ಚಳವಳಿಯಪ್ರಾರಂಭ

ಬೇರೆಲ್ಲೆಡೆಯಂತೆ ಮೈಸೂರಿನಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಬ್ರಾಹ್ಮಣರು ಆರ್ಥಿಕವಾಗಿ ಅಷ್ಟೇನೂ ಪ್ರಬಲರಾಗಿರಲಿಲ್ಲ. ಆದರೆ ೧೯ನೇ ಶತಮಾನದ ಮಧ್ಯಭಾಗದಿಂದ ಪಟ್ಟಣಕ್ಕೆ ವಲಸೆ ಬರಲು ಪ್ರಾರಂಭಿಸಿದ್ದರಿಂದ ಅವರು ಆಡಳಿತ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಪ್ರಭಾವವನ್ನು ಗಣನೀಯವಾಗಿ ಬೆಳೆಸಿಕೊಂಡರು. ಹೀಗೆ ವಲಸೆ ಬರುವಾಗ ತಮ್ಮ ಭೂಮಿಯನ್ನು ಪ್ರಬಲ ಬ್ರಾಹ್ಮಣೇತರ ಜಾತಿಗಳಾದ ಒಕ್ಕಲಿಗ, ಲಿಂಗಾಯತರಿಗೆ ವಹಿಸಿ ಬಂದಿರುವುದರಿಂದ ಹಳ್ಳಿಗಳಲ್ಲಿ ಇವರ ಪ್ರಭಾವ ಕುಂಠಿತಗೊಂಡು ಒಕ್ಕಲಿಗ, ಲಿಂಗಾಯತರು ಪ್ರಭಾವಶಾಲಿಗಳಾಗಿ ಬೆಳದರು.

ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಬ್ರಾಹ್ಮಣರು ಬೇರೆಲ್ಲರಿಗಿಂತ ಮುಂದಿರುವ ಕಾರಣದಿಂದಾಗಿ ಸರ್ಕಾರಿ ನೌಕರಿಗಳನ್ನು ಪಡೆದು ಪ್ರಬಲರಾದರು. ೧೯೧೮ರ ಹೊತ್ತಿಗೆ ಮೈಸೂರು ಸರ್ಕಾರದ ನೌಕರಶಾಹಿಯಲ್ಲಿ ಬ್ರಾಹ್ಮಣರ ಪ್ರಾಬಲ್ಯ ಎಷ್ಟು ಗಣನೀಯವಾಗಿತ್ತು ಎಂದರೆ ಗೆಜೆಟೆಡ್‌ ನೌಕರಿಯಲ್ಲಿ ಶೇ. ೬೫ ರಷ್ಟು ಹಾಗೂ ನಾನ್‌ ಗೆಜೆಟೆಡ್‌ ನೌಕರಿಯಲ್ಲಿ ಶೇ. ೭೦ ರಷ್ಟು ನೌಕರಿಗಳು ಇವರ ಪಾಲಾಗಿದ್ದವು.

ಬ್ರಾಹ್ಮಣರಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಬ್ರಾಹ್ಮಣೇತರ ಪ್ರಬಲ ಜಾತಿಗಳಾದ ಲಿಂಗಾಯತರು, ಒಕ್ಕಲಿಗರು ಮತ್ತು ಇತರೇ ಜಾತಿಯ ಜನರ ಪಟ್ಟಣದ ವಲಸೆ ನಿಧಾನವಾಗಿತ್ತು. ವಿದ್ಯಾಭ್ಯಾಸ ಹಾಗೂ ನೌಕರಿಯನ್ನು ಅರಸಿ ಈ ಶತಮಾನದ ಮೊದಲೆರಡು ದಶಕಗಳಲ್ಲಿ ಬ್ರಾಹ್ಮಣೇತರರು ಪಟ್ಟಣಕ್ಕೆ ವಲಸೆ ಬಂದಾದರೂ ಅವರ ಸಂಖ್ಯೆ ಗಣನೀಯವಾಗಿರಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಭೂಮಿಯ ಒಡೆತನ ಮತ್ತು ಇತರ ಸಾಮಾಜಿಕ ಸವಲತ್ತುಗಳನ್ನು ಅನುಭವಿಸುವುದರಲ್ಲಿ ಹೆಚ್ಚು ಕಡಿಮೆ ಬ್ರಾಹ್ಮಣರಿಗೆ ಸಮನಾಗಿದ್ದ ಈ ಗುಂಪುಗಳಿಗೆ ಪಟ್ಟಣದಲ್ಲಿ ಸಂಪೂರ್ಣ ಬ್ರಾಹ್ಮಣೇತರ ಪ್ರಾಬಲ್ಯ ಉಸಿರು ಕಟ್ಟಿಸುವಂತೆ ಮಾಡಿದ್ದು ಸಹಜವೇ ಆಗಿತ್ತು. ಹಾಗಾಗಿ ಹೊಸದಾಗಿ ಪಟ್ಟಣಕ್ಕೆ ಬಂದಿದ್ದ ಬ್ರಾಹ್ಮಣೇತರ ಶಿಕ್ಷಿತ ವರ್ಗಕ್ಕೆ ತಮ್ಮ ಸ್ಥಾನಮಾನಗಳಿಗಾಗಿ ಬ್ರಾಹ್ಮಣರ ವಿರುದ್ಧ ಹೋರಾಟಕ್ಕೆ ಇಳಿಯುವುದರ ವಿನಹ ಅನ್ಯ ಮಾರ್ಗ ಇರಲಿಲ್ಲ.

ಚಳವಳಿಯ ಎರಡು ಹಂತಗಳು

ಜೇಮ್ಸ್‌ ಮನೋರ್‌ರವರು ಮೈಸೂರಿನ ಬ್ರಾಹ್ಮಣೇತರ ಚಳವಳಿಯಲ್ಲಿ ಪ್ರಮುಖವಾಗಿ ಎರಡು ಘಟ್ಟಗಳನ್ನು ಗುರುತಿಸುತ್ತಾರೆ. ಮೊದಲನೇ ಘಟ್ಟದಲ್ಲಿ ಬಂದ ಬ್ರಾಹ್ಮಣೇತರ ನಾಯಕರು ಗುರುತಿಸಿದ ಮುಖ್ಯ ಸವಾಲು ಆಡಳಿತದಲ್ಲಿ ಬ್ರಾಹ್ಮಣರ ಪ್ರಾಬಲ್ಯ ಮಾತ್ರ ಅವರ ಈ ಬೇಡಿಕೆಯನ್ನು ಅಧಿಕಾರ ಸ್ಥಾನಗಳಲ್ಲಿ ಪಾಲು ಕೊಡುವುದರ ಮೂಲಕ ಈಡೇರಿಸಲು ಪ್ರಯತ್ನಿಸಲಾಯಿತು.

ಎರಡನೇ ಘಟ್ಟದಲ್ಲಿ, ಅಂದರೆ ೧೯೨೦ರ ನಂತರ ಬಂದ ಬ್ರಾಹ್ಮಣೇತರರು ಪಾಶ್ಚಾತ್ಯ ವಿದ್ಯಾಭ್ಯಾಸದಿಂದ ಪ್ರಭಾವಿತರಾದವರು. ಈ ಹಂತದಲ್ಲಿ ಬ್ರಾಹ್ಮಣೇತರ ನಾಯಕರು ರಾಷ್ಟ್ರೀಯ ಚಳವಳಿಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಆರಂಭಿಸಿದರು.

ಮೈಸೂರಿನಲ್ಲಿ ಬ್ರಾಹ್ಮಣೇತರ ಚಳವಳಿ ಮೊದಲ ಹಂತ

೧೯೦೬ರಲ್ಲಿ ದಿವಾನ್‌ ಕೃಷ್ಣಮೂರ್ತಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಆ ಸ್ಥಾನವನ್ನು ತುಂಬಿದವರು ಮಾಧವರಾವ್‌ ಎನ್ನುವ ಮದ್ರಾಸಿ ಬ್ರಾಹ್ಮಣರು. ಬ್ರಾಹ್ಮಣೇತರರು ರಾಜಕೀಯವಾಗಿ ಹೆಚ್ಚು ಕ್ರಿಯಾಶೀಲರಾದದ್ದು ಮಾಧವರಾವ್‌ ಅವರ ಕಾಲದಲ್ಲಿ ಇದಕ್ಕೆ ಎರಡು ಮುಖ್ಯ ಕಾರಣಗಳಿವೆ:

ಒಂದನೆಯದಾಗಿ ಮಾಧವರಾವ್‌ ಅವರಿಗೆ ಮೈಸೂರು ಬ್ರಾಹ್ಮಣರ ಬಗೆಗೆ ಇದ್ದ ದ್ವೇಷ, ಎರಡನೆಯದಾಗಿ, ಬ್ರಾಹ್ಮಣೇತರ ಜಾತಿಗಳನ್ನು ಬೆಂಬಲಿಸುವ ಬಗ್ಗೆ ಮಹಾರಾಜರಿಗಿದ್ದ ಒಲವು.

ಆದಾಗಲೇ ಶೈಕ್ಷಣಿಕವಾಗಿ ಪ್ರಗತಿಗೊಂಡಿದ್ದ ವೀರಶೈವರು ೧೯೦೫ರಲ್ಲಿ ‘ಮೈಸೂರು ಲಿಂಗಾಯತ ಶಿಕ್ಷಣ ನಿಧಿ ಸಂಘ’ವನ್ನು ಸ್ಥಾಪಿಸಿಕೊಂಡಿದ್ದರು. ಮಾಧವರಾವ್‌ ಅವರ ಕಾಲದಲ್ಲಿ ಇನ್ನಷ್ಟು ಜಾತಿ ಸಂಘಟನೆಗಳು ಹುಟ್ಟಿಕೊಂಡವು. ೧೯೦೬ರಲ್ಲಿ ಸ್ಥಾಪನೆಗೊಂಡ ಒಕ್ಕಲಿಗರ ಸಂಘವು ಒಕ್ಕಲಿಗ ಯುವ ಜನಾಂಗದ ಶಿಕ್ಷಣಕ್ಕೆ ಬೆಂಬಲ ನೀಡತೊಡಗಿತು. ಬೆಂಗಳೂರು ಸೇರಿದಂತೆ ಹಳೆ ಮೈಸೂರು ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಒಕ್ಕಲಿಗ ವಿದ್ಯಾರ್ಥಿನಿಲಯಗಳು ಸ್ಥಾಪನೆಗೊಂಡವು. ಒಕ್ಕಲಿಗ ಸಮುದಾಯದ ಜಾಗೃತಿಗಾಗಿ ೧೯೦೭ರಲ್ಲಿ ‘ಒಕ್ಕಲಿಗರ ಪತ್ರಿಕೆ’ ಸಹ ಆರಂಭವಾಯಿತು. ನಂತರ ಅದು ಒಕ್ಕಲಿಗರು ಮಾತ್ರವಲ್ಲದೆ ಹಿಂದುಳಿದ ವರ್ಗದ ಜನರೆಲ್ಲರ ಮುಖವಾಣಿ ಎನಿಸಿತು. ೧೯೦೯ರಲ್ಲಿ ‘ಮಹಮದೀಯ ಕೇಂದ್ರ ಸಂಘ’ ಸ್ಥಾಪನೆಗೊಂಡಿತು. ಈ ಎಲ್ಲ ಬೆಳವಣಿಗೆಗಳು ಮೈಸೂರಿನಲ್ಲಿ ಬ್ರಾಹ್ಮಣೇತರ ಚಳವಳಿಗೆ ಚಾಲನೆ ನೀಡಿದವು.

ಪ್ರಜಾಮಿತ್ರ ಮಂಡಳಿ ಸ್ಥಾಪನೆ

ಮೈಸೂರು ಸಂಸ್ಥಾನದ ಬ್ರಾಹ್ಮಣೇತರ ಚಳವಳಿಗೆ ನೆರೆ ರಾಜ್ಯವಾದ ಮದ್ರಾಸು ಪ್ರಾಂತ್ಯದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ಗಾಢ ಪ್ರಭಾವ ಬೀರಿದವು. ಮದ್ರಾಸಿನಲ್ಲಿ ಬ್ರಾಹ್ಮಣರ ಪ್ರಾಬಲ್ಯದ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಸ್ಥಾಪಿಸಲ್ಪಟ್ಟ ‘ಜಸ್ಟೀಸ್‌ ಪಕ್ಷ’ ಮೈಸೂರಿನ ಬ್ರಾಹ್ಮಣೇತರರಿಗೆ ಪ್ರೇರಕ ಶಕ್ತಿಯಾಯಿತೆಂದು ವಿದ್ವಾಂಸರಾದ ಇರ್ಷಿಕ್‌ರವರು ಅಭಿಪ್ರಾಯ ಪಡುತ್ತಾರೆ. ಮದ್ರಾಸು ಮಾದರಿಯ ಬ್ರಾಹ್ಮಣೇತರ ಚಳವಳಿಯನ್ನು ಮಯಸೂರಿನಲ್ಲಿ ಯಶಸ್ವಿಯಾಗಿ ಬಿತ್ತಿದವರು ಪ್ರೊಫೆಸರ್ ಸಿ.ಆರ್‌. ರೆಡ್ಡಿಯವರು ಮದ್ರಾಸಿನ ಚಳವಳಿಯಿಂದ ಪ್ರೇರಿತರಾದ ಇವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿ ಬಂದು ಇಲ್ಲಿ ಬ್ರಾಹ್ಮಣೇತರರ ಜೊತೆಗೆ ತಮ್ಮ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಇದರ ಪರಿಣಾಮವಾಗಿ ೧೯೧೭ರಲ್ಲಿ ‘ಪ್ರಜಾಮಿತ್ರ ಮಂಡಳಿ’ ಎನ್ನುವ ಬ್ರಾಹ್ಮಣೇತರರ ಒಕ್ಕೂಟದ ಸ್ಥಾಪನೆಯಾಯಿತು. ಪ್ರಜಾಮಿತ್ರ ಮಂಡಳಿಯು ಲಿಂಗಾಯತ, ಒಕ್ಕಲಿಗ ಮತ್ತು ಮುಸ್ಲಿಮ್‌ಮುಖಂಡರ ಒಂದು ವೇದಿಕೆಯಾಗಿ ಬ್ರಾಹ್ಮಣೇತರರ ಹಿತಾಸಕ್ತಿಗಳನ್ನು ಬಿಂಬಿಸಲು ತೊಡಗಿತು. ೧೯೧೭ರಲ್ಲಿ ಬ್ರಾಹ್ಮಣೇತರರ ಭಾರಿ ಬಹಿರಂಗ ಸಭೆಯೂ ನಡೆಯಿತು.

ಅಂದಿನ ದಿನಗಳಲ್ಲಿ ಸರ್ಕಾರಿ ನೌಕರಿ ಸಾಮಾಜಿಕ ಪ್ರತಿಷ್ಠೆತಯ ಮತ್ತು ಸಂಪತ್ತಿನ ಸಂಕೇತವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಆಡಳಿತದಲ್ಲಿ ತಮಗೆ ನ್ಯಾಯಯುತ ಪ್ರಾತಿನಿಧ್ಯ ದೊರಕಬೇಕೆಂಬುದು ಅದರ ಪ್ರಧಾನ ಬೇಡಿಕೆಯಾಗಿತ್ತು. ಈ ಉದ್ದೇಶದಿಂದಲೇ ಬ್ರಾಹ್ಮಣೇತರ ಪಕ್ಷವಾದ ಪ್ರಜಾಮಿತ್ರ ಮಂಡಳಿಯ ನಿಯೋಗವೊಂದು ೧೯೧೮ರಲ್ಲಿ ಮಹಾರಾಜರನ್ನು ಭೇಟಿಯಾಗಿ ಒಂದು ಮನವಿ ಪತ್ರವನ್ನು ಸಲ್ಲಿಸಿತು. ಆ ನಿಯೋಗದ ಸದಸ್ಯರಿಗೆ ಆಗಿನ ಯುವರಾಜನ ಸಮೀಪವರ್ತಿಗಳ ಒಂದು ಗುಂಪಿನ ಬೆಂಬಲವಿದ್ದುದಾಗಿ ತಿಳಿದುಬರುತ್ತದೆ. ಈ ಗುಂಪಿಗೆ ‘ಪ್ಯಾಲೇಸ್‌ ಪಾರ್ಟಿ’ ಎಂಬ ಹೆಸರು ಇತ್ತು. ಈ ಮನವಿ ಪತ್ರವನ್ನು ಸಲ್ಲಿಸಿದ ಪರಿಣಾಮವಾಗಿ ಮಹಾರಾಜರು ಸರ್‌ಲೆಸ್ಲಿಸಿ ಮಿಲ್ಲರ್‌ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿ ಈ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಕ್ರಮ ಕೈಗೊಂಡರು.

ಮಿಲ್ಲರ್ಸಮಿತಿ

ಬ್ರಾಹ್ಮಣೇತರರ ನಿಯೋಗವು ೧೯೧೮ರಲ್ಲಿ ಸಲ್ಲಿಸಿದ ಮನವಿ ಪತ್ರದ ಪರಿಣಾಮವಾಗಿ ಮಹಾರಾಜರು ಬ್ರಾಹ್ಮಣೇತರರಿಗೆ ಆಡಳಿತದಲ್ಲಿ ಪ್ರಾತಿನಿಧ್ಯ ನೀಡಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವುದನ್ನು ಪರಿಶೀಲಿಸಲು ಸರ್‌ ಲೆಸ್ಲಿಸಿ ಮಿಲ್ಲರ್‌ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿದರು. ಸಮಿತಿಯ ಇತರ ಸದಸ್ಯರೆಂದರೆ ಶ್ರೀ ಶ್ರೀಕಂಠೇಶ್ವರ ಐಯ್ಯರ್‌, ಶ್ರೀ ಎಂ. ಮುತ್ತಣ್ಣ, ಶ್ರೀ ಎಂ. ಸಿ. ರಂಗಯ್ಯಚಾರ್‌, ಶ್ರೀ ಎಚ್‌. ಚೆನ್ನಯ್ಯ, ಶ್ರೀ ಗುಲಾಮ ಅಹ್ಮದ್‌ ಕಲಾಯಿ ಮತ್ತು ಶ್ರೀ ಎಂ. ಬಸವಯ್ಯರ್‌.

೧೯೧೯ರ ಆಗಸ್ಟ್‌ ೧೫ ರಂದು ಮಿಲ್ಲರ್‌ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಮಿಲ್ಲರ್‌ ಸಮಿತಿಯು ತನ್ನ ವರದಿಯಲ್ಲಿ ಸರ್ಕಾರಿ ನೌಕರಿಯಲ್ಲಿ ಸಾಕಷ್ಟು ಪ್ರಾತಿನಿಧ್ಯ ಹೊಂದಿರುವ ಕೋಮುಗಳನ್ನು ಹಿಂದುಳಿದ ಕೋಮುಗಳು ಎಂದು ಗುರುತಿಸಿದ್ದರಿಂದ, ಬ್ರಾಹ್ಮಣರನ್ನು ಹೊರತುಪಡಿಸಿ ತರ ಎಲ್ಲ ಜಾತಿಗಳು ಹಿಂದುಳಿದ ಜಾತಿಗಳೆಂದು ಪರಿಣಮಿಸಿತು. ಈ ಸಮಿತಿ ೧೯೧೧ರ ಜನಗಣತಿಯ ಆಧಾರದಲ್ಲಿ ಶೇ. ೫ಕ್ಕೂ ಕಡಿಮೆ ಸಾಕ್ಷರತೆ ಹೊಂದಿದ್ದ ಎಲ್ಲ ಜಾತಿಗಳನ್ನು ಹಿಂದುಳಿದ ಸಮುದಾಯಗಳೆಂದು ಪರಿಗಣಿಸಿತು. ಈ ಆಧಾರದಲ್ಲಿ ನೋಡಿದಾಗ ಸ್ವಾಭಾವಿಕವಾಗಿಯೇ ಬ್ರಾಹ್ಮಣರನ್ನು ಹೊರತುಪಡಿಸಿ ಇತರ ಭಾರತೀಯ ಜಾತಿ ಸಮುದಾಯದವರು ಹಿಂದುಳಿದ ವರ್ಗಗಳೆಂದು ಪರಿಗಣಿಸಲ್ಪಟ್ಟರು.

ಮಿಲ್ಲರ್‌ ಸಮಿತಿಯು ನೀಡಿದ ಮುಖ್ಯ ಶಿಫಾರಸ್ಸುಗಳೆಂದರೆ :

  • ಸರ್ಕಾರದ ಅರ್ಧ (೧/೨) ಭಾಗದಷ್ಟು ಉನ್ನತ ದರ್ಜೆಯ ಹುದ್ದೆಗಳನ್ನು ಮತ್ತು ಮೂರನೇ ಎರಡರಷ್ಟು (೨/೩) ಭಾಗದಷ್ಟು ಕೆಳದರ್ಜೆಯ ಹುದ್ದೆಗಳನ್ನು ಏಳು ವರ್ಷದ ಅವಧಿಯೊಳಗೆ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಂದ ತುಂಬಬೇಕು.
  • ಸರ್ಕಾರಿ ಆಡಳಿತದಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ೨೫ ರಿಂದ ೨೮ ವರ್ಷಗಳಿಗೆ ಹೆಚ್ಚಿಸಬೇಕು.
  • ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆಯಲು ಹಾಗೂ ಹಿಂದುಳಿದ ವರ್ಗಗಳಿಗೆ ವಿದ್ಯಾರ್ಥಿ ವೇತನ ನೀಡಲು ೨ ಲಕ್ಷ ರೂಪಾಯಿಗಳನ್ನು ಆಯವ್ಯಯದಲ್ಲಿ ಒದಗಿಸಬೇಕು ಇತ್ಯಾದಿ.

ಮಿಲ್ಲರ್‌ ಸಮಿತಿಯ ವರದಿ ಮತ್ತು ಶಿಫಾರಸ್ಸುಗಳನ್ನು ಅಂಗೀಕರಿಸಿದ ಅಂದಿನ ಮೈಸೂರು ಸರ್ಕಾರ ಮೇಲೆ ೧೯೨೧ ರಲ್ಲಿ ಈ ಕೆಳಗಿನಂತೆ ಆದೇಶ ಹೊರಡಿಸಿತು.

ಏಳು ವರ್ಷಗಳಲ್ಲಿ ಎಲ್ಲ ಇಲಾಖೆಗಳ ಮುಖ್ಯ ಕೇಂದ್ರಗಳಲ್ಲಿ ಮತ್ತು ಜಿಲ್ಲಾ ಕಚೇರಿಗಳಲ್ಲಿ ಹಿಂದುಳಿದ ಕೋಮುಗಳ ಸದಸ್ಯರ ಪ್ರಮಾಣವನ್ನು ನೌಕರ ವರ್ಗದ ಒಟ್ಟು (ಕೆಳದರ್ಜೆಯ ನೌಕರಿಯನ್ನು ಹೊರತುಪಡಿಸಿ) ಸಂಖ್ಯೆಯ ಶೇಕಡಾ ಐವತ್ತಕ್ಕೆ ಏರಿಸಬೇಕು.

ಮಿಲ್ಲರ್ವರದಿಯ ನಂತರದ ಬೆಳವಣಿಗೆಗಳು

ಮೈಸೂರು ಸರ್ಕಾರದ ಈ ಮೀಸಲಾತಿ ನೀತಿಯೇ ಆಗಿನ ಮೈಸೂರು ರಾಜ್ಯದ ದಿವಾನರಾಗಿದ್ದ ಎಂ. ವಿಶ್ವೇಶ್ವರಯ್ಯನವರ ರಾಜೀನಾಮೆಗೆ ಕಾರಣವಾಯಿತು. ಸಮರ್ಥ ಮತ್ತು ದಕ್ಷ ಆಡಳಿತಗಾರರೆಂದೇ ಹೆಸರು ಮಾಡಿದ ವಿಶ್ವೇಶ್ವರಯ್ಯನವರ ಆರು ಅಸಿಸ್ಟೆಂಟ್‌ ಕಮೀಷನರ್‌ ಹುದ್ದೆಯ ನೇಮಕಾತಿಗಾಗಿ ಅಷ್ಟೇ ಅಭ್ಯರ್ಥಿಗಳ ಹೆಸರುಗಳನ್ನು ಶಿಫಾರಸ್ಸು ಮಾಡಿ ಮಹಾರಾಜರ ಅನುಮೋದನೆಗಾಗಿ ಕಳುಹಿಸಿದ್ದರು. ಅವರು ಕಳುಹಿಸಿದ ಆರು ಹೆಸರುಗಳೂ ಬ್ರಾಹ್ಮಣ ವರ್ಗಕ್ಕೆ ಸೇರಿದವು ಎನ್ನುವ ಕಾರಣಕ್ಕಾಗಿ ಮಹಾರಾಜರು ಆ ಶಿಫಾರಸ್ಸನ್ನು ತಿರಸ್ಕರಿಸಿದರು. ನಂತರ ವಿಶ್ವೇಶ್ವರಯ್ಯನವರು ಮೈಸೂರು ವಿಶ್ವವಿದ್ಯಾಲಯದ ಸೆನೆಟಿಗೆ ಮಾಡಿದ ಶಿಫಾರಸ್ಸು ಅದೇ ಕಾರಣಕ್ಕಾಗಿ ತಿರಸ್ಕೃತವಾಯಿತು. ‘ದಕ್ಷತೆಯನ್ನು ಕಡೆಗಣಿಸಲಾಗಿದೆ’ ಎನ್ನುವ ವಾದವನ್ನು ಮಹಾರಾಜರು ಒಪ್ಪಲಿಲ್ಲ. “ಇದನ್ನು ನಾನು ಯೋಚಿಸಿಯೇ ಮಾಡಿದ್ದೇನೆ ಮತ್ತು ನಾನು ಮಾಡಿರುವುದು ಸರಿ ಎಂದು ನನಗೆ ಗೊತ್ತಿದೆ” ಎಂದು ಮಹಾರಾಜರು ಪ್ರತಿಕ್ರಿಯಿಸಿದರು. ಮಹಾರಾಜರ ಈ ಕ್ರಮವನ್ನು ಪ್ರತಿಭಟಿಸಿ ವಿಶ್ವೇಶ್ವರಯ್ಯನವರು ಹುದ್ದೆ ತ್ಯಜಿಸಿದರು.

ಬ್ರಾಹ್ಮಣೇತರ ದಿವಾನರ ನೇಮಕ

ವಿಶ್ವೇಶ್ವರಯ್ಯನವರ ರಾಜೀನಾಮೆಯ ನಂತರ ಮೈಸೂರು ಮಹಾರಾಜರ ಸಂಬಂಧಿಗಳಾದ ಎಂ. ಕಾಂತರಾಜೇ ಅರಸರು ದಿವಾನರಾಗಿ ನೇಮಕಗೊಂಡರು. ಕಾಂತರಾಜೇ ಅರಸರು ಮೈಸೂರು ಸಂಸ್ಥಾನದ ಮೊತ್ತಮೊದಲ ಬ್ರಾಹ್ಮಣೇತರ ದಿವಾನರು. ಇವರ ಕಾಲದಲ್ಲಿ ಕರ್ನಾಟಕದ ಹಿಂದುಳಿದ ವರ್ಗಗಳು ಹೆಚ್ಚಿನ ಅವಕಶಘಳನ್ನು ಪಡೆಯುವಂತಾಯಿತು.

೧೯೨೦ರ ದಶಕದಲ್ಲಿ ಪ್ರಜಾಮಿತ್ರ ಮಂಡಳಿಯ ಚಟುವಟಿಕೆಗಳೂ ಹಿನ್ನಡೆ ಕಂಡವು. ಈ ಹಿನ್ನಡೆಗೆ ಮುಖ್ಯ ಕಾರಣಗಳೆಂದರೆ:

ಮೊದಲನೆಯದಾಗಿ, ಚಳವಳಿಯ ಸ್ಥಾಪಕರಾದ ಪ್ರೊ. ಸಿ.ಆರ್‌. ರೆಡ್ಡಿ ಅವರು ಮೈಸೂರು ತೊರೆದು ಮದ್ರಾಸಿಗೆ ಹಿಂತಿರುಗಿದರು.

ಎರಡನೆಯದಾಗಿ, ಬ್ರಾಹ್ಮಣೇತರ ಚಳವಳಿಯು ನಗರ ಕೇಂದ್ರೀಕೃತವಾಗಿದ್ದು, ಬೆರಳೆಣಿಕೆಯಷ್ಟು ವಿದ್ಯವಂತ ಬ್ರಾಹ್ಮಣೇತರರು ಮಾತ್ರ ಈ ಚಳವಳಿಯಲ್ಲಿ ಸಕ್ರಿಯರಾಗಿದ್ದರು.

ಮೂರನೆಯದಾಗಿ, ಚಳವಳಿಯ ನಾಯಕರಿಗೆ ಒಟ್ಟು ಸಾಮಾಜಿಕ ಹಿತಕ್ಕಿಂತ ಮುಖ್ಯವಾಗಿ ಶಿಕ್ಷಿತ ಪಟ್ಟಣವಾಸಿಗಳಾದ ಬ್ರಾಹ್ಮಣೇತರರ ಹಿತವಷ್ಟೆ ಮುಖ್ಯವಾಗಿತ್ತು.

ಮಿಲ್ಲರ್ವರದಿಯ ಪರಿಣಾಮಗಳು

ಮಿಲ್ಲರ್‌ ವರದಿಯ ಶಿಫಾರಸುಗಳಿಂದಾಗಿ ಬ್ರಾಹ್ಮಣೇತರರಿಗೆ ಆಡಳಿತದಲ್ಲಿ ಕೆಲವು ಸ್ಥಾನಗಳು ದಕ್ಕಿದರೂ, ಎಲ್ಲ ಬ್ರಾಹ್ಮಣೇತರ ವರ್ಗಗಳನ್ನು ತೃಪ್ತಿಪಡಿಸುವಲ್ಲಿ ವಿಫಲವಾಯಿತು. ವಿದ್ವಾಂಸರಾದ ಜೆ. ಎಸ್‌. ಸದಾನಂದ ಅಭಿಪ್ರಾಯ ಪಡುವಂತೆ ಈ ಸಮಸ್ಯೆಗಳಿಗೆ ಎರಡು ಕಾರಣಗಳಿವೆ:

ಒಂದನೆಯದಾಗಿ, ಬ್ರಾಹ್ಮಣೇತರ ವರ್ಗಗಳಲ್ಲಿಯೂ ಶಿಕ್ಷಣ ಪಡೆಯುವ ಸ್ಥಿತಿಯಲ್ಲಿದ್ದವರೆಂದರೆ ಭೂಒಡೆತನದಿಂದಾಗಿ ಪ್ರಬಲರಾಗಿದ್ದ ಲಿಂಗಾಯತರು ಮತ್ತು ಒಕ್ಕಲಿಗರು ಮಾತ್ರ. ಇತರ ಜಾತಿಯವರಿಗೆ ಮೀಸಲಾತಿ ಸೌಲಭ್ಯಗಳಿದ್ದರೂ, ಎಲ್ಲೊ ಕೆಲವು ಅಪವಾದಗಳನ್ನು ಬಿಟ್ಟರೆ, ಆಡಳಿತ ಸೇವೆಗೆ ಸೇರುವಷ್ಟು ವಿದ್ಯಾರ್ಹತೆ ಇರಲಿಲ್ಲ.

ಎರಡನೆಯದಾಗಿ, ವಿದ್ಯಾರ್ಹತೆ ಪಡೆದ ಎಲ್ಲ ಹಿಂದುಳಿದ ವರ್ಗದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವಷ್ಟು ಸರ್ಕಾರಿ ಹುದ್ದೆಗಳೂ ಇರಲಿಲ್ಲ.

ಈ ಕಾರಣದಿಂದಾಗಿ ಬ್ರಾಹ್ಮಣೇತರರಲ್ಲೂ ಒಡಕು ಉಂಟಾಯಿತು. ಮುಸ್ಲಿಮ್‌ ಮತ್ತು ಆದಿ ಕರ್ನಾಟಕದ ಜನಾಂಗದವರಿಗೆ ಮಿಲ್ಲರ್‌ ವರದಿಯಿಂದ ತಮಗೆ ಯಾವುದೆ ರೀತಿಯ ಸೌಲಭ್ಯ ಸಿಗುವುದಿಲ್ಲವೆಂಬ ಅನುಮಾನ ಉಂಟಾಯಿತು. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಬ್ರಾಹ್ಮಣ ನಾಯಕರು ಅತೃಪ್ತರಾಗಿರುವ ಕೆಳಜಾತಿಯ ಜನರನ್ನು ಸಂಘಟಿಸಲು ನೆರವಾದರು. ಈ ಪ್ರಯತ್ನಗಳಿಂದಾಗಿ ಬ್ರಾಹ್ಮಣೇತರ ಸಂಘಟನೆ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಪರೋಕ್ಷವಾಗಿ ಈ ರೀತಿಯ ಒಡಕುಗಳು ಬ್ರಾಹ್ಮಣರ ಪ್ರಾಬಲ್ಯ ಮುಂದುವರಿಯಲು ನೆರವಾಯಿತು.

ಮಿಲ್ಲರ್‌ ವರದಿಯ ಅನುಷ್ಠಾನದೊಂದಿಗೆ ಮುಸ್ಲಿಮರಾದ ಮಿರ್ಜಾ ಇಸ್ಲಾಯಿಲ್‌ರನ್ನು ದಿವಾನರನ್ನಾಗಿ ನೇಮಿಸಿದ ಮಹಾರಾಜರ ಕ್ರಮವು ಬ್ರಾಹ್ಮಣರನ್ನು ಇನ್ನಷ್ಟು ಕೆರಳಿಸಿತು. ಮಿರ್ಜಾ ಇಸ್ಮಾಯಿಲ್‌ ಅವರು ಬ್ರಾಹ್ಮಣೇತರ ಚಳವಳಿಯನ್ನು ಬೆಂಬಲಿಸಬಹುದು ಎಂಬ ಆತಂಕವು ಅವರಲ್ಲಿ ಉಂಟಾಯಿತು. ಆದರೆ ೧೯೨೮ರಿಂದ ಆರಂಭಗೊಂಡು ೧೯೩೫ರ ತನಕ ಹಿಂದೂ-ಮುಸ್ಲಿಮ್‌ ಸಮುದಾಯಗಳಲ್ಲಿ ನಡೆದ ಕೋಮು ಗಲಭೆಗಳು ಮಿರ್ಜಾ ಇಸ್ಮಾಯಿಲ್‌ರನ್ನು ಬ್ರಾಹ್ಮಣೇತರ ವರ್ಗಗಳಿಗಾಗಲಿ, ಮುಸ್ಲಿಮರಿಗಾಗಲಿ ಬೆಂಬಲ ನೀಡದಂತೆ ಮಾಡಿದವು. ೧೯೨೮ರ ಹಿಂದೂ –ಮುಸ್ಲಿಮ್‌ಗಲಭೆಗಳು ಬ್ರಾಹ್ಮಣೇತರರ ಪರವಾಗಿ ನೀಡಿದ ಮೀಸಲಾತಿ ಸೌಲಭ್ಯದಿಂದ ಅಸಮಾಧಾನಗೊಂಡ ರಾಜಕಾರಣಿಗಳ ಕುಮ್ಮಕ್ಕಿನಿಮದಲೇ ನಡೆಯಿತೆಂದು ಎಂ. ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯ ವಿಚಾರಣಾ ಸಮಿತಿ ಅಭಿಪ್ರಾಯಪಟ್ಟಿತು.

ಬ್ರಾಹ್ಮಣೇತರ ಚಳವಳಿಯ ಎರಡನೆಯ ಹಂತ

೧೯೨೮ರ ನಂತರ ಹೊಸ ಹೊಸ ತಲೆಮಾರಿನ ಬ್ರಾಹ್ಮಣೇತರ ನಾಯಕರ ಪ್ರವೇಶದಿಂದಾಗಿ ಬ್ರಾಹ್ಮಣೇತರ ರಾಜಕೀಯ ಇತಿಹಾಸದ ಸ್ವರೂಪದಲ್ಲಿ ಬದಲಾವಣೆ ಕಂಡುಬಂತು. ರಾಷ್ಟ್ರೀಯ ಭಾವನೆಯ ಬೆಳವಣಿಗೆ, ಮಹಾತ್ಮ ಗಾಂಧಿಯವರ ಪ್ರಭಾವ ಮುಂತಾದ ಅಂಶಗಳಿಂದ ಪ್ರಭಾವಿತರಾದ ಹೊಸ ತಲೆಮಾರಿನ ಬ್ರಾಹ್ಮಣೇತರ ವರ್ಗವು ಚಳವಳಿಯ ನಾಯಕತ್ವವನ್ನು ವಹಿಸಿಕೊಂಡಿತು.

ಈ ಹೊಸ ತಲೆಮಾರಿನ ನಾಯಕರು ಹಿಂದಿನ ಬ್ರಾಹ್ಮಣೇತರ ನಾಯಕರಂತೆ ಮಹಾರಾಜರ ಆಳ್ವಿಕೆಯನ್ನು ಒಪ್ಪಿಕೊಳ್ಳುಲು ಸಿದ್ಧರಿರಲಿಲ್ಲ. ರಾಷ್ಟ್ರೀಯ ಚಿಂತನೆಯ ಪ್ರಭಾವ ಇವರ ಮೇಲೆ ಹೆಚ್ಚಿದಂತೆ ಮೈಸೂರ ಸಂಸ್ಥಾನದ ಸರ್ಕಾರದ ಮೇಲೆ ಇವರ ಅಸಹನೆ, ತಿರಸ್ಕಾರಗಳು ಬೆಳೆಯುತ್ತಾ ಹೋಯಿತು. ವಿದ್ವಾಂಸರಾದ ಜೇಮ್ಸ್ ಮನೋರ್ ಅಭಿಪ್ರಾಯ ಪಡುವಂತೆ ಬ್ರಾಹ್ಮಣೇತರರಿಗೆ ಸರ್ಕಾರಿ ನೌಕರಿ ದೊರಕಿದರು ಅತ್ಯಂತ ನಿಧಾನ ಗತಿಯಲ್ಲಿ ಬಡ್ತಿ ದೊರೆಯುತ್ತಿದ್ದುದು ಇವರ ಅಸಮಾಧಾನಕ್ಕೆ ಇನ್ನೊಂದು ಕಾರಣ.

ಬ್ರಾಹ್ಮಣೇತರರ ರಾಷ್ಟ್ರೀಯ ಚಿಂತನೆಯ ಆ ಕಾಲದಲ್ಲಿ ರಾಷ್ಟ್ರೀಯ ಚಳವಳಿಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಪಕ್ಷದ ಚಿಂತನೆಯೇ ಆಗಿತ್ತು. ಬ್ರಾಹ್ಮಣೇತರರು ತಮ್ಮ ರಾಜಕೀಯ ಚಟವಟಿಕೆಗಳಲ್ಲಿ ಬ್ರಾಹ್ಮಣ ನೇತಾರರನ್ನು ಸೇರಿಸಿಕೊಳ್ಳು ಆರಂಭಿಸಿದರು. ಆಮೂಲಕ ಅವರು ಪ್ರಾದೇಶಿಕ ಹಾಗೂ ಜಾತಿ ರಾಜಕಾರಣವನ್ನು ಮೀರಿ ನಿಲ್ಲುವ ಪ್ರಯತ್ನವನ್ನು ನಡೆಸಿದರು. ಆದರೆ ಪ್ರಾರಂಭದಲ್ಲಿ ಕಾಂಗ್ರೆಸ್‌ನ ಬ್ರಾಹ್ಮಣ ನಾಯಕತ್ವವು ಬ್ರಾಹ್ಮಣೇತರರಿಗೆ ಸಾಕಷ್ಟು ಪ್ರಾಧಾನ್ಯತೆ ನೀಡಲಿಲ್ಲ. ಹಾಗಾಗಿ ಬ್ರಾಹ್ಮಣೇತರ ವರ್ಗವು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಉತ್ಸಾಹ ಹೆಚ್ಚಾಗಿ ತೋರಿಸಲಿಲ್ಲ. ಇನ್ನೊಂದು ಕಡೆ ಬ್ರಾಹ್ಮಣರು ರಾಷ್ಟ್ರೀಯ ಸಿದ್ಧಾಂತಗಳನ್ನು ಅಪ್ಪಕೊಳ್ಳುವ ಮೂಲಕ ಬ್ರಾಹ್ಣೇತರರಂತೆ ತಾವು ಸಂಕುಚಿತ ವಾದಿಗಳಲ್ಲ ಎಂದು ತೋರ್ಪಡಿಸುವ ಪ್ರಯತ್ನವನ್ನು ನಡೆಸಿದ್ದರು.

೧೯೨೦ರ ದಶಕದಲ್ಲಿ ರಾಷ್ಟ್ರೀಯವಾದಿ ಬ್ರಾಹ್ಮಣ ಮತ್ತು ಬ್ರಾಹ್ಮಣೇತರರ ನಡುವೆ ಬಹಳ ಭಿನ್ನಾಭಿಪ್ರಾಯಗಳಿದ್ದವು. ಅದರಲ್ಲೂ ಸಾಮಾಜಿಕ ಚಿಂತನೆಗಳು ವಿಭಿನ್ನವಾದ ಕಾರಣ ಅವರ ರಾಜಕೀಯ ನಿಲುವಿನಲ್ಲೂ ವ್ಯತ್ಯಾಸಗಳಿದ್ದವು. ಜೆ. ಎಸ್. ಸದಾನಂದ ಅಭಿಪ್ರಾಯ ಪಡುವಂತೆ ಅಂದಿನ ಬ್ರಾಹ್ಮನೆತರರು ಕಾಂಗ್ರೆಸ್ ಪಕ್ಷ ಸೇರಬೇಕಿದ್ದಲ್ಲಿ ಅವರು ಬೇರೆ ರಾಜಕೀಯ ಸಂಘಟನೆಯಲ್ಲಿ ಗುರುತಿಸಿಕೊಳ್ಳುವಂತಿರಲಿಲ್ಲ. ಈ ಕಾರಣದಿಂದಾಗಿ ೧೯೨೩ರಲ್ಲಿ ಕಾಂಗ್ರೆಸ್ ಪಕ್ಷ ಸೇರುವಂತೆ ಬ್ರಾಹ್ಮಣರು ನಡೆಸಿದ ಪ್ರಯತ್ನಕ್ಕೆ ಬ್ರಾಹ್ಮಣೇತರರು ಕಿವಿ ಗೊಡಲಿಲ್ಲ. ಆದರೆ ೧೯೩೦ರ ನಂತರ ಕಾಂಗ್ರೆಸ್‌ನ ನಿಲುವಿನಲ್ಲೂ ಬದಲಾವಣೆಗಳು ಕಂಡು ಬಂದವು. ಕಾಂಗ್ರೆಸ್ ಪಕ್ಷವು ಬ್ರಾಹ್ಮಣೇತರರನ್ನು ಒಂದು ರಾಜಕೀಯ ಪಕ್ಷವಾಗಿ ಗುರುತಿಸಿ ತನ್ನ ಕಕ್ಷೆಯೊಳಗೆ ತರುವ ಪ್ರಯತ್ನ ಮಾಡತೊಡಗಿತು.

೧೯೩೦ರ ದಶಕದಲ್ಲಿ ಮದ್ರಾಸಿನಲ್ಲಿ ಜಸ್ಟಿಸ್ ಪಕ್ಷವು ಸಕ್ರಿಯವಾಗಿತ್ತು. ಜಸ್ಟೀಸ್ ಪಕ್ಷದ ಪ್ರಭಾವವು ಮದ್ರಾಸು ಪ್ರಾಂತ್ಯಕ್ಕೆ ಸೇರಿದ ಕರಾವಳಿನ ಕರ್ನಾಟಕದ ದಕ್ಷಿಣ ಕನ್ನಡದಲ್ಲಿಯೂ ಕಂಡುಬಂದಿತ್ತು. ೧೯೩೬ರಲ್ಲಿ ದಕ್ಷಿಣ ಕನ್ನಡದಲ್ಲಿ ಡಿಸ್ಟ್ರಿಕ್ಟ್ ಬೋರ್ಡ್ ಅಧ್ಯೆಕ್ಷೆತೆಯೂ ಜಸ್ಟಿಸ್ ಪಕ್ಷದ ಪಾಲಾಯಿತು. ಆದರೆ ಶೀಘ್ರದಲ್ಲಿಯೇ ಪಕ್ಷವು ತನ್ನ ನೆಲೆಯನ್ನು ಕಳೆದುಕೊಳ್ಳಲಾರಂಭಿಸಿತು.

ಪೀಪಲ್ಸ್ ಫೆಡರೇಷನ್ ರಚನೆ

ಈಗಾಗಲೇ ಚರ್ಚಿಸಿದಂತೆ ೧೯೨೦ ರ ದಶಕದ ಅಂತ್ಯದಲ್ಲಿ ಆಧುನಿಕ ಕಾನೂನು ಶಿಕ್ಷಣ ಪಡೆದ ಯುವ ಬ್ರಾಹ್ಮಣೇತರ ನಾಯಕರು ರಾಜಕೀಯದಲ್ಲಿ ಪ್ರಬಲಗೊಂಡರು. ಈ ನಾಯಕರು ಗ್ರಾಮೀಣ ಪ್ರದೇಶದಲ್ಲೂ ತಮ್ಮ ಜಾತಿ ಬಾಂಧವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ೧೯೨೯ರಲ್ಲಿ ಅವರು ಒಂದು ಬ್ರಾಹ್ಮಣೇತರರ ಸಮ್ಮೇಳನವನ್ನು ನಡೆಸಿದರು. ಮುಂದಿನ ವರ್ಷವೇ ‘ಪ್ರಜಾಪಕ್ಷ’ವೆಂಬ ವೇದಿಕೆಯನ್ನು ಹುಟ್ಟುಹಾಕಿದರು. ೧೯೩೪ರಲ್ಲಿ ಪ್ರಜಾಪಕ್ಷ ಮತ್ತು ‘ಪ್ರಜಾಮಿತ್ರ ಮಂಡಳಿ’ಗಳು ವಿಲೀನಗೊಂಡು ‘ಪ್ರಜಾ ಸಂಯುಕ್ತ ಮಂಡಳಿ’ಎನ್ನುವ ವೇದಿಕೆಯ ರಚನೆಯಾಯಿತು. ೧೯೩೫ರಲ್ಲಿ ಈ ನಾಯಕರ ಗುಂಪು ಪೀಪಲ್ಸ್ ಫೆಡರೇಶನ್ ಎನ್ನುವ ಹೊಸ ಪಕ್ಷವನ್ನು ಸ್ಥಾಪಿಸಿತು.

೧೯೩೭ರಲ್ಲಿ ಪ್ರತಿನಿಧಿ ಸಭೆ ಮತ್ತು ಶಾಸನ ಸಬೆಗಳ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರವನ್ನು ಕಾಂಗ್ರೆಸ್ ಪಕ್ಷವು ಪ್ರಕಟಿಸಿತು. ಈ ಸಂದರ್ಭದಲ್ಲಿ ಬ್ರಾಹ್ಮಣೇತರರು ತಮ್ಮ ಬಲವನ್ನು ತೋರ್ಪಡಿಸುವ ದೃಷ್ಟಿಯಿಂದ ಪೀಪಲ್ಸ್ ವತಿಯಿಂದ ಸ್ಪರ್ಧಿಸುವ ನಿರ್ಧಾರ ಕೈಗೊಂಡರು.

೧೯೩೭ರ ಚುನಾವಣೆಯಲ್ಲಿ ಶಾಸನ ಸಮಿತಿಯ ೨೧ ಸ್ಥಾನಗಳಿಗೆ ಸ್ಪರ್ಧಿಸಿದ ೧೬ ಬ್ರಾಹ್ಮಣೇತರರಲ್ಲಿ ೧೩ ಅಭ್ಯರ್ಥಿಗಳು ಚುನಾಯಿತರಾದರು. ಕಾಂಗ್ರೆಸ್ ೧೦ ಮಂದಿ ಸ್ಪರ್ಧಿಗಳಲ್ಲಿ ಚುನಾಯಿತರಾದವರು. ನಾಲ್ಕು ಮಂದಿ ಇದರಲ್ಲಿ ೭ ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಪೀಪಲ್ಸ್ ಫೇಡರೆಷನ್ ನಡುವೆ ನೇರ ಸ್ಪರ್ಧೆ ಇದ್ದು ಕಾಂಗ್ರೆಸ್‌ ನಿಂದ ಒಬ್ಬ ಅಭ್ಯರ್ಥಿ ಮಾತ್ರ ಚುನಾಯಿತರಾದರು.

ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆ

ಈ ಚುನಾವಣೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಬ್ರಾಹ್ಮಣೇತರರ ಬೆಂಬಲವಿಲ್ಲದೆ ಬಲವೃದ್ಧಿಯಾಗುವುದು ಸಾಧ್ಯವಿಲ್ಲ ಎಂದು ಮನವರಿಕೆಯಾಯಿತು. ಹಾಗಾಗಿ ನಂತರದ ದಿನಗಳಲ್ಲಿ ಕಾಂಗ್ರೆಸ್ ಬ್ರಾಹ್ಮಣೇತರ ನಾಯಕರನ್ನು ತನ್ನ ತೆಕ್ಕೆಯೊಳಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸಿತು. ಅದರಲ್ಲಿಯೂ ಮುಖ್ಯವಾಗಿ ಬಹುಸಂಖ್ಯಾತ ಒಕ್ಕಲಿಗ,ಲಿಂಗಾಯತ ಕೋಮುಗಳ ನಾಯಕರ ಬಗ್ಗೆ ವಿಶೇಷ ಆಸಕ್ತಿ ವಹಿಸಿತು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮಾಡಿದ ಮೊದಲ ಪ್ರಯತ್ನವೇ ಪೀಪಲ್ಸ್ ಫೆಡರೇಷನ್ ಗೆ ಸೇರಿದ ಬ್ರಾಹ್ಮಣೇತರ ನಾಯಕರನ್ನು ಕಾಂಗ್ರೆಸ್‌ನ ಉನ್ನತ ಸ್ಥಾನಗಳಿಗೆ ನೇಮಿಸಿರುವುದು. ಚಿತ್ರದುರ್ಗದ ಬಣಜಿಗ ಲಿಂಗಾಯತರಾದ ಎಸ್. ನಿಜಲಿಂಗಪ್ಪ, ದೊಡ್ಡ ಬಳ್ಳಾಪುರದ ದೇವಾಂಗ ಲಿಂಗಾಯತ ನಾಯಕರಾದ ಸಿದ್ಧಲಿಂಗಯ್ಯ ಮುಂತಾದವರು ಈ ಹಂತದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಈ ಸಮಯದಲ್ಲಿ ಮೈಸೂರು ಸರ್ಕಾರವೂ ಶಾಸನ ಸಮಿತಿ ಮತ್ತು ಪ್ರತಿನಿಧಿ ಸಭೆಯ ಅಧಿಕಾರಗಳನ್ನು ಮೊಟಕುಗೊಳಿಸಿತು. ಹಲವಾರು ಬ್ರಾಹ್ಮಣೇತರ ನಾಯಕರು ಅದಾಗಲೇ ಕಾಂಗ್ರೆಸ್ ಸೇರಿದ್ದರಿಂದ ಪೀಪಲ್ಸ್ ಫೆಡರೇಷನ್ ನಲ್ಲಿ ಮಿಕ್ಕುಳಿದ ಬ್ರಾಹ್ಮಣೇತರ ನಾಯಕರನ್ನು ಕಾಂಗ್ರೆಸ್‌ ಸೇರುವಂತೆ ಒಲಿಸುವುದು ಸುಲಭವಾಯಿತು. ಈ ಸಂದರ್ಭದಲ್ಲಿ ಬ್ರಾಹ್ಮಣೇತರ ನಾಯಕರು ರಾಷ್ಟ್ರೀಯ ಚಳವಳಿಯ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿರುವ ಬ್ರಾಹ್ಮಣೇತರ ಪಕ್ಷದಲ್ಲಿ ಮುಂದುವರಿಯುವುದು ಕ್ಷೇಮವಲ್ಲವೆಂದು ಭಾವಿಸಿ ಕಾಂಗ್ರೆಸ್ ಪಕ್ಷ ಸೇರಲಾರಂಭಿಸಿ ದರು. ಈ ಎಲ್ಲಾ ಬೆಳವಣಿಗೆಗಳ ಪರಿಣಾಮವಾಗಿ ೧೯೩೭ರಲ್ಲಿ ಬ್ರಾಹ್ಮಣೇತರ ಪಕ್ಷವಾದ ಪೀಪಲ್ಸ್ ಫೆಡರೇಷನ್ ಕಾಂಗ್ರೆಸ್ ನೊಂದಿಗೆ ವಿಲೀನಗೊಂಡಿತು.

ಈ ವಿಲೀನವು ಬ್ರಾಹ್ಮಣೇತರ ನಾಯಕರಲ್ಲಿ ಬದಲಾದ ನೀತಿಯನ್ನು ಪ್ರತಿಬಿಂಬಿಸುತ್ತದೆ. ಈ ನಾಯಕರು ಪ್ರಾಂತೀಯ ರಾಜಕೀಯಕ್ಕಿಂತ ರಾಷ್ಟ್ರೀಯ ರಾಜಕಾರಣದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿಕೊಂಡರು. ಬ್ರಾಹ್ಮಣೇತರ ನಾಯಕರು ಕಾಂಗ್ರೆಸ್ ಸೇರಿದಾಗ ಸ್ವಾಭಾವಿಕವಾಗಿ ಆ ಸಮುದಾಯಕ್ಕೆ ಸೇರಿದ ಜಿಲ್ಲಾ ಮಂಡಳಿಯ ಅಧ್ಯಕ್ಷರು ಹಾಗೂ ಇತರ ಜಿಲ್ಲಾ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅವರೊಂದಿಗೆ ತಾಲೂಕು ಹಾಗೂ ಗ್ರಾಮ ಮಟ್ಟದ ಕಾರ್ಯಕರ್ತರೂ ಕಾಂಗ್ರೆಸ್ ತೆಕ್ಕೆಯೊಳಗೆ ಸೇರಿಕೊಂಡರು. ಕಾಂಗ್ರೆಸ್ ಪಕ್ಷವು ಗ್ರಾಮ ಗ್ರಾಮಗಳಲ್ಲಿಯೂ ತನ್ನ ನೆಲೆಯನ್ನು ಭದ್ರಗೊಳಿಸಿಕೊಂಡಿತು. ಬೆಳವಣಿಗೆಯಿಂದಾಗಿ ಕಾಂಗ್ರೆಸ್ ಪಕ್ಷದ ನಾಯಕತ್ವವು ನಿಧಾನವಾಗಿ ಬ್ರಾಹ್ಮಣರಿಂದ ಬ್ರಾಹ್ಮಣೇತರರ ಹಿಡಿತಕ್ಕೆ ವರ್ಗಾವಣೆಗೊಂಡಿತು. ಸ್ವಾತಂತ್ರ್ಯಾನಂತರವೂ ಈ ಪರಿಸ್ಥಿತಿಯೇ ಮುಂದುವರಿಯಿತು.

ಉಪಸಂಹಾರ

ಬ್ರಾಹ್ಮಣೇತರ ಚಳವಳಿಯು ಪ್ರಾರಂಭದಲ್ಲಿ ಕೇವಲ ಸಾಮಾಜಿಕ, ಸಾಂಸ್ಕೃತಿಕ ಚಳವಳಿಯಾಗಿ ರೂಪುಗೊಂಡಿತ್ತು. ಆದರೆ ಕಾಲಕ್ರಮೇಣ ಬ್ರಾಹ್ಮಣೇತರ ವರ್ಗವು ಆಧುನಿಕ ಶಿಕ್ಷಣ ಪಡೆದು ರಾಜಕೀಯ ಅಧಿಕಾರ ಹಾಗೂ ಆಡಳಿತದ ಸ್ಥಾನಗಳ ಕಡೆಗೆ ಆಸಕ್ತಿ ತೋರಿಸಲಾರಂಭಿಸಿದರು. ಈ ಹಂತದಲ್ಲಿ ಮೇಲ್ಜಾತಿಗಳಿಂದ ಸಾಕಷ್ಟು ಪ್ರತಿರೋಧವನ್ನು ಎದುರಿಸಬೇಕಾಗಿ ಬಂದರೂ ಒಂದೊಂದಾಗಿ ಸೌಲಭ್ಯಗಳನ್ನು ಪಡೆಯುವಲ್ಲಿ ಯಶಸ್ಸು ಗಳಿಸಿತು.

ಪ್ರಾರಂಭದಲ್ಲಿ ಮೇಲ್ಜಾತಿ ಬ್ರಾಹ್ಮಣೇತರರು ಈ ಚಳವಳಿಯನ್ನು ಹುಟ್ಟುಹಾಕಿದ್ದರು. ಏಕೆಂದರೆ ಆ ಹಂತದಲ್ಲಿ ಭೂಒಡೆತನ ಹೊಂದಿದ್ದ ಭ್ರಾಹ್ಮಣೇತರ ವರ್ಗವು ಮಾತ್ರ ಆಧುನಿಕ ಶಿಕ್ಷಣ ಪಡೆದು ಸೌಲಭ್ಯಗಳನ್ನು ಪಡೆಯಲು ಹೋರಾಟ ನಡೆಸುವ ಸಾಮರ್ಥ್ಯ ಹೊಂದಿತ್ತು. ಆದರೆ ಕಾಲಕ್ರಮೇಣ ಇತರ ಹಿಂದುಳಿದ ವರ್ಗಗಳೂ ಜಾಗೃತಗೊಂಡು ತಮ್ಮ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ನೀಡತೊಡಗಿದವು.

ಇತ್ತೀಚಿನ ಬರವಣಿಗೆಗಳು

ಬ್ರಾಹ್ಮಣೇತರ ಚಳವಳಿ ಹಾಗೂ ಹಿಂದುಳಿದ ವರ್ಗಗಳ ಚಳವಳಿಯು ಹತ್ತೊಂಬಂತ್ತನೇ ಶತಮಾನದಲ್ಲಿ ಪ್ರಾರಂಭಗೊಂಡು ಇಪ್ಪತ್ತನೇ ಶತಮಾನದ ಮಧ್ಯಭಾಗದ ತನಕ ನಡೆದಿದ್ದರೂ ಈ ಕ್ಷೇತ್ರದಲ್ಲಿ ಕಂಡುಬರುವ ಬರವಣಿಗೆಗಳು ಸಾಕಷ್ಟಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾಯಶಃ ರಾಷ್ಟ್ರೀಯ ಚಳವಳಿಯ ಸಂದಭದಲ್ಲಿ ಹಿಂದುಳಿದ ವರ್ಗಗಳ ಚಳವಳಿ ಹಾಗೂ ಬ್ರಾಹ್ಮಣೇತರ ಚಳವಳಿಯ ಬಗೆಗೆ ವಿದ್ವಾಂಸರೂ ಸಾಕಷ್ಟು ಗಮನಹರಿಸಲಿಲ್ಲ. ಆದರೆ ಸ್ವತಂತ್ರ್ಯಾನಂತರ ಹಿಂದುಳಿದ ವರ್ಗಗಳು ರಾಜಕೀಯ ರಂಗದಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳಲು ಆರಂಭಿಸಿದಾಗ ಆ ಬಗ್ಗೆ ಸಾಕಷ್ಟು ಸಾಹಿತ್ಯವೂ ಸೃಷ್ಟಿಯಾಯಿತು. ಈ ಹಿನ್ನೆಲೆಯಲ್ಲಿ ಸೃಷ್ಟಿಯಾದ ಎಲ್ಲ ಸಾಹಿತ್ಯಗಳನ್ನು ಮುಖ್ಯ ವಿಭಾಗಗಳನ್ನಾಗಿ ಪರಿಗಣಿಸಬಹುದು.

೧. ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಪರಿಚಯಿಸುವ ಪರಿಚಯಿಸುವ ಸಾಹಿತ್ಯಗಳು ಸಾಮಾನ್ಯ ಸ್ವರೂಪದ ಬರವಣಿಗೆಗಳು

೨. ಹಿಂದುಳಿದ ಜಾತಿ, ಬ್ರಾಹ್ಮಣೇತರ ಚಳವಳಿಯ ಬಗೆಗೆ ಪ್ರಕಟಿಸಲಾದ ಬರವಣಿಗೆಗಳು.

೩. ಸರ್ಕಾರ ನೇಮಿಸಿದ ಆಯೋಗಗಳ ವರದಿ ಹಾಗೂ ಇತರ ಪ್ರಕಟಣೆಗಳು

೧. ಸಾಮಾನ್ಯ ಸ್ವರೂಪದ ಬರವಣಿಗೆಗಳು: ಇಪ್ಪತ್ತನೇ ಶತಮಾನದ ಮಧ್ಯಭಾಗ ನಂತರ ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಪರಿಚಯಿಸುವ ಹಲವಾರು ಗ್ರಂಥಗಳು ಪ್ರಕಟಗೊಂಡಿವೆ. ಖ್ಯಾತ ಸಮಾಜಶಾಸ್ತ್ರಜ್ಞರಾದ ಎಂ. ಎನ್. ಶ್ರೀ ನಿವಾಸ್‌ರವರ ‘‘ಕಾಸ್ಟ್‌ ಇನ್ ಮೋಡರ್ನ್‌ ಇಂಡಿಯಾ” (೧೯೬೨), “ಸೋಷಿಯಲ್‌ ಚೇಂಜ್‌ ಇನ್‌ ಮೋಡರ್ನ್‌ ಇಂಡಿಯಾ” (೧೯೭೨), “ಡಾಮಿನೆಂಟ್‌ ಕಾಸ್ಟ್ಸ್ ಆಂಡ್‌ ಅದರ್‌ ಎಸ್ಸೇಸ್‌”(೧೯೮೭) ಮುಂತಾದ ಗ್ರಂಥಗಳನ್ನು ಈ ವಿಭಾಗದಲ್ಲಿ ಸೇರಿಸಬಹುದು. ಅವರು ಈ ಗ್ರಂಥದಲ್ಲಿ ಸಂಸ್ಕೃತೀಕರಣ ಎನ್ನುವ ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ.

ಭಾರತದಲ್ಲಿ ನಡೆದ ವಿವಿಧ ಸಾಮಾಜಿಕ ಚಳವಳಿಯ ಮೇಲೆ ಖ್ಯಾತ ವಿದ್ವಾಂಸರಾದ ಎಮ್‌.ಎಸ್‌.ಎ. ರಾವ್‌ ಕೂಡಾ ಸಾಕಷ್ಟು ಪ್ರಕಟಣೆಗಳನ್ನು ಮಾಡಿರುವರು. ಅವರ “ಸೋಷಿಯಲ್‌ಮೂವ್‌ಮೆಂಟ್ಸ್‌ಇನ್‌ಇಂಡಿಯಾ” (೧೯೭೯) ಮತ್ತು “ಸೋಷಿಯಲ್‌ ಮೂವ್‌ಮೆಂಟ್ಸ್‌ ಅಂಡ್‌ ಸೋಷಿಯಲ್‌ ಟ್ರಾನ್ಸ್‌ಫಾರ್ಮೆಷನ್‌” (೧೯೮೭) ಎನ್ನುವ ಗ್ರಂಥಗಳು ಅತ್ಯಂತ ಪ್ರಮುಖವಾದವು. ಹಾಗೆ ಆಂದ್ರೆ ಬೇತೆಯವರ “ಬ್ಯಾಕ್‌ವರ್ಡ್‌ ಕ್ಲಾಸಸ್‌ ಆಂಡ್‌ ನ್ಯೂ ಸೋಷಿಯಲ್‌ ಆರ್ಡರ್‌” (೧೯೮೧) ಮತ್ತು “ದಿ ಐಡಿಯಾ ಆಫ್ ನ್ಯಾಚುರಲ್‌ ಈಕ್ವಾಲಿಟಿ” (೧೯೮೭) ಗ್ರಂಥಗಳನ್ನೂ ಈ ವಿಭಾಗದಲ್ಲಿ ಸೇರಿಸಬಹುದು.

ಹಾಗೆಯೇ ದೀಪಂಕರ್‌ಗುಪ್ತಾರವರ “ಇಂಟರೊಗೇಟಿಂಗ್‌ ಕಾಸ್ಟ್‌ ಅಂಡರ್‌ಸ್ಟಾಂಡಿಗ್‌ ಹೈರಾರ್ಕಿ ಅಂಡ್‌ ಡಿಫರೆನ್ಸ್‌ ಇನ್‌ ಇಂಡಿಯನ್‌ ಸೊಸೈಟಿ” (೨೦೦೦), ರೂಡೊಲ್ಫ್‌ರವರ “ಮಾಡರ್ನಿಟಿ ಆಫ್‌ ಟ್ರೆಡಿಷನ್‌ ಪೊಲಿಟಿಕಲ್‌ ಡೆವಲಪ್‌ಮೆಂಟ್‌ ಇನ್‌ ಇಂಡಿಯಾ” (೧೯೬೯) ಮುಂತಾದ ಗ್ರಂಥಗಳೂ ಭಾರತದ ಸಾಮಾಜಿಕ, ರಾಜಕೀಯ ಚಳವಳಿಯ ಬಗ್ಗೆ ಮಾಹಿತಿಯನ್ನು ನೀಡುತ್ತವೆ.

೨. ಬ್ರಾಹ್ಮಣೇತರ ಹಾಗೂ ಹಿಂದುಳಿದ ವರ್ಗಗಳ ಚಳವಳಿ: ಭಾರತದಲ್ಲಿ ಹಿಂದುಳಿದ ವರ್ಗ ಮತ್ತು ಬ್ರಾಹ್ಮಣೇತರ ಚಳವಳಿಯ ಬಗ್ಗೆಯೂ ಸಾಕಷ್ಟು ಗ್ರಂಥಗಳು ಪ್ರಕಟಗೊಂಡಿವೆ. ಅವುಗಳಲ್ಲಿ ಮುಖ್ಯವಾದವು ರಾಬರ್ಟ್ ಹಾರ್ ಗ್ರೇವ್ ಬರೆದ “ದಿ ದ್ರವಿಡಿಯನ್ ಮೂವ್ ಮೆಂಟ್”(೧೯೬೫), ಯೂಜಿನ್ ಇರ್ಷಿಕ್ರವರ “ಪಾಲಿಟಿಕ್ಸ್ ಎಂಡ್ ಸೋಷಿಯಲ್ ಕಾನ್ ಪ್ಲಿಕ್ಟ್ ಇನ್ ಸೌತ್ ಇಂಡಿಯಾ” “ದಿ ನಾನ್ ಬ್ರಾಹ್ಮಿನ್ ಮೂವ್ ಮೆಂಟ್ ಎಂಡ್ ತಮಿಲ್ ಸೆಪರೇಟಿಸಂ” ೧೯೧೬-೧೯೨೯(೧೯೬೯) ಮತ್ತು ವಿ. ಗೀತಾ ಮತ್ತು ಎಸ್.ವಿ. ರಾಜ ದೊರೈಯವರ “ಟುವರ್ಡ್ ಎ ನಾನ್ ಬ್ರಾಹ್ಮಿನ್ ಮಿಲೇನಿಯಂ-ಫ್ರಮ್ ಜೋತಿಥಾಸ್ ಟು ಪೆರಿಯಾರ್” (೧೯೯೮) ಮುಂತಾದ ಗ್ರಂಥಗಳು ತಮಿಳುನಾಡಿನ ಬ್ರಾಹ್ಮಣೇತರ ಚಳವಳಿ ಹಾಗೂ ಹಿಂದುಳಿದ ವರ್ಗಗಳ ಚಳವಳಿಯನ್ನು ವಿಶ್ಲೇಷಿಸುತ್ತವೆ.

ಅದೇ ರೀತಿಯಲ್ಲಿ ಮಹಾರಾಷ್ಟ್ರದ ಬ್ರಾಹ್ಮಣೇತರ ಹಾಗೂ ಹಿಂದುಳಿದ ವರ್ಗಗಳ ಚಳವಳಿಯ ಬಗ್ಗೆಯೂ ಬಹಳಷ್ಟು ಬರವಣಿಗೆಗಳನ್ನು ಹೆಸರಿಸಬಹುದ. ಗೈಲ್ ಒಮ್‌ವೆಟ್ ರವರು “ಕಲ್ಚರಲ್ ರಿವೊಲ್ಟ್ ಇನ್ ಎ ಕಾಲೋನಿಯಲ್ ಸೊಸೈಟಿ -ನಾನ್ ಬ್ರಾಹ್ಮಿನ್ ಮೂವ್‌ಮೆಂಟ್ ಇನ್ ವೆಸ್ಟರ್ನ್ ಇಂಡಿಯಾ ೧೮೫೦-೧೯೩೫” (೧೯೭೬), ಎಲಿಯೆನಾರ್ ಜೆಲಿಯಟ್ರವರ “ಫ್ರಮ್ ಅನ್‌ಟಚೆಬಲ್ ಟು ದಲಿತ್ – ಎಸ್ಸೇಸ್ ಆನ್ ಅಂಬೇಡ್ಕರ್ ಮೂವ್‌ಮೆಂಟ್ ”(೧೯೯೨), ರೋಸಲಿಂಡ್ ಹ್ಯಾನ್‌ಲನ್‌ರವರ “ಕಾಸ್ಟ್ ಕಾನ್‌ಫ್ಲಿಕ್ಟ್‌ ಆಂಡ್‌ ಐಡಿಯಾಲಜಿ-ಮಹಾತ್ಮ ಜ್ಯೋತಿರಾವ್‌ ಫುಲೆ ಎಂಡ್‌ಲೋ ಕಾಸ್ಟ್‌ ಪ್ರೊಟೆಸ್ಟ್‌ ಮೂವ್‌ಮೆಂಟ್‌ ಇನ್‌ ನೈನ್‌ಟೀಂತ್‌ ಸೆಂಚುರಿ ವೆಸ್ಟರ್ನ್‌ ಮಹಾರಾಷ್ಟ್ರ’’ (೧೯೮೫) ಮುಂತಾದ ಕೃತಿಗಳು ಮಹಾರಾಷ್ಟ್ರದಲ್ಲಿನಡೆದ ಚಳವಳಿಯನ್ನು ನಿರೂಪಿಸುತ್ತವೆ.

ಕರ್ನಾಟಕದ ಬ್ರಾಹ್ಮಣೇತರ ಹಾಗೂ ಹಿಂದುಳಿದ ವರ್ಗಗಳ ಚಳವಳಿಯ ಬಗ್ಗೆಯೂ ಇತ್ತೀಚಿನ ದಿನಗಳಲ್ಲಿ ಬಹಳ ಅಧ್ಯಯನಗಳು ನಡೆದಿವೆ. ವಿದ್ವಾಂಸರಾದ ಜೇಮ್ಸ್‌ ಮೆನೊರ್‌ ಅವರ ಕೃತಿ “ಪೊಲಿಟಿಕಲ್ ಚೇಂಜ್‌ ಇನ್‌ ಯಾನ್‌ ಇಂಡಿಯನ್‌ ಸ್ಟೇಟ್‌, ಮೈಸೂರ್‌ ೧೯೧೭-೧೯೫೫” (೧೯೭೮), ಜಾನ್‌ ಹೆಟ್ನೆಯವರ “ಪೊಲಿಟಿಕಲ್ ಇಕಾನಮಿ ಆಫ್‌ ಇಂಡೈರೆಕ್ಟ್‌ ರೂಲ್‌” ೧೮೮೧-೧೯೪೭(೧೯೭೮) ಮತ್ತು ಎಸ್‌. ಚಂದ್ರಶೇಖರ್‌ ಅವರ ಗ್ರಂಥ ಡೈಮೆನ್‌ಷನ್ಸ್‌ ಆಫ್‌ಸೋಷಿಯೋ ಪೊಲಿಟಿಕಲ್‌ ಚೇಂಜ್‌ ಇನ್‌ ಮೈಸೂರ್‌ ೧೯೧೮-೧೯೪೦” (೧೯೮೫) ಮುಂತಾದ ಗ್ರಂಥಗಳು ಕರ್ನಾಟಕದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ನಡೆದ ಸಾಮಾಜಿಕ ರಾಜಕೀಯ ಚಳವಳಿಗಳ ಬಗೆಗೆ ಬೆಳಕು ಚೆಲ್ಲುತ್ತವೆ. ಅದರಲ್ಲೂ ಮುಖ್ಯವಾಗಿ ಬ್ರಾಹ್ಮಣೇತರ ಚಳವಳಿಯ ಬಗ್ಗೆ ಈ ಗ್ರಂಥಗಳು ವಿವರಣಾತ್ಮಕ ಮಾಹಿತಿಗಳನ್ನು ಒದಗಿಸುತ್ತವೆ.

ಕರ್ನಾಟಕದಲ್ಲಿ ಸ್ವಾತಂತ್ರ್ಯಾನಂತರದಲ್ಲಿ ನಡೆದ ಹಿಂದುಳಿದ ವರ್ಗಗಳ ಚಳವಳಿಯ ಬಗ್ಗೆ ಕುಪ್ಪುಸ್ವಾಮಿಯವರ “ಬ್ಯಾಕ್‌ವರ್ಡ್‌ ಕ್ಲಾಸ್‌ ಮೂವ್‌ಮೆಂಟ್‌ ಇನ್‌ ಕರ್ನಾಟಕ” (೧೯೭೫) ಹಾಗೂ ಡಿ. ತಿಮ್ಮಯ್ಯರವರ “ಪವರ್‌ ಪಾಲಿಟಿಕ್ಸ್‌ ಎಂಡ್‌ ಸೋಷಿಯಲ್‌ ಜಸ್ಟೀಸ್‌ ಬ್ಯಾಕ್‌ವರ್ಡ್‌ ಕ್ಲಾಸನ್‌ ಇನ್‌ ಕರ್ನಾಟಕ” (೧೯೯೩) ಮುಂತಾದವು ಉತ್ತಮ ಮಾಹಿತಿಗಳನ್ನು ನೀಡುತ್ತವೆ.

ಕರ್ನಾಟಕದಲ್ಲಿ ಹಿಂದುಳಿದ ಹಾಗೂ ಬ್ರಾಹ್ಮಣೇತರ ಚಳವಳಿಯ ಬಗ್ಗೆ ಇತ್ತೀಚೆಗೆ ಕನ್ನಡ ಭಾಷೆಯಲ್ಲಿ ಪ್ರಕಟಿಸಲಾದ ಎರಡು ಗ್ರಂಥಗಳನ್ನು ಇಲ್ಲಿ ಪರಿಚಯಿಸಬೇಕಿದೆ. ಅವುಗಳೆಂದರೆ, ಲಕ್ಷ್ಮಣ್‌ ತೆಲಗಾವಿಯವರು ೧೯೯೯ರಲ್ಲಿ ರಚಿಸಿದ ಗ್ರಂಥ “ಹಿಂದುಳಿದ ವರ್ಗಗಳ ಮತ್ತು ದಲಿತ ಚಳವಳಿ” ಮತ್ತು ಜೆ. ಎಸ್‌. ಸದಾನಂದ “ಅರಿವು ಬರಹ” ಎನ್ನುವ ಪತ್ರಿಕೆಯಲ್ಲಿ ಪ್ರಕಟಿಸಿದ ಲೇಖನಗಳು. ಈ ಪ್ರಕಟಣೆಗಳು ಕರ್ನಾಟಕದ ಸಾಮಾಜಿಕ ಇತಿಹಾಸವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿವೆ.

ಈ ಗ್ರಂಥಗಳಲ್ಲದೆ ಕರ್ನಾಟಕದ ಸಾಮಾಜಿಕ ಚಳವಳಿಗಳು ಮತ್ತು ಇತಿಹಾಸದ ಬಗ್ಗೆ ಹಲವು ತಜ್ಞರು ಲೇಖನಗಳನ್ನು ಪ್ರಕಟಿಸುತ್ತಾರೆ. ಉದಾಹರಣೆಗೆ ಎಂ. ಎನ್‌. ಶ್ರೀನಿವಾಸ್‌ ಮತ್ತು ಎಂ. ಎಸ್‌. ಪಾಣಿನಿಯವರು, ಜೇಮ್ಸ್‌ ಮೆನೋರ್‌, ಲಲಿತಾ ನಟರಾಜ್‌, ವಿ. ಕೆ. ನಟರಾಜ್‌, ಲೀಲ್ಹಾ ದುಷ್ಕಿನ್‌, ಎಂಬ್ರೋಸ್‌ ಪಿಂಟೊ, ವಲೇರಿಯನ್‌ ರಾಡ್ರಿಗಸ್‌ ಇತ್ಯಾದಿ ತಜ್ಞರು ಪ್ರಕಟಿಸಿದ ಲೇಖನಗಳೂ ಸಾಮಾಜಿಕ ಚಳವಳಿಗಳ ಮೇಲೆ ಬೆಳಕು ಚೆಲ್ಲುತ್ತವೆ.

ಕೇರಳದಲ್ಲಿ ನಡೆದ ಸಾಮಾಜಿಕ ಕ್ರಾಂತಿಗೆ ಸಂಬಂಧಿಸಿದ ಪ್ರಕಟನೆಗಳು ಆಂಗ್ಲ ಭಾಷೆಯಲ್ಲಿ ಸಾಕಷ್ಟು ದೊರಕುತ್ತವೆ. ಡೇನಿಯಲ್ ಥಾಮಸ್‌ರವು ೧೯೬೫ರಲ್ಲಿ ಪ್ರಕಟಿಸಿದ “ಶ್ರೀನಾರಾಯಣ ಗುರು” ಎನ್ನುವ ಗ್ರಂಥ, ಎಂ,ಎಸ್.ಎ. ರಾವ್ ರವರ ಗ್ರಂಥ “ಸೋಷಿಯಲ್ ಟ್ರಾನ್ಸ್‌ಫಾರ್ಮೆಷನ್‌ ಎ ಸ್ಟಡಿ ಆಫ್‌ಟು ಬ್ಯಾಕ್‌ವರ್ಡ್‌ ಕ್ಲಾಸ್‌ ಮೂವ್‌ಮೆಂಟ್ಸ್‌” (೧೯೭೮), ರಾಬಿನ್‌ ಜೆಫ್ರಿ ಬರೆದ ಗ್ರಂಥ, “ದ ಡಿಕ್ಲೈನ್‌ ಆಪ್‌ ನಾಯರ್‌ ಡಾಮಿನೆನ್ಸ್‌ ಸೊಸೈಟಿ ಆಂಡ್‌ ಪಾಲಿಟಿಕ್ಸ್‌ ಆಫ್‌ ಟ್ರಾವಂಕೂರ್” ೧೮೪೭-೧೯೦೮ (೧೯೭೬), ಎನ್ನುವ ಕೃತಿಯೂ “ಟೆಂಪಲ್‌ ಎಂಟ್ರಿ ಮೂವ್‌ಮೆಂಟ್‌ ಇನ್‌ಟ್ರಾವಂಕೂರ್‌” ೧೮೬೦-೧೯೪೦(೧೯೭೬) ಹಾಗೂ “ದಿ ಸೋಷಿಯಲ್‌ ಒರಿಜಿನ್‌ ಆಫ್‌ ಕಾಸ್ಟ್‌ ಅಸೋಸಿಯ್‌ಷನ್‌ ೧೮೭೫-೧೯೦೫: ದಿ ಫೌಂಡಿಂಗ್‌ ಆಫ್‌ ಎಸ್‌.ಎನ್‌.ಡಿ.ವಿ. ಮೂವ್‌ಮೆಂಟ್‌” (೧೯೭೪) ಮುಂತಾದ ಲೇಖನಗಳೂ ಕೇರಳದ ಹಿಂದುಳಿದ ವರ್ಗಗಳ ಚಳವಳಿಯ ಬಗ್ಗೆ ವಿಶ್ಲೇಷಣಾತ್ಮಕ ವಿವರಣೆ ನೀಡುತ್ತವೆ. ಇದಲ್ಲದೆ ಕನ್ನಡ ಭಾಷೆಯಲ್ಲಿಯೂ ಶ್ರೀ ನಾರಾಯಣ ಗುರು ಇವರ ಬಗ್ಗೆ ಒಂದೆರಡು ಚಿಕ್ಕ ಪ್ರಕಟಣೆಗಳೂ ಇವೆ.

ಈ ಮೇಲೆ ಉಲ್ಲೇಖಿಸಿದ ಎಲ್ಲ ಪ್ರಕಟಣೆಗಳೂ ದಕ್ಷಿಣ ಭಾರತದಲ್ಲಿ ನಡೆದ ಸಾಮಾಜಿಕ ಚಳವಳಿ ಹಾಗೂ ಹಿಂದುಳಿದ ವರ್ಗಗಳ ಚಳವಳಿಯ ಮೇಲೆ ಬೆಳಕು ಚೆಲ್ಲುತ್ತವೆ.

೩. ಹಿಂದುಳಿದ ಆಯೋಗಗಳ ವರದಿ ಹಾಗೂ ಇತರ ಪ್ರಕಟಣೆಗಳು: ಹಿಂದುಳಿದ ವರ್ಗಗಳ ಚಳವಳಿಯ ಬಗ್ಗೆ ನಮಗೆ ಕೆಲವು ಉಪಯುಕ್ತ ಮಾಹಿತಿಗಳು ಸರ್ಕಾರ ಬರೆ ಬೇರೆ ಸಮಯಗಳಲ್ಲಿ ನೇಮಿಸಿದ ಹಿಂದುಳಿದ ವರ್ಗಗಳ ಆಯೋಗಗಳ ವರದಿಯಲ್ಲಿ ದೊರಕುತ್ತವೆ. ಉದಾಹರಣೆಗೆ ಕೇಂದ್ರ ಸರ್ಕಾರವು ೧೯೫೩ರಲ್ಲಿ ಕಾಕಾ ಕಾಲೇಲ್ಕರ್‌ ಆಯೋಗವನ್ನೂ, ೧೯೭೮ರಲ್ಲಿ ಮಂಡಲ್‌ ಆಯೋಗವನ್ನು ನೇಮಿಸಿತು. ಈ ಎರಡೂ ಆಯೋಗಗಳ ವರದಿಗಳು ನಮಗೆ ಅತ್ಯಮೂಲ್ಯ ಮಾಹಿತಿಗಳನ್ನು ನೀಡುತ್ತವೆ. ಇದಲ್ಲದೆ ಪ್ರತಿಯೊಂದು ರಾಜ್ಯದಲ್ಲಿಯೂ ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯ ನಂತರ ಹಲವಾರು ಹಿಂದುಳಿದ ವರ್ಗಗಳ ಆಯೋಗಗಳು ವರದಿಗಳನ್ನು ಸಲ್ಲಿಸಿವೆ. ಈ ಎಲ್ಲ ದಾಖಲೆಗಳು ಈ ಸಾಮಾಜಿಕ ಚಳವಳಿಯು ಇತಿಹಾಸದ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತವೆ.