ಇಪ್ಪತ್ತನೆಯ ಶತಮಾನದ ಮೊದಲರ್ಧ ಶತಕದ ಭಾರತದ ಚರಿತ್ರೆಯಲ್ಲಿ ತಮ್ಮ ಛಾಪು ಮೂಡಿಸಿದವರು ವಿನಾಯಕ ದಾಮೋದರ ಸಾವರ್ಕರ್‌ ಅವರು. ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ವಿ. ಡಿ. ಸಾವರ್ಕರ್‌ ಅವರ ಹೆಸರು ಮುಖ್ಯವಾಗಿ ಎರಡು ಮುಖ್ಯ ಕಾರಣಿಗಳಿಗಾಗಿ ಸದಾ ನಮ್ಮ ಮುಂದಿರುತ್ತವೆ. ಅವರ ಕ್ರಾಂತಿಕಾರಿ ಹೋರಾಟಗಾರರಾಗಿ ಭಾರತದ ಕ್ರಾಂತಿಕಾರಿ ಹೋರಾಟದ ಮುಂಚೂಣಿಯಲ್ಲಿ ನಿಂತು ಸಾಮ್ರಾಜ್ಯಶಾಹಿಗಳ ವಿರುದ್ಧ ಸಡ್ಡು ಹೊಡೆದು ನಿಂತದ್ದು ಅವರ ಹೋರಾಟದ ಒಂದು ಘಟ್ಟ. ಇದೇ ಸಂದರ್ಭದಲ್ಲಿ ಅವರು ೧೮೫೭ರ ಹೋರಾಟವನ್ನು ಕೇವಲ ಸಿಪಾಯಿದಂಗೆ ಎಂದು ಕರೆಯುತ್ತಿದ್ದ ಬ್ರಿಟಿಷರಿಗೆ ಅದು ಭಾರತೀಯರ ಪ್ರಥಮ ಸ್ವಾತಂತ್ರ್ಯ ಹೋರಾಟ ಎಂದು ತಮ್ಮ ಕೃತಿಯ ಮೂಲಕ ಸಾರಿ ಹೇಳುವ ಮೂಲಕ ರಾಷ್ಟ್ರೀಯವಾದಿಗಳಲ್ಲಿ ಮಿಂಚನ್ನುಂಟು ಮಾಡಿದ್ದರು. ನಂತರದ ಘಟ್ಟದಲ್ಲಿ ಸಾವರ್ಕರ್‌ ಅವರು ಬ್ರಿಟಿಷರ ವಿರುದ್ಧ ನೇರ ಹೋರಾಟವನ್ನು ಕೈಬಿಟ್ಟು ಬದಲಿಗೆ ಹಿಂದೂ ಮಹಾಸಭಾದ ಮೂಲಕ ಹಿಂದುತ್ವದ ಹೋರಾಟವನ್ನು ಕೈಗೆತ್ತಿಕೊಂಡು ಭಾರತದ ಚರಿತ್ರೆಯಲ್ಲಿ ಹಿಂದೂಕೋಮುವಾದಿ ನೆಲೆಯು ತೀವ್ರವಾಗಲು ಕಾರಣರಾದರು.

ಸಾವರ್ಕರ್‌ ಸ್ವತಂತ್ರ ಚಳವಳಿಯಲ್ಲಿ, ಕ್ರಾಂತಿಕಾರಿ ಉಗ್ರವಾದಿ ಹೋರಾಟಗಾರರಾಗಿ ಗುರುತಿಸಲ್ಪಟ್ಟಿದ್ದಾರೆ. ೨೦ನೆಯ ಶತಮಾನದ ರಾಜಕೀಯ ಮತ್ತು ಸಾಮಾಜಿಕ ಅಂಶಗಳ ಪ್ರಭಾವವನ್ನು ಸಾವರ್ಕರ್‌ ಕಾರ್ಯಚಟುವಟಿಕೆಗಳಲ್ಲಿ ಗುರುತಿಸಬಹುದಾಗಿದೆ. ಸಮಕಾಲೀನ ಕ್ರಾಂತಿಕಾರಿ ರಾಷ್ಟ್ರೀಯ ನಾಯಕರುಗಳಾದ ತಿಲಕ್‌, ಬಿಪಿನ್‌ ಚಂದ್ರಪಾಲ್‌, ಲಾಲಾಲಜಪತ್‌ ರಾಯ್‌ರ ಪ್ರಭಾವಕ್ಕೆ ಸಾವರ್ಕರ್‌ ಅವರು ಒಳಗಾಗಿದ್ದರು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಡೆದ ಕ್ರಾಂತಿ ಹೋರಾಟಗಳಿಂದ ಅವರು ಸ್ಫೂರ್ತಿ ಪಡೆದಿದ್ದರು. ಅಂತಹ ಹೋರಾಟ

ಭಾರತದಲ್ಲೂ ಅಗತ್ಯವೆಂಬುದು ಸಾವರ್ಕರ್‌ ಅವರ ಅಭಿಮತವಾಗಿತ್ತು. ೧೯ನೆಯ ಶತಮಾನದ ಕೊನೆಯ ವೇಳೆಗಾಗಲೇ ಭಾರತದಲ್ಲಿ ಇಟಲಿ ಮಾದರಿಯ ರಹಸ್ಯ ಸಂಘಟನೆಗಳು ಸ್ಥಾಪಿತಗೊಂಡಿದ್ದವು. ಆ ಸಂದರ್ಭದಲ್ಲಿ ಅತಿ ಹೆಚ್ಚು ಉಗ್ರವಾದಿ ಕ್ರಾಂತಿಕಾರಿ ಹೋರಾಟಗಳು ನಡೆಯುತ್ತಿದ್ದ ಪ್ರದೇಶಗಳಲ್ಲಿ ಬಂಗಾಳ ಮತ್ತು ಮಹಾರಾಷ್ಟ್ರ ಪ್ರಮುಖವಾಗಿದ್ದವು. ಮಹಾರಾಷ್ಟ್ರದಲ್ಲಿದ್ದ ಸಾವರ್ಕರ್‌ ಅವರು ಕ್ರಾಂತಿಕಾರಿ ಹೋರಾಟಗಳಿಂದ ಪ್ರಭಾವಿತರಾಗಿ ತಮ್ಮ ವಿದ್ಯಾರ್ಥಿ ದಿಸೆಯಲ್ಲಿ ಮಿತ್ರಮೇಳ ಎಂಬ ಯುವಕರ ಗುಂಪನ್ನು ಸಂಘಟಿಸಿದ್ದರು. ಕ್ರಾಂತಿಕಾರಿ ಚಟುವಟಿಕೆಗಳಿಗೆ ಯುವಕರನ್ನು ಪ್ರೇರೇಪಿಸುವ ಕಾರ್ಯಗಳಲ್ಲಿ ಅವರು ತೊಡಗಿಕೊಂಡಿದ್ದರು. ೧೯೦೩ರಿಂದ ೧೯೦೮ರವರೆಗಿನ ಸಂದರ್ಭ ಭಾರತದ ರಾಜಕೀಯದಲ್ಲಿ ಹಲವಾರು ತುಮುಲಗಳಿಂದ ಕೂಡಿತ್ತು. ಈ ಸಂದರ್ಭದಲ್ಲೇ ಮಂದಗಾಮಿ ಚಳವಳಿಯಿಂದ ತೀವ್ರಗಾಮಿ ಚಳವಳಿಯಡೆಗೆ, ಕ್ರಾಂತಿಕಾತಿ ಹೋರಾಟಗಳಿಂದ ಸಮಾಜದೆಡೆಗೆ, ಮನವಿ ಮತ್ತು ಸಾರ್ವಜನಿಕ ಭಾಷಣಗಳಿಂದ ಬಹಿಷ್ಕಾರ ಮತ್ತು ಸ್ವದೇಶಿ ಚಳವಳಿಗಳ ಕಡೆಗೆ ಹೊರಳಿದ ಸಮಯವಾಗಿತ್ತು. ಸಮಕಾಲೀನ ಕ್ರಾಂತಿಕಾರಿ ನಾಯಕರು ಇಟಲಿ ಹಾಗೂ ಯುರೋಪಿನ ಐರ್ಲ್ಯಾಂಡ್‌ ಮೊದಲಾದ ರಾಷ್ಟ್ರಗಳಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಗಳಿಂದ ಪ್ರಭಾವಿತರಾಗಿದ್ದರು. ಈ ಕಾಲಘಟ್ಟದಲ್ಲಿ ಸಾವರ್ಕರ್‌ ೧೯೦೪ರಲ್ಲಿ ಅಭಿನವ ಭಾರತ ಎಂಬ ರಹಸ್ಯ ಸಂಘಟನೆಯನ್ನು ಆರಂಭಿಸಿದರು. ಈ ಸಂಘಟನೆಯು ಕ್ರಾಂತಿಕಾರಿ ಯುವಕರ ಮೇಲೆ ನೆಲೆ ಮತ್ತು ತರಬೇತಿ ಕೇಂದ್ರಗಳಂತೆ ಕಾರ್ಯ ನಿರ್ವಹಿಸುತ್ತಿದ್ದಿತು. ಈ ಹೊತ್ತಿಗೆ ದೇಶಾದ್ಯಂತ ಹಲವಾರು ಕ್ರಾಂತಿಕಾರಿ ಗುಂಪುಗಳು ಹೋರಾಟದಲ್ಲಿ ಕಾರ್ಯನಿರತವಾಗಿದ್ದವು. ಅವುಗಳಲ್ಲಿ ಕಲ್ಕತ್ತೆಯ ಅನುಶೀಲನ ಸಮಿತಿ, ಢಾಕಾದ ಅನುಶೀಲನ ಸಮಿತಿ ಬಂಗಾಳದಲ್ಲೂ, ಅಭಿನವ ಭಾರತ ಮಹಾರಾಷ್ಟ್ರದಲ್ಲೂ ಕಾರ್ಯನಿರತವಾಗಿದ್ದವು. ಕ್ರಾಂತಿಕಾರಿ ಸಂಘಟನೆಯ ಕಾರ್ಯಚಟುವಟಿಕೆ ಬೆಳಕಿಗೆ ಬಂದಿದ್ದರ ಫಲವಾಗಿ ಕಾಲೇಜಿನಿಂದ ಸಾವರ್ಕರ್‌ ಅವರು ಹೊರಹಾಕಲ್ಪಟ್ಟರು. ಆದರೆ ಅವರಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ದೊರೆತಿತ್ತು. ಮುಂದೆ ವಿದೇಶದಲ್ಲಿದ್ದ ಕ್ರಾಂತಿಕಾರಿ ಶ್ಯಾಮ್‌ಕೃಷ್ಣ ಶರ್ಮರ ಸಹಾಯದಿಂದ ಅವರಿಗೆ ಕಾನೂನು ಪದವಿಯ ಅಧ್ಯಯನಕ್ಕಾಗಿ ಇಂಗ್ಲೆಂಡ್‌ಗೆ ಹೋಗಲು ವಿದ್ಯಾರ್ಥಿವೇತನ ದೊರೆಯಿತು.

ಸಾವರ್ಕರ್‌ ಉನ್ನತ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ತೆರಳಿ ನ್ಯಾಯಶಾಸ್ತ್ರದ ಪದವಿಗೆ ಸೇರಿದರು. ಇವರು ಲಂಡನ್ನಿನ ಇಂಡಿಯಾ ಹೌಸ್‌ನಲ್ಲಿ ವಾಸಿಸುತ್ತಿದ್ದರು. ೨೦ನೆಯ ಶತಮಾನದ ಆರಂಭವಾದ ಮೊದಲ ಮಹಾಯುದ್ಧ ಕೊನೆಗೊಳ್ಳುವವರೆಗೂ ಇಂಡಿಯಾ ಹೌಸ್‌ ಭಾರತೀಯ ಕ್ರಾಂತಿಕಾರಿ ಸಂಘಟನೆಯ ಕೇಂದ್ರದಂತೆ ಕಾರ್ಯನಿರ್ವಹಿಸುತ್ತಿತ್ತು. ಕ್ರಾಂತಿಕಾರಿಗಳಿಗೆಲ್ಲ ಒಟ್ಟಾಗಿ ಸಂಧಿಸಲು ಅದು ವೇದಿಕೆಯೊಂದನ್ನು ನಿರ್ಮಿಸಿತ್ತು. ಉನ್ನತ ವಿದ್ಯಾಭ್ಯಾಸ ಪಡೆಯಲು ಹೋದ ಸಾವರ್ಕರ್‌ರಿಗೆ ಇದರ ಮೂಲಕ ತೀವ್ರವಾದಿ ಹೋರಾಟಗಾರರಾದ ಮೇಡಂ ಕಾಮಾ, ಹರ್‌ದಯಾಲ್‌, ಮದನ್‌ಲಾಲ್‌ ಧಿಂಗ್ರ ಮತ್ತು ಆ ಕಾಲಘಟ್ಟದ ಅನೇಕ ಪಾಶ್ಚಾತ್ಯ ಕ್ರಾಂತಿಕಾರಿ ತೀವ್ರವಾದಿ ಹೋರಾಟಗಾರರ ಸಂಪರ್ಕ ದೊರೆಯಿತು. ಸಾವರ್ಕರ್‌ ಅವರು ರಷ್ಯನ್ ಕ್ರಾಂತಿಕಾರಿಗಳ ಸಂಪರ್ಕಕ್ಕೆ ಒಳಗಾಗಿ ಬಾಂಬ್‌ ತಯಾರಿಕೆ ಮತ್ತು ಗೆರಿಲ್ಲಾ ಯುದ್ಧ ಮಾದರಿಗಳನ್ನು ಕಲಿತುಕೊಂಡರು. ಕ್ರಾಂತಿಕಾರಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಸಾಹಿತ್ಯ, ಅಗತ್ಯವಾದ ಶಸ್ತ್ರಾಸ್ತ್ರ ಉತ್ಪಾದನ ವಿಧಾನಗಳ ಮಾಹಿತಿಯನ್ನು ಮುದ್ರಿಸಿ ಭಾರತದಲ್ಲಿದ್ದ ಕ್ರಾಂತಿಕಾರಿಗಳಿಗೆ ಹಂಚುತ್ತಿದ್ದರು. ಈ ಸಂದರ್ಭದಲ್ಲಿ ಕ್ರಾಂತಿಕಾರಿ ಹೋರಾಟಗಳು ಭಾರತದಲ್ಲಿ ಚುರುಕಾಗಿದ್ದವು.

ಭಾರತದ ರಾಜಕೀಯ ವಲಯದಲ್ಲಿ ಕಾಂಗ್ರೆಸ್‌ನ ಮನವಿಗಳು ಯಾವುದೇ ಫಲವನ್ನು ನೀಡದ ಕಾರಣ ನಿರಾಶ ವಾತಾವರಣ ಏರ್ಪಟ್ಟಿತ್ತು ಎನ್ನುವ ವಾದದ ಹಿನ್ನೆಲೆಯಲ್ಲಿ ಕ್ರಾಂತಿಕಾರಿ ಹೋರಾಟವು ತೀವ್ರಗೊಂಡಿತು. ಈ ಸಂದರ್ಭದಲ್ಲೆ ಬಂಗಾಳದಲ್ಲಿ ತೀವ್ರವಾದಿ ಕ್ರಾಂತಿಕಾರಿಗಳ ಚಟುವಟಿಕೆಯನ್ನು ಹತ್ತಿಕ್ಕಲು ಬಂಗಾಳದ ವಿಭಜನೆ ಮಾಡಲಾಯಿತು. ಸೈದ್ಧಾಂತಿಕ ಭಿನ್ನಮತದ ಕಾಂಗ್ರೆಸ್‌ ವಿಭಜನೆಯ ನಂತರ ತೀವ್ರವಾದಿ ಚಳವಳಿಗಾರರ ಸಹಕಾರವು ಕ್ರಾಂತಿಕಾರಿ ಹೋರಾಟಗಾರರಿಗೆ ದೊರೆಯಿತು. ಈ ಎಲ್ಲ ಅಂಶಗಳಿಂದ ಭಾರತದಲ್ಲಿ ಕ್ರಾಂತಿಕಾರಿ ಹೋರಾಟವು ತೀವ್ರತೆಯನ್ನು ಪಡೆದುಕೊಂಡಿತು. ಸಾವರ್ಕರ್‌ ಅವರು ಇಂಗ್ಲೆಂಡ್‌ನಲ್ಲಿದ್ದಾಗ ಭಾರತದಲ್ಲಿ ಅಭಿನವ ಭಾರತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿತ್ತು. ಸಾವರ್ಕರ್‌ತಮ್ಮ ಸಹೋದರರ ಮೂಲಕ ಈ ರಹಸ್ಯ ಸಂಘಟನೆಯು ೧೯೧೦ರವರೆಗೆ ಭಾರತದಲ್ಲಿ ಕ್ರಾಂತಿಕಾರಿ ಉಗ್ರವಾದಿ ಹೋರಾಟಗಳನ್ನು ಜೀವಂತವಾಗಿರಿಸಲು ಪ್ರಯತ್ನಪಟ್ಟರು. ಸಾವರ್ಕರ್‌ ಲಂಡನ್ನಿನಲ್ಲಿ ಫ್ರೀ ಇಂಡಿಯಾ ಎಂಬ ಕ್ರಾಂತಿಕಾರಿ ಹೋರಾಟಗಾರರ ಸಂಘವನ್ನೂ ಆರಂಭಿಸಿದ್ದರು. ಪ್ರತಿ ಭಾನುವಾರ ಇಲ್ಲಿ ಪ್ರಸಕ್ತ ಭಾರತದ ರಾಜಕೀಯ ಸಮಸ್ಯೆ ಕುರಿತು ಚರ್ಚೆಗಳು ನಡೆಯುತ್ತಿದ್ದವು. ೧೯೦೯ರಲ್ಲಿ ಮದನ್‌ಲಾಲ್‌ ಧಿಂಗ್ರ ಅವರು ಸರ್‌ ಕರ್ಜನ್‌ವೈಲಿ ಎನ್ನುವ ಕ್ರೂರಿ ಬ್ರಿಟಿಷ್ ‌ಅಧಿಕಾರಿಯನ್ನು ಕೊಲೆ ಮಾಡಿ ವಿವಾದದಲ್ಲಿ ಸಿಲುಕಿಕೊಂಡರು. ಬ್ರಿಟಿಷ್ ‌ಸರ್ಕಾರವು ರಹಸ್ಯ ವಿಚಾರಣೆಯನ್ನು ನಡೆಸುವ ಮೂಲಕ ಧಿಂಗ್ರಾಗೆ ಮರಣದಂಡಣೆಯನ್ನು ವಿಧಿಸಿತು. ಧಿಂಗ್ರ ಅವರ ಸಾವು ಭಾರತದ ಕ್ರಾಂತಿಕಾರಿಗಳ ಮೇಲೆ ಅಪಾರ ಪರಿಣಾಮ ಬೀರುತು. ಸಾವರ್ಕರ್‌ ಢಿಂಗ್ರನನ್ನು ಹೀರೋ ರೀತಿಯಲ್ಲಿ ತ್ಯಾಗ ಬಲಿದಾನದ ಸಂಕೇತದಂತೆ ಬಿಂಬಿಸಿದ್ದರು. ಮಾತೃಭೂಮಿಯ ಬಿಡುಗಡೆಗೆ ತ್ಯಾಗ ಬಲಿದಾನದ ಅವಶ್ಯಕತೆಯಿದೆ ಎಂದು ಅವರು ನಂಬಿದ್ದರು. ಇದರಿಂದ ಸ್ಫೂರ್ತಿಗೊಂಡ ಅನಂತರ ಕನ್ವೇರಿ ಎಂಬ ಕ್ರಾಂತಿಕಾರಿ ಯುವಕ ೧೯೧೦ರಲ್ಲಿ ನಾಸಿಕ್‌ನ ಜಾಕ್ಸನ್‌ ಎಂಬ ಬ್ರಿಟಿಷ್ ‌ಅಧಿಕಾರಿಯನ್ನು ಕೊಂದು ಮರಣದಂಡನೆ ಶಿಕ್ಷೆಗೆ ಒಳಗಾದನು. ಈ ಸಂಘಟನೆಗಳು ಸಾವರ್ಕರ್‌ ಅವರ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರಿದವು.

ಸಾವರ್ಕರ್‌ ಅವರು ತಿಲಕರ ಗಣೇಶೋತ್ಸವ ಮತ್ತು ಶಿವಾಜಿ ಉತ್ಸವಗಳಿಂದ ಪ್ರಭಾವಿತರಾಗಿದ್ದರು. ಭಾರತೀಯರೆಲ್ಲರನ್ನು ಪ್ರತಿಪಾದಿಸುವ ಅಂತಹದೇ ರಾಷ್ಟ್ರೀಯ ಉತ್ಸವದ ಅಗತ್ಯತೆಯನ್ನು ಅವರು ಮನಗಂಡಿದ್ದರು. ೧೯೦೯ರ ಮೇ ೧ನೆಯ ದಿನಾಂಕವನ್ನು ಸಿಪಾಯಿ ದಂಗೆ ಅಡಗಿಸಿದ ೫೦ನೆಯ ವರ್ಷದ ಆಚರಣೆಯನ್ನು ಬ್ರಿಟಿಷ್ ‌ಸರ್ಕಾರವು ಉತ್ಸವವನ್ನಾಗಿ ಆಚರಿಸಿತ್ತು. ಈ ಹಿನ್ನೆಲೆಯಲ್ಲಿ ೧೮೫೭ರ ಹೋರಾಟದ ಆರಂಭದ ದಿನವನ್ನು ಇಂಗ್ಲೆಂಡಿನಲ್ಲಿ ಸಾವರ್ಕರ್‌ ಮತ್ತು ಕ್ರಾಂತಿಕಾರಿಗಳು ಉತ್ಸವದ ರೂಪದಲ್ಲಿ ಆಚರಿಸುತ್ತಿದ್ದರು. ಅದೇ ವರ್ಷ ೧೯೦೯ರಲ್ಲಿ ೧೮೫೭ರ ಹೋರಾಟವನ್ನು ಕುರಿತು ಇಂಡಿಯನ್‌ ವಾರ್‌ ಆಫ್‌ ಇಂಡಿಪೆಂಡೆನ್ಸ್‌ ಎಂಬ ಸಾವರ್ಕರರ ಕೃತಿಯನ್ನು ಪ್ರಕಟಿಸಿಲಾಯಿತು. ಈ ಕೃತಿಯು ೧೮೫೭ರಲ್ಲಿ ಉತ್ತರ ಭಾರತದ ಬಹುತೇಕ ಕಡೆ ನಡೆದ ಬ್ರಿಟಿಷ್ ‌ಈಸ್ಟ್‌ ಇಂಡಿಯಾ ಕಂಪೆನಿ ಮತ್ತು ಭಾರತೀಯ ಹೋರಾಟಗಾರರ ನಡುವೆ ಹೋರಾಟದ ಕಥನವನ್ನು ವ್ಯಾಖ್ಯಾನಿಸಿತು. ಈ ಕೃತಿಯನ್ನು ಬರೆದಾಗ ಸಾವರ್ಕರ್‌ ಅವರು ಭಾರತದಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ ಸಮರ ಸಾರಿದ್ದರು. ೧೮೫೭ರ ದಂಗೆಯ ಇತಿಹಾಸವನ್ನು ರೋಮಾಂಚಕ ಐತಿಹಾಸಿಕ ಕಾದಂಬರಿಯಂತೆ, ಮಹಾಕಾವ್ಯದಂತೆ ಅವರು ರಚಿಸಿದ್ದಾರೆ. ಸಾವರ್ಕರ್‌ ಅವರು ಕ್ರಾಂತಿಕಾರಿಯಾಗಿ ಭಾವೋದ್ರೇಕದಿಂದ ಕ್ರಾಂತಿಯ ಬಗೆಗೆ ಬರೆದಿದ್ದಾರೆ. ಆ ಸಂದರ್ಭದಲ್ಲಿ ಕ್ರಾಂತಿಯಲ್ಲಿದ್ದ ಉನ್ನತ ಆದರ್ಶಗಳು ಮತ್ತು ವಿಧಾನಕ್ರಮ ನ್ಯಾಯವಾದುದು ಹಾಗೂ ಈಗ ಕ್ರಾಂತಿಕಾರಿಗಳು ಬಳಸುತ್ತಿರುವ ಮಾರ್ಗವು ಅದೇ ಆಗಿದೆ. ಆಕಸ್ಮಾತ್‌ ಕ್ರಾಂತಿಯ ತತ್‌ಕ್ಷಣದಲ್ಲಿ ದೇಶವನ್ನು ವಿದೇಶಿ ದಾಸ್ಯದಿಂದ ಮುಕ್ತಿಗೊಳಿಸಲು ವಿಫಲವಾದರೂ, ಹಳೆಯ ಕ್ರಾಂತಿಯ ವಿಫಲತೆಗೆ ಪ್ರಾಯಶ್ಚಿತ್ತವಾಗಿ ಹೊಸ ತಲೆಮಾರನ್ನು ಕ್ರಾಂತಿಯಿಂದ ಪ್ರಭಾವಕ್ಕೊಳಗಾಗುವಂತೆ ಮಾಡುವುದು ಸಾವರ್ಕರ್‌ ಅವರ ಉದ್ದೇಶವಾಗಿತ್ತು ಎಂದು ಬಿ. ಸುರೇಂದ್ರ ರಾವ್‌ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸಾವರ್ಕರ್‌ ಅವರು ತಮ್ಮ ಇಂಡಿಯನ್‌ ವಾರ್‌ ಆಫ್‌ ಇಂಡಿಪೆಂಡೆನ್ಸ್‌ ಕೃತಿಯಲ್ಲಿ ೧೯೫೭ರ ಘಟನೆಯನ್ನು ರಾಷ್ಟ್ರೀಯ ಇತಿಹಾಸಕಾರರಂತೆ ಪುನರ್ನಿರೂಪಿಸಿದ್ದಾರೆ. ಅಲ್ಲಿಯವರೆಗೆ ಬ್ರಿಟಿಷರು ಬೆಳೆಸಿದ್ದ ‘ಸಿಪಾಯಿ ದಂಗೆ’ ಎನ್ನುವ ಕಲ್ಪನೆಯನ್ನು ಹೋಗಲಾಡಿಸಿ. ಅದನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂಬಂತೆ ಅಭಿಪ್ರಾಯ ಮೂಡಿಸುವುದು ಅವರ ಉದ್ದೇಶವಾಗಿತ್ತು. ಇದು ರಾಷ್ಟ್ರೀಯ ಸ್ವತಂತ್ರ ಹೋರಾಟಕ್ಕೆ ಮುಂಚೂಣಿಯಾಯಿತು. ಮುಂದೆ ಮಹಾತ್ಮಾ ಗಾಂಧಿ ಇದನ್ನು ತರ್ಕಬದ್ಧವಾಗಿ, ಯಶಸ್ವಿಯಾಗಿ ಸಮಾಪ್ತಿಗೊಳಿಸಿದರು ಎಂದು ಬಿ. ಸುರೇಂದ್ರ ರಾವ್ ಅಭಿಪ್ರಾಯಪಟ್ಟಿದ್ದಾರೆ. ಸ್ವತಂತ್ರ ನಂತರದ ಇತಿಹಾಸಕಾರರ ಪ್ರಕಾರ ಸಾಮ್ರಾಜ್ಯಶಾಹಿ ಕಾಲದಲ್ಲಿ ಸಾವರ್ಕರರ ಈ ಕೃತಿಯು ೧೮೫೭ರ ದಂಗೆಯ ಬಗೆಗೆ ಬೆಳಸಿದ ದಂತಕತೆಯಾಗಿ ಮೂಡಿದ್ದಾಗಿದೆ. ಆದರೆ ಸಾವರ್ಕರ್‌ರ ಕಾಲಘಟ್ಟದಲ್ಲಿ ಈ ಕೃತಿಯು ಭಾರತೀಯರಲ್ಲಿ ಭಾವನಾತ್ಮಕವಾಗಿ ಇತಿಹಾಸದ ಬಗೆಗೆ ಜಾಗೃತಿಯನ್ನು ಮೂಡಿಸಲು ಸಾಧ್ಯವಾಯಿತು.

ಸಾವರ್ಕರರ ಕೃತಿಯು ಕೆಲ ಯುವಕರು ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಲು ಸಶಸ್ತ್ರ ಕ್ರಾಂತಿಕಾರಿ ಹೋರಾಟದ ಹಾದಿ ಹಿಡಿದುದನ್ನು ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಭಾವನೆ ಬೆಳೆಸಲು ಬಳಸುತ್ತಾರೆಂದು ಬ್ರಿಟಿಷ್ ‌ಸರ್ಕಾರ ಗುರುತಿಸಿತ್ತು. ಎಲ್ಲ ಪಕ್ಷಗಳು ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತವೆ, ಇದು ಕ್ರಾಂತಿಕಾರಿಗಳ ಚಟುವಟಿಕೆಯ ಪ್ರಣಾಳಿಕೆಯಂತೆ ಬಳಸಬಹುದು ಎಂಬುದರ ಬಗೆಗೆ ಬ್ರಿಟಿಷ್ ‌ಸರ್ಕಾರಕ್ಕೆ ಅನುಮಾನವಿತ್ತು. ಹಾಗಾಗಿ ಕೃತಿಯನ್ನು ಮುದ್ರಿಸುವ ಮೊದಲೇ ಅದನ್ನು ನಿಷೇಧಿಸಿದ್ದರು. ಇದರಿಂದ ಇದರ ಮುದ್ರಣದ ಬಗೆಗೆ ರೋಮಾಂಚನಕಾರಿ ಕಥೆಗಳು ಗಾಳಿಸುದ್ದಿಯಾಗಿ ಹಬ್ಬಿತ್ತು. ಇದು ಸಹ ಕೃತಿಗೆ ಹೆಚ್ಚಿನ ಬೆಲೆ ತರುವಲ್ಲಿ ಯಶಸ್ವಿಯಾಗಿಸಿತು. ಕೃತಿಯನ್ನು ನಿಷೇಧಿಸಿದ್ದರಿಂದ ರಹಸ್ಯ ಸಂಘಟನೆಗಳು ಅದನ್ನು ಜನರಲ್ಲಿ ತಲುಪಿಸಲು ಪ್ರಮುಖ ಪಾತ್ರವಹಿಸಿತು. ಈ ಕೃತಿಯ ಮುದ್ರಣಕ್ಕೆ ಹಾಗೂ ಬೇರೆ ಭಾಷೆಗಳಲ್ಲಿ ಅನುವಾದಗೊಳಿಸಲು ಪ್ರಮುಖವಾಗಿ ಅಭಿನವ ಭಾರತಿ ಮತ್ತು ಗದರ್‌ನಂತಹ ಕ್ರಾಂತಿಕಾರಿ ಪಕ್ಷಗಳು ಸಹಕರಿಸಿದವು. ಒಂದು ಹಂತದಲ್ಲಿ ಕ್ರಾಂತಿಕಾರಿ ಚಟುವಟಿಕೆಗಾರರ ನೀಲಿನಕ್ಷೆಯಂತೆ ಕಾರ್ಯನಿರ್ವಹಿಸಿತು. ಇದು ಭಾರತೀಯ ಕ್ರಾಂತಿಕಾರಿಗಳ ಬೈಬಲ್‌ ಎನ್ನುವಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ೧೮೫೭ರ ದಂಗೆಯ ಕಥಾಪಾತ್ರವನ್ನು ತಿಳಿದುಕೊಳ್ಳುವ ದೃಷ್ಟಿಯಿಂದಷ್ಟೇ ಅಲ್ಲದೆ ಜೀವನದ ಚೌಕಟ್ಟನ್ನು ತಿಳಿಯಲು ಸಹಕರಿಸುತ್ತದೆ ಎಂದು ಸುರೇಂದ್ರರಾವ್‌ತಿಳಿಸುತ್ತಾರೆ.

ಸಾವರ್ಕರರ ಕೃತಿಯು ಅಲ್ಲಿಯವರೆಗೆ ೧೮೫೭ರವರ ಬಗೆಗೆ ಬಂದಿದ್ದ ಕೃತಿಗಳಿಗಿಂತ ಗಂಭೀರವಾದ ಅಧ್ಯಯನದ ಕೃತಿಯಾಗಿದೆ. ಜಾನ್ ಕಯೆ, ಟ್ರೆವೆಲ್ಯಾನ್ ಜಿ. ಒ. ಚಾರ್ಲ್ಸ್‌ಬಾಲ್‌, ಮಾಲೆಷನ್‌, ಜಿ. ಬಿ. ರೈಸ್‌ಹಾಮಸ್‌, ಲಾರ್ಡ್‌ ರಾಬರ್ಟ್‌, ರಸೆಲ್ಸ್‌ಡೈರಿ ಮೊದಲಾದವುಗಳನ್ನು ಆಕರವಾಗಿ ಬಳಸಿಕೊಂಡಿದ್ದರು. ಅಲ್ಲಿಯವರೆಗೆ ಯಾವ ಇಂಗ್ಲಿಷ್‌ ಮತ್ತು ದೇಶಿ ಇತಿಹಾಸಕಾರನು ನೀಡದ ದೃಷ್ಟಿಕೋವನ್ನು ೧೮೫೭ರ ದಂಗೆಯ ಬಗೆಗೆ ನೀಡುತ್ತಾರೆ. ೧೮೫೭ರ ಹೋರಾಟವನ್ನು ನಿಜವಾದ ಕ್ರಾಂತಿಯಂತೆ ನೋಡುತ್ತಾರೆ. ಅಲ್ಲಿಯವರೆಗೆ ಇದನ್ನು ಯಾರೂ ವೈಜ್ಞಾನಿಕವಾಗಿ ನೋಡಿರಲಿಲ್ಲ ಮತ್ತು ಹೋರಾಟದ ಕಾರಣಗಳನ್ನು ಪ್ರಾಮಾಣಿಕವಾಗಿ ತಿಳಿಯಲು ಪ್ರಯತ್ನಿಸಿರಲಿಲ್ಲ. ೧೮೫೭ರ ಘಟನೆಯ ಬಗೆಗೆ ನೀಡುತ್ತಾರೆ. ೧೮೫೭ರ ಹೋರಾಟವನ್ನು ನಿಜವಾದ ಕ್ರಾಂತಿಯಂತೆ ನೋಡುತ್ತಾರೆ. ಅಲ್ಲಿಯವರೆಗೆ ಇದನ್ನು ಯಾರೂ ವೈಜ್ಞಾನಿಕವಾಗಿ ನೋಡಿರಲಿಲ್ಲ ಮತ್ತು ಹೋರಾಟದ ಕಾರಣಗಳನ್ನು ಪ್ರಾಮಾಣಿಕವಾಗಿ ತಿಳಿಯಲು ಪ್ರಯತ್ನಿಸಿರಲಿಲ್ಲ. ೧೮೫೭ರ ಘಟನೆಯ ಬಗೆಗೆ ವಿಶ್ಲೇಷಿಸಿದ ಮತ್ತೊಬ್ಬ ಭಾರತೀಯ ಸರ್‌ಸೈಯದ್‌ ಅಹಮದ್‌ಖಾನ್‌ ಆಗಿದ್ದಾರೆ. ಇವರು ಘಟನೆ ನಡೆದುದು ಮತ್ತು ಅದಕ್ಕೆ ಕಾರಣಗಳ ಬಗೆಗೆ ಗಮನ ಹರಿಸದೆ ವಿಮರ್ಶಾತ್ಮಕವಾಗಿ ನೋಡುವ ಪ್ರಯತ್ನ ಮಾಡಿದ್ದಾರೆ. ೧೮೫೭ರ ಹೋರಾಟವನ್ನು ಕಣ್ಣಾರೆ ನೋಡಿದ್ದ ಸೈಯದ್‌ ಅಹಮದ್‌ಖಾನ್‌ ಅದರ ಪರಿಣಾಮಗಳ ಬಗೆಗೆ ಜಾಗೃತವಾಗಿದ್ದರು. ಮುಸ್ಲಿಮ್‌ ಸಮುದಾಯದ ವಿದ್ಯಾವಂತ ಪ್ರತಿನಿಧಿಯಾಗಿ ಅಂದಿನ ಅಗತ್ಯಗಳಿಗೆ ತಕ್ಕಂತೆ ಅದನ್ನು ಬಳಸಿಕೊಂಡಿದ್ದಾರೆ. ಸುಮಾರು ೫೦ ವರ್ಷಗಳ ನಂತರ ಅಮೂಲಾಗ್ರವಾಗಿ ಘಟನೆಯ ಕಥೆಯನ್ನು ಸಾವರ್ಕರ್‌ ಪುನರ್‌ ರಚಿಸುತ್ತಾರೆ. ಆ ಹೊತ್ತಿಗಾಗಲೇ ಕ್ರಾಂತಿಕಾರಿ ಹೋರಾಟದಲ್ಲಿ ಭಾಗಿಯಾಗಿದ್ದ ಸಾವರ್ಕರ್‌ ಅಗತ್ಯಕ್ಕೆ ತಕ್ಕಂತೆ ೧೮೫೭ರ ಘಟನೆಯನ್ನು ರಚಿಸಿದ್ದಾರೆ.

ಸಾವರ್ಕರ್‌ ಅವರು ಮ್ಯಾಜಿನಿಯ ಸ್ವರ್ಗ ಮತ್ತು ಭೂಮಿಯ ನಡುವೆ ಅಂತರವಿಲ್ಲ ಎಂಬ ಪರಿಕಲ್ಪನೆಯಿಂದ ಪ್ರಭಾವಿತರಾಗಿದ್ದರು. ಹಾಗಾಗಿ ಅಂತಹದೆ ಪರಿಕಲ್ಪನೆಯನ್ನು ಅವರು ಬೆಳೆಸುತ್ತಾರೆ. ಸ್ವರ್ಧಮ ಮತ್ತು ಸ್ವರಾಜ್ಯವೆರಡನ್ನು ಪೂರಕವಾಗಿ ಬಳಸುತ್ತಾರೆ. ಶಿವಾಜಿಯ ಗುರು ರಾಮದಾಸನ ತತ್ವಗಳನ್ನು ಉತ್ಪ್ರೇಕ್ಷಿಸಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಲ್ಪನೆಗಳನ್ನು ಬೆರಸಿ ಬಳಸುತ್ತಾರೆ. ಇದು ಕೆಲವು ಕಡೆ ಘಟನೆಗಳ ನಡುವೆ ಅಭಾಸವನ್ನು ಹುಟ್ಟುಹಾಕುತ್ತದೆ. ಸಾವರ್ಕರ್‌ ಅವರು ನಾನಾಸಾಹೇಬ ಮತ್ತು ಝಾನ್ಸಿರಾಣಿ ಯುದ್ಧ ವಿದ್ಯೆಗಳನ್ನು ಒಟ್ಟಾಗಿ ಕಲಿತಿದ್ದು, ಬಾಲ್ಯದಿಂದಲೂ ಅಣ್ಣ ತಂಗಿಯರಂತೆ ಬೆಳೆದರು ಎಂದು ಹೇಳುತ್ತಾ ಸಾಗುವುದನ್ನು ಗಮನಿಸಬಹುದು. ಈ ಪಾತ್ರಗಳನ್ನು ಮರಾಠರ ಸ್ವತಂತ್ರ ಪ್ರಿಯತೆ ಮತ್ತು ಕ್ರಾಂತಿಕಾರಿ ಉತ್ಸಾಹವನ್ನು ಉದ್ದೀಪಿಸಲು ಬಳಸುತ್ತಾರೆ. ಸಾವರ್ಕರ್‌ ಮರಾಠದಲ್ಲಿದ್ದ ಕ್ರಾಂತಿಕಾರಿ ಪರಂಪರೆಯು ಸಮಕಾಲೀನದವರೆಗೂ ಮುಂದುವರೆದು ಬಂದಿದೆ ಎಂಬ ಪ್ರತಿಮೆಯನ್ನು ಕಟ್ಟಿಕೊಡುತ್ತಾರೆ.

ಎಲ್ಲ ಹಿರಿ, ಕಿರಿಯ ವ್ಯಕ್ತಿಗಳು ಮತ್ತು ಜನ ಸಾಮಾನ್ಯರ ಭಾವೋದ್ರೇಕದಿಂದ ನಡೆಸಿದ ಪೂರ್ವಭಾವಿ ತಯಾರಿಯೇ ೧೮೫೭ರ ಹೋರಾಟವಾಗಿತ್ತು ಎಂದು ಸಾವರ್ಕರ್‌ ಅಭಿಪ್ರಾಯಪಟ್ಟಿದ್ದಾರೆ. ಭಾರತದಾದ್ಯಂತ ಹೋರಾಟಕ್ಕೂ ಪೂರ್ವಭಾವಿಯಾಗಿ ಮಾಹಿತಿ ರವಾನೆಯಾಗಿತ್ತು ಎಂಬಂತೆ ವಿಚಾರಗಳನ್ನು ಬಿಂಬಿಸುತ್ತಾರೆ. ಹಾಗಾಗಿ ಇದನ್ನು ಕುರಿತು ಪಾರ್ಥಸಾರಥಿಯವರು ಈ ರೀತಿ ಅಭಿಪ್ರಾಯ ಪಡುತ್ತಾರೆ:

ಎರಡು ವರ್ಷಕ್ಕೂ ಮೀರಿದ ಅಂದಿನ ಘಟನಾವಳಿಗಳನ್ನು ಒಂದು ಕತೆಯ ವಿವಿಧ ಪ್ರಕಾರಗಳ ನಡುವೆ, ಪರಸ್ಪರ ಸಂಬಂಧ ಕಲ್ಪಿಸಿ ಸತ್ಯಸಂಗತಿಗಳ ಜೊತೆಗೆ ಕಲ್ಪನೆಗಳನ್ನು ಸೇರಿಸಿ ಹೇಳಿದ್ದಾರೆ. ಎಲ್ಲ ಬಿಡಿಬಿಡಿ ಘಟನೆಗಳು ಒಂದೇ ಕೇಂದ್ರದಿಂದ ನಿದೇಶಿತವಾಗಿವೆ ಎಂದು ಹೇಳಲಾಗದು. ತಾರ್ಕಿಕವಾಗಿ ಮುಂದುವರಿದ ಹಂತ ಹಂತದ ಬೆಳವಣಿಗೆಯೂ ಅಲ್ಲಿಲ್ಲ. ಬಹುಶಃ ಸಾವರ್ಕರ್‌ಅವರು ಒಬ್ಬರೇ ಹಾಗೆ ಬರೆದವರು.

ಸಾವರ್ಕರ್‌ ತಮ್ಮ ಕೃತಿಯಲ್ಲಿ ರಹಸ್ಯ ಕಾರ್ಯಾಚರಣೆಯ ಮೂಲಕ ಮಾಹಿತಿ ರವಾನಿಸಲು ಕಮಲ ಮತ್ತು ಚಪಾತಿಯನ್ನು ಬಳಸಿಕೊಂಡರು ಎಂದು ರೋಮಾಂಚಕಾರಿಯಾಗಿ ಚಿತ್ರಿಸುತ್ತಾರೆ. ನಾನಾ ಸಾಹೇಬನ ಕ್ರಾಂತಿಕಾರಿ ಸಂಪ್ರದಾಯದ ಜೊತೆಗೆ ಸಾವರ್ಕರ್‌ ತಮ್ಮನ್ನು ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದು ಸುರೇಂದ್ರರಾವ್ ಅಭಿಪ್ರಾಯ ಪಡುತ್ತಾರೆ. ೧೮೫೭ರಲ್ಲಿ ನಾನಾನು “ಸಾವಿರಾರು ಫಕೀರರನ್ನು, ಪಂಡಿತರನ್ನು ಮತ್ತು ಸನ್ಯಾಸಿಗಳನ್ನು” ಜನರಿಗೆ “ಕ್ರಾಂತಿಯನ್ನು ಹರಡಲು” ಕಳಿಸುತ್ತಾನೆ ಎಂದು ಅವರು ಬರೆದರು. ಇಂತಹ ರಹಸ್ಯ ಸಂಘಟನೆಗಳ ಮೂಲಕ ನಾನಾ ಸಾಹೇಬನು ದೆಹಲಿ, ಆಗ್ರಾ, ಲಕ್ನೋ, ಜಗದೀಶಪುರ, ನಾಗಪುರದಲ್ಲಿ ಕ್ರಾಂತಿಯ ಮೊಳಕೆಯನ್ನು ಹುಟ್ಟುಹಾಕಿದ್ದ ಎನ್ನುತ್ತಾರೆ ಸಾವರ್ಕರ್‌. ಕ್ರಾಂತಿಯ ಸಂದೇಶವನ್ನು ಹೋರಾಟಗಾರರು ಕಲ್ಕತ್ತಾ, ಹೈದರಾಬಾದ್‌, ಕೊಲ್ಲಾಪುರ, ಸಾಂಗ್ಲಿ ಮತ್ತು ಮದ್ರಾಸುಗಳಲ್ಲಿಯೂ ಕಳಿಸುತ್ತಾರೆ. ರಹಸ್ಯ ಸಂದೇಶಗಳನ್ನು ಚಪಾತಿ ಮತ್ತು ತಾವರೆ ಮೂಲಕ ಬಿತ್ತುವ ವಿಚಾರವನ್ನು ವೈಭವೀಕರಿಸಿದವರು ಸಾವರ್ಕರ್‌ ಅವರು.

ಸಾವರ್ಕರ್‌ ಕ್ರಾಂತಿಕಾರಿ ಚಟುವಟಿಕೆಗಳಿಗೆ ಧರ್ಮದ ಬೆಂಬಲವಿರುವಂತೆ ಬಿಂಬಿಸುತ್ತಾರೆ. ಅದಕ್ಕೆ ಕೃತಿಯಲ್ಲಿ ಹೋರಾಟಗಾರರು ಗೀತೆ ಮೊದಲಾದ ಧಾರ್ಮಿಕ ಗ್ರಂಥಗಳ ಮೇಲೆ ಪ್ರಮಾಣ ಮಾಡುವಂತೆ ಚಿತ್ರಿಸುತ್ತಾರೆ. ಸಾವರ್ಕರ್‌ ಹಿಂಸೆಯ ಪ್ರಶ್ನೆಯನ್ನು ಚರ್ಚಿಸುತ್ತಾ ಅಹಿಂಸೆ ಮತ್ತು ವಿನಮ್ರ ಹೋರಾಟವನ್ನು “ಕಳ್ಳರ ಮುಂದೆ ಹೇಗಿದ್ದೀರಿ ಎಂದಂತೆ” ಎನ್ನುತ್ತಾರೆ. ಅಹಿಂಸೆಯು ವಿಶ್ವದಲ್ಲಿ ನ್ಯಾಯ ಮತ್ತು ಮಾನವೀಯ ಗುಣಗಳು ಅತ್ಯುನ್ನತ ಶಿಖರವನ್ನು ಮುಟ್ಟಿದಾಗ ಮಾತ್ರ ಬಳಸಲು ಯೋಗ್ಯವಾದುದು ಎನ್ನುತ್ತಾರೆ. ಹಿಂಸಾತ್ಮಕ ಕ್ರಾಂತಿ ಹೋರಾಟದಿಂದಲೆ ಗುರಿ ತಲುಪಲು ಸಾಧ್ಯವೆಂಬಂತೆ ಬಿಂಬಿಸುತ್ತಾರೆ. ಕ್ರಾಂತಿಯ ಸಂದರ್ಭದಲ್ಲಿ ರಕ್ತಪಾತ ತಪ್ಪಲ್ಲ, ದಮನದ ವಿರುದ್ಧ ರಕ್ತಸಿಕ್ತ ಹೋರಾಟ ಮಾಡುವುದು ಕರ್ತವ್ಯ ಎಂಬಂತೆ ತಿಳಿಸುತ್ತಾ ಸಮಕಾಲೀನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿನ ರಕ್ತಪಾತ ಮತ್ತು ಹಿಂಸೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

ಸಾವರ್ಕರ್‌ ಅವರು ೧೮೫೭ರ ಸಂದರ್ಭದಲ್ಲಿ ಹೋರಾಡಿದ ನಾಯಕರಿಗೆ ಮತ್ತು ಹೋರಾಟಗಾರರಿಗೆ ವೀರಸ್ವರ್ಗವಿದೆ ಎಂಬುದನ್ನು ಪ್ರತಿಪಾದಿಸುತ್ತಾರೆ. ಕ್ರಾಂತಿಕಾರಿ ಹೋರಾಟಗಾರರು ಬ್ರಿಟಿಷರಿಂದ ಕೊಲ್ಲಲ್ಪಡಲಿಲ್ಲ; ಬದಲಿಗೆ ಅವರು ವೀರ ಮರಣವನ್ನು ಹೊಂದಿ ಹುತಾತ್ಮರಾದರು. ಮಂಗಲಪಾಂಡೆಯಿಂದ ತಾತ್ಯಾಟೋಪಿಯವರೆಗೆ, ನಾನಾ ಸಾಹೇಬನಿಂದ ಝಾನ್ಸಿರಾಣಿಯವರೆಗೆ, ಬಹದ್ದೂರ್‌ ಷಾ ಜಫರ್‌ನಿಂದ ಕುನ್ವರ್‌ಸಿಂಗ್‌ನವರೆಗಿನ ವೀರರೆಲ್ಲ ಹುತಾತ್ಮರಾದರೇ ವಿನಹ ಅವರ್ಯಾರು ಕೊಲ್ಲಲ್ಪಡಲಿಲ್ಲ ಎಂದು ಸಾವರ್ಕರ್‌ ವಾದಿಸಿದರು. ೧೮೫೭ರ ಹೋರಾಟವನ್ನು ವೈಭವೀಕರಿಸಿದ ಸಾವರ್ಕರ್‌ ಅವರು ಆ ಯುದ್ಧ ಇನ್ನೂ ಮುಗಿದಲ್ಲ; ಸಾವರ್ಕರ್‌ ಅವರು ಕೂಡ ಪಾಲುದಾರರಾಗಿರುವ ಈ ಯುದ್ಧವು ಇನ್ನು ಪರಿಪೂರ್ಣಗೊಳ್ಳದ ಕ್ರಾಂತಿಕಾರಿ ಹೋರಾಟವಾಗಿದೆ ಎಂದು ಬಿಂಬಿಸಿದ್ದನ್ನು ಸುರೇಂದ್ರರಾವ್‌ ಅವರು ವಿಮರ್ಶಿಸಿರುವುದನ್ನು ನೋಡಬಹುದು. ಹೀಗಾಗಿಯೇ ಸಾವರ್ಕರ್‌ ಅವರು ತಮ್ಮನ್ನು ಮರಾಠಿ ಕ್ರಾಂತಿಕಾರಿ ಸಂಪ್ರದಾಯದ ವಾರಸುದಾರ ಎಂದೇ ಭಾವಿಸಿಕೊಂಡಿದ್ದರು.

ಹಾಗೆಯೇ ಈ ಕೃತಿಯು ಕ್ರಾಂತಿಗಾಗಿ ಹಿಂದೂ ಮುಸ್ಲಿಮರು ಜೊತೆಯಾಗಿ ಹೋರಾಡಿದ್ದನ್ನು ಭಾವೋದ್ವೇಗದಿಂದ ಬಿಂಬಿಸುತ್ತದೆ. ಇವು ಸಾವರ್ಕರ್‌ ಹಿಂದುತ್ವ ಸಿದ್ಧಾಂತವನ್ನು ಪ್ರತಿಪಾದಿಸುವುದಕ್ಕಿಂತ ಹಿಂದಿನ ದಿನಗಳಾಗಿದ್ದವು. ಹಿಂದೂಮುಸ್ಲಿಮರು ಜೊತೆಗೂಡಿ ಕೆಲಸ ಮಾಡಿದ್ದನ್ನು ಅವರು ಒಪ್ಪಿದ್ದರು. ಆದರೆ ಅದೊಂದು ದೈವನಿರ್ಮಿತ ಘಟನೆ ಎಂದು ಅವರು ಬಿಂಬಿಸುತ್ತಾರೆ. ಕ್ರಾಂತಿಯು ವಸಾಹತುಶಾಹಿ ದಾಸ್ಯದ ವಿರುದ್ಧ ಮಾಡಿದ ಪ್ರಯತ್ನವಾಗಿದೆ. ಸಾವರ್ಕರ್‌ ಅವರ ಪ್ರಕಾರ, ಹಿಂದೂಸ್ತಾನ ಎಂದರೆ ಮುಸ್ಲಿಮ್ ಮತ್ತು ಹಿಂದೂಗಳು ಇರುವ ಸಂಯುಕ್ತ ಸಂಸ್ಥಾನವಾಗಿತ್ತು. ಸಾವರ್ಕರರ ಕ್ರಾಂತಿಕಾರಿ ಚಟುವಟಿಕೆಗಳು ಈ ಮಾದರಿಯನ್ನೇ ಒಪ್ಪುತ್ತವೆ ಹಾಗೂ ಅವರ ಕೃತಿಯಲ್ಲಿ ಇದಕ್ಕೆ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ ಎಂದು ಸುರೇಂದ್ರರಾವ್‌ ವಿಶ್ಲೇಷಿಸಿದ್ದಾರೆ. ಇದರಲ್ಲಿ ಸಾವರ್ಕರ್‌ ಯಾವ ಹಂತದಲ್ಲಿ ಮತ್ತು ಸಂದರ್ಭದಲ್ಲಿ ಮುಸ್ಲಿಮರು ಹಿಂದೂಗಳ ಶತ್ರುಗಳಾಗಿದ್ದರು ಹಾಗೂ ಶತಮಾನಗಳ ಹೋರಾಟದ ನಂತರ ಹೇಗೆ ಈಗ ಇಬ್ಬರೂ ಸಮಾನರಾಗಿದ್ದಾರೆ ಎಂದು ಚರ್ಚಿಸುತ್ತಾರೆ. ಬ್ರಿಟಿಷರ ವಿರುದ್ಧ ಹೋರಾಡಲು ಹಿಂದು-ಮುಸ್ಲಿಮ್‌ ಒಂದಾಗುವ ಅವಶ್ಯಕತೆಯುಂಟಾಯಿತು ಎಂಬಂತೆ ಚಿತ್ರಿಸುತ್ತಾರೆ.

ಇಂಡಿಯನ್‌ ವಾರ್‌ ಆಫ್ ಇಂಡಿಪೆಂಡೆನ್ಸ್‌ ಕೃತಿಯ ರಚನೆಯ ಕಾಲಘಟ್ಟ ಸಾವರ್ಕರರ ಜೀವನದಲ್ಲಿ ಕ್ರಾಂತಿಕಾರಿ ಹೋರಾಟದ ಉತ್ಕೃಷ್ಟತೆಯನ್ನು ತಲುಪಿದಾಗಿತ್ತು. ಇದಾದ ನಂತರ ಸಾವರ್ಕರ್ ಕ್ರಾಂತಿಕಾರಿ ಚಟವಟಿಕೆಗಳನ್ನು ನಡೆಸುತ್ತಿದ್ದದ್ದು ಸಾಬೀತಾಗುತ್ತದೆ. ಭಾರತದಲ್ಲಿ ಅನಂತ ಕನ್ವೇರಿ ಮತ್ತು ಸಹೋದರ ಗಣೇಶ್ ಸಾವರ್ಕರ್ ಜಿಲ್ಲಾ ಮ್ಯಾಜಿಸ್ಟೇಟ್ ಜಾಕ್ಸನ್ ಕೊಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಈ ಕೊಲೆಗೆ ಬಳಸಿದ ಪಿಸ್ತೂಲು ಸಾವರ್ಕರ್ ಕಳುಹಿಸಿದ್ದ ೨೦ ಪಿಸ್ತೂಲುಗಳಲ್ಲಿ ಒಂದಾಗಿತ್ತು. ದೇಶದ್ರೋಹ ಮತ್ತು ಕ್ರಾಂತಿಕಾರಿಗಳಿಗೆ ಸಹಕಾರ ಹಾಗೂ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದುದ್ದಕ್ಕಾಗಿ ಸಾವರ್ಕರರನ್ನು ಬಂಧಿಸಲಾಯಿತು. ಹಡಗಿನಲ್ಲಿ ಸಾವರ್ಕರ್ ಅವರನ್ನು ಭಾರತಕ್ಕೆ ಕರೆತರುವಾಗ ಪ್ರಾನ್ಸ್‌ನ ಮಾರ್ಸ್ಸೇಲ್ಸಿನಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿ ಸಿಕ್ಕಿಹಾಕಿಕೊಳ್ಳುತಚತಾರೆ. ವಿಚಾರಣೆಯ ನಂತರ ಬ್ರಿಟಿಷ್ ನ್ಯಾಯಾಲಯ ಸಾವರ್ಕರರ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ೫೦ ವರ್ಷಗಳ ಕಾರಗೃಹ ಶಿಕ್ಷೆ ವಿಧಿಸಿತು. ಸಾವರ್ಕರ್ ಅವರನ್ನು ಬ್ರಿಟಿಷ್ ಅಧಿಕಾರಿಗಳು ಪ್ರಾನ್ಸ್‌ನಲ್ಲಿ ಬಂಧಿಸಿದ್ದನ್ನು ವಿರೋಧಿಸಿ ಹೇಗ್‌ನ ರಾಷ್ಟ್ರೀಯ ನ್ಯಾಯಾಲಯ ದಲ್ಲಿ ಅವರು ಅಪೀಲು ಮಾಡಿದ್ದರು. ಹಲವು ಸಮಕಾಲಿನ ಪತ್ರಿಕೆಗಳು ಮ್ಯಾಜಿನಿ, ಗ್ಯಾರಿಬಾಲ್ಡಿ ಮೊದಲಾದ ಕ್ರಾಂತಿಕಾರಿಗಳಿಗೆ ಸಾವರ್ಕರ್ ಸಮಾನರಾದವರೆಂದು ಪ್ರಕಟಿಸಿದ್ದವು. ಆರಂಭದಲ್ಲಿ ತೀರ್ಪು ಅವರ ಪರವಿದ್ದು ಅವರನ್ನು ಪ್ರಾನ್ಸ್ ಸರ್ಕಾರಕ್ಕೆ ಒಪ್ಪಿಸಲು ತಿಳಿಸಲಾಯಿತು. ನಂತರದಲ್ಲಿ ಬ್ರಿಟಿಷ್ ಸರ್ಕಾರದ ಒತ್ತಡಕ್ಕೆ ಮಣಿದು ಬ್ರಿಟಿಷ್ ಸರ್ಕಾರದ ಧೋರಣೆಯನ್ನು ಎತ್ತಿಹಿಡಿಯಿತು. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾವರ್ಕರ್ ಅವರಿಗೆ ಪ್ರಚಾರ ದೊರಕಿತ್ತು. ಇದು ರಾಜಕೀಯ ವಿವಾದವಾಗಿ ಪರಿಣಮಿಸಿತ್ತು. ಈ ತೀರ್ಪನ್ನು ವಿಶ್ವದ ಹಲವು ಪತ್ರಿಕೆಗಳು ಖಂಡಿಸಿದ್ದವು. ಇಟಲಿಯ ರಾಜಕೀಯ ಪಕ್ಷವೊಂದು ಮೆರವಣಿಗೆ ಮೂಲಕ ಈ ತೀರ್ಪನ್ನು ವಿರೋಧಿಸಿತ್ತು. ಈ ಎಲ್ಲ ಘಟನೆಗಳ ಭಾರತದ ಕ್ರಾಂತಿಕಾರಿ ಚಳವಳಿಗಾರರಿಗೆ ಸ್ಫೂರ್ತಿಯನ್ನು ನೀಡಿದ್ದವು. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದೆ ಎಂಬುದನ್ನು ಬಿಂಬಿಸಲು ಅವರು ಸಫಲರಾಗಿದ್ದರು. ಮುಂದಿನ ಪೀಳಿಗೆಯ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮತ್ತು ಗದರ್ ಪಕ್ಷ ಮೊದಲಾದವರುಗಳಿಗೆ ಸಾವರ್ಕರ್ ಲೇಖನಗಳೇ ಸ್ಫೂರ್ತಿಯ ಸೆಲೆಯಾಗಿತ್ತು.

ಸಾವರ್ಕರ್ ಸೆರೆಮನೆಯಿಂದ ಬಂದ ಮೇಲೆ ಬ್ರಿಟಿಷರ ದಮನ ನೀತಿಯ ವಿರುದ್ಧ ಹೋರಾಡುವುದನ್ನು ನಿಲ್ಲಿಸಿದರು. ೧೮೫೭ರ ಕೃತಿ ಸಾವರ್ಕರರನ್ನು ವಿರನಾಯಕನಂತೆ ಬಿಂಬಿಸಿತು. ಆದರೆ ಅದರ ಪರಿಣಾಮ ದುರಂತದಲ್ಲಿ ಕೊನೆಯಾಯಿತು. ಅಂಡಮಾನಿನ ಸೆಲ್ಯೂಲರ್ ಜೈಲು ಸಾವರ್ಕರರನ್ನು ಭಾರತದಲ್ಲಿದ್ದ ಬ್ರಿಟಿಷರ ಆಳ್ವಿಕೆಗೆ ಶರಣಾಗುವಂತೆ ಮಾಡಿತು ಎಂದು ಜ್ಯೋತಿರ್ಮಯ ಶರ್ಮ ಹೇಳಿದ್ದಾರೆ. ೧೯೧೩ ನವೆಂಬರ್ ೧೪ರಂದು ಸರ್ಕಾರಕ್ಕೆ ಪಿಟಿಷನ್ ಸಲ್ಲಿಸಿ ದಯೆಯ ಮೇಲೆ ಬಿಡುಗಡೆ ಮಾಡಲು ಸಾವರ್ಕರ್ ಅವರು ಮನವಿ ಸಲ್ಲಿಸಿದರು. ನಂತರದಲ್ಲಿ ಬ್ರಿಟಿಷ್ ಸರ್ಕಾರದ ವಿರೋಧಿ ನೀತಿಯನ್ನು ಬಿಟ್ಟು ಸಹಕಾರ ನೀತಿಯನ್ನು ಅನುಸರಿಸುವುದಾಗಿ ಅವರು ಒಪ್ಪಿಕೊಂಡಿದ್ದರು. ಸಾವರ್ಕರ್ ಮಾತಿಗೆ ತಕ್ಕಂತೆ ನಡೆದರು. ೧೯೨೨ರ ನಂತರ ಹಿಂದುತ್ವ ಸಿದ್ಧಾಂತಕ್ಕೆ ಒತ್ತುಕೊಟ್ಟರು. ಆ ಹಿನ್ನಲೆಯಲ್ಲೇ ಹಿಂದುತ್ವ, ಹಿಂದು-ಪದ್ ಪದಶಾಹಿ ಮತ್ತು ದಿ ಸ್ಪೋರಿ ಆಫ್ ಮೈಟ್ಸಾನ್ಸ್ ಪೋರ್ಟೆಷನ್ ಆಫ್ ಲೈಫ್ ಮೊದಲಾದ ಕೃತಿಗಳನ್ನು ರಚಿಸಿದ್ದರು. ಇಂಡಿಯನ್ ವಾರ್ ಆಫ್ ದಿ ಇಂಡಿಪೆಂಡೆನ್ಸ್‌ನಲ್ಲೆ ಹಿಂದುತ್ವದ ಲಕ್ಷಣಗಳನ್ನು ಕಾಣಬಹುದಾದರೂ ಕ್ರಾಂತಿಕಾರಿ ಆದರ್ಶ ಸಂಪೂರ್ಣ ಅವಕಾಶವನ್ನು ಕಲ್ಪಿಸಿಕೊಟ್ಟಿರಲಿಲ್ಲ. ೧೯೧೩ರ ನಂತರ ಈ ಹಿಡಿತ ಸಡಿಲವಾಗತೊಡಗಿತು. ಸಾವರ್ಕರ್ ಅವರು ಮುಸ್ಲಿಮರ ವಿರುದ್ಧ ಯುದ್ಧ ಸಾರಿದುದರ ಬಗೆಗೆ ಬ್ರಿಟಿಷ್ ಸರ್ಕಾರಕ್ಕೆ ಯಾವ ತೊಂದರೆಯೂ ಇರಲಿಲ್ಲ. ವಸಾಹತುಶಾಹಿ ನೀತಿಯು ಕೋಮು ಸಿದ್ಧಾಂತವನ್ನು ರಾಷ್ಟ್ರೀಯತೆಯ ನೆರಳಿನಲ್ಲಿ ಬೆಳಸಲು ವಿಪುಲವಾದ ಅವಕಾಶ ಕಲ್ಪಿಸಿಕೊಟ್ಟಿತ್ತು.

* * *

ಸಾವರ್ಕರ್ ಅವರು ಖಿಲಾಫತ್ ಚಳವಳಿಯ ಸಂದರ್ಭದಲ್ಲಿ ಸೆರೆಮನೆಯಿಂದ ಬಿಡುಗಡೆಗೊಳ್ಳುತ್ತಾರೆ. ಆದರೆ ಅವರು ಸಕ್ರಿಯ ರಾಜಕೀಯ ಚಳವಳಿಗಳಿಂದ ದೂರ ಉಳಿಯುತ್ತಾರೆ. ಈ ಹಂತದಲ್ಲೆ ಸಾವರ್ಕರ್ ಉಗ್ರ ಹಿಂದುತ್ವದೆಡೆಗೆ ಹೊರಳಿದರು. ಸಾವರ್ಕರ್ ಅವರ ದೃಷ್ಟಿಕೋನವು ತೀವ್ರವಾಗಿ ಹಿಂದೂ ಸಂಸ್ಕೃತಿ ಮತ್ತು ರಾಷ್ಟ್ರೀಯತೆ ಬಗೆಗೆ ಚಿಂತಿಸುತ್ತಿತ್ತು. ರತ್ನಗಿರಿಯ ಸೆರೆಮನೆಯಲ್ಲಿರುವಾಗಲೇ ಸಾವರ್ಕರ್ ‘ಹಿಂದುತ್ವ; ಹು ಇಸ್ ಎ ಹಿಂದೂ’ ಎಂಬ ಕೃತಿಯನ್ನು ರಚಿಸಿ ಪ್ರಕಟಗೊಳಿಸಿದ್ದರು. ಈ ಕೃತಿಯ ಹಿಂದೂ ಸಮಾಜ, ರಾಜಕೀಯದ ಜಾಗೃತಿ ಮೂಡಿಸಲು ಒತ್ತುಕೊಟ್ಟಿದ್ದಾಗಿದೆ. ಈ ಹಿಂದೆ ಬರೆದ ‘ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ’ ಕೃತಿಯ ಮುಖ್ಯ ಉದ್ದೇಶ ಕ್ರಾಂತಿಕಾರಿ ಚಳವಳಿಗಳನ್ನು ಪ್ರೋತ್ಸಾಹಿಸುವ ಮೂಲಕ ಬ್ರಿಟಿಷರ ವಿರುದ್ಧ ಯುದ್ಧ ಸಾರಿವುದಾಗಿತ್ತು. ‘ಹಿಂದೂತ್ವ; ಹು ಇಸ್ ಎ ಹಿಂದೂ’ ಕೃತಿಯ ಮೂಲಕ ಸಾವರ್ಕರ್ ‘ಹಿಂದೂ ರಾಷ್ಟ್ರ’ ಮತ್ತು ‘ಅಖಂಡ ಭಾರತ’ ಎಂಬ ಪರಿಕಲ್ಪನೆಗಳನ್ನು ಬೆಳೆಸಿದರು. ಈ ಪರಿಕಲ್ಪನೆಗಳನ್ನು ‘ದಿ ವಾರ್ ಆಫ್ ಇಂಡಿಪೆಂಡೆನ್ಸ್’ನಲ್ಲೂ ಗುರುತಿಸಬಹುದಾಗಿದೆಯಾದರು ಅದು ಅಸ್ಪಷ್ಟವಾಗಿದೆ.

‘ಹಿಂದೂತ್ವ; ಹು ಇಸ್ ಎ ಹಿಂದೂ’ ಕೃತಿಯಲ್ಲಿ ಸಾವರ್ಕರ್ “ಹಿಂದೂ” ಪದವನ್ನು ವ್ಯಾಖ್ಯಾನಿಸುತ್ತ ಮೂರು ಅಂಶಗಳನ್ನು ಪ್ರತಿಪಾದಿಸುತ್ತಾರೆ. ಈ ಚೌಕಟ್ಟಿನೊಳಗೆ ಬರುವವರು ಮಾತ್ರ ಸಾವರ್ಕರ್ ದೃಷ್ಟಿಕೋನದಲ್ಲಿ ಹಿಂದೂ ಆಗಿದ್ದಾನೆ. ಮೊದಲನೆಯದಾಗಿ, ವ್ಯಕ್ತಿಯು ರಾಷ್ಟ್ರದ ಜೊತೆಗೆ ಭೌಗೋಳಿಕ ಬಂಧನ ಹೊಂದಿರಬೇಕು ಸಿಂದೂ ನದಿಯಿಂದ ಬ್ರಹ್ಮಪುತ್ರ ದವರೆಗೆ ಮತ್ತು ಹಿಮಾಲಯದಿಂದ ಕನ್ಯಾಕುಮಾರಿಯವರೆಗಿನ ಭೌಗೊಳಿಕ ಪ್ರದೇಶದ ಒಳಗಿನವರಾಗಿರಬೇಕು. ಎರಡನೆಯದಾಗಿ,ವ್ಯಕ್ತಿಯು ಹಿಂದೂ ರಕ್ತ ಸಂಬಂಧ ಕುಟುಂಬದವನಾಗಿರಬೇಕು. ಅಂದರೆ ಪೂರ್ವಿಕರು ಹಿಂದೂಗಳೇ ಆಗಿರಬೇಕು. ಸಂಸ್ಕೃತಿ ಮತ್ತು ನಾಗರಿಕತೆಗಳು ಹಿಂದೂತ್ವವನ್ನು ಒಳಗೊಂಡಿರಿತ್ತದೆ. ಭಾರತದಲ್ಲಿರುವ ಕ್ರಿಶ್ಚಿಯನ್ನರಾಗಲಿ, ಮುಸ್ಲಿಮರಾಗಲಿ ಸಾಂಸ್ಕೃತಿಕ ವಂಶಪಾರಂಪರ್ಯತೆಯ ದೃಷ್ಟಿಯಿಂದ ಹಿಂದೂಗಳಿಗಿಂತ ಕೀಳಾಗಿರುತ್ತಾರೆ. ಹಾಗಾಗಿ ಹಿಂದೂತ್ವವನ್ನು ಅನುಮೋದಿಸಲು ಸಾಧ್ಯವಿಲ್ಲ. ಕೊನೆಯದಾಗಿ ಹಬ್ಬಗಳು, ಘಟನೆಗಳು, ಐತಿಹಾಸಿಕ ಸಾಧನೆ ಹಾಗೂ ವಿಫಲತೆಗಳನ್ನು ಪ್ರತಿನಿಧಿಸುವ ಹಿಂದೂ ಸಂಸ್ಕೃತಿ ಮತ್ತು ನಾಗರೀಕತೆಯ ಬಗೆಗೆ ಹೆಮ್ಮೆ ಇರಬೇಕೆಂದು ಹೇಳುತ್ತಾರೆ. ಹಿಂದೂ ಎಂದರೆ ಯಾರಾಗಿರಬೇಕು ಎಂದು ಹೇಳುತ್ತಲೆ ಜನಾಂಗೀಯ ನೀತಿಯನ್ನು ಸಾವರ್ಕರ್ ಮುಂದಿಡುತ್ತಾರೆ

ಸಾವರ್ಕರ್ ಅವರು ತಮ್ಮ ಕೃತಿಗಳಲ್ಲಿ ಸ್ವರಾಜ್ಯ ಮತ್ತು ಸ್ವಧರ್ಮವನ್ನು ಪರ್ಯಾಯ ಪದಗಳಾಗಿ ಬಳಸುತ್ತಾರೆ. ಈ ಮೂಲಕ ಅವರು ರಾಜಕೀಯ ಮತ್ತು ಧರ್ಮವನ್ನು ಬೇರ್ಪಡಿಸುವುದಿಲ್ಲ. ೨೦ನೆಯ ಶತಮಾನದಿಂದೀಚೆಗೆ ಧರ್ಮ ಮತ್ತು ರಾಜಕೀಯವನ್ನು ಬೇರೆ ಬೇರೆಯಾಗಿ ನೋಡುವ ಪರಿಕಲ್ಪನೆ ಬೆಳೆದು ಬಂದಿದೆ. ಇಂದು ಸಹ ಅನೇಕ ರಾಷ್ಟ್ರಗಳು ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸುವುದಿಲ್ಲ. ಸಮಕಾಲೀನ ರಾಷ್ಟ್ರೀಯ ನಾಯಕ ಗಾಂಧಿ ಅವರು ಸಹ ರಾಜಕೀಯದೊಂದಿಗೆ ಧರ್ಮವನ್ನು ಬೆರೆಸುತ್ತಾರೆ. ಆದರೆ ಅದು ಸಾವರ್ಕರರ ದೃಷ್ಟಿಗಿಂತ ವಿಭಿನ್ನವಾಗಿದೆ. ಸಾವರ್ಕರ್ ಹಿಂದುತ್ವ ಎಂದರೇನು? ಯಾರು ಹಿಂದೂ ಎಂಬ ಪ್ರಶ್ನೆಗಳ ಮೂಲಕ ಹಿಂದೂಯಿಸಂ ಎನ್ನುವುದು ಧಾರ್ಮಿಕ ಪದ್ಧತಿಮತ್ತು ಹಿಂದುತ್ವ ಎನ್ನುವುದು ರಾಜಕೀಯ ಸಿದ್ಧಾಂತವೆಂದು ವಿಭಾಗಿಸುತ್ತಾರೆ. ಸಾವರ್ಕರ್ ಈ ಮೂಲಭೂತ ಪ್ರಶ್ನೆಯನ್ನೆ ರಾಜಕೀಯವನ್ನಾಗಿಸಿ ಭೌಗೋಲಿಕ ಪಾವಿತ್ರತೆಯ ಸಿದ್ಧಾಂತವನ್ನು ಮಂಡಿಸುತ್ತಾರೆ. ಸಾವರ್ಕರ್ ಧರ್ಮದ ಬಾಹ್ಯಕ್ಕೆ ಹೆಚ್ಚಿನ ಒತ್ತು ನೀಡಿದರೆ, ಗಾಂಧಿ ಆಂತರ್ಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಗಾಂಧಿ ಹಿಂದೂ ಧರ್ಮವನ್ನು ಅಹಿಂಸೆ, ಏಕತೆ, ದೇವರ ಅಸ್ತಿತ್ವ, ಪ್ರೀತಿ ಸತ್ಯ ಎಂದು ಮರುವ್ಯಾಖ್ಯಾನಿಸುತ್ತಾರೆ. ಗಾಂಧಿ ಧಾರ್ಮಿಕ ನೀತಿಶಾಸ್ತ್ರವನ್ನು ರಾಜಕೀಯದ ಚೌಕಟ್ಟಿಗೆ ತರುತ್ತಾರೆ. ಸಾವರ್ಕರ್ ಇದಕ್ಕೆ ವಿರುದ್ಧವಾಗಿ ‘ಜನ್ಮ ಭೂಮಿ’ಮತ್ತು ‘ಪುಣ್ಯ ಭೂಮಿ’ಎಂಬ ಪರಿಕಲ್ಪನೆಗಳನ್ನು ಬಳಸುತ್ತಾರೆ. ಇದರ ಮೂಲಕ ವಿಭಿನ್ನ ಧರ್ಮಗಳ ನಡುವೆ ಉಗ್ರ ಧಾರ್ಮಿಕತೆ ನೀತಿಯನ್ನು ಬೆಳಸುತ್ತಾರೆ. ಅವರ ಇನ್ನೊಬ್ಬ ಸಮಕಾಲೀನ ವ್ಯಕ್ತಿ ಮಹಮದ್ ಆಲಿ ಜಿನ್ನ ಅವರು ಕೂಡ ಧರ್ಮವನ್ನು ರಾಜಕೀಯ ಅಸ್ತ್ರವಾಗಿ ಬಳಸಿದರು. ಇವರೆಲ್ಲರೂ ಧರ್ಮವನ್ನು ರಾಜಕೀಯದಿಂದ ಭಿನ್ನವಾಗಿ ನೋಡುವುದಿಲ್ಲ. ಸಾವರ್ಕರ್ ಧರ್ಮವನ್ನು ರಾಜಕೀಯ ಸಿದ್ಧಾಂತವಾಗಿ, ಆಡಳಿತದ ಮಾರ್ಗದರ್ಶಕವಾಗಿ ಪರಿಭಾವಿಸಿದ್ದರು. ಜಿನ್ನಾ ಕಾಂಗ್ರೆಸ್‌ನಲ್ಲೆ ಇದ್ದವರು. ಗಾಂಧಿ ಆಗಮನದ ನಂತರ ಮುಸ್ಲಿಮ್ ಲೀಗನೊಡನೆ ಗುರುತಿಸಿಕೊಳ್ಳುತ್ತಾರೆ. ನಂತರದಲ್ಲಿ ಭಾರತದ ವಿಭಜನೆಗೂ ಪ್ರಮುಖ ಒತ್ತಡವನ್ನು ಸೃಷ್ಟಿಸುತ್ತಾರೆ. ಗಾಂಧಿ, ಜಿನ್ನ, ಸಾವರ್ಕರ್ ಇವರುಗಳ ದೃಷ್ಟಿಕೋನದಲ್ಲಿ ಧರ್ಮ ಎಂದರೇನು ಎಂಬುದರ ಮರು ವ್ಯಾಖ್ಯಾನದ ಅಗತ್ಯವಿದೆ.

ಸಾವರ್ಕರ್ ಅವರ ಮತ್ತೊಂದು ಕೃತಿ ‘ಹಿಂದೂ ಪದ್ ಪದಶಾಹಿ’ ಹಿಂದೂ ರಾಷ್ಟ್ರೀಯತೆ ಮತ್ತು ಭಾರತದ ರಾಷ್ಟ್ರೀಯತೆಯನ್ನು ಬೇರೆ ಬೇರೆಯಾಗಿ ವ್ಯಾಖ್ಯಾನಿಸುತ್ತದೆ. ಈ ಮೂಲಕ ಭಾರತದವರೆಲ್ಲ ಹಿಂದೂ ರಾಷ್ಟ್ರೀಯತಯನ್ನು ಹೊಂದಲು ಸಾಧ್ಯವಿಲ್ಲವೆಂದು ತಿಳಿಸುತ್ತದೆ. ಮರಾಠ ಸಾಮ್ರಾಜ್ಯದ ಯಶಸ್ಸನ್ನು ವಿವರಿಸುತ್ತ, ಅದು ಹಿಂದೂ ಧರ್ಮದ ಯಶಸ್ಸೆಂದು ಬಿಂಬಿಸುತ್ತಾರೆ. ಸಾವರ್ಕರ್ ಹಿಂದುತ್ವದ ಭವ್ಯತೆಯನ್ನು ತೋರಿಸಲು ಮರಾಠ ಇತಿಹಾಸವನ್ನು ಹಿಂದೂ ಪದ್ ಪದಶಾಹಿ ಕೃತಿಯಲ್ಲಿ ಬಳಸಿಕೊಂಡರು. ಮರಾಠ ಸಾಮ್ರಾಜ್ಯಸಂಪೂರ್ಣ ಭಾರತವನ್ನು ಪ್ರತಿನಿಧಿಸುವಂತಿಲ್ಲ ಎಂಬ ಅರಿವು ಸಹ ಅವರಿಗಿತ್ತು. ಆದರೆ ಸಾವರ್ಕರ್ ಪ್ರಕಾರ “ಹಿಂದೂಗಳು ಪ್ರತ್ಯೇಕಿಸಲಾಗದಂತ ಅಸ್ತಿತ್ವವನ್ನು ಹೊಂದಿದ್ದಾರೆ. ಹಾಗಾಗಿ ಯಾವುದೇ ಭಾಗದ ಸಾಧನೆಯನ್ನು ಸಂಪೂರ್ಣ ಹಿಂದೂ ಜನಾಂಗಕ್ಕೆ ಆರೋಪಿಸಬಹುದಾಗಿತ್ತು.” ಸಾವರ್ಕರ್ “ಹಿಂದೂಯಿಸಂ ಮತ್ತು ಹಿಂದುತ್ವದ ನಡುವಿನ ಭೇದವನ್ನು ಅರಿಯಲು ಸಾಧ್ಯವಾಗದ, ತಪ್ಪು ಕಲ್ಪನೆ ಮತ್ತು ಪರಸ್ಪರ ಸಂದೇಹದ ಬೆಳವಣಿಗೆಗೆ ಕಾರಣವಾದರು” ಎಂದು ಟಿ. ಸಿ. ಎ. ರಾಘವನ್ ಹೇಳುತ್ತಾರೆ.

೧೯ನೆಯ ಅಖಿಲ ಭಾರತ ಹಿಂದೂ ಮಹಾಸಭೆಯಲ್ಲಿ ಸಾವರ್ಕರ್ “ಬ್ರಿಟಿಷರು ಭಾರತ ಬಿಟ್ಟುಹೋದ ನಂತರ ಮುಸ್ಲಿಮರು ಹಿಂದೂ ರಾಷ್ಟ್ರೀಯತೆಗೆ ಮತ್ತು ಹಿಂದೂ ರಾಷ್ಟ್ರಕ್ಕೆ ಗಂಡಾಂತರಕಾರಿಯಾಗುವ ಸಾಧ್ಯತೆಯಿದೆ. ಮುಸ್ಲಿಮರು ಭಾರತದಲ್ಲಿ ಮುಸ್ಲಿಮ್ ಆಳ್ವಿಕೆ ಮುಂದುವರಿಸಲು ಬೇಕಾದಂತಹ ತಂತ್ರಗಳನ್ನು ರೂಪಿಸಿಕೊಳ್ಳುತ್ತಾರೆ” ಎಂದು ಹೇಳುತ್ತಾರೆ. ಇದು ಬಹುತೇಕ ಹಿಂದೂ ಮಹಾಸಭಾದ ಅಧಿವೇಶನಗಳಲ್ಲಿ ಕಂಡು ಬಂದ ಪ್ರಮುಖ ತತ್ವವಾಗಿದೆ. ಸಾವರ್ಕರ್ ಅವರು ೧೯೨೨ರಲ್ಲಿ ಸೆರೆಮನೆಯಿಂದ ಬಿಡುಗಡೆ ಹೊಂದಿದ ಮೇಲೆ ಹಿಂದೂ ಮಹಾಸಭಾ ಸೇರಿದರು. ಇದು ಸಮಕಲೀನ ಸ್ವತಂತ್ರ ಹೋರಾಟದೊಂದಿಗೆ ಗುರುತಿಸಿಕೊಂಡಿರಲಿಲ್ಲ. ಆದ್ದರಿಂದ ಬ್ರಿಟಿಷ್ ಸರ್ಕಾರ ಸಾವರ್ಕರರ ಕಾರ್ಯ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ ಎಂಬುದು ಗಮನಿಸಬೇಕಾದ ಪ್ರಮುಖ ಅಂಶವಾಗಿದೆ.

ಹಿಂದೂ ಮಹಾಸಭೆ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳ ಪ್ರಮುಖ ಉದ್ದೇಶದಲ್ಲಿ ಸಾಮ್ಯತೆ ಇರುವಂತೆ ಕಂಡುಬರುತ್ತದೆ. ಅಸಲಿಗೆ ಈ ಸಂಘಟನೆಗಳು ಭಿನ್ನ ನೆಲಗಟ್ಟಿನ ಮೇಲೆ ನಿಂತಿದುದಾಗಿದೆ. ಆದರೆ ಇವುಗಳ ಕಾರ್ಯಚಟುವಟಿಕೆಯ ಉದ್ದೇಶದಲ್ಲಿ ಸಾಮ್ಯತೆ ಕಂಡುಬರುತ್ತದೆ. ಗುರಿಸಾಧನೆಗೆ ಹಿಂಸಾಚಾರ ಅವಶ್ಯಕವೆಂದು ಆರ್.ಎಸ್.ಎಸ್. ಮತ್ತು ಹಿಂದೂ ಮಹಾಸಭೆಗಳೆರಡು ಒಪ್ಪಿಕೊಂಡಿದ್ದವು. ಮತ್ತೊಂದು ಪ್ರಮುಖ ಅಂಶವೆಂದರೆ ಈ ಸಂಘಟನೆಗಳೆರಡು ಆರಂಭದಲ್ಲಿ ಮಹಾರಾಷ್ಟ್ರದಲ್ಲೆ ಬೆಳೆದುಬಂದುದಾಗಿದೆ ಆರ್.ಎಸ್.ಎಸ್. ಫ್ಯಾಸಿಸಂ ಮಾದರಿಯ ರಹಸ್ಯ ಸಂಘಟನೆ ಮತ್ತು ಹಿಂಸಾಚಾರಕ್ಕೆ ಒತ್ತು ನೀಡಿತ್ತು. ಹಿಂದೂ ಮಹಾಸಭಾವು ಜರ್ಮನಿಯ ನಾಜಿಸ್ಟ್ ಮಾದರಿಯ ತಾತ್ವಿಕತೆಯನ್ನು ಒಪ್ಪಿಕೊಂಡಿತ್ತು. ಹಿಂದೂ ಮಹಾಸಭಾ ಮತ್ತು ಇತರ ಎಲ್ಲ ಕೋಮುವಾದಿ ಸಂಘಟನೆಗಳು ೨೦ನೆಯ ಶತಮಾನದ ಮತ್ತು ಸಾಮಾಜಿಕ ಅಂಶಗಳಿಂದ ಪ್ರೇರೇಪಿತವಾಗಿತ್ತು. ಭಾರತದಲ್ಲಿ ೧೯೩೦ರಿಂದ ಎರಡನೆ ಮಹಾಯುದ್ಧದ ಆರಂಭದವರೆಗೆ ಸಾವರ್ಕರ್ ಕೋಮುವಾದಿ ರಾಜಕೀಯದಲ್ಲಿ ಪ್ರಬಲವಾಗಿ ಕಂಡುಬರುತ್ತಾರೆ. ಸಾವರ್ಕ ಅವರು ೧೯೪೨ರವರೆಗೂ ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ಸಂಘಟನೆಯನ್ನು ಮುನ್ನಡೆಸುತ್ತಾರೆ. ಈ ಸಂದರ್ಭವು ಭಾರತದ ರಾಜಕೀಯದಲ್ಲಷ್ಟೇ ಅಲ್ಲದೆ ಅಂತರ್ ರಾಷ್ಟ್ರೀಯ ಮಟ್ಟದಲ್ಲೂ ಅತ್ಯಂತ ಸೂಕ್ಷ್ಮವಾದ ಸಂದರ್ಭವಾಗಿತ್ತು. ಬಹುತೇಕ ವಸಾಹತು ರಾಷ್ಟ್ರಗಳಲ್ಲಿ ಸ್ವತಂತ್ರ ಹೋರಾಟ ತೀವ್ರತೆಯನ್ನು ಮುಟ್ಟಿರುತ್ತದೆ. ವಸಾಹತುಶಾಹಿ ರಾಷ್ಟ್ರಗಳು ಎರಡನೆ ಮಹಾಯುದ್ಧದ ಆರಂಭದ ಆತಂಕವನ್ನು ಎದುರಿಸುತ್ತಿರುತ್ತವೆ.

ಹಿಂದೂ ಮಿಲಿಟೆಂಟ್ ಸಂಘಟನೆಗಳಿಗೆ ಹಿಂದೂ ಮಹಾಸಭಾ ಮತ್ತು ಆರ್.ಎಸ್.ಎಸ್. ಬೆಂಬಲ ನೀಡುತ್ತಿದ್ದವು. ಆ ಸಂದರ್ಭದ ಎಲ್ಲ ಸಾರ್ವಜನಿಕ ಭಾಷನಗಳಲ್ಲಿ ಸಾವರ್ಕರ್ ಹಿಂದೂ ಮುಸ್ಲಿಮ್ ಸಂಬಂಧ ಮತ್ತು ಅಂತರ್ ರಾಷ್ಟ್ರೀಯ ಪರಿಸ್ಥಿತಿ ಕುರಿತು ಮಾತನಾಡುತ್ತಿದ್ದರು. ಈ ಕಾಲಘಟ್ಟದಲ್ಲೆ ಉಗ್ರ ಹಿಂದೂತ್ವವನ್ನು ಸಮರ್ಥಿಸುತ್ತ ತೀವ್ರವಾಗಿ ಮುಸ್ಲಿಮ್ ವಿರೋಧಿ ನೀತಿಯನ್ನು ಸಾವರ್ಕರ್ ತಳೆಯುತ್ತಾರೆ. ಇದನ್ನು ಸಮರ್ಥಿಸಿಕೊಳ್ಳಲು ನಿರಂತರವಾಗಿ ಜರ್ಮನಿಯಲ್ಲಿನ ನಾಜಿ ಮತ್ತು ಯಹೂದಿಗಳ ನಡುವಿನ ಸಂಬಂದವನ್ನು ಉದಾಹರಣೆಯಾಗಿ ಬಳಸಿಕೊಳ್ಳುತ್ತಾರೆ. ಅಂತಹದೆ ನಿಲುವನ್ನು ಭಾರತ ಸರ್ಕಾರವು ವಿದೇಶಿ ಧರ್ಮಿಯರ ವಿರುದ್ಧ ತಳೆಯ ಬೇಕಾಗಿದೆಯೆಂದು ಅವರು ಪ್ರತಿಪಾದಿಸುತ್ತಾರೆ. ಆ ಕಾಲದ ಆರ್.ಎಸ್.ಎಸ್.ನ ಮುಖ್ಯಸ್ಥರಾಗಿದ್ದ ಗೋಳ್ವಲ್ಕರ್ ಅವರ ನಿಲುವು ಇಂತಹುದೆ ಆಗಿರುತ್ತದೆ. ಹಿಂದೂ ಮಹಾಸಭಾ, ಆರ್.ಎಸ್.ಎಸ್, ಮುಸ್ಲಿಮ್ ಲೀಗ್ ಮೊದಲಾದ ಎಲ್ಲ ಕೋಮುವಾದಿ ಸಂಘಟನೆಗಳು ಸುಮಾರು ೧೯೩೭ರ ವರೆಗೆ ಉದಾರ ಕೋಮುವಾದಿ ಧೋರಣೆಗಳಿಗೆ ಅವರೆಲ್ಲ ಕಟ್ಟುಬೀಳುತ್ತಾರೆ. ಸಾವರ್ಕರ್ ಅವರು ಹಿಂದೂ ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತಿದ್ದರೂ ಹಿಂದೂ ಮುಸ್ಲಿಮ್ ಏಕತೆ ಅಗತ್ಯವೆಂದು ೧೯೩೫ರವರೆಗೆ ಭಾವಿಸಿದ್ದು ಕಂಡುಬರುತ್ತದೆ.

ಅಂತರ್ ರಾಷ್ಟ್ರೀಯ ಮಟ್ಟದಲ್ಲಿದ್ದ ಫ್ಯಾಸಿಸಂ ಮತ್ತು ನಾಜಿಸಂಗಳಿಂದ ಹಿಂದೂ ಕೋಮುವಾದಿ ಸಂಘಟನೆಗಳು ಸ್ಫೂರ್ತಿ ಪಡೆದಿರುತ್ತಾರೆ. ಮುಂದೆ ಭಯ ಮತ್ತು ದ್ವೇಷದಿಂದ ಕೂಡಿದ ವಾತಾವರಣ ಹಿಂಸಾ ರೂಪದಲ್ಲಿ ಪ್ರಕಟಗೊಳ್ಳುತ್ತದೆ. ಆರಂಭದಿಂದಲೂ ಬ್ರಿಟಿಷ ಸರ್ಕಾರವು ಕೋಮುವಾರು ವಿಷಯದಲ್ಲಿ ಧೃಡ ನಿಲುವನ್ನು ತಳೆಯುವುದಿಲ್ಲ, ಪರೋಕ್ಷವಾಗಿ ಮುಸ್ಲಿಮ್ ಕೋಮುವಾದಿಗಳ ಬೆಳವಣಿಗೆಗೆ ಸಹಕರಿಸುತ್ತದೆ. ಇದನ್ನು ವಿರೋಧಿಸುತ್ತಲೆ ಹಿಂದೂ ಕೋಮುವಾದ ಬೆಳೆಯಲು ಅದು ಅವಕಾಶ ಮಾಡಿಕೊಡುತ್ತದೆ. ಈ ಹಿನ್ನಲೆಯಲ್ಲೆ ದೇಶದಾದ್ಯಂತ ಆ ಸಂದರ್ಭದಲ್ಲಿ ಕೋಮುಗಲಭೆಗಳು ಹೆಚ್ಚಾಗಿದ್ದ ಕಂಡುಬರುತ್ತದೆ.

ಸಾವರ್ಕರ್ ಅವರು ‘ಅಖಂಡ ಹಿಂದೂ ರಾಷ್ಟ್ರದ’ ದ ಪರಿಕಲ್ಪನೆಯನ್ನು ಕಟ್ಟಿಕೊಡುತ್ತಲೆ ದ್ವಿರಾಷ್ಟ್ರ ರಚನೆಗೆ ಅವಕಾಶ ಕಲ್ಪಿಸಿ ಕೊಡುತ್ತಾರೆ. ಇದು ೧೯೩೭ರ ನಂತರ ಸಾವರ್ಕರ್ ಅವರ ನೀತಿಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ೧೯೩೭ರ ನಂತರ ಜಮೀನ್ದಾರರು, ಭೂಮಾಲೀಕರು, ಜಾಗೀರದಾರರು, ಲೇವಾದೇವಿಗಾರರು ಮತ್ತು ವ್ಯಾಪಾರಿಗಳು ರಾಷ್ಟ್ರಮಟ್ಟದ ಪಕ್ಷಗಳಾದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ನಿಲುವಿನಿಂದ ಹೆದರಿದ್ದರು. ಪರಿಣಾಮವಾಗಿ, ಈ ವರ್ಗದವರು ಹಿಂದೂ ಮತ್ತು ಮುಸ್ಲಿಮ್ ಕೋಮುವಾದಿ ಸಂಘಟನೆಗಳನ್ನು ಅಪ್ಪಿಕೊಳ್ಳುತ್ತಾರೆ. ಸಾವರ್ಕರ್ ಅವರು ಭೂ ಮಾಲೀಕರು ಮತ್ತು ಗೇಣಿದಾರರ ನಡುವಿನ ಸಂಘರ್ಷವನ್ನು ವಿರೋಧಿಸುತ್ತಾ ಭೂ ಮಾಲೀಕರ ಪರ ನಿಲುವು ತಳೆಯುತ್ತಾರೆ. ಇದು ಹಿಂದೂ ಜಮೀನ್ದಾರರು, ಮತ್ತು ಜಾಗೀರದಾರರು, ವ್ಯಾಪಾರಿಗಳು ಹಿಂದೂ ಮಹಾಸಭಾದ ಕಡೆಗೆ ಸೆಳೆಯಲ್ಪಡಲು ಪ್ರಮುಖ ಅಂಶವಾಗುತ್ತದೆ. ೧೯೪೫ರ ನಂತರ ದೇಶದಾದ್ಯಂತ ಕೋಮುಗಲಭೆಗಳು ತೀವ್ರವಾಗಿ ಹೆಚ್ಚುತ್ತದೆ. ಈ ಸಂದರ್ಭದಲ್ಲಿ ಜಿನ್ನ ಅವರು ದ್ವಿರಾಷ್ಟ್ರ ರಚನೆಗೆ ಪಟ್ಟು ಹಿಡಿಯುತ್ತಾರೆ. ಹಾಗಾಗಿ ೧೯೪೭ರಲ್ಲಿ ಸ್ವಾತಂತ್ರ್ಯವನ್ನು ದೇಶ ವಿಭಜನೆಯೊಂದಿಗೆ ಪಡೆದುಕೊಳ್ಳುವಂತಾಗುತ್ತದೆ.

ಗಾಂಧಿ ಮತ್ತು ಸಾವರ್ಕರ್ ಇಬ್ಬರೂ ಧರ್ಮ ಮತ್ತು ರಾಜಕೀಯವನ್ನು ಬೇರ್ಪಡಿಸಿದವರಲ್ಲ. ಗಾಂಧಿ ಧರ್ಮದ ಆಂತರ್ಯಕ್ಕೆ ಒತ್ತು ನೀಡಿದ್ದಾರೆ. ರಾಜಕೀಯ ಧಾರ್ಮಿಕ ನೀತಿಯನ್ನು ಆರೋಪಿಸುತ್ತಾರೆ. ಕ್ರಾಂತಿಕಾರಿ ಭಯೋತ್ಪಾದನ ಚಟುವಟಿಕೆಗಳಲ್ಲಿ ನಂಬಿಕೆ ಹೊಂದಿದ್ದ ಸಾವರ್ಕ್‌ಗೆ ಗಾಂಧಿಯ ಅಹಿಂಸಾ ಮಾರ್ಗದಲ್ಲಿ ನಂಬಿಕೆಯಿರಲಿಲ್ಲ. ಉಗ್ರ ಹಿಂದುತ್ವ ಪ್ರತಿಪಾದಿಸುತ್ತ ಅಖಂಡ ಭಾರತ ಪರಿಕಲ್ಪನೆಯನ್ನು ಸಾವರ್ಕರ್ ಹೊಂದಿದ್ದರು. ಗಾಂಧಿ ಅವರು ‘ಸರ್ವಧರ್ಮ ಸಂಭವ’ ಪರಿಕಲ್ಪನೆಗೆ ಒತ್ತು ನೀಡಿದ್ದರು. ಸಹನೆಯ ಆಧಾರದ ಮೇಲೆ ವಿಭಿನ್ನ ಕೊಮಿನ ಜನರು ಶಾಂತಿ ಮತ್ತು ಸೌಹಾರ್ದದಿಂದ ಬದುಕಲು ಸಾಧ್ಯ ಎನ್ನುತ್ತಿದ್ದರು. ವಿಬಿನ್ನ ಸೈದ್ಧಾಂತಿಕ ನೆಲೆಯನ್ನು ಹೊಂದಿದ್ದ ಸಾವರ್ಕರ್ ಅವರು ಗಾಂಧಿ ಮತ್ತು ಕಾಂಗ್ರೆಸ್‌ನ ತತ್ವಗಳನ್ನು ಟೀಕಿಸುತ್ತಿದ್ದರು. ಅಹಿಂಸೆಯ ಗುಣವೆ ಭಾರತ ದಾಸ್ಯಕ್ಕೆ ಒಳಗಾಗಲು ಕಾರಣವೆಂದು ಸಾವರ್ಕರ್ ಅವರ ನಂಬಿಕೆಯಾಯಿತ್ತು. ಒಬ್ಬ ನಾಯಕ, ಒಂದು ರಾಷ್ಟ್ರ, ಒಂದು ಧರ್ಮದಲ್ಲಿ ನಂಬಿಕೆಯಿದ್ದ ಸಾವರ್ಕರ್ ಅವರು ಪ್ರಜಾಪ್ರಬುತ್ವ ಮಾದರಿಯ ಚಳವಳಿಗಳನ್ನು ಖಂಡಿಸುತ್ತಿದ್ದರು. ಗಾಂಧಿ ಅವರು ಹಿಂದೂ ಸಮಾಜವನ್ನು ದುರ್ಬಲಗೊಳಿಸಿ ಮುಸ್ಲಿಮರಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದರಿಂದಲೆ ಭಾರತದ ವಿಭಜನೆಯಾಯಿತು ಎಂದು ಸಾರ್ವಜನಿಕ ಭಾಷಣಗಳಲ್ಲಿ ಸಾರ್ವಕರ್ ಅವರು ನಿಂದಿಸುತ್ತಿದ್ದರು. ಈ ಸಂದರ್ಭದಲ್ಲೆ ಉಗ್ರ ಹಿಂದುತ್ವದ ಪ್ರತಿಪಾದಕನಾಗಿದ್ದ ನಾಥುರಾಮ್ ಗೋಡ್ಸೇ ೧೯೪೮ ಜನವರಿಯಲ್ಲಿ ಗಾಂಧಿಯ ಹತ್ಯೆ ಮಾಡಿದನು. ನಾಥುರಾಮ್ ಗೋಡ್ಸೆ ಹಾಗೂ ಆತನ ಆಪ್ತವಲಯದವರನ್ನು ಪೋಲಿಸರು ಬಂದಿಸಿದಾಗ ಅವರಲ್ಲಿ ಸಾವರ್ಕರರನ್ನು ಅನುಮಾನಸ್ಪದ ವ್ಯಕ್ತಿಯೆಂದು ಬಂಧಿಸಲಾಗಿತ್ತು. ಸಾವರ್ಕರ್ ಗಾಂಧಿಯ ಹತ್ಯಯ ಪೂರ್ವದಲ್ಲಿ ಸಾರ್ವಜನಿಕ ವಲಯದಲ್ಲಿ ಗಾಂಧಿ ವಿರುದ್ಧ ಪ್ರಚೋದನಾತ್ಮಕ ಭಾಷಣಗಳನ್ನು ಮಾಡುತ್ತಿದ್ದದರಿಂದ ಹತ್ಯಯ ಸಂಚಿನಲ್ಲಿ ಭಾಗಿಯಾಗಿರಬಹುದೆಂದು ಸರ್ಕಾರ ಭಾವಿಸಿತ್ತು. ಸಾಕ್ಷ್ಯಧಾರಗಳ ಕೊರತೆಯಿಂದ ಸಾವರ್ಕರ್ ಅವರನ್ನು ಬಿಡುಗಡೆ ಮಾಡಲಾಯಿತು. ಗಾಂಧೀಜಿ ಅವರ ಹತ್ಯಯ ನಂತರ ಭಾರತ ಸರ್ಕಾರ ಎಲ್ಲಾ ರೀತಿಯ ಕೊಮುವಾದಿ ಸಂಘಟನೆಗಳನ್ನು ರಾಜಕೀಯ ಪಕ್ಷಗಳಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸಿತ್ತು . ಅಹಿಂಸೆ ಪ್ರತಿಪಾದಕ ಗಾಂಧಿಯ ಕೊಲೆ ಜನರ ಮನಸ್ಸಿನಲ್ಲಿ ಹಿಂದೂ ಮಹಾಸಭೆ ವಿರೋಧಿ ಭಾವನೆಯನ್ನು ಬೆಳಸಿತ್ತು. ಗಾಂಧಿಯನ್ನು ಕೊಂದ ವ್ಯಕ್ತಿಯ ಜೊತೆಗೆ ಹಿಂದೂ ಮಹಾಸಭಾ ಸಂಪರ್ಕ ಪಡೆದಿತ್ತು ಎನ್ನುವ ಕಾರಣದಿಂದ ಹಿಂದೂ ಮಹಾಸಭಾವು ಭಾರತದ ರಾಜಕಾರಣದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿತು.

ಗಾಂಧಿಯ ಕೊಲೆಯ ನಂತರ ಸಾವರ್ಕರ್ ಸಾರ್ವಜನಿಕ ವಲಯದಿಂದ ಹಿಂದೆ ಸರಿಯುವಂತಾಗುತ್ತದೆ. ಉಗ್ರವಾದಿ ಕ್ರಾಂತಿಕಾರಿಯಾಗಿ ಸ್ವತಂತ್ರ ಹೋರಾಟದಲ್ಲಿ ಪಾಲ್ಗೊಂಡ ಸಾವರ್ಕರ್ ಅಂಡಮಾನ್‌ ಸೆರೆಮನೆವಾಸದ ನಂತರ ಉಗ್ರ ಹಿಂದುತ್ವದೆಡೆಗೆ ಆಕರ್ಷಿತರಾದರು. ಮುಂದೆ ಉಗ್ರ ಹಿಂದುತ್ವದ ಪ್ರತಿಪಾದಕರಾದ ಸಾವರ್ಕರ್‌ ಮತ್ತೊಬ್ಬ ಸ್ವತಂತ್ರ ಹೋರಾಟದ ನಾಯಕ ಗಾಂಧಿ ಕೊನೆಯ ಆರೋಪ ಎದುರಿಸಿದ್ದು ಭಾರತದ ಸ್ವತಂತ್ರ ಹೋರಾಟದಲ್ಲಿನ ಸಂಕೀರ್ಣ ಘಟನೆಯಾಗಿದೆ.

ಟಿಪ್ಪಣಿ

ಈ ಲೇಖನವನ್ನು ತಯಾರಿಸಲು ಸೂಕ್ತ ಮಾರ್ಗದರ್ಶನವನ್ನು ನೀಡಿದ ನನ್ನ ಪಿಎಚ್.ಡಿ ಅಧ್ಯಯನಕ್ಕೆ ಮಾರ್ಗದರ್ಶಕರಾಗಿರುವ ಡಾ. ವಿಜಯ್‌ ಪೂಣಚ್ಚ ಅವರಿಗೆ ನಾನು ಆಭಾರಿಯಾಗಿದ್ದೇನೆ.* ಪ್ರಸ್ತುತ ಕೃತಿಯ ೧ ರಿಂದ ೧೪ನೇ ಪುಟಗಳಲ್ಲಿ ೧೮೫೭ರ ಹೋರಾಟಕ್ಕೆ ಸಂಬಂಧಿಸಿದಂತಿರುವ ವಿವರಗಳನ್ನು ಚರ್ಚಿಸಲಾಗಿದೆ. -ಸರಿ.