ಸಮುದಾಯ, ಧರ್ಮ, ರಾಜಕಾರಣ, ದೇಶ ನಿರ್ಮಾಣ, ಹೋರಾಟ ಹಾಗೂ ಇವೆಲ್ಲವನ್ನು ಆವರಿಸಿಕೊಂಡಿರುವ ಐಹಿಕ ಜಗತ್ತು ಕಳೆದೆರಡು ಐಹಿಕ ಜಗತ್ತು ಕಳೆದೆರಡು ಶತಮಾನಗಳಲ್ಲಿ ಅನೇಕ ಸಮುದಾಯಗಳನ್ನು ಅಥವಾ ಅವುಗಳನ್ನು ಅಂತರ್ಗತ ಮಾಡಿಕೊಂಡಿರುವ ದೇಶಗಳನ್ನು ಕಂಡರಿಯದ ರೀತಿಯಲ್ಲಿ ಸಮೃದ್ಧಿಯತ್ತ ಕೊಂಡೊಯ್ದಿದ್ದನ್ನು ಕಾಣಬಹುದು. ಅದೇ ಸಂದರ್ಭದಲ್ಲಿ ಅನೇಕ ದೇಶಗಳು ಅವಮಾನಗಳಿಂದ ತತ್ತರಿಸುತ್ತಾ, ಮಹಾಯುದ್ಧಗಳ ರಾಜಕೀಯದಲ್ಲಿ ದಾಳಗಳಾಗಿ ಸೋತು ಸೊರಗಿ ತಮ್ಮ ವಿಶ್ವಾಸವನ್ನು ಕಳೆದುಕೊಂಡಿದ್ದನ್ನು ಗಮನಿಸಬಹುದು. ಲಕ್ಷ ಲಕ್ಷ ಜನರು ಈ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡರು. ಕೋಟಿ ಕೋಟಿ ಜನರು ನಿರ್ಗತಿಕರಾಗಿ, ಅವಮಾನಿತರಾಗಿ ಮೂಲೆ ಸೇರಿದರು. ಏಷ್ಯಾದ ಬಹುತೇಕ ದೇಶಗಳು ಮಹಾಯುದ್ಧಗಳಲ್ಲಿ ಪಾಲ್ಗೊಳ್ಳದಿದ್ದರೂ ಅವೆಲ್ಲ ವಸಾಹತುಶಾಹಿಗಳ ಪ್ರತ್ಯಕ್ಷ ಅಥವಾ ಪರೋಕ್ಷ ಆಡಳಿತಕ್ಕೆ ಒಳಪಟ್ಟಿದ್ದರಿಂದ ಯಜಮಾನಿಕೆ ನಡೆಸುತ್ತಿದ್ದ ರಾಷ್ಟ್ರಗಳ ಆಸೆಬುರುಕತನಕ್ಕೆ ಬಲಿಯಾದವು. ವಸಾಹತುಶಾಹಿಗಳು ಎಸಗಿದ ಅವಮಾನ ಮತ್ತು ಶೋಷಣೆಗೆ ಬಂಡೆದ್ದ ರಾಷ್ಟ್ರೀಯ ಹೋರಾಟಗಳು ಇಪ್ಪತ್ತನೆಯ ಶತಮಾನದ ಚರಿತ್ರೆಯ ಕೇಂದ್ರ ಬಿಂದು.

ಪಶ್ಚಿಮದ ಕಾನೂನುಗಳು, ಸಮಾಜದ ವಿನ್ಯಾಸಗಳು, ರಾಜಕೀಯ ನಿಯಮಗಳು ಪ್ರಭಾವಿಯಾಗಿ ಸಾಂಪ್ರದಾಯಿಕ ಭಾರತವನ್ನು ಆವರಿಸಿಕೊಂಡವು. ಇಲ್ಲಿನ ಜಮೀನ್ದಾರಿ ವರ್ಗಗಳು, ಮೇಲ್ಜಾತಿಗಳು ಮೇಲ್ವರ್ಗಗಳು ಇದರಿಂದ ಕೆಲವು ಕಾಲ ಜರ್ಜರಿತಗೊಂಡು ಕೆಳಜಾತಿ/ವರ್ಗಗಳು ತಮ್ಮ ಸ್ವಾತಂತ್ರ್ಯವನ್ನು ಪಡೆದುಕೊಂಡವು ಎಂದು ಭಾವಿಸುವ ಹೊತ್ತಿಗೆ ಜಮೀನ್ದಾರಿ ಶಕ್ತಿಗಳು, ಇಂಗ್ಲಿಷ್‌ ಕಲಿತ ಮೇಲ್ಜಾತಿಯ ಮೇಲ್ವರ್ಗಗಳು ಬ್ರಿಟಿಷರೊಂದಿಗೆ ಕೈಜೋಡಿಸಿ ಅದನ್ನು ಸರ್ವಶಕ್ತಿಶಾಲಿಯನ್ನಾಗಿ ಮಾಡಿದವು. ಇಂಗ್ಲಿಷ್‌ ವಿದ್ಯಾಭ್ಯಾಸ ಪಡೆದ ಬಹುತೇಕ ಮೇಲ್ವರ್ಗದ ಜನತೆ ಬ್ರಿಟಿಷ್ ‌ವ್ಯವಸ್ಥೆಯು ಹಾಕಿಕೊಟ್ಟ ಪಾರ್ಲಿಮೆಂಟರಿ ಡೆಮಾಕ್ರಸಿ ಎನ್ನುವ ರಾಜಕೀಯ ಚೌಕಟ್ಟಿನೊಳಗೆ ರಾಷ್ಟ್ರೀಯ ಹೋರಾಟವನ್ನು ಕೈಗೊಂಡವು. ಈ ಹೋರಾಟವನ್ನು ಬ್ರಿಟಿಷ್ ‌ವಿರೋಧಿ ಹೋರಾಟವೆಂದೇ ಅರ್ಥ ಮಾಡಿಕೊಳ್ಳಲಾಯಿತು. ಇವೆರಡು ಆಡಳಿತ ಮತ್ತು ಆಡಳಿತ ವಿರೋಧಿ ಶಕ್ತಿಗಳ ಜೊತೆ ಅಥವಾ ಅವರಿಗಿಂತ ಭಿನ್ನವಾಗಿ ಹಲವು ಪ್ರತಿಭಟನೆಗಳು, ಚಳವಳಿಗಳು ಕೂಡ ರಾಷ್ಟ್ರೀಯ ಹೋರಾಟದ ಭಾಗಗಳಾಗಿಯೇ ಹೊರಹೊಮ್ಮಿದವು. ಆಧುನಿಕ ಭಾರತದ ಚರಿತ್ರೆಯನ್ನು ಈ ಹಿನ್ನೆಲೆಯಲ್ಲಿ ಅಭ್ಯಸಿಸುವ ಸಣ್ಣ ಪ್ರಯತ್ನವೊಂದನ್ನು ಪ್ರಸ್ತುತ ಸಂಪುಟವು ಮಾಡಿದೆ.

ಭಾರತ ಉಪಖಂಡದಲ್ಲಿ ಬ್ರಿಟಿಷ್ ‌ಸಾಮ್ರಾಜ್ಯಶಾಹಿ ಶಕ್ತಿಗಳು ೧೮೫೭ರ ಹೋರಾಟವನ್ನು ಹತ್ತಿಕ್ಕಿದ ನಂತರದ ರಾಜಕೀಯ ಬೆಳವಣಿಗೆಗಳನ್ನು ಈ ಸಂಪುಟವು ಒಳಗೊಂಡಿದೆ. ಬ್ರಿಟಿಷ್ ‌ಮಹಾರಾಣಿ ಭಾರತದ ಉಪಖಂಡದ ಉಸ್ತುವಾರಿಯನ್ನು ತೆಗೆದುಕೊಂಡು ಭಾರತದ ನಾಗರಿಕರನ್ನು ತನ್ನ ನಾಗರಿಕರೆಂದು ಘೋಷಿಸಿದ ದಿನದಿಂದ ಭಾರತವು ವಸಾಹತುಶಕ್ತಿಗಳಿಂದ ವಿಮೋಚನೆ ಪಡೆಯುವವರೆಗೆ ನಡೆದ ವಿವಿಧ ವಿದ್ಯಮಾನಗಳನ್ನು ಪ್ರಸ್ತುತ ಸಂಪುಟವು ಚರ್ಚಿಸಲು ಪ್ರಯತ್ನಿಸಿವೆ.

ಬ್ರಿಟಿಷ್ ‌ಸರಕಾರವು ಅತ್ಯಂತ ಶಿಸ್ತಿನಿಂದ ಉಪಖಂಡವು ಆಕ್ರಮಿಸಿಕೊಂಡ ಬಗೆಯನ್ನು, ಭಾರತೀಯರ ಮೇಲೆ ಹಿಡಿತ ಸಾಧಿಸಿದ ಬಗೆಗಳನ್ನು ವಿವರಿಸುವ ಲೇಖನಗಳನ್ನು ಈ ಸಂಪುಟವು ಹೊಂದಿದೆ. ಕಾಂಗ್ರೆಸ್‌ ರಾಜಕಾರಣ, ಗಾಂಧೀಜಿ ಅವರ ಸತ್ಯಾಗ್ರಹದ ಮಾದರಿಗಳ ಜೊತೆ ಜೊತೆಗೆ ಸಾವರ್ಕರ್‌, ನೆಹರೂ, ಅಂಬೇಡ್ಕರ್‌, ಜಿನ್ನಾ ಮೊದಲಾದ ಹೋರಾಟಗಾರರ ಸೈದ್ಧಾಂತಿಕ ದೃಷ್ಟಿಕೋನಗಳನ್ನು ಇಲ್ಲಿ ವಿಮರ್ಶಿಸುವ ಪ್ರಯತ್ನ ನಡೆಸಲಾಗಿದೆ. ಭಾರತದ “ಒಪ್ಪಿತ ಚರಿತ್ರೆಯಲ್ಲಿ” ಅಷ್ಟಾಗಿ ಚರ್ಚೆಗೊಳಪಡದ ಅನೇಕ ವಿಷಯಗಳಿವೆ. ಬೃಹತ್‌ ಪ್ರಮಾಣದಲ್ಲಿ ವಸಾಹತು ಸರಕಾರವನ್ನು ತಲ್ಲಣಗೊಳಿಸಿದ ತೆಲಂಗಾಣ ಹೋರಾಟವನ್ನು, ಕಾಂಗ್ರೆಸ್‌ ಕಮ್ಯುನಿಷ್ಟರ ನೇತೃತ್ವದ ರೈತ ಹೋರಾಟಗಳನ್ನು, ಭಗತ್‌ಸಿಂಗ್‌, ಸುಭಾಶ್‌ಚಂದ್ರ ಬೋಸ್‌ಮೊದಲಾದ ಕ್ರಾಂತಿಕಾರಿಗಳ ಆಶಯಗಳನ್ನು, ಭಾರತದ ನೌಕಾದಳದ ದಂಗೆಯನ್ನು, ಪ್ರತಿಭಟನೆಗಳನ್ನು ಪ್ರಸ್ತುತ ಸಂಪುಟದಲ್ಲಿ ಚರ್ಚಿಸಲಾಗಿದೆ. ಆಧುನಿಕ ಭಾರತದ ಚರಿತ್ರೆಯಲ್ಲಿ ಕ್ರಾಂತಿಕಾರಕ ಸಾಮಾಜಿಕ ಚಳವಳಿಗಳ ನೇತಾರರಾದ ಜ್ಯೋತಿಭಾ ಫುಲೆ, ಶ್ರೀನಾರಾಯಣ ಗುರು, ಪೆರಿಯಾರ್‌ ಅವರ ಸಿದ್ಧಾಂತಗಳನ್ನು ಮತ್ತು ಹೋರಾಟಗಳನ್ನು, ಅವರು ಹಮ್ಮಿಕೊಂಡ ಚಳವಳಿಗಳ ವಿವಿಧ ಆಯಾಮಗಳನ್ನು ಪರಿಚಯಿಸುವ ಲೇಖನಗಳನ್ನು ಈ ಸಂಪುಟವು ಒಳಗೊಂಡಿದೆ.

ವಸಾಹತೋತ್ತರ ಕಾಲಘಟ್ಟದಲ್ಲಿ ಪ್ರಮುಖವಾಗಿ ಭಾರತ ಉಪಖಂಡದ ವಿಭಜನೆಯ ನಂತರದ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಈ ಸಂಪುಟದ ಎರಡನೆಯ ಭಾಗವು ಒಳಗೊಂಡಿದೆ. ಇಂಗ್ಲಿಷ್‌ ಭಾಷೆಯಲ್ಲಿ ಈ ವಿಷಯಗಳಿಗೆ ಸಂಬಂಧಿಸಿದಂತೆ ಅಲ್ಲಲ್ಲಿ ಪ್ರಕಟಣೆಗಳು ಕಂಡುಬಂದರೂ ಕನ್ನಡದಲ್ಲಿ ಅವುಗಳನ್ನು ಒಂದೆಡೆ ತಂದು ಚರ್ಚಿಸಿರುವ ಆದ್ಯ ಕೃತಿಯಿದು ಎಂದರೆ ಉತ್ಪ್ರೇಕ್ಷೆಯೇನಲ್ಲ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತದ ರಾಜಕಾರಣದ, ಸಮಾಜ ಮತ್ತು ಆರ್ಥಿಕತೆಯ ವಿವಿಧ ಮಜಲುಗಳನ್ನು ವಿಮರ್ಶಾತ್ಮಕವಾಗಿ ಈ ಸಂದರ್ಭದಲ್ಲಿ ಅಭ್ಯಸಿಸಲು ಪ್ರಯತ್ನಿಸಲಾಗಿದೆ. ಹಾಗೆಯೇ ಉಪಖಂಡದ ಪಾಕಿಸ್ತಾನ, ಶ್ರೀಲಂಕಾ ಮೊದಲಾದ ದೇಶಗಳೊಡನೆ ಇರುವ ರಾಜಕಾರಣದ ಸಂಬಂಧಗಳ ಬಗ್ಗೆ, ಅವುಗಳ ರಾಷ್ಟ್ರೀಯತೆಗಳೊಡನೆ ಇರುವ ಸಂಘರ್ಷಗಳ ಬಗ್ಗೆ ಚರ್ಚಿಸಲಾಗಿದೆ. ಭಾರತದ ವಿರೋಧ ಪಕ್ಷಗಳು, ಪ್ರಾಂತೀಯ ರಾಜಕಾರಣ, ಐಡೆಂಟಿಟಿ ಹೋರಾಟಗಳು ತ್ರಿವಿಕ್ರಮನಂತೆ ಬೆಳೆಯಲು ಹಪಹಪಿಸುವ ಯಾವುದೇ ಕೇಂದ್ರ ಸರಕಾರಗಳನ್ನು ಪ್ರಜಾಪ್ರಭುತ್ವೀಯ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವಂತೆ ಒತ್ತಾಯಿಸುವ ವ್ಯವಸ್ಥೆಯನ್ನು ಚರ್ಚಿಸುವ ಲೇಖನಗಳು ಓದುಗರಿಗೆ ಉಪಯೋಗವಾಗಬಹುದು ಎಂಬ ನಂಬುಗೆ ನಮ್ಮದು.

ಭಾರತ ಸ್ವತಂತ್ರಗೊಂಡರೂ ಭಾರತದ ಒಳಗಡೆ ಕುದಿಯುತ್ತಿರುವ ಕೆಲವು ಪ್ರಾಂತೀಯ ಹಾಗೂ ಜನಾಂಗೀಯ ಶಕ್ತಿಗಳು ದೆಹಲಿ ರಾಜಕಾರಣದಿಂದ ಬೇಸತ್ತು ಪ್ರತ್ಯೇಕ ರಾಷ್ಟ್ರಕ್ಕಾಗಿ ಹಾಗೂ ಕೆಲವು ರಾಜಕೀಯ ಶಕ್ತಿಗಳು ಭಾರತದ ಸಂವಿಧಾನದ ಪರಿಧಿಯಲ್ಲಿ ಪ್ರತ್ಯೇಕ ರಾಜ್ಯಗಳಾಗಿ ಹೊರಹೊಮ್ಮಲು ಯತ್ನಿಸಿದ, ಯತ್ನಿಸುತ್ತಿರುವ ವಿದ್ಯಮಾನಗಳನ್ನು ಪ್ರಸ್ತುತ ಸಂಪುಟವು ದಾಖಲಿಸಲು ಶ್ರಮಿಸಿದೆ. ಭಾರತದ ರಾಷ್ಟ್ರೀಯತೆಯನ್ನು ನಿರ್ವಹಿಸುವ ಲೇಖನಗಳೊಂದಿಗೆ ಸ್ವತಂತ್ರ ಭಾರತವು ಎದುರಿಸುತ್ತಿರುವ ಸಾಮಾಜಿಕ ಸವಾಲುಗಳನ್ನು ನಮ್ಮ ಸಂಪುಟದ ವಿದ್ವಾಂಸರು ಚರ್ಚಿಸಲು ಪ್ರಯತ್ನಿಸಿದ್ದಾರೆ.

ಕನ್ನಡ ವಿಶ್ವವಿದ್ಯಾಲಯವು ೨೦೦೧ರಲ್ಲಿ ಹೊರತಂದ ಚರಿತ್ರೆ ವಿಶ್ವಕೋಶದಲ್ಲಿ ಬಹುತೇಕವಾಗಿ ಪ್ರಕಟಗೊಂಡಿರುವ ಲೇಖನಗಳನ್ನು ಈ ಸಂಪುಟದಲ್ಲಿ ಬಳಸಿಕೊಳ್ಳಲಾಗಿದೆ. ಅನೇಕ ಲೇಖನಗಳನ್ನು ಈ ಸಂದರ್ಭದಲ್ಲಿ ಮಾರ್ಪಾಟುಗೊಳಿಸಲಾಗಿದೆ. ಇನ್ನೂ ಕೆಲವು ಲೇಖನಗಳನ್ನು ಹೊಸದಾಗಿ ಸೇರಿಸಲಾಗಿದೆ. ಭಾರತ ಉಪಖಂಡದ ಚರಿತ್ರೆಯ ಕುರಿತಂತೆ ಮುಖ್ಯವಾಗಿರುವ ಆಯ್ದ ಲೇಖನಗಳನ್ನು ಕನ್ನಡದಲ್ಲಿ ವ್ಯವಸ್ಥಿತವಾಗಿ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಇಂಗ್ಲಿಷ್‌ನಲ್ಲಿ ಈ ಕುರಿತಂತೆ ಪ್ರಮುಖವಾದ ಕೃತಿಗಳು ಹೊರಬಂದಿದ್ದರೂ ಕನ್ನಡದಲ್ಲಿ ಈ ವಿಷಯದ ಕುರಿತಾಗಿರುವ ಕೃತಿಗಳು ಬಹಳ ಕಡಿಮೆ. ಅಲ್ಲಲ್ಲಿ ಈ ಕುರಿತಂತೆ ಆದ ಕೆಲವು ಪ್ರಯತ್ನಗಳನ್ನು ಹೊರತುಪಡಿಸಿದರೆ ಪ್ರಸ್ತುತ ಕೃತಿಯು ಇತ್ತೀಚಿನ ದಶಕದಲ್ಲಿ ಬಂದ ಆದ್ಯ ಕೃತಿಯಾಗಿದೆ ಎಂದು ತಿಳಿಸಲು ನಾನು ಹರ್ಷಿಸುತ್ತಿದ್ದೇನೆ.

ಭಾರತದ ಉಪಖಂಡದ ಚರಿತ್ರೆಯನ್ನು ಯಾವ ಭಾಷೆಯಲ್ಲಾದರೂ ಒಂದೆಡೆ ತರುತ್ತೇನೆ ಎಂದರೆ ಅದು ಉತ್ಪ್ರೇಕ್ಷೆಯೇ. ಉಪಖಂಡದಲ್ಲಿ ಇಂಗ್ಲಿಷ್ ಭಾಷೆಯು ವಿದ್ವಾಂಸರ ನಡುವೆ ಸಾಮಾನ್ಯವಾದ ಭಾಷೆಯಾದ್ದರಿಂದ ಇಂಗ್ಲಿಷ್‌ನಲ್ಲಿ ಉಪಖಂಡದ ಚರಿತ್ರೆಯನ್ನು ಅಲ್ಲಲ್ಲಿ ತರುವ ಪ್ರಯತ್ನಗಳಾಗಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯ ನಂತರದಲ್ಲಿ ಬಂದ ಆ ಬಗೆಯ ಪ್ರಯತ್ನಗಳು ಆಗಿವೆ. ಆದರೆ ಅವು ಬಹುತೇಕವಾಗಿ ಚರಿತ್ರೆಕಾರ ರಣಜಿತ್‌ ಗುಹಾ ಹೇಳುವ ಹಾಗೆ ‘ಎಲೈಟ್‌’ ಚರಿತ್ರೆಕಾರರು ಕಟ್ಟಿಕೊಟ್ಟ/ಕಟ್ಟಿಕೊಡುವ ಚರಿತ್ರೆಗಳೇ ಆಗಿವೆ. ಬಹುಭಾಷಿಕ ಸಮುದಾಯಗಳ ಸ್ಥಳೀಯ ಮತ್ತು ಮೌಖಿಕ ಚರಿತ್ರೆಗಳ ಆಶಯದಿಂದ ಅವುಗಳನ್ನು ನೋಡದಿರುವ ಪ್ರಯತ್ನಗಳೇ ಅಧಿಕವಾದುದು. ಪ್ರಸ್ತುತ ಕೃತಿಯು ಈ ಬಗೆಯ ಮಿತಿಗಳಿಂದ ಸಾಧ್ಯವಾದಷ್ಟು ಹೊರಬರಲು ಸಣ್ಣ ಪ್ರಯತ್ನವನ್ನು ಮಾಡಿದೆ. ಕನ್ನಡದ ಓದುಗರನ್ನು ಗಮನದಲ್ಲಿಟ್ಟುಕೊಂಡು ವಸಾಹತು ಕಾಲ ಮತ್ತು ವಸಾಹತೋತ್ತರ ಕಾಲಘಟ್ಟಗಳಲ್ಲಿ ನಡೆದ ವಿದ್ಯಮಾನಗಳನ್ನು ಆಧರಿಸಿ, ಹೊರತರುತ್ತಿರುವ ಕೃತಿ ಇದು. ಈ ಕಾಲಘಟ್ಟಗಳಲ್ಲಿನ ಅನೇಕ ಚಾರಿತ್ರಿಕ ಘಟನೆಗಳು ಒಂದಲ್ಲ ಒಂದು ಕಾರಣಕ್ಕೆ ವರ್ತಮಾನವನ್ನೂ ಬಾಧಿಸುತ್ತಿರುವಂತಹದು. ಇಂದಿನ ಪಾಕಿಸ್ತಾನದ ಭೂಭಾಗಗಳು ೧೯೪೭ರವರೆಗೆ ಭಾರತ ಉಪಖಂಡದ ಭಾಗವೇ ಆಗಿದ್ದರಿಂದ ವಸಾಹತುಪೂರ್ವ ಭಾಗದ ಚರಿತ್ರೆಯನ್ನು ಭಾರತ ಉಪಖಂಡದ ಚರಿತ್ರೆಯೆಂದೇ ಅಭ್ಯಸಿಸಲಾಗಿದೆ. ಪ್ರಾಚೀನ ಭಾರತ ಅಥವಾ ಪ್ರಾಚೀನ ಪಾಕಿಸ್ತಾನದ ಚರಿತ್ರೆ ಎಂದು ಚಾರಿತ್ರಿಕ ದೃಷ್ಟಿಕೋನದಿಂದ ಅಭ್ಯಸಿಸಿದರೆ ಆಭಾಸವಾಗುವುದರಿಂದ ‘ಭಾರತ ಉಪಖಂಡ’ ಎನ್ನುವ ಶೀರ್ಷಿಕೆಯಿಂದ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳುವುದು ಪರಿಣಾಮಕಾರಿಯಾದುದು.

ಚರಿತ್ರೆ ವಿಶ್ವಕೋಶವನ್ನು ಹೊರತರಲು ಪ್ರೇರಕಶಕ್ತಿಯಾಗಿದ್ದ ಆರಂಭಿಕ ಕುಲಪತಿ ಡಾ. ಚಂದ್ರಶೇಖರ ಕಂಬಾರ, ಕುಲಸಚಿವರಾಗಿದ್ದ ಡಾ. ಕೆ. ವಿ. ನಾರಾಯಣ ಅವರನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ. ಈಗಾಗಲೇ ತಿಳಿಸಿದ ಹಾಗೆ ಇಲ್ಲಿನ ಬಹುತೇಕ ಲೇಖನಗಳು ಚರಿತ್ರೆ ವಿಶ್ವಕೋಶದಲ್ಲಿ ಪ್ರಕಟವಾದವು. ಅವುಗಳಲ್ಲಿ ಬಹಳಷ್ಟು ಪರಿಷ್ಕಾರವಾದವು. ಇವುಗಳೊಂದಿಗೆ ಹಲವು ಹೊಸ ಲೇಖನಗಳನ್ನು ನಮ್ಮ ವಿದ್ವಾಂಸರು ಬರೆದುಕೊಟ್ಟಿದ್ದಾರೆ. ಈ ಬಗೆಯ ಕೃತಿಗಳು ಹೊರಬರಲೇಬೇಕೆಂದು ಒತ್ತಾಸೆ ನೀಡಿದ ಹಿಂದಿನ ಕುಲಪತಿಗಳಾದ ಡಾ. ಬಿ. ಎ. ವಿವೇಕ ರೈ ಅವರಿಗೆ ನಮ್ಮ ಕೃತಜ್ಞತೆಗಳು. ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ಮತ್ತು ಪ್ರಸಾರಾಂಗದ ಹಿಂದಿನ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್‌ ಅವರಿಗೆ ನಾನು ಆಭಾರಿಯಾಗಿದ್ದೇನೆ.

ಈ ಯೋಜನೆಯ ವಿಷಯತಜ್ಞರಾದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್‌. ಎ. ಬಾರಿ ಹಾಗೂ ಇತಿಹಾಸ ಪ್ರಾಧ್ಯಾಪಕರಾದ ಡಾ. ರಾಜಾರಾಮ ಹೆಗಡೆ ಅವರಿಗೆ ವಿಶೇಷ ಕೃತಜ್ಞತೆಗಳು. ಈ ಕೃತಿಯನ್ನು ಹೊರತರಲು ಶ್ರಮಿಸಿದ ವಿಭಾಗದ ಹಿಂದಿನ ಮುಖ್ಯಸ್ಥರಾದ ಡಾ. ಕೆ. ಮೋಹನಕೃಷ್ಣ ರೈ ಹಾಗೂ ವಿಭಾಗದ ಇಂದಿನ ಮುಖ್ಯಸ್ಥರಾದ ಡಾ. ಎನ್‌. ಚಿನ್ನಸ್ವಾಮಿ ಸೋಸಲೆ ಅವರಿಗೂ, ಸಹೋದ್ಯೋಗಿಗಳಾದ ಪ್ರೊ. ಲಕ್ಷ್ಮಣ್‌ ತೆಲಗಾವಿ, ಡಾ. ಸಿ. ಆರ್‌. ಗೋವಿಂದರಾಜು ಹಾಗೂ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರಿಗೆ ನಾನು ಆಭಾರಿಯಾಗಿದ್ದೇನೆ.

ಈ ಕೃತಿಯ ಪುಸ್ತಕ ವಿನ್ಯಾಸ ಮಾಡಿದ ಸಹಾಯಕ ನಿರ್ದೇಶಕ ಶ್ರೀ ಸುಜ್ಞಾನಮೂರ್ತಿ ಅವರಿಗೆ, ಮುಖಪುಟ ವಿನ್ಯಾಸ ಮಾಡಿದ ಶ್ರೀ ಯು. ಟಿ. ಸುರೇಶ್‌ ಅವರಿಗೆ ವಿಷಯಸೂಚಿ ತಯಾರಿಯಲ್ಲಿ ನೆರವಾದ ಶ್ರೀಮತಿ ಎಸ್‌. ರಶ್ಮಿ ಮತ್ತು ಶಿವಪ್ರಸಾದ್‌ ಅವರಿಗೆ ಅಕ್ಷರ ಜೋಡಣೆ ಮಾಡಿದ ಹೊಸಪೇಟೆಯ ಯಾಜಿ ಗ್ರಾಫಿಕ್ಸ್‌ನ ಶ್ರೀಮತಿ ಸವಿತಾ ಯಾಜಿ, ಶ್ರೀ ಗಣೇಶ ಯಾಜಿ ಅವರಿಗೆ ಹಾಗೂ ಕೃತಿಯನ್ನು ಮುದ್ರಿಸಿದ ಸ್ವ್ಯಾನ್‌ ಪ್ರಿಂಟರ್ಸ್‌, ಬೆಂಗಳೂರು ಅವರಿಗೆ ನನ್ನ ಕೃತಜ್ಞತೆಗಳು.

ವಿಜಯ್ಪೂಣಚ್ಚ ತಂಬಂಡ