ಸರ್ವಧರ್ಮ ಸಮ್ಮೇಳನ: ಸರ್ವಧರ್ಮ ಸಮಬಾಳ್ವೆಯ ಸಂದೇಶ

ಶ್ರೀ ನಾರಾಯಣ ಗುರು ತಮ್ಮಲ್ಲಿದ್ದ ವಿಶಾಲ ಧಾರ್ಮಿಕ, ಸಾಮಾಜಿಕ ದೃಷ್ಟಿಕೋನಕ್ಕೆ ಪೂರಕವಾಗುವಂತೆ ೧೯೨೪ರಲ್ಲಿ ಶಿವರಾತ್ರಿಯ ದಿನದಂದು ಆಳ್ವಾಯಿಯ ಅದ್ವೈತಾಶ್ರಮದಲ್ಲಿ ಎಲ್ಲ ಧರ್ಮಗಳನ್ನು ಒಂದೇ ವೇದಿಕೆಗೆ ತಂದು ಸಮ್ಮೇಳನವೊಂದನ್ನು ನಡೆಸಿದರು. ಆ ಸಮ್ಮೇಳನದ ಮುಖ್ಯ ಉದ್ದೇಶ ಜ್ಞಾನ ಪ್ರಸಾರ ಮಾತ್ರವಾಗಿತ್ತು. ಆದ್ದರಿಂದಲೇ ಗುರುಗಳು ಸಮ್ಮೇಳನಕ್ಕೆ ಮೊದಲೇ “ಜ್ಞಾನವನ್ನು ಪಡೆಯುವುದಕ್ಕೆ, ತಿಳಿಸುವುದಕ್ಕೋಸ್ಕರ ಈ ಸಮ್ಮೇಳನ, ವಾದ ಮಾಡಿ ಜಯಿಸುವುದಕ್ಕಲ್ಲ” ಎಂದು ಸಮ್ಮೇಳನದ ಆಶಯವನ್ನು ಮಂಡಿಸಿದರು.

ಮದ್ರಾಸಿನಲ್ಲಿ ನ್ಯಾಯಾಧೀಶರಾಗಿದ್ದ ಟಿ. ಸದಾಶಿವ ಅಯ್ಯರ್‌ ಅವರು ಈ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆರ್ಯಸಮಾಜ, ಬ್ರಹ್ಮಸಮಾಜ, ಶ್ರೀಲಂಕಾದ ಬೌದ್ಧ ಸನ್ಯಾಸಿಗಳು ಹಾಗೂ ಇತರ ಹಲವು ಸಂಸ್ಥೆಗಳನ್ನು ಪ್ರತಿನಿಧಿಸುವ ಮುಖಂಡರು ಉಪಸ್ಥಿತರಿದ್ದ ಈ ಸಮ್ಮೇಳನವು ಅಪೂರ್ವವಾದ ರೀತಿಯಲ್ಲಿ ಯಶಸ್ವಿಯಾಯಿತು. “ಎಲ್ಲ ಧರ್ಮಗಳ ಅಂತಿಮ ಗುರಿ ಒಂದೇ, ಇದರಿಂದಾಗಿ ವಿವಿಧ ಧರ್ಮಗಳ ಅನುಯಾಯಿಗಳು ಪರಸ್ಪರ ಕಿತ್ತಾಡಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ’’ ಎಂದು ಸ್ವಾಮಿಯವರು ಈ ಸಮ್ಮೇಳನದಲ್ಲಿ ಸರ್ವಧರ್ಮ ಸಹಬಾಳ್ವೆಯ ಸಂದೇಶ ನೀಡಿದರು.

ವೈಕಂ ಸತ್ಯಾಗ್ರಹ ಹಾಗೂ ಗಾಂಧಿಯೊಂದಿಗೆ ಭೇಟಿ

ನಾರಾಯಣ ಗುರು ತಮ್ಮದೇ ಆದ ದೇಗುಲಗಳ ಸ್ಥಾಪನೆ ಮಾತ್ರವಲ್ಲದೆ ಅಸ್ಪೃಶ್ಯರಿಗೂ, ಹಿಂದುಳಿದ ಜಾತಿ ವರ್ಗಗಳಿಗೂ ಪಾರಂಪರಿಕ ದೇಗುಲ ಪ್ರವೇಶದ ಹಕ್ಕಿಗಾಗಿಯೇ ಹೋರಾಟ ನಡೆಸಿದ್ದರು. ಇದರ ಅಂಗವಾಗಿಯೇ ೧೯೨೪ರಲ್ಲಿ ಪ್ರಸಿದ್ಧ ವೈಕಂ ಸತ್ಯಾಗ್ರಹ ನಡೆಯಿತು.

ಕೇರಳದ ವೈಕಂ ನಗರದ ಶಿವ ದೇವಾಲಯವು ಅತಿ ಪ್ರಖ್ಯಾತವಾದುದು. ಆಗಿನ ಕಾಲದಲ್ಲಿ ಆ ದೇಗುಲದ ಪ್ರಧಾನ ರಸ್ತೆಗಳಲ್ಲಿ ಅಸ್ಪೃಶ್ಯ ಜಾತಿಯವರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಈ ಸಾಮಾಜಿಕ ಅಸಮಾನತೆಯನ್ನು ಮಹಾತ್ಮ ಗಾಂಧಿಯವರ ಸತ್ಯಾಗ್ರಹ ಪದ್ಧತಿಯಲ್ಲಿ ವಿರೋಧಿಸಲು ತೀರ್ಮಾನಿಸಿ ನಾರಾಯಣ ಗುರುಗಳ ಶಿಷ್ಯರಾದ ಟಿ. ಕೆ. ಮಾಧವನ್‌, ಕೇಳಿಪ್ಪನ್‌ ಹಾಗೂ ಕೃಷ್ಣಸ್ವಾಮಿ ಮುಂತಾದ ಧುರೀಣರನ್ನು ಸೇರಿಕೊಂಡು ಗಾಂಧೀಜಿಯವರ ಅನುಮತಿ ಮೇರೆಗೆ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಸತ್ಯಾಗ್ರಹಿಗಳು ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ದೇವಾಲಯಕ್ಕೆ ಹೊಂದಿಕೊಂಡಿರುವ ರಸ್ತೆಯನ್ನು ಪ್ರವೇಶಿಸಿ ವೈಕಂ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಸತ್ಯಾಗ್ರಹ ಶಾಂತಿಯುತವಾಗಿತ್ತು. ಈ ಸತ್ಯಾಗ್ರಹಕ್ಕೆ ಶ್ರೀ ನಾರಾಯಣ ಗುರುಗಳ ಬೆಂಬಲವಿದ್ದ ಕಾರಣ ಅಸಂಖ್ಯಾತ ಈಳವರು ಸತ್ಯಾಗ್ರಹಿಗಳಾಗಿ ಭಾಗವಹಿಸಿದ್ದರು.

ಸತ್ಯಾಗ್ರಹಕ್ಕೆ ಅಹ್ಮದಾಬಾದಿನಿಂದಲೇ ಬೆಂಬಲ ನೀಡುತ್ತಿದ್ದ ಮಹಾತ್ಮಾಗಾಂಧಿಯವರು ಅಂತಿಮ ಹಂತದಲ್ಲಿ ತಾವೇ ವೈಕಂಗೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರು ನಾರಾಯಣ ಗುರುಗಳನ್ನೂ ಸಂರ್ದಶಿಸಿದರು. ಗುರುಗಳು ಕೈಗೊಂಡ ಸಮಾಜಿಕ ಕ್ರಾಂತಿಯ ವಿಚಾರಗಳು ಗಾಂಧೀಜಿಯವರಿಗೆ ತಿಳಿದಿದ್ದವು. ಅವರ ಚಳವಳಿಯನ್ನು ಗಾಂಧೀಜಿಯವರು ಮೆಚ್ಚಿಕೊಂಡಿದ್ದರು. ಆದರೂ ಗಾಂಧೀಜಿಯವರ ಚಿಂತನೆಗೂ ನಾರಾಯಣ ಗುರುಗಳ ಸಿದ್ಧಾಂತದಲ್ಲಿ ಒಂದು ವ್ಯತ್ಯಾಸವನ್ನು ಗುರುತಿಸಬಹುದು. ಗಾಂಧೀಜಿಯವರು ಸಾಂಪ್ರದಾಯಿಕ ಪದ್ಧತಿಯಲ್ಲಿ ವರ್ಣಾಶ್ರಮವನ್ನು ಒಪ್ಪಿಕೊಳ್ಳುತ್ತಿದ್ದರು. ಆದರೆ ನಾರಾಯಣ ಗುರುಗಳು ಈ ವಿಚಾರವನ್ನು ಒಪ್ಪಿಕೊಳ್ಳುತ್ತಿರಲಿಲ್ಲ.

ಈ ಘಟನೆಗೂ ಹಿಂದೆ, ೧೯೨೨ರಲ್ಲಿ ಕವಿ ರವೀಂದ್ರನಾಥ ಠಾಕೂರರು ದಕ್ಷಿಣ ಭಾರತ ಪ್ರವಾಸದಲ್ಲಿದ್ದಾಗ ವರ್ಕಳದ ಶಿವಗಿರಿಯಲ್ಲಿ ನಾರಾಯಣ ಗುರುಗಳನ್ನು ಸಂದರ್ಶಿಸಿದ್ದರು.

ಹೀಗೆ ಹತ್ತೊಂಬತ್ತನೆಯ ಶತಮಾನದಲ್ಲಿ ಸ್ವಾಮಿ ದಯಾನಂದ ಸರಸ್ವತಿ, ಈಶ್ವರ ಚಂದ್ರ ವಿದ್ಯಾಸಾಗರ, ವಿವೇಕಾನಂದರು ಉತ್ತರ ಭಾರತದಲ್ಲಿ ಧಾರ್ಮಿಕ ಸುಧಾರಣೆಗಳನ್ನು ಕೈಗೊಂಡರೆ, ದಕ್ಷಿಣ ಭಾರತದಲ್ಲಿ ಹಿಂದುಳಿದ ವರ್ಗದ ಆಧ್ಯಾತ್ಮ ನಾಯಕರಾದ ನಾರಾಯಣ ಗುರು ಕೆಳವರ್ಗ ಜಾತಿಗಳಲ್ಲಿ ಧಾರ್ಮಿಕ, ಸಾಮಾಜಿಕ ಕ್ರಾಂತಿಯನ್ನೇ ಪ್ರಾರಂಭಿಸಿದರು.

ಶೈಕ್ಷಣಿಕ ಅಭಿಯಾನ

ಶ್ರೀ ನಾರಾಯಣ ಗುರು ಅವರ ತತ್ವ ಸಿದ್ಧಾಂತಗಳು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗಿರದೆ ಹಿಂದುಳಿದ ವರ್ಗಗಳಲ್ಲಿ ಶಿಕ್ಷಣ ಮತ್ತು ಸಂಘಟನೆಗಳ ಮಹತ್ವವನ್ನು ಪ್ರತಿಪಾದಿಸಿದರು. “ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಶಾಲಿಗಳಾಗಿ” ಇದು ನಾರಾಯಣ ಸ್ವಾಮಿಯವರು ನೀಡಿದ ಅತಿ ಮಹತ್ವದ ಸಂದೇಶ. ಶ್ರೀ ನಾರಾಯಣ ಗುರು ಅಲೌಕಿಕ ಚಿಂತನೆಗೆ ಎಷ್ಟು ಮಹತ್ವ ನೀಡಿದ್ದರೊ ಅಷ್ಟೆ ಮಹತ್ವವನ್ನು ಲೌಕಿಕ ಚಿಂತನೆಗೂ ನೀಡಿದ್ದರು.

ಗುರುಗಳು ಹಿಂದುಳಿದ ವರ್ಗಗಳು ಆಧುನಿಕ ಶಿಕ್ಷಣ ಪಡೆಯುವುದರ ಮೂಲಕ ಆಧುನೀಕರಣಗೊಳ್ಳಬೇಕೆಂದು ಪ್ರತಿಪಾದಿಸಿದರು. ಅನಕ್ಷರತೆಯೇ ಈ ಜನರನ್ನು ಶತಮಾನಗಳಿಂದ ಮೂರ್ಖರನ್ನಾಗಿಸಿದೆ ಎಂದು ಗುರುಗಳು ಪ್ರತಿಪಾದಿಸಿದರು. ಈ ಜನಾಂಗಗಳ ದಾಸ್ಯಕ್ಕೆ ಕೂಡಾ ಅನಕ್ಷರತೆಯೇ ಕಾರಣವೆಂದು ಅವರು ನಂಬಿದ್ದರು. ಹಾಗಾಗಿ ಆಧುನಿಕ ಶಿಕ್ಷಣದ ಮೂಲಕ ಈ ಜನರನ್ನು ಪ್ರಜ್ಞಾವಂತರನ್ನಾಗಿ ಮಾಡಬಹುದೆಂದು ಸ್ವಾಮೀಜಿಯವರು ವಾದಿಸಿದರು.

ಸ್ವತಃ ಸ್ವಾಮೀಜಿಯವರೇ ಕಾವ್ಯ, ತತ್ವಶಾಸ್ತ್ರ, ಧರ್ಮಗ್ರಂಥಗಳ ಅಧ್ಯಯನ ನಡೆಸಿದ್ದರು. ಶಿಕ್ಷಣದ ಮಹತ್ವವನ್ನು ಅರಿತ ಸ್ವಾಮೀಜಿ ಒಂದು ಶೈಕ್ಷಣಿಕ ನಿಧಿಯನ್ನು ಸ್ಥಾಪಿಸಿದರು. ಪ್ರತಿಯೊಂದು ಈಳವ ಕುಟುಂಬವು ವಿವಾಹ ಮುಂತಾದ ಸಂತೋಷ ಸಮಾರಂಭಗಳ ಸಂದರ್ಭದಲ್ಲಿ ಈ ನಿಧಿಗೆ ದೇಣಿಗೆ ನೀಡುವಂತೆ ಒತ್ತಾಯ ಮಾಡಿದರು.

ಪ್ರಾರಂಭದಲ್ಲಿ ತನ್ನ ಹುಟ್ಟೂರಲ್ಲೆ ಗುರುಗಳು ಒಂದು ಏಕೋಪಾಧ್ಯಾಯ ಶಾಲೆ ನಡೆಸತೊಡಗಿದರು. ಯುವಕ ನಾಣು ಆ ಬಳಿಕ ಊರಿನ ಜನರಿಗೆ ನಾರಾಯಣ ಆಶನ್‌ ಆದರು. ನಂತರದ ದಿನಗಳಲ್ಲಿ ನಾರಾಯಣ ಗುರು ಹಲವಾರು ವಸತಿ ಶಾಲೆಗಳನ್ನೂ, ಗುರುಕುಲಗಳನ್ನು, ಸೇವಾಶ್ರಮಗಳನ್ನೂ ಸ್ಥಾಪಿಸಿ ಕೇರಳ ಸಮಾಜದಲ್ಲಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಕ್ರಾಂತಿಯನ್ನೆ ಹುಟ್ಟುಹಾಕಿದರು. ಹಾಗೆಯೇ ಹಲವಾರು ಮಠಗಳನ್ನು ಸ್ಥಾಪಿಸುವ ಮೂಲಕ ಸುಧಾರಿತ ಹಿಂದೂ ಧರ್ಮವೆನಿಸಿದ ‘ನಾರಾಯಣ ಧರ್ಮ’ದಲ್ಲಿ ಅಡಕವಾದ ಬೌದ್ಧಿಕ ಚಿಂತನೆಗಳನ್ನೂ ಪ್ರಚಾರಗೊಳಿಸಿದರು.

ಶ್ರೀನಾರಾಯಣ ಗುರುಗಳು ಸ್ಥಾಪಿಸಿದ ದೇವಾಲಯಗಳು ಶಿಕ್ಷಣ ಕೇಂದ್ರಗಳೂ ಆಗಿದ್ದವು. ಪ್ರತಿ ದೇವಾಲಯಗಳಲ್ಲಿ ಸುಸಜ್ಜಿತ ಗ್ರಂಥಾಲಯಗಳನ್ನೂ ಸ್ಥಾಪಿಸಿದರು. ಕೇವಲ ಧಾರ್ಮಿಕ ಗ್ರಂಥ ಮಾತ್ರವಲ್ಲದೆ ಆಧುನಿಕ ಕಾಲಕ್ಕೆ ತಕ್ಕಂತೆ ತಾಂತ್ರಿಕ ಶಾಲೆಗಳನ್ನೂ ದೇವಾಲಯಗಳು ಹೊಂದಿರಬೇಕೆಂದು ಇಚ್ಚೆಪಟ್ಟರು. ೧೯೧೨ರಲ್ಲಿ ವರ್ಕಳದಲ್ಲಿ ಸ್ಥಾಪಿಸಲಾದ ಶಾರದಾ ಮಠವು ನಿಜವಾಗಿಯೂ ಒಂದು ಶೈಕ್ಷಣಿಕ ಕೇಂದ್ರವೇ ಆಗಿತ್ತು. “ಇದು ಕೇವಲ ಜ್ಞಾನಾರ್ಜನೆಯ ಮಠವೇ ಹೊರತು ದೇವಾಲಯವಲ್ಲ” ಎಂದು ಗುರುಗಳು ಅಭಿಪ್ರಾಯಪಟ್ಟರು.

ವೇದ ಉಪನಿಷತ್ತುಗಳು ಬೋಧಿಸುವ ಪಾಠ “ಕತ್ತಲೆಯಿಂದ ಬೆಳಕಿಗೆ” ಎನ್ನುವುದು. ಈ ತತ್ವವನ್ನಾಧರಿಸಿ ಕಾರಮುಕ್ಕು ದೇವಾಲಯದಲ್ಲಿ ಹಾಗೂ ಕಲವಂಕೋಡಂ ದೇವಾಲಯಗಳಲ್ಲಿಯೂ ಮೂರ್ತಿಯನ್ನು ಸ್ಥಾಪಿಸದೆ ಕೇವಲ ಜ್ಞಾನಾರ್ಜನೆಯೇ ಆ ಕೇಂದ್ರಗಳ ಉದ್ದೇಶವೆಂದು ಪ್ರತಿಪಾದಿಸಿದರು.

“ಯೋಗ್ಯ ಶಿಕ್ಷಣದಿಂದ ಸ್ವಾತಂತ್ರ್ಯ ಲಭಿಸುತ್ತದೆ ನಾವು ಬಂಧಮುಕ್ತರಾಗುತ್ತೇವೆ. ಸಂಘಟನೆ, ಸುವ್ಯವಸ್ಥೆಯಿಂದ ನಾವು ಶಕ್ತಿವಂತರಾಗುತ್ತೇವೆ” ಎನ್ನುವುದು ಸ್ವಾಮಿಯವರ ಅಭಿಮತ.

ಆರ್ಥಿಕ ಚಿಂತನೆಗಳು

ಶ್ರೀ ನಾರಾಯಣ ಗುರು ಹಿಂದುಳಿದ ಹಾಗೂ ಅಸ್ಪೃಶ್ಯರಿಗೆ ತಮ್ಮ ಪಾರಂಪರಿಕ ಕುಲಕಸುಬನ್ನು ತೊರೆದು ಆಧುನಿಕ ಶಿಕ್ಷಣ, ಆಧುನಿಕ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಕರೆ ನೀಡಿದರು. ಅದರಲ್ಲೂ ಮುಖ್ಯವಾಗಿ ತನ್ನ ಜಾತಿ ಬಾಂಧವರಾದ ಈಳವರು ಸಾಮಾಜಿಕವಾಗಿ ಕೀಳೆನಿಸಿಕೊಂಡಿರುವ ವೃತ್ತಿಗಳನ್ನು ಅನುಸರಿಸುವುದು ಸ್ವಾಮಿಯವರು ಒಪ್ಪಿಕೊಳ್ಳಲಿಲ್ಲ. ಈಳವರು ಸೇಂದಿ ಇಳಿಸುವ ಕಾಯಕದಲ್ಲಿ ತೊಡಗಿದ್ದರಿಂದ ಗುರುಗಳು ಈ ಕುಲಕಸುಬನ್ನು ತೊರೆಯುವಂತೆ ತಮ್ಮ ಜಾತಿ ಬಾಂಧವರಿಗೆ ಕರೆ ನೀಡಿದರು. ಅದರ ಬದಲಾಗಿ ಆಧುನಿಕ ಕೆಲಸ ಕಾರ್ಯಗಳಲ್ಲಿ ತೊಡಗುವಂತೆ ಅವರನ್ನು ಪ್ರೆರೇಪಿಸಿದರು. ಈಳವ ಹಾಗೂ ಇನ್ನಿತರ ಕೆಳಜಾತಿಯ ಜನರಿಗೆ “ಮದ್ಯಪಾನ ಮಾಡಬೇಡಿ, ಉತ್ಪಾದಿಸಬೇಡಿ, ನೀಡಬೇಡಿ” ಎನ್ನುವ ಸಂದೇಶವನ್ನೂ ನೀಡಿದರು.

“ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ” ಶ್ರೀ ನಾರಾಯಣ ಗುರು ನುಡಿದ ಇನ್ನೊಂದು ಪ್ರಮುಖ ಸಂದೇಶವೇ ಸಂಘಟನೆಯ ಸಂದೇಶ. ಶ್ರೀಗುರುಗಳು ಕೆಳಸ್ತರದ ಜನರಿಗೆ ಸಂಘಟಿತ ಹೋರಾಟ ನೀಡುವಂತೆ ಕರೆ ಕೊಟ್ಟರು. ಸಂಘಟನೆ, ಸುವ್ಯವಸ್ಥೆಯಿಂದ ನಾವು ಶಕ್ತಿವಂತರಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡೋಣ ಎನ್ನುವುದು ಅವರ ಸಂದೇಶವಾಗಿತ್ತು.

ಗುರುಗಳ ಸಂಘಟನೆಯ ಸಂದೇಶದಿಂದ ಪ್ರೇರಿತರಾದ ಅವರ ಶಿಷ್ಯರನೇಕರು ಸೇರಿ ಗುರುಗಳ ಆಶಯದಂತೆ “ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ”ವೆಂಬ ಸಂಸ್ಥೆಯನ್ನು ಪ್ರತಿಷ್ಠಾಪಿಸಿದರು. ಈ ಸಂಸ್ಥೆಯಲ್ಲಿ ನಾರಾಯಣ ಗುರುಗಳ ಶಿಷ್ಯರಾದ ಕುಮಾರನ್‌ ಆಶಾನ್‌, ಡಾ. ಪಲ್‌ಪು ಮುಂತಾದವರು ಸಕ್ರಿಯರಾಗಿದ್ದರು. ಮುಂದೆ ಈ ಶಿಷ್ಯರು ಯೋಗಂ ವತಿಯಿಂದ ಹಲವಾರು ಹೋರಾಟಗಳನ್ನು ನಡೆಸಿದರು. ಅದರಲ್ಲಿ ಮುಖ್ಯವಾಗಿ ಅವರು ನಾಗರಿಕ ಹಕ್ಕುಗಳ ಹೋರಾಟ, ದೇಗುಲ ಪ್ರವೇಶ ಹೋರಾಟ ಇತ್ಯಾದಿಗಳನ್ನು ಹೆಸರಿಸಬಹುದು.

ನಂತರದ ದಿನಗಳಲ್ಲಿ ಯೋಗಂ ಕೇರಳದಲ್ಲಿ ಈ ಕೆಳಗಿನ ನಾಗರಿಕ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ನಡೆಸಿತು.

  • ಯೋಗಂ ಈಳವ ಸಮಾಜದ ಮಕ್ಕಳಿಗೆ ಸಾರ್ವಜನಿಕ ಶಾಲೆಗಳಲ್ಲಿ ಪ್ರವೇಶ ನೀಡುವಂತೆ ಒತ್ತಾಯಿಸಿ ಮನವಿಗಳನ್ನು ಸಲ್ಲಿಸಿತು. ಪ್ರಾರಂಭದಲ್ಲಿ ಈ ಒತ್ತಾಯಕ್ಕೆ ಸರ್ಕಾರ ಮಣಿಯಲಿಲ್ಲ. ಆದರೆ ಸುಬ್ಬಾ ಅಯ್ಯರ್‌ ದಿವಾನರಾಗಿದ್ದಾಗ ಸಾರ್ವಜನಿಕ ಶಾಲೆಗಳಿಗೆ ಪ್ರವೇಶ ನೀಡದಿದ್ದರೂ, ಈಳವರು ತಮ್ಮದೇ ಪ್ರತ್ಯೇಕ ಶಾಲೆಗಳನ್ನು ನಡೆಸಲು ಅನುಮತಿ ನೀಡಲಾಯಿತು. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಯೋಗಂ ಈಳವ ಹಾಗೂ ಇನ್ನಿತರ ಕೆಳಜಾತಿಗಳ ವಿದ್ಯಾರ್ಥಿಗಳಿಗಾಗಿ ಶಾಲೆಗಳನ್ನು ಪ್ರಾರಂಭಿಸಿತು.
  • ಆಗಿನ ಸಂದರ್ಭದಲ್ಲಿ ಈಳವ ಹಾಗೂ ಇನ್ನಿತರ ದಲಿತ ವರ್ಗಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಅವಕಾಶ ದೊರೆಯುತ್ತಿರಲಿಲ್ಲ. ಈ ಸಂದರ್ಭದಲ್ಲಿ ಯೋಗಂ ಈ ಜನಸಮುದಾಯಕ್ಕೆ ಸರ್ಕಾರಿ ಹುದ್ದೆಗಳಲ್ಲಿ ಸ್ಥಾನ ನೀಡುವಂತೆ ಒತ್ತಾಯಿಸತೊಡಗಿತು.
  • ಹಿಂದುಳಿದ ವರ್ಗಗಳಿಗೆ ಹಾಗೂ ದಲಿತ ಸಮುದಾಯಗಳಿಗೆ ದೇವಾಲಯ ಪ್ರವೇಶ ನಿಷೇಧವಾಗಿತ್ತು. ಶ್ರೀನಾರಾಯಣ ಧರ್ಮ ಪರಿಪಾಲನಾ ಯೋಗಂ ದೇವಾಲಯ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಎಲ್ಲ ಜಾತಿಯ ಜನರಿಗೆ ಪ್ರವೇಶ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸಿತು.
  • ಯೋಗಂ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಸೌಲಭ್ಯಗಳಲ್ಲಿ, ಉದ್ಯೋಗದಲ್ಲಿ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮೀಸಲಾತಿ ನೀಡುವಂತೆ ಒತ್ತಾಯ ತಂದಿತು.
  • ಯೋಗಂ ಶತಮಾನಗಳಿಂದ ಶೋಷಣೆಗೆ ಒಳಗಾದ ಜನಸಮುದಾಯಗಳ ಎಲ್ಲ ನಾಗರಿಕ ಹಾಗೂ ಮಾನವ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸಿತು.

ಹೀಗೆ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಚಳವಳಿಗೆ ಚಾಲನೆ ನೀಡಿ ಕೇರಳ ಸಮಾಜದಲ್ಲಿ ಗುರುಗಳು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳಿಗೆ ಧಾರ್ಮಿಕ ಸಂಸ್ಥೆಗಳಿಗೆ ಹಾಗೂ ಮಾನವೀಯ ಮೌಲ್ಯಗಳಿಗೆ ಒಂದು ವೇದಿಕೆಯನ್ನು ಒದಗಿಸಿದರು. ಆದರೆ ಯೋಗಂನ ರಾಜಕೀಯ ನಿಲುವುಗಳನ್ನು ಪ್ರತಿಭಟಿಸಿ ಸ್ವಾಮಿ ಯೋಗಂ ತ್ಯಜಿಸಿ ನಾರಾಯಣ ಧರ್ಮ ಸಂಘ ಟ್ರಸ್ಟ್‌ ಸ್ಥಾಪಿಸಿದರು.

ಉಪಸಂಹಾರ

ಕೇರಳದಲ್ಲಿ ಒಂದು ಮೌನಕ್ರಾಂತಿಯನ್ನು ಹುಟ್ಟುಹಾಕಿದ ಶ್ರೀ ನಾರಾಯಣ ಗುರು ಸೆಪ್ಟೆಂಬರ್ ೧೯೨೮ರಲ್ಲಿ ಮರಣ ಹೊಂದಿದರು. ಆದರೆ ಅವರ ಜೀವನ, ತತ್ವ ಮತ್ತು ಸಿದ್ಧಾಂತಗಳ ಮೂಲಕ ಅವರ ಅನುಯಾಯಿಗಳಿಗೆ ಒಂದು ಸ್ಪಷ್ಟವಾದ ಪ್ರಗತಿಯ ಮಾರ್ಗವನ್ನು ತೋರಿಸಿದ್ದರು. ಅವರು ನೀಡಿದ ಸಂದೇಶಗಳು ಕೇರಳದಲ್ಲಿ ಶೋಷಿತ ಸಮುದಾಯಗಳಲ್ಲಿ ಹೊಸ ಜಾಗೃತಿಯನ್ನು ಮೂಡಿಸಿತು.

ವಿದ್ಯೆ ಪಡೆಯುವುದೇ ಅಸಾಧ್ಯವೆನಿಸಿದ್ದ ಜಾತಿಯೊಂದರಲ್ಲಿ ಜನಿಸಿದ ಗುರುಗಳು ಉನ್ನತ ವ್ಯಾಸಂಗವನ್ನು ಮಾಡಿ, ಧಾರ್ಮಿಕ ಕೇಂದ್ರಗಳನ್ನೂ, ಪಾಠಶಾಲೆಗಳನ್ನೂ ಸ್ಥಾಪಿಸಿ ಕೇರಳದಲ್ಲಿ ಹಿಂದುಳಿದ ಜನತೆಗೆ ಒಂದು ಸಾಂಸ್ಥಿಕ ಭದ್ರತೆಯನ್ನು ಒದಗಿಸಿದರು. ಅಷ್ಟಲ್ಲದೆ, ಅವರು ಪ್ರಗತಿಪರ ವಿಚಾರಗಳಿಂದ ಒಂದು ಸಾಮಾಜಿಕ, ಸಾಂಸ್ಕೃತಿಕ ಕ್ರಾಂತಿಯನ್ನೇ ಪ್ರಾರಂಭಿಸಿದರು. ಶ್ರೀ ಗುರು ಅವರ ವಿಚಾರಧಾರೆಗಳು ಕೇರಳದಲ್ಲಿ ನಂತರ ಕಾಣಿಸಿಕೊಂಡ ಎಲ್ಲ ರಾಜಕೀಯ, ಸಾಮಾಜಿಕ ಚಳವಳಿಗೆ ಮೂಲಕಾರಣವಾಯಿತು.

೧೯೨೩ರಲ್ಲಿ ಡಾ. ಪಲ್ಪುರವರ ಪುತ್ರರಾದ ಶ್ರೀ ನಟರಾಜ ಗುರು ಸ್ವಾಮೀಜಿಯವರ ಹೆಸರಿನಲ್ಲಿ ಶ್ರೀ ನಾರಾಯಣ ಗುರುಕುಲ ಎನ್ನುವ ಸಂಘಟನೆಯನ್ನು ಸ್ಥಾಪಿಸಿದರು. ಸ್ವಾತಂತ್ರ್ಯಾನಂತರ ಯೋಗಂ, ಸಂಘ ಹಾಗೂ ಗುರುಕುಲಗಳು ತಮ್ಮದೇ ಹಾದಿಯಲ್ಲಿ ಸಕ್ರೀಯವಾದವು. ಈ ಮೂರು ಸಂಘಟನೆಗಳು ನಾರಾಯಣ ಗುರು ಅವರು ತತ್ವ ಸಿದ್ಧಾಂತಗಳನ್ನೂ ಇಪ್ಪತ್ತನೇ ಶತಮಾನದಲ್ಲಿ ಕೇರಳ ಸಮಾಜದಲ್ಲಿ ನೆಲೆಯೂರುವಂತೆ ಪ್ರಯತ್ನಿಸಿದವು.

ಬ್ರಾಹ್ಮಣೇತರ ಚಳವಳಿ

ಜಾತಿ ಪದ್ಧತಿಯು ಭಾರತೀಯ ಸಮಾಜದ ವೈಶಿಷ್ಟ್ಯತೆ. ಶತಮಾನಗಳಿಂದ ಧಾರ್ಮಿಕ ಚೌಕಟ್ಟಿನೊಳಗೆ ಈ ಪದ್ಧತಿಯು ಸಾಂಸ್ಥೀಕರಣಗೊಂಡು ಸಮಾಜದಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಪ್ರತಿಯೊಂದು ಜಾತಿಯೂ ಒಂದು ಸಾಮಾಜಿಕ ಘಟಕವಾಗಿದ್ದು, ಆಚಾರ ಸಂಪ್ರದಾಯಗಳಲ್ಲಿ ಇತರ ಜಾತಿಗಳಿಂದ ಭಿನ್ನವಾದ ಅಸ್ತಿತ್ವವನ್ನು ಹೊಂದಿರುತ್ತದೆ. ಅಲ್ಲದೇ ಈ ವ್ಯವಸ್ಥೆಯು ಶ್ರೇಣೀಕೃತಗೊಂಡಿದ್ದು ವೃತ್ತಿ ಆಧರಿತವಾಗಿದ್ದು, ಶುದ್ಧ-ಅಶುದ್ಧವೆನ್ನುವ ಕಲ್ಪನೆಯೊಂದಿಗೆ ತನ್ನ ಅಸ್ತಿತ್ವವನ್ನು ರೂಪಿಸಿಕೊಂಡಿರುತ್ತದೆ.

ಆದರೆ ಈ ಜಾತಿ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಶೋಷಣೆ, ದಬ್ಬಾಳಿಕೆಗಳಿಂದಾಗಿ ಆ ವ್ಯವಸ್ಥೆಯನ್ನು ಧಿಕ್ಕರಿಸುವ ಪ್ರಯತ್ನಗಳೂ ನಡೆದವು. ವಿವಿಧ ಸಾಮಾಜಿಕ, ಧಾರ್ಮಿಕ ಚಳವಳಿಗಗಳಾದ ಬೌದ್ಧ, ಜೈನ, ವೀರಶೈವ ಮುಂತಾದವು ಜಾತಿ ತಾರತಮ್ಯತೆಯನ್ನು ಅಲ್ಲಗಳೆದು ಏಕರೂಪದ ಸಾಮಾಜಿಕ ವ್ಯವಸ್ಥೆಯನ್ನು ಕಟ್ಟುವ ಪ್ರಯತ್ನದಲ್ಲಿ ತೊಡಗಿದವು. ಈ ಎಲ್ಲ ಚಳವಳಿಗಳು ಹಿಂದೂ ಧಾರ್ಮಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳಿಗೆ ಕಾರಣವಾದರೂ, ಹಿಂದೂ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವಲ್ಲಿ ಯಶಸ್ವಿಯಾಗಲಿಲ್ಲ.

ಪಾರಂಪರಿಕವಾಗಿ ಬ್ರಾಹ್ಮಣ ವರ್ಗವು ಬೋಧಕರಾಗಿ, ಪುರೋಹಿತರಾಗಿ, ಜ್ಯೋತಿಷಿಗಳಾಗಿ, ಅರ್ಚಕರಾಗಿ ಸಮಾಜದ ಪ್ರಮುಖ ಸ್ಥಾನದಲ್ಲಿದ್ದ ಕಾರಣದಿಂದಾಗಿಯೂ, ಆಡಳಿತ ಹಾಗೂ ಸಚಿವಪದವಿಗಳನ್ನು ಹೊಂದಿದ್ದು ಅಧಿಕಾರ ನಿರ್ವಹಣೆ ಮಾಡಿದ ಕಾರಣದಿಂದಾಗಿಯೂ ವ್ಯವಸ್ಥೆಯ ಮೇಲೆ ಹಿಡಿತವನ್ನು ಸಾಧಿಸಿತ್ತು. ಈ ಬೌದ್ಧಿಕ ಹಿನ್ನೆಲೆ ಇದ್ದ ಕಾರಣ ಮುಸ್ಲಿಮ್‌ಆಡಳಿತದ ಸಮಯದಲ್ಲಿ ಅವರು ಅಧಿಕಾರ ವಂಚಿತರಾಗಲಿಲ್ಲ. ಅವರು ಪರ್ಷಿಯನ್‌ ಭಾಷೆ ಕಲಿತು ಸರ್ಕಾರಿ ಹುದ್ದೆಗಳನ್ನು ಪಡೆದರು. ನಂತರ ಬ್ರಿಟಿಷರು ತಮ್ಮ ಅಧಿಕಾರ ಭದ್ರಗೊಳಿಸಿದ ಸಂದರ್ಭದಲ್ಲಿ ಬ್ರಾಹ್ಮಣ ವರ್ಗ ಇಂಗ್ಲಿಷ್‌ ಶಿಕ್ಷಣ ಪಡೆದು ಪಾಶ್ಚಾತ್ಯರ ಉದಾರವಾದಿ ತತ್ವಗಳನ್ನು ಮೈಗೂಡಿಸಿಕೊಂಡು ತಮ್ಮ ಅಧಿಕಾರ ಸ್ಥಾನಗಳನ್ನು ಇನ್ನಷ್ಟು ಭದ್ರಗೊಳಿಸಿದರು.

ಬ್ರಿಟಿಷ್ ‌ಆಡಳಿತವೂ ಆಂಗ್ಲ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳನ್ನು ನಡೆಸಿತು. ೧೮೪೪ರಲ್ಲಿ ಲಾರ್ಡ್ ಹಾರ್ಡಿಂಜರು ಒಂದು ಆಜ್ಞೆ ಹೊರಡಿಸಿ ಆಧುನಿಕ ಆಂಗ್ಲ ಶಿಕ್ಷಣ ಪಡೆದ ಭಾರತೀಯರಿಗೆ ಉದ್ಯೋಗದಲ್ಲಿಯೂ ಹೆಚ್ಚಿನ ಅವಕಾಶ ನೀಡಿದರು. ಹಾಗೆಯೇ ಆಧುನಿಕ ಪಾಠಶಾಲೆಗಳನ್ನು ಪ್ರಾರಂಭಿಸಿ ಎಲ್ಲ ಜಾತಿ ಜನಾಂಗಗಳಿಗೂ ವಿದ್ಯಾಭ್ಯಾಸದ ಅವಕಾಶ ನೀಡಿದರು. ಭಾರತದ ಇತಿಹಾಸದಲ್ಲೇ ಮೊದಲಾಗಿ ಮಹಿಳಾ ಶಾಲೆಗಳನ್ನು ತೆರೆಯಲಾಯಿತು. ಈ ಬೆಳವಣಿಗೆಗಳು ಶೂದ್ರಾತಿ ಶೂದ್ರ ಜನರನ್ನು ಆಧುನಿಕ ಜಗತ್ತಿನ ಸೌಕರ್ಯಗಳನ್ನು ಪಡೆಯುವಂತೆ ಪ್ರೇರೇಪಿಸಿದವು. ಈ ಬದಲಾವಣೆಗಳ ಪ್ರತಿಫಲವೇ ಹತ್ತೊಂಬತ್ತನೇ ಶತಮಾನದಲ್ಲಿ ಹುಟ್ಟಿಕೊಂಡ ಬ್ರಾಹ್ಮಣೇತರ ಚಳವಳಿ. ಪ್ರಾರಂಭದಲ್ಲಿ ಭಾರತ ಪಶ್ಚಿಮ ಹಾಗೂ ದಕ್ಷಿಣ ಪ್ರಾಂತ್ಯಗಳಲ್ಲಿ ಈ ಚಳವಳಿಯು ಹುಟ್ಟಿಕೊಂಡಿತು. ನಂತರದ ದಿನಗಳಲ್ಲಿ ಭಾರತದ ಎಲ್ಲ ಕಡೆಗಳಲ್ಲಿ ಈ ರೀತಿಯ ಚಳವಳಿಗಳು ನಡೆದವು.

ಮಹಾರಾಷ್ಟ್ರದಲ್ಲಿ ಬ್ರಾಹ್ಮಣೇತರ ಚಳವಳಿ

ಫುಲೆಯವರ ಪ್ರಭಾವ : ಮಹಾರಾಷ್ಟ್ರದಲ್ಲಿ ನಡೆದ ಬ್ರಾಹ್ಮಣೇತರ ಚಳವಳಿಯ ಬೇರುಗಳು ೧೯ನೇ ಶತಮಾನದಲ್ಲಿ ಪೂನಾದ ಪರಿಸರದಲ್ಲಿ ಮಹಾತ್ಮ ಜ್ಯೋತಿಭಾ ಫುಲೆಯವರ ನೇತೃತ್ವದಲ್ಲಿ ನಡೆದ ಹಿಂದುಳಿದ ವರ್ಗದ ಜಾಗೃತಿ ಹಾಗೂ ಸತ್ಯಶೋಧಕ ಸಮಾಜದ ಚಳವಳಿಯಲ್ಲಿ ಅಡಗಿದೆ. ಫುಲೆಯವರನ್ನು ಮಹಾರಾಷ್ಟ್ರದ ಬ್ರಾಹ್ಮಣೇತರ ಚಳವಳಿಯ ಹರಿಕಾರನೆಂದೇ ಗುರುತಿಸಲಾಗುತ್ತದೆ.

ಪೂನಾದಲ್ಲಿ ಹಿಂದುಳಿದ, ಕೃಷಿ ತೋಟಗಾರಿಕೆಯನ್ನು ಅವಲಂಬಿಸಿದ ಮಾಲಿ ಜನಾಂಗದಲ್ಲಿ ಜನಿಸಿದ ಫುಲೆಯವರು ಕ್ರಿಶ್ಚಿಯನ್‌ ಶಾಲೆಯಲ್ಲಿ ಶಿಕ್ಷಣ ಪಡೆದು ವೈಚಾರಿಕತೆಯನ್ನು ಬೆಳೆಸಿಕೊಂಡರು. ಜಾತಿ ಕಟ್ಟುಪಾಡುಗಳಿಂದ ಸ್ವತಃ ನೋವು ಅನುಭವಿಸಿದ ಫುಲೆಯವರು ಹಿಂದುಳಿದ ವರ್ಗಗಳಿಗೆ ಅಸ್ಪೃಶ್ಯರಿಗೆ ಹಾಗೂ ಮಹಿಳೆಯರಿಗೆ ಶಾಲೆಗಳನ್ನು ತೆರೆದು ಶೈಕ್ಷಣಿಕ ಕ್ರಾಂತಿಯನ್ನು ಪ್ರಾರಂಭಿಸಿದರು. ಸಾಮಾಜಿಕವಾಗಿ ಶೋಷಿತ ವರ್ಗಕ್ಕೆ ಸ್ಥೈರ್ಯ ತುಂಬುವ ಹಲವಾರು ಗ್ರಂಥಗಳನ್ನು ರಚಿಸಿ ಪ್ರಕಟಿಸಿದರು. ತನ್ನ ಮಾತು ಹಾಗೂ ಕೃತಿಗಳ ಮೂಲಕ ಜಾತಿ ಕಟ್ಟುಪಾಡುಗಳನ್ನು ಧಿಕ್ಕರಿಸುವಂತೆಯೂ, ಮೌಢ್ಯವನ್ನಾಧರಿಸಿದ ಸಂಪ್ರದಾಯಗಳನ್ನು ತೊರೆಯುವಂತೆಯೂ ಕರೆ ನೀಡಿದರು. ಅವರ ವೈಚಾರಿಕ ನಿಲುವುಗಳು ಮಹಾರಾಷ್ಟ್ರದ ಹಿಂದುಳಿದ ಹಾಗೂ ದಲಿತ ಜನಾಂಗಗಳಿಗೆ ಸ್ಫೂರ್ತಿ ನೀಡಿತು.

೧೮೭೩ರಲ್ಲಿ ಫುಲೆಯವರು ಎಲ್ಲ ಹಿಂದುಳಿದ ವರ್ಗಗಳು ಒಂದಾಗಿ ಹೋರಾಟ ನಡೆಸಲು ಅನುಕೂಲವಾಗುವಂತೆ ‘ಸತ್ಯಶೋಧಕ ಸಮಾಜ’ವೆಂಬ ವೇದಿಕೆಯನ್ನು ಸ್ಥಾಪಿಸಿದರು. ಸರ್ಕಾರಿ ಹುದ್ದೆಗಳಲ್ಲಿ ಎಲ್ಲ ಜನವರ್ಗಗಳಿಗೂ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸತೊಡಗಿದರು. ಅಂಬೇಡ್ಕರ್‌ (೧೮೯೧-೧೯೫೬) ಸಹ ಈ ವೈಚಾರಿಕ ಹಿನ್ನೆಲೆಯಿಂದಲೇ ಬಂದು ದಲಿತ ಜನತೆಯ ನಾಯಕರಾಗಿ ಬೆಳೆದರು.

ಶ್ರೀ ಶಾಹು ಮಹಾರಾಜರು ಹಾಗೂ ಬ್ರಾಹ್ಮಣೇತರ ಚಳವಳಿ

ಪೂನಾದ ಪರಿಸರದಲ್ಲಿ ಪ್ರಾರಂಭಗೊಂಡ ಹಿಂದುಳಿದ ಜನವರ್ಗಗಳಲ್ಲಿ ಜಾಗೃತಿ ಮೂಡಿಸುವ ಪ್ರಕ್ರಿಯೆಯು ನಿಧಾನವಾಗಿ ಮರಾಠ ರಾಜ್ಯವಾದ ಕೊಲ್ಹಾಪುರದಲ್ಲಿಯೂ ಕಾಣಿಸಿಕೊಂಡಿತು. ಕೊಲ್ಹಾಪುರದ ಛತ್ರಪತಿ ಶಾಹು ಮಹಾರಾಜರು ೧೮೯೦ರಲ್ಲಿ ಜ್ಯೋತಿಭಾ ಫುಲೆಯವರು ಮರಣ ಹೊಂದಿದ ನಂತರ ಅವರು ಹುಟ್ಟುಹಾಕಿದ ಬ್ರಾಹ್ಮಣೇತರ ಚಳವಳಿ ಹಾಗೂ ಸತ್ಯಶೋಧಕ ಸಮಾಜದ ನೇತೃತ್ವ ವಹಿಸಿ ಮುನ್ನಡೆಸಿದರು.

ಶ್ರೀ ಶಾಹು ಮಹಾರಾಜರು ೧೮೯೪ರಲ್ಲಿ ಕೊಲ್ಹಾಪುರದ ಸಿಂಹಾಸನವೇರಿದರು. ಪ್ರಾರಂಭದಲ್ಲಿ ಅವರು ಸತ್ಯಶೋಧಕ ಸಮಾಜದ ಬೆಂಬಲಿಗರಾಗಿರಲಿಲ್ಲ. ಹಾಗಾಗಿ ಕೊಲ್ಹಾಪುರದಲ್ಲಿ ೧೯೧೩ರ ತನಕ ಸತ್ಯಶೋಧಕ ಸಮಾಜದ ಶಾಖೆ ಪ್ರಾರಂಭಗೊಳ್ಳಲಿಲ್ಲ. ಮಹಾರಾಜರು ಬ್ರಾಹ್ಮಣ ವರ್ಗದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಆದರೆ ಅರಮನೆಯ ಆಚರಣೆಗಳಲ್ಲಿ “ವದೋಕ್ತಿ ಅಥವಾ ಪುರಾಣೋಕ್ತಿ”ಯ ಯಾವುದನ್ನು ಪಾಲಿಸಬೇಕು ಎನ್ನುವ ವಿಚಾರದಲ್ಲಿ ಪುರೋಹಿತರಿಗೂ ಮಹಾರಾಜರಿಗೂ ವೈಮನಸ್ಸು ಉಂಟಾಯಿತು. ದ್ವಿಜರಲ್ಲದ ಮರಾಠ ರಾಜರ ಆಚರಣೆಗಳನ್ನು ‘ಪುರಾಣೋಕ್ತ’ ಪ್ರಕಾರವೇ ಮಾಡತಕ್ಕದ್ದೆಂದೂ, ‘ವೇದೋಕ್ತಿ’ಯನ್ನು ಬಳಸತಕ್ಕದ್ದಲ್ಲವೆಂದೂ ಮಹಾರಾಜರ ಕೋರಿಕೆಯನ್ನು ಪುರೋಹಿತರು ನಿರಾಕರಿಸಿದರು. ಶಾಹು ಮಹಾರಾಜರು ತಾನು ಶಿವಾಜಿ ಮಹಾರಾಜರ ವಂಶಸ್ಥರಾಗಿರುವ ಕಾರಣದಿಂದ ಕ್ಷತ್ರೀಯನೆಂದು ಪರಿಗಣಿಸಬೇಕೆಂದು ವಾದ ಮಂಡಿಸಿದರೂ ಪುರೋಹಿತರು ಸಮ್ಮತಿಸಲಿಲ್ಲ. ಈ ಘಟನೆಯಿಂದ ಮನಗೊಂಡು ಮಹಾರಾಜರು ನಂತರದ ದಿನಗಳಲ್ಲಿ ಬ್ರಾಹ್ಮಣೇತರರ ಬೇಡಿಕೆಗಳಿಗೆ ಸ್ಪಂದಿಸತೊಡಗಿದರು.

ಪ್ರಥಮ ಹೆಜ್ಜೆಯಾಗಿ ಮಹಾರಾಜರು ಆಡಳಿತದಲಲಿ ಬ್ರಾಹ್ಮಣ ವರ್ಗದ ಪ್ರಭಾವವನ್ನು ಕಡಿಮೆಗೊಳಿಸುವ ಬಗ್ಗೆ ಕ್ರಮಗಳನ್ನು ಕೈಗೊಂಡರು. ಈ ದೃಷ್ಟಿಯಿಂದ ಆಡಳಿತದಲ್ಲಿ ಶೇ. ೫೦ ರಷ್ಟು ಸ್ಥಾನಗಳನ್ನು ಅರ್ಹತೆ ಹೊಂದಿರುವ ಬ್ರಾಹ್ಮಣತೇರ ಅಭ್ಯರ್ಥಿಗಳಿಗೆ ಮೀಸಲಿಡುವ ತೀರ್ಮಾನ ಕೈಗೊಂಡರು.

ಸತ್ಯಶೋಧಕ ಸಮಾಜ ಮತ್ತು ಶಾಹು ಮಹಾರಾಜರು

೧೯೧೩ರ ಜುಲೈ ತಿಂಗಳಲ್ಲಿ ಶಾಹು ಮಹಾರಾಜರು ಕೊಲ್ಹಾಪುರದಲ್ಲಿ ಸತ್ಯಶೋಧಕ ಸಮಾಜದ ಶಾಖೆಯನ್ನು ತೆರೆದರು. ಅಂದಿನಿಂದ ಅವರು ತನ್ನ ಪ್ರಭಾವ ಇರುವ ಎಲ್ಲ ಪ್ರದೇಶಗಳಿಗೂ ಸಮಾಜದ ಚಟುವಟಿಕೆಗಳನ್ನು ವಿಸ್ತರಿಸುವ ಕ್ರಮ ಕೈಗೊಂಡರು. ಆದಾಗಲೇ ಮುಂಬೈ ಪ್ರಾಂತ್ಯದಲ್ಲಿ ಪಾಶ್ಚಾತ್ಯ ಶಿಕ್ಷಣದ ಪ್ರಭಾವದಿಂದಾಗಿ ಶೋಷಿತ ಸಮಾಜದಲ್ಲಿ ಜನಜಾಗೃತಿ ಮೊಳಕೆಯೊಡೆದಿತ್ತು. ದಮನಕ್ಕೊಳಗಾದ ಸಮುದಾಯದಲ್ಲಿ ತಮ್ಮ ಹಕ್ಕುಗಳ ಅರಿವು, ಸಾಮಾಜಿಕ ಸಮಾನತೆಯ ತುಡಿತವಿಲ್ಲದಿದ್ದರೆ ಭಾರತದಲ್ಲಿ ಪ್ರಜಾಪ್ರಭುತ್ವ ನೆಲೆಯೂರದೆಂದು ಶಾಹು ಮಹಾರಾಜರ ದೃಢನಂಬಿಕೆಯಾಗಿತ್ತು ಈ ಕಾಳಜಿಯನ್ನು ಸಮಾಜದಲ್ಲಿ ಸೃಷ್ಟಿಸಿ, ದಕ್ಷಿಣ ಪ್ರದೇಶದಲ್ಲಿ ಬ್ರಾಹ್ಮಣೇತರ ಚಳವಳಿಗೆ ಕಾರಣೀಭೂತರಾದರು. ಶಾಹು ಮಹಾರಾಜರ ಅಭಿಪ್ರಾಯದಲ್ಲಿ ಈ ಹಿಂದುಳಿದ ವರ್ಗಗಳ ಅಭಿವೃದ್ಧಿಯು ರಾಷ್ಟ್ರೀಯ ಸ್ವಾತಂತ್ರ್ಯ ಅಥವಾ ಸ್ವರಾಜ್ಯಕ್ಕಿಂತಲೂ ಮುಖ್ಯವಾದುದು. “ಸ್ವರಾಜ್ಯವು ಬಡವರನ್ನೂ ದಲಿತರನ್ನೂ ಗುಲಾಮರಿಗೆ ತಳ್ಳುತ್ತದೆ” ಎನ್ನುವ ಆತಂಕ ಅವರನ್ನು ಕಾಡುತ್ತಿತ್ತು.

೧೯೧೩ರ ನಂತರ ಸಕ್ರಿಯರಾದ ಶಾಹು ಮಹಾರಾಜರು ದಕ್ಷಿಣ ಭಾರತದ ಹಲವಾರು ಸಂಸ್ಥಾನಗಳ ರಾಜರನ್ನೂ, ರಾಜಕೀಯ-ಸಾಮಾಜಿಕ ಮುಖಂಡರನ್ನೂ ಸಂಪರ್ಕಿಸಿ ಬ್ರಾಹ್ಮಣೇತರ ಚಳವಳಿಗೆ ಹೊಸ ಆಯಾಮವನ್ನೇ ನೀಡಿದರು. ಅವರು ಸಂಪರ್ಕಿಸಿದ ಪ್ರಮುಖರಲ್ಲಿ ಹಲವಾರು ಜಾಗೀರುದಾರೂ, ಐರೋಪ್ಯ ಅಧಿಕಾರಿಗಳೂ ಸೇರಿದ್ದರು. ಉದಾಹರಣೆಗೆ ಇಂದೋರ್‌, ಬಾವನಗರ, ದೀವಸ್‌, ಬಾರ್‌, ಮುಧೋಳ, ಸಾವಂತವಾಡಿಸ ಸಾಂಗ್ಲಿ, ಅಕಲ್‌ಕೋಟ್‌, ಪಾಲ್ತಾನ್‌, ಭೋರ್‌ ಮುಂತಾದ ಕಡೆಗಳ ರಾಜ-ಮಹಾರಾಜರು, ಸಾಮಂತರನ್ನು ಸಂಪರ್ಕಿಸಿ ಈ ಚಳವಳಿಯಲ್ಲಿ ತೊಡಗಿಸಿದರು. ದಕ್ಷಿಣದಲ್ಲಿ ಮದ್ರಾಸು ಪ್ರಾಂತ್ಯದ ಬ್ರಾಹ್ಮಣೇತರ ಚಳವಳಿಯ ನೇತಾರರಾದ ಡಾ. ಟಿ. ಎಂ. ನಾಯರ್‌, ಸರ್‌ಪಿ. ಟಿ. ಚೆಟ್ಟಿಯಾರ್‌, ಪನಾಗಲ್‌ ರಾಜರು, ಸರ್‌ ರಾಮಸ್ವಾಮಿ ಮೊದಲಿಯಾರರು ಮುಂತಾದವರು ಕೂಡಾ ಶಾಹು ಮಹಾರಾಜರೊಂದಿಗೆ ಸಂಪರ್ಕ ಹೊಂದಿದ್ದರು.

ಫುಲೆಯವರು ಸತ್ಯಶೋಧಕ ಸಮಾಜ ಸ್ಥಾಪಿಸಿದ ಪರಿಸ್ಥಿತಿ ಹಾಗೂ ಮಹಾರಾಜರು ಬ್ರಾಹ್ಮಣೇತರ ಚಳವಳಿಯನ್ನು ಮುನ್ನಡೆಸಿದ ಪರಿಸ್ಥಿತಿಗಳು ಸ್ವಲ್ಪ ಭಿನ್ನವಾಗಿದ್ದವು. ಆದರೆ ಅವರಿಬ್ಬರ ಉದ್ದೇಶವು ಒಂದೇ ಆಗಿತ್ತು. ಫುಲೆಯವರು ಜಾತಿ ಪದ್ಧತಿಯ ವಿರುದ್ಧ, ಅಸ್ಪೃಶ್ಯತೆಯ ವಿರುದ್ಧ, ಹಿಂದುಳಿದ ಹಾಗೂ ಮಹಿಳಾ ಹಕ್ಕುಗಳ ಪರವಾಗಿ ಜನಜಾಗೃತಿಯನ್ನು ಹುಟ್ಟುಹಾಕಿದರು. ಈ ಜಾಗೃತಿಯ ಬುನಾದಿಯ ಮೇಲೆ ಶಾಹು ಮಹಾರಾಜರು ಬ್ರಾಹ್ಮಣೇತರ ಚಳವಳಿಯನ್ನು ಕಟ್ಟಿ ಬೆಳೆಸಿದರು.

ಸತ್ಯಶೋಧಕ ಸಮಾಜವು ಸಾಂಸ್ಕೃತಿಕ ಹೋರಾಟಗಳನ್ನೇ ಪ್ರಧಾನವಾಗಿರಿಸಿಕೊಂಡಿದ್ದರೆ, ಶಾಹು ಮಹಾರಾಜರು ಮುನ್ನಡೆಸಿದ ಬ್ರಾಹ್ಮಣೇತರ ಚಳವಳಿಯು ಆಡಳಿತದಲ್ಲಿ ಅವಕಾಶ ಪಡೆಯುವುದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿತು. ಆ ಸಮಯದಲ್ಲಿ ವಸಾಹತು ಆಡಳಿತವೂ ಹಲವಾರು ಸಾಂವಿಧಾನಿಕ ಸುಧಾರಣೆಗಳನ್ನು ತಂದು ಬ್ರಾಹ್ಮಣೇತರರಿಗೆ ಆಡಳಿತದಲ್ಲಿ ಅವಕಾಶ ನೀಡತೊಡಗಿತು. ಈ ಬೆಳವಣಿಗೆಗಳು ಬ್ರಾಹ್ಮಣೇತರ ಚಳವಳಿಗೆ ಪೂರಕವಾಯಿತು.

ಮಹಾರಾಷ್ಟ್ರದ ಬ್ರಾಹ್ಮಣೇತರ ಚಳವಳಿಯಲ್ಲಿ ಶಾಹು ಮಹಾರಾಜರಿಗೆ ನೆರವಾದವರು ಅವರ ಬ್ರಾಹ್ಮಣೇತರ ಸಂಗಾತಿಗಳಾದ ಭಾಸ್ಕರರಾವ್‌ ಜಾಧವ್ ಹಾಗೂ ಅಣ್ಣಾ ಬಾಬಾಜಿ ಲತ್ಥೆಯವರು. ಮರಾಠಾ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಸೌಲಭ್ಯಕ್ಕಾಗಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳ ಸ್ಥಾಪನೆಗಾಗಿ ಈ ನಾಯಕರು ಮಹಾರಾಜರೊಂದಿಗೆ ದುಡಿದರು. ಇದೇ ಸಮಯದಲ್ಲಿ ಬ್ರಾಹ್ಮಣೇತರ ತತ್ವಸಿದ್ಧಾಂತಗಳ ಪ್ರತಿಪಾದನೆಗಾಗಿ ‘ಜಾಗೃತಿ’, ‘ವಿಜಯೀ ಮರಾಠ’ ಮುಂತಾದ ಪತ್ರಿಕೆಗಳೂ ಮಹಾರಾಜರ ಬೆಂಬಲದೊಂದಿಗೆ ಸ್ಥಾಪನೆಗೊಂಡವು.

ಮದ್ರಾಸು ಪ್ರಾಂತ್ಯದ ಪ್ರಭಾವ

ಈ ಬೆಳವಣಿಗೆಗೆ ಸರಿಯಾಗಿ ಮದ್ರಾಸು ಪ್ರಾಂತ್ಯದಲ್ಲಿಯೂ ೧೯೧೭ರಲ್ಲಿ ಬ್ರಾಹ್ಮಣೇತರ ಪಕ್ಷವಾದ ‘ಜಸ್ಟೀಸ್‌ ಪಕ್ಷ’ದ ಸ್ಥಾಪನೆಯಾಯಿತು. ಇದರಿಂದ ಉತ್ತೇಜನಗೊಂಡ ಲತ್ಥೆ ಹಾಗೂ ಇತರ ಸಂಗಾತಿಗಳು ಮಹಾರಾಷ್ಟ್ರದಲ್ಲಿಯೂ ೧೯೨೦ರಲ್ಲಿ ‘ಬ್ರಾಹ್ಮಣೇತರ ಅಸೋಸಿಯೇಷನ್‌’ ಸ್ಥಾಪಿಸಿ, ಬ್ರಾಹ್ಮಣೇತರ ರಾಜಕೀಯ ಹಕ್ಕುಗಳನ್ನು ಪ್ರತಿಪಾದಿಸತೊಡಗಿದರು. ಈ ಸಂಘಟನೆಯು ಮುಂಬಯಿಯ ಶಾಸನ ಸಭೆಯಲ್ಲಿ ಬ್ರಾಹ್ಮಣೇತರರಿಗೆ ಪ್ರಾತಿನಿಧ್ಯ ನೀಡುವಂತೆ ಒತ್ತಾಯವನ್ನು ಮುಂದಿರಿಸಿತು. ಈ ನಡುವೆ ಶಾಹು ಮಹಾರಾಜರು ಗ್ರಾಮೀಣ ಪ್ರದೇಶದಲ್ಲಿ ಪ್ರಭಾವ ಹೊಂದಿದ್ದ ಕುಲಕರ್ಣಿ ಹುದ್ದೆಗಳನ್ನು ರದ್ದುಪಡಿಸಿ ಬ್ರಾಹ್ಮಣೇತರರನ್ನು ಹಾಗೂ ಅಸ್ಪೃಶ್ಯರನ್ನು ಒಳಗೊಂಡ ಹೊಸ ಅಧಿಕಾರ ಸ್ಥಾನಗಳನ್ನು ಸೃಷ್ಟಿಸಿ ಗ್ರಾಮಾಡಳಿತ ನಡೆಸುವ ಜವಾಬ್ದಾರಿಯನ್ನು ನೀಡಿದರು. ಅಸ್ಪೃಶ್ಯರ ಬಗ್ಗೆಯೂ ಸಾಕಷ್ಟು ಕಾಳಜಿ ಹೊಂದಿದ್ದ ಮಹಾರಾಜರು ೧೯೧೯ ಅಂಬೇಡ್ಕರ್‌ಅವರ ಅಧ್ಯಕ್ಷತೆಯಲ್ಲಿ ಒಂದು ಸಮ್ಮೇಳನವನ್ನು ಸಂಘಟಿಸಿದರು, ಮಾತ್ರವಲ್ಲ, ಅಸ್ಪೃಶ್ಯರು ತಮ್ಮ ಪಾರಂಪರಿಕ ಕಸುಬುಗಳಿಂದ ಮುಕ್ತರಾಗುವಂತೆ ಪ್ರಯತ್ನಗಳನ್ನು ನಡೆಸಿದರು.

ಫುಲೆ ಹಾಗೂ ಶಾಹು ಮಹಾರಾಜರು : ಒಂದು ಹೋಲಿಕೆ

ಫುಲೆಯವರ ವಿಚಾರಗಳು ಶಾಹು ಮಹಾರಾಜರು ಮುನ್ನಡೆಸಿದ ಬ್ರಾಹ್ಮಣೇತರ ಚಳವಳಿಯ ಮೇಲೆ ಗಾಢ ಪ್ರಭಾವ ಬೀರಿದ್ದರೂ, ಅವರಿಬ್ಬರ ನಿಲುವಿನಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸಗಳೂ ಇವೆ. ಫುಲೆಯವರು ವೈದಿಕ ಮೌಲ್ಯಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದರೆ, ಶಾಹು ಮಹಾರಾಜರು ಆರ್ಯಸಮಾಜದ ಪ್ರಭಾವಕ್ಕೊಳಗಾಗಿದ್ದು ವೈದಿಕ ಆಚರಣೆಗಳನ್ನು ಒಪ್ಪಿಕೊಂಡಿದ್ದರು. ವಿಶೇಷವೆಂದರೆ ಬ್ರಾಹ್ಮಣ ಪೌರೋಹಿತ್ಯಕ್ಕೆ ಬದಲಾಗಿ ‘ಮರಾಠಾ ಪೌರೋಹಿತ್ಯ’ವನ್ನು ಅಳವಡಿಸಿರುವುದು. ‘ಶ್ರಾವಣಿ’ಯಂತಹ ಸಂಪ್ರದಾಯಗಳನ್ನು ಮರಾಠಾ ಪೌರೋಹಿತ್ಯದಲ್ಲಿ ನಡೆಸಿರುವುದು ಇದಕ್ಕೆ ಉದಾಹರಣೆಯಾಗಿ ನೀಡಬಹುದು. ಜಾತಿ ವ್ಯವಸ್ಥೆಯನ್ನು ನಿರಾಕರಿಸುವ ದೃಷ್ಟಿಕೋನದಲ್ಲಿಯೂ ಅವರ ನಿಲುವುಗಳಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಾಸಗಳನ್ನು ಗುರುತಿಸಬಹುದು. ಎರಡನೆಯದಾಗಿ ಫುಲೆಯವರ ಸತ್ಯಶೋಧಕ ಸಮಾಜವು ಸಾಂಸ್ಕೃತಿಕ ಸಾಮಾಜಿಕ ವಿಷಯಗಳಿಗೆ ಮಹತ್ವ ನೀಡಿದ್ದರೆ, ಶಾಹು ಮಹಾರಾಜರು ಆಡಳಿತದಲ್ಲಿ ಬ್ರಾಹ್ಮಣೇತರರಿಗೆ ಹೆಚ್ಚಿನ ಅವಕಾಶ ನೀಡಿದರು.

ವಿಠಲರಾವ್ಶಿಂಧೆ (೧೮೭೫೧೯೪೪)

ಶಿಂಧೆಯವರನ್ನು ಬ್ರಾಹ್ಮಣೇತರ ಚಳವಳಿಯ ನಾಯಕರೆಂದು ಪರಿಗಣಿಸುವುದು ಸಂಪೂರ್ಣವಾಗಿ ಸಮಂಜಸವಲ್ಲವಾದರೂ, ಅವರು ಫುಲೆಯವರ ಸಿದ್ಧಾಂತವನ್ನು ಒಪ್ಪಿಕೊಂಡು ಮುನ್ನಡೆಸಿದ ಅಂಶವನ್ನು ಕಡೆಗಣಿಸುವಂತಿಲ್ಲ. ಕೊಲ್ಹಾಪುರದ ಮರಾಠಾ ಕೃಷಿಕ ಕುಟುಂಬದಲ್ಲಿ ಜನಿಸಿದ ಶಿಂಧೆಯವರು ಪೂನಾದ ಫರ್ಗ್ಯೂಸನ್‌ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಓದುತ್ತಿದ್ದರು. ಆ ಸಂದರ್ಭದಲ್ಲಿ ಬರೋಡದ ಮಹಾರಾಜರಾದ ಸಯಾಜಿರಾವ್‌ ಅವರ ಆರ್ಥಿಕ ನೆರವಿನೊಂದಿಗೆ ಇಂಗ್ಲೆಂಡಿನ ಮ್ಯಾಂಚೆಸ್ಟರ್‌ ಥಿಯಾಲಾಜಿಕಲ್‌ ಕಾಲೇಜಿನಲ್ಲಿ ೧೯೦೧ ರಿಂದ ಶಿಕ್ಷಣವನ್ನು ಮುಂದುವರೆಸಿದರು.

ಇಂಗ್ಲೆಂಡಿನಿಂದ ಹಿಂದಿರುಗಿದ ನಂತರ ‘ಸಮಾಜ’ದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಶಿಂಧೆಯವರು ಆ ಸಂಘಟನೆಯಲ್ಲಿರುವ ಮೇಲ್ಜಾತಿಗಳ ಪ್ರಾಬಲ್ಯವನ್ನು ಮನಗಂಡು ಅಸ್ಪೃಶ್ಯರ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ನೀಡಲು ತೊಡಗಿದರು. ೧೯೦೬ರಲ್ಲಿ ತನ್ನ ಸಂಗಡಿಗರೊಂದಿಗೆ ಸೇರಿ “ಡಿಪ್ರೆಸ್ಡ್‌ ಕ್ಲಾಸ್‌ ಮಿಷನ್‌ ಸೊಸೈಟಿ”ಯನ್ನು ಸ್ಥಾಪಿಸಿದರು. ೧೯೦೮ರಲ್ಲಿ ಶಿಂಧೆಯವರು ಅಸ್ಪೃಶ್ಯತೆಯ ಇತಿಹಾಸದ ಬಗೆಗೆ “ಬಹಿಷ್ಕೃತ ಭಾರತ” ಎಂದು ಹೆಸರಿಸಲಾದ ಒಂದು ಖ್ಯಾತ ಲೇಖನವನ್ನು ಪ್ರಕಟಿಸಿದರು. ತನ್ನ ಇನ್ನೊಂದು ಲೇಖನ ‘ಭಾರತೀಯ ಅಸ್ಪೃಶ್ಯಾಂಚ ಪ್ರಶ್ನಾ’ದಲ್ಲಿ ಮಹಾರಾಷ್ಟ್ರದ ಮಹಾರ್‌ ಸಮುದಾಯದ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ವಿಶ್ಲೇಷಿಸಿದರು.

ಶಿಂಧೆಯವರು ಶಾಹು ಮಹಾರಾಜರು ಸ್ಥಾಪಿಸಿದ ಸತ್ಯಶೋಧಕ ಸಮಾಜದ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರೂ ಸಮಾಜದ ಇತರ ನಾಯಕರಾದ ಜಾಧವ್‌, ಲತ್ಥೆ ಮುಂತಾದವರೊಂದಿಗೆ ಸಾಕಷ್ಟು ಭಿನ್ನಾಭಿಪ್ರಾಯಗಳನ್ನೂ ಹೊಂದಿದ್ದರು. ಭಾರತದ ರಾಷ್ಟ್ರೀಯ ಚಳವಳಿಯಲ್ಲಿಯೂ ತನ್ನನ್ನು ಗುರುತಿಸಿಕೊಂಡಿದ್ದ ಶಿಂಧೆಯವರು ಬ್ರಾಹ್ಮಣೇತರ ಪಕ್ಷವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲಿಲ್ಲ. ಆದರೂ ಶಿಂಧೆಯವರು ಪ್ರಕಟಿಸಿದ ತಾತ್ವಿಕ ಚಿಂತನೆಗಳು ಬ್ರಹ್ಮಣೇತರ ಚಳವಳಿಗೆ ವಿಶೇಷ ಬಲವನ್ನು ಒದಗಿಸಿತು.