ಅಸೆಂಬ್ಲಿಯಲ್ಲಿ ಬಾಂಬಿನ ದಾಳಿ

ಈ ಮಧ್ಯ ಸಾರ್ವಜನಿಕ ರಕ್ಷಣಾ ಕಾಯಿದೆ ಮತ್ತು ಕಾರ್ಮಿಕ ವಿವಾದ ಕಾಯಿದೆಗಳನ್ನು ಕೇಂದ್ರ ಶಾಸನ ಸಭೆಯು ಜಾರಿಗೆ ತರಲು ಸಿದ್ಧವಾಗಿತ್ತು. ಈ ಜನ ವಿರೋಧಿ ಕಾಯಿದೆಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಲು ಕೇಂದ್ರ ಶಾಸನ ಸಭೆಗೆ ನುಸುಳಿ ಯಾರಿಗೂ ಅಪಾಯವಾಗದಂತೆ ಬಾಂಬೆಸೆದು ದಸ್ತಗಿರಿಯಾದ ನಂತರ ಹಿಂದೂಸ್ತಾನ್‌ ಸಮಾಜವಾದಿ ಗಣತಂತ್ರ ಸಂಘಟನೆಯ ಧ್ಯೇಯೋದ್ದೇಶಗಳನ್ನು ಪ್ರಚಾರಪಡಿಸಬೇಕೆಂದು ತೀರ್ಮಾನವಾಗಿತ್ತು. ಈಗಾಗಲೇ ಸ್ಯಾಂಡರ್ಸ್‌ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ತಪ್ಪಿಸಿಕೊಂಡಿರುವುದರಿಂದ ಅಸೆಂಬ್ಲಿಯಲ್ಲಿ ಬಾಂಬು ಹಾಕಲು ಭಗತ್‌ರನ್ನು ಪರಿಗಣಿಸುವುದು ಬೇಡವೆಂಬತ್ತ ಚರ್ಚೆ ಸಾಗಿತ್ತು. ಹಿಂಸೆಯ ಕಳಂಕವನ್ನು ನಮಗೆ ಅಂಟಿಸಿರುವುದರ ಬಗ್ಗೆ ನರಳಿದ್ದೇವೆ. ನಾವು ಕೊಲೆಗಡುಕರೂ ಅಲ್ಲ, ಭಯೋತ್ಪಾದಕರೂ ಅಲ್ಲ. ನಮ್ಮ ರಾಷ್ಟ್ರ ಮತ್ತು ಪ್ರಪಂಚ, ಕ್ರಾಂತಿಯಲ್ಲಿರುವ ನಮ್ಮ ನಂಬಿಕೆಯನ್ನು ತಿಳಿಯಬೇಕು ಎಂಬುದೇ ನಮ್ಮ ಬಯಕೆ. ನಮ್ಮ ಸಂಘಟನೆಯ ಆಸೆ, ಆಕಾಂಕ್ಷೆ, ನಿಷ್ಠೆ ಮತ್ತು ತತ್ವ ಸಿದ್ಧಾಂತಗಳನ್ನು ನ್ಯಾಯಾಲಯದ ಕಟಕಟೆಯ ಮೇಲೆ ಭಗತ್‌ರಷ್ಟು ಬುದ್ಧಿವಂತಿಕೆಯಿಂದ ವಾದ ಮಂಡಿಸಲು ಇನ್ಯಾರಿಗೂ ಸಾಧ್ಯವಿಲ್ಲವೆಂದೂ ಭಗತ್ ಮತ್ತು ಬಿ.ಕೆ. ದತ್ ಜಂಟಿಯಾಗಿ ಕೆಲಸ ನಿರ್ವಹಿಸಬೇಕೆಂದೂ ಸುಖ್‌ದೇವ್ ಪಟ್ಟು ಹಿಡಿದು ಕುಳಿತದ್ದರಿಂದ ಸಭೆಯಲ್ಲಿ ಅದರಂತೆಯೇ ತೀರ್ಮಾನವಾಯಿತು. ಅವರ ವಾಗ್‌ವೈಖರಿ, ಪಾಂಡಿತ್ಯ ಅಂತಹ ಮೇರು ಮಟ್ಟದ್ದಾಗಿತ್ತು.

ಹಿಂದಿನ ದಿನವೇ ಸದನಕ್ಕೆ ಭೇಟಿ ಕೊಟ್ಟ ಕಾರ್ಯಾಚರಣೆಯ ದಿನ ತಾವು ನಿಲ್ಲಬೇಕಾದ ಆಯಕಟ್ಟಿನ ಜಾಗವನ್ನು ಇಬ್ಬರೂ ಕ್ರಾಂತಿಕಾತಿಗಳು ನೋಡಿಕೊಂಡರು. ಭಗತ್‌ನನ್ನು ತಾನಿನ್ನೆಂದೂ ನೋಡಲಾರೆನೇನೋ ಎಂಬ ಭಾರವಾದ ಹೃದಯದಿಂದ ಚಂದ್ರಶೇಖರ್ ಆಜಾದ್‌ರು ಇವರನ್ನು ಬೀಳ್ಕೊಟ್ಟರು. ಇವೆರಡೂ ಕಾಯಿದೆಗಳು ಅಂಗೀಕಾರಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲವಾದ್ದರಿಂದ ಚರ್ಚೆಯ ನಡುವೆ ಭಗತ್ ಮತ್ತು ಬಿ.ಕೆ. ದತ್ ಎದ್ದುನಿಂತು ಬಾಂಬೊಂದನ್ನು ಸಭೆಯತ್ತ ಎಸೆದರು. ಇಂಕ್ವಿಲಾಬ್ ಜಿಂದಾಬಾದ್, ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗುತ್ತಾ ಕರಪತ್ರ ತೂರಿದರು. ಸುಲಭವಾಗಿ ತಪ್ಪಿಸಿಕೊಳ್ಳಬಹುದಾಗಿದ್ದರೂ ಅದಕ್ಕಾಗಿ ಯಾವುದೇ ಪ್ರಯತ್ನ ಮಾಡದೆ ಇಬ್ಬರೂ ಮಂಜುಗಡ್ಡೆಯಂತ್ರೆ ದಸ್ತಗಿರಿಯಾಗಲು ನಿಂತಾಗ ಕೆಲವು ಸಮಯದ ನಂತರವಷ್ಟೇ ಪೊಲೀಸರು ಎಚ್ಚೆತ್ತು ಅವರನ್ನು ಬಂಧಿಸಲನುವಾದರು. ನ್ಯಾಯಾಲಯವನ್ನು ಪ್ರಚಾರ ಮಾಧ್ಯಮವನ್ನಾಗಿ ಭಗತ್ ಸಂಪೂರ್ಣವಾಗಿ ಬಳಸಿಕೊಂಡು ಕಿವುಡಾಗಿದ್ದ ಬ್ರಿಟಿಷ್‌ ಪ್ರಭುತ್ವ ಕಿವಿ ನಿಮಿರುವಂತೆ ಮಾಡುವುದಷ್ಟೆ ಅವರ ಮತ್ತು ಸಂಘಟನೆಯ ಮುಖ್ಯ ಧ್ಯೇಯವಾಗಿತ್ತು.

ಅಸೆಂಬ್ಲಿಯಲ್ಲಿ ಬಾಂಬು ದಾಳಿಯಾದ ತಕ್ಷಣವೆ ಪ್ರಗತಿಪರ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಕಾಂಗ್ರೆಸ್ ಸದಸ್ಯ ಚಮನ್‌ಲಾಲ್ ಇದನ್ನು ಖಂಡಿಸಿ ಬಾಂಬ್‌ ಎಸೆಯುವುದು ಹುಚ್ಚುತನ ಎಂದದಕ್ಕೆ, ಮೊದಲ ಭೇಟಿಯಲ್ಲಿಯೇ ಭಗತ್‌ಸಿಂಗ್ ಅವಗರು ತನ್ನ ಲಾಯರಾಗಿದ್ದ ಮತ್ತೊಬ್ಬ ಕಾಂಗ್ರೆಸ್ ಸದಸ್ಯ ತರುಣ್ ಅಸಫ್ ಆಲಿಗೆ ಹೇಳಿದ್ದು: “ನಾವು ಹುಚ್ಚರಲ್ಲ ಎಂಬುದನ್ನು ದಯಮಾಡಿ ಚಮನ್‌ಲಾನಲ್‌ಗೆ ಮನದಟ್ಟು ಮಾಡಿ. ನಾವು ಸ್ಥಿತಿಗತಿಗಳ, ಆಶೋತ್ತರಗಳ ಗಂಭೀರ ವಿದ್ಯಾರ್ಥಿಗಳು ಎಂಬುದನ್ನು ವಿನಮ್ರವಾಗಿ ತಿಳಿಸುತ್ತೇವೆ”.

ಭಗತ್‌ಸಿಂಗ್ ಮತ್ತು ಸಂಗಡಿಗರು ಅಪರಾಧಕ್ಕೆ ಶಿಕ್ಷೆ ವಿಧಿಸಿದ ನಂತರ ಅವರನ್ನು ಕೆಲಕಾಲ ಮಿಯಾನ್‌ವಾಲಿ ಜೈಲಿನಲ್ಲಿಟ್ಟಿದ್ದು ನಂತರ ಲಾಹೋರ್‌ ಸೆಂಟ್ರಲ್ ಜೈಲಿಗೆ ರವಾನಿಸಲಾಯಿತು. ಸ್ಯಾಂಡರ್ಸ್‌ಹತ್ಯೆ, ಲಾಹೋರ್ ಪಿತೂರಿ ಮೊಕದ್ದಮೆ ಹೀಗೆ ಹಲವು ಅರಾದಗಳ ಸರಣಿ ಪಟ್ಟಿಯನ್ನು ಅವರ ಸುತ್ತಲೂ ಬ್ರಿಟಿಷರು ಹೆಣೆಯಲಾರಂಭಿಸಿದರು. ಆದರೂ ರಾಜಕೀಯ ಬಂಧಿಗಳಿಗೆ ಜೈಲಿನಲ್ಲಿ ನೀಡಲಾಗುತ್ತಿದ್ದ ಕಿರುಕುಳವನ್ನು ಪ್ರತ್ಯಕ್ಷ ಕಂಡ ಭಗತ್‌ಸಿಂಗ್ ಮತ್ತು ಸಂಗಡಿಗರು, ಉತ್ತಮ ಸೌಲಭ್ಯಗಳಿಗಾಗಿ ಉಪವಾಸ ಸತ್ಯಾಗ್ರಹ ಹೂಡಿ ಬಂಧಿಗಳಿಗೆ ಸ್ವಲ್ಪಮಟ್ಟಿಗೆ ಉತ್ತಮ ಆಹಾರ ಮತ್ತು ಓದಲು ಬೇಕಾದ ಸೌಲಭ್ಯ ಒದಗಿಸುವಲ್ಲಿ ಸತ್ಯಾಗ್ರಹವು ಯಶಸ್ವಿಯಾಯಿತು.

ಚಂದ್ರಶೇಖರ ಆಜಾದ್‌ರ ನಾಯಕತ್ವದಲ್ಲಿ ಹಿಂದೂಸ್ತಾನ್ ಸಮಾಜವಾದಿ ಗಣತಂತ್ರ ಸಂಘಟನೆಯ ಭಗತ್‌ರನ್ನು ಜೈಲಿನಿಂದ ಅಪಹರಿಸಿ ಬಿಡಿಸಿಕೊಂಡು ಬರಲು ಯೋಜಿಸಿದ ಯಾವ ತಂತ್ರಗಳೂ ಫಲಿಸದೆ ಕಾರ್ಯಕರ್ತರು ಕಂಗೆಟ್ಟರು.

ತೀಕ್ಷ್ಣ ಶಕ್ತಿ ಹೊಂದಿದ್ದ ಭಗತ್‌ಸಿಂಗ್ ಮತ್ತು ಸಂಗಡಿಗರು ಸೆರೆಮನೆಯ ಸಂಕಷ್ಟ, ಯಾತನೆಗಳಿಂದಾಗಿ ಕೊನೆಕೊನೆಗೆ ಬಸವಳಿದು ಕೃಶವಾಗಿದ್ದ ದೇಹ ಎಂಥಹವರಲ್ಲೂ ಕಣ್ಣೀರು ಹರಿಸುವಂತಿತ್ತು. ಆದರೆ ಅವರ ಕಣ್ಣುಗಳಲ್ಲಿನ ತೇಜಸ್ಸಿನ ಪ್ರಖರತೆ ಮತ್ತಷ್ಟು ಇಮ್ಮಡಿಗೊಳ್ಳುತ್ತಿತ್ತು. ಸೆರೆಮನೆಯಲ್ಲಿದ್ದಷ್ಟು ದಿನವೂ ಕಾಕೋರಿ ದಿನೋತ್ಸವ, ಲೆನಿನ್ ದಿನೋತ್ಸವ, ಹೀಗೆ ಮುಂತಾದ ಕ್ರಾಂತಿಕಾರಿ ಉತ್ಸವಗಳನ್ನು ಆಚರಿಸುತ್ತಾ ಖುಷಿಪಡುತ್ತಿದ್ದರು. ಸಂಪೂರ್ಣ ಮಾರ್ಕ್ಸ್‌‌ವಾದಿಗಳಾಗಿ ಪರಿವರ್ತಿತರಾಗದಿದ್ದರೂ ಮಾರ್ಕ್ಸ್‌‌ವಾದವನ್ನು ಇಂಚಿಂಚೂ ಅಭ್ಯಸಿಸುತ್ತಾ ವಿಷಯದಿಂದ ವಿಷಯವನ್ನು ಗ್ರಹಿಸುವ ಪ್ರಕ್ರಿಯೆಯ ಹಾದಿಯಲ್ಲಿದ್ದರು. ಅವರು ಅಧ್ಯಯನದ ಮೂಲಕ ಸಿದ್ಧಾಂತವನ್ನು ಒಂದು ಅಸ್ತ್ರವಾಗಿ ವಿರೋಧಿಗಳ ಕಪಟತೆಯನ್ನು ಛಿದ್ರಗೊಳಿಸಲು ಕ್ರಿಯೆಯಾಗಿ ಬಳಸುತ್ತಿದ್ದರು.

ಲಾಹೋರ್ ಉಚ್ಚ ನ್ಯಾಯಾಲಯದಲ್ಲಿ ಭಗತ್ ಸಿಂಗ್ ನುಡಿದ ಮಾತುಗಳು ಅವರ ಪ್ರಖರ ಪಾಂಡಿತ್ಯಕ್ಕೆ ಹಿಡಿದ ಕನ್ನಡಿಯಂತಿವೆ. ಕ್ರಾಂತಿಯ ಖಡ್ಗವನ್ನು ವಿಚಾರದ ಸಾಣೆಕಲ್ಲಿನ ಮೇಲೆ ಹರಿತಗೊಳಿಸಲಾಗುತ್ತದೆ. ಗಾಂಧೀಜಿಯವರ ಬಗ್ಗೆ ಅವರಿಗೆ ಗೌರವವಿದ್ದರೂ ಸೈದ್ಧಾಂತಿಕ ನಿಲುಮೆಯ ಕುರಿತು ಅವರು ಈ ರೀತಿ ನುಡಿದಿದ್ದಾರೆ: “ಗಾಂಧೀಜಿಯು ಒಬ್ಬ ಉದಾರ ಹೃದಯದ ಪರೋಪಕಾರಿ ಮನುಷ್ಯ. ನಮಗೆ ಅಗತ್ಯವಿರುವುದು ಪರೋಪಕಾರವಲ್ಲ, ಆದರೆ ಚಲನಾತ್ಮಕ ವೈಜ್ಞಾನಿಕ ಸಾಮಾಜಿಕ ಶಕ್ತಿ”. ೧೯೨೯ ರಲ್ಲಿ ಅವರನ್ನು ಬಂಧಿಸುವ ಹೊತ್ತಿಗಾಗಲೇ ಅವರು ಭಯೋತ್ಪಾದಕ ಮತ್ತು ವ್ಯಕ್ತಿಗತವಾದ ವೀರೋಚಿತ ಕಾರ್ಯಗಳಲ್ಲಿ ನಂಬಿಕೆ ಕಳೆದುಕೊಂಡು ಕ್ರಾಂತಿಯೊಂದು ಸಮೂಹಕ್ಕಾಗಿ ಸಮೂಹ ನಡೆಸುವ ಕ್ರಿಯೆ ಎಂಬ ದೃಢ ನಿಲುಮೆಗೆ ಬಂದಿದ್ದರು. ಇದಕ್ಕೆ ಪೂರಕವಾಗಿಯೇನೋ ಎಂಬಂತೆ ಅವರನ್ನು ಗಲ್ಲಿಗೇರಿಸುವ ಸ್ವಲ್ಪ ಮುಂಚಿತವಾಗಿ ನಿಜವಾದ ಕ್ರಾಂತಿಕಾರಿ ಸೇನೆಯು ಹಳ್ಳಿ ಮತ್ತು ಕಾರ್ಖಾನೆಗಳಲ್ಲಿವೆ ಎಂದಿದ್ದರು.

ಕ್ರಾಂತಿಕಾರಿಗಳ ಸಾವಿನ ಗಳಿಗೆಗಳು

ಭಗತ್‌ಸಿಂಗ್‌, ಸುಖ್‌ದೇವ್, ರಾಜಗುರು ಮತ್ತು ಇತರೆ ಕ್ರಾಂತಿಕಾರಿಗಳು ಗಲ್ಲಿಗೇರಿಸುವ ದಿನ ಸಹ ಎದೆಗುಂದದೆ ಖುಷಿಯಿಂದಿದ್ದರು. ಗಲ್ಲು ಸ್ಥಳದ ಪ್ಲಾಟ್‌ಫಾರಂ ಮೇಲೆ ನಿಂತು ಹಗ್ಗಕ್ಕೆ ಮುತ್ತಿಕ್ಕುತ್ತಾ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಮಾಡುತ್ತಾ ಸುಖ್‌ದೇವ್, ಭಗತ್ ಮತ್ತು ರಾಜಗುರು ಕುಣಿಕೆ ಬೀರಿಕೊಂಡರು. ಅಂದು ಸೆರೆಮನೆಯಲ್ಲಿ ಸ್ಮಶಾನ ಮೌನ ಆವರಿದಿ, ಯಾರೊಬ್ಬರೂ ಆಹಾರ ಮುಟ್ಟಲಿಲ್ಲ. ಅವರನ್ನು ಗಲ್ಲಿಗೇರಿಸಿದ ವಿಷಯ ತಿಳಿಯದ ಅವರ ಸಂಬಂಧಿಕರು ಸಂಧಿಸಲು ಬಂದಾಗ ಗದ್ಗದಿತರಾದರು. ಸಟ್ಲೆಜ್ ನದಿತೀರದಲ್ಲಿ ಕ್ರಾಂತಿಕಾರಿಗಳ ದೇಹವನ್ನು ರಹಸ್ಯವಾಗಿ ಸುಡುತ್ತಿರುವ ವಿಷಯ ತಿಳಿದು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸತೊಡಗಿದರು. ಅಲ್ಲಿ ದೊರೆತದ್ದು ಅರೆಬರೆ ಸುಟ್ಟ ಕ್ರಾಂತಿಕಾರಿಗಳ ದೇಹದ ಬೂದಿಯಷ್ಟೆ.

ಭಗತ್‌ಸಿಂಗ್‌ರನ್ನು ರಕ್ಷಿಸಲು ಗಾಂಧೀಜಿ ‘ತಟಸ್ಥರಾದದನ್ನು’ ಪ್ರಶ್ನಿಸಿ ದೇಶದಾದ್ಯಂತ ಯುವಕರ ಪಡೆಯು ಅವರು ಸಿಕ್ಕಲ್ಲೆಲ್ಲ ಧಮಕಿ ಹಾಕತೊಡಗಿತು. ಅಂಥದೊಂದು ಸಂಬಂಧದಲ್ಲಿ ಅವರು ನೀಡಿದ ಉತ್ತರ ಎಂಥವರಲ್ಲೂ ವೇದನೆ ಮೂಡಿಸದಿರದು. ಭಗತ್‌ಸಿಂಗ್‌ರನ್ನು ರಕ್ಷಿಸಲು ನನಗಿಚ್ಚೆಯಿರಲಿಲ್ಲವೆಂಬುದು ತ್ಯಕ್ಕೆ ದೂರವಾದದ್ದು. ಆದರೆ ನೀವು ಭಗತ್‌ಸಿಂಗ್‌ಎಸಗಿರುವ ತಪ್ಪನ್ನೂ ಅರ್ಥಮಾಡಿಕೊಳ್ಳಬೇಕು. ಆದರೆ ಹಿಂಸೆಯ ಕುರಿತು ಬೇಸತ್ತಿದ್ದ ಭಗತ್‌ಗೆ ಗಾಂಧಿಯ “ಬೇಜವಾಬ್ದಾರಿ ಯುವಕರು” ಎಂಬ ವರ್ಣನೆ ಕಿರಿಕಿರಿ ಉಂಟು ಮಾಡಿತ್ತು. ಸ್ವಾತಂತ್ರ್ಯವನ್ನು ಬ್ರಿಟಿಷರಿಂದ ಕಿತ್ತುಕೊಳ್ಳಬೇಕೇ ಹೊರತು ಅದೇನೊ ಆಕಾಶದಿಂದ ಬೀಳುವುದಿಲ್ಲ ಅಥವಾ ಚಳವಳಿಗಳನ್ನು ಹಿಂತೆಗೆದುಕೊಂಡು ಶಾಂತಿಯ ಹೋಮ ಮಾಡಿದರೆ ಬರುವುದಿಲ್ಲವೆಂದು ಕ್ರಾಂತಿಕಾರಿಗಳಿಗೆ ತಿಳಿದಿತ್ತು.

ಬ್ರಿಟಿಷರು ಭಗತ್‌ಸಿಂಗ್ ಮತ್ತು ಸಂಗಡಿಗರನ್ನು ಕೊಂದದ್ದು ಅವರ ಸಾಮ್ರಾಜ್ಯಶಾಹಿ ಭೂಪಟಕ್ಕೆ ತಾವೇ ಚೂರಿಯಿಂದ ತಿವಿದುಕೊಂಡಂತಾಯಿತಷ್ಟೆ. ಕ್ರಾಂತಿಕಾರಿಗಳ ಭವಿಷ್ಯವಾಣಿ ಸುಳ್ಳಾಗಲಿಲ್ಲ. ಅವರ ಹೆಸರು ಸಾವಿಗಳುಕದ ಧೈರ್ಯ, ತ್ಯಾಗ, ಬಲಿದಾನ, ರಾಷ್ಟ್ರಾಭಿಮಾನ ಮತ್ತು ತದೇಕಚಿತ್ತತೆಯ ಹೋರಾಟಗಳ ಪ್ರತೀಕವಾಯಿತು. ಅವರ ಇಂಕ್ವಿಲಾಬ್ ಜಿಂದಾಬಾದ್ ಕ್ರಾಂತಿ ಚಿರಾಯುವಾಗಲಿ ಘೋಷಣೆಯು ಇಡೀ ರಾಷ್ಟ್ರದ ಯುದ್ಧದ ಕೂಗಾಗಿ ಮಾರ್ಪಟ್ಟು ಸಮಾಜವಾದಿ ಸಮಾಜ ನಿರ್ಮಾಣದ ಕನಸನ್ನು ವಿದ್ಯಾವಂತ ಯುವಜನರಲ್ಲಿ ಹಿಡಿದಿಟ್ಟಿತು. ೧೯೩೦-೩೨ರಲ್ಲಿ ಎಲ್ಲ ಜನರುಒಂದೇ ಮನುಷ್ಯನಂತೆ ನಿಂತರು. ಸೆರೆಮನೆವಾಸಗಳು, ಛಡಿಯೇಟುಗಳು, ಮತ್ತು ಲಾಠಿಯೇಟುಗಳು ಅವರ ಸ್ಫೂರ್ತಿಯನ್ನು ಕಂಗೆಡಿಸಲು ಸಾಧ್ಯವಾಗಲಿಲ್ಲ. ೧೯೪೫-೪೬ ರಲ್ಲಿ ನವಭಾರತ ಉದಯಿಸಿದ್ಧನ್ನು ಇಡೀ ಪ್ರಪಂಚವೇ ಕಣ್ಣಾರಿ ಕಂಡಿತು. ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಯುವಜನರು, ಜಲಸೇನೆ, ಭೂಸೇನೆ, ವಾಯುಸೇನೆ ಮತ್ತು ಪೊಲೀಸರು ಸಹ ಬಲವಾದ ಹೊಡೆತಗಖನ್ನು ಅನುಭವಿಸಿದರು. ೧೯೩೦ರವರೆಗೆ ಕೆಲವೇ ಕೆಲವರಲ್ಲಿ ತ್ಯಾಗ, ಬಲಿದಾನ ಮತ್ತು ಅರ್ಪಣಾ ಮನೋಭಾವನೆಗಳು ಸಮೂಹ ಪ್ರಕ್ರಿಯೆಯಾಗಿ ರಾಷ್ಟ್ರಾದ್ಯಂತ ದಂಗೆಯು ವ್ಯಾಪಿಸಿತು.

ಭಗತ್‌ಸಿಂಗ್ ಅವರಿಗೆ ಸ್ವಾಂತತ್ರ್ಯ ಸಿಗುವ ಕುರಿತು ಯಾವುದೇ ಅನುಮಾನವಿರಲಿಲ್ಲವಾದರೂ ಅವರು ಆತಂಕಗೊಂಡಿದದ್ದು ಬಿಳಿ ಸಾಹೇಬರು ಖಾಲಿ ಮಾಡಿದ ಆಸನದಲ್ಲಿ  ಕಂದು ಸಾಹೇಬರು ಕುಳಿತುಕೊಳ್ಳುವರೆಂಬ ಭಯದಿಂದ. ಕೇವಲ ಯಜಮಾನರ ಬದಲಾವಣೆಯಿಂದ ಸ್ವಾತಂತ್ರ್ಯ ಬಂದಂತಾಗುವುದಿಲ್ಲ. ಪುರಾತನ ವ್ಯವಸ್ಥೆಯನ್ನು ನಾಶಮಾಡದೆ ಹೊಸ ಬದಲಾವಣೆಯನ್ನು ತುರುವುದು ಸಾಧ್ಯವಿಲ್ಲ ಎಂದು ಭಗತ್‌ಸಿಂಗ್ ಅವರಿಗೆ ಮನವರಿಕೆಯಾಗಿತ್ತು. ಆದರೆ ಪ್ರತಿಭಟನೆಯ ದಿವ್ಯಜ್ಯೋತಿ ಆರದಂತೆ ಉರಿಯಲು ತನ್ನಂಥವರು ಸಾಯಲೇ ಬೇಕೆಂದು ಭಗತ್‌ನಂಬಿದ್ದರು.

ಭಗತ್‌ಸಿಂಗನ ವೈಜ್ಞಾನಿಕ ದೃಷ್ಟಿಕೋನ ಮತ್ತು ನಾಸ್ತಿಕತೆ

ವೈಜ್ಞಾನಿಕ ದೃಷ್ಟಿಕೋನ ಮತ್ತು ನಾಸ್ತಿಕತೆಗೆ ಸಂಬಂಧಿಸಿದಂತೆ ಭಗತ್‌ಸಿಂಗ್ ಅವರ ದೃಷ್ಟಿಕೋನವನ್ನು ಅವರ ಕಿರುಹೊತ್ತಗೆಯಲ್ಲಿ ಚರ್ಚಿಸಲಾಗಿರುವುದನ್ನು ಕಾಣಬಹುದು. ಕೇವಲ ೨೩ನೆಯ ವಯಸ್ಸಿಗೆ ಹುತಾತ್ಮರಾದ ಭಗತ್‌ಸಿಂಗ್ ಅವರಿಗೆ ಭಾರತದ ರಾಜಕೀಯ ಪದ್ಧತಿಯನ್ನು ಬದಲಾಯಿಸುವುದರೊಂದಿಗೆ ಭಾರತದ ಸಾಮಾಜಿಕ ಪದ್ಧತಿಯನ್ನು ಕ್ರಾಂತಿಕಾರಿಯಾಗಿ ಬದಲಾಯಿಸಲೇಬೇಕೆಂಬ ಹುಮ್ಮನಸ್ಸಿತ್ತು. ಅವರ ಜೀವಿತ ಅವಧಿಯಲ್ಲಿ ಅವರು “ವೈ ಐ ಆಮ್ ಆನ್ ಎಥಿಯಿಸ್ಟ್” (ನಾನೇಕೆ ನಾಸ್ತಿಕ) ಎನ್ನುವ ಕಿರಿಹೊತ್ತಗೆಯನ್ನು ಬರೆದಿದ್ದರು. ತನ್ನ ಕ್ರಾಂತಿಕಾರಿ ಸ್ನೇಹಿತ ಬರೆದ “ದಿ ಡ್ರೀಮ್ ಲ್ಯಾಂಡ್ “(ಸ್ವಪ್ನಲೋಕ) ಎನ್ನುವ ಪುಸ್ತಕಕ್ಕೆ ಭಗತ್‌ಸಿಂಗ್ ಮುನ್ನುಡಿಯನ್ನು ಬರೆದಿದ್ದರು. ಚರಿತ್ರೆಕಾರ ಬಿಪನ್‌ಚಂದ್ರ ಅವರು ಅವುಗಳನ್ನು ಸಂಪಾದಿಸಿ ಮುನ್ನುಡಿಯೊಂದಿಗೆ ೧೯೮೦ ರ ದಶಕದಲ್ಲಿ ಪ್ರಕಟಿಸಿದ್ದರು. ಕನ್ನಡದಲ್ಲಿ ಈ ಬರಹಗಳನ್ನು ಎನ್. ಗಾಯತ್ರಿ ಅವರು ಅನುವಾದ ಮಾಡಿದ್ದನ್ನು ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ್ದಾರೆ. ೧೯೮೮ರಲ್ಲಿ ಮೊದಲ ಮುದ್ರಣವನ್ನು ಕಂಡ ಈ ಕೃತಿಯ ೨೦೦೫ ರಲ್ಲಿ ಎಂಟನೆಯ ಮುದ್ರಣವನ್ನು ಕಂಡಿದೆ. ಲೇಖನದ ಈ ಭಾಗದಲ್ಲಿ ಬಿಪನ್‌ಚಂದ್ರ ಅವರ ಪ್ರಸ್ತಾವನೆಯಲ್ಲಿ ಇರುವ ಅಂಶಗಳನ್ನು ಮತ್ತು ಭಗತ್‌ಸಿಂಗ್‌ಅವರ ಲೇಖನದ ಆಯ್ದ ಭಾಗಗಳನ್ನು ಬಳಸಿಕೊಳ್ಳಲಾಗಿದೆ. ಬಿಪಿನ್‌ಚಂದ್ರ ಅವರ ಮುನ್ನುಡಿಯಲ್ಲಿ ಪ್ರಸ್ತಾಪಿಸಲಾಗಿರುವ ಭಗತ್‌ಸಿಂಗ್ ಅವರ ಸೈದ್ಧಾಂತಿಕ ದೃಷ್ಟಿಕೋನವನ್ನು ಅವರು ವಿವರಿಸಿದ್ದಾರೆ. ಅದರ ಆಯ್ದ ಭಾಗಗಳು ಹೀಗಿವೆ.

ಭಗತ್‌ ಸಿಂಗನಿಗಿನ್ನೂ ಇಪ್ಪತ್ತಮೂರು ವರ್ಷಗಳಾಗಿದ್ದಾಗಲೇ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಸಾವನ್ನಪ್ಪಿದ. ಅವನ ರಾಜಕೀಯ ಚಿಂತನೆ ಮತ್ತು ಚಟುವಟಿಕೆ ತೀರ ಬಾಲ್ಯದ ದಿನಗಳಲ್ಲೇ ಆರಂಭವಾಗಿದ್ದು, ಗಾಂಧೀಜಿಯವರ ರಾಷ್ಟ್ರೀಯತೆಯಿಂದ ಕ್ರಾಂತಿಕಾರಿ ಭಯೋತ್ಪಾದಕರೆಯತ್ತ ಬಹುಬೇಗನೆ ಅದು ವಿಕಾಸ ಗೊಂಡಿತ್ತು. ಆದರೆ ೧೯೨೭-೨೮ರ ವೇಳೆಗಾಗಲೇ ಅವನು ಕ್ರಾಂತಿಕಾರಿ ಭಯೋತ್ಪಾದಕತೆಯಿಂದ ಮಾರ್ಕ್ಸವಾದದತ್ತ ಮುನ್ನಡೆದಿದ್ದ. ಸುಮಾರು ೧೯೨೫ರಿಂದ ೧೯೨೮ರ ನಡುವಣ ಸಮಯದಲ್ಲಿ ಅವನು ಅಗಾಧವಾಗಿ ಅಧ್ಯಯನ ನಡೆಸಿದ್ದ. ವಿಶೇಷವಾಗಿ ಸೋವಿಯತ್ ಒಕ್ಕೂಟ ಮತ್ತು ರಷ್ಯಾದ ಕ್ರಾಂತಿಯನ್ನು ಕುರಿತ ಸಾಹಿತ್ಯವನ್ನೆಲ್ಲಾ ಓದಿ ಅರಗಿಸಿಕೊಂಡಿದ್ದ. ಆ ಸಮಯದಲ್ಲಿ ಇಂತಹ ಸಾಹಿತ್ಯವನ್ನು ದೊರಕಿಸಿಕೊಳ್ಳುವುದೇ ಅತ್ಯಂತ ಕಷ್ಟದ, ಕ್ರಾಂತಿಕಾರಿ ಕೆಲಸವಾಗಿತ್ತು. ೧೯೨೦ರ ದಶಕದಲ್ಲಿ ಕ್ರಾಂತಿಕಾರಿ ಚಳುವಳಿಗಳು, ಅರಾಜಕತಾವಾದ ಹಾಗೂ ಮಾರ್ಕ್ಸ್‌‌ವಾದದ ಅಧ್ಯಯನವನ್ನು ಕುರಿತಂತೆ ಅಗಾಧ ಪಾಂಡಿತ್ಯವುಳ್ಳ ವಿದ್ವಾಂಸರಲ್ಲಿ ಭಗತ್‌ಸಿಂಗ್ ಒಬ್ಬನಾಗಿದ್ದ. ತನ್ನ ಜೊತೆಗಾರರಾದ ಕ್ರಾಂತಿಕಾರಿಗಳಲ್ಲಿ ಹಾಗೂ ಯುವ ಸಂಗಾತಿಗಳಲ್ಲಿ ಅಧ್ಯಯನದ ಮತ್ತು ಚಿಂತನೆಯ ಪ್ರವೃತ್ತಿಯನ್ನು ಹುಟ್ಟು ಹಾಕಲು ಆತ ಬಹುವಾಗಿ ಶ್ರಮಿಸಿದ. ಲಾಹೋರ್‌ಹೈಕೋರ್ಟ್‌‌ನ ಮುಂದೆ ಆರೋಪಿಯಾಗಿ ವಿಚಾರಣೆಗೆ ನಿಂತಿದ್ದಾಗ ತನ್ನ ನಿಲುವನ್ನು ಅವನು ಸಮರ್ಥಿಸಿ ಕೊಂಡದ್ದು ಹೀಗೆ: “ಚಿಂತನೆಯ ಸಾಣೆಕಲ್ಲಿನ ಮೇಲೆ ಮಸೆದ ಕ್ರಾಂತಿಯ ಖಡ್ಗವನ್ನು ಹರಿತ  ಗೊಳಿಸಲಾಗುತ್ತದೆ.: ೧೯೨೮ರ ಕೊನೆಗಾಗಲೇ ಅವನು ಮತ್ತು ಅವನ ಸಂಗಾತಿಗಳು ಸಮಾಜವಾದವನ್ನು ತಮ್ಮ ಹೋರಾಟದ ಅಂತಿಮ ಧ್ಯೇಯವಾಗಿ ಒಪ್ಪಿಕೊಂಡಿದ್ದರಲ್ಲದೆ ತಮ್ಮ ಸಂಘಟನೆಯನ್ನು ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ಎಂಬ ಹೆಸರಿನಿಂದ ‘ಹಿಂದೂಸ್ತಾನ್ ಸಮಾಜವಾದಿ ಗಣತಂತ್ರ ಸಂಘಟನೆ’ ಎಂದು ಪುನರ್ನಾಮಕರಣ ಮಾಡಿದ್ದರು…(ಪುಟ ೫-೬)

ಧರ್ಮ ಹಾಗೂ ಮೂಲಭೂತವಾಗಿ ಅದು ಯಾವುದರ ಪರಿಣಾಮ ಎಂಬುದನ್ನು ಕುರಿತಂತೆ ಭಗತ್‌ಸಿಂಗ್‌ನ ವಿಶ್ಲೇಷಣೆಯಲ್ಲಿ ಅತ್ಯಂತ ಶಕ್ತಿಯುತವಾದ ಬುದ್ಧಿಮತ್ತೆಯ, ಅಂತೆಯೇ ಅವನ ಕ್ರಾಂತಿಕಾರಿ ಬದ್ಧತೆಯ ಹಾಗೂ ಚಾರಿತ್ರಿಕವಾಗಿ, ವೈಜ್ಞಾನಿಕವಾಗಿ ಮತ್ತು ಭೌತವಾದಿಯಾಗಿ ಚಿಂತನೆ ನಡೆಸುವ ಅವನ ಸಾಮರ್ಥ್ಯದ ಪರಿಚಯವೂ ಆಗುತ್ತದೆ.

ಧರ್ಮವೆಂಬುದು ಆಳುವ ಮತ್ತು ಶೋಷಕ ವರ್ಗವು ಜನರನ್ನು ಮೋಸಗೊಳಿಸಲು, ತಮ್ಮ ವರ್ಗದ ಸವಲತ್ತುಗಳನ್ನು ಮತ್ತು ಅಧಿಕಾರವನ್ನು ನ್ಯಾಯಸಮ್ಮತವಾಗಿಸಲು ಮತ್ತು ಜನರನ್ನು ಸಾಮಾಜಿಕವಾಗಿ ಮೌನವಾಗಿಸಲು ಸೃಷ್ಟಿಸಿಕೊಂಡಿರುವ ತಂತ್ರವೆಂಬುದನ್ನು ಭಗತ್‌ಸಿಂಗ್ ಗುರುತಿಸುತ್ತಾನೆ. ನಿಜ ಜೀವನದಲ್ಲಿ ಧರ್ಮವು ಇದನ್ನೆಲ್ಲಾ ಮಾಡುತ್ತದೆಂಬುದು ನಿಜ; ಆದ್ದರಿಂದಲೇ ಅದು ಈ ವರ್ಗಗಳ ಮಿತ್ರವೃಂದಕ್ಕೆ ಸೇರುತ್ತದೆ. ಅವುಗಳ ಸಾಧನವಾಗುತ್ತದೆ. ಆದರೆ ಇದಕ್ಕೂ ಮಿಗಿಲಾಗಿ ತನ್ನ ಸುತ್ತಮುತ್ತಲಿನ ಪ್ರಾಕೃತಿಕ ಪರಿಸರವನ್ನು ಮಾತ್ರವಲ್ಲದೆ ತನ್ನ ಸ್ವಂವ ಸಾಮಾಜಿಕ ಚಟುವಟಿಕೆ ಮತ್ತು ಸಂಘಟನೆಯನ್ನು ಸಹ ಅರ್ಥಮಾಡಿಕೊಳ್ಳಲಾಗದ ಹಾಗೂ ತನ್ನ ಸ್ವಂತ ಜೀವನವನ್ನು ನಿಯಂತ್ರಿಸಿಕೊಳ್ಳಲಾಗದ ಮತ್ತು ಅದರ ಇತಿಮಿಗಳನ್ನು ಮೀರಲಾಗದ ಪ್ರಾಚೀನ ಮಾನವನ ಅಸಾಮರ್ಥ್ಯದ ಪರಿಣಾಮವಾಗಿ ಧರ್ಮವು ಹುಟ್ಟಿಕೊಂಡಿತು ಎಂಬುದನ್ನು ಭಗತ್‌ಸಿಂಗ್ ಎತ್ತಿ ತೋರಿಸುತ್ತಾನೆ. ಆಗ ದೇವರೆನ್ನುವವನು ಪ್ರಯೋಜನಕರವಾದ ಒಂದು ಐತಿಹ್ಯವಾಗಿ ಪರಿಣಮಿಸುತ್ತಾನೆ. ಈ ಐತಿಹ್ಯವು “ಪ್ರಾಚೀನ ಯುಗದಲ್ಲಿ ಸಮಾಜಕ್ಕೆ ಉಪಯುಕ್ತವಾಗಿತ್ತು.”

ಅದೂ ಅಲ್ಲದೆ, “ದೇವರ ಕಲ್ಪನೆಯು ಮನುಷ್ಯನ ಸಂಕಟ ಸಮಯದಲ್ಲಿ ಅವನಿಗೆ ಸಹಾಯವಾಗುತ್ತದೆ.” ಅಸಹಾಯಕ ವ್ಯಕ್ತಿಯ ಜೀವನವನ್ನು ಧೈರ್ಯವಾಗಿ ಎದುರಿಸಲು ದೇವರು ಮತ್ತು ಧರ್ಮ ಆಧಾರ ನೀಡಿವೆ. “ಜೀವನದ ಎಲ್ಲ ದುರ್ಭರ ಸನ್ನಿವೇಶಗಳನ್ನೂ ಆತ ಧೈರ್ಯದಿಂದ ಎದುರಿಸುವಂತೆ, ಎಲ್ಲ ಅಪಾಯಗಳನ್ನೂ ಎದೆಗುಂದದೆ ಹಿಮ್ಮೆಟ್ಟಿಸುವಂತೆ ಹಾಗೂ ಸುಖ ಸಮೃದ್ಧಿಗಳ ಕಾಲದಲ್ಲಿ ಹಿಗ್ಗಿ ಹಾರಾಡುವುದನ್ನು ತಡೆಗಟ್ಟಿ ಸಂಯಮದಿಂದ ವರ್ತಿಸುವಂತೆ ಮನುಷ್ಯನಿಗೆ ಪ್ರೋತ್ಸಾಹ ನೀಡುವ ಸಲುವಾಗಿ ದೇವರನ್ನು ಕಾಲ್ಪನಿಕವಾಗಿ ಅಸ್ತಿತ್ವಕ್ಕೆ ತರಲಾಯಿತು”. “ನಂಬಿಕೆಯ ಕಷ್ಟ ಕಾರ್ಪಣ್ಯಗಳನ್ನು ಹಗುರುಗೊಳಿಸುತ್ತದೆ; ಮಾತ್ರವಲ್ಲ ಅವುಗಳನ್ನು ಅದು ಅಪ್ಯಾಯಮಾನವಾಗಿಯೂ ಮಾಡಬಹುದು. ದೇವರಲ್ಲಿ ಮನುಷ್ಯನು ಅತ್ಯಂತ ಹೆಚ್ಚಿ ಸಾಂತ್ವನ ಹಾಗೂ ಬೆಂಬಲವನ್ನು ಪಡೆಯಬಲ್ಲ.” ಆದ್ದರಿಂದಲೇ ನೊಂದವರಿಗೆ, ಅನ್ಯಾಯಕ್ಕೊಳಗಾದವರಿಗೆ ಮತ್ತು ಅಸಹಾಯಕರಿಗೆ ದೇವರು “ತಂದೆ, ತಾಯಿ, ಸೋದರ, ಸೋದರಿ, ಸ್ನೇಹಿತ ಹಾಗೂ ಸಹಾಯಕ” ಎಲ್ಲವೂ ಆಗುತ್ತಾನೆ.

ಆದರೆ, ಭಗತ್ ಸಿಂಗ್‌ನ ಅಭಿಪ್ರಾಯದಲ್ಲಿ ವಿಜ್ಞಾನ ಬೆಳೆದು, ಶೋಷಿತರು ತಮ್ಮ ವಿಮೋಚನೆಗಾಗಿ ಹೋರಾಟ ನಡೆಸುವ ಹಂತದಲ್ಲಿರುವಾಗ ಹಾಗೂ “ಮನುಷ್ಯನೊಬ್ಬ ವಾಸ್ತವವಾದಿಯಾಗಿ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಲು ಯತ್ನಿಸಿದಾಗ” (ಭಗತ್‌ಸಿಂಗ್‌ನು ವಿಚಾರವಾದಿ ಹಾಗೂ ಭೌತವಾದಿ ಎಂಬ ಪದಗಳಿಗೆ ಸಂವಾದಿಯಾಗಿ ವಾಸ್ತವವಾದಿಯೆಂಬ ಪದವನ್ನು ಬಳಸುತ್ತಾನೆ) ದೇವರೆಂಬ ಈ ಕೃತಕ ಊರುಗೋಲಿನ, ಈ ಕಾಲ್ಪನಿಕ ರಕ್ಷಕನ ಅವಶ್ಯಕತೆಯೇ ಕೊನೆಗೊಳ್ಳುತ್ತದೆ. ಆತ್ಮ ವಿಮೋಚನೆಯ ಈ ಹೋರಾಟದಲ್ಲಿ “ಧರ್ಮದ ಸಂಕುಚಿತ ಕಲ್ಪನೆಯ ವಿರುದ್ಧದ ಹಾಗೂ ದೇವರ ನಂಬಿಕೆಯ ವಿರುದ್ಧದ ಹೋರಾಟವು ಅತ್ಯಗತ್ಯವಾಗುತ್ತದೆ.” ಭಗತ್‌ಸಿಂಗ್‌ನ ಮಾತಿನಲ್ಲಿ ಹೇಳುವುದಾದರೆ, “ಪ್ರಗತಿಗೆ ಬದ್ಧನಾದ ಯಾವನೇ ವ್ಯಕ್ತಿಯು ಹಳೆಯ ನಂಬಿಕೆಗಳ ಪ್ರತಿಯೊಂದು ಅಂಶವನ್ನೂ ವಿಮರ್ಶಿಸಿ, ಅದನ್ನು ಅನುಮಾನದಿಂದ ನೋಡಿ, ಅದಕ್ಕೆ ಸವಾಲೆಸೆಯಬೇಕು. ಪ್ರಚಲಿತವಾದ ನಂಬಿಕೆಗಳ ಮೂಲೆ ಮೂಲೆಗಳಲ್ಲೂ ಶೋಧಿಸಿ ಒಂದಂಶವನ್ನೂ ಬಿಡದೆ ತರ್ಕದ ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸಬೇಕು. ತನ್ನನ್ನು ವಾಸ್ತವವಾದಿಯೆಂದು ಕರೆದುಕೊಳ್ಳುವವನು ಎಲ್ಲ ಪ್ರಾಚೀನ ನಂಬಿಕೆಗಳನ್ನು ಇಡಿಯಾಗಿ ಪ್ರಶ್ನಿಸಬೇಕು… ಅವನ ಮೊದಲ ಕೆಲಸವೆಂದರೆ ಆ ಎಲ್ಲ ನಂಬಿಕೆಗಳನ್ನು ನೆಲಸಮ ಮಾಡಿ, ಹೊಸ ತತ್ವಶಾಸ್ತ್ರದ ನಿರ್ಮಾಣಕ್ಕೆ ಅಗತ್ಯವಾದ ಜಾಗವನ್ನು ತೆರವು ಮಾಡಿಕೊಳ್ಳುವುದು” (ಪುಟ ೬-೧೧).

ಲೇಖನದ ಈ ಭಾಗದಲ್ಲಿ ಭಗತ್‌ಸಿಂಗ್ ಅವರ ಮಾತುಗಳನ್ನೇ ಉದ್ಧರಿಸಲಾಗಿದೆ:

ನೀವು ನಂಬಿರುವಂತೆ ಈ ಪೃಥ್ವಿ ಅಥವಾ ವಿಶ್ವವನ್ನು ಸೃಷ್ಟಿಸಿದನೆಂದು ಹೇಳಲಾಗುವ ಒಬ್ಬ ಸರ್ವಶಕ್ತ, ಸರ್ವವ್ಯಾಪಿ ಮತ್ತು ಸರ್ವಜ್ಞನಾದ ದೇವರು ಇದ್ದರೆ ದುಃಖ, ಸಂಕಟ ಮತ್ತು ಅಸಂಖ್ಯಾತ ದುರಂತಗಳ ಶಾಶ್ವತ ಕಂತೆಯಾಗಿರುವ, ಒಂದೇ ಒಂದು ಜೀವಿಗೆ ಸಹ ಪೂರ್ಣ ತೃಪ್ತಿ ಇಲ್ಲದಿರುವ ಇದನ್ನು ಅವನೇಕೆ ಸೃಷ್ಟಿಸಿದನೆಂದು ದಯವಿಟ್ಟು ನನಗೆ ತಿಳಿಸಿಕೊಡುವಿರಾ?

ಆದರೆ ಇದು “ಅವನ ನಿಯಮ” ಎಂದು ಮಾತ್ರ ಹೇಳಬೇಡಿ. ಅಂತಹ ಯಾವುದಾದರೊಂದು ನಿಯಮಕ್ಕೆ ಒಳಪಟ್ಟೊದ್ದರೆ ಆತ ಸರ್ವಶಕ್ತನಲ್ಲ. ನಮ್ಮಂತೆಯೇ ಅವನು ಕೂಡ ಗುಲಾಮ. ಹಾಗಿದ್ದರೆ ಅದು ಅವನ ಆನಂದಮಯ ಲೀಲೆ ಎಂದೂ ದಯಮಾಡಿ ನುಡಿಯ ಬೇಡಿ. ನೀರೋ ಎಂಬ ಪುರಾತನ ರೋಮನ್‌ ಚಕ್ರವರ್ತಿ ತನ್ನ ಆನಂದಕ್ಕಾಗಿ ದಹಿಸಿದ್ದು ಒಂದು ರೋಮ್‌ ನಗರವನ್ನು; ಸಂಹರಿಸಿದ್ದು ಕೆಲವೇ ಕೆಲವು ಜನರನ್ನು; ಮಾಡಿದ್ದು ಒಂದೆರಡು ದುರಂತಗಳನ್ನು ಮಾತ್ರ. ಆದರೂ ಇತಿಹಾಸದಲ್ಲಿ ಅವನ ಸ್ಥಾನವೇನು? ಇತಿಹಾಸಕಾರರು ಅವನನ್ನು ಯಾವ ಹೆಸರುಗಳಿಂದ ಕರೆಯುತ್ತಾರೆ? ಅವನ ಮೇಲೆ ಎಲ್ಲ ಬಗೆಯ ಕೆಟ್ಟ ಪದಗಳ ಮಳೆಯನ್ನೇ ಸುರಿಸಲಾಗಿದೆ. ಅವನನ್ನು ಪ್ರಜಾಪೀಡಕ, ಹೃದಯ ಹೀನ ವ್ಯಕ್ತಿ, ದುಷ್ಟ ಎಂದು ಖಂಡಿಸಲಾಗಿದೆ. ಅವನನ್ನು ಕುರಿತ ಇತಿಹಾಸದ ಪುಟಗಳು ಅವನ ದೂಷಣೆಗಳಿಂದ ಕಪ್ಪಾಗಿವೆ. ತನ್ನ ಆನಂದಕ್ಕಾಗಿ ಒಬ್ಬ ಚೆಂಗಿಸ್‌ಖಾನ್‌ ಕೆಲವು ಸಹಸ್ರ ಜನರನ್ನು ಬಲಿಕೊಟ್ಟ. ಅದರಿಂದಾಗಿ ಆ ಹೆಸರನ್ನೇ ನಾವಿಂದು ದ್ವೇಷಿಸುತ್ತೇವೆ. ಹೀಗಿರುವಾಗ, ಹಿಂದೆ ಮತ್ತು ಇಂದು ಕೂಡ ದಿನದಿನವೂ ನಿಮಿಷ ನಿಮಿಷವೂ ಅಸಂಖ್ಯಾತ ದುರಂತಗಳಿಗೆ ಕಾರಣವಾಗಿದ್ದು ಸಾರ್ವಕಾಲಿಕ ನೀರೋ ಆಗಿ ವಿಜೃಂಭಿಸುತ್ತಿರುವ ನಿಮ್ಮ ಸರ್ವಶಕ್ತ ಭಗವಂತನನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ? ಆ ಚೆಂಗಿಸ್‌ಖಾನ್‌ರ ಕ್ರೌರ್ಯಗಳನ್ನು ಮೀರಿಸುವಂತಹ ದುಷ್ಕೃತ್ಯಗಳನ್ನು ಪ್ರತಿಕ್ಷಣದಲ್ಲೂ ಮಾಡುತ್ತಿರುವ ಅವನಿಗೆ ಹೇಗೆ ಬೆಂಬಲ ನೀಡುತ್ತೀರಿ? ಸದಾ ವಿಷಮಯ ಅಶಾಂತಿ ತಾಣವಾಗಿರುವ, ನಿಜವಾಗಿಯೂ ಒಂದು ನರಕವಾಘಿರುವ ಜಗತ್ತನ್ನು ಆತ ಏಕೆ ಸೃಷ್ಟಿಸಿದ ಎಂದು ನಿಮ್ಮೊಡನೆ ನಾನು ಕೇಳುತ್ತೇನೆ. ಮಾನವನನ್ನು ಸೃಷ್ಟಿಮಾಡದೆ ಇರಬಲ್ಲ ಸಾಮರ್ಥ್ಯ ಇದ್ದಾಗ್ಯೂ ಆ ಸರ್ವಶಕ್ತಿ ಅವನನ್ನೇಕೆ ಉಂಟುಮಾಡಿದ? ಇದಕ್ಕೆಲ್ಲ ಸಮರ್ಥನೆ ಯಾವುದು? ಇಲ್ಲಿ ದುಃಖಕ್ಕೊಳಗಾದ ನಿರಪರಾಧಿಗಳಿಗೆ ಪರಲೋಕದಲ್ಲಿ ಪುರಸ್ಕಾರ ನೀಡುವುದಕ್ಕಾಗಿ ಮತ್ತು ಅದೇ ರೀತಿಯಲ್ಲಿ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸುವ ಲುವಾಗಿ ಎಂದೆನ್ನುವಿರಾ? ಸರಿ ಹಾಗಾದರೆ; ನಿಮ್ಮ ಗಾಯದ ಮೇಲೆ ಮೃದುವಾಗ ಹಾಗೂ ಹಿತಕರವಾದ ಲೇಪನವನ್ನು ಹಚ್ಚುವುದಕ್ಕೋಸ್ಕರವೆಂದೇ ನಿಮ್ಮ ದೇಹವನ್ನು ಇರಿದ ಒಬ್ಬ ವ್ಯಕ್ತಿಯನ್ನು ನೀವು ಎಷ್ಟರಮಟ್ಟಿಗೆ ಸಮರ್ಥಿಸುವಿರಿ? ಪುರಾತನ ರೋಮ್‌ನಲ್ಲಿ ಗ್ಲಾಡಿಯೇಟರ್ ಕಾದಾಟ ಎಂಬ ಒಂದು ವಿಶಿಷ್ಟ ಕ್ರೀಡೆಯಿತ್ತು. ಗ್ಲಾಡಿಯೇಟರ್‌ಗಳೆಂದರೆ ಒಂದು ಬಗೆಯ ಜಟ್ಟಿಗಳು. ಹಸಿವೆಯಿಂದ ಕಂಗೆಟ್ಟ ಕೋಪಾವಿಷ್ಟ ಸಿಂಹಗಳೊಂದಿಗೆ ಕಾದಾಡಲು ಅವುಗಳ ಮುಂದೆ ಇವರನ್ನು ಎಸೆಯಲಾಗುತ್ತಿತ್ತು. ಆ ಹಿಂಸ್ರಪಶುಗಳಿಂದ ಮರಣಕ್ಕೆ ತುತ್ತಾಗದೆ ಈ ಸ್ಪರ್ಧೆಯಲ್ಲಿ ಅವರು ಬದುಕಿ ಉಳಿದರೆ ಅವರನ್ನು ಸತ್ಕರಿಸಿ ಪೋಷಿಸಲಾಗುತ್ತಿತ್ತು. ಈ ಕ್ರೂರ ಕ್ರೀಡೆಯ ಬೆಂಬಲಿಗರ ಮತ್ತು ವ್ಯವಸ್ಥಾಪಕರ ಕೃತ್ಯ ಸಮರ್ಥನೀಯವಾಗಿತ್ತೆ? ಆದುದರಿಂದ ನಾನು ಪ್ರಶ್ನಿಸುತ್ತಿದ್ದೇನೆ: “ಪ್ರಜ್ಞಾವಂತ ಪರಮ ಶಕ್ತಿಯೆನಿಸಿಕೊಂಡಿರುವ ದೇವರು ಈ ಜಗತ್ತನ್ನು ಮತ್ತು ಅದರೊಳಗೆ ಮನುಷ್ಯನನ್ನು ಏಕೆ ಸೃಷ್ಟಿ ಮಾಡಿದ? ಅದರಿಂದ ಖುಷಿಪಡಲೆಂದೆ? ಹಾಗಿದ್ದರೆ, ಅವನ ಮತ್ತು ನಿರೋವಿನ ನಡುವಣ ವ್ಯತ್ಯಾಸವೇನು?”

ಹಿಂದೂ ತತ್ವಶಾಸ್ತ್ರವು ಇದಕ್ಕೆ ಮತ್ತೇನಾದರೂ ವಾದವನ್ನು ಮುಂದಿಡಲು ಸಿದ್ಧವಾಗುತ್ತಿರಬಹುದು. ಆದರೆ ಮಹಮದೀಯರೇ ಮತ್ತು ಕ್ರೈಸ್ತರೇ, ನೀವು ಹೇಳಿ, ಮೇಲಿನ ನನ್ನ ಪ್ರಶ್ನೆಗೆ ನಿಮ್ಮ ಉತ್ತರವೇನು? ನಿಮಗೆ ಪೂರ್ವಜನ್ಮದಲ್ಲಿ ನಂಬಿಕೆಯಿಲ್ಲ. ಆದ್ದರಿಂದ ನೀವು ಹಿಂದೂಗಳಂತೆ ಅಮಾಯಕ ಜನರ ಕಷ್ಟಕೋಟಲೆಗಳಿಗೆ ಅವರ ಪೂರ್ವಜನ್ಮದ ಕರ್ಮಫಲವೇ ಕಾರಣವೆಂಬ ವಾದವನ್ನು ಮುಂದಿಡಲಾರಿರಿ ಅಲ್ಲವೇ? ಹಾಗಾದರೆ, ನನ್ನ ಸೊಲ್ಲಿನಿಂತ ಈ ಜಗತ್ತನ್ನು ಸೃಷ್ಟಿಸಲು ಆರು ದಿನಗಳು ಶ್ರಮವಹಿಸಿದ ಆ ನಿಮ್ಮ ಸರ್ವಶಕ್ತ ಭಗವಂತ ಪ್ರತಿದಿನವೂ ತಾನು ಸೃಷ್ಟಿಸಿದ ಈ ಜಗತ್ತಿನಲ್ಲಿ ಎಲ್ಲವೂ ಚೆನ್ನಾಗಿದೆ ಎಂದೇಕೆ ಹೇಳಿದ? ಹಾಗಾದರೆ ಇಂದು ಅವನನ್ನು ಕರೆಯಿರಿ. ಅವನಿಗೆ ಗತಕಾಲದ ಚರಿತ್ರೆಯನ್ನು ತೋರಿಸಿರಿ. ಇಂದಿನ ಸನ್ನಿವೇಶವನ್ನು ಅಧ್ಯಯನ ಮಾಡಲು ಹೇಳಿ. ಆಗೇನಾದರೂ ‘ಎಲ್ಲವೂ ಚೆನ್ನಾಗಿದೆ’ ಎಂದು ಹೇಳಲು ಅವನಿಗೆ ಧೈರ್ಯ ಉಂಟಾಗುತ್ತದೋ ಇಲ್ಲವೋ ನೋಡೋಣ.

ಇಲ್ಲಿಗೆ ಬರಲಿ ಆ ಭಗವಂತ. ಇಲ್ಲಿನ ಸೆರೆಮನೆಗಳ ಕತ್ತಲೆ ಕೂಪಗಳು, ಕೊಳೆಗೇರಿಗಳಲ್ಲಿ ಹಾಗೂ ಗುಡಿಸಲುಗಳಲ್ಲಿ ಮಿಲಿಯಗಟ್ಟಲೆ ಮಾನವ ಜೀವಿಗಳನ್ನು ನುಂಗಿ ಹಾಕುತ್ತಿರುವ ಹಸಿವಿನ ಉಗ್ರಾಣಗಳು, ಬಂಡವಾಳಶಾಹಿ ರಕ್ತ ಪಿಶಾಚಿಗಳು ತಮ್ಮ ನೆತ್ತರನ್ನು ಹೀರುತ್ತಿರುವ ವಿಧಾನವನ್ನು ತಾಳ್ಮೆಯಿಂದ ಅಥವಾ ನಿರಾಸಕ್ತಿಯಿಂದ ವೀಕ್ಷಿಸುವ ಶ್ರಮಜೀವಿಗಳು, ಒಂದಿಷ್ಟಾದರೂ ಯುಕ್ತಾಯುಕ್ತ ವಿವೇಕವುಳ್ಳ ಯಾವ ಮನುಷ್ಯನನ್ನಾದರೂ ಗಾಬರಿಗೊಳಿಸುವ ರೀತಿಯಲ್ಲಿ ಮಾನವ ಶಕ್ತಿಯನ್ನು ವೃಥಾ ಫೋಲು ಮಾಡುವ ಕ್ರಮಗಳು ಮತ್ತು ಹೆಚ್ಚುವರಿ ಉತ್ಪಾದನೆಯನ್ನು ಕೊರತೆಯಿಂದ ಬಳಲುತ್ತಿರುವ ಉತ್ಪಾದಕರಿಗೆ ವಿತರಣೆ ಮಾಡುವುದಕ್ಕೆ ಬದಲಾಗಿ ಅದನ್ನು ಸಮುದ್ರಕ್ಕೆಸೆಯುವುದೇ ಲೇಸೆಂದು ಬಗೆಯುವ ಕುಸಂಸ್ಕೃತಿ-ಇವುಗಳಿಂದ ತೊಡಗಿ ಮನುಷ್ಯರ ಮೂಳೆಗಳ ಆಸ್ತಿವಾರದ ಮೇಲೆ ಕಟ್ಟಲಾದ ರಾಜಮಹಾರಾಜರ ಅರಮನೆಗಳವರೆಗೆ-ಎಲ್ಲವನ್ನೂ ಇಲ್ಲಿಗೆ ಬಂದು ನೋಡಿ ಆಮೇಲೆ ಆತ ಹೇಳಲಿ: “ಎಲ್ಲವೂ ಚೆನ್ನಾಗಿದೆ” ಎಂದು! ಹೀಗೆಲ್ಲ ಏಕೆ ಮತ್ತು ಹೇಗೆ? ಇದೇ ನನ್ನ ಪ್ರಶ್ನೆ. ಇದಕ್ಕೆ ಮೌನವೇ ನಿಮ್ಮ ಉತ್ತರವೆ? ಸರಿ, ನಾನು ಮುಂದುವರಿಸುವೆ.

ಹಿಂದೂಗಳೇ; ಈಗ ನೀವು ಹೇಳಿ. ಈ ಜನ್ಮದಲ್ಲಿ ಸಂಕಟಪಡುತ್ತಿರುವವರೆಲ್ಲ ಅವರ ಪೂರ್ವಜನ್ಮದಲ್ಲಿ ಪಾಪಕೃತ್ಯಗಳನ್ನು ಎಸಗುತ್ತಿದ್ದ ವರ್ಗಕ್ಕೆ ಸೇರಿದ್ದವರು ಎಂಬುದು ನಿಮ್ಮ ಹೇಳಿಕೆ. ಒಳ್ಳೆಯದು, ಇಂದು ಶೋಷಕರಾಗಿರುವವರು ಅವರ ಪೂರ್ವಜನ್ಮದಲ್ಲಿ ಸಾಧುಗಳು, ಸಜ್ಜನರು ಆಗಿದ್ದುದರಿಂದ ಇಂದು ಅಧಿಕಾರವನ್ನು ಅನುಭವಿಸುತ್ತಿದ್ದಾರೆಂದು ನಿಮ್ಮ ತಿಳಿವಳಿಕೆ. ನಿಮ್ಮ ಪೂರ್ವಿಕರು ತಂಬಾ ಚಾಣಾಕ್ಷರಾಗಿದ್ದರು ಎಂಬುದೇನೋ ಒಪ್ಪಬೇಕಾದ ಮಾತೇ. ಆದ್ದರಿಂದ ದೇವರ ಬಗ್ಗೆ ತರ್ಕ ಮತ್ತು ಅಪನಂಬಿಕೆಗಳನ್ನು ಬಡಿದುಹಾಕಲು ಅವರು ಸರ್ವಪ್ರಯತ್ನ ನಡೆಸಿ ಅದಕ್ಕೆ ಸಾಕಷ್ಟು ಬಲಯುತವಾದ ಸಿದ್ಧಾಂತಗಳನ್ನು ಸೃಷ್ಟಿಸಿದ್ದಾರೆ. ಆದರೆ ಅವರ ಈ ವಾದವು ಎಷ್ಟರಮಟ್ಟಿಗೆ ನಿಲ್ಲಬಲ್ಲದು ಎಂಬುದನ್ನು ಈಗ ವಿಮರ್ಶಿಸೋಣ.

ಅತ್ಯಂತ ಖ್ಯಾತಿವಂತ ನ್ಯಾಯಪಟುಗಳ ದೃಷ್ಟಿಯಲ್ಲಿ ನೋಡುವುದಾದರೆ, ತಪ್ಪನ್ನೆಸಗಿದವನಿಗೆ ವಿಧಿಸಲಾಗುವ ಶಿಕ್ಷೆಗೆ ಸಮರ್ಥನೆ ಇರುವುದು ಮೂರು ನಾಲ್ಕು ಉದ್ದೇಶಗಳನ್ನು ಅದು ಪೂರೈಸುತ್ತದೆ ಎಂಬ ಕಾರಣದಿಂದ. ಅವು ಪ್ರತೀಕಾರಾತ್ಮಕ, ಸುಧಾರಣಾತ್ಮಕ ಮತ್ತು ಪ್ರತಿಬಂಧಕ ಉದ್ದೇಶಗಳಾಗಿರುತ್ತವೆ. ಪ್ರತೀಕಾರದ ಸಿದ್ಧಾಂತವನ್ನು ಈಗ ಎಲ್ಲ ಶ್ರೇಷ್ಠ ಚಿಂತಕರು ಖಂಡಿಸುತ್ತಿದ್ದಾರೆ. ಪ್ರತಿಬಂಧನದ ಸಿದ್ಧಾಂತಕ್ಕೂ ಇದೇ ಗತಿಯಾಗುತ್ತದೆ. ಹೀಗಾಗಿ ಸುಧಾರಣಾತ್ಮಕ ಸಿದ್ಧಾಂತವೊಂದೇ ಮೂಲಭೂತವಾದ ಮತ್ತು ಮಾನವ ಪ್ರಗತಿಗೆ ಅನಿವಾರ್ಯವಾದ ಸಿದ್ಧಾಂತವಾಗಿದೆ. ಅಪರಾಧಿಯನ್ನು ಮತ್ತೆ ಸಮರ್ಥ ಹಾಗೂ ಶಾಂತಿಪ್ರಿಯ ಪ್ರಜ್ಞೆಯನ್ನಾಗಿ ಮಾಡಿ ಸಮಾಜಕ್ಕೆ ಹಿಂದಿರುಗಿಸುವ ಗುರಿ ಹೊಂದಿರುವ ವಿಧಾನ ಇದು. ಆದರೆ ಬದು ಮಂದಿ ಮಾನವರು ಅಪರಾಧಿಗಳೆಂದು ಒಂದು ವೇಳೆ ನಾವು ಒಪ್ಪಿಕೊಂಡರೂ ದೇವರು ಅವರಿಗೆ ವಿಧಿಸುವ ಶಿಕ್ಷೆಯ ಸ್ವರೂಪವಾದರೂ ಎಂತಹುದು? ಹಸು, ಬೆಕ್ಕು, ಮರ, ಮೂಲಿಕೆ, ಪ್ರಾಣಿ ಇತ್ಯಾದಿಯಾಗಿ ಹುಟ್ಟುವಂತೆ ಆತ ಶಿಕ್ಷೆಯನ್ನು ವಿಧಿಸುತ್ತಾನೆಂದು ನೀವು ಹೇಳುತ್ತೀರಿ. ಇಂತಹ ಶಿಕ್ಷೆಗಳಿಂದ ಅಪರಾಧಿ ಮನುಷ್ಯನ ಮೇಲೆ ಉಂಟಾಗಬಹುದಾದ ಸುಧಾರಣಾತ್ಮಕ ಪ್ರಭಾವ ಏನು? ತಾವು ಮಾಡಿದ್ದ ಪಾಪದ ಫಲವಾಗಿ ಹಿಂದಿನ ಜನ್ಮದಲ್ಲಿ ಕತ್ತೆಯಾಗಿ ಹುಟ್ಟಿದ್ದುದಾಗಿ ಹೇಳುವ ಎಷ್ಟು ಮಂದಿಯನ್ನು ನೀವು ಭೇಟಿಯಾಗಿದ್ದೀರಿ. ಒಬ್ಬರೂ ಇಲ್ಲ ಅಲ್ಲವೇ? ನಿಮ್ಮ ಪುರಾಣಗಳನ್ನು ದಯವಿಟ್ಟು ಉದ್ಧರಿಸಬೇಡಿ. ನಿಮ್ಮ ಪುರಾಣದ ಕಲ್ಪನೆಗಳನ್ನು ಮುಟ್ಟುವ ಗೋಜಿಗೆ ನಾನು ಹೋಗುವುದಿಲ್ಲ. ಅಲ್ಲದೆ ಈ ಜಗತ್ತಿನಲ್ಲಿ ಒಬ್ಬ ಮಾಡಬಹುದಾದ ಅತ್ಯಂತ ದೊಡ್ಡ ಪಾಪವೆಂದರೆ ಬಡವನಾಗಿರುವುದು, ಎಂಬುದು ನಿಮಗೆ ಗೊತ್ತೇ? ಬಡತನ ಒಂದು ಮಹಾಪರಾಧ. ಅದೊಂದು ಗಂಭೀರ ಶಿಕ್ಷೆ. ಅನಿವಾರ್ಯವಾಗಿ ಹೆಚ್ಚು ಹೆಚ್ಚು ಅಪರಾಧಗಳನ್ನು ಮಾಡುವಂತೆ ಮನುಷ್ಯನನ್ನು ಪ್ರೇರೇಪಿಸುವ ಶಿಕ್ಷಾಕ್ರಮಗಳನ್ನು ಸೂಚಿಸುವ ಅಪರಾಧ ತಜ್ಞ, ನ್ಯಾಯವಾದಿ ಅಥವಾ ಶಾಸಕರ ಪ್ರಯತ್ನವನ್ನು ನೀವು ಎಷ್ಟರಮಟ್ಟಿಗೆ ಮೆಚ್ಚುತ್ತೀರಿ? ಈ ವಿಷಯ ನಿಮ್ಮ ದೇವರಿಗೆ ಗೊತ್ತಿರಲಿಲ್ಲವೇ? ಅಥವಾ ಮನುಕುಲವು ಎದುರಿಸುತ್ತಿರುವ ಅನೂಹ್ಯವಾದ ನೋವು ಸಂಕಟಗಳ ಅನುಭವದಿಂದ ನಿಮ್ಮ ದೇವರು ಇನ್ನೂ ಪಾಠ ಕಲಿಯಬೇಕಾಗಿದೆಯೇ? ಬಡತನ ಮತ್ತು ನಿರಕ್ಷರತೆಗಳಿಗೆ ಗುರಿಯಾದ ಒಂದು ಸಂಸಾರದಲ್ಲಿ ಉದಾಹರಣೆಗೆ ಒಬ್ಬ ಚಮ್ಮಾರನ ಅಥವಾ ಕಸ ಗುಡಿಸುವವನ ಕುಟುಂಬದಲ್ಲಿ ಹುಟ್ಟಿದ ಮನುಷ್ಯನ ಗತಿಯ ಬಗ್ಗೆ ನೀವು ಏನು ಹೇಳುವಿರಿ? ಅವನು ಬಡವನಾಗಿದ್ದರಿಂದ ವಿದ್ಯಾಭ್ಯಾಸ ಪಡೆಯಲಾರ. ಅವನ ಜಾತಿಗಿಂತ ಮೇಲಿನದೆಂದು ಹೇಳಲಾದ ಜಾತಿಯಲ್ಲಿ ಹುಟ್ಟಿರುವ ಕಾರಣದಿಂದಾಗಿ ಅವನಿಗಿಂತ ಶ್ರೇಷ್ಠರೆಂದು ಭಾವಿಸಿರುವ ಅವನ ಸಹ ಮಾನವರು ಅವನನ್ನು ದ್ವೇಷಿಸುತ್ತಾರೆ ಹಾಗೂ ದೂರವಿಡುತ್ತಾರೆ. ಅವನ ಅಜ್ಞಾನ, ಅವನ ಬಡತನ ಮತ್ತು ಸಾಜದ ಉಳಿದವರು ಅವನೊಂದಿಗೆ  ನಡೆದುಕೊಳ್ಳುವ ರೀತಿ-ಇವು ಸಮಾಜದತ್ತ ಅವನ ಹೃದಯವನ್ನು ಕಲ್ಲು ಮಾಡುತ್ತವೆ. ಆದ್ದರಿಂದ ಅವನು ಅಪರಾಧವೊಂದನ್ನು ಮಾಡುತ್ತಾನೆಂದುಕೊಳ್ಳಿ. ಅದಕ್ಕೆ ಬಾಧ್ಯರು ಯಾರು? ದೇವರೇ? ಅವನೇ? ಅಥವಾ ಸಮಾಜದ ವಿದ್ಯಾವಂತ ಜನರೇ? ಇಷ್ಟೇ ಅಲ್ಲ, ಒಣ ಪ್ರತಿಷ್ಠೆಯೇ ಅಹಂಕಾರದಿಂದ ಮೆರೆವ ಬ್ರಾಹ್ಮಣದಿಂದ ಉದ್ದೇಶ ಪೂರ್ವಕವಾಗಿಯೇ ಅಜ್ಞಾನಾಂಧಕಾರದಲ್ಲಿ ನೂಕಲ್ಪಟ್ಟ ಈ ಜನರು ನಿಮ್ಮ ಪವಿತ್ರ ಗ್ರಂಥವಾದ ವೇದದ ಒಂದೆರಡು ಮಂತ್ರಗಳನ್ನು ಕೇಳಿಸಿಕೊಂಡ ತಪ್ಪಿಗೆ ಕಾದ ಸೀಸವನ್ನು ಕಿವಿಯಲ್ಲಿ ಹೊಯ್ಯಿಸಿಕೊಳ್ಳಬೇಕಾದ ದಂಡ ತೆರಬೇಕಾಗಿದ್ದುದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಅವರು ಅಂತಹ ಅಪರಾಧ ಮಾಡಿದ್ದರು ಎಂದು ಆರೋಪಿಸುವುದಾದರೆ ಅದಕ್ಕೆ ಯಾರು ಹೊಣೆ ಮತ್ತು ಹೊಡೆತ ತಿನ್ನಬೇಕಾಗಿದ್ದವರು ಯಾರು? ನನ್ನ ಪ್ರಿಯ ಸ್ನೇಹಿತರೇ, ಸಮಾಜದಲ್ಲಿ ಸವಲತ್ತುಗಳನ್ನು ಪಡೆದ ಕೆಲವು ಪ್ರತಿಷ್ಠಿತ ಜನರೇ ಈ ಸಿದ್ಧಾಂತಗಳನ್ನು ಸೃಷ್ಠಿಸಿರುವವರು. ತಾವು ಸೆಳೆದುಕೊಂಡಿರುವ ಅಧಿಕಾರ, ಸಂಪತ್ತು, ವೈಭವ ಹಾಗೂ ಶ್ರೇಷ್ಠತೆಯನ್ನು ಸಮರ್ಥಿಸಿಕೊಳ್ಳಲು ಈ ಸಿದ್ಧಾಂತಗಳನ್ನು ಅವರು ಬಳಸಿಕೊಳ್ಳುತ್ತಿದ್ದಾರಷ್ಟೆ. ಹೌದು, ಬಹುಶಃ ಪ್ರಸಿದ್ಧ ಕಾದಂಬರಿಕಾರ ಅಪ್ಟನ್ ಸಿಂಕ್ಲೇರ್‌ ಎಲ್ಲೋ ಒಂದು ಕಡೆ ಹೇಳಿರುವಂತೆ, ಮನುಷ್ಯನಿಗೆ ಒಮ್ಮೆ ಅಮರತ್ವದಲ್ಲಿ ನಂಬಿಕೆ ಮೂಡಿಸಿದರೆ ಸಾಕು, ನಂತರ ಅವನ ಎಲ್ಲಾ ಆಸ್ತಿ, ಸಂಪತ್ತು, ಗಳಿಕೆಯನ್ನು ದೋಚಬಹುದು. ಅವನು ಅದಕ್ಕೆ ಸಹ ತುಂಬು ಮನಸ್ಸಿನಿಂದ ನಿಮಗೆ ಸಹಾಯ ಮಾಡುತ್ತಾನೆ. ಧರ್ಮೋಪದೇಶ ಕರ ಮತ್ತು ಅಧಿಕಾರ ಸಂಪನ್ನರ ಒಕ್ಕೂಟವು ಸೆರೆಮನೆ, ನೇಣುಗಂಬ, ಚಾಟಿ ಏಟುಗಳು ಮತ್ತು ಇಂತಹ ಸಿದ್ಧಾಂತಗಳ ಹುಟ್ಟಿಗೆ ಕಾರಣವಾಗಿದೆ.

ಇನ್ನೊಂದು ಪ್ರಶ್ನೆ ಇದೆ: ಒಬ್ಬ ಮನುಷ್ಯ ಯಾವುದೊ ಪಾಪ ಅಥವಾ ಅಪರಾಧವನ್ನು ಮಾಡುತ್ತಿರುವಾಗ ಆ ನಿಮ್ಮ ಸರ್ವಶಕ್ತ ದೇವರು ಅವನನ್ನು ನಿಲ್ಲಿಸಿ ಹಾಗೆ ಮಾಡದಂತೆ ತಡೆಯುವುದಿಲ್ಲವೇಕೆ? ಅವನು ಅದನ್ನು ಬಹಳ ಸುಲಭವಾಗಿ ಮಾಡಬಹುದು. ಯುದ್ಧಕೋರರನ್ನು ಅವನೇಕೆ ನಾಶ ಮಾಡಲಿಲ್ಲ ಅಥವಾ ಅವರಲ್ಲಿದ್ದ ಯುದ್ಧೋನ್ಮಾದವನ್ನು ನಾಶ ಮಾಡಿ ಮನುಕುಲದ ಮೇಳೆ ಎರಗಿ ಬಂದ ಮಹಾಯುದ್ಧದ (ಇದು ೧೯೧೪-೧೮ರ ಮೊದಲನೇ ಮಹಾಯುದ್ಧವನ್ನು ಕುರಿತು ಹೇಳಲಾಗಿರುವ ಮಾತು-ಅನು) ಸರ್ವನಾಶವನ್ನು ಏಕೆ ತಪ್ಪಿಸಲಿಲ್ಲ? ಭಾರತವನ್ನು ವಿಮುಕ್ತಿಗೊಳಿಸುವುದಕ್ಕಾಗಿ ಬ್ರಿಟಿಷ್ ಜನತೆಯ ಮನಸ್ಸಿನಲ್ಲಿ ಕೊಂಚವಾದರೂ ಅಂತಹ ಭಾವನೆಗಳನ್ನು ನಿಮ್ಮ ದೇವರು ಏಕೆ ಹುಟ್ಟಿಸುವುದಿಲ್ಲ? ಉತ್ಪಾದನೆಯ ಸಾಧನಗಳ ರೂಪದಲ್ಲಿರುವ ತಮ್ಮೆಲ್ಲ ವೈಯಕ್ತಿಕ ಆಸ್ತಿಯ ಮೇಲಿನ ಹಕ್ಕನ್ನೂ ಪರೋಪಕಾರ ಭಾವನೆಯ ಉತ್ಸಾಹದಿಂದ ಬಿಟ್ಟುಕೊಡುವಂತೆ ಎಲ್ಲ ಬಂಡವಾಳಿಗರ ಹೃದಯದಲ್ಲೂ ಆ ದೇವರೇಕೆ ಪ್ರೇರಣೆಯನ್ನು ಬಿತ್ತುವುದಿಲ್ಲ? ಇದರಿಂದ ಇಡೀ ಶ್ರಮಿಕ ಸಮುದಾಯವನ್ನು ಮಾತ್ರವೇ ಏಕೆ, ಪೂರ್ತಿಯಾಗಿ ಮಾನವ ಜನಾಂಗವನ್ನೇ ಬಂಡವಾಳಶಾಹಿ ದಾಸ್ಯದಿಂದ ವಿಮೋಚನೆ ಗೊಳಿಸಬಹುದಲ್ಲ? ಆದರೆ ದೇವರೇಕೆ ಆ ಮನಸ್ಸು ಮಾಡುವುದಿಲ್ಲ? ಸಮಾಜವಾದಿ ಸಿದ್ಧಾಂತದ ಪ್ರಾಯೋಗಿಕತೆಯ ಬಗ್ಗೆ ವಿವೇಚನೆ ಮಾಡಬೇಕೆಂದು ನೀವು ಬಯಸುತ್ತೀರಲ್ಲವೆ? ಅದರ ಜಾರಿಗೊಳಿಸುವಿಕೆಯನ್ನು ನಾನು ನಿಮ್ಮ ದೇವರಿಗೆ ಬಿಟ್ಟುಬಿಡುವೆ. ಸಮಾಜದ ಸರ್ವ ಜನರ ಕಲ್ಯಾಣಕ್ಕೆ ಸಂಬಂಧಪಟ್ಟಂತೆ ಸಮಾಜವಾದದ ಗುಣಾಂಶವನ್ನು ಜನತೆ ಗುರುತಿಸಿದ್ದಾರೆ. ಆದರೆ ಅದು ಅಪ್ರಾಯೋಗಿಕವೆಂಬ ನೆಪ ಹೂಡಿ ಅದನ್ನವರು ವಿರೋಧೀಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಆ ನಿಮ್ಮ ಭಗವಂತ ಮಧ್ಯ ಪ್ರವೇಶಿಸಿ ಎಲ್ಲವನ್ನೂ ವ್ಯವಸ್ಥಿತ ರೀತಿಯಲ್ಲಿ ನೆರವೇರಿಸಲಿ. ಈಗ ದಯವಿಟ್ಟು ಸುತ್ತು ಬಳಸಿ ವಾದ ಮಾಡುವುದನ್ನು ಮೊದಲು ನಿಲ್ಲಿಸಿರಿ. ಆ ವಾದಗಳೆಲ್ಲ ಈಗ ಸವಕಲಾಗಿವೆ. ನಾನು ಹೇಳುತ್ತೇನೆ ಕೇಳಿ: ಬ್ರಿಟಿಷರ ಆಳ್ವಿಕೆ ಇನ್ನೂ ಇಲ್ಲಿರುವುದಕ್ಕೆ ಅವರಲ್ಲಿ ಶಕ್ತಿಯಿದೆ ಎನ್ನುವುದು ಕಾರಣವೇ ಹೊರತು ಅದು ದೈವೇಚ್ಛೆಯಿಂದಾಗಿ ಅಲ್ಲ. ಅವರಲ್ಲಿ ಅಧಿಕಾರವಿದೆ. ಬಲವಿದೆ, ಹಾಗೆಯೇ ನಮ್ಮಲ್ಲಿ ಅವರನ್ನು ವಿರೋಧಿಸುವ ಧೈರ್ಯವಿಲ್ಲ. ಅವರು ನಮ್ಮನ್ನು ದಾಸ್ಯಕ್ಕೊಳಪಡಿಸಿರುವುದು ದೇವರ ನೆರವಿನಿಂದಲ್ಲ ಬದಲು ಬಂದೂಕು, ಬಾಂಕುಬಳು, ಗುಂಡುಗಳು, ಪೊಲೀಸರು ಹಾಗೂ ಸೈನಿಕರ ಸಹಾಯದಿಂದ. ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮ ನಿರ್ಲಕ್ಷ್ಯದಿಂದ ಸಮಾಜದ ವಿರುದ್ಧ ಅತ್ಯಂತ ಹೇಯವಾದ ಮಹಾಪಾತಕವೊಂದನ್ನು ಯಶಸ್ವಿಯಾಗಿ ಅವರು ನೆರವೇರಿಸುತ್ತಿದ್ದಾರೆ. ಒಂದು ರಾಷ್ಟ್ರದಿಂದ ಮತ್ತೊಂದು ರಾಷ್ಟ್ರದ ದಾರುಣ ಶೋಷಣೆ ಇದು. ಈಗ ಹೇಳಿ, ನಿಮ್ಮ ದೇವರೆಲ್ಲಿದ್ದಾನೆ? ಅವನು ಏನು ಮಾಡುತ್ತಿದ್ದಾನೆ! ಮನುಕುಲದ ಈ ಎಲ್ಲ ಸಂಕಷ್ಟಗಳನ್ನು ನೋಡಿ ಅವನು ಖುಷಿಪಡುತ್ತಿದ್ದಾನೆಯೇ? ಹಾಗಾದರೆ ಅವನೊಬ್ಬ ನೀರೋ, ಒಬ್ಬ ಚೆಂಗಿಸ್‌ಖಾನ್! ಅವನಿಗೆ ಧಿಕ್ಕಾರವಿರಲಿ.

ಗೆಳೆಯ ಎಲ್. ರಾಮಶರಣದಾಸರ ಸ್ವಪ್ನ ಲೋಕಕ್ಕೆ ಮುನ್ನುಡ ಬರೆದ ಭಗತ್‌ಸಿಂಗ್ ಅವರ ವಿಚಾರಗಳಲ್ಲಿ ಆಯ್ದ ಭಾಗವನ್ನು ಲೇಖನದ ಈ ಭಾಗದಲ್ಲಿ ಉದ್ಧರಿಸಲಾಗಿದೆ: ರಾಜಕೀಯ ಕ್ಷೇತ್ರದಲ್ಲಿ ‘ಡ್ರೀಮ್ ಲ್ಯಾಂಡ್‌’ಗೆ ಅತ್ಯಂತ ಪ್ರಮುಖವಾದ ಸ್ಥಾನವಿದೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಚಳವಳಿಯಲ್ಲಿರುವ ಮುಖ್ಯವಾದ ಒಂದು ಕಂದರವನ್ನು ಅದು ಭರ್ತಿ ಮಾಡುತ್ತದೆ. ಹಾಗೆ ನೋಡಿದರೆ ನಮ್ಮ ದೇಶದ ಆಧುನಿಕ ಚರಿತ್ರೆಯಲ್ಲಿ ಈವರೆಗೆ ಪ್ರಮುಖ ಪಾತ್ರವಹಿಸುತ್ತಾ ಬಂದಿರುವ ಯಾವ ರಾಜಕೀಯ ಚಳವಳಿಗಳೂ ತಾವು ಗುರಿಯಲ್ಲಿರಿಸಿಕೊಂಡ ಆದರ್ಶಗಳ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ಹೊಂದಿಲ್ಲ. ಕ್ರಾಂತಿಕಾರಿ ಚಳವಳಿಯೂ ಇದಕ್ಕೆ ಹೊರತಾಗಿಲ್ಲ. ಅವುಗಳ ಬಗ್ಗೆ ಸಾಧ್ಯವಾದಷ್ಟು ಅಧ್ಯಯನವನ್ನು ಮಾಡಿದ ನಂತರವೂ ನನಗೆ ಘದರ್ ಪಕ್ಷವೊಂದನ್ನು ಬಿಟ್ಟರೆ, ಉಳಿದ ಕ್ರಾಂತಿಕಾರಿ ಪಕ್ಷಗಳು ಯಾವುವೂ ತಾವು ನಡೆಸುತ್ತಿದ್ದ ಹೋರಾಟದ ಬಗ್ಗೆ ಸ್ಪಷ್ಟ ತಿಳಿವಳಿಕೆಯನ್ನು ಹೊಂದಿದ್ದಂತೆ ಕಾಣಿಸಲಿಲ್ಲ. ಘದರ್ ಪಕ್ಷವಾದರೋ ಅಮೆರಿಕನ್ ಮಾದರಿಯ ಸರ್ಕಾರದಿಂದ ಸ್ಫೂರ್ತಿ ಹೊಂದಿದ್ದು, ಇಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರವನ್ನು ಕಿತ್ತೆಸೆದು ಗಣತಂತ್ರ ಸರ್ಕಾರವೊಂದನ್ನು ಸ್ಥಾಪಿಸುವ ಆಶಯ ಹೊಂದಿರುವುದಾಗಿ ಸ್ಪಷ್ಟವಾಗಿ ಹೇಳಿದ್ದಿತು. ಉಳಿದೆಲ್ಲ ಪಕ್ಷಗಳಲ್ಲೂ ಸದಸ್ಯರು ಪರಕೀಯ ಆಳ್ವಿಕೆಯ ವಿರುದ್ಧ ಹೋರಾಡುವುದಷ್ಟನೇ ಮುಖ್ಯ ಧ್ಯೇಯವಾಗಿ ಇಟ್ಟುಕೊಂಡಿದ್ದರು. ಈ ಧ್ಯೇಯವೇನೋ ಶ್ಲಾಘನೀಯವಾದರೂ ಕ್ರಾಂತಿಕಾರಿಯಾದದ್ದಂತೂ ಅಲ್ಲ. ಕ್ರಾಂತಿಯೆಂದರೆ ದಂಗೆಯೇಳುವುದು ಅಥವಾ ರಕ್ತಪಾತದ ಸಂಘರ್ಷವೆಂದಷ್ಟೇ ಅಲ್ಲವೆಂಬುದನ್ನು ನಾವು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು. ಕ್ರಾಂತಿಕಾರಿಯೆಂದರೆ ಅಸ್ತಿತ್ವದಲ್ಲಿರುವ ಸಮಾಜದ ವ್ಯವಸ್ಥೆಯನ್ನು ಅಂದರೆ ಆಳ್ವಿಕೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿ ನವೀನ ರೀತಿಯಲ್ಲಿ ಹಾಗೂ ಉತ್ತಮ ಮಾದರಿಯ ಆಧಾರದ ಮೇಲೆ ಕ್ರಮಬದ್ಧವಾದ ಕಾರ್ಯಕ್ರಮಗಳ ಮೂಲಕ ಸಮಾಜದ ಪುನರ್ ನಿರ್ಮಾಣ ಎಂದರ್ಥ. ಹೀಗೆ ಮಾಡುವುದು ಅವಶ್ಯ. ಇಲ್ಲವಾದರೆ ಅದು ಕ್ರಾಂತಿಯಾಗುವುದಿಲ್ಲ.