ಭಾರತದಲ್ಲಿ ಬಹಳ ಹಿಂದಿನಿಂದಲೂ ವಿವಿಧ ರೀತಿಯ ಸಾಮಾಜಿಕ ಚಳವಳಿಗಳು ನಡೆದಿದ್ದರೂ ಆಧುನಿಕತೆಯ ಉಗಮದೊಂದಿಗೆ ಅವು ತೀವ್ರಗೊಂಡವು. ಬ್ರಿಟಿಷರ ಆಡಳಿತ ಕಾಲದಲ್ಲಿ ಭಾರತವು ಪಾಶ್ಚಾತ್ಯ ನಾಗರಿಕತೆ ಹಾಗೂ ಶಿಕ್ಷಣದ ಪ್ರಭಾವಕ್ಕೆ ಒಳಗಾಯಿತು. ಭಾರತದ ವಿವಿಧ ಪ್ರಾಂತ್ಯಗಳಲ್ಲಿಯೂ ಆಧುನಿಕ ವಿಜ್ಞಾನದ ಶಾಖೆಗಳು ಪ್ರಾರಂಭಗೊಂಡವು. ಆಧುನಿಕ ಶಿಕ್ಷಣದಿಂದಾಗಿ ಹೊಸ ರಾಜಕೀಯ ಹಾಗೂ ಆರ್ಥಿಕ ಚಿಂತನೆಗಳು ಮೊಳಕೆಯೊಡೆದವು. ಈ ರೀತಿಯ ಹೊಸ ಚಿಂತನೆ ಹಾಗೂ ಜೀವನದೃಷ್ಟಿಯು ಇಲ್ಲಿ ಒಂದು ವಿಶಿಷ್ಟ ಬೌದ್ಧಿಕ ಪ್ರಕ್ರಿಯೆಗೆ ನಾಂದಿಯಾಯಿತು. ಹಾಗೂ ಇಲ್ಲಿನ ಪಾರಂಪರಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಬಹಳಷ್ಟು ಪರಿವರ್ತನೆಗಳನ್ನೂ ಹುಟ್ಟುಹಾಕಿತು.

ಬ್ರಿಟಿಷ್ ‌ಆಡಳಿತದಲ್ಲಿ ಅವರದ್ದೇ ಸ್ವಂತ ಹಿತಾಸಕ್ತಿಗಳು ಅಡಕವಾಗಿದ್ದವು ಎನ್ನುವುದನ್ನು ಮರೆಯುವಂತಿಲ್ಲ. ಆದರೂ ಅವರು ಅಳವಡಿಸಿದ ಆಧುನಿಕ ಶಿಕ್ಷಣವು ವ್ಯಕ್ತಿಸ್ವಾತಂತ್ರ್ಯ ಮಾನವ ಹಕ್ಕುಗಳು, ಸಮಾನತೆ, ವೈಚಾರಿಕತೆ, ಪ್ರಜಾಸತ್ತೆ, ಜಾತ್ಯತೀತೆಯಂತಹ ಮೌಲ್ಯಗಳನ್ನು ಭಾರತೀಯ ಸಮಾಜಕ್ಕೆ ಪರಿಚಯಿಸಿತು. ಈ ಮೌಲ್ಯಗಳ ಪ್ರಭಾವಕ್ಕೊಳಗಾದ ಭಾರತದ ಶಿಕ್ಷಿತ ವರ್ಗವು ಈ ನಾಡಿನ ಸಾಮಾಜಿಕ ತಳಹದಿಯನ್ನೇ ಪ್ರಶ್ನಿಸಲಾರಂಭಿಸಲಾಯಿತು. ಮೇಲಾಗಿ ಹೊಸ ಕಾನೂನು ವ್ಯವಸ್ಥೆ, ಆಧುನಿಕ ಕೈಗಾರಿಕೆಗಳು, ಆಂತರಿಕ ಸಾರಿಗೆ ಸಂಪರ್ಕ ವ್ಯವಸ್ಥೆ, ರಸ್ತೆ ಹಾಗೂ ರೈಲ್ವೆ ಹಳಿಗಳ ನಿರ್ಮಾಣ, ಪಟ್ಟಣದ ಬೆಳವಣಿಗೆ, ಭೂ ಒಡೆತನದ ಹಕ್ಕು, ಆಧುನಿಕ ಕೃಷಿ ವಿಧಾನಗಳು ಇತ್ಯಾದಿ ಬದಲಾವಣೆಗಳು ಸಾಮಾಜಿಕವಾಗಿ ಕೆಳಸ್ತರದಲ್ಲಿರುವ ಜನರಿಗೆ ಹೊಸ ಅವಕಾಶಗಳನ್ನು ಸೃಸ್ಟಿಸಿದವು. ಪ್ರಾರಂಭದಲ್ಲಿ ಮೇಲ್ವರ್ಗದ ಜನರೇ ಈ ಬದಲಾವಣೆಗಳ ಪ್ರತಿಫಲವನ್ನು ಅನುಭವಿಸಿದ್ದರೂ, ಕಾಲಕ್ರಮೇಣ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಲ್ಲಿಯೂ ಪ್ರಗತಿಗೆ ಚಾಲನೆ ನೀಡಿತು.

ಈ ಸಂದರ್ಭದಲ್ಲಿ ನಡೆದ ಸಾಮಾಜಿಕ ಚಳವಳಿಗೆ ಯುರೋಪಿನ ಮಿಷನರಿಗಳ ಪ್ರಯತ್ನವನ್ನು ಕೂಡಾ ಉಲ್ಲೇಖಿಸಬೇಕಾಗಿದೆ. ಐರೋಪ್ಯ ಮಿಷನರಿಗಳು ಭಾರತೀಯ ಸಮಾಜದಲ್ಲಿ ವ್ಯಾಪಕವಾಗಿದ್ದ ಸತಿ, ಪ್ರಾಣಿಬಲಿ, ಬಾಲ್ಯವಿವಾಹ ಮುಂತಾದ ಆಚರಣೆಗಳ ಹಿಂದಿನ ಅಮಾನವೀಯತೆಯನ್ನು ಬಯಲಿಗೆಳೆದವು. ಹಾಗೆಯೇ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಆಸ್ಪತ್ರೆ, ಅನಾಥಾಲಯಗಳ ಸ್ಥಾಪನೆ ಮುಂತಾದ ರಚನಾತ್ಮಕ ಕಾರ್ಯಗಳಲ್ಲೂ ತೊಡಗಿಕೊಂಡವು. ಈ ಮಿಷನರಿಗಳು ಹಿಂದುಳಿದ ಹಾಗೂ ಅಸ್ಪೃಶ್ಯರನ್ನು ಮತಾಂತರಗೊಳಿಸುತ್ತಿದ್ದವು ಎನ್ನುವ ಟೀಕೆಯಲ್ಲಿ ಸತ್ಯಾಂಶ ಇದ್ದರೂ ಭಾರತದ ಸಮಾಜಿಕ ಪರಿವರ್ತನೆಗೆ ಮಿಷನರಿಗಳ ಸೇವೆಯು ಗಣನೀಯವಾಗಿದೆ.

ಮಿಷನರಿಗಳ ಮತಾಂತರ ಪ್ರಯತ್ನಕ್ಕೆ ಪ್ರತಿಯಾಗಿ ಭಾರತದ ಒಳಗಡೆಯೂ ಪಾಶ್ಚಾತ್ಯ ಶಿಕ್ಷಣ ಪಡೆದ ಕೆಲವು ಗಣ್ಯರು ಜಾತಿಪದ್ಧತಿಯ ವಿರುದ್ಧ ಸಮರ ಸಾರಿದವರಲ್ಲದೆ ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಪ್ರಯತ್ನವನ್ನು ನಡೆಸಿದರು. ‘ಬ್ರಹ್ಮ ಸಮಾಜ,’ ‘ಪ್ರಾರ್ಥನಾ ಸಮಾಜ,’ ‘ಆರ್ಯ ಸಮಾಜ’ ಮುಂತಾದ ಸಂಘಟನೆಗಳನ್ನು ಸ್ಥಾಪಿಸುವ ಮೂಲಕ ಈ ನಾಯಕರು ಹಿಂದೂ ಧಾರ್ಮಿಕ ಸುಧಾರಣೆಗಳಲ್ಲಿ ತೊಡಗಿದರು. ಬ್ರಹ್ಮಸಮಾಜ, ಪ್ರಾರ್ಥನಾ ಸಮಾಜಗಳು ಜಾತಿ ವ್ಯವಸ್ಥೆಯ ವಿರುದ್ಧ ಸಮರ ಹೂಡಿದರೆ ಆರ್ಯ ಸಮಾಜವು ವೇದಕಾಲದ ಚಾತುರ್ವಣ್ಯ ಸಿದ್ಧಾಂತರ ಆಧಾರದಲ್ಲಿ ಹಿಂದೂ ಸಮಾಜವನ್ನು ಪುನರ್‌ಸಂಘಟಿಸುವ ಪ್ರಯತ್ನದಲ್ಲಿ ತೊಡಗಿತು.

ಈ ಎಲ್ಲ ಬೆಳವಣಿಗೆಗಳ ಸಾಧಕ-ಬಾಧಕಗಳಿದ್ದರೂ ಕೆಳಸ್ತರದ ಜನಸಮುದಾಯಕ್ಕೆ ಮೇಲ್ಮುಖ ಚಲನೆಯ ಅವಕಾಶಗಳು ದೊರೆತವು. ಹತ್ತೊಂಬತ್ತನೇ ಹಾಗೂ ಇಪ್ಪತ್ತನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಕಾಣಿಸಿಕೊಂಡ ಹಿಂದುಳಿದ ವರ್ಗಗಳ ಚಳವಳಿಗಳು ಈ ಪ್ರಕ್ರಿಯೆಯ ಪ್ರತಿಫಲವೆಂದೇ ಹೇಳಬಹುದು. ಈ ಅಧ್ಯಾಯದಲ್ಲಿ ದಕ್ಷಿಣ ಭಾರತದಲ್ಲಿ ಆ ಕಾಲಘಟ್ಟದಲ್ಲಿ ನಡೆದ ದ್ರಾವಿಡ ಹಾಗೂ ಹಿಂದುಳಿದ ವರ್ಗಗಳ ಚಳವಳಿಯ ಸ್ವರೂಪವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ.

ಹತ್ತೊಂಬತ್ತು ಹಾಗೂ ಇಪ್ಪತ್ತನೇ ಶತಮಾನದಲ್ಲಿ ನಡೆದ ಹಿಂದುಳಿದ ವರ್ಗ ಹಾಗೂ ದ್ರಾವಿಡ ಚಳವಳಿಗಳು ದಕ್ಷಿಣ ಭಾರತ ಇತಿಹಾಸದಲ್ಲಿ ನಡೆದ ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಚಳವಳಿಗಳು ಭಾರತದ ಎಲ್ಲ ಭಾಗಗಳಲ್ಲಿ ಕಂಡುಬಂದರೂ, ಸೈದ್ಧಾಂತಿಕವಾಗಿ ಹಾಗೂ ವಾಸ್ತವಿಕವಾಗಿ ಅವು ತೀವ್ರಸ್ವರೂಪ ಪಡೆದಿರುವುದು ಮುಂಬೈ, ಮದ್ರಾಸು, ಕೇರಳ, ಕರ್ನಾಟಕ ಮುಂತಾದ ದಕ್ಷಿಣದ ಪ್ರಾಂತ್ಯಗಳಲ್ಲಿಯೇ. ಪಾಶ್ಚಾತ್ಯ ಶಿಕ್ಷಣ ಪಡೆದ ಹಿಂದುಳಿದ ವರ್ಗಗಳು ಈ ಪ್ರಾಂತ್ಯಗಳಲ್ಲಿ ಸಾಂಸ್ಕೃತಿಕ ಕ್ರಾಂತಿಯನ್ನೇ ನಡೆಸಿದವು.

ಜ್ಯೋತಿಭಾ ಫುಲೆ (೧೮೨೭೯೦)

ಹತ್ತೊಂಬತ್ತನೇ ಶತಮಾನದ ಮಹಾರಾಷ್ಟ್ರದಲ್ಲಿ ದೇಶದ ಇತರ ಕಡೆಗಳಂತೆ ಜಾತಿ ವ್ಯವಸ್ಥೆಯು ತೀವ್ರ ಸ್ವರೂಪವನ್ನು ಪಡೆದಿತ್ತು. ಒಟ್ಟು ಜನಸಂಖ್ಯೆಯ ಶೇ. ೪ಕ್ಕಿಂತಲೂ ಕಡಿಮೆ ಇದ್ದ ಬ್ರಾಹ್ಮಣರು ಪೇಶ್ವೆ ಹಾಗೂ ಬ್ರಿಟಿಷರ ಆಡಳಿತದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರು. ಭೂಮಾಲೀಕರಣ, ಕೃಷೀಕರಣ ಆದ ಮರಾಠ-ಕುಣಬಿಗಳು, ತೋಟಗಾರಿಕೆಯನ್ನು ಕಸುಬನ್ನಾಗಿ ಆಶ್ರಯಿಸಿಕೊಂಡಿದ್ದ ಮಾಲಿ ಜನಾಂಗದವರು, ಸಾಮಾಜಿಕವಾಗಿ ನಂತರದ ಸ್ಥಾನದಲ್ಲಿದ್ದರು. ಮಹಾರ್‌, ಮಾಂಗ್‌, ಚಮ್ಮಾರ ಮುಂತಾದ ಸಮುದಾಯಗಳು ಅಸ್ಪೃಶ್ಯತೆಗೆ ಒಳಗಾಗಿ ಸಾಮಾಜಿಕವಾಗಿ ಅತ್ಯಂತ ಕೆಳಸ್ತರಕ್ಕೆ ತಳ್ಳಲ್ಪಟ್ಟಿದ್ದರು.

ಪುಣೆಯಲ್ಲಿ ಪೇಶ್ವಾ ಆಳ್ವಿಕೆಯು ೧೮೧೮ರಲ್ಲಿ ಕಂಪೆನಿಯೊಂದಿಗಿನ ಯುದ್ಧದೊಂದಿಗೆ ಅಂತ್ಯಕಂಡಾಗ ಬ್ರಾಹ್ಮಣ ವರ್ಗ ಸ್ವಲ್ಪಮಟ್ಟಿನ ಹಿನ್ನಡೆ ಅನುಭವಿಸಿತು. ಆದರೆ ಕ್ರಮೇಣ ಇಂಗ್ಲಿಷ್‌ ಶಿಕ್ಷಣ ಪಡೆದು ಕಂಪೆನಿ ಆಡಳಿತದಲ್ಲಿ ಸೃಷ್ಟಿಯಾದ ಆಧುನಿಕ ವೃತ್ತಿಗಳ್ಲಲಿ ಸೇರಿಕೊಳ್ಳುವ ಮೂಲಕ ಬ್ರಾಹ್ಮಣರು ಮತ್ತೊಮ್ಮೆ ಬಲಶಾಲಿ ವರ್ಗವಾಗಿ ರೂಪುಗೊಂಡರು. ಇದೇ ಸಂದರ್ಭದಲ್ಲಿ ಕೃಷಿಕರಾದ ಮರಾಠ-ಕುಣಬಿ-ಮಾಲಿ ಜನಾಂಗದವರೂ ಆಧುನಿಕ ಕೃಷಿ ವಿಧಾನಗಳಿಂದಲೂ, ಮಾರುಕಟ್ಟೆ ಆಧಾರಿತ ಕೃಷಿ ಬೆಳೆಗಳಿಂದಲೂ ಸ್ವಲ್ಪಮಟ್ಟಿಗೆ ಆರ್ಥಿಕ ಪ್ರಗತಿ ಸಾಧಿಸಿದ್ದರು. ಆ ಆರ್ಥಿಕ ಪ್ರಗತಿಗೆ ಪೂರಕವಾಗಿ ಸಮಾಜಿಕ ಸ್ಥಾನವನ್ನು ಪಡೆಯುವುದು ಸಮುದಾಯಗಳಿಗೆ ಕಾಲದ ಅಗತ್ಯತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಬ್ರಾಹ್ಮಣೇತರ ಚಳವಳಿ ಹುಟ್ಟಿಕೊಂಡಿತು. ಮಹಾತ್ಮ ಜ್ಯೋತಿಭಾ ಫುಲೆಯವರು ಈ ಚಳವಳಿಯ ಸ್ಥಾಪಕರಾಗಿದ್ದರು.

ಜ್ಯೋತಿಭಾ ಫುಲೆಯವರ ಸೈದ್ಧಾಂತಿಕ ಹಿನ್ನೆಲೆ

ಸಾಮಾನ್ಯವಾಗಿ ‘ಮಹಾತ್ಮ’ ಅಥವಾ ‘ಜ್ಯೋತಿಭಾ’ ಎಂದೇ ಕರೆಯಲ್ಪಡುವ ಫುಲೆಯವರು ಮಹಾರಾಷ್ಟ್ರದ ಕೃಷಿ ಹಾಗೂ ತೋಟಗಾರಿಕೆ ವೃತ್ತಿಯನ್ನು ಅವಲಂಬಿಸಿರುವ ‘ಮಾಲಿ’ ಜನಾಂಗಕ್ಕೆ ಸೇರಿದವರು. ಫುಲೆಯವರ ಕುಟುಂಬವು ಅವರ ತಾತನ ಕಾಲದಲ್ಲಿಯೇ ಪೂನಾಕ್ಕೆ ವಲಸೆ ಹೋಗಿತ್ತು. ಫುಲೆಯವರ ತಂದೆ ಕೃಷಿ ಹಾಗೂ ಹಣ್ಣು, ತರಕಾರಿ ಮತ್ತು ಹೂವಿನ ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಸಾಧಿಸಿದ್ದರು. ಮರಾಠಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಫುಲೆಯವರು ಸ್ಕಾಟಿಷ್‌ ಮಿಷನ್‌ ಶಾಲೆಯಲ್ಲಿ ಹಾಗೂ ಮುಂಬೈ ಸರ್ಕಾರ ನಡೆಸುತ್ತಿದ್ದ ಇಂಗ್ಲಿಷ್‌ ಶಾಲೆಯಲ್ಲಿ ೧೮೪೧ರಿಂದ ೧೮೪೭ರ ತನಕ ವಿದ್ಯಾಭ್ಯಾಸ ನಡೆಸಿದರು. ಈ ಹಂತದಲ್ಲಿ ಪಾಶ್ಚಾತ್ಯ ವಿಚಾರಧಾರೆಗಳಿಂದಲೂ, ಮುಖ್ಯವಾಗಿ ಥಾಮಸ್‌ಪೆಯಿನ್‌ರವರ ‘ರೈಟ್ಸ್‌ ಆಫ್‌ ಮೆನ್‌’ ಗ್ರಂಥದಿಂದ ಪ್ರಭಾವಕ್ಕೊಳಗಾದರು.

ಹಿಂದುಳಿದ ಮಾಲಿ ಜನಾಂಗಕ್ಕೆ ಸೇರಿದ ಫುಲೆಯವರು ಚಿಕ್ಕಂದಿನಲ್ಲೆ ಜಾತಿ ವ್ಯವಸ್ಥೆಯ ಕಹಿಯನ್ನು ಅನುಭವಿಸಿದ್ದರು. ತನ್ನ ಬ್ರಾಹ್ಮಣ ಮಿತ್ರನೋರ್ವನ ಮದುವೆ ಮೆರವಣಿಗೆಯಲ್ಲಿ ಪಾಲ್ಗೊಂಡ ಫುಲೆಯವರನ್ನು ಸಂಪ್ರದಾಯವಾಗಿ ಬ್ರಾಹ್ಮಣನೋರ್ವನು ಜಾತಿ ಕಟ್ಟುಪಾಡುಗಳನ್ನು ಉಲ್ಲಂಘಿಸಿದ ಕಾರಣಕ್ಕೆ ನಿಂದಿಸಿ ಹೊರನಡೆಯುವಂತೆ ಮಾಡಿದನು. ಆ ಕಾಲದ ಮಹಾರಾಷ್ಟ್ರದಲ್ಲಿ ಅಸ್ಪೃಶ್ಯರು ಅತಿ ಹೀನಾಯವಾದ ಬದುಕನ್ನು ಸಾಗಿಸುತ್ತಿದ್ದರು. ಅಸ್ಪೃಶ್ಯರು ಬೆಳಿಗ್ಗೆ ಹಾಗೂ ಸಂಜೆಯಲ್ಲಿ ಪೂನಾದ ಬೀದಿಗಳಲ್ಲಿ ನಡೆಯುವಂತಿರಲಿಲ್ಲ. ಏಕೆಂದರೆ ಸವರ್ಣೀಯರ ಮೇಲೆ ಅವರ ನೆರಳು ಬೀಳಕೂಡದೆಂದು ನಿಯಮವಿತ್ತು. ಮಧ್ಯಾಹ್ನದ ಹೊತ್ತು ಬೀದಿಯಲ್ಲಿ ನಡೆಯುವಾಗಲೂ ಅವರು ಎಂಜಲು ಉಗಿಯಲು ಕುತ್ತಿಗೆಗೆ ಒಂದು ಮಡಕೆ ನೇತಾಡಿಸಿಕೊಂಡು ಇರಬೇಕಾಗಿತ್ತು. ಇಂತಹ ಅನುಭವಗಳು ಅವರಿಗೆ ಜಾತಿ ವ್ಯವಸ್ಥೆ ಹಾಗೂ ಪುರೋಹಿತಶಾಹಿಯ ಬಗ್ಗೆ ತೀವ್ರ ಅತೃಪ್ತಿಯನ್ನು ಉಂಟುಮಾಡಿದವಲ್ಲದೆ, ಹಿಂದುಳಿದ ಹಾಗೂ ಅಸ್ಪೃಶ್ಯರಪರ ಹೋರಾಟ ನಡೆಸುವಂತೆ ಪ್ರೇರೇಪಿಸಿದವು.

ಅದಾಗಲೇ ಮಹಾರಾಷ್ಟ್ರದಲ್ಲಿ ಪ್ರಾರಂಭವಾಗಿದ್ದ ಸಮಾಜ ಸುಧಾರಣೆಯ ಪ್ರಯತ್ನಗಳೂ ಫುಲೆಯವರನ್ನು ಪ್ರಭಾವಿಸಿದ್ದವು. ಮುಖ್ಯವಾಗಿ ಬಿ. ಜಿ. ಜಂಭೇಕರ (೧೮೧೨-೪೬) ಅವರ ‘ದರ್ಪಣ’ ಎನ್ನುವ ಪ್ರಥಮ ಮರಾಠಿ ಪತ್ರಿಕೆ ಹಾಗೂ ಜಿ.ವಿ. ಮಹಾಜನ (೧೮೧೫-೧೯೦೦) ಅವರ ‘ಪ್ರಭಾಕರ’ ಪತ್ರಿಕೆಗಳು ಹಿಂದೂ ಸಮಾಜದ ಅನಿಷ್ಟ ಪದ್ಧತಿಗಳನ್ನು ಖಂಡಿಸುತ್ತಾ ಸುಧಾರಣೆಗಾಗಿ ಒತ್ತಾಯಿಸುತ್ತಿದ್ದವು. ಹಿಂದುಳಿದ ವರ್ಗದ ಹಿನ್ನೆಲೆಯಿಂದ ಬಂದಿದ್ದ ಚಿಂತಕರಾದ ಡಿ.ಪಿ. ತರಡ್ಕರ್‌ (೧೮೧೪-೮೨) ಜಾತಿ ಪದ್ಧತಿಯನ್ನು ನಿವಾರಿಸುವ ಅಗತ್ಯತೆಯನ್ನು ಪ್ರತಿಪಾದಿಸುತ್ತಿದ್ದರು. ‘ಲೋಕಹಿತವಾದಿ’ (ದೇಶಮುಖ್‌ ೧೮೨೩:೯೨) ಕೂಡಾ ಪ್ರಭಾಕರ ಪತ್ರಿಕೆಯಲ್ಲಿ ಜಾತಿಪದ್ಧತಿಯ ವಿರುದ್ಧ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಮಹಾತ್ಮ ಜ್ಯೋತಿಭಾ ಫುಲೆಯ ತತ್ವ ಚಿಂತನೆಗಳು, ಬರಹಗಳು ಹಾಗೂ ಸಾಮಾಜಿಕ ಕಾರ್ಯಗಳನ್ನು ಈ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ.

ಫುಲೆಯವರು ತಮ್ಮ ಜೀವಿತಾವಧಿಯಲ್ಲಿ ಹಲವಾರು ಕೃತಿಗಳ ಮೂಲಕ ತಮ್ಮ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವಿಚಾರಗಳನ್ನು ಪ್ರತಿಪಾದಿಸಿದರು. ಈ ಭಾಗದಲ್ಲಿ ಫುಲೆಯವರ ಕೃತಿಗಳು ಹಾಗೂ ಪ್ರತಿಪಾದಿಸಿದ ಚಿಂತನೆಗಳನ್ನು ವಿವರಿಸಲಾಗಿದೆ.

. ಬ್ರಾಹ್ಮಣಾಚೆ ಕಸಬ್

ಜ್ಯೋತಿಭಾ ಫುಲೆಯವರು ತನ್ನ ಖ್ಯಾತ ಕೃತಿಯಾದ ‘ಬ್ರಾಹ್ಮಣಾಚೆ ಕಸಬ್‌’ (Priestcraft Exposed)ನಲ್ಲಿ ಜಾತಿಪದ್ಧತಿಯ ಉಗಮವನ್ನು ವಿಶ್ಲೇಷಿಸುತ್ತಾರೆ. ಈ ಗ್ರಂಥದಲ್ಲಿ ಫುಲೆಯವರು ರಾಜಾ ಬಲಿಯವರ ಕಾಲದಲ್ಲಿ ಈ ನಾಡಿನ ಮೂಲನಿವಾಸಿಗಳಾದ ಕ್ಷತ್ರಿಯರನ್ನು ಪರಕೀಯರಾದ ಆರ್ಯರು ಸೋಲಿಸಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದರು ಎಂದು ವಾದಿಸುತ್ತಾರೆ. ಇಲ್ಲಿ ಆರ್ಯರೆಂದರೆ ಬ್ರಾಹ್ಮಣರು, ಬೇರೆಯವರಲ್ಲ. ಅವರು ಈ ನಾಡಿನ ಕ್ಷತ್ರಿಯರನ್ನು ಸೋಲಿಸಿ ಶೂದ್ರರನ್ನಾಗಿ ಮಾರ್ಪಡಿಸಿದರು. ಅಲ್ಲದೆ ಅಸ್ಪೃಶ್ಯರು ಕೂಡಾ ಈ ವರ್ಗದಿಂದಲೇ ಬಂದವರು. ಬ್ರಾಹ್ಮಣ ರಾಜ ಪರಶುರಾಮನೆದುರು ದಿಟ್ಟ ಹೋರಾಟ ನೀಡಿ ಸೋತ ಮಾಂಗರು ಮತ್ತು ಮಹಾ ಅರಿಗಳನ್ನು (ದಿಟ್ಟ ಅರಿಗಳು, ಮಹಾರರು) ಸಮಾಜದ ಕೆಳಸ್ತರಕ್ಕೆ ತಳ್ಳಿ ಅಸ್ಪೃಶ್ಯರನ್ನಾಗಿಸಿದರು. ಆ ಶೋಷಿತ ಜನವರ್ಗವನ್ನು ಫುಲೆಯವರು ‘ಶೂದ್ರ-ಅತಿಶೂದ್ರ’ ಎಂದು ಕರೆದು ತನ್ನ ಗ್ರಂಥವನ್ನು ಅವರಿಗೆ ಸಮರ್ಪಣೆ ಮಾಡಿದರು. ಈ ಗ್ರಂಥದ ಮುಂದಿನ ಅಧ್ಯಾಯಗಳಲ್ಲಿ ಫುಲೆಯವರು ಹೇಗೆ ಬ್ರಾಹ್ಮಣ ಪುರೋಹಿತರು, ಜ್ಯೋತಿಷಿಗಳು ಹಾಗೂ ವೈದ್ಯರು ಜನಸಾಮಾನ್ಯರ ದೈನಂದಿನ ಸಾಮಾಜಿಕ ಹಾಗೂ ಧಾರ್ಮಿಕ ಜೀವನದಲ್ಲಿ ಪ್ರವೇಶಿಸುತ್ತಾರೆ ಹಾಗೂ ಎಲ್ಲ ವಿಧದ ಮಾರ್ಗಗಳಿಂದ ಅವರ ಸಂಪತ್ತು ಹಾಗೂ ಹಣವನ್ನು ದೋಚುತ್ತಾರೆ ಎನ್ನುವ ವಿಚಾರವನ್ನು ಪ್ರತಿಪಾದಿಸುತ್ತಾ ಅತ್ಯಂತ ಕಹಿ ಮಾತುಗಳಲ್ಲಿ ಖಂಡಿಸುತ್ತಾರೆ.

. ಗುಲಾಮಗಿರಿ

ತನ್ನ ಇನ್ನೊಂದು ಗ್ರಂಥ ‘ಗುಲಾಮಗಿರಿ’ಯಲ್ಲಿ ‘ಶೂದ್ರ-ಅತಿಶೂದ್ರ’ರ ಹಕ್ಕುಗಳ ಬಗ್ಗೆ ಫುಲೆಯವರ ಪ್ರತಿಪಾದನೆಯನ್ನು ತಿಳಿಯಬಹುದು. ತನ್ನ ಈ ಗ್ರಂಥದಲ್ಲಿ ಬ್ರಿಟಿಷ್ ‌ಸರ್ಕಾರ ಭಾರತದಲ್ಲಿ ಕೈಗೊಂಡ ಸಮಾಜ ಸುಧಾರಣಾ ಕ್ರಮಗಳನ್ನು ಮೆಚ್ಚಿಕೊಳ್ಳುತ್ತಾರೆ ಮಾತ್ರವಲ್ಲ, ಈ ನಾಡಿನ ಶೋಷಿತ ಸಮಾಜದ ದಯನೀಯ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಈ ಗ್ರಂಥವನ್ನು ಫುಲೆಯವರು ನೀಗ್ರೊ ಗುಲಾಮರ ಪರವಾಗಿ ನಿಲುವು ತೆಗೆದುಕೊಂಡು ‘ಅಮೆರಿಕ ದೇಶದ ಸಜ್ಜನರಿಗೆ’ ಅರ್ಪಿಸಿದರು. ಇದೇ ಮಾದರಿಯಲ್ಲಿ ನಮ್ಮ ನಾಡಿನ ಜನತೆಯೂ ವೈದಿಕರಿಂದ ದಮನಕ್ಕೊಳಗಾದ ಶೂದ್ರ ಸಹೋದರರಿಗೆ ಹೋರಾಟದಲ್ಲಿ ಮಾರ್ಗದರ್ಶನ ನೀಡಬೇಕೆಂದು ಹಂಬಲ ವ್ಯಕ್ತಪಡಿಸುತ್ತಾರೆ.

ಈ ಗ್ರಂಥದಲ್ಲಿ ಮಾನವನಲ್ಲಿ ಅಂತರ್ಗತವಾಗಿರುವ ಹಕ್ಕುಗಳ ಬಗ್ಗೆ ಬರೆಯುತ್ತಾ ಕೆಳಸ್ತರದ ಜನತೆಯ ಪರವಾದ ನಿಲುವನ್ನು ಸಮರ್ಥಿಸಿಕೊಳ್ಳುತ್ತಾ ಈ ಕೆಳಗಿನಂತೆ ಬರೆಯುತ್ತಾರೆ.

“ದೇವರು ಈ ಜಗತ್ತಿನಲ್ಲಿ ಶೂದ್ರ ಅತಿಶೂದ್ರರಿಗೆ ಸಮಾನ ಹಕ್ಕು ನೀಡಿದ್ದರು ಬ್ರಾಹ್ಮಣರು ಅವರ ಈ ಹಕ್ಕನ್ನು ನಿರಾಕರಿಸಿ, ಭಗವಂತನ ಹೆಸರಿನಲ್ಲಿ ತಾವೇ ಸೃಷ್ಟಿಸಿದ ಸುಳ್ಳು ಗ್ರಂಥಗಳ ಮೂಲಕ ತಮ್ಮನ್ನು ಉನ್ನತ ಸ್ಥಾನಕ್ಕೇರಿಸಿಕೊಂಡಿದ್ದಾರೆ”

‘ಗುಲಾಮಗಿರಿ’ ಗ್ರಂಥದ ೧೬ ಅಧ್ಯಾಯಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಭಾಗವು ಆರ್ಯನ್ನರ ಆಕ್ರಮಣದ ವಿವರದ ಬಗ್ಗೆ ಮೀಸಲಾಗಿದೆ. ಅವರ ಆಕ್ರಮಣದ ನಂತರ ಮೂಲನಿವಾಸಿಗಳ ಮೇಲೆ ಹಿಡಿತ ಸಾಧಿಸಲು ಅವರು ಜಾತಿವ್ಯವಸ್ಥಯನ್ನು ಸೃಷ್ಟಿಸಿದರು ಎಂದು ವಾದಿಸುತ್ತಾರೆ. ವಿಶೇಷವೆಂದರೆ, ಈ ಹಂತದಲ್ಲಿ ಅಬ್ರಾಹ್ಮಣ(ಶೂದ್ರ)ರು ಕೂಡಾ ಅಸ್ಪೃಶ್ಯತೆಯ ಉಗಮಕ್ಕೆ ಫುಲೆಯವರು ದೂಷಿಸುತ್ತಾರೆ. ಎಕೆಂದೆರೆ ಆರ್ಯರ ವಿರುದ್ಧ ಕೆಚ್ಚಿನಿಂದ ಹೋರಾಡಿದ ಮಹಾರ್ ಮತ್ತು ಮಾಂಗ್ ಸಮುದಾಯದ ಜನರಿಗೆ ಸಮಾಜದಲ್ಲಿ ನಿಕೃಷ್ಟ ಸ್ಥಾನವನ್ನು ಕಲ್ಪಿಸಿದಾಗ ಶೂದರು ಸಮ್ಮತಿ ನೀಡಿರುವುದು ಅಸ್ಪೃಶ್ಯರ ಇಂದಿನ ಸ್ಥಿತಿಗೆ ಕಾರಣವೆಂದು ವಾದಿಸುತ್ತಾರೆ.

ಆದರೆ ಫುಲೆಯವರು ನಿರೀಕ್ಷಿಸಿದಂತೆ ಬ್ರಿಟಿಷ್ ಆಡಳಿತದಲ್ಲಿ ಜಾತಿ ಅಸಮಾನತೆಗಳು ಕುಂಠಿತಗೊಳ್ಳುವ ಬದಲಾಗಿ, ಹೊಸದಾಗಿ ಸೃಷ್ಟಿಸಲಾದ ಅವಕಾಶಗಳನ್ನು ಬಳಸಿಕೊಂಡು ಬ್ರಹ್ಮಣರ ವರ್ಗವು ಇನ್ನಷ್ಟು ಬಲಾಡ್ಯವಾಯಿತು. ಈ ಬೆಳವಣಿಗೆಗೆ ಸ್ವಲ್ಪಮಟ್ಟಿಗೆ ಬ್ರಿಟಿಷ್ ಆಡಳಿತದಲ್ಲಿನ ದೋಷವೂ ಕಾರಣವೆಂದು ಅರಿತುಕೊಂಡು ಫುಲೆಯವರು ಕೆಳಸ್ತರದ ಜನತೆಗೆ ವಿದ್ಯ ಹಾಗೂ ಉದ್ಯೋಗಗಳ ಅವಕಾಶಗಳನ್ನು ತೆರೆಯುವಂತೆ ಸರ್ಕಾರವನ್ನು ಒತ್ತಾಯಿಸಿದರು. ಈ ಗ್ರಂಥದ ಕೊನೆಯ ಭಾಗದಲ್ಲಿ ಬ್ರಾಹ್ಮಣ ವರ್ಗ ವಸಾಹತುಶಾಹಿ ವ್ಯವಸ್ಥೆಯಲ್ಲಿಯೂ ಹೇಗೆ ಏಕಸ್ವಾಮ್ಯವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಯಿತು ಎನ್ನುವುದನ್ನು ವಿವರಿಸುತ್ತಾ, ಬ್ರಿಟಿಷ್ ಆಡಳಿತ ನೀಡಿದ ಅವಕಾಶಗಳನ್ನು ಬಳಸಿಕೊಂಡು ಪಾರಂಪರಿಕವಾಗಿ ದಮನಕ್ಕೊಳಗಾದ ಶೂದ್ರ-ಅತಿಶೂದ್ರರು ಉತ್ತಮ ಶಿಕ್ಷಣ ಪಡೆದು ತಮ್ಮದಾಸ್ಯದ ಸಂಕೋಲೆಯಿಂದ ಹೊರಬರುವಂತೆ ಹುರಿದುಂಬಿಸಿದರು .

. ‘ಶೇತ್ಕಾರ್ಯಚ ಅಸುದ್’ ಮತ್ತು ಸಾರ್ವಜನಿಕ ಸತ್ಯಧರ್ಮ ಪುಸ್ತಕ

‘ಶೇತ್ಕಾರ್ಯಚ ಅಸುದ್’ (cultivators whip-cord) ಫುಲೆಯವರ ಇನ್ನೊಂದು ಅತಿಮುಖ್ಯ ಗ್ರಂಥದಲ್ಲಿ ಫುಲೆಯವರು ಧರ್ಮದ ಹೆಸರಿನಲ್ಲಿ ಬ್ರಾಹ್ಮಣವರ್ಗ ರೈತರನ್ನು ಹುಟ್ಟಿನಿಂದ ಮರಣದ ತನಕ ಶೋಷಣೆ ಮಾಡುವ ಬಗೆಯನ್ನು ಸ್ಪಷ್ಟ ಮತ್ತು ನಿಖರ ಶಬ್ದಗಳಲ್ಲಿ ವಿವರಿಸುತ್ತಾರೆ. ‘ಸಾರ್ವಜನಿಕ ಸತ್ಯಧರ್ಮ ಪುಸ್ತಕ’ (real religion book for the public) ಎಂಬ ಹೆಸರಿನ ಇನ್ನೊಂದು ಗ್ರಂಥದಲ್ಲಿ ಫುಲೆಯವರು ಮಾನವ ಜೀವನದ ಎಲ್ಲಾ ಜಂಜಾಟಗಳು, ಎಂದರೆ ಜನನ, ಮರಣ, ಮದುವೆ, ಉತ್ಪಾದನೆ, ಲೈಂಗಿಕ ಸಂಬಂಧಗಳು, ಜಾತಿ ಸಂಬಂಧಗಳು, ನೀತಿ-ಧರ್ಮ ಮುಂತಾದ ವಿಚಾರಗಳನ್ನು ಒಳಗೊಂಡಿದೆ. ಅಲ್ಲದೆ ಈ ಗ್ರಂಥವು ಲಿಂಗ-ಸಮಾನತೆ, ಮಾನವ ಹಕ್ಕುಗಳ ಬಗ್ಗೆ ಗೌರವ, ಶ್ರಮ ಗೌರವ, ಮೂರ್ತಿಪೂಜೆ, ತ್ಯಜಿಸುವಿಕೆ ಇತ್ಯಾದಿ ಮೌಲ್ಯಗಳ ಬಗ್ಗೆ ಕೂಡಾ ತಿಳಿಸುತ್ತದೆ. ಕೆಲವೊಂದು ವಿಷಯಗಳಲ್ಲಿ ಫುಲೆಯವರಲ್ಲಿ ಕ್ರೈಸ್ತಧರ್ಮದ ಪ್ರಭಾವವನ್ನು ಗುರುತಿಸಬಹುದು.

ಪಾಶ್ಚಾತ್ಯ ವಿಚಾರಗಳ ಪ್ರಭಾವ ಗಾಢವಾಗಿದ್ದರು ಫುಲೆಯವರು ರೈತ ಸಮುದಾಯವು ತನ್ನನ್ನು ತಾನು ಅರಿತುಕೊಳ್ಳುವುದರ ಮೂಲಕ ಮೇಲ್ವರ್ಗದ ಧರ್ಮ ನೀತಿಯ ಚೌಕಟ್ಟಿನಿಂದ ಹೊರಗೆ ಬರಬೇಕೆಂಬ ಕರೆ ನೀಡುತ್ತಾರೆ. ಉದಾಹರಣೆಗೆ “ನೀನು ಬೇರೆಯವರನ್ನು ಪುರಾತನ ಪೊಳ್ಳು ಗ್ರಂಥಗಳು ತಿಳಿಸುವಂತೆ ಪಾರಂಪರಿಕ ಗಿಲಾಮರೆಂದು ಪರಿಗಣಿಸಬೇಡ” ಅಂತೆಯೇ, “ನೀನು ಚಮ್ಮಾರರ ಕಸುಬನ್ನು ಹಳಿಯಬೇಡ, ಅವರಿಗೆ ನೆರವಾಗು” ಇತ್ಯಾದಿ ಮಾತುಗಳು ಅವರ ಈನಿಲುವನ್ನು ಸ್ಪಷ್ಟಗೊಳಿಸುತ್ತವೆ.

ಸತ್ಯಶೋಧಕ ಸಮಾಜದ ಸ್ಥಾಪನೆ (೧೮೭೩)

ತಾನು ಪ್ರತಿಪಾದಿಸಿದ ತತ್ವಾದರ್ಶಗಳನ್ನು ಕಾರ್ಯರೂಪಕ್ಕೆ ತರುವ ದೃಷ್ಟಿಯಿಂದ ಹಾಗೂ ಆ ಬಗ್ಗೆ ಜನತೆಗೆ ಅರಿವು ಮೂಡಿಸುವ ದೃಷ್ಟಿಯಿಂದ ಫುಲೆಯವರು ತನ್ನ ಸಂಗಾತಿಗಳೊಂದಿಗೆ ಸೇರಿ ಸೆಪ್ಟೆಂಬರ್ ೧೮೭೩ರಲ್ಲಿ ಪೂನಾದಲ್ಲಿ ‘ಸತ್ಯಶೋಧಕ ಸಮಾಜ’ವೆಂಬ ಸಂಘಟನೆಯನ್ನು ಹುಟ್ಟುಹಾಕಿದರು. ಈ ಬೆಳವಣಿಗೆಯು ಭಾರತದಲ್ಲಿ ಹಿಂದುಳಿದ ವರ್ಗಗಳ ಚಳವಳಿಯಲ್ಲಿ ಒಂದು ಮೈಲಿಗಲ್ಲು ಎಂದೇ ಭಾವಿಸಲಾಗಿದೆ. ಸ್ವತಃ ಜ್ಯೋತಿಭಾ ಫುಲೆಯವರೇ ಈ ಸಮಾಜದ ಅಧ್ಯಕ್ಷ ಮತ್ತು ಖಜಾಂಚಿಯಾಗಿ ಕಾರ್ಯನಿರ್ವಹಿಸಿದರು. ನತಂರದ ದಿನಗಳಲ್ಲಿ ಸತ್ಯಶೋಧಕ ಸಮಾಜದ ಶಾಖೆಗಳು ದಕ್ಷಿಣ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಹಲವಾರು ಕಡೆಗಳಲ್ಲಿ ಸ್ಥಾಪನೆಗೊಂಡು ಫುಲೆಯವರ ಚಿಂತನೆಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನಗಳಾದವು.

ಅತಿ ಶೀಘ್ರದಲ್ಲಿಯೇ ಸತ್ಯಶೋಧಕ ಸಮಾಜವು ಬಹಳ ಖ್ಯಾತಿ ಪಡೆಯಿತು ‘ಸತ್ಯ ದೀವಿಕ’ ಪತ್ರಿಕೆಯ ಸಂಪಾದಕರಾದ ಬಾಬಾ ಪದ್ಮನ್ ಜಿಯವರು ಅಕ್ಟೋಬರ್ ೧೮೭೩ರ ಸಂಚಿಕೆಯಲ್ಲಿ ‘ಪೂನಾದಲ್ಲಿ ಒಂದು ಮಹಾಕ್ರಾಂತಿಯೇ ನಡೆಯುತ್ತದೆ’ ಎಂದು ವರದಿ ಮಾಡಿದರು. ಕುಣಬಿ, ಮಾಲಿ, ಕುಂಬಾರ, ಅಕ್ಕಸಾಲಿ, ಮತ್ತಿತರ ಶೂದ್ರ ಸಮುದಾಯಕ್ಕೆ ಸೇರಿದ ಸುಮಾರು ೭೦೦ ಕುಟುಂಬಗಳು ಬ್ರಾಹ್ಮಣರ ಹಿಡಿತದಿಂದ ಸ್ವತಂತ್ರವಾಗುವ ಪ್ರಕ್ರಿಯೆ ನಡೆದಿದೆ ಎಂದೂ ವರದಿ ಮಾಡಲಾಯಿತು.

ಸತ್ಯಶೋಧಕ ಸಮಾಜದ ಧ್ಯೇಯ ಧೋರಣೆಗಳು

ಸತ್ಯಶೋಧಕ ಸಮಾಜದ ಕಾರ್ಯದರ್ಶಿಗಳಾಗಿದ್ದ ನಾರಾಯಣ ತಿಕಾರಂ ನಗರ್ ಕರ್ ೧೮೭೭ರಲ್ಲಿ ಸಮಾಜದ ಕಾರ್ಯ ಚಟುವಟಿಕೆಗಳ ವರದಿಯನ್ನು ನೀಡುತ್ತಾ ಸಮಾಜದ ಧ್ಯೇಯ ಧೋರಣೆಗಳನ್ನು ಈಕೆಳಗಿನಂತೆ ವಿವರಿಸುತ್ತಾರೆ;

“ಶೂದ್ರರನ್ನು ಬ್ರಾಹ್ಮಣ, ಭಟ್ಟ, ಜ್ಯೋತಿಷಿ, ಪುರೋಹಿತರ ಮತ್ತಿತರರ ಗುಲಾಮಗಿರಿಯಿಂದ ಸ್ವತಂತ್ರಗೊಳಿಸುವ ಉದ್ದೇಶದಿಂದ ಕೆಲವು ಪ್ರಜ್ಞಾವಂತ ಮಹನೀಯರು ೧೮೭೩ರ ಸೆಪ್ಟೆಂಬರ್ ೨೪ರಂದು ಈ ಸಮಾಜವನ್ನು ಸ್ಥಾಪಿಸಿದರು. ಸಾವಿರಾರು ವರ್ಷಗಳಿಂದ ಈ ಜನರು ತಮ್ಮ ಕುತ್ಸಿತ ಗ್ರಂಥಗಳ ಮುಖೇನ ಶೂದ್ರರನ್ನು ನಿಕೃಷ್ಟರೆಂದು ಕಡೆಗಣಿಸುತ್ತಿದ್ದರು. ಮತ್ತು ಶೋಷಿಸುತ್ತಿದ್ದರು. ಆದ್ದರಿಂದ ಶಿಕ್ಷಣ ಮತ್ತು ಸಲಹೆಗಳ ಮೂಲಕ ಶೂದ್ರರು ತಮ್ಮ ಹಕ್ಕುಗಳನ್ನು ಅರಿಯುವಂತಾಗಬೇಕು ಹಾಗೂ ಧಾರ್ಮಿಕ ಹಾಗು ಇತರ ವಿಷಯಗಳಲ್ಲಿ ಬ್ರಾಹ್ಮಣರ ಕಪಟ ಮತ್ತು ಸ್ವಾರ್ಥದಿಂದ ತುಂಬಿದ ಗ್ರಂಥಗಳ ಹಿಡಿತದಿಂದ ಮುಕ್ತರನ್ನಾಗಿಸಬೇಕೆಂದು ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಧಾರ್ಮಿಕ ಮಧ್ಯವರ್ತಿಗಳ ಖಂಡನೆ

ಸತ್ಯಶೋಧಕ ಸಮಾಜ ಮತ್ತು ಅದರ ಸ್ಥಾಪಕರಾದ ಜ್ಯೋತಿಭಾ ಫುಲೆಯವರು ದೇವರು ಮತ್ತು ಭಕ್ತರ ನಡುವೆ ಮಧ್ಯವರ್ತಿಗಳಾಗಿರುವ ಪುರೋಹಿತಶಾಹಿಯನ್ನು ಬಲವಾಗಿ ಖಂಡಿಸಿದರು. ಧಾರ್ಮಿಕ ಆಚರಣೆಗಳಲ್ಲಿ ಮಧ್ಯವರ್ತಿಗಳ ನೆರವು ಅಗತ್ಯವಿಲ್ಲವೆನ್ನುವುದು ಸತ್ಯಶೋಧಕರ ದೃಡನಂಬಿಕೆಯಾಗಿತ್ತು. ಮಾತ್ರವಲ್ಲ ಹಿಂದೂ ಧರ್ಮ ಹಾಗೂ ಧರ್ಮಗ್ರಂಥಗಳ ಮೇಲಿರುವ ಪರೋಹಿತಶಾಹಿಯ ಹಿಡಿತವನ್ನು ಅವರು ಒಪ್ಪಿಕೊಳ್ಳುತ್ತಿರಲಿಲ್ಲ.

ಪುರೋಹಿತಶಾಹಿಯ ಲೌಕಿಕ ಜಗತ್ತಿನಲ್ಲಿಯೂ ಜನಸಾಮಾನ್ಯರ ಮೇಲೆ ಹಿಡಿತ ಸಾಧಿಸಿರುವುದನ್ನು ಅವರು ಬೊಟ್ಟು ಮಾಡಿದರು. ಉದಾಹರಣೆಗೆ ಸರ್ಕಾರಿ ಅಧಿಕಾರ ಸ್ಥಾನಗಳಲ್ಲಿಯೂ ಅವರು ಬ್ರಾಹ್ಮಣರ ಮೇಲುಗೈ ಇವರು ವಿರೋಧಿಸುತ್ತಿದ್ದ ಇನ್ನೊಂದು ಅಂಶವಾಗಿತ್ತು. ಈ ಅಧಿಕಾರಿಗಳು ನೈಜ ಜನಪರ ಕಾಳಜಿ ಇರುವ ಬ್ರಿಟಿಷ್ ಆಡಳಿತಗಾರರನ್ನು ದಾರಿ ತಪ್ಪಸುತ್ತಿದ್ದರೆಂದು ಫುಲೆಯವರು ವಾದಿಸುತ್ತಿದ್ದರು. ಈ ಸಮಸ್ಯೆಯನ್ನು ಎದುರಿಸಲು ರೈತರ ಬಗ್ಗೆ ಸಹಾನುಭೂತಿ ಇರುವ ಬ್ರಾಹ್ಮಣೇತರರು ಅಧಿಕಾರ ಸ್ಥಾನ ಪಡೆಯಬೇಕೆಂದು ಅವರು ಪ್ರತಿಪಾದಿಸುತ್ತಿದ್ದರು.

ಸತ್ಯಶೋಧಕ ಸಮಾಜದ ಚಟುವಟಿಕೆಗಳು

ವಾರಕ್ಕೆ ಒಮ್ಮೆ ನಡೆಯುತ್ತಿದ್ದ ಸತ್ಯಶೋಧಕ ಸಮಾಜದ ಸಭೆಗಳಲ್ಲಿ ಕೃಷಿಕರ ದೈನಂದಿನ ಸಮಸ್ಯೆಗಳು, ಬ್ರಾಹ್ಮಣ ಪೌರೋಹಿತ್ಯವಿಲ್ಲದೆ ನಡೆಯುವ ವಿವಾಹ ಸಮಾರಂಭಗಳು, ಧಾರ್ಮಿಕ ಸಮಾರಂಭಗಳನ್ನು ನಡೆಸುವುದು ಮುಂತಾದ ಚಟುವಟಿಕೆಗಳಿಗೆ ಮಹತ್ವ ನೀಡಲಾಗುತ್ತಿತ್ತು. ಆಕಾಲದ ಸಂಪ್ರದಾಯವಾದಿ ಹಿಂದು ಸಮಾಜಕ್ಕೆ ಸತ್ಯಶೋಧಕ ಸಮಾಜದ ನಿಲುವುಗಳು ಅತಿದೊಡ್ಡ ಸವಾಲಾಗಿತ್ತು. ಕಾಲಕ್ರಮೇಣ ಸತ್ಯಶೋಧಕ ಸಮಾಜವು ಈ ಕೆಳಗೆ ಉಲ್ಲೇಖಿಸಿದ ಆರ್ಥಿಕ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿತು:

೧. ಭಾರತ ಹಾಗೂ ಪಾಶ್ಚಾತ್ಯ ಕೃಷಿಯಲ್ಲಿನ ತುಲನಾತ್ಮಕ ಅಧ್ಯಯನ

೨. ಭಾರತದಲ್ಲಿ ಕೃಷಿ ತಂತ್ರಜ್ಞಾನದ ಬಳಕೆ

೩. ಕೃಷಿಕ ಸಮುದಾಯದ ವಿದ್ಯಾರ್ಥಿಗಳಿಗೆ ರಾತ್ರಿ ಶಾಲೆಯ ಸ್ಥಾಪನೆ

೪. ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಪಾವತಿಯಲ್ಲಿ ನೆರವು

೫. ಬಡ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಲ್ಕ ಮಾಫಿ

೬. ಜಾತಿ ವ್ಯವಸ್ಥೆಯ ಸಮಸ್ಯೆಯ ಬಗ್ಗೆ ಚರ್ಚೆ

೭. ಮೂರ್ತಿ ಪೂಜೆ ಇತ್ಯಾದಿ ಆಚರಣೆಗಳ ಕುರಿತು ಚರ್ಚೆ ಇತ್ಯಾದಿ

ಸತ್ಯಶೋಧಕ ಸಮಾಜದ ಸದಸ್ಯತ್ವ

ಸತ್ಯಶೋಧಕ ಸಮಾಜವು ಮೂಲಭೂತವಾಗಿ ಶೂದ್ರ ಅತಿಶೂದ್ರರ ಪ್ರಗತಿಯ ಕಾಳಜಿ ಹೊಂದಿದ್ದು, ಶೂದ್ರ ಸಮುದಾಯದ ಯಾವುದೇ ವ್ಯಕ್ತಿ ಈ ಸಮಾಜದ ಸದಸ್ಯನಾಗಲು ಅವಕಾಶ ಮುಕ್ತವಾಗಿತ್ತು. ಹಾಗಾಗಿ ಸಮಾಜದ ಸದಸ್ಯತ್ವ ಪಡೆದ ಜನರಲ್ಲಿ ಮುಖ್ಯವಾಗಿ ಮಾಲಿ ಜನಾಂಗದವರು ಅಧಿಕ ಸಂಖ್ಯೆಯಲ್ಲಿದ್ದರೂ, ಇತರ ಸಮುದಾಯಗಳದ ಮರಾಠ-ಕುಣಬಿ ಹಾಗೂ ಮರಾಠರು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ಸದಸ್ಯರಾಗಿ ಸೇರಿದ್ದರು. ಅಲ್ಲದೆ ಮುಂಬೈ ಹಾಗೂ ಪೂನಾ ಪಟ್ಟಣದ ಶೀಮಂತ ವರ್ತಕರು, ಗುತ್ತುಗೆದಾರರು, ವೈದ್ಯರು, ಗುಮಾಸ್ತರು, ವಿದ್ಯಾರ್ಥಿಗಳು ಮತ್ತಿತರ ವೃತ್ತಿಯವರೂ ಸಮಾಜದ ಸದಸ್ಯರಾಗಿ ಸೇರ್ಪಡೆಗೊಂಡಿದ್ದರೂ ಧಾರ್ಮಿಕವಾಗಿ, ಸಾಮಾಜಿಕವಾಗಿ, ಮೇಲ್ಜಾತಿಗಳಿಂದ ಶೋಷಣೆಗೆ ಒಳಗಾದವರು. ಸಾಮಾಜಿಕ-ಧಾರ್ಮಿಕ ಅವಗಣೆಗೆ ಒಳಗಾದ ಈ ವರ್ಗವು ಸಂಘಟನೆಯ ಮಹತ್ವವನ್ನು ಅರಿತು ಸತ್ಯಶೋಧಕ ಸಮಾಜವನ್ನು ಬೆಂಬಲಿಸತೊಡಗಿದರು. ಫುಲೆಯವರಿಗೆ ದಲಿತ ಹಿಂದೂಳಿದ ವರ್ಗಗಳ ಏಳಿಗೆಯೂ ಮೂಲಭೂತ ಉದ್ದೇಶವಾಗಿದ್ದರೂ ಇತರ ಬ್ರಾಹ್ಮಣೇತರ ಪ್ರಬಲ ವರ್ಗಗಳಿಗೆ ಅವರ ವಿರೋಧವಿರಲಿಲ್ಲ.

ಫುಲೆಯವರು ವೈಯಕ್ತಿಕ ಆಧಾರದಲ್ಲಿ ಬ್ರಾಹ್ಮಣ ವಿರೋಧಿಯಾಗಿರಲಿಲ್ಲ. ಹಲವಾರು ಬ್ರಾಹ್ಮಣ ನಾಯಕರು ಫುಲೆಯವರ ಆಪ್ತ ಮಿತ್ರರಾಗಿದ್ದರು. ಉದಾಹರಣೆಗೆ, ಸಖಾರಾಂ ಯಶವಂತ ಪರಾಂಜಪೆ, ರಾವಂ ಬಹದ್ದೂರ್ ಗೋವಂದೆ, ವಿಠಲ್ ವಾಲ್ವೇಕರ್ ಮುಂತಾದ ಮೇಲ್ವರ್ಗದ ಬೆಂಬಲಿಗರನ್ನು ಸಮಾಜ ತನ್ನ ಮಿತ್ರರೆಂದು ಪರಿಗಣಿಸುತ್ತಿತ್ತು. ನಂತರದ ದಿನಗಳಲ್ಲಿ ಕೆಲವು ಬ್ರಾಹ್ಮಣ ನಾಯಕರು ಸಮಾಜದ ಸದಸ್ಯತನ ಪಡೆದು ಸಕ್ರೀಯರಾಗಿದ್ದರು ಎನ್ನುವ ಅಂಶ ಉಲ್ಲೇಖಾರ್ಹವಾಗಿದೆ.

ಶಿಕ್ಷಣದ ಮಹತ್ವ

ಪ್ರಾಯಶಃ ಫುಲೆಯವರ ಚಿಂತನೆಯಲ್ಲಿ ಅತಿಮುಖ್ಯವಾಗಿರುವುದು ದಲಿತ, ಹಿಂದುಳಿದ ಮತ್ತು ಮಹಿಳೆಯರ ಶಿಕ್ಷಣದ ಬಗೆಗೆ ಅವರ ಪುರೋಗಾಮಿ ನಿಲುವು. ಫುಲೆಯವರ ಸಾಮಾಜಿಕ ಹೋರಾಟ ಪ್ರಾರಂಭವಾದದ್ದೆ ೧೮೪೮ರಲ್ಲಿ ಕೆಳಜಾತಿ ಹಾಗೂ ಅಸ್ಪೃಶ್ಯರಿಗೆ ಒಂದು ಪಾಠಶಾಲೆಯನ್ನು ತೆರೆಯವುದರ ಮೂಲಕ. ೧೮೫೧ರಲ್ಲಿ ಪೂನಾದಲ್ಲಿ ಒಂದು ಮಹಿಳಾ ಶಾಲೆಯನ್ನು ಪ್ರಾರಂಭಿಸಿ ಶಿಕ್ಷಣ ಕ್ಷೇತ್ರದಲ್ಲಿ ಇನ್ನೊಂದು ಕ್ರಾಂತಿಯ ಹೆಜ್ಜೆಯನ್ನಿಡುತ್ತಾರೆ. ಅಂದಿನ ಕಾಲದಲ್ಲಿ ಮಹಿಳಾ ಶಿಕ್ಷಕಿಯರು ದೊರೆಯದಿದ್ದ ಕಾರಣ ತನ್ನ ಪತ್ನಿಗೆ ವಿದ್ಯೆ ನೀಡಿ ಶಿಕ್ಷಕಿಯರನ್ನಾಗಿ ನೇಮಿಸಿದರು. ಫುಲೆಯವರು ಸ್ಥಾಪಿಸಿದ ಒಟ್ಟು ಆರು ಶಾಲೆಗಳಲ್ಲಿ ಮೂರು ಮಹಿಳೆಯರಿಗೆ ಹಾಗೂ ಇತರ ಮೂರು ಶಾಲೆಗಳು ಅಸ್ಪೃಶ್ಯರಿಗಾಗಿ ಮೀಸಲಾಗಿತ್ತು. ೧೮೫೩ರಲ್ಲಿ ಅವರು ಮಹಾರ್, ಮಂಗ್ ಮತ್ತು ಇತರ ಅಸ್ಪೃಶ್ಯಜಾತಿ ಭಾಂಧವರಿಗಾಗಿ ಜ್ಞಾನ ಪ್ರಸಾರದ ಉದ್ದೇಶದಿಂದ ಒಂದು ಸಮಾಜವನ್ನು ಸ್ಥಾಪಿಸಿದರು. ಅದೇ ವರ್ಷ ಶಿಕ್ಷಣ ವಂಚಿತರಿಗಾಗಿ ರಾತ್ರಿ ಶಾಲೆಯನ್ನು ತೆರೆದರು. ಅಸ್ಪೃಶ್ಯರಿಗಾಗಿ ತನ್ನ ಮನೆಯ ಬಾವಿಯನ್ನೇ ತೆರೆದರು. ವಿಧವಾ ವಿವಾಹಕ್ಕೆ ಉತ್ತೇಜನ ನೀಡಿದ ಫುಲೆಯವರು ೧೮೬೦ರಲ್ಲಿ ಸಾರಸ್ವತ ಸಮಾಜದ ವಿಧವೆಯೋರ್ವಳಿಗೆ ವಿವಾಹ ನೆರವೇರಿಸಿದರು.

ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ

೧೮೭೦ ಹಾಗೂ ೧೮೮೦ರ ದಶಕಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಫುಲೆಯವರ ಕೊಡುಗೆಗಳನ್ನು ಪರಿಗಣಿಸಿ ಪೂನಾ ನಗರಸಭೆಯ ಸದಸ್ಯರನ್ನಾಗಿ ನೇಮಿಸಲಾಯಿತು. ಇದೇ ಕಾರಣಕ್ಕೆ ೧೮೮೨ರಲ್ಲಿ ಭಾರತ ಶಿಕ್ಷಣ ಆಯೋಗ ಹಂಟರ್ ಆಯೋಗಕ್ಕೆ ಸಾಕ್ಷಿ ನೀಡುವ ಅವಕಾಶವನ್ನು ನೀಡಲಾಯಿತು. ಹಂಟರ್ ಆಯೋಗಕ್ಕೆ ಸಲ್ಲಿಸಿದ ಮನವಿಯಲ್ಲಿ ಫುಲೆಯವರು ಶಿಕ್ಷಣ ಮೇಲ್ವರ್ಗಕ್ಕೆ ಸೀಮಿತ ಮಾಡದೆ, ಜನಸಮುದಾಯಕ್ಕೆ ಅದರ ಅಗತ್ಯತೆ ಇದೆ ಎನ್ನುವ ವಿಚಾರವನ್ನು ಆಯೋಗಕ್ಕೆ ಮನವರಿಕೆ ಮಾಡಲು ಯತ್ನಸಿದರು. ಅಲ್ಲದೆ ವಂಚಿತ ಜನರ ಆಯೋಗವನ್ನು ಒತ್ತಾಯಿಸಿದರು.

ಜನ ಜಾಗೃತಿ

ಫುಲೆಯವರ ನೇತೃತ್ವದ ಸತ್ಯಶೋಧಕ ಸಮಾಜವು ಜನಜಾಗೃತಿಯಲ್ಲಿಯೂ ತೊಡಗಿತು. ಅದರಲ್ಲಿ ಮುಖ್ಯವಾಗಿ ‘ಪಾನ ನಿಷೇಧ’ ಮುಖ್ಯ ಅಂಶವಾಗಿ ಇಟ್ಟುಕೊಂಡು ಪೂನಾದಲ್ಲಿ ಮದ್ಯದಂಗಡಿ ತೆರೆಯದಂತೆ ನಗರಪಾಲಿಕೆಯನ್ನು ಒತ್ತಾಯಿಸಿದರು. ಮಾತ್ರವಲ್ಲ, ಮದ್ಯಪಾನ ವರ್ಜಿಸುವಂತೆ ಜನಜಾಗೃತಿಯನ್ನು ಮೂಡಿಸುವ ಪ್ರಯತ್ನ ನಡೆಸಿದರು. ಫುಲೆಯವರ ಇಬ್ಬರು ಸಹವರ್ತಿಗಳಾದ ಗಣಪತಿರಾವ್ ಪಾಟೀಲ್ ಹಾಗೂ ಕೃಷ್ಣರಾವ್ ಭಾಲೇಕರ್ ಗ್ರಾಮೀಣ ಪ್ರದೇಶದಲ್ಲಿ ಮದ್ಯಪಾನದ ವಿರುದ್ಧ ರೈತರ ಮನವೊಲಿಸುವ ಕೆಲಸದಲ್ಲಿ ನಿರತರಾದರು. ಸತ್ಯಶೋಧಕ ಸಮಾಜದ ಇತರ ಸದಸ್ಯರು ಹಾಗೂ ನಾಯಕರು ಈ ಚಳವಳಿಗೆ ಬೆಂಬಲವಿತ್ತರು. ನಂತರದ ದಿನಗಳಲ್ಲಿ ಪ್ರಭಾವಗೊಂಡ ಬ್ರಾಹ್ಮಣೇತರ ಚಳವಳಿಯ ಮಹಾನ್ ನಾಯಕರಾದ ಶಾಹು ಮಹಾರಾಜರೂ, ಕೇಶವರಾವ್ ಜೇಧೆಯವರೂ ಈ ಚಳವಳಿಯನ್ನು ಬೆಂಬಲಿಸಿದ್ದರು ಎನ್ನುವುದು ಗಮನಾರ್ಹ ಸಂಗತಿ.

ರೈತಪರ ನಿಲುವುಗಳು

ರೈತರ ಸಮಸ್ಯಗಳನ್ನು ಕೇಂದ್ರವಾಗಿಟ್ಟುಕೊಂಡು ಸತ್ಯಶೋಧಕ ಸಮಾಜವು ಸಾಕಷ್ಟು ಹೋರಾಟಗಳನ್ನು ನಡೆಸಿತು. ಕಡಕ್‌ ವಸ್ರಾ ಅಣೆಕಟ್ಟು ಕಟ್ಟಿ ರೈತರ ಹೊಲಗಳಿಗೆ ನೀರುಣಿಸುವಲ್ಲಿ ಫುಲೆಯವರು ಮುತುವರ್ಜಿ ವಹಿಸಿ ಕೊಂಡರಲ್ಲದೆ, ರೈತರ ಮುಸಂಬಿ, ಕಾಲಿಫ್ಲವರ್ನಂತಹ ಆಧುನಿಕ ಬೆಳೆಯನ್ನು ಪ್ರಾರಂಭಿಸಲು ಪ್ರೋತ್ಸಾಹವಿತ್ತರು. ಈ ಹಿಂದೆ ಉಲ್ಲೇಖಿಸಿದ ‘ಶೇತ್ಕಾರ್ಯಚ ಅಸುದ್’ (Cultivator’s Whip Cord) ಫುಲೆಯವರು ರೈತರ ಬಗ್ಗೆ ಈ ಹಿನ್ನಲೆಯಲ್ಲಿ ಬರೆದ ಅಸಮಾನ್ಯ ಕೃತಿಯಾಗಿದೆ.

೧೮೮೪ರಲ್ಲಿ ಜ್ಯೋತಿಭಾ ಫುಲೆಯವರು ಪೂನಾದ ಜುನ್ನಾರ್‌ ತಾಲೂಕಿನ ರೈತರ ಪ್ರತಿಭಟನೆಗೂ ಬೆಂಬಲವಿತ್ತರು. ಆ ಪ್ರದೇಶದ ಚಿಕ್ಕ ಹಿಡುವಳಿದಾರರು ಹಾಗೂ ಗೇಣಿದಾರರು ತೇಲಿ ಮತ್ತು ಸೋನಾರ ಸಮುದಾಯದ ಕುಶಲಕರ್ಮಿಗಳೊಂದಿಗೆ ಸೇರಿ ಬ್ರಾಹ್ಮಣ ಭೂಮಾಲೀಕರ ಹಾಗೂ ಲೇವಾದೇವಿಗಾರರಿಂದ ತಮ್ಮನ್ನು ರಕ್ಷಿಬೆಕೆಂದು ಮುಂಬೈ ಸರ್ಕಾರಕ್ಕೆ ಸಲ್ಲಿಸಿದ ಮನವಿಗೆ ಫುಲೆ ಮತ್ತವರ ಸತ್ಯಶೋಧಕರು ಬೆಂಬಲ ನೀಡಿದರು. ಮುಂದಿನ ಒಂದು ವರ್ಷ ಕಾಲ ಪ್ರತಿಭಟನೆಯಲ್ಲಿ ಕೃಷಿ ಕಾರ್ಯಗಳನ್ನು, ಬ್ರಾಹ್ಮಣರ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನೂ ಬಹಿಷ್ಕರಿಸಲಾಯಿತು. ಅಂತಿಮವಾಗಿ ಫುಲೆಯವರ ಮಧ್ಯಸ್ಥಿಕೆಯಲ್ಲಿ ಸರ್ಕಾರ, ಲೇವಾದೇವಿಗಾರರು ಹಾಗೂ ರೈತರ ನಡುವೆ ಮಾತುಕತೆ ನಡೆದು ಒಪ್ಪಂದದ ಪ್ರಕಾರ ಪ್ರತಿಭಟನೆ ನಿಲ್ಲಿಸಲಾಯಿತು.

ನಂತರದ ದಿನಗಳಲ್ಲಿ ಫುಲೆಯವರ ಸಾಮಾಜಿಕ ಚಳವಳಿಯ ಪ್ರಭಾವ ಹಳ್ಳಿಹಳ್ಳಿಗಳಿಗೆ ವ್ಯಾಪಿಸಿತು. ಸತ್ಯಶೋಧಕರ ನೇತಾರರಾದ ಕೃಷ್ಣಾರಾವ್ ಭಾಲೇಕರ್‌, ನವತಿ, ಲೋಖಂಡೆ, ಮುಂಕುಂದರಾವ್‌ ಪಾಟೀಲ್‌, ರಾಮಯ್ಯ ಅಯ್ಯಾರ್‌ ಮುಂತಾದವರು ಮಹಾರಾಷ್ಟ್ರದ ಹಳ್ಳಿಗಳಲ್ಲಿ ಚಳವಳಿಯನ್ನು ಕಟ್ಟಿ ಬೆಳೆಸಿದರು. ೧೮೯೦ರ ಸಮಯದಲ್ಲಿ ಪೂನಾ –ಬೊಂಬಾಯಿಯ ಗ್ರಾಮೀಣ ಪ್ರದೇಶದಲ್ಲಿ ಚಳವಳಿ ಭದ್ರವಾಗಿ ನೆಲೆಯೂರಿತು. ಅದರಲ್ಲಿಯೂ ಮುಖ್ಯವಾಗಿ ಅಹ್ಮದ್‌ನಗರ, ಜುನ್ನಾರ್‌, ಖೇಡ್‌, ಪುರಂದರ್‌, ಇಂದಾಪುರ ಮುಂತಾದ ಕಡೆಗಳಲ್ಲಿ ಚಳವಳಿ ವ್ಯಾಪಕಗೊಂಡಿತು.

ದಲಿತ ಚಳವಳಿಯ ಮೇಲಾದ ಪ್ರಭಾವ

ಫುಲೆಯವರಿಂದ ಪ್ರಾರಂಭಗೊಂಡ ಸತ್ಯಶೋಧಕ ಚಳವಳಿಯು ನಮತರದ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಅಸ್ಪೃಶ್ಯ ಹಾಗೂ ಇತರ ಹಿಂದುಳಿದ ವರ್ಗಗಳ ಚಳವಳಿಗೆ ಸ್ಫೂರ್ತಿ ನೀಡಿತು. ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಹಾರ್‌ಸಮುದಾಯಕ್ಕೆ ಸೇರಿದ ಜಿ. ವಿ. ವಾರಂಗ್‌ಕಾರ್‌ ಎನ್ನುವ ನಾಯಕರು ಫುಲೆಯವರ ಪ್ರಭಾವದಿಂದಾಗಿ ನಿವೃತ್ತಿಯ ನಂತರ (೧೮೮೬) ಜಾತಿ ವಿರೋಧಿ ಚಳವಳಿಯಲ್ಲಿ ತನ್ನನ್ನು ತೊಡಡಿಸಿಕೊಂಡರು. ೧೮೯೪ರಲ್ಲಿ ಅವರು ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಿ ಭಾರತೀಯ ಸೇನೆಯ ಸೇವೆಗೆ ಸೇರಲು ಮಹಾರ್‌ ಜನಾಂಗದವರಿಗೆ ಅವಕಾಶ ನೀಡಲು ಒತ್ತಾಯ ಮುಂದಿರಿಸಿದರು.

ಇನ್ನೋರ್ವ ಖ್ಯಾತ ಮಹಾನ್‌ ನಾಯಕರಾದ ಎಸ್‌. ಜಿ. ಕಾಂಟ್ಲಿಯವರು ಬಾಲ್ಯದಿಂದಲೇ ಫುಲೆಯವರ ಚಿಂತನೆ ಹಾಗೂ ಚಟುವಟಿಕೆಗಳ ಪ್ರಭಾವಕ್ಕೆ ಒಳಗಾಗಿ ಮಹಾರ್‌ ಸಮುದಾಯವನ್ನು ಸಂಘಟಿಸಿ ಒಂದು ಬೃಹತ್‌ ಅಧಿವೇಶನವನ್ನು ನಡೆಸಿದರು. ಮಾತ್ರವಲ್ಲದೆ ಸೇನೆ ಹಾಗೂ ಪೊಲೀಸ್‌ ಇಲಾಖೆಯಲ್ಲಿ ಆ ಸಮುದಾಯಕ್ಕೆ ಸೇರಿದ ಯುವಕರನ್ನು ಸೇರ್ಪಡೆಗೊಳಿಸಬೇಕೆಂದು ಮನವಿ ಸಲ್ಲಿಸಿದರು. ನಣತರದ ದಿನಗಳಲ್ಲಿ ಮಹಾರ್‌ ಸಮುದಾಯಕ್ಕೆ ಅಂಬೇಡ್ಕರ್‌ ಅವರ ನಾಯಕತ್ವ ದೊರೆಯಿತು. ಪರೋಕ್ಷವಾಗಿ ಅಂಬೇಡ್ಕರ್‌ ಕೂಡಾ ಸತ್ಯಶೋಧಕ ಸಮಾಜದ ಚಳವಳಿಯಿಂದ ಪ್ರೇರಿತರಾದ ನಾಯಕರೇ ಆಗಿದ್ದರು.