೧೯೪೨-೪೭ರ ಮಧ್ಯೆ ನಮ್ಮ ಸ್ವಾಂತತ್ರ್ಯ ಸಂಗ್ರಾಮವು ಕಂಡ ಕುತೂಹಲಕಾರಿ ಸಂಗತಿಯೆಂದರೆ ಇಲ್ಲಿನ ರೈತ ಸಂಘಟನೆಗಳು. ಇವುಗಳಲ್ಲಿ ಕೆಲವಕ್ಕೆ ಮಾತ್ರ ಮೊದಲು ರಾಜಕೀಯ ಸ್ವರೂಪವಿದ್ದರೂ ಸ್ವಾತಂತ್ರ್ಯಾನಂತರದಲ್ಲಿ ಅವುಗಳೆಲ್ಲ ಪ್ರಮುಖ ರಾಜಕೀಯ ಪಕ್ಷಗಳೊಡನೆ ಸೇರಿ ಅವುಗಳ ಉಪವಿಭಾಗಗಳಂತಾದವು. ಇಂತಹ ಕೆಲವು ಸಂಘಟನೆಗಳು ತಮ್ಮ ತಾತ್ವಿಕ ನಿಲುವನ್ನು ಸಾಮಾನ್ಯವಾಗಿ ಉದಾರವಾದೀ ರಾಷ್ಟ್ರೀಯ ಕಾಂಗ್ರೆಸಿನಿಂದ ಅಥವಾ ಅಹಿಂಸಾತ್ಮಕ ಪ್ರತಿಭಟನೆಯ ಗಾಂಧೀ ನೀತಿಯಿಂದ ಪಡೆದುಕೊಂಡಿದ್ದವು. ಇತರ ಕೆಲವು ರೈತ ಸಂಘಟನೆಗಳು ಭಾರತದಲ್ಲಿ ಆಗ ತಾನೆ ಬೆಳೆಯುತ್ತಿದ್ದ ಎಡಪಕ್ಷಗಳ ಹಿನ್ನೆಲೆಯಿಂದ ಬಂದವುಗಳಾದುದರಿಂದ ತಮ್ಮ ಸಿದ್ಧಾಂತ ಹಾಗೂ ಕಾರ್ಯಕ್ರಮಗಳಿಗೆ ಸಹಜವಾಗಿಯೇ ಮಾರ್ಕ್ಸ್‌ ಸಮಾಜವಾದದ ಕಡೆಗೆ ಅಥವಾ ನಿರ್ದಿಷ್ಟವಾದ ಬೋಲ್ಷೆವಿಕ್‌ ಮಾದರಿಗಳ ಕಡೆಗೆ ನೋಡುತ್ತಿದ್ದವು. ೧೯೨೦ರ ದಶಕದ ಸಮಾಜವಾದದ ಕಡೆಗೆ ಅಥವಾ ನಿರ್ದಿಷ್ಟವಾಗಿ ಬೋಲ್ಷೆವಿಕ್ ಮಾದರಿಗಳ ಕಡೆಗೆ ನೋಡುತ್ತಿದ್ದವು. ೧೯೨೦ರ ದಶಕದ ಮಧ್ಯಭಾಗದಿಂದ ೧೯೫೦ರ ತನಕ ಮೊದಲ ಗುಂಪು ಕೇವಲ ಅಸ್ತಿತ್ವದಲ್ಲಿತ್ತಷ್ಟೇ ವಿನಾ ಮಾರ್ಕ್ಸ್‌ವಾದಿ ಒಲವಿನ ಎರಡನೆಯ ಗುಂಪೇ ಹೆಚ್ಚು ಕ್ರಿಯಾಶೀಲವಾಗಿತ್ತು. ಇಂಡಿಯಾದ ಕಮ್ಯುನಿಸ್ಟ್ ಅಥವಾ ಸಮಾಜವಾದೀ ಚಳವಳಿಗಳ ಕುರಿತಾಗಿ ಬಂದ ಅನೇಕ ರಾಜಕೀಯ ಚಾರಿತ್ರಿಕ ಅಧ್ಯಯನಗಳು ಕೂಡ ಈ ರೈತ ಸಂಘಟನೆಗಳ ಬಗ್ಗೆ ಅಷ್ಟೇನೂ ಬರೆದಿರಲಿಲ್ಲ. ೧೯೨೦ರ ದಶಕದಲ್ಲಿ ರೈತ ಕಾರ್ಮಿಕ ಪಕ್ಷಗಳೂ, ೧೯೩೦-೧೯೪೦ರ ದಶಕದಲ್ಲಿ ವಿವಿಧ ರೀತಿಯ ಕಿಸಾನ್ ಸಭಾಗಳೂ ಭಾರತದಾದ್ಯಂತ ಸಂಘಟಿಸಲ್ಪಟ್ಟಿದ್ದವು. ಇವುಗಳಿಗಿರುವ ರೈತ ಸಂಘಟನೆಯ ಗುಣಲಕ್ಷಣಗಳು, ಅವುಗಳು ರೈತರನ್ನು ಸಂಘಟಿಸುವಲ್ಲಿ ವಹಿಸಿದ ಪಾತ್ರ ಮತ್ತು ರೈತ ಚಳುವಳಿಗಳಿಗೆ ಅವು ಕೊಟ್ಟ ಕೊಡುಗೆಗಳು. ಇವುಗಳನ್ನು ಸಮಾಜ ಶಾಸ್ತ್ರೀಯವಾಗಿ ನೋಡುವ ಅಗತ್ಯವಿದೆ. ಈ ಸಂಘಟನೆಗಳ ರಚನೆ, ಬೆಳವಣಿಗೆ ಮತ್ತು ಪತನಗಳ ವಿವರಗಳಯ, ನಾಯಕತ್ವ, ವರ್ಗಲಕ್ಷಣಗಳು, ಸಂಘಟನೆಯ ಸ್ವರೂಪ, ಕಾರ್ಯಕ್ರಮಗಳ ರೀತಿ ಮತ್ತು ಸಿದ್ಧಾಂತಗಳ ವಿಶ್ಲೇಷಣೆ ಇವುಗಳೇ ಈ ಅಧ್ಯಾಯದ ಮುಖ್ಯ ವಸ್ತುವೆನ್ನಬಹುದು.

ಭಾರತೀಯ ಕಮ್ಯುನಿಸ್ಟ್ ಚಳವಳಿಯ ಆರಂಭ

ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿ.ಪಿ.ಪಿ) ಉಗಮವನ್ನು ನಿರ್ದಿಷ್ಟವಾದ ದಿನಾಂಕಕ್ಕೆ ನಿಗದಿಗೊಳಿಸುವುದು ಚರ್ಚಾಸ್ಪದವಾಗಬಹುದಾದರೂ ಭಾರತೀಯ ಕಮ್ಯುನಿಸ್ಟ್ ಚಳುವಳಿಯ ಮೂಲವನ್ನು ಕಮ್ಯುನಿಸ್ಟ್‌ ಇಂಟರ್‌ನ್ಯಾಶನಲ್‌ನ ಎರಡನೆ ಅಧಿವೇಶನದಲ್ಲಿ (ಮಾಸ್ಕೋ, ಜುಲೈ-ಆಗಸ್ಟ್ ೧೯೨೦) ಸ್ಪಷ್ಟವಾಗಿಯೇ ಗುರುತಿಸಬಹುದು. ಆಗಿನ ಮಾರ್ಕ್ಸಿಸ್ಟ್‌ ಮುಖಂಡರೂ, ಮುಂದೆ ಸಿ.ಪಿ.ಪಿ.ಯ ಸ್ಥಾಪಕ ಸದಸ್ಯರೂ ಆದ ಎಂ.ಎನ್.ರಾತ್. ಅವರು ಕಾರ್ಮಿಕ ಹಾಗೂ ರೈತರ ಮೂಲಕ ಸಾಧ್ಯವಾಗಬಹುದಾದ ಭಾರತದ ಕ್ರಾಂತಿಯು ರಷ್ಯಾದ ಮಾದರಿಯಲ್ಲೇ ಇರುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಂಡಿದ್ದರು. ಈ ಉದ್ದೇಶಕ್ಕಾಗಿಯೇ ಅವರು ಕಮಿಂಟರ್ನ್‌ನ ವಿಶೇಷ ಸಹಾಯಕ್ಕಾಗಿ ವಾದಿಸಿದ್ದರು. ಏಕೆಂದರೆ ‘ಇದು ಮಾತ್ರ ವರ್ಗ ಸಂಘರ್ಷಕ್ಕಾಗಿ ಜನ ಸಂಘಟನೆಯನ್ನು ಮಾಡಲು ಮತ್ತು ಬ್ರಿಟಿಷ್‌ ಸಾಮ್ರಾಜ್ಯಷಾಹಿಯನ್ನೂ ಯುರೋಪಿನ ಬಂಡವಾಳಷಾಹಿಯನ್ನೂ ಕೊನೆಗಾಣಿಸಿ ಭಾರತೀಯ ಕ್ರಾಂತಿಗೆ ದೊಡ್ಡ ಕೊಡುಗೆಯನ್ನು ಕೊಡಲು ಸಾಧ್ಯ’ ಎಂದು ಅವರು ತಿಳಿದಿದ್ದರು.

[1]

ಭಾರತೀಯ ಕಮ್ಯುನಿಸ್ಟ್‌ರು ಮತ್ತು ಬೂರ್ಜ್ವಾ ರಾಷ್ಟ್ರೀಯ ಚಳವಳಿಯ ಜೊತೆಗಾರಿಕೆ, ವಸಾಹತುಗಳ ಬಗ್ಗೆ ಲೆನಿನರ ಸಿದ್ಧಾಂತ ಹಾಗೂ ಭಾರತದ ಕ್ರಾಂತಿಪೂರ್ವ ಸಿದ್ಧತೆಗಳಲ್ಲಿ ತಂತ್ರಗಾರಿಕೆಗೆ ಕೊಡಬೇಕಾದ ಆದ್ಯತೆಯನ್ನು ಕುರಿತಂತೆ ಅವರ ಧೋರಣೆಗಳ ಬಗ್ಗೆ ರಾಯ್‌ಗಿದ್ದ ಭಿನ್ನಾಭಿಪ್ರಾಯಗಳು ಸಾಕಷ್ಟು ಪ್ರಚಲಿತವಿದ್ದ ಕಾರಣ ಇಲ್ಲಿ ಅವನ್ನು ಚರ್ಚಿಸುವುದಿಲ್ಲ.[2] ಭಾರತದ ಕಾರ್ಮಿಕ ವರ್ಗ ದುರ್ಬಲವಾಗಿದ್ದರೂ ಅಸಂತುಷ್ಟ ರೈತರ ವಿಶಾಲ ಜನಸಮೂಹವನ್ನು ಬಳಸಿ ಒಂದು ಕ್ರಾಂತಿಕಾತಿ ಪಕ್ಷವನ್ನು ರಚಿಸಬಹುದೆಂದು[3] ರಾಯ್ ಸಾಕಷ್ಟು ಚೆನ್ನಾಗಿಯೇ ತಿಳಿದಿದ್ದರು. ಹೀಗೆ ಕಾರ್ಮಿಕರು ಮತ್ತು ರೈತರ ಜೊತೆಗಾರಿಕೆಯ ಲೆನಿನ್‌ ಧೋರಣೆಯು ವಸಾಹತುಶಾಹಿ ಹಾಗೂ ಭಾರತದ ಕ್ರಾಂತಿಗಳನ್ನು ಕುರಿತ ರಾಯ್ ಸಿದ್ಧಾಂತಕ್ಕೆ ಮೂಲವಾಯಿತು. ತೀವ್ರ ನಿರ್ಲಕ್ಷ್ಯಕ್ಕೊಳಗಾದ ರೈತರ ಪ್ರಶ್ನೆಗಳು, ಜಮೀನುದಾರರಲ್ಲಿದ್ದ ನೂರಾರು ಎಕರೆ ವಿಸ್ತಾರವಾದ ಎಸ್ಟೇಟುಗಳು, ರೈತರಲ್ಲಿದ್ದ ತೀವ್ರವಾದ ಭೂಮಿಯ ಬಯಕೆ ಮತ್ತು ಭಾರತದ ಹಳ್ಳಿಗಳಲ್ಲಿದ್ದ ಎದೆಗುಂದಿಸುವ ಬಡತನ ಇವುಗಳೆಲ್ಲ ರಾಯ್ ನಿಲುವನ್ನು ಮತ್ತಷ್ಟುಗಟ್ಟಿಗೊಳಿಸಿದವು. ಲೆನಿನ್ ಸಿದ್ಧಾಂತವನ್ನು ಕಮಿಂಟರ್ನ್‌ ಒಪ್ಪುವ ಜೊತೆಗೇ ‘ಕಾರ್ಮಿಕರನ್ನೂ ರೈತರನ್ನೂ ಒಗ್ಗೂಡಿಸುವ ಮೂಲಕ ಅವರಲ್ಲಿ ಸಮಾಜವಾದವನ್ನು ಹರಡುವ, ಒಟ್ಟಾರೆಯಾಗಿ ಪೂರ್ವ ದೇಶಗಳನ್ನು ಬೋಲ್ಷೇವಿಕರನ್ನಾಗಿಸುವ ಕಾರ್ಯಕ್ರಮಗಳನ್ನು ಸಂಘಟಿಸಲೂ’ ಅನುಮೋದಿಸಿತು.[4]

ಮೊದಲ ನಾಲ್ಕು ವರ್ಷಗಳಲ್ಲಿ (೧೯೨೦-೨೪) ಸಿ.ಪಿ.ಪಿ. ದೇಶದ ವಿವಿಧೆಡೆಗಳಲ್ಲಿ ಸಾಕಷ್ಟು ಕೆಲಸ ಮಾಡಿತಾದರೂ ಅದರಲ್ಲಿ ಪರಸ್ಪರ ಹೊಂದಾಣಿಕೆಯಿರಲಿಲ್ಲ. ೧೯೨೫ರವರೆಗೂ ಸಿ.ಪಿ.ಪಿ.ಯ ಕೇಂದ್ರ ಸಮಿತಿಯೇ ರಚನೆಯಾಗಿರಲಿಲ್ಲ.[5] ಕಮಿಂಟರ್ನ್‌ನ ನಿರ್ದೇಶನದಂತೆ ರಾಯ್ ಹಾಗೂ ಇತರ ಕಮ್ಯುನಿಸ್ಟರು ಕಾಂಗ್ರೆಸನ್ನು ಸಂಪೂರ್ಣವಾಗಿ ಬಳಸಿಕೊಂಡು ತಮ್ಮ ತತ್ವಪ್ರಣಾಲಿಯ ಪ್ರಸಾರವನ್ನು ಕೈಗೊಂಡರು. ೧೯೨೨ರ ಸುಮಾರಿಗೆ ಅಸಹಕಾರ ಆಂದೋಲನವನ್ನು ಗಾಂಧೀಜಿ ಹಿಂದೆಗೆದುಕೊಂಡಾ ಸಿ.ಆರ್.ದಾಸ್ ರ ಮುಖಂಡತ್ವದ ಒಂದು ವರ್ಗ ಗಂಧೀಜಿಗೊಂದು ಪ್ರತಿನಾಯಕತ್ವದ ಅಗತ್ಯವನ್ನು ಮನಗಂಡಿತು. ಈ ಸಂದರ್ಭದಲ್ಲಿ ರಾಯ್‌, ದಾಸ್ ಮೊದಲಾದ ಕೆಲವು ಕಾಂಗ್ರೆಸ್‌ವಕ್ತಾರರನ್ನು ಬಳಸಿಕೊಂಡು ಕಾಂಗ್ರೆಸ್‌ನ ಚಿಂತನೆ ಹಾಗೂ ಆರ್ಥಿಕ ಕಾರ್ಯಕ್ರಮಗಳ ಮೇಲೆ ತಮ್ಮ ಪ್ರಭಾವವನ್ನು ಬೀರಲು ಪ್ರಯತ್ನಿಸಿದರು. ೧೯೨೨ರ ಗಯಾ ಕಾಂಗ್ರೆಸ್ ಅಧಿವೇಶನದಲ್ಲಿ, ಸಿ.ಪಿ.ಪಿಯ ಆಧಾರದ ಸ್ತಂಭಗಳಾದ ಎಸ್.ಎ.ಡಾಂಗೆ ಮತ್ತು ಎಸ್. ಚೆಟ್ಟಿಯಾರ್ ತಮ್ಮನ್ನು ಕಮ್ಯುನಿಸ್ಟರೆಂದು ಘೋಷಿಸಿಕೊಂಡರಲ್ಲದೆ ಧೈರ್ಯವಾಗಿ ಪ್ರಗತಿಶೀಲ ಆರ್ಥಿಕ ಸುಧಾರಣೆಯ ರಾಯ್ ಸಿದ್ಧಾಂತವನ್ನು ಮಂಡಿಸಿದರು.[6] ಆದರೆ ಅಧಿವೇಶನವು ಸ್ಪಷ್ಟವಾಗಿ ಇದನ್ನು ತಿರಸ್ಕರಿಸಿತು. ಕಮ್ಯುನಿಸ್ಟರು ಮತ್ತು ಅವರನ್ನು ಬೆಂಬಲಿಸಿದ ದಾಸ್‌ಬಳಗದ ಸ್ಪಷ್ಟ ಸೋಲಿನಲ್ಲಿ ಇದು ಪರ್ಯವಸಾನವಾಯಿತು ಕಾಂಗ್ರೆಸ್‌ ಮತ್ತೊಮ್ಮೆ ಗಾಂಧೀಜಿಯ ನಾಯಕತ್ವದಲ್ಲಿ ಹಾಗೂ ಅವರ ಅಸಹಕಾರ ಸಿದ್ಧಾಂತದಲ್ಲಿ ತನ್ನ ನಿಷ್ಠೆಯನ್ನು ಸಾರಿತು. ಕಾಂಗ್ರೆಸಿನ ಸ್ವರೂಪ ಮತ್ತು ನಾಯಕತ್ವವನ್ನು ಬಲ್ಲವರಿಗೆ ಇದೇನೂ ಆಶ್ಚರ್ಯಕವಾಗಿರಲಿಲ್ಲ. ಈ ಹಂತದಲ್ಲಿ ತನ್ನ ವಸ್ತುನಿಷ್ಟ ಆರ್ಥಿಕ ಕಾರ್ಯಕ್ರಮಗಳಿಗೆ ಈ ಸೋಲು ಅನಿವಾರ್ಯವೆಂಬುದು ರಾಯ್‌ಗೂ ತಿಳಿದಿತ್ತು. ಹೀಗೆ ಕಾಂಗ್ರೆಸನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಕಮ್ಯುನಿಷ್ಟರ ಮೊದಲ ಪ್ರಯತ್ನ ನಿಷ್ಫಲವಾಯಿತು.[7]

ರೈತ –ಕಾರ್ಮಿಕ ಪಕ್ಷದ ಬೆಳವಣಿಗೆ ಮತ್ತು ಪತನ

ನಾಲ್ಕು ಮಂದಿ ಸಿ.ಪಿ.ಪಿ. ಮುಖಂಡರು ಸರಕಾರವನ್ನು ಬುಡಮೇಲು ಮಾಡುವ ಒಳಸಂಚಿನ ಆಪಾದನೆಗೆ ಈಡಾದ ಕಾನ್ಪುರ ಪಿತೂರಿ ಮೊಕದ್ದಮೆಯ (೧೯೨೩-೨೪)ಬಳಿಕ ಭಾರತೀಯ ಕಮ್ಯುನಿಸ್ಟರು ತಮ್ಮ ಚಟುವಟಿಕೆಗಳನ್ನು ರಹಸ್ಯವಾಗಿಡಬೇಕಾದ ಅಗತ್ಯವನ್ನು ಅರಿತರು. ಇದರಿಂದ ವಿದೇಶೀ ಮುಖಂಡರು ದೇಶೀಯ ನಾಯಕರು ಹಾಗೂ ಸ್ಥಳೀಯ ಕಾರ್ಯಕರ್ತರ ಸಂಪರ್ಕ ಸಾಧ್ಯತೆಗಳು ಇನ್ನಷ್ಟು ಅಪಾಯಕಾರಿಯೆನಿಸಿದವು.[8] ಆದುದರಿಂದ ರಾಯ್ ತನ್ನ ಸ್ನೇಹಿತರಿಗೆ ಕಾರ್ಮಿಕರ ಮತ್ತು ರೈತರ ಪಕ್ಷ (ಡಬ್ಲ್ಯು.ಪಿ.ಪಿ) ಹಾಗೂ ಕಮ್ಯುನಿಸ್ಟ್ ಪಕ್ಷ ಎಂಬ ಎರಡು ಸಂಘಟನೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು. ಎರಡನೆಯದು ನಿಷೇಧಿಸಲ್ಪಟ್ಟಿದ್ದರಿಂದ ಅದರ ವೇಷಾಂತರಗೊಂಡ ರೂಪದಲ್ಲಿ ಮೊದಲನೆಯದು ಕೆಲಸ ಮಾಡತೊಡಗಿತು. ಹೀಗೆ ಮೊತ್ತ ಮೊದಲ ಎಡಪಂಥೀಯ ರೈತ ಸಂಘಟನೆಯು ರೈತರ ಸ್ವತಂತ್ರ ಸಂಘಟನೆಯಾಗದೆ ಡಬ್ಲ್ಯು.ಪಿ.ಪಿ.ಯ ಹಿರಿಯ ಸದಸ್ಯರಾದ ಕಾರ್ಮಿಕರ ಹಿಂಬಾಲಕನಾಗಿ ಜನ್ಮ ತಾಳಿತು ಎನ್ನಬಹುದು.

ಸಿ.ಪಿ.ಐ. ಕಾರ್ಯಕರ್ತರು ಬಹಿರಂಗವಾಗಿ ಎಲ್ಲೂ ತಾವು ಡಬ್ಲ್ಯು.ಪಿ.ಪಿ.ಯನ್ನು ರೂಪಿಸಿದವರೆಂದು ತೋರಿಸಿಕೊಳ್ಳದಿದ್ದುದರಿಂದ ಸಮಾನ ಮನಸ್ಕ ಕಾಂಗ್ರೆಸ್‌ ಗೆಳೆಯರ ವಿಶ್ವಾಸವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗೆ ಡಬ್ಲ್ಯು.ಪಿ.ಪಿ. ಮುಂಬಯಿ, ಬಂಗಾಳ, ಉತ್ತರ ಪ್ರದೇಶ ಮತ್ತು ಪಂಜಾಬ ಪ್ರಾಂತಗಳಲ್ಲಿ ಸಾಕಷ್ಟು ಕೆಲಸ ಮಾಡಿತು.[9] ಡಬ್ಲ್ಯು.ಪಿ.ಪಿ. ಕೇವಲ ಒಂದು ರಕ್ಷಣಾ ಕವಚವೆಂದು ತಿಳಿದಿದ್ದರೂ ಕ್ರಾಂತಿಕಾರಿ ಹೋರಾಟದ ಮುಂಚೂಣಿಯಲ್ಲಿ ಕೇವಲ ಕಾರ್ಮಿಕರು ಮಾತ್ರ ಇರಲು ಸಾಧ್ಯ ಎಂಬ ಮಾರ್ಕ್ಸ್‌ ಲೆನಿನ್‌ ಸಿದ್ಧಾಂತಕ್ಕೆ ಕಮ್ಯುನಿಸ್ಟರು ಗಟ್ಟಿಯಾಗಿಯೇ ಅಂಟಿಕೊಂಡಿದ್ದರು. ಇದರಿಂದ ಡಬ್ಲ್ಯು.ಪಿ.ಪಿ.ಯ ಚೌಕಟ್ಟಿನೊಳಗೇ ಕಮ್ಯುನಿಸ್ಟರು ಒಂದು ಮುಂಚೂಣಿದಳವನ್ನು ಕಟ್ಟಲು ಯತ್ನಿಸುತ್ತಿದ್ದರು. ಹೀಗಾಗಿ ಅವರು ತಮ್ಮ ಹೆಚ್ಚಿನ ಶ್ರಮ ಹಾಗೂ ಸಮಯವನ್ನು ನಗರದ ಕೈಗಾರಿಕೆಗಳ ಕಾರ್ಮಿಕರನ್ನು ಒಗ್ಗೂಡಿಸಿ ಟ್ರೇಡ್‌ ಯೂನಿಯನ್ ಕಟ್ಟಲು ಶ್ರಮಿಸಿದರೇ ವಿನಾ ಗ್ರಾಮೀಣ ರೈತರ ಸಂಘಟನೆಗೆ ಏನೇನೂ ಪ್ರಯತ್ನಿಸಲಿಲ್ಲ.

೧೯೨೦ರ ದಶಕದಾದ್ಯಂತ ಕಮ್ಯುನಿಸ್ಟರ ಚಟುವಟಿಕೆಗಳ ಕಾರ್ಯಕ್ಷೇತ್ರಗಳೆಲ್ಲ ಪ್ರಮುಖ ಕೈಗಾರಿಕಾ ಕೇಂದ್ರಗಳಾದ ಮುಂಬಯಿ, ಕಲ್ಕತ್ತ ಹಾಗೂ ಕಾನ್ಪುರಗಳೇ ಆಗಿದ್ದವು. ೧೯೨೯ರ ಮೀರತ್‌ಪಿತೂರಿಯ ಬಂಧನಗಳ ವೇಳೆಗಾಗಲೇ ಡಬ್ಲ್ಯು.ಪಿ.ಪಿ. (ಸಿ.ಪಿ.ಐ) ಕಾರ್ಮಿಕ ವರ್ಗದಲ್ಲಿ ಅದರಲ್ಲೂ ಮುಂಬಯಿಯಲ್ಲಿ ತನ್ನ ಪ್ರಭಾವವನ್ನು ಸಾಕಷ್ಟು ಬೆಳೆಸಿಕೊಂಡಿತ್ತು. ಬಾಂಬೆ ಲೆಜಿಸ್ಲೇಟಿವ್ ಕೌನ್ಸಿಲ್‌ ಮೂಲಕ ಪಬ್ಲಿಕ್‌ಗೆ ಸೇಫ್ಟಿ ಬಿಲ್ಲನ್ನು ಸರಕಾರ ತಂದು ೩೧ ಮಂದಿ ಸಿ.ಪಿ,ಐ. ಮುಖಂಡರನ್ನು ಬಂಧಿಸಿದಾಗ ಇದನ್ನು ಪ್ರತಿಭಟಿಸಿ ಮುಂಬಯಿ ಕಾರ್ಮಿಕರು ಒಂದು ಸಾರ್ವತ್ರಿಕ ಮುಷ್ಕರವನ್ನು ಸಂಘಟಿಸಲು ಸಿದ್ಧರಾಗುತ್ತಿದ್ದರು.[10] ಇದರರ್ಥ ಡಬ್ಲ್ಯು.ಪಿ.ಪಿ.ಯ ಟ್ರೇಡ್ ಯೂನಿಯನ್ ಚಟುವಟಿಕೆಗಳು ಕೇವಲ ಮುಂಬಯಿಗೆ ಸೀಮಿತವಾಗಿತ್ತೆಂಬುದಲ್ಲ. ೧೯೨೪ ಮತ್ತು ೧೯೨೯ರ ನಡುವೆ ನಡೆದ ಮುಷ್ಕರಗಳು, ಇದರಲ್ಲಿ ಭಾಗವಹಿಸಿದ್ದ ಕಾರ್ಮಿಕರ ಸಂಖ್ಯೆ, ಕೈಗರಿಕೆಗಳಿಗೆ ಇದರಿಂದುಂಟಾದ ಕೆಲಸದ ದಿನಗಳ ನಷ್ಟ ಇವುಗಳು ನೂರು ಶೇಕಡಾದಷ್ಟು ಹೆಚ್ಚಾದುದನ್ನು ಗಮನಿಸಿದರೆ ಡಬ್ಲ್ಯು.ಪಿ.ಪಿ.ಯ ಕಾರ್ಯಕ್ಷೇತ್ರದಲ್ಲಾದ ವಿಸ್ತಾರವನ್ನು ಅರಿತುಕೊಳ್ಳಬಹುದು.[11] ಆದರೆ ರೈತರ ಪಾಲುಗಾರಿಕೆ ಇದೇ ಪ್ರಮಾಣದಲ್ಲಿ ಬೆಳೆಯಲಿಲ್ಲ ಎನ್ನುವುದೂ ಅಷ್ಟೇ ಸತ್ಯ.

ರೈತರ ಸಂಘಟನೆಗೆ ಗಂಭೀರವಾದ ಪ್ರಯತ್ನ ನಡೆಯಲಿಲ್ಲವೆಮದರೆ ಸಿ.ಪಿ.ಐಗೆ ಈ ಕುರಿತು ಕಾಳಜಿ ಅಥವಾ ಸಾಮರ್ಥ್ಯ ಇರಲಿಲ್ಲವೆಂದರ್ಥವಲ್ಲ. ಡಬ್ಲ್ಯು.ಪಿ.ಪಿ.ಯ ಕಾರ್ಮಿಕ ಸಂಘಟನೆ ಆಸಕ್ತಿಯ ಹೊರತಾಗಿಯೂ ಕೆಲವು ರೈತ ಸಮಸ್ಯೆಗಳು ಅದರ ಗಮನವನ್ನು ಸೆಳೆದಿದ್ದವು. ತನ್ನ ವಾರ್ಷಿಕ ಅಧಿವೇಶನಗಳಲ್ಲಿ ಮತ್ತು ಕಾಂಗ್ರೆಸಿನ ಸಭೆಗಳಲ್ಲಿ ಇದು ಅನೇಕ ಕರಪತ್ರಗಳನ್ನೂ, ಪ್ರಣಾಳಿಕೆಗಳನ್ನೂ ಹೊರತಂದಿತು. ಇಂತಹವುಗಳಲ್ಲಿ ‘ಊಳುವವನಿಗೇ ಭೂಮಿ’[12]ಯನ್ನೂ ಸೇರಿದಂತೆ ಅನೇಕ ತೀವ್ರತರವಾದ  ವ್ಯವಸಾಯಿ ಸುಧಾರಣೆಗಳ ಪ್ರಸ್ತಾಪವಿತ್ತು. ಮುಂದೆ ಇದು ಇನ್ನೂ ವಿಸ್ತಾರವಾಗಿ, ಸ್ಪಷ್ಟವಾಗಿ ಆ ಪಕ್ಷ ದಿನನಿತ್ಯದ ಘೋಷಣೆಗಳೆಂಬಂತೆ ಕೇಳಿಬಂದವು. ಆದರೆ ಘೋಷಣೆಗಳ ಅಬ್ಬರ ಕಾರ್ಯದಲ್ಲಿ ಮೂಡಿಬರದೇ ಇದ್ದುದರಿಂದ ಡಬ್ಲ್ಯು.ಪಿ.ಪಿ.ಗೆ ರೈತರ ಪ್ರತಿಕ್ರಿಯೆ ಅಷ್ಟೇನೂ ತೀವ್ರತರವಾಗಿರಲಿಲ್ಲ. ಏನಿದ್ದರೂ ಕಮ್ಯುನಿಸ್ಟ್‌ ಚಳುವಳಿಯ ಮೊದಲ ದಶಕದಲ್ಲಿ ರೈತ ಪರವಾದ ಈ ಘೋಷಣೆಗಳು ಒಂದು ಆವರಣೆಯೆಂಬಂತೆ ನಡೆದುಕೊಂಡು ಬಂದವು.

ರೈತರನ್ನು ಬಹು ಸಂಖ್ಯೆಯಲ್ಲಿ ಒಳಗೊಳ್ಳುವಲ್ಲಿ ಡಬ್ಲ್ಯು.ಪಿ.ಪಿ.ಯ ಕಾಯ್ಯಕ್ರಮಗಳು ಸೋಲಲು ಒಂದು ಕಾರಣ ಆರ್ಥಿಕ ಮುಗ್ಗಟ್ಟು ಮತ್ತು ಕಾರ್ಯಕತ್ತರ ಕೊರತೆಯಾದರೆ ಚಳುವಳಿಯನ್ನು ಹತ್ತಿಕ್ಕಲು ಸರಕಾರ ಕೈಗೊಂಡ ತೀವ್ರತರ ದಮನ ನೀತಿಯು ಇನ್ನೊಂದು ಕಾರಣವಾಯಿತು. ಮೊದಮೊದಲು ಈ ಹಿನ್ನಡೆಯ ಹೊರತಾಗಿಯೂ ಡಬ್ಲ್ಯು.ಪಿ.ಪಿ. ತನಗೆ ಸಕ್ಕಿದ ಅವಕಾಶಗಳನ್ನೆಲ್ಲಾ ನಗರದ ಕೈಗಾರಿಕಾ ಕಾರ್ಮಿಕರನ್ನು ಸಂಘಟಿಸಲು ಬಳಸಿಕೊಂಡಿತೇ ವಿನಾ ರೈತರನ್ನಲ್ಲ ಎನ್ನುವುದನ್ನು ಗಮನಿಸಬೇಕು. ೧೯೨೮ ಮಾರ್ಚ್‌ನಲ್ಲಿ ಕಲ್ಕತ್ತಾದ ಭಟ್‌ಪಾರದಲ್ಲಿ ಜರಗಿದ ಅಖಿಲ ಭಾರತ ಡಬ್ಲ್ಯು.ಪಿ.ಪಿ.ಯ ಮಹಾಸಭೆಯಲ್ಲಿ ಬಂಗಾಳದ ೪೪ ಕಾರ್ಮಿಕ ಸಂಘಟನೆಗಳ (ಬೂಟ್‌ಕಾರ್ಮಿಕರ ಸಂಘ, ಹತ್ತಿಗಿರಣಿ ಕಾರ್ಮಿಕರ ಸಂಘ, ಮೀನುಗಾರರ ಸಂಘ) ಪ್ರತಿನಿಧಿಗಳೂ ಸೇರಿದಂತೆ ಸುಮಾರು ೧೦೦೦ ಮಂದಿ ಭಾಗವಹಿಸಿದ್ದರು. ಮೈಮೆನ್‌ಸಿಂಗ್, ಢಾಕಾ ಮೊದಲಾದ ಜಿಲ್ಲೆಗಳಿಂದ ತಲಾ ಹತ್ತು ಮಂದಿ ರೈತರು ವೈಯಕ್ತಿಕ ನೆಲೆಯಲ್ಲಿ ಭಾಗವಹಿಸಿದ್ದರೂ, ಯಾವುದೇ ರೈತ ಸಂಘಟನೆಯಾಗಲಿ, ಕಿಸಾನ್ ಸಭಾಗಳಾಗಲಿ ತಮ್ಮ ಪ್ರತಿನಿಧಿಗಳನ್ನು ಇದಕ್ಕೆ ಕಳುಹಿಸಿರಲಿಲ್ಲ.[13]

ಡಬ್ಲ್ಯು.ಪಿ.ಪಿ.ಗೆ ತನ್ನ ಕಣ್ಣ ಮುಂದಿದ್ದ ಮಾದರಿ ರಷ್ಯಾದ ಕ್ರಾಂತಿಯಾಗಿತ್ತು. ೧೯೨೫-೨೬ರ ಮಧ್ಯೆ ಅದು ಹೊರತಂದ ಪ್ರಚಾರ ಸಾಹಿತ್ಯದಲ್ಲಿ ರಷ್ಯಾದ ಕಾರ್ಮಿಕ ರೈತರ ಸರ್ಕಾರದ ಸಾಧನೆಗಳ ನೇರ ಶ್ಲಾಘನೆಯಿತ್ತು. ಅದು ತನ್ನ ಕಾರ್ಯಕರ್ತರಿಗೆ ಏರ್ಪಡಿಸುತ್ತಿದ್ದ ತರಬೇತಿ ಶಿಬಿರಗಳಲ್ಲಿ ರಷ್ಯಾದ ಬೋಲ್ಷೆವಿಕರ ನಮೂನೆಯ ಕ್ರಾಂತಿಕಾರಿ ಪಕ್ಷವನ್ನು ಕಟ್ಟುವಂತೆ ಹೇಳುತ್ತಿತ್ತು.[14] ಒಟ್ಟಿನಲ್ಲಿ ಡಬ್ಲ್ಯು.ಪಿ.ಪಿ.ಯ ಮುಖಂಡರು ಸಿದ್ಧಾಂತ ಮತ್ತು ಕಾರ್ಯತಂತ್ರಗಳೆರಡರಲ್ಲೂ ರಷ್ಯಾದ ಕಮ್ಯುನಿಸ್ಟರನ್ನೇ ಅವಲಂಬಿಸಿದ್ದರು. ಡಬ್ಲ್ಯು.ಪಿ.ಪಿ.ನಾಯಕರು ಭಾರತೀಯ ಕಾರ್ಮಿಕರ ಸಂಘಟನಾ ಸಮಸ್ಯೆಯನ್ನು ಕಮಿಂಟರ್ನ್‌ನ ಕಣ್ಣುಗಳಿಂದಲೇ ನೋಡುತ್ತಿದ್ದರು. ಹೀಗೆ ಕಾರ್ಮಿಕ ಸರಕಾರದ ಸಿದ್ಧಾಂತ ಹಾಗೂ ಕಾರ್ಯಚರಣೆಗಳು ಡಬ್ಲ್ಯು.ಪಿ.ಪಿ.ಕಾರ್ಯಕರ್ತರ ನಂಬಿಕೆ ಹಾಗೂ ಗೌರವಗಳಿಗೆ ಪಾತ್ರವಾದವು. ಈ ಹಿನ್ನಲೆಯಲ್ಲಿ ನೋಡಿದಾಗ ಕ್ರಾಂತಿಕಾರಿ ಚಳವಳಿಯಲ್ಲಿ ರೈತರು ಕೇವಲ ಪೂರಕ ಪಾತ್ರವನ್ನಷ್ಟೇ ವಹಿಸಿದ್ದಂತೆ ತೋರುತ್ತದೆ.[15]

ಈ ಕೆಳಗಿನವುಗಳು ಪಕ್ಷ ಕಾರ್ಯಕರ್ತರ ಮುಂದಿದ್ದ ನಿಜವಾದ ಸವಾಲುಗಳಾಗಿದ್ದವು:

ವಿಶಾಲ ಜನಸಮುದಾಯದ ರೂಪದಲ್ಲಿದ್ದ ರೈತ ಸಂಘಟನೆಯೊಳಗೆ ಸೇರಿಕೊಳ್ಳುವುದು, ರೈತರ ಸಮಸ್ಯೆಗಳನ್ನು ದುಡಿಯುವ ವರ್ಗದವರಿಗೆ ತಲುಪಿಸುವುದು, ರೈತ ಚಳವಳಿಯ ಮಹತ್ವವನ್ನು ಅವರಿಗೆ ತಿಳಿಯಪಡಿಸುವುದು ಮತ್ತು ರೈತರಿಗೆ ಚಳವಳಿಯ ಕಾರ್ಯವಿಧಾನಗಳನ್ನು, ಪ್ರಚಾರದ ರೀತಿಗಳನ್ನು ಹಾಗೂ ಸಂಘಟನಾ ಕ್ರಮಗಳನ್ನು ತಿಳಿಸುವುದು.[16]

ರೈತರ ಕುರಿತ ಈ ರಾಷ್ಟ್ರೀಯ ಧೋರಣೆ ರೈತರ ಸಮಸ್ಯೆಗಳನ್ನು ಎಡಪಕ್ಷಗಳು ಕೇವಲ ತಾಂತ್ರಿಕ ಕಾರಣಕ್ಕಾಗಿ ಮಾತ್ರ ತೆಗೆದುಕೊಂಡಿದ್ದವು ಎಂಬುದನ್ನು ಸೂಚಿಸುತ್ತದೆ.[17] ಜೊತೆಗೆ ಸಿ.ಪಿ.ಐ. ಹಾಗೂ ಕಾನೂನಿನ ದೃಷ್ಟಿಯಲ್ಲಿ ಅದರ ಮುಖವಾಡವಾಗಿರುವ ಡಬ್ಲ್ಯು.ಪಿ.ಪಿ.ಗಳು ೧೯೨೯ರವರೆಗೂ ರೈತ ಸಂಘಟನೆಯಲ್ಲಿ ಖಾಯೆ ಅಷ್ಟಾಗಿ ಆಸಕ್ತಿ ತಳೆಯಲಿಲ್ಲ ಎನ್ನುವುದರ ಕುರಿತೂ ಕೆಲವು ಸುಳಿವುಗಳನ್ನು ಇದು ಕೊಡುತ್ತದೆ. ಸಂಘಟನೆಯ ಅನುಕೂಲಕ್ಕಾಗಿ ಮುಂಬಯಿ, ಪಂಜಾಬ ಮತ್ತು ಬಂಗಾಳಳಲ್ಲಿ ಪ್ರತ್ಯೇಕ ಡಬ್ಲ್ಯು.ಪಿ.ಪಿ.ಗಳಿದ್ದವು. ೧೯೨೮ರಲ್ಲಿ ಅಖಿಲ ಭಾರತೀಯ ಡಬ್ಲ್ಯು.ಪಿ.ಪಿ.ಯ ರಚನೆಯಾಗುವವರೆಗೂ ಅವುಗಳಲ್ಲಿ ಏಕಸೂತ್ರತೆಯೆಂಬುದು ಇರಲೇ ಇಲ್ಲ. ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಇವುಗಳಲ್ಲಿ ಮುಂಬಯಿ ಮತ್ತು ಬಂಗಾಳದ ಘಟಕಗಳು ರಾಜಕೀಯವಾಗಿ ತುಂಬಾ ಪ್ರಬಲವಾಗಿದ್ದವು. ಆದರೆ ಇವಾವುದರಲ್ಲೂ ದುಡಿಯುವ ಮಂದಿಯ ಪಾಲುಗಾರಿಕೆ ಹೇಳಿಕೊಳ್ಳುವಷ್ಟೇನೂ ಇರಲಿಲ್ಲ. ಪಂಜಾಬ ಮತ್ತು ಬಂಗಾಳದ ಘಟಕಗಳಲ್ಲಿ ಕೆಲವು ಸಕ್ರಿಯ ರೈತ ಸದಸ್ಯರಿದ್ದರು. ಮುಂಬಯಿ ಘಟಕದ ಕೆಲವೇ ಕೆಲವರಿಗೆ ಕಾರ್ಮಿಕ ಸಂಘಟನೆಗಳ ಮೂಲಕ ಕೆಲವು ರೈತ ವರ್ಗದ ಸಂಪರ್ಕವಿದ್ದರೂ ಹೆಚ್ಚಿನ ಸದಸ್ಯರು ಪೆಟಿಬೂರ್ಜ್ವಾಗಳಾಗಿದ್ದರು.[18]

ಸಿ.ಪಿ.ಐ. ಮತ್ತು ಡಬ್ಲ್ಯು.ಪಿ.ಪಿ.ಯ ನಾಯಕರು ಮೂಲತಃ  ನಗರದ ಮಧ್ಯಮವರ್ಗದ ಹಿನ್ನಲೆಯಿಂದ ಬಂದವರಾಗಿದ್ದರು. ಮೀರತ್ ಪ್ರಕರಣದ ಮೂವತ್ತಮೂರು ಮಂದಿ ಅಪರಾಧಿಗಳ ಪಟ್ಟಿಯನ್ನು ಉದಾಹರಣೆಗಾಗಿ ತೆಗೆದುಕೊಂಡರೆ ಎಡಪಂಥೀಯ ನಾಯಕರ ಮಧ್ಯಮವರ್ಗದ ಹಿನ್ನಲೆ ಸ್ಪಷ್ಟವಾಗುತ್ತದೆ.[19] ಪಿ.ಸ್ಟ್ರಾಟ್, ಬೆನ್‌ಬ್ರಾಡ್ಲಿ, ಎಲ್, ಹಚಿನ್ ಸನ್ ಎಂಬ ಮೂವರು ಬ್ರಿಟಿಷರನ್ನು ಹೊರತುಪಡಿಸಿದರೆ ಉತ್ತರ ಪ್ರದೇಶದಲ್ಲಿ ಕೆಲವರು ಹಾಗೂ ಭಾರತೀಯ ಕಮ್ಯುನಿಸ್ಟರೆಲ್ಲ ಮುಂಬಯಿ, ಪಂಜಾಬ್, ಬಂಗಾಳದವರೇ ಆಗಿದ್ದರು. ಇವರಲ್ಲಿ ಹೆಚ್ಚಿನವರು ಕಾರ್ಮಿಕ ಸಂಘಟನೆಗಳ ಸಂಪರ್ಕ ಹೊಂದಿದವರಾಗಿದ್ದು ಕ್ರಾಂತಿಯ ಚಟುವಟಿಕೆಯಲ್ಲಿ ರೈತರಿಗಿಂತ ಕಾರ್ಮಿಕ ವರ್ಗವೇ ಹೆಚ್ಚು ಶಕ್ತಿಶಾಲಿಯೆಂಬ ತತ್ವವನ್ನು ಒಪ್ಪಿದವರು. ಹೀಗಾಗಿಯೇ ಸಿ.ಪಿ.ಐ. ಡಬ್ಲ್ಯು.ಪಿ.ಪಿ.ಯ ಹೆಸರಾಂತ ನಾಯಕರ್ಯಾರೂ ರೈತವರ್ಗದವರಲ್ಲ. ಹೇಗಿದ್ದರೂ ಡಬ್ಲ್ಯು.ಪಿ.ಪಿ.ಗೆ ನಾಯಕರ ಪೆಟಿ ಬರ್ಜ್ವಾ ಹಿನ್ನಲೆಗಿಂತ ನಿಜವಾದ ಶ್ರಮಿಕ ವರ್ಗದಿಂದ ಅತಿ ಕಡಿಮೆ ಸಂಖ್ಯೆಯ ಸದಸ್ಯರು ಸೇರುತ್ತಿದ್ದುದೇ ಆತಂಕಕ್ಕೆ ಕಾರಣವಾಗಿತ್ತು.[20]

ಮೀರತ್‌ ತೀರ್ಪು ಭಾರತೀಯ ಕಮ್ಯುನಿಸ್ಟ್ ಚಳವಳಿಯ ಒಂದು ಮುಖ್ಯ ತಿರುವು ಎನ್ನಬಹುದು. ಈ ತೀರ್ಪಿನ ಮುಖಾಂತರ ಸರಕಾರ ಕಮ್ಯುನಿಸ್ಟ್ ಚಳವಳಿಯ ಮೇಲೆ ಸುಲಭವಾಗಿ ನಿಯಂತ್ರಣ ಸಾಧಿಸಿತು. ಕಮ್ಯುನಿಸ್ಟ್ ಚಳವಳಿಯು ಭವಿಷ್ಯದಲ್ಲಿ ಅನುಸರಿಸಬೇಕಾಗಿ ತಂತ್ರಗಾರಿಕೆಯ ಮರುಚಿಂತನೆ ಮಾಡುವಂತೆ ಮೀರತ್ ತೀರ್ಪು ಪ್ರೇರೇಪಿಸಿತು. ಇದಕ್ಕಿಂತ ಮೊದಲೇ ಕಮಿಂಟರ್ನ್‌ನ ಒಂದು ಭಾಗ ಲೆನಿನ್‌ಹೇಳಿದ ಸಾಮರಸ್ಯದ ದಾರಿಯನ್ನು ಪ್ರಶ್ನಿಸಿತು. ಒಂದು ಕಡೆ ಡಬ್ಲ್ಯು.ಪಿ.ಪಿ. ಕಾಂಗ್ರೆಸಿನ ಮತ್ತೊಂದು ಮುಖವೋ ಎಂಬಂತೆ ವರ್ತಿಸುತ್ತಿದ್ದು ಕ್ರಾಂತಿಕಾರಿ ಸಂಘಟನೆಯಾಗಿ ರೂಪುಗೊಳ್ಳುವಲ್ಲಿ ಸೋತಿತ್ತು. ಇನ್ನೊಂದು ಕಡೆ ಇಂಡಿಯಾದಲ್ಲಿದ್ದ ಸಾಮ್ರಾಜ್ಯಶಾಹಿ ಸರಕಾರ ಕೇವಲ ಗರ್ಜನೆಗೆ ಬೆದರುವಂಥದ್ದಲ್ಲ ಎನ್ನುವುದನ್ನು ತೋರಿಸಿಕೊಟ್ಟಿತ್ತು. ೧೯೨೮ ಜುಲೈ-ಆಗಸ್ಟ್‌ನಲ್ಲಿ ಮಾಸ್ಕೋದಲ್ಲಿ ಜರುಗಿದ ಕಮಿಂಟರ್ನ್‌ನ ೬ನೆಯ ಜಾಗತಿಕ ಸಮ್ಮೇಳನದಲ್ಲಿ ಭಾರತದ ಡಬ್ಲ್ಯು.ಪಿ.ಪಿ.ಯ ಭವಿಷ್ಯದ ಸ್ಥಾನಮಾನಗಳನ್ನು ಕುರಿತಂತೆ ರಷ್ಯಾ ಮತ್ತು ಇಂಗ್ಲೆಂಡಿನ ಕಮ್ಯುನಿಸ್ಟ್‌ಪಕ್ಷಗಳ ಮಧ್ಯೆ ಸ್ಪಷ್ಟ ಒಡಕುಂಟಾಯಿತು. ಅಲ್ಲಿ ರಷ್ಯಾ ಡಬ್ಲ್ಯು.ಪಿ.ಪಿ.ಯ ನಿಷೇಧವನ್ನು ಬಯಸಿದರೆ ಇಂಗ್ಲೆಂಡ್‌ಅದರ ಮುಂದುವರಿಕೆಯನ್ನು ಒತ್ತಾಯಿಸಿತು.[21] ಈ ಭಿನ್ನಾಭಿಪ್ರಾಯವು ಎರಡು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಒಂದು, ಕಮಿಂಟರ್ನ್‌ನ ಒಳಗೇ ಎರಡು ಗುಂಪುಗಳು ಏರ್ಪಟ್ಟು ಭಾರತದ ಕಮ್ಯುನಿಸ್ಟ್‌ ಪಕ್ಷದ ಮೇಲೆ ತಮ್ಮ ತಮ್ಮ ಹಿಡಿತವನ್ನು ಸಾಧಿಸುವುದಕ್ಕಾಗಿ ಸ್ಪರ್ಧಿಸುತ್ತಿದ್ದವು. ಎರಡು, ಡಬ್ಲ್ಯು.ಪಿ.ಪಿ. ಒಳಗಿಂದೊಳಗೆ ಕಾಂಗ್ರೆಸಿನ ಮೇಲೆ ತನ್ನ ಪ್ರಭಾವ ಬೀರಲು ಮತ್ತು ಒಂದು ಕ್ರಾಂತಿಕಾರಿ ಪಕ್ಷವಾಗಿ ಬೆಳೆಯಲು ಸೋತಿತ್ತು.

ತಾತ್ವಿಕವಾಗಿ ಡಬ್ಲ್ಯು.ಪಿ.ಪಿ. ಮಾರ್ಕ್ಸ್‌ವಾದ-ಲೆನಿನ್ ವಾದಗಳನ್ನು ಅವಲಂಬಿಸಿತ್ತಾದರೂ ತಾತ್ವಿಕತೆಯನ್ನು ಕೇಳಿಕೆ ಮತ್ತು ಕಾರ್ಯತಂತ್ರಗಳ ರೂಪಕ್ಕೆ ಪರಿವರ್ತಿಸುವಾಗ ಭಾರತೀಯ ಪರಿಸ್ಥಿತಿಯನ್ನು ಗಮನಿಸಿರಲಿಲ್ಲ. ಇದರಿಂದಾಗಿಯೇ ತನ್ನ ಗುರಿಯ ಸ್ಪಷ್ಟ ಕಲ್ಪನೆಯಾಗಲಿ, ಸುಸಂಬದ್ಧತೆಯಾಗಲು ಅದಕ್ಕಿರಲೇ ಇಲ್ಲ. ಹೀಗಾಗಿ ಯಾರೇ ಇಬ್ಬರು ನಾಯಕರು ಅಥವಾ ಎರಡು ಘಟಕಗಳು ತಮ್ಮ ಗುರಿಯನ್ನು ಆದ್ಯತೆಯನ್ನು ಏಕರೂಪದಲ್ಲಿ ಹೇಳಲಿಲ್ಲ ಮಾತ್ರವಲ್ಲದೆ ಅನೇಕ ಸಲ ಪರಸ್ಪರ ವಿರುದ್ಧವಾಗಿಯೇ ಹೇಳುತ್ತಿದ್ದರು. ಪಕ್ಷದ ಕೇಳಿಕೆಗಳು ಅನೇಕ ಬಾರಿ ಅದರ ಸಂವಿಧಾನಕ್ಕೆ ಅನುಗುಣವಾಗಿರಲೂ ಇಲ್ಲ. ಇದನ್ನು ಸ್ಪಷ್ಟೀಕರಿಸಲು ಕೆಲವು ಉದಾಹರಣೆಗಳನ್ನು ನೋಡಬಹುದು. ‘ರೈತ’ ಎನ್ನುವ ಶಬ್ದವನ್ನು ಡಬ್ಲ್ಯು.ಪಿ.ಪಿ. ಮೊದಲು ಹೀಗೆ ನಿರ್ವಚನ ಮಾಡಿತ್ತು: ರೈತರೆಂದರೆ ತನ್ನ ಭೂಮಿಯಲ್ಲಿ ತಾನೆ ಕೆಲಸ ಮಾಡುವ ಮತ್ತು ೩೦ ಎಕರೆಗಿಂತ ಹೆಚ್ಚು ಭೂಮಿಯನ್ನು ಹೊಂದಿರದವರು. ಕೃಷಿ ಕಾರ್ಮಿಕರು, ಗ್ರಾಮೀಣ ಕುಶಲಕರ್ಮಿಗಳು ಹಾಗೂ ಮೀನುಗಾರರನ್ನು ಸೇರಿಸಿಯೇ ರೈತರನ್ನು ಸಂಘಟಿಸಬೇಕು.[22]

ಈ ನಿರ್ವಚನವನ್ನು ಗಮನಿಸಿದರೆ ಶ್ರೇಣೀಕೃತ ಗ್ರಾಮೀಣ ವ್ಯವಸ್ಥೆ ಕೆಳಹಂತಗಳಲ್ಲಿದ್ದ ಎಲ್ಲರನ್ನೂ ಡಬ್ಲ್ಯು.ಪಿ.ಪಿ. ತನ್ನ ‘ರೈತ’ ಕಲ್ಪನೆಯನ್ನು ಸೇರಿಸಿಕೊಂಡಂತೆ ತೋರುತ್ತದೆ. ಅದೇ ಕಾಲಕ್ಕೆ ಶ್ರೀಮಂತ ರೈತರನ್ನೂ ವಾಣಿಜ್ಯ ಬೆಳೆಗಾರರನ್ನೂ ಅದು ತನ್ನ ಕಕ್ಷೆಯಿಂದ ಹೊರಗಿಟ್ಟಿರುವುದು ಸ್ಪಷ್ಟವಾಗುತ್ತದೆ. ಇದರಿಂದ ಡಬ್ಲ್ಯು.ಪಿ.ಪಿ. ಬಯಸಿದ್ದ ಮಿಶ್ರವರ್ಗ ವ್ಯವಸ್ಥೆಯಲ್ಲಿ ಸ್ವಂತ ಜಮೀನುಳ್ಳವರು, ಗೇಣಿದಾರರು, ಸಣ್ಣ ಪ್ರಮಾಣದ ಭೂಮಿ ಹೊಂದಿರುವವರು, ಬಡರೈತರು ಮತ್ತು ಕೃಷಿ ಕಾರ್ಮಿಕರೆಲ್ಲರೂ ಒಳಗೊಂಡಿದ್ದರು. ಪರಿಣಾಮವಾಗಿ ಅದಕ್ಕೆ ತನ್ನ ಪಕ್ಷವನ್ನೂ ವರ್ಗಹಿತವನ್ನೂ ಜತೆಜತೆಯಲ್ಲಿ ಕೊಂಡೊಯ್ಯಲಾಗಲಿಲ್ಲ. ೧೯೨೮ರ ಬಾರ್ಡೋಲಿ ಸತ್ಯಾಗ್ರಹವನ್ನು ಅದು ಎದುರಿಸಿದ ರೀತಿಯಲ್ಲಿ ಗಮನಿಸಿದರೆ ಅದು ಸ್ಪಷ್ಟವಾಗುತ್ತದೆ. ಇಲ್ಲಿ ಡಬ್ಲ್ಯು.ಪಿ.ಪಿ.ಗೆ ತನ್ನ ನೀತಿಯ ಸಂದಿಗ್ಧತೆಯನ್ನು ಹೋಗಲಾಡಿಸಿಕೊಳ್ಳಲು ಆಗಲಿಲ್ಲ. ಗಾಂಧೀಜಿಯ ಬಾರ್ಡೋಲಿ ಚಳವಳಿಯು ಆಗ ಸಕ್ರಿಯವಾಗಿತ್ತು. ಆದರೆ ಇದರಲ್ಲಿ ಭಾಗವಹಿಸಿದ್ದ ರೈತರಲ್ಲಿ ಹೆಚ್ಚಿನವರು ಶ್ರೀಮಂತ ಪಟಿದಾರರೇ ಆಗಿದ್ದರು.[23]ಈ ಸಂದರ್ಭದಲ್ಲಿ ಡಬ್ಲ್ಯು.ಪಿ.ಪಿ. ಚಳವಳಿಗೆ ಬೆಂಬಲ ಸೂಚಿಸಿ ಕೊಟ್ಟ ಹೇಳಿಕೆಯು ಅತ್ಯಂತ ಸಂಕ್ಷಿಪ್ತವೂ ಅಸ್ಪಷ್ಟವೂ ಆಗಿದ್ದು ಮನಸ್ಸಿಲ್ಲದ ಮನಸ್ಸಿನಿಂದ ಕೊಟ್ಟಂತಿತ್ತು. ಒಮ್ಮೆಯಂತೂ ಅದರ ನಾಯಕರಲ್ಲೊಬ್ಬರಾದ ಆರ್.ಎಸ್. ನಿಂಬ್ಕರ್ ಅವರು ಬಾರ್ಡೋಲಿ ಚಳವಳಿಯನ್ನು ಟೀಕಿಸುವುದಕ್ಕೂ ಹಿಂಜರಿಯಲಿಲ್ಲ. ಅವರು “ಬಾರ್ಡೋಲಿ ಸತ್ಯಾಗ್ರಹದ ಸಂಘಟಕರಿಗೆ ಕಾರ್ಮಿಕ ಹಾಗೂ ರೈತರ ಬಗ್ಗೆ ಯಾವುದೇ ಅನುಕಂಪವಿಲ್ಲದುದರಿಂದ ಅದು ಭೂಮಾಲೀಕರ ಶೋಷಣೆಯ ವಿರುದ್ಧ ಸೊಲ್ಲೆತ್ತದೆ ಕೇವಲ ಸಾಮ್ರಾಜ್ಯಶಾಹಿಯ ವಿರುದ್ಧ ಮಾತ್ರವಾಗಿದೆ.” ಎಂದು ಟೀಕಿಸಿದರು.[24]

ಆದರೆ ಇಂಗ್ಲೆಂಡಿನ ಕಮ್ಯುನಿಸ್ಟ್ ಪಕ್ಷದ ನಾಯಕರೂ ಇಂಡಿಯಾದ ಎಡಪಕ್ಷಗಳ ಹಿತೈಷಿಯೂ ಆಗಿದ್ದ ಕ್ಲೆಮೆನ್ಸ್‌ದತ್ ಇವರು ಬಾರ್ಡೋಲಿ ಸತ್ಯಾಗ್ರಹದ ಬಗೆಗಿನ ಡಬ್ಲ್ಯು.ಪಿ.ಪಿ.ಯ ನಿರಾಸಕ್ತಿಯನ್ನು ಆಕ್ಷೇಪಿಸಿದರು.

ಬಾರ್ಡೋಲಿ ಸತ್ಯಾಗ್ರಹಕ್ಕೆ ನಮ್ಮ ಸಕ್ರಿಯ ಬೆಂಬಲ ಘೋಷಿಸಬೇಕು. ಡಬ್ಲ್ಯು.ಪಿ.ಪಿ. ತನ್ನ ಮೌನದಿಂದ ಹೊರಬರಬೇಕು… ರೈತರು ಶ್ರೀಮಂತರಾಗಿರಲಿ ಬಡವರಾಗಿರಲಿ ಕೆಲವು ಹಂತದ ಕಷ್ಟಗಳು ಅವರಿಬ್ಬರಿಗೂ ಸಮಾನವಾಗಿದೆ. ಡಬ್ಲ್ಯು.ಪಿ.ಪಿ. ಅದರ ನಾಯಕತ್ವವನ್ನು ವಹಿಸಿಕೊಳ್ಳಬೇಕು

ಎಂದು ಅವರು ಬರೆದರು.* ಪ್ರಸ್ತುತ ಲೇಖನವು ಧನಾಗರೆಯವರು ಪ್ರಕಟಿಸಿದ ಪೆಸೆಂಟ್ ಮೂವ್‌ಮೆಂಟ್ಸ್ ಇನ್ ಇಂಡಿಯಾ (ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್ ೧೯೮೩) ಎನ್ನುವ ಕೃತಿಯಲ್ಲಿ ಪ್ರಕಟವಾದ ಅಧ್ಯಾಯವೊಂದರ ಅನುವಾದವಾಗಿದೆ. ಮಂಗಳೂರಿನ ಮಂಗಳಗಂಗೋತ್ರಿಯಿಂದ ೧೯೯೪ರಲ್ಲಿ ಪ್ರಕಟವಾದ ಅರಿವು ಬರಹ ಎನ್ನುವ ನಿಯತಕಾಲಿಕೆಯಲ್ಲಿ (೭ನೆಯ ಸಂಚಿಕೆ) ಈ ಅನುವಾದ ಲೇಖನ ಪ್ರಕಟವಾಗಿತ್ತು. ಈ ಲೇಖನವನ್ನು ಯಥಾಸ್ಥಿತಿಯಲ್ಲಿ ಬಳಸಿಕೊಳ್ಳಲು ಅನುಮತಿ ನೀಡಿದ ಅರಿವು ಬರಹದ ಗೆಳೆಯರಿಗೆ ನಾನು ಆಭಾರಿಯಾಗಿದ್ದೇನೆ. ಸಂ.

[1] ಎಂ.ಎನ್. ರಾಯ್ ರವರ, ಪೊಲಿಟಿಕಲ್ ಮೆವ್ಯೊರ್ಸ್, ಬೊಂಬಾಯಿ, ೧೯೬೪, ಪುಟ ೪೧೧-೧೮ ನೋಡಿ. ಡಿ.ಎನ್. ಡ್ರೂಹ್‌ಯವರ ಸೊವಿಯತ್ ರಷ್ಯಾ ಆಂಡ್‌ಇಂಡಿಯನ್ ಕಮ್ಯೂನಿಸಂ, ನ್ಯೂಯಾರ್ಕ್‌, ೧೯೫೯, ಪುಟ ೨೩-೬

[2] ವಿವರಗಳಿಗಾಗಿ ನೋಡಿ ಎನ್ ಕಾಸ್ ಆಂಡ್ ಸ್ಯಾಮ್‌ರವರ ಮಾರ್ಕಿಸಂ ಆಂಡ್ ಏಷ್ಯಾ, ಪುಟ ೧೫೯-೭೦, ೧೯೦-೨.

[3] ಡ್ರೂಹ್, ಸೋವಿಯತ್ ರಷ್ಯಾ ಅಂಡ್ ಇಂಡಿಯನ್ ಕಮ್ಯೂನಿಸಂ, ಪುಟ ೨೬-೨೭

[4] ಅದೇ, ಪುಟ ೨೯-೩೦

[5] ಎಂ. ಮಹಮ್ಮದ್ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಇಯರ್ಸ್ ಆಫ್ ಫಾಮೇಶನ್‌೧೯೨-೧೩೩, ಕಲ್ಕತ್ತಾ ೧೯೫೮ ಪುಟ ೧೪

[6] ನೋಡಿ, ರಿಪೋರ್ಟ್‌ಆಫ್ ದಿ ಪ್ರೋಸೀಡಿಂಗ್ಸ್ ಆಫ್ ದಿ ಥರ್ಟಿ ಸೆವೆಂನ್ತ್‌ ಸೆಶನ್ ಆಫ್ ದಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್, ಗಯಾ; ಡಿಸೆಂಬರ್ ೧೯೨೨, ಅಲಹಾಬಾದ್, ೧೯೨೩, ಪುಟ ೧೧೬-೧೭.

[7] ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಮೇಲೆ ಹಿಡಿತ ಸಾಧಿಸಬಯಸಿದ ರಾಯ್‌ರವರ ಪ್ರಯತ್ನದ ಬಗೆಗೆ ನೋಡಿ ಜಿ.ಡಿ. ಓವರ್‌ಸ್ಟ್ರೀಟ್ ಮತ್ತು ಎಂ.ವಿಂಡ್‌ಮಿಲ್ಲರ್‌ರವರ ಕಮ್ಯುನಿಸಂ ಇನ್ ಇಂಡಿಯಾ, ಬರ್ಕ್‌ಲೀ, ೧೯೫೯ಪುಟ ೪೪-೪೫.

[8] ಕಮ್ಯುನಿಸಂ ಇನ್ ಇಂಡಿಯಾ, ೧೯೨೪-೨೭ ಕಲ್ಕತ್ತಾ, ೧೯೭, ಪುಟ ೧೨೭-೨೮ ರಲ್ಲಿ ಇದು ಸ್ಪಷ್ಟವಾಗಿ ಇದೆ. ಎರಡನೆಯ ಕಾಮಿಂಟರ್ನ್‌ನ ನಂತರ ಸರಕಾರ ಒಂದು ವಿಶೇಷ ಗುಪ್ತದಳವನ್ನು ನೇಮಿಸಿತು. ಅಹಮ್ಮದ್‌ರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನೋಡಿ ಪುಟ ೭

[9] ಎಸ್. ಚೌದರಿ, ಪೆಸೆಂಟ್ಸ್ ಅಂಡ್ ವರ್ಕರ್ಸ್ ಮೂವ್‌ಮೆಂಟ್ ಇನ್ ಇಂಡಿಯಾ ೧೯೦೫-೨೯, ನ್ಯೂಡೆಲ್ಲಿ, ೧೯೭೧, ಪುಟ ೨೩೪-೩೫.

[10] ಮೊದಲು ೩೧ ಜನ ನಾಯಕರು ಸೆರೆ ಹಿಡಿಯಲ್ಪಟ್ಟರು. ನೋಡಿ ಎಲ್. ಹುಚಿನ್ ಸನ್, ಕಾನ್‌ಸ್ಟಿರೆಸಿ ಅಟ್ ಮೀರತ್, ಲಂಡನ್ ೧೯೩೫, ಪುಟ ೭೯-೮೦.

[11] ನೋಡಿ ಪಿ. ಗ್ಲಾಂಡಿಗ್‌ ‘ದಿ ಗ್ರೋತ್ ಆಫ್ ದಿ ಇಂಡಿಯನ್ ಸ್ಟ್ರೈಕ್ ಮೂವ್‌ಮೆಂಟ್, ೧೯೨೧-೨೯’ ದಿ ಲೇಬರ್ ಮಂತ್ಲಿ, ಸಂ. Xii,೭ (ಜುಲೈ ೧೯೩೦), ಪುಟ ೪೨೯-೩೦.

[12] ‘ಮೆನಿಫೆಸ್ಟೋ ಟು ದಿ ವರ್ಕರ್ಸ್ ಅಂಡ್ ಪೆಸೆಂಟ್ಸ್‌ಪಾರ್ಟಿ ಟು ದಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್, ಮದ್ರಾಸ್, ಡಿಸೆಂಬರ್ ೧೯೨೭’, ಕಲ್ಕತ್ತಾ ೧೯೨೭ ಎಮ್.ಸಿ.ಸಿ.ಇ IV ಕರಪತ್ರ ಪುಟ ೨೩ ರಲ್ಲಿ.

[13] ‘ದಿ ಫಸ್ಟ್ ಆಲ್ ಇಂಡಿಯಾ ಡಬ್ಲ್ಯು.ಪಿ.ಪಿ. ಕಾನ್‌ಫರೆನ್ಸ್, ಮಾರ್ಚ್ ೧೯೨೮, ಭಟ್‌ಪಾರಾ (ಕಲ್ಕತ್ತಾ ೧೯೨೮) ಎಮ್.ಸಿ.ಸಿ.ಇ.ವಿ.ಪಿ. ೪೬೭ (೪) ಪುಟ ೫೮-೫೯, ಮತ್ತು ‘ಲಿಸ್ಟ್ ಆಫ್ ಟ್ರೇಡ್ ಯೂನಿಯನ್ಸ್ ಆಫ್ ಬೆಂಗಾಲ್ ಎಮ್.ಸಿ.ಸಿ.ಇ.ವಿ.ಪಿ. ೫೨೬ ಪುಟ ೫೪-೫೫.

[14] ‘ದಿ ಪವರ್ ಆಫ್ ಲೇಬರ್’ (ಎನ್.ಡಿ.) ಎಮ್.ಸಿ.ಸಿ.ಇ.೧೧, ಪು೧ ೫೨೭ (೩), ಪುಟ ೨೮-೨೯

[15] ನೋಡಿ ಎಮ್.ಎನ್.ರಾಯ್, ‘ದಿ ಕಾನ್‌ಫರೆನ್ಸ್ ಆಫ್ ದಿ ವರ್ಕರ್ಸ್ ಅಂಡ್ ಪೆಸೆಂಟ್ಸ್ ಪಾರ್ಟಿ ಆಫ್ ಇಂಡಿಯಾ’ ೧೯, ಜನವರಿ, ೧೯೨೯; ಎಮ್.ಸಿ.ಇ.ಇ. ೧೧, ಪಿ. ೧೯೫೬ ಪುಟ ೩೦-೩೬.

[16] ಥೀಸಿಸ್ ಆನ್ ದಿ ರೆವೆಲ್ಯೂಶನರಿ ಮೂವ್‌ಮೆಂಟ್ ಇನ್ ದಿ ಕಾಲೋನೀಸ್ ಆಂಡ್ ಸೆಮಿಕಾಲೋನೀಸ್ ಎಕ್‌ಸ್ಟ್ರಾಕ್ಟ್‌ರೆಫರಿಂಗ್ ಟು ಇಂಡಿಯಾ (೧೨ ಡಿಸೆಂಬರ್ ೧೯೨೮) ಎಮ್.ಸಿ.ಸಿ.ಇ.ಸಿ. IV ಪಿ. ೩೩೪, ಪುಟ ೭೪-೭೫.

[17] ಭಾರತೀಯ ಕಮ್ಯುನಿಸ್ಟರ ಪ್ರಥಮ ತಲೆಮಾರು ಈ ವಿಷಯದಲ್ಲಿ ಯಾವುದೇ ಸಂಕೋಚ ಇಟ್ಟುಕೊಳ್ಳಲಿಲ್ಲ. ನೋಡಿ ಅಹಮ್ಮದ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪುಟ ೨೪, ಹುಚಿನ್‌ಸನ್, ಕಾನ್‌ಸ್ಪಿರೆಸಿ ಅಟ್ ಮೀರತ್, ಪುಟ ೩೬-೪೪; ಮತ್ತು ಪಿ.ಸ್ಟ್ರಾಟ್, ಬ್ಲೋವಿಂಗ್ ಆಫ್ ಇಂಡಿಯಾ ಕಲ್ಕತ್ತಾ ೧೯೯೫, ಪುಟ ೨೯.

[18] ನೋಡಿ ಪಿ. ಸ್ಟ್ರಾಟ್‌ಟು ಎಫ್.ಸಿ. ಮೆಲೊನಿ (೨ ಅಗೋಸ್ತು, ೧೯೨೮), ಎಮ್.ಸಿ.ಸಿ.ಇ. VIII ಪಿ, ೨೧೦೨ ಸಿ, ಪುಟ ೧೬.

[19] ಮೊದಲಿಗೆ ಬರೇ ೩೧ ಜನ ನಾಯಕರನ್ನು ಬಂಧಿಸಲಾಯಿತು. ಅನಂತರ ಎಲ್. ಹುಚಿನ್ ಸನ್ ಮತ್ತು ಎ. ಹೈದರ್‌ರವರನ್ನು ಆ ಗುಂಪಿಗೆ ಸೇರಿಸುವುದರ ಜತೆಗೆ ಒಟ್ಟು ಸಂಖ್ಯೆ ೩೩ ಕ್ಕೆ ಏರಿತು. ನೋಡಿ ಎಮ್.ಸಿ.ಸಿ.ಇ. VIII ಪಿ, ೨೪೮೫ ಪುಟ ೭೨-೭೩ ಮತ್ತು ಪಿ. ೨೪೩೪, ಪುಟ ೭೮-೭೯.

[20] ‘ಹೌಡು ಆರ್ಗನೈಸ್‌ಎ ವರ್ಕಿಂಗ್ ಪಾರ್ಟಿ’ (ಎನ್.ಡಿ.) ಎಮ್.ಸಿ.ಸಿ.ಇ. VIII ಪಿ ೨೩೨೩(ಪಿ) (೧) ಪುಟ ೧-೮.

[21] ಓವರ್‌ಸ್ಟ್ರೀಟ್ ಅಂಡ್ ವಿಂಡ್‌ಮಿಲ್ಲರ್, ಕಮ್ಯುನಿಸಂ ಇನ್ ಇಂಡಿಯಾ, ಪುಟ ೧೦೪-೧೦೫, ೧೦೯-೧೧೭.

[22] ‘ಫಸ್ಟ್ ಆಲ್ ಇಂಡಿಯಾ ವರ್ಕರ್ಸ್‌ಅಂಡ್ ಪೆಸೆಂಟ್ಸ್‌ಪಾರ್ಟಿ ಕಾನ್‌ಫರೆನ್ಸ್-ರಿಪೋರ್ಟ್‌’ (ಎನ್.ಡಿ) ಎಮ್.ಸಿ.ಸಿ.ಇ. V ಅನುಬಂಧ ಎನ್.ಪಿ. ೬೬೯, ಪುಟ ೮೧.

[23] ಬಾರ್ಡೋಲಿ ಸತ್ಯಾಗ್ರಹದ ಬಗೆಗಿನ ವಿವರಗಳಿಗಾಗಿ ನೋಡಿ, ಧನಾಗರೆ, ಅಗ್ರೇರಿಯನ್ ಮೂವ್‌ಮೆಂಟ್ಸ್‌ಅಂಡ್ ಗಾಂಧಿಯನ್‌ ಪಾಲಿಟಿಕ್ಸ್‌, ಅಧ್ಯಾಯ II.

[24] ದಿ ಬಾಂಬೆ ಕ್ರಾನಿಕಲ್, ೪ ಜೂನ್‌, ೧೯೨೮, ಪುಟ ೪. ಆ ಕಾಲದ ಕೆಲವು ಡಬ್ಲ್ಯೂ.ಪಿ.ಪಿ.ಯ ಕರಪತ್ರಗಳು ಬಾರ್ಡೋಲಿಯ ಕೆಲವು ಸಂಭಾವಿತ ನಾಯಕರು ಹೇಗೆ ಸತ್ಯಾಗ್ರಹಕ್ಕೆ ದ್ರೋಹ ಬರೆಗದು ಎಂಬುದನ್ನು ಸ್ಪಷ್ಟಪಡಿಸುತ್ತವೆ. ನೋಡಿ ಎಮ್.ಸಿ.ಸಿ.ಇ. IV (ಪಿ) ೪೧೫ (೧೩) ಪುಟ ೬೬-೬೮, ಮತ್ತು ಪಿ ೪೧೬ (೫) ಪುಟ ೭೭-೭೮.