ಅರಮನೆ ಅಥವಾ ದೇವಸ್ಥಾನದ ಕಟ್ಟಡ

ಮೊಹೆಂಜೋದಾರೋದ ಪ್ರಮುಖ ಬೀದಿಯ ಹತ್ತಿರದಲ್ಲಿ ವಿಶಾಲವಾದ ಪಾಳು ಕಟ್ಟಡವು ೧೬೯ ಅಡಿ ಉದ್ದ ಮತ್ತು ೧೩೫ ಅಡಿ ಅಗಲವಾಗಿದ್ದು ಅದರಲ್ಲಿ ದೊಡ್ಡ ದೊಡ್ಡ ಅಂಗಳಗಳು, ಸೇವಕರ ಕೊಠಡಿಗಳು ಮತ್ತು ಆಹಾರ ಸಂಗ್ರಹಣ ಕೊಠಡಿಗಳನ್ನು ಹೊಂದಿದೆ. ಇದನ್ನು ದೇವಸ್ಥಾನ ಅಥವಾ ನಗರದ ಪ್ರಮುಖ ಅರಮನೆಯಿರಬೇಕೆಂದು ಊಹಿಸಲಾಗಿದೆ.

ಕೂಲಿಗಳ ಮನೆಗಳು

ಹರಪ್ಪಾದಲ್ಲಿ ಬಿಡಿ ಮನೆಗಳ ಎರಡು ಸಾಲುಗಳಿವೆ. ಪ್ರತಿಯೊಂದು ಮನೆಯ ಸರಾಸರಿ ೧೮೮ ಮೀ. ಗಳಷ್ಟಿವೆ. ಪ್ರತಿ ಮನೆಯಲ್ಲೂ ಎರಡು ಕೋಣೆಗಳಿದ್ದು ನೆಲೆಗುಟ್ಟುಳ್ಳ ಅಂಗಳವೊಂದಿದ್ದು ಓರೆಯಾದ ದಾರಿಯಿಂದ ಇವಕ್ಕೆ ಪ್ರವೇಶವಿದೆ. ಈ ಮನೆಗಳು ಸರ್ಕಾರದ ಯೋಜನೆಗೆ ಅನುಗುಣವಾಗಿ ನಿರ್ಮಿಸಿದಂತಿರುವುದರಿಂದ ಈ ಕಟ್ಟಡಗಳನ್ನು ‘ಕೂಲಿಗಳ ಮನೆಗಳು’ ಎಂದು ಕರೆಯಲಾಗಿದೆ. ಈ ಕಟ್ಟಡಗಳ ಬಳಿಯೇ ಕಣಜವಿದ್ದು ಅಲ್ಲಿನ ಧ್ಯಾನಗಳ ಹೊಟ್ಟನ್ನು ತೆಗೆಯಲು ಬಳಸುತ್ತಿದ್ದ ವೇದಿಕೆಗಳು ಕೂಲಿಗಳ ನೇಮಕವನ್ನು ಸೂಚಿಸುತ್ತದೆ. ಕೂಲಿಗಳ ಮನೆಗಳ ಉತ್ತರದಲ್ಲಿ ವೃತ್ತಾಕಾರದ ವೇದಿಕೆಗಳನ್ನು  ಅಲ್ಲಿ ಹುಲ್ಲಿನ ಚೂರು, ಹೊಟ್ಟು, ಸುಟ್ಟ ಗೋಧಿ, ಹೊಟ್ಟು ತೆಗೆದ ಬಾರ್ಲಿ ಕಂಡುಬಂದಿವೆ. ಈ ವೃತ್ತಾಕಾರದ  ವೇದಿಕೆಗಳು ಕಣಜದ ಹತ್ತಿರವೇ ಕೇಂದ್ರೀಕೃತವಾಗಿರುವುದು. ಇಲ್ಲಿ ದಾಸ್ತಾನುಮಾಡಿದ ಧ್ಯಾನಗಳನ್ನು ಕೂಲಿಯವರಿಂದ ಬೃಹತ್ ಪ್ರಮಾಣದಲ್ಲಿ ಹಿಟ್ಟು ಮಾಡಿಸಲಾಗುತ್ತಿತೆಂಬುದನ್ನು ಸೂಚಿಸುತ್ತದೆ.

ಕೂಲಿಗಳ ಮನೆಗಳ ಹತ್ತಿರವೇ ೧೬ ಕುಲುಮೆಗಳು ಬೆಳಕಿಗೆ ಬಂದಿವೆ. ಇವುಗಳ ಹತ್ತಿರದಲ್ಲೇ ಕಂಡು ಬಂದ ಮಣ್ಣಿನ ಮೂಸೆಗಳನ್ನು, ಕಂಚನ್ನು ಕರಗಿಸಲು ಬಳಸಲಾಗುತ್ತಿತ್ತು. ಇಲ್ಲಿ ಕಂಚುಗಾರರು ಕೆಲಸ ಮಾಡುತ್ತಿದ್ದರೆಂದು ತೋರುತ್ತದೆ.

ಆಡಳಿತ

ಸಿಂಧೂ ನಾಗರಿಕತೆಯಲ್ಲಿ ಒಂದು ವ್ಯವಸ್ಥಿತವಾದಂತಹ ಸರ್ಕಾರ ಎಲ್ಲಾ ಹಂತಗಳಲ್ಲೂ ಅಸ್ತಿತ್ವದಲ್ಲಿದ್ದಿತೆಂದು ಅಲ್ಲಿನ ಅಂಶಗಳಿಂದ ತಿಳಿದುಬರುತದೆ. ಸಿಂಧೂ ನಾಗರಿಕತೆಯ ಬೃಹತ್ ವ್ಯಾಪ್ತಿಗೊಳಪಟ್ಟ ಎಲ್ಲಾ ಪ್ರದೇಶಗಳಲ್ಲೂ ಕಂಡುಬರುವ ವಸ್ತು ಹಾಗೂ ಅವುಗಳ ಆಕಾರ ಏಕರೂಪವಾಗಿವೆ. ಈ ಏಕತೆಗೆ ಹರಪ್ಪಾ ಜನರು ಪ್ರಮಾಣ ನಿರ್ಷ್ಕೆಯ ಅನುಕೂಲವನ್ನು ಗಮನದಲ್ಲಿಟ್ಟುಕೊಂಡಿರುವುದೇ ಕಾರಣವಿರಬೇಕು. ಅವರು ನೆಲಸಿದಲ್ಲೆಲ್ಲಾ ಒಂದೇ ವಿಧದ ನಗರಾಡಳಿತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಆ ಆಡಳಿತ  ವ್ಯವಸ್ಥೆಯ ಮೂಲಕ ಉತ್ತಮವಾದ ರಸ್ತೆ ಮತ್ತು ಓಣಿಗಳುಳ್ಳ ಪಟ್ಟಣ ಹಾಗೂ ನಗರಗಳನ್ನು ಸಮಗ್ರವಾದ ಚೌಕಟ್ಟಾದ ನಕ್ಷೆಗನುಗುಣವಾಗಿ ಕಟ್ಟಿದ್ದಾರೆ.

ಉತ್ತಮ ಮಟ್ಟದ ಸಾರ್ವಜನಿಕ ನೈರ್ಮಲೀಕರಣದ  ವ್ಯವಸ್ಥೆಯನ್ನು ಮಾಡಿದ್ದಾರೆ. ಸಿಂಧೂ ನಾಗರಿಕತೆಯ ಗಮನಾರ್ಹ ವೈಶಿಷ್ಟ್ಯವೆಂದರೆ ಅಲ್ಲಿಯ ಸಮರೂಪತ್ವ ಸಿಂಧೂ ನಾಗರಿಕತೆಯ ಪ್ರದೇಶದಲ್ಲೆಲ್ಲಾ ಒಂದೇ ಬಗೆಯ ಸಲಕರಣೆ ಹಾಗೂ ಆಯುಧಗಳು, ಒಂದೇ ಆಳತೆಯ ಹಾಗೂ ಒಂದೇ ಮಾದರಿಯ ಮನೆ, ಇಟ್ಟಿಗೆಗಳು, ಆಳತೆ ಮತ್ತು ತೂಕ ಇದ್ದುದು ತಿಳಿದುಬರುತ್ತದೆ. ಈ ಅಂಶವು ಈ ನಾಗರೀಕತೆಯು ಜೀವಿಸಿದ್ದ ಎಲ್ಲಾ ಕಾಲದಲ್ಲೂ ಒಂದೇ ವಿಧವಾದ ಸರ್ಕಾರ ಅಸ್ತಿತ್ವದಲ್ಲಿದ್ದು ಮುಂದುವರಿದುಕೊಂಡು ಬಂದಿತೆಂದು ತಿಳಿಸುತ್ತದೆ. ಮೊಹೆಂಜೋದಾರೋ ನಿವೇಶನದಲ್ಲಿ ಯಾವುದೇ ಮಾರ್ಪಾಡಿಲ್ಲದೆ ಹಳೆ ಮನೆಯ ನಿವೇಶನದ ಮೇಲೆ ಹೊಸ ಮನೆ ನಿರ್ಮಾಣವಾಗಿದೆ. ಸಿಂಧೂ ನಾಗರಿಕತೆಯ  ನಗರಗಳ ರಸ್ತೆ ಮತ್ತು ಓಣಿ ಯೊಜನೆಗೆ ಒಂದು ಸಾವಿರ ವರ್ಷವಾದರೂ ಒಂದೇ ರೀತಿಯಿದೆ. ಸಿಂಧೂ ನಾಗರಿಕತೆಯ ಜನರು ಈಜಿಪ್ಟ್ ಮತ್ತು ಮೆಸಪಟೋಮೀಯಾದೊಂದಿಗೆ ವಿಸ್ತೃತವಾದ ವ್ಯಾಪಾರ, ಸಾಂಸ್ಕೃತಿಕ ಸಂಬಂಧ ಹೊಂದಿದ್ದರೂ ಬರವಣಿಗೆಯ ಲಿಪಿಯಲ್ಲಾಗಲಿ, ಅಳತೆ ಮತ್ತು ತೂಕದಲ್ಲಾಗಲಿ, ವ್ಯಾಪಾರ ಸಂಘಟನೆಯಲ್ಲಾಗಲಿ ಮಾರ್ಪಾಡಾಗಿಲ್ಲ. ಹೀಗೆ ವಿಶಾಲವಾದ ನಾಡಿನಲ್ಲಿ ಏಕರೂಪತೆಯನ್ನು ತರಲು ಒಂದು ಕೇಂದ್ರೀಯ ಪ್ರಭುತ್ವ ಶಕ್ತಿ ಅಸ್ತಿತ್ವದಲ್ಲಿರಬೇಕು. ನಗರಗಳಲ್ಲಿ ಸಾರ್ವಜನಿಕ ನೈರ್ಮಲೀಕರಣದ ವ್ಯವಸ್ಥೆ ನಗರಗಳ ಬೀದಿಗಳಿಗೆ ದೀಪದ ವ್ಯವಸ್ಥೆ, ನಗರಗಳ ಬಡಾವಣೆಗಳಿಗೆ ರಕ್ಷಣೆ, ಪ್ರಮಾಣ ಮಾಡುವ ವ್ಯಾಪಾರಸ್ಥರಿಗೆ ‘ಸರಾಯ್’ಗಳು ಮತ್ತು ಸಾರ್ವಜನಿಕ ದಾಸ್ತಾನು ಮಳಿಗೆಗಳನ್ನು ಗಮನಿಸಿದಾಗ ಸಿಂಧೂ ನಾಗರಿಕತೆಯ ಜನರು ಬಹಳ ವ್ಯವಸ್ಥಿತವಾದ ನಾಗರೀಕ ಜೀವನ ನಡೆಸುತ್ತಿದ್ದರೆಂದು ಹಾಗೂ ಅವುಗಳನ್ನು ನೋಡಿಕೊಳ್ಳಲು ಉತ್ತಮ ನಾಗರಿಕ ಆಡಳಿತವು ಅಸ್ತಿತ್ವದಲ್ಲಿದ್ದಿತೆಂದು ನಂಬಬಹುದಾಗಿದೆ. ಕೆ. ಎನ್. ದೀಕ್ಷಿತ್ ಅವರು ಮೊಹೆಂಜೋದಾರೋದಲ್ಲಿ “ಮೌರ್ಯರ ಮಂಡಳಿ ವ್ಯವಸ್ಥೆಯ ರೀತಿ ಅಥವಾ ಗುಪ್ತರ ನಗರ ಸಭೆಯ ರೀತಿಯ ಆಡಳಿತ ವ್ಯವಸ್ಥೆ ಇದ್ದಿರಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಎ. ಎಲ್. ಬಾಷ್ಯಂರವರು ಸಿಂಧೂ ನಾಗರಿಕತೆಯಲ್ಲಿ ಪುರೋಹಿತ ರಾಜನ ಆಳ್ವಿಕೆಯಿತ್ತೆಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ  ಸಿಂಧೂ ನಾಗರಿಕತೆಯಲ್ಲಿ ಮೆಸಪೊಟೋಮಿಯ ಅತವಾ ಈಜಿಪ್ಟ್‌ಗಳಲ್ಲಿದ್ದಂತೆ ಪುರೋಹಿತ ರಾಜ ಅಥವಾ ದೈವಾಂಶ ಸಂಭೂತನಾದ ರಾಜನಿದ್ದಂತೆ ಕಾಣುವುದಿಲ್ಲ. ಏಕೆಂದರೆ ಸಿಂಧೂ ಪ್ರದೇಶದ ಯಾವ ನಗರಗಳಲ್ಲೂ ಯಾವುದೇ ದೇವಾಲಯದ ಅಥವಾ ಧಾರ್ಮಿಕ ಪೂಜೆಗಳಿಗೆ ಸಂಬಂಧಿಸಿದಂಥ ಯಾವುದೇ ಕಟ್ಟಡದ ಅವಶೇಷವು ರಾಜಕೀಯ ಆಕಾರದ ಕೇಂದ್ರದಲ್ಲಾಗಲಿ ಇಲ್ಲವೆ ಅದರ ಸಮೀಪದಲ್ಲಾಗಲಿ ದೊರೆತಿಲ್ಲ.

ಸಿಂಧೂ ನಾಗರಿಕತೆಯಲ್ಲಿ ರಾಜನೊಬ್ಬನು ಆಳಿದನೆಂಬುದಕ್ಕೂ ಯಾವುದೇ ಪುರಾವೆಗಳು ದೊರೆತಿಲ್ಲ. ಯುದ್ಧಕ್ಕೆ ಅವಶ್ಯಕವಾದ ಆಯುಧಗಳು ಕೆಲವೇ ಸಿಕ್ಕಿದ್ದು ಅದರಲ್ಲಿ ಕಠಾರಿ ಮತ್ತು ಚಾಕುಗಳು ಆಯುಧಗಳಾಗಿರದೆ ಉಪಕರಣಗಳಂತಿವೆ. ಬಿಲ್ಲು ಬಾಣಗಳ ನಮೂನೆಗಳು ದೊರೆತಿದ್ದರೂ ಬಾಣದ ಮುಂಭಾಗವು ಚಿಕ್ಕದಾಗಿದ್ದು ಹರಿತ ಮತ್ತು ಶಕ್ತಿಯುತವಾಗಿಲ್ಲ, ಕತ್ತಿ, ಶಿರಸ್ತ್ರಾಣ. ಕವಚದಂತಹ ರಕ್ಷಣಾಯುಧಗಳು ದೊರೆತಿಲ್ಲದಿರುವುದು ಸಿಂಧೂ ನಾಗರೀಕತೆಯ ಜನರು ಯುದ್ಧಪ್ರಿಯ ಜನಾಂಗವಲ್ಲವೆಂದು ನಿರೂಪಿಸುತ್ತದೆ.

ಎಸ್‌. ಅರ್. ರಾವ್‌ಅವರು “ಸಿಂಧೂ ಸಾಮ್ರಾಜ್ಯ ಲೌಕಿಕ ದೃಷ್ಟಿಯುಳ್ಳ ಧರ್ಮಶೀಲ ಅರಸನಿಂದ ಆಳಲ್ಪಟ್ಟಿತೆಂದು” ಅಭಿಪ್ರಾಯಪಟ್ಟಿದ್ದಾರೆ. ಕೊನೆಯದಾಗಿ ಸಿಂಧೂ ನಾಗರೀಕತೆಯ ನಗರ ರಾಜ್ಯಗಳನ್ನು ವ್ಯಾಪಾರ ವಾಣಿಜ್ಯಗಳ ಹತೋಟಿ ಹೊಂದಿದ ವರ್ತಕ ವರ್ಗ ಆಳುತ್ತಿದ್ದಿರಬಹುದೆಂದು ಊಹಿಸಬಹುದಾಗಿದೆ. ಕಾರಣ ಸಿಂಧೂ ನಾಗರಿಕತೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ನಗರ ವ್ಯವಸ್ಥೆ, ನಗರಗಳು ಬೆಳೆಯಲು ಇದ್ದ ಪ್ರಮುಖ ಅಂಶಗಳು ಮತ್ತು ಅದಕ್ಕೆ ಪೂರಕವಾಗಿದ್ದ ವ್ಯಾಪಾರ ವಾಣಿಜ್ಯ ವ್ಯವಸ್ಥೆ. ಆದ್ದರಿಂದ ನಗರಗಳನ್ನು ಆರ್ಥಿಕವಾಗಿ ಪ್ರಭಲವಾಗಿದ್ದ ವರ್ತಕರ ವರ್ಗ ತನ್ನ ಹತೋಟಿಯಲ್ಲಿಟ್ಟುಕೊಂಡು ಆಳುತ್ತಿತ್ತೆಂಬ ತೀರ್ಮಾನಕ್ಕೆ ಬರಬಹುದು.

ವ್ಯಾಪಾರ ಮತ್ತು ವಾಣಿಜ್ಯ

ಸಿಂಧೂ ನಾಗರಿಕತೆಯ ಮೂರು ಪ್ರಸಿದ್ಧ ಕೈಗಾರಿಕಾ ಕೇಂದ್ರಗಳೆನಿಸಿದ್ದ ಹರಪ್ಪಾ, ಮೊಹೆಂಜೋದಾರೊ ಮತ್ತು ಲೋಥಲ್‌ಗಳ ಅಭ್ಯುದಯ ಬಹಳ ಮಟ್ಟಿಗೆ ವ್ಯಾಪಾರದ ಮೇಲೆಯೇ ಅವಲಂಭಿಸಿತ್ತು. ಅಕ್ಕಪಕ್ಕದ ಪ್ರದೇಶಗಳಲ್ಲಿಯ ಕೃಷಿ ಉತ್ಪನ್ನಗಳನ್ನು ಇಲ್ಲಿಯ ಲೋಹದ ಉಪಕರಣ ಹಾಗೂ ಕಲ್ಲಿನ ಸಲಕರಣೆಗಳಿಗೆ ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. ಇವುಗಳ ಉತ್ಪಾದನೆ, ಸಾಮ್ರಾಜ್ಯದ ಒಳಗಿನ ಹಾಗೂ ಹೊರಗಿನ ಪ್ರದೇಶಗಳಿಂದ ಭೂ ಮತ್ತು ಸಮುದ್ರ ಮಾರ್ಗವಾಗಿ ಆಮದು ಮಾಡಿಕೊಂಡ ಕಚ್ಚಾ ವಸ್ತುಗಳ ಮೇಲೆ ಅವಲಂಬಿಸಿತ್ತು. ಉದಾಹರಣೆಗೆ ಲೋಥಲ್‌ಗೆ ಅಗತ್ಯವಾಗಿದ್ದ ಉತ್ತಮವಾದ ಚರ್ಟ್‌ಕಲ್ಲು ಸಿಂಧೂ ಕಣಿವೆಯಿಂದ ಸರಬರಾಜಾಗುತ್ತಿತ್ತು. ಇದಕ್ಕೆ ಪ್ರತಿಯಾಗಿ, ಇಲ್ಲಿಂದ ಸಿಂಧೂ ಕಣಿವೆಗೆ ಕಾಥೇವಾಡದ ತೀರದಲ್ಲಿ ಉಪಲಬ್ದವಿದ್ದ ಶಂಖಗಳೂ, ಗುಜರಾತದ ಬೆಟ್ಟಗಳಲ್ಲಿಯ ತೇಗದ ಮರಗಳೂ ಸರಬರಾಜಾಗುತ್ತಿದ್ದವು. ಹೀಗೆ, ನಗರಗಳ ಪರಸ್ಪರ ಅವಲಂಬನೆ ಅನಿವಾರ್ಯವಾಗಿತ್ತು. ಸಿಂಧೂ ಹಾಗೂ ಮೆಸಪೊಟೋಮಿಯಾ ನಗರಗಳಲ್ಲಿ ಭಾರಿ ಬೇಡಿಕೆಯಿದ್ದ ಭೋಗ ಸಾಮಗ್ರಿಗಳನ್ನು ಉತ್ಪಾದಿಸುವಲ್ಲಿ ಕೆಲವು ಕೇಂದ್ರಗಳು ಸಾಧಿಸಿದ್ದ ವೈಶಿಷ್ಟ್ಯ ಸಿಂಧೂ ವಾಣಿಜ್ಯದ ಗಮನಾರ್ಹ ಅಂಶವಾಗಿದೆ. ಲೋಥಲ್‌ಮತ್ತು ಚಾನ್ಹುದಾರೊಗಳಲ್ಲಿ ನರ್ಮದಾ ಕಣಿವೆ ಅಥವಾ ಆಫ್ಘಾನಿಸ್ತಾನದಿಂದ ಆಮದು ಮಾಡಿಕೊಂಡ ಕಚ್ಚಾವಸ್ತುಗಳಿಂದ, ರತ್ನಶಿಲೆಯ ಮಣಿಗಳನ್ನು ಉತ್ಪಾದಿಸುತ್ತಿದ್ದರು. ಮೊಹೆಂಜೋದಾರೋ ಮತ್ತು ಲೋಥಲ್‌ಗಳಲ್ಲಿ ರಫ್ತಿಗಾಗಿ ಹಾಗೂ ಸ್ಥಳೀಯ ಬಳಕೆಗಾಗಿ ದಂತದ ವಸ್ತುಗಳನ್ನು ತಯಾರಿಸುತ್ತಿದ್ದರು.

ಒಳನಾಡಿನ ವ್ಯಾಪಾರ, ಒಂದು ಕಡೆ ಆಫ್ಘಾನಿಸ್ಥಾನದ ಬಲೂಚಿ ಬೆಟ್ಟಗಳು ಮತ್ತು ಪರ್ಷಿಯಾದ ಪ್ರಸ್ಥಭೂಮಿಗಳನ್ನೂ ದಾಟಿ, ಮತ್ತೊಂದು ಕಡೆ ಪಂಜಾಬ್‌ ಮತ್ತು ಕರಾವಳೀ ಬೆಟ್ಟಗಳವರೆಗೂ ಹರಡಿದ್ದಿರಬೇಕು. ಸಮುದ್ರ ವ್ಯಾಪಾರ, ಪಶ್ಚಿಮದಲ್ಲಿ ಮಕ್ರಾನ್‌ಮತ್ತು ಪರ್ಷಿಯಾ ಖಾರಿ ರೇವುಗಳವರೆಗೂ, ದಕ್ಷಿಣದಲ್ಲಿ ವಲಬಾರದವರೆಗೆ ಅಲ್ಲದಿದ್ದರೂ ಗುಜರಾತ್‌ ಮತ್ತು ಕೊಂಕಣಗಳ ರೇವುಗಳವರೆಗೂ ಹರಡಿತ್ತು.

ಸುಮೇರಿಯಾದಲ್ಲಿಯ ವ್ಯಾಪಾರ ಸಾದೃಶ್ಯದಿಂದ ಹರಪ್ಪಾ ವರ್ತಕರೂ ಕೂಡ ಲಾಭ ಹಂಚಿಕೆಯ ಪಾಲುದಾರಿಕೆಯನ್ನು (profits-sharing partnership) ಸ್ಥಾಪಿಸಿ ಕೊಂಡಿದ್ದರೆಂದು ಊಹಿಸಬಹುದು. ಲೋಥಲ್‌ದ ದಾಸ್ತಾನು ಮಳಿಗೆಯಲ್ಲಿಯ ಜೇಡಿ ಮಣ್ಣಿನ ಮುದ್ರೆ ಗುರುತುಗಳ ಮೇಲೆ ಕಂಡುಬಂದಿರುವ ೨೩ ಬೇರೆ ಬೇರೆ ಮುದ್ರೆಗಳ ಗುರುತುಗಳಿರುವುದಕ್ಕೆ ವಿವರಣೆ ಹೀಗೆದೆ. ವ್ಯಾಪಾರದ ಪಾಲುದಾರರು ಮತ್ತು ದಾಸ್ತಾನುಮಳಿಗೆ ಅಧಿಕಾರಿಗಳು, ಪ್ರಾಮಾಣ್ಯ ಮತ್ತು ಗುರುತು ಸ್ಥಾಪನೆಗಳ ಉದ್ದೇಶದಿಂದ ತಮ್ಮ ತಮ್ಮ ವ್ಯಾಪಾರ ಮುದ್ರೆಗಳನ್ನು ಸರಕುಗಳ ಮೇಲೆ ಒತ್ತಿರುವುದಂತೂ ಸ್ಪಷ್ಟ. ವ್ಯಾಪಾರವನ್ನು ಪ್ರಮಾಣೀಭೂತ ಮಾಡಿದ ಮೇಲೆ, ಸರಕುಗಳ ಮೇಲೆ ಮುದ್ರೆ ಒತ್ತುವುದು ಕಡ್ಡಾಯವಾಗಿದ್ದಿರಬೇಕು. ಸುಮೇರಿಯಾದ ಲಿಖಿತ ಫಲಕಗಳ ಪ್ರಕಾರ, ಕೀಳುಗುಣಮಟ್ಟದ ಸರಕುಗಳನ್ನು ಸರಬರಾಜು ಮಾಡುವ ಯವುದೇ ವರ್ತಕನನ್ನು ಸಮಾಜದಲ್ಲಿ ತುಚ್ಛವಾಗಿ ಕಾಣಲಾಗುತ್ತಿತ್ತು. ವರ್ತಕನು ನಡತೆಯ ನಿಯಮಗಳಿಗೆ (code of conduct) ಬದ್ಧನಾಗಿರಬೇಕಾಗಿತ್ತು ಮತ್ತು ಸಭ್ಯನಂತೆ ವರ್ತಿಸಬೇಕಾಗಿತ್ತು. ಮಾಲೀಕರ ಮುದ್ರೆಯೊತ್ತಿದ ಸರಕುಗಳ ಮೇಲೆ ಬಹುಶಃ ಸುಂಕ ಸಂದಯವಾಗಿರುವುದನ್ನು ಖಚಿತಪಡಿಸಲು ದಾಸ್ತಾನು ಮಳಿಗೆ ಅಧಿಕಾರಿಗಳೂ ತಮ್ಮ ಮುದ್ರೆಗಳನ್ನೊತ್ತುತ್ತಿದ್ದರು. ಸುಮೇರಿಯಾದ ಸಾದೃಶ್ಯವನ್ನು ಹರಪ್ಪಾ ರೇವುಗಳಿಗೂ ವಿಸ್ತರಿಸುವುದಾದರೆ, ವರ್ತಕರು ಆಮದಾದ ಸರಕುಗಳಲ್ಲಿಯ ಒಂದು ಭಾಗವನ್ನು ತೆರಿಗೆ ರೂಪದಲ್ಲಿ ಹಾಗೂ ದಾಸ್ತಾನುಮಳಿಗೆಯ ವೆಚ್ಚಕ್ಕಾಗಿ ಕೊಡಬೆಕಾಗಿತ್ತು. ರವಾನೆ ಹಡಗುಗಳ ಯಜಮಾನರು ಹಡಗುಗಳನ್ನು ಲಂಗರು ಹಾಕಿ ನಿಲ್ಲಿಸುವ ಸೌಲಭ್ಯಗಳನ್ನು ಪಡೆದುದಕ್ಕಾಗಿ ಶುಲ್ಕವನ್ನು ಪದಾರ್ಥರೂಪದಲ್ಲಿ ಕೊಡಬೆಕಾಗಿತ್ತು. ಊರ್ನ ವರ್ತಕರ ಹಡಗಿನ ಯಜಮಾನರಿಗೆ ಸಾಲವಾಗಿ ಹಣವನ್ನು ಒದಗಿಸಿ ಅವರ ಲಾಭದಲ್ಲಿ ಒಂದು ಪಾಲನ್ನು ಕೇಳಿ ಪಡೆಯುತ್ತಿದ್ದರು. ಆದರೆ ಸಂಭವಿಸಬಹುದಾದ ನಷ್ಟದಲ್ಲಿ ದಿಲ್ಲ್‌ಮನ್‌, ಮಕ್ಕನ್‌ ಮತ್ತು ಮೆಲುಹಗಳಲ್ಲಿ ಸರಕುಗಳ ಕ್ರಯವಿಕ್ರಯಗಳನ್ನು ನಡೆಸುತ್ತಿದ್ದರು. ಸಿಂಧೂ ಕಣಿವೆ ಹಾಗೂ ಸೌರಾಷ್ಟ್ರಗಳಲ್ಲೂ ಇದೇ ರೀತಿಯ ವ್ಯಾಪಾರವನ್ನು ಸಂಘಟಿಸಿದ್ದ ಪಕ್ಷದಲ್ಲಿ, ಕರಾವಳಿಯಲ್ಲಿಯ ಸಿಂಧೂ ವರ್ತಕರು ಹಡಗಿನ ಯಜಮಾನರಿಗೆ ಬಡ್ಡಿಗಾಗಿ ಸಾಲವನ್ನು ಕೊಟ್ಟಿದ್ದುದು ಅಸಂಭವವೇನಲ್ಲ.

ಸಮುದ್ರ ವ್ಯಾಪಾರದಲ್ಲಿ ತೊಡಗಿದ್ದ ಲೋಥಲ್‌ದ ವರ್ತಕರು ಧನಿಕರಾಗಿದ್ದರು. ಅವರು ಕಚ್ಚಾವಸ್ತುಗಳ ಆಮದಿಗೆ ಹಣಕಾಸು ಒದಗಿಸಿ, ಕಾರ್ಖಾನೆ ವ್ಯವಸ್ಥೆಯಲ್ಲಿ ಕೈಗಾರಿಕೆಗಳನ್ನು ಸಂಘಟಿಸಿದ್ದರು. ಅಲ್ಲದೇ ಒಂದೇ ಛಾವಣಿಯಡಿಯಲ್ಲಿ ಬಹುಸಂಖ್ಯೆಯ ಕಾರ್ಮಿಕರನ್ನು ನೇಮಿಸಿಕೊಂಡಿದ್ದರು. ಲೋಥಲ್‌ದಲ್ಲಿಯ ಮಣಿ ಕಾರ್ಖಾನೆ ಮತ್ತು ಕುಲುಮೆ ಇವೆರಡೂ ಸಂಘಟಿತ ಕೈಗಾರಿಕೆಗಳ ಎರಡು ಉತ್ತಮ ನಿದರ್ಶನಗಳು.

ವ್ಯಾಪಾರದ ಸರಕುಗಳು

ದಿಲ್‌ಮನ್‌ ಅಲ್ಲದಿದ್ದರೂ, ಮಕ್ಕನ್‌ಮತ್ತು ಮೆಲುಹ ಸಿಂಧೂ ಸಾಮ್ರಾಜ್ಯದಲ್ಲಿತ್ತೆಂದು ಸದ್ಯದ ಮಟ್ಟಿಗೆ ಊಹಿಸಿಕೊಂಡು ಹರಪ್ಪಾದ ಮತ್ತು ಮೆಸಪಟೋಮಿಯಾದ ನಗರಗಳ ನಡುವೆ ವಿನಿಮಯವಾಗುತ್ತಿದ್ದ ಸರಕುಗಳ ಪಟ್ಟಿಯನ್ನು ಇಲ್ಲಿ ಪರಿಶೀಲಿಸಬಹುದು. ಪಶ್ಚಿಮ ದೇಶಗಳಲ್ಲಿ ರತ್ನಶಿಲೆಗಳು, ಮಣಿಗಳು, ದಂತ ಹಾಗೂ ಶಂಖಗಳಿಗೆ ಬಹಳ ಬೆಲೆಯಿತ್ತು. ಊರ್ದಲ್ಲಿಯ ಲಿಖಿತ ಫಲಕಗಳು ತಿಳಿಸುವಂತೆ, ಹಡಗಿನ ಯಜಮಾನರು ಚಿನ್ನದ ಗಟ್ಟಿಗಳು ಮರ, ಕಾರ್ನೀಲಿಯನ್‌, ದಂತದ ಬಾಚಣಿಗೆಗಳು, ಪೆಟ್ಟಿಗೆಗಳು ಹಾಗೂ ಕೆತ್ತನೆ ಕೆಲಸ ಮಾಡಿದ ವಸ್ತುಗಳನ್ನು ಹಡಗಿನ ಹಿಂಭಾಗದ ಬುಡದಲ್ಲಿಯ ಕೋಣೆಯಲ್ಲಿದ್ದ ಪೆಠಾರಿಯಲ್ಲಿ ಬೀಗ ಹಾಕಿಟ್ಟು ಸುರಕ್ಷಿತವಾಗಿ ಕೊಂಡೊಯ್ಯುತ್ತಿದ್ದರು. ಇವು ಮತ್ತು ಇನ್ನಿತರ ವಸ್ತುಗಳ ವ್ಯಾಪಾರದ ಬಗ್ಗೆ ಸೌರಾಷ್ಟ್ರ, ಸಿಂಧೂ ಕಣಿವೆ ಹಾಗೂ ಮೆಸಪೋಟೇಮಿಯಾಗಳಲ್ಲಿ ಪರೋಕ್ಷವಾದ ಪುರಾವೆಗಳಿವೆ. ಲೋಥಲದಲ್ಲಿಯ ಸುಟ್ಟ ಮಣ್ಣಿನ ಮುದ್ರೆ ಗುರುತುಗಳ ಮೇಲೆ ನೇಯ್ದ ಬಟ್ಟೆಯ ಗುರುತಿದೆ. ಯೂಫ್ರಟೀಸ್‌ಟ್ರೈಗೀಸ್‌ಕಣಿವೆಯಲ್ಲಿಯ ಲಾಗಾಷ್‌ಹತ್ತಿರದ ಉಮ್ಮಾದಲ್ಲಿ ಸಿಂಧೂ ಮುದ್ರೆಗೆ ಅಂಟಿಕೊಂಡಿರುವ ಹತ್ತಿ ಬಟ್ಟೆ ಸಿಕ್ಕಿದೆ. ಸಿಂಧೂ ಕಣಿವೆ ನಗರಗಳಲ್ಲಿ ಮತ್ತು ಲೋಥಲ್‌ದಲ್ಲಿ ಹತ್ತಿಬಟ್ಟೆ ನೇಯುವ ಅನೇಕ ಸಾಧನ ಸಾಮಗ್ರಿಗಳು ಸಿಕ್ಕಿರುವುದರಿಂದ ಈ ನಗರಗಳಿಂದ ಹತ್ತಿ ಹಾಗೂ ಹತ್ತಿ ಬಟ್ಟೆಗಳನ್ನು ರಫ್ತುಮಾಡುತ್ತಿದ್ದರೆಂದ ಊಹಿಸಬಹುದಾಗಿದೆ. ಸುಮೇರಿಯಾ ನಗರಗಳಿಗೆ ಅಗತ್ಯವಾಗಿದ್ದ ಶಂಖಗಳಿಗೆ ಅತಿ ಹತ್ತಿರದ ಆಕರವೆಂದರೆ ಕಾಥೇವಾಡದ ಕರಾವಳಿ, ಊರ್, ಬ್ರಾಕ್‌, ಕೀಷ್‌ಮತ್ತು ಸೂಸಾಗಳಲ್ಲಿ ಸಿಕ್ಕಿರುವ ಶಂಖದ ವಸ್ತುಗಳನ್ನು ಲೋಥಲ್‌ಮೂಲದ್ದೆಂದು ಗುರುತಿಸಬಹುದು. ರಫ್ತು ಮಾಡಲು ಇಲ್ಲಿಯ ಕಾರ್ಖಾನೆಗಳಲ್ಲಿ ಬಳೆ, ಕಡಗ, ಮಣಿ, ಆಟದ ಕಾಯಿಗಳು, ವಜ್ರಾಕೃತಿಯ ಕೆತ್ತನೆ ವಸ್ತುಗಳನ್ನು ತಯಾರಿಸಲಾಗುತ್ತಿತ್ತು. ಕ್ರಿ. ಪೂ. ೪ನೇ ಶತಮಾನದವರೆಗೂ ಆನೆಗಳ ವಾಸಸ್ಥಾನವಾಗಿದ್ದ ಕಾಥೇವಾಡದ ಮತ್ತೊಂದು ಉತ್ಪನ್ನವೆಂದರೆ ದಂತ, ದಂತದ ಕಟ್ಟಿಗಳು, ಹಣಿಗೆಗಳು, ಕೆತ್ತನೆ ಕೆಲಸ ಮಾಡಿದ ವಸ್ತುಗಳು, ಆಟದ ಕಾಯಿಗಳು ಇವು ಲೋಥಲ್‌ಮತ್ತು ಸಿಂಧೂ ನಗರಗಳಿಂದ ಪರ್ಷಿಯಾ ಖಾರಿಯ ರೇವು, ದಿಯಾಲಾ ಕಣಿವೆ ಮತ್ತು ಉತ್ತರ ಸಿರಿಯಾದ ಕರಾವಳಿ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತಿದ್ದ ಭೊಗ ಸಾಮಗ್ರಿಗಳ ಪೈಕಿ ಕೆಲವು.

ಸಿಂಧೂ ಕಣಿವೆ ನಗರಗಳಿಗೆ ಅಗತ್ಯವಾಗಿದ್ದ ಲೋಹ, ಅರೆಪ್ರಶಸ್ಥ ಶಿಲೆ ಮತ್ತು ಕಾಂತಿವರ್ಧಕಗಳು, ಇವುಗಳ ಪೂರೈಕೆ ಹೇಗೆ ಆಗುತ್ತಿತ್ತೆಂದು ಈಗ ನೋಡಬಹುದು. ಅವುಗಳಿಗೆ ಮೇದಶಿಲೆ ಮತ್ತು ಬಿಟುಮೆನ್‌ಗಳು ಸರಬರಾಜಾಗುತ್ತಿದ್ದುದು ಬಲೂಚಿಸ್ತಾನದಿಂದ ಎಂದು ನಂಬಲಾಗಿದೆ. ನರ್ಮದಾ ಖಣಿವೆಯಲ್ಲಿಯ ಎರಡು ಪ್ರಮುಖ ರೇವುಗಳಾಗಿದ್ದ ಮೇಹ್‌ಗಾಮ್‌ ಮತ್ತು ಭಗತ್ರಾವ್‌ ಲೋಥಲಿಗೆ ಬಹುಶಃ ಚಾನ್ಹುದಾರೊವಿಗೂ ಕೂಡ ಅರೆ ಪ್ರಶಸ್ತ ಶಿಲೆಗಳನ್ನು ರಫ್ತು ಮಾಡುತ್ತಿದ್ದವು. ತೇಗದ ಮರ ಸರಬರಾಜಾಗುತ್ತಿದ್ದುದು ಪಂಜಾಬದ ಬೆಟ್ಟಗಳಿಂದ ಅಥವಾ ಗುಜರಾತದ ಪಂಚಮಹಲ್‌ ಜಿಲ್ಲೆಯಿಂದ ಲೋಥಲ್‌ರೇವಿನ ಮೂಲಕ.

ಸಿಂಧೂ ನಗರಗಳಿಗೆ ರಾಜಸ್ಥಾನದಲ್ಲಿಯ ಖೇತ್ರಿ ಮತ್ತು ದೇಬರಿ ಗಣಿಗಳಿಂದ ತಾಮ್ರ ಬರುತ್ತಿತ್ತೆಂದು ಹೇಳಲಾಗಿದ್ದರೂ, ಮೂರನೆಯ ಸಹಸ್ರಮಾನದಲ್ಲಿ ಈ ಗಣಿಗಳಲ್ಲಿ ಕೆಲ’ಸ ನಡೆಯುತ್ತಿದ್ದುದಕ್ಕೆ ನಿಖರವಾದ ಪುರಾವೆಯಿಲ್ಲ. ಬಲೂಚಿಸ್ತಾನದ ಆಯ ರೋಬತ್ನ್ ಮತ್ತು ಶಾಹ್‌ ಬೆಲ್ಲಾಲ್‌ ಹಾಗೂ ಆಫ್ಘಾನಿಸ್ತಾನದ ಕುರ‍್ರಮ್‌ ಗಣಿಗಳು, ತಾಮ್ರದ ಇನ್ನಿತರ ಆಕರಗಳು, ಶಂಖದ ಕೆಲವು ಪ್ರಭೇದಗಳು, ದಕ್ಷಿಣ ಭಾರತ ಮತ್ತು ಸಿಂಹಳ ದ್ವೀಪಗಳಿಂದ ಬರುತ್ತಿದ್ದವು.

ಲೋಥಲ್‌ ಮತ್ತು ಸಿಂಧೂ ಕಣಿವೆಯ ನಗರಗಳಿಗೆ ಚಿನ್ನ ಬರುತ್ತಿದ್ದುದು, ಕರ್ನಾಟಕದ ಕೋಲಾರ ಮತ್ತು ಹಟ್ಟಿಗಳಿಂದ. ಬಿಳಿ ಮೇದಶಿಲೆಯ ಚಕ್ರಾಕಾರದ ಮಣಿಗಳಂಥ ಹರಪ್ಪಾದ ವಿಶಿಷ್ಟ ವಸ್ತುಗಳು, ಮಸ್ಕಿ, ಪಿಕ್ಲಿಹಾಳ, ತೆಕ್ಕಲಕೋಟ, ಉತ್ನೂರುಗಳಲ್ಲಿ (ಕ್ರಿ.ಪೂ.೨೩೦೦) ಸಿಕ್ಕಿರುವುದೂ ಈ ಸಂದರ್ಭದಲ್ಲಿ ಹೆಚ್ಚು ಮಹತ್ವ ಹೊಂದಿವೆ.

ಹರಪ್ಪಾ ಜನರು ಬೆಳ್ಳಿಯನ್ನು ವಿರಳವಾಗಿ ಬಳಸುತ್ತಿದ್ದರು. ಒಂದು ಬಳೆ ಹಾಗೂ ಕೆಲವು ಅನಿರ್ದಿಷ್ಟ ವಸ್ತುಗಳನ್ನು ಬಿಟ್ಟರೆ, ಲೋಥಲದಲ್ಲಿ ಈ ಅಮೂಲ್ಯ ಲೋಹ ಅಪರೂಪವೇ. ಸಿಂಧೂ ಕಣಿವೆಯ ನಗರಗಳಿಗೆ ಬರುತ್ತಿದ್ದ ಬೆಳ್ಳಿಯ ಮತ್ತೊಂದು ಪ್ರಮುಖ ಆಕರ ಆಫ್ಘಾನಿಸ್ತಾನ. ಅಲ್ಲಿಂದಲೇ ತವರವೂ ಸರಬರಾಜಾಗುತ್ತಿತ್ತು. ಇತರ ಲೋಹಗಳನ್ನು, ವಿಶೇಷವಾಗಿ ಆರ್ಸಿನಿಕ್‌ ರಹಿತವಾದ ತಾಮ್ರವನ್ನು ಹರಪ್ಪಾ ಮತ್ತು ಮೊಹೆಂಜೋದಾರೊಗಳಿಗೆ ಸರಬರಾಜು ಮಾಡುತ್ತಿದ್ದ ಆಕರವನ್ನು ಬಿಟ್ಟು ಬೇರೊಂದು ಮೂಲದಿಂದ ಲೋಥಲ್‌ ಆಮದು ಮಾಡಿಕೊಳ್ಳುತ್ತಿತ್ತು.

ದಕ್ಷಿಣ ಗುಜರಾತದ ರಾಜಪಿಪ್ಲಾದಲ್ಲಿಯ ಗಣಿಯಿಂದ ಅಗೇಟ್‌ ಮತ್ತು ಸಿಂಧೂ ಪ್ರದೇಶದ ಸುಕ್ಕೂರ್‌ ರೋಹ್ರಿಯಿಂದ ಚರ್ಟ್ ಶಿಲೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಸ್ಪಟಿಕ ಹಾಗೂ ಕ್ಷೀರಸ್ಪಟಿಕ ಶಿಲೆಗಳನ್ನು ಅಪರೂಪವಾಗಿಯಾದರೂ ಲೋಥಲ್‌ ಹಾಗೂ ಸಿಂಧೂ ನಗರಗಳಲ್ಲಿ ಮಣಿ ತಯಾರಿಸಲು ಬಳಸಲಾಗಿದೆ. ಅವುಗಳ ಆಕರ ದಕ್ಷಿಣ ಭಾರತದ ಕೊಯಮತ್ತೂರು ಇದ್ದಿರಬಹುದು. ಲೋಥಲದಲ್ಲಿ ನೀಲೋಪಲದ ಎರಡು ಮಣಿಗಳು ಮಾತ್ರ ಸಿಕ್ಕಿದ್ದು. ಬಹುಶಃ ಇದರ ಆಕರ ಉತ್ತರ ಆಫ್ಘಾನಿಸ್ತಾನದ ಬದಾಕ್ಷನ್‌ ಇರಬಹುದು.  ಮುದ್ರೆ, ಮಣಿ ಹಾಗೂ ಆಭರಣಗಳನ್ನು ಮಾಡಲು ಮೇದಶಿಲೆಯನ್ನು ವ್ಯಾಪಕವಾಗಿ ಬಳಸುತ್ತಿದ್ದುದು ಈ ವಸ್ತು ಸತತವಾಗಿ ಸರಜರಾಜಾಗುತ್ತಿದ್ದುದನ್ನು ಸೂಚಿಸುತ್ತದೆ. ಮೇದಶಿಲೆಯ ಇಂದಿನ ಆಕರಗಳೆಂದರೆ, ಉತ್ತರ ಗುಜರಾತದಲ್ಲಿಯ ದೇವ್ನಿಮೋರಿ, ಕುಂದೋಲ್‌ ಲೋಖ ಮತ್ತು ಮೋರ್. ಆದರೆ, ಇಲ್ಲಿಯ ಗಣಿಗಳಲ್ಲಿ ಇತಿಹಾಸಪೂರ್ವ ಕಾಲದಲ್ಲೇ ಕೆಲಸ ನಡೆಯುತ್ತಿತ್ತೆನ್ನಲು ಯಾವ ಆಧಾರವೂ ಸಿಕ್ಕಿಲ್ಲ. ಅಲ್ಲದೆ ಸಿಂಧೂದ ಜನರು ವ್ಯಾಪಕವಾಗಿ ಬಳಸುತ್ತಿದ್ದ ಬೂದು ಹಾಗೂ ಹಳದಿ ಬಣ್ಣದ ಮೇದಶಿಲೆಗಳು, ಕರ್ನಾಟಕದಲ್ಲಿಯ ಉತ್ತರ ಭಾಗಗಳಲ್ಲಿ ಸಿಗುತ್ತವೆ.

ಪ್ರಧಾನ ವಸ್ತುಗಳೆನಿಸಿದ್ದ ತಾಮ್ರ, ಚಿನ್ನ ಮತ್ತು ರತ್ನಶಿಲೆಗಳೇ ಅಲ್ಲದೆ ಬೇಗ ನಶಿಸುವ ವಸ್ತುಗಳೆನಿಸಿದ ಸಾಂಬ್ರಾಣಿ, ಕಣ್ಣಿನ ಬಣ್ಣಗಳನ್ನು (ಕಾಜಲ್‌ ದಕ್ಷಿಣ ಅರೇಬಿಯಾದಿಂದಲೂ, ಸಂತುಲಸ್‌ ಮರವನ್ನು ಮಲಬಾರಿನ ಕರಾವಳಿಯಿಂದಲೂ ಲೋಥಲಿಗೆ ತರಿಸಿಕೊಳ್ಳಲಾಗುತ್ತಿತ್ತು.

ಸಮುದ್ರ ವ್ಯಾಪಾರ

ಕಂಚಿನ ಯುಗದ ನಗರಗಳಲ್ಲಿಯ ಸಮುದ್ರ ವ್ಯಾಪಾರ ನಂಬಲು ಅಸಾಧ್ಯಯವಾಗುವಷ್ಟರ ಮಟ್ಟಿಗೆ ಬಹುದೂರದವರೆಗೂ ವ್ಯಾಪಿಸಿತ್ತು. ಪ್ರಧಾನವಾಗಿ ವರ್ತಕ ಸಮುದಾಯವೆನಿಸಿದ್ದ ಲೋಥಲ್‌ದ ವರ್ತಕರು ದೂರದ ಪರ್ಷಿಯಾ ಖಾರಿಯಲ್ಲಿಯ ರೇವುಗಳಿಗೆ, ಇನ್ನೂ ದೂರ ದೂರಕ್ಕೆ ತಮ್ಮ ವ್ಯಾಪಾರದ ಹಡಗುಗಳನ್ನು ಕಳುಹಿಸುತ್ತಿದ್ದರು. ಕ್ರಿ.ಪೂ. ಮೂರನೆಯ ಸಹಸ್ರಮಾನದಲ್ಲಿ ಸಮುದ್ರ ವ್ಯಾಪಾರ ಉತ್ತಮವಾಗಿ ಸಂಘಟಿತವಾಗಿತ್ತೆನ್ನಲು, ಪುರಾತತ್ವ ಪುರಾವೆಯೇ ನಮಗೆ ಸಿಗುತ್ತದೆ. ವರ್ತಕರು ತಮ್ಮ ತಾಯಿನಾಡಿನ ಹೊರಗಿರುವ ಪ್ರದೇಶಗಳಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿ, ಅಲ್ಲಿಯ ಅರಸರು ಅಥವಾ ವರ್ತಕ ಶ್ರೇಣಿಗಳುಲ ವಿಧಿಸಿದಂತೆ ವಿಶಿಷ್ಟ ಮಾದರಿಯ ಮುದ್ರೆಗಳನ್ನು ಬಳಸಿದರು. ಉದಾಹರಣೆಗೆ ಯೂಫ್ರಟೀಸ್‌-ಟೈಗ್ರೀಸ್‌ ಕಣಿವೆಯಲ್ಲಿ ಕೊಳವೆಯಾಕಾರದ ಮುದ್ರೆಗಳ, ಪರ್ಷಿಯಾ ಖಾರಿಯ ದ್ವೀಪಗಳಲ್ಲಿ ವೃತ್ತಾಕಾರದ ಮುದ್ರೆಗಳು, ಸಿಂಧೂ ನಾಗರಿಕತೆಯಲ್ಲಿ ಚದರ ಅಥವಾ ಆಯತಾಕಾರದ ಮುದ್ರೆಗಲು ಹೀಗೆ ಬಳಕೆಗೆ ತೆರಲಾಗಿತ್ತು. ವಿವಿಧ ನೆಲೆಗಳಲ್ಲಿ ಸಿಕ್ಕಿರುವ ಮುದ್ರೆಗಳು ಹಾಗೂ ಮುದ್ರೆ ಗುರುತುಗಳಿಂದ ಸರಕುಗಳ ಮೂಲವನ್ನು ತಿಳಿಯಲು ಸಾಧ್ಯವಿದೆ. ಬಹ್ರೇನ್‌ ದ್ವೀಪಗಳು, ಯೂಫ್ರಟೀಸ್‌-ಟೈಗ್ರೀಸ್‌ ಕಣಿವೆ ಮತ್ತು ಡಿಯಾಲ ಪ್ರದೇಶಗಳಲ್ಲಿ, ಸಿಂಧೂ ವರ್ತಕರು ಸ್ಥಾಪಿಸಿದ ವಸಾಹತುಗಳಿಗೆ, ರಾಸ್‌-ಅಲ್‌-ಕುಲ, ಊರ್‌, ಕೀಷ್‌, ಆಸ್ಮರ್ ಮತ್ತು ಡಿಯಾಲ ನೆಲೆಗಳಲ್ಲಿ ಸಿಕ್ಕಿರುವ ಸಿಂಧೂ ಆಕೃತಿ ಮತ್ತು ಲಿಪಿಗಳನ್ನೊಳಗೊಂಡ ಮುದ್ರೆಗಳೇ ಸಾಕ್ಷಿ. ದಕ್ಷಿಣ ಮೆಸಪೊಟೋಮಿಯದಲ್ಲಿಯ ಸಿಂಧೂ ತೂಕದ ಬೊಟ್ಟುಗಳು ಮತ್ತು ಮಣಿಗಳು, ಲೋಥಲ್‌ ಮತ್ತು ಇತರೆ ಹರಪ್ಪಾ ನೆಲಗಳಲ್ಲಿಯ ಮೆಸೊಪೊಟೇಮಿಯ ಮೂಲದ ಚಿನ್ನದ ಮಣಿಗಳು ಮತ್ತು ಚಿತ್ರಿತ ಮಡಕೆಗಳು ಇವು ಸಿಂಧೂ ಮತ್ತು ಸುಮೇರಿಯಾ ನಗರಗಳ ನಡುವಣ ವ್ಯಾಪಾರಕ್ಕೆ ಸಂಬಂಧಿಸಿದಂತಹ ಇತರ ಸಾಕ್ಷಿಗಳಾಗಿವೆ.

ಸುಮೇರಿಯಾ ಮತ್ತು ಅಕ್ಕಡ್‌ಗಳಲ್ಲಿಯ ಜೇಡಿ ಮಣ್ಣಿನ ಲಿಖಿತ ಫಲಕಗಳು ತಿಳಿಸುವಂತೆ, ದಿಲ್‌ಮನ್‌ ಎಂಬ ನಾಡಿನಿಂದ ಲಾಗಷ್‌ದಲ್ಲಿಯ ಉರ್‌ ನಾನ್‌ಷೆಗ್‌ (ಕ್ರಿ.ಪೂ.೨೪೫೦) ಮರವನ್ನು ಹಡಗುಗಳಲ್ಲಿ ಸಾಗಿಸಲಾಗುತ್ತಿತ್ತು. ಸಾರಗಾನನ ಕಾಲದಲ್ಲಿ (ಕ್ರಿ.ಪೂ. ೨೩೫೦) ದಿಲ್‌ಮನ್‌, ಮಗನ್‌ ಮತ್ತು ಮೆಲುಹಾಗಳಿಂದ ಬರುತ್ತಿದ್ದ ಹಡಗುಗಳನ್ನು ಅವನ ರಾಜಧಾನಿಯಾದ ಅಗೇಡ್‌(ಬ್ಯಾಬಿಲೊನ್‌) ಬಂದರಿನಲ್ಲಿ ನಿಲ್ಲಿಸಲಾಗುತ್ತಿತ್ತು. ಆದರೆ, ಕ್ರಿ.ಪೂ.೨೧೦೦ರ ಸುಮಾರಿಗೆ ಊರ್ ಮತ್ತು ಮೆಲುಹಾಗಳ ನಡುವಣ ಸಂಪರ್ಕ ಕಡಿದು ಹೋಗಿತ್ತಾದರೂ, ತಾಮ್ರ ಹಾಗೂ ದಂತದ ವಸ್ತುಗಳು, ಅರೆ ಪ್ರಶಸ್ತಶಿಲೆಗಳು ಮತ್ತು ಕೆಲವು ಜಾತಿಯ ಪ್ರಾಣಿಗಳು ಮಲುಹಾದಿಂದಲೇ ಬರುತ್ತಿದವು.

ಲೋಥಲದಲ್ಲಿ ಸಿಕ್ಕಿರುವ ವಿಶಿಷ್ಟವಾದ ವೃತ್ತಾಕಾರದ ಮೇದಶಿಲೆಯ ಮುದ್ರೆಯು, ಬಹ್ರೇನ್‌ ದ್ವೀಪಗಳು ಹಾಗೂ ಹರಪ್ಪಾದ ರೇವುಗಳ ನಡುವಣ ವ್ಯಾಪಾರದ ಬಗ್ಗೆ ಪ್ರಥಮ ಪುರಾವೆಯಾಗಿದೆ. ಈ ಮುದ್ರೆಯ ಒಂದು ಮುಖದಲ್ಲಿ ಜೋಡಿತಲೆಯ ‘ಡ್ರೇಗನ್‌’ದ ಎರಡು ಪಾರ್ಶ್ವಗಳಲ್ಲಿ ಸಮ್ಮಿತವಾಗಿರುವ ಮತ್ತು ಕಾಡುಮೇಕೆ ಜಾತಿಗೆ ಸೇರಿದ ಪ್ರಾಣಿಗಳಿವೆ. ಮತ್ತೊಂದು ಮುಖದಲ್ಲಿ ಮೂರು ರೇಖೆಗಳುಳ್ಳ ಹಾಗೂ ಅಡ್ಡವಾಗಿ ರಂಧ್ರ ಮಾಡಿರುವ ಚಿಕ್ಕ ಗುಬಟು ಇದೆ. ನಿಸ್ಸಂದೇಹವಾಗಿ ಅದು ಪರ್ಷಿಯಾ ‘ಖಾರಿ ಮುದ್ರೆಗಳು’ ಎಂಬ ಗುಂಪಿಗೆ ಸೇರಿದೆ.

ಭಾರತದ ವರ್ತಕರು ಹೋಗುತ್ತಿದ್ದ ಇನ್ನಿತರ ಪ್ರದೇಶಗಳೆಂದರೆ ನೈಲ್‌ಕಣಿವೆ ಮತ್ತು ಪೂರ್ವ ಆಫ್ರಿಕಾ ಕರಾವಳಿ ಪ್ರದೇಶ ಇಲ್ಲಿ ಭಾರತೀಯ ಮೂಲದ ಅರೆಪ್ರಶಸ್ತ ಶಿಲೆಯ ಮಣಿಗಳು ದೊರೆತಿವೆ.

ವ್ಯಾಪಾರದ ಸಾಧನಗಳು

ಮುದ್ರೆಗಳು : ಹರಪ್ಪಾದ ವ್ಯಾಪಾರದ ಸಾಧನಗಳಲ್ಲಿ ಮುದ್ರೆಗಳಿಗೆ ಪ್ರಥಮ ಸ್ಥಾನವಿದೆ. ಸಿಂಧೂ ಮುದ್ರೆಗಳನ್ನು ವಾಣಿಜ್ಯದ ಉದ್ದೇಶಕ್ಕಾಗಿ ಬಳಸಲಾಯಿತು. ಲೋಥಲ್‌ದಲ್ಲಿಯ ದಾಸ್ತಾನುಮಳಿಗೆಯಿಂದ ಸಂಗ್ರಹಿಸಲಾದ ೬೫ರಷ್ಟು ಸುಟ್ಟ ಮಣ್ಣಿನ ಮುದ್ರೆ ಗುರುತುಗಳಲ್ಲಿ ಒಂದು ಮುಖದಲ್ಲಿ ಸಿಂಧ ಮುದ್ರೆಗಳ ಗುರುತನ್ನು, ಮತ್ತೊಂದರಲ್ಲಿ ಮೂಟೆ ಕಟ್ಟಲು ಬಳಸಿದ ಬಿದಿರಿನ ಚಾಪೆ, ಜೊಂಡು ಹುಲ್ಲು, ನೇಯ್ದ ಬಟ್ಟೆ ಹಾಗೂ ತಿರಿಚಿದ  ಹುರಿಯಂಥ ವಸ್ತುಗಳ ಗುರುತನ್ನು ಕಾಣಬಹುದು. ಇದರಿಂದ ಎರಡು ನಿರ್ಧಾರಗಳಿಗೆ ಬರಬಹುದು. ಮೊದಲನೆಯದಾಗಿ, ಸರಕಿನ ಮೂಟೆಗಳನ್ನು ಚಾಪೆ ಅಥವಾ ಬಟ್ಟೆಗಳಲ್ಲಿ ಸುತ್ತಲಾಗುತ್ತಿತ್ತು. ಎರಡನೆಯದಾಗಿ, ಅವುಗಳ ಮೇಲೆ ಮುದ್ರೆಯನ್ನೊತ್ತಿ ಅವನ್ನು ದಾಸ್ತಾನು ಮಳಿಗೆಯಲ್ಲಿ ಇಡಲಾಗುತ್ತಿತ್ತು. ಅಲ್ಲದೆ, ಸರಕುಗಳ ಮೇಲೆ ಮುದ್ರೆಯೊತ್ತುತ್ತಿದ್ದ ವಿಧಾನದ ಮೇಲೂ ಅವು ಬೆಳಕು ಬೀರುತ್ತವೆ. ಸರಕನ್ನು ಬಿದಿರಿನ ಅಥವಾ ಜೊಂಡು ಹುಲ್ಲಿನ ಚಾಪೆಗಳಲ್ಲಿ ಅಥವಾ ಬಟ್ಟೆಗಳಲ್ಲಿ ಸುತ್ತಿ, ನಾರಿನ ಹುರಿಯಿಂದ ಬಿಗಿಯಲಾಗುತ್ತಿತ್ತು. ಅನಂತರ, ಗಂಟುಗಳ ಮೇಲೆ ಹಸಿ ಜೇಡಿಮಣ್ಣಿನ ಪಟ್ಟಿಗಳನ್ನು ಒತ್ತಿ, ಅವುಗಳ ಮೇಲೆ ರವಾನೆದಾರನ ಮುದ್ರೆಯನ್ನು ಒತ್ತಲಾಗುತ್ತಿತ್ತು. ಸರಕುಗಳ ಮೇಲೆ ಮುದ್ರೆಯೊತ್ತುವುದರ ಮತ್ತೊಂದು ಉದ್ದೇಶ, ಸರಕುಗಳ ಗುಣಮಟ್ಟವನ್ನು ಖಚಿತಪಡಿಸುವುದಾಗಿತ್ತು. ಇದನ್ನು ಬಹುಶಃ ರೇವಿನ ಅಧಿಕಾರಿಗಳು ತಮ್ಮ ಮುದ್ರೆಗಳನ್ನೊತ್ತುವುದರ ಮೂಲಕ ದೃಢೀಕರಿಸುತ್ತಿದ್ದರು. ಮೂರನೆಯ ಉದ್ದೇಶ ಯಾರೂ ಕದಿಯದಂತೆ ಭದ್ರಪಡಿಸುವುದು.

ಸಿ.ಜೆ.ಗ್ಯಾಡ್‌ ಅವರು ಊರ್ ಮತ್ತು ಬ್ಯಾಬಿಲಾನ್‌ಗಳಲ್ಲಿ ಸಿಕ್ಕಿರುವ ಮತ್ತು ಸಿಂಧೂ ಮಾದರಿ ಎನ್ನಲಾಗಿರುವ ೧೮ ಮುದ್ರೆಗಳನ್ನು ಪಟ್ಟಿಮಾಡಿದ್ದಾರೆ. ಅವುಗಳ ಪೈಕಿ, ಕೆಲವು ಮುದ್ರೆಗಳು ಲಿಪಿ ಮತ್ತು ಆಕೃತಿಗಳ ದೃಷ್ಟಿಯಿಂದ ಸಿಂಧೂ ಶೈಲಿಯವು ಎನ್ನಲಾಗಿದೆ. ಗ್ಯಾಡ್‌ ಅವರ ಪಟ್ಟಿಯಲ್ಲಿಯ ಮುದ್ರೆಯೊಂದು (ಸಂಖ್ಯೆ-೧) ಚದರಾಕಾರವಾಗಿದ್ದು, ಉಬ್ಬು ಕಚ್ಚುಬೆನ್ನಿನ ಮೇಲೆ ರಂಧ್ರವುಳ್ಳ ಬುಗುಟಿದೆ. ಬಾಗಿದ ತಲೆಯ ಕೂಳಿಯ ಆಕೃತಿ ಭಾರತದ್ದೆ ಆಗಿದ್ದರೂ, ಲಿಪಿ ಮಾತ್ರ ಪ್ರಾಚೀನ ಶಂಕು ಲಿಪಿ ಕ್ಯೂನಿಫಾರಮ್‌. ಈ ಮುದ್ರೆ ಭಾರತ ಹಾಗೂ ಸುಮೇರಿಯಾಗಳೆರಡರ ಪ್ರಭಾವಕ್ಕೊಳಗಾದ ಪ್ರದೇಶಕ್ಕೆ ಸೇರಿದ್ದಿರಬಹುದು. ಅದು ಸಾರ್ಗಾನನ ಕಾಲಕ್ಕಿಂತ ಮುಂಚಿನದೆಂದು ಹೇಳಲಾಗಿದೆ. ಮತ್ತೊಂದು ಮುದ್ರೆ (ಸಂಖ್ಯೆ-೨ರ ಮುದ್ರೆ) ವತ್ತಾಕಾರವಾಗಿದೆ. ಎದ್ದು ಕಾಣುವಂತಿರುವ ಗುಂಡಿಯಂಥ ಬುಗುಟಿದ್ದು, ಪರ್ಷಿಯಾ ಖಾರಿ ಮೂಲದ್ದಾಗಿದೆ. ಆದರೆ, ಲಿಪಿ, ಆಕೃತಿ, ಕಾರ್ಯಕೌಶಲ್ಯಗಳೆಲ್ಲವೂ ಭಾರತದವೇ. ಬಹ್ರೆನದಲ್ಲಿ ವಾಸಿಸುತ್ತಿದ್ದ ಭಾರತೀಯ ವರ್ತಕ ಅದರ ಮಾಲೀಕನಾಗಿದ್ದಿರಬಹುದು.

ತೂಕ ಮತ್ತು ಅಳತೆಗಳು

ಸಿಂಧೂ ವ್ಯಾಪಾರದ ಎರಡನೆಯ ಪ್ರಮುಖ ಸಾಧನವೆಂದರೆ ಕಲ್ಲಿನ ತೂಕದ ಬಟ್ಟುಗಳು, ಆಕಾರ, ಪ್ರಮಾಣ ಹಾಗೂ ವಸ್ತುಗಳಲ್ಲೂ ಇವು ಪಶ್ಚಿಮ ಏಷ್ಯಾದ ಬಟ್ಟುಗಳಿಂದ ಭಿನ್ನವಾಗಿವೆ. ಹರಪ್ಪಾ ಜನರು ಚರ್ಟ್‌ ಅಥವಾ ಆಗೇಟ್‌ ಕಲ್ಲಿನ ಆರು ಮುಖವುಳ್ಳ ಘನಾಕೃತಿಯ ತೂಕದ ಬಟ್ಟುಗಳನ್ನು ಬಳಸುತ್ತಿದರು. ಹರಪ್ಪಾ ಜನರು, ತಮ್ಮ ಬಟ್ಟುಗಳಲ್ಲಿ ಲಕ್ಷ್ಯವಿಟ್ಟು ಕೆತ್ತಿ ಹಾಗೂ ನಯ ಮಾಡಿದ ನಂತರ, ಅಗತ್ಯವಾದ ಗಾತ್ರ, ಆಕಾರ ಮತ್ತು ತೂಕಗಳಿಗೆ ತರುವಲ್ಲಿ ಹೆಚ್ಚು ಶ್ರಮವಹಿಸಿದ್ದಾರೆ. ಹರಪ್ಪಾ, ಮೊಹೆಂಜೋದಾರೋ, ಲೋಥಲ್‌ಮತ್ತು ಇತರ ನೆಲೆಗಳಲ್ಲಿಯ ಕಲ್ಲಿನ ಬಟ್ಟುಗಳ ಗಾತ್ರದಲ್ಲಿ ೧.೧ x ೧.೧ x ೦.೭ ಸೆಂ.ಮೀ. ನಿಂದ ಹಿಡಿದು ೪.೧ x ೪.೧ x ೩.೪ ಸೆಂ. ಮೀ. ವರೆಗೂ ಅಂತರವಿದೆ. ಅತಿ ಚಿಕ್ಕ ಸಿಂಧೂ ತೂಕದ ೨.೪, ೬.೮, ೧೬, ೩೨, ೬೪ ಮತ್ತು ೧೨೦ ಹೀಗೆ ಸಾಮಾನ್ಯ ಪ್ರಮಾಣದಲ್ಲಿ ಕಂಡುಬರುತ್ತದೆ.

ಸಿಂಧೂ ಜನರಿಗೆ ಉದ್ದಳತೆ ಮಾಡುವ ಮಾಧ್ಯಮವು ತಿಳಿದಿತ್ತು. ಲೋಥಾಲ್‌ನಲ್ಲಿ ಸಿಕ್ಕಿರುವ ದಂತದ ಅಳತೆ ಪಟ್ಟಿಯು ಇದನ್ನು ಸೂಚಿಸುತ್ತದೆ. ಈಗ ಸಿಕ್ಕಿರುವ ಅಳತೆಪಟ್ಟಿಯು ೧೨೮ ಮಿ.ಮೀ. ಉದ್ದ, ೧೫ ಮಿ.ಮೀ. ಅಗಳ ಮತ್ತು ೬. ಮಿ.ಮೀ. ದಪ್ಪದಾಗಿದ್ದು ಅದರ ಒಂದು ತುದಿ ಮುಂದೆ ಮತ್ತೊಂದು ತುದಿಯನ್ನು ದುಂಡಗೆ ಮಾಡಲಾಗಿದೆ. ಹೆಚ್ಚು ಕಡಿಮೆ ಸಮಾನವಾಗಿ ಗುರುತು ಮಾಡಿರುವ ೪೬ ಮಿ. ಮೀಗಳಷ್ಟು ಉದ್ದದಲ್ಲಿ ೨೭ ಗೆರೆಗಳು ಕಾಣುತ್ತವೆ. ಪ್ರತಿ ವಿಭಾಗವು ಸರಾಸರಿ ೧.೭ ಮಿ. ಮೀ.ನಷ್ಟಿದೆ. ಮೆಹೆಂಜೋದಾರೋದಲ್ಲಿನ ಕಂಚಿನ ಅಳತೆ ಪಟ್ಟಿಯೂ ಇದಕ್ಕೆ ಸಮವಾಗಿದೆ.

ಸಾಂಸ್ಕೃತಿಕ ಜೀವನ, ಕಲೆ, ಆರಾಧನಾ ಸಂಪ್ರದಾಯಗಳು
ಸಾಮಾಜಿಕ ಪರಿಸ್ಥಿತಿ

ಸಿಂಧೂ ನಾಗರಿಕತೆಯ ಜನರು ತಮ್ಮ ರಾಜಕೀಯ, ಸಾಮಾಜಿಕ ಸಂಸ್ಥೆಗಳ, ಧಾರ್ಮಿಕ ಭಾವನೆ ಹಾಗೂ ತಾತ್ವಿಕ ವಿಚಾರಗಳ ಮೇಲೆ ಬೆಳಕು ಬೀರುವಂಥಹ ಯಾವುದೇ ಸಾಹಿತ್ಯ ದಾಖಲೆಗಳನ್ನು ಬಿಟ್ಟು ಹೋಗಿಲ್ಲ. ಅಲ್ಲಿ ಸಿಕ್ಕಿರುವ ಮಡಿಕೆ-ಕುಡಿಕೆಗಳು, ಉಪಕರಣಗಳು, ಆಭರಣಗಳು, ಮುದ್ರೆಗಳು ಹಾಗೂ ಶಿಲ್ಪಗಳು, ಮನೆಗಳು ಮತ್ತು ಸಮಾಧಿಗಳು ಇವುಗಳಿಂದಲೇ ಅಂದಿನ ಸಾಮಾಜಿಕ ಜೀವನವನ್ನು ಹೆಣೆಯಬೇಕಾಗಿದೆ. ವಿವಿಧ ಮಾನವ ಕುಲಗಳಿಗೆ ಸೇರಿದ ಸಿಂಧೂ ನಾಗರಿಕತೆಯ ಜನರ ಆಹಾರ, ಉಡುಪು, ಆಚಾರ-ವಿಚಾರಗಳು ಮುಂತಾದ ಸಾಮಾಜಿಕ ವ್ಯವಸ್ಥೆಯಲ್ಲಿ ಭಿನ್ನತೆ ಇರಲೇಬೇಕು ಸಿಂಧೂ ನಾಗರಿಕತಯು ವಿಶಾಲವಾದ ಭೂ ಪ್ರದೇಶದಲ್ಲಿ ಹರಡಿದ್ದುರಿಂದ ಜನರ ಆಹಾರ ವೇಷಭೂಷಣಗಳು, ಧಾರ್ಮಿಕ ಆಚರಣೆಗಳು ಸಾಮಾಜಿಕ ವ್ಯವಸ್ಥೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನವಾಗಿವೆ. ಸಿಂಧೂ ನಾಗರಿಕತೆಯ ಪ್ರಮುಖ ಲಕ್ಷಣಗಳಾದ ನಗರಯೋಜನೆ ಹಾಗೂ ಕಟ್ಟಡಗಳು ಅವರ ನಾಗರಿಕ ಜೀವನವನ್ನು ತಿಳಿಸುತ್ತದೆ. ಅಲ್ಲಿನ ಅವಶೇಷಗಳನ್ನು ಅಧ್ಯಯನ ಮಾಡಿದಾಗ ಅಲ್ಲಿನ ಸಮಾಜವು ಮಧ್ಯಮ ವರ್ಗದ ಜನರನ್ನು ಹೆಚ್ಚು ಹೊಂದಿತ್ತೆಂದು ಹಾಗೂ ಆಗಿನ ಸಮಾಜಕ್ಕೆ ಹೊಂದುವಂತಹ ಸಾಮಾಜಿಕ ರಾಜಕೀಯ ಗುಂಪುಗಳಿದ್ದವು ಎಂದು ತೀರ್ಮಾನಿಸಬಹುದು. ನಗರದ ವಿವಿಧ ಬಡಾವಣೆಗಳಲ್ಲಿನ ಕಟ್ಟಡಗಳನ್ನು ನೋಡಿದಾಗ ಅಲ್ಲಿ ವಾಸಿಸುತ್ತಿದ್ದರು. ಆದರೆ ಗರಿಷ್ಠ ಸೌಲಭ್ಯಗಳುಳ್ಳ ಕೋಟೆ ಪ್ರದೇಶದಲ್ಲಿನ ಭವ್ಯ ಕಟ್ಟಡಗಳು ಶ್ರೀಮಂತರು ಹಾಗೂ ಆಡಳಿತಗಾರರ ನೆಲೆಗಳಾಗಿದ್ದವೆಂದು ತಿಳಿಯಬಹುದು. ಆದರೆ ಕೆಲಪಟ್ಟದಲ್ಲಿ ಯಾವ ಪ್ರತ್ಯೇಕತೆಯ ಭಾವನೆಯೂ ಇಲ್ಲದೆ ಶ್ರೀಮಂತ ವರ್ತಕರ ಮನೆಗಳ ಪಕ್ಕದಲ್ಲೆ ಶಂಖ ಮತ್ತು ತಾಮ್ರದ ಕೆಲಸ ಮಾಡುವ ಕಾರ್ಮಿಕರ ಮನೆಗಳಿರುವ ಸಾಕ್ಷಾಧಾರಗಳು ದೊರೆತಿವೆ. ಸಿಂಧೂ ನಾಗರಿಕತೆಯು ವ್ಯಾಪಾರ ವಾಣಿಜ್ಯದ ಮೇಲೆ ನಿಂತಿದ್ದ ವರ್ಗಗಳನ್ನೊಳಗೊಂಡ ಸಮಾಜವಾಗಿತ್ತು. ಆ ವರ್ಗಗಳಲ್ಲಿ ಪ್ರಮುಖವಾಗಿ ವರ್ತಕರು, ಆಡಳಿತಗಾರರು, ಪುರೋಹಿತರು, ಕುಶಲಕರ್ಮಿಗಳು, ಕೃಷಿಕರು, ಕಾರ್ಮಿಕರು ಮುಂತಾದವರಿದ್ದರು.

ಆಹಾರ ಪದ್ಧತಿ

ಸಿಂಧೂ ಜನರು ಗೋಧಿ, ಅಕ್ಕಿ, ಬಾರ್ಲಿ, ಸಜ್ಜೆ, ಹಾಲು, ತರಕಾರಿಗಳನ್ನು ಆಹಾರವಾಗಿ ಬಳಸುತ್ತಿದ್ದರು. ಜೊತೆಗೆ ದನದ ಮಾಂಸ, ಹಂದಿ ಮಾಂಸ, ಕೋಳಿ, ನದಿ ಮೀನು, ಸಮುದ್ರದ ಒಣ ಮೀನು, ಮೊಲ, ಸಂಬಾರ ಹಾಗೂ ಪಕ್ಷಿಗಳನ್ನು ತಿನ್ನುತ್ತಿದ್ದರು. ಹಣ್ಣುಗಳ ಪೈಕಿ ಖರ್ಜೂರ ಮತ್ತು ದಾಳಿಂಬೆಗಳ ಪರಿಚಯ ಅವರಿಗಿತ್ತು. ಅದಕ್ಕೆ ಆಧಾರವಾಗಿ ಹಣ್ಣುಗಳನ್ನಿಡುವ ದಾನಿ ದೊರೆತಿದೆ. ಆಹಾರ ಧಾನ್ಯಗಳನ್ನು ಹಿಟ್ಟು ಮಾಡಲು ಬೀಸುವ ಕಲ್ಲು ಮತ್ತು ಒಳರಳುಗಳನ್ನು ಉಪಯೋಗಿಸುತ್ತಿದ್ದರು.

ಸೌಂಧರ್ಯವರ್ಧಕಗಳು

ಸ್ತ್ರೀ ಪುರಷರು ಸುಂದರವಾಗಿ ಕೇಶಾಲಂಕಾರ ಮಾಡಿಕೊಳ್ಳುತ್ತಿದ್ದರು. ವಿವಿಧ ಬಗೆಯ ಸುಗಂಧ ಲೇಪನಗಳನ್ನು ಉಪಯೋಗಿಸುತ್ತಿದ್ದರು. ಇದಕ್ಕೆ ಆಧಾರವಾಗಿ ಸಿಕ್ಕಿರುವ ಬಾಚಣಿಗೆ ಪೆಟ್ಟಿಗೆಯೊಂದರಲ್ಲಿ ಕಾಡಿಗೆ ಕಡ್ಡಿ ಮತ್ತು ಬಾಚಣಿಗೆಗಳು, ತಾಮ್ರದ ಕನ್ನಡಿಗಳು ಮತ್ತು ಅಭ್ಯಂಜನ ವಸ್ತುಗಳುಳ್ಳ ಪಾತ್ರೆಗಳು ಕಂಡುಬಂದಿವೆ. ಲೋಥಾಲ್‌ನಲ್ಲಿ ದೊರೆತ ದಂತದ ಕಡ್ಡಿಯ ಚೂಪಾದ ತುದಿಯಲ್ಲಿ ಕಂಡು ಬಂದ ಕೆಂಪು ಬಣ್ಣ ಸಿಂಧೂ ಸ್ತ್ರೀಯರು ತುಟಿಗೆ ಇಲ್ಲವೆ ಕಣ್ಣಿಗೆ ಹಚ್ಚಿಕೊಳ್ಳುತ್ತಿದ್ದುದನ್ನು ತೋರಿಸುತ್ತದೆ. ಚಾನ್ಹುದಾರೊದಲ್ಲಿ ಸಿಕ್ಕಿದ ಅವಶೇಷಗಳು ತುಟಿಗೆ ಬಣ್ಣವನ್ನು, ಕಣ್ಣಿಗೆ ಕಾಡಿಗೆ ಮತ್ತು ಕೂದಲನ್ನು ತೊಳೆಯಲು ಶಾಂಪುವಿನಂತಹ ವಸ್ತುಗಳನ್ನು ಉಪಯೋಗಿಸುತ್ತಿದ್ದರೆಂದು ತಿಳಿಸುತ್ತವೆ.

ಆಭರಣಗಳು

ಪುರುಷರು ಮತ್ತು ಸ್ತ್ರೀರೆಂಬ ಭೇದವಿಲ್ಲದೆ ಆಭರಣ ಧರಿಸುತ್ತಿದ್ದರು. ಪುರುಷರು ಆಭರಣಗಳನ್ನು ಧರಿಸುತ್ತಿದ್ದುದರ ನಿದರ್ಶನ ಪುರೋಹಿತನ ವಿಗ್ರದಲ್ಲಿದೆ. ಈ ವಿಗ್ರಹಕ್ಕೆ ಹಣೆಯ ಮೇಲೆ ವೃತ್ತಾಕಾರದ ಆಭರಣಗಳನ್ನು ಅಲಂಕಾರ ಪಟ್ಟಿಯಿಂದ ಕಟ್ಟಲಾಗಿದೆ. ಮತ್ತೊಂದು ಅಂಥದೇ ಆಭರಣ ತೋಳಿನ ಮೇಲಿದೆ. ಚಿನ್ನ, ಬೆಳ್ಳಿ, ತಾಮ್ರ, ದಂತ ಮತ್ತಿತರ ಬೆಲೆಬಾಳುವ ವಸ್ತುಗಳಿಂದ ಹಾಗೂ ಚಿಪ್ಪು, ಪಿಂಗಾಣಿಯಂತಹ ವಸ್ತುಗಳಿಂದಲೂ ಆಭರಣಗಳನ್ನು ತಯಾರಿಸುತ್ತಿದ್ದರು. ಈ ಆಭರಣಗಳಿಗೆ ಪಚ್ಚೆ, ಹರಳು, ಕೆಂಪು ಮೊದಲಾದುವನ್ನು ಪೋಣಿಸುತ್ತಿದ್ದರು. ಈಗ ಸಿಕ್ಕಿರುವ ಆಗಿನ ಪ್ರಮುಖ ಆಭರಣಗಳೆಂದರೆ ಡಾಬು, ಮೂಗುತಿ, ಓಲೆ, ಕಾಲುಂದಿಗೆ, ತಲೆಬಂದಿ, ಕಿವಯುಂಗುರ, ಕತ್ತಿನ ಸರ, ಬೆರಳುಂಗುರ, ಬಳೆ, ತೋಳ್ಬಂದಿ ಮುಂತಾದವುಗಳನ್ನು ಧರಿಸುತ್ತಿದ್ದರು. ಈ ಆಭರಣಗಳ ಆಕರ ಮತ್ತು ವಿನ್ಯಾಸದಲ್ಲಿ ಹೆಚ್ಚು ವೈವಿಧ್ಯವಿದ್ದು ಅವುಗಳಲ್ಲಿ ಕೆಲವು ತುಂಬಾ ಸುಂದರವಾಗಿವೆ. ಉದಾಹರಣೆಗೆ ಆರು ಸುತ್ತಿನ ಮಣಿಗಳಿಂದ ಕೂಡಿದ ಕೈಕಡಗದ ಶೋಧನೆ ಸಿಂಧೂ ನಾಗರಿಕತೆಯ ಲೋಹಕಲಾ ನೈಪುಣ್ಯತೆಯನ್ನು ಎತ್ತಿತೋರಿಸುತ್ತದೆ. ಲೊಥಲ್‌ಮತ್ತು ಮೊಹೆಂಜೋದಾರೋಗಳಲ್ಲಿನ ಸೂಕ್ಷ್ಮ ಪ್ರಮಾಣದ ಚಿನ್ನದ ಮಣಿಗಳಿಂದ ಮಾಡಿರುವ ಹಲವು ಎಳೆಗಳ ಸರಗಳು ಅಲ್ಲಿ ಚಿನಿವಾರನ ಅತ್ಯುತ್ತಮ ಸಾಧನೆಗೆ ಸಾಕ್ಷಿಯಾಗಿವೆ.

ಉಡುಪುಗಳು

ಮೊಹೆಂಜೋದಾರೊದಲ್ಲಿ ಸಿಕ್ಕ ಹತ್ತು ಬಟ್ಟೆಯ ಚೂರೊಂದನ್ನು ಬಿಟ್ಟರೆ ಉಡುಪಿನ ಯಾವ ಅವಶೇಷವೂ ಸಿಕ್ಕಿಲ್ಲ. ಮೊಹೆಂಜೋದಾರೊದಲ್ಲಿನ ಪುರಷನ ಒಂದು ಕಲ್ಲಿನ ವಿಗ್ರಹದ ಪ್ರಕಾರ ಮೇಲುಡುಗೆಯನ್ನು ಧರಿಸಿದ್ದು ಅದು ಎಡಭುಜದ ಮೇಲೆ ಹಾಗೂ ಬಲಭುಜದ ಕೆಳಗೆ ಹಾದು ಹೋಗಿದೆ. ಪುರುಷರ ಪೂರ್ಣ ಉಡುಪಿನ ಚಿತ್ರಣ ನೀಡುವ ಮೊಹೆಂಜೋದಾರೊದಲ್ಲಿಯ ಒಂದು ಮುದ್ರೆಯ ಪ್ರಕಾರ ಉದ್ದವಾದ ನಿಲುವಂಗಿಗಳನ್ನು ತೊಟ್ಟು ತಲೆಗೆ ಮುಂಡಾಸನ್ನು ಧರಿಸಲಾಗಿದೆ. ಈಗ ದೊರೆತಿರುವ ಮಣ್ಣಿನ ಬೊಂಬೆಯಾದ ಮಾತೃದೇವತೆ ಮುರ್ತಿ ಹಾಗೂ ಸುಟ್ಟ ಮಣ್ಣಿನ ಸಣ್ಣ ವಿಗ್ರಗಳ ಪ್ರಕಾರ ಸ್ತ್ರೀಯರು ಮೊಳಕಾಲವರೆಗೆ ಮಿನಿಸ್ಕರ್ಟ್ ಧರಿಸಿ ಅದರೊಳಗೆ ಮಣಿಗಳನ್ನು ಪೋಣಿಸುತ್ತಿದ್ದರು. ಸ್ಕರ್ಟ್‌‌ನ್ನು ನಡುಪಟ್ಟಿ ಅಥವಾ ಡಾಬಿನಿಂದ ಬಿಗಿದು ಕಟ್ಟಲಾಗಿದೆ. ಈ ವಿಗ್ರಹಗಳ ಮೇಲ್ಬಾಗ ಯಾವುದೇ ವಸ್ತ್ರಗಳಿಂದ ಮುಚ್ಚಿರುವುದಿಲ್ಲ. ಪುರೋಹಿತನ ವಿಗ್ರಹದ ಮೇಲುಡುಗೆಯಲ್ಲಿ ಕಸೂತಿ ಕೆಲಸ ಮಾಡಲಾಗಿದೆ. ಪಾದರಕ್ಷೆಗಳ ಉಪಯೋಗದ ಬಗ್ಗೆ ಮಾಹಿತಿ ದೊರೆತಿಲ್ಲ. ಬಟ್ಟೆಯ ಉತ್ಪಾದನೆಯಲ್ಲಿ ಹತ್ತಿಯನ್ನು ಬಳಸುತ್ತಿದ್ದುದು ಸ್ಪಷ್ಟವಾಗಿದ್ದು ಉಣ್ಣೆಯ ಉಪಯೋಗದ ಬಗ್ಗೆ ಆಧಾರಗಳು ದೊರೆತಿಲ್ಲ. ಆದರೂ ದೇಹವನ್ನು ಶಾಖವಾಗಿಟ್ಟುಕೊಳ್ಳಲು ಉಣ್ಣೆ ಬಟ್ಟೆಗಳನ್ನು ಧರಿಸಿದ್ದರೆಂದು ನಂಬಲಾಗಿದೆ.