ಸುಭಾಶ್‌ ಚಂದ್ರ ಬೋಸ್

ಸುಭಾಶ್‌ಚಂದ್ರ ಬೋಸ್‌ರು ೧೮೯೭ರ ಜನವರಿ ೨೩ ರಂದು ಜನಿಸಿದರು. ಅವರು ಅಂದಿನ ಅತ್ಯುನ್ನತ ಪರೀಕ್ಷೆಯಾದ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ನಾಲ್ಕನೇ ರಾಂಕ್‌ಗಳಿಸಿದ್ದರೂ, ಅದೆಲ್ಲವನ್ನೂ ಬದಿಗೊತ್ತಿ ಭಾರತೀಯ ಸ್ವಾತಂತ್ರ್ಯ ಚಳವಳಿಯ ಕ್ರಿಯಾಶೀಲ ಸದಸ್ಯರಾಗಿ ಚಳವಳಿಗೆ ಧುಮುಕಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಸೇರಿ ಅದರ ಯುವಜನ ವಿಭಾಗದಲ್ಲಿ ಕಾರ್ಯನಿರ್ವಹಿಸಿದರು.

ಗಾಂಧೀಜಿಯವರು ಸಂಘಟಿಸಿದ ಅಸಹಕಾರ ಚಳವಳಿಯಿಂದ ಆಕರ್ಷಿತಗೊಂಡು, ಅವರ ಸಲಹೆಯ ಮೇರೆಗೆ ಕೋಲ್ಕತ್ತಾದಲ್ಲಿ ಚಿತ್ತರಂಜನ್ ದಾಸ್ ಅವರ ಮಾರ್ಗದರ್ಶನದಲ್ಲಿ ಚಳವಳಿಯ ಕೆಲಸ ಮಾಡಲು ತೆರಳಿದರು. ೧೯೨೧ ರಲ್ಲಿ ವೇಲ್ಸ್‌ನ ರಾಜಕುಮಾರ ಭಾರತಕ್ಕೆ ಭೇಟಿ ನೀಡುವುದರ ವಿರುದ್ಧ ಪ್ರತಿಭಟನೆ ಆಯೋಜಿಸಿ ಬಂಧಿಸಲ್ಪಟ್ಟರು. ನಂತರದಲ್ಲಿ ಭಯೋತ್ಪಾದನಾ ಸಂಶಯದ ಮೇಲೆ ಅವರನ್ನು ಅಲಿಪೋರ್ ಸೆರೆಮನೆಯಲ್ಲೂ ಕ್ರಮೇಣ, ಬರ್ಮಾಕ್ಕೂ ಗಡಿಪಾರು ಮಾಡಲಾಯಿತು. ಸೆರೆಮನೆಯಿಂದ ಬಿಡುಗಡೆ ಹೊಂದಿದ ಮೇಲೆ ಕೋಲ್ಕತ್ತಾ ನಗರದ ಮೇಯರ್‌ಆಗಿ ಚುನಾಯಿತರಾದರು.

ಕಾಂಗ್ರೆಸ್ಸಿನಲ್ಲಿ ಗಾಂಧೀಜಿಯ ಅಸಹಕಾರ ಮತ್ತು ಕಾಂಗ್ರೆಸ್ಸಿಗೆ ವಿದಾಯ

ಗಾಂಧೀಜಿಯವರ ಅಹಿಂಸಾ ಚಳವಳಿಯ ಮೂಲಕ ಸ್ವಾತಂತ್ರ್ಯ ಗಳಿಸುವುದು ಅಸಾಧ್ಯವೆಂದು, ಅದಕ್ಕಾಗಿ ರಾಜಕೀಯ ಮತ್ತು ಮಿಲಿಟರಿ ಶಕ್ತಿ ಗಳಿಸುವುದು ಅತ್ಯವಶ್ಯವೆಂದು ಬೋಸ್‌ ಅವರು ನಂಬಿದ್ದರು. ಬೋಸ್ ಅವರು ಹೆಚ್ಚೆಚ್ಚು ಸಾಮೂಹಿಕ ಹೋರಾಟಗಳನ್ನು ಹೂಡಬೇಕೆಂದು ಬಯಸಿದರೆ, ಗಂಧೀಜಿಯವರ ಗುಂಪಿಗೆ ಅಂಥ ಸಾಮೂಹಿಕ ತಳಮಟ್ಟದ ಹೋರಾಟದ ಬಗ್ಗೆ ವಿಶ್ವಾಸವಿರಲಿಲ್ಲ. ಆದರೆ, ಬೋಸ್‌ಅವರ ಜನಪ್ರಿಯತೆ ಎಷ್ಟಿತ್ತೆಂದರೆ, ಗಾಂಧೀಜಿಯ ವಿರೋಧದ ನಡುವೆಯೂ ಅವರು ಅಖಿಲ ಭಾರತ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಆಯ್ಕೆಯಾದರು. ಅದನ್ನು ತನ್ನ ಸೋಲೆಂದೇ ಹೇಳುತ್ತಿದ್ದ ಗಾಂಧೀಜಿಯವರು, ಬೋಸ್‌ರವರು  ಅಧ್ಯಕ್ಷರಾಗಿರುವತನಕ ಅವರಿಗೆ ಸಹಕಾರ ನೀಡಲೇ ಇಲ್ಲ. ಇದರಿಂದ ಇತರೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರೂ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿದ್ದವು. ಪರ್ಯಾಯವಿಲ್ಲದೇ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಅಖಿಲ ಭಾರತ ಫಾರ್ವರ್ಡ್‌ಬ್ಲಾಕ್ ಎಂಬ ಹೆಸರಿನ ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದರು. ಆ ಮೂಲಕ ಜನಾಂದೋಲನ ಹೂಡುವಂತೆ ಪರೋಕ್ಷವಾಗಿ ಕಾಂಗ್ರೆಸ್ಸಿನ ಮೇಲೆ ಒತ್ತಾಯ ಹೇರಿದರು. ೧೯೪೦ ರ ಜುಲೈನಲ್ಲಿ ಸರ್ಕಾರ ಅವರನ್ನು ಬಂಧಿಸಿತು. ಅವರು ನವೆಂಬರಿನಲ್ಲಿ ಉಪವಾಸ ಸತ್ಯಾಗ್ರಹ ಹೂಡಿದ ಕಾರಣ ಅವರ ಆರೋಗ್ಯ ಕಳವಳಕಾರಿ ಯಾಯಿತು. ಬ್ರಿಟಿಷ್‌ಸರ್ಕಾರ ಅವರನ್ನು ಬಿಡುಗಡೆ ಮಾಡಿತು.

ಇಂಡಿಯನ್ ನ್ಯಾಷನಲ್ ಆರ್ಮಿಯ ಸ್ಥಾಪನೆ

೧೯೪೧ರ ಜನವರಿ ೧೭ ರಂದು ಬೋಸರು ನಡುರಾತ್ರಿಯಲ್ಲಿ ಕೋಲ್ಕತ್ತಾವನ್ನು ಬಿಟ್ಟರು. ಅಲ್ಲಿಂದ ಪರಾರಿಯಾಗಿ ನೇರವಾಗಿ ಬರ್ಲಿನ್ನಿಗೆ ತೆರಳಿ, ಜರ್ಮನ್ನರು ಸೆರೆಹಿಡಿದಿದ್ದ ಭಾರತೀಯ ಯುದ್ಧ ಕೈದಿಗಳಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಸೇನೆ ಕಟ್ಟಲು ಜರ್ಮನಿಯ ವಿದೇಶಾಂಗ ಮಂತ್ರಿಯಿಂದ ಅವಕಾಶ ಪಡೆದರು. ಮೊದಮೊದಲು ನಿರೀಕ್ಷಿತ ಮಟ್ಟದಲ್ಲಿ ಸೇನೆ ನಿರ್ಮಿಸಲು ಸಾಧ್ಯವಾಗದಿದ್ದರೂ ೧೯೪೨ರ ಜನವರಿ ವೇಳೆಗೆ ಎರಡು ತುಕಡಿಗಳನ್ನು ರಚಿಸುವುದು ಸಾದ್ಯವಾಯಿತು.

ಎರಡನೇ ವಿಶ್ವ ಮಹಾಯುದ್ಧ ಸಮಯದಲ್ಲಿ ವಿಶ್ವದ ಬಲಾಢ್ಯ ರಾಷ್ಟ್ರಗಳು ಎರಡು ಬಣಗಳಾಗಿ ನಿಂತವು. ಜಪಾನೀಯರು ೧೯೪೧ ರಲ್ಲಿ ಉತ್ತರ ವಲಯದಲ್ಲಿ ದಾಳಿ ಮಾಡಿದಾಗ ಬ್ರಿಟಿಷರು ಸೋತರೂ, ಕ್ಯಾಪ್ಟನ್‌ಮೋಹನ್‌ಸಿಂಗ್‌ಹಲವು ಅಧಿಕಾರಿಗಳು ಹಾಗೂ ಸೈನಿಕರೊಂದಿಗೆ ಕಾಡಿಗೆ ಪರಾರಿಯಾದರೂ ಜಪಾನೀಯರಿಗೆ ಶರಣಾಗಬೇಕಾಯಿತು. ಬ್ಯಾಂಕಾಕಿನಲ್ಲಿದ್ದ ಭಾರತೀಯ ಪ್ರೀತಮ್ ಸಿಂಗ್ ಮತ್ತು ಮೇಜರ್ ಪುಜಿಹಾರಾ ಎಂಬ ಜಪಾನಿ ಸೇನಾಧಿಕಾರಿ ಮೋಹನ್ ಸಿಂಗ್‌ರೊಂದಿಗೆ ವಿಫುಲವಾಗಿ ಚರ್ಚಿಸಿ, ಜಪಾನೀಯರು ನೆರವಿನಿಂದ, ಭಾರತೀಯ ಯುದ್ಧ ಕೈದಿಗಳನ್ನು ಒಲಿಸಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಒಂದು ಸೈನ್ಯವನ್ನು ಕಟ್ಟುವ ಹೊಣೆಯನ್ನು ಹೊರುವಂತೆ ಒಪ್ಪಿಸಿದರು. ೧೯೪೨ರ ಸೆಪ್ಟೆಂಬರ್ ೧ ರಂದು ಅಧಿಕೃತವಾಗಿ ಇಂಡಿಯನ್ ನ್ಯಾಷನಲ್‌ಆರ್ಮಿ ಸ್ಥಾಪನೆಯಾಯಿತು.

ಐಎನ್‌ಎ ಸೇನಾ ವಿಭಾಗ ಮಾತ್ರ. ರಾಜಕೀಯ ಬೆಂಬಲ ಗಳಿಸಲು ರಚಿತವಾದ ಸಂಸ್ಥೆ ಇಂಡಿಯನ್ ಇಂಡಿಪಂಡೆನ್ಸ್‌ಲೀಗ್‌. ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಸೈನಿಕ ದಂಗೆಯೆಬ್ಬಿಸಲು ಯತ್ನಿಸಿ ವಿಫಲರಾದ ರಾಸ್‌ಬಿಹಾರಿ ಬೋಸ್ ಜಪಾನಿನಲ್ಲಿ ನೆಲೆಸಿ ಅಲ್ಲಿನ ನಾಗರಿಕರಾಗಿದ್ದರು. ಅವರು ಇಂಡಿಪೆಂಡೆನ್ಸ್‌ ಲೀಗ್‌ನ್ನು ಸ್ಥಾಪಿಸಲು ಮುಂದೆ ನಿಂತರು. ೧೯೪೨ರ ಮಾರ್ಚ್‌ನಲ್ಲಿ ಟೋಕಿಯೋವಿನಲ್ಲಿ, ಜೂನ್‌ನಲ್ಲಿ ಬ್ಯಾಂಕಾಕಿನಲ್ಲಿ ಸಮ್ಮೇಳನಗಳನ್ನು ನಡೆಸಿ ಅದನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು. ಬ್ಯಾಂಕಾಕಿನ ಸಮ್ಮೇಳನ ಸುಭಾಷ್‌ಬೋಸರನ್ನು ಪೂರ್ವ ಏಷ್ಯಾಕ್ಕೆ ಬಂದು ನಾಯಕತ್ವ ವಹಿಸುವಂತೆ ಕೇಳಿಕೊಂಡಿತು. ಮಲಯ, ಸಿಂಗಪುರ, ಸಯಾಂ ಮುಂತಾದ ಪೂರ್ವ ಏಷ್ಯಾ ದೇಶಗಳಲ್ಲಿ ನೆಲೆಸಿದ್ದ ಭಾರತೀಯರು ಉತ್ಸಾಹದಿಂದ ಈ ಲೀಗಿಗೆ ಸೇರಿದರು. ಸಾವಿರಾರು ತರುಣರು ಐಎನ್‌ಎಗೆ ಸೇರಲು ಮುಂದೆ ಬಂದು ತರಬೇತಿ ಪಡೆದರು. ರಾಸ್ ಬಿಹಾರಿ ಬೋಸ್‌ಲೀಗಿನ ಅಧ್ಯಕ್ಷರಾದರು. ಮೋಹನ್‌ಸಿಂಗ್ ಕಾರ್ಯ ಸಮಿತಿಯಲ್ಲಿ ಸೇನಾ ವ್ಯವಸ್ಥೆಯ ಹೊಣೆ ಹೊತ್ತ ಸದಸ್ಯರೂ, ಪ್ರಧಾನ ಸೇನಾಪತಿಯೂ ಆದರು.

ಕೆಲವೇ ದಿನಗಳಲ್ಲಿ ಜಪಾನ್ ಸರ್ಕಾರಕ್ಕೂ, ಮೋಹನ್‌ಸಿಂಗರಿಗೂ ವಿರಸ ಹುಟ್ಟಿತು. ಐಎನ್‌ಎಯ ಗರಿಷ್ಟ ಸಂಖ್ಯಾಬಲ ಎಷ್ಟಿರಬೇಕು ಮತ್ತು ಭಾರತದತ್ತ ಜಪಾನಿನ ನೀತಿಯನ್ನು ಕುರಿತು ಬಹಿರಂಗ ಘೋಷಣೆ… ಈ ವಿಚಾರಗಳಲ್ಲಿ ಅಭಿಪ್ರಾಯ ಭೇದ ಹುಟ್ಟಿತು. ರಾಸ್‌ಬಿಹಾರಿಯವರು ಒಮ್ಮತ ಮೂಡಿಸಲು ಮಾಡಿದ ಪ್ರಯತ್ನ ಮುರಿದು ಬಿತ್ತು. ಮೋಹನ್‌ಸಿಂಗರನ್ನು ಜಪಾನ್ ಸರ್ಕಾರ ಬಂಧಿಸಿತು. ಆದರೆ ಬಂಧನವನ್ನು ನಿರೀಕ್ಷಿಸಿದ್ದ ಸಿಂಗ್, ತಾವು ಬಂಧನಕ್ಕೊಳಗಾದರೆ ಇಂಡಿಯನ್ ನ್ಯಾಷನಲ್‌ಆರ್ಮಿಯನ್ನು ವಿಸರ್ಜಿಸಬೇಕೆಂಬ ಆದೇಶವನ್ನು ಇತರೆ ಸೇನಾಧಿಕಾರಿಗಳಿಗೆ ಮೊಹರು ಮಾಡಿದ ಕವರಿನಲ್ಲಿಟ್ಟು ನೀಡಿದ್ದರು. ಅದರ ಪ್ರಕಾರ ಮೊದಲ ಐಎನ್‌ಎ ವಿಸರ್ಜನೆಯಾಯಿತು.

ಸುಭಾಷ್‌ಚಂದ್ರ ಬೋಸರು ಪೂರ್ವ ಏಷ್ಯಕ್ಕೆ ಬರುವ ಪ್ರಯತ್ನ ಕೈಗೂಡಲು ಎಂಟು ತಿಂಗಳುಗಳಾದವು. ಅಲ್ಲಿ ಯುದ್ಧ ಕಾಲದ ಜಪಾನಿ ಪ್ರಧಾನಿ ಟೋಜೋ, ಮತ್ತು ಬೋಸರ ನಡುವೆ ಚರ್ಚೆ ನಡೆದು ಒಂದು ತಾತ್ಕಾಲಿಕ ಸರ್ಕಾರವನ್ನು ಸ್ಥಾಪಿಸಬೇಕೆಂದು ನಿರ್ಧರಿಸಲಾಯಿತು. ಸುಭಾಷರು ೧೯೪೩ರ ಜುಲೈ ೨ರಂದು ಸಿಂಗಪುರಕ್ಕೆ ಬಂದಾಗ ಅಲ್ಲಿನ ಭಾರತೀಯರು ಭವ್ಯ ಸ್ವಾಗತ ನೀಡಿದರು. ೪ನೆಯ ತಾರೀಕು ರಾಸ್ ಬಿಹಾರಿಯವರು ಇಂಡಿಪೆಂಡೆನ್ಸ್‌ಲೀಗಿನ ಮುಖಂಡತ್ವವನ್ನು ಸುಭಾಷರಿಗೆ ವಹಸಿಕೊಟ್ಟರು. ಅವರು ಆಜಾದ್ ಹಿಂದ ಫೌಜ್ ಎಂಬ ಹೆಸರಿನಲ್ಲಿ ಐಎನ್‌ಎಯನ್ನು ಪುನರ್ ಸಂಘಟಿಸಿದರು. ತಾವೇ ಸರ್ವೋಚ್ಚ ಸೇನಾಪತಿಯಾಗಿ ‘ಡೆಲ್ಲಿ ಚಲೋ’ ಎಂಬ ಘೋಷಣೆಯನ್ನು ಆ ಸೇನೆಗೆ ನೀಡಿದರು. ನಾನಾ ಕಾರಣಗಳನ್ನು ಮುಂದೊಡ್ಡಿ ಐಎನ್‌ಎ ಪ್ರತ್ಯಕ್ಷವಾಗಿ ಯುದ್ಧರಂಗಕ್ಕೆ ಇಳಿಯದಿರುವಂತೆ ಮಾಡಲು ಜಪಾನೀಯರು ವಿಶ್ವ ಪ್ರಯತ್ನ ಮಾಡಿದರು. ಬಲವಾದ ಐಎನ್‌ಎ, ಬ್ರಿಟಿಷರ ವಿರುದ್ಧ ಹೋರಾಡುವಂತೆ ತಮ್ಮ ಎದುರಿಗೂ ಹೋರಾಡಬಹುದು ಎಂಬುದು, ಹಾಗೂ ಸೇನಾಬಲ ಅಧಿಕವಾದಷ್ಟು ಬೋಸರು ರಾಜಕೀಯವಾಗಿ ಸ್ವತಂತ್ರರಾಗಿ ನಿರ್ಧಾರ ಕೈಗೊಳ್ಳಲು ಅವಕಾಶ ಒದಗುತ್ತದೆ ಎಂಬುದು ಜಪಾನಿನ ಸರ್ಕಾರಕ್ಕೆ ತಿಳಿದಿತ್ತು. ಆದರೆ ಬೋಸರು ಅದ್ಕಕೆ ಒಪ್ಪದೆ, ಎಲ್ಲ ಐಎನ್‌ಎ ದಳಗಳು ಭಾರತೀಯ ಅಧಿಕಾರಿಗಳ ಹಿಡಿತದಲ್ಲೇ ಇರುವಂತೆ ಮತ್ತು ಅದಕ್ಕೆ ಕಾರ್ಯಾಚರಣೆಯ ಸಲುವಾಗಿ ಸ್ವತಂತ್ರ ಕ್ಷೇತ್ರ ದೊರೆಯುವಂತೆ ಮಾಡಿದರು.

೧೯೪೪ರ ಆರಂಭದಲ್ಲಿ ಜಪಾನಿ ಹಾಗೂ ಐಎನ್‌ಎ ಪಡೆಗಳು ಈಶಾನ್ಯ ಭಾರತವನ್ನು ಪ್ರವೇಶಿಸಿದವು. ಆದರೆ, ಅಮೆರಿಕದ ಸೈನ್ಯ ಫಿಲಿಫೈನ್ಸಿನಲ್ಲಿ ಭಾರಿ ಕಾರ್ಯಾಚರಣೆಯನ್ನು ಆರಂಭಿಸಿದ ಕಾರಣ ಜಪಾನೀಯರ ವಿಮಾನ ಬಲ ಅಲ್ಲಿಗೆ ಹೋಗಬೇಕಾಯಿತು. ಮಳೆಗಾಲವೂ ಆರಂಭವಾಗಿ ಬರ್ಮಾದ ಕಡೆಗೆ ಹಿಂದೆ ಸರಿಯತೊಡಗಿತು ಐಎನ್‌ಎ. ೧೯೪೪ರ ಕೊನೆಯಲ್ಲಿ ಬ್ರಿಟಿಷ್‌ಸೇನೆಗಳೇ ಮುನ್ನುಗ್ಗಿದವು. ಹಿಂದೆ ಸರಿದ ಐಎನ್‌ಎ ರಂಗೂನಿಗೆ ಹೋಯಿತು. ಜಪಾನೀಯರು ರಂಗೂನನ್ನು ತೆರವು ಮಾಡಿದಾಗ ನಗರವನ್ನು ಐಎನ್‌ಎಗೆ ಒಪ್ಪಿಸಿದರು. ೧೯೪೫ರ ಮೇ ತಿಂಗಳ ಆರಂಭದಲ್ಲಿ ರಂಗೂನನ್ನು ಬ್ರಿಟಿಷ್ ಸೇನೆಗಳು ವಶಪಡಿಸಿಕೊಂಡಾಗ ಐಎನ್‌ಎಯನ್ನು ನಿಶ್ಯಸ್ತ್ರಗೊಳಿಸಿ, ಬಂಧಿಸಲಾಯಿತು. ಬೋಸರು ೧೯೪೫ರ ಆಗಸ್ಟ್ ೧೮ರಂದು ಒಂದು ವಿಮಾನಾಪಘಾತದಲ್ಲಿ ಮಡಿದರೆಂದು ಜಪಾನಿನ ಸರ್ಕಾರ ಅಧಿಕೃತವಾಗಿ ತಿಳಿಸಿತು.

ಬೋಸ್‌ ಸ್ಥಾಪಿಸಿದ ಅಖಿಲ ಭಾರತ ಫಾರ್ವರ್ಡ್‌ ಬ್ಲಾಕ್ ಪಕ್ಷವು ಇತರೆ ಎಡ ಪಕ್ಷಗಳಂತೆ ಸಾಮ್ರಾಜ್ಯಶಾಹಿ ವಿರೋಧಿ ಧೋರಣೆಯನ್ನು ಹೊಂದಿದ್ದರೂ, ಅದಕ್ಕೆ ಕಾರ್ಮಿಕರು ಮತ್ತು ರೈತಾಪಿ ಹೋರಾಟದ ಧೋರಣೆಯಿನ್ನೂ ಮೈಗೂಡಿರಲಿಲ್ಲವಾದ್ದರಿಂದ ಅದಿನ್ನೂ ಹೋರಾಟಕ್ಕಾಗಿ ಮಧ್ಯಮ ವರ್ಗವನ್ನೇ ನೆಚ್ಚಿಕೊಂಡಿತ್ತು. ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಫಾಸಿಸ್ಟ್ ಮತ್ತು ಸಾಮ್ರಾಜ್ಯಶಾಹಿ ವಿರುದ್ಧ ಇತರೆ ಎಡಪಕ್ಷಗಳು ಎಲ್ಲ ಕ್ರಾಂತಿಕಾರಿ ಶಕ್ತಿಗಳ ಐಕ್ಯತೆಗಾಗಿ ಯತ್ನಿಸುತ್ತಿದ್ದರೆ, ಫಾರ್ವರ್ಡ್‌ ಬ್ಲಾಕ್ ಪಕ್ಷರು ‘ಶತ್ರುವಿನ ಶತ್ರು ಮಿತ್ರ’ ಎಂಬ ಸರಳ ಸೂತ್ರಕ್ಕೆ ಕಟ್ಟುಬಿದ್ದು, ಬ್ರಿಟಿಷ್ ಸಾಮ್ರಾಜ್ಯಶಾಹಿಯೊಂದೇ ತನ್ನ ಪ್ರಮುಖ ಶತ್ರುವೆಂದು ಪರಿಗಣಿಸಿ, ಜರ್ಮನಿ ಮತ್ತು ಜಪಾನಿನ ಫ್ಯಾಸಿಸ್ಟ್‌ ಶಕ್ತಿಗಳೊಂದಿಗೆ ಕೈಜೋಡಿಸಲು ಯತ್ನಿಸಿತ್ತು. ಆದರೆ, ನೆಹರೂ ಅವರು ಫಾಸಿಸ್ಟ್ ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿ ಎರಡೂ ಅವಳಿ ಜವಳಿಗಳೆಂದು ಅಂದಾಜು ಮಾಡಿದ್ದರು.

ಬ್ರಿಟಿಷರಿಂದ ಇಂಡಿಯನ್ ನ್ಯಾಷನಲ್ ಆರ್ಮಿ (ಐ.ಎನ್.ಎ) ವಿಚಾರಣೆ

ಎರಡನೇ ಮಹಾಯುದ್ಧದಲ್ಲಿ ಜಪಾನೀಯರು ಮೈತ್ರಿಕೂಟದ ಸೇನೆಗೆ ಶರಣಾಗತಗೊಂಡಾಗ ಇಂಡಿಯನ್ ನ್ಯಾಷನಲ್ ಆರ್ಮಿಯ ಭಾರತೀಯ ಸೈನಿಕರು ಬ್ರಿಟಿಷರ ಖೈದಿಗಳಾಗಬೇಕಾಯಿತು. ಹೀಗೆ ಬಂಧಿಸಲ್ಪಟ್ಟ ಇಂಡಿಯನ್ ನ್ಯಾಷನಲ್ ಆರ್ಮಿಯ ಸೈನಿಕರನ್ನು ನವೆಂಬರ್ ೧೯೪೫ರಲ್ಲಿ ಬ್ರಿಟಿಷ್ ಸರ್ಕಾರ ವಿಚಾರಣೆ ನಡೆಸಲು ಮುಂದಾದಾಗ ದೇಶವ್ಯಾಪಿ ಪ್ರತಿಭಟನೆ ಶುರುವಾಯಿತು. ಇನ್ನೂ ಮಹತ್ತರ ಬೆಳವಣಿಗೆಯೆಂದರೆ, ಐ.ಎನ್.ಎ. ಅನುಭವ ಮತ್ತು ಬ್ರಿಟಿಷರ ಭಾರತೀಯ ಸೇನೆಯಲ್ಲಿದ್ದ ಅಸಮಾಧಾನ, ಇವೆರಡರ ನಡುವಿನ ಕೊಂಡಿಯಿಂದಾಗಿ, ೧೯೪೫-೪೬ರಲ್ಲಿ ಬಾಂಬೆ ನೌಕಾ ಮುಷ್ಕರ ಬೃಹತ್ ಮಟ್ಟದಲ್ಲಿ ಜರುಗಿತು. ಭಾಗಶಃ ಈ ಕಾರಣದಿಂದಾಗಿಯೇ ಬ್ರಿಟಿಷರು ಬಹುಬೇಗನೆ ಭಾರತದಿಂದ ಜಾಗ ಖಾಲಿ ಮಾಡಲು ತೀರ್ಮಾನಿಸಿದರು.

ಆರಂಭದಲ್ಲಿ ಬ್ರಿಟಿಷರು ನೂರಾರು ಸಂಖ್ಯೆಯ ಐ.ಎನ್.ಎ. ಸೈನಿಕರನ್ನು ವಿಚಾರಣೆಗೆ ಗುರಿಪಡಿಸಲು ನಿರ್ಧರಿಸಿದರು. ಅದರಂತೆ, ಹಲವರನ್ನು ವಿಚಾರಣೆಗೊಳಪಡಿಸುವುದು, ಗಲ್ಲಿಗೇರಿಸುವುದು, ಸೇವೆಯಿಂದ ಕಿತ್ತೊಗೆಯುವುದು ಮತ್ತು ಯಾವುದೇ ವಿಚಾರಣೆಯಿಲ್ಲದೆ ಸುಮಾರು ೭೦೦೦ ಕ್ಕೂ ಹೆಚ್ಚು ಜನರನ್ನು ಬಂಧನದಲ್ಲಿರಿವುದು. ನವೆಂಬರ್ ೧೯೪೫ರಲ್ಲಿ ಮೊದಲ ವಿಚಾರಣೆಯನ್ನು ದೆಹಲಿಯ ಕೆಂಪುಕೋಟೆಯಲ್ಲಿ ನಡೆಸಿ ಹಿಂದೂ, ಮುಸ್ಲಿಮ್‌ ಮತ್ತು ಸಿಖ್‌ ಎಲ್ಲರನ್ನೂ ಒಂದೇ ಸೆರೆಮನೆಯಲ್ಲಿ ಕೂಡಿ ಹಾಕಿದರು. ಭೂಲಭಾಯಿ ದೇಸಾಯಿ, ತೇಜ್ ಬಹದ್ದೂರ ಸಪ್ರು, ನೆಹರು ಮುಂತಾದ ಮುಂಚೂಣಿ ಲಾಯರುಗಳು ಐ.ಎನ್.ಎ. ಸೈನಿಕರ ನ್ಯಾಯಾಂಗ ರಕ್ಷಣೆಗೆ ಮುಂದಾದರೆ, ದೇಶವ್ಯಾಪಿ ಮುಷ್ಕರಕ್ಕೆ ಮುಸ್ಲಿಮ್ ಲೀಗ್ ಕೂಡ ಸೇರಿಕೊಂಡಿತು. ಅದೇ ವೇಳೆ, ಬ್ರಿಟಿಷ್‌ಭಾರತೀಯ ಸೇನೆಯ ಹಲವಾರು ಸೈನಿಕರು ಐ.ಎನ್.ಎ. ಸೈನಿಕರ ವಿಷಯದಲ್ಲಿ ಆಸ್ಥೆ ವಹಿಸುತ್ತಿದ್ದು, ಅದರ ಸ್ಫೂರ್ತಿಯನ್ನು ತನ್ನೆಲ್ಲ ನೆಲೆಗಳಲ್ಲಿ ಹಂಚುತ್ತಿದೆಯೆಂದು ಬ್ರಿಟಿಷರ ಗೂಢಾಚಾರ ಸಂಸ್ಥೆಯ ವರದಿಯಿಂದ ಬ್ರಿಟಿಷರು ಆತಂಕಕ್ಕೊಳಗಾಗಿದ್ದರು.

ಮತ್ತೊಂದೆಡೆ, ಡಚ್ಚರು ಮತ್ತು ಫ್ರೆಂಚರ ವಸಾಹತುಶಾಹಿ ಪರವಾಗಿ ವಿಯೆಟ್ನಾಂ ಮತ್ತು ಇಂಡೋನೇಷ್ಯಾ ಯುದ್ಧಗಳಲ್ಲಿ ಪಾಲ್ಗೊಂಡಿದ್ದ ಭಾರತೀಯ ಸೇನೆಯ ಸಾಮ್ರಾಜ್ಯಶಾಹಿ-ವಿರೋಧಿ ಪ್ರಜ್ಷೆಯು ಮಹತ್ತರ ಬೆಳವಣಿಗೆ ಕಂಡಿತ್ತು. ಇದರೊಂದಿಗೆ ಯುದ್ಧಾನಂತರ ಕಂಡುಬಂದ ನಿರುದ್ಯೋಗ, ಬೆಲೆಯೇರಿಕೆ, ಬಾಂಬೆ ಮತ್ತು ಬಂಗಾಳದಲ್ಲಿ ಬೆಳೆ ವೈಫಲ್ಯ, ಮದ್ರಾಸಿನಲ್ಲಿ ಚಂಡಮಾರುತ ಮತ್ತು ಪಂಜಾಬ್‌ನಲ್ಲಿ ಕಡಿಮೆ ಫಸಲು ಇವೆಲ್ಲವೂ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸಿದ್ದವು. ಬ್ರಿಟಿಷರಿಗೆ ನಡುಕ ಹುಟ್ಟಿಸತೊಡಗಿದ್ದು ೧೯೪೨ರಲ್ಲಿ ಜರುಗಿದಂತೆ ಇನ್ನೂ ಬೃಹತ್ ರೀತಿಯಲ್ಲಿ ಸಂವಹನ ವ್ಯವಸ್ಥೆಯ ಮೇಲೆ ದಾಳಿ, ರೈತರ ಬಂಡಾಯ, ಕಾರ್ಮಿಕರ ಮುಷ್ಕರಗಳು, ಐ.ಎನ್.ಎ. ಮತ್ತು ಭಾರತೀಯ ಸೇನೆಯ ನಡುವಿನ ಕೆಲಮಟ್ಟದ ಒಡಂಬಡಿಕೆ ಜರುಗಬಹುದೆಂಬ ಭೀತಿ.

೧೯೪೨ರ ವೀರ ಸೇನಾನಿಗಳನ್ನು ವೈಭವೀಕರಿಸುತ್ತಾ, ಬ್ರಿಟಿಷ್ ಅಧಿಕಾರಿಗಳ ದೌರ್ಜನ್ಯಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು ಮತ್ತು ತಕ್ಷಣವೇ ಐ.ಎನ್.ಎ. ಖೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ನೆಹರೂ ಒಳಗೊಂಡಂತೆ ಕಾಂಗ್ರೆಸ್ ನಾಯಕರ ಹಿಂಸೆ ಪ್ರಚೋದನಾ ಹೇಳಿಕೆಗಳ ಕುರಿತು ಬ್ರಿಟಿಷ್ ಗೌವರ್ನರ್ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಕಾಂಗ್ರೆಸ್ಸಿಗರು ಈ ಸಮಯದಲ್ಲಿ ಐ.ಎನ್.ಎ. ಗೆ ಬೆಂಬಲ ನೀಡದಿದ್ದಲ್ಲಿ ಚುನಾವಣೆಯಲ್ಲಿ ಪೆಟ್ಟು ಬೀಳುವುದೆಂದು ಅಲ್ಲದೆ, ವಾಸ್ತವವಾಗಿ ಕಾಂಗ್ರೆಸ್ಸೇನಾದರೂ ಅಧಿಕಾರಕ್ಕೆ  ಬಂದಲ್ಲಿ ಐ.ಎನ್.ಎ. ಸೈನಿಕರನ್ನು ವಿಚಾರಣೆ ನಡೆಸುತ್ತದೆಂದು ಬ್ರಿಟಿಷರಿಗೆ ಪರೋಕ್ಷವಾಗಿ ಸಂದೇಶ ರವಾನಿಸಲಾಯಿತು. ಹಾಗೆಯೇ ೧೯೪೨ರ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಕಮ್ಯುನಿಸ್ಟರು ವಹಿಸಿದ ಪಾತ್ರದ ಕುರಿತು ಅವರ ಮೇಲೆ ತೀವ್ರತರದ ದಾಳಿ ನಡೆಸಿ ಅಖಿಲ ಭಾರತ ಕಾಂಗ್ರೆಸ್ಸಿಗೆ ಅವರು ರಾಜೀನಾಮೆ ನೀಡುವಂತೆ ಮಾಡಲಾಯಿತು.

ಆದರೆ, ಕೋಲ್ಕತ್ತಾದಲ್ಲಿ ಫಾರ್ವಡ್‌ ಬ್ಲಾಕ್ ಮತ್ತು ಕಮ್ಯುನಿಷ್ಟರ ವಿದ್ಯಾರ್ಥಿ ಫೆಡರೇಷನ್ನಿನ ಕಾರ್ಯಕರ್ತರು ಐ.ಎನ್.ಎ. ಸೈನಿಕರನ್ನು ಬಿಡುಗಡೆ ಮಾಡಬೇಕೆಂದು ನಿರಂತರ ಮುಷ್ಕರ ನಡೆಸುತ್ತಿದ್ದರು. ಕಾರು, ಲಾರಿ ಸುಡುವುದು, ರಸ್ತೆ ತಡೆ, ರೈಲು ತಡೆ ಇತ್ಯಾದಿ ಮೂಲಕ ನಗರದಾದ್ಯಂತ ಮುಷ್ಕರವು ವ್ಯಾಪಿಸಿತು. ಪೊಲೀಸರು, ವಿದ್ಯಾರ್ಥಿಗಳು ನಾಗರೀಕರನ್ನು ಒಳಗೊಂಡಂತೆ ಸುಮಾರು ೩೩ ಮಂದಿಯನ್ನು ಕೊಂದರು ಮತ್ತು ೨೦೦ ಕ್ಕೂ ಹೆಚ್ಚು ಜನ ಗಾಯಗೊಂಡರು. ೧೫೦ ಪೊಲೀ ಮತ್ತು ಸೇನೆಯ ವಾಹನಗಳು ನಾಶಗೊಂಡವು, ೭೦ ಬ್ರಿಟಿಷ್ ಮತ್ತು ೩೭ ಅಮೆರಿಕನ್ ಸೈನಿಕರು ಗಾಯಗೊಂಡರು. ಬಂಗಾಳದ ಗೌವರ್ನರ್‌ ಜೊತೆಯಲ್ಲಿ ಸ್ನೇಹಪೂರ್ವಕ ಮಾತುಕತೆ ನಡೆಸಿದ ಗಾಂಧೀಜಿ, ಅಹಿಂಸಾತ್ಮಕ ಚಳವಳಿಗೆ ಮಾತ್ರವೇ ತನ್ನ ಬೆಂಬಲ ಎಂದು ಪುನರುಚ್ಚರಿಸಿದರು.

ಇತ್ತ ಕಡೆ, ಐ.ಎನ್.ಎ. ಸೈನಿಕರ ವಿಚಾರಣೆ ಕುರಿತು ಬ್ರಿಟಿಷರು ವಿನಾಯಿತಿ ತೋರಿಸಲೇಬೆಕೆಂಬ ವಾಸ್ತವವನ್ನು ಅರಿತುಕೊಂಡರು. ಅದರಂತೆ ಕೊಲೆ ಅಥವಾ ಗಂಭಿರ ಆರೋಪಗಳಲ್ಲಿ ಭಾಗಿಯಾದ ಸೈನಿಕರನ್ನು ಮಾತ್ರವೇ ವಿಚಾರಣೆ ಮಾಡಲಾಗುವುದೆಂದು ತಿಳಿಸಲಾಯಿತು. ಆದರೆ ೧೯೪೬ರ ಫೆಬ್ರುವರಿಯಲ್ಲಿ ಐ.ಎನ್.ಎ.ಯ ಅಬ್ದುಲ್‌ ರಷೀದ್‌ ಮೇಲೆ ೭ ವರ್ಷಗಳ ಕಠಿಣ ಸಜೆ ವಿಧಿಸಿದ್ದರ ವಿರುದ್ಧ ಕೊಲ್ಕತ್ತಾದಲ್ಲಿ ಮುಸ್ಲಿಮ್ ಲೀಗ್ ನೀಡಿದ ಕರೆಗೆ ವಿದ್ಯಾರ್ಥಿ ಫೆಡರೇಷನ್ ಮತ್ತು ಕಮ್ಯುನಿಸ್ಟರು ಬೆಂಬಲ ನೀಡಿದರು. ಇದರಿಂದಾಗಿ ನಗರದೆಲ್ಲೆಡೆ ಸಂಪೂರ್ಣ ಅಸ್ತವ್ಯಸ್ತ ಉಂಟಾಯಿತು. ಬೃಹತ್ ರ್ಯಾಲಿ ನಡೆಸಲಾಯಿತು. ಬ್ರಿಟಿಷ್ ಸೇನೆಯು ಮುಷ್ಕರನಿರತ ೮೪ ಮಂದಿಯನ್ನು ಕೊಂಡು ೩೦೦ ಮಂದಿಯನ್ನು ಗಾಯಗೊಳಿಸಿತು. ಇದರೊಂದಿಗೆ ಬೆಲೆಯೇರಿಕೆ ವಿರುದ್ಧ ಮತ್ತು ಪಡಿತರ ಸೌಲಭ್ಯಕ್ಕಾಗಿ ಆಗ್ರಹಿಸಿ ಸರ್ಕಾರಿ ನೌಕರರು, ಅಂಚೆ ಮತ್ತು ರೈಲ್ವೇ ಕಾರ್ಮಿಕರು ಮುಷ್ಕರವನ್ನು ತೀವ್ರಗೊಳಿಸಿದರು.

ನೆಹರೂ, ಗಾಂಧಿ ಮತ್ತು ಬೋಸ್

ಹರಿಪುರ ಅಧಿವೇಶನದಲ್ಲಿ ನೆಹರೂರವರಿಂದ ಕಾಂಗ್ರೆಸ್ಸಿನ ಅಧ್ಯಕ್ಷತೆಯನ್ನು ಪಡೆದಕೊಂಡ ಸುಭಾಷ್ ಬೋಸ್‌ರವರು ನೆಹರೂವಿನಂತೆ ತಾವೊಬ್ಬರು ಎಡಪಂಥೀಯರೆಂದು ಗುರುತಿಸಿಕೊಂಡಿದ್ದರೂ, ಅವರೆಂದಿಗೂ ನೆಹರೂವಿನಂತೆ ಗಾಂಧಿಯೊಡನೆ ವೈಯಕ್ತಿಕ ಸಂಬಂಧಗಳನ್ನು ಹೊಂದಿರಲೇ ಇಲ್ಲ. ನೆಹರೂವಿಗಿಂತ ಹೆಚ್ಚಿನ ಕಾಲ ಸೆರೆಮನೆಯಲ್ಲಿದ್ದ ಹಾಗೂ ರಾಜಕೀಯ ಕೆಲಸಗಳಿಗೆ ಜನತೆಯನ್ನು ಅಣಿನೆರೆಸಬಲ್ಲ ಶಕ್ತಿಯಿದ್ದದ್ದರಿಂದಲೇ ಬೋಸ್‌ರನ್ನು ಕಾಂಗ್ರಸ್ಸಿನ ಅಧ್ಯಕ್ಷರಾಗಿ ಮಾಡಬೇಕಾದ ಅನಿವಾರ್ಯತೆ ಕಾಂಗ್ರೆಸ್‌ಗೆ ಒದಗಿತ್ತು. ಆದರೆ ಬೋಸರನ್ನು ಅಧ್ಯಕ್ಷರನ್ನಾಗಿ ಮಾಡಿದ ನಂತರ ಬಲಪಂಥೀಯ ಕಾಂಗ್ರೆಸ್ಸಿಗರು ಸುಮ್ಮನೆ ಕೂರಲಾಗಲಿಲ್ಲ. ಏಕೆಂದರೆ, ಇವರಿಗೆ ತದ್ವಿರುದ್ಧವಾಗಿ ಬೋಸ್‌ರು ತಾವೇ ಹೇಳಿಕೊಳ್ಳುತ್ತಿದ್ದಂತೆ ಒಂದು ಸದೃಢ ಜನತಾ ಪ್ರತಿರೋಧವನ್ನು ನಿರ್ಮಿಸಲು ಪ್ರತಿ ಹೆಜ್ಜೆಯಲ್ಲೂ ಪ್ರಯತ್ನಿಸುತ್ತಿದ್ದರು, ಅಲ್ಲದೆ ಬಲಪಂಥೀಯ ಕಾಂಗ್ರೆಸ್ಸಿಗರಿಗೆ ಎಂದಿಗೂ ಮಣಿಯುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಬಲಪಂಥೀಯ ಕಾಂಗ್ರೆಸ್ಸಿಗರು ಅವರನ್ನು ಎರಡನೇ ಅವಧಿಗೆ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಚುನಾಯಿಸಲು ಒಪ್ಪದೆ ಅವರನ್ನು ಕೆಳಗಿಳಿಸಲು ಹುನ್ನಾರ ನಡೆಸಿದರು.

ನೆಹರೂರವರ ಜೀವನ ಚರಿತ್ರಾಕಾರರಾದ ಎಸ್. ಗೋಪಾಲ್ ಹೇಳುವಂತೆ, ಬಲಪಂಥೀಯರೊಂದಿಗೆ ಬ್ರಿಟಿಷ್ ಆಳ್ವಿಕೆಯು ಒಂದು ತೆರನಾದ ಮಧುಚಂದ್ರ ನಡೆಸುತ್ತಿತ್ತು. ರಾಜ್ಯಗಳಲ್ಲಿ ಕಾಂಗ್ರೆಸ್ಸಿಗರು ಅನುಸರಿಸುತ್ತಿದ್ದ ದಮನಕಾರಿ ನೀತಿಗಳು ಬ್ರಿಟಿಷರಿಗೆ ಅದೆಷ್ಟು ಖುಷಿ ನೀಡಿದ್ದವೆಂದರೆ ಕೇಂದ್ರದಲ್ಲಿ ಬ್ರಿಟಿಷರ ಆಡಳಿತಕ್ಕೆ ಕಿಂಚಿತ್ತೂ ಧಕ್ಕೆ ಬಾರದಂತೆ ಅವರು ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಮಾಡುತ್ತಿದ್ದರು. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಬ್ರಿಟಿಷರು ಇಬ್ಬರೂ ಹತ್ತಿರಾಗುವುದನ್ನು ಕಂಡು ಆತಂಕಕ್ಕೊಳಗಾದ ಜಿನ್ನಾ ಕೆಲವು ವಿರುದ್ಧ ನಡೆಗಳನ್ನು ಚಲಾಯಿಸತೊಡಗಿದ್ದರು. ಅಲ್ಲದೆ, ಬ್ರಿಟಿಷರೊಂದಿಗೆ ಬಲಪಂಥೀಯ ಕಾಂಗ್ರೆಸ್ಸಿಗರು ಒಳ ಒಪ್ಪಂದ ಮಾಡಿಕೊಂಡು ರಾಜಿಯಾಗುತ್ತಿದ್ದಾರೆಂಬ ಅನುಮಾನ ವ್ಯಾಪಿಸತೊಡಗಿತ್ತು. ಬೋಸರು ಕೂಡ ಬಹಿರಂಗವಾಗಿ ಕಾಂಗ್ರೆಸ್ಸಿಗರನ್ನು ಇದೇ ಕಾರಣವಾಗಿ ಜರೆಯುತ್ತಿದ್ದರು. ಬೋಸರಿಂದ ಟೀಕೆಗೊಳಲಾದ ಕಾಂಗ್ರೆಸ್ಸಿಗರಿಗೆ ಇದು ತಮ್ಮ ಪ್ರಾಮಾಣಿಕತೆ ಕುರಿತ ಪ್ರಶ್ನೆಯಾಗಿತ್ತು. ಆದ್ದರಿಂದ ಬೋಸರು ತಮ್ಮ ಆರೋಪವನ್ನು ಹಿಂತೆಗೆದುಕೊಳ್ಳದಿದ್ದರೆ ಅವರಿಗೆ ಯಾವೊಂದು ಸಹಕಾರವನ್ನು ತಾವು ನೀಡುವುದಿಲ್ಲವೆಂದು ಬಲಪಂಥೀಯ ಕಾಂಗ್ರೆಸ್ಸಿಗರು ಘೋಷಿಸಿದರು. ಇದರಿಂದಾಗಿ ಬೋಸರು ತಾವು ಬಹುಮತದಿಂದ ಆಯ್ಕೆಯಾಗಿದ್ದರೂ ತಮ್ಮ ಅಧ್ಯಕ್ಷೀಯ ಪದವಿಯಿಂದ ಹೊರಬರಬೇಕಾಯಿತು.

* * *

ರಾಯಲ್ ಇಂಡಿಯನ್ ನೌಕಾದಳದ ಬಂಡಾಯ

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರೋಚಿತವಾಗಿ ಮತ್ತು ಅಷ್ಟೇ ಅಪಾಯಕಾರಿಯಾಗಿ ಮೂಡಿಬಂದ ಘಟನೆಯೆಂದರೆ ೧೯೪೬ರ ಫೆಬ್ರುವರಿಯಲ್ಲಿ ಮುಂಬೈಯಲ್ಲಿ ಜರುಗಿದ ರಾಯಲ್ ಇಂಡಿಯನ್ ನೌಕಾದಳದ ಬಂಡಾಯ. ದ್ವಿತೀಯ ಮಹಾಯುದ್ಧ ಸಮಯ ಕಾಲವಾದ್ದರಿಂದ ದೇಶದ ಎಲ್ಲಡೆಯಿಂದ ರಾಯಲ್ ಇಂಡಿಯನ್ ನೌಕಾದಳಕ್ಕೆ ನೇಮಕಾತಿ ಮಾಡಲಾಗಿದ್ದು, ಅಂತಾರಾಷ್ಟ್ರೀಯ ಯುದ್ಧದಲ್ಲಿ ಪಾಲ್ಗೊಂಡಿದ್ದರಿಂಧಾಗಿ ವಿಶ್ವದ ಬೆಳವಣಿಗೆಗಳೊಂಖದಿಗೆ ಸಂಪರ್ಕ, ಐ.ಎನ್.ಎ. ವಿಚಾರಣೆಗಳು, ಯುದ್ಧಾನಂತರದಲ್ಲಿ ಭಾರತ ವಿಮೋಚನಾ ಹೋರಾಟಗಳು ಒಂದು ಶಕ್ತಿಯುತ ಪ್ರಭಾವವನ್ನುಂಟು ಮಾಡಿದ್ದವು. ಫೆಬ್ರುವರಿ ೧೮ ರಂದು ಕಳಪೆ ಆಹಾರ ಮತ್ತು ಜನಾಂಗೀಯ ನಿಂದನೆ ವಿರುದ್ಧ ನೌಕಾದಳದ ಸದಸ್ಯರು ದನಿಯೆತ್ತಿದ್ದರು. ಎಂ.ಎಸ್. ಖಾನ್ ನಾಯಕತ್ವದಲ್ಲಿ ಕೇಂದ್ರಿಯ ನೌಕಾದಳ ಮುಷ್ಕರ ಸಮಿತಿಯು ಉತ್ತಮ ಆಹಾರ, ಬಿಳಿಯರು ಮತ್ತು ಭಾರತೀಯರಿಗೆ ಸಮಾನ ವೇತನ, ಇತ್ಯಾದಿಗಳೊಂದಿಗೆ ಐ.ಎನ್.ಎ.ಬ ಧಿಗಳ ಬಿಡುಗಡೆ, ಇಂಡ್ಯೋನೇಷ್ಯಾದಿಂದ ಸೇನೆ ವಾಪಸಾತಿಯಂಥಹ ರಾಷ್ಟ್ರೀಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹ ಆರಂಭಿಸಿತು. ಆದರೆ, ಫೆಬ್ರುವತಿ ೨೦ ರಂದು ರಾಯಲ್ ಇಂಡಿಯನ್ ನೌಕಾದಳವನ್ನು ಬ್ರಿಟಿಷ್ ಸೇನೆಯು ಸುತ್ತುವರಿಯಿತು ಹಾಗೂಬ್ ರಿಟಿಷ್ ಅಡ್ಮಿರಲ್ ಗಾಡ್‌ಫ್ರೆ ಬಾಂಬರುಗಳನ್ನು ಆಯೋಜಿಸಿ ನೌಕಾದಳವನ್ನು ನಾಶಪಡಿಸುವುದಾಗಿ ಬೆದರಿಕೆ ಒಡ್ಡಿದನು. ಅದೇ ಮಧ್ಯಾಹ್ನ, ಸಾಮಾನ್ಯ ಜನ ಮತ್ತು ಅಂಗಡಿ ಮಾಲೀಕರು ಇಂಡಿಯನ್ ನೌಕಾದಳಕ್ಕೆ ಆಹಾರ ಸರಬರಾಜು ಮಾಡಿ ತಮ್ಮ ಒಗ್ಗಟ್ಟು ಮೆರೆದರು. ಇದರಿಂದ ಇನ್ನಷ್ಟು ಉತ್ತೇಜಿತಗೊಂಡು, ಇಡೀ ದೇಶದ ತುಂಬೆಲ್ಲ ಇದ್ದ ನೌಕಾದಳದ ನೆಲೆಗಳಿಗೂ ಮುಷ್ಕರ ವ್ಯಾಪಿಸಿತು. ಕರಾಚಿಯಲ್ಲಿ ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಪೊಲೀಸ್ ಮತ್ತು ಸೇನೆಯೊಂದಿಗೆ ಹಿಂಸಾತ್ಮಕವಾಗಿ ಸೆಣಸಿ ನೌಕಾದಳಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ನೌಕಾದಳಕ್ಕೆ ಬೆಂಬಲವಾಗಿ ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ ಸಮಾಜವಾದಿ ನಾಯಕರು ಮುಂಬೈನಲ್ಲಿ ಮುಷ್ಕರ ನಡೆಸಿ ಮೂರು ಲಕ್ಷ ಹೆಚ್ಚು ಕಾರ್ಮಿಕರು ಅದರಲ್ಲಿ ಭಾಗಿಯಾದರು. ಇದರಲ್ಲಿ ೨೨೮ ಸಾವು, ೧೦೪೬ ಗಾಯಾಳುಗಳು ಮತ್ತು ಮೂವರು ಪೊಲೀಸರು ಮರಣ ಹೊಂದಿದರು. ಇನ್ನೊಂದೆಡೆ ಕಾಂಗ್ರೆಸ್ಸಿನ ಮುಖಂಡರು ರಾಯಲ್ ಇಂಡಿಯನ್ ನೌಕಾದಳಕ್ಕೆ ಬೆಂಬಲ ನೀಡದೆ ಬ್ರಿಟಿಷರಿಗೆ ಅವರು ಶರಣಾಗುವಂತೆ ಸೂಚನೆ ನೀಡಿದರು. ಸರ್ದಾರ್ ಪಟೇಲರು ಆಂಧ್ರ ಕಾಂಗ್ರಸ್ಸಿನ ನಾಯಕ ವಿಶ್ವನಾಥನ್‌ರಿಗೆ ತಾವು ೧೯೪೬ರ ಮಾರ್ಚ್‌೧ ರಂದು ಬರೆದ ಪತ್ರದಲ್ಲಿ ‘ಸೇನೆಯ ಶಿಸ್ತನ್ನು ಹಾಳುಗೆಡವಬಾರು. ಸ್ವಾತಂತ್ರ್ಯಾ ನಂತರವೂ ಕೂಡ ನಮಗೆ ಸೇನೆ ಬೇಕಾಗುತ್ತದೆ’ ಎಂದಿದ್ದರು. ನೆಹರೂ ಅವರು ಮೊದಲಿಗೆ ನೌಕಾದಳದ ಹಿಂಸಾತ್ಮಕ ಹಾದಿಯನ್ನು ವಿರೋಧಿಸಿದರೂ ‘ಸೇನೆ ಮತ್ತು ಜನರ ನಡುವಿನ ಕಬ್ಬಿಣದ ಗೋಡೆಯನ್ನು ಕೆಡವಿದ್ದಕ್ಕಾಗಿ’ ರಾಯಲ್ ಇಂಡಿಯನ್ ನೌಕಾದಳವನ್ನು ಪ್ರಶಂಸಿದರು. ಮಹಾತ್ಮ ಗಾಂಧೀಜಿಯವರು ನೌಕಾದಳವನ್ನು ಖಂಡಿಸುತ್ತಾ ‘ಹಿಂಸಾತ್ಮಕ ಕ್ರಮವಾಗಿ ಹಿಂದೂ ಮತ್ತು ಮಸ್ಲಿಮರು ಒಂದಾಗುವುದಾದರೆ ಅದು ಅಪಮಿತ್ರ ಮೈತ್ರಿ’ ಎಂದು ಜರೆದರು. ಬ್ರಿಟಿಷ್ ಸೇನೆಯ ವೃತ್ತಿ ಇಷ್ಟವಿಲ್ಲದಿರುವ ಸೈನಿಕರು ಶರಣಾಗಬೇಕು ಅಥವಾ ರಾಜೀನಾಮೆ ನೀಡಿ ಕೆಲಸ ತ್ಯಜಿಸಬೇಕೆಂದು ಉಪದೇಶ ನೀಡಿದರು. ಆಜಾದ್ ಹಿಂದ್ ಫೌಜ್‌ಸಂಘಟನೆಗಿಂತಲೂ ಹೆಚ್ಚಿನ ಅಪಾಯಕಾರಿ ಕಾರ್ಯದ್ಲಲಿ ತೊಡಗಿದ್ದರೂ ರಾಯಲ್ ಇಂಡಿಯನ್ ನೌಕಾದಳವು ಅದರಷ್ಟು ಪ್ರಸಿದ್ಧಿ ಪಡೆಯದಿರುವುದು ಸೋಜಿಗವೇ ಸರಿ. ಕೇಂದ್ರೀಯ ನೌಕಾದಳ ಮುಷ್ಕರ ಸಮಿತಿಯ ಅಂತಿಮ ಹೇಳಿಕೆಯು ಇಲ್ಲಿ ಉಲ್ಲೇಖಾರ್ಹ.

ನಮ್ಮ ರಾಷ್ಟ್ರೀಯ ಜೀವನದಲ್ಲಿ ನಮ್ಮ ಮುಷ್ಕರವು ಐತಿಹಾಸಿಕ ಘಟನೆಯಾಗಿದೆ. ಪ್ರಥಮ ಬಾರಿಗೆ ಸೇನೆಯಲ್ಲಿರುವ ಮತ್ತು ಬೀದಿಯಲ್ಲಿರುವ ಜನರ ರಕ್ತ ಒಂದೇ ಧ್ಯೇಯಕ್ಕಾಗಿ ಒಟ್ಟಾಗಿ ಹರಿದಿದೆ. ಸೇನೆಯಲ್ಲಿರುವ ನಾವು ಇದನ್ನೆಂದೂ ಮರೆಯಲಾಗದು. ನೀವು, ನಿಮ್ಮ ಸಹೋದರ ಮತ್ತು ಸಹೋದರಿಯರು ಕೂಡ ಎಂದಿಗೂ ಮರೆಯಲಾಗದು. ನೀವು, ನಿಮ್ಮ ಸಹೋದರ ಮತ್ತು ಸಹೋದರಿಯರು ಕೂಡ ಎಂದಿಗೂ ಮರೆಯಲಾರರು ಎಂದು ನಮಗೆ ಗೊತ್ತು ನಮ್ಮ ಮಹಾನ್ ಜನತೆ ಚಿರಾಯುವಾಗಲಿ.

* * *

ಆರಂಭಿಕ ಕಾಲಘಟ್ಟದಲ್ಲಿ ಪ್ರಮುಖವಾಗಿ ಅರಬಿಂದೋ ಘೋಷರ ಕ್ರಾಂತಿಕಾರದ ಸಿದ್ಧಾಂತಗಳ ಹಿನ್ನೆಲೆಯಿಂದ ಆರಂಭವಾಗಿ ನೌಕಾದಳದ ಬಂಡಾಯದವರೆಗಿನ ಕಾಲಘಟ್ಟದ ವಿವಿಧ ಪ್ರತಿಭಟನೆಗಳು ಭಾರತದ ರಾಷ್ಟ್ರೀಯ ಹೋರಾಟದ ಪ್ರಮುಖ ಘಟ್ಟವಾಗಿದೆ. ಹೋರಾಟದ ಮುಖ್ಯವಾಹಿನಿಯಲ್ಲಿ ಪ್ರತಿಭಟನೆ ಮಾಡುತ್ತಿದೆ ಎಂದು ಕಾಂಗ್ರೆಸ್ ಸ್ವಯಂ ಪ್ರತಿಬಿಂಬಿಸಿಕೊಂಡರೂ ಕಾಂಗ್ರೆಸ್ಸಿಗೆ ಪರ್ಯಾಯವಾಗಿದ್ದ ಭಾರತದ ನೆಲದ ಕ್ರಾಂತಿಕಾರಿ ಹೋರಾಟಗಳು ಬ್ರಿಟಿಷ್‌ ಆಡಳಿತವನ್ನು ತಲ್ಲಣಗೊಳಿಸಿತು. ಅವುಗಳು ಕೇವಲ ‘ವೈಯಕ್ತಿಕ ಸಾಹಸಗಳಾಗಿರದೇ’ ತ್ಯಾಗ, ಬಲಿದಾನ ಮತ್ತು ಆದರ್ಶಗಳ ಹಿನ್ನೆಲೆಯಲ್ಲಿ ರೂಪುಗೊಂಡ ಸೈದ್ಧಾಂತಿಕವಾಗಿತ್ತು. ಈ ಹೋರಾಟಗಳೊಂದಿಗೆ ಆ ಕಾಲಘಟ್ಟದಲ್ಲಿ ರೈತ ಹೋರಾಟಗಳ ತೀವ್ರ ಪ್ರತಿಭಟನೆಗಳು ಬ್ರಿಟಿಶ್ ಸಾಮ್ರಾಜ್ಯಶಾಹಿಯನ್ನು ಕಂಗೆಡಿಸಿತ್ತು ಎನ್ನುವುದು ಗಮನಾರ್ಗವಾಗಿದೆ.