ನವಶಿಲಾಯುಗ ಸಂಸ್ಕೃತಿ

ನಿಯೋಲಿಥಿಕ್‌ ಎನ್ನುವ ಗ್ರೀಕ್‌ಪದವು ನವ ಶಿಲಾಯುಗ ಎಂಬ ಅರ್ಥವನ್ನು ಕೊಡುತ್ತದೆ. ಸ್ಥಿರ ಜೀವನ ಕೃಷಿಯ ಅವಲಂಬನೆ ಮತ್ತು ಪ್ರಾಣಿ ಸಾಕಾಣಿಕೆಯ ಪ್ರವೃತ್ತಿಗಳು ಮಾನವನಲ್ಲಿ ಉದಯವಾದಂದಿನಿಂದ ನೂತನ ಶಿಲಾಯುಗದ ಪ್ರಾರಂಭವನ್ನು ಗುರುತಿಸಲಾಗುತ್ತದೆ. ವಾಸ್ತವದಲ್ಲಿ ನೂತನ ಶಿಲಾಯುಗದ ಸಾಂಸ್ಕೃತಿಕ ಘಟ್ಟವನ್ನು  ಗುರುತಿಸುವಾಗ ಆ ಸಂಸ್ಕೃತಿಯ ವಿಶಿಷ್ಟ ಉಪಕರಣವನ್ನು ಅದರ ಲಕ್ಷಣಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದರ ಉಜ್ಜಿ ಉಜ್ಜಿ ನಯಮಾಡಿದ ಮೇಲ್ಮೈ ಯುಳ್ಳ ಕೊಡಲಿಗಳು, ಕೈಬಾಚಿಗಳು, ಕಲ್ಲಿನ ಆಯುಧಗಳು, ಉಳಿಗಳು ಮುಂತಾದವುಗಳನ್ನು ಮರದ ಹಿಡಿಕೆಗಳಿಂದ ಗಟ್ಟಿಯಾಗಿ ಜೋಡಿಸಿಮಾಡಿದ  ಉಪಕರಣಗಳು ಇತರೆ ಸಂಸ್ಕೃತಿಗಳಿಗಿಂತ ಭಿನ್ನವಾಗಿ ಕಾಣಿಸುತ್ತವೆ. ಹೊಳೆ ಹಳ್ಳಗಳ ದಂಡೆಯ ಮೇಲಿನ ಫಲವತ್ತಾದ ಜಮೀನುಗಳ ಹತ್ತಿರ ನೆಲೆಯೂರಿದ ಜೀವನ, ಕೃಷಿಯ ಅವಲಂಬನೆ, ಜೊತೆಗೆ ಸೂಕ್ಷ್ಮ ಶಿಲಾಯುಗದ ಹಂತದಲ್ಲಿ ಈಗಾಗಲೇ ಪ್ರಾರಂಭವಾಗಿದ್ದ ಕುರಿ, ಮೇಕೆ, ಎತ್ತು ಮತ್ತು ದನಗಳನ್ನು ಸಾಕುವುದು, ಸಾಮಾನ್ಯವಾಗಿ ಬೂದು ಮಣ್ಣಿನ ಸುಟ್ಟಿರದ ಪಾತ್ರೆಗಳನ್ನು ತಯಾರಿಸುವುದು ಒಂದು ರೀತಿಯ ಪರಸ್ಪರ ಅವಲಂಬನೆಯ ಆಧಾರದ ಮೇಲೆ ಒಟ್ಟಾಗಿ ಇರುವುದು ನವ ಶಿಲಾಯುಗದ ಸಂಸ್ಕೃತಿಯ ಲಕ್ಷಣಗಳೆಂದು ಗುರುತಿಸಬಹುದು: ಈ ಎಲ್ಲಾ ಬದಲಾವಣೆಗಳು ಇದ್ದಕಿದ್ದಂತೆ ಅದ ಬದಲಾವಣೆಗಳಲ್ಲ ಪರಿಸರದ ಬದಲಾವಣೆ, ಮಾನವ, ಪ್ರಾಣಿಗಳು ಮತ್ತು ಭೂಮಿ ಇವುಗಳ ನಡುವೆ ಸ್ಥಾಪನೆಯಾದ ಹೊಸ ಬಗೆಯ ಸಂಬಂಧ ಮಾನವ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾದವು. ಹೆಚ್ಚುತ್ತಿದ್ದ ಜನಸಂಖ್ಯೆಯು ಕೃಷಿಯ ಅವಲಂಬನೆಗೆ ಉತ್ತೇಜಿಸಿರಬಹುದು. ದೀರ್ಘ ಅವಧಿಗಲ್ಲದಿದ್ದರೂ ಸ್ಪಲ್ಪ ದಿನಗಳ ಮಟ್ಟಿಗಾದರೂ ಆಹಾರ ಶೇಖರಿಸುವ ಅವಶ್ಯಕತೆ ಉಂಟಾಗಿ ಮಡಿಕೆಗಳ ನಿರ್ಮಾಣಕ್ಕೆ ಉತ್ತೇಜಿಸಿರಬಹುದು. ಈ ಎಲ್ಲ ಬೆಳವಣಿಗೆಗಳು ಸ್ಥಿರ ಕೃಷಿ ನಡೆಸಲು ಕಾರಣಗಳಾಗಿದ್ದಿರಬಹುದು.

ಹಂಚಿಕೆ : ನವ ಶಿಲಾಯುಗದ ಸಂಸ್ಕೃತಿಗಳು ಆರು ವಿಭಿನ್ನ ಭೌಗೋಳಿಕ ಪ್ರದೇಶಗಳಲ್ಲಿ ಗುರುತಿಸಲಾಗಿದೆ. ಈ ವಿಭಾಗವನ್ನು ಅವುಗಳ ಪರಿಸರ ಮತ್ತು ಅವುಗಳಲ್ಲಿ ದೊರೆತ ಸಾಂಸ್ಕೃತಿಕ ಕುರುಹುಗಳಾನ್ನಾಧರಿಸಿ ಮಾಡಲಾಗಿದೆ. ಅವುಗಳೆಂದರೆ:

. ಉತ್ತರದ ಪ್ರದೇಶ (ಕಣಿವೆಯನ್ನೊಳಗೊಂಡಂತೆ)

. ವಿಂಧ್ಯಾ ಪ್ರದೇಶ (ಬೇತಾನ್ ಕಣಿವೆ ಮತ್ತು ವಿಂಧ್ಯಾ ಪ್ರಸ್ಥ ಭೂಮಿಯನ್ನೊಳಗೊಂಡಂತೆ)

. ಮಧ್ಯ ಪೂರ್ವ ಪ್ರದೇಶ (ಉತ್ತರ ಬಿಹಾರವನ್ನೊಳಗೊಂಡಂತೆ)

. ಈಶಾನ್ಯ ಭಾಗ (ಅಸ್ಸಾಂ ಮತ್ತು ಹಿಮಾಲಯ ಪ್ರದೇಶವನ್ನೊಳಗೊಂಡಂತೆ)

. ಪೂರ್ವ ಭಾಗ (ಬೆಲಾನ್, ಬಿಹಾರ್ ಮತ್ತು ಒರಿಸ್ಸಾ ಪ್ರದೇಶಗಳನ್ನೊಳಗೊಂಡಂತೆ)

. ದಕ್ಷಿಣ ಪ್ರದೇಶ (ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾದು ಪ್ರದೆಶಗಳನ್ನೊಳಗೊಂಡಂತೆ)

ಕಾಲ : ಪ್ರಪಂಚದ ಇತಿಹಾಸದಲ್ಲಿ ನವ ಶಿಲಾಯುಗದ ಸಂಸ್ಕೃತಿ ಕ್ರಿ. ಪೂ. ೯೦೦೦ದಲ್ಲಿ ಆರಂಭವಾಯಿತು. ಆದರೆ ಭಾರತೀಯ ಉಪಖಂಡದಲ್ಲಿ ಬಲೂಚಿಸ್ತಾನ ಮಹೆರ್ಘರ್ ಮಾತ್ರ ಕ್ರಿ. ಪೂ. ೭೦೦೦ದ್ದು, ವಿಂಧ್ಯಾ ಪರ್ವತ ಪ್ರದೇಶದ ಉತ್ತರ ಅಂಚಿನ ನವ ಶಿಲಾಯುಗದ ನಿವೇಶಗಳ ಕಾಲ ಕ್ರಿ. ಪೂ. ೫೦೦೦ ಎಂದು ಗುರುತಿಸಿದರೆ ದಕ್ಷಿಣ ಭಾರತದ ನವಶಿಲಾಯುಗದ ಕಾಲನ್ನು ಕ್ರಿ. ಪೂ. ೨೦೦೦, ರಿಂದ ಕ್ರಿ. ಪೂ. ೧೦೦೦, ದವರೆಗೆ ಗುರುತಿಸಲಾಗಿದೆ.

ಪ್ರಮುಖ ನೆಲೆಗಳು

. ಉತ್ತರ ಭಾರತದ ಪ್ರದೇಶ : ಈ ಪ್ರದೆಶವು ಮುಖ್ಯವಾಗಿ ಕಾಶ್ಮೀರ ಕಣಿವೆಯನ್ನು ಕೇಂದ್ರೀಕರಿಸಿಕೊಂಡಿತ್ತು. ಆಗಾಗ ಪ್ರವಾಹಗಳಿಗೆ ತುತ್ತಾಗುತ್ತಿದ್ದ ಮತ್ತು ಸರೋವರಗಳಿಂದ ಕೂಡಿದ್ದ ಕಾರೆವಾಸ್ (karewas) ಪ್ರಾಂತ್ಯದಲ್ಲಿ ನೂತನ ಶಿಲಾಯುಗದ  ಸಂಸ್ಕೃತಿಗೆ ಸಂಬಂಧಿಸಿದ ೩೬ ನೆಲೆಗಳನ್ನು ಅನ್ವೇಷಿಸಲಾಗಿದೆ. ಇವುಗಳಲ್ಲಿ ಬುರ್ಜಹಾಂ (burzaham) ಮತ್ತು ಗುಫ್‌ಕ್ರಾಲ್ (gufkral) ಮುಖ್ಯವಾದವು. ಶ್ರೀನಗರಕ್ಕೆ ವಾಯುವ್ಯದಲ್ಲಿ ೧೬ ಕಿ. ಮೀ. ದೂರದಲ್ಲಿರುವ  ಬುರ್ಜಹಾಂ (burzaham = the place of birth) ಪ್ರದೇಶವನ್ನು ಪ್ರಾರಂಭದಲ್ಲಿ ಡಿ. ಟೆರ್ರಾ ಮತ್ತು ಪೀಟರ್ಸ್‌ನ್ ನಂತರ ೧೯೬೦ – ೭೧ ಅವಧಿಯಲ್ಲಿ ಖಝಾನ್ಚಿ (khazanchi) ಉತ್ಖನನ ಮಾಡಿದ್ದಾರೆ. ಈ ಉತ್ಖನನಗಳಿಂದ ಮೂರು ಬಗೆಯ ಸಾಂಸ್ಕೃತಿಕ ಅನುಪೂರ್ವಿಯನ್ನು ಕಂಡುಕೊಳ್ಳಲಾಗಿದೆ. ಅವು ಕ್ರಮವಾಗಿ ನೂತನ ಶಿಲಾಯುಗ, ಬೃಹತ್‌ ಶಿಲಾ ಸಮಾಧಿಯುಗ ಮತ್ತು ಐತಿಹಾಸಿಕ ಕಾಲ. ಶ್ರೀನಗರಕ್ಕೆ ನೈರುತ್ಯದಲ್ಲಿ ೪೧ ಕಿ.ಮೀ. ದೂರದಲ್ಲಿರುವ ಗುಫ್‌ಕ್ರಾಲ್‌(gufkral = the cave of potter) ನಿವೇಶನವನ್ನು ಎ. ಕೆ. ಶರ್ಮ ೧೯೮೨ರಲ್ಲಿ ಉತ್ಖನನ ಮಾಡಿದ್ದಾರೆ. ಇಲ್ಲಿಯೂ ಮೇಲಿನ ಸಾಂಸ್ಕೃತಿಕ ಅನುಪೂರ್ವಿಯನ್ನೇ ಪ್ರತಿಬಿಂಬಿಸುತ್ತದೆ.

. ವಿಂಧ್ಯಾ ಪ್ರದೇಶ : ಈ ಪ್ರದೇಶವು ಬೇಲಾನ್‌ಕಣಿವೆ ಮತ್ತು ವಿಂಧ್ಯಾ ಪ್ರಸ್ಥಭೂಮಿಯನ್ನು ಒಳಗೊಂಡಿದೆ. ಈ ಪ್ರದೇಶದಲ್ಲಿ ಮುಖ್ಯವಾಗಿ ೩ ನಿವೇಶನಗಳನ್ನು/ನೆಲೆಗಳನ್ನು ಉತ್ಖನನ ಮಾಡಲಾಗಿದೆ. ಅವುಗಳೆಂದರೆ, ಚೂಪಣಿ ಮಾಂಡೊ, ಕೊಲ್ಡಿಹವ ಮತ್ತು ಮಹಗಡ್‌. ಈ ನಿವೇಶನಗಳಲ್ಲಿ ಬೇಟೆಗಾರಿಕೆ ಮತ್ತು ಆಹಾರ ಸಂಗ್ರಹಿಸುವ ಹಂತದಿಂದ ಸ್ಥಿರ ಕೃಷಿ ಜೀವನ ನಡೆಸುವ ಹಂತದವರೆಗೆ ಅವಶೇಷಗಳು ದೊರೆಯುತ್ತವೆ. ಚೂಪಣಿ ಮಾಂಡೊ ಪ್ರದೇಶವು ಬೇಲಾನ್‌ ನದಿಯ ಎಡದಂಡೆಯ ಮೇಲಿದೆ. ಇಲ್ಲಿ ಮೂರು ರೀತಿಯ ಸಾಂಸ್ಕೃತಿ ವಲಯಗಳು ಕಂಡುಬರುತ್ತದೆ. ಅವುಗಳೆಂದರೆ ಹಳೇ ಶಿಲಾಯುಗ, ಪ್ರಾರಂಭಿಕ ಸೂಕ್ಷ್ಮ ಶಿಲಾಯುಗ ಮತ್ತು ಪ್ರಾರಂಭಿಕ ನವ ಶಿಲಾಯುಗದ ಕುರುಹುಗಳು ಕಂಡುಬರುತ್ತವೆ. ಕೊಲ್ಡಿಹವಾ ಮತ್ತು ಮಹಗಡ್‌ನಿವೇಶನಗಳು ಬೇಲಾನ್‌ನದಿಯ ಬಲದಂಡೆಯ ಮೇಲಿದೆ ಕೋಲ್ಡಿಹವಾ ನಿವೇಶನದಲ್ಲಿ ನೂತನ ಶಿಲಾಯುಗ, ತಾಮ್ರ ಶಿಲಾಯುಗ ಮತ್ತು ಕಬ್ಬಣಯುಗಕ್ಕೆ ಸೇರಿದ ಕುರುಹುಗಳು ದೊರೆಯುತ್ತವೆ. ಇಲ್ಲಿನ ಮಡಿಕೆಗಳಲ್ಲಿ ಅಕ್ಕಿ ಬಳಕೆಯ ಕುರುಹುಗಳು ದೊರೆತಿದ್ದು ಸಿ-೧೪ ಕಾಲಗಣನೆಯಿಂದ. ಇದನ್ನು ಭಾರತ ಉಪಖಂಡದಲ್ಲಿ ಅಕ್ಕಿ ಕೃಷಿಯ ಪ್ರಾಥಮಿಕ ಕುರುಹು ಇದಾಗಿದೆ ಎಂದು ಅಭಿಪ್ರಾಯಪಡಲಾಗಿದೆ.

. ಮಧ್ಯ ಪೂರ್ವ ಪ್ರದೇಶ : ಬಿಹಾರ್ ರಾಜ್ಯದ ಉತ್ತರ ಭಾಗದಲ್ಲಿ ಕಂಡುಬರುವ ಈ ಪ್ರದೇಶದಲ್ಲಿ ಎರಡು ನಿವೇಶನಗಳನ್ನು ಉತ್ಖನನ ಮಾಡಲಾಗಿದೆ. ಅವುಗಳೆಂದರೆ ಚಿರಾಂಡ್‌ ಮತ್ತು ಚೆಚ್ಚರ್, ಚಿರಾಂಡ್‌ ನಿವೇಶನವು ಸರನ್‌ ಜಿಲ್ಲೆಯ ಗಂಗಾ ಮತ್ತು ಘಗ್ಗರ್ ನದಿಗಳ ಸಂಗಮ ಪ್ರದೇಶದಲ್ಲಿ ಕಂಡುಬರುತ್ತದೆ. ಚೆಚ್ಚರ್‌ನಿವೇಶನ ವೈಶಾಲಿ ಜಿಲ್ಲೆಯ ಗಂಗಾನದಿಯ ಉತ್ತರ ಭಾಗದಲ್ಲಿ ಕಂಡುಬರುತ್ತದೆ. ಈ ನಿವೇಶನಗಳ ಉತ್ಖನನಗಳಿಂದ ನವಶಿಲಾಯುಗ, ತಾಮ್ರ ಶಿಲಾಯುಗ ಮತ್ತು ಪ್ರಾರಂಭಿಕ ಐತಿಹಾಸಿಕ ಕಾಲವನ್ನು ಗುರುತಿಸಲಾಗಿದೆ ನವ ಶಿಲಾಯುಗಕ್ಕೆ ಸಂಬಂಧಿಸಿದ ಶಿಲೆ ಮತ್ತು ಮೂಳೆಗಳಿಂದ ತಯಾರಿಸಿದ ಆಯುಧೋಪಕರಣಗಳನ್ನು ಯಥೇಚ್ಚವಾಗಿ ಬಳಸಿರುವುದು ಕಂಡುಬರುತ್ತದೆ. ಅಲ್ಲದೆ ಟೆರ್ರಾಕೊಟ್ಟದಿಂದ ಮಾಡಿದ ಮಣಿಗಳ ಬಳೆಗಳು ಹಾಗೂ ಪಕ್ಷಿ ಮತ್ತು ಹಾವಿನ ಸಣ್ಣ ಪ್ರತಿಮೆಗಳು ದೊರಕುತ್ತವೆ.

. ಈಶಾನ್ಯ ಭಾಗ : ಅಸ್ಸಾಮಿನ ಉತ್ತರ ಭಾಗದ ಕಚಾರ್ ಬೆಟ್ಟ ಪ್ರದೇಶದಲ್ಲಿನ ದಾವೋಜಲಿ ಹಾಡಿಂಗ್‌ ಹಾಗೂ ಶಿಲ್ಲಾಂಗ್‌ ಪ್ರಸ್ಥಭೂಮಿಯ ಸರುತರು, ಮರಕ್ಡೋಲ; ಮತ್ತು ಮೇಘಾಲಯದ ಗಾರೋ ಬೆಟ್ಟ ಪ್ರದೇಶದಲ್ಲಿನ ಸೆಲ್‌ಬಲ್ಗಿರಿ ಇತ್ಯಾದಿ ಪ್ರದೇಶಗಳನ್ನು ಉತ್ಖನನ ಮಾಡಲಾಗಿದೆ.

. ಪೂರ್ವಭಾಗ : ಈ ಪ್ರದೇಶವು ಬೆಂಗಾಲ್‌, ಬಿಹಾರ್ ಮತ್ತು ಒರಿಸ್ಸಾದ ಪ್ರದೇಶಗಳನ್ನು ಒಳಗೊಂಡಿದೆ. ಈ ಭಾಗದಲ್ಲಿ ನೂತನ ಶಿಲಾಯುಗದ ಮೊದಲ ಕುರುಹುಗಳನ್ನು ಕ್ಯಾಪ್ಟನ್‌ ಬೀಚಿಂಗ್‌ ೧೮೬೮ರಲ್ಲಿ ಬಿಹಾರದ ಸಿಂಗಭೂಮ್‌ನಲ್ಲಿ ಕಂಡುಹಿಡಿದರು. ಅಲ್ಲಿಂದ ಮುಂದೆ ಸಂತಾಂಪರ್ಗಣ, ಚಕ್ರಾಧರ ರಾಂಚಿ ಇತ್ಯಾದಿ ಪ್ರದೇಶಗಳಲ್ಲಿ ಇದರ ಅವಶೇಷಗಳನ್ನು ಕಂಡುಹಿಡಿಯಲಾಯಿತು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಒರಿಸ್ಸಾದ ಮಯೂರ್ ಭಂಜ್‌ ಜಿಲ್ಲೆಯ ಕುಚ್ಕೆ ಮತ್ತು ಬಿಹಾರಿನ ಸಿಂಘ ಭೂಮಿ ಪ್ರದೇಶದಲ್ಲಿನ ಬರುದಿ. ಇವು ಕ್ರಮವಾಗಿ ೧೯೬೯ ಮತ್ತು ೧೯೬೭ರಲ್ಲಿ ಉತ್ಖನನವಾಯಿತು.

. ದಕ್ಷಿಣ ಭಾಗ : ಈ ಪ್ರದೇಶವು ದಕ್ಷಿಣ ಭಾರತವನ್ನು ಆವರಿಸಿದೆ. ಆಂಧ್ರಪ್ರದೇಶದ ಪಲವೋವ್‌, ಉತ್ನೂರ್, ನಾಗರ್ಜುನಕೊಂಡ ಮತ್ತು ರಾಮಪುರಂ ಪ್ರದೇಶಗಳಲ್ಲಿ : ಕರ್ನಾಟಕದ ಕೊಡೇಕಲ್‌, ತೇರದಾಳ್‌, ಮಸ್ಕಿ, ಪಿಕ್ಲಿಹಾಳ್‌, ಹಳ್ಳೂರು, ತೆಕ್ಕಲಕೋಟ, ಕಪ್ಪಗಲ್‌, ಸಂಗನಕಲ್ಲು, ಬ್ರಹ್ಮಗಿರಿ, ಟಿ. ನರಸೀಪುರ ಮತ್ತು ಹೆಮ್ಮಿಗೆ ಪ್ರದೇಶಗಳಲ್ಲಿ : ತಮಿಳನಾಡಿನ ಪೈಯಂಪಳ್ಳಿ ಮುಂತಾದ ಪ್ರದೇಶಗಳಲ್ಲಿ ನೂತನ ಶಿಲಾಯುಗಕ್ಕೆ ಸಂಬಂಧಿಸಿದ ಅವಶೇಷಗಳು ದೊರೆಯುತ್ತವೆ. ೧೯೪೭ರಲ್ಲಿ ಬ್ರಹ್ಮಗಿರಿಯನ್ನು ಮಾರ್ಟಿಮರ್ ವ್ಹೀಲರ್ ರವರು, ೧೯೪೮ರಲ್ಲಿ ಸಂಗನಕಲ್ಲನ್ನು ಸುಬ್ಬರಾವ್‌ರವರು, ೧೯೫೭ರಲ್ಲಿ ಮಸ್ಕಿಯನ್ನು ಬಿ. ಕೆ. ಧಾಪರ್ ರವರು, ೧೯೬೦ರಲ್ಲಿ ಪಿಕ್ಲಿಹಾಳ್‌ಮತ್ತು ೧೯೬೧ರಲ್ಲಿ ಉತ್ನೂರ್ ಗಳನ್ನು ಅಲ್‌ಚಿನ್‌ರವರು, ೧೯೭೫ರಲ್ಲಿ ನಾಗಾರ್ಜುನಕೊಂಡ ಪ್ರದೇಶವನ್ನು ಸರ್ಕಾರ್ ರವರು ಉತ್ಖನನ ಮಾಡಿದ್ದಾರೆ.

ಈ ಭಾಗದಲ್ಲಿನ ನವ ಶಿಲಾ ಯುಗದ ಸಂಸ್ಕೃತಿ ವಿಕಾಸವನ್ನು ಎರಡು ಹಂತಗಳಲ್ಲಿ ಗುರುತಿಸಲಾಗಿದೆ. ಮೊದಲ ಹಂತದ ಸಂಸ್ಕೃತಿಯಲ್ಲಿ ಸೇಲಂ, ಧರ್ಮಪುರಿ, ದಕ್ಷಿಣ ಅರ್ಕಾಟ್‌ಪ್ರದೇಶದ ಶೆವ್‌ರಾಯ್‌ಬೆಟ್ಟಶ್ರೇಣಿ ನಾಗಾರ್ಜುನಕೊಂಡ ಮತ್ತು ಉತ್ನೂರ್ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇಲ್ಲಿ ಸೂಕ್ಷ್ಮ ಶಿಲಾಯುಗದ ಕುರುಹುಗಳ ದೊರೆತಿರುವುದರಿಂದ ನವ ಶಿಲಾಯುಗ ಇದರ ಮುಂದುವರಿದ ಸಂಸ್ಕೃತಿಯಾಗಿದೆ. ಕೈಯಿಂದ ಮಾಡಿದ ಮಡಿಕೆಗಳು ದೊರೆಯುತ್ತದೆ. ಮಡಿಕೆಗಳು ಹೊಳಪಿನಿಂದ ಕೂಡಿವೆ. ಮಣಿ ತಯಾರಿಕೆಯ ಕುರುಹುಗಳ ಮತ್ತು ಟೆರ್ರಾಕೊಟ್ಟ ಪ್ರತಿಮೆಗಳು ಆಭರಣಗಳು ದೊರೆಯುತ್ತವೆ.

ವಸತಿಗಳು ಮತ್ತು ಸಂಸ್ಕೃತಿ

ವಸತಿಗಳು : ಬಹುಪಾಲು ನವಶಿಲಾಯುಗದ ನೆಲೆಗಳು ಬೆಟ್ಟದ ಮೇಲಿನ ಸಮತಲ ಪ್ರದೇಶದಲ್ಲಿ, ಇಳಿಜಾರು ಪ್ರದೇಶದಲ್ಲಿ, ನದಿತೀರಗಳಲ್ಲಿ ಮತ್ತು ಕಲ್ಲಿನ ಮರೆಗಳಲ್ಲಿ ಕಂಡುಬರುತ್ತವೆ. ಹೀಗೆ ವಸತಿಗೋಸ್ಕರ ಯೋಗ್ಯಸ್ಥಳಗಳನ್ನು ಆರಿಸಿಕೊಂಡ ಇಲ್ಲಿನ ನಿವಾಸಿಗಳು ಬಿಡಿಸಿದ ಚಿತ್ರಗಳು, ಚೂಪಾದ ಸಲಕರಣೆಗಳಿಂದ ಕುಟ್ಟಿ ಮೂಡಿಸಿರುವ ಚಿತ್ರಗಳು ಕಂಡುಬರುತ್ತವೆ. ಈ ಸಂಬಂಧಿಸಿದಂತೆ ತೆಕ್ಕಲುಕೋಟೆಯಲ್ಲಿ ಎರಡು ಜಿಂಕೆ, ಒಂದು ಎತ್ತು ಮತ್ತು ಒಂದು ಹಾವಿನ ಚಿತ್ರವಿರುವುದು ಕಂಡುಬರುತ್ತದೆ. ಉತ್ತರ ಭಾಗದ ನವಶಿಲಾಯುಗ ಸಂಸ್ಕೃತಿಯ ನೆಲೆಗಳಲ್ಲಿ ಬಂಜರು ಭೂಮಿಯ ಮೇಲ್ಮೈಯನ್ನು ಕತ್ತರಿಸಿ ತೆಗೆದು ಕುಳಿಗಳನ್ನು ಮಾಡಿ ಅವುಗಳಲ್ಲಿ ವಾಸಿಸುತ್ತಿದರು (undergrounding pits). ಅವು ಸಾಮಾನ್ಯವಾಗಿ ವೃತ್ತಕಾರವಾಗಿ, ಆಯತಕಾರವಾಗಿ ಕೆಲವೊಮ್ಮೆ ಚೌಕಾಕಾರವಾಗಿರುತ್ತಿದ್ದವು. ಅವುಗಳ ನೆಲಹಾಸನ್ನು ಸಮತಟ್ಟು ಮಾಡಿ ಅದಕ್ಕೆ ಕೆಂಪು ಕಂದು ಬಣ್ಣವನ್ನು ಬಳಿಯಲಾಗುತ್ತಿತ್ತು. ಮಳೆಗಾಳಿಗಳಿಂದ ರಕ್ಷಿಸಿಕೊಳ್ಳಲು ಕುಳಿಗಳ ಸುತ್ತಲೂ ಮರದ ಕಂಬಗಳನ್ನು ಇಟ್ಟು ಬಿರ್ಚ (birch-ನುಣುಪಾದ ತೊಗಟೆಯುಳ್ಳ ಒಂದು ಮರ) ಮರದಿಂದ ಮಾಡಿದ ಹೊದಿಕೆಯನ್ನು ನಿರ್ಮಿಸುತ್ತಿದ್ದರು. ಈ ವಸತಿಗಳಲ್ಲಿ ಒಲೆ, ಧಾನ್ಯಶೇಖರಣೆಗೆ ಧಾನ್ಯಗಳ ಕಣಜ (storage bins) ಮುಂತಾದವುಗಳ ಕುರುಹುಗಳು ದೊರೆಯುತ್ತವೆ. ವಿಂಧ್ಯಾ ಪ್ರದೇಶದಲ್ಲಿ ಗುಡಿಸಲುಗಳು ಕಂಡುಬಂದಿವೆ. ಅವಶೇಷಗಳು ದೊರೆಯುತ್ತವೆ. ಮಧ್ಯಪ್ರದೇಶದ ನೆಲೆಗಳಲ್ಲಿ ಅರ್ಧವೃತ್ತಕಾರದ ಗುಡಿಸಲುಗಳು ಕಂಡುಬಂದಿವೆ. ಗುಡಿಸಲುಗಳನ್ನು ತಡಿಕೆಗಳಿಂದ ನಿರ್ಮಿಸುತ್ತಿದ್ದರು. ದಕ್ಷಿಣದ ತಮಿಳುನಾಡಿನ ಪಯ್ಯಂಪಲ್ಲಿಯ ವಸತಿಗಳ ಗಟ್ಟಿ ನೆಲೆಗಳಲ್ಲಿ ಸುತ್ತ ಒಂದು ಮೀಟರ್ ಆಳದಷ್ಟು ವರ್ತುಲಾಕಾರದಲ್ಲಿ ಗುಂಡಿಗಳನ್ನು ತೋಡಿ ಇವುಗಳ ಸುತ್ತಲೂ ನೆಲದ ಮಟ್ಟದಲ್ಲಿ ಕಂಬಗಳನ್ನು ನೆಟ್ಟು ಅವುಗಳ ಮೇಲೆ ಇಳಿಜಾರು ಮಾಡುಗಳು ಇರುವಂತೆ ನಿರ್ಮಿಸಲಾಗುತ್ತಿತ್ತು.

ಮಡಿಕೆಗಳು : ನೂತನ ಶಿಲಾಯುಗ ಸಂಸ್ಕೃತಿಯ ಪ್ರಾರಂಭದಲ್ಲಿ ಕೈಯಿಂದ ಮಾಡಿದ ಮಡಿಕೆಗಳು ದೊರೆಯುತ್ತವೆ. ಕ್ರಮೇಣ ಚಕ್ರದ ಸಹಾಯದಿಂದ ಮಡಿಕೆಗಳನ್ನು ಮಾಡುವ ಉತ್ತಮ ದರ್ಜೆಯ ವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಉತ್ತರ ಭಾಗದ ಗುಫ್‌ಕ್ರಾಲ್‌ನಿವೇಶನದಲ್ಲಿ ಸುಮಾರು ೧.೭ ಮೀ. ಸುತ್ತಳತೆಯ ಮಡಿಕೆ ಮಾಡುವ ಕುಲಮೆ ದೊರೆತಿದೆ. ಈ ಭಾಗದ ನಿವೇಶನಗಳಲ್ಲಿ ಬೂದುವರ್ಣದ ದಪ್ಪ ಲೇಪನವುಳ್ಳ ಮಡಿಕೆಗಳು, ಸ್ವಲ್ಪ ಮಸುಕಾದ ಬೂದುವರ್ಣದ ಮಡಿಕೆಗಳು, ಸ್ವಲ್ಪ ಮಸುಕದ ಕೆಂಪುವರ್ಣದ ಮಡಿಕೆಗಳ ಮತ್ತು ಹೊಳಪುಳ್ಳ ವರ್ಣದ ಮಡಿಕೆಗಳು ದೊರೆಯುತ್ತವೆ. ಈ ಭಾಗದಲ್ಲಿ ದುಂಡಗಿನ ಹಿಡಿಕೆಯುಳ್ಳ ಪಾತ್ರೆಗಳ, ಬಟ್ಟಲು, ಬೋಗುಣಿ, ಮಡಿಕೆಯ ವಿಧಗಳು ದೊರೆಯುತ್ತವೆ. ಈ ಮಡಿಕೆಗಳ ಮೇಲೆ ಮ್ಯಾಟ್‌ ಇಂಪ್ರೆಷನ್‌(mat impression) ಕಂಡುಬರುತ್ತದೆ. ಬುರ್ಜಹೋಂನಲ್ಲಿ ಚಕ್ರದ ಸಹಾಯದಿಂದ ಮಾಡಿದ ಕೇಸರಿ ಬಣ್ಣದ ಮಡಿಕೆಗಳು ಕಂಡುಬರುತ್ತದೆ. ಇಲ್ಲಿನ ಒಂದು ಮಡಿಕೆಯ ಮೇಲೆ ಕಪ್ಪುಬಣ್ಣದ ಕೊಂಬುಳ್ಳ ಪ್ರಾಣಿಯ ಚಿತ್ರವೊಂದು ಕಂಡುಬರುತ್ತದೆ. ವಿಂಧ್ಯಾಪ್ರಾಂತ್ಯದಲ್ಲಿ ನಾಲ್ಕು ಬಗೆಯ ಮಡಿಕೆಗಳು ಕಂಡುಬರುತ್ತವೆ. ಅವುಗಳೆಂದರೆ, ಬಳ್ಳಿಯ ಚಿತ್ರವಿರುವ ಗುರುತುಗಳ (cord impressed), ಒರಟಾದ ಮಡಿಕೆಗಳು (rusticated), ಹೊಳೆಯುವ ಕೆಂಪು ಬಣ್ಣದ ಮಡಿಕೆಗಳು (burreshedred), ಹೊಳಪುಳ್ಳ ಕಪ್ಪು ವರ್ಣದ ಮಡಿಕೆಗಳು (burnished black), ಇಲ್ಲಿ ಈ ಹಿಂದೆ ಹೆಸರಿಸಿದ ಮಡಿಕೆಗಳ ವಿಧಗಳ ಜೊತೆ ನಳಿಕೆಯುಳ್ಳ ಬಟ್ಟಲುಗಳು (spouated bowls) ದೊರೆಯುತ್ತವೆ. ದಕ್ಷಿಣ ಪ್ರದೇಶದ ಮಡಿಕೆಗಳನ್ನು ಮುಖ್ಯವಾಗಿ ಎರಡು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಕಂದುವರ್ಣದ ಮಡಿಕೆಗಳು ಮತ್ತು ಸ್ವಲ್ಪ ಮಸುಕಾದ ಬೂದುಬಣ್ಣದ ಮಡಿಕೆಗಳು ಕಂಡುಬರುತ್ತವೆ. ಕರ್ನಾಟಕ-ಆಂಧ್ರಪ್ರದೇಶದ ನಡುವಣ ಪ್ರದೇಶದಲ್ಲಿನ ನಿವೇಶನಗಳಲ್ಲಿ ಕಂಡುಬರುವ ಮಡಿಕೆಗಳ ವಿಧಗಳೆಂದರೆ, ದಪ್ಪನೆಯ ದೊಡ್ಡ ದೊಡ್ಡ ಗುಡಾಣಗಳು. ಮಧ್ಯಮ ಆಕಾರದ ಉಬ್ಬಿದ ಹೊಟ್ಟೆಯ ಮತ್ತು ಹೊರಚಾಚಿದ ಉದ್ದನೆಯ ಹಿಡಿಕೆಯುಳ್ಳ ಗಡಿಗೆಗಳು. ಅಗಲ ಬಾಯುಳ್ಳ ಬಟ್ಟಲುಗಳು, ಭುಜದ ಭಾಗದಲ್ಲಿ ಕೊಳವೆಯುಳ್ಳ ಪಾತ್ರೆಗಳು, ಅರ್ಧಗೋಲಾಕೃತಿಯ ಬಟ್ಟಲು ತಟ್ಟೆ, ನಾನಾ ವಿಧದ ಮುಚ್ಚಳ ಮೊದಲಾದ ಮಣ್ಣಿನ ಪಾತ್ರೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಮಡಿಕೆಗಳ ಮೇಲೆ ರೇಖಾಚಿತ್ರಗಳ, ಗಿಡಮರಗಳು ಚಿತ್ರಗಳು, ಪ್ರಾಣಿ ಪಕ್ಷಿಗಳ ಚಿತ್ರಗಳು ಮತ್ತು ಜಲಚರ ಜೀವಿಗಳ ಚಿತ್ರಗಳು ಸಾಮಾನ್ಯವಾಗಿ ಕಂಡುಬರುತ್ತವೆ.

ಕೃಷಿ : ನೂತನ ಶಿಲಾಯುಗದ ಜನರು ಪ್ರಥಮವಾಗಿ ಸ್ಥಿರ ಕೃಷಿ ಜೀವನವನ್ನು ಆರಂಭಿಸಿದರು. ಭೂಮಿಯ ಮೇಲ್ಮೈಯನ್ನು ಕಲ್ಲಿನ ಆಯುಧಗಳಿಂದ ಕ್ರಮೇಣ ಮರದಿಂದ ಮಾಡಿದ ಉಪಕರಣದ ಸಹಾಯದಿಂದ ಕೆತ್ತಿ ಕೃಷಿಯನ್ನು ಮಾಡುತ್ತಿದ್ದರು. ಮೆಹರ್ಘರ್ ನಲ್ಲಿನ ಜನರು ಕೃಷಿಯಲ್ಲಿ ಮುಂದುವರಿದವರಾಗಿದ್ದರು. ಇವರು ಗೋಧಿ, ಹತ್ತಿಯನ್ನು ಬೆಳೆಯುತ್ತಿದ್ದರು. ವಿಂಧ್ಯಾಪ್ರದೇಶದ ಕೊಲ್ಡಿಹವ ನಿವೇಶನದ ಮಡಿಕೆಗಳಲ್ಲಿ ಅಕ್ಕಿ ಬಳಕೆಯ ಕುರುಹುಗಳು ದೊರೆತಿದ್ದು ಸಿ-೧೪ ಕಾಲಗಣನೆಯಿಂದ. ಇದನ್ನು ಭಾರತ ಉಪಖಂಡದಲ್ಲಿ ಅಕ್ಕಿ ಕೃಷಿಯ ಪ್ರಾಥಮಿಕ ಕುರುಹು ಇದಾಗಿದೆ ಎಂದು ಅಭಿಪ್ರಾಯಪಡಲಾಗಿದೆ. ಮಧ್ಯ/ಪೂರ್ವ ಪ್ರದೇಶದ ನೆಲೆಗಳಲ್ಲಿ ಭತ್ತದ ಹೊಟ್ಟು ದೊರೆತಿದೆ. ದಕ್ಷಿಣ ಭಾಗದಲ್ಲಿ ರಾಗಿ, ನವಣೆ, ಹುರುಳಿ ಮೊದಲಾದವುಗಳನ್ನು ಬೆಳೆಯುತ್ತಿದ್ದರು. ಒಟ್ಟಿನಲ್ಲಿ ಇವರು ಅಕ್ಕಿ, ಗೋಧಿ, ಬಾರ್ಲಿ, ಬೇಳೆಕಾಳು ಇತ್ಯಾದಿ ಧಾನ್ಯಗಳನ್ನು ಬೆಳೆಯುತ್ತಿದ್ದರು.

ಪಶುಪಾಲನೆ : ನೂತನ ಶಿಲಾಯುಗ ಸಂಸ್ಕೃತಿಯ ಜನರು ಕುರಿ, ಮೇಕೆ, ದನಕರುಗಳು, ಎಮ್ಮೆ, ನಾಯಿ, ಕಡವೆ ಇತ್ಯಾದಿಗಳನ್ನು ಬಳಸುತ್ತಿದ್ದರು. ಜಾನುವಾರುಗಳನ್ನು ಸಾಗಣಿಕೆಗೆ ಮತ್ತು ಆಹಾರಕ್ಕೆ ಸಾಕುತ್ತಿದ್ದರು. ಬ್ರಹ್ಮಗಿರಿ ಮತ್ತು ಮಸ್ಕಿಯಲ್ಲಿ ಕತ್ತೆಯ ಅಸ್ಥಿಗಳು, ಹಳ್ಳೂರಿನಲ್ಲಿ ಕುದುರೆಯ ಅವಶೇಷಗಳು ದೊರೆಯುತ್ತವೆ.

ಆಯುಧಗಳು/ಉಪಕರಣಗಳು : ನೂತನ ಶಿಲಾಯುಗದ ಸಂಸ್ಕೃತಿಯ ಜನರು ತಮ್ಮ ದೈನಂದಿನ ಕೆಲಸಗಳಿಗೆ ಕಲ್ಲಿನ ಆಯುಧಗಳನ್ನು ಮತ್ತು ಕುರಿ, ಮೇಕೆ, ಕಡವೆಯಂತಹ ಪ್ರಾಣಿಗಳ ಎಲುಬುಗಳಿಂದಲೂ ಸಹ ಆಯುಧಗಳನ್ನು ಮಾಡುತ್ತಿದ್ದರು. ಉತ್ತರ ಪ್ರಾಂತ್ಯದಲ್ಲಿ ಗ್ರಾನೈಟ್‌ಶಿಲೆಯನ್ನು ಬಳಸಿರುವುದು ಕಂಡುಬರುತ್ತದೆ. ದಕ್ಷಿಣ ಪ್ರದೇಶಗಳಲ್ಲಿ ಕರಿಕಲ್ಲುಗಳಲ್ಲಿ ಅಥವಾ ವಜ್ರದುಂಡಿ (ಡೊಲೆರೈಟ್‌) ಕಲ್ಲಿನಲ್ಲಿ ಇಂಥ ಉಪಕರಣಗಳನ್ನು ಮಾಡಲಾಗುತ್ತಿತ್ತು. ಇವುಗಳ ತಯಾರಿಕೆಯಲ್ಲಿ ನಾಲ್ಕು ಹಂತಗಳಿದ್ದವು. ಮೊದಲು ಅನುಕೂಲ ಆಕಾರದ ಆಯ್ದಕಲ್ಲಿನಲ್ಲಿ ಮೇಲ್ಮೈಯಿಂದ ದಪ್ಪ ಚಕ್ಕೆಯನ್ನು ಎಬ್ಬಿಸಿ ನಿಶ್ಚಿತ ಆಕಾರಕ್ಕೆ ತರುವುದು. ಇದರಿಂದ ಉಂಟಾದ ಒಟ್ಟು ತಗ್ಗುಗಳಲ್ಲಿ ಹಿತಮಿತವಾಗಿ ಸಣ್ಣ ಸಣ್ಣ ಚಕ್ಕೆಗಳನ್ನು ಎಬ್ಬಿಸಿ ಮೇಲ್ಮೈಯನ್ನು ಸಮತಲ ಮಾಡುವುದು. ಮೂರನೇ ಹಂತದಲ್ಲಿ ಕಲ್ಲಿನ ಮೇಲೆ ಈ ಉಪಕರಣವನ್ನು ಉಜ್ಜಿ ಪೂರ್ಣವಾಗಿ ನಯಮಾಡುವುದು. ಕೊನೆಯಲ್ಲಿ ಇದರ ಹರಿತವಾದ ಬಾಯಿಯ ಭಾಗವನ್ನಾಗಲೀ ಅಥವಾ ಇದೇ ಉಪಕರಣವನ್ನೇ ಆಗಲಿ ತಿಕ್ಕಿ ತಿಕ್ಕಿ ಹೊಳೆಯುವಷ್ಟು ನಯಮಾಡುವುದು, ಕೊಡಲಿ, ಬಾಚಿ, ಚೂಪಾದ ಮೊನೆಗಳು, ಈಟಿ, ಕೈಬಾಚಿಗಳು, ಹಾರೆ, ಗುದ್ದಲಿ, ಬೀಸುವ ಕಲ್ಲು, ರಿಂಗ್‌ಸ್ಟೋನ್‌, ಅರೆಯುವ ಕಲ್ಲು, ಉಳಿ, ರಂಧ್ರ ಕೊರೆಯುವ ಉಪಕರಣ, ಸಲಿಕೆ ಇತ್ಯಾದಿ ಉಪಕರಣಗಳನ್ನು ಬಳಸುತ್ತಿದ್ದರು.

ಶವಸಂಸ್ಕಾರ : ನೂತನ ಶಿಲಾಯುಗದ ಜನಸಮುದಾಯಗಳಲ್ಲಿ ಒಟ್ಟಾರೆ ಮೂರ ಪ್ರಕಾರಗಳ ಶವಸಂಸ್ಕಾರ ಪದ್ಧತಿಗಳಿದ್ದವು. ಶವಕುಣಿಯಲ್ಲಿ ನೇರವಾಗಿ ಶವವನ್ನು ನೆಟ್ಟಗೆ ಮಲಗಿಸುವುದು. ಮೊದಲು ಒಂದಡೆಯಲ್ಲಿ ಹುಗಿದು ಸ್ವಲ್ಪ ಕಾಲದ ನಂತರ ಹುಗಿದ ಸ್ಥಳದಿಂದ ಅಸ್ಥಿಗಳನ್ನು ಸಂಗ್ರಹಿಸಿ ಎರಡನೇ ಬಾರಿಗೆ ಮತ್ತೊಂದು ಕುಣಿಯಲ್ಲಿಟ್ಟು ಸಂಸ್ಕಾರ ಮಾಡುವುದು ಶವಕುಣಿಯಲ್ಲಿ ಎರಡು ಮೂರು ನಾಲ್ಕು ಗುಡಾಣಗಳ ಬುಡಗಳನ್ನು ಒಡೆದು ಸೇರಿಸಿ ಅದರೊಳಗೆ ಅಸ್ಥಿ ಅವಶೇಷಗಳನ್ನು ಇಡುವುದು, ಅಥವಾ ಒಂದೇ ಪಾತ್ರೆಯಲ್ಲಿ ಅಸ್ಥಿ ಅವಶೇಷಗಳನ್ನು ಇಟ್ಟು ಅದನ್ನು ಶವ ಕುಣಿಯಲ್ಲಿ ಹುಗಿಯುವುದು ಕಂಡುಬರುತ್ತದೆ. ಸಾಮಾನ್ಯವಾಗಿ ಶವವನ್ನು ಉತ್ತರ ದಕ್ಷಿಣಾಭಿಮುಖವಾಗಿ ಇಡಲಾಗುತ್ತಿತ್ತು. ಸಮಾಧಿಗಳಲ್ಲಿ ಆಹಾರ ಪಾನಿಯಗಳುಳ್ಳ ಮಣ್ಣಿನ ಪಾತ್ರೆಗಳನ್ನು ಇಡಲಾಗುತ್ತಿತ್ತು. ಬುರ್ಜ್‌‌ ಹೋಂ ನೆಲೆಯಲ್ಲಿ ಆರು ಸಮಾಧಿಗಳನ್ನು ಉತ್ಖನನ ಮಾಡಲಾಗಿದೆ. ಇಲ್ಲಿನ ಒಂದು ಸಮಾಧಿಯಲ್ಲಿ ಶವವನ್ನು ಹೂಳುವ ಮೊದಲು ಒಂದು ನಾಯಿಯನ್ನು ಮತ್ತು ಎರಡು ಜಿಂಕೆಗಳನ್ನು ಸಮಾಧಿ ಮಾಡಿರುವುದು ಕಂಡುಬರುತ್ತದೆ. ಇವೆಲ್ಲ ಶವಕುಣಿಗಳ ಜನವಾಸ್ತವ್ಯದ ನೆಲೆಯಲ್ಲಿಯೇ ಇದ್ದವು. ಶವಸಂಸ್ಕಾರಕ್ಕೋಸ್ಕರ ಜನವಾಸ್ತವ್ಯದ ನೆಲೆಯನ್ನು ಬಿಟ್ಟು ಪ್ರತ್ಯೇಕ ಸ್ಮಶಾನವಿರುತ್ತಿರಲಿಲ್ಲ. ಅಪರೂಪಕ್ಕೆ ತೆಕ್ಕಲುಕೋಟೆಯಲ್ಲಿ ಮನೆಯೊಳಗು ಶವಸಂಸ್ಕಾರ ಮಾಡಿದ ಕುರುಹುಗಳಿವೆ. ಇನಾಮ್‌ಗಾವಿನಲ್ಲಿ ಒಂದು ಅಪರೂಪ ಮಾದರಿಯ ಶವಕುಣಿಯು ಇತ್ತು. ಇದು ಒಂದು ಗಟ್ಟಿ ಮುಟ್ಟಾದ ಅತೀ ದಪ್ಪನೆಯ ನಾಲ್ಕು ಕಾಲಿನ ಅಗಲ ಬಾಯಿಯ ದೊಡ್ಡ ಜಾಡಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಪದ್ಮಾಸನದಲ್ಲಿ ಕುಳಿತ ಅಸ್ಥಿಪಂಜರವಿದೆ. ಈ ವಿಶಿಷ್ಟ ಮಾದರಿಯ ಶವಸಂಸ್ಕಾರವು ಬಹುಶಃ ಆ ಗ್ರಾಮದ ಮುಖ್ಯಸ್ಥನಾಗಿದ್ದಿರಬೇಕೆಂದು ತರ್ಕಿಸಲಾಗಿದೆ.

ತಾಮ್ರ ಶಿಲಾಯುಗ

ನವ ಶಿಲಾಯುಗದ ಕೊನೆಯ ವೇಳೆಗೆ ಮಾನವನಿಗೆ ಲೋಹಗಳ ಪರಿಚಯವಾಯಿತು. ಮನುಷ್ಯನ ಬಳಕೆಗೆ ಮೊದಲು ಒದಗಿಬಂದ ಲೋಹ ತಾಮ್ರ, ಹಲವು ಸಂಸ್ಕೃತಿಗಳು ಶಿಲೆ ಮತ್ತು ತಾಮ್ರ ಇವೆರಡರ ಬಳಕೆಯ ಆಧಾರದ ಮೇಲೆ ರೂಪುಗೊಂಡವು. ಅವುಗಳನ್ನು ತಾರ-ಶಿಲಾಯುಗ ಸಂಸ್ಕೃತಿಗಳೆಂದು ಹೆಸರಿಸಲಾಗಿದೆ. ಏಕೆಂದರೆ ಈ ಜನರು ತಾಮ್ರದ ಆಯುಧಗಳ ಜೊತೆಗೆ ಹೇರಳವಾಗಿ ಸೂಕ್ಷ್ಮ ಶಿಲಾಯುಧಗಳನ್ನು ತಯಾರಿಸಿ ಬಳಸಿದ್ದಾರೆ.

ಹಂಚಿಕೆ ಮತ್ತು ವಿಧಗಳು

ನಮ್ಮ ದೇಶದ ಮೆಕ್ಕಲು ಮಣ್ಣು ಬಯಲುಗಳು ಹಾಗೂ ದುರ್ಗಮ ಅರಣ್ಯ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಾಗಗಳಲ್ಲೂ ತಾಮ್ರ ಶಿಲಾಯುಗದ ಕುರುಹುಗಳು ಕಂಡುಬಂದಿವೆ. ಸಾಮಾನ್ಯವಾಗಿ ಈ ಸಂಸ್ಕೃತಿಯ ಜನರು ಒಂದೇ ಬಗೆಯ ಜೀವನ ವಿಧಾನ ಮತ್ತು ತಾಂತ್ರಿಕತೆಯನ್ನು ಹೊಂದಿದ್ದರೂ ಅವರು ಉಪಯೋಗಿಸಿದ ಪ್ರಧಾನವಾಗಿ ಮಡಿಕೆಗಳನ್ನಾಧರಿಸಿ ಅವುಗಳನ್ನು ಹಲವು ಸಂಸ್ಕೃತಿಗಳನ್ನಾಗಿ ವಿಂಗಡಿಸಿದ್ದಾರೆ. ಅವುಗಳನ್ನು ಸ್ಥೂಲವಾಗಿ ಈ ಕೆಳಗಿನಂತೆ ವಿಂಗಡಿಸಲಾಗಿದೆ:

. ತಪತಿ ಮತ್ತು ಪ್ರವರ ಕಣಿವೆಗಳಲ್ಲಿ ಕಂಡುಬರುವ ಸಾವಳದ ಸಂಸ್ಕೃತಿ

. ಚಂಬಲ್‌ ಕಣಿವೆಯಲ್ಲಿನ ಮಾಳವ ಪ್ರದೇಶದ ಮಧ್ಯಭಾಗದಲ್ಲಿ ಕಂಡುಬರುವ ಕಾಯಥ ಸಂಸ್ಕೃತಿ

. ರಾಜಸ್ಥಾನ್‌ ಆಗ್ನೇಯ ಭಾಗದಲ್ಲಿನ ಬನಾಸ್‌ಕಣಿವೆಯಲ್ಲಿ ಕಂಡುಬರುವ ಆಹಾರ್ ಅಥವಾ ಬನಾಸ್‌ಸಂಸ್ಕೃತಿ

. ಮಾಳವ ಸಂಸ್ಕೃತಿ

. ದಖ್ಖನ್‌ ಪ್ರಸ್ಥಭೂಮಿಯ ಉತ್ತರ ಭಾಗದಲ್ಲಿರುವ ಜೋರ್ವೆ ಸಂಸ್ಕೃತಿ

. ಗಂಗ ಯಮುನಾ ದೋಅಬ್‌ ಪ್ರದೇಶದಲ್ಲಿರುವ ತಾಮ್ರ ಉಪಕರಣ ಸಂಗ್ರಹ (copper hoards) ಹಾಗೂ ಕಾವಿ ಬಣ್ಣದ ಮಡಿಕೆ (ochre coloured pottery) ಸಂಸ್ಕೃತಿ ಮತ್ತು ಖೇತ್ರಿ ತಾಮ್ರ ನಿ‌ಕ್ಷೇಪ ಪ್ರದೇಶ ವ್ಯಾಪ್ತಿಯಲ್ಲಿರುವ ಗಣೇಶ್ವರ ಸಂಸ್ಕೃತಿ.

ಮೇಲೆ ತಿಳಿಸಿರುವ ಸ್ಥಳಗಳಲ್ಲಿ ಮಾತ್ರವಲ್ಲದೆ ಅಲಹಾಬಾದ್‌ಜಿಲ್ಲೆಯ ಪರ್ವತ ಪ್ರದೇಶ, ಗಂಗಾ ತೀರಾದ ಚಿರಾಂಡ್‌, ಪಶ್ಚಿಮ ಬಂಗಾಳದ ಬರ್ದವಾನ್‌ಜಿಲ್ಲೆಯ ಪಾಂಡು-ರಾಜರ್ ದಿ. ಬಿ. ಬೀರ್ಭೂಮ್‌ಜಿಲ್ಲೆಯ ಮಹಿಷದಲ್‌, ಬಿಹಾರದ ಸೆನ್ಟಾರ್, ಸೋಣ್‌ಪುರ ಮತ್ತು ತರ, ಉತ್ತರ ಪ್ರದೇಶದ ಖೈರಾ ಮತ್ತು ನರ್ಹಾನ್‌ಪ್ರದೇಶಗಳು ಈ ಸಂಸ್ಕೃತಿಯ ನಿವೇಶನಗಳಾಗಿದ್ದು ಉತ್ಖನನಗೊಂಡಿವೆ.

ಕಾಲ

ತಾಮ್ರ ಶಿಲಾಯುಗದ ಈ ವಿವಿಧ ಸಂಸ್ಕೃತಿಗಳು ವಿವಿಧ ಕಾಲಗಳಲ್ಲಿ ಅಸ್ತಿತ್ವದಲ್ಲಿದ್ದುದು ತಿಳಿದುಬರುತ್ತದೆ. ಕ್ರಿ. ಪೂ. ೨೦೦೦ದಿಂದ ಕ್ರಿ. ಪೂ. ೧೭೦೦ರ ಅವಧಿಯಲ್ಲಿ ಸಾವಳದ ಸಂಸ್ಕೃತಿ, ಕ್ರಿ. ಪೂ. ೨೧೦೦ರಿಂದ ೧೮೦೦ರ ಅವಧಿಯಲ್ಲಿ ಕಾಯಥ ಸಂಸ್ಕೃತಿ, ಕ್ರಿ. ಪೂ. ೨೧೦೦-೪೦೦ರ ಅವಧಿಯಲ್ಲಿ ಆಹಾರ್‌ ಸಂಸ್ಕೃತಿ ಕ್ರಿ. ಪೂ. ೧೭೦೦ ರಿಂದ ೧೪೦೦ರರ ಅವಧಿಯಲ್ಲಿ ಮಾಳವ ಸಂಸ್ಕೃತಿ, ಕ್ರಿ. ಪೂ. ೧೪೦೦ ರಿಂದ ೯೦೦ರವರೆಗೆ ಅವಧಿಯಲ್ಲಿ ಜೋರ್ವೆ ಸಂಸ್ಕೃತಿ, ಕ್ರಿ. ಪೂ. ೧೮೦೦ರಿಂದ ೧೪೦೦ ಅವಧಿಯಲ್ಲಿ ತಾಮ್ರ ಉಪಕರಣ ಸಂಗ್ರಹ ಮತ್ತು ಕಾವಿ ಬಣ್ಣದ ಕುಂಬರಿಕೆಯ ಸಂಸ್ಕೃತಿ ಮತ್ತು ಕ್ರಿ. ಪೂ. ೨೮೦೦-೨೨೦೦ರ ಅವಧಿಯಲ್ಲಿ ಗಣೇಶ್ವರ ಸಂಸ್ಕೃತಿ ಅಸ್ತಿತ್ವದಲ್ಲಿದ್ದುದು ಕಂಡುಬರುತ್ತದೆ.

ಭಾರತದ ತಾಮ್ರ ಶಿಲಾಯುಗದ ನಿವೇಶನಗಳಲ್ಲಿ ಕಾಲಾನುಕ್ರಮದಲ್ಲಿ ಹಲವು ಸರಣಿಗಳಿವೆ. ಕೆಲವು ಹರಪ್ಪಾ ಪೂರ್ವದವು. ಮತ್ತೆ ಕೆಲವು ಹರಪ್ಪಾ ಸಂಸ್ಕೃತಿಯ ಸಮಕಾಲೀನ ಇನ್ನೂ ಕೆಲವು ಹರಪ್ಪಾ ನಂತರದ ಕಾಲದವು. ಹರಪ್ಪಾ ಪೂರ್ವ ತಾಮ್ರ ಶಿಲಾ ಸಂಸ್ಕೃತಿಗಳು ಸಿಂಧ್‌, ಬಲೂಚಿಸ್ತಾನ ಹಾಗೂ ರಾಜಾಸ್ಥಾನ ಮುಂತಾದಡೆಗಳಲ್ಲಿನ ಕೃಷಿಕ ಸಮುದಾಯಗಳು ಹರಪ್ಪಾದ ನಾಗರೀಕೃತ ಸಂಸ್ಕೃತಿಯು ರೂಪಗೊಳ್ಳಲು ಅನುವಾಗಿದೆ. ಈ ನಿಟ್ಟಿನಲ್ಲಿ ಸಿಂಧನಲ್ಲಿರುವ ಅಮ್ರಿ ಮತ್ತು ಕೋಟ್‌ದಿಜಿ, ರಾಜಾಸ್ಥಾನದ ಕಾಲಬಂಗಾನ್‌ ಹಾಗೂ ಗಣೇಶ್ವರ ಇವುಗಳನ್ನು ನಿರ್ದಿಷ್ಟವಾಗಿ ಹೆಸರಿಸಬಹುದು. ಕಯಾಥ ಸಂಸ್ಕೃತಿಯು ಹರಪ್ಪಾದ ಸಮಕಾಲೀನ ಕಿರಿಯ ಸಂಸ್ಕೃತಿಯಾಗಿದೆ ಮತ್ತು ಹಲವು ತಾಮ್ರ ಶಿಲಾಯುಗದ ಸಂಸ್ಕೃತಿಗಳು ಹರಪ್ಪಾ ನಂತರದ ಸಂಸ್ಕೃತಿಗಳಾಗಿ ಅದರ ಅಂತಿಮ ಹಂತದ ಪ್ರವಾಹವನ್ನು ತೋರುತ್ತವೆ. ಹೀಗಿದ್ದೂ ನವದಾತೋಲಿ, ಏರಾನ್‌ಹಾಗೂ ನಾಗ್ಡಾ ನೆಲೆಗಳಲ್ಲಿನ ಮಾಳವ ಸಂಸ್ಕೃತಿ ಮಹಾರಾಷ್ಟ್ರದ ಜೋರ್ವೆ ಸಂಸ್ಕೃತಿ, ದಕ್ಷಿಣ ಭಾರತದ ತಾಮ್ರ ಶಿಲಾಯುಗ ಸಂಸ್ಕೃತಿ ಇತ್ಯಾದಿಗಳು ಹರಪ್ಪಾ ಸಂಸ್ಕೃತಿಯೊಂದಿಗೆ ಯಾವ ಸಂಬಂಧವನ್ನು ಹೊಂದಿಲ್ಲ.