ದ್ರಾವಿಡ ಮುನ್ನೇತ್ರ ಕಜಗಂ ಹಾಗೂ ಅಣ್ಣಾದೊರೈ

೧೯೪೦ರ ದಶಕದಲ್ಲಿ ದ್ರಾವಿಡ ಕಜಗಂ ತಮಿಳುನಾಡಿನಲ್ಲಿ ಒಂದು ಜನಪ್ರಿಯ ಪಕ್ಷವಾಗಿ ಬೆಳೆದರೂ ನಿಧಾನವಾಗಿ ಆಂತರಿಕ ಭಿನ್ನಮತ ಹುಟ್ಟಿಕೊಂಡಿತು. ಪಕ್ಷದೊಳಗಿನ ಒಂದು ಪ್ರಗತಿಪರ ಗುಂಪು ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಒತ್ತಾಯ ಮುಂದುವರಿಸಿತು. ಈ ಗುಂಪು ಪೆರಿಯಾರ್‌ ಅವರ ಪಕ್ಷದ ಮೇಲಿನ ಹಿಡಿತವನ್ನು ಪ್ರಶ್ನಿಸಲಾರಂಭಿಸಿ, ಸಿ. ಎನ್. ಅಣ್ಣಾದೊರೈ ನೇತೃತ್ವದಲ್ಲಿ ಒಂದು ಪರ್ಯಾಯ ಸಂಘಟನೆಯನ್ನು ಸ್ಥಾಪಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿತು.

ಸಿ. ಎನ್‌. ಅಣ್ಣಾದೊರೈಯವರು ಕಾಂಜೀವರಂನಲ್ಲಿ ೧೯೦೮ರಲ್ಲಿ ಜನಿಸಿದರು. ಮದ್ರಾಸಿನಲ್ಲಿ ಅರ್ಥಶಾಸ್ತ್ರದಲ್ಲಿ ಎಂ. ಎ. ಪದವಿಯನ್ನು ಪಡೆದ ಅಣ್ಣಾದೊರೈ ಪ್ರಾರಂಭದಲ್ಲಿ ಪತ್ರಕರ್ತರಾಗಿ ದುಡಿದರು. ೧೯೩೫ರಲ್ಲಿ ಜಸ್ಟೀಸ್‌ ಪಕ್ಷಕ್ಕೆ ಸೇರ್ಪಡೆಗೊಂಡು ೧೯೩೮ರಲ್ಲಿ ನಡೆದ ಹಿಂದಿ ವಿರೋಧಿ ಚಳವಳಿಯಲ್ಲಿ ನಾಯ್ಕರ್‌ ಅವರಿಗೆ ಬೆಂಬಲಿಗರಾಗಿದ್ದರು. ೧೯೪೪ರಲ್ಲಿ ದ್ರಾವಿಡ ಪಕ್ಷ ಸ್ಥಾಪನೆಗೊಂಡಾಗ ಅವರು ನಾಯ್ಕರ್‌ ಅವರ ನಿಕಟವರ್ತಿಗಳಾಗಿ ಪಕ್ಷದಲ್ಲಿ ದುಡಿಯಲಾರಂಭಿಸಿದರು.

ಭಾರತಕ್ಕೆ ಸ್ವಾತಂತ್ರ್ಯ ದೊರಕುವ ಸಂದರ್ಭದಲ್ಲಿ ಪೆರಿಯಾರ್‌ ನೇತೃತ್ವದ ದ್ರಾವಿಡ ಸ್ಥಾನ ಚಳವಳಿಯು ಪಾಕಿಸ್ತಾನ ಮಾದರಿಯಲ್ಲಿ ಪ್ರತ್ಯೇಕ ರಾಷ್ಟ್ರ ನಿರ್ಮಾಣದ ಬೇಡಿಕೆ ಮುಂದಿರಿಸಿ ಹೋರಾಟದಲ್ಲಿ ತೊಡಗಿತು. ಪೆರಿಯಾರ್‌ಭಾರತದ ಸ್ವಾತಂತ್ರೋತ್ಸವ, ರಾಷ್ಟ್ರಧ್ವಜ, ಸಂವಿಧಾನ ಇತ್ಯಾದಿಗಳನ್ನು ಬಹಿಷ್ಕರಿಸಲು ಕರೆ ನೀಡಿದರು. ಆದರೆ ಅಣ್ಣಾದೊರೈ ನೇತೃತ್ವದ ಗುಂಪು ಈ ನಿಲುವುಗಳನ್ನು ಒಪ್ಪಿಕೊಳ್ಳಲಿಲ್ಲ. ಈ ಗುಂಪು ರಾಷ್ಟ್ರೀಯ ಸ್ವಾತಂತ್ರ್ಯದ ಅಗತ್ಯತೆಯನ್ನು ಒಪ್ಪಿಕೊಂಡಿತು ಮಾತ್ರವಲ್ಲ, ಪಕ್ಷದಲ್ಲಿ ಆಂತರಿಕ ಪ್ರಜಾಸತ್ತೆಯ ಬೇಡಿಕೆಯನ್ನು ಮುಂದಿರಿಸಿತು. ಈ ಸಂದರ್ಭದಲ್ಲಿ ನಡೆದ ಒಂದು ಒಪ್ಪಂದದಂತೆ ಅಣ್ಣಾದೊರೈಯವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಆದರೆ ೧೯೪೯ರಲ್ಲಿ ಪೆರಿಯಾರರು ೨೮ ವರ್ಷ ಪ್ರಾಯದ ಪಕ್ಷದ ಕಾರ್ಯಕರ್ತೆಯೊಬ್ಬಳನ್ನು ವಿವಾಹವಾಗಿ ಪಕ್ಷದ ಮುಂದಿನ ನಾಯಕಿಯ ಸ್ಥಾನಕ್ಕೆ ತರಲು ಹವಣಿಸಿದಾಗ ಈ ಬೆಳವಣಿಗೆಯನ್ನು ವಿರೋಧಿಸಿದ ಅಣ್ಣಾದೊರೈ ನೇತೃತ್ವದ ಗುಂಪು ಪಕ್ಷವನ್ನು ತ್ಯಜಿಸಿ “ದ್ರಾವಿಡ ಮುನ್ನೇತ್ರ ಕಜಗಂ” (The Dravidian Progressive Federation) ಹೆಸರಿನ ಪ್ರತ್ಯೇಕ ಸಂಘಟನೆಯನ್ನು ಸ್ಥಾಪಿಸಿತು. ದ್ರಾವಿಡ ಕಜಗಂ ತೊರೆದು ಅಣ್ಣಾದೊರೈ ಬೆಂಬಲಕ್ಕೆ ನಿಂತ ಇತರ ಪ್ರಮುಖ ನಾಯಕರೆಂದರೆ ಎನ್‌. ವಿ. ನಟರಾಜನ್‌, ಕರುಣಾನಿಧಿ ಹಾಗೂ ಪೆರಿಯಾರರ ಸೋದರಳಿಯ ಇ. ವಿ. ಕೆ. ಸಂಪತ್‌ ಮುಂತಾದವರು.

ಪ್ರಾರಂಭದಿಂದಲೇ ಅಣ್ಣಾದೊರೈ ಪಕ್ಷದ ಸಂಘಟನೆಗೆ ವಿಶೇಷ ಮಹತ್ವ ನೀಡಿದರು. ಪಕ್ಷದ ಸಂವಿಧಾನವೇ ಸೂಚಿಸುವಂತೆ ತಳಹಂತದಲ್ಲಿ ವಾರ್ಡ್ ಮತ್ತು ಗ್ರಾಮ ಸಮಿತಿಗಳು ನಂತರ ತಾಲೂಕು ಹಾಗೂ ಜಿಲ್ಲಾ ಸಮಿತಿಗಳು ರಚಿಸಲ್ಪಟ್ಟವು. ಸುಮಾರು ೩೦೦೦ ಪಕ್ಷದ ಶಾಖೆಗಳು ಅಸ್ತಿತ್ವಕ್ಕೆ ಬಂದವು. ಪಕ್ಷ ಸಮೇಳನದಲ್ಲಿ ಆಕರ್ಷಕ ಭಾಷಣಗಳು, ಚಿತ್ರತಾರೆಯರ ಕಾರ್ಯಕ್ರಮಗಳು ಇತ್ಯಾದಿಗಳಿಂದ ಪಕ್ಷವು ಬಹುಬೇಗ ಪ್ರಚಾರ ಪಡೆದುಕೊಂಡಿತು. ಎಂ. ಜಿ. ರಾಮಚಂದ್ರನ್‌, ಎಸ್‌. ಎಸ್. ರಾಜೇಂದ್ರನ್‌, ಕೆ. ಆರ್‌. ರಾಮಸ್ವಾಮಿ ಮುಂತಾದವರು ಡಿ.ಎಂ.ಕೆ.ಯನ್ನು ಬೆಂಬಲಿಸಿದರು. ೧೯೬೦ರ ಸುಮಾರಿಗೆ ಡಿ.ಎಂ.ಕೆ. ಸದಸ್ಯತ್ವವು ಒಂದು ಲಕ್ಷದ ಎಪ್ಪತ್ತೈದು ಸಾವಿರದಷ್ಟಾಗಿತ್ತು. ಕೆಳ ಮಧ್ಯಮ ವರ್ಗದ ಜನರು, ಶ್ರಮಿಕರು, ಹಿಂದುಳಿದ ವರ್ಗಗಳು ಹೆಚ್ಚಾಗಿ ಡಿ.ಎಂ.ಕೆ.ಯನ್ನು ಬೆಂಬಲಿಸತೊಡಗಿದರು. ಆದರೆ ೧೯೫೧-೫೨ರ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿಲ್ಲ. ಹಾಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಜಯಗಳಿಸಿ ಸಿ. ರಾಜಗೋಪಾಲಾಚಾರಿಯವರು ಮುಖ್ಯಮಂತ್ರಿಗಳಾದರು.

೧೯೫೦ರ ದಶಕದಲ್ಲಿ ಪೆರಿಯಾರ್‌ ನೇತೃತ್ವದ ದ್ರಾವಿಡ ಕಜಗಂ ಕಮ್ಯುನಿಸ್ಟ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತು. ಆದರೆ ಪೆರಿಯಾರ್‌ರ ದ್ರಾವಿಡ ಸ್ಥಾನದ ಬೇಡಿಕೆಗಾಗಲಿ, ಬ್ರಾಹ್ಮಣ ವಿರೋಧಿ ನಿಲುವಿಗಾಗಲಿ ಕಮ್ಯುನಿಸ್ಟ್‌ ಪಕ್ಷದ ಬೆಂಬಲವಿರಲಿಲ್ಲ. ಹಾಗಾಗಿ ಅತಿ ಶೀಘ್ರದಲ್ಲಿಯೇ ಅವುಗಳು ಬೇರ್ಪಡೆಗೊಂಡವು. ಈ ನಡುವೆ ಶ್ರೀ ರಾಜಗೋಪಾಲಚಾರಿಯವರ ಜಾತಿ ಆಧಾರಿತ ಶಿಕ್ಷಣ ಯೋಜನೆಯು ರಾಜ್ಯಾದ್ಯಂತ ಪ್ರತಿಭಟನೆಯ ಅಲೆಯನ್ನೇ ಎಬ್ಬಿಸಿತು. ಪರಿಣಾಮವಾಗಿ ರಾಜಗೋಪಾಲಚಾರಿಯವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರು ಶ್ರೀ ಕಾಮರಾಜ ನಾಡರ್‌ ಮುಖ್ಯಮಂತ್ರಿಯಾದರು. ಕಾಮರಾಜ ನಾಡರ್‌ ಬ್ರಾಹ್ಮಣೇತರ ಹಿಂದುಳಿದ ವರ್ಗದಿಂದ ಬಂದಿರುವ ನಾಯಕರು. ಕಾಂಗ್ರೆಸ್‌ ಪಕ್ಷದಲ್ಲಾದ ಈ ಬೆಳವಣಿಗೆಯು ಪರೋಕ್ಷವಾಗಿ ದ್ರಾವಿಡ ಚಳವಳಿಯ ಜಯವೂ ಆಗಿದೆ.

ದ್ರಾವಿಡ ಚಳವಳಿಯಲ್ಲಿ ಬದಲಾದ ನಿಲುವು

೧೯೫೦ರ ದಶಕದಲ್ಲಿ ಭಾರತದಾದ್ಯಂತ ಭಾಷಾವಾರು ಪ್ರಾಂತ್ಯಗಳ ರಚನೆಯ ಬೇಡಿಕೆಯು ಪ್ರಬಲವಾಗಿ ಕೇಳಿಬಂದಿತು. ಈ ಹಂತದಲ್ಲಿ ದ್ರಾವಿಡ ಕಜಗಂ ಪಕ್ಷದ ನಿಲುವಿನಲ್ಲಿಯೂ ಬಹಳಷ್ಟು ಬದಲಾವಣೆಗಳು ಕಂಡುಬಂದವು. ಈ ಹಿಂದಿನ ದಕ್ಷಿಣ ಭಾರತದ ‘ದ್ರಾವಿಡ ರಾಜ್ಯ’ದ ಬೇಡಿಕೆಯನ್ನು ಕೈಬಿಟ್ಟು ಪೆರಿಯಾರರು ತಮಿಳು ಭಾಷಾ ಜನರನ್ನಷ್ಟೇ ಒಳಗೊಂಡಿರುವ ‘ತಮಿಳುನಾಡು’ ರಾಷ್ಟ್ರವನ್ನು ಸ್ಥಾಪಿಸುವ ಉದ್ದೇಶವನ್ನು ಮುಂದಿರಿಸಿದರು. ಆದರೆ ದ್ರಾವಿಡನಾಡು ಸ್ಥಾಪನೆಯ ವಿಚಾರವನ್ನು ಅಗತ್ಯ ಕಂಡಾಗ ಕೈಗೆತ್ತಿಕೊಳ್ಳುವುದಾಗಿಯೂ ಘೋಷಿಸಿದರು. ಈ ಸಂದರ್ಭದಲ್ಲಿ ಬ್ರಾಹ್ಮಣೇತರ ನಾಯಕರೊಬ್ಬರು ಮುಖ್ಯಮಂತ್ರಿ ಹುದ್ದೆಗೇರಿದಾಗ ಸರಕಾರವನ್ನು ಬೆಂಬಲಿಸತೊಡಗಿದರು. ಕಾಂಗ್ರೆಸ್‌ ಪಕ್ಷವೂ ತಮಿಳು ರಾಷ್ಟ್ರೀಯತೆಯ ಹಿಂದಿರುವ ಆಶಯಗಳನ್ನು ಅರಿತುಕೊಂಡು ತನ್ನ ಕಾರ್ಯಕ್ರಮಗಳಲ್ಲಿ ಆ ವಿಚಾರಗಳನ್ನೂ ಸೇರ್ಪಡೆಗೊಳಿಸಲು ಆರಂಭಿಸಿತು.

೧೯೫೦ರ ದಶಕದಲ್ಲಿ ಪರಿಯಾರ್‌ರ ನಿಲುವಿನಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬಂದರೂ ರಾಷ್ಟ್ರಧ್ವಜ ದಹನ, ಭಾರತದ ‘ಭೂಪಟ ದಹನ’, ಸಂವಿಧಾನ ವಿರೋಧಿ ಚಳವಳಿಗಳನ್ನು ಮುನ್ನಡೆಸಿಕೊಂಡು ಬಂದಿದ್ದರು. ಭೂಪಟ ದಹನ ಚಳವಳಿಯಲ್ಲಿ ಪಾಲ್ಗೊಂಡ ಸುಮಾರು ೨೦೦೦ ದ್ರಾವಿಡ ಕಜಗಂ ಕಾರ್ಯಕರ್ತರು ಜೈಲು ಸೇರಿದರು.

೧೯೬೦ರ ನಂತರ ಪೆರಿಯಾರ್‌ರ ದ್ರಾವಿಡ ಕಜಗಂ ಪಕ್ಷದ ಸಿದ್ಧಾಂತಗಳಲ್ಲಿ ಇನ್ನಷ್ಟು ಬದಲಾವಣೆಗಳು ಕಂಡುಬಂದವು. ೧೯೬೨ರಲ್ಲಿ ದ್ರಾವಿಡ ಕಜಗಂ ಸಮ್ಮೇಳನವನ್ನು ಆಯೋಜಿಸಿ ಪೆರಿಯಾರರು ಕಾಮರಾಜ ನಾಡರ್‌ರವರ ಕಾಂಗ್ರೆಸ್‌ ಸರ್ಕಾರವನ್ನು ಬೆಂಬಲಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಅವರು ತನ್ನ ಹೋರಾಟದ ತಿರುಳಾದ ‘ಬ್ರಾಹ್ಮಣ ವಿರೋಧಿ’ ನಿಲುವನ್ನು ಸಡಿಲಗೊಳಿಸಿದ್ದರು.

೧೯೬೨ರ ಸಮಯದಲ್ಲಿ ಡಿ. ಎಂ. ಕೆ. ಪಕ್ಷವು ಪ್ರಬಲಗೊಂಡಿತ್ತು. ಡಿ.ಎಂ.ಕೆಯು ಒಂದು ಕಡೆ ದ್ರಾವಿಡ ಪ್ರಜ್ಞೆಯನ್ನೂ ಇನ್ನೊಂದು ಕಡೆ ಜನರ ಆರ್ಥಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿತ್ತು. ಈ ಎಲ್ಲ ಬೆಳವಣಿಗೆಗಳಿಂದಾಗಿ ೧೯೬೨ರ ಚುನಾವಣೆಯಲ್ಲಿ ಡಿ. ಎಂ. ಕೆ. ಒಂದು ಪ್ರಬಲ ಪಕ್ಷವಾಗಿ ಹೊರಹೊಮ್ಮಿತ್ತು.

ಈ ಹಂತದಲ್ಲಿ ದ್ರಾವಿಡ ಚಳವಳಿಯು ತನ್ನ ಕ್ರಾಂತಿಕಾರಿ ಸಿದ್ಧಾಂತಗಳನ್ನೂ ಬದಿಗಿರಿಸಿ ನಂತರ ಡಿ.ಎಂ.ಕೆ. ಸದಸ್ಯರು ಸಂವಿಧಾನ ಹೆಸರಿನಲ್ಲಿ ಪ್ರತಿಜ್ಞಾ ಸ್ವೀಕಾರ ಮಾಡಿ ಭಾರತ ರಾಷ್ಟ್ರದ ಪಾರಮ್ಯತೆಯನ್ನು ಸ್ವೀಕಾರ ಮಾಡುವ ಸಂಕೇತವನ್ನು ನೀಡಿದರು.

ಕಾಂಗ್ರೆಸ್ಪಕ್ಷದ ಪ್ರಭಾವ

ದ್ರಾವಿಡ ಚಳವಳಿಯು ಜನಾಂಗ, ಭಾಷೆ, ಸಂಸ್ಕೃತಿಯ ಪ್ರಶ್ನೆಗಳನ್ನಿಟ್ಟುಕೊಂಡು ಜನ್ಮ ತಳೆದ ಚಳವಳಿ. ಆದರೆ ನಂತರದ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷ ಈ ಪ್ರಶ್ನೆಗಳನ್ನು ತನ್ನ ಕಕ್ಷೆಯೊಳಗೆ ಸೇರಿಸಿಕೊಳ್ಳಲು ತೊಡಗಿದಾಗ ತನ್ನ ತೀವ್ರತೆಯನ್ನು ಕಳೆದುಕೊಳ್ಳತೊಡಗಿತು. ಸ್ವತಃ ಪೆರಿಯಾರರೇ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ತಮಿಳೀಕರಣ ಪ್ರಕ್ರಿಯೆಯನ್ನು ಬೆಂಬಲಿಸತೊಡಗಿದರು. ಹೀಗಾಗಿ ದ್ರಾವಿಡ ಚಳವಳಿಯ ಮೇಲೆ ಪೆರಿಯಾರರ ಹಿಡಿತ ಸಡಿಲಗೊಂಡು ಡಿ.ಎಂ.ಕೆ. ಈ ಸಿದ್ಧಾಂತ ಹಾಗೂ ಹೋರಾಟವನ್ನು ತನ್ನದಾಗಿಸಿಕೊಂಡಿತು.

ಡಿ.ಎಂ.ಕೆಯಲ್ಲಿ ಭಿನ್ನಮತ

ಡಿ.ಎಂ.ಕೆ. ಪಕ್ಷವೂ ಭಿನ್ನಮತದಿಂದ ಹೊರತಾಗಿರಲಿಲ್ಲ. ಪಕ್ಷದ ಸ್ಥಾಪಕರಲ್ಲೊಬ್ಬರಾದ ಇ.ವಿ. ಸಂಪತ್‌ ಅವರು ಅಣ್ಣಾದೊರೈಯವರ ನಿಲುವನ್ನು ವಿರೋಧಿಸತೊಡಗಿದ್ದರು. ನಂತರ ಡಿ.ಎಂ.ಕೆ. ತಮಿಳುನಾಡಿನಲ್ಲಿ ಅಧಿಕಾರಕ್ಕೇರಿದರೂ ಒಂದು ಬಣ ಪಕ್ಷದಿಂದ ಹೊರನಡೆದು ಅಖಿಲ ಭಾರತ ಅಣ್ಣಾದ್ರಾವಿಡ ಮುನ್ನೇತ್ರ ಕಜಗಂ (AIADMK) ಹೆಸರಿನ ರಾಜಕೀಯ ವೇದಿಕೆಯನ್ನು ಸ್ಥಾಪಿಸಿಕೊಂಡಿತು.

ಪೆರಿಯಾರರ ಕೊನೆಯ ಹೋರಾಟ

ಈ ಮೇಲೆ ತಿಳಿದಂತೆ ಕಾಲಕ್ರಮೇಣ ದ್ರಾವಿಡ ಚಳವಳಿ ಹಾಗೂ ಆತ್ಮಾಭಿಮಾನ ಚಳವಳಿಯ ತಿರುಳನ್ನು ವಿವಿಧ ರಾಜಕೀಯ ಪಕ್ಷಗಳು ಅಳವಡಿಸಿಕೊಂಡವು. ಈ ನಡುವೆ ಅಖಿಲ ಭಾರತವೆಂಬ ರಾಷ್ಟ್ರ ನಿರ್ಮಾಣವಾಯಿತಲ್ಲದೆ ಒಂದು ಸಂವಿಧಾನದ ರಚನೆಯೂ ನಡೆಯಿತು. ಪೆರಿಯಾರರ ಹೋರಾಟಗಳು ತನ್ನ ತೀವ್ರತೆಯನ್ನು ಕಳೆದುಕೊಂಡು ಸಾಂಕೇತಿಕ ರೂಪ ಪಡೆದುಕೊಳ್ಳತೊಡಗಿತು. ಸಂವಿಧಾನ ದಹನ, ಭೂಪಟ ದಹಮ ರಾಮನ ವಿಗ್ರಹಕ್ಕೆ ಚಪ್ಪಲಿ ತೊಡಿಸುವುದು ಇತ್ಯಾದಿ ಕಾರ್ಯಕ್ರಮಗಳು ಕೇವಲ ಸಾಂಕೇತಿಕ ರೂಪವನ್ನಷ್ಟೆ ಬಿಂಬಿಸುತ್ತಿದ್ದವು.

೧೯೭೦ರಲ್ಲಿ ಎಂ. ಕರುಣಾನಿಧಿಯವರು ಮುಖ್ಯಮಂತ್ರಿಗಳಾಗಿದ್ದ ಡಿ.ಎಂ.ಕೆ. ಸರ್ಕಾರವು ತಮಿಳುನಾಡಿನ ಹಿಂದೂ ಧಾರ್ಮಿಕ ಹಾಗೂ ದತ್ತಿ ಶಾಸನಕ್ಕೆ ತಿದ್ದುಪಡಿಯನ್ನು ತಂದು ಅರ್ಚಕರ ನೇಮಕಾತಿಯಲ್ಲಿ ವಂಶಪಾರಂಪರಿಕ ನಿಯಮವನ್ನು ಅನುಸರಿಸಬೇಕಾಗಿಲ್ಲವೆಂದೂ, ತಮಿಳುನಾಡಿನ ಸುಮಾರು ೧೦,೦೦೦ ದೇಗುಲಗಳಲ್ಲಿ ಯಾವುದೇ ಜಾತಿಗೆ ಸೇರಿದ ಅರ್ಚಕರನ್ನು ನೇಮಿಸಬಹುದೆಂದೂ ನಿಯಮಗಳನ್ನು ಬದಲಾಯಿಸಲಾಯಿತು. ದೀರ್ಘಕಾಲದಿಂದ ಪೆರಿಯಾರರು ಬ್ರಾಹ್ಮಣರ ಧಾರ್ಮಿಕ ಏಕಸ್ವಾಮ್ಯವನ್ನು ಪ್ರಶ್ನಿಸುತ್ತಲೇ ಬಂದಿದ್ದರು. ಹಾಗಾಗಿ ಇಂತಹ ಶಾಸನದ ಅಗತ್ಯತೆಯನ್ನು ಅವರು ಮನಗಂಡಿದ್ದರು. ಆದರೆ ಈ ಶಾಸನವನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿ ದಾವೆ ಹೂಡಲಾದಾಗ ಪೆರಿಯಾರರು ಅಸಮಾಧಾನಗೊಂಡರು.

ಸರ್ವೋಚ್ಛ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ವಂಶಪಾರಂಪರ್ಯವಾಗಿ ಆರ್ಚಕರ ಸ್ಥಾನವನ್ನು ಮುಂದುವರಿಸುವ ಅಗತ್ಯವಿಲ್ಲವೆಂದು ಒಪ್ಪಿಕೊಂಡರೂ, ಯಾವುದೇ ಜಾತಿಗೆ ಸೇರಿದ ಅರ್ಚಕರನ್ನು ನೇಮಿಸುವ ವಿಚಾರವನ್ನು ಒಪ್ಪಿಕೊಳ್ಳಲಿಲ್ಲ. ಈ ತೀರ್ಮಾನವು ‘ಆಗಮಶಾಸ್ತ್ರ’ಕ್ಕೆ ವಿರೋಧವೆಂದೂ ಹಿಂದೂ ಭಕ್ತಾದಿಗಳ ನಂಬಿಕೆಯ ಉಲ್ಲಂಘನೆಯಾಗುವುದೆಂದೂ ನ್ಯಾಯಾಲಯವು ಭಾವಿಸಿತು. ಆಗಮಶಾಸ್ತ್ರದಲ್ಲಿ ಸಮ್ಮತಿಸಲಾಗದ ಜಾತಿಗಳಿಂದ ಆಯ್ಕೆಗೊಂಡ ಆರ್ಚಕರಿಗೆ ಪೂಜಾಕಾರ್ಯಕ್ಕೆ ಅವಕಾಶ ನೀಡುವ ಸರ್ಕಾರದ ತೀರ್ಮಾನವು ಹಿಂದೂ ಭಕ್ತರ ಧಾರ್ಮಿಕ ನಂಬಿಕೆ ಹಾಗೂ ಪೂಜಾ ವಿಧಿವಿಧಾನಗಳ ಗಂಭೀರ ಉಲ್ಲಂಘನೆಯಾಗುವುದೆಂದು ಸರ್ವೋಚ್ಚ ನ್ಯಾಯಾಲಯವು ತೀರ್ಪಿತ್ತಿತ್ತು.

ಜಾತಿ ಪದ್ಧತಿಯನ್ನೂ, ಬ್ರಾಹ್ಮಣರ ಧಾರ್ಮಿಕ ಪಾರಮ್ಯತೆಯನ್ನೂ ಎತ್ತಿಹಿಡಿಯಲಾದ ಈ ತೀರ್ಪಿನಿಂದ ಪೆರಿಯಾರ್‌ರು ರೊಚ್ಚಿಗೆದ್ದರು. ಭಾರತ ರಾಷ್ಟ್ರವು ಹಿಂದೂ ಧರ್ಮಗ್ರಂಥಗಳಲ್ಲಿ ಪ್ರತಿಪಾದಿಸಿರುವಂತೆ ಎಂದು ವಾದಿಸಿದರು. ಇತರ ಜನ ಸಮುದಾಯಗಳನ್ನು ಶಾಶ್ವತವಾಗಿ ಶೂದ್ರತ್ವಕ್ಕೆ ತಳ್ಳುವ ಹುನ್ನಾರ ಈ ತೀರ್ಪಿನ ಹಿಂದಿದೆ ಎಂದೂ ಭಾವಿಸಿದ ಪೆರಿಯಾರರು ತೀರ್ಪನ್ನು ಧಿಕ್ಕರಿಸುವ ತೀರ್ಮಾನ ಕೈಗೊಂಡರು.

ಈ ಹಿನ್ನೆಲೆಯಲ್ಲಿ ಪೆರಿಯಾರ್‌ರು ೧೯೭೨ರಲ್ಲಿ ತನ್ನ ‘ಪ್ರತ್ಯೇಕ ತಮಿಳುನಾಡು’ ಬೇಡಿಕೆಯನ್ನು ಪುನರುಚ್ಛರಿಸತೊಡಗಿದರು. ಇದು ಪೆರಿಯಾರ್‌ರ ಜೀವನದ ಕೊನೆಯ ಹೋರಾಟವಾಗಿತ್ತು. ಹೀಗೆ ಅಸ್ಪೃಶ್ಯತೆಯ ಪಿಡುಗು ಇಲ್ಲದಿರುವ ಮಿಲಿಯಾಂತರ ನತದೃಷ್ಟ ಜನತೆಗೆ ಸಮಾನತೆಯ ಬದುಕನ್ನು ನೀಡುವ ಒಂದು ಆದರ್ಶ ಸಮಾಜದ ನಿರ್ಮಾಣದ ಬಯಕೆಯನ್ನು ಪುನರುಚ್ಚರಿಸಿ, ಆ ಹೋರಾಟಕ್ಕೆ ಮತ್ತೆ ಜೀವ ತುಂಬುವ ಪ್ರಯತ್ನ ನಡೆಸುತ್ತಲೇ ಪೆರಿಯಾರರು ಮರಣ ಹೊಂದಿದರು.

ಶ್ರೀ ನಾರಾಯಣ ಗುರು

ಈ ಭಾಗದಲ್ಲಿ ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗ ಹಾಗೂ ಇಪ್ಪತ್ತನೇ ಶತಮಾನದ ಆದಿಯಲ್ಲಿ ಕೇರಳ ರಾಜ್ಯ ನೋಡಿದ ಮಹಾಪುರುಷ ಹಾಗೂ ಹಿಂದುಳಿದ ವರ್ಗಗಳ ಸಾಮಾಜಿಕ ಪರಿವರ್ತನೆಯ ಹರಿಕಾರನೆಂದೇ ಗುರುತಿಸಲ್ಪಡುವ ಶ್ರೀ ನಾರಾಯಣ ಗುರುಗಳ ಜೀವನ ಹಾಗೂ ಸಿದ್ಧಾಂತಗಳನ್ನು ಚರ್ಚಿಸಲಾಗಿದೆ. ಶ್ರೀ ನಾರಾಯಣ ಗುರು ಕೇರಳದಲ್ಲಿ ಒಂದು ಜಾತಿರಹಿತ, ವರ್ಣರಹಿತ ಸಮಾಜದ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಮಹಾನ್‌ವ್ಯಕ್ತಿ. ಇವರು ಪ್ರಾರಂಭಿಸಿದ ‘ಮೌನಕ್ರಾಂತಿ’ಯು ಕೇರಳ ಮಾತ್ರವಲ್ಲದೆ ಇಡೀ ಭಾರತದ ಹಿಂದುಳಿದ ವರ್ಗಗಳ ಚಳವಳಿಯಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆಯಿತು. ಅವರು ಪ್ರಾರಂಭಿಸಿದ ಸಾಮಾಜಿಕ ಕ್ರಾಂತಿಯ ಪರಿಣಾಮಗಳು ಇಂದಿಗೂ ಕೂಡ ಕೇರಳ ಹಾಗೂ ದಕ್ಷಿಣ ಭಾರತದ ಇತರ ಕಡೆಗಳಲ್ಲಿ ಕಡೆಯುತ್ತಿರುವ ಸಾಮಾಜಿಕ, ರಾಜಕೀಯ ಚಳವಳಿಗೆ ಸ್ಫೂರ್ತಿದಾಯಕವಾಗಿದೆ.

ಕೇರಳ ರಾಜ್ಯದ ಸಾಮಾಜಿಕ ಪರಿಸ್ಥಿತಿ

ಹತ್ತೊಂಬತ್ತನೇ ಶತಮಾನದಲ್ಲಿ ಕೇರಳದ ವರ್ಣಾಧಾರಿತ ಸಮಾಜದ ಕಟ್ಟುಪಾಡುಗಳು ಬಹಳ ಸೂಕ್ಷ್ಮವಾಗಿದ್ದವು. ಆ ನಾಡಿನಲ್ಲಿ ಸವರ್ಣೀಯರು ಅವರ್ಣೀಯರನ್ನೂ, ಪಂಚಮರನ್ನೂ ಮನುಷ್ಯರೆಂದು ಭಾವಿಸುತ್ತಲೇ ಇರಲಿಲ್ಲ. ಸಾಮಾಜಿಕ ಶ್ರೇಣಿಯಲ್ಲಿ ಅತಿ ಶ್ರೇಷ್ಠರೆನಿಸಿದ ನಂಬೂದಿರಿ ಬ್ರಾಹ್ಮಣರು ನಡೆದು ಬರುವ ದಾರಿಯಲ್ಲಿ ಅವರ್ಣೀಯರು ನಡೆಯುವಂತೆ ಇರಲಿಲ್ಲ. ನಂಬೂದಿರಿಗಳಿಂದ ಮೂರ್ತೆಗಾರಿಕೆ ಕುಲಕಸುಬನ್ನಾಗಿ ಹೊಂದಿರುವ ಈಳವರು ಸುಮಾರು ೩೨ ಅಡಿ ದೂರದಲ್ಲಿ ಇರಬೇಕಾಗಿತ್ತು. ಪುಲಯ, ಪರಯ, ಕುರವ ಮುಂತಾದ ಅಸ್ಪೃಶ್ಯರು ಅವರಿಂದ ಸುಮಾರು ೬೪ ಅಡಿಗಳಷ್ಟು ದೂರದಲ್ಲಿರಬೇಕೆಂಬ ಕಟ್ಟುನಿಟ್ಟಿನ ಸಾಮಾಜಿಕ ನಿಯಮವಿತ್ತು.

ಅವರ್ಣೀಯರು ಸಾರ್ವಜನಿಕ ರಸ್ತೆಗಳನ್ನು ತಮ್ಮ ಓಡಾಟಕ್ಕೆ ಬಳಸುವಂತಿರಲಿಲ್ಲ. ಅವರು ಕೆಲಸದಲ್ಲಿ ತೊಡಗುವ ‌ಪ್ರದೇಶದಲ್ಲಿ ಹಸಿರು ಸೊಪ್ಪನ್ನೂ, ಮಣ್ಣಿನ ರಾಶಿಯನ್ನೂ ಸುರಿದು ಸವರ್ಣೀಯರು ಗುರುತಿಸಲು ಸುಲಭವಾಗುವಂತೆ ಅವರು ಸೊಂಟದ ಮೇಲೆ ಉಡುಪು ಧರಿಸುವುದನ್ನು ನಿಷೇಧಿಸಲಾಗಿತ್ತು. ಚಪ್ಪಲಿ, ಕೊಡೆ ಹಾಗೂ ಬೆಲೆಬಾಳುವ ಆಭರಣಗಳನ್ನು ಅವರು ಧರಿಸುವಂತಿರಲಿಲ್ಲ. ಅವೆಲ್ಲವೂ ನಂಬೂದಿರಿಗಳ ಹಕ್ಕಾಗಿದ್ದವು. ಭಾರಿ ಮಳೆ ಬಂದು ನೆನೆದರೂ ಅವರು ಕೊಡೆಯ ಆಶ್ರಯ ಪಡೆಯುವಂತಿರಲಿಲ್ಲ. ಮೇಲು ಜಾತಿಗೆ ಗೌರವ ತೋರಿಸುವ ಸಲುವಾಗಿ ಕೆಳಜಾತಿಯ ಸ್ತ್ರೀಯರು ತಮ್ಮ ಎದೆಯ ಮೇಲೆ ಬಟ್ಟೆ ತೊಡುವಂತಿರಲಿಲ್ಲ. ೧೮೫೯ರ ಸುಮಾರುಗೆ ಅವರ್ಣೀಯ ಸ್ತ್ರೀಯರಿಗೆ ಮೊದಲ ಬಾರಿಗೆ ಕುಪ್ಪಸ ತೊಡುವ ಅವಕಾಶ ನೀಡಲಾಯಿತು.

ಕೆಳಸ್ತರದ ಜನಸಮುದಾಯಕ್ಕೆ ದೇವಾಲಯ ಪ್ರವೇಶ ನಿಷಿದ್ಧವಾಗಿತ್ತು. ದೇವಾಲಯಗಳಿಗೆ ಸೇರಿದ ರಸ್ತೆಯಲ್ಲಿಯೂ ಅಸ್ಪೃಶ್ಯರು ಸಂಚರಿಸುವಂತಿರಲಿಲ್ಲ. ಅವರು ತಮ್ಮ ಕಾಣಿಕೆಗಳನ್ನು ಹೊರಗಿನಿಂದಲೇ ದೇವಾಲಯದ ಎತ್ತರದ ಗೋಡೆ ಹಾರಿ ಒಳಗೆ ಬೀಳುವಂತೆ ಎಸೆಯಬೇಕಾಗಿತ್ತು. ಅದೇ ರೀತಿ ಪ್ರಸಾದವೂ ಒಳಗಿನಿಂದಲೇ ಹೊರಗೆ ಬಂದು ಬೀಳುತ್ತಿತ್ತು.

ಶಾಲೆಗಳಲ್ಲಿ ಅವರ್ಣೀಯರ ಜೊತೆ ಕುಳಿತು ವ್ಯಾಸಂಗ ಮಾಡುವಂತಿರಲಿಲ್ಲ. ಸರ್ಕಾರಿ ಶಾಲೆಗಳಲ್ಲಿಯೂ ಅವರ್ಣಿಯರಿಗೆ, ಮುಖ್ಯವಾಗಿ ಈಳವ, ಪರಮ, ಪುಲಯರಂತಹ ಕೆಳಸ್ತರದ ಜಾತಿಗಳಿಗೆ ಪ್ರವೇಶವಿರಲಿಲ್ಲ. ಈ ಜನರು ಬ್ರಿಟಿಷರ ಆಡಳಿತದ ಮದ್ರಾಸು ಮುಂತಾದ ಕಡೆಗೆ ಹೋಗಿ ವಿದ್ಯೆ ಪಡೆದು ಬಂದರೂ ಸರ್ಕಾರಿ ನೌಕರಿಯಲ್ಲಿ ಸ್ಥಾನದಲ್ಲಿರಲಿಲ್ಲ. ಸರ್ಕಾರ ನೌಕರಿಯಲ್ಲಿ ಸವರ್ಣೀಯ ಏಕಸ್ವಾಮ್ಯವಿತ್ತು. ಜಾತಿ ಆಧಾರಿತ ಶೋಷಣೆಯು ಎಷ್ಟೊಂದು ತೀವ್ರ ಸ್ವರೂಪ ಪಡೆದಿತ್ತೆಂದರೆ ಜಮಾಬಂದಿಯ ಸಮಯದಲ್ಲೂ ಸರ್ಕಾರಿ ಕಚೇರಿಯಲ್ಲಿ ಎಲ್ಲರಂತೆ ತೆರಿಗೆ ಹಣ ಪಾವತಿಸುವಂತಿಲ್ಲ. ಅವರ್ಣೀಯ ಜನರಿಗೆ ಹಣ ಪಾವತಿ ಮಾಡಲು ಒಂದು ನಿಗದಿತ ಸ್ಥಳವನ್ನು ಸೂಚಿಸಲಾಗುತ್ತಿತ್ತು. ಆ ಸ್ಥಳದಲ್ಲಿ ಅವರು ಹಣವನ್ನು ಇಡಬೇಕಾಗಿತ್ತು.

ಇಂತಹ ಒಂದು ಶೋಷಣಾತ್ಮಕ ಸಾಮಾಜಿಕ ಪರಿಸರದಲ್ಲಿ ನಾರಾಯಣ ಗುರುಗಳು ತನ್ನ ಮೌನ ಕ್ರಾಂತಿಯನ್ನು ಪ್ರಾರಂಭಿಸಿದರು.

ನಾರಾಯಣ ಗುರುಗಳ ಜೀವನ

ಶ್ರೀನಾರಾಯಣ ಗುರುಗಳು ತಿರುವನಂತಪುರ ಸಮೀಪದ ಚೆಂಬಳಾಂದಿ ಗ್ರಾಮದಲ್ಲಿ ವಯಲ್‌ವರಂ ಎಂದು ಕರೆಯಲ್ಪಡುತ್ತಿದ್ದ ಕುಟುಂಬದಲ್ಲಿ ೧೮೫೪ರ ಆಗಸ್ಟ್‌೩೦ ರಂದು ಜನಿಸಿದರು. ಬಾಲ್ಯದಲ್ಲಿ ನಾಣು ಎಂದು ಕರೆಯಲ್ಪಡುತ್ತಿದ್ದ ನಾರಾಯಣ ಗುರುಗಳು ಜನ್ಮತಾಳಿದ್ದು ಆ ಕಾಲದಲ್ಲಿ ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟಿದ್ದ ಈಳವ ಜಾತಿಯಲ್ಲಿ. ಅವರ ತಂದೆ ಮಾದನ್‌ ಆಶಾನ್‌, ತಾಯಿ ಕುಟ್ಟಿಯಮ್ಮ.

ಆಶಾನ್‌ ಎಂದರೆ ಅಧ್ಯಾಪಕ ಎಂದರ್ಥ. ನಾಣುವಿಗೆ ಮೊದಲ ಪಾಠ ತಂದೆ ಮಾದನ್‌ ಆಶಾನ್‌ರಿಂದಲೇ ನಡೆಯಿತು. ತಂದೆಯಿಂದ ಮಾತ್ರವಲ್ಲದೇ ಮಾವ ಕೃಷ್ಣನ್ ವೈದ್ಯರಿಂದಲೂ ಮಾರ್ಗದರ್ಶನ ದೊರಕಿತು. ಕೃಷ್ಣನ್‌ ವೈದ್ಯರ್‌ ಈಳವ ಸಮಾಜದಲ್ಲಿ ವಿದ್ವಾಂಸರಾಗಿದ್ದರಲ್ಲದೆ ಆಶಾನ್ ಕೂಡಾ ಆಗಿದ್ದರು. ಸಮಾಜದಲ್ಲಿ ಕೆಳಗೆ ಬಿದ್ದಿರುವ ಈಳವ ಸಮಾಜವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆತ್ತುವ ಉದ್ದೇಶದಿಂದ ಒಬ್ಬ ಸಮಾಜ ಸುಧಾರಕನಂತೆ ಅವರು ದುಡಿಯುತ್ತಿದ್ದರು. ಅವರ ಈ ಗುಣವೇ ಬಾಲಕ ನಾಣುವಿಗೆ ಸ್ಫೂರ್ತಿ ನೀಡಿತು. ತೀವ್ರ ಸುಧಾರಕನ, ಸತ್ಯಶೋಧಕನ ಲಕ್ಷಣ ಮಗುವಿದ್ದಾಗಿನಿಂದಲೇ ನಾಣುವಿನಲ್ಲಿ ಪ್ರಕಟವಾಗಿತ್ತು.

ಮನೆಯಲ್ಲಿ ತನ್ನ ಹಿರಿಯರು ಈಳವರಿಗಿಂತ ಕೆಳಸ್ತರದವರಾದ ಪುಲಯ-ಪರಯರನ್ನು ಮುಟ್ಟಲು ಹೇಸುತ್ತಿದ್ದ ಸನ್ನಿವೇಶವನ್ನು ಬಾಲಕ ನಾಣು ಪ್ರತಿಭಟಿಸತೊಡಗಿದ್ದನು. ಮನುಷ್ಯರೇ ಆಗಿರುವ ಅವರನ್ನು ಮುಟ್ಟುವುದರಿಂದ ಏನೂ ಹಾನಿಯಾಗಲಾರದು ಎಂದು ತೋರಿಸಲೋ ಎಂಬಂತೆ ಹೊಲದಲ್ಲಿ ಕೆಲಸ ಮಾಡುವ ಪುಲಯ ಆಳುಗಳನ್ನು ಬೇಕೆಂದೇ ಮುಟ್ಟಿ ಮತ್ತೆ ತನ್ನ ಮನೆಯವರನ್ನು ಮುಟ್ಟಿ ಭ್ರಷ್ಟಗೊಳಿಸುವನು. ಹೀಗೆ ಬಾಲ್ಯದಿಂದಲೂ ಸಾಮಾಜಿಕ ಸಮಾನತೆಯ ತತ್ವ ಪ್ರತಿಪಾದಕನಾಗಿಯೇ ನಾಣು ಬೆಳೆದನು.

ಬಾಲಕ ನಾಣು ಚೆಂಬಳಾಂದಿಯ ಮೂತಪಿಳ್ಳೈ ಆಶಾನ್‌ದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದನು. ಈ ಮೊದಲೇ ಮಲಯಾಳದಲ್ಲಿ ಚೆನ್ನಾಗಿ ಓದುವುದನ್ನೂ ಬರೆಯುವುದನ್ನೂ ಕಲಿತಿದ್ದ ನಾಣು ಸಂಸ್ಕೃತ ವ್ಯಾಕರಣವನ್ನೂ, ನಂತರ ಭಾಷಾಸಾಹಿತ್ಯವಾದ ಸಿದ್ಧರೂಪ, ಬಾಲಪ್ರಭೋದ ಹಾಗೂ ಅಮರಕೋಶವನ್ನು ಕಲಿತನು. ಮಲಯಾಳ ಸಂಸ್ಕೃತಗಳಲ್ಲದೆ ತಮಿಳನ್ನೂ ಅಭ್ಯಾಸ ಮಾಡಿದನು. ಮುಂದೆ ಕುರುನಾಗಪಲ್ಲಿ ಆಶಾನ್‌, ಕೇಶವನ್‌ ವೈದ್ಯರ್‌ ಹಾಗೂ ಕುಂಜನ್ ಪಿಳ್ಳೈ ಚಟ್ಟಾಂಬಿಯವರಲ್ಲಿ ಶಿಕ್ಷಣ ಪಡೆದು ನಾರಾಯಣ ಗುರುಗಳಾದರು. ನಂತರದ ಸುಮಾರು ನಾಲ್ಕು ದಶಕಗಳಲ್ಲಿ ಕೇರಳ ಸಮಾಜದಲ್ಲಿ ಅವರು ಹುಟ್ಟುಹಾಕಿದ ಕ್ರಾಂತಿಕಾರಿ ಬದಲಾವಣೆಗಳು ಸ್ಮರಣಾರ್ಹವಾಗಿವೆ. ನಾರಾಯಣ ಗುರು ವ್ಯವಸ್ಥಿತವಾದ ಚಿಂತನ ಕ್ರಮವೊಂದನ್ನು ರೂಪಿಸಿ ಸಾಮಾಜಿಕ ಪರಿವರ್ತನೆಯ ನಿಟ್ಟಿನಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ಇಳಿಸಿದರು. ಕಟ್ಟುಪಾಡುಗಳಿಂದ ಕೂಡಿದ ಹಾಗೂ ಜಾತಿಯನ್ನು ಪೋಷಿಸಿಕೊಂಡು ಬಂದ ವೈದಿಕ ಧರ್ಮವನ್ನು ಸಮಕಾಲೀನ ಸಂದರ್ಭದ ಅವಶ್ಯಕತೆಗಳಿಗೆ ತಕ್ಕಂತೆ ಮಾರ್ಪಡಿಸುವ ಹಾಗೂ ಜನರು ಸಮಾಜದಲ್ಲಿ ಸಮಾನರಾಗಿ ಬದುಕುವಂತೆ ಮಾಡುವ ನಿಟ್ಟಿನಲ್ಲಿ ನಾರಾಯಣ ಗುರುಗಳ ಚಿಂತನೆಗಳು ರೂಪುಗೊಂಡವು. ನಾರಾಯಣ ಗುರುಗಳು ಹುಟ್ಟುಹಾಕಿದ ಚಳವಳಿಯನ್ನು ಆಶಾನ್‌ ಚಳವಳಿ ಎಂಬುದಾಗಿಯೂ ಕರೆಯಲಾಗಿದೆ.

ಚಿಂತನೆಗಳು

ನಾರಾಯಣ ಗುರು ಅವರ ಚಿಂತನೆ ಹಾಗೂ ಚಳವಳಿಯನ್ನು ಈ ಕೆಳಗೆ ಚರ್ಚಿಸಲಾಗಿದೆ. “ಜಾತಿರಹಿತ ಸಮಾಜದ ಕಲ್ಪನೆ: ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು” ನಾರಾಯಣ ಗುರು ಬಾಲ್ಯದಿಂದಲೂ ಜಾತಿರಹಿತ ಸಮಾಜ ನಿರ್ಮಾಣದ ಕನಸನ್ನು ಕಂಡವರು. ಹಾಗಾಗಿ ಅವರ ಹೋರಾಟ ಮತ್ತು ಚಿಂತನೆಗಳಲ್ಲಿ ಜಾತಿ ಪದ್ಧತಿಯ ವಿರುದ್ಧ ಸಮರವೇ ಪ್ರಧಾನವಾಗಿದೆ. ಅಸ್ಪೃಶ್ಯತೆಯ ನಿರ್ಮೂಲನೆಯಾಗದ ಹೊರತು ಆಧುನಿಕ ಬದುಕು ಅಸಾಧ್ಯವೆನ್ನುವ ವಿಚಾರ ನಾರಾಯಣ ಗುರುಗಳಿಗೆ ಮನದಟ್ಟಾಗಿತ್ತು. ಜಾತಿ ವ್ಯವಸ್ಥೆಯ ಕರಾಳ ಮುಖವನ್ನು ಸ್ವತಃ ನಾರಾಯಣ ಗುರುಗಳೇ ಅನುಭವಿಸಿದ್ದರು. ಉಚ್ಚ ಜಾತಿಯ ಗುರುಗಳೊಂದಿಗೆ ಶಿಕ್ಷಣ ಪಡೆಯುವಾಗ ಅವರ ಮನೆಯಲ್ಲೆ ತಂಗಿ ಅಭ್ಯಾಸ ಮಾಡುವ ಅವಕಾಶ ಈಳವ ಜಾತಿಯಲ್ಲಿ ಜನಿಸಿದ ನಾಣುಗೆ ಇರಲಿಲ್ಲ. ಈ ಅನುಭವಗಳಿಂದ ಬೇಸತ್ತ ನಾರಾಯಣ ಗುರು ಜಾತಿವ್ಯವಸ್ಥೆಯ ವಿರುದ್ಧವೇ ಸೆಟೆದು ನಿಂತರು. ಒಂದೆಡೆ ಉಚ್ಚ ಜಾತಿಗಳ ಪೊಳ್ಳು ಜಂಬ, ಇನ್ನೊಂದೆಡೆ ಹಿಂದುಳಿದವರು, ಅಸ್ಪೃಶ್ಯರಲ್ಲಿ ಬೇರೂರಿರುವ ಕೀಳರಿಮೆ ಎರಡನ್ನೂ ಏಕಕಾಲದಲ್ಲಿ ಎದುರಿಸುವ ಪ್ರಯತ್ನವನ್ನು ನಾರಾಯಣ ಸ್ವಾಮಿಗಳು ನಡೆಸದಿರು. ಈ ಸಂದರ್ಭದಲ್ಲಿ ನಾರಾಯಣ ಗುರುಗಳು ಪ್ರತಿಪಾದಿಸಿದ ಸಿದ್ಧಾಂತವೇ “ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು”.

ನಾರಾಯಣ ಗುರುಗಳ ವಿಚಾರಧಾರೆಗಳು ಭಗವದ್ಗೀತೆ, ಉಪನಿಷತ್ತುಗಳ ಸಾರವನ್ನು ಒಳಗೊಂಡಿವೆ. ಜಾತಿ ಮತಗಳ ತಾರತಮ್ಯವನ್ನು ನಿರಾಕರಿಸುತ್ತಾ ಸ್ವಾಮಿ ನೀಡಿದ ಸಂದೇಶವು ಈ ಕೆಳಗಿನಂತಿದೆ:

“ಎಲ್ಲ ಧರ್ಮಗಳ ಗುರಿಯೂ ಒಂದೇ, ಸಾಗರವನ್ನು ಸೇರುವ ಎಲ್ಲ ನದಿಗಳು ತಮ್ಮ ಭಿನ್ನತೆಯನ್ನು ಮರೆಯುವಂತೆ ಸಕಲ ಧರ್ಮಗಳು ಅಂತಿಮ ಧ್ಯೇಯದಲ್ಲಿ ತಮ್ಮ ವಿಭಿನ್ನತೆಯನ್ನು ಕಳೆದುಕೊಳ್ಳುತ್ತವೆ. ಧರ್ಮಗಳು ಮಾನವನ ಜ್ಞಾನದ ಬೆಳವಣಿಗೆಯಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಉದ್ದೇಶವನ್ನು ಹೊಂದಿವೆ. ಒಮ್ಮೆ ಮಾನವ ಆ ಎತ್ತರವನ್ನು ಮುಟ್ಟಿದ ಮೇಲೆ ಅವನು ತನ್ನದೇ ಆದ ಮೋಕ್ಷದ ಹಾದಿಯನ್ನು ಕಂಡುಕೊಳ್ಳುತ್ತಾನೆ. ಬಾಳಿನ ಅಂತಿಮ ಸತ್ಯವನ್ನು ಕಂಡುಕೊಂಡವನಿಗೆ ಧರ್ಮದ ಸಹಾಯ ಬೇಕೆನಿಸುವುದಿಲ್ಲ. ಏಕೆಂದರೆ ಧರ್ಮದ ಮೂ ಅವನೇ ಆಗಿಬಿಡುತ್ತಾನೆ. ಬುದ್ಧ, ಕ್ರೈಸ್ತರು ಧಾರ್ಮಿಕ ಅನುಷ್ಠಾನಗಳಿಂದ ಮಹಾತ್ಮರಾಗಲಿಲ್ಲ. ಜ್ಞಾನೋದಯದ ಮುಖಾಂತರ ಅವರು ದೇವರಾದರು. ಅವರೆಲ್ಲರೂ ಒಂದೇ ಧರ್ಮಕ್ಕೆ ಸೇರಿದವರು ಅದೇ ಮಾನವ ಧರ್ಮ” ಜಾತಿ ವ್ಯವಸ್ಥೆಯನ್ನು ತಿರಸ್ಕರಿಸಿದ ಸ್ವಾಮಿ ‘ಜಾತಿ ಮಿಮಾಂಸ’ ಎನ್ನುವ ಕೃತಿಯನ್ನು ರಚಿಸಿದರು.

ಈ ಸಂದೇಶವು ಕೇರಳದ ಸಮಾಜದಲ್ಲಿ, ಅದರಲ್ಲಿಯೂ ಪ್ರಮುಖವಾಗಿ ಈಳವರಲ್ಲಿ ಜಾಗೃತಿಯನ್ನುಂಟುಮಾಡಿತು. ಈಳವರಲ್ಲಿ ಪರಂಪರೆಯಿಂದ ಬಂದ ಕೀಳರಿಮೆಯನ್ನು ತೊಡೆಯುವ ಪ್ರಯತ್ನ ನಡೆಯಿತು. ಈಳವರಲ್ಲಿಯೇ ತೀಯ, ಕೋವನ್‌, ತಾಂಡನ್‌ಮುಂತಾದ ಉಪಜಾತಿಗಳ ನಡುವೆ ವಿವಾಹಕ್ಕೆ ನಿರ್ಬಂಧನೆ ಇತ್ತು. ಶ್ರೀನಾರಾಯಣ ಗುರುಗಳ ಸಂದೇಶ ಅವರನ್ನು ಒಂದೇ ಸಮುದಾಯಕ್ಕೆ ಒಳಪಡಿಸಿತು. ಈಳವರ ದೇವಾಲಯಗಳಿಗೆ ಎಲ್ಲ ಜಾತಿ ಜನರು ಪ್ರವೇಶಿಸುವ ಅವಕಾಶ ನೀಡಲಾಯಿತು.

ಶ್ರೀ ನಾರಾಯಣ ಗುರುಗಳು ತಾವು ಸ್ಥಾಪಿಸಿದ ಆಶ್ರಯ ಮತ್ತು ಗುರುಕುಲಗಳಿಗೂ ಕೂಡಾ ಪುಲಯ, ಪರಯರಂಥ ಅಸ್ಪೃಶ್ಯರಿಗೂ ಪ್ರವಶ ನೀಡಿದರು, ಮಾತ್ರವಲ್ಲ ಪುಲಯ ಅಡಿಗೆ ಕೆಲಸಕ್ಕಾಗಿ ನೇಮಿಸಿ ಸಾಮಾಜಿಕ ಕ್ರಾಂತಿಯನ್ನೇ ನಡೆಸಿದರು.

ಇದೇ ಸಮಯದಲ್ಲಿ ಆರ್ಯ ಸಮಾಜ, ಬ್ರಹ್ಮಸಮಾಜ, ಶ್ರೀ ರಾಮಕೃಷ್ಣ ಮಿಷನ್‌ ಮುಂತಾದ ಸುಧಾರಣಾವಾದಿ ಸಂಘಟನೆಗಳಿಂದ ಪ್ರಾರಂಭಗೊಂಡ ಸುಧಾರಣೆಯ ಗಾಳಿ ಕೇರಳದಲ್ಲಿಯೂ ಬೀಳಲಾರಂಭಿಸಿತು. ಈ ಸುಧಾರಣೆಯ ಗಾಳಿ ನಾರಾಯಣ ಗುರು ನೀಡಿದ “ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು” ಸಿದ್ಧಾಂತಕ್ಕೆ ಸಮರ್ಥನೆ ಒದಗಿಸಿತು. ಹಾಗಾಗಿ ಈ ಸಂದೇಶವು ಕೇರಳದ ಈಳವ ಸಮಾಜ ಹಾಗೂ ಅಸ್ಪೃಶ್ಯರಲ್ಲಿ ಮಾತ್ರವಲ್ಲದೆ ಮೇಲ್ಜಾತಿಗಳಲ್ಲೂ ಬದಲಾವಣೆಯನ್ನು ಹುಟ್ಟುಹಾಕಿತು. ಸಾಮಾಜಿಕವಾಗಿ ಶತಮಾನಗಳಿಂದ ಶೋಷಿತರಾದ ಪುಲಯ, ಪರಯರಂತೂ ಮೇಲ್ಜಾತಿ ಜನರ ಮುಂದೆ ಎದೆಸೆಟೆದು ನಿಲ್ಲುವಂತಾಯಿತು.

ಸಂಸ್ಕೃತಾನುಕರಣ ಹಾಗೂ ದೇಗುಲ ಸ್ಥಾಪನಾ ಚಳವಳಿ

ತನ್ನ ತತ್ವ ಸಿದ್ಧಾಂತವನ್ನು ಅನುಷ್ಠಾನಗೊಳಿಸುವುದಕ್ಕಾಗಿ ಶ್ರೀ ನಾರಾಯಣ ಗುರು ಅನುಸರಿಸಿದ ಮಾರ್ಗವನ್ನು ವಿದ್ವಾಂಸರು ‘ಸಂಸ್ಕೃತಾನುಕರಣ ಪ್ರಕ್ರಿಯೆ’ ಎಂದು ವ್ಯಾಖ್ಯಾನಿಸುತ್ತಾರೆ. ಸಂಸ್ಕೃತಾನುಕರಣವೆಂದರೆ ಅಸ್ಪೃಶ್ಯತೆ ಅಥವಾ ಇತರ ಹಿಂದುಳಿದ ಜಾತಿಗಳು ಮೇಲ್ಜಾತಿಯ, ಅದರಲ್ಲೂ ಮುಖ್ಯವಾಗಿ ದ್ವಿಜರ ರೀತಿ ನೀತಿಗಳನ್ನು ಅನುಸರಿಸುವ ಪ್ರಕ್ರಿಯೆ.

ಶ್ರೀ ನಾರಾಯಣ ಗುರು ತನ್ನ ಅನುಯಾಯಿಗಳಿಗೆ ಅವರ ಪಾರಂಪರಿಕ ಸಂಪ್ರದಾಯ ಹಾಗೂ ಆಚರಣೆಗಳನ್ನು ಕೈಬಿಡುವಂತೆ ಪ್ರೇರೇಪಿಸತೊಡಗಿದರು. ಮುಖ್ಯವಾಗಿ ಕೆಳಸ್ತರದ ಜನತೆ ತಮ್ಮ ಜಾತಿ ಬುಡಕಟ್ಟುಗಳಿಗೆ ಅಂಟಿಕೊಂಡಿರುವ ಜಾಡ್ಯಗಳನ್ನು ತೊರೆಯಬೇಕೆನ್ನುವುದು ಗುರುಗಳ ಆಶಯವಾಗಿತ್ತು. ಒಂದು ಸುಧಾರಣಾ ಕ್ರಮವಾಗಿ ಹಿಂದುಳಿದವರು ತಮ್ಮ ಪಾರಂಪರಿಕ ದೈವ-ಭೂಗಳ ಆರಾಧನೆಯನ್ನು ತೊಡೆದು ಬ್ರಾಹ್ಮಣರಂತೆ ಆರ್ಯ ದೇವತೆಗಳ ಆರಾಧನೆ ನಡೆಸುವಂತೆ ಕರೆ ನೀಡಿದರು. ಮದ್ಯಪಾನ ಮಾಡುವುದು, ಪ್ರಾಣಿಬಲಿ ನೀಡುವುದು ಮುಂತಾದವುಗಳನ್ನು ಒಳಗೊಂಡ ಪೂಜಾಕ್ರಮವನ್ನು ಅವರು ವಿರೋಧಿಸಿದರು. ಇವೆಲ್ಲ ಕಲುಷಿತ ವಿಧಾನಗಳು ಹಾಗೂ ಈ ವಿಧಾನಗಳನ್ನು ತಕ್ಷಣ ನಿಲ್ಲಿಸಬೇಕೆಂದೂ ಅವರು ಕರೆ ನೀಡಿದರು. ಸೌಮ್ಯ ಸ್ವಭಾವವುಳ್ಳ ದೇವರ ಸ್ಥಾಪನೆ ಹಾಗೂ ಅರ್ಚನೆಯಿಂದ ಈಳವ ಹಾಗೂ ಇತರ ಕೆಳಜಾತಿಯ ಜನತೆಯನ್ನು ನಾಗರಿಕತೆಯ ಪ್ರಧಾನವಾಹಿನಿಗೆ ತರುವ ಪ್ರಯತ್ನವನ್ನು ಗುರುಗಳು ಮಾಡಿದರು.

ಧಾರ್ಮಿಕ ಕ್ಷೇತ್ರದಲ್ಲಿ ಇರುವ ಹಿಡಿತದಿಂದಾಗಿ ಮೇಲ್ವರ್ಗದ ಜನರು ಕೆಳಸ್ತರದ ಜನರನ್ನು ನಿಯಂತ್ರಿಸುತ್ತಿರುವ ಅಂಶ ನಾರಾಯಣ ಗುರುವಿಗೆ ಮನದಟ್ಟಾಗಿತ್ತು. ಹಾಗಾಗಿ ಕೆಳಜಾತಿಯ ಜನರು ಧಾರ್ಮಿಕವಾಗಿ ಪರ್ಯಾಯ ಸಂಸ್ಥೆಗಳನ್ನು ಸ್ಥಾಪಿಸಬೇಕೆನ್ನುವುದು ಅವರ ವಾದವಾಗಿತ್ತು. ಈ ಸಿದ್ಧಾಂತದ ಅಂಗವಾಗಿ ನಾರಾಯಣ ಗುರು ಪ್ರಾರಂಭಿಸಿದ ಚಳವಳಿಯೇ ದೇಗುಲ ಸ್ಥಾಪನಾ ಚಳವಳಿ. ಪ್ರಥಮವಾಗಿ ೧೮೮೮ರ ಫೆಬ್ರವರಿ ತಿಂಗಳಿನಲ್ಲಿ ಶಿವರಾತ್ರಿಯೆಂದು ಅರವಿಪ್ಪುರಂನಲ್ಲಿ ಒಂದು ಶಿವಾಲಯವನ್ನು ಸ್ಥಾಪಿಸಿದರು.

ನಾರಾಯಣ ಗುರು ಅರವಿಪ್ಪುರಂನಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದ ಸಂಗತಿಯು ಕೇರಳದಾದ್ಯಂತ ಪ್ರಚಾರ ಪಡೆಯಿತು. ಅನಾಗರಿಕ ಸಂಪ್ರದಾಯಗಳಿಂದಾಗಿ ವಿವೇಕಾನಂದರಿಂದ ಹುಚ್ಚರ ಸಂತೆಯೆಂದು ಕರೆಸಿಕೊಂಡಿದ್ದ ಕೇರಳದಲ್ಲಿ ವಿದ್ಯುತ್‌ ಸಂಚಾರವಾಯಿತು. ಈ ಬೆಳವಣಿಗೆಯಿಂದಾಗಿ ಉನ್ನತ ವರ್ಗದ ನಂಬೂದಿರಿ ನಾಯರ್‌ಸಮಾಜದ ಮುಂದಾಳುಗಳೂ ಚಿಂತನೆಗೊಳಗಾಗಿ ಸಮಾಜ ಸುಧಾರಣೆಯತ್ತ ಆಲೋಚಿಸುವಂತಾಯಿತು. ತಲತಲಾಂತರದಿಂದ ಅನುಸರಿಸಿಕೊಂಡು ಬಂದಿದ್ದ ಅನಿಷ್ಟ ಪದ್ಧತಿಗಳು ಕೆಲಮಟ್ಟಿಗೆ ಸಡಿಲಗೊಳ್ಳಲ್ಪಟ್ಟವು. ೧೯೦೪ರಲ್ಲಿ ವರ್ಕಳದಲ್ಲೂ ಶಿವಗಿರಿ ಮಠವನ್ನು ಸ್ಥಾಪಿಸಿದ ಸ್ವಾಮೀಯವರು ೧೯೧೨ರಲ್ಲಿ ಶಿವಗಿರಿಯಲ್ಲಿ ಇನ್ನೊಂದು ದೇಗುಲವನ್ನು ಸ್ಥಾಪಿಸಿದರು. ೧೯೦೭ರಲ್ಲಿ ಪಾಲ್ಗಾಟ್‌ನಲ್ಲಿ ಇನ್ನೊಂದು ದೇಗುಲ ಸ್ಥಾಪಿಸಿದರು.

ಈ ದೇಗುಲ ಸ್ಥಾಪನೆ ಚಳವಳಿಯಿಂದಾಗಿ ಮೇಲ್ಜಾತಿ ಜನರ ಟೀಕೆಗಳಿಗೂ ನಾರಾಯಣ ಗುರು ಉತ್ತರಿಸಬೇಕಾಯಿತು. ಒಮ್ಮೆ ಒಬ್ಬ ಯುವ ನಂಬೂದಿರಿ ಯುವಕನು ನಾರಾಯಣ ಗುರುಗಳನ್ನು “ಈಲವರಾಗಿ ಶಿವಮೂರ್ತಿಯನ್ನು ಪ್ರತಿಷ್ಠಾಪಿಸಲು ನಿಮಗೇನು ಅರ್ಹತೆ ಇದೆ” ಎಂದು ಪ್ರಶ್ನಿಸಿದನು. ಅದಕ್ಕೆ ಗುರುಗಳು “ನಾನು ಪ್ರತಿಷ್ಠಾಪಿಸಿದ್ದು ನಿಮ್ಮ ಶಿವನನ್ನಲ್ಲ. ಈಳವ ಶಿವನನ್ನು” ಎಂದು ಉತ್ತರಿಸಿದರು.

ನಾರಾಯಣ ಗುರುಗಳು ಸ್ಥಾಪಿಸಿದ ದೇಗುಲಗಳ ವೈಶಿಷ್ಟ್ಯತೆ

ಅವರ ದೇಗುಲ ಸ್ಥಾಪನಾ ಚಳವಳಿಯಲ್ಲಿ ಅತ್ಯಂತ ‌ಪ್ರಸಿದ್ಧವಾದುದೆಂದರೆ ೧೯೧೨ರಲ್ಲಿ ವರ್ಕಳದಲ್ಲಿ ಸ್ಥಾಪಿಸಲ್ಪಟ್ಟ ಶಾರದೆಯ ಮಠ. ಶಾರದ ಮಠವು ಕೇವಲ ಪೂಜಾಕೇಂದ್ರವಾಗಿರದೆ ಜ್ಞಾನಕೇಂದ್ರವಾಗಿರಬೇಕೆಂದು ಗುರುಗಳು ಬಯಸಿದರು. ನಂತರ ಆಳ್ವಾಯಿಯಲ್ಲಿ ಅದ್ವೈತ ಆಶ್ರಯವನ್ನು ಸ್ಥಾಪಿಸಿದರು. ಅಲ್ಲಿ ದೇವಾಲಯವಿರಲಿಲ್ಲ. ಮೂರ್ತಿಯೂ ಇರಲಿಲ್ಲ. ಅದೊಂದು ಪ್ರಾರ್ಥನಾ ಕೇಂದ್ರವಾಗಿತ್ತು. ಅಲ್ಲಿ ಹಿಂದೂ ಮುಸ್ಲಿಮ್‌ಕ್ರೈಸ್ತ ಜನಾಂಗಕ್ಕೆ ಸೇರಿದ ಜನರು ಯಾವುದೇ ನಿರ್ಬಂಧವಿಲ್ಲದೆ ಪ್ರಾರ್ಥನೆ ಸಲ್ಲಿಸಬಹುದಾಗಿತ್ತು. ಹಾಗಾಗಿ ನಾರಾಯಣ ಗುರುಗಳ ದೇಗುಲಗಳು ಪಾರಂಪರಿಕ ದೇಗುಲಗಳಿಂದ ಭಿನ್ನವಾಗಿದ್ದವು. ಸಾಂಪ್ರದಾಯಿಕ ದೇಗುಲಗಳಲ್ಲಿ ಆಚಾರಗಳಿಗೆ ಪ್ರಾಧಾನ್ಯತೆ ಇದ್ದರೆ, ಗುರುಗಳು ಸ್ಥಾಪಿಸಿದ ದೇಗುಲಗಳಲ್ಲಿ ಅಲೌಕಿಕ ಚಿಂತನೆಗಳಿಗೆ ಪ್ರಾಧಾನ್ಯತೆ ಇತ್ತು.

ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ದೇಗುಲಗಳ ಇನ್ನೊಂದು ವೈಶಿಷ್ಟ್ಯತೆಯೆಂದರೆ ಉತ್ಸವಗಳಿಗೆ ಅನಗತ್ಯ ವೆಚ್ಚ ಮಾಡುವ ಪದ್ಧತಿ ಇಲ್ಲ. ಆ ಹಣವನ್ನು ರಚನಾತ್ಮಕ ಕೆಲಸಗಳಿಗೆ ಬಳಸಲಾಗುತ್ತಿತ್ತು. ವಿಶಾಲವಾದ ಪ್ರಾರ್ಥನಾ ಗೃಹಗಳು, ಸುಂದರ ಹೂದೋಟಗಳು, ಸುಸಜ್ಜಿತ ಗ್ರಂಥಾಲಯಗಳು, ಶಾಲೆಗಳು, ವಿದ್ಯಾರ್ಥಿ ವಸತಿಗೃಹಗಳು ದೇವಸ್ಥಾನಗಳಿಗೆ ಹೊಂದಿಕೊಂಡಿದ್ದವು. ಧಾರ್ಮಿಕ ಗ್ರಂಥಾಲಯವು ಪ್ರತಿ ದೇವಸ್ಥಾನದಲ್ಲಿಯೂ ಕಡ್ಡಾಯವಾಗಿ ಇರುತ್ತಿತ್ತು.

ಗುರುಗಳು ಸ್ಥಾಪಿಸಿದ ದೇವಾಲಯಗಳಲ್ಲಿ ಅರ್ಚಕರು ಕೆಳಜಾತಿಗಳಿಂದ, ಮುಖ್ಯವಾಗಿ ಈಳವ ಜನಾಂಗದವರಾಗಿದ್ದರು. ಈ ಅರ್ಚಕರ ವರ್ಗದವರು ಸುಮಾರು ಒಂಬತ್ತು ವರ್ಷಗಳ ಕಾಲ ಮಂತ್ರ, ತಂತ್ರ, ಶಾಸ್ತ್ರ, ವೇದ, ಉಪನಿಷತ್ತು ಮತ್ತು ಆಧ್ಯಾತ್ಮದಲ್ಲಿ ವ್ಯಾಸಂಗ ನಡೆಸಿ ಅರ್ಹತೆ ಗಳಿಸಿಕೊಳ್ಳಬೇಕಾಗಿತ್ತು. ಬ್ರಾಹ್ಮಣೇತರ ಜಾತಿಗಳ ಆರ್ಚಕರನ್ನು ಒಂದು ದೊಡ್ಡ ಕ್ರಾಂತಿಯಾಗಿದೆ.

ನಾರಾಯಣ ಗುರುಗಳು ಒಂದಾದ ಮೇಲೊಂದರಂತೆ ದೇಗುಲಗಳನ್ನು ಸ್ಥಾಪಿಸಿದರು. ಕೇರಳದಲ್ಲಿ ಮಾತ್ರವಲ್ಲದೆ ತಮಿಳುನಾಡು, ಕರ್ನಾಟಕ, ಶ್ರೀಲಂಕಾ ಸೇರಿದಂತೆ ಹಲವು ರಾಜ್ಯಗಳಲ್ಲಿ ನಾರಾಯಣ ಗುರುಗಳು ಸುಮಾರು ಮೂವತ್ತು ದೇಗುಲಗಳನ್ನು ಸ್ಥಾಪಿಸಿದರು. ಉಹಾಹರಣೆಗೆ ಕರ್ನಾಟಕದ ಮಂಗಳೂರಿನಲ್ಲಿ ನಾರಾಯಣ ಗುರು ೧೯೧೨ರಲ್ಲಿ ಉದ್ಘಾಟಿಸಿದ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವು ಇಂದು ರಾಷ್ಟ್ರಮಟ್ಟದಲ್ಲೇ ಪ್ರಸಿದ್ಧಿ ಗಳಿಸಿದೆ. ಈ ಎಲ್ಲ ದೇಗುಗಳಲ್ಲಿ ಅರ್ಚಕರು, ಸನ್ಯಾಸಿಗಳು, ಶಿಷ್ಯರು ಸಕ್ರಿಯರಾಗಿದ್ದು ಗುರು ಪರಂಪರೆಯ ಎಲ್ಲ ಕ್ರಮಗಳನ್ನು ಅನುಸರಿಸಲಾಗುತ್ತದೆ. ಈ ದೇವಾಲಯಗಳು ಎಲ್ಲ ಜನರಿಗೆ ಮುಕ್ತವಾಗಿದ್ದರೂ ಅವುಗಳ ಭಕ್ತವೃಂದದಲ್ಲಿ ಪ್ರಧಾನವಾಗಿ ಈಳವ ಜಾತಿಬಾಂಧವರಿದ್ದಾರೆ.