೧೮೮೫ರಲ್ಲಿ ಕಾಂಗ್ರೆಸ್‌ನ ಸ್ಥಾಪನೆಯಾದ ನಂತರ ಬ್ರಿಟಿಷರು ಒಂದಲ್ಲ ಒಂದು ರೀತಿಯಲ್ಲಿ ಕಾಂಗ್ರೆಸ್‌ನ ಮೇಲೆ ಹರಿಹಾಯಲಿಕ್ಕೆ ಆರಂಭಿಸಿದ್ದರು. ವೈಸರಾಯ್‌ ಆಗಿದ್ದ ಡಫರಿನ್ನನು, ಕಾಂಗ್ರೆಸ್‌ ಕೇವಲ ಟೀಕೆಗಳನ್ನು ಮಾತ್ರ ಮಾಡುತ್ತಿದೆ ಹಾಗೂ ಈಡೇರಿಸಲಿಕ್ಕಾಗದ ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ಹೇಳತೊಡಗಿದನು. ಈ ಹಿನ್ನೆಲೆಯಲ್ಲಿ ಡಫರಿನ್ನನು ರಾಜಕೀಯ ಅಂಶಗಳಿಗಿಂತ ಸಾಮಾಜಿಕ ಅಂಶಗಳಿಗೆ ಹೆಚ್ಚು ಮಹತ್ವ ಕೊಡಲು ಕಾಂಗ್ರೆಸ್ಸಿಗೆ ಕರೆ ನೀಡಿದನು. ಆದರೆ ಕಾಂಗ್ರೆಸ್ಸಿನವರು ಇವನ ಕರೆಯನ್ನು ತಿರಸ್ಕರಿಸಿದರು. ಪರಿಸ್ಥಿತಿ ಹೀಗಿದ್ದರೂ ಬ್ರಿಟಿಷ್ ‌ಸರಕಾರವು ಕಾಂಗ್ರೆಸ್ಸಿಗರ ಮೇಲೆ ಸಾರ್ವಜನಿಕವಾಗಿ ದಬ್ಬಾಳಿಕೆ ಮಾಡಲಿಲ್ಲ ಎಂದು ಇತಿಹಾಸಕಾರ ಬಿಪಿನ್‌ಚಂದ್ರ ಬರೆಯುತ್ತಾರೆ. ಏಕೆಂದರೆ ಕಾಂಗ್ರೆಸ್ಸಿನಲ್ಲಿರುವ ಕೆಲವು ಬೆರಳೆಣಿಕೆಯ ಬುದ್ದಿವಂತರು ರಾಷ್ಟ್ರೀಯ ಚಳವಳಿಗೆ ಸಂಬಂಧಿಸಿದ ಅಕಾಡೆಮಿಕ್‌ ಚರ್ಚೆಗಳಲ್ಲಿ ಮುಳುಗಿರುತ್ತಾರೆಂದು ಬ್ರಿಟಿಷ್ ಆಳರಸರು ನಂಬಿದ್ದರು. ಆದರೆ ಬ್ರಿಟಿಷರ ನಂಬಿಕೆ ಹುಸಿಯಾಯಿತು. ಕಾಂಗ್ರೆಸ್‌ ಕಾರ್ಯಕರ್ತರು ದೇಶಿ ಭಾಷೆಗಳಲ್ಲಿ ಪತ್ರಿಕೆಗಳನ್ನು ತಂದು, ಅದರ ಮೂಲಕ ರಾಜಕೀಯ ಸಮಸ್ಯೆಗಳನ್ನು ಚರ್ಚಿಸಲಿಕ್ಕೆ ಆರಂಭಿಸಿದರು. ಹಾಗೆಯೇ ಸಾವಿರಾರು ಕರಪತ್ರಗಳನ್ನು ಅವರು ಜನರಿಗೆ ಮುಟ್ಟಿಸುವ ಕೆಲಸವನ್ನೂ ಮಾಡಲಾರಂಭಿಸಿದರು. (ಡ್ರೈನ್‌) ಸೋರಿಕೆ ಸಿದ್ಧಾಂತವನ್ನು ಜನರಿಗೆ ಮನಮುಟ್ಟುವಂತೆ ಹೇಳಲು ಆರಂಭಿಸಿದ ಕಾಂಗ್ರೆಸ್ಸಿಗರನ್ನು ಬ್ರಿಟಿಷರು “ದೇಶದ್ರೋಹಿ”ಗಳೆಂದು ಕರೆದರು. ರಾಷ್ಟ್ರೀಯ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಾರ್ಯಕರ್ತರ ಮೇಲೆ ಬ್ರಿಟಿಷರು ಆಪಾದನೆಗಳನ್ನು ಮಾಡಲಾರಂಭಿಸಿದರು. ಅವರನ್ನು “ಅವಿಧೇಯ ಬಾಬುಗಳು” (ಬೆಂಗಾಲಿಗಳನ್ನು ಬಾಬು ಎಂದು ಕರೆಯುವುದು ರೂಢಿಯಾಗಿತ್ತು), “ದೇಶದ್ರೋಹಿ ಬ್ರಾಹ್ಮಣರು”, “ಹಿಂಸೆಯನ್ನು ಪ್ರಚೋದಿಸುವ ಖಳನಾಯಕರು”-ಎಂಬಿತ್ಯಾದಿ ಭಾಷೆಗಳಿಂದ ಬ್ರಿಟಿಷರು ಕಾಂಗ್ರೆಸ್ಸಿಗರನ್ನು ಜರೆದರು. ಕಾಂಗ್ರೆಸ್ಸನ್ನು “ದೇಶದ್ರೋಹಿಗಳನ್ನು ತಯಾರಿಸುವ ಕಾರ್ಖಾನೆ” ಎಂದು ಕರೆದ ಬ್ರಿಟಿಷರು “ವೃತ್ತಿಯಲ್ಲಿ ಅಸಮಾಧಾನಗೊಂಡ ಕೆಲವು ವಕೀಲರು ಹಾಗೂ ಬ್ರಿಟಿಷರ ಕಛೇರಿಯಲ್ಲಿ ಕೆಲಸ ಸಿಗದ ಕೆಲವು ನಿರುದ್ಯೋಗಿಗಳೇ ಕಾಂಗ್ರೆಸ್ಸಿಗರು” ಎಂದರು. ೧೮೮೭ರಲ್ಲಿ ಡಫರಿನ್ನನು ಸಾರ್ವಜನಿಕವಾಗಿ ಕಾಂಗ್ರೆಸ್ಸನ್ನು ಹೀಯಾಳಿಸುತ್ತಾ “ಕೇವಲ ಕೆಲವು ಬೆರಳೆಣಿಕೆಯ ಜನರನ್ನು ಮಾತ್ರ” ಕಾಗ್ರೆಸ್‌ ಪ್ರತಿನಿಧಿಸುತ್ತದೆ ಎಂದನು. ಕೆಲವು ಬ್ರಿಟಿಷರಂತೂ ಕಾಂಗ್ರೆಸ್ ರಷ್ಯಾದಿಂದ ಬಂಗಾರವನ್ನು ಪಡೆದಿದೆ ಎಂದು ಆಪಾದಿಸಿದ್ದನ್ನು ಬಿಪಿನ್‌ಚಂದ್ರ ದಾಖಲಿಸಿದ್ದಾರೆ.

ಕಾಂಗ್ರೆಸ್‌ ಪಕ್ಷವು ದಿನದಿಂದ ದಿನಕ್ಕೆ ಬಲಿಷ್ಠಗೊಳ್ಳುತ್ತಿರುವ ಸಂದರ್ಭದಲ್ಲಿ ಬ್ರಿಟಿಷರು ತಮ್ಮ “ಒಡೆದು ಆಳುವ ನೀತಿ” ಯನ್ನು ಅನುಷ್ಠಾನಕ್ಕೆ ತಂದರು. ಬ್ರಿಟಿಷ್ ‌ಸಾಮ್ರಾಜ್ಯದ ಬುನಾದಿಯೇ ಅಲ್ಲಾಡುತ್ತಿರುವುದನ್ನು ಗಮನಿಸಿದ ಬ್ರಿಟಿಷ್ ‌ಆಳರಸರು ಸೈಯ್ಯದ್‌ ಅಹಮದ್‌ಖಾನ್, ರಾಜಾಶಿವಪ್ರಸಾದ್‌ ಮುಂತಾದ ಬ್ರಿಟಿಷ್ ‌ಪರ ವ್ಯಕ್ತಿಗಳ ಮೂಲಕ ಕಾಂಗ್ರೆಸ್‌ನ ವಿರುದ್ಧ ಪ್ರತಿ ಚಳವಳಿ ಹೂಡಲು ಸಫಲರಾದರು. ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಕೂಡ ಇವರು ಒಡಕನ್ನು ತಂದರು. ೧೮೫೭ರ ಘಟನೆಯ ನಂತರ ಮುಸ್ಲಿಮರ ಉನ್ನತ ವರ್ಗಗಳ ಜನರನ್ನು ಸದೆಬಡಿದು ಹಿಂದೂಗಳ ಮಧ್ಯಮ-ಉನ್ನತ ವರ್ಗಗಳ ಜನರಿಗೆ ಅನೇಕ ಸವಲತ್ತುಗಳನ್ನು ನೀಡಿದರು. ೧೮೭೦ರ ನಂತರ ಮಧ್ಯಮವರ್ಗದ ಮುಸ್ಲಿಮರನ್ನು ರಾಷ್ಟ್ರೀಯ ಚಳವಳಿಯ ವಿರುದ್ಧ ಬ್ರಿಟಿಷರು ಎತ್ತಿಕಟ್ಟಿದರು. ಹಿಂದಿ ಮತ್ತು ಉರ್ದು ಭಾಷೆಗಳಿಗೆ ಸಂಬಂಧಿಸಿದ ವಿವಾದಗಳಿಂದ ಹಿಂದೂ ಮತ್ತು ಮುಸ್ಲಿಮರ ನಡುವೆ ಭೇದ ಹುಟ್ಟಿಸಲು ಕಾರಣರಾದರು. ಸಾಂಪ್ರದಾಯಿಕ ಹಿಂದೂಗಳಿಂದ ಆರಂಭವಾದ ಗೋಸಂರಕ್ಷಣಾ ಚಳವಳಿಯನ್ನೂ ಬ್ರಿಟಿಷರು ದುರುಪಯೋಗಪಡಿಸಿಕೊಂಡರು. ಹಿಂದು ಮುಸ್ಲಿಮರ ನಡುವೆ ಬೇಧ ತರಲು ಮಾತ್ರ ಈ ರೀತಿಯ “ಒಡೆದು ಆಳುವ ನೀತಿ” ಮಿತಿಗೊಳ್ಳಲಿಲ್ಲ. ಬದಲಿಗೆ ಸಾಂಪ್ರದಾಯಿಕ ಊಳಿಗಮಾನ್ಯ ವರ್ಗ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿದ್ದ ಆಧುನಿಕ ಬುದ್ಧಿಜೀವಿಗಳ ನಡುವೆ, ಪ್ರಾಂತ್ಯ-ಪ್ರಾಂತ್ಯಗಳ ನಡುವೆ, ಜಾತಿ-ಜಾತಿಗಳ ನಡುವೆ, ಗುಂಪು-ಗುಂಪುಗಳ ನಡುವೆ “ಒಡೆದು ಆಳುವ ನೀತಿಯನ್ನು” ಪ್ರಯೋಗಿಸಲಾಯಿತು.

ಕಾಂಗ್ರೆಸ್ಮಂದಗಾಮಿಗಳು

ಕಾಂಗ್ರೆಸ್‌ ಹುಟ್ಟಿದ ನಂತರದ ಮೊದಲ ಇಪ್ಪತ್ತು ವರ್ಷಗಳನ್ನು ಸಾಂಪ್ರದಾಯಿಕವಾಗಿ “ಮಂದಗಾಮಿ ಯುಗ” ಎಂದು ಕರೆಯುವುದು ರೂಢಿಯಲ್ಲಿದೆ. ಪ್ರತಿವರ್ಷ ಕಾಂಗ್ರೆಸ್‌ನ ಮಹಾಧಿವೇಶನ ಮುರು ದಿನಗಳ ಕಾಲ ಭಾರತದ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿದ್ದವು. ಅಧ್ಯಕ್ಷೀಯ ಭಾಷಣವನ್ನೊಳಗೊಂಡಂತೆ ಅನೇಕ ಭಾಷಣಗಳು ಹೆಚ್ಚು ಕಡಿಮೆ ಇಂಗ್ಲಿಷ್‌ನಲ್ಲೇ ಇರುತ್ತಿದ್ದವು. ಇಂಗ್ಲಿಷ್‌ ಭಾಷೆ ಕಲಿತವರೇ ಆ ಕಾಲದಲ್ಲಿ ಕಾಂಗ್ರೆಸ್ಸಿನಲ್ಲಿದ್ದರು. ಗೋಖಲೆಯವರ ಪ್ರಕಾರ ‘ವಿದ್ಯಾವಂತರು ಸಹಜವಾಗಿಯೇ ಜನರ ನಾಯಕರಾಗಿರುತ್ತಾರೆ.’ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚೆಚ್ಚು ಅಧಿಕಾರ ಬೇಕು. ಆ ಸಂಸ್ಥೆಗಳಿಗೆ ಚುನಾಯಿತ ಪ್ರತಿನಿಧಿಗಳಿರಬೇಕು, ಹಾಗೆಯೇ ವಿಶ್ವವಿದ್ಯಾಲಯ, ಚೇಂಬರ್‌ ಆಫ್ ಕಾಮರ್ಸ್‌ಗಳಲ್ಲಿ ಚುನಾಯಿತ ಪ್ರತಿನಿಧಿಗಳಿರಬೇಕು ಎನ್ನುವ ರೀತಿಯ ಬೇಡಿಕೆಗಳನ್ನು ೧೯೦೫ರವರೆಗೆ ಕಾಂಗ್ರೆಸ್‌ ಮಾಡುತ್ತಿತ್ತು. ೧೯೦೫ರಲ್ಲಿ ಸ್ವ-ಸರಕಾರ ಅಥವಾ ಪ್ರಜಾಪ್ರಭುತ್ವದ ಬೇಡಿಕೆಯನ್ನು ಕಾಂಗ್ರೆಸ್‌ ಸರಕಾರದ ಮುಂದಿರಿಸಿತು. ‘ಸ್ವ-ಸರಕಾರ ಅಥವಾ ಸ್ವಾತಂತ್ರ್ಯವು ಯಾವ ರೀತಿಯಲ್ಲಿ ಯುನೈಟೆಡ್‌ ಕಿಂಗ್‌ಡಂ ಅಥವಾ ಅದರ ವಸಾಹತುಗಳಲ್ಲಿದೆಯೋ ಅದೇ ರೀತಿ’ ಸ್ವರಾಜ್ಯವನ್ನು ಭಾರತವೂ ನಿರೀಕ್ಷಿಸುತ್ತದೆ ಎಂದು ೧೯೦೬ರಲ್ಲಿ ದಾದಾಭಾಯಿ ನವರೋಜಿಯವರು ಉಲ್ಲೇಖಿಸಿರುವುದು ಗಮನಾರ್ಹ.

ಇಂಗ್ಲೆಂಡಿನಲ್ಲಿ ಆ ಕಾಲದಲ್ಲಿ ಐ.ಸಿ.ಎಸ್‌. ಪರೀಕ್ಷೆಗಳು ನಡೆಯುತ್ತಿದ್ದರಿಂದ ಭಾರತೀಯ ಅನೇಕರಿಗೆ ಅಲ್ಲಿಗೆ ಹೋಗಲಿಕ್ಕಾಗುತ್ತಿರಲಿಲ್ಲ. ಆದ ಕಾರಣ ಐ.ಸಿ.ಎಸ್‌. ಪರೀಕ್ಷೆಗಳು ಭಾರತದಲ್ಲೂ ಆಗಬೇಕೆಂದು ಈ ಮಂದಗಾಮಿ ರಾಜಕಾರಣಿಗಳು ಬೇಡಿಕೆ ಮುಂದಿಟ್ಟರು. ಅಧಿಕಾರಶಾಹಿಯನ್ನು ಭಾರತೀಕರಣ ಮಾಡಬೇಕೆಂದ ಕಾಂಗ್ರೆಸ್‌ ಆ ಮೂಲಕ ‘ಜನಾಂಗೀಯವಾದ’ದ ವಿರುದ್ಧ ಚಟುವಟಿಕೆಗಳನ್ನು ಆರಂಭಿಸಿತು. ಆಡಳಿತಾಂಗದಿಂದ ನ್ಯಾಯಾಂಗವನ್ನು ಪ್ರತ್ಯೇಕಿಸಬೇಕು, ಶಸ್ತ್ರಾಸ್ತ್ರ ಕಾಯ್ದೆಗೆ ತಿದ್ದುಪಡಿ, ಭಾರತೀಯರಿಗೆ ಉನ್ನತ ಸೈನ್ಯಾಧಿಕಾರಿಗಳ ಹುದ್ದೆಯಲ್ಲಿ ನೇಮಕಾತಿ, ಸ್ವಯಂ ಸೇವಕದಳಕ್ಕೆ ಭಾರತೀಯರ ಸಂಖ್ಯೆಯನ್ನು ಹೆಚ್ಚು ಮಾಡಲೂ ಕಾಂಗ್ರೆಸ್‌ ಒತ್ತಾಯಿಸಿತು. ಭಾರತದ ಸಂಪತ್ತು ಯಾವ್ಯಾವ ರೀತಿಯಲ್ಲಿ ಸೋರಿ ಹೋಗುತ್ತದೆ ಎನ್ನುವುದನ್ನು ಕೂಲಂಕಷವಾಗಿ, ಅಂಕಿ-ಅಂಶಗಳ ಮೂಲಕ ಹೇಳುವೆ. “ಡ್ರೈನ್‌ಥಿಯರಿ” (ಸಂಪತ್ತಿನ ಸೋರುವಿಕೆ ಸಿದ್ಧಾಂತ)ವನ್ನು ಖ್ಯಾತಿಗೊಳಿಸಿ ಬ್ರಿಟಿಷರು ಆತ್ಮಾವಲೋಕನ ಮಾಡುವಂಥ ವಾತಾವರಣವನ್ನು ಸೃಷ್ಟಿಸಿದರು. ಹೆಚ್ಚುತ್ತಿದ್ದ ಮಿಲಿಟರಿ ವೆಚ್ಚವನ್ನು ಕಡಿಮೆ ಮಾಡಲು, ಭಾರತೀಯ ಉದ್ದಿಮೆಗಳನ್ನು ಅಭಿವೃದ್ಧಿಪಡಿಸಲು, ತಾಂತ್ರಿಕ ಶಿಕ್ಷಣವನ್ನು ಕೊಡಲು, ಬಡತನ ಮತ್ತು ಬರಗಳ ಆ ಬಗ್ಗೆ ಅಧ್ಯಯನ ಮಾಡಲು ಕಾಂಗ್ರೆಸ್‌ ಬ್ರಿಟಿಷ್ ‌ಸರಕಾರವನ್ನು ತನ್ನ ನಿರ್ಣಯಗಳ ಮೂಲಕ ಒತ್ತಾಯಿಸಿತು. ವಿದೇಶಗಳಲ್ಲಿ ನರಳುತ್ತಿದ್ದ ಭಾರತೀಯ ಕೂಲಿಗಳ ಬಗ್ಗೆ, ಉಪ್ಪಿನ ಮೇಲಿನ ಕರದ ವಿರುದ್ಧ ಹಾಗೂ ಅರಣ್ಯ ಆಡಳಿತದಿಂದ ಕಿರುಕುಳಕ್ಕೊಳಗಾದ ರೈತರ ಪರವಾದ ನಿಲುವುಗಳನ್ನು ಬ್ರಿಟಿಷರಿಗೆ ಕಾಂಗ್ರೆಸ್‌ ಮನದಟ್ಟು ಮಾಡಲು ಪ್ರಯತ್ನಿಸಿತು.

ಮಂದಗಾಮಿ ರಾಜಕಾರಣದ ಮೇಲಿರುವ ಟೀಕೆಗಳೂ ಗಮನಾರ್ಹವಾದದ್ದೇ. ಮಂದಗಾಮಿಗಳು ಎಂದೂ ಬ್ರಿಟಿಷ್ ‌ಸರಕಾರದ ಕಾರ್ಯವೈಖರಿಗಳ ಬಗ್ಗೆ, ಕೆಲಸ ಮಾಡುವ ವಿಧಗಳ ಬಗ್ಗೆ ಟೀಕೆ ಮಾಡಲಿಲ್ಲ ಎಂದು ಕಾಂಗ್ರೆಸ್‌ ನೊಳಗೆ ಇದ್ದ ಅದರ ವಿರುದ್ಧ ಬಣವಾದ “ತೀವ್ರವಾದಿಗಳ” (ಎಕ್ಸ್‌ಟ್ರಿಮಿಸ್ಟ್ಸ್‌) ಟೀಕೆಯಾಗಿತ್ತು. ದಾದಾಭಾಯಿ ನವರೋಜಿ ಅವರ ಶಬ್ದದಲ್ಲೇ ಹೇಳಬೇಕಾದರೆ ಇದು “ಅನ್‌ ಬ್ರಿಟಿಷ್ ‌ರೂಲ್‌” ಆಗಿತ್ತು. ಅಂದರೆ, ಬ್ರಿಟಿಷ್ ‌ಆಡಳಿತ ಎಂದರೆ ಆದರ್ಶವಾದುದು. ಆದರೆ ಭಾರತದಲ್ಲಿ ಬ್ರಿಟಿಷರು ಆಳುತ್ತಿದ್ದರೂ ಅದು ‘ಅನ್‌ಬ್ರಿಟಿಷ್ ‌’ ಆಗಿತ್ತು ಎನ್ನುವುದೇ ಆಗಿದೆ. ಆದ್ದರಿಂದ ತೀವ್ರಗಾಮಿ ಕಾಂಗ್ರೆಸ್ಸಿಗರು ಇವರನ್ನು “ಬೇಡುವ” ರಾಜಕಾರಣ (ಪಾಲಿಟಿಕ್ಸ್‌ಆಫ್‌ಮೆಂಡಿಕೆನ್ಸ್‌) ಮಾಡುವವರು ಎಂದದ್ದನ್ನು ಗಮನಿಸಬೇಕು. ರಾಷ್ಟ್ರೀಯ ಹೋರಾಟ ಎನ್ನುವುದು ಈ ಮಂದಗಾಮಿಗಳಿಗೆ “ಪಾರ್ಟ್ ಟೈಂ’’ ಕೆಲಸವಾಗಿತ್ತು; ವರ್ಷದಲ್ಲಿ ಮುರು ದಿನಗಳ “ತಮಾಶೆ” ಮಾಡುವುದಕ್ಕೇ ಮೀಸಲಾಗಿತ್ತು ಹಾಗೂ ಕಾಂಗ್ರೆಸ್‌ ಕೆಲವೇ ಕೆಲವು ಆಸಕ್ತರಲ್ಲಿ ಕೇಂದ್ರೀಕೃತವಾಗಿತ್ತು ಎಂದು ತೀವ್ರಗಾಮಿಗಳು ಟೀಕೆ ಮಾಡಿರುವುದು ತಿಳಿದುಬರುತ್ತದೆ. ಮಂದಗಾಮಿಗಳಲ್ಲಿ ಹೆಚ್ಚಿನವರು ಇಂಗ್ಲಿಷ್‌ ವಿದ್ಯಾಭ್ಯಾಸ ಪಡೆದವರು ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲಿ ಇಂಗ್ಲಿಷ್‌ ಐಷಾರಾಮಗಳನ್ನು ಮೈಗೂಡಿಸಿಕೊಂಡವರಾಗಿದ್ದರು. “ಫಿರೋಜ್ ಮೆಹ್ತಾ ತನ್ನ ಪ್ರತ್ಯೇಕ ರೈಲು ಬೋಗಿಯಲ್ಲಿ ಪ್ರಯಾನಿಸುತ್ತಿದ್ದರು. ೧೮೮೬ರಲ್ಲಿ ರಾನಡೆಯವರು ಶಿಮ್ಲಾಗೆ ಭೇಟಿ ನೀಡಿದಾಗ ಅವರೊಂದಿಗೆ ೨೫ ಜನ ಸೇವಕರಿದ್ದರು” ಎಂದು ಚರಿತ್ರೆಕಾರ ಸುಮಿತ್‌ಸರ್ಕಾರ್‌ ಬರೆಯುತ್ತಾರೆ. ಸಹಜವಾಗಿಯೇ ಕೆಳಸ್ತರದಲ್ಲಿದ್ದ ಭಾರತೀಯರಿಗೆ ಮಂದಗಾಮಿ ರಾಜಕಾರಣಿಗಳು ಅಪಥ್ಯವಾಗಿದ್ದರು. ಮುಂಬೈಯ ಕೆಲವು ಉದ್ದಿಮೆದಾರರು, ಅಲಹಾಬಾದಿನ ಟೆಂಡನ್‌ಥರದ ವಾಣಿಜ್ಯೋದ್ಯಮಿಗಳು, ಭೂಮಾಲೀಕರು, ಭೂಹಿಡುವಳಿದಾರರು, ವಕೀಲರು ಮುಂತಾದವರ ಸಾರ್ವಭೌಮತ್ವವು ಕಾಂಗ್ರೆಸ್‌ನಲ್ಲಿ ಮಂದಗಾಮಿ ರಾಜಕಾರಣ ರೂಪದಲ್ಲಿದ್ದವು. ಇವರು ಎಂದಿಗೂ ಕ್ರಾಂತಿಕಾರಕ ಸುಧಾರಣೆಗಳನ್ನಾಗಲಿ ಅಥವಾ ಜನಪರವಾದ ಹೋರಾಟಗಳನ್ನಾಗಲಿ ಬೆಂಬಲಿಸದಿರುವುದನ್ನು ನೋಡಬಹುದು. ಅಪ್ರತಿಮ ಸೈನ್ಯ ಶಕ್ತಿ ಪಡೆದಿರುವ ಸಾಮ್ರಾಜ್ಯಶಾಹಿ ಸರಕಾರದ ವಿರುದ್ಧ ಧ್ವನಿ ಎತ್ತುವ ಅಥವಾ ಕ್ರಾಂತಿಕಾರಕವಾಗಿ ಜನರನ್ನು ಸಂಘಟಿಸುವಷ್ಟು ಶಕ್ತಿಯನ್ನು ಆರಂಭದಲ್ಲಿ ಕಾಂಗ್ರೆಸ್‌ ಹೊಂದಿರಲಿಲ್ಲ. ಆದ ಕಾರಣ ಶಾಂತಿಯಿಂದ ಹಾಗೂ ಸೌಹಾರ್ದತೆಯಿಂದ ಆರಂಭದ ಕಾಂಗ್ರೆಸ್ಸಿಗರು ಅರ್ಥಾತ್‌ ಮಂದಗಾಮಿ ರಾಜಕಾರಣಿಗಳು ಚಟುವಟಿಕೆ ಮಾಡುತ್ತಿದ್ದದ್ದು ಸಹಜವಾಗಿದೆ ಎಂದು ಇತಿಹಾಸಕಾರ ಬಿ. ಆರ್‌. ನಂದಾ ಅವರು ಹೇಳಿರುವುದು ಈ ಸಂದರ್ಭದಲ್ಲಿ ಪ್ರಸ್ತುತವಾಗಿದೆ.

ಕಾಂಗ್ರೆಸ್ತೀವ್ರವಾದಿಗಳು

ಕಾಂಗ್ರೆಸ್‌ ಮಂದಗಾಮಿ ರಾಜಕಾರಣವನ್ನು ತೀವ್ರವಾಗಿ ಟೀಕೆ ಮಾಡುತ್ತಾ ತೀವ್ರವಾದಿ ನಿಲುಗಳನ್ನು ತಮ್ಮ ತಾತ್ವಿಕ ನೆಲೆಯನ್ನಾಗಿ ಮಾಡಿಕೊಂಡ ಕಾಂಗ್ರೆಸ್‌ನ ಇನ್ನೊಂದು ಬಣವನ್ನು ಕಾಂಗ್ರೆಸ್‌ನ ತೀವ್ರವಾದಿಗಳೆಂದು ಗುರುತಿಸಲಾಗುತ್ತದೆ. “ವಂದೇ ಮಾತರಂ” ರಚಿಸಿದ ಬಂಕಿಮಚಂದ್ರ ಚಟರ್ಜಿ. ರಾಜನಾರಾಯಣ ಬೋಸ್ ಅವರು ಬಂಗಾಳದಲ್ಲಿಯೂ, ವಿಷ್ಣುಶಾಸ್ತ್ರಿ ಚಿಂಪ್ಲುಂಕರ್ ಅವರು ಮಹಾರಾಷ್ಟ್ರದಲ್ಲಿ ಈ ಬಗೆಯ ರಾಜಕಾರಣಕ್ಕೆ ಅಡಿಪಾಯ ಹಾಕಿದರು. ಬಲಿಷ್ಠ ಭಾರತದ ನಿರ್ಮಾಣಕ್ಕೆ ಕರೆ ನೀಡಿದ ಸ್ವಾಮಿ ವಿವೇಕಾನಂದರ ಆದರ್ಶಗಳು ದೈತ್ಯ ಚೀನಾವನ್ನ ಸೋಲಿಸಿದ ಜಪಾನಿನ ಪರಾಕ್ರಮದ ಮಾದರಿಗಳು ಒಂದು ಬಗೆಯ ಕ್ರಾಂತಿಕಾರಕ ಚಿಂತನೆಗಳನ್ನು ಹುಟ್ಟುಹಾಕಲು ತೀವ್ರವಾದಿಗಳಿಗೆ ಸಾಧ್ಯವಾಯಿತು. ಮಂದಗಾಮಿಗಳ ರೀತಿ ಇವರು ಇಂಗ್ಲಿಷ್ ವ್ಯಾಮೋಹಿಗಳಲ್ಲ. ಭಾರತೀಯ ಭಾಷೆಗಳಲ್ಲಿ ಸಾಮಾನ್ಯರೊಂದಿಗೆ ಮಾತನಾಡಿದರು. ಭಾರತೀಯ ಭಾಷೆಗಳಲ್ಲಿ ಪತ್ರಿಕೆಗಳನ್ನು ಮಾಡಿ ಜನಸಾಮಾನ್ಯರನ್ನು ಸಂಘಟಿಸುವ ಪ್ರಯತ್ನವನ್ನು ಇವರು ಮಾಡಿದರು. ೧೮೮೫ರಲ್ಲಿ ೨೯೯,೦೦೦ದಷ್ಟಿದ್ದ ಸ್ಥಳೀಯ ಭಾಷಿಕ ಪತ್ರಿಕೆಗಳ ಸಂಖ್ಯೆ ೧೯೦೫ರ ವೇಳೆಗೆ ೮೧೭,೦೦೦ಕ್ಕೆ ಏರಿರುವುದನ್ನು ನಾವು ಗಮನಿಸಬಹುದು. ಕಲ್ಕತ್ತಾದ ಬಂಗಾಬಾಸಿ, ಪೂನಾದ ಕೇಸರಿ ಮತ್ತು ಕಾಲ್ ಎನ್ನುವ ಭಾರತೀಯ ಪತ್ರಿಕೆಗಳನ್ನು ಈ ಸಂದರ್ಭದಲ್ಲಿ ಉದಾಹರಣೆಯನ್ನಾಗಿ ಕೊಡಬಹುದು. ಅರ್ಜಿಗಳನ್ನು ಗುಜರಾಯಿಸಿಕೊಂಡು ಬ್ರಿಟಿಷರ ಕೃಪಾಕಟಾಕ್ಷಕ್ಕೆ ಎದರು ನೋಡುವ ಮಂದಗಾಮಿಗಳು“ಬೇಡುವ ರಾಜಕೀಯ”ವನ್ನು ಕಟುವಾಗಿ ಆಕ್ರಮಣ ಮಾಡಿದ ತೀವ್ರವಾದಿ ಕಾಂಗ್ರೆಸ್ಸಿಗರು ಸ್ವಂತ ಶಕ್ತಿಯ ಮೇಲೆ ನಿಲ್ಲುವ ಕಾರ್ಯ ಕ್ರಮಗಳನ್ನು ಹಾಕಿಕೊಂಡರು. ರಚನಾತ್ಮಕ ಕಾರ್ಯಕ್ರಮಗಳು,ಸ್ವದೇಶಿ ಉದ್ದಿಮೆಗಳನ್ನು ಆರಂಭಿಸುವ ಕಾರ್ಯಕ್ರಮಗಳು ಖ್ಯಾತವಾಗ ತೊಡಗಿದವು. ದೇಸಿ ಭಾಷೆಗಳನ್ನು ಉಪಯೋಗಿಸುವುದು, ಪ್ರಸಿದ್ಧವಾದ ಸಾಂಪ್ರದಾಯಿಕ ಆಚರಣೆಗಳನ್ನು ಆಚರಿಸುವುದು, ಮೇಳ ಅಥವಾ ಜಾತ್ರೆಗಳನ್ನು ಸಂಘಟಿಸುವುದು ತೀವ್ರಗಾಮಿ ರಾಜಕಾರಣದ ಭಾಗವಾಗಿತ್ತು. ಆ ಕಾಲದಲ್ಲಿ ಹಿಂದೂ ಪುನರುತ್ಥಾನವಾದ ಸ್ಥಾನ ಪಡೆದುಕೊಂಡದ್ದು ಈ ಹಿನ್ನಲೆಯಲ್ಲಿಯೇ.

೧೮೯೩-೯೪ರಲ್ಲಿ “ನ್ಯೂ ಲ್ಯಾಂಪ್ ಫಾರ್ ಓಲ್ಡ್” ಎನ್ನುವ ಪುಸ್ತಕದಲ್ಲಿ ಅರವಿಂದ ಘೋಷ್ರವರು ಇಂಗ್ಲಿಷ್ ಮಾದರಿಯ ಸಂವಿದಾನದ ಮಾರ್ಗಗಳ ಬಗ್ಗೆ ಅಪಾರವಾದ ಗೌರವವಿಟ್ಟು ಮಂದಗಾಮಿಗಳ ಕಾರ್ಯವೈಖರಿಯನ್ನು ಟೀಕಿಸುತ್ತಾ, ಫ್ರೆಂಚ್ ಮಾದರಿಯ “ಭಯಾನಕವಾದ ”ಗಣರಾಜ್ಯ ವ್ಯವಸ್ಥೆಯೇ ಮೇಲು ಎನ್ನುವರು. ಅನೇಕ ರಹಸ್ಯ ಸಂಘಗಳನ್ನು ಈ ಕಾರಣಕ್ಕಾಗಿಯೇ ತೀವ್ರಗಾಮಿಗಳು ಹುಟ್ಟು ಹಾಕಿದರು

ಬಂಗಾಳದಲ್ಲಿ ೧೮೯೭ ರ ಕಾಂಗ್ರೆಸ್ ಮಹಾಧಿವೇಶನದಲ್ಲಿ ಪಾಲ್ಗೊಂಡಿದ್ದ ಅಶ್ವಿನಿಕುಮಾರ್ ದತ್ತಾ ಮಹಾಧಿವೇಶನವನ್ನು “ಮೂರು ದಿನಗಳ ತಮಾಶೆ”ಎಂದು ಲೇವಡಿ ಮಾಡಿದರು. ಇವರು ೧೯೦೫ರಲ್ಲಿ ನಡೆದ ಸ್ವದೇಶಿ ಚಳವಳಿಯಲ್ಲಿ ಜನಸಾಮಾನ್ಯರೂ ಭಾಗವಹಿಸುವಂತೆ ಮಾಡಲು ಕಾರಣಕರ್ತರಾಗಿದ್ದರು. ೧೯೦೫ರ ವೇಳೆಯಲ್ಲಿ ರವೀಂದ್ರನಾಥ ಠಾಗೋರ್ ಅವರು ಕೂಡ ತೀವ್ರವಾದಿ ಚಳವಳಿಯ ಮುಖಂಡತ್ವವನ್ನು ವಹಿಸಿದರು. ಯೂರೋಪಿನ ಕ್ರಾಂತಿಕಾರಕ ಸಂಘಟನೆಗಳಿಂದ ಅದರಲ್ಲೂ ಐರಿಷ್ ಹೋರಾಟದಿಂದ ಪ್ರಭಾವಗೊಂಡಿದ್ದ ಸ್ವಾಮಿ ವಿವೇಕಾನಂದರ ಶಿಷ್ಯೆ ನಿವೇದಿತಾ (ಮಾರ್ಗರೆಟ್ ನೊಬೆಲ್) ಕೂಡ ಕಾಂಗ್ರೆಸ್ಸಿನ ತೀವ್ರಗಾಮಿ ವಿಚಾರಗಲಿಗೆ ಹೊಸ ರೂಪರೇಷ ನೀಡಿದರು ಈ ಹಿನ್ನೆಲೆಯಲ್ಲೇ ೧೮೯೩ರಲ್ಲಿ ಪ್ರಫುಲ್ಲ ಚಂದ್ರರಾಯ್ ಅವರು “ಬೆಂಗಾಲ್ ಕೆಮಿಕಲ್ಸ್” ಸತೀಶ್ ಮುಖರ್ಜಿಯವರು “ಡಾನ್ ಸೊಸೈಟಿ”ಯನ್ನು, ರವೀಂದ್ರನಾಥ ಠಾಗೋರ್ ಅವರು “ಶಾಂತಿನಿಕೇತನ”ವನ್ನು ಆರಂಭಿಸಿದರು.

ಪಂಜಾಬ್ ನ್ಯಾಶನಲ್ ಬ್ಯಾಂಕನ್ನು ಸ್ಥಾಪಿಸಿದ ಹರಿಕಿಷನ್ಲಾಲ್ ಮತ್ತು ಆರ್ಯ ಸಮಾಜಿಗಳು ೧೯೮೦ರ ಲಜಪತ್ ರಾಯ್ ಅವರು ೧೯೦೧ರಲ್ಲಿ ಪ್ರಕಟವಾದ ಕಾಯಸ್ಥ ಸಮಾಚಾರದಲ್ಲಿ ಮೂರು ದಿನಗಳ ಕಾಂಗ್ರೆಸ್ ಜಾತ್ರೆಗೆ ಶ್ರಮ ವ್ಯಯಿಸುವ ಬದಲು ತಾಂತ್ರಿಕ ಶಿಕ್ಷಣ ಹಾಗೂ ಸ್ವಾವಲಂಬಿ ಉದ್ದಿಮೆಗಳನ್ನು ತಯಾರು ಮಾಡುವಂತೆ ಜನರನ್ನು ಪ್ರೇರೇಪಿಸಬೇಕು ಎಂದು ಬರೆದಿರುವರು. ಕಾಂಗ್ರೆಸ್ ಸಾರ್ವಜನಿಕವಾಗಿ ಹಾಗೂ ಧೈರ್ಯವಾಗಿ ಕೇವಲ ಹಿಂದುಗಳನ್ನು ಮಾತ್ರ ಅವಲಂಬಿಸಬೇಕು ಎಂದು ಲಜಪತರಾಯ್ ಕರೆ ಕೊಟ್ಟರು. ತೀವ್ರಗಾಮಿ ವಿಚಾರಧಾರೆಯ ಕೆಲವು ಮಿತಿಗಳಲ್ಲಿ ಇದು ಒಂದು ಸುಮಿತ್ ಸರ್ಕಾರ್ ಬರೆಯುತ್ತಾರೆ. ತೀವ್ರಗಾಮಿ ರಾಜಕಾರಣದ ಮುಂಚೂಣಿಯಲ್ಲಿದ್ದವರು ಬಾಲಗಂಗಾಧರ ತಿಲಕ್ ಅವರು ಜನಸಾಮಾನ್ಯರನ್ನು ರಾಜ್ಯರಾಜಕಾರಣದಲ್ಲಿ ತೊಡಗಿಸುವಲ್ಲಿ ಧಾರ್ಮಿಕ ಆಚರಣೆಗಳು ಉಪಯೋಗವಾಗುತ್ತವೆ ಎಂಬುದನ್ನು ಲೋಕಮಾನ್ಯ ತಿಲಕರು ತೋರಿಸಿಕೊಟ್ಟರು. ೧೮೯೪ರ ನಂತರ ಅವರು ಖ್ಯಾತಿಗೊಳಿಸಿದ ‘‘ಗಣೇಶ ಹಬ್ಬ” ಹಾಗೂ ೧೮೯೬ರ ನಂತರ ಖ್ಯಾತಿಗೊಳಿಸಿದ “ಶಿವಾಜಿ ಉತ್ಸವ”ಗಳು ಇದಕ್ಕೆ ಮುಖ್ಯ ಉದಾಹರಣೆಯಾಗಿದೆ ೧೮೯೬-೯೭ರಲ್ಲಿ ಕಂದಾಯಗಲನ್ನು ಬಹಿಷ್ಕರಿಸುವುದರ ಮೂಲಕ ಅವರು ಬ್ರಿಟಿಷರಿಗೆ ನೇರ ನೇರ ಸವಾಲನ್ನು ಒಡ್ಡಿದರು. ವಿದೇಶಿ ಉತ್ಪಾದನೆಗಳನ್ನು ಬಹಿಷ್ಕರಿಸಲು ತಿಲಕರು ಕರೆ ನೀಡುತ್ತಾ ಅದರ ಬದಲಿಗೆ ಸ್ವದೇಶಿ ವಸ್ತುಗಲನ್ನು ಕೊಂಡುಕೊಳ್ಳಲು ಜನರಿಗೆ ಕರೆ ನೀಡಿದರು. ಸರಕಾರದ ವಿರುದ್ಧ ದ್ವೇಷ ಹಾಗೂ ಅಸಮಾಧಾನಗಳು ಉದ್ಭವವಾಗಲು ಕಾರಣಕರ್ತರೆಂದು ಬ್ರಿಟಿಷರು ತಿಲಕರನ್ನು ೧೮೯೭ರಲ್ಲಿ ಬಂಧಿಸಿದರು. ಕ್ಷಮೆ ಕೇಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರಿಗೆ ೧೮ ತಿಂಗಳ ಕಠಿಣ ಸಜೆಯನ್ನು ಬ್ರಿಟಿಷರ ವಿಧಿಸಿದರು. ಈ ಕಾರಣದಿಂದ ಅವರು ನವರಾಷ್ಟ್ರೀಯತೆಯ ಜೀವಂತ ಪ್ರತೀಕವಾದರು.

ಲಾರ್ಡ್ ಕರ್ಜನ್ ಮತ್ತು ಬಂಗಾಳದ ವಿಭಜನೆ
ಆಡಳಿತಾತ್ಮಕ
ಸುಧಾರಣೆಗಳು

ಲಾರ್ಡ್‌ಕರ್ಜನ್ ಅಧಿಕಾರ ವಹಿಸಿಕೊ೦ಡ ಮೇಲೆ ತನ್ನ ಆಡಳಿತಾತ್ಮಕ ಸುಧಾರಣೆಗಳಿಂದಾಗಿ ಬಹಳಷ್ಟು ಪ್ರಶಂಸೆಗೊಳಗಾದ. ಬಂಗಾಳದ ವಿಭಜನೆಗೆ ಸಂಬಂದಿಸಿದ ಆತನ ನಿಲುವು ಮಾತ್ರ ತೀವ್ರವಾದ ರೀತಿಯಲ್ಲಿ ರಾಷ್ಟ್ರೀಯವಾದಿಗಳಿಂದ ಅದರಲ್ಲೂ ಕಾಂಗ್ರೆಸ್ ಕಾರ್ಯಕರ್ತರಿಂದ ಟೀಕೆಗೊಳಗಾಯಿತು ಹಾಗೂ ಪ್ರತಿಭಟನೆಗೊಳಗಾಯಿತು. ಇವನು ಅಧಿಕಾರ ವಹಿಸಿಕೊಳ್ಳುವ ಹೊತ್ತಿಗೆ ೧೮೯೯-೧೯೯೦೦ರ ಭೀಕರ ಬರಗಾಲದ ಪರಿಣಾಮಗಳು ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ಜನ್ ಬರಗಾಲ ಪೀಡಿತ ಪ್ರೆದೇಶಗಳ ರೈತರಿಗೆ ತೆರಿಗೆ ವಿನಾಯಿತಿ ನೀಡಿದನು. ಉಪ್ಪಿನ ಮೇಲಿನ ಕರವನ್ನು ಕಡಿತಗೊಳಿಸಿದನು. ೧೯೦೩-೦೪ರ ವೇಳೆಗೆ ಆದಾಯ ಮಿತಿಯನ್ನು ೫೦೦ ರೂಪಾಯಿಗಳಿಂದ ೧೦೦೦ ರೂಪಾಯಿಗಳಿಗೆ ಏರಿಸಿದನು. ರೈಲು ಹಳಿ ನಿರ್ಮಾಣದ ಬೃಹತ್ ಯೋಜನೆಯನ್ನು ಇವನು ಕಾರ್ಯರೂಪಕ್ಕೆ ತಂದನು ಯಾವ ವೈಸರಾಯ್ ಕೂಡ ಇಲ್ಲಿಯವರೆಗೆ ಮಾಡದ ರೀತಿಯಲ್ಲಿ ೬೧೦೦ ಮೈಲುಗಳ ರೈಲು ಹಳಿ ನಿರ್ಮಾಣ ಮಾಡಿಸಿದನು. ೧೯೦೧-೦೩ರ ವೇಳೆಯಲ್ಲಿ ನೀರಾವರಿ ಸುಧಾರಣೆಗಾಗಿ ನೀರಾವರಿ ಆಯೋಗವನ್ನು ರಚಿಸಿದನು. ಆರ್ಥಿಕ ಪದ್ಧತಿಗಳನ್ನು ಸುಧಾರಿಸಲು ಕರ್ಜನ್ ೧೯೦೫ರಲ್ಲಿ ವಾಣಿಜ್ಯ ಮತ್ತು ಉದ್ದಿಮೆ ಇಲಾಖೆಯನ್ನು ತೆರೆದನು. ಲೇವಾದೇವಿಗಳ ಹಿಡಿತದಿಂದ ರೈತರನ್ನು ಮುಕ್ತಗೊಳಿಸಲು ೧೯೦೧ರಲ್ಲಿ ಈತನು ಒಂಜಾಬ್ “ಭೂ ಪರಭಾರೆ ಕಾಯಿದೆ”ಯನ್ನು ಜಾರಿಗೆ ತಂದನು. ಈ ಕಾಯಿದೆ ಪ್ರಕಾರ ರೈತನ ಭೂಮಿಯನ್ನು ನಗರಗಳ ಲೇವಾದೇವಿಗಳು ಕೊಳ್ಳಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ೧೯೦೪ರಲ್ಲಿ ರೈತರಿಗೆ ಸಾಲ ಸೌಲಭ್ಯಗಳನ್ನು ಕೊಡಲು ರೈತರ ಸಹಕಾರ ಸಂಸ್ಥೆಗಳನ್ನು ತೆರೆಯುವಂತೆ ನಿರ್ದೇಶನ ನೀಡಿದರು. ಪಂಜಾಬಿನ ರೈತ ವರ್ಗದಲ್ಲಿ ಹೆಚ್ಚಿನವರು ಮುಸ್ಲಿಮರು ಮತ್ತು ಸಿಖ್ಖರಿದ್ದರು. ಲೇವಾದೇವಿ ಗಾರರಲ್ಲಿ ಹೆಚ್ಚಿನವರು ಹಿಂದುಗಳಿದ್ದ ಕಾರಣ ಆ ಕಾಲದ ಮುಂಚೂಣಿಯಲ್ಲಿದ್ದ ರಾಷ್ಟೀಯ ವಾದಿಗಳಿಗೆ (ಹಿಂದೂಗಳು) ಈ ಕಾಯಿದೆ ಮುಜುಗರವನ್ನು ತಂದಿತು. ವಿಪರ್ಯಾಸವೆಂದರೆ ನಗರಗಳ ಲೇವಾದೇವಿಗಾರರ ಬದಲು ಹಳ್ಳಿಗಳ ಶ್ರೀಮಂತ ರೈತರೇ ಲೇವಾದೇವಿಗಾರರ ಸ್ಥಾನವನ್ನು ತುಂಬಿದ್ದು. ಈ ಕಾರಣದಿಂದ ಒಂದು ಒಳ್ಳೆಯ ಉದ್ದೇಶದಿಂದ ಜಾರಿಗೆ ತಂದ ಸಹಕಾರ ಸಂಸ್ಥೆಯಂಥ ವ್ಯವಸ್ಥೆಯಲ್ಲಿ ಈ ಶ್ರೀಮಂತ ರೈತರೇ ಅಧಿಕಾರವನ್ನು ಅನುಭವಿಸಿದರು.

ಭಾರತದ ಮೂಲೆಮೂಲೆಗಳಲ್ಲಿ ಪ್ರಾಚೀನ ಸ್ಮಾರಕಗಳು ಹಾಳಾಗುತ್ತಿರುವುದನ್ನು ಗಮನಿಸಿದ ಕರ್ಜನ್‌ಅವುಗಳ ರಕ್ಷಣೆಗಾಗಿ “ಪ್ರಾಚೀನ ಸ್ಮಾರಕಗಳ ಕಾಯಿದೆ”ಯನ್ನು ಜಾರಿಗೆ ತಂದನು. ಜನರು ಭೀಕರ ಬಡತನದಿಂದ ನರಳುತ್ತಿದ್ದರೂ ಎರಡು ಮಿಲಿಯನ್‌ ರೂಪಾಯಿಗಳ ವೆಚ್ಚದಲ್ಲಿ ಇಂಗ್ಲೆಂಡಿನ ರಾಜ ಎಂಟನೇ ಎಡ್ವರ್ಡ್‌ ಬರುವ ವೇಳೆಯಲ್ಲಿ ದರ್ಬಾರಿಗಾಗಿ ವಿಕ್ಟೋರಿಯಾ ಮೆಮೊರಿಯಲ್‌ಭವನವನ್ನು ಕಟ್ಟಿ ಎಲ್ಲರಿಂದ ಪ್ರಮುಖವಾಗಿ ರಾಷ್ಟ್ರೀಯವಾದಿಗಳಿಂದ ಟೀಕೆಗೊಳಗಾದನು. ರಂಗೂನಿನಲ್ಲಿ (೧೮೯೯) ಬಿಳಿಯ ಸೈನಿಕರು ಭಾರತೀಯ ಹೆಣ್ಣೊಬ್ಬಳ ಮೇಲೆ ಮಾಡಿದ ಸಾಮೂಹಿಕ ಅತ್ಯಾಚಾರವನ್ನು ಗಂಭೀರವಾಗಿ ತೆಗೆದುಕೊಂಡ ಕರ್ಜನ್‌ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಲ್ಲಿ ಸಫಲನಾದನು. ೧೯೦೨ರಲ್ಲಿ ಸಿಯಾಲ್‌ ಕೋಲ್‌ನಲ್ಲಿ ಬಿಳಿಯ ಸೈನಿಕರು ಭಾರತೀಯ ಅಡಿಗೆಯವನೊಬ್ಬನನ್ನು ಕಗ್ಗೊಲೆ ಮಾಡಿದಾಗಲೂ ಅವರಿಗೆ ಶಿಕ್ಷೆಯಾಗುವಂತೆ ಕರ್ಜನ್‌ನು ನೋಡಿಕೊಂಡನು. ೧೯೦೪ರಲ್ಲಿ ಆಸ್ಸಾಂನ ಟೀ ಎಸ್ಟೇಟ್‌ನ ಬಿಳಿಯ ಮ್ಯಾನೇಜರ್‌ ಒಬ್ಬ ಕೂಲಿಯನ್ನು ಕೊಂದದ್ದಕ್ಕಾಗಿ ಮ್ಯಾನೇಜರ್‌ನನ್ನು ಶಿಕ್ಷಿಸುವಲ್ಲಿ ಕರ್ಜನ್‌ ಮುಖ್ಯ ಪಾತ್ರವಹಿಸಿದ್ದನ್ನು ಆ ಕಾಲದ ಆಂಗ್ಲೋ-ಇಂಡಿಯನ್ನರು ಸ್ವಾಗತಿಸಲಿಲ್ಲ. ಆದರೆ ವರ್ಣಭೇದದ ಕುರಿತು ಕರ್ಜನ್‌ಗೆ ಇದ್ದ ನಿಲುವುಗಳು ಈ ಸಂದರ್ಭದಲ್ಲಿ ಸ್ವಾಗತಾರ್ಹವಾದುದು ಎಂಬುದನ್ನು ಗಮನಿಸಬೇಕು.

ಬಂಗಾಳದ ವಿಭಜನೆ

ಈಗಾಗಲೇ ವಿವರಿಸಿದಂತೆ ಬ್ರಿಟಿಷರ ಒಡೆದು ಆಳುವ ನೀತಿಗೆ ಸ್ಪಷ್ಟವಾದ ಉದಾಹರಣೆ ಎಂದರೆ ಬಂಗಾಳದ ವಿಭಜನೆಯನ್ನು ೧೯೦೫ರಲ್ಲಿ ವಿಧ್ಯುಕ್ತವಾಗಿ ಲಾರ್ಡ್‌ಕರ್ಜನ್‌ ಘೋಷಿಸಿರುವುದು. ಹಲವಾರು ರೀತಿಯ ಆಡಳಿತಾತ್ಮಕ ಸುಧಾರಣೆಗಳನ್ನು ವೈಸರಾಯ್‌ ಕರ್ಜನ್‌ ಮಾಡಿದ್ದರೂ ಅವನ ಸಾಮ್ರಾಜ್ಯಶಾಹಿ ಅಹಂ ಏನೂ ಕಡಿಮೆ ಇರಲಿಲ್ಲ. ಸ್ಥಳೀಯ ಸ್ವಾಯತ್ತತೆ ಸರಕಾರ, ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆ ಹಾಗೂ ಪತ್ರಿಕೆಗಳ ಸ್ವಾತಂತ್ರ್ಯದ ಬಗ್ಗೆ ಈತನಿಗೆ ಕಿಂಚಿತ್ತೂ ಗೌರವವಿರಲಿಲ್ಲ. ಕಲ್ಕತ್ತಾ ಕಾರ್ಪೋರೇಷನ್‌ನಲ್ಲಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕಡಿಮೆ ಮಾಡಿ ಅದನ್ನು ಸರಕಾರದ ಕಪಿಮುಷ್ಟಿಯಲ್ಲಿಡಲು ಕರ್ಜನ್‌ ಸಫಲನಾದನು. ವಿಶ್ವವಿದ್ಯಾನಿಲಯಗಳಲ್ಲಿನ “ದ್ವಿತೀಯ ದರ್ಜೆ” ಕಾಲೇಜುಗಳನ್ನು ಮತ್ತು ಕಾನೂನು ಕಾಲೇಜುಗಳನ್ನು ಮುಚ್ಚಲು ಆದೇಶ ನೀಡಿದನು. ಅಲ್ಲಿನ ಸೆನೆಟ್‌ ಸದಸ್ಯರ ಸಂಖ್ಯೆಯನ್ನು ಇಳಿಸಿ ವಿಶ್ವವಿದ್ಯಾಲಯದ ಸ್ವಾಯತ್ತತೆಗೆ ಅಪಚಾರ ಮಾಡಿದನು.

೧೯೦೩ರ ಡಿಸೆಂಬರ್‌ನಲ್ಲೇ ಬಂಗಾಳವ ವಿಭಜನೆ ಮಾಡುವ ಸುದ್ದಿಗಳಿದ್ದವು. ಇದನ್ನು ಪ್ರತಿಭಟಿಸಿ ಪೂರ್ವ ಬಂಗಾಳವೊಂದರಲ್ಲೇ ೫೦೦ಕ್ಕೂ ಹೆಚ್ಚು ಪ್ರತಿಭಟನಾ ಸಭೆಗಳಾದವು. ಪ್ರಮುಖವಾಗಿ ಢಾಕ್ಕಾ, ಚಿತ್ತಗಾಂಗ್‌, ಮೈಮೆನ್‌ಸಿಂಗ್‌ಗಳಲ್ಲಿ ಪ್ರತಿಭಟನೆಗಳು ತೀವ್ರವಾಗಿ ವ್ಯಕ್ತವಾದವು. ಸುಮಾರು ೫೦,೦೦೦ ಕರಪತ್ರಗಳನ್ನು ಈ ಸಂದರ್ಭದಲ್ಲಿ ಹಂಚಲಾಯಿತು. ಮಾರ್ಚ್ ೧೯೦೪ ರಿಂದ ೧೯೦೫ರ ಜನವರಿಯವರೆಗೆ ೬೯ ಮನವಿಗಳನ್ನು ಢಾಕ್ಕಾವೊಂದರಲ್ಲೇ ಬ್ರಿಟಿಷ್ ‌ಆಳರಸರಿಗೆ ನೀಡಲಾಯಿತು. ಕೆಲವು ಮನವಿಗಳಲ್ಲಿ ೭೦,೦೦೦ಕ್ಕೂ ಹೆಚ್ಚು ಸಹಿಗಳಿದ್ದವು. ಮಂದಗಾಮಿ ಅಭಿವ್ಯಕ್ತಿಗಳಾದ ಮನವಿ ಅರ್ಪಣೆ, ಭಾಷಣ, ಸಾರ್ವಜನಿಕ ಸಭೆ ಹಾಗೂ ಪತ್ರಿಕಾ ಪ್ರಚಾರಗಳ ಅಬ್ಬರವಿದ್ದರೂ ಬ್ರಿಟಿಷರು ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ ಎಂದು ಬಿಪನ್‌ಚಂದ್ರ ಬರೆದಿದ್ದಾರೆ.

ರಾಷ್ಟ್ರೀಯ ಹೋರಾಟದ ಮುಖ್ಯ ಸ್ಥಳವಾದ ಬಂಗಾಳವನ್ನು ಒಡೆದರೆ ಕಾಂಗ್ರೆಸ್‌ ಹೋಳಾಗುತ್ತದೆ ಹಾಗೂ ಆ ಮೂಲಕ ರಾಷ್ಟ್ರೀಯ ಹೋರಾಟದ ಪರಿಣಾಮಗಳು ಗೌಣವಾಗುತ್ತದೆ ಎಂದು ಬ್ರಿಟಿಷರು ನಂಬಿದ್ದರು. ಬಂಗಾಳ ಪ್ರಾಂತ್ಯವು ಬಹಳ ದೊಡ್ಡ ಪ್ರದೇಶವಾಗಿದ್ದರಿಂದ, ಅದರ ಆಡಳಿತವನ್ನು ನಿರ್ವಹಿಸುವುದು ಕಷ್ಟ ಎನ್ನುವ ಕಾರಣದಿಂದಾಗಿ “ಆಡಳಿತಾತ್ಮಕ ಸುಧಾರಣೆ”ಯ ಭಾಗವಾಗಿ ಬಂಗಾಳದ ವಿಭಜನೆ ಮಾಡಬೇಕಾಯಿತು ಎಂದು ಬ್ರಿಟಿಷರು ಹೇಳುತ್ತಿದ್ದರೂ, ಅದು ಸತ್ಯವಾಗಿರಲಿಲ್ಲ. ಭಾರತದ ಗೃಹಕಾರ‍್ಯದರ್ಶಿಯಾಗಿದ್ದ ರಿಸ್ಲೆಯು ೧೯೦೪ರ ಡಿಸೆಂಬರ್‌ ೬ ರಂದು ಬರೆದ ಟಿಪ್ಪಣಿಯಲ್ಲಿ ಏಕೀಕೃತಗೊಂಡು ಒಂದಾದ ಬಂಗಾಳಕ್ಕೆ ಶಕ್ತಿ ಹೆಚ್ಚು ಮತ್ತು ವಿಭಜನೆಗೊಳ್ಳಬಹುದಾದ ಬಂಗಾಳದಿಂದ ಬ್ರಿಟಿಷರಿಗೆ ಲಾಭ ಜಾಸ್ತಿ ಎಂದು ಬರೆಯುತ್ತಾನೆ. “ಈ ರೀತಿ ನಮ್ಮ ವಿರೋಧಿಗಳನ್ನು ಒಡೆಯುವ ಮೂಲಕ ನಮ್ಮ ಆಡಳಿತವನ್ನು ವಿರೋಧಿಸುತ್ತಿರುವವರ ಬಲಹೀನ ಮಾಡಬಹುದು” ಎಂದು ಅವನು ಸೂಚಿಸಿರುವನು. ಉದ್ದೇಶಪೂರ್ವಕವಾಗಿಯೇ ಹಿಂದೂ-ಮುಸ್ಲಿಮರನ್ನು ಒಡೆಯುವ ತಂತ್ರವನ್ನಾಗಿ ಬ್ರಿಟಿಷರು ಬಂಗಾಳದ ವಿಭಜನೆಯನ್ನು ಮಾಡಿದರು ಎನ್ನುವ ರಾಷ್ಟ್ರೀಯ ವಾದಿಗಳ ವಾದಕ್ಕೆ ೧೯೦೪ರ ಫೆಬ್ರವರಿಯಲ್ಲಿ ಢಾಕ್ಕಾದ ಸಭೆಯೊಂದರಲ್ಲಿ ಕರ್ಜನ್‌ ಮಾಡಿದ ಭಾಷಣವೇ ಸಾಕ್ಷಿಯಾಗಿದೆ. “ಮುಸ್ಲಿಮರನ್ನು ಸಂತುಷ್ಟಿಗೊಳಿಸಲು” ಕರ್ಜನ್‌ನು ಢಾಕ್ಕಾವು “ಹೊಸ ಮುಸ್ಲಿಮ ವರ್ಗ”ದ ನೂತನ ರಾಜಧಾನಿಯಾಗಿರುವುದು ಎಂದು ಘೋಷಿಸಿದನು. ಆ ಹೊತ್ತಿಗೆ ಪೂರ್ವ ಬಂಗಾಳದಲ್ಲಿ ೧೮ ಮಿಲಿಯನ್‌ ಮುಸ್ಲಿಮರು ಹಾಗೂ ೧೨ ಮಿಲಿಯನ್‌ ಹಿಂದುಗಳಿದ್ದರು ಎಂಬುದನ್ನು ನಾವು ಗಮನಿಸಬೇಕು. ಈ ಹಿನ್ನೆಲೆಯಲ್ಲಿ ಗತಕಾಲದ ಮುಸಲ್ಮಾನ ವೈಸರಾಯಿಗಳು ಮತ್ತು ರಾಜರ ಕಾಲದಲ್ಲಿದ್ದ “ಮುಸ್ಲಿಮ್‌ ಏಕತೆ”ಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಕರ್ಜನ್‌ ಭಾಷಣ ಮಾಡಿದನು. ಪಶ್ಚಿಮ ಬಂಗಾಳದಲ್ಲಿ ಹೆಚ್ಚಿದ್ದ ಹಿಂದೂಗಳನ್ನು ಮತ್ತು ಪೂರ್ವ ಬಂಗಾಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಮುಸ್ಲಿಮರನ್ನು ವಿಭಜಿಸುವುದೇ ಬಂಗಾಳದ ವಿಭಜನೆಯ ಉದ್ದೇಶವಾಗಿತ್ತು ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಭಾಷಿಕ ರಾಜಕೀಯವೂ ಇಲ್ಲಿ ಸ್ಪಷ್ಟವಾಗಿದೆ. ಬಂಗಾಳಿಗಳನ್ನು ಬಂಗಾಳದಲ್ಲೇ ಅಲ್ಪಸಂಖ್ಯಾತರನ್ನಾಗಿ ಮಾಡಿದ ಹುನ್ನಾರವನ್ನು ಕೂಡ ಇಲ್ಲಿ ನಾವು ನೋಡಬಹುದು. ಪಶ್ಚಿಮ ಬಂಗಾಳದಲ್ಲಿ ೧೭ ಮಿಲಿಯನ್‌ ಬಂಗಾಳಿಗಳಿದ್ದರೆ ೩೭ ಮಿಲಿಯನ್‌ ಜನರು ಒರಿಯ ಮತ್ತು ಹಿಂದಿ ಭಾಷೆಗಳನ್ನಾಡುವವರಿದ್ದರು.

ಬಂಗಾಳದ ವಿಭಜನೆಗೆ ವಿರೋಧ ಮತ್ತು ಸ್ವದೇಶಿ ಚಳವಳಿ

ಬಂಗಾಳದ ವಿಭಜನೆಯನ್ನು ವಿರೋಧಿಸುತ್ತಲೇ ಹುಟ್ಟಿಕೊಂಡ ಚಳವಳಿಯೇ ಸ್ವದೇಶಿ ಚಳವಳಿ. ಮಹಿಳೆಯರು, ವಿದ್ಯಾರ್ಥಿಗಳು, ನಗರ, ಪಟ್ಟಣ, ಹಳ್ಳಿಗಳಲ್ಲಿನ ಜನರು ಭಾರತದ ಚರಿತ್ರೆಯಲ್ಲೇ ಮೊದಲ ಬಾರಿಗೆ ದೇಶದ ರಾಜಕೀಯದಲ್ಲಿ ನೇರವಾಗಿ ಧುಮುಕಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಹೊಸ ಆಯಾಮವನ್ನು ಕೊಟ್ಟ ಉದಾಹರಣೆಗಳನ್ನು ನಾವು ಈ ಸಂದರ್ಭದಲ್ಲಿ ನೋಡಬಹುದು. ಬಂಗಾಳದ ವಿಭಜನೆಯನ್ನು ಪ್ರತಿಭಟಿಸುವಲ್ಲಿ ಮಂದಗಾಮಿ ರಾಜಕಾರಣದ ಭಾಗವಾದ ಮನವಿ ಅರ್ಪಣೆ, ಭಾಷಣ… ಇತ್ಯಾದಿಗಳು ಬ್ರಿಟಿಷರ ದೃಢ ನಿರ್ಧಾರವನ್ನು ಅಲುಗಾಡಿಸಲಿಲ್ಲ. ಈ ಹಿನ್ನೆಲೆಯಲ್ಲಿ ತೀವ್ರಗಾಮಿಗಳ ಹೋರಾಟದ ಮಾದರಿಗಳು ಆದರ್ಶವಾದವು. ಬ್ರಿಟಿಷರು ತಯಾರಿಸಿದ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟನೆಗಳು ವ್ಯಕ್ತವಾದವು. ಬದಲಿಗೆ ಸ್ವದೇಶಿ ವಸ್ತುಗಳನ್ನು ಬಳಸಲು ಸರ್ವವ್ಯಾಪಿ ಕರೆಯನ್ನು ನೀಡಲಾಯಿತು. ರವೀಂದ್ರನಾಥ ಠಾಗೋರ್‌ ಮತ್ತು ರಾಮೇಂದ್ರ ಸುಂದರ್‌ ತ್ರಿವೇದಿಯವರು ಭಾರತೀಯ ಭ್ರಾತೃತ್ವದ ಸಂಕೇತವಾಗಿ “ರಾಖೀ ಬಂಧನ”ವನ್ನು ಖ್ಯಾತಿಗೊಳಿಸಿದರು. ಸ್ವಂತ ಶಕ್ತಿಯ ಮೇಲೆ ನಿಲ್ಲುವ ನಿರ್ಧಾರವನ್ನೇ ಸ್ವದೇಶಿ ಎಂದು ಕರೆದ ತೀವ್ರವಾದಿಗಳು ಬ್ರಿಟಿಷರಿಂದ ದಾಸ್ಯಮುಕ್ತರಾಗಲು ಭಾರತೀಯ ಉದ್ದಿಮೆಗಳನ್ನು, ರಾಷ್ಟ್ರೀಯ ಶಾಲೆಗಳನ್ನು ತೆರೆಯಬೇಕೆಂದರು. ಗ್ರಾಮೀಣ ವಿಕಾಸಕ್ಕೆ ಹೆಚ್ಚು ಒತ್ತನ್ನು ಕೊಡಬೇಕೆಂದು ಕರೆ ನೀಡಿದರು. ೧೯೦೫ರ ಆಗಸ್ಟ್‌೭ ರಂದು ಬಂಗಾಳದ ವಿಭಜನೆಯನ್ನು ಅಧಿಕೃತವಾಗಿ ವಿರೋಧಿಸಿದ ಮೇಲೆ ತೀವ್ರವಾದಿಗಳು ಮಾಡಿದ ಕಾರ್ಯಕ್ರಮಗಳ ಮಾದರಿಗಳನ್ನು ಮುಂದೆ ಚರ್ಚಿಸಲಾಗಿದೆ.

ಮಂದಗಾಮಿ ನಾಯಕರಾದ ಸುರೇಂದ್ರನಾಥ ಬ್ಯಾನರ್ಜಿಯವರು ಆರಂಭದಲ್ಲಿ ಚಳವಳಿಯ ನಾಯಕತ್ವ ವಹಿಸಿದರೂ, ನಾಯಕತ್ವವು ನಂತರದ ದಿನಗಳಲ್ಲಿ ತೀವ್ರಗಾಮಿ ನಾಯಕರಾದ ಬಿಪಿನ್‌ ಚಂದ್ರಪಾಲ್‌, ಅಶ್ವಿನಿಕುಮಾರ್‌ ದತ್ತ ಮತ್ತು ಅರವಿಂದ ಘೋಷ್‌ ಇವರಿಗೆ ಬಂದಿತು. ಇದು ಮುಖ್ಯವಾಗಿ ನಗರಕೇಂದ್ರಿತ ಚಳವಳಿಯಾದರೂ ಹಳ್ಳಿಹಳ್ಳಿಗಳ ಮೇಲೆ ಬಹಳ ಪ್ರಭಾವ ಬೀರಿತು. ಈ ಕಾರಣದಿಂದಲೇ ಅಕ್ಟೋಬರ್‌೧೬ ರ ದಿನವನ್ನು “ಸಂತಾಪ ದಿನ”ವನ್ನಾಗಿ ಆಚರಿಸಲಾಯಿತು. ಎಲ್ಲೆಲ್ಲೂ ಹರತಾಳ ಆರಂಭವಾದವು. ಜನರು ಉಪವಾಸ ಕುಳಿತರು. ಗಂಗಾನದಿಯಲ್ಲಿ ಸ್ನಾನ ಮಾಡಲು ಬರಿಗಾಲಲ್ಲಿ ನಡೆದು ಚಳವಳಿಗಾರರು “ವಂದೇ ಮಾತರಂ” ಘೋಷಣೆಯನ್ನು ಕೂಗಿದರು. ದೇಶಭಕ್ತಿ ಗೀತೆಗಳನ್ನು ಹಾಡಿದರು. ಬಂಗಾಳ ಭ್ರಾತೃತ್ವದ ಸಂಕೇತವಾಗಿ ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ರಾಖಿಯನ್ನು ಕಟ್ಟಿದರು.

ಸ್ವದೇಶಿ ಚಳವಳಿಯ ಭಾಗವಾದ “ಬಹಿಷ್ಕಾರ”ದಂತ ಮಾದರಿಗಳನ್ನು ಈಗಾಗಲೇ ಅಮೆರಿಕಾದವರು, ಐರಿಷ್ ಜನರು ಹಾಗೂ ಚೀನಿಯರು ತಮ್ಮ ಹೋರಾಟಗಳಲ್ಲಿ ಬಳಸಿಕೊಂಡಿದ್ದರು. ೧೮೭೦ ರ ವೇಳೆಯಲ್ಲಿ ಬಂಗಾಳದ ಬೋಲೋನಾಥ ಚಂದ್ರ ಅವರು ಬ್ರಿಟಿಷರ ಮೇಲೆ ಆರ್ಥಿಕ ಒತ್ತಡವನ್ನು ಹೇರಲು ವಿದೇಶಿ ವಸ್ತುಗಳ ಬಹಿಷ್ಕಾರ ಹಾಕಿದ್ದರು. ೧೮೬೯ರ ವೇಳೆಯಲ್ಲಿ ತಿಲಕರೂ ಈ ತಂತ್ರವನ್ನು ಬಳಸಿದ್ದರು. ೧೯೦೫ರಲ್ಲಿ ಬಹಳ ವ್ಯಾಪಕವಾಗಿ ಜನರು ಬಹಿಷ್ಕಾರವನ್ನು ಹಾಕಿದರು.

ಸ್ವದೇಶಿ ಹೋರಾಟದ ಸಂದೇಶಗಳು ಹಾಗೂ ವಿದೇಶಿ ವಸ್ತುಗಳ ಬಹಿಷ್ಕಾರದಂತ ಚಟುವಟಿಕೆಗಳು ಭಾರತದಾದ್ಯಂತ ಹರಡಿದವು. ಭಾರತದ ವಿವಿದೆಡೆಯಲ್ಲಿ ಅದರಲ್ಲೂ ಪೂನಾ ಮತ್ತು ಮುಂಬೈಗಳಲ್ಲಿ ಹೋರಾಟವನ್ನು ತಿಲಕರು ಸಂಘಟಿಸಿದರು. ಅಜಿತ್‌ಸಿಂಗ್‌ ಮತ್ತು ಲಾಲಾಲಜಪತ್‌ರಾಯ್‌ ಇವರು ಉತ್ತರ ಭಾರತದಲ್ಲಿ ಅದರಲ್ಲೂ ಪಂಜಾಬ್‌ ಪ್ರಾಂತ್ಯದಲ್ಲೂ, ಸೈಯ್ಯದ್‌ ಹೈದರ್‌ ರಾಜಾ ಅವರು ದೆಹಲಿ, ರಾವಲ್ಪಿಂಡಿ, ಕಾಂಗ್ರಾ, ಜಮ್ಮು, ಮುಲ್ತಾನ್‌ ಮತ್ತು ಹರಿದ್ವಾರಗಳಲ್ಲಿ ಸ್ವದೇಶಿ ಹೋರಾಟವನ್ನು ಸಂಘಟಿಸಿದರು. ಚಿದಂಬರಂ ಪಿಳ್ಳೈ ಅವರು ಮದ್ರಾಸ್‌ ಪ್ರಾಂತ್ಯದಲ್ಲಿ ಈ ಹೋರಾಟವನ್ನು ಸಂಘಟಿಸಲು ಪ್ರಯತ್ನಿಸಿದರು. ೧೯೦೫ರ ಬನಾರಸ್‌ ಅಧಿವೇಶನದಲ್ಲಿ ಅಖಿಲ ಭಾರತ ಕಾಂಗ್ರೆಸ್‌ನ ಅಧ್ಯಕ್ಷತೆ ವಹಿಸಿದ್ದ ಗೋಪಾಲಕೃಷ್ಣ ಗೋಖಲೆಯವರು ಸ್ವದೇಶಿ ಹೋರಾಟವನ್ನು ಬೆಂಬಲಿಸಿದರು. ತಿಲಕ್‌, ಬಿಪಿನ್‌ಚಂದ್ರಪಾಲ್‌, ಲಜತಪ್‌ರಾಯ್‌ ಮತ್ತು ಅರವಿಂದ ಘೋಷ್‌ ಇವರು ಸ್ವದೇಶಿ ಹೋರಾಟವನ್ನೊಂದು ರಾಷ್ಟ್ರೀಯ ಆಂದೋಲನವನ್ನಾಗಿ ಮಾಡಬೇಕಂದು ಬೀದಿಗಿಳಿದಿದ್ದರು. ಈ ಇಡೀ ಹೋರಾಟದ ಮುಖ್ಯ ಉದ್ದೇಶವೇನೆಂದರೆ ತೀರಾ ಸಣ್ಣತನದ, ಬಾಲಿಶವಾದ ಹಾಗೂ ಸಂಕುಚಿತವಾದ ರಾಜಕೀಯ ಲಾಭಗಳಿಗಾಗಿ ಮಾಡಿದ ವಿಭಜನೆಯನ್ನು ರದ್ದು ಮಾಡುವುದೇ ಆಗಿತ್ತು.

* * *