ಪ್ರಮುಖಉತ್ಖನನಗಳು

ಸಾವಳದ ಸಂಸ್ಕೃತಿ

ಈ ಸಂಸ್ಕೃತಿ ತಪತಿ ನದಿಯ ದಕ್ಷಿಣ ದಂಡೆಯಲ್ಲಿದೆ. ಮಹಾರಾಷ್ಟ್ರದ ಪಶ್ಚಿಮ ಖಾಂದೇಶ್‌, ಧುಲೇ ಮತ್ತು ಪ್ರಕಾಶಂ ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಇವುಗಳಲ್ಲಿನ ಉತ್ಖನನದಿಂದ ಎರಡು ಸಂಸ್ಕೃತಿಗಳು ಕಂಡುಬರುತ್ತದೆ. ಇಲ್ಲಿ ಸಿಗುವ ಮಡಿಕೆಗಳು ವೈವಿಧ್ಯಮಯವಾಗಿದೆ. ಮಡಿಕೆಗಳನ್ನು ಹೊರತು ಪಡಿಸಿದರೆ ಬೇರೆ ಮಾಹಿತಿಗಳು ಅತ್ಯಲ್ಪ ಪ್ರಮಾಣದಲ್ಲಿವೆ. ದೈಮಾಬಾದ್‌ನ ಉತ್ಖನನದಿಂದ ಈ ಸಂಸ್ಕೃತಿಯ ಮಣ್ಣಿನಿಂದ ಕಟ್ಟಿದ ಗೋಡೆಯ ರಚನೆಗಳು ಕಂಡುಬರುತ್ತವೆ.

ಕಾಯಥ ಸಂಸ್ಕೃತಿ

ಈ ಸಂಸ್ಕೃತಿಯ ಸುಮಾರು ೪೦ ನೆಲೆಗಳನ್ನು ಮಧ್ಯಪ್ರದೇಶದ ಚಂಬಲ್‌ ಕಣಿವೆಯಲ್ಲಿ ಅನ್ವೇಷಿಸಲಾಗಿದೆ. ಅವುಗಳಲ್ಲಿ ಉಜೈನಿಯ ಪೂರ್ವಕ್ಕಿರುವ ಚ್ಯೊಟಿ ಕಲಿಸಿಂಧ್‌ ನದಿಯ ಬಲದಂಡೆಯ ಮೇಲಿರುವ ಪ್ರಾಚೀನ ಕಪಿಥ್ಥಕ ಪ್ರದೇಶವನ್ನು ಉತ್ಖನನಕ್ಕೆ ಒಳಪಡಿಸಲಾಗಿದೆ. ಈ ನೆಲಯ ಉತ್ಖನನದಿಂದ ಕ್ರಮವಾಗಿ ಕಾಯಥ, ಅಹಾರ್, ಮಾಳವ, ಪೂರ್ವ ಐತಿಹಾಸಿಕ ಮತ್ತು ಶುಂಗ ಕುಷಾನ ಗುಪ್ತರನ್ನೊಳಗೊಂಡ ೫ ಬಗೆಯ ಸಂಸ್ಕೃತಿಗಳು ಅಸ್ತಿತ್ವದಲ್ಲಿದ್ದುದು ಕಂಡುಬರುತ್ತದೆ. ಕಾಯಥ ಸಂಸ್ಕೃತಿಗೆ ಸಂಬಂಧಿಸಿದ ಮಡಿಕೆಗಳು ಮತ್ತು ಇತರೆ ವಸ್ತುಗಳು ದೊರೆಯುತ್ತದೆ.

ಅಹರ್ ಸಂಸ್ಕೃತಿ

ಅಹರ್ ನ ಮೊದಲ ಹೆಸರು ತಾಂಬಾವತಿ. ಅಂದರೆ ತಾಮ್ರ ತಯಾರಿಸುವ ಜಾಗ ಎಂದರ್ಥ. ರಾಜಾಸ್ಥಾನದ ವಿದೈಪುರ್ ಬಳಿಯ ಅಹರ್ ನದಿಯ ಎಡದಂಡೆಯ ಮೇಲಿನ ದುಲ್‌ಕೋಟ್‌(dhulkot) ಪ್ರದೇಶದಲ್ಲಿ ಉತ್ಖನನ ನಡೆಸಲಾಗಿದ. ದುಲ್‌ಕೋಟ್‌ ಎಂದರೆ ಬೂದಿ ದಿಬ್ಬ ಎಂಬರ್ಥ. ಇದನ್ನು ಸಂಕಾಲಿಯ ಅವರು ಉತ್ಖನನಕ್ಕೆ ಒಳಪಡಿಸಿ ಈ ಸಂಸ್ಕೃತಿಯ ಕುರುಹುಗಳನ್ನು ಗುರುತಿಸಿದ್ದಾರೆ. ಈ ಸಂಸ್ಕೃತಿಯ ಮತ್ತೊಂದು ನೆಲೆಯನ್ನು ಬನಾಸ್‌ ಕಣಿವೆಯ ಗಿಲುಂಡ ಪ್ರದೇಶದಲ್ಲಿ ಉತ್ಖನನ ಮಾಡಲಾಗಿದೆ. ಇಲ್ಲಿ ಮಡಿಕೆಗಳು ಅಲ್ಲದೆ ತಾಮ್ರದಿಂದ ಮಾಡಿದ ವಸ್ತುಗಳು ದೊರೆಯುತ್ತವೆ. ಗಿಲುಂಡ ಪ್ರದೇಶದಲ್ಲಿ ಹಸಿಮಣ್ಣಿನ ಇಟ್ಟಿಗೆಗಳು ಮತ್ತು ಸುಟ್ಟ ಇಟ್ಟಿಗೆಗಳಿಂದ ಮಾಡಿದ ರಚನೆಗಳು, ಮಣ್ಣಿನ ಗೋಡೆಗಳು, ಕಲ್ಲಿನಿಂದ ಮಾಡಿದ ತಳಪಾಯದ ಗುರುತುಗಳ ಒಲೆಗಳು, ಬೀಸುವ ಕಲ್ಲುಗಳು ಇತ್ಯಾದಿಗಳು ಕಂಡುಬರುತ್ತವೆ.

ಮಾಳವ ಸಂಸ್ಕೃತಿ

ಮಾಳವ ಪ್ರದೇಶವು ಭೌಗೋಳಿವಾಗಿ ಒಂದು ಸಾಂಸ್ಕೃತಿ ಘಟಕವಾಗಿದೆ. ಈ ಸಂಸ್ಕೃತಿಯ ಉತ್ತರದಲ್ಲಿ ಚಂಬಲ್‌ ಕಣಿವೆ, ದಕ್ಷಿಣದಲ್ಲಿ ನರ್ಮದ, ಪೂರ್ವದಲ್ಲಿ ಬೆಟ್ಟಾನದಿ ಪಶ್ಚಿಮದಲ್ಲಿ ಕರಾವಳಿ ಬೆಟ್ಟದ ನಡುವಿನ ಪ್ರದೇಶದಲ್ಲಿ ಕಂಡುಬರುತ್ತದೆ. ಈ ಸಂಸ್ಕೃತಿಯ ಪ್ರಮುಖ ನೆಲೆಗಳೆಂದರೆ ನರ್ಮದಾ ನದಿ ಡಂಡೆ ಮೇಲೆ ಇರುವ ಮಹೇಶ್ವರ ಮತ್ತು ನವದತೋಲಿ, ಚಂಬಲ್‌ನದಿ ದಂಡೆಯ ಮೇಲಿನ ನಾಗ್ದ, ತಪತಿ ನದಿ ದಂಡೆಯ ಮೇಲಿನ ಪ್ರಕಾಶ್‌ಪ್ರವರ ನದಿ ದಂಡೆಯ ಮೇಲಿನ ಏರಾನ್‌, ಘೋಡ್‌ನದಿ ಡಂಡೆಯ ಮೇಲಿನ ಇನಾಮ್‌ಗಾಂವ್‌, ಈ ನಿವೇಶನಗಳಲ್ಲಿ ಈ ಸಂಸ್ಕೃತಿಗೆ ಸಂಬಂಧಿಸಿದ ಹಲವು ಬಗೆಯ ಮಡಿಕೆಗಳು, ತಾಮ್ರ ಮತ್ತು ಅಪರೂಪಕ್ಕೆ ಕಂಚಿನಿಂದ ಮಾಡಿದ ವಸ್ತುಗಳು ದೊರೆಯುತ್ತವೆ. ಇಲ್ಲಿ ವಸತಿಗಳು ಕುರುಹುಗಳು ದೊರೆಯುತ್ತವೆ.

ಜೊರ್ವೆ ಸಂಸ್ಕೃತಿ

ಈ ಸಂಸ್ಕೃತಿಯು ಪ್ರವರ ನದಿಯ ಎಡದಂಡೆಯಲ್ಲಿ ಕಂಡುಬರುತ್ತದೆ. ಇದು ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿದೆ. ಈ ನೆಲೆಯು ಸಂಕಾಲಿಯ ಮತ್ತು ಧವಳೀಕರ್ ಅವರಿಂದ ಉತ್ಖನನಗೊಂಡಿತು. ಈ ಸಂಸ್ಕೃತಿಯ ಉತ್ಖನನಗೊಂಡ ಇತರೆ ನಿವೇಶನಗಳೆಂದರೆ ನಾಸಿಕ್‌, ನೆವಾಸ, ಪ್ರಕಾಶ್‌, ನವದಾತೋಲಿ, ದೈಮಾಬಾದ್‌ ಮತ್ತು ಇನಾಮ್‌ಗಾಂವ್‌. ಈ ಸಂಸ್ಕೃತಿಯು ಮಾಳವ ಸಂಸ್ಕೃತಿ ಬಹಳಷ್ಟು ಅಂಶಗಳನ್ನು ಮತ್ತು ದಕ್ಷಿಣದ ನವಶಿಲಾಯುಗದ ಕೆಲವು ಅಂಶಗಳನ್ನು ಒಳಗೊಂಡಿದೆ. ಇಲ್ಲಿ ವಿವಿಧ ಬಗೆಯ ಮಡಿಕೆಗಳು, ತಾಮ್ರದಿಂದ ಮಾಡಿದ ವಸ್ತುಗಳು, ಅರೆಪ್ರಶಸ್ತ ಶಿಲೆಗಳಿಂದ ಮಾಡಿದ ಮಣಿಗಳು, ವಿವಿಧ ಬಗೆಯ ಪ್ರತಿಮೆಗಳು ಕಂಡುಬರುತ್ತವೆ.

ತಾಮ್ರ ಉಪಕರಣ ಸಂಗ್ರಹ (copper hoards) ಮತ್ತು ಕಾವಿ ಬಣ್ಣದ ಕುಂಬಾರಿಕೆ ಹಂತದ ಸಂಸ್ಕೃತಿ

ಪೂರ್ವದ ಬಂಗಾಳ ಮತ್ತು ಒರಿಸ್ಸಾದಿಂದ ಪಶ್ಚಿಮ ಗುಜರಾತಿನವರೆಗೆ ದಕ್ಷಿಣದಲ್ಲಿ ಆಂಧ್ರ ಪ್ರದೇಶದಿಂದ ಉತ್ತರದ ಪ್ರದೇಶದವರೆಗೆ ನಲವತ್ತಕ್ಕಿಂತ ಹೆಚ್ಚು ತಾಮ್ರ ಸಂಗ್ರಹಗಳು ದೊರೆತಿವೆ. ಅವುಗಳಲ್ಲಿ ಮಧ್ಯ ಪ್ರದೇಶದ ಗಾಂಗೇರಿಯಾ ಅತಿ ದೊಡ್ಡದು ದೊರೆತಿರುವ ಅರ್ಧಪಾಲಿನಷ್ಟು ಸಂಗ್ರಹಗಳು ಗಂಗಾ-ಯಮುನಾ ಬಯಲಿನಲ್ಲಿವೆ. ಇಲ್ಲೆಲ್ಲ ದೊರೆತಿರುವ ಉಪಕರಣಗಳಲ್ಲಿ ಉಂಗುರಗಳು, ಬಾಚಿ, ಕೊಡಲಿ, ಕತ್ತಿ, ಈಟಿ, ಗಾಳ ಅಥವಾ ಮೀನು ಭರ್ಜಿ, ಈಟಿ ಮೊನೆಗಳು ಸೇರಿವೆ.

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಉತ್ಖನನ ಮಾಡಿರುವ ಎರಡು ಜಾಗಗಳಲ್ಲಿ ತಾಮ್ರದ ವಸ್ತುಗಳು ಕಾವಿ ಮಡಿಕೆಗಳು ಮಣ್ಣಿನ ಮನೆಗಳೊಂದಿಗೆ ದೊರೆತಿವೆ. ಹಸ್ತಿನಾಪುರದಲ್ಲಿ ಇದರ ಮೊದಲ ಕುರುಹುಗಳು ದೊರೆತಯುತ್ತವೆ. ಗಂಗಾ-ಯಮುನಾ ಬಯಲಿನಲ್ಲಿ ನೆಲೆಸಿದ ಮೊದ ಮೊದಲ ಕೃಷಿಕರಾಗಿದ್ದರು. ಇದನ್ನು ಕಾವಿ ಬಣ್ಣದ ಕುಂಬಾರಿಕೆಯ ಸಂಸ್ಕೃತಿ ಎಂದು ಕರೆಯುತ್ತಾರೆ. ಈ ಕುಂಬಾರಿಕೆಯ ವಸ್ತುಗಳು ಕೆಂಪು ಬಣ್ಣದವಾಗಿ ಬಹುಮಟ್ಟಿಗೆ ಕಪ್ಪು ಬಳಿದಿರುವಂತಹವುಗಳಾಗಿವೆ.

ಸಂಸ್ಕೃತಿ

ವಸತಿ : ವಸತಿ ಪ್ರದೇಶಗಳ ವಿನ್ಯಾಸ ಒಂದು ಬಗೆಯ ಶ್ರೇಣಿ ವ್ಯವಸ್ಥೆಯನ್ನು ಸೂಚಿಸುತ್ತದೆ. ಮಹಾರಾಷ್ಟ್ರದ ಹಲವಾರು ಜೋರ್ವೆ ವಸತಿಗಳು ಕೆಲವು ದೊಡ್ಡದಾಗಿದ್ದವು ಮತ್ತೆ ಕೆಲವು ಸಣ್ಣದಾಗಿರುತ್ತಿದ್ದವು. ಇವುಗಳ ಆಯತಾಕಾರ ಮತ್ತು ವೃತ್ತಾಕಾರದ ತಳವಿನ್ಯಾಸಗಳನ್ನು ಹೊಂದಿರುತ್ತಿದ್ದರೂ ಸಾಮಾನ್ಯವಾಗಿ ಆಯತಾಕಾರದ ಮನೆಗಳಲ್ಲಿ ಬಹುಶಃ ಹಳ್ಳಿಯ ಪ್ರಮುಖದ ವಾಸದ ನೆಲೆಯಾಗಿತ್ತು. ಸಾಮಾನ್ಯವಾಗಿ ತಾಮ್ರ ಶಿಲಾಯುಗದ ಜನರಿಗೆ ಸುಟ್ಟ ಇಟ್ಟಿಗೆಗಳ ಪರಿಚಯವಿರಲಿಲ್ಲ. ಆದರೆ ಕ್ರಿ. ಪೂ. ೧೫೦೦ರ ಸುಮಾರಿಗೆ ಸೆರಿದ ಸುಟ್ಟ ಇಟ್ಟಿಗೆಯ ಮನೆಗಳು ಗಿಲುಂಡ ನಿವೇಶನದಲ್ಲಿ ದೊರೆತಿವೆ. ಅಪರೂಪಕ್ಕೆ ಮಣ್ಣು ಮತ್ತು ಇಟ್ಟಿಗೆಯ ಮನೆಗಳು ಕಂಡುಬರುವುದಾದರೂ ಬಹುಕಾಲ ಮನೆಗಳು ಹೆಣೆದ ತಡಿಕೆಗಳಿಗೆ ಮಣ್ಣು ಮೆತ್ತಿ ನಿರ್ಮಿಸಿದ ಮನೆಗಳು, ಅವುಗಳಿಗೆ ಹುಲ್ಲು ಮಾಡುಗಳಿರುತ್ತಿದ್ದವು. ಆದರೆ ಆಹಾರ್ ನಲ್ಲಿ ಜನರು ಕಲ್ಲಿನ ಮೆನೆಗಳಲ್ಲಿರುವ ಕುರುಹುಗಳಿವೆ. ಇದುವರೆಗೆ ಪತ್ತೆಯಾಗಿರುವ ಸುಮಾರು ೨೦೦ ಜೋರ್ವೆ ನಿವೇಶನಗಳಲ್ಲಿ ದೈಮಾಬಾದ್‌ನಿವೇಶನ ಅತ್ಯಂತ ದೊಡ್ಡದಾಗಿ ೨೦ ಹೆಕ್ಟೇರು ವಿಸ್ತಾರವಾಗಿದ್ದು ಅಲ್ಲಿ ಸುಮಾರು ೪೦೦೦ ಜನ ವಾಸ ಮಾಡುತ್ತಿದ್ದಿರಬಹುದೆಂದು ಅಂದಾಜಿಸಲಾಗಿದೆ. ಅದರ ಸುತ್ತಲೂ ಮಣ್ಣಿನಕೋಟೆ, ಕಲ್ಲು ಮಣ್ಣುಗಳಿಂದ ನಿರ್ಮಿಸಿದ ಕೊತ್ತಲಗಳು ಇದ್ದವೆಂದು ತೋರತ್ತದೆ. ಮಹಾರಾಷ್ಟ್ರದ ಇನಾಮ್‌ಗಾಂವ್‌ನಲ್ಲಿ ತಾಮ್ರ ಶಿಲಾಯುಗದ ಆರಂಭದ ಹಂತಕ್ಕೆ ಸೇರಿದ ಒಲೆಗಳು ಇರುವ ದೊಡ್ಡ ಮಣ್ಣಿನ ಮನೆಗಳು ದೊರೆತಿವೆ. ಅಲ್ಲಿ ವೃತ್ತಾಕಾರದ ಗುಳಿ ಮನೆಗಳು ಸಿಕ್ಕಿವೆ. ಇಲ್ಲಿ ಐದು ಕೋಣೆಗಳ ಒಂದು ಮನೆ ಕಂಡುಬಂದಿದೆ. ಅವುಗಳಲ್ಲಿ ನಾಲ್ಕು ಆಯತಾಕಾರದವು ಒಂದು ವೃತ್ತಾಕಾರದ್ದು ಹಲವು ನಿವಾಸಗಳ ನಡುವೆ ಇದು ಇರುವುದರಿಂದ ನಾಯಕನೊಬ್ಬನ ಮೆನೆಯಾಗಿರಬೇಕೆಂದು ಊಹೆ ಮಾಡಲಾಗಿದೆ. ಇಲ್ಲಿ ನೂರಕ್ಕಿಂತಲೂ ಹೆಚ್ಚು ಮನೆಗಳು ಸಿಕ್ಕಿವೆ. ಇದರ ಸುತ್ತಲೂ ಒಂದು ಕೋಟೆಯಿದ್ದ ಕುರುಹು ದೊರೆತಿವೆ.

ಮಡಕೆ : ದಿನ ನಿತ್ಯದ ಬಳಕೆಯ ಸಾಮಾನುಗಳಲ್ಲಿ ಮಡಕೆಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಸಂಸ್ಕೃತಿಯ ನೆಲೆಗಳಲ್ಲಿ ಉಪಯೋಗಿಸಿದ ಮಡಿಕೆಗಳು ವೈವಿಧ್ಯಮಯವಾಗಿದ್ದವು ಸಾವಳಿದ ಮಾದರಿಯ ಮಡಕೆಗಳ ಅಚ್ಚ ಕೆಂಪು ಇಲ್ಲವೆ, ದಾಳಿಂಬೆ ಬಣ್ಣದ ಕಾಂತಿಯು ಲೇಪನವುಳ್ಳದಾಗಿರುತ್ತವೆ. ಇಲ್ಲವೆ ಸ್ವಲ್ಪ ಮಸುಕಾದ ಬೂದು ವರ್ಣದವು. ಸಾಮಾನ್ಯವಾಗಿ ಕೆಲವು ಪಾತ್ರೆಗಳ ಬಾಯಿಯಂಚಿನ ಹೊರಬದಿಯು ದಪ್ಪಗೆ ಗುಂಡಗೆ ಇರಬಹುದು ಅಥವಾ ಅಂಗಿಯ ಕಾಲರಿನಂತೆ ಇರುತ್ತವೆ. ಉದ್ದನೆಯ ಕಂಠದ ಜಾಡಿಗಳು, ಅರ್ಧ ಗೋಲಾಕೃತಿಯ ಬಟ್ಟಲುಗಳ ವರ್ತುಳಾಕಾರದ ಮುಚ್ಚಳಗಳು ಇತ್ಯಾದಿಗಳು ಇಲ್ಲಿ ಕಂಡುಬರುತ್ತವೆ. ಕಾಯಥ ಸಂಸ್ಕೃತಿಯಲ್ಲಿ ನೇರಳೆ ಮತ್ತು ಕೆಂಪು ಗುಲಾಬಿ ವರ್ಣದ ಮಡಕೆಗಳು, ಕೆಂಪು ಹಳದಿ ವರ್ಣದ ಮಡಕೆಗಳು ಮತ್ತು ಪೂರ್ಣ ಕೆಂಪು ವರ್ಣದ ಕಂಡು ಬರುತ್ತದೆ. ಆಹಾರ್ ಸಂಸ್ಕೃತಿಯಲ್ಲಿ ಮುಖ್ಯವ್ಯಾಗಿ ನಯವಾದ ಬಿಳಿ-ಕಪ್ಪು ಮತ್ತು ಕೆಂಪು ಬಣ್ಣದಿಂದ ಕೂಡಿದ ಮಡಿಕೆಗಳು ಕಂಡುಬರುತ್ತವೆ. ಮಾಳವ ಸಂಸ್ಕೃತಿಯ ನೆಲೆಗಳಲ್ಲಿ ದೊರೆತಿರುವ ಕುಂಭ ಕಲಾ ವಸ್ತುಗಳು ಅತ್ಯುಚ್ಚವೆಂದು ಪರಿಗಣಿಸಲಾಗಿದ್ದು ಅದು ಮಾಳವ ಕುಂಭ ಕಲೆಯೆಂದೇ ಪ್ರಸಿದ್ಧಿಯಾಗಿದೆ. ಇಲ್ಲಿನ ಮಡಿಕೆಗಳ ಚಕ್ರದ ಸಹಾಯದಿಂದ ಮಾಡಲ್ಪಟ್ಟಿದ್ದು ನೇರಳೆ ವರ್ಣದಿಂದ ಕೂಡಿವೆ. ಇವುಗಳನ್ನು ಚೆನ್ನಾಗಿ ಸುಡಲಾಗುತ್ತಿತ್ತು. ಇವುಗಳ ಮೇಲೆ ವಿವಿಧ ಬಗೆಯ ರೇಖಾಚಿತ್ರಗಳು ಮತ್ತು ಪ್ರಾಣಿಗಳ ಚಿತ್ರಗಳು ಕಂಡುಬರುತ್ತವೆ. ಉದ್ದನೆಯ ಕಂಠವುಳ್ಳ ಜಾಡಿ, ಹೊರಚಾಚಿದ ಅಂಚನ್ನುಳ್ಳ ಮಡಿಕೆಗಳು, ಅಂಚನ್ನು ಹೊಂದಿದ ದುಂಡನೆಯ ಮಡಿಕೆ, ವಿವಿಧ ಆಕಾರದ ಬಟ್ಟಲುಗಳ (dishes on stands), ವರ್ತುಳಾಕಾರದ ಮುಚ್ಚಳಗಳು ಇತ್ಯಾದಿಗಳು ಕಂಡುಬರುತ್ತವೆ. ಪ್ರಕಾಶ್‌ ನಿವೇಶನದಲ್ಲಿ ಈ ಸಂಸ್ಕೃತಿಯ ಬಿಳಿ-ಬೂದು ಬಣ್ಣದ, ಕಪ್ಪು ಮತ್ತು ಬೂದು ವರ್ಣದ ಮಡಿಕೆಗಳು ದೊರೆಯುತ್ತವೆ. ಜೋರ್ವೆ ಸಂಸ್ಕೃತಿಯ ನೆಲೆಗಳಲ್ಲಿ ದೊರೆತ ಮಡಿಕೆಗಳನ್ನು ಜೋರ್ವೆ ಮಡಿಕೆಗಳೆಂದು ಗುರುತಿಸಲಾಗಿದೆ. ಇಲ್ಲಿನ ಮಡಿಕೆಗಳು ಚಕ್ರದ ಮೇಲೆ ರೂಪಿಸಿ ಭಟ್ಟಿಯಲ್ಲಿ ಹದವಾಗಿ ಸುಡಲಾಗುತ್ತಿತ್ತು. ಇನಾಮಗಾಂವ್‌ನಲ್ಲಿ ಈ ಸಂಸ್ಕೃತಿಯ ಒಂದು ಭಟ್ಟಿ ಇದ್ದ ಕುರುಹು ಕಂಡುಬರುತ್ತದೆ. ಇಲ್ಲಿನ ಮಡಿಕೆಗಳು ಕಾವಿ ನೇರಳೆ ಮತ್ತು ಕೆಂಪು ಬಣ್ಣದಿಂದ ಕೂಡಿದ್ದವು. ಇವುಗಳ ಮೇಲೆ ರೇಖಾಚಿತ್ರಗಳು ಕಂಡುಬರುತ್ತವೆ. ಗಂಗಾ-ಯುಮುನಾ ಬಯಲಿನ ಪ್ರದೇಶದಲ್ಲಿ ಕಾವಿ ಬಣ್ಣದ ಕುಂಬಾರಿಕೆಯ ವಸ್ತುಗಳು ದೊರೆತಿವೆ. ಇಂಗ್ಲಿಷಿನಲ್ಲಿ ಇದನ್ನು ochre coloured pottery ಎಂದು ಕರೆಯುತ್ತಾರೆ. ಇವು ಕೆಂಪು ಬಣ್ಣದವುಗಳಾಗಿದ್ದು ಬಹುಮಟ್ಟಿಗೆ ಕಪ್ಪು ಬಣ್ಣವನ್ನು ಬಳಿದಿರುವಂತಹುಗಳಾಗಿವೆ. ಸಾಮಾನ್ಯವಾಗಿ ಇವು ಹೂ ದಾನಿಗಳ ಆಕಾರದವು.

ಶವಸಂಸ್ಕಾರ

ಮಹಾರಾಷ್ಟ್ರದ ಜೋರ್ವೆ ಸಂಸ್ಕೃತಿಯಲ್ಲಿ ಜನರು ಸತ್ತವರ ಶವಗಳನ್ನು ಶವಕುಂಡಗಳಲ್ಲಿರಿಸಿ ತಂತಮ್ಮ ಮನೆಗಳಲ್ಲೇ ಗುಳಿ ತೆಗದು ಉತ್ತರ ದಕ್ಷಿಣವಾಗಿ ಹೂಳುತ್ತಿದ್ದರು. ಸತ್ತವರೊಂದಿಗೆ ಇವರು ಮಡಕೆ ಕುಡಿಕೆಗಳನ್ನು ಹಾಗೂ ತಾಮ್ರದ ವಸ್ತುಗಳನ್ನು ಇಡುತ್ತಿದ್ದರು. ಇನಾಮ್‌ಗಾಂವ್‌ನಲ್ಲಿ ಒಂದು ಅಪರೂಪ ಮಾದರಿಯ ಶವಕುಣಿಯು ಇತ್ತು. ಇದರಲ್ಲಿ ಒಂದು ಗಟ್ಟಿಮುಟ್ಟಾದ ದಪ್ಪನೆಯ ನಾಲ್ಕು ಕಾಲಿನ ಅಗಲ ಬಾಯಿಯ ದೊಡ್ಡ ಜಾಡಿ ಕಂಡುಬರುತ್ತದೆ. ಇದರಲ್ಲಿ ಕುಳಿತ ಒಂದ ಅಸ್ಥಿಪಂಜರವಿತ್ತು ಮತ್ತು ಇದು ವರ್ಣಚಿತ್ರಗಳಿಂದ ಅಲಂಕೃತಗೊಂಡಿದೆ. ಅವುಗಳಲ್ಲಿ ಒಂದು ದೋಣಿಯ ಚಿತ್ರವು ಕಂಡುಬರುತ್ತದೆ. ಇದು ಹಿಂದೂ ತತ್ವಜ್ಞಾನದ ದೃಷ್ಟಿಯಿಂದ ಪ್ರಮುಖವಾಗುತ್ತದೆ. ಇದು ಆತ್ಮವು ನದಿಯನ್ನು ದಾಟಿ ಸ್ವರ್ಗದ ಕಡೆ ಹೋಗುತ್ತದೆ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಹೀಗಾಗಿ ಈ ಶವಕುಣಿ ಬಹುಶಃ ಆ ಗ್ರಾಮದ ಮುಖ್ಯಸ್ಥನಾಗಿದ್ದಿರಬೇಕು ಎಂದು ಊಹಿಸುತ್ತಾರೆ. ನೆವಾಸಾ ಮತ್ತು ಚಂಡೋಲಿಗಳಲ್ಲಿ ದೊರೆತಿರುವ ಗೋರಿಗಳಲ್ಲಿ ಕೆಲವು ಮಕ್ಕಳು ತಾಮ್ರದ ಸರಗಳನ್ನು ಧರಿಸಿವೆ. ಕಾಯಥದ ಒಂದು ಮನೆಯಲ್ಲಿ ೨೯ ತಾಮ್ರದ ಬಳೆಗಳು ಎರಡು ವಿಶಿಷ್ಟವಾದ ತಾಮ್ರದ ಕೊಡಲಿಗಳು ಮತ್ತು ಮಡಕೆಗಳಲ್ಲಿಟ್ಟಿರುವ ಅರೆ ಪ್ರಶಸ್ತ ಶಿಲೆಗಳಿಂದ ಮಾಡಿದ ಮಣಿಗಳ ಸರಗಳು ದೊರೆತಿವೆ.

ಕಸಬುಗಳು

ತಾಮ್ರ ಶಿಲಾಯುಗದ ಕಲೆ ಮತ್ತು ಕಸುಬುಗಳ ಬಗ್ಗೆ ವಿಫುಲವಾಗಿ ಮಾಹಿತಿಗಳು ದೊರೆತಿವೆ. ತಾಮ್ರದ ಲೋಹಗಾರಿಕೆ ಮತ್ತು ಕಲ್ಲು ಗೆಲಸಗಳಲ್ಲಿ ಅವರು ಪರಿಣತರಾಗಿದ್ದರು. ಬಣ್ಣ ಬಣ್ಣದ ಅರೆ ಪ್ರಶಸ್ತ ಕಲೆಗಳಿಂದ, ಸ್ಪಟಿಕ ಶಿಲೆಗಳಲ್ಲಿ ಮಣಿಗಳನ್ನು ತಯಾರಿಸುತ್ತಿದ್ದರು. ಮಾಳವದಲ್ಲಿ ತಕಲಿಯ ಬಿಲ್ಲೆಗಳು ದೊರೆತಿವೆಯಾದ್ದರಿಂದ ಅವರಿಗೆ ನೂಲುಗಾರಿಕೆ, ನೆಯ್ಗೆ, ಕಲೆ ಗೊತ್ತಿತೆಂದು ತಿಳಿಯಬಹುದು. ಮಹಾರಾಷ್ಟ್ರದಲ್ಲಿ ಹತ್ತಿ, ಅಗಸೆನಾರು, ಬೂರುಗದ ಹತ್ತಿಗಳಿಂದ ಮಾಡಿದ ನೂಲು ದೊರೆತಿವೆ. ಇನಾಮ್‌ಗಾವಿನ ಹಲವು ನಿವೇಶನಗಳಲ್ಲಿ ಕುಂಬಾರರು, ಕಮ್ಮಾರರು, ದಂತಕೊರೆಯುವವರು, ಸುಣ್ಣ ಸುಡುವವರು, ಮಣ್ಣಿನ ಬೊಂಬೆಗಾರರು ಮುಂತಾದ ಕಸುಬುಗಾರರು ವಾಸಿಸುತ್ತಿದ್ದರು.

ಬೃಹತ್ಶಿಲಾ ಸಮಾಧಿ ಸಂಸ್ಕೃತಿಗಳು
ಕ್ರಿ. ಪೂ. ೧೦೦೦ದ ಸುಮಾರಿಗೆ ಶವಸಂಸ್ಕಾರ ಪದ್ಧತಿಯಲ್ಲಿ ಬದಲಾವಣೆಯನ್ನು ಕಾಣತೊಡಗಿತು. ಅದು ವಾಸ್ತವ್ಯದ ನೆಲೆಯಿಂದ ದೂರ ನಿರ್ಮಾಣವಾಗುತ್ತಿತ್ತು. ಈ  ಸಮಾಧಿಗಳು ಬೃಹತ್‌ಶಿಲೆಯಿಂದ (mega-lithos) ನಿರ್ಮಾಣವಾಗುತ್ತಿತ್ತು. ಈ ಜನರ ಸಂಸ್ಕೃತಿಯ ಕುರಿತು ನಮಗೆ ಸಮಾಧಿ ಅವಶೇಷಗಳೇ ಆಧಾರವಾಗಿವೆ. ಅವರ ವಸತಿ ನೆಲೆಗಳ ಅವಶೇಷಗಳು ತೀರ ಅಪವಾದಕ್ಕೆ ಸಿಕ್ಕಿವೆ. ಹಾಗಾಗಿ ಈ ಸಂಸ್ಕೃತಿಯನ್ನು ಬೃಹತ್‌ಶಿಲಾ ಸಮಾಧಿ ಸಂಸ್ಕೃತಿ ಎಂದೇ ಕರೆಯಲಾಗಿದೆ. ಇಂತಹ ಸಮಾಧಿಗಳು ಸಾಮಾನ್ಯವಾಗಿ ಬೆಟ್ಟಗುಡ್ಡಗಳ ಸಮತಟ್ಟು ಪ್ರದೇಶಗಳಲ್ಲಿ ಸಿಗುತ್ತವೆ. ಇವುಗಳ ತಪ್ಪಲು ಪ್ರದೇಶ ಅಥವಾ ಶಿಲಾಮಯವಾದ ಬರಡು ಭೂಮಿಗಳನ್ನು ಈ ಸಂಸ್ಕೃತಿಯ ಜನರು ತಮ್ಮ ವಾಸ್ತವ್ಯದ ನೆಲೆಗಳನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಕಂಡುಬರುತ್ತದೆ. ಇನ್ನೂ ಕೆಲವೆಡೆ ಹೇರಳವಾಗಿ ಕಬ್ಬಿಣ, ಮ್ಯಾಂಗನೀಸ್‌, ಬಂಗಾರ ಇತ್ಯಾದಿ ಖನಿಜ ನಿಕ್ಷೇಪ ದೊರೆಯುವ ಸ್ಥಳಗಳಲ್ಲಿ ಮತ್ತು ಅಲಂಕರಣ ಸರಗಳಿಗೆ ಬೇಕಾಗುವ ಉತ್ತಮ ಜಾತಿಯ ಅರೆಪ್ರಶಸ್ತ ಶಿಲೆಗಳು ಅಂದರೆ ಅಗೇಟ್‌, ಚಾಲ್ಸಿಡೋನಿ, ಕಾರ್ನೀಲಿಯ, ಜಾಸ್ಟರ್ ಮೊದಲಾದ ಕಲ್ಲುಗಳು ದೊರೆಯುವ ಸ್ಥಳಗಳಲ್ಲಿ ಈ ಸಂಸ್ಕೃತಿಯ ನೆಲೆಗಳು ಕಂಡುಬರುತ್ತವೆ. ಉದಾಹರಣೆಗೆ ಕರ್ನಾಟಕದ ಹಳ್ಳೂರು, ಬನಹಳ್ಳಿ, ಗುಳೇದಗುಡ್ಡ ಇತ್ಯಾದಿಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು.

ಹಂಚಿಕೆ

ಬೃಹತ್‌ಶಿಲಾ ಸಂಸ್ಕೃತಿಗಳು ಭಾರತದ ಉಪಖಂಡದಲ್ಲಿ ಬಲೂಚಿಸ್ತಾನ, ಪರ್ಶಿಯನ್‌ ಮಕ್ರಾನ್‌, ವಾಘದೂರ್, ಮುರದ್‌ ಮೆಮಾನ್‌ ಇತ್ಯಾದಿ ಪ್ರದೇಶಗಳಲ್ಲಿ ಕಂಡುಬರುತ್ತವೆ. ಭಾರತಕ್ಕೆ ಸಂಬಂಧಿಸಿದ ದಕ್ಷಿಣ ಭಾರತದಲ್ಲಿ ಅತೀ ಗಣನೀಯ ಪ್ರಮಾಣದಲ್ಲಿ ಕಂಡುಬರುತ್ತದೆ. ಆಂಧ್ರಪ್ರದೇಶದ ಮಲ್ಲೇಶ್ವರಂ, ನಾಗಾರ್ಜುನ ಕೊಂಡ, ಕರ್ನಾಟಕದ ಪಿಕ್ಲಿಹಾಳ್‌, ಮಸ್ಕಿ, ಬ್ರಹ್ಮಗಿರಿ, ಹಳ್ಳೂರು, ಟಿ. ನರಸೀಪುರ, ಸಂಗನಕಲ್‌, ಚಂದ್ರವಳ್ಳಿ, ಮಹಾರಾಷ್ಟ್ರದ ನೈಕುಂದ, ತಮಿಳುನಾಡಿನ ಪಯ್ಯಂಪಳ್ಳಿಗಳಲ್ಲಿ ಕಂಡುಬರುತ್ತವೆ. ದಕ್ಷಿಣ ಭಾರತವನ್ನು ಹೊರತುಪಡಿಸಿದರೆ ಲಡಾಕ್‌ನ ಲೇಹ್‌ಕಣಿವೆ, ಬುರ್ಜಹಾಂ ಮತ್ತು ಗುಫ್‌ಕ್ರಾಲ್‌(ಶ್ರೀನಗರ), ದಿಯೋಸ (ರಾಜಾಸ್ಥಾನ), ಖೇರ (ಫತೇಪುರ್ ಸಿಕ್ರಿ), ದಿಯೋಘರ್, ಬಾಂಡ, ಮಿರ್ಜಾಪುರ, ವಾರಣಾಸಿ (ಉತ್ತರ ಪ್ರದೇಶ) ಸರ್ವೆಕೋಲ (ಬಿಹಾರ) ಇತ್ಯಾದಿ ಪ್ರದೇಶಗಳಲ್ಲಿ ಈ ಸಂಸ್ಕೃತಿಗೆ ಸಂಬಂಧಿಸಿದ ನೆಲೆಗಳು ಕಂಡುಬರುತ್ತವೆ.

ಕಾಲ

ಬೃಹತ್‌ಶಿಲಾ ಸಂಸ್ಕೃತಿಯ ಕಾಲವನ್ನು ನಿರ್ಧರಿಸುವುದು ಕಷ್ಟ. ಮಾರ್ಟಿಮರ್ ವ್ಹೀಲರ್ ರವರು ಬ್ರಹ್ಮಗಿರಿಯ ಉತ್ಖನನ ವರದಿಯಲ್ಲಿ ಕ್ರಿ. ಶ. ೧ನೆಯ ಶತಮಾನದ ಮಧ್ಯಭಾಗದಲ್ಲಿ ಈ ಸಂಸ್ಕೃತಿಯ ಕೊನೆಗೊಂಡಿರಬಹುದೆಂದು ಊಹಿಸುತ್ತಾರೆ. ಆದರೆ ಈ ಸಂಸ್ಕೃತಿ ಎಷ್ಟು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು ಎನ್ನುವುದರಲ್ಲಿ ಗೊಂದಲವಿದೆ. ವ್ಹೀಲರ್ ರವರು ಕ್ರಿ. ಪೂ. ಸುಮಾರು ೨೦೦ನ್ನು ಈ ಸಂಸ್ಕೃತಿಯ ಪ್ರಾರಂಭದ ಅವಧಿಯನ್ನಾಗಿ ಗುರುತಿಸುತ್ತಾರೆ. ಗೋರ್ಡಾನ್‌ ಚೈಲ್ಡ್‌, ಸುಬ್ಬರಾವ್‌ ಇತ್ಯಾದಿ ಪ್ರಾಕ್ತನಶಾಸ್ತ್ರಜ್ಞರು ಈ ಸಂಸ್ಕೃತಿಯ ಅವಧಿಯನ್ನು ಕ್ರಿ. ಪೂ. ೭೦೦ರಿಂದ ಕ್ರಿ. ಪೂ. ೩೦೦ರವರೆಗೆ ನಿರ್ಧರಿಸಿದ್ದಾರೆ. ಇವರ ಆಭಿಪ್ರಾಯಗಳನ್ನು ಸಮರ್ಥಿಸುವಂತೆ ಕಾರ್ಬನ್‌ ೧೪ ಕಾಲಗಣನೆ ಮತ್ತು ಔಷ್ಣಿಕ ದೀಪ್ತಿ ಕಾಲಗಣನೆಗಳು ಕ್ರಿ. ಪೂ. ೧೦೦೦-೧೨೦೦ ರಷ್ಟು ಹಿಂದಿನ ಕಾಲಗಳನ್ನು ನೀಡಿವೆ. ಕರ್ನಾಟಕದ ಕೊಮಾರನ ಹಳ್ಳಿಯಲ್ಲಿ ಅತ್ಯಂತ ಹಳೆ ಅವಶೇಷ ಸಿಕ್ಕಿದ್ದು ಅದು ಕ್ರಿ. ಶ. ೧೨೦೦ರಷ್ಟು ಹಿಂದಿನದೆಂದು ತಿಳಿದುಬಂದಿದೆ. ಈ ಸಂಸ್ಕೃತಿ ಕ್ರಿಸ್ತಶಕದ ನಂತರ ಒಂದೆರಡು ಶತಮಾನಗಳವರೆಗೆ ಮುಂದುವರಿದ ಸಾಧ್ಯತೆ ಇದೆ. ದಕ್ಷಿಣ ಭಾರತದ ಪ್ರದೇಶಗಳಲ್ಲಿ ನವಶಿಲಾಯುಗದ ನಂತರ ಕಂಡುಬರುತ್ತದೆ.

ಸಂಸ್ಕೃತಿ ಜನಜೀವನ

ಬೃಹತ್‌ಶಿಲಾ ಸಮಾಧಿಗಳಲ್ಲಿ ದೊರೆಯುವ ದವಸಧಾನ್ಯ ಹಾಗೂ ಮಾನವ ನಿರ್ಮಿತ ವಸ್ತುಗಳಿಂದ ಮತ್ತು ಈ ಸಂಸ್ಕೃತಿಯ ಜನರು ಬಿಡಿಸಿದ ವರ್ಣಚಿತ್ರಗಳಿಂದ ಅವರ ಜೀವನ ರೀತಿ ನೀತಿಗಳನ್ನು ಕಂಡುಕೊಳ್ಳಬಹುದು. ಪಶು ಸಂಗೋಪನೆ, ಬೇಟೆಮಾಡುವುದು ಮತ್ತು ಸುಧಾರಿತ ಬೇಸಾಯವನ್ನು ಇವರು ಅವಲಂಬಿಸಿದ್ದರು. ಇವರು ತಯಾರಿಸದ ಈಟಿ, ಭರ್ಜಿ, ಕತ್ತಿ, ಬಾಣದ ಮೊನೆಗಳು ಮತ್ತು ಇವರು ರಚಿಸಿದ ವರ್ಣಚಿತ್ರಗಳಲ್ಲಿ ನಾನಾ ಪ್ರಕಾರದ ಕಬ್ಬಿಣದ ಆಯುಧಗಳನ್ನು ಹಿಡಿದಿರುವ ಮನುಷ್ಯರು ಪ್ರಾಣಿಗಳನ್ನು ಬೇಟೆಗಾರಿಕೆ ಮತ್ತು ಪಶುಪಾಲನೆಯನ್ನು ಹೆಚ್ಚು ಅವಲಂಬಿಸಿದ್ದರೆಂದು ತಿಳಿಯಬಹುದು. ಕಬ್ಬಿಣದ ಉಕ್ಕಿನ ನೇಗಿಲ ಕುಳು, ಕುಡಗೋಲು ಇತ್ಯಾದಿಗಳ ಆಧಾರದಿಂದ ಇವರು ಸುಧಾರಿತ ವ್ಯವಸಾಯವನ್ನು ಅವಲಂಬಿಸದ್ದರು ಎಂದು ತಿಳಿಯಬಹುದು. ಈ ಸಂಸ್ಕೃತಿಯ ಜನರು ಗೋಧಿ, ಬಾರ್ಲಿ, ಭತ್ತ, ರಾಗಿ, ನವಣೆ ಇತ್ಯಾದಿ ದವಸಧಾನ್ಯಗಳನ್ನು, ಕಡಲೆ, ಅವರೆ, ಹೆಸರುಕಾಳು, ಬಟಾಣಿ ಇತ್ಯಾದಿ ಕಾಳುಗಳನ್ನು ಬೆಳೆಯುತ್ತಿದ್ದರು. ಅಲ್ಲದೆ ಆದಿಚಲ್ಲೂರು ಮತ್ತು ನೀಲಗಿರಿ ಬೆಟ್ಟ ಶ್ರೇಣಿಗಳಲ್ಲಿನ ನಿವೇಶನಗಳಲ್ಲಿ ಹತ್ತಿ ಬೆಳೆಯುತ್ತಿದ್ದ ಕುರುಹುಗಳು ದೊರೆಯುತ್ತವೆ. ಈ ಸಂಸ್ಕೃತಿಯ ಜನರು, ಕುರಿ, ಆಡು, ಹಸು, ಎತ್ತು, ಮೊದಲಾದ ಪ್ರಾಣಿಗಳನ್ನು ಸಾಕುತ್ತಿದ್ದರು. ಇವರು ಕುದುರೆಯನ್ನು ಸರ್ವೇಸಾಮಾನ್ಯವಾಗಿ ಬಳಸುತ್ತಿದ್ದರು. ಕರ್ನಾಟಕದ ಹಿರೇಬೆನಕನ ಕಲ್ಲಿನ ಗವಿವರ್ಣ ಚಿತ್ರದಲ್ಲಿ ಕುದುರೆ ಸವಾರಿಯ ಚಿತ್ರಗಳು ದೊರೆಯುತ್ತವೆ. ಎಡಿಗೇನಹಳ್ಳಿಯ ಕಲ್ಗೋರಿಗಳಲ್ಲಿ ಕುದುರೆ ಬಾಯಿಗೆ ಹಾಕುತ್ತಿದ್ದ ಕಬ್ಬಿಣದ ನಿಯಂತ್ರಣ ಉಪಕರಣ ವಿದರ್ಭಾ ಪ್ರದೇಶದ ಮಹಾರಾಷ್ಟ್ರದ ನೈಕುಂದ, ಟಾಕಳ ಘಾಟ ಮೊದಲಾದ ನೆಲೆಗಳಲ್ಲಿ ದೊರೆತ ಕುದುರೆ ಮುಖಕ್ಕೆ ಅಲಂಕಾರಕ್ಕೋಸ್ಕರ ಹಾಕುತ್ತಿದ್ದ ತಾಮ್ರದ ಪಟ್ಟಿಗಳ ಅವಶೇಷಗಳ ಕುದುರೆಯನ್ನು ಸರ್ವೇಸಾಮಾನ್ಯವಾಗಿ ಸಾಕುತ್ತಿದ್ದರು ಎಂಬುದಕ್ಕೆ ಆಧಾರವಿದೆ.

ಮಡಿಕೆಗಳು

ದಿನನಿತ್ಯದ ಬಳಕೆಯ ಸಾಮಾನುಗಳಲ್ಲಿ ಮಡಿಕೆಗಳು ಪ್ರಮುಖ ಪಾತ್ರವಹಿಸುತ್ತವೆ. ಚಕ್ರದ ಸಹಾಯದಿಂದ ಮಾಡಿದ ಮಡಿಕೆಗಳು ಮತ್ತು ಕೈಯಿಂದ ಮಾಡಿದ ದೊಡ್ಡ ದೊಡ್ಡ ಗುಡಾಣಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ಸಂಸ್ಕೃತಿಯ ಜನರು ನಾನಾ ಬಗೆಯ ನಾನಾ ವರ್ಣದ ಮಡಕೆಗಳನ್ನು ಬಳಸಿರುವುದು ಕಂಡುಬರುತ್ತದೆ. ಮುಖ್ಯವಾಗಿ ಕಪ್ಪು ಮತ್ತು ಕೆಂಪು ಬಣ್ಣದ ಮಡಿಕೆಗಳು, ಪೂರ್ಣಕಪ್ಪು, ಪೂರ್ಣ ಕೆಂಪು, ಮೈ ಕಾಷಿಯಸ್‌ಕೆಂಪು ಮತ್ತು ರೊಸೆಟ್ಟಾ ವರ್ಣದ ಮಡಿಕೆಗಳು (russet-coated painted ware) ಉತ್ಖನನಗಳಿಂದ ದೊರೆತಿವೆ. ಇವುಗಳಲ್ಲಿ ಸಾಮಾನ್ಯವಾಗಿ ಕಪ್ಪು ಮತ್ತು ಕೆಂಪು ವರ್ಣದ ಮಡಿಕೆಗಳು ಮತ್ತು ಪೂರ್ಣ ಕಪ್ಪು ವರ್ಣದ ಮಡಿಕೆಗಳನ್ನು ಹೆಚ್ಚಾಗಿ ಬಳಸಿರುವುದು ತಿಳಿಯುತ್ತದೆ. ಮೈ ಕಾಷಿಯಸ್‌ಕೆಂಪು ವರ್ಣದ ಮಡಿಕೆಗಳು ವಿದರ್ಭಾ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಕಪ್ಪು ಮತ್ತು ಕೆಂಪು ದ್ವಿವರ್ಣದ ಪಾತ್ರೆಗಳಲ್ಲಿ ಒಳಮೈ ಪೂರ್ಣ ಕಪ್ಪಾಗಿದ್ದು, ಹೊರಮೈ ಮೇಲ್ಭಾಗ ಕಪ್ಪಾಗಿರುತ್ತದೆ. ಉಳಿದ ಹೊರ ಮೈಯ ಕೆಂಪು ಬಣ್ಣವಾಗಿರುತ್ತದೆ. ವಿಶೇಷವಾಗಿ ಕಪ್ಪು-ಕೆಂಪು ಬಣ್ಣದ ಮಧ್ಯಮ ಪ್ರಮಾಣದ ಪಾತ್ರೆಗಳು ಉತ್ತಮ ಜೇಡಿಮಣ್ಣಿನಿಂದ ಮಾಡಿರುತ್ತಿದ್ದವು. ವಿವಿಧ ಆಕಾರದ ಬಟ್ಟಲುಗಳು, ತಪ್ಪಲಿ ಆಕಾರದವು, ಕೊಡುಗೆಗಳು, ಉಂಗುರಾಕಾರದ ಅಡ್ಡಣಿಗೆಗಳು, ಗುಡಾಣಗಳು, ಬಾನಿಗಳು, ಮೊದಲಾದ ನಾನಾ ಪ್ರಕಾರಗಳ ಪಾತ್ರೆಗಳಿದ್ದವು ಮತ್ತು ಈ ಪಾತ್ರೆಗಳ ಬಾಯಿ ಅಂಚಿನ ಹಿಡಿಕೆಗಳು ನಾನಾ ವಿಧವಾಗಿರುತ್ತವೆ. ದೊಡ್ಡ ದೊಡ್ಡ ಗುಡಾಣಗಳ ಬಾಯಿಯ ಅಂಚು ಪೂರ್ತಿಯಾಗಿ ಚಿವುಟಿದಂತಿರುತ್ತದೆ. ಭುಜದ ಮೇಲೆ ಅಂಟಿಸಿದ ಮಣ್ಣಿನ ಪಟ್ಟಿಯ ತುದಿಗಳು ಹಿಂದಕ್ಕೆ ಬಾಗಿರುತ್ತವೆ. ಈ ಗುಡಾಣದ ಹೊಟ್ಟೆಯು ಬಹಳ ಉಬ್ಬಿದ್ದು ನಡುವ ಸಣ್ಣದಾಗುತ್ತ ಹೋಗುತ್ತದೆ. ಇಂತಹ ಗುಡಾಣಗಳನ್ನು ಅಸ್ಥಿ ಸಂಚಯನಕ್ಕೆ ಉಪಯೋಗಿಸಲಾಗುತ್ತಿತ್ತು. ಸಣ್ಣ ಮತ್ತು ಮಧ್ಯಮ ವರ್ಗದ ಪಾತ್ರೆಗಳ ಮೇಲೆ ಅಪರೂಪವಾಗಿ ಗೀಚಿದ ಸಾಮಾನ್ಯವಾಗಿ ಒಂದೊಂದು ಅಪರೂಪಕ್ಕೆ ಎರಡು ರೇಖೆಗಳಿರುತ್ತವೆ. ವಿದ್ವಾಂಸರುಗಳು ಈ ಗೆರೆಗಳಲ್ಲಿ ಕೆಲವನ್ನು ಅಶೋಕನ ಕಾಲದ ಬ್ರಾಹ್ಮಿ ವರ್ಣ ಮಾಲೆಯ ಅಕ್ಷರಗಳಿಗ ಹೋಲಿಸುತ್ತಾರೆ. ಮತ್ತೆ ಕೆಲವು ವಿದ್ವಾಂಸರು ಇವು ಕುಂಬಾರನ ಗುರುತಗಳೆಂದೂ, ಧಾರ್ಮಿಕ ಚಿಹ್ನೆಗಳೆಂದೂ ಅರ್ಥೈಸುತ್ತಾರೆ.

ಶವಸಂಸ್ಕಾರ

ಶವಸಂಸ್ಕಾರಕ್ಕೋಸ್ಕರ ಬೇರೆ ಬೇರೆ ಪ್ರದೇಶಗಳಲ್ಲಿ ಕಟ್ಟಿದ ವಿವಿಧ ಪ್ರಕಾರಗಳ ನೂರಾರು ಕಲ್ಗೋರಿಗಳು ಈ ಸಂಸ್ಕೃತಿಯ ವೈಶಿಷ್ಟ್ಯವಾಗಿದೆ. ಸಾಮಾನ್ಯವಾಗಿ ಈಗಾಗಲೆ ಶವ ಹುಗಿದ ಸ್ಥಳದಿಂದ ಲಭ್ಯವಾದ ಅಸ್ಥಿ ಅವಶೇಷಗಳನ್ನು ಸಂಗ್ರಹಿಸಿ ಸಿದ್ಧಪಡಿಸಿದ ಗೊರಿಗಳಲ್ಲಿ ಎರಡನೇ ಬಾರಿಗೆ ಸಂಸ್ಕಾರ ಮಾಡಲಾಗುತ್ತದೆ. ಒಂದೊಂದು ಗೋರಿಯಲ್ಲಿಯೂ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳ ಅವಶೇಷಗಳಿರುತ್ತವೆ. ಜೊತೆಗೆ ಕಬ್ಬಿಣದ ಆಯುಧಗಳು, ಅಪರೂಪವಾಗಿ ಸಾಮಾನುಗಳು ಕಲ್ಲಿನ ಮಣಿಗಳು ಮೊದಲಾದವುಗಳಿರುತ್ತವೆ.

ವಿಧಗಳು

ಬೃಹತ್‌ಶಿಲಾಸಂಸ್ಕೃತಿಯ ಸಮಾಧಿಗಳನ್ನು ಪ್ರಪ್ರಥಮ ಬಾರಿಗೆ ಕೃಷ್ಣಸ್ವಾಮಿಯವರು ವೈಜ್ಞಾನಿಕವಾಗಿ ವರ್ಗೀಕರಣವನ್ನು ಮಾಡಿದರು. ಈ ಸಮಾಧಿಗಳು ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಿದ್ದವು. ಕಲ್ಗೋರಿ ಟೋಪಿಕಲ್ಲು ಅಥವಾ ಕುಡೈಕಲ್‌, ಕಂಡಿಕೋಣೆ, ದಾರಿಕೋಣೆ, ನಿಲಸುಕಲ್ಲುಗಳು, ಕಲ್ಲುಗುಂಪೆಗಳು ಅಥವಾ ಕಲ್ಲುಗುಡ್ಡೆ, ಕಲ್ಲಿನ ಕೋಣೆ ಅಥವಾ ಕಲ್ಲಿನಿಂದ ಮಾಡಿದ ಶವ ಸಂಪುಟ, ಮಣ್ಣಿನ ಶವಪೆಟ್ಟಿಗೆಯುಳ್ಳ ದುಂಡುಕಲ್ಲು ಕಲ್ಲು ವೃತ್ತಗಳು, ಮಡಿಕೆಗಳಲ್ಲಿ ಅಸ್ಥಿಯನ್ನಿಟ್ಟು ಮಾಡಿದ ಶವಸಮಾಧಿ, ಡಾಲ್‌ಮೆನ್‌, ಮೆನ್‌ಹಿರ್ ಇತ್ಯಾದಿ ವಿಧಗಳು ಕಂಡುಬರುತ್ತವೆ. ಮೇಲೆ ಹೇಳಿದ ಪ್ರತಿಯೊಂದು ಪ್ರಕಾರವು ಬೇರೆ ಬೇರೆ ಕಾಲಗಳಲ್ಲಿ ಸ್ವತಂತ್ರವಾಗಿ ಹುಟ್ಟಿ ಬೆಳೆಯಲಿಲ್ಲ. ಕೆಲವು ಪ್ರಕಾರಗಳಲ್ಲಿ ಒಂದಕ್ಕೊಂದು ಸಂಬಂಧವಿದ್ದುದು ಮತ್ತು ಒಂದರಿಂದ ಇನ್ನೊಂದು ಪ್ರಕಾರವು ಬೆಳೆದಿರುವ ಸಾಧ್ಯತೆ ಇರುವುದು ಕಾಣುತ್ತದೆ.

ಸಾಮಾನ್ಯವಾಗಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲೆಲ್ಲಾ ಮುಖ್ಯವಾಗಿ ಹಾದಿಕೋಣೆ ಹಾಗೂ ಕಂಡಿಕೋಣೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಇವು ಸರಳ ಹಾಗೂ ಸಹಜವಾದ ನಿರ್ಮಾಣಗಳಾಗಿದ್ದರೂ ಅವುಗಳಲ್ಲಿರುವ ತಂತ್ರ ಕೌಶಲ್ಯಗಳು ಮೆಚ್ಚುವಂತಿವೆ. ಹಾದಿ ಕೋಣೆಯು ಒಂದು ಮೇಜಿನಂತೆ ಸಾಮಾನ್ಯವಾಗಿ ಚತರುಸ್ರಾಕಾರದಲ್ಲಿರುತ್ತದೆ. ಇದು ನೆಲದ ಮೇಲೆ ಇಲ್ಲವೆ ಭೂಮಿಯಲ್ಲಿ ಪೂರ್ತಿ ಅಂತರ್ಗತವಾಗಿರುತ್ತವೆ. ಒಂದೊಂದು ಬದಿಯಲ್ಲಿಯೂ ದೊಡ್ಡ ದೊಡ್ಡ ಚಪ್ಪಡಿಕಲ್ಲನ್ನು ಒಂದಕ್ಕೊಂದು ಅನಿಸಿ ಊರ್ಧ್ವಮುಖವಾಗಿ ನಿಲ್ಲಿಸಲಾಗುತ್ತಿತ್ತು. ಮುಂಬದಿಯಲ್ಲಿ ಎರಡು ಕಲ್ಲುಗಳನ್ನು ಮಧ್ಯದಲ್ಲಿ ಅಂತರವಿಟ್ಟು ಬದಿಗಳ ಕಲ್ಲುಗಳಿಗೆ ಆನಿಸಿಡಲಾಗುತ್ತಿತ್ತು. ಇವುಗಳ ಮುಂಬದಿಯಲ್ಲಿ ಸಾಮಾನ್ಯವಾಗಿ ದಕ್ಷಿಣಾಭಿಮುಖವಾಗಿ ಹಾದಿಯಿರುತ್ತಿತ್ತು. ಆದರೆ ಬದಿಗಳಲ್ಲಿರುವ ಕಲ್ಲುಗಳು ಸಮಾನಾಂತರದಲ್ಲಿರದೆ ಮುಂಬದಿಯಲ್ಲಿ ಸ್ವಲ್ಪ ಒಳಮುಖವಾಗಿರುತ್ತಿದ್ದವು. ಈ ರೀತಿಯ ಕ್ರಮವನ್ನು ಉದ್ದೇಶಪೂರ್ವಕವಾಗಿ ಅನುಸರಿಸಲಾಗುತ್ತಿತ್ತು. ಇದರಿಂದ ಕಾಲಾಂತರದಲ್ಲಿಯೂ ಕೂಡ ಚಪ್ಪಡಿಕಲ್ಲು ಒಳಗೆ ಬೀಳದಂತೆ ಮಾಡಲಾಗಿತ್ತು. ಈ ಕಲ್ಲುಗಳ ಮೇಲೆ ಬೃಹತ್‌ಚಪ್ಪಡಿ ಕಲ್ಲು ಇಡಲಾಗುತ್ತಿತ್ತು. ಇಂತಹ ಕೋಣೆಯು ಒಂದು ವೃತ್ತ ಇಲ್ಲೆವೆ ಚತುರ್ಭುಜ ಕಟ್ಟೆಯ ಮಧ್ಯದಲ್ಲಿರುತ್ತಿತ್ತು. ಕೋಣೆ ಮತ್ತು ಕಟ್ಟೆಯ ಮಧ್ಯದಲ್ಲಿ ತುಂಡು ಕಲ್ಲುಗಳನ್ನು ತುಂಬಿ ಕೋಣೆಗೆ ಭದ್ರತೆಯನ್ನು ನೀಡಲಾಗುತ್ತಿತ್ತು.

ತಾಂತ್ರಿಕತೆ : ಬೃಹತ್‌ ಶಿಲಾ ಸಂಸ್ಕೃತಿಯ ಜನರ ಅತ್ಯಂತ ವಿಶಿಷ್ಟವಾದ ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿದ್ದ ಉದ್ಯೋಗವೆಂದರೆ ಕಬ್ಬಿಣದ ಅದಿರಿನಿಂದ ಲೋಹವನ್ನು ತಯಾರು ಮಾಡುವುದು ಹಾಗೂ ಕಮ್ಮಾರಿಕೆಯಿಂದ ಬೇಕಾದ ವಿವಿಧ ಸಲಕರಣೆ ಮತ್ತು ಆಯುಧಗಳನ್ನು ತಯಾರಿಸುವುದು. ಆದ್ದರಿಂದಲೇ ದಕ್ಷಿಣ ಭಾರತದ ಈ ಬೃಹತ್ ಶಿಲಾ ಸಂಸ್ಕೃತಿಯನ್ನು ಕಬ್ಬಿಣ ಯುಗ ಸಂಸ್ಕೃತಿ ಎಂದು ಕರೆದಿದ್ದಾರೆ. ಈ ಸಂಸ್ಕೃತಿಯ ಕಬ್ಬಿಣದ ಉಪಕರಣಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲಾಗಿದೆ. ಈ ಆದ್ಯಯನಗಳಿಂದ ಆಯಾಯ ಪ್ರದೇಶದ ಅದಿರುಗಳನ್ನು ಸಂಗ್ರಹಿಸಿ, ಕರಗಿಸಿ, ಪದರು ಜೋಡಣೆ ತಂತ್ರದಿಂದ ಕಬ್ಬಿಣದ ಸಾಮಾನುಗಳನ್ನು ಮಾಡಲಾಗಿದೆ ಎಂದು ತಿಳಿದುಬರುತ್ತದೆ. ಮಹಾರಾಷ್ಟ್ರದ ನೈಕುಂದದಲ್ಲಿ ಕಬ್ಬಿಣದ ಅದಿರನ್ನು ಕರಗಿಸುವ ಸ್ವಲ್ಪ ದೊಡ್ಡದಾದ ಭಟ್ಟಿಯ ಅವಶೇಷಗಳು ದೊರೆತಿವೆ. ನೇಗಿಲಕುಳ, ಕುಡುಗೋಲು, ಚಾಕು, ಕತ್ತಿ, ಈಟಿ, ಮೂರುಕಾಲಿನ ಅಡ್ಡಣಿಗೆ, ಅಗಲ ಬಾಯಿಯ ಉದ್ದನೆಯ ಚಪ್ಪಟೆ, ಕೊಡಲಿ, ಬಿಲ್ಲುಬಾಣ ಮುಂತಾದ ಉಪಕರಣಗಳನ್ನು ತಯಾರಿಸಲಾಗುತ್ತಿತ್ತು.

ತಾಮ್ರ ಮತ್ತು ಕಂಚಿನ ಬಳಕೆ ಕಂಡುಬಂದರೂ ಅವುಗಳ ಪ್ರಮಾಣ ಕಡಿಮೆ ಮತ್ತು ಇವರು ಬಂಗಾರ ಮತ್ತು ಬೆಳ್ಳಿಯನ್ನು ಬಳಸಿರುವುದು ಕಂಡುಬರುತ್ತದೆ. ಇವುಗಳಿಂದ ತಯಾರಿಸಿದ ಬಳೆ, ರಿಂಗ್ಸ್‌, ಮಣಿಗಳು ದೊರೆಯುತ್ತದೆ. ತಕ್ಕಲಿಯಿಂದ ನೂಲುವುದು, ಚಾಪೆಹೆಣೆಯುವುದು ಕಂಡುಬರುತ್ತದೆ. ಮುತ್ತು ಪೋಣಿಸುವ ಮಣಿಗಳನ್ನು ಮಾಡುವುದು ಒಂದು ವಿಶಿಷ್ಟ ಉದ್ಯೋಗವೇ ಆಗಿತ್ತೆಂದು ಕಾಣುತ್ತದೆ. ಮಹಾರಾಷ್ಟ್ರ ಹಾಗೂ ಕೊಯಿಮತ್ತೂರು ಪ್ರದೇಶಗಳಲ್ಲಿಯ ಕೆಲವು ಕಲ್ಗೋರಿಗಳಲ್ಲಿ ಕಾರ್ನೇಲಿಯ, ಅಗೇಟ್‌, ಕೊರಲ್‌ಕ್ರಿಸ್ಟಲ್‌, ಲ್ಯಾಪಿಸ್‌ಲ್ಯಾಜುಲಿ, ಟೆರಕೊಟ್ಟ ಮುಂತಾದ ಅರೆ ಪ್ರಶಸ್ತ ಶಿಲೆಗಳಿಂದ ಮಾಡಿದ ಮಣಿಗಳು ದೊಡ್ಡ ಪ್ರಮಾಣದಲ್ಲಿ ದೊರೆಯುತ್ತವೆ. ಇವರು ಸಮಾಧಿಗಳಲ್ಲಿ ಬಳಸಿದ ಶಿಲೆಗಳನ್ನು ಆಧರಿಸಿ ಇವರಿಗೆ ವಿವಿಧ ಪ್ರಕಾರದ ಕಲ್ಲುಗಳ ರಚನೆ, ಗುಣಮಟ್ಟಗಳ ಪರಿಚಯ ಮತ್ತು ಅವುಗಳನ್ನು ಬೇಕಾದ ಆಕಾರಕ್ಕೆ ತಂದುಕೊಳ್ಳುವ ಉಪಕರಣಗಳ ಬಳಕೆಯ ಚೆತುರತೆ ಇತ್ತೆಂಬುದನ್ನು ತಿಳಿಯಬಹುದು.

ಋಗ್ವೇದ ಕಾಲ ಅಥವಾ ಪ್ರಾರಂಭಿಕ ವೈದಿಕಯುಗ

ಆರ್ಯರು ಹಲವು ಕಾಲಘಟ್ಟಗಳಲ್ಲಿ ಭಾರತಕ್ಕೆ ಬಂದರು. ಹೀಗೆ ಬಂದವರಲ್ಲಿ ಋಗ್ವೇದ ಕಾಲದ ಜನರೇ ಮೊದಲಿಗರಾಗಿದ್ದಾರೆ. ಭಾರತೀಯ ಸಾಹಿತ್ಯದಲ್ಲಿ ಅತ್ಯಂತ ಪ್ರಾಚೀನವಾದ ಸಾಹಿತ್ಯ ಕೃತಿ ಮೂಲಸಂಹಿತೆಗಳಲ್ಲಿ ಒಂದಾದ ಋಗ್ವೇದವಾಗಿದೆ. ಇದರಲ್ಲಿ ಒಟ್ಟು ೧೦೨೮ ಋಕ್ಕುಗಳು ಇವೆ. ಇದನ್ನು ಹತ್ತುಮಂಡಲಗಳಾಗಿ ವಿಭಜಿಸಲಾಗಿದೆ. ಕೊನೆಯದಾದ ಹತ್ತನೇ ಮಂಡಲವನ್ನು ಋಗ್ವೇದ ರಚನೆಯಾಗಿ ಇನ್ನೂರು ವರ್ಷಗಳಷ್ಟು ನಂತರ ಸೇರಿಸಲಾಗಿದೆ. ಋಗ್ವೇದದ ಪ್ರಾಚೀನತೆಗೆ ಸಂಬಂಧಿಸಿದ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಗಳಿವೆ. ಈ ಕುರಿತು ಜರ್ಮನ್‌ವಿದ್ವಾಂಸ ಮ್ಯಾಕ್ಸ್‌ಮುಲ್ಲರ್ ರವರು ಋಗ್ವೇದದ ಕಾಲವನ್ನು ನಿರ್ದಿಷ್ಟವಾಗಿ ನಿರ್ಣಯಿಸಲು ಸಾಧ್ಯವಿಲ್ಲವೆಂದು, ಅದು ಸಮಾರು ಕ್ರಿ. ಪೂ. ೧೨೦೦-೧೦೦೦ ವರ್ಷಗಳ ಮಧ್ಯೆ ರಚಿತವಾಗಿರಬೇಕೆಂದು ಅಭಿಪ್ರಾಯಪಡುತ್ತಾರೆ. ವಿದ್ವಾಂಸ ಜಾಕೋಬಿಯವರು ಜ್ಯೋತಿಷ್ಯಶಾಸ್ತ್ರ ಗಣನೆಯ ಆಧಾರದ ಮೇಲೆ ಋಗ್ವೇದದ ಕಾಲವನ್ನು ಕ್ರಿ. ಪೂ. ೪೦೦೦-೩೦೦೦ ವರ್ಷಗಳ ಮಧ್ಯಂತರ ಅವಧಿಯಲ್ಲಿ ರಚಿತವಾಗಿರಬೇಕೆಂದು ಅಭಿಪ್ರಾಯ ಪಡುತ್ತಾರೆ. ಬಾಲಗಂಗಾಧರತಿಲಕ್‌ರವರು ಋಗ್ವೇದದ ಕಾಲವನ್ನು ಸುಮಾರು ಕ್ರಿ. ಪೂ. ೬೦೦೦ ನಿಗಧಿಪಡಿಸಿದ್ದಾರೆ. ಕ್ರಿ. ಶ. ೧೯೦೭ರಲ್ಲಿ ಹ್ಯೂಗೋ ವಿಂಕ್ಲರ್ ವಿದ್ವಾಂಸ ಏಷ್ಯಾಮೈನರ್ ನಲ್ಲಿನ ಬೋಗಜ್‌ಕೊಯಿಯಲ್ಲಿ ಕೆಲವು ಮುದ್ರೆಗಳನ್ನು ಪರಿಶೋಧಿಸಿದರು. ಈ ಮುದ್ರೆಗಳು ಕ್ರಿ. ಪೂ. ಸುಮಾರು ೧೪ನೆಯ ಶಾತಮಾನದ ಪ್ರಾಂರಂಭದಲ್ಲಿ ರಚನೆಯಾಗಿದ್ದು ಹಿಟೈಟ್ಸ್‌ಮತ್ತು ಮಿತಣಿ ರಾಜರುಗಳ ಮಧ್ಯೆ ಆದಂತಹ ಒಪ್ಪಂದಗಳನ್ನು ಸೂಚಿಸುತ್ತದೆ. ಈ ಮುದ್ರೆಗಳಲ್ಲಿ ಉಲ್ಲೇಖಗೊಂಡಿರುವ ಮಿತ್ರ, ವರುಣ, ಇಂದ್ರ ಮತ್ತು ನಸತ್ಯ ದೇವರುಗಳು ಋಗ್ವೇದ ಸಂಹಿತದಲ್ಲೂ ಕಾಣಿಸಿಕೊಳ್ಳುತ್ತಾರೆ. ಇದರ ಆಧಾರದ ಮೇಲೆ ಹ್ಯೂಗೋ ವಿಂಕ್ಲರ್ ಅವರು ಋಗ್ವೇದ ಸಂಹಿತವು ಕ್ರಿ. ಪೂ. ೧೫೦೦ಕ್ಕಿಂತಲೂ ಹಿಂದೆ ರಚನೆಗೊಂಡಿರಲಾರವು ಎಂದು ಅಭಿಪ್ರಾಯಪಡುತ್ತಾರೆ.

ಒಟ್ಟಿನಲ್ಲಿ ಋಗ್ವೇದದ ಕಾಲವನ್ನು ಕ್ರಿ.ಪೂ. ೧೫೦೦ರಿಂದ ೧೦೦೦ದ ಅವಧಿಯಲ್ಲಿ ಇಡಬಹುದು. ಹೀಗಿದ್ದೂ ಈ ವೇದದ ಅತ್ಯಂತ ಪ್ರಾಚೀನ ಭಾಗಗಳು ಅಥವಾ ಉಲ್ಲೇಖಗಳು ಕ್ರಿ. ಪೂ. ೧೫೦೦ಕ್ಕಿಂತಲೂ ಪ್ರಾಚೀನವಾಗಿರುವ ಸಾಧ್ಯತೆಯೂ ಇದೆ. ಅದೇ ರೀತಿ ಋಗ್ವೇದದ ೧೦ನೇ ಮಂಡಲ ಹಾಗೂ ಇನ್ನೂ ಕೆಲವು ಋಕ್ಕುಗಳು ಕ್ರಿ. ಪೂ. ೧೦೦೦ಕ್ಕಿಂತಲೂ ನಂತರ ರಚಿತವಾಗಿರುವುದು ಕಂಡುಬರುತ್ತದೆ.

ಋಗವೇದ ಕಾಲದ ಸಮಾಜ

ಋಗ್ವೇದ ಸಂಹಿತೆಯ ಕಾಲದಲ್ಲಿ ಪ್ರತಿಬಿಂಬಿತವಾಗು ಆರ್ಯರ ಸಮಾಜ ಅಥವಾ ಜೀವನ ಶೈಲಿ ನಂತರದ ವೈದಿಕ ಸಾಹಿತ್ಯದಲ್ಲಿ ಕಾಣುವ ಸಮಾಜ ಅಥವಾ ಜೀವನಶೈಲಿಗಿಂತ ಭಿನ್ನವಾಗಿ ಕಂಡುಬರುವುದನ್ನು ಗುರುತಿಸಬಹುದ. ಈ ಕಾಲದ ಜನರು ಸಪ್ತಸಿಂಧೂ ಪ್ರದೇಶದಲ್ಲಿ ವಾಸಮಾಡುತ್ತಿದ್ದರು. ಸಪ್ತಸಿಂಧೂ ಪ್ರದೇಶವು ಪಂಜಾಬಿನ ಐದು ನದಿಗಳಾದ ಶತುದ್ರಿ (ಸಟ್ಲೇಜ್‌), ವಿಪಾಸ್‌(ಬಿಯಾಸ್‌), ಪರುಷ್ಣಿ (ರಾವಿ), ಅಸಕಿನಿ (ಚಿನಾಬ್‌) ಹಾಗೂ ವಿತಸ್ಥ (ಝೀಲಂ) ಪಂಚನದಿಗಳ ಜೊತೆ ಸಿಂಧೂ ಹಾಗೂ ಸರಸ್ವತೀ ನದಿಗಳ ಪ್ರದೇಶವನ್ನು ಒಳಗೊಂಡಿತ್ತು. ಅಲ್ಲದೆ, ದೃಷದ್ವತಿ, ಯಮುನಾ ಮತ್ತು ಗೋಮತಿ ನದಿಗಳ ಉಲ್ಲೇಖ ಋಗ್ವೇದದಲ್ಲಿ ಬರುವುದರಿಂದ ಆ ಪ್ರದೇಶಗಳ ಪರಿಚಯವೂ ಇವರಿಗಿತ್ತು ಎಂದು ಭಾವಿಸಬಹುದು.