ರೈತರ ವರ್ಗಲಕ್ಷಣಗಳನ್ನು ಗುರುತಿಸುವಲ್ಲಿ ಗೊಂದಲಕ್ಕೊಳಗಾದ ಡಬ್ಲ್ಯು.ಪಿ.ಪಿ. ತನ್ನ ಗುರಿಯನ್ನು ಎಂದೂ ಸ್ಪಷ್ಟಪಡಿಸಿಕೊಳ್ಳಲೇ ಇಲ್ಲ. ಇದರಿಂದಾಗಿಯೇ ಅದರ ಬೇಡಿಕೆಗಳಲ್ಲಿ ಸುಸಂಬದ್ಧತೆಯಿರಲಿಲ್ಲ. ಉದಾಹರಣೆಗೆ ಪಕ್ಷದ ಸಂವಿಧಾನವು ಈ ಬಗ್ಗೆ ಮೌನವಾಗಿದ್ದರೂ ಅದರ ಎಲ್ಲಾ ಕರಪತ್ರಗಳಲ್ಲೂ ಮತ್ತೆ ಮತ್ತೆ ಕೃಷಿ ಭೂಮಿಯ ರಾಷ್ಟ್ರೀಕರಣ ಹಾಗೂ ‘ದುಡಯುವ ರೈತನಿಗೆ ಕರಾರಿನ ಮೇರೆಗೆ ಕೃಷಿ ಭೂಮಿಯನ್ನು ಹಂಚುವುದು’ ಎಂಬೆರಡು ಕೇಳಿಕೆಗಳು ಪ್ರಕಟವಾಗುತ್ತಲೇ ಇದ್ದವು.

[1] ಅಂತೆಯೇ ಬಂಗಾಳದಲ್ಲಿದ್ದ ಜಮೀನುದಾರಿ ಪದ್ಧತಿಯನ್ನು ಶಾಶ್ವತವಾಗಿ ಕೊನೆಗೊಳಿಸುವುದು, ರೈತರೇ ಭೂಮಾಲೀಕರಾಗುವ ರಾಯತ್‌ವಾರಿ ಪದ್ಧತಿಯನ್ನು ಹಾಗೂ ಔಧ್‌ನಲ್ಲಿದ್ದ ತಾಲೂಕ್ ದಾರಿ ಪದ್ಧತಿಯನ್ನು ಕೊನೆಗೊಳಿಸುವುದು ತಮ್ಮ ಮೊತ್ತ ಮೊದಲ ಗುರಿ ಎಂಬುದಾಗಿ ಅಖಿಲ ಭಾರತ ಡಬ್ಲ್ಯು.ಪಿ.ಪಿ.ಯ ಸಮ್ಮೇಳನದಲ್ಲಿ ನಿರ್ಣಯವಾಯಿತು. ಆದರೆ ಅದೇ ಕರಪತ್ರದ ಇನ್ನೊಂದು ಬದಿಯಲ್ಲಿ ರೈತರನ್ನೇ ಭೂಮಾಲಿಕರನ್ನಾಗಿಸುವುದು ಮತ್ತು ವಾರ್ಷಿಕ ಆದಾಯ ರೂ.೨೦೦೦ ಕ್ಕಿಂತ ಹೆಚ್ಚಿರುವ ಕೃಷಿಕರಿಗೆ ಹಂತಹಂತವಾಗಿ ಆದಾಯ ತೆರಿಗೆಯನ್ನು ವಿಧಿಸುವುದನ್ನು ಒತ್ತಾಯಿಸಲಾಗಿದೆ.[2] ಇಂತಹ ಗೊಂದಲಗಳು ಹಾಗೂ ವಿರೋಧಾಭಾಸಗಳು ಬೇರೆ ಕಡೆ ಇರುವುದಕ್ಕಿಂತ ಬಂಗಾಳ ಘಟಕದಲ್ಲೇ ಹೆಚ್ಚಾಗಿದ್ದವು. ಇಲ್ಲಿ ಭೂಮಾಲೀಕರು ಮತ್ತು ಜಮೀನುದಾರರು ಡಬ್ಲ್ಯು.ಪಿ.ಪಿ.ಯ ಜತೆಯಲ್ಲಿ ಸಕ್ರಿಯವಾಗಿದ್ದುದು ಮಾತ್ರವಲ್ಲದೆ ಅದರ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದರು. ಡಬ್ಲ್ಯು.ಪಿ.ಪಿ.ಯ ಬಂಗಾಳ ಘಟಕವು ಜಮೀನುದಾರಿ ಪದ್ಧತಿಯನ್ನು ಕಿತ್ತೊಗೆಯುವ ಮಾತನ್ನು ಆಡುತ್ತಿದ್ದ ಸಮಯದಕ್ಕೇ ಪ್ರಸಿದ್ಧ ಜಮೀನುದಾರರೊಬ್ಬರು ಅದರ ಅಧ್ಯಕ್ಷರಾಗಿದ್ದುದು ಮಾತ್ರವಲ್ಲದೆ ಅವರ ರಾಜೀನಾಮೆಯ ಬಳಿಕ (೧೯೨೭) ಇದರ ಕೃಷಿ ನೀತಿಯನ್ನು ನೇರವಾಗಿ ಅಲ್ಲಗಳೆಯುತ್ತಿದ್ದ ಇನ್ನೊಬ್ಬ ಪ್ರಸಿದ್ಧ ಭೂಮಾಲಿಕರು ಅದರ ಅಧ್ಯಕ್ಷರಾಗಿದ್ದರು.[3]

ಡಬ್ಲ್ಯು.ಪಿ.ಪಿ. ಇಂತಹ ವಿರೋಧಾಭಾಸಗಳು ಅದರ ತಾತ್ವಿಕ ದಿವಾಳಿತನವನ್ನು ತೋರುವುದರ ಜತೆಗೇ ಪರಸ್ಪರ ವಿರುದ್ಧವಾಗಿದ್ದ ವರ್ಗ ಹಿತಾಸಕ್ತಿಗಳ ಅದರ ಕಾರ್ಯಕ್ರಮಗಳ ಮೇಲೆ ಬೀರುತ್ತಿದ್ದ ಒತ್ತಡವನ್ನು ತೋರಿಸುತ್ತವೆ. ತೆರಿಗೆಯ ಪ್ರಸ್ತಾಪವು ಮಧ್ಯಮ ವರ್ಗದ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಮೇಲ್ವರ್ಗದ ಬೆಂಬಲಿಗರನ್ನು ಗಾಬರಿಗೊಳಿಸಲಿಕ್ಕಷ್ಟೇ ಸೀಮಿತವಾಗಿತ್ತು.[4] ಈ ಎಲ್ಲಾ ಸಂಗತಿಗಳನ್ನು ನೋಡಿದರೆ ರೈತರ ಸಮಸ್ಯೆಯನ್ನು, ಗ್ರಾಮೀಣ ರೈತ ಸಮುದಾಯದಲ್ಲಿದ್ದ ಸಂಕೀರ್ಣ ವ್ಯವಸ್ಥೆಯನ್ನು ಅಥವಾ ತದ್ವಿರುದ್ಧವಾಗಿದ್ದ ವರ್ಗಲಕ್ಷಣಗಳನ್ನು ಡಬ್ಲ್ಯು.ಪಿ.ಪಿ.ಯ ನಾಯಕತ್ವ ಗಂಭೀರವಾಗಿ ಪರಿಗಣಿಸಲೇ ಇಲ್ಲವೆಂಬುದು ಸ್ಪಷ್ಟವಾಗುತ್ತದೆ. ಭೂಮಿಯ ಖಾಸಗಿ ಒಡೆತನ, ಭೂ ಸ್ವಾಮ್ಯ ಹಾಗೂ ಉಪಯೋಗ ಅಥವಾ ಪಕ್ಷದ ವರ್ಗಲಕ್ಷಣಗಳಂತಹ ವಿಷಯಗಳು ಮುಖ್ಯವಾಗದೆ ೧೯೩೦ರ ದಶಕದ ಕಾರ್ಮಿಕರ ರಾಜಕೀಯ ಪ್ರೌಢತೆಯೇ ಪಕ್ಷದ ನೀತಿಯನ್ನು ನಿರ್ಧರಿಸಿತು ಎಂದೇ ಹೇಳಬೇಕು.

ಪಕ್ಷದ ಈ ದೌರ್ಬಲ್ಯಕ್ಕೆ ಯಾರನ್ನಾದರೂ ದೂರುವುದಕ್ಕಿಂತ ಕಾರ್ಮಿಕರ ರೈತರ ಚಳವಳಿಗಳು ಹುಟ್ಟಿ ಬೆಳೆದು ಕೊನೆಗೆ ಸ್ಥಗಿತಗೊಂಡ ಚಾರಿತ್ರಿಕ ಸನ್ನಿವೇಶಗಳಲ್ಲೇ ಅದರ ಕಾರಣಗಳನ್ನು ಹುಡುಕುವುದು ಉತ್ತಮ. ತರ್ಕಕ್ಕಿಂತ ಸಾಮಾಜಿಕ ಒತ್ತಡಗಳು ಯಾವತ್ತೂ ಮುಖ್ಯವಾದುದರಿಂದ ಸಿ.ಪಿ.ಐ ಮತ್ತು ಡಬ್ಲ್ಯು.ಪಿ.ಪಿ.ಗಳು ತಮ್ಮ ರಾಜಕೀಯ ಅಸ್ತಿತ್ವದ ಉಳಿವಿಗಾಗಿ ಕಾರ್ಯಕ್ರಮಗಳಲ್ಲಿ ಅನಿವಾರ್ಯವಾಗಿ ರಾಜಿಮಾಡಿಕೊಳ್ಳಬೇಕಾಯಿತು.

ಡಬ್ಲ್ಯು.ಪಿ.ಪಿ.ಯ ವಿರೋಧಾಭಾಸಗಳು ಕಮಿಂಟರ್ನ್‌ನ ಗಮನಕ್ಕೆ ಬಂದಿದ್ದರೂ ಅದು ಕಾಂಗ್ರೆಸ್ಸಿನ ಒಳಗಿದ್ದ ಅನೇಕ ಸಣ್ಣಪುಟ್ಟ ಗುಂಪುಗಳಿಗೆ ತಮ್ಮ ಪ್ರತಿಗಾಮಿ ಸ್ವರೂಪವನ್ನು ಮನದಟ್ಟು ಮಾಡಿಕೊಟ್ಟು. ಅವರನ್ನು ತಮ್ಮೆಡೆಗೆ ಸೆಳೆಯುವಂತೆ ಸಿ.ಪಿ.ಐ. ನಾಯಕರಿಗೆ ಆದೇಶಿಸಿತು. ಹೀಗೆ ೧೯೨೯ರ ಸುಮಾರಿಗೆ ಸಿ.ಪಿ.ಐ. ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷದೊಳಗಿದ್ದೇ ಅದರ ನಿಷ್ಠುರ ವಿಮರ್ಶಕತೆಂಬಂತೆ ವರ್ತಿಸತೊಡಗಿದರು.[5] ೧೯೨೯ರಲ್ಲಿ ತೆಗೆದುಕೊಂಡ ಈ ನಿಲುವು ‘ಯುನೈಟೆಡ್‌ಫ್ರಂಟ್‌’ನ ರಚನೆಯ ತಂತ್ರದೊಂದಿಗೆ ಒಂದು ಹಂತವನ್ನು ತಲುಪಿತು.

೧೯೨೯-೩೫ರ ಮಧ್ಯೆ ಕಮ್ಯುನಿಸ್ಟ್‌ಪಕ್ಷದ ಸದಸ್ಯರ ಸಂಖ್ಯೆ ಗಣನೀಯವಾಗಿ ಕುಸಿಯಿತು. ಕಾರ್ಯಕ್ರಮಗಳ ಬಗೆಗಿನ ಭಿನ್ನ ನಿಲುವಿಗಾಗಿ ರಾಯ್ ಅವರು ಕಮಿಂಟರ್ನ್‌ನಿಂದ ಕಾರ್ಯಕ್ರಮಗಳ ಬಗೆಗಿನ ಭಿನ್ನ ನಿಲುವಿಗಾಗಿ ರಾಯ್ ಅವರು ಕಮಿಂಟರ್ನ್‌ನಿಂದ ಉಚ್ಛಾಟಿಸಲ್ಪಟ್ಟರು. ಸಿ.ಪಿ.ಐ. ನಾಯಕರನೇಕರು ಮೀರತ್‌ ಸೆರೆಮನೆಯಲ್ಲಿ ಮಂಕುಕವಿದಂತೆ ನಿಸ್ತೇಜರಾಗಿದ್ದರು. ಚಳವಳಿಯನ್ನು ಮುನ್ನಡೆಸುವವರು ಯಾರೂ ಇರಲಿಲ್ಲ. ಹೊಸ ನಾಯಕತ್ವವು ಬೆಳೆದು ಬರಬಹುದಾಗಿತ್ತಾದರೂ ಆಗಿನ ರಾಜಕೀಯ ಸನ್ನಿವೇಶವು ಗಾಂಧಿ ಹಾಗೂ ಕಾಂಗ್ರೆಸಿನ ಪ್ರಭಾವಕ್ಕೆ ಸಂಪೂರ್ಣವಾಗಿ ಒಳಪಟ್ಟಿದ್ದರಿಂದ ಇದೂ ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನಲ್ಲಿದ್ದೂ ಎಡಪಂಥೀಯ ಒಲವುಗಳಿದ್ದ ನೆಹರೂ ಅಂತಹವರಿಗೆ ಮೀರತ್ ಸೆರೆಮನೆಯಲ್ಲಿದ್ದವರ ಬಗ್ಗೆ ಅನುಕಂಪವಿತ್ತಾದರೂ ಕಾಂಗ್ರೆಸ್‌ನಾಯಕರು ಸಿ.ಪಿ.ಐ. ಮುಖಂಡರ ಬಂಧನದ ಬಗ್ಗೆ ಒಂದು ರೀತಿಯ ತೃಪ್ತಿಯನ್ನೇ ಹೊಂದಿದ್ದರೆನ್ನಬೇಕು. ಕೈಗಾರಿಕಾ ರಂಗವು ಸ್ಪರ್ಧೆಯೇ ಇಲ್ಲದ ಮುಕ್ತವಾದದೇ ಇದಕ್ಕೆ ಕಾರಣವಾಗಿತ್ತು. ಜತೆಗೆ ೧೯೩೦-೩೩ರ ನಡುವೆ ಕಾಂಗ್ರೆಸಿಗೆ ಕಾರ್ಮಿಕರ ಸಂಘಟನೆಯನ್ನು ಬೆಳೆಸಲು, ಕಮ್ಯುನಿಸ್ಟ್ ಪ್ರಭಾವವನ್ನು ತನ್ನೆಡೆಗೆ ಸೆಳೆದುಕೊಳ್ಳಲು ಒಳ್ಳೆಯ ಅವಕಾಶ ಸಿಕ್ಕಿತು ಎನ್ನುವುದೂ ಇನ್ನೊಂದು ಕಾರಣವಾಗಿತ್ತು.[6] ಸಂಪೂರ್ಣವಾಗಿ ಅಲ್ಲದಿದ್ದರೂ ಹೆಚ್ಚು ಕಡಿಮೆ ಡಬ್ಲ್ಯು.ಪಿ.ಪಿ. ತನ್ನೆಲ್ಲ ಪ್ರಭಾವವನ್ನೂ, ಸಂಘಟನಾ ಬಲವನ್ನೂ ಗ್ರಾಮಾಂತರ ಪ್ರದೇಶಗಳಲ್ಲಿ ಕಳೆದುಕೊಳ್ಳತೊಡಗಿತು. ಆದರೆ ಗ್ರಾಮೀಣ ಜನಸಮುದಾಯ ತನ್ನ ವರ್ಗ ‌ಪ್ರಜ್ಞೆಯನ್ನೇ ಕಳೆದುಕೊಂಡಿತು ಎಂದೇನೂ ಇದರರ್ಥವಲ್ಲ. ೧೯೩೧ರ ಸುಮಾರಿಗೆ ಸಿ.ಪಿ.ಐ. ಕಾರ್ಯಕರ್ತರು ಕೈಗಾರಿಕಾ ಕಾರ್ಮಿಕರ ಸಹಯೋಗವಿಲ್ಲದೆ ಕೇವಲ ರೈತರ ಬಲದಿಂದಲೇ ಚಳವಳಿಯನ್ನು ರೂಪಿಸುವ ಪ್ರಯತ್ನವನ್ನು ಕೈಗೊಂಡರು.[7] ಆದರೆ ೧೯೨೯-೩೩ರ ರಾಜಕೀಯ ಸನ್ನಿವೇಶವು ಒಡ್ಡುತ್ತಿದ್ದ ಪ್ರತಿರೋಧದಿಂದಾಗಿ ಇವರಿಗೆ ಹೆಚ್ಚಿನದೇನನ್ನೂ ಸಾಧಿಸಲಾಗಲಿಲ್ಲ.

‘ಯುನೈಟೆಡ್ ಫ್ರಂಟ್,’ ‘ಕಿಸಾನ್ ಸಭಾ’ಗಳ ಬೆಳವಣಿಗೆ ೧೯೩೫-೪೭

ಸಿ.ಪಿ.ಐ. ಹಾಗೂ ಡಬ್ಲ್ಯು.ಪಿ.ಪಿ.ಗಳು ತಮ್ಮ ಮೊದಲ ದಶಕದಲ್ಲಿ ಕಮಿಂಟರ್ನ್‌ ಹಾಕಿದ ಗೆರೆಯನ್ನು ಎಂದೂ ದಾಟುತ್ತಿರಲಿಲ್ಲ. ಕಮಿಂಟರ್ನ್‌ಗೆ ಹೇಗಿದ್ದರೂ ರಷ್ಯಾದ ವಿದೇಶಾಂಗ ವ್ಯವಹಾರ ನೀತಿಯ ಹಾಗೂ ಅದರ ಹಿತಾಸಕ್ತಿಯ ಮಿತಿಯನ್ನು ಮೀರಿಹೋಗುವುದು ಸಾಧ್ಯವಿರಲಿಲ್ಲ. ಜರ್ಮನಿಯ ನಾಜಿಗಳ ಬೆಳವಣಿಗೆ, ಜಪಾನಿನ ಮೂಲಭೂತವಾದಿಗಳ ಬೆದರಿಕೆಗಳು ರಷ್ಯಾದ ಮೇಲೆ ಬೀರಿದ ಒತ್ತಡದಿಂದಾಗಿ ಅದು ವಸಾಹತುಶಾಹಿಯ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಲ್ಲಿ ನಡೆಯುತ್ತಿದ್ದ ಎಡಪಂಥಿಯ ಚಟುವಟಿಕೆಗಳ ಕುರಿತಾದ ತನ್ನ ಧೋರಣೆಯನ್ನು ಬದಲಾಯಿಸಬೇಕಾಯಿತು. ೧೯೨೮-೩೩ರ ಅವಧಿಯಲ್ಲಿ ಸ್ಟಾಲಿನನ ಬಂಡವಾಳಶಾಹಿ ವಿರೋಧಿ ನೀತಿಯನ್ನು ಅಂಗೀಕರಿಸಿದ ಕಮಿಂಟರ್ನ್‌ ನಿರ್ದೇಶನದಿಂದಾಗಿ ಸಿ.ಪಿ.ಐ. ರಾಜಕೀಯವಾಗಿ ಒಂಟಿಯಾಗುವುದರ ಜತೆಗೆ ಸರಕಾರದ ದಮನಕ್ಕೂ (ಮೀರತ್‌ಜೈಲ್ ಪ್ರಕರಣ) ಒಳಗಾಗಬೇಕಾಯಿತು. ಅಂತಾರಾಷ್ಟ್ರೀಯ ರಾಜಕೀಯ ಒತ್ತಡಗಳ ಅಪಾಯವನ್ನೆದುರಿಸುತ್ತಿದ್ದ ರಷ್ಯಾ ಹೊಸ ಯುಕ್ತಿಯನ್ನು ಹುಡುಕಬೇಕಾಯಿತು. ೧೯೩೨ ಆಗಸ್ಟ್‌ನಲ್ಲಿ ಕಮಿಂಟರ್ನ್‌ ಭಾರತದ ಎಡಪಕ್ಷಕ್ಕೆ ಹೀಗೆಂದು ಸೂಚಿಸಿತು. ‘ಪಕ್ಷವನ್ನು ರಾಜಕೀಯವಾಗಿ, ಸಂಘಟನಾತ್ಮಕವಾಗಿ ಬಲಗೊಳಿಸಲು, ಮುಷ್ಕರಗಳನ್ನು ಸಂಘಟಿಸಲು ಕರನಿರಾಕರಣೆಯ ರೈತ ಚಳವಳಿಯನ್ನು ಸಂಪೂರ್ಣವಾಗಿ ಬೆಂಬಲಿಸಬೇಕು. ರೈತ ಚಳವಳಿಗೆ ಸಂಬಂಧಿಸಿದ ಗುರಿಗಳನ್ನು ಘೋಷಣೆಗಳನ್ನು ಪ್ರಚಾರ ಪಡಿಸಬೇಕು.’

ಎಡಪಕ್ಷಗಳು ಕಾಂಗ್ರೆಸಿನ ತನ್ನ ಬದಲಾದ ಹೊಸ ನೀತಿಯಿಂದಾಗಿ ಭಾರತದ ಒಳಗೂ ಹೊರಗೂ ಇದ್ದ ಎಡಪಂಥೀಯ ಒಲವುಳ್ಳ ಕಾರ್ಮಿಕರನ್ನು, ರೈತರನ್ನು ಹಾಗೂ ಮಾಧ್ಯಮ ವರ್ಗದವರನ್ನು ಸಾಮ್ರಾಜ್ಯಶಾಹಿ ವಿರೋಧಿ ನೀತಿಯ ವಿಶಾಲ ತಳಹದಿಯಲ್ಲಿ ಸಂಘಟಿಸುತ್ತದೆಂದು ಕಮಿಂಟರ್ನ್‌ನ ಏಳನೆ ಮಹಾಧಿವೇಶನವು ನಿರೀಕ್ಷಿಸಿತು. ಈ ಹೊಸ ಸಂಘಟನೆಯೇ ‘ಯುನೈಟೆಡ್‌ ಫ್ರಂಟ್‌.’ ಇದು ಕಾಂಗ್ರೆಸಿನಲ್ಲಿದ್ದ ಸುಧಾರಣಾವಾದಿಗಳ ಜತೆ ಕೆಲಸಮಾಡುವ ಬಯಕೆಯನ್ನು ವ್ಯಕ್ತಪಡಿಸಿತು. ರೈತ ಸಮಸ್ಯೆಯ ಬಗ್ಗೆ ಕೊಟ್ಟ ಒತ್ತು ಮತ್ತು ಕಾಂಗ್ರೆಸ್‌ ಬಗ್ಗೆ ಬದಲಾದ ಧೋರಣೆ ಇವೆರಡೂ ಹೊಸ ನೀತಿಯ ಮುಖ್ಯ ಆಶಯಗಳಾಗಿದ್ದವು. ಈಗ ಕಮಿಂಟರ್ನ್‌ನ ದೃಷ್ಟಿಯಲ್ಲಿ ಕಾಂಗ್ರೆಸ್ ಸುಧಾರಣಾವಾದಿ ಬೂರ್ಜ್ವಾ ಪಕ್ಷವಾಗಿರದೆ ಭಾರತದ ಪ್ರಜೆಗಳ ಕ್ರಾಂತಿಕಾರಿ ಪಕ್ಷವಾಯಿತು. ಗಾಂಧಿ, ನೆಹರೂ ಮೊದಲಾದವರೂ ಪ್ರತಿಗಾಮಿಗಳೆಂದು ಗುರುತಿಸಲ್ಪಡದೆ ಚಳವಳಿಯಲ್ಲಿ ಮೂಡಿ ಬಂದ ಜನಪ್ರಿಯನಾಯಕರೆಂಬ ಗೌರವಕ್ಕೆ ಪಾತ್ರರಾದರು.[8]

೧೯೩೪ರಲ್ಲಿ ಸಮಾಜವಾದಿಗಳು ಮತ್ತು ಎಡಪಂಥೀಯ ಬಲವುಳ್ಳ ಕಾಂಗ್ರೆಸಿಗರು ಸೇರಿ ಕಾಂಗ್ರೆಸ್ ಸೋಶಲಿಸ್ಟ್ ಪಾರ್ಟಿ (ಸಿ.ಎಸ್.ಪಿ) ಯನ್ನು ಸ್ಥಾಪಿಸಿದರು. ಬಿಹಾರ ಮತ್ತು ಉತ್ತರ ಪ್ರದೇಶಗಳೂ ಸೇರಿದಂತೆ ಉತ್ತರ ಭಾರತದ ಬಹುಭಾಗಗಳಲ್ಲಿ ಇದರ ಬೆಂಬಲಿಗರಿದ್ದರು. ಇಲ್ಲೆಲ್ಲ ಸಿ.ಎಸ್.ಪಿ.ಯ ನಾಯಕರು ಹೊಸ ಕಿಸಾನ್ ಸಭಾಗಳನ್ನು ಸಂಘಟಿಸಿ ಅಥಚಾ ಈಗಾಗಲೇ ಕಾಂಗ್ರೆಸಿನ ಕೆಳಗಿದ್ದ ಕಿಸಾನ್ ಸಭಾಗಳನ್ನು ಪುನಶ್ಚೇತನಗೊಳಿಸಿ ರೈತರೊಡನೆ ಆತ್ಮೀಯ ಸಂಬಂಧವನ್ನು ಸ್ಥಾಪಿಸಿದರು. ಬಲಪಂಥೀಯ ಕಾಂಗ್ರೆಸಿಗರೊಡನೆ ಇವರಿಗಿದ್ದ ಭಿನ್ನಾಭಿಪ್ರಾಯ ಕೇವಲ ಮೂಲಭೂತ ಆರ್ಥಿಕ ಕಾರ್ಯಕ್ರಮಗಳಿಗೆ ಸೀಮಿತವಾಯಿತು ಸಿ.ಎಸ್.ಪಿ. ನಾಯಕರು ತಾತ್ವಿಕವಾಗಿ ಮಾರ್ಕ್ಸ್ ವಾದಿಗಳಾಗಿದ್ದರೂ ಗಾಂಧೀವಾದದಿಂದಲೂ ಅವರು ಅಷ್ಟೇ ಪ್ರಭಾವಿತರಾಗಿದ್ದರು.[9] ಹೀಗಾಗಿ ಮೊದಮೊದಲು ಕಮ್ಯುನಿಸ್ಟರು ಸಿ.ಎಸ್.ಪಿ. ನಾಯಕರನ್ನು ಪ್ರತಿಗಾಮಿಗಳು, ಬೂರ್ಜ್ವಾಗಳ ಮುಂದುವರಿದ ರೂಪ ಎಂದು ಟೀಕಿಸಿದರೂ ಕೊನೆಗೆ ಪಿ.ಎಸ್.ಪಿಯನ್ನು ಮಾರ್ಕ್ಸಿಸ್ಟ್‌ಪಕ್ಷದ ಸೋದರ ಸಂಸ್ಥೆಯೆಂದೇ ಪರಿಗಣಿಸಿದರು.[10]

ರೈತ ಸಮಸ್ಯೆಗಳ ದೃಷ್ಟಿಯಿಂದ ನೋಡಿದಾಗ ಸಿ.ಎಸ್.ಪಿ ಯ ನೀತಿ ಹಾಗೂ ಕಾರ್ಯಕ್ರಮಗಳು ಖಂಡಿತವಾಗಿಯೂ ಕಾಂಗ್ರೆಸಿಗಿಂತ ಹೆಚ್ಚು ಮೂಲಭೂತವಾಗಿದ್ದವು. ಸಿ.ಪಿ.ಐ., ಡಬ್ಲ್ಯು.ಪಿ.ಪಿ.ಗಳಿಗಿಂತಲು ರೈತ ಸಮಸ್ಯೆಗಳನ್ನು ಹೆಚ್ಚು ಸ್ಪಷ್ಟವಾಗಿಯೂ ಆತ್ಮೀಯವಾಗಿಯೂ ತಿಳಿದುಕೊಳ್ಳಲು ಸಿ.ಎಸ್.ಪಿ ಗೆ ಸಾಧ್ಯವಾಯಿತು. ಜಮೀನುದಾರಿ ಪದ್ಧತಿಯನ್ನು ಕೊನೆಗಾಣಿಸುವುದು, ಗೇಣಿದಾರನಿಗೆ ಭೂಮಿಯ ಹಕ್ಕನ್ನು ಕೊಡಿಸುವುದು, ಸಾಲವನ್ನು ಮನ್ನಾ ಮಾಡಿಸುವುದು, ಕೃಷಿ ಕೆಲಸಕ್ಕೆ ಯೋಗ್ಯ ಸಂಬಳ ಕೊಡಿಸುವುದು ಮುಂತಾದ ವಿಷಯಗಳಲ್ಲಿ ಸಿ.ಎಸ್.ಪಿ ಹೆಚ್ಚು ಸ್ಪಷ್ಟವಾದ ನಿಲುವನ್ನು ತಳೆದಿತ್ತು.[11] ಸಿ.ಎಸ್.ಪಿ. ಹುಟ್ಟಿದ ಗಳಿಗೆಯಿಂದಲೇ ಸಿ.ಪಿ.ಐ. ಜತೆಗೆ ಭಿನ್ನಾಭಿಪ್ರಾಯವನ್ನು ಕಟ್ಟಿಕೊಂಡಿತು. ಸಿ.ಎಸ್.ಪಿ. ರೈತ ಸಮಸ್ಯೆಗಳನ್ನು ಕೇವಲ ಆರ್ಥಿಕ ಮುಖದಿಂದ ಮಾತ್ರವೇ ನೋಡಿದರೆ ಸಿ.ಪಿ.ಐ. ರಾಜಕೀಯ ಮುಖದಿಂದಲೂ ನೋಡುತ್ತಿತ್ತು. ಹೇಗಿದ್ದರೂ ಸಿ.ಎಸ್.ಪಿನ ನಿಕಟ ಸಂಪರ್ಕದಿಂದಾಗಿ ಸಿ.ಪಿ.ಐ.ಯ ಯುನೈಟೆಡ್‌ ಫ್ರಂಟ್‌ಗೆ ಮತ್ತು ಅದರ ರೈತ ಸಂಘಟನೆಗೆ ತುಂಬಾ ಲಾಭವಾಯಿತೆಂದೇ ಹೇಳಬೇಕು.

ಸಿ.ಪಿ.ಐ.ನ ಈ ಹೊಂದಾಣಿಕೆಯ ವರ್ತನೆಯಿಂದಾಗಿ ೧೯೩೫ರಲ್ಲಿ ಕಾಂಗ್ರೆಸ್‌ ಮತ್ತು ಸಿ.ಎಸ್.ಪಿ.ಗಳೆರಡೂ ಕಮ್ಯುನಿಸ್ಟರಿಗೆ ತಮ್ಮ ಬಾಗಿಲನ್ನು ತೆರೆದಿಟ್ಟವು. ಪರಿಣಾಮವಾಗಿ ಅನೇಕ ಕಮ್ಯುನಿಸ್ಟರು ಕಾಂಗ್ರೆಸ್ ಅಥವಾ ಸಿ.ಎಸ್.ಪಿ.ಗೆ ಸೇರಿದ್ದು ಮಾತ್ರವಲ್ಲದೆ ಕೆಲವರು ಪಕ್ಷದಲ್ಲಿ ಪ್ರಾಂತ ಮಟ್ಟದ, ರಾಷ್ಟ್ರ ಮಟ್ಟದ ಸ್ಥಾನಮಾನಗಳನ್ನೂ ಪಡೆದರು. ಈ ರೀತಿ ಹೊಂದಾಣಿಕೆ ಮಾಡಿಕೊಳ್ಳುವುದರ ಹಿಂದೆ ಆ ಎರಡೂ ಪಕ್ಷಗಳಿಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿದ್ದ ಸಂಘಟನೆಯನ್ನು ಉಪಯೋಗಿಸಿಕೊಳ್ಳುವ ಉದ್ದೇಶವಿತ್ತು. ಕಾರ್ಯಕ್ರಮಗಳ ಕೊರತೆಯಿಂದ ನರಳುತ್ತಿದ್ದ ಆ ಸಮಯದಲ್ಲಿ ಕಮ್ಯುನಿಸ್ಟರಿಗೆ ಕಾಂಗ್ರೆಸ್ ಮತ್ತು ಸಿ.ಎಸ್.ಪಿ.ಯ ಕಿಸಾನ್ ಸಭಾದಂತಹ ಸಂಘಟನೆಗಳನ್ನು ಉಪಯೋಗಿಸಿಕೊಳ್ಳುವುದಕ್ಕಿಂತ ಬೇರೆ ಮಾರ್ಗವಿರಲಿಲ್ಲ. ಹೀಗೆ ಒಂದು ಸಲ ಕಾಂಗ್ರೆಸಿನೊಳಗೆ ಪ್ರವೇಶಿಸಿದ ಕಮ್ಯುನಿಸ್ಟರು ಕೆಳಹಂತದಿಂದಲೇ ತಮ್ಮನ್ನು ತೊಡಗಿಸಿಕೊಳ್ಳಲು ಪ್ರಾರಂಭಿಸಿದರು. ಕಾಂಗ್ರೆಸ್, ಸಿ.ಎಸ್.ಪಿಯ. ಕಿಸಾನ್‌ಸಭಾಗಳ ನಾಯಕರನ್ನು ಕ್ರಮೇಣ ಪ್ರತ್ಯೇಕಿಸುವುದೇ ಇದರ ಉದ್ದೇಶವಾಗಿತ್ತು.[12] ಈ  ಕ್ರಮದಿಂದಾಗಿ ಅವರಿಗೆ ತುಂಬಾ ಲಾಭವಾಯಿತು. ಸಿ.ಪಿ.ಐ. ಕಾರ್ಯಕತ್ತರು ತಮ್ಮದೇ ರೈತ ಸಂಘಟನೆಯನ್ನು ಆಲ್ ಇಂಡಿಯಾ ಕಿಸಾನ್ ಸಭಾವನ್ನು (ಎ.ಐ.ಕೆ.ಎಸ್.) ಕಟ್ಟಲು ಈ ಅವಕಾಶ ಉಪಯೋಗಿಸಿಕೊಂಡರು. ಇದರಿಂದಾಗಿ ಚದುರಿಹೋಗಿದ್ದ ರಾಜಕೀಯ ಶಕ್ತಿಗಳೆಲ್ಲ ಕ್ರೋಢಿಕರಣಗೊಂಡಂತಾಗಿ ಮೊತ್ತ ಮೊದಲ ರಾಷ್ಟ್ರ ಮಟ್ಟದ ರೈತ ಸಂಘಟನೆ ಎ.ಐ.ಕೆ.ಎಸ್. ರೂಪುಗೊಂಡಿತು. ಸಿ.ಎಸ್.ಪಿ.ಸಿ.ಪಿ.ಐ, ಎಡಪಂಥೀಯ ಕಾಂಗ್ರೆಸ್ ಅಲ್ಲದೆ ಈಗಾಗಲೇ ಪ್ರಾಂತ ಮಟ್ಟದ ರೈತ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವ (ಪ್ರಮುಖವಾಗಿ ಬಿಹಾರ ಮತ್ತು ಆಂಧ್ರಗಳಲ್ಲಿ) ಸಣ್ಣ ಸಣ್ಣ ಗುಂಪುಗಳು ಒಟ್ಟು ಸೇರಿ ರಾಷ್ಟ್ರೀಯ ರೈತ ಸಂಘಟನೆಯೊಂದು ತಲೆಯೆತ್ತಿತ್ತು.[13] ತಾತ್ವಿಕ ಒಲವುಗಳಲ್ಲಿ, ವರ್ಗಕಲ್ಪನೆಯಲ್ಲಿ ಈ ಪಕ್ಷಗಳಿಗಿದ್ದ ಸಮಾನಾಂಶವು ಬಹಳ ಕಡಿಮೆ. ಆದರೆ ಗಾಂಧಿ, ನೆಹರೂ ಕಾಂಗ್ರೆಸ್ ಸ್ಪಷ್ಟವಾದ ವ್ಯವಸಾಯಿ ಕಾರ್ಯಕ್ರಮಗಳನ್ನು ಭಾರತದ ಸ್ವಾತಂತ್ರ್ಯ ಆಂದೋಲನದ ಚೌಕಟ್ಟಿನೊಳಗೆ ತರುವಲ್ಲಿ ಸೋತ ಬಗ್ಗೆ ಈ ಎಲ್ಲರಿಗೂ ಸಮಾನವಾಗಿಯೇ ಭ್ರಮನಿರಸನವಾಗಿತ್ತು.

ಎ.ಐ.ಕೆ.ಎಸ್.ನ್ನು ರೂಪಿಸಿದ ಪ್ರಧಾನ ರೈತ ಸಂಘಟನೆಗಳಲ್ಲಿ ಬಿಜಾರ್ ಪ್ರೋವಿನ್ಸಿಯಲ್ ಕಿಸಾನ್ ಸಭಾ (ಬಿ.ಪಿ.ಕೆ.ಎಸ್.) ಪ್ರಮುಖವಾಗಿತ್ತು. ಇದು ಬಿಹಾರವು ಆರ್ಥಿಕವಾಗಿ ಹಿನ್ನಡೆಯುತ್ತಿದ್ದ ಸಮಯದಲ್ಲೇ ಅಂದರೆ ೧೯೨೮-೨೯ ರಲ್ಲೇ ಕೆಲಸ ಮಾಡಲು ಪ್ರಾರಂಭಿಸಿತ್ತು. ಆದರೆ ಈ ವೇಳೆಗಾಗಲೇ ರಾಷ್ಟ್ರ ಮಟ್ಟದ ನಾಗರಿಕ ಅಸಹಕಾರ ಚಳವಳಿಗೆ ರಾಜಕೀಯ ಸನ್ನಿವೇಶ ಪಕ್ವಗೊಳ್ಳುತ್ತಿತ್ತು. ಬಿ.ಪಿ.ಕೆ.ಎಸ್.ನ್ನು ಕಟ್ಟಿದ ಪ್ರಮುಖರಲ್ಲಿ ಸ್ವಾಮಿ ಸಹಜಾನಂದ ಸರಸ್ವತಿಯವರು ಭಾರತ ಈ ಶತಮಾನದ ಪೂರ್ವಾರ್ಧದಲ್ಲಿ ಕಂಡ ರೈತ ನಾಯಕರಲ್ಲೇ ಶ್ರೇಷ್ಠರಾದವರು. ಬಾಲ್ಯದಿಂದಲೇ ಸನ್ಯಾಸಿಯಾಗಿದ್ದ ಇವರು ಗಾಂಧೀಜಿಯ ಅಸಹಕಾರದ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಸಮರಕ್ಕೆ ಕಾಲಿಟ್ಟವರು. ಜಮೀನುದಾರಿ ವ್ಯವಸ್ಥೆಯಲ್ಲಿದ್ದ ರೈತರ ಬವಣೆಗಳಲ್ಲಿ ಆಸಕ್ತಿ ತಾಳಿದರೂ ಮೊದಮೊದಲು ಸುಧಾರಣಾವಾದೀ ರಾಜಕೀಯದೊಳಗೆ ಅವುಗಳನ್ನು ಪರಿಹರಿಸಲು ಪ್ರಯ್ನಿಸಿದರು.[14] ೨೦ರ ದಶಕದುದ್ದಕ್ಕೂ ಅವರು ಗಾಂಧೀವಾದಿಯಾಗಿಯೇ ಉಳಿದರು.

೧೯೨೯-೩೩ ಅವಧಿಯಲ್ಲಿದ್ದ ರೈತರ ಅಸಹನೀಯ ಪರಿಸ್ಥಿತಿಯು ಬಿಹಾರದಲ್ಲಿ ಒಂದು ರಾಜಕೀಯ ಆಂದೋಲನವನ್ನು ಹುಟ್ಟು ಹಾಕುವ ಅವಕಾಶವನ್ನು ಒದಗಿಸಿತ್ತು. ಆದರೆ ಪ್ರಾಂತ ಕಾಂಗ್ರೆಸ್ಸಿನ ಮುಖಂಡರು ಒಂದು ರೀತಿಯ ಸಂತೃಪ್ತಿಯಿಂದಿದ್ದು ಈಗಾಗಲೇ ನಡೆಯುತ್ತಿದ್ದ ನಾಗರಿಕ ಅಸಹಕಾರ ಆಂದೋಲನದ ನಡುವೆ ಕರ ನಿರಾಕರಣೆಯ ಚಳವಳಿಯನ್ನು ಪ್ರಾರಂಭಿಸಲು ಹಿಂದೇಟು ಹಾಕುತ್ತಿದ್ದರು. ಅದೇ ಸಮಯದಲ್ಲಿ ಅವರು ಉತ್ತರ ಪ್ರದೇಶದ ನೆಹರೂ ನಾಯಕತ್ವ ಹೇಳಿದ ಗೇಣಿ ರಿಯಾಯತಿ ವಿಷಯದಲ್ಲಿ ನಿರಾಸಕ್ತರಾಗಿದ್ದರು.[15] ವಾಸ್ತವವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿದ್ದ ವ್ಯವಸಾಯಿ ಸಮಾಜ ರಚನೆ ಅಥವಾ ವರ್ಗ ಸಂಬಂಧಗಳು ಹೆಚ್ಚೂ ಕಡಿಮೆ ಒಂದೇ ತೆರನಾಗಿದ್ದವು. ಆದರೆ ಬಿಹಾರ ಕಾಂಗ್ರೆಸ್ ಜಮೀನುದಾರ ಮತ್ತು ಒಕ್ಕಲುಗಳ ನಡುವೆ ಸಂಧಾನ ಏರ್ಪಡಿಸುವ, ಸಂಬಂಧ ಸುಧಾರಿಸುವ ಪ್ರಯತ್ನ ಮಾಡುತ್ತಿತ್ತು.[16] ಅದೇ ಕಾಲದಲ್ಲಿ ಇನ್ನೊಂದು ಕಡೆ ಸ್ವಾಮಿ ಸಹಜಾನಂದ ಮತ್ತು ಅವರ ಬಿ.ಪಿ.ಕೆ.ಎಸ್. ಕಾಂಗ್ರೆಸಿನಿಂದ ಪ್ರತ್ಯೇಕವಾಗಿ ಜಮೀನುದಾರಿ ಪದ್ದತಿಯ ವಿರುದ್ಧ ಉಗ್ರ ಪ್ರತಿಭಟನೆ ಮಾಡುತ್ತಾ, ಸಂಧಾನ ಪ್ರಯತ್ನಗಳನ್ನು ವಿರೋಧಿಸುತ್ತ ಗೇಣಿದಾರರ ಭೂಸ್ವಾಮ್ಯ ಹಕ್ಕಿಗಾಗಿ ಹೋರಾಡುತ್ತಿತ್ತು. ೧೯೩೪ ರಲ್ಲಿ ಅನೇಕ ಸಮಾಜವಾದಿ ಕಾಂಗ್ರೆಸಿಗರು ಸಹಜಾನಂದರ ಜತೆಗೂಡಿದರು. ಬಿ.ಪಿ.ಕೆ.ಎಸ್. ಹೆಚ್ಚು ಹೆಚ್ಚು ಸ್ಥಿರತೆಯನ್ನು ಗಳಿಸುತ್ತ, ಅನೇಕ ಹಂತದಲ್ಲಿ ನಾಯಕತ್ವವನ್ನು ಬೆಳೆಸುತ್ತ, ತಾತ್ವಿಕ ಸಮರ್ಥನೆಯನ್ನು ಪಡೆಯುತ್ತ ಹೋಯಿತು.[17]

ಮಧ್ಯಮ ವರ್ಗದ ವಕೀಲರ ಕುಟುಂಬಗಳಿಂದ, ಪಾಶ್ವಿಮಾತ್ಯ ವಿದ್ಯಾಭ್ಯಾಸ ಪಡೆದ ಪ್ರಜ್ಞಾವಂತ ಹಿನ್ನೆಲೆಯಿಂದ ಬಂದವರೇ ಬಿ.ಪಿ.ಕೆ.ಎಸ್. ನಾಯಕತ್ವವನ್ನು ವಹಿಸಿದ್ದರು. ಇವರು ಸಣ್ಣ ಪ್ರಮಾಣದ ಭೂಮಿಯನ್ನು ಪಡೆದಿದ್ದು ರಾಜಕೀಯ ಮಹತ್ವಾಕಾಂಕ್ಷೆಯನ್ನು ಹೊಂದಿದವರಾಗಿದ್ದರು. ಜಯಪ್ರಕಾಶ ನಾರಾಯಣ[18] (ಕಾಂಗ್ರೆಸಿನ ಸಮಾಜವಾದಿ ನಾಯಕರಲ್ಲಿ ಪ್ರಮುಖರು)ರನ್ನೂ ಸೇರಿಸಿದಂತೆ ಕಿಸಾನ್ ಸಭಾದ ಹೆಚ್ಚಿನ ನಾಯಕರು ಸಣ್ಣ ಭೂಹಿಡುವಳಿದಾರರೂ ಸೇರಿದ್ದು ಕೆಲವರು ಮಾತ್ರ ರಜಪೂತ, ಬ್ರಾಹ್ಮಣ ಮತ್ತು ಕಾಯಸ್ಥ ಜಾತಿಗಳಿಗೆ ಸೇರಿದವರಾಗಿದ್ದರು. ಬಿ.ಪಿ.ಕೆ.ಎಸ್. ನಾಯಕತ್ವದ ಸಾಮಾಜಿಕ ಮೂಲಗಳನ್ನು ಗಮನಿಸಿದರೆ ಅವರ ಜಾತಿಯು ಬಿಹಾರದ ರೈತರನ್ನು ಸಂಘಟಿಸುವಲ್ಲಿ ಖಂಡಿತವಾಗಿಯೂ ಪ್ರಧಾನ ಶಕ್ತಿಯಾಗಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಏಕೆಂದರೆ ಇವರಲ್ಲಿ ಹೆಚ್ಚಿನವರು ಭೂಮಿಹಾರ್‌ಗಳು ಅಂದರೆ ಜಮೀನುದಾರರು. ಪ್ರತಿಯಾಗಿ ಪಕ್ಷದ ಬೆನ್ನೆಲುಬಾಗಿದ್ದ ಅಲ್ಲಿನ ರೈತರು ಕುರ್ಮಿ ಮತ್ತು ಕಿಯೋರಿ ಜಾತಿಗಳಿಗೆ ಸೇರಿದವರು. ಆದುದರಿಂದ ರೈತ ಸಂಘಟನೆಯಲ್ಲಿ ಜಾತಿಯ ಅಂಶವು ನಗಣ್ಯವೆಂದು ಹೇಳುವಂತಿಲ್ಲವಾದರೂ ಸ್ವಾಮಿಯ ನಾಯಕತ್ವದಲ್ಲಿ ಕಿಸಾನ್ ಸಭೆಯು ನಿಧಾನವಾಗಿ ವರ್ಗ ಲಕ್ಷಣಗಳನ್ನು ಪಡೆದುಕೊಳ್ಳುತ್ತಿತ್ತೆಂದು ಧಾರಾಳವಾಗಿ ಹೇಳಬಹುದು.[19]

ಬಿಹಾರದಲ್ಲಿ ಕಿಸಾನ್ ಸಭಾ ಕ್ರಮೇಣ ಸೈದ್ಧಾಂತಿಕವಾಗಿ ಬದಲಾಗುತ್ತಾ ಹೋಯಿತು. ಮೊದಮೊದಲು ಇದು ಹೆಚ್ಚಿದ ಗೇಣಿ, ಬಡ್ಡಿದರ, ಅಕ್ರಮ ವಸೂಲಿ ಮುಂತಾದ ರೈತ ಸಮಸ್ಯೆಗಳನ್ನು ಚರ್ಚಿಸುವ ಒಂದು ವೇದಿಕೆಯಷ್ಟೇ ಆಗಿತ್ತು. ಇದರ ನೇತಾರರಿಗೆ ‘ಕ್ರಾಂತಿ’ಯ ಬಗೆಗೆ ಯಾವ ಕಲ್ಪನೆಗಳೂ ಇದ್ದಿರಲಿಲ್ಲ. ಅಲ್ಲದೆ, ಸ್ವಾಮಿ ಬಿ.ಪಿ.ಕೆ.ಎಸ್. ಅನ್ನು ನಿಧಾನವಾಗಿ ಎಡಪಂಥೀಯತೆಯ ಕಡೆಗೆ ಒಯ್ಯುವಾಗಲೂ, ಅವರಿಗೆ ‘ಕ್ರಾಂತಿಕಾರಿ ಹೋರಾಟದ’ ಬಗೆಗೆ ಅಸ್ಪಷ್ಟ ಕಲ್ಪನೆಗಳಷ್ಟೇ ಇದ್ದುವು. ಸರಕಾರವನ್ನಾಗಲೀ, ಭೂಮಾಲೀಕರನ್ನಾಗಲೀ ಉಚ್ಛಾಟಿಸುವ ಕುರಿತು ಸಭಾ ಯಾವತ್ತೂ ಯೋಚಿಸಲೇ ಇಲ್ಲ, ಬದಲಿಗೆ ಅದು ಒಂದು ಬಗೆಯ ಹೊಂದಾಣಿಕೆ ಮನೋಭಾವದಿಂದ ಕೆಲಸ ಮಾಡುತ್ತಿತ್ತು.[20]ಆದರೆ, ಕಿಸಾನ್ ಸಭಾ ತನ್ನ ಗ್ರಾಮೀಣ ಚೌಕಟ್ಟನ್ನು ದಾಟಿ ಸಿ.ಎಸ್.ಪಿ. ಹಾಗೂ ನಂತರ ಸಿ.ಪಿ.ಐ. ಕಾರ್ಯಕರ್ತರ ಸಂಪರ್ಕಕ್ಕೆ ಬರತೊಡಗಿದಾಗ, ಸ್ವಾಮಿ ಸಹಜಾನಂದರಂತಹ ಇದರ ನೇತಾರರು ಹೆಚ್ಚು ಹೆಚ್ಚು ತೀವ್ರಗಾಮಿಗಳಾಗತೊಡಗಿದರು. ಮೂವತ್ತರ ದಶಕದ ಈ ಸ್ಥಿತ್ಯಂತರದ ಸಂದರ್ಭದಲ್ಲಿ ಬಿ.ಪಿ.ಕೆ.ಎಸ್. (ಮತ್ತು ಎ.ಐ.ಕೆ.ಎಸ್.) ಕ್ರಮಾಣ ಸೈದ್ಧಾಂತಿಕವಾಗಿ ಕಾಂಗ್ರೆಸ್‌ನಿಂದ ದೂರಸರಿದು ಸಿ.ಪಿ.ಐ. ಹಾಗೂ ಇದರ ಮಾರ್ಕ್ಸ್ ವಾದಿ-ಲೆನಿನ್‌ವಾದಿ ತತ್ವಗಳತ್ತ ವಾಲತೊಡಗಿತು.[21]

ಸೈದ್ಧಾಂತಿಕ ಪರಿವರ್ತನೆಯ ಈ ಅವಧಿಯಲ್ಲಿ ಬಿ.ಪಿ.ಕೆ.ಎಸ್. ರೈತರ ಕುರಿತ ತನ್ನ ನಿಲುವನ್ನು ಸತತವಾಗಿ ಪುನರ್‌ವಿಮರ್ಶಿಸುತ್ತಾ ಹೋದುದಲ್ಲದೆ, ವ್ಯವಸಾಯೀ ಸಮಸ್ಯೆಗಳಿಗೆ ಸಂಬಂಧಿಸಿದ ತನ್ನ ಆದ್ಯತೆಗಳನ್ನು ಬದಲಾಯಿಸಿತು. ೧೯೪೧ರಲ್ಲಿ ಸ್ವಾಮಿ ಜೈಲಿನಲ್ಲಿ ಕಮ್ಯುನಿಸ್ಟರ ಜೊತೆಗೆ ನಿಕಟವಾಗುವುದರೊಂದಿಗೆ ಈ ಬದಲಾವಣೆಗಳ ಮೊದಲ ಹಂತ ಕೊನೆಗೊಂಡಿತು. ಜೈಲಿನಿಂದ ಬಿಡುಗಡೆಯಾದ ಮೇಲೆ ಅವರು ತಮ್ಮ ನಿಲುವನ್ನು ಬದಲಾಯಿಸಿಕೊಂಡರು. ಉದಾಹರಣೆಗೆ, ೧೯೩೬ರಷ್ಟು ಹಿಂದೆಯೇ ಬಿ.ಪಿ.ಕೆ.ಎಸ್. ಜಮೀನ್ದಾರಿಯ ನಿರ್ಮೂಲನ ಪರವಾದ ನಿರ್ಣಯ ಅಂಗೀಕಾರ ಮಾಡಿತ್ತು. ಆಗ ಈ ನಿರ್ಣಯ ಅದರ ಸದಸ್ಯರಾದ ಅನೇಕ ಸಣ್ಣ ಭೂಮಾಲಕರನ್ನು ಗೊಂದಲಕ್ಕೀಡುಮಾಡಿತ್ತು. ಆದುದರಿಂದ ಸ್ವಾಮಿ ಸಹಜಾನಂದರು, ಬಿ.ಪಿ.ಕೆ.ಎಸ್. ದೃಷ್ಟಿಯಲ್ಲಿ ‘ಭೂಮಾಲೀಕ’ರೆಂದರೆ ವಿಶಾಲ ಎಸ್ಟೇಟುಗಳ ಮಾಲೀಕರು, ಊಳಿಗಮಾನ್ಯ ಮುಖ್ಯಸ್ಥರು ಹಾಗೂ ರಾಜರು ಮಾತ್ರ; ವಾಸ್ತವವಾಗಿ ಕೃಷಿ ಮಾಡಿ ಬದುಕುವ ಗೃಹಸ್ಥರಾಗಲಿ, ಸಣ್ಣ ಹಿಡುವಳಿದಾರರಾಗಲಿ, ಕಾರ್ಮಿಕರಾಗಲಿ ಅಲ್ಲ ಎಂಬ ವಿವರಣೆ ಕೊಡಬೇಕಾಯಿತು.[22] ರೈತರು ಹಾಗೂ ಭೂರಹಿತ ಕಾರ್ಮಿಕರ ನಡುವಿನ ವ್ಯತ್ಯಾಸ ವೇಗವಾಗಿ ಅಳಿಯುತ್ತಿದ್ದು, ಮಧ್ಯಮ ಅಥವಾ ಸ್ಥಿತಿವಂತ ರೈತರಿಗಿಂತ, ಹಳ್ಳಿಯ ಕಾರ್ಮಿಕರ ಸಮಸ್ಯೆಗಳನ್ನು ಅತಿ ಜರೂರಾಗಿ ಎದುರಿಸಬೇಕೆಂದು ೧೯೪೨ರ ನಂತರ ಸ್ವಾಮಿ ಸಹಜಾನಂದರು ತಿಳಿಯತೊಡಗಿದರು. ಶ್ರೀಮಂತ ರೈತರು (ಅದರಲ್ಲೂ ವಿಶೇಷವಾಗಿ ಕಬ್ಬು ಬೆಳೆಗಾರರು), ಕಿಸಾನ್‌ಸಭಾದ ಕಾರ್ಯಕ್ರಮಗಳ ಮಂಚೂಣಿಯಲ್ಲಿದ್ದುಕೊಂಡು ಅದರಿಂದ ಗರಿಷ್ಠ ಪ್ರಮಾಣದ ಲಾಭಗಿಟ್ಟಿಸಿಕೊಂಡದ್ದಲ್ಲದೆ ಸಭಾವನ್ನು ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಂಡರು ಎಂದು ಅವರು ಆಪಾದಿಸಿದರು.[23]ಬಿ.ಪಿ.ಕೆ.ಎಸ್. ಹಾಗೂ  ಎ.ಐ.ಕೆ.ಎಸ್.‌ನ ವರ್ಗ ತಳಹದಿ ಕೃಷಿ ಕಾರ್ಮಿಕರಿಂದ ರಚಿಸಲ್ಪಟ್ಟು ಉಳಿದೆಲ್ಲ ವ್ಯವಾಯೀ ವರ್ಗಗಳೂ ಸಭಾದಿಂದ ಹೊರಗುಳಿದಿರಬೇಕೆಂದು ಸ್ವಾಮಿ ಬಯಸಿದ್ದರು. ವ್ಯವಸಾಯೀ ರಚನೆಯಲ್ಲಿ ತೀವ್ರಗಾಮಿ ಬದಲಾವಣೆಯನ್ನು ತರಲು ಗಾಂಧೀಜಿಯವರ ಕಲ್ಪನೆಯ ‘ಅಹಿಂಸಾತ್ಮ ಪ್ರತಿಭಟನೆ’ ಅಸಮರ್ಥ ಆಯುಧ ಎಂಬುದನ್ನು ಅವರು ಕಂಡುಕೊಂಡರು.[24]

ಬಿ.ಪಿ.ಕೆ.ಎಸ್. ನಂತೆಯೇ ಎ.ಐ.ಕೆ.ಎಸ್.‌ನ ಇನ್ನಿತರ ಪ್ರಾಂತೀಯ ವಿಭಾಗಗಳು ಬಂಗಾಳ ಮತ್ತು ಆಂಧ್ರಗಳಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದವು. ಬಂಗಾಳದಲ್ಲಿ ೧೯೨೬-೨೮ರ ಮಧ್ಯೆ ಡಬ್ಲ್ಯು.ಪಿ.ಪಿ. ಚಟುವಟಿಕೆಗಳು ತುಂಬಾ ಚುರುಕಾಗಿದ್ದವು. ಡಬ್ಲ್ಯು.ಪಿ.ಪಿಯ ಈ ವಿಭಾಗ ಮಾತ್ರ ರೈತ ಸಮೂಹವನ್ನು ಸಂಘಟಿಸುವುದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ಸು ಕಂಡಿತ್ತು. ಬಂಗಾಳದ ಇಬ್ಬರು ಕಮ್ಯುನಿಸ್ಟ್ ಮುಖಂಡರು ರೈತ ಸಮಸ್ಯೆಗಳ ಬಗೆಗೆ ವಿಶೇಷ ಗಮನ ಹರಿಸಿದ್ದರು. ಅವರೇ, ಮುಜಾಫರ್ ಅಹಮ್ಮದ್ ಮತ್ತು ಬಂಕಿಂ ಮುಖರ್ಜಿ. ಇವರಿಬ್ಬರೂ ‘ಮೀರತ್ ಪಿತೂರಿ’ ಮೊಕದ್ದಮೆಯಲ್ಲಿ ಅಪರಾಧಿಗಳೆಂದು ಪರಿಗಣಿಸಲ್ಪಟ್ಟವರಾಗಿದ್ದರು. ಮೂವತ್ತರ ದಶಕದ ಆದಿಯಲ್ಲಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಅವರಿಬ್ಬರೂ ಎ.ಐ.ಕೆ.ಎಸ್‌.ನ ಆಶ್ರಯದಲ್ಲಿ ರೈತ ಸಂಘಟನೆಯ ಕೆಲಸವನ್ನು ಪುನಃ ಪ್ರಾರಂಭಿಸಿದರು. ಕಿಸಾನ್ ಸಭಾದ ಸಂಘಟನಾತ್ಮಕ ಕೆಲಸಗಳನ್ನು ಬಂಗಾಳದಲ್ಲಿ ಕಮ್ಯುನಿಸ್ಟರು ನಿಯಂತ್ರಿಸುತ್ತಿದ್ದರು. ೧೯೨೦ರ ನಂತರದಲ್ಲಿ ಬಂಗಾಳದಲ್ಲಿ, ರೈತ ಚಳುವಳಿಗಳೂ ತಾತ್ವಿಕವಾಗಿ ಉಗ್ರಪಂಥೀಯ ನಿಲುವನ್ನೇ ತಳೆದಿರುತ್ತಿದ್ದವು. ಯು.ಪಿ. ಹಾಗೂ ಬಿಹಾರದಲ್ಲಿದ್ದಂತೆ, ಕಾಂಗ್ರೆಸ್‌ ರಾಜಕಾರಣಿಗಳು ಇಲ್ಲಿ ಯಾವ ರೈತ ಚಳುವಳಿಯನ್ನೂ ಪರಿಣಾಮಕಾರಿಯಾಗಿ ನಿಯಂತ್ರಿಸುವ ಸ್ಥಿತಿಯಲ್ಲಿ ಇರಲಿಲ್ಲ.[25]

ಸಾಮಾಜಿಕ ಹಿನ್ನಲೆ ಹಾಗೂ ಪ್ರಮುಖ ಕಾಳಜಿಯನ್ನು ಗಮನಿಸಿದರೆ, ಎ.ಐ.ಕೆ.ಎಸ್.ನ. ಆಂಧ್ರ ವಿಭಾಗ ಹೆಚ್ಚು ಕಡಿಮೆ ಬಿ.ಪಿ.ಕೆ.ಎಸ್.ನ ಚರಿತ್ರೆಯನ್ನೇ ಹೊಂದಿದೆ ಎನ್ನಬಹುದು. ಆಂಧ್ರದ ಜಿಲ್ಲೆಗಳಲ್ಲಿ ರೈತರ ಸಂಘಟನೆ ೧೯೨೮-೯ರಲ್ಲೇ ಆರಂಭವಾಯಿತಾದರೂ, ಅದು ಚುರುಕುಗೊಂಡದ್ದು ಅಸಹಕಾರ ಚಳುವಳಿಯಸಂದರ್ಭದಲ್ಲಿ. ೧೯೨೮ರಲ್ಲಿ ಎನ್.ಜಿ.ರಂಗಾ ಹಾಗೂ ಎಮ್.ಬಿ. ನಾಯಿಡು ಅವರಿಂದ ಆಂಧ್ರ ಪ್ರಂತೀಯ ರೈತ ಸಂಘ ಗುಂಟೂರಿನಲ್ಲಿ  ಸ್ಥಾಪನೆಗೊಂಡಿತು. ಆದರೆ ಇದು ೧೯೩೪ರ ನಂತರವೇ ಬಲಗೊಳ್ಳತೊಡಗಿತು. ಕಂದಾಯ ಹೆಚ್ಚಳವನ್ನು ವಿರೋಧಿಸುವುದಲ್ಲದೆ ಕಂದಾಯದ ಪ್ರಮಾಣವನ್ನು ಕಡಿತಗೊಳಿಸುವುದಂತೆ ವಿನಂತಿಸುವುದು, ಬರಪರಿಹಾರ, ಸುಲಭದ ಶರ್ತದಲ್ಲಿ ರೈತರಿಗೆ ಸಾಲದ ವ್ಯವಸ್ಥೆ ಮುಂತಾದ ಉದ್ದೇಶಗಳಿಗಾಗಿ ಈ ಸಂಘ ಮೊದಮೊದಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿತ್ತು! ಈ ಬೇಡಿಕೆಗಳೆಲ್ಲ ಆಂಧ್ರಪ್ರದೇಶದ ಗುಂಟೂರ್, ಕರ್ನೂಲು ಮತ್ತು  ಪೂರ್ವ ಗೋದಾವರಿ ಜಿಲ್ಲೆಗಳ ಸಣ್ಣ ಹಿಡುವಳಿದಾರರ (ಸುಮಾರು ೫ ರಿಂದ ೧೫ ಎಕರೆ ಭೂಮಿ ಹೊಂದಿದ) ವಿಶಿಷ್ಠ ಅಗತ್ಯಗಳಾಗಿದ್ದವು.[26] ಆಂಧ್ರ ರೈತ ನಾಯಕರಿಗೆ ರಾಜಕೀಯವಾಗಿ ನಿರ್ದಿಷ್ಟವಾದ ಯಾವುದೇ ತಾತ್ವಿಕ ಒಲವುಗಳಿರಲಿಲ್ಲ. ಏಕೆಂದರೆ ಅವರೆಲ್ಲ ಮಾರ್ಕ್ಸ್ ವಾದ ಮತ್ತು ಗಾಂಧೀವಾದದ ಸಿದ್ಧಾಂತಗಳಿಂದ ಏಕಕಾಲದಲ್ಲಿ ಪ್ರೇರೇಪಿಸಲ್ಪಟ್ಟಿದ್ದರು.[1] ನೋಡಿ ‘ರೆಸೂಲ್ಯೂಶನ್ ಆನ್ ದಿ ನೀಡ್ ಫಾರ್ ವರ್ಕರ್ಸ್ ಅಂಡ್ ಪೆಸೆಂಟ್ಸ್‌ಪಾರ್ಟಿ’, (ಎನ್.ಡಿ.) ಎಮ್.ಸಿ.ಸಿ.ಇ. II, ಪಿ ೭೨೦, ಪುಟ ೫೩-೫೫ ಹೋಲಿಸಿ, ‘ಕಾನ್‌ಸ್ಟಿಟ್ಯೂಶನ್‌ ಆಫ್ ದಿ ಬೆಂಗಾಲ್ ಪೆಸೆಂಟ್ಸ್‌ ಅಂಡ್‌ ವರ್ಕರ್ಸ್‌ ಪಾರ್ಟಿ (೧೯೨೬) ಎಮ್.ಸಿ.ಸಿ.ಇ.ವಿ.ಪಿ ೪೫೯ (೪), ಪುಟ ೧೦-೧೧.

[2] ಎಮ್‌ಸಿ.ಸಿ.ಇ.ವಿ.ಪಿ. ೬೬೯, ಪುಟ ೮೧-೮೨.

[3] ಇದನ್ನು ಎಂ.ಎನ್. ರಾಯ್ ಸಿ.ಪಿ.ಐ.ಯ ಕೇಂದ್ರ ಸಮಿತಿಗೆ ಬರೆದ ಪತ್ರಗಳಿಂದ (೩೦ ಡಿಸೆಂಬರ್, ೧೯೨೭) ಆಯ್ದುಕೊಳ್ಳಲಾಗಿದೆ. ಇವುಗಳು ‘ಅಸೆಂಬ್ಲಿ ಲೆಟರ್ಸ್‌’ ಎಂದು ಪ್ರಸಿದ್ಧವಾಗಿದೆ. ನೋಡಿ, ಜಿ. ಚಟ್ಟೋಪಾಧ್ಯಾಯ, ಕಮ್ಯುನಿಸಂ ಅಂಡ್ ಬೆಂಗಾಲ್ಸ್ ಫ್ರೀಡಂ ಮೂವ್‌ಮೆಂಡ್, ೧, ೧೯೧೭-೨೯, ನ್ಯೂಡೆಲ್ಲಿ, ೧೯೭೦, ಪುಟ ೧೬೯-೭೦.

[4] ಮಾರ್ಕ್ಸ್‌ವಾದದ ಶಾಸ್ತ್ರೀಯ ಗ್ರಂಥಗಳಲ್ಲಿ ಬಳಸಲ್ಪಟ್ಟ ಅರ್ಥದಲ್ಲೇ ಈ ಶಬ್ದಗಳನ್ನು ಬಳಸಲಾಗಿದೆ. ನೋಡಿ, ವಿ.ಐ. ಲೆನಿನ್, ಕ್ಯಾಪಿಟಲಿಸಂ ಅಂಡ್ ಅಗ್ರಿಕಲ್ಚರ್‌, ನ್ಯೂಯಾರ್ಕ್, ೧೯೪೬ ಪುಟ ೫೭-೫೯, ಜೊತೆಗೆ, ಕಲೆಕ್ಟಡ್ ವರ್ಕ್ಸ್‌, ಸಂಪುಟ III, ಮಾಸ್ಕೋ ೧೯೬೦, ಪುಟ ೭೦-೧೮೭, ಮತ್ತು ಮಾವೋತ್ಸೆ ತುಂಗ, ಸೆಲೆಕ್ಟೆಡ್‌ ವರ್ಕ್ಸ್‌, ಸಂಪುಟ, ಪೀಕಿಂಗ್ ೧೯೬೭, ಪುಟ ೧೩೭-೩೯.

[5] ‘ದಿ ಪೊಲಿಟಿಕಲ್ ಸಿಟ್ಸುಯೇಶನ್ ಇನ್ ಇಂಡಿಯಾ-ಥೀಸಿಸ್ ಆಫ್ ದಿ ವರ್ಕರ್ಸ್ ಅಂಡ್ ಪೆಸೆಂಟ್ಸ್‌ಪಾರ್ಟಿ ಆಫ್ ಇಂಡಿಯಾ; ದಿ ಲೇಬರ್ ಮಂತ್ಲಿ, ಸಂಪುಟ XI, (೩ ಮಾರ್ಚ್‌೧೯೨೯) ಪುಟ ೧೫೯-೬೦.

[6] ಡ್ರೂಹೆ, ಸೋವಿಯತ್ ರಷ್ಯಾ ಅಂಡ್ ಇಂಡಿಯನ್ ಕಮ್ಯುನಿಸಂ, ಪುಟ ೧೩೨.

[7] ಓವರ್‌ಸ್ಟ್ರೀಟ್ ಅಂಡ್ ವಿಂಡ್ ಮಿಲ್ಲರ್, ಕಮ್ಯುನಿಸಂ ಇನ್ ಇಂಡಿಯಾ, ಪುಟ ೧೧೭-೨೧, ೧೫೦-೫೪.

[8] ನೀತಿ ನಿಯಮಾವಳಿಗಳಲ್ಲಿ ಆದ ಇಂತಹ ಬದಲಾವಣೆಗಳಿಗೆ ನೋಡಿ, ಆರ್, ಪಾಮೆ ದತ್ ಮತ್ತು ಬಿ. ಬ್ರಾಡ್ಲೆ, ‘ದಿ ಇಂಪೀರಿಯಲಿಸ್ಟ್‌ಪೀಪಲ್ಸ್ ಫ್ರಂಟ್,’ ಇಂಟರ್ ನ್ಯಾಶನಲ್ ಪ್ರೆಸ್ ಕರೆಸ್ಪಾಂಡೆನ್ಸ್‌, ಸಂಪುಟ XVI ೧೧ (೨೯ ಫೆಬ್ರವರಿ ೧೯೩೬) ಪುಟ ೨೯೭-೩೦೦.

[9] ನೋಡಿ ಎಂ. ಲಿಮೆಯೆ, ಇವಲ್ಯೂಶನ್ ಆಫ್ ಸೋಸಿಯಲಿಸ್ಟ್ ಪಾಲಸಿ, ಹೈದರಾಬಾದ್, ೧೯೫೨, ಪುಟ ೧-೫; ಮತ್ತು ಎಂ.ಆರ್. ಮಸಾನಿ, ದಿ.ಸಿ.ಪಿ.ಐ-ಎ ಶಾರ್ಟ್‌ ಹಿಸ್ಟರಿ, ಲಂಡನ್, ೧೯೫೪, ಪುಟ ೫೩-೫೫. ಸಿ.ಎಸ್. ಪಿ. ನಾಯಕರ ಮೇಲೆ ಗಾಂಧೀವಾದದ ಪ್ರಭಾವದ ಕುರಿತು ನೋಡಿ ಜೆ.ಪಿ. ನಾರಾಯಣ, ಸೋಶಿಯಲಿಸಂ, ಸರ್ವೋದಯ ಅಂಡ್ ಡೆಮಾಕ್ರೆಸಿ, ಬಾಂಬೆ, ೧೯೬೪, ಪುಟ ೧೩೮-೭೮; ಸಂಪೂರ್ಣಾನಂದ, ಇಂಡಿಯನ್ ಸೋಶಿಯಲಿಸಂ, ಬಾಂಬೆ, ೧೯೬೧, ಪುಟ ೧-೫೩.

[10] ಹೆಚ್. ಪೊಲಿಟ್ ಆರ್. ಪಾಮೆದತ್ ಮತ್ತು ಬ್ರಾಡ್ಲೆ, ‘ಇಂಡಿಯಾ-ದಿ ಯುನೈಟೆಡ್‌ನ್ಯಾಶನಲ್ ಫ್ರಂಟ್’, ಇಂಟರ್‌ನ್ಯಾಶನಲ್ ಪ್ರೆಸ್ ಕರೆಸ್ಪಾಂಡೆನ್ಸ್‌, ಸಂಪುಟ XVI ೫೦ (೧೭ ನವೆಂಬರ್ ೧೯೩೬), ಪುಟ ೧೩೪೨-೪೪.

[11] ಉದಾಹರಣೆಗೆ ನೋಡಿ, ‘ರಿಸೂಲ್ಯೂಶನ್ ಪಾಸ್‌ಡ್‌ ಅಟ್‌ ದಿ ಪ್ರಾವಿನ್ಸಿಯಲ್ ಕಾಂಗ್ರೆಸ್‌ ಸೋಶಿಯಲಿಸ್ಟ್ ಕಾನ್ಫರೆನ್ಸ್‌’ (ಇಚಾವಾ, ೨೮ ಡಿಸೆಂಬರ್ ೧೯೩೪), ಭಾರತ ಸರಕಾರದ ಗೃಹಖಾತೆಯ ಫೈಲಿನಲ್ಲಿ ೧೮/೧೨/೩೪-ಪೋಲ್ (ಫೋರ್ಟ್‌ನೈಟ್ಲಿ ರಿಪೋಟ್ಸ್ ಆನ್ ಇಂಟರ್ ನಲ್ ಪೊಲಿಟಿಕಲ್ ಸಿಟುಯೇಶನ್, ಯು.ಪಿ.) ಪುಟ ೩-೪.

[12] ಕಮ್ಯುನಿಸ್ಟ್ ಪ್ಲಾಟ್ ಆಗೈನ್‌ಸ್ಟ್ ದಿ.ಸಿ. ಎಸ್.ಪಿ.ವಿ.ಬಿ. ಕಾರ್ನಿಕ್ ಸಂ ಇಂಡಿಯನ್ ಕಮ್ಯುನಿಸ್ಟ್ ಪಾರ್ಟಿ ಡಾಕ್ಯುಮೆಂಟ್ಸ್ ೧೯೩೦೫೬, ಬಾಂಬೆ ೧೯೫೭, ಪುಟ ೩೬೪೫.

[13] ಎ.ಐ.ಕೆ.ಎಸ್‌.ನ ಮೊದಮೊದಲ ಹಿನ್ನೆಲೆಗಾಗಿ ನೋಡಿ, ಎನ್.ಜಿ.ರಂಗಾ, ‘ದಿ ಆಲ್ ಇಂಡಿಯನ್ ಕಿಸಾನ್‌ ಮೂವ್‌ಮೆಂಟ್‌,’ ದಿ ಇಂಡಿಯನ್ ಆನುಯಲ್‌ ರಿಜಿಸ್ಟರ್, ಎನ್.ಎನ್. ಮಿತ್ರ (ಸಂ), ಜುಲೈ-ಡಿಸೆಂಬರ್ ೧೯೩೬). ಸಂಪುಟ ii, ಪುಟ ೨೮೦-೮೪.

[14] ವಿವರಗಳಿಗಾಗಿ ನೋಡಿ ಡಬ್ಲ್ಯು.ಹೌಸರ್, ದಿ ಬಿಹಾರ್ ಪಾಲಿನ್ಶೀಯಲ್‌ಕಿಸಾನ್ ಸಭಾ ೧೯೨೯೪೨ ಎ ಸ್ಟಡಿ ಆಫ್ ಆನ್‌ ಇಂಡಿಯನ್ ಪೆಸೆಂಟ್‌ ಮೂವ್‌ಮೆಂಟ್‌ ಪಿ.ಎಚ್.ಡಿ. ಪ್ರಬಂಧ, ಯುನಿವರ್ಸಿಟಿ, ಆಫ್ ಚಿಕಾಗೊ ೧೯೬೧ ಪುಟ ೩೫೪೩.

[15] ಧನಾಗರೆ, ಆಗ್ರೋರಿಯನ್ ಮೂವ್‌ಮೆಂಟ್ ಅಂಡ್‌ ಗಾಂಧಿಯನ್ ಪಾಲಿಟಿಕ್ಸ್, ಅಧ್ಯಾಯ III.

[16] ಹೌಸರ್, ‘ಬಿಹಾರ್ ಪ್ರಾವಿನ್‌ಶಿಯಲ್ ಕಿಸಾನ್ ಸಭಾ,’ ಪುಟ ೪೮-೫೦, ೫೪-೫೫.

[17] ಅದೇ ಪುಟ ೬೬.

[18] ಭಾರತ ಸಮಾಜವಾದಿ ಚಳುವಳಿಯ ಪ್ರಮುಖ ನಾಯಕರಲ್ಲೊಬ್ಬರಾದ ಜಯಪ್ರಕಾಶ್ ನಾರಾಯರು ಕೊನೆಗೆ ಗಾಂಧಿವಾದ ಕಡೆಗೆ ಆಕರ್ಷಿಸಲ್ಪಟ್ಟು ಸ್ವಾಂತಂತ್ರ್ಯ ನಂತರ ಗ್ರಾಮೀಣ ಅಭ್ಯುದಯಕ್ಕಾಗಿ ‘ಸರ್ವೋದಯ’ ಎಂಬ ಹೊಸ ಚಳುವಳಿಯನ್ನು ಹುಟ್ಟು ಹಾಕಿದರು. ನೋಡಿ ನಾರಾಯಣ, ಸೋಶೀಯಲಿಸಂ, ಸರ್ವೋದಯ ಅಂಡ್ ಡೆಮಾಕ್ರಸಿ, ಪುಟ ೮೭೮.

[19] ಅದೇ, ಪುಟ ೭೭-೭೮.

[20] ಎಸ್.ಎಸ್. ಸರಸ್ವತಿ, ಮೇರಾ ಜೀವನ್ ಸಂಘರ್ಷ (ಹಿಂದಿ) ಪಾಟ್ನಾ, ೧೯೫೨, ಪುಟ ೨೯೩, ೩೨೨-೨೩.

[21] ಹೌಸರ್, ‘ಬಿಹಾರ್ ಪ್ರಾವಿನ್‌ಶಿಯಲ್ ಕಿಸಾನ್ ಸಭಾ,’ ಪುಟ ೯೫-೧೦೦.

[22] ಬಿಹಾರ್ ಪ್ರಾಂತೀಯ ಕಿಸಾನ್ ಸಭಾ ಕಾ ಘೋಷಣಾ ಪತ್ರ ಔರ್ ಕಿಸಾನೋಂ ಕೀ ಮಾಂಗೇ (ಹಿಂದಿ) ಪಾಟ್ನಾ, ೧೯೩೬, ಪಾಟ್ನಾ, ಪುಟ  ೧-೨.

[23] ನೋಡಿ. ಎಸ್.ಎಸ್. ಸರಸ್ವತಿ ಪ್ರೆಸಿಡೆನ್‌ಶಿಯಲ್‌ ಅಡ್ರೆಸ್-ಯೆಯ್ತ್‌ ಅನುಯಲ್ ಸೆಶನ್ ದಿ ಆಲ್ ಇಂಡಿಯಾ ಕಿಸಾನ್ ಸಭಾ, ಬೆಜವಾಡ, ಮಾರ್ಚ್‌ ೧೪-೧೫, ೧೯೪೪, ಪುಟ ೧೭. ನಿಜವಾಗಿಯೂ, ಬಿಹಾರ ಕಿಸಾನ್‌ ಸಭಾದಲ್ಲಿ ಶ್ರೀಮಂತ ರೈತರ ಪ್ರಭಾವ ೧೯೩೫ ರಷ್ಟು ಹಿಂದಿನಿಂದಲೇ ನಡೆಯುತ್ತಿತ್ತು. ನೋಡಿ, ಬಿಹಾರ್ ಪ್ರಾಂತೀಯ ಕಿಸಾನ್ ಸಭಾ ಕಿ ರಿಪೋರ್ಟ್, ನವಂಬರ್ ೧೯೨೯-ನವಂಬರ್ ೧೯೩೫ (ಹಿಂದಿ) ಪಾಟ್ನಾ, ೧೯೩೫, ಪುಟ ೭೦.

[24] ಸ್ವಾಮಿ ಸಹಜಾನಂದರ ಸೈದ್ಧಾಂತಿಕ ನಿಲುಗಳಲ್ಲಾದ ಬದಲಾವಣೆಗಳನ್ನು ಎಸ್.ಎಸ್. ಸರಸ್ವತಿಯವರ ಈ ಕೃತಿಯಲ್ಲಿ ಕಾಣಬಹುದು. ಪ್ರೆಸಿಡೆನ್‌ಶಿಯಲ್ ಅಡ್ರೆ, ೩ ಅನುಯೆಲ್ ಸೆಶನ್ ಆಫ್ ದಿ ಇಂಡಿಯಾ ಕಿಸಾನ್ ಸಭಾ, ಕೊಮಿಲಾ, ೧೩-೧೫ ಮೇ ೧೯೩೮, ಪುಟ ೭-೮, ೧೩-೧೪; ದಿ ಆಲ್ ಇಂಡಿಯಾ ಆಂಟಿ ಕಾಂಪ್ರಮೈಸ್ ಕಾನ್‌ಫರೆನ್ಸ್ (ರಾಮ್‌ಗರ್, ಮಾರ್ಚ್‌೧೯೨೦-೧೯೪೦), ಅಡ್ರೆಸ್‌ಆಫ್ ದಿ ಚೆಯರ್‌ಮೆನ್, ರಿಸೆಪ್ಶನ್ ಕಮಿಟಿ, ಬಂಕಿಪುರ್, ೧೯೪೦, ಪುಟ ೧೨-೧೪; ಪ್ರೆಸಿಡೆನ್‌ಶಿಯಲ್ ಅಡ್ರೆಸ್‌ನೈನ್ತ್‌ಸೆಶನ್ ಆಫ್‌ದಿ ಬಿಹಾರ್ ಪ್ರಾವಿನ್‌ಶಿಯಲ್‌ಕಿಸಾನ್ ಕಾನ್‌ಫರೆನ್ಸ್, ಗಯಾ, ೪-೫ ಏಪ್ರಿಲ್ ೧೯೪೨, ಪುಟ ೩೦-೩೩, ಅಲ್ಲದೇ ಅವರದೇ ಇನ್ನೊಂದು ಬರಹ ನೋಡಿ, ಕ್ರಾಂತಿ ಔರ್‌ಸಂಯುಕ್ತ ಮೋರ್ಚಾ (ಹಿಂದಿ) ಪಾಟ್ನಾ, ೧೯೪೩

[25] ‘ದಿ ಪ್ರೋಗ್ರಾಮ್ ಆಫ್ ದಿ ಬೆಂಗಾಳ್ ಪೆಸೆಂಟ್ಸ್ ಅಂಡ್ ವರ್ಕರ್ಸ್ ಪಾರ್ಟಿ- ಅಡೋಪ್ಟೆಡ್‌ ಅಟ್ ದಿ ಸೆಕೆಂಡ್‌ ಸೆಶನ್ ಆಫ್ ದಿ ಪೆಸೆಂಟ್ಸ ಅಂಡ್ ವರ್ಕರ್ಸ್ ಕಾನ್‌ಫರೆನ್ಸ್, ೨೭ ಫೆಬ್ರವರಿ, ೧೯೨೭,’ ಎಮ್.ಸಿ.ಸಿ.ಇ. VIII ಪಿ. ೨೫೧೦, ಪುಟ ೧೩೨೭, ಪುಟ-೬೨.

[26] ನೋಡಿ, ರಂಗಾ, ಆಲ್ ಇಂಡಿಯಾ ಕಿಸಾನ್‌ ಮೂವ್‌ಮೆಂಟ್‌, ಪುಟ ೨೮೫-೯೩.