ಪೂರ್ವ ಪ್ರಾಂತ್ಯ : ರಾಜಸ್ಥಾನ ಮತ್ತು ಉತ್ತರ ಪ್ರದೇಶ

ಹರಪ್ಪಾದವರು ಹಾಗೂ ಅವರ ತರುವಾಯ ಬಂದವರು ನೆಲೆಸಿದ್ದ ಸಟ್ಲೇಜ್‌ ಮತ್ತು ಗಂಗಾ ಯಮುನಾ ದೋಅಬ್‌ಗಳ ನಡುವಣ ಪ್ರದೇಶ ಸಿಂಧು ಸಾಮ್ರಾಜ್ಯದ ಪೂರ್ವ ಪ್ರಾಂತ್ಯವೆನಿಸಿತ್ತು. ಇಂದು ಮರಳುಗಾಡೆನಿಸಿರುವ ಯಮುನಾ ನದಿಯ ಪಶ್ಚಿಮದ ಮೈದಾನ ಪ್ರದೇಶ, ಪುರಾತನ ಕಾಲದಲ್ಲಿ ಘಗ್ಗರ್ ಚೌತಾಂಗ್‌ ನದಿಗಳು ಹರಿಯುತ್ತಿದ್ದುದರಿಂದ ಅತಿ ಫಲವತ್ತಾಗಿತ್ತು. ೧೮೯೨ರಲ್ಲಿ ಹೆಚ್‌. ಜಿ. ರಾವರ್ಟಿ ಅವರು ರಜಪುತಾನಾ ಪ್ರದೇಶವು ಮರುಭೂಮಿಯಾದುದು ಕೇವಲ ಇತ್ತೀಚೆಗೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಸಿಂಧು ಸಂಸ್ಕೃತಿಯ ಪೂರ್ವ ಭಾಗಗಳಿಗೆ ಹರಡಿರುವ ಬಗ್ಗೆ ಪುರಾತತ್ವ ಮಾಹಿತಿಯನ್ನು ಸಂಗ್ರಹಿಸಲು ಹೊರಟು, ೧೯೨೦-೨೧ರಲ್ಲಿ ಸ್ಟೀನ್‌ ಅವರೂ, ೧೯೫೦-೫೪ರಲ್ಲಿ ಘೋಷ್‌ ಅವರು ಈ ಪ್ರದೇಶದಲ್ಲಿ ಸರ್ವೇಕ್ಷಣ ಕಾರ್ಯವನ್ನು ನಡೆಸಿ, ರಾಜಸ್ಥಾನ ಮತ್ತು ಬಹವಾಲಪುರ (ಪಾಕಿಸ್ತಾನ)ಗಳಲ್ಲಿನ ಮರುಭೂಮಿಗಳ ಉಗಮಕ್ಕೆ ಸಂಬಂಧಿಸಿದಂತೆ, ಅತಿ ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ಭಾರತದಲ್ಲಿ ನಿವೇಶನಾನ್ವೇಷಣೆ

ಸರ್ ಆರೆಲ್‌ಸ್ಟೀನ್‌ ಅವರು ೧೯೪೨ರಲ್ಲಿ ಬಹವಾಲಪುರ ಜಿಲ್ಲೆಯಲ್ಲಿಯ ಸರಸ್ವತೀ ನದಿಯ ಪಾತ್ರದಲ್ಲಿ ಅನ್ವೇಷಣ ಕಾರ್ಯ ನಡೆಸಿ ಅನೇಕ ಹರಪ್ಪಾ ನಿವೇಶನಗಳನ್ನು ಗುರುತಿಸಿದರು. ಅವುಗಳಲ್ಲಿ ಹೆಚ್ಚು ಪ್ರಮುಖವೆನಿಸಿರುವವು, ಸಂಧಾನವಾಲ ಮತ್ತು ದೇರವಾರ. ಸಂಧಾನವಾಲದಲ್ಲಿಯ ೯ ಮೀ. ಎತ್ತರದ ದಿಬ್ಬದಲ್ಲಿ ಹರಪ್ಪಾ ನಿಕ್ಷೇಪ ೩ ಮೀ. ಗಿಂತ ಸ್ವಲ್ಪ ಕಡಿಮೆ ದಪ್ಪವಾಗಿದ್ದು, ದಿಬ್ಬದ ತಳಭಾಗ ೫೩ x ೩೯ ಮೀ. ಇದೆ. ದೇರವಾರದಲ್ಲಿ ನಡೆಸಿದ ಪರೀಕ್ಷಣಾ ಉತ್ಖನನದಿಂದ, ಹರಪ್ಪಾ ನೆಲೆಯನ್ನು ಪ್ರತಿನಿಧಿಸುವ ದಿಬ್ಬಗಳ ಸಮೂಹದ ಹೊರಗೆ. ಭಿನ್ನ ಶವಸಂಸ್ಕಾರ ಪದ್ಧತಿಯ (fractional burials) ೧೫೦ ಮೀ. ಚದರದ ಸ್ಮಶಾನವು ಬೆಳಕಿಗೆ ಬಂದಿತು. ೧೯೪೨ರಲ್ಲಿ ಸ್ಟೀನ್‌ ಅವರು, ಬಹುವಾಲಪುರ ಪ್ರಾಂತದ ಪೋರ್ಟ್‌ ಅಬ್ಬಾಸ್‌ದಿಂದ ಪೂರ್ವಕ್ಕೆ ಹರಪ್ಪಾ ನಿವೇಶನವಾವುದೂ ಇಲ್ಲವೆಂದು ಅಭಿಪ್ರಾಯಪಟ್ಟಿದ್ದರು. ಆದರೆ, ೧೯೫೧-೫೨ರಲ್ಲಿ ಘೋಷ್‌ಅವರು ಕೈಗೊಂಡ ನಿವೇಶನಾನ್ವೇಷಣೆ ತೋರಿಸಿರುವಂತೆ, ಸಿಂಧೂ ನಾಗರಿಕತೆ ಇನ್ನೂ ಪೂರ್ವದತ್ತ ಹರಡಿತ್ತೆಂಬುದು ಖಚಿತ ಗಂಗಾನಗರ ಜಿಲ್ಲೆಯಲ್ಲಿಯ ಹನುಮನಗಢ ಮತ್ತು ಸೂರತಗಢ ತಹಸೀಲುಗಳಲ್ಲಿ, ಪಾಕಿಸ್ತಾನದ ಗಡಿಯಿಂದ ಹಿಡಿದು ರಾಜಸ್ಥಾನದ ಬಿಕಾನೇರ್ ವಿಭಾಗದ ಭಾದ್ರಾದ ಪೂರ್ವಕ್ಕೆ ೨೫ ಕಿ. ಮೀ. ವರೆಗೂ ಹರಡಿರುವ ಸರಸ್ವತೀ ಹಾಗೂ ದೃಷದ್ವತೀ ಕಣಿವೆಗಳಲ್ಲಿ ಸುಮಾರು ೨೪ ಹರಪ್ಪಾ ಸಂಸ್ಕೃತಿಯ ನಿವೇಶನಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಬಹಳಷ್ಟು ಸಣ್ಣ ನೆಲೆಗಳು. ಇಲ್ಲಿ ಹರಪ್ಪ ಸಂಸ್ಕೃತಿಯ ವಿಶೇಷ ಲಕ್ಷಣಗಳುಳ್ಳ ಕುಂಭಾಕೃತಿಗಳ ಜೊತೆಗೆ ಚೂಪಾದ ತುದಿಯ ಪೀಠದ ಬಟ್ಟಲು, ಪೀಠದ ಮೇಲಿನ ತಟ್ಟೆ ಸುಟ್ಟ ಜೇಡಿಯ ಬಿಲ್ಲೆಗಳೂ, ಚರ್ಟ್‌ ‌ಕಲ್ಲಿನ ಉದ್ದದ ಅಲಗುಗಳೂ, ಮೇದ ಶಿಲೆಯ ಚಕ್ರಾಕಾರದ ಮಣಿಗಳೂ ದೊರಕಿವೆ. ಇಲ್ಲಿ ಅನ್ವೇಷಣೆ ನಡೆಸಿದವರ ಅಭಿಪ್ರಾಯದಲ್ಲಿ ದೃಷದ್ವತೀ ಕಣಿವೆಯಲ್ಲಿಯ ನಿವೇಶನಗಳು, ಹರಪ್ಪಾ ನೆಲೆಗಳ ಕಾಲದ ನಂತರ ಪ್ರವರ್ಧಮಾನ ಸ್ಥಿತಿಗೆ ಬಂದಂಥವು.

ಸರಸ್ವತೀ ದೃಷದ್ವತೀ ಪ್ರದೇಶದಲ್ಲಿಯ ಕೆಲವು ಹರಪ್ಪಾ ನಿವೇಶನಗಳಲ್ಲಿ, ಕೆಂಪಿನ ಮೇಲೆ ಕಪ್ಪು ಬಣ್ಣದಲ್ಲಿ ಚಿತ್ರಿಸಿರುವ ಅರ್ಧ ವೃತ್ತ, ಕುಣಿಕೆ, ಪರ್ಣಾಂಗ, ಅಲೆಯಲೆಯಂಥ ರೇಖೆ ಮುಂತಾದವನ್ನೊಳಗೊಂಡ ವಿಭಿನ್ನ ಮಣ್ಪಾತ್ರೆಗಳು ಸಿಕ್ಕಿದ್ದು, ಅವನ್ನು ‘ಸೋಥಿ ಮಡಕೆ’ಗಳೆಂದು (sothi ware) ಕರೆಯಲಾಗಿದೆ. ಮೊದಲು, ಇವನ್ನು ಹರಪ್ಪಾ ನಂತರ ಕಾಲದ್ದೆಂದು ಭಾವಿಸಲಾಗಿತ್ತು. ಇವುಗಳನ್ನು ಮತ್ತೆ ಪರೀಕ್ಷಿಸಿದ ನಂತರ ಕೋಟ್‌ದಿಜಿಯ ಪರಪ್ಪಾ ಪೂರ್ವಕಾಲೀನ ಮಣ್ಪಾತ್ರೆಗಳಿಗೆ ಸಾಮ್ಯ ಹೊಂದಿವೆಯೆನ್ನಲಾಗಿದೆ. ಕಾಲಿಬಂಗಾನ್‌, ಸರಸ್ವತೀ ಕಣಿವೆಯಲ್ಲಿಯ ಅತಿ ಪ್ರಮುಖವಾದ ಹರಪ್ಪಾ ನಿವೇಶನ ಇತ್ತೀಚೆಗೆ ಇಲ್ಲಿ ಉತ್ಖನನ ನಡೆಯಿತು. ಈ ಉತ್ಖನನದ ಫಲಿತಾಂಶವನ್ನು ಪರಿಗಣಿಸುವ ಮುನ್ನ, ಇದಕ್ಕಿಂತ ಇನ್ನೂ ಪೂರ್ವಕ್ಕಿರುವ ನಿವೇಶನಗಳನ್ನು ಕುರಿತಂತೆ, ಸಾಮಾನ್ಯ ಅವಲೋಕನ ಅವಶ್ಯಕವೆನಿಸುತ್ತದೆ. ಉತ್ತರ ಪ್ರದೇಶದ ಸಹ್ರಾನಪುರ ಜಿಲ್ಲೆಯಲ್ಲಿ, ಯಮುನಾ ನದಿಯ ಉಪನದಿಯಾದ ಮಾಸ್ಕರಾದ ದಡದ ಮೇಲಿರುವ ಭಾರಗಾಂವದಲ್ಲಿ, ಹರಪ್ಪಾ ಜನರ ವಸತಿಗಳ ಬಗ್ಗೆ ಇನ್ನಷ್ಟು ಸಾಕ್ಷ್ಯಾಧಾರಗಳು ಸಿಗುತ್ತವೆ. ಇಲ್ಲಿ, ಪೀಠದ ಮೇಲಿನ ತಟ್ಟೆ ಚರ್ಟ್‌ಕಲ್ಲಿನ ಅಲಗುಗಳು, ಒಂದು ಬಗೆಯ ಸುಟ್ಟ ಜೇಡಿಯ ಬಿಲ್ಲೆಗಳು, ಪಿಂಗಾಣಿ ಬಳೆಗಳು, ‘ತಾಮ್ರ ರಾಶಿ’ (coper hoards)ಯಲ್ಲಿ ಸಿಕ್ಕ ಉಂಗುರಗಳು ಗುಂಪಿಗೆ ಸೇರಿದಂಥ ಒಂದು ತಾಮ್ರದ ಉಂಗುರ ಇವೆಲ್ಲಾ ಸಿಕ್ಕಿವೆ. ಇವು ಗಂಗಾ ಯಮುನಾ ದೋಅಬ್‌ ಪ್ರದೇಶದಲ್ಲಿ ಅವನತ ಹರಪ್ಪಾ ಸಂಸ್ಕೃತಿ ಬಹಳ ಕಾಲದವರೆಗೂ ಉಳಿದು ಬಂದುದನ್ನು ತೋರಿಸುತ್ತವೆ. ಸೂಕ್ಷ್ಮವಾಗಿ ಪರೀಕ್ಷಿಸಿದಲ್ಲಿ, ಹಸ್ತಿನಾಪೂರದಲ್ಲಿಯ ಚಿತ್ರಿತ ಬೂದಬಣ್ಣದ ಮಡಕೆಗಳ (painted grey ware) ಅಡಿಯಲ್ಲಿ ಸಿಕ್ಕಿರುವ ಕಾವಿಗೆಂಪು ಬಣ್ಣದವು (ochre-coloured) ರಚನೆಯಲ್ಲಿ ಅವನತ ಹರಪ್ಪಾ ಸಂಸ್ಕೃತಿಯ ಕೆಂಪು ಮಡಕೆಗಳಿಗೆ (red ware) ಸಾಮ್ಯ ಹೊಂದಿರುವುದು ಸ್ಪಷ್ಟವಾಗುತ್ತದೆ. ಲೋಥಲದಲ್ಲಿ ಸಿಕ್ಕಿರುವ ದಂಡವುಳ್ಳ ತಾಮ್ರದ ಕೊಡಲಿಗೆ (sleeved copper axe) ಈ ಸಂದರ್ಭದಲ್ಲಿ ಹೆಚ್ಚಿನ ಮತ್ವವಿದೆ. ಏಕೆಂದರೆ ಗಂಗಾ ಕಣಿವೆಯಲ್ಲಿಯ ‘ತಾಮ್ರ ರಾಶಿಗಳ’ ನಿವೇಶನಗಳಲ್ಲಿ ಕಂಡುಬಂದಿರುವ ಮನುಷ್ಯಾಕಾರದ ವಿಗ್ರಹಗಳನ್ನು ಇದು ಅಸ್ಪಷ್ಟವಾಗಿಯಾದರೂ ಹೋಲುತ್ತದೆ.

ಸಹ್ರಾನ್‌ಪುರ ಜಿಲ್ಲೆಯಲ್ಲಿ ಅಂಬ್‌ಖೇರಿ ಮತ್ತೊಂದು ಹೆಚ್ಚು ಮಹತ್ವವುಳ್ಳ ನಿವೇಶನ. ಇಲ್ಲಿ, ಅಷ್ಟು, ಹದವಾಗಿ ಸುಟ್ಟಿಲ್ಲದ ಕೆಂಪು ಮಣ್ಪಾತ್ರೆಗಳು ಅಧಿಕ ಸಂಖ್ಯೆಯಲ್ಲಿ ಸಿಕ್ಕಿವೆ. ಇವುಗಳ ಪ್ರಮುಖ ಮಾದರಿಗಳೆಂದರೆ, ಗಿಡ್ಡದಿಂಡುಳ್ಳ ಬಟ್ಟಲು, ಪೀಠದ ಮೇಲಿನ ತಟ್ಟೆ, ಮಧ್ಯೆ ಗುಬಟಿರುವ ಮುಚ್ಚಳಗಳು ಹುರಿಯ ಗುರುತಿರುವ (cord impression) ಜಾಡಿಗಳು. ಇವೆಲ್ಲವುಗಳಿಗೂ, ಹರಪ್ಪಾ ಪಾತ್ರೆಗಳಿಗೂ ಸಾಮ್ಯವಿದ್ದಂತಿದೆ. ಇಲ್ಲಿಯ ಉತ್ಖನನಕಾರರು ಅಂಬ್‌ಖೇರಿಯನ್ನು ಹರಪ್ಪಾ ಸಂಸ್ಕೃತಿಯ ಅವನತ ಹಂತದ (degenerate Harappan) ಹಾಗೂ ಬಾರಗಾಂವನ್ನು ಅಂತ್ಯ ಕಾಲದ (late harappan) ನಿವೇಶನಗಳೆಂದು ಪರಿಗಣಿಸಿರುವುದು ಯುಕ್ತವೇ.

ಗಂಗಾಯಮುನಾ ದೋಅಬ್‌ ಪ್ರದೇಶದಲ್ಲಿಯ ಇನ್ನೂ ಪೂರ್ವಕ್ಕಿರುವ ನಿವೇಶನಗಳಲ್ಲಿ, ದೆಹಲಿಯ ಈಶಾನ್ಯಕ್ಕೆ ೫೦ ಕಿ.ಮೀ. ದೂರದಲ್ಲಿರುವ ಹಾಗೂ ಯಮುನಾ ನದಿಯ ಉಪ ನದಿಯಾದ ಹಿಂದೋನ್‌ನದಿ ದಡದ ಮೇಲಿನ ಅಲಂಗಿರಪುರ ಹರಪ್ಪಾ ಸಂಸ್ಕೃತಿಯ ಅವನತ (ಅಂತ್ಯ ಕಾಲದ) ಹಂತಕ್ಕೆ ಸೇರಿದ್ದು.

ಕಾಲಿಬಂಗನ್

ಬತ್ತಿಹೋದ ಘಗ್ಗರ್ ನದಿಯ ಪಾತ್ರವನ್ನು ಕ್ರಮಬದ್ಧವಾಗಿ ಮೋಜಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದ ಘೋಷ್‌ ಅವರು ಕಾಲಿಬಂಗಾನ್‌ ನೆಲೆಯನ್ನು ೧೯೫೩ರಲ್ಲಿ ಬೆಳಕಿಗೆ ತಂದರು. ಅನಂತರ ಲಾಲ್‌ ಮತ್ತು ಥಾಪರ್ ಅವರು ಇಲ್ಲಿ ಉತ್ಖನನ ನಡೆಸಿದರು. ಹರಪ್ಪಾದ ಆಗ್ನೇಯಕ್ಕೆ ೧೬೦೯೩ ಕಿ.ಮೀ. ದೂರದಲ್ಲಿ ಹಾಗೂ ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿಯ ಹನುಮಾನಗಢ ತಹಸೀಲಿನಲ್ಲಿರುವ ಘಗ್ಗರ್ ನದಿಯ ಎಡದಂಡೆಯ ಮೇಲೆ ಎರಡು ಸಣ್ಣ ಸಣ್ಣ ದಿಬ್ಬಗಳಾಗಿ ವಿಭಜಿಸಲಾಗಿರುವ ಪುರಾತನ ದಿಬ್ಬವೊಂದಿದೆ. ಪೂರ್ವದಲ್ಲಿರುವುದು ದೊಡ್ಡ ದಿಬ್ಬವಾಗಿದ್ದು, ಪಶ್ಚಿಮಕ್ಕಿರುವುದು ಚಿಕ್ಕದಾಗಿದೆ. ಈ ಚಿಕ್ಕ ದಿಬ್ಬದ ಪ್ರದೇಶದಲ್ಲಿ, ಮೊದಲು ಹರಪ್ಪಾ ಪೂರ್ವಕಾಲದ ತಾಮ್ರ ಶಿಲಾಯುಗದ ಜನರು ವಾಸಿಸುತ್ತಿದ್ದರು. ಅನಂತರ ಹರಪ್ಪಾ ಜನರೂ ಇಲ್ಲಿ ನೆಲೆಸಿದರು. ನೈಸರ್ಗಿಕ ಮೆಕ್ಕಲು ಮಣ್ಣಿನ (natural alluvium) ಮೇಲೆ ಕಂಡುಬರುವ ಕಟ್ಟಡಗಳ ಐದು ಹಂತಗಳುಳ್ಳ  (structural phases) ಸುಮಾರು ೧.೫೨ ಮೀ. ನಷ್ಟಿರುವ ಸಾಂಸ್ಕೃತಿಕ ನಿಕ್ಷೇಪದ ಪದರಗಳು ಹರಪ್ಪಾ ಪೂರ್ವ ಕಾಲದ ನೆಲೆಯನ್ನು ಪ್ರತಿನಿಧಿಸುತ್ತವೆ. ಆ ಕಾಲದಲ್ಲಿ (ಕಾಲಿಬಂಗಾನ್‌ ೧) ಮನೆಕಟ್ಟಲು ೩೦ x ೨೦ x ೧೦ ಸೆಂ.ಮೀ. ಗಳ ಹಸಿ ಇಟ್ಟಿಗೆಗಳನ್ನು ಬಳಸಲಾಗಿತ್ತು. ಬೆಣೆಯಾಕಾರದ ಕೆಲವು ಇಟ್ಟಿಗೆಗಳನ್ನು ಬಿಟ್ಟರೆ, ಸುಟ್ಟ ಇಟ್ಟಿಗೆಯು ಗೊತ್ತಿರಲಿಲ್ಲವೆಂದೇ ಹೇಳಬೇಕು. ಅನಂತರದ (ಕಾಲಿಬಂಗಾನ್‌ ೨) ಕಾಲದಲ್ಲಿ, ಮನೆ ಕಟ್ಟಲು ಹಸಿ ಇಟ್ಟಿಗೆಗಳ ಬಳಕೆ ಮುಂದುವರಿಯಿತಾದರೂ, ಸುಟ್ಟ ಇಟ್ಟಿಗೆಗಳ ಉಪಯೋಗ ಕೇವಲ ಚರಂಡಿ ಹಾಗೂ ಸ್ನಾನದ ಕೋಣೆಗಳಿಗೆ ಮಾತ್ರ ಸೀಮಿತವಾಗಿತ್ತು. ಇಲ್ಲಿ ಸುಟ್ಟ ಇಟ್ಟಿಗೆಗಳ ಬಳಕೆ, ಹರಪ್ಪಾ, ಮೊಹೆಂಜೋದಾರೋ ಹಾಗೂ ಲೋಥಲ್‌ಗಳಲ್ಲಿದ್ದಷ್ಟು ಜನಪ್ರಿಯವಾಗಿರಲಿಲ್ಲ. ಕಾಲಿಬಂಗಾನ್‌೧ ಕಾಲದ ಮಧ್ಯ ಹಂತದಲ್ಲಿಯ ಮನೆಗಳಲ್ಲಿ ಕಂಡುಬಂದ ಭೂಮಿಯ ಒಳಗಿನ ಮತ್ತು ಮೇಲಿನ ಒಲೆಗಳು ಈ ಜನರ ಅಡಿಗೆ ಪದ್ಧತಿಗಳ ಮೇಲೆ ಬೆಳಕನ್ನು ಬೀರುವಂತಿವೆ. ನೆಲದ ಮೇಲಿನ ಒಲೆಗಳಲ್ಲಿ, ಉರುವಲು ಇಡುವ ಜಾಗ ಒಂದು ಪಕ್ಕದಲ್ಲಿತ್ತು. ಕಾಲಿಬಂಗಾನ್‌೧ ಕಾಲವನ್ನು, ಕಲಿಬಂಗಾನ್‌ ೨ ಕಾಲದಿಂದ ಭಿನ್ನವೆಂದು ಗುರುತಿಸಲು ಪ್ರಧಾನ ಮಾನದಂಡವೆಂದರೆ, ೧ನೇ ಕಾಲದಲ್ಲಿ ಕಂಡುಬರುವ ೬ ಮಡಕೆ ಮಾದರಿಗಳ ವಿಶಿಷ್ಟ ಜೋಡಣೆ. ಇವುಗಳಲ್ಲಿಯ ಬಹಳಷ್ಟು ಆಕಾರ ಹಾಗೂ ಹೊರ ಮೈ ರಚನೆಗಳಲ್ಲಿ, ಹರಪ್ಪಾದ ವಿಶಿಷ್ಟ ಮಡಕೆಗಳಿಗಿಂತ ಬೇರೆಯಾಗಿವೆ. ಥಾಪರ್ ಅವರು (fabric A throught F) “ಎಫ್‌ಹಂತದವರೆಗಿನ ಏ ಫ್ರಾಭ್ರಿಕ್‌” ಎಂದು ಕರೆದಿದದ್ದಾರೆ. ಇವು ಸಾಮಾನ್ಯವಾಗಿ ತೆಳುವಾದ, ಹಗುರವಾದ ಮತ್ತು ಕೆಂಪುನಸುಗೆಂಪು ಬಣ್ಣದವು. ಮಾಸಲು ಕೆಂಪು ಹೊರ ಮೈಮೇಲೆ, ಕೆಲವು ವೇಳೆ ಬಿಳಿಯ ಬಣ್ಣದೊಡನೆ ಕಪ್ಪು ಬಣ್ಣದಿಂದ ಚಿತ್ರಿಸಿರುವದೂ ಉಂಟು. ರಂಧ್ರಗಳುಳ್ಳ ತ್ರಿಕೋನ ಅಥವಾ ಏಣಿಗಳು, ಜೇಡರ ಹುಳುವಿನಂಥ ವಿನ್ಯಾಸಗಳು, ಅಖಂಡ ಚಕ್ರಗಳಿಂದ ನಾನಾ ದಿಕ್ಕುಗಳಿಗೆ ಹರಿಯುವ ಕಿರಣಗಳಂಥ ರೇಖೆಗಳು ಮತ್ತು ಸಸ್ಯಾಕೃತಿಗಳು ಇವುಗಳನ್ನು ಇಲ್ಲಿ ವಿಶೇಷವಾಗಿ ಹೆಸರಿಸಬಹುದು. ಇಲ್ಲಿಯ ಮಡಕೆ ಮಾದರಿಗಳೆಂದರೆ ಹೊರಚಾಚಿದ ಅಂಚಿನ ಜಾಡಿಗಳು ಹಾಗೂ ಕ್ರಮೇಣ ಕಿರಿದಾಗುವ ಅಥವಾ ಹೊರ ಉಬ್ಬುಳ್ಳ ಪಾರ್ಶ್ವಗಳ ಬಟ್ಟಲು, ಸಸ್ಯಗಳ ಮತ್ತು ಪ್ರಾಣಿಗಳ ಸಾರಂಗ, ಗೂಳಿ, ಬಾತುಕೋಳಿ, ಕಾಡುಕೋಳಿ, ಕಾಡುಮೇಕೆ ಇತ್ಯಾದಿ ಆಕೃತಿಗಳನ್ನು ಫ್ಯಾಬ್ರಿಕ್ -ಬಿ (fabric B) ಯ ಒರಟಾದ ಮೇಲ್ಮೈ ಯ ಮೇಲೆ ಚಿತ್ರಿಸಲಾಗಿದೆ. ‘ಫ್ಯಾಬ್ರಿಕ್ -ಬಿ’ ಮೇಲೆ ಜೋಡಿಕೊಡಲಿ ಆಕೃತಿ, ‘ಮೆಟೋಪ್’ (metop- ಗ್ರೀಕ್ ಶಿಲ್ಪದಲ್ಲಿ ಕಂಡುಬರುವ ಅಂಶ) ಜಾಲಂಧರ ಹಾಗೂ ಕುಣಿಕೆಗಳು ಕಂಡುಬರುತ್ತವೆ. ಇದರ ಪ್ರಮುಖ ಮಾದರಿಗಳೆಂದರೆ ಪೀಠದ ಮೇಲಿನ ತಟ್ಟೆ ಗೋಳಾಕಾರದ ಅಲಂಕಾರಿಕ ಕುಂಡ ಹಾಗೂ ಬಟ್ಟಲು. ‘ಫ್ಯಾಬ್ರಿಕ್ -ಡಿಯಲ್ಲಿ’ ಒರಟಾದ ತಟ್ಟೆ ಮತ್ತು ದಾಸ್ತಾನು ಜಾಡಿಗಳಂಥ ಪಾತ್ರೆಗಳಿವೆ.

ಕಾಲಿಬಂಗಾನ್‌ದಲ್ಲಿ ಬಹಳ ಹಿಂದೆ ನೆಲೆಸಿದ್ದವರಿಗೆ ತಾಮ್ರದ ಕೆಲಸದ ಬಗ್ಗೆ ಸಾಕಷ್ಟು ಅರಿವಿತ್ತೆಂಬುದು ಅಲ್ಲಿಯ ತಾಮ್ರದ ಕೊಡಲಿ, ಬಳೆ ಮತ್ತು ಮಣೆಗಳಿಂದ ಸ್ಪಷ್ಟವಾಗುತ್ತದೆ. ಲೋಹದ ಜೊತೆಗೆ ಬೀಸುವ ಕಲ್ಲು, ಅರೆಯುವ ಕಲ್ಲು ಹಾಗೂ ಕ್ಯಾಲ್ಸೆಡನಿ ಮತ್ತು ಅಗೆಟ್‌ಗಳ ಸಣ್ಣ ಹಾಗೂ ಸಮಾನಾಂತರ ಪಾರ್ಶ್ವವುಳ್ಳ ಅಲಗುಗಳನ್ನು ಅವರು ಬಳಸುತ್ತಿದ್ದರು. ಅವರ ನಂತರ ಬಂದ ಹರಪ್ಪಾ ಜನರು ಚರ್ಟ್ ಕಲ್ಲಿನ ಉದ್ದವಾದ ಅಲಗುಗಳನ್ನು ಬಳಸುತಿದ್ದರು. ಅವರ ವೈಯಕ್ತಿಕ ಆಭರಣಗಳಲ್ಲಿ ಮೇದಶಿಲೆ, ತಾಮ್ರ ಶಂಖ ಹಾಗೂ ಕಾರ್ನೀಲಿಯನ್‌ಗಳ ಮಣಿಗಳೂ ಸೇರಿದ್ದವು . ಇಲ್ಲಿಯ ಆಟಿಗೆ ಗಾಡಿಚಕ್ರಗಳು ಮತ್ತು ಸುಟ್ಟ ಜೇಡಿಯ ಗೂಳಿಗಳ ಪ್ರತಿಮೆಗಳು ಸ್ಪಷ್ಟಪಡಿಸುವಂತೆ ಅವರಿಗೆ ಎತ್ತಿನ ಗಾಡಿಗಳ ಪರಿಚಯವಿತ್ತು. ಆದರೆ, ಅವರಿಗೆ ಮುದ್ರೆಗಳ ಮತ್ತು ಸುಟ್ಟ ಜೇಡಿಯ ಬಿಲ್ಲೆಗಳ ಬಳಕೆ ತಿಳಿದಿರಲಿಲ್ಲ. ಅಷ್ಟೇ ಅಲ್ಲ ಅವರು ಅನಕ್ಷರಸ್ಥರೂ ಆಗಿದ್ದರು. ಮನೆಗಳ ನಿರ್ಮಾಣದಲ್ಲಿ ಯಾವುದೇ ಒಂದು ನೀರ್ದಿಷ್ಟ ಯೋಜನೆಯಿದ್ದಂತೆ ಕಾಣುವುದಿಲ್ಲವಾದರೂ ಅವರ ಗ್ರಾಮವು ಹಸಿ ಇಟ್ಟಿಗೆ ಗೋಡೆಗಳ ಕೋಟೆಯಿಂದ ರಕ್ಷಿತವಾಗಿತ್ತು. ಅವರು ವಾಸಿಸುತ್ತಿದ್ದ ಮನೆಗಳ ವ್ಯವಸ್ಥೆ ಮೊದಲನೆಯ ಹಂತದಲ್ಲಿರುವುದಕ್ಕಿಂತ ಆ ನಂತರದ ಎರಡು ಹಂತಗಳಲ್ಲಿ ಬೇರೆಯೆ ಆಗಿತ್ತು. ಈ ಹರಪ್ಪ ಪೂರ್ವ ಕಾಲೀನ ಗ್ರಾಮವನ್ನು ಭೂ ಕಂಪದ ಅನಾಹುತದ ಕಾರಣದಿಂದಾಗಿ ತಾತ್ಕಾಲಿಕವಾಗಿ ತ್ಯಜಿಸಲಾಯಿತಾದರೂ, ಅನಂತರ ಶೀಘ್ರದಲ್ಲಿಯೇ ಮತ್ತೆ ಅಲ್ಲಿ ನೆಲೆಸಲಾಯಿತೆಂದು ನಂಬಲಾಗಿದೆ.

ಎರಡನೆಯ ಕಾಲದಲ್ಲಿ (preiod-II) ಹರಪ್ಪಾ ಹಾಗೂ ಪೂರ್ವ ಸಂಸ್ಕೃತಿಗಳ ಸಹಬಾಳ್ವೆ ನಡೆದುದು ಮಾತ್ರವಲ್ಲ, ಕಾಲಾನುಕ್ರಮದಲ್ಲಿ ಸ್ಥಳೀಯ ಮಡಕೆಗಳ ಹಾಗೂ ಕಲ್ಲಿನ ಮತ್ತು ಲೋಹದ ಉಪಕರಣಗಳ ಬದಲು, ಪ್ರೌಢಾವಸ್ಥೆಯ ಹರಪ್ಪ ಸಂಸ್ಕೃತಿಯ ಸರಕು ಸರಂಜಾಮುಗಳೂ ಕಾಣಿಸಿದವು. ಹೀಗಾಗಿ, ಹರಪ್ಪ ಪೂರ್ವ ಕಾಲದ ಜನರು, ಕಾಲಾನುಕ್ರಮದಲ್ಲಿ, ತಮ್ಮ ವ್ಯಕ್ತಿತ್ವವನ್ನು ಕಳೆದುಕೊಂಡಂತೆ ಕಾಣುತ್ತದೆ. ಹೊಸದಾಗಿ ಬಂದವರು (ಹರಪ್ಪ ಜನರು) ಹಸಿ ಇಟ್ಟಿಗೆ ಮತ್ತು ಮಣ್ಣಿನ ವೇದಿಕೆಗಳ ಮೇಲೆ ಕಟ್ಟಿದ ಮನೆಗಳಿದ್ದ ಭಾಗವನ್ನು ಸುತ್ತುವರಿಯುವಂತೆ, ಹೊರ ಮೈಯಲ್ಲಿ ೩೪ ಡಿಗ್ರಿ ಓರೆಯಿರುವ ರಕ್ಷಣಾ ಗೋಡೆಯನ್ನು ಕಟ್ಟಿದರು. ಇದು ಹರಪ್ಪ ನೆಲೆಯ ಕೋಟೆ ಪ್ರದೇಶದ (citadel complex) ಸಂಕೀರ್ಣವೆನಿಸಿತು. ಬೇರೆ ಬೇರೆಯಾಗಿ ಆದರೆ ಸಮಾನವಾಗಿ ಯೋಜಿಸಿರುವ ಎರಡು ವಜ್ರಮುಖಗಳಂಥ ಕಟ್ಟಡಗಳು (rhombs) ೩ ರಿಂದ ೭ ಮೀ. ಅಗಲವಿರುವ ಕೋಟೆ ಗೋಡೆಗಳಿಂದ ಸುತ್ತುವರಿಯಲ್ಪಟ್ಟಿವೆ. ಈ ಗೋಡೆಗಳಲ್ಲಿಯ ಎಲ್ಲ ಪಾರ್ಶ್ವಗಳಿಂದಲೂ ಪ್ರವೇಶಗಳಿರುವುದು ಕಂಡುಬಂದಿದೆ.

ಕೋಟೆಯ ನಿರ್ಮಾಣದ ಕೊನೆಯ ಹಂತಕ್ಕೆ ಸೇರಿದ ಸುಟ್ಟ ಇಟ್ಟಿಗೆಯ ಪ್ರವೇಶದ್ವಾರವನ್ನು ಮಧ್ಯದಲ್ಲಿಯ ಹೊರಚಾಚಿನ ಭಾಗ ಮತು ಗೋಡೆಯ ನೈರುತ್ಯ ತುದಿಯ ನಡುವೆ ಗುರುತಿಸಲಾಗಿದೆ. ಈ ಪ್ರವೇಶದ್ವಾರಕ್ಕೆ ಮೆಟ್ಟಿಲುಗಳಿರುವ ಮುಂಬಾಗವಿದ್ದು, ಒಳಗಿನ ವೇದಿಕೆಗಳನ್ನು ಹತ್ತಾರು ಇಳಿವೋರೆಗಳಿವೆ.

ಕೆಳನಗರವೆನಿಸಿದ್ದ ದೊಡ್ಡ ದಿಬ್ಬದಲ್ಲಿಯ ಹರಪ್ಪ ನೆಲೆಯೊಳಗೆ ಕಟ್ಟಡದ ೯ ಹಂತಗಳನ್ನು ಗುರುತಿಸಲಾಗಿದೆ. ಇದರ ಸುತ್ತಲೂ ಕೋಟೆಯಿತ್ತೆಂದು ಊಹಿಸಲಾಗಿದೆಯಾದರೂ, ವೇದಿಕೆಗಳೇನು ಕಾಣುತ್ತಿಲ್ಲ. ಹರಪ್ಪ ಮೊಹೆಂಜೋದಾರೊ ಹಾಗೂ ಲೋಥಲ್‌ಗಳಿಗಿಂತ ಅತಿ ಚಿಕ್ಕದಾಗಿದ್ದರೂ, ಕಾಲಿಬಂಗಾನ್ ಕೂಡ ವ್ಯವಸ್ಥಿತ ರೀತಿಯಲ್ಲಿ ಯೋಜಿಸಿದ ಪಟ್ಟಣವೆ. ಇದು ದೀರ್ಘ ಚತುರಪ್ರಾಕಾರದ ವಿಭಾಗ (oblong blocks) ಗಳಲ್ಲಿ ಕಟ್ಟಿದ ಮನೆಗಳು ಪ್ರಧಾನ ದಿಕ್ಕುಗಳಲ್ಲಿಯ ಹಾಗೂ ಶಾಖೆಗಳನ್ನೊಳಗೊಂಡ ಮುಖ್ಯ ರಸ್ತೆಗಳ ಇಕ್ಕೆಲಗಳನ್ನು ಹೊಂದಿದ್ದವು. ಇದುವರೆಗೂ, ಅಂಥ ಎರಡು ರಸ್ತೆಗಳನ್ನು ಗುರುತಿಸಲಾಗಿದ್ದು, ಒಂದು ೭ ಮೀ. ಮತ್ತೊಂದು ೩.೨೫ ಮೀ. ಅಗಲವಾಗಿವೆ. ಅಡ್ಡ ಓಣಿಗಳ ಅಗಲ ಇನ್ನೂ ಕಡಿಮೆ ಬೀದಿ ಚರಂಡಿಗಳು ಕಾಣದಿರುವುದರಿಂದ ಇತರ ಹರಪ್ಪ ನಗರ ಹಾಗೂ ಪಟ್ಟಣಗಳಲ್ಲಿನಂತೆ ಹೆಚ್ಚು ಕಟ್ಟುನಿಟ್ಟಾದ ನಿರ್ಮಲೀಕರಣದ ಬಗ್ಗೆ ಆಸ್ಥೆ ವಹಿಸಿದಂತಿಲ್ಲ. ಕೆಲವು ಮನೆಗಳಲ್ಲೇನೋ ಸ್ನಾನದ ಕೋಣೆ, ಕೊಳಚೆ ಜಾಡಿಗಳು ಹಾಗೂ ಬಚ್ಚಲುಗಳು ಕಂಡುಬಂದಿವೆ. ಅಲಂಕರಣೆಯ ಬಿಲ್ಲೆಗಳನ್ನು  (decorated tiles) ಜೋಡಿಸಿ, ನೆಲೆಗಟ್ಟು ಮಾಡಿರುವ ಒಂದು ನಿದರ್ಶನವೂ ಉಂಟು, ಸುಟ್ಟ ಇಟ್ಟಿಗೆ ಬದಲು ‘V’ ಆಕಾರದ ಮರವನ್ನು ಚರಂಡಿಗಳಲ್ಲಿ ಬಳಸಲಾಗಿದೆ. ಅಲ್ಲದೆ, ಅಂತ್ಯ ಕಾಲದ ಸ್ತರಗಳಲ್ಲಿ ಬೀದಿ ಚರಂಡಿಗಳೂ ಕಂಡುಬರುವುದಿಲ್ಲ. ಇದು ಪೌರ ಜೀವನದ ಮಟ್ಟ ಅಧೋಗತ್ತಿಯತ್ತ ಸಾಗಿದ್ದಕ್ಕೆ ಸೂಚನೆ, ತ್ರಿವಿಭಕ್ತ ವಿನ್ಯಾಸದಲ್ಲಿರುವ (triparate plan) ಒಂದು ದೊಡ್ಡ ಕಟ್ಟಡವನ್ನು ಹಸಿ ಇಟ್ಟಿಗೆಯಿಂದ ನಿರ್ಮಿಸಲಾಗಿದ್ದು, ಇದರ ಉದ್ದೇಶ ಧಾರ್ಮಿಕವೆನ್ನಲಾಗಿದೆ. ಇಲ್ಲಿ ನಾಲ್ಕು ಭಾಗಗಳಲ್ಲಿಯೂ ಸಮಾನ ರೂಪದ ಕೊಠಡಿ ಹಾಗೂ ಅಂಕಣಗಳಿವೆ. ಚೌಕಾಕಾರದ ಮಧ್ಯದ ಕೋಣೆಯೂ ಇದೆ. ಹರಪ್ಪಾ ಕಾಲದ ಪಟ್ಟಣದೊಳಗೆ ಹೊರಗಿನಿಂದ ಹಾದುಹೋಗಿದ್ದ ಮಾರ್ಗದಲ್ಲಿ ಮನೆಗಳ ೪ ಗುಂಪುಗಳನ್ನು ಗುರುತಿಸಲಾಗಿದೆ. ಈ ಕಾಲಕ್ಕೆ ಸೇರಿದ ಮನೆಗಳಲ್ಲಿ ಕಂಡುಬರುವ ಗಮನಾರ್ಹ ಅಂಶವೆಂದರೆ ಬಿಸಲಿನಲ್ಲಿ ಒಣಗಿಸಿದ ಇಟ್ಟಿಗೆಗಳಿಂದ ನಿರ್ಮಿತವಾದ ಅಂಡಕಾರದ ಅಥವಾ ಆಯತಾಕಾರದ ಕೊಠಡಿಗಳು. ಇಲ್ಲಿ ಸುಟ್ಟ ಜೇಡಿಯ ಬಿಲ್ಲೆಗಳೂ, ಬೂದಿಯೂ ಸಿಕ್ಕಿವೆ. ಇಟ್ಟಿಗೆಯಿಂದ ಕಟ್ಟಿರುವ  ಆಯತಾಕಾರದ  ಗುಂಡಿಗಳಲ್ಲಿ ದೊರಕಿದ ದನದ ಹಾಗೂ ಜಿಂಕೆಯ ಕವಲ್ಗೊಂಬುಗಳು, ಮೂಳೆಗಳು, ಯಜ್ಞ ಯಾಗಾದಿಗಳನ್ನು ಸೂಚಿಸುತ್ತವೆ. ಕಾಲಿಬಂಗಾನದಲ್ಲಿಯ ಹರಪ್ಪಾ ಜನರು ಸಿಂಧೂ ಕಣಿವೆಯ ಎಲ್ಲಾ ಮಡಕೆ ಮಾದರಿಗಳನ್ನು ಬಳಸುತ್ತಿದ್ದರು. ಹೊಸದಾಗಿ ಸೇರಿಸಿದ ಒಂದೇ ಒಂದು ಮಾದರಿಯೆಂದರೆ ಎರಡು ಕುಣಿಕೆಯ ಹಿಡಿಗಳುಳ್ಳ (loop- handles) ಸಣ್ಣದೊಂದು ಬಟ್ಟಲು. ೨ನೆಯ (period -II) ಕಾಲದಲ್ಲಿಯ ನಿವಾಸಿಗಳ ಇನ್ನಿತರ ಸರಕು ಸರಂಜಾಮುಗಳಲ್ಲಿ, ಮೇದಶಿಲೆಯ ಹಾಗೂ ಅಗೇಟ್ ಮುದ್ರೆಗಳು, ಫೆನಾ ಆಕೃತಿಯಲ್ಲಿ ಕಲ್ಲಿನ ತೂಕದ ಬಟ್ಟುಗಳು, ತಾಮ್ರದ ಕೊಡಲಿಗಳು, ಮೀನು ಹಿಡಿಯುವ ಕೊಕ್ಕೆಗಳು ಹಾಗೂ ಚರ್ಟ್ ಕಲ್ಲಿನ ಉದ್ದಾವಾದ ಅಲಗುಗಳೂ ಸೇರಿವೆ. ಆಯತಾಕಾರದ  ಮೇದಶಿಲೆಯ ಮುದ್ರೆಯೊಂದರಲ್ಲಿ ಮರದ ಮೇಲಿರುವ ಮಾನವನನ್ನು ಹಿಂತಿರುಗಿ ನೋಡುತ್ತಿರುವ ದೊಡ್ದದೊಂದು ಹುಲಿಯ ಚಿತ್ರವಿದೆ. ಅಂತ್ಯಕಾಲದ ಸ್ತರಗಳಲ್ಲಿ ಸಿಕ್ಕಿದ ಮೇಧಶಿಲೆಯ ಕೊಳವೆಯಾಕಾರದ ಮುದ್ರೆಯೊಂದರಲ್ಲಿ, ಹಲವು ಮನುಷ್ಯರಿಂದ ಸುತ್ತುವರೆಯಲ್ಪಟ್ಟಿರುವ ಅರ್ಧ ಮಾನವ ಅರ್ಧ ಪ್ರಾಣಿಯ ಚಿತ್ರವಿದೆ.

ಅಲಂಗೀರಪುರ ಮತ್ತು ಪೂರ್ವದ ಇತರ ನಿವೇಶನಗಳು

ರೂಪರನಿಂದ ಪೂರ್ವಕ್ಕೆ ಹಾಗೂ ಯಮುನೆಯ ಉಪನದಿಯಾದ ಹಿಂದೋನ್ ನದಿಯ ಎಡದಂಡೆಯಿಂದ ೩.೯೧ಕಿ. ಮೀ. ದೂರದಲ್ಲಿರುವ ಅಲಂಗೀರಪುರದಲ್ಲಿ ಸಣ್ಣದೊಂದು ಹರಪ್ಪಾ ನೆಲೆಯನ್ನು ಗುರುತಿಸಲಾಗಿದೆ. ಇಲ್ಲಿಯ ದಿಬ್ಬ, ಮೀರತ್‌ನಿಂದ ಪಶ್ಚಮಕ್ಕೆ ೨೭.೩೫ ಕಿ. ಮೀ. ಹಾಗೂ ದೆಹಲಿಯಿಂದ ಸುಮಾರು ೫೦ ಕಿ.ಮೀ. ದೂರದಲ್ಲಿದೆ. ಶರ್ಮಾ ಅವರು ಇಲ್ಲಿ ೧೯೫೮-೫೯ರಲ್ಲಿ ನಡೆಸಿದ ಉತ್ಖನನದಿಂದ ನಾಲ್ಕು ಸಾಂಸ್ಕೃತಿಕ ಕಾಲಗಳು ಬೆಳಕಿಗೆ ಬಂದವು. ಅವುಗಳ ಪೈಕಿ, ಹರಪ್ಪಾದ ಕಾಲವೇ ಅತ್ಯಂತ ಹಿಂದಿನದು. ಇಲ್ಲಿನ ಮಡಕೆಗಳಿಂದ ನಮಗೆ ಸಿಗುವ ಚಿತ್ರ ಸಿಂಧೂ ನಾಗರೀಕತೆಯ ಅವನತಿಯನ್ನು ತೋರಿಸುವಂಥದು. ಸಿಂಧೂಶೈಲಿಯಲ್ಲಿ ಹೊರಮೈಮೇಲೆ ಚಿತ್ರಿಸಿರುವ ‘S’ ಆಕಾರದ ಪಾತ್ರೆಗಳು ಸಂಪೂರ್ಣವಾಗಿ ಇಲ್ಲವಾಗಿವೆ. ಕೊಕ್ಕುಳ ಪಾತ್ರೆ ಮತ್ತು ರಂಧ್ರವುಳ್ಳ ಜಾಡಿಗಳು ವಿರಳವಾಗಿವೆ. ಹೀಗೆ ಹರಪ್ಪಾ ಸಂಸ್ಕೃತಿಯ ಪ್ರೌಢಾವಸ್ಥೆಯ ಲಕ್ಷಣಗಳು ಇಲ್ಲಿ ಕಾಣದಿರುವುದು ಸಂಪ್ರದಾಯದಲ್ಲಾದ ಬದಲಾವಣೆಗಳ ಸ್ಪಷ್ಟ ಸೂಚನೆ.

ನಗರ ಯೋಜನೆ ಮತ್ತು ಆಡಳಿತ

ಸಿಂಧೂ ನಾಗರೀಕತೆಯ ಬಹುಮುಖ್ಯ ಗುಣಲಕ್ಷಣವೆಂದರೆ ಆದರ ನಗರ ಯೋಜನೆ ಮತ್ತು ಬಹಳ ಯೋಜಿತವಾಗಿ ನಿರ್ಮಿತವಾಗಿರುವ ಮನೆಗಳ ಸಾಲು ಹಾಗೂ ಪಟ್ಟಣವನ್ನು ಚೌಕಟ್ಟಾದ ವಿನ್ಯಾಸದಲ್ಲಿ ಹಲವು ಭಾಗಗಳಾಗಿ ವಿಂಗಡಿಸಿರುವುದು. ನಗರಗಳನ್ನು ಮೇಲ್ ನಗರ ಮತ್ತು ಕೆಳನಗರಗಳೆಂದು ವಿಭಜಿಸಿರುವುದಲ್ಲದೆ ಮೇಲ್ ನಗರ ಕೋಟೆಗಳಿಂದ ಅವೃತಗೊಂಡಿದೆ. ಕೆಳ ನಗರಗಳಲ್ಲಿ ಕೆಲವು ಕೋಟೆಗಳಿವೆ. ಧೋಲವೀರದಲ್ಲಿ ಮೇಲ್ ನಗರ, ಮಧ್ಯನಗರ ಮತ್ತು ಕೆಳ ನಗರಗಗಳೆಂಬ ಮೂರು ಭಾಗಗಳಿವೆ. ನಗರ ಯೋಜನೆಯಲ್ಲಿ ನೇರವಾದ ಹಾಗೂ ವಿಶಾಲ ರಸ್ತೆಗಳು ಹಾಗೂ ಒಳಚರಂಡಿ ವ್ಯವಸ್ಥೆ ಗಮನಾರ್ಹವಾದವು. ನಗರ ಯೋಜನೆಯಲ್ಲಿ ಕೈಗಾರಿಕಾ ಹಾಗೂ ವಾಸದ ಪ್ರದೇಶಗಳಿಂದ ಸ್ಮಶಾನಗಳನ್ನು ಬೇರ್ಪಡಿಸಲಾಗಿದೆ. ಹರಪ್ಪ ಮತ್ತು ಮೊಹೆಂಜೋದಾರೋ ಪಟ್ಟಣಗಳು ನೂರಾರು ಕಿ. ಮೀ. ದೂರದಲ್ಲಿದ್ದರೂ ಅವೆರಡೂ ನಗರ ಯೋಜನೆಗಳು ಒಂದೇ ರೀತಿ ಇವೆ. ರಸ್ತೆಯ ಎರಡು ಕಡೆಗಳಲ್ಲೂ ಸಾಲಾಗಿ ಮನೆಗಳನ್ನು ಕಟ್ಟಲಾಗಿದೆ. ಒಂದು ಮನೆಯಾದರೂ ಸಾಲಿನಿಂದ ರಸ್ತೆಯಂಚಿನತ್ತ ನಿರ್ಮಿಸಿಲ್ಲ. ಈ ನಗರ ಯೋಜನೆಗೆ ಬನಾವಳಿ ಹೊರತಾಗಿದೆ.

ನಗರ ಪ್ರವೇಶ ದ್ವಾರಗಳು

ಸಿಂಧೂ ನಾಗರೀಕತೆಯ ಹೆಚ್ಚಿನ ಪಟ್ಟಣಗಳು ಕೋಟೆ- ಗೋಡೆಗಳಿಂದಾವೃತವಾಗಿ ಪ್ರವೇಶ ದ್ವಾರಗಳನ್ನು ಹೊಂದಿವೆ. ಪ್ರವೇಶ ದ್ವಾರಗಳು ಕೋಟೆಯ ರಕ್ಷಣಾ ಬಾಗಿಲುಗಳಂತಿರದೆ ಕೇವಲ ಪ್ರವೇಶ ದ್ವಾರಗಳಾಗಿದ್ದವು. ಕೆಲವು ಪಟ್ಟಣಗಳ ಪ್ರವೇಶ ದ್ವಾರಗಳ ಬಳಿ ಕಾವಲುಗಾರರ ಕೊಠಡಿಗಳಿವೆ. ಪ್ರವೇಶ ದ್ವಾರಗಳ ಮೇಲೆ ಪಹರೆ ಕೋಣೆಗಳಿದ್ದು ಅಲ್ಲಿಂದ ವೀಕ್ಷಿಸಲಾಗುತ್ತಿತ್ತು. ಈ ಪ್ರವೇಶ ದ್ವಾರಗಳು ವಿದೇಶೀ ಆಕ್ರಮಣಗಳನ್ನು ತಡೆಗಟ್ಟುವ ಉದ್ದೇಶಕ್ಕಿಂತ ಡಕಾಯಿತರು ಮತ್ತು ಪಶು ಕಳ್ಳರನ್ನು ತಡೆಗಟ್ಟುವುದಕ್ಕೂ ಹಾಗೂ ನಗರವನ್ನು ನದಿ ಪ್ರವಾಹದಿಂದ ರಕ್ಷಿಸುವುದಕ್ಕಾಗಿತ್ತು. ಒಳಚರಂಡಿ ರಸ್ತೆಯ ಇಬ್ಬದಿಯಲ್ಲಿನ ಪ್ರತಿಯೊಂದು ಮನೆಗಳಿಗೂ ಚರಂಡಿಗಳಿದ್ದು ಅವು ೧ರಿಂದ ೨ಅಡಿ ಆಳವಿದ್ದು ಮುಖ್ಯ ಚರಂಡಿಗೆ ಸಂಪರ್ಕ ಹೊಂದಿದ್ದವು. ಮುಖ್ಯಚರಂಡಿಯು ಎರಡೂವರೆಯಿಂದ ಐದು ಅಡಿ ಆಳವಾಗಿದ್ದು ನದಿಯಲ್ಲಿ ಕೊನೆಗೊಳ್ಳುತ್ತಿತ್ತು. ಎಲ್ಲ ಚರಂಡಿಗಳ ಮೇಲ್ಭಾಗವನ್ನು ಕಟ್ಟಿಗೆ ಮತ್ತು ಕಲ್ಲುಗಳಿಂದ ಮುಚ್ಚಲಾಗಿತ್ತು. ಚರಂಡಿಯನ್ನು  ಶುಚಿಯಾಗಿಡಲು ಹಾಗೂ ದುರಸ್ತಿಮಾಡಲು ಅಧುನಿಕ ಮ್ಯಾನ್ ಹೋಲ್ ಗಳಂಥ ರಂಧ್ರಗಳನ್ನು ವ್ಯವಸ್ಥಿತವಾಗಿ ಹಾಗೂ ಭದ್ರವಾಗಿ ನಿರ್ಮಿಸಲಾಗಿದೆ. ಒಳಚರಂಡಿ ವ್ಯವಸ್ಥೆಯು “ಪ್ರಾಚೀನ ಜಗತ್ತಿನ ಒಂದು ವಿಸ್ಮಯ” ಎಂದು ಪಿಗಟ್ ವರ್ಣಿಸಿರುವುದು ನ್ಯಾಯಯುತವಾಗಿದೆ. ಚರಂಡಿಗಳ ನಿರ್ಮಾಣದಲ್ಲಿ ಸುಣ್ಣ ಮತ್ತು ಜಿಪ್ಸಂಗಳನ್ನು ಅಧಿಕ ಶಕ್ತಿಕೊಡುವುದಕ್ಕಾಗಿ ಬಳಸಿದ್ದಾರೆ. ಕೆಲವು ಕಡೆ ಚರಂಡಿಗಳು ಬಾವಿಯ ಸಮೀಪದಲ್ಲಿರುವುದರಿಂದ ಬಾವಿಯ ನೀರು ಚರಂಡಿಗಳ ನೀರಿನಲ್ಲಿ ಕೆಡುವ ಸಂಭವವಿತ್ತು. ಇದೊಂದೇ ಈ ನಗರಗಳಲ್ಲಿ ಕಂಡುಬರುವ ನ್ಯೂನತೆಯಾಗಿದೆ.   

ನಗರ ರಸ್ತೆಗಳು

ಸಿಂಧೂ ನಗರಗಳ ವೈಶಿಷ್ಟ್ಯವೇ ನೇರವಾದ ವಿಶಾಲವಾದ ಹಾಗೂ ಉದ್ದವಾದ ರಸ್ತೆಗಳೇ ಆಗಿವೆ. ಮೊಹೆಂಜೊದಾರೋ ನಿವೇಶನವನ್ನು ಅಧ್ಯಯನ ಮಾಡಿದಾಗ ಅದು ಪೂರ್ವಯೋಜಿತ ನಿರ್ಮಾಣವೆಂದು ನಿಖರವಾಗಿ ಹೇಳಬಹುದು. ಮೊಹೆಂಜೊದಾರೋದ ಮುಖ್ಯ ರಸ್ತೆಯು ೩೨ ಅಡಿ ಅಗಲವಿದೆ. ಅಂದರೆ ಒಮ್ಮೆಗೆ ಏಳು ಬಂಡಿಗಳು ಎದುರುಬದಿರಾಗಿ ಚಲಿಸುವಷ್ಟು ವಿಶಾಲವಾಗಿದೆ. ಬೇರೆ ರಸ್ತೆಗಳು ೧೧ರಿಂದ ೧೨ ಅಡಿ ಅಗಲವಾಗಿವೆ. ಲೋಥಲ್ ನಲ್ಲಿನ ಇತ್ತೀಚಿನ ಸಂಶೋಧನೆಯು ೩೮ ರಿಂದ ೩೯ ಅಡಿ ಅಗಲವಾದ  ಹೆದ್ದಾರಿ ಇದ್ದುದನ್ನು ತಿಳಿಸಿದೆ. ಮುಖ್ಯ ಬೀದಿಯು ಮುರಿದ ಇಟ್ಟಿಗೆ ಮತ್ತು ಮಡಿಕೆ ಚೂರುಗಳಿಂದ ಸಿದ್ಧಗೊಂಡಿದೆ. ಈ ಮುಖ್ಯ ಬೀದಿಯ ಒಂದೂ ಮುಕ್ಕಾಲು ಮೈಲಿ ಉದ್ದವಿದೆ. ಎಂದು ಅಂದಾಜಿಸಲಾಗಿದೆ. ಮುಖ್ಯ ಮಾರ್ಗಗಳು ಹಾಗೂ ಓಣಿಗಳು ನೇರವಾಗಿದ್ದು ಮೆಸಪೊಟೋಮಿಯಾದಲ್ಲಿಯ ಕೆಲವು ನಗಾರಗಳಲ್ಲಿರುವಂತೆ ತಿರುಚು ಮುರುಚಾಗಿ ಅಥವಾ ವಂಕಿ ವಂಕಿಯಾಗಿ ಹೋಗದಿರುವುದೇ ಇಲ್ಲಿನ ರಸ್ತೆಗಳ  ವೈಶಿಷ್ಟ್ಯವಾಗಿದೆ. ಎಲ್ಲ ಮನೆ ಸಾಲುಗಳೂ ಮುಖ್ಯ ರಸ್ತೆ ಅಥವಾ ಓಣಿಯ ಕಡೆಗೆ ತಿರುಗಿದ್ದು ತಿರುವು ವಿಶಾಲವಾಗಿದೆ. ಅಲ್ಲೆಲ್ಲ ವಿಶಾಲವಾದ ಗಾಡಿಗಳು ಸುಲಭವಾಗಿ ತಿರುಗಲು ಅವಕಾಶ ಮಾಡಿಕೊಟ್ಟಿವೆ. ಪ್ರತಿ ರಸ್ತೆಯಲ್ಲೂ ಸಾರ್ವಜನಿಕ ಬಾವಿಯಿದ್ದಿತು.

ಕೋಟೆ ಗೋಡೆಗಳು

ಸಿಂಧೂ  ನಾಗರಿಕತೆಯ ನಗರಗಳು ಕೋಟೆಗಳಿಂದ ಅವೃತವಾಗಿವೆ. ನಗರಗಳಾದ ಮೊಹೆಂಜೊದಾರೋ, ಹರಪ್ಪ ಮತ್ತು ಕಾಲಿಬಂಗನ್‌ಗಳು ಎರಡು ಬಡಾವಣೆಗಳಲ್ಲಿ ನಿರ್ಮಾಣವಾಗಿದೆ. ಅಲ್ಲೆಲ್ಲ ಒಂದೊಂದು ಬಡಾವಣೆಯು ಕೋಟೆ ಗೋಡೆಯನ್ನು ಹೊಂದಿದೆ. ಆದರೆ ದೊಲವೀರ ನಗರವು ಮೂರು ಬಡಾವಣೆ ಹೊಂದಿವೆ. ಅಲ್ಲಿ ಮೇಲ್ವರ್ಗದ ಜನರ ಎರಡು ಬಡಾವಣೆಗಳಿಗೆ ಮಾತ್ರ ಕೋಟೆಯಿರುವುದು ಕಂಡು ಬರುತ್ತದೆ. ಕಾರ್ಮಿಕರ ಮೂರನೆಯ ಬಡಾವಣೆಗೆ ಕೋಟೆಯಿಲ್ಲದಿರುವುದನ್ನು ಗಮನಿಸಬಹುದು. ೧೮೮೬ರಲ್ಲಿ ಕನ್ನಿಂಗ್ ಹ್ಯಾಮ್ ರವರು ಪ್ರವಾಹದ ಬಯಲಿನಿಂದ ಕೋಟೆ ಪ್ರದೇಶವನ್ನು ತಲುಪಲು ಮೆಟ್ಟಿಲುಗಳ ವ್ಯವಸ್ಥೆಯಿತ್ತೆಂದು ತಿಳಿಸಿದ್ದಾರೆ. ಆದರೆ ಅವು ಈಗ ಕಾಣೆಯಾಗಿವೆ ಎಂಬುದು ಗಮನಾರ್ಹವಾದ ವಿಚಾರ, ಕೋಟೆ ಪ್ರದೆಶಗಳಲ್ಲಿ ಕಂಡುಬರುವ ದಂಡಿನ ಪಾಳೆಯದಂತಿರುವ ಜೋಡಿ ಸಾಲು ಮನೆಗಳು ವೃತ್ತಾಕಾರವಾಗಿ ಕಟ್ಟಿರುವ ಕಾರ್ಯಸ್ಥಾನಗಳೆನಿಸುವ ಐದು ಸಾಲು ವೇದಿಕೆಗಳು ಹಾಗೂ ಕಲ್ಲಿನ ವೇದಿಕೆಯ ಮೇಲೆ ನಿರ್ಮಿತವಾಗಿರುವ ಜೋಡಿ ಸಾಲಿನ ಕಣಜಗಳನ್ನು ವ್ಹೀಲರ್ ರವರು ಸೈನ್ಯಾವಾಸದ ಯೋಜನೆಯ ನಿದರ್ಶನವೆಂದು ಆಭಿಪ್ರಾಯ ಪಟ್ಟಿದ್ದಾರೆ.

ಇಟ್ಟಿಗೆಗಳು

ಸಿಂಧೂ  ನಾಗರಿಕತೆಯ  ಜನರು ಸ್ನಾನದ ಕೋಣೆ, ಚರಂಡಿ ಕಟ್ಟುವುದಕ್ಕೆ ಕೋಟೆ ಒಳಗಿನ ಕೆಲವು ಪ್ರಮುಖ ಮನೆಗಳು ಹಾಗೂ ಕಟ್ಟಡಗಳನ್ನು ಕಟ್ಟುವುದಕ್ಕೆ ಸುಟ್ಟ ಇಟ್ಟಿಗೆಗಳನ್ನು ಬಳಸಿದ್ದಾರೆ. ಮಿಕ್ಕ ಸಾಮಾನ್ಯ ಕಟ್ಟಡಗಳನ್ನು ಬಿಸಿಲಿನಲ್ಲಿ ಒಣಗಿದ ಇಟ್ಟಿಗೆಗಳಿಂದ ನಿರ್ಮಿಸಿದ್ದಾರೆ. ಇಟ್ಟಿಗೆಗಳು ೨೬ x ೧೨.೫ x ೫.೫ ಸೆಂ.ಮೀ ನಿರ್ದಿಷ್ಟ ಆಕಾರ ಹಾಗೂ ಅಳತೆ ಹೊಂದಿವೆ, ನದಿ ಬಯಲಿನಲ್ಲಿ ಸಿಗುವ ಮೆಕ್ಕಲು ಮಣ್ಣಿನಿಂದ ಇಟ್ಟಿಗೆ ನಿರ್ಮಿಸುತ್ತಿದ್ದರು. ಚರಂಡಿ ನಿರ್ಮಾಣಕ್ಕೆ ೫೧ ಸೆಂ.ಮೀ ಗಿಂತ ಉದ್ದವಾದ ಇಟ್ಟಿಗೆಗಳನ್ನು ಉಪಯೋಗಿಸಲಾಗಿದೆ. ಲೋಥಲ್ ನಲ್ಲಿ ಪ್ರಮಾಣಿಭೂತವಾದ ಎರಡು ಬಗೆಯ ಸುಟ್ಟ ಇಟ್ಟಿಗೆಗಳು ಕಂಡುಬರುತ್ತವೆ. ಅವುಗಳೆಂದರೆ : ೧.೨೮ x ೧೪ x ೬.೫ ಸೆಂ.ಮೀ. ೨.೨೫ x ೧೨.೫ x ೬ ಸೆಂ.ಮೀ. ಕಟ್ಟಡದ ಮೂಲೆಯ ಭಾಗವನ್ನು ‘L’ ಆಕಾರದ  ಇಟ್ಟಿಗೆಗಳಿಂದ ನಿರ್ಮಿಸಿದ್ದಾರೆ. ಮೊಹೆಂಜೊದಾರೊದಲ್ಲಿ ಇಟ್ಟಿಗೆಗಳನ್ನು ಸುಡುವ ಇಟ್ಟಿಗೆ ಆವಿಗೆಗಳು ಕಂಡುಬಂದಿವೆ. ಆದ್ದರಿಂದ. ಮೊಹೆಂಜೊದಾರೊ ನಗರವು ಇಟ್ಟಿಗೆ ನಿರ್ಮಾಣದ ಪ್ರಮುಖ ಕೇಂದ್ರವಾಗಿತ್ತೆಂದು ನಾವು ತಿಳಿಯಬಹುದು. ಇಟ್ಟಿಗೆಗಳ ಬಣ್ಣ ಹುಲ್ಲಿನ ಬಣ್ಣದಿಂದ ಹಿಡಿದು ಹೊಳೆಯುವ ಕೆಂಪು ಬಣ್ಣದಂತೆ ಇದ್ದವು.

ಕಟ್ಟಡಗಳು

ಇಲ್ಲಿನ ಕಟ್ಟಡಗಳು ಯೋಜಿತ ರೀತಿಯಲ್ಲಿ ಉತ್ತಮ ವಸ್ತುಗಳಿಂದ ನಿರ್ಮಾಣವಾಗಿವೆ. ವಾಸದ ಮನೆಗಳು ಅನೇಕವಿದ್ದು  ವಿಶಾಲತೆಯಲ್ಲಿ ಅಂತರವಿದೆ. ಎರಡು ಕೊಠಡಿಗಳುಳ್ಳ ಸಣ್ಣ ಕಟ್ಟಡದಿಂದ ಹಿಡಿದು ಮನೆಯ ಹೊರಮುಖ ೨೬ ಮೀ. ಉದ್ದ ೨೯.೫ ಮೀ. ಎತ್ತರ ಮತ್ತು ಹೊರ ಪಾರ್ಶ್ವದ ಗೋಡೆಗಳ ದಪ್ಪ ೧.೨೫ರಿಂದ ೧.೫ಮೀ. ಕಟ್ಟಡ ಹೊಂದಿರುವ ಅರಮನೆಯಂತಹ ಕಟ್ಟಡಗಳು ಇಲ್ಲಿವೆ. ಕಟ್ಟಡಗಳನ್ನು ಚೆನ್ನಾಗಿ ಸುಟ್ಟ ಮತ್ತು ಉತ್ತಮ ದರ್ಜೆಯ ಇಟ್ಟಿಗೆಗಳಿಂದ ಕಟ್ಟಲಾಗಿದೆ. ಕೆಲವು ಕಡೆ ೫೧.೫ ಸೆಂ. ಮೀ. ಉದ್ದ, ೨೬.೫ಸೆಂ. ಮೀ. ಅಗಲ ಮತ್ತು ೯ ಸೆಂ. ಮೀ. ದಪ್ಪವುಳ್ಳ ಬಾರೀ ಇಟ್ಟಿಗೆಗಳಿಂದ ಕಟ್ಟಡಗಳನ್ನು ಕಟ್ಟಲಾಗಿದೆ. ಈಗ ‘ಇಂಗ್ಲಿಷ್ ಬಾಂಡ್ ‘ ಎಂದು ಕರೆಯಲಾಗುತ್ತಿರುವ ವಿಧಾನವನ್ನು ಅಂದಿನ ಸಿಂಧೂ  ನಾಗರಿಕತೆಯ  ಕಟ್ಟಡ ಕಟ್ಟುವವರು ಆಗಲೇ ಅನುಸರಿಸುತ್ತಿದ್ದರು. ಮಣ್ಣಿನ ಕೆಸರು ಮತ್ತು ಜಲ್ಲಿಯನ್ನು ಸಿಮೆಂಟ್ ರೀತಿ ಉಪಯೋಗಿಸುತ್ತಿದ್ದರು. ಚರಂಡಿ ನಿರ್ಮಾಣದಲ್ಲಿ ಸುಣ್ಣ ಮತ್ತು ಜಿಪ್ಸಂ ಬಳಸುತ್ತಿದ್ದರು. ಕಟ್ಟಡಗಳಲ್ಲಿ ನೀರಿನ ಸೋರುವಿಕೆಯನ್ನು ತಡೆಯಲು ಬಿಟುಮೆನ್‌ನ್ನು (bitume ಗಚ್ಚಾಗಿ ಉಪಯೋಗಿಸಲಾಗುವ ಕಪ್ಪು ಬಣ್ಣದ ಒಂದು ಖನಿಜ) ಬಳಸುತ್ತಿದ್ದರು. ಇಟ್ಟಿಗೆ ಗೋಡೆಗಳನ್ನು ಕಟ್ಟುವಾಗ ಮಧ್ಯದಲ್ಲಿ ಜೇಡಿ ಮತ್ತು ಸಣ್ಣ ಬಿಡಿಕಲ್ಲುಗಳನ್ನು ಬಳಸಿ ಇಟ್ಟಿಗೆಗಳನ್ನು ಉಳಿತಾಯ ಮಾಡುತ್ತಿದ್ದರು. ದೊಡ್ಡ ಮನೆಗಳು ಎರಡೂ ಅಥವಾ ಹೆಚ್ಚು ಅಂತಸ್ತು ಹೊಂದಿದ್ದು ಮನೆಗಳಿಗೆ ಮೆಟ್ಟಿಲು ವ್ಯವಸ್ಥೆ ಇದ್ದಿತ್ತು. ಕೆಲವು ಮೆಟ್ಟಿಲುಗಳು ಸುಟ್ಟ ಇಟ್ಟಿಗೆಗಳಿಂದ ನಿರ್ಮಾಣಗೊಂಡವು ಸಿಕ್ಕಿವೆ. ಆದರೆ ಹೆಚ್ಚಿನವು ಮರದಿಂದ ನಿರ್ಮಾಣ ಮಾಡಿದವಾಗಿದ್ದು ಇಂದು ನಾಶವಾಗಿವೆ. ಮೆಟ್ಟಿಲುಗಳು ೩೮ಸೆಂ. ಮೀ. ಎತ್ತರ ಮತ್ತು ೧೩ ಸೆಂ. ಮೀ. ಅಗಲವಾದ ಕಡಿದಾದ ಮೆಟ್ಟಿಲುಗಳಾಗಿವೆ. ಮನೆಯ ಚಾವಣಿಯ ಮಳೆಯ ನೀರು ಹರಿದುಹೋಗಲು ಮಣ್ಣಿನಿಂದ ಮಾಡಿದ ಪೈಪು ವ್ಯವಸ್ಥೆ ಇದ್ದದ್ದು ಚಾನ್ಹುದಾರೊ ನಿವೇಶನದಲ್ಲಿ ಕಂಡುಬಂದಿದೆ. ಕಾಲಿಬಂಗನ್ ಒಂದು ಮನೆಯ ಕೆಳಗಿನ ನೆಲವನ್ನು ಅಲಂಕಾರಿಕ ಇಟ್ಟಿಗೆಗಳಿಂದ  ಹೊದಿಸಲಾಗಿದೆ. ಬೇರೆ ಮನೆಗಳಿಗೆ ಹಾಸುಗಲ್ಲನ್ನು ನೆಲಕ್ಕೆ ಹೊದಿಸಲಾಗಿದೆ. ಪ್ರತಿಯೊಂದು ಮನೆಯ ನಡುವೆ ಬೇರ್ಪಡಿಸುವ ಅಂತರ ಒಂದು ಅಡಿಯಷ್ಟು ಮಾತ್ರ. ಮೇಲ್ಛಾವಣಿಯನ್ನು ಜೊಂಡುಹುಲ್ಲಿನ ಚಾಪೆ ಹಾಸಿ ಅದರ ಮೇಲೆ ದಪ್ಪ ಮಣ್ಣಿನ ಲೇಪನ ಮಾಡುತ್ತಿದ್ದರು. ಪ್ರತಿಯೊಂದು ಕಟ್ಟಡವೂ ಬಾವಿ, ಚರಂಡಿ ವ್ಯವಸ್ಥೆ ಹಾಗೂ ಸ್ನಾನ ಗೃಹವನ್ನು ಹೊಂದಿದೆ. ಮನೆಯಲ್ಲಿ ಬಾಗಿಲುಗಳು ಮಧ್ಯದಲ್ಲಿರದೆ ಗೋಡೆಯ ಪಕ್ಕದಲ್ಲಿವೆ. ಹೆಚ್ಚಿನ ಮನೆಗಳು ಕಿಟಕಿ ಹೊಂದಿಲ್ಲದಿರುವುದು ವೈಶಿಷ್ಟ್ಯ ಹಾಗೂ ಕಿಟಕಿಗಳು ರಸ್ತೆಗಳ ಕಡೆ ಮುಖ ಮಾಡಿವೆ.

ಅಡುಗೆ ಮನೆ

ಅಡುಗೆ ಮನೆ ಚಿಕ್ಕದಾಗಿದ್ದು ಉರುವಲುನ್ನು ಎತ್ತರದ ಜಾಗದಲ್ಲಿಡಲು ವೇದಿಕೆ ನಿರ್ಮಿಸಿದ್ದಾರೆ. ರೊಟ್ಟಿ ಸುಡುವ ಗುಂಡಾದ ಒಲೆಗಳು ಕಂಡುಬಂದಿವೆ. ಅಡುಗೆ ಮನೆಯ ಕೊಳೆಯ ನೀರನ್ನು ಹೊರಹಾಕಲು ಮಣ್ಣಿನ ಮಡಕೆಯನ್ನು ಭೂಮಿಯಲ್ಲಿ ಹುಗಿದು, ಅದಕ್ಕೆ ಕೆಳಬಾಗದಲ್ಲಿ ರಂಧ್ರಮಾಡಿ, ಅದರ ಮೂಲಕ ಭೂಮಿಯಲ್ಲಿ ನೀರು ಇಂಗಿಹೋಗುವಂತೆ ಮಾಡಿದ್ದಾರೆ.

ಶೌಚಾಲಯ

ಶೌಚಾಲಯಗಳು ರಸ್ತೆಯ ಭಾಗದಲ್ಲಿದ್ದು ಅಲ್ಲಿಯೇ ಹತ್ತಿರವಿರುವ ರಸ್ತೆಯ ಇಕ್ಕೆಡೆಗಳಲ್ಲಿ ಮುಖ್ಯ ಚರಂಡಿಗೆ ನೀರು ಸುಲಭವಾಗಿ ಹೋಗುವಂತೆ ನಿರ್ಮಿಸಿದ್ದಾರೆ.  ಮೇಲಂತಸ್ತಿನ ಮನೆಗಳ ಶೌಚಾಲಯಗಳಿಂದ ನೀರು ಕೆಳಗಿಳಿದು ಬರಲು ಇಟ್ಟಿಗೆಗಳಿಂದ ಚಿಕ್ಕ ಕಾಲುವೆಗಳನ್ನು ಮಾಡಿದ್ದಾರೆ.

ಬೃಹತ್ ಈಜುಕೊಳ

ಸಿಂಧೂ ಜನರಿಂದ ನಿರ್ಮಿಸಲ್ಪಟ್ಟ ಅತ್ಯಂತ ಸುಂದರ ಕಟ್ಟಡವೆಂದರೆ ಮೊಹೆಂಜೊದಾರೋದ ಕೋಟೆ ಪ್ರದೇಶದಲ್ಲಿ ದೊರೆತಿರುವ ಸಾರ್ವಜನಿಕ ಈಜುಕೊಳ. ಇದು ೫೫ ಮೀಟರ್ ಉದ್ದ ೩೩ ಮೀಟರ್ ಅಗಲವಾದ ಒಂದು ಅಂಗಳದ ಮಧ್ಯದಲ್ಲಿದೆ. ಇದರ ಮಧ್ಯಭಾಗದಲ್ಲಿ ಚಾವಣಿಯಿಲ್ಲದ ಪ್ರಾಂಗಣವಿದ್ದು ಅದರ ಸುತ್ತ ಸೋಪಾನ ಪೀಠಗಳೂ ಮತ್ತು ಮೂರು ಪಾರ್ಶ್ವಗಳಲ್ಲಿ ಕೊಠಡಿಗಳ ಸಾಲಿವೆ. ಈ ಪ್ರಾಂಗಣದ  ಮಧ್ಯಭಾಗದಲ್ಲಿ ೧೧.೮ ಮೀ. ಉತ್ತರ ದಕ್ಷಿಣವಾಗಿ, ಹಾಗೂ ಪೂರ್ವ ಪಶ್ಚಿಮವಾಗಿ ೭.೦೧ಮೀ. ಮತ್ತು ೨.೪೩ ಮೀ. ಆಳವಾದ ಈಜುಕೊಳವಿದೆ. ಈ ಕೊಳಕ್ಕೆ ಎರಡು ಕಡೆಯಿಂದ ಇಳಿಜಾರಾಗಿ ಮೆಟ್ಟಿಲುಗಳಿವೆ. ಕೆಳಗಿನ ಕೊನೆಯ ಮೆಟ್ಟಿಲ ನಂತರ ೩ ಅಡಿ ಅಗಲದ ೧.೫ ಅಡಿ ಎತ್ತರದ ಕಟ್ಟೆ ಇದೆ. ಇದು ಚಿಕ್ಕ ಮಕ್ಕಳು ಸುರಕ್ಷಿತವಾಗಿ ಸ್ನಾನ ಮಾಡಲು ನಿರ್ಮಾಣ ಮಾಡಿದಂತಿದೆ. ಕೊಳಕ್ಕೆ ಪಕ್ಕದಲ್ಲೇ ಇರುವ ಬಾವಿಯಿಂದ ನೀರನ್ನು ಹರಿಸುವ ಮತ್ತು ಕೊಳದ ಮೂಲೆಯ ಚರಂಡಿಯ ಮೂಲಕ ಆಶುದ್ಧ ಕೊಳೆನೀರು ದೊಡ್ಡ ಚರಂಡಿಗೆ ಹೋಗುವಂತೆ ಮಾಡಲಾಗಿದೆ. ಕೊಳದ ಕೆಳಭಾಗವು ಸುಟ್ಟ ಇಟ್ಟಿಗೆಗಳಿಂದ ನಿರ್ಮಿತವಾಗಿದೆ. ಈ ಕೊಳದ ನೀರು ಸೋರಿ ಹೋಗದಂತೆ ಮಾಡಲು ಇಟ್ಟಿಗೆಗಳ ಅಂಚನ್ನು ಜಿಪ್ಸಮ್ ಗಾರೆಯಿಂದ ಸೇರಿಸಿ ಇಲ್ಲಿನ ನೆಲವನ್ನು ಮಾಡಲಾಗಿದೆ. ಇದೇ ಜಪ್ಸಮ್ (gypsum)ಗಾರೆಯನ್ನು ಪಾರ್ಶ್ವದ ಗೋಡೆಗಳಿಗೆ ಬಳಸಲಾಗಿದೆ.ಕೊಳದಲ್ಲಿಯ ಇಟ್ಟಿಗೆ ವರಸೆಗಳ ಮತ್ತು ನಡುವಣ ಸುಟ್ಟ ಇಟ್ಟಿಗೆಯ ಗೋಡೆಗಳ ಮಧ್ಯದಲ್ಲಿ ೨ ಸೆಂ. ಮೀ. ದಪ್ಪದ ಬಿಟುಮೆನ್ (bitumen) ತೇವ ತಡೆ ವರಸೆಯನ್ನು ಹಾಕಲಾಗಿದೆ. ಈ ಮದ್ಯದ ಗೋಡೆಯನ್ನು ಹಸಿ ಇಟ್ಟಿಗೆಗಳಿಂದ ತುಂಬಿ ಅತ್ಯಂತ ಹೊರಗಿನ ಗೋಡೆಗಳನ್ನು ಸುಟ್ಟ ಇಟ್ಟಿಗೆಗಳಿಂದ ಕಟ್ಟಿ ಭದ್ರಪಡಿಸಲಾಗಿದೆ. ಮೊಗಸಾಲೆಯ ಒಂದು ಪುಟ್ಟ ಕೋಣೆಯಲ್ಲಿರುವ ಮೆಟ್ಟಿಲುಗಳನ್ನೇರಿ ಮೇಲಿನ ಅಂತಸ್ತಿಗೆ ಹೋಗಬಹುದು. ಈ ಸ್ನಾನ ಕೊಳದ ಎತ್ತರದಲ್ಲಿಯಂಟು ಒಂದು ಓಣಿಯಲ್ಲಿ. ಚರಂಡಿಯ ಎರಡೂ ಕಡೆಗಳಲ್ಲಿಯೂ ತಲಾ ಒಂದೊಂದರಂತೆ ಎರಡು ಸಾಲುಗಳಲ್ಲಿರುವ ಒಟ್ಟು ೮ ಚಿಕ್ಕ ಸ್ನಾನದ ಕೋಣೆಗಳಿವೆ. ಈ ಕೋಣೆಗಳ ಮಹಡಿಯ ಮೇಲೆ ಹೋಗಲು ಮೆಟ್ಟಿಲಿನ ವ್ಯವಸ್ಥೆ ಇದೆ. ಮ್ಯಾಕೆಯವರು ‘ಪುರೋಹಿತರು ಇಂಥ ಸ್ನಾನದ ಕೋಣೆಗಳಲ್ಲೂ, ಸಾರ್ವಜನಿಕರು ಸ್ನಾನದ ಕೊಳದಲ್ಲೂ ಸ್ನಾನ ಮಾಡುತ್ತಿದ್ದರೆಂದು’ ಆಭಿಪ್ರಾಯಪಟ್ಟಿದ್ದಾರೆ. ಇದನ್ನು ಜಾನ್ ಮಾರ್ಷಲ್ ರವರು ಸಂಶೋಧಿಸಿದರು.

ವಿದ್ಯಾಲಯ ಕಟ್ಟಡ ಮತ್ತು ಆಸೆಂಬ್ಲಿ ಹಾಲ್

ಮೊಹೆಂಜೋದಾರೊದ ದಕ್ಷಿಣ ಭಾಗದಲ್ಲಿ ೬೯ x ೨೩.೫ ಸೆಂ. ಮೀ. ವಿಶಾಲತೆಯ ಕಟ್ಟಡವಿದ್ದು  ಇದು ಇತಿಹಾಸಜ್ಞರು ಗುರುತಿಸಿರುವ ನಗರದ ಪುರೋಹಿತರ ಬಡಾವಣೆಯಲ್ಲಿದೆ. ಈ ಕಟ್ಟಡದ ಮೂರು ಪಾರ್ಶ್ವಗಳಲ್ಲಿ ಮೊಗಸಾಲೆಗಳಿದ್ದು ಇಟ್ಟಿಗೆಯ ನೆಲಗಟ್ಟುಳ್ಳ ಕೋಣೆಗಳ ಸಾಲೂ ಇಲ್ಲಿದೆ. ಈ ಕಟ್ಟಡಕ್ಕೆ ಪೂರ್ವದ ಓಣಿಯಿಂದ ಪ್ರವೇಶಿಸಲು ೫ ಬಾಗಿಲುಗಳು, ದಕ್ಷಿಣ ಮತ್ತು ಪಶ್ಚಿಮ ಬಾಗಗಳಲ್ಲಿ ಒಂದೊಂದು ಬಾಗಿಲುಗಳನ್ನು ಇವೆ. ಮೇಲಿನಂತಸ್ತಿಗೆ ಹೋಗಲು ಮೆಟ್ಟಿಲುಗಳಿವೆ. ಈ ಕಟ್ಟಡದ ರಚನಾ ಕ್ರಮವು ವಿಶೇಷವಾಗಿದ್ದು ಇದನ್ನು ವಿದ್ಯಾಲಯ (ಕಾಲೇಜು) ಕಟ್ಟಡವೆಂದು ಕೆಲವರು ಕರೆದಿದ್ದಾರೆ. ಇನ್ನೂ ಕೆಲವರು  ಪುರೋಹಿತರ ವಸತಿ ಎಂದು ಕರೆದಿದ್ದಾರೆ.

ಮೊಹೆಂಜೋದಾರೊದ  ಕೋಟೆಯ ದಕ್ಷಿಣ ಭಾಗದಲ್ಲಿ ೨೭.೪೪ ಮೀ. ಚದರ ಹಜಾರ ಹೊಂದಿದ ಮತ್ತೊಂದು ದೊಡ್ಡ ಕಟ್ಟಡವು ಕಂಡುಬಂದಿದೆ. ಈ ಬೃಹತ್ ಹಜಾರವು ಪ್ರತಿ ಸಾಲಿನಲ್ಲಿ ೫ ರಂತೆ ನಾಲ್ಕು ಸಾಲುಗಳಲ್ಲಿಯ ೨೦ ಇಟ್ಟಿಗೆ ಕಂಭಗಳ ಆಧಾರದ ಮೇಲೆ ರಚಿತವಾಗಿದ್ದು ಹಜಾರವನ್ನು ೫ ಅಂಕಣಗಳಾಗಿ  ವಿಭಾಗಿಸಿದೆ. ಉತ್ತರದಿಂದ ಮುಖ್ಯ ಪ್ರವೇಶದ್ವಾರ ಹೊಂದಿರುವ ಈ ಹಜಾರವು ಅಸೆಂಬ್ಲಿ ಹಾಲ ಸಭಾಂಗಣ ಆಗಿತ್ತೆಂಬುದರಲ್ಲಿ ಅನುಮಾನವಿಲ್ಲ. ಸರ್ ಜಾನ್ ಮಾರ್ಷಲ್ ರವರು ಇದನ್ನು ಬೌದ್ಧ ವಿಹಾರಗಳಿಗೆ ಹೋಲಿಸಿದರೆ. ಮ್ಯಾಕೆರವರು ಇದನ್ನು ಮಾರುಕಟ್ಟೆಯ ಸ್ಥಳವೆಂದು ಆಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಮೇಲ್ಕಂಡ ಬೃಹತ್ ಕಟ್ಟಡಗಳು ವಾಸದ ಮನೆಗಳಾಗಿರದೆ ಆಡಳಿತ ಕೇಂದ್ರದ  ಕಟ್ಟಡಗಳಾದ್ದವೆಂದು ಹೇಳಬಹುದು.

ಉಗ್ರಾಣಗಳು

ಸಿಂಧೂ ನಾಗರಿಕತೆಯ ನಿವೇಶನಗಳಲ್ಲಿ ದೊರೆತಿರುವ ಬೃಹತ್ ಕಟ್ಟಡಗಳಲ್ಲಿ ಉಗ್ರಾಣಗಳು ಪ್ರಮುಖವಾದವು. ಮೊಹೆಂಜೋದಾರೊದಲ್ಲಿರುವ ಉಗ್ರಾಣವು ೪೫.೭೧ ಮೀ. ಉದ್ದ ಮತ್ತು ೧೫.೨೩ ಮೀ ಅಗಲವಾಗಿದೆ. ಇದು ೨೭ ವಿಭಾಗಗಳಿಂದ ಕೂಡಿದ್ದು ಸರಕಿನ ಚೀಲ ಅಥವಾ ಮೂಟೆಗಳನ್ನು ಸಾಗಿಸಲು ಅನುಕೂಲವಾಗುವಂತಹ ನಡುವಣ ಓಣಿ ಹಾಗೂ ವೇದಿಕೆಗಳನ್ನೊಳಗೊಂಡಿದೆ. ಈ ಉಗ್ರಾಣವನ್ನು ಬೃಹತ್ ಈಜುಕೊಳದ ನಿರ್ಮಾಣಕ್ಕಿಂತಲೂ ಮುಂಚೆಯೇ ಕಟ್ಟಲಾಗಿತ್ತು ಎಂದು ಎಸ್. ಆರ್. ರಾವ್ ಅವರು ಅಭಿಪ್ರಾಯಪಟ್ಟಿದ್ದಾರೆ. ಹರಪ್ಪಾ ನಗರದಲ್ಲಿರುವ ಕಣಜಗಳು ಪ್ರತಿಯೊಂದು ೧೫.೨೪ x ೬.೧೦ ಮೀ. ಅಳತೆಯ ಒಂದೊಂದು ಸಾಲಿನಲ್ಲಿ ೬ ರಂತೆ ೨ ಸಾಲುಗಳಲ್ಲಿ ೧೨ ಉಗ್ರಾಣಗಳ ನೆಲ ಜಾಗವೇ ೮೩೮ ಚ. ಮೀ. ಗಳಾಗಿವೆ. ಈ ಕಣಜಗಳಿಗೆ ಉತ್ತರದಲ್ಲಿರುವ ನದಿಯ ಕಡೆಯಿಂದ ಪ್ರವೇಶವಿರುವುದನ್ನು ನೋಡಿದರೆ ಧಾನ್ಯವನ್ನು ಸಾಗಿಸಲು ದೋಣಿಗಳನ್ನು ಬಳಸುತ್ತಿದ್ದಂತಿದೆ. ಹರಪ್ಪಾ  ಮೊಹೆಂಜೋದಾರೊ  ನಿವೇಶನಗಳಲ್ಲದೆ ಲೋಥರ್. ಕಾಲಿಬಂಗಾನ್ ಮುಂತಾದ ಕಡೆ ಉಗ್ರಾಣಗಳ  ಅವಶೇಷಗಳು ಸಿಕ್ಕಿವೆ. ಉಗ್ರಾಣಗಳ  ಜಾಗದಲ್ಲಿ ಗೋಧಿ ಮತ್ತು ಬಾರ್ಲಿ ಧಾನ್ಯಗಳು ಸಿಕ್ಕಿವೆ.