ಭಾರತದ ನಾಸಿಕದಂತಿದ್ದ ಸಿಂಧ್‌ನಲ್ಲಿ ರಾಜಕೀಯ ಪರಿಸ್ಥಿತಿ ಸಮರ್ಪಕವಾಗಿರಲಿಲ್ಲ. ಕ್ರಿ.ಶ. ೪೮೫ರಿಂದ ೬೨೨ರವರೆಗೆ ಸಿಂಧ್ ದೇಶವನ್ನು ಆಳುತ್ತಿದ್ದ ರೈ ಸಂತತಿಯನ್ನು ಕೊನೆಯ ದೊರೆ ಎರಡನೆಯ ರೈ ಸಾಹಸಿಯನ್ನು ಆತನ ಮಂತ್ರಿ ಚಾಚ್ ಪದಚ್ಯುತಗೊಳಿಸಿ, ಆತನ ವಿಧವೆಯನ್ನು ವಿವಾಹವಾಗಿ, ಸಿಂಹಾಸನವನ್ನು ಆಕ್ರಮಿಸಿದನು. “ಚಾಚ್ ನಾಮದ” ಪ್ರಕಾರ ಚಾಚನು (೬೨೨-೬೬೨) ಸಿಂಧ್ ಮೇಲೆ ತನ್ನ  ಪ್ರಭುತ್ವವನ್ನು ಸ್ಥಾಪಿಸಿದ ನಂತರ ಪಂಜಾಬಿನ ಕೆಲವು ಭಾಗಗಳು ಮತ್ತು ಬೆಲೂಚಿಸ್ತಾನ ಇವುಗಳನ್ನು ಗೆದ್ದುಕೊಂಡು ಅಲೋರ್‌ನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ನಂತರ ಆತನ ಸಹೋದರ ಚಂದರ್ ಸುಮಾರು ಏಳು ವರ್ಷಗಳವರೆಗೆ ಆಳಿದನು. ಆತನ ಮರಣಾನಂತರ ಚಾಚನ ಇಬ್ಬರು ಮಕ್ಕಳು ರಾಜ್ಯವನ್ನು ಇಬ್ಭಾಗ ಮಾಡಿಕೊಂಡು ಅಲೋರ್ ಮತ್ತು ಬ್ರಾಹ್ಮಣಾಬಾದ್‌ನಿಂದ ಆಳಲು ಪ್ರಾರಂಭಿಸಿದರು. ಅವರಲ್ಲಿ ಕಿರಿಯವನಾದ ದಹಾರ್ ಕ್ರಿ.ಶ.೭೦೦ರ ಸುಮಾರಿಗೆ ಎರಡು ಭಾಗಗಳನ್ನು ಒಂದುಗೂಡಿಸಿ ಆಳಲು ಪ್ರಾರಂಭಿಸಿದನು. ಆತನ ಆಳ್ವಿಕೆ ಅರಬ್ಬರ ದಾಳಿಯ ವಿಪತ್ತನ್ನು ಎದುರಿಸಬೇಕಾಯಿತು.

ಕ್ರಿ.ಶ. ೬೩೪ರಿಂದಲೇ ಸಿಂಧ್ ಆಕ್ರಮಿಸಲು ಅರಬ್ಬರು, ಅಯಶಸ್ವಿ ಪ್ರಯತ್ನಗಳನ್ನು ಮಾಡಿದ್ದರು. ೬೮೫ರಲ್ಲಿ ಮಕ್ರಾನ್ ವಶಪಡಿಸಿಕೊಂಡ ಅವರು ಮಹಮದ್‌ಬಿನ್‌ ಕಾಸಿಂನ ನಾಯಕತ್ವದಲ್ಲಿ ಪ್ರತೀಕಾರ ರೂಪದ ದಂಡಯಾತ್ರೆಯನ್ನು ಕಳುಹಿಸಿದರು. ದೇಬಲ್ ೭೧೨ರಲ್ಲಿ ವಶಪಡಿಸಿಕೊಂಡ ಕಾಸಿಂ ರವಾರ್‌ಕದನದಲ್ಲಿ ದಹಾರನನ್ನು ಕೊಂದು, ಬ್ರಾಹ್ಮಣಾಬಾದ್ ಮತ್ತು ಮುಲ್ತಾನ್‌ಗಳನ್ನು ೭೧೨ರಲ್ಲಿ ವಶಪಡಿಸಿಕೊಂಡರು. ಕನೌಜ್‌ನ ಮೇಲೆ ಆಕ್ರಮಣ ಮಾಡಬೇಕೆಂದು ಆಲೋಚಿಸುತ್ತಿದ್ದಾಗ ಕಾಸಿಂನನ್ನು ಖಲೀಫರ ಅನುಜ್ಞೆಯ ಮೇರೆಗೆ ೭೧೫ರಲ್ಲಿ ಕೊಲ್ಲಲಾಯಿತು.

ಸಿಂಧ್‌ನಲ್ಲಿದ್ದ ಖಲೀಫನ ಪ್ರಾಂತಾಧಾರಿಗಳು ಕಾಸಿಂನ ಕಾರ್ಯಾಚರಣೆಯನ್ನು ಮುಂದುವರಿಸಲಿಲ್ಲ. ಗೂರ್ಜರ ಪ್ರತೀಹಾರರು ಮತ್ತು ರಾಷ್ಟ್ರಕೂಟರ ವಿರೋಧವೂ ಇದಕ್ಕೆ ಕಾರಣವಾಗಿತ್ತು. ಹತ್ತನೆಯ ಶತಮಾನದಲ್ಲಿ ಸಿಂಧ್ ಅನ್ನು ಮುಲ್ತಾನ್ ಅಥವಾ ಮೇಲಿನ ಸಿಂಧ್ ಮತ್ತು ಮನ್‌ಸುರ ಅಥವಾ ಕೆಳಗಿನ ಸಿಂಧ್ ಎಂದು ಎರಡು ಭಾಗಗಳಾಗಿ ವಿಭಜಿಸಿಲಾಯಿತು. ಮಹಮ್ಮದ್‌ಘಜನಿಯು ೧೦೦೫ರಲ್ಲಿ ಮುಲ್ತಾನ್ ಮತ್ತು ೧೦೨೫ರಲ್ಲಿ ಮನ್‌ಸುರವನ್ನು ವಶಪಡಿಸಿಕೊಂಡನು.ಆತನ ಮರಣಾನಂತರ ಮುಲ್ತಾನ್ ಟರ್ಕರ ಸಾಮ್ರಾಜ್ಯಕ್ಕೆ ಸೇರಿಸಲ್ಪಟ್ಟಿತು. ಮನ್‌ಸುರದಲ್ಲಿ ಸುಮಾರು ಕ್ರಿ.ಶ.೧೦೩೦ರಲ್ಲಿ ರಜಪೂತ ರಾಜ ಸಂತತಿಯನ್ನು ಸ್ಥಾಪಿಸಿದರು.

ಅರಬ್ಬರ ಗೆಲವು “ಪರಿಣಾಮಗಳರಹಿತ ಒಂದು ವಿಜಯ” ಎಂದು ಪರಿಗಣಿಸಲಾಗಿದೆ. ಮೊದಲಿಗೆ ಅವರ ದಾಳಿಯು ಜೀವ, ಆಸ್ತಿಪಾಸ್ತಿ ಮತ್ತು ಲೋಕೋಪಯೋಗಿ ಸ್ಮಾರಕಗಳಿಗೆ ಹಾನಿಕಾರಕವಾಗಿತ್ತು. ಅವರದು ಕೇವಲ ವಿದೇಶಿ ರಾಜ್ಯವಾಗಿದ್ದುದರಿಂದ ಅರಬ್ಬರ ಆಸಕ್ತಿ ರಾಜಕೀಯ ಹಾಗೂ ಸೈನಿಕ ವ್ಯವಹಾರಗಳಲ್ಲಿ ಕೇಂದ್ರೀಕೃತವಾಗಿತ್ತು. ಪಂಚಾಯತ್ ವ್ಯವಸ್ಥೆ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮಧ್ಯ ಪ್ರವೇಶಿಸಲಿಲ್ಲ. ದೇವಾಲಯಗಳಲ್ಲಿ ಪೂಜೆ ಹಾಗೂ ನಾಶಹೊಂದಿದ ದೇವಾಲಯಗಳನ್ನು ಪುನರ್‌ನಿರ್ಮಿಸಲು ಉತ್ತೇಜನ ನೀಡಿದರು. ಭಾರತೀಯ ಮಹಿಳೆಯರನ್ನು ಮದುವೆಯಾಗಿ, ಭಾರತೀಯ ಕಟ್ಟಳೆಗಳನ್ನು ಮತ್ತು ಉಡಿಗೆ ತೊಡಿಗೆಗಳನ್ನು ಸ್ವೀಕರಿಸಿ, ಭಾರತೀಯ ಮುಸಲ್ಮಾನರು ಎಂಬ ಒಂದು ಹೋಸ ಸಮುದಾಯದ ಉದಯಕ್ಕೆ ಕಾರಣರಾದರು. ಅವರು ವ್ಯಾಪಾರಕ್ಕೆ ನೀಡಿದ ಪ್ರೋತ್ಸಾಹದಿಂದ ಮುಲ್ತಾನ್‌ಮತ್ತು ಸಮುದ್ರ ಬಂದರುಗಳು ಚೀನಾ, ಶ್ರೀಲಂಕಾ ಮತ್ತು ಪಶ್ಚಿಮ ಏಷಿಯಾದ ವ್ಯಾಪಾರದ ಕೇಂದ್ರಗಳಾದವು. ಈ ಸಂಬಂಧ ಭಾರತೀಯ ಚಿಂತನೆ ಹಾಗೂ ವಿಜ್ಞಾನದ ಯುರೋಪನ್ನು ತಲುಪಲು ಅನುಕೂಲವಾಯಿತು. ಚರಕಸಂಹಿತ ಮತ್ತು ಹಿತೋಪದೇಶಗಳನ್ನು ಅರಬ್ ಭಾಷೆಗೆ ಅನುವಾದಿಸಲಾಯಿತು. ಒಬ್ಬ ಅರಬ್ ಖಗೋಳಶಾಸ್ತ್ರಜ್ಞನು ಹತ್ತು ವರ್ಷಗಳವರೆಗೆ ವಾರಣಾಸಿಯಲ್ಲಿ ಭಾರತೀಯ ವಿಜ್ಞಾನದಲ್ಲಿ ಅಧ್ಯಯನ ಮಾಡಿದುದಕ್ಕೆ ದಾಖಲೆ ಇದೆ. ಎಂಟನೆಯ ಶತಮಾನದಲ್ಲಿ ಅನೇಕ ಭಾರತೀಯ ವಿದ್ವಾಂಸರು ಬಾಗ್ದಾದ್‌ಗೆ ತೆರಳಿ ಖಲೀಫರ ಪೋಷಣೆಗೆ ಪಾತ್ರರಾಗಿದ್ದರು. ಮಂಕ ಮತ್ತು ಸಲೇಹ್ ಎಂಬ ಇಬ್ಬರು ಭಾರತೀಯರು ಹರುಣ್‌ಅಲ್‌ರಶೀದ್‌ಖಲೀಫ್‌(೭೮೬-೮೦೯)ನ ಆಸ್ಥಾನದ ವೈದ್ಯರಾಗಿದ್ದರು. ಹೀಗೆ ಅರಬ್ಬರ ನೆಲವು ಸಾಂಸ್ಕೃತಿಕ ಪ್ರಸರಣಕ್ಕೆ ಅನುಕೂಲವಾಗಿತ್ತು.

ಹರ್ಷಯುಗದ ನಂತರ ಹಾಗೂ ಮುಸಲ್ಮಾನರ ದಾಳಿಗಳಿಗೆ ಮುಂಚಿನ ಈ ಮಧ್ಯಕಾಲವನ್ನು ರಜಪೂತರ ಯುಗವೆಂದು ಕರೆಯಲಾಗಿದೆ. ಅವರ ಮೂಲದ ಬಗ್ಗೆ ಒಮ್ಮತವಿಲ್ಲ. ಉತ್ತರ ಭಾರತದ ರಾಜಕೀಯದಲ್ಲಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿ ಅನೇಕ ಸಂಸ್ಥಾನಗಳನ್ನು ಆಳುತ್ತಿದ್ದರು. ಆಡಳಿತ ವ್ಯವಸ್ಥೆಯ ಅಗ್ರಸ್ಥಾನದಲ್ಲಿ ರಾಜನಿದ್ದನು. ಸಾಮಂತರು ಅಥವಾ ಜಾಗೀರ್‌ದಾರರು ಆತನ ಕೆಳಗಿನ ಸ್ಥಾನವನ್ನು ಅಲಂಕರಿಸಿದ್ದು ತುರ್ತುಪರಿಸ್ಥಿತಿಯಲ್ಲಿ ರಾಜನಿಗೆ ಸೈನಿಕ ನೆರವು ನೀಡುತ್ತಿದ್ದರು. ಇದು ಊಳಿಗಮಾನ್ಯ ಪದ್ಧತಿಯನ್ನು ಬಲಗೊಳಿಸಿತು. ರಾಜರುನಿಯತ ಅಧಿಕಾರ ವರ್ಗವನ್ನು ಹೊಂದಿದ್ದರು. ಬ್ರಾಹ್ಮಣ ವರ್ಗಕ್ಕೆ ಸೇರಿದ ಈ ಅಧಿಕಾರಿಗಳನ್ನು ಕಾಯಸ್ಥರೆಂದು ಕರೆಯುತ್ತಿದ್ದರು. ಗ್ರಾಮೀಣ ಜೀವನದಲ್ಲಿ ಪಂಚಾಯತ್ ಪ್ರಮುಖ ಪಾತ್ರವನ್ನು ವಹಿಸಿದ್ದಿತು.

ರಜಪೂತರ ಸಮಾಜದಲ್ಲಿ ಬ್ರಾಹ್ಮಣರು ಪ್ರಮುಖ ಸ್ಥಾನವನ್ನು ಹೊಂದಿದ್ದು ಮರಣ ಶಿಕ್ಷೆಯಿಂದ ಹೊರತಾಗಿದ್ದರು. ಭಟ್ ಮತ್ತು ಚರಣ್‌ಆಸ್ಥಾನದ ಹಾಡುಕವಿಗಳಾಗಿದ್ದರು. ರಜಪೂತ ಮಹಿಳೆಯರು ರಜಪೂತರ ಉನ್ನತ ಸಂಸ್ಕೃತಿಯನ್ನು ಆಧಾರಸ್ತಂಭಗಳಾಗಿದ್ದರು. ಅವರು ಮಾನ ರಕ್ಷಣೆಗಾಗಿ ಜೊಹಾರ್ ಮತ್ತು ವಿಧವತ್ವವನ್ನು ತಪ್ಪಿಸಿಕೊಳ್ಳಲು ಸತಿಪದ್ಧತಿಯನ್ನು ಅನುಸರಿಸುತ್ತಿದ್ದರೆಂದು ಹೇಳಲಾಗಿದೆ. ಈಗ ರಾಜಸ್ಥಾನದಲ್ಲಿ ಕಂಡುಬರುವ ಸತಿಸತ್ತ ಕಲ್ಲುಗಳು ಇದಕ್ಕೆ ಸಾಕ್ಷಿಯಾಗಿವೆ. ಹೆಣ್ಣು ಶಿಶುವಿಗೆ ಬಗ್ಗೆ ಹೇಸಿಗೆಯಿಂದ ಇರುತ್ತಿದ್ದರಲ್ಲದೆ, ಅವುಗಳು ಹುಟ್ಟಿದಾಕ್ಷಣ ಕೊಲ್ಲುತ್ತಿದ್ದರು. ಬಹುಪತ್ನಿತ್ವ ಸಾಮಾನ್ಯವಾಗಿತ್ತು.

ವಿಭಿನ್ನ ರಜಪೂತ ರಾಜಸಂತಿಗಳು ಉತ್ತರ ಭಾರತವನ್ನು ಆಳುತ್ತಿದ್ದರು. ಅವರುಗಳೆಂದರೆ ಗೂರ್ಜರಪ್ರತೀಹಾರರು, ಗಹದ್‌ವಾಲರು, ಚೌಹಾನರು, ಬಂದೇಲ್ ಖಂಡದ ಚಂದೇಲರು, ಚೇದಿಯ ಕಳಚೂರಿಯಗಳು ಮತ್ತು ಮಾಳವದ ಪಾರಮಾರರು.

ಪ್ರತೀಹಾರ ವಂಶದ ಮೂಲ ಪುರುಷ ಹರಿಚಂದ್ರ, ಒಂದನೆಯ ನಾಗಭಟ ಅವಂತಿಯಲ್ಲಿ ೭೨೫ರಲ್ಲಿ ಹೊಸರಾಜ್ಯವೊಂದನ್ನು ರಚಿಸಿದನು. ಆತನು ಅರಬ್ಬರನ್ನು ಹಿಮ್ಮೆಟ್ಟಿಸಿದನಲ್ಲದೆ ಮಾಳವ, ರಜಪುಣಾಣ ಮತ್ತು ಗುಜರಾತ್ ವಶಪಡಿಸಿಕೊಂಡನು. ನಾಗಭಟನ ನಂತರದ ರಾಜ ದೇವರಾಜನನ್ನು ರಾಷ್ಟ್ರಕೂಟ ದಂತಿದುರ್ಗಸೋಲಿಸಿ ಆವಂತಿಯನ್ನು ಗೆದ್ದುಕೊಂಡನಿ. ಇದು ಈ ರಾಜ್ಯಗಳ ಮಧ್ಯೆ ವಂಶಪರಂಪರಾಗತ ಹೋರಾಟಕ್ಕೆ ನಾಂದಿಯಾಯಿತು. ದೇವರಾಜನ ಮಗ ವತ್ಸರಾಜ (೭೭೫-೮೦೦)ಕನೌಜ್ ಗೆದ್ದುಕೊಂಡುದು ಈ ಹೋರಾಟದ ಕೇಂದ್ರವಾಯಿತು. ಆತನು ಬಂಗಾಳದ ರಾಜ ಧರ್ಮಪಾಲನನ್ನು ಸೋಲಿಸಿದನು. ಆದರೆ ರಾಷ್ಟ್ರಕೂಟ ಧ್ರುವ ವತ್ಸರಾಜನನ್ನು  ಸೋಲಿಸಿ ರಜಪುಣಾಟಕ್ಕೆ ಅಟ್ಟಿದನು. ಧರ್ಮಪಾಲನ ಪ್ರವೇಶದೊಂದಿಗೆ ಈ ಹೋರಾಟ ತ್ರಿವಿಭಕ್ತ ಹೋರಾಟವಾಗಿ ಮಾರ್ಪಾಡಾಯಿತು..

ಇಮ್ಮಡಿ ನಾಗಭಟ (೮೦೦-೮೨೫) ಕಳಿಂಗ, ವಿದರ್ಭ, ಸಿಂಧೂ ಮತ್ತು ಆಂಧ್ರ ರಾಜ್ಯಗಳೊಡನೆ ಸಂಬಂಧ ಬೆಳೆಸಿ, ಪಾಲ ದೊರೆ ಧರ್ಮಪಾಲನನ್ನು ಸೋಲಿಸಿ ತನ್ನ ಮರೆತನದ ಗೌರವವನ್ನು ಪುನರ್ ಸ್ಥಾಪಿಸಿ, ಕನೌಜನ್ನು ಸ್ವಾಧೀನಪಡಿಸಿಕೊಂಡು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡನು. ಈ ವೈಭವವು ಅಲ್ಪಕಾಲದ್ದಾಗಿತ್ತು. ರಾಷ್ಟ್ರಕೂಟ ಮುಮ್ಮಡಿ ಗೋವಿಂದನು ಆತನನ್ನು ಸೋಲಿಸಿ ಆತನ ಮುಂದುವರಿಕೆಗೆ ಕಡಿವಾಣ ಹಾಕಿದನು. ನಾಗಭಟನ ಮೊಮ್ಮಗ ಮಿಹಿರಭೋಜ (೮೩೬-೮೮೫) ಪ್ರತೀಹಾರರ ಪ್ರಸಿದ್ಧ ದೊರೆ. ತನ್ನ ರಾಜ್ಯವನ್ನು ಮಗಧದ ಸನಿಹಕ್ಕೆ ವಿಸ್ತರಿಸಿದನಲ್ಲ ಕರ್ನೂಲ್‌ ಜಿಲ್ಲೆ ಮತ್ತು ಸೌರಾಷ್ಟ್ರನನ್ನು ಒಳಹೊಕ್ಕನು. ಪಾಲರಾಜ ನಾರಾಯಣಪಾನನ್ನು ಸೋಲಿಸಿ ತ್ರಿವಿಭಕ್ತ ಹೋರಾಟದಲ್ಲಿ ಮೇಲುಗೈ ಸ್ಥಾಪಿಸಿದನು. ೮೫೦ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅರಬ್ ಪ್ರವಾಸಿ ಮಿಹಿರಭೋಜನ ಆಡಳಿತವನ್ನು ಪ್ರಶಂಸಿಸಿದ್ದಾನೆ. ಒಂದನೆಯ ಮಹೇಂದ್ರವರ್ಮಮ ಆಳ್ವಿಕೆಯಲ್ಲಿ (೮೩೬-೮೮೫) ಪ್ರತೀಹಾರರ ಪ್ರಭುತ್ವವು ತನ್ನ ಶಿಖರವನ್ನು ತಲುಪಿತು. ನಾರಾಯಣಪಾಲನಿಂದ ಬಂಗಾಳವನ್ನು ಪಡೆದುಕೊಂಡು ಮಗಧವನ್ನು ತನ್ನ ರಾಜ್ಯದಲ್ಲಿ ಲೀನಗೊಳಿಸಿದನು. ಆಸ್ಥಾನ ಕವಿ ರಾಜಶೇಖರನು ಬಾಲ ರಾಮಾಯಣ, ಬಾಲಭಾರತ, ಕರ್ಪೂರ ಮಂಜರಿ, ಅವಂತಿ ಸುಂದರಿಕಥೆ ಕೃತಿಗಳನ್ನು ರಚಿಸಿದನು. ಮಹೇಂದ್ರಕಾಲನ ನಂತರ ಇಮ್ಮಡಿ ಭೋಜ ಮತ್ತು ಮಹೀಪಾಲ (೯೧೨-೯೪೪) ಅನುಕ್ರಮವಾಗಿ ಆಳಿದರು. ರಾಷ್ಟ್ರಕೂಟ ಮುಮ್ಮಡಿ ಕೃಷ್ಣನು ಮಹೀಪಾಲನನ್ನು ಕನೌಜ್‌ನಿಂದ ಹೊರಹಾಕಿದನು. ಇದರೊಂದಿಗೆ ಪ್ರತೀಹಾರರ ಅವನತಿ ಪ್ರಾರಂಭವಾಯಿತು. ಆತನ ಪುತ್ರರಾದ ಇಮ್ಮಡಿ ಮಹೇಂದ್ರಪಾಲ, ದೇವಪಾಲ ಮತ್ತು ವಿನಯಪಾಲ ದೌರ್ಬಲ್ಯದ ಲಾಭಪಡೆದು ಬಂದೇಲಖಂಡದ ಚಂದೇಲರು, ಕಳಚೂರಿಗಳೂ, ಗುಜರಾತಿನ ಚಾಲುಕ್ಯರು, ಪಾರಮಾರರು, ಚೌಹಾನರು ಭಾರತೀಯ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಪ್ರಭಾವ ಬೀರಲಾರಂಭಿಸಿದರು.

ಪ್ರತೀಹಾರರು ರಾಜ್ಯದಲ್ಲಿ ಸುಖ ಶಾಂತಿ ನೆಲೆಸಲು ನೆರೆವಾಗಿದ್ದರು. ಸಾಹಿತ್ಯವನ್ನು ಪ್ರೋತ್ಸಾಹಿಸಿದರು. ಅವರ ಆಸ್ಥಾನದಲ್ಲಿ ರಾಜಶೇಖರನಲ್ಲದೆ ಚಂದ್‌ಕಾನಿಷ್ಕ ಮಾರ್ಕಂಡೇಯ ಪುರಾಣ ಮತ್ತು ನೈಶಕಾಂಡದ ಕರ್ತೃ ಸೋಮೇಶ್ವರನಿದ್ದನು.

ಪ್ರತೀಹಾರರ ಅವನತಿಯ ನಂತರ ರಾಷ್ಟ್ರಕೂಟರ ಪುಟ್ಟ ನಾಯಕರು ಸುಮಾರು ಐವತ್ತು ವರ್ಷಗಳವರೆಗೆ ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಮುಸಲ್ಮಾನರು ಗಂಗಾ ದೊಅಬ್‌ಮೇಲೆ ದಾಳಿಯನ್ನು ಪ್ರಾರಂಭಿಸಿದರು. ಈ ಪ್ರದೇಶವನ್ನು ರಕ್ಷಿಸಲು ಚಂದ್ರದೇವ ಗಹದವಾಲ ಎಂಬ ಸಾಹಸಿ ಮುಂದಾದನು. ಆತನು ೧೦೮೫ರಲ್ಲಿ ಕನೌಜ್ ವಶಪಡಿಸಿಕೊಂಡು ತನ್ನ ಹೆಸರಿನಲ್ಲಿ ಒಂದು ರಾಜ ಸಂತತಿಯನ್ನು ಪ್ರಾರಂಭಿಸಿದನು. ರಾಷ್ಟ್ರಕೂಟರು ಮತ್ತು ಕಳಚೂರಿಗಳ ವೆಚ್ಚದಿಂದ ಪೂರ್ವದಲ್ಲಿ ವಿಸ್ತರಿಸಿದನು. ಆದರೆ ಮಗಧ ರಾಜನಿಂದ ಪರಾಭವಗೊಂಡನು. ವಾರಣಾಸಿಯನ್ನು ಎರಡನೆಯ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದುದರಿಂದ  ಚಂದ್ರದೇವನನ್ನು ಕಾಶಿಯ ರಾಜನೆಂದು ಕರೆಯಲಾಗಿದೆ. ಆತನು ೧೧೦೦ವರೆಗೆ ಆಳಿದನು. ಆತನು ಉತ್ತರಾಧಿಕಾರಿ ಮದನಚಂದ್ರನನ್ನು ಎರಡನೆಯ ಮಸೂದ್ ಸೋಲಿಸಿ ಬಂಧಿಸಿದನು. ಯುವರಾಜ ಗೋವಿಂದಚಂದ್ರನು ಮುಸಲ್ಮಾನರನ್ನು ಸೋಲಿಸಿ ತನ್ನ ತಂದೆಯನ್ನು ಬಂಧನದಿಂದ ಬಿಡಿಸಿದನು. ಗೋವಿಂದಚಂದ್ರನು ಈ ವಂಶದ ಪ್ರಸಿದ್ಧ ದೊರೆ. ಪಾಲರು ಮತ್ತು ಸೇನರೊಂದಿಗೆ ಹೋರಾಡಿ ಗಹದವಾಲರ ಪ್ರಭುತ್ವವನ್ನು ಮಧ್ಯ ದೇಶದಲ್ಲಿ ಸ್ಥಾಪಿಸಿದನು. ಗೋವಿಂದ ಚಂದ್ರನು ೧೧೫೪ರಲ್ಲಿ ಮರಣಹೊಂದಿದ ಮೇಲೆ ಆತನ ಮಗ ವಿಜಯಚಂದ್ರನು ಖುಸ್ರಾವ್ ಮಾಲಿಕ್‌ನ ದಂಡಯಾತ್ರೆಯನ್ನು ಹಿಮ್ಮೆಟ್ಟಿಸಿದನು. ಆತನ ಉತ್ತರಾಧಿಕಾರಿ ಜಯಚಂದ್ರ (೧೧೭೦-೧೧೯೩) ಗಯಾ ಜಿಲ್ಲೆಯವರೆಗೆ ರಾಜ್ಯವನ್ನು ವಿಸ್ತರಿಸಿದನು. ಮಹಮದ್‌ ಘೋರಿಯು ಆತನನ್ನು ಕೊಂದು, ಆತನ ಮಗ ಹರಶ್ಚಂದ್ರನನ್ನು ತನ್ನ ಸಾಮಂತನಾಗಿ ಸಿಂಹಾಸನದ ಮೇಲೆ  ಕೂರಿಸಿದನು. ಇಲ್‌ಕೂರ್‌ಮಿಶ್‌ಆತನನ್ನು ಸೋಲಿಸಿ ಕನೌಜ್‌ ಅನ್ನು ತನ್ನ ರಾಜ್ಯದಲ್ಲಿ ವಿಲೀನಗೊಳಿಸಿದನು.

ಆರಂಭದ ಮಧ್ಯಕಾಲೀನ ಭಾರತ ಇತಿಹಾಸದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಶಾಕಾಂಬರಿ ಪ್ರದೇಶದಲ್ಲಿ ಚೌಹಾನರು ತಮ್ಮ ಆಡಳಿತವನ್ನು ಹನ್ನೊಂದನೆಯ ಶತಮಾನದಲ್ಲಿ ಪ್ರಾರಂಭಿಸಿದರು. ಹನ್ನೆರಡೆಯ ಶತಮಾನದ ಆದಿಭಾಗದಲ್ಲಿ ಪಾರಮಾರರನ್ನು ಸೋಲಿಸಿ ಉಜೈನಿಯನ್ನು ವಶಪಡಿಸಿಕೊಂಡರು. ಈ ಕೀರ್ತಿ ಅಜಯರಾಜನಿಗೆ ಸಲ್ಲುತ್ತದೆ. ಆತನು ಅಜಯಮೇರು ಅಥವಾ ಅಜ್ಮೀರ್ ನಗರವನ್ನು ನಿರ್ಮಿಸಿದನು. ಚೌಹಾನರ ರಾಜ್ಯವನ್ನು ಸಾಮ್ರಾಜ್ಯವಾಗಿ ಮಾರ್ಪಡಿಸಿದವನು ನಾಲ್ಕನೆಯ ವಿಗ್ರಹರಾಜ(೧೧೫೩-೧೧೬೩). ಆತನ ಸಾಮ್ರಾಜ್ಯವು ಸಿವಾಲಿಕ್ ಬೆಟ್ಟಗಳಿಂದ ಉದಯಪುರದವರೆಗೆ  ವಿಸ್ತರಿಸಿತ್ತು. ಮೂರನೆಯ ಪೃಥ್ವಿರಾಜನು ೧೧೭೮ರಲ್ಲಿ ಸಿಂಹಾಸನವೇರಿದನು. ಆತನ ಆಳ್ವಿಕೆಯು ಚೌಹಾನರ ಇತಿಹಾಸದಲ್ಲಿ ಹೊಸ ಯುಗವನ್ನು ಆರಂಭಿಸಿತು. ಘೋರಿಯು ಗುಜರಾತಿಗೆ ಮುತ್ತಿಗೆ ಹಾಕಿದಾಗ ಪೃಥ್ವಿರಾಜನು ತಟಸ್ಥನಾಗಿದ್ದನು. ಚಾಲುಕ್ಯರು ಘೋರಿಯನ್ನು ಸೋಸಿಸಿದರು. ರೇವಾರಿ  ಜಿಲ್ಲೆ ಹಾಗೂ ಚಂದೇಲರ ರಾಜ್ಯದ ಒಂದು ಭಾಗವನ್ನು ಗೆದ್ದುಕೊಂಡು ಗುಜರಾತ್ ಚಾಲುಕ್ಯರ ಮೇಲೆ ದಂಡೆತ್ತಿ ಹೋದನು. ಮೊದಲನೆಯ ಟರೈ (೧೧೯೦-೯೧) ಯುದ್ಧದಲ್ಲಿ ಘೋರಿಯನ್ನು ಸೋಲಿಸಿದನು. ಆದರೆ ಅದೇ ಸ್ಥಳದಲ್ಲಿ ೧೧೮೨ರಲ್ಲಿ ನಡೆದ ಕದನದಲ್ಲಿ  ಸೋತು ಕೊಲ್ಲಲ್ಲಟ್ಟನು. ಘೋರಿಯು ಪೃಥ್ವಿರಾಜನ ಮಗನನ್ನು ಅಜ್ಮೀರದಲ್ಲಿ ತನ್ನ ಸಾಮಂತನಾಗಿ ನೇಮಿಸಿದನು. ಪೃಥ್ವಿರಾಜನ ಸಹೋದರ ಹರಿರಾಜನು ಅಜ್ಮೀರದ ಸಿಂಹಾಸನವನ್ನು ಆಕ್ರಮಿಸಿಕೊಂಡು ಘೋರಿಯ ಆಳ್ವಿಕೆಯ ವಿರುದ್ಧ ಅತಿಕ್ರಮಣ ನೀತಿಯನ್ನು ಅನುಸರಿಸಿದನು. ಕುತುಬುದ್ದೀನನು ಆತನನ್ನು ಸೋಲಿಸಿ ಅಜ್ಮೀರನ್ನು ವಶಪಡಿಸಿಕೊಂಡನು. ನಂತರ ಚೌಹಾನರು ರಾಂತಂಬೂರಿನಲ್ಲಿ ವಿಶ್ರಮಿಸಿದರು. ೧೩೦೧ ರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯು ಚೌಹಾನರ ಅಂತಿಮ ಕುರುಹುಗಳನ್ನು ನಿರ್ನಾಮ ಮಾಡಿದನು.

ಚಂದೇಲರ ಬುಡಕಟ್ಟಿಗೆ ಸೇರಿದ ಯಶೋವರ್ಮನ್‌ ಕಲಂಜಾರ್‌ ವಶಪಡಿಸಿಕೊಂಡು, ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿ, ಮಹೊಬವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಈ ಸಂತತಿಯ ಮುಖ್ಯ ದೊರೆಗಳೆಂದರೆ ಧಂಗ ಮತ್ತು ಕೀರ್ತಿವರ್ಮನ್‌, ಕೀರ್ತಿವರ್ಮನು ಕಳಚೂರಿ ರಾಜ ಕರ್ಣನನ್ನು ಸೋಲಿಸಿದನು. ಕಿರಾತ್ ಸಾಗರದ ನಿರ್ಮಾತೃ ಆತನೇ. ಆ ವಂಶದ ಕೊನೆಯ ರಾಜ ಪೆರಮಾರ್ದಿಯನ್ನು ಮುಮ್ಮಡಿ ಪೃಥ್ವಿರಾಜ ಸೋಲಿಸಿ ಆ ಸಂತತಿಯನ್ನು ಕೊನೆಗೊಳಿಸಿದರು. ಚಂದೇಲರ ಪ್ರಖ್ಯಾತಿಯನ್ನು ಖಜುರಾಹೊ ದೇವಾಲಯಗಳು ಕೊಂಡಾಡುತ್ತವೆ.

ದಕ್ಷಿಣ ನರ್ಮದೆಯಿಂದ ಉತ್ತರ ಗೋದಾವರಿಯ ಪ್ರದೇಶವನ್ನೊಳಗೊಂಡ ಚೇದಿರಾಜ್ಯವನ್ನು ಕಳಚೂರಿಗಳು ಆಳುತ್ತಿದ್ದರು. ಜಬ್ಬಲ್‌ಪುರದ ಹತ್ತಿರದ ತ್ರಿಪುರಿ ಅವರ  ರಾಜಧಾನಿ. ಲಕ್ಷ್ಮಣರಾಜ ಚೇದಿ ರಾಜ್ಯದ ಸ್ಥಾಪಕ. ಕರ್ಣನನ್ನು ಚಂದೇಲ ಕೀರ್ತಿವರ್ಮನ್‌ ಸೋಲಿಸಿದ ನಂತರ ಆ ವಂಶದ ಪತನ ಪ್ರಾರಂಭವಾಯಿತು. ಅದರ ಅವಶೇಷಗಳ ಮೇಲೆ ಗಣಪತಿಗಳು, ಯಾದವರು ಮತ್ತು ಬಘ್ಹೇಲರು ತಮ್ಮ ಸ್ವತಂತ್ರರಾಜ್ಯವನ್ನು ನಿರ್ಮಿಸಿದರು.

ಪಾರಮಾರರ ರಾಜ್ಯವನ್ನು ಉಪೇಂದ್ರ ಅಥವಾ ಕೃಷ್ಣರಾಜ ಸ್ಥಾಪಿಸಿದರು. ಭೋಜರಾಜ (೧೦೧೮-೧೦೬೦) ಈ ವಂಶದ ಪ್ರಸಿದ್ಧ ದೊರೆ. ಧಾರ ಆತನ ರಾಜಧಾನಿ. ಸ್ವತಃ ವಿದ್ವಾಂಸನಾಗಿದ್ದ ಆತನು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹವಿತ್ತನು. ಧಾರದಲ್ಲಿ ಪ್ರಸಿದ್ಧ ಸಂಸ್ಕೃತ ವಿದ್ಯಾಕೇಂದ್ರವನ್ನು ಸ್ಥಾಪಿಸಿದನು. ಪ್ರಸಿದ್ಧ ಭೋಜಪುರ ಸರೋವರವನ್ನು  ನಿರ್ಮಿಸಿದನು. ಗುಜರಾತ್ ಮತ್ತು ಚೇದಿ ರಾಜರ ವಿರುದ್ಧ ಯುದ್ಧದಲ್ಲಿ ಭೋಜನು ಮಡಿದನು. ಆತನ ನಂತರ ಪಾರಮಾರರು ಸ್ಥಳೀಯ ಪ್ರಭುಗಳಾಗಿ  ಹದಿಮೂರನೆಯ ಶತಮಾನದ ಆರಂಭದವರೆಗೆ ಅಸ್ತಿತ್ವದಲ್ಲಿದ್ದರು.

ಎಂಟನೆಯ ಶತಮಾನದ ಪೂರ್ವಾರ್ಧದಲ್ಲಿ ಕನೌಜ್‌ದ ಯಶೋವರ್ಮನ್‌, ಕಾಶ್ಮೀರದ ಸಾಮ್ರಾಜ್ಯಶಾಹಿಗಳಾದ ಮುಕ್ತಪೀಡ, ಜಯಪೀಡ ಮತ್ತು ಇತನ ದಂಡಯಾತ್ರೆಗಳ ಫಲವಾಗಿ ಬಂಗಾಳದಲ್ಲಿ ಅರಾಜಕತ್ವ ತಾಂಡವವಾಡುತ್ತಿತ್ತು. ಜನಜೀವನ ತಲ್ಲಣಗೊಂಡಿತ್ತು. ಈ ಪರಿಸ್ಥಿತಿಯಿಂದ ಹೊರಬರಲು ಬಂಗಾಲದ ನಾಯಕರು ತಮ್ಮ ಮಹತ್ವಾಕಾಂಕ್ಷೆಗಳನ್ನು ಬದಿಗೊತ್ತಿ ಗೋಪಾಲನನ್ನು ರಾಜನನ್ನಾಗಿ ಚುನಾಯಿಸಿದರು. ಆತನೇ ಪಾಲವಂಶದ ಸ್ಥಾಪಕ. ರಾಜವಂಶಕ್ಕೆ ಸೇರದವನಾಗಿದ್ದರೂ ರಾಜ್ಯದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಯಶಸ್ವಿಯಾದನು. ಗೋಪಲನ ಮಗ ಹಾಗೂ ಉತ್ತರಾಧಿಕಾರಿ ಧರ್ಮಪಾಲನು ಮಗಧ, ವಾರಣಾಸಿ ಮತ್ತು ಪ್ರಯಾಗ ಇವುಗಳನ್ನು ವಶಪಡಿಸಿಕೊಂಡು ರಾಜ್ಯವನ್ನು ವಿಸ್ತರಿಸಿದನು. ಇಮ್ಮಡಿ ನಾಗಭಟನಿಂದ ಹೀನಾಯವಾಗಿ ಸೋಲಿಸಲ್ಪಟ್ಟಿದ್ದರಿಂದ ಈ ವಿಸ್ತರಣಾ ನೀತಿಗೆ ತಡೆಯುಂಟಾಯಿತು. ಧರ್ಮಪಾಲನು ಪರಮಸಾಗತ (ಪ್ರಸಿದ್ಧ ಬೌದ್ಧ) ಎಂಬ ಬಿರುದನ್ನು ಧರಿಸಿದ್ದಲ್ಲದೆ ಗಂಗಾನದಿಯ ದಕ್ಷಿಣ ದಂಡೆಯಲ್ಲಿ  ವಿಕ್ರಮಶೀಲ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದನು. ಆತನ ಮಗ ದೇವಪಾಲನು (೮೧೫-೮೫೪) ಶಾಸನಗಳಲ್ಲಿ  ಸಾಮ್ರಾಜ್ಯಶಾಹಿಯಾಗಿ ಪ್ರತಿನಿಧಿಸಲ್ಪಟ್ಟಿದ್ದಾನೆ. ಮುಮ್ಮಡಿ ಗೋವಿಂದ ಹಾಗೂ ಇಮ್ಮಡಿ ನಾಗಭಟನ ಮರಾಣನಂತರದ ತಾತ್ಕಾಲಿಕ ಪರಿಸ್ಥಿತಿಯ ಲಾಭ ಪಡೆಯಲು ಉದ್ಯುಕ್ತನಾದನು. ಆದರೆ ಮಿಹಿರಭೋಜನ ಪಟ್ಟಾಭಿಷೇಕದೊಂದಿಗೆ ಪಾಲಕರು ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ಕೈಬಿಡಬೇಕಾಯಿತು. ಶೈಲೇಂದ್ರ ಮಹಾರಾಜ ನಲಂದದಲ್ಲಿ ಕಟ್ಟಿಸಿದ ವಿಹಾರದ ನಿರ್ವಹಣೆಗಾಗಿ ದೇವಪಾಲನು ಐದು ಗ್ರಾಮಗಳನ್ನು ದತ್ತಿಯಾಗಿ ನೀಡಿದನು. ೮೫೪ರಲ್ಲಿ ಪಟ್ಟಕ್ಕೆ ಬಂದ ಒಂದನೆಯ ವಿಗ್ರಹಪಾಲನು ತನ್ನ ಮಗ ನಾರಾಯಣಪಾಲನ(೮೫೩-೯೧೧) ಸಲುವಾಗಿ ಸಿಂಹಾಸನವನ್ನು ತ್ಯಜಿಸಿದನು. ಪ್ರತೀಹಾರ ಮಹೇಂದ್ರಪಾಲನ ಆಳ್ವಿಕೆಯಲ್ಲಿ ಪಾಲರು ಬಿಹಾರ ಮತ್ತು ಉತ್ತರ ಬಂಗಾಳದಲ್ಲಿ ಕೆಲವು ಭಾಗಗಳನ್ನು ಕಳೆದುಕೊಂಡು ಮಿಹಿರ ಭೋಜನ ಹಾಗೂ ಆತನ ಮಗನ ಆಳ್ವಿಕೆಯಲ್ಲಿ ಕಳೆಗುಂದಿ ಮರೆಯಾದರು.

ಪಾಲರು ಸಂಸ್ಕೃತ ಕರ್ತೃ ಪ್ರೋತ್ಸಾಹ ನೀಡಿದರು. ರಾಮಚರಿತ ಕರ್ತೃ ಸಂಧ್ಯಾಕರನಂದಿ ಮತ್ತು ಚಕ್ರದುತ್ತದ ಕರ್ತೃ ಚಕ್ರಪಾಣಿ ಅವರ ಆಸ್ಥಾನದಲ್ಲಿದ್ದರು. ಭಾವದೇವ ಭಟ್ಟ ಮತ್ತು ಜೀಮೂತವಾಹನ ಅವರ ಆಸ್ಥಾನದಲ್ಲಿದ್ದರು. ವಾಸ್ತುಶಿಲ್ಪಕ್ಕೆ ಪಾಲರ ಕೊಡುಗೆಯನ್ನು ಉದ್ದಂಡಪುರ ಮತ್ತು ಸೋಮಪುರದಲ್ಲಿ ಕಾಣಬಹುದು. ಪಾಲರ ವರ್ಣಚಿತ್ರಕಲೆಯು ವಜ್ರಯಾನ ಮತ್ತು ತಾಂತ್ರಿಕ ಸೇವ ಸಮೂಹವನ್ನು ಕೂಡಿದ್ದಾಗಿದೆ. ಪಾಲರು ಬೌದ್ಧ ಧರ್ಮದ ಪೋಷಕರಾಗಿದ್ದ ವಜ್ರಯಾನ ಮತ್ತು ತಾಂತ್ರಿಕ ಬೌದ್ಧಧರ್ಮಪಂಥದ ಅನುಯಾಯಿಗಳಾಗಿದ್ದರು.

ಬಂಗಾಳದಲ್ಲಿ ಹೆಸರು ಗಳಿಸಿದ ಮತ್ತೊಂದು ರಾಜಸಂತತಿ ಸೇನರದು. ಸೇನರು ಕರ್ನಾಟಕದ ಮೂಲದವರು. ಈ ಸಂತತಿಯ ಸ್ಥಾಪಕ ಸಾಮಂತಸೇನ(೧೦೫೦-೧೦೭೫). ಆತನು ರಾಧಾ ಪ್ರದೇಶದ ನಾಯಕನಾಗಿದ್ದನು. ಆತನ ಮಗ ಹೇಮಂತ ಸೇನನು(೧೦೭೫-೧೦೯೩) ಸ್ವತಂತ್ರ ರಾಜ್ಯವನ್ನು ನಿರ್ಮಿಸಿ “ಮಹಾರಾಜಾದಿರಾಜ” ಎಂಬ ಬಿರುದನ್ನು ಧರಿಸಿದನು. ವಿಜಯಸೇನನು (೧೦೯೩-೧೧೫೯) ಬಂಗಾಳ ವರ್ಮನನ್ನು ಸ್ಥಳಾಂತರಗೊಳಿಸಿ ಪೂರ್ವ, ಪಶ್ಚಿಮ ಮತ್ತು ಉತ್ತರ ಬಂಗಾಳವನ್ನು ತನ್ನ  ರಾಜ್ಯಕ್ಕೆ ಸೇರಿಸಿ “ಪರಮಮಹೇಶ್ವರ” ಮತ್ತು ” ಅರಿವೃಷಭ ಶಂಕರ” ಎಂಬ ಬಿರುದುಗಳನ್ನು ಧರಿಸಿದನು. ಒಂದು ಶಿವ ದೇವಾಲಯ ಸರೋವರ ಮತ್ತು ವಿಜಯಪುರವನ್ನು ನಿರ್ಮಿಸಿದನು. ಬಲ್ಲಾಳಸೇನನು(೧೧೫೯-೧೧೮೫) ತಂದೆಯಿಂದ ಪಡೆದ ರಾಜ್ಯವನ್ನು ಸಂರಕ್ಷಿಸಿದನು. ಬಲ್ಲಾಳಸೇನನ ಮಗ ಲಕ್ಷ್ಣಸೇನನು (೧೧೮೫-೧೨೦೬) ಕಳಿಂಗ, ಅಸ್ಸಾಂ, ಬನಾರಸ್‌ಮತ್ತು ಅಲಹಾಬಾದ್‌ಪ್ರದೇಶಗಳ ಮೇಲೆ ದುರಾಕ್ರಮಣ ಮಾಡಿದಂತೆ ತೋರುತ್ತದೆ. ತನ್ನ ಆಸ್ಥಾನದಲ್ಲಿ “ಐದು ರತ್ನ” ಗಳಿಗೆ ಪ್ರೋತ್ಸಾಹ ನೀಡಿದ್ದರು. ಅವರೆಂದರೆ ಉಮಾಪತಿ, ಜಯದೇವ (ಗೀತಾ ಗೋವಿಂದದ ಕರ್ತೃ) ಧೋಯಿ (ಪವನದೂತ)ಹಲಾಯುಧ( ಬ್ರಾಹ್ಮಣ ಸರ್ವಸ್ವ) ಮತ್ತು ಶ್ರೀಧರದಾಸ ( ಸದ್ಯುಕ್ತಿರ್ಣಾಮೃತ) ಅದ್ಭುತ ಸಾಗರವನ್ನು ಪೂರ್ಣಗೊಳಿಸಿದನು. ೧೧೯೯ರಲ್ಲಿ ಮಹಮದ್ ಬಿನ್ ಭಕ್ತಾಯಾರ್ ನಾದಿಯ(ಬಂಗಾಳ) ವನ್ನು ವಶಪಡಿಸಿಕೊಂಡು ಧ್ವಂಸ ಮಾಡಿ ಲಕ್ನೋವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಲಕ್ಷ್ಮಣಸೇನನ ಉತ್ತರಾಧಿಕಾರಿಗಳು ಪೂರ್ವಬಂಗಾಳವನ್ನು ೧೨೩೦ ಅಥವಾ ೧೨೮೦ರವರೆಗೆ ಆಳಿದರು.

ಈ ಅವಧಿಯ ಪರ್ಯಾಯ ದ್ವೀಪದ ಇತಿಹಾ ರಾಜಕೀಯ ದೃಢತೆ ಮತ್ತು ಸಂಸ್ಕೃತಿಯ ಹಿರಿಮೆಯಿಂದ ಕೂಡಿದ್ದಿತು. ಕ್ರಿ.ಶ ೭೦೦ ರಿಂದ ೧೦೦೦ ರವರೆಗಿನ ಕಾಲಾವಧಿ ಕರ್ನಾಟಕದ ಮಹಿಮಾನ್ವಿತ ಕಾಲವಾಗಿದೆ. ಈ ಅವಧಿಯಲ್ಲಿ ಮಾನ್ಯಖೇಟರ ರಾಷ್ಟ್ರಕೂಟರು ಪ್ರಬಲವಾಗಿ ರಾಜಕೀಯರಂಗವನ್ನು ಪ್ರವೇಶಿಸಿದರು. ರಾಷ್ಟ್ರಕೂಟ ವಂಶದ ಸ್ಥಾಪಕ ದಂತಿದುರ್ಗ ಅವರಿಗೆ ಪೂರ್ಣ ಸ್ವಾತಂತ್ರ‍್ಯ ಗಳಿಸಿಕೊಟ್ಟ ಕೀರ್ತಿ ಆತನ ಚಿಕ್ಕಪ್ಪ ಒಂದನೆಯ ಕೃಷ್ಣನಿಗೆ(೭೫೬-೭೭೫) ಸಲ್ಲುತ್ತದೆ. ಆತನು ಚಾಲುಕ್ಯ ಇಮ್ಮಡಿ ಕೀರ್ತಿವರ್ಮನನ್ನು ಸೋಲಿಸಿ, ಚಾಲುಕ್ಯರನ್ನು ನಾಶಗೊಳಿಸಿದನು.ನಂತರ ಗಂಗರು, ವೆಂಗಿಯ ಚಾಲುಕ್ಯರನ್ನು ಸೋಲಿಸಿದನಲ್ಲದೆ ಕೊಂಕಣವನ್ನು  ಗೆದ್ದುಕೊಂಡನು. ಎಲ್ಲೋರದಲ್ಲಿ ಕೈಲಾಸ ದೇವಾಲಯವನ್ನು ಬಂಡೆಯಲ್ಲಿ ಕಡಿದು ನಿರ್ಮಿಸಿದನು. ಆತನ ಮಗ ಇಮ್ಮಡಿ ಗೋವಿಂದ ಭೋಗ ಜೀವಿಯಾಗಿದ್ದುದರಿಂದ ಗೋವಿಂದನ ಸಹೋದರ ಧ್ರುವ (೭೮೦-೭೯೩) ಸಿಂಹಾಸನವನ್ನು ಕಸಿದುಕೊಂಡನು.

ಧೃವನು ಭಾರತದ ಸಮರ್ಥ ರಾಜರಲ್ಲಿ ಒಬ್ಬನಾಗಿದ್ದನು. ಗಂಗರು, ಪಲ್ಲವರು ಮತ್ತು ವೆಂಗಿಯ ದೊರೆಗಳನ್ನು ಸೋಲಿಸಿ, ಉತ್ತರ ಭಾರತದ ಮೇಲೆ ದಂಡೆತ್ತಿ ಹೋಗಿ ವತ್ಸರಾಜ ಧರ್ಮಪಾಲನನ್ನು ಗಂಗಾ-ಯಮುನಾ  ನಡುವಿನ ಪ್ರದೇಶವನ್ನು ಭೇದಿಸಿಕೊಂಡು ಹೊಕ್ಕು ಉತ್ತರ ಭಾರತದ ಆಧಿಪತ್ಯವನ್ನು ಬಯಸಿದ್ದ ಪ್ರತಿಸ್ಪರ್ಧಿಗಳನ್ನು ಸೋಲಿಸಿದ್ದು ಇದೇ  ಮೊದಲು ಮಾತ್ರವಲ್ಲ. ೩೯೩ ರಲ್ಲಿ ಧೃವ ಸಾಯುವ ವೇಳೆಗೆ ಇಡೀ ಭಾರತದಲ್ಲಿ ರಾಷ್ಟ್ರಕೂಟರನ್ನು ಎದುರಿಸುವವರು ಯಾರೂ ಇರಲಿಲ್ಲವೆಂದು ಅಲ್ಟೇಕರರು ಅಭಿಪ್ರಾಯ  ವ್ಯಕ್ತಪಡಿಸಿದ್ದಾರೆ. ಆತನ ಮಗ ಮುಮ್ಮಡಿ ಗೋವಿಂದ ಪ್ರತೀಹಾರ ನಾಗಭಟ್ಟ, ಚಕ್ರಾಯುಧ ಮತ್ತು ಪಾಲರಾಜ ಧರ್ಮಪಾಲರನ್ನು ಸೋಲಿಸಿದನು. ದಕ್ಷಿಣಕ್ಕೆ ಹಿಂತಿರುಗಿ ಪಲ್ಲವ, ಪಾಂಡ್ಯ, ಕೇರಳ ಮತ್ತು ಗಂಗರ ಒಕ್ಕೂಟವನ್ನು ತಂಗಭದ್ರದ ಹತ್ತಿರ ಸಂಪೂರ್ಣವಾಗಿ ನಿಗ್ರಹಿಸಿ ಇಡೀ ಭಾರತದ ಏಕಮಾತ್ರ ವಿಜಯೀ ಸಾಮ್ರಾಟನಾದನು. ಶ್ರೀಲಂಕಾದ ರಾಜನೂ ಸಹ ರಾಷ್ಟ್ರಕೂಟ ಸಾಮಂತನಾದನು.

ಗೋವಿಂದನ ಉತ್ತರಾಧಿಕಾರಿ ಅಮೋಘವರ್ಷನು ಪಾಂಡ್ಯರು ಮತ್ತು ವೆಂಗಿಯ ಚಾಲುಕ್ಯರ ದಂಗೆಯನ್ನು ಅಡಗಿಸಿ ಸುಮಾರು ೫೦ ವರ್ಷಗಳವರೆಗೆ ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸಿದನು. ಈ ಕಾಲದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯಕ್ಕೆ ಭೇಟಿಯಿತ್ತ ಅರಬ್ ಪ್ರವಾಸಿಗ ಸುಲೈಮಾನ್ ಅಮೋಘವರ್ಷನ ಮಗ ಇಮ್ಮಡಿ ಕೃಷ್ಣ ದಕ್ಷನಾಗಿರಲಿಲ್ಲ. ಆದರೆ ಆತನ ಮೊಮ್ಮಗ  ಮುಮ್ಮಡಿ ಇಂದ್ರ ೯೧೬ರಲ್ಲಿ ಉತ್ತರ ಭಾರತದ ಮೇಲೆ ದಂಡೆತ್ತಿ ಹೋಗಿ ಪ್ರತೀಹಾರ ಮಹಿಪಾಲನನ್ನು ಸೋಲಿಸಿ ಕನೌಜ್ ವಶಪಡಿಸಿಕೊಂಡನು.ವೆಂಗಿಯ ಚಾಳುಕ್ಯರು ಅವನಿಗೆ ಅಧೀನರಾದರು.

ಈ ವಂಶದ ಕೊನೆಯ ಪ್ರಸಿದ್ಧ ದೊರೆ ಮುಮ್ಮಡಿ ಕೃಷ್ಣ (೯೩೯-೯೬೬). ಆತನು ಗಂಗ ವಂಶದ ಬೂತುಗನ ಜೊತೆಗೂಡಿ ೯೪೯ರಲ್ಲಿ ತಕ್ಕೊಲಂ ಕದನದಲ್ಲಿ ಚೋಳರನ್ನು ಸೋಲಿಸಿದನು. ಚೋಳ ಸೈನ್ಯದ ನಾಯಕತ್ವ ವಹಿಸಿದ್ದ ಒಂದನೆಯ ಪರಾಂತಕನ ಮಗ ರಾಜಾದಿತ್ಯ ಮಡಿದನು. ತನ್ನ ದಿಗ್ವಿಜಯವನ್ನು ಮುಂದುವರಿಸಿ ಚೇರ ಮತ್ತು ಪಾಂಡ್ಯರನ್ನು ಸೋಲಿಸಿ, ರಾಮೇಶ್ವರದವರೆಗೂ ಹೋಗಿ ಅಲ್ಲಿ ವಿಜಯಸ್ತಂಭವನ್ನು ನೆಟ್ಟನು. ಈ ವಂಶದ ಕೊನೆಯ ದೊರೆ ನಾಲ್ಮಡಿ ಇಂದ್ರನನ್ನು ಚಾಲುಕ್ಯ ತೈಲಪನು ಸೋಲಿಸಿ ಮತ್ತೊಮ್ಮೆ ಚಾಲುಕ್ಯ ಪ್ರಭುತ್ವವನ್ನು ಸ್ಥಾಪಿಸಿದನು.

ರಾಷ್ಟ್ರಕೂಟರ ಆಡಳಿತ ವ್ಯವಸ್ಥೆ ಚಾಲುಕ್ಯರ ವ್ಯವಸ್ಥೆಯನ್ನು ಹೋಲುತ್ತಿತ್ತು. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ತಮ್ಮ ಕೆಳವರ್ಗದ ಉದ್ಯೋಗಗಳನ್ನು ಸ್ವೀಕರಿಸುವ ಅವಕಾಶವನ್ನು ಧರ್ಮಶಾಸ್ತ್ರಗಳು ಕಲ್ಪಿಸಿಕೊಟ್ಟ ಕಾರಣದಿಂದ ವರ್ಗಗಗಳಲ್ಲಿ ಮೇಲು ಮತ್ತು ಕೀಳು ಎಂಬ ಭಾವನೆಗಳು ಬೆಳೆದವು. ಆ ವರ್ಗಗಳಿಗೆ ಮೀಸಲಾದ ಉದ್ಯೋಗಗಳಿಗೆ ಬದಲಾಗಿ ಬೇರೆ ಉದ್ಯೋಗಗಳನ್ನು ಸ್ವೀಕರಿಸಿದವರನ್ನು ಕೀಳಾಗಿ ಕಾಣಲಾಗುತ್ತಿತ್ತು. ಶೂದ್ರರ ಸ್ಥಾನಮಾನಗಳು ಹೆಚ್ಚಿದವು. ಸ್ಮಾರ್ತ ಆಚರಣೆಗಳನ್ನು ಮಾಡಲು ಅವಕಾಶವಿತ್ತು. ಅಸ್ಪೃಶ್ಯರನ್ನು ಸಮಾಜ ಜೀವನದಿಂದ ಹೊರಗಿಡಲಾಗಿತ್ತು. ಈ ಯುಗದ ಮುಖ್ಯ ಬದಲಾವಣೆ ಎಂದರೆ ಸ್ತ್ರೀಯರು ತಮ್ಮ ಪತಿಯ ಆಸ್ತಿಯಲ್ಲಿ ಪಾಲು ಪಡೆಯಲು ಅವಕಾಶವಾದುದು. ಕೃಷಿ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿತ್ತು. ಗಣಿಗಳು ಮತ್ತು ಕೈಗಾರಿಕೆಗಳು ಅಭಿವೃದ್ಧಿ ಹೊಂದಿದ್ದವು. ಬಳ್ಳಾರಿ, ಬಿಜಾಪುರ, ಕಡಪ, ಧಾರವಾಡ ಮತ್ತಿತರ ಪ್ರದೇಶಗಳಲ್ಲಿ ತಾಮ್ರದ ಗಣಿಗಳು ಇದ್ದವೆಂದು ಉಲ್ಲೇಕಗಳಿವೆ. ವಿದೇಶೀಯ ಬೇಡಿಕೆಯನ್ನು ತಣಿಸುವಷ್ಟು ತೃಪ್ತಿಕರ ದರ್ಜೆಯ ಬಟ್ಟೆಗಳು ತಯಾರಾಗುತ್ತಿದ್ದವು. ಭಾರತದ ಸಮುದ್ರ ವ್ಯಾಪಾರಕ್ಕೆ ಅರಬ್ಬರು ಮಧ್ಯವರ್ತಿಗಳಾಗಿದ್ದರು. ರಾಷ್ಟ್ರಕೂಟರು ಹಿಂದು, ಜೈನ ಮತ್ತು ಬೌದ್ಧ ಧರ್ಮಗಳಿಗೆ ಪ್ರೋತ್ಸಾಹ ನೀಡಿದ್ದರು. ಅಮೋಘವರ್ಷನು ಜೈನ ಧರ್ಮದ ಪೋಷಕನಾಗಿದ್ದು ಕೊನೆಗೆ ಜೈನಧರ್ಮದ ಸನ್ಯಾಸಿಯಾದನು. ಎರಡನೆಯ ಕೃಷ್ಣನ ಗುರು ಗುಣಭದ್ರನು ಸುಪ್ರಸಿದ್ಧ ಜೈನ ವಿದ್ವಾಂಸ. ಆದರೆ ಬಹುಪಾಲು ರಾಜರು ಶೈವ ಮತಾವಲಂಬಿಗಳಾಗಿದ್ದರು.

ರಾಷ್ಟ್ರಕೂಟರು ಸಾಹಿತ್ಯ ಪೋಷಕರೂ ಹೌದು. ಕನ್ನಡದ ಪ್ರಪ್ರಧಮ ಕೃತಿ ಕವಿರಾಜಮಾರ್ಗ ರಚಿತವಾದದ್ದು ಈ ಕಾಲದಲ್ಲಿ. ಹರಿಸೇನನು ಹರಿವಂಶ ಮತ್ತು ಆದಿಪುರಾಣಗಳನ್ನೂ ಮತ್ತು ಜಿನಸೇನನು ಪಾರ್ಶ್ವಾಭ್ಯುದಯ ಮತ್ತು ಶ್ರೀವಿಜಯ ಕವೀಶ್ವರ ಕೃತಿಗಳನ್ನು ರಚಿಸಿದರು. ಅಮೋಘವರ್ಷನು ಸಂಸ್ಕೃತದಲ್ಲಿ ಪ್ರಶ್ನೋತ್ತರ ರತ್ನಾವಳಿಯನ್ನು ರಚಿಸಿದನು. ಪೊನ್ನನು ಶಾಂತಿನಾಥ ಪುರಾಣ ಮತ್ತು ಭುವನೈಕ ರಾಮಾಭ್ಯುದಯನ್ನು ಬರೆದನು.

ಕಲೆ, ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳ ಪ್ರಪಂಚಕ್ಕೆ ರಾಷ್ಟ್ರಕೂಟರ ಕೊಡುಗೆ ಅಸಾಮಾನ್ಯವಾಗಿದೆ. ಎಲ್ಲೋರದಲ್ಲಿ ೩೪ ಗುಹಾಂತರ ದೇವಾಲಯಗಳು ರಚಿಸಲ್ಪಟ್ಟಿದ್ದು, ಕೈಲಾಸ ದೇವಾಲಯ ಅವುಗಳಲ್ಲಿ ಪ್ರಮುಖವಾಗಿದೆ.  ಇದು ಭಾರತದಲ್ಲಿ ಒಂದು ಅದ್ಭುತವಾದ ವಾಸ್ತುಶಿಲ್ಪದ ವಿಚಿತ್ರ ವರ್ತನೆಯಾಗಿದೆ. ಮಾತ್ರವಲ್ಲ, ಬಂಡೆಯಲ್ಲಿ ಕಡೆದು ನಿರ್ಮಿಸಿದ ದೇವಾಲಯಗಳಲ್ಲಿ ಇದು ವಿಶಾಲವಾದುದೂ ಮತ್ತು ಬೆರಗುಂಟು ಮಾಡುವಂತಹದೂ ಆಗಿದೆ. ಇಂತಹ ವಸ್ತು ಯಾವ ದೇಶದ್ದೇ ಆದರೂ ಅಭಿಮಾನ ಪಡಬೇಕಾದದ್ದು ಮತ್ತು ಯಾರು ನಿರ್ಮಿಸಿದರೂ ಅವರು ಸ್ತೋತ್ರಾರ್ಹರೇ ಎಂದು ವಿ.ಎ.ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ. ಎಲಿಫಂಟಾದ ಮುಖ್ಯ ದೇವಾಲಯ ಶಿಲ್ಪ ಸೌಂದರ್ಯದಲ್ಲಿ ಅತಿ ಶ್ರೇಷ್ಠಚಾಗಿದೆ. ನಟರಾಜ, ಸದಾಶಿವ, ಅರ್ಧನಾರೀಶ್ವರ ಮತ್ತು ತ್ರಿಮೂರ್ತಿ ಅಥವಾ ಮಹೇಶಮೂರ್ತಿ ಮೂರ್ತಿಗಳೂ ಅತ್ಯಾಲಂಕಾರದ್ದಾಗಿದೆ. ಕೆಲವು ದೇವಾಲಯಗಳಲ್ಲಿ ಮೊದಲಿಗೆ ವರ್ಣಚಿತ್ರಗಳಿದ್ದು  ಈಗ ಅವು  ನಶಿಸಿಹೋಗಿವೆ.

೧೦

ಚಾಲುಕ್ಯ ಸಾಮ್ರಾಜ್ಯದ ಪುನರುತ್ಥಾನಕ್ಕೆ ಇಮ್ಮಡಿ ತೈಲ ಅಥವಾ ತೈಲಪ ಕಾರಣ. ಆತನು ಮಾನ್ಯಖೇಟವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಗುಜರಾತ್ ಪ್ರದೇಶವನ್ನು ಹೊರತುಪಡಿಸಿ ಮಿಕ್ಕ ರಾಷ್ಟ್ರಕೂಟ ಸಾಮ್ರಾಜ್ಯ ತೈಲಪನ ವಶವಾಯಿತು. ಈತನ ಆಳ್ವಿಕೆಯಲ್ಲಿ ಕರ್ನಾಟಕ-ತಮಿಳು ಪ್ರದೇಶಗಳ ಹೋರಾಟ ಮರುಕಳಿಸಿತು. ತೈಲನು ಚೋಳ ಒಂದನೆಯ ರಾಜರಾಜನನ್ನು ಸೋಲಿಸಿದನೆಂದು ಹೇಳಲಾಗಿದೆ. ಈ ಹೋರಾಟ ಸತ್ಯಾಶ್ರಯ ಇರಿವ ಬೆಡಂಗನ ಆಳ್ವಿಕೆಯಲ್ಲಿ ಮುಂದುವರಿಯಿತು. ಒಂದನೆಯ ರಾಜರಾಜ ಗಂಗವಾಡಿ ಮತ್ತು  ನೊಳಂಬವಾಡಿಗಳನ್ನು ತನ್ನ ಅಧೀನತೆಗೆ ಒಳಪಡಿಸಿಕೊಂಡು ವೆಂಗಿಯ ಚಾಲುಕ್ಯರನ್ನು ತನ್ನ ಪ್ರಭಾವಕ್ಕೆ ಒಳಪಡಿಸಿಕೊಂಡು ಇದಕ್ಕೆ ಕಾರಣವಾಗಿತ್ತು. ವೆಂಗಿಯ ಮೇಲೆ ತನ್ನ ಹತೋಟಿಯನ್ನು ಸ್ಥಾಪಿಸುವ ಸತ್ಯಾಶ್ರಯನ ಪ್ರಯತ್ನ ಚೋಳ ಯುವರಾಜ ಒಂದನೆಯ ರಾಜೇಂದ್ರನ ಸೈನಿಕ ಕಾರ್ಯಾಚರಣೆಗೆ ನಾಂದಿಯಾಯಿತು. ಸತ್ಯಾಶ್ರಯನು ವೆಂಗಿಯನ್ನು ಬಿಟ್ಟುಕೊಟ್ಟು ಚೋಳಸೈನ್ಯ ತನ್ನ ರಾಜ್ಯಕ್ಕೆ ನುಸುಳದಂತೆ ತಡೆಗಟ್ಟಿದನು. ಐದನೆಯ ವಿಕ್ರಮಾದಿತ್ಯ ಮತ್ತು ಅಯ್ಯಣನು ಅನುಕ್ರಮವಾಗಿ ಆಳಿದ ನಂತರ ಇಮ್ಮಡಿ ಜಯಸಿಂಹ ಆಡಳಿತವನ್ನು ವಹಿಸಿಕೊಂಡನು. ಆತನು ಲಾಟ ಮತ್ತು ಕೊಂಕಣ ರಾಜ್ಯಗಳನ್ನು ಗೆದ್ದುಕೊಂಡು ರಾಜ್ಯವನ್ನು ವಿಸ್ತರಿಸಿದನು. ವೆಂಗಿಯ ಸಿಂಹಾಸನಕ್ಕೆ ಉಂಟಾದ ಸ್ಪರ್ಧೆಯಲ್ಲಿ ವಿಜಯಾದಿತ್ಯನ ಪರ ವಹಿಸಿದನು. ಚೋಳರು ರಾಜರಾಜನ ಪರ ನಿಂತರು. ಈ ಹೋರಾಟದಲ್ಲಿ ಜಯಸಿಂಹನನ್ನು ಚೋಳ ರಾಜೇಂದ್ರನನ್ನು ಪರಾಜಿತಗೊಳಿಸಿದನು. ಈ ಯುದ್ಧದ ನಂತರ ಸುಮಾರು ಇಪ್ಪತ್ತು ವರ್ಷಗಳವರೆಗೆ ಈ ವಲಯದಲ್ಲಿ ಶಾಂತಿ ನೆಲೆಸಿತ್ತು. ಜಯಸಿಂಹನ ಮಗ ಸೋಮೇಶ್ವರ ಅಹವಮಲ್ಲ ಮತ್ತು ತ್ರೈಲೋಕ್ಯಮಲ್ಲ ಚಾಲುಕ್ಯರ ರಾಜಧಾನಿಯನ್ನು ಕಲ್ಯಾಣಕ್ಕೆ ವರ್ಗಾಯಿಸಿದನು. ಇಪ್ಪತ್ತು ವರ್ಷಗಳ ನಂತರ ವೆಂಗಿಯ ರಾಜಕೀಯದಲ್ಲಿ ಚಾಲುಕ್ಯರ ಹಸ್ತಕ್ಷೇಪ ಈ ಯುದ್ಧಕ್ಕೆ ಕಾರಣವಾಯಿತು. ರಾಜೇಂದ್ರನ ಇಳಿವಯಸ್ಸಿನಲ್ಲಿ ಪ್ರಾರಂಭವಾದ ಈ ಹೋರಾಟ ಮುಂದುವರಿದು ಕೊಪ್ಪಂನಲ್ಲಿ ನಡೆದ ಕದನದಲ್ಲಿ (೧೦೫೩-೫೪) ರಾಜೇಂದ್ರನ ಉತ್ತರಾಧಿಕಾರಿ ರಾಜಾಧಿರಾಜನು ಮಡಿದನು.  ಎರಡನೆಯ ರಾಜೇಂದ್ರ ಚೋಳನು ಯುದ್ಧವನ್ನು ಮುಂದುವರಿಸಿ ಯಶಸ್ವಿಯಾಗಿ ಕೊಲ್ಲಾಪುರದಲ್ಲಿ ವಿಜಯಸ್ತಂಭವನ್ನು  ನೆಟ್ಟನು. ಈ ಸೋಲಿನ ಸೇಡಿಗಾಗಿ ಸೋಮೇಶ್ವರನು ಮತ್ತೊಮ್ಮೆ ಹೋರಾಡಿ ಕೂಡಲಸಂಗಮದಲ್ಲಿ ಪರಾಜಿತಗೊಂಡನು. ೧೦೬೮ರಲ್ಲಿ ಸೋಮೇಶ್ವರನು ಕುರುವತ್ತಿಯಲ್ಲಿ ತುಂಗಭದ್ರೆಯಲ್ಲಿ ಮುಳುಗಿ ಸಾವನ್ನಪ್ಪಿದನು.

ಇಮ್ಮಡಿ ಸೋಮೇಶ್ವರ ಚೋಳ ವೀರರಾಜೇಂದ್ರನೊಡನೆ ಸೆಣಸಬೇಕಾಯಿತು. ಆದರೆ ವೀರರಾಜೇಂದ್ರನು ತನ್ನ ಮಗಳನ್ನು ಸೋಮೇಶ್ವರನ ಸಹೋದರ ಆರನೆಯ ವಿಕ್ರಮಾದಿತ್ಯನಿಗೆ ವಿವಾಹ ಮಾಡಿದ್ದರಿಂದ ಈ ಭೀಕರಯುದ್ಧ ನಿಂತುಹೋಯಿತು. ಕೆ.ಎ.ನೀಲಕಂಠ ಶಾಸ್ತ್ರಿ ಅವರ ಅಭಿಪ್ರಾಯದಂತೆ ಚೋಲ-ಚಾಲುಕ್ಯರ ದೀರ್ಘಾವಧಿಯ ದ್ವೇಷ ಈ ವಿವಾಹದಲ್ಲಿ ಕೊನೆಗೊಂಡಿತು. ವೀರರಾಜೇಂದ್ರನ ಮರಣಾನಂತರ ವಿಕ್ರಮಾದಿತ್ಯ ಚೋಳ ಸಿಂಹಾಸನವನ್ನು ಅಧಿರಾಜೇಂದ್ರನಿಗೆ ದೊರಕಿಸಿಕೊಡಲು ಸಹಾಯ ಮಾಡಿದನು. ಆದರೆ ತಕ್ಷಣವೇ ದಂಗೆ ನಡೆದು ಚೋಳ ರಾಜನು ಅಸು ನೀಗಿದನು.  ನಂತರ ವೆಂಗಿಯ ದೊರೆ ರಾಜೇಂದ್ರ ಎರಡು ಸಾಮ್ರಾಜ್ಯಗಳನ್ನು ಒಂದುಗೂಡಿಸಿ ಒಂದನೆಯ ಕುಲೋತ್ತುಂಗ ಎಂಬ ಹೆಸರಿನಲ್ಲಿ ಚೋಳ ಸಿಂಹಾಸನವನ್ನೇರಿದನು.

ಈ ಮಧ್ಯೆ ವಿಕ್ರಮಾದಿತ್ಯನು ಚಾಲುಕ್ಯರ ಸಾಮಂತರನ್ನು ಒಲಿಸಿಕೊಂಡು ತನ್ನ ಸಹೋದರನಿಂದ ಸಿಂಹಾಸನವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದನು. ಸೋಮೇಶ್ವರ ಕುಲೋತ್ತುಂಗನೊಂದಿಗೆ ಒಪ್ಪಂದ ಮಾಡಿಕೊಂಡು ಆ ಜಂಟಿ ಸೈನ್ಯವು ನಂಗಲಿಯಲ್ಲಿ ವಿಕ್ರಮಾದಿತ್ಯನನ್ನು ಸೋಲಿಸಿತು. ಆದರೆ ವಿಕ್ರಮಾದಿತ್ಯನು ೧೦೭೬ರಲ್ಲಿ ಸೋಮೇಶ್ವರನನ್ನು ಬಂಧಿಸಿ ತಾನೆ ದೊರೆಯೆಂದು ಘೋಷಿಸಿಕೊಂಡನು.

ಆರನೆಯ ವಿಕ್ರಮಾದಿತ್ಯನು (೧೦೩೬-೧೧೨೬) ಚಾಲುಕ್ಯವಂಶದ ಶ್ರೇಷ್ಠದೊರೆ. ಪಟ್ಟಕ್ಕೆ ಬಂದ ನೆನಪಿಗಾಗಿ ೧೦೭೬ರಲ್ಲಿ ‘ಚಾಲುಕ್ಯ – ವಿಕ್ರಮ ಶಕೆ’ ಎಂಬ ಹೊಸ ಶಕೆಯನ್ನು ಸ್ಥಾಪಿಸಿದನು. ಇದು ಶಕವರ್ಷದ ಬಳಕೆಯನ್ನು ತಡೆದದ್ದಲ್ಲದೆ ತನ್ನ ಉತ್ತರಾಧಿಕಾರಿಗಳನೇಕರಿಗೆ ಹೊಸ ಶಕೆಗಳನ್ನು ಸ್ಥಾಪಿಸುವುದಕ್ಕೆ ಮಾದರಿಯಾಯಿತು. ಈ ಶಕೆಯು ಆತನ ನಂತರ ಸುಮಾರು ಅರ್ಧಶತಮಾನದವರೆಗೆ ಬಳಕೆಯಲ್ಲಿದ್ದಿತು. ವಿಕ್ರಮಾದಿತ್ಯನು ೧೦೮೫ರಲ್ಲಿ ಚೋಳರ ಮೇಲೆ ದಾಳಿ ಮಾಡಿ ಕಂಚಿಯನ್ನು ವಶಪಡಿಸಿಕೊಂಡನು. ೧೦೯೩ರಲ್ಲಿ ವೆಂಗಿಯನ್ನು ಸುಟ್ಟು  ಆಂಧ್ರಪ್ರದೇಶವನ್ನು ಚೋಳರಿಂದ ಕಸಿದುಕೊಂಡನು. ಆಳ್ವಿಕೆಯ ಕಡೆಯ ದಿನಗಳಲ್ಲಿ ಸಾಮಂತರಾದ ಹೊಯ್ಸಳ ವಿಷ್ಣುವರ್ಧನನನ್ನು ಸೋಲಿಸಿ, ಉಚ್ಚಂಗಿಯ ಪಾಂಡ್ಯರಾಜ, ಗೋವೆಯ ಕದಂಬ ಜಯಕೇಶಿ, ಶಿಲಾಹಾರರು ಮತ್ತು ಸೇವುಣರನ್ನು ದಂಡಿಸಿದನೆಂದು ತಿಳಿಯುತ್ತದೆ. ಪರಮಾನ ರಾಜಕೀಯದಲ್ಲೂ ಹಸ್ತಕ್ಷೇಪ ಮಾಡಿ ಜಗದ್ದೇವನನ್ನು ಸಿಂಹಾಸನಕ್ಕೆ  ತಂದನು. ಸ್ವಲ್ಪಕಾಲದ ನಂತರ ಜಗದ್ದೇವನು ಸಿಂಹಾಸನವನ್ನು ತ್ಯಜಿಸಿ ಕಲ್ಯಾಣದಲ್ಲಿಯೇ ಉಳಿದು ವಿಕ್ರಮಾದಿತ್ಯನ ಯುದ್ಧಗಳಲ್ಲಿ ನೆರವಾದನು. ವಿಕ್ರಮಾದಿತ್ಯನು ಸಾಹಿತ್ಯ ಪೋಷಕನೂ ಹೌದು. ವಿಕ್ರಮಾಂಕದೇವಚರಿತ ಕರ್ತೃ ಬಿಲ್ಹಣ ಮತ್ತು ಯಾಜ್ಞವಲ್ಕ್ಯಸ್ಮೃತಿಗೆ ಮಿತಾಕ್ಷರ ಎಂಬ ವ್ಯಾಖ್ಯಾನವನ್ನು ರಚಿಸಿದ ವಿಜ್ಞಾನೇಶ್ವರ ಆತನ ಆಸ್ಥಾನದಲ್ಲಿದ್ದರು. ಆತನು ವಿಕ್ರಮಪುರವೆಂಬ ನಗರವನ್ನು ಸ್ಥಾಪಿಸಿ ಅಲ್ಲಿ ದೇವಾಲಯವೊಂದನ್ನು ನಿರ್ಮಿಸಿದನು. ವಿಕ್ರಮಾದಿತ್ಯನ ನಂತರ ಚಾಲುಕ್ಯ ಸಾಮ್ರಾಜ್ಯ ಅವನತಿಯ ಹಾದಿಯನ್ನು ಹಿಡಿಯಿತು. ಆತನ ಮಗ ಮುಮ್ಮಡಿ ಸೋಮೇಶ್ವರ ಆಂಧ್ರ ದೇಶವನ್ನು ಚೋಳರಿಗೆ ಒಪ್ಪಿಸಿದನು. ಸ್ವತಃ ಕವಿಯಾದ ಸೋಮೇಶ್ವರ ಅಭಿಲಷಿತಾರ್ಥ ಚಿಂತಾಮಣಿ ಅಥವಾ ಮಾನಸೋಲ್ಲಾಸ ಎಂಬ ಕೃತಿಯನ್ನು ರಚಿಸಿದನು. ಆತನ ನಂತರ ಜಗದೇಕಮಲ್ಲ ಮತ್ತು ನಾಲ್ಮಡಿ ಸೋಮೇಶ್ವರ ಅನುಕ್ರಮವಾಗಿ ಆಳಿದರು. ಸೋಮೇಶ್ವರರ ಆಳ್ವಿಕೆಯಲ್ಲಿ ಸೇವುಣರು ಉತ್ತರ ಕರ್ನಾಟಕ ಮತ್ತು ಹೊಯ್ಸಳರು ದಕ್ಷಿಣ ಕರ್ನಾಟಕವನ್ನು ಆಕ್ರಮಿಸಿಕೊಳ್ಳುವುದರೊಂದಿಗೆ  ಚಾಲುಕ್ಯ ಸಾಮ್ರಾಜ್ಯ ಕೊನೆಗೊಂಡಿತು.

ಚಾಲುಕ್ಯರ ಆಡಳಿತ ವ್ಯವಸ್ಥೆ ಕೇಂದ್ರಿಕೃತವಾಗಿರಲಿಲ್ಲ. ಸಾಮಂತರು ಅಧಿಕಾರ ಸ್ವಾತಂತ್ರವನ್ನು ಹೊಂದಿದ್ದರು. ಆಡಳಿತದ ನಿರ್ವಹಣೆಗಾಗಿ ಠಾಣೆವರ್ಗಡೆ, ಬಾಣಸವರ್ಗಡೆ,  ಅಂತಃಪುರಾಧ್ಯ, ಕಡತವರ್ಗಡೆ ಮುಂತಾದ ವಿಭಾಗಗಳಿದ್ದವು. ರಾಷ್ಟ್ರ, ವಿಷಯ, ನಾಡು ಮತ್ತು ಠಾಣೆಗಳು ಸಾಮ್ರಾಜ್ಯದ ವಿಭಾಗಗಳಾಗಿದ್ದವು. ನಾಡಿನ ಅಧಿಕಾರಿಯನ್ನು ನಾಡರಸಮ ನಾಡಪ್ರಭು ಎಂದು ಕರೆಯುತ್ತಿದ್ದರು. ಠಾಣೆ(ಢಾನ)ಯು ಆರ್ಥಿಕ ಘಟಕವಾಗಿತ್ತು.

ವರ್ಣವ್ಯವಸ್ಥೆಯಲ್ಲಿ ಕಾಲಕ್ಕನುಗುಣವಾಗಿ ಬದಲಾವಣೆ ಕಂಡುಬರುತ್ತಿತ್ತು. ಆತ್ಮ ತ್ಯಾಗ, ಸ್ವಾಮಿಭಕ್ತಿಯ ಸಾಮಾಜಿಕ ಜೀವನದ ಪ್ರಮುಖ ಲಕ್ಷಣವಾಗಿತ್ತು. ಜೈನರ ಸಲ್ಲೇಖನ  ಮತ್ತು ಶೂಲಬ್ರಹ್ಮ ವ್ರತಗಳು ರೂಢಿಯಲ್ಲಿದ್ದವು. ಸತಿಪದ್ಧತಿ ಜನಪ್ರಿಯವಾಗಿರಲಿಲ್ಲ. ಸ್ತ್ರೀಯರು, ಮುಖ್ಯವಾಗೊ ರಾಣಿವಾಸದವರು ಆಡಳಿತದಲ್ಲಿ ಭಾಗವಹಿಸುತ್ತಿದ್ದರಲ್ಲದೆ ದತ್ತಿದಾನಗಳನ್ನು ಕೊಡುತ್ತಿದ್ದರು.

ಕೃಷಿ, ಗೃಹಕೈಗಾರಿಕೆಗಳು ಮತ್ತು ವ್ಯಾಪಾರ ಅಭಿವೃದ್ಧಿ ಪಡೆದಿದ್ದವು. ವ್ಯಾಪಾರ ಮತ್ತು ಕೈಗಾರಿಕೆಗಳು ತಮ್ಮ ಹಿತರಕ್ಷಣೆಗಾಗಿ ಸಂಘಗಳನ್ನು ಮಾಡಿಕೊಂಡಿದ್ದವು. ಪ್ರತಿಯೊಂದು ಸಂಘವೂ ತಮ್ಮದೇ ಆದ ಲಾಂಛನ ಮತ್ತು ಸೈನ್ಯವನ್ನು ಹೊಂದಿದ್ದವು. ವ್ಯಾಪಾರ ಸಂಘಗಳಲ್ಲಿ ಅಯ್ಯಾವೊಳೆಯ ೫೦೦ ಸಂಘ ಮತ್ತು ಮುಮ್ಮಡಿಯದಂಡರು ಎಂಬುವನ್ನು ಹೆಸರಿಸಬಹುದು.

ಎಲ್ಲ ಪ್ರಮುಖ ಧರ್ಮಗಳೂ ಪ್ರಚಾರದಲ್ಲಿದ್ದವು. ಜೈನ ಧರ್ಮ ತನ್ನ ಪ್ರಸಿದ್ಧಿಯನ್ನು ಉಳಿಸಿಕೊಂಡಿತ್ತು. ಸುಪ್ರಸಿದ್ಧ ಜೈನ ಭಕ್ತೆ ಅತ್ತಿಮಬ್ಬೆ ದಾನ ಚಿಂತಾಮಣಿ ಎಂದು ಪ್ರಸಿದ್ಧಿ ಪಡೆದಿದ್ದಳು. ಬಳ್ಳಿಗಾವೆ ಮತ್ತು ದಂಬಲ್ ಮಹಾಯಾನ ಬೌದ್ಧರ ಕೇಂದ್ರಗಳಾಗಿದ್ದವು.

ಕನ್ನಡ ಸಾಹಿತ್ಯದ ಹೆಚ್ಚು ಪರಿಚಿತವಾಯಿತು. ರನ್ನನು ಗದಾಯುದ್ಧ ಅಥವಾ ಸಾಹಸಭೀಮ ವಿಜಯ ಹಾಗೂ ಅಜಿತನಾಥ ಪುರಾಣವನ್ನು ರಚಿಸಿದನು. ಮೊದಲನೆಯ ನಾಗವರ್ಮ ಕರ್ನಾಟಕ ಕಾದಂಬರಿ ಮತ್ತು ಛಂದೋಂಬುಧಿ,ಕನ್ನಮ್ಮಯ್ಯ ಮಾಲತಿಮಾಧವ, ಚಾವುಂಡರಾಯ ಲೋಕೋಪಕಾರ, ಚಂದ್ರರಾಜ ಮದನತಿಲಕ, ಶ್ರೀಧರಾಚಾರ್ಯ ಜಾತಕ ತಿಲಕ, ಕೀರ್ತಿವರ್ಮ ಗೋವಿಧ್ಯ, ದುರ್ಗಸಿಂಹ ಪಂಚತಂತ್ರ, ಶಾಂತಿನಾಥ ಸುಕುಮಾರ ಚರಿತೆ, ನಾಗವರ್ಮಾಚಾರ್ಯ ಚಂದ್ರಚೂಡಾಮಣಿ ಮತ್ತು ನಯಸೇನ ಧರ್ಮಾಮೃತ ಕೃತಿಗಳನ್ನು ಕನ್ನಡದಲ್ಲಿ ರಚಿಸಿದರು. ಎರಡನೆಯ ನಾಗವರ್ಮನು ಕಾವ್ಯಾಲೋಕನ, ಭಾಷಾಭೂಷಣ ಮತ್ತು ಅಭಿಧಾನವಸ್ತು ಕೋಸ  ಹಾಗೂ ಬ್ರಹ್ಮಶಿವನು ಸಮಯ ಪರೀಕ್ಷೆಯನ್ನು ರಚಿಸಿದರು. ವಿದ್ಯಾಪತಿ ಬಿಲ್ಹಣ, ವಿಜ್ಞಾನೇಶ್ವರ, ಮೂರನೆಯ ಸೋಮೇಶ್ವರ ಪ್ರಮುಖ ಸಂಸ್ಕೃತ ಕವಿಗಳು ಧನಂಜಯನ ನಾಮಮಾಲೆ ಹಾಗೂ ಜಯಕೀರ್ತಿ ಛಂದೋನುಶಾಸನ ಈ ಕಾಲದಲ್ಲಿ ರಚಿಸಿದವುಗಳಾಗಿವೆ.

ಕಲೆಗೂ ಚಾಲುಕ್ಯರು ಹೆಚ್ಚಿನ ಪ್ರೋತ್ಸಾಹ ನೀಡಿದ್ದರಲ್ಲದೆ ಅವರ ಶೈಲಿಯು ಚಾಲುಕ್ಯ ಶೈಲಿ ಎಂದು ಹೆಸರು ಪಡೆದಿದೆ. ಆ ಕಾಲದ ಮುಖ್ಯ ದೇವಾಲಯಗಳಲ್ಲಿ ಕುಕ್ಕನೂರಿನ ನವಲಿಂಗ ಮತ್ತು ಕಲ್ಲೇಶ್ವರ, ಲಕ್ಕುಂಡಿಯ ಜೈನ ದೇವಾಳಯ ಮತ್ತು ಕಾಶಿ ವಿಶ್ವೇಶ್ವರ, ಕುರುವತ್ತಿಯ ಮಲ್ಲಿಕಾರ್ಜುನ ದೇವಾಲಯ ಮತ್ತು ಇಟ್ಟಿಗೆಯ ಮಹಾದೇವ ದೇವಾಲಯಗಳನ್ನು ಹೆಸರಿಸಬಹುದು.