ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ೧೯೩೫ ಮತ್ತು ೧೯೪೭ರ ಅವಧಿಯ ನಡುವಿನ ವರ್ಷಗಳು ಬಹಳ ಮಹತ್ವದ್ದಾಗಿವೆ. ಆಧುನಿಕ ಭಾರತದ ರಾಜಕೀಯ ವ್ಯವಸ್ಥೆ ಹಾಗೂ ಸಂಸ್ಕೃತಿಯ ಬೀಜಗಳನ್ನು ಈ ಸಂಕೀರ್ಣ ಅವಧಿಯಲ್ಲಿಯೇ ಬಿತ್ತಲಾಯಿತು. ೧೯೪೭ಕ್ಕಿಂತಲೂ ಮುಂಚಿನ ಈ ಅವಧಿಯು ಅತ್ಯಂತ ಸಂಕೀರ್ಣವಾಗಿ, ಘಟನೆಗಳಿಂದ ಕಿಕ್ಕಿರುದು ದಟ್ಟವಾಗಿರುವುದರಿಂದ ಅದನ್ನು ಕೆಲವು ಪುಟಗಳ ಮಿತಿಯಲ್ಲಿ ಸಮಗ್ರವಾಗಿ ಗ್ರಹಿಸಲು ಅಸಾಧ್ಯವಾಗಿದೆ. ಆದ್ದರಿಂದ ಕೆಲವು ಆಯ್ದ ಪ್ರಮುಖ ಘಟನೆಗಳ ಮೇಲೆ ಮಾತ್ರ ಬೆಳಕು ಚೆಲ್ಲುವುದು ಅನಿವಾರ್ಯವಾಗುತ್ತದೆ. ಈ ಕೆಳಕಂಡ ಅಂಶಗಳ ಹಿನ್ನಲೆಯಲ್ಲಿ ಒಟ್ಟು ಅವಧಿಯನ್ನು ಚರ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ. ಅವುಗಳು ಹೀಗಿವೆ. ೧. ಮಹಾತ್ಮಾಗಾಂಧಿಯವರ ವಿಶಿಷ್ಟ ವ್ಯಕ್ತಿತ್ವ ಹಾಗೂ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿ ೨. ಇದಕ್ಕೆ ಸಂವಿಧಾನದ ಸುಧಾರಣೆಗಳ ಮೂಲಕ ಬ್ರಿಟಿಷ್ ‌ಸರ್ಕಾರದ ಉತ್ತರ ೩. ಜಿನ್ನಾರ ನೇತೃತ್ವದಲ್ಲಿ ಮುಸ್ಲಿಮ್‌ ರಾಷ್ಟ್ರೀಯತೆ ಹಾಗೂ ದೇಶವಿಭಜನೆಯ ವಿಚಾರಗಳ ಉಗಮ ೪. ಅಂಬೇಡ್ಕರ್‌ ನೇತೃತ್ವದಲ್ಲಿ ಪರಿಶಿಷ್ಟ ಜಾತಿಗಳ ರಾಜಕಾರಣ ೫. ಸಮಾಜವಾದಿ ಹಾಗೂ ಎಡಪಂಥೀಯ ಕಮ್ಯುನಿಸ್ಟರ ಹುಟ್ಟು ೬. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ನಡೆದ ಮಾತುಕತೆಗಳು ಕ್ರಿಪ್ಸ ಹಾಗೂ ಕ್ಯಾಬಿನೆಟ್‌ ಆಯೋಗದ ಯೋಜನೆಗಳು, ವೇವೆಲ್‌ ಮತ್ತು ಮೌಂಟ್‌ ಬ್ಯಾಟನ್‌ ಯೋಜನೆಗಳು ೭. ಭಾಷಾವಾರು ಪ್ರಾಂತ್ಯಗಳ ಚಳವಳಿ (ಕರ್ನಾಟಕಕ್ಕೆ ಸಂಬಂಧಿಸಿದಂತೆ) ಮತ್ತು ೮. ಮಧ್ಯರಾತ್ರಿ ದೊರೆತ ಸ್ವಾತಂತ್ರ್ಯ.

ಮಹಾತ್ಮಾಗಾಂಧಿ ಹಾಗೂ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿ

ಸ್ವಾತಂತ್ರ್ಯ ಚಳವಳಿಯಲ್ಲಿ ಜನಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಲು ಕಾಂಗ್ರೆಸ್ಸನ್ನು ಸಂಘಟಿಸುವ ಹಾಗೂ ಅದರ ಸಿದ್ಧಾಂತವನ್ನು ರೂಪಿಸುವ ಜವಾಬ್ದಾರಿ ಮಹಾತ್ಮಾ ಗಾಂಧಿಯವರ ಮೇಲಿತ್ತು. ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧದ ಹೋರಾಟದ ನಂತರ ಗಾಂಧೀಜಿಯವರಿಗೆ ಬ್ರಿಟಿಷ್ ‌ಸಾಮ್ರಾಜ್ಯಶಾಹಿ ಹಾಗೂ ಪಾಶ್ಚಿಮಾತ್ಯ ದೇಶಗಳ ಪ್ರಭುತ್ವದ ಕರಾಳ ರುಚಿಯ ಅನುಭವವಿತ್ತು. ಅವರು ಭಾರತದ ರಾಜಕೀಯ ರಂಗಕ್ಕೆ ಪ್ರವೇಶ ಮಾಡಿದಾಗ ಬ್ರಿಟಿಷ್ ‌ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುತ್ತಿದ್ದ ಮುಖ್ಯ ಸಂಘಟನೆಯಾದ ಭಾರತ ರಾಷ್ಟ್ರೀಯ ಕಾಂಗ್ರೆಸ್‌, ಭಾರತದಲ್ಲಿ ಕನಿಷ್ಟ ಆಡಳಿತ ಸುಧಾರಣೆಯನ್ನು ತರುವಂತೆ ಬ್ರಿಟಿಷ್ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಾ ಅದನ್ನು ಮನವೊಲಿಸುವ ವ್ಯರ್ಥ ಕೆಲಸದಲ್ಲಿ ನಿರತವಾಗಿತ್ತು. ಗಾಂಧೀಜಿಯವರು ತಮ್ಮ ರಾಜಕೀಯ ಜೀವನವನ್ನು ಮಂದಗಾಮಿ ಹಾಗೂ ಉದಾರವಾದಿಯಾಗಿದ್ದ ಗೋಪಾಲಕೃಷ್ಣ ಗೋಖಲೆಯವರ ಜೊತೆಯಲ್ಲಿ ಆರಂಭಿಸಿದರೂ ತಮ್ಮದೇ ಆದ ವಿಶಿಷ್ಟ ರಾಜಕೀಯ ಸಿದ್ಧಾಂತಗಳಾದ ಸತ್ಯಾಗ್ರಹ, ಅಹಿಂಸೆಗಳನ್ನು ಬೇಗನೆ ರೂಪಿಸಿಕೊಂಡರು. ಅವರು ತಮ್ಮ ಹೊಸ ಯುದ್ಧಾಸ್ತ್ರಗಳನ್ನು ಮೊದಲು ಬಳಸಿದ್ದು ಭಾರತೀಯರನ್ನು ಗುಲಾಮರಂತೆ ಕಂಡ ರೌಲತ್‌ ಕಾಯಿದೆಯ ವಿರುದ್ಧ. ಗಾಂಧಿಯವರ ಹೋರಾಟ ಸತ್ಯ ಮತ್ತು ಪ್ರೇಮದ ನೈತಿಕ ಶಕ್ತಿಯ ಆಧಾರದ ಮೇಲೆ ನಿಂತಿತ್ತು. ಅವರು ತಮ್ಮ ಉತ್ಕೃಷ್ಟ ಕೃತಿ “ಹಿಂದ್ ಸ್ವರಾಜ್‌”ನಲ್ಲಿ ತಮ್ಮ ವಿರೋಧ ಸೂತ್ರವನ್ನು, ಪಾಶ್ಚಿಮಾತ್ಯ ನಾಗರಿಕತೆಯ ಪ್ರಾಪಂಚಿಕ ಹಾಗೂ ಪೈಶಾಚಿಕ ವಿಧಾನಗಳಿಂದ ಭಿನ್ನವಾದುದು ಎಂದು ಪ್ರತಿಪಾದಿಸಿದರು. ದೇವರು, ಧರ್ಮಗಳು ಇನ್ನೂ ಬಲವಾದ ಪ್ರಭಾವ ಬೀರುವ ವಿಷಯಗಳಾಗಿರುವ ಭಾರತದಂಥ ದೇಶಗಳ ಪರಿಸ್ಥಿತಿಯಲ್ಲಿ ಗಾಂಧೀಜಿಯವರು ಧಾರ್ಮಿಕ ಸಂಕೇತಗಳ ಮೂಲಕ ಜನರನ್ನು ತಲುಪಲು ಪ್ರಯತ್ನಿಸಿದ್ದರಿಂದ ಅವರ ಮಾತುಗಳಿಗೆ ವಿಶೇಷ ಅಧಿಕೃತತೆ ಸಿಕ್ಕಿತು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಗಾಂಧೀಜಿಯವರು ಇಡೀ ದೇಶದ ಜನಸಮೂಹದ ನಾಯಕನಾಗಿ ರೂಪುಗೊಂಡಿದ್ದು ಅವರು ಪ್ರತಿಪಾದಿಸಿದ ಧಾರ್ಮಿಕ-ನೈತಿಕ ಮೌಲ್ಯಗಳಿಂದಷ್ಟೇ ಅಲ್ಲ. ಧಾರ್ಮಿಕ-ನೈತಿಕ ವಿಚಾರಗಳ ಗರ್ಭದೊಳಗೆ ಆಮೂಲಾಗ್ರ ಬದಲಾವಣೆ ತರಲು ಬೇಕಾದ ಕ್ರಾಂತಿಕಾರಿ ಸಿದ್ಧಾಂತಗಳಿದ್ದವು. ಅವರ ಆದರ್ಶಗಳು-ವಿಚಾರಗಳು ಬರೀ ಧಾರ್ಮಿಕವಾಗಿರದೆ ಸಾಮಾನ್ಯ ಮನುಷ್ಯನ ಬದುಕಿಗೆ ಹತ್ತಿರವಾಗಿದ್ದವು. ಅವು ಹಿಂದೂ ಧರ್ಮದ ಸಂಕುಚಿತ ವಿಚಾರಗಳನ್ನು ಮೀರಿದವಾಗಿದ್ದವು. ಅವರು ಮುಸ್ಲಿಮರೊಂದಿಗೆ ಬೆಳೆಸಿದ ಭ್ರಾತೃತ್ವ ಬರೀ ಜಾತ್ಯತೀತ ಸಿದ್ಧಾಂತದ ಆಧಾರದ ಮೇಲೆ ನಿಂತಿದ್ದಾಗಿರದೆ ಒಂದು ವಿಶಾಲ ಮಾನವೀಯ ಮೌಲ್ಯದ ತಳಹದಿಯ ಮೇಲೆ ನಿಂತಿತ್ತು. ೧೯೩೦ರ ನಂತರ ಗಾಂಧೀಜಿಯವರು ತಮ್ಮ ಅಹಿಂಸಾತ್ಮಕ ಹೋರಾಟವನ್ನು ಸತ್ಯಾಗ್ರಹ, ಅಸಹಕಾರ ಮತ್ತು ನೈತಿಕ ವಿರೋಧಗಳಂಥ ವಿವಿಧ ತಂತ್ರಗಳ ಮೂಲಕ ತೀವ್ರಗೊಳಿಸಿದರು. ಅವರ ರಾಜಕೀಯ ನೀತಿ, ಅಹಿಂಸಾತ್ಮಕ ಹೋರಾಟ ಮತ್ತು ವೈರಿಯೊಂದಿಗೆ ಶಾಂತಿಪೂರ್ಣ ಮಾತುಕತೆ ಇವುಗಳ ಮಿಶ್ರಣದಿಂದ ರೂಪುಗೊಂಡಿತ್ತು. ಆದ್ದರಿಂದಲೇ ಅವರು ಬ್ರಿಟಿಷರ ಆಹ್ವಾನದ ಮೇರೆಗೆ ದುಂಡು ಮೇಜಿನ ಪರಿಷತ್ತಿನಲ್ಲಿ ಹಿಂದೂ ಮುಸ್ಲಿಮರ ಭ್ರಾತೃತ್ವ ಮತ್ತು ಪರಿಶಿಷ್ಟ ಜಾತಿಗಳ ಸಮಸ್ಯೆಗಳನ್ನು ಚರ್ಚಿಸಲು ಹಿಂಜರಿಯಲಿಲ್ಲ. ೧೯೩೨-೩೫ರ ಅವಧಿಯಲ್ಲಿ ಕಾಂಗ್ರೆಸ್‌ ಹಾಗೂ ಬ್ರಿಟಿಷರ ಸರ್ಕಾರ ಎರಡೂ ಕಡೆಗಳಲ್ಲಿ ರಾಜಕೀಯದ ಮಾತುಕತೆಗಳು ಮುರಿದು ಬಿದ್ದಿದ್ದವು. ಒಂದು ಕಡೆ ಸರ್ಕಾರವು ಕಾಂಗ್ರೆಸ್‌ ನೇತೃತ್ವದ ಸ್ವಾತಂತ್ರ್ಯ ಚಳವಳಿಯ ನಿಜವಾದ ಶಕ್ತಿಯನ್ನು ಅರಿಯದೆ ದಮನಕಾರಿ ನೀತಿಯನ್ನು ಅನುಸರಿಸಿತು. ಇನ್ನೊಂದು ಕಡೆ ಕಾಂಗ್ರೆಸ್‌ ಸಹ ಜನಗಳಲ್ಲಿ ಸ್ವಾತಂತ್ರ್ಯದ ಬಗ್ಗೆ ಇದ್ದ ಉತ್ಸಾಹವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಕಾಂಗ್ರೆಸ್‌ ಪೂರ್ಣ ಸ್ವರಾಜ್ಯವನ್ನಲ್ಲದೆ ಬೇರೇನನ್ನೂ ಒಪ್ಪದೇ ಇದ್ದ ಸಂದರ್ಭದಲ್ಲಿ, ಬ್ರಿಟಿಷರು ಸ್ವಾತಂತ್ರ್ಯವನ್ನು ೧೯೩೫ರಂಥ ಕಾಯಿದೆಗಳ ಮೂಲಕ ಹಂತಹಂತವಾಗಿ ನೀಡಲು ಸಿದ್ಧವಾದರು.

೧೯೩೫ರ ಕಾಯಿದೆ

ಬ್ರಿಟಿಷ್ ‌ಇತಿಹಾಸಕಾರರಾದ ಪಷಿವಲ್‌ ಸ್ಪಿಯರ್‌ರಂಥವರು (ಇಂಡಿಯಾ: ಎ ಮಾಡರ್ನ್‌ ಹಿಸ್ಟರಿ, ಯೂನಿವರ್ಸಿಟಿ ಆಫ್‌ ಮಿಸಿಗನ್‌ ಪ್ರೆಸ್‌, ಆನ್‌ ಆರ್ಬರ್‌, ೧೯೬೧) ಈ ಸಂವಿಧಾನದ ಸುಧಾರಣೆಗಳನ್ನು, ಸ್ವಾತಂತ್ರ್ಯ ಚಳವಳಿಯ ಜನಗಳ ಹೋರಾಟಕ್ಕೆ ಬ್ರಿಟಿಷರು ನೀಡಿದ ಉತ್ತರವಾಗಿರದೆ, ಬ್ರಿಟಿಷರೇ ತಮ್ಮ ಸ್ವಚ್ಛೆಯಿಂದ ಆರಂಭಿಸಿದವುಗಳಾಗಿದ್ದವು ಎಂದು ಅಭಿಪ್ರಾಯಪಡುತ್ತಾರೆ. ಈ ಕಾಯಿದೆಯು ಸ್ವಾತಂತ್ರ್ಯವನ್ನು ಪಡೆಯುವ ದಿಕ್ಕಿನಲ್ಲಿ ಸಹಾಯಕಾರಿಯಾಗದೆ ಇದ್ದುದರಿಂದ ರಾಷ್ಟ್ರೀಯವಾದಿ ಚಳವಳಿಯ ನೇತಾರರಿಗೆ ಸಮಾಧಾನ ತರದಿದ್ದರೂ ಇದರ ಮಹತ್ವವನ್ನು ಅಲ್ಲಗಳೆಯುವಂತಿಲ್ಲ. ಯಾಕೆಂದರೆ ಅದು ಪರಿಚಯಿಸಿದ ಸಂವಿಧಾನದ ಕುರಿತಾದ ವಿಚಾರಗಳು ಎಷ್ಟು ಪ್ರಮುಖವಾಗಿದ್ದವೆಂದರೆ ಅವನ್ನು ೧೯೫೦ರ ಭಾರತ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಯಿತು. ಇವುಗಳಲ್ಲಿ ಪ್ರಮುಖವಾದ ಪರಿಕಲ್ಪನೆಗಳೆಂದರೆ ಫೆಡರಲಿಸಂ ಮತ್ತು ಪಾರ್ಲಿಮೆಂಟರಿ ಪ್ರಜಾಪ್ರಭುತ್ವ. ಇವೆರಡೂ ತತ್ವಗಳನ್ನು ಬ್ರಿಟಿಷ್ ‌ಸಾಮ್ರಜ್ಯಶಾಹಿಯ ಚೌಕಟ್ಟಿನ ಒಳಗೇ ಕಾರ್ಯರೂಪಕ್ಕೆ ತರುವಾಗ ಫೆಡರಲಿಸಂ ಅನ್ನು ಬಳಕೆಗೆ ತರದಿದ್ದರೂ, ಪ್ರಾಂತೀಯ ಸರ್ಕಾರಗಳ ಹಂತದಲ್ಲಿ ಪಾರ್ಲಿಮೆಂಟರಿ ಪ್ರಜಾಪ್ರಭುತ್ವವನ್ನು ಆಂಶಿಕವಾಗಿ ಜಾರಿಗೆ ತರಲಾಗಿತ್ತು. ಈ ಕಾಯಿದೆ ಜಾರಿಗೆ ಬಂದ ನಂತರ ಸೀಮಿತ ಮತದಾನದ ಆಧಾರದ ಮೇಲೆ ಕೆಲವು ಜವಾಬ್ದಾರಿಯುತ ಸರ್ಕಾರಗಳನ್ನು ೧೯೩೭ರಲ್ಲಿ ಸ್ಥಾಪಿಸಲಾಯಿತು. ಚುನಾವಣೆಗಳು ಕಾಂಗ್ರೆಸ್‌ಗೆ ಇರುವ ಅಪಾರ ಜನಬೆಂಬಲವನ್ನು ತೋರಿಸಿಕೊಟ್ಟವು. ಸರ್ಕಾರದಲ್ಲಿ ಕಾಂಗ್ರೆಸ್‌ನ ಸಹಭಾಗಿತ್ವದ ಬಗ್ಗೆ ಬಹಳ ಹಿಂಜರಿಕೆಯಿಂದಲೇ ನಿರ್ಧಾರ ಕೈಗೊಳ್ಳಲಾಯಿತು. ಸ್ವತಃ ನೆಹರೂ ಅವರಿಗೂ ಸಹ ಇದರ ಬಗ್ಗೆ ಸಾಕಷ್ಟು ಅಂಜಿಕೆ ಇತ್ತು. ವಾಸ್ತವವಾಗಿ ಕಾಂಗ್ರೆಸ್‌ ಹಾಗೂ ಮುಸ್ಲಿಮ್‌ ಲೀಗ್‌ಗಳು ಚುನಾವಣೆಯಲ್ಲಿ ಭಾಗಿಯಾಗಿದ್ದು, ಅವರು ಈ ಕಾಯ್ದೆಯನ್ನು ಪೂರ್ತಿ ಒಪ್ಪಿಕೊಂಡಿದ್ದರಿಂದ ಅಲ್ಲ. ಅದು ಕಾಯ್ದೆಯ ನಿಜವಾದ ಮಹತ್ವವನ್ನು ಅರಿಯಲು ಮಾಡಿದ ಪ್ರಯೋಗವಷ್ಟೇ ಆಗಿತ್ತು. ಚುನಾವಣೆಯ ಫಲಿತಾಂಶಗಳು ಕಾಂಗ್ರೆಸ್‌ ನ್ನು ಒಂದು ರಾಷ್ಟ್ರೀಯ ಹಾಗೂ ದೇಶವ್ಯಾಪಿ ಬೆಂಬಲವಿರುವ ಪಕ್ಷ ಎಂದು ರುಜುವಾತುಪಡಿಸಿದವು. ಇದರ ಯಶಸ್ಸಿಗೆ ಪಕ್ಷದ ರಾಷ್ಟ್ರವ್ಯಾಪಿ ಪ್ರಭಾವದಿಂದ ಹಿಡಿದು ಅದು ಸ್ಥಳೀಯ ವಿಷಯ-ಸಮಸ್ಯೆಗಳನ್ನು ಬಳಸಿಕೊಂಡು ತನ್ನ ಶಕ್ತಿಯನ್ನು ಬೆಳೆಸಿಕೊಂಡಂಥ ಬೇರೆ ಬೇರೆ ಕಾರಣಗಳನ್ನು ಕೊಡಬಹುದು.

ಆದರೆ ಕಾಂಗ್ರೆಸ್‌ಗೆ ಮುಸ್ಲಿಮೇತರರ ಓಟುಗಳನ್ನು ಆಕರ್ಷಿಸುವಲ್ಲಿ ಇದ್ದ ಶಕ್ತಿ, ಸ್ವತಃ ಮುಸ್ಲಿಮರ ಓಟುಗಳನ್ನು ಪಡೆಯುವಲ್ಲಿ ಇರಲಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ. ಒಟ್ಟು ೪೮೨ ಸ್ಥಾನಗಳಲ್ಲಿ ಅದು ೫೬ ಮುಸ್ಲಿಮ್‌ಕ್ಷೇತ್ರಗಳಿಗೆ ಮಾತ್ರ ಸ್ಪರ್ಧಿಸಿದ್ದು, ಅದರಲ್ಲೂ ೨೮ ಸ್ಥಾನಗಳಲ್ಲಿ ಮಾತ್ರ ಜಯ ಗಳಿಸಿತು. ಉತ್ತರ ಪ್ರದೇಶದಲ್ಲಿ ಒಂದೇ ಒಂದು ಮುಸ್ಲಿಮ್‌ಸ್ಥಾನವನ್ನು ಗಳಿಸಲಾಗಲಿಲ್ಲ. ಬಂಗಾಳ ಮತ್ತು ಪಂಜಾಬ್‌ಗಳಲ್ಲಿನ ಸ್ಥಿತಿ ಸಹ ಇದಕ್ಕಿಂತ ಭಿನ್ನವಾಗಿರಲಿಲ್ಲ. ಆದರೆ ಮದ್ರಾಸ್‌ನಲ್ಲಿ ಮಾತ್ರ ೪ ಸ್ಥಾನಗಳನ್ನು ಗೆದ್ದಿದ್ದು ಹಾಗೂ ನಾರ್ತ್‌ವೆಸ್ಟ್‌ ಫ್ರಾಂಟಿಯರ್‌ ಪ್ರಾವಿನ್ಸ್‌ನ (NWFP) ೧೫ ಸ್ಥಾನಗಳನ್ನು ಪಡೆದಿದ್ದು ಮಾತ್ರ ಅದರ ವಿಶೇಷ ಸಾಧನೆ ಎನ್ನಬಹುದು. ಹಾಗೆಯೇ ಮುಸ್ಲಿಮ್‌ ಲೀಗ್‌ ಮುಸ್ಲಿಮರ ಪ್ರಾಬಲ್ಯವಿರುವ ಪ್ರಾಂತ್ಯಗಳಲ್ಲೂ ಸಹ ಕಳಪೆ ಸಾಧನೆಯನ್ನು ಮಾಡಿತು. ಅದಕ್ಕೆ ಯಾವ ಪ್ರಾಂತ್ಯದಲ್ಲೂ ಸಹ ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಚುನಾವಣಾ ಫಲಿತಾಂಶಗಳನ್ನು ಕೋಮುವಾದಿ ಹಾಗೂ ಪ್ರತ್ಯೇಕವಾದಿ ಶಕ್ತಿಗಳಿಗೆ ಸಿಕ್ಕ ಜಯ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಬಂಗಾಳದಲ್ಲಿ ಒಟ್ಟು ೧೧೭ ಮುಸ್ಲಿಮ್‌ ಸ್ಥಾನಗಳಲ್ಲಿ ಅದರ ಶಕ್ತಿ ೩ ಕ್ಕೆ ಸೀಮಿತವಾಗಿತ್ತು. ಈ ಮುಸ್ಲಿಮ್‌ ಬಾಹುಳ್ಯದ ಕ್ಷೇತ್ರಗಳಲ್ಲಿನ ಆರ್ಥಿಕ ಸಮಸ್ಯೆಗಳು ಹಾಗೂ ಸ್ಥಳೀಯ ವಿಷಯಗಳು ಕೋಮುವಾದಿ ಸಿದ್ಧಾಂತವನ್ನು ಬದಿಗೊತ್ತಿದವು. ಅದೇ ರೀತಿ, ಈಗಾಗಲೇ ಹೇಳಿದಂತೆ, ಕಾಂಗ್ರೆಸ್‌ ಸಹ ಮುಸ್ಲಿಮ್‌ಕ್ಷೇತ್ರಗಳಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಲಿಲ್ಲ. ಇದರ ಪರಿಣಾಮವಾಗಿ ಕಾಂಗ್ರೆಸ್ಸಾಗಲಿ, ಲೀಗ್‌ಗಾಗಲಿ ಮುಸ್ಲಿಮರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಹಕ್ಕು ಇರಲಿಲ್ಲ.

ಮುಸ್ಲಿಮ್ ಲೀಗ್ ಮತ್ತು ಜಿನ್ನಾ

ಈ ಹಿಂದೆ ಉಲ್ಲೇಖಿಸಿದಂತೆ ಚುನಾವಣಾ ಫಲಿತಾಂಶಗಳನ್ನು ವಿಶ್ಲೇಷಿಸಿದರೆ ಜಿನ್ನಾ ಅವರ ಮುಸ್ಲಿಮ್‌ ಲೀಗ್‌ ಮುಸ್ಲಿಮ್‌ ಸಮುದಾಯವನ್ನು ಪ್ರತಿನಿಧಿಸುವಂತಿರಲಿಲ್ಲ. ಆದ್ದರಿಂದ ೧೯೩೭ರ ಚುನಾವಣೆಗಳಲ್ಲಿ ಮುಸ್ಲಿಮ್‌ ಲೀಗ್ ಸಂಪೂರ್ಣ ಸೋಲನ್ನು ಅನುಭವಿಸಿತು. ಇದರಿಂದ ಜಿನ್ನಾಗೆ ಮುಂದೆ ಹೇಗೆ ಪಾಕಿಸ್ತಾನವನ್ನು ಗಳಿಸಲು ಸಾಧ್ಯವಾಯಿತು ಎಂಬ ಪ್ರಶ್ನೆ ಏಳುತ್ತದೆ. ೧೯೩೪ರಿಂದ ಜಿನ್ನಾ ಮುಸ್ಲಿಮ್‌ ಸಮುದಾಯದ ಐಕ್ಯತೆಯನ್ನು ಸಾಧಿಸಲು ಪ್ರಯತ್ನಿಸಿದ್ದರೂ, ಚುನಾವಣಾ ಫಲಿತಾಂಶಗಳಿಂದ ವ್ಯಕ್ತವಾದಂತೆ ಅದು ಮುಸ್ಲಿಮರ ಸ್ಥಳೀಯ ಸಮಸ್ಯೆ, ಹಿತಾಸಕ್ತಿಗಳು ಮತ್ತು ವಿಭಿನ್ನ ವ್ಯಕ್ತಿತ್ವಗಳ ಕಾರಣದಿಂದ ಸಾಧ್ಯವಾಗಿರಲಿಲ್ಲ. ಕೆಲವು ಆಧಾರಗಳ ಮೂಲಕ ಹೇಳುವುದಾದರೆ ಸ್ಥಳೀಯ ಸಮಸ್ಯೆಗಳ ಅರಿವಿದ್ದ ಕೆಲವು ಮುಸ್ಲಿಮ್‌ ಲೀಗ್‌ನ ನಾಯಕರು ಲೀಗ್‌ ಮತ್ತು ಕಾಂಗ್ರೆಸ್‌ ನಡುವೆ ಒಪ್ಪಂದಕ್ಕೆ ಸಿದ್ಧವಿದ್ದರು. ಇದರಿಂದ ವಿಚಲಿತರಾಗದ ಜಿನ್ನಾ ಮುಸ್ಲಿಮ್‌ ಐಕ್ಯತೆಗೆ ಹೋರಾಡುತ್ತಲೇ ಅವರಿಗೆ ಪ್ರತ್ಯೇಕ ಅಸ್ತಿತ್ವ ಬೇಕೆಂದು ಪ್ರತಿಪಾದಿಸಿದರು. ಕುತೂಹಲಕರ ಅಂಶವೆಂದರೆ ಜಿನ್ನಾ ಸಹ ಗಾಂಧಿಯ ಹಾಗೆ ಮುಸ್ಲಿಮ್‌ ಲೀಗ್‌ನ್ನು ಒಂದು ಜನಾಂದೋಲನವನ್ನಾಗಿ ರೂಪಿಸಿ, ಅದನ್ನು ಮುಸ್ಲಿಮ್‌ ಸಮುದಾಯದ ಒಳಗಿನ ಊಳಿಗಮಾನ್ಯ ಶಕ್ತಿಗಳು ಹಾಗೂ ಶ್ರೀಮಂತರಿಂದ ರಕ್ಷಿಸಲು ಪ್ರಯತ್ನಿಸಿದರು. ಮುಸ್ಲಿಮ್‌ ಲೀಗ್‌ಮತ್ತು ಕಾಂಗ್ರೆಸ್‌ಗಳು ತಮ್ಮ ಪ್ರತ್ಯೇಕ ಅಸ್ತಿತ್ವಗಳನ್ನು ಉಳಿಸಿಕೊಂಡೇ ಸ್ವಾತಂತ್ರ್ಯಕ್ಕಾಗಿ ದುಡಿಯಬೇಕೆನ್ನುವ ಜಿನ್ನಾರ ವಾದವನ್ನು ಕಾಂಗ್ರೆಸ್‌ ಅದರಲ್ಲೂ ಮುಖ್ಯವಾಗಿ ನೆಹರೂ ಒಪ್ಪಲಿಲ್ಲ. ಈ ವೈಫಲ್ಯಗಳ ನಡುವೆಯೇ ಜಿನ್ನಾ ಮುಸ್ಲಿಮರ ಪ್ರತ್ಯೇಕ ಅಸ್ತಿತ್ವದ ಪ್ರಶ್ನೆಯನ್ನಿಟ್ಟುಕೊಂಡು ತಮ್ಮ ನಾಯಕತ್ವವನ್ನು ಬಲಪಡಿಸಿಕೊಂಡರು. ಹೀಗೆ ಜಿನ್ನಾ ಧರ್ಮದ ಆಧಾರದ ಮೇಲೆ ಮುಸ್ಲಿಮರ ಅಸ್ತಿತ್ವವನ್ನು ರೂಪಿಸುತ್ತ ಕಾಂಗ್ರೆಸ್‌ ನ್ನು ಹಿಂದೂಗಳ ಪಕ್ಷವೆಂದು ಪ್ರಚಾರ ಮಾಡುವಲ್ಲಿ ಸಫಲರಾದರು. ಅದರೆ ಜಿನ್ನಾ ಅವರಿಗೆ ಈ ವಿಷಯಗಳನ್ನು ಮುಂದಿಟ್ಟುಕೊಂಡೇ ಕಾಂಗ್ರೆಸ್‌ನ ಜೊತೆ ಒಳ್ಳಯೆ ವ್ಯಾಪಾರ ಕುದುರಿಸಿಕೊಳ್ಳುವುದೇ ಮುಖ್ಯವಾಗಿತ್ತೆ ವಿನಾ ಒಂದು ಸ್ವತಂತ್ರ ಸಾರ್ವಭೌಮ ಮುಸ್ಲಿಮ್‌ ದೇಶವನ್ನು ಪಡೆಯುವುದಾಗಿರಲಿಲ್ಲ. ಕಾಂಗ್ರೆಸ್‌ ಲೀಗ್‌ನ ವಾದವನ್ನು ಹಾಗೂ ಜಿನ್ನಾ ಅವರು ಮುಸ್ಲಿಮರ ಅಧಿಕೃತ ಪ್ರತಿನಿಧಿ ಎಂಬ ಅಂಶವನ್ನು ತಿರಸ್ಕರಿಸುತ್ತಲೇ ಹೋಯಿತು. ಈ ವಿಷಯದ ಬಗ್ಗೆ ಗಾಂಧಿ ಹಾಗೂ ೧೯೩೮ರಲ್ಲಿ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಸುಭಾಷ್‌ಚಂದ್ರ ಬೋಸ್‌ ಇಬ್ಬರೂ ತಮ್ಮ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜಿನ್ನಾ ಈ ಸಂದರ್ಭದಲ್ಲಿ ಕಾಂಗ್ರೆಸ್‌ ಆಳ್ವಿಕೆಯ ಪ್ರಾಂತ್ಯಗಳಲ್ಲೆಲ್ಲ ಕಾಂಗ್ರೆಸ್‌ ವಿರೋಧಿ ಭಾವನೆಯನ್ನು ಚಾಣಾಕ್ಷತನದಿಂದ ಮುಸ್ಲಿಮರ ಮನಸ್ಸಿನಲ್ಲಿ ಬೆಳೆಸಿದರು. ಕಾಂಗ್ರೆಸ್ಸನ್ನು ಮುಸ್ಲಿಮ್‌ವಿರೋಧಿ ಎಂದು ಆಪಾದಿಸಿದ ಜಿನ್ನಾಗೆ, ಹೀಗೆ ಹೇಳಲು ಯಾವ ಆಧಾರಗಳಿಲ್ಲಿದ್ದರೂ ಅದನ್ನು ನಂಬುವಂತೆ ಮಾಡಲು ಕಷ್ಟವಾಗಲಿಲ್ಲ. ೧೯೩೯ರ ವೇಳೆಗೆ ಪರಿಸ್ಥಿತಿ ಅನಿಶ್ಚಿತವಾಗಿಯೇ ಮುಂದುವರಿಯಿತು. ಯಾಕೆಂದರೆ ಕಾಂಗ್ರೆಸ್‌ನ ರಾಷ್ಟ್ರೀಯತೆ ಕರೆಗೆ ವ್ಯಾಪಕ ಬೆಂಬಲ ಸಿಗಲಿಲ್ಲ. ಹಾಗೆಯೇ ಜಿನ್ನಾರಿಗೆ ಸಹ ಮುಸ್ಲಿಮರ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ.

ಎರಡನೆಯ ಮಹಾಯುದ್ಧ

೧೯೩೯ರ ಸೆಪ್ಟೆಂಬರ್‌ ೩ ರಂದು ಒಂದು ಹೊಸ ರಾಜಕೀಯ ಯುಗ ಭಾರತದಲ್ಲಿ ಆರಂಭವಾಯಿತು. ವೈಸರಾಯ್‌ ಲಿನ್‌ಲಿತ್‌ಗೋ ಭಾರತದ ಯಾವ ಪಕ್ಷಗಳನ್ನೂ ಸಹ ಕೇಳದೆ ಏಕಪಕ್ಷೀಯವಾಗಿ ಭಾರತ ಯುದ್ಧದಲ್ಲಿ ಭಾಗಿಯಾವುದೆಂದು ಘೋಷಿಸಿದೆ. ಹೀಗಿದ್ದರೂ ವೈಸರಾಯ್‌ಗೆ ಕಾಂಗ್ರೆಸ್‌ನ ಬೆಂಬಲವಿಲ್ಲದೆ ಯುದ್ಧಕ್ಕೆ ಸಹಾಯ ದೊರೆಯುವುದಿಲ್ಲವೆಂದು ತಿಳಿದಿತ್ತು. ಹಾಗೆಯೇ ಗಾಂಧೀಜಿ ಫಾಸಿಸ್ಟ್‌ ದೇಶಗಳಿಗೆ ಬೆಂಬಲ ನೀಡುವುದು ಅಸಾಧ್ಯ ಎಂದು ತಿಳಿದಿತ್ತು. ಗಾಂಧೀಜಿ ಈ ಅವಕಾಶವನ್ನು ರಾಷ್ಟ್ರೀಯವಾದಿ ಕಾಂಗ್ರೆಸ್‌ನ ಅಗತ್ಯಕ್ಕೆ ಬಳಸಿಕೊಳ್ಳಬಹುದೆಂಬ ಅನುಮಾನ ಸಹ ಇತ್ತು. ಆದರೆ ಜಿನ್ನಾರ ಯೋಜನೆ ಏನಾಗಿತ್ತೆಂದರೆ ಯುದ್ಧಕ್ಕೆ ಬೆಂಬಲ ನೀಡುವುದಕ್ಕೆ ಪ್ರತಿಫಲವಾಗಿ ವೈಸರಾಯ್‌ನನ್ನು, ಫೆಡರಲಿಸಂನ ತತ್ವಗಳನ್ನು ಹಾಗೂ ೧೯೩೫ರ ಕಾಯ್ದೆಯ ಬಹುಸಂಖ್ಯಾತ ಆಳ್ವಿಕೆಯ ವಿಷಯಗಳನ್ನು ಕೈ ಬಿಡುವಂತೆ ಮನವೊಲಿಸುವುದಾಗಿತ್ತು. ೧೯೩೯ರ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯು ಯುದ್ಧಕ್ಕೆ ಬೆಂಬಲ ನೀಡುವ ವಿಷಯ ಜನಗಳಿಗೆ ಬಿಟ್ಟಿದ್ದು ಎಂದು ಪ್ರತಿಪಾದಿಸಿದರೆ, ಗಾಂಧೀಜಿಯವರೊಬ್ಬರೇ ಅಹಿಂಸೆಯ ನೆಲೆಗಟ್ಟಿನ ಮೇಲೆ ಯುದ್ಧಕ್ಕೆ ಯಾವುದೇ ಷರುತ್ತುಗಳಿಲ್ಲದೆ ಬೆಂಬಲ ನೀಡಬೇಕೆಂದು ಅಭಿಪ್ರಾಯಪಟ್ಟರು. ಸ್ವಾತಂತ್ರ್ಯ ಭರವಸೆ ನೀಡದ ಹೊರತು ಕಾಂಗ್ರೆಸ್‌ ನಿಂದ ಯುದ್ಧಕ್ಕೆ ಬೆಂಬಲ ಪಡೆಯುವುದು ಸಾಧ್ಯವಿಲ್ಲ ಎಂದು ಸ್ಪಷ್ಟವಾದಾಗ ಮುಸ್ಲಿಮ್‌ ಲೀಗ್‌, ತನ್ನನ್ನು ಮುಸ್ಲಿಮ್‌ಸಮುದಾಯದ ಅಧಿಕೃತ ಪ್ರತಿನಿಧಿ ಎಂದು ಗುರುತಿಸಿದರೆ ಮಾತ್ರ ಬೆಂಬಲ ನೀಡುವುದಾಗಿ ಷರತ್ತು ಹಾಕಿತು. ಅಂದರೆ ಇದರರ್ಥ ಲಿನ್‌ಲಿತ್‌ಗೋ ಕಾಂಗ್ರೆಸ್‌ನ ಜೊತೆ ಸಮಾಲೋಚನೆ ನಡೆಸದೆ ಜಿನ್ನಾರ ಮಾತುಗಳನ್ನು ಒಪ್ಪಿಕೊಳ್ಳಬಹುದು ಎಂಬುದಾಗಿರಲಿಲ್ಲ. ಇದಕ್ಕೆ ಇನ್ನೊಂದು ಕಾರಣವೆಂದರೆ ವೈಸರಾಯ್‌ನ ದೃಷ್ಟಿಯಲ್ಲಿ ಮುಸ್ಲಿಮರ ರಾಜಕೀಯ ಕೋಮುಶಕ್ತಿ ಕಾಂಗ್ರೆಸ್‌ನ ರಾಷ್ಟ್ರೀಯತೆಗೆ ಸಮನಾಗಿರುವಂಥದಾಗಿರಲಿಲ್ಲ. ಕಾಂಗ್ರೆಸ್‌ ಸ್ವಾತಂತ್ರ್ಯ ದೊರಕಬೇಕೆಂಬ ಬಹಳ ಖಚಿತವಾದ ನಿಲುವನ್ನು ಹೊಂದಿದ್ದರೆ, ಜಿನ್ನಾ ಇದನ್ನು ವಿರೋಧಿಸಿದ್ದರಿಂದ ಅವರಿಗೆ ಸಿಗಬೇಕಾದ ರಾಜಕೀಯ ಪ್ರಾಮುಖ್ಯತೆ ಕಡಿಮೆಯಾಯಿತು. ಮುಸ್ಲಿಮರ ಕೋಮುಭಾವನೆಗಳನ್ನು ಜೀವಂತವಾಗಿಡಲು ಜಿನ್ನಾ ಪರ್ಯಾಯ ತಂತ್ರಗಳನ್ನು ರೂಪಿಸಬೇಕಿತ್ತು. ಆದ್ದರಿಂದ ೧೯೩೯ರ ಡಿಸೆಂಬರ್‌ ೨೨ ರಂದು ಜಿನ್ನಾ ಕಾಂಗ್ರೆಸ್‌ ನಿಂದ ವಿಮೋಚನೆ ಪಡೆದ ದಿನವೆಂದು ಘೋಷಿಸಿ, ಮುಸ್ಲಿಮರಿಗೆ ನೇರವಾಗಿ ತಮ್ಮ ಕಾರ್ಯಸಾಧನೆ ಮಾಡುವಂತೆ ಕರೆ ನೀಡಿದರು. ಸರ್ಕಾರ ಸ್ಥಿತಿಯನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುವ ನಿರ್ಧಾರ ಕೈಗೊಂಡರೂ ಅದರ ನಡುವೆಯೇ ಕಾಂಗ್ರೆಸ್‌ನ ವಿರುದ್ಧ ಸುಗ್ರೀವಾಜ್ಞೆ ಇತ್ಯಾದಿ ದಮನಕಾರಿ ಕೆಲಸಗಳನ್ನು ಆರಂಭಿಸಿತು. ಇತ್ತ ಕಾಂಗ್ರೆಸ್‌ ನೇರ ಮಾತುಗಳಲ್ಲಿ ಯುದ್ಧಕ್ಕೆ ನೀಡಿದ ಬೆಂಬಲವನ್ನು ಸ್ವಾತಂತ್ರ್ಯವನ್ನು ಪಡೆಯುವ ದಿಕ್ಕಿನಲ್ಲಿ ಇಟ್ಟ ಹೆಜ್ಜೆ ಎಂದು ಹೇಳುತ್ತ ಕಾನ್‌ಸ್ಟಿಟ್ಯೂಯೆಂಟ್‌ ಅಸೆಂಬ್ಲಿಯನ್ನು ರಚಿಸುವಂತೆ ಒತ್ತಾಯಿಸಿತು. ಹೀಗೆ ಸರ್ಕಾರವು ಕಾಂಗ್ರೆಸ್‌ ಮತ್ತು ಲೀಗ್ ಎರಡನ್ನೂ ರಾಜಕೀಯ ನೆಲೆಯಲ್ಲಿ ಸ್ಥಗಿತಗೊಳ್ಳುವಂತೆ ಮಾಡಿತು.

ಇಂಥ ಸಂದರ್ಭದಲ್ಲಿ ಲೀಗ್ ತನ್ನ ಪಾಕಿಸ್ತಾನ ನಿರ್ಣಯವನ್ನು ೧೯೪೦ ಮಾರ್ಚ್‌ ೨೩ರಂದು ಅಂಗೀಕರಿಸಿತು. ಅದು ಭೌಗೋಳಿಕವಾಗಿ ಹತ್ತಿರವಿರುವ ಮುಸ್ಲಿಮ್‌ ಬಾಹುಳ್ಯವಿರುವ ಪ್ರದೇಶಗಳನ್ನು ಸ್ವತಂತ್ರ ಮುಸ್ಲಿಮ್‌ ಪ್ರದೇಶಗಳೆಂದು ಘೋಷಿಸಬೇಕೆಂದು ಒತ್ತಾಯಿಸಿತು. ಲೀಗ್ ಮೊದಲ ಬಾರಿಗೆ ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟಿದ್ದು ಹೀಗೆ. ಇಂಥ ರಾಜ್ಯದ ಸೃಷ್ಟಿಯ ಕಲ್ಪನೆ ೧೯೩೩ ಹಿಂದಿನದಾಗಿತ್ತು. ಈ ನಿರ್ಣಯವು ದ್ವಿರಾಷ್ಟ್ರ ಪರಿಕಲ್ಪನೆಯ (Two Nation Theory) ಆಧಾರದ ಮೇಲೆ ನಿಂತಿದ್ದು, ಅದರ ಪ್ರಕಾರ ಭಾರತದಲ್ಲಿ ಹಿಂದೂಗಳು ಹಾಗೂ ಮುಸ್ಲಿಮರು ಎರಡು ಪ್ರತ್ಯೇಕ ರಾಷ್ಟ್ರೀಯತೆಗಳನ್ನು ಹೊಂದಿದವರಾಗಿದ್ದರು. ಸರ್ಕಾರಕ್ಕೆ ಕಾಂಗ್ರೆಸ್ಸನ್ನು ಹೆದರಿಸಲು ಇಂಥದೇ ಒಂದು ಅಸ್ತ್ರ ಬೇಕಿತ್ತು. ಆದರೂ ಲೀಗ್‌ನ ಪಾಕಿಸ್ತಾನದ ಕುರಿತಾದ ಲಾಹೋರ್‌ ನಿರ್ಣಯದ ಬಗ್ಗೆ ಮುಸ್ಲಿಮ್‌ ನಾಯಕರಲ್ಲಿಯೇ, ಅದರಲ್ಲೂ ಸಿಂಧ್‌ನಲ್ಲಿ ಬಹಳಷ್ಟು ಸಂಶಯಗಳಿದ್ದವು. ಸಹಜವಾಗಿ ಕಾಂಗ್ರೆಸ್‌, ಮಹಾಸಭಾ ಹಾಗೂ ಸಿಖ್‌ ನಾಯಕರು ಈ ಬೇಡಿಕೆಯ ವಿರುದ್ಧ ಪ್ರತಿಕ್ರಿಯೆ ನೀಡಿದ ಸರ್ಕಾರವು ತನ್ನ ಚಾಣಾಕ್ಷ ಮೌನವನ್ನು ಮುಂದುವರಿಸಿತು. ೧೯೪೦ರ ಜೂನ್‌ ೫ ರಂದು ಸರ್ಕಾರ ಯುದ್ಧ ಸಮಿತಿ ಹಾಗೂ ಸಿವಿಲ್‌ ಗಾರ್ಡ್‌ಗಳ ಪಡೆಯೊಂದನ್ನು ರಚಿಸಿದಾಗ ಲೀಗ್‌ ಮತ್ತು ಕಾಂಗ್ರೆಸ್‌ ಗಳು ಅದನ್ನು ಸೇರಲು ನಿರಾಕರಿಸಿ ತಮ್ಮದೇ ಆದ ಸಮಿತಿಗಳನ್ನು ರಚಿಸಿಕೊಂಡವು. ಯುದ್ಧದಲ್ಲಿ ಮಿತ್ರರಾಷ್ಟ್ರಗಳ ಬಲ ಕ್ಷೀಣಿಸುತ್ತಾ ಬಂದಾಗ ವೈಸರಾಯ್‌ ಎರಡರಿಂದಲೂ ಅದು ಸಾಧ್ಯವಾಗದಿದ್ದರೆ ಕನಿಷ್ಠ ಲೀಗ್‌ನಿಂದಾದರೂ ಬೆಂಬಲ ಪಡೆಯಲು ಕಾತರನಾಗಿದ್ದ. ೧೯೪೦ರ ಜುಲೈ ೩ ರಂದು ಕಾಂಗ್ರೆಸ್‌, ರಾಷ್ಟ್ರೀಯ ಸರ್ಕಾರವನ್ನು ರಚಿಸುವ ಹಾಗೂ ಸಂಪೂರ್ಣ ಸ್ವಾತಂತ್ರ್ಯ ನೀಡುವ ಭರವಸೆ ನೀಡಿದರೆ ಯುದ್ಧಕ್ಕೆ ಬೆಂಬಲ ನೀಡುವುದಾಗಿ ಹೇಳಿತು. ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿಯು ಗಾಂಧೀಜಿಯವರ ಅಹಿಂಸಾತ್ಮಕ ಸಹಕಾರದ ನಿಲುವನ್ನು ಒಪ್ಪದೇ ಇದ್ದದ್ದು ಇಲ್ಲಿ ಗಮನಾರ್ಹ ಅಂಶ. ಅದರಿಂದ ಗಾಂಧೀಜಿಯವರನ್ನು ರಾಜಕೀಯ ಮುಖ್ಯವಾಹಿನಿಯಿಂದ ಈ ಹೊತ್ತಿಗಾಗಲೇ ದೂರವಿಟ್ಟಿದ್ದನ್ನು ಕಾಣಬಹುದು. ವೈಸರಾಯ್‌ ಯುದ್ಧದ ತರುವಾಯ ಎಲ್ಲ ಭಾರತೀಯ ಪಕ್ಷಗಳ ಪಾರ್ಲಿಮೆಂಟನ್ನು ರಚಿಸುವ ಪಕ್ಷದಲ್ಲಿದ್ದರೆ, ಚರ್ಚಿಲ್‌ ಹಾಗೂ ಅಮೆರಿಕೆಯವರು ಒಂದು ವಿಸ್ತೃತ ಎಕ್ಸಿಕ್ಯೂಟಿವ್‌ ಕೌನ್ಸಿಲ್‌ ಅನ್ನು ಸ್ಥಾಪಿಸುವುದರ ಪರವಾಗಿದ್ದರು. ಇದರಿಂದಾಗಿ ಸರ್ಕಾರದ ಆಗಸ್ಟ್‌ ಕೊಡುಗೆಯನ್ನು ಕಾಂಗ್ರೆಸ್‌ ತಿರಸ್ಕರಿಸಿತು. ಇದರಿಂದ ಸಹಜವಾಗಿ ಮುಸ್ಲಿಮ್‌ ಲೀಗ್‌ಗೆ ಸಂತೋಷವಾಯಿತು. ಯಾಕೆಂದರೆ ಈ ಕೊಡುಗೆಯ ಸಂವಿಧಾನಾತ್ಮಕ ಮಾತುಕತೆಗಳ ಸಂದರ್ಭದಲ್ಲಿ ಅಲ್ಪಸಂಖ್ಯಾತರನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿತ್ತು.

ಕ್ರಿಪ್ಸ್ಆಯೋಗ

೧೯೪೧ ಡಿಸೆಂಬರ್‌ ೬ರಂದು ಜಪಾನೀಯರು ಪರ್ಲ್‌ ಹಾರ್ಬರ್‌ ಅನ್ನು ಆಕ್ರಮಿಸಿದಾಗ ಬ್ರಿಟಿಷ್ ಸರ್ಕಾರವು ಹೊಸ ಸಂವಿಧಾನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಕಂಡುಬಂತು. ಇದಕ್ಕೆ ಮಿತ್ರರಾಷ್ಟ್ರಗಳ, ಅದರಲ್ಲೂ ಮೂಖ್ಯವಾಗಿ ಅಮೇರಿಕಾದ, ಒತ್ತಾಯವೂ ಕಾರಣವಾಗಿತ್ತು. ಈ ಮಧ್ಯೆ ಸರ್ಕಾರ ವಿರೋಧಿ ಅಲೆಯು ದೇಶದಲ್ಲಿ ಭಾರಿ ಬಲವಾಗಿತ್ತು. ಕಾಂಗ್ರೆಸ್‌ನಲ್ಲಿಯೇ ಭೂಲಾಬಾಯಿ ಮತ್ತು ಸಿ. ರಾಜಗೋಪಾಲಾಚಾರಿಯವರಂಥ ಬಲಪಂಥೀಯ ಶಕ್ತಿಗಳು ಮುರಿದುಬಿದ್ದ ರಾಜಕೀಯ ಮಾತುಕತೆಗಳನ್ನು ಬಗೆಹರಿಸಿಕೊಂಡು ಪ್ರಾಂತ್ಯಗಳಿಗೆ ಹಿಂದಿರುಗುವ ಯೋಜನೆಯಲ್ಲಿದ್ದರು. ಗಾಂಧೀಜಿಯ ಬೆಂಬಲ ಪಡೆದು ನೆಹರು ಇದನ್ನು ವಿರೋಧಿಸಿದರು. ಅಮೆರಿಕಾ, ಕಾಂಗ್ರೆಸ್‌ನ ಬಲಪಂಥೀಯ ಶಕ್ತಿಗಳು ಹಾಗೂ ಕ್ಲೆಮೆಂಟ್ ಅಟ್ಲೀ-ಇವುಗಳ ಸಾಮೂಹಿಕ ಒತ್ತಾಯದ ಕಾರಣದಿಂದ ಸರ್ಕಾರವು ೧೯೪೨ರಲ್ಲಿ ಹೊಸ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಯಿತು. ಆದರೆ ಇದರಿಂದ ಸ್ವಸರ್ಕಾರವನ್ನು ಸ್ಪಾಪಿಸಲು ಸಾದ್ಯವಾಗದ್ದರಿಂದ ಕಾಂಗ್ರೆಸ್ ತನ್ನ ಒಪ್ಪಿಗೆ ನೀಡಲಿಲ್ಲ. ಜಿನ್ನಾ ಸಹ ಇದರಿಂದ ತನಗೆ ಪ್ರಮುಖ್ಯತೆ ಸಿಗುವ ಬಗ್ಗೆ ಖಾತರಿ ಇರಲಿಲ್ಲವಾದ್ದರಿಂದ ತನ್ನ ಸಮ್ಮತಿ ನೀಡಲಿಲ್ಲ. ಲೀಗ್ ಈ ಹೊತ್ತಿಗಾಗಲೇ ತನ್ನ ಅಲ್ಪಸಂಖ್ಯಾತರ ಪ್ರಶ್ನೆಯನ್ನು ಬದಿಗೆ ಸರಿಸಿ ದ್ವಿರಾಷ್ಟ್ರ ಸಿದ್ಧಾಂತವನ್ನು ತನ್ನ ಮುಖ್ಯ ಕಾರ್ಯಕ್ರಮವನ್ನಾಗಿಸಿಕೊಂಡಿತ್ತು. ೧೯೪೨ರ ಫೆಬ್ರವರಿಯಲ್ಲಿ ರಂಗೂನ್ ವೈರಿಗಳ ವಶವಾಗಿ, ನಂತರ ಮಾರ್ಚ್‌ನಲ್ಲಿ ಸಿಂಗಪೂರ್‌ನ ಪತನದ ನಂತರ ಬ್ರಿಟಿಷ್ ಸರ್ಕಾರ ಕ್ರಿಪ್ಸ್‌ ಪ್ರಸ್ತಾವನೆಯನ್ನು ಮುಂದಿಟ್ಟಿತು. ಕ್ರಿಪ್ಸ್ ಪ್ರಸ್ತಾವನೆಯಲ್ಲಿ ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡುವುದು. ಹಾಗೆಯೇ ಕಾಮನ್ ವಲ್ತ್ ನಲ್ಲಿ ಉಳಿಯುವ ನಿರ್ಧಾರವನ್ನು ಡೊಮಿನಿಯನ್‌ಗೇ ಬಿಡುವುದು, ಯುದ್ಧದ ನಂತರ ಪ್ರಾಂತೀಯ ಶಾಸನ ಸಭೆಗಳನ್ನು ರಚಿಸುವುದು ಸಂವಿದಾನ ರಚನಾ ಮಂಡಳಿಯನ್ನು ಕೆಳಮನೆಯ ಮೂಲಕ ಆರಿಸುವುದು, ಸಂವಿಧಾನವು ಒಪ್ಪಿಗೆಯಾಗದಿದ್ದಲ್ಲಿ ಯಾವುದೇ ಪ್ರಾಂತ್ಯಕ್ಕೆ ಒಕ್ಕೂಟದಿಂದ ಬೇರೆಯಾಗುವ ಹಕ್ಕು ಮತ್ತು ಒಕ್ಕೂಟದಿಂದ ಬೇರೆಯಾಗುವ ಪ್ರಾಂತ್ಯಗಳಿಗೆ ತಮ್ಮದೇ ಸಂವಿದಾನವನ್ನು ರಚಿಸಿಕೊಳ್ಳುವ ಜನಮತ ಗಣನೆ ಮಾಡಲಾಗುವುದೆಂದು ಕ್ರಿಪ್ಸ್ ಭರವಸೆ ನೀಡಿದ. ಇದರಿಂದ ಜಿನ್ನಾಗೆ ಪಾಕಿಸ್ತಾನದ ರಚನೆಯ ಸಾಧ್ಯತೆ ಸ್ಪಷ್ಟವಾಗಿ ಕಾಣಿಸಿತು. ಸಿಖ್ಖರಿಗೂ ಇದೇ ರೀತಿಯ ಅನುಮಾನಗಳಿದ್ದರಿಂದ ಕ್ರಿಪ್ಸ್ ಅಕಾಲಿ ನಾಯಕರಿಗೆ ಹಿಂದೂ ಅಥವಾ ಮುಸ್ಲಿಮ್ ಒಕ್ಕೂಟದಲ್ಲಿ ಯಾವುದಾದರು ಒಂದನ್ನು ಸೇರುವ ಅಅವಕಾಶವಿದೆ ಎಂದು ಹೇಳಿದ. ಕಾಂಗ್ರೆಸ್ ಇದನ್ನು ತಿರಸ್ಕರಿಸಿತು.

ಕ್ವಿಟ್ ಇಂಡಿಯಾ ಚಳವಳಿ

ಕ್ರಿಪ್ಸ್ ಆಯೋಗ ವಿಫಲವಾದದ್ದರಿಂದ ದೇಶದ ರಾಜಕೀಯ ವಾತಾವರಣದಲ್ಲಿ ಒಂದು ರೀತಿಯ ನಿರಾಶಾಭಾವ ಉಂಟಾಯಿತು. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸಹ ದಿಕ್ಕುತೋಚದಂತಾಗಿದ್ದರಿಂದ ಸರ್ಕಾರವೂ ಸಹ ಶಾಂತಿ–ಸುಭದ್ರತೆಯ ಭಾವವನ್ನು ಅನುಭವಿಸಿತು. ಅದು ಬಹಳ ಕಾಲ ಉಳಿಯಲಿಲ್ಲ. ೧೯೪೨ರ ಮೇ ವೇಳೆಗೆ ಹಲವಾರು ಪ್ರಾಂತ್ಯಗಳಲ್ಲಿ ಸಾಮೂಹಿಕ ಚಳವಳಿಗಳ ಸುದ್ದಿ ಎಲ್ಲ ಕಡೆ ಹಬ್ಬಿತು. ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯು ೧೩ ಜುಲೈ ೧೯೪೨ರ ನಿರ್ಣಯವು ಕಾಂಗ್ರೆಸ್‌ನ ಹೊಸ ಹಾಗೂ ತೀವ್ರ ಸ್ವರೂಪದ ಕಾರ್ಯಶೈಲಿಯನ್ನು ಸೂಚಿಸಿತು. ಈ ಮದ್ಯ “ಮಾತುಕತೆಗಳಿಂದ ಹಿಂತೆಗೆಯುವ ಮಾತೇ ಇಲ್ಲ. ಅವರು ಇಂಡಿಯಾದ ಸ್ವಾತಂತ್ರ್ಯಕ್ಕೆ ಒಪ್ಪಿಗೆ ನೀಡಬೇಕು ಅಥವಾ ಇಲ್ಲ ಎನ್ನಬೇಕು ಇದಕ್ಕಾಗಿ ಇನ್ನೊಂದು ಅವಕಾಶವನ್ನು ಕಾಯುವ ಮಾತೇ ಇಲ್ಲ…. ” ಎಂದು ಗಾಂಧೀಜಿ ಕರೆ ನೀಡಿದರು. ಜಿನ್ನಾ ಈ ನಿರ್ಣಯವನ್ನು ಸ್ವತಂತ್ರ ಭಾರತವನ್ನು ಕಟ್ಟಬೇಕೆನ್ನುವ ಹಿಂದುಗಳ ಆಕಾಂಕ್ಷೆಯ ಫಲ ಎಂದು ವ್ಯಾಖ್ಯಾನಿಸಿ, ಅದರಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿ ಶೋಷಣೆಗೊಳಗಾಗುವರೆಂದು ವಾದಿಸಿದರು. ಬ್ರಿಟಿಷ್ ಸರ್ಕಾರವು ಇದನ್ನು ತನ್ನ ಸಾರ್ವಭೌಮತ್ವಕ್ಕೆ ಎಸೆದ ಸವಾಲು ಎಂದು ಭಾವಿಸಿತು. ವೈಸರಾಯ್ ಲಿನ್ ಲಿತ್ ಗೋಗೆ ಕಾಂಗ್ರೆಸ್ ಬಹಳ ತೀವ್ರವಾಗಿ ಅಸಹಕಾರ ಚಳವಳಿಯನ್ನು ಆರಂಭಿಸುವ ಬಗ್ಗೆ ಯೋಚಿಸುತ್ತಿದೆ ಎಂದು ತಿಳಿದಿರಲಿಲ್ಲ. ಕಾರ್ಯಕಾರಣಿ ಸಮಿತಿಯ ನಿರ್ಣಯವನ್ನು ಎಐಸಿಸಿಯು ಆಗಸ್ಟ್ ೮ ರಂದು ಅನುಮೋದಿಸಿದ ಮೂರನೇ ದಿನ ಸರ್ಕಾರವು ಕಾಂಗ್ರೆಸ್ ನಾಯಕರನ್ನು ಬಂಧಿಸಿತು. ಸರ್ಕಾರವು ಇದರಿಂದ ಸಾರ್ವಜನಿಕ ಪ್ರತಿಭಟನೆಯನ್ನು ಹತ್ತಿಕ್ಕಬಹುದೆಂದು ಯೋಚಿಸಿತು. ಆದರೆ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಬೃಹತ್ ಪ್ರಮಾಣದಲ್ಲಿದ್ದವು. ಸರ್ಕಾರವು ಪ್ರತಿಭಟನೆಗಳನ್ನು ಹತ್ತಿಕ್ಕಲು ೫೭ ಬೆಟಾಲಿಯನ್‌ಗಳನ್ನು ಬಳಸಿತು. ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ ಆಡಳಿತ ಯಂತ್ರ ಕುಸಿದು ಬಿತ್ತು. ರೈಲು ಹಾಗೂ ತಂತಿ ವ್ಯವಸ್ಥೆಗಳನ್ನು ಹಾಳು ಮಾಡಲಾಯಿತು. ಈ ಸಮಯದಲ್ಲಿ ವಿಪ್ಟಿಂಗ್ ಕಾಯ್ದೆಯನ್ನು ಮತ್ತೆ ತರಲಾಯಿತು. ೧೯೪೩ರ ವೇಳೆಗೆ ಸರ್ಕಾರವು ಚಳವಳಿಯನ್ನು ಹತೋಟಿಗೆ ತಂದರೂ ಅದು ಆ ವೇಳೆಗಾಗಲೇ ಆಡಳಿತ ವ್ಯವಸ್ಥೆಗೆ ಭಾರಿ ಪೆಟ್ಟುಕೊಟ್ಟಿತು. ಈ ಚಳವಳಿಯಿಂದ ಬ್ರಿಟಿಷರಿಗೆ ದೇಶವನ್ನು ಬಿಟ್ಟು ಹೋಗಬೇಕೆಂಬ ಸತ್ಯ ಮನದಟ್ಟಾಯಿತು. ಜಿನ್ನಾ ಇದನ್ನು ಕಾಂಗ್ರೆಸ್ ತನ್ನ ಬೇಡಿಕೆಗಳಿಗೆ ಒಪ್ಪಿಗೆ ಪಡೆಯಲಿ ಮಾಡುತ್ತಿರುವ ತಂತ್ರವೆಂದೂ, ಹಾಗೆಯೇ ಇದನ್ನು ಮುಸ್ಲಿಮ್ ವಿರೋಧಿ ಚಳವಳಿ ಎಂದೂ ಭಾವಿಸಿದ್ದರು. ಅಕಾಲಿ ನಾಯಕರು ನೆಪ ಮಾತ್ರಕ್ಕೆ ಚಳವಳಿಯಲ್ಲಿ ಭಾಗವಹಿಸಿದರು. ಗಾಂಧಿಜಿ ಹಾಗೂ ಕಾಂಗ್ರೆಸ್ ಎಷ್ಟು ವಿರೋಧಿಸಿದರೂ ಈ ಚಳವಳಿಯು ಒಂದು ದೊಡ್ಡ ಪ್ರಮಾಣದ ಹಿಂಸಾತ್ಮಕ ರೂಪವನ್ನು ಎದುರಿಗೆ ತೆರೆದಿಟ್ಟಿತು.

ಸರ್ಕಾರದ ಉತ್ತರ

ಲಿನ್‌ಲಿತ್‌ಗೋ ಎಂದಿನಂತೆ ಬ್ರಿಟಿಷರ ಒಡೆದು ಆಳುವ ತತ್ವವನ್ನು ಪಾಲಿಸಿದ. ಬ್ರಿಟಿಷ್ ‌ಸಾಮ್ರಾಜ್ಯದ ಬುಡವನ್ನೇ ಅಲ್ಲಾಡಿಸುವ ಸಾಮೂಹಿಕ ಆಂದೋಲನವನ್ನು ಕಾಂಗ್ರೆಸ್‌ ರೂಪಿಸುತ್ತಿದ್ದಾಗ, ಸರ್ಕಾರವು ಲೀಗ್‌ಅನ್ನು ಕಾಂಗ್ರೆಸ್ಸೇತರ ಸರ್ಕಾರಗಳನ್ನು ರಚಿಸುವಂತೆ ಪ್ರೇರೇಪಿಸಿತು. ಮುಸ್ಲಿಮ್‌ ಜನಸಂಖ್ಯೆ ಅಧಿಕವಾಗಿರುವ ಅಸ್ಸಾಂ, ಸಿಂಧ್‌, ನಾರ್ತ್‌ ವೆಸ್ಟ್‌ ಫ್ರಾಂಟಿಯರ್‌ ಪ್ರಾವಿನ್ಸ್‌ ಮತ್ತು ಬಂಗಾಳದಲ್ಲಿ ಈ ಸರ್ಕಾರವನ್ನು ರಚಿಸಲಾಯಿತು. ಇದರಿಂದ ಲೀಗ್‌ನ ಪಾಕಿಸ್ತಾನದ ಸ್ಥಾಪನೆಯ ಕಾರ್ಯ ಸುಗಮಗೊಂಡಿತು. ೧೯೪೨ರಿಂದ ೧೯೪೫ರ ಅವಧಿಯಲ್ಲಿ ಜಿನ್ನಾ ತಮ್ಮ ಲೀಗ್‌ನ ಸಹಾಯದಿಂದ ಮುಸ್ಲಿಮ್‌ ಪ್ರಾಂತ್ಯಗಳಲ್ಲಿ ಅತ್ಯಂತ ಚಾಣಾಕ್ಷ ರಾಜಕೀಯ ವಿಧಾನಗಳನ್ನು ಬಳಸಿ ಪಾಕಿಸ್ತಾನದ ಸ್ಥಾಪನೆಗೆ ತಳಹದಿ ಹಾಕಿದರು.

ಕ್ಯಾಬಿನೆಟ್ಆಯೋಗದ ರಚನೆ

೧೯೪೫ರ ಮಧ್ಯಭಾಗದಲ್ಲಿ ಭಾರತ ಸರ್ಕಾರವು ದೇಶದಲ್ಲಿ ಒಂದು ಬೃಹತ್‌ ಶಾಂತಿ ಸುವ್ಯವಸ್ಥೆಯ ಸಮಸ್ಯೆಯನ್ನು ಎದುರಿಸಬೇಕಾಯಿತು. ಕಾಂಗ್ರೆಸ್‌ ನಾಯಕರ ಆವೇಶಭರಿತ ಭಾಷಣಗಳು ಹಾಗೂ ಜೈಲಿನಿಂದ ಬಿಡುಗಡೆಯಾದ ನಾಯಕರಿಗೆ ಜನರಿಂದ ಸಿಕ್ಕ ಸ್ವಾಗತ ಇತ್ಯಾದಿಗಳು ಬ್ರಿಟಿಷ್ ‌ಸರ್ಕಾರದ ಉನ್ನತ ಅಧಿಕಾರಿಗಳನ್ನು ಕಂಗೆಡಿಸಿದವು. ನೆಹರೂ ಅವರ ಕೆಲವು ಭಾಷಣಗಳು ಹಿಂಸೆಯನ್ನು ಪ್ರಚೋದಿಸುವಷ್ಟು ಪ್ರಭಾವಶಾಲಿಯಾಗಿದ್ದವು. ೧೯೪೬ರಲ್ಲಿ ನಡೆದ ಐ.ಎನ್‌.ಎ.ಯ ವಿಚಾರಣೆಯ ಸಂದರ್ಭದಲ್ಲಿ ಜನರಲ್ಲಿದ್ದ ಅತೃಪ್ತ ಭಾವನೆಯನ್ನು, ಬ್ರಿಟಿಷ್ ‌ಸರ್ಕಾರ ಮುಂದಾಗುವ ಅನಾಹುತಗಳ ಸೂಚನೆಯೆಂದು ತಿಳಿಯಲಿಲ್ಲ. ಇದರ ಜೊತೆಗೆ, ೧೯೪೬ರ ಆದಿಭಾಗದಲ್ಲಿ ರಾಯಲ್‌ ಇಂಡಿಯಾ ಏರ್‌ಫೋರ್ಸ್‌ ಹಾಗೂ ರಾಯಲ್‌ ಇಂಡಿಯಾ ನೆವಿಯ ನೇತೃತ್ವದಲ್ಲಿ ದಂಗೆಗಳು ನಡೆದವು. ಇವುಗಳಿಂದ ಬ್ರಿಟಿಷ್ ‌ಸಾಮ್ರಾಜ್ಯದ ತಳಹದಿ, ಅದರ ಮಿಲಿಟರಿ ಶಕ್ತಿ ಕುಸಿಯುವ ಸ್ಥಿತಿಯಲ್ಲಿದೆ ಎಂದು ಸ್ಪಷ್ಟವಾಯಿತು. ಬ್ರಿಟಿಷರಿಗೆ ತಮ್ಮ ಕೊನೆಯ ದಿನಗಳು ಹತ್ತಿರವಾದಂತೆನಿಸಿದವು. ಆಗ ಉಳಿದ ಪ್ರಶ್ನೆಗಳೆಂದರೆ ಈ ವಿದಾಯದ ದಿನ ಯಾವುದಾಗಬಹುದು ಹಾಗೂ ಎಂಥ ಪರಿಸ್ಥಿತಿಯಲ್ಲಿ ಎಂಬುವು ಮಾತ್ರವೇ. ಇಂಥ ಸಂದರ್ಭದಲ್ಲಿ ೧೯೪೬ರ ಮಾರ್ಚ್‌ ೧೪ ರಂದು ಕ್ಯಾಬಿನೆಟ್‌ ಆಯೋಗವು ಭಾರತಕ್ಕೆ ಬಂತು. ಈ ಆಯೋಗದ ಉದ್ದೇಶವು ಪ್ರಧಾನಂತ್ರಿ ಅಟ್ಲೇ ಹೇಳಿದಂತೆ, ಭಾರತೀಯರಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯಕವಾಗುವಂತೆ ಸಂವಿಧಾನದ ಚೌಕಟ್ಟನ್ನು ರೂಪಿಸಿಕೊಡುವುದು ಹಾಗೂ ಒಂದು ತಾತ್ಕಾಲಿಕ ಸರ್ಕಾರವನ್ನು ರಚಿಸುವುದಾಗಿತ್ತು.

ಬ್ರಿಟಿಷರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾದ್ದರಿಂದ ಈ ಆಯೋಗವು ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಭಾರತಕ್ಕೆ ಬಂದಿತ್ತು. ಆ ಸಮಯದಲ್ಲಿ ಬ್ರಿಟಿಷರು ಭಾರತ ವಿಭಜನೆಯ ವಿರೋಧವಾಗಿದ್ದು ಯಾಕೆಂದರೆ ಆ ಪ್ರದೇಶದ ಬ್ರಿಟಿಷರ ರಕ್ಷಣೆಯ ಹಿತದೃಷ್ಟಿಯಿಂದ ಮಾತ್ರ. ಆಯೋಗವು ಭಯಾನಕವಾದ ಕೋಮು ಹಿಂಸೆಯ ಘಟನೆಗಳನ್ನು ಕಣ್ಣಾರೆ ಕಂಡ ಮೇಲೆ ಪಾಕಿಸ್ತಾನದ ರಚನೆಯನ್ನು ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಒಪ್ಪಿಕೊಂಡಿತು. ಆಯೋಗದ ಅಧ್ಯಕ್ಷ ಪೆಥಿಕ್‌ ಲಾರೆನ್ಸ್‌ ಕ್ರಿಪ್ಸನ ಹಾಗೆ, ಕಾಂಗ್ರೆಸ್‌ಗೆ ಹೆಚ್ಚಿನ ಮಹತ್ವ ಕೊಟ್ಟರೆ, ವೈಸರಾಯ್‌ ವೇವೆಲ್‌ ಇದಕ್ಕಿಂತ ಭಿನ್ನವಾದ ನಿಲುವನ್ನು ತಾಳಿ, ಗಾಂಧೀಜಿಯನ್ನು ಸಂತನ ವೇಷದ ರಾಜಕಾರಣಿ ಎಂದು ಹೇಳಿದ.

ಕ್ಯಾಬಿನೆಟ್‌ ಆಯೋಗಕ್ಕಿಂತ ಮುಂಚೆ ನಡೆದ ಶಿಮ್ಲಾ ಸಮಾವೇಶವು ವಿಫಲವಾಗಿದ್ದರಿಂದ ಬ್ರಿಟಿಷ್ ‌ಸರ್ಕಾರವು ಲಾರ್ಡ್‌ಪೆಥಿಕ್‌ ಲಾರೆನ್ಸ್‌, ಸರ್‌ ಸ್ಟಾಫರ್ಡ್‌ ಕ್ರಿಪ್ಸ್‌ ಮತ್ತು ಎ. ವಿ. ಅಲೆಗ್ಸಾಂಡರ್‌ ಇವರು ನೇತೃತ್ವದಲ್ಲಿ ಕ್ಯಾಬಿನೆಟ್‌ ಆಯೋಗವನ್ನು ಕಳುಹಿಸಿತು. ಕ್ಯಾಬಿನೆಟ್‌ ಆಯೋಗವು ಮುಸ್ಲಿಮರಿಗೆ ಪ್ರತ್ಯೇಕ ಕಾನ್‌ಸ್ಟಿಟ್ಯೂಯೆಂಟ್‌ ಅಸೆಂಬ್ಲಿ ಹಾಗೂ ಪಾಕಿಸ್ತಾನದ ಬೇಡಿಕೆಯನ್ನು ತಿರಸ್ಕರಿಸಿದರೂ ಪರೋಕ್ಷವಾಗಿ ಈ ಎರಡೂ ಬೇಡಿಕೆಗಳನ್ನು ಒಪ್ಪಿತ್ತು. ಇದರ ಪ್ರಮುಖ ಅಂಶಗಳನ್ನು ಹೀಗೆ ವಿವರಿಸಬಹುದು.

೧. ಬ್ರಿಟಿಷ್ ‌ಹಾಗೂ ದೇಶೀಯ ರಾಜರಿಂದ ಆಳಲ್ಪಡುವ ರಾಜ್ಯಗಳೆರಡನ್ನು ಹೊಂದಿದ ಒಕ್ಕೂಟವಾಗಿ ಉಳಿಯುವುದು. ಈ ಒಕ್ಕೂಟಕ್ಕೆ ಅಂತಾರಾಷ್ಟ್ರೀಯ ವಿದ್ಯಮಾನಗಳು, ರಕ್ಷಣೆ ಮತ್ತು ಸಂಪರ್ಕ ವ್ಯವಸ್ಥೆಗಳ ಮೇಲೆ ನಿಯಂತ್ರಣವಿದ್ದು ಉಳಿದ ವಿಷಯಗಳನ್ನು ಪ್ರಾಂತ್ಯಗಳು ನಿರ್ವಹಿಸುವವು.

೨. ಒಕ್ಕೂಟವು ಒಬ್ಬ ಕಾರ್ಯನಿರ್ವಾಹಕನನ್ನು ಹೊಂದಿದ್ದು, ಪ್ರಾಂತ್ಯ ಹಾಗೂ ರಾಜ್ಯಗಳ ಪ್ರತಿನಿಧಿಗಳನ್ನೊಳಗೊಂಡ ಒಂದು ವಿಧಾಯಕ ಸಭೆಯನ್ನು ಒಳಗೊಂಡಿರುತ್ತದೆ. ವಿಧಾಯಕ ಸಭೆಯಲ್ಲಿ ಒಂದು ಕೋಮುಸಂಬಂಧಿ ವಿಷಯವನ್ನು ಎತ್ತಬೇಕಾದಾಗ ಎರಡೂ ಸಮುದಾಯದ (ಹಿಂದೂ-ಮುಸ್ಲಿಮ್‌) ಪ್ರತಿನಿಧಿಗಳು ಬಹುಮತದಲ್ಲಿದ್ದು ಮತದಾನ ನಡೆಯಬೇಕಿರುತ್ತವೆ. ಹಾಗೆಯೇ ಬೇರೆ ಎಲ್ಲ ಸದಸ್ಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದು ಮತದಾನದಲ್ಲಿ ಭಾಗವಹಿಸಬೇಕಿತ್ತು.

೩. ಪ್ರಾಂತ್ಯಗಳಿಗೆ ತಮ್ಮ ಕಾರ್ಯನಿರ್ವಾಹಕ ಹಾಗೂ ವಿಧಾಯಕ ಸಭೆಯನ್ನು ರಚಿಸಿಕೊಳ್ಳುವುದಕ್ಕೆ ಸ್ವಾತಂತ್ರ್ಯವಿದ್ದು, ತಮ್ಮ ವ್ಯಾಪ್ತಿಗೆ ಬರುವ ವಿಷಯಗಳನ್ನು ತಾವೇ ನಿರ್ಧರಿಸಿಕೊಳ್ಳಬೇಕಿತ್ತು.

ಇದು ಎರಡೂ ಪಕ್ಷಗಳ ಅನುಮತಿಯನ್ನು ಕಾಯ್ದಿರಿಸಿ ಸೂಚಿಸಿದ ವಿಷಯವಾಗಿತ್ತು. ಇದರಿಂದ ಚುನಾವಣೆಗಳ ನಂತರ ಸಂವಿಧಾನ ರಚನಾಮಂಡಳಿಯನ್ನು ರಚಿಸುವ ಸಂದರ್ಭದಲ್ಲಿ ಮೊದಲ ಬಿಕ್ಕಟ್ಟು ಉಂಟಾಯಿತು. ಲೀಗ್ ಚುನಾವಣೆಗಳಲ್ಲಿ ಭಾಗವಹಿಸಿತ್ತು. ಈ ಮಧ್ಯ ಕಾಂಗ್ರೆಸ್‌ ಹಾಗೂ ಮುಸ್ಲಿಮ್‌ ಲೀಗ್‌ನ ಮಧ್ಯೆ ಗುಂಪುಗಳನ್ನು ರಚಿಸುವ ವಿಷಯದಲ್ಲಿ ತೀವ್ರ ಮತಭೇದ ಉಂಟಾಯಿತು. ಬ್ರಿಟಿಷ್ ‌ಸರ್ಕಾರವು ಮಧ್ಯ ಪ್ರವೇಶಿಸಿ ಲೀಗ್‌ನ ವಾದ ಸರಿ ಎಂದಿತು. ೧೯೪೬ರ ಡಿಸೆಂಬರ್‌ ೬ ರಂದು ಸರ್ಕಾರವು ದೇಶದ ಜನಸಂಖ್ಯೆಯನ್ನು ಸರಿಯಾದ ರೀತಿಯಲ್ಲಿ ಪ್ರತಿನಿಧಿಸದೇ ಇರುವ ಸಭೆಯು ಅನುಮೋದಿಸಿದ ಸಂವಿಧಾನವನ್ನು ಅಂಗೀಕರಿಸುವುದಿಲ್ಲವೆಂದು ಘೋಷಿಸಿತು. ಇದರಿಂದ ವಾಸ್ತವವಾಗಿ ಎರಡು ಕಾನ್‌ಸ್ಟಿಟ್ಯೂಟ್‌ಯೆಂಟ್‌ ಅಸೆಂಬ್ಲಿಗಳನ್ನೂ ಒಪ್ಪಿಕೊಂಡ ಹಾಗಾಯಿತು. ೧೯೪೬ರ ಡಿಸೆಂಬರ್‌ ೯ ರಂದು ಸಭೆಯು ಮೊದಲ ಬಾರಿಗೆ ಸೇರಿದಾಗ ಮುಸ್ಲಿಮ್‌ ಸದಸ್ಯರು ಅದರಲ್ಲಿ ಭಾಗವಹಿಸಲಿಲ್ಲ. ಎಲ್ಲ ಬಗೆಯ ಜನಗಳನ್ನು ಅಗತ್ಯ ಸಂಖ್ಯೆಯಲ್ಲಿ ಪ್ರತಿನಿಧಿಸುವ ಪ್ರತಿನಿಧಿಗಳು ಇಲ್ಲದ್ದರಿಂದ ಸಭೆಯನ್ನು ವಿಸರ್ಜಿಸುವಂತೆ ಮುಸ್ಲಿಮ್‌ಲೀಗ್‌ ಬ್ರಿಟಿಷ್ ‌ಸರ್ಕಾರವನ್ನು ಕೋರಿತು. ೧೯೪೭ರ ಫೆಬ್ರವರಿ ೨೦ ರಂದು ಬ್ರಿಟಿಷ್ ‌ಸರ್ಕಾರವು ೧. ಬ್ರಿಟಿಷ್ ‌ಆಡಳಿತವು ಜೂನ್‌ ವೇಳೆಗೆ ಕೊನೆಗೊಳ್ಳುವುದರಿಂದ, ಸರ್ಕಾರವು ಅಧಿಕಾರವನ್ನು ಭಾರತೀಯರ ಕೈಗೆ ಒಪ್ಪಿಸುವುದು, ೨. ಕ್ಯಾಬಿನೆಟ್‌ ಆಯೋಗವು ಮಾಡಿದ ಶಿಫಾರಸ್ಸಿನಂತೆ ಜೂನ್‌ ವೇಳೆಗೆ ಸಂವಿಧಾನ ರಚನಾಮಂಡಳಿಯು ಸಂವಿಧಾನವನ್ನು ರಚಿಸುವಲ್ಲಿ ವಿಫಲವಾದರೆ ‘‘ಬ್ರಿಟಿಷ್ ‌ಸರ್ಕಾರವು ಕೇಂದ್ರ ಸರ್ಕಾರದ ಅಧಿಕಾರಗಳನ್ನು ಯಾರಿಗೆ ಕೊಡಬೇಕು ಹಾಗೂ ಯಾವ ಪ್ರಮಾಣದಲ್ಲಿ ಅಥವಾ ಭಾರತದ ಜನಗಳಿಗೆ ಒಪ್ಪಿಗೆಯಾಗುವ ಇನ್ನಾವುದಾದರೂ ರೀತಿಯಲ್ಲಿ ಈ ವಿಷಯವನ್ನು ಬಗೆಹರಿಸಬೇಕು” ಎಂದು ಘೋಷಿಸಿತು. ಇದರಿಂದ ಲೀಗ್‌ ಇನ್ನಷ್ಟು ತೀವ್ರವಾಗಿ ಮುಸ್ಲಿಮರಿಗಾಗಿ ಒಂದು ಪ್ರತ್ಯೆಕ ಕಾನ್‌ಸ್ಟಿಟ್ಯೂಯೆಂಟ್‌ ಅಸೆಂಬ್ಲಿಯನ್ನು ರಚಿಸಬೇಕೆಂದು ಒತ್ತಾಯಿಸಿತು.

ಇದರ ನಂತರ ಬ್ರಿಟಿಷ್ ‌ಸರ್ಕಾರವು ಲಾರ್ಡ್‌ ಮೌಂಟ್‌ ಬ್ಯಾಟನ್‌ನನ್ನು ವೇವೆಲ್‌ನ ಜಾಗಕ್ಕೆ ಭಾರತದ ಹೊಸ ಗವರ್ನರ್‌ ಜನರಲ್‌ ಆಗಿ ಕಳುಹಿಸಿತು. ಮೌಂಟ್‌ಬ್ಯಾಟನ್ನನ ಕೆಲಸ ನಿಗದಿತ ದಿನಾಂಕದೊಳಗೆ ಅಧಿಕಾರದ ಹಸ್ತಾಂತರವನ್ನು ಸುಗಮವಾಗಿ ನೆರವೇರಿಸುವುದಾಗಿತ್ತು. ಈ ಹೊಸ ಗವರ್ನರ್‌ ಜನರಲ್‌ ಸಮಸ್ಯಾತ್ಮಕವಾಗಿದ್ದ ಪಂಜಾಬ್‌ ಮತ್ತು ಬಂಗಾಳ ಪ್ರಾಂತ್ಯಗಳನ್ನು, ಅದರೊಳಗೆ ಹಿಂದೂ ಹಾಗೂ ಮುಸ್ಲಿಮ್‌ ಬಹುಸಂಖ್ಯೆಯ ಬ್ಲಾಕ್‌ಗಳನ್ನಾಗಿ ವಿಭಜಿಸುವಂತೆ ಕಾಂಗ್ರೆಸ್‌ ಹಾಗೂ ಲೀಗ್‌ ಎರಡನ್ನೂ ಮನವೊಲಿಸಲು ಯಶಸ್ವಿಯಾದ. ಲೀಗ್‌ಗೆ ಆಗ ಪಾಕಿಸ್ತಾನ ಸಿಕ್ಕರೂ ಅದರಲ್ಲಿ ಅಸ್ಸಾಂ, ಪೂರ್ವ ಪಂಜಾಬ್‌ ಮತ್ತು ದಕ್ಷಿಣ ಬಂಗಾಲಗಳು ಇರುತ್ತಿರಲಿಲ್ಲ. ಕಾಂಗ್ರೆಸ್‌ಗೆ ಭಾರತದ ಉಳಿದ ಪ್ರದೇಶಗಳು ಸಿಕ್ಕಿದರೂ ಅದರಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿ ಇರಬೇಕಾಗಿತ್ತು. ದೇಶ ವಿಭಜನೆಯ ನಿರ್ಧಾರವನ್ನು ‘‘ಮೌಂಟ್‌ಬ್ಯಾಟನ್‌ ಯೋಜನೆ” ಯ ಪ್ರಕಾರ ಎರಡೂ ಪ್ರಾಂತ್ಯಗಳ ಶಾಸನ ಸಭೆಗಳಿಗೆ ಬಿಡಲಾಯಿತು. ೧೯೪೭ರ ಜೂನ್‌ ೩ ರಂದು ಬ್ರಿಟಿಷ್ ‌ಸರ್ಕಾರವು ಈ ಯೋಜನೆಯನ್ನು ಒಳಗೊಂಡಂತೆ ಒಂದು ಘೋಷಣೆಯನ್ನು ಹೊರಡಿಸಿತು. ಇದರ ಪ್ರಕಾರ ಪಂಜಾಬ್‌ ಹಾಗೂ ಬಂಗಾಳದ ಪ್ರಾಂತೀಯ ಸಭೆಗಳು, ತಮ್ಮ ಯೂರೋಪಿಯನ್ ಸದಸ್ಯರನ್ನು ಹೊರತುಪಡಿಸಿ, ಎರಡು ಭಾಗಗಳಲ್ಲಿ, ಅಂದರೆ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಜಿಲ್ಲೆಗಳಲ್ಲಿ ಹಾಗೂ ಉಳಿದ ಭಾಗಗಳಲ್ಲಿ ಸೇರುವಂತೆ ಸೂಚಿಸಲಾಗಿತ್ತು. ಈ ಎರಡು ಹಂತಗಳ ಭೇಟಿಯು ಪ್ರಾಂತ್ಯವನ್ನು ವಿಭಜಿಸಬೇಕೇ ಅಥವಾ ಬೇಡವೆ ಎಂಬುದರ ಬಗ್ಗೆ ಮತದಾನಕ್ಕೆ ಅವಕಾಶ ಮಾಡಿಕೊಡುತ್ತಿತ್ತು. ಯಾವುದೇ ಒಂದು ಹಂತದಲ್ಲಿ ವಿಭಜನೆಯ ಪರವಾಗಿ ಹೆಚ್ಚು ಮತಗಳು ಬಿದ್ದರೆ, ವಿಭಜನೆಯನ್ನು ಅದರ ನಂತರ ಮಾಡಬೇಕಾದ ಎಲ್ಲ ವ್ಯವಸ್ಥೆಗಳೊಂದಿಗೆ ಒಪ್ಪಿಕೊಳ್ಳಬೇಕಾಗಿತ್ತು. ವಿಭಜನೆಯಾಗುವುದು ಖಿಚತವಾದ ಮೇಲೆ ಪ್ರತಿಯೊಂದು ಭಾಗವೂ ಸದ್ಯಕ್ಕೆ ಇರುವ ಅಥವ ಪ್ರತ್ಯೇಕ ಕಾನ್‌ಸ್‌ಇಟ್ಯೂಯೆಂಟ್‌ ಅಸೆಂಬ್ಲಿಯನ್ನು ಆರಿಸಿಕೊಳ್ಳಬೇಕಾಗಿತ್ತು. ಮುಸ್ಲಿಮ್‌ ಬಾಹುಳ್ಯವಿರುವ NWFP ಮತ್ತು ಸಿಲ್ಹಟ್‌ ಜಿಲ್ಲೆಗಳಿಗೆ ಜನಮತ ಸಂಗ್ರಹಣೆಯ ಮೂಲಕ ಭಾರತ ಅಥವಾ ಪಾಕಿಸ್ತಾನವನ್ನು ಸೇರುವ ಅವಕಾಶ ನೀಡಲಾಯಿತು. ೧೯೪೭ರ ಜುಲೈ ೨೬ರಂದು ಗವರ್ನರ್‌ ಜನರಲ್‌ನು ಪಾಕಿಸ್ತಾನಕ್ಕೆ ಪ್ರತ್ಯೇಕ ಕಾನ್‌ಸ್ಟಿಟ್ಯೂಯೆಂಟ್‌ ಅಸೆಂಬ್ಲಿಯನ್ನು ರಚಿಸಿದ. ಇದರಿಂದ ಭಾರತ ಹಾಗೂ ಪಾಕಿಸ್ತಾನಗಳೆಂಬ ಎರಡು ಪ್ರತ್ಯೇಕ ದೇಶಗಳ ರಚನೆಗೆ ಭೂಮಿಕೆ ಸಿದ್ಧವಾಯಿತು. ಬ್ರಿಟಿಷ್ ‌ಪಾರ್ಲಿಮೆಂಟಿನಲ್ಲಿ ೧೯೪೬ರ ಜುಲೈ ೪ ರಂದು ಭಾರತ ಸ್ವಾತಂತ್ರ್ಯ ಮಸೂದೆಯನ್ನು ಅಂಗೀಕರಿಸಿ ಅದು ೧೮ ಜುಲೈ ೧೯೪೭ರಂದು ರಾಜಸಮ್ಮತಿಯೊಂದಿಗೆ ಕಾಯ್ದೆಯ ರೂಪದಲ್ಲಿ ಜಾರಿಗೆ ಬಂತು. ಈ ಕಾಯ್ದೆಯ ಪ್ರಕಾರ ಭಾರತ ಹಾಗೂ ಪಾಕಿಸ್ತಾನದ ಡೊಮಿನಿಯನ್‌ಗಳು ರಚನೆಯಾದರೂ, ಅವುಗಳ ಸಂವಿಧಾನಾತ್ಮಕ ಚೌಕಟ್ಟುಗಳು ನಿರ್ಧಾರವಾಗುವುದು ಕಾನ್‌ಸ್ಟಿಟ್ಯೂಯೆಂಟ್‌ ಅಸೆಂಬ್ಲಿಗಳ ಮೂಲಕವೇ ಆಗಿತ್ತು. ಭಾರತ ಡೊಮಿನಿಯನ್‌ನ ಪ್ರದೇಶವು ಸಿಂಧ್‌, ಬಲೂಚಿಸ್ತಾನ, ಪಶ್ಚಿಮ ಪಂಜಾಬ್‌, ಪೂರ್ವ ಬಂಗಾಳ, ವಾಯುವ್ಯ ಪ್ರಾಂತ್ಯ ಮತ್ತು ಅಸ್ಸಾಂನ ಸಿಲ್ಹಟ್‌ ಜಿಲ್ಲೆಯನ್ನು ಬಿಟ್ಟು ಉಳಿದ ಭಾಗಗಳನ್ನು ಒಳಗೊಂಡಿತ್ತು. ಮೇಲೆ ಹಳಿದ ಭಾಗಗಳೆಲ್ಲ ಪಾಕಿಸ್ತಾನದ ಡೊಮಿನಿಯನ್‌ಗೆ ಸೇರುವ ಪ್ರದೇಶಗಳಾಗಿದ್ದವು. ಅಧಿಕೃತವಾಗಿ ಪಾಕಿಸ್ತಾನದ ರಚನೆ ಆಗಸ್ಟ್‌ ೧೪ ರಂದು ಮತ್ತು ಭಾರತವು ೧೫ ಆಗಸ್ಟ್‌ರಂದು ರಚಿತವಾಯಿತು. ಬ್ರಿಟಿಷರು ಕೊನೆಗೆ ಭಾರತವನ್ನು ಬಿಟ್ಟು ಹೋದರು ಅವರ ಹಿಂದೆ ಒಂದು ವಿಭಜಿತ ಭಾರತವನ್ನು ಹಾಗೂ ಅಸಂಖ್ಯ ದೇಶೀಯ ರಾಜ ಸಂಸ್ಥಾನಗಳನ್ನು ಬಿಟ್ಟು ಹೋದರು. ಭಾರತ ವಿಭಜನೆಯಿಂದ ಆದ ಲಾಭ-ನಷ್ಟಗಳು, ಅದು ಹೇಗೆ ಅಸ್ತಿತ್ವಕ್ಕೆ ಬಂದಿತು ಎಂಬ ಪ್ರಶ್ನೆಗಳು ಇತಿಹಾಸಕಾರರನ್ನು ಹಾಗೂ ರಾಜಕೀಯ ತಜ್ಞರನ್ನು ಕಾಡುತ್ತಲೇ ಇವೆ. ಬಹಳ ಮುಖ್ಯವಾದ ಅಂಶವೇನೆಂದರೆ ಇಂಥ ಮಹತ್ವದ ಮಾತುಕತೆಗಳು ಹಾಗೂ ಅಧಿಕಾರದ ಹಸ್ತಾಂತರದ ವಿಷಯಗಳಲ್ಲಿ ಗಾಂಧೀಜಿಯವರನ್ನು ನಿರ್ಲಕ್ಷಿಸಲಾಯಿತು. ದೇಶಕ್ಕೆ ಸ್ವಾತಂತ್ರ್ಯ ಬಂದ ದಿನದಂದು ಗಾಂಧೀಜಿ ಅತ್ಯಂತ ದುಃಖದಲ್ಲಿದ್ದರು. ಗಾಂಧಿ ಹಾಗೂ ನೆಹರೂ ಅವರ ನಡುವೆ ನಡೆದ ಪತ್ರವ್ಯವಹಾರದಿಂದ ಗಾಂಧೀಜಿಯವರಿಗೆ ವಿಭಜನೆ ಹಾಗೂ ಅದರ ಪರಿಣಾಮವಾಗಿ ಭುಗಿಲೆದ್ದ ಕೋಮುಗಲಭೆಗಳ ಬಗ್ಗೆ ಉಂಟಾದ ತೀವ್ರ ಅಸಮಾಧಾನಗಳ ಪರಿಚಯ ನಮಗಾಗುತ್ತದೆ. ಇದರ ಜೊತೆಗೆ ಗಾಂಧೀಜಿಯವರ ತತ್ವಗಳನ್ನು ನೆಹರೂ ಪ್ರಾಯೋಗಿಕವಲ್ಲದ ಅಪ್ರಸ್ತುತ ಸಿದ್ಧಾಂತಗಳು ಎಂದು ತಿರಸ್ಕರಿಸಿದ್ದು ಅವರ ಮನಸ್ಸಿಗೆ ತುಂಬಾ ನೋವುಂಟು ಮಾಡಿತ್ತು.

ಭಾಷಾವಾರು ಪ್ರಾಂತ್ಯಗಳು

ಆಧುನಿಕ ಭಾರತದ ಯಾವ ಚರಿತ್ರೆಯೂ ಭಾಷಾವಾರು ಪ್ರಾಂತ್ಯಗಳ ಬಗ್ಗೆ ಉಲ್ಲೇಖಿಸದಿದ್ದರೆ ಅಪೂರ್ಣವಾಗಿ ಬಿಡುತ್ತದೆ. ಭಾಷಾವಾರು ಪ್ರಾಂತ್ಯಗಳ ಚಳವಳಿಯು ದಕ್ಷಿಣದಲ್ಲಿ ಪ್ರಬಲವಾಗಿದ್ದು, ಅದರ ಇತಿಹಾಸ ೧೯ನೆಯ ಶತಮಾನದಷ್ಟು ಹಿಂದಿನದಾಗಿದೆ. ಕರ್ನಾಟಕದ ಒಟ್ಟು ಐದು ಪ್ರದೇಶಗಳಲ್ಲಿ ಮೂರು ಉಪಪ್ರದೇಶಗಳಾದ ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ ಹಾಗೂ ಮದ್ರಾಸ್‌ ಕರ್ನಾಟಕಗಳಲ್ಲಿ ಈ ಚಳವಳಿಯು ಕೇಂದ್ರೀಕೃತವಾಗಿತ್ತು (ಉಳಿದ ಎರಡು ಪ್ರದೇಶಗಳು ಮೈಸೂರು ಸಂಸ್ಥಾನ ಹಾಗೂ ಕೊಡಗು). ಸ್ವಾತಂತ್ರ್ಯದ ಆಗಮನವು ಏಕೀಕೃತ ಕರ್ನಾಟಕವನ್ನು ಕಾಣಬೇಕೆಂಬ ಹಂಬಲವಿದ್ದ ಕನ್ನಡ ಜನತೆಗೆ ಸಂತೋಷ ತರಲಿಲ್ಲ. ಸ್ವಾತಂತ್ರ್ಯ ಬರುವ ವರ್ಷದವರೆಗೂ ಕರ್ನಾಟಕ ಏಕೀಕರಣ ಚಳವಳಿಯು ಮುಂದುವರಿಯಿತು. ಇದು ಜಾತಿಗಳ, ಉಪಪ್ರದೇಶಗಳ ಹಾಗೂ ಪಕ್ಷಗಳ ಪರಸ್ಪರ ಸೆಣಸಾಟದ ಸಂಕೀರ್ಣ ಚಳವಳಿಯಾಗಿತ್ತು. ಈ ಚಳವಳಿಯ ಮುಂದಾಳತ್ವವನ್ನು ಬ್ರಿಟಿಷ್ ‌ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದ ನಿಜಲಿಂಗಪ್ಪ ಹಾಗೂ ಹಳೆಯ ಮೈಸೂರನ್ನು ಪ್ರತಿನಿಧಿಸುತ್ತಿದ್ದ ಹನುಮಂತಯ್ಯ ವಹಿಸಿದ್ದರು. ಸ್ವಾತಂತ್ರ್ಯದ ಸಮಯ ಹತ್ತಿರ ಬಂದಂತೆಲ್ಲ, ಮೊದಲು ಭಾಷಾವಾರು ಪ್ರಾಂತ್ಯಗಳನ್ನು ಬೆಂಬಲಿಸಿದ ಕಾಂಗ್ರೆಸ್‌ , ಹೊಸದಾಗಿ ರಚಿತವಾದ ದೇಶದ ಭದ್ರತೆ, ರಕ್ಷಣೆಯ ದೃಷ್ಟಿಯಿಂದ ಅವುಗಳ ಬಗ್ಗೆ ಹೆಚ್ಚು ಉತ್ಸಾಹ ತೋರಲಿಲ್ಲ. ಆದರೆ ಅಂತಿಮವಾಗಿ ಐವತ್ತರ ದಶಕದಲ್ಲಿ ಜನರ ಒತ್ತಾಯಕ್ಕೆ ಮಣಿಯಬೇಕಾಯಿತು. ಇದರ ಪರಿಣಾಮವಾಗಿ ೧೯೫೬ರ ನವೆಂಬರ್‌೧ ರಂದು ಏಕೀಕೃತ ಮೈಸೂರು ಅಸ್ತಿತ್ವಕ್ಕೆ ಬಂತು.

ಎಡಪಕ್ಷಗಳು

ಕಮ್ಯುನಿಸ್ಟರು ಹಾಗೂ ಸಮಾಜವಾದಿಗಳು ರಾಷ್ಟ್ರೀಯವಾದಿ ಚಳವಳಿಯ ಭಾಗವೇ ಆಗಿದ್ದರೂ ಇವುಗಳ ಅಸ್ತಿತ್ವವು ಪ್ರತ್ಯೇಕವಾಗಿ ಕಂಡುಬಂದಿದ್ದು ಭಾರತೀಯ ಕಮ್ಯುನಿಸ್ಟ್‌ ಪಕ್ಷ ಹಾಗೂ ಸಮಾಜವಾದಿ ಪಕ್ಷಗಳು ರಚನೆಯಾದ ಮೇಲೆ ಸಮಾಜವಾದಿ ಪಕ್ಷಗಳು ತಮಗೆ ಗಾಂಧೀವಾದಿ ಸಿದ್ಧಾಂತದ ಕುರಿತು ಇದ್ದ ಪಕ್ಷಪಾತದಿಂದ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದರೆ ಸ್ವಾತಂತ್ರ್ಯ ಹೋರಾಟದೊಂದಿಗೆ ಕಮ್ಯುನಿಸ್ಟ್‌ರ ಸಂಬಂಧ ಸಂಕೀರ್ಣವಾಗಿತ್ತು. ಯುದ್ಧದ ಸಂದರ್ಭದಲ್ಲಿ ರಷ್ಯಾವು ಮಿತ್ರರಾಷ್ಟ್ರಗಳೊಂದಿಗೆ ಸೇರಿದ ನಂತರ ಅವರು ಸ್ವಾತಂತ್ರ್ಯ ಚಳವಳಿಯಿಂದ ದೂರವಾದರು. ಯಾಕೆಂದರೆ ಅವರ ಪ್ರಕಾರ ಫಾಸಿಸಂನ ವಿರುದ್ಧ ಹೋರಾಡುವುದು ಬ್ರಿಟಿಷರ ವಿರುದ್ಧ ಹೋರಾಡುವುದಕ್ಕಿಂತ ಮುಖ್ಯವಾದುದಾಗಿತ್ತು. ಈ ದೃಷ್ಟಿಯಲ್ಲಿ ಅವರ ಅಭಿಪ್ರಾಯವು, ಒಂದು ವಿಭಿನ್ನ ಅರ್ಥದಲ್ಲಿ, ಅಂಬೇಡ್ಕರ್‌ ಮತ್ತು ಅವರ ಅನುಯಾಯಿಗಳು ಹಾಗೂ ಹಿಂದೂ ಕೋಮು ಸಂಘಟನೆಗಳ ಅಭಿಪ್ರಾಯಕ್ಕೆ ಸಂವಾದಿಯಾಗಿದೆ. ಅಂಬೇಡ್ಕರ್‌ ಅವರಿಗೆ, ಜಿನ್ನಾರಂತೆ ಕಾಂಗ್ರೆಸ್‌ ನೇತೃತ್ವದ ಚಳವಳಿಯಿಂದ ಅಸ್ತಿತ್ವಕ್ಕೆ ಬರುವ ದೇಶದಲ್ಲಿ ಮೇಲ್ವರ್ಗದ ಹಿಂದೂಗಳು ಪರಿಶಿಷ್ಟ ಜಾತಿ, ವರ್ಗಗಳನ್ನು ಶೋಷಣೆಗೆ ಗುರಿಪಡಿಸುತ್ತಾರೆಂಬ ಭಯವಿತ್ತು. ಹಿಂದೂ ಕೋಮುವಾದಿಗಳಿಗೆ, ಗಾಂಧಿ ಹಾಗೂ ಕಾಂಗ್ರೆಸ್‌ನ ಮೂಲಕ ಜಾತ್ಯತೀತೆಯ ಹೆಸರಿನಲ್ಲಿ ಮುಸ್ಲಿಮರಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯಬಹುದೆಂಬ ಆತಂಕವಿತ್ತು. ೧೯೪೭ರ ಸ್ವಾತಂತ್ರ್ಯವನ್ನು ಕಮ್ಯುನಿಸ್ಟ್‌ ಪಾರ್ಟಿಯು ದುಡಿಯುವ ವರ್ಗದ ಜನರನ್ನು, ಭೂಮಾಲೀಕ ವರ್ಗ ಮತ್ತು ದೊಡ್ಡ ಬೂರ್ಜ್ಟಾ ವರ್ಗಗಳು ಶೋಷಿಸುವ ಒಂದು ರಾಜಕೀಯ ವ್ಯವಸ್ಥೆಯ ಉದಯ ಎಂದು ವ್ಯಾಖ್ಯಾನಿಸಿತು.