ಪ್ರಾಚೀನ ಭಾರತದ ಇತಿಹಾಸವು ಕ್ರಿ. ಶ. ೧೯೨೧ರವರೆಗೂ ಆರ್ಯರು ಆರಂಭಿಸಿದ ವೇದಗಳ ಕಾಲದ ನಾಗರಿಕತೆಯಿಂದ ಆರಂಭವಾಗುತ್ತದೆಯೆಂದು ನಂಬಲಾಗಿತ್ತು. ಆದರೆ ೧೯೨೧-೨೨ರಲ್ಲಿನ ಸಂಶೋಧನೆಗಳು ಭೂ ಉತ್ಖನನಗಳು ಅರ್ಯರಿಗಿಂತ ಪೂರ್ವದಲ್ಲಿ ಸಿಂಧೂ ನದಿ ಬಯಲಿನಲ್ಲಿ ನಗರ ಸಂಸ್ಕೃತಿಯೊಂದು ಆಗಿಹೋದದ್ದನ್ನು ಪುರಾವೆಗಳ ಮೂಲಕ ಸಾದರಪಡಿಸಿತು. ಆದ್ದರಿಂದ ಪ್ರಾಚೀನ ಭಾರತದ ಇತಿಹಾಸವು ಇನ್ನೂ ಪೂರ್ವಕ್ಕೆ ಹೋಗಬೇಕಾಯಿತು. ಮೆಸೊಪೊಟೆಮಿಯಾ ಮತ್ತು ಈಜಿಪ್ಟ್‌ ನಾಗರೀಕತೆಗಳ ಸಮಕಾಲೀನದಲ್ಲಿ ಭಾರತದ ಸಿಂಧೂ ನದಿ ಬಯಲಿಯನಲ್ಲಿ ಉಜ್ವಲ ನಾಗರಿಕತೆಯೊಂದು ಬೆಳೆದು ಬಂದು ಕಾಲಾಂತರದಲ್ಲಿ ನಶಿಸಿಹೋಗಿರುವುದು ಬೆಳಕಿಗೆ ಬಂದಿತು.

ಸರ್ ಜಾನ್‌ಮಾರ್ಷಲ್‌, ದಯಾರಾಂ ಸಹನಿ, ಆರ್ ಡಿ. ಬ್ಯಾನರ್ಜಿ, ಇ. ಎಲ್‌. ಮ್ಯಾಕೆ, ಎಂ. ಎಸ್‌. ವಾಟ್ಸ್‌, ಕೆ. ಎನ್‌. ದೀಕ್ಷಿತ್‌, ಮಾರ್ಟಿಮರ್ ವೀಲರ್ ಮುಂತಾದ ಇತಿಹಾಸ ಸಂಶೋಧಕರು ಹರಪ್ಪ ಸಂಸ್ಕೃತಿಯ ಬಗೆಗೆ ಸಂಶೋಧನೆ ನಡೆಸಿ ಅನೇಕ ಸಂಗತಿಗಳನ್ನು ಬಹಿರಂಗ ಪಡಿಸಿದ್ದಾರೆ.

ಉತ್ಖನನಗಳು, ನೆಲೆಗಳು ಮತ್ತು ಕಾಲಮಾನ

ಪ್ರಖ್ಯಾತವಾದ ಸಿಂಧೂ ಬಯಲಿನ ನಾಗರಿಕತೆಯನ್ನೂ ಹರಪ್ಪ ಮತ್ತು ಮೊಹೆಂಜೋದಾರೊಗಳಲ್ಲಿ ಮೊಟ್ಟಮೊದಲಿಗೆ ಪತ್ತೆ ಹಚ್ಚಲಾಯಿತು. ಇದರಿಂದ ಭಾರತದ ಸಂಸ್ಕೃತಿಯ ಪ್ರಾಚೀನತೆ ಕ್ರಿ. ಪೂ. ೨೭೦೦ ವರ್ಷಗಳಿಗೂ ಹಿಂದೆ ಸರಿಯತು. ಇದು ಅತ್ಯಂತ ಮುಂದುವರಿದ ನಾಗರಿಕತೆಯಾಗಿದ್ದು, ಈಜಿಪ್ಟ್‌ ಮತ್ತು ಮೆಸೊಪೊಟೊಮಿಯಾ ನಾಗರಿಕತೆಗಳ ಜೊತೆಯಲ್ಲಿಯೇ ಬಾಳಿದ ಜಗತ್ತಿನ ನಾಲ್ಕು ಪ್ರಾಚೀನ ಹಾಗೂ ಪರಿಪೂರ್ಣ ನಾಗರಿಕತೆಗಳ ಒಂದೊಂದು ಪ್ರಖ್ಯಾತಿಯನ್ನು ಪಡೆದಿದೆ. ಸಮಕಾಲಿನ ನಾಗರೀಕತೆಗಳ ನಗರಗಳಲೆಲ್ಲೂ ಇಲ್ಲದ, ಸುಂದರ ಹಾಗೂ ಸುವ್ಯವಸ್ಥಿತವಾದ ನಗರ ವಿನ್ಯಾಸ ಹಾಗೂ ತಮ್ಮದೇ ಲಿಪಿಯ ಉಪಯೋಗವಿದ್ದ ವಿಶಿಷ್ಟ ನಾಗರಿಕತೆಯ ಪರಿಚಯ ನಮಗಾಗುತ್ತದೆ.

ಭಾರತೀಯ ಪುರಾತತ್ವ ಸಮೀಕ್ಷೆಯ ಅಧಿಕಾರಿಗಳಾದ ದಯರಾಂ ಸಹನಿಯವರು ೧೯೨೧ರಲ್ಲಿ ದೊಡ್ಡ ಹರಪ್ಪ ಪಟ್ಟಣವನ್ನು ಹಾಗೂ ಆರ್. ಡಿ. ಬ್ಯಾನರ್ಜಿಯವರು ೧೯೨೨ರಲ್ಲಿ ಮೊಹೆಂಜೋದಾರೋ ಪಟ್ಟಣವನ್ನು ಪತ್ತೆ ಹಚ್ಚಿದರು. ಪ್ರಸ್ತುತ ಆ ಸಂಸ್ಕೃತಿಯ ಸುಮಾರು ೧೫೦೦ ನೆಲೆಗಳು ಪತ್ತೆಯಾಗಿವೆ. ಅವುಗಳಲ್ಲಿ ೧೦೦೦ ನೆಲೆಗಳು ಭಾರತದ ಗುಜಾರಾತ್, ರಾಜಸ್ತಾನ, ಉತ್ತರ ಪ್ರದೇಶ, ಪಂಜಾಬ್ ಹಾಗೂ ಹರಿಯಾಣಗಳಲ್ಲಿ ದೊರೆತಿವೆ. ಉಳಿದ ೫೦೦ ನೆಲೆಗಳು ಪಾಕಿಸ್ತಾನದಲ್ಲಿವೆ. ಇದು ೨,೫೦,೦೦೦ ಚದರ ಮೈಲಿ ವಿಸ್ತೀಣದಲ್ಲಿ ವ್ಯಾಪಿಸಿದೆ. ಇದಕ್ಕೆ ಸಂಬಂಧಿಸಿದ ೨೦೦೦ಕ್ಕೂ ಹೆಚ್ಚು ಸಾಬೂನುಗಲ್ಲು (Soap stone) ಮುದ್ರೆಗಳು ದೊತೆತಿವೆ. ಇವುಗಳ ಮೂಲ ಪ್ರಾಣಿಗಳು ಚಿತ್ರ ಅಕ್ಷರಗಳಿವೆ. ಈ ನಾಗರೀಕತೆಯು ಅಂದಿನ ಈಜಿಪ್ಟ್ ಗಾಗೂ ಸುಮೇರಿಯಾ ನಾಗರೀಕತೆಗಳಿಗೆ ಎರಡಷ್ಟು ಪ್ರದೇಶವನ್ನು ಒಳಗೊಂಡಿದೆ. ಕಾಲಿಬಂಗನ್, ರೂಪರ್, ಅಲಂಗಿರ್ ಪುರ ದೇಸಲ್ ಪುರದ ಲೋಥಲ್, ಭಗತ್ರವ, ನಗ್ವಾಡ್, ಬನಾವಲಿ, ಕುನಾಲ್ ಮೊದಲಾದವು ಭಾರತದಲ್ಲಿರುವ ನೆಲೆಗಳಾಗಿವೆ. ಗುಜರಾತಿನ ಕಚ್ಚ್ ನಲ್ಲಿರುವ ಧೋಲವೀರ ನೆಲೆಯು ಇತ್ತೀಚಿಗೆ ಪತ್ತೆ ಹಚ್ಚಲಾಗಿರುವ ಪ್ರಮುಖ ನೆಲೆ.

ಮೂಲ

ಸಿಂಧೂ ನಾಗರಿಕತೆಯ ಪ್ರದೇಶದಲ್ಲಿನ ಸಂಶೋಧನೆಗಳು ಅದರ ವಿಕಾಸದ ವಿವಿಧ ಹಂತಗಳನ್ನು ಗುರುತಿಸಿದ್ದಾರೆ. ಇತಿಹಾಸಕಾರರ ಪ್ರಕಾರ ಒಟ್ಟು ನಾಲ್ಕು ಹಂತಗಳಲ್ಲಿ ಸಿಂಧೂ ನಾಗರಿಕತೆಯ ವಿಕಾಸ ಕಂಡಿದೆ.

  • ಹರಪ್ಪ ಪೂರ್ವ ಯುಗ
  • ಹರಪ್ಪದ ಆರಂಭ ಕಾಲ
  • ಹರಪ್ಪದ ಪ್ರೌಢ ಕಾಲ
  • ಹರಪ್ಪದ ಅಂತಿಮ ಕಾಲ

ಬಲೂಚಿಸ್ಥಾನದ ಭಾಗವಾಗಿದ್ದ ಮೆಗರ್ ಘರ್ ಸ್ಥಳವು ಹರಪ್ಪ ಪೂರ್ವಯುಗದ ಸಂಶ್ಕೃತಿಗೆ ಬಲೂಚಿಸ್ಥಾನದ ಸಂಪರ್ಕದೊಂದಿಗೆ ಸಿಂಧೂ ಬಯಲಿಗೆ ಬಂದು ನೆಲೆಸಲು ಸಾಹಸ ಮಾಡಿದ ‘ಅಮ್ರಿಯು’ ಹರಪ್ಪದ ಆರಂಭಿಕ ಸಂಸ್ಕೃತಿಗೆ ಕಾಲಿಬಂಗನ್ ಹರಪ್ಪ ಸಂಸ್ಕೃತಿಯ ಪ್ರೌಢ ಕಾಲಕ್ಕೆ ಹಾಗೂ ಲೋಥಾಲ್ ಹರಪ್ಪ ಸಂಸ್ಕೃತಿಯ ಅಂತಿಮ ಕಾಲದ ಉದಾಹರಣೆ ಗಳೆನಿಸಿವೆ.

ಸಿಂಧೂನಾಗರಿಕತೆ ಎಂದು ಹೆಸರು ಬಂದದ್ದು

ಆರಂಭದಲ್ಲಿ ಈ ನಾಗರೀಕತೆಯನ್ನು ಸಿಂಧೂ ಕೊಳ್ಳದ ಸಂಸ್ಕೃತಿ ಎಂದು ಸರ್ ಜಾನ್ ಮಾರ್ಷಲ್ ೧೯೨೪ ರಲ್ಲಿ ಹೆಸರಿಸಿದರು. ಅದರೆ ಈ ನಾಗರಿಕತೆಯ ವ್ಯಾಪ್ತಿ ಬಯಲು ಪ್ರದೇಶಕ್ಕೂ ವಿಸ್ತರಿಸಿದ್ದರಿಂದ ಇದನ್ನು ಸಿಂಧೂ ನಾಗರೀಕತೆಯೆಂದು ಕರೆಯಾಲಾಯಿತು. ಮುಂದೆ ಈ ನಾಗರೀಕತೆಯ ಮೊದಲ ಸಂಶೋಧಿತ ನಗರ ಹರಪ್ಪದಿಂದಾಗಿ ಇದು ‘ಹರಪ್ಪ ಸಂಸ್ಕೃತಿಯೆಂದು’ ಇತಿಹಾಸಕಾರರಿಂದ ಕರೆಸಿಕೊಂಡಿತು. ಇನ್ನು ಕೆಲವರು ಈ ನಾಗರೀಕತೆಯ ಎರಡು ದೊಡ್ಡ ನಗರಗಳನ್ನು ಗಮನಿಸಿ ‘ಹರಪ್ಪಮೊಹೆಂಜೋದಾರೊ ನಾಗರೀಕತೆ’ ಎಂತಲೂ ಕರೆದಿದ್ದಾರೆ. ಭಾರತದಲ್ಲಿ ಈ  ನಾಗರೀಕತೆಯ  ಹೆಚ್ಚಿನ ನಗರಗಳು ಘಗ್ಗರ್ ಮತ್ತು ಯಮುನಾ ನದಿಗಳ ತೀರ ಪ್ರದೇಶದಲ್ಲಿ ಕಂಡು ಬಂದಿರುವುದರಿಂದ ಈ ನಾಗರೀಕತೆಯನ್ನು ಘಗ್ಗರ್ – ಯಮುನಾ ಕಣಿವೆಯ ನಾಗರೀಕತೆ ಎಂದು ಕೆಲವರು ಕರೆದಿದ್ದಾರೆ.

ಇದು ಭಾರತದ ವಾಯುವ್ಯ ಭಾಗದ ಸಿಂಧೂ ನದಿಯ ವಿಶಾಲ ತೀರ ಪ್ರದೇಶದಲ್ಲಿ ಬೆಳೆದು ಬಂದಿತ್ತು. ಈಜಿಪ್ಟ್ ಸುಮೇರಿಯನ್ ಮತ್ತು ರೋಮನ್ ನಾಗರೀಕತೆಗಳ ಸಮಕಾಲಿನತೆಯನ್ನು ಇದು ಹೊಂದಿತ್ತು. ಉತ್ತಮ ಪ್ರಗತಿಯನ್ನು ವಿವಿಧ ರಂಗಗಳಲ್ಲಿ ಗಳಿಸಿದ ಹೆಗ್ಗಳಿಕೆ ಸಿಂಧೂ ನಾಗರೀಕತೆಗೆ ಇದೆ. ಕ್ರಿ. ಶ. ೧೯೨೧- ೨೨ರಲ್ಲಿ ದಯಾರಾಂ ಸಹನಿ, ಆರ್. ಡಿ. ಬ್ಯಾನರ್ಜಿಯವರಿಂದ ಆರಂಭವಾದ ಭೂ ಉತ್ಪನನವು ಮುಂದೆ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿ, ಇತಿಹಾಸ ತಜ್ಞ ಸರ್ ಜಾನ್ ಮಾರ್ಷಲ್ ರಿಂದ ಮುಂದುವರಿದು ಅಂತಿಮವಾಗಿ ಸಿಂಧೂ ನಾಗರೀಕತೆಯ ಅಸ್ತಿತ್ವ ಹಾಗೂ ವೈಶಿಷ್ಟ್ಯಗಳ ಬಗೆಗೆ ಸ್ಪಷ್ಟ ಚಿತ್ರಣ ಲಭಿಸಿತು.

ಸರ್ ಜಾನ್ ಮಾರ್ಷಲ್‌ರು ಸಿಂಧೂ ನಾಗರೀಕತೆಯ ಕಾಲವನ್ನು ಕ್ರಿ. ಪೂ. ೩೨೫೦ರಿಂದ ೨೭೫೦ ಎಂದು ನಿರ್ಧರಿಸಿದ್ದಾರೆ. ಲಿಖಿತ ದಾಖಲೆಗಳ ಕೊತರೆಯಿಂದಾಗಿ ಇತಿಹಾಸ ಕಾಲವನ್ನು ಖಚಿತವಾಗಿ ಹೇಳುವುದು ಕಷ್ಟವಾಗಿದೆ.

ಆಧಾರಗಳು

ಕ್ರಿ. ಶ. ೧೯೨೧ ರಿಂದ ಇತ್ತೀಚೆಗೆ ಭೂ ಉತ್ಖನನದಲ್ಲಿ ದೊರೆತ ಈ ನಾಗರೀಕತೆಯ ಅವಶೇಷಗಳು ಮತ್ತು ವಿವಿಧ ವಸ್ತುಗಳು ಇದರ ಮೂಲ ಆಧಾರಗಳೆನಿಸಿವೆ. ಯಾವುದೇ ಲಿಖಿತ ದಾಖಲೆಗಳ ಆಭಾವದಿಂದಾಗಿ ಸಿಂಧೂ ನಾಗರೀಕತೆಯ  ಕಾಲವನ್ನು ಆದಿಮ ಇತಿಹಾಸವೆಂದು (proto- historic) ಕರೆಯಾಲಾಗಿದೆ. ಮಣ್ಣಿನ ಮಡಕೆ, ಶಿಲಾಗುಂಡುಗಳು, ಮಣಿಗಳು, ಉಪಕರಣಗಳು, ಕಂಚಿನ ವಿವಿಧ ಉಪಕರಣಗಳು, ಆಭರಣಗಳು, ಭೂ ಉತ್ಖನನದಲ್ಲಿ ಕಂಡಿರುವ ಮನೆಗಳು, ಬೀದಿಗಳು, ಸ್ನಾನಗೃಹ, ಕಣಜ, ಚರಂಡಿ, ಸಭಾಗೃಹ, ಕೋಟೆ ಕೊತ್ತಲಗಳು, ಮುದ್ರೆಗಳು, ಪ್ರತಿಮೆಗಳು, ಆಟಿಕೆ ವಸ್ತುಗಳು, ವಿವಿಧ ವಸ್ತುಗಳ ಮೇಲಿನ ಚಿತ್ರಗಳು ಮುಂತಾದವು ಸಿಂಧೂ ನಾಗರೀಕತೆಯ  ಇತಿಹಾಸ ರಚನೆಗೆ ಆಧಾರಗಳಾವೆ.

ಸಿಂಧೂ ನಾಗರೀಕತೆಯ ಪ್ರಮುಖ ನಗರಗಳು

ಹರಪ್ಪ : ಈ ಉತ್ತರ ಭಾಗದಲ್ಲಿರುವ ಪಂಜಾಬ್‌ನ (ಪಾಕಿಸ್ತಾನ) ಈಗ ಒಣಗಿ ಹೋಗಿರುವ ರಾವಿ ನದಿಯ ಎಡದಂಡೆಯ ಮೇಲೆ ನಿರ್ಮಾಣವಾಗಿರುವ ಸುವ್ಯವಸ್ಥಿತ ನಗರ. ಸಿಂಧೂ ನಾಗರೀಕತೆಯ  ಬಗೆಗಿನ ಮೊದಲ ಸಂಶೋಧನೆ ನಡೆದದ್ದು ಹರಪ್ಪದಲ್ಲಿ. ಈ ನೆಲೆಯನ್ನು ೧೯೨೧ ರಲ್ಲಿ ದಯಾರಾಂ ಸಹನಿಯವರು ಉತ್ಖನನ ಮಾಡಿದರು. ಉಗ್ರಾಣ ಮತ್ತು ವಸತಿ ಗೃಹಗಳು ಇಲ್ಲಿನ ವಿಶೇಷ ಕಟ್ಟಡಗಳಾಗಿವೆ.

ಇಲ್ಲಿನ ಪ್ರಮುಖ ಉತ್ಖನನ ಕಾರ್ಯುವನ್ನು ಎಮ್. ಎಸ್. ವಾಟ್ಸ್ ಎನ್ನುವರು ೧೯೨೧ ರಿಂದ ೧೯೩೪ರವರೆಗೆ ನಡೆಸಿದರು.

ಮೆಹೆಂಜೋದಾರೋ : ಸಿಂಧೂ ನದಿಯ ಬಲದಂಡೆಯ ಮೇಲಿದೆ. ಸಿಂಧ್ ಭಾಷೆಯಲ್ಲಿ ಮೆಹೆಂಜೋದಾರೋ ಎಂದರೆ ಸತ್ತವರ ಗುಡ್ಡೆ ಎಂದರ್ಥ. ನೆರೆಹಾವಳಿಯಿಂದ ಧ್ವಂಸವಾಗುತ್ತಿದ್ದ ಈ ನಗರವನ್ನು ಏಳುಬಾರಿ ಪುನರ್ರಚಿಸಲಾಗಿದೆಯೆಂದು ನಂಬಲಾಗಿದೆ. ೧೯೨೨ರಲ್ಲಿ ಆರ್. ಡಿ. ಬ್ಯಾನರ್ಜಿಯವರು ಈ ನೆಲೆಯನ್ನು ಪತ್ತೆ ಹಚ್ಚಿದರು. ಆಗ ಪ್ರಾಕ್ತನಶಾಸ್ತ್ರ ಇಲಾಖೆಯ ನಿರ್ದೆಶಕರಾಗಿ ಸರ್ ಜಾನ್ ಮಾರ್ಷಲ್ ರವರು ಇದ್ದರು. ಇವರು ಹಾಗೂ ಮ್ಯಾಕೆ ಎಂಬುವರು ಸಹ ಈ ನೆಲೆಯಲ್ಲಿ ಉತ್ಖನನ ಮಾಡಿದರು. ಭಾರತ ಮತ್ತು ಪಾಕಿಸ್ತಾನಗಳ ವಿಭಜನೆಯ ನಂತರ ವ್ಹೀಲರ್ ಎಂಬುವರು ಈ ಸ್ಥಳದಲ್ಲಿ ಈ ಕಾರ್ಯವನ್ನು ಮುಂದೆವರೆಸಿದರು. ಇತ್ತೀಚೆಗೆ ಡೇಲ್ಸ್  ಎಂಬುವರು ಈ ಸ್ಥಳದಲ್ಲಿ ಉತ್ಖನನ ಕಾರ್ಯವನ್ನು ಮುಂದುವರೆಸಿದ್ದಾರೆ. ಆದರೆ ನೀರಿನ ಮಟ್ಟ ಇಲ್ಲಿ ಸಾಕಷ್ಟು ಏರಿರುವುದರಿಂದ ಯಾವ ಪ್ರಾಚ್ಯ ವಸ್ತು ಸಂಶೋಧಕರೂ ಹರಪ್ಪ ಸಂಸ್ಕೃತಿಯ ವಸಾಹತು ಇದ್ದಿತ್ತು ಎನ್ನಲಾಗುವ ಸ್ಥಳದ ತಳವನ್ನು ಮುಟ್ಟಲಾಗಿಲ್ಲ.

ಕಾಲಿಬಂಗನ್ : ಇದು ರಾಜಸ್ತಾನದಲ್ಲಿ ಘಗ್ಗಾರ್ ನದಿಯ (ಈಗ ಒಣಗಿದೆ) ದಡದಲ್ಲಿದೆ. ಇದು ಸಿಂಧೂ ನಾಗರೀಕತೆಯ ಪ್ರಾದೇಶಿಕ ಕೇಂದ್ರಕ್ಕೆ ಒಂದು ಒಳ್ಳೆಯ ಉದಾಹರಣೆ ಮತ್ತು ಹರಪ್ಪ ಸಂಸ್ಕೃತಿಯ ಪ್ರಾಥಮಿಕ ಹಾಗೂ ಪ್ರಬುದ್ಧ ಅವಸ್ಥೆಗಳ ಅವಶೇಷಗಳನ್ನು ಹೊಂದಿದೆ. ಹರಪ್ಪ ಮತ್ತು   ಮೆಹೆಂಜೋದಾರೋಗಳನ್ನು ಬಿಟ್ಟರೆ ಇದುವೆ ನಂತರದ ದೊಡ್ಡ ನಗರವಾಗಿತ್ತು. ೧೦ + ೨೦ + ೨೦ ಸೆಂ. ಮೀ. ಗಾತ್ರದ ಇಟ್ಟಿಗೆಗಳನ್ನು ಕಟ್ಟಡಗಳಿಗೆ ಈ ನಗರದಲ್ಲಿ ಬಳಸಲಾಗಿದೆ. ಭಾರತಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ ಹರಪ್ಪ ಪೂರ್ವ ಸಂಸ್ಕೃತಿಯ ಸ್ಥಳ ಕಾಲಿಬಂಗನ್ ಎಂಬಲ್ಲಿ ಮಾತ್ರ ಕಂಡುಬಂದಿದೆ.

ಕಾಲಿಬಂಗನ್ ಈ ನೆಲೆಯನ್ನು ಬಿ. ಕೆ. ಥಾಪರ್ ರವರು ೧೯೭೨, ೧೯೭೫ ಮತ್ತು ೧೯೭೭ ರಲ್ಲಿ ಉತ್ಖನನ ಮಾಡಿದರು. ಬಿ. ಬಿ. ಲಾಲ್ ರವರು ೧೯೭೯ರಲ್ಲಿ ಇದೇ ಸ್ಥಳವನ್ನು  ಉತ್ಖನನ ಮಾಡಿದರು.

ಕಾಲಿಬಂಗನ್ ಎಂದರೆ ಕಪ್ಪು ಬಳೆಗಳು (black bangles) ಎಂದರ್ಥ. ಈ ನೆಲೆಯಲ್ಲಿ ಟೆರಾಕೊಟ್ಟ ಬಳೆಗಳು ತುಂಬ ದೊರೆತಿವೆ. ಈ ನೆಲೆಯು ದೆಹಲಿಯಿಂದ ವಾಯುವ್ಯಕ್ಕೆ ೩೧೦ ಕೊಲೋಮೀಟರ್ ದೂರದಲ್ಲಿದೆ.

ಚುನ್ಹು ದಾರೋ : ಸಿಂಧ್‌ಪ್ರಾಂತ್ಯದ ಇದು ಸಿಂಧೂ ನದಿಯ ಎಡದಂಡೆಯ ಮೇಲೆ ಸ್ಥಾಪಿತವಾಗಿತ್ತು. ಮೊಹೆಂಜೋದಾರೊದಿಂದ ೧೩೦ ಕಿ. ಮೀ. ಅಂತರದಲ್ಲಿದ್ದಿತು. ಲೋಹದ ಆಭರಣ, ಕಪ್ಪೆಚಿಪ್ಪುಗಳ ಆಭರಣಗಾರರು ಈ ನಗರದಲ್ಲಿದ್ದರೆಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

ಲೋಥಲ್: ಸಿಂಧೂ ನಾಗರಿಕತೆಯ ಸಾಗರೋತ್ತರ ವಹಿವಾಟಿನ ಕೇಂದ್ರವಾಗಿ ಇದು ಕಾರ್ಯ ನಿರ್ವಹಿಸಿತು. ಲೋಥರ್ ನಗರ ಕ್ಯಾಂಬೆ ಕೊಲ್ಲಿಯಲ್ಲಿ ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಿರುವ ಪ್ರಮುಖ ಬಂದರು. ಹಡಗುಕಟ್ಟೆ (ಹಡಗು ನಿಲ್ಲುವ ತಾಣ) ದಕ್ಷಿಣೋತ್ತರವಾಗಿ ೨೧೬ ಮೀ. ಉದ್ದ ಹಾಗೂ ೩೭ ಮೀ ಅಗಲವಿದ್ದು ಸುಟ್ಟ ಇಟ್ಟಿಗೆಯಿಂದ ರೂಪಿಸಲಾಗಿದೆ. ಈ ನೆಲೆಯನ್ನು ೧೯೭೩ರಲ್ಲಿ ಎಸ್. ಆರ್. ರಾವ್. ಅವರು ಉತ್ಖನನ ಮಾಡಿದರು. ಅಲ್ಲದೇ ೧೯೭೯ ರಿಂದ ೧೯೮೫ರವರೆಗೆ ಸಹ ಉತ್ಖನನಗಳು ನಡೆದಿವೆ. ಏಳು ವರ್ಷಗಳ ಕಾಲ ನಡೆದ ಇಲ್ಲಿಯ  ಉತ್ಖನನದಿಂದ ಇಟ್ಟಿಗೆಗಳಿಂದ ಕಟ್ಟಿರುವ ಉತ್ತಮವಾದ ಹಡಗುಕಟ್ಟೆ ಹಾಗೂ ಅಚ್ಚುಕಟ್ಟಾದ ರಸ್ತೆಗಳುಳ್ಳ ಸಿಂಧೂ ಸಂಸ್ಕೃತಿಗೆ ಸೇರಿದ ಒಂದು ರೇವು ಪಟ್ಟಣದ ಅಸ್ತಿತ್ವವು ಬೆಳಕಿಗೆ ಬಂದಿತು.

ಬನಾವಳಿ : ಅಂದಿನ ಸರಸ್ವತಿ ನದಿ ದಡದಲ್ಲಿ ಇದು ಬೆಳೆದು ಬಂದಿತ್ತು. ಇದರಲ್ಲಿ ಹರಪ್ಪ ಪೂರ್ವ ಸಂಸ್ಕೃತಿ ಮತ್ತು ಹರಪ್ಪ ನಾಗರೀಕತೆಗಳೆರಡರ ಅವಶೇಷಗಳು ದೊರೆತಿವೆ.

ಸುರಕೋಟಡ : ಗುಜಾರಾತ್ ಪ್ರಾಂತ್ಯದಲ್ಲಿ ಇದು ಕಂಡುಬಂದಿದೆ. ಕುದುರೆಯ ಮೂಳೆಗಳು ಇಲ್ಲಿ ಲಭಿಸಿವೆ.

ಧೋಲವೀರ : ಗುಜರಾತಿನ ಕಚ್ ಜಿಲ್ಲೆಯಲ್ಲಿ ಇತ್ತೀಚೆಗೆ ಇದು ಸಂಶೋಧಿಸಲ್ಪಟ್ಟಿದೆ. ಬೀದಿಗಳು, ಚರಂಡಿಗಳು, ಕೋಟೆಗಳು ಇಲ್ಲಿ ಕಂಡುಬಂದಿದ್ದು ಹರಪ್ಪ ನಾಗರೀಕತೆಯ ಎಲ್ಲ ಲಕ್ಷಣಗಳನ್ನು  ಇದು ಒಳಗೊಂಡಿತ್ತ ಎಂದು ಚರಿತ್ರೆಕಾರರು ಊಹಿಸಿದ್ದಾರೆ.

ಹೀಗೆ ಸುಮಾರು ೧.೩ ಮಿಲಿಯನ್ ಚ. ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದ ಸಿಂಧೂ ನಾಗರೀಕತೆಯು ವಿಸ್ತೀರ್ಣದಲ್ಲಿ ಮೆಸೊಪೊಟೋಮಿಯ ಹಾಗೂ ಈಜಿಪ್ಟ್ ಗಳಿಂತ ದೊಡ್ಡದಾಗಿದ್ದಿತು. ಸುಮಾರು ಒಂದು ಸಾವಿರ ಸ್ಥಳಗಳು ಈವರೆಗೆ ಸಿಂಧೂ ನಾಗರೀಕತೆಗೆ ಸಂಬಂಧಿಸಿದಂತೆ ಸಂಶೋಧಿಸಲ್ಪಟ್ಟಿದೆ. ಈ ನಾಗರೀಕತೆಯ ವ್ಯಾಪ್ತಿಯು ಉತ್ತರದ ಸೋಪಾರನಿಂದ ದಕ್ಷಿಣ ಭಗತ್ಯವ (ಗುಜಾರಾತ್) ದವರೆಗೆ ಪೂರ್ವದಲ್ಲಿ ಉತ್ತರ ಪ್ರದೇಶದ ಅಲಂಗೀರಪುರದಿಂದ ಪಶ್ಚಿಮದ ಸುತ್ಕಜೆಂಡದವರೆಗೆ ಹರಡಿದ್ದಿತು.

ಕಾಲಮಾನ

ಸಿಂಧೂ ನಾಗರೀಕತೆಯ ಸುಮೇರ್ ಮತು ಅಕ್ಕಡ್ ಗಳೊಡನೆ ಹೊಂದಿದ್ದ ಸಂಪರ್ಕಗಳ ಆಧಾರದ ಮೇಲೆ, ಹರಪ್ಪಾ ಮತ್ತು  ಮೆಹೆಂಜೋದಾರೊಗಳಲ್ಲಿ ಮೊದಲು ಉತ್ಖನನ ನಡೆಸಿದರು ಆ ನಾಗರೀಕತೆಯ ಕಾಲವನ್ನು ನಿರ್ಧರಿಸಿದರು.  ಮೆಸೊಪೊಟೋಮೊಯಾದಲ್ಲಿ ದೊರೆತ ಅಕ್ಕಡ್ ಪೂರ್ವ (Pre- Akkadian) ಮತ್ತು ಇಸಿಸ್ ಲಾರ್ನ್ಸ್ (Isin- Lasra)  ಕಾಲಗಳಿಗೆ ಸೇರಿದ, ಸಿಂಧೂ ಮಾದರಿಯ ಮುದ್ರೆಗಳು ಇತರ ಸಾಮಾನ್ಯ ನಿತ್ಯೋಪಯೋಗಿವಸ್ತುಗಳು ಮುಂತಾದವುಗಳ ಆಧಾರದ ಮೇಲೆ, ಆ ನಾಗರಿಕತೆಯ ಕಾಲದ ಗರಿಷ್ಠ ಮಿತಿ ಕ್ರಿ. ಪೂ. ೨೫೦೦ ಮತ್ತು ಕನಿಷ್ಟ ಮಿತಿ ಕ್ರಿ. ಪೂ. ೧೫೦೦ ಎಂದು  ನಿರ್ಧರಿಸಿಲಾಗಿದೆ. ಇತ್ತೀಚೆಗಾದರೋ ಉತ್ಖನನ ನಡೆದ ನಿವೇಶನಗಳಲ್ಲಿ ದೊರೆತ ಪ್ರಾಣಿ ಮತ್ತು ಸಸ್ಯ ಸಂಬಂಧವಾದ ಅವಶೇಶಗಳಲ್ಲಿಯ ಇಂಗಾಲ-೧೪ರ ಅರೆಜೀವಾಧಿ ಕಾಲನಿರ್ಣಯ ವಿಧಾನವನ್ನು ಆಧರಿಸಿದ ಹೆಚ್ಚು ನಿಖರವಾದ ವಿಧಾನವನ್ನು  ಲೋಥರ್, ಕಾಲಿಬಂಗಾನ್ ಮತ್ತು ಕೋಟ್ ದಿಜಿಗಳ ಕಾಲ  ನಿರ್ಣಯದಲ್ಲಿ ಬಳಸಲಾಗಿದೆ. ಪೆನ್ಸಿಲ್ ವೇನಿಯಾ ವಿಶ್ವವಿದ್ಯಾನಿಲಯದ ಜಾರ್ಜ್ ಎಫ್. ಡೇಲ್ಸ್ ಅವರು ೧೯೬೪-೬೬ ರಲ್ಲಿ ನಡೆಸಿದ ಉತ್ಖನನದ ಪರಿಣಾಮವಾಗಿ ಮೊಹೆಂಜೋದಾರೊದ ಅವನತಿಯ ಕಾಲದ ಸ್ತರಗಳಿಗೂ ಸಹ ಇಂಗಾಲ-೧೪ರ ಕಾಲನಿರ್ಣಯದ ನಿಷ್ಕರ್ಷೆಗಳು ದೊರಕುವಂತಾಗಿದೆ.

ಇತೀಚಿನವರೆಗೂ ಸಿಂಧೂ ನಾಗರೀಕತೆಯ  ಕಾಲವನ್ನು ತುಲನಾತ್ಮಕ ಪುರಾತತ್ವದ ಆಧಾರದ ಮೇಲೆ ನಿಷ್ಕರ್ಷಿಸಲಾಗಿತ್ತಿತ್ತು. ಮೆಸೊಪೊಟೋಮೊಯಾದ ನಿವೇಶನಗಳಲ್ಲಿ ಕಾಲವನ್ನು ನಿಗಧಿಗೊಳಿಸಬಹುದಾದಂತಹ ಸ್ತರಗಳಲ್ಲಿ ಸಿಕ್ಕಿರುವ ಮುದ್ರೆ, ತೂಕದ ಬಟ್ಟು ಮತ್ತು ಆಭರಣಗಳೇ ಮುಂತಾದ ಸಿಂಧೂ ನಾಗರೀಕತೆಯ ವಸ್ತುಗಳು, ಕಾಲದ ಗರಿಷ್ಟ ಮತ್ತು ಕನಿಷ್ಟ ಪರಿಮಿತಿಗಳು ನಿಗಧಿಪಡಿಸಲು ಆಧಾರ ರೇಖೆಯನ್ನು (datum line) ಒದಗಿಸಿದವು ಆದರೆ, ಕಳೆದ  ೧೫ ವರ್ಷಗಳಲ್ಲಿ ಮೊಹೆಂಜೋದಾರೊ, ಕೋಟ್‌ದಿಜಿ, ಲೋಥಲ್ ಮತ್ತು ಕಾಲಿಬಂಗಾನ್‌ಗಳಲ್ಲಿ ನಡೆದ ಇತ್ತೀಚಿನ ಉತ್ಖನನಗಳಲ್ಲಿ ದೊರೆತ ಪ್ರಾಚೀನ ಅವಶೇಷಗಳ ಮಾದರಿಗಳಿಗೆ ವಿಕಿರಣಶೀಲ ಇಂಗಾಲ ಕಾಲಗಳು (radio carbon dates) ನಿಷ್ಕರ್ಷೆಯಾಗಿವೆ. ಈ ಕೆಳಕಂಡ ನಿಯಮಗಳಿಗನುಗುಣವಾಗಿ ಕಾಲದ ಗಣನೆ ಮಾಡಲಾಗಿದೆ.

ಇತೀಚಿನ ಯಾವುದೇ ವಸ್ತುವಿನೊಡನೆ ಬೆರಕೆಯಾಗದ ಪ್ರಾಚೀನ ಅವಶೇಷದ ಮಾದರಿಯಲ್ಲಿ (ಇದ್ದಿಲು, ಸುಟ್ಟ ಮರ ಇತ್ಯಾದಿ) ಅಳಿದುಳಿದ ಇಂಗಾಲ-೧೪ರ ಪ್ರಮಾಣವನ್ನು ಕರಾರುವಾಕ್ಕಾಗಿ ನಿಗಧಿಪಡಿಸುವುದರಿಂದ ಮಾದರಿಯು ನಶಿಸಿದ ಮೇಲೆ ಕಳೆದುಹೋದ ಕಾಲವನ್ನು ನಿಶ್ಚಯಿಸಬಹುದು. ಏಕೆಂದರೆ, ಜೈವಿಕ ಕ್ರಿಯೆಯು ನಾಶವಾದ ಮೇಲೆ ಆ ಮಾದರಿಯಲ್ಲಿರುವ ಇಂಗಾಲ – ೧೪ರ ಅಂಶ ಒಂದು ಗೊತ್ತಾದ ಪ್ರಮಾಣದಲ್ಲಿ ನಶಿಸುತ್ತದೆ.

ಸಿಂಧೂ ನಾಗರೀಕತೆಯ  ಕಾಲವನ್ನು ನಿರ್ಧರಿಸುವುದು ಬಹು ತೊಡಕಿನ ವಿಷಯವಾಗಿದೆ. ಕಾರಣ ಈ ನಾಗರೀಕತೆಯ  ಉಗಮ ಮತ್ತು ಬೆಳವಣಿಗೆಯ ವಿವಿಧ ಹಂತಗಳನ್ನು ತಿಳಿಸುವ ಆಧಾರಗಳು ದೊರೆತಿಲ್ಲ. ಅನೇಕ ನೆಲೆಗಳಲ್ಲಿ ದೊರಕಿರಿವ ಅಸ್ಥಿಪಂಜರಗಳು, ಉಪಕರಣಗಳು ಮುಂತಾದ ಅವಶೇಷಗಳನ್ನು ಯಾವ ಕಾಲದವೆಂದು ನಿರ್ಣಯಿಸಲು ವೈಜ್ಞಾನಿಕ ಕಾಲನಿರ್ಣಯದ ಇ-೧೪ರ ನಿರ್ಣಯವನ್ನು ಅನುಸರಿಸಲಾಗುತ್ತಿದೆ.

ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಲ್ಲಿ (Tata Institue of Funda -mental Research -TIFR)  ನಿಷ್ಕರ್ಷೆಯಾಗಿರುವಂತೆ, ಎರಡು ದಶಕಗಳಿಗೂ ಮುಂಚೆ ಮೊಹೆಂಜೋದಾರೊದಲ್ಲಿ ಸಂಗ್ರಹಿಸಲಾಗಿದ್ದ ವಸ್ತುವಿನ (ಮಾದರಿಯ) ಕಾಲ, ಕ್ರಿ. ಪೂ. ೧೭೬೦+೧೧೫.  ಹಲವು ಕಾರಣಗಳಿಗಾಗಿ, ಈ ಕಾಲನಿಷ್ಕರ್ಷೆ ವಿಶ್ವಾಸಾರ್ಹವೇ ಅಲ್ಲ. ಮೊದಲನೆಯಾದಾಗಿ, ಉತ್ಕನನ ನಡೆಸಿದವರು ಅದನ್ನು ಮೊದಲು ಸಂಗ್ರಹಿಸಿದಾಗ, ಅದು ಇತರ ವಸ್ತುಗಳಿಂದ ಬೆರಕೆಯಾಗಿರಲಿಲ್ಲ ಎಂಬುದೇ ಖಚಿತವಿಲ್ಲ. ಎರಡನೆಯಾದಾಗಿ ಸಂಗ್ರಹಿಸಿದ ಮೇಲೆ ಇನ್ನಿತರ ವಸ್ತುಗಳಂತೆಯೇ ಇದನ್ನೂ ಸಾಗಿಸಲಾಗಿದೆ. ಕಾರಣ, ೪೦ ವರ್ಷಗಳ ಹಿಂದೆ ಈ ಮಾದರಿಯು ನಿವೇಶನದ ಕಾಲ  ನಿಷ್ಕರ್ಷೆಯಲ್ಲಿ  ಎಷ್ಟು ಅಮೂಲ್ಯವೆಂದು ಊಹಿಸಲು ಯಾರಿಗೂ ಸಾಧ್ಯವಿಲ್ಲ. ಡೇಲ್ಸ್ ಅವರು ೧೯೬೪-೬೫ ರಲ್ಲಿ ತಾವು ಮೊಹೆಂಜೋದಾರೊದಲ್ಲಿ  ನಡೆಸಿದ ಉತ್ಖನನಗಳಲ್ಲಿ  ಆರು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ನಿರ್ಣಯವಾಗಿರುವ ಅವುಗಳ ಕಾಲಗಳೂ ಖಾತರಿಯಾಗಿವೆ. ಎಚ್. ಆರ್. ದಿಬ್ಬದ ಪಶ್ಚಿಮ ಅಂಚಿನ ಮೇಲ್ಭಾಗದಿಂದ ಈ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹರಪ್ಪಾ ಸಂಸ್ಕೃತಿಯ ಪ್ರೌಢ ಹಂತದ ಅಂತ್ಯ ಕಾಲಕ್ಕೆ ಸೇರಿದ ಕಟ್ಟಡಗಳಿರುವ ಸ್ತರಕ್ಕೆ (stuctural level) ಇವು ಸೇರಿದವಾಗಿವೆ. ಅರರಲ್ಲಿ ಐದು ಮಾದರಿಗಳ ಕಾಲ ಸಮಂಜಸವಾಗಿದೆ. ಕ್ರಿ. ಪೂ. ೧೯೬೬-೬೧ ರಿಂದ ೨೦೮೩-೬೬ ರವರೆಗೆ ಅವುಗಳ ಅಂತರವಿದೆ. ಒಂದರ ಕಾಲ ಮಾತ್ರ ಕ್ರಿ. ಪೂ. ೧೮೬೪-೬೫. ಆದ್ದರಿಂದ ಮೊಹೆಂಜೋದಾರೊದಲ್ಲಿಯ ‘ಹೆಚ್. ಆರ್’ ದಿಬ್ಬದಲ್ಲಿ ಹರಪ್ಪಾ ಜನರ ವಸತಿಯ ಪ್ರೌಢ ಹಂತದ ಕಾಲ  ಕ್ರಿ. ಪೂ. ೨೦೦೦ದ ಸುಮಾರಿಗೆ ಕೊನೆಗೊಂಡಿರುವುದು ಹೆಚ್ಚು ಸಂಭವನೀಯ. ಆದರೆ,  ಉತ್ಖನನಕಾರರೇ ಗಮನಿಸಿರುವಂತೆ ಈ ದಿಬ್ಬದ ಪ್ರೌಢ ಹಂತದ ಕೊನೆಯ ಕಾಲವನ್ನು (terminal date)  ಇಡೀ ನಗರಕ್ಕೆ ಅನ್ವಯಿಸಬಹುದೇ ಎಂಬುದು ಮಾತ್ರ ಖಚಿತವಿಲ್ಲ. ಎರಡನೆಯಾದಾಗಿ ಡೇಲ್ಸ್ ಅವರು ಯಾವುದನ್ನು ಹರಪ್ಪಾ  ಪ್ರೌಢ ಸಂಸ್ಕೃತಿಯ ಅತ್ಯಂತ ಕಡೆಯ ಹಂತವೆಂದು ಕರೆದಿರುವರೋ, ಅದು ನಗರದ ವಸತಿಯ ಉಪಾಂತವಾದ (Penultimate) ಹಂತವಿದ್ದಿರಬಹುದು. ಏಕೆಂದರೆ ವ್ಹೀಲರ್ ಅವರು ಅಭಿಪ್ರಾಯಪಟ್ಟಿರುವಂತೆ, ಮೊಹೆಂಜೋದಾರೊದಲ್ಲಿ  ಅವನತಿ ಹಂತವೂ (dencadent phase) ಇರುವುದನ್ನು ಇಲ್ಲಿ ಸ್ಮರಿಸಬಹುದು. ಅದು ಹೇಗಾದರಿರಲಿ ಸುಮಾರು ಕ್ರಿ. ಪೂ.  ೨೦೦೦ ಮತ್ತು ೧೯೦೦ರ ಅವಧಿಯಲ್ಲಿ ಮೊಹೆಂಜೋದಾರೊ ನಾಶವಾದಂತೆ ಕಾಣುತ್ತದೆ. ಲೋಥಲ್‌ದಲ್ಲಿಯ ಪ್ರಚಂಡ ಮಹಾಪೂರಗಳಲ್ಲೊಂದರ (ಹರಪ್ಪಾ ಜನರ ಅಭ್ಯುದಯವನ್ನು ಕೊನೆಗಾಣಿಸಿದ್ದೇ ಇದು) ಕಾಲ ಕ್ರಿ. ಪೂ. ೨೦೦೦ ಎಂದು ನಿಗದಿಯಾಗಿದೆ. ಅದರ ನಂತರ, ಪೌರ ಜೀವನ ಮಟ್ಟದಲ್ಲಿ ಸ್ಪಷ್ಟವಾದ ಅವನತಿ ಕಂಡುಬಂದು, ಕ್ರಿ. ಪೂ.೧೯೦೦ರಲ್ಲಿ ಮತ್ತೊಂದು ಮಹಾಪೂರದಿಂದ ನಗರದ ಸರ್ವನಾಶವಾಯಿತು. ಮೊಹೆಂಜೋದಾರೊದಲ್ಲಿಯ ಅತ್ಯಂತ ಮೇಲಿನ ಸ್ತರಗಳಲ್ಲಿರುವಂತೆ ಲೋಥಲ್‌ದ ೪ನೆಯ ಹಂತದಲ್ಲೂ, ಕೆಳದರ್ಜೆಯ ಜನರಿಂದ ಹೆಚ್ಚು ಕಳಪೆಯಾದ ಕಟ್ಟಡಗಳು ಕಟ್ಟಲ್ಪಟ್ಟವು. ಕ್ರಿ. ಪೂ. ೨೦೦೦-೧೯೦೦ರ ಅವಧಿಯಲ್ಲಿ ಸಿಂಧೂ ನಗರಗಳು ನಾಶದ ಅಂಚಿನಲ್ಲಿದ್ದವು. ಹರಪ್ಪಾ ಸಂಸ್ಕೃತಿಯ ಪ್ರೌಢ ಹಂತಕ್ಕೆ, ವಿಶೇಷವಾಗಿ ಗುಜರಾತದಲ್ಲಿ, ಅಂತಿಮ ಪ್ರಹಾರ ಬಿದ್ದುದು ಮತ್ತೊಂದು ಮಹಾಪೂರದಿಂದ ಮೊಹೆಂಜೋದಾರೋ, ಲೋಥಲ್ ಮತ್ತು ಕಾಲಿಬಂಗಾನಗಳಲ್ಲಿಯ ಹರಪ್ಪಾ ಸಂಸ್ಕೃತಿಯ ಪ್ರೌಢಾವಸ್ಥೆಯ ಹೆಚ್ಚು ಸಂಭವನೀಯವೆನಿಸುವ ಕೊನೆಯ ಕಾಲ ಕ್ರಿ. ಪೂ. ೧೯೦೦ ಎಂದು ನಿಗದಿಯಾಗಿದೆ.

ಕಾಲಿಬಂಗಾನಗಳಲ್ಲಿಯ ಹರಪ್ಪಾ ಸಂಸ್ಕೃತಿಯ ಪ್ರೌಢ ಹಂತದ ಪ್ರಾರಂಭ ಕಾಲ (೨ನೆಯ ಕಾಲ) ೨೨೪೫-೧೧೫ ರಿಂದ ೨೧೪೦-೯೦ (ಎರಡನೆಯ ಸರಣಿಯ ಮಾದರಿಗಳು). ಹೀಗೆ ಭಿನ್ನ ಭಿನ್ನವಾಗಿದೆ.  ಸಿಂಧೂ ಕಣಿವೆಯಲ್ಲಿಯೇ ಈ ನಾಗರೀಕತೆ ಎಷ್ಟು ಪ್ರಾಚೀನವೆಂಬುದನ್ನು ಈಗ ನೋಡಬಹುದು.  ಕೋಟ್‌ ದಿಜಿಯಲ್ಲಿಯ ಆ ಸ್ತರಗಳಲ್ಲಿಯ, ಹರಪ್ಪಾ ಪೂರ್ವ ಸಂಸ್ಕೃತಿಯ (ಕೋಟ್ -ದಿಜಿ- ೧) ಅಂತ್ಯ ಕಾಲವನ್ನು ತೋರಿಸುವಂತಹ ಮಾದರಿಯ ಇಂಗಾಲ-೧೪ರ ಕಾಲದ (ಕ್ರಿ. ಪೂ. ೨೧೦೦-೧೩೮) ಆಧಾರದ ಮೇಲೆ ಕೋಟ್ – ದಿಜಿಯಲ್ಲಿಯ ಹರಪ್ಪಾ ಸಂಸ್ಕೃತಿಯ ಪ್ರೌಢ ಹಂತ ಕ್ರಿ. ಪೂ. ೨೨೦೦ಕ್ಕಿಂತ ಮುಂಚಿನದಿರಲಾರದೆಂದು, ಆಗ್ರವಾಲ್ ಅವರು ಅಭಿಪ್ರಾಯಪಡುತ್ತಾರೆ. ಕಾಲಿಬಂಗಾನ್ ಹಾಗೂ ಲೋಥಲ್ ಗಳಿಗೆ ಸಂಬಾಂಧಿಸಿದಂತೆಯೂ ಅವರದು ಇದೇ ವಾದ.

ಉತ್ತರ ಬಲೂಚಿಸ್ತಾನದಲ್ಲಿಯ ಸಿಂಧೂ ನಾಗರೀಕತೆಯ ಕಾಲವನ್ನು ನಿರ್ಣಯಿಸಲು, ದಾಂಬ್ ಸದಾತ್ ಇಂಗಾಲ-೧೪ ರ ಕಾಲವನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ದಾಂಬ್ ಸದಾತ್ -೨ರ ಕಾಲದಲ್ಲಿ ಕ್ರಿ. ಪೂ. ೨೫೬೦+೨೦೦ ರಿಂದ ೨೨೦೦+೭೫ರವರೆಗೂ ಅಂತರವಿದೆ.

ಈ ಎರಡೂ ನಾಗರೀಕತೆಗೆ ಸೇರಿದವರ ನಡುವೆ ವಿನಿಮಯವಾಗುತ್ತಿದ್ದ ನಿತ್ಯಬಳಕೆಯ ವಸ್ತುಗಳು, (ನಮ್ಮ ಉದ್ದೇಶ ದೃಷ್ಟಿಯಿಂದ) ಎಷ್ಟರ ಮಟ್ಟಿಗೆ ವಿಶ್ವಾಸರ್ಹವೆಂಬುದನ್ನು ಈಗ ಪರಿಶೀಲೊಸೋಣ. ಊರ್, ಕಿಷ್ ಮತ್ತು ಟೆಲ್ ಆಸ್ಮಾರ್ಗಳಲ್ಲಿಯ ಸಾರ್ ಗಾನನ ಕಾಲಕ್ಕೆ ಸೇರಿದ ಸ್ತರಗಳಲ್ಲಿ ಸಿಂಧೂ ಮುದ್ರೆಗಳು ಸಿಗುವುದು ತಿಳಿದ ವಿಷಯವೇ ಗ್ಯಾಡ್ ಅವರು ಊರ್ ದಲ್ಲಿಯ ಇಂಡೋಸುಮೇರಿನ ಎರಡು ಮುದ್ರೆಗಳು, ಅಕ್ಕಡ್ ಪೂರ್ವಕಾಲಕ್ಕೆ ಸೇರಿದ್ದುವೆಂದು ತಿಳಿಸಿದ್ದಾರೆ. ಅವುಗಳ ಪೈಕಿ ಒಂದರಲ್ಲಿ, ಒರಾಚೀನ ಶಂಕು ಲಿಪಿಯ (ಕ್ಯೂನಿಫಾರಂ) ಶಾಸನವಿದೆ. ಮತ್ತೊಂದು ಮೊಹೆಂಜೋದಾರೊದಲ್ಲಿ ೧೪.೮೨ ಅಡಿಗಳ ಆಳದಲ್ಲಿ ದೊರೆತ ಮುದ್ರೆಯನ್ನು ಹೋಲುತ್ತದೆ. ಊರ್ ದಲ್ಲಿಯ ಮತ್ತೆರಡು ಮುದ್ರೆಗಳನ್ನೂ. ಲಗಾಷ್ ದಲ್ಲಿಯ ಒಂದು ಮುದ್ರೆಯನ್ನು, ಅಕ್ಕಡ್ ನಂತರದ ಕಾಲಕ್ಕೆ ಸೇರಿಸಲಾಗಿದೆ. ಇವುಗಳಲ್ಲಿಯಾ ಕೆಲವು ಮುದ್ರೆಗಳು ಬಹ್ರೇನ್ ಮೂಲದ್ದಾದರೂ ಅವೆಲ್ಲವೂ ಸಿಂಧೂ ವ್ಯಾಪಾರದ ವಸ್ತುಗಳೆಂಬುದರಲ್ಲಿ ಸಂಶಯಕ್ಕೆಡೆಯಿಲ್ಲ.

ಮೆಸೋಪೊಟೋಮಿಯಾವನ್ನು ತಲುಪಿದ ಸಿಂಧೂ ನಾಗರೀಕತೆಯ ಇನ್ನಿತರ ವಿಶಿಷ್ಟ ವಸ್ತುಗಳಲ್ಲಿ ಊರ್ ಆಸ್ಮಾರ್ ಮತ್ತಿತರ ಹಲವಾರು ನಿವೇಶನಗಳಲ್ಲಿ, ಈಜಿಷ್ಟಿನ ಪ್ರಾಚೀನ ರಾಜವಂಶದ ಕಾಲಕ್ಕೆ (early dynastic -!!! ) ಮತ್ತು ಸಾರ್ ಗಾನನ ಕಾಲಕ್ಕೆ ಸೇರಿದ ಸ್ತರಗಳಲ್ಲಿಯ ಕೊರೆದ ಕಾರ್ನಿಲಿಯನ್ ಮಣಿಗಳನ್ನು ಹೆಸರಿಸಬಹುದು. ಸಿಂಧೂನಾಗರೀಕತೆಯ ವೈಶಿಷ್ಟ್ಯಗಳೆನಿಸಿದ, ಮೂತ್ರಪಿಂಡಾ ಕೃತಿಯಲ್ಲಿರುವ, ಮೂಳೆಯ ಕೆತ್ತನೆ ಕೆಲಸಗಳು, ಗುಬುಟಿರುವ ಮಡಿಕೆ ಕುಡಿಕೆಗಳು, ಆಸ್ಮಾರ್  ದಲ್ಲಿಯ ಸಾರ್ ಗಾನನ ಕಾಲದ ಸ್ತರಗಳಲ್ಲಿ ಸಿಕ್ಕಿರುವಂತೆ ವರದಿಯಾಗಿದೆ. ಮೆಸೋಪೊಟೋಮಿಯಾದ ಕೆಲವು ವಸ್ತುಗಳು ಸಿಂಧೂಕಣಿವೆಯನ್ನು ತಲುಪಿವೆ. ಮೊಹೆಂಜೋದಾರೊದಲ್ಲಿಯ ಸಾಕಷ್ಟು ಪ್ರಾರಂಭಕಾಲೀನ ಸ್ತರದಲ್ಲಿ ಸಿಕ್ಕಿರುವ, ಚಾಪೆಯಂತೆ ಹೆಣೆದಿರುವ ವಿನ್ಯಾಸವನ್ನು ಕೊರೆದಿರುವ ‘ಕ್ಲೋರೈಟ್ ಸಿಸ್ಟ್’ (chlorite-schist) ಕಲ್ಲಿನ ಗುಡಿಸಲಿನಾಕಾರದ ಗಡಿಗೆಗೆ ಹೆಚ್ಚು ಮಹತ್ವವನ್ನು ಕೊಡಲಾಗಿದೆ. ಅಂಥ ಅಭ್ಯಂಜನ ಪಾತ್ರೆಗಳು, ಖಾಫಜೆ, ಊರ್, ಕಿಷ್, ಲಗಾಷ್, ಮರಿ ಮತ್ತು ಸೂಸ-II ಇಲ್ಲೆಲ್ಲಾ ಸಾಮಾನ್ಯ. ಅವು ಚೌಕಾಕಾರ ಅಥವಾ ಕೊಳವೆಯಾಕಾರದಲ್ಲಿದ್ದು, ನಾಲ್ಕು ಅಂಕಣದಲ್ಲಿ (compartments) ವಿಭಾಗವಾಗಿರುತ್ತವೆ. ಪಿಗೆಟ್ ಅವರ ಪ್ರಕಾರ ಅವು ಮಕ್ರಾನ್ ತೀರದ ಮೂಲದವು.

ಒಟ್ಟಿನಲ್ಲಿ, ಸಿಂಧೂ ಹಾಗೂ ಮೆಸೋಪೊಟೋಮಿಯಾ ನಿವೇಶನಗಳ ನಡುವೆ ವಿನಿಮಯವಾಗುತಿದ್ದ ಈ ಥಳಕು ಬಳುಕಿನ ಪಟ್ಟಿಯು, ಅಗೇಡ್ ಸಾರ್ ಗಾನನ ಕಾಲದಲ್ಲಿ (ಇವನ ಕಾಲ ಕ್ರಿ. ಪೂ. ೨೩೭೦-೨೩೧೫ ಎನ್ನಲಾಗಿದೆ). ಈ ಎರಡು ಕೇಂದ್ರಗಳ ನಡುವೆ ಗರಿಷ್ಟ ಮಟ್ಟದ ವ್ಯಾಪಾರ ಸಂಪರ್ಕವಿದ್ದುದನ್ನು ಸ್ಪಷ್ಟಪಡಿಸುತ್ತದೆ. ಒಟ್ಟು ಅಕ್ಕಡ್‌ ಕಾಲವನ್ನು ಪರಿಗಣಿಸಿದಲ್ಲಿ, ಕ್ರಿ. ಪೂ. ೨೩೭೦ ಮತ್ತು ೨೨೮೪ರ ಅವಧಿಯಲ್ಲಿ ಲೋಥಲ್ ಮೊಹೆಂಜೋದಾರೊ ಮತ್ತು ಹರಪ್ಪಾ ನಗರಗಳು, ಉರ್, ಕಿಷ್‌, ಬ್ರಾಕ್‌, ಆಸ್ಮಾರ್ ಮತ್ತು ಹಮ್ಮಾಗಳೊಡನೆ ವ್ಯಾಪಾರ ಸಂಬಂಧ ಹೊಂದಿದ್ದವು. ಆದ್ದರಿಂದ ಮಾರ್ಷಲ್‌ ಮತ್ತು ಮ್ಯಾಕೆ ಅವರು ಮೊಹೆಂಜೋದಾರೊದಲ್ಲಿಯ ಉತ್ಖನನದಲ್ಲಿ ತಲುಪಿರುವ ಅತ್ಯಂತ ಕೆಳಗಿನ ಸ್ತರದ ಕಾಲ ಕ್ರಿ.ಪೂ. ೨೪೦೦ಕ್ಕಿಂತ ಈಚಿನದಾಗಿರಲು ಸಾಧ್ಯವಿಲ್ಲ. ಡೇಲ್ಸ್‌ ಅವರು ಇತ್ತೀಚೆಗೆ ಕೈಗೊಂಡ ಭೂಮಿ ಕೊರತೆಗಳಿಂದ ತಿಳಿದಿರುವಂತೆ, ಕೆಳಗೆ ಇನ್ನೂ ೧೨ ಮೀ. ಗಳಷ್ಟು ವಸ್ತು ಸಂಚಯವಿದೆ. ಆದ್ದರಿಂದ, ಮೊಹೆಂಜೋದಾರೋ, ಅನುಮಿತವಾಗಿ ಹರಪ್ಪ ಕೂಡ, ಸಾರ್ಗಾನನ ಕಾಲದಲ್ಲಿ ಮೆಸಪೊಟೊಮಿಯಾ ನಗರಗಳೊಡನೆ ನೇರವಾದ ವ್ಯಾಪಾರ ಸಂಬಂಧವನ್ನು ಸ್ಥಾಪಿಸುವ ಮುನ್ನ, ಕನಿಷ್ಟ ಪಕ್ಷ ಒಂದು ಶತಮಾನದ ಕಾಲವಾದರೂ ಅಸ್ತಿತ್ವದಲ್ಲಿದ್ದಿರಬೇಕು. ಈ ಕಾರಣದಿಂದ ಸಿಂಧೂ ಕಣಿವೆಯ ನಗರಗಳ ಪ್ರಾರಂಭ ಕಾಲವನ್ನು, ವ್ಹೀಲರ್ ಅವರು ಸೂಚಿಸಿರುವಂತೆ ಕ್ರಿ.ಪೂ. ೨೫೦೦ ಎಂದು ಒಪ್ಪಿಕೊಳ್ಳಲು ಯಾವ ಅಭ್ಯಂತರವೂ ಇಲ್ಲ. ಲೋಥಲ್‌ ಸೇರಿದಂತೆ, ಸಿಂಧೂ ನಗರಗಳ ಕಾಲದ ಗರಿಷ್ಠ ಮಿತಿಯನ್ನು ಅಗ್ರವಾಲ್‌ಮತ್ತಿತರು ಸೂಚಿಸಿರುವಂತೆ, ಕ್ರಿ. ಪೂ. ೨೩೦೦ಕ್ಕೆ ನಿಗಧಿ ಮಾಡಿದಲ್ಲಿ, ಮೆಸೊಪೊಟೇಮಿಯಾ ನಗರಗಳಲ್ಲಿ (ಇವುಗಳ ಕಾಲನಿರ್ಣಯ ಖಚಿತವಾಗಿದೆ) ಸಿಕ್ಕಿರುವ ಮುದ್ರೆಗಳೇ ಮೊದಲಾದ ವಸ್ತುಗಳು ಒದಗಿಸುವ ಮಹತ್ವದ ಪುರಾವೆಯನ್ನು ಕೈಬಿಡಬೇಕಾದೀತು. ಸಾರ್ಗಾನನ ಅನಂತರದ ಕಾಲದ ಪುರಾವೆಗಳು ಅಷ್ಟು ನಿರ್ಣಾಯಕವಾಗಿಲ್ಲ.

ಹರಪ್ಪ ಪೂರ್ವ ಸಂಸ್ಕೃತಿಗಳು

ಪ್ರಬುದ್ಧ ಹರಪ್ಪ ಸಂಸ್ಕೃತಿಯನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ ಹರಪ್ಪ ಪೂರ್ವ ಸಂಸ್ಕೃತಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳಬೇಕು. ಹರಪ್ಪ ಪೂರ್ವದ ಸಂಸ್ಕೃತಿಗಳು ಮುಖ್ಯವಾಗಿ ಆಫ್‌ಘಾನಿಸ್ತಾನ್‌ ಮತ್ತು ಬಲೂಚಿಸ್ತಾನ್‌ ಪ್ರದೇಶಗಳಲ್ಲಿ ಮತ್ತು ಸಿಂಧೂ ಕಣಿವೆಯಲ್ಲಿ ಕಂಡುಬಂದಿದೆ. ಭಾರತಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ ಹರಪ್ಪ ಪೂರ್ವ ಸಂಸ್ಕೃತಿಯ ಸ್ಥಳ ಕಾಲಿಬಂಗನ್‌ ಎಂಬಲ್ಲಿ ಮಾತ್ರ ಕಂಡುಬಂದಿದೆ. ಹೊಸ ಪ್ರಾಚ್ಯ ಮತ್ತು ಸಂಶೋಧನಾ ದಾಖಲೆಗಳ ಆಧಾರದ ಮೇಲೆ ಹರಪ್ಪ ಪೂರ್ವ ಸಂಸ್ಕೃತಿಯ ಬೆಳವಣಿಗೆಯನ್ನು ನಾಲ್ಕು ಹಂತಗಳಲ್ಲಿ ಗುರುತಿಸಲಾಗಿದೆ. ಇದರ ಅತಿ ಮುಖ್ಯ ಸ್ಥಳಗಳು ಎಂದರೆ ಮುಂಡಿಗಾಕ್‌, ಮೆಹರ್ಘರ್, ಕಿಲಿಗುಲ್‌ ಮೊಹಮ್ಮದ್‌, ರಾನಘುಂಡಾಯ್‌, ಡಾಮ್ಟ್‌ಸಾದಾತ, ಅಂಜೀರಾ, ಕುಲ್ಲಿ, ಮೆಹಿ, ಕೋಟ್‌ ಡಿಜಿ, ಆಮ್ರಿ ಮತ್ತು ಇತರ ಸ್ಥಳಗಳು. ಆದರೆ ಹರಪ್ಪ ಪೂರ್ವ ಸಂಸ್ಕೃತಿಗಳು ಎಷ್ಟರಮಟ್ಟಿಗೆ ಹರಪ್ಪ ಸಂಸ್ಕೃತಿಗೆ ಪೂರವಾಗುವವು ಎಂಬುದನ್ನು ಇನ್ನೂ ಸರಿಯಾಗಿ ವಿವರಿಸಲಾಗದ ಪ್ರಶ್ನೆಯಾಗಿ ಉಳಿದಿದೆ. ಹರಪ್ಪ ಪೂರ್ವ ಸಂಸ್ಕೃತಿಯಲ್ಲಿ ಇದುವರೆಗೂ ಯಾವುದೇ ಬೃಹತ್ತಾದ ನಗರಗಳು ಅಥವಾ ವಸಾಹತುಗಳು ಕಂಡುಬಂದಿಲ್ಲ. ಸಾಮಾಜಿಕ ಸ್ತರಗಳಿರುವ ಸೂಚನೆಯೂ ಇಲ್ಲ. ಕುಶಲಕಲೆಯಲ್ಲೂ ಸಹ ಸಾಕಷ್ಟು ಪರಿಣತಿಯನ್ನು ಹೊಂದಿರುವುದು ಕಂಡುಬಂದಿಲ್ಲ. ಇತರ ವಸ್ತುಗಳ ಜೊತೆಯಲ್ಲಿ ಕಂಡುಬಂದಿರುವ ಮಣ್ಣಿನ ಪಾತ್ರೆಗಳು, ಪ್ರಬುದ್ಧ ಹರಪ್ಪ ಸಂಸ್ಕೃತಿಯ ಕಾಲದಲ್ಲೂ ಕಂಡುಬಂದಿರುವುದು ಹರಪ್ಪ ಪೂರ್ವ ಸಂಸ್ಕೃತಿಯ ಸಂಶೋಧನೆಯ ಒಂದು ಮಹತ್ವವಾದ ಅಂಶ. ಆಮ್ರಿ ಮತ್ತು ಕೋಟ್‌ ಡಿಜಿ ಎಂಬಲ್ಲಿ ಪ್ರಾಥಮಿಕ ಮಣ್ಣು ಗೋಡೆಗಳ ಉಲ್ಲೇಖಗಳು ಅತ್ಯಲ್ಪ ಪ್ರಮಾಣದಲ್ಲಿ ದೊರೆತಿವೆ. ಹರಪ್ಪ ಪೂರ್ವದ ಸಂಸ್ಕೃತಿಯಲ್ಲಿ ಬರಹ ವ್ಯವಸ್ಥೆ ಕಂಡುಬಂದಿಲ್ಲ.

ಹರಪ್ಪ ಪೂರ್ವದ ಸಂಸ್ಕೃತಿಯ ಅವಧಿಯನ್ನು ಕ್ರಿಸ್ತಪೂರ್ವ ೩೦೦೦ ದಿಂದ ೨೫೦೦ ವರ್ಷಗಳವರೆಗೆ ಎಂದು ಹೇಳಬಹುದು.

ಪಿಗಟ್‌ ಅವರು ಇತಿಹಾಸ ಪೂರ್ವಕಾಲಿನ ಸಂಸ್ಕೃತಿಗಳಲ್ಲಿ ಎರಡು ಗುಂಪುಗಳನ್ನು ಗುರುತಿಸಿದ್ದಾರೆ. ಒಂದು ಕಂದುಬಣ್ಣದ (buff ware) ಮಡಕೆಗಳಿಗೆ ಹೆಸರಾದದ್ದು. ಮತ್ತೊಂದು ಕೆಂಪು ಮಡಕೆಗಳಿಗೆ (red ware) ಹೀಗೆ ಗುರುತಿಸಲಾಗಿರುವ ಭಿನ್ನತೆ ನಿಷ್ಟಮಾಣವಾಗಿದ್ದಾದರೂ ವಿವಿಧ ಸಂಸ್ಕೃತಿಗಳ ಅಧ್ಯಯನ ಮಾಡಲು ಸಹಾಯಕವಾಗಿದೆ. ಇದನ್ನು ಕುರಿತು ಮತ್ತೆ ಪ್ರಸ್ತಾಪಿಸಲಾಗುವುದು.

. ಕಂದುಬಣ್ಣ ಮಡಕೆಯ ಸಂಸ್ಕೃತಿಗಳು (Buff Ware Cultures)

೧. ಕ್ವೆಟ್ಟಾ ಸಂಸ್ಕೃತಿ (Quetta Culture), (ಬೋಲಾನ್‌ ಕಣಿವೆಯಲ್ಲಿನ ನಿವೇಶನಗಳು ಪೈಕಿ)

೨. ಆಮ್ರಿನಾಲ್‌ ಸಂಸ್ಕೃತಿ (೨ ನಿವೇಶನಗಳು: ಮೊದಲನೆಯದು ಸಿಂಧ್‌ನಲ್ಲಿ, ಎರಡನೆಯದು ಬಲೂಚಿಸ್ತಾನದಲ್ಲಿಯ ನಾಲ್‌ಕಣಿವೆ ಪ್ರದೇಶದಲ್ಲಿ)

೩. ಕುಲ್ಲಿ ಸಂಸ್ಕೃತಿ (ದಕ್ಷಿಣ ಬಲೂಚಿಸ್ತಾನದ ಕೋಲ್ವಾದಲ್ಲಿಯ ನಿವೇಶನವೊಂದರಿಂದ)

ಬಿ. ಕೆಂಪು ಮಡಕೆಯ ಸಂಸ್ಕೃತಿಗಳು (Red Ware Cultures)

ಜಾಬ್‌ ಸಂಸ್ಕೃತಿ (Zhob Culture) (ಉತ್ತರ ಬಲೂಚಿಸ್ತಾನದ ಜಾಬ್‌ ಕಣಿವೆಯಲ್ಲಿಯ ನಿವೇಶನಗಳಿಂದ)

ದಕ್ಷಿಣ ಬಲೂಚಿಸ್ತಾನದಲ್ಲಿರುವ ನಿವೇಶನಗಳ ಸಂಖ್ಯೆ ಅತ್ಯಲ್ಪ. ಅವುಗಳಲ್ಲಿ ಕೆಲವು, ಕರಾವಳಿ ಮೇಲಿನ ವ್ಯಾಪಾರದ ಠಾಣೆಗಳು. ಅವುಗಳ ಪೈಕಿ ಸುತ್ಕಾಜಿನ್‌ ದೋರ್ ಸಾಕಷ್ಟು ದೊಡ್ಡ ಹಾಗೂ ಕೋಟೆಯಿಂದ ಆವರಿಸಲ್ಪಟ್ಟ ಪಟ್ಟಣವಾಗಿದೆ.

ಸುತ್ಕಾಜೆನ್ದೋರ್ ಮತ್ತು ಇತರ ಹರಪ್ಪಾ ನಿವೇಶನಗಳು

ಸುತ್ಕಾಜೆನ್‌ ದೋರ್ ದಲ್ಲಿನ ಪುರಾತನ ನಿವೇಶನ, ಬಲೂಚ್‌ ಮಕ್ರಾನ್‌, ಕರಾವಳಿಯ ಉತ್ತರಕ್ಕೆ ೫೬.೩೨ ಕಿ.ಮೀ. ದೂರದಲ್ಲಿದೆ. ಇಲ್ಲಿ ಮರಳುಗಲ್ಲಿನ ಎರಡು ಬೆಟ್ಟ ಸಾಲುಗಳಿದ್ದು, ಅವುಗಳ ಮಧ್ಯೆ ೧೫೫.೪೫ x ೧೧೪.೩ ಮೀ. ಗಳ ಒಂದು ಸಣ್ಣ ಪ್ರಸ್ಥಭೂವಿಯಿದೆ. ಇಲ್ಲಿಯ ಹರಪ್ಪಾ ನಿವೇಶನವನ್ನು, ಒರಟಾದ ಕಲ್ಲುಚಪ್ಪಡಿಗಳನ್ನು ಜೇಡಿ ಮಣ್ಣಿನಿಂದ ಸೇರಿಸಿ ಕಟ್ಟಲಾಗಿದ್ದ ಗೋಡಯಿಂದ ರಕ್ಷಿಸಲಾಗಿತ್ತು. ಗೋಡೆಯು ಬುಡದಲ್ಲಿ ೯ ಮೀ. ದಪ್ಪವಿದ್ದು, ಅದರ ಹೊರಮೈ ಒಳಭಾಗದತ್ತ ಕಡಿದಾಗಿ ಓರೆಯಾಗುತ್ತದೆ. ದಕ್ಷಿಣದ ಗೋಡೆಯ ಪಶ್ಚಿಮದ ತುದಿಯಲ್ಲಿಯ ಪ್ರವೇಶದ್ವಾರದ ಎರಡು ಪಾರ್ಶ್ವಗಳಲ್ಲಿ, ಎರಡು ಆಯತಾಕಾರದ ಗೋಪುಗಳಿದ್ದುದನ್ನು ಗಮನಿಸಲಾಗಿದೆ. ಈ ನಿವೇಶವನ್ನು ಪ್ರಥಮತಃ ೧೯೩೧ರಲ್ಲಿ ಪತ್ತೆಮಾಡಿದ ‘ಸರ್ ಆರೆಲ್‌ಸ್ಟೀನರು’, ಕೆಲವು ಗುಂಡಿಗಳನ್ನು ತೋಡಿದರಾದರೂ ಕೋಟೆಯೊಳಗೆ ಕಟ್ಟಡದ ಯಾವ ಅವಶೇಷಗಳೂ ಕಾಣಲಿಲ್ಲ. ಆದರೆ ೧೯೬೨ರಲ್ಲಿ ಡೇಲ್ಸ್‌ಅವರಿಂದ ನಡೆದ ಉತ್ಖನನದಿಂದ, ಪಟ್ಟಣದ ಎರಡು ವಿಭಾಗಗಳನ್ನು (ಕೋಟೆ ಪ್ರದೇಶ ಮತ್ತು ಕೆಳಪಟ್ಟಣ) ಗುರುತಿಸಲು ಸಹಾಯಕವಾಯಿತು. ಕೋಟೆ ಪ್ರದೇಶ ೭.೬೨ಮೀ. ಅಗಲದ ಕಲ್ಲಿನ ಗೋಡೆಯುಳ್ಳ ಕೋಟೆಯಿಂದ ಆವರಿಸಲ್ಪಟ್ಟಿದ್ದು. ಒಳಗಡೆಯಿಂದ ಹಸಿ ಇಟ್ಟಿಗೆಯ ವೇದಿಕೆಯಿಂದ ಅನುಬಂಧಿಸಲಾಗಿದೆ. ಕೋಟೆಯೊಳಗಿನ ಪಟ್ಟಣದಲ್ಲಿ, ಹರಪ್ಪಾ ಜನರ ವಸತಿಯ ಮೂರು ಹಂತಗಳನ್ನು ಡೇಲ್ಸ್‌ ಗುರುತಿಸಿದ್ದಾರೆ. ಅವರ ಪ್ರಕಾರ, ತೀರಪ್ರದೇಶದಿಂದ ದೂರ ಸರಿದಿರುವುದರಿಂದ ಇಂದು ಸಮುದ್ರ ಸಂಪರ್ಕವಿಲ್ಲದಿರುವ ಸುತ್ಕಾಜೆನ್‌ ದೋರ್, ಅಂದು ಮೂಲತಃ ಒಂದು ರೇವೆನಿಸಿತ್ತು.

ಷಾದಿ ಕೌರ್ ಕಣಿವೆಯ ಮೇಲ್ಭಾಗದಲ್ಲಿ ಹಾಗೂ ಪಾಸ್ನಿಯ ಉತ್ತರಕ್ಕೆ ೧೨.೮೭ ಕಿ.ಮೀ. ದೂರದಲ್ಲಿರುವ ಸೋತ್ಕಾಕೋಹ್‌ ಎಂಬ ಹರಪ್ಪಾ ನಿವೇಶನವನ್ನು ಡೇಲ್ಸ್‌ಅವರು ೧೯೬೨ರಲ್ಲಿ ಪತ್ತೆ ಮಾಡಿದರು. ಅವರ ಪ್ರಕಾರ, ಅದೂ ಕೂಡ ಕೋಟೆಯುಳ್ಳ ರೇವು ಪಟ್ಟಣವಾಗಿತ್ತು. ಇಲ್ಲಿಯ ಉತ್ಖನನದಲ್ಲಿ ದೊರೆತ ಮಡಕೆಗಳ ಪುರಾವೆ, ಹರಪ್ಪಾ ಜನರು ಇಲ್ಲಿ ವಾಸವಾಗಿದ್ದುದನ್ನು ಸೂಚಿಸುತ್ತದೆ.

ಕ್ವೆಟ್ಟಾ ಮತ್ತು ಜಾಬ್‌ಕಣಿವೆಗಳಲ್ಲಿ ಹರಪ್ಪಾ ನೆಲೆಗಳ ಅವಶೇಷಗಳು ಸಿಕ್ಕಿಲ್ಲವೆಂದೇ ಹೇಳಬೇಕು. ರಂಧ್ರವುಳ್ಳ ಪಾತ್ರೆಗಳ ಹಾಗೂ ಕೈ ಬೆರಳಿನುಗುರಿನಿಂದ ಕೊರೆದ (thumb-nail incised patterns) ನಮೂನೆಗಳುಳ್ಳ ಮಡಕೆ ಚೂರುಗಳನ್ನು, ಫೇರ್ ಸರ್ವಿಸ್‌ಅವರು ಕ್ವೆಟ್ಟಮಿರಿಯ ಮತ್ತು ದಾಂಬ್‌ ಸದಾತ್‌ III (damb sadat period III) ಸ್ತರಗಳಲ್ಲಿ ಕಂಡಿದ್ದರು. ಡಾಬರ್ ಕೋಟ್‌, ಉತ್ತರ ಬಲೂಚಿ ಬೆಟ್ಟಗಳ ತಪ್ಪಲಿನ ಅತಿ ದೊಡ್ಡದಾದೊಂದು ಹರಪ್ಪಾ ನೆಲೆ, ೧೯೨೯ರಲ್ಲಿ ಇದನ್ನು ಪತ್ತೆ ಮಾಡಿದ ಸ್ಟೀನ್‌ ಅವರು, ಇದು ಹರಪ್ಪಾ ಜನರ ವ್ಯಾಪಾರದ ಠಾಣೆಯಾಗಿತ್ತೆಂದು ಪರಿಗಣಿಸಿದರು. ಇಲ್ಲಿಯ ದಿಬ್ಬ ೩೨ಮೀ. ಗಿಂತ ಎತ್ತರವಾಗಿದೆ. ಇಲ್ಲಿ ಹರಪ್ಪಾ ಪೂರ್ವ ಕಾಲೀನ ಸ್ತರಗಳ ಮೇಲೆ, ಹರಪ್ಪಾದ ನಿಕ್ಷೇಪಗಳು ಕಂಡುಬಂದವು. ವಿಸ್ಮಯವೆಂದರೆ, ಡಾಬರ್ ಕೋಟದಲ್ಲಿ ಬಳಸಿದ್ದ ಸುಟ್ಟ ಇಟ್ಟಿಗೆಗಳ ವಿಸ್ತ್ರೀರ್ಣ ೬೧ x ೪೦.೫ x ೧೦.೫ ಸೆಂ. ಮೀ. ಹಾಗೂ ೫೩ x ೪೦.೫ x ೭.೫ ಸೆಂ. ಮೀ. ಗಳು. ಇಲ್ಲಿಯ ಉತ್ಖನನದಲ್ಲಿ ಕಂಡುಬಂದ ಪ್ರಮುಖ ಹರಪ್ಪಾ ಮಣ್ಪಾತ್ರೆ ಮಾದರಿಗಳೆಂದರೆ, ಜಾಡಿಗಳು ಮತ್ತು ಪೀಠದ ಮೇಲಿನ ತಟ್ಟೆಗಳು.

ಮಧ್ಯ ಬಲೂಚಿಸ್ತಾನದಲ್ಲಿಯ ಇನ್ನಿತರ ನಿವೇಶನಗಳ ಪೈಕಿ, ಮಾಷ್ಕೈ ಮತ್ತು ನದಿ ದಡದ ಮೇಲಿನ ಮೇಹಿ ಎಂಬಲ್ಲಿಯ ಕುಲ್ಲಿ ಸಂಸ್ಕೃತಿಯ ನಿವೇಶನ. ಇಲ್ಲಿ ಸಿಗುವ ಹರಪ್ಪಾ ಹಾಗೂ ಹರಪ್ಪಾಪೂರ್ವ, ಈ ಎರಡೂ ಶೈಲಿಯ ಮಣ್ಪಾತ್ರೆಗಳಿಗೆ ಹೆಸರಾಗಿದೆ. ಘೋಷ್‌ಅವರು ಮೇಹಿಯ ಮಣ್ಪಾತ್ರೆಗಳ ರಚನೆಯನ್ನು ಪರೀಕ್ಷಿಸಿದ್ದು, ಕೆಲವು ಸೋಥಿ ಆಕೃತಿಗಳು (sothi motifs) ಕಂಡುಬಂದಿವೆ. ಕುಲ್ಲಿಯೂ ಕೂಡ ಹರಪ್ಪಾದ ಸಮಕಾಲೀನವಿದ್ದಂತೆ ಕಂಡುಬಂದರೂ, ರಂಧ್ರಗಳುಳ್ಳ ಜಾಡಿ ಮತ್ತು ಪೀಠದ ಮೇಲಿನ ತಟ್ಟೆಗಳನ್ನು ಬಿಟ್ಟರೆ, ಮತ್ಯಾವ ಮಣ್ಪಾತ್ರೆ ಮಾದರಿಯೂ ಸ್ಪಷ್ಟವಾಗಿ ಹರಪ್ಪಾದಂತಿಲ್ಲ. ಕುಲ್ಲಿಯಲ್ಲಿ ದೊರೆತ ಸುಟ್ಟ ಜೇಡಿಯ ಸ್ತ್ರೀ ಮೂರ್ತಿಗಳು, ಲೋಥಲ್‌ದಲ್ಲಿಯ ಮೂರ್ತಿಯೊಂದಕ್ಕೆ ಸಾಮ್ಯ ಹೊಂದಿರುವುದು ಗಮನಾರ್ಹ.

ಕೊನೆಯದಾಗಿ, ಆಗ್ನೇಯ ಬಲೂಚಿಸ್ತಾನದ ಲಾಸ್‌ಬೇಲಾ ಜಿಲ್ಲೆಯಲ್ಲಿ, ಫೇರ್ ಸರ್ವೀಸ್‌ಅವರು ಪತ್ತೆ ಮಾಡಿದ ಎಡಿತ್‌ಶಹರ್ ದಿಬ್ಬಗಳ ಸಮೂಹವನ್ನು ಹೆಸರಿಸಬಹುದು. ಅವರ ಪ್ರಕಾರ ‘ಕಾಂಪ್ಲೆಕ್ಸ್‌ಎ’ದಲ್ಲಿ* ಕೈ ಬೆರಳುಗಳಿಂದ ಕೊರೆದ ನಮೂನೆಗಳಿಂದ ಅಲಂಕೃತವಾದ ಮಣ್ಪಾತ್ರೆಗಳು, ಸುಟ್ಟ ಜೇಡಯ ಆಟಿಗೆ ಗಾಡಿಗಳು ಮತ್ತು ಬಿಲ್ಲೆಗಳು ಇವೆಲ್ಲಾ ಹರಪ್ಪಾ ನಿವೇಶನಗಳ ವಿಶೇಷ ಲಕ್ಷಣಗಳೇ. ಇವು ನಾಲ್‌ ಸಂಸ್ಕೃತಿಯ ನಿಕ್ಷೇಪದ ಮೇಲೆ ಕಂಡುಬಂದಿವೆ. ಇಲ್ಲಿಯ ಇನ್ನಿತರ ಮಡಕೆಗಳೆಂದರೆ, ಕಂದುಬಣ್ಣದ ಮೇಲೆ ಕಪ್ಪು ಹಾಗೂ ಕೆಂಪು ಬಣ್ಣದ ಮೇಲೆ ಕಪ್ಪು ಬಣ್ಣದವು. ಕುಲ್ಲಿ ಶೈಲಿಯಲ್ಲಿ ಚಿತ್ರಿತವಾದವು ಎಡಿತ್‌ ಶಹರಿನ ಗುಡ್ಡಗಳಿಂದ ದೊರೆತ ಪುರಾತತ್ವ ಮಾಹಿತಿಯು, ಕುಲ್ಲಿಯಲ್ಲಿಯ ಪುರಾವೆಯನ್ನು ಸ್ಥಿರೀಕರಿಸುತ್ತದೆ. ಕುಲ್ಲಿಯ ಜನರು ಮೊದಲೇ ನೆಲಿಸಿದ್ದ ದಕ್ಷಿಣ ಬಲೂಚಿಸ್ತಾನವನ್ನು, ಹರಪ್ಪಾ ಜನರು ಪಶ್ಚಿಮಾಭಿಮುಖವಾಗಿ ಪ್ರವೇಶಿಸಿದರು ಎಂಬುದನ್ನು ಸೂಚಿಸುತ್ತದೆ.* ಉತ್ಖನನ ಮಾಡಿದ ತಜ್ಞರು ಮತ್ತು ಅಧ್ಯಯನಕಾರರು ಅಧ್ಯಯನದ ಅನೂಕೂಲಕ್ಕೋಸ್ಕರ ಉತ್ಖನನ ಸಂದರ್ಭದಲ್ಲಿ ದೊರೆತ ವಸ್ತುಗಳನ್ನು ವರ್ಗೀಕರಿಸಿ ನೀಡಿದ ಸಂಖ್ಯೆಗಳನ್ನು ಪಠ್ಯದಲ್ಲಿ ನೀಡಲಾಗಿದೆ. ಈ ಬಗೆಯ ಸಂಖ್ಯೆಗಳನ್ನು/ಕ್ರಮಗಳನ್ನು ಈ ಅಧ್ಯಾಯದ ಉದ್ದಕ್ಕೂ ಕಾಣಬಹುದಾಗಿದೆ ಎಂಬುದನ್ನು ಗಮನಿಸಬೇಕು – ಸಂ.