ಭಾರತದ ಸ್ವಾತಂತ್ರ್ಯಾಂದೋಲನ ಇತಿಹಾಸದಲ್ಲಿ ಇಂಡಿಯನ್‌ ನ್ಯಾಶನಲ್ ಕಾಂಗ್ರೆಸ್ಸಿನ ಸ್ಥಾಪನೆ ಒಂದು ಚರಿತ್ರಾರ್ಹ ಘಟನೆ. ಈ ಸಂಘದಡಿಯಲ್ಲಿಯೇ ಭಾರತದ ಸ್ವಾತಂತ್ರ್ಯ ಆಂದೋಲನ ನಡೆಯಿತಲ್ಲದೆ ಸ್ವರಾಜ್ಯ ಪಡೆಯಲಾಯಿತು. ಆದರೆ ಇಂಡಿಯನ್‌ ನ್ಯಾಶನಲ್ ಕಾಂಗ್ರೆಸ್ಸಿನ ಹುಟ್ಟಿನ ಬಗ್ಗೆ ಬಹಳಷ್ಟು ವಾದ-ವಿವಾದಗಳಿವೆ. ಭಾರತೀಯರ ಅಸಂತೃಪ್ತಿಗೊಂಡು “ಸುರಕ್ಷಾ ಕವಾಟವಾಗಿ” (Safty Volve) ಕಾಂಗ್ರೆಸ್ಸನ್ನು ಬ್ರಿಟಿಷರೇ ಸ್ಥಾಪಿಸಿದರೆಂದು ಕೆಲವರು ವಾದಿಸುತ್ತಾರೆ. ಭಾರತೀಯ ರಾಜಕೀಯ ಪ್ರಜ್ಞೆಯ ಪರಿಣಾಮ ಸ್ವರೂಪವೇ ಈ ಸಂಘವೆಂದು ಇನ್ನೂ ಕೆಲವರ ಅಭಿಪ್ರಾಯ. ಬ್ರಿಟಿಷರ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುವುದಕ್ಕಾಗಿಯೇ ಇದನ್ನು ಸ್ಥಾಪಿಸಲಾಯಿತು. ಆದರೆ ಮೊದಲಿನ ಅಭಿಪ್ರಾಯವನ್ನು ಇತಿಹಾಸಕಾರರು ಒಪ್ಪುವುದಿಲ್ಲ. ಅಸಂತೃಪ್ತಿಗೆ ಒಂದು ಸುರಕ್ಷಾ ಕವಾಟವೆಂಬಂತೆ ಬ್ರಿಟಿಷರು ಇದನ್ನು ಸ್ಥಾಪಿಸಿದರೆಂಬುದನ್ನು ಐತಿಹಾಸಿಕವಾಗಿಯೂ ಸಿದ್ಧಪಡಿಸಲು ಸಾಧ್ಯವಿಲ್ಲ. ಆದರೆ ಎರಡನೇ ಅಭಿಪ್ರಾಯವನ್ನು ಇಂದು ವ್ಯಾಪಕವಾಗಿ ಒಪ್ಪಲಾಗಿದೆ. ಇಂಡಿಯನ್‌ ನ್ಯಾಶನಲ್‌ ಕಾಂಗ್ರೆಸ್ಸಿನ ಸ್ಥಾಪನೆಗಿಂತ ಮೊದಲು ಎಷ್ಟೋ ಸಂಘಗಳಿದ್ದವಲ್ಲದೆ ಅವೆಲ್ಲವೂ ಬ್ರಿಟಿಷ್ ‌ವಿರೋಧಿಯಾಗಿದ್ದವೆಂಬುದು ಭಾರತ ಸ್ವಾತಂತ್ರ್ಯಾಂದೋಲನದ ಅಧ್ಯಯನ ಮಾಡಿದಾಗ ತಿಳಿದುಬರುತ್ತದೆ. ಆದ್ದರಿಂದ ಇಂಡಿಯನ್‌ ನ್ಯಾಶನಲ್‌ ಕಾಂಗ್ರೆಸ್ಸಿನ ಉದಯ ಒಂದು ಆಕಸ್ಮಿಕ ಮತ್ತು ಹಠಾತ್‌ ಬೆಳವಣಿಗೆಯಲ್ಲ.

ಇಂಡಿಯನ್‌ ನ್ಯಾಶನಲ್‌ ಕಾಂಗ್ರೆಸ್‌ (ಐ.ಎನ್‌.ಸಿ.) ಬಗೆಗಿನ ತಥ್ಯ ಮತ್ತು ಮಿಥ್ಯಗಳನ್ನು ತಿಳಿಯುವ ಮೊದಲು ಕಾಂಗ್ರೆಸ್‌ನ ಹುಟ್ಟಿಗಿಂತ ಮೊದಲೇ ಅಸ್ತಿತ್ವದಲ್ಲಿದ್ದ ಸಂಘಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ ಅಂಶವಾಗಿದೆ. ಐ.ಎನ್‌.ಸಿಗಿಂತ ಮೊದಲು ಎಷ್ಟೋ ರಾಜಕೀಯ ಸಂಘಗಳಿದ್ದವೆಂಬುದು ಸಿದ್ಧವಾಗುತ್ತದೆ. ಈ ಸಂಘಗಳು ಬಾಂಬೆ, ಮದ್ರಾಸ್‌ ಮತ್ತು ಬಂಗಾಳ ಪ್ರಾಂತಗಳಲ್ಲಿದ್ದವು. ಆರಂಭದ ಅವಧಿಯಲ್ಲಿ ಈ ಮೂರು ಸ್ಥಳಗಳು ರಾಜಕೀಯ ಚಟುವಟಿಕೆಯ ಕೇಂದ್ರಗಳಾಗಿದ್ದವು.

ಬಂಗಾಳದಲ್ಲಿ ಡೆರೋಝಿಯನ್ಸ್‌ರಿದ್ದರು. ಇವರೆಲ್ಲ ಕಲ್ಕತ್ತದಲ್ಲಿನ ಹಿಂದೂ ಕಾಲೇಜಿನ ಜನಪ್ರಿಯ ಶಿಕ್ಷಕನಾಗಿದ್ದ ಹೆನ್ರಿ ಲೂಯಿ ಡೆರಝಿಯನ್ನನ ಅನುಯಾಯಿಗಳಾಗಿದ್ದರು. ತಮ್ಮ ಬರವಣಿಗೆಗಳಲ್ಲಿ ಅವರು ಪೊಲೀಸರಲ್ಲಿನ ಭ್ರಷ್ಟಾಚಾರ, ರೈತರ ಸ್ಥಿತಿಗತಿ ಮತ್ತು ನಿಸ್ಸತ್ವ ನ್ಯಾಯವ್ಯವಸ್ಥೆಯನ್ನು ಬಯಲು ಮಾಡಿದರು. ಅಭಿಪ್ರಾಯ ಸ್ವಾತಂತ್ರ್ಯಕ್ಕಾಗಿ ಮತ್ತು ಹಿರಿಯ ಹುದ್ದೆಗಳಿಗೆ ಭಾರತೀಯರ ನೇಮಕಕ್ಕಾಗಿ ಅವರು ವಾದಿಸಿದರು.

ರಾಮಮೋಹನರಾಯ್‌ನ ಅನುಯಾಯಿಗಳು “ಬಂಗ ಭಾಷಾ ಪ್ರಕಾಶಿಕಾ ಸಭಾ” ಎಂಬ ಸಂಘವನ್ನು ೧೮೩೬ರಲ್ಲಿ ಸ್ಥಾಪಿಸಿದರು. ಈ ಸಂಘದ ಸದಸ್ಯರು ಸರಕಾರದ ಕಾರ್ಯನೀತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರಲ್ಲದೆ ಆಡಳಿತದಲ್ಲಿನ ಕಾರ್ಯನೀತಿಗೆ ಸಂಬಂಧಿಸಿದ ದೋಷಗಳನ್ನು ಟೀಕಿಸುತ್ತಿದ್ದರು. ಆದರೆ ಈ ಸಂಘದ ಪರಿಣಾಮ ಮಾತ್ರ ಅತ್ಯಲ್ಪವಾಗಿತ್ತು.

೧೮೩೭ರಲ್ಲಿ ಕಲ್ಕತ್ತೆಯ ಜಮೀನ್ದಾರರು ತಮ್ಮ ಹಿತರಕ್ಷಣೆಗಾಗಿ ಬಂಗಾಲ ಜಮೀನ್ದಾರರ ಸಂಘವೊಂದನ್ನು ಸ್ಥಾಪಿಸಿದರು. ಜಾರ್ಜ್‌ ಥಾಮ್ಸನ್‌ ಎಂಬ ಸ್ಟಾಕ್‌ಲ್ಯಾಂಡಿನ ಚಳವಳಿಗಾರ ಬಂಗಾಲ ಜಮೀನ್ದಾರರ ಸಂಘದ ಒಂದು ಕಾರ್ಯಾಲಯವನ್ನು ಲಂಡನ್ನಿನಲ್ಲಿ “ಬ್ರಿಟಿಷ್ ‌ಇಂಡಿಯಾ ಸೊಸೈಟಿ” ಎಂಬ ಹೆಸರಿನಲ್ಲಿ ೧೮೪೩ರಲ್ಲಿ ಪ್ರಾರಂಭಿಸಿದರು. ಭಾರತೀಯರ ನಿಜಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಸಾರ ಮಾಡುವುದು, ಶಾಂತಿಯುತ ಮಾರ್ಗವನ್ನನುಸರಿಸುವ ಮೂಲಕ ಅವರ ಕಲ್ಯಾಣ ಸಾಧಿಸುವುದೇ ಅದರ ಮೂಲ ಉದ್ದೇಶವಾಗಿತ್ತು.

೧೮೭೬ರ ಜುಲೈ ೨೬ ರಂದು ಕಲ್ಕತ್ತಾದಲ್ಲಿ ಸುರೇಂದ್ರನಾಥ ಬ್ಯಾನರ್ಜಿ “ಇಂಡಿಯನ್‌ ಅಸೋಸಿಯೇಷನ್‌” ಎಂಬ ಸಂಘವನ್ನು ಸ್ಥಾಪಿಸಿದರು. ಭಾರತೀಯರಲ್ಲಿ ದೃಢ ಜನಾಭಿಪ್ರಾಯವನ್ನು ಮೂಡಿಸುವುದು ಮತ್ತು ಎಲ್ಲ ಸ್ತರದ ಜನರನ್ನು ಒಂದುಗೂಡಿಸುವುದೇ ಅದರ ಉದ್ದೇಶವಾಗಿತ್ತು. “ಬಾಂಬೆ ಅಸೋಸಿಯೇಷನ್‌” ಎಂಬ ಸಂಘವನ್ನು ೧೮೫೨ರ ಆಗಸ್ಟ್‌೨೬ ರಂದು ಸ್ಥಾಪಿಸಲಾಯಿತು. ಬಾಂಬೆ ಪ್ರೆಸಿಡೆನ್ಸಿಯಲ್ಲಿನ ಜನರ ಬೇಡಿಕೆಗಳ ಬಗ್ಗೆ ಖಚಿತಪಡಿಸಿಕೊಂಡು, ಅದರಿಂದ ಜನರ ಅಭಿವೃದ್ಧಿಯಾಗಬಹುದೆಂದು ಎಣಿಸಿಕೊಂಡು, ಅವುಗಳ ಈಡೇರಿಕೆಗಾಗಿ ಅಧಿಕಾರ ವರ್ಗಕ್ಕೆ ಆಗಾಗ ನಿರೂಪಿಸುವುದೇ ಈ ಸಂಘದ ಉದ್ದೇಶವಾಗಿತ್ತು. ೧೮೬೭ರಲ್ಲಿ “ಪೂನಾ ಸಾರ್ವಜನಿಕ ಸಭಾ” ಪ್ರಾರಂಭಗೊಂಡಿತು. ಜನರು ಮತ್ತು ಸರ್ಕಾರದ ಮಧ್ಯದ ಸೇತುವೆಯಾಗಿರುವುದೇ ಈ ಸಂಘದ ಉದ್ದೇಶವಾಗಿತ್ತು. “ಬಾಂಬೆ ಪ್ರೆಸಿಡೆನ್ಸಿ ಅಸೋಸಿಯೇಷನ್‌” ಎಂಬುದನ್ನು ೧೮೮೫ರ ಜನವರಿ ೩೧ ರಂದು ಸ್ಥಾಪಿಸಲಾಯಿತು. ೧೮೮೫ರ ಡಿಸೆಂಬರ್‌ನಲ್ಲಿ ಬೊಂಬಾಯಿಯಲ್ಲಿ ಮೊದಲಬಾರಿಗೆ ಇಂಡಿಯನ್‌ ನ್ಯಾಶನಲ್‌ ಕಾಂಗ್ರೆಸ್ಸಿನ ಸಭೆ ಈ ಸಂಘದ ಆಶ್ರಯದಲ್ಲಿ ನಡೆಯಿತು. “ಮದ್ರಾಸ್‌ ಅಸೋಸಿಯೇಷನ್‌” ಶಾಖೆಯಾಗಿ ಪ್ರಾರಂಭಿಸಲಾಯಿತಾದರೂ ಅದು ೧೮೫೨ರ ಫೆಬ್ರವರಿ ೨೬ ರಂದು ಸ್ವತಂತ್ರ ಸಂಘವಾಯಿತು.

ಮದ್ರಾಸ್‌ ಮಹಾಜನಸಭಾ ಪ್ರಾರಂಭವಾದದ್ದು ೧೮೬೪ರ ಮೇ ೧೬ರಂದು. ಭಾರತೀಯರು ಅಧಿಕಾರ ವರ್ಗದಲ್ಲಿ ಉನ್ನತಿ ಹೊಂದುವುದನ್ನು ವಿರೋಧಿಸುವ ಯೂರೋಪಿನ ವಿರುದ್ಧ, ಇಲ್‌ಬರ್ಟ್ ಮಸೂದೆ ವಿರುದ್ಧ, ಯೂರೋಪಿಯನ್ ಸಮುದಾಯದ ಹಿಂಸಾತ್ಮಕ ಜನಾಂಗೀಯ ಪ್ರತಿಕ್ರಿಯೆಯ ವಿರುದ್ಧ ಚಳವಳಿ ನಡೆಸುವಂತೆ ಜನರನ್ನು ಈ ಸಭಾ ಸಂಘಟಿಸಿತು. ಹೀಗೆ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ಸಿನ ಉದಯವಾಗುವ ಮೊದಲು ಎಷ್ಟೋ ಸಂಘ ಸಂಸ್ಥೆಗಳಿದ್ದವೆಂಬುದು ಇದರಿಂದ ಖಚಿತವಾಗುತ್ತದೆ.

೧೮೮೫ರ ಡಿಸೆಂಬರಿನಲ್ಲಿ ೭೨ ರಾಜಕೀಯ ಕಾರ್ಯಕರ್ತರಿಂದ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ಸಿನ ಸ್ಥಾಪನೆಯಾಯಿತು. ಅಖಿಲ ಭಾರತದ ಮಟ್ಟದಲ್ಲಿ ಮೊಟ್ಟ ಮೊದಲು ಭಾರತದ ರಾಷ್ಟೀಯತೆಯ ಸುಸಂಘಟಿತ ದ್ಯೋತಕ ಇದಾಗಿತ್ತು. ಎ.ಓ. ಹ್ಯೂಮ್ ಎಂಬ ಒಬ್ಬ ನಿವೃತ್ತ ಐ.ಸಿ.ಎಸ್‌. ಅಧಿಕಾರಿ ಇದರ ಸ್ಥಾಪನೆಯಲ್ಲಿ ಮುಖ್ಯಪಾತ್ರ ವಹಿಸಿದನು. ಆದರೆ ಎಪ್ಪತ್ತೆರಡು ಜನರು ಇದನ್ನೇಕೆ ಸ್ಥಾಪಿಸಿದರು? ಆ ಸಮಯದಲ್ಲೇಕೆ ಸ್ಥಾಪಿಸಿದರು? “ಸುರಕ್ಷಾ ಕವಾಟ” ಎಂಬ ಸಶಕ್ತ ಕಲ್ಪಿತ ಕಥೆ ಇದನ್ನಾವರಿಸಿದೆ. ಅದೇನೆಂದರೆ, ಅಧಿಕೃತ ಆದೇಶದ ಮೇರೆಗೆ ಐ.ಎನ್‌.ಸಿ.ಯನ್ನು ಎ.ಓ. ಹ್ಯೂಮ್‌ ಸ್ಥಾಪಿಸಿದ್ದು, ಅದೂ ವೈಸರಾಯ್‌ ಲಾರ್ಡ್‌ ಡಫರಿನ್‌ ಮಾರ್ಗದರ್ಶನದಲ್ಲಿ ನಡೆಸಿ ಜನಸಾಮಾನ್ಯರಿಗೆ ಒಂದು ಸುರಕ್ಷಿತ, ಸೌಮ್ಯ ಹಾಗೂ ಸಂವಿಧಾನಕ್ಕೆ ಅನುಗುಣವಾದ ಬಹಿರ್‌ದ್ವಾರ ಅಥವಾ ಸುರಕ್ಷಾ ಕವಾಟವಾಗಲೆನ್ನುವ ಉದ್ದೇಶವಿದೆ. ಹೀಗಾಗಿ ಜನಸಾಮಾನ್ಯರಲ್ಲಿ ಉಕ್ಕುತ್ತಿದ್ದ ಅಸಮಾಧಾನ ಕ್ರಾಂತಿಯೆಡೆಗೆ ಸಾಗಿ ಮತ್ತು ಕ್ರಾಂತಿಕಾರಕ ಶಕ್ತಿಯಾಗಬಹುದಾದ್ದನ್ನು ಮೊಳಕೆಯ ಸ್ಥಿತಿಯಲ್ಲಿಯೇ ಚಿವುಟಿ ಹಾಕಲಾಯಿತು. ಆಗ ಒಂದು ಹಿಂಸಾತ್ಮಕ ಕ್ರಾಂತಿಯ ಸಂಭಾವ್ಯವನ್ನು ತಪ್ಪಿಸುವುದಕ್ಕಾಗಿ ಕಾಂಗ್ರೆಸ್ಸಿನ ಸ್ಥಾಪನೆಯಾಯಿತೆಂಬ ಕಲ್ಪನೆಯ ಜೀವಾಳವನ್ನು ಅನೇಕ ಲೇಖಕರು ಒಪ್ಪಿದ್ದಾರೆ. ಉದಾರವಾದಿಗಳು ಈ ಅಂಶವನ್ನು ಸ್ವಾಗಿಸುತ್ತಾರೆ. ಕಾಂಗ್ರೆಸ್‌ ಯಾವಾಗಲೂ ಸಾಮ್ರಾಜ್ಯ ಶಾಹಿಯ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತ ಬಂದಿದೆಯೆಂಬುದನ್ನು ಸಿದ್ಧಪಡಿಸಲು ತೀವ್ರಗಾಮಿಗಳು ಈ ಅಂಶವನ್ನು ಬಳಸಿಕೊಳ್ಳುತ್ತಾರೆ. ಅತಿ ಬಲಪಂಥೀಯರು ಇದನ್ನೇ ಬಳಸಿಕೊಂಡು, ಕಾಂಗ್ರೆಸ್‌ ಮೊದಲಿನಿಂದಲೂ ರಾಷ್ಟ್ರದ್ರೋಹಿಯೆಂದು ಹೇಳುತ್ತಾರೆ. ಇದರ ಸ್ಥಾಪನೆಯ ರೀತಿ, ಕಾಂಗ್ರೆಸ್ಸಿನ ಮೂಲಕ್ಷಣ ಮತ್ತು ಮುಂದಿನ ಕಾರ್ಯಕ್ಕೆ ನಿರ್ಣಾಯಕ ರೀತಿಯಲ್ಲಿ ಕಲಕಿತೆಂಬುದನ್ನು ಅವರೆಲ್ಲರೂ ಒಪ್ಪುತ್ತಾರೆ.

‘ಉಗ್ರಗಾಮಿಗಳ’ ಮುಖಂಡ ಲಾಲಾ ಲಜಪತರಾಯ್‌ ೧೯೧೬ರಲ್ಲಿ ತನ್ನ ‘ಯಂಗ್‌ ಇಂಡಿಯಾ’ದಲ್ಲಿ ಸುರಕ್ಷಾ ಕವಾಟ ವಾದವನ್ನು, ಕಾಂಗ್ರೆಸ್ಸಿನಲ್ಲಿನ ಸೌಮ್ಯವಾದಿಗಳನ್ನು ಕಟುವಾಗಿ ಟೀಕಿಸಲು, ಬಳಸಿಕೊಂಡರು. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವುದಕ್ಕಿಂತಲೂ ಹೆಚ್ಚಾಗಿ ಬ್ರಿಟಿಷ್ ‌ಸಾಮ್ರಾಜ್ಯವನ್ನು ಅಪಾಯದಿಂದ ಉಳಿಸುವ ಉದ್ದೇಶದಿಂದ ಕಾಂಗ್ರೆಸ್ಸನ್ನು ಸ್ಥಾಪಿಸಲಾಯಿತೆಂದು ವಾದಿಸಿದರು.

ಸುರಕ್ಷಾ ಕವಾಟದ ಈ ಕಲ್ಪನೆ ವಾಮಪಂಥೀಯರಿಗೆ ಪ್ರಮುಖ ಸರಕಾರಿಯೆಂದು ಆರ್‌. ಪಾಮೆದತ್ತ ತನ್ನ ಕೃತಿ ಇಂಡಿಯಾ ಟುಡೆಯಲ್ಲಿ ವಿವರಣೆ ಇತ್ತರು. ಸರಕಾರದ ನೇರಪ್ರೇರಣೆಯಿಂದಾಗಿ ಮತ್ತು ವೈಸರಾಯನ ಜೊತೆ ಮೊದಲೇ ಯೋಜಿಸಿಕೊಂಡಿದ್ದರಿಂದ ಕಾಂಗ್ರೆಸ್‌ ಹುಟ್ಟಿಕೊಂಡಿತೆಂದು ದತ್ತ ಬರೆದರು. ಬ್ರಿಟಿಷ್ ‌ಆಳ್ವಿಕೆಯನ್ನು ಕಾಪಾಡಿಕೊಂಡು ಹೋಗುವಲ್ಲಿ ಮತ್ತು ಜನರಲ್ಲಿನ ಅಸಮಾಧಾನ ಹಾಗೂ ಬ್ರಿಟಿಷ್ ‌ವಿರೋಧಿ ಮನೋಭಾವವನ್ನು ಎದುರಿಸುವಲ್ಲಿ ಕಾಂಗ್ರೆಸ್ಸನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳುವುದೇ ಸರ್ಕಾರದ ಉದ್ದೇಶವಾಗಿತ್ತೆಂಬುದೇ ದತ್ತ ಅವರ ಪ್ರತಿಪಾದನೆ. ಆದರೆ ಕಾಂಗ್ರೆಸ್‌ ಒಂದು ರಾಷ್ಟ್ರೀಯವಾದಿ ಪಕ್ಷವಾಯಿತು. ಹೀಗಾಗಿ ಕಾಂಗ್ರೆಸ್‌ ಎರಡು ನಿಲುವುಗಳ ಮಧ್ಯವಿತ್ತು. ಮೊದಲನೆಯದೆಂದರೆ ಜನರ ಚಳವಳಿಯನ್ನು ಎದುರಿಸಿಯೂ ಸಾಮ್ರಾಜ್ಯಶಾಹಿಯೊಡನೆ ಸಹಕರಿಸುವುದು. ಇನ್ನೊಂದೆಂದರೆ, ರಾಷ್ಟ್ರೀಯ ಚಳವಳಿಯ ನೇತೃತ್ವ ವಹಿಸಿಕೊಂಡು ಜನರಿಗೆ ಮಾರ್ಗದರ್ಶನ ನೀಡುವುದು. ಈ ನಿಲುವು ಭಾರತದ ಮಧ್ಯಮ ವರ್ಗದ ಇತ್ತಂಡವಾದ ಮತ್ತು ಡೋಲಾಯಮಾನ ಮನೋಭಾವವನ್ನು ಪ್ರತಿಬಿಂಬಿಸುತ್ತದೆಂದು ದತ್ತ ಹೇಳಿದ್ದಾರೆ. ಒಂದು ಕಡೆ ಭಾರತದ ಜನರು ಮುಂದಾಳತ್ವ ವಹಿಸಿ ಬ್ರಿಟಿಷ್ ‌ಮಧ್ಯಮವರ್ಗದೊಡನೆ ಸಂಘರ್ಷಿಸುವುದು ಮತ್ತು ಇದರ ಜೊತೆಗೆ, ಅವಸರದ ಹೆಜ್ಜೆಯಿಂದ ಸಾಮ್ರಾಜ್ಯಶಾಹಿಯಿಂದ ದೊರೆಯುವ ಸೌಲಭ್ಯಗಳಿಂದ ವಂಚಿತರಾಗಬಹುದೆಂಬ ಅನಿಸಿಕೆ ಕೂಡಾ ಇತ್ತು.

೧೯೩೮ರಲ್ಲಿ ಪ್ರಕಟವಾದ ಡ್ರೆಸ್‌ ಆಂಡ್‌ ಗ್ರೋತ್‌ ಕಾಂಗ್ರೆಸ್‌ ಇನ್‌ ಇಂಡಿಯಾ ಎಂಬ ತಮ್ಮ ಕೃತಿಯಲ್ಲಿ ಉದಾರವಾದಿಗಳಾಗಿದ್ದ ಸಿ. ಎಫ್‌. ಆಂಡ್ರಿವ್ಸ್‌ ಮತ್ತು ಗಿರಿಜಾ ಮುಖರ್ಜಿಯವರು, ಸುರಕ್ಷಾ ಕವಾಟದ ನಿಲುವನ್ನು ಬೆಂಬಲಿಸಿದರು. ಇದರಿಂದಾಗಿ ವ್ಯರ್ಥ ರಕ್ತಪಾತ ತಪ್ಪಿಸಲು ಸಾಧ್ಯವಾಗಿದೆಯೆಂದು ಅವರು ತಮ್ಮ ಸಂತೋಷ ವ್ಯಕ್ತಪಡಿಸಿದರು.

ಸುರಕ್ಷಾ ಕವಾಟದ ಸಿದ್ಧಾಂತದ ಐತಿಹಾಸಿಕ ಸಮರ್ಥನೆ ಸೀಕ್ರೆಟ್‌ ರಿಪೋರ್ಟ್ಸ್‌ ಎಂಬ ಏಳು ಸಂಪುಟಗಳಲ್ಲಿ ದೊರೆಯುತ್ತದೆ. ಇವುಗಳನ್ನು ೧೮೭೮ರ ಬೇಸಿಗೆಯ ಸಮಯದಲ್ಲಿ ಹ್ಯೂಮ್‌ ಸಿಮ್ಲಾದಲ್ಲಿ ಓದಿದ್ದನೆಂದು ಹೇಳಲಾಯಿತು. ಸಾಮಾನ್ಯ ಜನರಲ್ಲಿ ಉಕ್ಕುತ್ತಿರುವ ಅಸಮಾಧಾನ ಮತ್ತು ಬ್ರಿಟಿಷ್ ‌ಆಡಳಿತವನ್ನು ಹಿಂಸೆಯಿಂದಲಾದರೂ ಕೆಡವಬೇಕೆಂಬ ವ್ಯಾಪಕವಾದ ಸಂಚು ನಡೆಸಿತ್ತೆಂಬ ಖಚಿತ ಅಭಿಪ್ರಾಯ ಇವುಗಳಲ್ಲಿ ವ್ಯಕ್ತವಾಗಿತ್ತು.

ವಿಲಿಯಮ್‌ ವೆಡ್ಡರ ಬರ್ನ್‌ ಬರೆದ ಎ.ಓ. ಹ್ಯೂಮ್‌ನ ಜೀವನ ಚರಿತ್ರೆ ೧೯೧೩ರಲ್ಲಿ ಪ್ರಕಟಗೊಂಡಿತು. ದಿನಾಂಕಗಳಿಂದ ಹ್ಯೂಮ್‌ನ ಕೆಲವು ಟಿಪ್ಪಣಿಗಳು ವೆಡ್ಡರ ಬರ್ನ್‌ನಿಗೆ ಸಿಕ್ಕಿದ್ದವು. ಅವುಗಳಲ್ಲಿ ಕಾಂಗ್ರೆಸ್ಸಿನ ಸ್ಥಾಪನೆ ಕುರಿತು ಬರೆಯಲಾಗಿತ್ತು. ಈ ಅಂಶವನ್ನು ಮೊಟ್ಟಮೊದಲ ಬಾರಿಗೆ ವೆಡ್ಡರ ಬರ್ನ್‌ ಆ ಕೃತಿಯಲ್ಲಿ ಉಲ್ಲೇಖಿಸಿದ್ದನು. ಲಾಲಾ ಲಜಪತರಾಯನ ಪ್ರಕಾರ, ಹ್ಯೂಮ್‌ ಸ್ವಾತಂತ್ರ್ಯಪ್ರಿಯನಾಗಿದ್ದು ಬ್ರಿಟಿಷ್ ‌ಸಾಮ್ರಾಜ್ಯದ ಆಶ್ರಯದಲ್ಲಿ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ದೊರೆಯಲೆಂದು ಆಶಿಸಿದ್ದನು. ಆದರೆ ಇದಕ್ಕಿಂತ ಮಿಗಿಲಾಗಿ ಅವನೊಬ್ಬ ಇಂಗ್ಲಿಷ್‌ ದೇಶಭಕ್ತನಾಗಿದ್ದನು. ಬ್ರಿಟಿಷ್ ‌ಆಳ್ವಿಕೆಗೆ ವಿಪತ್ತು ಸಂಭವಿಸಲಿದೆಯೆಂಬುದು ತಿಳಿಯುತ್ತಲೇ ಅವನು ಜನರ ಅಸಮಾಧಾನಕ್ಕೆ ಸುರಕ್ಷಾ ಮುಚ್ಚಳ ಸೃಷ್ಟಿಸಲು ನಿರ್ಧರಿಸಿದನು. ಇದನ್ನು ಸಮರ್ಥಿಸಲು ವೆಡ್ಡರ ಬರ್ನ್‌ನ ಪುಸ್ತಕದಲ್ಲಿನ ಹ್ಯೂಮ್‌ನ ಉದ್ದವಾದ ಟಿಪ್ಪಣಿಗಳನ್ನು ಮತ್ತು ಅವುಗಳ ಬಗ್ಗೆ ಲೇಖಕ ತನ್ನ ಅಭಿಪ್ರಾಯ ಬರೆದ ಬಗ್ಗೆ ಲಾಲಾ ಲಜಪತರಾಯ್‌ ವಿವರಣೆ ಇತ್ತನು. ಅಂದಿನ ಸ್ಥಿತಿಗತಿಯ ಬಗ್ಗೆ ಬಡಜನರಲ್ಲಿ ನಿರಾಶೆ ವ್ಯಾಪಿಸಿತ್ತೆಂಬುದು ಆ ವರದಿಗಳಲ್ಲಿ ದೆಯೆಂದು ಅವನು ಉಲ್ಲೇಖಿಸಿದ್ದನು. ಸುಶಿಕ್ಷಿತ ವರ್ಗದ ಕೆಲ ಜನರು ನಾಯಕತ್ವ ವಹಿಸಿಕೊಂಡು ರಾಷ್ಟ್ರೀಯ ಕ್ರಾಂತಿಪಡೆಗೆ ಜನರನ್ನೊಯ್ಯಬಹುದೆಂಬ ಅಂಶ ಕೂಡಾ ಈ ವರದಿಗಳಲ್ಲಿತ್ತು.

ಆದರೆ ಲಾಲಾ ಲಜಪತರಾಯ್‌ ಈ ಏಳು ಸಂಪುಟಗಳ ವಿಶೇಷ ಲಕ್ಷಣ ಮತ್ತು ಹುಟ್ಟಿಕೊಂಡ ರೀತಿಯ ಬಗ್ಗೆ ವಿವರಣೆ ನೀಡಿರಲಿಲ್ಲ. ೧೯೩೩ರಲ್ಲಿ ಗುರುಮುಖ ನಿಹಾಲಸಿಂಗ್‌, ಅವು ಸರಕಾರಿ ವರದಿಗಳಲ್ಲವೆಂದು ಹೇಳಿದನು. ಅವು ಗುಪ್ತಚಾರ ವಿಭಾಗದಿಂದ ಪಡೆಯಲಾದ ಗುಪ್ತವರದಿಗಳಾಗಿದ್ದು, ಅಧಿಕಾರಿ ಹುದ್ದೆಯಲ್ಲಿದ್ದ ಹ್ಯೂಮ್‌ನಿಗೆ ಅವುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿರಬೇಕು. ಅಧಿಕಾರದ ಬಲದಿಂದಾಗಿ ಈ ಗುಪ್ತ ಪೊಲೀಸ್‌ವರದಿಗಳು ಹ್ಯೂಮ್‌ನ ಕೈ ಸೇರಲು ಸಾಧ್ಯವಾಯಿತೆಂಬುದನ್ನು ಆರ್. ಪಾಮೆದತ್ತ ಕೂಡಾ ಹೇಳಿದ್ದಾರೆ. ಇದೊಂದು ಚರಿತ್ರಾರ್ಹ ಘಟನೆಯೆಂದು ಆರ್‌. ಸಿ. ಮುಜುಂದಾರ್‌ ಮತ್ತು ತಾರಾಚಂದ್‌ ಅಭಿಪ್ರಾಯ ಪಟ್ಟಿದ್ದಾರೆ. ಹ್ಯೂಮ್‌ನ ಸಂಪುಟಗಳು ಅಧಿಕೃತ ದಾಖಲೆಗಳೆಂಬ ನಂಬಿಕೆ ಇಷ್ಟು ಬೇರೂರಿದೆಯೆಂದರೆ ೧೯೫೦ರ ದಶಕದಲ್ಲಿ ಬಹಳಷ್ಟು ಇತಿಹಾಸಕಾರರು ಇವುಗಳನ್ನು ಶೋಧಿಸತೊಡಗಿದರು. ಅವರು ವಿಫಲರಾದಾಗ, ಬಹುಶಃ ಬ್ರಿಟಿಷರು ೧೯೪೭ರಲ್ಲಿ ನಿರ್ಗಮಿಸುವ ಮೊದಲು ಅವುಗಳನ್ನು ನಾಶಪಡಿಸಿರಬೇಕೆಂದು ಹೇಳಿದರು. ಈ ಇತಿಹಾಸಕಾರರು ಸ್ವಲ್ಪವಾದರೂ ಇತಿಹಾಸ ಲೇಖನ ಜ್ಞಾನವನ್ನು ಬಳಸಿದ್ದರೆ, ಮೂರು ಸ್ತರಗಳಲ್ಲಿ ಐತಿಹಾಸಿಕ ಪ್ರಮಾಣ ಅವರಿಗೆ ದೊರಕುತ್ತಿತ್ತು. ಮೊದಲನೆಯದು, ೧೮೭೦ರಲ್ಲಿ ಭಾರತ ಸರಕಾರ ಎಂಥ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿತ್ತೆಂಬುದಕ್ಕೆ ಸಂಬಂಧಿಸಿದೆ. ಕಂದಾಯ, ಕೃಷಿ ಮತ್ತು ವಾಣಿಜ್ಯ ಖಾತೆಗಳ ಕಾರ್ಯದರ್ಶಿಯಾಗಿ ಹ್ಯೂಮ್‌ ಕಾರ್ಯ ನಿರ್ವಹಿಸುತ್ತಿದ್ದನು. ಇಂಥ ಖಾತೆಗಳ ಒಬ್ಬ ಕಾರ್ಯದರ್ಶಿಗೆ, ಗೃಹಶಾಖೆಯ ಕಡತ ಸಿಗಲು ಹೇಗೆ ಸಾಧ್ಯ? ಅವನಿದ್ದದ್ದು ಶೀಮ್ಲಾದಲ್ಲಿ, ಗೃಹಖಾತೆಯ ಕಡತಗಳಿದ್ದು ದಿಲ್ಲಿಯಲ್ಲಿ. ಕ್ರಾಂತಿಯ ಭಯದಿಂದಾಗಿ ಕಾಂಗ್ರೆಸ್ಸಿನ ಸ್ಥಾಪನೆಯಾಯಿತೆನ್ನಬೇಕಾದರೆ, ಅದಕ್ಕಾಗಿ ಏಳು ವರ್ಷಗಳಷ್ಟು ದೀರ್ಘ ಅವಧಿಯವರೆಗೆ ಅವರೇಕೆ ಕಾದರು?

ಇವು ಸರ್ಕಾರಿ ದಾಖಲೆಗಳಾಗಿರದಿದ್ದರೆ, ಮತ್ತೇನಾಗಿದ್ದವು? ಇದು ವೆಡ್ಡರಬರ್ನ್‌ನ ಕೃತಿಯಲ್ಲಿ ದೊರೆಯುತ್ತದೆ. ಇಲ್ಲಿಂದ ಐತಿಹಾಸಿಕ ಪ್ರಮಾಣದ ಎರಡನೆ ಸ್ತರಕ್ಕೆ ಬರುತ್ತೇವೆ. ಈ ಸಂಪುಟಗಳಲ್ಲೇನಿದೆ ಮತ್ತು ಹ್ಯೂಮ್‌ನಿಗೆ ಅವುಗಳನ್ನು ಒದಗಿಸಿದವರಾರೆಂಬುದನ್ನು ವೆಡ್ಡರಬರ್ನ್‌ ಓದುಗನಿಗೆ ತಿಳಿಸುತ್ತಾನೆ. ಈ ಏಳು ಸಂಪುಟಗಳ ಪ್ರಮಾಣವನ್ನು ಹ್ಯೂಮ್‌ನಿಗೆ ತೋರಿಸಿದವರು ಗುರುಗಳು ಅಥವಾ ಭಾರತದ ಧಾರ್ಮಿಕ ಮುಖಂಡರು. ಇವರು ತಮ್ಮ ಹಿಂಬಾಲಕರ ಅಥವಾ ಶಿಷ್ಯರ ಮೂಲಕ ಸಾವಿರಾರು ವರದಿಗಳನ್ನು ಕಳಿಸಿದರು. ಹ್ಯೂಮ್‌ನಿಗೆ ಸರ್ಕಾರಿ ವಲಯಗಳಲ್ಲಿ ಪ್ರವೇಶವಿದ್ದುದರಿಂದ ಅವರೆಲ್ಲ ಆತನೊಡನೆ ಸಂಪರ್ಕವಿಟ್ಟುಕೊಂಡಿದ್ದರಲ್ಲದೆ, ಅನಾಹುತವಾಗುವುದನ್ನು ತಪ್ಪಿಸುವಲ್ಲಿ ಕಾತರರಾಗಿದ್ದರು.

ಈ ಗುರುಗಳ ಮತ್ತು ಶಿಷ್ಯರ ಸಂಪೂರ್ಣ ಮನೋಭಾವವನ್ನು ವೆಡ್ಡರಬರ್ನ್‌ ಇನ್ನೂ ಹೊರಗೆಡಹಿರಲಿಲ್ಲವೆಂಬುದು ಚರಿತ್ರೆ ರಚನಾಶಾಸ್ತ್ರದ ಮೂರನೇ ಸ್ತರವಾಗಿದೆ. ಪೂರ್ವದ ವಿಚಿತ್ರ ಧಾರ್ಮಿಕ ವಿಚಾರಧಾರೆಯನ್ನನುಸರಿಸುತ್ತಿದ್ದುದರಿಂದ ಅವರಲ್ಲಿ ಅದ್ಭುತವಾದ ಮಂತ್ರಶಕ್ತಿಯಿರುತ್ತದೆಂದು ನಂಬಲಾಗಿತ್ತು. ಅವರು ಸಾವಿರಾರು ಮೈಲುಗಳಷ್ಟು ಅಂತರದಿಂದ ಸಂಪರ್ಕಿಸಿ ನಿರ್ದೇಶನ ನೀಡಬಲ್ಲವರಾಗಿದ್ದರು. ಯಾರಿಗೂ ಗೋಚರವಾಗದಂತೆ, ಎಲ್ಲೋ ಕುಳಿತು ಜನರ ವಿಚಾರಗಳನ್ನು ಮತ್ತು ಅಭಿಪ್ರಾಯಗಳನ್ನು ಅವರಿಗೆ ತಿಳಿಯದಂತೆಯೇ ನಿಯಂತ್ರಿಸಬಲ್ಲರಾಗಿದ್ದರೆಂದು ಮ್ಯಾಡಮ್‌ ಬ್ಲಾವಟಸ್ಕಿಗೆ ತಿಳಿದಿತ್ತು. ಇದಲ್ಲದೆ ವೈಸರಾಯ್‌ ರಿಪ್ಪನ್‌ ಮತ್ತು ಡಫರಿನ್ನರ ಖಾಸಗಿ ಕಾಗದಗಳಲ್ಲೂ ಇದರ ಉಲ್ಲೇಖವಿತ್ತು.

ಈ ಗುರುಗಳ ಜೊತೆಗೆ ಸಂಪರ್ಕವಿದೆಯೆಂದೂ ಮತ್ತು ಅವರನ್ನು ಮಹಾತ್ಮರೆಂದು ವರ್ಣಿಸುತ್ತಿದ್ದ ಮ್ಯಾಡಮ್‌ ಬ್ಲಾವಟಸ್ಕಿಯ ಪ್ರಭಾವಕ್ಕೆ ೧೮೮೧ರಲ್ಲಿ ಹ್ಯೂಮ್‌ ಒಳಗಾದನು. ಅವರೆಲ್ಲ ಟಿಬೆಟ್ಟಿನಲ್ಲಿದ್ದುಕೊಂಡು ವಿಶ್ವದ ಯಾವುದೇ ಭಾಗದ ಜನರೊಡನೆ ಸಂಪರ್ಕಿಸುತ್ತಿದ್ದರು. ಈ ಮಹಾತ್ಮರೊಡನೆ ಸಂಪರ್ಕವಿಟ್ಟುಕೊಳ್ಳುವಲ್ಲಿ ಮ್ಯಾಡಮ್‌ ಬ್ಲಾವಟಸ್ಕಿ ಹ್ಯೂಮ್‌ನಿಗೆ ಸಹಾಯ ಮಾಡಿದಳು. ಈ ಶಿಷ್ಯರ ಮೂಲಕ ಅವರು ಭಾರತದ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡರು. ‘ಪಯೋನಿಯರ್‌’ ಪತ್ರಿಕೆಯ ಸಂಪಾದಕ ಹಾಗೂ ಮ್ಯಾಡಮ್‌ ಬ್ಲಾವಟಸ್ಕಿಯ ಇನ್ನೊಬ್ಬ ಅನುಯಾಯಿಯಾಗಿದ್ದ ಎ. ಪಿ. ಸಿನ್ನೆಟ್‌, ೧೮೮೦ರಲ್ಲಿ ಪ್ರಕಟಗೊಂಡ ತನ್ನ ಪುಸ್ತಕದಲ್ಲಿ, ಈ ಮಹಾತ್ಮರು ತಮ್ಮ ಮಂತ್ರಶಕ್ತಿಯನ್ನು ಬಳಸಿಕೊಂಡು ಭಾರತೀಯ ಜನಸಮುದಾಯವನ್ನು ನಿಯಂತ್ರಿಸಿದವರಲ್ಲದೆ ಬ್ರಿಟಿಷ್ ‌ಚಕ್ರಾಧಿಪತ್ಯವನ್ನು ಉಳಿಸಿದರು. ಭವಿಷ್ಯದಲ್ಲಿ ಕೂಡಾ ಅದನ್ನೇ ಮಾಡುವರೆಂದು ಬರೆದಿದ್ದನು. ಹ್ಯೂಮ್‌ ಇದೆಲ್ಲವನ್ನು ನಂಬಿದನು. ಈ ಮಹಾತ್ಮರೊಡನೆ ಪತ್ರ ವ್ಯವಹಾರ ನಡೆಸಿ ವರ್ತಮಾನ ಮತ್ತು ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಯಸಿದನು. ಇದರ ಮೂಲಕ ಭಾರತೀಯ ಆಡಳಿತವನ್ನು ಸುಧಾರಿಸಿ ಅದು ಭಾರತೀಯರ ಅಭಿಪ್ರಾಯಕ್ಕೆ ಇನ್ನಷ್ಟು ಸ್ಪಂದಿಸುವಂತೆ ಮಾಡಬಯಸಿದನು.

ಈ ಧಾರ್ಮಿಕ ಮುಖಂಡರ ಬಗ್ಗೆ ಮತ್ತು ಆ ಏಳು ಸಂಪುಟಗಳ ಬಗ್ಗೆ ಯಾವುದೇ ನೇರ ಪ್ರಮಾಣ ನೀಡಲು ಹ್ಯೂಮ್‌ಸಿದ್ಧನಿರಲಿಲ್ಲ. ಹೀಗಾಗಿ, ಹ್ಯೂಮ್‌ ನೋಡಿದ ಏಳು ಸಂಪುಟಗಳು ಮಹಾತ್ಮರಿಂದ ಮತ್ತು ಗುರುಗಳಿಂದ ಸಿದ್ಧಪಡಿಸಲಾಗಿತ್ತೇ ವಿನಃ ಕಾಂಗ್ರೆಸ್ಸಿಗರಿಂದಲ್ಲವೆಂಬುದು ಸ್ಪಷ್ಟವಾಗುತ್ತದೆ.

೧೮೯೮ರಲ್ಲಿ ‘ಇಂಡಿಯನ್‌ ಪೊಲಿಟಿಕ್ಸ್‌’ನಲ್ಲಿ ಡಬ್ಲ್ಯು.ಸಿ. ಬ್ಯಾನರ್ಜಿಯು ಕಾಂಗ್ರೆಸ್ಸು ಶ್ರೀಮಂತ ವರ್ಗದ ಡಫರಿನ್‌ ಮತ್ತು ಅವಾ ಇವರ ಕೊಡುಗೆ ಎಂದು ಹೇಳಿಕೆ ನೀಡಿದ್ದು ‘ಸುರಕ್ಷಾ ಕವಾಟ’ ವಾದವನ್ನು ಇನ್ನಷ್ಟು ಸಮರ್ಥಿಸಿತು. ವರ್ಷಕ್ಕೊಮ್ಮೆ ಭಾರತೀಯ ಮುಖಂಡರನ್ನು ಒಂದೆಡೆ ಕರೆಸಿ ಅವರೊಡನೆ ಸಾಮಾಜಿಕ ವಿಷಯಗಳನ್ನು ಚರ್ಚಿಸಿ, ಈ ಚರ್ಚೆಗಳಲ್ಲಿ ರಾಜಕೀಯ ಬರದಂತೆ ನೋಡಿಕೊಳ್ಳಬೇಕೆಂದುಕೊಂಡನೆಂದು ೧೮೮೪ರಲ್ಲಿ ಬ್ಯಾನರ್ಜಿ ಹೇಳಿದನು. ಆದರೆ ಇದು ನಿಜವಲ್ಲ. ಭಾರತೀಯ ಮುಖಂಡರ ಜೊತೆ ಹ್ಯೂಮ್‌ ನಡೆಸಿದ ಚರ್ಚೆಗಳೆಲ್ಲ ರಾಜಕೀಯಕ್ಕೆ ಸಂಬಂಧಿಸಿದ್ದವು. ಹಿಂದಿನ ಎಲ್ಲ ಸಂಘಗಳಲ್ಲಿ ರಾಜಕೀಯ ಲಕ್ಷಣವಿತ್ತು. ‘ಇಂಡಿಯನ್‌ ಸ್ಪೆಕ್ಟೇಟರ್‌’ನಲ್ಲಿ ಜಿ.ಎಮ್‌.ಮಲ್‌ಬರಿ ಬರೆದ ಸಂಪಾದಕೀಯಗಳನ್ನು ಟೀಕಿಸಿದ ಹ್ಯೂಮ್‌, ಒಂದು ಸಾಮಾಜಿಕ ಸುಧಾರಣಾ ಚಳವಳಿ ಪ್ರಾರಂಭಿಸುವಂತೆ ಭಾರತೀಯರಿಗೆ ಪ್ರೇರೇಪಿಸಿದನು. ಹೀಗಾಗಿ ಡಫರಿನ್‌ ಮತ್ತು ಹ್ಯೂಮರ್‌ ಮಧ್ಯ ಭಿನ್ನಾಭಿಪ್ರಾಯವಿತ್ತೆಂಬುದು ಕಂಡುಬರುತ್ತದೆ. ಕೊನೆಗೂ, ಸುರಕ್ಷಾ ಕವಾಟವಾದವು ಕಾಂಗ್ರೆಸ್ಸಿನ ಉಗಮಕ್ಕೆ ಕಾರಣವಾಯಿತೆಂಬುದು, ಮೂಲತಃ ಹುಟ್ಟಿಸಿದ ಮಹಾತ್ಮರ ಪಾಲಿಗೆ ಬಿಡಲಾಯಿತು.

೧೮೮೫ರಲ್ಲಿ ಸ್ಥಾಪಿಸಲಾದ ಐ.ಎನ್‌.ಸಿ. ಹಠಾತ್ತನೆ ಸಂಭವಿಸಿದ ಘಟನೆ ಅಥವಾ ಐತಿಹಾಸಿಕ ಘಟನೆಯಾಗಿರಲಿಲ್ಲ. ೧೮೬೦ ಮತ್ತು ೧೮೭೦ ರ ದಶಕಗಳಲ್ಲಿ ಪ್ರಾರಂಭವಾದ ರಾಜಕೀಯ ಪ್ರಜ್ಞೆಯ ಈ ಪ್ರಕ್ರಿಯೆ, ೧೮೭೦ ಮತ್ತು ೧೮೮೦ರ ದಶಕಗಳಲ್ಲಿ ಮುಂದುವರೆದು ಉತ್ತುಂಗ ತಲುಪಿತ್ತು. ೧೮೮೫ ನೆಯ ವರ್ಷದಲ್ಲಿ ಈ ಪ್ರಕ್ರಿಯೆ ಒಂದು ಹೊಸ ತಿರುವನ್ನು ಪಡೆಯಿತು ಆ ವರ್ಷ ಭಾರತದ ವಿದ್ಯಾವಂತ ವರ್ಗ ಬ್ರಿಟಿಷರ ವಿರುದ್ಧ ಹೋರಾಡಲು ಒಂದು ಸಂಘವನ್ನು ಸ್ಥಾಪಿಸಿದರು. ಅಖಿಲ ಭಾರತ ರಾಷ್ಟ್ರೀಯ ಸಂಸ್ಥೆ ಎಂದು ಸ್ಥಾಪಿಸಲಾದ ಈ ಮಂಡಳಿಯು ರಾಷ್ಟ್ರೀಯತೆ ಮತ್ತು ರಾಜಕಾರಣದ ಒಂದು ವೇದಿಕೆ ಹಾಗೂ ಸಂಕೇತವಾಗುವುದಿತ್ತು. ಇದೆಲ್ಲವನ್ನು ಬ್ರಿಟಿಷರು ಸಂಶಯದಿಂದ ನೋಡಿದರು. ಈ ಹೊಸ ರಾಷ್ಟ್ರೀಯತಾವಾದಿಗಳು ತಮ್ಮನ್ನು ಹಿಂಸಿಸುತ್ತಿರುವ ಬ್ರಿಟಿಷ್ ‌ಆಡಳಿತವನ್ನು ವಿರೋಧಿಸಿದವರಲ್ಲದೆ ಬ್ರಿಟಿಷ್ ‌ಸರ್ಕಾರದ ಕಾರ್ಯನೀತಿಯನ್ನು ಟೀಕಿಸಿದರು. ಇದು ಸೌಮ್ಯವಾಗಿ ಕಂಡರೂ, ತಮ್ಮ ವಸಾಹತುಶಾಹಿ ಆಡಳಿತವನ್ನು ಇದು ಶಿಥಿಲಗೊಳಿಸುತ್ತದೆಂದುಕೊಂಡ ಬ್ರಿಟಿಷರು ಬಿಟ್ಟು ಕೊಡಲಿಲ್ಲ. ಹೀಗಾಗಿ ಒಂದು ಹೊಸತೆರನಾದ ರಾಜಕೀಯ ಜೀವನ ಲಕ್ಷಣ ಅಸ್ತಿತ್ವಕ್ಕೆ ಬರುವಂತೆ ಕಂಡಿತು.

೧೮೮೫ರ ಸಮಯಕ್ಕೆ, ಒಂದು ಅಖಿಲ ಭಾರತ ರಾಜಕೀಯ ಸಂಘದ ಸ್ಥಾಪನೆಯ ಅಗತ್ಯ ಧ್ಯೇಯವಾಗಿತ್ತು ಈ ಪ್ರಶ್ನೆಯನ್ನು ಕುರಿತು ಕಲ್ಕತ್ತಾದ ‘ಇಂಡಿಯನ್‌ ಮಿರರ್‌’ ಸತತವಾಗಿ ಪ್ರಚಾರ ಕಾರ್ಯ ನಡೆಸಿತು. ೧೮೮೩ರ ಡಿಸೆಂಬರ್‌ನಲ್ಲಿ ‘ದಿ ಇಂಡಿಯನ್‌ ಅಸೋಸಿಯೇಷನ್‌’ ಒಂದು ಅಖಿಲ ಭಾರತ ರಾಷ್ಟ್ರೀಯ ಸಮ್ಮೇಳನ ಮಾಡಿತಲ್ಲದೆ, ಇಂಥದೇ ಇನೊಂದು ಸಮ್ಮೇಳನ ೧೮೮೫ರ ಡಿಸೆಂಬರ್‌ನಲ್ಲಿ ನಡೆಸುವಂತೆ ಕರೆ ಕೊಟ್ಟಿತು.

ಹಿಂದಿನ ಹತ್ತು ವರ್ಷಗಳಲ್ಲಿ ಸಂಘಟಿಸಲಾದ ಅನೇಕ ಹೋರಾಟಗಳಿಂದಾಗಿ ಭಾರತೀಯರಿಗೆ ಈಗ ಅನುಭವ ಹಾಗೂ ಧೈರ್ಯ ಬಂದಿತ್ತು. ಅವರು ಶಸ್ತ್ರಾಸ್ತ್ರ ಕಾಯಿದೆ, ದೇಶೀಭಾಷೆಯ ಪತ್ರಿಕಾ ಕಾಯಿದೆ, ಅಂತರ್ದೇಶೀಯ ವಲಸೆ ಕಾಯಿದೆಗಳ ವಿರುದ್ಧ ಹೋರಾಟ ನಡೆಸಿದ್ದರು.

ಹಿಂದಿನ ವರ್ಷಗಳಲ್ಲಿ ಮಾಡಲಾದ ರಾಜಕೀಯ ಕೆಲಸದಿಂದಾಗಿ ಕಾಂಗ್ರೆಸ್ಸಿನ ಸ್ಥಾಪನೆ ಸಹಜ ಪ್ರಕ್ರಿಯೆ ಸ್ಥಾನ ಪಡೆಯಿತು. ೧೮೮೫ರ ಸಮಯಕ್ಕೆ ಭಾರತದ ರಾಜಕೀಯ ಬೆಳವಣಿಗೆ ಇಂಥ ಒಂದು ಹಂತಕ್ಕೆ ಬಂದಿತ್ತೆಂದರೆ, ಕೆಲವು ಮೌಲಿಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಹೊರಡಬೇಕಾಗಿತ್ತು. ಈ ಉದ್ದೇಶಗಳನ್ನು ಹೊಂದಿಸಿಕೊಳ್ಳುವುದಲ್ಲದ ಅವುಗಳ ಯಶಸ್ಸಿಗಾಗಿ ರಾಜಕೀಯ ಕಾರ್ಯಕರ್ತರನ್ನು, ಅಖಿಲಭಾರತ ಮಟ್ಟದಲ್ಲಿ ಒಂದು ಸಂಘದಡಿಯಲ್ಲಿ ಕಲೆಯುವಂತೆ ಮಾಡಬೇಕಾಗಿತ್ತು.

ಆಗ ತಾನೆ ಭಾರತ ಒಂದು ರಾಷ್ಟ್ರವಾಗುವ ಪ್ರಕ್ರಿಯೆಯಲ್ಲಿ ಪ್ರವೇಶ ಮಾಡಿತ್ತು. ಈ ಪ್ರಕ್ರಿಯೆಗೆ ಪ್ರೋತ್ಸಾಹ ನೀಡಿ ಎಲ್ಲ ಭಾರತೀಯರನ್ನು ಬೆಸೆದು ಒಂದು ರಾಷ್ಟ್ರವನ್ನಾಗಿ ಮಾಡುವುದೇ ಭಾರತದ ರಾಷ್ಟ್ರೀಯ ಚಳವಳಿ ಸ್ಥಾಪಕರ ಮುಖ್ಯ ಉದ್ದೇಶವಾಗಿತ್ತು. ತಿಲಕ, ಸುರೇಂದ್ರನಾಥ ಬ್ಯಾನರ್ಜಿಯವರು ಭಾರತವನ್ನು ನಿರ್ಮಾಣದಲ್ಲಿರುವ ರಾಷ್ಟ್ರವೆಂದು ಕರೆದರು. ಆದ್ದರಿಂದ ರಾಷ್ಟ್ರೀಯಭಾವವನ್ನು ಪ್ರೋತ್ಸಾಹಿಸುವುದೇ ಒಂದು ಮುಖ್ಯ ಉದ್ದೇಶವಾಗಿರಬೇಕೆಂದು ಅವರು ನಂಬಿದ್ದರು. ಹೀಗಾಗಿ ನಿರ್ಮಾಣ ಹಂತದಲ್ಲಿರುವ ಭಾರತವನ್ನು ಒಂದು ರಾಷ್ಟ್ರವನ್ನಾಗಿ ಮಾಡುವುದು ಒಂದು ಮುಂದುವರೆಸಲಾಗುವ ಐತಿಹಾಸಿಕ ಪ್ರಕ್ರಿಯೆಯಾಗಿತ್ತು. ರಾಷ್ಟ್ರೀಯ ಪ್ರಜ್ಞೆಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಜನರನ್ನು ತಲುಪಲು ಕಾಂಗ್ರೆಸ್‌ ಗೋಷ್ಠಿಗಳನ್ನು ಸರದಿ ಪ್ರಕಾರ ವಿವಿಧೆಡೆ ಸಂಘಟಿಸಬೇಕೆಂದು ನಿರ್ಧರಿಸಲಾಯಿತು. ಪ್ರಾರಂಭದಲ್ಲಿದ್ದ ನಾಯಕರು ಒಂದು ಧರ್ಮನಿರಪೇಕ್ಷ ರಾಷ್ಟ್ರವನ್ನು ಕಟ್ಟಬೇಕೆಂದು ನಿರ್ಧರಿಸಿದ್ದರು. ಯಾವುದೇ ಗೊತ್ತುವಳಿಯನ್ನು ಹಿಂದೂಗಳಾಗಲಿ ಅಥವಾ ಮುಸಲ್ಮಾನರಾಗಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿರೋಧ ವ್ಯಕ್ತಪಡಿಸಿದರೆ ಅಂಥ ಗೊತ್ತುವಳಿಯನ್ನು ಅಂಗೀಕರಿಸಬಾರದೆಂದು ೧೮೮೮ರಲ್ಲಿ ಒಂದು ನಿಯಮ ಮಾಡಿದರು.

ಒಂದು ಸಾಮಾನ್ಯ ವೇದಿಕೆ ಅಥವಾ ಕಾರ್ಯಕ್ರಮ ಹಾಕಿಕೊಳ್ಳುವುದರ ಮೂಲಕ ದೇಶದ ವಿವಿಧ ಭಾಗಗಳ ಕಾರ್ಯಕರ್ತರು ಒಂದೆಡೆ ಸೇರಿ, ತಮ್ಮ ರಾಜಕೀಯ ಚಟುವಟಿಕೆ ನಡೆಸಿ, ಜನರಲ್ಲಿ ಅರಿವು ಮೂಡಿಸುವುದಲ್ಲದೆ ಅವರನ್ನು ಅಖಿಲ ಭಾರತ ಮಟ್ಟಕ್ಕೇರುವಂತೆ ಮಾಡುವುದೇ ಕಾಂಗ್ರೆಸ್ಸಿನ ಎರಡನೇ ಮುಖ್ಯ ಉದ್ದೇಶವಾಗಿತ್ತು. ಜಾಗೃತಿ ತರಬೇತುಗೊಳಿಸುವ ಮತ್ತು ಜನಾಭಿಪ್ರಾಯವನ್ನು ಸಂಘಟಿಸುವುದನ್ನು ಒಂದು ಪ್ರಮುಖ ಕಾರ್ಯವೆಂದು ಕಾಗ್ರೆಸ್ಸಿನ ಮುಖಂಡರು ಪರಿಗಣಿಸಿದರು. ಆದರೆ ಈ ಕೆಲಸ ಅಷ್ಟೇನು ಸುಲಭಸಾಧ್ಯವಾದುದಾಗಿರಲಿಲ್ಲ. ಇದಕ್ಕಾಗಿ ದೀರ್ಘಾವಧಿಯ ರಾಜಕೀಯ ಸ್ವರೂಪ ನೀಡಬೇಕಾಗುತ್ತದೆ. ಅವರು ಜನರ ಚಳವಳಿಗಳನ್ನು ನಡೆಸಲಿಲ್ಲ. ರಾಜಕೀಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂಬುದು ರಾನಡೆಯವರ ದೃಢನಂಬಿಕೆಯಾಗಿತ್ತು.

ರಾಷ್ಟ್ರೀಯ ಚಳವಳಿಯ ನಿರ್ಮಾಣದ ಮೂಲ ಉದ್ದೇಶದ ಅಂಗವಾಗಿ ಸಾಮಾನ್ಯ ಅಖಿಲ ಭಾರತೀಯ ರಾಜಕೀಯ ನಾಯತ್ವವನ್ನು ಸೃಷ್ಟಿಸುವುದು ಅವಶ್ಯವಾಗಿತ್ತು. ಇದನ್ನು ನೆರವೇರಿಸಬೇಕಾದರೆ, ಮುಖಂಡರೆಲ್ಲ ಸ್ವತಃ ಒಂದಾಗಬೇಕಲ್ಲದೆ, ಅವರು ಸಾಮೂಹಿಕವಾದ ಗುರುತನ್ನು ಸ್ವೀಕರಿಸುವುದಲ್ಲದೆ ಅವರೆಲ್ಲ ಒಬ್ಬರನೊಬ್ಬರು ಅರಿತುಕೊಂಡು ಒಂದು ಸಾಮಾನ್ಯ ಮನೋಭಾವ ತಾಳಬೇಕಿತ್ತು.

ಪ್ರಾರಂಭದ ದಿಶೆಯಲ್ಲಿನ ಈ ರಾಷ್ಟ್ರವಾದಿ ಮುಖಂಡರು ರಾಜಕೀಯ ಪ್ರಜಾತಂತ್ರವನ್ನು ಅಳವಡಿಸಿಕೊಳ್ಳುವುದು ಹಾಗೂ ಅದನ್ನು ಸ್ವದೇಶೀಕರಣಗೊಳಿಸುವುದು ತಮ್ಮ ಪ್ರಮುಖ ಉದ್ದೇಶಗಳಲ್ಲೊಂದೆಂದುಕೊಂಡಿದ್ದರು. ಮೊದಲಿನಿಂದಲೂ ಕಾಂಗ್ರೆಸ್‌ ಸಭೆಯ ನಡವಳಿಕೆಗಳನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಸಲಾಗುತ್ತಿತ್ತು. ಬ್ರಿಟಿಷ್ ‌ವಸಾಹತು ಪದ್ಧತಿಯ ಮೂಲ ಲಕ್ಷಣವನ್ನು ಅವರು ಶೋಧಿಸಬೇಕಾಗಿತ್ತು. ಆದರೆ ಇದಕ್ಕಾಗಿ ಅವರು ಬ್ರಿಟಿಷರೊಡನೆ ತಾತ್ವಿಕ ಹೋರಾಟವೊಂದನ್ನು ನಡೆಸಿದರು.

ಸಾಮ್ರಾಜ್ಯವಾದದ ವಿರುದ್ಧ ಹೋರಾಟವೆಂದರೆ, ವಸಾಹತುವಾದದ ವಿರುದ್ಧ ಹೋರಾಟವಾಗುವ ಮುನ್ನ ವಸಾಹತುವಾದದ ಬಗೆಗಿನ ಹೋರಾಟವೆಂಬುದನ್ನು ಮರೆಯಲಾಗದು. ಕಾಂಗ್ರೆಸ್ಸಿನ ಸಂಸ್ಥಾಪಕರು ವಸಾಹತು ಪದ್ಧತಿಯ ವಿರುದ್ಧ ಬಹಳ ಒಳ್ಳೆಯ ರೀತಿಯಲ್ಲಿ ಹೋರಾಟ ನಡೆಸಿದರು.

ಒಟ್ಟಾರೆ ಒಂದು ಧರ್ಮನಿರಪೇಕ್ಷ ಹಾಗೂ ಪ್ರಜಾಸತ್ತಾತ್ಮಕ ರಾಷ್ಟ್ರೀಯ ಚಳವಳಿಗೆ ಪಾಯ ಹಾಕಬೇಕಂಬುದೇ ಪ್ರಾರಂಭದಲ್ಲಿದ್ದ ನಾಯಕರ ಉದ್ದೇಶವಾಗಿತ್ತು. ಇದರ ಮೂಲಕ ರಾಜಕೀಯ ಚಳವಳಿ ನಡೆಸುವುದಲ್ಲದೇ, ಜನರಲ್ಲಿ ರಾಜಕೀಯ ಅರಿವು ಮೂಡಿಸುವುದು, ಚಳವಳಿಯ ಕೇಂದ್ರ ಸ್ಥಾನಗಳನ್ನು ಸ್ಥಾಪಿಸುವುದು ಮತ್ತು ವಸಾಹತು ಪದ್ಧತಿಯ ವಿರುದ್ಧ ರಾಷ್ಟ್ರೀಯತಾ ಭಾವನೆಯನ್ನು ಬೆಳೆಸುವುದಲ್ಲದೆ ಪ್ರಸಾರ ಮಾಡುವುದೂ ಅವರ ಉದ್ದೇಶವಾಗಿತ್ತು.

ಇನ್ನು ಎ.ಓ.ಹ್ಯೂಮ್‌ನ ಪಾತ್ರದ ಬಗ್ಗೆ ಹೇಳಬೇಕೆಂದರೆ, ಕಾಂಗ್ರೆಸ್ಸಿನ ಮುಖ್ಯ ಸಂಘಟಕನಾಗಿ ಕಾರ್ಯನಿರ್ವಹಿಸಲು ಅವರಿಗೆ ಹ್ಯೂಮ್‌ ಏಕೆ ಬೇಕಾದ? ಅಂದಿನ ಸ್ಥಿತಿಗತಿಗಳೇ ಈ ಪ್ರಶ್ನಗೆ ಉತ್ತರ ನೀಡುತ್ತವೆ. ಅಂದಿನ ನಾಯಕರಲ್ಲಿ, ತಮ್ಮ ಕಾರ್ಯದ ಪ್ರಾರಂಭ ದೆಶೆಯಲ್ಲಿ ಆಡಳಿತಗಾರರ ಕೋಪವನ್ನು ಕೆರಳಿಸುವ ಇಚ್ಛೆ ಇರಲಿಲ್ಲ. ಈ ಸಂಘದ ಮುಖ್ಯ ಸಂಘಟಕ ಒಬ್ಬ ನಿವೃತ್ತ ಬ್ರಿಟಿಷ್ ಅಧಿಕಾರಿಯಾಗಿದ್ದರೆ, ಆಡಳಿತಗಾರರು ಈ ಸಂಘದ ಬಗ್ಗೆ ಸಂಶಯ ತಾಳುವ ಹಾಗೂ ಟೀಕಿಸುವ ಪ್ರಮಾಣ ಕಡಿಮೆಯಾಗುತ್ತದೆಂದು ಅವರು ಭಾವಿಸಿದರು. ೧೯೧೩ರಲ್ಲಿ ಗೋಖಲೆಯವರು “ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ಸನ್ನು ಸ್ಥಾಪಿಸಲು ಯಾವ ಭಾರತೀಯನಿಗೂ ಸಾಧ್ಯವಾಗುತ್ತಿರಲಿಲ್ಲಿ. ಭಾರತೀಯ ನಾಯಕರು ಇಂಥ ಚಳವಳಿಯನ್ನು ಪ್ರಾರಂಭಿಸಲು ಮುಂದಾಗಿದ್ದರೆ ಭಾರತದಲ್ಲಿದ್ದ ಅಧಿಕಾರಿಗಳು ಈ ಚಳವಳಿ ಅಸ್ತಿತ್ವಕ್ಕೆ ಬರಲು ಬಿಡುತ್ತಿರಲಿಲ್ಲ” ವೆಂದು ಹೇಳಿದರು. ಮುಂದಿನ ಶತಮಾನದಲ್ಲಿ ಈ ಕಾರಣಕ್ಕಾಗಿಯೇ ಕಾಂಗ್ರೆಸ್ಸಿನ ಹುಟ್ಟಿನ ಬಗ್ಗೆ ನಡೆದ ಚರ್ಚೆಗಳು ಹೊಸ ರಾಜಕೀಯ ಆಯಾಮವನ್ನೇ ಸೃಷ್ಟಿಸಿತ್ತೆನ್ನುವುದು ಗಮನಾರ್ಹವಾಗಿದೆ.