿದನು.

ಹುಮಾಯೂನ್ (೧೫೩೦-೧೫೫೬). ಸಿಂಹಾಸನವನ್ನೇರಿದ ತರುಣದಲ್ಲಿಯೇ ಯುದ್ಧದಲ್ಲಿ ನಿರತನಾಬೇಕಾಯಿತು. ಕಲಿಂಜರ್ ಆಕ್ರಮಣ (೧೫೩೧) ನಿರರ್ಥಕವಾಯಿತು. ೧೫೩೨ರಲ್ಲಿ ಚೂನಾರ್ ಆಕ್ರಮಣದಲ್ಲಿ ಶೇರ್‌ಖಾನನನ್ನು ತನ್ನ ಪ್ರಭುತ್ವವನ್ನು ಒಪ್ಪಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದನು. ೧೫೩೪ರಲ್ಲಿ ದಿನ್ ಪನ್ಹ ಎಂಬ ಹೊಸ ನಗರವನ್ನು ದೆಹಲಿಯಲ್ಲಿ ನಿರ್ಮಿಸಿದನು. ೧೫೩೫-೩೬ರಲ್ಲಿ ಪಕ್ಷವಾದ ಫಲದಂತಿದ್ದ ಮಾಳ್ವ ಮತ್ತು ಗುಜರಾತ್ ಹುಮಾಯೂನನ ಕೈವಶವಾದವು. ಆದರೆ ಶೇರ್‌ಖಾನ್‌ನೊಡನೆ ದೀರ್ಘಕಾಲದ (೧೫೩೩-೧೫೪೦) ಹೋರಾಟದಲ್ಲಿ ಹುಮಾಯೂನನು ಬಿಲ್‌ಗ್ರಾಂ ಅಥವಾ ಕನೌಜ್ ಕದನದಲ್ಲಿ ಸೋತು (೧೫೪೦), ಯುದ್ಧದಿಂದ ಪಲಾಯನ ಮಾಡಿ,ಕೊನೆಯಲ್ಲಿ ಪರ್ಷಿಯಾದ ಷಾನ ಆಶ್ರಯವನ್ನು ಪಡೆದನು. ಶೇರ್‌ಖಾನನು ದೆಹಲಿ ಮತ್ತು ಆಗ್ರವನ್ನು ವಶಪಡಿಸಿಕೊಳ್ಳುವುದರೊಂದಿಗೆ ದೆಹಲಿಯ ಸಿಂಹಾಸನ ಮತ್ತೊಮ್ಮೆ ಮೊಗಲರಿಂದ ಆಫ್ಘನರಿಗೆ ಹಸ್ತಾಂತರವಾಯಿತು.

ಶೇರ್ ಷಾ (೧೫೪೦-೧೫೪೫) ದೆಹಲಿಯಲ್ಲಿ ಆಫ್ಘನರ ಎರಡನೆಯ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಈ ಸಾಮ್ರಾಜ್ಯವನ್ನು ವಿಸ್ತರಿಸುವುದು ಮತ್ತು ಸಂಘಟಿಸುವುದು ಆತನ ಆದ್ಯಕರ್ತವ್ಯವಾಗಿತ್ತು. ಭಾರತಕ್ಕೆ ಮೊಗಲರು ನುಸಳದಂತೆ ಮಾಡಲು ಬಲೂಚಿಸ್ತಾನದ ಗಖ್ಖರರ ಪ್ರದೇಶವನ್ನು ಲೂಟಿ ಮಾಡಿ ಜೀಲಂನಲ್ಲಿ ಸೈನಿಕ ರಾಜ್ಯವನ್ನು ಸ್ಥಾಪಿಸಿದನು. ೧೫೫೧ರಲ್ಲಿ ಬಂಗಾಳದ ದಂಗೆಯನ್ನು ಅಡಗಿಸಿದನು. ನಂತರ ಮಾಳ್ವ (೧೫೪೨), ರೈಸಿನ್ ಕೋಟೆ (೧೫೪೩), ಮುಲ್ತಾನ್ (೧೫೪೩) ಶೇರ್ ಷಾನ ವಶವಾದವು. ಕಲಿಂಜರ್ ಕೋಟೆಯ ಮುತ್ತಿಗೆಯಲ್ಲಿ(೧೫೪೫) ಆಕಸ್ಮಿಕವಾದ ಗುಂಡಿನ ಸ್ಫೋಟದಿಂದ ಷೇರ್ ಷಾ ಮರಣಹೊಂದಿದನು.

ಶೇರ್ ಷಾ ಸಮರ್ಥ ಆಡಳಿತಗಾರನಾಗಿದ್ದನು. ಸಾಮ್ರಾಜ್ಯವನ್ನು ಇಕ್ತ, ಸರ್ಕಾರ್, ಪರಗಣ ಮತ್ತು ಗ್ರಾಮಗಳಾಗಿ ವಿಭಜಿಸಿ ದಕ್ಷ ಅಧಿಕಾರಿಗಗಳನ್ನು ನೇಮಿಸಿದನು. ಸರ್ಕಾರ ಮತ್ತು ಪರಗಣಗಳ ಅಧಿಕಾರಿಗಳನ್ನು ೨ ಅಥವಾ ೩ ವರ್ಷಗಳಿಗೆ ಒಮ್ಮೆ ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದನು. ಭೂಕಂದಾಯವನ್ನು ನಿಗದಿಗೊಳಿಸುವ ಸಲುವಾಗಿ ಜಮೀನನ್ನು ಅಳತೆಮಾಡಿ, ಅದನ್ನು ಉತ್ತಮ, ಮಧ್ಯಮ ಮತ್ತು ಕನಿಷ್ಠ ಎಂದು ಮೂರು ಭಾಗಗಳಾಗಿ ವಿಂಗಡಿಸಿ, ಪ್ರತಿ ವಿಭಾಗದ ಸರಾಸರಿ ಉತ್ಪನ್ನವನ್ನು ನಿರ್ಧರಿಸಿ, ಈ ಮೂತು ಭಾಗಗಳ ಸರಾಸರಿಯನ್ನು ಒಂದುಗೂಡಿಸಿ ಅದರ ೧/೨ ಭಾಗವನ್ನು ಕಂದಾಯವನ್ನಾಗಿ ನಿರ್ಧರಿಸಿದನು. ರೈತರಿಗೆ ಹಕ್ಕುಪತ್ರ(ಪಟ್ಟಾ)ವನ್ನು ಕೊಟ್ಟು ಅವರಿಂದ ಸಮ್ಮತಿಯನ್ನು (ಕಬೂಲಿಯತ್) ಪಡೆದುಕೊಂಡನು. ಆದರೆ ಈ ವ್ಯವಸ್ಥೆ ದೋಷಮುಕ್ತ ವಾಗಿರಲಿಲ್ಲ. ಗುಪ್ತಾಚಾರ ವ್ಯವಸ್ಥೆಯನ್ನು ಕ್ರಮಪಡಿಸಿದನು. ಪೋಲಿಸ್ ವ್ಯವಸ್ಥೆಯನ್ನು ಸುಧಾರಿಸಿದನು. ಹಳೆಯ ನಾಣ್ಯಗಳನ್ನು ಚಲಾವಣೆಯನ್ನು ನಿಲ್ಲಿಸಿ ಚಿನ್ನ, ಬೆಳ್ಳಿ ಮತ್ತು ತಾಮ್ರಗಳಲ್ಲಿ ಮಾಡಿದ ಹೊಸ ನಾಣ್ಯಗಳನ್ನು ಚಲಾವಣೆಗೆ ತಂದನು. ಈ ನಾಣ್ಯಗಳಲ್ಲಿ ಮುಖ್ಯವಾದುದು ಬೆಳ್ಳಿಯ ರೂಪಾಯಿ. ಈ ರೂಪಾಯಿ ಬ್ರಿಟಿಷರ ಕಾಲದಲ್ಲಿಯೂ ನಾಣ್ಯ ವ್ಯವಸ್ಥೆಯ ಮೂಲವಾಗಿದ್ದು ಇಂದಿಗೂ ಚಲಾವಣೆಯಲ್ಲಿರುವುದನ್ನು  ಸ್ಮರಿಸಬಹುದು. ಈ ಕಾರಣಕ್ಕಾಗಿ ಶೇರ್ ಷಾನನ್ನು “ಆಧುನಿಕ ರೂಪಾಯಿಯ ಜನಕನೆಂದು” ಪರಿಗಣಿಸಲಾಗಿದೆ. ಆತನ ಹಲವಾರು ಸುಧಾರಣೆಗಳು ಅಕ್ಬರನಿಗೆ ಮಾರ್ಗದರ್ಶಿಗಳಾದವು.

ಶೇರ್ ಷಾ ನಂತರ ಎರಡನೆಯ ಆಫ್ಘನ್ ಸಾಮ್ರಾಜ್ಯ ಬಹಳ ಕಾಲ ಉಳಿಯಲಿಲ್ಲ. ೧೫೫೫ರಲ್ಲಿ ಹುಮಾಯೂನ್ ಸಿಕಂದರ್ ಷಾನನ್ನು ಸೋಲಿಸಿ ದೆಹಲಿಯನ್ನು ವಶಪಡಿಸಿಕೊಂಡನು. ನಂತರ ಆಗ್ರ, ಸಂಭಾಲ್  ಮತ್ತು ಸನಿಹದ ಪ್ರದೇಶಗಳೂ ಮೊಗಲರ ಕೈವಶವಾದವು. ಆದರೆ ಹುಮಾಯೂನ್ ತನ್ನ ಈ ವಿಜಯವನ್ನು ಬಹುಕಾಲ ಸವಿಯುವ ಸುಯೋಗವನ್ನು  ಪಡೆದುಕೊಂಡು ಬಂದಿರಲಿಲ್ಲ. ೧೫೫೬ರಲ್ಲಿ ಗ್ರಂಥಾಲಯದ ಮೆಟ್ಟಿಲುಗಳನ್ನು ಇಳಿದು  ಬರುತ್ತಿರುವಾಗ ಬಿದ್ದು ಮರಣ ಹೊಂದಿದನು. ಆದರೆ ಸಾಯುವ ಮುನ್ನ ತನ್ನ ಮಗ ಅಕ್ಬರನನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದನು.

ಅಕ್ಬರ್ (೧೫೫೬-೧೬೦೫) ಮೊಗಲ್ ವಂಶದ ಶ್ರೇಷ್ಠ ದೊರೆ. ಮಧ್ಯಕಾಲೀನ ಭಾರತದ ದೊರೆಗಳಲ್ಲಿ ಅಕ್ಬರನನ್ನು ಮಾತ್ರ ಮಹಾಶಯನೆಂದು ಪರಿಗಣಿಸಲಾಗಿದೆ. ೧೫೪೨ರಲ್ಲಿ ಅಮರಕೋಟೆಯಲ್ಲಿ ಜನಿಸಿದ ಅಕ್ಬರ್ ೧೪ ವರ್ಷಗಳು ಪೂರ್ಣವಾಗುವ ಮುನ್ನ ಸಾಮ್ರಾಟನಾದನು. ೧೫೫೬ರಿಂದ ೧೫೬೦ ರವರೆಗೆ ಬೈರಾಮ ಖಾನನ ಪೋಷಣೆಯಲ್ಲಿ ಬೆಳೆದ ಅಕ್ಬರ್ ಎರಡನೆಯ ಪಾಣಿಪಟ್ ಕದನದಲ್ಲಿ ಆದಿಲ್ ಷಾನ ಸೇನಾಧಿಕಾರಿಯನ್ನು ಸೋಲಿಸಿ ತನ್ನ ದಕ್ಷತೆಯನ್ನು ಪ್ರದರ್ಶಿಸಿದನು. ಈ ಕದನದ ನಂತರ ಮೇಮರ್, ಅಜ್ಮೀರ್, ಸಂಬಾಲ್, ಲಕ್ನೋ, ಗ್ವಾಲಿಯರ್  ಮತ್ತು ಜಾನ್‌ಪುರ ಸುಲಭವಾಗಿ ಮೊಗಲರ ಕೈವಶವಾದವು. ಈ ಮಧ್ಯೆ ಬೈರಾಮ ಖಾನನು ಆಸ್ಥಾನದ ಅವಕೃಪೆಗೆ ಪಾತ್ರವಾಗಿ ಕೊಲ್ಲಲ್ಪಟ್ಟನು. ಈಗ ಸ್ವತಂತ್ರವಾಗಿ ಸಾಮ್ರಾಜ್ಯದ ವಿಸ್ತರಣಾ ನೀತಿಯನ್ನು ಕೈಕೊಂಡನು. ಮಾಳ್ವ, ಚೂನಾರ್, ಗೊಂಡವನ, ಜಯಪೂರ್, ಮೆರ್‌‌‌ಟ, ಮೇವಾರ್, ರಾಣತಂಬೂರ್, ಕಲಿಂಜರ್, ಮಾಶ್‌ಮಾಡ್‌, ಗುಜರಾತ್, ಬಿಹಾರ, ಬಂಗಾಳ, ಕಾಬೂಲ್, ಕಾಶ್ಮೀರ, ಸಿಂಧ್, ಒರಿಸ್ಸಾ, ಬಲೂಚಿಸ್ತಾನ,ಕಾಂದಹಾರ್, ಖಾನ್‌ದೇಶ್ ಮತ್ತು ಅಹಮದ್ ನಗರ ರಾಜ್ಯಗಳನ್ನು ಜಯಿಸಿದನು. ಈ ವಿಜಯಗಳಿಂದ ಅಕ್ಬರನ ಸಾಮ್ರಾಜ್ಯವನ್ನು ಪಶ್ಚಿಮದಲ್ಲಿ ಕಾಂದಹಾರ್ ಮತ್ತು ಕಾಬೂಲಿನಿಂದ ಪೂರ್ವ ಪಶ್ಚಿಮ ಬಂಗಾಳದವರೆಗೆ ಉತ್ತರದಲ್ಲಿ ಕಾಶ್ಮೀರದಿಂದ ದಕ್ಷಿಣದಲ್ಲಿ ಬೀರಾರ್ ಮತ್ತು ಅಹಮದ್ ನಗರದವರೆಗೆ ವಿಸ್ತರಿಸಿತ್ತು.

ಅಕ್ಬರನು ಸಮರ್ಥ ಆಡಳಿತಗಾರನಾಗಿದ್ದನು. ಭಾರತದಿಂದ ಹೊರಗಿನ ಅಧಿಪತ್ಯಕ್ಕೆ ಒಳಗಾಗದೆ ಸ್ವತಂತ್ರವಾಗಿ ಆಳಿದ ಮುಸಲ್ಮಾನ್ ದೊರೆಗಳಲ್ಲಿ ಮೊಗಲರು ಮೊದಲಿಗರು. ಪ್ರಾಂತಗಳು ಸುಬಾಗಳೆಂದು ಕರೆಯಲು ಪ್ರಾರಂಭವಾದುದು ಅಕ್ಬರ ಕಾಲದಿಂದ. ತನ್ನ ವಿಸ್ತಾರವಾದ ರಾಜ್ಯದ ರಕ್ಷಣೆಗೆ ದೊಡ್ಡ ಸೈನ್ಯದ ಅವಶ್ಯಕತೆಯನ್ನು ಆತನು ಮನಗಂಡನು. ಸೈನಿಕರ ನೇಮಕ, ತರಬೇತಿ, ಶಿಸ್ತು ಕಾಪಾಡುವುದು, ಆಯುಧಗಳ ಜಮಾವಣೆ ಮುಂತಾದ ಕೆಲಸಗಳನ್ನು ತೃಪ್ತಿಕರವಾಗಿ ಹಾಗೂ ನೇರವಾಗಿ ನಿರ್ವಹಿಸುವುದು ಕೇಂದ್ರ ಸರ್ಕಾರಕ್ಕೆ ಕಷ್ಟವೆಂದು ತಿಳಿದ ಅಕ್ಬರ್ ಪರ್ಷಿಯಾದಲ್ಲಿ  ಆಚರಣೆಯಲ್ಲಿದ್ದ ಮನ್‌ಸಬ್ದಾರಿ ಪದ್ಧತಿಯನ್ನು ಜಾರಿಗೆ ತಂದನು. ವಿವಿಧ ಇಲಾಖೆಗಳನ್ನು ಸ್ಥಾಪಿಸಿ ಆಡಳಿತವನ್ನು  ಸುಗಮಗೊಳಿಸಿದನು. ಕಂದಾಯ ಪದ್ಧತಿಯಲ್ಲಿ ಲೋಪಗಳನ್ನು ಸರಿಪಡಿಸಲು ಜಮೀನನ್ನು ಪೊಲಾಜ್, ಪರೌತಿ, ಚಚಾರ್ ಮತ್ತು ಬಂಜಾರ್ ಎಂದು ನಾಲ್ಕು ಭಾಗಗಳಾಗಿ ವಿಭಾಗಿಸಿ ಪ್ರತಿ ವಿಭಾಗದ ಸರಾಸರಿ ಉತ್ಪನ್ನದ ಮೇಲೆ ೧/೨ ಭಾಗವನ್ನು ರಾಜ್ಯದ ಕಂದಾಯವಾಗಿ ನಿರ್ಧರಿಸಿದನು. ಕಂದಾಯವನ್ನು ನಗದು ರೂಪದಲ್ಲಿ ಪಡೆಯಲು ನಿರ್ಧರಿಸಿದ್ದರಿಂದ ರೈತರಿಗೆ ಅನಾನುಕೂಲವಾಗುವಂತೆ ನೋಡಿಕೊಳ್ಳಲು ರಾಜ್ಯದಲ್ಲಿ ಮಾರುಕಟ್ಟೆಯಲ್ಲಿ ಹತ್ತು ವರ್ಷಗಳ ಬೆಲೆ ಸರಾಸರಿಯ ಮೇಲೆ ಧಾನ್ಯವನ್ನು ಹಣಕ್ಕೆ ಪರಿವರ್ತಿಸಿ ನಿರ್ಧರಿಸಲಾಯಿತು. ಇದನ್ನು ದಹ್ ಸಲಾ ಅಥವಾ ಜಬ್ತಿ ವ್ಯವಸ್ಥೆ ಎಂದು ಕರೆಯಲಾಗಿದೆ. ಈ ವ್ಯವಸ್ಥೆಯನ್ನು ತೋದರಮಲ್ ರೂಪಿಸಿದ್ದರಿಂದ ತೋದರ್‌ಮಲ್ ಬಂದೂಮಸ್ತು ಎಂದು ಕರೆಯಲಾಗಿದೆ.

ಆಳುವವರು ಅಲ್ಪಸಂಖ್ಯಾತರು ಮತ್ತು ಆಳ್ವಿಕೆಗೆ ಒಳಪಟ್ಟವರು ಬಹುಸಂಖ್ಯಾತರು ಎಂಬ ಅಂಶವನ್ನು ಗುರುತಿಸಿದವರಲ್ಲಿ ಅಕ್ಬರ್ ಮೊದಲಿಗ. ಮೊಗಲ್ ಸಾಮ್ರಾಜ್ಯವು ದೀರ್ಘಕಾಲ ಉಳಿಯಬೇಕಾದರೆ ಹಿಂದೂಗಳ ಸಹಕಾರ ಅಗತ್ಯವೆಂಬುದನ್ನು ಆತ ಮನಗಂಡನು. ಹಿಂದೂ ಮತ್ತು ಮುಸಲ್ಮಾನರ ನಡುವೆ ತಾರತಮ್ಯವನ್ನು ಹೋಗಲಾಡಿಸಲು ಹಿಂದುಗಳ  ಮೇಲೆ ಹೇರಿದ್ದ ಜಿಸಿಯ ಮತ್ತು ಯಾತಾರ್ಫಿ ತೆರಿಗೆಗಳನ್ನು ವಜಾ ಮಾಡಿದನು. ರಜಪೂತರ ರಾಜ್ಯಗಳನ್ನು ಜಯಿಸಿದರು ಅವರೊಂದಿಗೆ ಹೀನಾಯಕರವಾಗಿ ನಡೆದುಕೊಳ್ಳಲಿಲ್ಲ. ಅವರೊಂದಿಗೆ ವಿವಾಹ ಸಂಬಂಧವನ್ನು ಬೆಳೆಸಿದನಲ್ಲದೆ ಅವರಿಗೆ ಆಡಳಿತದಲ್ಲಿ ಪ್ರಮುಖ ಹುದ್ದೆಗಳನ್ನು ನೀಡಿ, ಸೇನಾಧಿಪತಿಯೂ ಸೇರಿದಂತೆ, ತನ್ನ ಸಾಮ್ರಾಜ್ಯದ ಆಧಾರಸ್ತಂಭಗಳನ್ನಾಗಿ ಮಾಡಿಕೊಂಡನು. ಹಿಂದೂ ಮತ್ತು ಮುಸಲ್ಮಾನರ ನಡುವಣ ವೈಷಮ್ಯಕ್ಕೆ ಧರ್ಮವೇ ಪ್ರಮುಖ ಕಾರಣವೆಂದು ಅರಿತ ಅಕ್ಬರ್ ವಿವಿಧ ಕೋಮುಗಳು ಅನುಸರಿಸಲು ಸಾಧ್ಯವಾಗುವಂತಹ ಹೊಸ ಧರ್ಮ ದಿನ್-ಇ-ಇಲಾಹಿಯನ್ನು (೧೫೮೨) ರೂಪಿಸಿದನು. ಆತನ ಈ ಮನೋಭಾವ ‘ರಾಷ್ಟ್ರೀಯ ರಾಜ’ ಎಂಬ ಮೆಚ್ಚುಗೆಯನ್ನು ಗಳಿಸಿಕೊಟ್ಟಿದೆ. ಅಕ್ಬರ್ ಈ ಹೊಸಧರ್ಮವನ್ನು ಬಲತ್ಕಾರವಾಗಿ ತನ್ನ ಪ್ರಜೆಗಳ ಮೇಲೆ ಹೇರಲು ಪ್ರಯತ್ನಿಸಲಿಲ್ಲ. ಅದು ಜನಪ್ರಿಯವಾಗದೆ ಅಕ್ಬರನೊಂದಿಗೆ ಅವಸಾನಗೊಂಡಿತು.

ವಿದ್ಯಾಭ್ಯಾಸ, ಸಾಹಿತ್ಯ ಮತ್ತು ಕಲೆಗೆ ಅಕ್ಬರ್ ಪ್ರೋತ್ಸಾಹ ನೀಡಿದನು. ಮದ್ರಸ ಮತ್ತು ಮೆಕ್ತಬ್‌ಗಳಲ್ಲದೆ ಪಾಠಶಾಲೆಗಳು ಮತ್ತು ವಿದ್ಯಾಪೀಠಗಳಿಗೆ ಪ್ರೋತ್ಸಾಹ ನೀಡಿ ಗಣಿತಶಾಸ್ತ್ರ ಭೂಗೋಳಶಾಸ್ತ್ರ, ಗೃಹವಿಜ್ಞಾನ, ಇತಿಹಾಸ, ರಾಜ್ಯಶಾಸ್ತ್ರ, ಕಘೋಳಶಾಸ್ತ್ರ ಮೊದಲಾದ ಎಲ್ಲ ವಿಷಗಳ ಅಧ್ಯಯನಕ್ಕೆ ವ್ಯವಸ್ಥೆ ಮಾಡಿದನು. ವಿದ್ಯಾರ್ಥಿಯು ಸ್ವತಃ ಪ್ರತಿಯೊಂದನ್ನೂ ಅರ್ಥ ಮಾಡಿಕೊಳ್ಳುವುದನ್ನು ಉಪಾಧ್ಯಾಯರ ಸ್ವಲ್ಪ ನೆರವಿನಿಂದ ಕಲಿತುಕೊಳ್ಳುವಂತೆ ತಯಾರು ಮಾಡಬೇಕೆಂಬುದು ಆತನ ಅಪೇಕ್ಷೆಯಾಗಿತ್ತು. ಆದರೆ ಈ ವಿಚಾರದಲ್ಲಿ ಅಕ್ಬರ್ ಎಷ್ಟು ಯಶಸ್ವಿಯಾದನೆಂಬುದು ತಿಳಿಯದಾಗಿದೆ. ಆತನ ಆಸ್ಥಾನದಲ್ಲಿ ಅಬ್ದುಲ್ ಫಸಲ್ ಪರ್ಷಿಯನ್ ಭಾಷೆಯಲ್ಲಿ ಅಕ್ಬರನಾಮ ಮತ್ತು ಐನ್ ಇ ಅಕ್ಬರಿಯನ್ನು, ಬದೌನಿಯ ಮುಂತಕಾಬ್-ಉಲ್-ತವಾರಿಕ್ ಎಂಬ ಕೃತಿಗಳನ್ನು ರಚಿಸಿದರು. ಆತನ ಅಪೇಕ್ಷೆಯ ಮೇರೆಗೆ ಮಹಾಭಾರತ, ರಾಮಾಯಣ, ಅಥರ್ವವೇದ, ಲೀಲಾವತಿ, ರಾಜತರಂಗಿಣಿ, ಕಾಳಿಯ ದಮನ್, ನಳದಮಯಂತಿ, ಹರಿವಂಶ ಗ್ರಂಥಗಳು ಸಂಸ್ಕೃತದಿಂದ ಪರ್ಷಿಯನ್ ಭಾಷೆಗೆ ಭಾಷಾಂತರಿಸಲ್ಪಟ್ಟವು.