೧೧

ಕಳಚೂರಿಗಳು ಚಾಲುಕ್ಯರ ಸಾಮಂತರಾಜರಾಗಿದ್ದರು, ಶಿಲಾಹಾರ ವಿಜಯಾದಿತ್ಯ ಮತ್ತು ಬನವಾಸಿಯ ನಾಯಕ ರೇಚನ ಸಹಾಯದಿಂದ ಚಾಲುಕ್ಯ ಸಿಂಹಾಸನವನ್ನು ವಶಪಡಿಸಿಕೊಂಡ ಬಿಜ್ಜಳನೂ ೧೧೬೨ ರಲ್ಲಿ ಸ್ವತಂತ್ರವಾಗಿ ಆಳಲು ಪ್ರಾರಂಭಿಸಿದನು. ಆನತು ಚೋಳರು, ಚೇರರು, ಆಂಧ್ರರು, ಕಳಂಗರು, ಗಂಗರು ಮತ್ತು ಚೇದಿಯ ಕಳಚೂರಿಗಳನ್ನು ಸೋಲಿಸಿದನಲ್ಲದೆ ನೇಪಾಳ, ಲಾಟ ಮತ್ತು ಗುರ್ಜರರ ಮೇಲೆ ಸಫಲ ದಾಳಿ ಮಾಡಿದನೆಂದು ಹೇಳಲಾಗಿದೆ. ವೀರಶೈವ ಮತಸ್ಥಾಪಕ ಬಸವಣ್ಣನವರ ಅನುಯಾಯಿಗಳ ದಂಗೆಯಲ್ಲಿ ಬಿಜ್ಜಳು ೧೧೬೮ರಲ್ಲಿ ಕೊಲ್ಲಲ್ಪಟ್ಟನು.

ಬಿಜ್ಜಳನು ನಂತರ ಆತನ ನಾಲ್ಕು ಮಕ್ಕಳು, ಸೋಮೇಶ್ವರ ಅಥವಾ ಸೋಯಿದೇವ, ಸಂಕಮ, ಅಹಮಮಲ್ಲ ಮತ್ತು ಸಿಂಘಣ ಅನುಕ್ರಮವಾಗಿ ಆಳಿದರು. ಆತನ ನಂತರ ಕಳಚೂರಿಗಳ ಬಗ್ಗೆ ಮಾಹಿತಿಗಳು ಕಡಿಮೆ. ಈ ವಂಶದವರು ಆಳ್ವಿಕೆ ನಡೆಸಿದ್ದು ಸುಮಾರು ೨೬ ವರ್ಷಗಳಾದರೂ ಮಧ್ಯಕಾಲೀನ ಕರ್ನಾಟಕದ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ.

೧೨

ಕಳಚೂರಿನ ಆಳ್ವಿಕೆ ಕಾಲವು ವೀರಶೈವ ಮತದ ಸ್ಥಾಪನೆ ಮತ್ತು ಅಭಿವೃದ್ಧಿಗೆ ಹೆಸರಾಗಿದೆ. ಬಾಗೇವಾಡಿಯ ಶೈವ ಬ್ರಾಹ್ಮಣ ಮತದ ಸ್ಥಾಪನೆ ಮತ್ತು ಅಭಿವೃದ್ಧಿಗೆ ಹೆಸರಾಗಿದೆ. ಬಾಗೇವಾಡಿಯ ಶೈವ ಬ್ರಾಹ್ಮಣ ಮಾದರಸ ಮತ್ತು ಮಾದಲಾಂಬಿಕೆಗೆ ಜನಿಸಿದ ಬಸವಣ್ಣನವರು ಬಿಜ್ಜಳಳ ಮಂತ್ರಿ, ಮುಖ್ಯಮಂತ್ರಿ, ಸೇನಾಧಿಪತಿ ಮತ್ತು ಕೋಶಾಧ್ಯಕ್ಷನಾಗಿ ಪ್ರಮಾಣಿಕತೆಯಿಂದ  ಕಾರ್ಯನಿರ್ವಹಿಸಿದ್ದರು. ರಾಜ್ಯದ ಆದಾಯವನ್ನು ಹೆಚ್ಚಿಸಿದ್ದರು, ಶಿವಭಕ್ತರಾಗಿ ಅವರು ಭಾರತದ ವಿಭಿನ್ನ ಪ್ರದೇಶಗಳ ಶಿವಭಕ್ತರಿಗೆ ಪೂಜ್ಯರಾಗಿದ್ದರು. ಸಮಾಜದಲ್ಲಿ ಬೇರೂರಿದ್ದ ಅನಿಷ್ಟಗಳ ವಿರುದ್ಧದ ಅವರ ಬೋಧನೆಗಳು ಸಂಪ್ರದಾಯಸ್ಥರನ್ನು ಕೆರಳಿಸಿತು. ದೊರೆಗೆ ಅವರು ದೂರು ನೀಡಲು ಪ್ರಾರಂಭಿಸಿದರು. ದೊರೆ ಬಿಜ್ಜಳನ ಅಸಮಾಧಾನವನ್ನು ಅರಿತ ಬಸವಣ್ಣವನರು ತಮ್ಮ ಹುದ್ದೆಗೆ ರಾಜೀನಾಮೆ ಇತ್ತು, ಕೂಡಲಸಂಗಮಕ್ಕೆ ಬಂದು ಅಲ್ಲಿ ೧೧೬೭ರಲ್ಲಿ ಶಿವೈಕ್ಯವಾದರು.

ವೀರಶೈವ ಧರ್ಮವು ಏಕದೇವನ ಅಸ್ತಿತ್ವವನ್ನು ಪ್ರತಿಪಾದಿಸುತ್ತದೆ. ಶಕ್ತಿಯ ಒಡಗೂಡಿದ ಶಿವನೇ ಈ ಒಬ್ಬ ದೇವ. ಈ ದೇವನಿಂದ ಲಿಂಗ ಅಥವಾ ಇಷ್ಟದೇವತಾ(ಶಿವ) ಮತ್ತು ಅಂಗ ಅಥವಾ ಜೀವಾತ್ಮ ಎಂದು ಎರಡು ಭಾಗಗಳಾಗಿವೆ. ಮುಂದಿನ ವಿಕಸನದಲ್ಲಿ ತಲಾ ಮೂರು ಭಾಗಗಳನ್ನು ಹೊಂದಿರುತ್ತವೆ. ಹೀಗೆ ಒಟ್ಟು ಷಟ್‌ಸ್ಥಲ ಅಥವಾ ಆರು ಭಾಗಗಳಾಗುತ್ತವೆ. ಸ್ಥಲ ಎಂಬ ಪದವು ಸ್ಥರತೆಯನ್ನು ಸೂಚಿಸುತ್ತದೆ. ಲಿಂಗದಲ್ಲಿ ಐಕ್ಯವಾಗುವುದೇ ಅಂಗದ ಅಂತಿಮ ಗುರಿ.ಪ್ರತಿಯೊಂದು ಜೀವವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತವೆ. ಅದು ಒಂದು ಅಣುವಿನ ಗಾತ್ರದಲ್ಲಿರುವುದರಿಂದ, ಲಿಂಗದ ಒಂದು ಅಂಗವಾಗುತ್ತದೆ. ಈ ಅನನ್ಯತೆಯನ್ನು ಭಕ್ತಿಯಿಂದ ಪಡೆಯಬಹುದು. ಈ ಸಾಧನೆಗೆ ಎಂಟು ನಿಯಮಗಳಿವೆ (ಅಷ್ಟಾವರ್ಣ). ಗುರುವಿಗೆ ವಿಧೇಯತೆ ತೋರುವುದು, ಲಿಂಗ ಪೂಜೆ, ಜಂಗಮರಿಗೆ ಗೌರವ ತೋರುವುದು, ವಿಭೂತಿ ಹಚ್ಚಿಕೊಳ್ಳುವುದು, ರುದ್ರಾಕ್ಷವನ್ನು ಧರಿಸುವುದು, ಪಾದೋದಕವನ್ನು ತೆಗೆದುಕೊಳ್ಳುವುದು, ಪ್ರಸಾದವನ್ನು ಸ್ವೀಕರಿಸುವುದು ಮತ್ತು ಪಂಚಾಕ್ಷರ (ಓಂ ನಮಃ ಶಿವಾಯ)ವನ್ನು ಜಪಿಸುವುದು- ಇವೇ ಅಷ್ಟಾವರ್ಣಗಳು. ಅದನ್ನು ದೀಕ್ಷೆ ಪಡೆಯುವ ವೇಳೆಯಲ್ಲಿ ಉಪದೇಶಿಸಲಾಗುತ್ತದೆ. ಬಸವಣ್ಣನವರು ಭಕ್ತಿಮಾರ್ಗವೂ ಪ್ರತಿಪಾದಿಸಿದರು. ಜಾತಿ ಪದ್ಧತಿಯನ್ನು ಕಟುವಾಗಿ ವಿರೋಧಿಸಿದರು. ಮೇಲು ಜಾತಿ, ಕೀಳುಜಾತಿ, ಹೊಲೆಯ, ಮಾದಿಗ ಎಂಬ ಪ್ರಚಲಿತ ಸಮಾಜದ ವರ್ಗೀಕರಣಗಳನ್ನು ಅವರು ಒಪ್ಪಲಿಲ್ಲ. ಮೂರ್ತಿಪೂಜೆ, ತೀರ್ಥಯಾತ್ರೆಗಳು, ತೀರ್ಥಸ್ನಾನ, ಶಾಸ್ತ್ರಾದಿ ವಿಧಿಗಳು ಮುಂತಾದ ಮೂಢನಂಬಿಕೆಗಳನ್ನು ಅಲ್ಲಗಳೆದರು. ಭಕ್ತಿಯ ಮುಕ್ತಿಗಿಂತ ಮಿಗಿಲಾದುದೆಂದು ಹೇಳಿದರು. ಭಕ್ತಿಯೇ ಮುಕ್ತಿಯಿದ್ದಂತೆ ಎಂದು ವಿವರಿಸಿದರು. ದೇಹವನ್ನು ದಂಡಿಸುವುದರಲ್ಲಾಗಲೀ ಆಡಂಬರದ ಪೂಜೆಯಲ್ಲಾಗಲೀ ಅವರಿಗೆ ನಂಬಿಕೆಯಿರಲಿಲ್ಲ. ಶ್ರದ್ಧೆ ಮತ್ತು ನಿರ್ಮಲ ಹೃದಯದಿಂದ ಶಿವನ ಸಾನಿಧ್ಯವನ್ನು ಪಡೆಯಲು ಸಾಧ್ಯವಾಗುತ್ತದೆಂದು ಸಾರಿದರು. ಇಂದ್ರಿಯ ನಿಗ್ರಹಣಕ್ಕೆ ಮಹತ್ವ ನೀಡಿದರು. ಪುರುಷ ಸ್ತ್ರೀಯಲ್ಲಿ ಸಮಾನತೆ ಇರಬೇಕೆಂದು ಬಯಸಿದರು. ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿ ‘ಕಾಯಕವೇ ಕೈಲಾಸ’ ಎಂದು ಸಾರಿದರು.

೧೩

ಸಂಗಮ್ ಯುಗದ ಉತ್ತರಾರ್ಧದ ಚೋಳದ ಇತಿಹಾಸ ಅಸ್ಪಷ್ಟವಾಗಿದೆ. ಸಮಕಾಲೀನ ಸಾಮ್ರಾಜ್ಯಗಳ ಸಾಮಂತರಾಗಿ ಅಸ್ತಿತ್ವದಲ್ಲಿದ್ದರು. ಒಂಬತ್ತನೆಯ ಶತಮಾನದಲ್ಲಿ ವಿಜಯಾಲಯ (೮೫೦-೮೭೧) ಮುಕ್ತರೈಯಾರರಿಂದ ತಂಜಾವೂರನ್ನು ವಶಪಡಿಸಿಕೊಂಡು, ತನ್ನ ರಾಜಧಾನಿಯನ್ನು ಅಲ್ಲಿಗೆ ವರ್ಗಾಯಿಸಿ, ತಂಜಾವೂರು ಚೋಳ ಸಂತತಿಗೆ ಬುನಾದಿ ಹಾಕಿದನು. ವಿಜಯಾಲಯನ ಈ ಸಾಹಸ ಪಲ್ಲವ-ಪಾಂಡ್ಯರ ಹೋರಾಟವನ್ನು ಪ್ರಚೋದಿಸಿತು. ವಿಜಯಾಲಯನ ಮಗ ಆದಿತ್ಯ ಪಲ್ಲವರ ಪರವಾಗಿ ಪಾಂಡ್ಯರನ್ನು ೮೮೦ರಲ್ಲಿ ಶ್ರೀಪುರಂಬಿಯಂನಲ್ಲಿ ನಡೆದ ಕದನದಲ್ಲಿ ಸೋಲಿಸಿ ನಂತರ ಪಲ್ಲವರಾಜ ಅಪರಾಜಿತನನ್ನು ಸೋಲಿಸಿ, ಕಂಚಿ ಪ್ರದೇಶವನ್ನು ವಶಪಡಿಸಿಕೊಂಡು ಚೋಳರ ಸ್ವತಂತ್ರರಾಜ್ಯವನ್ನು ಸ್ಥಾಪಿಸಿದನು. ಆದರೆ ಈ ಎಳತಾದ ಸಾಮ್ರಾಜ್ಯ ಒಂದನೆಯ ಪರಾಂತಕನ ಆಳ್ವಿಕೆಯಲ್ಲಿ ಕಕ್ಕೋಲಂ ಪರಾಜಯದಿಂದ  ತಲ್ಲಣಿಸುತ್ತಾ ಸುಮಾರು ಮುವ್ವತ್ತು ವರ್ಷಗಳಿಗೂ ಮೀರಿ ಗೊಂದಲದಲ್ಲಿ ಸಿಲುಕಿತ್ತು. ಈ ಗೊಂದಲವನ್ನು ನಿವಾರಿಸಿ ಚೋಳರ ಪ್ರತಿಷ್ಠೆಯನ್ನು ಸ್ಥಾಫಿಸಿದ ಕೀರ್ತಿ ಒಂದನೆಯ ರಾಜರಾಜನಿಗೆ (೯೮೫-೧೦೧೪) ಸಲ್ಲುತ್ತದೆ.

ರಾಜರಾಜನು ಪಾಂಡ್ಯ, ಕೊಡಗು, ಗಂಗವಾಡಿ ಮೊದಲಾದ ಪ್ರದೇಶಗಳನ್ನು ಗೆದ್ದುಕೊಂಡು ತುಂಗಭದ್ರೆಯನ್ನು ರಾಜ್ಯದ ಉತ್ತರ ಗಡಿಯನ್ನಾಗಿಸಿದನು. ದಕ್ಷಿಣದಲ್ಲಿ ಚೇರರು ಮತ್ತು ಶ್ರೀಲಂಕದ ದೊರೆಗಳನ್ನು ಸೋಲಿಸಿ ಮಾಲ್ಡೀವ್ ದ್ವೀಪಗಳನ್ನು ವಶಪಡಿಸಿಕೊಂಡನು. ಆಧುನಿಕ ಆಡಳಿತದಲ್ಲಿ ಕಂಡುಬರುವ  ಕಾರ್ಯದರ್ಶಿಗಳಿಗೆ ಸಮಾನವಾದ ಅಧಿಕಾರವರ್ಗದವರನ್ನು ನೇಮಿಸಿ ಸುವ್ಯಸ್ಥಿತವಾದ ಆಡಳಿತವನ್ನು ರೂಪಿಸಿದನು. ಭೂಕಂದಾಯದ ನಿರ್ಧಾರಕ್ಕಾಗಿ ಜಮೀನಿನ ಕ್ರಮವಾದ ಮೋಜಣಿಗೆ ವ್ಯವಸ್ಥೆ ಮಾಡಿದನು. ಶಕ್ತಿಯುತವಾದ ಸೈನ್ಯ ಹಾಗೂ ನೌಕಾದಳವನ್ನು ನಿರ್ಮಿಸಿದನು. ಶಾಸನಗಳಿಗೆ ಐತಿಹಾಸಿಕ ಪೀಠಿಕೆಗಳನ್ನು ಸೇರಿಸುವ ಕ್ರಮವನ್ನು  ಜಾರಿಗೆ ತಂದನು. ಸುಮಾತ್ರದ ಶೈಲೇಂದ್ರ ದೊರೆ ನಾಗಪಟ್ಟಣದಲ್ಲಿ ಬೌದ್ಧ ವಿಹಾರ ನಿರ್ಮಿಸಲು ನೆರವಾದನು. ಶಿವಭಕ್ತನಾದ ಆತನು “ಶಿವಪಾರಶೇಖರ” ಎಂಬ ಬಿರುದನ್ನು ಧರಿಸಿದ್ದನಲ್ಲದೆ ತಂಜಾವೂರಿನಲ್ಲಿ ಪ್ರಸಿದ್ಧ ರಾಜರಾಜೇಶ್ವರ ( ಈಗಿನ ಬೃಹದೇಶ್ವರ) ದೇವಾಲಯವನ್ನು ನಿರ್ಮಿಸಿದನು. ಇದು ೧೦೧೦ರಲ್ಲಿ ಪೂರ್ಣಗೊಂಡಿತು.

ತಂದೆಗೆ ತಕ್ಕವನಾದ ಮಗ ಒಂದನೆಯ ರಾಜೇಂದ್ರ, ಉತ್ತರ ಭಾರತದ ಮೇಲೆ ದಂಡೆತ್ತಿ ಹೋಗಿ ಉತ್ತರ ಬಂಗಾಳದ ದೊರೆ ಗೋವಿಂದಚಂದ್ರ, ಪಶ್ಚಿಮ ಬಂಗಾಳದ ಒಂದನೆಯ ಮಹೀಪಾಲ ಮತ್ತು ದಕ್ಷಿಣ ಬಂಗಾಳ ರಾಣಾಸುರರನ್ನು ಸೋಲಿಸಿ, ಗಂಗಾನದಿಯನ್ನು ಎರಡು ಸಲ ದಾಟಿ, ಗಂಗಾಕಣಿವೆಯ ವಿಜಯದ ನೆನಪಿಗಾಗಿ “ಗಂಗೈಕೊಂಡಚೋಳ” ಎಂಬ ಬಿರುದನ್ನು ಧರಿಸಿದನಲ್ಲದೆ  “ಗಂಗೈಕೊಂಡಚೋಳಪುರಂ” ಎಂಬ ಹೊಸ ರಾಜಧಾನಿಯನ್ನು ಸ್ಥಾಪಿಸಿ, ಶಿವದೇವಾಲಯವನ್ನು ಕಟ್ಟಿಸಿದನು. ಆತನ ಪ್ರಸಿದ್ಧ ಸಾಹಸವೆಂದರೆ, ೧೦೨೫ರ ಕಡಾರಂ ಮತ್ತು ಶ್ರೀವಿಜಯದ ಮೇಲಿನ ನೌಕಾ ದಂಡಯಾತ್ರೆ. ಬಂಗಾಳ ಕೊಲ್ಲಿಯನ್ನು ದಾಟಿ ಸುಮಾತ್ರ ಮತ್ತು ಮಲಯದ ಮೇಲೆ ವಿಜಯ ಸಾಧಿಸಿ, ಮಣಿಗ್ರಾಮಗಳು ಎಂಬ ವ್ಯಾಪಾರಿ ಸಂಘವನ್ನು ಸ್ಥಾಪಿಸಿದನು. ದಕ್ಷಿಣಭಾರತ ಮತ್ತು ಶ್ರೀಲಂಕಗಳಲ್ಲಿ ಚೋಳರ ಆಧಿಪತ್ಯವನ್ನು ಬಲಗೊಳಿಸಿದನು.

ರಾಜೇಂದ್ರನ ನಂತರ ಆತನ ಮೂರು ಮಕ್ಕಳು, ಒಂದನೆಯ ರಾಜಾಧಿರಾಜ, ಎರಡನೆಯ ರಾಜೇಂದ್ರ ಮತ್ತು ಒಂದನೆಯ ವೀರರಾಜೇಂದ್ರ ಅನುಕ್ರಮವಾಗಿ ಆಳಿದರು. ವೀರರಾಜೇಂದ್ರನ ಮಗ ಅಧಿರಾಜೇಂದ್ರನ ಅಸ್ವಾಭಾವಿಕ ಮರಣದಿಂದಾಗಿ ಉತ್ತರಾಧಿಕಾರಿಗಳು ಇಲ್ಲದಿದ್ದಾಗ ವೆಂಗಿಯ ರಾಜ ರಾಜೇಂದ್ರನು ಒಂದನೆಯ ಕುಲೋತ್ತುಂಗ ಎಂಬ ಹೆಸರನ್ನು ಧರಿಸಿ, ಎರಡು ರಾಜ್ಯಗಳನ್ನು ಒಂದುಗೂಡಿಸಿ ಚೋಳ ಸಿಂಹಾಸನವನ್ನು ಏರಿದನು. ಆತನು ಚೋಲ ರಾಜ್ಯಕ್ಕೆ ಹೊಸ ಜೀವನವನ್ನು ಕೊಟ್ಟನಲ್ಲದೆ, ಕಳಿಂಗದ ಮೇಲೆ ದಿಗ್ವಿಜಯ ಸಾಧಿಸಿ, ತನ್ನ ಪ್ರಜೆಗಳಿಗೆ ಸುಮಾರು ಒಂದು ಶತಮಾನದ ನೆಮ್ಮದಿ ಹಾಗೂ ಉತ್ತಮ ಸರ್ಕಾರವನ್ನು ನೆಲೆಸಿದನು.

ಒಂದನೆಯ ಕುಲೋತ್ತುಂಗನ ನಂತರ ವಿಕ್ರಮ ಚೋಳ, ಇಮ್ಮಡಿ ಕುಲೋತ್ತುಂಗ, ಇಮ್ಮಡಿ ರಾಜಾರಾಜ ಮತ್ತು ಇಮ್ಮಡಿ ರಾಜಾಧಿರಾಜ ಅನುಕ್ರಮವಾಗಿ ಆಳಿದರು. ಪಾಂಡ್ಯ ರಾಜ್ಯದಲ್ಲಿ ಉಂಟಾದ ದಾಯಾದಿ ಕಲಹ ಇಮ್ಮಡಿ ರಾಜಾಧಿರಾಜನ ಕಾಲದಲ್ಲಿ ಕೊನೆಗೊಂಡಿತು. ರಾಜಾಧಿರಾಜನ ನಂತರ ಚೋಳರ ಕೊನೆಯ ಪ್ರಮುಖ ದೊರ ಮುಮ್ಮಡಿ ಕುಲೋತ್ತುಂಗ (೧೧೭೮-೧೨೧೬) ಸಿಂಹಾಸನಕ್ಕೆ ಬಂದನು. ಈ ವೇಳೆಗೆ ಪಾಂಡ್ಯನು ಪ್ರಾಬಲ್ಯಕ್ಕೆ ಬಂದು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಪಾಂಡ್ಯ ದೊರೆ ಜಟಾಜರ್ಮನ್ ಕುಲಶೇಖರನ ವಿರುದ್ಧ ಯಶಸ್ಸು ಗಳಿಸಿದರೂ ಮಾರವರ್ಮನ್‌ಸುಂದರಪಾಂಡ್ಯನ್‌ಕೈಲಿ ಸೋತು ಸಿಂಹಾಸನದ ರಕ್ಷಣೆಗಾಗಿ ಹೊಯ್ಸಳರ ನೆರವನ್ನು ಪಡೆಯಬೇಕಾಯಿತು. ಆತನ ಉತ್ತರಾಧಿಕಾರಿ ಮುಮ್ಮಡಿ ರಾಜರಾಜನ (೧೨೧೬-೧೨೪೬) ಆಳ್ವಿಕೆಯಲ್ಲಿ ಪಾಂಡ್ಯರು ಚೋಳರನ್ನು ಧ್ವಂಸಗೊಳಿಸಲು ಪ್ರಾರಂಭಿಸಿದ ಪ್ರಯತ್ನ ಮುಮ್ಮಡಿ ರಾಜೇಂದ್ರನ (೧೨೪೬-೧೨೭೯) ಆಳ್ವಿಕೆಯಲ್ಲಿ ಪೂರ್ಣಗೊಂಡು ತಮಿಳುನಾಡಿನ ಅಧಿಪತಿಗಳಾದರು.

ಚೋಳರು  ಸಮರ್ಥವಾದ ಆಡಳಿತವನ್ನು ವ್ಯವಸ್ಥೆಗೊಳಿಸಿದ್ದರು. ಕೇಂದ್ರಾಡಳಿತವನ್ನು ರಾಜನ ನೇತೃತ್ವದಲ್ಲಿ ವ್ಯವಸ್ಥಿತವಾದ ಅಧಿಕಾರ ವರ್ಗ ನಿರ್ವಹಿಸುತ್ತಿತ್ತು. ಸುಸಜ್ಜಿತವಾದ ಸೈನ್ಯ ಮತ್ತು ನೌಕಾದಳವನ್ನು ರೂಪಿಸಿದ್ದರು. ಗ್ರಾಮಸಭೆಗಳು ಸ್ವಾಯತ್ತವಾಗಿದ್ದು ಚುನಾಯಿತ ಸದಸ್ಯರೂ ಕೇಂದ್ರ ಸರ್ಕಾರದ ಮಧ್ಯ ಪ್ರವೇಶವಿಲ್ಲದೆ, ಗ್ರಾಮಾಡಳಿತವನ್ನು ನಿರ್ವಹಿಸುತ್ತಿದ್ದರು. ಒಂದನೆಯ ಪರಾಂತಕನ ಉತ್ತರಮೇರೂರು ಶಾಸನಗಳು ಈ ಕರ್ತವ್ಯಗಳನ್ನು ಕುರಿತಾದ ವಿವರಣಗಳನ್ನೊಳಗೊಂಡಿವೆ. ಫಲವತ್ತತೆಯ ಆಧಾರದ ಮೇಲೆ ಜಮೀನನ್ನು ವಿಭಜಿಸಿ, ಕಂದಾಯವನ್ನು ನಿಗದಿಪಡಿಸಿ ನಗದು ಅಥವಾ ವಸ್ತುರೂಪದಲ್ಲಿ ವಸೂಲಿಸುತ್ತಿದ್ದರು. ನ್ಯಾಯಾಡಳಿತವು  ದಯಾಪರತೆಯಿಂದ  ಕೂಡಿದ್ದಿತ್ತು.

ಸಮಾಜದಲ್ಲಿ ಕಂಡುಬರುತ್ತಿದ್ದ ವೈಶಿಷ್ಟ್ಯವೆಂದರೆ ವಲಂಗೈ (ಬಲಗೈ) ಮತ್ತಿ ಇಡಂಗೈ (ಎಡಗೈ) ನಡುವಣ ಹೋರಾಟ. ಈ ಜಾತಿಗಳು ಕೈಗಾರಿಕ ವರ್ಗಗಳ ಭಾಗಗಳಾಗಿದ್ದವು. ಸ್ತ್ರೀಯರ ಸ್ಥಾನಮಾನದಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವುದಿಲ್ಲ. ವಿದೇಶಿವ್ಯಾಪಾರ ಸಂಘಗಳ ನಿಯಂತ್ರಣದಲ್ಲಿತ್ತು. ಹಿಂದೂ ಹಾಗೂ ಜೈನ, ಬೌದ್ಧ ಧರ್ಮಗಳೂ ಪ್ರಚಲಿತದಲ್ಲಿದ್ದವು. ಏನ್ನಾಯಿರಂ, ತಿಭುವನಿ, ತಿರುಮುಕ್ಕೂಡಲ್ ಮತ್ತು ತಿರುವದುತುರೈ ಪ್ರಸಿದ್ಧ ವಿದ್ಯಾಕೇಂದ್ರಗಳನ್ನು ಹೊಂದಿದ್ದವು. ದೇವಾಲಯಗಳು ಧಾರ್ಮಿಕ ಶಿಕ್ಷಣದ ಕೇಂದ್ರಗಳಾಗಿದ್ದವು. ತಮಿಳು ಸಾಹಿತ್ಯ ತನ್ನ ರಜತ ಯುಗವನ್ನು ಚೋಳರ ಕಾಲದಲ್ಲಿ ಕಂಡಿತು. ಆ ಯುಗದ ಪ್ರಮುಖ ಕೃತಿಗಳೆಂದರೆ ತಿರುತ್ತಕ್ಕದೇವರ ಶಿವಕಸಿಂದಾಮಣಿ, ಕಂಬನ್‌ನ ರಾಮಾಯಣ, ಸೆಕ್ಕಿಲಾರ್‌ನ ಪೆರಿಯಪುರಾಣಂ ಅಥವಾ ತಿರುತ್ತೊಂಡಾರ್ ಪುರಾಣಂ. ತಂಜಾವೂರು ಮತ್ತು ಗಂಗೈಕೊಂಡ ಚೋಳಪುರಂನ ಶಿವದೇವಾಲಯಗಳೂ ದ್ರಾವಿಡ ಶೈಲಿಯ ವಿಕಸನದ ಉದಾಹರಣೆಗಳಾಗಿವೆ. ಬೃಹದೇಶ್ವರ ದೇವಾಲಯದ ವಿಮಾನ ವೈಭವಯುತವಾಗಿದೆ. ಕುಶಲಕರ್ಮಿಗಳು ಲೋಹವನ್ನು ಎರಕ ಹುಯ್ಯುವುದರಲ್ಲಿ ಉನ್ನತ  ಪರಿಣತಿ ಪಡೆದಿದ್ದರೆಂಬುದಕ್ಕೆ ವಿಶ್ವವಿಖ್ಯಾತ ನಟರಾಜ ಪ್ರಸಿದ್ಧವಾಗಿದೆ.

೧೪

ರಾಷ್ಟ್ರಕೂಟರು ಮತ್ತು ಚಾಲುಕ್ಯರಿಗೆ ಸಾಮಂತರಾಗಿದ್ದ ದೇವಗಿರಿಯ ಸೇವುಣರು (ಯಾದವರು) ಸುಮಾರು ಹನ್ನೆರಡನೆಯ ಶತಮಾನದ ಅಂತ್ಯದ ವೇಳೆಗೆ ಪ್ರವರ್ಧಮಾನಕ್ಕೆ ಬಂದರು. ದೃಡಪ್ರಹಾರನು ಈ ಮನೆತನದ ಮೂಲ ಪುರಷ. ಆತನ ಮಗ ಸೇವುಣಚಂದ್ರನು ತನ್ನ ವಂಶದ ಸ್ಥಾನಮಾನಗಳನ್ನು ಹೆಚ್ಚಿಸಿ ಮಹಾಮಂಡಲೇಶ್ವರ ಸ್ಥಾನಕ್ಕೆ ಏರಿಸಿದನು. ಐದನೆಯ ಭಿಲ್ಲಮನ ಕಾಲದಲ್ಲಿ ಸೇವುಣರು ಸ್ವತಂತ್ರರಾದರು. ತನ್ನ ದಿಗ್ವಿಜಯದಲ್ಲಿ ಕಲ್ಯಾಣ,  ಕಿಸುಕಾಡುನಾಡು, ತರ್ದವಾಡಿ, ಬೆಳ್ವಲ ಮೊದಲಾದ ಪ್ರದೇಶಗಳನ್ನು ಗೆದ್ದುಕೊಂಡನು. ಉತ್ತರದಲ್ಲಿ ಪಾರಮಾರರು, ಗುಜರಾತಿನ ಚಾಲುಕ್ಯರು ಮತ್ತು ಚೌಹಾನರನ್ನು ಸೋಲಿಸಿದನು.  ಹೊಯ್ಸಳ ವೀರಬಲ್ಲಾಳನಿಂದ ಸೊರಟೂರು ಕದನಲ್ಲಿ ಪರಾಜಯಗೊಂಡು ನಂತರ ತೀರಿಕೊಂಡನು. ಆತನು ದೇವಗಿರಿಯನ್ನು ನಿರ್ಮಾಣ ಮಾಡಿ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನೆಂದು ಹೇಮಾದ್ರಿ ಹೇಳಿದ್ದಾನೆ. ಆತನ ಮಗ ಜೈಕುಗಿಗೆ ಹೊಯ್ಸಳರನ್ನು ದಂಡಿಸಲಾಗದಿದ್ದರೂ ಕಾಕತೀಯರ ವಿರುದ್ಧ ಯಶಸ್ಸು ಗಳಿಸಿದನು.

ಸಿಂಘಣನು ಈ ವಂಶದ ಮಹತ್ವಪೂರ್ಣ ವ್ಯಕ್ತಿ. ೧೨೧೧ ರಲ್ಲಿ ವೀರಬಲ್ಲಾಳನ ಮೇಲೆ ಯುದ್ಧ ಘೋಷಿಸಿ ಬೆಳ್ಳಿಗ್ರಾಮ ಒಂದಳಿಕೆ ಮತ್ತು ಉದ್ದರೆ ಕದನಗಳಲ್ಲಿ ಸೋಲಿಸಿದನಲ್ಲದೆ ತನ್ನ ವಿಜಯಿ ಸೈನ್ಯವನ್ನು ಕಾವೇರಿಯವರೆಗೂ ನುಗ್ಗಿಸಿದನು. ಕಾಕತೀಯರ ಮೇಲೆ ಜಯ ಗಳಿಸಲು ಆತನಿಗೆ ಸಾಧ್ಯವಾಗಲಿಲ್ಲ ಮತ್ತು ಉತ್ತರ ಭಾರತದ ದಿಗ್ವಿಜಯ ಹೆಚ್ಚು ಫಲಕಾರಿಯಾಗಿರಲಿಲ್ಲ.

ಸಿಂಘಣನ ಮೊಮ್ಮಗ ಕೃಷ್ಣ ತಾತನಿಂದ ಪಡೆದ ಸಾಮ್ರಜ್ಯಕ್ಕೆ ಕೆಲವು ಪ್ರದೇಶಗಳನ್ನು ಸೇರಿಸಿ ವಿಸ್ತರಿಸಿದನು. ಆತನ ಸಹೋದರ ಮಹಾದೇವ ಕೊಂಕಣದ ಶಿಲಾಹಾರರನ್ನು ಸೋಲಸಿ “ಕೊಂಕಣ ಚಕ್ರವರ್ತಿ” ಎಂಬ ಬಿರುದನ್ನು ಧರಿಸಿದನು. ಮಹಾದೇವನ ಮರಣಾನಂತರ ಅವನ ಮಗ ಅಮ್ಮಣ ಹಾಗೂ ಕೃಷ್ಣನ ಮಗ ರಾಮಚಂದ್ರನಿಗೂ ಯುದ್ಧ ಪ್ರಾರಂಭವಾಯಿತು. ರಾಮಚಂದ್ರನು ಅಮ್ಮಣನನ್ನು ಕೊಂದು ಸಿಂಹಾಸನವನ್ನೇರಿದನು.

ರಾಮಚಂದ್ರನ ಆಳ್ವಿಕೆಯಲ್ಲಿ ಕಾರಾದ ಆಡಳಿತಾಧಿಕಾರಿ ಅಲ್ಲಾವುದ್ದೀನ್ ಖಿಲ್ಜಿಯು ೧೨೩೪ರಲ್ಲಿ ದೇವಗಿರಿಯನ್ನು ಮುತ್ತಿ ಸೂರೆ ಹೊಡೆದನು. ರಾಮಚಂದ್ರನ ಮಗ ಸಂಕರದೇವನು ಯುದ್ಧವನ್ನು ಮುಂದುವರಿಸಿ ಸೋತು, ಹೆಚ್ಚಿನ ಕಪ್ಪ ಕಾಣಿಕೆಗಳನ್ನು ಖಿಲ್ಜಿಗೆ ಒಪ್ಪಿಸುವುದು ಅನಿವಾರ್ಯವಾಯಿತು. ಈ  ಸೋಲಿನ ಲಾಭ ಪಡೆದ ಕಾಕತೀಯ ಪ್ರತಾಪರುದ್ರ ಮತ್ತು ಮುಮ್ಮಡಿ ಬಲ್ಲಾಳ ಸೇವುಣರ ಪ್ರದೇಶಗಳನ್ನು ಆಕ್ರಮಿಸತೊಡಗಿದರು. ೧೩೦೭ರಲ್ಲಿ ಕಾಫರನು ಸಂಕರನ್ನು ಸೋಲಿಸಿ, ಲೂಟಿಯೊಡನೆ ಹಿಂತಿರುಗಿದನು. ೧೩೧೦ ರಲ್ಲಿ ರಾಮಚಂದ್ರನ ಮರಣಾನಂತರ ಮತ್ತೊಮ್ಮೆ ದಾಳಿ ಸಂಕರನನ್ನು ಸೋಲಿಸಿ ಸೇವುಣ ರಾಜ್ಯವನ್ನು ದೆಹಲಿ ಸುಲ್ತಾನರ ಆಳ್ವಿಕೆಗೆ ಒಳಪಡಿಸಿದನು.

ಅಲ್ಲಾವುದ್ದೀನನ ಮರಣಾನಂತರದ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಘವನ ನೆರವಿನಿಂದ ರಾಮಚಂದ್ರನ ಅಳಿಯ ಹರಪಾಲದೇವನು ದೇವಗಿರಿಯ ಕೋಟೆಯನ್ನು ವಶಪಡಿಸಿಕೊಂಡು ಸ್ವಾತಂತ್ರ್ಯವನ್ನು ಸ್ಥಾಪಿಸಿದನು. ಇದು ಮೂರು ವರ್ಷಗಳು ಮಾತ್ರ ನಡೆಯಿತು. ಮುಬಾರಕ್ ಸುಲ್ತಾನನ ಆಪ್ತ ಸೇವಕ ಖುಸ್ರಾಮ್ ಆತನನ್ನು ಸೋಲಿಸಿ, ಹೊಸ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿ, ಮಲ್ಲಿಕ್ ಯಾಕ್ ಲಿಖಿಯನ್ನು ಪ್ರಾಂತಾಧಿಕಾರಿಯಾಗಿ ನೇಮಿಸಿದನು. ಹೀಗೆ ೧೩೧೮ರಲ್ಲಿ ಸೇವುಣರ ವೈಭವವು ಕೊನೆಗೊಂಡಿತು.

ಸೇವುಣರ ಆಡಳಿತ ಪದ್ಧತಿ ಸಮರ್ಥವಾಗಿತ್ತು. ಜಾತಿ ಪದ್ಧತಿಯಲ್ಲಿ ರೂಪಾಂತರವೇನೂ ಇರಲಿಲ್ಲ. ಜಾತೀಯತೆ ಯಾವ ಹುದ್ದೆಗಳಿಗೂ ಅಡ್ಡ ಬರುತ್ತಿರಲಿಲ್ಲ. ಸ್ತ್ರೀಯರ ಸ್ಥಾನಮಾನದಲ್ಲಿ ಯಾವ ಔನ್ಯತ್ಯವೂ ಇರಲಿಲ್ಲ. ಧರ್ಮಶಾಸ್ತ್ರದ ಬ್ರಾಹ್ಮಣ ವಿಧವೆಯರು ಪತ್ನಿಯಾಗಲು ಅವಕಾಶವಿರಲಿಲ್ಲ. ಆಸ್ತಿಯಲ್ಲಿ ಅಧಿಕಾರವಿರುತ್ತಿತ್ತು. ದೇವಗಿರಿಯು ಐಶ್ವರ್ಯ ಮತ್ತು ಸಂಮೃದ್ಧಿಗೆ ಹೆಸರಾಗಿತ್ತು. ವಸ್ತು ವಿನಿಮಯ ಪದ್ಧತಿಯು ಅಲ್ಪ ಪ್ರಮಾಣದ ವ್ಯವಹಾರವಾಗಿತ್ತು. ವ್ಯಾಪಾರ  ಮತ್ತು ಕೈಗಾರಿಕೆಗಳು ಸಂಘಗಳಿಂದ ವ್ಯವಸ್ಥಾಪಿಸಲಾಗುತ್ತಿದ್ದಿತು. ನೂತನ ವೈಷ್ಣವ ಪಂಥಗಳು ಈ ಕಾಲದಲ್ಲಿ ಅಭಿವೃದ್ಧಿಯನ್ನು ಪಡೆದವು. ಪಂಡರಾಪುರದ ವಿಠ್ಠಲ ಅಥವಾ ವಿಠೋಬ ಪಾಂಡುರಂಬ ಭಕ್ತಿ ಪಂಥದ ಕೇಂದ್ರವಾಗಿತ್ತು. ಸಾಹಿತ್ಯಕ್ಕೆ ಸೇವುಣರ ಕೊಡುಗೆ ಜ್ಯೋತಿಷ್ಯ ಗ್ರಂಥಗಳು. ಲಕ್ಷ್ಮೀಧರ, ಚಂಗಲದೇವ ಮತ್ತು ಅನಂತದೇವ ಆಸ್ಥಾನದ ಜ್ಯೋತಿಷ್ಯರು. ಶಾರ್ಙ್ಞದೇವನು ಸಂಗೀತ ರತ್ನಾಕರ ಎಂಬ ಸಂಗೀತ ಗ್ರಂಥವನ್ನು ರಚಿಸಿದನು. ಕನ್ನಡ ಕವಿ ಕಮಲಭವನು ಶಾಂತೇಶ್ವರ ಪುರಾಣವನ್ನು ರಚಿಸಿದನು. ಬಿಲ್ಹಣ ಪಂಡಿತ ಸೂಕ್ತಿ ಮುಕ್ತಾವಳಿ ಎಂಬ ಗ್ರಂಥವನ್ನು ರಚಿಸಿದನು. ಹೇಮಾದ್ರಿಯು ಆ ಕಾಲದ ಪ್ರಮುಖ ಗ್ರಂಥಕರ್ತ. ಚತುವರ್ಗ ಚಿಂತಾಮಣಿ, ಕಾಲ ನಿರ್ಣಯ, ತಿಥಿ ನಿರ್ಣಯ, ಪರ್ಜನ್ಯ ಪ್ರಯೋಗ, ತ್ರಿಸ್ಥಲವಿಧಿ, ಆಯುರ್ವೇದ ರಸಾಯನ, ದಾನ ವಾಕ್ಯಾವಲಿ, ಅರ್ಧಕಾಂಡ ಮತ್ತು ಹರಿಲೀಲ ಆತನ ಕೃತಿಗಳು. ಹೀಗೆ ಅನವರತ ಹೋರಾಟಗಳ ನಡುವೆಯೂ ಸೇವುಣರು ಸಾಂಸ್ಕೃತಿಯ ಪ್ರಗತಿಯನ್ನು  ಕಡೆಗಣಿಸಲಿಲ್ಲ.

೧೫

ಕರ್ನಾಟಕದ ಮತ್ತೊಂದು ಪ್ರಸಿದ್ಧ ರಾಜಮನೆತನದ ಹೊಯ್ಸಳರದು. ಶಾಸನಗಳ ಪ್ರಕಾರ ಈ ವಂಶದ ಮೂಲ ಪುರುಷ ಸಳ. ಈಗಿನ ಮೂಡಗೆರೆ ತಾಲ್ಲೂಕಿನ ಸೊಸೆವೂರು ಅಥವಾ ಶಶಕಪುರ ಅವರ ರಾಜಧಾನಿಯಾಗಿತ್ತು. ಕಲ್ಯಾಣದ ಚಾಲುಕ್ಯರ ಸಾಮಂತರಾಗಿ ವಿನಯಾದಿತ್ಯನ ಕಾಲದಲ್ಲಿ ಅಭಿವೃದ್ಧಿ ಹೊಂದಿದರು. ಆತನ ಮೊಮ್ಮಗ ವಿಷ್ಣುವರ್ಧನನ ಆಳ್ವಿಕೆಯಲ್ಲಿ (೧೧೦೬-೧೧೫೨) ಹೆಚ್ಚು ಪ್ರಖ್ಯಾತರಾದರು. ೧೧೧೩ರಲ್ಲಿ ಗಂಗವಾಡಿಯನ್ನು ವಶಪಡಿಸಿಕೊಂಡು ಕರ್ನಾಟಕವನ್ನು ಚೋಳರ ಆಧಪತ್ಯದಿಂದ ಮುಕ್ತಿಗೊಳಿಸಿದನು. ಸಂಪನ್ಮೂಲಗಳಿಗೆ ಹೆಸರಾದ ಪಶ್ಚಿಮ ತೀರ ಪ್ರದೇಶಗಳನ್ನು  ವಶಪಡಿಸಿಕೊಂಡು ಬಂಕಾಪುರದಲ್ಲಿ ಬೀಡುಬಿಟ್ಟನು. ಹೊಯ್ಸಳರ ಸಾರ್ವಭೌಮತ್ವವನ್ನು ಸ್ಥಾಪಿಸುವ ಯತ್ನ ಫಲಕಾರಿಯಾಗಲಿಲ್ಲ. ಹಾಸನ ಜಿಲ್ಲೆಯ ಕನ್ನೇಗಾ ಕದನದಲ್ಲಿ ಹಿನ್ನೆಡೆ ಪಡೆದು ವಿಕ್ರಮಾದಿತ್ಯ ಕೈಬಿಡಲಿಲ್ಲ. ನಾಮಮಾತ್ರವಾಗಿದ್ದ  ಚಾಲುಕ್ಯ ಸಾಮಂತತನವು ಆತನನ್ನು ಚುಚ್ಚಿತ್ತಿತ್ತು. ಮುಮ್ಮಡಿ ಸೋಮೇಶ್ವರನ ಕಾಲದಲ್ಲಿ  ದಂಗೆಯೆದ್ದು ೧೧೩೭ರಲ್ಲಿ ಹಾನಗಲ್ಲನ್ನು ವಶಪಡಿಸಿಕೊಂಡನು. ಇಮ್ಮಡಿ ಜಗದೇಕಮಲ್ಲನ  ಆಳ್ವಿಕೆಯಲ್ಲಿ ಗಂಗವಾಡಿ, ನೊಳಂಬವಾಡಿ, ಬನವಾಸಿ, ಹಾನಗಲ್ಲು, ಹೆದ್ದೊರೆಯವರೆಗೆ ಹುಲಿಗೆರೆಯನ್ನು ವಶಪಡಿಸಿಕೊಂಡು ತನ್ನ ನೆಲೆವೀಡಾದ ಬಂಕಾಪುರದಿಂದ ಆಳುತ್ತಿದ್ದನು. ಈ ವಿಜಯಗಳ ಸ್ಮರಣೆಗಾಗಿ  ವಿಷ್ಣುವರ್ಧನನು ತಲಕಾಡು, ಬೇಲೂರು, ಮೇಲುಕೋಟೆ, ಗದಗ ಮತ್ತು ಬಂಕಾಪುರದಲ್ಲಿ ವಿಜಯನಾರಾಯಣ ದೇವಾಲಯಗಳನ್ನು ಕಟ್ಟಿಸಿದನು. ವಿಶಿಷ್ಟಾದ್ವೈತದ ಪ್ರತಿಪಾದಕ ರಾಮಾನುಜಾಚಾರ್ಯರಿಗೆ ಆಶ್ರಯವಿತ್ತು, ಶ್ರೀ ವೈಷ್ಣವಧರ್ಮ ಕರ್ನಾಟಕದಲ್ಲಿ ಜನಪ್ರಿಯವಾಗಲು ಕಾರಣನಾದನು. ಈ ಕಾಲದಲ್ಲಿ ಜೈನ ವಿದ್ವಾಂಸರ ರಾಜೇಂದ್ರನು ಕ್ಷೇತ್ರಗಣಿತ ಮತ್ತು ಲೀಲಾವತಿ ಎಂಬ ಗಣಿತಶಾಸ್ತ್ರದ ಬಗ್ಗೆ ಗ್ರಂಥಗಳನ್ನು ರಚಿಸಿದನು.

ಆತನ ಮಗ ವಿಜಯನರಸಿಂಹನ (೧೧೫೨-೧೧೭೩) ದುರ್ಬಲತೆಯಿಂದಾಗಿ ಸೇವುಣರು ಮತ್ತೆ ಮೈಸೂರಿನ ಉತ್ತರ ಭಾಗಗಳನ್ನು ಆಕ್ರಮಿಸಿದರು. ಆತನ ಆಸ್ಥಾನದ ಕವಿ ಕೆರೆಯಪದ್ಮರಸ ಕನ್ನಡದಲ್ಲಿ ದೀಕ್ಷಾಬೋಧೆ ಮತ್ತು ಸಂಸ್ಕೃತದಲ್ಲಿ ಸುನಂದ ಚರಿತ್ರೆಯನ್ನು ರಚಿಸಿದನು. ಜನ್ನನ  ತಂದೆ ಸುಮನೋಬಾಣ ಮತ್ತು ಕನ್ನಡ ಕವಿ ಹರಿಹರ ಆತನ ಆಸ್ಥಾನದಲ್ಲಿದ್ದರು. “ದಕ್ಷಿಣದ ಚಕ್ರವರ್ತಿ” ಎಂಬ ಬಿರುದಾಂಕಿತ ಇಮ್ಮಡಿ ಬಲ್ಲಾಳ ಈ ವಂಶದ ಶ್ರೇಷ್ಠ ದೊರೆ. ಉಚ್ಚಂಗಿಯ ದುರ್ಗಮ್ಮ ಕೋಟೆಯನ್ನು ವಶಪಡಿಸಿಕೊಂಡು “ಶನಿವಾರಸಿದ್ಧಿ” ಮತ್ತು “ಗಿರಿದುರ್ಗಮಲ್ಲ” ಎಂಬ ಬಿರುದುಗಳನ್ನು ಧರಿಸಿದನು. ವಿಕ್ರಮಚೋಳ ಮತ್ತು ಇಮ್ಮಡಿ ಕುಲೋತ್ತುಂಗನನ್ನು ಸೋಲಿಸಿ ಕರ್ನಾಟಕದಿಂದ ಚೋಳರ ಆಳ್ವಿಕೆಯನ್ನು ನಿರ್ಮೂಲ ಮಾಡಿದನು. ಬನವಾಸಿ ಮತ್ತು ನೊಳಂಬವಾಡಿಯನ್ನು ವಶಪಡಿಸಿಕೊಂಡು ಸರಟೂರಿನಲ್ಲಿ ಸೇವುಣ ರಾಜನನ್ನು ಸೋಲಿಸಿ ಕಲ್ಯಾಣವನ್ನು ಸ್ವಾಧೀನಪಡಿಸಿಕೊಂಡನು. ಲೊಕ್ಕಿಗುಂಡಿ ಅಥವಾ ಲಕ್ಕುಂಡಿ ಬಲ್ಲಾಳನ  ಎರಡನೆಯ ರಾಜಧಾನಿಯಾಯಿತು. ಇಮ್ಮಡಿ ಚೋಳರಾಜನಿಗೆ ಸಿಂಹಾಸನವನ್ನು ದೊರಕಿಸಿಕೊಟ್ಟು ಚೋಳರಾಜ್ಯ ಪ್ರತಿಷ್ಠಾಪನಾಚಾರ್ಯ ಎಂಬ ಬಿರುದನ್ನು ಧರಿಸಿದನು. ಬಲ್ಲಾಳನ ಕೊನೆಯ ದಿನಗಳಲ್ಲಿ ಸೇವುಣರಾಜ ತುಂಗಭದ್ರೆಯ ಉತ್ತರ ಪ್ರದೇಶವನ್ನು ಗೆದ್ದುಕೊಂಡನು. ಬಲ್ಲಾಳನು ಸಾಹಿತ್ಯ ಪೋಷಕನಾಗಿದ್ದನು. ಜನ್ನನು ಯಶೋಧರ ಚರಿತೆ, ರುದ್ರಭಟ್ಟನು ಜಗನ್ನಾಥ ವಿಜಯ, ನೇಮಿನಾಥನು ಲೀಲಾವತಿ ಪ್ರಬಂಧಂ, ನೇಮಿನಾಥ ಪುರಾಣ (ಅರ್ಥನೇಮಿ) ರಚಿಸಿದರು.

ಬಲ್ಲಾಳನ ಮಗ ಇಮ್ಮಡಿ ನರಸಿಂಹ ಸೇವುಣರಾಜ ಮಹಾದೇವನನ್ನು ಸೋಲಿಸಿ, ಚೋಳರಾಜನ ನೆರವಿಗೆ ಧಾವಿಸಿ, ಶಂಭುನಾರಾಯನನ್ನು ಸೋಲಿಸಿ, ಚೋಳ ಆಡಳಿತವನ್ನು ಪುನಃ ವ್ಯವಸ್ಥಾಪಿಸಿದನು. ಕಾವೇರಿಯ ಉತ್ತರ ದಂಡೆಯ ಮೇಲೆ ಕಣ್ಣಾನೂರು ಎಂಬಲ್ಲಿ ಹೊಯ್ಸಳರ ರಾಜಧಾನಿಯನ್ನು ಸ್ಥಾಪಿಸಿ ದಕ್ಷಿಣ ಭಾರತವನ್ನು ನಿಯಂತ್ರಿಸಲು ಪ್ರಾರಂಭಿಸಿದನು. ಆತನು ಮಾರವರ್ಮಪಾಂಡ್ಯನು ಕಪ್ಪ ಕೊಡುವಂತೆ ಮಾಡಿದನೆಂದು ಗದ್ಯಕರ್ಣಾಮೃತವು ತಿಳಿಸುತ್ತದೆ.

ನರಸಿಂಹ ಮಗ ಸೋಮೇಶ್ವರ ರಾಜ್ಯವನ್ನು ಇಬ್ಭಾಗ ಮಾಡಿ ಕರ್ನಾಟಕದ ಜಿಲ್ಲೆಗಳನ್ನು ತನ್ನ ಮಗ ಮುಮ್ಮಡಿ ನರಸಿಂಹನಿಗೂ, ತಮಿಳು ಪ್ರದೇಶಗಳನ್ನು ಮತ್ತೊಬ್ಬ ಮಗ ರಾಮನಾಥನಿಗೂ ಹಂಚಿದನು. ನರಸಿಂಹನ ಮರಣಾನಂತರ ಪಟ್ಟಕ್ಕೆ ಬಂದ ಮುಮ್ಮಡಿ  ಬಲ್ಲಾಳನು ಎರಡು ಭಾಗಗಳನ್ನು ಒಟ್ಟಾಗಿಸಿದನು. ಸೇವುಣರಿಂದದ ಬನವಾಸಿ, ಸಂತಲಿಗೆ ಮತ್ತು ಕೋಗಲಿಗಳನ್ನು ಗೆದ್ದುಕೊಂಡನು. ದಕ್ಷಿಣದತ್ತ ತಿರುಗಿ ಪಾಂಡ್ಯದ ದಾಯಾದಿ ಕಲಹದಲ್ಲಿ ಮಧ್ಯ ಪ್ರವೇಶಿಸಿ ಕೊಂಡೈಮಂಡಲದ ಬಹುಪಾಲು ಪ್ರದೇಶಗಳನ್ನು, ಕಂಚಿಯೂ ಸೇರಿದಂತೆ, ತನ್ನದಾಗಿಸಿಕೊಂಡನು. ೧೩೧೦ರವರೆಗೆ ದಕ್ಷಿಣ ಭಾರತದಲ್ಲಿ ತನ್ನ ಸ್ಥಾನವನ್ನು ಉನ್ನತವಾಗಿಸಿಕೊಂಡಿದ್ದನು. ಬಲ್ಲಾಳನು ರಾಜಧಾನಿಯಲ್ಲಿಲ್ಲದಾಗ ೧೩೧೦ ರಲ್ಲಿ ಮಲ್ಲಿಕಾಫರನು ನಿರಾಯಾಸವಾಗಿ ದೋರಸಮುದ್ರನನ್ನು ವಶಪಡಿಸಿಕೊಂಡನು. ಕಾಫನರು ತಮಿಳುನಾಡಿನ ವಿರುದ್ಧ ದಂಡಯಾತ್ರೆಯನ್ನು ಮುಂದುವರಿಸಿದಾಗ ಬಲ್ಲಾಳನು ದ್ವಾರಸಮದ್ರವನ್ನು ಪುನಃ ಸ್ವಾಧೀನಪಡಿಸಿಕೊಂಡನಲ್ಲದೆ ತನ್ನ ಮಗ ವಿಜಯ ವಿರೂಪಾಕ್ಷನ ಹೆಸರಿನಲ್ಲಿ ಹಂಪಿಯ ಹತ್ತಿರ ಹೊಸ ರಾಜಧಾನಿ ವಿಜಯ ವಿರೂಪಾಕ್ಷಪುರವನ್ನು ಸ್ಥಾಪಿಸಿದನು. ಈ ರಾಜಧಾನಿಯು ನಂತರ ವಿಜಯನಗರವಾಯಿತು.

ತೊಗಲಕ್ ಸಂಸ್ಕೃತಿ ಅವನತಿ ವೇಳೆಗೆ ಮಧುರೆಯ ಸುಲ್ತಾನರಿಂದ ಆಳಲ್ಪಡುತ್ತಿತ್ತು.  ಈ ಸುಲ್ತಾನನು ಬಲಯುತವಾದ ರಕ್ಷಣಾಪಡೆಯೊಂದನ್ನು ಕಣ್ಣಾನೂರಿನಲ್ಲಿ ಸ್ಥಾಪಿಸಿದನು. ಈ ಪಡೆಯನ್ನು ಓಡಿಸಲು ಹೋರಾಟ ಪ್ರಾರಂಭಿಸಿ ಇನ್ನೇನು ಗೆಲುವು ದೊರೆಯಿತೆನ್ನುವಷ್ಟರಲ್ಲಿ ಬಲ್ಲಾಳನು ೧೩೪೨ರಲ್ಲಿ ಮಡಿದನು. ಆತನ ಸಾವಿನೊಂದಿಗೆ ಹೊಯ್ಸಳರ ವೈಭವಯುತ ಯುಗ ಅಂತ್ಯಗೊಂಡು ಮರೆಯಾಯಿತು.

ಆಡಳಿತ ಕ್ಷೇತ್ರದಲ್ಲಿ ಹೊಯ್ಸಳರ ವಿಶೇಷವೆಂದರೆ ಪಂಚಪ್ರಧಾನಿಗಳ ಮಂತ್ರಿ ಮಂಡಲದ ರಚನೆ. ಸಮಾಜದ ವರ್ಣ ಪದ್ಧತಿಯ ಅನುಸರಣೆ ಕಠಿಣವಾಗಿರಲಿಲ್ಲ. ದಂಡನಾಯಕರಾಗಿ  ಬ್ರಾಹ್ಮಣರು  ಮತ್ತು ವೈಶ್ಯರು ಆರಿಸಲ್ಪಟ್ಟಿದ್ದರು. ಕೆಳಜಾತಿಯವರು ತಮ್ಮ ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ವ್ಯಾಪಾರಿಗಳು, ಕಲ್ಲುಕುಟಿಗರು, ಕಂಚುಗಾರರು, ಅಕ್ಕಸಾಲಿಗರು, ಬಡಗಿಗಳು ಸಮಾಜದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿದ್ದರು. ತಮ್ಮ  ಸೇನಾಧಿಪತಿಗಳ ಮತ್ತು ದೊರೆಗಳ ಬಗ್ಗೆ ಸ್ವಾಮಿನಿಷ್ಠೆ ವ್ಯಕ್ತಪಡಿಸುವ ಗರುಡ ಪದ್ಧತಿ ಸಮಾಜದ ವಿಶೇಷತೆಯಾಗಿತ್ತು. ಸ್ತ್ರೀಯರು, ಮುಖ್ಯವಾಗಿ ರಾಣಿಯರು, ಆಡಳಿತ ಶ್ಲಾಘ್ಯವಾದ ಕಾರ್ಯ,  ಸಾಹಿತ್ಯ ಮತ್ತು ಕಲಾಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.  ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ದೊರೆಗಳ ಪೋಷಣೆಗೆ ಪಾತ್ರವಾಗಿದ್ದವು. ಜೈನಧರ್ಮವು ಪ್ರಬಲವಾಗಿದ್ದಿತು. ರಾಣಿ ಶಾಂತಲ ಜಾಗೂ ಪ್ರಸಿದ್ಧ ದಂಡನಾಯಕರು ಜೈನರಾಗಿದ್ದರು. ಪ್ರತ್ಯಭಿಜ್ಞೆ, ಪಾಶುಪತಿ ಮತ್ತು ಕಾಲಮುಖ ಶೈವಪಂಗಡಗಳು ಪ್ರಚಲಿತದಲ್ಲಿದ್ದವು. ರಾಮಾನುಜಾಚಾರ್ಯರು ೨೦ ವರ್ಷಗಳು ಕರ್ನಾಟಕದಲ್ಲಿ ತಂಗಿದ್ದುದು ಆ ಧರ್ಮದ ಜನಪ್ರಿಯತೆಗೆ ಕಾರಣವಾಯಿತು.

ಚಾಲುಕ್ಯ ವಾಸ್ತುಶಿಲ್ಪದ ಹೊಯ್ಸಳರ ಕಾಲದಲ್ಲಿ ಕೆಲವು ವೈಶಿಷ್ಟ್ಯಗಳನ್ನು ಪಡೆದು ಹೊಯ್ಸಳ ಶೈಲಿ ರೂಪಗೊಂಡಿತು. ಹೊಯ್ಸಳ ದೇವಾಲಯಗಳು ನಕ್ಷತ್ರಾಕಾರದಲ್ಲಿದ್ದು ಅವುಗಳನ್ನು ಏಕಕೂಟ, ದ್ವಿಕೂಟ, ತ್ರಿಕೂಟ, ಚತುಷ್ಕೂಟ ಮತ್ತು ಪಂಚಕೂಟಗಳೆಂದು ಗರ್ಭಗುಡಿಯ ಆಧಾರದ ಮೇಲೆ ವಿಭಜಿಸಲ್ಪಡುತ್ತವೆ. ಜಗತಿಯ ಮೇಲೆ ಪ್ರದಕ್ಷಿಣ ಪಥವಿರುವುದು ಈ ಶೈಲಿಯ ಒಂದು ವಿಶೇಷ. ಶಿಲ್ಪಕಲೆ, ಕುಶಲತೆ, ಸಂವೃದ್ಧಿ, ಗಹನವಾದ ಅಲಂಕಾರ ಮತ್ತು ಆಭರಣಗಳ ಭೂಷಣಕ್ಕೆ ಹೆಸರಾಗಿವೆ. ಶಿಲಾಬಾಲಿಕೆಗಳು ವಿಭಿನ್ನ ನೃತ್ಯದ ಭಂಗಿಗಳಲ್ಲಿದ್ದು, ಶಿಲ್ಪಗಳ ಜಟಿಲ ಮತ್ತು ನೈಪುಣ್ಯದ ಶಿಲ್ಪಕೌಶಲ್ಯಕ್ಕೆ ಸಾಕ್ಷಿಗಳಾಗಿವೆ. ಬೇಲೂರಿನ ಚನ್ನಕೇಶವ, ಹಳೇಬೀಡಿನ ಹೊಯ್ಸಳೇಶ್ವರ, ಸೋಮನಾಥಪುರದ ಕೇಶವ ದೇವಾಲಯಗಳು ಹೊಯ್ಸಳ ಪ್ರಸಿದ್ಧ ನಿರ್ಮಾನಗಳಾಗಿವೆ.

೧೬

ವಾರಂಗಲ್‌ನ ಕಾಕತೀಯರ ಐತಿಹಾಸಿಕ ವ್ಯಕ್ತಿ ಬೇಟ ಕಲ್ಯಾಣದ ಆರನೆಯ ವಿಕ್ರಮಾದಿತ್ಯದ ಸಾಮಂತನಾಗಿದ್ದನು. ಇಮ್ಮಡಿ ಪ್ರೊಲನು ಕೃಷ್ಣ ಗೋದಾವರಿ ನಡುವಣ ಪ್ರದೇಶವನ್ನು ವಶಪಡಿಸಿಕೊಂಡು ತನ್ನ ರಾಜ್ಯವನ್ನು ನಿರ್ಮಿಸಿ ಅನುವುಕೊಂಡವನ್ನು ರಾಜದಾನಿಯನ್ನಾಗಿ ಮಾಡಿಕೊಂಡನು. ಒಂದನೆಯ ಪ್ರತಾಪರುದ್ರ (೧೧೬೧-೧೧೮೫) ವಾರಂಗಲ್ ನಗರವನ್ನು ನಿರ್ಮಿಸಿ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಪ್ರತಾಪ ರುದ್ರನಿಗೆ ಮಕ್ಕಳಿಲ್ಲದ್ದರಿಂದ ಆತನ ಸಹೋದರ ಮಹಾದೇವ ಸಿಂಹಾಸನಕ್ಕೆ ಬಂದನು.  ಆತನು ಸೇವುಣರಾಜ ಜೈತುಗಿಯಿಂದ ಪರಾಭವಗೊಂಡನು.

ಮಹಾದೇವನ ಮಗ ಗಣಪತೆ (೧೧೯೯-೧೨೬೧) ಈ ವಂಶದ ಶ್ರೇಷ್ಠ ದೊರೆ. ಆತನು ತನ್ನ ೬೨ ವರ್ಷಗಳ ದೀರ್ಘ ಆಳ್ವಿಕೆಯಲ್ಲಿ ಉತ್ತಮ ಆಡಳಿತಗಾರ ಎಂಬ ಗೌರವಕ್ಕೆ ಪಾತ್ರನಾಗಿದ್ದನು. ವೆಲನಾಂತಿ ಚೋಡರ ಫಲವತ್ತಾದ ಪ್ರದೇಶಗಳನ್ನು ವಶಪಡಿಸಿಕೊಂಡು ನೆಲ್ಲೂರಿನ ತೆಲುಗು-ಚೋಡರನ್ನು ತನ್ನ ಅಧಿಪತ್ಯಕ್ಕೆ ಒಳಪಡಿಸಿದನು. ನಂತರ ಮುಮ್ಮಡಿ ಕುಲೋತ್ತುಂಗ ಮತ್ತು ಕಳಿಂಗದ ಮುಮ್ಮಡಿ ಅವಂಗ ಭೀಮನೊಂದಿಗೆ ಹೋರಾಡಿದನು.  ತೆಲುಗು-ಚೋಡರ ಪರವಾಗಿ ಜಟಾವರ್ಮನ್ ಸುಂದರ ಪಾಂಡ್ಯನೊಂದಿಗೆ ಹೋರಾಡಿ ಚೋಡ ತಿಕ್ಕನನ್ನು ನೆಲ್ಲೂರಿನ ಸಿಂಹಾಸನದಲ್ಲಿ ಸ್ಥಿರವಾಗಿ ನೆಲೆಸಿದನು. ಕಾಡವ ನಾಯಕ ಕೊಪ್ಪೆರುಂಜಿಂಗ ಗಣಪತಿಯ ಆಧಿಪತ್ಯಕ್ಕೆ ಸಮ್ಮತಿಸಿದನು.

ಗಣಪತಿಯು ತನ್ನ ಪುತ್ರಿ ರುದ್ರಾಂಬಾಳನ್ನು ತನ್ನ ಉತ್ತರಾಧಿಕಾರಿಯಾಗಿ ಘೋಷಿಸಿ, ಆಕೆಯನ್ನು ರುದ್ರದೇವ ಮಹಾರಾಜ ಎಂದು  ಕರೆಯಲಾರಂಭಿಸಿ, ತನ್ನ ಆಡಳಿತದಲ್ಲಿ ಭಾಗಿಯಾಗಿಸಿಕೊಂಡಿದ್ದನು. ಆಳ್ವಿಕೆಯ ದಿನಗಳಲ್ಲಿ ಕಂಡುಬರುತ್ತಿದ್ದ ತೊಂದರೆಗಳನ್ನು ಹತ್ತಿಕ್ಕಿದಳು. ಸೇವುಣ ಮಹಾದೇವನ ದಾಳಿಯನ್ನು ಹಿಮ್ಮೆಟ್ಟಿಸಿದಳು. ಆದರೆ ಸೇವುಣರು ತಮ್ಮ ಹೋರಾಟವನ್ನು ಮುಂದುವರಿಸಿದರು. ೧೨೮೦ರಲ್ಲಿ ತನ್ನ ಮೊಮ್ಮಗ  ಇಮ್ಮಡಿ ಪ್ರತಾಪರುದ್ರನನ್ನು ಯುವರಾಜನಾಗಿ ನೇಮಿಸಿಕೊಂಡು. ಆತನು ಹೊಯ್ಸಳರು ಮತ್ತು ಸೇವುಣರ ಬೆಂಬಲ ಪಡೆದ ಅಂಬದೇವನ ದಂಗೆಯನ್ನು  ೧೨೯೧ರಲ್ಲಿ ಅಡಗಿಸಿದನು. ರುದ್ರಾಂಬಾಳ ನಂತರ ಸಿಂಹಾಸನಕ್ಕೆ ಬಂದ ಇಮ್ಮಡಿ ಪ್ರತಾಪರುದ್ರ ( ೧೨೯೫-೧೩೨೬) ಕುಂತಲದ ದಂಡಯಾತ್ರೆಯನ್ನು ಪ್ರಾರಂಭಿಸಿ ಸೇವುಣರ ನಾಣ್ಯಗಳನ್ನು ಹೊರಹಾಕಿ  ಆದೋನಿ ಮತ್ತು ರಾಯಚೂರು ಕೋಟೆಗಳನ್ನು ವಶಪಡಿಸಿಕೊಂಡು, ಆ ಪ್ರದೇಶವನ್ನು ಮತ್ತೆ ಆಳ್ವಿಕೆಗೆ ಒಳಪಡಿಸಿದನು. ಹದಿಮೂರನೆಯ ಶತಮಾನದ ಆದಿಭಾಗದಲ್ಲಿ ಅಲ್ಲಾವುದ್ಧಿನನ ಯುದ್ಧ ಚಟುವಟಿಕೆಗಳು ದಖನ್‌ನಲ್ಲಿ ಅಪಾಯದ ಭೀತಿಯನ್ನು ಸೃಷ್ಟಿಸಿತು. ಪ್ರತಾಪರುದ್ರನು ದಕ್ಷಿಣದಲ್ಲಿ ದಂಡಯಾತ್ರೆಯ ಯೋಜನೆಯನ್ನು ಮುಂದೂಡಿ ತನ್ನ ರಾಜ್ಯವನ್ನು ಈ ಹೊಸ ಅಪಾಯದಿಂದ ರಕ್ಷಿಸಲು ಕಾರ್ಯತತ್ಪರನಾದನು. ೧೩೦೯-೧೩೧೦ರಲ್ಲಿ ಕಾಫರ್ ವಾರಂಗಲ್ ಮೇಲೆ ಅತಿಕ್ರಮಣ ಮಾಡಿದಾಗ ತನ್ನ ಭಂಡಾರವನ್ನು ಆತನಿಗೊಪ್ಪಿಸಿ ಶಾಂತಿಯನ್ನು ಖರೀದಿಸಿದನು. ಮುಸಲ್ಮಾನರ ಸೈನ್ಯ ತೆರವು ಮಾಡಿದ ಮೇಲೆ ತನ್ನ ದಕ್ಷಿಣದ ದಂಡಯಾತ್ರೆಯನ್ನು ಪ್ರಾರಂಭಿಸಿ ತಿರುಚಿನಾಪಲ್ಲಿಯವರೆಗೆ ಎಲ್ಲ ದೇಶಗಳನ್ನು ಆಕ್ರಮಿಸಿಕೊಂಡನು. ಆದರೆ ಈ ವಿಶಾಲವಾದ ಸಾಮ್ರಾಜ್ಯವನ್ನು ಬಹುಕಾಲದ ವರೆಗೆ ಅನುಭವಿಸುವ ಅದೃಷ್ಟವನ್ನು ಆತನು ಪಡೆದಿರಲಿಲ್ಲ. ೧೩೨೨ರಲ್ಲಿ ಮಹಮದ್ ಬಿನ್ ತೊಗಲಕ್ ವಾರಂಗಲ್ ಆಕ್ರಮಿಸಿ ಪ್ರತಾಪರುದ್ರನನ್ನು ಸೆರೆಹಿಡಿದನು. ಆನಂತರದ ಪ್ರತಾಪರುದ್ರ ಮತ್ತು ಆತನ ಉತ್ತರಾಧಿಕಾರಿಗಳ ರಾಜಕೀಯ ಚಟುವಟಿಕೆಗಳ ಕುರಿತಾಗಿ ಏನೂ ತಿಳಿಯದು. ಪ್ರತಾಪರುದ್ರನ ಆಸ್ಥಾನಕವಿ ವಿದ್ಯಾನಾಥನು ಪ್ರತಾಪರುದ್ರ-ಯಶೋಭೂಷಣವನ್ನು ರಚಿಸಿದನು. ಕಾಕತೀಯರು ಸಂಸ್ಕೃತ ಹಾಗೂ ತೆಲುಗು ಸಾಹಿತ್ಯವನ್ನು ಪೋಷಿಸಿದರು.