೧೭೬೦ರ ಸನ್ಯಾಸಿ ಫಕೀರ ದಂಗೆಯಿಂದ ಆರಂಭವಾದ ಸಶಸ್ತ್ರ ಹೋರಾಟಗಳು ಮತ್ತು ರೈತಾಪಿ ದಂಗೆಗಳು, ಸಶಸ್ತ್ರ ಹೋರಾಟಗಾರರ ಹಲವು ಗುಂಪುಗಳು ದೇಶದಾದ್ಯಂತ ಪರಸರಿಸಿದ್ದವು. ೧೮೫೭ರ “ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು” ಹಾದು ೧೯೪೬ರ ರಾಯಲ್ ಭಾರತೀಯ ನೌಕಾದಳದ ಬಂಡಾಯದೊಂದಿಗೆ ಈ ಹೋರಾಟ ವಾಹಿನಿಯು ಅಂತ್ಯಗೊಂಡಿತು. ಇವೆಲ್ಲ ಸಶಸ್ತ್ರ ಹೋರಾಟಗಳು ಮತ್ತು ರೈತಾಪಿ ದಂಗೆಗಳನ್ನು ಬ್ರಿಟಿಷರು ಕ್ರೂರವಾಗಿ ಹತ್ತಿಕ್ಕಿದರೂ ಈ ಪ್ರತಿಭಟನೆಗಳು ಬ್ರಿಟಿಷ್ ‌ಆಳ್ವಿಕೆಯ ಬೇರುಗಳನ್ನು ಅಲುಗಾಡಿಸುವಲ್ಲಿ ಯಶಸ್ವಿಯಾದವು.

ವಸಾಹತು ಕಾಲದಲ್ಲಿ ಬ್ರಿಟಿಷರ ದೌರ್ಜನ್ಯ, ದಬ್ಬಾಳಿಕೆ ಮತ್ತು ಶೋಷಣೆಯ ನೊಗದಿಂದ ಭಾರತ ಸ್ವಾತಂತ್ರ್ಯ ಗಳಿಸುವಲ್ಲಿ ಮೂರು ಪ್ರಮುಖ ಸ್ವಾತಂತ್ರ್ಯ ಹೋರಾಟ ವಾಹಿನಿಗಳು ಪ್ರಧಾನ ಪಾತ್ರ ವಹಿಸಿವೆ. ಈ ವಾಹಿನಿಗಳು ಕೆಲವೊಮ್ಮೆ ಒಂದಕ್ಕೊಂದು ಎದುರಾಗಿದ್ದು ಮತ್ತು ಕೆಲವು ವೇಳೆ ಒಂದರೊಡನೊಂದು ಕೂಡಿಕೊಂಡ ಫಲವಾಗಿ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರವಾಗಿ ಮುನ್ನಡೆಯಲು ಸಾಧ್ಯವಾಯಿತು. ಅವುಗಳನ್ನು ಕೆಳಗಿನಂತೆ ಸ್ಥೂಲವಾಗಿ ವಿಂಗಡಿಸಬಹುದಾಗಿದೆ:

೧. ೧೯೨೦ರ ನಂತರದಲ್ಲಿ ಮಹಾತ್ಮಾಗಾಂಧಿಯವರ ನಾಯಕತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ರಾಷ್ಟ್ರೀಯ ಚಳವಳಿಯ ಮೇಲೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸುವಲ್ಲಿ ಯಶಗೊಂಡಿತ್ತು. ಬ್ರಿಟಿಷ್ ‌ಆಳ್ವಿಕೆಯ ವಿರುದ್ಧ ಮಿಲಿಯಟ್ಟಲೆ ಭಾರತೀಯ ಜನತೆಯನ್ನು ಅಹಿಂಸಾ ನೆಲೆಗಟ್ಟಿನಲ್ಲಿ ಕಾಂಗ್ರೆಸ್‌ ಹೋರಾಟ ಮಾಡುತ್ತಿತ್ತು. ಆದರೆ ಕಾಂಗ್ರೆಸ್ಸಿಗೆ ಸೈದ್ಧಾಂತಿಕವಾಗಿ ಭಿನ್ನಭಿನ್ನ ಹಾದಿ ತುಳಿದ ರಾಜಕೀಯ ವರ್ತುಲಗಳನ್ನು ಒಂದೆಡೆ ತರಲು ಮತ್ತು ಆ ಮೂಲಕ ಎಲ್ಲ ಸಮುದಾಯಗಳನ್ನು ಪ್ರತಿನಿಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನ ಧರ್ಮನಿರಪೇಕ್ಷತೆಯ ಹೋರಾಟವು ಈ ಬಗೆಯ ರಾಷ್ಟ್ರೀಯ ಹೋರಾಟದ ಮುಖ್ಯ ಲಕ್ಷಣವಾಗಿತ್ತು.

೨. ೧೯೨೧ರಲ್ಲಿ ಅಹಮದಾಬಾದ್‌ ಮಹಾಧಿವೇಶನದಲ್ಲಿ ಕಮ್ಯುನಿಸ್ಟರು ಸಂಪೂರ್ಣ ಸ್ವಾತಂತ್ರ್ಯವನ್ನು ಪ್ರಥಮ ಬಾರಿಗೆ ಪ್ರತಿಪಾದಿಸಿದರು. ಆಗಿನ್ನೂ ಭಾರತೀಯ ಕಾಂಗ್ರೆಸ್‌ ಬ್ರಿಟಿಷರಿಂದ ‘ಡೊಮಿನಿಯನ್‌ ಸ್ಥಾನಮಾನ’ಕ್ಕಾಗಿಯಷ್ಟೆ ಬೇಡಿಕೆ ಇಟ್ಟಿತ್ತು. ಬ್ರಿಟಿಷರ ನಿಷೇಧಾಜ್ಞೆ ಮತ್ತು ತೀವ್ರ ದಾಳಿಯನ್ನು ಲೆಕ್ಕಿಸದೆ, ದುಡಿಯುವ ಜನ ಮತ್ತು ರೈತಾಪಿಯು ಸಂಘಟನೆಗೊಂಡು ತೆಲಂಗಾಣ ಸಶಸ್ತ್ರ ರೈತಾಪಿ ಬಂಡಾಯದಂಥಹ ವೀರೋಚಿತ ಹೋರಾಟಗಳು ಮೂಡಿಬಂದವು.

೩. ರಾಜಾರಾಂ ಮೋಹನರಾಯ್‌, ಮಹಾತ್ಮ ಜ್ಯೋತಿರಾವ್‌ ಫುಲೆ, ಈಶ್ವರ್‌ಚಂದ್ರ ವಿದ್ಯಾಸಾಗರ್‌, ನಾರಾಯಣ ಗುರು, ಇ. ವಿ. ರಾಮಸ್ವಾಮಿ ನಾಯ್ಕರ್‌ (ಪೆರಿಯಾರ್‌) ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ರಂಥ ಧೀಮಂತರು ಜಾತಿ ಮತ್ತು ಲಿಂಗ ತಾರತಮ್ಯದ ವಿರುದ್ಧ ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ಸಾಮಾಜಿಕ ಸುಧಾರಣಾ ಚಳವಳಿಯನ್ನು ದೇಶದ ವಿವಿಧ ಭಾಗಗಳಲ್ಲಿ ನಡೆಸಿದರು.

ಪ್ರಸ್ತುತ ಸಂಬಂಧವು ಭಾರತದಲ್ಲಿ ಹುಟ್ಟಿಕೊಂಡ ಕ್ರಾಂತಿಕಾರಿ ಹೋರಾಟದ ಸಿದ್ಧಾಂತವು ೨೦ನೆಯ ಶತಮಾನದ ಉದ್ದಕ್ಕೂ ಭಿನ್ನಭಿನ್ನ ವ್ಯಕ್ತಿಗಳನ್ನು ಹಾಗೂ ಸಂಘಟನೆಗಳನ್ನು ಹಾದು ನಿರ್ವಸಹತೀಕರಣಕ್ಕೆ ಕಾರಣವಾದ ಬಗೆಗಳನ್ನು ವಿವರಿಸಲು ಪ್ರಯತ್ನಿಸುತ್ತಿದೆ. ಮೇಲ್ಕಂಡ ಮೂರು ಪ್ರಧಾನ ರಾಜಕೀಯ ಮತ್ತು ಸಾಮಾಜಿಕ ಚಿಂತನೆದಾರೆಗಳಿಂದ ಹೊರತಾದ ಪ್ರಮುಖ ಹೋರಾಟದ ಮಾದರಿಯೇ ಕ್ರಾಂತಿಕಾರಿ ಹೋರಾಟಗಳು. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಆರಂಭಿಕ ಕ್ರಾಂತಿಕಾರಿಗಳಿಂದ ಆರಂಭವಾದ ಈ ಯತ್ನವು ಗಂಭೀರವಾದ ಸ್ವರೂಪವನ್ನು ಪಡೆದುಕೊಂಡಿದ್ದು ೧೯೩೦-೪೦ರಲ್ಲಿ ಭಗತ್‌ಸಿಂಗ್‌ ಮತ್ತು ಸುಭಾಶ್‌ಚಂದ್ರ ಬೋಸರ ನಾಯಕತ್ವದಲ್ಲಿ ಎನ್ನುವುದು ಗಮನಾರ್ಹವಾಗಿದೆ. ನಂತರದ ಕಾಲಾವಧಿಯಲ್ಲಿ ಕ್ರಾಂತಿಕಾರಿ ಪ್ರತಿಭಟನೆಯ ಚಹರೆಗಳು ಮುಖ್ಯವಾಗಿ ೧೯೪೬ರ ಇಂಡಿಯನ್‌ ನೌಕಾದಳದ ಬಂಡಾಯದಲ್ಲಿ ಕಂಡುಬಂದಿರುವುದನ್ನು ನೋಡಬಹುದು. ಕ್ರಾಂತಿಕಾರಿಗಳ ಈ ಬಗೆಯ ರಾಷ್ಟ್ರೀಯ ಹೋರಾಟದ ಮಗ್ಗುಲನ್ನು ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

* * *

ಆರಂಭಿಕ ಹೋರಾಟಗಳು

೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರವೂ ದೇಶದೆಲ್ಲೆಡೆ ಅಲ್ಲಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ಅವ್ಯಾಹತವಾಗಿ ಮುಂದುವರಿದೇ ಇದ್ದವು.* ಬ್ರಿಟಿಷ್ ‌ಸಾಮ್ರಾಜ್ಯಶಾಹಿಯ ಆರಂಭಿಕ ರಾಷ್ಟ್ರೀಯ ಹೋರಾಟಕ್ಕೆ ಮತ್ತು ಅದರಲ್ಲೂ ಕ್ರಾಂತಿಕಾರಿ ಹೋರಾಟಕ್ಕೆ ಸಂಬಂಧಿಸಿದ ವಿವರಗಳು ಪ್ರಸ್ತುತ ಸಂಪುಟದ ೩೯-೫೩ ಪುಟಗಳಲ್ಲಿವೆ. ವಿರುದ್ಧ ಕತ್ತಿ ಮಸೆಯುತ್ತಿದ್ದ ಕ್ರಾಂತಿಕಾರಿ ಗುಂಪುಗಳು ಮಹಾರಾಷ್ಟ್ರ, ಬಂಗಾಳ, ಒರಿಸ್ಸಾ, ಬಿಹಾರ, ಉತ್ತರ ಪ್ರದೇಶ ಮತ್ತು ಪಂಜಾಬ್‌ಗಳಲ್ಲಿ ಕೇಂದ್ರಿಕೃತವಾಗಿದ್ದವು. ವಿಶೇಷವಾಗಿ ಬಂಗಾಳದಲ್ಲಿ ‘ಢಾಕಾ ಅನುಶೀಲನ್‌’ ಸಂಘಟನೆಯು ರಾಜ್ಯದಾದ್ಯಂತ ತನ್ನ ಶಾಖೆಗಳನ್ನು ಹೊಂದಿದ್ದು ನಿಧಿ ಸಂಗ್ರಹಣೆಗಾಗಿ ಸ್ವದೇಶಿ ಢಕಾಯಿತಿಗಳನ್ನು ಆಯೋಜಿಸುತ್ತಿತ್ತು ಮತ್ತು ಅಧಿಕಾರಿಗಳನ್ನು ಕೊಲ್ಲುತ್ತಿತ್ತು. ಜತೀಂದ್ರನಾಥ ಮುಖರ್ಜಿ ನಾಯಕತ್ವದ ‘ಯುಗಾಂತರ’ ಸಂಘಟನೆಯು ಹಲವು ಗುಂಪುಗಳನ್ನು ಪ್ರತಿನಿಧಿಸುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಸಾಧಿಸಿ ಸೂಕ್ತ ಸಮಯದಲ್ಲಿ ಮಿಲಿಟರಿ ಪಿತೂರಿ ನಡೆಸಲು ಅಗತ್ಯ ಸಂಪನ್ಮೂಲಗಳನ್ನು ಕಲೆ ಹಾಕುತ್ತಿತ್ತು. ರಾಸ್‌ಬಿಹಾರಿ ಮತ್ತು ಸಚಿಂದ್ರನಾಥ್‌ ಸನ್ಯಾಲ್‌ರವರು ಪಂಜಾಬ್‌, ದೆಹಲಿ ಮತ್ತು ಉತ್ತರ ಪ್ರದೇಶಗಳಲ್ಲೆಲ್ಲ ರಹಸ್ಯ ಚಟುವಟಿಕೆಗಳನ್ನು ವಿಸ್ತರಿಸುತ್ತಿರುವಾಗಲೇ ಹಾರ್ಡಿಂಗ್‌ಎಂಬ ಬ್ರಿಟಿಷ್ ‌ಅಧಿಕಾರಿಯ ಮೇಲೆ ೧೯೧೨ ಡಿಸೆಂಬರ್‌೨೩ ರಂದು ಬಾಂಬ್‌ದಾಳಿ ನಡೆಸಿದರು.

ಭಾರತೀಯ ಕ್ರಾಂತಿಕಾರಿಗಳು ತಮ್ಮ ಕಾರ್ಯಾಚರಣೆಗಳಿಗೆ ಅತ್ಯಗತ್ಯವಾದ ಶಸ್ತ್ರಾಸ್ತ್ರಗಳನ್ನು ಅರಸುತ್ತಾ ವಿದೇಶಕ್ಕೂ ತೆರಳಿದರು. ಲಂಡನ್‌ನಲ್ಲಿ ಶ್ಯಾಮ್‌ಜಿ ಕೃಷ್ಣಾವರ್ಮ ಅವರು ೧೯೦೫ರಲ್ಲಿ ಭಾರತೀಯ ವಿದ್ಯಾರ್ಥಿ ಕೇಂದ್ರವೊಂದನ್ನು ಸ್ಥಾಪಿಸಿದರು. ೧೯೦೭ರ ನಂತರ ಅದನ್ನು ವಿ.ಡಿ. ಸಾವರ್ಕರ್‌ ನಾಯಕತ್ವದ ಗುಂಪು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಈ ವಲಯದ ಸಂಪರ್ಕದಲ್ಲಿದ್ದ ಮದನ್‌ ಲಾಲ್‌ಧಿಂಗ್ರಾ ಭಾರತೀಯ ಕಛೇರಿ ಅಧಿಕಾರಿ ಕರ್ಜನ್‌ ವೈಲಿಯನ್ನು ೧೯೦೯ರ ಜುಲೈನಲ್ಲಿ ಕೊಂದು ಹಾಕಿದರು. ಬ್ರಿಟಿಷರು ಅವರನ್ನು ನೇಣಿಗೇರಿಸುವ ಸಂದರ್ಭದಲ್ಲಿ ಅವರು ನೀಡಿರುವ ಹೇಳಿಕೆ ಇಲ್ಲಿ ಉಲ್ಲೇಖಾರ್ಹ. ‘ತಾಯಿಯು ಹೆರಿಗೆ ಸಮಯದಲ್ಲಿ ಶ್ರೀಮಂತನೂ ಅಲ್ಲದ, ಸಮರ್ಥನೂ ಅಲ್ಲದ ನನ್ನಂಥಹ ಬಡಮಗನು ರಕ್ತವನ್ನು ಮಾತ್ರವೇ ಕೊಡಬಲ್ಲೆನು. ಇದೇ ತಾಯಿಂದ ಹುಟ್ಟಿ ಇಂಥಹ ಪಾವಿತ್ರ್ಯ ಕಾರ್ಯಪೂರ್ಣಗೊಳ್ಳುವವರೆಗೂ ಅವಳು ಸ್ವತಂತ್ರಗೊಳ್ಳುವವರೆಗೂ ನಾನು ಮತ್ತೆ ಸಾಯಲು ಸಿದ್ಧ.

ಈ ನಡುವೆ, ಬ್ರಿಟನ್‌ ಮತ್ತು ಯೂರೋಪ್‌ಗಳಲ್ಲಿ ಹಲವಾರು ಸಣ್ಣ ಸಣ್ಣ ಭಾರತೀಯ ವಲಸಿಗ ಗುಂಪುಗಳಿದ್ದವು. ಆದರೆ ಅಮೆರಿಕದಲ್ಲಿ ಮೊದಲಬಾರಿಗೆ ಕ್ರಾಂತಿಕಾರಿ ಚಳವಳಿಯು ಸಾಮೂಹಿಕ ನೆಲೆಯನ್ನು ಹೊಂದುವಲ್ಲಿ ಸಫಲವಾಗಿತ್ತು. ವ್ಯಾಪಾರಿಗಳು ಮತ್ತು ಕಾರ್ಮಿಕರಿಂದ ಕೂಡಿದ ಸಿಖ್ಖರೇ ಹೆಚ್ಚಾಗಿದ್ದ ಸುಮಾರು ೧೫೦೦೦ ಭಾರತೀಯರು ಇಲ್ಲಿಗೆ ೧೯೧೪ರ ಹೊತ್ತಿಗೆ ಬಂದಿದ್ದರು. ಹಲವು ಜನಾಂಗೀಯ ತಾರತಮ್ಯಗಳಿಂದ ನರಳಿದರೂ ಕೂಡ ಬ್ರಿಟಿಷ್ ‌ಭಾರತೀಯ ಸರ್ಕಾರ ಏನೇನೂ ಮಾಡಿರಲಿಲ್ಲ. ಈ ಮಧ್ಯೆ ೧೯೧೩ರಲ್ಲಿ ಪ್ರಸಿದ್ಧ ಗದ್ದರ್‌ ಚಳವಳಿಯು ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಸೊಹಾನ್‌ಸಿಂಗ್‌ಭಕ್ನಾ ಮತ್ತು ಹರ್‌ ದಯಾಳ್‌ ಅವರಿಂದ ಸ್ಥಾಪಿತಗೊಂಡಿತ್ತು.

೧೯೦೭ರಲ್ಲಿ ಲಂಡನ್ನಿನ ಗುಂಪೊಂದು ಪ್ರಕಾಶನ ಮಾಡಿದ ‘ಓ ವೀರ ಬಲಿದಾನಿ’ ಕರಪತ್ರವು ೧೮೫೭ರ ಹಿಂದೂ ಮುಸ್ಲಿಮ್‌ ಜಂಟಿ ಬಂಡಾಯವನ್ನು ಸ್ಮರಣೆಗೆ ತರುತ್ತದೆ. ‘ಪರಂಗಿಯವರ ಆಳ್ವಿಕೆಯನ್ನು ಅದ್ಹೇಗೆ ನುಚ್ಚುನೂರು ಮಾಡಲಾಗುತ್ತಿದೆ ಮತ್ತು ಹಿಂದೂ ಹಾಗೂ ಮೊಹಮ್ಮದೀಯರ ಸಹಮತದಿಂದ ಸ್ವದೇಶಿ ಸಿಂಹಾಸನ ಸ್ಥಾಪಿಸಲಾಗುತ್ತಿದೆ…’

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ದೃಷ್ಟಿಕೋನ ಮೂಡಿಬರುತ್ತಿತ್ತು. ಭಾರತೀಯ ಪತ್ರಿಕೆಗಳಾದ ಇಂಡಿಯನ್‌ ಸೋಷಿಯಾಲಾಜಿಸ್ಟ್‌, ವಂದೇ ಮಾತರಂ, ಚಟ್ಟೋಪಾಧ್ಯಾಯರ ‘ತಲ್ವಾರ್‌’, ತಾರಕನಾಥ್‌ರ ‘ಸ್ವತಂತ್ರ ಹಿಂದೂಸ್ತಾನ್‌’ ಮತ್ತು ಗದ್ದರ್‌ ಪತ್ರಿಕೆಗಳನ್ನು ಭಾರತೀಯ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿದೇಶದಲ್ಲಿದ್ದ ಯುಗಾಂತರ್‌ ಗುಂಪಿನ ನಾಯಕ ನರೇನ್‌ ಭಟ್ಟಾಚಾರ್ಯ ಎಂ.ಎನ್‌. ರಾಯ್‌, ವೀರೇಂದ್ರನಾಥ್‌ ಚಟ್ಟೋಪಾಧ್ಯಾಯ, ಅಬಾನಿ ಮುಖರ್ಜಿ ಮತ್ತು ಕೆಲವು ಗದ್ದರ್‌ ಹಿರಿಯರು ಭಾರತದ ಪ್ರಥಮ ಕಮ್ಯುನಿಸ್ಟರಾಗಿ ಮೂಡಿ ಬಂದಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಪ್ರಥಮ ಮಹಾಯುದ್ಧ ಸಮಯದಲ್ಲಿ ಕ್ರಾಂತಿಕಾರಿ ಭಯೋತ್ಪಾದಕರನ್ನು ಗಂಭೀರವಾಗಿ ಹತ್ತಿಕ್ಕಿದ್ದರಿಂದ ಬಹುತೇಕ ನಾಯಕರು ಸೆರೆಮನೆಯಲ್ಲಿ ಇಲ್ಲವೋ ತಪ್ಪಿಸಿಕೊಂಡೋ ತಿರುಗುತ್ತಿದ್ದರು. ಮೌಂಟೆಗೊ ಚೇಮ್ಸ್‌ಫೋರ್ಡ್‌ ಸುಧಾರಣೆ ಜಾರಿಗೆ ತರುವ ಸಲುವಾಗಿ ಒಂದು ಸೌಹಾರ್ಧ ವಾತಾವರಣ ಸೃಷ್ಟಿಸಲು ಬಂಧಿತ ನಾಯಕರನ್ನು ಬಿಡುಗಡೆ ಮಾಡಲಾಯಿತು. ಹೀಗೆ ಬಿಡುಗಡೆಗೊಂಡ ಕ್ರಾಂತಿಕಾರಿ ಭಯೋತ್ಪಾದಕರು ಗಾಂಧೀಜಿ, ಸಿ. ಆರ್‌. ದಾಸ್‌ ಮತ್ತು ಇತರೆ ನಾಯಕರ ನಾಯಕತ್ವದಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗಿಯಾದರು.

ಆದರೆ, ೧೯೨೨ರ ಚೌರಿಚೌರಾ ಘಟನೆಯ ನಂತರ ಗಾಂಧೀಜಿಯವರು ಅಸಹಕಾರ ಚಳವಳಿಯಿಂದ ಹಿಂದೆ ಸರಿದದ್ದರಿಂದ ಬಂಗಾಳ, ಉತ್ತರ ಪ್ರದೇಶ ಮತ್ತು ಪಂಜಾಬ್‌ ಪ್ರಾಂತ್ಯದ ವಿದ್ಯಾವಂತ ಯುವಜನತೆ ಮತ್ತು ಕ್ರಾಂತಿಕಾರಿ ಭಯೋತ್ಪಾದನಾ ಚಟುವಟಿಕೆಯನ್ನು ತೀವ್ರಗೊಳಿಸಿದರು. ಹೀಗಾಗಿ ಕ್ರಾಂತಿಕಾರಿ ಭಯೋತ್ಪಾದನಾ ರಾಜಕೀಯದ ಪ್ರಮುಖ ಹೊಸ ನಾಯಕರಾದ ಜೋಗೇಶ್ ಚಂದ್ರ ಚಟರ್ಜಿ, ಸೂರ್ಯಸೇನ್‌, ಜತಿನ್‌ದಾಸ್‌, ಚಂದ್ರಶೇಖರ್‌ ಆಜಾದ್‌, ಭಗತ್‌ಸಿಂಗ್‌, ಸುಖ್‌ದೇವ್‌, ಶಿವವರ್ಮ, ಭಗವತಿ ಚರಣ್‌ ವೋಹ್ರಾ ಮತ್ತು ಜಯದೇವ್‌ ಕಪೂರ್‌ ಮುಂತಾದವರು ಅಸಹಕಾರ ಚಳವಳಿಯಲ್ಲಿ ಈ ಹಿಂದೆ ಪಾಲ್ಗೊಂಡಿದ್ದವರೇ ಆಗಿದ್ದರು.

ಈ ಮುಂಚಿನ ಬಂಧಿಗಳ ಸಂಪಾದಕತ್ವದಲ್ಲಿ ಆತ್ಮಶಕ್ತಿ, ಸಾರಥಿ ಮತ್ತು ಬಿಜೋಲಿ ಎಂಬ ಬಂಗಾಳಿ ಪತ್ರಿಕೆಗಳು ಹಳೆಯ ಕ್ರಾಂತಿಕಾರಿಗಳ ತ್ಯಾಗ ಬಲಿದಾನಗಳ ಕುರಿತು ಹಲವು ಲೇಖನಗಳನ್ನು ಬರೆದವು. ೧೯೨೩-೨೪ರಲ್ಲಿ ಡೇ ಎಂಬ ಬ್ರಿಟಿಷ್ ‌ಅಧಿಕಾರಿಯನ್ನು ಗೋಪಿನಾಥ್‌ ಶಾ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ, ಬ್ರಿಟಿಷರು ಬೃಹತ್‌ ರೀತಿಯಲ್ಲಿ ಹಲವರನ್ನು ಬಂಧಿಸಿದರು. ಬಂಧಿತರು ೧೯೨೮ರಲ್ಲಿ ಬಿಡುಗಡೆಯಾಗುವವರೆಗೂ ಭಯೋತ್ಪಾದನಾ ಚಟುವಟಿಕೆಗಳು ಕೆಲಮಟ್ಟಿಗೆ ಸ್ಥಗಿತಗೊಂಡಿದ್ದವೆಂದೇ ಹೇಳಬಹುದು. ಈ ಮಧ್ಯೆ, ಸಚಿನ್‌ ಸನ್ಯಾಲ್‌ ಮತ್ತು ಜೋಗೇಶ್‌ ಚಂದ್ರ ಚಟರ್ಜಿಯವರು ಆರಂಭಿಸಿದ ‘ಹಿಂದೂಸ್ತಾನ್‌ ರಿಪಬ್ಲಿಕ್‌’ ಎಂಬ ಸಂಘಟನೆ ಕೂಡ ಕ್ರಿಯಾಶೀಲವಾಗಿತ್ತು.

* * *

ಭಗತ್ಸಿಂಗ್

ಕೇವಲ ರಕ್ತಪಾತವಷ್ಟೆ ಕ್ರಾಂತಿಯಲ್ಲ. ಕ್ರಾಂತಿಯೆಂದರೆ ಬರೆ ಬಾಂಬು, ಪುಸ್ತೂಲುಗಳ ಹೋರಾಟವಲ್ಲ. ಸ್ವಾತಂತ್ರ್ಯ ಎನ್ನುವುದೇ ಕ್ರಾಂತಿ. ಶೋಷಿತ ವ್ಯವಸ್ಥೆಯನ್ನು ಕಿತ್ತೊಗೆದು ಶ್ರಮಿಕರು ವಿಮೋಚನೆ ಪಡೆಯುವುದೇ ಕ್ರಾಂತಿ. ಅಪ್ಪಟ ಕ್ರಾಂತಿಯು ಎಂದಿಗೂ ಒಡೆಯರ, ಪ್ರಭುಗಳ, ಶೋಷಕರ ವಿರೋಧಿ   – ಭಗತ್‌ಸಿಂಗ್‌

ಪ್ರಪಂಚದ ಯಾವುದೇ ರಾಷ್ಟ್ರದ ಇತಿಹಾಸದ ಪುಟಗಳನ್ನು ತಿರುವಿಹಾಕಿದರೂ ಸಹ ಭಗತ್‌ಸಿಂಗ್‌ರಷ್ಟು ಚಿಕ್ಕ ವಯಸ್ಸಿನಲ್ಲೇ ಮಾನವ ಇತಿಹಾಸದಲ್ಲಿ ಅಚ್ಚಳಿಯದ ಛಾಪೊತ್ತಿರುವ ಅಪ್ರತಿಮ ಸಾಹಸಿಗರು ಕಾಣಸಿಗುವುದಿಲ್ಲ. ಧುಮ್ಮಿಕ್ಕುವ ಜಲಪಾತದಂತಹ ಹುಮ್ಮಸ್ಸು, ಎದೆ ಝಲ್ಲೆನಿಸುವ ಧರ್ಯ, ಎಂಥಹವರನ್ನೂ ವಿದ್ಯುತ್‌ ಸಂಚಲನಕ್ಕೀಡು ಮಾಡುವಂಥ ವ್ಯಕ್ತಿತ್ವ ಹೊಂದಿದ್ದ ಭಗತ್‌ಸಿಂಗ್‌, ಚಂದ್ರಶೇಖರ್‌ ಆಜಾದ್‌ ಮತ್ತು ಸಂಗಡಿಗರಾದ ರಾಜಗುರು, ಸುಖ್‌ದೇವ್, ಬಿ. ಕೆ. ದತ್‌, ಶಿವವರ್ಮ ಮುಂತಾದ ಕ್ರಾಂತಿಕಾರಿಗಳು, ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ತಮ್ಮದೇ ಆದ ವಿಶೇಷ ಸ್ಥಾನವನ್ನು ಸೃಷ್ಟಿಸಿದ್ದಾರೆ. ಯುವ ಜನರ ಸ್ಫೂರ್ತಿ ಮತ್ತು ಕೆಚ್ಚೆದೆಯ ಪ್ರತೀಕದಂತಿದ್ದ ಅವರ ಜನಪ್ರಿಯತೆಯು ಕೋಟ್ಯಂತರ ಯುವಜನರ ಎಚ್ಚರಿಕೆ ಘಂಟೆಯ ಪ್ರತಿಧ್ವನಿಗಳಾಗಿ ಮಾರ್ಪಟ್ಟು ಬ್ರಿಟಿಷರ ಪಾಲಿಗೆ ಆಗಂತುಕನಂತೆ ಅಪ್ಪಳಿಸಿತೆಂದರೆ ಉತ್ಪ್ರೇಕ್ಷೆಯೆಂದೇನೂ ಅನಿಸದು. ಅವರು ಭಾರತೀಯ ಯುವಜನತೆಯ ವಿರೋಚಿತ ಹೋರಾಟಗಳು ಮತ್ತು ಸಾಹಸ ಶೌರ್ಯಗಳ ಮತ್ತೊಂದು ಮುಖವೆತ್ತಂತಿದ್ದರು.

ಭಗತ್‌ಸಿಂಗ್‌ ಜನಿಸಿದ್ದು ೧೯೦೭ರ ಸೆಪ್ಟೆಂಬರ್‌ ೨೭ ರಂದು ಈಗ ಪಾಕಿಸ್ತಾನಕ್ಕೆ ಸೇರಿರುವ ಲಾಯಲ್‌ಪುರ ಜಿಲ್ಲೆಯ ಜರಾನ್‌ವಾಲಾ ತಾಲ್ಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ. ಅವರ ತಾಯಿ ಶ್ರೀಮತಿ ವಿದ್ಯಾವತಿ ಮತ್ತು ತಂದೆ ಕಿಶನ್‌ಸಿಂಗ್‌ ಅವರು. ಅವರ ತಂದೆ ಜೀವವಿಮಾ ಕಂಪನಿಯಲ್ಲಿ ಏಜೆಂಟರಾಗಿ ವೃತ್ತಿ ಮಾಡುತ್ತಿದ್ದರು. ಭಗತ್‌ರ ಮೇಲೆ ಅತೀವ ಪ್ರಭಾವವನ್ನು ಬೀರಿದ್ದವರೆಂದರೆ ವರ ಚಿಕ್ಕಪ್ಪ ಅಜಿತ್‌ಸಿಂಗ್‌. ಈಗಾಗಲೇ ಅಜಿತ್‌ಸಿಂಗರು ಉಗ್ರ ಭಾಷಣಕಾರರಾಗಿದ್ದು ರೈತರ ನಡುವೆ ಹಲವಾರು ಚಳವಳಿಗಳನ್ನು ಸಂಘಟಿಸಿ ಬ್ರಿಟಿಷರು ಬಂಧನಕ್ಕೀಡು ಮಾಡಲು ಬಲೆ ನೇಯ್ದಿದ್ದರು ಸಿಗದೆ ಅವರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ಇದರೊಂದಿಗೆ ಜಲಿಯನ್‌ ವಾಲಾಬಾಗ್‌ನಲ್ಲಿ ಬ್ರಿಟಿಷರು ನಡೆಸಿದ ಮಾರಣಹೋಮದಿಂದುಂಟಾದ ರಕ್ತದ ಕೆಂಪು ಕಲೆ ಅವರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸಿ ಮನಸ್ಸಿನಲ್ಲಿ ಹೋರಾಟದ ಚಿತ್ತಾರ ಮೂಡಿಸಿತ್ತು. ಪಂಜಾಬಿನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಲಾಹೋರ್‌ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕರ್ತಾರ ಸಿಂಗ್‌ ಸರಭ್‌ ಅವರನ್ನು ೧೯೧೫ರಲ್ಲಿ ಅವರ ೨೦ನೆಯ ವಯಸ್ಸಿನಲ್ಲೇ ನೇಣಿಗೇರಿಸಲಾಗಿತ್ತು. ರಾಷ್ಟ್ರ ವಿಮೋಚನೆಯೊಂದೇ ನನ್ನ ಗುರಿ. ಯಾವುದೇ ವ್ಯಕ್ತಿ, ರಾಷ್ಟ್ರ, ಧರ್ಮ ಅಥವಾ ಜನಾಂಗದ ಮೇಲೆ ದ್ವೇಷ ಸಾಧಿಸಲು ನಾನಾವುದನ್ನೂ ಮಾಡಿಲ್ಲ. ನನಗೆ ಬೇಕಾಗಿರುವುದೊಂದೆ ಸ್ವಾತಂತ್ರ್ಯ ಅದೊಂದೇ ನನ್ನ ಕನಸು ಎಂಬ ಸರಬ್‌ರ ಕೊನೆಗಾಲದ ಮಾತುಗಳು ಅವರಲ್ಲಿ ಕ್ರಾಂತಿಯ ಉದ್ದೀಪನ ಹಚ್ಚಿದ್ದವು. ಇದು ಭಗತ್‌ರನ್ನು ಮೈನವಿರೇಳಿಸಿ ಸಾವಿಗೇ ಸವಾಲು ಹಾಕುವ ಗುಣವನ್ನು ಮೈಗೂಡುವಂತೆ ಮಾಡಿತ್ತು. ವಿದ್ಯಾರ್ಥಿ ಜೀವನದಲ್ಲಿ ಅವರು ೧೯೨೧ರ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಭಾವನೆಗಳನ್ನು ಪ್ರಚೋದಿಸುತ್ತಿದ್ದರಿಂದ ಬ್ರಿಟಿಷರು ನಿಷೇಧಿಸಿದ್ದ ರಾಷ್ಟ್ರೀಯ ನಾಟಕ ಕೂಟದ ಸಕ್ರಿಯ ಕಾರ್ಯಕರ್ತನಾಗಿದ್ದುಕೊಂಡೇ ತಾನೂ ಸಹ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಮನೆಯಲ್ಲಿ ಮದುವೆ ಒತ್ತಾಯ ಹೆಚ್ಚಾದಾಗ ಮನೆ ಬಿಟ್ಟು ವಿದ್ಯಾಭ್ಯಾಸ ತೊರೆದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲು ೧೯೨೪ರಲ್ಲಿ ಕಾನ್ಪುರಕ್ಕೆ ತೆರಳಿದರು.

ಕಾನ್ಪುರದಲ್ಲಿ ಚಂದ್ರಶೇಖರ್‌ ಆಜಾದ್‌, ಭಗತ್‌ಸಿಂಗ್‌, ಬಿ.ಕೆ. ದತ್‌, ಜೆ.ಸಿ. ಚಟರ್ಜಿ, ಬಿಜೊಯ್‌ ಕುಮಾರ್‌ ಸಿನ್ಹಾ ಒಂದುಗೂಡಿದರು. ಈ ಸಮ್ಮಿಲನ ಗಾಳಿ ಮತ್ತು ಬೆಂಕಿ ಒಂದೂಗಿಡಿದಂತಾಗಿ ಸಮರಶೀಲ ಹೋರಾಟ ನಡೆಸಲು ಭದ್ರವಾದ ಬುನಾದಿ ಹಾಕಿದವು. ಆ ಸಂದರ್ಭದಲ್ಲಿ ಕ್ರಾಂತಿಕಾರಿ ಸಂಘಟನೆಯೆಂಬ ಹೆಗ್ಗಳಿಕೆಯಿಂದ ಕೆಲಸ ಮಾಡುತ್ತಿದ್ದ ಹಿಂದೂಸ್ತಾನ್‌ ಗಣತಂತ್ರವಾದಿ ಸಂಘಟನೆಯ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದರು. ವಸಾಹತುಶಾಹಿ ಪ್ರಭುತ್ವವನ್ನು ಶಸ್ತ್ರಸಜ್ಜಿತ ಕ್ರಾಂತಿಯ ಮೂಲಕ ಕಿತ್ತೊಗೆಯಲು ಸಚಿಂದ್ರನಾಥ ಸನ್ಯಾಲ್‌, ಜೋಗೇಶ್‌ಚಂದ್ರ ಚಟರ್ಜಿ ಮತ್ತು ರಾಮಪ್ರಸಾದ್‌ ಬಿಸ್ಮಿಲ್‌ ಅವರ ನಾಯಕತ್ವದಡಿ ೧೯೨೪ರ ಅಕ್ಟೋಬರ್‌ನಲ್ಲಿ ಹಿಂದೂಸ್ತಾನ್‌ ಗಣತಂತ್ರ ಸಂಘಟನೆಯನ್ನು ಸ್ಥಾಪಿಸಲಾಗಿತ್ತು. ಕ್ರಾಂತಿಕಾರಿ ಸಮರಶೀಲ ಚಳವಳಿಯ ಹಳೆಯ ಸಂಪ್ರದಾಯಗಳನ್ನು ಮುಂದುವರಿಸುತ್ತಾ ಸಮೂಹ ಸಶಸ್ತ್ರ ಹೋರಾಟದ ಮೂಲಕ ಹೊಸ ಸಮಾಜವಾದಿ ದೃಷ್ಟಿಕೋನವನ್ನು ಬೆಸೆಯುತ್ತಿದ್ದ ಚಂದ್ರಶೇಖರ್‌ ಆಜಾದ್‌, ಭಗತ್‌ಸಿಂಗ್‌, ಶಿವವರ್ಮಾ ಮತ್ತು ಸುಖದೇವ್‌ ಅವರು ಹಿಂದೂಸ್ತಾನ್‌ ಗಣತಂತ್ರ ಸಂಘಟನೆಯ ಸದಸ್ಯರಾಗಿ ನಂತರ ಸೇರಿದರು. ರಾಜಗುರು ಅವರು ೧೯೦೮ರ ಆಗಸ್ಟ್‌ ೨೪ ರಂದು ಮಹಾರಾಷ್ಟ್ರದ ಖೇದ್‌ ಎಂಬ ನಗರದಲ್ಲಿ ಜನಿಸಿದರು. ಅವರು ಭಗತ್‌ಸಿಂಗ್‌ರ ಸಹಚರರೆಂದೇ ಪ್ರಸಿದ್ಧಿ ಪಡೆದಿದ್ದಾರೆ ಸುಖ್‌ದೇವ್‌ ಅವರು ೧೯೦೭ರ ಮೇ ೧೫ ರಂದು ಜನಿಸಿದರು. ಅವರು ಕಾಲೇಜು ದಿನಗಳಲ್ಲೇ ಲಾಹೋರಿನ ನ್ಯಾಷನಲ್‌ ಕಾಲೇಜಿನಲ್ಲಿ ಅಧ್ಯಯನ ಗುಂಪುಗಳನ್ನು ಸ್ಥಾಪಿಸಿದ್ದರು.

ಉತ್ತರ ಪ್ರದೇಶದಲ್ಲಿ ಜನಿಸಿದ ಚಂದ್ರಶೇಖರ್‌ ಆಜಾದ್‌ ಅವರು ಅತ್ಯಂತ ಪ್ರಮುಖ ಕ್ರಾಂತಿಕಾರಿಗಳಲ್ಲೊಬ್ಬರಾಗಿದ್ದು ‘ಗರಮ್‌ ದಳ’ವನ್ನು ಸ್ಥಾಪಿಸಿದರು ಭಗತ್‌ಸಿಂಗ್‌ ಸುಖ್‌ದೇವ್ ಮತ್ತು ರಾಜಗುರುವಿನಂಥ ಕ್ರಾಂತಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ಪೊಲೀಸರಿಗೆ ಸಿಂಹಸ್ವಪ್ನವಾಗಿದ್ದ ಅವರು ತಾನೆಂದಿಗೂ ಪೊಲೀಸರ ಬಂಧನಕ್ಕೊಳಗಾಗುವುದಿಲ್ಲವೆಂದು ಪಣತೊಟ್ಟಿದ್ದರು. ಅವರ ಕೊನೆಗಳಿಕೆಯಲ್ಲೂ ಸಹ ಪೊಲೀಸರು ಅವರನ್ನು ಸುತ್ತುವರಿದಾಗ, ಅವರು ಮೂರು ಪೊಲೀಸರಿಗೆ ಗುಂಡು ಹಾರಿಸಿದರೂ, ತಾನಿನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲವೆಂದು ಮನವರಿಕೆಯಾದಾಗ ಕೊನೆಯ ಗುಂಡನ್ನು ತಮ್ಮ ಹಣೆಗೆ ಹಾರಿಸಿಕೊಂಡು ಪ್ರಾಣಬಿಟ್ಟರು.

ಕಾಕೋರಿ ದರೋಡೆ ಪ್ರಕರಣ

ಹರ್ದೋಯಿಯಿಂದ ಲಕ್ನೋಗೆ ಹೊರಟಿದ್ದ ರೈಲನ್ನು ಕಾಕೋರಿ ಎಂಬ ನಿಲ್ದಾಣದಲ್ಲಿ ೧೯೨೫ರ ಆಗಸ್ಟ್‌ ೯ ರಂದು ತಡೆದು ಬ್ರಿಟಿಷ್ ಖಜಾನೆಗೆ ಪಾವತಿಗಾಗಿ ಹೊಯ್ಯುತ್ತಿದ್ದ ಸುಮಾರು ರೂ.೪,೦೦೦ ಗಳ ಪೆಟ್ಟಿಗೆಯನ್ನು ಅಪಹರಿಸಿ ಹಿಂದೂಸ್ತಾನ್ ಗಣತಂತ್ರವಾದಿ ಸಂಘಟನೆಯು ಬ್ರಿಟಿಷ್ ಪ್ರಭುತ್ವಕ್ಕೆ ನೇರ ಸವಾಲೆಸೆಯಿತು. ಈ ಪ್ರಕರಣದಲ್ಲಿ ಬಂಧಿಸಲಾಗಿದ್ದ ಕೆಲವರನ್ನು ಕಾರಾಗೃಹದಿಂದ ಬಿಡಿಸಿಕೊಂಡು ಬರಲು ಭಗತ್ ಕಾಲ್ಪುರದಲ್ಲಿ ಯೋಜನೆ ರೂಪಿಸಿದರೂ, ಬ್ರಿಟಿಷರಿಗೆ ಅದರ ತಿಳಿವುಂಟಾದ್ದರಿಂದ ಯೋಜನೆಯನ್ನು ಕೈಬಿಡಬೇಕಾಯಿತು. ಕಾಕೋರಿ ಪ್ರಕರಣವೆಂದೇ ಖ್ಯಾತಿ ಪಡೆದ ಅಪಹರಣದಲ್ಲಿ ಭಾಗಿಯಾಗಿದ್ದವರಲ್ಲಿ ಚಂದ್ರಶೇಖರ್ ಆಜಾದ್ ಮತ್ತು ಅವರ ಸಂಗಡಿಗರು ತಪ್ಪಿಸಿಕೊಂಡಿದ್ದರಿಂದ ಅವರನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ಉಗ್ರಶಿಕ್ಷೆಗೊಳಪಡಿಸಿ ಹಲವರನ್ನು ನಿರ್ದಯವಾಗಿ ಗಲ್ಲಿಗೇರಿಸಲಾಯಿತು. ಕಾಕೋರಿ ಪ್ರಕರಣದಲ್ಲಿ ಹಿಂದೂಸ್ತಾನ್ ಗಣತಂತ್ರ ಸಂಘಟನೆಯ ಹಲವು ಕಾರ್ಯಕರ್ತರನ್ನು ಬ್ರಿಟಿಷರು ಬಂಧಿಸಿ ಕಿರುಕುಳ ನೀಡುತ್ತಾ ಅತೀವ ಆಸ್ಥೆ ವಹಿಸಿದ್ದರಿಂದಾಗಿ ಸಂಘಟನೆಯು ನೆಲಕಚ್ಚುವಂತಾಯಿತು.

ಸದಾ ಉತ್ಸಾಹದ ಚಿಲುಮೆಯಂತೆ ಕ್ರಾಂತಿಕಾರಿ ಹಾದಿಯನ್ನು ಅರಸುತ್ತಿದ್ದ ಭಗತ್ ಮತ್ತೆ ಲಾಹೋರ್‌ಗೆ ಮರಳಿ ಹಲವು ಯುವಜನರು ವಿದ್ಯಾರ್ಥಿಗಳನ್ನು ಸಂಘಟಿಸಲು ೧೯೨೬ ಮಾರ್ಚ್‌‌ನಲ್ಲಿ ನೌ ಜವಾನ್ ಭಾರತ್ ಸಭಾ ಎಂಬ ಸಂಘಟನೆಯನ್ನು ರಚಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕಾರ್ಮಿಕರು, ರೈತರು ಮತ್ತು ವಿದ್ಯಾರ್ಥಿಗಳ ನಡುವೆ ಧರ್ಮ ನಿರಪೇಕ್ಷತೆಯ ತಾತ್ವಿಕ ನೆಲೆಗಟ್ಟಿನ ಮೇಲೆ ಈ ಸಂಘಟನೆಯು ಕೆಲಸ ಮಾಡುತ್ತಿತ್ತು. ಸಭಾದ ಕ್ರಾಂತಿಕಾರಿ ಹೋರಾಟದ ಸ್ವರೂಪಗಳನ್ನು ಆರಂಭದಲ್ಲಿಯೇ ಬ್ರಿಟಿಷರು ಗುರುತಿಸಿದರು. ಈ ಸಂಘಟನೆಯು ಕಾಲೇಜುಗಳನ್ನು ಪ್ರವೇಶಿಸದಂತೆ ನಿರ್ಬಂಧಿಸಿ ೧೯೩೦ ರಲ್ಲಿ ಬ್ರಿಟಿಷ್ ಸರ್ಕಾರವು ಸಭಾವನ್ನು ಒಂದು ಕಾನೂನು ಬಾಹಿತ ಸಂಸ್ಥೆಯೆಂದು ಘೋಷಿಸಿತು.

ಹೆಚ್.ಎಸ್.ಆರ್.ಎ. ಉದಯ ಮತ್ತು ಪೊಲೀಸ್‌ ಅಧಿಕಾರಿ ಸ್ಕಾಟ್ ಹತ್ಯೆ

ಸ್ವಾತಂತ್ರ್ಯ ಮತ್ತು ಸಮಾಜವಾದ ಎರಡನ್ನೂ ಬೆಸೆದು ಹೋರಾಟ ನಡೆಸಲು ಸಶಸ್ತ್ರ ಪಡೆಯ ಅವಶ್ಯಕತೆ ಮತ್ತು ಚಳವಳಿಗಳಿಗೆ ಸಾಮಾಜಿಕ ದಿಕ್ಸೂಚಿಯಾಗಲು ಸಶಕ್ತವಾದ ಪ್ರತ್ಯೇಕ ಸಂಘಟನೆಯ ಅತ್ಯಗತ್ಯತೆಯನ್ನು ಅರ್ಥ ಮಾಡಿಕೊಂಡು ಹಿಂದೂಸ್ತಾನ್ ಸಮಾಜವಾದಿ ಗಣತಂತ್ರ ಸೈನ್ಯ (ಹೆಚ್.ಎಸ್.ಆರ್.ಎ) ಎಂಬ ಸಂಘಟನೆಯನ್ನು ರಚಿಸಿ ಚಂದ್ರಶೇಖರ್ ಆಜಾದ್ ಅವರನ್ನು ಸೇನೆಯ ದಂಡನಾಯಕರನ್ನಾಗಿಯೂ, ಭಗತ್‌ಸಿಂಗ್‌ರನ್ನು ಅಖಿಲ ಭಾರತ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿಯೂ ಆಯ್ಕೆ ಮಾಡಲಾಯಿತು. ಹಿಂದೂಸ್ತಾನ್ ಗಣತಂತ್ರ ಸಂಘಟನೆಯ ಯುವ ಸದಸ್ಯರೆಲ್ಲ ಒಗ್ಗೂಡಿ ಚಂದ್ರಶೇಖರ್‌ ಆಜಾದ್‌ರ ನಾಯಕತ್ವದಲ್ಲಿ ೧೯೨೮ರ ಸೆಪ್ಟೆಂಬರ್‌ನಲ್ಲಿ ಹೆಚ್.ಎಸ್.ಆರ್.ಎ.ಯನ್ನು ಸ್ಥಾಪಿಸಿದರು. ಅತ್ಯಂತ ಬುದ್ಧಿವಂತ ಮತ್ತು ಅರ್ಪಣಾ ಮನೋಭಾವದ ಯುವಜನರು ಅದರಲ್ಲಿದ್ದರೂ, ಉತ್ತಮ ಸೈದ್ಧಾಂತಿಕ ತಿಳುವಳಿಕೆ ಮತ್ತು ಅಗಾಧ ಸಾಮರ್ಥ್ಯ ಹೊಂದಿದ್ದ ಭಗತ್‌ಸಿಂಗ್‌ ಸಂಘಟನೆಯ ಶಕ್ತಿಯಾಗಿದ್ದರೆ, ಅತ್ಯುತ್ತಮ ಸಂಘಟನಾ ಚಾತುರ್ಯ ಹೊಂದಿದ್ದ ಸುಖ್‌ದೇವ್ ಅದರ ಅಡಿಪಾಯವಾಗಿದ್ದರು. ಭಗತ್‌ಸಿಂಗ್‌ ಮತ್ತು ಸುಖ್‌ದೇವ್ ಅವರು ಸ್ಥಾಪಿಸಿದ್ದ ಲಾಹೋರ್‌ ವಿದ್ಯಾರ್ಥಿ ಸಂಘಟನೆಯು ಹೆಚ್.ಎಸ್.ಆರ್.ಎ. ಗೆ ಕಾರ್ಯಕರ್ತರನ್ನು ನೇಮಕಾತಿ ಮಾಡಿಕೊಳ್ಳುವ ತಾಣವಾಗಿತ್ತು. ರಷ್ಯಾದ ಮಹಾನ್ ಕ್ರಾಂತಿಯಿಂದ ಪ್ರೇರೇಪಿತಗೊಂಡು ಸ್ಥಾಪಿತವಾಗಿದ್ದ ಈ ಸಂಘಟನೆಯ ಮೂಲಧ್ಯೇಯ ಸಂಘಟಿತ ಸಶಸ್ತ್ರ ಕ್ರಾಂತಿಯ ಮೂಲಕ ಸಂಯುಕ್ತ ರಾಜ್ಯಗಳ ಗಣರಾಜ್ಯವನ್ನು ಸ್ಥಾಪಿಸುವುದಾಗಿತ್ತು.

ಭಗತ್‌ಸಿಂಗ್‌ ಮತ್ತು ಸಂಗಡಿಗರು ಸವೆಸುತ್ತಿದ್ದ ಜೀವನ ಬಹಳ ಕಠೋರತೆಯಿಂದ ಕೂಡಿತ್ತು. ಎಲ್ಲರಿಗೂ ಮಲಗಲು ಸ್ಥಳವಿಲ್ಲ. ಅಡಿಗೆ ಮಾಡಲು ಅಡಿಗೆ ಸಾಮಾನುಗಳಿಲ್ಲ. ದಿನಸಿ ಕೊಳ್ಳಲು ಹಣವಂತೂ ಮೊದಲೇ ಇರಲಿಲ್ಲ. ಕೆಲವು ದಿನ ರಾತ್ರಿ ಊಟ ಸಿಗದಿದ್ದರೆ, ಕೆಲವು ದಿನ ಮಧ್ಯಾಹ್ನದ ಊಟ ಸಿಗುತ್ತಿರಲಿಲ್ಲ. ಮತ್ತೆ ಕೆಲವು ದಿನ ಪೂರ್ತಿ ಊಟವೇ ಇಲ್ಲದೆ ಹಸಿವೆಯಿಂದ ನೀರು ಕುಡಿದು ಮಲಗಬೇಕಾಗಿತ್ತು. ಹಣಕಾಸಿನ ಇಲಾಖೆಯನ್ನು ಆಜಾದ್ ನೋಡಿಕೊಳ್ಳುತ್ತಿದ್ದು ಪ್ರಮುಖ ವ್ಯಕ್ತಿಗಳ ಸಂಪರ್ಕದಿಂದ ಹಣ ಹುಡುಕುವ ಕಾಯಕ ಅವರದಾಗಿತ್ತು. ಕೆಲವು ಸಂದೇಶವಾಹಕರ ಮೂಲಕ ಹಣ ರವಾನೆಯಾಗುತ್ತಿದ್ದರೂ ಕೂಡ ಬದುಕುಳಿಯಲಷ್ಟೆ ಅದು ಸಾಕಾಗುತ್ತಿತ್ತು.

ಅಂದಿನ ಭಾರತದಲ್ಲಿ ಬಿಗಡಾಯಿಸುತ್ತಿದ್ದ ರಾಜಕೀಯ ವಿದ್ಯಮಾನಗಳ ಕುರಿತು ವರದಿ ತಯಾರಿಸಲು ಸೈಮನ್ ಅಧ್ಯಕ್ಷತೆಯ ಆಂಗ್ಲರ ಆಯೋಗವೊಂದು ೧೯೨೮ರ ಅಕ್ಟೋಬರ್ ೩೦ ರಂದು ಲಾಹೋರ್ ತಲುಪುವುದಿತ್ತು. ಬ್ರಿಟಿಷರ ವಿರುದ್ದ ಸದಾ ಕತ್ತಿ ಮಸೆಯುತ್ತಾ, ಜ್ವಾಲಾಮುಖಿಯಂತೆ ಸ್ಪೋಟಿಸಲು ಇದಿರು ನೋಡುತ್ತಿದ್ದ ಭಗತ್‌ಸಿಂಗ್ ಮತ್ತು ಸಂಗಡಿಗರು ತಮ್ಮ ಸಂಪರ್ಕದಲ್ಲಿರುವ ಎಲ್ಲ ಸಂಘಟನೆಗಳೊಡನೆ ಚರ್ಚಿಸಿ ಸೈಮನ್ ಆಯೋಗವನ್ನು ಬಹಿಷ್ಕರಿಸಲು ಸಿದ್ಧರೆ ನಡೆಸುತ್ತಿದ್ದರು. ಅದರ ಹಿಂದಿನ ದಿನ ಪೊಲೀಸ್ ಮುಖ್ಯಾಧಿಕಾರಿ ಸ್ಕಾಟ್ ಆದೇಶವೊಂದನ್ನು ಹೊರಡಿಸಿ ಆಯೋಗದ ವಿರುದ್ಧ ಯಾವುದೇ ಮೆರವಣಿಗೆಯನ್ನು ನಿಷೇಧವೆಂದು ಘೋಷಿಸಿದ. ನಿಷೇದಾಜ್ಞೆಯನ್ನು ಧಿಕ್ಕರಿಸಿ ಲಾಲಾ ಲಜಪತ್‌ರಾಯ್ ಅವರ ಮುಂದಾಳತ್ವದಲ್ಲಿ ಸಾಗುತ್ತಾ ಹೊರಟ ಶಾಂತಿಯುತವಾದ ಮೆರವಣಿಗೆಯತ್ತ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಕ್ರೋಧಾಗ್ನಿಯಿಂದ ಕುದಿಯುತ್ತಿದ್ದ ಪೊಲೀಸ್ ಮುಖ್ಯಾಧಿಕಾರಿ ಸ್ಕಾಟ್ ತಾನೇ ಮುಂದಾಗಿ ಲಜಪತ್‌ರಾಯರ ತಲೆಗೆ ಅಪ್ಪಳಿಸಿ ಕ್ರೂರವಾಗಿ ಪ್ರಹಾರ ನಡೆಸಿದ್ದರಿಂದ ಅವರು ಮರಣ ಹೊಂದಿದರು.

ಇದೊಂದು ಸ್ವಾಭಿಮಾನಿ ಭಾರತದ ಸಾರ್ವಭೌಮತೆಯ ಮೇಲೆ ಬ್ರಿಟಿಷರು ಪ್ರಯೋಗಿಸಿದ ಬಲಪ್ರಹಾರವೆಂದು ಹೆಚ್.ಎಸ್.ಆರ್.ಎ. ಪರಿಗಣಿಸಿತು. ಪೊಲೀಸ್ ಅಧಿಕಾರಿ ಸ್ಕಾಟ್‌ನ ಕ್ರೌರ್ಯಕ್ಕೆ ಸಮಾಧಿ ಕಟ್ಟುವ ಮೂಲಕ ಬ್ರಿಟಿಷ್ ಸಾಮ್ರಾಜ್ಯಶಾಹಿ ಪ್ರಭುತ್ವಕ್ಕೆ ಸವಾಲೆಸೆಯಲು ಹಿಂದೂಸ್ತಾನ್ ಸಮಾಜವಾದಿ ಗಣತಂತ್ರ ಸಂಘಟನೆಯು ಯೋಜನೆ ಸಿದ್ಧಪಡಿಸತೊಡಗಿತು. ಪಂಜಾಬ್ ಸಿವಿಲ್ ಸೆಕ್ರಟೇರಿಯಟ್ ಕಚೇರಿಯಿಂದ ಹೊರಬಂದ ಪೊಲೀಸ್ ಸಹಾಯಕ ಸೂಪರಿಂಟೆಂಡ್‌ಜೆ.ಪಿ. ಸ್ಟಾಂಡರ್ಸ್‌‌ನ್ನು ಸ್ಕಾಟ್ ಎಂದು ತಪ್ಪಾಗಿ ತಿಳಿದು ಅಲ್ಲಿಯೇ ಅಡಗಿ ಕುಳಿತಿದ್ದ ಭಗತ್ ಮತ್ತು ರಾಜಗುರು ಇಬ್ಬರೂ ದೈತ್ಯರಂತೆ ಎದುರಾಳಿಯ ಮೇಲರಗಿ ಗುಂಡಿನ ಸುರಿಮಳೆಗೈದಾಗ ಹತ್ತಿರದಲ್ಲಿಯೇ ಇದ್ದ ಪೊಲೀಸರಾರು ಇವರತ್ತ ಸುಳಿಯುವ ಕೊಂಚ ಧರ್ಯವನ್ನು ಹೊಂದಿರಲಿಲ್ಲ. ಬ್ರಿಟಿಷ್ ಪಾಳೆಯಕ್ಕೆ ಸುದ್ದಿ ಉರಿಬೆಂಕಿಯ ಕೆನ್ನಾಲಗೆಯಂತೆ ವ್ಯಾಪಿಸತೊಡಗಿತು. ಇದರಿಂದ ಭಗತ್‌ಸಿಂಗ್‌ರು ರಾಷ್ಟ್ರಾದ್ಯಂತ ಕೋಟ್ಯಂತರ ಜನರ ಮನಸೂರೆಗೈದು ಅವರ ಪ್ರೀತಿಗೆ ಪಾತ್ರರಾದರು. ಇವರನ್ನು ಬಂಧಿಸಲು ಬೆಂಬಿಡದ ಬ್ರಿಟಿಷ್‌ ಪೊಲೀಸರು ಬೇಟೆ ನಾಯಿಗಳಂತೆ ವ್ಯಾಪಕ ಬಲೆ ಬೀಸತೊಡಗಿದರು. ೧೯೨೮ರ ಡಿಸೆಂಬರ್‌ನಲ್ಲಿ ಭಗತ್ ಮತ್ತು ಸಂಗಡಿಗರು ಲಾಹೋರ್ ಬಿಟ್ಟು ಬಂಗಾಳ ಮತ್ತು ಉತ್ತರ ಪ್ರದೇಶದಗಳ ಎಲ್ಲೆಡೆ ಕ್ರಾಂತಿಕಾರಿ ಗುಂಪುಗಳೊಂದಿಗೆ ಸಂಪರ್ಕ ಕಲ್ಪಿಸುತ್ತಾ ಸಮಯದೂಡಿದರು. ಕಲ್ಕತ್ತೆಯಲ್ಲಿ ಬಾಂಬುಗಳನ್ನು ತಯಾರಿಸುವ ಪುಟ್ಟ ಪ್ರಯೋಗ ಶಾಲೆಯೊಂದನ್ನು ಸಹಚರರೊಂದಿಗೆ ಒಡಗೂಡಿ ಸ್ಥಾಪಿಸಿದರು. ತಯಾರಾದ ಬಾಂಬುಗಳ ಪರೀಕ್ಷೆ ಸಮಯದಲ್ಲಿ ಹಲವು ಬಾರಿ ಭಗತ್ ಹಾಜರಿರುತ್ತಿದ್ದರು.* ಆರಂಭಿಕ ರಾಷ್ಟ್ರೀಯ ಹೋರಾಟಕ್ಕೆ ಮತ್ತು ಅದರಲ್ಲೂ ಕ್ರಾಂತಿಕಾರಿ ಹೋರಾಟಕ್ಕೆ ಸಂಬಂಧಿಸಿದ ವಿವರಗಳು ಪ್ರಸ್ತುತ ಸಂಪುಟದ ೩೯-೫೩ ಪುಟಗಳಲ್ಲಿವೆ.