ಕ್ರೀಡೆವಿನೋದಗಳು

ಮೊಹೆಂಜೋದಾರೋದ ನರ್ತಕಿಯ ಕಂಚಿನ ಪ್ರತಿಮೆಯು ಆಗ ಸಂಗಿತಕ್ಕೆ ತಕ್ಕಂತೆ ನೃತ್ಯ ಮಾಡುವ ಕಲೆ ಗೊತ್ತಿತ್ತೆಂದು ತಿಳಿಸುತ್ತದೆ. ಉತ್ಸವದ ದಿನಗಳಲ್ಲಿ ನರ್ತಕರು ಮೊಗವಾಡಗಳನ್ನು ಧರಿಸುತ್ತಿದ್ದರಬೇಕೆಂದು ಸುಟ್ಟಮಣ್ಣಿನ ಮಾದರಿಗಳು ತಿಳಿಸುತ್ತವೆ. ಪ್ರಾಣಿಗಳ ಹಾಗೂ ಮಾನವರ ಸುಟ್ಟ ಮಣ್ಣಿನ ವಿಗ್ರಹಗಳ ಕತ್ತಿನಲ್ಲಿ ಹಾಗೂ ಮುಂಡ ಭಾಗಗಳಲ್ಲಿ ರಂಧ್ರಗಳನ್ನು ಮಾಡಿ ಆ ಮೂಲಕ ತಂತಿ ಅಥವಾ ದಾರದಿಂದ ಚಲಿಸುವಂತೆ ಮಾಡಿ ಸೂತ್ರದ ಬೊಂಬೆಯಾಟವನ್ನಾಡಿಸುತ್ತಿದ್ದರು. ತಂತಿ ವಾದ್ಯಗಳನ್ನು ಬಳಸುತ್ತಿದ್ದರೆಂಬುದಕ್ಕೆ ಅನೇಕ ಆಧಾರಗಳು ದೊರೆತಿವೆ. ಲೋಥಾಲದಲ್ಲಿನ ಸುಟ್ಟ ಮಣ್ಣಿನ ಘನಾಕೃತಿಯ ದಾಳಗಳು ಆಟದ ಮಣಿಯ ಮಾದರಿಗಳು ಪಗಡೆಯಾಟದಂತಹ ಆಟಗಳಿದ್ದವೆಂಬುದನ್ನು ಸ್ಪಷ್ಟಪಡಿಸುತ್ತದೆ. ಚದುರಂಗದ ಆಟವು ಸಿಂಧೂ ಜನರಿಗೆ ಪರಿಚಯವಿದ್ದಿತ್ತು. ಕೆಲವು ಪ್ರಾಣಿ ತಲೆಗಳುಳ್ಳ ಮತ್ತು ಗೋಪುರಾಕೃತಿಯ ಸುಟ್ಟ ಮಣ್ಣು, ಶಂಖ, ದಂತ, ಮೂಳೆ ಮತ್ತು ಕಲ್ಲುಗಳಿಂದ ಮಾಡಿದ ಆಟದ ಕಾಯಿಗಳು ದೊರೆತಿವೆ. ಅನೇಕ ಕುಳಿಗಳಿರುವ ಮರದ ಮಣೆಯನ್ನು ಬಳಸಿ ಮತ್ತೊಂದು ಆಟವನ್ನು ಆಡುತ್ತಿದ್ದರು. ಪ್ರಾಣಿ, ಪಕ್ಷಿ, ಮನುಷ್ಯ ರೂಪದ ಮಣ್ಣಿನ ಗೊಂಬೆಗಳು ಮತ್ತು ಚಕ್ರವಿರುವ ಗಾಡಿಗಳನ್ನು ಚಿಕ್ಕ ಮಕ್ಕಳು ಆಟವಾಡಲು ಬಳಸುತ್ತಿದ್ದರು. ಮಕ್ಕಳ ಆಟದ ಸಾಮಾನುಗಳ ಮೇಲೆ ನಾಯಿಯ ಚಿತ್ರವನ್ನು ಕೆತ್ತಿರುವುದರಿಂದ ನಾಯಿಗಳನ್ನು ಅವರು ಸಾಕುತ್ತಿದ್ದರೆಂಬ ವಿಷಯ ತಿಳಿಯುತ್ತದೆ. ಡುಬ್ಬದ ಗೂಳಿ, ಕೋಣ, ಕುರಿ, ಆನೆ, ಒಂಟೆ ಮುಂತಾದವು ಸಾಕು ಪ್ರಾಣಿಗಳಾಗಿದ್ದವು. ಇವುಗಳ ಅಸ್ತಿಪಂಜರಗಳ ಅವಶೇಷಗಳು ದೊರೆತಿವೆ. ಚಾನ್ಹುದಾರೊ ಬೊಂಬೆಗಳ ತಯಾರಿಕೆಯ ಪ್ರಮುಖ ಕೇಂದ್ರವಾಗಿತ್ತು.

ಬೇಟೆಮಾಡುವುದು, ಮೀನು ಹಿಡಿಯುವುದು ಸಹ ವಿನೋದಾವಳಿ ಹಾಗೂ ಆಹಾರ ಸಂಗ್ರಹಣೆಯ ಅಂಶವಾಗಿತ್ತು. ಒಂದು ಮುದ್ರೆಯ ಮೇಲೆ ಘೇಂಡಾಮೃಗವನ್ನು ಬೇಟೆಯಾಡುವ ಚಿತ್ರವಿದೆ. ಹಾಗೆಯೇ ಕೋಳಿಗಳ ನಡುವಿನ ಪಂದ್ಯವು ಪ್ರಚಲಿತದಲ್ಲಿತ್ತು.

ಕಲೆ

ಹರಪ್ಪಾ ಜನರು ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧಿಸಿದಷ್ಟೇ ಸಾಧನೆಗಳನ್ನು ಲಲಿತಕಲೆಗಳಲ್ಲಿಯೂ ಸಾಧಿಸಿದ್ದರು. ಹರಪ್ಪ ಮತ್ತು ಮೊಹೆಂಜೋದಾರೊಗಳಲ್ಲಿ ದೊರೆತ ಶಿಲಾಮೂರ್ತಿಗಳು ಅವರ ಕಲಾವಂತಿಕೆಗೆ ಉತ್ತಮ ನಿದರ್ಶನಗಳೆನಿಸಿವೆ.

ಮೊಹೆಂಜೋದಾರೊದಲ್ಲಿಯ ಅಂತ್ಯಕಾಲೀನ ಸ್ತರಗಳಲ್ಲಿ ಸಿಕ್ಕಿರುವ ಮೇದಶಿಲೆಯ ಗಡ್ಡಧಾರಿ ತಲೆ, ೧೭.೮ ಸೆಂ.ಮೀ. ಎತ್ತರವಿದೆ. ಅದರ ತುಟಿಗಳು ದಪ್ಪನಾಗಿದ್ದು, ಹಣೆ ಕಿರುದಾಗಿದೆ. ಮೇಲಿನ ತುಟಿಯನ್ನು ಬೋಳಿಸಲಾಗಿದೆ. ಈ ಮೂರ್ತಿಯ ಅರ್ಧ ಮುಚ್ಚಿರುವ ಕಣ್ಣುಗಳು, ಯೋಗಧ್ಯಾನದ ಭಾವನ್ನು ಸೂಚಿಸುತ್ತವೆಂದು ಹೇಳಲಾಗಿದ್ದು, ಉಬ್ಬು ಚಿತ್ರದಲ್ಲಿ ಕಾಣುವ, ಎಡ ಭುಜದ ಮೇಲೆ ಹಾದು ಹೋಗಿರುವ ಮೇಲುಡಿಗೆಯ ತ್ರಿಪರ್ಣಿ ವಿನ್ಯಾಸದಿಂದ (terfoil design) ಅಲಂಕೃತವಾಗಿದೆ. ಇದನ್ನು ಮೂಲತಃ ಕೆಲವು ಬಣ್ಣದ ಅಂಟು ಮುದ್ದೆಯಿಂದ ತುಂಬಲಾಗಿತ್ತು. ಹರಪ್ಪಾದ ಮಣಿಗಳ ಮೇಲೂ ಕಾಣುವ ತ್ರಿಪರ್ಣಿ ವಿನ್ಯಾಸಗಳು, ಸುಮೇರಿಯಾದ ನಿವೇಶನಗಳಲ್ಲಿಯ ಅಕ್ಕಡ್‌ಕಾಲದ ಸ್ತರಗಳಲ್ಲಿ ಕಂಡುಬರುವ ಗೂಳಿ ತಲೆಯ ಮಾನವನ ಪ್ರತಿಮೆಗಳ ಮೇಲೂ ಕಂಡು ಬರುತ್ತದೆ. ಈ ವಿನ್ಯಾಸವು ನಕ್ಷತ್ರಗಳ ಸಂಕೇತವೆಂದು ಹೇಳಲಾಗಿದೆ. ಈ ನಕ್ಷತ್ರ ಸಂಕೇತವು ಮೊಹೆಂಜೋದಾರೊದಲ್ಲಿಯ ವಿಗ್ರಹವು ಪುರೋಹಿತ ರಾಜನದು ಅಥವಾ ದೇವತೆಯದು ಎಂದು ಹೇಳಲು ಆಧಾರವೆಂದು ಪರಿಗಣಿಸಲಾಗಿದೆ.

ಮೊಹೆಂಜೋದಾರೊದಲ್ಲಿ ದೊರೆತ ಮೂರ್ತಿಗಳ ಎರಡನೆಯ ನಿದರ್ಶನ ಬಹಳ ಯಥಾರ್ಥ ನಿರೂಪಣೆಯದು. ಈ ಪ್ರತಿಮೆಯಲ್ಲಿ ವ್ಯಕ್ತಿಯ ಕತ್ತರಿಸಿದ ಕೂದಲನ್ನು ಒಂದು ಅಲಂಕಾರ ಪಟ್ಟಿಯಿಂದ ಕಟ್ಟಿದಂತೆ ತೋರಿಸಲಾಗಿದ್ದು. ತುಟಿಗಳ ಮತ್ತು ಕೆನ್ನೆಗಳ ರಚನೆ ಸೂಕ್ಷ್ಮವಾಗಿದೆ. ಅಂತ್ಯಕಾಲೀನ ಸ್ತರಗಳಲ್ಲಿ ಸಕ್ಕಿರುವ ಮತ್ತೊಂದು ಸುಣ್ಣಕಲ್ಲಿನ ತಲೆ ಸ್ವಲ್ಪ ದೊಡ್ಡದಾಗಿದ್ದು, ಅದರ ಮುಖ ಅಗಲವಾಗಿದೆ. ಈ ಮೇಲಿನ ಮೂರು ಪ್ರತಿಮೆಗಳಲ್ಲಿ, ಕಿವಿಗಳು ಸಿಂಪಿನಾಕಾರದಲ್ಲಿದ್ದು, ಕಣ್ಣುಗಳು ಮೂಲತಃ ಹುದುಗಿಸಿದ್ದಂಥವು.

ಮೊಹೆಂಜೋದಾರೋದಲ್ಲೇ ಸಿಕ್ಕಿದ ಮತ್ತೊಂದು ಪುರುಷ ವಿಗ್ರಹ ಕುಳಿತ ಭಂಗಿಯಲ್ಲಿದ್ದು ಇದರ ತಲೆ ಕಾಣದಾಗಿದೆ. ಈ ಹಾಲುಗಲ್ಲಿನ ಮೂರ್ತಿ ೨೯.೫ ಸೆಂ. ಮೀ. ಎತ್ತರವಿದ್ದು, ಸ್ವಲ್ಪ ಮೇಲಕ್ಕೆತ್ತಿರುವ ಎಡ ಮಂಡಿಯನ್ನು ಎಡಕೈಯಿಂದ ಹಿಡಿದುಕೊಂಡಿದೆ. ಇದು ಕುಳಿತಿರುವ ಭಂಗಿ ಯೋಗಾಸನಗಳಲೊಂದು ಹೋಲುತ್ತದೆ. ಇದರ ವಿವಿಧ ಅಂಗಗಳನ್ನು ಸರಿಯಾಗಿ ಬಿಡಿಸದೆ, ರಚನೆ ಒರಟಾಗಿದೆ. ಅದೇ ನಿವೇಶನದಲ್ಲಿ ಮತ್ತೊಂದು ಹಾಲುಗಲ್ಲಿನ ಮೂರ್ತಿ ಸಿಕ್ಕಿದ್ದು, ಕುಳಿತ ಭಂಗಿಯಲ್ಲಿರುವ ಈ ಮಾನವ ಮೂರ್ತಿ ೪೨ ಸೆಂ. ಮೀ. ಎತ್ತರವಿದೆ. ಇದರ ಕೈಗಳು ಸ್ವಲ್ಪ ಮೇಲಕ್ಕೆತ್ತಿರುವ ಬಲಮಂಡಿಯ ಮೇಲಿದೆ. ಈ ವ್ಯಕ್ತಿ ಉಟ್ಟಿರುವ ವಸ್ತ್ರವನ್ನು ಮಂಡಿಗಳ ನಡುವೆ ಕಾಣುವ ಮಡಿಕೆಗಳ ರೂಪದಲ್ಲಿ ತೋರಿಸಲಾಗಿದೆ. ಅಲಂಕಾರ ಪಟ್ಟಿಯ ತುದಿಗಳು ತಲೆಯ ಹಿಂದೆ ಜೋಲುಬಿದ್ದಿವೆ. ಗಡ್ಡ ಮತ್ತು ಕಣ್ಣುಗಳೂ ಸೇರಿದಂತೆ ಮುಖದ ವಿವರಗಳು ಕಾಣೆಯಾಗಿವೆ.

ಮೊಹೆಂಜೋದಾರೊದಲ್ಲಿ ದೊರೆತ ೧೧ ರಲ್ಲಿ ೫ ವಿಗ್ರಹಗಳು, ಕೋಟೆ ಪ್ರದೇಶದಲ್ಲಿ ಸಕ್ಕಿರುವುದಕ್ಕೆ ಹೆಚ್ಚು ಮಹತ್ವ ಕೊಡಲಾಗಿದೆ. ಆದರೂ ಇದುವರೆಗೂ ಮೊಹೆಂಜೋದಾರೊದಲ್ಲಾಗಲೀ, ಅಥವಾ ಸಿಂಧೂ ಕಣಿವೆಯ ಇನ್ನಾವುದೇ ನಗರದಲ್ಲಾಗಲೀ ದೇವಾಲಯವೆಂದು ಹೇಳಬಹುದಾದ ಯಾವುದೇ ಕಟ್ಟಡವು ಸಿಕ್ಕಿಲ್ಲ. ಸುಟ್ಟ ಮಣ್ಣಿನ ಮಾನವ ಮೂರ್ತಿಗಳಂಥ ಕೆಲವು ಧ್ಯಾನದ ಮುದ್ರೆಯನ್ನು ಸೂಚಿಸುತ್ತವೆಯಾದರೂ, ಸ್ವತಃ ಈ ಪ್ರತಿಮೆಗಳಲ್ಲಿ ಅವು ದೈವಾಂಶಗಳಿಗೆ ಸಂಬಂಧಪಟ್ಟವುಗಳೆಂಬ ಯಾವ ಸೂಚನೆಯೂ ಇಲ್ಲ. ಸಿಂಧೂ ಕಣಿವೆಯಲ್ಲಿಯ ಬಹು ಸಂಖ್ಯೆಯ ಕಲ್ಲಿನ ಹಾಗೂ ಸುಟ್ಟ ಮಣ್ಣಿನ ಶಿಲ್ಪಗಳ ಮತ್ತು ಸಿಂಧೂ ಮುದ್ರೆಗಳ ಮೇಲೆ ಕಾಣಸಿಗುವ ದೇವತೆಗಳ ಭಂಗಿಗಳೇನೋ, ಯೋಗಾಸನಗಳನ್ನು ಸೂಚಿಸುತ್ತವೆಂದು ಒಪ್ಪಬೇಕಾಗುತ್ತದೆ. ಬೋಳಿಸಿರುವ ಮೇಲಿನ ತುಟಿ ಮತ್ತು ಹುದುಗಿಸಿರುವ ಕಣ್ಣುಗಳು, ಇವು ಸಿಂಧೂ ಕಣಿವೆ ಹಾಗೂ ಮೆಸೊಪೊಟೇಮಿಯಾಗಳ ಕಲೆಗಳೆರಡಕ್ಕೂ ಸಾಮಾನ್ಯವಾದ ಲಕ್ಷಣಗಳೇ ಆದರೂ, ವಸ್ತ್ರಾಲಂಕಾರ ಮತ್ತು ಇತರ ವಿವರಗಳಲ್ಲಿ ಸಿಂಧೂ ಕಣಿವೆಯ ವಿಗ್ರಗಳು ತಮ್ಮದೇ ಆದ ಬೇರೊಂದು ವರ್ಗಕ್ಕೆ ಸೇರಿದ್ದಾಗಿವೆ.

ಹರಪ್ಪಾದಲ್ಲಿಯ ಕಣಜದ ನಿವೇಶನದಲ್ಲಿ ಸಿಕ್ಕಿರುವ ೧೦ ಸೆಂ.ಮೀ. ಗಿಂತ ಕಡಿಮೆ ಎತ್ತರವಿರುವ ೨ ಸಣ್ಣ ಪ್ರತಿಮೆಗಳು, ಆಕಾರ ಮತ್ತು ತಂತ್ರಗಳಲ್ಲಿ ಶ್ರೇಷ್ಠವಾಗಿವೆ. ಅವು ವಿದೇಶೀ ಕಲೆಯಿಂದ ಆದವುಗಳು ಎಂದು ಪರಿಗಣಿಸಲು ಯಾವ ಕಾರಣವೂ ಇಲ್ಲ. ಮುದ್ರೆಗಳ ಮೇಲೆ ನೈಜವಾಗಿ ಕೆತ್ತಿರುವ ಪ್ರಾಣಿಗಳ ಚಿತ್ರಗಳು, ಹರಪ್ಪಾದ ಶಿಲ್ಪಗಳು ಪುಷ್ಟಯುತ ಸ್ನಾಯುಗಳುಳ್ಳ ಆಕರಗಳನ್ನು ಯಥಾರ್ಥವಾಗಿ ಬಿಡಿಸುವುದರಲ್ಲಿ ಸಿದ್ಧಹಸ್ತರಾಗಿದ್ದರೆಂಬುದನ್ನು ಸಂಶಯಾತೀತವಾಗಿ ಖಚಿತಪಡಿಸುತ್ತವೆ. ಹರಪ್ಪಾದಲ್ಲಿಯ ಮೂರ್ತಿಗಳಲ್ಲೊಂದು ನರ್ತಿಸುತ್ತಿರುವ ಪುರುಷನದಾಗಿದ್ದು ಶಿವನ ತಾಂಡವ ನೃತ್ಯದಂಥ ದಾರ್ಶನಿಕ ಭಾವವನ್ನು ಸೂಚಿಸುವುದು, ನಟರಾಜನ ಮೂಲರೂಪವೆಂದು ಹೇಳಲಾಗಿದೆ. ಮತ್ತೊಂದು ರುಂಡವಿಲ್ಲದ ಮೂರ್ತಿ ಬೆತ್ತಲೆಯಾಗಿದ್ದು, ಪುಷ್ಟಿಯತ ಸ್ನಾಯುಗಳ ವಿವರಗಳಿಂದ ತುಂಬಿದೆ. ಈ ಮೇಲೆ ಹೇಳಿದ ಎರಡೂ ಮೂರ್ತಿಗಳು, ಶಿಲ್ಪ ಕಲೆಯಲ್ಲಿ ಯಥಾರ್ಥ ನಿರೂಪಣೆ ಉತ್ತುಮ ನಿದರ್ಶನಗಳು.

ಕಂಚನ್ನು ಎರಕ ಹೊಯ್ಯುವ ಕಲೆಯನ್ನು ಹರಪ್ಪಾ ಜನರು ದೊಡ್ಡ ಪ್ರಮಾಣದಲ್ಲಿ ರೂಢಿಗೆ ತಂದಿದ್ದರು. ಇದರಲ್ಲಿ ಮನುಷ್ಯರ ಹಾಗೂ ಪ್ರಾಣಿಗಳ ಮೂರ್ತಿಗಳೂ ಸೇರಿದ್ದು, ಮಾನವ ಪ್ರತಿಮೆಗಳಲ್ಲಿ ಅತ್ಯುತ್ತಮ ನಿದರ್ಶನವೆನಿಸಿರುವುದು. ಒಬ್ಬ ನರ್ತಕಿಯದು ಬಹುಶಃ ಮೊಹೆಂಜೋದಾರೊದಲ್ಲಿಯ ಮಧ್ಯಕಾಲೀನ ಸ್ತರಗಳಲ್ಲಿ ಸಿಕ್ಕಿದ ಈ ಪ್ರತಿಮೆ ಭಾವಪೂರ್ಣವಾಗಿದ್ದು, ಚೈತನ್ಯದಿಂದ ತುಂಬಿದಂತಿದೆ. ಅಗಲವಾದ ಕಣ್ಣುಗಳು, ಚಪ್ಪಟೆ ಮೂಗು, ಗೊಂಚಲಾಗಿ ಕಟ್ಟಿರುವ ಕೂದಲುಗಳಿಂದ ಕೂಡಿರುವ ಆ ಹುಡುಗಿಯ ರೂಪವು ಬಲೂಚಿಸ್ತಾನದ ಅಥವಾ ದಕ್ಷಿಣ ಭಾರತದ ಮೂಲನಿವಾಸಿಯನ್ನು ಸೂಚಿಸುವ ಮಾದರಿಯನ್ನು ಪ್ರತಿನಿಧಿಸುತ್ತದೆ. ಓರೆಯಾಗಿರುವ ತಲೆ ಹಾಗೂ ಕಾಲು ಮತ್ತು ಬಲಗೈಗಳ ಸ್ಥಿತಿಯೂ ನರ್ತನದ ಭಂಗಿಯನ್ನು ಸೂಚಿಸುತ್ತವೆ. ಅವಳ ಎಡ ತೋಳು ಬಳೆಗಳಿಂದ ಮುಚ್ಚಿದ್ದು, ಮುಖ ಬಹಳ ಭಾವಪೂರ್ಣವಾಗಿದೆ. ಅದೇ ನಿವೇಶನದಲ್ಲಿಯ ಮತ್ತೊಂದು ಕಂಚಿನ ಪ್ರತಿಮೆಯು, ಅಷ್ಟೇನೂ ಪ್ರಮುಖವೆನಿಸಿಲ್ಲ. ಸಿಂಧೂ ಕಣಿವೆಯಲ್ಲಿಯ ಪ್ರಾಣಿಗಳ ಕಂಚಿನ ಪ್ರತಿಮೆಗಳಲ್ಲಿ ತಲೆಯನ್ನು ಮೇಲೆಕ್ಕೆತ್ತಿರುವ ಮತ್ತು ಕೊಂಬುಗಳು ಹಿಂದಕ್ಕೆ ಚಾಚಿರುವ ಎಮ್ಮೆ ಮತ್ತು ಆಡು ಕಲಾತ್ಮಕವಾಗಿವೆ.

ಕಲ್ಲಿನ ಹಾಗೂ ಕಂಚಿನ ಶಿಲ್ಪಗಳಿಗೆ ಹೋಲಿಸಿದರೆ, ಸಿಂಧೂ ಕಣಿವೆಯಲ್ಲಿಯ ಸುಟ್ಟ ಮಣ್ಣಿನ ಮಾನವ ಪ್ರತಿಮೆಗಳು ಒರಟಾಗಿವೆ. ಆದರೆ, ಗುಜರಾತದ ನಿವೇಶನಗಳಲ್ಲಿ ಹಾಗೂ ಕಾಲಿಬಂಗಾನದಲ್ಲಿ ಅವು ಹೆಚ್ಚು ಯಥಾರ್ಥ ರೂಪದ್ದಾಗಿವೆ. ಸಿಂಧೂ ಕಣಿವೆಯಲ್ಲಿಯ ಕೆಲವು ಪ್ರತಿಮೆಗಳು ಅಲ್ಲಿನ ಜನಗಳ ಬುಡಕಟ್ಟಿಗೆ ಸಂಬಂಧಿಸಿದ ಲಕ್ಷಣಗಳ ಮೇಲೆ ಬೆಳಕನ್ನು ಚೆಲ್ಲುವಂತಿವೆ. ಮೊಹೆಂಜೋದಾರೊದಲ್ಲಿಯ ಕಣಜದ ನಿವೇಶನದಲ್ಲಿ ೧೯೫೦ರಲ್ಲಿ ಸಿಕ್ಕ ಸುಟ್ಟ ಮಣ್ಣಿನ ಪುರುಷಪ್ರತಿಮೆ, ಸಿಮಿಟಿಕ್‌ಬುಡಕಟ್ಟಿಗೆ ಸೇರಿದ ಲಕ್ಷಣಗಳನ್ನು ಹೊಂದಿದೆ. ಅದು ಉದ್ದ ಮೂಗು ಮತ್ತು ತುಂಬಿದ ಗಲ್ಲಗಳನ್ನು ಹೊಂದಿದೆ. ಮತ್ತೊಂದು ಪ್ರತಿಮೆ ನಿಸ್ಸಂಶಯವಾಗಿ ಮಂಗೋಲಾಯಿಡ್‌(mangoloid) ಲಕ್ಷಣಗಳನ್ನು ಹೊಂದಿದೆ. ಮೊಹೆಂಜೋದಾರೊ ಮತ್ತು ಹರಪ್ಪಾಗಳಲ್ಲಿಯ ಕೆಲವು ಸುಟ್ಟ ಮಣ್ಣಿನ ಪುರುಷ ಪ್ರತಿಮೆಗಳ ಕುಳಿತಿರುವ ಭಂಗಿಗಳು ಪತಂಜಲಿಯ ಯೋಗಸೂತ್ರದಲ್ಲಿ ಹೇಳಿರುವ ಭಾರತದಲ್ಲಿ ವೈದಿಕ ಯುಗದಿಂದ ಹಿಡಿದು ಇಂದಿನವರೆಗೂ ಯೋಗಿಗಳು ಅಭ್ಯಾಸ ಮಾಡುತ್ತಿರುವ ಯೋಗಾಸನಗಳನ್ನು ನೆನಪಿಗೆ ತರುವಂತಿದೆ.

ಸಿಂಧೂ ಕಣಿವೆಯ ಪ್ರತಿಮೆಗಳಲ್ಲಿ ಅತ್ಯಂತ ಪ್ರಧಾನವೆನಿಸಿರುವವು, ಮಹಾನ್‌ಮಾತೃದೇವತೆಯನ್ನು ಪ್ರತಿನಿಧಿಸುವಂಥವು. ಅವು ನಯವಿಲ್ಲದ ಮತ್ತು ನಿಂತ ಭಂಗಿಯ ಸ್ತ್ರೀ ವಿಗ್ರಹಗಳಾಗಿದ್ದು, ಉನ್ನತ ಸ್ತನಗಳ ಮೇಲೆ ನೇತು ಬಿದ್ದಿರುವ ಸರಗಳಿಂದ ಅಲಂಕೃತವಾಗಿವೆ. ಸಾಮಾನ್ಯವಾಗಿ ತುಂಡು ಬಟ್ಟೆಯನ್ನು ಹಾಗೂ ಡಾಬನ್ನು ದರಿಸಿದಂತಿವೆ ಹಾಗೂ ಎದೆಯ ಮೇಲೆ ನೇತು ಬಿದ್ದಿರುವ ಸರಗಳಿಂದ ಅಲಂಕೃತವಾಗಿದೆ. ಈ ಮಾದರಿಯ ಮಾತೃದೇವತೆಯ ವಿಗ್ರಹ ಸಿಂಧೂ ಕಣಿವೆಯ ಹೊರತಾಗಿ, ಮತ್ತೆಲ್ಲೂ ಕೋಟ್‌ದಿಜೆಯಲ್ಲಿ ಕೂಡ ಕಂಡುಬಂದಿಲ್ಲ.

ಆರಾಧನಾ ಸಂಪ್ರದಾಯಗಳು

ಹರಪ್ಪಾ ಮತ್ತು ಮೊಹೆಂಜೋದಾರೊಗಳಲ್ಲಿ ಯಾವದೇ ಧಾರ್ಮಿಕ ಕಟ್ಟಡಗಳು ಸಿಕ್ಕಿಲ್ಲ. ಆದ್ದರಿಂದ ಸಿಂಧೂ ಜನರ ಧಾರ್ಮಿಕ ನಂಬಿಕೆ ಹಾಗೂ ಆಚಾರಗಳ ಬಗ್ಗೆ ಅಭಿಪ್ರಾಯ ರೂಪಿಸಿಕೊಳ್ಳಬೇಕಾಗಿದೆ. ಅದನ್ನು ರೂಪಿಸಿಕೊಳ್ಳಲು, ಅರಾಧನಾ ಪದ್ಧತಿಗೆ ಸಂಬಂಧಿಸಿದವುಗಳೆಂದು ಊಹಿಸಲಾಗಿರುವ ಮುದ್ರೆಗಳು, ಕಲ್ಲಿನ ವಿಗ್ರಹಗಳು, ಸುಟ್ಟ ಮಣ್ಣಿನ ಸಣ್ಣ ಪ್ರತಿಮೆಗಳಂಥ ಒಯ್ಯಲು ಸಾಧ್ಯವಾಗುವ ವಸ್ತುಗಳನ್ನೇ ಅವಲಂಬಿಸಬೆಕಾಗಿದೆ.

ಅರ್ಧ ಚಂದ್ರಾಕೃತಿಯ ತಲೆಯುಡಿಗೆಗಳಿಂದ ವಿಶದವಾಗಿ ಅಲಂಕರಿಸಲ್ಪಟ್ಟಿರುವ ಸುಟ್ಟ ಮಣ್ಣಿನ ಅನೇಕ ಚಿಕ್ಕ ಸ್ತ್ರಿ ಮೂರ್ತಿಗಳು ಸಿಂಧೂ ನಗರಗಳಲ್ಲಿ ಸಿಕ್ಕಿವೆ. ಅವು ಮಾತೃ ಅಥವಾ ಪ್ರಕೃತಿ ದೇವತೆಯನ್ನು ಪ್ರತಿನಿಧಿಸುತ್ತವೆ ಎನ್ನಲಾಗಿದೆ. ಶಕ್ತಿಪೂಜೆಯ ಪ್ರಧಾನವಾಗಿ ಆರ್ಯೇತರರಿಗೆ ಸೇರಿದ್ದೆಂದು ಹೇಳಲಾಗಿದ್ದು, ಸಿಂಧೂ ಕಣಿವೆಯ ಮಾತೃದೇವತೆಯು ಶಕ್ತಿದೇವತೆ ಹಾಗೂ ಗ್ರಾಮದೇತೆಗಳ ಮೂಲರೂಪ ಎನ್ನಲಾಗಿದೆ. ಆದರೆ, ಋಗ್ವೇದದ ಆರ್ಯರು ಕೂಡ ಭೂಮಿಯನ್ನು (ಪೃಥ್ವೀ) ದೇವತೆಯೆಂದು ವ್ಯಕ್ತೀಕರಿಸಿದ್ದಾರೆ.

ಹರಪ್ಪಾ, ಮೊಹೆಂಜೋದಾರೊ ಮತ್ತು ಕಾಲಿಬಂಗಾನ್‌ಗಳಲ್ಲಿಯ ಮುದ್ರೆಗಳ ಮೇಲೆ ಪುರುಷ ದೇವತೆಗಳನ್ನು ಚಿತ್ರಿಸಲಾಗಿದೆ. ಅವುಗಳಲ್ಲಿ ಹೆಚ್ಚು ಜನಪ್ರಿಯವೆನಿಸಿರುವುದು, ಕಾಲುಮಣೆ ಸ್ಟೂಲ್‌ಅಥವಾ ಸಿಂಹಾಸನದ ಮೇಲೆ ಯೋಗಿಯ ಮುದ್ರೆಯಲ್ಲಿ ಕುಳಿತಿರುವ ಮೂರು ಮುಖದ ದೇವತೆ. ಈ ದೇವತೆಯ ಕಾಲುಗಳನ್ನು ಹಿಮ್ಮಡಿ ಮಡಿಸಲಾಗಿದ್ದು, ಹಿಮ್ಮಡಿಗೆ ಹಿಮ್ಮಡಿ ಸೇರಿಸಲಾಗಿದೆ. ಮಂಡಿಯ ಮೇಲೆ ಊರಿರುವ ತೋಳುಗಳನ್ನು ಬಳೆಗಳಿಂದ, ಎದೆಯನ್ನು ತ್ರಿಕೋನಾಕಾರದ ತಿರುಚು ಲೋಹದ ಸರದಿಂದ ಮತ್ತು ನಡುವನ್ನು ಜೋಡಿ ನಡುಪಟ್ಟಿಗಳಿಂದ ಅಲಂಕರಿಸಲಾಗಿದೆ. ಈ ದೇವತೆಯು ಮಧ್ಯದಲ್ಲಿ ವಿಶಿಷ್ಟವಾದ ತ್ರಿಶೂಲಾಕಾರದಂಥ ಕೊಂಬುಳ್ಳ ಉಡುಗೆಯನ್ನು ಧರಿಸಿದ್ದು ಎಮ್ಮೆ, ಖಡ್ಗಮೃಗ, ಆನೆ, ಹುಲಿ ಈ ನಾಲ್ಕು ಪ್ರಾಣಿಗಳಿಂದ ಸುತ್ತುವರಿಯಲ್ಪಟ್ಟಿದೆ. ಸಿಂಹಾಸನದ ಕೆಳಗೆ ಗೂಳಿ, ಕಾಲಬಳಿ ಚಿಂಕೆ ಇರುವಂತಿದೆ. ಇವುಗಳಲ್ಲಿ ಪಶುಪತಿ ಶಿವನ ಅನೇಕ ಹೋಲಿಕೆಗಳಿದ್ದು ಶಿವಾರಾಧನೆ ಪ್ರಚಲಿತದಲ್ಲಿತ್ತೆಂದು ತಿಳಿಯಬಹುದು.

ಸಿಂಧೂ ಜನರು ಕೆಲವು ಪ್ರಾಣಿಗಳನ್ನು ಪವಿತ್ರವೆಂದು ಪರಿಗಣಿಸಿದ್ದು, ಅವುಗಳಲ್ಲಿ ಗೂಳಿ ಅತ್ಯಂತ ಪ್ರಮುಖವಾದುದು. ಒಂದು ಮುದ್ರೆಯಲ್ಲಿ ಈ ಪ್ರಾಣಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿರುವ ದೃಶ್ಯವಿದೆ. ಕೆಲವು ಮುದ್ರೆಗಳಲ್ಲಿ ಮನುಷ್ಯ ಮುಖದ ಆಡು ಅಥವಾ ಟಗರು, ಮನುಷ್ಯ ಮುಖದ ಗೂಳಿ ಮತ್ತು ಗೂಳಿ ಮುಖದ ಆನೆಯಂತಹ ಸಂಯುಕ್ತ ಪ್ರಾಣಿಗಳನ್ನು ಅಸಾಧಾರಣ ಪ್ರತಿಭಾಶಾಲಿ ಎಂಬಂತೆ ಪೂಜಿಸುತ್ತಿದ್ದರು. ಮೊಹೆಂಜೋದಾರೊ ಮುದ್ರೆಗಳಲ್ಲಿ ಅರೆ ಗೋಜಾತಿಯ ಮತ್ತು ಅರೆಮಾನವ ಪ್ರಾಣಿಗಳು ಕೊಂಬುಗಳುಳ್ಳ ಹುಲಿಯೊಡನೆ ಕಾಳಗ ಮಾಡುತ್ತಿರುವ ದೃಶ್ಯಗಳಿವೆ. ಮುದ್ರೆಗಳ ಮೇಲಿನ ಪ್ರಾಣಿಗಳ ಮುಂದೆ ಸಾಮಾನ್ಯವಾಗಿ ಕಾಣುವ ವಸ್ತುವೆಂದರೆ ಮಧ್ಯದ ಹಿಡಿಕೆಯ ಮೇಲೆ ಒಂದು ಮೇಲೊಂದರಂತೆ ಇಟ್ಟಿರುವ ಎರಡು ಪಾತ್ರೆಗಳು, ಇವನ್ನು ಧೂಪ ಪಾತ್ರೆಯೆಂದು ಕರೆಯಲಾಗಿದೆ. ಇಂತಹ ಧೂಪದ ಪಾತ್ರೆಯನ್ನು ಪೂಜ್ಯವಸ್ತುವೆಂದು ಪರಿಗಣಿಸಲಾಗುತ್ತಿತ್ತು.

ಸಿಂಧೂ ಕಣಿವೆ ಹಾಗೂ ಗುಜರಾತ್‌ಪ್ರದೇಶಗಳಲ್ಲಿ, ಮರಗಳನ್ನು ಪೂಜಿಸುವುದು ಒಂದು ಪ್ರಮುಖ ಆರಾಧನಾ ಪದ್ಧತಿಯಾಗಿತ್ತು. ಹಿಂದೂ ಮತ್ತು ಬೌದ್ದರಿಬ್ಬರಿಗೂ ಅಷ್ಟೇ ಪವಿತ್ರವೆನಿಸಿರುವ ಅರಳಿ ಮರದ ಚಿತ್ರಗಳಿರುವ ಅನೇಕ ಮುದ್ರೆಗಳು ಹರಪ್ಪಾ ನಿವೇಶನಗಳಲ್ಲಿ ಸಿಕ್ಕಿವೆ. ಅದನ್ನು ‘ಜ್ಞಾನವೃಕ್ಷ’ವೆಂದು ‘ಜೀವವೃಕ್ಷ’ವೆಂದು ಅಥವಾ ಎರಡೂ ರೂಪಗಳಲ್ಲಿ ಪರಿಗಣಿಸಲಾಗಿತ್ತು ಎಂಬುದು ಮಾತ್ರ ತಿಳಿಯದು. ಅದನ್ನು ಕೆಲವು ಮುದ್ರೆಗಳಲ್ಲಿ ಸಾಂಕೇತಿಕ ರೂಪದಲ್ಲಿ ತೋರಿಸಲಾಗಿದೆ. ವಿಶೇಷವಾಗಿ, ಮೊಹೆಂಜೋದಾರೊ ಮುದ್ರಯಲ್ಲಿ ‘U’ ಆಕಾರದ ಕುಣಿಕೆಯಿಂದ ಹೊರಬರುತ್ತಿರುವ ಎರಡು ರೆಂಬೆಗಳಂತೆ ತೋರಿಸಲಾಗಿದೆ. ಈ ರಂಬೆಗಳ ಮಧ್ಯೆ, ಕೊಂಬುಗಳುಳ್ಳ ಹಾಗೂ ನೀಳವಾಗಿ ಹಾರಾಡುತ್ತಿರುವ ತಲೆಗೂದಲುಳ್ಳ ಒಬ್ಬ ದೇವತೆಯ ಚಿತ್ರವಿದೆ. ಅದರ ಬಲಕ್ಕೆ ಮಂಡಿಯೂರಿ ಕುಳಿತು ಮೊರೆಯಿಡುತ್ತಿರುವ ವ್ಯಕ್ತಿಯ ಚಿತ್ರವಿದೆ. ಈ ವ್ಯಕ್ತಿಯ ತಲೆಯ ಮೇಲಿನ ಕೊಂಬುಗಳಿಂದ ಎಳೆಯ ಗಿಡವೊಂದು ಹೊರಹೊಮ್ಮುತ್ತಿದೆ. ಆತನ ಹಿಂದೆ, ಗೂಳಿಯ ದೇಹ ಹಾಗೂ ಆಡಿನ ಕೊಂಬುಗಳುಳ್ಳ ಮನುಷ್ಯ ಮುಖದ ಪ್ರಾಣಿಯಿದೆ. ಉದ್ದವಾದ ಅಂಗಿ ಧರಿಸಿರುವ, ಹಾರಾಡುತ್ತಿರುವ ತಲೆಗೂದಲು ಮತ್ತು ತಲೆಯ ಮೇಲೆ ಹಕ್ಕಿಯ ಗರಿಗಳಿರುವ ಏಳು ಜನ ಪುರುಷರು ನಿಂತಿರುವ ಚಿತ್ರ ಕೆಳಗೆ ಕಾಣುತ್ತದೆ. ಈ ದೃಶ್ಯವು ಮರಕ್ಕೆ ಸಂಬಂಧಿಸಿದಂಥ ದೇವತೆಯ ಆರಾಧನೆಯನ್ನು ಪ್ರತಿನಿಧಿಸುತ್ತದೆ.

ಯಜ್ಞಕುಂಡಗಳು

ಕಾಲಿಬಂಗಾನ್‌ ಶೋಧನೆಯಲ್ಲಿ ಮಣ್ಣು ಇಟ್ಟಿಗೆಗಳಿಂದ ನಿರ್ಮಾಣವಾದ ವೇದಿಕೆಯ ಮೇಲೆ ಯಜ್ಞಕುಂಡಗಳು ಕಂಡುಬಂದಿವೆ. ಕಾಲಿಬಂಗಾನ್‌ನಲ್ಲಿನ ಯಜ್ಞಕುಂಡಗಳು ಜೇಡಿಮಣ್ಣಿನ ಗುಣಿಗಳಾಗಿವೆ. ಪ್ರತಿಯೊಂದು ಗುಣಿಯು ೭೫ x ೫೫ ಸೆಂ.ಮೀ. ವ್ಯಾಸ ಹೊಂದಿದೆ. ಈ ಗುಣಿಗಳಲ್ಲಿ ಸುಟ್ಟ ಜೇಡಿಯ ಬಿಲ್ಲೆ, ಬೂದಿ, ಕಲ್ಲಿದ್ದಲಿನ ಅಂಶಗಳು ಸಿಕ್ಕಿವೆ. ಈ ಯಜ್ಞಕುಂಡಗಳ ಹತ್ತಿರದಲ್ಲೇ ಸ್ನಾನಘಟ್ಟಗಳು ಹೊಂದಿಕೊಂಡಂತಿವೆ. ಇವು ಸಾಂಪ್ರದಾಯಿಕ ಸ್ನಾನವು ಆಚಾರದ ಒಂದು ಪ್ರಮುಖ ಅಂಶವಾಗಿತ್ತೆಂಬುದನ್ನು ಎತ್ತಿ ತೋರಿಸುತ್ತವೆ. ಯಜ್ಞಕುಂಡಗಳಲ್ಲಿ ದೊರೆತಿರುವ ಬಿಲ್ಲೆಗಳ ಮೇಲೆ ಆಡನ್ನು ಹಿಡಿದುಕೊಂಡು ಹೋಗುತ್ತಿರುವ ಮನುಷ್ಯನ ಚಿತ್ರ ಮತ್ತೊಂದು ಮುಖದಲ್ಲಿ ಕೊಂಬಿರುವ ತಲೆಯುಡುಗೆಯುಳ್ಳ ದೇವತೆಯ ಚಿತ್ರಗಳನ್ನು ಕೊರೆಯಲಾಗಿದೆ. ಈ ದೃಶ್ಯವು ಯಜ್ಞದ ಸಮಯದಲ್ಲಿ ಪ್ರಾಣಿಬಲಿ ನೀಡುತ್ತಿದ್ದರೆಂಬುದನ್ನು ತಿಳಿಸುತ್ತದೆ.

ಇತ್ತೀಚೆಗೆ ಲೋಥಲ್‌ನಲ್ಲೂ ಅನೇಕ ಯಜ್ಞಕುಂಡಗಳು ಕಂಡುಬಂದಿದ್ದು ೩೦ ರಿಂದ ೯೦ ಸೆಂ.ಮೀ. ಆಳವಾಗಿವೆ. ಯಜ್ಞಕುಂಡಗಳ ಬಳಿ ಹೊಗೆಮಸಿ ಗುರುತಿರುವ ಸುಟ್ಟಮಣ್ಣಿನ ಸೌಟು ಕಂಡುಬಂದಿದ್ದು ಇದನ್ನು ಅಗ್ನಿಗೆ ದ್ರವ ಪದಾರ್ಥವನ್ನು ಅರ್ಪಿಸಲು ಬಳಸಲಾಗುತ್ತಿತ್ತು. ಅಗ್ನಿಪೂಜೆಯ ದೇವತಾರಾಧನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿತ್ತು. ಕೆಲವು ಇತಿಹಾಸತಜ್ಞರು ಈ ಯಜ್ಞದ ಕುಂಡಗಳನ್ನು ಸಾಮೂಹಿಕ ರೊಟ್ಟಿ ಸುಡುವ ಒಲೆಗಳೆಂದು ಅಭಿಪ್ರಾಯಪಟ್ಟಿದ್ದಾರೆ.

ಮುದ್ರೆಗಳು ಮತ್ತು ಲಿಪಿ
ಮುದ್ರೆಗಳು

ಹರಪ್ಪಾ ವ್ಯಾಪಾರದ ಸಾಧನಗಳಲ್ಲಿ ಮುದ್ರೆಗಳಿಗೆ ಪ್ರಥಮ ಸ್ಥಾನವಿದೆ. ಸಿಂಧೂ ಮುದ್ರೆಗಳನ್ನು ವಾಣಿಜ್ಯದ ಉದ್ದೇಶಕ್ಕಾಗಿ ಬಳಸಲಾಯಿತೇ ಹೊರತು, ತಾಯಿತ ಅಥವಾ ಆಭರಣ ರೂಪದಲ್ಲಲ್ಲ ಎಂಬುದನ್ನು ನಿರ್ಣಾಯಕವಾಗಿ ರುಜುವಾತು ಮಾಡುವುದರಲ್ಲಿ ಲೋಥಲಿಗೆ ಅಸಾಧಾರಣ ವೈಶಿಷ್ಟ್ಯವಿದೆ. ಲೋಥಲ್‌ದಲ್ಲಿಯ ದಾಸ್ತಾನುಮಳಿಗೆಯಿಂದ ಸಂಗ್ರಹಿಸಲಾದ ೬೫ರಷ್ಟು ಸುಟ್ಟ ಮಣ್ಣಿನ ಮುದ್ರೆ ಗುರುತುಗಳಲ್ಲಿ, ಒಂದು ಮುಖದಲ್ಲಿ ಸಿಂಧೂ ಮುದ್ರೆಗಳ ಗುರುತನ್ನು, ಮತ್ತೊಂದರಲ್ಲಿ ಮೂಟೆ ಕಟ್ಟಲು ಬಳಸಿದ ಬಿದಿರಿನ ಚಾಪೆ, ಜೊಂಡು ಹುಲ್ಲು, ನೇಯ್ದ ಬಟ್ಟೆ ಹಾಗೂ ತಿರುಚಿದ ಹುರಿಯಂಥ ವಸ್ತುಗಳ ಗುರುತನ್ನೂ ಕಾಣಬಹುದು. ಇದರಿಂದ ಎರಡು ನಿರ್ಧಾರಗಳಿಗೆ ಬರಬಹುದು. ಮೊದಲನೆಯದಾಗಿ, ಸರಕಿನ ಮೂಟೆಗಳನ್ನು ಚಾಪೆ ಅಥವಾ ಬಟ್ಟೆಗಳಲ್ಲಿ ಸುತ್ತಲಾಗುತ್ತಿತ್ತು. ಎರಡನೆಯದಾಗಿ, ಅವುಗಳ ಮೇಲೆ ಮುದ್ರೆಯನ್ನೊತ್ತಿ ಅವನ್ನು ದಾಸ್ತಾನು ಮಳಿಗೆಯಲ್ಲಿ ಇಡಲಾಗುತ್ತಿತ್ತು. ಅಲ್ಲದೆ, ಸರಕುಗಳ ಮೇಲೆ ಮುದ್ರೆಯೊತ್ತುತ್ತಿದ್ದ ವಿದಾನದ ಮೇಲೂ ಅವು ಬೆಳಕು ಬೀರುತ್ತವೆ. ಸರಕನ್ನು ಬಿದಿರಿನ ಅಥವಾ ಜೊಂಡು ಹುಲ್ಲಿನ ಚಾಪೆಗಳಲ್ಲಿ ಅಥವಾ ಬಟ್ಟೆಗಳಲ್ಲಿ ಸುತ್ತಿ, ನಾರಿನ ಹುರಿಯಿಂದ ಬಿಗಿಯಲಾಗುತ್ತಿತ್ತು. ಆನಂತರ, ಗಂಡುಗಳ ಮೇಲೆ ಹಸಿ ಜೇಡಿ ಮಣ್ಣಿನ ಪಟ್ಟಿಗಳನ್ನು ಒತ್ತಿ ಅವುಗಳ ಮೇಲೆ ರವಾನೆದಾರನ ಮುದ್ರೆಯನ್ನು ಒತ್ತಲಾಗುತ್ತಿತ್ತು. ಕೆಲವು ವೇಳೆ, ಸುಂಕದ ಅಧಿಕಾರಿಗಳೂ ತಮ್ಮ ಮುದ್ರೆಗಳನ್ನು ಅವುಗಳ ಮೇಲೆ ಒತ್ತುತ್ತಿದ್ದರು. ಗಂಟುಗಳ ಮೇಲೆ ಹಸಿ ಜೇಡಿಮಣ್ಣನ್ನು ಒತ್ತುವಾಗ ರವಾನೆದಾರನ ಹೆಸರನ್ನು ತಿಳಿಸುವ ಬರಹವನ್ನು ಕೆಡಿಸದಂತೆ ಎಚ್ಚರವಹಿಸಲಾಗುತ್ತಿತ್ತು. ಎಷ್ಟೋ ಸಂದರ್ಭಗಳಲ್ಲಿ ಪ್ರಾಣಿ ಆಕೃತಿಗಳು ಅಳಿಸಿಹೋಗಿದ್ದರೂ, ಅದರ ಮೇಲಿನ ಬರಹಗಳಿಂದ, ಸರಕುಗಳ ಮೂಲ, ಅವನ್ನು ರಫ್ತು ಮಾಡಿದ ರೇವು, ರವಾನೆದಾರನ ಹೆಸರನ್ನು ಗುರುತಿಸಲು ಗ್ರಾಹಕನಿಗೆ ಸಾಧ್ಯವಿತ್ತು. ಸರಕುಗಳ ಮೇಲೆ ಮುದ್ರೆಯೊತ್ತುವುದರ ಮತ್ತೊಂದು ಉದ್ದೇಶ, ಸರಕುಗಳ ಗುಣಮಟ್ಟವನ್ನು ಖಚಿತಪಡಿಸುವುದಾಗಿತ್ತು. ಇದನ್ನು ಬಹುಶಃ ರೇವಿನ ಅಧಿಕಾರಿಗಳು ತಮ್ಮ ಮುದ್ರೆಗಳೊನ್ನುತ್ತುವುದರ ಮೂಲಕ ದೃಢೀಕರಿಸುತ್ತಿದ್ದರು. ಮೂರನೆಯ ಉದ್ದೇಶ ಯಾರೂ ಕದಿಯದಂತೆ ಭದ್ರಪಡಿಸುವುದು. ಆದರೂ ಸುಲಭವಾಗಿ ಒಡೆದು ಹೋಗುವ ಈ ಮುದ್ರೆ ಗುರುತುಗಳು ಸಾಗಣೆಯಲ್ಲಿ ಹಾನಿಗೆ ಗುರಿಯಾಗುವಂಥವು ಎಂಬುದನ್ನೇನೋ ಒಪ್ಪಿಕೊಳ್ಳಬೇಕಾಗುತ್ತದೆ. ಆದ್ದರಿಂದ ಹಡಗಿನಲ್ಲಿರುವಾಗ, ಸರಕನ್ನು ರಕ್ಷಿಸಲು ಹೆಚ್ಚು ಗಮನಹರಿಸಿದಂತೆ ಕಾಣುತ್ತದೆ. ಏಕೆಂದರೆ, ಬ್ರಾಕ್‌ಅಥವಾ ಸೂಸಾದಿಂದ ಕಳುಹಿಸಿದ ಒಂದು ಜಾಡಿಯಾದರೂ, ಮೊಹರು ಮಾಡಿದ ಅದರ ಮುಚ್ಚಳಕ್ಕೆ ಮಾರ್ಗದಲ್ಲಿ ಯಾವ ಹಾನಿಯೂ ತಗಲದೆ, ಲೋಥಲನ್ನು ತಲುಪಿದೆ. ಬ್ರಾಕ್‌ನ ಒತ್ತು ಮುದ್ರೆಗಳ (stamp seals) ಮೇಲೆ ಕಾಣುವ ಅನೇಕ ರೇಖೆಗಳಲ್ಲಿರುವ ಸ್ವಸ್ತಿಕದಂಥ ಆಕೃತಿಯು ಅದರ ಮೇಲೂ ಇದೆ. ಈ ಮುದ್ರೆ ಭಾರತೀಯ ಮೂಲದ್ದಂತೂ ಅಲ್ಲವೆಂದು ಎಸ್‌. ಆರ್. ರಾವ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸಿಂಧೂ ಮುದ್ರೆಗಳು ಶಾಲೆಗಳಲ್ಲಿ ಭಾಷೆಯನ್ನು ಕಲಿಸಲು ಬಲಸುತ್ತಿದ್ದ ವ್ಯಾಕರಣದ ಫಲಕಗಳು ಎಂದು ಎಸ್. ಕೆ. ರೇ ಅವರು ಊಹಿಸಿದ್ದರೆ, ಅವನ್ನು ಯಾಗಕ್ಕೆ ಬಂದಿದ್ದ ಆಹ್ವಾನಿತರಿಗೆ ಸಾಂಕೇತಿಕ ಕೊಡುಗೆಯಾಗಿ (token-gifts) ಕೊಡಲಾಗುತ್ತಿತ್ತು ಎಂದು ರಾಮಚಂದ್ರನ್ ಅವರು ಹೇಳುತ್ತಾರೆ. ಅನೇಕರು, ಈ ಮುದ್ರೆಗಳನ್ನು ಆಭರಣಗಳಾಗಿ, ಇಲ್ಲವೇ ತಾಯಿತಗಳಾಗಿ ಬಳಸಲಾಗುತ್ತಿತ್ತು ಎಂದು ನಂಬಿದ್ದರೆ, ಅವುಗಳ ಮೇಲಿನ ರಂಧ್ರವಿರುವ ಗುಬುಟು ಹಿಡಿದುಕೊಳ್ಳಲು ಅನುಕೂಲವಾಗಿತ್ತು. ಲೋಥಲದಲ್ಲಿಯ ಕೆಲವು ಮುದ್ರೆಗಳ ಮೇಲಿನ ರಂಧ್ರಗಳಲ್ಲಿ ತಾಮ್ರದ ಉಂಗುರಗಳ ಗುರುತು ಈಗಲೂ ಕಾಣಿಸುತ್ತವೆ.

ಸಿ. ಜೆ. ಗ್ಯಾಡ್ ಅವರು, ಊರ್ ಮತ್ತು ಬ್ಯಾಬಿಲಾನ್‌ಗಳಲ್ಲಿ ಸಿಕ್ಕಿರುವ ಮತ್ತು ಸಿಂಧೂ ಮಾದರಿ ಎನ್ನಲಾಗಿರುವ ೧೮ ಮುದ್ರೆಗಳನ್ನು ಪಟ್ಟಿಮಾಡಿದ್ದಾರೆ. ಅವುಗಳ ಪೈಕಿ ಕೆಲವು  ಮುದ್ರೆಗಳು (ಮುದ್ರೆ ಸಂಖ್ಯೆ -೨, ೩, ೪, ೫, ೧೬ ಮತ್ತು ೧೭) ಲಿಪಿ ಮತ್ತು ಆಕೃತಿಗಳ ದೃಷ್ಟಿಯಿಂದ, ಸಿಂಧೂ ಶೈಲಿಯವು ಎನ್ನಬಹುದು. ಮಿಕ್ಕವು ಸಿಂಧೂ ಶೈಲಿಯವಂತೂ ಅಲ್ಲ, ಗ್ಯಾಡ್ ಅವರ ಪಟ್ಟಿಯಲ್ಲಿಯ ಮುದ್ರೆ (ಸಂಖ್ಯೆ -೧) ಚದರಾಕಾರವಾಗಿದ್ದು, ಉಬ್ಬು ಕಚ್ಚು ಬೆನ್ನಿನ ಮೇಲೆ ರಂಧ್ರವುಳ್ಳ ಗುಬುಟಿದೆ. ಬಾಗಿದ ತಲೆಯ ಗೂಳಿಯ ಆಕೃತಿ ಭಾರತದ್ದೆ ಆಗಿದ್ದರೂ, ಲಿಪಿ ಮಾತ್ರ ಪ್ರಾಚೀನ ಶಂಕು ಲಿಪಿ (ಕ್ಯೂನಿಫಾರಮ್). ಈ ಮುದ್ರೆ ಭಾರತ ಹಾಗೂ ಸುಮೇರಿಯಾಗಳೆಡರ ಪ್ರಭಾವಕ್ಕೊಳಗಾದ ಪ್ರದೇಶಕ್ಕೆ ಸೇರಿದ್ದಿರಬಹುದು. ಅದು ಸಾರ್ಗಾನನ ಕಾಲಕ್ಕಿಂತ ಹಿಂದಿನದೆಂದು ಹೇಳಲಾಗಿದೆ. ಸಂಖ್ಯೆ ೨ರ ಮುದ್ರೆ ವೃತ್ತಾಕಾರವಾಗಿದೆ. ಎದ್ದು ಕಾಣುವಂತಿರುವ ಗುಂಡಿಯಂಥ ಗುಬುಟಿದ್ದು,  ಪರ್ಷೀಯಾ ಖಾರಿ ಮೂಲದ್ದಾಗಿದೆ. ಆದರೆ, ಲಿಪಿ, ಆಕೃತಿ, ಕಾರ್ಯ ಕೌಶಲಗಳೆಲ್ಲವೂ ಭಾರತದವೇ. ಬಹ್ರೇನದಲ್ಲಿ ವಾಸಿಸುತ್ತಿದ್ದ ಭಾರತೀಯ ವರ್ತಕ ಅದರ ಮಾಲೀಕನಾಗಿದ್ದಿರಬಹುದು. ಸಂಖ್ಯೆ  ೩, ೪ ಮತ್ತು ೫ರ ಮುದ್ರೆಗಳೂ ಅದೇ ವರ್ಗಕ್ಕೆ ಸೇರಿದವು. ಸಂಖ್ಯೆ  ೬ರ ಮುದ್ರೆ ಕೊಳವೆಯಾಕಾರದ್ದಿದ್ದು, ಸುಮೇರಿಯಾ ಮೂಲದ್ದು. ಹಿಣಿಯುಳ್ಳ ಗೂಳಿ, ಹಾವು, ಚೇಳು ಮತ್ತಿತರ ಆಕೃತಿಗಳೆಲ್ಲ ಭಾರತದವು. ಸಂಖ್ಯೆ ೭ರ ಮುದ್ರೆಯ ಮೇಲಿನ ಮರ ಹಾಗೂ ಇತರ ಆಕೃತಿಗಳೂ ಭಾರತದವೇ. ಈ ಮುದ್ರೆಗಳನ್ನು ಸುಮೇರಿಯಾದಲ್ಲಿ ವಾಸವಾಗಿದ್ದ ಭಾರತೀಯ ವರ್ತಕರು ಮಾಡಿಸಿದ್ದುದು ಸ್ಪಷ್ಟವಿದೆ.

ಸಂಖ್ಯೆ ೮ರ ಮುದ್ರೆಯ ಮೇಲೆ ಕಾಣುವ ಪುರುಷರಿಬ್ಬರು ಧರಿಸುವ ಉಡುಪು ಸುಮೇರಿಯಾದ್ದು, ಅವರಲ್ಲೊಬ್ಬನು, ಆಡಿನಂತಿರುವ ಪ್ರಾಣಿಯನ್ನು ಹಿಡಿದುಕೊಂಡಿದ್ದಾನೆ. ಆದ್ದರಿಂದ ಆ ಮುದ್ರೆ ಊರ್ ನಲ್ಲಿದ್ದ ಬಹ್ರೇನದ ವರ್ತಕನದಿರಬಹುದು. ಸಂಖ್ಯೆ ೯, ೧೦, ೧೧ ಮತ್ತು ೧೩ ರ ಮುದ್ರೆಗಳು ಬಹ್ರೇನ್ ಮೂಲದವು. ಸಂಖ್ಯೆ ೧೨ ಮತ್ತು ೧೪ರ  ಮುದ್ರೆಗಳು ಮೇಲಿನ ವರ್ಗಕ್ಕೆ ಸೇರಿದ್ದರೂ ಭಾರತೀಯ ತಂತ್ರ ಹೊಂದಿರುವುದರಿಂದ ಅವು ಬಹ್ರೇನದಲ್ಲಿದ್ದ ಭಾರತೀಯ ವರ್ತಕರಿಗೆ ಸೇರಿದ್ದಾಗಿರಬಹುದು. ಗ್ಯಾಡ್ ಅವರ ಪಟ್ಟಿಯಲ್ಲಿಯ ಸಂಖ್ಯೆ ೧೫ರ ಮುದ್ರೆ, ಸಾರ್ಗಾನನ ಕಾಲದ ಸಮಾಧಿಯಲ್ಲಿ ಕಾರ್ನೀಲಿಯನ್ ಮೇದಶಿಲೆ ಮತ್ತು ತಾಮ್ರಗಳ ಮಣಿಗಳೊಡನೆ ಸಿಕ್ಕಿದ್ದು, ಅದನ್ನು ‘ಪರ್ಷಿಯಾ ಖಾರಿ ಮುದ್ರೆಗಳ’ ಗುಂಪಿಗೆ ಸೇರಿಸಬಹುದು. ಸಂಖ್ಯೆ ೧೬, ೧೭ ಮತ್ತು ೧೮ರ ಮುದ್ರೆಗಳು, ಸಿಂಧೂ ಲಿಪಿಯನ್ನೊಳಗೊಂಡಿರುವುದರಿಂದ, ಅವು ಬಹ್ರೇನದಲ್ಲಿ ನೆಲೆಸಿದ್ದ ಭಾರತೀಯ ವರ್ತಕರವು ಎನ್ನಬಹುದು.

ಕಿಷ್, ಆಸ್ಮರ್ ಮತ್ತು ಗೌರಾಗಳಲ್ಲಿ ಸಿಕ್ಕಿರುವ ಚದುರಾಕಾರದ ಮತ್ತು ಸಿಂಧೂ ಲಿಪಿಯುಳ್ಳ ಮುದ್ರೆಗಳು, ನಿಸ್ಸಂದೇಹವಾಗಿ ಭಾರತೀಯ ಮೂಲದವು.

ಬ್ರಿಗ್ಸ್‌ಬುಕಾನನ್ (Briggs Buchanan) ಅವರು, ಪರ್ಷಿಯಾ ಖಾರಿ ಮುದ್ರೆಗಳಲ್ಲಿ ಮೂರು ಮಾದರಿಗಳನ್ನು ಗುರುತಿಸಿದ್ದಾರೆ. ಗ್ಯಾಡ್ ಅವರ ಪಟ್ಟಯಲ್ಲಿಯ (ಸಂಖ್ಯೆ ೨, ೩, ೪, ೫, ಮತ್ತು ೧೬) ಕೆಲವು ಮುದ್ರೆಗಳನ್ನು ಅವರು ಒಂದನೆಯ ಮಾದರಿಗೆ ಸೇರಿಸಿದ್ದಾರೆ. ಈ ಮಾದರಿಯವು ವೃತ್ತಾಕಾರವಾಗಿದ್ದು, ಹಿಂಭಾಗದಲ್ಲಿ ಚಿಕ್ಕ ಗುಬುಟು ಹಾಗೂ ಮುಂಭಾಗದಲ್ಲಿ ಸಿಂಧೂ ಕಣಿವೆಯ ಲಿಪಿ ಮತ್ತು ಆಕೃತಿಗಳನ್ನು ಹೊಂದಿವೆ. ಅಂಥವು ಬಹ್ರೇನ್ ದ್ವೀಪದಲ್ಲಿ ಸಿಕ್ಕಿರುವುದು ಅಪರೂಪ. ಎರಡನೆಯ ಮಾದರಿಯವು (type-II) ಸಿಂಧೂ ಮುದ್ರೆಗಳ ಒರಟಾದ ಅನುಕರಣೆಯಾಗಿದ್ದು, ಇವು  ಬಹ್ರೇನದಲ್ಲೂ ಸಿಗುತ್ತವೆ. ಗ್ಯಾಡ್ ಅವರ ಸಂಖ್ಯೆ ೧೫ರ ಮುದ್ರೆ, ಈ ಗುಂಪಿಗೆ ಸೇರುತ್ತದೆ ಮೂರನೆಯ ಮಾದರಿಯವು (type-III) ಲೋಥಲ್‌ದ ಪರ್ಷಿಯಾದ ಖಾರಿ ಮುದ್ರೆಗಳಿಗೆ ಸದೃಶವಾಗಿವೆಯೆಂದು ಹೇಳಲಾಗಿದೆ. ಅವು ಬ್ರಹ್ರೇನದಲ್ಲಿ ಅಲ್ಪ  ಸಂಖ್ಯೆಯಲ್ಲೂ, ಫೈಲಕದಲ್ಲಿ ಬಹು ಸಂಖ್ಯೆಯಲ್ಲೂ ಸಿಗುತ್ತವೆ. ಗ್ಯಾಡ್ ಅವರ (ಸಂಖ್ಯೆ ೮ರಿಂದ ೧೪ರವರೆಗಿನ) ಕೆಲವು ಮುದ್ರೆಗಳನ್ನು ಮೂರನೇ ಮಾದರಿಗೆ ಸೇರಿಸಬೇಕಾಗುತ್ತದೆ. ಇವುಗಳ ಕಾಲವನ್ನು ಖಚಿತವಾಗಿ ನಿರ್ಧರಿಸಬಹುದು. ಏಕೆಂದರೆ ‘ಯೇಲ್ ಬ್ಯಾಬಿಲೋನಿಯಾ ಸಂಗ್ರಹ ‘ (Yale Babylonian Collection)  ದಲ್ಲಿಯ ಈ ಮಾದರಿಯ ಮುದ್ರೆಯೊಂದನ್ನು, ಲಾರ್ಸಾದ ಗುಂಗುನಮ್ (Cungunum, ಕ್ರಿ. ಪೂ. ೧೮೨೩) ೧೦ನೆಯ ವರ್ಷಕ್ಕೆ ಸೇರಿದ ಒಂದು ಫಲಕದ ಮೇಲೆ ಮುದ್ರೆಯೊತ್ತಲು ಬಳಸುವುದನ್ನು ಕಾಣಬಹುದು. ಬಹ್ರೇನದಲ್ಲಿಯ ಮುದ್ರೆಯ ಮೇಲಿನ ಆಕೃತಿಗೂ, ಇದರ ಮೇಲಿನ ಆಕೃತಿಗೂ ಸಾಮ್ಯವಿದೆ. ಲೋಥಲದ ಮುದ್ರೆಗಳ ಕಾಲ ಕ್ರಿ ಪೂ. ೧೯೦೦ ಎಂದು ಬುಕಾನನ್ ಅವರು ಹೇಳಿದ್ದರೂ, ಅವು ಅಕ್ಕಡ್ ಕಾಲಕ್ಕೆ ಸೇರಿದ್ದವೆಂದು ನಂಬಲು ಪ್ರಬಲ ಕಾರಣಗಳಿವೆ. ಕ್ರಿ ಪೂ. ೨೩೫೦ರಲ್ಲಿ, ಸಿಂಧೂ ರೇವುಗಳು ಸುಮೇರ್ ದೊಡನೆ ಹೊಂದಿದ್ದ ವ್ಯಾಪಾರ ಸಂಬಂಧವು ಪ್ರವರ್ಧಮಾನ ಸ್ಥಿತಿಯಲ್ಲಿತ್ತೆಂಬುದನ್ನು, ಇತರ ಪುರಾವೆಗಳೂ ಸೂಚಿಸುತ್ತವೆ.

ಸಿಂಧೂಲಿಪಿ

ಸಿಂಧೂ ಲಿಪಿ, ಸುಮಾರು ೨೫೦ ಚಿಹ್ನೆಗಳನ್ನೊಳಗೊಂಡಿದೆ ಎನ್ನಲಾಗಿದೆ. ಈ ಸಂಖ್ಯೆ ವರ್ಣ ಮಾಲಾಪ್ರಕ್ರಮಕ್ಕೆ ಅತಿ ಹೆಚ್ಚು ಚಿತ್ರಲಿಪಿ ಅಥವಾ ಪದ ಚಿಹ್ನೆಗಳ ಬರವಣಿಗೆ ಅತಿ ಕಡಿಮೆ. ಈ ಲಿಪಿಯನ್ನು ಓದಲು ಪ್ರಯತ್ನಿಸಿರುವ ಬಹುಮಂದಿ ವಿದ್ವಾಂಸರು, ಪ್ರತಿ ಚಿಹ್ನೆಯು ಒಂದು ಭಾವ ಅಥವಾ ಪದವನ್ನು ಪ್ರತಿನಿಧಿಸುತ್ತದೆ ಎಂದು ಊಹಿಸಿದ್ದಾರೆ. ಆದ್ದರಿಂದ, ಪದ ಚಿಹ್ನಾ (logography) ಶಾಸ್ತ್ರದ ನಿಯಮವನ್ನು ಅನುಸರಿಸಿ, ಪ್ರತಿ ಚಿಹ್ನೆಗೂ ಒಂದೊಂದು ಪದ ಮೌಲ್ಯವನ್ನು ಕೊಟ್ಟರು.

ರಚನಾಕ್ರಮದ ವಿಶ್ಲೇಷಣೆ

ಅನೇಕ ವಿದ್ವಾಂಸರು ಬೇರೆ ಬೇರೆಯಾಗಿ ತೋರುವ ಸಿಂಧೂ ಲಿಪಿಯ ಬಹಳಷ್ಟು ಚಿಹ್ನೆಗಳನ್ನು ಅವುಗಳ ಮೂಲರೂಪದಲ್ಲಿ ವಿಶ್ಲೇಷಿಸಿಲ್ಲದಿರುವುದನ್ನು ಗಮನಿಸಬಹುದು.  ಮೌಲ್ಯಗಳನ್ನು ಗೊತ್ತುಪಡಿಸುವ ಉದ್ದೇಶದಿಂದ ೨೫೦ ರಿಂದ ೩೦೦ ಮೂಲ ರೂಪಗಳನ್ನು ಒಪ್ಪಿಕೊಂಡಿದ್ದಾರೆ. ಈ ನ್ಯೂನತೆಗೆ ಕಾರಣವನ್ನು ಹುಡುಕುವುದು ಕಷ್ಟವೇನಲ್ಲ. ಭಾರತೀಯೇತರ ಲಿಪಿಗಳಲ್ಲಿ, ಸಂಯುಕ್ತಾಕ್ಷರ ಪದ್ಧತಿಯನ್ನು ಅಂದರೆ ಒಂದಕ್ಕಿಂತ ಹೆಚ್ಚು ವ್ಯಂಜನಗಳನ್ನು ಒಂದು ಸ್ವರದೊಂದಿಗೆ ಕೂಡಿಸಿ ಒಂದು ಸಂಯುಕ್ತ ಚಿಹ್ನೆಯಾಗಿ ಬರೆಯುವ ಪದ್ಧತಿಯನ್ನು, ಅಳವಡಿಸಲು ಸಾಧ್ಯವಿಲ್ಲ. ಆದರೆ ಭಾರತೀಯ ಲಿಪಿಗಳಲ್ಲಿ ಇದು ಸಾಧ್ಯವಿದ್ದು ೨೦೦೦ ವರ್ಷಗಳಿಗಿಂತಲೂ ಮುಂಚಿನನಿಂದ ರೂಢಿಯಲ್ಲಿದೆ. ಈ ವ್ಯವಸ್ಥೆ ಬಹುಶಃ ಸಿಂಧೂ ಬರವಣಿಗೆಯಲ್ಲೇ ಉಗಮವಾಗಿತ್ತು. ಉದಾಹರಣೆಗೆ ಬ್ರಾಹ್ಮೀ ಮತ್ತು ದೇವನಾಗರಿ ಲಿಪಿಗಳಲ್ಲಿ ‘ಪ್’  ‘ತ್ ‘ ಮತ್ತು ‘ಅ’ ಗಳನ್ನು ಸೇರಿಸಿ, ‘ಪ’ ಬರೆಯಲು ಒಂದೇ ಸಂಯುಕ್ತ ಚಿಹ್ನೆಯಿದೆ. ಜಾಣ್ಮೆಯಿಂದ ಮಾಡಿದ ಮೂಲ  ಚಿಹ್ನೆಗಳ ಸಂಯೋಜನೆಯಿಂದ, ಅವು ಬೇರೆ ಬೇರೆ ಚಿತ್ರಗಳಂತೆ ಕಾಣುತ್ತದೆ. ಇದರಿಂದ ಅವುಗಳ ಸಂಖ್ಯೆಯೂ ಹೆಚ್ಚುತ್ತದೆ. ಎಲ್ಲ ಸಂಯುಕ್ತ ಚಿಹ್ನೆಗಳನ್ನು ವಿಶ್ಲೇಷಿಸಿದಲ್ಲಿ ಮೂಲ ಚಿಹ್ನೆಗಳ (component basic signs) ಸಂಖ್ಯೆ ಅಂತ್ಯಕಾಲದ ಹರಪ್ಪಾ ಲಿಪಿಯಲ್ಲಿ (late Harappan script) ೨೦ಕ್ಕೆ ಇಳಿಯುತ್ತದೆ ಮತ್ತು ಪ್ರಾರಂಭಕಾಲದ (early Harappan writing) ಹರಪ್ಪಾ ಬರಹದಲ್ಲಿ ೪೦+೧೨ರಷ್ಟು (ಚಿತ್ರಸಂಕೇತಗಳು) ಇವೆ. ಸಂಯುಕ್ತ ಚಿಹ್ನೆಗಳ ಮೂಲ ಅಂಗ ಭಾಗಗಳನ್ನು (basic components) ಲೋಥಲ್ ಮುದ್ರೆಗಳಲ್ಲಿ ಗುರುತಿಸಬಹುದು.

ಸಿಂಧೂ ಬರವಣಿಗೆಯ ಮತ್ತೊಂದು ವಿಶಿಷ್ಟ ಅಂಶವೆಂದರೆ, ಮೂಲ ಚಿಹ್ನೆಗೆ ಗೆರೆಗಳನ್ನು (strokes) ಸೇರಿಸುವುದು. ಸಿಂಧೂ ಮತ್ತು ಸಿಮಿಟೆಕ್ ಲಿಪಿಗಳಲ್ಲಿಯಾ ಚಿಹ್ನೆಗಳು ಸಮಾನವಿದ್ದಾಗ್ಯೂ ಪ್ರತ್ಯೇಕ ಮೂಲ ಚಿಹ್ನೆಗೆ ಸ್ವರ ಮೌಲ್ಯ (vowel value) ನಿರ್ದೇಶಿಸಲು ಸೇರಿಸಿವ ಗೆರೆಗಳ ಬಳಕೆ ಸಿಂಧೂ ಬರಹವನ್ನು ಸಿಮಿಟಿಕ್ ಬರಹದಿಂದ (semetic writing) ಭಿನ್ನವಾಗಿಸಿದೆ. ಅನಂತರದ ಬ್ರಾಹ್ಮಿ ಮತ್ತು ಖರೋಷ್ಟಿ ಮುಂತಾದ ಭಾರತೀಯ ಲಿಪಿಗಳು, ಇದೇ ಪದ್ಧತಿಯನ್ನು ಅನುಸರಿಸಿವೆ. ಸಂಯುಕ್ತಾಕ್ಷರಗಳ ರಚನೆ ಮತ್ತು ಚಿಹ್ನೆಗಳ ಜೋಡಣೆ ಭಾರತೀಯ ಲಿಪಿಗಳ ಈ ಲಕ್ಷಣಗಳನ್ನು ಹಿಂದಕ್ಕೊಯ್ದು, ಸಿಂಧೂ ಲಿಪಿಗೂ ಅನ್ವಯಿಸದೇ ಹೋದ್ದರಿಂದ ಸೋವಿಯತ್ ಮತ್ತು ಫೀನಿಷ್ ವಿದ್ವಾಂಸರಿಗೆ ಅಮೂಲಾಗ್ರವಾದ ರಚನಾ ಕ್ರಮದ ವಿಶ್ಲೇಷಣೆ ಮಾಡಲು ಅಡ್ದಿಯಾಯಿತು ಮತ್ತು ಸಂಯುಕ್ತ ಚಿಹ್ನೆಗಳನ್ನು ಚಿತ್ರ ಸಂಕೇತಗಳೆಂದು ಭಾವಿಸುವಲ್ಲಿ  ಪರಿಣಾಮಗೊಂಡಿತು. ಅವರ ಪ್ರಕಾರ, ಸಿಂಧೂ ಲಿಪಿಯ ರಚನಾ ಸ್ವರೂಪವೂ ಭಾಷೆ ಮೂಲದ್ರಾವಿಡ (proto- Dravdian) ಎಂದು ಸೂಚಿಸುತ್ತದೆ. ಅವರು ಪ್ರಯತ್ನಿಸುತ್ತಿರುವ ರಚನಾಕ್ರಮದ ವಿಶ್ಲೇಷಣೆಯನ್ನು ಪರಾಮರ್ಶಿಸುವ ಮುನ್ನ, ಹರಪ್ಪಾ (ಪ್ರೌಢ ಹಂತ ಕ್ರಿ. ಪೂ. ೨೫೦೦-೧೯೦೦) ಕಾಲದ ಹರಪ್ಪಾ (ಕ್ರಿ. ಪೂ. ೧೯೦೦-೧೩೦೦) ಲಿಪಿಗಳಲ್ಲಿಯ ಮೂಲ ಚಿಹ್ನೆಗಳ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳುವುದು ಅವಶ್ಯಕ. ಅವುಗಳ ಆಧಾರದ ಮೇಲೆ, ಬರವಣೆಗೆಯ ರೂಪದಲ್ಲಿ ವಿಕಾಸವಾಯಿತೇ ಹಾಗೂ ಈ ಲಿಪಿಯು ಪದಚಿಹ್ನೆ ಉಚ್ಚಾರಾಂಶದ ಅಥವಾ ವರ್ಣ ಮಾಲೆಯ ಪ್ರಕ್ರಮವಾಗಿತ್ತೇ ಎಂಬುದನ್ನು ನಿಷ್ಕರ್ಷಿಸಲು ಸಾಧ್ಯವಾದೀತು.