ಕೇಶವರಾವ್ಜೇಧೆ (೧೮೯೬೧೯೫೯)

ಮಹಾರಾಷ್ಟ್ರದ ಬ್ರಾಹ್ಮಣೇತರ ಚಳವಳಿಯು ಸೃಷ್ಟಿಸಿದ ಮಹಾನ್‌ ನಾಯಕರಲ್ಲಿ ಜೇಧೆಯವರ ಹೆಸರು ಚಿರಪರಿಚಿತವಾಗಿದೆ. ಅವರು ಮರಾಠ ಕುಟುಂಬಗಳಲ್ಲೇ ಹೆಸರಾಂತ ಕನೋಜಿ ಜೇಧೆ ವಂಶಕ್ಕೆ ಸೇರಿದವರು. ಫರ್ಗ್ಯುಸನ್‌ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಜೇಧೆಯವರು ಮಧ್ಯದಲ್ಲೇ ಅದನ್ನು ತೊರೆದು ಆಲ್‌ ಇಂಡಿಯಾ ಮರಾಠಾ ಲೀಗನ್ನು (All India Marathan League) ೧೯೧೮ರಲ್ಲಿ ಸೇರಿದರು. ಪೂನಾದಲ್ಲಿದ್ದ ಜೇಧೆಯವರ ಬಂಗಲೆಯೇ ಬ್ರಾಹ್ಮಣೇತರ ಕೇಂದ್ರವಾಗಿತ್ತು. ಶಾಹು ಮಹಾರಾಜರು, ಶಿಂಧೆಯವರು ಹಾಗೂ ಇನ್ನಿತರ ನಾಯಕರು ಆಗಾಗ ಅವರ ನಿವಾಸ ‘ಜೇಧಮ್ಯಾನ್ ಷನ್’ಗೆ ಭೇಟಿ ನೀಡುತ್ತಿದ್ದರು. ಯುವ ನಾಯಕ ದಿನಕರ್ ರಾವ್ ಜಾವಲ್ಕರ್ ಜೊತೆಗೂಡಿ ಜೇಧೆಯವರು ಬ್ರಾಹ್ಮಣೇತರ ಚಳವಳಿಯ ಹೊಸ ಅಧ್ಯಾಯವನ್ನೇ ತೆರೆದರು.

೧೯೨೫ರಲ್ಲಿ ಜೇಧೆಯವರು ಪೂನಾ ನಗರಪಾಲಿಕೆಯ ಸದಸ್ಯರಾಗಿ ಆಯ್ಕೆಗೊಂಡರು. ಆಗ ಬ್ರಾಹ್ಮಣೇತರ ವರ್ಗ ದೊಡ್ಡ ಶಕ್ತಿಯಾಗಿ ಬೆಳೆದಿರಲಿಲ್ಲ. ಅದೇ ವರ್ಷ ಪೂನಾ ನಗರ ಪಾಲಿಕೆಯ ಸಾರ್ವಜನಿಕ ಬಾವಿ ಹಾಗೂ ನೀರು ಸರಬರಾಜನ್ನು ಅಸ್ಪೃಶ್ಯರಿಗೂ ವಿಸ್ತರಿಸುವಂತೆ ಒಂದು ನಿರ್ಣಯ ಮಂಡಿಸಿದರು. ಹಾಗೆಯೇ ಪುಲೆಯವರ ಪ್ರತಿಮೆ ಸ್ಥಾಪಿಸುವಂತೆಯೂ ನಿರ್ಣಯ ಮಂಡಿಸಲಾಯಿತು. ಆದರೆ ಪಾಲಿಕೆಯಲ್ಲಿ ತಿಲಕರ ಬೆಂಬಲಿಗರೆಂದು ಹೇಳಲಾದ ಬಹುಸಂಖ್ಯಾತ ಬ್ರಾಹ್ಮಣ ಸದಸ್ಯರು ಈ ನಿರ್ಣಯವನ್ನು ಅಂಗೀಕರಿಸಲಿಲ್ಲ. ಅದೇ ವರ್ಷ ಜಾವಲ್ಕರ್ ಬರೆದ ‘ದೇಶಾಚೆ ದುಶ್ಮನ್’ ಎಂಬ ಕೃತಿಯನ್ನು ಜೇದೆಯವರು ಪ್ರಕಟಿಸಿದರು. ಈ ಪುಸ್ತಕದಲ್ಲಿ ತಿಲಕರು ಹಾಗೂ ಚಿಪ್ಲೂಂಕರ್ ರಂತಹ ನಾಯಕರನ್ನು ದೇಶದ ವೈರಿಗಳೆಂದು ಬಣ್ಣಿಸಲಾಯಿತು. ಈ ವಿವಾದವು ಉಚ್ಚ ನ್ಯಾಯಾಲಯದ ಮುಂದೆ ಬಂದಾಗ ಅಂಬೇಡ್ಕರ್ ಜೇಧೆ ಜಾವಲ್ಕರ್ ಪರ ವಾದ ಮಂಡಿಸಿದರು. ಅಂಬೇಡ್ಕರ್ ಅವರು ಮಹಾದ್ ಮುಂತಾದ ಸ್ಥಳಗಳಲ್ಲಿ ನೀರಿನ ಹಕ್ಕಿಗಾಗಿ ಹೋರಾಟ ನಡೆಸಿದಾಗ ಜೇಧೆ ಹಾಗೂ ಜಾವಲ್ಕರ್ ಸಕ್ರಿಯವಾಗಿ ಭಾಗವಹಿಸಿದ್ದರು. ಮುಂದೆ ಅಂಬೇಡ್ಕರ್ ಪುಣೆ ಹಾಗೂ ನಾಸಿಕದಲ್ಲಿ ದೇಗುಲ ಪ್ರವೇಶ ಚಳವಳಿ ನಡೆಸಿದಾಗಲೂ ಅವರೀರ್ವರು ಬೆಂಬಲಿಸಿದ್ದರು.

ಆದರೆ ೧೯೩೨ರಲ್ಲಿ ಜೇಧೆಯವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸೇರುವುದರೊಂದಿಗೆ ಮಹಾರಾಷ್ಟ್ರದಲ್ಲಿ ಬ್ರಾಹ್ಮಣೇತರ ಚಳವಳಿಯ ಹಿನ್ನಡೆ ಅನುಭವಿಸಿತು.

ಮಹಾರಾಷ್ಟ್ರದ ಬ್ರಾಹ್ಮಣೇತರ ಚಳವಳಿಯು ಏಕರೂಪದ ಚಳವಳಿಯೇನೂ ಆಗಿರಲಿಲ್ಲ. ಅಲ್ಲಿ ಸಾಕಷ್ಟು ವೈವಿಧ್ಯತೆಗಳೂ, ಭಿನ್ನಭಿಪ್ರಾಯಗಳೂ ಇದ್ದವು. ಜೇಧೆ ಮತ್ತವರ ಬೆಂಬಲಿಗರು ಸೈಮನ್ ಆಯೋಗವನ್ನು ಬಹಿಷ್ಕರಿಸಬೇಕೆಂದು ಬಯಸಿದ್ದರೆ. ಇನ್ನೊಂದು ಗುಂಪು ಆಯೋಗದ ಪರವಾಗಿತ್ತು. ಆದರೆ ನಂತರದ ದಿನಗಳಲ್ಲಿ ಜೇಧೆಯವರನ್ನೊಳಗೊಂಡು ಪ್ರಮೂಖ ಬ್ರಾಹ್ಮಣೇತರ ನಾಯಕರು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಕೈಗೊಂಡ ಅಸಹಕಾರಚಳವಳಿಯಲ್ಲಿಪಾಲ್ಕೊಂಡು ಜೈಲುವಾಸವನ್ನು ಅನುಭವಿಸಿದರು. ಬ್ರಾಹ್ಮಣೇತರ ಚಳವಳಿಯು ನಿಧಾನವಾಗಿ ರಾಷ್ಟ್ರೀಯ ಚಳವಲಿಯಲ್ಲಿ ಐಕ್ಯತೆಗೊಳ್ಳತೊಡಗಿತು

ಮದ್ರಾಸು ಪ್ರಾಂತ್ಯದಲ್ಲಿ ಬ್ರಾಹ್ಮಣೇತರ ಚಳವಳಿ

ಬ್ರಾಹ್ಮಣೇತರ ಜಾತಿ-ಸಮುದಾಯಗಳು ತಮಿಳುನಾಡಿನಲ್ಲಿ ಇಂದು ಪಡೆಯುತ್ತಿರುವ ವಿಶೇಷ ಸವಲತ್ತುಗಳೇನಿದ್ದರೂ ಅವುಗಳು ಬಹುತೇಕ ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಆ ಪ್ರಾಂತ್ಯದಲ್ಲಿ ಚಳವಳಿಯ ಕೊಡುಗೆಯೆಂದೇ ಹೇಳಬಹುದು. ದಕ್ಷಿಣ ಭಾರತದ ಇತರೆಡೆಗಳಂತೆಯೇ ಮದ್ರಾಸು ಪ್ರಾಂತ್ಯದಲ್ಲಿಯೂ ಬ್ರಾಹ್ಮಣರು ವಸಾಹತು ಆಡಳಿತದ ಪ್ರಾರಂಭದ ಹಂತದಲ್ಲಿ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಲಸೆ ಬಂದು ಆಧುನಿಕ ಶಿಕ್ಷಣವನ್ನು ತಮ್ಮ ಬದುಕಿನ ಮುಖ್ಯ ಅಂಗವನ್ನಾಗಿ ಮಾಡಿಕೊಂಡರು. ಆ ಕಾರಣದಿಂದ ಬ್ರಿಟಿಷರ ನಗರ ಕೇಂದ್ರಿತ ಹೊಸ ಆಡಳಿತ ವ್ಯವಸ್ಥೆಗೆ ಅಗತ್ಯವಾಗಿದ್ದ ನೌಕರವರ್ಗ ಹಾಗೂ ಅಧಿಕಾರಿ ವರ್ಗವಾಗಿ ಮಾರ್ಪಟ್ಟು, ಆಧುನಿಕ ರಾಜ್ಯ ವ್ಯವಸ್ಥೆಯಲ್ಲಿ ಪ್ರಭಾವಕಾರಿಗಳಾಗಿ ಬೆಳೆದರು. ಒಂದು ಅಧ್ಯಯನದ ಪ್ರಕಾರ ಮದ್ರಾಸು ಪ್ರಾಂತ್ಯದಲ್ಲಿ ಶೇ. ೩೫ ರಷ್ಟಿದ್ದ ಬ್ರಾಹ್ಮಣ ವರ್ಗವು ಶೇ. ೭೦ಕ್ಕಿಂತಲೂ ಅಧಿಕ ಸರ್ಕಾರಿ ಹುದ್ದೆಗಳನ್ನು ತನ್ನದಾಗಿಸಿಕೊಂಡಿತ್ತು.

ಬ್ರಾಹ್ಮಣೇತರ ಚಳವಳಿಯ ಹುಟ್ಟು

ಇಪ್ಪತ್ತನೇಯ ಶತಮಾನದ ಆದಿಭಾಗದಲ್ಲಿ ಭೂಒಡೆತನ ಹೊಂದಿದ್ದ ಬ್ರಾಹ್ಮಣೇತರರು ಆಧುನಿಕ ಶಿಕ್ಷಣ ಪಡೆದು ಸರ್ಕಾರಿ ಹುದ್ದೆಗಳಲ್ಲಿ ಸೇರಿಸಿಕೊಂಡರು. ಬ್ರಾಹ್ಮಣರ ಏಕಸ್ವಾಮ್ಯಕ್ಕೆ ಅವರ ಶೈಕ್ಷಣಿಕ ಹಿನ್ನೆಲೆಯೇ ಕಾರಣವೆಂದು ಅರಿತು ಬ್ರಾಹ್ಮಣೇತರರು ಶಿಕ್ಷಣಕ್ಕೆ ಮಹತ್ವ ನೀಡಬೇಕೆಂದು ಉತ್ತೇಜಿಸಿದರು. ಹಾಗೆಯೇ ಶಿಕ್ಷಿತ ಬ್ರಾಹ್ಮಣೇತರರಿಗೆ ಸರ್ಕಾರಿ ಹುದ್ದೆಗಳಲ್ಲಿ ಪ್ರಾತಿನಿಧ್ಯ ನೀಡಬೇಕೆಂದೂ ಒತ್ತಾಯಿಸ ತೊಡಗಿದರು. ೧೯೧೪ರ ಸಮಯದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು ಪ್ರಗತಿಪರ ಚಿಂತಕರಾಗಿದ್ದ ಡಾ. ಸಿ. ಎನ್. ಮೊದಲಿಯಾರರು ‘‘ಮದ್ರಾಸು ದ್ರವಿಡಿಯನ್ ಅಸೋಸಿಯೇಷನ್” ಎನ್ನುವ ಸಂಘಟನೆಯನ್ನು ರಚಿಸಿ ಬ್ರಾಹ್ಮಣೇತರ ಶಿಕ್ಷತ ವರ್ಗಕ್ಕೆ ಒಂದು ವೇದಿಕೆಯನ್ನು ಒದಗಿಸಿದರು. ನಂತರ ಡಿಸೆಂಬರ್ ೧೯೧೬ರಲ್ಲಿ ಡಾ. ಟಿ. ಎಂ ನಾಯರ್, ಸರ್ ತ್ಯಾಗರಾಜ ಚೆಟ್ಟಿಯಾರರು ಮೊದಲಾದವರೊಂದಿಗೆ ಸೇರಿ “ಸೌತ ಇಂಡಿಯನ್ ಲಿಬರಲ್ ಫೆಡರೇಷನ್” ಎನ್ನುವ ವೇದಿಕೆಯನ್ನು ಸಂಘಟಿಸಿದರು. ಮುಂದೆ ಇವರು ಪ್ರಾರಂಭಿಸಿದ ‘ಜಸ್ಟೀಸ್’ ಎನ್ನುವ ಹೆಸರಿನ ಪತ್ರಿಕೆಯಿಂದಾಗಿ ಇದನ್ನು ಜಸ್ಟೀಸ್ ಪಕ್ಷವೆಂದು ಕರೆಯಲಾಯಿತು.

ಜಸ್ಟಿಸ್ ಪಕ್ಷ

೧೯೧೬ರಲ್ಲಿ ಸ್ಥಾಪಿಸಲಾದ ಜಸ್ಟಿಸ್ ಪಕ್ಷವು ಸರ್ಕಾರಿ ಹುದ್ದೆಗಳಲ್ಲಿ ಹಾಗೂ ಶಾಸಕಾಂಗದಲ್ಲಿ ಬ್ರಾಹ್ಮಣೇತರಿಗೆ ಪ್ರಾತಿನಿಧ್ಯದ ಬೇಡಿಕೆಯನ್ನು ಮುಂದಿಟ್ಟು ಕೊಂಡು ಹೋರಾಡತೊಡಗಿತು. ಆ ಸಂದರ್ಭದಲ್ಲಿ ಹೊರಡಿಸಲಾದ ‘ಜಸ್ಟಿಸ್’, ‘ದ್ರಾವಿಡಿಯನ್,’ ‘ಆಂಧ್ರ ಪ್ರಕಾಶಿಕ’ ಮುಂತಾದ ಪತ್ರಿಕೆಗಳು ಜಸ್ಟಿಸ್ ಪಕ್ಷದ ಪ್ರಣಾಳಿಕೆಯನ್ನು ಬೆಂಬಲಿಸುತ್ತಾ ಹಾಗೂ ಅದರ ಟೀಕಾಕಾರರಿಗೆ ಪಕ್ಷದ ಪರವಾಗಿ ವಿವರಣೆಗಳನ್ನು ನೀಡುತ್ತಾ ಬ್ರಾಹ್ಮಣೇತರ ಚಳವಳಿಯನ್ನು ಬೆಳೆಸಿದವು. ರಾಷ್ಟ್ರೀಯ ಚಳವಳಿಯಲ್ಲಿ ತೊಡಗಿಕೊಂಡ ಬ್ರಾಹ್ಮಣರ ಪ್ರಾಬಲ್ಯವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸುವ ದೃಷ್ಟಿಯಿಂದ ಬ್ರಿಟಿಷ್ ಆಡಳಿತವು ಈ ಚಳವಳಿಗೆ ಪರೋಕ್ಷ ಬೆಂಬಲವನ್ನು ನೀಡಿತು. ಈ ಕಾರಣದಿಂದ ಜಸ್ಟಿಸ್ ಪಕ್ಷದ ಬೇಡಿಕೆಗಳಿಗೆ ಮದ್ರಾಸು ಸರ್ಕಾರದ ಬೆಂಬಲವೂ ದೊರಕಿತು. ೧೯೧೯ ರಲ್ಲಿ ಮೊಂಟೆಗೊ-ಚೇಮ್ಸ್ ಫರ್ಡ್ ಸುಧಾರಣೆಗಳಲ್ಲಿ ಬ್ರಾಹ್ಮಣೇತರರಿಗೆ ಪ್ರಾತಿನಿಧ್ಯ ನೀಡಲಾಯಿತು.

ಈ ಮೇಲೆ ವಿವರಿಸಲಾದ ಕಾರಣಗಳಿಂದಾಗಿ ೧೯೨೦ರ ಚುನಾವಣೆಯಲ್ಲಿ ಜಸ್ಟೀಸ್ ಪಕ್ಷ ಜಯಗಳಿಸಿ ಅಧಿಕಾರ ಪಡೆಯಿತು. ಅಧಿಕಾರ ದೊರಕಿದ ನಂತರ ಪಕ್ಷವು ಬ್ರಾಹ್ಮಣೇತರರ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಂಡಿತು. ಮುಖ್ಯವಾಗಿ ೧೯೨೧ ಹಾಗೂ ೧೯೨೨ರಲ್ಲಿ ಎರಡು ಆಜ್ಞೆಗಳನ್ನು ಹೊರಡಿಸಿ ಬ್ರಾಹ್ಮಣೇತರರಿಗೆ ಉದ್ಯೋಗಾವಕಾಶಗಳನ್ನು ವಿಸ್ತರಿಸಲಾಯಿತು.

ಈ ರೀತಿ ಪ್ರಾರಂಭವಾದ ಬ್ರಾಹ್ಮಣೇತರರ ಪರವಾದ ಸರ್ಕಾರದ ನೀತಿಗಳು ೧೯೨೬ರ ತನಕವೂ ಮುಂದುವರಿಯಿತು. ಆದರೆ ೧೯೨೬ರ ಚುನಾವಣೆಯಲ್ಲಿ ಕೆಲವು ಪಕ್ಷೇತರರ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೇರಿತು. ಬ್ರಾಹ್ಮಣೇತರ ಚಳವಳಿಗೆ ಇದೊಂದು ಹಿನ್ನಡೆಯಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಆ ಸಮಯದಲ್ಲಿ ಇ. ವಿ. ರಾಮಸ್ವಾಮಿ ನಾಯ್ಕರ್‌ರ ನಿರ್ಗಮನದಿಂದಾಗಿ ಕಾಂಗ್ರೆಸ್ ಸರ್ಕಾರವು ೧೯೨೭ರಲ್ಲಿ ಇನ್ನೊಂದು ಆಜ್ಞೆ ಹೊರಡಿಸಿ ಬ್ರಾಹ್ಮಣೇತರ ವರ್ಗಕ್ಕೆ ಇನ್ನು ಹೆಚ್ಚಿನ ಸೌಲಭ್ಯ ನೀಡಿತು.

೧೯೨೮ ರಲ್ಲಿ ಜಸ್ಟೀಸ್ ಪಕ್ಷವು ಅಧಿಕಾರ ಪಡೆಯಿತು. ಈ ಸಂದರ್ಭದಲ್ಲಿ ಬ್ರಾಹ್ಮಣೇತರರಿಗೆ ಹಲವಾರು ಸೌಲಭ್ಯಗಳನ್ನು ನೀಡಿದರು ಪಕ್ಷದ ನಿಲುವಿನ ಬಗ್ಗೆ ಬ್ರಾಹ್ಮಣೇತರರಲ್ಲಿ ಹಿಂದುಳಿದ ಗುಂಪುಗಳು ಅತೃಪ್ತಿ ವ್ಯಕ್ತಪಡಿಸತೊಡಗಿದವು. ಬ್ರಾಹ್ಮಣೇತರ ವರ್ಗಗಳಲ್ಲಿ ಸೌಲಭ್ಯಗಳು ಮೇಲ್ಜಾತಿ, ಮೇಲ್ವರ್ಗಗಳಿಗೆ ಮಾತ್ರ ದೊರಕುತ್ತಿದ್ದು, ಅವುಗಳಲ್ಲಿ ಹಿಂದುಳಿದ ಜಾತಿಗಳನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಅಸಮಧಾನ ಅವರಲ್ಲಿ ತಲೆದೋರಿತು. ಜಸ್ಟೀಸ್ ಪಕ್ಷವು ಕೇವಲ ಜಮೀನ್ದಾರಿ ವರ್ಗಗಳಲ್ಲಿಯೇ ತನ್ನ ಸಾಮಾಜಿಕ ನೆಲೆ ಹೊಂದಿದ್ದು ಭೂರಹಿತ ವರ್ಗಗಳಲ್ಲಿ ನೆಲೆಯನ್ನು ವಿಸ್ತರಿಸಲು ಯತ್ನಿಸಿರಲಿಲ್ಲ. ಸ್ವಾಭಾವಿಕವಾಗಿಯೇ ಕೆಳಸ್ತರದ ಸಮುದಾಯಗಳಲ್ಲಿ ಅಗತ್ಯವಿರುವ ಸಾಮಾಜಿಕ ಸುಧಾರಣೆಗಳು ಪಕ್ಷದ ಮುಖ್ಯ ಕಾರ್ಯಕ್ರಮ ಆಗಿರಲಿಲ್ಲ. ಹಾಗಾಗಿ ಪಕ್ಷ ಸ್ಥಾಪನೆಗೊಂಡು ಒಂದು ದಶಕದಲ್ಲೇ ಅಲ್ಲಲ್ಲಿ ಬಿರುಕು ಧ್ವನಿಗಳು ಕೇಳಿ ಬರಲಾಂಭಿಸಿದವು. ನಾಯಕತ್ವದಲ್ಲೂ ಅಲ್ಲಲ್ಲಿ ಬಿರುಕುಗಳು ಕಾಣತೊಡಗಿ ಕೆಲವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ಕಡೆಗೆ ಒಲವು ವ್ಯಕ್ತಪಡಿಸಿದವು. ಈ ಕಾರಣದಿಂದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೂ ಬ್ರಾಹ್ಮಣೇತರರ ಬೇಡಿಕೆಗಳು ಸ್ಥಾನ ಪಡೆದವು. ೧೯೩೦ ರ ದಶಕದಲ್ಲಿ ತಮಿಳುನಾಡಿನಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದು ಎಲ್ಲಾ ಪಕ್ಷಗಳೂ ಒಪ್ಪಿಕೊಂಡ ನೀತಿಯಾದ ಕಾರಣ, ಆ ಬೇಡಿಕೆಯು ಜಸ್ಟೀಸ್ ಪಕ್ಷದ ಬೇಡಿಕೆಯಾಗಿ ಉಳಿಯಲಿಲ್ಲ. ಕಾಂಗ್ರೆಸ್ ಪಕ್ಷವು ಬ್ರಾಹ್ಮಣೇತರರ ಹಿತಾಸಕ್ತಿಗಳ ಬಗ್ಗೆ ಒಲವು ತೋರಲಾಂಭಿಸಿದಾಗ ಜಸ್ಟಿಸ್ ಪಕ್ಷವು ತನ್ನ ನೆಲೆ ಕಳೆದುಕೊಳ್ಳಲಾರಂಭಿಸಿತು. ಮೇಲಾಗಿ ಜಸ್ಟಿಸ್ ಪಕ್ಷವು ಬ್ರಿಟಿಷ್ ಆಡಳಿತದ ಕೈಗೊಂಬೆ ಎನ್ನುವ ಭಾವನೆಯೂ ಆ ಪಕ್ಷದ ಬೆಳವಣಿಗೆಗೆ ತೊಡಕಾಗಿ ಪರಿಣಮಿಸಿತ್ತು.

ಆತ್ಮಾಭಿಮಾನ ಚಳವಳಿ

ಜಸ್ಟೀಸ್ ಪಕ್ಷವು ಬ್ರಾಹ್ಮಣೇತರ ವರ್ಗದ ಪರವಾಗಿ ಹೋರಾಟಗಳನ್ನು ನಡೆಸುತ್ತಿದ್ದ ಈ ಸಂದರ್ಭದಲ್ಲಿ ಬಲಿಜ ನಾಯ್ಡು ಸಮುದಾಯದವರಾದ ಇ. ವಿ. ರಾಮಸ್ವಾಮಿ ನಾಯ್ಕರ್ ಪೆರಿಯಾರ್ ಕಾಂಗ್ರೆಸ್ ಪಕ್ಷದಲ್ಲಿ ತನ್ನ ರಾಜಕೀಯ ಜೀವನ ಪ್ರಾರಂಭಿಸಿದರು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಆ ಸಂದರ್ಭದಲ್ಲಿದ್ದ ಬ್ರಾಹ್ಮಣ ಪ್ರಭಾವದಿಂದ ನಾಯ್ಕರ್ ರವರು ಬೇಸರಗೊಂಡಿದ್ದರು. ಮಾತ್ರವಲ್ಲದೆ ಗಾಂಧೀಜಿಯವರ ವರ್ಣವ್ಯವಸ್ಥೆಯ ಪರವಾದ ನಿಲುವಿನಿಂದಲೂ ಅವರು ಅಸಮಾಧಾನಗೊಂಡು ೧೯೨೫ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಆತ್ಮಾಭಿಮಾನ ಚಳವಳಿಯನ್ನು ಪ್ರಾರಂಭಿಸಿದರು. ಆತ್ಮಾಭಿಮಾನ ಚಳವಳಿಯು ತಮಿಳನ್ನು ಗುಲಾಮಗಿರಿಗೆ ತಳ್ಳಿದ ವೈದಿಕ ಧರ್ಮ ಮತ್ತು ಸಂಸ್ಕೃತಿಯನ್ನು ನಿರಾಕರಿಸುವಂತೆ ಕರೆ ನೀಡಿತು. ೧೯೩೯ರ ಸಮಯದಲ್ಲಿ ನಾಯ್ಕರ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತ್ಯೇಕ ‘ದ್ರಾವಿಡ್ ರಾಜ್ಯ’ದ ಬೇಡಿಕೆಯನ್ನು ಮುಂದಿಟ್ಟರು. ಖ್ಯಾತ ವಿದ್ವಾಂಸರಾದ್ ಯೂಜಿನ್ ಇರ್ಷಿಕ್ ರವರು ಹೇಳುವಂತೆ

‘‘ಆತ್ಮಾಭಿಮಾನ ಚಳವಳಿಯು ಸಂಪೂರ್ಣ ತಮಿಳು ಜಿಲ್ಲೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಸಾಮಾಜಿಕ ಸುಧಾರಣೆಯ ವೇದಿಕೆಯ ಅಗತ್ಯತೆಯನ್ನು ಮನಗಂಡ, ಅಸ್ಪೃಶ್ಯರನ್ನು ಒಳಗೊಂಡು, ಜಾತಿ ಶ್ರೇಣಿಯಲ್ಲಿ ಕೆಳಸ್ತರದ ಗುಂಪುಗಳಲ್ಲಿ ಕೇಂದ್ರೀಕೃತವಾಗಿತ್ತು”.

ದ್ರಾವಿಡ ಕಜಗಂ ಸ್ಥಾಪನೆ

ಆತ್ಮಾಭಿಮಾನ ಚಳವಳಿಯು ಬ್ರಾಹ್ಮಣೇತರ ಚಳವಳಿಗೆ ಪ್ರಧಾನ ವೇದಿಕೆಯಾಗಿದ್ದರೂ, ಉಚ್ಛ ಬ್ರಾಹ್ಮಣೇತರರು ಆತ್ಮಾಭಿಮಾನ ಚಳವಳಿಯಲ್ಲಿ ತಮ್ಮ ಹಿತಾಸಕ್ತಿಗಳನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಪೆರಿಯಾರ್‌ ನೇತೃತ್ವದ ಆತ್ಮಾಭಿಮಾನ ಚಳವಳಿಯ ಗುಂಪು ಜಸ್ಟೀಸ್‌ ಪಕ್ಷವನ್ನು ಸಂಘಟನೆ ಮಾಡಲು ಪ್ರಯತ್ನಿಸಿತು. ಇದರ ಪರಿಣಾಮವಾಗಿ ೧೯೪೪ರಲ್ಲಿ ಜಸ್ಟೀಸ್‌ ಪಕ್ಷವನ್ನು ಪುನಃ ಸಂಘಟಿಸಿ ‘ದ್ರಾವಿಡ ಕಜಗಂ’ ಎನ್ನುವ ವೇದಿಕೆಯನ್ನು ಸ್ಥಾಪಿಸಲಾಯಿತು. ದ್ರಾವಿಡ ಕಜಗಂ ಬ್ರಾಹ್ಮಣೇತರ ವರ್ಗದ ಹಿತಾಸಕ್ತಿಯ ಪರವಾಗಿಯೂ ಉತ್ತರ ಭಾರತ ವಿರೋಧಿ ಹಾಗೂ ಹಿಂದಿ ವಿರೋಧಿ ನಿಲುವಿನೊಂದಿಗೆ ಪ್ರತ್ಯೇಕ ‘ತಮಿಳು ರಾಷ್ಟ್ರೀಯತೆ’ಯನ್ನು ಪ್ರತಿಪಾದಿಸತೊಡಗಿತು.

೧೯೪೦ರ ದಶಕದ ಅಂತ್ಯದಲ್ಲಿ ಕೆಲವು ಯುವ ನಾಯಕರು ದ್ರಾವಿಡ ಕಜಗಂ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವದ ಬೇಡಿಕೆಯನ್ನು ಮುಂದಿಟ್ಟರು. ೧೯೪೯ರಲ್ಲಿ ಸಿ. ಎನ್‌. ಅಣ್ಣಾ ದೊರೈಯವರ ನೇತೃತ್ವದಲ್ಲಿ ಈ ಯುವ ಕಾರ್ಯಕರ್ತರು ಪಕ್ಷದೊಳಗೆ ಪೆರಿಯಾರರ ಏಕಸ್ವಾಮ್ಯವನ್ನು ಪ್ರಶ್ನಿಸಿ, ತಮ್ಮದೇ ಹೊಸ ಪಕ್ಷವಾದ “ದ್ರಾವಿಡ ಮುನ್ನೇತ್ರ ಕಜಗಂ” ಎನ್ನುವ ನೂತನ ಪಕ್ಷವನ್ನು ಸ್ಥಾಪಿಸಿದರು. ಈ ಬೆಳವಣಿಗೆಯು ತಮಿಳುನಾಡಿನ ಬ್ರಾಹ್ಮಣೇತರ ಚಳವಳಿಗೆ ಹೊಸ ಆಯಾಮವನ್ನು ನೀಡಿತು.

ಈ ನಡುವೆ ೧೯೪೭ರಲ್ಲಿ ಸರ್ಕಾರ ಒಂದು ಆಜ್ಞೆ ಹೊರಡಿಸಿ ಬ್ರಾಹ್ಮಣೇತರ ವರ್ಗಗಳನ್ನು ಎರಡು ಪಂಗಡಗಳನ್ನಾಗಿ ವಿಭಜಿಸಿತು. ಅವುಗಳೆಂದರೆ ಬ್ರಾಹ್ಮಣೇತರ ಹಿಂದುಳಿದ ಹಾಗೂ ಹಿಂದುಳಿದ ಬ್ರಾಹ್ಮಣೇತರ ಹಿಂದೂ ಜಾತಿಗಳೆನ್ನುವ ಎರಡು ವರ್ಗಗಳು. ಸ್ವಾಭಾವಿಕವಾಗಿಯೇ ಬ್ರಾಹ್ಮಣೇತರ ಹಿಂದುಳಿದ ವೆಲ್ಲಾಳ, ನಾಯ್ಡು, ಚೆಟ್ಟಿಯಾರ್‌, ರೆಡ್ಡಿ ಮುಂತಾದ ಸಮುದಾಯಗಳು ಈ ವಿಭಜನೆಯನ್ನು ವಿರೋಧಿಸಲಿಲ್ಲ. ಎಕೆಂದರೆ ಆ ಸಮುದಾಯಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ. ೪೩ ರಷ್ಟು ಮೀಸಲಾತಿ ನೀಡಲಾಗಿತ್ತು. ಆದರೆ ಇತರ ಹಿಂದುಳಿದ ಜಾತಿಗಳು ಈ ವಿಭಜನೆಯಿಂದ ಅಸಮಾಧಾನಗೊಂಡವು. ಸರ್ವೋಚ್ಛ ನ್ಯಾಯಾಲಯದಲ್ಲಿ ಈ ಆಜ್ಞೆಯನ್ನು ಪ್ರಶ್ನಿಸಲಾದಾಗ ನ್ಯಾಯಾಲಯವು ಅದನ್ನು ಅನೂರ್ಜಿತಗೊಳಿಸಿತು. ಮುಂದೆ ೧೯೫೧ರಲ್ಲಿ ಹೊರಡಿಸಿದ ಆಜ್ಞೆಯಲ್ಲಿ ಈ ಉಪವಿಭಜನೆಯನ್ನು ಕೈಬಿಟ್ಟು ಹಿಂದುಳಿದ ವರ್ಗಗಳಿಗೆ ಒಟ್ಟು ಶೇ. ೨೪ರಷ್ಟು ಹುದ್ದೆಗಳನ್ನು ಮೀಸಲಿರಿಸಿತು.

ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ಬ್ರಾಹ್ಮಣೇತರ ಚಳವಳಿಯನ್ನು ಹುಟ್ಟುಹಾಕಿದ ವೆಲ್ಲಾಳ, ಮೊದಲಿಯಾರ್‌, ನಾಯ್ಡು ಮುಂತಾದ ಸಮುದಾಯಗಳು ಭಾರತಕ್ಕೆ ಸ್ವಾತಂತ್ರ್ಯ ದೊರಕುವ ಸಮಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಿ ಬ್ರಾಹ್ಮಣರಿಗೆ ಸ್ಪರ್ಧೆ ನೀಡುವ ಹಂತ ತಲುಪಿದ್ದವು. ಆದರೆ ಇತರ ಹಿಂದುಳಿದ ಜಾತಿಗಳು ಈ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಿಲ್ಲ. ಹಾಗಾಗಿ ಸ್ವಾತಂತ್ರ್ಯಾನಂತರ ಸ್ಥಾಪನೆಗೊಂಡ ಹಲವಾರು ಹಿಂದುಳಿದ ವರ್ಗಗಳ ಆಯೋಗಗಳು ಈ ಸಮುದಾಯಗಳ ಪ್ರಬಲ ವರ್ಗಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈಬಿಡುವ ಬಗ್ಗೆ ಶಿಫಾರಸ್ಸು ಮಾಡಿದವು. ಈ ಕಾರಣದಿಂದ ಸ್ವಾತಂತ್ರ್ಯೋತ್ತರದಲ್ಲಿ ತಮಿಳುನಾಡಿನ ಬ್ರಾಹ್ಮಣೇತರ ಚಳವಳಿಯು ಹಿಂದುಳಿದ ವರ್ಗದ ಚಳವಳಿಯಾಗಿ ರೂಪುಗೊಳ್ಳಲಾರಂಭಿಸಿತು.

ಕೇರಳ ರಾಜ್ಯದಲ್ಲಿ ಬ್ರಾಹ್ಮಣೇತರ ಚಳವಳಿ

ಭಾರತೀಯ ಸಮಾಜದಲ್ಲೇ ಜಾತಿ ವ್ಯವಸ್ಥೆಯು ಅತ್ಯಂತ ತೀವ್ರ ಸ್ವರೂಪ ಪಡೆದಿರುವುದು ಕೇರಳ ರಾಜ್ಯದಲ್ಲಿ. ಕೇರಳದ ಸಾಮಾಜಿಕ ವ್ಯವಸ್ಥೆಯಲ್ಲಿ ಪಾರಂಪರಿಕವಾಗಿ ನಂಬೂದಿರಿ ಬ್ರಾಹ್ಮಣರು ಶ್ರೇಷ್ಠತೆಯ ಶಿಖರದಲ್ಲಿದ್ದರೆ, ಅದರ ನಂತರದ ಸ್ಥಾನಗಳಲ್ಲಿ ಇತರ ಬ್ರಾಹ್ಮಣ ವರ್ಗವು, ನಾಯರರೂ ನಿಲ್ಲುತ್ತಾರೆ. ನಂತರದ ಸ್ಥಾನಗಳಲ್ಲಿ ಈಳವರು ಹಾಗೂ ಅತಿ ಕೆಳಸ್ತರದಲ್ಲಿ ಪಂಚಮರಾದ ಪುಲಯ, ಪರಯರೆಂಬ ಅಸ್ಪೃಶ್ಯ ಸಮುದಾಯಗಳು ಇದ್ದವು. ಈ ಎಲ್ಲ ಜಾತಿ ಸಮುದಾಯಗಳು ಅವರ ಜಾತಿ ಚೌಕಟ್ಟಿನ ಸಂಪ್ರದಾಯಗಳಿಗೆ ಬದ್ಧರಾಗಿರಬೇಕಿತ್ತು. ತಮ್ಮ ಜಾತಿ ಕಟ್ಟುಪಾಡುಗಳನ್ನು ಮೀರಿದರೆ ಮೇಲ್ಜಾತಿಯ ಅವಹೇಳನಕ್ಕೆ ಹಾಗೂ ಶಿಕ್ಷೆಗೆ ಗುರಿಯಾಗಬೇಕಾಗಿತ್ತು.

ಬ್ರಾಹ್ಮಣೇತರ ಚಳವಳಿಯ ಹುಟ್ಟು

ವಸಾಹತುಶಾಹಿ ಆಡಳಿತದ ಕಾಲದಲ್ಲಿ ಕ್ರೈಸ್ತ ಮಿಷನರಿಗಳು ಕೇರಳದ ವಿವಿಧ ಪ್ರದೇಶಗಳಲ್ಲಿ ಮತಾಂತರ ಹಾಗೂ ಶಿಕ್ಷಣ ಪ್ರಸಾರದ ಕಾರ್ಯಗಳನ್ನು ಕೈಗೊಂಡವು. ಅತ್ಯಂತ ಶೋಷಣೆಗೆ ಒಳಗಾಗಿದ್ದ ಕೆಳಸ್ತರದ ಸಮುದಾಯಗಳು ಸ್ವಾಭಾವಿಕವಾಗಿಯೇ ಕ್ರೈಸ್ತ ಪಂಥದ ಕಡೆಗೆ ಆಕರ್ಷಿತವಾದವು. ಮತಾಂತರವು ಮಿಷನರಿಗಳ ಪ್ರಮುಖ ಉದ್ದೇಶವಾದರೂ ಸಾಮಾಜಿಕ ತಾರತಮ್ಯತೆಯ ನಿವಾರಣೆ, ಆಧುನಿಕ ಶಿಕ್ಷಣ ಹಾಗೂ ಉದ್ಯೋಗಗಳಿಗೆ ಮಿಷನರಿಗಳು ಉತ್ತೇಜನ ನೀಡಿದರು. ಈ ಬೆಳವಣಿಗೆಯ ಪರಿಣಾಮವಾಗಿ ಗುಲಾಮ ಪದ್ಧತಿ ಹಾಗೂ ಜೀತಪದ್ಧತಿಗಳು ರದ್ದುಗೊಂಡವು ಹಾಗೂ ನಿಮ್ನ ವರ್ಗಗಳಿಗೆ ಪ್ರಗತಿಯ ಅವಕಾಶಗಳು ತೆರೆದುಕೊಂಡವು. ಅಲ್ಲಿಯವರೆಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಶೋಷಣೆಗೆ ಒಳಗಾಗಿದ್ದ ಶೂದ್ರ-ಅತಿಶೂದ್ರ ಸಮುದಾಯಗಳು ಆಧುನಿಕ ಜಗತ್ತಿನ ಅವಕಾಶಗಳಿಗಾಗಿ ಹೋರಾಟ ಪ್ರಾರಂಭಿಸಿದವು.

ಮಲೆಯಾಳಿ ಮೆಮೋರಿಯಲ್

ಆಧುನಿಕ ಶಿಕ್ಷಣ ವ್ಯವಸ್ಥೆಯ ಉಪಯೋಗ ಪಡೆದ ಬ್ರಾಹ್ಮಣೇತರರಲ್ಲಿ ಪ್ರಥಮರೆಂದರೆ ಭೂ ಒಡೆತನ ಹೊಂದಿದ್ದ ನಾಯರ್‌ ಸಮುದಾಯದವರು. ಅದಾಗಲೇ ಜಾತಿ ಆಧಾರಿತ ಸವಲತ್ತುಗಳನ್ನು ಕಳೆದುಕೊಳ್ಳತೊಡಗಿದ್ದ ನಾಯರ್‌ ಜನಾಂಗಕ್ಕೆ ಆಧುನಿಕ ಶಿಕ್ಷಣ ಹಾಗೂ ಉದ್ಯೋಗಗಳು ವರದಾನವಾದವು. ಆದರೆ ಶಿಕ್ಷಣ ಹಾಗೂ ಆಡಳಿತ ಹುದ್ದೆಗಳಲ್ಲಿ ಆ ಹಂತದಲ್ಲೇ ಮಲೆಯಾಳೇತರ ಬ್ರಾಹ್ಮಣರು ಸ್ಥಾಪಿತಗೊಂಡಿದ್ದು, ಹಾಗಾಗಿ ನಾಯರ್‌ ಜನಾಂಗದ ಶಿಕ್ಷಿತ ಹಾಗೂ ಪ್ರಜ್ಞಾವಂತ ನಾಯಕರು ‘ಮಳೆಯಾಗಿ ಸಭಾ’ ಎನ್ನುವ ಸಂಘಟನೆಯನ್ನು ಸ್ಥಾಪಿಸಿಕೊಂಡು ಹೊರನಾಡಿನ ಬ್ರಾಹ್ಮಣರ ಪ್ರಾಬಲ್ಯಕ್ಕೆ ಸವಾಲು ನೀಡಲಾರಂಭಿಸಿದರು. ಈ ಚಳವಳಿಯಲ್ಲಿ ನಾಯರ್‌ ಸಮುದಾಯವು ಸ್ಥಳೀಯ ಕ್ರೈಸ್ತ ಹಾಗೂ ಈಳವ ಸಮಾಜದ ಬೆಂಬಲವನ್ನು ಪಡೆಯಿತು. ೧೮೯೧ರಲ್ಲಿ ಈ ಮೂರು ಸಮುದಾಯಗಳು ಸೇರಿ ತಿರುವಾಂಕೂರು ಮಹಾರಾಜರಿಗೆ ೧೦೦೩೮ ಸಹಿಗಳನ್ನೊಳಗೊಂಡ ಒಂದು ಮನವಿಯನ್ನು ಸಲ್ಲಿಸಲಾಯಿತು. ಆ ಮನವಿಯು ‘ಮಳೆಯಾಳಿ ಮೆಮೋರಿಯಲ್‌’ ಅಥವಾ ‘ತಿರುವಾಂಕೂರು ಮೆಮೋರಿಯಲ್‌’ ಎಂದೇ ಪ್ರಖ್ಯಾತವಾಯಿತು.

ಮಲೆಯಾಳಿ ಮೆಮೋರಿಯಲ್‌ ಕೇರಳದ ಸಮಸ್ತ ಜನರ ಸಂಕಷ್ಟಗಳ ಅಭಿವ್ಯಕ್ತಿ ಎಂದು ಪರಿಗಣಿಸಲ್ಪಟ್ಟರೂ, ವಾಸ್ತವವಾಗಿ ಅದು ಕೇವಲ ನಾಯರ್‌ ಸಮುದಾಯದ ಹಿತಾಸಕ್ತಿಗಳನ್ನಷ್ಟೆ ಪ್ರಬಿಂಬಿಸುತ್ತಿತ್ತು. ಈ ಮನವಿಯಲ್ಲಿ ನಾಯರ್‌ ಸಮುದಾಯಕ್ಕೆ ಸರ್ಕಾರ ವಿಶೇಷ ಬೆಂಬಲ ಸವಲತ್ತುಗಳನ್ನು ನೀಡುವಂತೆ ಒತ್ತಾಯಿಸಲಾಗಿತ್ತು. ಈ ಮನವಿಯ ಹಿಂದೆ ‘ಮಲೆಯಾಳಿ ಸಭಾ’ ಎನ್ನುವ ನಾಯರ್‌ ಸಂಘಟನೆಯ ಪ್ರಭಾವವೂ ಅಡಗಿತ್ತಲ್ಲದೆ, ಸಹಿ ಮಾಡಿರುವ ಜನರಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಾಯರ್‌ ಜನಾಂಗದವರೇ ಇದ್ದರು.

ತಿರುವಾಂಕೂರಿನ ದಿವಾನರು ಈ ನಾಯಕರನ್ನು ಭೇಟಿ ಮಾಡಿದರೂ ಹೆಚ್ಚಿನ ಮಹತ್ವ ನೀಡಲಿಲ್ಲ. ಆದರೂ ೧೮೯೨ರ ನಂತರ ದಿವಾನರು ನಾಯರ್‌ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸತೊಡಗಿದರು. ನಾಯರ್‌ ಅಧಿಕಾರಿಗಳಿಗೆ ಶೀಘ್ರ ಬಡ್ತಿ ದೊರೆಯಲಾರಂಭಿಸಿದವು.

ಈಳವ ಮೆಮೋರಿಯಲ್

ಮಲೆಯಾಳಿ ಮೆಮೋರಿಯಲ್‌ ನಂತರ ನಾಯರ್‌ ಜಾತಿಯವರ ಬಗ್ಗೆ ಸರ್ಕಾರ ಗಮನಹರಿಸಲಾರಂಭಿಸಿದರೂ, ಹಿಂದುಳಿದ ಈಳವ ಜಾತಿಯವರ ಪರಿಸ್ಥಿತಿಯು ಸುಧಾರಣೆಗೆ ಒಳಗಾಗಲಿಲ್ಲ. ಈಳವರನ್ನು ಅಂದಿನ ಕಾಲದಲ್ಲಿ ಅಸ್ಪೃಶ್ಯರೆಂದು ಪರಿಗಣಿಸುತ್ತಿದ್ದ ಕಾರಣ ಸರ್ಕಾರಿ ನೌಕರಿ ದೊರೆಯುತ್ತಿರಲಿಲ್ಲ. ಈಳವ ಜನಾಂಗಕ್ಕೆ ಸೇರಿದ ಡಾ. ಪಲ್ಪುರವರು ವೈದ್ಯ ಶಿಕ್ಷಣ ಪಡೆದರೂ ಸರ್ಕಾರಿ ನೌಕರಿ ಪಡೆಯುವಲ್ಲಿ ವಿಫಲರಾದರು. ನಂತರ ಈಳವ ಜನಾಂಗದ ನಾಯಕತ್ವವನ್ನು ವಹಿಸಿದ ಡಾ. ಪಲ್ಪುರವರು ೧೮೯೫ರಲ್ಲಿ ಒಂದು ಸುದೀರ್ಘ ಮನವಿಯನ್ನು ತಯಾರಿಸಿ ತಿರುವಾಂಕೂರಿನ ದಿವಾನರಿಗೆ ಸಲ್ಲಿಸಿದರು.

ಡಾ. ಪಲ್ಪುರವರ ಪ್ರಯತ್ನ ವಿಫಲಗೊಂಡಾಗ ೧೮೯೬ರಲ್ಲಿ “ತಿರುವಾಂಕೂರು ಈಳವ ಸಭಾ” ಹೆಸರಿನ ಸಂಘಟನೆಯನ್ನು ಸ್ಥಾಪಿಸಿ, ೧೩,೧೭೬ ಈಳವ ಬಾಂಧವರ ಸಹಿಯುಳ್ಳ ಪ್ರಸಿದ್ಧ ‘ಈಳವ ಮೆಮೋರಿಯಲ್‌’ನ್ನು ಸರ್ಕಾರಕ್ಕೆ ಸಲ್ಲಿಸಿದರು. ಈಳವರಿಗೆ ಸರ್ಕಾರದಿಂದ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಅವಕಾಶ ನೀಡಬೇಕೆನ್ನುವುದು ಅವರ ಪ್ರಮುಖ ಬೇಡಿಕೆಯಾಗಿತ್ತು.

ಸರಿ ಸುಮಾರು ಇದೇ ಸಮಯದಲ್ಲಿ ತಿರುವನಂತಪುರದಲ್ಲಿ ಶ್ರೀ ನಾರಾಯಣ ಗುರುಗಳು ಈಳವ ಜನಾಂಗದಲ್ಲಿ ಒಬ್ಬ ಪ್ರಭಾವೀ ನಾಯಕರೆನಿಸಿಕೊಂಡಿದ್ದರು. ಡಾ. ಪಲ್ಪುರವರು ಸ್ವಾಮಿಯನ್ನು ಸಂಪರ್ಕಿಸಿ ಹೋರಾಟಕ್ಕೆ ನೆರವು ಯಾಚಿಸಿದರು. ಅದಾಗಲೇ ಕೇರಳದ ದಕ್ಷಿಣ ಭಾಗದಲ್ಲಿ ಬಹಳ ಬೆಂಬಲಿಗರನ್ನು ಹೊಂದಿದ್ದು, ಪ್ರಭಾವಿ ಧಾರ್ಮಿಕ ವ್ಯಕ್ತಿತ್ವ ಹೊಂದಿದ್ದ ನಾರಾಯಣ ಗುರುಗಳ ನೆರವಿನೊಂದಿಗೆ ಮೇ ೧೫, ೧೯೦೩ರಲ್ಲಿ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಸ್ಥಾಪನೆಯಾಯಿತು.

ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಹಾಗೂ ನಾಗರಿಕ ಹಕ್ಕುಗಳ ಹೋರಾಟ

ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಈಳವ ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ಪರವಾಗಿ ಹೋರಾಡುವ ವೇದಿಕೆಯಾಗಿ ಕೆಲಸ ನಿರ್ವಹಿಸತೊಡಗಿತು. ಪ್ರಾರಂಭದಲ್ಲಿ ಈಳವ ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶ ದೊರಕಿಸಲು ಯೋಗಂ ವತಯಿಂದ ಹೋರಾಟ ಸಂಘಟಿಸಲಾಯಿತು. ಹಲವು ವರ್ಷಗಳ ಕಾಲ ಸರ್ಕಾರ ಇದಕ್ಕೆ ಅನುಮತಿ ನೀಡಲಿಲ್ಲ. ಕೊನೆಗೆ ದಿವಾನ್‌ ಸುಬ್ಬಾ ಅಯ್ಯರ್‌ರವರು ಈಳವರು ತಮ್ಮದೇ ಪಾಠಶಾಲೆ ತೆರೆಯಲು ಅನುಮತಿ ನೀಡಿದರು. ಈ ಅವಕಾಶವನ್ನು ಉಪಯೋಗಿಸಿಕೊಂಡು ಯೋಗಂ ವತಿಯಿಂದ ಈಳವರಿಗಾಗಿ ಶಾಲೆಗಳನ್ನು ತೆರೆಯಲಾಯಿತು. ಮುಂದೆ ಯೋಗಂ ಹಾಗೂ ಇತರ ಈಳವ ಮುಖಂಡರ ಒತ್ತಾಯದ ಮೇರೆಗೆ ಈಳವರಿಗಾಗಿ ಸರ್ಕಾರವೂ ಶಾಲೆಗಳನ್ನು ತೆರೆಯಲು ಆರಂಭಿಸಿತು. ಈ ಸಂಬಂಧವಾಗಿ ಕೆಲವು ಕಡೆಗಳಲ್ಲಿ ನಾಯರ್‌ ಮತ್ತು ಈಳವ ಸಮುದಾಯದೊಳಗೆ ಜಗಳಗಳೂ ನಡೆದವು.

ಯೋಗಂನ ಇನ್ನೋರ್ವ ನಾಯಕ ಕುಮಾರನ್‌ ಆಸನ್‌ರವರ ನೇತೃತ್ವದಲ್ಲಿ ಈಳವರು ಸರ್ಕಾರಿ ಹುದ್ದೆಗಳನ್ನು ಪಡೆಯಲು ಬೇಡಿಕೆಗಳನ್ನು ಸಲ್ಲಿಸತೊಡಗಿದರು. ಆದರೆ ಈ ಬೇಡಿಕೆಗೆ ಸರ್ಕಾರ ದೀರ್ಘಕಾಲ ಸ್ಪಂದಿಸಲಿಲ್ಲ. ಕೆಲವು ಮೇಲ್ಜಾತಿಯ ಜನರೂ ಈ ಬೇಡಿಕೆಗಳನ್ನು ವಿರೋಧಿಸುತ್ತಿದ್ದ ಕಾರಣ ಸರ್ಕಾರಿ ಹುದ್ದೆಗಳಿಗೆ ನೇಮಕಗೊಂಡ ಅಧಿಕಾರಿಗಳೂ ಉಸಿರುಗಟ್ಟಿಸುವ ವಾತಾವರಣದಲ್ಲಿ ಕೆಲಸ ನಿರ್ವಹಿಸಬೇಕಾಗಿತ್ತು.

ನಾಗರಿಕ ಹಕ್ಕುಗಳ ಲೀಗ್ (Civil Rights League)

೧೯೧೯ರಲ್ಲಿ ಕೇರಳದ ಈಳವ, ಕ್ರಿಶ್ಚಿಯನ್‌ ಹಾಗೂ ಮುಸ್ಲಿಂ ನಾಯಕರು ಸೇರಿ ಒಂದು ನಾಗರಿಕ ಹಕ್ಕುಗಳ ಲೀಗ್‌ ಎನ್ನುವ ವೇದಿಕೆಯನ್ನು ಕಟ್ಟಿಕೊಂಡು ತಮ್ಮ ಬೇಡಿಕೆಗಳನ್ನು ಮುಂದಿಡತೊಡಗಿದರು. ಖ್ಯಾತ ನಾಯಕರಾದ ಟಿ. ಕೆ. ಮಾಧವನ್‌ ಹಾಗೂ ಇತರರು ಈ ಸಂದರ್ಭದಲ್ಲಿ ನಾಯಕತ್ವ ವಹಿಸಿದ್ದರು. ಆ ನಾಯಕರು ತಿರುವಾಂಕೂರು ರಾಜ್ಯದಲ್ಲಿ ಶೆ. ೨೦ ರಷ್ಟಿದ್ದ ಸವರ್ಣೀಯರು ಎಲ್ಲ ನಾಗರಿಕ ಹಕ್ಕುಗಳನ್ನು ಅನುಭವಿಸುತ್ತಿದ್ದು, ಶೇ. ೮೦ ರಷ್ಟಿರುವ ಜನತೆಯ ಹಕ್ಕುಗಳನ್ನು ಕಡೆಗಣಿಸಲಾಗುತ್ತಿದೆ ಎಂದೂ, ‘ಮಾದರಿ ರಾಜ್ಯ’ವೆಂದು ಪರಿಗಣಿಸಲ್ಪಟ್ಟ ತಿರುವಾಂಕೂರಿನಲ್ಲಿ ನಾಗರಿಕ ಸಮಾನತೆಯ ಉಲ್ಲಂಘಟನೆಯಾಗುತ್ತಿದೆ ಎಂದು ವಾದಿಸಿದರು. ನಾಗರಿಕ ಹಕ್ಕುಗಳ ವೇದಿಕೆಯ ನಿಯೋಗವೊಂದು ೨೦, ೨, ೧೯೨೦ ರಂದು ದಿವಾನರನ್ನು ಭೇಟಿಯಾಗಿ ಒಂದು ಮನವಿಯನ್ನು ಸಲ್ಲಿಸಿತು.

ಈಳವ ಸಮಾಜವು ಆಡಳಿತದಲ್ಲಿ ಪ್ರಾತಿನಿಧ್ಯಕ್ಕಾಗಿ ಹೋರಾಟ ನಡೆಸುವುದರೊಂದಿಗೆ ರಾಜಕೀಯ ಪ್ರಾತಿನಿಧ್ಯಕ್ಕೂ ಪ್ರಯತ್ನ ನಡೆಸಿತು. ೧೯೨೧ರಿಂದ ೧೯೩೧ರವರೆಗೆ ನಡೆದ ಚುನಾವಣೆಗಳಲ್ಲಿ ಈಳವ ಸಮಾಜಕ್ಕೆ ಪ್ರಾತಿನಿಧ್ಯ ದೊರಕದ ಕಾರಣ ೧೯೩೨ರಲ್ಲಿ ಈಳವರು ಇತರ ಶೋಷಿತ ಸಮುದಾಯಗಳೊಂದಿಗೆ ಸೇರಿ ‘ಆಲ್‌ ಟ್ರಾವಂಕೂರ್‌ ಜಾಯಿಂಟ್‌ ಪೊಲಿಟಿಕಲ್‌ ಕಾನ್ಫರೆನ್ಸ್‌’ನ್ನು (All Travancore Joint Political Conference) ಸ್ಥಾಪಿಸಿಕೊಂಡು ತಮಗೆ ಮತದಾನದ ಹಕ್ಕು ನೀಡುವಂತೆ ಒತ್ತಾಯಿಸತೊಡಗಿದವು. ಈಳವ ಯುವಕರ ವೇದಿಕೆಯು ಮತಾಂತರದ ಬೇಡಿಕೆಯನ್ನು ಮುಂದಿಟ್ಟಿತು. ಇದರ ಪರಿಣಾಮವಾಗಿ ೧೯೩೬ರಲ್ಲಿ ಅಸ್ಪೃಶ್ಯೃತಾ ನಿವಾರಣೆ, ಸಾಮಾಜಿಕ ಸಮಾನತೆ, ದೇಗುಲ ಪ್ರವೇಶ ಮುಂತಾದ ಸುಧಾರಣೆಗಳನ್ನು ತರಲಾಯಿತು. ಈ ಸುಧಾರಣೆಗಳು ಮುಂದೆ ಎಲ್ಲ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಪರಿವರ್ತನೆಗೆ ನಾಂದಿಯಾಯಿತು.

ನಾಯರ್ಸರ್ವಿಸ್ಸೊಸೈಟಿ

ಕೇರಳ ರಾಜ್ಯದಲ್ಲಿ ೧೯ನೆಯ ಶತಮಾನದ ಮಧ್ಯಭಾಗದವರೆಗೂ ನಾಯರ್‌ ಸಮುದಾಯವು ಸಾಕಷ್ಟು ಸಾಮಾಜಿಕ ಸ್ಥಾನಮಾನವನ್ನೂ, ಆರ್ಥಿಕ ಸೌಲಭ್ಯಗಳನ್ನೂ ಅನುಭವಿಸುತ್ತಿತ್ತು. ಆದರೆ ೧೮೫೫ರ ನಂತರ ನಾಯರ್‌ ಸಮುದಾಯವು ಹಲವು ಸಮಸ್ಯೆಗಳನ್ನು ಎದಿರುಸಬೇಕಾಯಿತು. ಬ್ರಿಟಿಷರು ಪ್ಲಾಂಟೇಷನ್‌ಗಳನ್ನು ಪ್ರಾರಂಭಿಸಿದ ಮೇಲೆ ಕೃಷಿ ಉತ್ಪನ್ನಗಳ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ನಿರ್ಧಾರಿತವಾಗತೊಡಗಿತು. ಕೃಷಿಕ ಸಮುದಾಯವಾದ ನಾಯರರು ಭೂ ಸ್ವಾಧೀನತೆಯನ್ನು ಕಳೆದುಕೊಳ್ಳತೊಡಗಿದರು. ಇನ್ನೊಂದು ಕಡೆಯಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಆಧುನಿಕ ಶಿಕ್ಷಣದ ಅಗತ್ಯತೆ ಇದ್ದ ಕಾರಣ ನಾಯರ್‌ ಸಮುದಾಯಕ್ಕೆ ಈ ಅವಕಾಶ ದೊರೆಯುವಂತಿರಲಿಲ್ಲ.

ಈ ನಡುವೆ ಮಾತೃಪ್ರಧಾನ ಸಮಾಜವಾದ ನಾಯರರ ಆಸ್ತಿಯ ಹಕ್ಕುಗಳಲ್ಲಿಯೂ ಸಾಕಷ್ಟು ಗೊಂದಲಗಳು ಉದ್ಭವಿಸಿದರು. ಈ ಎಲ್ಲ ನಾಯರ್‌ ಯುವಕರು ತಮ್ಮ ಸಮಾಜದ ಹಲವಾರು ಆಚಾರಗಳನ್ನು ಆಧುನಿಕ ಜಗತ್ತಿಗೆ ಹೊಂದುವಂತೆ ಬದಲಾಯಿಸಬೇಕೆಂದು ಪ್ರಯತ್ನಪಟ್ಟರು. ಅದಕ್ಕಾಗಿ ‘ನಾಯರ್‌ ಸಜಾಜಮ್‌’ ಎನ್ನುವ ಸಂಘಟನೆಯನ್ನು ಹುಟ್ಟುಹಾಕಿದರು. ಆದರೆ ನಾಯರ್‌ ಸಮಾಜಮ್‌ ಬಹುಬೇಗ ನಿಷ್ಕ್ರೀಯಗೊಂಡಿತು.

೧೯೧೪ರಲ್ಲಿ ಮನ್ನಾತು ಪದ್ಮನಾಭ ಪಿಳ್ಳೈಯವರ ನೇತೃತ್ವದಲ್ಲಿ ‘ನಾಯರ್‌ ಸರ್ವಿಸ್‌ ಸೊಸೈಟಿ’ ಸ್ಥಾಪನೆಗೊಂಡಿತು. ಈ ನಾಯರ್‌ ಸರ್ವಿಸ್‌ ಸೊಸೈಟಿಯು ಮಧ್ಯಮ ವರ್ಗದ ನಾಯರ್‌ ಸಮಾಜದಲ್ಲಿ ಪ್ರಗತಿಪರ ದೃಷ್ಟಿಕೋನ ಬೆಳೆಸುವಲ್ಲಿ ಸಕ್ರಿಯವಾಯಿತು.

೧೯೨೧ರಿಂದ ತಿರುವಾಂಕೂರು ಶಾಸನ ಸಭೆಯಲ್ಲಿ ನಾಯರ್‌ ಸಮುದಾಯ ಪ್ರಾಬಲ್ಯ ಪಡೆದ ಕಾರಣ ೧೯೨೫ರಲ್ಲಿ ‘ನಾಯರ್‌ ರೆಗ್ಯುಲೇಷನ್‌’ ಜಾರಿಗೆ ತಂದು ನಾಯರ್‌ ಕುಟುಂಬಗಳನ್ನು ನಂಬೂದಿರಿ ಬ್ರಾಹ್ಮಣರ ಹಿಡಿತದಿಂದ ಮುಕ್ತಗೊಳಿಸುವ ಹೆಜ್ಜೆ ಇರಿಸಿದರು. ಈ ಬದಲಾವಣೆಯು ನಾಯರ್‌ ಸಮುದಾಯದಲ್ಲಿ ಪಿತೃಪ್ರಧಾನ ಆಚರಣೆ ಜಾರಿಗೆ ತಂದಿತು ಮಾತ್ರವಲ್ಲ, ಬ್ರಾಹ್ಮಣ ಪುರುಷರು ನಾಯರ್‌ ಸ್ತ್ರೀಯರೊಂದಿಗೆ ಹೊಂದಿರಬಹುದಾದ ‘ಸಂಬಂಧಮ್‌’ ಪದ್ಧತಿಯನ್ನು ಕೊನೆಗಾಣಿಸಿತು. ಇದರಿಂದ ಅಸಮಾಧಾನಗೊಂಡ ಬ್ರಾಹ್ಮಣರು ಸರ್ಕಾರಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಿ ‘ಸಂಬಂಧಮ್‌’ ಪದ್ಧತಿಯನ್ನು ಮುಂದುವರಿಸಲು ಅವಕಾಶ ನೀಡಬೇಕೆಂದು ಕೋರಿದರು. ಈ ಬದಲಾವಣೆಯಿಂದಾಗಿ ಅವಿಭಕ್ತ ನಾಯರ್‌ ಕುಟುಂಬಗಳು ವಿಭಜಿತವಾದರೂ ನಾಯರ್‌ ಸಮುದಾಯದಲ್ಲಿ ಐಕ್ಯತೆ ಬಲಗೊಂಡಿತು.

ನಾಯರ್‌ ಸರ್ವಿಸ್‌ ಸೊಸೈಟಿಯು ಕೇರಳದಲ್ಲಿ ನಾಯರ್‌ ಸಮುದಾಯದ ಸಾಮಾಜಿಕ, ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸಮುದಾಯದಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಮಾಡಿತು.

ಉಪಸಂಹಾರ

ಶ್ರೀ ನಾರಾಯಣ ಧರ್ಮ ಪರಿಪಾಲನಾ ಚಳವಳಿ, ನಾಯರ್‌ ಸರ್ವಿಸ್‌ ಸೊಸೈಟಿ ಮುಂತಾದ ಸಂಘಟನೆಗಳು ಕೇರಳದ ಬ್ರಾಹ್ಮಣೇತರ ಸಮುದಾಯಗಳಲ್ಲಿ ಜಾಗೃತಿಯನ್ನು ಸೃಷ್ಟಿಸಿದವು. ಈ ಸಂಘಟನೆಗಳ ಪ್ರಗತಿಪರ ದೃಷ್ಟಿಕೊನದಿಂದ ಪರಭಾವಿತರಾದ ಇತರ ಶೋಷಿತ ಜನವರ್ಗಗಳು ಕೇರಳದಲ್ಲಿ ತಮ್ಮದೇ ಆದ ಸಂಘಟನೆಗಳನ್ನು ಸ್ಥಾಪಿಸಿ ಹೋರಾಟ ಮಾಡತೊಡಗಿದವು.

ಕಾಲಕ್ರಮೇಣ ಕೇರಳದ ಬ್ರಾಹ್ಮಣೇತರ ಹಿಂದುಳಿದ ವರ್ಗಗಳ ಚಳವಳಿಗಳು ಎಡಪಂಥೀಯ ನಿಲುವುಗಳನ್ನು ಪ್ರತಿಪಾದಿಸತೊಡಗಿದವು. ಹಾಗಾಗಿ ಇಂದು ಕೇರಳದಲ್ಲಿ ಕಂಡುಬರುವ ಪ್ರಗತಿಪರ, ಎಡಪಂಥೀಯ ಹೋರಾಟಗಳ ಬೇರುಗಳು ಈ ಶೋಷಿತ ಸಮುದಾಯಗಳು ಚಳವಳಿಯಲ್ಲಿ ಅಡಗಿವೆ.

ಆಂಧ್ರಪ್ರದೇಶದಲ್ಲಿ ಬ್ರಾಹ್ಮಣೇತರ ಚಳವಳಿ

ಮಹಾರಾಷ್ಟ್ರದಲ್ಲಿ ಫುಲೆ, ಶಾಹು ಮಹಾರಾಜರು ಹಾಗೂ ಅಂಬೇಡ್ಕರ್‌ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳು ಮತ್ತು ಬ್ರಾಹ್ಮಣೇತರ ಚಳವಳಿಗಳು ನಡೆದವು. ಅದೇ ರೀತಿಯಲ್ಲಿ ಪೆರಿಯಾರ್‌ ತಮಿಳುನಾಡಿನಲ್ಲಿ ಶ್ರಮಿಕ ವರ್ಗ, ಜಾತಿ ವಿರೋಧಿ ಚಳವಳಿಗಳ ನೇತೃತ್ವ ವಹಿಸಿದ್ದರು. ಆದರೆ ಈ ಸಂದರ್ಭದಲ್ಲಿ ತೆಲುಗು ಭಾಷಾ ಪ್ರದೇಶದಲ್ಲಿ ಇಂತಹ ಒಂದು ಚಳವಳಿ ಪ್ರಾರಂಭಗೊಳ್ಳಲಿಲ್ಲ. ಹೈದರಾಬಾದ್‌ ಪ್ರಾಂತ್ಯದಲ್ಲಿ ಇತರ ಕಡೆಗಳಲ್ಲಿ ನಡೆದಂತೆ ಒಂದು ಬ್ರಾಹ್ಮಣೇತರ ಚಳವಳಿ ನಡೆಯಲಿಲ್ಲ. ಪ್ರಾಯಶಃ ಇದಕ್ಕೆ ಒಂದು ಮುಖ್ಯ ಕಾರಣವೆಂದರೆ, ಹೈದರಾಬಾದ್‌ ರಾಜ್ಯದ ಆಡಳಿತದಲ್ಲಿ ಬ್ರಾಹ್ಮಣರ ಬದಲಾಗಿ ಮುಸ್ಲಿಮ್‌ ಪ್ರಭಾವವೇ ವ್ಯಾಪಕವಾಗಿತ್ತು. ಇನ್ನೊಂದು ಪ್ರಮುಖ ಕಾರಣವೆಂದರೆ ಹೈದರಾಬಾದ್‌ನ ನಿಜಾಮರ ನಿರಂಕುಶ ಆಡಳಿತದಲ್ಲಿ ಯಾವುದೇ ಸಾಮಾಜಿಕ, ರಾಜಕೀಯ ಚಳವಳಿ ನಡೆಯುವ ಅವಕಾಶ ಇರಲಿಲ್ಲ. ಮೂರನೆಯದಾಗಿ, ಹೈದರಾಬಾದ್‌ ಪ್ರಾಂತ್ಯದಲ್ಲಿ ಬ್ರಾಹ್ಮಣೇತರ ವರ್ಗಗಳಾದ ಕಮ್ಮಾ ಹಾಗೂ ಕಾಪುರೆಡ್ಡಿ ಸಮುದಾಯದ ನಾಯಕರು ಬ್ರಾಹ್ಮಣೇತರ ಚಳವಳಿಗಳಲ್ಲಿ ತೊಡಗುವ ಬದಲಾಗಿ ೧೯೨೦ರ ದಶಕದ ನಂತರ ಎಸ್‌. ಜಿ. ರಂಗಾ ಅವರ ರೈತ ಚಳವಳಿಯಲ್ಲಿ ಹಾಗೂ ಕಮ್ಯುನಿಸ್ಟ್ ಚಳವಳಿಯಲ್ಲಿ ತೊಡಗಿಕೊಂಡರು.

ಆದರೂ ೧೯೪೦ರ ದಶಕದಲ್ಲಿ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಕೆಲವು ಹಿಂದುಳಿದ ವರ್ಗಗಳು ಜನನಾಯಕರಾದ ಗೋಥು ಲಚ್ಚಣ್ಣ ಮತ್ತು ಪುಗೋಡ ಕೋಟಯ್ಯನವರಂತಹ ನಾಯಕರ ಪ್ರಯತ್ನದ ಫಲವಾಗಿ ತಮ್ಮ ನ್ಯಾಯಬದ್ಧ ಹಕ್ಕುಗಳಿಗಾಗಿ ಹೋರಾಟ ಪ್ರಾರಂಭಿಸಿದರು. ಅದೇ ರೀತಿ ತೆಲಂಗಾಣ ಪ್ರದೇಶದಲ್ಲಿ ಬೊಜ್ಜಂ ನರಸಿಂಹಲು ಹಾಗೂ ಕೊಂಡ ಲಕ್ಷ್ಮಣ ಬಾಪೂಜಿ ಮತ್ತಿತರರು ಇಂತಹ ಚಳವಳಿಯನ್ನು ನಡೆಸಿದರು.

ಲಚ್ಚಣ್ಣನವರು ಆಂಧ್ರದಲ್ಲಿ ಪಾತ್ರ ವಹಿಸಿದ್ರು. ಅವರು ಪ್ರಾರಂಭದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರಾಗಿದ್ದು ಪಕ್ಷದಲ್ಲಿ ಹರಿಜನ ಚಳವಳಿಯನ್ನು ನಡೆಸಿಕೊಂಡು ಬಂದಿದ್ದರು. ೧೯೪೬ರಲ್ಲಿ ಅವರು ಆಂಧ್ರ ಕಾಂಗ್ರೆಸ್‌ ಸಮಿತಿಯ ಪದಾಧಿಕಾರಿಗಳಾಗಿ ಆಯ್ಕೆಯಾದರು. ಹಾಗೂ ಪಕ್ಷದ ವತಿಯಿಂದ ಹಿಂದುಳಿದ ವರ್ಗ, ಕಾರ್ಮಿಕ ಹಾಗೂ ಸೇವಾದಳದ ಸಂಘಟನೆಗೆ ನಿಯೋಜಿಸಲ್ಪಟ್ಟಿದ್ದರು. ೧೯೫೪ರ ನಂತರ ಈ ಹುದ್ದೆಯನ್ನು ನಿರ್ವಹಿಸಿದ ಲಚ್ಚಣ್ಣನವರು ನಂತರ ಕಾಂಗ್ರೆಸ್‌ ತ್ಯಜಿಸಿ ಮೂರ್ತೆದಾರರ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಪುಗೋಡ ಕೋಟಯ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದ ಇನ್ನೊಬ್ಬ ನಾಯಕರು. ಎನ್. ಸಂಜೀವರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಕೋಟಯ್ಯನವರು ಕಾಂಗ್ರೆಸ್‌ ಪಕ್ಷದಲ್ಲಿ ಹಿಂದುಳಿದ ವರ್ಗಗಳ ಉಪಸಮಿತಿಯ ಅಧ್ಯಕ್ಷರಾಗಿದ್ದರು. ಅವರು ಆಂಧ್ರಪ್ರದೇಶದಲ್ಲಿ ಹಿಂದುಳಿದ ವರ್ಗದ ಪ್ರಗತಿಗೆ ಕೊಡುಗೆ ನೀಡಿದ್ದರು.

ಬೊಜ್ಜಂ ನರಸಿಂಹಲು ಆಂಧ್ರದಲ್ಲಿ ಹಿಂದುಳಿದ ವರ್ಗದ ಚಳವಳಿಯ ಇನ್ನೊಬ್ಬ ಮುಖ್ಯ ನೇತಾರರಾಗಿದ್ದರು. ೧೯೨೦ರಲ್ಲಿ ಕಾಂಗ್ರೆಸ್‌ ಪಕ್ಷ ಸೇರಿದ ನರಸಿಂಹಲು ತನ್ನ ಜೀವನವನ್ನೇ ಈ ವರ್ಗದ ಸಾಮಾಜಿಕ, ರಾಜಕೀಯ, ಆರ್ಥಿಕ ಅಭಿವೃದ್ಧಿಗೆ ಮೀಸಲಾಗಿಟ್ಟಿದ್ದರು. ಹೈದರಾಬಾದಿನ ಹಿಂದುಳಿದ ವರ್ಗಗಳ ಪ್ರಥಮ ನಾಯಕರೆನಿಸಿಕೊಂಡ ಅವರು ಈ ಸಂಘಟನೆಗೆ ಭದ್ರ ಬುನಾದಿ ಒದಗಿಸಿದರು. ಅದಲ್ಲದೆ, ಮುನ್ನೂರು ಕಾಪು ಚಳವಳಿಯಲ್ಲೂ ಅವರು ಸಕ್ರಿಯರಾಗಿದ್ದರು.

ಮೈಸೂರು ಸಂಸ್ಥಾನದಲ್ಲಿ ಬ್ರಾಹ್ಮಣೇತರ ಚಳವಳಿ

ಹಳೇ ಮೈಸೂರು ಪ್ರಾಂತ್ಯದಲ್ಲಿ ಬ್ರಾಹ್ಮಣರು ಪಾಶ್ಚಾತ್ಯರ ಪ್ರಭಾವ ಮತ್ತು ಆಧುನೀಕರಣ ಪ್ರಕ್ರಿಯೆಯ ಪ್ರಾರಂಭದ ಹಂತದಲ್ಲೆ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ವಲಸೆ ಬಂದು ವಿದ್ಯಾಭ್ಯಾಸ ಮತ್ತು ಸರ್ಕಾರಿ ಉದ್ಯೋಗಗಳನ್ನು ಆಶ್ರಯಿಸಿಕೊಂಡರು. ಬ್ರಾಹ್ಮಣೇತರ ಜಾತಿಗಳಲ್ಲಿ ಬಹುಪಾಲು ಜನರು ಹಳ್ಳಿಯಲ್ಲಿದ್ದ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಹತ್ತು ಹಲವು ವೃತ್ತಿಗಳನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದರಿಂದ ಮತ್ತು ನಗರೀಕರಣಕ್ಕೆ ಒಳಗಾಗದ ಕಾರಣದಿಂದ ಪಾಶ್ಚಾತ್ಯ ಶಿಕ್ಷಣದಿಂದ ವಂಚಿತರಾಗಿದ್ದರು.

ಈ ಬ್ರಾಹ್ಮಣೇತರ ಜಾತಿಗಳಲ್ಲಿ ಪ್ರಬಲ ಗುಂಪುಗಳಾದ ಒಕ್ಕಲಿಗ, ಲಿಂಗಾಯತ ಮುಂತಾದವರಲ್ಲಿ ಆರ್ಥಿಕವಾಗಿ ಬಲಾಢ್ಯರು ಪಟ್ಟಣಗಳಲ್ಲಿ ನೆಲೆಸಿ ಆಧುನಿಕ ಶಿಕ್ಷಣ ಪಡೆದು ಸರ್ಕಾರಿ ಹುದ್ದೆಗಳಿಗಾಗಿ ಬೇಡಿಕೆ ಮುಂದಿಡತೊಡಗಿದರು. ಈ ಬೆಳವಣಿಗೆಗಳಿಂದಾಗಿ ಮುಂದೆ ಬ್ರಾಹ್ಮಣೇತರ ಚಳವಳಿಯು ಜನ್ಮತಾಳಿತು.

೧೮೩೦ರ ಆಂತರಿಕ ದಂಗೆಯ ನಂತರ ಮೈಸೂರು ಮಹಾರಾಜರಿಗೆ ತಮ್ಮ ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ಪ್ರಾದೇಶಿಕ ಜನರ ಬೆಂಬಲ ಅನಿವಾರ್ಯವಾಗಿತ್ತು ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೂ ಬ್ರಿಟಿಷ್ ‌ಆಳ್ವಿಕೆಯಲ್ಲಿದ್ದ ಮದ್ರಾಸು ಸಂಸ್ಥಾನದಿಂದಲೇ ಮೈಸೂರಿನ ಆಡಳಿತದ ಮುಖ್ಯಾಧಿಕಾರಿಗಳಾಗಿದ್ದ ದಿವಾನರು ನೇಮಕಗೊಳ್ಳುತ್ತಿದ್ದುದರಿಂದ ಮತ್ತು ಒಂದಲ್ಲ ಒಂದು ರೀತಿಯಲ್ಲಿ ಬ್ರಿಟಿಷ್ ‌ರ ನಿಯಂತ್ರಣಕ್ಕೆ ಒಳಪಟ್ಟಿದುದರಿಂದ ಮಹಾರಾಜರು ಬ್ರಿಟಿಷರ ಆಜ್ಞಾನುವರ್ತಿಗಳಾಗಿದ್ದರು. ಬ್ರಿಟಿಷರಿಂದ ನೇಮಕಗೊಳ್ಳುತ್ತಿದ್ದ ದಿವಾನರೆಲ್ಲರೂ ಬ್ರಾಹ್ಮಣರೇ ಆಗಿದ್ದರು ಎಂಬುದು ಇಲ್ಲಿ ಗಮನಾರ್ಹ ಅಂಶ. ಮೈಸೂರಿನಲ್ಲಿ ಬ್ರಾಹ್ಮಣೇತರ ಚಳವಳಿ ಆರಂಭವಾಗುವ ಮೊದಲು ಮೈಸೂರಿಗೆ ಹೊರಗಿನಿಂದ ನೇಮಕಗೊಂಡ ಮದ್ರಾಸು ಬ್ರಾಹ್ಮಣ ಅಧಿಕಾರಿಗಳ ವಿರುದ್ಧ ಮೈಸೂರು ಬ್ರಾಹ್ಮಣರು ತಮಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕೆಂದು ಹೋರಾಟ ನಡೆಸಿದರು. ಈ ಹೋರಾಟಕ್ಕೆ ಮೈಸೂರು ಬ್ರಾಹ್ಮಣರ ನಾಯಕತ್ವವನ್ನು ಶ್ರೀಯುತ ಕೃಷ್ಣಮೂರ್ತಿಯವರು ವಹಿಸಿದ್ದರು. ಅವರ ಈ ಬೇಡಿಕೆಗೆ ಮಹಾರಾಣಿಯವರ ಪರೋಕ್ಷ ಬೆಂಬಲವೂ ಇತ್ತು. ನಂತರ ಮೈಸೂರಿನ ರಾಜರುಗಳಿಗೆ ತಮ್ಮ ಜನಬೆಂಬಲವನ್ನು ಇಡೀ ರಾಜ್ಯಾದ್ಯಂತ ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿ ಗ್ರಾಮೀಣ ಪ್ರದೇಶದ ಪ್ರಬಲ ಕೋಮುಗಳಾದ ಒಕ್ಕಲಿಗ, ಲಿಂಗಾಯತರು ಪ್ರಾರಂಭಿಸಿದ ಬ್ರಾಹ್ಮಣ ವಿರೋಧಿ ಚಳವಳಿಯನ್ನು ಬೆಂಬಲಿಸುವುದು ಪರೋಕ್ಷವಾಗಿಯಾದರೂ ಅನಿವಾರ್ಯವೆನಿಸಿತು.

ಪ್ರಾಯಶಃ ಭಾರತದಲ್ಲಿ ಪ್ರಥಮವಾಗಿ ಪ್ರಜಾಪ್ರಭುತ್ವ ಮಾದರಿ ಸರ್ಕಾರದ ಪ್ರಯೋಗ ಮೈಸೂರಿನಲ್ಲಿ ನಡೆಯಿತು. ಅಂತಹ ‌ಪ್ರಯೋಗದ ಪರಿಣಾಮವೇ ೧೮೮೧ರಲ್ಲಿ ಸ್ಥಾಪನೆಗೊಂಡ ‘ಪ್ರಜಾಪ್ರತಿನಿಧಿ ಸಭೆ’ ಹೆಸರಿನ ರಾಜಕೀಯ ಸಂಸ್ಥೆ. ಆದರೆ ಈ ಸಭೆಯ ಸದಸ್ಯನಾಗಲು ವಿದ್ಯಾರ್ಹತೆ, ಸಾಮಾಜಿಕ ಸ್ಥಾನಮಾನ, ಆರ್ಥಿಕ ಅನುಕೂಲತೆ ಮೊದಲಾದ ಅರ್ಹತೆಗಳು ಅವಶ್ಯವಾಗಿದ್ದವು. ಈ ವ್ಯವಸ್ಥೆಯಲ್ಲಿ ಪ್ರತಿನಿಧಿಗಳಾಗಲು ಅರ್ಹತೆ ಹೊಂದಿರುವವರು ಬ್ರಾಹ್ಮಣರನ್ನು ಹೊರತುಪಡಿಸಿದರೆ ಪಟ್ಟಣವಾಸಿಗಳಾದ ಪ್ರಬಲ ಕೋಮಿನ ಜನರು ಮಾತ್ರ ಈ ಕಾರಣದಿಂದಾಗಿ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಜಾತಿಗಳಲ್ಲಿ ಸಹಜವಾಗಿಯೇ ಅಧಿಕಾರಕ್ಕಾಗಿ ಪೈಪೋಟಿ ಪ್ರಾರಂಭವಾಯಿತು. ಈ ಘರ್ಷಣೆಯ ಪರಿಣಾಮವೇ ಸುಮಾರು ಅರ್ಧ ಶತಮಾನದ ಕಾಲ ಮೈಸೂರಿನಲ್ಲಿ ನಡೆದ ಬ್ರಾಹ್ಮಣೇತರ ಚಳವಳಿ.