ಭತ್ತದ ವ್ಯವಸಾಯ ಮತ್ತು ಕ್ರಿ. ಪೂ. ,೦೦೦ ನಂತರದ ಮಧ್ಯ ಹಾಗೂ ಪೂರ್ವಭಾರತದ ನವಶಿಲಾಯುಗ ಸಂಸ್ಕೃತಿಗಳು

ಸಮಾಜಗಳು ಅಸಮಾನವಾಗಿ ಬೆಳೆಯುತ್ತಿವೆ. ಮೆಹರ್ಘಡದಲ್ಲಿ ಸುಮಾರು ಕ್ರಿ. ಪೂ. ೭,೦೦೦ ಸುಮಾರಿಗೆ ಕಂಡುಬಂದ ನವಶಿಲಾಯುಗ ತಂತ್ರಗಳು ಹಾಗೂ ಕೃಷಿ ಉತ್ಪಾದನೆ ಸಿಂಧೂ  ಬಯಲಿನಾಚೆ, ಭಾರತದ ಇತರ ಯಾವುದೇ ಭಾಗದಲ್ಲಿ ಸುಮಾರು ೪೦೦೦ ವರ್ಷಗಳವರೆಗೆ ಕಾಣಿಸಿಕೊಳ್ಳಲೇ ಇಲ್ಲ ಎನ್ನುವ ಸಂಗತಿಯನ್ನು ಪರಿಶೀಲಿಸಿದಾಗ ಮೇಲಿನ ಮಾತಿನ ಸತ್ಯತೆ ನಮಗೆ ಹೊಳೆಯುತ್ತದೆ.

ಮಧ್ಯ ಗುಜಾರಾತ್‌ನ ಥಾರ್ ಮರುಭೂಮಿಯಾಚೆಯೆಷ್ಟೇ ಇರುವ ಲಾಂಗ್ ನಾಜ್ ನಲ್ಲಿರುವ ಸಣ್ಣ ಶಿಲಾ ಉಪಕರಣಗಳ (ನವಶಿಲಾಯುಗದ ಉಪಕರಣಗಳಿಲ್ಲ) ಕಾಲವನ್ನು ರೇಡಿಯೋ ಕಾರ್ಬನ್ ಕಾಲಮಾಪನದ ಪ್ರಕಾರ ಕ್ರಿ. ಪೂ. ೨,೫೫೦ ದಿಂದ್ ೨,೧೫೮ ಎಂದು ನಿರ್ಧರಿಸಲಾಗಿದೆ. ಇದರ ಇನ್ನೂ ಉತ್ತರಕ್ಕೆ ಬಾಗೋರ್ ನಿವೇಶನವಿದೆ (ಇದು ಮೇವಾಡದ ಅರವಳ್ಳಿಯ ಎತ್ತರದಿಂದ ಥಾರ್ ನತ್ತ ಮುಖ ಮಾಡಿದೆ). ಇಲ್ಲಿಯ ಎರಡು ಹಂತಗಳನ್ನು ಗುರುತಿಸಿದ್ದು ಈ ಕಾಲಮಾನ ಕ್ರಿ. ಪೂ.೫,೩೬೫ರಿಂದ ೨,೩೧೫ ರವರೆಗೆ ಇದೆ. ಆದಾಗ್ಯೂ ಇವು ಪೂರ್ಣವಾಗಿ ಸೂಕ್ಷ್ಮ ಶಿಲಾ ಉಪಕರಣಗಳ ಹಂತಗಳು. ಕ್ರಿ. ಪೂ. ೨.೬೫೦ರ ನಂತರವೇ, ಬಾಗೋರ್ ನಹಂತ IIರಲ್ಲಿ, ತಾಮ್ರ ಮತ್ತು ಮಡಕೆಗಳು ನುಸುಳುತ್ತವೆ. ಹಂತ Iರಲ್ಲಿ ಪ್ರಾಣಿ ಸಾಕಾಣಿಕೆ ಇದ್ದು ಕುರಿ, ಮೇಕೆ, ಜೆಬು ಎತ್ತು ಹಾಗೂ ಹಂದಿಗಳನ್ನು ಸಾಕಲಾಗುತ್ತಿದ್ದು, ಕುರಿ, ಮೇಕೆಗಳು ಪ್ರಾಮುಖ್ಯತೆ ಪಡೆದಿದ್ದವು. ಬೀಸುವಕಲ್ಲು ಪತ್ತೆಯಾಗಿದ್ದರೂ ಯಾವುದೇ ಧಾನ್ಯಗಳು ಪತ್ತೆಯಾಗಿಲ್ಲ. ಹೀಗಾಗಿ ಅಲ್ಲಿಯ ನಿವಾಸಿಗಳು ಆಹಾರಧಾನ್ಯಗಳ ವ್ಯವಸಾಯ ಅರಿತಿದ್ದರೇ ಎಂದು ಹೇಳಬರುವುದಿಲ್ಲ. ಅವರು ಹೆಚ್ಚು ಕುರಿಕಾಯುವವರ ಸಮುದಾಯವಿದ್ದಂತೆ ಕಂಡುಬರುತ್ತದೆ. ಹೀಗೆ ಲಾಂಗ್ ನಾಜ್ ನಿಂದ ಬಾಗೋರ್ ವರೆಗಿನ ಮಧ್ಯ ಶಿಲಾಯುಗದ ಈ ಪಟ್ಟಿಯು ಅಧ್ಯಾಯ ೧.೫ರಲ್ಲಿ ವಿವರಿಸಿದಂತಹ ಮಧ್ಯಶಿಲಾಯುಗದ ಸಂಸ್ಕೃತಿಗಳಿಂದ ಉಳಿದುಕೊಂಡು ಬಂದ ಸಂಸ್ಕೃತಿಯಾಗಿರಬಹುದು. ಇದರ ಮುಖ್ಯ ನಿವೇಶನ ನರ್ಮದಾ ಕಣಿವೆಯಲ್ಲಿನ ಆದಮ್‌ಘಡದಲ್ಲಿದೆ (ಕ್ರಿ. ಪೂ. ೬,೦೦೦).

ಇದರ ಇನ್ನೂ ಪೂರ್ವಕ್ಕೆ, ಪಶ್ಚಿಮದ ನವಶಿಲಾಯುಗದ ಸಂಸ್ಕೃತಿಗಳಿಗೆ ಯಾವುದೇ ಸ್ಪಷ್ಟ ಸಂಬಂಧವಿಲ್ಲದ ಬೇರೆಯದೇ ಹಾಗೂ ಸ್ವತಂತ್ರ ನವಶಿಲಾಯುಗದ ತಂತ್ರಜ್ಞಾನ ಹಬ್ಬಿದಂತೆ ಕಾಣುತ್ತದೆ. ಈ ನವಶಿಲಾಯುಗ ಪ್ರೇರಣೆಯ ಮೂಲ ಮಧ್ಯ ಭಾರತದಿಂದಲೇ  ಬಂತು ಎಂದು ಮೊದಲು ಭಾವಿಸಲಾಗಿತ್ತು. ಜಿ. ಆರ್. ಶರ್ಮ ಹಾಗೂ ಅವರ ಸಹಯೋಗಿಗಳು ಅಲಹಾಬಾದ್‌ನ ದಕ್ಷಿಣಕ್ಕಿರುವ ವಿಂದ್ಯಾದ ಸಣ್ಣ ನದಿ ಬೇಲಾನ್‌ನ ಕಣಿವೆಯ ಕೋಲ್‌ದಿಹ್ವದಲ್ಲಿ ಭತ್ತ ವ್ಯವಸಾಯವನ್ನು ಪತ್ತೆ ಹಚ್ಚಿದರು. ಅಕ್ಕಿಯನ್ನು ಪಡೆದ ಸ್ತರದ್ದೆಂದೇ ಭಾವಿಸಲಾದ ಸಾಮಾಗ್ರಿಗಳ ಕಾರ್ಬನ್ ಪರೀಕ್ಷೆ ಕ್ರಿ. ಪೂ. ೬,೭೧೬ ರಿಂದ ೫,೦೧೦ ಕಾಲಮಾನ ಕೊಟ್ಟಿತು. ಈ ನಿವೇಶನವು ಈ ಪ್ರಕಾರ ಪ್ರಪಂಚದಲ್ಲೆಲ್ಲಾ ಅತಿ ಪುರಾತನ ಭತ್ತ ಪತ್ತೆಯಾದ ಸ್ಥಳವಾಗಿರುತ್ತಿತ್ತು. ಇಂತಹ ಹೇಳಿಕೆಯು ಹಲವು ಪಠ್ಯಪುಸ್ತಕಗಳಲ್ಲಿಯೂ ದಾಖಲಾಗಿತ್ತು. ಆದರೆ ಈಗ ಸ್ಟಷ್ಟವಾದಂತೆ ಈ ಪುರಾತನ ಕಾಲಮಾನ ನಿಗದಿ ಕಲ್ಲಿದ್ದಲು ಇರುವ ಸ್ತರದ ತಪ್ಪು ನಿಗದಿಯಿಂದಾದುದು ಎಂದು ತಿಳಿದಿದೆ. ವಾಸ್ತವ ಸಾಂಸ್ಕೃತಿಕ ಅನುಕ್ರಮ ಹೀಗಿದೆ.

ಎಲ್ಲಕ್ಕೂ ಮೊದಲಾಗಿ, ಅದೇ ಸಣ್ಣ ನದಿ ಬೇಲಾನ್‌ನ ಕಣಿವೆಯಲ್ಲಿನ ಚೊಪಾನಿ ಮಂಡೋನಲ್ಲಿ ತಡವಾದ ಮಧ್ಯಶಿಲಾಯುಗ ಅಥವಾ ಆರಂಭಿಕ ನವಶಿಲಾಯುಗದ ಹಂತ ಪತ್ತೆಯಾಗಿದ್ದು, ಅದರ ಕಾಲಮಾನವನ್ನು (ಕಾರ್ಬನ್ ಕಾಲಮಾನ ನಿರ್ಣಯದ ಪ್ರಕಾರ ) ಕ್ರಿ. ಪೂ. ೩೩೮೫ರಿಂದ ೩೧೩೫ ಎನ್ನಲಾಗಿದೆ. ಇಲ್ಲಿಯ ಜನರು ಗುಡಿಸಲುಗಳಲ್ಲಿ ವಾಸವಾಗಿದ್ದರು. ಆ ಗುಡಿಸಲುಗಳ ನೆಲಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಣ್ಣ ಶಿಲಾ ಉಪಕರಣಗಳು ದೊರೆತಿವೆ. ಜನರು ಬೇಟೆಗಾರರು ಹಾಗೂ ಆಹಾರ ಸಂಗ್ರಹಕಾರರೂ ಆಗಿದ್ದರು. ಈ ಕಾರಣಕ್ಕೆ ಗಂಡಸರು ಸರಾಯ್ ನಹರ್  ರಾಯ್ ಮತ್ತು ಮಹಾದಹನದಲ್ಲಿ ೫೦೦೦ ವರ್ಷಗಳ ಹಿಂದೆ ಇದ್ದಂತೆ ಬಲಿಷ್ಟವಾಗಿ ಹಾಗೂ ಎತ್ತರವಾಗಿದ್ದರು. ಆದರೆ ಹೆಂಗಸರು ನಾಜೂಕಾಗತೊಡಗಿದ್ದರು ಹಾಗೂ ಅವರ ಗಾತ್ರ ಕಡಿಮೆಯಾಗತೊಡಗಿತ್ತು (ವಯಸ್ಕರ ಸರಾಸರಿ ಎತ್ತರ ೧೬೨ ಸೆ.ಮಿ). ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಲೇಖಾಹಿಯಾದಲ್ಲಿ ದೊರೆತ ಆಸ್ಥಿಪಂಜರಗಳು ಇದನ್ನೇ ಹೇಳುತ್ತವೆ. ಇವುಗಳ ಕಾಲಮಾನ ಕ್ರಿ. ಪೂ. ೩೦೩೫ ರಿಂದ ೨೭೮೦ದ್ದು ಎಂದು ನಿರ್ಧರಿಸಲಾಗಿದೆ. ಇಲ್ಲಿನ ಮಾನವರ ಜೀವಿತಾವಧಿ ಇನ್ನೂ ಕಡಿಮೆಯಿತ್ತು. ಹತ್ತೊಂಬತ್ತು ಆಸ್ಥಿಪಂಜರಗಳ ವಯಸ್ಸನ್ನು ಅಂದಾಜು ಮಾಡಿದ್ದು ಅದರಲ್ಲಿ ಹನ್ನೊಂದು ಮಂದಿ ತಮ್ಮ ೨೫ನೇ ವರ್ಷದ ಒಳಗೆ ಸತ್ತಿದ್ದಾರೆ. ಚೋಪಾನಿ ಮಂಡೋಗೆ ಹಿಂದಿರುಗುದಾದರೆ, ಇಲ್ಲಿ ಕಲ್ಲಿನ ಸುತ್ತಿಗೆ ಬೀಸಕಲು ಹಾಗೂ ಅರೆವ ಕಲ್ಲಿನಂತಹ ಕೆಲವು ನಯಗೊಳಿಸಿದ ಕಲ್ಲಿನ ಪರಿಕರಗಳನ್ನು ನಾವು ಕಾಣಬಹುದು. ಆದರೆ ಇನ್ನೂ ವ್ಯವಸಾಯ,  ಸಸ್ಯಗಳ ಮತ್ತು ಪ್ರಾಣಿಗಳ ಸಂಗೋಪನೆಗಳ ಸುಳಿವು ಇಲ್ಲ. ಆದರೆ ಕಾಡುಭತ್ತವನ್ನು ಸಂಗ್ರಹಿಸಲಾಗುತ್ತಿತು (ಸುಟ್ಟ ಜೇಡಿಮಣ್ಣಿನಲ್ಲಿ ಭತ್ತದ ಹೊಟ್ಟಿನ ಮುದ್ರೆ). ಕೈಯಿಂದ ಮಾಡಿದ ಮಡಕೆಗಳು ಕೆಲವೊಮ್ಮೆ ಹಗ್ಗದ ಹುರಿಯಿಂದ ಮುದ್ರಿಸಿದ ಅಲಂಕಾರಗಳೊಂದಿಗೆ ದೊರೆತಿವೆ. ಈ ಮಡಕೆಯು ಈ ಸಂಸ್ಕೃತಿಯನ್ನು ಕುಂಝುನ್ ನದಿಯ  ಹತ್ತಿರವಿರುವ ಕೋಲ್‌ದಿಹ್ವಾ ಮತ್ತು ಮಹಾಗರ ನಿವೇಶನಗಳು ಪ್ರತಿನಿಧಿಸುವ ‘ವಿಂಧ್ಯಾ ನವಶಿಲಾಯುಗ’ ದ ಸಂಸ್ಕೃತಿಯೊಂದಿಗೆ ಸಂಬಂಧ ಕಲ್ಪಿಸುತ್ತದೆ. ಇವುಗಳಲ್ಲಿ ಕೊನೆಯದು ಚೋಪಾನಿ ಮಂಡೋಗೆ ತೀರಾ ಹತ್ತಿರದಲ್ಲಿದೆ. ವಿಂಧ್ಯಾದ ನವ ಶಿಲಾಯುಗ ಸಂಸ್ಕೃತಿಯು ಚೋಪಾನಿ ಮಂಡೋದ ಮಧ್ಯ ಶಿಲಾಯುಗ ಸಂಸ್ಕೃತಿಯ ನಂತರ ಸುಮಾರು ಕ್ರಿ. ಪೂ. ೩೦೦೦ ವೇಳೆಗೆ ಬಂದಿರಬೇಕು. ಕುನ್‌ಜಾನ್ ನದಿಯ ಕ್ಷೇತ್ರದಲ್ಲಿ ಕಾರ್ಬನ್ ಕಾಲ ಮಾನ ಕ್ರಿ. ಪೂ.೩೫೩೦ ರಿಂದ ೧೨೬೫ ರವರೆಗೆ ಇದ್ದರೆ, ಮಹಾಗರದ ಕಾಲಮಾನ ಎರಡನೇ ಸಹಸ್ರಮಾನಕ್ಕೆ ಸೀಮಿತವಾಗಿದೆ. ಅಥವಾ ಕ್ರಿ. ಪೂ. ೧೭೭೦ ರಿಂದ ೧೩೭೫ ರವರೆಗೆ ಇದೆ. ವಿಂಧ್ಯಾದ ನವ ಶಿಲಾಯುಗ  ಸಂಸ್ಕೃತಿ ಖಂಡಿತ ಮುಖ್ಯವಾಗುತ್ತದೆ. ಏಕೆಂದರೆ, ಈಗಾಲೇ ಹೇಳಿದಂತೆ, ಅಲ್ಲಿ ಭತ್ತ ವ್ಯವಸಾಯದ ಬಹಳ ಒಳ್ಳೆಯ ಸಾಕ್ಷ್ಯಗಳು ದೊರೆತಿವೆ. ಭತ್ತ ಈಗ ಭಾರತದ ಪ್ರಮುಖ ಆಹಾರ ಬೆಳೆ. ಇದನ್ನು ಹೊರತುಪಡಿಸಿದರೆ ಇಲ್ಲಿಯ ಹಗ್ಗದ ಮುದ್ರೆಯಿರುವ, ಕೈಯಿಂದ ತಯಾರಿಸಿದ ಮಡಕೆ ಈ ಸಂಸ್ಕೃತಿಯು ಆದಿಮ ಸ್ವರೂಪಕ್ಕೆ ಸಾಕ್ಷ್ಮಿ.

ಪಶ್ಚಿಮಕ್ಕೆ ಸಮಾನಾಂತರವಾಗಿ ಪೂರ್ವದಲ್ಲಿ ಒಂದು ವಿಶಾಲ ನವ ಶಿಲಾಯುಗದ ಕ್ಷೇತ್ರದ ಸುಳಿವುಗಳು ನಮಗಿಲ್ಲಿ ದೊರೆಯುವ ಸಾಧ್ಯತೆಯಿದೆ. ಪೂರ್ವದ ಸುಳಿವು ನಮ್ಮನ್ನು ಚೀನಾಕ್ಕೆ ಎಳೆದೊಯ್ಯುತ್ತದೆ. ಅಲ್ಲಿ ಕ್ರಿ. ಪೂ. ೫೦೦೦ಕ್ಕಾಗಲೆ ಭತ್ತದ ಸಂಗೋಪನೆ ಖಂಡಿತವಾಗಿಯೂ ಆರಂಭವಾಗಿತ್ತು. ಹೆಮುಡು ಸಂಸ್ಕೃತಿಯಲ್ಲಿ ಇದರ ಗುರುತುಗಳು ಹೇರಳಾವಾಗಿ ದೊರೆಯುತ್ತಿದ್ದು, ಹಾಗೆಯೇ ಹಗ್ಗದ ಮುದ್ರೆಯ ಮಡಕೆಗಳು ಸಹ ಸಿಕ್ಕಿವೆ. ವಿಯಟ್ನಾಮ್ ಹಾಗೂ ಥಾಯಲ್ಯಾಂಡ್‌ನ ಹೋಬಿನ್ ಹಿಯನ್ ಸಂಸ್ಕೃತಿಯಲ್ಲಿ, ಕ್ರಿ. ಪೂ. ೫೦೦೦ದ ಬಹುಕಾಲದ ನಂತರ ತಡವಾದ ಹಂತಗಳಲ್ಲಿ, ಭತ್ತದ ವ್ಯವಸಾಯ ಹಾಗೂ ಹಗ್ಗ ಮುದ್ರೆಯಿರುವ ಮಡಕೆಗಳು ದೊರೆಯುತ್ತವೆ. ಅಸ್ಸಾಮ್‌ನ ನವ ಶಿಲಾಯುಗದ ನಿವೇಶನಗಳು ಆಗ್ನೇಯ ಏಶ್ಯಾದೊಂದಿಗೆ ಭಾರತೀಯ ಸಂಬಂಧಗಳಿರುವ ಸಾಧ್ಯತೆಗಳ ಬಗೆಗೆ ಹೇಳುತ್ತವೆ. ದೋಜಾಲಿ ಹೇಡಿಂಗ್ (ಉತ್ತರ ಕಚಾರ್ ಬೆಟ್ಟಗಳು) ಮತ್ತು ಸರುಟರುಗಳಲ್ಲಿ (ಅಸ್ಸಾಮ್‌ನ ಕಾಮರೂಪ್ ಜಿಲ್ಲೆ) ಧಾನ್ಯಗಳನ್ನು ಕುಟ್ಟಲು ಅಥವಾ ಅರೆಯಲು ಬಳಸುವ ಪರಿಕರಗಳೊಂದಿಗೆ  ಹಗ್ಗದ ಮುದ್ರೆಯ ಮಡಕೆ ಪತ್ತೆಯಾಗಿದೆ. ದುರದೃಷ್ಟಕ್ಕೆ ಕಾಲಮಾನ ನಿರ್ಣಾಯ ಸಾಧ್ಯವಾಗಿಲ್ಲ. ಪಶ್ಚಿಮ ಬಂಗಾಳದ ಪಾಂಡು ರಾಜರ್ ದಿಬಿಯಲ್ಲಿ (ಬರ್ಧ್ವಾನ್ ಜಿಲ್ಲೆ) ಎರಡು ನವ ಶಿಲಾಯುಗದ ಹಂತಗಳು, ಕಾಲಮಾನ I ಹಾಗೂ II ಪತ್ತೆಯಾಗಿವೆ. ಕಾಲಮಾನ I ಬಹುಶಃ ಕ್ರಿ. ಪೂ. ೨೦೦೦ಕ್ಕೂ ಹಿಂದಿನದು, ಇಲ್ಲಿ ಭತ್ತದ ವ್ಯವಸಾಯ ಹಗೂ ಹಗ್ಗದ ಮುದ್ರೆಯ ಮಡಕೆಗಳ ಉಳಿಕೆಗಳು ದೊರತಿವೆ. ಕಾಲಮಾನ II, ಹೊಸ ನೆಲೆಗೆ ಸೇರಿದ್ದು ಇಲ್ಲಿ ಭತ್ತದೊಂದಿಗೆ ಚಕ್ರದಿಂದ ತಯಾರಿಸಿದ ಮಡಕೆ ಇದೆ. ಇಂತಹ ಮಡಕೆಯ ತಾಂತ್ರಿಕತೆ ಬಹುಶಃ ಸಿಂಧೂ ಕಣಿವೆಯಿಂದ ಬಂದಿರಬೇಕೆಂದು ನಾವು ಊಹಿಸಬಹುದು. ಅಲ್ಲಿ ಇದು ೨೦೦೦ ವರ್ಷಗಳ ಮೊದಲು ಕಾಣಸಿಕ್ಕಿದೆ. ಹಗ್ಗದ ಮುದ್ರೆಯುಳ್ಳ ಮಡಕೆಯ ವಿಂಧ್ಯಾ ನವ ಶಿಲಾಯುಗವು ಪೂರ್ವದಿಂದ ಭತ್ತದ ವ್ಯವಸಾಯ ಹಬ್ಬಿದ ಕೊನೆಯ ಬಿಂದುವೆಂದು ನಾವು ಭಾವಿಸಬಹುದು, ಅಸ್ಸಾಮ್‌ನ ನಿವೇಶನಗಳು ಹಾಗೂ ಪಾಂಡು ರಾಜರ್ ಧಿಬಿಯ ಕಾಲಮಾನ I ಅದರ ಮುಖ್ಯ ಹಂತಗಳು ಎಂದು ಭಾವಿಸಲು ಸಾಧ್ಯ.

ತಕ್ಕಮಟ್ಟಿಗೆ ಪ್ರಗತಿಯಾದ ಪಾಂಡು ರಾಜರ್ ಧಿಬಿಯ ನವ ಶಿಲಾಯುಗದ ಕಾಲಮಾನ II ಹಂತವನ್ನು ಬಿಹಾರದ ಸರಣ್ ಜಿಲ್ಲೆಯಲ್ಲಿರುವ ಚಿರಾಂದ್‌ಗೆ ಹೋಲಿಸಬಹುದು. ಇಲ್ಲಿನ ಕಾಲಮಾನ Iನ್ನು ಕ್ರಿ.ಪೂ. ೨೧೦೦ರಿಂದ ೧೪೦೦ ರ ನಡುವೆ ಇಡಬಹುದು. ಇಲ್ಲಿ ವೈವಿಧ್ಯಮಯ ನವಶಿಲಾಯುಗದ ಪರಿಕರಗಳು, ಸುಟ್ಟ ಧಾನ್ಯಗಳು ಪತ್ತೆಯಾಗಿವೆ. ಭತ್ತ ಮಾತ್ರವಲ್ಲ, ಗೋಧಿ, ಬಾರ್ಲಿ, ಮುಂಗ್, ಮಸೂರ್ ನಂತಹ ಬೇಳೆಕಾಳುಗಳನ್ನೂ ಬೆಳೆಯಲಾಗುತ್ತಿತ್ತು. ಜನರು ಕಾಡಿನ ಜೊಂಡುಗಳಿಂದ ಗುಡಿಸಲು ನಿರ್ಮಿಸಿ ವಾಸಿಸುತ್ತಿದರು. ಆದರೆ ಬೇರೆಡೆಗೆ ಹೋಲಿಸಿದರೆ ಅಲ್ಲಿನ ಸಮೃದ್ಧಿಯನ್ನು  ಅರೆ – ಪ್ರಶಸ್ತ ಶಿಲೆ (ಕ್ಯಾಲ್ಸೆಡೆನಿ, ಅಗೇಟ್ ಮುಂತಾದ) ಗಳಿಂದ ಮಾಡಿದ ಸೂಕ್ಷ್ಮ ಶಿಲಾ ಉಪಕರಣಗಳಲ್ಲಿ, ಮಣಿಗಳಲ್ಲಿ ನೋಡಬಹುದು. ಮಡಕೆ ಪ್ರಮುಖವಾಗಿ ಕೈಯಿಂದ ಮಾಡಿದುದು, ಅದರೆ ಹೊಳೆಯುವ, ಸುಟ್ಟ ಹಾಗೂ ಬಣ್ಣ ಲೇಪಿಸಿದ ಮಡಕೆಗಳು ಇವೆ ಮತ್ತು ಕೆಲವು ಚಕ್ರದಿಂದ ತಯಾರಿಸಿದ ಮಡಕೆಗಳೂ ಲಭ್ಯವಾಗಿವೆ.

ಸಸ್ಯಗಳ ಸಂಗೋಪನೆ, ಅದರಲ್ಲೂ ಮುಖ್ಯವಾಗಿ ಭತ್ತದ ಸಾಕ್ಷ್ಯದಿಂದ ನವ ಶಿಲಾಯುಗದ ಕ್ರಾಂತಿಯು ತಕ್ಷಣವೇ ಗಂಗಾ ಕಣಿವೆಯಲ್ಲಿ ಯಾವುದೇ ವಿಶಾಲ ಮಟ್ಟದ ವ್ಯವಸಾಯ ನಿರ್ಮಿಸಿತು ಎಂದು ನಾವು ಊಹಿಸುವಂತಾಗಬಾರದು. ಈ ಕಣಿವೆ ದಟ್ಟವಾದ ಅರಣ್ಯದಿಂದ ಕೂಡಿದ್ದಿರಬೇಕು. ಈ ಕಾರಣಕ್ಕೆ  ವ್ಯವಸಾಯವು ಮಾನವ ನೆಲೆಗಳ ಸುತ್ತಮುತ್ತಲು ಕಾಡು ಸವರಿ ಮಾಡಿದ ಸಣ್ಣ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿರಬಹುದು. ಪ್ರತಿಯೊಂದನ್ನೂ ಒಣ ಋತುವಿನಲ್ಲಿ ಸಸ್ಯಗಳಿಗೆ ಬೆಂಕಿ ಹಚ್ಚುವ ಮೂಲಕ ಮಾಡಿದ ಈ ಸವರಿಕೆಗಳಲ್ಲಿ ಕೆಲ ವರ್ಷಗಳ ಬೇಸಾಯದ ನಂತರ ಅದನ್ನು ತೊರೆದು ಇನ್ನೊಂದು ಅಂತಹ ಹೊಸದಾಗಿ ಸ್ವಚ್ಚಗೊಳಿಸಿದ ಪ್ರದೇಶಕ್ಕೆ ವ್ಯವಸಾಯ ಬದಲಾಯಿಸಿರಬೇಕು. ಇದನ್ನು ಜೂಮ್ ಅಥವಾ ‘ಕಡಿ ಮತ್ತು ಸುಡು’ ವಿಧಾನವೆಂದು ಕರೆಯಲಾಗುತ್ತದೆ. ಇದನ್ನು ಈಗಲೂ ಆರಣ್ಯದ ಬುಡಕಟ್ಟು ಜನಸಮುದಾಯಗಳು ಮಾಡುತ್ತವೆ. ಬೇಟೆ ಹಾಗೂ ಮೀನುಗಾರಿಕೆಗಳು ಸಸ್ಯಹಾರಕ್ಕೆ ದೊಡ್ಡ ಪ್ರಮಾಣದಲ್ಲಿ ಪೂರಕವಾಗಿದ್ದಿರಬೇಕು. ಈ ಕಾರಣಕ್ಕೆ ಚಿರಾಂದ್‌ನಲ್ಲಿಯೂ ಸಹ ಕಾಡುಪ್ರಾಣಿಗಳಾದ ಆನೆ, ಗೇಂಡಾಮೃಗ, ಜಿಂಕೆಯೊಂದಿಗೆ ಎತ್ತು ಹಾಗೂ ಕೋಣಗಳ ಮೂಳೆಗಳು ಲಭ್ಯವಾಗಿವೆ. (ಕೊನೆಯವು ಕೂಡಾ ಬಹುಶಃ ಕಾಡು ಪ್ರಾಣಿಗಳಾಗಿರಬಹುದು). ದನಗಳ ಸಾಕಾಣಿಕೆ ಅಂತೆಯೇ ಕುರಿ, ಮೇಕೆ ಹಾಗೂ ಹಂದಿ ಸಾಕಾಣಿಕೆ ಕೂಡಾ ಭಾಗಶಃ ಮಾಂಸಕ್ಕಾಗಿಯೇ ಮಾಡುತ್ತಿರಬೇಕು. ಏಕೆಂದರೆ ನೇಗಿಲಾಗಲೀ, ಚಕ್ಕಡಿಯಾಗಲೀ ಇನ್ನೂ ತಿಳಿದಿರಲಿಲ್ಲ. ಅದ್ದರಿಂದ ಭತ್ತ ವ್ಯವಸಾಯದ ಪೂರ್ಣ ಸಾಧ್ಯತೆಯನ್ನು ಈಡೇರಿಸಿಕೊಳ್ಳಲು ಹಾಗೂ ಪೂರ್ಣ ಪ್ರಮಾಣದ ಕೃಷಿ ಸಮುದಾಯಗಳು ಗಂಗಾ ಬಯಲಿನಲ್ಲಿ ವ್ಯಾಪಕವಾಗಿ ಹಬ್ಬಲು ಇನ್ನೂ ಬಹಳಷ್ಟು ಸಮಯ ತೆಗೆದುಕೊಂಡಿತು.

.. ಕ್ರಿ. ಪೂ. ೩೦೦೦ದ ನಂತರದ ಉತ್ತರ ಹಾಗೂ ಪ್ರಾರಂಭಿಕ ದಕ್ಷಿಣದ ನವಶಿಲಾಯುಗ ಸಂಸ್ಕೃತಿಗಳು

ಇತರ ಎರಡು ಪ್ರಮುಖ ನವಶಿಲಾಯುಗದ ಸಂಸ್ಕೃತಿಗಳನ್ನು ಇನ್ನೂ ವಿವರಿಸಬೇಕಿದೆ. ಮೊದಲನೆಯದು ಉತ್ತರದ್ದು, ಕಾಶ್ಮೀರದ ಸುತ್ತ ಕೇಂದ್ರವಾಗಿರುವುದು ಮತ್ತು ಇನ್ನೊಂದು ದಕ್ಷಿಣದ್ದು, ಮುಖ್ಯವಾಗಿ ಕರ್ನಾಟಕದಲ್ಲಿ ಕಂಡುಬರುವುದು. ಇವೆರಡು ಸುಮಾರು ಕ್ರಿ. ಪೂ. ೩೦೦೦ದವು, ಅಂದರೆ ವಿಂಧ್ಯಾ ನವಶಿಲಾಯುಗದ ಪ್ರಾರಂಭಿಕ ಕಾಲದವು. ಇದುವರೆಗೆ ತಿಳಿದಿರುವಂತೆ, ಇವೆರಡೂ ಒಂದೇ ಕಾಲದಲ್ಲಿ ಕಂಡುಬಂದಿರುವುದು ಒಂದು ಆಕಸ್ಮಿಕ ಮತ್ತು ಈ ಮೂರು ಸಂಸ್ಕೃತಿಗಳ ನಡುವೆ ಯಾವುದೇ ಒಡನಾಟ ಇದ್ದಂತಿಲ್ಲ.

ಉತ್ತರ ನವಶಿಲಾಯುಗದ ಎರಡು ಪ್ರಮುಖ ನಿವೇಶನಗಳೆಂದರೆ ಕಾಶ್ಮೀರ ಕಣಿವೆಯ ಬುರ್ಝಹೋಮ್‌ ಮತ್ತು ಗುಫ್‌ಕ್ರಲ್‌. ಬುರ್ಝಹೋಮ್‌ನಲ್ಲಿ ಕ್ರಿ. ಪೂ. ೨೮೦೦ರಿಂದ ೨೫೦೦ರವರೆಗೆ ಮಡಕೆಗಳಿಲ್ಲದ ಪ್ರಾರಂಭಿಕ ನವಶಿಲಾಯುಗ ಹಂತವಿತ್ತೆನ್ನಲು ಸಾಕಷ್ಟು ಕಾರ್ಬನ್‌ ಕಾಲಮಾನ ನಿರ್ಣಯಗಳು ಲಭ್ಯವಾಗಿವೆ. ಇದನ್ನು ಅನುಸರಿಸುವ ಮುಖ್ಯ ನವಶಿಲಾಯುಗ ಹಂತವು ಕ್ರಿ ಪೂ. ೨೫೦೦ರಿಂದ ೨೦೦೦ವರೆಗಿದ್ದು, ಇಲ್ಲಿ ಕೈಯಿಂದ ಮಾಡಿದ ಚಾಪೆಯ, ಹಗ್ಗದ ಮುದ್ರೆಯ ಹಾಗೂ ಬಣ್ಣ ಹಚ್ಚಿದ ಮಡಕೆಗಳು ಕಾಣಬರುತ್ತವೆ. ಜನರು ಕರೇವಾಸದ ಅಥವಾ ಹಳ್ಳದ ಹತ್ತಿರದ ನೈಸರ್ಗಿಕ ಮೆಕ್ಕಲು ಮಣ್ಣಿನ ದಿಬ್ಬಗಳ ಮೇಲಿನ ಕುಣಿಗಳಲ್ಲಿ ವಾಸ ಮಾಡುತ್ತಿದ್ದರು. ಅವರು ನಯಗೊಳಿಸಿದ ಶಿಲಾ ಉಪಕರಣಗಳನ್ನು ಮತ್ತು ವಿವಿಧ ಮೂಳೆಯ  ಉಪಕರಣಗಳನ್ನು ಬಳಸುತ್ತಿದ್ದರು. ಅವರು ಪ್ರಾರಂಭದಲ್ಲಿ ತಮ್ಮ ಮಾಂಸಹಾರದಲ್ಲಿ ಹೆಚ್ಚಿನವನ್ನು ಬೇಟೆಯಿಂದಲೇ ಪಡೆಯುತ್ತಿದ್ದರು. ದನಗಳು, ಕುರಿ, ಮೇಕೆ, ಎಮ್ಮೆ, ಹಂದಿ ಮತ್ತು ನಾಯಿಗಳ ಸಾಕಾಣಿಕೆ ಇದ್ದು ಕಾಲಾಂತರದಲ್ಲಿ ನಿಧಾನವಾಗಿ ಈ ಪಶುಪಾಲನೆಯ ಬೇಟೆಯ ಸ್ಥಾನಕೆ ಬಂತು. ಕೊಯ್ಲಿನ ಚಾಕು ಸೂಚಿಸುವಂತೆ ಅವರು ವ್ಯವಸಾಯದಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದರು. ಗೋಧಿ, ಬಾರ್ಲಿ, ಅವರೆಯಂತಹ ಸಸ್ಯ ಮತ್ತು ಬಟಾಣಿಗಳನ್ನು ಬೆಳೆಯುತ್ತಿದ್ದರು. ತಡವಾದ ನವಶಿಲಾಯುಗ ಹಂತದಲ್ಲಿ (ಕ್ರಿ. ಪೂ. ೨೦೦೦ದಿಂದ ೧೫೦೦) ಭತ್ತವೂ ಪತ್ತೆಯಾಗಿದೆ.

ಸಾಕಷ್ಟು ಪ್ರಮಾಣದಲ್ಲಿ ಇಲ್ಲಿ ಕರ್ಮವಿಧಿಗಳಿದ್ದವು. ಬಹುಶಃ ಸತ್ತ ನಂತರ ದೇಹವನ್ನು ತೆರದಿಟ್ಟು, ನಂತರ ಮೂಳೆಗಳು ಮಾತ್ರ ಉಳಿದಾಗ ಅವನ್ನು ಸಂಗ್ರಹಿಸಿ, ಕೆಲವೊಮ್ಮೆ ಕೆಂಪು ಪೂಸಿ ಹೂಳಲಾಗುತ್ತಿತ್ತು. ನಾಯಿಗಳ ಹೂಳುವಿಕೆ ನಾಯಿಬಲಿ ಇತ್ತೆಂಬುದಕ್ಕೆ ಸಾಕ್ಷಿಯಾಗಿದೆ. ಕಲ್ಲಿನ ಮೇಲೆ ಸಂಕೀರ್ಣ ಗೆರೆಗಳು ಹೆಣೆದುಕೊಂಡ ನಮೂನೆ ಕಂಡುಬಂದಿದ್ದು ಇದಕ್ಕೆ ಕರ್ಮಾಚರಣೆಯ ಮಹತ್ವ ಇದ್ದಿರಬಹುದು. ಇಂತಹುದೇ ಪ್ರಾಮುಖ್ಯತೆ ಕಲ್ಲಿನ ಚಪ್ಪಡಿಯ ಮೇಲೆ ಗೀರಿದ ದೃಶ್ಯಕ್ಕೆ ಇರಬಹುದು. ಅದರಲ್ಲಿ ಜಿಂಕೆಯೊಂದನ್ನು ಇಬ್ಬರು ಕೊಲುವ ಚಿತ್ರವಿದೆ. ಒಬ್ಬನು ಬಿಲ್ಲುಬಾಣ ಹಿಡಿದಿದ್ದರೆ ಇನ್ನೊಬ್ಬ ಈಟಿ ಹಿಡಿದಿದ್ದಾನೆ. ಅಲ್ಲದೆ ಸೂರ್ಯನ ಎರಡು ಚಿತ್ರಗಳು ಹಾಗೂ ನಾಯಿಯೊಂದರ ಚಿತ್ರವಿದೆ.

ಒಬ್ಬನನ್ನು ಶ್ರೀಮಂತ ಕಾಣಿಕೆಗಳೊಂದಿಗೆ ಹೂಳಲಾಗಿದೆ. ಜಿಂಕೆಯ ಕೊಂಬು, ಸಾಬೂನುಗಳಲ್ಲಿನ ವಸ್ತು ಹಾಹೂ ತಟ್ಟೆಯಾಕಾರದ ಮಣಿಗಳನ್ನು ಈ ಕಾಣಿಕೆಗಳು ಒಳಗೊಂಡಿವೆ. ಹೂಳಲ್ಪಟ್ಟವನ ಬುರುಡೆಗೆ ಏಳು ರಂಧ್ರಗಳಿವೆ. ಈ ವಿಶಿಷ್ಟ ಆಚರಣೆಯನ್ನು ತಲೆಚಿಪ್ಪು ಕೊರೆಯುವುದು (ಟ್ರೆಪಾನಿಂಗ್ ಅಥವಾ ಟ್ರೆಪೈನಿಂಗ್ ) ಎಂದು ಕರೆಯಾಲಾಗಿದೆ. ಇದು ಏಷಿಯಾ ಹಾಗೂ ಯುರೋಪಿನ ಇತರ ನವಶಿಲಾಯುಗದ ಸಂಸ್ಕೃತಿಗಳಲ್ಲಿಯೂ ಆಚರಣೆಯಲ್ಲಿತ್ತು ಎಂದು ಕಾಣುತ್ತದೆ. ಈ ತಲೆಚಿಪ್ಪು ಕೊರೆಯುವುದು ಮಾನವನ ಮೊದಲ ಶಸ್ತ್ರಚಿಕ್ಸೆಯ ಗಂಭೀರ ಪ್ರಯತ್ನ. ಇದು ಮೆದುಳಿನ ಒಳ ಒತ್ತಡ ತಗ್ಗಿಸುತ್ತದೆ ಎಂಬ ಸುಳ್ಳು ಸಿದ್ಧಾಂತವನ್ನು ಆಧರಿಸಿತ್ತು ಅಥವಾ ಮನುಷ್ಯನಿಗೆ ತೊಂದರೆ ಕೊಡುತ್ತಿದ್ದ ದುಷ್ಟಶಕ್ತಿಯನ್ನು ಓಡಿಸುವ ಮೂಢನಂಬಿಕೆಯನ್ನು ಆಧರಿಸಿತ್ತು. ಕಲ್ಲಿನ ಪರಿಕರಗಳಿಂದ ಮಾಡಿದ ಶಸ್ತ್ರಚಿಕಿತ್ಸೆಯ ನಂತರವೂ ಜನರು ಬದುಕಿ ಉಳಿದದದ್ದು ಆಶ್ಚರ್ಯವನ್ನುಂಟು ಮಾಡುತ್ತದೆ.

ಉತ್ತರದ ನವಶಿಲಾಯುಗವು ಬಹುಶಃ ಪಾಕಿಸ್ತಾನದ ರಾಜಧಾನಿಯಾದ ಇಸ್ಲಾಮಾಬಾದ್‌ ಉತ್ತಿರ ಇರುವ ಸರಾಯ್‌ ಖೋಲಾವರೆಗೂ ವ್ಯಾಪಿಸಿದೆ. ಇದರ ಕಾರ್ಬನ್‌ ನಿರ್ಣಯಿತ ಕಾಲಮಾನ ಕ್ರಿ. ಪೂ. ೩೩೬೦ದಿಂದ ೨೫೨೫. ಬಹುಶಃ ಪಂಜಾಬ್‌ನಲ್ಲಿ ಹಿಮಾಲಯ ಬುಡದಲ್ಲಿ ಸಹ ಇದರ ಇತರ ನಿವೇಶನಗಳು ಇದ್ದಿರಬಹುದು. ಗಲಿಘಾಯ್‌ (ಕ್ರಿ. ಪೂ. ೩೦೦೦ದಿಂದ ೧೯೦೦)  ಪ್ರತಿನಿಧಿಸುತವಂತೆ ಸ್ಪಾಟ್‌ ನವಶಿಲಾಯುಗ ಸಂಸ್ಕೃತಿಯು (ಪಾಕಿಸ್ಥಾನದ ವಾಯುವ್ಯ ಗಡಿಪ್ರಾಂತ) ಕೈಯಿಂದ ಮಾಡಿದ ಮಡಕೆಯಿಂದ ಪ್ರಾರಂಭವಾಯಿತು ಮತ್ತು ನಂತರದ ಹಂತದಲ್ಲಿ, ಮಡಕೆ ಪ್ರಕಾರದ ಆಧಾರದ ಮೇಲೆ ಹೇಳುವುದಾದರೆ, ಬುರ್ಝಹೋಮ್‌ನೊಂದಿಗೆ ಸಂಬಂಧ ಹೊಂದಿತ್ತೆಂದು ಭಾಸವಾಗುತ್ತದೆ. ಸ್ಪಾಟ್‌ ಕಣಿವೆಯಲ್ಲಿ ಗೋದಿ ಮತ್ತು ಬಾರ್ಲಿಗಳನ್ನು ನವಶಿಲಾಯುಗದ ಪ್ರಾರಂಭದಿಂದಲೂ ಬೆಳೆಯಲಾಗುತ್ತಿತ್ತು. ಕ್ರಿ.ಪೂ. ೨೦೦೦ಕ್ಕೂ ಮುಂಚಯೇ ಇಲ್ಲಿ ವ್ಯವಸಾಯ ಮಾಡಿದ ಭತ್ತವೂ ಕಾಣಿಸಿಕೊಂಡಿರಬೇಕು.

ಪೂರ್ವದ ನವಶಿಲಾಯುಗದಂತಲ್ಲದೆ, ಈ ಉತ್ತರದ ನವಶಿಲಾಯುಗವು ನಿಸ್ಸಂದೇಹವಾಗಿಯೂ ಸಿಂಧೂ ತಪ್ಪಲಿನ ಸಂಸ್ಕೃತಿಗಳೊಂದಿಗೆ, ಕೋಟ್‌ ದಿಜಿಯನ್‌ ಹಾಗೂ ಕ್ರಿ.ಪೂ. ಮೂರನೆಯ ಸಹಸ್ರಮಾನದ ಪಕ್ಕ ಸಿಂಧೂ ಸಂಸ್ಕೃತಿಗಳೊಂದಿಗೆ ಸಂಬಂಧ ಹೊಂದಿತ್ತು. ಆದರೆ ಇವೆರಡರಿಂದಲೂ ಭೌತಿಕ ಸಂಸ್ಕೃತಿ, ಕಲೆ, ಕರ್ಮವಿಧಿಗಳಲ್ಲಿ ಅದು ಸ್ವತಂತ್ರವಾಗಿತ್ತು. ಈ ವಿಷಯದಲ್ಲಿ ಅದು ಒಳ ಏಷಿಯಾದ ನವಶಿಲಾಯುಗದ ಸಂಸ್ಕೃತಿಗಳೊಂದಿಗೆ ಹೆಚ್ಚಿನ ಸಂಬಂಧ ಹೊಂದಿತ್ತು, ಉತ್ತರ ಚೀನಾದ ಯಾಂಗ ಶಾವೋ (ಕ್ರಿ. ಪೂ. ೫೧೦೦-೨೫೦೦)ದೊಂದಿಗೆ ಇಂತಹ ನಿಕಟತೆಯನ್ನು ಗುರುತಿಸಲಾಗಿದೆ. ಇದು ಭಾರತ, ಇತರ ಎಲ್ಲ ದೇಶಗಳಂತೆ, ಬಹಳ ಪ್ರಾಚೀನ ಕಾಲದಿಂದಲೂ ನಿರಂತರವಾಗಿ ಹೊರಗಿನ ಎಲ್ಲ ದಿಕ್ಕುಗಳಿಂದಲೂ ಪ್ರಭಾವವನ್ನು ಸ್ವೀಕರಿಸಿದೆ ಎಂಬುದನ್ನು ಮತ್ತೊಂಮ್ಮೆ ಹೇಳುತ್ತದೆ.

ನಾವು ಇಂದಿನ ಲಭ್ಯ ಮಾಹಿತಿಯ ಆಧಾರದ ಮೇಲೆ ಹೇಳುವುದಾದರೆ ಬಹುಶಃ ಪೂರ್ಣವಾಗಿ ಸ್ಥಳೀಯ ಮೂಲ ಹೊಂದಿರುವ ಏಕೈಕ ನವಶಿಲಾಯುಗ ಸಂಸ್ಕೃತಿಯೆಂದರೆ ದಕ್ಷಿಣದ್ದು. ಈ ದಾಕ್ಷಿಣಾತ್ಯ ನವಶಿಲಾಯುಗದ ಕ್ಷೇತ್ರ ಸುಮಾರಾಗಿ ಆಧುನಿಕ ಕರ್ನಾಟಕದ ಪ್ರದೇಶದಲ್ಲಿ ಇತ್ತು. ಕೆಲವು ಆಂಧ್ರ ಪ್ರದೇಶ ಮತ್ತು ತಮಿಳುನಾಡು ಭಾಗಗಳನ್ನು ಕೂಡಾ ಒಳಗೊಂಡಿತ್ತು. ಕೊಡೆಕಲ್‌ ಹಾಗೂ ಉತ್ತನೂರಿನಲ್ಲಿ ಪಡೆದ ಕಾರ್ಬನ್‌ ಕಾಲಮಾನ ಸೂಚಿಸುವಂತೆ ಇದರ ಆರಂಭವನ್ನು ಸುಮಾರು ಕ್ರಿ. ಪೂ. ೩೦೦೦ಕ್ಕೆ ಇರಿಸಬಹುದು. ಇಲ್ಲಿ ನಾವು ಪರಿಶೀಲಿಸುವ ಪ್ರಾರಂಭಿಕ ಕಾಲಮಾನ ಸುಮಾರು ಕ್ರಿ.ಪೂ. ೨೧೦೦ರವರೆಗೂ ಇತ್ತು. ನುಣುಪುಗೊಳಿಸಿದ ಕೊಡಲಿ, ತಿಕ್ಕುವ ಕಲ್ಲುಗಳು ಹಾಗೂ ಬೀಸುಗಲ್ಲುಗಳು ಇಲ್ಲಿ ವ್ಯವಸಾಯ ನಡೆಸಲಾಗಿತ್ತು ಎಂದು ಸೂಚಿಸುತ್ತವೆ. ಆದರೆ ಯಾವುದೇ ಧಾನ್ಯಗಳು ಪತ್ತೆಯಾಗಿಲ್ಲ. ದನಗಳು ಕುರಿ ಹಾಗೂ ಮೇಕೆ ಸಾಕಾಣಿಕೆ ಇತ್ತು. ಉತ್ತನೂರಿನ ಸಗಣಿಬೂದಿ ದಿಬ್ಬ ಸೂಚಿಸುವಂತೆ ದನಗಳನ್ನು ಒಂದೆಡೆ ಕೂಡಿಹಾಕಲಾಗುತ್ತಿತ್ತು. ಮಡಕೆಯನ್ನು ಸಂಪೂರ್ಣವಾಗಿ ಕೈಯಿಂದ ತಯಾರಿಸಲಾಗುತ್ತಿತ್ತು. ಆದರೆ ನಿಧಾನವಾಗಿ ತಿರುಗಿಸುವ ಒಡ್ಡಾದ ಒಂದು ತಿರುಗು ಪದ್ಧತಿಯಲ್ಲಿ (ವೇಗವಾಗಿ ತಿರುಗುವ ಕುಂಬಾರನ ಚಕ್ರವಲ್ಲ) ತಿರುಗಿಸುವ ಮೂಲಕ ಒಂದು ರೀತಿಯ ದುಂಡು ಆಕಾರವನ್ನು ಮಡಕೆಗೆ ಕೊಡಲಾಗುತ್ತಿತ್ತು.

ಟಿಪ್ಪಣಿಗಳುಮತ್ತುಪರಾಮರ್ಶನಗ್ರಂಥಗಳು

. ಭೂವೈಜ್ಞಾನಿಕ ಕಾಲದ ಮೂಲ ವರ್ಗೀಕರಣ

ಭೂಸ್ವರೂಪ, ನೈಸರ್ಗಿಕ ವಾತಾವರಣ, ಸಸ್ಯ, ಪ್ರಾಣಿ ಸಂತತಿ ರೂಪಗೊಂಡ ಹಲವು ಪ್ರಮುಖ ಅವಧಿಗಳನ್ನು ಭೂವೈಜ್ಞಾನಿಕ ಕಾಲದ ಮೂಲಕ ಹೇಳಲಾಗುತ್ತದೆ. ಅವುಗಳ ಸಾರಾಂಶಗಳನ್ನು ಇಲ್ಲಿ ಕೋಷ್ಟಕ ರೂಪದಲ್ಲಿ ಸಂಗ್ರಹಿಸಿ ಕೊಡಲಾಗಿದೆ. ಇದು ಮಾನವನ ವಿಕಾಸಕ್ಕೂ ಹಿಂದಿನ ಅವಧಿಯ ಪೂರ್ವೇತಿಹಾಸವನ್ನು ತಿಳಿಸುತ್ತವೆ.

ಭೂವೈಜ್ಞಾನಿಕ ಕಾಲದ ಮೂಲ ವರ್ಗೀಕರಣವನ್ನು ಮೊದಲು ಯುರೋಪಿನಲ್ಲಿ ರೂಪಿಸಲಾಯಿತು. ಅದರಲ್ಲಿ ದೀರ್ಘವಾದ ‘ಅವಧಿ’ (ಪೀರಿಯಡ್‌) ಅಥವಾ ವ್ಯವಸ್ಥೆ (ಸಿಸ್ಟಮ್‌)ಗಳನ್ನೆಲ್ಲ ಒಂದು ಅನುಕ್ರಮದಲ್ಲಿ ಸೇರಿಸಿ ಶಕ (ಇಪೋಕ್) ಅಥವಾ ಸರಣಿಗಳು (ಸಿರಿಸ್‌) ಎಂದು ಹೆಸರಿಸಲಾಯಿತು. ಅವನ್ನು ನಿರ್ದಷ್ಟ ಯುಗ(ಯೆರಾ)ಕ್ಕೆ ಸೇರಿಸಲಾಯಿತು. ಭಾರತದಲ್ಲಿಯೂ ಶಿಲೆ ಮತ್ತು ಇತರ ಸ್ತರಗಳನ್ನು ಹಾಗೆಯೇ ವ್ಯವಸ್ಥೆಗಳೆಂದು ಗುರುತಿಸಲಾಯಿತು. ಅವುಗಳಿಗೆ ‘ಧಾರವಾಡ’, ‘ಕಡಪ’ ಮತ್ತು ‘ವಿಂಧ್ಯಾ’ ಎಂದು ಹೆಸರಿಸಲಾಯಿತು. ಇವುಗಳನ್ನು ಅನುಕ್ರಮವೊಂದರಲ್ಲಿ ಇರಿಸಲಾಯಿತು. ಯಾವ ಯುಗದೊಂದಿಗೆ ಈ ವ್ಯವಸ್ಥೆಗಳನ್ನು ಗುರುತಿಸಲಾಯಿತೋ ಅವಕ್ಕೆ ಕಾಲ್ಪನಿಕ ಹೆಸರುಗಳನ್ನೂ ಕೊಡಲಾಯಿತು. ಉದಾಹರಣೆಗೆ ವೈದಿಕ (ಅತಿ ಪುರಾತನ, ಅಂತರಾಷ್ಟ್ರೀಯ ವರ್ಗಿಕರಣದಲ್ಲಿ ಆರ್ಕೆಯನ್‌ ಅಂತರಾಷ್ಟ್ರೀಯ ನಾಮಕರಣಕ್ಕೆ ಸಮ), ‘ಪುರಾಣ’, ‘ದ್ರಾವಿಡ’ ಮತ್ತು ‘ಆರ್ಯ’ ಈ ಕ್ರಮದಲ್ಲಿ ಹೆಸರಿಲಾಯಿತು. ಕೊನೆಯದು ಪ್ಲಿಯೊಸ್ಟೋಶಿಯನ್‌ ಪ್ರಾರಂಭಕ್ಕೆ ಅಂತ್ಯವಾಗುತ್ತದೆ. ಆದರೆ ಭೌಗೋಳಿಕ ರೂಪದಳೆಯುವಿಕೆಯನ್ನು ಒಂದೇ ಅಂತರಾಷ್ಟ್ರೀಯ ವರ್ಗಿಕರಣದಲ್ಲಿ ತರುವುದು ಹೆಚ್ಚು ಅನುಕೂಲ ಎಂದು ನಂತರ ಭಾವಿಸಲಾಯಿತು. ಪರಿಣಾಮವಾಗಿ ಮೂಲ ಯುರೋಪಿನ ವರ್ಗಿಕರಣ ವ್ಯವಸ್ಥೆಯನ್ನೇ ಸತತ ಬದಲಾವಣೆ ಹಾಗೂ ಸುಧಾರಣೆಗಳೊಂದಿಗೆ ಇಂದು ಭಾರತವನ್ನೊಳಗೊಂಡು ಎಲ್ಲ ಕಡೆಯಲ್ಲಿಯೂ ಅಳವಡಿಸಿಕೊಳ್ಳಲಾಗಿದೆ.

ಭೂವೈಜ್ಞಾನಿಕ ಕಾಲಗಳು

ಕಲ್ಪ
(ಇಯಾನ್‌)

ಯುಗ
ಎರಾ

ಅವಧಿ/ವ್ಯವಸ್ಥೆ
(ಶಕ/ಸರಣಿ)

ಕಾಲದ ಆರಂಭ
(ದಶಲಕ್ಷ ವರ್ಷಗಳ ಹಿಂದೆ)

ಜೀವಿಗಳು

ಆರ್ಕೆಯನ್‌ ೪೦೦೦ ಪ್ರಾರಂಭಿಕ, ಶೈವಲ, ಬ್ಯಾಕ್ಟೀರಿಯಾ
ಪ್ರೊಟೆರೋಜೋಯಿಕ್‌ ಪ್ರಿಕ್ಯಾಂಬ್ರಿಯನ್‌ ೨೫೦೦ ಕೊಲೊನಿಯಲ್‌ ಆಲ್ಗೇ ಹಾಗೂ ಮೃದ್ವಂಗಿಗಳು
ಫೆನರೋಜೋಯಿಕ್‌ ಪಾಲಿಯೊಝೊಯಿಕ್‌ ಕ್ಯಾಂಬ್ರಿಯನ್‌ ೫೭೦ ಮೀನು
ಆರ್ಡೋ ೫೦೫ ಹವಳಗಳು (ಕೋರಲ್‌)
ವೀಸಿಯನ್‌ ಸಿಲೂರಿಯನ್‌ ೪೩೮ ಭೂಸಸ್ಯಗಳು ಮತ್ತು ಕೀಟಗಳು
ದಿವೋನಿಯನ್‌ ೪೦೮ ಫೆರ್ನ್, ಪಾಚಿ, ಉಭಯಜೀವಿಗಳು (ಭೂ ಮತ್ತು ಜಲವಾಸಿಗಳು)
ಕರ್ಬಾನಿಫೆರಸ್‌ ಕೆಳಗಿನ ೩೬೦ ರೆಕ್ಕೆಯುಳ್ಳ ಕೀಟಗಳು
ಕರ್ಬಾನಿಫೆರಸ್‌ ಮೇಲಿನ ೩೨೦ ಸರೀಸೃಪಗಳು
ಪರ್ಮಿಯನ್‌ ೨೮೬
ಮೆಸೋಝೋಯಿಕ್‌ ಟ್ರಿಯಾಸಿಕ್‌ ೨೮೪ ಡೈನಾಸರ್
ಜುರಾಸಿಕ್‌ ೨೧೩ ಪಕ್ಷಿಗಳು, ಸಸ್ತಿನಿಗಳು
ಕ್ರಿಟೇಷಿಯಸ್‌ ಕೆಳಗಿನ ೧೪೪ ಹೂಬಿಡುವ ಸಸ್ಯಗಳು, ಸರೀಸೃಪಗಳ ಏಳ್ಗೆಯ ಕಾಲ
ಕ್ರಿಟೇಷಿಯಸ್‌ ಮೇಲಿನ ೯೮ ಡೈನೋಸಾರ್ ಕೊನೆಗಾಲ
ಸೆನೊಝೋಕ್‌ ಟರ್ಷಿಯರಿ ಡೈನೋಸಾರ್ ಅಳಿವು
ಪಾಲಿಯೋಸಿಸ್‌ ೬೫ ಬೃಹತ್‌ ಸಸ್ತನಿಗಳು
ಇಯೋಸಿಸ್‌ ೫೫ ಹುಲ್ಲುಗಳು
ಒಲಿಗೋಸಿನ್‌ ೩೮
ಮಯೋಸಿನ್‌ ೨೫ ವಾನರಗಳು
ಪ್ಲಿಯೋಸಿಸ್‌ ದ್ವಿಪಾದಿಗಳು
ಕ್ವಾಟರ್ನರಿ ಪ್ಲಿಸ್ತೋಸಿನ್‌ ೧.೮ ಮಾನವ, ದನಗಳು, ಆನೆ, ಕುದುರೆ
ಹೊಲೋಸಿನ್‌ ೧.೦೧ – –

. ಪೂರ್ವೇತಿಹಾಸದಲ್ಲಿ ಬಳಸುವ ಕಾಲಗಣನೆಯ ಪದ್ಧತಿಗಳು
ಬರವಣೆಗೆಯ ದಾಖಲೆಗಳು ಲಭ್ಯವಿಲ್ಲದ ಕಾಲವು ಪುರಾತತ್ವಶಾಸ್ತ್ರಜ್ಞರ ಪರಿಭಾಷೆಯಲ್ಲಿ ‘ಪೂರ್ವೇತಿಹಾಸ’ ಎಂದು ಕರೆಯಲ್ಪಡುತ್ತದೆ. ಬರವಣಿಗೆಯ ದಾಖಲೆಗಳು ಲಭ್ಯವಾಗತೊಡಗಿದಾಗಿ ನಾವು ಇತಿಹಸಕ್ಕೆ ಕಾಲಿರಿಸುತ್ತೇವೆ. ಸಂಸ್ಕೃತಿಯೊಂದರ ಲಿಖಿತ ದಾಖಲೆಗಳು ಲಭ್ಯವಿದ್ದೂ ಓದಲು ಸಾಧ್ಯವಾಗದಿದ್ದಲ್ಲಿ ಅಥವಾ ಸಂಸ್ಕೃತಿಯೊಂದರಲ್ಲಿ ಬರವಣಿಗೆ ಇಲ್ಲದಿದ್ದಾಗ್ಯೂ ಆ ಸಂಸ್ಕೃತಿಯ ಬಗೆಗೆ ಇತರ ಬರವಣಿಗೆ ಅರಿತ ಸಮಾಜಗಳಿಂದ ಮಾಹಿತಿ ಲಭ್ಯವಾಗಿದ್ದಾಗ ಆ ಕಾಲವನ್ನು ಆದಿ ಇತಿಹಾಸ (protohistroy) ಎಂದು ಕರೆಯಲಾಗುತ್ತದೆ.

ಈ ಪ್ರಬಂಧಗಳಲ್ಲಿ ವಿವರಿಸಿದ ಸಂಸ್ಕೃತಿಗಳ ಪೂರ್ವೇತಿಹಾಸಕ್ಕೆ ಸಂಬಂಧಿಸಿದವು. ಇವುಗಳ ಬಗೆಗೆ ನಮಗಿರುವ ಅರಿವು ಪೂರ್ಣವಾಗಿ ಅವುಗಳ ಭೌತಿಕ ಉಳಿಕೆಗಳಿಂದಲೇ ಬಂದಿವೆ. ಈ ಕಾರಣಕ್ಕೆ ಸಹಜವಾಗಿಯೇ ನಮಗೆ ಲಭ್ಯವಿರುವ ದಾಖಲೆಗಳಿಂದ ಯಾವ ಕಾಲಮಾನವೂ ದೊರಕಲಾರದು. ಆದಾಗ್ಯೂ ವಿಶಿಷ್ಟ ಉಳಿಕೆ ಅಥವಾ ನಿವೇಶನಗಳ ಕಾಲಮಾನವನ್ನು ನಿರ್ಧರಿಸಲು ಹಲವು ಸಾಧನಗಳು, ವಿಶೇಷವಾಗಿ ಭೌತವಿಜ್ಞಾನಗಳಲ್ಲಿ ಲಭ್ಯವಿವೆ. ಹೀಗೆ ಅವು ಯಾವ ಸಂಸ್ಕೃತಿಗಳಿಗೆ ಸೇರಿದ್ದೆಂದೂ ನಿರ್ಧರಿಸಬಹುದು.

ಮೊದಲನೆಯದಾಗಿ, ಪುರಾತತ್ವ ನಿವೇಶನಗಳ ಉತ್ಖನನ ಮಾಡತೊಡಗಿದಾಗ ಭಿನ್ನ ಸಂಸ್ಕೃತಿಗಳ ಸ್ತರಗಳು ಒಂದರ ಮೇಲೊಂದು ದೊರೆಯಬಹುದು. ಉತ್ಖನನದಲ್ಲಿ ಕಂಡುಬಂದ ಸ್ತರಗಳ ಅವಲೋಕನದಿಂದಲೇ ಕಾಲಮಾನ ಪಡೆಯಲು ಸಾಧ್ಯವಾಗುವುದಿಲ್ಲವಾದರೂ, ನಾವು ಅನುಕ್ರಮವೊಂದನ್ನು ನಿರ್ಧರಿಸಬಹುದು. ಸಾಮಾನ್ಯವಾಗಿ ಕೆಳ ಸ್ತರದಲ್ಲಿನ ಸಂಸ್ಕೃತಿಗಳು ನಂತರದ ಸ್ತರಗಳಲ್ಲಿದ್ದವಕ್ಕಿಂತಲೂ ಹಿಂದಿನ ಕಾಲದವು. ಒಂದೇ ನಿವೇಶನದಲ್ಲಿ ದೊರೆತ ಭಿನ್ನ ಮೂಳೆಗಳ ಸಾಪೇಕ್ಷ (ನಿರಪೇಕ್ಷ ಅಲ್ಲ) ಕಾಲಮಾನವನ್ನು ಅವುಗಳಲ್ಲಿರುವ ಪ್ಲೋರಿನ್‌, ಯುರೇನಿಯಂ ಮತ್ತು ಸಾರಜನಕದ ಪ್ರಮಾಣದ ಮೇಲೆ ನಿರ್ಣಯಿಸಬಹುದು. ಕಾಲಕಳೆದಂತೆ ಅವುಗಳಲ್ಲಿನ ಪ್ಲೋರಿನ್‌ ಹಾಗೂ ಯರೇನಿಯಂ ಪ್ರಮಾಣ ಹೆಚ್ಚಾಗುತ್ತದೆ ಹಾಗೂ ಸಾರಜನಕದ ಅಂಶ ಕಡಿಮೆಯಾಗುತ್ತದೆ. ಈ ಅಳತೆಗಳು ಭಿನ್ನ ಮೂಳೆಗಳನ್ನು ಹೊಂದಿದ ಸಾಂಸ್ಕೃತಿಕ ಹಂತಗಳನ್ನು ಅನುಕ್ರಮದಲ್ಲಿ ಜೋಡಿಸಲು ಇದು ಸಹಕಾರಿಯಾಗುತ್ತದೆ. ಒಂದು ಸ್ತರದಿಂದ ಇನ್ನೊಂದು ಸ್ತರವನ್ನು ಬೇರ್ಪಡಿಸುವ ಕಾಲಮಾನವನ್ನು ಸಹ ಅವುಗಳ ಮಧ್ಯದ ಪದರದ ದಪ್ಪದ ಆಧಾರದ ಮೇಲೆ ಅಂದಾಜಿಸಬಹುದು.

ನಿಜವಾದ ಅಥವಾ ನಿರಪೇಕ್ಷ ಕಾಲಮಾನ ನಿರ್ಣಯಕ್ಕೆ ಹಲವು ಪದ್ಧತಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಾಪೇಕ್ಷ ಕಾಲಗಣನೆಯನ್ನು ನಿರಪೇಕ್ಷ ಕಾಲಗಣನೆಗೆ ಹೊಂದಿಸಬಹುದು. ಇಂತಹ ಎರಡು ಪ್ರಮುಖ ಕಾಲನಿರ್ಣಯ ತಂತ್ರಗಳು ವಿಕಿರಣ ಹಾಗೂ ಕಾಂತತ್ವಗಳ ಅಳತೆಗಳನ್ನು ಆಧರಿಸಿವೆ.

ಬಹಳ ಹಿಂದಿನ ಕಾಲಮಾನವನ್ನು (ಈ ಕಾಲವು ೧ ಲಕ್ಷ ವರ್ಷಗಳಿಂದ ೩೦೦೦ ದಶಲಕ್ಷವರ್ಷಗಳವರೆಗೂ) ವಿಕಿರಣ ಪದ್ಧತಿಯನ್ನು ಬಳಸುವ ಪೊಟಾಸಿಯಂ-ಅರ್ಗಾನ್‌ (K-Ar) ಪದ್ಧತಿಯಲ್ಲಿ ಅಳೆಯಲಾಗುತ್ತದೆ. ಕಲ್ಲಿನ ತುಣುಕೊಂದರ ವಯಸ್ಸನ್ನು ಅದರಲ್ಲಿರುವ ಪೊಟಾಸಿಯಂ (A-೪೦) ಮತ್ತು ಅರ್ಗಾನ್‌ಗಳ (A-೪೦) ಅನುಪಾತದ ಆಧಾರದ ಮೇಲೆ ನಿರ್ಣಯಿಸಬಹುದು.

ಬಹಳ ಪ್ರಾಚೀನ ಕಾಲಮಾನ (೨೦೦ ದಶಲಕ್ಷ ವರ್ಷಗಳಿಂದ ೭೮೦,೦೦೦ ವರ್ಷಗಳವರೆಗೆ) ನಿರ್ಣಯದಲ್ಲಿ ಬಳಸುವ ಇನ್ನೊಂದು ಪ್ರಮುಖ ಪದ್ಧತಿ ಪ್ರಾಚೀನ ಕಾಂತತ್ವ (ಪಾಲಿಯೋ-ಮ್ಯಾಗ್ನೆಟಿಸಂ) ಪದ್ಧತಿ, ಸಮುದ್ರ ಶಿಲೆಗಳು ಹಾಗೂ ಸಂಚಿತ ಗಷ್ಟುಗಳು ಅಥವಾ ಮಡ್ಡಿಗಳು ಅವು ರೂಪಗೊಂಡಾಗಿನ ಕಾಂತಕ್ಷೇತ್ರದ ದಿಕ್ಕನ್ನು ಉಳಿಸಿಕೊಳ್ಳುತ್ತವೆ. ಪ್ರಪಂಚದಾದ್ಯಂತ ಈ ಕಾಂತಕ್ಷೇತ್ರವು ಕೆಲವು ನಿರ್ದಿಷ್ಟ ಕಾಲಗಳಲ್ಲಿ (ಇದನ್ನು ಪೊಟಾಸಿಯಂ ಅರ್ಗಾನ್‌ ಪದ್ಧತಿಯ ಮೂಲಕ ಕಾಂತಶಿಲೆಗಳಿಂದ ನಿರ್ಣಯಿಸಲಾಗಿದೆ) ಹಿಂದುಮುಂದಾಯಿತು. ಜ್ವಾಲಾಮುಖಿ ಶಿಲೆಗಳ ಅಥವಾ ಮಡ್ಡಿಗಳ ಕಾಲಮಾನವನ್ನು ಅವುಗಳ ಕಾಂತತ್ವದ ಹಂತದಿಂದ ನಿರ್ಣಯಿಸಬಹುದು. ಈ ಕಾಲಮಾನವು ಅವುಗಳಲ್ಲಿರುವ ಪಳೆಯುಳಿಕೆಗಳಿಗೂ ಅನ್ವಯವಾಗುತ್ತದೆ. ಕಳೆದ ೫ ದಶಲಕ್ಷ ವರ್ಷಗಳಲ್ಲಿ ಪ್ರಮುಖವಾಗಿ ೪ ಬಾರಿ ಕಾಂತಕ್ಷೇತ್ರ ಹಿಂದು ಮುಂದಾದುನ್ನು ಗುರುತಿಸಲಾಗಿದೆ.

ಇಂದು ಈ ಎರಡೂ ಪದ್ಧತಿಗಳಿಗೂ ಪೂರಕವಾಗಿ ಇತರ ವಿಧಾನಗಳನ್ನೂ ಬಳಸಲಾಗುತ್ತಿದೆ.

ಶಿಲೆಗಳ ವಯಸ್ಸನ್ನು ವಿದಳನದ-ಜಾಡು (ಫಿಶನ್‌ ಟ್ಯ್ರಾಕಿಂಗ್‌) ಪದ್ಧತಿಯ ಮೂಲಕ ಸಹ ನಿರ್ಣಯಿಸಲಾಗುತ್ತದೆ. ಶಿಲೆಗಳಲ್ಲಿ ಅಡಕಗೊಂಡ ಕೆಲವು ಖನಿಜಗಳ ವಯೋಮಾನ ನಿರ್ಣಯಿಸಲು ಈ ಪದ್ಧತಿಯನ್ನು ಬಳಸುತ್ತಾರೆ. ವಿದಳನದ ಜಾಡು ಅಥವಾ ವಿಕರಣಪಟುತ್ವ ಹೊಂದಿದ ಸಮಸ್ತಾನಿ (ಒಂದೇ ಧಾತುವಿನಲ್ಲಿ ಒಂದೇ ಸಂಖ್ಯೆ ಪ್ರೊಟಾನ್‌ಗಳಿದ್ದು ಆದರೆ ಬೇರೆ ಬೇರೆ ಸಂಖ್ಯೆಯ ನ್ಯೂಟ್ರಾನ್‌ಗಳಿದ್ದಲ್ಲಿ ಅವುಗಳನ್ನು ಆ ಧಾತುವಿನ ಸಮಸ್ತಾನಿ ಅಥವಾ ಐಸೋಟೋಪ್‌ಗಳೆನ್ನುತ್ತಾರೆ) ಕಣಗಳು ಬಿಟ್ಟುಹೋಗಿರುವ ಸೂಕ್ಷ್ಮ ಜಾಡುಗಳನ್ನು ಎಣಿಸುವ ಮೂಲಕ ಕಾಲಮಾನವನ್ನು ನಿರ್ಣಯಿಸುತ್ತಾರೆ. ಈ ಪದ್ಧತಿಯು ೧೦೦೦ ದಶಲಕ್ಷ ವರ್ಷಗಳಿಂದ ೫೦೦,೦೦೦ ವರ್ಷಗಳವೆರೆಗಿನ ಕಾಲಮಾನ ಕೊಡುತ್ತದೆ.

ವಿಕರಣಪಟುತ್ವ ಕ್ಷಯಿಸುವಿಕೆಯನ್ನು ಅಳೆಯುವ ಹಲವು ಭಿನ್ನ ಭಿನ್ನ ಪದ್ಧತಿಗಳಿವೆ. ಇವುಗಳಲ್ಲೊಂದು ಯುರೇನಿ-ಯಂಥೋರಿಯಂ (U-Th) ಪದ್ಧತಿ. ಇದು ೩೫೦,೦೦೦ ವರ್ಷಗಳು ಅಥವಾ ಅದಕ್ಕೂ ಹಿಂದಿನವರೆಗಿನ ಕಾಲಮಾನ ಕೊಡಬಲ್ಲದು. ಯುರೇನಿಯಂ-ಥೋರಿಯಂ ಪದ್ಧತಿಯನ್ನು ಭಾರತದ ಕೆಲವು ಹಳೆ ಶಿಲಾಯುಗ ನಿವೇಶನಗಳ ಕಾಲಮಾನ ಪತ್ತೆ ಹಚ್ಚಲು ಬಳಲಸಾಗಿದೆ.

ಈ ಪದ್ಧತಿಗಳಿಂದ ಪಡೆದ ಪ್ರಾಚೀನ ಕಾಲಮಾನಗಳನ್ನು ಸಂಕ್ಷಿಪ್ತ ರೂಪದಲ್ಲಿ ‘mya’ ಅಥವಾ ‘my’ (ದಶಲಕ್ಷ ವರ್ಷಗಳ ಹಿಂದೆ) ಎಂದು ಹೇಳುತ್ತಾರೆ. ಅಲ್ಲದೆ kya ಅಥವಾ ky ಸಾವಿರ ವರ್ಷಗಳನ್ನು ಸೂಚಿಸಲು ಕೆಲವು ಸಲ ಬಳಸಲ್ಪಡುತ್ತದೆ.

ಹೆಚ್ಚಿನ ಖಚಿತತೆ ಬೇಕಾಗುವ ಕಡಿಮೆ ಕಾಲಾವಧಿಯ ಗಣನೆಯಲ್ಲಿ ಸಾವಯವ ಪದಾರ್ಥಗಳಲ್ಲಿನ ರೇಡಿಯೋಕಾರ್ಬನ್‌ ಕಾಲನಿರ್ಣಯ ಪದ್ಧತಿ ಅತಿ ಹೆಚ್ಚಿನ ಮಹತ್ವ ಪಡೆದಿದೆ. ಸಾವಯವ ಪದಾರ್ಥದಲ್ಲಿ ಕಾರ್ಬನ್‌೧೨ರೊಂದಿಗೆ ನಿಶ್ಚಿತ ಅನುಪಾತದಲ್ಲಿರುವ ಕಾರ್ಬನ್‌೧೪ (೧೪C)ರ ಪ್ರಮಾಣ. ಸಾವಯವ ಪದಾರ್ಥದಲ್ಲಿ ಜೀವ ಅಳಿದುಹೋದ ಮೇಲೆ ನಿಗದಿತ ವೇಗದಲ್ಲಿ ಕಡಿಮೆಯಾಗತೊಡಗುತ್ತದೆ. ಈ ವೇಗ ತಿಳಿದಿದ್ದು (ಕಾರ್ಬನ್‌೧೪ರ ‘ಅರ್ಧ ಜೀವನ’ ೫೭೩೦ ವರ್ಷಗಳು. ಅಂದರೆ ಕಾರ್ಬನ್‌೧೪ರ ಪ್ರಮಾಣ ೫೭೩೦ ವರ್ಷಗಳಲ್ಲಿ ಅರ್ಧವಾಗುತ್ತದೆ). ಸತ್ತ ಸಾವಯವ ಪದಾರ್ಥದಲ್ಲಿನ ಕಾರ್ಬನ್‌೧೪ ಮತ್ತು ಕಾರ್ಬನ್‌೧೨ರ ಅನುಪಾತವನ್ನು ಅಳೆಯುವ ಮೂಲಕ ಆ ಸಾವಯವ ಅಂಶ ಜೀವಿಯಿಂದ ಬೇರ್ಪಟ್ಟ/ಜೀವಿಯು ಸತ್ತ ಕಾಲ ಹಾಗೂ ಇಂದಿನ ಮಧ್ಯದ ಕಾಲವನ್ನು ಲೆಕ್ಕ ಹಾಕಬಹುದು. ೧೯೪೯ರಲ್ಲಿ ಇದನ್ನು ಕಂಡುಹಿಡಿದು ಕೆಲ ಕಾಲದ ನಂತರ ವಿಶ್ವ ವಿಕಿರಣಗಳು ಹೆಚ್ಚು ಕಡಿಮೆಯಾಗುವ ಕಾರಣಕ್ಕೆ ಕಾರ್ಬನ್‌೧೪ ಕ್ಷಯಿಸುವ ವೇಗ ಕ್ರಿ.ಪೂ. ೮೦೦ರ ಹಿಂದೆ ಇಂದಿನಂತೆಯೇ ಇರಲಿಲ್ಲವೆಂದು ಪತ್ತೆಯಾಯಿತು. ಇದನ್ನು ವಿಶೇಷವಾಗಿ ಕಾರ್ಬನ್‌೧೪ ಕಾಲಮಾನ ಹಾಗೂ ವೃಕ್ಷ ಕಾಲಗಣನೆಯ (ಡೆಂಡ್ರೊಕ್ರೊನಾಲಜಿ) ಪದ್ಧತಿಯನ್ನು ಬಳಸಿ ಪಡೆದ ಕಾಲಮಾನಗಳೊಂದಿಗೆ ಹೋಲಿಸಿ ಪತ್ತೆ ಮಾಡಲಾಯಿತು. ವಾತಾವರಣದ ಬದಲಾವಣೆಗಳನ್ನು ಮರಗಳ ವಾರ್ಷಿಕ ವೃಕ್ಷ-ಉಂಗುರಗಳ ಅಧ್ಯಯನ, ಎಣಿಸುವುಕೆಯಿಂದ ಪತ್ತೆ ಹಚ್ಚಬಹುದು. ಏಕೆಂದರೆ ಈ ಉಂಗುರಗಳು ಆರ್ದ್ರ ವಾತಾವರಣದಲ್ಲಿ ದಪ್ಪವಾಗಿಯೂ, ಒಣ ವಾತಾವರಣದಲ್ಲಿ ತೆಳುವಾಗಿಯೂ ಇರುವ ಪ್ರವೃತ್ತಿ ತೋರುತ್ತವೆ. ಪ್ರಾಚೀನ, ಸತ್ತ ಮರಗಳ ವೃಕ್ಷ-ಉಂಗುರಗಳನ್ನು ಹೋಲಿಸುವ ಮೂಲಕ ಅಮೇರಿಕಾದ ಕ್ಯಾಲಿಪೋರ್ನಿಯಾದಲ್ಲಿನ ಒಣ ಹಾಗೂ ಆರ್ದ್ರ ವಾತಾವರಣದ ಸತತ ಕಾಲಗಣನೆಯನ್ನು ೭೦೦೦ ವರ್ಷಗಳವರೆಗೆ ದಾಖಲಿಸಲಾಯಿತು. ಆದರೆ ಇದು ಸತ್ತ ಮರಗಳ ಕಾರ್ಬನ್‌೧೪ ಕಾಲಗಣನೆಗೆ ತಾಳೆಯಾಗಲಿಲ್ಲ. ಈ ವ್ಯತ್ಯಾಸವನ್ನು ‘ಕ್ರಮಾಂಕನ’ (ಕ್ಯಾಲಿಬ್ರೇಶನ್‌) ಮೂಲಕ ಸರಿಪಡಿಸಲಾಯಿತು. ಕ್ರಿ.ಪೂ ೮೦೦ರ ಹಿಂದಿನ ಕಾರ್ಬನ್‌೧೪ ಕ್ಷಯಿಸುವಿಕೆಗೆ ಭಿನ್ನ ವೇಗವನ್ನು ಅಂದಾಜಿಸಿ, ಕಾರ್ಬನ್‌೧೪ ವರ್ಷಗಳಿಗೆ ಸೇರಿಸಿ ಇದನ್ನು ಮಾಡಲಾಯಿತು. ಹೀಗೆ ಕ್ರಮಾಂಕನ ಮಾಡಿದ ಕಾಲಮಾನಗಳು ಪ್ರಾಚೀನ ಈಚಿಜಪ್ಟ್‌ ಹಾಗೂ ಇರಾಕ್‌ನ ಈಗಾಗಲೇ ದಾಖಲೆಗಳಿಂದ ಸ್ಥಾಪಿತವಾದ ಕಾಲಮಾನಗಳಿಗೆ ಹೆಚ್ಚು ಚೆನ್ನಾಗಿ ಹೊಂದಿಕೊಂಡವು. ಕ್ರಿ.ಪೂ. ೮೦೦ರ ಹಿಂದಿನ ಕಾಲಮಾನಗಳಿಗೆ ಕ್ರಮಾಂಕನ ಮಾಡದ ಕಾರ್ಬನ್‌೧೪ ಪದ್ಧತಿಯ ಕಾಲಮಾನಗಳನ್ನು ಉಪಯೋಗಿಸಬಾರದು, ಏಕೆಂದರೆ ಕಾಲದಲ್ಲಿ ಹಿಂದೆ ಹೋದಂತೆ ವ್ಯತ್ಯಾಸ ಹೆಚ್ಚಾಗುತ್ತದೆ ಹೀಗೆ ಕಾರ್ಬನ್‌೧೪ರಿಂದ ಪಡೆದ ಕ್ರಿ.ಪೂ. ೩೦೦೦ವು ಕ್ರಮಾಂಕನದ ನಂತರ ಕ್ರಿ.ಪೂ. ೩೭೦೦ ಆಗುತ್ತದೆ. ಕಾರ್ಬನ್‌ ಕಾಲಗಣನೆ ಪದ್ಧತಿಗೆ ಕ್ರಮಾಂಕನವು ಕ್ರಿ.ಪೂ. ೮೦೦೦ದ ವರೆಗೆ ವೃಕ್ಷ-ಉಂಗುರದ ಆಧಾರದ ಮೇಲೆ ಲಭ್ಯವಿದ್ದು ಅದು ಕ್ರಿ.ಪೂ. ೯೩೫೦ ಆಗುತ್ತದೆ. ಹಾಗೆಯೇ ಹವಳದ ದಿಬ್ಬ ಆಧಾರದ ಕ್ರಮಾಂಕನವು ಸಹ ಕ್ರಿ.ಪೂ. ೧೮,೦೦೦ದವರೆಗೂ ಲಭ್ಯವಿದ್ದು ಅದು ಕ್ರಮಾಂಕನದ ನಂತರ ೨೧,೬೫೦ ಆಗುತ್ತದೆ. ಇದಕ್ಕೂ ಹಿಂದಿನ ಕಾರ್ಬನ್‌ ಕಾಲಮಾನವನ್ನು ಹಾಗೆಯೇ ಪರಿಗಣಿಸಬೆಕು, ಏಕೆಂದರೆ ಅವುಗಳ ನಿಜ ಮೌಲ್ಯಗಳಾಗಿ ಪರಿವರ್ತಿಸಲು ಯಾವ ಮಾರ್ಗವೂ ಲಭ್ಯವಿಲ್ಲ. ಕಾರ್ಬನ್‌ ಪದ್ಧತಿಯಿಂದ ಪಡೆದ ಕ್ರಿ.ಪೂ. ೪೦,೦೦೦ಕ್ಕೂ ಹಿಂದಿನ ಕಾಲಮಾನಗಳನ್ನು ಅಷ್ಟೊಂದು ನಂಬಲರ್ಹವಲ್ಲವೆಂದು ಭಾವಿಸಲಾಗಿದೆ. ಇದಕ್ಕಿಂತ ಉನ್ನತವಾದ ವೇಗೋತ್ಕರ್ಷಕ ರಾಶಿ ರೋಹಿತಮಾಮಕ (ಎಕ್ಷಲ್‌ರೇಟರ್ ಮಾಸ್‌ ಸ್ಟೆಕ್ಟ್ರೋಮೀಟರ್) ಅಥವಾ ಎಎಂಎಸ್‌ ಪದ್ಧತಿಯನ್ನು ಬಳಸಲಾಗುತ್ತದೆ. ಈ ಪದ್ಧತಿಯ ಮೂಲಕ ೧೦೦,೦೦೦ ವರ್ಷಗಳಷ್ಟು ಹಿಂದಿನ ಸಾವಯವ ಪದಾರ್ಥಗಳ ಕಾಲಮಾನವನ್ನು ಪಡೆಯಬಹುದು.

ಕಾರ್ಬನ್‌ ಕಾಲಮಾನವನ್ನು ಯಾವಾಗಲೂ ಶಿಷ್ಟವಿಚಲನೆಯೊಂದಿಗೆ (ಸ್ಟ್ಯಾಂಡರ್ಡ್ ಡೀವಿಯೇಶನ್‌) ಸಂಭವನೀಯ ಕಾಲ ಶ್ರೇಣಿಯೊಂದಿಗೆ ನೀಡಲಾಗುತ್ತಿದ್ದು ಕೆಲವು ಸಲ ಇದು ಸ್ಥಾಪಿತ ಸ್ತರಗಳ ಅನುಕ್ರಮಕ್ಕೆ ಹೊಂದಿಕೊಳ್ಳದಿರಬಹುದು. (ಕೆಳಗಿನ ಸ್ತರದ ಕಾಲಮಾನ ಮೇಲಿನದಕ್ಕಿಂತ ನಂತರದೆಂದು ಬರಬಹುದು) ಅಥವ ಇನ್ನಾವುದೇ ರೀತಿಯಲ್ಲಿ ಏರುಪೇರು ಆಗಿರಬಹುದು. ಪುರಾತತ್ವಶಾಸ್ತ್ರಜ್ಞ ಪರೀಕ್ಷಿಸಿದ ಮಾದರಿಯ ಸ್ತರದ ತಪ್ಪು ವಾಚನ, ನಂತರದ ಸಾವಯವ ತುಣುಕು ಮಾದರಿಯೊಂದಿಗೆ ಸೇರಿರುವುದು ಅಥವಾ ಪ್ರಯೋಗಶಾಲೆಯ ತಪ್ಪಿನಂತಹ ಅನೇಕ ಅಂಶಗಳು ಇದಕ್ಕೆ ಕಾರಣವಾಗಿರಬಹುದು. ಇಂತಹ ಸಂದರ್ಭಗಳಲ್ಲಿ ಸಂಬವನೀಯತೆಯ ಆಧಾರದ ಮೇಲೆ ಕಾಲಮಾನದ ಆಯ್ಕೆ ಅಗತ್ಯವಾಗುತ್ತದೆ.

ಕಾರ್ಬನ್‌೧೪ ಕಾಲಮಾನ BP ಬಿ.ಪಿ.-ಬಿಫೋರ್ ಪ್ರೆಸೆಂಟ್‌ ಅಂದರೆ ಇಂದಿನಿಂದ ಹಿಂದೆ) ಎಂದು ಸಾಂಪ್ರದಾಯಿಕವಾಗಿ ಸೂಚಿತವಾಗುತ್ತದೆ ಹಾಗೂ ಈ ಇಂದು ೧೯೫೦ನ್ನು ಸೂಚಿಸುತ್ತದೆ. ಕ್ರಿ.ಪೂ. ಪಡೆಯಬೇಕಾದರೆ ಬಿ.ಪಿ.ಗಳಿಂದ ೧೯೫೦ನ್ನು ಕಳೆಯಬೇಕಾಗುತ್ತದೆ. ಕಾಲಮಾನವು ೧೯೫೦ರಕ್ಕಿಂತ ಕಡಿಮೆ ಇದ್ದರೆ ೧೯೫೦ರಲ್ಲಿ ಅವುಗಳನ್ನು ಕಳೆಯುವ ಮೂಲಕ ಕ್ರಿ.ಶ. ಪಡೆಯಬಹುದು. ಹೀಗಾಗಿ ೩೦೦೦ ಬಿ.ಪಿ. ಅಂದರೆ ಕ್ರಿ.ಪೂ. ೧೦೫೦ಕ್ಕೆ ಸಮ ಹಾಗೂ ೫೦೦ ಬಿ.ಪಿ. ಕ್ರಿ.ಶ. ೧೪೫೦ಕ್ಕೆ ಸಮ. ಬಿ.ಪಿ.ಯನ್ನು ಮೊದಲು ಕಾರ್ಬನ್‌೧೪ ಕಾಲಮಾನ ಪದ್ಧತಿಯಲ್ಲಿ ಬಳಸಲಾಯಿತಾದರೂ ಇಂದು ಇತರ ಪದ್ಧತಿಗಳಲ್ಲಿಯೂ ಇದನ್ನು ಬಳಸಲಾಗುತ್ತಿದೆ.

ಕಾಲಮಾನ ನಿರ್ಣಯಿಸಬೇಕಿರುವ ವಸ್ತುಗಳು ಉಷ್ಣತೆಗೆ ಒಡ್ಡಲ್ಪಟ್ಟಿದ್ದರೆ ಉಷ್ಣದೀಪ್ತಿ ಅಥವಾ ತರ್ಮೋಲೂಮಿನೆಸೆನ್ಸ್‌ (ಟಿ.ಎಲ್‌.) ವಿಧಾನ ಉಪಯುಕ್ತವಾಗಿದೆ. ಮುಖ್ಯವಾಗಿ ಮಡಕೆಗಳ ಕಾಲಗಣನೆಗೆ ಈ ಪದ್ಧತಿಯನ್ನು ಬಳಸಲಾಗಿದೆ. ಜೇಡಿ ಮಣ್ಣನ್ನು ಕಾಯಿಸಿದಾಗ ಅದರಲ್ಲಿನ ಸ್ಪಟಿಕವು (ಕ್ವಾರ್ಟ್ಸ್‌) ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಮತ್ತೆ ತಣ್ಣಗಾಗ ತೊಡಗಿದಾಗ ಸ್ಪಟಿಕವು ಶಕ್ತಿಯನ್ನು ಹೀರಿಕೊಳ್ಳತೊಡಗುತ್ತದೆ. ಹೀಗೆ ಪುನರ್ ಶೇಖರಣೆಗೊಂಡ ಶಕ್ತಿಯನ್ನು ಅಳೆಯುವ ಮೂಲಕ ಆ ಮಡಕೆಯನ್ನು ಉಷ್ಣಕ್ಕೆ ಒಡ್ಡಿದ (ಮಡಕೆಯನ್ನು ಕಾಯಿಸಿದ) ಕಾಲವು ದೊರೆಯುತ್ತದೆ. ಈ ಪದ್ಧತಿಯಲ್ಲಿ ೫೦೦,೦೦೦ ವರ್ಷಗಳ ಹಿಂದಿನವರೆಗಿನ ವಸ್ತುಗಳ ಕಾಲಗಣನೆ ಮಾಡಲು ಸಾಧ್ಯ. ಈ ಪದ್ಧತಿಯ ಬಳಕೆಯನ್ನು ಈಗ ಉಷ್ಣಕ್ಕೆ ಒಡ್ಡಲ್ಪಟ್ಟ ಮಣ್ಣು ಮತ್ತು ಚಕಮಕಿ ಕಲ್ಲುಗಳ ಕಾಲ ನಿರ್ಣಯಕ್ಕೆ ವಿಸ್ತರಿಸಲಾಗುತ್ತಿದ್ದು. ಈ ಪದ್ಧತಿ ಉಳಿಕೆಗಳು ಹಾಗೂ ಹಸ್ತಕೃತಿಗಳ ಹಿಂದಿನ (ಮಡಕೆ ಪೂರ್ವದ) ಕಾಲಮಾನವನ್ನು ಕೂಡಾ ಕೊಡಬಲ್ಲದು.

ಸಂಬಂಧಿತ ಇನ್ನೊಂದು ಪದ್ಧತಿಯನ್ನು ದ್ಯುತಿ ಉತ್ತೇಜಿತ ದೀಪ್ತಿ (ಆಪ್ಟಿಕಲಿ ಸಿಮುಲೇಟಡ್‌ ಲ್ಯುಮಿನೆಸೆನ್ಸ್‌ಒ. ಎಸ್‌. ಎಲ್‌) ಎಂದು ಕರೆಯಲಾಗಿದ್ದು ಖನಿಜವು ಹೂಳಲ್ಪಟ್ಟಿದ್ದರೆ, ಸಿಲುಕಿಕೊಂಡ ಬೆಳಕು ಸಂವೇದಿ ಎಲೆಕ್ಟ್ರಾನ್‌ಗಳ ಸಂಖ್ಯೆ ಕ್ರಮೇಣ ಹೆಚ್ಚತೊಡಗುತ್ತವೆ ಎಂಬ ಸಂಗತಿಯನ್ನು ಇದು ಆಧರಿಸಿದೆ. ಪ್ರಯೋಗಶಾಲೆಯಲ್ಲಿ ಇವುಗಳ ಮೇಲೆ ಬೆಳಕು ಬಿಟ್ಟಾಗ ಬಿಡುಗಡೆ ಹೊಂದುವ ಎಲೆಕ್ಟ್ರಾನ್‌ಗಳು ಹೊರಹೊಮ್ಮಿಸುವ ಬೆಳಕನ್ನು ಅಳೆಯಬಹುದು. ಇದರಿಂದ ಆ ಖನಿಜವು ಎಷ್ಟು ಕಾಲದಿಂದ ಹೂಳಲ್ಪಟ್ಟಿದೆ ಎಂಬುದನ್ನು ಲೆಕ್ಕಹಾಕಬಹುದಾಗಿದೆ.

ಕೊನೆಯದಾಗಿ, ಎಲೆಕ್ಟ್ರಾನ್‌ ಸ್ಟೀನ್‌ ರೆನೋಸಾನ್ಸ್‌ (ಇ. ಎಸ್‌. ಆರ್.) ಪದ್ಧತಿ ಇತ್ತೀಚೆಗೆ ಬಳಕೆಗೆ ಬಂದಿದೆ. ಖನಿಜಗಳು, ಹಲ್ಲಿನ ಲೇಪನ, ಚಿಪ್ಪು ಮತ್ತು ಹವಳಗಳ ಕಾಲಮಾನವನ್ನು ತಿಳಿಯಲು ಈ ಪದ್ಧತಿಯನ್ನು ಬಳಸಲಾಗುತ್ತಿದ್ದು. ಇದು ೧ ದಶಲಕ್ಷ ವರ್ಷದಿಂದ ೧೦೦೦ ವರ್ಷಗಳ ಹಿಂದಿನ ಕಾಲಮಾನವನ್ನು ಕೊಡಬಲ್ಲದು.