ಸಮಾಜ ಎದುರಿಸಿದ ಸಂಘಟನಾತ್ಮಕ ಸಮಸ್ಯೆಗಳು

ಎಲ್ಲ ಸಾಮಾಜಿಕ ಸಂಘಟನೆಗಳಂತೆಯೇ ಸತ್ಯಶೋಧಕ ಸಮಾಜವೂ ಮುಂದಿನ ದಿನಗಳಲ್ಲಿ ಕೆಲವು ರೀತಿಯ ಸಂಘಟನಾತ್ಮಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಉದಾಹರಣೆಗೆ, ಲೋಖಂಡೆಯವರು ಮುಂಬೈಯಲ್ಲಿ ಪ್ರಥಮವಾಗಿ ಶೋಷಿತ ಕೈಗಾರಿಕಾ ನೌಕರರನ್ನು ಸಂಘಟಿಸುವಾಗ ಫುಲೆಯವರಿಂದ ಭಿನ್ನವಾದ ನಿಲುವುಗಳನ್ನು ವ್ಯಕ್ತಪಡಿಸಿದ್ದರು. ಪ್ರಾರಂಭದಿಂದಲೂ ಫುಲೆಯವರ ಸಹವರ್ತಿಯಾಗಿದ್ದು ‘ದೀನಬಂಧು’ ಪತ್ರಿಕೆಯ ಸಂಪಾದಕರಾಗಿದ್ದ ಭಾಲೇಕರ್‌ ಅವರು ಕೂಡಾ ಪತ್ರಿಕೆಯ ಆಡಳಿತ ವೈಖರಿ ಹಾಗೂ ಫುಲೆಯವರ ಅಧಿಕಾರದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಪರಿಣಾಮವಾಗಿ ೧೮೮೪ರಲ್ಲಿ ಅವರು ಸತ್ಯಶೋಧಕ ಸಮಾಜ ತೊರೆದು ‘ದೀನಬಂಧು ಸಾರ್ವಜನಿಕ ಸಭಾ’ ಹೆಸರಿನ ಪರ್ಯಾಯ ಸಂಸ್ಥೆಯೊಂದನ್ನು ಸ್ಥಾಪಿಸಿದರು.

ಫುಲೆಯವರ ಜೀವಿತಾವಧಿಯಲ್ಲಿಯೇ ಸತ್ಯಶೋಧಕ ಸಮಾಜ ಬಹಳ ಕಂಟಕಗಳನ್ನು ಎದುರಿಸಬೇಕಾಯಿತು. ಇದರೊಂದಿಗೆ ಸಮಾಜವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ೧೮೯೦ರಲ್ಲಿ ಫುಲೆಯವರು ಮರಣ ಹೊಂದುವಾಗ ಆರ್ಥಿಕ ಸಮಸ್ಯೆ ಬಹುವಾಗಿ ಅವರನ್ನು ಕಾಡುತ್ತಿತ್ತು.

ಉಪಸಂಹಾರ

ಫುಲೆಯವರು ಭಾರತದಲ್ಲಿ ಹಿಂದುಳಿದ ವರ್ಗಗಳ ಚಳವಳಿಯನ್ನು ಹುಟ್ಟುಹಾಕಿದವರಲ್ಲಿ ಮೊದಲಿಗರು. ನಂತರದ ದಿನಗಳ್ಲಲಿ ಈ ಚಳವಳಿಯು ಭಾರತದ ಇತರ ಕಡೆಗಳಲ್ಲಿ ನಡೆದ ಬ್ರಾಹ್ಮಣೇತರ ಚಳವಳಿಗೆ ಸ್ಫೂರ್ತಿ ನೀಡಿತು. ಫುಲೆಯವರು ಮನ್ನಡೆಸಿದ ಹೋರಾಟವು ಕೇವಲ ರಾಜಕೀಯ ಸ್ಥಾನಮಾನಕ್ಕಾಗಿ ನಡೆಸಿದ ಹೋರಾಟವಾಗಿರಲಿಲ್ಲ. ಅವರು ಪ್ರಾರಂಭಿಸಿದ ಸತ್ಯಶೋಧಕ ಚಳವಳಿಯು ಪ್ರಬಲವಾದ ಸಾಂಸ್ಕೃತಿಕ ಆಯಾಮವನ್ನು ಹೊಂದಿತ್ತು. ಹಾಗಾಗಿ ನಂತರದ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಸತ್ಯಶೋಧಕ ಚಳವಳಿಯು ಒಂದು ಕಡೆಯಿಂದ ಬ್ರಾಹ್ಮಣೇತರ ಚಳವಳಿಗೂ ಇನ್ನೊಂದು ಕಡೆಯಲ್ಲಿ ದಲಿತ ಚಳವಳಿಗೂ ತಾತ್ವಿಕ ನೆಲೆಗಟ್ಟನ್ನು ಒದಗಿಸಿತು.

ಪೆರಿಯಾರ್ಮತ್ತು ದ್ರಾವಿಡ ಚಳವಳಿ

ಸುಮಾರು ಐದು ಸಾವಿರ ವರ್ಷದ ಸಾಂಸ್ಕೃತಿಕ ಇತಿಹಾಸ ಇರುವ ಭಾರತೀಯ ಉಪಖಂಡದಲ್ಲಿ ಉತ್ತರ ಭಾಗವನ್ನು ಆರ್ಯ ಪ್ರವೇಶವೆಂದೂ ದಕ್ಷಿಣ ಭಾರತದ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಮುಂತಾದ ಪ್ರದೇಶಗಳನ್ನು ದ್ರಾವಿಡ ಪ್ರದೇಶವೆಂದು ಸಾಮಾನ್ಯವಾಗಿ ಗುರುತಿಸಲಾಗುತ್ತದೆ. ಈ ಪ್ರಭೇದಗಳು ಕೇವಲ ಇತಿಹಾಸಕಾರರ ಸೃಷ್ಟಿ ಎನ್ನುವ ವಾದವಿದ್ದರೂ, ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ತಮಿಳುನಾಡಿನಲ್ಲಿ ಪ್ರಬಲಗೊಂಡ ‘ದ್ರಾವಿಡ ಚಳವಳಿಯ’ಯು ಈ ಸಿದ್ಧಾಂತವನ್ನೇ ಆಧರಿಸಿದೆ. ಸುಮಾರು ಕ್ರಿ. ಪೂ. ೩೦೦೦ ಇಸ್ವಿಯ ಕಾಲಕ್ಕೆ ಉತ್ತರ ಭಾರತಕ್ಕೆ ಆರ್ಯ ಜನಾಂಗದ ಪ್ರವೇಶವಾದೊಡನೆ ದ್ರಾವಿಡರು ದಕ್ಷಿಣಕ್ಕೆ ಚಲಿಸಿ ಈ ಭಾಗದ ಆದಿವಾಸಿಗಳೊಂದಿಗೆ ಬೆರೆತು ಬದುಕಲಾರಂಭಿಸಿದರು ಹಾಗೂ ಕ್ರಿ. ಪೂ. ೧೦೦೦ ದ ಸಮಯದಲ್ಲಿ ಆರ್ಯರು ತಮ್ಮ ನೆಲೆ ವಿಸ್ತರಿಸಿಕೊಂಡು ದ್ರಾವಿಡ ಜನರೊಂದಿಗೆ ಬೆರೆತು ಬದುಕಲಾರಂಭಿಸಿದರು ಎಂದು ತಿಳಿಯಲಾಗಿದೆ. ತಮಿಳು ರಾಜಮನೆತನದವರು ಆರ್ಯ ಪುರೋಹಿತರನ್ನು ದಕ್ಷಿಣಕ್ಕೆ ಬರಮಾಡಿಕೊಂಡರು ಎನ್ನುವ ಇನ್ನೊಂದು ಪ್ರಬಲವಾದ ವಾದವಿದೆ.

ಶ್ರೇಣೀಕೃತ ಸಮಾಜದ ರಚನೆ

ಕಾಲ ಕ್ರಮೇಣ ಈ ಪ್ರದೇಶದ ಭಾಷೆ, ಸಂಸ್ಕೃತಿ, ಜನಜೀವನವು ಆರ್ಯರ ಪ್ರಭಾವಕ್ಕೆ ಒಳಗಾದವು. ತಮಿಳು ಭಾಷೆಗೆ ಸಂಸ್ಕೃತದ ಪದಗಳು ಸೇರಿಕೊಂಡವು. ದ್ರಾವಿಡ ದೈವಗಳು ಸಂಸ್ಕತೀಕರಣ ಪ್ರಭಾವಕ್ಕೆ ಒಳಗಾದವು ಹಾಗೂ ವೈದಿಕ ಧರ್ಮದ ಪರೀಧಿಯೊಳಗೆ ಸೇರ್ಪಡೆಗೊಂಡವು. ಈ ಬೆಳವಣಿಗೆಯ ಪರಿಣಾಮವೆಂದರೆ ತಮಿಳು ಪ್ರದೇಶದಲ್ಲಿ ಜಾತಿ ಆಧಾರಿತ ಶ್ರೇಣಿಕೃತ ಸಮಾಜದ ರಚನೆ. ವರ್ಣ ವ್ಯವಸ್ಥೆಯು ದಕ್ಷಿಣದಲ್ಲಿ ನೆಲೆ ಕಾಣದಿದ್ದರೂ ಸಂಕೀರ್ಣವಾದ ಜಾತಿ ವ್ಯವಸ್ಥೆಯು ಜಾರಿಗೊಂಡಿತು. ಹೀಗೆ ಧಾರ್ಮಿಕ ಮತ್ತು ಶೈಕ್ಷಣಿಕ ಏಕಸ್ವಾಮ್ಯತೆ ಹೊಂದಿದ್ದ ಬ್ರಾಹ್ಮಣ ವರ್ಣವು ಕಾಲಕ್ರಮೇಣ ಭೂಒಡೆತನ ಪಡೆದುಕೊಂಡು ಆರ್ಥಿಕವಾಗಿಯೂ ಬಲಿಷ್ಠಗೊಂಡಿತು.

ಆಧುನಿಕತೆಯ ಪ್ರಭಾವ

ಆಧುನಿಕತೆಯ ಆರಂಭದಲ್ಲಿ ಈ ಸಮುದಾಯವು ಪಾಶ್ಚಾತ್ಯ ಶಿಕ್ಷಣವನ್ನು ಪಡೆದು ವಸಾಹತುಶಾಹಿಯ ಆಡಳಿತದಲ್ಲಿ ಸೇರ್ಪಡೆಗೊಳ್ಳುವುದರೊಂದಿಗೆ ಇನ್ನಷ್ಟು ಪ್ರಭಾವಶಾಲಿ ವರ್ಗವಾಗಿ ಬೆಳೆಯಿತು. ಈ ಬೆಳವಣಿಗೆಗಳು ಇತರ ಜನವರ್ಗದಲ್ಲಿಯೂ ಬ್ರಾಹ್ಮಣ ಸಮುದಾಯದ ಬಗೆಗೆ ಸಂಶಯವನ್ನು ಹುಟ್ಟುಹಾಕಿತು. ಶಿಕ್ಷಣ, ಆರ್ಥಿಕ ಹಾಗೂ ರಾಜಕೀಯ ಶಕ್ತಿಯಿಂದ ವಂಚಿತವಾಗಿದ್ದ ತಮಿಳುನಾಡಿನ ಬ್ರಾಹ್ಮಣೇತರ ವರ್ಗಗಳು ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದವು. ಅವುಗಳಲ್ಲಿ ಆರ್ಥಿಕ ಬಲವಿರುವ ಒಂದು ಸಣ್ಣ ವರ್ಗ ಆಧುನಿಕ ಶಿಕ್ಷಣ ಪಡೆದು ತನ್ನ ಜಾತಿ ಬಾಂಧವರ ಏಳಿಗೆಗಾಗಿ ಚಿಂತಿಸತೊಡಗಿತು. ಆದರೆ ಇದೇ ಸಮಯದಲ್ಲಿ ಪ್ರಾರಂಭಗೊಂಡ ರಾಷ್ಟ್ರೀಯ ಹಾಗೂ ಹಿಂದೂ ಪುನರುತ್ಥಾನ ಚಳವಳಿಯು ಬ್ರಾಹ್ಮಣರ ಹಿಡಿತವನ್ನು ಇನ್ನಷ್ಟು ಬಲಿಷ್ಠಗೊಳಿಸಲಾರಂಭಿಸಿತು. ಈ ಬೆಳವಣಿಗೆಗಳಿಂದ ಎಚ್ಚೆತ್ತ ಬ್ರಾಹ್ಮಣೇತರ ನಾಯಕತ್ವವು ವಸಾಹತುಶಾಹಿ ಆಡಳಿತದ ನೆರವಿನೊಂದಿಗೆ ಒಂದು ಪರ್ಯಾಯ ಶಕ್ತಿಯಾಗಿ ರೂಪುಗೊಳ್ಳುವ ಪ್ರಯತ್ನದಲ್ಲಿ ತೊಡಗಿತು. ೧೮೭೩ರಲ್ಲಿ ಪೂನಾದಲ್ಲಿ ಹಿಂದುಳಿದ ಮಾಲಿ ಜನಾಂಗದ ನಾಯಕರಾದ ಫುಲೆಯವರಿಂದ ಸ್ಥಾಪನೆಗೊಂಡ ‘ಸತ್ಯಶೋಧಕ ಸಮಾಜ’ದ ಜಾತಿ ವಿರೋಧ ಹೋರಾಟವು ಇವರಿಗೆ ಪ್ರೇರಕ ಶಕ್ತಿಯಾಗಿತ್ತು.

ದ್ರಾವಿಡ ಚಳವಳಿಯ ಹುಟ್ಟು

೧೯೧೪ರಲ್ಲಿ ಮದ್ರಾಸಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಡಾ. ಸಿ. ನಟೇಶ ಮೊದಲಿಯಾರ್‌ ಬ್ರಾಹ್ಮಣೇತರ ವರ್ಗದ ವಿದ್ಯಾರ್ಥಿಗಳು ವಸತಿ ಸವಲತ್ತಿಲ್ಲದೆ ತೊಂದರೆ ಅನುಭವಿಸುವುದನ್ನು ಮನಗಂಡು ‘ದಿ ದ್ರವೀಡಿಯನ್‌ ಹೋಮ್‌’ (The Dravidian Home) ಎನ್ನುವ ವಸತಿ ನಿಲಯವನ್ನು ಸ್ಥಾಪಿಸಿದರು. ನಂತರ ಇನ್ನೊಂದು ಹಂತಕ್ಕೇರಿ ಬ್ರಾಹ್ಮಣೇತರ ರಾಜಕೀಯ, ಸಾಮಾಜಿಕ, ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ‘ದಿ ದ್ರವಿಡಿಯನ್‌ ಅಸೋಸಿಯೇಷನ್‌’ (The Dravidian Association) ಎನ್ನುವ ಸಂಘಟನೆಯನ್ನು ಹುಟ್ಟು ಹಾಕಿದರು. ಈ ಸಂಘಟನೆಗೆ ಪನಾಗಲ್‌ ರಾಜರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಡಾ. ಟಿ. ಎಂ. ನಾಯರ್‌ ಉಪಾಧ್ಯಕ್ಷರಾಗಿಯೂ, ಮೊದಲಿಯಾರರು ಕಾರ್ಯದರ್ಶಿಗಳಾಗಿಯೂ ನೇಮಕಗೊಂಡರು. ಬ್ರಿಟಿಷ್ ‌ಆಡಳಿತದ ನೆರವನ್ನು ಪಡೆದು ದಕ್ಷಿಣ ಭಾರತದಲ್ಲಿ ‘ಬ್ರಾಹ್ಮಣೇತರರ, ಬ್ರಾಹ್ಮಣೇತರರಿಗಾಗಿ ಬ್ರಾಹ್ಮಣೇತರರಿಂದ’ ಒಂದು ದ್ರಾವಿಡ ರಾಜ್ಯವನ್ನು ಸ್ಥಾಪಿಸುವುದು ಈ ಸಂಘಟನೆಯ ಘೋಷಿತ ಉದ್ದೇಶವಾಗಿತ್ತು. ಮುಂದಿನ ದಿನಗಳಲ್ಲಿ ಖ್ಯಾತ ಉದ್ಯಮಿಗಳಾದ ಸರ್‌. ಪಿ. ತ್ಯಾಗರಾಜನ್‌ ಚೆಟ್ಟಿಯಾರರ ಸೇರ್ಪಡೆಯೊಂದಿಗೆ ಈ ಚಳವಳಿಯು ಇನ್ನಷ್ಟು ಬಲಗೊಂಡಿತು.

ಸೌತ್ಇಂಡಿಯನ್ಪೀಪಲ್ಸ್ಅಸೋಸಿಯೇಷನ್

೧೯೧೬ರಲ್ಲಿ ಈ ನಾಯಕರು ಸೌತ್‌ ಇಂಡಿಯನ್‌ ಪೀಪಲ್ಸ್‌ ಅಸೋಸಿಯೇಷನ್ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿ ದ್ರಾವಿಡ ಚಳವಳಿಯಗೆ ಸ್ಪಷ್ಟರೂಪು ನೀಡಿದರು. ಈ ಸಂದರ್ಭದಲ್ಲಿ ತಮಿಳುನಾಡಿನ ಹಲವಾರು ಜಮೀನ್ದಾರರನ್ನು ಸಂಪರ್ಕಿಸಿ ಸುಮಾರು ಒಂದು ಲಕ್ಷ ರೂಪಾಯಿ ಹಣವನ್ನು ಸಂಗ್ರಹಿಸಲಾಯಿತು. ಈ ಹಣದಿಂದ ಒಂದು ಮುದ್ರಣಾಲಯವನ್ನು ಖರೀದಿಸಿ ‘ಜಸ್ಟೀಸ್‌’ ಹೆಸರಿನ ಪತ್ರಿಕೆಯನ್ನು ಪ್ರಾರಂಭಿಸಿತು. ಹಾಗಾಗಿ ನಂತರದ ದಿನಗಳಲ್ಲಿ ಸೌತ್‌ ಇಂಡಿಯನ್‌ ಪೀಪಲ್ಸ್‌ ಅಸೋಸಿಯೇಷನ್‌ ‘ಜಸ್ಟೀಸ್‌ ಪಾರ್ಟಿ’ ಎಂದೇ ಖ್ಯಾತಿ ಪಡೆಯಿತು. ಸ್ವಲ್ಪ ಸಮಯದಲ್ಲೇ ದ್ರಾವಿಡ ಜನರ ಹಿತಾಸಕ್ತಿಗಳನ್ನು ಬಿಂಬಿಸುವ ದೃಷ್ಟಿಯಿಂದ ‘ದ್ರಾವಿಡನ್‌’ ಹೆಸರಿನ ತಮಿಳು ಪತ್ರಿಕೆಯನ್ನು ‘ಆಂಧ್ರ ಪ್ರಕಾಶಕ’ ಹೆಸರಿನ ತೆಲುಗು ಪತ್ರಿಕೆಯನ್ನೂ ಪ್ರಾರಂಭಿಸಲಾಯಿತು.

ಸೌತ್‌ ಇಂಡಿಯನ್‌ ಪೀಪಲ್ಸ್‌ ಅಸೋಸಿಯೇಷನ್‌ನ ಕಾರ್ಯದರ್ಶಿಗಳಾಗಿದ್ದ ಚೆಟ್ಟಿಯಾರರು ಬ್ರಾಹ್ಮಣೇತರ ಸಮುದಾಯಗಳ ಪರಿಸ್ಥಿತಿಯ ಅಭ್ಯಾಸ ನಡೆಸಿ ಹಾಗೂ ಅವರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ೧೯೧೬ರ ಡಿಸೆಂಬರ್‌ನಲ್ಲಿ ‘ಬ್ರಾಹ್ಮಣೇತರರ ಪ್ರಣಾಳಿಕೆ’ಯಾದ ‘ದಿ ನಾನ್‌ ಬ್ರಾಹ್ಮಣನ್‌ ಮ್ಯಾನಿಫೆಸ್ಟೊ’ವನ್ನು ಬಿಡುಗಡೆ ಮಾಡಿದರು. ಈ ಪ್ರಣಾಳಿಕೆಯಲ್ಲಿ ಜನಸಂಖ್ಯೆಯಲ್ಲಿ ಅತಿ ಚಿಕ್ಕ ವರ್ಗವಾದ ಬ್ರಾಹ್ಮಣರು ಆಡಳಿತದಲ್ಲಿ ಏಕಸ್ವಾಮ್ಯತೆ ಹೊಂದಿರಲು ಅವರ ಶೈಕ್ಷಣಿಕ ಪ್ರಗತಿಯೇ ಕಾರಣ ಎಂದು ವಾದಿಸಲಾಗಿದೆ. ಮಾತ್ರವಲ್ಲ, ಬ್ರಾಹ್ಮಣೇತರರ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಮುನ್ನಡೆಗಾಗಿ ಸಂಘಟಿತರಾಗಿ ಬ್ರಿಟಿಷ್ ‌ಆಡಳಿತದ ಗಮನ ಸೆಳೆಯುವಂತೆ ಕರೆ ನೀಡಲಾಯಿತು. ಆ ಪ್ರಕಾರವಾಗಿ ಆಗಸ್ಟ್‌೧೯೧೭ರಲ್ಲಿ ಬ್ರಾಹ್ಮಣೇತರರ ರಾಜಕೀಯ ಬಲವರ್ಧನೆಯ ದೃಷ್ಟಿಯಿಂದ ‘ಸೌತ್‌ ಇಂಡಿಯನ್‌ ಲಿಬರಲ್‌ ಫೆಡರೇಷನ್‌’ (South Indian Liberal Federation) ಹೆಸರಿನ ವೇದಿಕೆಯನ್ನು ಸ್ಥಾಪಿಸಲಾಯಿತು.

ಜಸ್ಟೀಸ್ ಪಕ್ಷದ ಧ್ಯೇಯೋದ್ದೇಶಗಳು

೧೯೧೭ರಲ್ಲಿ ಸ್ಥಾಪಿಸಲ್ಪಟ್ಟ ಸೌತ್‌ ಇಂಡಿಯನ್‌ ಲಿಬರಲ್‌ ಫೆಡರೇಷನ್‌ ಬ್ರಿಟಿಷ್ ಉದಾರವಾದಿ ಹಾಗೂ ಫ್ರೆಂಚ್‌ ವೈಚಾರಿಕತೆಯನ್ನು ಮೈಗೂಡಿಸಿಕೊಂಡ ವೇದಿಕೆಯಾಗಿತ್ತು. ಬ್ರಾಹ್ಮಣೇತರರ ಚಳವಳಿಯ ಪ್ರಾರಂಭದ ಹಂತಗಳಲ್ಲಿ ಪ್ರಾಯಶಃ ಸಂಪರ್ಕದ ಕೊರತೆಯಿಂದಾಗಿ ಪಕ್ಷದ ಪ್ರಭಾವವು ಕೇವಲ ಪಟ್ಟಣವಾಸಿ ಬ್ರಾಹ್ಮಣೇತರ ಮೇಲ್ವರ್ಗಕ್ಕೆ ಸೀಮಿತವಾಗಿತ್ತು. ಅದರ ನಾಯಕರು ಗ್ರಾಮೀಣ ಅನಕ್ಷರಸ್ಥರ ಬವಣೆಗಳ ಕುರಿತು ದನಿ ಎತ್ತಿದರೂ ಗ್ರಾಮೀಣ ಜನರನ್ನು ಪಕ್ಷದ ಸಂಘಟನೆಗೆ ತರಲು ಸಾಧ್ಯವಾಗಲಿಲ್ಲ. ಅದಕ್ಕೆ ಮುಖ್ಯ ಕಾರಣವೆಂದರೆ ಅಂದಿನ ಚುನಾವಣಾ ವ್ಯವಸ್ಥೆಯಲ್ಲಿ ಮತದಾರ ವರ್ಗವು ಸೀಮಿತವಾಗಿದ್ದು, ಅತಿದೊಡ್ಡ ಬ್ರಾಹ್ಮಣೇತರ ಜನ ಸಮುದಾಯವು ರಾಜಕೀಯ ಪ್ರಕ್ರಿಯೆಯ ವ್ಯಾಪ್ತಿಯಿಂದ ಹೊರಗಿತ್ತು.

ಜಸ್ಟೀಸ್‌ ಪಕ್ಷದ ಪ್ರಮುಖ ಉದ್ದೇಶವು ಎಲ್ಲ ದ್ರಾವಿಡ ಜನಾಂಗಗಳಿಗೆ ನ್ಯಾಯ ಒದಗಿಸುವುದಾಗಿದೆ ಎಂದು ಪಕ್ಷದ ಪ್ರಮುಖ ವಕ್ತಾರರಾದ ಡಾ. ಟಿ. ಎಂ. ನಾಯರ್‌ ಅವರು ವ್ಯಾಖ್ಯಾನಿಸಿದರು. ಈ ಪೋಷಿತ ನಿಲುವಿನೊಂದಿಗೆ ಜಸ್ಟೀ ಪಕ್ಷವು ಸರ್ಕಾರದ ಕಾರ್ಯಕ್ರಮಗಳನ್ನು ವಿಶ್ಲೇಷಿಸತೊಡಗಿತು. ೧೯೧೭ರ ಆಗಸ್ಟ್‌ನಲ್ಲಿ ಕೊಯಮತ್ತೂರಿನ ಪಕ್ಷದ ಪ್ರಥಮ ಸಮ್ಮೇಳನದಲ್ಲಿ ಪನಾಗಲ್‌ನ ರಾಜರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆರಿಸಲಾಯಿತು. ನಂತರದ ತಿಂಗಳುಗಳಲ್ಲಿ ಪಕ್ಷದ ಹಲವಾರು ಸಭೆಗಳನ್ನು ನಡೆಸಿ ಪಕ್ಷದ ರಾಜಕೀಯ ಉದ್ದೇಶಗಳನ್ನು ಸ್ಪಷ್ಟಪಡಿಸುವ ಪ್ರಯತ್ನಗಳು ನಡೆದವು. ೧೯೧೭ರ ಡಿಸೆಂಬರ್‌ನ ಅಧಿವೇಶನದಲ್ಲಿ ತ್ಯಾಗರಾಜ ಚೆಟ್ಟಿಯಾರರು ಜಸ್ಟೀಸ್‌ ಪಕ್ಷದ “ಪ್ರಗತಿಪರ ರಾಜಕೀಯ ಸುಧಾರಣೆ”ಗಳನ್ನು ಸ್ಪಷ್ಟಪಡಿಸಿದರು. ಪಕ್ಷದ ಪ್ರಮುಖ ಕಾರ್ಯಕ್ರಮಗಳೆಂದರೆ:

೧. ಎಲ್ಲ ಬ್ರಾಹ್ಮಣೇತರ ಜಾತಿಗಳನ್ನು ಒಂದೇ ವೇದಿಕೆಯಲ್ಲಿ ಸಂಘಟಿಸುವುದು.

೨. ಅಂತರ ಜಾತಿಯ ಸಂಬಂಧಗಳ ಸುಧಾರಣೆಗೆ ಪ್ರಯತ್ನಿಸುವುದು.

೩. ಅಸ್ಪೃಶ್ಯರಿಗೆ ಕೆರೆ ಬಾವಿ ನೀರಿನ ಹಕ್ಕು ನೀಡಲು ಇರುವ ಕಾನೂನು ತೊಡಕುಗಳನ್ನು ನಿವಾರಿಸಲು ಒತ್ತಾಯಿಸುವುದು.

೪. ಬ್ರಾಹ್ಮಣೇತರ ವರ್ಗಗಳಿಗೆ ಸರ್ಕಾರಿ ಹುದ್ದೆಗಳನ್ನು ಪಡೆಯಲು ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳುವುದು ಇತ್ಯಾದಿ.

ಮಾಂಟೆಗೋಚೇಮ್ಸ್ಫರ್ಡ್ನಿಯೋಗ

ಜಸ್ಟೀಸ್‌ ಪಕ್ಷದ ಸ್ಥಾಪನೆಯಾದ ಸ್ವಲ್ಪ ಸಮಯದಲ್ಲಿ ಮಾಂಟೆಗೊ ಚೇಮ್ಸ್‌ಫರ್ಡ್‌ ನಿಯೋಗವು ಭಾರತದ ಸಮಸ್ಯೆಗಳನ್ನು ಸಮೀಕ್ಷೆ ನಡೆಸತೊಡಗಿತ್ತು. ಆದರೆ ಮದ್ರಾಸಿನಲ್ಲಿ ನಿಯೋಗವು ಬ್ರಾಹ್ಮಣೇತರರ ಸಮಸ್ಯೆಗಳನ್ನು ಪ್ರತಿನಿಧಿಸಲು ಜಸ್ಟೀಸ್‌ಪಕ್ಷಕ್ಕೆ ಅವಕಾಶ ನೀಡದೆ ‘ಮದ್ರಾಸು ಪ್ರೆಸಿಡೆನ್ಸಿ ಅಸೋಸಿಯೇಷನ್‌’ ಹೆಸರಿನ ಹೋಂ ರೂಲ್‌ ಪರವಾಗಿರುವ ಸಾಂಸ್ಕೃತಿಕ ವೇದಿಕೆಗೆ ಅವಕಾಶ ನೀಡಿತು. ಇದರಿಂದ ಕುಪಿತಗೊಂಡ ಜಸ್ಟೀಸ್‌ ಪಕ್ಷದ ನಾಯಕರು ನಿಯೋಗವನ್ನು ಬಹಿಷ್ಕರಿಸುವ ತೀರ್ಮಾನವನ್ನು ಕೈಗೊಂಡರು. ಈ ಮಧ್ಯೆ ನಿಯೋಗದ ನಿಲುವಿನಲ್ಲಿ ಸಡಿಲಿಕೆ ಕಂಡುಬಂದಾಗಲಷ್ಟೇ ಜಸ್ಟೀಸ್ ಪಕ್ಷದ ನಾಯಕರು ತಮ್ಮ ಮನವಿಯನ್ನು ಸಲ್ಲಿಸಿದರು.

ಸಂಸದೀಯ ಜಂಟಿ ಸಮಿತಿ

೧೯೧೯ರಲ್ಲಿ ನೇಮಿಸಲಾದ ಸಂಸದೀಯ ಜಂಟಿ ಸಮಿತಿಗೆ ಮನವಿ ಸಲ್ಲಿಸಲು ಟಿ. ಎಂ. ನಾಯರ್‌ ನೇತೃತ್ವದ ಜಸ್ಟೀಸ್ ಪಾರ್ಟಿಯ ನಿಯೋಗವು ಲಂಡನ್‌ಗೆ ತೆರಳಿತು. ದುರದೃಷ್ಟವಶಾತ್‌ ಇಂಗ್ಲೆಂಡ್‌ ತಲುಪಿದ ತಕ್ಷಣ ನಾಯರ್‌ ಮರಣಕ್ಕೀಡಾದರು. ಜಸ್ಟೀಸ್‌ ಪಾರ್ಟಿ ತನ್ನ ಲಿಖಿತ ಹಾಗೂ ಮೌಖಿಕ ಮನವಿಗಳ ಮೂಲಕ ಬ್ರಾಹ್ಮಣೇತರರಿಗೆ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ನೀಡುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಿತು. ಪರಿಣಾಮವಾಗಿ ಮದ್ರಾಸು ಶಾಸನ ಸಭೆಯಲ್ಲಿ ಒಟ್ಟು ೯೮ ಸ್ಥಾನಗಳನ್ನು ೨೮ ಸ್ಥಾನಗಳನ್ನು ಬ್ರಾಹ್ಮಣೇತರರಿಗೆ ನೀಡುವ ತೀರ್ಮಾನವಾಯಿತು.

ಜಸ್ಟೀಸ್ಪಕ್ಷದ ಚುನಾವಣಾ ವಿಜಯ

೧೯೨೦ರಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಪಾಲ್ಗೊಳ್ಳಲಿಲ್ಲ. ಈ ಚುನಾವಣೆಯಲ್ಲಿ ಜಸ್ಟೀಸ್‌ ಪಕ್ಷವು ಜಯಗಳಿಸಿತು. ಆಗಿನ ಪರಿಸ್ಥಿತಿಯಲ್ಲಿ ಬ್ರಾಹ್ಮಣ ವರ್ಗದ ರಾಜಕೀಯ ವೇದಿಕೆಯೆಂದೇ ಪರಿಗಣಿಸಲ್ಪಟ್ಟಿದ್ದ ಕಾಂಗ್ರೆಸ್‌ ಪಕ್ಷದ ಪ್ರಭಾವವನ್ನು ತಡೆಯುವ ಉದ್ದೇಶದಿಂದ ವಸಾಹತುಶಾಹಿ ಆಡಳಿತವೂ ಜಸ್ಟೀಸ್‌ ಪಕ್ಷವನ್ನು ಬೆಂಬಲಿಸತೊಡಗಿತು. ಈ ಹಿನ್ನೆಲೆಯಲ್ಲಿ ಜಸ್ಟೀಸ್‌ಪಕ್ಷದ ನಾಯಕರಾದ ಪನಾಗಲ್‌ರಾಜರನ್ನು ಮದರಾಸಿನ ಗವರ್ನರ್‌ ಲಾರ್ಡ್‌ ವೆಲಿಂಗ್ಟನ್‌ ಅವರು ಪ್ರಥಮ ಮಂತ್ರಿಯನ್ನಾಗಿ ನೇಮಿಸಿಕೊಂಡರು.

೧೯೨೩ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಂಗಪಕ್ಷವಾದ ಸ್ವರಾಜ್ಯ ಪಕ್ಷವು ಸ್ಪರ್ಧಿಸಿದರೂ ಜಸ್ಟೀಸ್‌ ಪಕ್ಷವನ್ನು ಸೋಲಿಸುವಲ್ಲಿ ಯಶಸ್ಸು ಕಾಣಲಿಲ್ಲ. ಈ ಸಂದರ್ಭಗಳನ್ನು ಬಳಸಿಕೊಂಡು ಬ್ರಾಹ್ಮಣೇತರರ ಪರವಾಗಿ ಹಲವು ಸುಧಾರಣೆಗಳನ್ನು ತರಲಾಯಿತು. ಆದರೆ ೧೯೨೬ರ ಚುನಾವಣೆಯಲ್ಲಿ ಸ್ವರಾಜ್ಯ ಪಾರ್ಟಿಯ ಶಾಸನ ಸಭೆಯಲ್ಲಿ ಬಹುಮತಗಳಿಸುವಲ್ಲಿ ಶಕ್ತವಾಯಿತು. ಗಾಂಧೀಜಿಯವರ ಪ್ರಭಾವ ಕೂಡ ಈ ಜಯಕ್ಕೆ ಕಾರಣವಾಗಿರಬಹುದು. ಆದರೆ ಈ ಸಮಯದಲ್ಲಿ ಇ. ವಿ. ರಾಮಸ್ವಾಮಿ ನಾಯ್ಕರ್‌ಕಾಂಗ್ರೆಸ್‌ ತ್ಯಜಿಸಿದ್ದರಿಂದ ಪಕ್ಷವು ಬಿಕ್ಕಟ್ಟನ್ನು ಎದುರಿಸುತ್ತಿತ್ತು.

ಕಾಂಗ್ರೆಸ್ಪಕ್ಷದ ಪ್ರಭಾವ

೧೯೩೦ರಲ್ಲಿ ಪುನಃ ಕಾಂಗ್ರೆಸ್‌ ಪಕ್ಷದ ಬಹಿಷ್ಕಾರದ ಕಾರಣದಿಂದ ಜಸ್ಟೀಸ್‌ ಪಾರ್ಟಿಯು ಬಹುಮತ ಪಡೆಯಿತು. ಆದರೆ ಈ ಸಮಯದಲ್ಲಿ ಜಸ್ಟೀಸ್‌ ಪಕ್ಷದಲ್ಲಿ ಭಿನ್ನಮತಗಳು ತಲೆದೋರಿದ್ದವು. ಪಕ್ಷವು ತನ್ನ ನಿಲುವಿನಲ್ಲಿ ಬಹಳ ಬದಲಾವಣೆಗಳು ತರುವುದು ಅನಿವಾರ್ಯವೆನಿಸಿತು. ಕಾಂಗ್ರೆಸ್‌ನಲ್ಲಿರುವ ಬ್ರಾಹ್ಮಣೇತರರ ಬೆಂಬಲ ಪಡೆಯುವ ಉದ್ದೇಶದಿಂದ ತನ್ನ ಪಕ್ಷದ ಸದಸ್ಯರನ್ನು ಕಾಂಗ್ರೆಸ್‌ ನೊಂದಿಗೆ ಕೂಡಾ ಗುರಿತಿಸಿಕೊಳ್ಳಲು ಅವಕಾಶ ನೀಡಿದವರಲ್ಲದೆ, ಬ್ರಾಹ್ಮಣರಿಗೂ ಜಸ್ಟೀಸ್ ಪಕ್ಷದ ಸದಸ್ಯತ್ವ ಪಡೆಯಲು ಅವಕಾಶ ನೀಡಿದರು. ಈ ಎಲ್ಲ ಸುಧಾರಣೆಗಳ ಹೊರತಾಗಿಯೂ ಹಾಗೂ ೧೯೩೭ರಲ್ಲಿ ಶಾಸನ ಸಭೆಯ ೨೧೫ ಸ್ಥಾನಗಳಲ್ಲಿ ೧೫೯ ಸ್ಥಾನಗಳನ್ನೂ, ಪರಿಷತ್ತಿನ ೪೬ ಸ್ಥಾನಗಳನ್ನೂ ಕಾಂಗ್ರೆಸ್‌ ಪಕ್ಷ ಪಡೆಯಿತು.

೧೯೩೦ರ ದಶಕದಲ್ಲಿ ರಾಷ್ಟ್ರೀಯ ಚಳವಳಿಯ ಕಾವು ಏರತೊಡಗಿತ್ತು. ಇದರ ಪರಿಣಾಮವಾಗಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಕೂಡಾ ಬಲಶಾಲಿಯಾಗಿ ಬೆಳೆಯಿತು. ಇನ್ನೊಂದು ಕಡೆ ಜಸ್ಟೀಸ್‌ಪಕ್ಷದ ಸದಸ್ಯರು ಪಕ್ಷದೊಳಗಿನ ಸಮಸ್ಯೆಗಳಿಂದ ಬೇಸತ್ತು ಕಾಂಗ್ರೆಸ್‌ ಪಕ್ಷವನ್ನು ಸೇರತೊಡಗಿದ್ದರು. ಜಸ್ಟೀಸ್‌ ಪಕ್ಷವು ಒಂದು ಮತೀಯ ಪಕ್ಷವೆಂದೂ, ಕಾಂಗ್ರೆಸ್‌ ಆಡಳಿತದ ಏಜೆಂಟ್‌ ಎಂದೂ ಕಾಂಗ್ರೆಸ್‌ ಪಕ್ಷ ಬಿಂಬಿಸತೊಡಗಿತು. ಈ ಸಂದರ್ಭದಲ್ಲಿ ಜಸ್ಟೀಸ್‌ ಪಕ್ಷದೊಳಗೆ ಪುನರ್‌ವ್ಯಾಖ್ಯಾನದ ಪ್ರಯತ್ನಗಳು ನಡೆದರೂ ಅಷ್ಟೊಂದು ಪ್ರಯೋಜನಕಾರಿಯಾಗಲಿಲ್ಲ.

ಪೆರಿಯಾರ್‌ (೧೮೭೯೧೯೭೩) ಮತ್ತು ದ್ರಾವಿಡ ಚಳವಳಿ

ಜಸ್ಟೀಸ್‌ ಪಕ್ಷವು ನಿಧಾನವಾಗಿ ನೆಲೆ ಕಳೆದುಕೊಳ್ಳಲು ಆರಂಭಿಸಿದಾಗ ದಕ್ಷಿಣ ಭಾರತದ ಇತಿಹಾಸದಲ್ಲೆ ಅತಿ ಪ್ರಭಾವಶಾಲಿ, ಕ್ರಿಯಾಶೀಲ ಹಾಗೂ ವರ್ಣರಂಜಿತ ನಾಯಕರಲ್ಲೊಬ್ಬರನ್ನು ಸೃಷ್ಟಿಸುವಲ್ಲಿ ಪಕ್ಷ ಯಶಸ್ವಿಯಾಯಿತು. ಅವರೇ ‘ಪೆರಿಯಾರ್‌’ ಎಂದು ಖ್ಯಾತರಾದ ಇ ವಿ. ರಾಮಸ್ವಾಮಿ ನಾಯ್ಕರ್‌ರವರು.

ಇ. ವಿ. ರಾಮಸ್ವಾಮಿ ನಾಯ್ಕರ್‌ ಈರೋಡಿನ ಕುಶಲಕರ್ಮಿಗಳ ಕುಟುಂಬವೊಂದರಲ್ಲಿ ೧೮೭೯ರಲ್ಲಿ ಜನಿಸಿದರು. ತನ್ನ ೧೩ನೇ ವಯಸ್ಸಿನಲ್ಲಿ ವಿವಾಹವಾದ ಇವರು ಆರು ವರ್ಷಗಳ ನಂತರ ಸನ್ಯಾಸಿಯಾಗಿ ಭಾರತದಾದ್ಯಂತ ಸಂಚರಿಸಿದರು. ಆದರೆ ಹಿಂದೂ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳನ್ನು, ಪುರೋಹಿತಶಾಹಿಯಿಂದ ಶೋಷಣೆಗೊಳಗಾದ ಜನಸಾಮಾನ್ಯರ ಸಂಕಷ್ಟಗಳನ್ನೂ ನೋಡಿ ಮನಃಪರಿವರ್ತನೆಗೊಂಡು ಸನ್ಯಾಸ ತ್ಯಜಿಸಿದರು. ನಂತರ ತನ್ನ ಹುಟ್ಟೂರಾದ ಈರೋಡಿಗೆ ಮರಳಿ ಸ್ಥಳೀಯ ರಾಜಕಾರಣದಲ್ಲಿ ಸಕ್ರೀಯರಾದರು. ಜಾತಿ ಕಟ್ಟುಪಾಡುಗಳ ಉಲ್ಲಂಘನೆ, ಮಹಿಳಾ ಹಕ್ಕುಗಳಿಗಾಗಿ ಹೋರಾಟ, ವಿಧವಾ ವಿವಾಹಕ್ಕೆ ಪ್ರೋತ್ಸಾಹ ಮುಂತಾದ ಕ್ರಾಂತಿಕಾರಿ ವಿಚಾರಗಳನ್ನು ಪ್ರತಿಪಾದಿಸತೊಡಗಿದರು. ತನ್ನ ಸಂಬಂಧಿ ವಿಧವೆಯೋರ್ವಳ ಮರುಮದುವೆಗೆ ಪ್ರೋತ್ಸಾಹ ನೀಡಿದ ಕಾರಣ ಅವರು ಸಂಪ್ರದಾಯವಾದಿ ಜನರ ಕೆಂಗಣ್ಣಿಗೆ ಗುರಿಯಾಗಿ ತನ್ನ ಜನರಿಂದಲೇ ಬಹಿಷ್ಕಾರಕ್ಕೊಳಗಾದರು. ಆದರೆ ಈರೋಡಿನ ಇತರ ಹಿಂದುಳಿದ ವರ್ಗಗಳ ಬೆಂಬಲ ಗಳಿಸಿದ ನಾಯ್ಕರ್‌ನಂತರ ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರು.

ಪೆರಿಯಾರ್ಹಾಗೂ ಕಾಂಗ್ರೆಸ್ಪಕ್ಷ

ಪೆರಿಯಾರರು ಕಟ್ಟಾ ಬ್ರಾಹ್ಮಣ ವಿರೋಧಿಯಾಗಿದ್ದರೂ ರಾಜಕೀಯದಲ್ಲಿ ಜಸ್ಟೀಸ್‌ ಪಕ್ಷಕ್ಕಿಂತ ಕಾಂಗ್ರೆಸ್‌ಗೆ ಹೆಚ್ಚು ನಿಕಟವಾಗಿದ್ದರು. ೧೯೨೦ರ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಖಾದಿ ಪ್ರಚಾರ ಮದ್ಯಪಾನ ವಿರೋಧಿ ಚಳವಳಿಯಲ್ಲಿ ಸಕ್ರೀಯವಾಗಿ ಎರಡು ಬಾರಿ ಜೈಲು ವಾಸವನ್ನು ಅನುಭವಿಸಿದರು. ನಂತರ ಅವರು ತಮಿಳುನಾಡಿನ ಕಾಂಗ್ರೆಸ್‌ ಸಮಿತಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಆದರೆ ೧೯೨೫ರಲ್ಲಿ ಕೇರಳದ ವೈಕಂನಲ್ಲಿ ನಡೆದ ದೇಗುಲ ಪ್ರವೇಶ ಚಳವಳಿಯಲ್ಲಿ ಅವರು ವಹಿಸಿದ ಪಾತ್ರದಿಂದಾಗಿ ಬ್ರಾಹ್ಮಣ ನಾಯಕರ ಅವಕೃಪೆಗೆ ಒಳಗಾದರು. ಇನ್ನೊಂದು ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ನಡೆಸುತ್ತಿದ್ದ ಅನಾಥಾಶ್ರಮ ಒಂದರಲ್ಲಿ ಆಚರಣೆಯಲ್ಲಿದ್ದ ಜಾತಿ ತಾರತಮ್ಯವನ್ನು ಖಡಾಖಂಡಿತವಾಗಿ ವಿರೋಧಿಸಿದರು. ಹಾಗೆಯೇ ಶಾಸನ ಪರಿಷತ್ತಿನಲ್ಲಿ ಬ್ರಾಹ್ಮಣೇತರರಿಗೆ ಮೀಸಲಾತಿ ನೀಡಬೇಕೆಂದೂ ಒತ್ತಾಯಿಸಿದರು. ಈ ಎಲ್ಲ ಬರಾಹ್ಮಣ ವಿರೋಧಿ, ಸಂಪ್ರದಾಯ ವಿರೋಧಿ ನಿಲುವುಗಳಿಂದಾಗಿ ಕಾಂಗ್ರೆಸ್‌ ನಾಯಕತ್ವದ ಅಸಮಾಧಾನಕ್ಕೆ ಕಾರಣರಾದರು.

೧೯೨೨ರಲ್ಲಿ ನಾಯ್ಕರ್‌ ಒಬ್ಬ ಬ್ರಾಹ್ಮಣ ಅಭ್ಯರ್ಥಿಯ ಎದುರು ಸ್ಪರ್ಧಿಸಿ ಅಲ್ಪಮತದ ಮುನ್ನಡೆಯೊಂದಿಗೆ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಅವರು ಅಧಿಕಾರಕ್ಕೆ ಏರುವುದಕ್ಕಿಂತ ಮುಂಚಿತವಾಗಿಯೇ ಒಬ್ಬ ಬ್ರಾಹ್ಮಣ ನಾಯಕರು ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿ ಅಂಗೀಕಾರ ಪಡೆಯುವಲ್ಲಿ ಸಫಲರಾದರು. ಈ ಹಂತದಲ್ಲಿ ನಾಯ್ಕರ್‌ ಅವರು ಕಾಂಗ್ರೆಸ್‌ ಪಕ್ಷವನ್ನು ಬ್ರಾಹ್ಮಣದ ವೇದಿಕೆಯೆಂದು ಟೀಕಿಸಿ ಪಕ್ಷದಿಂದ ಹೊರನಡೆದರು.

ಆತ್ಮಗೌರವ ಚಳವಳಿ

೧೯೨೫ರಲ್ಲಿ ಕಾಂಗ್ರೆಸ್‌ ಪಕ್ಷವನ್ನು ತೊರೆದು ಹೊರನಡೆದ ಇ. ವಿ. ರಾಮಸ್ವಾಮಿ ನಾಯ್ಕರ್‌ ಒಂದು ಪರ್ಯಾಯವಾದ ಸಾಂಸ್ಕೃತಿಕ ವೇದಿಕೆಯನ್ನು ಪ್ರಾರಂಭಿಸುವ ಇಚ್ಚೆಯಿಂದ ಹಾಗೂ ದ್ರಾವಿಡ ಜನರ ಉನ್ನತಿಯ ಉದ್ದೇಶವನ್ನು ಈಡೇರಿಸುವ ದೃಷ್ಟಿಯಲ್ಲಿರಿಸಿಕೊಂಡು ‘‘ಆತ್ಮಗೌರವ ಚಳವಳಿ” (Self Respect Movement)ಯನ್ನು ಹುಟ್ಟು ಹಾಕಿದರು. ಆತ್ಮಗೌರವ ಚಳವಳಿಯು ಸಮಸ್ತ ಹಿಂದೂ ಜೀವನವನ್ನು ನಿಯಂತ್ರಣಕ್ಕೊಳಪಡಿಸಿದ ಬ್ರಾಹ್ಮಣ ಷಡ್ಯಂತ್ರವನ್ನು ಬಯಲಿಗೆಳೆಯುವ ವೇದಿಕೆಯೆಂದು ಪರಿಗಣಿಸಲಾಯಿತು.

ಆತ್ಮಗೌರವ ಚಳವಳಿಯ ಪ್ರಧಾನ ಅಂಶಗಳೆಂದರೆ ರಾಬರ್ಟ್‌ ಇಂಗರ್‌ಸಲ್‌ ಅವರ ಕೃತಿಗಳನ್ನು ತಮಿಳಿಗೆ ಭಾಷಾಂತರಿಸಿ ಬ್ರಾಹ್ಮಣೇತರ ಜಾತಿ ವರ್ಗಗಳ ಮೇಲೆ ಮೇಲ್ಜಾತಿಗಳ ದಬ್ಬಾಳಿಕೆಯ ಖಂಡನೆ.

 • ಪುರಾಣಗಳು ಕಟ್ಟುಕಥೆಗಳೆಂದೂ ಅವೈಚಾರಿಕತೆಯಿಂದ ಕೂಡಿವೆಯೆಂದೂ ವಾದ ಮಂಡನೆ.
 • ಮನು ಧರ್ಮಶಾಸ್ತ್ರದ ಅಮಾನವೀಯ ತತ್ವ ಸಿದ್ಧಾಂತಗಳನ್ನು ಬಯಲಿಗೆಳೆಯುವುದು.
 • ಜಾತಿ ಸಂಪ್ರದಾಯಗಳು, ಬಾಲ್ಯವಿವಾಹ, ಮಹಿಳೆಯರ ಮೇಲೆ ವೈಧವ್ಯದ ಹೇರಿಕೆ ಇತ್ಯಾದಿ ಗೊಡ್ಡು ಸಂಪ್ರದಾಯಗಳಿಗೆ ವಿರೋಧ.
 • ಪ್ರಗತಿಪರ ಹಾಗೂ ವೈಚಾರಿಕತೆಯನ್ನು ಜನರಿಗೆ ತಲುಪಿಸಲು ‘ಕುದಿಯರಸು’ (ಜನತಾ ಸರ್ಕಾರ) ಎನ್ನುವ ಪತ್ರಿಕೆಯ ಪ್ರಕಟಣೆ ಇತ್ಯಾದಿ.

ಪೆರಿಯಾರ್‌ ೧೯೩೧ರಲ್ಲಿ ಸೋವಿಯತ್‌ ಪ್ರವಾಸದಿಂದ ಹಿಂದಿರುಗಿದ ಮೇಲೆ ಲೌಕಿಕವಾದವೇ ಭಾರತದ ಸಮಸ್ಯೆಗಳಿಗೆ ಉತ್ತರವೆಂದು ವಾದಿಸತೊಡಗಿದರು. ಆದರೆ ೧೯೩೩-೩೪ರ ಸಮಯದಲ್ಲಿ ಜೈಲು ವಾಸಕ್ಕೊಳಗಾಗಿ ಮರಳಿದ ನಂತರ ಯಾವುದಾದರೊಂದು ರಾಜಕೀಯ ಪಕ್ಷವನ್ನು ಸೇರಿ ಹೋರಾಡುವ ಆಲೋಚನೆ ಮಾಡಿದರು. ಹದಿನಾಲ್ಕು ಅಂಶಗಳ ಕಾರ್ಯಯೋಜನೆಯನ್ನು ತಯಾರಿಸಿ ಕಾಂಗ್ರೆಸ್‌ ಹಾಗೂ ಜಸ್ಟೀಸ್‌ಪಕ್ಷಕ್ಕೆ ಅನುಮೋದನೆಗಾಗಿ ಸಲ್ಲಿಸಿದರು. ಕಾಂಗ್ರೆಸ್‌ ಪಕ್ಷ ಈ ಯೋಜನೆಗೆ ಸಮ್ಮತಿಸಲಿಲ್ಲ. ಆದರೆ ಆ ಸಮಯದಲ್ಲಿ ರಾಜಕೀಯ ಹಿನ್ನಡೆ ಅನುಭವಿಸಿದ್ದ ಜಸ್ಟಿಸ್‌ಪಕ್ಷವು ಈ ಕಾರ್ಯಯೋಜನೆಗೆ ಒಪ್ಪಿಗೆ ನೀಡಿ ಪೆರಿಯಾರ್‌ರನ್ನು ಪಕ್ಷದಲ್ಲಿ ಸೇರಿಸಿಕೊಂಡು ಬಲವೃದ್ಧಿ ಮಾಡಿಕೊಂಡಿತು.

ಹಿಂದಿ ಭಾಷಾ ವಿರೋಧಿ ಚಳವಳಿ

೧೯೩೭ರಲ್ಲಿ ಅಧಿಕಾರಕ್ಕೇರಿದ ರಾಜಗೋಪಾಲಾಚಾರಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಶಾಲೆಗಳಲ್ಲಿ ಹಿಂದಿ ಕಲಿಕೆ ಕಡ್ಡಾಯಗೊಳಿಸುವ ಕ್ರಮವನ್ನು ತೆಗೆದುಕೊಂಡಿತು. ಈ ಕ್ರಮವನ್ನು ತಮಿಳು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ದಾಳಿ ಎಂದು ಪರಿಗಣಿಸಿದ ತಮಿಳು ಪ್ರೇಮಿಗಳು ಹಿಂಸಾತ್ಮಕ ಪ್ರತಿಭಟನೆಯನ್ನು ಪ್ರಾರಂಭಿಸಿದರು. ಈ ಹಿಂದೆ ಭಾಷಾ ವಿರೋಧಿ ಚಳವಳಿಯು ನಾಯ್ಕರ್‌ ಅವರು ಪ್ರಾರಂಭಿಸಿದ ಬ್ರಾಹ್ಮನ ವಿರೋಧಿ ಹಾಗೂ ಸರ್ಕಾರ ವಿರೋಧಿ ಚಳವಳಿಗೆ ಪ್ರಧಾನ ರಂಗವಾಗಿ ಪರಿಣಮಿಸಿತು. ಪೊಲೀಸ್‌ ಗೋಲಿಬಾರ್‌ನಲ್ಲಿ ಎರಡು ಮಂದಿ ಜೀವ ಕಳೆದುಕೊಂಡಾಗ ಸರ್ಕಾರವು ಹಿಂದಿಯನ್ನು ಕಡ್ಡಾಯಗೊಳಿಸುವುದನ್ನು ಕೈಬಿಟ್ಟು ಆಯ್ಕೆಯ ವಿಷಯವನ್ನಾಗಿ ಬದಲಾಯಿಸಬೇಕಾಯಿತು. ಈ ಚಳವಳಿಯಲ್ಲಿ ಪೆರಿಯಾರ್‌ ಜೈಲು ಸೇರಿದರೂ, ನಂತರ ೧೯೩೮ರಲ್ಲಿ ಅವರು ಜಸ್ಟೀಸ್‌ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು.

ದ್ರಾವಿಡ ನಾಡುಚಳವಳಿಯ ಆರಂಭ

ಪೆರಿಯಾರ್‌ ಪ್ರಕಾರ ಹಿಂದಿ ಹೇರಿಕೆಯು ತಮಿಳರ ಅನನ್ಯತೆಯ ಮೇಲಿನ ದಬ್ಬಾಳಿಕೆಯ ಪ್ರಯತ್ನ ಹಾಗೂ ಈ ದಬ್ಬಾಳಿಕೆಯನ್ನು ಒಂದು ಪರ್ಯಾಯ ಮಾದರಿಯ ಹೋರಾಟದಿಂದ ಮಾತ್ರ ಎದುರಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಅವರು ಪ್ರತ್ಯೇಕ ‘ದ್ರಾವಿಡ ರಾಜ್ಯದ’ ಸ್ಥಾಪನೆಗೆ ಕರೆ ನೀಡಿದರು. ೧೯೩೮ರ ಜಸ್ಟೀಸ್‌ ಪಕ್ಷದ ಅಧಿವೇಶದನದಲ್ಲಿ ತಮಿಳುನಾಡನ್ನು ಬ್ರಿಟಿಷ್ ‌ಆಡಳಿತಕ್ಕೊಳಪಟ್ಟ ಒಂದು ಪ್ರತ್ಯೇಕ ರಾಜ್ಯವನ್ನಾಗಿ ಪರಿಗಣಿಸಬೇಕೆಂದು ಬೇಡಿಕೆ ಸಲ್ಲಿಸಲು ನಿರ್ಣಯಿಸಲಾಯಿತು. ಈ ಬೇಡಿಕೆಯು ಮುಂದೆ ಜಸ್ಟೀಸ್‌ ಪಕ್ಷ ನಡೆಸಿಕೊಂಡು ಬಂದ ಚಳವಳಿಯ ಮೂಲ ಪ್ರಶ್ನೆಯಾಗಿ ಮಾರ್ಪಟ್ಟು ಕುಂದುತ್ತಿದ್ದ ಆ ಪಕ್ಷಕ್ಕೆ ಜೀವ ನೀಡಿತು.

೧೯೩೯ರಲ್ಲಿ ಪೆರಿಯಾರ್‌ ಸ್ವತಂತ್ರವಾದ ‘ದ್ರಾವಿಡ ಸ್ಥಾನ’ದ ಬೇಡಿಕೆಯೊಂದಿಗೆ ‘ದ್ರಾವಿಡನಾಡು ಕಾನ್ಫರೆನ್ಸ್‌’ನ್ನು ಸಂಘಟಿಸಿದರು. ಮುಂದಿನ ವರ್ಷ ಪಾಕಿಸ್ತಾನ ಸ್ಥಾಪನೆ ಬೇಡಿಕೆಯನ್ನಿಟ್ಟು ಮುಸ್ಲಿಮ್‌ ಲೀಗ್‌ ಲಾಹೋರ್‌ ನಿರ್ಣಯವನ್ನು ಮಂಡಿಸಿದ ಮಾದರಿಯಲ್ಲಿ ‘ದ್ರಾವಿಡ ಸ್ಥಾನ’ದ ಬೇಡಿಕೆಯನ್ನು ಉಚ್ಚರಿಸಲಾಯಿತು. ತಮಿಳು, ತೆಲುಗು, ಕನ್ನಡ, ಮಲಯಾಳಿ ಮುಂತಾದ ಬ್ರಾಹ್ಮಣೇತರ ದ್ರಾವಿಡ ಜನರು ಜನಾಂಗೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಆರ್ಯನ್ನರಿಂದ ಭಿನ್ನವಾಗಿರುವರು. ಅವರನ್ನು ಆರ್ಯನ್ನರ ಆಡಳಿತದ ಹಿಡಿತದಿಂದ ಮುಕ್ತಗೊಳಿಸುವುದೇ ಈ ದ್ರಾವಿಡ ರಾಜ್ಯದ ಆಶಯ.

ದ್ರಾವಿಡ ಕಜಗಂ ಸ್ಥಾಪನೆ

೧೯೪೪ರಲ್ಲಿ ಜಸ್ಟೀಸ್‌ ಪಕ್ಷವು ಪೆರಿಯಾರ್‌ ಅವರ ಆಶಯದಂತೆ ದ್ರಾವಿಡ ಕಜಗಂ (Dravidian Federation) ಆಗಿ ಪರಿವರ್ತನೆಗೊಂಡಿತು. ಹೊಸ ಪಕ್ಷವು ದ್ರಾವಿಡನಾಡಿನ ಸ್ಥಾಪನೆಗಾಗಿ ಉಗ್ರ ಹೋರಾಟಗಳನ್ನು ಸಂಘಟಿಸತೊಡಗಿತು. ಈ ಸಂದರ್ಭದಲ್ಲಿ ಪಕ್ಷದ ಉಗ್ರವಾದಿ ನೀತಿಗಳನ್ನು ಒಪ್ಪದಿರುವ ಪಿ. ಟಿ. ರಾಜನ್‌ನಂತಹ ಸಂಪ್ರದಾಯವಾದಿ ಸದಸ್ಯರು ಚಳವಳಿಯನ್ನು ತೊರೆದು ಹಿಂದಿನ ಜಸ್ಟೀಸ್‌ ಪಕ್ಷವನ್ನೇ ಮುನ್ನಡೆಸುವ ಪ್ರಯತ್ನವನ್ನೂ ಮಾಡಿದರು.

೧೯೪೫ರ ತಿರುಚಿನಾಪಳ್ಳಿ ಅಧಿವೇಶನದಲ್ಲಿ ದ್ರಾವಿಡ ಕಜಗಂ ತನ್ನದೇ ಆಗಿರುವ ಸಂವಿಧಾನವನ್ನು ಅಳವಡಿಸಿಕೊಂಡಿತು. ಮಧ್ಯದಲ್ಲಿ ಕೆಂಪು ವೃತ್ತವಿರುವ ಕಪ್ಪು ಬಾವುಟವನ್ನು ತನ್ನ ಚಿಹ್ನೆಯಾಗಿ ಅಂಗೀಕರಿಸಿತು. ‘ಕಪ್ಪು’ ದ್ರಾವಿಡ ಜನರ ದುಃಖವನ್ನು ಪ್ರತಿನಿಧಿಸಿದರೆ ‘ಕೆಂಪು ಬಣ್ಣದ ವೃತ್ತ’ ಆ ಜನರ ಆಶಾಕಿರಣದ ಸಂಕೇತ.

ದ್ರಾವಿಡ ಕಜಗಂನ ಪ್ರಧಾನ ಉದ್ದೇಶಗಳೆಂದರೆ :

 • ದ್ರಾವಿಡ ಗಣರಾಜ್ಯದ ಸ್ಥಾಪನೆ
 • ದ್ರಾವಿಡ ಗಣರಾಜ್ಯವು ಒಂದು ಸಂಯುಕ್ತ ರಾಷ್ಟ್ರವಾಗಿದ್ದು ನಾಲ್ಕು ದ್ರಾವಿಡ ಭಾಷಾವಾರು ಪ್ರಾಂತ್ಯಗಳನ್ನು ಹೊಂದಿರುತ್ತದೆ
 • (ತಮಿಳು, ತೆಲುಗು, ಮಲಯಾಳಂ, ಕನ್ನಡ)
 • ಜಾತಿರಹಿತ ಸಮಾಜದ ಸ್ಥಾಪನೆ
 • ಸಾಮಾಜಿಕ, ಆರ್ಥಿಕ ಸಮಾನತೆ
 • ಶೋಷಿತ ಹಾಗೂ ದಮನಕ್ಕೊಳಗಾದ ಜನರ ಅಭ್ಯುದಯ
 • ವಸಾಹತುಶಾಹಿ ಹಿಡಿತದಿಂದ ಬಿಡುಗಡೆ ಇತ್ಯಾದಿ

ಆತ್ಮಗೌರವ ಚಳವಳಿಯಲ್ಲಿ ನಾಯ್ಕರ್‌ ಅವರು ಪ್ರತಿಪಾದಿಸಿದಂತೆ ಧರ್ಮ ಮತ್ತು ಸಂಪ್ರದಾಯಗಳನ್ನು ಆಧರಿಸಿದ ಎಲ್ಲ ರೀತಿಯ ಮೌಢ್ಯಗಳನ್ನು ತೊಡೆಯುವ ಪ್ರಯತ್ನಗಳೂ ನಡೆದವು. ಅವುಗಳೆಂದರೆ:

೧. ತಮ್ಮ ಧಾರ್ಮಿಕ ಪಂಥವನ್ನು ಸಂಕೇತಿಸುವಂತೆ ಹಣೆಗೆ ವಿಭೂತಿ ಹಚ್ಚುವ ಸಂಪ್ರದಾಯವನ್ನು ತೊರೆಯುವಂತೆ ಪಕ್ಷದ ಸದಸ್ಯರಿಗೆ ಕರೆ ನೀಡಲಾಯಿತು.

೨. ಕಾರ್ಯಕ್ರಮಗಳಲ್ಲಿ ಬ್ರಾಹ್ಮಣ ಪೌರೋಹಿತ್ಯಕ್ಕೆ ಬಹಿಷ್ಕಾರ

೩. ವಿಧವಾ ವಿವಾಹಕ್ಕೆ ಪ್ರೋತ್ಸಾಹ

೪. ಅಂತರ್‌ಜಾತಿಯ ವಿವಾಹಕ್ಕೆ ಪ್ರೋತ್ಸಾಹ

೫. ವಿವಾಹ ಸಂಪ್ರದಾಯಗಳಲ್ಲಿ ಸುಧಾರಣೆ

೬. ಹಿಂದೂ ಧಾರ್ಮಿಕ ವಿಧಿಗಳನ್ನು ಬಹಿಷ್ಕರಿಸುವುದು

೭. ಮೂರ್ತಿ ಪೂಜೆಯನ್ನು ತಿರಸ್ಕರಿಸುವುದು

೮. ಸಂಸ್ಕೃತದಲ್ಲಿ ರಚಿತವಾದ ಧಾರ್ಮಿಕ ಗ್ರಂಥಗಳನ್ನು ಬಹಿಷ್ಕರಿಸುವುದು ಇತ್ಯಾದಿ.

ರಾಮಾಯಣದ ಪುನರ್ವ್ಯಾಖ್ಯಾನ ಮತ್ತು ತಮಿಳು ಪುನರುತತ್ಥಾನ

ಧಾರ್ಮಿಕ ಗ್ರಂಥ ಹಾಗೂ ಪುರಾಣದ ‘ರಾಮಾಯಣ’ವನ್ನು ಬಹಿಷ್ಕರಿಸಿದ ವಿಚಾರವು ಅತಿ ಹೆಚ್ಚಿನ ಚರ್ಚೆಗೆ ಒಳಗಾಯಿತು. ಕಾರಣವೇನೆಂದರೆ ಇಲ್ಲಿ ಆರ್ಯನಾದ ರಾಮನು ನಾಯಕನಾಗಿಯೂ ‘ದ್ರಾವಿಡ’ ರಾಜ ರಾವಣನು ಖಳನಾಯಕನಾಗಿಯೂ ಚಿತ್ರಿತರಾಗಿದ್ದಾರೆ ಎಂದು ಪೆರಿಯಾರರು ಗ್ರಂಥವನ್ನೇ ಬಹಿಷ್ಕರಿಸಲು ಕರೆ ನೀಡುತ್ತಾರೆ. ದ್ರಾವಿಡನಾಡು ಚಳವಳಿಯಲ್ಲಿ ‘ರಾವಣನು ನಿಜವಾದ ನಾಯಕನೆಂದು’ ಬಿಂಬಿಸಲಾಯಿತು. ರಾವಣನನ್ನು ದ್ರಾವಿಡಸ್ಥಾನದ ಸಂಕೇತವಾಗಿ ಬಿಂಬಿಸುತ್ತಾ ದ್ರಾವಿಡಸ್ಥಾನ ಚಳವಳಿಗೆ ಜನಬೆಂಬಲ ಕ್ರೋಡೀಕರಿಸುವ ಉದ್ದೇಶದಿಂದ ರಾಮಾಯಣ ನಾಟಕವನ್ನು ತಮಿಳುನಾಡಿನಾದ್ಯಂತ ಪ್ರದರ್ಶಿಸಬೇಕಾಯಿತು.

ಈ ಸಂದರ್ಭದಲ್ಲಿ ತಮಿಳು ಪುನರುತ್ಥಾನದ ಪ್ರಕ್ರಿಯೆಯೂ ಆರಂಭವಾಯಿತು. ಪ್ರಾಚನ ತಮಿಳು ಗ್ರಂಥಗಳನ್ನು ಮರು ವ್ಯಾಖ್ಯಾನಿಸಲಾಯಿತು. ತಮಿಳು ಭಾಷೆಯನ್ನು ಸಂಸ್ಕೃತದ ಪ್ರಭಾವದಿಂದ ಮುಕ್ತಗೊಳಿಸಿ ಶುದ್ಧಗೊಳಿಸುವ ಪ್ರಕ್ರಿಯೆಯೂ ನಡೆಯಿತು. ಒಟ್ಟಾರೆಯಾಗಿ ಈ ಚಳವಳಿಯು ತಮಿಳು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ರಾಂತಿಗೆ ನಾಂದಿಯಾಯಿತು.

ಒಟ್ಟಾರೆಯಾಗಿ ದ್ರಾವಿಡ ಚಳವಳಿಯು ತಮಿಳರನ್ನು ಒಂದು ಸಮುದಾಯವಾಗಿ ರೂಪಿಸಿತು. ದ್ರಾವಿಡ ಕಜಗಂ ಪಕ್ಷವು ತಮಿಳುನಾಡಿನಾದ್ಯಂತ ಸ್ಥಾಪಿಸಲಾದ ತನ್ನ ಶಾಖೆಗಳ ಮೂಲಕ ಜನತೆಯಲ್ಲಿ ತಮಿಳು ರಾಷ್ಟ್ರೀಯತೆಯನ್ನು ಬೆಳೆಸಿತು. ಕ್ರಾಂತಿಕಾರಿ ಭಾಷಣಗಳು, ನಾಟಕಗಳು, ಸಾಹಿತ್ಯ ಇತ್ಯಾದಿಗಳ ಮೂಲಕ ತಮಿಳುನಾಡಿನ ಹಿಂದುಳಿದ, ಶೋಷಿತ ಸಮುದಾಯಗಳಲ್ಲಿ ಆತ್ಮ ಪ್ರಜ್ಞೆಯನ್ನು ಮುಡಿಸಿ ತಮ್ಮ ಅನನ್ಯತೆಗಾಗಿ ಹೋರಾಡುವಂತೆ ಪ್ರೇರೇಪಿಸಿತು. ಖ್ಯಾತ ವಿದ್ವಾಂಸ ಮೈನರ್‌ ವೀನರ್‌ ಹೇಳುವಂತೆ “ಸಮುದಾಯ ಆಧಾರಿತ ಸಂಘಟನೆಗಳ ರಚನೆಯೇ ಜನತೆಯಲ್ಲಿ ಸಮುದಾಯ ನಿಷ್ಠೆಯನ್ನು ಬಲಗೊಳಿಸುತ್ತವೆ”. ಈ ಹಿನ್ನೆಲೆಯಲ್ಲಿ ದ್ರಾವಿಡ ಸಂಘಟನೆಳು ಸ್ಥಾಪನೆಗೊಂಡಾಗ ಅದುವರೆಗೆ ದನಿಯೆತ್ತದ ಶೋಷಿತ ಸಾಮಾಜಿಕ ಗುಂಪುಗಳು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲಾರಂಭಿಸಿದವು.

ಆತ್ಮಗೌರವ ಚಳವಳಿ ಮತ್ತು ದ್ರಾವಿಡ ಚಳವಳಿಯ ವೈಶಿಷ್ಟ್ಯತೆ

ಜಸ್ಟೀಸ್‌ ಪಕ್ಷವು ತಮಿಳುನಾಡಿನ ಬ್ರಾಹ್ಮಣೇತರ ವರ್ಗದ ಸಾಮಾಜಿಕ ಶೈಕ್ಷಣಿಕ ಹಿನ್ನಡೆಗೆ ಕಾರಣಗಳನ್ನು ಗುರುತಿಸಿ ಅವರಿಗೆ ಒಂದು ರಾಜಕೀಯ ಕಾರ್ಯಕ್ರಮ ರೂಪಿಸುವ ಪ್ರಯತ್ನದಲ್ಲಿ ತೊಡಗಿದ್ದರೆ, ಪೆರಿಯಾರ್‌ಹಾಗೂ ಅವರ ಆತ್ಮಾಭಿಮಾನ ಚಳವಳಿಯ ಕಾರ್ಯಕರ್ತರು ಒಂದು ಹೆಜ್ಜೆ ಮುಂದೆ ಇಟ್ಟು ಈ ರಾಜಕೀಯ ಹೋರಾಟಕ್ಕೆ ಸಾಂಸ್ಕೃತಿಕ ಆಯಾಮವನ್ನು ನೀಡಿದರು.

ಆತ್ಮಾಭಿಮಾನ ಚಳವಳಿಯು ಭಾರತದಲ್ಲಿ ಆ ಸಂದರ್ಭದಲ್ಲಿ ವ್ಯಾಪಕಗೊಂಡ ರಾಷ್ಟ್ರೀಯ ಚಳವಳಿಗೆ ಮುಖಾಮುಖಿಯಾಗಿ ಒಂದು ಪರ್ಯಾಯ ಚಿಂತನೆಯನ್ನು ಕಟ್ಟಿ ಬೆಳೆಸಿತು. ಹಾಗಾಗಿ ಈ ಚಳವಳಿಯು ಅತ್ಯಂತ ಹೆಚ್ಚಿನ ಸಂಘರ್ಷವನ್ನೇ ಎದುರಿಸಬೇಕಾಯಿತು. ಮಹಾತ್ಮಾಗಾಂಧಿಯಂತಹ ಮೇರು ವ್ಯಕ್ತಿತ್ವ ಹೊಂದಿರುವ ನಾಯಕರು ಮುನ್ನಡೆಸುತ್ತಿದ್ದ ರಾಷ್ಟ್ರೀಯ ಚಳವಳಿಗೆ ಪರ್ಯಾಯ ಚಿಂತನೆಯನ್ನು ರೂಪಿಸಿ ಗಟ್ಟಿಗೊಳಿಸುವುದು ಸುಲಭದ ಮಾತಾಗಿರಲಿಲ್ಲ. ಆ ಸಂದರ್ಭದಲ್ಲಿ ಆತ್ಮಗೌರವ ಚಳವಳಿಯು ಮಾನವ ಹಕ್ಕುಗಳ ಶ್ರೇಷ್ಠತೆಯನ್ನು ಪ್ರತಿಪಾದಿಸತೊಡಗಿತಲ್ಲದೆ ಸಮಸ್ತ ರಾಷ್ಟ್ರೀಯತೆಯ ವಾಙ್ಮಯಕ್ಕೆ ಹೊಸ ಆಯಾಮಗಳನ್ನು ಒದಗಿಸಿತು.

ಈ ಚಳವಳಿಯು ಜನಪರವಾಗಿತ್ತು. ಬೌದ್ಧಿಕ ಕಸರತ್ತುಗಳಾದ ಸಂವಾದ, ಉಪನ್ಯಾಸ, ಪ್ರದರ್ಶನ, ಭಾಷಣ ಇತ್ಯಾದಿಗಳಿಂದ ಯುವಕ-ಯುವತಿಯರನ್ನು ತನ್ನೆಡೆಗೆ ಆಕರ್ಷಿಸಿತು. ಹಿಂದೂ ವಿಷಯಗಳೂ ಇದರಲ್ಲಿ ಅಡಕವಾಗಿತ್ತು. ಕವಿಗಳು, ಹಾಡುಗಾರರು, ಕಾರ್ಯಕರ್ತರ ಸಮಾಗಮವು ಆತ್ಮಗೌರವ ಚಳವಳಿಯ ಸಾಮಾನ್ಯ ಲಕ್ಷಣವಾಗಿತ್ತು. ಈ ಚಳವಳಿಯು ಭಾರತೀದಾಸನ್‌ನಂತಹ ಕವಿಗಳನ್ನೂ, ಜೀವನಂಧಮ್‌, ಗುರುಸ್ವಾಮಿಯಂತಹ ಬರಹಗಾರರನ್ನೂ ಸೃಷ್ಟಿಸಿತು.

ಈ ಚಳವಳಿಯ ಇನ್ನೊಂದು ಮುಖ್ಯ ವೈಶಿಷ್ಟ್ಯವೆಂದರೆ ಇದು ಮೇಲ್ವರ್ಗದ ಜನರ ಚಳವಳಿಯಾಗಿ ಸೀಮಿತಗೊಳ್ಳಲಿಲ್ಲ. ಒಬ್ಬ ಮಹಿಳೆ, ಒಬ್ಬ ದಲಿತ, ಓರ್ವ ನೌಕರ, ಇನ್ನೋರ್ವ ಕಾರ್ಮಿಕ ಹೀಗೆ ಸಮಾಜದ ಕೆಳಸ್ತರದ ವ್ಯಕ್ತಿಗಳು ಹಾಗೂ ಕೆಳಸ್ತರದ ವೃತ್ತಿಯನ್ನವಲಂಬಿಸಿದ ಜನರಿಂದ ತುಂಬಿಕೊಂಡಿತ್ತು. ಹಾಗಾಗಿ ಇದು ಭಾರತ ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಮೈಲಿಗಲ್ಲಾಯಿತು.