ಸವಿನಯ ಕಾನೂನುಭಂಗ ಚಳವಳಿ, ಮುಷ್ಕರ, ಬಹಿಷ್ಕಾರ, ಹಿಂಸೆ ಇವುಗಳಿಂದ ಸರ್ಕಾರಕ್ಕೆ ಹಾಗೂ ಬ್ರಿಟಿಷ್ ‌ಸಮುದಾಯಕ್ಕೆ ನಷ್ಟವುಂಟಾದುದಲ್ಲದೆ ರಾಷ್ಟ್ರೀಯ ಚಳವಳಿಯನ್ನು ಬಲಾತ್ಕಾರದಿಂದ ಹತ್ತಿಕ್ಕಲು ಸಾಧ್ಯವಿಲ್ಲವೆಂದೂ, ಗಾಂಧಿ ಮತ್ತು ಕಾಂಗ್ರೆಸ್ಸನ್ನು ಹೊರಗಿಟ್ಟು ಯಾವ ಸಮಾಲೋಚನೆಯೂ ಪೂರ್ಣಗೊಳ್ಳುವುದಿಲ್ಲವೆಂದು ತಿಳಿದು ಸರ್ಕಾರ ಗಾಂಧಿಯೊಡನೆ ಸಂಧಾನ ಕ್ರಮಗಳನ್ನು ಪ್ರಾರಂಭಿಸಿತು. ೧೯೩೧ರಲ್ಲಿ ಗಾಂಧಿ ಮತ್ತು ಇರ್ವಿನ್‌ ಒಪ್ಪಂದವಾಯಿತು. ಅದರಂತೆ ಗಾಂಧಿ ಚಳವಳಿಯನ್ನು ಲಂಡನ್ನಿಗೆ ತೆರಳಿದರು. ಇದಕ್ಕೆ ಹಲವು ನಾಯಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಈಗಾಗಲೇ ಒಂದನೇ ದುಂಡು ಮೇಜಿನ ಪರಿಷತ್ತಿನ ಸಮಾಲೋಚನೆ ಕಾಂಗ್ರೆಸ್ಸಿನ ಬಹಿಷ್ಕಾರದಿಂದ ಅಪೂರ್ಣವಾಗಿತ್ತು. ಅಲ್ಲದೇ ಮಹಮದ್‌ ಅಲಿ ಜಿನ್ನಾ ಮತ್ತು ಬಿ. ಆರ್‌. ಅಂಬೇಡ್ಕರ್‌ ಅವರ ಪ್ರತ್ಯೇಕ ಪ್ರಾತಿನಿಧ್ಯ ಹಾಗೂ ಮತ ಕ್ಷೇತ್ರಗಳ ಬೇಡಿಕೆಗಳಿಂದ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಎರಡನೇ ದುಂಡು ಮೇಜಿನ ಪರಿಷತ್ತು ೧೯೩೧ರ ಸೆಪ್ಟೆಂಬರ್‌ನಲ್ಲಿ ಸೇರಿದಾಗ ಗಾಂಧಿ ಅವರು ಕಾಂಗ್ರೆಸ್ಸಿನ ಏಕೈಕ ಪ್ರತಿನಿಧಿಯಾಗಿ ಹೋದರು. ಮುಖ್ಯವಾಗಿ ಕೋಮು ಸಮಸ್ಯೆ ಮತ್ತು ನಿಮ್ನವರ್ಗದ ಪ್ರಾತಿನಿಧ್ಯದ ಬಗ್ಗೆ ತೀವ್ರ ಭಿನ್ನಾಭಿಪ್ರಾಯವುಂಟಾಯಿತು. ಗಾಂಧಿಯವರ ಕಾಂಗ್ರೆಸ್‌ ಸಂಪೂರ್ಣ ಭಾರತವನ್ನು, ಎಲ್ಲ ವರ್ಗದವರನ್ನು ಪ್ರತಿನಿಧಿಸುತ್ತದೆ ಎಂಬ ಮಾತನ್ನು ಅಂಬೇಡ್ಕರ್‌ ಒಪ್ಪದೇ ನಿಮ್ನವರ್ಗಗಳಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರ ಬೇಕೆಂದು ವಾದಿಸಿದರು. ಈ ವಾದಕ್ಕೆ ಸಿಖ್ಖರ ವಿನಾ ಉಳಿದ ಎಲ್ಲ ಅಲ್ಪಸಂಖ್ಯಾತರ ಬೆಂಬಲ ದೊರೆಯಿತು. ಮುಸ್ಲಿಮರು, ಸಿಖ್ಖರು ಕಾಂಗ್ರೆಸ್ಸಿನ ಸಂಯುಕ್ತ ರಚನಾ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ತಿಳಿಸಿದರು. ಅಂಬೇಡ್ಕರರು ಗಾಂಧಿ ಹಾಗೂ ಕಾಂಗ್ರೆಸ್ಸಿನಿಂದ ನ್ಯಾಯ ದೊರಕುವುದಿಲ್ಲವೆಂದು, ನಿಮ್ನವರ್ಗಗಳಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರ ಬೇಕೆಂದು ವಾದಿಸಿ ಬ್ರಿಟಿಷ್ ‌ಸರ್ಕಾರ ಈ ಬಗ್ಗೆ ಮರುಚಿಂತನೆ ಮಾಡುವಂತೆ ಮಾಡಿದರು. ಮುಸ್ಲಿಮ್‌ಲೀಗ್‌ ಕೂಡ ತನ್ನ ಬೇಡಿಕೆಯನ್ನು ಕೈಬಿಡಲಿಲ್ಲ. ಇದರಿಂದ ಗಾಂಧಿಯವರ ವಿಚಾರಕ್ಕೆ ಪುಷ್ಟಿ ದೊರಕದೆ ನಿರಾಶರಾಗಿ ಬರಿಗೈಯಲ್ಲಿ ಹಿಂತಿರುಗಿದರು. ದುಂಡು ಮೇಜಿನ ಪರಿಷತ್ತು ವಿಫಲವಾಯಿತು. ನಂತರ ಬ್ರಿಟಿಷ್ ‌ಪ್ರಧಾನಿ ಆಗಸ್ಟ್‌ ೧೯೩೨ರಲ್ಲಿ ತನ್ನ ತೀರ್ಪನ್ನು ನೀಡಿದರು. ಅಲ್ಪಸಂಖ್ಯಾತರ ಬೇಡಿಕೆಗಳನ್ನು ಈಡೇರಿಸುವ, ನಿಮ್ನವರ್ಗಗಳಿಗೆ ಪ್ರತ್ಯೇಕ ಪ್ರಾತಿನಿಧ್ಯ ಕೊಡುವ ಈ ತೀರ್ಪನ್ನು ಮತೀಯ ತೀರ್ಪೆಂದು ಕರೆಯಲಾಗಿದೆ. ಭಾರತದ ಸಮಾಜವನ್ನು, ದೇಶವನ್ನು ಛಿದ್ರಗೊಳಿಸುವ ಈ ತೀರ್ಪನ್ನು ಕಟುವಾಗಿ ಟೀಕಿಸಿ ಗಾಂಧಿ ಅದರ ವಿರುದ್ಧ ಸೆಪ್ಟೆಂಬರ್‌ ೨೦ ರಂದು ಆತ್ಮಶುದ್ಧಿಗಾಗಿ ಆಮರಾಂತ ಉಪವಾಸ ವ್ರತ ಕೈಗೊಳ್ಳುವುದಾಗಿ ಘೋಷಿಸಿದರು. ಗಾಂಧಿಯ ಈ ನಿರ್ಧಾರವನ್ನು ಸರ್ಕಾರ ವಿರೋಧಿಸಿತು. ತನ್ನ ನಿಲುವನ್ನು ಸಮರ್ಥಿಸಿಕೊಂಡಿತು. ಗಾಂಧಿಯವರ ಉಪವಾಸವನ್ನು ಅಂಬೇಡ್ಕರ್ ಒಂದು ತೋರಿಕೆಯ ರಾಜಕೀಯ ನಾಟಕವೆಂದು ಹೇಳಿದರು. ಅನೇಕ ಗಣ್ಯರು, ಕಾಂಗ್ರೆಸ್‌ ನಾಯಕರು ಸಭೆ ಸೇರಿ ಗಾಂಧಿಯವರ ನಿರ್ಣಯ ಬದಲಿಸುವಂತೆ ಕೇಳಿಕೊಂಡರು. ನಿಮ್ನವರ್ಗದ ನಾಯಕ ಎಂ. ಸಿ. ರಾಜ ಪ್ರತ್ಯೇಕತಾ ಪ್ರಾತಿನಿಧ್ಯವನ್ನು ಖಂಡಿಸಿದರು. ಉಪವಾಸ ಸತ್ಯಾಗ್ರಹವನ್ನು ಆರಂಭಿಸಿ ಗಾಂಧಿ ನಿಶ್ಯಕ್ತರಾದರು. ಅಂಬೇಡ್ಕರ್‌ ದಲಿತರ ರಾಜಕೀಯ ಹಕ್ಕು ಸ್ಥಾನಮಾನಗಳ ಬಗ್ಗೆ ಗಾಂಧಿಯವರ ಸ್ಪಷ್ಟ ನಿಲುವೇನೆಂಬುದನ್ನು ತಿಳಿಯ ಬಯಸಿದರು. ಸವರ್ಣೀಯರು, ಗಾಂಧಿಯ ಮಾತಿನಂತೆ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಕಾರ್ಯಕ್ರಮವನ್ನು ಹಾಕಿಕೊಳ್ಳುವುದಾಗಿ ಹೇಳಿಕೊಂಡರು. ಅಂಬೇಡ್ಕರ್‌ರ ಮನವೊಲಿಸಲು ಪ್ರಯತ್ನಿಸಿದರು, ಅವರ ಮೇಲೆ ಒತ್ತಡ ತಂದರು. ಅಂಬೇಡ್ಕರರು ಶತಮಾನಗಳಿಂದ ಶೋಷಣೆ, ಅವಮಾನಕ್ಕೊಳಗಾದ ತಮ್ಮ ಅಸ್ಪೃಶ್ಯ ಜನಾಂಗದ ಹಿತವನ್ನು ಬಲಿಕೊಡಲಾರೆನೆಂದು ಸ್ಪಷ್ಟವಾಗಿ ತಿಳಿಸಿದರು. ಆದರೆ ಪರಿಸ್ಥಿತಿ ವಿಷಮಿಸುತ್ತಿರುವ ಸಮಯದಲ್ಲಿ ಅರೆ ಮನಸ್ಸಿನಿಂದ ಗಾಂಧಿಯನ್ನು ಭೇಟಿ ಮಾಡಲು ಯರವಾಡ ಸೆರೆಮನೆಗೆ ಹೋದರು. ಅಲ್ಲಿ ಗಾಂಧಿ ಹಾಗೂ ಇತರ ನಾಯಕರು ಮುಂದಿಟ್ಟ ಸಂಯುಕ್ತ ಮತದಾನ ಪದ್ಧತಿಯ ಪ್ರಕಾರ ದಲಿತರ ಮೀಸಲು ಕ್ಷೇತ್ರ ವ್ಯವಸ್ಥೆಗೆ ಒಪ್ಪಿಕೊಂಡರು. ಶಾಸನ ಸಭೆಗಳಲ್ಲಿ ದಲಿತರಿಗೆ ಪ್ರಾತಿನಿಧ್ಯ ಕೊಡುವ ಸಲುವಾಗಿ ಇಂತಿಷ್ಟು ಸ್ಥಾನಗಳನ್ನು ಮೀಸಲಿಡಬೇಕೆಂದು, ಈ ಮೀಸಲು ವ್ಯವಸ್ಥೆ ಹತ್ತು ವರ್ಷಗಳ ಕಾಲ ಇರಬೇಕೆಂದು ತೀರ್ಮಾನವಾಯಿತು. ಸೆಪ್ಟೆಂಬರ್‌ ೨೪ ರಂದು ಪೂನಾ ಒಪ್ಪಂದವಾಗಿ ಗಾಂಧಿ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿದರು. ಆದರೆ ವೈಸರಾಯ್‌ ಜೊತೆಗೆ ಶಾಂತಿ ಸಂಧಾನದ ಮಾತುಕತೆಗಳು ವಿಫಲವಾಗಿ ಪುನಃ ಗಾಂಧಿ ವೈಯಕ್ತಿಕ ಸತ್ಯಾಗ್ರಹವನ್ನು ಪ್ರಾರಂಭಿಸುವುದಾಗಿ ಹೇಳಿದರು. ಸರ್ಕಾರ ಅವರನ್ನು ಬಂಧಿಸಿತು. ದೇಶಾದ್ಯಂತ ಜನರು ವೈಯಕ್ತಿಕ ಕಾನೂನುಭಂಗ ಚಳವಳಿಯನ್ನು ನಡೆಸಿದರು. ೧೯೩೩ರಲ್ಲಿ ಗಾಂಧಿಯವರು ಬಿಡುಗಡೆ ಹೊಂದಿರು. ಚಳವಳಿಯಲ್ಲಿ ಜನರ ಉತ್ಸಾಹ ಕಡಿಮೆಯಾಗಿತ್ತು. ೧೯೩೪ರಲ್ಲಿ ಗಾಂಧಿ ಕಾನೂನುಭಂಗ ಚಳವಳಿಗಳನ್ನು ನಿಲ್ಲಿಸಿದರು. ಬಿಡುವಿನ ನಡುವೆ ಗಾಂಧಿ ಅಸ್ಪೃಶ್ಯತಾ ನಿರ್ಮೂಲನ ಆಂದೋಲನವನ್ನು ರಾಷ್ಟ್ರಾದ್ಯಂತ ಬೃಹತ್‌ ಪ್ರಮಾಣದಲ್ಲಿ ಪ್ರಾರಂಭಿಸಿ ಪಿಡುಗನ್ನು ತೊಡೆದು ಹಾಕಲು ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಂಡರು. ಅಸ್ಪೃಶ್ಯತಾ ನಿವಾರಣಾ ಸಪ್ತಾಹವನ್ನು ಎಲ್ಲೆಡೆ ಆಚರಿಸಲಾಯಿತು. ಗಾಂಧಿ ಹರಿಜನ ಸೇವಕ ಸಂಘವನ್ನು ಸ್ಥಾಪಿಸಿದರು. ಜನರಲ್ಲಿ ಸಾಮಾಜಿಕ ಅನಿಷ್ಟದ ವಿರುದ್ಧ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ‘ಹರಿಜನ’ ಪತ್ರಿಕೆಯಲ್ಲಿ ತಮ್ಮ ವಿಚಾರಗಳನ್ನು ಜನರಿಗೆ ಮುಟ್ಟುವಂತೆ ಮಾಡಿದರು. ಭಂಗಿ ಕಾಲೋನಿಗಳಲ್ಲಿ ತಾವೇ ಸ್ವತಃ ಕೆಲಸ ಮಾಡಿದರು. ಹರಿಜನರೊಂದಿಗೆ ಬೆರೆತರು. ಕಾಂಗ್ರೆಸ್‌ ಕಾರ್ಯಕರ್ತರು ದೇಶದ ಅನೇಕ ಕಡೆ ಅಸ್ಪೃಶ್ಯರೊಂದಿಗೆ ಸವರ್ಣೀಯರು ಬೆರೆಯುವಂತೆ, ದೇವಸ್ಥಾನದ ಬಾಗಿಲುಗಳು ಅವರಿಗೆ ತೆರೆಯುವಂತೆ, ಕೆರೆಬಾವಿಗಳಲ್ಲಿ ನೀರು ಕೊಡುವಂತೆ ಜನರ ಮನಸ್ಸನ್ನು ಒಲಿಸಿದರು.

ಮೂರನೇ ದುಂಡುಮೇಜಿನ ಪರಿಷತ್ತಿನ ನಂತರ ಬ್ರಿಟಿಷ್ ‌ಸರ್ಕಾರ ೧೯೩೫ರ ಭಾರತ ಸರ್ಕಾರ ಶಾಸನವನ್ನು ಹೊರಡಿಸಿತು. ಭಾರತ ಒಕ್ಕೂಟ ರಚನೆ ಮತ್ತು ಪ್ರಾಂತೀಯ ಸ್ವಾಯತ್ತತೆ ಈ ಶಾಸನದ ಮುಖ್ಯ ಅಂಶಗಳು. ಈ ಶಾಸನದ ಕಟು ಟೀಕೆಗೆ ಒಳಗಾಯಿತು. ಆದರೂ ಕಾಂಗ್ರೆಸ್ಸಿಗರು ಸಂಸದೀಯ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ತೋರಿದರು. ೧೯೩೭ರ ಚುನಾವಣೆಯಲ್ಲಿ ಭಾಗವಹಿಸಿ ಹಿಂದು ಬಹುಸಂಖ್ಯಾತ ಪ್ರಾತಗಳಲ್ಲಿ ಬಹುಮತ ಗಳಿಸಿದರು. ಆ ಪ್ರಾಂತಗಳಲ್ಲಿ ಕಾಂಗ್ರೆಸ್ಸಿಗೆ ಸರ್ಕಾರ ರಚಿಸಲು ಸಾಧ್ಯವಾಯಿತು. ಚುನಾವಣಾ ಕಾಲದಲ್ಲಿ ದೇಸಾದ್ಯಂತ ಹಳ್ಳಿಹಳ್ಳಿಗೂ ಕಾಂಗ್ರೆಸ್‌ ತನ್ನ ಸಂದೇಶ ಹಾಗೂ ರಾಷ್ಟ್ರೀಯ ಭಾವನೆಯನ್ನು ಪ್ರಸಾರ ಮಾಡಿತು. ಜವಾಹರಲಾಲ್‌ ನೆಹರೂ ಚುನಾವಣೆ ಪ್ರಚಾರ ಕಾರ್ಯದಲ್ಲಿ ಪ್ರಮುಖಪಾತ್ರ ನಿರ್ವಹಿಸಿದರು. ಕೆಲವು ಪ್ರಾಂತಗಳಲ್ಲಿ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಮುಸ್ಲಿಮ್‌ಲೀಗ್‌ ಹೆಚ್ಚಿನ ಸ್ಥಾನವನ್ನು ಗಳಿಸಲಿಲ್ಲ. ಏಳು ಪ್ರಾಂತಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತು. ಮುಸ್ಲಿಮ್‌ಲೀಗ್‌ ಕಾಂಗ್ರೆಸ್‌ ನೊಡನೆ ಸೇರಿ ಸಮ್ಮಿಶ್ರ ಸರಕಾರವನ್ನು ರಚಿಸುವ ಸಲಹೆಯನ್ನು ಕಾಂಗ್ರೆಸ್ಸಿಗರು ತಿರಸ್ಕರಿಸಿದರು. ಯು.ಪಿ.ಯಲ್ಲಿ ಗೋವಿಂದವಲ್ಲಭ ಪಂತ್‌ ಪ್ರಾಂತೀಯ ಪ್ರಧಾನಿಯಾದರು. ಕಾಂಗ್ರೆಸ್ಸಿಗೆ ಮುಂದಿನ ರಾಷ್ಟ್ರೀಯ ಹೋರಾಟಕ್ಕೆ ಜನತೆಯನ್ನು ಸಜ್ಜುಗೊಳಿಸಲು ಇದು ಉತ್ತಮ ಅವಕಾಶವಾಗಿ ಕಂಡಿತು. ಕಾಂಗ್ರೆಸ್‌ ಮಂತ್ರಿಮಂಡಳ ಅನೇಕ ಜನಪರ ಕಲ್ಯಾಣ ಕಾರ್ಯಕ್ರಮ ಹಾಗೂ ಸಾಮಾಜಿಕ ಸುಧಾರಣೆಯನ್ನು ಕೈಗೊಂಡು ಜನಪ್ರಿಯವಾಯಿತು. ವಿಶೇಷ ಸಾಧನೆಗಳನ್ನು ಮಾಡಿತು. ಈ ಕಾಲದಲ್ಲಿ ಕಾಂಗ್ರೆಸ್‌ ಸದಸ್ಯರ ಸಂಖ್ಯೆ ಐವತ್ತು ಲಕ್ಷಕ್ಕೇರಿತು. ತನ್ನ ಪ್ರತಿಷ್ಠೆ ಮತ್ತು ಒಗ್ಗಟ್ಟಿನಿಂದಾಗಿ ಕಾಂಗ್ರೆಸ್‌ ಒಂದು ಬೃಹತ್‌ ರಾಷ್ಟ್ರೀಯ ಸಂಸ್ಥೆಯಾಗಿ ಬೆಳೆಯಿತು.

ಆದರೆ ೧೯೩೯ರಲ್ಲಿ ಪ್ರಪಂಚದ ಯುದ್ಧ ಬಂದೆರಗಿತು. ಬ್ರಿಟಿಷ್ ‌ಸರ್ಕಾರ ಭಾರತವನ್ನು ಯುದ್ಧಕ್ಕೆ ತಳ್ಳಿತು. ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸದೆ ಕೈಗೊಂಡ ಈ ಅನುಚಿತ ತೀರ್ಮಾನದಿಂದ ಸಿಟ್ಟಿಗೆದ್ದ ಕಾಂಗ್ರೆಸ್ಸಿಗರು ಮಂತ್ರಿಮಂಡಲದಿಂದ ಹೊರಬಂದು ರಾಜೀನಾಮೆ ನೀಡಿದರು. ಆದರೆ ಜಿನ್ನಾ ಮತ್ತು ಮುಸ್ಲಿಮ್‌ಲೀಗ್‌ ಸದಸ್ಯರು ಇದಕ್ಕೆ ವಿರುದ್ಧವಾಗಿ ತಾವು ಪ್ರತ್ಯೇಕವಾಗಿ ಉಳಿದು ಬ್ರಿಟಿಷರೊಂದಿಗೆ ಸಹಕರಿಸುವುದಾಗಿ ಹೇಳಿದರು. ಈ ನಡುವೆ ಕಾಂಗ್ರೆಸ್‌ನಲ್ಲಿ ಪುನಃ ಬಿಕ್ಕಟ್ಟು ತಲೆದೋರಿತು. ೧೯೩೮ರ ಹರಿಪುರ ಅಧಿವೇಶನದಲ್ಲಿ ಸುಭಾಷ್‌ಚಂದ್ರ ಬೋಸ್‌ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಗಾಂಧಿ ಮತ್ತು ಬೋಸರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಮುಂದಿನ ತ್ರಿಪುರ ಅಧಿವೇಶನದಲ್ಲಿ ಗಾಂಧಿ ಪಟ್ಟಾಭಿ ಸೀತಾರಾಮಯ್ಯನವರನ್ನು ಬೆಂಬಲಿಸಿದರು. ಅವರೇ ತಮ್ಮ ಅಭ್ಯರ್ಥಿ ಎದರು. ಆದರೂ ಬೋಸ್‌ ಅವರೇ ಗೆದ್ದರು. ಗಾಂಧಿ ಅವರ ಅಭ್ಯರ್ಥಿ ಸೋತರು. ಇದು ತಮ್ಮ ಸೋಲೆಂದು ಗಾಂಧಿ ಭಾವಿಸಿದರು. ಇದರಿಂದಾಗಿ ವರ್ಕಿಂಗ್‌ ಕಮಿಟಿಯಲ್ಲಿ ಸುಭಾಷರು ಕೆಲಸ ಮಾಡಲು ಸಾಧ್ಯವಾಗಲಾಗದೇ ಹೋಯಿತು. ಸಮಿತಿಯ ಸದಸ್ಯರಲ್ಲಿ ಅನೇಕರು ರಾಜೀನಾಮೆ ಇತ್ತರು. ಗಾಂಧಿ ಈ ಹಿಂದೆಯೇ ಕಾಂಗ್ರೆಸ್‌ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದರು. ಆದರೂ ತಮಗೆ ಸರಿ ಎನಿಸಿದ ಅಭ್ಯರ್ಥಿಯೇ ಅಧ್ಯಕ್ಷರಾಗುವಂತೆ ಪ್ರಭಾವ ಬೀರುತ್ತಿದ್ದರು. ಗಾಂಧಿ ಮತ್ತು ಸುಭಾಷರ ನಡುವಣ ಸಂಧಾನ ವಿಫಲವಾಗಿ ಬೋಸರು ಬೇಸರದಿಂದ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದರು. ಬೋಸರನ್ನು ಸದಸ್ಯತ್ವದಿಂದ ತೆಗೆದುಹಾಕಿ ಅವರು ಕಾರ್ಯಕಾರಿ ಸಮಿತಿಯಲ್ಲಿ ಸೇರದಂತೆ ಅನರ್ಹರನ್ನಾಗಿ ಮಾಡಲಾಯಿತು. ಧೃತಿಗೆಡದ ಸುಭಾಷ್‌ತಮ್ಮದೇ ಆದ ಫಾರ್ವರ್ಡ್‌ಬ್ಲಾಕ್‌ ಎಂಬ ಪಕ್ಷವನ್ನು ಕಟ್ಟಿದರು. ಬ್ರಿಟಿಷ್ ‌ಸರ್ಕಾರದ ವಿರುದ್ಧ ಬಹಿರಂಗವಾಗಿ ಹೋರಾಡುವುದಾಗಿ ಅವರು ತಿಳಿಸಿದರು.

ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಭಾರತದಲ್ಲಿ ಸಮಾಜವಾದಿಗಳ ಮತ್ತು ಕಮ್ಯುನಿಷ್ಟರ ಬೆಳವಣಿಗೆ ಹಾಗೂ ರಾಷ್ಟ್ರೀಯ ಹೋರಾಟದಲ್ಲಿ ಅವರು ನಿರ್ವಹಿಸಿದ ಪಾತ್ರವನ್ನೂ ಅವಲೋಕಿಸಬೇಕಾಗುತ್ತದೆ. ಸಮಾಜವಾದಿ ಸಿದ್ಧಾಂತ ಭಾರತದ ಬುದ್ಧಿಜೀವಿಗಳಿಗೆ ಆಕರ್ಷಣೀಯವಾಗಿತ್ತು. ಅದರಲ್ಲೂ ೧೯೧೭ರ ರಷ್ಯಾ ಕ್ರಾಂತಿಯ ನಂತರ ಅದರ ಪ್ರಭಾವ ಗಾಢವಾಯಿತು. ಕಮ್ಯುನಿಸಂ ಅನೇಕರನ್ನು ಸೆಳೆಯಿತು. ಭಾರತದಲ್ಲಿ ಕಮ್ಯುನಿಸ್ಟ್‌ ತತ್ವಗಳನ್ನು ಹರಡಲು ಪ್ರಯತ್ನಿಸಿದರು. ಇಂಗ್ಲೆಂಡಿನ ಕಮ್ಯುನಿಷ್ಟ್‌ ಕಾರ್ಯಕರ್ತರು ಭಾರತದ ಕಾರ್ಮಿಕ ಸಂಘಟನೆಯಲ್ಲಿ ಆಸಕ್ತಿ ತೋರಿದರು. ಲಾಲಾ ಲಜಪತರಾಯ್‌, ಜವಹರಲಾಲ್‌ ನೆಹರು, ಜಯಪ್ರಕಾಶ ನಾರಾಯಣ, ನರೇಂದ್ರ ದೇವ, ಅಚ್ಯುತ ಪಟವರ್ಧನ್‌ ಮೊದಲಾದ ಕಾಂಗ್ರೆಸ್‌ ನಾಯಕರು ಸಮಾಜವಾದದಲ್ಲಿ ನಂಬಿಕೆಯುಳ್ಳವರಾಗಿದ್ದರು. ಭಾರತದಲ್ಲಿ ಕಮ್ಯುನಿಸ್ಟ್‌ಪಕ್ಷ ಸ್ಥಾಪನೆಯಾಗಿ ಅದು ಬಂಗಾಳದಲ್ಲಿ ಹೆಚ್ಚು ಪ್ರಭಾವಶಾಲಿಯಾಯಿತು. ಕಮ್ಯುನಿಸ್ಟರು ಕಾರ್ಮಿಕರ ಟ್ರೇಡ್‌ ಯೂನಿಯನ್‌ಗಳನ್ನು ವ್ಯವಸ್ಥೆಗೊಳಿಸಿದರು. ಕಲ್ಕತ್ತಾ ಅದರ ಕೇಂದ್ರವಾಯಿತು. ಬ್ರಿಟಿಷ್ ‌ಸಾಮ್ರಾಜ್ಯಶಾಹಿಗಳ ವಿರುದ್ಧ ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದರು, ಪಿತೂರಿ ನಡೆಸಿದರು. ಅದರಲ್ಲಿ ಕಾನ್ಪುರ ಪಿತೂರಿ ಮೊಕದ್ದಮೆ ಹೆಸರುವಾಸಿಯಾದದ್ದು. ಬ್ರಿಟಿಷರಿಗೆ ಕಮ್ಯುನಿಸ್ಟರಿಂದ ಅಪಾಯವಿದೆ ಎಂದು ತಿಳಿಯಿತು. ೧೯೨೯ರಲ್ಲಿ ಕಮ್ಯುನಿಸ್ಟರು ಮೀರತ್‌ ಪಿತೂರಿ ನಡೆಸಿದರು. ಇದರಲ್ಲಿ ಐವತ್ತೇಳು ಆಪಾದಿತರಿಗೆ ಶಿಕ್ಷೆಯಾಯಿತು. ಬಂಗಾಳ, ಮುಂಬೈ, ಪಂಜಾಬ್‌ಗಳಲ್ಲಿ ಕಾರ್ಮಿಕರ ಚಳವಳಿ ಪ್ರಭಾವಶಾಲಿಯಾಗಿ ಹರಡಿತು. ಆದರೆ ಅದರ ನಾಯಕರ ಬಂಧನದಿಂದ ಸ್ವಲ್ಪ ಕಾಲ ಕಮ್ಯುನಿಸ್ಟ್‌ ಚಟುವಟಿಕೆಯಾಗಿ ಹರಡಿತು. ಆದರೆ ಅದರ ನಾಯಕರ ಬಂಧನದಿಂದ ಸ್ವಲ್ಪ ಕಾಲ ಕಮ್ಯುನಿಸ್ಟ್‌ ಚಟುವಟಿಕೆ ಸ್ಥಗಿತಗೊಂಡಿತು. ಪುನಃ ಕಾರ್ಮಿಕ ಚಳವಳಿ ವ್ಯಾಪಕವಾಯಿತು ಅವರ ಸಂಘಟನೆ ಪ್ರಬಲವಾಯಿತು. ಮುಷ್ಕರ, ಪ್ರದರ್ಶನ, ಪ್ರತಿಭಟನೆಗಳು ನಡೆದವು. ಆದರೆ ಸರ್ಕಾರ ಕಮ್ಯುನಿಸ್ಟ್‌ಪಕ್ಷ ಮತ್ತು ಅದರ ಅಂಗಸಂಸ್ಥೆಗಳನ್ನು ಬಹಿಷ್ಕರಿಸಿತು. ಕಮ್ಯುನಿಸ್ಟ್‌ ನಾಯಕರ ವಿಚಾರಣೆ ನಡೆಯುವಾಗ ಅವರಿಗೆ ಸಹಾನುಭೂತಿ, ಜನಬೆಂಬಲ ವ್ಯಕ್ತವಾಯಿತು. ಜವಹರಲಾಲ್‌ ನೆಹರು, ಅನ್ಸಾರಿ ಮೊದಲಾದವರು ವಿಚಾರಣಾ ಸಮಯದಲ್ಲಿ ಅವರಿಗೆ ಬೆಂಬಲ ನೀಡಿದರು. ಗಾಂಧಿ ಅವರನ್ನು ಜೈಲಿನಿಂದ ಭೇಟಿ ಮಾಡಿದರು. ಇದರಿಂದ ಸಂಗ್ರಾಮವನ್ನು ಹೀಗಳೆದು, ಜನವಿರೋಧಿ ಎಂದು ಬಣ್ಣಿಸಿದರು. ಕಮ್ಯುನಿಸ್ಟ್‌ ಮಾದರಿಯ ಸಶಸ್ತ್ರ ಕ್ರಾಂತಿಯಿಂದ ಮಾತ್ರ ಸಾಮ್ರಾಜ್ಯಶಾಹಿ ಮತ್ತು ಬಂಡವಾಳ ಶಾಹಿಯಿಂದ ಬಿಡುಗಡೆ ಹೊಂದಲು ಸಾಧ್ಯವೆಂದು ಸಮರ್ಥಿಸಿದರು. ಈ ನಡುವೆ ತೀವ್ರ ಎಡಪಂಥವಾದಿಗಳಿಗೂ, ಸಿ.ಪಿ.ಐ. ನಡುವೆ ಭಿನ್ನಾಭಿಪ್ರಾಯಗಳುಂಟಾದುದರಿಂದ ಕಮ್ಯುನಿಸ್ಟರ ಏಳಿಗೆ ಕುಂಠಿತವಾಯಿತು. ಜವಾಹರಲಾಲ್‌ ನೆಹರು, ನರೇಂದ್ರದೇವ, ಅಚ್ಯುತ ಪಟವರ್ಧನ್‌ ಮೊದಲಾದ ಕಾಂಗ್ರೆಸ್‌ ನಾಯಕರು ಸಮಾಜವಾದದಲ್ಲಿ ನಂಬಿಕೆಯುಳ್ಳವರಾಗಿದ್ದರು. ಅಲ್ಲದೆ ಕೆಲವು ಕಾಂಗ್ರೆಸ್‌ ನಾಯಕರು ಸಮಾಜವಾದಿ ತತ್ವಗಳಿಂದ ಪ್ರೇರಿತರಾಗಿ ೧೯೩೪ರಲ್ಲಿ ಕಾಂಗ್ರೆಸ್‌ ಸೋಷಿಯಲಿಸ್ಟ್‌ ಪಕ್ಷವನ್ನು ಸ್ಥಾಪಿಸಿದರು. ಆದರೆ ಕಾಂಗ್ರೆಸ್ಸಿನಿಂದ ಪ್ರತ್ಯೇಕಗೊಳ್ಳದೆ ಭಾರತದಲ್ಲಿ ಆರ್ಥಿಕ ಬದಲಾವಣೆಯನ್ನು ಮಾಡುವ ಮಾರ್ಗವನ್ನು ಕಂಡರು. ಇವರಲ್ಲಿ ಜಯಪ್ರಕಾಶ ನಾರಾಯಣ್‌, ರಾಮಮನೋಹರ ಲೋಹಿಯಾ, ಎಸ್‌. ಎಂ. ಜೋಶಿ, ಕಮಲಾದೇವಿ ಚಟ್ಟೋಪಾಧ್ಯಾಯ ಮೊದಲಾದವರು ಪ್ರಮುಖರು. ೧೯೩೬ರ ಅಧಿವೇಶನದಲ್ಲಿ ಕಾಂಗ್ರೆಸ್‌ ಸೋಷಿಯಲಿಸ್ಟ್‌ಪಕ್ಷ ಹದಿನೈದು ಅಂಶಗಳ ಕಾರ್ಯಕ್ರಮಗಳನ್ನು ಪ್ರಕಟಿಸಿತು. ಆದರೆ ಗಾಂಧಿಯವರ ವಿಚಾರ ಮಾರ್ಗ ಭಿನ್ನವಾಗಿತ್ತು. ಅವರಿಗೆ ವರ್ಗ ಸಂಘರ್ಷವಾದದಲ್ಲಿ ನಂಬಿಕೆ ಇರಲಿಲ್ಲ. ಅವರು ಅದನ್ನು ವಿರೋಧಿಸಿದರು. ಇದರಿಂದ ಗಾಂಧಿ ನೆಹರೂರವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು. ಸುಭಾಸ್‌ಚಂದ್ರ ಬೋಸರು ನೆಹರು ಪರ ವಾಲಿದರು. ಆದರೆ ನೆಹರೂಗೆ ಗಾಂಧಿಯವರ ವಿರೋಧವಾಗಲಿ, ಗಾಂಧಿ ಕಾಂಗ್ರೆಸ್‌ ನಿಂದ ಹೊರಗುಳಿಯುವುದಾಗಲಿ ಬೇಕಿರಲಿಲ್ಲ. ಆದುದರಿಂದ ಗಾಂಧಿಯೊಡನೆ ರಾಜಿ ಮಾಡಿಕೊಂಡರು. ಇದರಿಂದ ಕಾಂಗ್ರೆಸ್‌ ಸೋಷಿಯಲಿಸ್ಟ್‌ ಪಕ್ಷ ಅಲ್ಪಸಂಖ್ಯಾತವಾಗಿಯೇ ಉಳಿಯಿತು. ಎರಡನೇ ಪ್ರಪಂಚ ಯುದ್ಧದಲ್ಲಿ ಬ್ರಿಟಿಷ್ ‌ಸರ್ಕಾರವನ್ನು ವಿರೋಧಿಸಿ ಕಾಂಗ್ರೆಸ್‌ ಪಕ್ಷ ಹಾಗೂ ಗಾಂಧಿ ವಿಚಾರವಾದಕ್ಕೆ ಹತ್ತಿರವಾದರು. ಇಂಡಿಯಾ ಚಳವಳಿಯಲ್ಲಿ ಭಾಗಿಗಳಾದರು. ಇದರಲ್ಲಿ ಜಯಪ್ರಕಾಶ ನಾರಾಯಣರ ಪಾತ್ರ ಮಹತ್ತರವಾಗಿತ್ತು. ಈ ನಡುವೆ ೧೯೩೫ರಲ್ಲಿ ಕಮ್ಯುನಿಸ್ಟ್‌ ನಿಷೇಧಿತವಾದುದರಿಂದ ಅದರ ಅನೇಕ ಕಾರ್ಯಕರ್ತರು ಕಾಂಗ್ರೆಸ್‌ ಸೋಷಿಯಲಿಸ್ಟ್‌ ಪಕ್ಷ ಸೇರಿದರು. ಆದರೆ ಕ್ರಮೇಣ ಅವರ ಕಾರ್ಯವೈಖರಿ, ಕಿರುಕುಳಗಳನ್ನು ಸಹಿಸಲಾರದೆ ಅವರನ್ನು ಕಾಂಗ್ರೆಸ್‌ ಸೋಷಿಯಲಿಸ್ಟ್‌ ಪಕ್ಷ ಹೊರಹಾಕಿತು. ಎರಡನೇ ಮಹಾಯುದ್ಧದ ಕಾಲದಲ್ಲಿ ಭಾರತದ ಕಮ್ಯುನಿಸ್ಟರು ಗೊಂದಲಕ್ಕೀಡಾದರು. ತಮ್ಮ ನಾಯಕ ರಾಷ್ಟ್ರ ನಿಲುವನ್ನು ಬದಲಿಸಿದಂತೆ ಅವರು ಕೂಡ ಮೊದಲು ಬ್ರಿಟಿಷ್ ‌ಸಾಮ್ರಾಜ್ಯಶಾಹಿಗಳ ವಿರುದ್ಧ ಯುದ್ಧ ಸಾರಿ, ನಂತರ ತಮ್ಮ ವಿಚಾರವನ್ನು ಬದಲಿಸಿದರು.

೧೯೩೯ರಲ್ಲಿ ಎರಡನೇ ಮಹಾಯುದ್ಧ ಪ್ರಾರಂಭವಾಗಿ ಕಾಂಗ್ರೆಸ್‌ ಮಂತ್ರಿಮಂಡಲದಿಂದ ಹೊರಬಂದುದರಿಂದ ಸಂವಿಧಾನಾತ್ಮಕ ಬಿಕ್ಕಟ್ಟು ಉಂಟಾಯಿತು. ಬ್ರಿಟನ್‌ಗೆ ಯುದ್ಧಕಾಲದಲ್ಲಿ ಭಾರತೀಯರ ಸಹಕಾರ ಬೇಕಾಗಿದ್ದಲ್ಲಿ ಅದು ಭಾರತದ ಬಗ್ಗೆ ಅದರ ಧೋರಣೆಗಳನ್ನು ಸ್ಪಷ್ಟಪಡಿಸುವಂತೆ ಕಾಂಗ್ರೆಸ್‌ ಕೇಳಿಕೊಂಡಿತು. ೧೯೪೦ರಲ್ಲಿ ವೈಸರಾಯ್‌ ಲಿನ್‌ ಲಿತ್‌ಗೋ ತಮ್ಮ ಪ್ರಸ್ತಾವನೆಯನ್ನು ಮುಂದಿಟ್ಟರು. ಆದರೆ ಅವರ ಆಗಸ್ಟ್‌ ಪ್ರಸ್ತಾವನೆ ರಾಜಕೀಯ ಧುರೀಣರ, ಕಾಂಗ್ರೆಸ್‌ ಮತ್ತು ಮುಸ್ಲಿಮ್‌ಲೀಗ್‌ನ್ನು ತೃಪ್ತಿಗೊಳಿಸಲಿಲ್ಲ. ಅಲ್ಲದೆ ಪ್ರಧಾನಿ ಚರ್ಚಿಲ್‌ ಅಟ್ಲಾಂಟಿಕ್‌ ಒಡಂಬಡಿಕೆ ಭಾರತಕ್ಕೆ ಅನ್ವಯವಾಗುವುದಿಲ್ಲವೆಂದರು ಮತ್ತು ತಾನು ಬ್ರಿಟಿಷ್ ‌ಸಾಮ್ರಾಜ್ಯದ ಸೂರ್ಯನು ಅಸ್ತಂಗತವಾಗಲು ಬಿಡಲಾರೆ ಎಂದರು. ಈ ವೇಳೆಗೆ ಜಪಾನ್‌ ಯುದ್ಧದಲ್ಲಿ ಆಗ್ನೇಯ ಏಷ್ಯಾದಲ್ಲಿ ಮುನ್ನುಗ್ಗಿತ್ತಿದ್ದುದು ಆತಂಕಕಾರಿಯಾಗಿತ್ತು. ೧೯೪೦ರಲ್ಲಿ ಗಾಂಧಿ ಬ್ರಿಟನ್‌ನ ವಿರುದ್ಧ ವೈಯಕ್ತಿಕ ಸತ್ಯಾಗ್ರಹದ ಕರೆ ಕೊಟ್ಟಿದ್ದರು. ಕಾಯಿದೆ ಭಂಗ ಚಳವಳಿ ಉಗ್ರರೂಪವನ್ನು ತಾಳಿತ್ತು. ಭಾರತೀಯರನ್ನು ತೃಪ್ತಿಪಡಿಸಲು ಬ್ರಿಟಿಷ್ ‌ಸರ್ಕಾರ ಸ್ಟ್ರಾಪರ್ಡ್‌ ಕ್ರಿಪ್ಸರನ್ನು ಸಂಧಾನಕ್ಕಾಗಿ ಕಳುಹಿಸಿಕೊಟ್ಟಿತು. ಕ್ರಿಪ್ಸ್‌ ಯುದ್ಧಾನಂತರದ ತನ್ನ ಸರ್ಕಾರದ ಯೋಜನೆಗಳನ್ನು ಮುಂದಿಟ್ಟನು. ಭಾರತಕ್ಕೆ ಡೊಮೀನಿಯನ್‌ ಸ್ಥಾನ ಕೊಡುವುದಾಗಿಯೂ ಅದಕ್ಕಾಗಿ ಸಂವಿಧಾನ ರಚಿಸಲು ಸಭೆ ಕರೆಯುವುದಾಗಿಯೂ, ಹೊಸ ಸಂವಿಧಾನದಲ್ಲಿ ಭಾರತ ಒಕ್ಕೂಟದಲ್ಲಿ ಸೇರುವ ಅಥವಾ ಬಿಡುವ ಸ್ವಾತಂತ್ರ್ಯವನ್ನು ಆಯಾ ರಾಜ್ಯಗಳಿಗೆ ಬಿಡುವುದಾಗಿಯೂ ತಿಳಿಸಿದನು. ಈ ಯೋಜನೆಗೆ ಕಾಂಗ್ರೆಸ್‌ ತನ್ನ ಅಸಮ್ಮತಿಯನ್ನು ಸೂಚಿಸಿ ತಿರಸ್ಕರಿಸಿತು. ಕ್ರಿಪ್ಸ್‌ ಶಿಫಾರಸ್ಸುಗಳನ್ನು ಬೇರೆ ಮಾರ್ಗವಿಲ್ಲದೆ, ಸರ್ಕಾರ ಹಿಂದಕ್ಕೆ ತೆಗೆದುಕೊಳ್ಳಬೇಕಾಯಿತು.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ತನ್ನ ಕೊನೆಯ ಹೋರಾಟವಾಗಿ ಚಲೇಜಾವ್ ಅಥವಾ ಕ್ವಿಟ್ ಇಂಡಿಯಾ (ಬ್ರೀಟಿಷರೇ ಭಾರತವನ್ನು ಬಿಟ್ಟು ತೊಲಗಿ)ಚಳವಳಿಯ ಕರೆಕೊಟ್ಟಿತು. ಗಾಂಧಿ ಕ್ವಿಟ್ ಇಂಡಿಯಾ ಹೋರಾಟದ ನಾಯಕತ್ವ ವಹಿಸಿದರು. ವೈಸರಾಯನೊಡನೆ ಗಾಂಧಿಯ ಸಂಧಾನ ವಿಫಲವಾಯಿತು. ಗಾಂಧಿ ಬ್ರಿಟಿಷರು ಕೂಡಲೇ ತಮ್ಮ ಆಳ್ವಿಕೆಯನ್ನು ಮುಂದಿಟ್ಟರು. ಆಗಸ್ಟ್ ೮. ೧೯೪೨ರಂದು ಕ್ವಿಟ್‌ ಇಂಡಿಯಾ ಚಳವಳಿ ಪ್ರಾರಂಭವಾಯಿತು. ಗಾಂಧಿ ತಮ್ಮ ದೇಶಬಾಂಧವರಿಗೆ ಇದು ಅಂತಿಮ ಹೋರಾಟವೆಂದು ಬಣ್ಣಿಸಿ “ಮಾಡು ಇಲ್ಲವೆ ಮಡಿ” ಎಂಬ ಘೋಷಣೆ ಕೋಟ್ಟರು. ದೇಶಾದ್ಯಂತ ವಿದ್ಯುತ್ ಸಂಚಾರವಾಯಿತು. ಆದರೆ ಮುಂಜಾನೆ ಪ್ರಮುಖ ಕಾಗ್ರೇಸ್ ನಾಯಕರು,ಗಾಂಧಿ, ನೆಹರು, ರಾಜೇಂದ್ರ ಪ್ರಸಾದ, ಅಜಾದ, ಸರ್ದಾರ್ ಪಟೇಲ ಕೃಪಾಲಿನಿ, ಮೊದಲಾದ ನಾಯಕರೂ ಸಹಸ್ರಾರು ಕಾರ್ಯಕರ್ತರೂ ಬಂದನಕ್ಕೊಳಗಾದರು. ಕಸ್ತೂರಿ ಬಾ ಗಾಂಧಿಯವರನ್ನು ಈ ಸಂದರ್ಭದಲ್ಲಿ ಬಂಧಿಸಲಾಯಿತು. ಕಾಂಗ್ರೆಸ್ ಕಛೇರಿಗಳಿಗೆ ಬೀಗ ಮುದ್ರೆ ಹಾಕಲಾಯಿತು. ಪತ್ರಿಕೆಗಳ ಮೇಲೆ ನಿರ್ಬಂಧ ಹೇರಲಾಯಿತು. ಚಳವಳಿಗೆ ಸರಿಯಾದ ಮಾರ್ಗ ತೋರುವ. ಸಂಘಟಿಸುವ ನಾಯಕರು ಇಲ್ಲದಂತಾಯಿತು. ಕ್ರಮೇಣ ಚಳವಳಿ ಹಿಂಸಾಚಾರಕ್ಕೆ ತಿರುಗಿತು. ಅಂಚೆ, ತಂತಿ ರೈಲ್ವೇ, ಪೋಲಿಸ್ ಸರ್ಕಾರಿ ಕಛೇರಿಗಳನ್ನು ಮುಚ್ಚಲಾಯಿತು. ಕ್ರೂರ ರೀತಿಯಲ್ಲಿ ಸರ್ಕಾರ ಚಳವಳಿಯನ್ನು ದಮನ ಮಡಲು ಪ್ರಯತ್ನಿಸಿತು. ಅರವತ್ತು ಸಾವಿರಕ್ಕೂಹೆಚ್ಚು ಜನ ಬಂಧನಕ್ಕೊಳಗಾದರು. ಇಡಿ ದೇಶವೇ ಚಳವಳಿಯ ಬೇಗುದಿಗೆ ಒಳಗಾಯಿತು. ಸಂಘಟನಾ ಸಾಮಥ್ಯ ನಯಕತ್ವವಿಲ್ಲದೆ ಚಳವಳಿ ದಿಕ್ಕು ತಪ್ಪಿ ವಿಫಲವಾಯಿತು ಜಯಪ್ರಕಾಶ ನಾರಾಯಣ ನವೆಂಬರ್ ನಲ್ಲಿ ಚಳವಳಿಯನ್ನು ಪುನಃ ಸಂಘಟಿಸಲು ಪ್ರಯತ್ನಿಸಿದರು. ಅಲ್ಲದೆ ಚಲೇಜಾವ್ ಚಳವಳಿಯಲ್ಲಿ ಶ್ರೀಮಂತರು, ಜಮೀನ್ದಾರರು, ಉದ್ಯೋಗಪತಿಗಳು, ದೊಡ್ಡ ವ್ಯಾಪಾರಿಗಳು ಭಾಗವಹಿಸಲಿಲ್ಲ ಮತ್ತು ಚಳವಳಿಯನ್ನು ಪ್ರೋತ್ಸಾಹಿಸಲಿಲ್ಲ ರಾಜಕುಮಾರರು ದೂರ ಉಳಿದರು.

ಮುಸ್ಲಿಮ್ ಲೀಗ್ ತಮ್ಮ ಜನಾಂಗಕ್ಕೆ ಹಿಂದೂಗಳ ಚಳವಳಿಯಿಂದ ದೂರವಿರಲು ಕರೆ ನೀಡಿತು. ಅದರ ಧೋರಣೆ ಕಾಂಗ್ರೆಸ್‌ನ ವಿರುದ್ಧವಾಯಿತು. ಜಿನ್ನ ತನ್ನ ಬಾಂಧವರಿಗೆ ಚಳವಳಿಯಲ್ಲಿ ಭಾಗವಹಿಸಬಾರದೆಂದು ಹೇಳಿದರು. ಹಿಂದೂಗಳ ಕಾಂಗ್ರೆಸ್ಸಿನಲ್ಲಿ ತನಗೆ ನಂಬಿಕೆ ಇಲ್ಲವೆಂದು, ತಲೆ ಎಣಿಸುವ ಪ್ರಜಾಪ್ರಭುತ್ವ ಅಧಾರಿತ ಸರ್ಕಾರದಿಂದ ತಮಗೆ ನ್ಯಾಯ ದೊರಕಿರುವುದಿಲ್ಲ; ಹಿಂದೂಗಳು ಮುಸ್ಲಿಮರು ಎರಡು ಪ್ರತ್ಯೇಕ ರಾಷ್ಟ್ರೀಯರೆಂದೂ, ಅವರೆಂದೂ ಒಂದಾಗಲು ಸಾಧ್ಯವಿಲ್ಲವೆಂದು ಹೇಳಿದರು. ೧೯೪೦ರ ಲಾಹೋರ್ ಅಧಿವೇಶನದಲ್ಲಿ ಮುಸ್ಲಿಮ್ ಲೀಗ್ ತಮಗೆ ಪ್ರತ್ಯೇಕ ರಾಷ್ಟ್ರಬೇಕೆಂದು ಕೇಳಿತು. ಜಿನ್ನಾ ಅವರು ಪಂಜಾಬ್, ವಾಯವ್ಯ ಸರಹದ್ದು. ಪ್ರಾಂತ್ಯ, ಕಾಶ್ಮೀರ, ಬಲೂಚಿಸ್ತಾನಗಳನ್ನೊಳಗೊಂಡ ಸ್ವತಂತ್ರ ಪವಿತ್ರ ಪಾಕಿಸ್ತಾನ ರಾಷ್ಟ್ರ ಬೇಕೆಂದು ಬೇಡಿಕೆಯನ್ನು ಸ್ಪಷ್ಟಪಡಿಸಿದರು. ಇದೇ ವಿಚಾರವನ್ನು ದುಂಡು ಮೇಜಿನ ಪರಿಷತ್ತಿನಲ್ಲಿಟ್ಟಾಗ ಅದು ಅದೊಂದು ಕುಹಕ ವಿದ್ಯಾರ್ಥಿ ಯೋಜನೆ ಎಂದು ತಳ್ಳಿಹಾಕಲಾಯಿತ್ತು. ಮಹಮ್ಮದ್ ಇಕ್ಬಾಲ್ ನೀಡಿದ ಸಡಿಲ ಸಂಯುಕ್ತ ರಾಷ್ಟ್ರ ಕಲ್ಪನೆಯನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಲಾಹೋರಿನಲ್ಲಿ ಜಿನ್ನಾ ಪಾಕಿಸ್ತಾನ ರಾಷ್ಟ್ರದ ಕಲ್ಪನೆಯನ್ನಿಟ್ಟು ೧೯೪೦ರಲ್ಲಿ ಅಪಾರ ಬೆಂಬಲ ಗಳಿಸಿದರು. ಈ ವೇಳೆಗೆ ಮುಸ್ಲಿಮ್ ಲೀಗ್ ಕೂಡ ಸಾಕಷ್ಟು ಪ್ರಬಲ ಹಾಗೂ ಪ್ರಭಾವಶಾಲಿಯಾಗಿ ಬೆಳೆದಿತ್ತು. ಕಾಂಗ್ರೆಸ್ ಲೀಗಿನ ಸಂಬಂಧ ಈ ವಿಚಾರದಲ್ಲಿ ಒಡೆದು ಹೋಯಿತು. ಗಾಂಧಿ ಅವರು ಜಿನ್ನಾರಿಗೆ ಅನಗತ್ಯ ಪ್ರಾಮುಖ್ಯತೆ ನೀಡಿದರು. ಕ್ವಿಟ್ ಇಂಡಿಯಾ ವಿರುದ್ಧವಾಗಿ, ಮುಸ್ಲಿಮ್ ಲೀಗ್ “ಡಿವೈಡ್ ಅಂಡ್ ಕ್ವಿಟ್ ”ಅಥವಾ‘ ದೇಶವಿಭಜಿಸಿ ಹೊರಡಿ’ಎಂಬ ಪ್ರತಿಘೋಷಣೆಯನ್ನು ಹೊರಡಿಸಿತು. ೧೯೪೪ರ ಮೇ ತಿಂಗಳಿನಲ್ಲಿ ಗಾಂಧಿ ಸೆರೆಮನೆಯಿಂದ ಬಿಡುಗಡೆಯಾದರು. ೧೯೪೪ರ ಮೇ ತಿಂಗಳಿನಲ್ಲಿ ಚಳುವಳಿಯನ್ನು ಹಿಂದಕ್ಕೆ ಪಡೆಯಲಾಯಿತು. ಬ್ರಿಟಿಷ್ ಸರ್ಕಾರ ಸಂಧಾನದ ಬಾಗಿಲನ್ನು ತೆರೆಯಿತು.

ಕಾಂಗ್ರೆಸ್ ಹಾಗೂ ಗಾಂಧಿಗಿಂತ ಭಿನ್ನವಾದ ವಿಧಾನದ ಮೂಲಕ ಅಂದರೆ ಸಶಸ್ತ್ರ ದಂಗೆಯ ಮೂಲಕ ಬ್ರಿಟಿಷರನ್ನು ಭಾರತದಿಂದ ಬಿಡುಗಡೆ ಮಾಡಿ ಸ್ವಾತಂತ್ರ್ಯವನ್ನು ಗಳಿಸಬೇಕೆಂದು, ಅದಕ್ಕಾಗಿ ಎರಡನೆ ಮಹಾಯುದ್ಧದ ಸಮಯ ಉತ್ತಮವಕಾಶವೆಂದು, ಬ್ರಿಟಿಷ ವಿರೋದಿಗಳಾದ ಜರ್ಮನಿ ಹಾಗೂ ಜಪಾನ್‌ನ ಸಹಕಾರ ನೆರವನ್ನು ಪಡಯಬೇಕೆಂದು ಕಾರ್ಯೋನ್ಮುಖರಾದವರು ಸುಭಾಷಚಂದ್ರ ಬೋಸ್. ಬ್ರಿಟಿಷ್ ಸರ್ಕಾರ ಅವರನ್ನು ೧೯೪೦ರಲ್ಲಿ ಬಂಧಿಸಿತು. ಆದರೆ ಅವರು ಗೃಹಬಂಧನದಲ್ಲಿದ್ದಾಗ ತಪ್ಪಿಸಿಕೊಂಡು ಭಾರತದ ಗಡಿದಾಟಿ ೧೯೪೧ರಲ್ಲಿ ಬರ್ಲಿನನ್ನು ತಲುಪಿದರು. ಬ್ರಿಟಿಷರ ವಿರುದ್ಧ ಹೋರಾಡಲು ಹಿಟ್ಲರನ ಬೆಂಬಲ ಕೋರಿದರು. ರೋಂ ಮತ್ತು ಪ್ಯಾರಿಸ್‌ನಲ್ಲಿ ಸ್ವತಂತ್ರ ಭಾರತದ ಯೋದರ ಪಡೆಯನ್ನು ಸಂಘಟಿಸಿ. ಬ್ರಿಟಿಷ್ ಆಡಳಿತವನ್ನು ಕಿತ್ತೊಗೆಯಲು ಹೋರಾಟಕ್ಕೆ ಇಳಿಯುವಂತೆ, ಸರ್ಕಾರದ ವಿರುದ್ಧ ದಂಗೆ ಏಳುವಂತೆ ಕರೆಕೊಟ್ಟರು. ಪೂರ್ವದಲ್ಲಿ ಜಪಾನ್ ದೇಶದ ನೆರವು ಪಡೆದು ಸಶಸ್ತ್ರ ದಾಳಿಯ ಮೂಲಕ ಬ್ರಿಟಿಷ್ ಮೇಲೆ ದಾಳಿ ಮಾಡಲು ಭಾರತವನ್ನು ಮುಕ್ತಿಗೊಳಿಸಲು, ಸ್ವಾತಂತ್ರ್ಯ ಪಡೆಯಲು ಯೋಜನೆಗಳನ್ನು ಸಿದ್ದಪಡಿಸಿದರು. ೧೯೪೨ ರಲ್ಲಿ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್‌ರ ಟೋಕಿಯೋ ಸಮಾವೇಶದಲ್ಲಿ ಪಾಲ್ಗೊಂಡರು ಆಗ್ನೇಯ ಏಷ್ಯಾದ ದೇಶಗಳಿಂದ ಅನೇಕ ಪ್ರತಿನಿಧಿಗಳು ಭಾಗವಹಿಸಿದ್ದರು. ರಾಸ್ ಬಿಹಾರಿ ಸುಭಾಸರನ್ನು ಆಜ್ಞೆಯ ಏಷ್ಯಾಕ್ಕೆ ಆಹ್ವಾನಿಸಿದರು. ಕಾಪ್ಟನ್ ಮೋಹನ್ ಸಿಂಗ್ ನೆರವಿನಿಂದ ಭಾರತದ ರಾಷ್ಟ್ರೀಯ ಪಡೆ ‘ಆಜಾದ್ ಹಿಂದ್ ಫೌಜ್’ಅನ್ನು ಸ್ಥಾಪಿಸಲಾಯಿತು. ಸಹಸ್ರಾರು ಭಾರತೀಯ ಕೈದಿಗಳು ಐಎನ್‌ಎ ಸೇರಿದರು. ಸುಭಾಷ್ ೧೯೪೨ರಲ್ಲಿ ಜಪಾನಿನ ಟೋಜೋರರನ್ನು ಬೇಟಿ ಮಾಡಿ ಅವರ ಸಹಾಯ. ಭರವಸೆಯನ್ನು ಪಡೆದರು. ಇಂಡಿಯನ್ ಇಂಡಿಪೆಂಡೆನ್ಸ್ ಲೀಗಿನ ಅಧ್ಯಕ್ಷರಾದರು. ಬ್ರಿಟಿಷರನ್ನು ಭಾರತದಿಂದ ಹೊರಹಾಕಲು ಪೂರ್ವದ ಗಡಿಯಿಂದ ದಾಳಿ ಮಾಡಲಾಗುವುದೆಂದು ಟೋಕಿಯೋದಿಂದ ಸಾರಿದರು. ದೆಹಲಿ ಚಲೋ ಘೋಷಣೆಯೊಂದಿಗೆ ನೇತಾಜಿ ಸುಭಾಷ್ ಪಡೆ ಭಾರತದತ್ತ ನುಗ್ಗಿತ್ತು. ಅನೇಕ ಕಡೆ ಐಎನ್‌ಎ ಕೇಂದ್ರಗಳು ಸ್ಥಾಪನೆಯಾದವು. ಸ್ತ್ರೀಯರು ಯೋಧರಾಗಿ ಬ್ರಿಟಿಷರ ವಿರುದ್ಧ ಹೋರಾಡಿದರು. ಸುಭಾಷ್ ಹಂಗಾಮಿ ಭಾರತ ಸರ್ಕಾರವನ್ನು ರಚಿಸಿದರು. ಅಂಡಮಾನ್-ನಿಕೋಬಾರ್ ದ್ವೀಪಗಳು ಬಿಡುಗಡೆ ಹೊಂದಿದವು. ಸುಭಾಷರ ಪಡೆ ಬರ್ಮಾದ ಗಡಿಯನ್ನು ತಲುಪಿ ಭಾರತದ ಭೂಭಾಗವನ್ನು ತಲುಪಿತು. ಆದರೆ ಬ್ರಿಟಿಷ್ ಮತ್ತು ಅದರ ಮಿತ್ರರಾಷ್ಟ್ರ ಪಡೆಗಳು ಸತತವಾಗಿ ದಾಳಿಮಾಡಿ ಜಪಾನೀಯರನ್ನು ಹಿಮ್ಮೆಟ್ಟಸಿದವು. ಆಜಾದ್ ಹಿಂದ್ ನ ಸೈನಿಕರು ಮಾತ್ರ ವೀರಾವೇಶದಿಂದ ಹೋರಾಡಿದರು. ೧೯೪೫ರ ಆಗಸ್ಟ್‌ನಲ್ಲಿ ಸುಭಾಷ್ ಚಂದ್ರಬೋಸ್ ಅವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ನಿಗೂಢವಾಗಿ ಕಣ್ಮರೆಯಾದರು. ಅವರು ವಿಮಾನ ಅಪಘಾತದಲ್ಲಿ ಅಸುನೀಗಿದರೆಂದು ತಿಳಿಯಲಾಗಿದೆ.

೧೯೪೪ರಮೇ ತಿಂಗಳಿನಲ್ಲಿ ಸೆರೆಮನೆಯಿಂದ ಬಿಡುಗಡೆಯಾದ ಗಾಂಧಿ ಅಂದು ದೇಶವನ್ನು ಕಾಡುತ್ತಿದ್ದ ಕೋಮುವಿವಾದವನ್ನು ಬಗೆಹರಿಸಲು ಜಿನ್ನಾರೊಡನೆ ಮಾತುಕತೆ ಪ್ರಾರಂಭಿಸಿದರು. ಆದರೆ ಜಿನ್ನಾ ಅವರು ಗಾಂಧಿಯವರು ನೀಡಿದ ಸೂತ್ರಗಳನ್ನು ಒಪ್ಪಲಿಲ್ಲ. ಮಾತುಕತೆ ವಿಫಲವಾಯಿತು. ವೈಸರಾಯ್ ಲಾರ್ಡ್ ವೆವಲ್ ತಮ್ಮ ಯೋಜನೆಯನ್ನು ತಿಳಿಸಿದರು. ಅದರಂತೆ ವೈಸರಾಯ್ ಕೌನ್ಸಿಲನ್ನು ಪುನರಚಿಸಿ ಹಿಂದೂ ಮುಸ್ಲಿಮರಿಗೆ ಸಮಾನ ಪ್ರಾತಿನಿಧ್ಯವನ್ನು ಕೊಡುವುದಾಗಿ ತಿಳಿಸಿದರು. ಸಿಮ್ಲಾದಲ್ಲಿ ಸಮ್ಮೇಳನವನ್ನು ಕರೆಯಲಾಯಿತು. ಈ ಸಮ್ಮೇಳನದಲ್ಲಿ ಕಾಂಗ್ರೆಸ್‌ ಇಡೀ ರಾಷ್ಟ್ರವನ್ನು ಪ್ರತಿನಿಧಿಸುತ್ತದೆ. ಕೇವಲ ಹಿಂದೂಗಳ ಪ್ರತಿನಿಧಿಯಲ್ಲ ಎಂಬ ಮಾತನ್ನು ಜಿನ್ನಾ ಖಂಡಿಸಿದರು. ಮುಸ್ಲಿಮ್‌ಲೀಗ್‌ ಎಲ್ಲ ಮುಸ್ಲಿಮರನ್ನು ಪ್ರತಿನಿಧಿಸುತ್ತದೆ ಎಂಬ ಮಾತನ್ನು ಜಿನ್ನಾ ಕಾಂಗ್ರೆಸ್‌ ಒಪ್ಪಲಿಲ್ಲ. ಹೀಗಾಗಿ ಸಿಮ್ಲಾ ಸಮ್ಮೇಳನ ಮುರಿದುಬಿತ್ತು. ಯುದ್ಧ ಮುಗಿದು ಬ್ರಿಟನ್‌ನಲ್ಲಿ ಲೇಬರ್‌ ಪಕ್ಷ ಅಧಿಕಾರಕ್ಕೆ ಬಂದಿತು. ಹೊಸ ಸರ್ಕಾರ ಭಾರತದಲ್ಲಿ ರಾಜಕೀಯ ಬಿಕ್ಕಟ್ಟನ್ನು ಬೇಗನೆ ಕೊನೆಗಾಣಿಸಲು ಕ್ರಮ ಕಯಗೊಂಡಿತು. ೧೯೪೬ರಲ್ಲಿ ಚುನಾವಣೆಗಳಾದವು. ಸಾಮಾನ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ಅತ್ಯಧಿಕ ಮತ ಬಂದಿತು. ಮುಸ್ಲಿಮ್‌ ಲೀಗ್‌ ಮುಸ್ಲಿಮ್‌ ಕ್ಷೇತ್ರಗಳಲ್ಲಿ ಭಾರಿ ಜಯಗಳಿಸಿತು. ಬ್ರಿಟಿಷ್ ‌ಪ್ರಧಾನಿ ಭಾರತಕ್ಕೆ ಸ್ವಯಮಾಧಿಕಾರವನ್ನು ಕೊಡುವ ಬಗ್ಗೆ ರಾಜಕೀಯ ಇತ್ಯರ್ಥ ಕೈಗೊಳ್ಳಲು ಸಹಾಯಕವಾಗುವಂತೆ ಮೂವರು ಕ್ಯಾಬಿನೆಟ್‌ ಸದಸ್ಯರನ್ನು ಭಾರತಕ್ಕೆ ಕಳುಹಿಸಿಕೊಟ್ಟರು. ಭಾರತೀಯರು ಒಪ್ಪಿದರೆ ಸಂಪೂರ್ಣ ಸ್ವರಾಜ್ಯವನ್ನು ಕೊಡುವುದಾಗಿ ಹೇಳಲಾಯಿತು. ೧೯೪೬ರ ಮಾರ್ಚ್‌ನಲ್ಲಿ ಬಂದ ಕ್ಯಾಬಿನೆಟ್‌ ಆಯೋಗ ಕಾಂಗ್ರೆಸ್‌, ಮುಸ್ಲಿಮ್‌ ಲೀಗ್‌ ಮತ್ತು ಇತರ ಅನೇಕ ರಾಜಕೀಯ ಮುಖಂಡರೊಡನೆ ಸಮಾಲೋಚಿಸಿತು. ಕಾಂಗ್ರೆಸ್‌ ಮತ್ತು ಮುಸ್ಲಿಮ್‌ ಲೀಗ್ ನಡುವೆ ಒಮ್ಮತಾಭಿಪ್ರಾಯ ಮೂಡಿಸಲು ಸಾಧ್ಯವಾಗಲಿಲ್ಲ. ಆಯೋಗ ತನ್ನ ಶಿಫಾರಸ್ಸುಗಳನ್ನು ಮುಂದಿಟ್ಟಿತು. ಭಾರತಕ್ಕೆ ಫೆಡರಲ್‌ ಮಾದರಿಯ ಸರ್ಕಾರವನ್ನು ಸೂಚಿಸಿತು. ದೇಶಕ್ಕೆ ಸಂವಿಧಾನವನ್ನು ರಚಿಸಲು ಸಂವಿಧಾನ ರಚನಾ ಸಭೆಯನ್ನು ಕರೆಯುವುದಾಗಿ ತಿಳಿಸಿತು. ಮಧ್ಯಂತರ ರಾಷ್ಟ್ರೀಯ ಸರ್ಕಾರವನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿತು. ಎಲ್ಲ ರಾಜಕೀಯ ಪಕ್ಷಗಳು ಬಹುಮಟ್ಟಿಗೆ ಆಯೋಗದ ಶಿಫಾರಸ್ಸುಗಳನ್ನು ಒಪ್ಪಿಕೊಂಡವು. ಆದರೆ ಮಧ್ಯಂತರ ಸರ್ಕಾರ ರಚಿಸುವ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಲೀಗ್ ನಡುವೆ ಬಿಕ್ಕಟ್ಟು ತಲೆದೋರಿತು. ಮುಂಬೈ ಅಧಿವೇಶನದಲ್ಲಿ ಮುಸ್ಲಿಮ್‌ ಲೀಗ್‌ ಕ್ಯಾಬಿನೆಟ್‌ ಆಯೋಗದ ತೀರ್ಪಿಗೆ ಕೊಟ್ಟ ತನ್ನ ಒಪ್ಪಿಗೆಯನ್ನು ಹಿಂದಕ್ಕೆ ಪಡೆಯಿತು. ಪ್ರತ್ಯೇಕ ಮುಸ್ಲಿಮ್‌ ರಾಷ್ಟ್ರ ಸಾಧನೆಗಾಗಿ ೧೯೫೬ರ ಆಗಸ್ಟ್‌೧೬ ರಂದು ನೇರ ಕ್ರಮವನ್ನು ಘೋಷಿಸಿತು. ದೇಶದ ಅನೇಕ ಭಾಗಗಳಲ್ಲಿ ಮುಸ್ಲಿಮ್‌ ಹಿಂದೂಗಳ ನಡುವಿನ ಕೋಮು ಜ್ವಾಲೆಯ ಹಿಂಸಾಚಾರ ಭುಗಿಲೆದ್ದಿತು. ಕಲ್ಕತ್ತಾದಲ್ಲಿ ನಡೆದ ಗಲಭೆ ಭೀಕರವಾಗಿತ್ತು. ಇತರ ಪ್ರದೇಶಗಳಿಗೂ ವ್ಯಾಪಿಸಿ ಸಹಸ್ರಾರು ಹಿಂದೂಗಳು ಮುಸ್ಲಿಮರು ಬಲಿಯಾದರು. ಈ ಸಮಯದಲ್ಲಿ ನೆಹರೂ ಮತ್ತು ಜಿನ್ನಾ ಹಂಗಾಮಿ ಸರ್ಕಾರದ ಬಗ್ಗೆ ವೈಸರಾಯ್‌ರೊಡನೆ ಚರ್ಚೆಯಲ್ಲಿ ನಿರತರಾಗಿದ್ದರು. ಮಧ್ಯಂತರ ಸರ್ಕಾರದ ಕಾರ್ಯದಲ್ಲಿ ಲೀಗ್‌ಅಡಚಣೆಗಳನ್ನು ತಂದೊಡ್ಡಿತು. ಡಿಸೆಂಬರ್‌೧೯೪೬ರ ರಾಜೇಂದ್ರ ಪ್ರಸಾದ್‌ ಅಧ್ಯಕ್ಷತೆಯಲ್ಲಿ ಸೇರಿದ ಸಂವಿಧಾನ ಸಭೆಯಲ್ಲಿ ಮುಸ್ಲಿಮ್‌ ಲೀಗ್‌ ಭಾಗವಹಿಸಲಿಲ್ಲ. ದೇಶದಲ್ಲಿ ಗಂಭೀರ ವಾತಾವರಣ ನಿರ್ಮಾಣವಾಯಿತು. ಮುಸ್ಲಿಮ್‌ ಲೀಗ್‌ ಮತ್ತು ಕಾಂಗ್ರೆಸ್‌ನಡುವೆ ಹೊಂದಾಣಿಕೆ ಸಾಧ್ಯವಿಲ್ಲವೆಂಬ ಪರಿಸ್ಥಿತಿ ತೀರ್ಮಾಣವಾಯಿತು. ಹಿಂದೂ ಮುಸ್ಲಿಮರ ಸಂಬಂಧ ತೀರ ಹದಗೆಟ್ಟಿತು. ಇಂತ ಆತಂಕಕಾರಿ ಸಮಯದಲ್ಲಿ ಬ್ರಿಟಿಷ್ ‌ಸರ್ಕಾರ ಶೀಘ್ರವಾಗಿ ಅಧಿಕಾರವನ್ನು ಹಸ್ತಾಂತರಗೊಳಿಸುವುದಾಗಿ ತಿಳಿಸಿತು. ಲಾರ್ಡ್‌ಮೌಂಟ್‌ ಬ್ಯಾಟನ್‌ ವೈಸರಾಯಯಾಗಿ ಬಂದರು. ೧೯೪೭ರ ಮಾರ್ಚ್‌ನಲ್ಲಿ ವೈಸರಾಯ್‌ ಭಾರತೀಯರಿಗೆ ಅಧಿಕಾರ ಹಸ್ತಾಂತರಗೊಳಿಸುವ ವಿಧಿವಿಧಾನಗಳನ್ನು ಸೂಚಿಸಿದರು. ರಾಜಕೀಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಭಾರತವನ್ನು ವಿಭಜಿಸುವ ಸೂಚನೆಯನ್ನು ಬ್ರಿಟಿಷ್ ‌ಸರ್ಕಾರ ಘೋಷಿಸಿತು. ಜೂನ್‌ ಮೂರರ ಮೌಂಟ್‌ಬ್ಯಾಟನ್‌ ಯೋಜನೆ ಪ್ರಕಾರ ಭಾರತವನ್ನು ಹಿಂದೂ ಬಹುಸಂಖ್ಯಾತ ಮತ್ತು ಮುಸ್ಲಿಮ್‌ ಬಹುಸಂಖ್ಯಾತ ಪ್ರದೇಶಗಳನ್ನೊಳಗೊಂಡಂತೆ ಎರಡು ಪ್ರತ್ಯೇಕ ಸ್ವತಂತ್ರ ರಾಷ್ಟ್ರಗಳನ್ನಾಗಿ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು. ದೇಶದ ವಿಭಜನೆ ಅನಿವಾರ್ಯ, ಇದನ್ನು ತಪ್ಪಿಸಲು ಅಸಾಧ್ಯವೆನ್ನುವ ಮಟ್ಟಕ್ಕೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ರಾಜಕೀಯ ನಾಯಕರು ಹತಾಶರಾಗಿ ವಿಭಜನೆಗೆ ಒಪ್ಪಿಕೊಳ್ಳಲೇ ಬೇಕಾಯಿತು. ೧೯೪೭ರ ಜುಲೈನಲ್ಲಿ ಭಾರತ ಸ್ವಂತಂತ್ರ್ಯ ಮಸೂದೆ ಕಾಯಿದೆ ರೂಪ ಪಡೆದು ೧೯೪೭ ಆಗಸ್ಟ್‌೧೫ ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಪ್ರತ್ಯೇಕ ಸ್ವತಂತ್ರ ರಾಷ್ಟ್ರಗಳು ಅಸ್ತಿತ್ವಕ್ಕೆ ಬಂದವು.

ರಾಡ್‌ಕ್ಲಿಪ್‌ ಆಯೋಗ ಈ ಎರಡು ದೇಶಗಳ ಗಡಿಗಳನ್ನು ಗುರುತಿಸಿತು. ಪಂಜಾಬ್‌ ಮತ್ತು ಬಂಗಾಳಗಳಲ್ಲಿ ಭೀಕರ ಸ್ವರೂಪದ ಸಮಸ್ಯೆಗಳು ಉದ್ಭವಿಸಿದವು. ಕೋಮು ಗಲಭೆ, ಹಿಂಸಾಚಾರ, ಹತ್ಯಾಕಾಂಡ ನಡೆದವು. ನಿರಾಶ್ರಿತರ ಸಮಸ್ಯೆ ಎದುರಾಯಿತು. ಸ್ವಾತಂತ್ರ್ಯ ಹೋರಾಟದ ಫಲವನ್ನು ಸಂತೋಷದಿಂದ ಅನುಭವಿಸಲು ಸಾಧ್ಯವಾಗದೇ ದೇಶದ ಪ್ರಜೆಗಳಲ್ಲಿ ದುಃಖ, ಭಯ, ಆತಂಕ, ಹತಾಶ ಭಾವನೆ ತುಂಬಿಹೋದವು. ಬ್ರಿಟಿಷರು ಭಾರತವನ್ನು ಬಿಟ್ಟು ಹೋದರು, ಭಾರತ ಸ್ವತಂತ್ರ ದೇಶವಾಯಿತು ಎಂಬುದೇ ಸಮಾಧಾನಕರ ಅಂಶವಾಯಿತು. ನೂರಾರು ವರ್ಷಗಳ ವಸಾಹತುಶಾಹಿ ಆಡಳಿತ, ದಾಸ್ಯ ಶೃಂಖಲೆ ಕೊನೆಯಾಗಿ ದೆಹಲಿಯ ಕೆಂಪು ಕೋಟೆಯ ಮೇಲೆ ತ್ರಿವರ್ಣಧ್ವಜ ಹಾರಾಡಿತು. ದೇಶದಲ್ಲಿ ನಡೆಯುತ್ತಿದ್ದ ಕೋಮುಗಲಭೆ ದೇಶ ವಿಭಜನೆಯಿಂದ ಜಿನ್ನಾರಾಗಿದ್ದ ಗಾಂಧಿ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಗಳಾಗದೆ ಕಲ್ಕತ್ತಾದಲ್ಲಿ ಕೋಮು ಗಲಭೆಗಳಲ್ಲಿ ಸಂತ್ರಸ್ತರಾಗಿದ್ದವರನ್ನು ಸಂತೈಸುವ ಕಾರ್ಯದಲ್ಲಿದ್ದರು. ಉಪವಾಸವನ್ನಾಚರಿಸಿದರು. ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ರಾಜಕೀಯ ನಿರ್ಧಾರ ಕೈಗೊಳ್ಳುವಲ್ಲಿ ಗಾಂಧಿಯವರ ಪ್ರಭಾವ ಕಡಿಮೆಯಾಯಿತು. ದೇಶಬಾಂಧವರಿಗೆ ತಾವು ಕೊಡುವ ಯಾವ ಸಂದೇಶವೂ ಇಲ್ಲವೆಂದರು. ಈ ನಡುವೆ ಸ್ವಾತಂತ್ರ್ಯ ಪ್ರಕಟಣೆ ಹೊರಬಂದ ತರುವಾಯ ಹಿಂದಿನ ಬ್ರಿಟಿಷ್ ‌ಸರ್ಕಾರದ ಅಧೀನಕ್ಕೆ ಒಳಪಟ್ಟಿದ್ದ ಕೆಲವು ದೇಶೀಯ ರಾಜ್ಯಗಳು ತಾವು ಭಾರತದ ಸಂಯುಕ್ತ ರಾಜ್ಯವ್ಯವಸ್ಥೆಯಿಂದ ಹೊರಬಂದು ಸ್ವತಂತ್ರವಾಗಬಹಿಸಿದ್ದವು. ಮುಸ್ಲಿಮ್‌ ಲೀಗ್‌ ಈ ರಾಜ್ಯಗಳಿಗೆ ಬೆಂಬಲ ಸೂಚಿಸಿತು. ಹೈದ್ರಾಬಾದ್‌, ಜುನಾಗಡ್‌, ಕಾಶ್ಮೀರ, ತಿರುವಾಂಕೂರು, ಭೂಪಾಲ ಮುಂತಾದ ರಾಜ್ಯಗಳ ರಾಜಕುಮಾರರು, ನವಾಬರು ಸ್ವತಂತ್ರರಾಗಿ ಇತರ ರಾಜ್ಯಗಳೊಂದಿಗೆ ಹಾಗೂ ಮತ್ತೊಂದು ಸಾರ್ವಭೌಮ ರಾಷ್ಟ್ರದೊಂದಿಗೆ ಒಪ್ಪಂದಕ್ಕೆ ಬರುವ ಇಚ್ಛೆಯನ್ನು ವ್ಯಕ್ತಪಡಿಸಿದವು. ಇಂತಹ ವಿಚಾರವನ್ನು ಕಾಂಗ್ರೆಸ್‌ ನಾಯಕರು, ಗಾಂಧಿ, ನೆಹರೂ ಮತ್ತು ಇತರ ರಾಜಕೀಯ ಧುರೀಣರು ವಿರೋಧಿಸಿದರು. ದೇಶೀಯ ಸಂಸ್ಥಾನಗಳ ಇಲಾಖೆಯನ್ನು ವಹಿಸಿಕೊಂಡಿದ್ದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಎಲ್ಲ ರಾಜ್ಯಗಳೂ ಸಂಯುಕ್ತ ವ್ಯವಸ್ಥೆಯಲ್ಲಿ ಸೇರಿಕೊಳ್ಳಬೇಕೆಂದು ವಿನಂತಿಸಿಕೊಂಡರು. ಆದರೆ ಭಾರತ ಒಕ್ಕೂಟಕ್ಕೆ ಸೇರದ, ಸ್ವತಂತ್ರವಾಗಿರಲು ಬಯಸಿದ ಸಂಸ್ಥಾನಗಳ ವಿರುದ್ಧ ಪೊಲೀಸ್‌ ಕಾರ್ಯಾಚರಣೆ ನಡೆಸಿ ಅಥವಾ ಸೈನ್ಯವನ್ನು ನುಗ್ಗಿಸಿ ಅವು ತಲೆಬಾಗುವಂತೆ ಮಾಡಿದರು. ಕೆಲವು ರಾಜ್ಯಗಳಲ್ಲಿ ಪ್ರಜೆಗಳೇ ದಂಗೆ ಎದ್ದರು. ಉಕ್ಕಿನ ಮನುಷ್ಯ ಎಂದು ಪ್ರಸಿದ್ಧರಾದ ಸರ್ದಾರ ಪಟೇಲರ ಮುತ್ಸದ್ದಿತನ ಹಾಗೂ ಕ್ಷಿಪ್ರ ಕಾರ್ಯಾಚರಣೆಗಳಿಂದ ಭಾರತದ ಒಕ್ಕೂಟದ ಕಲ್ಪನೆ ಸಾಕಾರವಾಯಿತು. ಆದರೆ ಕಾಶ್ಮೀರದ ಸಮಸ್ಯೆಯನ್ನು ಪೂರ್ಣವಾಗಿ ಬಗೆಹರಿಸಲಾಗಲಿಲ್ಲ. ಕಾಶ್ಮೀರದ ಮೂರನೇ ಒಂದು ಭಾಗವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿತು. ಉಳಿದ ಕಾಶ್ಮೀರ ಹಾಗೂ ಜಮ್ಮು ಭಾಗಗಳು ಭಾರತ ಒಕ್ಕೂಟದ ಭಾಗವಾದವು. ಕಾಶ್ಮೀರ ಸಮಸ್ಯೆಯ ಪೂರ್ಣ ಇತ್ಯರ್ಥಕ್ಕೆ ವಿಶ್ವಸಂಸ್ಥೆಯ ಮುಂದೆ ಕೊಂಡೊಯ್ಯಲಾಯಿತು.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಶಿಲ್ಪಿ ಗಾಂಧಿ ಕೋಮು ಗಲಭೆಯಿಂದ ನೊಂದಿರುವ ಜನರ ಸೇವೆಯಲ್ಲಿ ತೊಡಗಿದ್ದರು. ಪಾಕಿಸ್ತಾನದಿಂದ ನಿರಾಶ್ರಿತರ ಮಹಾಪ್ರವಾಹ ಹರಿದು ಬಂದಿತು. ದೆಹಲಿಯಲ್ಲಿ ಅವರ ಮರು ವಸತಿಗಾಗಿ ಮತ್ತು ಕೋಮು ಸಾಮರಸ್ಯಕ್ಕಾಗಿ ಪ್ರಯತ್ನಿಸುತ್ತಿದ್ದರು. ಕಾಂಗ್ರೆಸ್‌ ನಾಯಕರು ರಾಜಕೀಯ ಚಟುವಟಿಕೆಗಳಲ್ಲಿ, ಹೊಸ ಸರ್ಕಾರದ ವ್ಯವಸ್ಥೆಯಲ್ಲಿ ನಿರತರಾಗಿರುವ ಸಂದರ್ಭದಲ್ಲಿ ಗಾಂಧಿ ಎಲ್ಲ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದರು. ಅವರ ಜೀವಿತದ ಕನಸು, ಧ್ಯೇಯವಾಗಿದ್ದ ಹಿಂದೂ-ಮುಸ್ಲಿಮ್‌ ಸಾಮರಸ್ಯ, ಏಕತೆ ಸಾಧ್ಯವಾಗದೇ ಹೋಗಿತ್ತು. ಭಗ್ನಹೃದಯಿಗಳಾದರು. ಕೋಮು ಗಲಭೆಗಳು ನಿಲ್ಲುವ ಸೂಚನೆ ಕಂಡುಬರಲಿಲ್ಲ. ದೆಹಲಿ, ಕಲ್ಕತ್ತಾದಲ್ಲೂ ಪುನಃ ಗಲಾಟೆಗಳಾದವು. ೧೯೪೮ರ ಜನವರಿ ೧೩ ರಂದು ಕೋಮುಶಾಂತಿಗಾಗಿ ಉಪವಾಸ ಆರಂಭಿಸಿದರು. ಗಾಂಧಿಯವರ ಇಚ್ಛೆಯಂತೆ ಹಿಂದೂ-ಮುಸ್ಲಿಮರು ಶಾಂತಿ ಕಾಪಾಡುವುದಾಗಿ ಪ್ರತಿಜ್ಞೆ ಮಾಡಿದರು. ಜನರು ತಮ್ಮಲ್ಲಿದ್ದ ಆಯುಧಗಳನ್ನು ತಂದೊಪ್ಪಿಸಿದರು. ಬಂಗಾಳದಲ್ಲಿ ಕೋಮುಜ್ವಾಲೆಯ ಬಿಸಿ ತಗ್ಗುವಂತೆ ಮಾಡುವುದರಲ್ಲಿ ಸಫಲರಾದರು. ಆದರೆ ಕೆಲವು ಹಿಂದೂ ಹಾಗೂ ಸಿಖ್‌ಜನರಿಗೆ ಗಾಂಧಿ ಮುಸ್ಲಿಮರ ಹಾಗೂ ಪಾಕಿಸ್ತಾನದ ಪರವಹಿಸುತ್ತಾರೆಂಬ ವಿಚಾರವಿತ್ತು ಗಾಂಧಿಯ ನಿವಾಸದ ಮುಂದೆ ಅವರ ವಿರುದ್ಧ ಕೂಗೆಬ್ಬಿಸಿದರು. ಜನವರಿ ೨೦, ೧೯೪೮ ರಂದು ದೆಹಲಿಯ ಗಾಂಧಿ ಪ್ರಾರ್ಥನಾ ಸಭೆಯಲ್ಲಿ ಬಾಂಬೆ ಸಿಡಿಯಿತು. ಅವರ ಕೊಲೆಗಾಗಿ ಸಂಚು ನಡೆಯಿತು. ೧೯೪೮ರ ಜನವರಿ ೩೦ ರಂದು ಸಂಜೆ ಪ್ರಾರ್ಥನಾ ಸಭೆಗೆ ನಡೆದು ಹೋಗುತ್ತಿದ್ದಾಗ ನಾಥುರಾಮ್‌ ಗೋಡ್ಸೆ ಎಂಬ ಹಿಂದೂವಾದಿಯು ಗಾಂಧಿಯ ಎದೆಗೆ ಮೂರು ಬಾರಿ ಗುಂಡುಹಾರಿಸಿ ಕೊಲೆ ಮಾಡಿದನು. ಅದರೊಂದಿಗೆ ಗಾಂಧಿಯವರ ಅಂತ್ಯವಾಯಿತು.

ಮಹಾತ್ಮಾಗಾಂಧಿ ೧೯೧೯ರಿಂದ ೧೯೪೭ರವರೆಗೆ ಬ್ರಿಟಿಷರ ವಿರುದ್ಧ ವಿಭಿನ್ನ ರೀತಿಯಲ್ಲಿ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಭಾರತದ ದೇಶದಲ್ಲಿ ಶತಮಾನದಿಂದ ಆಚರಣೆಯಲ್ಲಿದ್ದ ಸಾಮಾಜಿಕ ಅನಿಷ್ಟಗಳ ವಿರುದ್ಧ ಜನಜಾಗೃತಿಯನ್ನು ತಂದರು. ಆರ್ಥಿಕ ಸಾಮಾಜಿಕ ಸುಧಾರಣೆಗೆ ರಚನಾತ್ಮಕ ಕಾರ್ಯಕ್ರಮ ಕೈಗೊಂಡರು. ಗ್ರಾಮ ಸ್ವರಾಜ್ಯದ ಕನಸು ಕಂಡರು. ನಿಜವಾದ ಭಾರತ, ಗ್ರಾಮ ಭಾರತವೆಂದು ಸಾರಿದರು. ಆಧುನಿಕ ಕೈಗಾರೀಕರಣದಿಂದಾಗುವ ದುಷ್ಪರಿಣಾಮದ ವಿರುದ್ಧ ಧ್ವನಿ ಎತ್ತಿದರು. ಗುಡಿ ಕೈಗಾರಿಕೆ, ಕರಕುಶಲ ಕಸಬುಗಳನ್ನು ಪ್ರೋತ್ಸಾಹಿಸಬೇಕೆಂದರು. ಬೃಹತ್‌ ಉದ್ದಿಮೆ, ಬಂಡವಾಳಶಾಹಿ ಸಂಪತ್ತಿನ ಕೇಂದ್ರೀಕರಣದಿಂದ ಉಂಟಾಗುವ ಸಾಮಾಜಿಕ ಅಸಮತೋಲನದ ಬಗ್ಗೆ ಚಿಂತಿಸುವಂತೆ ಮಾಡಿದರು. ಬದಲಾವಣೆ ಎಂಬುದು ಅಹಿಂಸಾತ್ಮಕ ಪ್ರಕ್ರಿಯೆ ಮೂಲಕ, ಜನರ ಪುನಃ ಪರಿವರ್ತನೆ, ಸ್ವ ಇಚ್ಛೆಯಿಂದ ಆಗಬೇಕೆಂದರು. ಮಾನವನ ಮೂಲಭೂತ ಸದ್ಗುಣ ಸದಾಚಾರದಲ್ಲಿ ನಂಬಿಕೆ ಇಟ್ಟಿದ್ದರು. ಅವರ ರಾಮರಾಜ್ಯ ಕಲ್ಪನೆ ವಿಶಿಷ್ಟವಾದುದಾಗಿತ್ತು. ‘ಗಾಂಧಿವಾದಿ’ ಎಂಬುದು ಅವರು ಕೊಟ್ಟ ವಿಚಾರಯೋಗ್ಯ ಕೊಡುಗೆ ದಕ್ಷಿಣ ಆಫ್ರಿಕಾದಲ್ಲಿ ಪ್ರಯೋಗಕ್ಕೊಳಗಾದ, ಬಹುಪಾಲು ಯಶಸ್ಸು ಗಳಿಸಿದ ಗಾಂಧಿಯ ಸಿದ್ಧಾಂತ, ತಂತ್ರಗಳು, ಅವರ ‘ಸತ್ಯಶೋಧ ಪ್ರಯೋಗ’ ಭಾರತದಲ್ಲೂ ಬೃಹತ್‌ ಪ್ರಮಾಣದಲ್ಲಿ ತನ್ನದೇ ಆದ ಇತಿಮಿತಿಯೊಳಗೆ ಗಾಂಧಿಯುಗದಲ್ಲಿ ಬ್ರಿಟೀಷರ ವಿರುದ್ಧ ಅಹಿಂಸಾತ್ಮಕ ಹೋರಾಟದಲ್ಲಿ, ರಚನಾತ್ಮಕ ಕಾರ್ಯಕ್ರಮದಲ್ಲಿ ಸಾಮಾಜಿಕ, ಆರ್ಥಿಕ ಸುಧಾರಣೆಯಲ್ಲಿ ಆಚರಣೆಗೊಳಗಾಗಿ ವಿಶ್ವದ ಗಮನ ಸೆಳೆಯಿತು. ಇಪ್ಪತ್ತನೇ ಶತಮಾನದಿಂದ ಮೂಲಧರ್ಮದ ಇತಿಹಾಸದ ಅಪೂರ್ವ ಪುಟಗಳಲ್ಲಿ ಸೇರಿತು.