ನಮ್ಮ ಆರಂಭಿಕ ಪೂರ್ವಜರು

ಮನುಕುಲದ ವಿಕಾಸ : ಆಡಮ್‌ ಹಾಗೂ ಈವ್‌ನಂತಹ ಪ್ರಾರಂಭಿಕ ಜೋಡಿ ಅಥವಾ ಇಂತಹುದೇ ಯಾವುದೋ ರೀತಿಯಲ್ಲಿ ಒಮ್ಮೆಲೇ ಮಾನವ ಕುಲ ಸೃಷ್ಟಿಸಲ್ಪಟ್ಟಿತು ಎಂಬ ನಂಬಿಕೆ ಜನಗಳಲ್ಲಿ ಹಿಂದೆ ಇತ್ತು. ೧೮೫೯ರಲ್ಲಿ ಚಾರ್ಲ್ಸ್‌ ಡಾರ್ವಿನ್‌ನ ಪುಸ್ತಕ ‘ದಿ ಆರಿಜನ್‌ ಆಫ್‌ ಸ್ಪೀಷೀಸ್‌’ (ಜೀವಸಂಕುಲಗಳ ಉಗಮ)ದಲ್ಲಿ ತನ್ನ ವಿಕಾಸವಾದವನ್ನು ಪ್ರಕಟಿಸಿದ ನಂತರ ಈ ನಂಬಿಕೆಯ ಬುಡ ಅಲುಗಾಡತೊಡಗಿತು. ಇದಾದ ನಾಲ್ಕು ವರ್ಷಗಳ ನಂತರ ಥಾಮಸ್‌ ಹಕ್ಸ್‌ಲಿಯು ಇದೇ ತತ್ತ್ವಗಳನ್ನು ಆಧಾರವಾಗಿಟ್ಟುಕೊಂಡು ಮಾನವ ಜನಾಂಗವೂ ಸಹ ದೀರ್ಘ ವಿಕಾಸ ಪ್ರಕ್ರಿಯೆಯ ಪರಿಣಾಮವಾಗಿ ಅಸ್ತಿತ್ವಕ್ಕೆ ಬಂದಿತು ಎಂದು ಸಾರಿದ. ತಕ್ಷಣವೇ ದೈಹಿಕವಾಗಿ ಆಧುನಿಕನಾದ ಮಾನವ (ಹೋಮೋ ಸೆಪಿಯನ್ಸ್‌ ಸೆಪಿಯನ್ಸ್‌) ಹಾಗೂ ಅವನಿಗಿಂತ ಹಿಂದೆ ವಿಕಾಸವಾದ ವಾನರಗಳಂತಹ ಪ್ರಾಣಿಗಳ ಮಧ್ಯದ ಜೀವಿಗಳನ್ನು ‘ಮಿಸ್ಸಿಂಗ್‌ ಲಿಂಕ್‌’ ಅಂದರೆ ಕಳೆದಹೋದ ಕೊಂಡಿಯ ಮೂಲಕ ಹುಡುಕಾಟವನ್ನು ಆರಂಭಿಸಲಾಯಿತು. ಇದಕ್ಕೆ ಮುಖ್ಯ ಸಾಕ್ಷಿ ಒದಗಿಸಿದುದು ಪಳೆಯುಳಿಕೆಗಳು. ಜೀವಿಯ ಉಳಿಕೆಗಳು ತಮ್ಮ ಮೂಲರೂಪದಲ್ಲೇ ಉಳಿದುಕೊಂಡು ಶಿಲೆಗಳಲ್ಲಿ ರಕ್ಷಿಸಲ್ಪಟ್ಟ ಉಳಿಕೆಗಳನ್ನೇ ಪಳಿಯುಳಿಕೆಗಳು ಎಂದು ಕರೆಯುತ್ತಾರೆ. ಜೈವಿಕ ಉಳಿಕೆಗಳು ಹಾಗೆಯೇ ಉಳಿದುಕೊಂಡು ಬರಲಾರದಷ್ಟು ಹಿಂದಿನ ಕಾಲದ ಬಗೆಗೆ ನಾವು ಇಲ್ಲಿ ವಿವರಿಸುತ್ತಿದ್ದೇವೆ.

ಸುಮಾರು ನೂರು ವರ್ಷಗಳ ಹಿಂದೆ ಭಾರತದ ಶಿವಾಲಿಕ್ ಪರ್ವತಗಳಲ್ಲಿ ವಾನರ ಪಳೆಯುಳಿಕೆಯೊಂದು ಪತ್ತೆಯಾಯಿತು. ಮಯೋಸಿನ್ ಕಾಲದ ಸಂಚಿತ ಶಿಲೆಗಳಲ್ಲಿ (ಸೆಡಿಮೆಂಟರಿ ಶಿಲೆಗಳು ೨೪ ರಿಂದ ೧೬ ದಶಲಕ್ಷ ವರ್ಷಗಳ ಹಿಂದೆ) ಕಂಡುಬಂದ ಈ ವಾನರ ಪಳಿಯುಳಿಕೆಗೆ ರಾಮಾಪಿತೆಕಸ್ ಎಂದು ಹೆಸರಿಡಲಾಯಿತು. ಮಾನವ ವಿಕಾಸದ ಹಾದಿಯಲ್ಲಿನ ಮಧ್ಯಂತರ ಸಂಕುಲವನ್ನು ಇದು ಪ್ರತಿನಿಧಿಸುತ್ತದೆ ಎಂದು ಒಮ್ಮೆ ತಪ್ಪಾಗಿ ಭಾವಿಸಲಾಗಿತ್ತು, ಇಂದು ಈ  ರಾಮಾಪಿತೆಕಸ್ ಬಹುಶಃ ಶಿವಾಪಿತಿಕಸ್ ಎಂಬ ಜೀವಸಂಕುಲದ (ಸ್ಪೀಷೀಸ್) ಹೆಣ್ಣು ಜೀವಿ ಎಂದು ಕಂಡುಬಂದಿದೆ. ಈ ಎರಡರ ಅಸ್ಥಿಪಂಜರದ ಪಳೆಯುಳಿಕೆಗಳು ಪಾಕಿಸ್ತಾನ ಹಾಗೂ ಇತರ ದೇಶಗಳಲ್ಲೂ ಪತ್ತೆಯಾಗಿವೆ. ಈ  ಜೀವಸಂಕುಲ ಇಂಡೋನೇಷಿಯಾದ ಕಾಡುಗಳಲ್ಲಿ ಕಂಡು ಬರುವ ವಾನರ ಒರಾನ್ ಗುಂಟಾನ್ ಸಂಬಂಧಿ. ಹೀಗೆ ಇದು ನರವಾನರ ವಿಕಾಸದ ಪ್ರಧಾನ ಮಾರ್ಗದಿಂದ ಕವಲೊಡೆದ ಒಂದು ಶಾಖಗೆ ಸಂಬಂಧಿಸಿದ್ದು. ಈ ಕಾರಣಕ್ಕೆ ಅದನ್ನು ನಾವು ನಮ್ಮ ಪೂರ್ವಜರ ಪೈಕಿಯದು ಎಂದು ಪರಿಗಣಿಸಲಾಗುವುದು. ನಮ್ಮ ಪೂರ್ವಜರ ಮೂಲ ವಾಸ್ತವದಲ್ಲಿ ಆಫ್ರಿಕಾದಲ್ಲಿ ವಿಕಾಸಗೊಂಡಿತು ಎಂಬುದೀಗ ಒಪ್ಪಿತವಾಗಿದೆ. ಎರಡು ಮಹಾನ್ ಆಫ್ರಿಕನ್ ವಾನರಗಳಾದ ಚಿಂಪಾಜಿ ಹಾಗೂ ಗೊರಿಲ್ಲಾಗಳು ಅದೇ ಸಂಕುಲದಿಂದ ಕವಲೊಡೆದು ವಿಕಾಸಗೊಂಡವುಗಳು. ಕೆನ್ಯಾದಲ್ಲಿ ಪತ್ತೆ ಹಚ್ಚಲಾದ ಕೆನ್ಯಾಪಿತೆಕಸ್ (೧೪ ದಶಲಕ್ಷ ವರ್ಷಗಳ ಹಿಂದೆ) ಮನುಕುಲದ ಮೂಲ ಕವಲಿನ ನರವಾನರ ಪೂರ್ವ ವಂಶಜ ಎಂದು ಭಾವಿಸಲಾಗಿದೆ. ಈ  ಕೆನ್ಯಾಪಿತೆಕಸ್ ಎನ್ನುವ ನರವಾನರತೆ ಅಥವಾ ಹೋಮಿನಿಡ್‌ಗಳಂತೆ ಇನ್ನೂ ದ್ವಿಪಾದಿಯಾಗಿರಲಿಲ್ಲ (ಎರಡು ಕಾಲ ಮೇಲೆ ಸಹಜವಾಗಿ ನೆಟ್ಟಗೆ ನಡೆಯುತ್ತಿರಲಿಲ್ಲ).

ಪೂರ್ವ ಆಫ್ರಿಕಾದಲ್ಲಿ  ದೊರೆತ, ಆಸ್ಟ್ರಲೋಪಿತೆಸಿನ್ಸ್ ಎಂದು ಕರೆಯಲ್ಪಡುವ  ಜೀವ ಸಂಕುಲಗಳ ಪಳೆಯುಳಿಕೆಗಳು ನಿರ್ಣಾಯಕ ‘ಮಿಸ್ಸಿಂಗ್ ಲಿಂಕ’ ನ್ನು ಒದಗಿಸಿದವು. ಇವುಗಳ ಕಾಲಮಾನ ೩.೮ ದಶಲಕ್ಷ ವರ್ಷದಷ್ಟು ಹಿಂದೆ ಹೋಗುತ್ತದೆ. ಇವು ದ್ವಿಪಾದಿಗಳಾಗಿದ್ದು ನಿಜ ನರವಾನರ (ಹೋಮಿನಿಡ್)ಗಳು. ಲೂಸಿ ಎಂದು ಹೆಸರಿಸಿದ ಈ ಹೆಣ್ಣಿನ ಅಸ್ತಿಪಂಜರದ ಪಳೆಯುಳಿಕೆಯ ಕಾಲಮಾನ ಸುಮಾರು ೩.೨ ದಶಲಕ್ಷ ವರ್ಷಗಳಷ್ಟು ಹಿಂದೆ. ಇಥಿಯೋಪಿಯಾದಲ್ಲಿ ಕಂಡು ಬಂದ, ಗಿಡ್ಡ ಆಕಾರದ ಈ ಜೀವಿಯ ಶಿರಸಂಪುಟದ ಗಾತ್ರ (ಮೆದುಳಿನ ಕೋಶದ ಟೊಳ್ಳಿನ ಗಾತ್ರ) ಸುಮಾರು ೪೦೦ ಘನ ಸೆಂಟಿಮೀಟರ್ (ಆಧುನಿಕ ಮಾನವ ಶಿರ ಸಂಪುಟದ ಗಾತ್ರ ೧೨೫೦ರಿಂದ ೧೪೫೦ ಘನ ಸೆಂಟಿಮೀಟರ್ ಎಂದುದನ್ನು ಹೋಲಿಸಬಹುದು). ಇದು ಆಸ್ಟ್ರಲೋಪಿತೆಕಸ್ ಅಪಾರೆನ್ಸಿಸ್‌ ಎಂಬ ಜೀವಸಂಕುಲಕ್ಕೆ ಸೇರಿದ್ದು. ಇಂತಹುವೇ, ಆದರೆ ಹೆಚ್ಚು “ಗಟ್ಟಿಮುಟ್ಟಾದ” ( ಅಂದರೆ ಭಾರವಾದ, ದಪ್ಪ ಎಲುಬಿನ) ಜೀವಸಂಕುಲಗಳು ಪೂರ್ವ ಹಾಗೂ ದಕ್ಷಿಣ ಆಫ್ರಿಕಾದಲ್ಲಿ  ಕಂಡುಬಂದಿವೆ. ಇನ್ನೊಂದು ತುಸು “ಕೋಮಲ” ಎನ್ನ ಬಹುದಾದ (ಅಂದರೆ ತೆಳ್ಳಗಿನ ಎಲಬಿನ) ಜೀವಸಂಕುಲ ದಕ್ಷಿಣ ಆಫ್ರಿಕಾದಲ್ಲಿ  ವಿಕಾಸವಾಯಿತು. ಇದನ್ನು ಆಸ್ಟ್ರಲೋಪಿತೆಕಸ್ ಆಫ್ರಿಕಾನಸ್ ಎಂದು ಕರೆಯಲಾಗಿದ್ದು ಇದರ ಮಿದುಳಿನ ಕೋಶದ ಗಾತ್ರ ಸುಮಾರು ೫೦೦ ಘನ ಸೆಂಟಿಮೀಟರ್. ಇದು ಸುಮಾರು ೨.೩ ದಶಲಕ್ಷ ವರ್ಷಗಳ ಹಿಂದೆ ಜೀವಿಸಿತ್ತು. ಇವು ಬಹುಶಃ ಒಂದು ಕೋಲನ್ನು ಬಳಸಿ ಏನನ್ನಾದರೂ ದಬ್ಬಬಲ್ಲವಾಗಿದ್ದವು ಅಥವಾ ಕೆರೆಯಬಲ್ಲವಾಗಿದ್ದವು. ಕಲ್ಲುಗಳನ್ನು ಎಸೆಯಬಲ್ಲವಾಗಿದ್ದವು. ಆದರೆ ಉದ್ದೇಶಪೂರ್ವಕವಾಗಿ ಮಾಡಲ್ಪಟ್ಟ ಯಾವುದೇ ಪರಿಕರಗಳು ಇವುಗಳೊಂದಿಗೆ ಪತ್ತೆಯಾಗಿಲ್ಲ.

“ಕೋಮಲ” ಜೀವಸಂಕುಲದ ಮಾಂಸಖಂಡಗಳು ಕಡಿಮೆ ಬಲಿಷ್ಟವಾಗಿದ್ದವು. ಆದರೆ ಅವು ಕೈ. ಕಾಲುಗಳ ಚಲನೆಯನ್ನು, ವಿಶೇಷವಾಗಿ ಕೈ ಹಾಗೂ ಬೆರಳುಗಳ ಚಲನೆಯನ್ನು ಹೆಚ್ಚು ಚೆನ್ನಾಗಿ ನಿಯಂತ್ರಿಸಬಲ್ಲವಾಗಿದ್ದವು. ಆಸ್ಟ್ರಲೋಪಿತೆಕಸ್ ಆಫ್ರಿಕಾನಸ್ ಬಹುಶಃ ಮೊದಲ ನಿಜ ಮಾನವ ಸಂಕುಲ ಎನಿಸಿಕೊಂಡ ಹೊಮೋ ಹೆಬೆಲಿಸ್‌ಗೆ ಶಾರೀರಕವಾಗಿ ತೀರ ಹತ್ತಿರ ಬರುತ್ತದೆ. ಪೂರ್ವ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ೨೬ ರಿಂದ ೧೭ ಲಕ್ಷ ವರ್ಷಗಳಷ್ಟು ಹಿಂದೆ ಕಂಡುಬಂದ ಈ ಹೊಮೋ ಹೆಬಿಲಿಸ್ ಮಾನವನ ಮಿದುಳಿನ ಕೋಶದ ಗಾತ್ರ ಸುಮಾರು ೭೦೦ ಘ. ಸೆಂ.  ಈ ಕಾರಣಕ್ಕೆ ಬಹುಶಃ ಅವನು ಹಿಂದಿನ ನರವಾನರಗಳಿಗಿಂತ ಹೆಚ್ಚಿನ ಬುದ್ಧಿಮತ್ತೆ ಪಡೆದಿದ್ದ ಎಂದು ಊಹಿಸಬಹುದು. ಈ ಮಾನವ ಕಲ್ಲನ್ನು ಕಲ್ಲಿಗೆ ಹೊಡೆದು, ಚಕ್ಕೆ ಎಬ್ಬಿಸಿ ಪಡೆದ ತಿರುಗಲ್ಲಿನಲ್ಲಿ ಕೊಯ್ಯಬಹುದಾದ ಅಂಚನ್ನು ಪಡೆಯುವ ಮೂಲಕ ಶಿಲಾ ಉಪಕರಣಗಳನ್ನು ಮಾಡಬಲ್ಲವನಾಗಿದ್ದ. ಈ ಉಪಕರಣಗಳು ಕೆನ್ಯಾದ ಒಲ್ಡುವೈನಲ್ಲಿನ ನಿವೇಸನದಲ್ಲಿ ಮೊದಲು ಪತ್ತೆಯಾದ್ದರಿಂದ ಅವುಗಳನ್ನು ಒಲ್ಡೋವಾನ್ ಎಂದು ಕರೆಯಲಾಗಿದೆ. ಹೋಮೋ ಹೆಬಿಲಿಸ್‌ನ ಸಾಮೂಹಿಕ ಜೀವನದ ಕೆಲವು ಕುರುಹುಗಳು ದೊರತಿವೆ. ಅವನ ಮಿದುಳಿನ ‘ಬ್ರೋಕ ಕ್ಷೇತ್ರ’ (ಮೆದುಳಿನ ಭಾಷೆ, ಗ್ರಹಿಕೆಯ ಕ್ಷೇತ್ರ) ಬೆಳವಣಿಗೆಯನ್ನು ಗಮನಿಸಿದರೆ ನಾವು ಇಂದು ಪದಗಳೆಂದು ಕರೆಯುವ ಧ್ವನಿ ಸರಣಿಗಳನ್ನು ಅವನಾಗಲೇ ಬಳಸುತ್ತಿರಬಹುದು ಎಂಬ ಸೂಚನೆ ದೊರೆಯುತ್ತದೆ.

ಹೋಮೋ ಎರೆಕ್ಟಸ್ ಎಂಬುದು ಹೋಮೋ ಹೆಬಿಲಿಸ್‌ನ ಕಿರಿಯ ಸಮಕಾಲೀನ. ಆಫ್ರಿಕಾದಲ್ಲಿ ಇವನನ್ನು ಹೋಮೋ ಎರ್ ಗ್ಯಾಸ್ಟರ್ ಎಂದು ಸಹ ಕರೆಯಾಲಾಗಿದೆ. ಆಫ್ರಿಕಾದಲ್ಲಿ ದೊರೆತ ಎರೆಕ್ಟಸ್ ಮಾನವನ ಪಳೆಯುಳಿಕೆಗಳ ಕಾಲಮಾನ ೧೮ ಲಕ್ಷದಿಂದ ೨ ಲಕ್ಷ ವರ್ಷಗಳು ಎನ್ನಲಾಗಿದೆ. ವಾಸ್ತವದಲ್ಲಿ ಅವನ ಕಾಲಮಾನ ೨೦ ಲಕ್ಷ ವರ್ಷಗಳಷ್ಟು ಹಿಂದೆ ಸರಿಯಬಹುದು. ಹೋಮೋ ಹೆಬಿಲಿಸ್‌ಗೆ ಹೋಲಿಸಿದಲ್ಲಿ ಅವನು ಹೆಚ್ಚು ದೃಢಕಾಯ ಹಾಗೂ ಭಾರವಾದ ತಲೆಬುರುಡೆ ಹೊಂದಿದ್ದ. ಮೆದುಳಿನ ಕೋಶದ ಗಾತ್ರ ೧೦೦೦ ಘ. ಸೆಂ. ಬಹುಶಃ ಬೆಂಕಿಯನ್ನು ಬಳಸವುದು ಹಾಗೂ ಹತೋಟಿಯಲ್ಲಿಡುವುದು ಹೇಗೆ ಎಂದು ತಿಳಿದಿದ್ದ ಮೊದಲ ಜೀವ ಸಂಕುಲ ಇವನು. ಇದಕ್ಕೆ ಸಾಕ್ಷಿ ಕಿನ್ಯಾದ ಚೆಸೋವಂಚಾದಲ್ಲಿ ಸುಮಾರು ೧೪ ಲಕ್ಷ ವರ್ಷಗಳಷ್ಟು ಹಿಂದೆ ದೊರೆಯುತ್ತದೆ. ಹೋಮೋ ಎರೆಕ್ಟಸ್ ಮೊದಮೊದಲು ಹೋಮೋ ಹೆಬಲಿಸ್ ಬಳಸಿದ ಪರಿಕರಗಳನ್ನೇ ಬಳಸಿದನಾದರೂ ಅವುಗಳನ್ನು ಹೆಚ್ಚು ಸಂಕೀರ್ಣವಾಗಿಸಿದ್ದ. ಕೇವಲ ಚಕ್ಕೆ ಏಳಿಸಿದ ತಿರುಳುಗಲ್ಲನ್ನು ಮಾತ್ರವಲ್ಲದೆ ಚಕ್ಕೆಗಳನ್ನು ಸಹ ಪರಿಕರಗಳಾಗಿ ಇವನು ರೂಪಿಸಿಕೊಂಡ ಹೀಗೆ ‘ಚಕ್ಕೆ ಕಲ್ಲಿನ ಉಪಕರಣ’ ಉದ್ದಿಮೆಯೊಂದು ಪ್ರಾರಂಭವಾಯಿತು. ಕೊನಗೆ ಕೈಗೊಡಲಿ ಸಹ ಬಳಕೆಗೆ ಬಂದಿತು. ಅದು ಎರಡೂ ಕಡೆ ಇಳಿಜಾರಿದ್ದರಿಂದ ಅದಕ್ಕೆ ದ್ವಿಮುಖ ಎನ್ನುವ ಹೆಸರು ಬಂದಿತು. ಈ ಮೂಲಕ ಕಲ್ಲಿಗೆ ಗಡುಸು ತುದಿ ಅಥವಾ ಕೊಯ್ಯುವ ಅಂಚಿರುವುದನ್ನು ಕಾಣಬಹುದು. ಇದನ್ನು ಕೈಯಲ್ಲಿಯೇ ಹಿಡಿದು ಬಳಸಲಾಗುತ್ತಿತ್ತು. ಈ ತಂತ್ರದ ಮೂಲಕ ಕೈಗೊಡಲಿ ತಯಾರಿಸುವುದನ್ನು ಅಶ್ಯೂಲಿಯನ್ ಎಂದು ಕರೆಯಲಾಗುತ್ತಿದೆ. ತೀರ ಪ್ರಾಚೀನ ಕೈಗೊಡಲಿ ಸುಮಾರು ೧೪ಲಕ್ಷ ವರ್ಷ ಹಿಂದೆ ಆಫ್ರಿಕಾ ಖಂಡದ ಇಥಿಯೋಪಿಯಾದ ಕೊಂಸೋನಲ್ಲಿ ಪತ್ತೆಯಾಗಿದೆ. ಒಲ್ಡೋವಾನ್ ಮತ್ತು   ಅಶ್ಯೂಲಿಯನ್  ಈ ಎರಡೂ ತಯಾರಿಕಾ ತಂತ್ರಗಳನ್ನು ಪುರಾತತ್ವಶಾಸ್ತ್ರಜ್ಞರು ಕೆಳ ಅಥವಾ ಹಳೆಯ ಶಿಲಾ (ಲೋಯರ್ ಪ್ಯಾಲಿಯೋಥಿಕ್) ಯುಗಕ್ಕೆ ಸೇರಿಸುತ್ತಾರೆ (ಇಲ್ಲಿ ಹಾಗೂ ಇತರ ಪುರಾತತ್ವಶಾಸ್ತ್ರ ಸಂದರ್ಭದಲ್ಲಿ ‘ಕೆಳ’ ಪದದ ಅರ್ಥ ‘ಹಿಂದಿನದು’ ಎಂದು. ಏಕೆಂದರೆ ಕೆಳಗಿನ ಸ್ತರವು ಯಾವಾಗಲೂ ಮೇಲಿನ ಸ್ತರಕ್ಕಿಂತ ಮುಂಚಿನದು. ಹಾಗೆಯೇ ಮೇಲಣ, ಎಂದರೆ ನಂತರದ್ದು ಎಂದು ಅರ್ಥ).

ಭಾರತದಲ್ಲಿ ಆದಿ ಮಾನವ
ನರವಾನರ ಜೀವ ಸಂಕುಲಗಳ ಯಶಸ್ಸಿನ ಗುರುತೆಂದರೆ ಹೊಮೋ ಹೆಬಿಲಿಸ್ (ಅಥವಾ ಪ್ರಾಚೀನ ಹೋಮೋ ಎರೆಕ್ಟಸ್) ತಾನು ವಿಕಾಸಗೊಂಡ ಆಫ್ರಿಕಾದ ಹುಲ್ಲುಗಾವಲು ಮತ್ತು ದಟ್ಟವಲ್ಲದ ಅರಣ್ಯದಿಂದ ಹೊರಬಂದು ಹಲವು ಭಿನ್ನ ವಾತಾವರಣಗಳಲ್ಲಿ ವಾಸಿಸಲಾರಂಭಿಸಿದುದು. ಅವನ ಈ ಹರಡುವಿಕೆಯ ವ್ಯಾಪ್ತಿ ಚೀನಾದಿಂದ (ಲಾಂಗುಪೋನಲ್ಲಿ ಒಂದು ದವಡೆಯ ಪಳೆಯುಳಿಕೆ ಹಾಗೂ ಒಲ್ಡೋವಾನ್ ಪರಿಕರಗಳು ದೊರೆತಿದ್ದು ಇವುಗಳ ಕಾಲಮಾನ ಸುಮಾರು ೧೮ ರಿಂದ ೧೯ ಲಕ್ಷ ವರ್ಷಗಳಷ್ಟು ಹಿಂದೆ) ಸ್ಟೇನ್ ವರೆಗೂ ಇದೆ (ಬಾರಾಂಕೋ ಲಿಯೋನ್ ನಲ್ಲಿ ೧೮ ಲಕ್ಷ ವರ್ಷಗಳ ಹಿಂದೆ). ಅಲ್ಲದೆ ಇಂತಹುದೇ ಕಾಲಮಾನವನ್ನು (೧೭ ಲಕ್ಷ ವರ್ಷಗಳ ಹಿಂದೆ). ಡಮಿನಿಸಿ (ಜಾರ್ಜಿಯಾ, ಕಾಕಸಸ್  ಹಾಗೂ ಮೋಜೋಕೆಟೋ (ಜಾವಾ, ಇಂಡೋನೇಷಿಯಾ — ೧೮ ವರ್ಷಗಳ ಹಿಂದೆ). ದೊರೆತ ಹೋಮೋ ಎರೆಕ್ಟಸ್ನ  ಪಳೆಯುಳಿಕೆಗಳಿಗೆ ಕೊಡಲಾಗಿದೆ. (ಡಮನಿಸಿಯಲ್ಲಿ ಒಲ್ಡೋವಾನ್ ಪರಿಕರಗಳೊಂದಿಗೆ ದೊರೆತ ಪಳೆಯುಳಿಕೆಯನ್ನು ಇಂದು ಹೋಮೋ ಹೆಬಿಲಿಸ್‌ನದ್ದು ಎಂದು ಭಾವಿಸಲಾಗುತ್ತಿದೆ).

ಪಾಕಿಸ್ತಾನದಲ್ಲಿಯೂ ಸಹ ಹೋಮೋ ಹೆಲಿಬಿಸ್ ಅಥವಾ ಆರಂಭದ ಹೋಮೋ ಎರೆಕ್ಟಸ್ ಬಳಸಿರಬಹುದಾದ ಈ ಅರಂಭದ ಉಪಕರಣಗಳ ಸುಳಿವಿಗಳ ಸುಳಿವುಗಳು ದೊರೆತಿವೆ. ಇವು ಪಶ್ಚಿಮ ಪಂಜಾಬ್ ಪೋಟ್ವಾರ್ ತಪ್ಪಲಿನ ಸೋನ್ ಕಣಿವೆಯ ರಿವತ್ ಎನ್ನುವಲ್ಲಿ ದೊರೆತಿವೆ. ಇವುಗಳ ಕಾಲಮಾನ ಸುಮಾರು ೨೦ಲಕ್ಷ ವರ್ಷಗಳಷ್ಟು ಹಿಂದೆ. ಅಷ್ಟೇ ಪ್ರಾಚೀನ ಪರಿಕರಗಳು ಹಿಮಾಚಲ ಪ್ರದೇಶದ ಶಿವಾಲಿಕ್ ಶಿಲೆಗಳಲ್ಲಿ ದೊರೆತಿದ್ದು, ಇವುಗಳ ಕಾಲಮಾನವನ್ನು ೧೮ ಲಕ್ಷ ವರ್ಷ ಹಿಂದೆ ಎಂದು ಪರಿಗಣಿಸಲಾಗಿದೆ.

ಹೋಮೋ ಎರೆಕ್ಟಸ್ ಕಾಲಾಂತರದಲ್ಲಿ ಹೋಮೋ ಹೆಬಿಲಿಸ್ ಸ್ಥಾನ ಆಕ್ರಮಿಸಿಕೊಂಡ. ಇವನ ಉಳಿಕೆಗಳು ಹಳೆಯ ಪ್ರಪಂಚದಲ್ಲಿ ವ್ಯಾಪಕವಾಗಿ ಕಂಡುಬಂದಿವೆ. ಈ ಪ್ರದೇಶಗಳನ್ನಲ್ಲದೆ ಅವನು ಉತ್ತರ ಚೀನಾದ ಶೀತಲ ಪ್ರದೇಶವನ್ನೂ ಪ್ರವೇಶಿಸಿದ್ಧ ಝೌಕುವೊದಿ ಯಾನ್, ೭ ಲಕ್ಷ ವರ್ಷಗಳ ಹಿಂದೆ). ಇದೇ ಸಮಯದಲ್ಲಿ ಇಂಡೋನೇಶಿಯಾದ ದಟ್ಟ ಅರಣ್ಯಗಳ ಜಾವಾ ದ್ವೀಪದಲ್ಲಿಯೂ ಜೀವಿಸಿದ್ದ. ಅವನು ಇನ್ನೂ ತೀರಾ ಗಡಸುತಿರುಳುಗಲ್ಲಿನ ಮತ್ತು ಚಕ್ಕೆಯ ಉಪಕರಣಗಳನ್ನು ಬಳಸುತ್ತಿದ್ದಾಗ್ಯೂ, ಅವನ ದೃಢಕಾಯ. ಭಾಷೆಯ ಮೇಲೆ ಹೆಚ್ಚಿನ ಹಿಡಿತ ಮತ್ತು ದೊಡ್ಡ ಮೆದುಳುಗಳು ಅವನಿಗೆ ಅನುಕೂಲಗಳಾಗಿ ಪರಿಣಮಿಸಿದವು ಅವನಿಗೆ ಬೆಚ್ಚಗಿರಿಸಿಕೊಳ್ಳಲು, ಹಿಂಸ್ರ ಪ್ರಾಣಿಗಳನ್ನು ದೂರವಿರಿಸಲು ಅಥವಾ ಕಾಡು ಸವರಲು ಬೆಂಕಿಯನ್ನು ಬಳಸಲು ಸಾಧ್ಯಾವಾಗಿತ್ತು. ಆದರೆ, ಬಹುಶಃ ಮಾಂಸ, ಮೂಳೆ ಹುರಿಯುವುದನ್ನು ಇನ್ನೂ ಆರಿತಿರಲಿಲ್ಲ.

ಪಾಕಿಸ್ತಾನದ ಝೇಲಂನ ಆಚೆ ಸೋನ್ ಕಣಿವೆ ಹತ್ತಿರದ ಪಬ್ಬಿ ಪರ್ವತಗಳಲ್ಲಿ ಚಕ್ಕೆ ತೆಗೆದ ಬೆಣಚುಗಲ್ಲುಗಳ ಮುಖ್ಯ ಉಪಕರಣಗಳ (ಇವನ್ನು ಮಚ್ಚುಗತ್ತಿ ಅಥವಾ ಚಾಪರ್ ಚಾಪಿಂಗ್  ಉಪಕರಣಗಳು ಎಂದು ಸಹ ಕರೆಯಲಾಗುತ್ತದೆ) ಕಾಲಮಾನ ಹತ್ತು ಲಕ್ಷ  ವರ್ಷಗಳಿಗಿಂತ ಹಿಂದಿನವು ಎಂದು ಹೇಳಲಾಗಿದೆ. ಇಂತಹುದೇ ಹಸ್ತ ಕೃತಿಗಳು ಹಿಮಾಚಲ ಪ್ರದೇಶದ ಬ್ಯಾಸ್, ಬಂಗಾಂಗ ಮತ್ತು ಇತರ ನದಿಗಳ ಕಣಿವೆಗಳಲ್ಲಿ ಕಾಲಮಾನ ನಿರ್ಧರಿಸಲಾಗದ ಸ್ತರಗಳಲ್ಲಿ ದೊತೆವೆ. ಈ ಯಾವ ಪ್ರದೇಶದಲ್ಲಿಯೂ ಈ ಕಾಲಮಾನದ ಹೋಮೋ ಎರೆಕ್ಟಸ್ ಪಳೆಯುಳಿಕೆಗಳು ದೊರೆತಿಲ್ಲ. ಆದರೆ ಈ ಉಪಕರಣಗಳು ಈ ಸಂತತಿಯದೇ ಕೆಲಸ ಎನ್ನುವುದು ಖಚಿತವೆಂದೇ ಹೇಳಬಹುದು.

೧೪ ಲಕ್ಷ  ವರ್ಷಗಳ ಹಿಂದೆಯೇ ಆಫ್ರಿಕಾದಲ್ಲಿ ಗುರುತಿಸಲಾಗಿದ್ದ ಅಶ್ಯೂಲಿಯನ್ ಕೈಗೊಡಲಿಗಳು ಸೋನ್ ಕಣಿವೆಯಲ್ಲಿ ಮಚ್ಚುಗತ್ತಿ ಪರಿಕರಗಳೊಂದಿಗೆ ೭ ರಿಂದ ೫ ಲಕ್ಷ ವರ್ಷಗಳ ಹಿಂದೆ ಕಂಡುಬಂದಿದೆ. ಇದೇ ಕಾಲಾವಧಿಯ ಇಂತಹುದೇ ಪರಿಕರಗಳು ಕಾಶ್ಮೀರದ ಪಹಲ್ಗಾಮ್‌ನ ದಿಬ್ಬದಲ್ಲಿಯೂ ಕಂಡುಬಂದಿವೆ. ಅದುವರೆಗೆ ಮಾಂಸಾಹಾರಿ ಪ್ರಾಣಿಗಳು ಸಾಯಿಸಿದ ಪ್ರಾಣಿಗಳ ಮಾಂಸವನ್ನು ತಿಂದು ಸ್ವಚ್ಛಗೊಳಿಸುವ ಜಾಡಮಾಲಿಯಾಗಿದ್ದ, ಕಾಡಿನಲ್ಲಿ ಲಭ್ಯ ಹಣ್ಣುಗಳು, ಬೇರುಗಳು, ಹುಲ್ಲಿನ ಬೀಜಗಳ ಆಹಾರಕ್ಕಾಗಿ ಸಂಗ್ರಹಗಾರನಾಗಿದ್ದ ಹೋಮೋ ಎರೆಕ್ಟಸ್ ಮಾನವ ಈಗ ಸಾಕಷ್ಟು ಪರಿಣಾಮಕಾರಿಯಾಗಿ ಎಸೆಯಬಹುದಾದ ಕೈಗೊಡಲಿಯನ್ನು ಆಯುಧವಾಗಿ ಹೊಂದಿದ್ದು, ಬೆಂಕಿಯನ್ನು ಹತೋಟಿಯಲ್ಲಿರಿಸಿಕೊಂಡಿದ್ದು ಅವನನ್ನು ಒಬ್ಬ ಸಣ್ಣ ಪ್ರಾಣಿಗಳ ಬೇಟೆಗಾರನಾಗಿಯೂ ಮಾಡಿರಬಹುದು.

ಹೋಮೋ ಎರೆಕ್ಟಸ್ ಕ್ರಮೇಣ ಭಾರತದ ಉಳಿದ ಭಾಗಗಳಿಗೆ ಬಹುಮಟ್ಟಿಗೆ ಭೂಗರ್ಭಶಾಸ್ತ್ರಜ್ಞರು ಮಧ್ಯ ಪ್ಲಿಸ್ಟೋಸೀನ್ (ಸುಮಾರು ೭.೩ ಲಕ್ಷದಿಂದ ೧.೩ ಲಕ್ಷ ವರ್ಷಗಳ ಹಿಂದೆ) ಎಂದು ಕರೆಯುವ ಕಾಲದಲ್ಲಿ ಹರಡಿರಬೇಕು. ಇದಕ್ಕೆ ಅಂದಿನ ಹಿಮಯುಗಗಳ ಪರಿಣಾಮವಾಗಿ ಉಂಟಾದ ಶೀತಲ, ಶುಷ್ಕ ವಾತಾವರಣದ ಹಂತಗಳು ಕಾಡುಗಳನ್ನು ಬರಿದಾಗಿಸಿದುದು ಮತ್ತು ಹಿಮಯುಗಗಳ ಮಧ್ಯದ ಬಿಸುಪು ಮತ್ತು ತೇವಾಂಶದಿಂದಾಗಿ ಹೆಚ್ಚಿನ ಕಾಡಿನ ನಿಬಿಡತೆ ಹೇಗೆ ಅಡ್ದಿಯಾದವು ಅಥವಾ ಹೇಗೆ ಸಹಾಯ ಮಾಡಿದವು ಎಂದು ಹೇಳಲು ಸಾಧ್ಯವಾಗುವುದಿಲ್ಲ. ದಕ್ಷಿಣ ಭಾರತದಲ್ಲಿನ ಕರ್ನಾಟಕದ ಹುಣಸಿಗಿ ಕೊಳ್ಳ, ಚೆನೈ ಹತ್ತಿರದ ಅತ್ತಿರಾಂಪಾಕ್ಕಂಗಳನ್ನೂ ಒಳಗೊಂಡು ದಕ್ಷಿಣ ಭಾರತದ ಹಲವು ನಿವೇಶನಗಳಲ್ಲಿ ಕೈಗೊಡಲಿ ಮತ್ತು ಇತರ, ಪ್ರಮುಖವಾಗಿ ತಿರುಗಳುಗಲ್ಲಿನಿಂದ ಮಾಡಿದ ಪ್ರಾರಂಭಿಕ ಅಶ್ಯೂಲಿಯನ್ ಉಪಕರಣಗಳು (ಇವನ್ನು ‘ಮದ್ರಾಸ್ ಉದ್ದಿಮೆ’ಯವು ಎಂದು ಕರೆಯಲಾಗಿದೆ). ಯುರೇನಿಯಂ ಥೋರಿಯಂ ಕಾಲಗಣನೆಯ ಪದ್ಧತಿಯ ಪ್ರಕಾರ  ಕರ್ನಾಟಕದ ನಿವೇಶನಗಳ ಕಾಲಮಾನ ೩೫೦,೦೦೦ ವರ್ಷಗಳಿಗಿಂತ ಹಿಂದೆ ಎನ್ನಲಾಗಿದೆ. ರಾಜಸ್ಥಾನದ ದಿಡ್ವಾನದಲ್ಲಿನ ಹಾಗೂ ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ನೆವೇಸಾದಲ್ಲಿನ ಕೆಳಗಣ ಹಳೆಯ ಶಿಲಾಯುಗದ ಪರಿಕರಗಳಿಗೆ ಇದೇ ಪದ್ಧತಿಯ ಮೇಲೆ ಕೊಟ್ಟ ಕಾಲಮಾನ ಅನುಕ್ರಮವಾಗಿ ೩೯೦,೦೦೦ ಹಾಗೂ ೩೫೦,೦೦೦ ವರ್ಷ ಹಿಂದೆ.

ಈ ಪಸರಿಸುವಿಕೆಯ ಪ್ರಕ್ರಿಯೆಯ ಅವಧಿಯಲ್ಲಿ ಮೂಲ  ಹೋಮೋ ಎರೆಕ್ಟಸ್  ವಿಕಾಸದ ಪ್ರವೃತ್ತಿ ಜಾರಿಯಲ್ಲಿತ್ತು ಹೀಗೆ ವಿಕಾಸಗೊಂಡ ಉಪಸಂತತಿಗಳ ಮಾನವರು ಕಡಿಮೆ ದೃಢಕಾಯರಾಗಿದ್ದರೂ ಹೆಚ್ಚು ಕುಶಲತೆ ಪಡೆದಿದ್ದರು. ಅವರು ಚಕ್ಕೆಗಳಿಂದ ಸಣ್ಣ ಪರಿಕರಗಳನ್ನು ಅಥವಾ ನಂತರದ ಅಶ್ಯೂಲಿಯನ್ ಉಪಕರಣಗಳನ್ನು ಮಾಡತೊಡಗಿದ್ದರು. ಇಂತಹ ಪರಿಕರಗಳ ಉಳಿಕೆಗಳು ನರ್ಮದಾ ಕಣಿವೆಯ ಹತ್ನೋರದಲ್ಲಿ ಸಿಕ್ಕಿದ ನರ್ಮದಾ ತಲೆಬುರುಡೆಯೊಂದಿಗೆ ಪತ್ತೆಯಾಗಿವೆ. ಈ ತಲೆಬುಡೆ ವಿಕಾಸಗೊಂಡ ಹೋಮೋ ಎರೆಕ್ಟಸ್‌ದಾಗಿದ್ದು ೧೩೦,೦೦೦ ವರ್ಷಗಳಿಗಿಂತ ಹಿಂದಿನದು. ಇದೇ ಪ್ರದೇಸದ ಪ್ರಖ್ಯಾತ ಭಿಂಬೆಟ್ಕ ಗುಹೆಯಲ್ಲಿ ಅನುಕ್ರಮ ಅವಧಿಗಳ ಮಾನವ ವಸತಿ ಕಂಡುಬಂದಿದ್ದು, ಅತಿ ಕೆಳಗಿನ ಸ್ತರಗಳಲ್ಲಿ ನಂತರದ ಅಶ್ಯೂಲಿಯನ್ ಪರಿಕರಗಳು ಕಂಡುಬಂದಿವೆ.

ಹೋಮೋ ಎರೆಕ್ಟಸ್  ವಿಕಾಸಗೊಡಂತೆ, ತನ್ನ ಉಪಕರಣಗಳನ್ನು  ಉತ್ತಮ ಪಡಿಸಿಕೊಂಡ, ಅವಕ್ಕೆ ಹೊಸ ಆಕಾರಗಳನ್ನು ಕೊಟ್ಟ ಹಾಗೂ ಸ್ಥಳೀಯವಾಗಿ ಲಭ್ಯವಿರುವ ಶಿಲೆಗಳಿಗೆ ತಂತ್ರಗಳನ್ನು ಹೊಂದಿಸಿಕೊಂಡ ಈ ಬದಲಾವಣೆಗಳು ಬಹಳ ನಿಧಾನವಾಗಿ ನಡೆದವು ಮತ್ತು ಈ ಪ್ರಕ್ರಿಯೆಗೆ ಹತ್ತಾರು ಸಾವಿರ ವರ್ಷಗಳನ್ನೇ ತೆಗೆದುಕೊಂಡವು. ಆದರೆ ಇವು ಅಂತಿಮವಾಗಿ ಸ್ಥಳೀಯ ಸಂಸ್ಕೃತಿಗಳ ಉದಯಕ್ಕೆ ಕಾರಣವಾದವು ಪುರಾತತ್ತ್ವಶಾಸ್ತ್ರಜ್ಞರು ‘ಸಂಸ್ಕೃತಿ’ ಎಂಬ ಪದವನ್ನು ಒಂದೇ ರೀತಿಯ ಉಪಕರಣಗಳು, ಆಭರಣಗಳು ಮತ್ತು ಮಾನವ ಶ್ರಮದ ಇತರ ಉತ್ಪನ್ನಗಳ ಸಮೂಹ, ಹಾಗೆಯೇ ಒಂದೇ ತೆರನ ರೂಢಿಗಳು, ನಂಬಿಕೆಗಳು, ಸತ್ತವರನ್ನು ಹೂಳುವುದು ಇತ್ಯಾದಿ ಮತ್ತು ಅಚರಣೆಗಳ ಸಂಕೇತಗಳ ಸೂಚನೆ ಒಂದು ಅಥವಾ ಹೆಚ್ಚಿನ ನಿವೇಶನಗಳ ಸ್ತರಗಳಲ್ಲಿ ಕಂಡಾಗ ಬಳಸುತ್ತಾರೆ. ಇವನ್ನು ಹಸ್ತಕೃತಿಗಳು (artefacts) ಎಂದು ಕರೆಯಲಾಗುತ್ತದೆ. ಹೋಮೋ ಎರೆಕ್ಟಸ್‌ನ ನಂಬಿಕೆಗಳ, ಸಂಪ್ರಾದಾಯಗಳ ಬಗೆಗೆ ನಮಗೆ ಯಾವ ಮಾಹಿತಿ ದೊರೆಯುವುದಿಲ್ಲ, ಅವನ ಶಿಲಾ  ಉಪಕರಣಗಳ ಸ್ವರೂಪವೇ ಅವನು ರೂಪಿಸಿದ ಭಿನ್ನ ಸಂಸ್ಕೃತಿಗಳ ಬಗೆಗೆ ಸೂಚನೆ ನೀಡುತ್ತದೆ. ಹಲವು ಸಾವಿರ ವರ್ಷಗಳು ಕಳೆದಂತೆ ಪರಿಕರಗಳು ಸಣ್ಣವಾಗುವ ಹಾಗೂ ತೆಳುವಾಗುವ ಪ್ರವೃತ್ತಿ ಕಾಣುತ್ತದೆ. ಪ್ರಪಂಚದಾದ್ಯಂತ ಸ್ವತಂತ್ರವಾಗಿ ಕಂಡುಬರುವ ಅಲಗು. ಚಕ್ಕೆ ಅಲಗಿನ ವಿವಿಧ ಸ್ವರೂಪಗಳು ಈ ಪ್ರವೃತ್ತಿಯ ಒಂದು ಸಹಜ ಫಲಿತಾಂಶ. ಚಕ್ಕೆ ಅಲಗಗುಗಳು ಭಾರತದಲ್ಲಿ ಮಧ್ಯ ಹಳೆಯ ಶಿಲಾಯುಗದ ವೈಶಿಷ್ಟ್ಯಎನ್ನಲಾಗಿದೆ. ಇಂತಹ ಶಿಲಾ ಅಲಗುಗಳು ನೆವಾಸಾ ಸಂಸ್ಕೃತಿಯಲ್ಲಿ (ಈ ಹಿಂದೆ ಹೇಳಿದ ನೆವಾಸಾ ಎಂಬ ಸ್ಥಳದಿಂದ ಈ ಹೆಸರು ಪಡೆದಿದೆ). ಇದು ದಕ್ಷಿಣ ಭಾರತ ಹಾಗೂ ಮಧ್ಯ ಭಾರತಕ್ಕೂ ವ್ಯಾಪಿಸಿದಂತೆ ಕಾಣುತ್ತದೆ. ದಿಡ್ವಾನದಲ್ಲಿ ‘ಮಧ್ಯ ಅದಿಶಿಲಾಯುಗ’ದ ಕಾಲಮಾನ ೧೫೦,೦೦೦ ವರ್ಷಗಳ ಹಿಂದೆ ಎಂದು ಥರ್ಮೋಲ್ಯೂಮಿನೆಸೆನ್ಸ್ ಪದ್ಧತಿಯ ಪ್ರಕಾರ ನಿರ್ಣಯಿಸಲಾಗಿದೆ. ಆದರೆ ಗುಜಾರಾತ್‌ನಲ್ಲಿ ಯುರೇನಿಯಂ ಥೋರಿಯಂ ಪದ್ಧತಿಯ ಪ್ರಕಾರ ಪಡೆದ ಈ ಸಂಸ್ಕೃತಿಯ ಕಾಲಮಾನ ಸುಮಾರು ೫೬,೮೦೦ ರಷ್ಟು ಇತ್ತೀಚಿನದು. ಶೀಲಂಕಾದ ದಕ್ಷಿಣದ ಒದ್ದೆ ವಲಯದಲ್ಲಿ, ಇದಕ್ಕೆ ಸೂಚಿಸಲಾದ ಕಾಲಮಾನ ೨೦೦,೦೦೦ದಿಂದ ೪೦, ೦೦೦ ವರ್ಷಗಳ ಹಿಂದೆ. ಹೀಗೆ ಈ ಸಂಸ್ಕೃತಿಯು ಕನಿಷ್ಟ ಲಕ್ಷ ವರ್ಷಗಳಷ್ಟಾದರೂ ದೀರ್ಘವಾಗಿತ್ತು. ಈ ಸಂಸ್ಕೃತಿಯು  ನೇರವಾಗಿ ಹಳೆಯ ಆದಿಶಿಲಾಯುಗದಿಂದ ಮುಂದುವರೆದುದು ಎಂದು ಭಾವಿಸಲಾಗಿದೆ. ಆದ್ದರಿಂದ ಇದರ ಕರ್ತೃಗಳು ನಂತರದ ಹೋಮೋ ಎರೆಕ್ಟಸ್ ನ ನೇರ ವಂಶಜರಿರಬೇಕು. ಆದರೆ ಈ ಯಾವುದೇ ಕ್ಷೇತ್ರದಲ್ಲಿ ಈ ಮಾನವನ ಆಸ್ಥಿಪಂಜರದ ಪಳೆಯುಳಿಕೆಗಳು ದೊರೆತಿಲ್ಲ.

ಶಿಲಾಯುಗದ ಹಂತ, ಉಪಕರಣಗಳ ವಿಧಗಳು, ಜೀವಸಂಕುಲಗಳು

ಕಾಲಮಾನ

ಉಪಕರಣ – ವಿಧ

ಮೊದಲು ಬಳಸಿದ್ದೆಂದು ಗುರುತಿಸಿದ ಜೀವಸಂಕುಲ

ಕೆಳಗಣ ಹಳೆಶಿಲಾಯುಗ  ಒಲ್ಡೋವಾನ್ ಹೋಮೋ ಹೆಬಿಲಿಸ್
ಕೆಳಗಣ ಹಳೆಶಿಲಾಯುಗ ಬೆಣಚುಕಲ್ಲು ಚೆಕ್ಕೆ ಹೋಮೋ ಎರೆಕ್ಸಸ್
ಕೆಳಗಣ ಹಳೆಶಿಲಾಯುಗ ಅಶ್ಯುಲಿಯನ್ ಹೋಮೋ ಎರೆಕ್ಟಸ್
ಮಧ್ಯ ಹಳೆಶಿಲಾಯುಗ ಚಕ್ಕೆ ಅಲಗು ವಿಕಾಸಗೊಂಡ ಹೋಮೋ ಎರೆಕ್ಸ್, ಪ್ರಾಚೀನ ಹೋಮೋ ಸೆಪಿಯನ್ಸ್
ಮಧ್ಯ ಹಳೆಶಿಲಾಯುಗ ಲೆವೆಲೋಯಿಸ್ ನಿಯಾನ್ ಡೆರ್ಥಲ್
ಮೇಲಣ ಹಳೆಶಿಲಾಯುಗ ಹಿಂಬದಿಯಿರುವ ಅಲಗು ಹೋಮೋ ಸೆಪಿಯನ್ಸ್, ಸೆಪಿಯನ್ಸ್
ಮಧ್ಯ ಶಿಲಾಯುಗ ಸೂಕ್ಷ್ಮ ಶಿಲಾ ಉಪಕರಣಗಳು ಹೋಮೋ ಸೆಪಿಯನ್ಸ್, ಸೆಪಿಯನ್ಸ್
ನವಶಿಲಾಯುಗ ನಯವಾಗಿಸಿದ ಉಪಕರಣಗಳು ಹೋಮೋ ಸೆಪಿಯನ್ಸ್, ಸೆಪಿಯನ್ಸ್

ಟಿಪ್ಪಣಿ : ಹಿಂದಿನ ವಿಧದ ಪರಿಕರಗಳನ್ನು ನಂತರದ ಪರಿಕರಗಳೊಂದಿಗೆ ಬಳಸಬಹುದು ಹಾಗೆಯೇ ನಂತರದ ಭಿನ್ನ ಜೀವಸಂಕುಲಗಳೂ ಬಳಸಬಹುದು.

ದೈಹಿಕವಾಗಿ ಆಧುನಿಕನಾದ ಮಾನವ
ಪಾಕಿಸ್ತಾನದ ಸೋನ್ ಕಣಿವೆ (ಪೋಟ್ವಾರ್ ತಪ್ಪಲು) ಹಾಗೂ ರೋಹ್ರಿ ಪರ್ವತಗಳಲ್ಲಿ  (ಉತ್ತರ ಸಿಂಧ್ ಪ್ರಾಂತ) ದೊರೆಯುವ ಹೇರಳವಾದ ಮಧ್ಯ ಹಳೆ ಶಿಲಾಯುಗದ ಉಪಕರಣಗಳಿಗೆ (ಚಕ್ಕೆ ಅಲಗುಗಳ ಉಪಕರಣಗಳನ್ನೂ ಒಳಗೊಂಡ) ಇಂತಹ ನಿರಂತರತೆ ಇತ್ತೆಂದು ಊಹಿಸಲು ಸಾಧ್ಯವಾಗುವುದಿಲ್ಲ. ಪೋಟ್ವಾರ್ ತಪ್ಪಲಿನ ಈ ಸಂಸ್ಕೃತಿಯ ಕಾಲಮಾನ ೬೦,೦೦೦ ದಿಂದ ೨೦,೦೦೦ ವರ್ಷ ಹಿಂದೆ (ಕಾರ್ಬನ್ ೧೪ ಕಾಲಗಣನೆ ಪದ್ಧತಿಯ ಪ್ರಕಾರ). ಅದಕ್ಕೂ ೫೦೦,೦೦೦ ವರ್ಷ ಹಿಂದಿನ ಹಳೆಯ ಆದಿ ಶಿಲಾಯುಗದ ಸೋನ್ ಸಂಸ್ಕೃತಿಗೆ ಈ ಹೊಸ ಸಂಸ್ಕೃತಿಯೊಂದಿಗೆ ಯಾವುದೇ ಸಂಪರ್ಕವಿಲ್ಲ. ಹೀಗಿರುವಾಗ ನಂತರದ ಉದ್ದಿಮೆ ಭಾರತದೊಳಕ್ಕೆ ಬರುತ್ತಲಿದ್ದ ಆಧುನಿಕ ಮಾನವನದು (ಹೋಮೋ ಸೆಪಿಯನ್ಸ್ ಸೆಪಿಯನ್ಸ್) ಆಗಿರಲು ಸಾಧ್ಯ. ಈ ಕಾರಣಕ್ಕೆ ಈಗ ಆತನ ಮೂಲಗಳ ಕಡೆಗೆ ಗಮನ ಹರಿಸುವುದು ಆಗತ್ಯ.

ಹೋಮೋ ಎರೆಕ್ಟಸ್ ಭಿನ್ನ ಗುಂಪುಗಳಾಗಿ ಹಳೆಯ ಪ್ರಂಪಂಚದ ದೂರ ದೂರದ ವಿವಿಧ ಪ್ರದೇಶಗಳಿಗೆ  ಹಂಚಿಹೋದುದರಿಂದ, ಪ್ರತಿಯೊಂದು ಗುಂಪು ಇತರ ಎಲ್ಲವುಗಳಿಂದ ಪ್ರತ್ಯೇಕಿಸಲ್ಪಟ್ಟ ಕಾರಣಕ್ಕೆ ಅವುಗಳ ನಡುವೆ ವಂಶಾವಾಹಿಗಳ ಹರಿವು ಸಾದ್ಯವಾಗದೇ ಹೋಯಿತು. ಈ ಕಾರಣಕ್ಕೆ ಹೋಮೋ ಎರೆಕ್ಟಸ್ ಹಲವು ಭಿನ್ನ ಉಪಜೀವ ಸಂಕುಲಗಳಾಗಿ ಕವಲೊಡೆಯುವುದು ಅನಿವಾರ್ಯವಾಯಿತು. ಹೀಗೆ ರೂಪಗೊಂಡ ಭಿನ್ನ ಉಪಜೀವ ಸಂಕುಲಗಳನ್ನು ಸಾಮಾನ್ಯವಾಗಿ ಪ್ರಾಚೀನ ಹೋಮೋ ಸೆಪಿಯನ್ಸ್ ಎಂದು ವರ್ಗಿಕರಿಸಲಾಯಿತು. ದೇಹಗಳು ಹೆಚ್ಚೆಚ್ಚು ಹಗುರವಾಗುವ ಅಥವಾ ಕೋಮಲತ್ವದ ಪ್ರವೃತ್ತಿ ಸಾಮಾನ್ಯವಾಗಿ ಕಂಡು ಬಂದರೂ ಅದು ಸಾರ್ವತ್ರಿಕವೇನೂ ಆಗಿರಲಿಲ್ಲ. ಸಾಕಷ್ಟು ಯಶಸ್ಸು ಸಾಧಿಸಿದ ದೃಢಕಾಯದ ಹೋಮೋ ಸೆಪಿಯನ್ಸ್ ನಿಯಾನ್ ಡೆರ್ಥಲೆನ್ಸಿಸ್ ಅಥವಾ ನಿಯಾನ್ ಡೆರ್ಥಲ್ ಮಾನವ ಹೋಮೋ ಎರೆಕ್ಟಸ್ ನಿಂದ ಯುರೋಪಿನಲ್ಲಿ ವಿಕಾಸಗೊಂಡ. ಈ ಮಾನವ ೨೩೦,೦೦೦ ವರ್ಷಗಳಿಂದ ೩೦,೦೦೦ ವರ್ಷಗಳ ಹಿಂದಿನವರೆಗೆ ಜೀವಿಸಿದ್ದ. ಪಶ್ಚಿಮ ಏಷಿಯಾ ಹಾಗೂ ಅದರ ಪೂರ್ವಕ್ಕೆ ೫೦,೦೦೦ ವರ್ಷಗಳಷ್ಟು  ಹಿಂದಿನಿಂದಲೇ ಇವನ ನೆಲೆಗಳಿದ್ದರಬಹುದೆಂದು ಭಾವಿಸಬಹುದು. ಗಿಡ್ಡ ದೇಹ, ಸಣ್ಣ ಮುಂದಲೆ, ಉಬ್ಬಿದ  ಹುಬ್ಬಿನ ಮೂಳೆ, ಗಲ್ಲವಿಲ್ಲದ ಈ ನಿಯಾನ್ ಡೆರ್ಥಲ್  ಮಾನವನ ಮೆದುಳಿನ ಕೋಶದ ಗಾತ್ರ ಆಧುನಿಕ ಮಾನವನ ಸರಾಸರಿ ಮೆದುಳಿನ ಕೋಶದ ಗಾತ್ರಕ್ಕೆ ಹೋಲಿಸುವಷ್ಟು, ಅಂದರೆ ಸುಮಾರು ೧೪೫೦ ಘ. ಸೆಂ. ಅವನು ‘ಲೆವಲೋಯಿಸ್ ಮೌಸ್ಟೇರಿಯನ್’ ಎಂದು ಕರೆಯಲ್ಪಡುವ ಸಾಕಷ್ಟು ಸಂಕೀರ್ಣ ತಂತ್ರವನ್ನು ಬಳಸಿ ಉಪಕರಣಗಳನ್ನು ರೂಪಿಸುತ್ತಿದ್ದ. ಈ ತಂತ್ರದಲ್ಲಿ ಶಿಲೆಯ ತಿರುಳನ್ನು ಮೊದಲು ತನಗೆ ಬೇಕಾದ ಚಕ್ಕೆಗಳನ್ನು ಪಡೆಯುವ ರೀತಿಯಲ್ಲಿ, ನಂತರ ಅದನ್ನು ತನಗೆ ಬೇಕಾದ ಆಕಾರಗಳಲ್ಲಿ ಪ್ರತ್ಯೇಕಿಸಲು  ಸಾಧ್ಯಾವಾಗುವಂತೆ ರೂಪಿಸಿಕೊಳ್ಳಲಾಗುತಿತ್ತು. ಇಷ್ಟೆಲ್ಲಾ ಇದ್ದಾಗ್ಯೂ, ಅವನು ಆಧುನಿಕ ಮಾನವನ ವಿಕಾಸದ ದಿಕ್ಕಿಗಿಂತ ಭಿನ್ನವಾಗಿ ವಿಕಾಸವಾದ.

ಇತರ ನರವಾನರರಿಗೆ ಹೋಲಿಸಿದರೆ ಆಧುನಿಕ ಮಾನವನ ಎದ್ದು ಕಾಣುವ ಲಕ್ಷಣಗಳೆಂದರೆ ದೊಡ್ಡದಾದ ಮುಂದಲೆ, ಕಣ್ಣುಗಳ ಮೇಲಿನ ಭಾರೀ ಕೂಡಿಕೆ ಇಲ್ಲವಾಗುವುದು, ಲಂಬವಾದ  ಮುಖ (ಕೆಳಗಡೆ ಇಳಿಜಾರಾಗದೆ) ಮತ್ತು ಗಲ್ಲ. ಅವನ ಮೂಳೆಗಳು ತೆಳುವಾಗುತ್ತಾ ಬರುತ್ತೇವೆ. ಅಂದರೆ ‘ದೃಢಕಾಯ’ ದ ಬದಲು ‘ಕೋಮಲ’ ವಾಗುತ್ತವೆ. ಈ ನಮ್ಮ ಜೀವಸಂಕುಲ ಆಫ್ರಿಕಾದಲ್ಲಿ ಹುಟ್ಟಿ ಅಲ್ಲಿಂದ ಜಗತ್ತಿನೆಲೆಡೆ ಪಸರಿಸಿದೆ ಎಂದು ಊಹಿಸಲು ಸಾಕಷ್ಟು ಕಾರಣಗಳಿವೆ. ಆಫ್ರಿಕಾದ ಸಹಾರದ ಕೆಳಗಿನ ಪ್ರದೇಶಗಳಲ್ಲಿರುವ ಜನರಲ್ಲಿ  ಕಂಡುಬರುವ ವಂಶವಾಹಿಗಳ ವೈವಿಧ್ಯತೆ ಬೇರೆ ಪ್ರದೇಶದ ಜನಗಳಿಗೆ ಹೋಲಿಸಿದಲ್ಲಿ ತುಂಬಾ ಹೆಚ್ಚು. ಇದು ಇಲ್ಲಿಯ ಜನರು  ಹೋಮೋ ಸೆಪಿಯನ್ ಗಳಾಗಿ ಬಹುಕಾಲ ಗತಿಸಿತೆಂದೂ, ಈ ಕಾರಣಕ್ಕೆ ಅವರಲ್ಲಿನ ವಂಶಾವಾಹಿಗಳು ಇತರೆಲ್ಲ ಕಡೆಗಳಲ್ಲಿ ಜನಸಮೂಹಗಳಿಗಿಂತ ಬಹಳ ಹೆಚ್ಚಿನ ವ್ಯತ್ಯಯ (ಮ್ಯುಟೇಸನ್‌ — ಜೀವಿಗಳ ವಂಶವಾಹಿಗಳಲ್ಲಾಗುವ ಮಾರ್ಪಾಡು)ಗಳಿಗೆ ಒಳಗಾಗಿವೆ ಎಂದೂ ಸೂಚಿಸುತ್ತದೆ. ಆಫ್ರಿಕಾದಲ್ಲಿ ಹೊಮೋ ಎರೆಕ್ಟಸ್‌ನ ಮಾರ್ಪಾಡು ಹಂತಹಂತವಾಗಿ ನಡೆದಿದೆ ಎಂದು ಪುರಾತತ್ವ ಸಂಶೋಧನೆಗಳಿಂದ ಸಾಬೀತಾಗಿದೆ. ಇಥಿಯೋಪಿಯಾದ ಅಫಾರ್ನಲ್ಲಿ ದೊರೆತ ಹೋಮೋ ಎರೆಕ್ಟಸ್‌ನಲ್ಲಿ ಕೆಲವು ಆಧುನಿಕ ಮನವನ ಗುಣಲಕ್ಷಣಗಳು ಕಂಡುಬಂದಿವೆ (೧೪ ಲಕ್ಷದಿಂದ ೬ ಲಕ್ಷ ವರ್ಷಗಳಷ್ಟು ಹಿಂದೆ). ನಂತರ ದಕ್ಷಿಣ ಆಫ್ರಿಕಾದ ಎಲಾಂಡ್ಸ್‌ಫೋಂಟೇನ್‌ನಲ್ಲಿ ೨೦೦,೦೦೦ ವರ್ಷಗಳ ಹಿಂದೆ ಪ್ರಾಚೀನ ಹೋಮೋ ಸೆಪಿಯನ್ಸ್‌ ಪತ್ತೆಯಾಗಿದ್ದಾನೆ. ಇವನಿಗೆ ಸಂಬಂಧಿಸಿದ ನಂತರದ ಅಶ್ಯೂಲಿಯನ್‌ ಹಸ್ತಕೃತಿಗಳೂ ಕಂಡುಬಂದಿವೆ. ಒಂದು ಹೆಚ್ಚು ವಿಕಸಿತವಾದ ರೂಪ ೧೨೦,೦೦೦ ವರ್ಷಗಳ ಹಿಂದೆ ಕಂಡುಬಂದಿತು. ಅವನಾಗಲೇ ಚಿಕ್ಕ ಶಿಲಾ ಉಪಕರಣಗಳನ್ನು ತಯಾರಿಸಿ, ಬಳಸುವ ನಿಪುಣತೆಯನ್ನು, ವಿಶೇಷವಾಗಿ ಆಫ್ರಿಕಾದ ಮಧ್ಯ ಶಿಲಾಯುಗ (ಎಂ. ಎಸ್‌. ಎ) ಉದ್ದಿಮೆ ಎಂದು ಕರೆಯಲ್ಪಡುವ ವಿಶಿಷ್ಟವಾದ ಚಕ್ಕೆ ಅಲುಗುಗಳನ್ನು ಬಳಸುವ ಕೌಶಲ್ಯ ಪಡೆದಿದ್ದ.

ಈ ಜೀವಸಂಕುಲದ ಮೂಲ ರಚನೆ (೧೦,೦೦೦ ಮತ್ತು ಅದಕ್ಕಿಂತ ಹೆಚ್ಚಾದ ಒಳ ಸಂತಾನೋತ್ಪತ್ತಿ ಗುಂಪು) ಸುಮಾರು ೨೦೦,೦೦೦ ವರ್ಷಗಳ ಹಿಂದೆ ರೂಪಗೊಂಡಿತು ಎಂದು ತಳಿಶಾಸ್ತ್ರಜ್ಞರು ಊಹಿಸುತ್ತಾರೆ. ಆದರೆ ಪುರಾತತ್ವ ದಾಖಲೆಗಳ ಪ್ರಕಾರ ನಿಜವಾದ ದೈಹಿಕವಾಗಿ ಆಧುನಿಕನಾದ ಮಾನವ ದಕ್ಷಿಣ ಆಫ್ರಿಕಾದಲ್ಲಿ ೧೧೫,೦೦೦ ವರ್ಷಗಳ ಹಿಂದೆ ಮೊದಲು ಕಾಣಿಸಿಕೊಳ್ಳುತ್ತಾನೆ. ಆಧುನಿಕ ಮಾನವರು ಮಧ್ಯ ಹಳೆ ಶಿಲಾಯುಗದ ಉಪಕರಣಗಳನ್ನೇ ಪ್ರಾರಂಭದಲ್ಲಿ ಬಳಸಿದರೂ ನಂತರದಲ್ಲಿ (ಸುಮಾರು ೯೦,೦೦೦ ವರ್ಷಗಳ ಹಿಂದೆ) ತೆಳುವಾದ, ಎರಡು ಸಮಾಂತರ ಅಂಚುಗಳ ಮುಪ್ಪಟ್ಟೆಯ ಅಥವಾ ಪ್ರಿಸಂ ರೀತಿಯ ಚಕ್ಕೆಯ ಉಪಕರಣಗಳನ್ನು (ಇದನ್ನು ‘Backed Bable’ ಅಂದರೆ ಹಿಂಬದಿಯಿರುವ ಅಲಗು ಎಂದು ಕರೆಯಲಾಗುತ್ತದೆ) ತಯಾರಿಸಿದ್ದು ಕಂಡುಬರುತ್ತದೆ. ನಿಜವಾಗಿಯೂ ಈ ಸಮಾಂತರ ಅಂಚಿನ ಅಲಗುಗಳು ಆಧುನಿಕ ಮಾನವನಿಗೆ ವಿಶಿಷ್ಟವಾದ ಉಪಕರಣಗಳಿದ್ದಂತೆ ಕಾಣುತ್ತದೆ. ಅವುಗಳೊಂದಿಗೆ ಅವನಿಗೆ ಭಿನ್ನ ಭಿನ್ನ ಕಾರ್ಯಗಳಿಗೆ ಬಳಸಲು ವೈವಿಧ್ಯಪೂರ್ಣ ಉಪಕರಣಗಳನ್ನು ಮಾಡಲು ಸಾಧ್ಯವಾಯಿತು. ಪ್ರಾಣಿಗಳ ಮೂಳೆಗಳಿಂದ ಮತ್ತು ಕೊಂಬುಗಳಿಂದ ಪರಿಕರಣಗಳನ್ನು, ಆಭರಣಗಳನ್ನು ಸಹ ಅವನು ತಯಾರಿಸತೊಡಗಿದ್ದ. ಆಧುನಿಕ ಮಾನವ ತನಗೆ ಎದುರಾಗಿ ಕಂಡ ಲೆವೆಲೋಯಿಸ್‌ ಮೌಸ್ಟೇರಿಯನ್‌ ತಂತ್ರ ಅಥವಾ ಅಶ್ಯೂಲಿಯನ್‌ ತಂತ್ರ ಅಥವಾ ಬೆಣಚುಕಲ್ಲು ಪರಿಕರಗಳಂತಹ ಹಿಂದಿನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ.

ನಿಶ್ವಾಸ ಅಥವಾ ಉಸಿರು ಬಿಡುವ ಶಕ್ತಿಯ ಸುಧಾರಣೆಯಾಗಿ ಅವನು ಶಾರೀರಿಕವಾಗಿ ಹೊಮೋ ಎರೆಕ್ಟಸ್‌ನಂತೆ ಚೆನ್ನಾಗಿ ಮಾತನಾಡುವ ಸಾಮರ್ಥ್ಯ ಪಡೆದಿದ್ದ. ಬಹುಶಃ ಈಗ ಅವನಲ್ಲಿ ಬಹಳಷ್ಟು ವೈವಿಧ್ಯಮಯ ಮಾತುಗಳಿದ್ದವು. ಈಗಲೂ ಬಹುಶಃ ಬಾಯಿ ಧ್ವನಿಗಳಿಗೆ ಪೂರಕವಾಗಿ ಸಂಜ್ಞೆ, ಸಿಳ್ಳೆ, ಉಚ್ಛ್ವಾಸ, ಗುರುಗುಟ್ಟುವಿಕೆ ಮುಂತಾದ ಇತರ ಧ್ವನಿಗಳೂ ಇದ್ದಿರಬಹುದು. ಆದರೆ ಬಹಳ ದೀರ್ಘಕಾಲದಿಂದ ಪ್ರತ್ಯೇಕಿಸಲ್ಪಟ್ಟ ಮಾನವ ಜನಸಮುದಾಯಗಳು, ಮುಖ್ಯವಾಗಿ ಸುಮಾರು ೬೦,೦೦೦ ವರ್ಷ ಅಥವಾ ಇನ್ನೂ ಹಿಂದೆ ಬೇರ್ಪಟ್ಟ ಆಸ್ಟ್ರೇಲಿಯಾದಲ್ಲಿ ಜೀವಿಸಿದ್ದವರನ್ನೂ ಒಳಗೊಂಡು ಎಲ್ಲ ಆಧುನಿಕ ಮಾನವ ಜೀವಸಂಕುಲ ಒಂದಲ್ಲ ಒಂದು ರೀತಿಯ ಭಾಷೆಯನ್ನು ಪೂರ್ಣವಾಗಿ ಪಡೆದಿದೆ ಎಂಬ ಸಂಗತಿ, ಇದನ್ನು ಆಧುನಿಕ ಮಾನವ ಆಫ್ರೀಕಾದಿಂದ ಚದುರಿಹೋಗಲು ಆರಂಭವಾದ ಹೊತ್ತಿಗಾಗಲೇ ಸಾಧಿಸಿದ್ದ ಎನ್ನುವ ಸುಳಿವು ನೀಡುತ್ತದೆ. ಭಾಷೆ ಆತನಿಗೆ ಸಹಜೀವಿಗಳೊಂದಿಗೆ ಸಂವಹನ ನಡೆಸುವ ಶಕ್ತಿಯನ್ನು ಕೊಟ್ಟಿತು ಹಾಗೂ ಇದು ಕೌಶಲವನ್ನು ಒಬ್ಬರಿಂದೊಬ್ಬರಿಗೆ ವರ್ಗಾಯಿಸುವಲ್ಲಿ ನಿರ್ಣಾಯಕ ಅನುಕೂಲವಾಗಿ ಪರಿಣಮಿಸಿತು. ಇದರಿಂದ ಸಂಕೀರ್ಣವಾದ ಮತ್ತು ಪೂರ್ವಯೋಜಿತವಾದ ಸಾಮೂಹಿಕ ಕಾರ್ಯಾಚರಣೆ ಸಾಧ್ಯವಾಯಿತು. ಅಷ್ಟೇ ಅಲ್ಲ, ನೆನಪುಗಳನ್ನು ಕೂಡಿಡಲು ಹಾಗೂ ಚಿಂತನೆಗಳನ್ನು ವ್ಯವಸ್ಥೆಗೊಳಿಸಲು ಒಂದು ಹೆಚ್ಚು ಅನುಕೂಲಕರ ಸಾಧನ ಸಿಕ್ಕಂತಾಯಿತು.

ಭಾರತದಲ್ಲಿ ಆಧುನಿಕ ಮಾನವ

ಆಧುನಿಕ ಮಾನವ ಆಫ್ರಿಕಾದಿಂದ ಬಹಳ ವೇಗವಾಗಿ ಪ್ರಪಂಚದಾದ್ಯಂತ ಪಸರಿಸಿದ ಎಂದು ಮಾನವ ಆಸ್ಥಿಪಂಜರದ ಉಳಿಕೆಗಳು (ಇನ್ನೂ ಪಳೆಯುಳಿಕೆಗಳ ರೂಪದಲ್ಲಿಯೇ) ಸಾಕ್ಷಿ ನುಡಿಯುತ್ತವೆ. ಸುಮಾರು ೧೦೦,೦೦೦ ವರ್ಷಗಳ ಹಿಂದೆ, ಪಶ್ಚಿಮ ಏಷಿಯಾದಲ್ಲಿ, ಸಮಾಂತರ ಅಂಚುಗಳ ಅಲಗಿನ ಉದ್ದಿಮೆಯೊಂದಿಗೆ ಅವನು ಕಂಡುಬಂದಿದ್ದಾನೆ. ಸುಮಾರು ೬೦,೦೦೦ ವರ್ಷಗಳ ಹಿಂದೆ ಏಷಿಯಾ ದಾಟಿ ಆಸ್ಟ್ರೇಲಿಯಾ ಪ್ರವೇಶಿಸಿದ್ದಾನೆ. ಹೊಸ ಪ್ರಂಪಂಚಕ್ಕೆ  (ಆಮೇರಿಕಾ ಖಂಡಗಳು) ಅವನು ಸೈಬಿರಿಯಾ ಮತ್ತು ಅಲಸ್ಕಾದ ಮೂಲಕ ಪ್ರವೇಶಿಸಿದುದು ಬಹುಶಃ ೨೦,೦೦೦ ವರ್ಷಗಳಿಗೂ ಹಿಂದೆ. ಭಾರತೀಯ ಗಡಿಪ್ರದೇಶಗಳು ಆಫ್ರಿಕಾದಿಂದ  ಈ ಮಾನವನ ಪಯಣದ ಮಧ್ಯ ದಾರಿಯಲ್ಲಿರುವುದರಿಂದ ೫೦,೦೦೦  ವರ್ಷಗಳಿಗೆ ಬಹು ಮುಂಚೆಯೇ ಅವನು ಭಾರತೀಯ ಉಪಖಂಡದ ಅಂಚನ್ನು ತಲುಪಿರಬೇಕು. ಶ್ರೀಲಂಕಾದ ಫಾ ಹೀನ್ ಗುಹೆಯಲ್ಲಿ ದೊರೆತ, ಸುಮಾರು ೩೧,೦೦೦ ವರ್ಷಗಳ ಹಿಂದಿನದೆಂದು ಗುರುತಿಸಲಾದ, ಆಧುನಿಕ ಮಾನವನ ಆಸ್ಥಿಪಂಜರದ ಪಳೆಯುಳಿಕೆ (ಮಗುವಿನದು) ಗಣನೆಗೆ ತೆಗೆದುಕೊಂಡರೆ, ನಂತರದ ೨೦, ೦೦೦ ವರ್ಷಗಳಲ್ಲಿ ಭಾರತದ ಮೂಲಕ ಸಂಚರಿಸಿ ಶ್ರೀಲಂಕಾ ಪ್ರವೇಶಿಸಿರಬೇಕು. ಶ್ರೀಲಂಕಾದಲ್ಲಿ ಆಧುನಿಕ ಮಾನವನ ವಾಸದ ಕಾಲ ಇನ್ನೂ ಮೊದಲಿಗೆ ೩೫,೦೦೦ ವರ್ಷಗಳ ಹಿಂದಕ್ಕೆ ಹೋಗುತ್ತವೆ. ಇಲ್ಲಿನ ಬಟಡೊಂಬಾ ಲೆನದ ಗುಹೆಯಲ್ಲಿ ೨೮,೫೦೦ ವರ್ಷಗಳ ಹಿಂದಿನ ಆಧುನಿಕ ಮಾನವನ ಆಸ್ಥಿಪಂಜರದ ಉಳಿಕೆಗಳು ಪತ್ತೆಯಾಗಿವೆ. ಸುಮಾರು ೩೦,೦೦೦ ವರ್ಷಗಳ ಹಿಂದೆ ಸಮುದ್ರ ಮಟ್ಟ ಏರಿದ್ದರೂ ಅದಕ್ಕೂ ಹಿಂದೆ (೫೦,೦೦೦ ಅಥವಾ ಹೆಚ್ಚು ವರ್ಷಗಳ ಹಿಂದೆ) ಹಿಮಯುಗದ ಹಿಂದಿನ ಘಟ್ಟದಲ್ಲಿ ಸಮುದ್ರಮಟ್ಟ ಕೆಳಗಿಳಿದು ಭಾರತದಿಂದ ಶ್ರೀಲಂಕಾಕ್ಕೆ ಒಂದು ನೇರ ಭೂಸೇತುವೆ ಇದ್ದಿರಬಹುದು ಎಂಬುದನ್ನು ನಾವು ನೆನಪಿಸಿಕೊಳ್ಳಬಹುದು.

ಆಧುನಿಕ ಮಾನವನ  ಮೊದಲ ಆಗಮನವನ್ನು ಏಷಿಯಾದ ಮೂಲಕ ಆಸ್ಟ್ರೇಲಿಯಾಕ್ಕೆ ಪಯಣಿಸುವ ಸಂದರ್ಭದಲ್ಲಿ ನೋಡುವುದಾದರೆ, ಆಧುನಿಕ ಮಾನವರು ಭಾರತೀಯ ಗಡಿಪ್ರದೇಶಗಳ ಬಳಿ ತಲುಪುವಾಗ ಅವರ ಬಳಿ ಹಿಂಬದಿಯಿರುವ ಅಲಗಿನ (backed blade) ತಂತ್ರಜ್ಞಾನ ಇದ್ದಿರಲಿಕ್ಕಿಲ್ಲ. ಏಕೆಂದರೆ ಇದನ್ನವರು ಆಸ್ಟ್ರೇಲಿಯಾಕ್ಕೆ ತೆಗೆದುಕೊಂಡು ಹೋಗಲಿಲ್ಲ. ಪಾಕಿಸ್ತಾನದ ಸೋನ್  ಕಣಿವೆಯಲ್ಲಿನ, ಆಧುನಿಕ ಮಾನವಕೃತವಾಗಿ ಇದ್ದಿರಬಹುದಾದ, ಮಧ್ಯ ಆದಿಶಿಲಾಯುಗದ ಸಂಸ್ಕೃತಿಯಲ್ಲಿ (೬೦,೦೦೦ ದಿಂದ ೨೦,೦೦೦ ವರ್ಷಗಳ ಹಿಂದೆ) ಈ ಸಮಾಂತರ ಅಂಚುಗಳ ಅಲಗುಗಳು ಇರಲಿಲ್ಲ.  ಈ ಸಂಸ್ಕೃತಿಯ ಉಪಕರಣಗಳ ಬಾಹುಳ್ಯ ಮತ್ತು ಅವುಗಳ ಮುರುಕಲು ಗುಪ್ಪೆಗಳು (ವಿಶೇಷವಾಗಿ ರೋಹ್ರಿ ಪರ್ವತಗಳಲ್ಲಿ) ಇಲ್ಲಿ ಇದ್ದಿರಬಹುದಾದ ಒಂದು ಸಮಾಜದ ಚಿತ್ರವನ್ನು ಕೊಡುತ್ತವೆ. ಈ ಜನಸಮುದಾಯಗಳಲ್ಲೆ ಕೆಲಜನರು ಕಾಡು, ಕಣಿವೆ, ಸಮತಟ್ಟು ಪ್ರದೇಶಗಳಲ್ಲಿ ಬೇಟೆಯಾಡಿದರೆ, ಪರಿಣತಿ ಪಡೆದ ಇನ್ನೂ ಕೆಲವರು ಉತ್ತಮ ಹಾಗೂ ಸೂಕ್ತ ಶಿಲೆಗಳನ್ನು ಕಡಿದು ತೆಗೆಯಬಹುದಾದ ದೂರದ ಸ್ಥಳಗಳಲ್ಲಿ ಇದ್ದ ಕಾರ್ಖಾನೆಗಳಲ್ಲಿ ಉಪಕರಣಗಳನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿದ್ದರೆಂದು ಕಾಣುತ್ತದೆ. ಇದರಿಂದ ಒಂದು ರೀತಿಯ ಸ್ಥೂಲ ಶ್ರಮ ವಿಭಜನೆ ಮತ್ತು ವಸ್ತುವಿನಿಮಯ ಆ ಕಾಲಕ್ಕಾಗಲೇ ಮೂಡಿರಬಹುದೆಂದು ಊಹಿಸಲು ಸಾಧ್ಯ.

ದಕ್ಷಿಣ ಏಷಿಯಾದಲ್ಲಿ ಮೇಲಣ ಹಳೆ ಶಿಲಾಯುಗದ ವೈಶಿಷ್ಟ್ಯವಾದ ಹಿಂಬದಿಯಿರುವ ಅಲಗುಗಳ ಉದ್ದಿಮೆ ಹಾಗೂ ಮಧ್ಯ ಶಿಲಾಯುಗದ  ವೈಶಿಷ್ಟ್ಯವಾದ ಸೂಕ್ಷ್ಮ ಅಥವಾ ಸಣ್ಣ ಶಿಲಾ ಉಪಕರಣಗಳಲ್ಲಿ ಸಾಮಾನ್ಯವಾಗಿ ಇರುವ ಅನುಕ್ರಮತೆ ಮಸುಕಾಗಿದೆ. ಏಕೆಂದರೆ ಇವುಗಳ ಅನುಕ್ರಮತೆಯನ್ನು ಸ್ಪಷ್ಟ ಸ್ತರೀಕರಣದಿಂದ ಬಹಳ ವಿರಳವಾಗಿ ಗುರುತಿಸಬಹುದು ಅಲ್ಲದೆ, ಎಲ್ಲಿಯೂ ಮೇಲಣ  ಹಳೆ ಶಿಲಾಯುಗದ ಸ್ಥಳಗಳ ಕಾಲ ೩೪,೦೦೦ ವರ್ಷಕ್ಕಿಂತ ಹಿಂದೆ ಹೋಗುವುದಿಲ್ಲ. ಇದು ಶ್ರೀಲಂಕಾದಲ್ಲಿ ದೊರೆತ ಮಧ್ಯ ಶಿಲಾಯುಗದ ಸಣ್ಣ ಉಪಕರಣಗಳ ಕಾಲಮಾನವೂ ಹೌದು. ಆದರೆ ಈ ಎರಡು ತಂತ್ರಜ್ಞಾನದ ಬಗೆಗಿನ ಅನುಕ್ರಮದ ತರ್ಕ ಸ್ಪಷ್ಟವಾಗಿಯೇ ಇದ್ದು, ಹಿಂಬದಿಯಿರುವ ಅಲಗುಗಳ ಬಳಕೆ ಇಲ್ಲದೆ ಸಣ್ಣ ಶಿಲಾ ಉಪಕರಣಗಳನ್ನು ಉತ್ಪಾದಿಸಬಹುದೆಂದು ಊಹಿಸಲು ಸಾಧ್ಯಾವಾಗುವುದಿಲ್ಲ. ಈ ಕಾರಣಕ್ಕೆ ಮುಂದಿನ ಸಂಶೋಧನೆಗಳು ನಮಗೆ ಭಾರತದಲ್ಲಿ ಸಮಾಂತರ ಅಂಚುಗಳ ಹಿಂಬದಿಯಿರುವ ಅಲಗು ತಂತ್ರಜ್ಞಾನಕ್ಕೆ ಇದುವರೆಗೆ ಸಿಕ್ಕಿರುವ ಕಾಲಮಾನಕ್ಕಿಂತ ಹಿಂದಿನ ಕಾಲಮಾನವನ್ನು ಒದಗಿಸುತ್ತವೆ ಎಂದು ಭಾವಿಸಬಹುದು.

ಇಂತಹ ಹಿಂದಿನ ಕಾಲಮಾನವನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೇಣಿಗುಂಟ ನಿವೇಶನಕ್ಕೆ, ಕರ್ನಾಟಕದ ಶೋರಪುರ ದೋಆಬ್ ನ (ಎರಡು ನದಿಗಳ ಮಧ್ಯದ ಪ್ರದೇಶ) ಮೇಲಣ ಹಳೆ ಶಿಲಾಯುಗದ ನಿವೇಶನಕ್ಕೆ ಅಥವಾ ರಾಜಸ್ಥಾನದ ಬುಧ ಪುಷ್ಕರದ ಸಮಾಂತರ ಅಂಚುಗಳ ಅಲಗುಗಳಿಗೆ ಕೊಡಬೇಕಾಗಬಹುದು. ಆದರೆ ಸಧ್ಯಕ್ಕೆ ಇವುಗಳ ನಿಜ ಕಾಲಮಾನದ ಬಗೆಗೆ ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ. ಮಧ್ಯ ಭಾರತದಲ್ಲಿ ಎರಡು ಪ್ರಮುಖ ಮೇಲಣ  ಹಳೆ ಶಿಲಾಯುಗದ ಸಂಸ್ಕೃತಿಗಳು ದೊರೆಯುತ್ತವೆ, ಅದರಲ್ಲಿ ಮೊದಲನೆಯದು ‘ಬಾಗೋರ್’ -1. ಬಾಗೋರ್ ಕಾಲಮಾನ ೨೫,೫೦೦ ರಿಂದ ೧೦,೫೦೦ ವರ್ಷಗಳ ಹಿಂದೆ ಎಂದು ನಿರ್ಣಯಿಸಲಾಗಿದೆ. ಇನ್ನೊಂದು ಬೇಲಾನ್ ಕಣಿವೆಯದು. ಅದರ ಕಾಲಮಾನ ೧೮,೦೦೦ ದಿಂದ ೧೬,೦೦೦ ವರ್ಷಗಳ ಹಿಂದೆ,  ಇದರಲ್ಲಿ, ಸೋನ್ ಕಣಿವೆ ಮಧ್ಯದಲ್ಲಿರುವ ಬಾಗೋರ್ ವಿಶೇಷ ಪ್ರಾಮುಖ್ಯತೆ ಪಡೆದಿದೆ. ಇದು ಹಿಂಬದಿಯಿರುವ ಅಲಗುಗಳು, ಅಸಮ ತ್ರಿಕೋನಾಕೃತಿಗಳು, ರಂಧ್ರಕ ಹಾಗೂ ಕೆರೆಯುವ ಉಪಕರಣಗಳು ಮುಂತಾದ ಶಿಲಾ ಉಪಕರಣಗಳನ್ನು ಹೇರಳವಾಗಿ ತಯಾರಿಸಿರುವ ಸ್ಥಳ ಮೂಢನಂಬಿಕೆಯೂ (ಒಂದು ಅತ್ಯಂತ ಮಾನವ ಸಹಜ ಸ್ವಭಾವ!) ಇಲ್ಲಿ ರಾರಾಜಿಸುತ್ತಿತ್ತು. ಉಸುಕುಗಲ್ಲಿನ ಶಿಥಿಲ ವೇದಿಕೆ ಯೊಂದನ್ನು ಇಲ್ಲಿ ಆಗೆದು ತೆಗೆಯಲಾಗಿದೆ. ಇದರ ಮಧ್ಯದಲ್ಲಿ ವಿವಿಧ ಛಾಯೆಗಳ ಅಯಸ್ಸಂಯುಕ್ತವಿರುವ ಉಸುಕು ಕಲ್ಲಿನ ತುಣುಕು ಇತ್ತು. ಇದು ಬಹುಶಃ ಯಾವುದೋ ದೈವವನ್ನು ಪ್ರತಿನಿಧಿಸುತ್ತಿರಬೇಕು.

ಆಧುನಿಕ ಮಾನವ ಸಮುದಾಯಗಳ ಒಂದು ವಲಸೆ ಪೂರ್ವ ಭಾರತಕ್ಕೆ ಮ್ಯಾನ್ಮಾರ್ (ಬರ್ಮಾ) ದಿಂದಲೂ ಪ್ರವೇಶಿಸಿರಬಹುದಾದ ಸಾಧ್ಯತೆ ಇದೆ. ತ್ರಿಪುರ ಹಾಗೂ ಪೂರ್ವ ಬಾಂಗ್ಲಾದೇಶದಲ್ಲಿ ಕಟ್ಟಿಗೆಯ ಪಳೆಯುಳಿಕೆಯಿಂದ ತಯಾರಿಸಿದ ಹಸ್ತಕೃತಿಗಳು ದೊರೆತಿವೆ. ಸಮಾಂತರ ಅಂಚಿನ ಚಾಕು ಕೂಡಾ ಇದರಲ್ಲಿ ಸೇರಿದೆ. ಇವುಗಳ ಕಾಲಮಾನ ಸುಮಾರು ೧೧,೦೦೦ ದಿಂದ ೪,೫೦೦ ವರ್ಷಗಳ ಹಿಂದೆ. ಇವು ಮ್ಯಾನ್ಮಾರಿನ ಮೇಲಣ ಇರವಡ್ಡಿ ಕಣಿವೆಯ ‘ ಅನ್ಯೇತಿಯನ್’ ಎಂದು ಕರೆಯಲ್ಪಡುವ ಹಳೆ ಶಿಲಾಯುಗದ ಕೊನೆಯ ಹಂತಕ್ಕೆ ಸಂಬಂಧಿಸಿದವುಗಳು.

ಈ ಹೊಸ ಜೀವಸಂಕುಲ ಭಾರತವನ್ನು ಪ್ರವೇಶಿಸುವಾಗ ಇತರ ನರವಾನರಗಳನ್ನು ಎದುರಿಸಿದವೇ? ಇದೊಂದು ತರ್ಕ ಬದ್ಧ ಅನಿಸಿಕೆ ನಿಯಾನ್ ಡೆಥಲ್ ಮಾನವ ತಯಾರಿಸುತ್ತಿದ್ದ ಲೆವೋಲಿಯನ್ ಮೈಸ್ಸ್ತೇರಿಯನ್( ಅಪೇಕ್ಷಿತ ಆಕಾರಗಳ ಉಪಕರಣಗಳನ್ನು  ಪಡೆಯಲು ಮುಂಚೆ ಆಕಾರಗೊಳಿಸಿದ ಅಥವ ಸಿದ್ಧಗೊಳಿಸಿದ ತಿರುಳಿನಿಂದ ಮಾಡಿದ) ಉಪಕರಣಗಳು ಆಘ್ಘಾನಿಸ್ತಾನದ ದರ್ರಾ – ಇ -ಕುರ್ ನಲ್ಲಿ (ಸುಮಾರು ೫೦,೦೦೦ ವರ್ಷಗಳ ಹಿಂದೆ), ಕಾರ ಕಮಾರ್ ನಲಿ (೩೦,೦೦೦ ವರ್ಷಗಳ ಹಿಂದೆ) ಹಾಗೂ ಪಾಕಿಸ್ತಾನದ ಸಾಂಘಾವೊ ಗುಹೆಯಲ್ಲಿ ಕಂಡುಬಂದಿವೆ. ಈ ಸ್ಥಳಗಳು ನಿಯನ್ ಡೆರ್ಥಲ್‌ನ ತಲೆಬುರುಡೆ ದೊರಕಿದ ಉಝ್ಬೆಕಿಸ್ಥಾನದ ತೆಷಿಕ್ ತಾಷ್ ನಿಂದ ಬಹಳ ದೂರವೇನಿಲ್ಲ. ದರ್ರಾ – ಇ- ಕುರ್ ನಲ್ಲಿ ನಿಯಾನ್ ಡೆರ್ಥಲ್ ಜನಸಮುದಾಯಕ್ಕೆ ‘ಭಾಗಶಃ ‘ ಸೇರಿದ್ದಿರಬಹುದಾದ ತಲೆಬುರುಡೆಯೊಂದು ದೊರೆತಿದೆ. ಇಂತಹುದೇ ಮೌಸ್ತೇರಿಯನ್ ಉಪಕರಣಗಳು ಮಹಾರಾಷ್ಟ್ರದ ಮೂಲಾ ಅಣೆಕಟ್ಟಿನಲ್ಲಿ (ಕಾಲಮಾನ ೩೧,೦೦೦ ವರ್ಷಗಳ ಹಿಂದೆ), ಗುಜಾರಾತ್‌ನ ಬರಡಿಯಾದಲ್ಲಿ (ಕಾಲಮಾನ ೧೫,೦೦೦ ವರ್ಷಗಳ ಹಿಂದೆ), ಹಾಗೂ ಭಾರತದ ಇತರ ಕಡೆಗಳಲ್ಲಿ ದೊರೆತಿವೆ. ಇವು ನಿಯಾನ್ ಡೆರ್ಥಲ್ ದಾಗಿರದಿದ್ದಲ್ಲಿ. ಈ ತಂತ್ರವನ್ನು ಆಧುನಿಕ ಮಾನವ ನಿಯಾನ್ ಡೆರ್ಥಲ್ ರಿಂದ ಕಲಿತು ವಾಯುವ್ಯ ದಿಕ್ಕಿನಿಂದಲೇ ಭಾರತಕ್ಕೆ ತಂದಿರಬೇಕು. ಹಾಗಿದ್ದಲ್ಲಿ, ಅವರು ಪಶ್ಚಿಮ ಏಷಿಯಾದಲ್ಲಿನ ಮಧ್ಯವರ್ತಿ ಸ್ವರೂಪದ ಅಸ್ಥಿಪಂಜರಗಳಿಂದ ಸೂಚಿತ ವಾದಂತೆ, ನಿಯಾನ್ ಡೆರ್ಥಲ್  ರೊಂದಿಗೆ ಬೆರೆತು ಸಂತಾನೋತ್ಪತ್ತಿಯನ್ನೂ ಮಾಡಿರಬಹುದು. ಇಂತಹುದೇ ಸಂಬಂಧಗಳು ಆಧುನಿಕ ಮಾನವ ಹಾಗೂ ನಂತರದ ಹೋಮೋ ಎರೆಕ್ಟಸ್ ಸಮುದಾಯಗಳ ಮಧ್ಯವೂ ಉಂಟಾಗಿರಬಹುದು. ಇಂತಹುದು ಇಂಡೋನೇಷಿಯಾದ ಜಾವದಲ್ಲಿನ ನಗಾಂಡಾಗ್ ನಲ್ಲಿ ೫೩,೦೦೦ದಿಂದ ೨೭,೦೦೦ ವರ್ಷಗಳ ಹಿಂದೆ ನಡೆಯಿತು. ಶ್ರೀಲಂಕಾದ ವಾಯುವ್ಯ ಕಡಲತೀರದಲ್ಲಿ ತಡವಾದ ಹಳೆಶಿಲಾಯುಗದ ಸಂಸ್ಕೃತಿಯ ಕರ್ತೃಗಳು ಹೋಮೋ ಎರೆಕ್ಟಸ್ ಎಂದಾದಲ್ಲಿ, ಇಂತಹುದೇ ಅಲ್ಲಿಯೂ ನಡೆದಿರಬೇಕೆಂದು ನಾವು ಊಹಿಸಬಹುದು. ಶ್ರೀಲಂಕಾದ ಸಣ್ಣ ಶಿಲಾ (ಮೈಕ್ರೋಲಿಥ್ ) ಉಪಕರಣಗಳ ಕರ್ತೃ, ಅಸ್ಥಿಪಂಜರಗಳು (೩೪,೦೦೦ ವರ್ಷಗಳ ನಂತರ ಇವು ದೊರೆಯತೊಡಗುತ್ತವೆ) ಸೂಚಿಸುವಂತೆ, ನಿರ್ವಿವಾದವಾಗಿ ಆಧುನಿಕ ಮಾನವ ೬೦,೦೦೦ ವರ್ಷಗಳ ಬಹಳಷ್ಟು ಮುಂಚೆ ಶ್ರೀಲಂಕಾ ಪ್ರವೇಶಸಿದ್ದರೆ ಈ ಇನ್ನೊಂದು ಸಂಸ್ಕೃತಿಯ ಕರ್ತೃ ಸಹ ಅವನೇ ಎಂದು ನಾವು ಹೇಳಬಹುದು). ಅಲ್ಲದೆ ಪ್ರತಿಸ್ಪರ್ಧಿಗಳನ್ನು ಕಗ್ಗೊಲೆ ಮಾಡಿರಬಹುದಾದ ಸಾಧ್ಯತೆಯನ್ನು ನಾವು ಪರಿಗಣನೆಗೆ ತೆಗೆದುಕೊಳ್ಳಬೇಕಿದೆ. ಪ್ರಬಲರಾದವರು  (ನಮ್ಮವರು!) ಕಡಿಮೆ ಪ್ರತಿರೋಧ ಸಾಮರ್ಥ್ಯದವರನ್ನು ಕೊಂದಿರಬಹುದು. ಹೀಗೆ ಶಾರೀಕವಾಗಿ ಆಧುನಿಕನಾದ ಮಾನವ ಭಾರತದಲ್ಲಿ ಮಾತ್ರವಲ್ಲ ಹಳೆಯ ಜಗತ್ತಿನಾದ್ಯಾಂತ ಲೀನಗೊಳಿಸಿಕೊಳ್ಳುವ ಹಾಗೂ ನಿರ್ಮೂಲಗೊಳಿಸುವ ಪ್ರಕ್ರಿಯೆಯ ಮೂಲಕ ಹಿಂದಿನ ನರವಾನರಗಳನ್ನು ಅಳಿಸಿ ಹಾಕಿದ.

ನಮ್ಮ ಮತು ಇತರ ಸಂಕುಲಗಳ ಒಳಗೆ ಸಂತಾನೋತ್ಪತ್ತಿ ನಡೆದಿದ್ದಲ್ಲಿ, ಈ ಹಿಂದಿನ  ಸಂಕುಲಗಳ ಕುರುಹುಗಳು ನಮ್ಮಲ್ಲಿ ಏಕೆ ಉಳಿದಿಲ್ಲ ಎಂಬ ಪ್ರಶ್ನೆ ಚರ್ಚಗೆ ಸಾಕಷ್ಟು ಗ್ರಾಸ ಒದಗಿಸಿದೆ. ಹೊಮೋ ಎರೆಕ್ಟಸ್ ಕೆಲವು ಸಣ್ಣ ದೈಹಿಕ ಲಕ್ಷಣಗಳು ಇಂದಿಗೂ ಪೂರ್ವ ಏಷಿಯಾದ ಮಂಗೋಲಾಯ್ಡರಲ್ಲಿ ಹಾಗೂ ಆಸ್ಟ್ರೇಲಿಯಾದ ಆಸ್ಟ್ರಲಾಯ್ಡರಲ್ಲಿ ಉಳಿದುಕೊಂಡಿವೆ ಎಂದು ನಂಬಲಾಗಿದೆ. ಆದರೆ ಈ ಅಲ್ಪ ಜನಾಂಗಿಯ ವ್ಯತ್ಯಾಸಗಳ ನಡುವೆಯೂ ಹಾಗೂ ಆಸ್ಟ್ರಲಾಯ್ಡ್ ಹಾಗೂ ಅಮೆರಿಂಡಿಯನ್ ಜನಗಳು ಮನುಕುಲದ ಇತರರಿಂದ ಬಹಳ ದೀರ್ಘಕಾಲ ಪ್ರತ್ಯೇಕಿಸಲ್ಪಟ್ಟಾಗ್ಯೂ ಇಂದಿನ ಮನುಕುಲ ಜೈವಿಕವಾಗಿ ಅತ್ಯಂತ ಏಕರೂಪತೆ ಹೊಂದಿರುವ ಜೀವಸಂಕುಲ. ನಿಯಾನ್ ಡೆರ್ಥಲರು ಪಶ್ಚಿಮ ಯುರೋಪಿನಲ್ಲಿ ಆಧುನಿಕ ಮಾನವರೊಂದಿಗೆ ಕನಿಷ್ಟ ೧೦,೦೦೦ ವರ್ಷಗಳ ಕಾಲ ಸಹ ಜೀವನ ನಡೆಸಿದರು. ಆದಾಗ್ಯಾ ಇತ್ತೀಚೆಗೆ  ಪಡೆದ ನಿಯಾನ್ ಡೆರ್ಥಲ್ ಡಿಎನ್ ಎ ಯುರೋಪಿಯನ್ ಮಾನವ ವಂಶವಾಹಿಗಳ (ಜೀನ್‌ಗಳ) ಸಮೂಹಕ್ಕೆ ತನ್ನ ವಿಶಿಷ್ಟ ಕೊಡುಗೆಯನ್ನೇನೂ ಕೊಟ್ಟಂತೆ ಕಾಣುವುದಿಲ್ಲ. ಬಹುಶಃ ಬೇರೆ ಜೀವಸಂಕುಲಗಳ ಸಂಪರ್ಕ ಬರುವ ವೇಳೆಗೆ ಹಾಗೂ ನಂತರ ಅಧುನಿಕ ಮಾನವ ಜೀವಸಂಕುಲ ಸಂಖ್ಯಾತ್ಮಕವಾಗಿ ಅದೆಷ್ಟು ದೊಡ್ದದಿತ್ತೆಂದರೆ ಸಣ್ಣ ಸಂಖ್ಯೆಯ ಇತರ ಜೀವಸಂಕುಲ, ಉಪ ಜೀವಸಂಕುಲಗಳ (ಸಬ್‌ಸ್ಪೀಷೀಸ್) ವಂಶಾವಾಹಿಗಳ ಹರಿವು ಶೀಘ್ರದಲ್ಲಿಯೇ ಗೌಣವೆನ್ನಿಸತೊಡಗಿತು ಎಂದು ಊಹಿಸಬೇಕಾಗುತ್ತದೆ.

 


* ಇರ್ಫಾನ್‌ ಹಬೀಬ್‌ ಅವರು ಬರೆದ ‘ನಮ್ಮ ಆರಂಭಿಕ ಪೂರ್ವಜರು’ ಮತ್ತು ‘ನವ ಶಿಲಾಯುಗ ಕ್ರಾಂತಿ ವ್ಯವಸಾಯ ಹಾಗೂ ಪ್ರಾಣಿ ಸಾಕಣೆಯ ಪ್ರವೇಶ’ ಎನ್ನುವ ಎರಡು ಪ್ರಬಂಧಗಳನ್ನು ಅಧ್ಯಾಯ ೧ರಲ್ಲಿ ಪ್ರಕಟಿಸುತ್ತಿದ್ದೇವೆ. ಇದನ್ನು ‘ಚಿಂತನ ಪುಸ್ತಕ’ ಅವರು ಪ್ರಕಟಿಸಿರುವ ‘ಪೂರ್ವೇತಿಹಾಸ’ (೨೦೦೮) ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ‘ಆಲಿಘರ್ ಹಿಸ್ಟೋರಿಯನ್ಸ್‌ ಸೊಸೈಟಿ’ಯ ನೇತೃತ್ವದಲ್ಲಿ ತುಲಿಕಾ ಬುಕ್ಸ್‌ ಅವರು ‘ಪೀಪಲ್ಸ್‌ ಹಿಸ್ಟರಿ ಆಫ್‌ ಇಂಡಿಯಾ’ ಎಂಬ ಪುಸ್ತಕ ಮಾಲೆಯನ್ನು ಪ್ರಕಟಿಸಿದ್ದಾರೆ. ಈ ಪುಸ್ತಕ ಮಾಲೆಯ ಮೊದಲ ಪುಸ್ತಕ ‘ಪ್ರಿಹಿಸ್ಟರಿ’ಯನ್ನು ಕನ್ನಡಕ್ಕೆ ಪ್ರದೀಪ್‌ ಬೆಳಗಲ್‌ ಅವರು ಅನುವಾದಿಸಿದ್ದಾರೆ. ಈ ಮಾಲೆಯ ಉಳಿದ ಆವೃತ್ತಿಗಳನ್ನು ಇರ್ಫಾನ್‌ ಹಬೀಬ್‌ ಅವರು ಸಂಪಾದಿಸಿದ್ದಾರೆ. ಪ್ರಸ್ತುತ ಪ್ರಬಂಧಗಳನ್ನು ನಮ್ಮ ಚರಿತ್ರೆ ಸಂಪುಟದಲ್ಲಿ ಬಳಸಲು ಅನುಮತಿ ನೀಡಿದ ‘ಚಿಂತನ ಪುಸ್ತಕ’ ಸಂಸ್ಥೆಗೆ ನಾವು ಕೃತಜ್ಞರಾಗಿದ್ದೇವೆ. —ಸಂಪಾದಕರು.