೧೯೩೧ರ ಹೊತ್ತಿಗೆ ವಿಶ್ವವ್ಯಾಪಿ ಆರ್ಥಿಕ ಕುಸಿತ ತೀವ್ರವಾಯಿತು. ಆಂದ್ರದ ಹಳ್ಳಿಗಾಡಿನಲ್ಲ ಇದು ಬಿಕ್ಕಟ್ಟನ್ನು ತೀವ್ರಗೊಳಿಸಿತು. ಇದೇ ಹೊತ್ತಿಗೆ, ಆಂಧ್ರ ರೈತ ಚಳುವಳಿಗಳು ಹಿಡುವಳಿದಾರರ ಕುಂದುಕೊರತೆಗಳ ಕಡೆಗೆ ಸಾರ್ವಜನಿಕ ಅಭಿಪ್ರಾಯವನ್ನು ಸಂಘಟಿಸುವ ಕೆಲಸ ಮಾಡಿದವು. ಜಮೀಂನ್ದಾರಿ ಆಡಳಿತ ಪದ್ಧತಿಯ ಕ್ರೌರ್ಯದ ವಿರುದ್ಧ ಜನಜಾಗೃತಿ ಉಂಟುಮಾಡುವ ಕೆಲಸವನ್ನು ಅತ್ಯುತ್ಸಾಹದಿಂದ ಕೈಗೆತ್ತಿಕೊಂಡವು. ೧೯೩೧ ಮತ್ತು ೧೯೩೪ರ ನಡುವೆ ರೈತರ ಸಭೆಗಳು ಮೇಲಿಂದ ಮೇಲೆ ನಡೆದುವಲ್ಲದೆ, ಹಿಡುವಳಿದಾರರು ಹಾಗೂ ವಕ್ಕಲುಗಳ ಸಮಸ್ಯೆಗಳು ಈ ಸಭೆಗಳಲ್ಲಿ ಯಾವಾಗಲು ಚರ್ಚಿಸಲ್ಪಡುತ್ತಿದ್ದವು.

[1]

ಪ್ರೊ. ಎನ್.ಜಿ. ರಂಗಾ ಅವರು ಎ.ಐ.ಕೆ.ಎಸ್.ನ ಆಂಧ್ರ ವಿಭಾಗದ ಪ್ರಮುಖ ಮುಖಂಡರಾಗಿದ್ದರು. ಶ್ರೀಮಂತ ರೈತ ಕುರುಂಬದಿಂದ ಬಂದ ಅವರು ಕಮ್ಮ ಜಾತಿಗೆ ಸೇರಿದವರಾಗಿದ್ದು, ಆಂದ್ರದಲ್ಲಿ ಈ ಜನಾಂಗದವರು ನಿಜವಾದ ಬೇಸಾಯಗಾರರಾಗಿದ್ದರು. ಕಮ್ಮ ರೈತ ವರ್ಗ ಇನ್ನೊಂದು ಪ್ರಮುಖ ರೈತವರ್ಗವಾದ ಬೇಸಾಯಗಾರರಾಗಿದ್ದರು. ಕಮ್ಮ ರೈತವರ್ಗ ಇನ್ನೊಂದು ಪ್ರಮುಖ ರೈತ ವರ್ಗವಾದ ರೆಡ್ಡಿಗಳ ಜೊತೆಗೆ ಆರ್ಥಿಕ ಹಾಗೂ ರಾಜಕೀಯ ಪ್ರಾಬಲ್ಯಕ್ಕಾಗಿ ಸ್ಪರ್ಧೆ ನಡೆಸಿತ್ತು.[2] ಸಹಜಾನಂದರಂತೆ ರಂಗಾ ಕೂಡಾ ಮೊದಮೊದಲು, ರಾಷ್ಟ್ರೀಯ ಚಳುವಳಿಯಲ್ಲಿ ಎಡಪಂಥೀಯ ಸುಧಾರಣಾವಾದಿ ನಾಯಕರಾಗಿದ್ದರು. ಅಲ್ಲದೆ, ಅವರೊಬ್ಬ ಪಾಶ್ವಿಮಾತ್ಯ ವಿದ್ಯಾಭ್ಯಾಸದ ಹಿನ್ನೆಲೆ ಇದ್ದ ಬುದ್ಧಿಜೀವಿಯಾಗಿದ್ದರು. ಅವರೇ ಸ್ಥಾಪಿಸಿದ ಕೆಲವು ರೈತ ಪಕ್ಷಗಳು ಅವರಲ್ಲಿದ್ದ ನಾಯಕತ್ವದ ಶಕ್ತಿಯನ್ನಾಗಲೀ ರಾಜಕೀಯ ಚಾಣಾಕ್ಷತನವನ್ನಾಗಲೀ ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಸೋತಿದ್ದವು. ಆ ಕಾಲದ ಇತರ ಕೆಲವು ಮಹತ್ವಾಕಾಂಕ್ಷೀ ನಾಯಕರಂತೆ ಅವರು ಅನೇಕ ಪಕ್ಷಗಳು, ಗುಂಪುಗಳು ಹಾಗೂ ವೈಚಾರಿಕ ವೇದಿಕೆಗಳ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದರು. ೧೯೩೪ರಿಂದ ೩೭ರ ವರೆಗೆ ಅವರು ಸಿ.ಎಸ್.ಪಿ. ಹಾಗೂ ಸಿ.ಪಿ.ಐ ಜೊತೆಗೆ ಸಹಕರಿಸಿದರು. ಪ್ರಮುಖವಾಗಿ ಶ್ರೀಮಂತ ಮತ್ತು ಮಧ್ಯಮ ವರ್ಗದ ಕಮ್ಮ ರೈತರ ನಡುವೆ ಅವರ ಜನಪ್ರಿಯತೆ ಎಷ್ಟು ವ್ಯಾಪಕವಾಗಿತ್ತೆಂದರೆ, ಸ್ವಲ್ಪಕಾಲ ಸಿ.ಎಸ್.ಸಿ. ಮತ್ತು ಸಿ.ಪಿ.ಐ.ಗಳೆರಡೂ ರಂಗಾರವರನ್ನು ತಮ್ಮ ತಮ್ಮ ಗುಂಪಿಗೆ ಸೆಳೆದುಕೊಳ್ಳುವ ಸ್ಪರ್ಧೆಯಲ್ಲಿ ತೊಡಗಿದ್ದವು. ಸಿ.ಪಿ.ಐ.ಯಂತೂ, ಅಕ್ಟೋಬರ್‌ ೧೯೩೪ರಲ್ಲಿ, ಮದ್ರಾಸಿನಲ್ಲಿ ನಡೆಯುವ ಅಖಿಲ ಭಾರತ ರೈತ ಮತ್ತು ಮಜೂರರ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಅವರನ್ನು ಆಯ್ಕೆ ಮಾಡಿತು. ಸಿ.ಪಿ.ಎಸ್. ಇದನ್ನು ಕಟುವಾಗಿ ಟೀಕಿಸಿತಲ್ಲದೆ ತನ್ನ ಕಾರ್ಯಕರ್ತರ್ಯಾರೂ ರಂಗಾರವರಿಗೆ ಯಾವ ಸಹಕಾರವನ್ನು ಕೊಡಬಾರದೆಂದು ನಿರ್ದೇಶನವಿತ್ತಿತ್ತು.[3]

೧೯೩೬ರಲ್ಲಿ ಸಿ.ಪಿ.ಐ. ಎಡಪಂಥೀಯ ಒಲವಿರುವ ಶಕ್ತಿಯನ್ನು ಒಂದು ವಿಶಾಲ ಒಕ್ಕೂಟದ ಚೌಕಟ್ಟಿನಲ್ಲಿ, ಕ್ರೋಢೀಕರಿಸಿ ಎ.ಐ.ಕೆ.ಎಸ್.ನ್ನು ಸ್ಥಾಪಿಸುವುದರೊಂದಿಗೆ ವೈಷ್ಯಮ್ಯ ತಾತ್ಕಾಲಿಕವಾಗಿ ಕೊನೆಗೊಂಡಿತು. ಹೀಗೆ, ರಂಗಾರವರು ಅಖಿಲ ಭಾರತ ಮಟ್ಟದ ರೈತ ಸಂಘಟನೆಯ ಸ್ಥಾಪಕರಲ್ಲಿ ಒಬ್ಬರಾದರು. ಅದೇ ಹೊತ್ತಿಗೆ ಆಂಧ್ರ ಪ್ರಾಂತೀಯ ರೈತರ ಅಸೋಸಿಯೇಷನ್, ಕಮ್ಯುನಿಸ್ಟರ ಸಂಪರ್ಕವಿರುವ ಈ ಎ.ಐ.ಕೆ.ಎಸ್. ಜೊತೆಗೆ ಸೇರಿ ತನ್ನ ಅಸ್ತಿತ್ವ ಕಳಕೊಳ್ಳುವುದನ್ನು ಅವರು ಇಷ್ಟಪಡಲಿಲ್ಲ. ಎ.ಐ.ಕೆ.ಎಸ್.ನಲ್ಲಿ ಕಮ್ಯುನಿಸ್ಟರ ಪ್ರಾಬಲ್ಯ ಮೊದಲಿನಿಂದಲೇ ಇತ್ತು. ೧೯೩೬ ರಿಂದ ೩೯ರ ವರೆಗೆ ರಂಗಾರವರು ಎ.ಐ.ಕೆ.ಎಸ್. ಜತೆಗೆ ಸಂಪರ್ಕವಿರಿಸಿಕೊಂಡಿದ್ದರೂ, ಸ್ವಾಮಿ ಸಹಜಾನಂದರಂತೆ, ಅವರೇನೂ ಸೈದ್ಧಾಂತಿಕವಾಗಿ ಬದಲಾಗಿರಲಿಲ್ಲ. ಅವರು ಮೊದಲಿದ್ದಂತೆ, ಶ್ರೀಮಂತ ಹಾಗೂ ಮಧ್ಯಮ ವರ್ಗದ ರೈತರ ನಾಯಕನಾಗಿಯೇ ಮುಂದುವರಿದರು. ಅಲ್ಲದೆ, ವ್ಯವಸಾಯ ಸುಧಾರಣೆ ಹಾಗೂ ಗ್ರಾಮೀಣ ಪುನರುತ್ಥಾನದ ಅವರ ಯೋಜನೆಗಳು ಪ್ರತಿಷ್ಟೆಗೆ ಹಾತೊರೆಯುವ ಆಂಧ್ರದ ರೈತವರ್ಗದ ಆಶೋತ್ತರಗಳನ್ನು ಸ್ಪಷ್ಟವಾಗಿ ಪ್ರತಿಫಲಿಸುತ್ತಿದ್ದವು.[4]

ಬಡ ರೈತರ ಸಮಸ್ಯೆಗಳ ಬಗೆಗೆ ಅವರು ಗಮನ ಕೊಡುತ್ತಿದ್ದುದು ಅಪರೂಪವಾಗಿತ್ತು. ಒಮ್ಮೆ ೧೯೨೯ ರಲ್ಲಿ ಮತ್ತು ೧೯೩೩ ರಲ್ಲಿ ಇನ್ನೊಮ್ಮೆ ಅವರು ಭೂರಹಿತ ಕೃಷಿ ಕಾರ್ಮಿಕರನ್ನು ಸಂಘಟಿಸುವ ಪ್ರಯತ್ನ ಮಾಡಿದ್ದರು. ಆದರೆ, ಈ ಪ್ರಯತ್ನ ಅಷ್ಟೇನೂ ಪರಿಣಾಮಕಾರಿಯಾಗಲಿಲ್ಲ. ಆಗಲೇ ಆಂಧ್ರದ ಗ್ರಾಮಾಂತರ ಪ್ರದೇಶಗಳಲ್ಲಿ ಭೂರಹಿತ ಕೃಷಿಕಾರ್ಮಿಕರ ಹಾಗೂ ಭೂಮಾಲೀಕರ ನಡುವೆ ಸಂಘರ್ಷ ತೀಕ್ಷ್ಣಗೊಳ್ಳುತ್ತಿದ್ದುದು ರಂಗಾರವರ ಈ ವೈಫಲ್ಯಕ್ಕೆ ಕಾರಣವಾಗಿತ್ತು. ೧೯೩೫ರಲ್ಲಿ, ನೆಲ್ಲೂರು ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರು ತಮ್ಮ ಶ್ರೀಮಂತ ದನಿಗಳು ಕೂಲಿ ಕೊಡಲು ಅಧಿಕೃತ ಅಳತೆಗಳನ್ನೇ ಬಳಸುವಂತೆ ಒತ್ತಾಯಿಸುವಲ್ಲಿ ಸಫಲರಾಗಿದ್ದರು. ಮೂಲತಃ ಭೂಮಾಲೀಕರ ನಾಯಕರಾದ ರಂಗಾರವರು, ಕೃಷಿ ಕಾರ್ಮಿಕರ ಹಾಗೂ ಅವರ ದನಿಗಳ ನಡುವೆ ನೇರ ಸಂಘರ್ಷ ಸ್ಫೋಟಗೊಳ್ಳುವುದನ್ನು ತಡೆಯಲು ಕಾತರರಾಗಿದ್ದರು. ಹೀಗಾಗಿ, ದಕ್ಷಿಣ ಭಾರತ ರೈತ ಹಾಗೂ ಕೂಲಿಕಾರರ ಒಕ್ಕೂಟ ಅದೇ ವರ್ಷ ಅಸ್ತಿತ್ವಕ್ಕೆ ಬಂದು ರಂಗಾರವರು ಅದರ ಪ್ರಧಾನ ಕಾರ್ಯದರ್ಶಿಯಾದುದು ಆಕಸ್ಮಿಕವೇನೂ ಅಲ್ಲ. ಈ ಒಕ್ಕೂಟ ಒಂದು ರಾಜಿ ಸೂತ್ರವನ್ನು ಸಿದ್ಧಪಡಿಸಿತು. ಇದರಂತೆ, ಕೂಲಿ ಹಾಗೂ ಕೆಲಸದ ಅವಧಿಯ ಬಗೆಗಿನ ಕೂಲಿಕಾರರ ಬೇಡಿಕೆಗಳನ್ನು ದನಿಗಳು ಒಪ್ಪಿಸಿಕೊಳ್ಳಬೇಕೆಂದೂ ಇದಕ್ಕೆ ಪ್ರತಿಯಾಗಿ ಕಾರ್ಮಿಕರ ತಮ್ಮ ದನಿಗಳಿಗೆ ಸಂಪೂರ್ಣ ಸಹಕಾರ ಕೊಡಬೇಕೆಂದೂ ತೀರ್ಮಾನಿಸಲಾಯಿತು.[5]

೧೯೪೧-೪೩ರ ಜಡುವಿನ ಜನತಾ ಸಮರ (ಪೀಪಲ್ಸ್ ವಾರ್)ದ ಅವಧಿಯಲ್ಲಿ ಎ.ಐ.ಕೆ.ಎಸ್. ಕಮ್ಯುನಿಸ್ಟರ ಹಿಡಿತಕ್ಕೆ ಬಂದಿತು. ಆಗಲೇ ಸೈದ್ಧಾಂತಿಕವಾಗಿ ಕಮ್ಯುನಿಸಂನ ಕಡೆಗೆ ಪ್ರಭಾವಿತರಾಗಿದ್ದ ಸ್ವಾಮಿ ಸಹಜಾನಂದರು ಎ.ಐಕೆ.ಎಸ್.ನ್ನು ಸಂಪೂರ್ಣವಾಗಿ ಒಂದು ಬಡರೈತರ ಸಂಘಟನೆಯಾಗಿ ರೂಪಿಸತೊಡಗಿದರು. ಈ ಹಂತದಲ್ಲೇ ರಂಗಾರವರು ಎ.ಐ.ಕೆ.ಎಸ್. ಜೊತೆಗಿನ ತನ್ನ ಸಂಬಂಧವನ್ನು ಸಂಪೂರ್ಣವಾಗಿ ಕಳಚಿಕೊಂಡು ಆಲ್ ಇಂಡಿಯಾ ಕಿಸಾನ್ ಕಾಂಗ್ರೆಸ್‌ಎಂಬ ಹೊಸ ಸಂಸ್ಥೆಯನ್ನು ಸ್ಥಾಪಿಸಿದರು. ಕಾಂಗ್ರೆಸಿನ ಬಗ್ಗೆ ಒಲವಿರುವ ರೈತರನ್ನು ಮಾರ್ಕ್ಸ್‌ವಾದಿಗಳಿಂದ ದೂರ ಮಾಡುವುದೇ ಅವರ ಉದ್ದೇಶವಾಗಿತ್ತು. ಅವರ ಪ್ರಕಾರ, ಈ ಮಾರ್ಕ್ಸ್‌ವಾದಿಗಳಿಗೆ ಭಾರತೀಯ ರೈತಾಪಿವರ್ಗಗಳೊಳಗಿನ ಚಲನಶೀಲತೆಯ ಬಗೆಗಿಂತ ಹೆಚ್ಚಾಗಿ, ‘ಕಾರ್ಮಿಕರ ಸರ್ವಾಧಿಕಾರದ’ ಯುರೋಪಿಯನ್ ಮಾದರಿಯೇ ಹೆಚ್ಚು ಆಕರ್ಷಕವಾಗಿತ್ತು.[6] ಆದರೆ, ಚಲನಶೀಲತೆ ಎಂದರೆ ನಿಜವಾಗಿಯೂ ಏನು? ಅದರ ಕಲ್ಪನೆಯ ‘ರೈತ’ ಎಂದರೆ ಯಾರು? ಇಂತಹ ಮೂಲಭೂತ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ರಂಗಾರವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲೇ ಇಲ್ಲ.

ಎ.ಐ.ಕೆ.ಎಸ್. ಮೂಲತಃ ಅಸಂತುಷ್ಟ ಮಾಜಿ ಕಾಂಗ್ರೆಸಿಗರ ಒಂದು  ಗುಂಪಾಗಿದ್ದರೂ ಸಹ, ಅದು ಕಾಂಗ್ರೆಸಿನ ಜತೆಗೆ ‘ಔಪಚಾರಿಕ ಒಪ್ಪಂದ’ ಒಟ್ಟುಕೊಳ್ಳುವ ಬಗೆಗಿನ ತನ್ನ ನಿರಂತರ ಪ್ರಯತ್ನವನ್ನು ಕೈಬಿಡಲೇ ಇಲ್ಲ. ಇಂತಹ ಒಪ್ಪಂದದಿಂದ ಕಾಂಗ್ರೆಸಿನ ವ್ಯವಸಾಯೀ ನೀತಿಗಳನ್ನು ಬದಲಿಸಬಹುದು ಎಂಬ ಭರವಸೆ ಅದರದ್ದಾಗಿತ್ತು. ತಮ್ಮ, ತಮ್ಮ ಪ್ರದೇಶಗಳಲ್ಲಿರುವ ವ್ಯವಸಾಯೀ ಪರಿಸ್ಥಿತಿಯ ಕುರಿತು ವರದಿ ಸಲ್ಲಿಸುವಂತೆ ಪ್ರಾಂತೀಯ ಸಮಿತಿಗಳಿಗೆ ನಿರ್ದೇಶಿಸಲು ಕಾಂಗ್ರೆಸ್‌ನ ಲಕ್ನೋ ಅಧಿವೇಶನ (ಏಪ್ರಿಲ್ ೧೯೩೬) ಅರೆ ಮಸನ್ಸಿನಿಂದಲೇ ಒಪ್ಪಿಕೊಂಡಿತು. ಅಲ್ಲದೆ, ಪ್ರಾಂತೀಯ ಮಟ್ಟದ ವ್ಯವಸಾಯೀ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಂತೆ ಈ ಸಮಿತಿಗಳಿಗೆ ಸೂವಿಸಲಾಯಿತು. ರಂಗಾ ಮತ್ತು ಸಹಜಾನಂದ ಸರಸ್ವತಿಯವರು (ಎ.ಐ.ಕೆ.ಎಸ್.ನ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ) ನೆಹರೂರಂತಹ ಕಾಂಗ್ರೆಸ್‌ನ ಉನ್ನತ ನಾಯಕರನ್ನು ಒತ್ತಾಯಿಸಿದ್ದರಿಂದಲೇ, ಇದೇ ಅಧಿವೇಶನದಲ್ಲಿ, ಒಂದು ಗೊತ್ತುವಳಿಯನ್ನು ಅಂಗೀಕರಿಸಲಾಯಿತು. ಖಚಿತವಾದ ವ್ಯವಸಾಯೀ ನೀತಿಯನ್ನು ರೂಪಿಸುವ ಬದ್ಧತೆ ಕಾಂಗ್ರೆಸಿಗೆ ಇದೆ ಎಂಬುದನ್ನು ಇವರಿಬ್ಬರೂ ಪ್ರತಿಪಾದಿಸಿದ್ದರು.[7] ಇದರ ಪರಿಣಾಮವಾಗಿ, ಫೈಜ್‌ಪುರ್ ಅಧೀವೇಶನದಲ್ಲಿ (ಡಿಸೆಂಬರ್ ೧೯೩೬) ಕಾಂಗ್ರೆಸ್‌ ಒಂದು ವ್ಯವಸಾಯೀ ಕಾರ್ಯಕ್ರಮವನ್ನು ಅಂಗೀಕರಿಸಿತು. ಆದರೆ, ಈ ಕಾರ್ಯಕ್ರಮಗಳು ಎ.ಐ.ಕೆ.ಎಸ್‌.ನ್ನು ಸಾಕಷ್ಟು ನಿರಾಶೆಗೊಳಿಸುವಂತಿದ್ದವು. ಏಕೆಂದರೆ ಅಲ್ಲಿ ಜಮೀಂನ್ದಾರಿ ನಿರ್ಮೂಲನದಂತಹ ಪ್ರಗತಿಪರ ಕಾರ್ಯಕ್ರಮಗಳೇ ಇದ್ದಿರಲಿಲ್ಲ.[8] ಇಷ್ಟಾದರೂ, ಎ.ಐ.ಕೆ.ಎಸ್. ೧೯೩೭ರ ಚುನಾವಣೆಯಲ್ಲಿ ಕಂಗ್ರೆಸ್‌ನ್ನು ಸಂಪೂಣ್ಣವಾಗಿ ಬೆಂಬಲಿಸಿತು. ಇದರಿಂದಾಗಿ, ಏಳೂ ಪ್ರಾಂತಗಳಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆಯುವಂತಾಯಿತು. ಹೀಗೆ ‘ಔಪಚಾರಿಕ ಒಪ್ಪಂದ’ದ ಆಕರ್ಷಕ ನಿಲುವಿನಿಂದಾಗಿ ಕಾಂಗ್ರಸಿಗೆ ಮಾತ್ರ ಲಾಭವಾಯಿತು. ಅದೇ ಹೊತ್ತಿಗೆ, ಕಾಂಗ್ರೆಸಿನ ವ್ಯವಸಾಯೀ ನೀತಿಯಿಂದ ಹಾಗೂ ೧೯೩೭-೩೯ರ ಅವಧಿಯಲ್ಲಿ ಅದರ ಮಂತರಿಗಳ ಅಧ್ಯಕ್ಷ ಆಡಳಿತ ನಿರ್ವಹಣೆಯಿಂದ ಎ.ಐ.ಕೆ.ಎಸ್.ಗೆ ಸಂಪೂರ್ಣ ಭ್ರಮನಿರಸನವಾಯಿತು.[9]

ಎ.ಐ.ಕೆ.ಎಸ್‌.ನ ರಾಷ್ಟ್ರೀಯ ಸಮಿತಿ, ಅದರ ಪ್ರಾಂತೀಯ ಘಟಕಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗುವುದು ಸಂಘಟನಾತ್ಮಕವಾಗಿ ಸಾಧ್ಯವಿರಲಿಲ್ಲ. ಏಕೆಂದರೆ ಪ್ರಾಂತೀಯ ಮಟ್ಟದಿಂದ ಹಳ್ಳಿಯವರೆಗಿನ ಎಲ್ಲ ಹಂತಗಳಲ್ಲೂ ನೀತಿರೂಪಕ ಸಮಿತಿಗಳನ್ನು ಹೊಂದುವ ಸೌಲಭ್ಯ ಸಂಘಟನೆಯ ಸಂವಿಧಾನದಲ್ಲೇ ಅಳವಡಿಸಲ್ಪಟ್ಟಿತ್ತು.[10] ರಾಷ್ಟ್ರ ಮಟ್ಟದ ಪದಾಧಿಕಾರಿಗಳ ಒಂದು ಕೇಂದ್ರ ವ್ಯವಸ್ಥೆಯನ್ನು ಬಿಟ್ಟರೆ, ಸುಸಂಘಟಿತವಾದ ಪಕ್ಷದ ಜಾಲ ದೇಶವ್ಯಾಪಿಯಾಗಿ ಅಸ್ತಿತ್ವದಲ್ಲಿರಲಿಲ್ಲ. ಕಾಲಕಾಲಕ್ಕೆ ಜರುಗುತ್ತಿದ್ದ ಚಳುವಳಿಗಳು, ಸಭೆಗಳು ಹಾಗೂ ಅಧಿವೇಶನಗಳೆಲ್ಲ ತಾತ್ಪೂರ್ತಿಕ ನೆಲೆಯಲ್ಲೇ ಸಂಯೋಜಿಸಲ್ಪಡುತ್ತಿದ್ದವು. ಸಂಘಟನೆಯ ಅಂಗರಚನೆಗಳನ್ನು ಬಲಪಡಿಸಿ, ತನ್ಮೂಲಕ ಪಕ್ಷವನ್ನು ಶಕ್ತಿಯುತವಾಗಿ ಬೆಳೆಸುವ ಬಗ್ಗೆ ಕೇಂದ್ರ ಸಮಿತಿ ಯಾವತ್ತೂ ಗಂಭೀರವಾಗಿ ಚಿಂತಿಸಲೇ ಇಲ್ಲ. ಆದರೆ, ಸಂಘಟನೆಗೆ ಬೇಕಾದ ಹಣ ಎ.ಐ.ಕೆ.ಎಸ್‌.ನ ಶ್ರೀಮಂತ ಹಿತಚಿಂತಕರಿಂದ ಹಾಗೂ ವಿಶೇಷವಾಗಿ ಸ್ವಾಮಿ ಸಹಜಾನಂದರಂತಹ ನಾಯಕರಿಂದ ದೊರೆಯುತ್ತಿತ್ತು.[11] ಕಿಸಾನ್ ಸಭಾದ ಸದಸ್ಯರ ಸಂಖ್ಯೆ ಸಾಕಷ್ಟು ಗಣನೀಯವಾಗಿತ್ತು; ಬಿಹಾರದಲ್ಲಿ ೧೯೩೫ರಲ್ಲಿ ೮೦,೦೦೦ ಇದ್ದ ಸದಸ್ಯರ ಸಂಖ್ಯೆ ೧೯೩೮ರ ಹೊತ್ತಿಗೆ ೨,೫೦,೦೦೦ ಕ್ಕೆ ಏರಿತು (ಅಂದರೆ, ಸುಮಾರು ಶೇಕಡಾ ೩೦೦ರಷ್ಟು). ಆಗ ವ್ಯವಸಾಯೀ ಚಳುವಳಿ ತನ್ನ ತೀವ್ರತೆಯ ತುತ್ತ ತುದಿಯಲ್ಲಿದ್ದು, ಸ್ವಾಮಿ ಸಹಜಾನಂದರು ಅದರ ಜನಪ್ರಿಯ ನಾಯಕರಾಗಿದ್ದರು.[12] ರೈತರ ರ್ಯಾಲಿಗಳಿಗೆ ಸಾಕಷ್ಟು ಜನರು ಸೇರುತ್ತಿದ್ದರು. ಆದರೆ, ಈ ‘ಸಮೂಹ ಬೆಂಬಲ’ ಯಾವ ರೀತಿಯಲ್ಲೂ ಒಂದು ‘ಶುಸ್ತು ಬದ್ಧ ಹಾಗೂ ಸುಸಂಘಟಿತ ಪಕ್ಷಕ್ಕೆ’ ಸಂವಾದಿಯಾಗಲಾರದು. ೧೯೩೯-೪೧ರ ಅವಧಿಯಲ್ಲಿ ಎ.ಐ.ಕೆ.ಎಸ್. ತನ್ನ ಸೈದ್ಧಾಂತಿಕ ಒಲವು ಹಾಗೂ ವರ್ಗನೆಲೆಗಳಲ್ಲಿ ತೀವ್ರ ಬದಲಾವಣೆಗಳು ಕಂಡುಕೊಳ್ಳುತ್ತಿದ್ದಾಗ ಸದಸ್ಯರ ಸಂಖ್ಯೆ ಕುಸಿಯತೊಡಗಿತು. ೧೯೪೨ರಷ್ಟರಲ್ಲಿ ಕಮ್ಯುನಿಸ್ಟರು ಎ.ಐ.ಕೆ.ಎಸ್‌.ನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಯುದ್ಧದ ಕುರಿತು ಸಿ.ಪಿ.ಐ. ನಿಸ್ಸಂದಿಗ್ಧ ನಿಲುವು ತೆಗೆದುಕೊಳ್ಳಲೇ ಬೇಕಾಯಿತು. ಮೊದಲು ಅದರ ನಿಲುವು ಹೆಚ್ಚು ಕಮ್ಮಿ ಕಾಂಗ್ರೆಸ್ ಹಾಗೂ ಸಿ.ಎಸ್.ಪಿ.ಗಳ ನಿಲುವನ್ನೇ ಹೋಲುತ್ತಿತ್ತು. ಕಾಂಗ್ರೆಸ್ ಹಾಗೂ ಸಿ.ಎಸ್.ಪಿ.ಗಳು ಈ ಸಾಮ್ರಾಜ್ಯಶಾಹಿ ಯುದ್ಧವನ್ನು ಮೊದಮೊದಲು ವಿರೋಧಿಸಿದ್ದವು. ಆದರೆ, ರಷ್ಯಾ ಯುದ್ಧರಂಗಕ್ಕಿಳಿದಾಗ ಸಿ.ಪಿ.ಐ. (ಆದುದರಿಂದ ಎ.ಐ.ಕೆ.ಎಸ್‌. ಕೂಡಾ) ಯುದ್ಧವನ್ನು ಬೆಂಬಲಿಸಿತು. ಈಗ ಅದು ಅವರ ದೃಷ್ಟಿಯಲ್ಲಿ ‘ಜನತಾ ಸಮರ’ವಾಯಿತು. ತನ್ನ ಧೋರಣೇಯಲ್ಲಾದ ಈ ಕ್ಷಿಪ್ರ ಬದಲಾವಣೆಗೆ ಸಿ.ಪಿ.ಐ. ಅನಂತರ ಭಾರೀ ಬೆಲೆ ತೆರಬೇಕಾಯಿತು. ಅನೇಕ ಎಡಪಂಥೀಯ ಬಲವುಳ್ಳವರು ಅದರಿಂದ ದೂರಹೋದರು. ಅದರ ರಾಜಕೀಯ ನಿಷ್ಠೆಯೇ ಅನುಮಾನಕ್ಕೊಳಪಟ್ಟಿತು.[13]

ಇಂತಹ ಅಪಖ್ಯಾತಿಯಹ ರತಾಗಿಯೂ, ಸಿ.ಪಿ.ಐ ಹಾಗೂ ಎ.ಐ.ಕೆ.ಎಸ್. ಗೆ ಯುದ್ಧ ವ್ಯಾವಹಾರಿಕವಾಗಿ ಲಾಭವನ್ನೇ ಮಾಡಿತು. ಯುದ್ಧದ ಬಗೆಗೆ ಅವರ ಸಹಕಾರೀ ನಿಲುವಿಗಾಗಿ ಸರಕಾರ ಅವರ ಕುರಿತು ಹೆಚ್ಚೆಚ್ಚು ಉದಾರವಾಗಿ ವರ್ತಿಸತೊಡಗಿತು. ಬಂಧನದಲ್ಲಿದ್ದ ಅನೇಕ ಎಡಪಂಥೀಯ ನಾಯಕರನ್ನು ಸರಕಾರ ಬಿಡುಗಡೆ ಮಾಡಿತು. ಇದರ ಜೊತೆಗೆ ಪಕ್ಷದ ಕೆಲಸ ಕೂಡಾ ಚುರುಕಾರಿ ಬೆಳೆಯಿತು. ೧೯೪೧-೪೫ರ ಅವಧಿಯಲ್ಲಿ ಎ.ಐ.ಕೆ.ಎಸ್‌.ನ ಮೇಲೆ ಕಮ್ಯುನಿಸ್ಟರ ಪ್ರಾಬಲ್ಯ ಇನ್ನಷ್ಟು ತೀವ್ರಗೊಂಡಿತು. ಕ್ರಮೇಣ ಎ.ಐ.ಕೆ.ಎಸ್‌. ಮತ್ತು ಸಿ.ಪಿ.ಐ. ಒಂದೇ ಘಟಕದ ಎರಡು ಮುಖಗಳು ಎಂಬಷ್ಟು ನಿಕಟವಾದವು. ಇದೇ ಅವಧಿಯಲ್ಲಿ ಸಿ.ಪಿ.ಐ. ಸದಸ್ಯತ್ವ ಗಣನೀಯವಾಗಿ ಏರಿತು. ಬಂಗಾಳ ಒಂದರಲ್ಲೇ ೧೯೪೩ ರಲ್ಲಿ ೩,೦೦೦ದಷ್ಟಿದ್ದ ಸದಸ್ಯತ್ವ ೧೯೪೫ರ ಹೊತ್ತಿಗೆ ೯,೦೦೦ ದಷ್ಟಾಯಿತು. ಪಂಜಾಬ್‌, ಕಿಸಾನ್‌ಸಭಾದ ಇನ್ನೊಂದು ಭದ್ರ ಕೋಟೆಯಾಗಿತ್ತು. ಏಪ್ರಿಲ್ ೧೯೪೩ರಲ್ಲಿ ಪಂಜಾಬ್ ಒಂದರಲ್ಲೇ ೩೦,೦೦೦ ಸದಸ್ಯತ್ವ ಹೊಂದಿರುವುದಾಗಿ ಎ.ಐ.ಕೆ.ಎಸ್‌. ಹೇಳಿಕೊಂಡಿದ್ದಲ್ಲದೇ, ಒಂದೇ ವರ್ಷದಲ್ಲಿ ಈ ಸಂಖ್ಯೆಯನ್ನು ದ್ವಿಗುಣಗೊಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿತು.[14] ಅಂತೆಯೇ, ೧೯೪೧-೪೪ರ ನಡುವೆ ಎಲ್ಲಾ ಪ್ರಾಂತೀಯ ಘಟಕಗಳಲ್ಲೂ ಸದಸ್ಯತ್ವದಲ್ಲಿ ಇದೇ ಪ್ರಮಾಣದ ಏರಿಕೆ ಕಂಡು ಬಂದಿತು. ಮುಂದಿನ ಪುಟದಲ್ಲಿರುವ ಕೋಷ್ಠಕದಲ್ಲಿ ಈ ಬಗ್ಗೆ ವಿವರವಾಗಿ ತಿಳಿಸಲಾಗಿದೆ:

೧೯೪೪ ಫೆಬ್ರವರಿ ನಂತರವು ಸದಸ್ಯರ ಸೇರ್ಪಡೆ ಚುರುಕಾಗಿಯೇ ಮುಂದುವರಿಯಿತು. ಸದಸ್ಯತ್ವದ ಸಂಖ್ಯೆಗೆ ಸಂಬಂಧಿಸಿದಂಥೆ ಎ.ಐ.ಕೆ.ಎಸ್‌.ನ ಎಲ್ಲ ಪ್ರಾಂತೀಯ ಘಟಕಗಳಿಗೂ ತುಂಬ ದೊಡ್ಡ ಗುರಿಗಳನ್ನು ನಿಗದಿಪಡಿಸಲಾಯಿತು.[15]

ಕಿಸಾನ್ ಸಭಾದ ಜಾಲ ಹೆಚ್ಚು ವ್ಯಾಪಕವಾಗಿದ್ದ ಆಂಧ್ರ, ಬಂಗಾಳ ಮತ್ತು ಪಂಜಾಬ್‌ಗಳಲ್ಲಿ ಸದಸ್ಯತ್ವದಲ್ಲಿ ಏರಿಕೆ ಎದ್ದು ಕಾಣುವಷ್ಟು ಇತ್ತು. ಆದರೆ ಎ.ಐ.ಕೆ.ಎಸ್‌.ನ ಬಿಹಾರ ಘಟಕದಲ್ಲಿ ಸದಸ್ಯರ ಸಂಖ್ಯೆ ಗಣನೀಯವಾಗಿ ಇಳಿಯತೊಡಗಿತು. ೧೯೩೮ರಲ್ಲಿ ೮೦,೦೦೦ದಷ್ಟಿದ್ದ ಸಂಖ್ಯೆ ೧೯೪೨ರ ಹೊತ್ತಿಗೆ ೫೪,೨೦೦ ಕ್ಕೆ ಇಳಿದು ೧೯೪೩ರಲ್ಲಿ ೨೭,೧೬೮ ರಷ್ಟಾಯಿತು. ಹೇಗಿದ್ದರೂ ಇದು ಮರು ವರ್ಷ ಸ್ವಲ್ಪ ಏರಿತು.

ಕೋಷ್ಟಕ : ೧೯೪೧-೪೪ ನಡುವೆ ಆಲ್ ಇಂಡಿಯಾ ಕಿಸಾನ್ ಸಭಾ ಸದಸ್ಯತ್ವದ ಬಗೆಗಿನ ವಿವರ ಪ್ರಾಥಮಿಕ ಸದಸ್ಯತ್ವ

ಪ್ರಾಂತ್ಯ

ಸೆಪ್ಟೆಂಬರ್ ೧೯೪೧ ಮತ್ತು ಮಾರ್ಚ್‌೧೯೪೨ರ ನಡುವೆ

ಫೆಬ್ರವರಿ ೧೯೪೩

ಫೆಬ್ರವರಿ ೧೯೪೪

ಶೇಕಡಾವಾರು ಹೆಚ್ಚಳ

ಆಂಧ್ರ

೩೬,೯೯೩

೫೫,೫೬೦

೧೦೧,೫೦೨

೧೭೮

ಬಂಗಾಳ

೩೫,೧೨೦

೮೩,೧೬೦

೧೭೭,೬೨೯

೪೦೫

ಬಿಹಾರ

೫೪,೨೦೦

೨೭.೧೬೮

೬೯,೩೦೯

೨೭.೮

ಪಂಜಾಬ್

೫೨,೩೫೪

೫೬.೦೦೪

೧೦೦,೬೦೮

೯೨

ಯು.ಪಿ

೯,೬೦೦

೧೨.೦೯೬

೨೭,೯೪೮

೧೯೧

ಇತರ ಪ್ರಾಂತ್ಯಗಳು

೩೭,೫೧೪

೮೭.೯೯೫

೭೬,೪೩೧

೧೦೩

ಒಟ್ಟು

೨೨೫,೭೪೧

೨೮೧.೯೮೩

೫೫೩,೪೨೭

೧೪೫

ಮೂಲ: ಆಲ್ ಇಂಡಿಯಾ ಕಿಸಾನ್ ಸಭಾಆರ್ಗ್ನೈಸೇಶನಲ್ ಡಿಪೋಟೇಜ್, (೧೯೪೨೪೩) ಅಪೆಂಡಿಕ್ಸ್ , ಪುಟ ೨೭; (೧೯೪೨೪೩) ಪುಟಗಳು ೧೧೧೨; ಮತ್ತು (೧೯೪೩೪೪); ಪುಟ ( ಎಲ್ಲಾ ಮಾಹಿತಿಗಳೂ, ಪ್ರಧಾನ ಕಾರ್ಯದರ್ಶಿಯವರಾದ ಸ್ಯಾಮಿ ಸಹಜಾನಂದರಿಂದ ಪಾಟ್ನಾ ಅಥವಾ ಬೊಂಬಾಯಿಯಿಂದ ಪ್ರಕಟಿಸಲ್ಪಟ್ಟಿವೆ)

ಪಕ್ಷದ  ನಾಯಕರ ಸೈದ್ಧಾಂತಿಕ ನಿಲುವುಗಳು ಹಾಗೂ ರಾಜಕೀಯ ಒಡಂಬಡಿಕೆಗಳಲ್ಲಾಗುತ್ತಿದ್ದ ಬದಲಾವಣೆಗಳಿಂದಾಗಿ ಸದಸ್ಯತ್ವದಲ್ಲೂ ಏರಿಕೆಗಳಾಗುತ್ತಿದ್ದವು. ೧೯೩೮ರಲ್ಲಿ ಪ್ರಾರಂಭವಾದ ಸ್ವಾಮಿ ಸಹಜಾನಂದರ ಸೈದ್ಧಾಂತಿಕ ಬದಲಾವಣೆಯ ಪ್ರಕ್ರಿಯೆ ಸುಮಾರು ೧೯೪೨ರ ಹೊತ್ತಿಗೆ ಸಂಪೂರ್ಣವಾಯಿತು. ಆ ವರ್ಷ ಎ.ಐ.ಕೆ.ಎಸ್‌., ಸಿ.ಪಿ.ಐ.ನ ಹಾದಿಯಲ್ಲೇ ಯುದ್ಧವನ್ನು ಬೆಂಬಲಿಸುವ ಒಂದು ಠರಾವನ್ನು ಮಂಡಿಸಿತು.[16] ಪ್ರಮುಖವಾಗಿ ಆಂಧ್ರ, ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ‘ಬಡ ರೈತಪರ’ ಒತ್ತುಕೊಡುವ ಕೆಲಸವನ್ನು ಅತಿ ಉತ್ಸಾಹದಿಂದ ಕೈಗೆತ್ತಿಕೊಳ್ಳಲಾಯಿತು. ಇದೇ ಹೊತ್ತಿಗೆ, ಎ.ಐ.ಕೆ.ಎಸ್‌. ಮಧ್ಯಮ ಮತ್ತು ಶ್ರೀಮಂತ ರೈತರಿಂದ ದೂರ ಸರಿಯಿತು. ಸಿ.ಐ.ಪಿ. ಮತ್ತು ರಂಗಾರವರ ಕಿಸಾನ್ ಕಾಂಗ್ರೆಸ್ ೧೯೪೪ರಲ್ಲಿ ಎ.ಐ.ಕೆ.ಎಸ್‌. ಹಾಗೂ ಸ್ವಾಮಿ ಸಹಜಾನಂದರ ಸಂಬಂಧವನ್ನು ಏಕೆ ಸಂಪೂರ್ಣವಾಗಿ ಕಡಿದುಕೊಂಡವು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.[17] ೧೯೪೪-೪೫ರಲ್ಲಿ ಎ.ಐ.ಕೆ.ಎಸ್‌.ನ ಮೇಲೆ ಸಿ.ಪಿ.ಐ. ಸಂಪೂರ್ಣ ಹಿಡಿತ ಸಾಧಿಸಿದರೂ, ಸ್ವಾಮಿ ಸಹಜಾನಂದರನ್ನು ಪಕ್ಷದಲ್ಲಿಯೇ ದೀರ್ಘಕಾಲ ಉಳಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಲಿಲ್ಲ. ಸಿ.ಪಿ.ಐ. ಹಾಗೂ ಸ್ವಾಮಿ ಸಹಜಾನಂದರ ನಡುವಿನ ಸಹಯೋಗ ಸುಮಾರು ೧೯೪೫ರ ಮಧ್ಯಭಾಗದಲ್ಲಿ ಮುರಿದುಬಿತ್ತು. ಅನಂತರ ಸಹಜಾನಂದರು ಕಾಂಗ್ರೆಸಿನ ಎಡ ಒಲವಿನ ಗುಂಪು ಹಾಗೂ ಕಾಂಗ್ರೆಸ್ ಸಮಾಜವಾದಿಗಳ ಜೊತೆಗೆ ಹೆಚ್ಚೆಚ್ಚು ಗುರುತಿಸಿಕೊಳ್ಳತೊಡಗಿದರು. ಸ್ವಲ್ಪಕಾಲ ಅವರು ಎಡಪಂಥೀಯ ಗುಂಪುಗಳ ಕ್ರೋಢಿಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದರ ಫಲವಾಗಿ ಆಲ್‌ ಇಂಡಿಯಾ ಯುನೈಟೆಡ್‌ ಕಿಸಾನ್ ಸಭಾ ರೂಪುಗೊಂಡಿತು.[18] ರೈತರ ಈ ಹೊಸ ಒಕ್ಕೂಟ ತನ್ನ ಸಂಘಟನಾತ್ಮಕ ಸ್ವರೂಪ ಹಾಗೂ ಮೂಲಭೂತ ಗುರಿಗಳಲ್ಲಿ ಎ.ಐ.ಕೆ.ಎಸ್‌.ನ್ನು ಹೋಲುತ್ತಿತ್ತು. ಈ ಆಲ್ ಇಂಡಿಯಾ ಕಿಸಾನ್ ಸಭಾಕ್ಕೂ ಕೂಡಾ ಉತ್ತರ ಪ್ರದೇಶ ಹಾಗೂ ಬಿಹಾರದ ಕೆಲವು ಪ್ರದೇಶಗಳಲ್ಲಿ ಉತ್ತಮ ಬೆಂಬಲ ಇತ್ತು. ಆದರೂ, ಅದರ ಕಾರ್ಯವ್ಯಾಪ್ತಿ ಅಷ್ಟೇನೂ ವ್ಯಾಪಕವಾಗಿರಲಿಲ್ಲ. ಆ ಕಾಲದ ಇನ್ನಿತರ ರಾಜಕೀಯ ಪಕ್ಷಗಳಂತೆ, ಈ ಹೊಸ ಸಂಘಟನೆ ಕೂಡಾ ಭೂಮಾಲಿಕತ್ವ ನಿರ್ಮೂಲನವನ್ನು ತನ್ನ ಪ್ರಮುಖ ಘೋಷಣೆಯನ್ನಾಗಿಸಿಕೊಂಡಿತು. ಅಲ್ಲದೆ, ಹಳ್ಳಿಗಾಡಿನ ರೈತರ ಮೇಲೆ ಶ್ರೀಮಂತರ ಹಾಗೂ ಲೇವಾದೇವಿಆರರ ಹಿಡಿತವನ್ನು ನಿವಾರಿಸುವ ಯೋಜನೆಯನ್ನು ಹಾಕಿಕೊಂಡಿತು.[19] ಹೇಗಿದ್ದರೂ, ಹೊಸತಾಗಿ ರಚಿಸಲ್ಪಟ್ಟ ಯುನೈಟೆಡ್‌ ಕಿಸಾನ್‌ ಸಭಾ ಅಖಿಲ ಭಾರತ ಮಟ್ಟದಲ್ಲಿ ಸಿಡಿದು ಹೋದ ಪಕ್ಷಗಳ ಒಂದು ಒಕ್ಕೂಟವಾಗಿತ್ತೇ ಹೊರತು, ಅದೊಂದು ಪ್ರಭಾವಶಾಲೀ ಸಂಘಟನೆಯಾಗಿರಲಿಲ್ಲ. ಮೂವತ್ತರ ದಶಕದ ಮಧ್ಯದವರೆಗಿನ ಬೆಳವಣಿಗೆಗಳನ್ನು ಗಮನಿಸಿದರೆ, ಆಗ ಪ್ರಭಾವೀ ನಾಯಕರ ಮಧ್ಯೆ ಅಧಿಕಾರ ಹೋರಾಟವೇ (ಪವರ್‌ಸ್ಟಗಲ್) ಪ್ರಧಾನವಾಗಿ, ಅವರು ಪ್ರತಿಪಾದಿಸುತ್ತಿದ್ದ ಗ್ರಾಮೀಣ ಜನಸಾಮಾನ್ಯರ ಆಶೋತ್ತರಗಳನ್ನು ಪ್ರತಿಬಿಂಬಿಸುವ ಕೆಲಸ ಗೌಣವಾಗಿದ್ದಂತೆ ಕಂಡುಬರುತ್ತದೆ. ಆದರೆ, ಮೂವತ್ತರ ದಶಕದ ಕೊನೆಗೆ ಹಾಗೂ ನಲವತ್ತರ ದಶಕದಲ್ಲಿ ನಡೆದ ಬೆಳವಣಿಗೆಗಳು, ಪಕ್ಷದ ಸಂಘಟನೆ, ಯೋಜನೆಗಳು ಹಾಗೂ ನಾಯಕತ್ವದಲ್ಲಿ ವರ್ಗ ಹಿನ್ನೆಲೆಗೆ ಹೆಚ್ಚೆಚ್ಚು ಮಹತ್ವ ಬಂದಿರುವುದನ್ನು ಸೂಚಿಸುತ್ತವೆ.[20]

ರೈತ ಪಕ್ಷಗಳಲ್ಲಾದ ಬಿರುಕುಗಳ ಹೊರತಾಗಿಯೂ, ನಲವತ್ತರ ದಶಕದಲ್ಲಿ ಸಿ.ಪಿ.ಐ., ಎ.ಐ.ಕೆ.ಎಸ್‌.ನ್ನು ವಶಪಡಿಸಿಕೊಳ್ಳುವಲ್ಲಿ ಸಫಲವಾಯಿತು. ಇದು ‘ಯುನೈಟೆಡ್‌ ಫ್ರಂಟ್’ ಕಾರ್ಯತಂತ್ರಕ್ಕೊಂದು ಸಾಧನೆಯಾಯಿತು. ಎ.ಐ.ಕೆ.ಎಸ್‌. ಭಾರತದ ಪ್ರಮುಖ ರೈತ ಪಕ್ಷವಾಗಿ ಉಳಿಯಿತು. ಆಂಧ್ರ, ಬಂಗಾಳ ಮತ್ತು ಪಂಜಾಬುಗಳ ಬಡರೈತರು, ಪಾಲು ಬೆಳೆಗಾರರು ಮತ್ತು ಭೂರಹಿತ ಕಾರ್ಮಿಕರ ನಡುವೆ ಅದರ ಪ್ರಭಾವ ಬಹುಬೇಗ ವ್ಯಾಪಿಸಿತು. ಪಕ್ಷದ ವರ್ಗ ತಳಹದಿಯನ್ನು ಬದಲಿಸುವ ತನ್ನ ಪ್ರಯತ್ನ ಸಫಲವಾಗುತ್ತಲೇ, ಎ.ಐ.ಕೆ.ಎಸ್‌. ಮತ್ತು ಸಿ.ಪಿ.ಐ. ಎರಡು ಪ್ರಥಮ ಎಡಪಂಥೀಯ ರೈತ ದಂಗೆಗಳನ್ನು ಸಂಘಟಿಸಿತು. ಅವೇ, ಬಂಗಾಳದ ತೆಭಾಗಾ ಹೋರಾಟ (೧೯೪೬-೪೭) ಮತ್ತು ತೆಲಂಗಾಣ ದಂಗೆ (೧೯೪೬-೫೧).[21]

ಭಾರತದಲ್ಲಿ ೧೯೨೫-೪೭ರ ಮಧ್ಯೆ ಹುಟ್ಟಿ, ಬೆಳೆದ ಮತ್ತು ಅಳಿದ ರೈತ ಸಂಘಟನೆಗಳ ಬಗೆಗೆ ಕೆಲವು ಸಾಮಾನ್ಯ ತೀರ್ಮಾನಗಳನ್ನು ಹೀಗೆ ಪಟ್ಟಿ ಮಾಡಬಹುದು.

ದೇಶ ಬೇರೆ ಬೇರೆ ಭಾಗಗಳಲ್ಲಿ ಸಂಘಟಿಸಲ್ಪಟ್ಟ ಈ ಹೋರಾಟಗಳ ಪ್ರಥಮತಃ ವ್ಯವಸಾಯೀ ಚಳವಳಿಗಳಾಗಿದ್ದುವು. ಅವುಗಳ ಗುಣಲಕ್ಷಣಗಳನ್ನು ಗಮನಿಸಿದರೆ ಅವು ಯಾವುದೇ ಪಕ್ಷದ ಅಥವಾ ‘ಸಂಘಟನೆಯ’ ಹೋರಾಟಗಳಂತಿರಲಿಲ್ಲ. ರೈತರ ಸಮಸ್ಯೆಗಳಲ್ಲಿ ಏರಿಳಿತಗಳಾದಂತೆ ಈ ಚಳವಳಿಗಳೂ ತೀವ್ರತೆಯನ್ನು ಗಳಿಸಿಕೊಳ್ಳುತ್ತಿದ್ದವು ಅಥವಾ ಕಳಕೊಳ್ಳುತ್ತಿದ್ದವು. ಆದುದರಿಂದ, ರೈತ ಪಕ್ಷಗಳೆಲ್ಲ ಮೂಲತಃ ಆಯಾಯ ಸಂದರ್ಭಕ್ಕೆ ರೂಪುಗೊಂಡ ತಾತ್ಕಾಲಿಕ ವ್ಯವಸ್ಥೆಗಳಾಗಿದ್ದವು.

ಎರಡನೆಯದಾಗಿ, ರೈತ ಸಂಘಟನೆಗಳೆಲ್ಲ ಯಾವಾಗಲೂ ಒಂದಲ್ಲ ಒಂದು ಬಗೆಯ ಕೀಳರಿಮೆಯಿಂದ (ಐಡೆಂಟಿಟಿ) ನರಳುತ್ತಿದ್ದವು. ಅವು ಯಾವುದಾದರೂ ಒಂದು ರಾಷ್ಟ್ರ ಮಟ್ಟದ ಪಕ್ಷದ ಜೊತೆಗೆ ಹೊಂದಾಣಿಕೆಗಾಗಿಯೋ ಅಥವಾ ಅದರಿಂದ ಗುರುತಿಸಿಕೊಳ್ಳುವುದಕ್ಕಾಗಿಯೋ ಹಾತೊರೆಯುತ್ತಿದ್ದವು. ಹೀಗೆ, ರೈತ ಸಮುದಾಯದ ವಿಶಿಷ್ಠ ಸಮಸ್ಯೆಗಳನ್ನೇ ಬಳಸಿಕೊಂಡು ಸ್ವತಂತ್ರವಾಗಿ ಹೋರಾಟ ರೂಪಿಸಲು ಸಾಧ್ಯವಾಗದ ಈ ರೈತ ಘಟನೆಗಳ ಅಸಹಾಯಕತೆಯನ್ನು ರಾಜಕೀಯ ಪಕ್ಷಗಳು ಒಂದೋ ತಮ್ಮ ತಮ್ಮ ಕಿಸಾನ್ ಸಭಾಗಳನ್ನು ಸ್ಥಾಪಿಸಿದವು ಅಥವಾ ಅದಾಗಲೇ ಅಸ್ತಿತ್ವದಲ್ಲಿರುವ ರೈತ ಸಂಘಟನೆಗಳನ್ನು ತಮ್ಮ ರಾಜಕೀಯ ಗುರಿಗಳಿಗಾಗಿ ಬಳಸಿಕೊಂಡವು. ಈ ರೈತ ಸಂಘಟನೆಗಳ ಮೊದಮೊದಲ ಹಂತಗಳಲ್ಲಿ ಜಾತಿ ಪ್ರಶ್ನೆಯೂ ಪ್ರಧಾನವಾಗಿ ಬಳಕೆಗೆ ಬಂದಿತ್ತು. ಆದರೆ, ಚಳುವಳಿಯ ನೀತಿ ನಿಯಮಗಳ ನಿರೂಪಣೆಯ ಹಂತದಲ್ಲಿ ಜಾತಿ ಪ್ರಮುಖವಾಗುತ್ತಿರಲಿಲ್ಲ. ವ್ಯವಸಾಯೀ ಸಮಸ್ಯೆಗಳ ವರ್ಗಗುಣಗಳೇ ಅಲ್ಲಿ ಚಳುವಳಿಯ ಪ್ರಧಾನ ಅಂಶವಾಗಿತ್ತು.

ಕೆಲವು ರೈತ ಸಂಘಟನೆಗಳು ವರ್ಗಗುಣಗಳಿಗೆ ಒತ್ತು ಕೊಡುವ ವ್ಯವಸಾಯೀ ಹೋರಾಟವನ್ನು ಸಂಘಟಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರೂ, ಅವುಗಳು ಕೆಲವು ಪ್ರಾಂತಗಳಲ್ಲಷ್ಟೇ ಸಫಲವಾದವು. ಅದೊಂದು ಅಖಿಲ ಭಾರತ ವ್ಯಾಪ್ತಿಯ ಪ್ರವೃತ್ತಿಯಾಗಿ ಬಲಗೊಳ್ಳಲಿಲ್ಲ. ಅಲ್ಲದೆ, ಅವ್ಯಾವವೂ ಒಂದು ಶಿಸ್ತುಬದ್ಧ, ಕ್ರಾಂತಿಕಾರಿ ಸಂಘಟನೆಗಳಾಗಿ ಯಾವತ್ತೂ ಸಫಲವಾಗಲಿಲ್ಲ.

ಶ್ರೀಮಂತ ರೈತ ಹಿನ್ನೆಲೆಯಿಂದ ಅಥವಾ ಪಟ್ಟಣದ ಮಧ್ಯಮ ವರ್ಗದ ಬುದ್ಧಿ ಜೀವಿಗಳಿಂದ ಈ ಸಂಘಟನೆಗಳ ನಾಯಕತ್ವ ರೂಪುಗೊಂಡಿತ್ತು. ಹೀಗಾಗಿ ನಿಜವಾದ ರೈತ ನಾಯಕತ್ವಕ್ಕೆ ಯಾವ ರೂಪದಲ್ಲೂ ಪೈಪೋಟಿ ನಡೆಸಲಿಲ್ಲ. ಮೊದಮೊದಲು, ನಾಯಕರ ವೈಯಕ್ತಿಕ ಪ್ರಭಾವವೇ ಪ್ರಧಾನವಾಗಿ ರೈತರ ನಿಜವಾದ ಆಕಾಂಕ್ಷೆಗಳು ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಳ್ಳುತ್ತಿರಲಿಲ್ಲ. ಆದರೆ, ಕ್ರಮೇಣ ಪಕ್ಷದ ಕಾರ್ಯಕ್ರಮಗಳ ಮೂಲಕ ನಾಯಕತ್ವದ ನಿಜವಾದ ವರ್ಗಗುಣ ಬಹಿರಂಗಗೊಳ್ಳತೊಡಗಿತು. ಇದರಿಂದ ಇಡೀ ಸಂಘಟನೆಯ ವರ್ಗ ಸಂರಚನೆಯೂ ಬದಲಾಗತೊಡಗಿತು. ಬರೇ ವೈಯಕ್ತಿಕ ಪ್ರಭಾವದಿಂದ ಮಿಲಿಯಗಟ್ಟಲೆ ಜನರ ‘ಭರವಸೆಯ’ ಪ್ರತೀಕವಾಗುವುದು ಅಪವಾದವೆನ್ನುಷ್ಟು ಅಪರೂಪವಾಯಿತು. ಆದರೆ, ಕಿಸಾನ್ ಸಭಾದ ಬಿಹಾರ ಘಟಕದಲ್ಲಿ ಸ್ವಲ್ಪ ಮಟ್ಟಿಗೆ ಇಂತಹ ಪ್ರವೃತ್ತಿಗಳು ಮೊದಮೊದಲ ಹಂತದಲ್ಲಿ ಕಂಡುಬರುತ್ತದೆ.[22]

೧೯೨೫-೧೯೩೮ರ ನಡುವಿನ ರೈತ ಪಕ್ಷಗಳ ವರ್ಗಹಿನ್ನೆಲೆಯ ಬಗ್ಗೆ ಹೇಳುವುದಾದರೆ, ಅವು ಮುಖ್ಯವಾಗಿ ಮಧ್ಯಮ ವರ್ಗದ ರೈತರ ಪಕ್ಷಗಳಾಗಿದ್ದುವು. ಶ್ರೀಮಂತ ರೈತರು ಮತ್ತು ಸಾಕಷ್ಟು, ಸಂಖ್ಯೆ ಗೇಣಿದಾರರು ಪಕ್ಷವನ್ನು ಸಂಘಟಿಸುವಲ್ಲಿ ಪ್ರಧಾನಪಾತ್ರ ವಹಿಸಿದ್ದರು. ಆದರೆ, ೧೯೪೦ರ ನಂತರ, ಆ ಕಾಲದ ರೈತ ಸಮೂಹದ ಪ್ರಭಾವೀ ಪ್ರತಿನಿಧಿಯಾದ ಎ.ಐ.ಕೆ.ಎಸ್‌.ನ ಬಡರೈತರ ಮತ್ತು ಭೂರಹಿತ ಕೃಷಿ ಕಾರ್ಮಿಕರ ಸಮಸ್ಯೆಗಳ ಕುರಿತು ಗಮನ ಹರಿಸತೊಡಗಿದಾಗ, ಅದು ಬರೇ ಶ್ರೀಮಂತ ಮತ್ತು ಮಧ್ಯಮ ವರ್ಗದ ರೈತರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಸಂಸ್ಥೆಯಾಗಿ ಉಳಿಯಲಿಲ್ಲ. ಅನಂತರ ಅದಕ್ಕೆ ಬಡ ರೈತರ ಭಾರೀ ಉತ್ತೇಜಕ ಪ್ರತಿಕ್ರಿಯೆ ಸಿಗತೊಡಗಿತು.

ಈ ರೈತ ಸಂಘಗಳ ತಾತ್ವಿಕತೆ ಒಂದು ಕಡೆ ಗಾಂಧೀವಾದ ಹಾಗೂ ಇನ್ನೊಂಖದು ಕಡೆ ಮಾರ್ಕ್ಸ್ ವಾದ-ಲೆನಿನ್ ವಾದದ ನಡುವೆ ಓಲಾಡುತ್ತಿತ್ತು. ಹೋರಾಟದ ಗುರಿ ಹಾಗೂ ನಡೆಯಬೇಕಾದ ದಾರಿಯ ಮಹತ್ವದ ಕುರಿತು ಬೇರೆ, ಬೇರೆ ರೀತಿಯ, ಒಮ್ಮೊಮ್ಮೆ ವಿಚಿತ್ರವಾದ ನಿಲುವುಗಳ ರೂಪುಗೊಳ್ಳುತ್ತಿದ್ದವು. ಕೆಲವೊಮ್ಮೆ ಫೇಬಿಯನ್ ಸಮಾಜವಾದದ ಮಾದರಿಯೂ ಚರ್ಚಿಸಲ್ಪಡುತ್ತಿತ್ತು. ಆದರೆ, ನಾವು ಗಣನೆಗೆ ತೆಗೆದುಕೊಂಡ ಅವಧಿಯಲ್ಲಿ ರೈತ ಸಂಘಟನೆಗಳೂ ಗಾಂಧೀವಾದದಿಂದ ಕ್ರಮೇಣ ಮಾರ್ಕ್ಸ್ ವಾದ-ಲೆನಿನ್‌ವಾದದ ಕಡೆಗೆ ಹೆಚ್ಚೆಚ್ಚು ಒಲಿದದ್ದು ಕಂಡು ಬರುತ್ತದೆ. ವ್ಯವಸಾಯೀ ಸಮಾಜ ರಚನೆಯ ವೈವಿಧ್ಯತೆ ಮತ್ತು ಸಂಕೀರ್ಣತೆಯ ಸಂಪೂರ್ಣ ಹಿಡಿತವಿಲ್ಲದಿದ್ದುದು ಹಾಗೂ ವ್ಯವಸಾಯೀ ವರ್ಗಗಳಲ್ಲೇ ಇರುವ ಪರಸ್ಪರ ವೈರುಧ್ಯಗಳ ಬಗೆಗಿನ ಸಂಪೂರ್ಣ ಅಜ್ಞಾನ ಇವು ಆ ಅವಧಿಯ ರೈತ ಸಂಘಟನೆಗ ಎದ್ದು ಕಾಣುವ ದೌರ್ಬಲ್ಯವಾಗಿದೆ. ಇದರಿಂದಾಗಿ ಅವುಗಳಿಗೆ ವ್ಯವಸಾಯೀ ಸಮಸ್ಯೆಗಳನ್ನು ಖಚಿತವಾಗಿ ನಿರ್ಧರಿಸುವುದಾಗಲೀ, ಹೋರಾಟಗಳ ಬಗೆಗೆ ಸ್ಪಷ್ಟ ಸೈದ್ಧಾಂತಿಕ ನಿಲುವು ತಾಳುವುದಾಗಲೀ ಸಾಧ್ಯವಾಗಲಿಲ್ಲ. ಹೀಗಾಗಿ ಅವುಗಳ ಘೋಷಣಾ ಪತ್ರಗಳಾಗಲೀ, ಬೇಡಿಕೆಯ ಪಟ್ಟಿಗಳಾಗಲೀ ಆ ಕ್ಷಣದ ರಾಜಕೀಯ ಪರಿಸ್ಥಿತಿಗಳಿಂದ ನೇರವಾಗಿ ಪ್ರಭಾವಿಸಲ್ಪಡುತ್ತಿದ್ದವು. ಅಲ್ಲದೆ, ಸಂಘಟನೆಗಳ ಒಳಗೇ ಒಮ್ಮೊಮ್ಮೆ ಪರಸ್ಪರ ವಿರೋಧವಾಗಿ ಇರುತ್ತಿದ್ದ ಒತ್ತಡಗಳನ್ನು ಬಹಿರಂಗಗೊಳಿಸುತ್ತಿದ್ದವು.‘ ರೈತ’, ‘ಕಿಸಾನ್’ ಸಮಸ್ಯೆಗಳಿಗಾಗಿ ಹೋರಾಡುವುದು ಪಾರ್ಟಿಯ ಪದಾಧಿಕಾರಿಗಳಿಗೆ ಒಂದು ಫ್ಯಾಶನ್‌ಆಗಿತ್ತು. ಸಮಸ್ಯೆಗಳ ಕುರಿತು ರಚನಾತ್ಮಕ ಚಿಂತನೆ ಹಾಗೂ ಕಾರ್ಯಕ್ರಮಗಳ ಬಗೆಗೆ ಸ್ಪಷ್ಟತೆ, ಎ.ಐ.ಕೆ.ಎಸ್‌. ಸಂಪೂರ್ಣವಾಗಿ ಸಿ.ಪಿ.ಐ. ಹಿಡಿತಕ್ಕೆ ಬಂದ ನಂತರವಷ್ಟೇ ಬೆಳೆಯತೊಡಗಿತು. ಆದರೂ, ವ್ಯವಸಾಯೀ ವರ್ಗಗಳನ್ನು ಗುರುತಿಸುವುದಕ್ಕೆ ಮತ್ತು ದೇಶದ ಮತ್ತು ದೇಶದ ವಿವಿಧ ಪ್ರಾಂತಗಳಲ್ಲಿ ಆದ್ಯತೆಗಳನ್ನು ಖಚಿತಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂಥೆ ಸಿ.ಪಿ.ಐ. ಹಾಗೂ ಅದರ ನಿಯಂತ್ರಣದಲ್ಲಿ ರೈತ ಸಂಘಟನೆಗಳ ನಡುವೆ ಸಾಕಷ್ಟು ಸೈದ್ಧಾಂತಿಕ ಗೊಂದಲ ನಲವತ್ತರ ದಶಕದಾದ್ಯಂತ ಮುಂದುವರಿಯಿತು. ಎಡಪಂಥೀಯ ಪಕ್ಷಗಳು ತಮ್ಮ ಉಳಿವಿಗಾಗಿ ಸ್ವಾತಂತ್ರ್ಯ ಚಳವಳಿಯ ಅನೇಕ ಪ್ರವೃತ್ತಿಗಳ ಜೊತೆಗೆ ರಾಜಕೀಯ ಒಪ್ಪಂದ ಮಾಡಬೇಕಾಗಿ ಬಂದುದು ಈ ವಿಫಲತೆಗೆ ಪ್ರಮುಖ ಕಾರಣ ಎನ್ನಬಹುದು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)[1] ನೋಡಿ, ಎನ್.ಜಿ.ರಂಗಾ, ರೆವಲ್ಯೂಶನರಿ ಪೆಸೆಂಟ್ಸ್, ನ್ಯೂಡೆಲ್ಲಿ ೧೯೪೯, ಪುಟ ೫೮-೬೫.

[2] ಕಮ್ಮ ಮತ್ತು ರೆಡ್ಡಿ ಜನರ ನಡುವಿನ ಸಂಘರ್ಷದ ಬಗೆಗೆ ವಿವರವಾಗಿ ಎಸ್. ಹ್ಯಾರಿಸನ್‌ ಅವರು ಚರ್ಚಿಸಿದ್ದಾರೆ. ‘ಕಾಸ್ಟ್ ಅಂಡ್ ದಿ ಆಂಧ್ರಾ ಕಮ್ಯುನಿಸ್ಟ್ಸ್’ ದಿ ಅಮೆರಿಕನ್ ಪೊಲಿಟಿಕಲ್ ಸಾಯನ್ಸ್ ರಿವ್ಯೂ, ಸಂಪುಟ ಎಲ್, ೨ (ಜೂನ್ ೧೯೫೬) ಪುಟ ೩೭೮-೪೦೪.

[3] ರಂಗಾ, ರೆವಲ್ಯೂಶನರಿ ಪೆಸೆಂಟ್ಸ್, ಪು ೬೮-೬೯.

[4] ನೋಡಿ, ಎನ್.ಜಿ. ರಂಗಾ, ‘ಡ್ರಾಫ್ಟ್‌ಚಾರ್ಟರ್ ಆಫ್ಲಾಂಗ್ ಟರ್ಮ್‌ ಕನ್‌ಸ್ಟ್ರಕ್ಟೀವ್‌ ಡಿಮಾಂಡ್ಸ್,’ ರೂರಲ್ ಇಂಡಿಯಾ (ಮಾರ್ಚ್‌೧೯೩೯) ಪುಟ ೨೬೭-೭೩

[5] ವಿವರಗಳಿಗಾಗಿ ನೋಡಿ, ರಂಗಾ, ‘ಆಲ್‌ ಇಂಡಿಯಾ ಕಿಸಾನ್ ಮೂವ್‌ಮೆಂಟ್ಸ್,’ ಪುಟ ೨೮೭-೭೮.

[6] ರಂಗಾ, ರೆವಲ್ಯೂಶನರಿ ಪೆಸೆಂಟ್ಸ, ಪುಟ ೭೧, ರಂಗಾರವರ ಸೈದ್ಧಾಂತಿಕ ಬೆಳವಣಿಗೆಯ ಕುರಿತು ತಿಳಿಯಲು ಅವರ ಇನ್ನಿತರ ಕೆಲವು ಬರಹಗಳನ್ನು ನೋಡಿ: ದಿ ಮಾಡರ್ನ್‌ ಇಂಡಿಯನ್ ಪೆಸೆಂಟ್ಸ್-ಎ ಕಲೆಕ್ಷನ್‌ ಆಫ್ ಅಡ್ರೆಸಸ್, ಮದ್ರಾಸ್, ೧೯೩೬; ಪೆಸೆಂಟ್ಸ್‌ ಅಂಡ್ ಕಾಂಗ್ರೆಸ್, ಮುದ್ರಾಸ್, ೧೯೩೯, ಪುಟ ೧-೮೦; ಮತ್ತು ಕಿಸಾನ್ ಅಂಡ್ ಕಮ್ಯುನಿಸ್ಟ್ಸ್‌, ಬೊಂಬಾಯಿ, ೧೯೪೯.

[7] ದಿ ಇಂಡಿಯನ್ ಅನುಯೆಲ್ ರಿಜಿಸ್ಟರ್, ೧೯೩೬, ಪುಟ ೨೮೩-೮೪, ಕಾಂಗ್ರೆಸ್ಸಿನ ಲಕ್ನೋ ಅಧಿವೇಶನದಲ್ಲಿ ರೂಪಿಸಿದ ವ್ಯವಸಾಯೀ ನೀತಿಗಳ ಕುರಿತ ವಿವರಗಳಿಗೆ ನೋಡಿ, ಜೆ.ನೆಹರೂ, ದಿ ಯೂನಿಟಿ ಆಫ್‌ ಇಂಡಿಯಾ-ಕಲೆಕ್ಟೆಡ್‌ ರೈಟಿಂಗ್ಸ್, ೧೯೩೭-೪೦, ಲಂಡನ್, ೧೯೪೮, ಅನುಬಂಧ ಎ-೩, ಪುಟ ೪೦೮-೪೦೯.

[8] ಫೈಜ್‌ಪುರ್ ವ್ಯವಸಾಯೀ ನೀತಿಗಳ ಕುರಿತ ವಿವರಗಳಿಗೆ ನೋಡಿ, (ಡಿಸೆಂಬರ್, ೧೯೩೬) ಎಚ್.ಡಿ.ಮಾಲವೀಯಾ ಲ್ಯಾಂಡ್ ರಿಫಾಮರ್ಸ್‌ಇನ್ ಇಂಡಿಯಾ, ನ್ಯೂಡೆಲ್ಲಿ, ೧೯೫೫, ಪುಟ ೬೨-೬೫.

[9] ಫೈಜ್ಪುರ ವ್ಯವಸಾಯೀ ನೀತಿಗಳು ಹಾಗೂ ಕಾಂಗ್ರೆಸ್ ಮಂತ್ರಿಗಳ ವೈಫಲ್ಯದ ಕುರಿತು ಎ.ಐ.ಕೆ.ಎಸ್. ನಾಯಕರ ನಿರಾಶೆಯನ್ನು ಸ್ವಾಮಿ ಸಹಜಾನಂದರು ಅವರ ಈ ಬರಹದಲ್ಲಿ ಸ್ಪಷ್ಟಪಡಿಸಿದರು. ದಿ ಅದರ್ ಸೈಡ್ ಆಫ್ ದಿ ಶೀಲ್ಡ್‌, ಬೊಂಬಾಯಿ, ೧೯೩೮, ಪುಟ ೧-೧೮.

[10] ಆಲ್‌ ಇಂಡಿಯಾ ಕಿಸಾನ್ ಸಭಾ-ದಿ ಕಾನ್‌ಸ್ಟಿಟ್ಯೂಶನ್, ಬೊಂಬಾಯಿ, ೧೯೩೯, ಪುಟ-೧-೨.

[11] ಹೌಸರ್, ಬಿಹಾರ್ ಪ್ರಾವಿನ್‌ಶಿಯಲ್ ಕಿಸಾನ್ ಸಭಾ, ಪುಟ ೯೦-೯೧.

[12] ಅದೇ, ಪುಟ ೯೨.

[13] ಯುದ್ಧದ ಕುರಿತ ಸಿ.ಪಿ.ಐ.ಯ ಬದಲಾದ ಧೋರಣೆ ಬಗೆಗೆ ನೋಡಿ, ಡ್ರೂಡ್, ಸೋವಿಯತ್ ರಷ್ಯಾ ಅಂಡ್ ಇಂಡಿಯನ್‌ ಕಮ್ಯೂನಿಸಂ ಪುಟ ೧೯೯-೨೪೦.

[14] ಪಿ.ಸಿ. ಜೋಶಿ, ‘ದಿ ಪೆಸೆಂಟ್ಸ್‌ ಆಫ್ ಇಂಡಿಯಾ,’ ವಲ್ಡ್‌ನ್ಯೂಸ್ ಅಂಡ್ ವ್ಯೂಸ್, ಸಂಪುಟ xxiii, ೨೦ (ಮೇ ೧೯೪೩), ಪುಟ ೧೫೯. ಸಂಘಟನಾತ್ಮಕವಾಗಿ ಪಂಜಾಬು ಪ್ರಾಂತ್ಯ ಅನೇಕ ಕುತೂಹಲಕಾರಿ ಬೆಳವಣಿಗೆಯನ್ನು ದಾಖಲಿಸಿದೆ. ಆದರೆ, ಸಾಕಷ್ಟು ವಿವರಗಳು ಲಭ್ಯವಿಲ್ಲದ ಕಾರಣ, ಈ ಬಗ್ಗೆ ಹೆಚ್ಚು ಚರ್ಚೆ ಈ ಪುಸ್ತಕದಲ್ಲಿ ಸಾಧ್ಯವಾಗಿಲ್ಲ.

[15] ಉದಾಹರಣೆಗೆ ನೋಡ, ಆಲ್ ಇಂಡಿಯಾ ಕಿಸಾನ್ ಸಭಾ- ಆರ್ಗನೈಸೇಶನಲ್‌ರಿಪೋರ್ಟ್ಸ್‌, ೩, ೧೯೪೪-೪೫, ಬೊಂಬಾಯಿ, ಅಗೋಸ್ತು ೧೯೪೫, ಪುಟ ೧೦.

[16] ಎ.ಐ.ಕೆ.ಎಸ್. ತನ್ನ ನಾಗಪುರ ಅಧಿವೇಶನದಲ್ಲಿ ಈ ಠರಾವನ್ನು ೧೨ ಫೆಬ್ರವರಿ ೧೯೪೨ರಂದು ಅನುಮೋದಿಸಿತು. ನೋಡಿ, ಎಸ್.ಎಸ್. ಸರಸ್ವತಿ, ಜಂಗ್ ಔರ್ ರಾಷ್ಟ್ರೀಯ ಲಡಾಯಿ (ಹಿಂದಿ), ಪಾಟ್ನಾ, ೧೯೪೨, ಪುಟ ೧೧-೧೬.

[17] ರಂಗಾ, ರೆವಲ್ಯೂಶನರಿ ಪೆಸೆಂಟ್ಸ್‌ಪುಟ ೭೧-೭೩.

[18] ಎ ಮೂವ್ ಫಾರ್ ದಿ ಫಾರ್ಮೇಶನ್ ಆಫ್ ಆನ್ ಆಲ್‌ ಇಂಡಿಯಾ ಆರ್ಗನೈಸೇಶನ್ ಫಾರ್ ದಿ ಕಿಸಾನ್ಸ್, ಒಂದು ಕರಪತ್ರ ಬೊಂಬಾಯಿ, ೧೯೪೬, ಪುಟ ೧-೮; ಎಸ್.ಎಸ್. ಸರಸ್ವತಿ, ಪ್ರೆಸಿಡೆನ್‌ಶಿಯಲ್ ಅಡ್ರೆಸ್‌; ದಿ ಟ್ವೆಲ್ತ್‌ ಬಿಹಾರ್ ಪ್ರಾವಿನ್‌ಶಿಯಲ್ ಕಿಸಾನ್ ಕಾನ್‌ಫರೆನ್ಸ್‌ (ವಾರಿಲಿಂಗಂಜ್‌ಗಯಾ, ೧೧-೧೨, ಮೇ ೧೯೪೫), ಪಾಟ್ನಾ, ೧೯೪೫, ಪುಟ ೬-೭; ಜೊತೆಗೆ ಎಸ್.ಎಸ್. ಸರಸ್ವತಿಯವರದ್ದೇ, ಅಬ್‌ ಕ್ಯಾ ಹೋ (ಹಿಂದಿ) ಪಾಟ್ನಾ, ೧೯೪೭, ಪುಟ ೩೦-೩೪.

[19] ಆಲ್ ಇಂಡಿಯಾ ಯುನೈಟೆಡ್‌ ಕಿಸಾನ್ ಸಭಾ- ದಿ ಕಾನ್‌ಸ್ಟಿಟ್ಯೂಶನ್, ಎಸ್.ಎಸ್. ಸರಸ್ವತಿಯವರಿಂದ ಪ್ರಕಟಿತ, ಬಿಹ್ತಾ-ಪಾಟ್ನಾ, ಜುಲೈ ೧೯೪೮, ಪುಟ ೧-೧೦; ಮತ್ತು ದಿ ಪ್ರೋಗ್ರಾಮ್ ಅಂಡ್ ಚಾರ್ಟ್‌ರ್ ಆಫ್ ಕಿಸಾನ್ ಡಿಮಾಂಡ್ಸ್, ಆಲ್ ಇಂಡಿಯಾ ಯುನೈಟೆಡ್‌ ಕಿಸಾನ್ ಸಭಾ, ಬಿಹ್ತಾ-ಪಾಟ್ನಾ ೧೯೪೯, ಪುಟ ೧೫-೨೫.

[20] ಈ ಮೂರರಲ್ಲಿ ಮೊದಲಿನ ಎರಡರ ಕುರಿತು ಈ ಅಧ್ಯಾಯದಲ್ಲಿ ವಿವರವಾಗಿ ಚರ್ಚಿಸಿದೆ, ರೈತ ಸಂಘಟನೆಗಳ ವರ್ಗ ಸ್ವರೂಪದಲ್ಲಾದ ಬದಲಾವಣೆ ಅರ್ಥವಾಗುವಂತಹದೆ. ೧೯೩೬-೪೦ರ ನಡುವೆ ಎ.ಐ.ಕೆ.ಎಸ್. ಸದಸ್ಯತ್ವದಲ್ಲಾದ ಕುಸಿತಕ್ಕೆ ಶ್ರೀಮಂತ ಹಾಗೂ ಮಧ್ಯಮ ರೈತರು ತಮ್ಮ ಸದಸ್ಯತ್ವವನ್ನೇ ವಾಪಾಸು ಪಡೆದುದು ಮುಖ್ಯ ಕಾರಣವಾಗಿದೆ. ಏಕೆಂದರೆ, ಎ.ಐ.ಕೆ.ಎಸ್. ಹೆಚ್ಚೆಚ್ಚು ಬದಲಾದಂತೆ, ಮೇಲ್ವರ್ಗದ ರೈತರ ಆಶೋತ್ತರಗಳನ್ನು ಅದು ಸಮರ್ಥವಾಗಿ ಪ್ರತಿಬಿಂಬಿಸುವ ಒಂದು ವೇದಿಕೆಯಲ್ಲ ಎಂಬುದು ಅವರಿಗೆ ಸ್ಪಷ್ಟವಾಯಿತು. ಹಾಗೆಯೇ ನಲವತ್ತರ ದಶಕದ ಅಂತ್ಯದಲ್ಲಿ ಬಡ ರೈತರ ಹಾಗೂ ಭೂರಹಿತ ಕಾರ್ಮಿಕರನ್ನು ವ್ಯಾಪಕವಾಗಿ ಸಂಘಟಿಸಿದಾಗ ಎ.ಐ.ಕೆ.ಎಸ್‌.ನ ಸದಸ್ಯತ್ವ ಗಣನೀಯವಾಗಿ ಏರಿತು. ಹೇಗಿದ್ದರೂ ಎ.ಐ.ಕೆ.ಎಸ್.ನ ಸ್ಥಳೀಯ ಹಾಗೂ ಪ್ರಾಂತೀಯ ಘಟಕಗಳ ವರ್ಗ ಸ್ವರೂಪದ ಬಗೆಗೆ ಸರಿಯಾದ ಮಾಹಿತಿ ಇಲ್ಲದೆ ಇಂತಹ ತೀರ್ಮಾನಗಳನ್ನು ಬರೇ ತಾತ್ಕಾಲಿಕವಾಗಿಯೇ ಪರಿಗಣಿಸಬೇಕಾಗುತ್ತದೆ.

[21] ವಿವರಗಳಿಗಾಗಿ ನೋಡಿ, ಅಧ್ಯಾಯ VII ಮತ್ತು VIII.

[22] ನೋಡಿ, ಹೌಸರ್, ‘ಬಿಹಾರ್ ಪ್ರಾವಿನ್‌ಶಿಯಲ್ ಕಿಸಾನ್‌ಸಭಾ,’ ಪುಟ ೮೫-೮೭.