ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ೧೯೧೭ರಿಂದ ೧೯೪೭ರ ಕಾಲವನ್ನು ‘ಗಾಂಧೀಯುಗ’ವೆಂದು ಕರೆಯುವುದು ರೂಢಿಯಲ್ಲಿದ. ರಾಷ್ಟ್ರೀಯ ಚಳವಳಿಯ ೧೯೧೯ರಲ್ಲಿ ಮೂರನೆಯ ಹಾಗೂ ಅಂತಿಮ ಘಟ್ಟವನ್ನು, ತಲುಪಿ ಮುಂದೆ ಭಾರತ ಸರ್ವತಂತ್ರ ಸ್ವತಂತ್ರ ದೇಶವಾಗುವವರೆಗೂ ನಡೆದ ಘಟನಾವಳಿಗಳಲ್ಲಿ ಗಾಂಧಿ. ಮುಖ್ಯ ಭೂಮಿಕೆಯನ್ನು ನಿರ್ವಹಿಸಿದರು. ರಾಷ್ಟ್ರೀಯ ಹೋರಾಟಕ್ಕೆ ಗಾಂಧಿ ನೀಡಿದ ಜನಾಂದೋಲನ ಸ್ಪರ್ಶ, ಹೊಸ ಹೊಳವು, ಅನುಸರಿಸಿದ ಮಾರ್ಗ ಹಾಗೂ ತಂತ್, ಅವರ ರಚನಾತ್ಮಕ ಸಾಮಾಜಿ-ಆರ್ಥಿಕ ಕಾರ್ಯಕ್ರಮ ಎಲ್ಲವೂ ವಿಶಿಷ್ಟವಾದವು. ಆದುದರಿಂದ ಗಾಂಧಿ ಯುಗಪ್ರವರ್ತಕರೆನಿಸಿದರು: ಮಹಾತ್ಮರೆನಿಸಿದರು.

ಮೋಹನದಾಸ ಕರಮಚಂದ ಗಾಂಧಿ ೧೯೧೫ ದಕ್ಷಿಣ ಆಪ್ರಿಕಾದಿಂದ ಭಾರತಕ್ಕೆ ಹಿಂದಿರುಗಿದರು. ದಕ್ಷಿಣ ಆಪ್ರಿಕಾದಲ್ಲಿ ಸರ್ಕಾರದ ವರ್ಣಭೇದ ಹಾಗೂ ಜನಾಂಗೀಯ ಪಕ್ಷಪಾತ ಧೋರಣೆಯ ವಿರುದ್ಧ ಹೋರಾಡಿದರು. ಅದಕ್ಕಾಗಿ ಅವರು ಆಯ್ದುಕೊಂಡ ಮಾರ್ಗ ಅಹಿಂಸಾತ್ಮಕ ಅಸಹಕಾರ ಚಳವಳಿ. ಸತ್ಯಾಗ್ರಹ ಒಂದು ಸಕ್ರೀಯ ಸಕಾರಾತ್ಮಕ ಹೋರಾಟ. ಸತ್ಯ ಮತ್ತು ಅಹಿಂಸೆಯ ಮೂಲಭೂತ ತತ್ವಗಳನ್ನಾದರಿಸಿದ ಪ್ರೇಮಶಕ್ತಿ, ಆತ್ಮಶಕ್ತಿ, ಸಾತ್ವಿಕ ಅಸ್ತ್ರ, ಬಲಿಷ್ಠ ಸಾಧನ, ಎದುರಾಳಿಯ ಹೃದಯ ಪರಿರ್ವನೆ ಮಾಡುವ ತಂತ್ರ.

ಬ್ರಿಟಿಷರ ವಿರುದ್ಧ ರಾಷ್ಟ್ರೀಯ ಹೋರಾಟದಲ್ಲಿ ನೇರವಾಗಿ ಧುಮುಕುವ ಮೊದಲು ಗೋಪಾಲಕೃಷ್ಣ ಗೋಖಲೆಯ ಸಲಹೆಯಂತೆ ಭಾರತೀಯರ ಹೃದಯಾಂತರಾಳವನ್ನು ಅರಿಯಲು ದೇಶದ ನಾನಾಭಾಗಗಳಲ್ಲಿ ಸಂಚರಿಸಿದರು. ಇದರಿಂದ ಅವರಿಗೆ ಬಾರತದ ಅಂತಃಶಕ್ತಿಯ ಪರಿಚಯವಾಯಿತು. ಅಹಮ್ಮದಾಬಾದಿನಲ್ಲಿ ಸಾಬರಮತಿ ದಂಡೆಯ ಮೇಲೆ ಸತ್ಯಾಗ್ರಹ ಆಶ್ರಮವನ್ನು ತೆರೆದರು. ಇದೊಂದು ಸಂಘಟನೆಯ ಕೇಂದ್ರವಾಗಿತ್ತು.

ಗಾಂಧಿಯವರಿಗೆ ದಕ್ಷಿಣ ಆಪ್ರಿಕಾದಲ್ಲಿ ನಡೆಸಿದ ಅಹಿಂಸಾತ್ಮಕ ಹೋರಾಟವನ್ನು ಭಾರತದಲ್ಲಿ ಪ್ರಥಮ ಬಾರಿಗೆ ಬ್ರಿಟಿಷರ ವಿರುದ್ಧ ಪ್ರಯೋಗಿಸಲು ಚಂಪಾರಣ ಸತ್ಯಾಗ್ರಹ ಒಂದು ಅವಕಾಶವಾಯಿತು. ಅಲ್ಲಿಂದ ಅವರ ರಾಜಕೀಯ ಚಟುವಟಿಕೆ ಪ್ರಾರಂಭವಾಗಿ ಕ್ರಮೇಣ ವಿಸ್ತೃತಗೊಳ್ಳುತ್ತಾ ಬಂದಿತು. ಬಿಹಾರದ ಚಂಪಾರಣದಲ್ಲಿ ಬ್ರಿಟಿಷ್ ಪ್ಲಾಂಟರುಗಳು ಅಲ್ಲಿನ ರೈತರನ್ನು ತೀವ್ರ ಶೋಷನೆಗೊಳಮಾಡಿದ್ದರು. ರೈತರು ಕಡ್ಡಾಯವಾಗಿ ಬೆಳೆಯಲೇಬೇಕಾಗಿದ್ದ ಇಂಡಿಗೋವನ್ನು(ನೀಲಿ) ಅತಿ ಕಡಿಮೆ ಬೆಲೆಗೆ ಮಾರಲು ನಿರಾಕರಿಸಿದ ಕೃಷಿಕರ ಮೇಲೆ ದಬ್ಬಾಳಿಕೆ ನಡೆಸಿದರು. ಸಮಸ್ಯೆ ಗಂಭೀರ ಸ್ವರೂಪದ್ದಾಗಿತ್ತು. ಸ್ಥಳೀಯರ ಕರೆಯಂತೆ ಸಮಸ್ಯೆಯನ್ನು ಅಧ್ಯಯನ ಮಾಡಲು ಚಂಪಾರಣಕ್ಕೆತೆರಳಿ ಬಡರೈತರ ಹಕ್ಕುಗಳ ರಕ್ಷಣೆಗಾಗಿ, ಪ್ಲಾಂಟರುಗಳ ಶೋಷಣೆಯ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರೈತರನ್ನು ಹಿರಿದುಂಬಿಸಿ, ಧೈರ್ಯ ತುಂಬಿ ಅವರೊಡನೆ ಬೆರೆತು ಚಂಪಾರಣದ ಕೇಂದ್ರ ಮೋತಿಹಾರಿನಿಂದ ಗಾಂಧಿ ಕಾರ್ಯಾರಂಭ ಮಾಡಿದರು. ಸಹಸ್ರಾರು ಸಂಖ್ಯೆಯಲ್ಲಿ ಹೊರಬಂದ ರೈತರಿಂದಾಗಿ ಚಳವಳಿ ಹೋರಾಟದ ರೂಪಪಡೆದು ವ್ಯಾಪಕವಾಗಿತ್ತು. ಪರಿಸ್ಥಿತಿ ಕೈಮೀರಿ ಹೋಗುವುದನ್ನರಿತ ಸರ್ಕಾರ ಸಮಸ್ಯೆಯನ್ನು ಬಗೆಹರಿಸಲು ಗಾಂಧಿಯರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿತು. ಅದರ ಶಿಫಾರಸಿನಂತೆ ರೈತರಿಂದ ಅನ್ಯಾಯವಾಗಿ ವಸೂಲು ಮಾಡಿದ್ದ ಹಣವನ್ನು ಪ್ಲಾಂಟರುಗಳು ಹಿಂತಿರುಗಿಸಬೇಕಾಯಿತು. ನೀಲಿಯನ್ನು ಕಡ್ಡಾಯವಾಗಿ ಬೆಳೆಯಲೇಬೇಕೆಂಬ ನಿಯಮವನ್ನು ತೆಗೆದುಹಾಕಿತು ರೈತರಿಗೆ ನ್ಯಾಯ ದೊರಕಿಸಿಕೊಟ್ಟಂತಾಯಿತು. ಇದು ಭಾರತದಲ್ಲಿ ಗಾಂಧಿಯವರ ಸತ್ಯಾಗ್ರಹಕ್ಕೆ ದೊರೆತ ಪ್ರಥಮ ವಿಜಯ. ನಂತರಗಾಂಧಿ ಅಹ್ಮದಾಬಾದ್ ಗಿರಣಿ ಕಾರ್ಮಿಕರು ಹೆಚ್ಚಿನ ವೇತನಕ್ಕಾಗಿ ನಡೆಸುತ್ತಿದ್ದ ಹೋರಾಟದ ನೇತೃತ್ವವನ್ನು ವಹಿಸಿದರು. ಎರಡು ವಾರಗಳಾದರು ಮುಷ್ಕರ ಪರಿಣಾಮಕಾರಿಯಾಗಲಿಲ್ಲ. ಆಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ಇಪ್ಪತ್ತೊಂದು ದಿನಗಳ ಸತತ ಮುಷ್ಕರವು ಗಿರಣಿ ಮಲೀಕರು, ಕಾರ್ಮಿಕರ ನಡುವಣ ಒಪ್ಪಂದದಿಂದ ಬಗೆಹರಿಯಿತು. ತರುವಾಯ ಗಾಂಧಿ ಖೇಡಾದ ರೈತರ ಹೋರಾಟದಲ್ಲಿ ಧುಮುಕಿದರು. ಕ್ಷಾಮದ ದವಡೆಯಲ್ಲಿ ಸಿಕ್ಕಿ ನಲುಗುತ್ತಿದ್ದ ಖೇಡಾದ ರೈತರಿಂದ ಬಲಾತ್ಕಾರವಾಗಿ ಕಂದಾಯ ವಸೂಲು ಮಾಡಲಾಗುತ್ತಿತ್ತು. ರೈತರು ಕಂದಾಯ ವಸೂಲಿಯನ್ನು ಮನ್ನಾ ಮಾಡಬೇಕೆಂದು ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಗಾಂಧಿ ಸ್ವತಃ ಹಳ್ಳಿಗಳಿಗೆ ಭೇಟಿ ಕೊಟ್ಟು ಸರ್ಕಾರವು ಒಂದು ಸಮಿತಿಯನ್ನು ನೇಮಕ ಮಾಡುವಂತೆ ಕೇಳಿಕೊಂಡರು. ಜಾಗೃತಿ ರೈತರು ಗಾಂಧಿ ನೇತೃತ್ವದಲ್ಲಿ ಚಳವಳಿ ಮಾರ್ಗ ಹಿಡಿದು ಕಂದಾಯ ಕೊಡಲು ನಿರಾಕರಿಸಿದರು. ಬಲಾತ್ಕಾರ, ಹಿಂಸೆಯ ನಡುವೆಯೂ ಸತ್ಯಾಗ್ರಹ ಮುಂದುವರೆಯಿತು. ನಾಲ್ಕು ತಿಂಗಳ ಹೋರಾಟದ ನಂತರ ಚಳವಳಿಯ ತೀವ್ರತೆಯನ್ನರಿತ ಸರ್ಕಾರ ರೈತರಿಗೆ ಅನುಕೂಲಕರವಾದ ಸೂತ್ರಗಳನ್ನೊಳಗೊಂಡ ರಾಜಿ ನಿರ್ಣಯವನ್ನು ಪ್ರಕಟಿಸಿತು. ಅನೇಕ ಸ್ಥಳೀಯ ನಾಯಕರ ಮೇಲೆ ಈ ಚಳವಳಿ ಗಾಢವಾದ ಪ್ರಭಾವ ಬೀರಿತು. ವಲ್ಲಭಬಾಯಿ ಪಟೇಲರು ಗಾಂಧಿಯವರ ಅನುಯಾಯಿಗಳಾದರು. ಮೇಲಿನ ಮೂರು ಪ್ರಕರಣಗಳಿಂದ ಭಾರತದಲ್ಲಿ ಬ್ರಿಟಿಷರ ವಿರುದ್ಧ ಗಾಂಧಿಯವರ ಸತ್ಯಾಗ್ರಹ ಹೋರಾಟದ ಕುಡಿ ಒಡೆಯುವಂತಾಯಿತು.

ಗಾಂಧಿ ಅವರಿಗೆ ಈವರೆಗೂ ಬ್ರಿಟಿಷರ ನ್ಯಾಯಪರ ಧೋರಣೆಯಲ್ಲಿ ವಿಶ್ವಾಸವಿತ್ತು. ಗೋಖಲೆಯವರಿಂದ ಪ್ರಭಾವಿತರಾಗಿದ್ದು ಮಂದಗಾಮಿ ಧೋರಣೆಯಿಂದ ಭಾರತದ ರಾಜಕೀಯ ಸಮಸ್ಯೆಗಳನ್ನು ಪರಿಹರಿಸಬಹುದೆಂದು ತಿಳಿದಿದ್ದರು. ಆದರೆ ೧೯೧೯ರ ರೌಲತ್‌ ಮಸೂದೆ ಅವರ ನಂಬಿಕೆಯನ್ನು ಅಲುಗಾಡಿಸಿತು. ಅವರ ಹೃದಯಕ್ಕೆ ಘಾಷಿಯಾಯಿತು. ಗಾಂಧಿ ಅವರು ಹೋರಾಟಕ್ಕೆ ಅಣಿಯಾದರು. ರೌಲತ್‌ ಶಾಸನದಿಂದ ಕಾರ್ಯಾಂಗಕ್ಕೆ ದೊರಕಿದ ನಿರಂಕುಶ ಅಧಿಕಾರವನ್ನು ಕ್ರಾಂತಿಕಾರಿ ರಾಜಕೀಯ ಚಟುವಟಿಕೆಗಳನ್ನು ಹತ್ತಿಕ್ಕಲು ಬಳಸಬಹುದಾಗಿತ್ತು. ಕರಾಳ ಸ್ವರೂಪದ ರೌಲತ್‌ ಶಾಸನದ ವಿಧಿಗಳು ಅಪಾಯಕಾರಿಯಾಗಿದ್ದವು. ಎಲ್ಲ ಕಡೆಯಿಂದ ಕಟು ಟೀಕೆಗಳು ಬಂದರೂ ಸರ್ಕಾರ ಮಣಿಯಲಿಲ್ಲ. ಗಾಂಧಿಯವರು ಸತ್ಯಾಗ್ರಹ ಸಮಿತಿಗಳನ್ನು ರಚಿಸಿ ಹೋರಾಟಕ್ಕಿಳಿದರು. ದೇಶಾದ್ಯಂತ ಚಳವಳಿ ನಡೆಸಲು, ಒಂದು ದಿನ ಹರತಾಳ ಆಚರಿಸಲು ಕರೆ ಕೊಟ್ಟರು. ಮೆರವಣಿಗೆ, ಪ್ರದರ್ಶನಗಳು ನಡೆದವು. ಪೊಲೀಸರು ಚಳವಳಿಗಾರರ ಮೇಲೆ ಗುಂಡು ಹಾರಿಸಿದರು. ದೆಹಲಿ, ಮುಂಬೈಗಳಲ್ಲಿ ಬಿಡುಗಡೆ ಮಾಡಿದರು. ಕೆಲವು ಕಡೆ ಹಿಂಸಾಚಾರವಾಗಿ ಪರಿಸ್ಥಿತಿ ಗಂಭೀರವಾಯಿತು. ನಾಡಿಯಾಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ನೋಡಿ ಸತ್ಯಾಗ್ರಹಕ್ಕೆ ಜನ ಪಕ್ವರಾಗಿಲ್ಲವೆಂದು ಹಿಂಸೆಯ ವಿರುದ್ಧ ಅಹಿಂಸಾತ್ಮಕ ಹೋರಾಟಕ್ಕೆ, ತ್ಯಾಗ ಬಲಿದಾನಕ್ಕೆ ಜನರನ್ನು ಇನ್ನೂ ಸಿದ್ಧಗೊಳಿಸಬೇಕಾಗಿದೆ ಎಂದು ತಿಳಿದು, ಏಪ್ರಿಲ್‌ ೧೮ ರಂದು ಸವಿನಯ ಕಾನೂನು ಭಂಗ ಚಳವಳಿಯನ್ನು ಹಿಮದಕ್ಕೆ ಪಡೆದರು. ಇದರಿಂದ ಅನೇಕರಿಗೆ ನಿರಾಶೆಯಾಯಿತು. ಕೂಡಲೇ ಮುಂಬೈಯಲ್ಲಿ ಸ್ವಯಂ ಸೇವಕರನ್ನೊಳಗೊಂಡ ಸತ್ಯಾಗ್ರಹ ಸಭಾವನ್ನು ರಚಿಸಿದರು. ಸ್ವಯಂ ಸೇವಕರಲ್ಲಿ ಹೆಚ್ಚಿನ ಉತ್ಸಾಹ ಕಂಡುಬರಲಿಲ್ಲ. ೧೯೧೯ರ ರೌಲತ್‌ಶಾಸನದ ವಿರುದ್ಧದ ಚಳವಳಿ ತನ್ನ ಮೂಲ ಉದ್ದೇಶವನ್ನು ಸಾಧಿಸಲಾರದೇ ಹೋಯಿತು.

ಈ ನಡುವೆ ಪಂಜಾಬಿನ ಅಮೃತಸರ ನಗರದಲ್ಲಿ ಜಲಿಯನ್‌ ವಾಲಾಬಾಗ್‌ ಎಂಬಲ್ಲಿ ಭೀಕರವಾದ ಘಟನೆ ಸಂಭವಿಸಿತು. ರೌಲತ್‌ ಶಾಸನದ ವಿರುದ್ಧ ಪಂಜಾಬಿನಲ್ಲಿ ಚಳವಳಿ ವ್ಯಾಪಕವಾಗಿ ಹರಡಿತು. ಅಲ್ಲಿನ ಲೆಫ್ಟಿನಂಟ್‌ ಗವರ್ನರ್‌ ಪ್ರಾಂತ್ಯಾದ್ಯಂತ ದಮನಕಾರಿ ನೀತಿಯಿಂದ ಜನರನ್ನು ಮಾನಸಿಕ ಚಿತ್ರಹಿಂಸೆಗೆ ಗುರಿ ಮಾಡಿದ್ದನು. ಪಂಜಾಬಿನ ಪ್ರತಿನಿಧಿಗಳು ತಾವೊಂದು ಅಗ್ನಿಪರ್ವತದ ಮೇಲಿದ್ದೇವೆಂದು ಅದು ಎಂದಾದರೂ ಸಿಡಿಯಬಹುದೆಂದು ತಿಳಿಸಿದರು. ಏಪ್ರಿಲ್‌ನಲ್ಲಿ ಚಳವಳಿ ಭುಗಿಲೆದ್ದಿತು. ಲಾಹೋರ್‌, ಗುಜನಾವಾಲ್‌, ಕಸೂರೆ ಮೊದಲಾದ ಕಡೆ ಪೊಲೀಸರು ಅತಿರೇಕದಿಂದ ವರ್ತಿಸಿದ್ದರು. ಪರಿಸ್ಥಿತಿಯನ್ನು ನಿಭಾಯಿಸಲು ಜನರಲ್‌ ಡಯರ್‌ನನ್ನು ಅಮೃತಸರಕ್ಕೆ ಕರೆಸಲಾಯಿತು. ಸರ್ಕಾರದ ಧಮನಕಾರಿ ನೀತಿ, ದಬ್ಬಾಳಿಕೆ ವಿರುದ್ಧ ಜನರು ಹಿಂಸೆಗೆ ಇಳಿದರು. ಡಯರ್‌ ಉಸಿರು ಕಟ್ಟಿದ ವಾತಾವರಣವನ್ನು ನಿರ್ಮಾಣ ಮಾಡಿ, ಮಾರ್ಷಲ್‌ ಲಾ ಹೇಳಿದಂತೆ ವರ್ತಿಸಿದನು. ಏಪ್ರಿಲ್‌ ೧೨ ವೈಶಾಖ ದಿನ ಹತ್ತು ಸಾವಿರಕ್ಕೂ ಹೆಚ್ಚು ಜನ ಜಲಿಯನ್‌ ವಾಲಾಬಾಗ್‌ಎಂಬಲ್ಲಿ ಸಭೆ ಸೇರಿದರು. ಇದ್ದಕ್ಕಿದ್ದಂತೆ ಸೈನಿಕರೊಡನೆ ಬಂದೆರಗಿದ ಡಯರ್‌ ಜನರ ಮೇಲೆ ಯಾವ ಮುನ್ಸೂಚನೆಯೂ ಇಲ್ಲದೆ ಹತ್ತು ನಿಮಿಷಗಳ ಕಾಲ ಸತತವಾಗಿ ಸಾವಿರದ ಆರುನೂರ ಐವತ್ತು ಸುತ್ತು ಗುಂಡು ಹಾರಿಸಿ ೩೭೯ ಜನರ ಸಾವಿಗೆ ಕಾರಣನಾದರು. ಇದರಿಂದ ಸಹಸ್ರಾರು ಜನರು ಗಾಯಗೊಂಡರು. ಸುತ್ತಲೂ ಎತ್ತರದ ಗೋಡೆಗಳಿಂದ ಆವೃತ್ತವಾಗಿದ್ದು, ಜನರಿಗೆ ಕಿರಿಯ ಬಾಗಿಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಚಾರಣೆ ಸಮಯದಲ್ಲಿ ಡಯರ್‌ ತನ್ನ ಕಾರ್ಯವನ್ನು ಸಮರ್ಥಿಸಿಕೊಂಡನು. ಬ್ರಿಟಿಷ್ ‌ಜನರಿಂದ ಡಯರ್‌ಗೆ ಬೆಂಬಲ ವ್ಯಕ್ತವಾಯಿತು. ಈ ದುರಂತ ಇತಿಹಾಸದ ಒಂದು ಕಪ್ಪು ಚುಕ್ಕೆ. ಜಲಿಯನ್‌ ವಾಲಾಬಾಗ್‌ ದುರಂತದ ವಿಚಾರಣೆಗಾಗಿ ನೇಮಿಸಲ್ಪಟ್ಟ ಹಂಟರ್‌ ಆಯೋಗದ ವರದಿ ಭಾರತೀಯರ ಮನಸ್ಸನ್ನು ಖೇದಗೊಳಿಸಿತು. ಪಂಜಾಬಿನಲ್ಲಿ ಮತ್ತಷ್ಟು ಗಲಭೆ ಹಿಂಸಾಚಾರಗಳಾದವು. ಮಾರ್ಷಲ್‌ ಲಾ ಅನ್ನು ಜಾರಿಗೊಳಸಲಾಯಿತು. ಈ ದುರಂತದಿಂದ ಬ್ರಿಟಿಷರು ಹಾಗೂ ಭಾರತೀಯರ ನಡುವೆ ದೊಡ್ಡ ಕಂದರ ನಿರ್ಮಾಣವಾಗಿ, ಈವರೆಗೆ ವಿಶ್ವಾಸಲವಿಟ್ಟವರಲ್ಲೂ ಕೂಡ ಅವರಲ್ಲಿ ನಂಬಿಕೆ ಸಡಿಲವಾಯಿತು. ಆಳುವವರ ಮತ್ತು ಪ್ರಜೆಗಳ ನಡುವೆ ವಿಶ್ವಾಸ ಸಂಬಂಧ ಕಸಿದು ಬಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಚಳವಳಿಯ ಸ್ವರೂಪ ಬದಲಾಯಿತು. ೧೯೧೯ರಲ್ಲಿ ಮೋತಿಲಾಲ್ ನೆಹರೂ ಅವರ ಅಧ್ಯಕ್ಷತೆಯಲ್ಲಿ ಅಮೃತಸರದ ಕಾಂಗ್ರೆಸ್‌ ಅಧಿವೇಶನದಲ್ಲಿ ಗಾಂಧಿ ತಮ್ಮ ಮುಂದಿನ ಹೋರಾಟದ ಮಾರ್ಗವನ್ನು ಸೂಚಿಸುತ್ತ, ಬ್ರಿಟಿಷ್ ‌ಸರ್ಕಾರವನ್ನು ಸೈತಾನನ ಸರ್ಕಾರವೆಂದು, ಸೈತಾನನ ರಾಜ್ಯದೊಂದಿಗೆ ಸಹಕರಿಸುವುದು ಪಾಪಕಾರ್ಯವೆಂದು ತಿಳಿಸಿದರು. ಇದೇ ಸಮಯಕ್ಕೆ ರಾಷ್ಟ್ರೀಯ ಚಳವಳಿಯ ಕಾವನ್ನು ಆರಿಸಲು ಮಾಂಟೆಗೂ ಚೇಮ್ಸ್‌ಫೋರ್ಡ್‌ ಸುಧಾರಣೆಗಳನ್ನು ಬ್ರಿಟಿಷ್ ‌ಸರ್ಕಾರ ಪ್ರಕಟಿಸಿತ್ತು. ಆದರೆ ಕಾಂಗ್ರೆಸ್‌ ಅದನ್ನು ಒಪ್ಪಿಕೊಳ್ಳಲಿಲ್ಲ. ಸುಧಾರಣೆಗಳು ಭಾರತೀಯರಿಗೆ ಸಮಾಧಾನ ತರಲಿಲ್ಲ. ಈ ಮಧ್ಯೆ ಗಾಂಧಿ ಕಾಂಗ್ರೆಸ್‌ನಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಸಮಯದಲ್ಲಿ ಕೆಲವು ಅನುಕೂಲಕರ ಬದಲಾವಣೆಗಳಾಗಿದ್ದವು. ಮುಸ್ಲಿಮ್‌ ಲೀಗ್‌ನ ನಾಯಕರು, ಆನಿಬೆಸೆಂಟ್‌, ಸೂರತ್‌ ಅಧಿವೇಶನದಲ್ಲಿ ಹೊರ ಹೋಗಿದ್ದ ತೀವ್ರಗಾಮಿಗಳು, ತಿಲಕರು ಕಾಂಗ್ರೆಸ್ಸಿಗೆ ಮರಳಿ ಬಂದರು. ಲಕ್ನೋ ಒಪ್ಪಂದದಿಂದ ಕಾಂಗ್ರೆಸ್‌ ಒಂದಾಯಿತು. ೧೯೧೮ರಲ್ಲಿ ಜನಪ್ರಿಯ ನಾಯಕರಾಗಿದ್ದ ತಿಲಕ್‌ ವಕೀಲ ಕಾರ್ಯನಿಮಿತ್ತ ಇಂಗ್ಲೆಂಡಿಗೆ ಹೋಗಬೇಕಾಯಿತು. ಕಾಂಗ್ರೆಸ್‌ನಲ್ಲಿ ನಾಯಕತ್ವದ ಅವಕಾಶ ಉಂಟಾಯಿತು. ಮುಂದೆ ನಡೆದ ಘಟನಾವಳಿಗಳಿಂದಾಗಿ ಕ್ರಮೇಣ ಅದು ಗಾಂಧೀಜಿಯವರ ಪಾಲಿಗೆ ಬಂದಿತ್ತು. ಗಾಂಧಿ ಕಾಂಗ್ರೆಸ್‌ ಪಕ್ಷವನ್ನು ಕೇವಲ ಅದೊಂದು ಬುದ್ಧಿಜೀವಿಗಳ, ಮೇಲುವರ್ಗದವರ ಸಂಸ್ಥೆಯಾಗದೇ ಜನತೆಯ ಸಂಸ್ಥೆಯಾಗುವಂತೆ ಪರಿವರ್ತಿಸಿದರು. ಹಳ್ಳಿಹಳ್ಳಿಗೂ ಕಾಂಗ್ರೆಸ್‌ ತನ್ನ ಚಟುವಟಿಕೆಗಳನ್ನು ವಿಸ್ತರಿಸಿತು. ಅಹಿಂಸಾತ್ಮಕ ಅಸಹಕಾರ ಚಳವಳಿಯ ಮಾರ್ಗವನ್ನು ಅನೀತಿಯುತ ಸರ್ಕಾರದ ವಿರುದ್ಧ ಬಳಸಬೇಕಾದ ಅಸ್ತ್ರವೆಂದು ಗಾಂಧಿ ಈಗಾಗಲೇ ಕರೆ ಕೊಟ್ಟಿದ್ದರು. ೧೯೨೦ರ ನಾಗಪುರ ಅಧಿವೇಶನದಲ್ಲಿ ಗಾಂಧಿ ಸೂಚಿಸಿದ ಹೊಸ ಸಂವಿಧಾನವು ಕಾಂಗ್ರೆಸ್‌ ಒಂದು ಪ್ರಜಾಸತ್ತಾತ್ಮಕ ಮುಕ್ತ ವ್ಯವಸ್ಥಿತ ರಾಜಕೀಯ ಪಕ್ಷವಾಗಿ ಬೆಳೆಯಲು ಅನುಕೂಲವಾಯಿತು.

ಮೊದಲನೆಯ ಪ್ರಪಂಚ ಯುದ್ಧದ ಸಮಯದಲ್ಲಿ ಬ್ರಿಟಿಷರು ಭಾರತೀಯರ ಸಹಕಾರವನ್ನು ಬಯಸಿದ್ದರು. ಅಲ್ಲದೇ ಮುಸ್ಲಿಮರ ಬೆಂಬಲಗಳಿಸಲು ಖಿಲಾಫತ್‌ಗೆ ಧಕ್ಕೆ ತಗಲದಂತೆ ಟರ್ಕರಿಗೆ ಅನುಕೂಲಕರವಾದ ಒಪ್ಪಂದ ಮಾಡಿಕೊಡುವ ಭರವಸೆ ಕೊಟ್ಟಿದ್ದರು ಆದರೆ ೧೯೨೦ರ ಒಂಪದ ಟರ್ಕಿಗೆ ಪ್ರತಿಕೂಲವಾಗಿತ್ತು. ಟರ್ಕಿ ಸಾಮ್ರಾಜ್ಯವನ್ನು ಛಿದ್ರಗೊಳಿಸುವ ಹುನ್ನಾರದಿಂದ ಮುಸ್ಲಿಮರು ಬ್ರಿಟಿಷರನ್ನು ವಿಶ್ವಾಸಘಾತಕರೆಂದು ತಿಳಿದು, ಅವರ ವಿರುದ್ಧ ಸೇಡಿನ ಮನೋಭಾವವನ್ನು ತಾಳಿದರು. ಅಲಿ ಸಹೋದರರು ಖಿಲಾಫತ್ ಪಕ್ಷವನ್ನು ರಚಿಸಿಕೊಂಡು ಟರ್ಕಿಸಾಮ್ರಾಜ್ಯ ಮತ್ತು ಖಲೀಫನ ಪಾವಿತ್ರ್ಯ ಸಂರಕ್ಷಣೆಗೆ ಪಣತೊಟ್ಟರು. ತಮ್ಮ ಗುರಿ ಸಾಧನೆಗೆ ಕಾಂಗ್ರೆಸ್ ಮತ್ತು ಹಿಂದೂಗಳ ಸಹಕಾರದ ಅಗತ್ಯವನ್ನು ಕಂಡರು ಬ್ರಿಟಿಷರ ವಿರುದ್ಧ ಹೋರಾಡಲು ಹಿಂದೂ ಮುಸ್ಲಿಮರನ್ನು ಒಂದುಗೂಡಿಸಲು ಇದೊಂದು ಉತ್ತಮ ಅವಕಾಶವಾಯಿತು. ಅನೇಕ ರಾಷ್ಟ್ರೀಯ ನಾಯಕರು ಖಿಲಾಫತ್ ಚಳವಳಿಯ ಪರವಾಗಿ ನಿಂತರು. ಖಿಲಾಫತ್ ಸಮಿತಿ ಮತ್ತು ಕಾಂಗ್ರೆಸ್ ಅಸಹಕಾರ ಚಳವಳಿಯ ಉದ್ದೇಶಗಳನ್ನು ಸ್ಪಷ್ಟಪಡಿಸಿ,ನಾಲ್ಕೂ ಹಂತಗಳಲ್ಲಿ ಚಳವಳಿಯನ್ನು ಕೈಗೊಳ್ಳಬೇಕೆಂದು ಕೇಳಿಕೊಂಡಿತು ಮತ್ತು ಕಾಂಗ್ರೆಸ್ ಏಳು ಅಂಶಗಳ ಕಾರ್ಯಕ್ರಮಗಳನ್ನು ರೂಪಿಸಿತು. ಅದರಂತೆ ಗಾಂಧಿ ೧೯೨೦ರಲ್ಲಿ ಅಸಹಕಾರ ಚಳವಳಿಯಕರೆ ಇತ್ತರು. ಆಗಸ್ಟ್ ೧. ೧೯೨೦ ರಂದು ತಿಲಕರು ನಿಧನರಾದ ದಿನವೇ ಅಧಿಕೃತವಾಗಿ ಖಿಲಾಫತ್ ಚಳವಳಿ ಪ್ರಾರಂಭವಾಯಿತು. ಈ ಚಳವಳಿ ಹಿಂದೂ ಮುಸ್ಲಿಮರು ಒಂದು ಗೂಡಿ ನಡೆಸಿದ ಪ್ರಮ ರಾಷ್ಟ್ರವ್ಯಾಪೀ ಅಸಹಕಾರ ಆಂದೋಲನವಾಗಿತ್ತು. ಯುವಕರು, ವಿದ್ಯಾರ್ಥಿಗಳು, ಸ್ತ್ರೀಯರು, ನ್ಯಾಯವಾದಿಗಳು ಚಳವಳಿಯಲ್ಲಿ ಧುಮುಕಿದರು. ಅನೇಕರು ತಮ್ಮ ಬಿರುದು ಬಾವಲಿಗಳನ್ನು ಹಿಂದಿರುಗಿಸಿದರು. ನ್ಯಾಯಾಲಯ, ಶಾಲಾ ಕಾಲೇಜು, ಕಛೇರಿಗಳನ್ನು ಬಿಟ್ಟು ಹೊರಬಂದರು. ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿದರು ಸುಟ್ಟರು. ಸ್ವದೆಶಿ ಚಳವಳಿ ಉಗ್ರ ಸ್ವರೂಪವನ್ನು ತಾಳಿತು. ರಾಜನಿಷ್ಠೆಯನ್ನು ಬಲಪಡಿಸಲು ಪ್ರಿನ್ಸ್‌ ಆಫ್‌ ವೇಲ್ಸ್‌ನನ್ನು ಭಾರತಕ್ಕೆ ೧೯೨೧ರಲ್ಲಿ ಕಳುಹಿಸಿದಾಗ ಜನರು ಅವರ ವಿರುದ್ಧ ಹರತಾಳವನ್ನು ಆಚರಿಸಿದರು. ಮದ್ಯದಂಗಡಿಗಳ ಮುದೆ ಪಿಕೆಟಿಂಗ್ ನಡೆಸಿ ಮದ್ಯಪಾನ ನಿಷೇಧಕ್ಕೆ ಒತ್ತಾಯ ತಂದರು. ಸಿ.ಆರ್. ದಾಸ್‌, ವಲ್ಲಭಬಾಯಿ ಪಟೇಲ್‌, ರಾಜಗೋಪಾಲಚಾರಿ, ಮೋತಿಲಾಲ್‌ ನೆಹರೂ, ಸುಭಾಷ್‌ಚಂದ್ರ ಬೋಸ್‌ ಮೊದಲಾದವರು ಉತ್ಸಾಹದಿಂದ ಅನುಯಾಯಿಗಳೊಂದಿಗೆ ಚಳವಳಿಯಲ್ಲಿ ಪಾಲ್ಗೊಂಡರು. ಸರ್ಕಾರಿ ಶಾಲಾ ಕಾಲೇಜುಗಳಿಂದ ಹೊರಬಂದ ವಿದ್ಯಾರ್ಥಿಗಳು, ಶಿಕ್ಷಕರು, ರಾಷ್ಟ್ರೀಯ ಶಾಲೆಗಳನ್ನು ಸೇರಿದರು. ಅಲಿಘರ್‌, ಬನಾರಸ್‌, ಗುಜರಾತ್‌ಗಳಲ್ಲಿ ರಾಷ್ಟ್ರೀಯ ಶಾಲೆಗಳನ್ನು ಸೇರಿದರು. ಅಲಿಘರ್‌, ಬನಾರಸ್‌, ಗುಜರಾತ್‌ಗಳಲ್ಲಿ ರಾಷ್ಟ್ರೀಯ ಶಿಕ್ಷಣ ಕೇಂದ್ರಗಳು ಸ್ಥಾಪನೆಗಳಾದವು. ಚಳವಳಿ ಮತ್ತಷ್ಟು ತೀವ್ರ ಹೊಂದುವ ಲಕ್ಷಣಗಳನ್ನು ಕಂಡ ಸರ್ಕಾರ ಖಿಲಾಫತ್‌ ನಾಯಕರನ್ನು, ಅಲಿ ಸಹೋದರರನ್ನು, ಕಾಂಗ್ರೆಸ್‌ ಮುಂದಾಳುಗಳನ್ನು, ಸಿ. ಆರ್‌. ದಾಸ್‌, ಲಾಲಾ ಲಜಪತ್‌ರಾಯ, ಜವಹರಲಾಲ್‌ ನೆಹರೂ ಮೊದಲಾದವರನ್ನು ಬಂಧಿಸಿತು. ಈ ಹೊತ್ತಿಗೆ ಚಳವಳಿ ಹಿಂಸಾರೂಪಕ್ಕೆ ತಿರುಗಿತು. ಅರಾಜಕತೆಯ ವಾತಾವರಣ ನಿರ್ಮಾಣವಾಯಿತು. ಚಳವಳಿಗಾರರು ಇತರರ ಮೇಲೆ ಅನೇಕ ರೀತಿಯ ಒತ್ತಡ ತಂದರು, ಚಳವಳಿ ಸೇರುವಂತೆ ಬಲಪ್ರಯೋಗ ಮಾಡಿದರು. ಸರ್ಕಾರ ದಮನಕಾರಿ ಅಸ್ತ್ರವನ್ನು ಕೈಗೊಂಡು ಚಳವಳಿಯನ್ನು ನಿಗ್ರಹಿಸಲು ತೊಡಗಿತ್ತು. ಸೆರೆಮನೆಗಳು ಕೈದಿಗಳಿಂದ ತುಂಬಿದವು. ಚಳವಳಿದಾರರು ಹಿಂಸಾಚಾರಕ್ಕೆ ಇಳಿದಿರುವುದನ್ನು ಆನಿಬೆಸೆಂಟ್‌ರಂಥ ನಾಯಕರು ವಿರೋಧಿಸಿದರು. ಅವರು ಗಾಂಧಿ ರಾಜ್ಯದಲ್ಲಿ ಅವರ ಅನುಯಾಯಿಗಳ ಅನುಚಿತ ವರ್ತನೆಯನ್ನು ಖಂಡಿಸಿದರು. ಈ ಖಿಲಾಫತ್‌ ಚಳವಳಿಯ ಕಾಲದಲ್ಲಿ ಕೇರಳದಲ್ಲಿ ೧೯೨೧ರಲ್ಲಿ ನಡೆದ ಮಾಪಿಳ್ಳೆ ದಂಗೆ ಭೀಕರವಾಗಿತ್ತು. ಅಲಿ ಸಹೋದರರಿಂದ ಉದ್ರೇಕಗೊಂಡ ಮಾಪಿಳ್ಳೆಗಳು ಹಿಂದು ಲೇವಾದೇವಿಗಾರರನ್ನು, ಜಮೀನ್ದಾರರನ್ನು ಕೊಂದರು. ಇದನ್ನು ಹಿಂದೂ ಮುಸ್ಲಿಮ್‌ ಕೋಮುಗಲಭೆಯಾಗಿ ನೋಡಿದ ಚರಿತ್ರೆಕಾರರು ಬಹಳಷ್ಟು ಒಂದೇ ವರ್ಷದಲ್ಲಿ ಇಸ್ಲಾಂ ರಾಜ್ಯ ಸ್ಥಾಪನೆಯಾಗುವುದೆಂದು ಕಲ್ಪಿಸಿಕೊಂಡು ದಂಗೆಕೋರರು ಖಿಲಾಫತ್‌ ರಾಜ್ಯವನ್ನು ಘೋಷಿಸಿದರು. ಸರ್ಕಾರ ದಂಗೆಯನ್ನು ಅಡಗಿಸಲು ಉಗ್ರಕ್ರಮ ಕೈಗೊಂಡಿತ್ತು. ಪ್ರತಿಭಟನಾಕಾರರ ಬಗ್ಗೆ ಕಾಂಗ್ರೆಸ್‌ ಮೆದುವಾಗಿ ನಡೆದುಕೊಂಡಿತ್ತು. ಖಿಲಾಫತ್‌ ನಾಯಕರು ಮಾಪಿಳ್ಳೆಗಳನ್ನು ಶೂರರೆಂದು ಬಣ್ಣಿಸಿ ಅವರನ್ನು ಹುತಾತ್ಮರ ಸ್ಥಾನಕ್ಕೇರಿಸಿದರು. ಹಿಂದೂ ಜಮೀನ್ದಾರರು ತಮ್ಮ ಊಳಿಗದವರೆಂದು ದಲಿತ ಮತ್ತು ಮುಸ್ಲಿಮ್‌ ಸಮುದಾಯದ ಗೇಣಿದಾರರನ್ನು ಸದಾ ಶೋಷಿಸಿದ ಘಟನೆಗಳನ್ನು ಈ ನಾಯಕರು ಕಟುಟೀಕೆ ಮಾಡಿದರು.

ಖಿಲಾಫತ್‌ ಚಳವಳಿಯ ಸ್ವರೂಪವೇ ಬೇರೆ ತರಹದ್ದು. ಅಸ್ಸಾಂ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಪಂಜಾಬ್‌ ಮೊದಲಾದ ಕಡೆ ರೈತರು, ಗೇಣಿದಾರರು, ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿದರು. ವೈಸರಾಯ್‌ ಯಾವುದೇ ಅನುಕೂಲಕರ ಕ್ರಮ ಕೈಗೊಳ್ಳದೇ ಇರುವಾಗ ಗಾಂಧಿ ಕಾನೂನುಭಂಗ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಬರ್ದೋಲಿಯಿಂದ ತಿಳಿಸಿದರು. ಇಂತಹ ಕಾವೇರಿದ ಸಂದರ್ಭದಲ್ಲಿ ಉತ್ತರ ಪ್ರದೇಶದ ಗೋರಖ್‌ಪುರದ ಚೌರಿಚೌರ ಎಂಬ ಹಳ್ಳಿಯಲ್ಲಿ, ಕಾಂಗ್ರೆಸ್‌ ಖಿಲಾಫತ್‌ ಕಾರ್ಯಕರ್ತರು ಮೂರು ಸಾವಿರ ಹಳ್ಳಿಗಳನ್ನು ಸಂಘಟಿಸಿ ಚಳವಳಿಗೆ ನುಗ್ಗಿದರು. ಪೊಲೀಸರು ಮೆರವಣಿಗೆಗಾರರ ಮೇಲೆ ಹಲ್ಲೆ ಮಾಡಿದರು, ಗುಂಡು ಹಾರಿಸಿದರು. ರೊಚ್ಚಿಗೆದ್ದ ಚಳವಳಿಗಾರರು ಹತ್ತಿರದ ಪೊಲೀಸ್‌ಠಾಣೆಗೆ ಬೆಂಕಿಯಿಟ್ಟರು. ಈ ಘಟನೆಯಲ್ಲಿ ಇಪ್ಪತ್ತೆರಡು ಪೊಲೀಸರು ಜೀವಂತ ಬೆಂದರು. ಈ ಹಿಂಸಾಚಾರದ ಘಟನೆಯಿಂದ ಖಿನ್ನರಾದ ಗಾಂಧಿ ಫೆಬ್ರವರಿ ೨೨, ೧೯೨೨ರಂದು ಕಾಯಿದೆ ಭಂಗ ಚಳವಳಿಯನ್ನು ಹಿಂತೆಗೆದುಕೊಳ್ಳುವ ಬರ್ದೋಲಿ ಹೇಳಿಕೆಯನ್ನಿತ್ತರು. ಹಿಂಸೆಯಿಂದ ಯಾವ ಸಾಧನೆಯನ್ನೂ ಮಾಡಿದಂತಾಗುವುದಿಲ್ಲವೆಂದರು. ರೀತಿ ಹಠಾತ್ತನೆ ಕೈಗೊಂಡ ಗಾಂಧಿಯವರ ನಿರ್ಧಾರದಿಂದ ಅನೇಕ ನಾಯಕರಿಗೆ ದಿಗ್ಭ್ರಮೆಯಾಯಿತು. ಉದ್ದೇಶ ಸಾಧನೆಯಾಗುವುದಕ್ಕೆ ಮುಂಚೆಯೇ ಚಳವಳಿಯನ್ನು ಹಿಂದಕ್ಕೆ ತೆಗೆದುಕೊಂಡಿದ್ದುದರಿಂದ ಜೈಲಿನಲ್ಲಿದ್ದ ಜವಾಹರಲಾಲ್‌ ನೆಹರು, ಸಿ. ಆರ್‌. ದಾಸ್. ಮೊದಲಾದ ಅನೇಕ ನಾಯಕರು ನಿರಾಶೆಗೊಂಡರು. ಅವರಿಗೆ ಕತ್ತಲೆ ಕವಿದಂತಾಯಿತು. ಖಿಲಾಫತ್‌ ನಾಯಕರಿಗೆ ಇದು ವಿಶ್ವಾಸಘಾತಕವಾಗಿ ಕಂಡಿತು. ಇಂತಹ ಸಮಯದಲ್ಲಿ ಗಾಂಧಿ ಬಂಧನಕ್ಕೊಳಗಾದರು. ಅವರಿಗೆ ಆರು ವರ್ಷಗಳ ಸೆರೆಯನ್ನು ವಿಧಿಸಲಾಯಿತು. ಇಡೀ ಚಳವಳಿ ಗಾಂಧಿಯನ್ನು ಕೇಂದ್ರಬಿಂದುವನ್ನಾಗಿ ಹೊಂದಿದ್ದು ತಾತ್ಕಾಲಿಕವಾಗಿ ಚಳವಳಿ ಅನೇಕ ಕಡೆ ತಾತ್ಕಾಲಿಕವಾಗಿ ಚಳವಳಿ ಸ್ಥಗಿತಗೊಂಡಿತು.

೧೯೧೯-೨೨ರ ಖಿಲಾಫತ್‌ ಅಸಹಕಾರ ಚಳವಳಿ ಅನೇಕ ಕಡೆ ಸೋತಿತು. ಚಳವಳಿಯ ಧ್ಯೇಯ ಸಾಧನೆಯಾಗಲಿಲ್ಲ. ಒಂದೇ ವರ್ಷದಲ್ಲಿ ಸ್ವರಾಜ್ಯ ಗಳಿಸುವುದು ಅಸಾಧ್ಯದ ಮಾತಾಯಿತು. ಖಿಲಾಫತ್‌ ಚಳವಳಿಯ ನಂತರ ಅಲಿ ಸಹೋದರರು ಗಾಂಧಿಯ ವಿರೋಧಿಗಳಾದರು. ಜಿನ್ನಾ ಕಾಂಗ್ರೆಸ್‌ ನಿಂದ ದೂರ ಉಳಿದರು. ಹಿಂದೂ ಮುಸ್ಲಿಮರ ನಡುವೆ ಕಂದರ ಹೆಚ್ಚಿಸಲು ಕೋಮುವಾದಿಗಳು ಈ ಅವಕಾಶವನ್ನು ಬಳಸಿಕೊಂಡರು. ಅನೇಕ ಕಡೆಗಳಲ್ಲಿ ಕೋಮುಗಲಭೆಗಳಾಗಿ ಕೋಮು ರಾಜಕೀಯ ಬೆಳೆಯುತ್ತಾ ಬಂದಿತು. ಹೀಗಾಗಿ ೧೯೨೧ರಲ್ಲಿ ಉಂಟಾದ ಹಿಂದೂ–ಮುಸ್ಲಿಮ್‌ ಒಗ್ಗಟ್ಟು ತಾತ್ಕಾಲಿಕವಾದುದೆಂದು ತಿಳಿಯಿತು. ೧೯೨೪ರಲ್ಲಿ ವಾಯುವ್ಯ ಪ್ರಾಂತದ ಕೋಹಟ್‌ನಲ್ಲಿ ನಡೆದ ಕೋಮುಗಲಭೆ ಗಂಭೀರ ಸ್ವರೂಪದ್ದಾಗಿತ್ತು. ಕೋಹಟ್‌ ಮತ್ತು ಗುಲ್ಬರ್ಗಾದ ದುರಂತಗಳು ಗಾಂಧಿಯ ಮನಸ್ಸನ್ನು ಕಲಕಿದವು. ೧೯೨೬ರ ಮೋಹರಂ ದಿನ ದೆಹಲಿ, ಅಲಹಾಬಾದ್‌ ಮತ್ತು ಕಲ್ಕತ್ತಾದಲ್ಲಿ ಗಲಭೆಗಳಾದವು. ದಿನೇ ದಿನೇ ಹೆಚ್ಚುತ್ತಿರುವ ಕೋಮುಗಲಭೆ ಸಣ್ಣ ಪಟ್ಟಣ ಮತ್ತು ಗ್ರಾಮಗಳ ಕಡೆಗೂ ಹರಡುತ್ತಿದ್ದು ಕೋಮು ವಾತಾವರಣವನ್ನು ಕಲುಷಿತಗೊಳಿಸಿದವು. ಮೂಲಭೂತ ಹಿಂದೂ ಹಾಗೂ ಮುಸ್ಲಿಮರು ಇದರ ದುರುಪಯೋಗ ಮಾಡಿಕೊಂಡು ಎರಡೂ ಸಮುದಾಯಗಳ ನಡುವೆ ಭೀತಿಯನ್ನುಂಟು ಮಾಡಿದರು. ಹೀಗೆ ಖಿಲಾಫತ್‌ ಅಸಹಕಾರ ಚಳವಳಿ ಪೂರ್ಣ ಯಶಸ್ಸನ್ನು ಕಾಣಲಿಲ್ಲ. ಆದರೂ ಕೆಲವು ಒಳ್ಳೆಯ ಫಲಿತಾಂಶವನ್ನು ನೀಡಿತು. ಭಾರತೀಯರು ಮೊದಲ ಬಾರಿಗೆ ರಾಷ್ಟ್ರಾದ್ಯಂತ ಬೃಹತ್‌ ಸಂಖ್ಯೆಯಲ್ಲಿ ಚಳವಳಿಯಲ್ಲಿ ಭಾಗವಹಿಸಿದುದರಿಂದ ಚಳವಳಿ ಅಖಿಲ ಭಾರತ ಸ್ವರೂಪ ಬಂದಿತು. ಕಾಂಗ್ರೆಸ್‌ ಒಂದು ಕ್ರಾಂತಿಕಾರಿ ಸಂಘಟನೆಯಾಗಿ ಬೆಳೆಯಿತು. ಅದರ ಪ್ರಭಾವ ಮೂಲೆ ಮೂಲೆಗಳಲ್ಲೂ ಪ್ರಸರಿಸಿ ದೇಶದ ನಾನಾ ಭಾಗದ ಹಳ್ಳಿ, ನಗರ, ಪಟ್ಟಣಗಳಲ್ಲಿ ಅದರ ಶಾಖೆಗಳು ಕಾರ್ಯಪ್ರವೃತ್ತವಾದವು.

ಈ ಹೊತ್ತಿಗಾಗಲೇ ಬ್ರಿಟಿಷ್ ‌ಸರ್ಕಾರ ಮೌಂಟ್‌ ಫರ್ಡ್‌ ಸುಧಾರಣೆಗಳನ್ನು ಜಾರಿಗೊಳಿಸುವ ದಿಕ್ಕಿನಲ್ಲಿ ಸಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಕೌನ್ಸಿಲ್‌ ಪ್ರವೇಶದ ಬಗ್ಗೆ ಕಾಂಗ್ರೆಸ್ಸಿನಲ್ಲಿ ಭಿನ್ನಾಭಿಪ್ರಾಯಗಳುಂಟಾದವು. ಸಿ. ಆರ್. ದಾಸ್‌ ಮತ್ತು ಮೋತಿಲಾಲ್‌ ನೆಹರು ಕೌನ್ಸಿಲ್‌ ಪ್ರವೇಶಿಸಲು ತೀರ್ಮಾನಿಸಿ ೧೯೨೨ರಲ್ಲಿ ತಮ್ಮದೇ ಆದ ಸ್ವರಾಜ್ಯ ಪಕ್ಷವನ್ನು ಸ್ಥಾಪಿಸಿದರು. ಶಾಸಕಾಂಗದ ಒಳ ಸೇರಿ ಸ್ವಾಯತ್ತ ಪಡೆದ ಸರ್ಕಾರವನ್ನು ರಚಿಸುವ ಉದ್ದೇಶವನ್ನು ಹೊಂದಿತ್ತು. ಅದು ಸಾಧ್ಯವಾಗದಿದ್ದಲ್ಲಿ ಸಂವಿಧಾನವನ್ನು ಭಗ್ನಗೊಳಿಸುವುದಾಗಿ ತಿಳಿಸಿತು. ಸ್ವರಾಜ್ಯ ಪಕ್ಷ ಚುನಾವಣೆಗಳಲ್ಲಿ ಕೇಂದ್ರ ಮತ್ತು ಪ್ರಾಂತ ಮಟ್ಟದಲ್ಲಿ ಅತಿ ಹೆಚ್ಚಿನ ಮತ ಗಳಿಸಿ ಶಾಸಕಾಂಗ ಪ್ರವೇಶಿಸಿತು ಮತ್ತು ಜಿನ್ನಾರವರ ಬಂಬಲ ಪಡೆದು ಸರ್ಕಾರಕ್ಕೆ ವಿರೋಧವನ್ನು ಒಡ್ಡುತ್ತಾ ಬಂದಿತು. ಆದರೆ ಜನಹಿತ ರಚನಾತ್ಮಕ ಕಾರ್ಯಕ್ರಮ ಹಾಗೂ ರಾಷ್ಟ್ರದ ಬೆಳವಣಿಗೆಗೆ ಅವಶ್ಯಕವಾದ ಕಾನೂನಿಗೆ ಅಡ್ಡಿಯನ್ನುಂಟು ಮಾಡಲಿಲ್ಲ. ೧೯೨೪ರಲ್ಲಿ ಅನಾರೋಗ್ಯದ ನಿಮಿತ್ತ ಗಾಂಧಿ ಜೈಲಿನಿಂದ ಬಿಡುಗಡೆ ಹೊಂದಿ ಕಾಂಗ್ರೆಸ್‌ ಮತ್ತು ಸ್ವರಾಜ್ಯ ಪಕ್ಷದ ಭಿನ್ನಾಭಿಪ್ರಾಯಗಳನ್ನು ತಿಳಿಗೊಳಿಸಿದರು. ಸ್ವರಾಜ್ಯಗಳು ಶಾಸಕಾಂಗದ ಒಳಗಿದ್ದು ಸರ್ಕಾರದ ವಿರುದ್ಧ ಕೆಲಸ ಮಾಡುವುದರ ಔಚಿತ್ಯವನ್ನು ಒಪ್ಪಿಕೊಂಡರು. ಬೆಳಗಾವಿ ಅಧಿವೇಶನದಲ್ಲಿ ಸ್ವರಾಜ್ಯ ಪಕ್ಷದ ಔಚಿತ್ಯ ಕಡಿಮೆಯಾಗಿ ಕೊನೆಗೆ ಅದು ಕಾಂಗ್ರೆಸ್ಸಿನಲ್ಲಿ ಸೇರಿಹೋಯಿತು. ಸ್ವರಾಜ್ಯವಾದಿಗಳು ತಮ್ಮ ಗುರಿ ಸಾಧನೆಯಲ್ಲಿ ವಿಫಲರಾದರೂ ಸಾಮಾಜಿಕ ಸುಧಾರಣ ಕಾರ್ಯಕ್ರಮಗಳನ್ನು ತರುವಲ್ಲಿ ನೆರವಾದರು. ಶಾಸಕಾಂಗಗಳಲ್ಲಿ ಜನಪರ ಚರ್ಚೆ ನಡೆಯಿತು. ಶಾಸಕಾಂಗಗಳು ರಾಷ್ಟ್ರೀಯ ಸಭೆಗಳಂತೆ ಕೆಲಸ ಮಾಡಿದವು. ಪ್ರಜೆಗಳಲ್ಲಿ ರಾಷ್ಟ್ರಪ್ರಜ್ಞೆ ಮೂಡುವಂತೆ ಮಾಡಿದುದಲ್ಲದೇ, ಶಾಸಕಾಂಗದಲ್ಲಿ ಕೆಲಸ ಮಾಡುವ ಕಾರ್ಯಾನುಭವ ಪಡೆದರು.

ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಕೇವಲ ರಾಜಕೀಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ, ಭಾರತೀಯ ಸಮಾಜದಲ್ಲಿ ಸಾಮಾಜಿಕ ಸುಧಾರಣೆ ಹಾಗೂ ಆರ್ಥಿಕ ಬದಲಾವಣೆಯನ್ನು ತರುವ ಉದ್ದೇಶದಿಂದ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಂಡಿತು. ಗಾಂಧಿ ಬಿಡುವಿನ ವೇಳೆಯಲ್ಲಿ ತಮ್ಮ ಅನುಯಾಯಿಗಳಿಗೆ, ಕಾರ್ಯಕರ್ತರಿಗೆ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು. ಹಳ್ಳಿಗಳಿಗೆ ಹೋಗುವಂತೆ ಹೇಳಿದರು. ಭಾರತದ ಜೀವಾಳ ಹಳ್ಳಿ ಮತ್ತು ಗ್ರಾಮ. ಭಾರತವೇ ನಿಜವಾದ ಭಾರತವೆಂದು ತಿಳಿಸಿದರು. ಸಮಾಜದ ಸೇವಕರು ಹಳ್ಳಿಗರೊಂದಿಗೆ ಬೆರೆಯುವಂತೆ ಮಾಡಿದರು. ಸಾಮಾಜಿಕ ಅನಿಷ್ಟಗಳನ್ನು ಪರಂಪರಾಗತ ಪಿಡುಗುಗಳನ್ನು ತೊಡೆದು ಹಾಕುವಂತೆ ಕೇಳಿಕೊಂಡರು. ಹಿಂದೂ ಮುಸ್ಲಿಂ ಸೌಹಾರ್ದತೆ, ಗ್ರಾಮ ಸ್ವರಾಜ್ಯ, ಸ್ವದೇಶಿ ಚಳವಳಿ, ಖಾದಿ, ಅಸ್ಪೃಶ್ಯತಾ ನಿವಾರಣೆ, ಪಾನ ನಿರೋಧ, ರಾಷ್ಟ್ರೀಯ ಶಿಕ್ಷಣ ಮೊದಲಾದವುಗಳು ಮುಖ್ಯವಾದ ಕಾರ್ಯಕ್ರಮಗಳಾಗಿದ್ದವು. ಖಾದಿ ವಸಾಹತುಶಾಹಿ ಅರ್ಥವ್ಯವಸ್ಥೆಗೆ ಪ್ರತ್ಯುತ್ತರವೆಂದು, ಅದು ಅಹಿಂಸೆಯ ಬಂಧು ಎಂದು ನಿಡಿದರು. ಅದಕ್ಕೆ ಪಾವಿತ್ರ್ಯ, ಗೌರವ, ಮನ್ನಣೆ ದೊರೆಯಿತು. ಜನರ ಮನಃಪರಿವರ್ತನೆಯಿಂದ ಸಮಾಜದ ಶಾಪವಾದ ಅಸ್ಪೃಶ್ಯತೆಯನ್ನು ತೊಲಗಿಸಬಹುದೆಂದು ಸ್ಪಷ್ಟಪಡಿಸಿದರು. ಅಸ್ಪೃಶ್ಯರನ್ನು ಹರಿಜನರೆಂದು, ದೇವರ ಮಕ್ಕಳೆಂದು ಕರೆದು, ‘ಹರಿಜನ’ ಎಂಬ ಪತ್ರಿಕೆಯನ್ನು ಹೊರಡಿಸಿ ಅದರಲ್ಲಿ ತಮ್ಮ ವಿಚಾರಗಳನ್ನು ಬಿತ್ತರಿಸಿದರು. ಸ್ವಯಂ ಗಾಂಧಿ ತಮ್ಮ ಅನುಯಾಯಿಗಳೊಂದಿಗೆ ಭಂಗಿ ಕಾಲೋನಿಗಳಲ್ಲಿ ಸೇವೆ ಮಾಡಿದರು. ಹರಿಜನರಲ್ಲಿ, ಆತ್ಮವಿಶ್ವಾಸ ಮೂಡಿಸಲು ಪ್ರಯತ್ನಿಸಿದರು. ಸವರ್ಣೀಯರು ಹರಿಜನರೊಂದಿಗೆ ಬೆರೆಯುವ ಕೆಲಸ ಮಾಡಿದರು. ಇದರಂತೆ ಮದ್ಯಪಾನ ನಿಷೇಧವನ್ನು ಕಾರ್ಯರೂಪಗೊಳಿಸಲು ಹೆಂಡದಂಗಡಿಗಳ ಮುಂದೆ ಪಿಕೆಟಿಂಗ್‌ ನಡೆಯಿತು. ಸಾಮಾಜಿಕ ಪರಿವರ್ತನೆಗೆ ಪಾನ ವಿರೋಧ ಅವಶ್ಯಕವೆಂದು ತಿಳಿಯ ಹೇಳಿದರು. ರಾಷ್ಟ್ರೀಯ ಶಿಕ್ಷಣಕ್ಕಾಗಿ ಖಾಸಗಿ ಒಡೆತನದಲ್ಲಿ ಶಿಕ್ಷಣ ಸಂಸ್ಥೆಗಳು ಗಾಂಧಿಯ ವಿಚಾರಧಾರೆಗನುಗುಣವಾಗಿ ಹುಟ್ಟಿಕೊಂಡವು. ಹಿಂದಿ ಪ್ರಚಾರ ಮಾಡಿದರು. ದೈಹಿಕ ಶ್ರಮಕ್ಕೆ ಮಹತ್ವ ನೀಡಿದರು. ದುಡಿಮೆಯ ಬೆಲೆ ತಿಳಿಸಿದರು. ಮೂಲಭೂತ ಶಿಕ್ಷಣ ಮತ್ತು ಕರಕುಶಲ ತಂತ್ರಕ್ಕೆ ಶಿಕ್ಷಣದಲ್ಲಿ ಮಹತ್ವ ನೀಡಬೇಕೆಂದು ವಿಚಾರ ಮಾಡಿದರು. ಅಹಿಂಸಾತ್ಮಕ ಹಾಗೂ ಸ್ವಯಂ ಪ್ರೇರಣೆಯಿಂದ ಅಪರಿಗ್ರಹ ತತ್ವದಂತೆ ಭೂಸುಧಾರಣೆಯನ್ನು ಜಾರಿಗೊಳಿಸಬೇಕೆಂದು, ರೈತರ ಬವಣೆ ನೀಗಬೇಕೆಂದು ಬಯಸಿದರು. ಸಹಸ್ರಾರು ಸ್ವಯಂ ಸೇವಕರು ಗಾಂಧಿಯವರ ಈ ತತ್ವಗಳನ್ನು ಸಾಕಾರಗೊಳಿಸಲು ಉತ್ಸಾಹದಿಂದ ದುಡಿದರು. ಗಾಂಧಿ ಸ್ವಯಂ ಸೇವಕರನ್ನು ಸಂಘಟಿಸಿದರು. ಗಾಂಧಿಯ ಕಲ್ಪನೆಯಾದ ಸ್ವರಾಜ್ಯ ಸಂದೇಶ ಹಳ್ಳಿಗಳಿಗೆ ಮುಟ್ಟಿತು. ಇದರಿಂದ ಭಾರತದ ಗ್ರಾಮ ಪ್ರಪಂಚ ರಾಷ್ಟ್ರೀಯ ಹೋರಾಟದಲ್ಲಿ ಲೀನವಾಯಿತು. ಗಾಂಧಿ ಕಾಂಗ್ರೆಸ್‌ ರಾಜಕೀಯದಿಂದ ದೂರವಾಗಿ ರಚನಾತ್ಮಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕೆಳವರ್ಗದವರು, ಆದಿವಾಸಿಗಳು, ರೈತರು, ಕೂಲಿಕಾರರು ರಾಷ್ಟ್ರೀಯ ವಾಹಿನಿಯಲ್ಲಿ ಬೆರೆತರು. ಕಾಯಿದೆ ಭಂಗ ಅಸಹಕಾರ ಚಳವಳಿಯಲ್ಲಿ ಈ ವರ್ಗಗಳ ಪಾತ್ರ ಮಹತ್ತರವಾಗಿತ್ತು.

ಬ್ರಿಟಿಷರ ವಿರುದ್ಧ ಗಾಂಧಿ ನಡೆಸಿದ ಅಹಿಂಸಾತ್ಮಕ ಹೋರಾಟದಂತೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಶಸ್ತ್ರಾಸ್ತ್ರ ದಂಗೆಯಿಂದ ತಾಯ್ನಾಡನ್ನು ವಿದೇಶಿ ಸಂಕೋಲೆಯಿಂದ ಮುಕ್ತಗೊಳಿಸಬೇಕೆಂಬ ತೀಕ್ಷ್ಣಕರವಾದ ಕ್ರಾಂತಿಕಾರಿ ಹೋರಾಟವು ಒಂದು ರೋಮಾಂಚಕ ಅಧ್ಯಾಯವಾಗಿದೆ. ಕ್ರಾಂತಿಕಾರರು ರಹಸ್ಯ ಸಂಘಟನೆಗಳನ್ನು ಕಟ್ಟಿಕೊಂಡು ಗುಪ್ತವಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. ಹೊರದೇಶಗಳಲ್ಲಿ ತಮ್ಮ ಕೇಂದ್ರಗಳನ್ನು ಸ್ಥಾಪಿಸಿಕೊಂಡು ಕಾರ್ಯಾಚರಣೆ ನಡೆಸಿದರು. ಇವರಲ್ಲಿ ವಾಸುದೇವ ಬಲವಂತ ಫಡಕೆ, ಶ್ಯಾಮಜಿ ಕೃಷ್ಣವರ್ಮ, ವಿ. ಡಿ. ಸಾವರ್ಕರ್‌ ಮೊದಲಾದವರನ್ನು ಹೆಸರಿಸಬಹುದು. ಬಂಗಾಳದಲ್ಲಿ ಅನುಶೀಲನ ಸಮಿತಿಯ ನಾಯಕ ಬರೀಂದ್ರಕುಮಾರ ಘೋಷ್‌ ಮತ್ತು ಅವರ ಸಹೋದರ ಅರವಿಂದ ಘೋಷ್‌, ಪ್ರಫುಲ್ಲ ಚಾಕಿ, ಖುದಿರಾಂ ಬೋಸ್‌, ರಾಸ್‌ಬಿಹಾರಿ ಬೋಸ್‌ ಇವರುಗಳು ಉಲ್ಲೇಖಾರ್ಹರು. ಸರ್ದಾರ ಅಜಿತ್‌ಸಿಂಗ್‌ ಕಟ್ಟಿದ ಭಾರತ ಮಾತ ಸಂಘ, ಜ್ಯೋತಿಂದ್ರನಾಥರ ಸಂಜೀವಿನಿ ಸಭಾ ಪ್ರಸಿದ್ಧವಾದದ್ದು. ಅಲ್ಲದೆ ಭಗತ್‌ಸಿಂಗ್‌, ಚಂದ್ರಶೇಖರ್‌ ಆಜಾದ್‌, ರಾಜಗುರು ರಾಮ್‌ಪ್ರಸಾದ್‌ ಬಿಸ್ಮಿಲ್ಲಾ ಮೊದಲಾದ ಯುವ ಕ್ರಾಂತಿಕಾರರು ಹಿಂದೂಸ್ಥಾನ ರಿಪಬ್ಲಿಕ್‌ ಅಸೋಷಿಯೇಷನ್‌ ಎಂಬ ಕ್ರಾಂತಿ ಸಂಘಟನೆಯನ್ನು ಸ್ಥಾಪಿಸಿದರು. ಈ ಗುಂಪಿನ ಕಾಕೋರಿ ರೈಲು ಡಕಾಯತಿ ಪ್ರಕರಣ ಹೆಸರುವಾಸಿಯಾಗಿದೆ. ಇದಲ್ಲದೆ, ಭಗತ್‌ಸಿಂಗ್‌ ಮತ್ತು ರಾಜಗುರು ೧೯೨೮ರಲ್ಲಿ ಲಾಲಾ ಲಜಪತರಾಯರನ್ನು ಲಾಠಿಯಿಂದ ಹೊಡೆದ ಸ್ಯಾಂಡರ್ಸ್‌ನನ್ನು ಗುಂಡಿಟ್ಟು ಕೊಂದರು. ಈ ಪ್ರಕರಣದಲ್ಲಿ ರಾಜಗುರು, ಭಗತ್‌ಸಿಂಗ್‌ ಮತ್ತು ಸುಖದೇವ ಮರಣ ದಂಡನೆಗೊಳಗಾದರು. ಚಂದ್ರಶೇಖರ ಆಜಾದ್‌ ಅನೇಕ ಪಿತೂರಿಗಳನ್ನು ನಡೆಸಿದರು. ೧೯೩೧ರಲ್ಲಿ ತಮ್ಮನ್ನು ಬಂಧಿಸುವ ಸಮಯದಲ್ಲಿ ಪೊಲೀಸರೊಡನೆ ಹೋರಾಡುತ್ತಾ ಆತ್ಮಾಹುತಿ ಮಾಡಿಕೊಂಡರು. ಕ್ರಾಂತಿಕಾರರ ಮತ್ತೊಂದು ರೋಚಕ ಪ್ರಸಂಗವೆಂದರೆ ಸೂರ್ಯಸೇನ ನೇತೃತ್ವದಲ್ಲಿ ನಡೆದ ಚಿತ್ತಗಾಂಗ್‌ ಶಸ್ತ್ರಾಗಾರ ದಾಳಿ. ೧೯೩೦ರಲ್ಲಿ ಅರವತ್ತನಾಲ್ಕು ಜನ ಕ್ರಾಂತಿಕಾರರ ಗುಂಪು ಶಸ್ತ್ರಾಗಾರದ ಮೇಲೆ ದಾಳಿ ಮಾಡಿತು. ಗುಡ್ಡಗಳಲ್ಲಿ ಅಡಗಿಕೊಂಡಿದ್ದು ಕಾರ್ಯಾಚರಣೆಗೆ ನಡೆದರು. ೧೯೩೪ರಲ್ಲಿ ಸೂರ್ಯಸೇನರನ್ನು ಗಲ್ಲಿಗೇರಿಸಲಾಯಿತು. ಇವರ ಇತರ ಅನುಯಾಯಿಗಳಿಗೆ ಸೆರೆಯಾಯಿತು. ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಸ್ತ್ರೀಯರಲ್ಲಿ ಕಲ್ಪನಾ ದತ್‌, ಶಾಂತಿ ಘೋಷ್‌, ಸುನೀತಿ ಚೌಧರಿ ಮೊದಲಾದವರಿದ್ದರು. ಬೀನಾದಾಸ್‌ ಗವರ್ನರ್‌ನನ್ನು ಕೊಲ್ಲಲು ಪ್ರಯತ್ನಿಸಿದರು. ಈ ಎಲ್ಲ ಕ್ರಾಂತಿಕಾರರು ಬ್ರಿಟಿಷ್ ‌ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದರು. ಪ್ರದ್ಯುತ್‌ಕುಮಾರ್‌ ಭಟ್ಟಾಚಾರ್ಯ, ಪ್ರೊಬನ್ಸು ಪಾಲ್‌ ಎಂಬುವವರು ಜಿಲ್ಲಾ ನ್ಯಾಯಾಧೀಶರನ್ನೇ ಗುಂಡಿಕ್ಕಿ ಕೊಂದರು. ಹೀಗೆ ಸರ್ಕಾರಿ ಅಧಿಕಾರಿಗಳಲ್ಲಿ ಭೀತಿಯನ್ನುಂಟು ಮಾಡಿ ಅವರಲ್ಲಿ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿ, ಆಡಳಿತ ಯಂತ್ರವನ್ನು ನಿಸ್ತೇಜಗೊಳಿಸಿ ದೇಶವನ್ನು ವಿದೇಶಿಯರಿಂದ ಮುಕ್ತಗೊಳಿಸುವ ವಿಚಾರ ಅವರದಾಗಿತ್ತು. ಕೆಲವು ಕ್ರಾಂತಿಕಾರರು ಯುರೋಪ್‌, ಅಮೆರಿಕ, ಮಧ್ಯ ಏಷ್ಯಾ, ಆಗ್ನೇಯ ಏಷ್ಯಾಗಳಲ್ಲಿ ತಮ್ಮ ತಮ್ಮ ಕೇಂದ್ರಗಳನ್ನು ಸ್ಥಾಪಿಸಿ ಕಾರ್ಯಾಚರಣೆ ನಡೆಸುತ್ತಿದ್ದರು. ಶ್ಯಾಮಜಿ ಕೃಷ್ಣವರ್ಮ, ವಿ. ಡಿ. ಸಾವರ್ಕರ್‌, ಹರದಯಾಳ್‌, ಮೇಡಂ ಕಾಮಾ, ಅಜಿತಸಿಂಗ್‌ ಮೊದಲಾದವರು ಇವರಲ್ಲಿ ಪ್ರಮುಖರು. ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋನಲ್ಲಿ ಗದ್ದರ್‌ಎಂಬ ಬಂಡಾಯ ಪಕ್ಷ ಭಾರತೀಯರಲ್ಲಿ ಕ್ರಾಂತಿಕಾರಿ ವಿಚಾರಗಳನ್ನು ಹರಡಲು ಪ್ರಯತ್ನಿಸಿತು. ಜಲಿಯನ್‌ವಾಲಾಬಾಗ್‌ ದುರಂತದ ರೂವಾರಿ ಗವರ್ನರ್‌ ಜನರಲ್‌ ಡಯರ್‌ನನ್ನು ೧೯೪೦ರಲ್ಲಿ ಉಧಾಮಸಿಂಗ್‌ ಕೊಲೆ ಮಾಡಿದನು. ಮದನ್‌ಲಾಲ್ ಧಿಂಗ್ರ ಲಂಡನ್‌ನ ಸಮಾವೇಶದಲ್ಲಿ ಕರ್ಜನ ವೈಲಿಯನ್ನು ಕೊಂದನು. ಈ ಕ್ರಾಂತಿಕಾರರ ಚಟುವಟಿಕೆಗಳು ರೋಮಾಂಚನಕಾರಿಯಾಗಿದ್ದವು. ಆದರೆ ಇದರಿಂದ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿಸಿಕೊಡುವುದು ಸಾಧ್ಯವಾಗಲಿಲ್ಲ. ಬೃಹತ್‌ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುವ ಜನ ಬೆಂಬಲ, ಕಾರ್ಯಚಾತುರ್ಯ, ತಂತ್ರಗಾರಿಕೆ ಇಲ್ಲದಿದ್ದುದು ಅವರಿಗೆ ಯಶಸ್ಸನ್ನು ದೊರಕಿಸಿಕೊಡಲು ಸಾಧ್ಯವಾಗದಾಯಿತು. ಆದರೂ ಅವರ ಉತ್ಕಟ ದೇಶಾಭಿಮಾನ, ತ್ಯಾಗ ಬಲಿದಾನಗಳು ಸ್ಮರಣೀಯವಾಗಿವೆ.

೧೯೨೮ರ ಹೊತ್ತಿಗೆ ರಾಜಕೀಯ ಚಟುವಟಿಕೆಗಳು ನಿಧಾನವಾಗಿ ತಮ್ಮ ಕಾವನ್ನು ಕಳೆದುಕೊಳ್ಳುತ್ತಿರುವ ಸಮಯದಲ್ಲಿ ದೇಶದಲ್ಲಿ ಸಂವಿಧಾನಾತ್ಮಕ ಕಾರ್ಯಪ್ರಗತಿಯ ಸಮೀಕ್ಷೆಯನ್ನು ನಡಸಿ, ವರದಿಯನ್ನು ತಯಾರಿಸಲು ಬ್ರಿಟನ್ ಸೈಮನ್‌ ಆಯೋಗವನ್ನು ಕಳುಹಿಸಿಕೊಟ್ಟಿತು. ಕಾಂಗ್ರೆಸ್ಸಿನ ಒಡಕಿನ ಹಿಂದೂ ಮುಸ್ಲಿಮರ ವೈಷಮ್ಯದ ಲಾಭ ಪಡೆದು, ಮಂದಗಾಮಿಗಳ ಬೆಂಬಲದಿಂದ ರಾಷ್ಟ್ರೀಯ ಹೋರಾಟದ ಬಲವನ್ನು ಕುಗ್ಗಿಸಲು ಹವಣಿಸಿತು. ಆದರೆ ಆಯೋಗದಲ್ಲಿ ಒಬ್ಬ ಭಾರತೀಯ ಪ್ರತಿನಿಧಿಯೂ ಇಲ್ಲದಿದ್ದುದು ಖೇದದ ಸಂಗತಿಯಾಗಿತ್ತು. ಆದುದರಿಂದ ಕಾಂಗ್ರೆಸ್‌ ಸೈಮನ್‌ ಆಯೋಗವನ್ನು ಬಹಿಷ್ಕರಿಸಿತು. ಅದು ಸರ್ಕಾರದ ಸವಾಲನ್ನು ಸ್ವೀಕರಿಸಿ ೧೯೨೮ರ ಸರ್ವಪಕ್ಷ ಸಮ್ಮೇಳನದಲ್ಲಿ ಸಂವಿಧಾನ ರಚಿಸಲು ಮೋತಿಲಾಲ್ ನೆಹರೂ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು. ಸಮಿತಿ ಸರ್ವಮಾನ್ಯವಾಗುವಂತಹ ನೆಹರೂ ವರದಿಯನ್ನು ತಯಾರಿಸಿತು. ಭಾರತಕ್ಕೆ ಜವಾಬ್ದಾರಿ ಹಾಗೂ ಸ್ವಯಂ ಆಡಳಿತ ತತ್ವಗಳ ಆಧಾರದ ಮೇಲೆ ಸರ್ಕಾರ ರಚನೆಯಾಗಬೇಕೆಂದು ಸಲಹೆ ಮಾಡಿತು. ಈ ನಡುವೆ ಸೈಮನ್‌ಭಾರತಕ್ಕೆ ಬಂದಾಗ ಪ್ರತಿಭಟನೆಯ ಪ್ರದರ್ಶನಗಳು ನಡೆದು, ಸೈಮನ್‌ ಹಿಂದಕ್ಕೆ ಹೋಗು ಎಂಬ ಕೂಗು ಕೇಳಿಸಿತು. ನಂತರ ವೈಸರಾಯ್‌ ಲಾರ್ಡ್‌ ಇರ್ವಿನ್‌ನ ಆಶ್ವಾಸನೆಗಳು ಕಾಂಗ್ರೆಸ್ಸಿಗರಿಗೆ ಸಮಾಧಾನ ತಂದುಕೊಡಲಿಲ್ಲ. ೧೯೨೯ರಲ್ಲಿ ಲಾಹೋರ್‌ನಲ್ಲಿ ಜವಹರಲಾಲ್‌ ನೆಹರೂ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದು, ಅದರಲ್ಲಿ ಸಂಪೂರ್ಣ ಸ್ವರಾಜ್ಯವೇ ತಮ್ಮ ಗುರಿಯೆಂದು ಕಾಂಗ್ರೆಸ್‌ ಘೋಷಿಸಿತು. ಜನವರಿ ೨೬, ೧೯೩೦ ರಲ್ಲಿ ದೇಶಾದ್ಯಂತ ಸ್ವಾತಂತ್ರ್ಯದಿನ ವನ್ನು ಆಚರಿಸಲಾಯಿತು. ಇದೊಂದು ಅಪೂರ್ವ ದಿನವಾಯಿತು. ಆದರೆ ಮುಸ್ಲಿಮ್ ಲೀಗ್‌ಜಿನ್ನಾರವರ ನೇತೃತ್ವದಲ್ಲಿ ಪ್ರತ್ಯೇಕವಾಗಿ ಸಭೆ ಸೇರಿ ತಮ್ಮ ಹದಿನಾಲ್ಕು ಅಂಶಗಳ ಬೇಡಿಕೆಯನ್ನು ಮುಂದಿಟ್ಟಿತು. ಈ ಬೇಡಿಕೆ ಮುಂದೆ ದೇಶ ವಿಭಜನೆಗೂ, ಪಾಕಿಸ್ತಾನದ ಉದಯಕ್ಕೂ, ಮುಸ್ಲಿಮರ ಪ್ರತ್ಯೇಕವಾದಕ್ಕೂ ಬಹಳ ಮಟ್ಟಿಗೆ ಕಾರಣವಾದವು.

ಗಾಂಧಿ ಪುನಃ ಸಕ್ರಿಯ ರಾಜಕೀಯಕ್ಕಿಳಿದರು. ಸಾಮೂಹಿಕ ಅನುನಯ ಕಾನೂನುಭಂಗ ಚಳವಳಿಗೆ ಕರೆ ಇತ್ತರು. ಕಾಂಗ್ರೆಸ್‌ ಸಮಿತಿ, ಸಬರಮತಿ ಆಶ್ರಮದಲ್ಲಿ ಸಭೆ ಸೇರಿ ಗಾಂಧಿಯವರಿಗೆ ಕಾನೂಭಂಗ ಚಳವಳಿಯ ಪೂರ್ಣ ಜವಾಬ್ದಾರಿಯನ್ನು ಕೊಟ್ಟಿತು. ಗಾಂಧಿ ಕಾನೂನುಭಂಗ ಚಳವಳಿಯನ್ನು, ಉಪ್ಪಿನ ಸತ್ಯಾಗ್ರಹವನ್ನು ಕೈಗೊಳ್ಳುವ ಮೂಲಕ ಪ್ರಾರಂಭಿಸಿದರು. ಇದಕ್ಕೂ ಮುನ್ನ ವೈಸರಾಯರಿಗೆ ಹನ್ನೊಂದು ಬೇಡಿಕೆಗಳನ್ನು ಸಲ್ಲಿಸಿದ್ದರು. ೧೯೩೦ರ ಮಾರ್ಚ್‌೧೨ ರಂದು ಸುಪ್ರಸಿದ್ಧ ದಂಡಯಾತ್ರೆ ಪ್ರಾರಂಭವಾಯಿತು. ಎಪ್ಪತ್ತೆಂಟು ಆಶ್ರಮವಾಸಿಗಳೊಂದಿಗೆ ಸಬರಮತಿಯಿಂದ ೨೪೦ ಕಿಲೋಮೀಟರ್‌ ದೂರದ ದಂಡಿ ಸಮುದ್ರತೀರದ ಕಡೆಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದರು. ಇದೊಂದು ಮಹಾನ್‌ ಯಾತ್ರೆಯಾಗಿ ಪರಿಣಮಿಸಿತು. ದೇಶಾದ್ಯಂತ ವಿದ್ಯುತ್‌ ಸಂಚಾರವಾದಂತಾಯಿತು. ಏಪ್ರಿಲ್‌ ೫ ರಂದು ದಂಡಿಯನ್ನು ತಲುಪಿ ಸಾಂಕೇತಿಕವಾಗಿ ಸರಕಾರದ ಕಾನೂನಿಗೆ ವಿರುದ್ಧವಾಗಿ ಉಪ್ಪನ್ನು ತಯಾರಿಸಿದರು. ಉಪ್ಪನ್ನು ಕೈಗೆತ್ತಿಕೊಂಡು ದೇಶ ಬಾಂಧವರೆಲ್ಲರಿಗೂ ಚಳವಳಿ ಕೈಗೊಳ್ಳುವಂತೆ ಕರೆ ನೀಡಿದರು. ಕಾನೂನುಭಂಗ ಚಳವಳಿ ಬಹುವ್ಯಾಪಕವಾಗಿ ಉಗ್ರರೂಪದಲ್ಲಿ ನಡೆಯಿತು. ಕಾಂಗ್ರೆಸ್‌ ನಾಯಕರು, ಸ್ತ್ರೀ ಪುರುಷರು ಉತ್ಸಾಹದಿಂದ ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿದರು. ಗಾಂಧಿ ತಮ್ಮ ಯಂಗ್‌ ಇಂಡಿಯಾದಲ್ಲಿ ಸ್ತ್ರೀಯರು ಚಳವಳಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು. ವಿಜಯಲಕ್ಷ್ಮಿ ಪಂಡಿತ್‌, ಸ್ವರೂಪರಾಣಿ, ಕಮಲಾ ನೆಹರೂ ಮೊದಲಾದವರು ಬಂಧನಕ್ಕೊಳಗಾದರು. ಪಂಡಿತ ನೆಹರೂ, ವಲ್ಲಭಬಾಯಿ ಪಟೇಲ್‌, ರಾಜಗೋಪಾಲಚಾರಿ, ಮನದಮೋಹನ ಮಾಳವೀಯ, ಬಾಬುರಾಜೇಂದ್ರ ಪ್ರಸಾದ್‌ ಮುಂತಾದ ಸಹಸ್ರಾರು ಕಾರ್ಯಕರ್ತರನ್ನು ಸೆರೆಮನೆಗೆ ಕಳುಹಿಸಲಾಯಿತು. ಮುಂಬೈಯಲ್ಲಿ ಗಾಂಧಿಯವರನ್ನು ಬಂಧಿಸಲಾಯಿತು. ಸರೋಜಿನಿ ನಾಯ್ಡು ಸತ್ಯಾಗ್ರಹಗಳೊಂದಿಗೆ ಚಳವಳಿಯ ಮುಂದಾಳುಗಳಾಗಿ ಪೊಲೀಸರ ದೌರ್ಜನ್ಯಕ್ಕೊಳಗಾದರು. ಸಹಸ್ರಾರು ಜನರು ಅಹಿಂಸಾತ್ಮಕವಾಗಿ ಹೋರಾಡುತ್ತಾ ಮುನ್ನುಗ್ಗಿದರು. ಸರ್ಕಾರ ದಮನಕಾರಿ ನೀತಿಯನ್ನು ಅನುಸರಿಸಿತು. ಪತ್ರಿಕೆಗಳ ಮೇಲೆ ನಿರ್ಬಂಧ ಹೇರಲಾಯಿತು. ನಾಗರಿಕ ಹಕ್ಕುಗಳನ್ನು ಕಸಿಯಲಾಯಿತು. ಕಾಂಗ್ರೆಸ್ಸನ್ನು ಕಾನೂನುಬಾಹಿರ ಸಂಸ್ಥೆ ಎಂದು ಹೇಳಲಾಯಿತು. ಕಾನೂನುಭಂಗ ಚಳವಳಿ ದೇಶದ ನಾನಾ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ನಡೆಯಿತು. ಸಾರಾಯಿ ಅಂಗಡಿಗಳ ಮುಂದೆ ಪಿಕೆಟಿಂಗ್‌ ಮಾಡಿದರು, ತೆರಿಗೆ ಕೊಡಲು ನಿರಾಕರಿಸಿದರು. ಕರ್ನಾಟಕದ ಅಂಕೋಲ, ಸಿದ್ಧಾಪುರಗಳಲ್ಲಿ ಅನೇಕ ಕುಟುಂಬಗಳು ಚಳವಳಿಯಲ್ಲಿ ಭಾಗವಹಿಸಿದುದರಿಂದ ತಮ್ಮ ಜಮೀನುಗಳನ್ನು ಕಳೆದುಕೊಂಡರು. ಅರಣ್ಯ ಶಾಸನವನ್ನು ಉಲ್ಲಂಘಿಸಿದರು. ಕಾರ್ಮಿಕರು, ಮಿಲ್‌ಗಳ ಒಡೆಯರು ಚಳವಳಿಯಲ್ಲಿ ಸೇರಿದರು. ಇದೇ ಸಮಯದಲ್ಲಿ ದೂರದ ಅಪ್ಘಾನಿಸ್ತಾನದಲ್ಲಿ ಖಾನ್‌ ಅಬ್ದುಲ್‌ ಗಫಾರ್‌ಖಾನ್‌ ಕೆಂಪುದಳವನ್ನು ಕಟ್ಟಿ ಪಠಾಣರನ್ನು ಸತ್ಯಾಗ್ರಹದಲ್ಲಿ ಸೇರಿಸಿದರು. ಪಂಜಾಬಿನಲ್ಲಿ ಸಿಖ್‌ ಸಮುದಾಯದ ಅಕಾಲಿಗಳು ಸೈನಿಕರಲ್ಲಿ ಕ್ರಾಂತಿಕಾರಕ ಮನೋಭಾವವನ್ನು ಬಿತ್ತಿದರು. ಬಂಗಾಳದ ರೈತರು ಕಂದಾಯ ಅಧಿಕಾರಿಗಳ ಮುಂದೆ ಪ್ರತಿಭಟಿಸಿದರು. ವಿದ್ಯಾರ್ಥಿಗಳು ಶಾಲಾ ಕಾಲೇಜಿನಿಂದ ಹೊರಬಂದರು. ವಿದೇಶಿ ಬಟ್ಟೆ, ಸಿಗರೇಟ್‌ಗಳ ಆಮದು ಕುಸಿಯಿತು. ಸರ್ಕಾರದ ಆದಾಯವೂ ಕಡಿಮೆಯಾಯಿತು. ಬಲ್ಡಾನಾದ ರೈತರು ದಂಗೆ ಎದ್ದಾಗ ಸೇನೆಯನ್ನು ಕರೆಸಬೇಕಾಯಿತು. ಆದರೆ ಮುಸ್ಲಿಮ್‌ಲೀಗ್‌ ಕಾನೂನುಭಂಗ ಚಳವಳಿಯಲ್ಲಿ ಭಾಗವಹಿಸಲಿಲ್ಲ. ಮುಸ್ಲಿಮರು ಚಳವಳಿಯಿಂದ ಹೆಚ್ಚಾಗಿ ದೂರ ಉಳಿದರು. ಅಲ್ಲದೆ ಮೊದಲನೇ ದುಂಡು ಮಿನ ಪರಿಷತ್ತಿನಲ್ಲಿ ಮುಸ್ಲಿಮ್‌ಲೀಗ್‌ ಭಾಗವಹಿಸಿತ್ತು.